ಅದೊಂದು ಶುಕ್ರವಾರ “ಆದಿತ್ಯವಾರ ಎಲ್ಲಿಗಾದ್ರೂ ಕಯಾಕಿಂಗ್ ಹೋಗುವನಾ ಸಾರ್” ಎಂದು ಸೈಕಲ್ ಗೆಳೆಯ ಅನಿಲ್ ಶೇಟ್ ಕೇಳಿದ್ದರು. ನಾನು ಎಂದೋ ಯೋಚಿಸಿಟ್ಟಂತೆ “ಶೆರಿ, ಶಿರಿಯಾಕ್ಕೆ ಶಲೋ…” ಎಂದುಬಿಟ್ಟೆ. ನೇತ್ರಾವತಿ, ಫಲ್ಗುಣಿ, ಶಾಂಭವಿ, ನಂದಿನಿ, ಉಚ್ಚಿಲಾದಿ ನದಿಗಳನ್ನು ಕಂತುಗಳಲ್ಲಿ ತೇಲಿ ಮುಗಿಸಿದ ಹೊಸತರಲ್ಲಿ, ನಾನು ಅಂತರ್ಜಾಲದಲ್ಲಿ (ಗೂಗಲಿಸಿ) ಹುಡುಕಾಡಿದಾಗ, ಕುತೂಹಲ ಮೂಡಿಸಿತ್ತು ಈ ಶಿರಿಯಾ ಹೊಳೆ. ಮಂಗಳೂರು – ಕಾಸರಗೋಡು ದಾರಿಯನ್ನು ಬಂದ್ಯೋಡಿನಿಂದ ತುಸು ಮುಂದೆ, ಪೂರ್ವ- ಉತ್ತರದಿಂದ ಇಳಿದು, ಅಡ್ಡ ಹಾಯುವ ತೋರ ನೀಲಿ ರೇಖೆಯಿದು. ಮತ್ತೆ ಒತ್ತಿನಲ್ಲೇ ಹರಿಯುವ ರೈಲ್ವೇ ದಾರಿಯನ್ನು ದಾಟಿ, ಸ್ಪಷ್ಟ ದಕ್ಷಿಣ ತಿರುವು ತೆಗೆಯುತ್ತದೆ. ಅಲ್ಲಿ ಎಡ ಮಗ್ಗುಲಿನಲ್ಲೊಂದು ಸಣ್ಣ ಭೂಭಾಗ ಕತ್ತರಿಸಿಟ್ಟು (ಶಿರಿಯಾ ಪಾರ್ಕ್ ಎಂಬ ಕುದುರು, ಅರ್ಥಾತ್ ನದಿ ದ್ವೀಪ), ಬಲ ಹೊರಳಿ ಸಮುದ್ರ ಸೇರುತ್ತದೆ. ಆದರೆ ಅದೇನು ಭೂ ರಚನಾ ಚೋದ್ಯವೋ – ನೀಲ ಹರಹು ಮಾತ್ರ ಅತ್ತ ಸಮುದ್ರಕ್ಕೊಂದು ಕಂದು ಮರಳರೇಖೆ ಇಟ್ಟು ಸಮಾಂತರದಲ್ಲಿ, ಸುಮಾರು ಐದು ಕಿಮೀ ಉದ್ದಕ್ಕೆ, ಅಂದರೆ ಕುಂಬ್ಳೆಯವರೆಗೂ ವ್ಯಾಪಿಸಿರುವುದು ಕಾಣುತ್ತಿತ್ತು. ಹೊಳೆಗೆ ನಮ್ಮ ದೋಣಿ ಇಳಿಸುವುದೆಲ್ಲಿ, ಸುತ್ತುವ ಪರಿಸರ ಎಂತದ್ದು ಎಂಬಿತ್ಯಾದಿ ಮುನ್ನೋಟಕ್ಕಾಗಿ, ಮಾರಣೇ ದಿನವೇ ಸಂಜೆ ಬೈಕಿನಲ್ಲಿ ದೇವಕಿಯನ್ನು ಬೆನ್ನಿಗೆ ಹಾಕಿಕೊಂಡು ಹೋಗಿದ್ದೆ. ಮಂಗಳೂರಿನಿಂದ ಸುಮಾರು ಮೂವತ್ಮೂರು ಕಿಮೀ ದೌಡಾಯಿಸಿ, ಶಿರಿಯಾ ಹೊಳೆ ಕಾಣಿಸುತ್ತಿದ್ದಂತೆ ಎಡದ ಕವಲು – ಒಲಯಂ ಜುಮ್ಮಾ ಮಸೀದಿ ರಸ್ತೆ ಹಿಡಿದೆವು. ರಸ್ತೆ ಸಪುರದ್ದಾದರೂ ತೆಂಗಿನ ತೋಪಿನ ನೆರಳು, ಎಡಕ್ಕೆ ವಿವಿಧ ಶೈಲಿಗಳ ಮನೆಗಳ ಸಾಲು, ಬಲಕ್ಕೆ ದಂಡೆ ಕಟ್ಟಿಕೊಟ್ಟ ಶಿರಿಯಾ ಹೊಳೆಯ ಸಾಂಗತ್ಯ ಮತ್ತು ಸಾಕಷ್ಟು ಸುಸ್ಥಿತಿಯಲ್ಲೇ ಇರುವ ಕಾಂಕ್ರೀಟ್ ಹಾಸು ನಮಗೆ ಅಪ್ಪಟ ವಿಹಾರದ ಸವಾರಿಯನ್ನೇ ಕೊಟ್ಟಿತ್ತು. ಇದನ್ನು ವಾಣಿಜ್ಯ ಸರಕಾಗಿಸಲು ಆಗಲೇ ಒಂದು ರಿಸಾರ್ಟ್ (ಡಿಎಂ ಕಬಾನ) ಸಜ್ಜಾಗಿರುವುದೂ ಕಾಣಿಸಿತು. ಅದು ದಾರಿಯ ಎಡ ಮಗ್ಗುಲಿನಲ್ಲಿ ವಿಲಾಸೀ ಕಟ್ಟಡವನ್ನೂ ಬಲ ಮಗ್ಗುಲಿನ ನದೀ ತೀರದಲ್ಲಿ ಜಲಕ್ರೀಡೆಗಳಿಗೂ ಸಜ್ಜುಗೊಂಡಿತ್ತು.
ಮುಂದೆ, ದಾರಿ ಹೊಳೆ ಬಿಟ್ಟು ಎಡ ಹೊರಳಿದಲ್ಲಿ ನಾವು ನೇರದ ಮಣ್ಣ ದಾರಿಗಿಳಿದೆವು. ಅದು ಬರಿ ನೂರಿನ್ನೂರು ಮೀಟರಿಗೆ ಮುಗಿದಿತ್ತು. ಅನಂತರ ತಿಳಿದಂತೆ, ಅಲ್ಲಿನ ಮಟ್ಟಸ ನೆಲ, ಕಬಾನ ರಿಸಾರ್ಟಿನ ವಾಹನಗಳಿಗೆ ತಂಗಲೆಂದೇ ಸಜ್ಜುಗೊಳ್ಳುತ್ತಿತ್ತು. ಮರುದಿನದ ನಮ್ಮ ಕಾರುಗಳಿಗೂ ಅದನ್ನೇ ಮನದಲ್ಲಿ ನಿಶ್ಚಯಿಸಿಕೊಂಡೆವು. ಹೊಳೆದಂಡೆ ಬಿಗಿ ಮಾಡುವ ಕಾಮಗಾರಿ ಅಲ್ಲಿಗೆ ಮುಟ್ಟಿರಲಿಲ್ಲ. ಸಹಜವಾಗಿ ಹೊಳೆಗಿಳಿಯಲು ಸ್ಥಳೀಯ ಬೆಸ್ತರೋ ಮರಳಿಗರೋ ಮಾಡಿಕೊಂಡಿದ್ದ ವ್ಯವಸ್ಥೆಯೂ ನಮ್ಮನುಕೂಲಕ್ಕೆ ತಕ್ಕಂತಿತ್ತು. ಅಷ್ಟಕ್ಕೇ ತೃಪ್ತರಾಗಿ, ಹೆದ್ದಾರಿಗೆ ಮರಳಿದೆವು. ಶಿರಿಯಾ ಸಂಕ ದಾಟಿ, ಆಚಿನ ಜನ, ಅಂಗಡಿಯಲ್ಲಿ ಸ್ವಲ್ಪ ವಿಚಾರಿಸಿದೆವು, ಓಡಾಡಿದೆವು. ಗೂಗಲ್ ನಕ್ಷೆಯೇ ಹೇಳಿತ್ತು – ಸೇತುವೆಗಳಿಂದಾಚೆ ನೀರಂಚಿನಲ್ಲಿ ಅಧಿಕೃತ ದಾರಿಗಳಿಲ್ಲ. ಆದರೂ ಸೇತುವೆಯ ಬುಡದಲ್ಲೇ ಇದ್ದೊಂದು ಮರಳ ಅಡ್ಡೆಯತ್ತ ಮಣ್ಣ ದಾರಿಯಲ್ಲಿ ಹೋದೆವು. ಅದಕ್ಕೆ ಅಡ್ಡ ಸರಪಳಿ ಬಿಗಿದಿದ್ದರು. ಅಲ್ಲಿನ ಅಂಗಡಿಯಾತ, ಹಿನ್ನೀರ ಹರಹಿಗೆ ಕುಂಬಳೆವರೆಗೆ ಅನ್ಯ ಮಾರ್ಗ ಸಂಪರ್ಕವಿಲ್ಲ ಎಂದೇ ಖಾತರಿಪಡಿಸಿದ. ಕತ್ತಲೆಗೆ ಮುನ್ನ ಮಂಗಳೂರಿಗೆ ಮರಳಿದೆವು. ಆದಿತ್ಯವಾರದ (೫-೫-೧೯) ಸೂರ್ಯೋದಯವನ್ನು ಶಿರಿಯಾ ನದಿಯ ಮೇಲಿನಿಂದಲೇ ನೋಡುವುದೆಂದೇ ಅಂದಾಜಿಸಿ, ನಮ್ಮ ತಂಡ ಐದೂವರೆಗೇ ಮಂಗಳೂರು ಬಿಟ್ಟಿತ್ತು. ಆದರೆ ಹೊರಟ ಮೇಲೆ, ಹೊಟ್ಟೆ ಗಟ್ಟಿಯಾಗದೇ ರಟ್ಟೆಗೆ ಬಲಬಾರದು ಎಂಬ ಚಿಂತೆ ಅಮರಿತು. ಸಹಜವಾಗಿ ಅಷ್ಟು ಬೆಳಿಗ್ಗೆ ನಮ್ಮ ಹೊಟ್ಟೆಯುರಿ ಇಳಿಸಲು ಯಾರಿದ್ದಾರು ಎಂದು ಹುಡುಕುನೋಟ ಮುಂದಿಟ್ಟುಕೊಂಡೇ ನಾಲ್ಕೂ ಕಾರುಗಳು ಓಡಿದ್ದವು. ಅದೃಷ್ಟ ಬಂಗ್ರಮಂಜೇಶ್ವರದಲ್ಲಿ ಖುಲಾಯಿಸಿತು. ಸಣ್ಣ ಹೋಟೆಲೊಂದರ ತತ್ಕಾಲೀನ ದಾಸ್ತಾನಿನಲ್ಲಿದ್ದ ಪೂರಿ ಸಾಗನ್ನು ಪೂರಾ ನಮ್ಮ ಹೊಟ್ಟೆಗಳಿಗೆ ಸಾಗಹಾಕಿದೆವು. ಒಗ್ಗರಿಸಿದ ಹೆಸರು ಮೆದ್ದು, ಒಡೆ ಒಡೆದು, ಚಟ್ಟಂಬಡೆ ಚಟ್ಟು ಮಾಡಿಯೂ ನಮ್ಮ ಒಂಬತ್ತರ ತಂಡ ಸೇವಿಗೆ ಕಡಿಮೆ ಸೇವಿಸಲಿಲ್ಲ. ಚಾ ಕಾಫಿಯೊಡನೆ ವಂದನಾರ್ಪಣೆ.
ಯೋಜನೆಯಂತೆ ಒಲಯಂ ಮಸೀದಿ ರಸ್ತೆಯಲ್ಲಿ ಎಡ ಹೊರಳಿದೆವು. ಒಂದೂವರೆ ಕಿಮೀಯ ಕೊನೆಯಲ್ಲಿ ಕಾರುಗಳಿಗೆ ವಿಶ್ರಾಂತಿ. ಮೂರು ಕಾರುಗಳ ತಲೆಯ ಮೇಲೆ ಫೈಬರ್ ಗ್ಲಾಸಿನ ಗಟ್ಟಿ ದೋಣಿಗಳು ಕೂತಿದ್ದವು. ನಮ್ಮದು ಕೆಂಪು, ಅನಿಲ್ ಶೇಟ್ ಮತ್ತು ಶಿವಾನಂದ ರಾವ್ ಜೋಡಿಯದ್ದು ಕೆಂಪು ಹಳದಿ, ಧನರಾಜ್ ಮತ್ತು ಭೀಷ್ಮ ಜೋಡಿಯದ್ದು ನೀಲ ದೋಣಿಗಳು. ನಬಿಲ್ ಅಹಮದ್, ಪೂರ್ವ ರಂಗದ ಕಸರತ್ತುಗಳು) ಮೂರು ಗಂಟು ಸಡಿಲಿಸಿ ಎರಡು ಹುಟ್ಟು (ತೊಳಸುಗೈ) ಕಳಚಿಟ್ಟೆ. ಅದೇ ಹಗ್ಗದ ಮತ್ತೆ ಮೂರು ಗಂಟು ಕಳಚಿದ್ದೇ ನಮ್ಮ ದೋಣಿಯೂ ವಿಮುಕ್ತ. ಮುಂತುದಿಯಲ್ಲಿ ದೇವಕಿ, ಹಿಂತುದಿಯಲ್ಲಿ ನಾನು ಅದನ್ನು ಹೊತ್ತು ಇಳಿಸಿ, ಹೊಳೆ ಪಾತ್ರೆಗೇ ಒಯ್ದೆವು. ಮತ್ತೆ ಕ್ಷಣಾರ್ಧದಲ್ಲಿ ತೇಲಂಗಿ, ತೊಪ್ಪಿ ತೊಡರಿಸಿ ತಯಾರ್!
ಮರ್ಜೂಕ್ ಮತ್ತು ರೋಶದ್ (ಬಾಲಕ) ತ್ರಿವಳಿಯದ್ದು – ನೀಲ ಕಪ್ಪಿನ ಬಣ್ಣದ್ದು, ಗಾಳಿ ತುಂಬುವ ಮಾದರಿ, ಡಿಕ್ಕಿಯೊಳಗೆ ತೆಪ್ಪಗೆ ಮಲಗಿತ್ತು. ಗಟ್ಟಿ ದೋಣಿ ಹೊರುವ ಲೆಕ್ಕದಲ್ಲಿ ನನ್ನ ಕಾರು ಮಾತ್ರ ಸಮರ್ಥವಾಗಿ ಸಜ್ಜಾಗಿತ್ತು. (ನೋಡಿ: ಉಳಿದೆರಡು ಕಾರಿನವರೂ ಹಿಂದೆ ಆರೇಳು ಸಾಗಾಟ, ತೇಲಾಟ ನಡೆಸಿದ್ದಾರೆ. ಆದರೆ ದೋಣಿ ಸಾಗಣೆ ಸೌಕರ್ಯದಲ್ಲಿ ಇನ್ನೂ ಚೌಕಾಶಿ ಮುಗಿಸಿಯೇ ಇಲ್ಲ! ಅನಿಲ್, ಕಾರಿನ ಬೋಳು ತಲೆಯ ಮೇಲೆ ದಪ್ಪದ ಜಮಖಾನ ಹಾಕಿ ದೋಣಿ ಕೂರಿಸುತ್ತಾರೆ. ಮತ್ತೆ ಕಾರಿನ ನಾಲ್ಕೂ ಬಾಗಿಲು ತೆರೆದಿಟ್ಟು, ನೂರಡಿಗೂ ಮಿಕ್ಕ ಸಪುರ ನೈಲಾನ್ ಹಗ್ಗವನ್ನು ಸುತ್ತಿ ಸುತ್ತಿ ಕಟ್ಟುತ್ತಾರೆ. ದೋಣಿಗೆ ಹೆಚ್ಚಿನ ಬಿಗಿತವನ್ನು ಮುಚ್ಚಿದ ಬಾಗಿಲುಗಳು ಒದಗಿಸುತ್ತವೆ ಎಂದವರು ನಂಬಿದ್ದರು. ಧನರಾಜ್ ತನ್ನ ಬೊಲೆರೋ ವ್ಯಾನಿನ ತಲೆಯಲ್ಲೂ ಇಂಥದ್ದೇ ಒಂದು (ಅ)ವ್ಯವಸ್ಥೆ ಮಾಡಿಕೊಂಡಿದ್ದರು. ಇಂಥವುಗಳನ್ನು ಪ್ರತಿ ಬಾರಿ ಏರಿಸುವುದಾಗಲೀ ಇಳಿಸುವುದಾಗಲೀ ರಗಳೆ, ಸಮಯ ತಿನ್ನುವ ಕೆಲಸ ಮತ್ತು ಸಾಗಣೆಯೂ ಅಭದ್ರ.
ನಬಿಲ್ ಹಿಂದೆ ಫಲ್ಗುಣಿ ಯಾನಕ್ಕೆ ಬಂದಾಗಲೇ (ನೋಡಿ: ಫಲ್ಗುಣಿಯ ಮೇಲೊಂದು ಪಲುಕು) ತನ್ನ ದೋಣಿಯಲ್ಲಿ ಗಾಳಿ ಸೋರಿಕೆ ಕಂಡಿದ್ದರು. ಆದರೆ ಪುಣ್ಯಾತ್ಮ, ಅಂದು ಮನೆಗೆ ಮರಳಿದ ಮೇಲೆ ಕಟ್ಟಿ ಮೂಲೆಯಲ್ಲಿ ಹಾಕಿದ್ದನ್ನು, ಮರೆತು ಹಾಗೇ ಹಿಡಿದುಕೊಂಡು ಬಂದಿದ್ದರು! ಅದೃಷ್ಟಕ್ಕೆ ಆ ಸೋರಿಕೆ ತುಂಬಾ ಕ್ಷೀಣವಾದದ್ದು ಮತ್ತು ದೋಣಿಯ ಗಾಳಿ ತುಂಬುವ ಬಾಯಿಯೂ ಒಳಮೈಯಲ್ಲೇ ಇತ್ತು. ಹಾಗಾಗಿ ಸೊರಗಿದ ‘ಚೀಲ’ವನ್ನು ಒಮ್ಮೆ ದೋಣಿಯ ಗಾತ್ರಕ್ಕೆ ಏರಿಸಿದರೂ ತೇಲಾಟದ ಉದ್ದಕ್ಕೆ ಆಗಾಗ ಸಣ್ಣದಾಗಿ ಪಂಪ್ ಹೊಡೆಯುವ ರಗಳೆ ಇದ್ದೇ ಇತ್ತು! ಸೂರ್ಯೋದಯಕ್ಕೂ ಮೊದಲೇ “…ದೋಣಿ ಸಾಗಲೀ…. ದೂರ ತೀರವ ಸೇರಲೀ…”
ಹಾಡಬೇಕಿದ್ದ ನಾವು, ಈ ಎಲ್ಲ ವ್ಯವಸ್ಥೆಗಳನ್ನು ಮುಗಿಸಿ, ಹುಟ್ಟು ನೀರಿಗಿಳಿಸುವಾಗ ಗಂಟೆ ಏಳಾಗಿತ್ತು, ಸೂರ್ಯ ಬೆಳ್ಳಿ ತಗಡಾಗಿದ್ದ! ನಾವು ಹೊಳೆಯ ಬಲದಂಡೆಗೆ (ಅಥವಾ ಪಶ್ಚಿಮ ದಂಡೆ) ಸಮೀಪವಿರುವಂತೇ ನೀರು ತೊಳೆಸಲು ಪ್ರಾರಂಭಿಸಿದ್ದೆವು. ಲೆಕ್ಕಕ್ಕೆ ನಮ್ಮದು ಹೊಳೆಯ ಎದುರೋಟ. ಆದರೆ ಇಲ್ಲಿನ ಪರಿಸ್ಥಿತಿ, ನಮ್ಮ ಉಚ್ಚಿಲ ತ್ರಿವೇಣೀ ಸಂಗಮಕ್ಕೆ ಭಿನ್ನದ್ದಲ್ಲ (ನೋಡಿ: ಉಚ್ಚಿಲದ ಕಾಳಿಂದೀ ಮಡು). ಬೇಸಗೆಯ ಉರಿಯಲ್ಲಿ, ಶಿರಿಯಾ ಹೊಳೆಯ ಜಲಾನಯನ ಪ್ರದೇಶವೆಲ್ಲ ಬತ್ತಿ ಹೋಗಿದೆ. ಇತ್ತ ಸಮುದ್ರದ ಅಲೆಗೈಗಳು ಹರಿನೀರಿನ ಪ್ರತಿರೋಧವಿಲ್ಲದ್ದರಿಂದ ದ್ವಾರವನ್ನು (ಅಳಿವೆ) ಮುಚ್ಚಿಬಿಟ್ಟಿವೆ. ಸದ್ಯ ಸಮುದ್ರ ಮಟ್ಟದ ವ್ಯಾಪ್ತಿಗೆ ನಿಲುಕುವಷ್ಟು ಉದ್ದಕ್ಕೆ ಹೊಳೆ ಪಾತ್ರೆಯಲ್ಲಿ ಕಡಲಿನ ಕೃಪೆಯಿಂದ ಉಪ್ಪು ನೀರೇ ತುಂಬಿದೆ; ಕಡಲಿನ ಭರತ ಇಳಿತಗಳ ವಿಶೇಷ ಬಾಧೆಯಿಲ್ಲದ, ಅಲೆಗಳ ಆರ್ಭಟೆಯೂ ಇಲ್ಲದ ಸರೋವರವೇ ಆಗಿದೆ! ಗೂಗಲ್ ನಕ್ಷೆಯಲ್ಲಿ ಕಂಡಂತೆ, ಮುಂದಿನ ಬಲ ತಿರುವಿಗೇ ಅದು ಮುಗಿಯುವುದಿತ್ತು. ಸಮುದ್ರದ ಭರತ ಕಾಲದಲ್ಲಿ (ಹೈ ಟೈಡ್) ಉಪ್ಪುನೀರು ಮತ್ತೂ ಮೇಲ್ದಂಡೆಗೆ ವ್ಯಾಪಿಸಿ, ಇಕ್ಕೆಲಗಳ ಕೃಷಿಕರು ನೆಚ್ಚಿದ ನೆಲದ ನೀರು ಉಪ್ಪಾಗದಂತೆ, ಅಲ್ಲೊಂದು ಸಣ್ಣ ಅಣೆಕಟ್ಟನ್ನು ರಚಿಸಿದ್ದರು. ಈ ಬಂಬ್ರಾಣ (ಸ್ಥಳ ನಾಮ) ಅಣೆಕಟ್ಟಿನವರೆಗೆ ನಮ್ಮ ಸವಾರಿ ಹೋಯ್ತು.
ಮರಳಿಗರ ಸಣ್ಣ ಅಡ್ಡೆ, ನಮ್ಮ ಲಕ್ಷದ್ವೀಪಯಾನದ ಸಂದರ್ಭದಲ್ಲಿ (ನೋಡಿ: ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ) ಕೊಚ್ಚಿಯಲ್ಲಿ ಕಂಡಂತದ್ದೇ ಚೀನೀ ಬಲೆಯ ಸಣ್ಣ ರೂಪ, ಒಂದೆರಡು ಕೊಕ್ಕರೆ, ತೀರಾ ವಿರಳ ಹಾರುವ ಮೀನುಗಳನ್ನುಳಿದು ವಿಶೇಷವೇನೂ ಇರಲಿಲ್ಲ. ಹೆಚ್ಚು ಕಮ್ಮಿ ನಾವು ಕಾರಿಳಿದ ಜಾಗದವರೆಗೂ ಮಸೀದಿ ರಸ್ತೆಗೆ ಸಮಾನಾಂತರದಲ್ಲಿ ಹೊಳೆ ದಂಡೆಯನ್ನು ಸರಿಯಾದ ಸೈಜುಗಲ್ಲುಗಳಿಂದ ಕಟ್ಟಿ ಪ್ರಕೃತಿಗೆ ಮಿತಿ ಗುರುತಿಸಿಬಿಟ್ಟಿದ್ದಾರೆ! ನಾವು ಹುಟ್ಟು ಹಾಕಿದ್ದ ವಲಯದಲ್ಲಿ ದಂಡೆಯಲ್ಲಿ ದಾರಿಯಿಲ್ಲವೆಂಬಂತೆ ದೃಢಪಡಿಸುವ ಕೆಲಸವೂ ನಡೆದಿರಲಿಲ್ಲ. ಆದರೆ ಕೃಷಿ, ಸೌದೆ, ಮರಳುಗಾರಿಕೆ, ಮೀನುಗಾರಿಕೆಯೇ ಮೊದಲಾದ ಮಾನವ ಅಗತ್ಯಗಳಿಂದ ಸಹಜ ಹಸಿರು ನಶಿಸಿದೆ. ಒಂದು ಸಣ್ಣ ಉದ್ದದಲ್ಲಿ ಹಬ್ಬಿಕೊಂಡಿದ್ದ ಮುಂಡೋವು (ಕೇದಗೆ ಜಾತಿಯ ಮುಳ್ಳ ಗಿಡ, Pandanus falcicularis) ಪೊದರುಗಳು, ನಾವು ಹೆಚ್ಚು ಕಂಡಿರದ, ಅನಾನಸಿನಂತೇ ತೋರುವ ಕಾಯಿ ಬಿಟ್ಟದ್ದು ವಿಶೇಷ ಗಮನ ಸೆಳೆಯಿತು. ಇದೂ ನಮಗೆ ಖಾದ್ಯಯೋಗ್ಯವೇ ಎಂಬ ತಿಳಿವು ನನಗಿಲ್ಲ.
ತೆಳ್ಳನೆ ಗಾಳಿ ಮತ್ತು ನಮ್ಮದೇ ಚಟುವಟಿಕೆಗೆ ಸಣ್ಣ ಏರಿಳಿತಗಳನ್ನು ಕಾಣಿಸಿದರೂ ನೀರು ಬಹುತೇಕ ದಪ್ಪ ಗಾಜಿನಂತೇ ಕಾಣುತ್ತಿತ್ತು. ಅದರಲ್ಲಿ ಮೂಡುತ್ತಿದ್ದ ದಂಡೆಯ ಹಸಿರಿನ ಪ್ರತಿರೂಪ ಮೂಲವನ್ನೇ ವಂಚಿಸುವಷ್ಟು ಆಕರ್ಷಕವಾಗಿ ತೋರುತ್ತಿತ್ತು. ಆದರೆ ನಿಜದಲ್ಲಿ ನೀರು (ಫಲ್ಗುಣಿಯಂತೇ) ಹೊಂಡಗಳ ಸರಣಿಯಲ್ಲಷ್ಟೇ ನಿಂತಂತಿತ್ತು. ಅಲ್ಲಲ್ಲಿ ಮರಳ ತಳ ಎದ್ದು ಹುಟ್ಟಿಗೆ ತಾಗುವಷ್ಟೂ ನೀರು ತೆಳುವಾಗಿತ್ತು. ಆಗೀಗ ತೇಲಿ ಕಾಣುತ್ತಿದ್ದ ಕಂದು ಬಣ್ಣದ ಉಂಡೆಗಳು ಮನುಷ್ಯ ಮಲವಲ್ಲ ಎಂದೇ ನಮ್ಮ ಮನವನ್ನು ಸಂತೈಸಿಕೊಂಡರೂ ಯಾವುದೇ ರೀತಿಯ ಸಂಪರ್ಕಕ್ಕೆ ಸಿಗದಂತೆ ಎಚ್ಚರವಹಿಸಿದ್ದೆವು. ಹೊಳೆ ತಿರುವು ತೆಗೆದುಕೊಳ್ಳುತ್ತಿದ್ದಂತೆ ಉಜ್ವಲ ಬೆಳ್ಳಿ ತಗಡಿನಂಥ ಸೂರ್ಯ ನಮ್ಮನ್ನು ನೇರ ಎದುರಿಸಿದ್ದ. ಇದರಿಂದ ಬಂಬ್ರಾಣ ಕಟ್ಟೆಯನ್ನು ಕ್ಯಾಮರಾದಲ್ಲಿ ತುಂಬಿಕೊಳ್ಳುವ ಕೆಲಸ ಮಾತ್ರ ಹೆಚ್ಚು ಯಶ ಕಾಣಲಿಲ್ಲ.
ನಾಲ್ಕೂ ದೋಣಿಗಳ ನಡೆ ವಿರಾಮದಲ್ಲೇ ಸಾಗಿತ್ತು. ಗಾಳಿ ಇಳಿಯುತ್ತಿದ್ದ ನಬಿಲ್ ನಾವೆ ಅಪಾಯಕಾರಿಯಾಗೇನೂ ಇರಲಿಲ್ಲ. ಆದರೆ ಇತರ ದೋಣಿಗಳಿಂದ ಮಿದುವಾದ್ದಕ್ಕೆ ಸಹಜವಾಗಿ ಸ್ವಲ್ಪ ಹೆಚ್ಚೇ ನಿಧಾನದಲ್ಲಿತ್ತು. ಶಿವಾನಂದ ಜಲನಿರೋಧಕ ಗೋಪ್ರೋ ಕ್ಯಾಮರಾ ತಂದಿದ್ದರು. ಅಲ್ಲದಿದ್ದರೂ ಕಾಲಧರ್ಮದಂತೆ ಎಲ್ಲರಲ್ಲೂ ಕ್ಯಾಮರಾ/ಚರವಾಣಿ ಇತ್ತು, ಸಹಜವಾಗಿ ಸ್ವಂತೀ ಮತ್ತು ಪರಸ್ಪರ ಚಿತ್ರ, ಚಲಚಿತ್ರ ತೆಗೆಯುವ ಚಟುವಟಿಕೆ, ಮತ್ತೆ ಅದರಲ್ಲಿ ಆಯ್ದವನ್ನು ಕೂಡಲೇ ಅಂತರ್ಜಾಲಕ್ಕೇರಿಸುವುದೂ ನಡೆದಂತಿತ್ತು. ಚಾರಣ, ಮೈಲೋಟ, ಸೈಕಲ್ ಸವಾರಿ ಮುಂತಾದವುಗಳಲ್ಲಿ ವೈಯಕ್ತಿಕ ಸಾಧನೆಯನ್ನು ಉಪಗ್ರಹದ ಎತ್ತರದಿಂದ ಲೆಕ್ಕವಿಡುವ ಒಂದು ತಂತ್ರಜ್ಞಾನ ಸ್ಟ್ರಾವಾ. ನಾವೆಲ್ಲ ಮೂಲತಃ ಸೈಕಲ್ ಸವಾರಿಯಿಂದಲೇ ಒಂದಾದವರು. ಸಹಜವಾಗಿ ನಮ್ಮಲ್ಲೇ ಯಾರೋ ದೋಣಿ ಸವಾರಿಗೂ ಚಾಲೂ ಇಟ್ಟಂತಿತ್ತು. ವೈಯಕ್ತಿಕವಾಗಿ ನಾನು ಸ್ಟ್ರಾವ ಎಲ್ಲೂ ಬಳಸಿದವನಲ್ಲ. ಸಲಕರಣೆ ಸವಲತ್ತುಗಳ ಸಂತೆಯಲ್ಲಿ, ಅಂಕಿ ಸಂಕಿಗಳ ಡೊಂಬರಾಟದಲ್ಲಿ ಅನುಭವದ ಸರಕು ಸೊರಗುತ್ತದೆ, ನಿಜ ಮೌಲ್ಯ ಮರೆಯಾಗುತ್ತದೆ ಎಂದೇ ಹೆದರಿದವ ನಾನು.
ಬಂಬ್ರಾಣ ಅಣೆಕಟ್ಟೆ ಬಳಿ, ನೀರು ತೀರಾ ತೆಳುವಿದ್ದ ಜಾಗದಲ್ಲಿ, ಭಿನ್ನ ಅನುಭವಕ್ಕಾಗಿ ನಬಿಲ್ ಮತ್ತು ಧನರಾಜ್ ಜೋಡಿ, ದೋಣಿ ಬದಲಾಯಿಸಿಕೊಂಡರು. ಗಟ್ಟಿ ದೋಣಿಗಳಲ್ಲಿ ಸವಾರರಿಗೆ ಕುಳಿತುಕೊಳ್ಳಲು ಖಚಿತ ಹೊಂಡ (ಬಕೆಟಿನಂತೇ) ಇರುವುದರಿಂದ, ಹಾಗಿಲ್ಲದ ಮೂಲ ದೋಣಿಯ ಹೆಚ್ಚಿನ ಹೊರೆ – ಬಾಲಕ ರೋಶದ್, ಅದರಲ್ಲೇ ಉಳಿದುಕೊಂಡ. ಈ ದೋಣಿ ಬದಲಾವಣೆಯನ್ನು ನನ್ನ ವಿವೇಚನೆಗೆ ಬಿಟ್ಟಿದ್ದಲ್ಲಿ, ನಡು ನೀರಿನಲ್ಲಿ ದೋಣಿ ಬದಲಾಯಿಸಬಾರದೆಂಬ ಲೋಕೋಕ್ತಿಯನ್ನೇ ಗೌರವಿಸುತ್ತಿದ್ದೆ. ನಬಿಲ್ ಒಳ್ಳೆಯ ಈಜುಗಾರ. ಸಹಜವಾಗಿ ತನ್ನ ತೇಲಂಗಿಯನ್ನು ಬಾಲಕನಿಗೇ ಹಾಕಿದ್ದ. ಉಳಿದಂತೆಯೂ ಧನರಾಜ್, ಶಿವಾನಂದರು ತೇಲಂಗಿಗಳಿದ್ದರೂ ಧರಿಸಿಕೊಳ್ಳಲು ಉದಾಸೀನ ಮಾಡಿದ್ದೂ ನನಗೆ ಒಪ್ಪಿಗೆಯಿಲ್ಲ. ಅಪರಿಚಿತ ನೀರಿನಲ್ಲಿ, ಅದರಲ್ಲೂ ಪರಿಣತಿ ಅಥವಾ ಅನುಭವ ಇಲ್ಲದ ಒಂದು ಸಮೂಹ ಕ್ರೀಡೆಯಲ್ಲಿ ಯಾರೇ ತೊಡಗಿರುವಾಗ ಆಕಸ್ಮಿಕಗಳು, ನಮ್ಮ ನಿರೀಕ್ಷೆಯನ್ನು ಮೀರಿ ಬಂದಾವು ಎಂಬ ಎಚ್ಚರ ಅವಶ್ಯ. ಆ ನಿಟ್ಟಿನಲ್ಲಿ ಕೆಲವು ಸಾಧ್ಯತೆಗಳನ್ನು ಗಮನಿಸಿ: ತೆಳು ನೀರಿನ ತಳದಲ್ಲಿ ಗಟ್ಟಿ ಮರಳನ್ನು ನಂಬಿ ಇಳಿದವರು ಕೆಸರಿನಲ್ಲಿ ಸಿಲುಕಿಕೊಳ್ಳಬಹುದಿತ್ತು. ತುಳುಕಾಡುವ ಹಗುರ ದೋಣಿಗಳನ್ನೇರಿಳಿವ ಸಂದರ್ಭಗಳಲ್ಲಿ ದೋಣಿ ಮಗುಚಬಹುದಿತ್ತು. ಇಂಥ ಸಂದರ್ಭಗಳಲ್ಲಿ ವೈಯಕ್ತಿಕ ಬಲ್ಮೆಯಷ್ಟೇ ಸಮೂಹದ ಅಪಾಯವನ್ನು (ಆತಂಕವನ್ನೂ) ತಪ್ಪಿಸೀತು ಎಂದು ಭಾವಿಸುವುದು ತಪ್ಪು.
ಗೂಗಲ್ ನಕ್ಷೆ ಬಂಬ್ರಾಣ ಅಣೆಕಟ್ಟಿನ ಆಚೆ ಒಂದೆರಡು ಸಣ್ಣ ತಿರುವುಗಳ ಉದ್ದಕ್ಕೆ ತೆಳು ನೀರನ್ನೇನೋ ಕಾಣಿಸಿತ್ತು. ಮತ್ತೆ ಫಲ್ಗುಣೀ – ಒಂದು ನದಿಯ ಅವಹೇಳನ ) ಎಲ್ಲೋ ಒಂದು ಮುರುಕು ದೋಣಿ ನೀರಿನಲ್ಲಿ ಬಿದ್ದುಕೊಂಡಿತ್ತು. ಮತ್ತೆಲ್ಲೋ ನದಿ ಪಾತ್ರೆಗೇ ನುಗ್ಗಿ ಏನೋ ದೈವಾರಾಧನೆ ನಡೆಸಿದ ಅವಶೇಷಗಳೂ ಇದ್ದವು. ಇಂಥವುಗಳನ್ನು ಪ್ರಕೃತಿಯ ಕುರಿತು ಉಡಾಫೆ ಎನ್ನಬಹುದು. ಆದರೆ ಸ್ಪಷ್ಟವಾಗಿ ಜಾನುವಾರುಗಳ ಕೋಡು ಸಹಿತ ಮುಖ, ಭಾರೀ ಮೂಳೆಗಳ ರಾಶಿಯೂ ಗುಡ್ಡೆ ಬಿದ್ದುಕೊಂಡಿದ್ದದ್ದು ಬರಿಯ ತ್ಯಾಜ್ಯವಲ್ಲ, ಕಳ್ಳ ಕಸಾಯಿಯ ಉಳಿಕೆಯೇ ಇರಬೇಕು. (ಅಧಿಕೃತ ಮೂಳೆಗಳಿಗೆ ಔದ್ಯಮಿಕ ಬೇಡಿಕೆ ಸಾಕಷ್ಟಿದೆ ಎಂದೇ ಕೇಳಿದ್ದೇನೆ.) ಇಂಥವನ್ನು ಪ್ಲ್ಯಾಸ್ಟಿಕ್ ಗೋಣಿಗಳಲ್ಲಿ ತುಂಬಿ, ಬಾಯಿಕಟ್ಟಿ, ನೀರಿಗೆ ತಳ್ಳುವವರೇ ಹೆಚ್ಚಂತೆ. ಪಾರಿಸರಿಕವಾಗಿ ಅದು ಇನ್ನಷ್ಟು ಹಾನಿಕರ ಎಂದಷ್ಟೇ ಹೇಳುವುದುಳಿದಿದೆ.
ಸ್ಪಷ್ಟವಾಗಿ ನೀರಿನ ನೀಲ ಪೂರ್ಣ ಕಳೆದು, ಮರಳಿನ ಕಂದು ನಮ್ಮ ಹೆಚ್ಚಿನ ನಿರೀಕ್ಷೆಯನ್ನು ಕುಂದಿಸಿತ್ತು. ಸಾಲದ್ದಕ್ಕೆ ಅಣೆಕಟ್ಟಿನ ಮೇಲಕ್ಕೋ ದಂಡೆಗೋ ದೋಣಿ ಹೊತ್ತು ನಡೆಯುವ ಸುಲಭ ಅವಕಾಶಗಳೂ ಕಾಣಿಸಲಿಲ್ಲ. ನಾವು ಹಿಮ್ಮುರಿ ತಿರುವು ತೆಗೆದು ಹೊಳೆಯ ಎಡ ದಂಡೆಯನ್ನಷ್ಟು ನೋಡುತ್ತ ಸಾಗಿದೆವು. ಈ ಮಗ್ಗುಲು ಹೊಳೆಯ ಸಹಜ ಹರಿವಿನ ಕಾಲದಲ್ಲಿ ಒಳಮೈಯಾಗುವುದರಿಂದ ಮರಳೋ ಮೆಕ್ಕಲು ಮಣ್ಣಿನದೋ ಸಂಗ್ರಹ ಹೆಚ್ಚಿದ್ದಂತಿತ್ತು. ಹಾಗೇ ತಿರುವುಗಳಲ್ಲಿ ಈ ತತ್ಕಾಲೀನ ದಂಡೆ ಕೊರೆದದ್ದೂ ತೋರುತ್ತಿತ್ತು. ಆ ನೆಲದ ಅಸ್ಥಿರತೆಯನ್ನು ಹಿಡಿದಿಡುವಂತೆ ನೆಲಕ್ಕೆ ಸಂಬಂಧಿಸಿದವರು (ಖಾಸಗಿಯೋ ಸರಕಾರವೋ ನನಗೆ ತಿಳಿದಿಲ್ಲ) ಗಾಳಿ ಮರಗಳ ತೋಪು ಬೆಳೆಸಿದ್ದರು. ಇನ್ನು ನಾಗರಿಕ ಪ್ರಭಾವದ ಜಲಮಾಲಿನ್ಯದ ಕುರಿತಂತೆ, ನಾವು ಹಿಂದೆಲ್ಲ ಕಂಡ ನದಿಪಾತ್ರೆಗಳಿಂದ (ನೇತ್ರಾವತಿ, ಫಲ್ಗುಣಿ, ಶಾಂಭವಿ, ನಂದಿನಿ…) ಭಿನ್ನವಾಗೇನೂ ಶಿರಿಯಾ ಹೊಳೆ ಕಾಣಿಸಲಿಲ್ಲ. ( ಮಂಗಳೂರು ಬೈಸಿಕಲ್ ಸಂಘ (ಎಂಬೀಸೀ) ಅಂದು ತನ್ನ ವಾರ್ಷಿಕೋತ್ಸವ ನಡೆಸುವುದಿತ್ತು. ಹಾಗಾಗಿ ಬಂಬ್ರಾಣದಿಂದ ಮರಳುತ್ತಿದ್ದಂತೆ, ಕಾರಿನ ಬಳಿ ನಬಿಲ್ ದೋಣಿ ದಂಡೆಗೇರಿತು. ದೋಣಿಯ ‘ಜೀವ’ ತೆಗೆದು, ಮೂವರೂ ಕಾರೇರಿ, ಮಂಗಳೂರಿಗೆ ಮರಳಿದರು. ವಾರ್ಷಿಕೋತ್ಸವದ ಕಲಾಪಕ್ಕೆ ನನಗೂ ಒತ್ತಾಯದ ಆಮಂತ್ರಣವೇನೋ ಇತ್ತು. ಆದರೆ ಔಪಚಾರಿಕ ಕಲಾಪಗಳಲ್ಲಿ ನನಗೆ ಅಷ್ಟಾಗಿ ರುಚಿ ಇಲ್ಲದ್ದಕ್ಕೆ, ಉಳಿದೆರಡು ದೋಣಿಗಳೊಡನೆ ಎಡ ದಂಡೆ ಯಾನವನ್ನು ಮುಂದುವರಿಸಿದೆ.
ಕಾಸರಗೋಡು ವಲಯದಲ್ಲಿ ಹೆದ್ದಾರಿ ಇನ್ನೂ ದ್ವಿಪಥವಾಗಿಯೇ ಉಳಿದದ್ದಕ್ಕೆ ನಮಗೆ ಅಡ್ಡಕ್ಕೆ ಸಿಕ್ಕ ಸೇತುವೆ ಒಂದೇ. ಅದರ ಮೇಲೋಡುವ ವಾಹನಿಗರು ನಮ್ಮ ಮೇಲೆ ಕೃಪೆಯಿಟ್ಟು ತಲೆಗೇ ಕಸವೃಷ್ಟಿ ಮಾಡದಂತೆ ಎಚ್ಚರವಹಿಸಿ, ಮೊದಲು ಅದರ ತಳವನ್ನು ಚುರುಕಾಗಿಯೇ ನುಸಿದು ಪಾರಾದೆವು. ಸೇತುವೆಯ ಅಡಿ ಭಾಗದಲ್ಲಿ ಅದೇನೋ ವಿಶೇಷ ಹೊದಿಕೆ ಅಂಟಿಸಿದಂತಿತ್ತು.
ಅದರಲ್ಲೂ ನಿಯತಾಂತರಗಳಲ್ಲಿ ಮಾಡಿದ್ದ ಆಯತಾಕಾರದ ಕಿಂಡಿಗಳು (ಚಿತ್ರ ನೋಡಿ) ನಮ್ಮ ಸೇತುವೆ-ತಿಳುವಳಿಕೆಯನ್ನೇ ಗೊಂದಲಮಯವನ್ನಾಗಿಸಿದೆ. ರಸ್ತೆ ಸೇತುವೆಯ ಅಡಿಯಲ್ಲಿ ನುಸುಳುವಾಗ ಎರಡು ಅಂಚುಗಳಲ್ಲಷ್ಟೇ ಜಾಗೃತರಾಗಿದ್ದರೆ ಸಾಕಾಗುತ್ತದೆ. ರೈಲ್ವೇ ಹಳಿಗಳ ಸೇತುವೆಗೆ ಅಷ್ಟು ಸಾಕಾಗುವುದಿಲ್ಲ! (ಕಾರಣ ನಿಮಗೆ ತಿಳಿದೇ ಇದೆ) ಸಾಲದ್ದಕ್ಕೆ ಇಲ್ಲಿ ರೈಲ್ವೇ ದ್ವಿಪಥಗಾಮಿನಿಯಾಗಿ ನಮಗೆ ಎರಡು ಸೇತುವೆ ಪಾರಾಗುವ ಸಂಕಟ. ನಾವು ಕಿವಿ ಚುರುಕು ಮಾಡಿ ಹತ್ತಿರದಲ್ಲೆಲ್ಲೂ ರೈಲು ಬರುತ್ತಿಲ್ಲವೆಂದು ಖಾತ್ರಿಯಾದ ಮೇಲೇ ನುಸುಳಿ ಮುಂದುವರಿದೆವು.
ಹಿಂದಿನ ದಿನ ನಾವು ಸೇತುವೆ ಮೇಲಿನಿಂದ ಎರಡು ರೈಲ್ವೇ ಸೇತುವೆಗಳಾಚೆ, ಹೊಳೆಯ ನೀರ ಹರಹಿಗೊಂದು ಮರಳ ರಂಗೋಲಿ ರೇಖೆಯನ್ನಷ್ಟೇ ಇಟ್ಟು, ಕಡಲು ಮೆರೆದಿದ್ದುದನ್ನು ನೋಡಿದ್ದೆವು. ಬಲದಂಡೆಯ ಹಸಿರ ಮೊತ್ತ ಆ ಮರಳ ದಂಡೆಗೆ ಬಲಕೊಡುವಂತೆ ಗಾಳಿ ಮರದ ತೋಪನ್ನೇ ಹಬ್ಬಿಸಿದಂತೆಯೂ ಅನ್ನಿಸಿತ್ತು. ಆದರೆ ಇಂದು ನೀರ ಮಟ್ಟದಿಂದ ನೋಡುವಾಗ, ಪಶ್ಚಿಮಕ್ಕೆ ಭಾರೀ ಮರಳದಿಬ್ಬವಷ್ಟೇ ಕಾಣಿಸುತ್ತಿತ್ತು. ಕೇವಲ ಭೋರಿಡುವಿಕೆಯಿಂದ ತನ್ನಿರವನ್ನು ಘೋಷಿಸುತ್ತಿದ್ದ ಸಾಗರದ ವಿಕ್ಷಿಪ್ತತೆಯಲ್ಲಿ, ಗಾಳಿ ಮರದ ತೋಪಾದರೂ ಅಳಿದುಳಿದ ವಿರಳ ಬುಡಗಳು ಎಂದೂ ಸ್ಪಷ್ಟವಾಗುತ್ತಿತ್ತು. ನಾವು ಮೊದಲಿಗೆ ಎಡ ದಂಡೆಯಲ್ಲೇ ಎಡ ಹೊರಳಿದ್ದ ಸಪುರ ಕವಲನ್ನು ಆಯ್ದುಕೊಂಡೆವು. ಇದರುದ್ದಕ್ಕೆ ನಮ್ಮ ಬಲ ಭಾಗದಲ್ಲಿ ನಾವು ಮೊದಲೇ ನಕ್ಷೆಯಲ್ಲಿ ಕಂಡುಕೊಂಡ ಕುದುರು – ಶಿರಿಯಾ ಪಾರ್ಕ್, ಇತ್ತು. ಅದು ನಮಗೆ ಕಂಡಂತೆ, ಮನುಷ್ಯ ಹಸ್ತಕ್ಷೇಪವಿಲ್ಲದ ಶುದ್ಧ ವನ್ಯವೇ ಇರಬೇಕು. ಅದರಲ್ಲಿಳಿದು, ವೈಶಿಷ್ಟ್ಯಗಳನ್ನು ಗುರುತಿಸುವ ನಮ್ಮ ಉತ್ಸಾಹವನ್ನು ಬಿಸಿಲಿನ ಉರಿ ಬತ್ತಿಸಿಬಿಟ್ಟಿತ್ತು. ಹಾಗೇ ಮುಂದೆ ಕುಂಬಳೆಯತ್ತ ಪಸರಿಸಿದ ಹಿನ್ನೀರಿನ ವ್ಯಾಪ್ತಿ ಕಾಣುವ ಆಸಕ್ತಿಯೂ ಉಳಿಯಲಿಲ್ಲ. ಕುದುರು ಕಳೆದದ್ದೇ ಬಲ ಹೊರಳಿ, ಮುಚ್ಚಿದ ಕಡಲದ್ವಾರವನ್ನು ಅಂದಾಜಿನಲ್ಲಿ ಹಾಯ್ದು, ಮರಳ ದಂಡೆಯಲ್ಲಿ ತುಸು ಬಿಡುವು ಮಾಡಿಕೊಂಡೆವು.
ದೋಣಿಗಳನ್ನು ಮೇಲೆಳೆದಿಟ್ಟು, ಮರಳ ದಿಣ್ಣೆ ಏರಿ ಕಡಲಂಚಿಗೆ ನಡೆದೆವು. ಅಲೆಗೈಗಳು ಅಬ್ಬರದ ಹೊಡೆತಗಳಲ್ಲಿ ಎರಡೂ ದಿಕ್ಕಿಗೆ, ನಮ್ಮ ಕಣ್ಣಿಗೆಟುಕದ ದೂರದವರೆಗೂ ಮರಳ ದಂಡೆಯನ್ನು ಶಿಸ್ತಿನ ಪುಟ್ಟ ಗೋಡೆಯಂತೇ ಒತ್ತಿಟ್ಟಿದ್ದವು. ನಾನು ಮನಸ್ಸಿನ ಲೆಕ್ಕಾಚಾರದಲ್ಲಿ ಉತ್ತರಕ್ಕೇನೋ ಮೂಸೋಡಿಯನ್ನು ಕೊರೆದು ಕಳೆದ ಮಂಜೇಶ್ವರದ ಮೀನುಗಾರಿಕಾ ಬಂದರದವರೆಗೆ, ಅಖಂಡ ಮರಳ ಹಾಸು ಕಂಡೆ. ದಕ್ಷಿಣದ್ದೇನಿದ್ದರೂ ನನ್ನದು ನಕ್ಷಾಜ್ಞಾನ. ಅದರಲ್ಲಿ ದೃಷ್ಟಿಗೆ ನಿಲುಕದ ಮೊಗ್ರಾಲ್ ಪುತ್ತೂರ ಬಳಿ, ಇನ್ನೂ ಪುಟ್ಟ ಹೊಳೆ – ಮಧುವಾಹಿನಿ, ಸಾಗರ ಸಂಗಮ ಕಾಣುವ ಉಲ್ಲೇಖವಿದೆ ಎಂದು ಮಾತ್ರ ಹೇಳಬಲ್ಲೆ. ಕರ್ನಾಟಕದಲ್ಲೂ ಬಾಲಬಿಚ್ಚಿದಂತಿರುವ ಶಿರಿಯಾಹೊಳೆಯೇ ‘ಬಾಯಿ’ಮುಚ್ಚಿಕೊಂಡು (ಅಳಿವೆ) ಬಿದ್ದ ಕಾಲದಲ್ಲಿ, ಕಾಸರಗೋಡು ಜಿಲ್ಲೆಯೊಳಗೇ ನುಲಿದಾಡುವ ಮಧುವಾಹಿನಿಯ ಬಗ್ಗೆ ಭಾರೀ ನಿರೀಕ್ಷೆಯೇನೂ ಬೇಕಿಲ್ಲ, ಬಿಡಿ.
ಶಿರಿಯಾ ಹೊಳೆಯ ಸಾಗರ ಸಂಗಮದ ಈ ಕೊನೆಯಲ್ಲಿ ನಿಂತು ನದಿಯತ್ತ ನೋಡಿದಾಗ, ಒಮ್ಮೆಗೆ ನಾವು ಕಳೆದ ಸಮಯ ಅಲ್ಪ, ಕಂಡದ್ದು ತೀರಾ ಸ್ವಲ್ಪ ಎಂದೇ ಅನ್ನಿಸಿತ್ತು. ಆದರೆ ನಕ್ಷೆಯ ಆಧಾರದಲ್ಲಿ ಅದು ಹುಟ್ಟುವ ಮತ್ತು ಹರಿದು ಬಂದ ನೆಲ ಧ್ಯಾನಿಸಿದಾಗ, ನಮಗಿಬ್ಬರಿಗೆ ಬೇರೇ ಸ್ತರದಲ್ಲಿ ಹೆಚ್ಚು ಅರ್ಥಪೂರ್ಣವಾಗಿ ಕಂಡಿತ್ತು. ಶಿರಿಯಾ ಹೊಳೆಯ ಪ್ರಧಾನ ಧಾರೆ ಮಡಿಕೇರಿ ದಾರಿಯ ಕುಂಬ್ರದ ಆಸುಪಾಸಿನಲ್ಲಿ ಪ್ರಕಟವಾಗುತ್ತದೆ. ಅದಕ್ಕೆ ಮುಂದೆ ಸೇರಿಕೊಳ್ಳುವ ಧಾರೆಗಳಲ್ಲಿ ನನ್ನ ಲೆಕ್ಕಕ್ಕೆ ಮುಖ್ಯವಾದದ್ದು – ಮರಿಕೆ ಬೈಲಿನ ಎಲ್ಲ ತೋಡುಗಳು. ನಿಮಗೆಲ್ಲ ತಿಳಿದಿರಬಹುದು, ಮರಿಕೆಯ ನೆಲ ಜಲ ನನ್ನಜ್ಜನ (ಮಾತಾಮಹ) ಕೃಷಿಭೂಮಿ ಮತ್ತು ನನ್ನ ಹುಟ್ಟು, ಶೈಶವದ ನೆಲೆ. ಶಿರಿಯಾ ಹೊಳೆಯ ಇನ್ನೊಂದು ಅಷ್ಟೇ ಮುಖ್ಯವಾದ ಜಲಧಾರೆ ದೇವಕಿಯ ತವರ್ಮನೆ – ಕೊಂದ್ಲಕಾನದ ಹೊಳೆ – ಅವಳ ಹುಟ್ಟು, ಶೈಶವದ ಸಂಪೂರ್ಣ ನೆಲೆ. ಮೊದಲಿಗೆ ಕೇವಲ ಇನ್ನೊಂದೇ ‘ಜಲಸಾಹಸ’ವೆಂದು ಆಯ್ದುಕೊಂಡ ಶಿರಿಯಾಹೊಳೆ, ಹೀಗೆ ನಮ್ಮ ಸಂಬಂಧವನ್ನೇ ಸಾರುವಂತ ಚೋದ್ಯವಾದದ್ದು ನಮಗಂತೂ ದೊಡ್ಡ ಧನ್ಯತೆಯನ್ನೇ ತಂದಿತು. ಇದರ ಮುನ್ನೆಲೆಯಲ್ಲಿ…..
ಈ ವಾರದ ಸುಧಾ ವಾರಪತ್ರಿಕೆಯಲ್ಲಿ ರಹಮತ್ ತರೀಕೆರೆಯವರು ಪ್ರಕಟಿಸಿದ ಸರಸ ಪ್ರಬಂಧ ‘ಬಲದಂಡೆ ಕಾಲುವೆ’ ತುಂಬಾ ಮಹತ್ವದ ಮತ್ತು ಸ್ವಾರಸ್ಯಕರ ಓದನ್ನೇ ನನಗೆ ಕೊಟ್ಟಿತು. ಈ ಪ್ರಬಂಧದಲ್ಲಿ ಬರುವ ಕಾಲುವೆಯಾದರೋ ತನ್ನ ಪ್ರಾಕೃತಿಕ ಪಾತ್ರೆಯನ್ನು ಬಿಟ್ಟ ಒಂದು ಜಲಧಾರೆ. ಆದರೆ ಅಲ್ಲೂ ಗ್ರಹಿಸುವುದಿದ್ದರೆ ಎಷ್ಟು ವೈವಿಧ್ಯ, ಎಂಥ ಸಮೃದ್ಧಿ ಎನ್ನುವುದನ್ನು ರಹಮತ್ ತುಂಬ ಸುಂದರವಾಗಿ ಗ್ರಹಿಸಿ, ದಾಖಲಿಸಿದ್ದಾರೆ. ಆಸಕ್ತರು ನೋಡಿ: ೧೬ ಮೇ ೨೦೧೯ರ ಸುಧಾ ಅಥವಾ ಈಗ ಫೇಸ್ ಬುಕ್ಕಿನಲ್ಲಿ ಕಡಲಮುಖಿಯಾಗಿ ನಿಂತು, ಧನರಾಜ್ ಜೇಬಿನಿಂದ ಪರ್ಸ್ ತೆಗೆದು ದೇವಕಿಗೆ ಕೊಟ್ಟು, ಸಚೇಲ ಸ್ನಾನವನ್ನೇ ಮಾಡಿದರು. ಉಳಿದವರು ಕಾಲು ಮುಖವನ್ನಷ್ಟು ತೊಯ್ಯಿಸಿ, ಪುನಶ್ಚೇತನರಾದರು. ನೋಡುತ್ತ ನಿಂತರೆ ಪ್ರತಿ ಅಲೆಯೂ ಹೊಸ ವಿಸ್ಮಯವೇ, ಅಸಂಖ್ಯ ‘ಶಿರಿಯಾ ಚೋದ್ಯ’ಗಳ ಮೊತ್ತವೇ. ಕಾಲ ಯಾರನ್ನೂ ಕಾಯುವುದಿಲ್ಲ ಎಂಬ ಎಚ್ಚರದಲ್ಲಿ, ಮರುಯಾನಕ್ಕಿಳಿದೆವು.
ಈಗ ಶಿರಿಯಾ ಹೊಳೆಯ ಬಲದಂಡೆ ಹಿಡಿದು, ವಿಸ್ತಾರ ಸರಸಿಯನ್ನುತ್ತರಿಸಿದೆವು. ಮೂರು ಸೇತುವೆಗಳನ್ನು ದಾಟುವವರೆಗೂ ಕಡಲ ಗಾಳಿಯ ಅಲೆಗಳು ನಮ್ಮನ್ನು ತಣಿಸಿ ಬೀಳ್ಕೊಂಡವು. ಒಲಯಂ ಮಸೀದಿ ರಸ್ತೆಯ ಅಂಚಿನಲ್ಲಿ ಹುಟ್ಟು ಹಾಕುತ್ತಿದ್ದಂತೆ ನಮಗೀಗ ಸಾಕಷ್ಟು ಪ್ರೇಕ್ಷಕರೂ ಸಿಕ್ಕರು. ಸೇತುವೆಯ ಮೇಲಿನ ಸ್ಕೂಟರ್ ಸವಾರರಿಂದ ತೊಡಗಿ, ಬಹುತೇಕ ಎಲ್ಲ ಮನೆಯ ಮಂದಿಯೂ ಅಲ್ಲಲ್ಲಿ ನಿಂತು, ಕೈಯಾಡಿಸಿ ಸಂತೋಷಿಸಿದರು, ನಮ್ಮ ಬಳಲಿಕೆಗೆ ಟಾನಿಕ್ ಆದರು. ಇಬ್ಬರು ಹುಡುಗರಂತೂ ಒಂದೂವರೆ ಕಿಮೀ ಉದ್ದಕ್ಕೂ ರಸ್ತೆಯಲ್ಲೇ ನಮ್ಮನ್ನನುಸರಿಸುತ್ತ ಕಾರಿನವರೆಗೂ ಬಂದಿದ್ದರು! ಕಡಲ ದಂಡೆ ಬಿಟ್ಟಲ್ಲಿಂದ ಅನಿಲ್, ಧನರಾಜ್ ನಾವೆಗಳು ಅಸಹನೀಯ ಬಿಸಿಲು ತಪ್ಪಿಸಲೆಂಬಂತೆ ಸಾಕಷ್ಟು ಚುರುಕಾಗಿಯೇ ಹೋಗಿದ್ದವು. ನಾವು ಮಾತ್ರ ಎಲ್ಲವನ್ನೂ ಮೊದಲಿನಂತೇ ನೋಡುತ್ತ, ವಿರಾಮದಲ್ಲೇ ಹುಟ್ಟು ಹಾಕುತ್ತ, ಸುಮಾರು ಹತ್ತು ಮಿನಿಟು ತಡವಾಗಿ ಕಾರಿಟ್ಟಲ್ಲಿಗೆ ತಲಪಿದ್ದೆವು. ಆದರೆ ಆಶ್ಚರ್ಯಕರವಾಗಿ ಮುಂದೆ ಬಂದವರು, ತಮ್ಮ ದೋಣಿಗಳನ್ನು ಕಾರಿಗೇರಿಸದೆ, ನಮ್ಮನ್ನೇ ಕಾದು ಕೂತಿದ್ದರು. ದೊಡ್ಡ ಕತೆಯೇನೂ ಇಲ್ಲ – ದೋಣಿಯಾನ ತೊಡಗುವಾಗಲೇ ಅನಿಲ್ ತನ್ನ ಕಾರಿನ ಕೀಲಿಕೈಯನ್ನು ಧನರಾಜ್ ಭದ್ರತೆಗೆ ಒಪ್ಪಿಸಿದ್ದರು. ಧನರಾಜ್ ಸಮುದ್ರಸ್ನಾನ ಮಾಡುವ ಉತ್ಸಾಹದಲ್ಲಿ ತನ್ನ ಕೀಲಿಕೈಯೂ ಸೇರಿದ್ದ ಪರ್ಸನ್ನು ದೇವಕಿಗೊಪ್ಪಿಸಿದ್ದರು, ಅಲ್ಲೇ ಮರಳಿಪಡೆಯಲು ಮರೆತಿದ್ದರು!
ದೋಣಿಗಳನ್ನೆಲ್ಲ ಕಾರಿನ ನೆತ್ತಿಯಲ್ಲಿ ಬಂದೋಬಸ್ತು ಮಾಡಿ ಹೊರಡುವಾಗ ಗಂಟೆ ಹತ್ತೂವರೆ ಕಳೆದಿತ್ತು. ಹಿಂದಿನ ದಿನದ ನನ್ನ ಮೋಜಣಿಯಲ್ಲಿ ಸಮೀಪದ ಅರಿಕ್ಕಾಡಿ ಕೋಟೆಯ ಬಗ್ಗೆ ಕೇಳಿದ್ದೆ. ನೋಟಕ್ಕೆ ಮುಸ್ಲಿಂನಂತಿದ್ದೊಬ್ಬ ‘ಟಿಪ್ಪು ಕೋಟೈ’, ಅವಶ್ಯ ನೋಡಬೇಕು ಎಂದಿದ್ದ. ಹೆಚ್ಚಿನ ವಿವರಗಳಿಗೆ ವಿಚಾರಣೇ ನಡೆಸಿದ್ದಾಗ, ಹಿಂದುವಿನಂತಿದ್ದೊಬ್ಬ, ಅರಿಕ್ಕಾಡಿ ಆಂಜನೇಯ ದೇವಸ್ಥಾನದ ಹಿತ್ತಿಲಿನಲ್ಲೇ ಹಾಳು ಬಿದ್ದ (ಅನಾಮಧೇಯ) ಕೋಟೆ ಇರುವುದನ್ನು ಖಾತ್ರಿ ಪಡಿಸಿದ್ದ. ಇಷ್ಟು ದೂರ ಬಂದ ಮೇಲೆ, ಸಮಯವೂ ಇರುವಾಗ, ಈ ಐತಿಹಾಸಿಕ ಸ್ಮಾರಕವನ್ನು ನೋಡಿಯೇಬಿಡೋಣವೆಂದು ಕಾಸರಗೋಡಿನತ್ತ ಮುಂದುವರಿದೆವು.
ಸುಮಾರು ಒಂದು ಕಿಮೀ ಅಂತರದಲ್ಲಿ, ದಾರಿಯ ಎಡಮಗ್ಗುಲಿಗೆ ಸಿಗುವ ಹನುಮಂತನ ಗುಡಿಯ ಒತ್ತಿಗೇ ಇದೆ – ಅರಿಕ್ಕಾಡಿ ಕೋಟೆ. ಬಹುಶಃ ಮೂಲದಲ್ಲಿ ಕೋಟೆಯ ಭಾಗವಾಗಿದ್ದ ದೇವಳ, ಕಾಲಮಾನದ ಏರುಪೇರಿನಲ್ಲಿ ಸ್ವತಂತ್ರವಾಗಿ, ಭರ್ಜರಿ ಜೀರ್ಣೋದ್ಧಾರವನ್ನೇ ಕಂಡಂತಿದೆ. ಅದರ ಹೊರಗಿನ ಬಣ್ಣ, ಪತಾಕೆಗಳ ವೈಭವ ಮತ್ತು ಹೆದ್ದಾರಿ ಭಕ್ತರ ವಹಿವಾಟುಗಳು ನಮ್ಮನ್ನು ಆಕರ್ಷಿಸಲಿಲ್ಲ. ನಾವು ಪಕ್ಕದ ಕಲ್ಲು ಮುಳ್ಳುಗಳ ಸವಕಲು ಜಾಡಿನಲ್ಲಿ ಕೋಟೆ ನುಗ್ಗಿದೆವು.
ಸುಮಾರು ಒಂದು ಎಕರೆಯ ಸಣ್ಣ ಆವರಣವಿದ್ದಂತಿತ್ತು. ಇನ್ನೂ ಭದ್ರವಾಗಿಯೇ ಇರುವ ಹೊರ ಸುತ್ತಿನ ಎತ್ತರದ ಗೋಡೆ ಮತ್ತು ನಡುವಲ್ಲಿರುವ ವೀಕ್ಷಣಾ/ಭದ್ರತಾ (ಫಿರಂಗಿ ನೆಲೆ?) ದಿಬ್ಬವನ್ನುಳಿದು ಎಲ್ಲ ರಚನೆಗಳೂ ನೆಲ ಸಮವಾಗಿವೆ. ಮುರಕಲ್ಲಿನ ಗುಡ್ಡೆಗೆ ಸಹಜವಾದ ಕಲ್ಲು, ಕುರುಚಲಷ್ಟೇ ರಾಜ್ಯಭಾರ ನಡೆಸಿದೆ. ಇಂದಿನ ಜನ ಹನುಮಂತನಲ್ಲಿ ಕಂಡ ಧರ್ಮೋದ್ಯಮದ ಯಶಸ್ಸಿನಂತೆ, ಕೋಟೆಯ ಮೂಲಕ ಇತಿಹಾಸ ಪ್ರವಾಸೋದ್ದಿಮೆಯನ್ನು ಯಾಕೆ ಕಾಣಲಿಲ್ಲವೋ ಅರ್ಥವಾಗುವುದಿಲ್ಲ. ಪೌಳಿಯ ಹೊರ ಸುತ್ತಿನ ನೆಲ, ಅಂದರೆ ಹಿಂದೆ ಕಂದಕವಿದ್ದಿರಬಹುದಾದ ಸ್ಥಳಗಳಲ್ಲೆಲ್ಲ ವರ್ತಮಾನದ ಮನೆ ತೋಟ ಹಬ್ಬಿವೆ. ಕನಿಷ್ಠ ಮೂವತ್ತಡಿ ಎತ್ತರವಾದರೂ ಇರುವ ಮುರಕಲ್ಲ ಗೋಡೆ, ಇನ್ನೂ ದೃಢವಾಗಿಯೇ ನಿಂತಿದೆ. ಅದಲ್ಲದಿದ್ದರೆ, ಕೋಟೆಯೊಳವನ್ನೂ ನವನಾಗರಿಕತೆ ‘ಸದುಪಯೋಗ’ಪಡಿಸುತ್ತಿತ್ತೋ ಏನೋ!
ಈಚೆಗೆ ಗೆಳೆಯ ಲಕ್ಷ್ಮೀನಾರಾಯಣ ಭಟ್ಟರು ಜಪಾನ್, ತೈವಾನ್ ಪ್ರವಾಸ ಹೋಗಿ ಬಂದರು. ಆ ಅನುಭವವನ್ನು ವಿವರಗಳಲ್ಲಿ ಸಚಿತ್ರ ಲೇಖನ ಮಾಲೆಯೇ ಮಾಡಿ (ನೋಡಿ: ಫೇಸ್ ಬುಕ್ಕಿನಲ್ಲಿ laxminarayana bhat p ಪುಟ – Japan Taiwan tour) ಸಾರ್ವಜನಿಕದಲ್ಲಿ ಹಂಚಿಕೊಂಡರು. ಅದನ್ನು ಓದುವಾಗ ಯಾರಲ್ಲೂ ಪಲ್ಲವಿಯಂತೆ ಮೂಡುವ ಭಾವ ಒಂದೇ. ಜಪಾನಿನಲ್ಲಿ ತೀರಾ ವಿರಳವಾಗಿರುವ (ಮತ್ತು ನಮ್ಮವುಗಳಿಗೆ ಹೋಲಿಸಿದರೆ ಬಹುತೇಕ ಯಕಃಶ್ಚಿತ್ ಎನ್ನುವ) ಐತಿಹಾಸಿಕ ಸ್ಥಳ, ವಿಚಾರಗಳನ್ನೂ ಅವರು ಚಂದಕ್ಕೆ ಇಂದಿನ ರುಚಿಗೆ ಒಡ್ಡಿಕೊಂಡಿದ್ದಾರೆ. ಈ ಕ್ರಮ ಹಳತಕ್ಕೆ ಗೌರವದೊಡನೆ, ಹೊಸ ಕಾಲಕ್ಕೆ ಆರ್ಥಿಕ ಯಶಸ್ಸನ್ನೂ ಅವರಿಗೆ ತಂದುಕೊಟ್ಟಿದೆ. ಅದೇ ನಮ್ಮಲ್ಲಿ ಎಡವಿದಲ್ಲಿ, ಬಿದ್ದಲ್ಲಿ ಅಪಾರ ಮತ್ತು ಎಷ್ಟೋ ಅಗಾಧ ರಚನೆಗಳೂ ಪೂರಕ ಇತಿಹಾಸವೂ ಇದೆ. ಅದರ ರಕ್ಷಣೆ, ಜೀರ್ಣೋದ್ಧಾರಕ್ಕೆ ಇಲಾಖೆಗಳು, ಹಣ ವಿನಿಯೋಗಗಳೂ ಧಾರಾಳ ಆಗುತ್ತಿವೆ. ಆದರೆ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ಎತ್ತಿ ಹೇಳಲು ಒಂದೂ ಸಮರ್ಪಕವಾಗಿಲ್ಲ. ನಾವು ಇನ್ನಾದರೂ ಅರಿಕ್ಕಾಡಿ ಕೋಟೆಯಂಥ ಎಷ್ಟೂ ಐತಿಹಾಸಿಕ ರಚನೆಗಳನ್ನು ‘ಹನುಮ ದೇವಳಗಳ’ ಬಲದಲ್ಲಿ ಹಿಂದೂ ರಚನೆಯ ಭಾಗವೆಂದು ಗುರುತಿಸುವುದನ್ನು ಬಿಡಬೇಕು. ಒಂದು ಕಾಲಘಟ್ಟದಲ್ಲಷ್ಟೇ ಆಳಿರಬಹುದಾದ ‘ಟಿಪ್ಪುಸುಲ್ತಾನರುಗಳ’ ನೆಪದಲ್ಲಿ ‘ಮುಸ್ಲಿಂ’ ಮತಾಚಾರಕ್ಕೆ ಸಲ್ಲಬೇಕೆಂದು ಹಕ್ಕೊತ್ತಾಯ ಸಲ್ಲಿಸುವುದೂ ಅಲ್ಲ. ಅವೆರಡನ್ನೂ ಮೀರಿ, ಭಾರತದ ಸಂಪತ್ತೆಂದು ಕಂಡು ಉಳಿಸಿ ಬೆಳೆಸುವಂತಾಗಬೇಕು. ಹನ್ನೊಂದೂವರೆಯ ಸುಮಾರಿಗೆ ನಾವು ನಂನಮ್ಮ ಮನೆಗೆ ಮರಳಿದೆವು.
Channagide ….next time naanu barthini .. nanna doni hattuva time hattira bantu ..next time join maadthini
ಭಗೀರಥನನ್ನು ತಲೆಯಲ್ಲಿ ಕಟ್ಟಿಹಾಕಿದ ಗಂಗೆಯಂತೆ ಕಾಣುವ ದೇವಕಿ ಹ್ಯಾಟಾರೂಢ ನಿಮ್ಮ ಚಿತ್ರ ನೋಡಿ ಎಲಾ, ಎನಿಸಿತು.ನನಗೂ ಒಮ್ಮೆ ಕಯಾಕ್ ಯಾನ ಮಾಡುವ ಮನಸ್ಸಿದೆ. ಮಳೆಗಾಲ ಅಡ್ಡಿಯಾಗದೆ?
ಗಮ್ಮತ್ತಿದ್ದು ಪಟಗಳು. ನೋಡುವಾಗ ಆಸೆ ಆಗುತ್ತದೆ, ಪುರುಸೊತ್ತಿಲ್ಲದೆ ಸೋತೆ. ಪಟದಲ್ಲಿ ಸ್ವರ್ಗದಾಗೆ ಕಾಣುತ್ತದೆ…
“ನೀವೇ ಕಲಿ(ಗಾಲದ) ಹನುಮ! ನದಿಗಳನ್ನು ಕಯಾಕ್ನಲ್ಲಿ ಯಾನಗೈವುದಕ್ಕೆ ನೀವೇ ಕಲಿ ಹನುಮ!” ನಿಮ್ಮಿಂದ ನಾವೆಲ್ಲಾ ಕಲಿಯುವುದಿದೆ ಸಾರ್ಥಕವೆನಿಪ ತಿರುಗಾಟದ ಬಳಲಿಕೆಯರಿಯದ ಚೆಲುವಿನ ರಸದೌತಣ!ಚರಿತ್ರೆಯ ಬಗ್ಗೆ ನಮಗೆ ಇರುವ ಅನಾಸಕ್ತಿ ಅತ್ಯದ್ಭುತ! ಆದರೆ ಚರಿತ್ರೆಯನ್ನು ನಮ್ಮ ಮೂಗಿನ ನೇರಕ್ಕೆ ತಿರುಚಿ, ಕಿವುಚಿ ಹಾಲಾಹಲದೋಕುಳಿ ಎರಚುವ ವಿಕೃತಿಯೇ ಮೂಲಪ್ರವೃತ್ತಿಯಾಗಿ ವಿಜ್ರಂಭಿಸುವುದನ್ನು ನೋಡುವಾಗ ಇದಕ್ಕೆಂದು ಕೊನೆ ಎಂಬ ಪ್ರಶ್ನೆ ಉತ್ತರವಿಹೀನವಾಗಿ ಸದಾ ಕಾಡುತ್ತಿರುತ್ತದೆ.
nimma hindeye naanidde embudu gottaagale illa. hogli bidi.
Shiriya holeya kathana odi khushiyaaytu. kedage mundigeya kaayi tinnalu hogabedi. meenu hidiyuvavaru adannu balasi meenige prajnetappisuva bagge keliddene.Vanalli- Dushanbe yinda