[೪ನೇ ಫೆಬ್ರುವರಿ ಸಂತ ಏಗ್ನೆಸ್ ಕಾಲೇಜು, ಸರಕಾರೀ ಪ್ರಥಮ ದರ್ಜೆ ಕಾಲೇಜು ರಥಬೀದಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಲಿ ಮತ್ತು ಆಕಾಶವಾಣಿ ಮಂಗಳೂರು ಜಂಟಿಯಾಗಿ ಆಯೋಜಿಸಿ ಸಂತ ಏಗ್ನೆಸ್ ಕಾಲೇಜಿನಲ್ಲಿ ನಡೆದ ಒಂದು ದಿನದ ವಿಚಾರ ಸಂಕಿರಣದ ಉದ್ಘಾಟನೆಯಲ್ಲಿ, ನಾನು ಮಂಡಿಸಿದ ಆಶಯ ಭಾಷಣ.]

ಮಿತ್ರರೇ,

ನಾನು ಔಪಚಾರಿಕ ಭಾಷಣಕಾರನಲ್ಲ. ಮತ್ತೆ ಸ್ವಂತ ಅನುಭವಕ್ಕೆ ದಕ್ಕದೇ ಇರುವುದರ ಕುರಿತು ಸಾರ್ವಜನಿಕ ವೇದಿಕೆಯಲ್ಲಿ ಕೊರೆಯುವುದು ನನಗೆ ಒಗ್ಗುವುದೂ ಇಲ್ಲ. ಹಾಗಾಗಿ ನೂರೆಂಟು ವಿಚಾರಗಳ ಕಾಡಿನಲ್ಲಿ, ಇಂದಿನ ಗುರಿ ಕಳೆದುಹೋಗದಂತೆ ಬರೆದು ತಂದದ್ದನ್ನೇ ಆದಷ್ಟೂ ನಿಧಾನಕ್ಕೆ ಓದುತ್ತೇನೆ.

ಪರ್ವತಾರೋಹಣ ನನ್ನ ಪ್ರಿಯ ಹವ್ಯಾಸ. ೧೯೭೫ರಲ್ಲಿ ನಾನು ಪುಸ್ತಕ ವ್ಯಾಪಾರಿಯಾಗಿ ಮಂಗಳೂರಿನಲ್ಲಿ ನೆಲೆಸಿದೆ. ಜೊತೆಗೇ ರಜಾ ದಿನಗಳಲ್ಲಿ ಈ ವಲಯದ ಬೆಟ್ಟ ಕಾಡು ಸುತ್ತಾಡತೊಡಗಿದೆ. ನನ್ನ ಪರ್ವತಾರೋಹಣ ಕೇವಲ ಚಾರಣ, ಶಿಬಿರವಾಸ ಎಂಬ ಮಿತಿಗೆ ಒಳಪಟ್ಟದ್ದಲ್ಲ. ಕುತೂಹಲ ಕಾಡಿದಂತೆ, ಎದುರಾದ ಎಲ್ಲ ಪ್ರಾಕೃತಿಕ ವೈಶಿಷ್ಟ್ಯಗಳಿಗೂ ನನ್ನ ಶೋಧವನ್ನು ವಿಸ್ತರಿಸಿದೆ. ಗುಹೆ, ಜಲಪಾತ, ಕಚ್ಚಾ ದಾರಿಗಳು, ಜೀವವೈವಿಧ್ಯ, ಋತುವೈವಿಧ್ಯ, ಪ್ರವಾಸ ಇತ್ಯಾದಿಗಳನ್ನು ನನ್ನ ಮಿತಿ ಮತ್ತು ತಿಳುವಳಿಕೆಯಲ್ಲಿ ಗಂಭೀರವಾಗಿಯೇ ಅನುಸರಿಸಿದೆ. ಆಗ ಆಳವಾಗಿ ಮತ್ತು ವಿಸ್ತೃತವಾಗಿ ಹಾವು, ಹಕ್ಕಿ, ಚಿಟ್ಟೆ, ಕಪ್ಪೆ, ಇರುವೆ, ಜೇಡ, ಚಿಪ್ಪು, ಮೀನು, ಸಸ್ಯ ವೈವಿಧ್ಯ, ಫೋಟೋಗ್ರಫಿ, ಚಳವಳಿ ಎಂದಿತ್ಯಾದಿ ತೊಡಗಿಕೊಂಡ ಅನೇಕ ಪರಿಣತರ ಒಡನಾಟ ಸುಖವನ್ನೂ ಧಾರಾಳ ಪಡೆದೆ. ಇಂದೂ ನಾನು ಸ್ಪಷ್ಟವಾಗಿ ಯಾವುದೇ ವಿಚಾರದಲ್ಲಿ ಪರಿಣತನಲ್ಲ.

ಆದರೆ ಕಳೆದ ನಾಲ್ಕು ದಶಕಗಳಿಗೂ ಮಿಕ್ಕು ಸಾಕ್ಷಿಯಾದ ಪರಿಸರದ ಸಮೃದ್ಧಿ ಮತ್ತು ಸಂಕಟಗಳ ಅನುಭವ ಮಾತ್ರ ದಟ್ಟವಾಗಿದೆ. ಮೊದಲು ಪತ್ರಿಕಾ ಲೇಖನಗಳಲ್ಲಿ, ಕಳೆದ ಹನ್ನೊಂದು ವರ್ಷಗಳಿಂದ ನನ್ನದೇ ಜಾಲತಾಣ (ಬ್ಲಾಗ್) – www.athreebook.com ಇದರಲ್ಲಿ ದಾಖಲಿಸಿದ್ದೇನೆ. ಅಂಥ ಏಳ್ನೂರಕ್ಕೂ ಮಿಕ್ಕು ಲೇಖನಗಳು ಪೂರಕ ಚಿತ್ರ, ಚಲಚಿತ್ರ ತುಣುಕು ಹಾಗೂ ಅಸಂಖ್ಯ ಪೂರಕ ಸೇತುಗಳೊಡನೆ ಸಾರ್ವಜನಿಕರಿಗೆ ಮುಕ್ತವಾಗಿದೆ. ಅದರ ಸಾರಾಂಶವನ್ನಷ್ಟೇ ಇಲ್ಲಿ ಬಿಡಿಸಿಡುತ್ತೇನೆ. ಹೆಚ್ಚಿನ ವಿವರಣೆಗಳಿಗೆ ಜಾಲತಾಣ ನೋಡಿಕೊಳ್ಳಿ. ವನ್ಯ ಸಂರಕ್ಷಣೆಯನ್ನೇ ಮೊದಲಾಗಿ ಗಮನಿಸಿ. ಗಾಳಿ ಮತ್ತು ನೀರಿನ ಶುದ್ಧಕ್ಕೆ ಅತಿ ಮುಖ್ಯ ನೆಲೆ – ಕಾಡು. ಅದನ್ನು ಸರಳವಾಗಿ ಹಸಿರಿಗೆ ಸಮೀಕರಿಸಿ ಕೃಷಿಭೂಮಿ, ಧಾರ್ಮಿಕ ನೆಲೆಯ ದೇವರಬನಗಳು, ತೋರಿಕೆಯ ಉದ್ಯಾನವನಗಳು ಮತ್ತು ಕೊನೆಯಲ್ಲಿ (ಮೂಲದಲ್ಲಿ) ನೇರ ಮನುಷ್ಯ ಉಪಯೋಗವನ್ನೇ ಉದ್ದೇಶಿಸಿದ ಕಾಯ್ದಿರಿಸಿದ ಅರಣ್ಯ ಮತ್ತು ಕೊನೆಯದಾಗಿ ವನಧಾಮಗಳೆಂದೆಲ್ಲ ಹೆಸರಿಸುತ್ತಾರೆ. ಇದು ತಪ್ಪು. ಉಪಗ್ರಹ ಆಧಾರಿತ ಚಿತ್ರಗಳನ್ನು ನೋಡುತ್ತ ಗ್ರೀನ್ ಕವರ್, ಅಂದರೆ ಹಸಿರು ಹೊದಿಕೆ ಎಷ್ಟು ವ್ಯಾಪಕವಾಗಿದೆ ಎನ್ನುವುದು ಬರಿಯ ಅಂಕಿಸಂಕಿಗಳ ಮೋಸ. ಬಹುತೇಕ ಏಕ ಬೆಳೆ ಮತ್ತದರ ಉಳಿವು ವೃದ್ಧಿಗಾಗಿ ಏನೆಲ್ಲ ಕಸರತ್ತು ಇಂದು ಕೃಷಿ ಪ್ರಪಂಚದಲ್ಲಿ ನಡೆದಿದೆ ಎನ್ನುವುದು ನಿಮಗೆಲ್ಲ ತಿಳಿದೇ ಇದೆ. ಇನ್ನು, ಅವಧಿ ತೀರಿದ ಮೌಲ್ಯಗಳ (ಔಟ್ ಡೇಟೇಡ್ ವ್ಯಾಲ್ಯೂಸ್) ಪೋಷಕ ನೆಲೆಗಳೋ ತೀರಾ ಸಣ್ಣ ತುಣುಕುಗಳು – ಹೊಗಳಿ ಹಾಡುವುದು ನಮ್ಮ  ಅಪರಾಧೀ ಪ್ರಜ್ಞೆಯ ಪ್ರಲಾಪ.

ನನ್ನ ಉದ್ಘಾಟನಾ ಮಾತುಗಳು ನಡೆದಿದ್ದಾಗ ಎಡದಿಂದ ಬಲಕ್ಕೆ – ಸಂಕಿರಣ ಸಂಚಾಲಕ ಪ್ರಕಾಶಚಂದ್ರ ಶಿಶಿಲ, ಸರಕಾರೀ ಪರಿಸರ ಅಧಿಕಾರಿ – ರಾಜಶೇಖರ ಡಿ. ಪುರಾಣಿಕ, ಅಧ್ಯಕ್ಷತೆ ವಹಿಸಿದ್ದ ಏಗ್ನೆಸ್ ಪ್ರಾಂಶುಪಾಲೆ – ಜೆಸ್ವೀನಾ ಎ.ಸಿ, ಆಕಾಶವಾಣಿ ನಿರ್ದೇಶಕಿ – ಉಷಾಲತಾ ಸರಪಾಡಿ, ಸರಕಾರೀ ಪ್ರಥಮ ದರ್ಜೆ ಕಾಲೇಜು ರಥಬೀದಿಯ ಪ್ರಾಂಶುಪಾಲ – ರಾಜಶೇಖರ ಹೆಬ್ಬಾರ್ ಮತ್ತು ಇನ್ನೋರ್ವ ಸಂಕಿರಣ ಸಂಚಾಲಕ ಸಂಪೂರ್ಣಾನಂದ ಬಳ್ಕೂರು

ಅಲಂಕಾರಿಕ ಗಿಡ ಬಳ್ಳಿಗಳ ಕೂಟ, ಕಾಂಕ್ವುಡ್ ರಚನೆ ಮತ್ತು ಮಾತಿನ ಚಮತ್ಕಾರಗಳ ನೂರೆಂಟು ಫಲಕಗಳನ್ನಷ್ಟೇ ಮೆರೆಸುವ, ಅದೂ ಈಗ ತಾಲೂಕಿಗೊಂದರಂತೆ ಮೊಳೆಯುತ್ತಿರುವ ‘ತಿಮ್ಮಕ್ಕ ವನ’ ಸರಣಿಯಂತೂ ರಾಜ್ಯ ಖಜಾನೆಯ ಶುದ್ಧ ದರೋಡೆ. ಇವೆಲ್ಲ ವಾತಾವರಣಕ್ಕೆ ಕೊಡುವ ಆಮ್ಲಜನಕಕ್ಕಿಂತಲೂ ಅಧಿಕವಾಗಿ ಪ್ರಾಕೃತಿಕ ಶಕ್ತಿಗಳನ್ನು ದಮನಿಸುತ್ತವೆ ಮತ್ತು ಕಲುಷಿತಗೊಳಿಸುತ್ತವೆ. ಯಾವುದೇ ಮನುಷ್ಯ ಹಸ್ತಕ್ಷೇಪವಿಲ್ಲದೆ ಪ್ರಕೃತಿ ರೂಪಿಸುವ, ಜೀವವೈವಿಧ್ಯ ನೆಲೆಯನ್ನಷ್ಟೇ ನಿಜದ ಕಾಡೆನ್ನಬಹುದು. ಅಂಥಲ್ಲಿ ಪಾಚಿಯಿಂದ ಮಹಾಮರದವರೆಗೆ ಹಸಿರಿದೆ, ಅಗೋಚರ ಕೀಟದಿಂದ ಆನೆಯವರೆಗೆ ನೆಲ, ಜಲ, ವಾಯುವಿನಲ್ಲಾಡುವ ಪ್ರಾಣಿಪಕ್ಷಿಗಳಿದ್ದಾವೆ. ಹಾಗಾಗಿಯೇ ಪ್ರಾಕೃತಿಕ ಸಹಜತೆಯಲ್ಲಿರುವ ಯಾವುದೇ ನೆಲ-ಜಲ ಆವಾರಗಳನ್ನು ಬಲ್ಲವರು ವನ್ಯವೆಂದು ಗುರುತಿಸುತ್ತಾರೆ, ಸಂರಕ್ಷಿಸಬೇಕೆಂದೂ ಬಯಸುತ್ತಾರೆ. ಒಂದೆರಡು ಉದಾಹರಣೆ: ನಾಗರಹೊಳೆ, ಬಂಡೀಪುರ ವನಧಾಮಗಳು ನಿಮಗೆ ತಿಳಿದವೇ ಇವೆ. ಪ. ಬಂಗಾಳದಲ್ಲಿ ಗಂಗೆ ಸಮುದ್ರ ಸೇರುವಲ್ಲಿ ನೂರೆಂಟು ಕಾಲುವೆ ಮತ್ತಷ್ಟೇ ಕುದ್ರುಗಳು (ದ್ವೀಪಗಳು) ರೂಪುಗೊಂಡಿವೆ. ಅವನ್ನು ಒಟ್ಟಾಗಿ ಸುಂದರಬನ್ಸ್ ವ್ಯಾಘ್ರಧಾಮ ಎಂದೇ ಗುರುತಿಸಿದ್ದಾರೆ. ಅಂಡಮಾನಿನ ವಂಡೂರಿನ ಕಡಲ ಭಾಗ ಮೊಸಳೆಗಳದೇ ವನಧಾಮ. ನೀರಿರಲಿ, ಹಸಿರಿನ ತುಣುಕೂ ವಿರಳವೆನ್ನುವ ಮರುಭೂಮಿ, ಹಿಮಖಂಡಗಳನ್ನೂ ವನಧಾಮವಾಗಿ ಗುರುತಿಸಿದ್ದಾರೆ. ಇಂದು ಹುಲಿ ಮೊಸಳೆಗಳ ಬೀಡಾಗಿ, ವಿಶ್ವಖ್ಯಾತಿಯನ್ನೇ ಗಳಿಸಿರುವ ರಣಥೊಂಬರ ವನಧಾಮ, ಒಂದು ಕಾಲದಲ್ಲಿ ರಾಜಸ್ತಾನದ ಒಂದು ಅರಸೊತ್ತಿಗೆಯ ಆವರಣವೇ ಆಗಿತ್ತು ಎನ್ನುವುದನ್ನು ಮರೆಯಬಾರದು. ಕೊನೆಯದಾಗಿ ನನ್ನ ಹೆಚ್ಚಿನ ಪ್ರೀತಿಪಾತ್ರ ವನಧಾಮ ಕುದುರೆಮುಖ ರಾಷ್ಟ್ರೀಯ ಉದ್ಯಾನ. ಇಲ್ಲಿ ಗಣಿಗಾರಿಕೆ ನಿಲ್ಲಿಸಿದ ಒಂದೆರಡು ವರ್ಷಗಳಲ್ಲೇ ಸಹಜವಾಗಿ ಪ್ರವೇಶಿಸಿದ ಹುಲಿ ಸಂಸಾರದ ವರದಿ ರೋಮಾಂಚಕಾರಿ. ವನಧಾಮದೊಳಗಿದ್ದ ಕೃಷಿಕರಿಗೆ ಹೊರಗೆ ಮರುವಸತಿ ಕಲ್ಪಿಸಿದ ಮರು ವರ್ಷದಲ್ಲೇ ಅಲ್ಲಿ ಹಾಳುಬಿದ್ದ ಗದ್ದೆಯಲ್ಲಿ ವಿಹರಿಸುತ್ತಿದ್ದ ಕಾಟಿ ಹಿಂಡು ಆರೋಗ್ಯಪೂರ್ಣ ವನಧಾಮದ ಮುನ್ನುಡಿಯಂತೇ ಇತ್ತು. ಇಂಥ ಘೋಷಿತ ಪ್ರಾಕೃತಿಕ ವಲಯಗಳಲ್ಲಿ ಯಾವುದೇ ತೆರನ ಮನುಷ್ಯ ಹಸ್ತಕ್ಷೇಪವಿಲ್ಲದಂತೆ  ನೋಡಿಕೊಳ್ಳುವುದೊಂದೇ ನಿಜ ವನ್ಯ ಸಂರಕ್ಷಣೆ.

ಮೊದಲ ಗೋಷ್ಟಿಯಲ್ಲಿ ಆಕಾಶವಾಣಿಯ ಸೂರ್ಯನಾರಾಯಣ ಭಟ್ ನಿರ್ವಾಹಕರಾಗಿ ನೋಡುತ್ತಿದ್ದರೆ, ನರೇಂದ್ರ ರೈ ದೇರ್ಲ – ಕೃಷಿ ಪರಿಸರದ ತಲ್ಲಣಗಳ ಬಗ್ಗೆ ತಮ್ಮ ಪ್ರಬಂಧ ಮಂಡಿಸುತ್ತಿದ್ದಾರೆ.

ಬ್ರಿಟಿಷ್ ಯುಗದ ಅರಣ್ಯ ಇಲಾಖೆ ನಾಗರಿಕತೆಗೆ ವನ್ಯ ಕಚ್ಚಾ ಉತ್ಪನ್ನಗಳನ್ನು ವ್ಯವಸ್ಥಿತವಾಗಿ ಕೊಡುವ ಜವಾಬ್ದಾರಿಯನ್ನು ಹೊತ್ತಿತ್ತು. ಅದು ಹೋಗಿ, ಬಂದ ನಮ್ಮದೇ ಸ್ವಚ್ಛಂದ ಭಾರತದಲ್ಲಿ ವನ್ಯ ಯದ್ವಾತದ್ವಾ ಸೂರೆಹೋಯ್ತು. ಸೌದೆ, ಮೋಪು, ಜೇನು, ಹಣ್ಣು, ಮೂಲಿಕೆ, ಮಾಂಸ ಎಂದಿತ್ಯಾದಿ ವನ್ಯೋತ್ಪನ್ನಗಳ ಪಟ್ಟಿ ಬಹಳ ದೊಡ್ಡದು. ಕೃಷಿ, ಗಣಿ, ಅಣೆಕಟ್ಟು, ವಿದ್ಯುಚ್ಛಕ್ತಿ, ದಾರಿ, ಬೆಂಕಿ, ಪ್ರವಾಸ ಎಂದಿತ್ಯಾದಿ ನೆಲದ ಆಕ್ರಮಣವೂ ವಿಪರೀತವೇ ಇತ್ತು. ಇನ್ನು ಕಾಡಿನೊಳಗಿನ ಮನುಷ್ಯೇತರ ಸಂಚಾರಿ ಜೀವಗಳಿಗೋ ನಾಗರಿಕ ಗಡಿಗಳ ಅರಿವಿಲ್ಲ. ಸಹಜವಾಗಿ ಅವು ಸಂಖ್ಯೆ ಹೆಚ್ಚಿದ್ದಕ್ಕೋ ಪ್ರಾಕೃತಿಕ ವಿಪರೀತಗಳ ನೆಲೆಯಲ್ಲೋ ನಾಗರಿಕತೆಯೊಡನೆ ಸಂಘರ್ಷಕ್ಕೆ ಬಂದಾಗೆಲ್ಲ ನಷ್ಟದ ಲೆಕ್ಕ ಅವುಗಳದ್ದೇ ನಡೆಯಿತು. ಇವೆಲ್ಲವನ್ನು ವನ್ಯ-ವಿಜ್ಞಾನ ನಿಸ್ಸಂದಿಗ್ಧವಾಗಿ ತಿಳಿದು, ನಿರ್ದೇಶಿಸಿದ್ದಕ್ಕೆ ಇಂದು ಅರಣ್ಯ ಇಲಾಖೆಯನ್ನು ಸಾಮಾಜಿಕ ಅಗತ್ಯಗಳಿಗಷ್ಟೇ ಸೀಮಿತಗೊಳಿಸಿ, ವನ್ಯ ಇಲಾಖೆಯನ್ನು ಪ್ರತ್ಯೇಕವಾಗಿ ಗುರುತಿಸಿದ್ದಾಗಿದೆ. ಆದರೆ ಹೆಸರು ಬದಲಾದರೇನು ಬಹುತೇಕ ಮಂದಿಗೆ ಮೂಲ ವಾಸನೆ ಮರೆತೇ ಇಲ್ಲ. ಅನುಕೂಲವಿದ್ದಷ್ಟೇ ಪಹರೆ. ಅದನ್ನು ವಿಸ್ತರಿಸಲು ಮತ್ತು ಬಿಗಿಪಡಿಸಲು ಸಾಕಷ್ಟು ಸಿಬ್ಬಂದಿ, ಮಾರ್ಗ, ವಾಹನ, ಸವಲತ್ತುಗಳು ಕೊರತೆಯಲ್ಲೇ ಸುದ್ದಿ ಮಾಡಿದ್ದು ಹೆಚ್ಚು. ಇನ್ನವರ ತಿಳಿವಿನ ಸ್ಥಿತಿಗೆ ಒಂದು ಸಣ್ಣ ಉದಾಹರಣೆ: ಬಿಸಿಲೆಯ ಒಂದು ಕಪ್ಪೆ ಶಿಬಿರಕ್ಕೆ ಮಂಗಳೂರಿನಿಂದ ನಾವು ಮೂರು ಮಂದಿ ಮಿತ್ರರು, ಸೈಕಲ್ಲೇರಿ ಹೋಗುತ್ತಿದ್ದೆವು. ಘಾಟಿ ದಾರಿಯಲ್ಲಿ ವನ್ಯ ಇಲಾಖೆಯ ಅಧಿಕಾರಿಯೊಬ್ಬರು ಸಿಕ್ಕು, ಮಾತಾಡಿಸಿದರು. ಅವರಿಗೆ ನಾವು ಕಪ್ಪೆ ಗುರುತಿಸಲು ಹೋಗುತ್ತಿದ್ದೇವೆ ಎನ್ನುವುದು ಬಹಳ ದೊಡ್ಡ ಜೋಕಾಗಿತ್ತು. ನಿಜದಲ್ಲಿ ಅಲ್ಲಿನ ಒಂದು ರಾತ್ರಿಯ ಒಂದೆರಡು ಗಂಟೆ ಅವಧಿಯಲ್ಲೇ ನಾವು (ಕೆ.ವಿ. ಗುರುರಾಜರ ನೇತೃತ್ವದ ತಂಡ) ಹದಿನೇಳಕ್ಕೂ ಮಿಕ್ಕು ಪೂರ್ಣ ಭಿನ್ನ ಜಾತಿಯ ಕಪ್ಪೆಗಳನ್ನು ಗುರುತಿಸಿದ್ದೇವೆ. ಇನ್ನು ಭಾರತದ ಭೂಪಟ ಬಿಡಿಸಿ ಕಪ್ಪೆ ನಮೂದು ನೋಡಿ: ಎರಡು ಮೂರು ದಶಕಗಳ ಹಿಂದೆ ಅಸ್ಪಷ್ಟವಾಗಿ ಎಪ್ಪತ್ತು – ಎಂಬತ್ತಷ್ಟೇ ಜಾತಿಯನ್ನು ಗುರುತಿಸಿದ್ದರು. ಆದರೆ ಇಂದಿನ ಕಪ್ಪೆ ವೈವಿಧ್ಯ ಮುನ್ನೂರೈವತ್ತನ್ನೂ ಮಿಕ್ಕಿ ಬೆಳೆದಿದೆ.

ಎರಡನೇ ಗೋಷ್ಟಿಯಲ್ಲಿ ನಿರ್ವಾಹಕನ ಮಾತುಗಳನ್ನು ರವಿಕುಮಾರ್ ನಡೆಸಿದ್ದಾಗ ಪರಿಸರ ಕಾಯ್ದೆಗಳು ಮತ್ತು ಅನುಷ್ಠಾನದ ಬಗ್ಗೆ ತಿಳಿಸಲಿದ್ದ ಜಯಪ್ರಕಾಶ್ ಎಸ್. ನಾಯಕ್ ನೋಡುತ್ತಿದ್ದಾರೆ.

ವನ್ಯ ಇಲಾಖೆಗೆ ನಾವೇನು ಕಾಯಬೇಕು ಎನ್ನುವ ತಿಳಿವಿಗಾದರೂ ಸಂಶೋಧನೆ ಅವಶ್ಯ, ವಿಜ್ಞಾನಿಗಳ ಪ್ರವೇಶ ಅನಿವಾರ್ಯ. ಹೀಗೆ ರಕ್ಷಣೆ, ಸಂಶೋಧನೆಯಿಂದಷ್ಟೇ ಪರಿಪೂರ್ಣವಾಗುತ್ತದೆ. ಹಿಂದೆಲ್ಲ ಪ್ರಾಣಿ ಸಂಗ್ರಹಾಲಯಗಳ (ಜೂ) ವಿಸ್ತರಣೆಯಾಗಿ ವನಧಾಮಗಳು ಪ್ರವಾಸೋದ್ಯಮದ ಪಟ್ಟಿಯಲ್ಲಿರುತ್ತಿತ್ತು. ವನ್ಯ ನಿರ್ದೇಶನಗಳು ಶುದ್ಧವಿದ್ದರೂ ಇಲಾಖೆ ಆಚರಣೆಯಲ್ಲಿ ವನವಿಹಾರವನ್ನು ವನ್ಯ ಶಿಕ್ಷಣದ ಮುಸುಕಿನಲ್ಲಿ ಪ್ರವಾಸಿಗಳಿಗೆ ತೆರೆದೇ ಇಟ್ಟಿದೆ. ವನ್ಯರಕ್ಷಣೆಯ ಹೆಸರಿನಲ್ಲಿ ಒಂದೆಡೆ ಸಲಕರಣೆಗಳ ಖರೀದಿ ಬಿಲ್ಲುಗಳು ಬೆಳೆಯುತ್ತಿವೆ. ನಿಜದಲ್ಲಿ ಅವುಗಳ ಗುಣಮಟ್ಟ ಅದಕ್ಕೂ ಮಿಗಿಲಾಗಿ ಅವುಗಳನ್ನು ಅರ್ಥಪೂರ್ಣವಾಗಿ ಬಳಸುವ ಪರಿಣತಿ ಮತ್ತು ಆಸಕ್ತಿ ಇಲಾಖೆ ತೋರಿದ್ದು ಬಹಳ ಕಡಿಮೆ. ಮತ್ತೆ ಪ್ರವಾಸೋದ್ಯಮದಿಂದ ಸ್ವಯಂಶಕ್ತವಾಗುವ ಸುಳ್ಳನ್ನೂ ನಡೆಸುತ್ತ ಕಟ್ಟಡ ಮತ್ತು ನಾಗರಿಕ ಸವಲತ್ತುಗಳನ್ನು ಹೆಚ್ಚಿಸುತ್ತಲೂ ಇದೆ. ಇಲ್ಲಂತೂ ಸಹಜವಾಗಿ ದೊಡ್ಡ ಹಣ ಇದ್ದೇ ಇದೆ. ವನಧಾಮಗಳ ಘೋಷಣೆಗೂ ಪೂರ್ವದಲ್ಲಿ ಆ ವಲಯದಲ್ಲಿ ಚದುರಿದಂತೆ ಕೆಲ ಮಂದಿ ಕಷ್ಟದಲ್ಲಿ ಕೃಷಿ ಜೀವನ ರೂಢಿಸಿಕೊಂಡಿದ್ದರು. ಇಂದು ಅವರನ್ನೆಲ್ಲ ಮರುವಸತಿಗೆ ಓಲೈಸಬೇಕಾದ ಇಲಾಖೆ ನಿರ್ಲಕ್ಷ್ಯ ತೋರುತ್ತ, ವಿಹಾರಿಗಳನ್ನು ಓಲೈಸುತ್ತಿರುವುದು ನಿಜಕ್ಕೂ ಆತ್ಮಘಾತಕವೇ ಆಗಿದೆ. ನಿಜದಲ್ಲಿ ವನಧಾಮಗಳು ಸಾರ್ವಜನಿಕ ಭೇಟಿಯ ಸ್ಥಳಗಳಲ್ಲ. ವನ್ಯದ ಅರಿವಿನೊಡನೆ, ಕನಿಷ್ಠ ಸೌಕರ್ಯಗಳನ್ನು ಒಪ್ಪಿಕೊಳ್ಳುವವರಿಗಷ್ಟೇ ವನ್ಯ ವೀಕ್ಷಣೆ ದೊರಕುವಂತಾಗಬೇಕು. ಇಂದು ರಕ್ಷಣಾ ಸಿಬ್ಬಂದಿಯ ನೇಮಕಾತಿ ಮತ್ತು ಅವರ ಸವಲತ್ತುಗಳು ಆಡಳಿತದ ಸಿಕ್ಕುಗಳಲ್ಲಿ ಬಿದ್ದು ದುರ್ಬಲವಾಗಿವೆ. ಸಹಜವಾಗಿ ಇರುವವರು ಇಲಾಖೆಗೆ ಅಗತ್ಯವಿಲ್ಲದ ಪ್ರಚಾರ ಗಳಿಕೆ ಮತ್ತು ಮಾಡಬಾರದ ಪ್ರವಾಸೋದ್ದಿಮೆಯ ಕೆಲಸಗಳಲ್ಲಿ ಕಳೆದುಹೋಗಿದ್ದಾರೆ. ಮೊನ್ನೆ ನವೆಂಬರ್ ೨೯ರಿಂದ ಡಿಸೆಂಬರ್ ಎರಡರವರೆಗೆ ನಾನು ರಾಜಸ್ತಾನದ ವನ್ಯ ಇಲಾಖೆಯ ನೇರ ವ್ಯವಸ್ಥೆಯ ‘ಪೆಡಲ್ ಟು ಜಂಗಲ್’ ಅರ್ಥಾತ್ ಸೈಕಲ್ ಸವಾರಿಯಲ್ಲಿ ಕಾಡು ನೋಡಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಇಲಾಖೆ ನಮಗೊಂದು ಜನಪ್ರಿಯ ಪ್ರವಾಸೀ ಅನುಭವನ್ನೇನೋ ಕೊಟ್ಟಿತು. ಆದರೆ ಗಂಭೀರ ವನ್ಯಾಸಕ್ತನಾಗಿ ಹೋಗಿದ್ದ ನನಗೆ ತೀವ್ರ ನಿರಾಶೆಯಾಯ್ತು. ಇದನ್ನು ಅವರಿಗೆ ಬರೆದೇ ತಿಳಿಸಿದ್ದೇನೆ. ಆಸಕ್ತರು ನನ್ನ ಜಾಲತಾಣದ ವನ್ಯಸಂರಕ್ಷಣೆ ವಿಭಾಗದಲ್ಲಿ ಓದಿಕೊಳ್ಳಬಹುದು.

ಮೂರನೇ ಗೋಷ್ಟಿಯಲ್ಲಿ ಜಯಕರ ಭಂಡಾರಿಯವರು ಪರಿಸರ ಸಮಸ್ಯೆಗಳು ಮತ್ತು ನೈತಿಕ ಪ್ರಜ್ಞೆಯನ್ನು ವಿಸ್ತರಿಸುತ್ತಿದ್ದಾಗ ನಿರ್ವಾಹಕಿ ಶೈಲಜ ಕೆ ಉಪಸ್ಥಿತರಿದ್ದಾರೆ

ಕಾಡಿನ ಕಷ್ಟ ಸುಖಗಳು ಸಮಾಜವನ್ನು ಪರೋಕ್ಷವಾಗಿ ಮಾತ್ರ ಪ್ರಭಾವಿಸುತ್ತವೆ. ಆದರೆ ನೀರಿನದ್ದು ಹಾಗಲ್ಲ. ಮೂರನೆಯ ಜಾಗತಿಕ ಯುದ್ಧ ನೀರಿನ ಕಾರಣಕ್ಕೇ ಆಗುತ್ತದೆ ಎಂಬ ವಿಚಾರವಂತರ ನುಡಿಗಳು ದಿನದಿನಕ್ಕೂ ಹೆಚ್ಚು ಸ್ಫುಟಗೊಳ್ಳುತ್ತಲೇ ಇದೆ. ಜಲ ಸಂರಕ್ಷಣೆಯ ಕುರಿತು ನಮ್ಮಲ್ಲೇ ಶ್ರೀಪಡ್ರೆ, ಶಿವಾನಂದ ಕಳವೆ, ಎ.ಆರ್. ಶಿವಕುಮಾರ್ ಮುಂತಾದವರು ತುಂಬಾ ಕೆಲಸ ಮಾಡಿದ್ದಾರೆ. ಪಿ. ಸಾಯಿನಾಥ್ ನೀರಿನ ರಾಜಕೀಯದ ಮೇಲೆ ಪ್ರಕಟಿಸಿದ ಪುಸ್ತಕ – ಎವರಿಬಡಿ ಲವ್ಸ್ ಅ ಗುಡ್ ಡ್ರಾಟ್ ವಿಶ್ವಖ್ಯಾತವೇ ಆಗಿದೆ. ಇಂದು ಜಲಸಂರಕ್ಷಣೆಯ ತುರ್ತು ಮತ್ತು ಆದರ್ಶಗಳನ್ನು ಹೇಳುವಲ್ಲಿ ದೇಶದ ವರಿಷ್ಠನಿಂದ ಕನಿಷ್ಠನವರೆಗೂ ಪ್ರವೀಣರೇ ಇದ್ದಾರೆ. ಆದರೆ ನಿರ್ಣಾಯಕ ನಿಲುವುಗಳ ಹಂತದಲ್ಲಿ ಎಲ್ಲರೂ ಪಕ್ಷಾತೀತವಾಗಿ ಜನಪ್ರತಿನಿಧಿತ್ವವನ್ನು ಮರೆತು, ನಿರ್ಲಜ್ಜವಾಗಿ ಹಣಪ್ರತಿನಿಧಿಗಳೇ ಆಗುತ್ತಾರೆ. ಇದಕ್ಕೆ ಸಣ್ಣ ಉದಾಹರಣೆ ಎತ್ತಿನಹೊಳೆ ತಿರುವು.

ಯಾವುದೇ ಘನಸಾಧನೆಯಿಲ್ಲದ ಸರಕಾರೀ ಸಿವಿಲ್ ಎಂಜಿನಿಯರೊಬ್ಬ, ಕಸುಬಿಲ್ಲದೇ ಕಟ್ಟಿದ ಕನಸು ನೇತ್ರಾವತಿ ನದಿ ತಿರುವು. ಅದರ ಭಾರೀ ಆಯಾಮವನ್ನು ಲೋಕಮುಖದಲ್ಲಿ ಒಮ್ಮೆಗೇ ಸಮರ್ಥಿಸಿಕೊಳ್ಳಲು ಹೆದರಿದ ಸರಕಾರಗಳು – ಗಮನಿಸಿ, ಪಕ್ಷಾತೀತವಾಗಿ ಎಲ್ಲ ಸರಕಾರಗಳೂ ಹೇರಿದ ಯೋಜನೆ ಎತ್ತಿನಹೊಳೆ ತಿರುವು. ಒಂದೇ ವಾಕ್ಯದಲ್ಲಿ ಹೇಳುವುದಿದ್ದರೆ, ಈ ಯೋಜನೆಯಲ್ಲಿ ಹಣದ ಹೊಳೆ ಮಾತ್ರ ಹರಿಯುತ್ತದೆ. ಹೆಚ್ಚಿನ ವಿವರಗಳ ಆಸಕ್ತರು ನನ್ನ ಜಾಲತಾಣದ ಎತ್ತಿನಹೊಳೆ ವಿಭಾಗವನ್ನು ಆಯ್ದುಕೊಂಡು ಧಾರಾಳವಾಗಿ ತಿಳಿದುಕೊಳ್ಳಬಹುದು.

[ಸಮಾರೋಪ ಕಲಾಪಕ್ಕೆ ಪ್ರಾರ್ಥನೆ – ಅನನ್ಯಾ ಬಳಂತಿಮಗರು]

ಜಲಮಾಲಿನ್ಯ ತಡೆಯುವಲ್ಲೂ ಇದೇ ಪುಡಾರಿಗಿರಿ ಮೆರೆದಿದೆ. ಕೇವಲ ಕರಾವಳಿ ವಲಯದ ನೇತ್ರಾವತಿಯನ್ನೇ ನೋಡಿ – ಅದು ಹರಿದು ಬರುವ ಸುಬ್ರಹ್ಮಣ್ಯ, ಗುಂಡ್ಯ, ಬೆಳ್ತಂಗಡಿಯಾದಿ ಸ್ಥಳಗಳಿಂದ ತೊಡಗಿ ಬೆಂಗ್ರೆ ಅಳಿವೆಯವರೆಗೂ ಎಲ್ಲ ನಾಗರಿಕ ಪಾಪಹಾರಿಣಿ ಅರ್ಥಾತ್ ಕೊಳಚೆವಾಹಿನಿ ನೇತ್ರಾವತಿ. ಎಷ್ಟೋ ಊರಿನಲ್ಲಿ ಭೂಗತ ಕೊಳಚೆ ನೀರು ಸಂಗ್ರಹದ ಕೊಳವೆ ಜಾಲವನ್ನೇನೋ ಹೆಣೆದಿದ್ದಾರೆ, ಆದರೆ ಕೊನೆಯಲ್ಲಿ ಸಂಸ್ಕಾರಾಗರಗಳ ಸಕ್ಷಮತೆ ಬಗ್ಗೆ ಗಂಭೀರ ಸಂದೇಹಗಳೇ ಇವೆ. ನಾನು ಚಾರಣ, ಸೈಕಲ್ ಸವಾರಿ ಮತ್ತು ಕಯಾಕಿಂಗ್ – ಅಂದರೆ ದೋಣಿ ಸವಾರಿಯಲ್ಲಿ, ಕಂಡ ಎಲ್ಲಾ ಜಲಮೂಲಗಳ ಸ್ಥಿತಿಯೂ ಹೀಗೆ ನಿರಂತರ ಅವಹೇಳನಕ್ಕೆ ಈಡಾಗುತ್ತಲೇ ಇವೆ. ಇಂಥವುಗಳ ವಿರುದ್ಧದ ಉದಾತ್ತ ಯೋಜನೆಗಳನ್ನು ಸಾಂಕೇತಿಕವಾಗಿ ಗಂಗಾಶುದ್ಧಿ ಎಂದು ಹೆಸರಿಸಿದರೆ, ಇಂದಿರಾ ರಾಜೀವರ ಕಾಲದಲ್ಲೂ ಗಂಗಾಶುದ್ಧಿಯ ವರದಿಗಳು ‘ಯಶಸ್ಸ’ನ್ನೇ ಸಾರುತ್ತವೆ. ಆದರೂ ನಿಜದ ಗಂಗೆ ಅತ್ಯಂತ ಕೊಳಚೆಯಾಗಿಯೇ ಉಳಿದಿದೆ. ನಮ್ಮಲ್ಲಿ ಅರಿವು, ತಂತ್ರಜ್ಞಾನ, ಸಲಕರಣೆಗಳು ಎಂದೂ ಕಡಿಮೆಯಾದದ್ದಿಲ್ಲ. ಆಗಿರುವ ಕೊರತೆ ಒಂದೇ – ರಾಜಕೀಯ ಇಚ್ಛಾಶಕ್ತಿ. ಎಮ್ಮಾರ್ಪೀಯೆಲ್ಲಿನ ನೆಲದ ಸೋರಿಕೆಗಳು ಸುತ್ತಣ ಎಲ್ಲಾ ಜಲಮೂಲಗಳನ್ನು ಕೆಡಿಸಿದ್ದಕ್ಕೆ, ಸ್ವಚ್ಛಭಾರತ್ ಮಂತ್ರದಿಂದ ಮನೆಗೊಂದು ಶೌಚಾಲಯ ಮಾಡಿಸುವ ಜಾಣತನ ನಮ್ಮದು. ದೊಡ್ಡ ಮೊತ್ತದ ಕೊಳಚೆ ತಯಾರಾಗುವ ಉದ್ದಿಮೆಗಳಿಗೆ ಕಡಿವಾಣ ಹಾಕುವುದಿಲ್ಲ. ಇರುವ ಕೊಳಚೆ ವಿಲೇವಾರಿ ವ್ಯವಸ್ಥೆಯನ್ನೂ ದಕ್ಷ ಗೊಳಿಸುವುದಿಲ್ಲ. ಇದಕ್ಕೆ ಉದಾಹರಣೆಯಾಗಿ ನಗರದೊಳಗೆ ಎಷ್ಟೂ ಸಾರ್ವಜನಿಕ ಶೌಚಾಲಯಗಳನ್ನು ನೀವು ನೋಡಬಹುದು. ಮುಖ್ಯ ಮಾರ್ಗವೊಂದರ ನಡುವೆ ಆಳುಗುಂಡಿ – ಮ್ಯಾನ್ ಹೋಲ್, ಉಕ್ಕಿದರೆ, ನಗರದೊಳಗೆ ಇನ್ನೂ ಸಾಕಷ್ಟಿರುವ ಹಳೆಗಾಲದ ಸೆಪ್ಟಿಕ್ ಟ್ಯಾಂಕ್‍ಗಳು ತುಂಬಿ ನಿಂತರೆ, ಕೊಳಚೆ ಮಂಡಳಿಯ ಆಧುನಿಕ ಸಕ್ಕರ್ ಲಾರಿಗಳೇನೋ ಬರುತ್ತವೆ ಮತ್ತು ಹೀರುತ್ತವೆ. ಆದರೆ ಮುಂದೆ ಅವು ಯಥಾವತ್ ಹೊರೆಯನ್ನು ನಮ್ಮ ತೋಡು ಹೊಳೆಗಳಿಗೆ ಇಳಿಸುವುದನ್ನು ನಾನು ಕಂಡಿದ್ದೇನೆ. ಹಾಗಾಗಿ ಲೆಕ್ಕಕ್ಕಿರುವ ಕೊಳಚೆ ಸಂಸ್ಕಾರ ಹೊಂಡಗಳ ಸಾಮರ್ಥ್ಯ ಮತ್ತು ಸಕ್ಷಮತೆ ಬಗ್ಗೆ ನನಗೆ ಗಂಭೀರ ಸಂಶಯಗಳಿವೆ. ಇಂದಿಗೂ ಕೆಪಿಟಿ, ಯೆಯ್ಯಾಡಿ, ಕುಲಶೇಖರ, ಆಕಾಶವಾಣಿಗಳನ್ನು ಹೊತ್ತ ವಿಸ್ತಾರ ಪದವಿನ ಸುತ್ತಣ ತಪ್ಪಲಿನಲ್ಲಿ ಅಸಂಖ್ಯ ಶುದ್ಧ ನೀರಿನ ಒರತೆಗಳು ಕಡು ಬೇಸಗೆಯಲ್ಲೂ ಶುದ್ಧ ನೀರನ್ನೇ ದ್ರವಿಸುತ್ತವೆ. ಆದರೆ ಕದ್ರಿ ಮಂಜುನಾಥ ದೇವಳದ ವಠಾರದಲ್ಲಿ ಕಣ್ಣಿಗೊತ್ತಿ ಸೇವಿಸುವ ನೀರು, ಅಲ್ಲೇ ಸ್ವಲ್ಪ ಕೆಳಗೆ ಮೂಗೊತ್ತಿ ವಾಕರಿಸುವ ಸ್ಥಿತಿ ಇರುವಾಗ ಬೇರೆ ಸಾಕ್ಷಿ ಬೇಕೇ?

ಸಮಾರೋಪ ಕಲಾಪದಲ್ಲಿ ಎಡದಿಂದ ಬಲಕ್ಕೆ – ಸಂಕಿರಣ ಸಂಚಾಲಕ – ಪ್ರಕಾಶಚಂದ್ರ ಶಿಶಿಲ, ಭಾಷಣಕಾರ – ಜಯಂತ ಎಚ್, ಅಧ್ಯಕ್ಷ – ಕೃಷ್ಣಮೂರ್ತಿ, ನಿರ್ವಾಹಕಿ – ಶೈಲಜಾ ಕೆ ಮತ್ತು ಇನ್ನೋರ್ವ ಸಂಕಿರಣ ಸಂಚಾಲಕ – ಸಂಪೂರ್ಣಾನಂದ ಬಳ್ಕೂರು

ಚಿಲ್ಲರೆ ಮಾರಾಟ ಮಳಿಗೆಗಳ ಮೇಲೆ ದಾಳಿ ಮಾಡಿ ಐದು ಹತ್ತು ಕಿಲೋ ಪ್ಲ್ಯಾಸ್ಟಿಕ್ ಚೀಲ ವಶಪಡಿಸಿಕೊಳ್ಳುವುದು, ದಂಡ ಹಾಕುವುದು ಹತ್ತು ಹದಿನೈದು ವರ್ಷಗಳಿಂದಲೂ ನಡೆದೇ ಇದೆ. ಅವನ್ನು ತಯಾರಿಸುವ ಕಾರ್ಖಾನೆಯನ್ನು ಮಾತ್ರ ಪ್ರಶ್ನಿಸುವ ತಡೆಯುವ ಕೆಲಸ ನಾನು ಕಂಡಿಲ್ಲ. ಇದು ಮದ್ಯವರ್ಜನಾ ಶಿಬಿರ, ಕಳ್ಳಭಟ್ಟಿ ದಾಳಿಯಂಥ ತೋರಿಕೆಯ ಚಟುವಟಿಕೆಗಳನ್ನು ನಡೆಸುತ್ತ, ಅಬಕಾರಿ ಇಲಾಖೆಯ ಹರಾಜೇ ಸರಕಾರದ ಬಲ ಎಂದಂತಿದೆ. ಮದ್ಯನಿಷೇಧವನ್ನು ಕೇಳಿ ಮುನ್ನೂರಕ್ಕೂ ಕಿಮೀ ಪಾದಯಾತ್ರೆಯಲ್ಲಿ ಬಂದವರಿಗೆ ಸಂದರ್ಶನವನ್ನೇ ನಿರಾಕರಿಸಿದಂತೇ ಇದೆ.

ಕೊಳ್ಳುಬಾಕತನ ಮತ್ತು ಆರೋಗ್ಯದ ಭ್ರಮೆಯಲ್ಲಿ ಇಂದು ಪ್ರತಿ ಮನೆ/ ಅಪಾರ್ಟ್ಮೆಂಟ್ ಹುಟ್ಟು ಹಾಕುವ ಅವಿನಾಶೀ ಕಸ ಭೂಮಿಯನ್ನು ನುಂಗುವುದಿರಲಿ, ಸಮುದ್ರದಲ್ಲೂ ಸಾವಿರಾರು ಚದರ ಕಿಮೀ ವ್ಯಾಪ್ತಿಯ ವಿಷದ ಗಡ್ಡೆಯಾಗಿ ತೇಲುತ್ತಿದೆ. ಕಸವನ್ನು ಹುಟ್ಟಿಸಿದವರೇ ಜೀರ್ಣಿಸಿಕೊಳ್ಳಬೇಕು ಎನ್ನುವುದನ್ನು ಕಡ್ಡಾಯ ಮಾಡಬೇಕಾದ ಸರಕಾರ, ತದ್ವಿರುದ್ಧವಾಗಿ ಮುದ್ದು ಮಾಡುತ್ತಿದೆ. ಯಾಕೆಂದರೆ ಮನೆ ಮನೆಗೆ ವಾಹನ, ಜನ ಕಳಿಸಿ, ಕಸ ಸಂಗ್ರಹಿಸುವ ಮತ್ತೆ ಸಂಸ್ಕರಿಸುವ ಯೋಜನೆಗಳಲ್ಲಿ ಬಹಳ ದೊಡ್ಡ ದುಡ್ಡಿದೆ. ಇಷ್ಟಾಗಿಯೂ ಈ ನಾಟಕ ಸುಖಾಂತವಲ್ಲ, ದುರಂತ ಎನ್ನುವುದನ್ನು ಸಾರುವ ಒಂದು ಸಣ್ಣ ದೃಶ್ಯ – ಈಚೆಗೆ ಪಚ್ಚನಾಡಿಯ ಕಸದ ಗುಡ್ಡೆಯಲ್ಲೆದ್ದ ಭಾರೀ ಅಗ್ನಿಕಾಂಡ. ಎರಡು ಮೂರು ದಶಕಗಳ ಹಿಂದೆ, ಮಳೆಯ ಮಾರುತಗಳ ಒಳನಾಡು ಪ್ರವೇಶವನ್ನು ಪಶ್ಚಿಮ ಘಟ್ಟಗಳು ತಡೆಯುತ್ತಿವೆ ಎನ್ನುವ ವಿಚಾರ, ಕೀಳು ರಾಜಕಾರಣದಲ್ಲಿ ಆಪಾದನೆಯಂತೇ ಮೇಲೆ ಬಂತು. ಆಗ ಮಂತ್ರಿಯಾದವನು ಘಟ್ಟಗಳ ತಲೆ ಸವರುವ ಯೋಚನೆ ನಡೆಸಿದ್ದ. ಹೀಗೇ ನೇತ್ರಾವತಿ ನದಿ ತಿರುವಿನ ಯೋಜನಾವರದಿಯಲ್ಲೂ ಕೆಲವು ವಿಪರೀತ ಊಹಂದಾಜುಗಳಿವೆ. ಉದಾಹರಣೆಗೆ ಶೋಲಾ ಕಾಡುಗಳ ಅತಿ ಮುಖ್ಯ ಭಾಗವಾದ ಹುಲ್ಲ ಹರಹುಗಳು ಹಾಳು ನೆಲವಂತೆ. ಮತ್ತೊಂದು, ಇಲ್ಲಿನ ನದಿಗಳ ಮಳೆಗಾಲದ ಹರಿವೆಲ್ಲ ವ್ಯರ್ಥವಾಗಿ ಸಮುದ್ರ ಸೇರುತ್ತವಂತೆ. ಇಂಥವನ್ನೆಲ್ಲ ತೇಲಿ ಬಿಡುವ ಭಾರೀ ಉದ್ದಿಮೆಯೊಡನೆ ಬರುವ ಭಾರೀ ಹಣದ ವಹಿವಾಟಿರುವುದರಿಂದ ಪಕ್ಷಾತೀತವಾಗಿ ನಮ್ಮೆಲ್ಲ ಸರಕಾರಗಳೂ ಜಾಣ ಕುರುಡು, ಕಿವುಡು ನಟಿಸುತ್ತವೆ. ಹಾಗಾಗಿ ಎಮ್ಮಾರ್ಪೀಯೆಲ್, ಉಷ್ಣ ವಿದ್ಯುತ್ ಸ್ಥಾವರಗಳಂಥವಕ್ಕೆ ಬರುತ್ತವೆ, ವಿಸ್ತರಿಸುತ್ತವೆ ಎಂದಾಗ, ಆಡಳಿತ ವರ್ಗಗಳಿಗೆ ಫಲವತ್ತಾದ ಕೃಷಿ, ಪಾರಂಪರಿಕ ಹಳ್ಳಿ-ಊರುಗಳೆಲ್ಲ ಯಃಕಶ್ಚಿತ್ ನೆಲವಾಗುತ್ತವೆ. ಇಂದು ಭಾರೀ ನಿರ್ಮಾಣ ವೆಚ್ಚದ ರಸ್ತೆಗಳ ವಿಸ್ತರಣೆ, ರೈಲು ದ್ವಿಪಥೀಕರಣ, ಅಸಂಖ್ಯ ವಿದ್ಯುತ್ ವಾಹಕಗಳು, ಎಣ್ಣೆ ಮತ್ತು ಅನಿಲಗಳ ಕೊಳವೆ ಸಾಲುಗಳು, ಮಿನಿ ವಿದ್ಯುದಾಗರಗಳು, ನೀರಾವರಿ ಅಥವಾ ಕುಡಿನೀರ ಅಣೆಕಟ್ಟೆಗಳು, ಸೇತುವೆಗಳು, ಸುರಂಗ ಮಾರ್ಗ ಎನ್ನುವವು ಮುಟ್ಟಿದ ನೆಲವೆಲ್ಲ, ಅದರಲ್ಲೂ ಮುಖ್ಯವಾಗಿ ಪಶ್ಚಿಮ ಘಟ್ಟ, ಅಕ್ಷರಶಃ ಅಡ್ಡ ನೀಟ ಸೀಳಿ ಚಿಂದಿಯಾಗಿದೆ, ಆಗುತ್ತಿದೆ. ಅವೆಲ್ಲವನ್ನು ಒಟ್ಟಾಗಿ ನೋಡಬೇಕಾದ ಸರಕಾರ, ಜಾಣತನದಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿಯೇ ಗ್ರಹಿಸುತ್ತ, ಅವು ಕೊಡುವ ಯೋಜನಾ ವರದಿಯ ‘ನಿರುಪಯೋಗಿ’ ಪದವನ್ನು ಸಮರ್ಥಿಸುತ್ತಲೇ ಇದೆ.’

ಅಭಿವೃದ್ಧಿ ಹೆಸರಿನಲ್ಲಿ ಇಂದು ವನ್ಯ ವಲಯದ ನೆಲಕ್ಕೆ ಬೇಡಿಕೆ ಬರುವಾಗ, ಸ್ವತಃ ವನ್ಯ ಇಲಾಖೆ ಕುದುರೆಮುಖ ಮತ್ತು ಪುಷ್ಪಗಿರಿ ವನಧಾಮಗಳು ಹಿಂದೆ ಆಗಿಹೋದ ಮಹಾಪರಾಧ ಎನ್ನುವಂತೆ ಮೌನವನ್ನೇ ತಳೆಯುತ್ತದೆ. ಉಚ್ಛನ್ಯಾಯಾಲಯ ಕುದುರೆಮುಖ ಗಣಿಗಾರಿಕೆಯನ್ನು ಪಶ್ಚಿಮ ಘಟ್ಟದ ನೆಲೆಯ ಎಲ್ಲ ಹೊಣೆಗಾರಿಕೆಗಳಿಂದಲೂ ಹೊರಗೆ ಹಾಕಿದೆ. ಆದರೂ ಅದರ ವಕ್ತಾರರು ಸ್ಲರಿ ಕೊಳವೆಗಳ ಮೂಲಕ ಮಂಗಳೂರಿಗೆ ನೀರು ಕೊಡುತ್ತೇವೆ, ಲಖ್ಯಾ ಅಣೆಕಟ್ಟೆಯ ಮಣ್ಣಿನಲ್ಲಿ ಇಟ್ಟಿಗೆ ಭಟ್ಟಿ ನಡೆಸುತ್ತೇವೆ, ಹಳೇ ವಸತಿ ಗೃಹಗಳಲ್ಲಿ ರಿಸಾರ್ಟ್ ನಡೆಸುತ್ತೇವೆ ಎಂದಾಗ ವನ್ಯ ಇಲಾಖೆ ಯಾಕೆ ಉತ್ತರಿಸಲಿಲ್ಲವೋ ನನಗಂತೂ ತಿಳಿಯದು. ವನ್ಯದ ಹಿತ ಕಾಯುವ ಯಾವುದೇ ತಜ್ಞ ವರದಿ ಬಂದಾಗ ಇಲಾಖೆ ಉತ್ಸಾಹ ತಳೆದದ್ದಂತೂ ನಾನು ಕಾಣಲೇ ಇಲ್ಲ. ಮಾಧವ ಗಾಡ್ಗೀಳ್ ಸಮಿತಿಯ ವಿಸ್ತೃತ ವರದಿ, ಕಸ್ತೂರಿ ರಂಗನ್ ಕೊಟ್ಟ ರಿಯಾಯಿತಿಯ ವರದಿಗಳನ್ನು ಬಿಡಿ, ಜಾಗತಿಕವಾಗಿ ‘ವಿಶ್ವಪರಂಪರೆಯ ನೆಲೆ’ ಎಂದು ಮನ್ನಣೆ ಕೊಡುತ್ತೇವೆ ಎಂದಾಗಲೂ ವನ್ಯ ಇಲಾಖೆಯೇ ಇಲ್ಲದಂತೆ, ಜವಾಬ್ದಾರಿಯುತ ಸರಕಾರ ಕ್ಷಣಕಾಲ ವಿಳಂಬಿಸದೇ ತಿರಸ್ಕರಿಸಿದ್ದು ನಿಜವಾದ ಪರಿಸರ ತಲ್ಲಣ.

ನಮ್ಮ ಪಶ್ಚಿಮ ಕರಾವಳಿಯನ್ನು ಪೌರಾಣಿಕವಾಗಿ ಪರಶುರಾಮ ಸೃಷ್ಟಿ ಎನ್ನುವುದಿದೆ. ಕಥೆಯಲ್ಲಿ ತನ್ನ ಅಗತ್ಯದ ಭೂಮಿತಿಯನ್ನು ಸೂಚಿಸಲು ಭಾರ್ಗವರಾಮ ಕೊಡಲಿಯನ್ನು ಸಾಗರದ ಮೇಲೆ ಎಸೆಯುತ್ತಾನೆ. ಇದನ್ನು ವಾಸ್ತವವಾದಿಗಳು ಕಾಡು ಕಡಿದದ್ದಕ್ಕೆ ರೂಪಕವಾಗಿಯೇ ಕಾಣುವುದಿದೆ. ದುರಂತವೆಂದರೆ ಇಂದು ನಾವು ಬರಿಯ ಕೊಡಲಿಯಲ್ಲ, ಗುದ್ದಲಿಯನ್ನೂ ಸೇರಿಸಿಕೊಂಡು ದಕ್ಕಿದ ನೆಲದ ಹದವನ್ನೂ ವಿಪರೀತವಾಗಿ ಕೆಡಿಸಿ ಮತ್ತೆ ಸಮುದ್ರಕ್ಕೆ ಸೇರಿಸುತ್ತಿದ್ದೇವೆ. ಭಸ್ಮಾಸುರನ ಉರಿಹಸ್ತದಂತೇ ವರವಾಗಿ ಬಂದ ಬುಲ್ಡೋಜರುಗಳ ಕ್ರಾಂತಿಯಲ್ಲಿ, ಅಂದಂದಿನ ಅನುಕೂಲದ ಹೆಸರಿನಲ್ಲಿ ಪ್ರಕೃತಿ, ಪರಂಪರೆಗಳೆಲ್ಲವನ್ನೂ ಅಳಿಸುತ್ತಿದ್ದೇವೆ. ತಂತ್ರಜ್ಞಾನದ ಅಮಲಿನಲ್ಲಿ ಗುಡ್ಡೆ ಕಡಿದು, ಕಣಿವೆ ತುಂಬಿ, ಕೃಷಿ ಹೂತು ರಸ್ತೆ, ಕಟ್ಟಡಗಳನ್ನು ತರುತ್ತಲೇ ಇದ್ದೇವೆ. ಕನಿಷ್ಠ ಇಪ್ಪತ್ಮೂರು ಮಿನಿ ವಿದ್ಯುದಾಗರಗಳ ಸರಣಿ ಕುಸಿತದಿಂದ ಆರು ವರ್ಷಗಳ ಹಿಂದೆ ಕೇದಾರನಾಥದಲ್ಲಿ ಪ್ರಳಯವಾದದ್ದು ಸುಮ್ಮನಲ್ಲ. ಕಳೆದ ಮಳೆಗಾಲದಲ್ಲಿ ಕೇರಳ, ಮಡಿಕೇರಿಗಳಲ್ಲೂ ನಡೆದ ಭೂ ಕುಸಿತಗಳನ್ನು ನಾವು ಸುಳ್ಳೇ ಪ್ರಾಕೃತಿಕ ವೈಪರೀತ್ಯದ ತಲೆಗೆ ಕಟ್ಟಿ ಕೂತಿದ್ದೇವೆ. ಹದಿನೈದು ದಿನಗಳ ಹಿಂದೊಮ್ಮೆ ಎತ್ತಿನಹೊಳೆ ಯೋಜನೆಯ ವಲಯದಲ್ಲಿ ಸುತ್ತಾಡಿ ಬಂದಿದ್ದೇನೆ. ಪರಸ್ಪರ ಸಂಪರ್ಕವಿಲ್ಲದೆ ತುಂಡುತುಂಡಾಗಿ ಹೂತ ಎಷ್ಟೊ ಕೊಳವೆ ಸಾಲುಗಳು ಸಂದು ಸಡಲಿ, ಕುಸಿದು, ಕಸ ಗೊಸರು ತುಂಬಿಹೋಗಿವೆ. ಆದರು ಅಣೆಕಟ್ಟೆಗಳು ಮೇಲೇಳುತ್ತಲೇ ಇವೆ, ಕಾರಣ – ಹಣ ಹರಿಯುತ್ತಲೇ ಇದೆ. ಸಂಪಾಜೆ, ಶಿರಾಡಿ, ಬಿಸಿಲೆ ದಾರಿಗಳಿಗೆ ಪ್ರಥಮ ಚಿಕಿತ್ಸೆಯನ್ನಷ್ಟೇ ಕೊಟ್ಟು ಮುಖ ಉಳಿಸಿಕೊಂಡಿದ್ದಾರೆ. ಈಗ ಸಂತ್ರಸ್ತರ ಮರುವಸತಿ, ಕುಸಿದ ನೆಲ, ದಾರಿಗಳ ಖಾಯಂ ಕಾಮಗಾರಿ ನೆನೆಗುದಿಗೆ ಬಿದ್ದಿದೆಯಂತೆ. ಬದಲಿಗೆ ಶಿರಾಡಿಯ ಹದಿನೆಂಟು ಕಿಮೀ ಸುರಂಗಮಾರ್ಗ, ಭೈರಾಪುರ ಶಿಶಿಲ ಮಾರ್ಗ, ಆಗುಂಬೆಯ ಚತುಷ್ಪಥ, ಮಂಗಳೂರು – ಬೆಂಗಳೂರು ರೈಲು ದಾರಿಯ ದ್ವಿಪಥಗಳ ಬಗ್ಗೆ ಹಣ ಹೊಂದಿಸುತ್ತಿದ್ದೇವೆ.

ಪರಿಸರ ‘ಸಂರಕ್ಷಣೆ’ ಎನ್ನುವುದೇನೂ ಯುದ್ಧವಲ್ಲ. ಪರಿಸರಕ್ಕೆ ಅಸಂಖ್ಯ ವೈರಿಗಳೇನೋ ಇದ್ದಾರೆ, ನಿಜ. ಆದರೆ ಪಾರುಗಾಣಿಸುವಲ್ಲಿ ಬೇಕಾದದ್ದು ಶೌರ್ಯವಲ್ಲ. ಮೊದಲು ಮುಕ್ತ ತಿಳುವಳಿಕೆ ಮತ್ತೆ ನಮ್ಮದೇ ಜೀವನಶೈಲಿಯ ತಿದ್ದುಪಡಿ. ಪ್ರಾಯ, ಅನುಭವ ಹೆಚ್ಚಿದಂತೆ ನನ್ನಂಥವರಿಗೆ ಹೋದಲ್ಲೆಲ್ಲಾ ಕೊರತೆ, ದೋಷಗಳೇ ಕಾಣುತ್ತವೆ. ಇದಕ್ಕೆ ಪರಿಹಾರ ಹುಡುಕುವಲ್ಲಿ ಬಹಳ ದೊಡ್ಡ ಅಡ್ಡಿ ಪ್ರಾಮಾಣಿಕತೆಯದ್ದು. ಇಂದು ಸಮಾಜಸೇವೆಯ ಹೆಸರಿನಲ್ಲಿ ಬರುವ ಹೆಚ್ಚಿನ ಜನಪ್ರತಿನಿಧಿಗಳು ಮತ್ತು ವೃತ್ತಿ ಪರಿಣತಿಯ ಹೆಸರಿನಲ್ಲಿ ಬರುವ ಹೆಚ್ಚಿನ ಆಡಳಿತದವರು ಕೆರಿಯರಿಸ್ಟ್‍ಗಳು, ಸರಳವಾಗಿ ಹೇಳುವುದಿದ್ದರೆ ಹೊಟ್ಟೆಪಾಡಿನವರು. (ಅವರು ಏನೆಲ್ಲ ತಿನ್ನುತ್ತಾರೆ ಎನ್ನುವುದು ನಿಮ್ಮ ಊಹೆಗೆ ಬಿಟ್ಟಿದ್ದೇನೆ!) ಅವರು ಯಾವುದೇ ಕೆಲಸಕ್ಕೆ ನ್ಯಾಯ ಸಲ್ಲಿಸುವುದಕ್ಕಿಂತ ಹೆಚ್ಚಿಗೆ ಸ್ವಂತಕ್ಕೆ ಪ್ರಚಾರ, ಹಣ, ಸವಲತ್ತು ಗಳಿಸುವುದನ್ನೇ ಲಕ್ಷ್ಯವಾಗಿಟ್ಟುಕೊಳ್ಳುತ್ತಾರೆ. ಹೀಗೆ ದುರ್ಬಲಗೊಂಡ ವ್ಯವಸ್ಥೆಯೇ ಪರಿಸರ ತಲ್ಲಣದ ಮುಖ್ಯ ಕಾರಣ. ಇದರ ಪರಿಹಾರಕ್ಕೆ ಯಾವ ಅಲೌಕಿಕ ಶಕ್ತಿ, ಹೊಸ ಶಾಸನಗಳ ಬಲ ಬೇಕಿಲ್ಲ. ಬಳಕೆದಾರರ ಜಾಗೃತಿ ಸಾಕು. ನಮ್ಮ ವಲಯದಲ್ಲೇ ಕೆ.ಪಿ.ಎಸ್. ಕಾಮತ್ ಎನ್ನುವವರು ಸರಕಾರೀ ನೌಕರರು ಎಷ್ಟು ದೊಡ್ಡ ಅಧಿಕಾರಿಯಾಗಿದ್ದರೂ ಒಡೆಯರಲ್ಲ ಸೇವಕರು ಎಂದೇ ಸ್ವಾನುಭವದ ಪುಸ್ತಕ ಬರೆದು ತೋರಿಸಿದ್ದಾರೆ. ರವೀಂದ್ರನಾಥ ಶಾನುಭಾಗ್ ಸ್ವಂತ ಸಾಧನೆಗಳನ್ನು ಬಹುಜನ ಸುಖಾಯ ಬಹುಜನ ಹಿತಾಯ ಎಂದು ಮೊದಲು ಲೇಖನಗಳ ಮತ್ತೆ ಸಂಕಲಿತ ಪುಸ್ತಕಗಳ ಮಾಲೆಯಲ್ಲಿ ದಾಖಲಿಸಿ ಇಟ್ಟಿದ್ದಾರೆ, ಈಗಲೂ ಕೆಲಸ ನಡೆಸಿಯೇ ಇದ್ದಾರೆ. ಇದಕ್ಕೆ ಯಾವುದೇ ಸಾಂಸ್ಥಿಕ ಸಂಘಟನೆ ಬೇಕಿಲ್ಲ. ಇದು ಬೀದಿ ಪ್ರದರ್ಶನವಂತೂ ಅಲ್ಲವೇ ಅಲ್ಲ. ವೈಯಕ್ತಿಕ ಪರಿಣತಿ ಮತ್ತು ಮಿತಿಯಲ್ಲಿ ಎಲ್ಲವನ್ನೂ ಪ್ರಶ್ನಿಸಿ, ಕನಿಷ್ಠ ನಿಮ್ಮ ಅನುಭವದ ಭಾಗವಾಗಿಯಾದರೂ ರೂಢಿಸಿಕೊಳ್ಳಿ. ಇದು ಪರಿಸರ ಸಂರಕ್ಷಣೆಯೊಡನೆ, ವ್ಯವಸ್ಥೆಯ ಭಾಗವಾದ ನಮ್ಮನ್ನೇ ತಿದ್ದಿಕೊಳ್ಳುವ ಕ್ರಿಯೆಯೂ ಆಗುತ್ತದೆ. ಸಣ್ಣ ಉದಾಹರಣೆ: ಕೆಲವರು ನನ್ನ ಸೈಕಲ್ ಬೆಲೆ ಕೇಳಿ, ಹೇಳಿವುದುಂಟು – ಆ ಮೊತ್ತಕ್ಕೆ ಮೋಟಾರ್ ಸೈಕಲ್ ಸಿಕ್ತಿತ್ತಲ್ಲ! ಬೈಕ್ – ಶ್ರಮ ಕಡಿಮೆ, ವೈಯಕ್ತಿಕವಾಗಿ ನನಗೆ ಭಾರೀ ನಿರ್ವಹಣಾ ವೆಚ್ಚವನ್ನೂ ಕೊಡದು. ಆದರೆ ಸೈಕಲ್ಲಿನಿಂದ ನಾನು ಪಡೆಯುವ ವ್ಯಾಯಾಮಕ್ಕೆ ಬದಲಿ ಹುಡುಕಬೇಕಾಗುತ್ತದೆ. ಮತ್ತೆ ಸಾಮಾಜಿಕವಾಗಿ ಬೈಕ್ ನಿರಾಕರಿಸುವುದರಿಂದ ನಾನು ಉಳಿಸಿದ ಇಂಧನ ಮತ್ತು ಕಡಿಮೆ ಮಾಡಿದ ಮಾಲಿನ್ಯ ದೊಡ್ಡದು ಎಂಬ ತಿಳುವಳಿಕೆ ಮುಖ್ಯವಾಗಬೇಕು.

ಬೀದಿ ಪ್ರದರ್ಶನಗಳು ಮತ್ತು ಸಾಂಕೇತಿಕ ಕಲಾಪಗಳು ಸಾಮಾನ್ಯವಾಗಿ ಹೆಸರಿಸಿದ ಉದ್ದೇಶದಿಂದ ಬೇರೇ ಲಾಭಕ್ಕಾಗಿಯೇ ದುಡಿಯುತ್ತವೆ. ಹಿಂದೊಮ್ಮೆ ಎತ್ತಿನಹೊಳೆ ಯೋಜನಾ ವಿರುದ್ಧ, ನಮ್ಮ ಸಂಸದನ ನೇತೃತ್ವದಲ್ಲಿ ಮಂಗಳೂರಿನಿಂದ ಗುಂಡ್ಯದವರೆಗೆ ಕೆಲವು ದಿನಗಳ ಭರ್ಜರಿ ಪಾದಯಾತ್ರೆ ನಡೆಯಿತು. ತಮಾಷೆ ಎಂದರೆ ಇಂಥ ಕೆಲಸಗಳನ್ನು ತಾತ್ವಿಕವಾಗಿ ಮಾಡಲೆಂದೇ ಜನ ಆತನನ್ನು ಆಯ್ದದ್ದು. ಆತ ಬದಲಿಗೆ ಅದೇ ಜನರನ್ನು ಒಳಗೊಂಡು, ಅವರದೇ ಎದುರು ನಡೆಸಿದ ಈ ಪ್ರದರ್ಶನ ವ್ಯಕ್ತಿ ಪ್ರಚಾರಕ್ಕಿಂತ ಹೆಚ್ಚಿನದ್ದೇನೂ ಸಾಧಿಸಲಿಲ್ಲ. ಸುತ್ತಣ ಪರಿಸರದ ನೀರು, ಗಾಳಿ ಮತ್ತು ನೆಲಕ್ಕೆ ವಿಷ ಮತ್ತು ಭಯವನ್ನೇ ಊಡುತ್ತಿರುವ ನಮ್ಮದೇ ಮಹಾ ಪೆಟ್ರೋ ಉದ್ದಿಮೆ, ವಾರ್ಷಿಕ ಹರಿಕೆಯಂತೆ ಮೊನ್ನೆಯಷ್ಟೇ ವಾಯು ಮಾಲಿನ್ಯ ಕಡಿಮೆ ಮಾಡಿ ಎಂದು ‘ಸೈಕಲ್ ಜಾಥಾ’ ನಡೆಸಿತು. ಅಲ್ಲಿ ಇಲ್ಲಿ ಸಂಘ ಸಂಸ್ಥೆಗಳು ವಠಾರಗಳನ್ನು ವಹಿಸಿಕೊಂಡು ಕಸ ಕಳೆಯುತ್ತಿರುವ ಕಥಾನಕಗಳನ್ನು ಕೇಳುತ್ತಲೇ ಇರುತ್ತೇವೆ. (ಇದರಲ್ಲಿ ಶತಕೋತ್ತರ ಮಿಂಚುತ್ತಿರುವವರೂ ಇದ್ದಾರೆ!) ಅದಲ್ಲ, ಬದಲಿಗೆ ಕೊಳಕು ನಿವಾರಣೆಗಾಗಿಯೇ ಇರುವ ಶಾಸನ ಬದ್ಧ ಸಂಸ್ಥೆಗಳನ್ನು ಬಲಪಡಿಸಿ. ಅದರ ಸಿಬ್ಬಂದಿಗಳಿಗೆ ಸವಲತ್ತು ಒದಗಿಸಿ, ದಕ್ಷತೆ ಹೆಚ್ಚಿಸಿ ಎನ್ನುವವರಿಲ್ಲವಾಗಿದೆ. ಸಣ್ಣ ಉದಾಹರಣೆ: ಬಲ್ಮಠದಲ್ಲಿ ನನ್ನಂಗಡಿ ಎದುರು ನಿತ್ಯ ಕಸಗುಡಿಸಿ, ಎತ್ತುತ್ತಿದ್ದವನಿಗೆ ಒಂದು ದಿನ ಅದೇ ಮೊದಲು ಎನ್ನುವಂತೆ ಇಲಾಖೆಯಿಂದ ಒಂದು ಕೈ ಗವುಸು ಬಂದಿತ್ತು. ಗಮನಿಸಿ, ಆತನಿಗೆ ದುಡಿಯುವ ಕೈಗಳು ಎರಡಿದ್ದರೂ ಬಂದದ್ದು ಒಂದೇ ಕೈಗೆ! ಸ್ವಯಂ ಸೇವಾ ಚಳವಳಿಗಳಲ್ಲಿ ಪ್ರಾಯೋಜಕರು, ಮೆರೆಯುವವರು, ಪೋಸ್ಟರ್, ಕ್ಯಾಪ್, ಬನಿಯನ್, ಕೈ ಗವುಸು, ಗಂಬೂಟು, ಮೂಗುಪಟ್ಟಿ, ಹೊಸ ಹೊಸಾ ಸಲಕರಣೆಗಳ ಮಿಂಚು, ಉದ್ಘಾಟನೆ, ಸಮಾರೋಪ, ಉಪಾಹಾರ, ಅರ್ಹತಾಪತ್ರ, ಪ್ರಚಾರ ದೊಡ್ಡದು, ಒಟ್ಟಾರೆ ಪರಿಣಾಮ ಅಲ್ಪಾಯು ಮತ್ತು ಮೊದಲೇ ಹೇಳಿದಂತೆ ಸಾಂಕೇತಿಕ.

ಸಾಮಾಜಿಕ ಪರಿವರ್ತನೆಯ ಅನಿವಾರ್ಯತೆಯಲ್ಲಿ ಮೌಲ್ಯಗಳ ಪರಿಷ್ಕರಣ ನಿತ್ಯ ನಡೆಯುತ್ತಲೇ ಇರುತ್ತದೆ. ಇದನ್ನು ಯಾವುದೋ ಒಂದು ಕಾಲದ ಮಾನಕ ಇಟ್ಟುಕೊಂಡು – ನಮ್ಮ ಕಾಲದಲ್ಲಿ ಹೀಗಿರಲಿಲ್ಲ, ಸೋಲಾಯ್ತು, ರಾಜಿ ಮಾಡಿಕೊಂಡೆವು ಎಂದೆಲ್ಲ ಖಿನ್ನರಾಗಬೇಕಾಗಿಲ್ಲ. ಆ ಕೊರಗಿನಲ್ಲಿ ಸಿನಿಕರಾಗಿ ಏನೂ ಮಾಡದ ಜಡತ್ವಕ್ಕೂ ಇಳಿಯಬಾರದು. ಆದರ್ಶ ರಾಜ್ಯದ ಆಶಯವನ್ನು ವರ್ತಮಾನದ ಚೌಕಟ್ಟಿಗೆ ಹೊಂದಿಸುವ ಅರಿವಿನೊಡನೆ, ನಮ್ಮ ಮಿತಿಯ ದುಡಿಮೆ ನಡೆಸಲೇಬೇಕು. ಹಾಗೆ ನೋಡಿದರೆ ನಮ್ಮ ಸುತ್ತಮುತ್ತೇ ಅದೆಷ್ಟು ಮಹಾತ್ಮರು ಇದ್ದಾರೆ ನೋಡಿ. ನಿರೇನ್ ಜೈನ್ – ವನ್ಯ ಸಂರಕ್ಷಣೆ, ಶ್ರೀಪಡ್ರೆ – ಕೃಷಿ ಜೀವವೈವಿಧ್ಯ, ಶಿವಶಂಕರ್ – ಹಕ್ಕಿ, ಸಮ್ಮಿಲನ ಶೆಟ್ಟಿ – ಚಿಟ್ಟೆ, ಗುರುರಾಜ ಸನಿಲ್ – ಹಾವು, ಚಾರ್ಲ್ಸ್ – ಅನಾಥ ಪ್ರಾಣಿ, ಕೆವಿ ಗುರುರಾಜ್ – ಕಪ್ಪೆ, ಕೃಷ್ಣಮೋಹನ್ – ಕೀಟಗಳು, ಜಯಂತ – ಆಕಾಶವೀಕ್ಷಣೆ, ರೋಹಿತ್ ರಾವ್ – ಸಂವಹನ, ಶ್ರೀನಿವಾಸ ಕಕ್ಕಿಲ್ಲಾಯ – ಸಾಮಾಜಿಕ ಆರೋಗ್ಯ, ಸುಂದರ ರಾವ್ – ನದಿ ಸ್ವಾಸ್ಥ್ಯ, ಅಭಿಜಿತ್ – ಜೇಡ, ಕೆಜಿ ಭಟ್ – ಸಸ್ಯಗಳು ಇತ್ಯಾದಿ ಇತ್ಯಾದಿ. ಅವಸರದ ನನ್ನೀ ಪಟ್ಟಿ ಪರಿಪೂರ್ಣವಲ್ಲ ಮತ್ತು ಆ ವ್ಯಕ್ತಿಗಳು ಇಲ್ಲಿ ನನ್ನನುಕೂಲಕ್ಕೆ ಹೆಸರಿಸಿದ ಒಂದು ವಿಷಯಕ್ಕಿಂತ ಎಷ್ಟೆಷ್ಟೋ ಹೆಚ್ಚಿನ ಜವಾಬ್ದಾರಿಯುಳ್ಳವರೂ ಹೌದು ಎನ್ನುವುದು ನೆನಪಿರಲಿ. ಮೊನ್ನೆಯಷ್ಟೇ ಇಂಥಾ ವಿಚಾರಗಳನ್ನು ಒಂದು ಸಣ್ಣ ನಾಟಕದ ಚೌಕಟ್ಟಿನಲ್ಲಿ, ಕೆವಿ ಅಕ್ಷರ ಕಟ್ಟಿಕೊಟ್ಟಿದ್ದನ್ನು ಕಂಡೆ. ಅವಕಾಶ ಒದಗಿದರೆ ಎಲ್ಲರೂ ಆ ನಾಟಕ – ಸೇತುಬಂಧವನ್ನು ನೋಡಿ. ಅದೃಷ್ಟಕ್ಕೆ ಈ ವರ್ಷದ ನೀನಾಸಂ ತಿರುಗಾಟ ಮಂಗಳೂರಿನಲ್ಲಿ ಎರಡನೇ ಸುತ್ತಿನ ಪ್ರದರ್ಶನಗಳನ್ನು ಇದೇ ೯,೧೦ರಂದು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕೊಡಲಿದೆ.

‘ಪರಿಸರ ಉಳಿಸೋಣ’ ಬಹಳ ಪ್ರಚಾರದಲ್ಲಿರುವ ಮಾತು. ವಾಸ್ತವದಲ್ಲಿ ಇದಕ್ಕೆ ಹೆಚ್ಚಿನೆಲ್ಲರೂ ತಮ್ಮ ದೈನಂದಿನ ಅಗತ್ಯಗಳಾದ – ನೀರು, ಗಾಳಿ, ಆಹಾರ, ಆರೋಗ್ಯಾದಿಗಳ ಕೊರತೆ ಅಥವಾ ಬೆರಕೆಯ ಸಂಕಟಕ್ಕೆ ಪರಿಹಾರ ಒದಗುತ್ತದೆ ಎಂದೇ ಧ್ವನಿ ಸೇರಿಸುತ್ತಾರೆ. ಅವರಲ್ಲಿ ಹೆಚ್ಚಿನವರು ಜಗತ್ತಿನ ಇತರ ಜೀವ ಅಜೀವಗಳೆಲ್ಲ ಮನುಷ್ಯನ ನೇರ ಉಪಯೋಗಕ್ಕೇ ಇದೆ ಎನ್ನುವ ಭ್ರಮೆಯಲ್ಲೇ ಮಾತಾಡುತ್ತಾರೆ. ಸಣ್ಣ ಉದಾಹರಣೆ ಹೇಳುತ್ತೇನೆ – ಮೊನ್ನೆಯಷ್ಟೇ ಹೆಗ್ಗಡದೇವನಕೋಟೆ ಸಮೀಪದಲ್ಲಿ ನರಭಕ್ಷಕ ಹುಲಿ ಸುದ್ಧಿ ಮಾಡಿತು. ಅನಂತರ ಅದನ್ನು ಅರಿವಳಿಕೆ ಹೊಡೆದು ಹಿಡಿದದ್ದೂ ಆಗಿದೆ, ಬಿಡಿ. ದೈಹಿಕವಾಗಿ ಸಹಜ ಬೇಟೆಯಾಡಲಾಗದೆ, ಕೇವಲ ಹೊಟ್ಟೆಪಾಡಿಗಾಗಿ ಅದು ಮನುಷ್ಯರನ್ನು ಕೊಂದಿತ್ತಾದರೂ ಹಸಿವೆ ನೀಗುವಷ್ಟು ತಿನ್ನುವುದಾಗಿರಲಿಲ್ಲ. ಆದರೆ ಊರಿನ ಜನರ ಆಪಾದನೆ ನೋಡಿ “ಜನರ ಜೀವಕ್ಕಿಂತ ಅಧಿಕಾರಿಗಳಿಗೆ ಹುಲಿ ಹೆಚ್ಚಾಯಿತು.” ಭಯ, ನೋವಿನ ಆಳದಲ್ಲಿ ಇಂಥ ಮಾತು ತಪ್ಪೆನ್ನಲಾರೆ. ಆದರೆ ಅವರನ್ನು ಸರಿದಾರಿಗೆ ಒಯ್ಯುವಲ್ಲಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದು. ಅದರ ಅರಿವಿನಲ್ಲೇ ಒಂದೆರಡು ವರ್ಷಗಳ ಹಿಂದೆ ಮಂಗಳೂರಿನಲ್ಲೇ ಪತ್ರಕರ್ತರಿಗೆ ವನ್ಯದ ವರದಿಗಾರಿಕೆಯ ಕುರಿತಾಗಿ ಒಂದು ಕಮ್ಮಟವೂ ನಡೆದಿತ್ತು.

ಜೀವ ವಿಕಾಸ ಪಥದಲ್ಲಿ ನಾವು ಶಿಖರದಲ್ಲೇನೋ ಇದ್ದೇವೆ, ಆದರೆ ಅತ್ಯಂತ ಎಳೆಯರೂ ಹೌದು ಎನ್ನುವುದನ್ನು ಮರೆಯಬಾರದು. ನಮ್ಮ ನಿಜ ಸಮಸ್ಯೆ ಮತ್ತು ಪರಿಹಾರಗಳಿಗೆ ಮೇಲೆ ನೋಡುವುದಲ್ಲ, ಇಳಿಜಾರಿನ ಉದ್ದಕ್ಕೆ, ಅಂದರೆ ನಾವು ನಡೆದು ಬಂದ ದಾರಿಯನ್ನು ನೋಡಬೇಕು. ಇಲ್ಲವಾದರೆ, ಹೆಗ್ಗೌಳಿ, ಮ್ಯಾಮತ್ ಆನೆಗಳಂಥವೆಲ್ಲ ನಾಮವಶೇಷವಾದಂತೆ ಮನುಷ್ಯನೂ ಅಳಿದು ಹೋದರೆ ಆಶ್ಚರ್ಯವಿಲ್ಲ. ಮತ್ತೆಯೂ ಪ್ರಾಕೃತಿಕ ಪರಿಸರ ಉಳಿದೇ ಇರುತ್ತದೆ.

ನನಗೆ ಇಷ್ಟು ಮಾತುಗಳ ಅವಕಾಶ ಕಲ್ಪಿಸಿದ ಎಲ್ಲರಿಗೂ ಕೇಳಿದವರಿಗೂ ನಮಸ್ಕಾರ.