ಶುಕ್ರವಾರ (೯-೮-೧೯) ಅಪರಾಹ್ನ ಎರಡೂವರೆ ಗಂಟೆಯ ಸುಮಾರಿಗೆ ಸುಮಾರು ಅರ್ಧ – ಮುಕ್ಕಾಲು ಗಂಟೆಯಷ್ಟೇ ಬಂತು – ಮೇಘಸ್ಫೋಟದಂಥ ಮಳೆ. ಚಾರ್ಮಾಡಿಯಿಂದ ದಿಡುಪೆಯವರೆಗಿನ ವಲಯಕ್ಕಷ್ಟೇ ಮಿತಿಗೊಂಡ ಬಾನಬೋಗುಣಿ ಕವುಚಿದಂತಹ ಈ ನೀರು ನಡೆಸಿದ ಉತ್ಪಾತಗಳು ಸಾಮಾನ್ಯ ಲೆಕ್ಕಕ್ಕೆ ಸಿಗುವಂತದ್ದಲ್ಲ. ಅದರ ಸಣ್ಣ ನೋಟವಾದರೂ ನಮಗೊಂದು ಪಾಠವೆಂದುಕೊಂಡೇ ನಾವು ನಾಲ್ವರು ಮೊನ್ನೆ (೨೫-೮-೧೯) ಕಾರೇರಿ ಹೋಗಿದ್ದೆವು.

ಮಂಗಳೂರು – ಬೆಳ್ತಂಗಡಿ ಮಾಡಿ, ಎಡದ ಬಂಗಾಡಿ – ಕಿಲ್ಲೂರು ದಾರಿಗಳಲ್ಲಾಗಿ ಮೊದಲು ನಿಂತ ಸ್ಥಳ ಕಾಜೂರು. ಉತ್ತರದಿಂದ ದಕ್ಷಿಣದತ್ತ ಚಾಚಿರುವ ಪಶ್ಚಿಮಘಟ್ಟದ ಮುಖ್ಯಶ್ರೇಣಿ ಕುದುರೆಮುಖ ಶಿಖರದಿಂದ ಒಂದು ಸಣ್ಣ ಪೂರ್ವ ತಿರುವು ತೆಗೆದಿದೆ (ನಕ್ಷೆ ನೋಡಿ). ಇದು ಹಿರಿಮರುದುಪ್ಪೆ ಅಂಚಿನಿಂದ ಬಲ್ಲಾಳರಾಯನ ದುರ್ಗದ ದಕ್ಷಿಣ ಕೊನೆಯವರೆಗೆ ಮತ್ತಷ್ಟು ದೀರ್ಘ ಒಳತಿರುವು ತೆಗೆದು ದೊಡ್ಡ ಲಾಳದ ಆಕೃತಿಯಲ್ಲೇ ಇದೆ. ನಾವು ಈ ಆಕೃತಿಯ ಬಾಯಿಯ ಬಹುತೇಕ ನಡು ರೇಖೆಯಲ್ಲಿ ನಿಂತಿದ್ದೆವು. ಯುಗಾಂತರಗಳ ಋತು ಸಹಜ ಪಶ್ಚಿಮಗಾಳಿ ಮತ್ತು ವಿಪರೀತ ಮಳೆ ಲಾಳದ ಒಳಮೈಯ ಮಣ್ಣು, ಸಡಿಲ ಕಲ್ಲುಗಳನ್ನೆಲ್ಲ ಕಳಚಿ, ಬಹುತೇಕ ಶಿಲಾಗೋಡೆಯನ್ನೇ ತೆರೆದಿಟ್ಟಿದೆ. ಹಾಗೆ ಉದುರಿದ ಮಣ್ಣು, ಕಲ್ಲುಗಳ ಅಸಮ ತಟ್ಟು ದಿಡುಪೆ ವಲಯ. ಸಹಜವಾಗಿ ಇಲ್ಲಿ ಅಸಂಖ್ಯ ಜಲಪಾತಗಳು (ಯಳನೀರು, ಆನಡ್ಕ, ಕಡಮಗುಂಡಿ, ಎರ್ಮಾಯಿ, ಬಂಡಾಜೆ…), ಅದಕ್ಕೂ ಮಿಕ್ಕು ತೋಡು ಹೊಳೆಗಳು. ಸುಮಾರು ನಾಲ್ಕು ದಶಕಗಳ ಹಿಂದೆ ಉದಯವಾಣಿ ಪತ್ರಿಕೆ ಕುಗ್ರಾಮ ಗುರುತಿಸುವ ಅಪೂರ್ವ ಸಾಹಸ ನಡೆಸಿದಾಗ, ಪ್ರಥಮಸ್ಥಾನ ಪಡೆದ ಹೀನಾಯ ಸ್ಥಿತಿಯಲ್ಲಿತ್ತು ಈ ಭೂದ್ವೀಪ ದಿಡುಪೆ!

ಕಾಜೂರು ದರ್ಗದ ಪಕ್ಕದಲ್ಲಿ ನಿಂತು ಸುತ್ತ ಕಣ್ಣಾಡಿಸಿದರೆ, ಹಸಿರು ಹೊದ್ದ ಬೆಟ್ಟ, ಬಹಳ ಕಾಲದ ಮೇಲೆ ಸೂರ್ಯರಶ್ಮಿಯ ಮೀಯಾಣದಲ್ಲಿ ಆಗೀಗ ಮೋಡದ ತೆರೆ ಸರಿಸಿ ಕೊಡುತ್ತಿದ್ದ ದರ್ಶನ ಮನೋಹರವೇ ಸರಿ. ಆದರೆ ಬಲ್ಲಾಳರಾಯನ ದುರ್ಗದ ಮಗ್ಗುಲಿನಲ್ಲಿ, ಅಂದರೆ ಕಡ್ತಿಕಲ್ಲು ಘಾಟಿಗೂ ಮೊದಲೇ ಕಾಣಬೇಕಿದ್ದ ಹಸಿರುಗೋಡೆ ಹರಿದು, ರೂಕ್ಷ ಬಂಡೆ ಮೈ ನೀರು ಜಿನುಗಿಸಿ ಕನ್ನಡಿಯಂತಿದ್ದದ್ದು ಯಾಕೋ ಹಿಡಿಸಲಿಲ್ಲ. ಅವರಿವರನ್ನು ಕೇಳುವಾಗ, ಅಲ್ಲೇ ‘ಮೊನ್ನೆ’ ಮುಖ್ಯ ಭೂಕುಸಿತವಾದದ್ದೆಂದು ತಿಳಿಯಿತು. ಜತೆಗೇ ಅತ್ತಿತ್ತ ಕಣ್ಣು ಹಾಯಿಸಿದಂತೆ ಆ ದಿಕ್ಕಿನಲ್ಲಿ ಅಸ್ಪಷ್ಟವಾಗಿ ಅಸಂಖ್ಯ ದರೆ ಜಾರಿದ ಲಕ್ಷಣಗಳು ಕಾಣಿಸಿದವು.

ಬಲ್ಲಾಳರಾಯನದುರ್ಗವನ್ನು ನಾನು ಪ್ರಥಮ ಬಾರಿಗೆ (೧೯೭೯) ಈಗ ಕಾಣುತ್ತಿದ್ದ ಪಶ್ಚಿಮ ಮೈಯಲ್ಲೇ ಏರಿದ್ದು (ನೋಡಿ: ಬನ್ನಿ ಬಲ್ಲಾಳರಾಯನ ದುರ್ಗಕ್ಕೆ) ಸಣ್ಣದಾಗಿ ನೆನಪಿಗೆ ಬಂತು. ಅಂದು ಸರ್ವೇಕ್ಷಣಾ ಇಲಾಖೆಯ ನಕ್ಷೆ ‘ಓದಿಕೊಂಡು’, ಕಡ್ತಿಕಲ್ಲು ಘಾಟಿ – ಅಂದರೆ ಐತಿಹಾಸಿಕ ಕಾಲದಲ್ಲಿ ಈ ವಲಯಕ್ಕಿದ್ದ ಕಾಲುದಾರಿ, ಪತ್ತೆ ಮಾಡಿ, ಶಿಖರ ಸಾಧಿಸುವ ಯೋಚನೆ ನಮ್ಮದಿತ್ತು. ಆದರೆ ಅಳತೆಗಳ ಅಂದಾಜಿನಲ್ಲಿ ತಪ್ಪಿ, ಕಾಲ್ದಾರಿಗೂ ಮೊದಲೇ ಸಿಗುವ ಗೋಡೆ ಮೈಯನ್ನೇ ಏರೇರಿ, ಶಿಖರ ಸಾಧಿಸಿದ್ದೆವು. ಅಂದು ನಮಗೆ ಬಹುತೇಕ ಎಲ್ಲೂ ಸಹಜವಾಗಿ ಏರಲಾಗದ ಬಂಡೆಮೈ ಸಿಕ್ಕಿರಲಿಲ್ಲ. ತೀರಾ ಕಡಿದಾಗಿದ್ದರೂ ಪಾದ ಊರಲು ಕೊರತೆಯಾಗದಂತೆ ಮಣ್ಣಿನ ಹೊದಿಕೆ ಇತ್ತು. ಅದರಲ್ಲಿ ದೃಢವಾಗಿ ಬೇರು ಬಿಟ್ಟ ವಿರಳ ಪೊದರು ಹಾಗೂ ಹುಲ್ಲಿನ ಗಡ್ಡೆ, ನಡುವೆ ವನ್ಯ ಜಾನುವಾರು ಓಡಾಡಿ ಮೂಡಿದ್ದ ಜಾಡು ನಮ್ಮನ್ನು ಧಾರಾಳ ಆಧರಿಸಿತ್ತು. ಆ ಇಡೀ ವ್ಯವಸ್ಥೆ ಇಂದು ಜಾರಿದ್ದು ಸ್ಪಷ್ಟವಿತ್ತು. ಅದರ ನಿರಪಾಯಕಾರಿ ಸಮೀಪ ದರ್ಶನ ಮತ್ತು ಪಾದಮೂಲದಲ್ಲಿದ್ದು ಹಾನಿ ಅನುಭವಿಸಿದವರ ಕೃಷಿ, ವಸತಿಯ ಭೇಟಿ ಬಯಸಿದ್ದೆವು. ಅದಕ್ಕೆ ನಮಗೆ ಆಕಸ್ಮಿಕವಾಗಿ ಒದಗಿದ ಸಮರ್ಥ ಮಾರ್ಗದರ್ಶಿ, ಬಾಡಿಗೆ ಜೀಪುದಾರ, ಭೂಕುಸಿತದ ನೇರ ನಷ್ಟಾನುಭವಿ – ಪುರಂದರ ಗೌಡ.

ಕಾಜೂರು – ದಿಡುಪೆ ಮಾರ್ಗದಿಂದ ಬಲಕ್ಕೆ, ನೇರ ಗುಡ್ಡೆಯೊಂದನ್ನು ಏರ ಹೊರಟ ತೀರಾ ಸಪುರ ಮತ್ತು ಅಷ್ಟೇ ತಿರುವುಗಳ ಕಾಂಕ್ರೀಟ್ ದಾರಿ ಬರಿಯ ಕಣ್ಕಟ್ಟು. ಕೆಲವೇ ನೂರಡಿಗೆ ಕಾಂಕ್ರೀಟ್ ಮುಗಿದು, ಮುಂದೆ ಸುಮಾರು ಐದು ಕಿಮೀ ಉದ್ದಕ್ಕೂ ಅದು ಅಪ್ಪಟ ಕಚ್ಚಾದಾರಿ. ಇದು ಬೆಟ್ಟ ಏರುವವರ ಶೋಕಿಗೆ ಮಾಡಿದ್ದಲ್ಲ – ಮೂರು ಹಂತಗಳಲ್ಲಿ, ಅತ್ತ ಸುಮಾರು ಐವತ್ತರವತ್ತು ಮಂದಿ ಕೃಷಿ ನಂಬಿ ನಿಂತವರಿಗೆ ಸರಕಾರ ಕೊಟ್ಟ ಬಿಕ್ಷೆ. ಜೀಪು ನಾಲ್ಕು ಚಕ್ರಗಳ ಶಕ್ತಿ ಹಾಕಿಯೂ ಅಲ್ಲಿ ಇಲ್ಲಿ ತಡವರಿಸುವಂತ ಏರು, ಗೊಸರು, ಕಲ್ಲು ಕೊರಕಲುಗಳ ಸರಣಿ. ಅದನ್ನುತ್ತರಿಸುವಲ್ಲಿ ಯಂತ್ರ ಸಾಮರ್ಥ್ಯದಷ್ಟೇ ಪುರಂದರ (ವಿಠಲ?) ಕೌಶಲವೂ ಧೈರ್ಯವೂ ಸ್ತುತಿಸುವಂತದ್ದೇ ಇದೆ. ಅಷ್ಟಾಗಿಯೂ ಸುಮಾರು ಐದು ಕಿಮೀ ಜೀಪ್ ಸವಾರಿಯಲ್ಲಿ ಯಾರೂ ಗಟ್ಟಿ ಸೀಟಿನ ಮೇಲೆ ಕುಳಿತದ್ದಿರಲಿಲ್ಲ. ಸೀಟಿನ ಮೇಲೇ ಅಕ್ಷರಶಃ ಹಾರಿಹಾರಿ ಬಿದ್ದು, ಎಡ – ಬಲ ಹೊರಳಾಡಿ, ತಗ್ಗಿಸಿದ ಮಾಡಿನ ಪಟ್ಟಿಗೋ ಕೊಳವೆಗೋ ತಲೆ ಹೆಟ್ಟಿಕೊಂಡು ಸುಮಾರು ಐದು ಕಿಮೀ ಸವಾರಿಯಲ್ಲಿ ನಾವು ಜೀಪಿನೊಳಗೇ ಉಳಿದದ್ದೇ ಒಂದು ಸಾಹಸ! ( ವಿಫಲ ವಿಡಿಯೋ ತುಣುಕು ನೋಡಿ!) ಅಲ್ಲಿಗೆ ನಾವು ಪ.ಘಟ್ಟದ ಮುಖ್ಯ ಶ್ರೇಣಿಯ ಪಾದವನ್ನು ಹತ್ತಿದಂತಾಗಿತ್ತು. ಅಲ್ಲಿನ ನಾಗಬನದ ಪಕ್ಕದಲ್ಲಿ, ಆ ವಲಯದ ಮೊದಲ (ಮಲೆಕುಡಿಯರ) ಮನೆ ಮತ್ತು ಕೃಷಿಕ್ಷೇತ್ರವನ್ನು ಮುಟ್ಟಿದ್ದೆವು.ಮುಂದಿನ ಸುಮಾರು ಎರಡು ಕಿಮೀ, ಅಂದರೆ ಪುರಂದರರ ಮನೆ, ಕೃಷಿಭೂಮಿ – ಪರ್ಲಕ್ಕೆ, ಕೊನೆಗೊಳ್ಳುವ ದಾರಿ ಬಹುತೇಕ ಸರ್ವನಾಶವಾಗಿತ್ತು. ಅಲ್ಲಿನ ಮನೆಗಳಿಗೇನಾಗದಿದ್ದರೂ ಕೃಷಿಕ್ಷೇತ್ರ ಪೂರ್ಣ ನಿರುಪಯುಕ್ತವಾಗಿತ್ತು. ಅದನ್ನು ನಾವು ನಡೆದೇ ನೋಡಿದೆವು. ಈಚೆಗೆ ಸ್ಥಳೀಯ ಆಡಳಿತ ‘ದಾರಿ ಬಿಡಿಸಿಕೊಳ್ಳಿ’ ಎಂದು ಸಮಯ ಮಿತಿ ಹಾಕಿ ಒಂದು ಹಿತಾಚಿಯ ಸೇವೆಯನ್ನೇನೋ ಕೊಟ್ಟಿದೆ. ಆದರೆ ಅದರ ಚಾಲಕನಿಗೆ ವಿವೇಚನೆ ಅಥವಾ ಯುಕ್ತ ನಿರ್ದೇಶನ ಇದ್ದಂತಿಲ್ಲ. ಆತ ಕೆಲವೆಡೆಗಳಲ್ಲಿ ಗಂಟೆಗಟ್ಟಳೆ ಮಾಡಿದ ಮಣ್ಣಿನ ಕೆಲಸ, ಅಲ್ಲಿನ ಒಂದು ಮಳೆಗೇ ತೊಳೆದು ಹೋಗುವುದನ್ನು ಯಾರೂ ಊಹಿಸಬಹುದಿತ್ತು. ಮತ್ತೆ ಐದಾರು ಕಿಮೀ ಉದ್ದಕ್ಕೂ ಜೀಪಿನಂಥ ಸಣ್ಣ ಮತ್ತು ನಾಲ್ಕು ಚಕ್ರಗಳ ಶಕ್ತಿಯೂಡಿ ಬರುವ ವಾಹನಕ್ಕೆ ಅನಾವಶ್ಯಕವಾದ ಅಗಲ ಮತ್ತು ಮಟ್ಟ ಮಾಡಿದ್ದಂತೂ ಸವಲತ್ತಿನ ದುರ್ವ್ಯಯವೇ ಸರಿ. ಆ ದಾರಿಯ ತೀರಾ ಆಪ್ತ ಬಳಕೆದಾರ – ಪುರಂದರ, ತಲೆ ಬಿಸಿಮಾಡಿಕೊಂಡು ಉದ್ಗರಿಸಿದ್ದರು “ಇಲ್ಲಿ ಜೀಪು ಲಾರಿಗೂ ಸೈಡ್ ಹೊಡೆಯುವಷ್ಟು ಅಗಲ ಯಾಕೆ ಸಾರ್! ಇಲ್ಲಿ ಇವ ಬ್ಲೇಡಿನಲ್ಲಿ ಸಾರಣೆ ಮಾಡುವ ಸಮಯದಲ್ಲಿ ಮುಂದೆ ಹತ್ತು ಮೀಟರ್ ರಸ್ತೆ ಬಿಡಿಸಬಹುದಿತ್ತಲ್ಲ!!”

ನಾವು ಬರುವುದನ್ನು ತಿಳಿದೋ ಎನ್ನುವಂತೆ ಹಿತಾಚಿ ಆಗಷ್ಟೇ (ಹತ್ತು ಗಂಟೆ!) ದಿನದ ಕೆಲಸ ಶುರು ಮಾಡಿತ್ತು! ನಾವು ಪರ್ಲಕ್ಕೆ ನಡೆದು ಹೋಗಿ ಮರಳುವ ನಡುವಣ ಸುಮಾರು ಎರಡು ಗಂಟೆ ಅವಧಿಯಲ್ಲಿ ಅದು ಕೇವಲ ಹತ್ತೇ ಮೀಟರ್ ಕೆಲಸ ಮಾಡಿತ್ತು! ಅದಕ್ಕೆ ಇನ್ನೂ ಕನಿಷ್ಠ ಎರಡು ಕಿಮೀಯ ಉದ್ದಕ್ಕೆ ಇಡಿಯ ಬೆಟ್ಟವೇ ಕವಿದು ಬಿದ್ದಂತಿದ್ದ ಮಣ್ಣು, ಕಲ್ಲು, ಕಾಡು ತೆರವುಗೊಳಿಸಲಿತ್ತು. ಆದರೆ ಸ್ಥಳೀಯ ಆಡಳಿತ ಮರುದಿನ ಸಂಜೆಗೆ ಅದಕ್ಕೆ ಅನ್ಯ ಕಾರ್ಯಾರ್ಥ ವಾಪಾಸು ಬರಲು ಆದೇಶ ಕೊಟ್ಟೂ ಆಗಿತ್ತು! ಹಿಂದೆಂದೋ ಬಹಳ ಕಷ್ಟದಿಂದಲೇ ಅಲ್ಲೆಲ್ಲ ನೆಲೆ ಕಂಡಿದ್ದ ವಿದ್ಯುತ್ ಕಂಬ, ಸರಿಗೆಗಳ ಬಹ್ವಂಶ ಭೂಗತವಾಗಿದೆ. ಬಹುಶಃ ಇಲಾಖೆ ಹೊಸ ಕಂಬ ಊರಿ, ತಂತಿ ಎಳೆಯಲು ರಸ್ತೆ ಸರಿಯಾಗುವುದನ್ನು ಕಾದಿದ್ದಾರೋ ಏನೋ! ಪುರಂದರರೇನು, ಉಳಿದಂತೆ ಸ್ಥಿರ ಜೀವನವಿರುವ ನಮಗೂ ತಲೆ ಸಿಡಿಯುವಷ್ಟು ಬಿಸಿಯಾಗಿತ್ತು.

ಜೀಪು ಬಿಟ್ಟಲ್ಲಿಂದ ಸ್ವಲ್ಪ ದೂರ ಸುಸ್ಥಿತಿಯಲ್ಲಿದ್ದ ಹಳೇ ದಾರಿ, ಮುಂದೆ ಅಲ್ಲಲ್ಲಿ ‘ಹಿತಾಚಿ ಸೇವೆ’ಯಿಂದಾದ ಕಂಬಳದ ಕಳಗಳನ್ನು ಬಹಳ ಎಚ್ಚರಿಕೆಯಿಂದಲೇ ದಾಟಿದೆವು. ಪೂರ್ಣ ಮುಚ್ಚಿಹೋದಲ್ಲಿ ಸವಕಲು ಜಾಡೊಂದನ್ನನುಸರಿಸಿ, ಗುಡ್ಡೆಯ ಮೈಯಲ್ಲಿದ್ದ ಸಣ್ಣ ಅಡಿಕೆ ತೋಟಕ್ಕಾಗಿ ಬಲದ ಕಣಿವೆಯತ್ತ ಸರಿದೆವು. ಅಲ್ಲಿನೊಂದು ತೊರೆ ಪುರಂದರರ ಬಾಲ್ಯದ ಆಟದ ಭಾಗವಾಗಿತ್ತಂತೆ. ಪ್ರವಾಹ ಅದರ ಅಂಚುಗಳನ್ನು ಹರಿದು, ಹಸಿರನ್ನು ಮಗುಚಿ, ಮಣ್ಣನ್ನು ತೊಳೆದು ಸಾಗಿಸಿ, ಬಂಡೆ ತುಂಡುಗಳು ಗಿಡಿದ ಸುವಿಸ್ತಾರ ಹೊಳೆಯ ರೂಪವನ್ನೇ ಕಾಣಿಸಿತ್ತು. ‘ಕಟ್ಟದ ಪಾದೆ’ಯ ಕೊನೆಯಲ್ಲಿ ಹಸಿರ ಮುಸುಕಿನಲ್ಲಿ ಕೆಳ ಸರಿದಿದ್ದ ತೊರೆ ಇಂದು ನೋಟಕ್ಕೆ ಸುಂದರವಾದ ಜಲಪಾತ! ಕಳೆದು ಹೋದ ಭೀಕರ ಪ್ರವಾಹವನ್ನು ನೆನಪಿಸುವಂತೆ ಎರಡಾಳು ತಬ್ಬುವ ಭಾರೀ ಮರವೊಂದು ಕಡೆಯಿಂದ ಕೊಡಿಯವರೆಗೆ ತೊಗಟೆ ಸುಲಿದು ನುಣ್ಣಗೆ, ಬೆಳ್ಳಗೆ ಮಲಗಿದ್ದು ಭಯ ಹುಟ್ಟಿಸುವಂತಿತ್ತು. ಮೊದಲೆಲ್ಲ ಜಲಪಾತದಿಂದ ಕೆಳಗೂ ಇಪ್ಪತ್ತಡಿ ಆಚೆ ದಿಟ್ಟಿ ಹರಿಯುತ್ತಿರಲಿಲ್ಲವಂತೆ. ಆದರಿಂದು ನೂರಿನ್ನೂರಡಿ ಆಚಿನ ಬೇರೊಂದೇ ಕೃಷಿಕ್ಷೇತ್ರ, ಮನೆ ಮತ್ತೆ ದೂರದ ಬೆಟ್ಟಗಳವರೆಗೂ ದೃಶ್ಯ ಮುಕ್ತವಾಗುವಂತೆ ಕೆಳ ಕಣಿವೆಯನ್ನೂ ಕೊಚ್ಚಿ, ರಕ್ತಸಿಕ್ತ ಪಾತ್ರೆಯನ್ನೇ ತೆರೆದಿಟ್ಟಿತ್ತು. ಆ ಕೊನೆಯ ಮನೆ, ತೋಟದ ಸಂಕಷ್ಟಗಳನ್ನು ಕಾಣುವ, ಕೇಳುವ ಸಮಯಾವಕಾಶ ನಮಗೆ ಒದಗಲಿಲ್ಲ.

ಕಟ್ಟಪಾದೆಯಿಂದ ಮೇಲಿನ ಹಂತ ಪರ್ಲ; ಪುರಂದರರ ಕುಟುಂಬ ಸೇರಿದಂತೆ ಮೂರು ಮನೆಗಳ ಕೃಷಿಕ್ಷೇತ್ರ. ಸಣ್ಣದಾಗಿ ಗದ್ದೆ, ಅಡಿಕೆ, ತೆಂಗು, ಬಾಳೆಗಳ ನೆಲೆ. ಮಳೆದೂರವಾದ ದಿನಗಳಲ್ಲಿ ಮೇಲಿನ ಬೆಟ್ಟದ ಝರಿಗಳಿಗೆ ಕೊಳವೆ ಒಡ್ಡಿ ನೀರುಣಿಸಿ ಬೆಳೆ ತೆಗೆಯುತ್ತಿದ್ದ ನೆಲ. ಅಲ್ಲಿನ ವನ್ಯ ಬಾಧೆಗಳ ಲೆಕ್ಕಕ್ಕಿಳಿದರೆ ಹಸಿರಿಗೆ – ಕೆಂಜಳಿಲು, ಹಂದಿ, ಕಡವೆ, ಕಾಟಿ, ಆನೆ…. ಜಾನುವಾರಿಗೆ – ಕೆನ್ನಾಯಿ, ಚಿರತೆ, ಹುಲಿ… ಪಟ್ಟಿ ಮುಗಿಯದು. ಪುರಂದರ ಸುಲಭದಲ್ಲಿ ಹೇಳುವಂತೆ “ಸಿಂಹವೊಂದು ಬಿಟ್ಟು ಎಲ್ಲ ಈ ಕಾಡಿನಲ್ಲಿದೆ!” ಹಗಲು ಮೈಮುರಿಯೆ ದುಡಿದು, ರಾತ್ರಿ ನಿದ್ದೆಗೆಟ್ಟು ಪಾರ ಕಾದರೂ ಕೆಲವೊಮ್ಮೆ ಬೆಳೆ ದಕ್ಕುವುದಿಲ್ಲ ಎನ್ನುವ ಸ್ಥಿತಿ. ಅಬ್ಬರದ ಪ್ರವಾಹ ಅಲ್ಲಿ ಇಂದು ಅಸಂಖ್ಯ ಹೊಸದೇ ಚರಂಡಿ, ತೊರೆಗಳ ಜಾಡು ಮೂಡಿಸಿದೆ. ಹಲವು ಮರಗಳು ಅಡಿ ಮಗುಚಿವೆ, ಗದ್ದೆ ತೋಟಗಳೆಲ್ಲ ಮರಳು ಕಲ್ಲುಗಳಲ್ಲಿ ನಿಗಿದೇ ಹೋಗಿವೆ. ನೀರಾವರಿಯೇ ಮುಂತಾದ ಸಣ್ಣ ವ್ಯವಸ್ಥೆಗಳೆಲ್ಲ ಪೂರ್ಣ ನಷ್ಟದ ಲೆಕ್ಕಕ್ಕೇ ಸೇರಿದೆ.

ದುರಂತದ ಅಪರಾಹ್ನ (ಎರಡೂವರೆಯ ಸುಮಾರಿಗೆ) ಪುರಂದರರ ತಂದೆ – ರುಕ್ಮಯ್ಯ ಗೌಡ, ಮುಖ್ಯ ತೊರೆಯ ಆಚೆ ದಂಡೆಯಲ್ಲೇನೋ ಕೆಲಸದಲ್ಲಿದ್ದರಂತೆ. ಒಮ್ಮೆಗೇ ಅಡ್ಡಬಿದ್ದ ಮರವೊಂದರ ಕೊಂಬೆಯ ಒತ್ತಿಗೆ ಕಾಲು ಸಿಕ್ಕಿ ಹೋಯ್ತಂತೆ. ನೋಡ ನೋಡುತ್ತಿದ್ದಂತೆ ತೊರೆ ರಕ್ಕಸರೂಪೀಯಾಗುತ್ತಿದ್ದಂತೆ, ಇವರು ಹಾಗೂ ಹೀಗೂ ಕಾಲೆಳೆದುಕೊಂಡು ಎದುರು ದಂಡೆ ಸೇರಿದ್ದರಂತೆ. ಇತ್ತ ಗದ್ದೆ, ತೋಟ, ಮನೆಯಲ್ಲಿದ್ದವರು, ಭೀಕರ ಶಬ್ದ, ಪ್ರಳಯಸ್ವರೂಪೀ ಪ್ರವಾಹ ಕಾಣುತ್ತಿದ್ದಂತೆ, ಜಾನುವಾರುಗಳನ್ನು ಕಟ್ಟಿದ್ದ ಹಗ್ಗ ಬಿಚ್ಚಿ ಹಾಕಿ, ಗುಡ್ಡದ ಎತ್ತರಕ್ಕೆ ಓಡಿದ್ದರು. ಅಲ್ಲಿ ಒಮ್ಮೆಗೆ ಮನೆಯ ಹಿರಿಯನದೇ ಆತಂಕ ಇವರನ್ನು ಕಾಡಿತ್ತು. ಆದರೆ ಅರ್ಧ ಮುಕ್ಕಾಲು ಗಂಟೆಯಲ್ಲಿ ನೀರಿನ ಸೊಕ್ಕು ಕಡಿಮೆಯಾದಾಗ, ಎದುರು ದಂಡೆಯಲ್ಲಿದ್ದ ರುಕ್ಮಯ್ಯರನ್ನು ಕಂಡು, ನಿರಪಾಯವಾಗಿ ಸಂಗ್ರಹಿಸಿಕೊಂಡರು. ಮತ್ತೆ ರಾತ್ರಿಗೆ ಅಲ್ಲುಳಿಯಲು ಧೈರ್ಯ ಸಾಲದೇ ಎಲ್ಲ ಕಾಜೂರಿಗೆ ವಲಸೆ ಹೋಗಿದ್ದರು.

ಪುರಂದರ ಅವರ ಮನೆ ತೋರಿಸಿದರು. ತಂದೆ, ಅಣ್ಣ, ಅತ್ತಿಗೆಯಾದಿ ಕೂಡು ಕುಟುಂಬ. ಬೆಕ್ಕು, ನಾಯಿ, ಕೋಳಿ, ಹಸುಗಳಾದಿ ಸಹಜ ಓಡಾಟದ ಪಕ್ಕಾ ರೈತಾಪಿ ಮನೆ. ಅಲ್ಲಿನ ಮನೆಗಳು ನಗರ ಸಂಸ್ಕೃತಿಯ ಒತ್ತಡದಲ್ಲಿ ಇಂದು ಗುಂಡಿ ಒತ್ತಿದ್ದೇ ದೀಪ, ಅಂಟಿಕೊಂಡಂತೇ ಬರುವ ಸಣ್ಣಪುಟ್ಟ ಸಲಕರಣೆಗಳು, ಡಿಶ್, ಚರವಾಣಿಗಳ ಸುಳಿಯಲ್ಲಿವೆ; ತಪ್ಪಲ್ಲ.

ಅವುಗಳಲ್ಲಿ ಕೆಲವನ್ನಾದರೂ ಪ್ರವಾಹೋತ್ತರದಲ್ಲೂ ತತ್ಕಾಲೀನವಾಗಿ ಸಾಕಿಕೊಳ್ಳುವ ಅನಿವಾರ್ಯತೆಗೆ ಪುಟ್ಟ ಜಲವಿದ್ಯುಜ್ಜನಕ ರೂಢಿಸಿಕೊಂಡಿರುವುದನ್ನೂ ಕಂಡೆವು.
ವಿಪರೀತ ಪರಿಸರಕ್ಕೆ ಜೀವನ ರೂಢಿಸಿಕೊಂಡ ಅಲ್ಲಿನವರು, ಈಗಲೂ ಮೂವತ್ತರಿಂದ ನಲ್ವತ್ತು ಕಿಲೋ ತೂಕದವರೆಗೆ ತಮ್ಮ ಕೃಷ್ಯುತ್ಪನ್ನ ಒಯ್ಯುವುದಕ್ಕೋ (ಅಕ್ಕಿ ಗೊಬ್ಬರದಂತ) ಒಳಸುರಿಗಳನ್ನು ತರುವುದಕ್ಕೋ ತಲೆ ಕೊಡುತ್ತಲೇ ಇರುತ್ತಾರೆ. ಪುರಂದರ ಜೀಪಿಟ್ಟುಕೊಂಡದ್ದಾದರೂ ಬಾಡಿಗೆಗೆ ಓಡಿಸಿ, ಪೂರಕ ಆದಾಯಕ್ಕಾಗಿ ಮಾತ್ರ. ಅದನ್ನು ಮನೆವಾರ್ತೆಯ ಅನುಕೂಲಕ್ಕೆ ಬಳಸಿದರೆ, ಅದು ಕುಡಿಯುವ ಡೀಸೆಲ್, ಅನುಭವಿಸುವ ಆಘಾತಗಳ ಪರಿಣಾಮದ ವೆಚ್ಚಕ್ಕೆ ಇರುವ ಸಣ್ಣ ಕೃಷಿ ಆದಾಯವನ್ನೇ ಬಲಿಕೊಡಬೇಕಾದೀತು!

ಬರಿಯ ಕೃಷಿ ನಂಬಿ ವಿಶೇಷ ಏಳ್ಗೆ ಕಾಣದ ಜೀವನಕ್ಕಾಗಿ, (ಪುರಂದರರಂತೆ) ಸಣ್ಣದಾಗಿಯಾದರೂ ಪೇಟೆ ಸೇರಿ, ಹೆಚ್ಚಿನ ಆದಾಯದ ಬೇಟೆ ಇನ್ನೂ ಕೆಲವರು ನಡೆಸಿದ್ದಿರಬಹುದು. ಆದರೀ ಪ್ರವಾಹ ಅಂಥವರ ಹಲವು ದಶಕಗಳ ನಿಧಾನ ಬೆಳವಣಿಗೆಯನ್ನು, ಸುಂದರ ಕನಸುಗಳನ್ನು ಕ್ಷಣ ಮಾತ್ರದಲ್ಲಿ ಒರೆಸಿ ಹಾಕಿಬಿಟ್ಟಿದೆ. ನೆಲ ಚಿಂದಿ ಚರಂಡಿ ಮಾಡಿ, ಭತ್ತವೇ ಮೊದಲಾದ ವಾರ್ಷಿಕ ಬೆಳೆ ಬಿಡಿ, ಆರ್ಥಿಕ ಮೂಲದ ಅಡಿಕೆ ತೆಂಗನ್ನೂ ಮಗುಚಿ ಹಾಕಿದೆ. ನೆಟ್ಟಗೆ ಉಳಿದುಕೊಂಡವುಗಳ ಬುಡಕ್ಕೂ ಗದ್ದೆ ಹುಣಿ ಮರೆಯಾಗುವಷ್ಟೂ ಅಂದರೆ, ಒಂದೆರಡು ಅಡಿಗಳ ದಪ್ಪಕ್ಕೆ ಮರಳು , ಕಲ್ಲಚೂರುಗಳನ್ನು ನಿಗಿದು, ಚೇತರಿಸಿಕೊಳ್ಳಲಾಗದ ಪೆಟ್ಟು ನೀಡಿದೆ.

ಪತ್ರಿಕಾ ವರದಿಗಳು (ಹೆಚ್ಚಿನವು ದಾನಿಯ ಧೋರಣಾನುಸಾರ ರೂಪುಗೊಳ್ಳುವ ಪ್ರಚಾರಗಳು) ಹರಿದು ಬರುವ ಸಹಾಯವನ್ನು ಕೋಟಿಗಳ ಲೆಕ್ಕದಲ್ಲಿ ಕಾಣಿಸಬಹುದು. ಸಾಂಕೇತಿಕವಾಗಿ ಹೊರಗಿನ ಜನ, ಸಂಘಟನೆಗಳು ಒಂದೆರಡು ದಿನ ಸೇವೆ ನಡೆಸುವುದೂ ಇರಬಹುದು. ಮತ್ತೆ ನಮ್ಮ ನಾಗರಿಕ ಅಜ್ಞಾನ, “ಇನ್ನೇನು ಬಿದ್ದ ನಾಲ್ಕೆಂಟು ಮರಗಳಿಗೆ ಬದಲಿ ಸಸಿ ಇಟ್ಟರಾಯ್ತು, ಮರಳು, ಕಲ್ಲುಗಳನ್ನು ತೆಗೆದರಾಯ್ತು” ಅನ್ನಿಸಬಹುದು. ಆದರೆ ಯಾವುದೇ ಯಂತ್ರ ಸಹಾಯವಿಲ್ಲದೇ ಟನ್ನುಗಟ್ಟಳೆ ಮರಳು ಕಲ್ಲನ್ನು ತೆಗೆಯುವುದು ಹೇಗೆ? ಹೊತ್ತು ಹಾಕುವುದೆಲ್ಲಿಗೆ? ಹಳೆ ಮರಗಳ ಪೋಷಣೆ ಎಂತು? ಹೊಸ ಗಿಡ ಇಟ್ಟು ಬೆಳೆಸುವುದು ಎಂದು?…. ಪ್ರಶ್ನಾ ಸರಣಿ ಕಾಡುತ್ತಲೇ ಉಳಿದುಬಿಡುತ್ತವೆ. ಸ್ಥಳೀಯ ಆಡಳಿತ ಕೊಟ್ಟ ಹಿತಾಚಿ, ಎರಡು ಗಂಟೆ ದುಡಿಮೆಯಲ್ಲಿ ಹತ್ತು ಮೀಟರ್ ಪ್ರಗತಿ ತೋರಿಸಲಿಲ್ಲ. ಅದೂ ಕೇವಲ ಸೇವಾದಾಖಲೆ ಇಟ್ಟು, ಮರುದಿನ ಮರಳುವುದಿತ್ತು. ಪುರಂದರ ರಸ್ತೆ ಸಂಪರ್ಕ, ವಿದ್ಯುತ್ ಮತ್ತು ಇತರ ಸೇವೆಗಳ ಪುನಶ್ಚೇತನಗಳನ್ನು ಸಾರ್ವಜನಿಕ ಹಿತಕ್ಕೇ ಬಯಸಿದ್ದಿರಬಹುದು. ಹಾಗೆಂದು, ಅವರ ಬಳಿಯೇ ಬಂದ ಇನ್ನೊಬ್ಬ ಬಡಪಾಯಿ ಪಿಸುಗುಟ್ಟಿದ್ದನ್ನು ಮರೆಯಲುಂಟೇ: ಆತನ ಮನೆಯ ಹಿತ್ತಲಿನ ಪುಟ್ಟ ದರೆ ಕುಸಿತದಲ್ಲಿ ಬಚ್ಚಲಮನೆ ಸಮಾಧಿಯಾಗಿಯೂ ಹದಿನಾರು ದಿನಗಳು ಕಳೆದಿತ್ತು! ಅದನ್ನು ಬಿಡಿಸಿಕೊಡುವುದೂ ಅಗತ್ಯದ್ದೇ ಅಲ್ಲವೇ?

ಅಲ್ಲಿನ ಬಹುತೇಕ ಕೃಷಿಕರು ಮೂಲತಃ ಕಾಜೂರಿನ ಬಳಿಯ ದೊಡ್ಡ ಜಮೀನುದಾರರ ಒಂದು ಕಾಲದ ಸಣ್ಣ ಗೇಣಿದಾರ ಒಕ್ಕಲುಗಳು. ತಮ್ಮ ದುಡಿಮೆಯ ನೆಲವೇ ತಮ್ಮದ್ದಾದ ಸಂತೋಷಕ್ಕೋ ಬಿಟ್ಟು ಹೊಸತೇ ನೆಲೆ ಸಾಧಿಸಲಾಗದ ಭಯಕ್ಕೋ (ಬೇರೇನೂ ಮಾಡಲು ತಿಳಿಯದ ಸಂಕಟವೂ ಇದ್ದಿರಬಹುದು) ಹೆಚ್ಚು ನಾಗರಿಕ ಅವಕಾಶಗಳು ಬಂದಾಗೆಲ್ಲ ಇವರು “ಎಲ್ಲಿಗೂ ಹೋಗಲಾರೆ” ಎಂದೇ ಹೇಳಿದವರು. ಆದರೆ ಇಂದು “ಇಲ್ಲಿರಲಾರೆ” ಎಂದು ಇವರೇ ಕರೆ ಕರೆದು ಹೇಳುವ ಸ್ಥಿತಿ ಬಂದಿದೆ, ಕೇಳುವವರಿದ್ದಾರೆಯೇ?

ಪುರಂದರ, ಒತ್ತಾಯ ಮಾಡಿ ನಮಗೆಲ್ಲ ಮನೆಯ (ಕಡಿಮೆ ನೀರಿನ) ಮಜ್ಜಿಗೆ ಸಮ್ಮಾನ ಮಾಡಿದ್ದರು. ಮತ್ತೆ ನಾವು ಬಂದಂತೇ ಕಾಜೂರಿಗೆ ಮರಳಿದೆವು. ಹಾಗೇ ಒಮ್ಮೆ ದಿಡುಪೆ ಸೇತುವೆಯವರೆಗೆ ಹೋಗಿ, ಅಲ್ಲೂ ಪ್ರವಾಹ ತೊಳೆದು ಹಾಕಿದ ದಾರಿ ನೋಡಿದೆವು. ಅದನ್ನೀಗಾಗಲೇ ಮರುತೆರೆಯುವ ಕೆಲಸ ಸಾಕಷ್ಟು ನಡೆದಿದೆ. ಸೇತುವೆಯಿಂದ ಮೇಲ್ದಂಡೆಯಲ್ಲಿನ ದೈವಸ್ಥಾನವೊಂದು ಪ್ರಾಕೃತಿಕ ಆಕಸ್ಮಿಕದಲ್ಲಿ ಪ್ರವಾಹದ ಪೆಟ್ಟನ್ನು ತಪ್ಪಿಸಿಕೊಂಡಿರುವುದೂ ಕಾಣುತ್ತದೆ. ಅವಲಂಬನ ಇಲ್ಲದೆ ಬಳಲುವ ಮನಸ್ಸುಗಳು, ಇದನ್ನು ಕೇದಾರದ ಪ್ರವಾಹದಲ್ಲಿ ದೇವಳ ಉಳಿದ ‘ಪವಾಡ’ಕ್ಕೇ ಹೋಲಿಸಿದರೆ ಆಶ್ಚರ್ಯವಿಲ್ಲ! ದಿಡುಪೆ – ಕಿಲ್ಲೂರು ವಲಯದ ಅಸಂಖ್ಯ ಜಲಪಾತಗಳಲ್ಲಿ ‘ಎರ್ಮಾಯಿ’ ಒಂದು. (ನಾನದನ್ನು ಮೊದಲು ನೋಡಿರಲಿಲ್ಲ.) ಈ ಸಲದ ಮಹಾಪ್ರವಾಹ ಅದರ ಪಾತ್ರೆಯಲ್ಲೂ ಹರಿದಿತ್ತು. ಅದನ್ನು ನೋಡಲು ಮರಳಿ ಕಾಜೂರು – ಕಡಿರುದ್ಯಾವರ ದಾರಿಯಲ್ಲಿ ತುಸು ಮುಂದುವರಿದೆವು. ಅಲ್ಲಿನ ಎಡ ಹೊರಳಿಗೆ ದಕ್ಕಿದ ಮತ್ತೊಂದೇ ಕಚ್ಚಾ ದಾರಿಯಲ್ಲಿ ಮತ್ತೆ ಜೀಪು ದಡಬಡಿಸಿತು. ಇಲ್ಲಿ ರಸ್ತೆ ಕುಸಿತಕ್ಕೇನೂ ಪಕ್ಕಾದಂತಿರಲಿಲ್ಲ. ಆದರೆ ಮಳೆಯೊಡನೆ ಹೆಚ್ಚು ವಾಹನ ಸಂಚಾರದಿಂದ ಕೊರೆದು, ಸವೆದು ಹೋದಂತಿತ್ತು. ಹಾಗೆ ಜೀಪೊಳಗೆ ಹೊರಳಾಡುವ ‘ಸೌಕರ್ಯ’ಕ್ಕಿಂತ ನಡೆಯುವ ಶ್ರಮವೇ ಒಳ್ಳೆಯದಿತ್ತೋ ಎಂದು ನಾವು ಯೋಚಿಸುವುದರೊಳಗೆ, ಅಂದರೆ ಸುಮಾರು ಎರಡು ಕಿಮೀ ಅಂತರದಲ್ಲೇ ಸವಾರಿ ಮುಗಿದಿತ್ತು. ಮತ್ತೊಂದು ಇನ್ನೂರು ಮೀಟರ್ ಅಂತರದಲ್ಲೇ ಭಾರೀ ಬಂಡೆಗಳ ಪಾತ್ರೆಯಲ್ಲೇ ಭೋರಿಡುತ್ತಿತ್ತು ಎರ್ಮಾಯಿ ಅಬ್ಬಿ.

ಎರ್ಮಾಯಿಯ ಹೊಳೆ, ನೆಲ ಖಾಸಗಿ ನೆಲದಲ್ಲಿದೆ. ಇಲ್ಲಿನ ಸ್ಥಳನಾಮದ ಐತಿಹ್ಯ ಕುತೂಹಲಕಾರಿಯಾಗಿದೆ. ಸ್ಥಳೀಯ ರೈತನೊಬ್ಬ ದಿನದ ಉಳುಮೆ ಮುಗಿಸಿ (ಎರು) ಕೋಣಜೋಡಿಯನ್ನು ಮೀಯಿಸಲು ಅಬ್ಬಿಯ ಬುಡಕ್ಕೆ ಹೋದವ, ಪೂರ್ಣ ಕಾಣದಾದ್ದಕ್ಕೆ (ಮಾಯ!) ಇದು ಎರುಮಾಯಿ! ಪ್ರಾಕೃತಿಕ ಸನ್ನಿವೇಶ ನೋಡಿದರೆ, ಇಂದಿಗೂ ಪರ್ವತಾಗ್ರಗಳಲ್ಲಿ ದೊಡ್ಡ ಮಳೆಯಾದರೆ ಇಲ್ಲಿ ಮಿಂಚಿನ ಪ್ರವಾಹ ಬರುವ ಸಂಭವ ಹೆಚ್ಚೇ ಇದೆ. ಹಾಗೆ ಬಂದ ನೀರ ಹೊಡೆತಕ್ಕೆ ‘ಎರು’ವೇನು ಆನೆಯೂ ಲೆಕ್ಕಕ್ಕಿಲ್ಲ ಎಂಬುದನ್ನೇ ಈ ಸಲದ ಪ್ರವಾಹ ಪ್ರಮಾಣಿಸಿದೆ.

ಎರ್ಮಾಯಿಯ ಬಂಡೆಯ ಕೊರಕಲುಗಳಲ್ಲಿ ಭಾರೀ ಸದ್ದು ಮತ್ತು ಒಂದೆರಡು ಹಂತಗಳ ಬೀಳಿನಲ್ಲಿ ಕೆನ್ನೀರು ಬಿದ್ದು ಹುಡಿಹಾರುತ್ತಲೇ ಇತ್ತು. ಸ್ಥಳದ ಯಜಮಾನರು ಅಲ್ಲಿನ ಪ್ರಾಕೃತಿಕ ಸ್ಥಿತಿಯನ್ನು ಏನೂ ಬದಲಿಸದೆ, ಸ್ವಂತಕ್ಕೆ ಸಣ್ಣದಾಗಿ ಜಲವಿದ್ಯುತ್ ವ್ಯವಸ್ಥೆ ಮಾಡಿಕೊಂಡಿದ್ದರಂತೆ. ಮೊನ್ನಿನ ಪ್ರವಾಹದಲ್ಲಿ ಅದು ಪೂರ್ಣ ಕೊಚ್ಚಿ ಹೋಗಿ, ತುಂಡು ಕೊಳಾಯಿ ಮಾತ್ರ ಉಳಿದದ್ದು ಕಾಣಿಸುತ್ತಿತ್ತು. ಉಳಿದಂತೆ ಪಾತ್ರೆಯನ್ನು ಸುತ್ತುವರಿದ ಮನೋಹರ ಹಸಿರಿನ ಚೌಕಟ್ಟನ್ನು ಪ್ರವಾಹ ಪೂರ್ಣ ಹರಿದು ಚೆಲ್ಲಾಡಿತ್ತು. ನಾಲ್ಕಾಳು ತಬ್ಬಿನ ಭಾರೀ ಮರವೂ ಕೊಚ್ಚಿ ಬಂದು, ನುಣ್ಣಗೆ ತೊಗಟೆ ಕೀಸಿಕೊಂಡು, ಎದುರು ದಂಡೆಯ ಎತ್ತರದ ಇನ್ನೊಂದೇ ಬಂಡೆಯ ಮೇಲೆ, ತಣ್ಣಗೆ ಮಲಗಿದ್ದು ಕಾಣುವಾಗ ಹರಿದ ನೀರಿನ ಮೊತ್ತ, ಶಕ್ತಿ ಯಾರಿಗೂ ಚಳಿ ಹುಟ್ಟಿಸುತ್ತಿತ್ತು. ಅಷ್ಟಾದರೂ ಇಂದು ನಮಗೆ ತೊರೆ ದಾಟುವಲ್ಲಿ ನಮಗೆ ವಿಶೇಷ ಸಮಸ್ಯೆಯೇನೂ ಕಾಡಲಿಲ್ಲ ಎನ್ನುವುದು ಇಲ್ಲಿನ ಸಾಮಾನ್ಯ ಸ್ಥಿತಿ. ನಮ್ಮ ದುರದೃಷ್ಟಕ್ಕೆ ಆ ಹೊತ್ತಿನಲ್ಲಿ, ಬೆಟ್ಟದ ಮೇಲೆಲ್ಲಾದರೂ ಮಳೆಯಾಗಿದ್ದರೆ, ‘ಕುಡ್ಲದಾರ್ಮಾಯೆ’ ಎಂದು ಅಬ್ಬಿಗೆ ಹೊಸ ಹೆಸರು ಸಿದ್ಧಿಸುತ್ತಿತ್ತು. ಅಬ್ಬಿಯ ಜನಪ್ರೀತಿಯನ್ನು ಮನಗಂಡೋ ಏನೋ ಸ್ಥಳದ ಯಜಮಾನರು ಅಲ್ಲಿಗೆ ಸಾರ್ವಜನಿಕ ಪ್ರವೇಶವನ್ನು ಮುಕ್ತವಾಗಿಟ್ಟಿದ್ದರು. ನಾವು ಎದುರು ದಂಡೆಯ ಎತ್ತರದ ಬಂಡೆಯನ್ನೇರಿ ಕುಳಿತು ಬುತ್ತಿಯೂಟ ಮುಗಿಸಿ ಮರಳಿದೆವು. ನಾವಿನ್ನೂ ಎರ್ಮಾಯಿ ಯೋಚನೆಯೊಡನೆ ಕಾಜೂರು ದಾಟುತ್ತಿದ್ದಾಗ, ಪುರಂದರರ ಪರಿಚಯದಲ್ಲೊಬ್ಬ ತರುಣ – ಶಿವಕುಮಾರ್, ಡಾಮರ್ ದಾರಿಯ ಉದ್ದಕ್ಕಷ್ಟೇ ಸವಾರಿ ಕೇಳಿ ಸೇರಿಕೊಂಡಿದ್ದರು. ಅವರನ್ನು ಹೀಗೇ ಮಾತಾಡಿಸಿದಾಗ ಆಶ್ಚರ್ಯಕರ ಸುದ್ಧಿಯೇ ಇತ್ತು. ಆತ ಸಿದ್ಧಗಂಗೆ ಮೂಲದವರು. ಎಂಜಿನಿಯರಾಗಿ ಬೆಳೆದು, ಬೆಂಗಳೂರಿನಲ್ಲಿ ಕೆಲಕಾಲ ದುಡಿದು, ನಗರ ಬದುಕಿಗೆ ರೋಸಿ, ಇಲ್ಲಿ ನೆಲೆ ನಿಂತು ವರ್ಷ ಎರಡೇ ಕಳೆದಿತ್ತು! ಅವರು ನನ್ನ ಹಳೆ ಪರಿಚಯದ, ಸ್ಥಳೀಯ ಕೃಷಿಕರೂ ಆದ ಬಿಕೆ ಪರಮೇಶ್ವರರ ಆಶ್ರಯದಲ್ಲಿ, ಪ್ರಕೃತಿಪರ ಚಟುವಟಿಕೆಗಳೊಡನೆ ಸರಳ, ಒಂಟಿಬಾಳು ನಡೆಸಿದ್ದರು! ಇವೆಲ್ಲ ಅನಾವರಣಗೊಂಡಂತೆ, ನಮ್ಮೊಳಗಿನ ವೈಚಾರಿಕ ಸಾಮ್ಯತೆಯಿಂದ ಆಕರ್ಷಿತರಾಗಿ, ಶಿವಕುಮಾರ್ ನಮ್ಮೊಡನೆ ಜಲಪಾತಕ್ಕೂ ಬಂದರು. ಕೊನೆಯಲ್ಲಿ ಒಂದು ಗಳಿಗೆಯಾದರೂ ‘ಪರಮೇಶ್ವರ ದರ್ಶನ’ ಮಾಡಬೇಕೆಂದು ಒತ್ತಾಯಿಸಿ, ಒಯ್ದೇಬಿಟ್ಟರು.

ಸಮುದಾಯದ ಹೆಸರಿನಲ್ಲೇ ಸ್ಥಳೀಯತನ ಹೊತ್ತು ಬಂದ (ಸ್ಥಾನಿಕರು), ತನ್ನ ಹೆಸರಿನ ಭಾಗವಾಗಿ ಊರನ್ನೇ ಸೇರಿಸಿಕೊಂಡವರು (ಬಂಗಾಡಿ ಕಿಲ್ಲೂರು -) ಬಿ.ಕೆ ಪರಮೇಶ್ವರ್. ಇವರು ಕಿಲ್ಲೂರಿನ ಗಣ್ಯ ಕೃಷಿಕರು, ಪರಿಸರಪ್ರಿಯರು. ಸುಮಾರು ಮೂರು ದಶಕಗಳ ಹಿಂದೆ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಮುಂಚೂಣಿಯಲ್ಲಿದ್ದಂತೆ ದಕ ಜಿಲ್ಲೆಯೊಳಗೂ ‘ಪಶ್ಚಿಮ ಘಟ್ಟ ಉಳಿಸಿ’ ಪಾದಯಾತ್ರೆ ನಡೆದಿತ್ತು. ಪರಮೇಶ್ವರ್ ಅದಕ್ಕೆ ಸಹಜವಾಗಿ ಸೇರಿಕೊಂಡರು ಮತ್ತು ನನಗೂ ಪರಿಚಯಕ್ಕೆ ಸಿಕ್ಕರು. ಪಾದಯಾತ್ರೆಯಿಂದ ಹುರಿಗೊಂಡ ಇವರ ಪರಿಸರಪ್ರೇಮ ಪ್ರದರ್ಶನಕ್ಕಿಟ್ಟ ವಸ್ತುವೂ ಅಲ್ಲ, ಪರೋಪದೇಶದ ಸಾಹಿತ್ಯವೂ ಅಲ್ಲ.

ಪರಮೇಶ್ವರರದು ಸಾವಯವ ಕೃಷಿಯಿಂದಲೂ ಭಿನ್ನವಾಗಿ ನಿಲ್ಲುವ ಪಾರಂಪರಿಕ ಕೃಷಿ ವಿಧಾನ. ಅದರಲ್ಲವರು ತಮಗೆ ಹಿಂದಿನವರಿಂದ ದಕ್ಕಿದ್ದ ಹಲವು ಭತ್ತದ ತಳಿಗಳಿಗೆ, ತಮ್ಮ ನಿಲುಕಿಗೆ ಸಿಕ್ಕ ಇನ್ನಷ್ಟನ್ನು ಸೇರಿಸಿ, (ಇಲ್ಲ, ಮ್ಯೂಸಿಯಂ ಸೇರಿಸಿಲ್ಲ) ವರ್ಷಂಪ್ರತಿ ಶುದ್ಧವಾಗಿ ಬೆಳೆಸುತ್ತ (ಬರಿದೇ ಆರ್ಥಿಕ ಆದಾಯ ನೋಡದೇ), ಬಳಸುತ್ತ, ಆಸಕ್ತರಲ್ಲಿ ಪ್ರಸರಿಸುತ್ತ ಬಂದಿದ್ದಾರೆ. ಹೀಗೆ ಸದ್ಯ ಅವರಲ್ಲಿರುವ ನೂರಾಮೂವತ್ತಕ್ಕೂ ಮಿಕ್ಕ (ನಿಖರ ಸಂಖ್ಯೆ ಮರೆತಿದ್ದೇನೆ)

ಭತ್ತದ ತಳಿಗಳ ಬೀಜ ಪಟ್ಟಿಯನ್ನು ನೋಡುವುದು, ಮತ್ತು ಅದನ್ನವರು ಕೃಷಿಯಲ್ಲಿ ವಿಸ್ತರಿಸುತ್ತಲೇ ಇರುವ ಮಾತು ಕೇಳುವುದು ನಾವು ನಿರೀಕ್ಷಿಸದ ಭಾಗ್ಯವಾಗಿ ಒದಗಿತ್ತು.
ಯಾವುದೇ ಕೃಷಿಕ ಬರಿಯ ಆಹಾರ ಬೆಳೆಗಳನ್ನು ನಂಬಿ ಯಶಸ್ವಿಯಾಗುವುದು ಕಷ್ಟ ಎನ್ನುವ ಮಾತಿದೆ. ಅದನ್ನು ಪರಮೇಶ್ವರ್ ಬೇರೇ ಸ್ತರದಲ್ಲಿ ಪರಿಹರಿಸಿಕೊಂಡಿದ್ದಾರೆ. ಮಳೆ ದೂರವಾದ ಹೆಚ್ಚಿನ ವಾರಾಂತ್ಯಗಳಲ್ಲಿ ಅಸಂಖ್ಯ ಶುದ್ಧ ನಗರವಾಸಿಗಳು ಇವರಲ್ಲಿಗೆ (ಖರ್ಚು ಕೊಟ್ಟು) ‘ಅತಿಥಿ’ಗಳಾಗಿ ಬರುತ್ತಾರಂತೆ. ಆದರಿದು ಹೋಂಸ್ಟೇ ಎಂದು ತೇಲಿಸುವಷ್ಟು ಹಗುರವಾದ ಸಂಗತಿಯಲ್ಲ. ಇಲ್ಲಿ ದಮ್ಮು, ಗುಂಡು, ತುಂಡುಗಳ ಗಮ್ಮತ್ತಿಗೆ ಸ್ಪಷ್ಟ ನಿಷೇಧವೇ ಇದೆ. ಅದು ತಿಳಿದೇ ಗಂಭೀರವಾಗಿ ಬದಲಾವಣೆಯನ್ನು ಬಯಸಿದವರಷ್ಟೇ ಇವರ ಅತಿಥಿಗಳು. ಬಂದ ಮೇಲೆ ನಖರಾ ಮಾಡಿ, ಇವರು ಗೆಟೌಟ್ ಹೇಳಿದ ಅತಿಥಿಗಳ ಸಂಖ್ಯೆ ಸಣ್ಣದೇನಿಲ್ಲ!

ಪರಮೇಶ್ವರ್ ಅತಿಥಿಗಳಿಗೆ ತಮ್ಮ ನೆಲದ್ದೇ ಬೆಳೆಯ ಮತ್ತು ಮನೆಯವರದೇ ಅಡುಗೆಯ ಪಾಲನ್ನೇ ಕೊಡುತ್ತಾರೆ; ಥಳುಕಿನ ಪ್ರತ್ಯೇಕತೆ ಇಲ್ಲ. ಇತರ ಸೌಕರ್ಯಗಳು, ಮನೆಯವರದ್ದಕ್ಕಿಂತಲೂ ಕಡಿಮೆಯದ್ದೂ (ಕೀಳಲ್ಲ) ಸರಳವಾದ್ದೂ ಇರುತ್ತವೆ. ವಾಸಕ್ಕೆ ಮನೆಯ ಸುತ್ತಣ ವಿಸ್ತರಿಸಿದ ಜಗುಲಿಯಷ್ಟೇ ಲಭ್ಯ. (ಕೋಣೆ, ಮಂಚ ಇತ್ಯಾದಿ ಇಲ್ಲ) ಅನಿವಾರ್ಯವಾಗಿ ಆವರಣ ಬಯಸುವವರಿಗೆ, ಜಗುಲಿಯೊಳಗೇ ಬಿಡಿಸಿಕೊಳ್ಳಲು ಗುಡಾರಗಳ ವ್ಯವಸ್ಥೆಯಿದೆ. ಬಿಸಿಲಿನ ದಿನಗಳಲ್ಲಿ ಅಂದಾಜಿಗೂ ಮೀರಿದ ಜನ ಬಂದಾಗ ಅಂಗಳದಲ್ಲೂ ಗುಡಾರ ಬಿಡಿಸಿದ್ದಿದೆಯಂತೆ. ನೆಲದ ಮೇಲೆ ಮಲಗಲು ದಪ್ಪ ಹಾಸೇನೋ (ಫೋಮ್) ಕೊಡುತ್ತಾರೆ, ಹೊದಿಕೆಗಳು ಬಂದವರವೇ! ಇನ್ನು ಶೌಚ, ಸ್ನಾನಕ್ಕೆ ಮನೆಯ ಭಾಗವಾಗಿಯೇ ಶುಚಿಯಾದ ಸಾರ್ವಜನಿಕ ವ್ಯವಸ್ಥೆಯನ್ನೇ ಮಾಡಿದ್ದಾರೆ. (ಅಟ್ಯಾಚ್ಡ್, ಹಾಟ್ ಶವರ್ರು ಎಲ್ಲ ಕೇಳಬೇಡಿ) ಇವೆಲ್ಲಕ್ಕೂ ಮುಖ್ಯವಾಗಿ ಬಂದವರು ಆಸುಪಾಸಿನ ಪ್ರಾಕೃತಿಕ ವೈಶಿಷ್ಟ್ಯಗಳನ್ನು ಅನುಭವಿಸುವುದರೊಡನೆ, ಅಲ್ಲಿ ಅನಾಗರಿಕರು ಮಾಡಿದ ಪರಿಸರ ಮಾಲಿನ್ಯವನ್ನು ತೊಡೆಯುತ್ತಾರೆ. ಹೆಚ್ಚಿನ ಇಷ್ಟದಲ್ಲಿ ಪರಮೇಶ್ವರರ ಕೃಷಿಕ್ಷೇತ್ರದ ಚಟುವಟಿಕೆಗಳಲ್ಲೂ ಕೈ ಸೇರಿಸುತ್ತಾರೆ! ಪರಮೇಶ್ವರ್ ಬಯಸದೇ ಈ ಅತಿಥಿಗಳು ವಾಪಾಸು ಹೋಗುವ ಕಾಲಕ್ಕೆ ಇಲ್ಲಿನ ಕೃಷ್ಯುತ್ಪನ್ನಗಳ ಹೆಚ್ಚುವರಿ ಗ್ರಾಹಕರಾಗುತ್ತಾರೆ, ದೂರದೂರುಗಳಲ್ಲಿ ಪ್ರಚಾರಕರ್ತರೂ ಆಗುತ್ತಾರೆ. ಹೀಗೇ ಹಿಂದೆಂದೋ ಓರ್ವ ಅತಿಥಿಯಾಗಿ ಬಂದಿದ್ದ ಶಿವಕುಮಾರ್, ಇಂದು ಇಲ್ಲೇ ನೆಲೆಸಿರುವುದು ಪರೋಕ್ಷವಾಗಿ ಪರಮೇಶ್ವರರ ಯಶಸ್ಸಿನ ದ್ಯೋತಕ ಎಂದೇ ಹೇಳಬಹುದು.

ನಾವು ಹೋದಂದು ಯಾವುದೇ ಅತಿಥಿಗಳಿರಲಿಲ್ಲ. ಪರಮೇಶ್ವರ್ ಮತ್ತೊಂದೆರಡು ಮೊಮ್ಮಕ್ಕಳನ್ನುಳಿದು, ಮನೆಯವರೆಲ್ಲ ಶೃಂಗೇರಿ ದರ್ಶನಕ್ಕೆ ಹೋಗಿದ್ದರು. ನಾವು ಅಲ್ಲಿ ಇದ್ದ ಸಣ್ಣ ಸಮಯದಲ್ಲಿ ಅವರ ಭತ್ತ ಸಂಗ್ರಹ ನೋಡುವುದರೊಡನೆ ಧಾರಾಳ ವಿಚಾರ ವಿನಿಮಯ ನಡೆಸಿದೆವು. ಎಡೆಯಲ್ಲಿ ಶಿವಕುಮಾರ್ ಅಡುಗೆಮನೆ ವಹಿಸಿಕೊಂಡು ನಮಗೆ ಬೆಲ್ಲದ ಕರಿಕಾಫಿಯ ಉಪಚಾರವನ್ನೂ ಮಾಡಿದರು. ಕನಿಷ್ಠ ಆರು ಶತಮಾನಗಳ ಐತಿಹಾಸಿಕ ಹಿನ್ನೆಲೆಯುಳ್ಳ ಬಂಗಾಡಿ ಅರಸು ಮನೆತನಕ್ಕೆ ಪಾರಂಪರಿಕ ಬೌದ್ಧಿಕ ಸಾಂಗತ್ಯ (ಪುರೋಹಿತ, ಮಂತ್ರಿ, ಗುರು ಇತ್ಯಾದಿ) ಕೊಡುತ್ತಲೇ ಬಂದ ಕುಟುಂಬ ಪರಮೇಶ್ವರರದು. ಹೀಗೆ ಪರಂಪರೆಯ ಜ್ಞಾನ ಮತ್ತು ನೆಲದ ಅನುಭವಗಳೊಡನೆ ಪರಮೇಶ್ವರ್ ಪ್ರಸ್ತುತ ಮಹಾಪ್ರವಾಹದ ಕುರಿತು ವಿಷಾದಪೂರ್ವಕ ಸ್ಥಿತಪ್ರಜ್ಞೆಯನ್ನೇ ಪ್ರದರ್ಶಿಸಿದರು. ಯುಗಾಂತರಗಳಲ್ಲಿ ಸುತ್ತಣ ಎತ್ತರಗಳಿಂದ ಸವಕಳಿಯನ್ನೂ (ಕಲ್ಲು, ಮಣ್ಣು) ನೀರನ್ನೂ ಈ ತಪ್ಪಲಿನ ಬಯಲಿಗೆ ವಿತರಿಸುತ್ತಲೇ ಇರುವ ಪ್ರಕೃತಿಯಾಟದಲ್ಲಿ ನಮ್ಮ ‘ಮಹಾಪ್ರವಾಹ’ ಸಣ್ಣಾಟ. ಇಲ್ಲಿನ ಕೆಲವು ಐವತ್ತು ನೂರು ವರ್ಷಗಳ ಮೇಲ್ಮೈಯ ತೋರಿಕೆಯ ಮಣ್ಣಿನ ದೃಢತೆಯನ್ನು ‘ಕೊಡುಗೆ’ ಎಂದೇ ಮನುಷ್ಯ ಭಾವಿಸಿ ನೆಲೆಸಿದ, ತನ್ನ ಚಟುವಟಿಕೆಗಳನ್ನು ವಿಸ್ತರಿಸಿದ. ಈ ವರ್ಷ ನಾವೆಲ್ಲ ಅನುಭವಿಸಿದಂತೆ ವಿಚಿತ್ರ ಮಳೆಯಲ್ಲಿ ಬೆಟ್ಟದ ಗೋಡೆಮೈಯ ಬಂಡೆಯ ಮೇಲೆ ನೆಲೆಸಿದ್ದ ಮಣ್ಣು, ಹಸಿರು ವೈವಿಧ್ಯಗಳ ಬೇರಿನ ಬಂಧ ಸಡಿಲಗೊಂಡಿತ್ತು. ಸ್ವಲ್ಪ ದೊಡ್ಡ ಮಳೆ ಬಂದಾಗ ಬೆಟ್ಟ ಹೊದಿಕೆ ಜಾರಿಸಿದೆ, ನೀರಿನ ಹರಿವು ಜಾಡು ಬದಲಿಸಿದೆ. ಇದನ್ನು ಸಮರ್ಥಿಸುವ ಉದಾಹರಣೆಯನ್ನು ಪರಮೇಶ್ವರ್ ಮಾತಿನಲ್ಲೂ ಬಂತು. ಕಿಲ್ಲೂರು ವಲಯದ ಬಯಲಿನಲ್ಲಿ ಸಾಮಾನ್ಯವಾಗಿ ಎಲ್ಲೂ ಎಂಟು ಹತ್ತು ಅಡಿ ಆಳಕ್ಕಿಳಿದರೆ ಹಳೇ ಹೊಳೆ ಪಾತ್ರೆಯ ಚರಳು, ಮರಳು ಸಿಗುತ್ತದೆ. ಪರಿಹಾರ ಕಲ್ಪಿಸುವವರು ತತ್ಕಾಲೀನ ತುರ್ತುಗಳೊಂದಿಗೇ ಈಗ ಪ್ರಕೃತಿಪಾಠವನ್ನೂ ಮಾಡಬೇಕು. ಅದರಿಂದ ಪ್ರಾಮಾಣಿಕವಾಗಿ ದೀರ್ಘ ಕಾಲೀನ ಪರ್ಯಾಯ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ನೀಡುವಂತಾಗಬೇಕು. ನಾವು ಮತ್ತೆ ಕಾರೇರಿ ಮಂಗಳೂರತ್ತ ಹೊರಡುವವರೆಗೂ ಕಾದಿದ್ದ ಮಳೆ ನಮ್ಮ ಮಾತನ್ನು ಅನುಮೋದಿಸಿದಂತೇ ಭರ್ರೆಂದು ಒಮ್ಮೆ ಹೊಡೆದು ಹೋಯಿತು!