ಹೊಸ್ತಿಲಲ್ಲಿ ಮುಗ್ಗರಿಸಿದವ!
ಮೊನ್ನೆ ಅಕ್ಟೋಬರಿನಲ್ಲಿ (೨೦೧೮) ನಮ್ಮನ್ನು ಕೇದಾರ ಬದರಿಗೆಳೆದ ಸೈಕಲ್ ಗೆಳೆಯ – ಹರಿಪ್ರಸಾದ್ ಶೇವಿರೆ, ನಿಮಗೆಲ್ಲ ಗೊತ್ತೇ ಇದೆ (ಇಲ್ಲದವರು ಓದಿಕೊಳ್ಳಿ: ಕೇದಾರನಾಥ ೨೮ ವರ್ಷಗಳ ಮೇಲೆ). ಮತ್ತವರೇ ನವೆಂಬರ್ ಮೊದಲ ವಾರದಲ್ಲಿ, ಒಮ್ಮೆಲೆ ಭಾಗವತರಂತೆ “ಸೈಕಲ್ಲೇರಿ ನಾನು ನೀವು ವನಕೆ ಪೋಗುವಾ” ಎಂದು ರಾಗ ತೆಗೆದರು. ಅರೆ, ಇದ್ಯಾವ ಹೊಸ ಯಕ್ಷ-ಪ್ರಸಂಗಾಂತ ಒಮ್ಮೆ ಬೆರಗಾದೆ. ಆದರೆ ಅವರು ಚರಣಗಳಲ್ಲಿ, ನವೆಂಬರ್ ೨೯,೩೦ ಮತ್ತು ಡಿಸೆಂಬರ್ ೧,೨ ದಿನಗಳನ್ನು ಸೂಚಿಸಿದರು. ವ್ಯವಸ್ಥೆ ರಾಜಸ್ತಾನದ ಅರಣ್ಯ ಇಲಾಖೆಯ ವನ್ಯ ವಿಭಾಗದ್ದು. ಸಹಯೋಗದಲ್ಲಿ ಅಂತಾರಾಷ್ಟ್ರೀಯ ಪ್ರವಾಸೀ ಸಂಸ್ಥೆ ‘ಲೆ ಟೂರ್ ಇಂಡಿಯಾ’ ಇತ್ತು. ಆದರೂ ಕೇವಲ ಒಂಬತ್ತೇ ಸಾವಿರ ರೂಪಾಯಿಗೆ ವನಧಾಮಕ್ಕೆ ಪ್ರವೇಶಾನುಮತಿ, ಮಾರ್ಗದರ್ಶನ, ಬೆಂಬಲ, ಊಟ, ವಾಸ, ಸ್ಥಳೀಯ ಪಯಣ…. ಎಂದೆಲ್ಲ ರಾಗ ತಾಳ ವಿಸ್ತರಿಸಿದಾಗ ನಾನೂ ಗೆಜ್ಜೆ ಕಟ್ಟಿ, ಹೆಜ್ಜೆ ಕೂಡಿಸಿದೆ. ಮಂಗಳೂರಿನ ತಂಡವೆಂಬ ಹೆಸರಿಗೆ, ಇನ್ನೋರ್ವ ಸೈಕಲ್ ಗೆಳೆಯ – ಅನಿಲ್ ಕುಮಾರ್ ಶಾಸ್ತ್ರಿ, (ಹಿಂದೂ ಪತ್ರಿಕೆಯ ಪ್ರತಿನಿಧಿ) ಸೇರಿಕೊಂಡರು.
ರಾಜಸ್ತಾನದ ಉದಯಪುರದವರೆಗೆ ಹೋಗಿ ಬರುವ ಖರ್ಚು, ವ್ಯವಸ್ಥೆ ನಮ್ಮದೇ ಆದ್ದರಿಂದ, ಕಡಿಮೆ ಖರ್ಚಿನ ಲೆಕ್ಕದಲ್ಲಿ ಹರಿಪ್ರಸಾದ್ ವಡೋದರದವರೆಗೆ ರೈಲು, ಮುಂದೆ ಬಸ್ಸು ಸಂಯೋಜಿಸಿದರು. ಆದರೆ ರಜೆಯ ಕೊರತೆ ಕಂಡ ಅನಿಲ್, ಹಿಂದಿರುಗುವಲ್ಲಿ ಮಾತ್ರ ನಮಗೆ ಜತೆಗೊಡುವ ವ್ಯವಸ್ಥೆ ಮಾಡಿಕೊಂಡರು. ಹೋಗುವ ದಾರಿಯಲ್ಲಿ ಬೆಂಗಳೂರಿಗೆ ಬಸ್ಸು, ಮುಂದೆ ನೇರ ವಿಮಾನ.
ಹರಿ ಸುಮಾರು ಹದಿನೈದು ದಿನಗಳ ಮುಂಚಿತವಾಗಿಯೇ ಗಣಕದ ಮೂಲಕ ಎಲ್ಲ (ಹಿಂದಿರುಗುವುದೂ ಸೇರಿದಂತೆ ರೈಲು, ಬಸ್ಸು) ಟಿಕೆಟ್ ಏನೋ ಖರೀದಿಸಿಬಿಟ್ಟರು. ಆದರೆ ರೈಲ್ ವಿಭಾಗ “ಇತರರು ಗೈರಾದರೆ ನೀವು ಸರದಿಯಲ್ಲಿದ್ದೀರಿ” (RAC) ಎಂದೇ ಹೆದರಿಸಿತು. ಹರಿ ವರಿ ಇಳಿಸಲು ಮಂಗಳೂರು ನಿಲ್ದಾಣದ ಸಾರ್ವಜನಿಕ ಸಂಪರ್ಕಾಧಿಕಾರಿ – ಕಿಶನ್ ಬಂಗೇರಾ, ನಮ್ಮ ಸೈಕಲ್ ಮಿತ್ರರನ್ನು ಸಂಪರ್ಕಿಸಿದರು. ಆದರೆ ಗಣಕೀಕೃತ ಟಿಕೆಟ್ ವ್ಯವಸ್ಥೆಯಲ್ಲಿ, ಯಾರೂ ಏನೂ ಮಾಡುವಂತಿರಲಿಲ್ಲ. ಅದೃಷ್ಟಕ್ಕೆ ಇನ್ನೆರಡೇ ದಿನ ಎನ್ನುವಾಗ, ನಮ್ಮ ಸ್ಥಾನ ಖಾತ್ರಿಯಾಗಿತ್ತು.
ನವೆಂಬರ್ ೨೮ರ ಬೆಳಿಗ್ಗೆ ಐದೂಕಾಲರ ರೈಲಿಗೆ, ಅರ್ಧ ಗಂಟೆ ಮುಂಚಿತವಾಗಿಯೇ ನಾವಿಬ್ಬರು ಕಂಕನಾಡಿ ರೈಲು ನಿಲ್ದಾಣ ಸೇರಿದ್ದೆವು. ನಮ್ಮದು ರಾಜಧಾನೀ ಎಕ್ಸ್‍ಪ್ರೆಸ್ ಅಂದರೆ, ದೇಶದ ವಿವಿಧ ಮೂಲೆಗಳಿಂದ ರಾಷ್ಟ್ರ ರಾಜಧಾನಿಗೋಡುವ ವಿಶೇಷ ರೈಲು. ಇದು ಕೇರಳದ ಮೂಲೆಯಿಂದ ರಾತ್ರಿಯ ಚಾಪೆ ಸುತ್ತಿಕೊಂಡು ಬರುವುದಿತ್ತು. ನಾವು ಮೊದಲೇ ವಿಚಾರಿಸಿಕೊಂಡಂತೆ, ಸಾಮಾನ್ಯ ತಿಳುವಳಿಕೆಯಂತೆ, ಒಂದನೇ ತಂಗುಗಟ್ಟೆಯಲ್ಲೇ ಕಾದಿದ್ದೆವು. ಮೂರು ಸಾಲು ಕುರ್ಚಿಯ ನಡುವೆಯೆಲ್ಲೋ ಕುಳಿತು ಮೂರೂ ತಂಗುಗಟ್ಟೆಗಳ ಸದ್ದು ಗದ್ದಲಗಳಲ್ಲಿ, ಜನ ಓಡಾಟದಲ್ಲಿ ಯಾವ್ಯಾವುದೋ ರೈಲು ಬಂತು, ರೈಲು ಹೋಯ್ತು. ನಿಲ್ದಾಣದ ಮೈಕು ಗಣಕೀಕೃತಕೋಶ ಹೆಕ್ಕುತ್ತ, ತುಂಡು ತುಂಡಾಗಿ, ದಟ್ಟ ಮಲೆಯಾಳೀ ಗಂಧದೊಡನೆ ಚತುರ್ಭಾಷೆಗಳಲ್ಲಿ (ಮಲೆಯಾಳ, ಕನ್ನಡ, ಹಿಂದಿ, ಇಂಗ್ಲಿಷ್), ಅವಿರತ ಪ್ರಲಾಪಿಸುತ್ತಿದ್ದುದರಿಂದ ನಾವು ಅರೆಗಿವುಡರಾಗಿದ್ದೆವು. ಆದರೆ…..
ರಾಜಧಾನಿ ಎಕ್ಸ್‍ಪ್ರೆಸ್ಸಿನ ನಿಗದಿತ ಆಗಮನ ವೇಳೆ ಮೀರಿದ ಮೇಲೂ ನಮ್ಮೆದುರು ‘ಮೀನವಾಸನೆ’ (ಮತ್ಸ್ಯಗಂಧ) ಗಾಡಿಯೇ ತಂಗಿದ್ದಾಗ, ಹರಿ ಆಚೀಚೆ ವಿಚಾರಣೆ ನಡೆಸಿದರು. ಅಂಗಡಿಯಾತ “ಅಯ್ಯೋ ಅದು ಆಗಲೇ ಎರಡನೇ ಕಟ್ಟೆಗೆ ಬಂದಂತಿದೆ. ಇನ್ನೆರಡೇ ಮಿನಿಟಿನಲ್ಲಿ…..” ಎನ್ನುತ್ತಿದ್ದಂತೆ ನಮ್ಮ ಅಂಡಿಗೆ ಬೆಂಕಿ ಹತ್ತಿತ್ತು! ಸರಕ್ಕನೆ ಚೀಲಗಳನ್ನು ಬೆನ್ನಿಗೇರಿಸಿ, ಮೇಲ್ಸೇತಿನ ಮೇಲೆ ಕಣ್ಣಿಟ್ಟು ಅವಸರಿಸಿದೆವು. ಎಡ ಮಗ್ಗುಲಲ್ಲಿ ಕುಳಿತಿದ್ದ ಹರಿ ಹಾಗೇ ಹೊರಳಿ ನಡೆದರೆ, ನಡುವಲ್ಲಿದ್ದ ನಾನು, ತುಸು ಬಲದ ಆಸನಗಳ ನಡುವಿನ ಓಣಿಗೆ ನುಗ್ಗಿಯೇಬಿಟ್ಟೆ. ಆದರೆ ವಾಸ್ತವದಲ್ಲಿ ಅಲ್ಲಿ ಆಸನ ಕಳೆದುಹೋಗಿ, ತಳದಲ್ಲಾಧರಿಸುವ ಅಡ್ಡಗೋಲು ದೃಢವಾಗಿತ್ತು. ಅದು ನನ್ನ ಬಲಗಾಲಿನ ಮೊಣಕಾಲ ಕೆಳಗಿನ ಮೂಳೆಗೆ ತೊಡರಾಗಿ, ಕ್ಷಣಾರ್ಧದಲ್ಲಿ ನಾನು ಧೊಪ್ಪನೆ ಮುಂದಿನ ನೆಲಕ್ಕೆ ಬಿದ್ದೆ. ಅದೃಷ್ಟವಶಾತ್ (ಪುಣ್ಯಕ್ಕೆ?!) ಎರಡೂ ಮೊಣಕಾಲು ಮತ್ತು ಅಂಗೈಗಳಷ್ಟೆ ನೆಲಕ್ಕೆ ಅಪ್ಪಳಿಸಿದ್ದರಿಂದ ಸುಧಾರಿಸಿಕೊಂಡೆ. ಮೊಣಕಾಲಿನಿಂದ ಕೆಳಗೆ ಮೂಳೆ ಹೆರೆದ ನೋವು, ಮೊಣಕಾಲು ಮತ್ತು ಮಣಿಗಂಟುಗಳದ್ದೋ ಮೂಕಪೆಟ್ಟಿನ ಅಪಸ್ವರ. ಅಷ್ಟಾಗಿಯೂ ರೈಲಿನ ಯೋಚನೆಯಲ್ಲಿ, ಕನ್ನಡಕ ಹೆಕ್ಕಿ, ಜೇಬುಗಳನ್ನು ತಡವಿ, ಸಾವರಿಸಿಕೊಂಡು, ಹರಿಯ ಬೆನ್ನಿಗೋಡಿದೆ. ನೋವಿನ ಪೂರ್ಣ ಅರಿವಾಗುವುದರೊಳಗೆ (ಕುಂಯ್ಗುಟ್ಟುತ್ತ?) ಮೇಲ್ಸೇತಿನ ಮೆಟ್ಟಿಲಷ್ಟೂ ಏರಿ, ಅಡ್ಡಕ್ಕೋಡಿ, ಅತ್ತ ತಳಕ್ಕೂ ಜಾರಿ, ಇನ್ನೂ ನಿಂತಿದ್ದ ರೈಲೇರಿದ್ದೆವು. ವೇಳಾಪಟ್ಟಿಗೆ ತಪ್ಪದಂತೆ, ಒಂದೇ ಮಿನಿಟಿನಲ್ಲಿ ರಾಜಧಾನೀ ಎಕ್ಸ್‍ಪ್ರೆಸ್ “ನಡೆ ಮುಂದೆ, ನಡೆಮುಂದೆ” ಜಪ ಶುರು ಮಾಡಿತ್ತು.
ರೈಲಿನ ಮುದ್ದು
ರಾಜಧಾನೀ ಎಕ್ಸ್‍ಪ್ರೆಸ್ ಬಗ್ಗೆ ಹೊಗಳಿಕೆಯ ಮಾತುಗಳಷ್ಟೇ ಕೇಳಿದ್ದೆ. ನನಗಿದು ಪ್ರಥಮ ಅನುಭವ. ಹಾಗಾಗಿ “ಅಬ್ಬ, ರೈಲ್ವೇ ಇಲಾಖೆ ಪ್ರಯಾಣಿಕರನ್ನು ಇಷ್ಟು ಮುದ್ದು ಮಾಡುತ್ತದೆಯೇ” ಎಂದನ್ನಿಸಿದ ವಿಚಾರಗಳ ಬಗ್ಗೆ ಎರಡು ಮಾತು ಹೇಳದಿರಲಾರೆ! ‘ರಾಜಧಾನಿ’ಗೆ ನಿಲುಗಡೆಗಳು ಕೆಲವೇ. ನಮ್ಮನ್ನು ರೈಲು ಉಡುಪಿ, ಕಾರವಾರ, ಮಡ್ಗಾಂ….ಎಂದಿತ್ಯಾದಿ ಏಳೇ ಕಡೆಗಳಲ್ಲಿ, ಮಿನಿಟುಗಳ ಕಾಲವಷ್ಟೇ ನಿಲ್ಲಿಸಿ, ೧೫೩೮ ಕಿಮೀ ಓಟದ ಎಂಟನೆಯ ನಿಲುಗಡೆಯಲ್ಲಿ ನಮ್ಮ ಲಕ್ಷ್ಯ – ವಡೋದರ, ಮುಟ್ಟಿಸಲಿತ್ತು. ಓಟ ವೇಗದ್ದು ಮತ್ತು ಸಮಯಪರಿಪಾಲನೆ ತುಂಬ ಖಚಿತ. ಇಡೀ ರೈಲು ಹವಾನಿಯಂತ್ರಿತ ಮತ್ತು ಸಹಜ ಆಸನವಿದ್ದಷ್ಟೇ ಜನ ತೆಗೆದುಕೊಳ್ಳುವ ಬಿಗಿ ನಿಯಮದ್ದು. ಒಟ್ಟಾರೆ ಟಿಕೇಟ್ ಖರೀದಿಸಿ, ಹೇಗಾದರೂ (ಯಾರನ್ನೋ ಒತ್ತರಿಸಿ ಕುಳಿತೋ, ಹಗಲೆಲ್ಲ ಅಟ್ಟಕ್ಕೇರಿ ನಿದ್ರಿಸಿಯೋ) ರೈಲಿಗೆ ಅಂಟಿಕೊಳ್ಳುವ ಅವಕಾಶವೇ ಇಲ್ಲಿಲ್ಲ. ಬಹುಶಃ ಆ ಕಾರಣಕ್ಕೇ ನಮಗೆ ಮಂಗಳೂರಿನಲ್ಲಿ ರಾಜಧಾನಿಯ ಆಗಮನ, ಇರವು ತಿಳಿಯದೇ ಹೋದದ್ದು! ಎಲ್ಲೋ ನಾಲ್ಕು ಇಳಿದಿರಬೇಕು, ನಾವೆರಡೇ ಹತ್ತಲಿದ್ದಿರಬೇಕು!
ಕಂಕನಾಡಿ ನಿಲ್ದಾಣದ ಒಂದನೇ ತಂಗುಕಟ್ಟೆ ನನಗೆ ‘ಕಂಕಣೆಪಾಡಿ’ಯ (ತುಳುವಿನಲ್ಲಿ ಕವುಚಿ ಹಾಕು ಎನ್ನುವ ಅರ್ಥ) ಅನುಭವ ಕೊಟ್ಟಾಗ, ನಮಗೆ ಅನಾಥಪ್ರಜ್ಞೆ ಕಾಡಿದ್ದು ಸುಳ್ಳಲ್ಲ. ಆದರೆ ಎರಡನೇ ತಂಗುಕಟ್ಟೆಗೆ ಧಾವಿಸಿದ್ದಾಗ, ನಿರ್ಜನ ಕಟ್ಟೆಯಲ್ಲೂ ನಮ್ಮನ್ನೇ ಕಾದು ನಿಂತಂತೆ ಸಿಕ್ಕ ರೈಲಿನ ರಕ್ಷಕ, ನಮಗೆ ಭರವಸೆಯ ಕಂದೀಲೇ (ಗ್ರೀನ್ ಸಿಗ್ನಲ್!) ಆಗಿದ್ದ. ನಮ್ಮನ್ನು ನಗುಮುಖದಿಂದ ಸ್ವಾಗತಿಸಿ, ಕ್ಷಣಾರ್ಧದಲ್ಲಿ ನಮ್ಮ ಟಿಕೆಟ್ ನೋಡಿ, ಡಬ್ಬಿ, ಸ್ಥಾನ ನಿರ್ದೇಶಿಸಿ ನಿರುಮ್ಮಳರಾಗಿಸಿದ್ದ. ಒಳಗೆ ಹೋಗಿ ಕೂರುತ್ತಿದ್ದಂತೆ ಬಂದ (ರೈಲಿನಲ್ಲೇ ಇರುವ) ಅಡುಗೆಮನೆ ದೂತ, ಆಹಾರ ಪದ್ಧತಿ (ಸಸ್ಯ ಅಥವಾ ಮಾಂಸ) ವಿಚಾರಿಸಿ, ದಾಖಲಿಸಿಕೊಂಡ. ಮತ್ತೆ ನಿಯತ ಕಾಲಗಳಲ್ಲಿ ಚಾ, ತಿಂಡಿ, ನೀರು, ಹಣ್ಣಿನ ರಸ, ಬಿಡು ವೇಳೆಯ ಕುರುಕಲು, ಸೂಪು, ಊಟ, ಚಾ…. ಕೊಡುತ್ತಲೇ ಹೋದ. ಹೊರಗಿನ ದೂಳು, ವಾಸನೆ, ಭೋರ್ಗುಟ್ಟುವ ಗಾಳಿ, ಬಹುತೇಕ ಶಬ್ದವನ್ನೂ ಹಿತವಾದ ಹವಾನಿಯಂತ್ರಿತ ವ್ಯವಸ್ಥೆ ತಪ್ಪಿಸಿತ್ತು. ವಿಶಾಲ ಕನ್ನಡಿಯ ಕಿಟಕಿಗಳು ದೃಶ್ಯ ವೈಭವವನ್ನು ಹೆಚ್ಚಿಸಿಯೇ ಕೊಡುತ್ತಿದ್ದವು. ಅವೆಲ್ಲ ಬೇಡವೆಂದರೆ, ಮರೆಸಲು ಪರದೆಗಳು, ಚಳಿಯನ್ನಿಸಿ ಮೈಚಾಚುವುದಿದ್ದರೆ ಹಾಸಿ, ಹೊದೆಯಲು ಶುಭ್ರ ಬಟ್ಟೆಗಳು, ಮೇಲಿನಿಂದ ರಗ್ಗು, ತಲೆಗೆ ಇಂಬೂ ಸಿಕ್ಕ ಮೇಲೆ ಕೇಳಬೇಕೇ!
ನಮ್ಮದು ಮೂರು ಹಂತದಲ್ಲಿ ಮಲಗು-ಸೌಕರ್ಯದ ಭೋಗಿ. ಒಟ್ಟಾರೆ ಜನ ಕಡಿಮೆ ಇದ್ದುದರಿಂದ ಹಗಲಲ್ಲೂ ಮಲಗಿ ವೇಳೆ ಕಳೆದವರೇ ಹೆಚ್ಚು. ನಾವಿಬ್ಬರು ಓಣಿ ಬದಿಯ ಸೀಟಿನಲ್ಲಿ ಹಗಲನ್ನು ಕುಳಿತೇ ಕಳೆದೆವು. ನಮ್ಮ ವಿಭಾಗದ ಉಳಿದ ಮೂರು ಮೂರು ಆಸನದ ಉದ್ದದಲ್ಲಿ, ಅದೊಬ್ಬ (ನನಗಿಂತ) ವೃದ್ಧ, ಮತ್ತಾತನ ಹೆಂಡತಿ ಕೇರಳದಾಚೆಯಿಂದ ರಾತ್ರಿಯುದ್ದಕ್ಕೆ ನಡೆಸಿಕೊಟ್ಟ ನಿದ್ರೆಯನ್ನು ಹಗಲಿನಲ್ಲೂ ಮುಸುಕು ಹಾಕಿ, ಆಗೀಗ ಗೊರಕೆ ಹೊಡೆದೂ ಗಂಭೀರವಾಗಿ ಮುಂದುವರಿಸಿದ್ದರು. ಹಾಗೆಂದು ಹೊತ್ತು ಹೊತ್ತಿಗೆ ಬಂದ ತಿನಿಸು, ಪಾನೀಯಗಳನ್ನೇನು ಅವರು ತಿರಸ್ಕರಿಸಲಿಲ್ಲ. ಇನ್ನೊಂದು ವಿಚಿತ್ರ – ರೈಲು ಹೊಳೆ ದಾಟಿದ ಸದ್ದಾದಗಲೆಲ್ಲ ಎದ್ದು, ಅದರ ಹೆಸರು ಮತ್ತು ರಾಜ್ಯವನ್ನು ನಮ್ಮಲ್ಲಿ ವಿಚಾರಿಸುತ್ತಿದ್ದರು! ಕಾರವಾರದವರೆಗೇನೋ ನಮಗೆ ತಿಳಿದದ್ದು ಹೇಳಿದೆವು. ಗೋವಾ, ಮಹಾರಾಷ್ಟ್ರಗಳಿಗಾಗುವಾಗ ತಾರಮ್ಮಯ್ಯ ಆಡಿಸಿದೆವು! ಪಕ್ಕದ ವಿಭಾಗದಲ್ಲಿ ಮೇಲೆ ಮಲಗಿದ್ದ ಅಸಾಮಿಯೊಬ್ಬನ ಜೈವಿಕ ಗಡಿಯಾರ ಇಲ್ಲಿ ಹಿಂದೆ ಬಿದ್ದಿತ್ತು! ರೈಲ್ವೇ ಮಾಣಿ ಮಲಗಿದ್ದವರ ಬಳಿಯೂ ಕೂಗಿ, ತಟ್ಟಿ “ಬೆಡ್ಟೀ”, “ಬ್ರೇಕ್ಫಾಸ್ಟ್” ಮುಟ್ಟಿಸುತ್ತಿದ್ದುದನ್ನು ನಾವು ಕಂಡಿದ್ದೆವು. ಆದರೆ ‘ಹಿಂದುಳಿದವ’, ಸೂರ್ಯಕುಮಾರ – ಹನ್ನೊಂದು ಗಂಟೆಯ ಕುರುಕಲು, ಪಾನೀಯ ಬರುವಾಗ “ನನಗೆ ಬೆಡ್ಟೀ ಕೊಡಲೇ ಇಲ್ಲ” ಎಂಬ ತಕರಾರು ತೆಗೆದಿದ್ದ! ಇನ್ನು ಮಾತಿನ ರೈಲು ಬೆಳೆಸದೇ ನೇರ ನಮ್ಮ ಪಯಣಕ್ಕೆ ಸಂಬಂಧಿಸಿದಂತೆ ಸ್ವಲ್ಪ ಹೇಳುವುದಾದರೆ…..
ಮಂಗಳೂರು – ಉದಯಪುರ ನಮ್ಮ ಅಗತ್ಯಕ್ಕೆ ತಕ್ಕ ನೇರ ರೈಲು ಸಂಪರ್ಕ ಹೊಂದಿರಲಿಲ್ಲ. ಹಾಗಾಗಿ ನಾವು ತತ್ಕಾಲೀನ ಲಕ್ಷ್ಯ – ವಡೋದರ ಆರಿಸಿಕೊಂಡಿದ್ದೆವು. ಅದಕ್ಕೆ ನಡುರಾತ್ರಿಯ ಮುಹೂರ್ತವಿದ್ದುದರಿಂದ ನಾವು ಸ್ವಲ್ಪ ವಿರಮಿಸುವ ಅಂದಾಜು ಮಾಡಿದ್ದೆವು. ಹರಿ ನನ್ನ ಪ್ರಾಯಕ್ಕೆ ಹೆಚ್ಚಿನ ಗೌರವ ಕೊಟ್ಟು, “ನೀವು ಮೇಲೆ ಮಲಗಿ, ನಾನು ಕೆಳಗುಳಿದು, ಸಕಾಲಕ್ಕೆ ಎಬ್ಬಿಸುತ್ತೇನೆ” ಎಂದಿದ್ದರು. ಆದರೆ ನಿತ್ಯದಲ್ಲೂ ವಿರಳ ನಿದ್ರಿಗನಾದ ನಾನು ರೈಲು ನಿಧಾನಿಸಿದ್ದಾಗ, ವಡೋದರದ ಸಂದೇಹದಲ್ಲೇ ಅಟ್ಟಳಿಗೆ ಬಿಟ್ಟಿಳಿದಿದ್ದೆ. ಹರಿ, ಹಿಂದೆ ದ್ವಾರಾವತಿಯಲ್ಲಿ ಅರ್ಜುನ ದುರ್ಯೋದನರು ಸಂದರ್ಶನ ಬಯಸಿ ಬಂದಾಗಿನದೇ ಪೋಸಿನಲ್ಲಿದ್ದರು! ಅಘಟಿತ ಘಟನೆಯೇನೂ ಆಗಲಿಲ್ಲ ಬಿಡಿ. ಹನ್ನೆರಡಕ್ಕೆ ಸರಿಯಾಗಿಯೇ ವಡೋದರದಲ್ಲಿಳಿದೆವು.
ಅಂತರ್ಜಾಲಾಟ ಪ್ರವೀಣ ಹರಿ, ವಾರ ಮೊದಲೇ ಹತ್ತೆಂಟು ಅನಿಷ್ಟಗಳನ್ನು ಕಳೆದು, ಪೂರ್ಣ ಮುಂಗಡ ವರೋಪಚಾರ ಸಹಿತ ಪಯಣದ ಉತ್ತರಾರ್ಧಕ್ಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಪ್ರಕಾರ, ಸೂರತ್ತಿನಿಂದ ಬರುವ ನಿಶಾಚರಿ ಮಲಗು-ಬಸ್ಸು, ವಡೋದರ ತಲಪುವ ಅಪರಾತ್ರಿ ಮೂರು ಗಂಟೆ ನಮ್ಮ ಕಲ್ಯಾಣ ಮುಹೂರ್ತ. ರೈಲ್ವೇ ನಿಲ್ದಾಣದ ಎದುರೇ ಬಸ್ ನಿಲ್ದಾಣವೆಂದು ಮೊದಲೇ ತಿಳಿದುಕೊಂಡಿದ್ದುದರಿಂದ ರಿಕ್ಷಾ, ಕಾರುಗಳ ಹಂಗಿಲ್ಲದೇ ನಡೆದೆವು. ಆದರೆ ಅಲ್ಲಿ ನಮ್ಮ ನಿದ್ದೆಗಣ್ಣಿಗೆ ಸ್ಪಷ್ಟ ಕಾಣಿಸಿದ್ದು –
ಸ್ವತಂತ್ರ ಗೇಟೂ ಭರ್ಜರಿ ಮುಖಮಂಟಪ ಸಹಿತವಿದ್ದ ಪಿವಿಆರ್ ಚಿತ್ರ ಮಂದಿರ ಮತ್ತು ಅಷ್ಟೇ ಗಡದ್ದಿನ ಮಾಲ್! ಅವನ್ನು ಸಮೀಪಿಸುತ್ತಿದ್ದಂತೆ, ಒತ್ತಿನ ಅನಾಮಧೇಯ ಗಲ್ಲಿಗೇ ಬಸ್ಸೊಂದು ನುಗ್ಗಿದಂತೆ ತೋರಿದಾಗ, ನಾವೂ ಧೈರ್ಯ ಮಾಡಿ ನುಗ್ಗಿದ್ದೆವು. ಓರೆ ದಾರಿ, ಅಂಗಡಿ ಮುಂಗಟ್ಟುಗಳ ಎರಡು ಸುವಿಸ್ತಾರ ಜಗುಲಿ ಕಳೆದ ಮೇಲಷ್ಟೇ ನಮಗೆ ಅದುವೇ ವಡೋದರ ಮಹಾನಗರದ ಕೇಂದ್ರ ಬಸ್ ನಿಲ್ದಾಣವೆಂದು ಖಾತ್ರಿಯಾಯ್ತು. ಅನಂತರ ತಿಳಿದು ಬಂತು: ಚಿತ್ರ ಮಂದಿರ ಮತ್ತು ಮಾಲ್ ಸೇರಿದ ಆ ಮಹಾ ವಠಾರಗಳ ನಾಮಕೇವಾಸ್ತೇ ಮಾಲಿಕ ಮತ್ತು ಬಸ್ ನಿಲ್ದಾಣದ ವ್ಯವಸ್ಥೆ ಮಾತ್ರ ಸರಕಾರದ್ದು. ನಿಜದಲ್ಲಿ ಅದು ಬಸ್ ನಿಲ್ದಾಣದೊಡನೆ ‘ಇತರ’ ರಚನೆಗಳನ್ನು ಮಾಡಿಕೊಂಡು, ಖರ್ಚು ಆದಾಯವನ್ನೂ ನಿಯತ ಕಾಲದಲ್ಲಿ ದುಡಿದುಕೊಳ್ಳಲು ಖಾಸಗಿ ವ್ಯವಸ್ಥೆಗೆ (ಅಮಿತ್ ಶಾ ಸಂಬಂಧ?) ಪರಭಾರೆಯಾಗಿದೆ! ಸಹಜವಾಗಿ ಮನೆಯಳಿಯ ಮುಖಮಂಟಪದಲ್ಲಿ ಮೆರೆಯುತ್ತ, ಮಾವಯ್ಯನನ್ನು ಹಿತ್ತಿಲ ಕೊಟ್ಟಿಗೆಯಲ್ಲಿ ಕೂರಿಸಿದ್ದ!
ವಿಚಾರಣಾ ಕೊಠಡಿ ಸಿಬ್ಬಂದಿಯಲ್ಲಿ ಅಸಹನೆ ಮನೆ ಮಾಡಿತ್ತು. ನಿಲ್ದಾಣದ ಕುಂದಕ್ಕೊಂದರಂತೆ ತಗುಲಿಸಿದ್ದ ಗಣಕೀಕೃತ ಪ್ರಕಟಣಾ ಫಲಕಗಳು ಪರಸ್ಪರ ಸಂಬಂಧವಿಲ್ಲದಂತೆ, ಕೇವಲ ಇಂಗ್ಲಿಷ್ ಮತ್ತು ಗುಜರಾಥಿಯಲ್ಲಿ ಏನೇನೋ ಬಸ್ ಸಂಚಾರಪಟ್ಟಿ ತೋರಿಸುತ್ತಲೂ ನಿರಂತರ ಎರಡೂ ಭಾಷೆಗಳಲ್ಲಿ ಗೊಣಗುತ್ತಲೂ ಇದ್ದವು. ಕೆಲವು ರಾತ್ರಿ ಹನ್ನೊಂದು ಗಂಟೆಯಿಂದ ಮುಂದಿನ ಪ್ರಕಟಣೆಗಳಿಗೆ ತೆರೆದುಕೊಳ್ಳುತ್ತಲೇ ಇರಲಿಲ್ಲ. ಇನ್ನು ಕೆಲವು ಮರುಮುಂಜಾನೆ ಐದರನಂತರದ ಬಸ್ ಸಂಚಾರದ ಭವಿಷ್ಯ ನುಡಿದಿದ್ದವು – ವರ್ತಮಾನಕ್ಕೆ, ನಮ್ಮ ಅಗತ್ಯಕ್ಕೆ ಯಾವುದೂ ಸ್ಪಂದಿಸುತ್ತಿರಲಿಲ್ಲ. ಆಗೀಗ ಪ್ರತ್ಯೇಕ ಉಚ್ಚಸ್ತರದ ಧ್ವನಿವರ್ಧಕದಲ್ಲಿ, ವಿಚಾರಣಾ ಕೊಠಡಿ ಸಿಬ್ಬಂದಿ, ಕೇವಲ ಗುಜರಾಥಿಯಲ್ಲಿ, ಯಾವುದೋ ಬಸ್ಸಿನ ಆಗಮನದ್ದೋ ನಿರ್ಗಮನದ್ದೋ ಸುದ್ದಿಯನ್ನು ಸಾರುವುದೂ ನಡೆದಿತ್ತು. ಅಪರಾತ್ರಿಯಾದ್ದರಿಂದ ಒಟ್ಟಾರೆ ಬಸ್ ಹಾಗೂ ಜನ ಸಂಚಾರ ವಿರಳವೇ ಇತ್ತು. ಅಲ್ಲಿನ ಬಸ್ಸುಗಳಾದರೂ ಗುಜರಿ (ಗುಜರಾಥಿನ ಹೃಸ್ವರೂಪ?) ಮಾಲುಗಳಂತೇ ಇದ್ದವು. ಬಹುಶಃ ಅದಕ್ಕೇ ನಮ್ಮೂರ ಬಸ್ಸುಗಳಿಗೆ ಹೋಲಿಸಿದರೆ ಇಲ್ಲಿನ ಟಿಕೇಟ್ ದರವೂ ಅರ್ಧಕ್ಕರ್ಧ ಕಡಿಮೆ (ಸುಮಾರು ೩೪೫ ಕಿಮೀಗೆ, ಮಲಗುವ ಟಿಕೇಟ್ ದರ ಮುನ್ನೂರೇ ರೂಪಾಯಿ!). ಇಂಥಾ ಸ್ಥಿತಿಯಲ್ಲಿ ಬಸ್ಸುಗಳು ನಿಗದಿತ ವೇಳಾಪಟ್ಟಿಯಲ್ಲಿ ಓಡುತ್ತಿವೆಯೇ? ನಮ್ಮದು ದಾರಿಯಲ್ಲಿ ಕೆಟ್ಟು ರದ್ಧಾಗಿರಬಹುದೇ? ಎಂಬಿತ್ಯಾದಿ ನಮ್ಮ ಆತಂಕಗಳಿಗೆ ಅಲ್ಲಿ ಸಮಾಧಾನ ಏನೂ ಸಿಗಲಿಲ್ಲ. ಇದು ಪರೋಕ್ಷವಾಗಿ ನಮ್ಮನ್ನು ನಿದ್ರೆಯಲ್ಲಿ ಕಳೆದು ಹೋಗದಂತೆ ಕಾಪಾಡಿತು. ನಟ್ಟಿರುಳು ಒಂದು ಗಂಟೆಯಿಂದ ತೊಡಗಿ, ಮೂರೂಮುಕ್ಕಾಲರವರೆಗು, ಅಂದರೆ ನಿಜದ ಬಸ್ ಬಂದು, ನಾವದನ್ನು ಏರುವವರೆಗೂ ನಿಲ್ದಾಣಕ್ಕೆ ಬಂದು ಹೋಗುತ್ತಿದ್ದ ಪ್ರತಿ ಬಸ್ಸಿನ ಚಾಲಕ ನಿರ್ವಾಹಕರಲ್ಲಿ ನಮ್ಮದೊಂದೇ ಪಲ್ಲವಿ “ಬಸ್ಸು ಯಾವುದಯ್ಯಾ ಉದಯಪುರಕ್ಕೇ”? ಭಾಷಾ ದುರಭಿಮಾನ ಎಷ್ಟು ಜನವಿರೋಧೀ ಎಂಬುದನ್ನು ತಿಳಿದುಕೊಳ್ಳಲಾದರೂ ಎಲ್ಲ ಭಾಷೆಗಳ (ತಮಿಳು, ಮಲಯಾಳಿ…ಗಳನ್ನು ಸೇರಿಸಿ) ‘ಹಭಿಮಾನಿ, ಉಟ್ಟು ಓರಾಟಗಾರರನ್ನು’ ಇಂಥ ಪರಭಾಷಾ ಸಂದಿಗ್ಧಗಳಲ್ಲಿ ಬಿಸಾಡಬೇಕು!
ನಮ್ಮ ಬಸ್ ನೋಟಕ್ಕೆ ಹೇಗಿದ್ದರೂ ಒಳಗೆ ಎತ್ತರಿಸಿದ ಅಟ್ಟಳಿಗೆಗಳಲ್ಲಿ ಮಲಗುವ ವ್ಯವಸ್ಥೆ, ಅದರ ನೆರಳಿನಲ್ಲಿ ತಲೆ ತಗ್ಗಿಸಿ ನುಗ್ಗಿದರೆ ಹಿಂದೆ ಸರಿಯುವ ಸೀಟುಗಳ ಕೂರುವ ವ್ಯವಸ್ಥೆ ಸರಿಯಾಗಿಯೇ ಇತ್ತು. ನಾವು ಬಾಗಿಲಿನಲ್ಲಿ ನಿರ್ವಾಹಕನ ಅನುಮೋದನೆ ಸಿಕ್ಕ ಮೇಲೆ, ನಿಶ್ಚಿಂತೆಯಿಂದ ಖಾಲಿಯೇ ಇದ್ದ ನಿಗದಿತ ಹಾಸುಗೆಯಲ್ಲಿ ಬಿದ್ದುಕೊಂಡೆವು. ಬಸ್ಸು ನಿಲ್ದಾಣ ಬಿಡುತ್ತಿದ್ದಂತೆ, ಇನ್ನೇನು ನಿದ್ರೆ ನಮ್ಮನ್ನು ಆವರಿಸಿತು ಎನ್ನುವುದರೊಳಗೆ ನಿರ್ವಾಹಕ ಬಂದವನೇ ನಮ್ಮನ್ನು ತಟ್ಟಿ, ಕೆಳಗೆ ಖಾಲಿಯೇ ಇದ್ದ ಆಸನವನ್ನು ತೋರಿದ! ವಿಚಾರಿಸಿದಾಗ ತಿಳಿಯಿತು, ಗಣಕೀಕರಣದ ಕೊರತೆಯಲ್ಲಿ ಕಾಯ್ದಿರಿಸುವಿಕೆ ಆಸನಕ್ಕಷ್ಟೇ ಸೀಮಿತವಾಗಿತ್ತು. ನಾವು ತಲಾ ರೂ ೮೦ ಹೆಚ್ಚುವರಿ ಕೊಟ್ಟು, ನಿದ್ರೆಯನ್ನು ಸಕ್ರಮಗೊಳಿಸಿಕೊಂಡೆವು.
ಸೂರತ್ತಿನಿಂದ ಓಡಿ ಬರುವಾಗ ರೆಗ್ಸಿನ್ ಹಾಸಿಗೆ ಸಂಗ್ರಹಿಸಿದ್ದ ದೂಳನ್ನು ನಾವು ಮಲಗಿಯೇ ಒರೆಸಿಬಿಟ್ಟೆವು. ಮತ್ತೆ ಕಿಟಕಿಯ ಕನ್ನಡಿ ನಿಧಾನಕ್ಕೆ ಸಂದು ಬಿಡುತ್ತಾ ಶೀತಲ ಗಾಳಿ ಹೊಗ್ಗಿಸಿ, ಹೊದಿಕೆ ರಗ್ಗಿನ ಕೊರತೆಯನ್ನೇನೋ ಕಾಣಿಸುತ್ತಿತ್ತು. ಆದರೆ ತುಂಡು ತುಂಡು ನಿದ್ರೆಯೇ ಅಭ್ಯಾಸವಾದ ನನಗೆ ಎಚ್ಚರವಾದಾಗೆಲ್ಲ ಅದನ್ನು ಸುಧಾರಿಸಿಕೊಳ್ಳುವುದು ಕಷ್ಟ ಆಗಲಿಲ್ಲ. ಮತ್ತೆ ಅಷ್ಟು ದೀರ್ಘ ಪಯಣಕ್ಕೆ ಅಷ್ಟು ಕಡಿಮೆ ರುಸುಮು ಕೊಟ್ಟವರಿಗೆ ಇಷ್ಟು ಸಿಕ್ಕಿದ್ದೂ ದೊಡ್ಡದಲ್ಲವೇ! ಸಿನಿಕರಾಗಿ ಬಂದವರು, ಗುಜರಾತ್ ಸರಕಾರೀ ಬಸ್ಸಿನ ಟಿಕೆಟ್ ದರಕ್ಕೆ ನಿಜಕ್ಕೂ ಮಾರುಹೋದೆವು.
ಗುಜರಿಯಿಂದ ಪಂಚತಾರೆಗೆ!
ವಡೋದರ – ಉದಯಪುರ ದಾರಿಯಲ್ಲಿ ಸೂರ್ಯೋದಯದ ಕಾಲಕ್ಕೆ ಆಭಾಪುರ, ಗುರಾಡ್ ವಲಯದ ಪರ್ವತಾವಳಿ ದಾಟುತ್ತಿದ್ದೆವು. ಅಲ್ಲಿ ಕಾಣಿಸಿದ ಭಾರೀ ಶಿವಲಿಂಗಾಕೃತಿಯ ಬೆಟ್ಟ ನಿಜಕ್ಕೂ ಸ್ಮರಣೀಯ. ಎಂಟು ಗಂಟೆಯ ಸುಮಾರಿಗೆ ದಾರಿ ಬದಿಯ ಹೋಟೆಲೊಂದರಲ್ಲಿ ಬಸ್ ತುಸು ದೀರ್ಘಾವಧಿಗೇ ವಿಶ್ರಮಿಸಿತ್ತು. ಇದು ಚಾಲಕ, ನಿರ್ವಾಹಕರೊಡನೆ ಪ್ರಯಾಣಿಕರಿಗೂ ಪ್ರಾತರ್ವಿಧಿ, ಉಪಾಹಾರಗಳಿಗೆ ಬಿಡುವೆಂದು ನಮಗೆ ತಿಳಿಯುವಾಗ (ನಮ್ಮಲ್ಲಿನ ಚಾಲಕ, ನಿರ್ವಾಹಕರು ಘೋಷಿಸುವಂತೆ ಇಲ್ಲಿನವರು ಮಾಡಲಿಲ್ಲ) ಸ್ವಲ್ಪ ತಡವಾಯ್ತು. ಲಘೂಪಹಾರವನ್ನಾದರೂ ಮುಗಿಸಿಕೊಳ್ಳಲೆಂದು ನಾವು ಧಾವಿಸಿದಾಗ, ನಾನು ಹೋಟೆಲ್ ಮೆಟ್ಟಲಿಗೂ ಒಂದು ‘ನಮಸ್ಕಾರ’ ಹಾಕಿಬಿಟ್ಟೆ. ಕಂಕನಾಡಿ ಬಲಗಾಲಿಗೆ ಮಾಡಿದ್ದ ಗಾಯಕ್ಕೆ ಸಂವಾದಿಯಾಗಿ ಇಲ್ಲಿ ಎಡಗಾಲಿಗೂ ಸಣ್ಣ ಜಖಂ ಆಯ್ತು. ಶಕುನಿಗಳು (ಶಕುನ ನಂಬುವವರು) “ಮೂರಕ್ಕೆ ಮುಕ್ತಾಯ” ಎನ್ನುವ ಮಾತಾಡುವುದು ನಾನು ಕೇಳದ್ದೇನೂ ಅಲ್ಲ. ಆದರೆ ಆಕಸ್ಮಿಕಗಳಿಗೆ ಪೂರ್ವೋತ್ತರವಿಲ್ಲ ಎನ್ನುವುದು ನನ್ನ ದೃಢ ನಂಬಿಕೆ. ಅದಕ್ಕೆ ಪೂರಕವಾಗಿ ಇಲ್ಲೇ ಹೇಳಿಬಿಡುತ್ತೇನೆ – ಮುಂದಿನೆಲ್ಲ ಕಲಾಪವನ್ನೂ ನಾನು ನಿರ್ವಿಘ್ನವಾಗಿ ಪೂರೈಸಿ, ಇಂದು ಸ್ವಸ್ತವಾಗಿ ಮನೆಯಲ್ಲಿದ್ದೇನೆ! ಹೊಟ್ಟೆಗೆ ಬಿದ್ದ ಅವಲಕ್ಕಿ, ಚಾ ಕಲ್ಪಿಸಿದ ಒತ್ತಡಕ್ಕೆ ಪರಿಹಾರವನ್ನಷ್ಟೇ ಯೋಚಿಸುತ್ತ ಬಾಕಿದಾರಿ ಮುಗಿಸಿದೆವು.
ನಮಗೆ ಬಂದಿದ್ದ ಸೂಚನಾ ಪತ್ರದಲ್ಲಿ “ಉದಯಪುರದ ಸ್ವಾಗತ ನೆಲೆ – ಹೋಟೆಲ್ (ಇಂಗ್ಲಿಷಿನಲ್ಲಿ) ವೈ-ಓ-ಅಯ್- ಎಸ್” ಎಂದಿತ್ತು. ಉಚ್ಚಾರಣೆ ಅಸಾಧ್ಯವಾದ, ಇತ್ತ ಜೋಯ್ಸಿಕೆಗೂ (ನಮ್ಮ ಜೋಯಿಸ) ಒಲಿಯದ, ಅತ್ತ ಓಯ್ಸಿಕೆಗೂ (ಮರುಭೂಮಿಗೆ ಬೇಕಲ್ಲವೇ ಓಯಸಿಸ್) ಸಿಗದ ಇದೆಲ್ಲೋ ಪೆಲ್ಲಿಂಗ್ ಮಿಟ್ಟೇಕು (spelling mistake ಅರ್ಥಾತ್ ಮುದ್ರಾ ರಾಕ್ಷಸ) ಎಂದುಕೊಂಡೆವು! ನಮ್ಮ ‘ಪ್ರವಾಸ’ದ ಅಧಿಕೃತ ನಾಂದಿ ಸಂಜೆಗಿದ್ದರೂ ಹೋಟೆಲ್ ವಾಸಾನುಕೂಲ ಬೆಳಗ್ಗಿನಿಂದಲೇ ತೆರೆದಿರುತ್ತದೆ ಎಂಬ ಸೂಚನೆ ನಮಗಿತ್ತು. ಹಾಗಾಗಿ ಆ ಅಕ್ಷರ ಸಂಯೋಜನೆಯನ್ನೇ ಗೂಗಲಪ್ಪನಿಗೆ ಕೊಟ್ಟು, ಆಟೋರಾಕ್ಷಸನನ್ನು ಏರಿ ಹೋದೆವು. ನಿಜದಲ್ಲಿ ನಮ್ಮ ತಮಾಷೆ ಮೀರಿಯೇ ಇತ್ತು – ಯೋಯ್ಸ, ಉದಯಪುರದ ಹೊಸ ಬಡಾವಣೆಯ ಹೆಗ್ಗುರುತು, ಪಂಚತಾರಾ ಹೋಟೆಲ್! ರಿಕ್ಷಾ ನಿಲ್ಲುತ್ತಿದ್ದಂತೆ ಠಾಕೋಠೀಕಾಗಿ ಕಂಠಬಿಗಿದ ಕೋಟ್ ಹಾಕಿದವ (ಮರುಭೂಮಿಯಾದರೇನು ಶಿವಾ, ಹೋಟೆಲ್ ಒಳಗೆ ಸದಾ ಚಳಿಗಾಲವೇ!) ಸಟಸಟ ಬಂದು ನಮ್ಮ ಚೀಲಗಳಿಗೆ ಕೈ ಕೊಟ್ಟ! ಗಲ್ಲಾಕ್ಕೆ ಹೋಗುತ್ತಿದ್ದಂತೆ ಸ್ವಾಗತಕಾರಿಣಿ ತಣ್ಣನೆ ಸ್ಟ್ರಾಬೆರಿ ಶರಬತ್ ಕೊಟ್ಟು, ಅದಕ್ಕೂ ತಣ್ಣಗಿನ ಧ್ವನಿಯಲ್ಲಿ ಪ್ರವರ ವಿಚಾರಿಸಿ ದಾಖಲಿಸಿಕೊಂಡಳು.
ನಾವು ‘ಸೈಕಲ್’ ಮಂತ್ರಕ್ಕೆ ‘ಆಧಾರ’ದ ಒತ್ತು ಕೊಟ್ಟದ್ದೇ ಪಂಚತಾರೆ ನಮ್ಮನ್ನು ಆವರಿಸಿಕೊಂಡಳು! ಸುಮಾರು ಮೂವತ್ತು ಗಂಟೆಗಳ ಬಳಲಿಕೆ ಕಳೆದು, ಸಂಜೆಗೇ ಪುನಶ್ಚೇತನರಾಗುವ ಆತುರ ನಮ್ಮದು. ಇದ್ದೊಂದು ಕಕ್ಕೂಸ್ ಸಹಿತ ಬಚ್ಚಲಿಗೆ ಇಬ್ಬರು ತುರ್ತಿನವರ ಹೊಂದಾಣಿಕೆ ನಡೆಯುತ್ತಿದ್ದಂತೆ, ನಿರ್ಯೋಚನೆಯಿಂದ ತಿಂಡಿ-ಊಟಗಳ ಸಂಗಮಕ್ಕೆ ಆದೇಶವನ್ನೂ ಕೊಟ್ಟುಬಿಟ್ಟೆವು. ನಾವು ಹಗುರ, ಶುಚಿಯಾಗುವ ಮುಹೂರ್ತಕ್ಕೆ ಊಟ ಬಿಸಿಯಾಗಿಯೇ ಬಂತು. ಕೊಚ್ಚಿದ ನೀರುಳ್ಳಿ, ನಿಂಬೆ, ಮೆಣಸಿನೊಡನೆ ಹಪ್ಪಳ ಬರಿಯ ಪೀಠಿಕೆ. ದಾಲ್ ಎಂಬ ತೊವ್ವೆ, ಮಿಕ್ಸೆಡ್ ವೆಜಿಟೆಬಲ್ ಕರ್ರಿ ಎಂಬ ಸಂಮಿಶ್ರ ತರಕಾರಿ ಗೊಜ್ಜು, ರೋಟಿ ಎಂಬ ರೊಟ್ಟಿ, ಚಾಜ್ ಎಂಬ ಮಜ್ಜಿಗೆ, ಅಚಾರ್ ಆದ ಉಪ್ಪಿನಕಾಯಿಗಳೆಲ್ಲ ರುಚಿಯಾಗಿಯೇ ಇತ್ತು, ತುಸು ಹೆಚ್ಚೇ ಆಯ್ತು. ಕೊನೆಯಲ್ಲಿ, ನಾವು ಅನ್ನಕ್ಕೂ ಕೊಟ್ಟಿದ್ದ ಆದೇಶ ಪೂರೈಕೆಯಾಗಿಲ್ಲ ಎಂದು ಕಂಡೆವು. ವಿಚಾರಿಸಿದಾಗ ಲಿಪಿಕಾರನ ಕಣ್ತಪ್ಪಿನಲ್ಲಿ ಬಿಟ್ಟು ಹೋಗಿತ್ತು. ತೃಪ್ತಿಯ ತೇಗಿನೊಡನೆ, “ಒಳ್ಳೇದೇ ಆಯ್ತು” ಎನ್ನುವುದರೊಳಗೆ ಬಿಲ್ ಬಂತು. ತಿಂದ ಸ್ವಲ್ಪಕ್ಕೇ ಅದು ಸಾವಿರದಿನ್ನೂರು ರೂಪಾಯಿ ಎಂದಾಗ, ನಾವು ಅವಸರಕ್ಕೆ ಕೊಟ್ಟ ಬುದ್ಧಿಯನ್ನು ಹಳಿದುಕೊಂಡೆವು. ತಿಂದದ್ದೆಲ್ಲ ಮೈಹತ್ತದೆಂದೂ ಹೇವರಿಸಿದೆವು. ಕೊನೆಯಲ್ಲಿ ತಿಂದಷ್ಟಾದರೂ ರುಚಿಯಾಗಿತ್ತು, ಕೇಳಿಯೂ ಬಾರದ ಅನ್ನದ ದುಡ್ದು ಉಳಿಯಿತು, ಎಂದು ನಮ್ಮ ಮನವ ಸಂತೈಸಿಕೊಂಡೆವು.
ಸಂಜೆ ಸಮೀಪದ ಚಾವ್ಲಾ ವಠಾರದೊಳಗಿದ್ದ ‘ಬೈಕ್ ಸ್ಟುಡಿಯೋ’ ಎಂಬ ಸೈಕಲ್ ಮಳಿಗೆಗೆ ನಡೆದೇ ಹೋದೆವು. ಯೋಜನೆಯಂತೇ ಅನಿಲ್ ಶಾಸ್ತ್ರಿ ಕೂಡಾ ಅಲ್ಲಿ ನಮ್ಮನ್ನು ಸೇರಿಕೊಂಡರು. ಭಾರತಾದ್ಯಂತ ಹಲವು ಶಾಖೆಗಳಿರುವ ಬೈಕ್ ಸ್ಟುಡಿಯೋದ ಉದಯಪುರ ಕವಲು, ತನ್ನ ಬಗಲಲ್ಲೇ ಸೈಕಲ್ಲಿಗರ ತತ್ಕಾಲೀನ ಎಲ್ಲ ಅಗತ್ಯಗಳನ್ನೂ ಪೂರೈಸುವಷ್ಟು ಸುಸಜ್ಜಿತವಿತ್ತು. ತುಸು ತಡವಾಗಿಯೇ ಆದರೂ ಅಲ್ಲಿನ ಹುಲ್ಲ ಹಾಸಿನ ಮೇಲೆ ‘ಕಾಡಿಗೆ ಪೆಡಲಿ’ಯ ಆರಂಭಿಕ ಉಪಚಾರಗಳು ಸರಳ ಸುಂದರವಾಗಿ ನಡೆಯಿತು. ಅಭ್ಯರ್ಥಿಗಳಿಗೆ ಅವರವರ ಸೈಕಲ್ ತರುವ ಸ್ವಾತಂತ್ರ್ಯ ಇತ್ತು. ಆದರೆ ನಾವು ಮುಂದಾಗಿ ಕೇಳಿಕೊಂಡಂತೆ, ಸ್ಥಳೀಯವಾಗಿ ಬಾಡಿಗೆ (೨೧ ವೇಗದ ಎಂಟೀಬೀ ಸೈಕಲ್ ಒಂದಕ್ಕೆ ಮೂರು ದಿನಕ್ಕೆ ರೂಪಾಯಿ ಒಂದು ಸಾವಿರ ಬಾಡಿಗೆ, ಎರಡು ಸಾವಿರ ಭದ್ರತಾ ಠೇವಣಿ) ಸೈಕಲ್ಲುಗಳನ್ನು ನಮ್ಮ ಹೆಸರಿನ ಫಲಕ ಹಚ್ಚಿ ಕಾಯ್ದಿರಿಸಿದ್ದರು. ಔಪಚಾರಿಕ ಉದ್ಘಾಟನೆಯಲ್ಲಿ ಇಲಾಖಾ ಮುಖ್ಯಸ್ಥ (ಚೀಫ್ ಕನ್ಸರ್ವೇಟರ್ ಆಫ್ ಫಾರೆಸ್ಟ್ಸ್ ವೈಲ್ಡ್ ಲೈಫ್) ರಾಹುಲ್ ಭಟ್ನಾಗರ್ ಅಧ್ಯಕ್ಷತೆಯಲ್ಲಿ, ತಂಡದೊಡನೆ ಇಲಾಖಾ ನಾಯಕತ್ವ ವಹಿಸಿದ (ಡೀಎಫೋ) ಸುಹೇಲ್ ಮಜ್ಬೂರ್, ಸಹಯೋಗ ಕೊಟ್ಟ ಸಂಸ್ಥೆ – ಲೆ ಟೂರ್ ಡೆ ಇಂಡಿಯಾದ ಸಂಚಾಲಕನಾಗಿ ಕುಶಾಲ್ ರಾಥೋರ್ ಭಾಗವಹಿಸಿದ್ದರು. ಕೃತಕತೆಯಿಲ್ಲದ ಚುಟುಕು ಸಮಾರಂಭ ಮೂರು ದಿನದ ಕಲಾಪಕ್ಕೆ ಅರ್ಥಪೂರ್ಣ ಮುನ್ನುಡಿಯಿತು. ಅದಕ್ಕೆ ಕಳಸವಿಟ್ಟಂತೆ ಗಣ್ಯ ಅತಿಥಿಯಾಗಿ ಬಂದೊಬ್ಬರ ಬಗ್ಗೆ ಎರಡು ಮಾತು..
ಋಷಭ್ ಜೈನ್ – ಉದಯಪುರಕ್ಕೆ ಇದೇ ಪ್ರಥಮವಾಗಿ ‘ಐರನ್ ಮ್ಯಾನ್’ (ಬಹುಶಃ ಭಾರತಕ್ಕೆ ಹನ್ನೆರಡನೇ) ಅರ್ಹತಾಪತ್ರವನ್ನು ಸಾಧಿಸಿ ತೋರಿದ ತರುಣನನ್ನು ವಿಶೇಷ ಸ್ಮರಣಿಕೆ ಕೊಟ್ಟು ಸಮ್ಮಾನಿಸಿದರು. ನಮಗೆಲ್ಲ ಪರಿಚಿತವಾದ ಮ್ಯಾರಥಾನಿನಂತೆ, ಜಾಗತಿಕ ಮಟ್ಟದಲ್ಲಿ, ವಿವಿಧೆಡೆಗಳಲ್ಲಿ, ತೀರಾ ಅಸಾಧ್ಯ ಕ್ರೀಡಾ ಸವಾಲುಗಳನ್ನು ಒಡ್ಡಿ ಮನುಷ್ಯನ ದೈಹಿಕ ತಾಕತ್ತಿನ ಉತ್ತುಂಗವನ್ನು ಸಾರುವ ಪ್ರಶಸ್ತಿ – ಐರನ್ ಮ್ಯಾನ್. ಅಂಥ ಒಂದು ಮಲೇಶ್ಯಾದ ಸರಣಿಯನ್ನು ಟ್ರಯಾತ್ಲಾನ್ (ಅವಿರತ ಮೂರು ಬಗೆಯ ಓಟ) ಆಗಿ ನಡೆಸುತ್ತಾರೆ. ಅದರಲ್ಲಿ ೨೦೧೮ರ ನವೆಂಬರಿನಲ್ಲಿ, ಜಾಗತಿಕವಾಗಿ ನೆರೆದ ಸುಮಾರು ೨೪೦೦ ಸ್ಪರ್ಧಿಗಳೊಡನೆ (ಅದರಲ್ಲಿ ಭಾರತದವರು ಸುಮಾರು ಐವತ್ತು ಮಂದಿ) ನಿಕಷಕ್ಕೆ ಒಡ್ಡಿಕೊಂಡು, ಪೂರ್ಣಗೊಳಿಸಿದ ಖ್ಯಾತಿ ಋಷಭ್ ಜೈನರದ್ದು. ನಾಲ್ಕು ಕಿಮೀ ಸಮುದ್ರ ಈಜು, ೧೮೦ ಕಿಮೀ ಸೈಕಲ್ ಸವಾರಿ (ಸಮತಟ್ಟು ಮೈದಾನವೇನಲ್ಲ, ಊರುಕೇರಿಯ ದಾರಿಗಳಲ್ಲಿ ಮತ್ತು ಔನ್ನತ್ಯ ಗಳಿಕೆ ೧೫೦೦ ಮೀಟರ್!) ಮತ್ತು ೪೨ ಕಿಮೀ ಓಟವನ್ನು, ಸುಮಾರು ಹದಿನೇಳು ಗಂಟೆಯೊಳಗೆ ಪೂರೈಸಿದ ಸಾಹಸಿ ಋಷಭ್. ಅವರು ಪ್ರಮಾಣಪತ್ರ, ಪದಕವನ್ನು ತೋರಿಸಿ, ತಮ್ಮ ಸಾಧನೆಯ ಆತ್ಮೀಯ ವಿವರಗಳನ್ನು ಸಂಕ್ಷಿಪ್ತವಾಗಿ ನಮ್ಮೆದುರು ತೆರೆದಿಟ್ಟರು. ಕಳೆದ ಎಂಟು ಹತ್ತು ವರ್ಷಗಳಿಂದ ಉದಯಪುರದಲ್ಲಿ ಆಧುನಿಕ ಗರಡಿಮನೆ ನಡೆಸುತ್ತಿರುವ ಋಷಭ್, ವೃತ್ತಿ ಪ್ರವೃತ್ತಿ ಮತ್ತು ಸಂಸಾರಗಳ ಸಮತೋಲನದಲ್ಲಿ ಸಾಧಿಸಿದ ಎತ್ತರ, ಕಾಡಿಗೆ ಪೆಡಲಲಿದ್ದ ನಮಗೆ ನಿಸ್ಸಂದೇಹವಾಗಿ ಬಹುದೊಡ್ಡ ಪ್ರೇರಣೆಯೇ ಆಯ್ತು.
ಕಲಾಪಗಳ ಕೊನೆಯಲ್ಲಿ ಅಲ್ಲೇ ಸುಗ್ರಾಸ ಭೋಜನದ ವ್ಯವಸ್ಥೆಯೂ ಇತ್ತು. ಸೈಕಲ್ಲುಗಳನ್ನು ಮರು ಬೆಳಿಗ್ಗೆ ಕಲಾಪ ಆರಂಭಿಸುವ ಸ್ಥಳಕ್ಕೇ ಮುಟ್ಟಿಸುವ ವ್ಯವಸ್ಥೆಯಿದ್ದುದರಿಂದ, ನಾವು ನಿಶ್ಚಿಂತರಾಗಿ, ನಿದ್ರೆಗಷ್ಟೇ ಯೋಯ್ಸ ಸೇರಿದೆವು!
ಭಾಗ್ಡೋರಾ ಬಾಗಿಲಿನಲ್ಲಿ ಬೆಳಗ್ಗೆ ಒಂದೇ ಸ್ಥಳದಿಂದ ಮತ್ತು ಬೇಗನೇ ಹೊರಡುವ ಅನುಕೂಲಕ್ಕಾಗಿ ಬಹುತೇಕ ಎಲ್ಲ ಅಭ್ಯರ್ಥಿಗಳನ್ನೂ ಹೋಟೆಲ್ ಯೋಯ್ಸದಲ್ಲೇ ಉಳಿಸಿದ್ದರು. ಅಂತೆಯೇ ಮುಂದಿನ ಎರಡು ರಾತ್ರಿಗಳಲ್ಲಿ ವಾಸ ಬಯಲಿನಲ್ಲೇ ಆದರೂ ನಮಗೆ ಗುಡಾರ ಮತ್ತು ಮಲಗೋಚೀಲ ಕೊಟ್ಟು, ಬೆಚ್ಚಗುಳಿಸುವ ಖಾತ್ರಿಯನ್ನೂ ಸಂಘಟಕರು ಕೊಟ್ಟಿದ್ದರು. ಎಲ್ಲಕ್ಕೂ ಮಿಗಿಲಾಗಿ ನಾವು ಹೋಗುತ್ತಿದ್ದದ್ದು ಕಾಡಿಗೆ, ಅದೂ ಸಾಹಸ ಸಾಧನೆಗೆ. ‘ಕಾಡಿಗೆ ಪೆಡಲಿ’ ಸಾಹಸಯಾನಕ್ಕೆ ಬಂದವರಿಗೆಲ್ಲ ಇದು ಸ್ಪಷ್ಟ ತಿಳಿದೇ ಇತ್ತು. ಮತ್ತೆ ಬಂದವರಲ್ಲೂ ಹೆಚ್ಚಿನ ಮಂದಿ ಒಂದೋ ರಾಜಸ್ತಾನಿಗಳೇ (ಉದಯಪುರ, ಜೈಪುರ, ಜೋಧ್ಪುರ, ಕೋಟಾ ಎಂದು ೨೧ ಮಂದಿ) ಅಥವಾ ಈ ವಾತಾವರಣದ ಪರಿಚಿತರೇ. (ತೀವ್ರ ಚಳಿಗಾಲದ ರಾತ್ರಿಗಳಲ್ಲಷ್ಟೇ ಮರುಭೂಮಿಯ ಉಷ್ಣತೆ ಒಮ್ಮೊಮ್ಮೆ ಮಾತ್ರ ಶೂನ್ಯದ ಬಳಿ ಸುಳಿಯುವುದಿದೆ!) ಹಾಗಿದ್ದೂ ಕರ್ನಾಟಕದ ದೂರದಿಂದ ಹೋದ ನಾವು ಮೂವರು, ಸಕಾಲಕ್ಕೆ ಸಜ್ಜಾಗಿ, ಸಣ್ಣ ಚೀಲಗಳನ್ನಷ್ಟೇ (ಬೆಳಿಗ್ಗೆ ಆರಕ್ಕೆ ಮೊದಲೇ) ಹೋಟೆಲ್ ಮುಖಮಂಟಪದಲ್ಲಿ ಹಾಜರಾಗಿದ್ದೆವು. ಉಳಿದ ಬಹುಮಂದಿಯ ಹೊರಡುವ ಗದ್ದಲವೇನೋ ಬೆಳಗ್ಗೆ ಐದು ಗಂಟೆಯಿಂದಲೇ ಕೇಳುತ್ತಿತ್ತು. ಆದರೆ ಎಲ್ಲ ಮುಗಿಸಿ ಭಾರೀ ಸುಟ್ಟಕೇಸುಗಳನ್ನು, (ವ್ಯಕ್ತಿಗೆ ಮೂರರಂತೆ ಹಡಪ ಹೊತ್ತವರೂ ಇದ್ದರು!) ಮತ್ತು ಚೀಲಗಳನ್ನು ಎಳೆದೋ ನೂಕಿಯೋ ಭುಜ ಜಗ್ಗಿಸಿಯೋ ಕೊನೆಗೆ “ರೂಂ ಭಾಯ್”ಗೇ ಹೇರಿಯೋ ಅರ್ಧಗಂಟೆಯವರೆಗೂ ತಡವಾಗಿ ಬರುತ್ತಲೇ ಇದ್ದರು. ವಿಶೇಷ ಬಸ್ಸು ನಮ್ಮೆಲ್ಲರನ್ನು ಸುಮಾರು ೧೭ ಕಿಮೀ ಅಂತರದ ಡೇರಾ ಭಾಗ್ಡೊರಾ ರಾಷ್ಟ್ರೀಯ ಉದ್ಯಾನದ ಮಹಾದ್ವಾರಕ್ಕೆ ಏಳು ಗಂಟೆಯ ಸುಮಾರಿಗೆ ಮುಟ್ಟಿಸಿತು.
ಉದ್ಯಾನದ ತೋರಣ ಶೃಂಗಾರ ಸರಕಾರೀ ಇಲಾಖೆಗೆ ತಕ್ಕುದಾಗಿ, ಭರ್ಜರಿಯಾಗಿಯೇ ಇದೆ. ಅಲ್ಲಿ ಭಾರೀ ಉತ್ಸವದ ವಾತಾವರಣ ಕಲ್ಪಿಸಿದ್ದರು. ಡಕ್ಕ ಡಕ್ಕ ಡೋಲು ಬಾಜಣದೊಡನೆ, ಹಳ್ಳಿಗರು ನಮಗೆಲ್ಲ ತಿಲಕವಿಟ್ಟು, ಚೆಂಡುಹೂವಿನ ಹಾರ ಹಾಕಿದರು. (ಕುರಿ, ಕೋಣದ ತಲೆಗಡಿಯುವ ಮೊದಲು ಹೀಗೇ ಮಾಡುತ್ತಾರೆ ಎಂದು ನೆನಪಾಗದಿರಲಿಲ್ಲ!) ದ್ವಾರದ ಒಳಗೆ ಎಡ ಅಂಚಿನ ಉದ್ದಕ್ಕೆ ನಿಂತ ಸೈಕಲ್ಲುಗಳು “ಏನಿಷ್ಟು ತಡ” ಎಂದು ನಮ್ಮನ್ನು ಅಣಕಿಸಿತ್ತು. ಇನ್ನೊಂದೆಡೆ ಕಾದಿದ್ದ ವ್ಯಾನಿಗೆ ನಮ್ಮ ಸವಾರಿಯ ನೇರ ಅಗತ್ಯಗಳನ್ನು ಬಿಟ್ಟು (ಶಿರಸ್ತ್ರಾಣ, ನೀರಂಡೆ ಮತ್ತು ಬೇಕಿದ್ದರೆ ಹಗುರದ ಬೆನ್ನಚೀಲ), ಎಲ್ಲ ಹೊರೆಯನ್ನೂ ತುಂಬಿದೆವು. ಈ ವ್ಯಾನ್ ಇತರ ಶಿಬಿರ ಸಾಮಗ್ರಿಗಳೊಡನೆ ಯೋಜಿತ ತಾಣಕ್ಕೆ ಮುಂದಾಗಿಯೇ ಹೋಗುವುದಿತ್ತು. ಮಾರ್ಗಕ್ರಮಣದಲ್ಲಿನ ಸೈಕಲ್ ತುರ್ತಿಗೆ ಕುಶಲಕರ್ಮಿ ಸಹಿತ ಇನ್ನೊಂದೇ ವ್ಯಾನಿನಲ್ಲಿ ಸ್ವತಃ ಡೀಎಪ್ಫೋ ಸುಹೇಲ್ ಮಜ್ಬೂರ್ ನಮ್ಮನ್ನು ಹಿಂಬಾಲಿಸಲು ಸಜ್ಜಾಗಿದ್ದರು, ಹೆಚ್ಚಿನ ಬಂದೋಬಸ್ತಿಗೆ, ಒಂದಷ್ಟು ಸೈಕಲ್ ಟ್ಯೂಬ್ ರಾಶಿ ಹಾಕಿ, ಎಲ್ಲರೂ ಒಂದೊಂದನ್ನು ತಮ್ಮ ಬೆನ್ನಚೀಲಕ್ಕೆ ತುಂಬಿಕೊಳ್ಳುವುದುತ್ತಮ ಎಂದೂ ಸೂಚಿಸಿದರು. (ನಾನು ತುಂಬಿಕೊಂಡದ್ದನ್ನು ಬಳಸುವ ಅಗತ್ಯ ಬಾರದೇ ಕೊನೆಯಲ್ಲಿ ಮರಳಿಸಿದೆ) ಮೂರನೆಯ ವಾಹನದಲ್ಲಿ ಸ್ಥಿರ, ಚಲಚಿತ್ರಗಳಲ್ಲದೆ ಡ್ರೋನ್ ದೃಶ್ಯಗಳ ದಾಖಲಾತಿಗೂ ತಂಡ ಸಜ್ಜಾಗಿತ್ತು. ಇಷ್ಟಲ್ಲದೆ ಇಲಾಖಾ ವರಿಷ್ಠ ರಾಹುಲ್ ಭಟ್ನಾಗರ್ ಸಪತ್ನೀಕರಾಗಿ ಕಾರೇರಿ, ಮೂರೂ ದಿನಗಳಂದು ಬೇರೆ ಬೇರೆ ಕಡೆಗಳಲ್ಲಿ ನಮ್ಮ ಯಾನಕ್ಕೂ ರಾತ್ರಿಗಳಲ್ಲಿ ಶಿಬಿರವಾಸಕ್ಕೂ ಜತೆಗೊಡುವವರಿದ್ದರು.
ನಿಜ ಸವಾರಿಯುದ್ದಕ್ಕೆ ನಮಗೆ ಅವಿರತ ಜತೆಗೊಟ್ಟ ಮೂವರು ತರುಣರನ್ನು ನಾನು ಮೊದಲಲ್ಲೇ ನೆನೆಯುವುದು ಅವಶ್ಯ. ಈ ಯೋಜನೆ ಅರಣ್ಯ ಇಲಾಖೆಗೆ ಪೂರ್ಣ ಸ್ವಂತ ನೆಲ, ಅಪಾರ ಜನ ಮತ್ತು ಸೌಕರ್ಯಗಳ ಬಲದ ಸಣ್ಣ ಹೊಂದಾಣಿಕೆಯಲ್ಲಿ ನಡೆದಿತ್ತು. ಅದರ ವೆಚ್ಚವನ್ನು ಗಣಿಸಿದರೆ, ನಾವು ಕೊಟ್ಟ ಶುಲ್ಕ ಎಲ್ಲಿಗೂ ಮುಟ್ಟಲಾರದು; ನಿಜಾರ್ಥದಲ್ಲಿ ಅವರು ಆತಿಥೇಯರು. ವಾರಗಳಿಗೂ ಮೊದಲೇ ಕಲಾಪವನ್ನು ಜಾಹೀರುಪಡಿಸಿ, ಅರ್ಜಿ, ಶುಲ್ಕ ಸ್ವೀಕರಿಸಿ, ಯೋಗ್ಯತೆಯನ್ನು ಪರಿಗಣಿಸಿ ಕರೆಕೊಡುವುದರಿಂದ ತೊಡಗಿ, ಮಂಜುಸುರಿದ ಬೆಳಗ್ಗಿನಲ್ಲಿ “ನನ್ನ ಜೆರ್ಸಿ ಒಣಗಿಯೇ ಇಲ್ಲ”ದವರೆಗೆ ಭಾಗಿಗಳಿಗೆ ನೇರ ಉತ್ತರದಾಯಿಯಾಗಿ ನಿಂತವನು ಲೆ ಟೂರ್ ಇಂಡಿಯಾದ ಕುಶಾಲ್ ರಾಥೋರ್. ಈತ ಯಾನದುದ್ದಕ್ಕೂ ಸಮಯಪರಿಪಾಲನೆ, ಮುಖ್ಯ ಸೂಚನೆಗಳು, ಸಭಾ ನಿರ್ವಹಣೆಗಳೆಲ್ಲವನ್ನೂ ಸದಾ ಹಸನ್ಮುಖದಿಂದಲೇ ನಡೆಸಿದ. ಈತ ನಮ್ಮ ಸವಾರಿಯುದ್ದಕ್ಕೂ ಸಹಾಯಕ್ಕೊದಗುವಂತೆ, ತನ್ನ ಮೋಟಾರ್ ಸೈಕಲ್ಲಿನಲ್ಲಿ ಜತೆಗೊಟ್ಟಿದ್ದ. ಈ ಓಡಾಟದಲ್ಲಿ ಅನಿವಾರ್ಯವಾಗಿ ಏಳುತ್ತಿದ್ದ ದೂಳನ್ನು ನೋಡಿ, ನಾನಂತೂ ಪ್ರೀತಿಯಿಂದಲೇ ‘ದೂಳೀವಾಲ’ ಎಂದೇ ಅಡ್ಡ ಹೆಸರಿಟ್ಟಿದ್ದೆ!
ಸಂಘಟನೆಯ ಭಾಗವಾಗಿ ಮತ್ತು ಸ್ವತಃ ಸೈಕಲ್ ಏರಿಯೇ ನಮ್ಮೊಡನೆ ಇನ್ನಿಬ್ಬರು ತರುಣರು ಬಂದಿದ್ದರು. ಅದರಲ್ಲಿ ನೋಟಕ್ಕೆ ಭಾರೀ ಸೌಮ್ಯ, ಕೃತಿಯಲ್ಲಿ ಪ್ರಚಂಡ – ತ್ರಿಲೋಕ್ ಕುಮಾರಸ್ವಾಮಿ! ಈತ ಜೈಪುರದ ಬೈಕ್ ಸ್ಟುಡಿಯೋದ ಪಾಲುಗಾರ. ಈತನ ಸಂಕ್ಷಿಪ್ತ ಸಾಧನಾ ಪಟ್ಟಿ ನೋಡಿ: ಎರಡು ಗಂಟೆ ಮೂವತ್ತೊಂದು ಮಿನಿಟಿನಲ್ಲಿ ನೂರು ಕಿಮೀ ಅಂತರವನ್ನು (ಸೈಕಲ್ ಮೈದಾನದೊಳಗೆ) ಸಾಧಿಸಿದ ವೇಗವಂತ. ನೂರು ಕಿಮೀ ಅಳತೆಯ (ಒಂದು ಲ್ಯಾಪ್) ಬಯಲ ಮಾಪನದಲ್ಲಿ ಈತ ನಿರಂತರ ಇಪ್ಪತ್ನಾಲ್ಕು ಗಂಟೆ ಸೈಕಲ್ ಪೆಡಲಿ ಆರು ಶತಕದ ಮೇಲೆ ಒಂಬತ್ತು ಕಿಮೀ ಗಳಿಸಿದ ಆರ್ಮುಗ (= ಕುಮಾರಸ್ವಾಮಿ)! ಈ ಅಂತರವನ್ನು ನಮ್ಮೂರಿಗೆ ಅನ್ವಯಿಸಿ ಹೇಳುವುದಿದ್ದರೆ – ಬೆಳಿಗ್ಗೆ ಪುತ್ತೂರು ಬಿಟ್ಟವ ಸಂಜೆ ಬೆಂಗಳೂರು ಮುಟ್ಟಿ, ಮರು ಬೆಳಿಗ್ಗೆ ಪುತ್ತೂರಲ್ಲಿ ಹಾಜರಾತಿ ಕೊಟ್ಟಂತೆ. ನಮ್ಮ ಮೂರು ದಿನದ ಯಾನದಲ್ಲಿ ಈತ ಬಳಸಿದ್ದು ಆನೆ ಸೊಂಡಿಲಿನ ಗಾತ್ರದ ಚಕ್ರಗಳಿರುವ ಭಾರೀ ಸೈಕಲ್ – ಆರ್ಗನ್ ೧೮. ಆದರೇನು ಕುತ್ತೇರು, ದಡಬಡ ಕಲ್ಲು, ಇತರ ಸೈಕಲಿಸ್ಟರ ಗೊಂದಲಗಳ ನಡುವೆಯೂ ಈತ ಎಲ್ಲೂ ಇಳಿಯದೆ, ಏದುಸಿರು ಬಿಡದೆ, ತಂಡದ ಹಿಂದೆ ಮುಂದೆ ಓಡಾಡಿಕೊಂಡೇ ಇದ್ದ. ನಮ್ಮನ್ನೆಲ್ಲ ಸಂಭ್ರಮದಲ್ಲೇ ಸ್ವಾಗತಿಸುತ್ತಿದ್ದ ಹಳ್ಳಿಗರು, ಈತನ ಚಕ್ರದ ಗಾತ್ರ ನೋಡಿದಾಗ ಬೆರಗಿನಲ್ಲಿ ಮೂಕರಾಗಿಬಿಡುತ್ತಿದ್ದರು. ನಾನೇ ಒಬ್ಬಿಬ್ಬರಿಗೆ ಸಮಾಧಾನ ಹೇಳಿದ್ದಿತ್ತು “ಹಾಳು ದಾರೀಂತ ಟ್ರ್ಯಾಕ್ಟರ್ ಚಕ್ರ ಹಾಕಿಕೊಂಡು ಬಂದಿದ್ದಾರೆ – ನಮ್ಮ ಟ್ರ್ಯಾಕ್ಟರ್ವಾಲಾ”! ತ್ರಿಲೋಕರಂತೇ ತಂಡದ ಮುಂದು ಹಿಂದನ್ನು ಕಾಯ್ದುಕೊಳ್ಳುತ್ತಾ ಅಲ್ಲಲ್ಲಿನ ಸಣ್ಣ ಪುಟ್ಟ ಸಲಹೆ ಸಹಾಯ ನೀಡುತ್ತಿದ್ದ ಇನ್ನೋರ್ವ ಅನುಭವೀ ತರುಣ – ಉಮೇಶ್ ಗೌತಮ್. ಈತನ ಸೈಕಲ್ ಸವಾರಿಯ ದಾಖಲಿಲೆಗಳ ಕುರಿತು ನಾನು ಹೆಚ್ಚು ತಿಳಿದಿಲ್ಲ. ಆದರೆ ದೀರ್ಘ ಸವಾರಿಯಲ್ಲಿ ಈತ ಎಲ್ಲರಿಗೂ ಕೊಟ್ಟ ಮುಂದಾಳ್ತನ, ಕೊನೆಯಲ್ಲಿ ಪ್ರಾಯೋಗಿಕ ಸಲಹೆಗಳ ಜತೆ ಕೊಟ್ಟ ವ್ಯಾಯಾಮ ಪಾಠ ಬಹುಮಂದಿಯ ವೃಥಾ ಬಳಲಿಕೆ, ಮಾಂಸಖಂಡಗಳ ಸೆಟೆತಗಳನ್ನು ನಿವಾರಿಸಿದ್ದಂತೂ ಹೌದು.
ಪುಟ್ಟ ವೇದಿಕೆಯಲ್ಲಿ ಸೇರಿದ ಕೆಲ ಗಣ್ಯರು, ನಾಲ್ಕೇ ಔಪಚಾರಿಕ ಮಾತುಗಳನ್ನಾಡಿದರು. ಭಟ್ನಾಗರ್ ಅವರು ಸಾಹಸಯಾನಕ್ಕೆ ನಿಜ ನಿಶಾನಿ ತೋರುವಾಗ ಗಂಟೆ ಎಂಟು ಕಳೆದಿತ್ತು. ಅರಾವಳಿ, ಭೂವಿಜ್ಞಾನದ ಭಾಷೆಯಲ್ಲಿ ತೀರಾ ಹಳೆಯದಾದ, ಸಹಜವಾಗಿ ತುಂಬಾ ಸವಕಳಿಗೀಡಾಗಿ ಮುಕ್ಕಾದ ಪರ್ವತಶ್ರೇಣಿ. ಇದರ ಅತ್ಯುನ್ನತಿಯಲ್ಲೂ ಹೆಸರಾಂತ ಶಿಖರಗಳೇನೂ ಇಲ್ಲ. ಮುಖ್ಯವಾಗಿ ಕಾಣುವಂತೆ ಶಿಲಾ ಚೂರು, ಬಂಡೆಹಾಸುಗಳಿಂದಾಗಿ ನೀರು, ಹಸಿರು ಕಡಿಮೆ.
ನಮ್ಮ ಕರಾವಳಿ ವಲಯದ ಗೇರುಗುಡ್ಡೆಗಳಂತೆ ವಿರಳ ಮರ, ಬಹುತೇಕ ಕುರುಚಲು ಕಾಡು. ಒಣ ನೆಲಕ್ಕೆ ಸಹಜವಾಗಿ ಎಲೆ ಉದುರಿಸುವ ವರ್ಗದ ಸಸ್ಯರಾಜಿ ಇಲ್ಲಿ ವ್ಯಾಪಕ. ಜಲ್ಲಿ ಹಾಕಿದ ಕಚ್ಚಾ ರಸ್ತೆಯಲ್ಲಿ ನಮ್ಮ ಯಾನಾರಂಭವಾಗಿತ್ತು. “ಇದು ವೇಗ ಪರೀಕ್ಷೆಯ ಸ್ಪರ್ಧೆಯಲ್ಲ, ಆತ್ಮ ತೃಪ್ತಿಗಾಗಿ ಸಮೂಹದಲ್ಲಿ ಭಾಗವಹಿಸುವ ಅವಕಾಶ ಮಾತ್ರ” ಎಂದು ಬಗೆ ತರದಲ್ಲಿ ತಿಳಿಸಲಾಗಿತ್ತು. ಆದರೆ ಎಲ್ಲ ಚಟುವಟಿಕೆಗಳಲ್ಲೂ ವೈಯಕ್ತಿಕ ವೇಗ ಎನ್ನುವುದೊಂದು ಇರುವುದನ್ನು ಅಲ್ಲಗಳೆಯುವಂತಿಲ್ಲ. ಸುಮಾರು ಮೂವತ್ತೆರಡು ಮಂದಿ ಅಧಿಕೃತ ಅಭ್ಯರ್ಥಿಗಳಾದರೆ, ಅನುಭವೀ ಮಾರ್ಗದರ್ಶಿಗಳ ನೆಲೆಯಲ್ಲಿ ಇನ್ನಷ್ಟು ಸೈಕಲ್, ವಾಹನಗಳು ಸೇರಿ ಮೊದಲ ಭಾಗ ತುಸು ಗೊಂದಲದಲ್ಲೇ ಸಾಗಿತ್ತು. ಸಣ್ಣ ಏರಿಳಿತ, ಸಾಮಾನ್ಯ ತಿರುವುಗಳು, ಅಗಲ ಕಡಿಮೆಯಲ್ಲೂ ಸೈಕಲ್ ಜಾಡಿನ ಆಯ್ಕೆ ಇನ್ನಷ್ಟು ಸಂಕೀರ್ಣ. ಬಹುತೇಕ ನಾಗರಿಕ ಮಂದಿಗೆ ರೂಢಿಯೇ ಇಲ್ಲದ ನೆಲ. ಆದರೂ ಕಾಡುವ ಚಳಿ ಹೋಗಿತ್ತು, ಚುರುಗುಟ್ಟುವ ಬಿಸಿ ಬಂದಿರಲಿಲ್ಲ. ಏನೋ ಮಹತ್ತರವಾದ ಸಾಧನೆಗಿಳಿದಿದ್ದೇವೆ ಎಂಬ ಭಾವ ಬಿಗಿತದಲ್ಲಿ ಒಬ್ಬಿಬ್ಬರು ನಗುನಗುತ್ತಲೇ ತಾಕಲಾಡಿಗೊಂಡು ಬಿದ್ದದ್ದು, ತರಚಲು ಗಾಯಗಳಾದದ್ದು, ಚೂರುಪಾರು ನೂಕಿ ನಡೆದದ್ದೆಲ್ಲ ಒಂದೆರಡು ಕಿಮೀ ಅಂತರದಲ್ಲೇ ನಡೆಯಿತು. ಹಣೆಯಲ್ಲಿ ಮುತ್ತುಗಟ್ಟಿದ ಬೆವರಿಗೆ ತಿಲಕ ಕಲಸಿ ಹೋಗುವುದರೊಳಗೆ, ಹೂಹಾರದ ಹಗ್ಗ ಹರಿದು ಬೀಳುವ ಮುನ್ನ, ಉದ್ಯಾನದ ಕೇಂದ್ರ ಆಕರ್ಷಣೆಯಾದ ಸರೋವರದ ದಂಡೆ ಸೇರಿದ್ದೆವು.
ಆಸುಪಾಸಿನ ಬೆಟ್ಟ ಕಣಿವೆಗಳು ಹಿಡಿದ ಮಳೆನೀರಿಗೆ ಇಲ್ಲೊಂದು ಒಡ್ಡು ಸರೋವರ ರಚಿಸಿದ್ದರು. ಜಾಲತಾಣದ ಕತೆ ಕೇಳಿದರೆ, ಇದು ಮುಖ್ಯವಾಗಿ ಮೊಸಳೆಗಳೂ ಸೇರಿದಂತೆ ಜೀವವೈವಿಧ್ಯಕ್ಕೆ ಸುಪ್ರಸಿದ್ಧವೇ ಇತ್ತು. ಅಲ್ಲಿನ ವೀಕ್ಷಣಾ ಕಟ್ಟೆಯ ಎತ್ತರದಿಂದ ಸುತ್ತ ಕಣ್ಣು ಹಾಯಿಸಿದೆವು. ನೀರ ಅಂಚಿನವರೆಗೂ ಮಾಡಿದ್ದ ಮೆಟ್ಟಿಲ ಸಾಲಿನಲ್ಲಿ ಓಡಿದ್ದಾಯ್ತು, ದೋಣಿಗಟ್ಟೆಯಂತೇ ಇದ್ದ ಆವರಣಕ್ಕೆ ನುಗ್ಗಿ ಸ್ವಂತೀ ಕ್ಲಿಕ್ಕಿಸಿದ್ದೂ ಆಯ್ತು. ಇನ್ನೂ ಹುಲ್ಲು ಹಳದಿಯಾಗುತ್ತಿದ್ದ ಕಾಲ. ಸರೋವರದ ಪರಿಸರದಲ್ಲಿ ನೀರ ಸಾಮೀಪ್ಯದಿಂದ ಉಳಿದಂತೆಯೂ ಸಾಕಷ್ಟು ಹಸಿರು ನಳನಳಿಸಿತ್ತು. ದಾರಿಯಲ್ಲಿ ಯಾರಿಗೋ ಚಿರತೆಯ ಹೆಜ್ಜೆ ಗುರುತುಗಳು ಕಾಣಸಿಕ್ಕಿದ್ದು, ಅಲ್ಲೊಂದು ಕುಕಿಲು ಕೇಳಿದ್ದು, ಇಲ್ಲೊಂದು ಹಕ್ಕಿ ಮಿಂಚಾದ ಲೆಕ್ಕಗಳನ್ನೆಲ್ಲ ಬಿಟ್ಟು, ಎಲ್ಲರ ದೃಷ್ಟಿ ಸರೋವರದ ಮಕರದರ್ಶನಕ್ಕೆ ಹಾತೊರೆದಿತ್ತು; ಸಿಗಲೇ ಇಲ್ಲ. ಜಾರುವ ಸಮಯ ಉಳಿಸುವಂತೆ ಕುಶಾಲ್, ದಾರಿಯಲ್ಲಿ ಮತ್ತೊಂದೇ ದೀರ್ಘ ತಿರುವಿನಾಚೆ ಕಾಣಿಸುತ್ತಿದ್ದ, ಇನ್ನೊಂದೇ ವೀಕ್ಷಣಾ ತಾಣಕ್ಕೆ ಬೆಟ್ಟು ಮಾಡಿ, “ಅಲ್ಲಿ ನಿಮ್ಮೆಲ್ಲರ ಉಪಾಹಾರ ಕಾದಿದೆ” ಎಂದು ಘೋಷಿಸಿದರು. ಸಹಜವಾಗಿ ಸೈಕಲ್ ವಾಹಿನಿ ಅತ್ತ ಹರಿಯಿತು.
ಈ ಸ್ಥಳದಲ್ಲಿ ಹೆಚ್ಚಿನ ಮನುಷ್ಯ ರಚನೆಗಳು, ಎರಡು ಮೂರು ಪರಿಷ್ಕಾರ ಶಿಬಿರತಾಣಗಳೂ ನೆಲೆಗೊಂಡಿದ್ದವು. ತುಸು ಹಿಂದಕ್ಕೆ ವನ್ಯದ ಉಸ್ತುವಾರಿ ಸಿಬ್ಬಂದಿಯ ವಾಸ್ತವ್ಯದ ನೆಲೆಯೂ ಇದ್ದಂತಿತ್ತು. ಅಲಂಕಾರದ ಎರಡು ಡೇರೆಗಳು ಅರಳಿ ನಿಂತಿದ್ದವು. ಒತ್ತಿನಲ್ಲಿದ್ದಿರಬಹುದಾದ ಶೌಚ ವ್ಯವಸ್ಥೆಗಳು ನಮ್ಮ ತಂಡದಲ್ಲಿದ್ದ ನಾಲ್ಕೈದು ಮಹಿಳಾ ಸವಾರರಿಗೆ ಹೆಚ್ಚಿನ ಅನುಕೂಲ ಒದಗಿಸಿರಬೇಕು. ದ್ವಾರದಲ್ಲಿ ನಮಗೆ ಶುಭನುಡಿಗಳನ್ನಾಡಿದವರೂ ಮತ್ತಷ್ಟು ಜನರೂ ಇಲ್ಲಿ ಸೇರಿದ್ದರು. ಸಾಕಷ್ಟು ಮೊದಲೇ ಬಂದಿದ್ದ ಯಾತ್ರೆಯ ಅಡುಗೆ ವಿಭಾಗ ಬ್ರೆಡ್ಡ್, ಬೆಣ್ಣೆ, ಆಲೂ ಪರೋಟ, ತಕ್ಕ ಕೂಟಕಗಳು, ಚಾ, ಮೊಟ್ಟೆ, ಹಣ್ಣ ಹೋಳುಗಳನ್ನೆಲ್ಲ ಮುಕ್ತವಾಗಿಟ್ಟು ನಮ್ಮ ಹೊಟ್ಟೆಗಳಿಗೆ ಹಬ್ಬ ಮಾಡಿದರು.
ಸಾಹಸ-ಪ್ರವಾಸಿಗಳೇ? ಪರಿಸರ ವಕ್ತಾರರೇ?!: ಉಪಾಹಾರದ ಬೆನ್ನಿಗೆ ನಮ್ಮ ನಿಜದ ‘ಸಾಹಸಯಾನ’ ತೊಡಗಿತ್ತು. ಅಂದಿನ ಲಕ್ಷ್ಯ – ಸುಮಾರು ಐವತ್ತು ಕಿಮೀ ಅಂತರದ, ಜೈಸಮಂದರ್ ಸರೋವರ. ಹದಿನೇಳನೇ ಶತಮಾನದ ಮೇವಾಡದ ಅರಸ ಮಹಾರಾಣಾ ಜೈಸಿಂಗನ ಮುನ್ನೋಟದ ಕಾಣ್ಕೆಯಾಗಿ ಗೋಮತಿ ನದಿಗೆ ಕಟ್ಟಲಾದ ೩೬ ಮೀಟರ್ ಎತ್ತರ, ೩೬೬ ಮೀಟರ್ ಉದ್ದ ಹಾಗೂ ೨೧ ಮೀಟರ್ ದಪ್ಪದ ಅಣೆಕಟ್ಟೆಯ ಫಲ ಈ ಸರೋವರ.
ಇಂದಿಗೂ ಸದೃಢವಾಗಿ, ಸುಂದರವಾಗಿ ನಿಂತ ಕಟ್ಟೆ, ತನ್ನ ಪೂರ್ಣ ಸಾಮರ್ಥ್ಯದಲ್ಲಿ ಐವತ್ತು ಚದರ ಕಿಮೀ ವ್ಯಾಪಿಸುವ ಜಲನಿಧಿ, ಏಷ್ಯಾ ಖಂಡದೊಳಗೆ ಮಾನವ ನಿರ್ಮಿತಿಯ ಜಲಾಗರಗಳಲ್ಲಿ ಎರಡನೇ ಸ್ಥಾನದಲ್ಲಿದೆಯಂತೆ. ಈಚೆಗೆ ಇದರ ಉಪಯುಕ್ತತೆಯನ್ನು ಗೌರವಿಸುವಂತೆ, ಒಟ್ಟಾರೆ ಪರಿಸರವನ್ನು ಸರಕಾರ ಸ್ವತಂತ್ರ ವನಧಾಮವನ್ನಾಗಿಸಿದೆ. ಅಣೆಕಟ್ಟೆಗೆ ರಾಜಸ್ತಾನಕ್ಕೆ ಪರಕೀಯವಲ್ಲದ ಅಮೃತಶಿಲೆಯದೇ ಹೊದಿಕೆ ಇದೆ. ಅಲ್ಲದೆ ಅಲಂಕಾರಿಕ ಮಂಟಪ, ಗುಮ್ಮಟ, ಶಿವ ದೇವಾಲಯ, ಕೆಳದಂಡೆಯ ಸಣ್ಣ ಉದ್ಯಾನವನ ಇದನ್ನು ಹೆಚ್ಚು ಪ್ರೇಕ್ಷಣೀಯವೂ ಆಗಿಸಿದೆ. ಜೈಸಮಂದರ್ ಸರಸಿ ಅಧಿಕೃತವಾಗಿ ಮೂರು ನಡುಗಡ್ಡೆಗಳನ್ನು ಹೊಂದಿದೆ. ಅಲ್ಲಿನ ಒಂದೆರಡು ವಿಲಾಸೀ ಹೋಟೆಲುಗಳು ಅಂತಾರಾಷ್ಟ್ರೀಯ ವಿಹಾರಿಗಳನ್ನೂ ಧಾರಾಳ ಆಕರ್ಷಿಸುತ್ತವಂತೆ. ಆ ಹೋಟೆಲುಗಳಿಗೆ ಸಂಪರ್ಕಸಾಧನವಾಗಿಯೂ ಅನ್ಯ ವಿಹಾರಿಗಳ ಮಾನಸೋಲ್ಲಾಸಕ್ಕಾಗಿಯೂ ಕಟ್ಟೆಯಂಚಿನಲ್ಲಿ ದೋಣಿಗಳ ವ್ಯವಸ್ಥೆಯಿದೆ. ಕಟ್ಟೆಯ ಇನ್ನೊಂದು ಕೊನೆಯ ದಿಟ್ಟ ಶಿಖರ – ವೀರಪುರ, ಅದರ ನೆತ್ತಿಯಲ್ಲಿ ರಾಜಸತ್ತೆಯ ವೈಭವವನ್ನು ಸಣ್ಣದಾಗಿ ಸಾರುವ ಹವಾ ಮಹಲ್, ಪಕ್ಕದ ಇನ್ನೊಂದೇ ಪುಟ್ಟ ಶಿಖರದ ಕೊಡಿಯ ರಾಣೀ ಮಹಲ್ಗಳು, ವನಧಾಮಕ್ಕೆ ನಿಸ್ಸಂದೇಹವಾಗಿ ಐತಿಹಾಸಿಕ ವೀಕ್ಷಣೆಯ ಆಕರ್ಷಣೆಯನ್ನೂ ಕಲ್ಪಿಸಿವೆ. ಈ ಎಲ್ಲ ವೈಭವಗಳ ಸಾನ್ನಿಧ್ಯದಲ್ಲಿ ಮಧ್ಯಾಹ್ನದೂಟದಿಂದ ಮರುಬೆಳಗ್ಗಿನವರೆಗಿನ ವಿವಿಧ ಕಲಾಪ, ವಿಶ್ರಾಂತಿಗಳ ರಮ್ಯ ಕಲ್ಪನೆಗಳೊಡನೆ ನಮ್ಮ ತಂಡ ಪೆಡಲಿಕೆಗಿಳಿಯಿತು.
ಹೊರಟ ಒಂದೆರಡು ಕಿಮೀ ಅಂತರದಲ್ಲೇ ನಾವು ಭಾಗ್ದೊರಾ ವನಧಾಮದ ಹಿತ್ತಿಲಿನ ದ್ವಾರವನ್ನು ಕಳೆದು, ಡಾಮರ್ ಮಾರ್ಗ ಸೇರಿದ್ದೆವು. ಮೊದಲೇ ಹೇಳಿದಂತೆ, ಭಾಗ್ದೋರಾ ಲಘು ಪರ್ವತ ಶ್ರೇಣಿಯ (ನಿರಾಕರ್ಷಕ ಗುಡ್ಡೆ ಸಾಲು ಎನ್ನಿ) ಭಾಗ. ಇದಕ್ಕು ಪೂರ್ವ-ಉತ್ತರದ ತುಸು ಎತ್ತರದಲ್ಲಿ, ಪ್ರಾಕೃತಿಕ ಕಣಿವೆಯಲ್ಲೇ ಉದಯ ಸಾಗರ್ ಎನ್ನುವ ಸರೋವರವಿದೆ. ಅಲ್ಲಿ ಕೋಡಿಬಿದ್ದ ನೀರು ಹರಿವ ಕಣಿವೆಯ ಗುಂಟ, ಅಂದರೆ ಪಶ್ಚಿಮದಂಡೆಯ ಗುಡ್ಡೆ ಸಾಲಿನ ನೆರಳಿನಲ್ಲಿ ಸಾಗಿತ್ತು ನಮ್ಮ ದಾರಿ. (ಕಣಿವೆ ನಮ್ಮ ದೃಷ್ಟಿಗೆ ಸಿಕ್ಕಲಿಲ್ಲ.) ಝಾಮರ್ ಕೊಟ್ರಾ – ಈ ವಲಯದ ಹೆಸರು. ಚದುರಿದಂತೆ ಬಳ್ಳಾರಿ ಜಾಲಿಯಂಥ ಮರ, ವಿರಳ ಕುರುಚಲು ಕಾಡು.
ಆರೆಂಟು ಕಿಮೀ ಕಳೆಯುವುದರೊಳಗೇ ಬಲದ ಶಿಖರಸಾಲಿನ ಪ್ರಾಕೃತಿಕ ಸ್ಥಿತಿಯನ್ನು ಪೂರ್ಣ ಔದ್ಯಮಿಕ ‘ಹಾಳುಮಣ್ಣು’ ಆಕ್ರಮಿಸಿದ್ದು ತೋರಿತು. ಇದು ಭಾರತದಲ್ಲೇ ಅತಿ ದೊಡ್ಡ ಕಲ್ಲಕೋರೆ (ರಾಕ್ ಫಾಸ್ಫೇಟ್) ಎನ್ನಿಸಿರುವ ಮಹೋದ್ಯಮದ ಪುಣ್ಯಫಲ. (ಹಿಂದಿನ ದಿನದ ಅತಿಥಿ ಗಣ್ಯರಲ್ಲಿ ಗಣಿಗಾರಿಕೆಯ ವರಿಷ್ಠನೊಬ್ಬ ಹಾಜರಿದ್ದ!) ಅದು ಗುಡ್ಡಸಾಲನ್ನು ಸುಮಾರು ೧೮.೪೪ ಚದರ ಕಿಮೀ ವ್ಯಾಪ್ತಿಯಲ್ಲಿ ‘ಜಗಿದು’, ‘ಉಗಿದ’ ಅಷ್ಟೂ ಮಣ್ಣು ಇಂದು ಪರ್ಯಾಯ ಗುಡ್ಡಸಾಲಾಗಿ ನಿಂತಿದೆ, ಮುಗಿಯದ ಪಾರಿಸರಿಕ ದುಃಖವಾಗಿ ಬೆಳೆದಿದೆ. ಈ ಮಣ್ಣು, ಮಳೆಗಾಳಿಗಳ ಕೊರೆತದಲ್ಲಿ ಉಂಟುಮಾಡಿರಬಹುದಾದ ಪಾರಿಸರಿಕ ಹಾನಿಯ ಕುರಿತ ಪ್ರತ್ಯಕ್ಷ ತಿಳುವಳಿಕೆ ನನಗಿಲ್ಲ. ಆದರೆ ತುಸು ಕೆಳಪಾತ್ರೆಯಲ್ಲೇ (ಹತ್ತಿಪ್ಪತ್ತು ಕಿಮೀ ಅಂತರ) ನಾನು ಮೊದಲೇ ಹೇಳಿದ, ಜೈಸಮಂದರ್ ಸರೋವರ ಇದೆ ಎನ್ನುವುದನ್ನು ಮರೆಯಲಾದೀತೇ. ಅದಕ್ಕೆ ತುಂಬಿರಬಹುದಾದ ಹೂಳು ಅಸಾಧಾರಣವೇ ಇರಬೇಕು. ಇಲ್ಲಿ ನಡೆಯುತ್ತಿರುವ ಸ್ಫೋಟ ಮತ್ತು ಯಂತ್ರ ಗದ್ದಲಗಳು ಸುತ್ತಣ ಬಾಗ್ದೋರಾ ವನ್ಯದ ಮೇಲೆ ಬೀರುವ ಕೆಟ್ಟ ಪ್ರಭಾವವೂ ಸಣ್ಣದಲ್ಲ. ಮೂರ್ನಾಲ್ಕುನೂರು ಕಿಮೀ ದೂರದ ತುಂಗಭದ್ರ ಅಣೆಕಟ್ಟಿಗೆ ತುಂಬಿದ ಹೂಳನ್ನೇ ಮುಖ್ಯ ಸಾಕ್ಷಿಯಾಗಿ ಪರಿಗಣಿಸಿ, ದೇಶದ ಅತ್ಯುಚ್ಛ ನ್ಯಾಯಾಲಯ, ಭಾರೀ ಹಣಹೂಡಿಕೆಯ ಕುದುರೆಮುಖ ಗಣಿಗಾರಿಕೆಯನ್ನು ಉಚ್ಚಾಟಿಸಿದ್ದು ಮರೆಯಲುಂಟೇ!\
ಬಹುತೇಕ ಪರ್ವತ ಶ್ರೇಣಿಯ ಲಘು ಇಳಿಜಾರೇ ನಮಗೊದಗಿತ್ತು. ಇತರ ವಾಹನ ಸಂಚಾರ ಇಲ್ಲವೆನ್ನುವಷ್ಟು ವಿರಳ. ಸಹಜವಾಗಿ ಪರಿಣತ ಸವಾರರುಗಳು ಪೆಡಲಿಕೆಗೆ ಯಾಂತ್ರಿಕ ಸ್ಥಿರತೆ ಕೊಟ್ಟು, ಗೆಳೆತನದ ಪಟ್ಟಾಂಗಗಳಲ್ಲಿ ದಾರಿಯನ್ನು ಮರೆತಂತೇ ಸಾಗಿದ್ದರು. ಚಿಲುಮೆ ಚಿಮ್ಮಿದಂತೆ ಮುನ್ನುಗ್ಗುವವರು, ಆಮೆಯ ಓಟದಲ್ಲೂ ವಿಶ್ವಾಸದವರು ದಾರಿಯುದ್ದಕ್ಕೂ ಚದುರಿಕೊಳ್ಳುತ್ತಾ ಹೋದರು. ಕೆಲವು ಹಂತಗಳಲ್ಲಿ ಮುಂದಾಳು ಎಲ್ಲರನ್ನು ತಡೆದು, ಮರುಗುಂಪುಗಳನ್ನು ರೂಪಿಸುವುದಿತ್ತು. ತಂಡದ ಅಧಿಕೃತ ಚಿತ್ರಗ್ರಾಹಿಗಳದು ಇನ್ನೊಂದೇ ಸಂಕಟ. ಭಾಗಿಗಳ ಪರಸ್ಪರ ಅಂತರ ಹೆಚ್ಚಿದರೆ, ಚಿತ್ರದ ಪರಿಣಾಮ ತಗ್ಗುತ್ತದೆ. ಹಾಗಾಗಿ ಆಯಕಟ್ಟಿನ ಜಾಗಗಳಲ್ಲಿ ಅವರು ಹೊಂಚು ಹಾಕಿ, ಎಲ್ಲರನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದರು. ಆದರೆ ಮುಂದೆ ಬಂದವರ ತಹತಹವನ್ನು ಹೆಚ್ಚುಹೊತ್ತು ತಾಳಲಾರದೆ, ಸಿಕ್ಕಷ್ಟು ಮಂದಿಯನ್ನೇ ಏಕಕಾಲಕ್ಕೆ ಕ್ಯಾಮರಾದ ಎದುರು ಹಾಯಿಸುವುದಾಗುತ್ತಿತ್ತು. ಇವೆಲ್ಲವನ್ನು ಮೀರಿಯೂ ಉಸಿರು ಸೋತವರು ಹೆಚ್ಚುತ್ತಲೇ ಇದ್ದರು. ಅದಕ್ಕೆ ಮದ್ದಾಗಿ ನಮ್ಮೆದುರು ಸಾಕ್ಷಾತ್ ಜಗತ್ತೇ ಪ್ರತ್ಯಕ್ಷವಾಯ್ತು! ಗಾಬರಿಯಾಗಬೇಡಿ, ಮೊದಲೇ ದಿನದ ಯಾನದ ಮಧ್ಯಂತರವೆಂದೇ ನಿಗದಿಯಾಗಿದ್ದ ಹಳ್ಳಿಯ ಹೆಸರು – ಜಗತ್.
ಕನಿಷ್ಠ ಒಂದು ಸಾವಿರ ವರ್ಷಗಳ ಇತಿಹಾಸವಿರುವ – ಜಗತ್, ಇಂದು ದೇವಿ ಅಂಬಿಕೆಯ (ಚಾಮುಂಡೇಶ್ವರಿ ಎಂದೇ ಸ್ಥಳೀಯ ಸ್ಪಷ್ಟಪಡಿಸಿದ) ಸುಂದರ ಮಂದಿರದಿಂದ ಖ್ಯಾತವಾಗಿದೆ. ದಾರಿಯಲ್ಲಿ ಮೊದಲಿಗೆ ಸಂದ ಮಹಾರಾಜರುಗಳ ಒಂದೆರಡು ಗೋರಿಗಳೂ ಒತ್ತಿನಲ್ಲಿ ಸ್ವಲ್ಪ ತಗ್ಗಿನಲ್ಲಿ ದೇವಸ್ಥಾನವೂ ಕಾಣಿಸುತ್ತದೆ. ಸುಂದರ ಆಯ, ಕೆತ್ತನೆಗಳಲ್ಲಿ ನನಗೆ ಮೈಸೂರು ಸಮೀಪದ ಸೋಮನಾಥಪುರ ನೆನಪಿಗೆ ಬಂತು. ಕೆಲವು ಬಿಂಬಗಳ ರೂಪಣೆಯಲ್ಲಿ ಇದು ಖಜುರಾಹೋವನ್ನೂ ಹೋಲುತ್ತದಂತೆ. ದೇವಾಲಯದ ವಿವರಗಳನ್ನು ಆಡಳಿತ ಮಂಡಳಿಯ ಕಾರ್ಯದರ್ಶಿ, ನಮ್ಮನ್ನು ಕಾದು ನಿಂತು ವಿವರಿಸಿದರು. ದೇವಳದ ವಿಸ್ತಾರ ಅಂಗಳದಲ್ಲಿ ನಮಗೆ ಲಘೂಪಹಾರ, ಚಾ ವ್ಯವಸ್ಥೆ ಮಾಡಿದ್ದರು. ನನಗಂತೂ ಬೆಳಗ್ಗಿನ ತಿಂಡಿಯೇ ಪೂರ್ತಿ ಗಂಟಲಿನಿಂದ ಕೆಳಗಿಳಿದಿರಲಿಲ್ಲ. ಆದರೆ ನಿಧಾನಿಗಳ ಸಂತೆಯಲ್ಲಿ, ಮುಂದೆ ಮಧ್ಯಾಹ್ನದ ಊಟ ತಡವಾದರೆ ಎಂಬ ಸಂಕಟಕ್ಕೆ ಬಾಯಿಗೆ ಸಮೋಸಾ ತುರುಕಿ, ಬಾಳೆಹಣ್ಣಿನಲ್ಲಿ ನೂಕಿ, ಹೆಚ್ಚಿನ ಸಡಿಲಿಕೆಗೆ ಚಾ ಹೊಯ್ದುಕೊಂಡೆ!
ದೇವಳದ ಎದುರು ಬಾಲಿಕೆಯರ ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ಇತ್ತು. ಯಾತ್ರಾ ಸಂಘಟಕರು, ನಮ್ಮ ಹುಚ್ಚಿಗೆ ಪಾರಿಸರಿಕ ಹೊಳಪು ನೀಡುವ ಉತ್ಸಾಹದಲ್ಲಿ ಶಾಲಾ ಭೇಟಿಯನ್ನೂ ನಿಗದಿಸಿದ್ದರು. ವಿವಿಧ ಆಟಪಾಠಗಳಲ್ಲಿದ್ದ ಪುಟಾಣಿಗಳು (ಐದನೇ ತರಗತಿವರೆಗೆ ಹುಡುಗರೂ ಇದ್ದರು) ‘ಮಾತೆ ಶಾರದೆ’ಯ ಮಂಟಪದೆದುರು ಸಾಲುಗಟ್ಟಿ ನಡೆದು, ಹರಕು ದೊಡ್ಡಿಯಂತಿದ್ದ ತರಗತಿಯೊಂದನ್ನು ಹಾಯ್ದು, ಒಳಾಂಗಳದ ದೂಳು ಹಾರುತ್ತಿದ್ದ ನೆಲದಲ್ಲಿ ಹಾಕಿದ್ದ ಚಾಪೆಯಲ್ಲಿ ಶಿಸ್ತುಬದ್ಧವಾಗಿ ಕುಳಿತರು. ನಾವೂ ಹಿಂಬಾಲಿಸಿದೆವು. ಮಕ್ಕಳು ಹಲವರು ಬರಿಗಾಲಿನವರೇ. (ಬಹುಶಃ) ಸರಕಾರ ಕೊಟ್ಟ ಸಮವಸ್ತ್ರವಲ್ಲದಿದ್ದರೆ, ಕೆಲವಾದರೂ (ಹೊಸ ಫ್ಯಾಶನ್ನಿನಂತೆ?) ಭುಜ ಹರಿದ ಅಂಗಿ, ಅಂಡು ಹರಕು ಚಡ್ಡಿ ಕಾಣಿಸುತ್ತಿತ್ತೋ ಏನೋ. ಒಳಾಂಗಣದ ಎದುರು ಮಗ್ಗುಲಿನಲ್ಲಿ ಪೂರ್ಣ ಶಿಥಿಲವೇ ಆಗಿದ್ದ ಕೊಠಡಿ ಸಾಲು ಕಂಗೊಳಿಸಿತು!
ಅಧ್ಯಾಪಕ ವೃಂದ ಒತ್ತಟ್ಟಿಗೆ ನಿಂತಂತೆ, ಮುಖ್ಯೋಪಾಧ್ಯಾಯಿನಿ ‘ಸಾಹಸಿಗಳೂ’, ‘ಪರಿಸರಪ್ರೇಮಿ’ಗಳೂ ಆದ ನಮ್ಮನ್ನು ಸ್ವಾಗತಿಸಿದರು. ನಾನು ಮುಜುಗರದಲ್ಲಿ ಶಿಥಿಲ ಜಗುಲಿಯತ್ತ ಜಾರಿದೆ. ಅಲ್ಲಿ ಸಾರಣೆ ಕಿತ್ತ ಛಾವಣಿ, ಕುಸಿದು ಬಿದ್ದ ಗೋಡೆ ನೋಡಿ, ಬೀಳುವ ಕಾಲದಲ್ಲಿ ಮುಗ್ದಬಾಲರು ಅಡಿಗೆ ಸಿಕ್ಕಿ ಉಸಿರು ಕಟ್ಟಿದ್ದಿರಬಹುದೇ ಎಂದು ತಲ್ಲಣಿಸಿದೆ. ಅಂಗಳದಲ್ಲಿ ನಮ್ಮ ತಂಡದ ಗಟ್ಟಿಗನೊಬ್ಬ ದಿವ್ಯಜ್ಞಾನದಿಂದ, ಮಕ್ಕಳಿಗೆ ಹಸಿರಿನಿಂದ ಆಮ್ಲಜನಕ ಬರುವ ಪಾಠ ನೆನಪಿಸುತ್ತಿದ್ದ. ಗೆದ್ದಲು ಹತ್ತಿ, ಸೌದೆ ಯೋಗ್ಯತೆಗೂ ಬಾರದಂತೆ ಮುರಿದು ಬಿದ್ದ ಬಾಗಿಲು ಕಿಟಕಿ ಒಟ್ಟಣೆ ನೋಡಿದೆ. ನಮ್ಮ ಇನ್ನೊಬ್ಬ ಬುದ್ಧಿವಂತ “ಪ್ರತಿ ವ್ಯಕ್ತಿ ಕನಿಷ್ಠ ಐದು ಮರಗಳನ್ನಾದರೂ ನೆಡಬೇಕು” ಎಂದು ಗಟ್ಟಿಯಾಗಿ ಉಪದೇಶಿಸಿದ್ದ. ಶಿಥಿಲ ಜಗುಲಿಯ ಕೊನೆಯ ಗೋಡೆಬರಹದಲ್ಲಿ (ಬಹುಶಃ) ‘ಬಿಸಿಯೂಟ’ದ ವಾರಾನುಕ್ರಮದ ಪಾಕಪಟ್ಟಿ ಹಳಸಿಹೋಗಿತ್ತು. (ಈಗಲೂ ಅದು ಊರ್ಜಿತದಲ್ಲಿದೆಯೇ ಎಂದು ಮುಂದೆ ವಿಚಾರಿಸಬೇಕೆಂದಿದ್ದೆ. ಮುಂದೆ ನಮ್ಮವರ ಕಲಾಪಗಳು ವಿಕಸಿಸಿಸಿದ ಪರಿಯಲ್ಲಿ ನನ್ನ ಗಂಟಲು ಕಟ್ಟಿಯೇಹೋಯ್ತು) ನಮ್ಮ ಮೂರನೆಯ ಮಹಾಮಂಡೆಯೊಂದು, ಯಾವುದೋ ಊರಲ್ಲಿದ್ದ ತನ್ನಣ್ಣ ಅತ್ತಿಗೆಯರ ವಿವಾಹ ಬೆಳ್ಳಿಹಬ್ಬದ ದಿನವಿದು ಎಂದು (ಕರ್ನಾಟಕ ಸರಕಾರ ವಾಲ್ಮೀಕಿಯದೋ ಟಿಪ್ಪುವಿನದೋ ದಿನಾಚರಣೆ ಘೋಷಿಸಿದಷ್ಟೇ) ಗಟ್ಟಿಯಾಗಿ ಪ್ರಕಟಿಸಿದ. ಮಕ್ಕಳೂ ಸೇರಿದಂತೆ ಎಲ್ಲರ ಒಕ್ಕೊರಳ “ಶುಭಾಶಯ”ಗಳು ಮೊಳಗಿದವು. ಅಷ್ಟಕ್ಕೆ ನಿಲ್ಲದ ಆ ಉತ್ಕಟ ಭಾತೃಪ್ರೇಮಿ, ಅದರ ಸಂತೋಷಾರ್ಥ ‘ಜಗತ್ತಿನ’ ಮಕ್ಕಳಿಗೆ ಆ ಮಧ್ಯಾಹ್ನ ಸಿಹಿಯೂಟ ಮಾಡಿಸಲು ಒಂದು ಸಾವಿರ ರೂಪಾಯಿಯ ಉದಾರ ಆಶ್ವಾಸನೆಯನ್ನೂ ಸಭೆಯಲ್ಲೇ ಘೋಷಿಸಿಬಿಟ್ಟ. (ಹೋಟೆಲ್ ಯೋಯ್ಸಾದಲ್ಲಿ ನಾವಿಬ್ಬರೇ ಮಾಡಿದ ಸಾದಾ ಊಟದ ಬಿಲ್ಲು ಸಾವಿರದ ಇನ್ನೂರು ರೂಪಾಯಿ!) ನಿಜವಾಗಿ ಹಣ ಕೊಡಬೇಕಾದ ಹೊತ್ತಿಗೆ, “ಅರೆ ಯಾರ್, ಮೈನೇ ಪರ್ಸ್ ಭೂಲ್ ಗಯಾ” ಎಂದು, ಇನ್ಯಾರಿಂದಲೋ ತತ್ಕಾಲೀನ ಕಡ ಪಡೆದು ಸಲ್ಲಿಸಿದ್ದನ್ನು ಕಂಡೆವು. ದಿನದ ಕೊನೆಯಲ್ಲಿ, ಅಂದರೆ ಜೈಸಮಂದರ್ ಶಿಬಿರದ ವಠಾರದಲ್ಲಿ, “ಸಾಲಿಗನು ಬಂದಾಗ, ಕಿಬ್ಬದಿಯ ಕೀಲು ಮುರಿದಂತೆ” ಒರಲುತ್ತಿದ್ದದ್ದನ್ನೂ ಕೇಳಿದೆ. “ನಮಗೆ ಉಪದೇಶದ ಅಮೃತ ಬೇಕಿಲ್ಲ. ಹೊಟ್ಟೆಗೆ ಹಿಟ್ಟು ಕೊಡಿ, ತಲೆಗೆ ಸೂರು ಕೊಡಿ, ಉಡಲು ಬಟ್ಟೆ ಕೊಡಿ” ಎಂದು ಒಂದೂ ಕಾಲು ಶತಮಾನದ ಹಿಂದೆಯೇ ಘೋಷಿಸಿದ ಸ್ವಾಮಿ ವಿವೇಕಾನಂದ, ನಿಜಕ್ಕೂ ಮಹಾತ್ಮ!
ಬಿಸಿಲು ಚುರುಕಾಯಿಸುತ್ತಿದ್ದಂತೆ ಪಕ್ಕಾ ಗ್ರಾಮೀಣ ಪ್ರದೇಶದ ನಡುವೆ ನಮ್ಮ ನಿರಂತರ ಪೆಡಲಿಕೆ ನಡೆದಿತ್ತು. ಭತ್ತದಹುಲ್ಲಿನಂತದ್ದೇ ಮೆದೆಗಳು, ಒಣ ಬೇಸಾಯಕ್ಕೆ ಉತ್ತು ಹಸನಾದ ಮಡಿಗಳು, ಕಾವಲಿನ ಅಟ್ಟಳಿಗೆಗಳು, ದನ ಎಮ್ಮೆಗಳನ್ನು ನೋಡುವಾಗ ನಮ್ಮೂರಿನದೇ ನೆನಪಾಗುತ್ತಿತ್ತು. ಆದರೆ ಅಲ್ಲ ಎನ್ನುವಂತೆ, ಒಂದೆಡೆ ಮೇವರಸಿಕೊಂಡು ನಡೆದಿದ್ದ ಒಂಟೆ ಹಿಂಡೂ ಕಾಣಿಸಿತ್ತು. ಕೆಲವು ಸಂಶಯಾಸ್ಪದ ಕವಲುಗಳಲ್ಲಿ ಒಬ್ಬಿಬ್ಬ ಅರಣ್ಯ ಇಲಾಖೆಯ ನೌಕರರು ನಿಂತು ನಮಗೆ ಕೈಮರಗಳಾಗುತ್ತಿದ್ದರು. ಇಲಾಖಾ ನೌಕರರು ಹಾಗೆ ಮೂರೂ ದಿನಗಳಲ್ಲಿ, ಸಂಧಿ ಸ್ಥಾನಗಳಲ್ಲಿ ಮತತು ಆಯಕಟ್ಟಿನ ಜಾಗಗಳಲ್ಲಿ ನಮ್ಮನ್ನು ಕಾದು ನಿಂತು ನೀರು, ನಿಂಬೆ ಪಾನಕ, ಮೊಳಕೆ ಬರಿಸಿದ ಕಾಳು, ಸೀಬೇ ಕಾಯಿ, ಹಸೀ ಕ್ಯಾರಟ್ ಮೊದಲಾದ ಸಕಾಲಿಕ ಸುವಸ್ತುಗಳನ್ನು ಉಚಿತವಾಗಿ ಕೊಟ್ಟೂ ಉತ್ತೇಜಿಸಿದರು. (ನಾಲ್ಕು ದಿನ ಕಳೆದು ಮನೆಗೆ ಮರಳಿದಾಗ, ಕಣ್ತಪ್ಪಿ ನನ್ನ ಕೊಳೆಬಟ್ಟೆಯಲ್ಲುಳಿದೊಂದು ಕೊಳೆತ ಕ್ಯಾರಟ್ ತುಂಡು, ಮನೆ ತುಂಬ ಸುಗಂಧ ಪಸರಿಸಿದ್ದಕ್ಕೆ, ದೇವಕಿ ಪರಿಹಾರ ಕೇಳಬೇಕೆಂದಿದ್ದಾಳೆ!)
ಹನ್ನೆರಡೂವರೆ ಗಂಟೆಯ ಸುಮಾರಿಗೆ ಜೈಸಮಂದರ್ ಸರೋವರದ ಒಂದು ಅಂಚನ್ನು ಮುಟ್ಟಿದ್ದೆವು. ಮುಂದೆ ಅಣೆಕಟ್ಟೆಯವರೆಗೂ (ನಾಲ್ಕೈದು ಕಿಮೀ) ದಾರಿ ಬಲದಂಡೆಯ ಬೆಟ್ಟದ ಏಣು ಕಣಿವೆಗಳಲ್ಲಿ ಬಳುಕುತ್ತಾ ಸಾಗುವ ಚಂದ, ಅದರಲ್ಲಿ ಸೈಕಲ್ ಮೆಟ್ಟುತ್ತ ಸಾಗುವ ಆನಂದಕ್ಕೆ ಯಾವ ಮಾತು, ಎಷ್ಟೂ ಚಿತ್ರ ಪೂರ್ಣ ನ್ಯಾಯ ನೀಡದು. ಇಲ್ಲಾದರೂ ಒಮ್ಮೆ ಪೂರ್ಣ ತಂಡದ ಅದ್ಭುತ ಚಲ-ಚಿತ್ರ ದಾಖಲಿಸುವ ಆಸೆಗೆ ವೀಡಿಯೋ ಮತ್ತು ಡ್ರೋನಿನವರ ಜಂಟಿ ಕಾರ್ಯಾಚರಣೆ ನಮ್ಮನ್ನು ಸುಮಾರು ಅರ್ಧ – ಮುಕ್ಕಾಲು ಗಂಟೆಯಷ್ಟು ತಡೆದು ನಿಲ್ಲಿಸಿತು. ಆದರೂ ದಾಖಲೀಕರಣ ಪೂರ್ಣ ಯಶಸ್ಸು ಗಳಿಸದಷ್ಟು ಕೆಲವರು ಹಿಂದೆಯೇ ಉಳಿದುಬಿಟ್ಟರು. ಒಂದೂ ಮುಕ್ಕಾಲರ ಸುಮಾರಿಗೆ, ಜೈಸಮಂದರ್ ಅಣೆಕಟ್ಟೆಯ ಮೇಲಣ ಮಹಾದ್ವಾರದಲ್ಲಿ ಸೈಕಲ್ವಾಹಿನಿ ಹನಿಹನಿಯಾಗಿ ಸಂಗ್ರಹಗೊಂಡು (ಕೆಲವರು ವ್ಯಾನೇರಿ ಬಂದಿದ್ದರು!) ಹೊಸದೇ ಉಲ್ಲಾಸ ತರಂಗಗಳನ್ನು ಎಬ್ಬಿಸಿತು. ಅದನ್ನು ವಾಚ್ಯವಾಗಿಸುವಂತೆ, ಇಲ್ಲೂ ಡೋಲು, ತಿಲಕ, ಮಾಲೆಯ ನಾಟಕ ನಡೆಯಿತು. ದಿನದ ಸಾಧನೆ ಸುಮಾರು ನಲ್ವತ್ತೆಂಟು ಕಿಮೀ. ಬಹುತೇಕ ಇಳಿಜಾರು ಅಥವಾ ಸಮತಟ್ಟಿನ ಡಾಮರು ದಾರಿ. ನಮ್ಮೂವರ (ಮಂಗಳೂರು ಅಳತೆ) ಲೆಕ್ಕದಲ್ಲಿ, ಇದು ಆರಾಮದಲ್ಲಿ ಎರಡೂವರೆಯಿಂದ ಮೂರು ಗಂಟೆಯ ದಾರಿ. ಆದರೆ ಅಲ್ಲಿ, ಅಷ್ಟೆಲ್ಲ ಉಪಚಾರದೊಡನೆ ತಂಡವಾಗಿ ನಾವು ಬಳಸಿದ್ದು ಸುಮಾರು ಆರು ಗಂಟೆ!
(ಮುಂದುವರಿಯಲಿದೆ)
Excellent collection sequence. Admirable.William Robert
Nice
Very Well done
Stunning pictures. Great!! Must have been really challenging and exciting. I recall participating in Thar Jaisalmer Cycling Expedition organised by Youth Hostel Association of India along with friends which was too equally challenging and exciting. Thanks for sharing such wonderful experience. http://rgbcycling.blogspot.com/search?updated-max=2015-06-01T06:42:00-07:00&max-results=1&start=9&by-date=false&m=1
http://rgbcycling.blogspot.com/2015/01/the-great-thar-desert-cycling-jaisalmer.html
ತಮ್ಮ ಅಪರೂಪದ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಬಹಳ ಚೆನ್ನಾಗಿ ದಾಖಲಿಸಿದ್ದೀರ.