ಎ.ಪಿ. ರಮಾನಾಥ ರಾವ್ – ನನ್ನ ನಾಲ್ವರು ಸೋದರ ಮಾವಂದಿರಲ್ಲಿ ಕೊನೆಯವರು ಮತ್ತು ಬದುಕಿದ್ದವರಲ್ಲೂ ಕೊನೆಯವರು, ಈಚೆಗೆ (೧೬-೫-೧೯) ತನ್ನ ೮೨ರ ಹರಯದಲ್ಲಿ, ತೀರಿಹೋದರು. ಬಳಕೆಯ ಸರಳತೆಯಲ್ಲಿ – ‘ರಾಮನಾಥ’, ವಿದ್ಯಾ ದಿನಗಳಲ್ಲಿ ಬಯಸಿ, ಮದ್ರಾಸಿನ (ಇಂದಿನ ಚೆನ್ನೈ) ಪಶುವೈದ್ಯಕೀಯ ಕಾಲೇಜು ಸೇರಿದ್ದ. ಆದರೆ ಪ್ರಯೋಗಕ್ಕಾಗಿ ನಡೆಯುತ್ತಿದ್ದ ಪ್ರಾಣಿ ಹಿಂಸೆ ನೋಡಲಾಗದ ಸಹಜ ಸಾಧು ಸ್ವಭಾವದಲ್ಲಿ ಮುದುರಿ, ಮನೆ ಸೇರಿಕೊಂಡ. ಪಾಲಿನಲ್ಲಿ ಬಂದ ಪಿತ್ರಾರ್ಜಿತ ನೆಲದಲ್ಲೇ (ಮರಿಕೆ ಬಯಲಿನಲ್ಲಿ ‘ಭೂತಗುರಿ’ ಪಾಲು) ನೆಲೆಸಿ, ಸರಳ ಕೃಷಿಕ, ಸಭ್ಯ ಸಾಮಾಜಿಕನಾಗಿಯೇ ಉಳಿದ. ರಾಮನಾಥ ನನಗಿಂತ ಸುಮಾರು ಹದಿನಾಲ್ಕು ವರ್ಷಕ್ಕೆ ಹಿರಿಯ ಹಾಗೂ ಪೂರ್ಣ ಗೌರವ ಪಾತ್ರನಾದರೂ ರೂಢಿಯಂತೆ ಏಕವಚನದ ಸಂಬೋಧನೆಯಲ್ಲೇ ಮುಂದುವರಿಸುತ್ತೇನೆ, ತಪ್ಪು ತಿಳಿಯಬೇಡಿ.

ನನ್ನ ಸ್ಮೃತಿಪಟಲದಲ್ಲಿ ಅಚ್ಚೊತ್ತಿರುವ ರಾಮನಾಥನ ಮೊದಲ ಚಿತ್ರಗಳಲ್ಲಿ ಕಾಣುತ್ತಿದ್ದದ್ದು ಶುಚಿ, ಅಚ್ಚುಕಟ್ಟುತನ ಮತ್ತು ಕಾರ್ಯಶ್ರದ್ಧೆ. ಆತ ದೇಹತ್ಯಾಗದಿಂದ ಬಿಟ್ಟುಹೋಗಿರುವ ಕಾರ್ಯಕ್ಷೇತ್ರ ಇಂದಿಗೂ ಆತನ ಆ ಗುಣಗಳನ್ನು ಪೂರ್ಣ ಸಮರ್ಥಿಸುತ್ತದೆ. ಹೆಂಡತಿ – ಶಾಂತಾ, ಮಗಳು – ಕುಸುಮಾ, ಅಳಿಯ – ಸದಾಶಿವ, ಮಗ – ಸತೀಶ, ಸೊಸೆ – ವಿನಯಾ ಅದೇ ಅಚ್ಚಿನ ಪ್ರತಿಗಳಂತೆ ಮುಂದುವರಿದಿರುವುದು ಕೂಡಾ ರಾಮನಾಥನ ಶ್ರದ್ಧೆಯ ಫಲ ಎಂದರೆ ಅತಿಶಯೋಕ್ತಿಯಾಗದು. (ಕುಸುಮನ ಮಗಳು, ಅಳಿಯ, ಮೊಮ್ಮಗು, ಸತೀಶನ ಮಗ – ನನ್ನ ಬಳಕೆಗೆ ಹೆಚ್ಚು ಸಿಕ್ಕವರಲ್ಲವಾದರೂ ಭಿನ್ನರಿರಲಾರರು.) ನನ್ನಜ್ಜ ಪಾಲು ಕೊಟ್ಟ ಹೊಸದರಲ್ಲಿ, ಕೃಷಿಯಲ್ಲಿ ನೆಲೆಸಲು ಸಿದ್ಧರಿದ್ದ ಎರಡು ತಮ್ಮಂದಿರ ತೋಟಗಳ ಮತ್ತು ವಾಸದ ಮನೆಗಳ ಮೂಲ ಸ್ವರೂಪವನ್ನು ರೂಪಿಸಿ, ನಿರ್ಮಿಸಿ ಕೊಟ್ಟವ ಹಿರಿಯಣ್ಣ – ಎ.ಪಿ. ತಿಮ್ಮಪ್ಪಯ್ಯ (ನೋಡಿ: ಅಸಮ ಸಾಹಸಿ ಮರಿಕೆಯ ಅಣ್ಣ ). ಅಣ್ಣ ಯಾವುದೇ ಕೆಲಸದಲ್ಲಿ ಉಪಯುಕ್ತತೆಗೆ ಆದ್ಯತೆ ಕೊಟ್ಟು, ಕಲಾವಂತಿಕೆಯನ್ನು ಮಿತವ್ಯಯಕ್ಕೆ ಸಮೀಕರಿಸುವಾತ. ಹಾಗೆ ಆತ ಸರಳವಾಗಿ ಕೊಟ್ಟ ಮನೆಯ ಮೂಲ ಚೌಕಟ್ಟನ್ನು ಉಳಿಸಿಕೊಂಡೇ ರಾಮನಾಥ ಅಳವಡಿಸಿದ ಪರಿಷ್ಕರಣೆಗಳು, ಇಂದು ಭೂತಗುರಿ ಮನೆಯನ್ನು, ಇತರೆಲ್ಲ ಮನೆಗಳಿಂದ (ಮೂಲ ಮರಿಕೆ ಹಾಗೂ ತಡವಾಗಿ ಬಂದ ಗೌರೀಶಂಕರನ ಪಾಲಿನ ಜಿಂಕೆ ಮನೆ ಸೇರಿದಂತೆ) ಭಿನ್ನವೂ, ಚಂದವೂ ಮಾಡಿದೆ.

ನನ್ನ ಎಳವೆಯಲ್ಲಿ ಮರಿಕೆಯಲ್ಲಿದ್ದದ್ದು ಒಂದೇ ಮನೆ (ಸದ್ಯ ಹಿರಿಯಣ್ಣ – ಎ.ಪಿ. ತಿಮ್ಮಪ್ಪಯ್ಯನವರ ಪಾಲಿನಲ್ಲಿ ಮುಂದುವರಿದ ಮೂಲಮನೆ). ಆ ದಿನಗಳಲ್ಲಿ ಆಳು ಕಾಳುಗಳಿಗೆ ಕೊರತೆಯಾಗಲೀ ಮತ್ತೆ ಅವರಿಗೆ ಕೆಲಸ ಹೇಳುವಲ್ಲಿ ಮನೆ, ಕೃಷಿ ಎಂಬೆಲ್ಲ ಯೋಚನೆಯಾಗಲೀ ಇದ್ದಂತಿರಲಿಲ್ಲ. ಆದರೂ ಮನೆಯ ವಿಸ್ತಾರ ಅಂಗಳವನ್ನು (ಅಡಿಕೆ ಜಾಲು ಅರ್ಥಾತ್ ಅಡಿಕೆ ಒಣಗಿಸುವ ಅಂಗಳ) ತರುಣ ರಾಮನಾಥ ಮುತುವರ್ಜಿಯಿಂದ ಗುಡಿಸುತ್ತಿದ್ದ. ಕೆಳ ಬಚ್ಚಲುಮನೆಯ ಹೊರಗೆ, ತೋಡಿಗಿಳಿಯುತ್ತಿದ್ದ ಮೆಟ್ಟಿಲ ಸಾಲುಗಳ ತಲೆಯಲ್ಲಿ ಇದ್ದ ಭಾರೀ ಕಲ್ಲ ಚಪ್ಪಡಿಯ ಮೇಲೆ, ಬಿಳಿ ಪಂಚೆಗಳನ್ನು ಮತ್ತಷ್ಟು ಬಿಳಿಯಾಗುವಂತೆ ಒಗೆಯುತ್ತಿದ್ದ. ಆಗ ಮರಿಕೆಗೆ ವಿದ್ಯುತ್ ಸಂಪರ್ಕ ಬಂದಿರಲಿಲ್ಲ. ಹಾಗಾಗಿ ಮನೆಯಲ್ಲಿ ದೊಡ್ಡದಾಗಿಯೇ ಆಚರಿಸಲ್ಪಡುತ್ತಿದ್ದ ನವರಾತ್ರಿ ಹಬ್ಬದ ಸಂಜೆಗಳಲ್ಲಿ, ರಾಮ್ನಾಥಾ ಪತ್ತಾಯದ ಅಟ್ಟಕ್ಕೇರಿದಾಗ ನಾನೂ ಸೇರಿದಂತೆ ಬಾಲರಿಗೆಲ್ಲ ಸಂಭ್ರಮ. ಆತ ಪೆಟ್ರೋಮ್ಯಾಕ್ಸ್ (ಗ್ಯಾಸ್ ಲೈಟ್) ಇಳಿಸಿ, ದೂಳು ಮಸಿ ಕಳೆದು, ಮೊದಲೇ ಸಜ್ಜಾಗಿರಿಸಿಕೊಂಡ ಮ್ಯಾಂಟಲ್, ಪಿನ್ನು, ಸೀಮೆ ಎಣ್ಣೆ ಬಲದಲ್ಲಿ ಬೆಳ್ಕರಿಸುತ್ತಿದ್ದ. ಅದುವರೆಗೆ, ಚಿಮಣಿ ದೀಪದ ಸಣ್ಣ ಬೆಳಕಿನವಲಯದ ಅಂಚಿನಲ್ಲೇ ನಮ್ಮನ್ನು ನುಂಗಲು ಹೊಂಚುತ್ತಿದ್ದ ಭೂತಪ್ರೇತಾದಿಗಳು, ನಮ್ಮ ಉತ್ಪಾತಕ್ಕೆ ಹೆಚ್ಚಿನ ಅಂಗಳ ಕೊಟ್ಟು ಓಡಿಹೋಗುತ್ತಿದ್ದವು!

ನಿಮಗೆ ತಿಳಿದಿರಬಹುದು, ನನ್ನಜ್ಜನಿಗೆ ಹತ್ತು ಮಕ್ಕಳು. ಅವರ ಮದುವೆಗಳೂ (ಹುಡುಗರದ್ದು ಗೃಹಪ್ರವೇಶ) ಸೇರಿದಂತೆ ಕುಟುಂಬದ ಎಲ್ಲ ದೊಡ್ಡ ಕಲಾಪಗಳು ಮರಿಕೆ ಮನೆಯಲ್ಲೇ ನಡೆಯುತ್ತಿದ್ದವು. ಅದಕ್ಕೆ ಚಪ್ಪರ ಮತ್ತಿತರ ಅಗತ್ಯಗಳನ್ನೆಲ್ಲ ಹೊರಗಿನಿಂದ ತರಿಸಿದ್ದು ನನ್ನ ನೆನಪಿನಲ್ಲಿಲ್ಲ. (ಆ ದಿನಗಳಲ್ಲಿ ಪುತ್ತೂರಿನಂಥ ಸಣ್ಣ ಊರುಗಳಲ್ಲಿ ಅಂಥ ವ್ಯವಸ್ಥೆ ಇತ್ತೇ – ಮರಿಕೆಯ ಮೂಲಮನೆ
ಗೊತ್ತಿಲ್ಲ!) ಅಂಗಳ ಪೆಟ್ಟಿಸಿ, ಅಡಿಕೆ ಕಂಬ ಊರಿ, ಋತುಮಾನದ ಎಚ್ಚರದೊಡನೆ ಚಪ್ಪರ ಬಿಗಿಯುವ, ಅಡುಗೆಗೆ ಹೊರ ಅಡುಗೆ ಮನೆಯಲ್ಲಿ ಒಲೆ ಒಪ್ಪಗೊಳಿಸುವುದೇ ಮೊದಲಾದ ದೊಡ್ಡ ಕೆಲಸಗಳೆಲ್ಲ ಅಣ್ಣನ ನಿರ್ದೇಶನದಲ್ಲಿ, ಆಳುಗಳ ಶ್ರಮದಲ್ಲಿ ಶಿಸ್ತಿನಲ್ಲೇ ನಡೆಯುತ್ತಿತ್ತು. ಆದರೆ ಅದರ ಕಲಾಮುಖವಾಗಿ, ಅಡಿಕೆ ಕಂಬಗಳನ್ನು ಕೀಸುವುದು, ಬೇಗಡೆ ಹಾಳೆಗಳನ್ನು ವಿವಿಧ ವಿನ್ಯಾಸಗಳಲ್ಲಿ ಕತ್ತರಿಸಿ ಅಂಟಿಸುವುದು, ಮಂಟಪದ ಕುಸುರುಗಾರಿಕೆ, ಆತಿಥ್ಯದ ಸೂಕ್ಷ್ಮಗಳು ಮುಂತಾದ ಎಲ್ಲಕ್ಕೂ ಸಮರ್ಥ ಎರಡನೇ ಸ್ಥಾನದಲ್ಲಿ ನಿಂತು, ನಡೆಸುತ್ತಿದ್ದವ ರಾಮನಾಥ.

ಮರಿಕೆ ಕಲಾಪಗಳಲ್ಲೆಲ್ಲ ಎಳೆಯರಿಗೆ ಅಣ್ಣ – ಶಿಸ್ತಿನ ಸಿಪಾಯಿ,ಮಹಾ ಸಾಹಸಿ, ಹಾಗಾಗಿ ತುಸು ಭಯಕಾರಿ. ಗೋವಿಂದನದು ಕತೆ, ಗಮ್ಮತ್ತಿನ ಸರಸ ಕೂಟ. ಶಂಕರನೂ ಸ್ವಭಾವತಃ ವಿನೋದಪರನೇ. ಆದರೆ ಅವನ ವೃತ್ತಿ ಮತ್ತು ಬಿಡುವೇಳೆಗಳು ಹಳ್ಳಿಯಿಂದ ದೂರವಾಗಿ, ನಮ್ಮ ಹೆಚ್ಚಿನ ಒಡನಾಟಕ್ಕೆ ಅವಕಾಶ ಮಾಡಿಕೊಡುತ್ತಿರಲಿಲ್ಲ. ಮಿತಭಾಷಿ ಮತ್ತು ಮೃದುವಚನಿಯಾದ ರಾಮನಾಥ ನೋಟಕ್ಕೆ ಮಂದಸ್ಮಿತನೇ. ಆದರೆ ಆತನ ಸಹಜ ಗಂಭೀರ ತೋರಿಕೆ, ಆಂತರ್ಯದ ಸರಳ ಮತ್ತು ಕುಟುಂಬಪ್ರೇಮವನ್ನು ನಮ್ಮಿಂದ ಮರೆಸಿಬಿಡುತ್ತಿತ್ತು. ನಿಗೂಢನೂ ಅನಾಕರ್ಷಕನೂ ಆಗಿಯೇ ಕಾಣುತ್ತಿದ್ದ. ಸುಮಾರು ಐದೂವರೆ ದಶಕಗಳ ಹಿಂದೆ, ಗೋವಿಂದನ ದಿಬ್ಬಣ ಗಂಗೊಳ್ಳಿ ಕಡವು ತಲಪಿದ್ದಾಗ, ಸುಮಾರು ಮೂರು-ನಾಲ್ಕರ ಹರಯದ ನನ್ನ ತಮ್ಮ ಆನಂದ, ಕಿವಿಗೆ ಗಾಳಿ ಹೊಕ್ಕ ಕರುವಿನಂತೆ ಓಡತೊಡಗಿದ್ದ. ನೀರಿಗೆ ಬಿದ್ದಾನು ಎಂಬ ಆತಂಕದಲ್ಲಿ ಎಲ್ಲರೂ ಬೊಬ್ಬೆ ಹಾಕಿದಾಗ, ಅವನನ್ನು ಗದರಿ, ತಹಬಂದಿಯಲ್ಲಿಟ್ಟ ರಾಮನಾಥ, ಬಹುಕಾಲ ಆನಂದನ ‘ವೈರಿ ಸ್ಥಾನ’ದಲ್ಲಿದ್ದದ್ದು ನೆನಪಾಗುತ್ತದೆ.

ರಾಮನಾಥನ ಗಾಂಭೀರ್ಯದೊಳಗಿನ ಆತಂಕ ಬಹಳ ರಾಮನಾಥ, ದೊಡ್ಡ ಅತ್ತಿಗೆ ರಮಾ, ಗೋವಿಂದ ಹಿಂದೊಮ್ಮೆ ಪ್ರಕಟವಾದ ಪರಿ, ನನಗಿಂದೂ ಪೂರ್ಣ ಅರ್ಥವಾಗದ ಆದರೆ ಮನದಾಳದಲ್ಲಿ ಗಟ್ಟಿಯಾಗಿ ಉಳಿದ ಚಿತ್ರ. ಬಹುಶಃ ಆ ದಿನಗಳಲ್ಲಷ್ಟೇ ಶಂಕರ (ಈಚೆಗೆ ತೀರಿಕೊಂಡ ನನ್ನ ಮೂರನೇ ಮಾವ) ಮಂಗಳೂರಿನಲ್ಲೇ ನೆಲೆ ಊರುತ್ತಿದ್ದ. ಆ ದುರ್ದಿನ ಮಾತ್ರ ಆತ ಊರಲ್ಲಿ ಲಭ್ಯನಿರಲಿಲ್ಲ. ರಾಮನಾಥ (ದಂಪತಿ?) ಯಾವುದೋ ಕೆಲಸದ ಮೇಲೆ ಪಯಣಿಸುತ್ತಿದ್ದ ಮಂಗಳೂರು ಉಡುಪಿ ಬಸ್ ಅಪಘಾತಕ್ಕೀಡಾಗಿತ್ತು. ಹಲವರೊಡನೆ ರಾಮನಾಥನಿಗೂ ಸಣ್ಣಪುಟ್ಟ ಗಾಯಗಳಾಗಿದ್ದವು. ಹೆಂಡತಿ ಶಾಂತಾ ಸ್ವಸ್ಥವಾಗಿಯೇ (?) ಜತೆಗಿದ್ದಳು. ಬಹುಶಃ ಪೋಲಿಸರು, ಎಲ್ಲರಂತೆ ಇವರನ್ನೂ ಮಂಗಳೂರು ಸರಕಾರೀ ಆಸ್ಪತ್ರೆಗೆ ಸಾಗಿಸಿ, ಸೂಕ್ತ ಚಿಕಿತ್ಸೆಯೂ ಕೊಡಿಸಿ, ವಾರ್ಡಿಗೆ ಹಾಕಿದ್ದರು. ಅದೇನು ತುರ್ತು ಬಂತೋ ಗೊತ್ತಿಲ್ಲ, ಯಾರದೋ ಮೂಲಕ ಅಂಗಡಿಯಲ್ಲಿದ್ದ ನನಗೆ ರಾಮನಾಥ ಕರೆ ಕೊಟ್ಟಿದ್ದ. ನಾನು ಆತಂಕದಲ್ಲೇ ಆಸ್ಪತ್ರೆಗೆ ಓಡಿದ್ದೆ. ನಿಜದಲ್ಲಿ ಹೆದರುವಂತದ್ದೇನೂ ಆಗಿರಲಿಲ್ಲ.

ಆದರೆ ರಾಮನಾಥನ ಮನಸ್ಸಿನಲ್ಲೆದ್ದ ಕೋಲಾಹಲದ ಅಲೆ, ಆತನನ್ನು ತೀವ್ರ ವಿಷಾದಕ್ಕೆ ತಳ್ಳಿದ್ದು, ನಾನು ನಿರೀಕ್ಷೆಯೇ ಮಾಡಿರಲಿಲ್ಲ. ಮಕ್ಕಳ ಜಗಳ ಮತ್ತು ಲೋಕದ ಕುರಿತು ಯಾರೋ ಅನಪೇಕ್ಷಿತವಾಗಿ, (ರಾಮನಾಥನ ಮಗ) “ಸತೀಶ ತಿನಪಾಂಡಿ, ಹೆಡ್ಡ…” ಎಂದೇನೋ ಹೇಳಿದ್ದರಂತೆ. ಅದು ಅಂದು ಬಾಲ ಸತೀಶನ ಭವಿಷ್ಯದ ಕುರಿತ ಆತಂಕವಾಗಿ, ರಾಮನಾಥನ ಗದ್ಗದ ಧ್ವನಿಯಲ್ಲಿ ಪ್ರಕಟವಾಗಿತ್ತು! ನಾನು ನಿಜಕ್ಕೂ ನಿರುತ್ತರನಾಗಿಬಿಟ್ಟಿದ್ದೆ. ರಾಮನಾಥ ಮತ್ತೆ ಚೇತರಿಸಿಕೊಂಡ, ಇಂದು ಸತೀಶ ವೈದ್ಯನಾಗಿಯೂ ಕೃಷಿ ಕುಟುಂಬ ಪಾಲನೆಯಲ್ಲೂ ಯಶಸ್ವಿ ಎನ್ನಿಸಿಕೊಂಡು ಹಲವು ವರ್ಷಗಳೇ ಆಗಿವೆ, ಬಿಡಿ.

ನನ್ನಜ್ಜನಿಂದ ದತ್ತವಾದ ಆದರ್ಶಮಯ ಸಂಸ್ಕಾರ, (ನೋಡಿ: ಬಾಳಿಗೊದಗಿದ ಬೆಳಕು) ಓದು ಮತ್ತು ಚಿಂತನೆಗಳ ಫಲವಾಗಿ ರಾಮನಾಥ ಗಂಭೀರ ಸಂವಾದಗಳಿಗೆ ಸದಾ ಸಿಕ್ಕುತ್ತಿದ್ದ. ಆತ ವೈಚಾರಿಕ ಬದಲಾವಣೆ ಹಾಗೂ ಸಂಘರ್ಷಗಳಿಗೆ ಮುಕ್ತನೇ ಇದ್ದ. ಆದರೆ ಎಷ್ಟೋ ಅನುಷ್ಠಾನಗಳಲ್ಲಿ ಮಾತ್ರ ಸಾಂಪ್ರದಾಯಿಕ ಒತ್ತಡಗಳಿಂದ ಅನ್ಯರ ನಿರೀಕ್ಷೆಯನ್ನು ಮುಟ್ಟುತ್ತಿರಲಿಲ್ಲ. ಅವನ ವೈಚಾರಿಕ ನಿಲುವುಗಳು ಎಷ್ಟೋ ಬಾರಿ, ಕುಟುಂಬದ ಕೂಟಗಳಲ್ಲಿ, ಮುಖ್ಯವಾಗಿ ಎರಡನೇ ಅಣ್ಣ ಗೋವಿಂದನ (ನೋಡಿ: ಹಾಡುಮುಗಿಸಿದ ಗೋವಿಂದ) ಭಕ್ತಿಪಂಥದ ಎದುರು, ‘ಮಾತಿನ ಮಹಾಯುದ್ಧ’ದಂತೇ ಬೆಳೆಯುವುದಿತ್ತು. (ಸಾಂಪ್ರದಾಯಿಕತೆಯ ವಕ್ತಾರನಾಗಿ

ನನ್ನಪ್ಪಮ್ಮ ಗೋವಿಂದ, ಕುಶಾಲಿಗೆ ತನ್ನನ್ನು ಸಂಟ್ಯಾರಿನ ಖೊಮೇನಿ ಎಂದುಕೊಳ್ಳುವುದೂ ಇತ್ತು!) ಆಗ ಕುಟುಂಬದ ಬಹುತೇಕ ಎಳೆಯರು ಓದು, ಚಿಂತನೆ ಮತ್ತು ಜೀವನಾನುಭವದ ಕೊರತೆಯಲ್ಲಿ, ರಾಮನಾಥನನ್ನು ತಪ್ಪು ತಿಳಿಯುವುದಿತ್ತು. ಆದರೆ ಅವು ಎಂದೂ ಯಾರೂ ‘ಮಾತು ಬಿಡುವ’ ಅಥವಾ ಕುಟುಂಬ ಸಂಬಂಧಗಳ ಆತ್ಮೀಯತೆಗೆ ಧಕ್ಕೆ ತರುವ ಬೆಳವಣಿಗೆ ಕಂಡದ್ದಿಲ್ಲ.

ಗೋವಿಂದನ ಕೊನೆಯ ದಿನಗಳ ಸಮಯದಲ್ಲಿ, ರಾಮನಾಥನೂ ವೃದ್ಧಾಪ್ಯದ ಬೇನೆಗಳಲ್ಲಿ ಕುಂದುತ್ತಲೇ ಇದ್ದ. ಆದರೂ ಹೆಚ್ಚುಕಮ್ಮಿ ಪ್ರತಿ ಸಂಜೆ ನಿಧಾನಕ್ಕೆ ಗೋವಿಂದನ ಮನೆಗೆ ನಡೆದು ಹೋಗಿ, ಪಟ್ಟಾಂಗ ಹೊಡೆಯುತ್ತಿದ್ದ. ಗೋವಿಂದನ ಧ್ವನಿಪೆಟ್ಟಿಗೆ ರೋಗಗ್ರಸ್ತವಾಗಿ ಮಾತು ಬಿದ್ದು ಹೋದಾಗಲೂ ಮುಂದೆ ಗೋವಿಂದ ಮರಣಿಸಿದ ಮೇಲೂ ರಾಮನಾಥ ಆ ಮನೆಗೆ ಹೋಗಿ, ಕೆಲ ಹೊತ್ತು ಮೌನವಾಗಿಯಾದರೂ ಕುಳಿತು ಬರುವುದನ್ನು ತಪ್ಪಿಸಿಕೊಂಡದ್ದಿಲ್ಲ! ಮೊನ್ನೆ ರಾಮನಾಥನ ಶವಸಂಸ್ಕಾರದ ವೇಳೆ ರಾಧಾಕೃಷ್ಣ (ಗೋವಿಂದನ ಮಗ) ಸ್ವಲ್ಪ ವಿಷಾದದಲ್ಲೇ ಹೇಳಿದ “ಕಾಲ ಬದಲಾಗಿ, ಈಗ ಹೆಚ್ಚಾಗಿ ನಾವ್ಯಾರೂ ತೋಟದೊಳಗಿನ ಒಳದಾರಿಯಲ್ಲಿ ನಡೆಯುವುದೇ ಇಲ್ಲ. ಆದರೆ ರಾಮ್ನಾಥಪ್ಪಚ್ಚಿಗಾಗಿ ಈಚೆಗೆ ಬಲ್ಲೆ ಕಡಿಸಿ, ನಮ್ಮ ಕಣಿಗಳಿಗೆ ಹೊಸ ಪಾಲ ಕೂಡಾ ಹಾಕಿಸಿದ್ದೆ”. ರಾಮನಾಥ ಕೆಲವೊಮ್ಮೆ “ಮೈ ಮಾಲುತ್ತದೆ” ಎಂದು ಹೆದರಿ, ತೋಟದೊಳಗಿನ ಒಳದಾರಿಯಲ್ಲಿ ನಡೆಯುವುದನ್ನು ತಪ್ಪಿಸುವುದಿತ್ತು. ಆಗ ಕೆಲಸದಾಳನ್ನು ಹೊರಡಿಸಿಕೊಂಡು, ವಾಹನ ಮಾರ್ಗದಲ್ಲೇ ಹೋಗುತ್ತಿದ್ದ. ಹಲವು ಬಾರಿ ಸೊಸೆ ವಿನಯಳ ಕಾರು ಹೊರಡಿಸಿ, ಗೋವಿಂದನನ್ನಷ್ಟೇ ಅಲ್ಲ, ಮೂಲಮನೆಯಲ್ಲಿ ದೀರ್ಘ ಕಾಲದಿಂದ ದೈಹಿಕ ಅಸ್ವಾಸ್ಥ್ಯದಿಂದ ಹೆಚ್ಚುಕಮ್ಮಿ ಮಲಗಿದಂತೇ ಇರುವ ದೊಡ್ಡ ಅತ್ತಿಗೆಯನ್ನೂ (ರಮಾ) ಕಂಡು, ಸಹಜ ಪ್ರೀತಿಯ ದೀಪಕ್ಕೆ ಎಣ್ಣೆ ಹೊಯ್ಯುತ್ತಲೇ ಇದ್ದ!

ರಾಮನಾಥನ ವಿಚಾರವಂತಿಕೆಗೆ ಪೂರಕವಾಗಿ ಇನ್ನೊಂದು ಘಟನೆ: ಬಹುಶಃ ಅದು ರಾಮನಾಥನ ಮಗ – ಸತೀಶನ, ಉಪನಯನದ ಸಂದರ್ಭವಿರಬೇಕು. ವೈದಿಕ ಕಲಾಪಗಳ ನಡುವೆ ಮುಹೂರ್ತದ ಹೊಂದಾಣಿಕೆಗಾಗಿ ಒಂದು ಗಂಟೆಯ ಬಿಡುವು ದೊರಕಿತ್ತು. ಸಭೆ ಸಾಮಾನ್ಯವಾಗಿ ಇಂಥ ಬಿಡುವುಗಳ ಅರಿವೇ ಇಲ್ಲದಂತೆ, ತನ್ನ ಲೋಕಾಭಿರಾಮವನ್ನು ನಡೆಸಿಯೇ ಇರುತ್ತದೆ. ಕೆಲವೆಡೆಗಳಲ್ಲಿ ಸದಾಶಯದಲ್ಲಿ, ತಾಳಮದ್ದಳೆಯೋ ಮನರಂಜನಾ ಕಲಾಪಗಳೋ ನಡೆಯುವುದೂ ಇದೆ. ಆದರೆ ರಾಮನಾಥ, ನನ್ನಪ್ಪನಿಗೆ (- ಜಿಟಿ ನಾರಾಯಣ ರಾವ್, ಆತನ ದೊಡ್ಡ ಭಾವ) ವಿಷಯ ಸ್ವಾತಂತ್ರ್ಯ ಕೊಟ್ಟು, ಜನಪ್ರಿಯ ವೈಜ್ಞಾನಿಕ ಭಾಷಣವನ್ನೇ ಯೋಜಿಸಿದ್ದ. ತಂದೆ, ಸಾಂಪ್ರದಾಯಿಕ ಪಂಚಾಂಗ ಮತ್ತು ‘ಮುಹೂರ್ತ’ವನ್ನೇ ವಿಶ್ಲೇಷಿಸಿ, ಎಂದಿನಂತೆ ಖಡಕ್ ಮಾತುಗಳನ್ನೇ ಆಡಿದ್ದರು. ಇದು ಉಪನಯನ ನಿರ್ವಹಿಸಲು ಬಂದ ಪುರೋಹಿತರಾದಿ ಬಹುಮಂದಿ ಸಂಪ್ರದಾಯಸ್ಥ ಮನಸ್ಸುಗಳಿಗೆ ತೀವ್ರ ಮುಜುಗರವನ್ನೇ ಉಂಟು ಮಾಡಿತ್ತು. ಆದರೆ ತಂದೆಯನ್ನು ನೇರ ಪ್ರಶ್ನಿಸುವ ಧೈರ್ಯ ಯಾರಿಗೂ ಇರಲಿಲ್ಲ. ಬದಲಿಗೆ ಹಿಂದಿನಿಂದ ಮನೆ ಯಜಮಾನ ರಾಮನಾಥನನ್ನೇ ಕುಟುಕಿದ್ದಿತ್ತು “ನಾರಾಯಣನನ್ನು ಹಾಗೆ ಮಾತಾಡಿಸಬಾರದಿತ್ತು…!” ಭಾಷಣವನ್ನು ಪೂರ್ಣ ಕೇಳಿ ಅರ್ಥೈಸಿಕೊಂಡ ರಾಮನಾಥ ಮಾತ್ರ, ಚೂರೂ ಪಶ್ಚಾತ್ತಾಪಪಡದೆ, ದೂರು ತಂದವರನ್ನು ಸಮಾಧಾನಿಸಿದನೇ ಹೊರತು, ‘ನಾರಾಯಣ’ನನ್ನು ಬಿಟ್ಟುಕೊಡಲಿಲ್ಲ.

ನಾನು ವೃತ್ತಿ ವ್ಯಾಪಾರಿಯಾಗಿ ಮಂಗಳೂರಿನಲ್ಲಿ ನೆಲೆಸುವುದರೊಡನೆ, ಹವ್ಯಾಸೀ ಪ್ರಕೃತಿಪರ ಚಟುವಟಿಕೆಗಳನ್ನೂ ಮುಂದುವರಿಸಿದ್ದೆ. ರಾಮನಾಥ ಅವುಗಳನ್ನು ಅಭಿಮಾನದಿಂದ ಗಮನಿಸುತ್ತಿದ್ದ. ನನ್ನನುಭವಕ್ಕೆ ಬಂದಂತೆ, ಕೆಲವನ್ನು ಸ್ವಂತಕ್ಕೆ ಅಳವಡಿಸಿಕೊಳ್ಳಲೂ ಪ್ರಯತ್ನ ಮಾಡಿದ್ದ. ಅದಕ್ಕೊಂದೆರಡು ಪ್ರಸಂಗಗಳನ್ನು ಹೇಳುವುದು ಅಗತ್ಯ. ಅದು ನನ್ನ ಮದುವೆ ಮುಂಚಿನ ಒಂದು ರಜಾದಿನ. ‘ಅಜ್ಜನ ಮನೆಯ ಹಕ್ಕಿ’ನಲ್ಲಿ ಮರಿಕೆ ಮನೆಗಳಲ್ಲಿ ಓಡಾಡಿಕೊಂಡಿದ್ದೆ. ಆಗ ರಾಮನಾಥ ಜಾಂಬ್ರಿ ಗುಹೆಯ ಪ್ರಸ್ತಾಪ ಮಾಡಿದ್ದ. (ನೋಡಿ: ಜಾಂಬ್ರಿ – ಕೆದಕಿದ ಕಣಜದ ಗೂಡು) ಕೂಡಲೇ ನಾನದನ್ನು ನೋಡಿಯೇ ಬಿಡೋಣವೆಂದೆ. (ನನ್ನಲ್ಲಿ ವಾಹನಗಳಿರಲಿಲ್ಲ) ರಾಮನಾಥ ತನ್ನ ಸ್ಕೂಟರ್ ನನಗೆ ಕೊಟ್ಟು, ಸ್ವತಃ ತಾನೇ ಸಹವಾರನಾಗಿ ಬಂದ. ಪಾಣಾಜೆ ಸಮೀಪದ ಜಾಂಬ್ರಿಯಲ್ಲಿ, ಒತ್ತಿನ ಜಮೀನ್ದಾರ ಗಿಳಿಯಾಲು ಮಹಾಬಲೇಶ್ವರ ಭಟ್ಟರೂ ಸಿಕ್ಕರು. ಅವರು ಸ್ಥಳಪುರಾಣ, ವಿಧಿನಿಷೇಧಗಳ ಪರಿಚಯವನ್ನು ಹಗುರವಾಗಿಯೇ ಮಾಡಿಕೊಟ್ಟರು. ಆದರೆ ಪ್ರಕೃತಿ ನಿಷ್ಠರಾಗಿ ನಾವೊಂದಿಬ್ಬರೋ ಮೂವರೋ (ಎ.ಪಿ. ಚಂದ್ರಶೇಖರನಿದ್ದ, ಉಳಿದವರ ನೆನಪಿಲ್ಲ) ಗುಹೆಗೆ ಇಳಿದು ಶೋಧ ನಡೆಸಿದ್ದೆವು. ಅಂದು ರಾಮನಾಥ, ಆತನಷ್ಟೇ ಕುತೂಹಲದಲ್ಲಿ ಜತೆಗೊಟ್ಟಿದ್ದ ಅಣ್ಣ (ಎ.ಪಿ. ತಿಮ್ಮಪ್ಪಯ್ಯ) ನಮ್ಮನ್ನು ತಡೆಯದಿದ್ದರೂ ಗುಹಾಪ್ರವೇಶಕ್ಕೆ ಮುಂದಾಗಲಿಲ್ಲ. ಮತ್ತೆ ತಿಳಿಯಿತು, ಇದು ಗುಹೆಯ ಪವಾಡಗಳ ಕುರಿತು ಅವರು ಹೆದರಿದ್ದಲ್ಲ, ಸ್ಥಳೀಯ ನಂಬಿಕೆಗಳಿಗೆ ಕೊಟ್ಟ ಗೌರವ ಮಾತ್ರ.

ರಾಮನಾಥ ನನಗೆ ಈಜು ಕಲಿಸಿದ ಕತೆ, ಇಲ್ಲೇ ಬರೆದ ಅಣ್ಣನ ಸ್ಮರಣೆ ಓದಿದವರಿಗೆಲ್ಲ ತಿಳಿದೇ ಇದೆ. ಮತ್ತೊಂದು ರಜಾದಿನದಲ್ಲಿ, ನಾನು ದ್ವಿಚಕ್ರ ವಾಹನಗಳ ಆರೇಳರ ತಂಡ ಕಟ್ಟಿ ಅರಂತೋಡಿನಿಂದ ಭಾಗಮಂಡಲಕ್ಕಿದ್ದ ಒಳದಾರಿಯನ್ನು ಕಂಡುಕೊಳ್ಳುವುದಕ್ಕೆ ಹೊರಟಿದ್ದೆ. ಅದರಲ್ಲಿ ರಾಮನಾಥ ಆಕಸ್ಮಿಕವೆಂಬಂತೆ ಭಾಗವಹಿಸಿದ್ದಲ್ಲದೆ ಸಣ್ಣ ಅಪಘಾತಕ್ಕೂ ಒಳಗಾದದ್ದಿತ್ತು. ಆಸಕ್ತರು ಅದರ ಪೂರ್ಣ ಕಥನವನ್ನು ಇಲ್ಲಿ ಓದಿಕೊಳ್ಳಬಹುದು: ಅರಂತೋಡಿನಿಂದ ಕರಿಕೆಗೆ. ೧೯೭೦ರದಶಕದಷ್ಟು ಹಿಂದೆಯೇ ನಾನೊಂದು ‘ಗೇರ್ ಸೈಕಲ್’ ಕೊಂಡಿದ್ದೆ. ಅದರ ವಿಶೇಷ (ಸಾಹಸೀ) ಉಪಯೋಗ ನಾನು ಪಡೆಯಲಾಗದ್ದಕ್ಕೆ ಮಾರಲು ಹೊರಟಿದ್ದೆ. ಅದನ್ನು ರಾಮನಾಥ ಬಾಲ ಸತೀಶನಾದರೂ ಅನುಸರಿಸಲಿ ಎಂಬಂತೆ ನನ್ನಿಂದ ಕೊಂಡಿದ್ದ.

ರಾಮನಾಥ ಸಾಂಪ್ರದಾಯಿಕ ನಂಬಿಕೆಗಳನ್ನು ಭಾವುಕತೆಯ ಸಾಂತ್ವನಕ್ಕೆ ಬಳಸಿಕೊಂಡಷ್ಟೇ ವೈಚಾರಿಕ ನಿಕಷಕ್ಕೂ ಉಜ್ಜಿಕೊಳ್ಳುತ್ತಿದ್ದ. (ಇದನ್ನು ಆಗಲೇ ಉಪನಯನದ ಸಂದರ್ಭದಲ್ಲಿ ಕಂಡಿದ್ದೀರಿ) ಅದನ್ನು ನಾನು ಮತ್ತೂ ಎರಡು ಸಂದರ್ಭಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಕಂಡಿದ್ದೆ. ಒಂದು, ಮನೆಯ ಎದುರು (ಸಾರ್ವಜನಿಕ ಸ್ಥಳದಲ್ಲಿ) ತಾನಾಗಿಯೇ ಮೂಡಿಕೊಂಡ ಹಳ್ಳಿಗರ ಭಜನಾ ಮಂದಿರ. ಅದಕ್ಕೆ ಆರ್ಥಿಕ ಮತ್ತು ಕೆಲವು ಸಂದರ್ಭಗಳಲ್ಲಿ ಸಂಘಟನಾ ಬಲವನ್ನೂ ರಾಮನಾಥ ನಿಸ್ವಾರ್ಥವಾಗಿ ಕೊಡುತ್ತಿದ್ದ, ಯಾವ ದೊಡ್ಡಸ್ತನ ಮೆರೆಯದೇ ಭಾಗಿಯಾಗುತ್ತಲೂ ಇದ್ದ. ಇನ್ನೂ ಮುಖ್ಯವಾದದ್ದು, ಗ್ರಾಮದೇವತೆ – ಕಾರ್ಪಾಡಿ ಸುಬ್ರಹ್ಮಣ್ಯ ದೇವರದ್ದು.

ಕಾರ್ಪಾಡಿ ಆಲಯದ ಜೀರ್ಣೋದ್ಧಾರ ಮತ್ತು ಅಭಿವೃದ್ಧಿಗಳಲ್ಲಿ ರಾಮನಾಥ ತುಂಬ ತೊಡಗಿಕೊಂಡಿದ್ದ. ಪ್ರಾದೇಶಿಕವಾಗಿ ಸಾಮಾಜಿಕ ಒಗ್ಗಟ್ಟಿಗೆ ಇಂಥ ದೇವಳಗಳು, ಭಜನಾಮಂದಿರಗಳು ಅವಶ್ಯ ಎಂದೇ ರಾಮನಾಥ ನಂಬಿದ್ದ. ಆದರೆ ಅದೇ ದೇವಳದ ನಡೆ, ನನಗೆ ತಿಳಿದಂತೆ, ಎರಡು ಬಾರಿ ದಾರಿ ತಪ್ಪುವುದರಲ್ಲಿದ್ದಾಗ ನೆಲೆಗೆ ತಂದದ್ದರಲ್ಲಿ ರಾಮನಾಥನ ವೈಚಾರಿಕತೆಯ ಪಾತ್ರ ದೊಡ್ಡದು. ಮೊದಲು ಧಾರ್ಮಿಕ ಹೆಸರಿನಲ್ಲಿ, ಭೂಗಳ್ಳತನದ ಜಾಲ ನಡೆಸುವ ಸ್ವಾಮಿಯೊಬ್ಬ, ಮಂಗಳೂರಿನ ದೂರದಿಂದ ಬಂದು, ಶುದ್ಧಾಶುದ್ಧಗಳ ಭಯ ಹುಟ್ಟಿಸಿ ದೇವಳವನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದ. ಆತನ ಪವಾಡಗಳನ್ನು ನಿರಾಕರಿಸಿ, ಕಾರ್ಪಾಡಿಯನ್ನು ಗ್ರಾಮದೇವಳದ ಸರಳತೆಯಲ್ಲೇ ಕಾಪಾಡುವಲ್ಲಿ ಗಟ್ಟಿಯಾಗಿ ನಿಂತವನು ರಾಮನಾಥ. ಇನ್ನೊಮ್ಮೆ ದೇವಳದ ಆಡಳಿತ ಮಂಡಳಿಗೇ ವ್ಯಾಪ್ತಿ ಹೆಚ್ಚಿಸಿಕೊಳ್ಳುವ ಚಪಲ (ನೆಲ ದಾಹ?) ಹೆಚ್ಚಾದಂತಿತ್ತು. ಆಡಳಿತ ಮಂಡಳಿ, ಆರ್ಯಾಪು ವಲಯದ ಉನ್ನತ ಸ್ಥಳ ಮತ್ತು ದಟ್ಟ ಕಾಯ್ದಿರಿಸಿದ ಕಾಡು – ಬಲ್ಲೇರಿಯನ್ನು, ಕಾರ್ಪಾಡಿ ದೇವರ ಮೂಲ ನೆಲೆ ಎಂದೇ ಘೋಷಿಸಿ, ಚಳವಳಿಗಿಳಿದಿತ್ತು. ಇದು ಸ್ಪಷ್ಟವಾಗಿ ವನ್ಯ ನಾಶಕ್ಕೂ ಗ್ರಾಮ ಸ್ವಾಸ್ಥ್ಯ ಕದಡುವುದಕ್ಕೂ ಪೀಠಿಕೆ ಎಂದೇ ರಾಮನಾಥ ಕಂಡು, ನಿರುತ್ತೇಜನಗೊಳಿಸುವಲ್ಲಿ ವಿಶೇಷ ಪಾತ್ರವನ್ನೇವಹಿಸಿದ್ದ. ಆತನ ದೇವರ ಕಲ್ಪನೆ ಪ್ರಕೃತಿ ಸಂರಕ್ಷಣೆಯಿಂದ ಹೊರಗಿನದ್ದಲ್ಲ ಮತ್ತು ಸಾಮಾಜಿಕ ಶಾಂತಿಯನ್ನು ನಿಷ್ಪ್ರಯೋಜಕ ಕ್ರಾಂತಿಯ ಆಳಕ್ಕೆ ತಳ್ಳುವಂತದ್ದೂ ಆಗಿರಲಿಲ್ಲ.

ವೈಯಕ್ತಿಕವಾಗಿ ರಾಮನಾಥ ನನಗೆ ಒದಗಿದ ಸಂದರ್ಭಗಳು ಹಲವು. ಅವುಗಳಲ್ಲಿ ಮುಖ್ಯವಾಗಿ ಎರಡನ್ನಷ್ಟೇ ದಾಖಲಿಸಿ ವಿರಮಿಸುತ್ತೇನೆ. ೧೯೭೫ರಲ್ಲಿ ನಾನು ಸ್ವೋದ್ಯೋಗಿಯಾಗಿ ಕಟ್ಟಿದ ಅತ್ರಿ ಬುಕ್ ಸೆಂಟರ್ ೧೯೮೩ರ ಸುಮಾರಿಗೆ ಸಾರ್ವಜನಿಕದಲ್ಲೇನೋ ಗಟ್ಟಿಯಾಗಿಯೇ ನೆಲೆಸಿತ್ತು. ಆದರೆ ಆರ್ಥಿಕವಾಗಿ ನಾನು ಸಿಂಡಿಕೇಟ್ ಬ್ಯಾಂಕಿನ ಋಣದಲ್ಲಿ ಹೆಚ್ಚು ಹೆಚ್ಚು ಬೀಳುತ್ತಿದ್ದೆ. ಹದಿನೈದು ಸಾವಿರದ ಮಿತಿಯಿಂದ ತೊಡಗಿದ್ದ ಓಡಿ ಖಾತೆ, ಏರು ಮೆಟ್ಟಿಲು ಹಿಡಿದು ನಲ್ವತ್ತು ಸಾವಿರ ಮುಟ್ಟಿತ್ತು. ಇನ್ನೂ ಏರಿಸಬೇಕೆಂಬ ಬೇಡಿಕೆಯೊಡನೆ ನಾನು ಹೋದಾಗ, ಬ್ಯಾಂಕ್ ಮ್ಯಾನೇಜರನ ಸಂಶಯಾಸ್ಪದ ನಡೆಗಳು ನನಗೊಪ್ಪಿಗೆಯಾಗಲಿಲ್ಲ. ಹಠಗಟ್ಟಿ ಸಾಲದ ಖಾತೆಯನ್ನೇ ಮುಚ್ಚಿಬಿಡುವ ನಿರ್ಧಾರ ಮಾಡಿದ್ದೆ. ಆಗ ನನ್ನ ಒಂದೇ ಮಾತಿಗೆ ಅಣ್ಣನೂ ರಾಮನಾಥನೂ ನಿಶ್ಶರ್ತವಾಗಿ, ತಲಾ ಇಪ್ಪತ್ತು ಸಾವಿರ ರೂಪಾಯಿಗಳ ಸಾಲ ಕೊಟ್ಟು (ಆ ದಿನಗಳಲ್ಲಿ ಒಬ್ಬರಿಗೇ ನಲ್ವತ್ತು ಸಾವಿರ ಕೊಡುವುದು ಕಷ್ಟವಿತ್ತು) ಬಿಡುಗಡೆಯ ದಾರಿ ಹಸನು ಮಾಡಿದ್ದರು. ಸಾಲವನ್ನು ನನ್ನದೇ ಅನುಕೂಲ ಕಾಲದಲ್ಲಿ, ನನ್ನದೇ ಮರುಪಾವತಿಯ ಕ್ರಮದಲ್ಲಿ (ದೈನಿಕ ಕಂತುಗಳು!) ಮಾಡಿದ್ದನ್ನೂ ಅಷ್ಟೇ ನಿರ್ವಿಕಾರವಾಗಿ ಒಪ್ಪಿಕೊಂಡು ಸಹಕರಿಸಿದ್ದು (ಇಬ್ಬರೂ) ಬಹಳ ದೊಡ್ಡ ಸಂಗತಿಯೇ ಸರಿ.

ನಾನು ಮದುವೆಯಾಗಿ ಮಂಗಳೂರಿನಲ್ಲಿ ಮನೆ ಮಾಡುತ್ತೇನೆಂದ ಹೊಸತರಲ್ಲಿ, ಅತ್ಯಂತ ತೂಕದ ಮತ್ತು ಅರ್ಥಪೂರ್ಣ ‘ಉಡುಗೊರೆ’ ಘೋಷಿಸಿದವನು (ಮತ್ತೆ ಕೊಟ್ಟವನು) ರಾಮನಾಥ. ಇಂದು ನನ್ನ ಮನೆಯಲ್ಲಿ ಅವಸರದ ಅಡುಗೆಗೆ ಮಿಕ್ಸಿ, ಟಿಲ್ಟಿಂಗ್ ಗ್ರೈಂಡರ್ ಇದ್ದರೂ ನಿಜ ಸ್ವಾದದ ಅಡುಗೆಗೆ ಒದಗುವುದು ಅಂದು ರಾಮನಾಥ ಕೊಟ್ಟ ಉತ್ತಮ ಕಡೆವ ಕಲ್ಲು. ನಾನು ಇದನ್ನು ಮಾತಿನ ಚಂದಕ್ಕೆ ಹೇಳುತ್ತಿಲ್ಲ, ಆ ಕಲ್ಲು ನಮ್ಮನ್ನು ತಣಿಸುತ್ತಿರುವವರೆಗೂ ರಾಮನಾಥನ ಸ್ಮರಣೆ ಶಾಶ್ವತ!