ಎ.ಪಿ. ಗೌರೀಶಂಕರ ಇನ್ನಿಲ್ಲ – ೧

ಅಂದು (೧೦-೧-೨೦೧೯) ನನ್ನ ನಿತ್ಯದ ಸೈಕಲ್ ಸರ್ಕೀಟಿಗೆ ಬೆಳಿಗ್ಗೆಯೇ ಹೋಗಿದ್ದೆ. ನನ್ನ ಸೋದರ ಮಾವ ಎ.ಪಿ. ಗೌರೀಶಂಕರ (ಶ್ರೀಶೈಲ) ಹಾಗೂ ನನ್ನ (ಅಭಯಾದ್ರಿ) ಮನೆಗಳು ಸ್ವತಂತ್ರವೇ ಇದ್ದರೂ ರೂಢಿಯಲ್ಲಿ ಒಂದೇ ವಠಾರ ಎಂಬಂತೇ ಇವೆ. ಎರಡೂ ಮನೆಗೆ ನಂದಿನಿ ಹಾಲು ತಂದು ಕೊಡುವ ಜವಾಬ್ದಾರಿ ನನ್ನದು. ಹಾಗೇ ಸರ್ಕೀಟಿನ ಕೊನೆಯಲ್ಲಿ, ಎಂದಿನಂತೆ ನಮ್ಮೆರಡು ಮನೆಯ ಹಾಲು ಹಿಡಿದು ಬಂದವನೇ ನಿತ್ಯದಂತೆ ಗೇಟಿನ ಚಿಲಕದ ಛಳಕ್ಕಿನೊಡನೆ “ಪೇರ್ ಪೇರ್” (ಹಾಲು ಹಾಲೂ) ಕೂಗೂ ಹಾಕಿದ್ದೆ. ಮಾಮೂಲಿನಂತಾದರೆ ಒಳಗೆಲ್ಲೋ ಕೆಲಸದಲ್ಲಿರುವ (ಅತ್ತೆ) ದೊಡ್ಡ ದೇವಕಿ, ಕುಶಾಲಿಗೆ ಪ್ರತಿಧ್ವನಿ ಹಾಕುವುದಿತ್ತು. (ಮಾವ, ಎ.ಪಿ. ಗೌರೀ) ಶಂಕರನಿಗೆ ಈಚಿನ ದಿನಗಳಲ್ಲಿ ಕಿವಿ ದೂರವಾಗಿದ್ದರೂ ನನ್ನ ಧ್ವನಿಸ್ತರಕ್ಕೆ ಮಾತ್ರ ಲಯಸಾಧನೆ ಚೆನ್ನಾಗಿಯೇ ಇರುತ್ತಿತ್ತು. ಪದ್ಯಕ್ಕೆ ಎತ್ತುಗಡೆ ಗುರುತಿಸಿದ ಭಾಗವತನ ಉತ್ಸಾಹದಲ್ಲಿ ಅವನೂ “ಬಾಂದೆಯ್……. ಬಂದೇ…” ಪ್ರತಿಕೂಗು ಕೊಡುವುದೂ ಇತ್ತು. ಆದರೆ ಅಂದು ತಾರದಲ್ಲಿ ಕೇಳಿದ್ದು ಒಂದೇ, ದೊಡ್ಡ ಆರ್ತಸ್ವರ!

ಹೈದರಾಬಾದಿನಿಂದ ಅಪ್ಪನನ್ನು (ಶಂಕರ) ನೋಡಲು ಬಂದಿದ್ದ ಶೈಲ, ಕಂಪಿತ ಕಂಠದಲ್ಲಿ ಕರೆದಿದ್ದಳು, “ಅಶೋಕಭಾವಾ ಬೇಗ ಬಾ! ಅಪ್ಪ ಯಾಕೋ ಮಾತಾಡ್ತಿಲ್ಲಾ…. ಅಮ್ಮಾ, ಇಳಾ (ಶೈಲನ ಮಗಳು), ದೇವಕಿಯಕ್ಕಾ (ನನ್ನ ಹೆಂಡ್ತಿ – ಸಣ್ಣ ದೇವಕಿ) ಬನ್ನೀ…..”. ನಾನು ಸೈಕಲ್ ಬದಿಗೆ ನೂಕಿ, ಚಪ್ಪಲಿ ಎಸೆದು ಒಳ ನುಗ್ಗಿದೆ. ಗಿಡಕ್ಕೆ ನೀರು ಹಾಕುತ್ತಿದ್ದ ದೇವಕಿ ಪೈಪ್ ಅಲ್ಲೇ ಬಿಟ್ಟು ಓಡಿಬಂದಳು. ಅದೇ ತಾನೇ ಸ್ನಾನ ಕೊಟ್ಟು, ನಡುಕೋಣೆಯ ಸೋಫಾದ ಮೇಲೆ ಸುಧಾರಿಸಿಕೊಳ್ಳಲು ಬಿಟ್ಟು, ಬಚ್ಚಲೊಲೆ ಕೆದಕಲು ಹೋಗಿದ್ದ ದೊ ದೇವಕಿ, ಸಾವರಿಸಿಕೊಂಡು ಧಾವಿಸಿದಳು. ಮಹಡಿ ಕೋಣೆಯಲ್ಲಿ ಮುಂಜಾವಿನ ಹೂನಿದ್ದೆಯಲ್ಲಿದ್ದ ಇಳಾ ಅದನ್ನು ಹರಿದುಕೊಂಡು ಕೆಳಗೋಡಿ ಬಂದಳು. ಶಂಕರ ಸೋಫಾದಲ್ಲೇ ಕುಸಿದಂತಿದ್ದ. ಶಂಕರನನ್ನು ಎತ್ತಿ ತಂದು, ಹಾಸಿಗೆಯಲ್ಲಿ ಮಲಗಿಸಿದೆವು. ಗದ್ದ ಅಲುಗಿಸಿ, ಹೆಸರಿಡಿದು ಕರೆದರೂ ಶಂಕರ ಓ ಎನ್ನಲಿಲ್ಲ. ಶೈಲನಿಗೆ ತಿಳಿದ ಪ್ರಥಮ ಚಿಕಿತ್ಸೆ – ರಕ್ತ ಸಂಚಾರ ತಲೆಗೆ ಹೆಚ್ಚುವಂತೆ ದಿಂಬು ದೂರ ಮಾಡಿದ್ದಾಯ್ತು, ಕಾಲೆರಡನ್ನು ಎತ್ತೆತ್ತಿ ಇಳಿಸಿದ್ದಾಯ್ತು, ಅಂಗೈಗಳನ್ನೂ ಪಾದವನ್ನೂ ಹಿಡಿದು ಮಸಾಜು ಕೊಟ್ಟದ್ದೂ ಆಯ್ತು. ನಿಸ್ಪಂದ ಮುಂದುವರಿದಂತೆ, ದೊಡ್ಡ ದೇವಕಿ ಎರಡು ಮನೆಯಾಚಿನ ವೈದ್ಯ – ನಂದಕಿಶೋರ್, ಅವರ ಮನೆಗೆ ಧಾವಿಸಿ ಕರೆ ಮುಟ್ಟಿಸಿದಳು. ಅವರು ತಿಂಡಿ ತಿನ್ನುತ್ತಿದ್ದ ನಡುವಿನಲ್ಲೇ ಕೈ ತೊಳೆದು ಬಂದದ್ದೂ ಆಯ್ತು. ಆದರೆ ಅವರಿಗೆ ಶಂಕರನ ನಾಡಿ ಸಿಗಲೇ ಇಲ್ಲ.

ನಮ್ಮ ಮನೆಗಳಿಂದ ನೂರಡಿಯಾಚೆ ವಿನಯಾ ಆಸ್ಪತ್ರೆ ಇದೆ. ನಾನು ಇದ್ದ ವೇಷದಲ್ಲೇ ಶೆಡ್ಡಿನಿಂದ ಕಾರು ತೆಗೆದೆ. ಅಪಾರ ಸಹಾನುಭೂತಿಯಲ್ಲಿ ನಂದಕಿಶೋರರೂ ಕೈಸೇರಿಸಿದಂತೆ, ಶಂಕರನನ್ನು ಕಾರಿಗೇರಿಸಿದೆವು, ವಿನಯಾ ಆಸ್ಪತ್ರೆಗೇ ಒಯ್ದೆವು. ಸೇವಾನಿರತ ವೈದ್ಯ ಅದೇನೋ ಯಂತ್ರ ಜೋಡಿಸಿದ. ರೌಂಡ್ಸಿನಲ್ಲಿದ್ದ ಇವರ ನೆಚ್ಚಿನ ವೈದ್ಯ – ಹಂಸರಾಜ ಆಳ್ವರೂ ಬಂದರು. ಆದರೆ ಇಬ್ಬರೂ ಘೋಷಿಸಿದ್ದು ಒಂದೇ – BROUGHT DEAD !

ಅಗಲಿದ ಬಂಧುವನ್ನು ಸಾಮಾನ್ಯವಾಗಿ ವಿಶೇಷಣಗಳನ್ನಷ್ಟೇ ಬಳಸಿ ಹೊಗಳುವುದು ಸಂಪ್ರದಾಯವಾಗಿದೆ. ಇದು ಅವರಿಗೆ ಬೇಕಿಲ್ಲ ಮತ್ತು ಎಷ್ಟೋ ಬಾರಿ ಅಗಲಿದವರ ಬೆಳಕಿನಲ್ಲಿ ನಮ್ಮನ್ನು ತೋರಿಸಿಕೊಳ್ಳುವ ಚಟವಾಗಿಯೂ ಕಾಣುವುದುಂಟು. ಬದಲು, ಅವರೊಡನೆ ನಮಗಾದ ಆಪ್ತ ಅನುಭವಗಳ ಸ್ಮರಣೆಯ ಮೂಲಕ, ಮೌಲ್ಯಗಳನ್ನು ಕಂಡುಕೊಳ್ಳುವುದು ಬದುಕಿರುವ ನಮ್ಮ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು.

ಹಿಂದೆ ನಾನು ಹಲವು ಆತ್ಮೀಯರ ಅಗಲಿಕೆಯ ಸಂದರ್ಭಗಳಲ್ಲೆಲ್ಲ ಕಿರು ನುಡಿನಮನಗಳನ್ನು ಪ್ರಕಟಿಸಿದ್ದಿತ್ತು. ತೋರ ನೋಟಕ್ಕೆ ಇದೂ ಅಂಥದ್ದೇ ಒಂದು ಸನ್ನಿವೇಶ. ಆದರೆ ನನ್ನ ಮತ್ತು ಸ. ದೇವಕಿಯ ಸ್ಥಿತಿ ಬೇರೆಯೇ ಇತ್ತು. ನಮ್ಮ ನೆನಪುಗಳ ಭಿತ್ತಿಯಲ್ಲಿ ಹುಟ್ಟು, ವಿವಿಧ ಸಂಸ್ಕಾರ ಮತ್ತು ಎಂದಿಗೂ ಕಡಿಯದ ಪ್ರೀತಿಪೂರ್ಣ ಜವಾಬ್ದಾರಿಯ ಮೂರ್ತರೂಪರಾಗಿ ಅಪ್ಪ ಅಮ್ಮಂದಿರು ನಿಸ್ಸಂದೇಹವಾಗಿ ಪ್ರಥಮರು. ಆದರೆ ಹಾಗೇ ಆತ್ಮೀಯ ಒಡನಾಟಕ್ಕೆ ಒದಗಿದ ಇತರರ ಲೆಕ್ಕ ತೆಗೆದರೆ, ಅದರಲ್ಲೂ ನಮ್ಮ ಬುದ್ಧಿಪೂರ್ವಕ ಸ್ವತಂತ್ರ ಜೀವನದ ದಿನಗಳನ್ನು ಎಣಿಸಿದರೆ, ತಮ್ಮಂದಿರೂ ಸೇರಿದಂತೆ ಎಲ್ಲ ಸಂಬಂಧಿಕರನ್ನೂ ಮೀರಿ ಅಗ್ರ ಸ್ಥಾನದಲ್ಲಿ ನಿಲ್ಲುವವರು ಶಂಕರ ಮತ್ತು (ಅತ್ತೆ ಅಥವಾ ನಮ್ಮೊಳಗೇ ಗುರುತಿಸಿಕೊಳ್ಳುವಂತೆ ದೊಡ್ಡ) ದೇವಕಿಯರು ಮಾತ್ರ. ೧೯೭೫ ರಿಂದ ೨೦೧೯ರವರೆಗೂ (ನಾಲ್ಕು ದಶಕಕ್ಕೂ ಮಿಕ್ಕು) ಎರಡು ಮನೆ ಒಂದು ಮನವಾಗಿ ನಮ್ಮ ಬಂಧ ಬೆಳೆದಿದೆ! ಅದನ್ನು ಕಡಿದುರುಳಿಸಿದ ನಿರೀಕ್ಷಿತ ಅನಿರೀಕ್ಷಿತವನ್ನು (ಸಾವು) ಒಪ್ಪಿಕೊಂಡು, ಸಹಜವಾಗಿ ನೆನಪಿನ ತುಣುಕುಗಳನ್ನು ಹೆಕ್ಕಿ ರೂಪ ಕೊಡಲು ಹೊರಟಿದ್ದೆ. ಆದರದು ಪ್ರಳಯ ಪ್ರವಾಹದ ಆಘಾತಕ್ಕೆ ಸಿಕ್ಕ ಮನೆಯ ಜೀರ್ಣೋದ್ಧಾರದ ಕೆಲಸದಂತಾಗಿತ್ತು. ಒಂದು ಕಲ್ಲನ್ನು ಬಿಡಿಸತೊಡಗಿದರೆ, ಹತ್ತು ಕುಸಿದು ಕೂತು ದಿಕ್ಕೆಡಿಸುತ್ತಿತ್ತು. ಜತೆಗೇ ವಿಳಂಬದ ಬಗ್ಗೆ ನನಗೇ ಅಪರಾಧೀ ಭಾವವೂ ಹೆಚ್ಚುತ್ತ ಹೋಯ್ತು. ಹಾಗಾಗಿ ಸುಮಾರು ಮೂರು ತಿಂಗಳು ಕಳೆದು, ಫೇಸ್ ಬುಕ್ಕಿನಲ್ಲಿ, ಕಿರು ಟಿಪ್ಪಣಿಗಳ ಅನಿಯತ ಧಾರಾವಾಹಿಯಲ್ಲಿ ನಾನು ಕೆಲವು ನೆನಪುಗಳನ್ನು ಬಿಡಿಸಿಟ್ಟೆ. ಅವಕ್ಕೆ ಬಂದ ಪ್ರತಿಕ್ರಿಯೆ ಮತ್ತು ಪೂರಕ ಟಿಪ್ಪಣಿಗಳನ್ನು ಪರಿಷ್ಕರಿಸಿ ಒಪ್ಪಿಸುವ ಶಂಕರ-ಗೌರವವಿದು.

[ನಮ್ರ ಸೂಚನೆ: ಶಂಕರ ಅಧಿಕಾರ (ಸೋದರ ಮಾವ) ಮತ್ತು ಪ್ರಾಯದಿಂದ (ಹದಿನೇಳು ವರ್ಷ) ನನ್ನಿಂದ ಹಿರಿಯನಾದರೂ ನನ್ನ ರೂಢಿಯಂತೆ ಏಕವಚನ ಹಾಗೂ ಹೆಸರೆತ್ತಿಯೇ ಬರೆಯುತ್ತಿದ್ದೇನೆ; ವಿಶೇಷಣಗಳ, ಕೃತ್ರಿಮ ಗೌರವಗಳನ್ನು ಮೀರಿದವ ಶಂಕರ]

ನನ್ನ ಹಕ್ಕಲ್ಲ, ಅವರ ಔದಾರ್ಯ!! – ೨

ನನ್ನ ಅಮ್ಮನ ಅಪ್ಪ – ಅಜ್ಜ, ಎ.ಪಿ.ಸುಬ್ಬಯ್ಯ ಕೃಷಿಕರು. ಅವರ ಮೂಲಮನೆ ಮತ್ತು ಕೃಷಿಕ್ಷೇತ್ರ ಪುತ್ತೂರು ಸಮೀಪದ (ಮಡಿಕೇರಿ ದಾರಿಯ, ಆರ್ಯಾಪು ಗ್ರಾಮದ, ಸಂಟ್ಯಾರ್ ಬಳಿಯ) ಮರಿಕೆ. ಆದರೆ ಅವರು ಕಾಲಧರ್ಮಾನುಸಾರ ಪಡೆದ ಮಕ್ಕಳ (ನಾಲ್ಕು ಗಂಡು, ಆರು ಹೆಣ್ಣು) ವಿದ್ಯಾಭ್ಯಾಸ ಹಾಗೂ ಆಡಳಿತ ವ್ಯವಹಾರ ಸೌಕರ್ಯಗಳಿಗಾಗಿ ನಾಲ್ಕೇ ಮೈಲಂತರದ ಪುತ್ತೂರಿನಲ್ಲಿ ಬಿಡಾರ ಹೂಡಿದ್ದರು. ಕಾಲ ಸಂದಂತೆ ಹೆಣ್ಣು ಮಕ್ಕಳೆಲ್ಲ ಮದುವೆಯಾಗಿ ಗಂಡನ ಮನೆ ಸೇರಿದರೆ, ಮೂರು ಗಂಡು ಮಕ್ಕಳೂ ಹಳ್ಳಿಯಲ್ಲಿ (ಮರಿಕೆ ಬೈಲು), ಪಾಲಿಗೆ ಬಂದ ಕೃಷಿಭೂಮಿಯಲ್ಲೇ ಮನೆ ಕಟ್ಟಿ ನೆಲೆಸಿದರು. ಪ್ರಾಯ ಏರುತ್ತಿದ್ದ ಅಜ್ಜಜ್ಜಿಯರಿಗೆ ಆ ಉದ್ದಕ್ಕೂ ಧೈರ್ಯದ ಆಸರೆಯಾಗಿ ಜತೆಗೊಟ್ಟವರು ಗೌರೀಶಂಕರ ದಂಪತಿ. ಮುಂದೊಂದು ದಿನ ಶಂಕರ ವಕೀಲ ವೃತ್ತಿಯನ್ನು ಮಂಗಳೂರಿಗೆ ವರ್ಗಾಯಿಸಿಕೊಳ್ಳುವ ಸ್ಥಿತಿ ಬಂದಾಗ, ಅಜ್ಜಜ್ಜಿ ಅನಿವಾರ್ಯವಾಗಿ ಹಳ್ಳಿಗೇ ಮರಳಬೇಕಾಯ್ತು. ಮಕ್ಕಳ ಸರಣಿಯಲ್ಲಿ ಶಂಕರ ನಾಲ್ಕನೆಯವ. ಈಗಾಗಲೇ ಗತಿಸಿದ ಮೊದಲ ಮೂವರನ್ನು ನೀವಿಲ್ಲಿ ಕಂಡವರೇ ಇದ್ದೀರಿ – ಕ್ರಮದಲ್ಲಿ ಎ.ಪಿ. ತಿಮ್ಮಪ್ಪಯ್ಯ, ಎರಡನೆಯವಳು – ನನ್ನ ಅಮ್ಮ ಮತ್ತು ಎ.ಪಿ. ಗೋವಿಂದಯ್ಯ. ಈ ಲೇಖನ ಪ್ರಕಟವಾಗುವ ಕಾಲಕ್ಕೆ ನನ್ನ ಕೊನೆಯ ಸೋದರಮಾವ – ಎಪಿ. ರಮಾನಾಥ ರಾವ್ ಕೂಡಾ ಗತಿಸಿದ್ದು ನೀವು ಓಡಿಯೇ ಇದ್ದೀರಿ.

ನನ್ನ ಬಾಲ್ಯ ಮಡಿಕೇರಿ, ಬಳ್ಳಾರಿ, ಬೆಂಗಳೂರು ಮತ್ತು ಮೈಸೂರುಗಳೆಂದು ವಿಕಸಿಸಿತು. ನಾನು ಐದಾರನೇ ಪ್ರಾಯದಿಂದಲೇ ಹಿರಿಯ ಮೊಮ್ಮಗನ ಹಕ್ಕಿನಲ್ಲಿ (ಮುಂದೆ ಉಳಿದಿಬ್ಬರು ತಮ್ಮಂದಿರೂ) ಒಬ್ಬನೆಯೂ ದೀರ್ಘ ರಜಾದಿನಗಳ ಮೊಕ್ಕಾಂನ್ನು ಪುತ್ತೂರೆಂದೇ ಮಾಡಿಕೊಂಡಿದ್ದೆ. ಮಡಿಕೇರಿಯಲ್ಲಿ ಹಿರಿಯರು ಬಸ್ಸು ಹತ್ತಿಸಿ ಬಿಟ್ಟರೆ ಸಾಕು, ಇಂದಿನಂತಲ್ಲದ ಪುತ್ತೂರು ಪೇಟೆಯನ್ನು ನಾನು ಸುಧಾರಿಸಿಕೊಳ್ಳುತ್ತಿದ್ದೆನಂತೆ! ಅಜ್ಜನ ಮನೆತನದ ಹೆಚ್ಚುವರಿ ಕಲಾಪಗಳು, ಅಂದರೆ, ನವರಾತ್ರಿ, ಚೌತಿ, ಅನಂತನ ವ್ರತಗಳಂಥ ಪೂಜೆಗಳು, ಮದುವೆ, ಉಪನಯನಾದಿಗಳೆಲ್ಲ ನಡೆಯುತ್ತಿದ್ದದ್ದು ಮರಿಕೆಯ ಮೂಲ ಮನೆಯಲ್ಲಿ. ಉಳಿದಂತೆ ರಜಾದಿನಗಳ ನನ್ನ ಹೆಡ್ಡಾಫೀಸು ಪುತ್ತೂರು ಮನೆಯೇ. ಮಹಾಲಿಂಗೇಶ್ವರ ದೇವಳದ ಜಾತ್ರೆಯನ್ನು ಸಾಂಗವಾಗಿ ನಡೆಸಿಕೊಡುವುದು, ಯಕ್ಷಗಾನ ಮೇಳಗಳ ಬೆಂಬತ್ತುವುದು, ಚಿಕ್ಕಮ್ಮಂದಿರೋ ಇತರ ಮಾವಂದಿರುಗಳದೋ ಮನೆಗೆ ಹೀಗೇ ಹೋಗುವುದಿದ್ದರೂ ನನ್ನ ಪ್ರಾರಂಭ ಮತ್ತು ಮುಕ್ತಾಯ ಪುತ್ತೂರು ಮನೆಯಿಂದಲೇ ಆಗುತ್ತಿತ್ತು.

೧೯೭೪ರಲ್ಲಿ ನಾನು ಎಮ್ಮೆ ಪರೀಕ್ಷೆ ಬರೆದು ಮುಗಿಸಿದ್ದೇ ಬಂದದ್ದೂ ಪುತ್ತೂರಿಗೆ. ಉದ್ದೇಶ – ಮಂಗಳೂರಿನಲ್ಲಿ ಪುಸ್ತಕದಂಗಡಿ ತೆರೆಯುವ ಪೂರ್ವಭಾವೀ ಕೆಲಸಗಳು. ಆ ಐದು ತಿಂಗಳ ಕಾಲ ನಾನು ಎಲ್ಲೇ ಓಡಾಡಿದರೂ ನನ್ನ ದೃಢ ನೆಲೆ ಇದ್ದದ್ದು ಪುತ್ತೂರ ಮನೆಯಲ್ಲೇ. ಅಂದಿನ ಕಾಲಧರ್ಮದಲ್ಲಿ ಈ ಎಲ್ಲ ಬಿಡಿಚಿತ್ರಗಳು ಯಾರಿಗೂ ವಿಚಿತ್ರವೆನ್ನಿಸಿರಲಾರದು. ಆದರೆ ಇಂದು ಹಿಂದಿರುಗಿ ನೋಡಿದಾಗ ನನಗೆ ಕಾಣುವ ಚಿತ್ರ ಬೇರೆಯೇ! ಮೊಮ್ಮಕ್ಕಳ ಬಗ್ಗೆ ಅಜ್ಜ ಅಜ್ಜಿಯರ ಮನಸ್ಸು ಸಮೃದ್ಧ. ಒಟ್ಟಾರೆ ಮನೆಯ ಆರ್ಥಿಕತೆ ಶ್ರೀಮಂತಿಕೆಯದ್ದಲ್ಲ, ಬಡತನದ್ದೂ ಅಲ್ಲ. ಅದರಲ್ಲಿ ಹಿರಿಯರ ಔದಾರ್ಯಕ್ಕೂ ಮನೆಯ ಬಿಸುಪಿಗೂ ಕೊರತೆ ಬಾರದಂತೆ, ನಿಜದಲ್ಲಿ ಮನೆಯನ್ನು ನಡೆಸಿಕೊಟ್ಟದ್ದು ಗೌರೀಶಂಕರ ಮತ್ತು ಅವಿಭಾಜ್ಯ ಅಂಗವಾದ ಅತ್ತೆ ದೇವಕಿ. ಅದರ ಅರಿವೇ ಇಲ್ಲದ ಹುಡುಗು ಬುದ್ಧಿಯಲ್ಲಿ, ನಾನು /ನಾವು ಕೊಟ್ಟ ಕೀಟಲೆಗಳು ಸಣ್ಣವಿರಲಾರವು. ಒಂದೆರಡನ್ನೇ ದೊಡ್ಡದಾಗಿ ನೆನೆಸಿಕೊಳ್ಳುವುದಿದ್ದರೆ…..

ನನ್ನ ಮೈಸೂರಿನ ಪರ್ವತಾರೋಹಿ ಮಿತ್ರರಿಗೆ ಕುದುರೆಮುಖ ಕುಮಾರಪರ್ವತಗಳನ್ನೇರಲು ಪುತ್ತೂರಿಗೆ ಕರೆಸಿಕೊಂಡಿದ್ದೆ. ಅವರ ಊಟ, ವಾಸಕ್ಕೆ ಹೋಟೆಲ್ ಬಳಸುವುದು ನನಗೆ ಹೊಳೆಯಲೇ ಇಲ್ಲ. ಮನೆಯಲ್ಲೇ ಅವರಿಗೆ ಊಟ, ವಾಸ ಮಾತ್ರವಲ್ಲ, ಎಲ್ಲರ ಚಾರಣಾವಧಿಯ ಎರಡು ಹೊತ್ತಿನ ಬುತ್ತಿಯೂಟವನ್ನೂ ದೊ.ದೇವಕಿಯಿಂದಲೇ ಮಾಡಿಸಿಕೊಂಡಿದ್ದೆ! ನನಗೆ ಮಂಗಳೂರಿನಲ್ಲಿ ಪುಸ್ತಕ ಮಳಿಗೆಗೆ ಕೋಣೆ ಸಿಕ್ಕಿದಾಗ (೧೯೭೫), ಜಡಿ ಮಳೆಗಾಲ ತೊಡಗಿತ್ತು. ಕಪಾಟುಗಳಿಗೆ ಬೇಕಾದ ಮರಗಳನ್ನು ಪುತ್ತೂರಿನಲ್ಲೇ ಖರೀದಿಸಿ, ಅಜ್ಜನ ಮನೆಯ ಹಿತ್ತಿಲಲ್ಲೇ ಜಿಂಕ್ ಶೀಟ್ ಮಾಡಿಳಿಸಿ ಒಟ್ಟಿಕೊಂಡಿದ್ದೆ. ಮತ್ತೆ ಸುಮಾರು ಎರಡು ತಿಂಗಳ ಕಾಲ, ಅವನ್ನು ಅಲ್ಲೇ ಹಗಲಿರುಳೆನ್ನದಂತೆ ಮೂರು ನಾಲ್ಕು ಬಡಗಿಗಳು ಅವಿರತ ಲಟಪಟ ನಡೆಸಿದ್ದರು. ಪಟ್ಟಿ ಮಾಡಿ ಮುಗಿಯದ ಇಂಥ ನೂರೆಂಟು ಹಿಂಸೆ, ಪರೋಕ್ಷ ಖರ್ಚು, ಜವಾಬ್ದಾರಿಗಳನ್ನು ಅಂದು ಅಜ್ಜನಿಗಿಂತಲೂ ಒಂದು ತೂಕ ಹೆಚ್ಚೇ ಸಹಜವಾಗಿ ನಡೆಸಿಕೊಟ್ಟ ಔದಾರ್ಯ ಶಂಕರ ದಂಪತಿಯದ್ದು.

ನಡುವೆ ಇರುವವರು ನನ್ನಜ್ಜ, ಶಂಕರನ ಕೈಯಲ್ಲಿ ಶೈಲಜಾ

ಪುತ್ತೂರಿನ ಕೋರ್ಟ್ ದಾರಿಯಿಂದ ಪೋಲಿಸ್ ವಸತಿ ಸಮೂಹಕ್ಕೊಂದು ಸಪುರ ದಾರಿ ಕವಲೊಡೆಯುತ್ತಿತ್ತು. ಆ ಮೂಲೆಯ (ಕಾರ್ನರ್ ಸೈಟ್!) ಮಾಳಿಗೆಯ ಮೇಲಿನ ವಕೀಲರ ಕಛೇರಿಯ ಮೂವರಲ್ಲಿ (ನಗ್ರಿಮೂಲೆ ಶಂಕರ ಭಟ್, ಪುಳು ನಾರಾಯಣ ಭಟ್ ಮತ್ತು) ಕಿರಿಯವ ನನ್ನೀ ಮಾವ. ಆ ದಾರಿಯ ನೇರ ಕೊನೆಯಲ್ಲೇ ಇತ್ತು ಅಜ್ಜನ ಮನೆ. ಅಜ್ಜ ಸಂಜೆ ಸಣ್ಣ ಸಂಚಾರ ಹೊರಟರೆ ಶಂಕರನ ಕಚೇರಿಗೆ ಏರಿ, ಸಪುರ ಬಾಲ್ಕನಿಯಲ್ಲಿ ಕುರ್ಚಿ ಹಾಕಿ ಕೂರುವುದು ಇತ್ತು. ಶಿವರಾಮ ಕಾರಂತರು ನಡುವೆ ಇರುವವರು ನನ್ನಜ್ಜ, ಶಂಕರನ ಕೈಯಲ್ಲಿ ಶೈಲಜಾ ಊರಲ್ಲಿದ್ದರೆ, ಅತ್ತ ಬಾಲವನದಿಂದ ಹಾಗೇ ನಡೆದು ಬಂದಾಗ, ಜಗುಲಿಗೆ ಇನ್ನೊಂದು ಕುರ್ಚಿಯೂ ಬರುತ್ತಿತ್ತು. ಇಬ್ಬರೂ ಬಾಲ್ಕನಿ ಕಟ್ಟೆಗೆ ಕಾಲು ಚಾಚಿಟ್ಟು ಲೋಕಾಭಿರಾಮ ಮಾತನಾಡುತ್ತಿದ್ದ ಚಿತ್ರ ನಾನು ಮರೆಯಲಾರೆ. ನಾವು (ಅತ್ರಿಗಳಲ್ಲಿ ಮುಖ್ಯವಾಗಿ ನಾನು ಮತ್ತು ಆನಂದ) ರಜಾದಿನಗಳಲ್ಲಿ ಅಜ್ಜನ ಮನೆಯಲ್ಲಿದ್ದಾಗ, ಕೆಲವೊಮ್ಮೆ ಅಜ್ಜನ ಸಂಚಾರಕ್ಕೆ ಜತೆಗೊಡುವುದಿತ್ತು, ಹಾಗೇ ಯಾವುದೇ ಭಾವ ವಿಶೇಷವಿಲ್ಲದೆ ಕಾರಂತರೊಡನೆ ಸರಸವಾಡಿದ್ದೂ ಇತ್ತು!

೧೯೭೫ಕ್ಕೆ ನಾನು ಸೊನ್ನೆ ಬಂಡವಾಳದೊಡನೆ, ಪುಸ್ತಕ ಮಳಿಗೆ ಕಟ್ಟುವ ಉಮೇದಿನಲ್ಲಿ ಮಂಗಳೂರಿನಲ್ಲಿ ನೆಲೆಸಿದೆ. ಮೊದಲ ಐದು ವರ್ಷ, ನನ್ನ ಬ್ರಹ್ಮಚಾರಿ ಬಿಡಾರ, (ಕೀರ್ತಿಶೇಷ ಬಿವಿ ಕೆದಿಲಾಯರ ಕೃಪೆಯಿಂದ) ಸಂತ ಅಲೋಶಿಯಸ್ ಕಾಲೇಜ್ ಹಾಸ್ಟೆಲಿನಲ್ಲಿತ್ತು. ಇತ್ತ ಪುತ್ತೂರಿನಲ್ಲಿ ಶಂಕರನ ಜನಪ್ರಿಯತೆ ಬೆಳೆದಂತೆ, ಸುತ್ತಣ ಸುಳ್ಯ, ಜೋಡುಮಾರ್ಗ, ಬೆಳ್ತಂಗಡಿಗಳಂತೇ ಅಥವಾ ತುಸು ಹೆಚ್ಚೇ ಮಂಗಳೂರಿನ ನ್ಯಾಯಾಲಯಕ್ಕೂ ಓಡಾಡುವ ಅನಿವಾರ್ಯತೆ ಬಂತು. ಹಾಗಾಗಿ ೧೯೭೬ರ ಸುಮಾರಿಗೆ ಶಂಕರ ತನ್ನ ಕಛೇರಿ, ವಾಸ್ತವ್ಯವನ್ನು ಮಂಗಳೂರಿಗೇ ಬದಲಿಸಿದ. ಹೊಸತರಲ್ಲಿ ಶಂಕರನ ಕುಟುಂಬ ಶಿವಭಾಗಿನ ಒಂದು ಕಿಷ್ಕಿಂಧೆಯಂಥ ಬಾಡಿಗೆ ಮನೆ ಹಿಡಿದಿತ್ತು. ಅಂದು ನನ್ನಲ್ಲಿದ್ದ ಮಹಾ ವಾಹನ ಸಾಮಾನ್ಯ ಸೈಕಲ್. (೧೯೮೦ರಲ್ಲಿ, ಅದೂ ಬ್ಯಾಂಕ್ ಸಾಲ ಮಾಡಿ, ನಾನು ಮೋಟಾರ್ ಸೈಕಲ್ ಕೊಂಡೆ) ಆದರೆ ವಾರಾಂತ್ಯ, ವಿಶೇಷ ರಜಾದಿನ ಬಂತೆಂದರೆ ಹೆಚ್ಚಾಗಿ ನನ್ನ ದಾಳಿ ಶಂಕರನ ಮನೆಯ ಮೇಲೇ. ಆಗೆಲ್ಲಾ ನನ್ನ ಮನಸ್ಸು ಮುಖ್ಯವಾಗಿ ಸ್ಕೂಟರ್ ಸವಾರಿಗೆ ನೆಪಗಳನ್ನು ಹುಡುಕುತ್ತಿತ್ತು.

ನನ್ನ ಪ್ರಥಮ ಜಮಾಲಾಬಾದ್ ಏರೋಣ, ಮಳೆಗಾಲದಲ್ಲಿ ಕುದುರೆಮುಖ ಪಟ್ಟಣ ಸಂದರ್ಶನ, ಹಲವು ಗುಹಾ ಸಂಶೋಧನಾ ಓಡಾಟಕ್ಕೆಲ್ಲ ನಾನು ಬಳಸಿದ್ದು ಶಂಕರನ ಲ್ಯಾಂಬ್ರೆಟ್ಟಾ! ಅದನ್ನು ಕೇಳುತ್ತಿದ್ದ ನನಗಂತೂ ಲಜ್ಜೆಯಿರಲಿಲ್ಲ (ಬಹುಶಃ ಮಾವನೆಂಬ ಸದರ!). ನಿಜದಲ್ಲಿ ಶಂಕರನ ಔದಾರ್ಯಕ್ಕೆ ಎಣೆಯಿರಲಿಲ್ಲ. ನನ್ನ ನೆನಪಿನಲ್ಲಿರುವಂತೆ ಆತ ಒಂದೇ ಒಂದು ಸಲವೂ ನೆಪ ಹೇಳಿಯಾದರೂ ತಪ್ಪಿಸಿದ್ದಿಲ್ಲ, ಕನಿಷ್ಠ ಪೆಟ್ರೋಲ್ ಖರ್ಚೂ ಪಡೆದದ್ದಿಲ್ಲ ಮತ್ತು ಎಲ್ಲಕ್ಕೂ ಮುಖ್ಯವಾಗಿ ನಾನು ಸ್ಕೂಟರಿಗೆ ಮಾಡಿದ ಜಖಂಗಳಿಗೆ ಬೈಯುವುದಿರಲಿ, ಗೊಣಗಿದ್ದೂ ಇಲ್ಲ. ಎಷ್ಟೋ ಬಾರಿ ಅದೇ ಸಮಯದಲ್ಲಿ ಅವನಿಗೆ ವೃತ್ತಿ ಸಂಬಂಧೀ ಓಡಾಟವಿದ್ದರೂ ‘ಪ್ರೀತಿಯ ಅಳಿಯನಿಗೆ’ ಸ್ಕೂಟರ್ ಕೊಟ್ಟು ತಾನು ಬಸ್ಸೋ ರಿಕ್ಷಾವೋ ಹಿಡಿದದ್ದು ಅನಂತರ ನನಗೆ ತಿಳಿದದ್ದಿತ್ತು. ಒಮ್ಮೆ ನಾನು ಸ್ಕೂಟರನ್ನು ಆಟೋ ರಿಕ್ಷಾಕ್ಕೆ ಟಕರಾಯಿಸಿ, ದಾರಿಗೆ ಬಿದ್ದಿದ್ದೆ. ಅದೃಷ್ಟವಶಾತ್ ನಾನು ಹಲವು ತರಚಲು ಗಾಯಗಳಿಂದ ಬಚಾವಾದೆ. ಆದರೆ ಸ್ಕೂಟರಿನ ಹೆದ್ದೀಪ, ಕನ್ನಡಿ, ಗೇರ್ ಲಿವರ್ ಪುಡಿಯಾಗಿ, ಕೆಲವು ತಗಡು ಓರೆಕೋರೆಯಾಗಿತ್ತು. ಅಪರಾಧಿಯಂತೆ ಅವರ ಮನೆಗೆ ಸ್ಕೂಟರ್ ಒಯ್ದು, ತಿಳಿಸಿದೆ. ಶಂಕರ ಸ್ಕೂಟರ್ ಮರೆತು, ನನ್ನ ನೋವು, ಗಾಯಕ್ಕೆ ಮದ್ದಾಗಿದ್ದ. ಅತ್ತೆ ದೇವಕಿಯಂತೂ ಮೂರು ನಾಲ್ಕು ದಿನ ಅವರ ಸಣ್ಣ ಮನೆಯಲ್ಲೇ ನನ್ನನ್ನು ಒತ್ತಾಯಪೂರ್ವಕವಾಗಿ ಉಳಿಸಿಕೊಂಡು ಆರೈಕೆ ಮಾಡಿದ್ದಂತೂ ಮರೆಯಲಾರೆ.

ಹುಡುಗುಬುದ್ಧಿಗೂ ಪುರಸ್ಕಾರ – ೩

ಶಂಕರನ ಮಕ್ಕಳ ಮೇಲಿನ ಪ್ರೀತಿ ನಿರಾಡಂಬರದ್ದು (ಪ್ರದರ್ಶನದ್ದಲ್ಲ). ನಾನಿನ್ನೂ ಮಡಿಕೇರಿಯಲ್ಲಿ ಮೂರು ನಾಲ್ಕನೇ ತರಗತಿಯಲ್ಲಿದ್ದ ಕಾಲವಿರಬೇಕು. ರಜೆಯಲ್ಲಿ ಪುತ್ತೂರಿಗೆ ಹೋದವನು ಶಂಕರನ ಆಫೀಸಿಗೂ ಹೋಗಿದ್ದೆ. ಅಲ್ಲಿ ಆತನ ಹೆಸರು ವಿಳಾಸದ ರಬ್ಬರ್ ಮೊಹರು ನೋಡಿ, ಬಾಲ ಚಪಲತೆಯಲ್ಲಿ ಕೇಳಿದ್ದೆ ಮತ್ತೆ ಮರೆತಿದ್ದೆ. ರಜಾ ಕಳೆದು ಮಡಿಕೇರಿಗೆ ಮರಳಿದ ಮೇಲೊಂದು ದಿನ, ಅಂಚೆಯಲ್ಲಿ ಪಾರ್ಸೆಲ್ ಬಂದಾಗ ನನ್ನ ಸಂತೋಷಕ್ಕೆ ಪಾರವಿಲ್ಲ. G.N.Ashoka Vardhana Rao, Ashoka Nivasa, Sahakari nagara, Mercara, Coorg, ಇಟಾಲಿಕ್ಸ್ ಅಕ್ಷರಗಳ ಮೊಹರೂ, ನೇರಿಳೆ ಬಣ್ಣದ ಪ್ಯಾಡೂ ಬಂದಿತ್ತು! ಶಂಕರ ತನ್ನ ಮಂಗಳೂರಿನ ರಬ್ಬರ್ ಮೊಹರು ತಯಾರಕನಿಗೆ ಆದೇಶ ಕೊಟ್ಟು, ನನ್ನ ಆಸೆ ಪೂರೈಸಿದ್ದ. ಆ ಮೊಹರನ್ನು ಬಳಸುವ ಸಂತೋಷಕ್ಕೇ ಆ ದಿನಗಳಲ್ಲಿ ನಾನೆಷ್ಟೋ ಅಂಚೆ ಕಾರ್ಡುಗಳನ್ನು (ಚಿಕ್ಕಮ್ಮಂದಿರಿಗೆ ಬರೆಯುವ ನೆಪದಲ್ಲಿ) ಹಾಳು ಮಾಡಿದ್ದೆ!

ಹಾಗೇ ಇನ್ನೊಂದು ರಜೆಯಲ್ಲಿ ಶಂಕರನಿಗೆ ಏನನ್ನಿಸಿತೋ ಅವನ ಕಚೇರಿಯ ಕೆಳಗೇ ಇದ್ದ ಎಂ. ಸಂಜೀವ ಶೆಟ್ಟರ ಜವುಳಿ ಅಂಗಡಿಗೆ ಕರೆದೊಯ್ದು, ಬಿಸ್ಕೆಟ್ ಬಣ್ಣದ ಬಟ್ಟೆ ಖರೀದಿಸಿದ. ಮತ್ತೆ ಕುಟುಂಬದ ಟೈಲರ್ ಮುತ್ತನಲ್ಲಿ ಕರೆದೊಯ್ದು ನನ್ನ ಅಳತೆ ಕೊಡಿಸಿ, ನಿಯತ ಕಾಲದಲ್ಲಿ, ಯಾವ ವಿಶೇಷವೂ ಇಲ್ಲದಂದು ಬುಶ್ ಕೋಟ್ ಅಂದರೆ, ನಿಜಕ್ಕೂ ಉಡುಗೊರೆಯನ್ನೇ (ಉಡುವ+ಕೊರೆ) ನೀಡಿದ್ದ. ಬುದ್ಧಿ ತಿಳಿದ ನನಗೆ ಯಾವ ವಿಶೇಷವೂ ಇಲ್ಲದೆ ಬಂದ ಮೊದಲ ಉಡುಗೊರೆ ಇರಬೇಕು ಅದು. ಬಹುಶಃ ಹಾಗಾಗಿಯೇ ಮುಂದೆ ನನಗೆ ಎಷ್ಟೂ ಹೊಸ ಬಟ್ಟೆ ಬಂದಾಗೆಲ್ಲ, ಶಂಕರ ಕೊಟ್ಟ ಬುಶ್ ಕೋಟಿನ ಸಂಭ್ರಮ ಒಳಗಿಂದೊಳಗೇ ಮರುಕಳಿಸುತ್ತಲೇ ಇರುತ್ತದೆ.

ನಾನು ತೀರಾ ಸಣ್ಣವನಾಗಿದ್ದಾಗ, ಅಪ್ಪ ಎನ್ಸಿಸಿ ಅಧಿಕಾರದ ಬಲದಲ್ಲಿ ವಾಹನಗಳನ್ನು ಚಲಾಯಿಸುವುದು ಕಂಡಿದ್ದೆ. ಉಳಿದಂತೆ ನಮ್ಮ ಕುಟುಂಬ ವಲಯದಲ್ಲಿ (ಎರಡೂ ಅಜ್ಜಂದಿರ ಮನೆಗಳು ಸೇರಿದಂತೆ) ನಾನು ಮುಕ್ತವಾಗಿ ಕಂಡ ದೊಡ್ಡ ವಾಹನ ಎತ್ತಿನ ಗಾಡಿ, ಸಣ್ಣದು ಸೈಕಲ್. ಅದಕ್ಕಪವಾದವಾಗಿ, ಬಹುಶಃ ನಾನು ಮೈಸೂರಿನಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ, ಇತ್ತ ಪುತ್ತೂರಿನಲ್ಲಿ ಶಂಕರ ಸ್ಕೂಟರ್ ಖರೀದಿಸಿದ್ದ. ನಾನೊಂದು ರಜೆಯಲ್ಲಿ ಪುತ್ತೂರಿಸಿದ್ದಾಗ, ಆ ಸ್ಕೂಟರನ್ನು ಕೇವಲ ಆಸೆಕಂಗಳಿಂದ ನೋಡಿದ್ದೆ. ಕೇಳಲು ನನ್ನಪ್ಪನ ಶಿಸ್ತಿನ ಪಾಠದ ಬಿಗು ಬಿಡದು. ಆದರೆ ಶಂಕರನಿಗೆ ಗೊತ್ತಿತ್ತು ನನ್ನ ಹುಡುಗುಬುದ್ಧಿ! ಅದೊಂದು ಆದಿತ್ಯವಾರ ಆತ ನನ್ನನ್ನು ಸ್ಕೂಟರ್ ಬೆನ್ನಿಗೆ ಏರಿಸಿಕೊಂಡು ಮರಿಕೆಗೆ ಹೋಗುವ ನೆಪ ಮಾಡಿದ. ದಾರಿಯಲ್ಲಿ ಸ್ಕೂಟರ್ ಕಲಿಸಿಯೇ ಬಿಟ್ಟ. ಇದರ ಪರಿಣಾಮವಾಗಿ ಶಂಕರ ಮುಂದೆ ಲೆಕ್ಕವಿಲ್ಲದಷ್ಟು ಸಲ ನನ್ನ ಚಪಲಗಳಿಗೆ ತನ್ನ ಸ್ಕೂಟರ್ ಕೊಡುವಂತಾದ್ದು ಈ ಹಿಂದೆಯೇ ಹೇಳಿದ್ದೇನೆ.

ನಿವೇಶನದಿಂದ ತೊಡಗಿ ಮೂಲಗೇಣಿಯವರೆಗೆ – ೪

ಶಂಕರ ಮಂಗಳೂರಿಗೆ ಬಂದ ಒಂದೆರಡು ವರ್ಷಗಳಲ್ಲೇ ನಿವೇಶನ ಖರೀದಿಸಿ, ಸ್ವಂತ ಮನೆ ಕಟ್ಟುವ ಯೋಚನೆ ಮಾಡಿದ. ಹುಡುಕಾಟಕ್ಕಿಳಿದಾಗ ಸಹೋದ್ಯೋಗಿ ಸಿ.ವಿ. ಶಾಂತಮ್ಮ, ತಮ್ಮ ಮನೆಯಂಗಳದ (ಪಿಂಟೋರವರ ಓಣಿ) ೨೧ ಸೆಂಟ್ಸ್ ಜಾಗವನ್ನು ಒಂದು ನಿವೇಶನವಾಗಿಸಿ ಸೆಂಟ್ಸಿಗೆ ರೂ ಒಂದೂವರೆ ಸಾವಿರದಂತೆ ಮಾರಲಿದ್ದದ್ದೇ ನಿಶ್ಚಯವೇನೋ ಆಯ್ತು (ಸುಮಾರಿಗೆ ೧೯೭೮ರ ಕತೆ). ಆದರೆ ಶಂಕರ, ನನ್ನಪ್ಪನ ಬಳಿ “ನಿವೇಶನ ನನಗೆ ದೊಡ್ಡದಾಗುತ್ತದೆ. ಎರಡು ಮಾಡಿಸುತ್ತೇನೆ. ಅರ್ಧ ಅಶೋಕನ ಹೆಸರಿಗಿರಲಿ” ಎಂದನಂತೆ. ನಾನೋ ಇನ್ನೂ ವೃತ್ತಿ ಬಂಡವಾಳಕ್ಕೇ ಪರದಾಡುತ್ತಿದ್ದವ, ನಿವೇಶನ ಖರೀದಿ, ಸ್ವಂತಕ್ಕೆ ಮನೆ ಕಟ್ಟಿಸುವುದು ಬಹುದೂರದ ಕನಸು. ಅನಿರೀಕ್ಷಿತವಾಗಿ ಎರಗಿದ ತುರ್ತಿಗೆ ಹದಿನಾರೂವರೆ ಸಾವಿರ ರೂಪಾಯಿಯಷ್ಟು ದೊಡ್ಡ ಮೊತ್ತ (!) ಹೊಂದಿಸಲು ನನ್ನಪ್ಪನೂ ಅಸಹಾಯಕತೆಯನ್ನು ಹೇಳಿಕೊಂಡಿದ್ದರು. ಆದರೆ ಶಂಕರ ನಮ್ಮ ಒಪ್ಪಿಗೆಯನ್ನಷ್ಟೇ ಪಡೆದು, ಪೂರ್ಣ ಹಣವನ್ನು ತಾನೇ ಪಾವತಿಸಿ, ಪ್ರತ್ಯೇಕವಾಗಿಯೇ ನೋಂದಾಯಿಸಿಬಿಟ್ಟ. (ಶಂಕರ ನನ್ನ ಪಾಲಿನ ಮೊತ್ತವನ್ನು ಕೇವಲ ಬಾಯಿ ಮಾತಿನಲ್ಲೇ ಸಾಲವೆಂದು ಪರಿಗಣಿಸಿದ್ದ. ನನ್ನಪ್ಪ ಆದಷ್ಟು ಬೇಗದ ಅನುಕೂಲದಲ್ಲಿ ಅದನ್ನು ತೀರಿಸಿದ್ದರು.) ಶಂಕರ ೧೯೭೯ರಲ್ಲಿ ಮನೆ – ಶ್ರೀಶೈಲ, ಕಟ್ಟಿಸಿ ಸೇರಿಕೊಂಡ. ನಾನು ೧೯೮೨ರಲ್ಲಿ ಮನೆ – ಅಭಯಾದ್ರಿ ಕಟ್ಟಿಸಿ ಸೇರಿಕೊಂಡೆ. ಈ ಆಕಸ್ಮಿಕಗಳ ಫಲವಾಗಿ, ಇಂದು ನಾನು ನೆಲೆಸಿದ ನೆಲದ ಪುಣ್ಯಕ್ಕೆ ಕೋಟ್ಯಧಿಪತಿಯಾಗಿದ್ದೇನೆ. ತಮಾಷೆಯಲ್ಲ, ಇಂದು ಇಲ್ಲಿ ನೆಲದ ಬೆಲೆ ಸೆಂಟ್ಸಿಗೆ ರೂ ಹದಿಮೂರೂವರೆ ಲಕ್ಷದಿಂದ ಮೇಲೆ!

ನೀವೇಶನ ರೂಪಿಸಿದ ಶಾಂತಕ್ಕ, ನಮ್ಮ ಕುರುಡುಕೊನೆಯ ಗಲ್ಲಿಯಲ್ಲಿ ಮೊದಲು ಸಿಕ್ಕುವ ಶಂಕರನ ಸ್ಥಳಕ್ಕೇ ಸಾರ್ವಜನಿಕ ದಾರಿಯನ್ನು ಮುಗಿಸಿದ್ದರು. (ನಕ್ಷೆ ನೋಡಿ.) ಮುಂದಿನದು ಈ ವಠಾರದ ಕೊನೆಯ ನಿವೇಶನ. ವಾಸ್ತವದಲ್ಲಿ ಅದು ನನ್ನ ನೆಲದ ತುಣುಕಿನ ಎದುರಿನಷ್ಟೂ ನೆಲವನ್ನು ವ್ಯಾಪಿಸಿತ್ತು. ಕಾಲಾನುಕ್ರಮದಲ್ಲಿ ಅದನ್ನು ಕೊಂಡವರು ನನ್ನ ಮನೆಗೂ ಸಹಜವಾಗಿ ಒದಗುವಂತೆ ದಾರಿ ಮಾಡಿಯಾರು. ಅಲ್ಲದಿದ್ದರೆ ಕನಿಷ್ಠ ದಾರಿಗಾಗುವಷ್ಟು ತುಣುಕನ್ನು ನಾನು ಕೇಳಿದರೆ, ಕ್ರಯಕ್ಕಾದರೂ ಕೊಟ್ಟಾರು ಎನ್ನುವ ನಿರೀಕ್ಷೆ ನಮ್ಮದಿತ್ತು. ಆದರೂ ತತ್ಕಾಲೀನವಾಗಿ ನನಗೆ ಸಂಕೋಚವಾಗದಂತೆ, ಶಂಕರ ತನ್ನ ಅಂಗಳದಲ್ಲಿ ನನಗೆ ದಾರಿಯ ಹಕ್ಕನ್ನು ಉಚಿತವಾಗಿ ಬರೆದೇ ಕೊಟ್ಟಿದ್ದ. (ಇಂಥವೆಲ್ಲ ನನ್ನ ಅನನುಭವಿ ಮಂಡೆಗೆ ನಿಲುಕದ ವಿಚಾರ.)

ಮುಂದೊಂದು ಕಾಲದಲ್ಲಿ, ಎದುರಿನ ನಿವೇಶನಕ್ಕೆ ಬಂದವರು, ದಾರಿಯ ಕುರಿತ ನಮ್ಮೆಲ್ಲ ಮನವಿಗಳನ್ನೂ ತಿರಸ್ಕರಿಸಿಬಿಟ್ಟರು. ಆಗ ಶಂಕರ, ತನ್ನಂಗಳದ ಅಂಚಿನ ಫಲಕೊಡುತ್ತಿದ್ದ ತೆಂಗಿನ ಮರವನ್ನು ಕಳೆವ, ತನ್ನ ಮನೆಯ ಸೆಪ್ಟಿಕ್ ಟ್ಯಾಂಕನ್ನು ಸ್ಥಳಾಂತರಿಸುವ ನಿರ್ಧಾರ ಕೈಗೊಂಡ. (ಕಟ್ಟಿ ನಲ್ವತ್ತು ವರ್ಷವಾದರೂ ನಗರದ ಕೊಳಚೆವಾಹಿನಿ ಇಂದಿಗೂ ನಮ್ಮ ಗಲ್ಲಿಯ ಮನೆಗಳನ್ನು ಮುಟ್ಟಿಲ್ಲ. ನಗರಾಭಿವೃದ್ಧಿ ಕರ ಪಾವತಿಯಲ್ಲಿ ನಾವೆಂದೂ ತಪ್ಪಿಲ್ಲ!) ಆ ಅಂಗಳದ ತುಣುಕನ್ನು ನನಗೆ ದಾರಿಯಾಗಿ ನಕ್ಷೆ, ನೋಂದಣಿ ಮಾಡಿಸಿಯೇ ಕೊಟ್ಟ (ನಾನು ಸಾಂಕೇತಿಕವಾಗಿ ತೀರಾ ಅಲ್ಪ ಮೊತ್ತವನ್ನೇನೋ ಕೊಟ್ಟದ್ದಿರಬೇಕು, ಅಷ್ಟೆ).

ದಕ ಜಿಲ್ಲೆಯ ಬಹುತೇಕ ಭೂ ಹಿಡುವಳಿಗಳೆಲ್ಲ ಕೃಷಿಮೂಲದವು ಮತ್ತು ಮೂಲಗೇಣಿಯ ನಿಯಮದಲ್ಲಿ ಬಂಧಿತವೂ ಇವೆ. ಮನೆ ಕಟ್ಟಿಸುವ ಕಾಲದಲ್ಲಿ ಭೂ ಪರಿವರ್ತನೆ ಮತ್ತು ಮೂಲಗೇಣಿಯ ಜಿಡುಕುಗಳನ್ನೆಲ್ಲ ನನ್ನರಿವಿಗೆ ಬಾರದಂತೆ ಶಂಕರ ಪರಿಹರಿಸಿದ್ದ. ಮುಂದೊಂದು ಕಾಲದಲ್ಲಿ ಮೂಲಗೇಣಿ ಪದ್ಧತಿಯ ರದ್ಧತಿಯ ಕುರಿತು ಅವಿಭಜಿತ ದಕ ಜಿಲ್ಲೆಯೊಳಗೆ ಜನಾಭಿಪ್ರಾಯ ಬಲಿತಾಗ, ಶಂಕರ ಮುಂದೆ ನಿಂತು, ಅದನ್ನು ನಿಃಶುಲ್ಕವಾಗಿ ಪೂರ್ಣ ವೈಚಾರಿಕ ಆಂದೋಲನವಾಗಿ ನಡೆಸಿದ. ಅದಕ್ಕಾಗಿ ಆತ ತನ್ನ ನಿಜವೃತ್ತಿಯ ಒತ್ತಡಗಳನ್ನೂ ಆರೋಗ್ಯದ ಕಾಳಜಿಗಳನ್ನೂ ಬದಿಗೊತ್ತಿ, ಉಡುಪಿ, ಬೆಂಗಳೂರು, ದಿಲ್ಲಿ ಎಂದು ಓಡಾಡಿದ್ದಕ್ಕೆ ಲೆಕ್ಕವಿಲ್ಲ. ಮತ್ತೆ ನಡೆಸಿದ ಸಭೆ, ಭೇಟಿಯಾದ ಜನಪ್ರತಿನಿಧಿಗಳು ಮತ್ತು ಪರಿಹಾರ ಸೂಚಿಸಿದ ವೈಯಕ್ತಿಕ ಅಳಲುಗಳ ಪಟ್ಟಿ ಮಾಡಿದರೆ ಎಂದೂ ಮುಗಿಯದ ಕತೆಯಾದೀತು. ಅವೆಲ್ಲವುಗಳ ಫಲವಾಗಿ (ಬಹುತೇಕ ಅವನೇ ಬರೆದ) ಇಂದು ಮೂಲಗೇಣಿ ರದ್ಧತಿ ಶಾಸನ ರೂಪದಲ್ಲಿ ಉತ್ತೀರ್ಣವಾಗಿ ಇನ್ನೇನು ಜ್ಯಾರಿಗೆ ಬರುವ ಕೊನೆಯ ಹಂತದಲ್ಲಿದೆ ಎಂಬುದನ್ನೂ ಇಲ್ಲಿ ಸ್ಮರಿಸಲೇಬೇಕು.

ನಂಬಿಕೆಗಳ ಲೋಕದಲ್ಲಿ – ೫

ಮಾವ ಶಂಕರ, ಕುಟುಂಬದ ‘ದೇವರು’ (ಮೂಲ ಮನೆ ಮರಿಕೆಯಲ್ಲಿ ಸ್ಥಿತವಾದ ದೇವಿ ದುರ್ಗೆ) ಮತ್ತು ತತ್ಸಂಬಂಧೀ ವ್ರತಪೂಜೆಗಳ ವಾತಾವರಣದಲ್ಲಿ ಸೇರಿ ಬೆಳೆದವನಾದ್ದರಿಂದ, ಆಸ್ತಿಕ ಎಂದು ಸುಲಭದಲ್ಲಿ ಹೇಳಿಬಿಡಬಹುದು. ಆದರೆ ಈತ ಮಂಗಳೂರ ಮನೆಯಲ್ಲಿ, ದೈಹಿಕವಾಗಿ ಸಾಮರ್ಥ್ಯವಿದ್ದಾಗ ಮಾಡುತ್ತಿದ್ದ ಪೂಜೆ ನೋಡಿದರೆ, ಅದಕ್ಕೆ ಶ್ರದ್ದೆಯೊಂದೇ ಮಂತ್ರ. ಸಾಮಾನ್ಯವಾಗಿ ಕಾಣುವ ಔಪಚಾರಿಕ ಕಲಾಪಗಳೋ ಕಲ್ಪಿತ ಕೊರತೆಗಳಿಗೆ ವೈದಿಕರನ್ನು ಕರೆಸಿ ಪಾರಿಹಾರಿಕ ವ್ರತ ಹೋಮಗಳನ್ನೋ ಶಂಕರ ನಡೆಸಿದ್ದಿಲ್ಲ. ಹಾಗೆಂದು ಕ್ಯಾಲೆಂಡರಿನಲ್ಲಿ ಬರುವ ‘ನಮ್ಮ’ ರೂಢಿಯ ಹಬ್ಬ ಹರಿದಿನಗಳನ್ನು ಸಾಮಾನ್ಯವಾಗಿ ಶಂಕರ ದೇವಕಿಯರು ಖಾಲಿ ಬಿಡುತ್ತಿರಲಿಲ್ಲ. ಅವಕ್ಕೆಲ್ಲ ಯಾವುದೇ ‘ಏಜಂಟ್ ಎಂಗೇಜ್’ (ಪುರೋಹಿತರು) ಮಾಡದೆ, ‘ನಿತ್ಯ ಪೂಜೆ’ಯ ಮೇಲೆ ಹೆಚ್ಚಿನೊಂದು ಹೂವು ಹಾಕಿ, ಸ್ವತಃ ದೊ.ದೇವಕಿ ಮಾಡುತ್ತಿದ್ದ ವಿಶೇಷ ಅಡುಗೆಯನ್ನು ತೋರಿಸಿ (ನೈವೇದ್ಯ) ಆಚರಿಸಿಕೊಳ್ಳುತ್ತಿದ್ದರು. ಈ ಆಚರಣೆಗಳಲ್ಲಿ ದೇವ ನಂಬಿಕೆ ಇಲ್ಲದ ನಮ್ಮನ್ನು ಎಂದೂ ಸಿಕ್ಕಿಸಿದವರಲ್ಲ. ಆದರೆ ವಿಶೇಷ ಅಡುಗೆಗಳ ಪ್ರಸಾದವನ್ನು ಮಾತ್ರ ಎಂದೂ ನಮಗೆ (ಕಳ್ಳ ಬ್ರಾಹ್ಮಣರಿಗೆ – ಶಂಕರ ಬಳಸುತ್ತಿದ್ದ ಪ್ರಿಯ ಬೈಗುಳ!!) ತಪ್ಪಿಸಿದ್ದಿಲ್ಲ! ಕೊಡುವುದರಲ್ಲಿ ಶಂಕರ, ದೇವಕಿಯರ ಕೈ ಎಂದೂ ಗಿಡ್ಡವಾದದ್ದಿಲ್ಲ.

ಮರಿಕೆಯಲ್ಲಿ ಕುಲದೇವರಿಗೆ ನಿತ್ಯ ಹಾಗೂ ಪರ್ವಕಾಲಗಳಲ್ಲಿ (ತಂದೆ ಮತ್ತು ಅಣ್ಣ) ನಡೆಸುತ್ತಿದ್ದ ವ್ರತ ಪೂಜೆಗಳಲ್ಲಿ ಇವರು ಅನುಕೂಲವಿದ್ದಾಗೆಲ್ಲ, ನಿಷ್ಠೆಯಲ್ಲೇ ಭಾಗಿಯಾಗುತ್ತಿದ್ದರು. ನಾನೂ/ವೂ ಆತ್ಮೀಯರ ಸಂಗಕ್ಕಾಗಿ ಹೋಗುತ್ತಿದ್ದೆವು. ಅಣ್ಣ ತೀರಿಕೊಂಡ ಮೊದಲಲ್ಲಿ, ಹಿರಿಯರ ವಾರ್ಷಿಕ ತಿಥಿ ನಿಂತು ಹೋಗುವ ಗೊಂದಲ ಶಂಕರನನ್ನು ಕಾಡಿತ್ತು, ಒಂದೆರಡು ವರ್ಷ ಏನೇನೋ ಮಾಡಿದ್ದ. ಆಗ ಆಕಸ್ಮಿಕವಾಗಿ ಶೈಲ-ಶ್ಯಾಮರ (ಮಗಳು, ಅಳಿಯ) ಸಾಂಗತ್ಯದಲ್ಲಿ ಇವರಿಗೆ ಬದರೀನಾಥಕ್ಕೆ ಹೋಗುವ ಅವಕಾಶ ಒದಗಿತ್ತು. ‘ಬದರಿಯಲ್ಲಿ ಒಮ್ಮೆ ಪಿಂಡ ಪ್ರದಾನ ಮಾಡಿದರೆ ಆಜನ್ಮ ಮಾಡಬೇಕಿಲ್ಲ’ ಎನ್ನುವ ಮಾತಿದೆಯಂತೆ. ಹಾಗೆ ಅದನ್ನು ಶಂಕರ ನಡೆಸಿಕೊಟ್ಟು, ಮರಳಿದ ಹೊಸತರಲ್ಲಿ ನಿರುಮ್ಮಳನಾಗಿದ್ದ. ಆದರೆ ಸಾಂಪ್ರದಾಯಿಕ ಕಾಲಚಕ್ರದಲ್ಲಿ ಮತ್ತೆ ವಾರ್ಷಿಕ ತಿಥಿಯ ದಿನ ಬಂದಾಗ, ಶಂಕರನ ಮನಸ್ಸು ಕೇಳಲಿಲ್ಲ; ತೀರಾ ಖಾಸಗಿಯಾಗಿ ಮತ್ತೇನೋ ಸರಳ ಕಲಾಪ ನಡೆಸುತ್ತಿದ್ದ! ಆತನ ಧಾರ್ಮಿಕತೆ ಮತಾಧಾರಿತವಾದ ಪ್ರದರ್ಶನಕ್ಕಿಂತಲೂ ಅಂತಃಪ್ರೇರಣೆಯ ಅಭಿವ್ಯಕ್ತಿಯೇ ಆಗಿದ್ದಿರಬೇಕು.

ಶಂಕರ, ಕುರಿತು ತೀರ್ಥಾಟನೆ ಮಾಡಿದ್ದು ಕಡಿಮೆ. ಆದರೆ ಅನುಕೂಲದಲ್ಲಿ ಒದಗಿದಾಗ ಯಾವುದೇ ಕ್ಷೇತ್ರ, ಮಂದಿರಗಳನ್ನು ಭಕ್ತಿಪುರಸ್ಸರವಾಗಿ ಕಾಣುವುದನ್ನು ತಪ್ಪಿಸಿದ್ದೂ ಇಲ್ಲ. ತಾರುಣ್ಯದಲ್ಲಿ ಪುತ್ತೂರಿನ ಪೇಪರ್ ಮಯ್ಯರ ಪ್ರಭಾವದಲ್ಲಿ ಒಂದೋ ಎರಡೋ ಬಾರಿ ಸತ್ಯ ಸಾಯೀಬಾಬರ ದರ್ಶನವನ್ನು ಪುಟ್ಟಪರ್ತಿಗೇ ಹೋಗಿ ಮಾಡಿದ್ದಿತ್ತು. ಅವನ ಮನೆಯ ದೇವರ ಪೀಠದಲ್ಲಿ ಬಾಬಾರ ಪಟಕ್ಕೆ ಬಹುಕಾಲ ಒಂದು ಸ್ಥಾನವಿತ್ತು. ಹಾಗೆಂದು ಅವನ ಭಕ್ತಿ ಎಂದೂ ಪರಮತ (ಜಾತಿ ಮತ್ತು ಅಭಿಪ್ರಾಯ) ಅಸಹಿಷ್ಣುತೆಯನ್ನು ತೋರಿದ್ದಿಲ್ಲ. ಎಂದೂ ನಾನವನ ಎದುರು ಕುಳಿತು, ಪವಾಡಗಳನ್ನು ಗೇಲಿ ಮಾಡಬಹುದಿತ್ತು! ಅವನು ನಂಬಿದ ಶಕ್ತಿ ನನ್ನ ಗ್ರಹಿಕೆಯನ್ನು ಮೀರಿದ್ದೇ ಇದ್ದಿರಬೇಕು. ಶಂಕರ ನನ್ನಪ್ಪನ (ಅವನ ಲೆಕ್ಕಕ್ಕೆ ‘ನಾರಾಯಣ’ನ) ವೈಜ್ಞಾನಿಕ ಮನೋಭಾವದ ವಿಚಾರಗಳನ್ನೂ ದೇವ ವಿಶ್ವಾಸದಷ್ಟೇ ಗಂಭೀರವಾಗಿ ಸ್ವೀಕರಿಸಿದವ. “ಸರ್ವದೇವ ನಮಸ್ಕಾರ” ಎಂಬ ಪ್ರಾಮಾಣಿಕ ನಂಬಿಕೆ ಶಂಕರನ ಆಸ್ತಿ. ಶಂಕರ ಕೊಡಿಯಾಲಬೈಲಿನ ಇಬ್ರೋಸ್ ಕಟ್ಟಡದಲ್ಲಿ, ಸ್ವಂತ ಕೋಣೆಯಲ್ಲಿ ಕಚೇರಿ ಕಟ್ಟಿಕೊಂಡಿದ್ದ. ಅಲ್ಲಿನ ಪಕ್ಕದ ವಠಾರದ ಥಿಯೊಸೋಫಿಕಲ್ ಸೊಸಾಯಿಟಿ ಶಂಕರ ದಂಪತಿಗಳ ಈಚಿನ ದಿನಗಳ ನೆಚ್ಚಿನ ‘ದೇವಾಲಯ’ವೇ ಆಗಿತ್ತು, ಎಂದರೆ ತಪ್ಪಿಲ್ಲ. ಅದರಲ್ಲೂ ಅಲ್ಲಿ ಸೋಮವಾರಗಳ ಸಂಜೆ ನಡೆಯುತ್ತಿದ್ದ ಬೈಬಲ್ ಪಾಠದ ಈಪನ್ ನಜರತ್ ಅವರೊಡನಂತೂ ಶಂಕರನಿಗೆ ಗಾಢ ಮಿತ್ರಬಂಧವೇ ಬೆಳೆದಿತ್ತು. ಈಚೆಗೆ ನಾನು ಸೈಕಲ್ ಸರ್ಕೀಟಿನಲ್ಲಿ (ನೋಡಿ ೪೬೬) ಪದವಿನಂಗಡಿ, ಬೊಂದೇಲ್ ದಾರಿಯಲ್ಲಿ ಸಾಗಿದ್ದಾಗ, ಎಂದಿನಂತೆ ಎಡಕ್ಕೆ ಕಾಣುವ ‘ನಜರತ್ ನಿವಾಸ್’ ಬೋರ್ಡ್ ಕಂಡಾಗ, ಒಮ್ಮೆಲೆ ಶಂಕರನ ನೆನಪು ಮೀಟಿತು. ಕೂಡಲೇ ಅತ್ತ ಹೊರಳಿದೆ. ಸುಮಾರು ನೂರಿನ್ನೂರು ಮೀಟರ್ ನೇರ ಹರಕು ಡಾಮರ್ ದಾರಿ. ಅಲ್ಲಿವರೆಗೂ ಬಲಕ್ಕೆ ಭರ್ಜರಿ ಆಧುನಿಕ ಕಟ್ಟಡಗಳು, ಎಡಕ್ಕೆ ತದ್ವಿರುದ್ಧವಾಗಿ ಒಣ ಕುರುಚಲಿನ ಮುರ ಕಲ್ಲ ಪದವು. ಅದಕ್ಕೆ ಹೊಂದುವಂತೇ ಪದವಿನಂಚಿನ ಸಣ್ಣ ದಿಬ್ಬದ ಮೇಲೆ ಕುಳಿತ ಹಳೆಗಾಲದ ಮನೆಯೇ ನಜರತ್ ನಿವಾಸ್.

ಆಧುನಿಕ ಕಟ್ಟಡಗಳು ಮುಗಿದಲ್ಲಿಗೆ ದಾರಿಯೂ ಪೂರ್ಣ ಕಚ್ಚಾವಾಗುತ್ತದೆ. ಮುಂದೆ ಅದು ಹಗುರ ಏರಿನಲ್ಲಿ ಸರಿಯಾಗಿ ಒಂದು ಸುತ್ತು ಹಾಕಿ ಮನೆಯಂಗಳದಲ್ಲೇ ನನ್ನನ್ನಿಳಿಸಿತು. ಕರೆಗಂಟೆ ಏನೋ ಒತ್ತಿದೆ, ಸ್ಪಂದನ ಕಾಣಿಸಲಿಲ್ಲ. ಕಿಟಕಿ ಕನ್ನಡಿಯಲ್ಲಿ ಇಣುಕಿದಾಗ ಇನ್ನೊಂದು ಮಗ್ಗುಲಿನ ಕೋಣೆಯಲ್ಲಿ ಕುಳಿತಿದ್ದ ನಜರತ್ತರಿಗೆ ಕರೆ ಕೇಳಿಲ್ಲವೆಂದು ಸ್ಪಷ್ಟವಾಯ್ತು. ನಾನೇ ಆ ಕಿಟಕಿಯತ್ತ ಹೋಗಿ, ಪ್ರವರ ಹೇಳಿದೆ. ಪ್ರಾಯ ಮತ್ತು ಹಲವು ದೈಹಿಕ ಸಂಕಟಗಳು ಅವರ ಬಾಹ್ಯ ಸಂವೇದನೆಗಳನ್ನು ಜಡಗೊಳಿಸಿವೆ. ಆದರೆ ನೆನಪು ಚುರುಕಾಗಿಯೇ ಇತ್ತು – ಕತ್ತು ಓರೆ ಮಾಡಿ ನೋಡಿ, ದೃಷ್ಟಿ ಮಾಂದ್ಯದೊಡನೆ ಉಳಿದಿರುವ ಒಕ್ಕಣ್ಣಿನಲ್ಲೂ ಹರ್ಷದ ಮಿಂಚು ಹರಿಸಿ, ಎಂದಿನ ಅವರದೇ ಶೈಲಿಯಲ್ಲಿ “ಹೋ!! ಅ-ಶೋ-ಕ-ವ-ರ್ಧ-ನಾ, ಬನ್ನೀ ಬನ್ನಿ…” ಎನ್ನುತ್ತ ಎದ್ದರು. ಆದರೆ ಮನಸ್ಸಿನ ಚುರುಕು ಕಾಲಿಗಿರಲಿಲ್ಲ. ಇತ್ತಣಿಂದ ಅವರು, ಇನ್ನೊಂದು ದಿಕ್ಕಿನಿಂದ ಅವರಷ್ಟೇ ಬಳಲಿದ, ತುಸು ಸಣ್ಣ-ವೃದ್ಧ ಸಹಾಯಕಿ, ಬಹುತೇಕ ಇಬ್ಬರೂ ಕಾಲೆಳೆದುಕೊಂಡು ಬಂದೇ ಬಾಗಿಲು ತೆರೆದು ಒಳ ಸೇರಿಸಿಕೊಂಡರು. ಮತ್ತೆ ಐದೇ ಮಿನಿಟಿಗೆಂದು ನುಗ್ಗಿದ್ದ ನನ್ನನ್ನು, ಹದಿನೈದು ಮಿನಿಟಿಗೆ ಕಡಿಮೆಯಿಲ್ಲದಂತೆ ಮಾತಾಡಿಸಿದರು.

ಕಾಡ್ಮನೆಯಲ್ಲಿ ಶಿಬಿರಾರ್ಥಿಗಳಿಗೆ ಕಾನೂನಿನ ಪಾಠ

ನಜರತ್ ಮೂಲದಲ್ಲಿ ಕರಂಗಲ್ಪಾಡಿ ಮಾರುಕಟ್ಟೆಯ ಸಮೀಪದ ದೊಡ್ಡ ಮನೆ – ನಜರತ್ ಎಸ್ಟೇಟ್, ಇದರ ಆಢ್ಯ ಕ್ರಿಶ್ಚಿಯನ್ ಕುಟುಂಬದ ಸದಸ್ಯ. (ಅಲ್ಲೀಗ ಅವರ ಅಣ್ಣನ ಮಕ್ಕಳು ನೆಲೆಸಿದ್ದಾರೆ) ಇವರು ಇಂದು ತೊಂಬತ್ತರ ಆಸುಪಾಸಿನ ಹರಯ ಮತ್ತದಕ್ಕೆ ಸಹಜವಾದ ದೈಹಿಕ ಮಿತಿಗಳಿಂದ ಬಹುತೇಕ ಎಲ್ಲಿಗೂ ಹೋಗರು. ಇವರು ಆಗರ್ಭ ಶ್ರೀಮಂತರಾದರೂ ವಸನ ವರ್ತನೆಗಳಲ್ಲಿ ಅತಿ ಸರಳ – ಮಾಸಲು ಬಿಳಿ ಪೈಜಾಮ ಜುಬ್ಬಾ ಇವರ ಖಾಯಂ ದಿರುಸು. ಮೊದಲೆಲ್ಲ ದೇಹ ಅನುಮತಿಸಿದಷ್ಟು ಕಾಲ ಸಣ್ಣ ದೂರಗಳಿಗೆ ನಡಿಗೆ, ಇಲ್ಲವಾದರೆ ತಾವೇ ಚಲಾಯಿಸುತ್ತಿದ್ದ ಹಳೆಗಾಲದ ಕಾರು. ಕಣ್ಣೊಂದು ಇಂಗಿ ಹೋಗಿ, ಕಾಡ್ಮನೆಯಲ್ಲಿ ಶಿಬಿರಾರ್ಥಿಗಳಿಗೆ ಕಾನೂನಿನ ಪಾಠ ಉಳಿದೊಂದು ಮಂದವಾಗಿ, ದೇಹ ಬಳಲಿದ ಗೂಡಾದ ಇಂದಿಗೆ, ಅವರೇ ಹೇಳುವಂತೆ, ಎರಡೇ ಹೊರ ಸಂಚಾರ – ಥಿಯೋಸೋಫಿಕಲ್ ಸೊಸಾಯಿಟಿ ಮತ್ತು ಅನಿವಾರ್ಯವಾದರೆ ವೈದ್ಯರ ಭೇಟಿ. ಆಗ ಅದೇ ಹಳಗಾಲದ ಕಾರನ್ನು, ಸಂಬಳದ ಚಾಲಕ ಚಲಾಯಿಸುತ್ತಾನೆ ಎನ್ನುವುದೊಂದೇ ವ್ಯತ್ಯಾಸ. ಪ್ರಾಯದಲ್ಲಿ ಶಿಸ್ತಿನ ಜೀವನದ ಇವರು, ಮದುವೆ ಮತ್ತು ಸ್ವಂತ ಸಂಸಾರಬಂಧಗಳನ್ನು ಬಯಸಲಿಲ್ಲ. ಆದರೆ ವಿಶ್ವಕುಟುಂಬಿಯಂತೆ ಎಲ್ಲೆಲ್ಲಿನ ಮೈತ್ರಿ ಮತ್ತು ಬಾಂಧವ್ಯದ ಎಳೆ ಹಿಡಿದು, ಅವರ ಏನೇನೋ ಸಂಭ್ರಮಗಳಿಗೆ, ರುಚಿಯರಿತು ಭಾರೀ ಎನ್ನುವಂತ ಉಡುಗೊರೆ ಕೊಡುವುದರಲ್ಲಿ ಸದಾ ದೊಡ್ಡ ಕೈ. ಆ ಕಾರಣಕ್ಕೇ ನಾನು ಅಧಿಕೃತವಾಗಿ ಮಾರುತ್ತಿದ್ದ ಪುಸ್ತಕಗಳು ಮತ್ತು ಊರಿನಿಂದ ತರಿಸಿ ಕೊಡುತ್ತಿದ್ದ ಜೇನುಗಳದೇ ಲೆಕ್ಕ ತೆಗೆದರೂ ಇವರು ಕೊಂಡ ಸಂಖ್ಯೆ ಭಾರಿಯೇ ಇತ್ತು. ಮತ್ತೆ ಕಣ್ಣು ಸರಿಯಿರುವವರೆಗೆ ಇವರು ಸ್ವಂತಕ್ಕೆ ಕೊಂಡ ಪುಸ್ತಕಗಳಂತೂ ಅಕ್ಷರಶಃ ಅಸಂಖ್ಯ. ಇವರ ಅದ್ವಿತೀಯ ಪಾಂಡಿತ್ಯ, ಹೊಸದನ್ನು ತಿಳಿಯುವ ಕುತೂಹಲ ಸದಾ ಸಹಜ ವಿನಯದ ಮುಸುಕಿನಲ್ಲೇ ಇರುತ್ತದೆ. ಇವರ ಬಹುಮುಖೀ ಪುಸ್ತಕಾಸಕ್ತಿ ತಿಳಿದಿದ್ದ ನನ್ನ ಸಹಾಯಕನಿಗೆ ಇವರು ಬಂದಾಗ ಹೊಸ ಪುಸ್ತಕ ತೋರಲು ಮೇರೆ ಮೀರಿದ ಉತ್ಸಾಹ. ಇವರಿಗಾದರೂ ಗಂಟೆಗಟ್ಟಳೆ ಪುಸ್ತಕಗಳ ಬೆಂಬರಹ, ಮುನ್ನುಡಿಯ ಚುಟುಕು ರುಚಿ ನೋಡುವಲ್ಲಿ, ಕೊಳ್ಳುವ ಗಂಟು ಬೆಳೆಸುವಲ್ಲಿ ಆಯಾಸವಾದದ್ದೇ ಇಲ್ಲ. ಇವರ ಬ್ಯಾಂಕ್ ಪಾಸ್ ಬುಕ್ ತುಂಬುವ ನೌಕರ ಹಿಂದೊಮ್ಮೆ ಉದ್ಗರಿಸಿದ್ದನಂತೆ “ನಿಮ್ಮ ದೊಡ್ಡ ಮೊತ್ತದ ಚೆಕ್‍ಗಳೆಲ್ಲ ಪುಸ್ತಕ ಮಳಿಗೆಗಳಿಗೇ ಹೋಗುತ್ತವೇ”!

ಶಂಕರನ ನೆನಪುಗಳಿಂದಲೇ ನಾನು ಸಂವಾದ ಶುರು ಮಾಡಿದ್ದೆ. ನಜರತ್ ಒಮ್ಮೆ ಭಾರದ ಧ್ವನಿಯಲ್ಲಿ ಥಿಯೋಸಾಫಿಕಲ್ ಸೊಸಾಯಿಟಿಯ ಕಾರ್ಯದರ್ಶಿಯ ಮಾತನ್ನು ಜ್ಞಾಪಿಸಿಕೊಂಡರು “ಎ.ಪಿ. ಗೌರೀಶಂಕರ್ ಒಬ್ಬರು, ಇತರ ಹತ್ತು ಕೇಳುಗರ ಗ್ರಹಣ ಶ್ರದ್ಧೆಗೆ ಸಮ!” ಮತ್ತೆ ದೊ.ದೇವಕಿಯನ್ನು ವಿಶೇಷವಾಗಿ ವಿಚಾರಿಸಿಕೊಂಡರು. ಆಕೆ ಮಗನ ಮನೆ ಸೇರಿದ್ದು ತಿಳಿದು, ತಮ್ಮ ಪುತ್ತೂರ ಕೊನೆಯ ಭೇಟಿ ನೆನೆಸಿಕೊಂಡರು. ಅದು ಪುತ್ತೂರ ‘ಅಜ್ಜ’ ಎಂದೇ ಪ್ರಸಿದ್ಧರಾದ ‘ಸಿದ್ಧ ಪುರುಷ’ನೋರ್ವ ಗತಿಸಿದ ಮೇಲಿನ ಸ್ಮರಣಾ ಕಲಾಪವಂತೆ. ‘ಅಜ್ಜ’ ಸಾರಿದ ಸರ್ವಧರ್ಮ ತತ್ತ್ವಾನುಸಾರಕ್ಕೆ ತಕ್ಕಂತೆ, ನಜರತ್ತರಿಗೆ ಕ್ರಿಶ್ಚಿಯಾನಿಟಿ ಬಗ್ಗೆ ಮಾತಾಡಲು ಎರಡು ಗಂಟೆಗಳ ಮುಕ್ತ ವೇದಿಕೆ ಕೊಟ್ಟಿದ್ದರಂತೆ. ಸೊಸಾಯಿಟಿಯ ಅಂದಿನ ಕಾರ್ಯದರ್ಶಿ ಶ್ರೀಮತಿ ಬೃಂದಾ ರಾವ್ (ನನ್ನ ನೆಚ್ಚಿನ ವೈದ್ಯ, ಕೀರ್ತಿಶೇಷ ಕೆ.ಪಿ.ರಾವ್ ಅವರ ಪತ್ನಿ.) ಕಾರಿನಲ್ಲಿ ಇವರನ್ನೂ ಇನ್ನೊಂದೆರಡು ಗಣ್ಯರನ್ನೂ ಕರೆದೊಯ್ದಿದ್ದರಂತೆ. ನಜರತ್ತರು ಬೈಬಲ್ಲಿನಲ್ಲಿ ಪ್ರೇಮದ ಕುರಿತು ಎರಡು ಗಂಟೆ ಭರ್ತಿ ಮಾತಾಡಿದರಂತೆ. ಕೊನೆಯಲ್ಲಿ ಗಣ್ಯ ಹಿಂದೂ ಕೇಳುಗರೊಬ್ಬರು ಇವರಲ್ಲಿ ಬಂದು ಹೇಳಿದ್ದರಂತೆ, “ನಿಮ್ಮ ಮಾತು ಕೇಳಿದ ಮೇಲೆ, ನನ್ನ ತಪ್ಪುಗ್ರಹಿಕೆ ಬಿಟ್ಟು, ನಾಳೆಯೇ ಬೈಬಲ್ ಕೊಂಡು ಓದಲಿದ್ದೇನೆ.” ಅಂಥದ್ದೇ ವೈಚಾರಿಕ ಶುದ್ಧಿಯ ಶಂಕರನನ್ನು ಕಳೆದು ಕೊಂಡದ್ದಕ್ಕೆ ವ್ಯಥಿಸುವುದು ಬಿಟ್ಟು, ಒಡನಾಡಿದ ಸಂತೋಷವನ್ನಷ್ಟೇ ಹಂಚಿಕೊಂಡ ನಜರತ್ತರಿಗೆ ನನ್ನ ನಜರೊಪ್ಪಿಸಿ, ಹೊರಟು ಬಂದೆ.

ಭೋಲಾ ಶಂಕರ್! – ೬

ದೂರದೂರುಗಳಿಂದ ಮಂಗಳೂರಿಸುವ ಹೆಚ್ಚಿನ ಬಸ್ಸುಗಳು ನಮ್ಮ ಮನೆಗಳಿಗೆ ಹತ್ತಿರದ ಕರಂಗಲ್ಪಾಡಿಯ ಮಾರುಕಟ್ಟೆಯ ಎದುರಿನಿಂದಲೇ ಕೇಂದ್ರ ಬಸ್ ನಿಲ್ದಾಣಕ್ಕೆ ಹೋಗುತ್ತವೆ. ನಾವು ಅಂಥವಲ್ಲಿ ಬಂದಾಗ, ಮಾರುಕಟ್ಟೆಯಲ್ಲೇ ಇಳಿದು, ನಡೆದೇ ಮನೆ ಸೇರಿಕೊಳ್ಳುವುದು ಕ್ರಮ. ಅಂದು (ಬಹುಶಃ ಮೂಲಗೇಣಿಯ ನಿಃಶುಲ್ಕ ವಕಾಲತ್ತಿಗೇ ಹೋಗಿ,) ಬೆಂಗಳೂರಿನಿಂದ ರಾತ್ರಿ ಬಸ್ಸಿನಲ್ಲಿ ಪಯಣಿಸಿ ಬಂದಿಳಿದಿದ್ದ ಶಂಕರ. ಚೀಲದ ಹೊರೆ ಸಾಮಾನ್ಯವಿದ್ದರೂ ಹೆಚ್ಚಿನ ಸುಸ್ತೇನೂ ಆಗದಿದ್ದರೂ ಕಾಲೆಳೆದುಕೊಂಡೇ ಮನೆ ಮುಟ್ಟಿದ್ದನಂತೆ. ಅನಂತರ ಎಷ್ಟೋ ಹೊತ್ತಿನ ಮೇಲೆ, ಶಂಕರ ಕಚೇರಿಗೆ ಹೋಗುವ ಸಂದರ್ಭದಲ್ಲಿ ಒಮ್ಮೆಲೇ ಉದ್ಗರಿಸಿದನಂತೆ “ಯಾರೋ ನನ್ನ ಒಂದು ಚಪ್ಪಲಿ ಬದಲಿಸಿದ್ದಾರೆ.” ಈ ಮಧ್ಯೆ ಮನೆಗೆ ಬಂದು ಹೋದವರ ಲೆಕ್ಕ, ಸಣ್ಣ ಹುಡುಕಾಟವೆಲ್ಲ ನಡೆದಿರಬೇಕು. ತುಸು ವಿರಾಮದಲ್ಲಿ ಯೋಚಿಸಿದಾಗ ಹೊಳೆದ ಸತ್ಯ ಬೇರೇ ಇತ್ತು. ರಾತ್ರಿ ಬಸ್ಸಿನಲ್ಲಿ ನಿದ್ರೆ ಮಾಡುವಾಗ ಹೆಚ್ಚಿನವರು ಚಪ್ಪಲಿಗಳನ್ನು ಕಳಚಿ ಪದ ತಳದಲ್ಲೇ ಬಿಟ್ಟಿರುತ್ತಾರೆ. ಬಸ್ಸಿನ ನಿರಂತರ ಅಲುಗಾಟ, ಮತ್ತು ಇಳಿದು ಹತ್ತುವವರ ತುಳಿತಗಳಲ್ಲಿ ಆ ಚಪ್ಪಲಿಗಳು ಸ್ಥಳಾಂತರಗೊಳ್ಳುವುದು ಮಾಮೂಲು. ಶಂಕರ ಕರಂಗಲ್ಪಾಡಿಯಲ್ಲಿ ಇಳಿಯುವ ಗಡಿಬಿಡಿಯಲ್ಲಿ ಹಾಗೆ ಚದುರಿದ್ದ ತನ್ನ ಚಪ್ಪಲಿಗಳೆಂದುಕೊಂಡು ಆಯ್ದುಕೊಂಡದ್ದರಲ್ಲೇ ಇನ್ನೊಂದು ಬೇರೆಯವರದೇ ಆಗಿತ್ತು. ಅದಕ್ಕೇ ಬೆಳಗ್ಗೆ ನಡೆಯುವಾಗಲೇ ಒಂದು ಕಾಲೆಳೆದಂತನ್ನಿಸಿದ್ದೆಂದು ಎಂದು ಅರಿವಾಗುವುದರೊಡನೆ ಉಳಿದದ್ದು ನಗು ಮಾತ್ರ! ಇನ್ನೊಮ್ಮೆ……..

ಎದುರು ಮನೆಯ ಅನಂತರಾಮ ಕೆದಿಲಾಯರು (ಈಗ ಕೀರ್ತಿಶೇಷರು), ಅದೊಂದು ದಿನ ಬೆಳಿಗ್ಗೆ ನಮ್ಮೆರಡೂ ಮನೆಗಳಿಗೆ ಬಂದು, ತಮ್ಮ ಹಿರಿಯರ ವಾರ್ಷಿಕ ತಿಥಿಯೂಟಕ್ಕೆ ಆಹ್ವಾನ ಕೊಟ್ಟು ಹೋಗಿದ್ದರು. ಮಧ್ಯಾಹ್ನ ಕೋರ್ಟು ಕಲಾಪದಲ್ಲಿ ಶಂಕರ ಮನೆಗೆ ಬರುವಾಗ ತಡವಾಗಿದೆ. ಸಾಲದ್ದಕ್ಕೆ ದೊ.ದೇ ಮನೆಗೆಲಸದಲ್ಲೇನೋ ಕಳೆದು ಹೋಗಿದ್ದಿರಬೇಕು. ಶಂಕರ, ತಡವಾದ್ದಕ್ಕೆ ಮನದೊಳಗೇ ಮಿಡುಕುತ್ತಾ ಅವಸರದಲ್ಲೇ ಪಂಚೆ, ಜುಬ್ಬಾಕ್ಕೆ ಬದಲುತ್ತ “ಹೊರಡಿರಿ, ಹೊರಡಿರಿ, ಹೆಮ್ಮಕ್ಕಳಿರಾ” ಎಂದು ತನ್ನ ವಿಶಿಷ್ಟ ಶೈಲಿಯಲ್ಲಿ ದೊ.ದೇವಕಿಗೆ ಹೇಳುತ್ತ, ಕೆದಿಲಾಯರ ಮನೆಗೆ ನಡೆದಿದ್ದಾನೆ. ಅಲ್ಲಿನ ಕರೆಗಂಟೆ ಒತ್ತಿದಾಗ ಸುಶೀಲಮ್ಮ (ಶ್ರೀಮತಿ ಕೆದಿಲಾಯರು) ಬಾಗಿಲು ತೆರೆದಿದ್ದಾರೆ. ಶಂಕರ ಹಿಂದೆಲ್ಲ ಬಂದ ನೆನಪಿನ ಬಲದಲ್ಲಿ, ಒಳಗಿನ ಹಾಲಿನಲ್ಲಿ ಗೋಡೆಗೊರಗಿಸಿ ಇಟ್ಟಿದ್ದ ಮಣೆಯನ್ನು ಹಾಕಿ ಊಟಕ್ಕೆ ಸಜ್ಜಾಗಿ ಕುಳಿತೇಬಿಟ್ಟ. ಸುಶೀಲಮ್ಮ ಸಂಕೋಚದಲ್ಲೇ ಏನಾಯ್ತೆಂದು ವಿಚಾರಿಸಿದರಂತೆ. “ಅಯ್ಯೋ ಕೋರ್ಟಿನಲ್ಲಿ ತಡವಾಯ್ತು. ಎಲ್ಲರೂ ಊಟ ಮುಗಿಸಿ ಹೋಗಿಯೂ ಆಯ್ತೇ?” ಎಂದೇನೋ ಹೇಳಿರಬೇಕು. ಆಗ ಸುಶೀಲಮ್ಮನಿಗೆ ಪರಿಸ್ಥಿತಿ ಅರಿವಾಗಿ, ನಸು ನಕ್ಕು ಹೇಳಿದರಂತೆ “ತಿಥಿ ಇಂದಲ್ಲ, ಮುಂದಿನವಾರ….” ಹೋದಷ್ಟೇ ವೇಗದಲ್ಲಿ ಶಂಕರ ಮನೆಗೆ ವಾಪಾಸಾಗುವಾಗ, ಇವನೆಲ್ಲಿ ಹೋದನೆಂದು ಅರಿಯದೆ, ದೇವಕಿ ಊಟಕ್ಕೆ ತಟ್ಟೆ ಇಟ್ಟು ಕಾದಿದ್ದಳು.

ಪುತ್ತೂರಿನಿಂದ ಒಮ್ಮೆ ಶಂಕರ “ಬೀಸ್ರೋಡ್ ಗೆಂಟ್” (ಬೀಸೀರೋಡಿನವರೆಗೆ) ಎಂದು ಟಿಕೆಟ್ ಮಾಡಿ ‘ಧ್ಯಾನಸ್ಥ’ನಾದವ “ಉತ್ತಿಷ್ಠ ಉತ್ತಿಷ್ಟ ಕನಕನದಿ (ಕಂಕಣಪಾಡಿ)” ಕೇಳಿದಾಗ ಜಾಗೃತಾವಸ್ಥೆಗೆ ಇಳಿದನಂತೆ. ಈತ ತಣ್ಣಗೆ ನಿರಾತಂಕವಾಗಿ ಇಳಿದು, ವಿರುದ್ಧ ದೆಸೆಗೆ ಮುಖ ಮಾಡಿ ನಿಂತಿದ್ದ ಬೇರೊಂದೇ ಬಸ್ಸು ಹತ್ತಿ ಮತ್ತೆ “ಬೀಸ್ರೋಡ್ ಗೆಂಟ್” ಟಿಕೇಟ್ ಪಡೆದನಂತೆ.

ದೊ.ದೇವಕಿಯ ಅಡುಗೆಮನೆ ಪ್ರಯೋಗಗಳು ಅಪಾರ ಮತ್ತು ಸದಾ ಪರಿಷ್ಕಾರ. ಶಂಕರನಾದರೂ ಅವನ್ನೆಲ್ಲ ಸ್ಪಷ್ಟ ಗುಣೈಕ ದೃಷ್ಟಿಯಿಂದ ಗುರುತಿಸಿ, ಚಪ್ಪರಿಸಿ ಆಸ್ವಾದಿಸುತ್ತಿದ್ದ. ನಮ್ಮ ಕುಟುಂಬಗಳ ಬಹುತೇಕರಂತೆ ಶಂಕರನಿಗೂ ಸಿಹಿ ಬಹಳ ಅಪ್ಯಾಯಮಾನ ರುಚಿಯೇ. ನನ್ನಮ್ಮ ಹೇಳುತ್ತಿದ್ದಂತೆ ದಿನವೂ ಪಾಯಸ ಮಾಡಿದರೂ ಎರಡು ಸೌಟು ಹೆಚ್ಚು ಹಾಕಿಕೊಂಡೇ ತಿಂದಾರು, ಕಟರೆ ಬಂತೆನ್ನಲಾರರು. ಅದರಲ್ಲೂ ಶಂಕರನದ್ದು ಒಂದು ಕೈ ಹೆಚ್ಚು. ಪಾಯಸಕ್ಕೆ ಸಕ್ಕರೆಪಾಕದಂತೇ ಇದ್ದರೂ ಮೇಲೊಂದು ಚಮಚ ಸಕ್ಕರೆ ಮತ್ತೆ ಇದ್ದರೆ ಹೊಸದಾಗಿ ಕಾಯಿಸಿದ ತುಪ್ಪ ಎರೆಸಿಕೊಂಡು ತಿಂದಾನು. ಇಂಥವನಿಗೆ ಹಲವು ವರ್ಷಗಳ ಹಿಂದೊಂದು ದಿನ ಸಕ್ಕರೆಯ ಕೆಡುಕಿನ ಕುರಿತು ಜಾಗೃತಿ ಮೂಡಿತು. ಈತನಿಗೆ ಸಕ್ಕರೆ ಕಾಯಿಲೆಯ ಯಾವುದೇ ಲಕ್ಷಣಗಳಿರಲಿಲ್ಲ. ಆದರೂ “ಇನ್ನು ಜೀವದ ಕೊನೆಯವರೆಗೆ ಚಾ, ಕಾಫಿಗಳನ್ನು ಚಪ್ಪೆಯೇ ಕುಡಿಯುತ್ತೇನೆ” ಎಂದು ಭೀಷ್ಮ ಪ್ರತಿಜ್ಞೆಯನ್ನೇ ಮಾಡಿಬಿಟ್ಟ. ಮತ್ತದನ್ನು ಒಂದು ಸಣ್ಣ ತಿದ್ದುಪಡಿಯೊಡನೆ ಕೊನೆವರೆಗೂ ನಡೆಸಿದ. ತಿದ್ದುಪಡಿ ಇಷ್ಟೇ: ಚಪ್ಪೆ ಕುಡಿಯುವಾಗಲೋ ಅಥವಾ ಕುಡಿದು ಮುಗಿದ ಮೇಲೋ ಪುಟ್ಟ ಬೆಲ್ಲದ ಉಂಡೆ ತಿನ್ನುತ್ತಿದ್ದ!! ಶಿವಪುರಾಣದಲ್ಲಿ ಇಂಥದ್ದೇ ಕೆಲವು ಲಘು ಪ್ರಸಂಗಗಳ ಉಲ್ಲೇಖದ ಕೊನೆಯಲ್ಲಿ “ಇಂತಿಪ್ಪ ಭೋಲಾ ಶಂಕರ, ನಮಗೆ ಮಂಗಳವನ್ನುಂಟುಮಾಡಲಿ” ಎಂದು ಕೇಳಿದ್ದೇವೆ. ಯುಗಾದಿಯ ಈ ದಿನವಿಂದು (ಇದನ್ನು ಯುಗಾದಿಯಂದು ಫೇಸ್ ಬುಕ್ಕಿನಲ್ಲಿ ಪ್ರಕಟಿಸಿದ್ದೆ) ನಮ್ಮ ಶಂಕರಪುರಾಣದಲ್ಲಾದರೂ ಇದು ಔಚಿತ್ಯಪೂರ್ಣ ಸಿಹಿ-ಕಹಿಯಾಗಬಹುದೆಂದು ಆಶಿಸುತ್ತೇನೆ.

ಆರ್ತ ಪರಿಪಾಲಕ – ೭

ಶಂಕರ ಇನ್ನೂ ವಿದ್ಯಾರ್ಥಿಯೋ ವೃತ್ತಿಯ ಆರಂಭಿಕ ಹಂತದಲ್ಲೋ ಇದ್ದ. ಮುಂಬೈಯಲ್ಲಿದ್ದ ತಂಗಿ – ಮೀನಾಕ್ಷಿಯ ಗಂಡನಿಗೆ (ವಾರಣಾಸಿ ಕೃಷ್ಣ ಭಟ್ ಉರುಫ್ ವೀಕೇ ಭಟ್) ತೀವ್ರ ಅಸ್ವಾಸ್ಥ್ಯ ಕಾಡಿತ್ತು. ಆಗ ಮುಂಬೈಗೆ ಧಾವಿಸಿ, ಬಹುಶಃ ತಿಂಗಳ ಕಾಲ ಎಲ್ಲ ಬಿಟ್ಟು, ಭಾವನ ಶುಶ್ರೂಷೆಯಲ್ಲಿ ತಂಗಿಗೆ ದೃಢವಾಗಿ ಜತೆಗೊಟ್ಟವನು ಶಂಕರ. ಇಂಥವಕ್ಕೆಲ್ಲ ಧನ್ಯವಾದದ ಮಾತುಗಳನ್ನೂ ಈತ ನಿರೀಕ್ಷಿಸದವನಲ್ಲ. ಅವನ್ನು ಮೀರಿದ ಇನ್ನೂ ಎಷ್ಟೋ ಪ್ರಾಮಾಣಿಕ ಪರೋಪಕಾರ ಪ್ರಕರಣಗಳಲ್ಲಿ ಅಪಖ್ಯಾತಿಯನ್ನು ನುಂಗಬೇಕಾದಲ್ಲೂ ಶಂಕರ ಕುಗ್ಗಿದವನಲ್ಲ. ಆದರೆ ಅವನ್ನು ಇಂದು ವಿಸ್ತರಿಸುವುದು ಎಂದರೆ, ಲೋಕ ಕಲ್ಯಾಣಾರ್ಥ ದೇವ ಶಂಕರನು ನುಂಗಿದ ಬಡಬಾನಲವನ್ನೇ ಅವನಿಚ್ಛೆಗೆ ವಿರುದ್ಧ ಮುಕ್ತಗೊಳಿಸಿದಂತಾದೀತು, ನಾನು ಸಾಹಸಿಯಲ್ಲ.

ಪುತ್ತೂರ ಮನೆಗೆ ಎಲ್ಲೆಲ್ಲಿನ ಸಂಬಂಧ, ಪರಿಚಯದ ಎಳೆ ಹಿಡಿದು ಹೆಚ್ಚಿನ ‘ಪೇಟೆಯ ಚಿಕಿತ್ಸೆ’ಗೆ (ವಿದ್ಯೆ, ಆರೋಗ್ಯ, ಕಚೇರಿ ವಹಿವಾಟು ಇತ್ಯಾದಿ) ಬರುತ್ತಿದ್ದವರು ಕಡಿಮೆ ಏನೂ ಇರಲಿಲ್ಲ. ಮನೆಯಲ್ಲಿ ಒಂದು ಹೊತ್ತಿನ ಹೊರಗೆಲಸಕ್ಕಷ್ಟೇ ಕೆಲಸದಾಕೆ ಬಂದು ಹೋಗುತ್ತಿದ್ದಳು. ಉಳಿದಂತೆ ಎಲ್ಲಕ್ಕೂ ಅಜ್ಜಿ – ಪಾರ್ವತಿ, ಅತ್ತೆ ದೊ.ದೇವಕಿಯರೇ ಶುಶ್ರೂಷಕಿಯರು! ಕುಟುಂಬದೊಳಗೆ ಈ ಮನೆಯನ್ನು ‘ಪಾರ್ವತೀ ಆರೋಗ್ಯಧಾಮ’ ಎಂದು ಆಗೀಗ ಹೇಳುತ್ತಿದ್ದದ್ದು ಬರಿಯ ತಮಾಷೆಗಲ್ಲ. ನಿಜದ ಕೆಲಸದ ಹೊರೆ ಹೊರುತ್ತಿದ್ದವರು ಮನೆಯ ಹೆಂಗಸರೇ ಆದರೂ ಅಯಾಚಿತವಾಗಿಯೂ ಉದ್ದೇಶಪೂರ್ವಕವಾಗಿಯೂ ಬರುತ್ತಿದ್ದವರಿಗೆಲ್ಲ ಆಧಾರ ಬಿಂದು ಕುಟುಂಬದ ಗಂಡಸರೇ. ಇದರಲ್ಲಿ ನನ್ನಜ್ಜನ ‘ಸಕಲ ಕಲ್ಯಾಣಗುಣ’ವೂ ಬೇಕಾದರೆ ಒಂದು ಗುಲಗಂಜಿ ತೂಕ ಹೆಚ್ಚೇ ಶಂಕರನಲ್ಲಿ ಮೂರ್ತಿಮತ್ತಾಗಿತ್ತು! ಆ ಖಾತೆಯಲ್ಲಿ ನನ್ನನ್ನು ಸದಾ ಕಾಡುವ ಒಂದು ಆಖ್ಯಾನವನ್ನಷ್ಟೇ ಇಲ್ಲಿ ತುಸು ವಿಸ್ತರಿಸುತ್ತೇನೆ. ಅದೊಂದು ದಿನ ಕೋರ್ಟಿನಿಂದ ಬರುವಾಗ ತೀರಾ ಅಪರಿಚಿತ, ತೆಲುಗು ಮಾತಿನ, `ಪಾಂಡುರೋಗಿ’ ನಡುವಯಸ್ಕನೊಬ್ಬ, ಮತ್ತಾತನ ಗಟ್ಟಿಮುಟ್ಟಾದ ಆದರೆ ಮೂಕ, ತರುಣ ಮಗನನ್ನು ಮನೆಗೆ ಕರೆತಂದಿದ್ದ. (ಪಾಂಡುರೋಗ ಅಥವಾ ತೊನ್ನು ಎಂದೇ ಸಾಮಾನ್ಯವಾಗಿ ಗುರುತಿಸಲ್ಪಡುವುದು ನಿಜದಲ್ಲಿ ಚರ್ಮದ ವರ್ಣಕೋಶಗಳ ವ್ಯತ್ಯಯದ ಕೊರತೆ ಮಾತ್ರ.) ಆತನನ್ನು ಶಂಕರ ದೇವಕಿಯರು ತಮ್ಮೊಳಗೇ ‘ಬಿಳಿ ಮನುಷ್ಯ’ ಎಂದೇ ಗುರುತಿಸಿಕೊಂಡಿದ್ದರು. ಹಿರಿಯ ಆಂಧ್ರದ ಗಡಿಯ ಬಳಿಯ ಹಳ್ಳೀ ಶಾಲೆಯೊಂದರ ಬಡ ಉಪಾಧ್ಯಾಯ. ಮಗ ಕಿವುಡ-ಮೂಕರ ವಿಶೇಷ ಸವಲತ್ತಿನಲ್ಲಿ ಮಂಗಳೂರ ನ್ಯಾಯಾಲಯದ ಜವಾನನ ಹುದ್ದೆಗೆ ನೇಮಕಾದೇಶ ಪಡೆದಿದ್ದ. ಬಹುತೇಕ ಗಮಾರನಂತಿದ್ದ ತಂದೆ, ತೀರಾ ಅಪರಿಚಿತ ಪರಿಸರ ಮತ್ತು ಸಮಾಜದ ನಡುವೆ ಆ ಮಗನನ್ನು ಹೊಸ ವೃತ್ತಿಯಲ್ಲಿ ನೆಲೆ ನಿಲ್ಲಿಸುವ ಉತ್ಸಾಹದಲ್ಲಿ ಆಳ ಆಯ ತಿಳಿಯದೇ ಧುಮುಕಿಬಿಟ್ಟಿದ್ದ. ಟಿಕೆಟ್ ಖರೀದಿಸಿದೊಂದೇ ಯೋಗ್ಯತೆಗೆ ಬಸ್ ಅವರನ್ನು ಮಂಗಳೂರಿಗೆ ಹೊತ್ತು ಹಾಕಿತ್ತು. ರಿಕ್ಷಾದ ರುಸುಮು ಕೊಟ್ಟು, ಕೋರ್ಟು ವಠಾರವನ್ನೂ ಮುಟ್ಟಿದ್ದರು. ಆದರೆ ಮಗನನ್ನು ಹುದ್ದೆಗೆ ಸೇರಿಸುವ ಔಪಚಾರಿಕತೆ ಮತ್ತು ಆತನಿಗೆ ವಾಸ್ತವ್ಯ ಹೊಂದಿಸುವ ಅಗತ್ಯಗಳಲ್ಲಿ ಬಡಪಾಯಿಗಳು ಗೊಂದಲದ ಗೂಡಾಗಿದ್ದರು.

ಮಾಮೂಲಿನಂತೆ ಕೋರ್ಟಿನಲ್ಲಿದ್ದ ಶಂಕರನ ಕಣ್ಣಿಗೆ ಈ ಅಪ್ಪ ಮಗ ಆಕಸ್ಮಿಕವಾಗಿ ಸಿಕ್ಕಿಕೊಂಡರು. ಶಂಕರ ಸಹಜವಾಗಿ ಕಚೇರಿಗೆ ಸೇರಿಸುವ ಕೆಲಸ ಮಾಡಿಕೊಟ್ಟ. ಮುಂದುವರಿದು, ನ್ಯಾಯಾಲಯದ ವಠಾರದಲ್ಲೇ ಮಗನಿಗೆ ತತ್ಕಾಲೀನ ವಾಸದ ವ್ಯವಸ್ಥೆಯನ್ನೂ ಮಾಡಿಸಿಬಿಟ್ಟ. ಈಗ ಅಪ್ಪಯ್ಯ ಶಂಕರನನ್ನು ಹೆಚ್ಚು ‘ಅಪ್ಪಿಕೊಂಡ.’ “ಮೂಕ ಮಗನಿಗೆ ಊರು ಜನ ರೂಢಿಸಲು ಎರಡು ಮೂರು ದಿನವಾದರೂ ನಾನಿಲ್ಲಿರಬೇಕಾದೀತು. ಬಡವಾ…” ಎಂದೇ ರಾಗ ತೆಗೆದ. ಶಂಕರ ಅಂದಿನ ಮಧ್ಯಾಹ್ನದೂಟಕ್ಕೆ ಇಬ್ಬರನ್ನೂ ತನ್ನ ಮನೆಗೇ ತಂದುಬಿಟ್ಟ. ಮತ್ತೆ ರಾತ್ರಿಗೆ ಅಪ್ಪಯ್ಯನಿಗೆ ಮನೆಯೊಳಗೇ ಹಾಸಿಗೆಯನ್ನೂ ಕೊಟ್ಟ!! ಒಂದೆರಡು ದಿನ ಅಲ್ಲ, ಬಹುಶಃ ವಾರ ಕಾಲ ದೊ.ದೇವಕಿಗೆ ಮನೆಯಲ್ಲಿ, ಬಿಳಿ ಮನುಷ್ಯ – ಗಟ್ಟಿ ಅತಿಥಿ. ಅಂತೂ ಒಂದು ದಿನ ಅಪ್ಪ ವಾಪಾಸಾದ, ಮಗ ಕೆಲಸದಲ್ಲಿ ಸೇರಿಹೋದ, ಎಂದಲ್ಲಿಗೆ ಕತೆ ಮುಗಿಯಲಿಲ್ಲ. ಒಮ್ಮೆಗೆ ಅಪ್ಪ ಹೋದದ್ದೇನೋ ಹೌದು. ಮತ್ತೆ……..

ತರುಣನ ಲೋಕಾನುಭವ ಸಾಲದಾಯ್ತೋ, ಒಡನಾಡಿಗಳ ಗೇಲಿ/ ಹಿಂಸೆ ಹೆಚ್ಚಾಯ್ತೋ, ಮನೆ ಮತ್ತು ಪರಿಚಿತರ ಗೀಳು ಕಾಡಿತೋ ಕೆಲವೇ ದಿನಗಳಲ್ಲಿ ಹುಚ್ಚನಂತಾಡತೊಡಗಿದ. ಶಂಕರನ ಮನೆಗೇ ಬಂದು ಆತಂಕಕ್ಕೂ ಕಾರಣನಾದ. ಹೇಗೇಗೋ ಸುಧಾರಿಸಿ, ಅಪ್ಪನನ್ನು ಕರೆಸಿದ್ದೂ ಆಯ್ತು. ಅಪ್ಪ ಬಂದು ಹಕ್ಕಿನ ಮೇಲೆ ಎನ್ನುವಂತೆ ಶಂಕರನಲ್ಲೇ ತಂಗಿ, ಎಲ್ಲ ಸರಿಪಡಿಸುವ ಒದ್ದಾಟ ನಡೆಯಿತು. ಅಪ್ಪ ವಾಪಾಸಾಗುವುದು ಮಗ ಮತ್ತೆ ಕೆರಳುವುದು ಎಂಬ ವಹಿವಾಟು ಎರಡು ಮೂರು ಸಲ, ಕೆಲವು ತಿಂಗಳುಗಳ ಕಾಲ ನಡೆದಿರಬೇಕು. ಆದರೆ ಶಂಕರನ ಸದಿಚ್ಛೆ, ಅಭಯ ಹಸ್ತ ಅವರೊಂದಿಗೇ ಇತ್ತು. ಹಿಡಿದದ್ದನ್ನು ಚಂದಕ್ಕೆ ಕೊನೆ ಮುಟ್ಟಿಸುವ ಹಠದಲ್ಲಿ, ತರುಣನಿಗೆ ಅಪ್ಪನ ಹಳ್ಳಿಯ ಸಮೀಪಕ್ಕೆಲ್ಲೋ ವರ್ಗಾವಣೆ ಕೊಡಿಸಿಯೇ ಮಂಗಳ ಹಾಡಿದ.

ನಿರ್ಧಾರ ತೆಗೆದುಕೊಂಡು, ಆಡಳಿತ ಮಟ್ಟದಲ್ಲಿ ನಿಭಾಯಿಸುವ ಶಂಕರನ ಔದಾರ್ಯದಷ್ಟೇ ಅದನ್ನು ಬೆಂಬಲಿಸಿ, ಮನೆಯಲ್ಲಿ ನಡೆಸಿಕೊಟ್ಟ, ದೊ.ದೇವಕಿಯ ಆತಿಥ್ಯವೂ ಬಹಳ ದೊಡ್ಡದು ಮತ್ತು ಸ್ಮರಣೀಯ. ಇನ್ನು ಬರಿಯ ಆತಿಥ್ಯದ ಕತೆ ಕೇಳಿದರೆ………

‘ಕುಟುಂಬ’ ವತ್ಸಲ – ೮

ಜೀವ ಹಿತದ ಕುಟುಂಬವಷ್ಟೇ ಶಂಕರನಿಗೆ ಕಂಡಿತ್ತು. ಇವನು ಅಂಬೇಡ್ಕರ್, ಗಾಂಧಿಯ ಹಾಗೆ ಆದರ್ಶಗಳನ್ನು ಘೋಷಿಸಿಕೊಂಡವನಲ್ಲ, ಸಾರ್ವಜನಿಕ ತಿಳುವಳಿಕೆಗೋ ಕನಿಷ್ಠ ಇತರರಿಗೆ ಪ್ರೇರಣೆಯಾಗುವ ಮಟ್ಟದಲ್ಲೂ ಪ್ರಕಟಗೊಂಡವನೂ ಅಲ್ಲ. ಆದರೆ ಈತ ಸಾಮಾನ್ಯ ಮನುಷ್ಯ ಕರ್ಮಗಳಲ್ಲಿ ಕಾಣಿಸಿದ ಯಾರವೇ (ಕುಟುಂಬ, ಸ್ನೇಹಿತ ವರ್ಗ ಮತ್ತು ಹಿಂದೆ ‘ಬಿಳಿಮನುಷ್ಯ’ನಲ್ಲಿ ಕಂಡಂತೆ ಅಪರಿಚಿತರವು ಕೂಡಾ) ನೋವುಗಳನ್ನು ತನ್ನ ಮಿತಿಯರಿತು ಪರಿಹರಿಸಲು ಸ್ವಲ್ಪವೂ ಹಿಂಜರಿಯದವ.

ದೊ.ದೇವಕಿಯ ತಂದೆ, ಬಹುತೇಕ ಹಳೆಗಾಲದವರಂತೆ ಕಡು ಸಂಪ್ರದಾಯ ನಿಷ್ಠರು. ಶಂಕರನಿಗೆ ಮದುವೆಯಾದ ಹೊಸದರಲ್ಲೇ ದೊ.ದೇವಕಿಯ ಅಣ್ಣನ ‘ವಿಜಾತೀಯ’ (ಕ್ರಿಶ್ಚಿಯನ್) ಪ್ರೇಮವಿವಾಹಕ್ಕೆ, ಮಾವನಿಂದ ಮಾನ್ಯತೆ ಗಳಿಸುವ ಜವಾಬ್ದಾರಿ ಬಂದಿತ್ತು. (ಮಾನ್ಯತೆ ದಕ್ಕದಿದ್ದರೂ ಅಳಿಯ ಮಾವರ ಸಂಬಂಧಕ್ಕೆ ದಕ್ಕೆ ಬರಲಿಲ್ಲ, ದೊ.ದೇವಕಿ ತವರಿಗೆ ಎರವಾಗಲಿಲ್ಲ. ಅಣ್ಣ ದಿಟ್ಟವಾಗಿ ಮದುವೆ, ಸಂಸಾರ, ಅಮೆರಿಕದ ನಾಗರಿಕತೆ ಎಂದೆಲ್ಲ ಯಶಸ್ವಿಯೇ ಆದರೂ ಈ ಭಾವ ತಂಗಿಯರ ಬಗ್ಗೆ ಅಪಾರ ಪ್ರೀತಿ ಜೀವಮಾನವೆಲ್ಲ ಉಳಿಸಿಕೊಂಡಿದ್ದರು. ಇಂದು ಶಂಕರನ ಮಾವನೂ ದೊಡ್ಡ ಭಾವನೂ ಇಲ್ಲ.)

ಹಿಂದೆಲ್ಲ ‘ದೊಡ್ಡಮನೆ’, ಅವಿಭಕ್ತ ಕುಟುಂಬಗಳಲ್ಲಿ ಆದಾಯದ ಮೂಲಗಳು, ದುಡಿಯುವ ಕೈಗಳು ಅನೇಕವಿದ್ದು ಅತಿಥಿ ಸತ್ಕಾರ ಧಾರಾಳ ನಡೆಯುತ್ತಿದ್ದದ್ದು ಗೊತ್ತು. ಆದರೆ ನಗರದ ಮನೆ, ಎಲ್ಲಕ್ಕೂ ಸೀಮಿತ ಸೌಲಭ್ಯಗಳಿದ್ದಲ್ಲೂ ‘ಶ್ರೀಶೈಲ’ದ (ಶಂಕರ ದೇವಕಿಯರ ಮನೆ ಹೆಸರು) ಔದಾರ್ಯ ಎಂದೂ ಸಣ್ಣದಾಗಲೇ ಇಲ್ಲ. ಗೇಟಿನ ಚಿಲಕ ತೆರೆದ ಸದ್ದು ಕೇಳುವಾಗಲೇ ದೊ. ದೇವಕಿ ಹಾಜರಾಗಿ, ಚಿಲಕ ಹಾಕುವುದರೊಳಗೆ “ನಿಮಗೆ ಕಾಫಿಯಾದೀತೋ ಚಾ ಆದೀತೋ…” ಎಂದು ವಿಚಾರಿಸಿಕೊಳ್ಳುತ್ತಿದ್ದ ಉತ್ಸಾಹಕ್ಕೆ ನನ್ನಲ್ಲಿ ಮಾತುಗಳೇ ಇಲ್ಲ. ಬರಿಯ ಒಂದು ಹೊತ್ತಿಗೋ ಒಂದು ದಿನಕ್ಕೋ ಬಂದು ಹೋಗುವವರ ಮಾತು ಬಿಡಿ. ಒಂದೋ ಎರಡೋ ವರ್ಷದುದ್ದಕ್ಕೆ ಸ್ಪಷ್ಟ ಆಶ್ರಯ ಬಯಸಿ ಬಂದ ಬಾದರಾಯಣ ಸಂಬಂಧಿಗಳನ್ನೂ ಪ್ರೀತಿ ಮತ್ತು ಜವಾಬ್ದಾರಿಯಲ್ಲಿ ನಡೆಸಿಕೊಂಡ ಮನೆ ಇವರದು. ನನ್ನ ಸೀಮಿತ ಅನುಭವದಲ್ಲಿ, ಇಂಥ ಇನ್ನೊಂದು ಬೇರೆ ನಾನು ಕಂಡಿಲ್ಲ. ಎ.ಪಿ. ಚಂದ್ರಶೇಖರ, (ಇಂದಿನ) ನಳಿನಿ ಮಾಯ್ಲಂಕೋಡಿ, ಎಸ್. ಜಯಪ್ರಕಾಶ, ರವಿಶಂಕರ ಕಜೆ, (ಇಂದಿನ) ಜಯಲಕ್ಷ್ಮೀ ಜ್ಞಾನಶೇಖರಾದಿಗಳಂತೆ ಅನೇಕ ಮಂದಿ, ಅನೇಕ ಕಾರಣಗಳಿಗೆ ‘ಶಂಕರ-ದೇವಕಿ ಭವನ’ವನ್ನೇ ತಮ್ಮ ದೀರ್ಘ (ಕನಿಷ್ಠ ಒಂದು ವರ್ಷ) ಮಂಗಳೂರು ವಾಸಕ್ಕೆ ಬಳಸಿದ್ದರು. ಹಿರಿಯಕ್ಕನಾಗಿ ದೇವಕಿ ತನ್ನನನುಸರಿಸಿದ ಒಡಹುಟ್ಟಿನವರಿಗೆಲ್ಲ (ಕನಿಷ್ಠ ಎಂಟು ಮಂದಿ) ತಾಯಿಯಾದಷ್ಟೇ ಸಹಜವಾಗಿ, ಶಂಕರ ತಂದೆಯಂತೇ ಸಲಹಿದ್ದ.

ವ್ಯಕ್ತಿ, ಸಂಬಂಧಗಳ ಮಾಹಿತಿ ಸಂಗ್ರಹ, ಸ್ಮರಣೆ, ಕಾಲಕಾಲಕ್ಕೆ ಪರಿಷ್ಕರಣೆ ಮತ್ತು ಸಕಾಲಕ್ಕೆ ಪ್ರಕಟಣೆಯ ಸಾಮರ್ಥ್ಯದಲ್ಲಿ ದೊ.ದೇವಕಿಗೆ ಬಿಟ್ಟವರಿಲ್ಲ ಎಂದೇ ನಮ್ಮೆಲ್ಲ ಕುಟುಂಬಗಳವರ ಅಚಲ ನಂಬಿಕೆ. ಇದು ಸಣ್ಣ ನೆಪವಾಗಿಯೂ ವಿಸ್ತೃತ ಕುಟುಂಬದೊಳಗೆ ಶಂಕರ ದೇವಕಿಯರು ಮಾಡಿಸಿದ ಕಲ್ಯಾಣ ಪ್ರಸಂಗಗಳು ಅಸಂಖ್ಯ. ಮತ್ತೆ ಅನ್ಯ ಕೆಲವು ಸಂಬಂಧಗಳು ಬಿಗಡಾಯಿಸಿಕೊಂಡು ಶಂಕರನಲ್ಲಿ ಬಂದದ್ದೂ ಇದೆ. ಅಂಥಲ್ಲಿ ಆತ ವೃತ್ತಿ ವಕೀಲನ ನೆಲೆಯಲ್ಲಿ ಸೋಡಾಚೀಟಿ ಕಲಾಪ ನಡೆಸುವುದಕ್ಕಿಂತ ಹೆಚ್ಚಿಗೆ, ಮಾನವೀಯ ನೆಲೆಯಲ್ಲಿ ಸಮಾಧಾನಿಸಲು ಹೆಣಗಿದ್ದೇ ಅಪಾರ. ನನ್ನ ತೋರಗಾಣ್ಕೆಯಲ್ಲೇ ಅಂಥವುಗಳ ಪಟ್ಟಿ ಸಾಕಷ್ಟು ದೊಡ್ಡದೇ ಇದೆ. ಆದರೆ ಅದನ್ನು ಸಾರ್ವಜನಿಕದಲ್ಲಿ ಪ್ರಕಟಿಸುವುದು ಅನೌಚಿತ್ಯವಾಗುತ್ತದೆ, ಬೇಡ.

ಅಭಯ ಸಾಕಷ್ಟು ದೊಡ್ಡವನಾಗುವವರೆಗೂ ಇತ್ತ ನನ್ನಪ್ಪಮ್ಮ, ಅತ್ತ ಸ. ದೇವಕಿಯ ಅಪ್ಪಮ್ಮ ಚೆನ್ನಾಗಿಯೇ ಇದ್ದರು. ಆದರೆ ಇವನಿಗೆ ಅವರೆಲ್ಲ ಮೈಸೂರಜ್ಜಜ್ಜಿ, ಕೊಂದ್ಲಕಾನಜ್ಜಜ್ಜಿಯರು! ಏಕೈಕ ಅಜ್ಜಜ್ಜಿ ನಿತ್ಯ ಕಾಣುವ ಶಂಕರ, ದೊ.ದೇವಕಿಯರು! ದೊ.ದೇವಕಿಯ ಓರ್ವ ತಂಗಿ (ವೀಣಾ. ಗಂಡ – ರಾಮಕೃಷ್ಣ, ಕೆ.ಇ.ಬಿ) ಬ್ಯಾಂಕ್ ನೌಕರಿಯಲ್ಲಿದ್ದಳು. ಹಾಗಾಗಿ ಮಗ ಅವಿನಾಶನ ಶಾಲಾ ಬಿಡುವೇಳೆಗಳೆಲ್ಲ ಕಳೆಯುತ್ತಿದ್ದದ್ದು ಶ್ರೀಶೈಲದಲ್ಲೇ (ಶಂಕರ-ದೇವಕಿಯರ ಮನೆ). ಅವಿ, ಅಭಯರು ಸಮವಯಸ್ಕರು. ಅಭಯನಿಗೆ ನಮ್ಮ ಮನೆಯೊಳಗಿನ ‘ಆಡು-ಹುಡಿ’ಗೆ “ಅಪ್ಪನಿಗೆ ಹೇಳುತ್ತೇನೆ” ಭಯ, ಮತ್ತೆ ಅಂಗಳದ ಹಾರಾಟಕ್ಕೂ ಅಮ್ಮನ ಕಾಕದೃಷ್ಟಿಯ ಕಾಟ. ಹಾಗಾಗಿಯೇ ಇರಬೇಕು, ಆ ದಿನಗಳಲ್ಲಿ ಅಭಯನ ಆಟಕ್ಕೆ ನಾಂದಿ ಗೀತೆಯೇ “ಅಜ್ಜೀಮನೆಗೆ ಹೋಗ್ತೇನೆ.” ಈಚೆಗೆ, ಪ್ರಾಯ ಸಂದ ಶಂಕರ, “ಮೈ ಮಾಲುತ್ತದೆ” ಎಂದು ಹಳ್ಳಿಯಿಂದ ತಂದಿದ್ದ ಡೊಂಕು ಕೋಲೂರಿ ನಡೆದಾಡುತ್ತಿದ್ದ. ಇದನ್ನು ನಮ್ಮೆಲ್ಲರಿಗಿಂತಲೂ ಚೆನ್ನಾಗಿ ಗುರುತಿಸಿದವ ಮೊಮ್ಮಗ ಅಭಯ. ಅಮ್ಮನಿಗೆ ಸೂಚನೆ ಕೊಟ್ಟು, ಅಂಗಡಿಯಿಂದ ನೇರ, ಹಗುರ ಮತ್ತು ಗಟ್ಟಿಯಾದ ಬೆತ್ತದ ಕೋಲನ್ನೇ ಕೊಡಿಸಿದ್ದ. ಶಂಕರ ಅದನ್ನು ಯಾವ ಪ್ರಶಸ್ತಿ ಸಮ್ಮಾನ-ಸ್ಮರಣಿಕೆಗಳಿಗಿಂತಲೂ ಹೆಚ್ಚು ನೆಚ್ಚಿ ಬಳಸುತ್ತಲೂ ಇದ್ದ.

ಒದಗಿದ್ದರಲ್ಲೆಲ್ಲ ಒಳ್ಳೆಯದನ್ನು ಕಾಣುವ ಮತ್ತು ಸಾಧಿಸುವ ಪ್ರಯತ್ನ ಶಂಕರನದ್ದು. ಮಂಗಳೂರಿನಲ್ಲಿ ಹವ್ಯಕ ಹುಡುಗಿಯರಿಗೆ ವಸತಿ ನಿಲಯ (ಇಂದಿನ ‘ಭಾರತೀ ವಿದ್ಯಾರ್ಥಿನೀ ನಿಲಯ’) ಸ್ಥಾಪಿಸಿದ ‘ಮೂಲಪುರುಷರ’ ಪಟ್ಟಿ ಮಾಡುವುದಿದ್ದರೆ ಕೈಂತಜೆ ಗೋವಿಂದ ಭಟ್ಟರು, ಕೂಡೂರು ಕೃಷ್ಣ ಭಟ್ಟರು, ಕಾಶಿಮಠ ಶಂಕರನಾರಾಯಣ ಭಟ್ಟರು, ಸಿ ವಿ ಶಾಂತಮ್ಮ ಇವರೊಂದಿಗೆ ಸರಿಮಿಗಿಲಾಗಿ ನಿಂತವರು ಶಂಕರದಂಪತಿ. ಯಾವುದೇ ಸಂಸ್ಥೆಯಂತೆ ಬಾಲಾರಿಷ್ಟಗಳಾದ ಹಣ, ಅನುಭವ ಮತ್ತು ಸಿಬ್ಬಂದಿ ಕೊರತೆಗಳನ್ನು ವಿದ್ಯಾರ್ಥಿನಿ ನಿಲಯ ಎದುರಿಸಿದಾಗ, ಇವರದನ್ನು ತಮ್ಮ ಮನೆಯ ವಿಸ್ತರಣೆ ಎಂಬಂತೇ ಗ್ರಹಿಸಿ ನಡೆಸಿದ್ದರು. ಎಷ್ಟೋ ಬಾರಿ ಅಲ್ಲಿನ ಮಕ್ಕಳೆಲ್ಲ ಶ್ರೀಶೈಲದಲ್ಲೇ ಊಟಕ್ಕಿದ್ದದ್ದು, ವಾಸಿಗಳ ಸಂಖ್ಯೆ ಸಣ್ಣದಿದ್ದು, ಮೇಲ್ವಿಚಾರಕಿ ಇಲ್ಲದಾಗ, ಮಕ್ಕಳಿಗೆ ಭಯವಾದೀತೆಂದು ತಮ್ಮ ಮನೆಗೇ ತಂದು ಉಳಿಸಿಕೊಂಡದ್ದೂ ಇತ್ತು.

ವಕೀಲನಲ್ಲ, ಮಾನವೀಯ ನೆಲೆಯ ಅರ್ಥದಾರಿ – ೯

‘ಕಾನೂನು ಕತ್ತೆ’ ಎನ್ನುವುದು ಲೋಕರೂಢಿಯ ಮಾತು. ಆದರೆ ಹಾಗಲ್ಲ, ಎಂದು ವೃತ್ತಿ ವಕೀಲನಾಗಿ ಅದನ್ನು ಮಾನವೀಯತೆಗೆ ದುಡಿಸುವ ಅರ್ಥದಾರಿಯಂತೇ ಜೀವನ ನಿರ್ವಹಿಸಿದವ ಶಂಕರ. ಪುತ್ತೂರಿನಲ್ಲಿದ್ದಾಗ ಶಂಕರನಿಗೆ ಕೃಷಿಕರ ಸಂಪರ್ಕ ಹೆಚ್ಚಿತ್ತು. ಅವರು ವ್ಯಾಜ್ಯದೊಡನೆ, ಪ್ರೀತಿಯಿಂದ ತಂದೊಪ್ಪಿಸುತ್ತಿದ್ದ ಹಸಿರುವಾಣಿಗೆ ಈತ ಮನಕರಗಿ, ಫೀಸು ಕೇಳಲು ದಾಕ್ಷಿಣ್ಯಪಟ್ಟು, ಮನೆಗೆ ಬಂದಾಗ ದೊ.ದೇವಕಿಯಿಂದ ‘ತರಕಾರಿ ವಕೀಲ’ ಎಂದು ತಮಾಷೆಗೀಡಾದದ್ದೂ ಇತ್ತು! ಈ ಮಾನವಪ್ರೇಮಾಧಾರಿತ ವೃತ್ತಿ ನಿರ್ವಹಣೆಗೆ, ಶಂಕರನಿಗೆ ಅವನಪ್ಪನೇ (ಎ.ಪಿ.ಸುಬ್ಬಯ್ಯ, ನನ್ನಜ್ಜ) ಆದರ್ಶ. ಜತೆಗೇ ಅಜ್ಜನ ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯಗಳ ವೈವಿಧ್ಯಮಯ ದೊಡ್ಡ ಗ್ರಂಥಭಂಡಾರದ ವಾರೀಸುದಾರಿಕೆಯೂ ಶಂಕರನಿಗೆ ಬಂದಿತ್ತು. ಅದರ ಅಧ್ಯಯನದ ಫಲವೂ ಈ ಔದಾರ್ಯದಲ್ಲಿ ಪ್ರತಿಫಲಿಸಿತ್ತು.

ಶಂಕರ ಬಹಳ ದೊಡ್ಡ ಹಾಗೂ ಸಹೃದಯೀ ಓದುಗ. ಇದು ಆತನ ವಕೀಲೀವೃತ್ತಿಯಲ್ಲಿನ ತಾತ್ತ್ವಿಕ ನೆಲೆಯ ಹೋರಾಟಗಳಿಗೆ, ಅಂದರೆ ಈಗಾಗಲೇ ಹೇಳಿದಂತೆ ಮೂಲಗೇಣಿಯಂಥ ಜಟಿಲ ಸಮಸ್ಯೆಗಳಿಗೆ, ನ್ಯಾಯಿಕ ಪರಿಹಾರ ಒದಗಿಸುವಲ್ಲಿ ಬಹಳ ಪರಿಣಾಮಕಾರಿಯಾಗಿತ್ತು. ಶಂಕರನ ಅಧ್ಯಯನಶೀಲತೆಗೆ ಉದಾಹರಣೆಯಾಗಿ ಕೆಲವು ಪ್ರಸಂಗಗಳ ಮಿಂಚು ನೋಟವನ್ನಷ್ಟೇ ದಾಖಲಿಸುತ್ತೇನೆ.

ನಮ್ಮ ದೇಶದಲ್ಲಿ ಜ್ಞಾನಕ್ಕೆ ಗೌರವಸೂಚಕವಾಗಿ ‘ಓದುವ ಪುಸ್ತಕ’ಗಳಿಗೆ ಮಾರಾಟ ಕರ ಸೇರಿದಂತೆ ಯಾವುದೇ ಕರಬಾಧೆ ಇಲ್ಲ. ಅವನ್ನು ಇಂಗ್ಲಿಷಿನಲ್ಲಿ ತಪ್ಪಾಗಿ ‘ಪ್ರಿಂಟೆಡ್ ಬುಕ್ಸ್’ (ಮುದ್ರಿತ ಪುಸ್ತಕಗಳು) ಎಂದೇ ಹೇಳುತ್ತಿದ್ದರು. ವಾಸ್ತವದಲ್ಲಿ ಮುದ್ರಿತವೇ ಆಗಿದ್ದರೂ ಒಟ್ಟಾರೆ ಅಧ್ಯಯನಕ್ಕೆ ಒದಗದ ಗೀಟು, ಚೌಕ, ಚಿತ್ರ, ನಕ್ಷಾಸಂಗ್ರಹವೇ ಮುಂತಾದವನ್ನು ಸ್ಟೇಶನರಿ ಎಂಬ ವರ್ಗಕ್ಕೆ ಸೇರಿಸಿ ಕರಭಾರ ವಿಧಿಸುತ್ತಿದ್ದರು. ನಾನು ಬುದ್ಧಿಪೂರ್ವಕವಾಗಿ ‘ಓದುವ ಪುಸ್ತಕ’ಗಳ ವ್ಯಾಪಾರಿಯಾಗಿ, ಯಾವತ್ತೂ ಮಾರಾಟಕರ ಇಲಾಖೆಯ ಭ್ರಷ್ಟ ಕೈಗಳಿಗೆ ಸಿಲುಕಿಕೊಳ್ಳಲೇ ಇಲ್ಲ. ಆಕ್ಟ್ರಾಯ್ ಪುನರುಜ್ಜೀವನ ಕಂಡ ಹೊಸತರಲ್ಲೊಮ್ಮೆ ಮಂಗಳೂರು ನಗರಪಾಲಿಕೆ ನನ್ನ ಬಿಲ್ಲುಗಳಲ್ಲಿ ಕಾಣಿಸಿದ ನಿಘಂಟು, ಅಟ್ಲಾಸುಗಳನ್ನು ‘ಓದುವ ಪುಸ್ತಕ’ವಲ್ಲ ಎಂದು ಕುತರ್ಕ ಹೂಡಿ ಕರ ವಸೂಲಿಗಿಳಿದರು. ಅವು ಬರಿಯ ನಕ್ಷಾ ಸಂಗ್ರಹಗಳಲ್ಲ, ಸಾಕಷ್ಟು ಲಿಖಿತ ಭೌಗೋಳಿಕ ಮಾಹಿತಿಗಳ ಕೋಶ, ಕರಭಾರ ತಪ್ಪು ಎಂಬ ನನ್ನ ಪ್ರತಿಭಟನೆಗೆ, ಶಂಕರ ಬೆಂಬಲಕ್ಕೆ ಬಂದ. ಆತ ಮೂರು ಮೂರು ನಿಘಂಟುಗಳನ್ನೇ ಹೊತ್ತುಕೊಂಡು ನನ್ನ ಜತೆ ಪಾಲಿಕೆಯ ಕಚೇರಿಗೆ ಬಂದು, “ಯಾರೂ ನಿಘಂಟನ್ನು ಬರಿದೇ ನೋಡುವುದಿಲ್ಲ, ಅಧ್ಯಯನ ಮಾಡುತ್ತಾರೆ….” ಎಂದು ವಿವರಿಸುವ ಶ್ರಮ ತೆಗೆದುಕೊಂಡದ್ದು ಶುದ್ಧ ಸಾಹಿತ್ಯಪ್ರೇಮದಿಂದ. (ವಿನಾಯ್ತಿ ಸಿಕ್ಕಿತು.) ಮುಂದೊಂದು ದಿನ (ಬಹುಶಃ ಎಸ್ಸೆಮ್ ಕೃಷ್ಣ ಅರ್ಥ ಸಚಿವನಾಗಿ) ಮುಂಗಡಪತ್ರದಲ್ಲಿ ಸ್ಪಷ್ಟವಾಗಿ ಓದುವ ಪುಸ್ತಕಗಳಿಗೇ ೪% ಮಾರಾಟ ಕರದ (ಪ್ರಸ್ತಾವ) ಭಯೋತ್ಪಾದನೆ ಮಾಡಿದಾಗ, ಮಂಗಳೂರಿನ ಪುಸ್ತಕ ಮಾರಾಟಗಾರರು ಹೋರಾಟ ನಡೆಸಿ ಯಶಸ್ವೀಯಾಗಲು ‘ಬೆನ್ನ ಬಲ’ ಕೊಟ್ಟದ್ದೂ ಅದೇ ಶಂಕರವಾದ!

ಶಿವರಾಮ ಕಾರಂತರ ‘ಬೆಟ್ಟದ ಜೀವ’ ಕಾದಂಬರಿಯನ್ನು ಯಾರೋ ಹಿಂದಿಗೆ ‘ಕಾನನ್ ಜೀವ್’ ಎಂದು ಅನುವಾದ ಮಾಡಿದ್ದರು. ಅದನ್ನು ದಿಲ್ಲಿಯ ಪ್ರಸಿದ್ಧ ಪ್ರಕಾಶನ ಸಂಸ್ಥೆ – ಎಸ್. ಚಾಂದ್ ಅಂ. ಕಂ., ಪ್ರಕಟಿಸಿ, ಧಾರಾಳ ಮಾರಿಕೊಂಡಿತ್ತು. ಉತ್ತರ ಭಾರತದ ಯಾವ್ಯಾವುದೋ ವಿವಿ ನಿಲಯಗಳಿಗೆ ಪಠ್ಯ, ಉಪ ಪಠ್ಯದಂತೆ ಶಿಫಾರಸು ಪಡೆದು, ಪ್ರಕಾಶಕರಿಗೆ ಸಾಕಷ್ಟು ಹಣ ತಂದಂತಿತ್ತು. ಅದರ ಒಂಬತ್ತನೇ ಮರುಮುದ್ರಣದ ಕಾಲದಲ್ಲಿ (ನವೀ ಆವೃತ್ತಿ), ನಾನದನ್ನು ಕಂಡು, ವ್ಯಾಪಾರಕ್ಕೆಂದೇ ತರಿಸಿದ್ದೆ. ಕುಟುಂಬ ಮಿತ್ರನ ನೆಲೆಯಲ್ಲಿ, ಶಿವರಾಮ ಕಾರಂತರು ಪರಿಚಿತರೇ ಇದ್ದುದರಿಂದ ಹೀಗೇ ಅದನ್ನು ಕಾರಂತರ ಗಮನಕ್ಕೂ ತಂದೆ. ತಮಾಷೆ ಎಂದರೆ, ಅದು ಕಾರಂತರಿಗೆ ಹೊಸಸುದ್ದಿ! ಹೀಗೆ ತೊಡಗಿಕೊಂಡ ಬರಹಗಾರನ ಸ್ವಾಮ್ಯದ (ಲೇಖಕನ ಹಕ್ಕು) ಉಲ್ಲಂಘನೆ ಪ್ರಕರಣದ ನ್ಯಾಯಿಕ ಹೋರಾಟಕ್ಕೆ, ಸಹಜ ಆಯ್ಕೆಯಾಗಿ ಒದಗಿದ ವಕೀಲ ಗೌರೀಶಂಕರ. ಈ ಪ್ರಕರಣ ಸಣ್ಣದಾಗಿ ಒಂದು ಐತಿಹಾಸಿಕ ಹೋರಾಟವೇ ಆಯ್ತು.

ಮಂಗಳೂರಿನ ನ್ಯಾಯಾಲಯ ಕಾನನ್ ಜೀವ್ ಪ್ರಕರಣವನ್ನು ರಾಷ್ಟ್ರೀಯ ಮಟ್ಟದ ಲೇಖಕಕರ ಹಕ್ಕಿನ ಟ್ರಿಬ್ಯೂನಲ್ಲಿಗೆ ಶಿಫಾರಸು ಮಾಡಿಬಿಟ್ಟಿತು. ಅದರ ಬೈಠಕ್ಕುಗಳು ಸರಕಾರೀ ಖರ್ಚಿನಲ್ಲಿ, ಸದಸ್ಯರ ಖಯಾಲಿಯಲ್ಲಿ (ಮೋಜಿನಲ್ಲಿ?), ಅಕ್ಷರಶಃ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಎಂದೂ ಎಲ್ಲೂ ನಡೆಯಬಹುದಿತ್ತು. ಆದರೆ ನ್ಯಾಯಾರ್ಥಿಗಳೋ ಸ್ವಂತ ಶ್ರಮ ಮತ್ತು ಖರ್ಚಿನಲ್ಲಿ ಆಯಾ ಸ್ಥಳಗಳಿಗೆ ಹೋಗಿ ಮಾಮೂಲೀ ನ್ಯಾಯಾಲಯಗಳಂತೆ ಮರ್ಜಿ ಕಾಯುವ ಸಂಕಟ ಅನುಭವಿಸಬೇಕಿತ್ತು. ಟ್ರಿಬ್ಯೂನಲ್ ನಮ್ಮ ನ್ಯಾಯ (ಅ)ವ್ಯವಸ್ಥೆಯ ಎಲ್ಲ ದೌರ್ಬಲ್ಯಗಳನ್ನು, ಮುಖ್ಯವಾಗಿ ಪಿಳ್ಳೆ ನೆಪಕ್ಕೂ ವಿಚಾರಣೆಯನ್ನು ಅನಿರ್ದಿಷ್ಟವಾಗಿ ಮುಂದೂಡುವ ಸ್ವಭಾವವನ್ನು ಹೊಂದಿಕೊಂಡೇ ನಡೆಯುತ್ತವೆ. ಅಂಥ ಒಂದು ಬೈಠಕ್, ಕಾರಂತರ ವ್ಯಾಜ್ಯಕಾಲದಲ್ಲಿ ರಾಜಸ್ತಾನದ ಜೈಪುರದಲ್ಲಿ ನಿಶ್ಚಯವಾಗಿತ್ತು. ಅದರ ಅಸಾಮಾನ್ಯ ಖರ್ಚು ಮತ್ತು ತೀರ್ಪಿನ ಅನಿಶ್ಚಿತತೆಯನ್ನು ಶಂಕರ ಕಾರಂತರಿಗೆ ಮನಗಾಣಿಸಿದ. ಹಿತೈಷಿಯಾಗಿ, ಭಾಗವಹಿಸುವುದನ್ನು ಕೈಬಿಟ್ಟು, “ಬಂದದ್ದು ಬರಲಿ” ಎಂದು ಕಾಯುವುದನ್ನೇ ಶಿಫಾರಸು ಮಾಡಿದ. ಕಾರಂತರಾದರೋ ನಿಜ ಜೀವನದ ಕೊನೆಯ ದಿನಗಳಲ್ಲಿದ್ದರೂ (ಕಡಲತಡಿಯ ಭಾರ್ಗವ ಎಂಬ ವಿಶೇಷಣಕ್ಕೆ ತಕ್ಕಂತೆ) ಭಾರ್ಗವ-ದೃಢತೆಯನ್ನೇ ತೋರಿದರು. ಶಂಕರನಿಗೆ ವಿಮಾನದ ಟಿಕೆಟ್ಟೂ, ಉಳಿದ ಖರ್ಚಿಗೆ ಹಣವನ್ನೂ ಕೊಟ್ಟು ಕಲಾಪ ಮುಂದುವರಿಸುವಂತೆ ನೋಡಿಕೊಂಡರು. ಹಾಗಾಗಿ ಮತ್ತೆಷ್ಟೋ ಕಾಲ ವ್ಯಾಜ್ಯ ‘ಕಟಕಟೆ’ಗಳ ಓಡಾಟ ನಡೆಸಿದರೂ ಅಕ್ಷರಶಃ ಕಾರಂತರ ಅಂತಿಮ ಶ್ವಾಸದ ಗಳಿಗೆಯಲ್ಲಿ ತೀರ್ಪು ಅವರ ಪರವಾಗಿ ಬಂತು. ಇದು ನಿಸ್ಸಂದೇಹವಾಗಿ ಶಂಕರನ ನ್ಯಾಯ ಕಾಳಜಿಗೂ ಹಿಡಿದ ಕನ್ನಡಿ.

ಶಿವರಾಮ ಕಾರಂತರ ಪ್ರಕರಣ ಶಂಕರನನ್ನು ‘ಲೇಖಕರ ಹಕ್ಕು’ಗಳ ಪ್ರತಿಪಾದಕನೆಂದೇ ಪ್ರಸಿದ್ಧಿಸಿತು. ಸಹಜವಾಗಿ ಎನ್ನುವಂತೆ, ಬಿವಿ ಕಾರಂತರ ಮರಣೋತ್ತರದಲ್ಲಿ ಅವರ ಆತ್ಮಕಥೆ – ‘ಇಲ್ಲಿರಲಾರೆ….’ಗೆ ಪುಸ್ತಕದ ಹಕ್ಕಿನ ಪಂಚಾಯ್ತಿ ಶಂಕರನಿಗೆ ತಗುಲಿಕೊಂಡಿತು. ಪ್ರಕರಣ ಇಷ್ಟೇ: ವೈದೇಹಿ ಬಿವಿ ಕಾರಂತ ಹಾಗೂ ಅವರ ಅಸಂಖ್ಯ ಪರಿಚಿತರ ಸಂದರ್ಶನಗಳು ಅವಕ್ಕಾಗಿ ಹಲವು ಓಡಾಟಗಳನ್ನು ನಡೆಸಿ, ಸಮರ್ಥ ಲೇಖಕಿಯ ನೆಲೆಯಲ್ಲಿ ಪುಸ್ತಕ ಸಿದ್ಧಪಡಿಸಿದ್ದರು. ಅದನ್ನು ಪ್ರಿಸಂ ಪ್ರಕಾಶನ ಪ್ರಕಟಿಸುವುದಿತ್ತು. ಈ ನಡುವೆ ಬಿವಿ ಕಾರಂತರು ತೀರಿಕೊಂಡರು. ಸಹಜವಾಗಿ ಅವರ ಹೆಂಡತಿ – ಪ್ರೇಮಾ ಕಾರಂತ, ಏಕೈಕ ಉತ್ತರಾಧಿಕಾರಿಯ ನೆಲೆಯಲ್ಲಿ ‘ಆತ್ಮಕಥನ’ದ ಹಕ್ಕುಗಳೂ ತನ್ನವೆಂದು ಸಾಧಿಸಲು ಹೊರಟರು. ಇಲ್ಲಿ ಭಿನ್ನ ನೆಲೆಯಲ್ಲಿ ಪ್ರೇಮ ಮತ್ತು ವೈದೇಹಿ – ಇಬ್ಬರಲ್ಲೂ ನ್ಯಾಯವಿತ್ತು. ಇದನ್ನು ಯಾರಿಗೂ ವಿಶೇಷ ನೋವಿಲ್ಲದಂತೆ ರಾಜಿ ಮಾಡಿಸಿ, ಅಪೂರ್ವ ಕೃತಿ ಬೆಳಕು ಕಾಣಲು ಕಾರಣನಾದವನು ಶಂಕರ.

ಸಾರಾ ಅಬೂಬಕ್ಕರ್ ಅವರ ಕಾದಂಬರಿ – ‘ಚಂದ್ರಗಿರಿಯ ತೀರದಲ್ಲಿ’ ಮಲಯಾಳದಲ್ಲಿ ಸಿನಿಮಾವಾಯ್ತು. ಸಾರಾ ತನ್ನ ಹಕ್ಕುಚ್ಯುತಿಯಾದ ಕುರಿತು ವ್ಯಾಜ್ಯ ಹೂಡುವುದು ಅನಿವಾರ್ಯವಾಗಿ, ಶಂಕರನ ಮೊರೆಹೋದರು. ಈ ವೇಳೆಗೆ ಶಂಕರ ಪ್ರಾಯ ಸಹಜವಾಗಿ ನಿವೃತ್ತಿಯ ದಾರಿಯಲ್ಲಿದ್ದ. ಆದರೆ ಸಾರಾ ಅವರ ಒತ್ತಾಯ ಮತ್ತು ಸಿನಿಮಾ ನಿರ್ಮಾಪಕ/ ನಿರ್ದೇಶಕರ ಉಡಾಫೆ, ಶಂಕರನ ಸಾತ್ತ್ವಿಕ ಶಕ್ತಿಗೆ ಸವಾಲಾದ್ದರಿಂದ ವಕಾಲತ್ತು ವಹಿಸಿಕೊಂಡ. ಸಿನಿಮಾದವರು ಮೊದಲಲ್ಲಿ ಲೇಖಕ ಹಕ್ಕನ್ನು ಹಗುರ ಮಾಡಿದರು, ಕತೆ ಸ್ವಂತದ್ದೇ ಎಂದೂ ಹೇಳಿಕೊಂಡರು. ಶಂಕರ ತನ್ನ ದೈಹಿಕ ಅಸೌಖ್ಯಗಳ ಜತೆಗೆ ‘ಚಂದ್ರಗಿರಿ’ಗೆ ಒಂದು ಸ್ವಸ್ಥ ದಡ ಕಾಣಿಸಬೇಕೆಂದು ಬಹಳ ದುಡಿದ. ವೈದ್ಯರಿಂದ ವೈದ್ಯ, ನರ್ಸಿಂಗ್ ಹೋಂ – ಮನೆ ಓಡಾಟಗಳ ನಡುವೆ ‘ಚಂದ್ರಗಿರಿ ವ್ಯಾಜ್ಯ’ವನ್ನು ಶಂಕರ ಕೊನೆಯಾಸೆಯಂತೇ ಸಲಹಿದ. ಆದರೆ ವಿಧಿ ಅದನ್ನು ನಡೆಯಗೊಡಲಿಲ್ಲ. ಇಂದು ಶಂಕರನ ಕಛೇರಿಯ ಕಿರಿಯರಿಗೆ (ಪ್ರಾಯದಲ್ಲಿ ಬಹುತೇಕ ಸಮಕಾಲೀನರು) ‘ಚಂದ್ರಗಿರಿ…’ಗೆ ತಾರ್ಕಿಕ ಕೊನೆ ಕಾಣಿಸುವಲ್ಲಿ ಶಂಕರ ಬಿಟ್ಟುಹೋದ ಬೆಳಕೇ ದಾರಿದೀಪ!

ಉದಾರ ಹೃದಯಿ – ೧೦

ಸ. ದೇವಕಿ ನೆನಪಿಸಿದ್ದು: ಕೋರ್ಟಿಂದ ಬರುತ್ತಿದ್ದ ಶಂಕರನಿಗೆ ‘ಕರುಣಾಜನಕ ಕತೆ’ಯೊಡನೆ, ಯಾರೋ ‘ಪರ ಊರಿನವ’, ಮರುಪಯಣಕ್ಕೆ ಹಣಸಾಲದೇ ಬಂದಂತೆ ತಗುಲಿಕೊಂಡ. ಶಂಕರ ತನ್ನ ಕಿಸೆ ತಡವಿ, ಬರಿಯ ಹತ್ತಿಪ್ಪತ್ತು ರೂಪಾಯಿ ಮಾತ್ರ ಇದ್ದುದಕ್ಕೆ ಬೇಸರಿಸಿ, ಆತನನ್ನು ಮನೆಗೇ ಕರೆತಂದ. ಶಂಕರ ಆತನನ್ನು ಹೊರಗೇ ನಿಲ್ಲಿಸಿ, ತನ್ನ ಕಪಾಟಿಂದ ಹಣ ತೆಗೆಯುತ್ತಿದ್ದಾಗ ಅನ್ಯ ಕಾರ್ಯಾರ್ಥ ಅಲ್ಲಿದ್ದ (ನನ್ನ ಹೆಂಡತಿ) ಸ.ದೇವಕಿ “ಇಂಥವರು ನಮ್ಮಂಗಡಿಗೆ ಎಷ್ಟು ಬರ್ತಾರೆ ಶಂಕರಪ್ಪಚ್ಚಿ. ಬಹುತೇಕ ಮೋಸ….” ಎಂದು ಹೇಳಿದ್ದಳು. ಆದರೆ ಶಂಕರನಿಗೆ ಲೋಕಜ್ಞಾನದ ಕೊರತೆಯೇನೂ ಇರಲಿಲ್ಲ, “ಹೋಗಲಿ ಬಿಡು, (ಸುಳ್ಳೇ ಹೇಳಿದರೂ ಅವನ ದಾರಿದ್ರ್ಯ ಅಷ್ಟು ಕಡಿಮೆಯಾಯ್ತಲ್ಲ ಎನ್ನುವ ಭಾವದಲ್ಲಿ) ಯಾರ್ಯಾರಿಗೋ ಎಷ್ಟೆಷ್ಟೋ ಅನವಶ್ಯಕ ಕೊಡುತ್ತೇವೆ. ಇಂವ ಬಿಕ್ಷೆಯಾಗಿಯೇ ಕೇಳಿದ್ದಾನೆ. ನಾವು (ಮರಣಿಸಿದಾಗ) ತೆಗೊಂಡು ಹೋಗಲಿಕ್ಕುಂಟಾ….” ಅವನಿಗೆ ‘ಪೂರ್ಣ ಬಸ್ ಚಾರ್ಜೇ’ ಕೊಟ್ಟು ಕಳಿಸಿದ್ದ! ಹೀಗೆ ನಮ್ಮ ದಾರಿಯಲ್ಲಿ ಆಗಾಗ ಎದುರಾಗುವ ಡೊಂಕು ಮೈಯ, ಕಡಿಮೆ ಬುದ್ಧಿಶಕ್ತಿಯ, ಯಾರದೋ ಮನೆಗೆಲಸದವನಿಗೂ ದಾರಿ ಸಾಗುವಾಗ ಕರುಣಾಜನಕವಾಗಿ ಕಂಡವರಿಗೆಲ್ಲ, ತನ್ನ ಕಿಸೆ ಖಾಲಿ ಮಾಡಿದ್ದೂ ಉಂಟು. ಶಂಕರನ ಸ್ಕೂಟರ್ ಸಾಮಾನ್ಯ ಸವಾರಿಗೆ ಸರಿಯಾಗಿಯೇ ಓಡುವ ಸ್ಥಿತಿಯಲ್ಲಿತ್ತು. ಈ ಎಂಬತ್ತರ ಪ್ರಾಯದ ಆಸುಪಾಸಿನಲ್ಲಿ ಒಂದು ದಿನ ಶಂಕರನಿಗೆ ತಾನಿನ್ನು ಸ್ಕೂಟರ್ ಬಿಡುವುದು ಇತರರಿಗೆ ಅಪಾಯಕಾರಿ ಎಂದು ಕಂಡಿತಂತೆ. ಅಂಥ ಸಂದರ್ಭದಲ್ಲಿ ನಾವೆಲ್ಲ ಸಹಜವಾಗಿ ಅದನ್ನು ಸಿಕ್ಕ ಬೆಲೆಗೆ ಮಾರುವ ಯೋಚನೆ ಮಾಡುತ್ತೇವೆ. ಶಂಕರ ಅದನ್ನು ಕೆಳದಾರಿಯ ಓರ್ವ ಬಡ ಮೋಟಾರ್ ಮೆಕ್ಯಾನಿಕ್ಕಿಗೆ ದಾನ ಮಾಡಿದಂತೇ ಕೊಟ್ಟುಬಿಟ್ಟ. ಆತ ಮಾತಿನುಪಚಾರಕ್ಕೆ “ಮಾರಿ ಹೋದರೆ ಕಾಸು ಕೊಡ್ತೇನೆ” ಎಂದೇನೋ ಹೇಳಿದ್ದ. ಶಂಕರನ ನಿರೀಕ್ಷೆಯಂತೆ ಹಾಗೇನೂ ಆಗಲಿಲ್ಲ!

ಪುತ್ತೂರಿನ ಅಜ್ಜನ ಮನೆಯ ಸಂಪ್ರದಾಯದಲ್ಲಿ ದಾನ ಯಾವತ್ತೂ ಕಡಿಮೆಯಾದದ್ದಿಲ್ಲ. ಆ ಕಾಲದ ಪುತ್ತೂರಿನಲ್ಲಿ ಶನಿವಾರ ಬಿಕ್ಷುಕರ ದಿನವೆಂದೇ ಅಲಿಖಿತ ಶಾಸನ ಇತ್ತು. ಶನಿವಾರ ಬಂತೆಂದರೆ ಬೆಳಿಗ್ಗೆಯೇ ಮನೆಯ ಎದುರು ಕಿಟಕಿಯ ಬುಡದಲ್ಲಿ ಒಂದು ಬುಟ್ಟಿಯೂ ಅದರೊಳಗೊಂದು ಸೌಟೂ ಇರುತ್ತಿತ್ತು. ಅಂದು ಕನಿಷ್ಠ ಐವತ್ತರವತ್ತು ಮಂದಿ, ಎಲ್ಲ ಮನೆಮನೆ ಸುತ್ತಿಕೊಂಡು ಅಜ್ಜನ ಮನೆಗೂ ಬರುತ್ತಿದ್ದರು. ಮಕ್ಕಳಿಗೋ “ದಾನಪಾಡ್ಲೇ” ಧ್ವನಿ ಕೇಳಿದ್ದೇ, ಇದ್ದ ಆಟ ಬಿಟ್ಟು ಓಡಿಹೋಗಿ ತಲೆಗೆ ಒಂದು ಸೌಟಿನ ಲೆಕ್ಕದಲ್ಲಿ ಅಕ್ಕಿ ಕೊಡುವ ಸಂಭ್ರಮ! ಕೆಲವು ಬಿಕ್ಷುಕರು ತಲೆ ಲೆಕ್ಕ ಹೆಚ್ಚಿಸಲು ಮನೆಯ ಚಿಳ್ಳೆಪಿಳ್ಳೆಗಳ ಕೈಗೂ ಕರಟ ಕೊಟ್ಟು ಕರೆತರುತ್ತಿದ್ದರು. ಆದರೆ ಶನಿವಾರದ ಲಗಾವಿಲ್ಲದೆಯೂ ಕೆಲವು ವಿಶೇಷ ಬಿಕ್ಷುಕರು ಅಜ್ಜನ ಮನೆಯನ್ನೇ ಹುಡುಕಿಕೊಂಡು ಬರುವುದಿತ್ತು. ಅಂಥವರಲ್ಲಿ ಒಬ್ಬಾಕೆ, ಮುದುಕಿ, ಅಜ್ಜಿಯನ್ನೇ ಸಂಬೋಧಿಸಿ “ದಾನ ಪಾಡ್ಲೇ ದೆತ್ತೀ” ಎಂದೇ ಕರೆಯುತ್ತಿದ್ದಳು. ಆಗ ನಾವೆಲ್ಲ ತಮಾಷೆಗೆ “ಅಜ್ಜಿಯ ದಾನ್ಪಾರ್ ದೆತ್ತಿ ಬಂದಳು” ಎಂದೇ ಗುರುತಿಸುತ್ತಿದ್ದೆವು. ಅಂಥದ್ದೇ ಇನ್ನೊಂದು, ತೀವ್ರ ವಿಷಾದದೊಡನೆ ನೆನಪಾಗುವುದು – ಓರ್ವ ಭಟ್ಟರ ಕುಟುಂಬ! ಪುತ್ತೂರಿನ ಖ್ಯಾತ ಮಹಾಲಿಂಗೇಶ್ವರ ದೇವಳದ ವರ್ಷಾವಧಿ ಜಾತ್ರೆಯ ಸಮಯದಲ್ಲಿ ಬಲ್ನಾಡಿನಿಂದ ಉಳ್ಳಾಲ್ತಿಯ ಭಂಡಾರ ಬರುತ್ತದೆ. ಆ ದಿನಗಳಲ್ಲಿ ಈ ಭಟ್ಟರೇ ಉಳ್ಳಾಲ್ತಿಯ ದರ್ಶನಪಾತ್ರಿ, ಆದರೆ ಉಳಿದ ದಿನಗಳಲ್ಲಿ, ನಾನು ಕೇಳಿದಂತೆ, ಆತ ಅತಿ ಕುಡುಕತನದಿಂದ ತಾನು ಹಾಳಾದ್ದಲ್ಲದೆ, ತನ್ನ ಕುಟುಂಬವನ್ನು ಬಿಕ್ಷಾನ್ನಕ್ಕೆ ದೂಡಿದ್ದ. ಆತನ ಹೆಂಡತಿ ಮತ್ತು ಮಗಳೂ ಅನಿಯತವಾಗಿ ಅಜ್ಜನ ಮನೆಯ ಬಿಕ್ಷಾನ್ನಕ್ಕೆ ಬರುವುದಿತ್ತು. ಈ ವಿಶೇಷದಲ್ಲೂ ವಿಶೇಷ ವೀರಪ್ಪ!

ಅಲ್ಲಿ ಶಂಕರನ ಕಚೇರಿಯ ಸಪುರ ಜಗುಲಿ ಕುರಿತು ಹೇಳಿದ್ದನ್ನು ನೆನಪಿಸಿಕೊಳ್ಳಿ. ಆ ಇಕ್ಕಟ್ಟಿನ ಕೊನೆಯಲ್ಲಿ ಒಬ್ಬ ಕೆಟ್ಟಬಾಯಿಯ ಬಿಕ್ಷುಕ – ವೀರಪ್ಪ, ಕೇವಲ ಶಂಕರನ ಔದಾರ್ಯದಲ್ಲಿ ವಸತಿ ಹೂಡಿದ್ದ. (ಒಂದು ಸಂಜೆ ನನ್ನಜ್ಜನೊಡನೆ ಅಲ್ಲಿ ಮಾಮೂಲೀ ಬೈಠಕ್ ನಡೆಸಿದ್ದ ಶಿವರಾಮ ಕಾರಂತರು, ಈ ವೀರಪ್ಪನ ಗದ್ದಲ ಕೇಳಿ ರೋಸಿ, ಆತನಿಗೆ ಡಿಬ್ಬೆಂದು ಎರಡು ಬೆನ್ನಗುದ್ದು ಕೊಟ್ಟದ್ದೂ ಇತ್ತು!) ಕೆಲವೊಮ್ಮೆ ಆ ವೀರಪ್ಪ ಕೋರ್ಟು ಮುಗಿಸಿ ಮನೆಗೆ ಬರುವ ಶಂಕರನ ಬೆನ್ನು ಹಿಡಿದಂತೇ ಮನೆಗೂ ಬರುವುದಿತ್ತು. ಅವನಿಗೆ ಹೊತ್ತುಗಳೇನೂ ಇರಲಿಲ್ಲ. ಮತ್ತೆ ಮಾಮೂಲೀ ಬಿಕ್ಷೆಯೆಂದು ಐದೋ ಹತ್ತು ಪೈಸೆ ಅಥವಾ ಮುಷ್ಟಿ ಅಕ್ಕಿ ಎಲ್ಲ ಕೊಟ್ಟರೆ ವೀರಪ್ಪ ದೊಡ್ಡ ಧ್ವನಿ ತೆಗೆಯುತ್ತಿದ್ದ. ಊಟಕ್ಕಿಂತ ಕಡಿಮೆ ಏನೂ ತೆಗೆದುಕೊಳ್ಳದ ಹಠ ಅವನದ್ದು. ಅಜ್ಜಿ ಒಮ್ಮೆ ಅನ್ನ ಸ್ವಲ್ಪ ಕಡಿಮೆಯಿದ್ದುದರಿಂದ ಬೆಳಗ್ಗೆ ಮಾಡಿದ್ದ ಎರಡು ರೊಟ್ಟಿ ಸಹಿತ ಕೊಟ್ಟಾಗ ಈ ವೀರಪ್ಪ “ದಾನೆ ಇನಿ ಪ್ಲೇಟ್ ಮೀಲಾ” ಎಂದು ಗೇಲಿ ಮಾಡಿಯೇ ತಿಂದು ಹೋಗಿದ್ದ. ಆದರೆ ಶಂಕರ ಕಾರುಣ್ಯ ಮಾತ್ರ ಎಂದೂ ಕಡಿಮೆಯಾಗಲೇ ಇಲ್ಲ. (ಅವನಿಗೆ ಒಂದೆರಡು ಸಲ ಶಂಕರ ಉಡುವ ಬಟ್ಟೆ ಕೊಟ್ಟ ಗುಟ್ಟು ‘ನನಗೆ ಮಾತ್ರ’ ಎನ್ನುವಂತೆ ಮನೆಯವರಿಗೆಲ್ಲ ತಿಳಿದಿತ್ತು) ಅವನ ಬೊಬ್ಬೆ ಕೇಳಿದ್ದೇ ಮನೆಯ ಎಲ್ಲರೂ “ಶಂಕರನ ವೀರಪ್ಪ ಬಂದ” ಎಂದೇ ಗುರುತಿಸುತ್ತಿದ್ದದ್ದು ಸುಮ್ಮನಲ್ಲ!

ಅಮ್ಮನಿಗೂ ‘ಪಾಲು’ ಬಂತು! – ೧೧

ಶಂಕರನ ಕುರಿತು ನಳಿನಿ ಮಾಯ್ಲಂಕೋಡಿ ಫೇಸ್ ಬುಕ್ಕಿನಲ್ಲಿ ಕೆಲವು ನೆನಪುಗಳನ್ನು ಹಂಚಿಕೊಂಡಿದ್ದಾಳೆ. ಅದರಲ್ಲಿ ಒಂದು ಸಂದರ್ಭದಲ್ಲಿ ಶಂಕರ ಕನ್ಯಾಪಿತೃ ಒಬ್ಬರಿಗೆ ನಯವಾಗಿ ಚಾಟಿ ಏಟು ಕೊಡುವುದು ಬರುತ್ತದೆ “ಏನು ಮಗಳನ್ನು ಮದುವೆ ಮಾಡಲಿಕ್ಕಾಗಿಯೇ ಬೆಳೆಸಿದ್ದೀರಾ? ಹುಡುಗಿ ಪ್ರಪಂಚ ನೋಡಿ ನಿರ್ಧರಿಸುವಂತಾಗಲಿ.” ಇದು ಹೆಮ್ಮಕ್ಕಳ ಕುರಿತು ಶಂಕರನ ನಿಲುವು. ಶಂಕರನ ಈ ನಿಲುವಿಗೆ ಇನ್ನೂ ಹೆಚ್ಚಿನ ನಿದರ್ಶನವೊಂದನ್ನೂ ನಾನು ಹೇಳಲೇಬೇಕು. ನನ್ನಮ್ಮನ ಅಪ್ಪ – ಅಜ್ಜನಿಗೆ, ಆ ದಿನಮಾನಗಳಿಗೆ ಸಹಜವೆನ್ನುವಂತೆ ಮಕ್ಕಳೇನೋ ಹತ್ತು. ಆದರೆ ಎಲ್ಲರನ್ನೂ ಮತ್ತು ತನ್ನ ಸುಪರ್ದಿಯಲ್ಲಿ ಬಂದ ಎಲ್ಲವನ್ನೂ ಪ್ರೀತಿ, ಪ್ರಾಮಾಣಿಕತೆ ಹಾಗೂ ನೈತಿಕ ನೆಲೆಗಳಲ್ಲಿ ವ್ಯವಸ್ಥೆಗೊಳಿಸುವ ಕರ್ತವ್ಯಪ್ರಜ್ಞೆ ಅವರದು. ಆ ನೆಲೆಯಲ್ಲಿ (ತನ್ನ ಮರಣೋತ್ತರ ಕಾಲಕ್ಕೆ ಉಳಿಸದೆ) ತಾನು ಪೂರ್ಣ ಸ್ವಸ್ಥನೂ ಮಕ್ಕಳೆಲ್ಲ ಹೊಸಜೀವನ ಕಟ್ಟಿಕೊಳ್ಳಲು ಶಕ್ತರೂ ಇದ್ದ ಕಾಲಕ್ಕೇ ತನಗೆ ಪರಂಪರೆಯಿಂದ ಬಂದ ಆಸ್ತಿಯನ್ನು, ಅಂದಿನ ಕಾನೂನಿನಂತೇ ನಾಲ್ಕೂ ಗಂಡು ಮಕ್ಕಳಿಗೆ ಪಾಲು ಮಾಡಿಕೊಟ್ಟು, ಸ್ವತಂತ್ರಗೊಳಿಸಿದ್ದರು. (ಮಗಳಂದಿರಿಗೆ ಕೊರತೆ ಬಾರದಂತೆ ಸಮರ್ಥ ಗಂಡಂದಿರನ್ನೂ ಮಾಡಿಕೊಟ್ಟಿದ್ದರು, ಬಿಡಿ.) ಇದು ಸಹಜವಾಗಿ ಎಲ್ಲರೊಳಗೆ ನಿರ್ವಿಕಾರ ಪ್ರೀತಿಯೊಂದೇ ಹಂಚಿಕೊಳ್ಳಲು ಉಳಿಯುವಂತೆ ಮಾಡಿತ್ತು. ಮೊದಲು ಅಜ್ಜ, ಕೆಲ ಕಾಲಾನಂತರ ಅಜ್ಜಿಯೂ ಮರಣಿಸಿದ ಮೇಲೆ ಎಲ್ಲೋ (ಕೊಡಗಿನಲ್ಲಿ) ಕುಟುಂಬದ ಪಾಲಿನದೊಂದು ನೆಲದ ತುಣುಕು ಮರೆವಿಗೆ ಸಂದಿರುವುದು ಶಂಕರನಿಗೆ ದಾಖಲೆಗಳಲ್ಲಿ ಸ್ಪಷ್ಟವಾಯ್ತು. ವಕೀಲನಾಗಿ ಅವನು ದಾಖಲೆಗಳನ್ನು ಶುದ್ಧಪಡಿಸಿದ. ಅನಂತರ ಎಲ್ಲರ ಒಪ್ಪಿಗೆ ರೀತ್ಯಾ ಅದನ್ನು ಮಾರಿದ್ದೂ ಆಯ್ತು. ಆಗ ಇನ್ನೂ ‘ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಸಮಪಾಲು’ ಕಾನೂನು ಬಂದಿರಲಿಲ್ಲ. ಹಾಗಾಗಿ ಬಂದ ಹಣವನ್ನು ಸಹಜವಾಗಿ ನಾಲ್ಕು ಗಂಡು ಮಕ್ಕಳೊಳಗೇ ಹಂಚಿದ್ದೂ ಆಯ್ತು. ಆದರೆ ಶಂಕರನ ನೈತಿಕ ಪ್ರಜ್ಞೆ ದೊಡ್ಡದು. ಆತ ತನ್ನ ಪಾಲಿಗೆ ಅಯಾಚಿತವಾಗಿ ಒದಗಿದ ಹಣವನ್ನು ಏಳು ಸಮಪಾಲು ಮಾಡಿ ಎಲ್ಲ ಸೋದರಿಯರೊಡನೆ ಹಂಚಿಕೊಂಡ. ಆ ಕಾಲಕ್ಕೆ ಶಂಕರನೂ ಎಲ್ಲ ಸೋದರಿಯರೂ ಅವರವರ ಬದುಕಿನಲ್ಲಿ ಆರ್ಥಿಕವಾಗಿ ದೃಢವೇ ಇದ್ದಿರಬೇಕು. ಆದರೂ ಕೆಲವು ಸಾವಿರ ರೂಪಾಯಿಗಳೇ ಆದರೂ ತಂದೆಯ ಮಧುರ ಸ್ಮರಣಿಕೆಯಂತೆ, ಸೋದರನ ಪ್ರೀತಿಯ ಕೊಡುಗೆಯಂತೇ ಬಂದಾಗ ಎಲ್ಲರೂ ಸಂತೋಷದಿಂದಲೇ ಸ್ವೀಕರಿಸಿದರು. ನನ್ನಮ್ಮನಂತೂ ಆ ಹಣ ತನ್ನಪ್ಪನದು, ತನ್ನ ಪಾಲಿನದು ಎನ್ನುವುದೆಲ್ಲ ಬಿಟ್ಟು “ಅಕ್ಕ ತಂಗಿಯರನ್ನೂ ಲೆಕ್ಕಕ್ಕೆ ಹಿಡಿದು ಶಂಕರ ಕೊಟ್ಟ” ಎಂದೇ ಸಂದರ್ಭ ಬಂದಲ್ಲೆಲ್ಲ ಹಾಡಿ ಹೊಗಳುತ್ತಿದ್ದಳು.

ಎಡ ಕೊನೆಯಲ್ಲಿರುವವರು ಹೆರಂಜೆ ಕೃಷ್ಣ ಭಟ್ಟರು

‘ವಿರೋಧಿ’ಯಿಂದಲೂ ಸಮ್ಮಾನಿತ -೧೨

ಶಿವರಾಮ ಕಾರಂತರ ಯಕ್ಷಗಾನದ ಕಲ್ಪನೆ ಮತ್ತು ಪ್ರಯೋಗಗಳಿಗಾಗಿಯೇ ಕುಶಿ ಹರಿದಾಸ ಭಟ್ಟರ ಎಂಜಿಎಂ ಕಾಲೇಜು (ಮಣಿಪಾಲ ಬಳಗ) ಸಂಘಟಿಸಿದ ಕೂಟ ಯಕ್ಷರಂಗ. ಶಿವರಾಮ ಕಾರಂತರ ಮರಣೋತ್ತರದಲ್ಲಿ, ಅವರದೇ ಸ್ಪಷ್ಟ ನಿರ್ದೇಶದಂತೆ, ಅವರೆಲ್ಲ ಕೃತಿಗಳ ಸ್ವಾಮ್ಯ ಆಪ್ತ ಸಹಾಯಕಿ ಮಾಲಿನಿ ಮಲ್ಯರಿಗೆ ಹೋಯ್ತು. ಸಾಂಸ್ಥಿಕವಾಗಿ ಯಕ್ಷರಂಗ ಮಣಿಪಾಲದ ಬಳಗದೊಳಗೇ ಮುಂದುವರಿದಿತ್ತು.

ಕಾರಂತರ ಆಪ್ತ ಶಿಷ್ಯ, ಅವರೆಲ್ಲ ಯಕ್ಷ ಪ್ರಯೋಗಗಳ ಮುಖ್ಯ ಪಾತ್ರಧಾರಿ, ಅಧಿಕೃತ ವಕ್ತಾರ ಮತ್ತು ವರ್ತಮಾನದಲ್ಲಿ ಯಕ್ಷರಂಗದ ಮಹಾಗುರು ಬನ್ನಂಜೆ ಸಂಜೀವ ಸುವರ್ಣ. ಇವರು ಮುಂದೊಂದು ದಿನ ತಮ್ಮ ಕೇಂದ್ರಕ್ಕಾಗಿಯೇ ಶಿವರಾಮ ಕಾರಂತರು ನಿರ್ದೇಶಿಸಿದ್ದ ಪ್ರಸಂಗಗಳ ಮರುಬಳಕೆಗಿಳಿದರು. ಆಗ ಮಾಲಿನಿ ಮಲ್ಯ ತನ್ನ ಹಕ್ಕು ಸ್ಥಾಪನೆಗಿಳಿದರು. ಕಾರಂತರ ‘ಕಾನನ್ ಜೀವ್’ ಪ್ರಕರಣದಿಂದ ಬೆಳೆದ ಆಪ್ತತೆ ಕಾರಣವಾಗಿ ಆಕೆ ವಕಾಲತ್ತನ್ನು ಶಂಕರನಿಗೇ ಕೊಟ್ಟರು. ಕಾರಂತರು ಪರಂಪರೆಯ ಪ್ರಸಂಗಗಳನ್ನೇ ಆರಿಸಿಕೊಂಡಿದ್ದರೂ ರಂಗಪಠ್ಯವನ್ನು ತಮ್ಮದೇ ಕಲ್ಪನೆಯ ಮೂಸೆಯಲ್ಲಿ ರೂಪಿಸಿದ್ದರು. ಅದು ನಿಸ್ಸಂದೇಹವಾಗಿ ಕಾರಂತರ ‘ಬೌದ್ಧಿಕ ಹಕ್ಕು’, ಪರ್ಯಾಯವಾಗಿ ಮಾಲಿನಿ ಮಲ್ಯರ ಸ್ವಾಮ್ಯಕ್ಕೊಳಪಟ್ಟದ್ದು ಎನ್ನುವುದನ್ನು ಶಂಕರ ನ್ಯಾಯಾಲಯದಲ್ಲಿ ಸಾಧಿಸಿ, ಪ್ರಕರಣ ಗೆಲ್ಲಿಸಿದ.

ಆ ದಿನಗಳಲ್ಲಿ ಯಕ್ಷಗಾನ ಕೇಂದ್ರದೊಡನೆ ಪ್ರಾದೇಶಿಕ ರಂಗ ಕಲೆಗಳ ಕೇಂದ್ರ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ತುಳು ನಿಘಂಟು ಯೋಜನೆ ಮುಂತಾದ ಸಂಸ್ಥೆಗಳ ಆಡಳಿತ ನಿರ್ದೇಶಕರಾಗಿ ಹೆರಂಜೆ ಕೃಷ್ಣ ಭಟ್ಟರಿದ್ದರು. ಹೆರಂಜೆ ಮತ್ತು ಆ ಎಲ್ಲ ಸಂಸ್ಥೆಗಳೊಡನೆ ನನಗೆ ಬಹಳ ಆತ್ಮೀಯತೆ ಇತ್ತು. ಆದ್ದರಿಂದಲೋ ಎಂಬಂತೆ, ಅವರ ಚಟುವಟಿಕೆಗಳ ಪ್ರಾಮಾಣಿಕತೆ ಹಾಗೂ ಉದಾತ್ತತೆಯ ಬಗ್ಗೆ ಶಂಕರನಿಗೆ ಪೂರ್ಣ ಅರಿವೂ ಇತ್ತು. ಸಾಲದ್ದಕ್ಕೆ ಹೆರಂಜೆಯವರು “ನೀವಾದರೂ ನಿಮ್ಮ ಮಾವನಿಗೆ ಹೇಳಿ ಮಾರಾಯ್ರೇ” ಎಂದು ನನ್ನ ಮೂಲಕ ವಿಷಾದವನ್ನೂ ದಾಟಿಸಿದ್ದರು. ಶಂಕರನ ಭಾವನಾತ್ಮಕ ಅನುಕಂಪ ಯಕ್ಷರಂಗದೊಡನಿದ್ದರೂ ಕರ್ತವ್ಯ ವಿಮುಖನಾಗಲಿಲ್ಲ. ಶಂಕರ ನಿಜಕ್ಕೂ ನೀಲಕಂಠನೇ ಆಗಿದ್ದ! ಈ ವೇಳೆಗೆ ಯಕ್ಷರಂಗ ಸ್ವಂತ ಕಟ್ಟಡ, ಅಪಾರ ಸೊತ್ತು (ಗುರು, ಶಿಷ್ಯ ಸಂಪತ್ತೂ ಸೇರಿ) ಗಳಿಸಿತ್ತು. ನಿರಂತರ ಮತ್ತು ಬಹುಮುಖೀ ಚಟುವಟಿಕೆಗಳಿಂದ ಸುಪ್ರಸಿದ್ಧವೂ ಆಗಿತ್ತು. ಆದರೂ ‘ಯಕ್ಷರಂಗ’ ಹೆಸರಿಗೆ ಎರವಾಗಲೇಬೇಕಾಯ್ತು. ಇಂದು ಅದು ಕೇವಲ ‘ಯಕ್ಷಗಾನ ಕೇಂದ್ರ, ಎಂಜಿಎಂ ಕಾಲೇಜ್’. ಕಾರಂತ ನಿರ್ದೇಶಿತ ಯಕ್ಷ-ರೂಪಾಂತರಗಳು ಮುಕ್ತ ಬಳಕೆಗೆ ನಿಲುಕದಂತೆಯೂ ಆಯ್ತು! ಈ ಮತ್ತು ಮುಂದೆ ಅನೇಕ ನ್ಯಾಯಿಕ ಸಲಹೆಗಳಲ್ಲು, ಮಾಲಿನಿ ಮಲ್ಯ ಶಂಕರನ ನಿಸ್ಪೃಹತೆಯನ್ನು, ವೃತ್ತಿ ನಿಷ್ಠೆಯನ್ನು ಧಾರಾಳ ಗುರುತಿಸಿದ್ದರು. ಅದಕ್ಕೆ ಸಣ್ಣ ಸಾಕ್ಷಿ ಎಂಬಂತೆ, ಮಾಲಿನಿ ಮಲ್ಯ ಯಾವ ಪೂರ್ವಾಭಾಸವೂ ಇಲ್ಲದೇ ಶಂಕರನ ಮರಣದ ಹಿಂದಿನ ಸಾಲಿಗ್ರಾಮದಿಂದ ಕಾರು ಮಾಡಿ ಬಂದಿದ್ದರು. ಅತೀವ ಬಳಲಿದ್ದ ಶಂಕರನನ್ನು ಕಂಡು, ಯಾರಿಗೂ ಮುಜುಗರವಾಗದಂತೆ “ಇದು ಸಂಬಳವಲ್ಲ. ನನ್ನ ಯಃಕಶ್ಚಿತ್ತ್ ಗೌರವ” ಎಂದೇ ಒಂದಷ್ಟು ನಗದು ಕೊಟ್ಟು ಪುರಸ್ಕರಿಸಿದ್ದರು!

ಮುಂದೊಂದು ದಿನ ಹೆರಂಜೆಯವರನ್ನು ಮಣಿಪಾಲ ಬಳಗ, ಅಕೃತಜ್ಞತಾಪೂರ್ವಕವಾಗಿ ತಮ್ಮೆಲ್ಲ ಸಂಸ್ಥೆಗಳ ಜವಾಬ್ದಾರಿಯಿಂದ ಹೊರಗಿಟ್ಟಿತು. ಆಗ ಅವರಿಗುಂಟಾಗಿದ್ದ ನ್ಯಾಯಿಕ ಜಿಜ್ಞಾಸೆಗೆ ತೋರಿದ ವ್ಯಕ್ತಿ. ಒಂದು ಕಾಲದ ವಿರೋಧೀ ಪಕ್ಷದ ವಕೀಲ ಶಂಕರನೇ. ಹೆರಂಜೆ ದಾಕ್ಷಿಣ್ಯದಲ್ಲೇ ನನಗೆ ಫೋನಾಯಿಸಿ, ಶಂಕರನ ಬಿಡುವು ಮತ್ತು ಒಲವುಗಳನ್ನು ಕೇಳಿಕೊಂಡೇ ಮಂಗಳೂರಿಗೆ ಬಂದಿದ್ದರು. ಗಂಟೆ ಗಟ್ಟಳೆ ಶಂಕರನಲ್ಲಿ ಮಾತಾಡಿ, ಯುಕ್ತ ಸಲಹೆಗಳನ್ನೇ ಪಡೆದು ಮರಳಿದ್ದರು !!

ಎರಡಲ್ಲದ ಒಂದು ಅನುಭವ! -೧೩

ಶಂಕರ ತೀರಿ ಹೋಗಿ ಹಲವು ದಿನಗಳು ಗತಿಸಿದ್ದವು. ದೊ.ದೇವಕಿ ನಿಶ್ಶಕ್ತಿಯಲ್ಲೂ “ಒಡೆ ಮತ್ತೆ ಅಶೋಕನಿಗೆ ಪಾಯಸದ ಬದಲು ರವೆ ಉಂಡೆ” (ಕುಟುಂಬ ವಲಯಕ್ಕೆಲ್ಲ ತಿಳಿದಿದೆ, ನನಗೆ ಪಾಯಸ ಮೆಚ್ಚದು!) ಎಂದು ಹೇಳುತ್ತ ನಮಗೆ ಕೊಡುವಾಗ ತಿಳಿಯಿತು, ಅಂದು ಶಂಕರ ಗತಿಸಿದ ಲೆಕ್ಕದಲ್ಲಿ ಮೂರನೇ ಮಾಸಿಕ.

ನನ್ನೊಂದು ನೆನಪಿನ ಕಂತಿಗೆ ಪ್ರತಿಕ್ರಿಯೆಯಾಗಿ, ಅಮೆರಿಕಾದಿಂದ ಆನಂದ ಬರೆದಿದ್ದ “ಶಂಕರ William Wordsworth, Longfellow ಮುಂತಾದವರ ಕಾವ್ಯವನ್ನು ಗಮ್ಮತ್ತಿಗೆ ಓದುತ್ತಿದ್ದ!!” ನಿಜ ಅಷ್ಟೇ ಅಲ್ಲ, ಆತ ತನ್ನ ಭಾವಾಭಿವ್ಯಕ್ತಿಗೂ ಕಾವ್ಯದ್ದೇ ಉಡುಪು ಹೊಸೆದಿದ್ದ ಎಂದು ನನಗೆ ನಿನ್ನೆ ತಿಳಿಯಿತು. ಆತ ಆರೋಗ್ಯದ ತಟಪಟದಲ್ಲಿ ೨೫-೧-೨೦೧೬ರಂದೊಮ್ಮೆ ವಿನಯಾ ನರ್ಸಿಂಗ್ ಹೋಂನಲ್ಲಿದ್ದಾಗ, ಮಗಳು ಶೈಲಜಾಳಿಗೆ ಉಕ್ತಲೇಖನ ಕೊಟ್ಟು ಬರೆಸಿದ, ತಲೆಬರಹವಿಲ್ಲದ ಆ ಕವನವೇ ಇಂದಿನ ಸ್ಮರಣಿಕೆ.

ಕಳೆದಿಹುದು ಎಂಬತ್ತೊಂದು ಮೈಲಿಗಲ್ಲು,
ಎಷ್ಟು ವಸಂತಗಳು ಎಷ್ಟು ಗ್ರೀಷ್ಮ ನಾನರಿಯೆ,
ಹಲವು ಪಂದ್ಯಗಳಲ್ಲಿ ಓಡಿದೆನು ಓಟವ,
ಎಷ್ಟೋ ಪಂಥಗಳ ಕಳಕೊಂಡೆ ಕೆಲವ ಗೆದ್ದೆ, ಬಿರುದು ನಾನರಿಯೆ.

ಜೀವನದ ಬಹುದೀರ್ಘ ಪಾಲು ಕಳೆದೆ –
ಜನರ ನಗು ಅಳು ಕಷ್ಟ ಸುಖಗಳ ಕಂಡು ನೊಂದು ಬಂದೆ,
ಎಲ್ಲಿಗೆಂದು ಇನ್ನು ನಾನರಿಯೆ.
ಉದ್ದೇಶವೇನಿಲ್ಲ,
ಪಡುಗಡಲತೀರದಲಿ ಮುಳುಗುತಿಹ ದಿನಕರನ ಕಿರಣಗಳ ನೋಡುತ್ತ ಕುಳಿತಿಹೆನು.

ಸುಖವೋ ಆನಂದವೋ
ಅಲ್ಲಾ ಎರಡಲ್ಲದ ಒಂದು ಕಳೆಗುಂದಿದ ಅನುಭವವೋ!
ದಾರಿ ತೋರು ನೀ ಓ ದೇವಾ.

ತಳವಿಲ್ಲದ ಬಾವಿಗೆ ಏನೋ ಒಂದು ಮುಚ್ಚಳ -೧೪

ನಾನು ಸಾಂಪ್ರದಾಯಿಕ ರೀತಿಯಲ್ಲಿ ‘ಹುಡುಗಿ ನೋಡಿ’, ಮದುವೆಯಾಗಲು ಅಪ್ಪಮ್ಮರಿಗೆ ಸೂಚನೆ ಕೊಟ್ಟಿದ್ದೆ. ಇದನ್ನು ಕಾರ್ಯರೂಪಕ್ಕೆ ತರುವಲ್ಲಿ ನನ್ನಮ್ಮ ಮರಿಕೆಯಲ್ಲಿದ್ದ ತನ್ನಣ್ಣ – ಎ.ಪಿ. ತಿಮ್ಮಪ್ಪಯ್ಯ, ಉರುಫ್ ಸಾಮಾನ್ಯವಾಗಿ ಮನೆಯವರೆಲ್ಲ ಸಂಬೋಧಿಸುತ್ತಿದ್ದಂತೆ ‘ಅಣ್ಣ’ನ ಸಹಕಾರ ಕೋರಿದ್ದಳು. ಈ ಸೋದರ ಮಾವ ಕೃಷಿಯೊಡನೆ ಆ ಕಾಲಕ್ಕೆ ದೊಡ್ಡ ಹೈನುಗಾರ! ಆತ ತನ್ನ ಗಾಡಿ ಎತ್ತಿಗೆ ಜೋಡಿ ಹುಡುಕಿದಷ್ಟೇ ಸಮರ್ಥವಾಗಿ ಕೆಲಸ ಪೂರೈಸಿಬಿಟ್ಟ (೧೯೮೦). ಅವನು ‘ಹುಡುಗಿ ಮಾಡಿ ಕೊಟ್ಟ’ ವೇಗಕ್ಕೆ, ನಾನು ವಾಸದ ಮನೆ ಹುಡುಕುವುದರಲ್ಲಿ ಸೋತಿದ್ದೆ. ಆಗ ನಮ್ಮನ್ನು ಎಳೆದು ಮನೆ ತುಂಬಿಕೊಂಡವರು ಇದೇ ಶಂಕರ, ದೊ.ದೇವಕಿ ದಂಪತಿ. ಸುಮಾರು ಹದಿನೈದು ದಿನಗಳ ಅಂತರದಲ್ಲಿ ನಾವು ಬಾಡಿಗೆ ಮನೆಗೆ ಹೋದೆವಾದರೂ ಎರಡೇ ವರ್ಷದ ಒಳಗೆ, (ಈ ಮೊದಲೇ ಹೇಳಿದಂತೆ) ನನ್ನ ಸ್ವಂತ ಮನೆಯ ಹೆಸರಿನಲ್ಲಿ ಖಾಯಂ ಶಂಕರನ ಸಾಮೀಪ್ಯ ಗಳಿಸಿಕೊಂಡೆವು. ಅಷ್ಟರಲ್ಲಿ ಅವತರಿಸಿದ್ದ ಅಭಯನಿಗಂತೂ ಬೆಳವಣಿಗೆಯ ಉದ್ದಕ್ಕೂ ಬಗಲಲ್ಲೇ ಅಜ್ಜಜ್ಜಿ. ಮನೆ ಎರಡಾದರೂ ಪ್ರಾಯೋಗಿಕವಾಗಿ ಒಂದರದೇ ಭಾವ. ಶಂಕರ ದೊ.ದೇವಕಿಯರ ಮನೆಯ ವಿಸ್ತರಣೆಯಲ್ಲಿನ ವಾಸಿಗಳು ನಾವು!

ನಡುವೆ ಇರುವವರು ನನ್ನಜ್ಜಿ

ಶ್ರೀಶೈಲ, ಅಭಯಾದ್ರಿ ಮನೆಗಳ ಎರಡನೆ ಪ್ರತಿ ಬೀಗದ ಕೈಗಳು ಸದಾ ಇನ್ನೊಬ್ಬರ ಮನೆಯಲ್ಲಿರುತ್ತಿದ್ದವು. ಮತ್ತೆ ಯಾವುದೇ ಅಗತ್ಯಕ್ಕೂ ಅವನ್ನು ಬಳಸಿ ಒಬ್ಬರಿನ್ನೊಬ್ಬರ ಮನೆಯನ್ನು ಹೊಕ್ಕು ಬಳಸುವುದು ಸಹಜವಾಗಿ ನಡೆಯುತ್ತಿತ್ತು. ಇಂದು ಎಲ್ಲಾ ನಗರಗಳಲ್ಲೂ ಮನೆಗೆ ಬೀಗವಿಕ್ಕಿ ದೀರ್ಘ ಪ್ರವಾಸ ಹೋಗುವುದೆಂದರೆ, ರಾತ್ರಿ ಪಾರಕ್ಕೆ ಜನ ಮಾಡುವುದು ಕ್ರಮವಾಗಿದೆ. ಆದರೆ ಹುಟ್ಟಾ ತಿರುಗಾಡಿಗಳಾದ ನಾವು ಮುಖ್ಯವಾಗಿ, ಶ್ರೀಶೈಲದ ಸಾಮೀಪ್ಯವೇ ಶ್ರೀರಕ್ಷೆ ಎಂದು ನಂಬಿ ಎಂದೂ ಪಹರೆಗೆ ಜನ ಮಾಡಿದ್ದೇ ಇಲ್ಲ. ಅಲ್ಲಿನ ಹಬ್ಬಗಳ ಪುಣ್ಯಫಲವಂತಿರಲಿ, ಸಂಬಂಧಿ-ಮಿತ್ರ ವರ್ಗದ ಯಾರೇ ಬಂದರೂ ಅನ್ಯ ಆಮಂತ್ರಿತರಲ್ಲಿ ಪ್ರಥಮರು ನಾವು. ಆಗ ಯಾವುದೇ ಕಾರಣಕ್ಕೆ ನಾವಲ್ಲಿ ಭಾಗವಹಿಸಲಿಲ್ಲವಾದರೂ ಖಾದ್ಯ ವಿಶೇಷಗಳಾದರೂ ನಮ್ಮನೆಗೆ ಬಂದೇ ಬರುತ್ತಿತ್ತು. ಹಾಗೇ ಅತಿಥಿಗಳ ಮೂಲಕ ಬಂದ ಯಾವುದೇ ಸುವಸ್ತುಗಳಲ್ಲಿ (ಮುಖ್ಯವಾಗಿ ಹಣ್ಣು ತರಕಾರಿಗಳು) ಅರ್ಧಕ್ಕೆ ಕಡಿಮೆಯಿಲ್ಲದಂತೆ ನಮ್ಮನೆಗೂ ಹರಿಯುತ್ತಿತ್ತು ಖಾತ್ರಿ. ಕೇಳಿಕೆಯ ಮೇರೆಗೆ ಶಂಕರ ಉದಯವಾಣಿ ಸೇರಿದಂತೆ ಅನೇಕ ಪತ್ರಿಕೆಗಳಿಗೆ, ಆಕಾಶವಾಣಿಗೆ ಕಾನೂನಿಗೆ ಸಂಬಂಧಿಸಿದ ಎಷ್ಟೂ ಲೇಖನಗಳನ್ನು ಬರೆದು ಪ್ರಕಟಿಸಿದ್ದಿದೆ. ಅನ್ಯರ ಎಷ್ಟೂ ಲೇಖನ ಪುಸ್ತಕಗಳನ್ನು ಹೊಗಳಿ ಹಾಡಿದ್ದಿದೆ. ಆತ ಅಣ್ಣ ಗೋವಿಂದನ ಬಗ್ಗೆ ಬರೆದ ಲೇಖನ ನೀವು ಇಲ್ಲೇ ಹಿಂದೆ ಓದಿದ್ದೀರೆಂದು ಭಾವಿಸುತ್ತೇನೆ. ಆದರೆ ಎಂದೂ ತನ್ನ ಸಾಧನೆಗಳ ಕುರಿತು ವರದಿಯ ಮಟ್ಟದಲ್ಲೂ ಏನೂ ದಾಖಲಿಸಿದ್ದಿಲ್ಲ; ತನ್ನ ಬಣ್ಣಿಸಬೇಡ! ಮೊಗೆದಷ್ಟೂ ಖಾಲಿಯಾಗದ, ತಳವೇ ಕಾಣದ ಬಾವಿ ಶಂಕರನ ನೆನಪುಗಳು.

ಶಂಕರ ತೀರಿಹೋಗುವುದಕ್ಕೂ ತಿಂಗಳ ಹಿಂದೆ, ನನ್ನ ಮರಕೆತ್ತುವ ಹವ್ಯಾಸಕ್ಕೆ, ನಮ್ಮಂಗಳದಲ್ಲೇ ಬೆಳೆದು, ಬಿದ್ದು, ಅರೆಬರೆ ಕುಂಬಾಗಿದ್ದ ಸೀತಾಫಲದ ಮರ ಸಿಕ್ಕಿಕೊಂಡಿತ್ತು. ಶಂಕರ ತೀರಿಹೋದ ಮೇಲೆ ಅವನ ಕುರಿತೇ ಸ್ಮೃತಿ ಲೇಖನವಾಗಲೀ ಅನ್ಯ ಲೇಖನಗಳ ಕುಟ್ಟಣೆಯಾಗಲೀ ನನಗೆ ಸಹಜವಾಗಲೇ ಇಲ್ಲ. ಕಲಕಿದ ಮನದಲ್ಲಿ ಕುಂಬು ಮರದ ಕಾಯಕಲ್ಪದೊಡನೆ ಶಂಕರನ ನೆನಪುಗಳು ಓಡುತ್ತಲೇ ಇದ್ದುದರಿಂದ, ಶಿಲ್ಪವನ್ನು ‘ಗೌರೀಶಂಕರ’ ಎಂದೇ ಹೆಸರಿಸಿದ್ದೇನೆ. ಆ ಶಿಲ್ಪ ಬಾಲಿಶವಾಗಿದೆ, ಅದು ಶಿಲ್ಪವಾಗಿ ಯಾವ ಸಾರ್ವಜನಿಕ ಅನಾವರಣ, ಪ್ರದರ್ಶನದ ಅಂಗಳ ಅಲಂಕರಿಸುವುದಿಲ್ಲ! ಆದರೆ ಗಂಭೀರ ಪರ್ವತಾರೋಹಿ ಶಿಖರದಷ್ಟೇ ಚಾರಣದ ಮಾರ್ಗವನ್ನು ಪ್ರೀತಿಸಿದಂತೆ, ಇದರ ಕೆತ್ತನೆಯ ದಾರಿಯನ್ನಷ್ಟೇ ಇನ್ನು ಕೆಲವು ದಿನಗಳಲ್ಲಿ ಪ್ರತ್ಯೇಕ ಇಲ್ಲೇ ದಾಖಲಿಸುತ್ತೇನೆ. ಅದುವರೆಗೆ ಫೇಸ್ ಬುಕ್ಕಿನಲ್ಲಿ ಅನಿಯತ ಧಾರಾವಾಹಿಯಾಗಿ ಹರಿದು, ಈಗ ಪರಿಷ್ಕೃತಗೊಂಡು ಬಂದ ಈ ಮಾಲಿಕೆಗೆ ಮಂಗಳ.