ಭಾರತದ ಏಕತಾಮೂರ್ತಿ – ಸರ್ದಾರ್ ಪಟೇಲ್ ವಿಗ್ರಹ!
(ಸೈಕಲ್ಲೇರಿ ವನಕೆ ಪೋಗುವ- ಮೂರನೇ ಮತ್ತು ಅಂತಿಮ ಭಾಗ)

ರಾಜಸ್ತಾನದ ಮೂರು ವನಧಾಮಗಳಲ್ಲಿ ನಾವು ಸೈಕಲ್ ಹೊಡೆದ ಕಥನ – ಸೈಕಲ್ಲೇರಿ ನಾನು ನೀವು ವನಕೆ ಪೋಗುವಾ (೨೦೧೮ ಡಿಸೆಂಬರ್), ನೀವೆಲ್ಲ ಓದಿದ್ದೀರಿ. ಆ ಕಥನಾಂತ್ಯದಲ್ಲಿ “……. ಪುನಶ್ಚೇತನರಾಗಿ, ಇನ್ನೊಂದೇ ಹೊಸ ಅನುಭವಕ್ಕೆ ಪೀಠಿಕೆ ಎಂಬಂತೆ ರೈಲ್ವೇ ನಿಲ್ದಾಣಕ್ಕೆ ಧಾವಿಸಿದೆವು” ಎಂದಿದ್ದೆ. ಅದಕ್ಕೀಗ ಮುಹೂರ್ತ ಬಂದಿದೆ.

ಮಂಗಳೂರಿನಿಂದ ರಾಜಸ್ತಾನಕ್ಕೆ ಹೋಗುವ ದಾರಿಯಲ್ಲಿ ನಮ್ಮ ಜತೆಗಿರದ ಅನಿಲ್ ಶಾಸ್ತ್ರಿ, ವಾಪಾಸಾಗುವ ದಾರಿಯಲ್ಲಿ ಸೇರಿಕೊಂಡಿದ್ದರು. ಹೀಗೆ ಹರಿವಾಯು (ಹರಿಪ್ರಸಾದ್ ಶೇವಿರೆ ಮತ್ತು ಅನಿಲ್ ಶಾಸ್ತ್ರಿ) ಸಂಧಿಯಲ್ಲಿ ನಮ್ಮದು ಪೂರ್ಣ ರೈಲು ಯಾನ ಎಂದೂ ಟಿಕೆಟ್ಟೂ ಶುದ್ಧವಾಗಿತ್ತು. ವಡೋದರದಲ್ಲಿ ಐದಾರು ಗಂಟೆಗಳ ವ್ಯತ್ಯಾಸದಲ್ಲಿ ಗಾಡಿ ಬದಲಾವಣೆಯ ಅನಿವಾರ್ಯತೆ ಏನೋ ಇತ್ತು. ಆ ಅಂತರವನ್ನು ನಾವು ಹನ್ನೆರಡು ಗಂಟೆಗಳಿಗೆ (ಒಂದು ಗಾಡಿಯನ್ನು ನಿರಾಕರಿಸಿ) ವಿಸ್ತರಿಸಿ, ವಡೋದರ ರೈಲ್ವೇ ಆರಾಮ್ ಘರ್ ಜಗುಲಿ ನರ್ಮದಾಸಾಗರ ತಟದಲ್ಲಿ, ಹೊಸದಾಗಿ (೨೦೧೭) ಮೂಡಿ, ವಿಶ್ವವಿಕ್ರಮ ಸ್ಥಾಪಿಸಿರುವ ಸರ್ದಾರ್ ಪಟೇಲರ ವಿಗ್ರಹ ನೋಡುವುದೆಂದೂ ನಿಶ್ಚೈಸಿದ್ದೆವು. ಮಾಳಿಗೆ ರೈಲು ಸೈಕಲ್ ಯಾನ ಮತ್ತದರ ಸಮಾರೋಪ ಸಮಾರಂಭ ಅಪರಾಹ್ನ ಮೂರು ಗಂಟೆಗೇ ಮುಗಿದದ್ದು ಸರಿ. ಆದರೆ ಆ ಚಿತೋರ್ಘರ್‍ನಿಂದ ಸುಮಾರು ನೂರು ಕಿಮೀ ದೂರದ ಉದಯಪುರಕ್ಕೆ ನಮ್ಮನ್ನು ಹೊತ್ತು ಮುಟ್ಟಿಸಲಿದ್ದ ಬಸ್ ಮಾತ್ರ ನಿಧಾನಿಯಾಯ್ತು. ಕಾಡು ದಾರಿಯ ಪೆಡಲಿಕೆಯಿಂದ ಕಿತ್ತ ಬೆವರು, ಮೆತ್ತಿದ ದೂಳು, ಆವರಿಸಿದ ಬಳಲಿಕೆಗೆಲ್ಲ ಕನಿಷ್ಠ ಒಂದು ಸ್ನಾನ ಬಯಸಿದ್ದೆವು. ಆದರೆ ಸಮಯಾಭಾವದಲ್ಲಿ ಅದನ್ನು ಬಿಟ್ಟು, ಬೈಕ್ ಸ್ಟುಡಿಯೋದ (ವಿಶೇಷಪಟ್ಟ ಸೈಕಲ್ ಅಂಗಡಿ ಮಾತ್ರ) ಸೀಮಿತ ಅನುಕೂಲದಲ್ಲೇ ಕೇವಲ ಕೈ ಮುಖ ತೊಳೆದು, ಬಟ್ಟೆ ಬದಲಿಸಿಕೊಂಡೆವು. ಪಕ್ಕದ ಹೋಟೆಲಿನಲ್ಲಿ ಅಷ್ಟೇ ಚುರುಕಾಗಿ ಹೊಟ್ಟೆಪಾಡೂ ಪೂರೈಸಿಕೊಂಡೆವು. ಆಮೇಲೂ ಆರೆಂಟು ಕಿಮೀ ದೂರದ ರೈಲ್ವೇ ನಿಲ್ದಾಣ ಸೇರುವಲ್ಲಿ ತಡವಾಗುತ್ತೇವೆಂಬ ನಮ್ಮ ಭಯವನ್ನು, ಸಿಕ್ಕ ರಿಕ್ಷಾ ಚಾಲಕನಿಗೆ ವರ್ಗಾಯಿಸಿದೆವು. ಅವನು ನಿಜಕ್ಕೂ ಚಾಲಾಕಿಯೇ! ಆತ ರಿಕ್ಷಾದ ವೇಗ ಇಮ್ಮಡಿಸಿ, ಇತರ ವಾಹನ ಸಮ್ಮರ್ದಗಳನ್ನು ನಿಭಾಯಿಸಿದ ಜಾಣ್ಮೆ ನಮಗೆ ಹಲವು ಆತಂಕದ ಕ್ಷಣಗಳನ್ನೇ ಕೊಟ್ಟಿತ್ತು. ಆದರೂ ನಿಗದಿತ ವೇಳೆಗೆ, ನಿರಪಾಯವಾಗಿ ರೈಲ್ವೇಕಟ್ಟೆ ವಡೋದರ ಅರಮನೆ ದ್ವಾರ ಮುಟ್ಟಿಸಿದ್ದ! ಹಾಗೆಂದು ನಮ್ಮ ಸಾಹಸವನ್ನು ರೈಲ್ವೇ ಇಲಾಖೆಯೇನೂ ಪುರಸ್ಕರಿಸಲಿಲ್ಲ. ಅಲ್ಲಿ ಗಣಕೀಕೃತ ಫಲಕ ಕರಾರುವಾಕ್ಕಾಗಿ ನಮ್ಮ ರೈಲು ಸುಮಾರು ೪೫ ಮಿನಿಟು ತಡವಾಗಿ ಬರುವುದನ್ನು ಸಾರಿಕೊಂಡಿತ್ತು!

ಕಾಯುವಿಕೆಗಿಂತ ಅನ್ಯ ತಪವಿಲ್ಲ ಎಂಬ ಕವಿವಾಣಿ ನಿಜ! ಫಲವಾಗಿ ನಮಗೆ ಅನಿರೀಕ್ಷಿತವಾಗಿ ಮಾಳಿಗೆ ರೈಲಿನ, ಅರ್ಥಾತ್ ಡಬ್ಬಲ್ ಡೆಕ್ಕರ್ ಟ್ರೈನ್ನ ದರ್ಶನವಾಯ್ತು. ೨೦೧೧ರಿಂದೀಚೆಗೆ ಮಾಳಿಗೆ ರೈಲುಗಳು ‘ಭಾರತ ಸಂಚಾರ’ದ ಸಮ್ಮರ್ದವನ್ನು ಹಗುರಮಾಡಲು ಕೆಲವೇ ದಾರಿಗಳಲ್ಲಿ ಸೇವೆಗಿಳಿದಿವೆ ಎಂದೇನೋ ತಿಳಿದಿದ್ದೆ. ಆದರೆ ಕಣ್ಣಾರೆ ನೋಡಲು ಪ್ರಥಮ ಬಾರಿಗೆ ಇಲ್ಲಿ ಅವಕಾಶ ಒದಗಿತ್ತು. ರೈಲುಗಳು ಮೀಟರ್ ಗೇಜಿನಿಂದ ಬ್ರಾಡ್ ಗೇಜಿಗೆ, ಚಕುಪುಕು ಬಂಡಿಯಿಂದ ಬೊಬ್ಬಿರಿವ ಡೀಸೆಲ್ ಇಂಜಿನಿಗೆ, ಕೊನೆಯಲ್ಲಿ ಪೂರ್ಣ ವಿದ್ಯುದೀಕರಣಕ್ಕೆ ರೂಪಾಂತರಗೊಂಡದ್ದು, ಒಳವಿನ್ಯಾಸಗಳು ಪರಿಷ್ಕರಣೆಗೊಂಡದ್ದು, ಸೇವಾ ಸೌಕರ್ಯಗಳು ನೂರು ಬಗೆಗಳಲ್ಲಿ ಹೆಚ್ಚಿದ್ದನ್ನೆಲ್ಲ ನಾನು (ಜನಸಾಮಾನ್ಯ), ವಿಕಾಸಶೀಲತೆಯ ಸಹಜ ಹೆಜ್ಜೆಗಳೆಂದೇ ಗಣಿಸುತ್ತ ಬಂದಿದ್ದೆ.

ಆದರೆ ದ್ವಿಪಥೀಕರಣ (ಉದಾ: ಕೊಂಕಣ್ ರೈಲ್ವೇ), ಅದರಲ್ಲೂ ಮುಖ್ಯವಾಗಿ ಭಾರೀ ಸುರಂಗ, ಸೇತುವೆಗಳ ವಲಯಗಳಲ್ಲಿ ಎನ್ನುವಾಗ “ಅಯ್ಯೋ ಎಲ್ಲ ಇನ್ನೊಂದು ಪ್ರತಿಯಾಗಬೇಕು” ಎಂದು ಉದ್ಗರಿಸಿದ್ದೆ. ಆ ನಿಟ್ಟಿನಲ್ಲಿ ಈ ಮಾಳಿಗೆ ರೈಲು ಕಂಡಾಗ ನನ್ನ ಯೋಚನಾಪಥಕ್ಕೆ ಒಮ್ಮೆ ಭಾರೀ ಆಘಾತವೇ ಆಯ್ತು. ವಿದ್ಯುತ್ ಸಂಪರ್ಕ, ಮೇಲ್ಸೇತುಗಳು, ಗುಹಾಚಪ್ಪರಗಳು, ಬಹುತೇಕ ರೈಲ್ವೇ ನಿಲ್ದಾಣದ ಮಾಡುಗಳನ್ನು ರೈಲಿಗೆ ಹೊಂದಿಕೊಳ್ಳಲು ಎತ್ತರಿಸುವುದು ಸಣ್ಣ ಕೆಲಸವಲ್ಲ ಎಂದೇ ನಂಬಿದ್ದೆ. ಆದರೆ ಮುಂದುವರಿದ ತಂತ್ರಜ್ಞಾನದ ಫಲವಾದ ಈ ಡಬ್ಬಿಗಳು ಬಹುತೇಕ ಇರುವ ವ್ಯವಸ್ಥೆಗೇ ಸುಲಭವಾಗಿ ಒಗ್ಗಿಕೊಳ್ಳುವಂತವೇ ಆಗಿವೆ.

ನಮ್ಮ ರೈಲು ಸುಮಾರು ಮುಕ್ಕಾಲು ಗಂಟೆ ತಡವಾಗಿ ಬಂತು. ಅದರೊಳಗಿನ ನಮ್ಮ ಸ್ಥಾನ ಮೊದಲೇ ಖಾತ್ರಿಗೊಂಡಿದ್ದುದರಿಂದ ನಿರಾತಂಕವಾಗಿ ಸೇರಿಕೊಂಡೆವು. ವಡೋದರವೂ ಸೂರ್ಯೋದಯದನಂತರವೇ ಸಿಕ್ಕುವ ನಿಲ್ದಾಣವಾದ್ದರಿಂದ ನಾವು ನಿಶ್ಚಿಂತರಾಗಿ ಮಲಗಿಕೊಂಡೆವು. ನನ್ನ ತಾರುಣ್ಯದ ಬಹುತೇಕ ರೈಲುಯಾನಗಳೆಲ್ಲ ಸಾಮಾನ್ಯ ಭೋಗಿಗಳಲ್ಲೇ ಆಗಿತ್ತು. ಅದರಲ್ಲೂ ಕೆಲವು ಆಸನ ನಿಗದಿಯಿಲ್ಲದ (ಅನ್ ರಿಸರ್ವ್ಡ್) ಟಿಕೆಟ್, ಅಂದರೆ ಕೇವಲ ಪ್ರಯಾಣ ಅನುಮತಿಪತ್ರಗಳಷ್ಟೇ ಆಗಿರುತ್ತಿದ್ದವು. ಅಂದರೆ, ಎಡೆ ಸಿಕ್ಕರೆ ಅಂಡೂರಬಹುದು, ಮಲಗಲೂಬಹುದು. ಉಳಿದಂತೆ ಗೃಹಕೃತ್ಯದ ಬಹುತೇಕ ಎಲ್ಲ ಕಲಾಪಗಳನ್ನೂ ನಿರ್ಭಿಡೆಯಿಂದ ರೈಲಿಗೆ ವಿಸ್ತರಿಸಿಕೊಂಡ ಮಂದೆಯಲ್ಲಿ ಒಂದಾಗಿ ಸಾಗಬೇಕಾಗುತ್ತಿತ್ತು. ಆದರೆ ಇದೋ ಹವಾನಿಯಂತ್ರಿತ ಭೋಗಿ. ಇಲ್ಲಿ, ರೈಲ್ವೇ ಇಲಾಖೆ ಮಡಿ ಮಾಡಿದ ಹಾಸುಹೊದೆಗಳನ್ನು ಕೊಟ್ಟು, ತಲೆಗಿಂಬೂ ಕೊಟ್ಟು, ಲೆಕ್ಕದಿಂದಾಚೆ ಒಬ್ಬರೂ ಭೋಗಿಯೊಳಗೆ ಬಾರದಂತೆ ಪಾರಕ್ಕೆ ಜನ ಇಟ್ಟು ನೋಡಿಕೊಳ್ಳುತ್ತದೆ. ಒಮ್ಮೆಗೆ ಗಮ್ಮತ್ತು ಅನ್ನಿಸುವಂತಿತ್ತು. ಅನಂತರ ಕಳ್ಳರ ಕುರಿತ ಜಾಗೃತಿ, ಬಿಸಿ ಗಾಳಿಯನ್ನೇ ಭಸ್ಸೆಂದು ಕಲಕುವ ಪಂಕಗಳ ಶ್ರುತಿ, ಕಂಬಿಗಳ ಲಟಕ್ ಪಟಕ್ ತಾಳ, ಆಗೀಗ ಇಂಜಿನ್ ಹಾರ್ನಿನ ಪಲುಕುಗಳೆಲ್ಲ ಕಳೆದುಕೊಂಡೆ ಎನ್ನುವ ವಿರಹಶೃಂಗಾರ ತುಸು ಕಾಡಿತು! ದಿನದ ಬಳಲಿಕೆ, ನನ್ನ ಅರಿವನ್ನು ಬೇಗನೆ ಮೆಟ್ಟಿ ನಿದ್ದೆಗೆ ಕೆಡಹಿತ್ತು. ಆರಾಮದಲ್ಲಿ ಬೆಳಿಗ್ಗೆ ಏಳೂವರೆಯ ಸುಮಾರಿಗೆ ವಡೋದರ ತಲಪಿದೆವು.

ಪ್ರಯಾಣದ ವಿವರಗಳನ್ನು ಮುಂದಾಗಿಯೇ ಜಾಲಾಡಿ ಸ್ಥಳ, ವಿರಾಮ, ಮರುಸಂಪರ್ಕಾದಿಗಳನ್ನು ಹರಿ ಗಟ್ಟಿ ಮಾಡಿದ್ದರು. ನಾನು ತಮಾಷೆಗೆ ‘ರೈಲ್ವೇಮಂತ್ರಿ’ ಎಂದೂ ಕರೆಯುವ ಅನಿಲ್ ಹೆಚ್ಚಿನ ಮಾಹಿತಿ ಸಂಗ್ರಹಿಸಿ, ವಡೋದರದಲ್ಲಿ ತತ್ಕಾಲೀನ ವಿಶ್ರಾಂತಿಗೆ ಅತಿಥಿಗೃಹ – ಆರಾಂ ಘರ್, ಕಾಯ್ದಿರಿಸಿದ್ದರು. ನಾವು ನಿರ್ಯೋಚನೆಯಿಂದ ಪ್ಲ್ಯಾಟ್ ಫಾರಂನಲ್ಲಿ ತಿಂಡಿ ಮುಗಿಸಿಕೊಂಡೆವು. ನಾಲ್ಕು ಹೆಜ್ಜೆ ಹಾಕಿ, ಪ್ಲಾಟ್ ಫಾರಂ ಮುಂದುವರಿಕೆಯೇ ಆದ ಆರಾಮ್ ಘರ್ ಸೇರಿಕೊಂಡೆವು. ಶೌಚ ಸ್ನಾನ ಮುಗಿಸಿ, ಅನಗತ್ಯ ಹೊರೆಗಳಿಗೆ ಕೋಣೆಯನ್ನೇ ಲಾಕರ್ ಮಾಡಿ, ಹೊರಗೆ ಬಂದು ಚೌಕಾಸಿಯಲ್ಲಿ ಬಾಡಿಗೆ ಕಾರು ಹಿಡಿದೆವು.

ತುಳುವರ ಬರೋಡಾ (= ಬರಬೇಕಾ?) ನವಭಾರತೀಕರಣದ ಅಲೆಯಲ್ಲಿ ಇಂದು ವಡೋದರ (ವಡೆ ತುಂಬಿದ ಹೊಟ್ಟೆ?) ಆಗಿದೆ. ಜಾಗತೀಕರಣದ ಕಣ್ಣಲ್ಲಿ ಇಂದು ಎಲ್ಲ ನಗರಿಗಳೂ (ಅಷ್ಟೇ ಅಲ್ಲ, ಅಲ್ಪಾಯುಗಳಾದ ವ್ಯಕ್ತಿಗಳೂ) ಗಣಕಗಳಲ್ಲಿ ಕೇವಲ ಸಂಖ್ಯೆಗಳಷ್ಟೇ ಆಗಿರುವ (ಡಿಜಿಟಲೈಸೇಶನ್?!) ತಮಾಷೆ ನೆನೆಸಿದರೆ ನಗೆ ಬರುತ್ತದೆ. ಉದಾಹರಣೆಗೆ, ನನ್ನದೇ ಕತೆ ನೋಡಿ: ಭವ್ಯ ಬಾರತದೊಳಗಣ ಅಮರ ಮಂಗಳೂರು ಇಂದು ‘೫೭೫೦೦೧’. ಏನೇ ಬಿದಿರುಬಾವಲಿ ಕಟ್ಟಿಕೊಂಡರೂ ತಾತ ಮುತ್ತಾತರನ್ನು ಎಳೆದುಕೊಂಡು ಪ್ರವರ ವಿಸ್ತರಿಸಿದರೂ ಇಂದು ‘ಅಶೋಕವರ್ಧನ’ ಲೋಕಮುಖಕ್ಕೆ ಆಧಾರ್ ಕಾರ್ಡಿನ ಖಚಿತ ಹತ್ತು ಸಂಖ್ಯೆ ಮಾತ್ರ! ಉತ್ತಮ ಸಾಮಾಜಿಕ ನಿರ್ವಹಣೆಗೆ ಅಂಕಿಕ (ಡಿಜಿಟಲೈಸೇಶನ್) ಪ್ರಾತಿನಿಧ್ಯ ಅನಿವಾರ್ಯವಿರಬಹುದು. ಅದು ಬಿಟ್ಟು, ಇತಿಹಾಸವನ್ನೇ ರಿಪೇರಿ ಮಾಡುತ್ತೇವೆಂಬ ಸೋಗಿನಲ್ಲಿ, ರೂಢಿಯಲ್ಲಿರುವ ಹೆಸರು, ಸಂಕೇತಗಳನ್ನೆಲ್ಲ ಬದಲಿಸುವುದು ಕುಹಕತನ. ಹಾಗೆ ಬದಲಿದವೂ ವರ್ತಮಾನದ ಖಯಾಲಿಗಳಿಗೆ ಹೊಂದುವಷ್ಟೇ ಹಿಂದೆ ಸರಿದೀತು, ನಿಜ ಮೂಲಕ್ಕಲ್ಲ ಎನ್ನುವುದನ್ನೂ ಮರೆಯಬಾರದು.

ಸರಳ ಉದಾಹರಣೆ: ಬ್ರಿಟಿಶರು ಧ್ವನಿ ಹೊರಡಿಸಲಾಗದ ಸಂಕಟಕ್ಕೆ ರೂಢಿಸಿದ ‘ಮರ್ಕ್ಯರಾ’ವನ್ನು ‘ಮಡಿಕೇರಿ’ ಎಂದರೇ ವಿನಾ ‘ಮುದ್ದುರಾಜಕೇರಿ’ ಅಲ್ಲ. ನಮ್ಮದೇ ‘ಸೋತ ಕೆನರಾ’ದಲ್ಲಿ ದಕ್ಕಿದ್ದು ‘ದಕ್ಷಿಣ ಕನ್ನಡ’ ಮಾತ್ರ, ತುಳುನಾಡು ಅಲ್ಲ….. ಈ ಸರ್ಕಸ್ಸುಗಳು, ಅಂದರೆ ಎಲ್ಲಾ ಬೋರ್ಡು, ದಾಖಲೆಗಳನ್ನು ಹೊಸ ಹೆಸರಿಗೆ ಬದಲಿಸುವ ಕೆಲಸ, ಸಾರ್ವಜನಿಕ ಖಜಾನೆಗೆ ಯಾವುದೇ ಸಾಧನೆಯಿಲ್ಲದ ದೊಡ್ಡ ವೆಚ್ಚ ಮಾತ್ರ! ಕೆನರಾ ಬ್ಯಾಂಕ್‍ಗೆ ಮೂಲದಲ್ಲಿ ಸಾಂಕೇತಿಕ ಚಿತ್ರವಾಗಿದ್ದ ಗುಲಾಬಿ ಬಿಟ್ಟು, ಗಂಟು ಹಾಕಿಕೊಂಡ ಎರಡು ತ್ರಿಕೋನಕ್ಕೆ ಬದಲುವಲ್ಲಿ ನಾಲ್ಕು ಕೋಟಿ ವೆಚ್ಚವಾಗಿದೆಯಂತೆ! ಇನ್ನು ಈಚೆಗಷ್ಟೇ ಘೋಷಣೆಯಾದಂತೆ ಸಿಂಡಿಕೇಟ್ ಬ್ಯಾಂಕ್ ಕೆನರಾದೊಡನೆ ವಿಲೀನವಾಗುತ್ತಿದೆ. ಅಂದರೆ ಗಂಟು ಹಾಕಿಕೊಂಡ ತ್ರಿಕೋನಗಳು ‘ನಾಯಿ’ ಕತ್ತಿನ ಸರಪಳಿಯಾಗಬಹುದು. ಅದು ಇನ್ನೊಂದು ಹತ್ತಿಪ್ಪತ್ತು ಕೋಟಿ ಅನುತ್ಪಾದಕ ವೆಚ್ಚಕ್ಕೆ ದಾರಿಯಾಗಲೂಬಹುದು!! ವಡೋದರದ ಕುರಿತು ಕೊನೆಯ ಮಾತು: ಈ ಎಲ್ಲವನ್ನೂ ನಡೆಸಿದ ರಾಜಕೀಯ ಖಯಾಲಿ ನಾಳೆ ಬಲವತ್ತರವಾದರೆ, ಅಂದರೆ ಮರುನಾಮಕರಣದ ಹುಚ್ಚು ಹೆಚ್ಚಾದರೆ, ನಮ್ಮ ಅಸಂಖ್ಯ ಗಾಂಧೀ ನೆಹರೂ ನಗರಗಳಂತೆ (ದೇಶ – ‘ನಮೋ ಭಾರತ’) ವಡೋದರ – ‘ಅಶಾ ಪುರ’ವಾದರೆ ಬೆರಳು ಕಚ್ಚಬೇಡಿ. (ನಾನು ಕೇಳಿದ ಮಾತು: ವಡೋದರ ಬಸ್ ನಿಲ್ದಾಣದ ಕಟ್ಟಡವಿಡೀ ಅಮಿತ್ ಶಾರದ್ದಂತೆ!)

ಗುಜರಾತಿನ ಮೂರನೇ ದೊಡ್ಡ ನಗರ ವಡೋದರ. ಆ ನಗರಮಿತಿ ದಾಟುತ್ತಿದ್ದಂತೆ ಅಲ್ಲಿನ ಪುರಾತನ ಅರಮನೆ ನಮ್ಮ ಗಮನ ಸೆಳೆದಿತ್ತು. ಸಂಜೆ ಬೇಗ ಬಂದರೆ ಅದನ್ನು ನೋಡುವ ಅಂದಾಜು ಹಾಕಿದ್ದಷ್ಟೇ ಲಾಭ! ವಡೋದರ – ನರ್ಮದಾ ಸಾಗರದ ನಡುವಣ ಸುಮಾರು ನೂರು ಕಿಮೀ ದಾರಿ, ಹಿಂದೆ ಹಳ್ಳಿಗಾಡಿನ ನಡುವೆ ಹರಿದ ಎರೆ ಹುಳದಂತಿತ್ತಂತೆ. ಆದರೆ ಇಂದು ಅದೇ ಪೊರೆ ಕಳಚಿದ ಮಹೋರಗವಾಗಿದೆ. ಇಲ್ಲಿ ಗಮನಿಸಬೇಕಾದ ಅಂಶ, ದೇಶದ ಘನತೆ ಹೆಚ್ಚಿಸುವ ಹೆಸರಿನಲ್ಲಿ, ಅಂತಾರಾಷ್ಟ್ರೀಯ ಪ್ರವಾಸಿಗಳಿಗೆ ನಡೆಮಡಿ ಹಾಸುವ ಹುಚ್ಚಿನಲ್ಲಿ, ಕಳೆದು ಹೋದ ಅಷ್ಟೂ ಹೆಚ್ಚುವರಿ ನೆಲ ಅಪ್ಪಟ ಕೃಷಿಭೂಮಿ. ಇನ್ನೂ ಸ್ಪಷ್ಟವಾಗಿ ಹೇಳುವುದಿದ್ದರೆ, ನರ್ಮದಾ ಸಾಗರದ ನೀರಾವರಿಯ ಭರವಸೆಯನ್ನು ಪಡೆದ ನೆಲ. ಹಾಗೆಂದು ಇದನ್ನು ಸಮರ್ಥಿಸಿಕೊಳ್ಳುವಂತೆ ಇಲ್ಲಿ ವಾಹನ ಸಂಚಾರವೇನೂ ಏರಿಲ್ಲ ಎಂದು ನಮ್ಮ ಕಾರಿನ ಚಾಲಕ ಹೇಳಿದ.

ಯಕ್ಷಗಾನದಲ್ಲಿ ವಿಶೇಷ ವೇಷಗಳು ನೇರ ವೇದಿಕೆಯ ಕಲಾಪಕ್ಕೆ ಸೇರಿಕೊಳ್ಳುವುದಿಲ್ಲ. ಮೊದಲು ಬೊಬ್ಬೆ, ಆಂಶಿಕ ನಡೆಗಳೊಡನೆ ಪ್ರೇಕ್ಷಾಮನದಲ್ಲಿ ‘ಅದ್ಭುತ’ವನ್ನು ಪ್ರಚೋದಿಸುತ್ತದೆ. ಅಂಥಾ ತೆರೆಪೊರ್ಪಾಟನ್ನು ಸರದಾರ್ ವಲ್ಲಭ ಭಾಯ್ ಪಟೇಲ್ ವಿಗ್ರಹ ನಮಗೆ ಏಳೆಂಟು ಕಿಮೀ ದೂರದಿಂದಲೇ ಕೊಡ ತೊಡಗಿತ್ತು. ದಾರಿಯ ಕೊನೆಯ ನಾಗರಿಕ ವ್ಯವಸ್ಥೆ – ಕೆವಡಿಯಾ, ಒಂದು ಕಾಲದ ಹಳ್ಳಿ. ಈಗ ನಮ್ಮ ರಾಷ್ಟ್ರಗರ್ವವನ್ನು (ಅನಾವಶ್ಯಕವಾಗಿ?) ಈ ವಿಗ್ರಹದಲ್ಲಿ ನಿಕ್ಷೇಪಿಸಿದ್ದರ ಫಲವಾಗಿ ಅಲ್ಲಿಂದಲೇ ರಕ್ಷಣಾ ಬಂದೋಬಸ್ತುಗಳು ಕಾಡುತ್ತವೆ. ೨೦೧೭ರಲ್ಲಿ ವಿಗ್ರಹ ಲೋಕಾರ್ಪಣವಾಗುವ ಮತ್ತು ಹಿಂಬಾಲಿಸಿದ ಕೆಲವು ವಾರಗಳ ಕಾಲ ದೇಶಾದ್ಯಂತ ಪೋಲಿಸ್ ಬಲದ ಪ್ರಾತಿನಿಧಿಕ ತುಕಡಿಗಳು ಇಲ್ಲಿನ ರಕ್ಷಣಾ ಹೊರೆಗೆ ಹೆಗಲು ಕೊಡಲು ಬರಬೇಕಾಯ್ತಂತೆ! ಕೆವಡಿಯಾ ಹೊಸ ಅಲೆಗೆ ಮೈಮುರಿದೇಳುತ್ತಿದೆ. ನರ್ಮದಾ ನದಿಯನ್ನು ಹೆಚ್ಚು ಜನೋಪಯೋಗಿ ಮಾಡುವ ಸರಕಾರಗಳ ಯೋಜನೆಗಳ ಹೇರಾಟ, ಅದರಿಂದುಂಟಾಗುವ ಪಾರಿಸರಿಕ ಮತ್ತು ಸಾಮಾಜಿಕ ಸಮಸ್ಯೆಗಳ ವಿರುದ್ಧದವರ ಹೋರಾಟ ನಾವು ಸಾಕಷ್ಟು ಕಂಡಿದ್ದೇವೆ, ಕೇಳಿದ್ದೇವೆ. ಅವನ್ನೆಲ್ಲ (ಎಂದಿನಂತೆ) ಅಧಿಕಾರಯುತವಾಗಿ ಮೆಟ್ಟಿ ಯೋಜನೆಗಳು ಪೂರ್ಣಗೊಂಡದ್ದೂ ಆಗಿವೆ. ಅದರ ಗುಣಾವಗುಣಗಳು ಕಾಲನ ತಕ್ಕಡಿಯಲ್ಲಿ ಭಾರವಾಗಿ ಇರುವಂತೆಯೇ ಚಿಗಿತುಕೊಂಡ ಈ ಮೂರನೆಯ ಮುಖ – ಭಾರತದ ಏಕತೆಗೊಂದು ಸಂಕೇತವೆಂಬ ವಿಶೇಷ ವೇಷ, ಕೆವಡಿಯಾದ ಪ್ರಸಂಗದಲ್ಲಿ ದುಷ್ಟ ರಕ್ಕಸವಾಗುವುದೋ ನಿಜಕ್ಕೂ ವಿಶ್ವದರ್ಶನದ್ದಾಗುವುದೋ ಕಾಲವೇ ಹೇಳಬೇಕು.

ರಾಷ್ಟ್ರೀಯ ಪ್ರಜ್ಞೆಗೆ ಹೀಗೊಂದು ಸಂಕೇತದ ಕೊರತೆಯಿತ್ತೇ ಎಂಬ ಪ್ರಶ್ನೆಗೆ ಅವಕಾಶವೇ ಇಲ್ಲದಂತೆ ೨೦೧೦ರಲ್ಲಿ ಇದರ ನಿರ್ಮಾಣದ ವಿವಿಧ ಹಂತಗಳು ಘೋಷಣೆಯಾಗಿತ್ತು. ಆದರದು ಸಾರ್ವಜನಿಕ ಪಾಲುಗಾರಿಕೆಯಲ್ಲಿ, ಗುಜರಾತಿನ ಕೊಡುಗೆ ಎಂದಷ್ಟೇ ಅಂದಿನ ಗುಜರಾತಿನ ಮು.ಮಂ. ನರೇಂದ್ರ ಮೋದಿ ಘೋಷಿಸಿದ್ದರು. ಅದರಲ್ಲಿ ಅವರ ಅಧಿಕಾರಗ್ರಹಣದ ದಶವಾರ್ಷಿಕ ‘ಸಂಭ್ರಮ’ವೂ ಸೇರಿತ್ತು. ೨೦೧೩ರಲ್ಲಿ ನಿರ್ಮಾಣ ಶುರುವಾದ ಹೊಸತರಲ್ಲೇ (೨೦೧೪) ಮೋದಿ ದಿಲ್ಲಿಗೆ ಹೋದ ಮೇಲೆ ಪ್ರಧಾನಿ ಪೀಠದ ಬಲವೂ ಸೇರಿಕೊಂಡಿತು. (ಶಾಸನ ವಿಧಿಸಿದ ಎಚ್ಚರಿಕೆ: ಹತ್ತು ವರ್ಷ ಕಳೆದರೂ ಪೂರ್ಣಗೊಳ್ಳದ ನಮ್ಮ ಹೆದ್ದಾರಿ ಮೇಲ್ಸೇತಿನ ಕತೆ ಇಲ್ಲಿ ಸ್ಮರಿಸುವುದು ದೇಶದ್ರೋಹ!) ನಾಲ್ಕೇ ವರ್ಷದಲ್ಲಿ, ಅಂದರೆ ೨೦೧೮ರಲ್ಲಿ ‘ಏಕತೆಯ ಸಂಕೇತ’ ಲೋಕಾರ್ಪಣವಾಯ್ತು! ಈ ಪಟೇಲ್ ವಿಗ್ರಹಕ್ಕೆ ರಾಜ್ಯ ಸರಕಾರದಿಂದ ಸುಮಾರು ಐನೂರು ಕೋಟಿ, ಕೇಂದ್ರ ಸರಕಾರದಿಂದ ಇನ್ನೂರು ಕೋಟಿ ನೇರ ಅನುದಾನಗಳೇ ಬಂದಿವೆ. ಅದರ ಮೇಲೆ ‘ಸ್ವಯಂಪ್ರೇರಿತ’ ಖಾಸಾ ದೇಣಿಗೆಗಳು, ಟನ್‍ಗಟ್ಟಳೆ ಲೋಹದಾನವೂ ಸಂದಿವೆ. ಒಟ್ಟು ಸುಮಾರು ಮೂರು ಸಾವಿರ ಕೋಟಿಯಷ್ಟು ಬೆಲೆ ಬಾಳುವ ವಿಗ್ರಹ ಇಂದು ಜಗತ್ತಿನಲ್ಲೇ ಅತ್ಯುನ್ನತ ವಿಗ್ರಹವೆನ್ನುವ (೫೯೭ ಅಡಿ ಅಥವಾ ೧೮೨ ಮೀಟರ್) ದಾಖಲೆಯನ್ನೇ ನಿರ್ಮಿಸಿದೆ. ಇನ್ನೊಂದು ಕುತೂಹಲಕರ ವಿಚಾರ: ಯೋಜನೆಯ ಕಾರ್ಯರೂಪವನ್ನು ಲಾರ್ಸೆನ್ ಅಂಡ್ ಟಾಬ್ರೋ ನಿರ್ವಹಿಸಿದರೂ ವಿಗ್ರಹದ ಕಂಚಿನ ಎರಕದ ಬಾಹ್ಯ ರೂಪ ಎರಕಗೊಂಡು, ತುಂಡುಗಳಲ್ಲಿ ಬಂದದ್ದು ಚೀನಾದಿಂದ! (ಆಸಕ್ತರು ವಿಕಿಪೀಡಿಯಾದಲ್ಲಿ ಹೆಚ್ಚಿನ ಅಂಕಿ ಸಂಕಿಗಳನ್ನು ನೋಡಬಹುದು)

ನರ್ಮದಾ ನದಿಗೆ ಕೆವಾಡಿಯಾದಲ್ಲಿ ಅಣೆಕಟ್ಟಿ ನಿಲ್ಲಿಸಿದ ನೀರಮೊತ್ತದ ಹೆಸರು ಸರ್ದಾರ್ ಸರೋವರ. ಕಟ್ಟೆಯಿಂದ ಸುಮಾರು ಮೂರು ಕಿಮೀ ಕೆಳ ಪಾತ್ರೆಯ ‘ಸಾಧು ಬೆಟ್’ ಎನ್ನುವ ಜಾಗದಲ್ಲಿ ಸುಮಾರು ಐದು ಎಕ್ರೆ ಜಾಗವನ್ನು ವಿಗ್ರಹ ಯೋಜನೆ ಆವರಿಸಿದೆ. ನದಿಯ ಅಪ್ಪಟ ಶಿಲಾ ಪಾತ್ರೆಯ ಕೊರಕಲು, ದಿಬ್ಬಗಳನ್ನು ಮಟ್ಟಹಾಕಿ ಸೇತುವೆ, ಉದ್ಯಾನವನಗಳ ಸಹಿತ ದೈತ್ಯ ವಿಗ್ರಹ ನಿಂತಿದೆ. ನಾವು ಹೋದಂದು (ಸೋಮವಾರ) ವಾರದ ರಜಾದಿನ. ವಿಗ್ರಹ ಭಾರೀ ತರಾತುರಿಯಲ್ಲಿ ಲೋಕಾರ್ಪಣಗೊಂಡಿದ್ದರೂ ಅದರ ಪೂರಕ ಕಾಮಗಾರಿಗಳೆಲ್ಲ ತುಂಬಾ ಬಾಕಿ ಉಳಿದಿವೆಯಂತೆ. ಆ ಕಾಮಗಾರಿಗಳೊಡನೆ ವಿಗ್ರಹದ ಶುಚಿಯಾದಿ ಉಸ್ತುವಾರಿ ಕೆಲಸಗಳನ್ನು ಪರಿಣತರು ರಜಾದಿನಗಳಲ್ಲಿ ಹೆಚ್ಚು ನಡೆಸುತ್ತಾರಂತೆ. ಹಾಗಾಗಿ ವಿಗ್ರಹದ ಎಲ್ಲ ಹಂತಗಳೂ ವೀಕ್ಷಣೆಗೇನೋ ತೆರೆದೇ ಇದ್ದವು. ನಾವು ಪೂರ್ವಪರಿಚಿತ ಗೆಳೆಯರ ಮೂಲಕ ಕೇವಲ ವಿಶೇಷ ಅನುಮತಿ ಪಡೆದು ಪಟೇಲರ ಹೃದಯ ಕಂಡ ವಿದ್ರಾವಕ ನರ್ಮದೆ ಮುಂದುವರಿದೆವು.

ಸುವಿಸ್ತಾರ ಸಾರ್ವಜನಿಕ ವಾಹನ ತಂಗುದಾಣದಲ್ಲಿ ಕಾರಿಳಿದು, ಅತ್ತ ಅಣೆಕಟ್ಟು, ಇತ್ತ ವಿಗ್ರಹದ ದೂರ ವೀಕ್ಷಣೆ ಮುಗಿಸಿದೆವು. ಅನಂತರ ವಿಶೇಷ ಮಾರ್ಗದರ್ಶಿಯೊಡನೆ ಐದನೇ ಗೇಟಿನಿಂದ ವಿಗ್ರಹದ ವಠಾರ ಪ್ರವೇಶಿಸಿದೆವು. ಟಿಕೆಟ್ ಕೌಂಟರ್ ಸೇರಿದಂತೆ ಆಡಳಿತ ಕಚೇರಿ, ಪಕ್ಕದ ನವೀನ ಶೈಲಿಯ ಬಯಲು ರಂಗಕ್ಕೊಂದು ನೋಟ ಹಾಕಿದೆವು. ಮುಂದೆ ಸುವಿಸ್ತಾರ ಸೇತುಪಥದಲ್ಲಿ ನೇರ ವಿಗ್ರಹದತ್ತ ನಡೆದೆವು. ಸೇತುವೆಯ ಪ್ರಧಾನ ಜಾಡು ತೀರಾ ಸೀಮಿತ ವಾಹನ ಸಂಚಾರಕ್ಕೆ ದಕ್ಕುವಂತೆಯೇ ಇದೆ. ಆದರೂ ಒಟ್ಟಾರೆ ವ್ಯವಸ್ಥೆ ಪಾದಚಾರಿಗಳನ್ನೇ ಉದ್ದೇಶಿಸಿದಂತಿದೆ. ಭರ್ಜರಿ ದೀಪಕಂಬಗಳ ಸಾಲು, ಹಸಿರುಪಾತಿಗಳು ಅಲ್ಲದೆ ಎರಡೂ ಪಕ್ಕಗಳಲ್ಲಿ ಸುಮಾರು ಒಂದೂವರೆ ಮೀಟರ್ ಅಗಲದ ಚಲಿಸುವ ನಡೆಮಡಿಗಳೂ (ಚಲಿಸುವ ಮೆಟ್ಟಲು ಅಂದರೆ, ಎಸ್ಕಲೇಟರು ಸಮತಟ್ಟಿನಲ್ಲಿ ಹರಿದಂತೆ, ಟ್ರಾವಲೇಟರ್) ಇದ್ದವು. ಸೇತುವೆಯಾಚೆ ಬಹುತೇಕ ಬತ್ತಿ ಹೋದ ನದೀ ಕೊರಕಲನ್ನು ಆಗೀಗ ಇಣುಕುತ್ತ ಪುಟ್ಟಪಥ, ನಡೆಮಡಿಗಳೆಲ್ಲವನ್ನು ಅನುಭವಿಸುತ್ತ ವಿಗ್ರಹದ ಬುಡದ ಕಟ್ಟೆ ತಲಪಿದೆವು.

ವಿಗ್ರಹ ದೂರಕ್ಕೆ ನದಿ ಪಾತ್ರೆಯ ಉನ್ನತ ಪೀಠದ ಮೇಲೆ ಏಕಾಂಗಿಯಾಗಿ ನಿಂತ ದೈತ್ಯ ರಚನೆ. ಆದರೆ ನಿಜದಲ್ಲಿ ಇದರ ಒಳಗಿಂದೊಳಗೇ ಅಸಂಖ್ಯ ಅಂತಸ್ತುಗಳಿವೆ, ವಿಭಾಗಗಳಿವೆ. ಮತ್ತೆ ಅವೆಲ್ಲ ಅಡಿಪಾಯದಿಂದ ನೆತ್ತಿಯವರೆಗೆ ಮೆಟ್ಟಿಲ ಸಾಲುಗಳಿಂದಲೂ ಎರಡು ಎತ್ತುಗ ಬಾವಿಗಳಿಂದಲೂ (ಲಿಫ್ಟ್ ವೆಲ್) ಸಜ್ಜಾಗಿವೆ. ಒಳಗಿನ ಅದ್ಭುತ ವಿನ್ಯಾಸ, ವಾತಾಯನ ಮತ್ತು ಬೆಳಕು ಹೊರಗಿನ ಉರಿ ಬಯಲನ್ನೂ ಗಾರೆದ್ದ ಬಂಡೆ ಪರಿಸರವನ್ನೂ ಮರೆಸುವಂತಿವೆ. ಪೂರ್ಣ ವಿಕಾಸದಲ್ಲಿ ಇನ್ನೇನೆಲ್ಲಾ ಸೇರಲಿದೆಯೋ ತಿಳಿದಿಲ್ಲ. ನೆಲ ಮಾಳಿಗೆಯ ಮುಖ್ಯ ಪ್ರದರ್ಶನಾಂಗಣದಲ್ಲಿ ವಿಗ್ರಹದ ರಚನಾಕ್ರಮ, ಜಗತ್ತಿನ ಇತರ ಉನ್ನತ ವಿಗ್ರಹಗಳ ಜತೆಗಿನ ಹೋಲಿಕೆಯ ವಿವರಗಳು, ಅಸಂಖ್ಯ ಪಟೇಲ್ ಸ್ಮರಣಿಕೆಗಳೂ ಸೇರಿ ‘ಭಾರತ್ ಮಹಾನ್’ ಕಾಣಿಸುತ್ತವೆ. ಮಾರ್ಗದರ್ಶಿ ಅಂತಿಮವಾಗಿ ನಮ್ಮನ್ನು ಎತ್ತುಗ ಒಂದಕ್ಕೆ ಸೇರಿಸಿ ವಿಗ್ರಹದ ಎದೆ ಮಟ್ಟದಲ್ಲಿರುವ (ಬಹುಶಃ ಹತ್ತನೇ ಮಾಳಿಗೆ) ವೀಕ್ಷಣಾ ಕಿಂಡಿಗೆ ಮುಟ್ಟಿಸಿದ. ನಾವು ಅಲ್ಲೂ ಐದು ಹತ್ತು ಮಿನಿಟು ಸುತ್ತುನೋಟ ಹರಿಸಿ, ಚಿತ್ರ ಹಿಡಿದು ಕ್ರಮವಾಗಿ ಮರಳಿದೆವು.

ವಿಗ್ರಹದ ಆಯಾಮಗಳು ಮತ್ತು ವಠಾರದ ವೈಭವ ನಮ್ಮಲ್ಲಿ ‘ಪಟೇಲ’ರ ಹಿಮ್ಮಡಿಗೂ ಸಮನಲ್ಲದವರು! ಸ್ವಲ್ಪ ಬೆರಗನ್ನು ಹುಟ್ಟಿಸಿದ್ದು ನಿಜ. ಆದರೆ ಬೆಳ್ಗೊಳದ ಗೊಮ್ಮಟ ವಿಗ್ರಹದ ಪದತಳದಲ್ಲಿ ನಿಂತ ಅಥವಾ ಆಯಕಟ್ಟಿನ ಜಾಗಗಳಲ್ಲಿರುವ ಯಾವುದೇ ಬಹುಮಹಡಿ ಕಟ್ಟಡದ ನೆತ್ತಿಯಲ್ಲಿ ನಿಂತ ಅನುಭವಕ್ಕಿಂತ ಹೆಚ್ಚಿಗೆ ಖಂಡಿತಾ ಅಲ್ಲ. ಈ ಕಾಲದ ತಂತ್ರಜ್ಞಾನದ ಸಾಮರ್ಥ್ಯಕ್ಕೆ ಅಸ್ಥಿರ ಮರುಭೂಮಿಯಲ್ಲೂ ಎರಡು ಸಾವಿರ ಅಡಿಗೂ ಮಿಕ್ಕ ಬುರ್ಜ್ ಖಾಲೀಫಾದಂತ ಸಕಲ ವೈಭವದ ಕಟ್ಟಡ ನಿರ್ಮಾಣ ಕಷ್ಟವಲ್ಲ ಎನ್ನುವಾಗ ಈ ೫೯೭ ಅಡಿ ವಿಶೇಷವೂ ಅಲ್ಲ. ಪಶ್ಚಿಮ ಘಟ್ಟದ ಗಿರಿಶಿಖರಗಳ ಎತ್ತರದಿಂದ ಕಂಡ ಝರಿ ಅಬ್ಬಿಗಳ ಸೌಂದರ್ಯಕ್ಕೆ ಈ ವಿಗ್ರಹದ ಎತ್ತರದಿಂದ ಕಾಣುವ ಬಡಕಲು ನರ್ಮದೆ, ದೃಶ್ಯವೇ ಅಲ್ಲ.

ಮಾರ್ಗದರ್ಶಿ ನಮ್ಮನ್ನು ಅಣೆಕಟ್ಟಿಗೂ ಕರೆದೊಯ್ದ. ಹಿಂದೆ ಅಣೆಕಟ್ಟಿನ ವಿವಾದಗಳು ಉಲ್ಬಣಿಸಿದ್ದ ಕಾಲದಲ್ಲಿ ಸರಕಾರ, ಕಟ್ಟೆ ನಿರ್ದಿಷ್ಟ ಮಟ್ಟ ಮೀರದ ಆಶ್ವಾಸನೆ ಕೊಟ್ಟು ಜಾರಿಕೊಂಡಿತ್ತು. ಪ್ರತಿಭಟನೆಗಳು ತಣ್ಣಗಾದ (ಪರಿಹಾರಗೊಂಡಾಗ ಅಲ್ಲ!) ಈಚಿನ ದಿನಗಳಲ್ಲಿ, ಕಟ್ಟೆಯನ್ನು ಮತ್ತೆ ಕೆಲವು ಅಡಿಗಳಷ್ಟು ಎತ್ತರಿಸಿದ್ದರು. ಇದು ನಿಜ ಮಳೆಯನ್ನಾಧರಿಸಿದ ಅಭಿವೃದ್ಧಿ ಏನೂ ಅಲ್ಲ ಎನ್ನುವಂತೆ ಕಟ್ಟೆಯೊಳಗೆ ನೀರು ತುಂಬಾ ಕೆಳಕ್ಕಿತ್ತು. (ನಾನು ಹೇಳುತ್ತಿರುವುದು ಡಿಸೆಂಬರ್ – ಮಳೆಗಾಲಕ್ಕೆ ಇನ್ನೂ ಐದಾರು ತಿಂಗಳು ಬಾಕಿಯಿದ್ದ ಕಾಲದ ಕತೆ!) ಕಟ್ಟೆಯ ಗರ್ಭದಲ್ಲಿರುವ ವಿದ್ಯುದಾಗರಕ್ಕೂ ಹೋಗಿ ಬಂದೆವು. ಅಲ್ಲಿನ ಮುಖ್ಯ ವಿದ್ಯುಜ್ಜನಕಗಳೆಲ್ಲ ನೀರ ಅಭಾವದಲ್ಲಿ ಸ್ಥಗಿತಗೊಂಡಿದ್ದವು. ಕಾರ್ಯನಿರತ ಇಂಜಿನಿಯರೇ ವಿಷಾದದಲ್ಲಿ ಹೇಳಿದಂತೆ, ಕೇವಲ ಕಾಲುವೆಯೊಂದರ ಹರಿನೀರಿಗೆ ಗಿರಿಗಿಟಿ ಇಟ್ಟು ಸಾವಿರ ಸಾವಿರ ಕೋಟಿಯ ಯೋಜನೆ ಮಿಣುಕು ದೀಪ ಹಚ್ಚಿಕೊಂಡಿತ್ತು. ನಮ್ಮ ಎತ್ತಿನಹೊಳೆ ಯೋಜನೆ ಎಂದಾದರೂ ಪರಿಪೂರ್ಣವಾದರೂ ಇಷ್ಟೇ ಅಲ್ಲವೇ?!

 

ಕಾಲುವೆಯಂಚಿನ ಇನ್ನೊಂದೇ ದಾರಿಯಲ್ಲಿ ಕೆವಾಡಿಯಾದತ್ತ ಮುಂದುವರಿದೆವು. ಇಲ್ಲಿ ಒತ್ತಿನ ಗುಡ್ಡೆಯ ಹಿಮ್ಮೈಗೆ ಕಾಲುವೆ ಹೊಡೆದು, ಉಪ ಸರೋವರ ಮಾಡಿದ್ದು, ಅದರ ನೆರಳಲ್ಲಿ ಎಂಬಂತೆ ಪ್ರವಾಸೀ ಸವಲತ್ತಾಗಿ ಎರಡು ಭಾರೀ ಗುಡಾರ ಶಿಬಿರಗಳು ನಡೆದಿರುವುದನ್ನೂ ಕಣ್ಣು, ಕ್ಯಾಮರಾಗಳಿಗೆ ತುಂಬಿಕೊಂಡೆವು. ಗುಡಾರವೆಂದದ್ದೇ ತತ್ಕಾಲೀನ, ಅಪರಿಪೂರ್ಣ ಎಂದೆಲ್ಲ ಪಡಪೋಷೀ ಮಾಡಬೇಡಿ. ಅಂತರ್ಜಾಲದಲ್ಲಿ ನೋಡಿದರೆ ತಿಳಿದೀತು, ಅಲ್ಲೂ ತಾರಾ ಹೋಟೆಲುಗಳಿಗೆ ಕಡಿಮೆಯಿಲ್ಲದಂತೆ ಏಸಿಯ ತಣ್ಪೂ ಗೀಸರಿನ ಬಿಸುಪೂ ಯೋಗ್ಯ ದರದಲ್ಲಿ ಲಭ್ಯವಿದೆ. ಮುಂದೊಂದು ದಿನ ಗುಡಾರ ಶಿಬಿರಗಳು ಪಕ್ಕಾ ಕಾಂಕ್ರೀಟ್, ಗಾಜು, ಮರಗಳ ಖಾಯಂ ವಸತಿ ಸೌಕರ್ಯಗಳಾಗಿ ಅಭಿವೃದ್ಧಿ ಕಾಣುವುದು ನಿಶ್ಚಿತ. ಆ ಕಾಲಕ್ಕೆ ಹೆಚ್ಚುವ ನೀರಿನ ಅಗತ್ಯ, ವಿದ್ಯುಚ್ಛಕ್ತಿಯ ಬೇಡಿಕೆಗೆಲ್ಲ ಇದೇ ಬಡಕಲು ನರ್ಮದೆ ನರಳುವುದು ಅನಿವಾರ್ಯ. ಅಷ್ಟಾಗುವಾಗ ನರ್ಮದಾ ಯೋಜನೆಯ ಮೂಲ ಫಲಾನುಭವಿಗಳೆಂದು ಹೆಸರಿಸಲ್ಪಟ್ಟ ಕೃಷಿಕರೆಲ್ಲ ಏನಾಗುತ್ತಾರೆ ಎಂಬ ಆತಂಕವೇ? ಬಿಡಿ, ತಮ್ಮ ಬಂಜರು ಭೂಮಿಗಳನ್ನೆಲ್ಲ ದೊಡ್ಡ ಉದ್ಯಮಗಳಿಗೆ ಮಾರಿ, ಬಿಸಿಲೇರಿ ಬಾಟಲು ನೀರುಗಳಲ್ಲಿ ಸ್ನಾನ ಪಾನ ಮಾಡುತ್ತ, ಒಂದು ಕಾಲದಲ್ಲಿ ತಮ್ಮದೇ ಆಗಿದ್ದ ನೆಲದ ಆಸುಪಾಸಿನಲ್ಲೇ ಆದ್ಯತೆಯಲ್ಲಿ ಸಿಗುವ ವೃತ್ತಿಯ ಸುಂದರ ಸಮವಸ್ತ್ರದಲ್ಲಿ ಲಾಠಿ ಹಿಡಿದು ನಿಂತಿರುತ್ತಾರೆ ಅಥವಾ ಗಸ್ತು ಹೊಡೆಯುತ್ತಾರೆ!

ಹಿಂದೆ ಕಾರುಪಾರ್ಕಿನಲ್ಲಿ ನೊಣ ಹೊಡೆಯುತ್ತಿದ್ದ ಒಂದು ಕ್ಯಾಂಟೀನಷ್ಟೇ ಕಂಡಿತ್ತು. ಅಲಂಕಾರಿಕ ಮರುಭೂಮಿಯಲ್ಲಿ ಇನ್ನೊಂದು ಅವಕಾಶ ಸಿಗದಿದ್ದರೆ ಎಂದುಕೊಂಡು ಅಲ್ಲಿ ಲಭ್ಯ ಕುರುಕುಲು, ಚಾ ಕುಡಿದಿದ್ದೆವು. ಮಧ್ಯಾಹ್ನಕ್ಕೆ ನಮ್ಮ ಬಡೋದರಕ್ಕೆ ವಡೋದರವೇ ಗತಿಯೋ ಎಂಬ ಚಿಂತೆಯಲ್ಲಿ ಗುಡಾರ ನಗರದಿಂದ ಆಚಿನ ಬಳಸು ದಾರಿಯಲ್ಲಿ ಸಾಗಿದ್ದೆವು. ನಮ್ಮ ಅದೃಷ್ಟಕ್ಕೆ ಅಲ್ಲೊಂದು ಸುವಿಸ್ತಾರ ಹೋಟೆಲ್ ಇತ್ತು. ಅವರ ಭವ್ಯ ಭವಿಷ್ಯತ್ತಿನ ಕನಸು ಅಂದಿನ ಹೊಟ್ಟೆಪಾಡಿಗೆ ನಮ್ಮನ್ನಷ್ಟೇ ಬರೆದಿರಬೇಕು. ನಮಗಂತೂ ಒಳ್ಳೆ ಊಟವೇ ಸಿಕ್ಕಿತು. ಮತ್ತೆ ಎಷ್ಟು ಚುರುಕೆಂದರೂ ವಡೋದರ ತಲಪುವಾಗ ಕತ್ತಲ ಮುಸುಕು ಎರಗಿತ್ತು. ಅರಮನೆ ಮುಂತಾದ ನಗರದರ್ಶನದ ಮಾತೆಲ್ಲ ಮರೆತು ಸಕಾಲಕ್ಕೆ ರೈಲು ಹಿಡಿದು ಮಂಗಳೂರಿಸಿದೆವು.

ರಾಜಸ್ತಾನದ ಕಾಡಲ್ಲಿ ಸೈಕಲ್ ಪೆಡಲಿದ ಅನುಭವವನ್ನು ಬಿಸಿಬಿಸಿಯಾಗಿಯೇ ಎರಡು ಭಾಗಗಳಲ್ಲಿ ಬಿತ್ತರಿಸಿದವನಿಗೆ, ಈ ‘ಏಕತೆಯ ಸಂಕೇತ’ ಯಾಕೋ ಗಂಟಲಿಗೆ ಅಡ್ಡ ಸಿಕ್ಕಿದಂತಾಗಿತ್ತು. ಪೂರ್ಣ ಸಾರ್ವಜನಿಕದ, ಆದರೆ ಯಾರಿಗೂ ನೇರ ಉಪಯುಕ್ತತೆಗೆ ಒದಗದ ಮೂರು ಸಾವಿರ ಕೋಟಿ ರೂಪಾಯಿಗಳ ಮಹಾ ಹೂಡಿಕೆ, ಇಂದಿನ ಭಾರತೀಯ ಆರ್ಥಿಕ ಸ್ಥಿತಿಯಲ್ಲಿ ಸಮರ್ಥನೀಯವೇ? ತೊಡಗಿಸಿದ ಹಣ ಬಿಡಿ, ಮುಂದೆ ಇದರ ನಿರ್ವಹಣೆಗಾದರೂ ತಕ್ಕ ಆದಾಯ ಇದು ತರುವುದು ನಿಜವೇ? ಇಲ್ಲಿನ ದುಬಾರಿ ಪ್ರವೇಶಧನವನ್ನು ಸಮರ್ಥಿಸುವಷ್ಟು ಇಲ್ಲಿನ ಪೂರಕ ಸವಲತ್ತುಗಳು ಸದ್ಯೋಭವಿಷ್ಯತ್ತಿನಲ್ಲಿ ವಿಕಾಸಗೊಳ್ಳುವುದು ಸಾಧ್ಯವೇ? (ಭಾರತೀಯರಿಗೆ ತಲಾ ರೂ ಮೂನ್ನೂರೈವತ್ತು! ವಿದೇಶಿಗಳಿಗೆಷ್ಟೋ ನನಗೆ ತಿಳಿದಿಲ್ಲ) ಇಂದು ಕರೋನಾದ ಮಹಾಪ್ರವಾಹದಲ್ಲಿ ಇಂಥವೇ ಅಸಂಖ್ಯ ಸಂಕೇತಗಳು, ಅತಿಭಾವುಕ ವಿಚಾರಗಳು ನೆಲೆ ಕಳೆದೋ ಗಟ್ಟಿಗೊಳ್ಳಲೋ ತೊಳಲಾಡುತ್ತಿವೆ. ಆ ಪ್ರಚೋದನೆಯಲ್ಲಿ ಪುಟಿದೆದ್ದು ರೂಪುಗೊಂಡ ನನ್ನ ವರ್ಷ ಹಳತಾದ ಅನುಭವದ ಪುಟ್ಟ ದೋಣಿಯನ್ನು ಈಗ ಬಿಟ್ಟಿದ್ದೇನೆ. ಉತ್ತರ ನೀವೇ ಕಂಡುಕೊಳ್ಳಿ – ಭಾರತದ ಏಕತೆಗೆ ಹೀಗೊಂದು ಸಂಕೇತದ ಕೊರತೆ ಇತ್ತೇ? ಬೇಕಿತ್ತೇ?

(ಕಾಡಿಗೆ ಪೆಡಲಿ – ಸರಣಿ ಮುಗಿಯಿತು)