(ಸೈಕಲ್ ಸರ್ಕೀಟ್ – ೪೬೩)

ನೆನಪಿದೆಯಲ್ಲಾ, ನಿನ್ನೆ (ಫೇಸ್ ಬುಕ್ಕಿನ ಸೈಕಲ್ ಸರ್ಕೀಟ್ ೪೬೨ ನೋಡಿ) ಹೇಳಿದಂತೆ, ಇಂದು (೨೪-೩-೨೦೧೯) ನನ್ನ ಸೈಕಲ್ ಸವಾರಿ ಒಂಟಿಯಲ್ಲ, ಮಂಗಳೂರು ಬೈಸಿಕಲಿಗರ ಸಂಘಕ್ಕೆ ಜಂಟಿ. ತಂಡದ ಲಕ್ಷ್ಯ – ಬಂಟ್ವಾಳದಾಚಿನ ನರಹರಿಪರ್ವತ. ದಿನದ ಬೆಳಕು ಹರಿಯುವ ಮುನ್ನ, ಮೊದಲ ಪಾದದಲ್ಲೇ ಕಂಬಳದ ಗದ್ದೆಯಿಂದ ಕದ್ರಿಗುಡ್ಡೆಯ ನೆತ್ತಿಗೆ ಒಂದು ಗುಣಿಸು ಒಂದು ಗೇರಿನಲ್ಲಿ ಏರುವ ಪಡಿಪಾಟಲು ನನ್ನದು! ಇದು ಪರೋಕ್ಷವಾಗಿ ದಿನದ ಅಂತಿಮ ಲಕ್ಷ್ಯದ ಮುನ್ಸೂಚನೆ. ಪಾಲಿಟೆಕ್ನಿಕ್ ಎದುರಿನಿಂದ ಐದೂ ನಲ್ವತ್ತರ ಸುಮಾರಿಗೆ ಹೊರಟ ಹನ್ನೆರಡರ ತಂಡಕ್ಕೆ ಅಪ-ಸಂಖ್ಯೆಯಾಗಿ (ಹದಿಮೂರಕ್ಕಿರುವ ಅಪಕಲ್ಪನೆಯ ಗೇಲಿ ಮಾತ್ರ!) ನಾನು ಸೇರಿಕೊಂಡೆ. ಲೆಕ್ಕಕ್ಕೆ ನಾವು ಐದೂವರೆಗೆ ಹೊರಡಬೇಕಿತ್ತು. ಅದಕ್ಕೆ ಸರಿಯಾಗಿ ಸುರತ್ಕಲ್ಲಿನ ದೂರದಿಂದ ಬಂದಿದ್ದ ವೇಣು ವಿನೋದ್, ಡಾ| ಟಿ.ಆರ್ ಉಡುಪರು ಕಾಯ್ದುಕೊಂಡ ಸಮಯದ ಶಿಸ್ತನ್ನು, ಇಲ್ಲೇ ಇದ್ದ ನಾನು ಉಳಿಸಿರಲಿಲ್ಲ. ಆದರೆ ಅಂತಿಮವಾಗಿ ಹದಿನಾರರವರೆಗೂ ತಂಡದ ಬಲ ಹೆಚ್ಚುವಂತೆ ದಾರಿಯಲ್ಲಿ ಸೇರಿಕೊಂಡ ಮತ್ತೂ ಕೆಲವು ಗೆಳೆಯರಿಂದ ನನ್ನ ಲಜ್ಜೆಯ ಒಜ್ಜೆ ಸ್ವಲ್ಪ ಹಗುರಾಯ್ತು!

ನಂತೂರು, ಮರೋಳಿಯಲ್ಲಿ ಪೆಡಲಿಕೆಯ ಬಿಸಿ ಏರಿಸಿ, ಪಡೀಲು ಇಳಿಜಾರಿನಲ್ಲಿ ಬೆವರು ಆರಿಸಿಕೊಂಡೆವು. ಅದುವರೆಗೆ ಚಿನ್ಮಯ ದೇಲಂಪಾಡಿಯ ವೃತ್ತಿ ಸಂಬಂಧೀ ಮಾತುಗಳನ್ನು ಮೆಲು ಧ್ವನಿಯಲ್ಲಿ ವಿಚಾರಿಸಿಕೊಳ್ಳುತ್ತಿದ್ದೆ. ಇಲ್ಲಿ ಒಮ್ಮೆಗೆ ಮೇಲ್ಸೇತುವೆಯಲ್ಲಿ ಓಡುತ್ತಿದ್ದ ರೈಲು ನಮ್ಮ ಬಗಲಿಗೇ ಬಂತೋ ಎನ್ನುವಂತೆ ಬೆನ್ನಟ್ಟಿ ಸೇರಿಕೊಂಡವರು ಶ್ರೀಕಾಂತ ರಾಜ. ಇವರ ಮಾತಿನ ರೈಲಿಗೆ ಸದ್ದು ಜಾಸ್ತಿಯಾದರೂ ಹೊರೆಯೆಲ್ಲ ಪ್ರೀತಿಯದ್ದೇ. ಕಣ್ಣೂರು ದರ್ಗಾ ಹಾಯುತ್ತಿದ್ದಂತೆ ಎಲ್ಲರ ಮಾತುಗಳ ಸಮಾಧಿ ಮಾತ್ರವಲ್ಲ, ದುರ್ಬಲ ಹೃದಯಗಳ ಕವಾಟವೂ ಕಳಚಿಬೀಳುವ ಹಾಗೆ ಮೈಕಿನ ಅಬ್ಬರ ಕೇಳಿಸಿತು. ಇಂದು ಲೋಕಸಭೆಯ ಲೆಕ್ಕದಲ್ಲಿ ಮತಬೇಟೆಗಿಳಿದವರಿಗೆ ಮೈಕು, ಭಾಷಣಗಳಿಗೆ ಸಾರ್ವಜನಿಕ ಹಿತೈಕ ದೃಷ್ಟಿಯಿಂದ ನೂರೆಂಟು ಕಟ್ಟುಪಾಡು ಕೇಳುತ್ತೇವೆ. ಆದರೆ ನಿತ್ಯದ ಇಂಥ ಮತ ಪ್ರಚಾರಕ್ಕೆ (ಭಜಕರ ಬೊಬ್ಬೆ, ಸುಪ್ರಭಾತಗಳ ಒರಲಿಗೆ ಮೈಕ್ ಕಟ್ಟುವವರನ್ನು ಸೇರಿಸಿಕೊಂಡೇ ಹೇಳುತ್ತಿದ್ದೇನೆ) ಕಡಿವಾಣ ಹಾಕುವವರೆಲ್ಲಿ ಪ್ರಜಾಪ್ರಭುವೇ?

ಅರ್ಕುಳ ಕಳೆಯುತ್ತಿದ್ದಂತೆ ಎದುರಿನಾಗಸಕ್ಕೆ ರಂಗು ಬಂತು. ಸಹಜವಾಗಿ ಫರಂಗಿಪೇಟೆಯ ಮೀನಕಟ್ಟೆಯ ಹಿಂದಿನ ಗದ್ದೆಯಲ್ಲಿ ದಪ್ಪಕ್ಕೆ ಹಾಸಿ ಮಲಗಿದ್ದ ಮಂಜಿನಲ್ಲಿ ಸಂಚಲನ ಶುರುವಾಗಿತ್ತು. ತುಂಬೆಯ ಸುಂಕದ ಕಟ್ಟೆಯಲ್ಲಿ ಚದುರಿದ ಒಮ್ಮೆಗೆ ನಮ್ಮ ತಂಡ ಒಗ್ಗೂಡಿತ್ತು. ಮತ್ತೆ ಹಾಗೇ ಜೋಡುಮಾರ್ಗ ಮುಟ್ಟುವಾಗ, ದಿಗಂತದಲ್ಲಿ ಮೂಡಿತ್ತೊಂದು ಭಾರೀ ಟೊಮೇಟೋ (ಉದಯರವಿ)! ಇದು ನಮ್ಮನ್ನು ತತ್ಕಾಲೀನವಾಗಿ ಹೋಟೆಲಿನತ್ತ ದಿಕ್ಚ್ಯುತಿಗೊಳಿಸಿತು. ಅಲ್ಲಿ ತಿಂಡಿ ತಿಂದವರೆಲ್ಲ ಟೊಮೇಟೋದ ಭಾತ್, ಚಟ್ನಿ, ಸಾರು… ಮುಗಿಸುವುದರೊಡನೆ, ಆಗಸದ ಕೆಂಪು ಮಾಸಿ, ಬೆಳ್ಳಿ ತಟ್ಟೆ ಬೆಳಗಿತ್ತು. ನೇತ್ರಾವತಿ ಸಂಕ ಹಾಯ್ದು, ಮೇಲ್ಕಾರ್ ಪೇಟೆ ಬರುತ್ತಿದ್ದಂತೆ ಸಾಕ್ಷಾತ್ ನರಹರಿಪರ್ವತ ನಸು ಮಂಜಿನಲ್ಲಾಡುತ್ತ ನಮ್ಮನ್ನು ಸ್ವಾಗತಿಸಿತು.

ಹೊಸ ತಲೆಮಾರಿನ ಸೈಕಲ್ ಮಹಿಮೆ (ಗೇರ್ ಸೈಕಲ್) ಹಾಡುವ ಭರದಲ್ಲಿ “ದಾರಿ ಇದ್ದರಾಯ್ತು, ಏರಲಾಗದ ಕಡಿದಿಲ್ಲ” ಎಂದು ಹೇಳುವವರೇ ನಾವು. ನರಹರಿ ಗುಡ್ಡೆಗೇರುವ (ನಿಜದಲ್ಲಿ ಅದಕ್ಕೆ ‘ಪರ್ವತ’ ಎನ್ನುವ ಮಹಾ ಆಯಾಮವೇನೂ ಇಲ್ಲ) ದಾರಿ ನುಣ್ಣನೆ ಡಾಮರ್/ ಕಾಂಕ್ರೀಟ್ ಹೊದಿಕೆಯೇನೋ ಹೊದ್ದಿದೆ. ಆದರೆ ಏರೇರುತ್ತ ನೆಲ ಮಾಡ ಹೊರಟವರು ಗೋಡೆ ಮುಗಿಸಿಟ್ಟಿದ್ದಾರೆ! ಶಿಖರದ ಪಾದದವರೆಗಿನ ಹೊಸ ಹೊದಿಕೆಯ ಹಳೆ ದಾರಿಯನ್ನು ಬಹುತೇಕ ನಾವೆಲ್ಲ ಸಹಜವಾಗಿ ಸೀಟಿನಲ್ಲಿ ಕುಳಿತೇ ಮೆಟ್ಟಿ ಜಯಿಸಿದೆವು. ಮುಂದೆ ಮೆಟ್ಟಿಲ ಸಾಲಷ್ಟೇ ಇದ್ದ ಭಾಗದಲ್ಲಿ, ಇಂದು ಬಂದಿರುವ (ತೀರಾ ಅನಪೇಕ್ಷಿತ) ದಾರಿ ಮಾತ್ರ ಅಸಾಧ್ಯ ಕಡಿದು. ಎಳೆದು ಮೆಟ್ಟಿದರೆ ಎದುರು ಚಕ್ರ ಎದ್ದೀತು, ಮುಂಬಾಗಿ ಮೆಟ್ಟಿದರೆ ಹಿಂಚಕ್ರ ಜಾರೀತು. ಕೊನೆಯದಾಗಿ ಪೆಡಲಿನ ಮೇಲೇ ನಿಂತು ಮೆಟ್ಟುವುದೇ ಆದರೆ ಸುತ್ತೆರಡು ಮುಗಿಸುವುದರೊಳಗೆ ಉಸಿರು ಇಂಗಿ, ಚಕ್ರದ ಬಲ ಉಡುಗಿ ಕುಸಿಯುವುದು ಖಾತ್ರಿ! ಹಿಂದೊಮ್ಮೆ ನನ್ನ ಸೈಕಲ್ ಉತ್ಸಾಹ ನೋಡಿದ ಘಟ್ಟದ ಮೇಲಿನ ಹಿರಿಯರೊಬ್ಬರು ಕೇಳಿದ್ದಿತ್ತು “ಸೈಕಲ್ ತುಂಬಾ ಮೆಟ್ಟಿದರೆ ನರ ಹರ್ದೋಯ್ತದಂತೆ, ಫ್ಯಾಮಿಲಿ ಮಾಡೋಕ್ಕಾಗೋಲ್ವಂತೆ, ಹೌದಾ ಸಾರ್?” (ಅದು ಸುಳ್ಳು) ಇಲ್ಲಿ ನರವೇನು ಜೀವವೇ ಹರಿದುಹೋಗುವ ಸ್ಥಿತಿ!

ನಮ್ಮಲ್ಲಿನ ಭಾರೀ ಹುರಿಯಾಳುಗಳು ದಾರಿಯಿದ್ದ ಅಗಲದಲ್ಲೇ ಹಾವಾಡುವ, ತಳದಿಂದಲೇ ಬಿರುಸಾದ ಆವರ್ತಗಳೊಡನೆ ಗರಿಷ್ಠ ಗೇರಿನಲ್ಲೇ ಬರುವ ಥಿಯರಿಗಳನ್ನು ಸರಿಯಾಗಿಯೇ ಜ್ಞಾಪಿಸಿಕೊಂಡರು, ಪ್ರಾಕ್ಟಿಕಲ್ಸಿನಲ್ಲಿ ಸೋತರು. ಆಧುನಿಕ ವ್ಯಾಯಾಮ ಶಾಲೆಯ ಪ್ರವೀಣ, ಎಮ್ಮೆಮ್ಮೆ (ಮಿಕ್ಸೆಡ್ ಮಾರ್ಷಲ್ ಆರ್ಟ್ಸ್) ಪರಾಕ್ರಮಿ ಕೌಶಿಕ್ ಮಾತ್ರ ಸೋಲನ್ನು ಸವಾಲಾಗಿಯೇ ಸ್ವೀಕರಿಸಿದರು. ಮೆಟ್ಟಿಲ ಸಹಯೋಗದ ದಾರಿಯನ್ನು ತುಂಡು ತುಂಡಾಗಿಯೇ ಮೆಟ್ಟಿ, ನೂಕಿ ಒಮ್ಮೆಗೆ ಮೇಲೇರಿದ್ದರೂ ಉಸ್ಸಪ್ಪಾಂತ ಕೂರಲಿಲ್ಲ. ಕೂಡಲೇ ಇಳಿದು ಹೋದರು. ಹೊಸದೇ ಶಕ್ತಿ ಆವಾಹನೆ ಮಾಡಿಕೊಂಡಂತೆ, ಅವಿರತ ಪೆಡಲ್ ಮೆಟ್ಟಿ ಶಿಖರ ಸಾಧಿಸಿಯೇಬಿಟ್ಟರು. ಆಗ ‘ಭಕ್ತ ಗಣ’ಗಳೇ ಆದ ನಾವು ಮಾತ್ರವಲ್ಲ, ಸದಾಶಿವ ದೇವರನ್ನು ನೋಡ ಬಂದ ಇತರ ಭಕ್ತಾದಿಗಳೂ ಚಪ್ಪಾಳೆಗೆ ಧ್ವನಿಸೇರಿಸಿದ್ದರು. ಈತ ಪುರಾಣ ಪ್ರಸಿದ್ಧ ಕೌಶಿಕನ (ಪ್ರತಿ ಸ್ವರ್ಗವನ್ನೇ ಸೃಷ್ಟಿಸಿದ ಛಲವಂತ!) ಹೆಸರಿಗೂ ಗೌರವ ತಂದನೆಂದರೆ ಉತ್ಪ್ರೇಕ್ಷೆಯಲ್ಲ!

ನರಹರಿ ಪರ್ವತದ ಶ್ರೀ ಸದಾಶಿವ ಕ್ಷೇತ್ರ, ‘ಜೀರ್ಣೋದ್ಧಾರ’ದ ಮಹಾ ತಿರುಗಣಿ ಮಡುವಿನಲ್ಲಿರುವುದನ್ನು ಎರಡು ವರ್ಷಗಳ ಹಿಂದೆಯೇ ನಾನು ಕಂಡಿದ್ದೆ. (ನೋಡಿ: ಮೂರು ಮುಕ್ಕಣ್ಣರ ಭೇಟಿ…. ) ಈ ಪುಟ್ಟ ಬೆಟ್ಟದ ಪ್ರಾಕೃತಿಕ ಶಕ್ತಿ ಮತ್ತು ಮಿತಿಗಳನ್ನು ಅರಿತು, ಅನುಸರಿಸಿದ ಹಿಂದಿನವರ ಭಕ್ತಿ, ಸೇವೆಗಳನ್ನೆಲ್ಲ ಇಂದಿನವರು ಕುಟ್ಟಿ ಕೆಡವುತ್ತಿದ್ದಾರೆ. ಸವಕಲು ಜಾಡು, ಮೆಟ್ಟಿಲ ಸಾಲುಗಳು ಅರ್ಥ ಕಳೆದುಕೊಂಡದ್ದಕ್ಕೂ ವಿಪರೀತವಾಗಿ ಇಲ್ಲಿನ ತೀರ್ಥ (ಶಂಖ, ಚಕ್ರ, ಗದಾ…)

ಮಹಿಮಾ ಸ್ಥಾನಗಳೂ ಎಲ್ಲೆಲ್ಲಿನ ನೀರು, ಹಣಗಳ ಅಭಿವ್ಯಕ್ತಿಯಾಗುತ್ತಿರುವುದು ದುರಂತವೇ ಸರಿ. ನಿಜದಲ್ಲಿ ಇದು ಜೀರ್ಣೋದ್ಧಾರವಲ್ಲ, ಪೂರ್ಣ ನವನಿರ್ಮಾಣ. ಇದಕ್ಕೆ ಕೊನೆ ಎಲ್ಲಿ? ಹೇಗೆ? ಭೂಕುಸಿತದಂಥ ದುರಂತವಾಗದಿರಲಿ ಎಂದು ನಾನೂ (ಅಲೌಕಿಕ ಶಕ್ತಿಗಳಲ್ಲಿ ನಂಬಿಕೆಯಿಲ್ಲದವ) ಆ ಸದಾಶಿವನನ್ನೇ ಪ್ರಾರ್ಥಿಸಬೇಕಾಗಿದೆ! ಗುಡ್ಡೆ ಹತ್ತಿದಷ್ಟೇ ಕಷ್ಟ ಇಳಿಯುವಲ್ಲೂ ಕಂಡೆವು. ಸೈಕಲ್ ಬಿಟ್ಟರೆ ರಾಕೆಟ್, ಬಿರಿ (ಬ್ರೇಕ್) ಬಿಗಿ ಮಾಡಿದರೆ ಹಿಂಚಕ್ರ ಎತ್ತಿ ಸವಾರನನ್ನೇ ಗಾಳಿಗೆ ಉಡಾಯಿಸುವ ಹುಚ್ಚು ಕುದುರೆ.

ಬಂದಂತೇ ಬಹುತೇಕ ಮಂದಿ ನೂಕಿಯೇ ಇಳಿಸಿದೆವು. ಅಲ್ಲೂ ಬಿರಿ ಬಿಗಿ ಮಾಡಿದರೆ ಅಬ್ಬ, ಸೈಕಲ್ ಹೋಗಿ ಸ್ಕೇಟರ್ ಹಿಡಿದ ಅನುಭವ – ಅಂಡು ಓರೆ ಮಾಡಿ ನಮ್ಮ ಬಗಲಿಗೇ ಕುಟ್ಟುತ್ತಿತ್ತು. ಕೆಲವರಂತು ಕೆಲವು ಹಂತಗಳಲ್ಲಿ ಸೈಕಲ್ ಹೊತ್ತು ಮೆಟ್ಟಿಲ ಸಾಲನ್ನೇ ಅನುಸರಿಸಿದ್ದರು! ನಾನು ದೇವಳದ ವಠಾರದಂಚಿನಲ್ಲಿ ನಿಂತು, ವಿಹಂಗಮ ನೋಟದಲ್ಲಿ ದಾರಿಯುದ್ದಕ್ಕೂ ಓಡುವ ಸೈಕಲ್ ದಳವನ್ನು ವಿಡಿಯೋ ಮಾಡಬೇಕೆಂದು ಯೋಚಿಸಿದ್ದೇ ಬಂತು. ಇಳಿದಾರಿಯಲ್ಲಿ ಕೊನೆಯವನಾಗಿ ನಾನೂ ಸೈಕಲ್ ನೂಕಿದ್ದೇ ಹೆಚ್ಚು.

ಬೆಟ್ಟವೇರಿಸಿದ ಶ್ರಮಕ್ಕೆ ಮರಳುವ ದಾರಿಯಲ್ಲಿ, ‘ವಿಶೇಷ ಬೇಸಗೆ’ ಬಿಸಿಲ ಹೊಡೆತವೂ ಸೇರಿಕೊಂಡಿತ್ತು. ಎಲ್ಲರೂ ಅವರವರ ಮಿತಿಯಲ್ಲಿ ಪೆಡಲುತ್ತ, ತುಣುಕು ನೆರಳುಗಳಲ್ಲಿ ನಿಂತು ನೀರು ಕುಡಿಯುತ್ತ ಸಾಗಿದ್ದೆವು. ಆಗ ನನಗೆ ತುಂಬೆ ಬಳಿ ತಂಗಾಳಿಯಂತೆ ಕಂಡವ ಈ ಗೋವಿಂದ. ನನ್ನ ಜಾಲತಾಣದ ಖಾಯಂ ಓದುಗರಿಗೆ ‘ವಿಶ್ವಯಾನಿ ಗೋವಿಂದ’ ಚಿರಪರಿಚಿತನೇ. ಕೇವಲ ನೆನಪಿಗೆ ಚೋದಕವಾಗಿ ಎರಡು ಪರಿಚಯದ ಮಾತು: ಪ್ರಾಯದ ಹಿರಿಮೆಯಲ್ಲಷ್ಟೇ ಇವನನ್ನು ನನ್ನ ಶಿಷ್ಯ ಎಂದು ಗುರುತಿಸುವಲ್ಲಿ ನನಗೆ ಸದಾ ಹೆಮ್ಮೆ ಇದೆ. ಸುಮಾರು ಮೂರು ದಶಕಗಳ ಹಿಂದೆ ಏಕಾಂಗಿಯಾಗಿ ಕೆಲವು ತಿಂಗಳ ಕಾಲ ಸೈಕಲ್ಲೇರಿ ವಿಶ್ವದ ಬಹುತೇಕ ದೇಶಗಳನ್ನು ಸುತ್ತಿ ಬಂದ ಸಾಹಸಿ ಈತ. ಮುಂದೊಂದು ಕಾಲದಲ್ಲಿ ‘ಸಾಮಾನ್ಯರ ವಿಮಾನ’ (ಪವರ್ಡ್ ಹ್ಯಾಂಗ್ ಗ್ಲೈಡರ್) ಹಾರಿಸುವ ಉಮೇದಿನಲ್ಲಿ ಈತ ಅಪಘಾತಕ್ಕೊಳಗಾಗಿ ಬೆನ್ನ ಹುರಿ ಶಾಸ್ವತ ಜಖಂ ಮಾಡಿಕೊಂಡ. ವೃತ್ತಿತಃ ಈತ ಸಾವಯವ ಕೃಷಿಕ. ಹಾಗಾಗಿ ತನ್ನ ದೈಹಿಕ ಅನಾನುಕೂಲವನ್ನು ಸಾಹಸೀ ದೃಷ್ಟಿಕೋನದಲ್ಲಿ ಅಳೆದು, ಚೀನಾದಿಂದ ಸಕಲ ಸಂಚಾರಿ ವಾಹನ (ಏಟೀವಿ ಅಥವಾ ಆಲ್ ಟೆರೇನ್ ವೆಹಿಕಲ್) ಆಮದು ಮಾಡಿದ. ಮತ್ತು ಕೃಷಿ ಓಡಾಟಗಳಿಗೆ ಹಾಗೂ ಕೆಲಸಗಳಿಗೆ ಪಳಗಿಸಿಕೊಂಡ. ಅಷ್ಟಕ್ಕೇ ತೃಪ್ತನಾಗದೇ ಇಂಗ್ಲೆಂಡಿನಿಂದ ಒರಗಿ ಕುಳಿತು ಪೆಡಲುವ ಮೂರು ಚಕ್ರದ ಸೈಕಲ್ಲನ್ನೂ ಆಮದಿಸಿದ. ಇದರಲ್ಲಿ ಭಾರತ ಸುತ್ತುವ ಯೋಜನೆಯನ್ನೂ ಹಾಕಿದ್ದ. (ಮೂರು ರಾಜ್ಯ ಅಳೆದದ್ದೂ ಆಗಿತ್ತು. ಆದರೆ ಪ್ರಾಕೃತಿಕ ಮತ್ತೆ ಕೌಟುಂಬಿಕ ಒತ್ತಡಗಳ ಕಾರಣದಿಂದ ಎಲ್ಲ ನಿಲ್ಲಿಸಿದ) ಅಂಥ ಗೋವಿಂದನಿಗೆ ಇಂದು ಅನ್ಯ ಕಾರ್ಯನಿಮಿತ್ತ ಮಂಗಳೂರಿನತ್ತ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಸೈಕಲ್ ತಂಡ ಕಂಡಾಗ ಕುತೂಹಲ ಮೂಡಿದ್ದು ಆಶ್ಚರ್ಯವೇನಲ್ಲ. ಅದಕ್ಕೂ ಮಿಗಿಲಾಗಿ ‘ಪರಿಚಿತ ಮೀಸೆ’ ಕಂಡ ಮೇಲೆ ನಿಂತು ಮಾತಾಡಿಸದಿದ್ದರೆ ಹೇಗೆ ಎಂದು ಕಂಡದ್ದೂ ತಪ್ಪಲ್ಲ. ಜತೆಗಿದ್ದ ವೇಣು, ಚಿನ್ಮಯರಿಗೆ ಪರಿಚಯಿಸಿ, ಎರಡೇ ಮಾತಾಡಿ ಬೀಳ್ಕೊಂಡೆವು.

ಗೋವಿಂದನ ಜೀವನಾಸಕ್ತಿಯ ಪ್ರೇರಣೆಯಲ್ಲಿ ಸೆಕೆ ಬಳಲಿಕೆಗಳನ್ನು ಹಗುರ ಮಾಡಿ ಒಂಬತ್ತೂವರೆಯ ಸುಮಾರಿಗೆ ಮಂಗಳೂರಿನಲ್ಲಿ ಎಲ್ಲರೂ ಅವರವರ ಮನೆಯತ್ತ ಚದುರಿದೆವು.