(ಪ್ರಾಕೃತಿಕ ಭಾರತ ಸೀಳೋಟ – ೮) ದಿಲ್ಲಿ ದಾಳಿಗೆ (೯-೫-೯೦) ಬೆಳಿಗ್ಗೆ ಆರಕ್ಕೆ ನಾಂದಿಯೇನೋ ಹಾಡಿದೆವು. ಆದರೆ ನನ್ನ ಚಕ್ರವೊಂದು ನಿಟ್ಟುಸಿರು ಬಿಟ್ಟು, ಒಂದು ಗಂಟೆ ತಡವಾಗಿ ಮುಂದುವರಿದೆವು. ಆ ದಾರಿ ಖ್ಯಾತ ಪ್ರವಾಸೀ ತ್ರಿಕೋನದ ಬಲ ಭುಜ, ವಾಸ್ತವದಲ್ಲೂ ಬಹುತೇಕ ಸರಳ ರೇಖೆಯಂತೇ ಇದೆ. ಗಗನಗಾಮೀ ನಕ್ಷಾ ನೋಟದಲ್ಲಿ ಮಾತ್ರ ಉದ್ದಕ್ಕೂ ಯಮುನಾ ನದಿ ದೀರ್ಘ ಬಳಕುಗಳ ಸಾಂಗತ್ಯ ಕೊಡುತ್ತದೆ. ಮಾರ್ಗದ ಕಠೋರ ತಪೋನಿಷ್ಠೆಯನ್ನು ಮುರಿಯ ಬಂದ ಅಪ್ಸರೆಯಂತೆ ನಲಿದಿದೆ. ದಾರಿಗೆ ಈ ಅಲೌಕಿಕ ದೃಶ್ಯ ಅಗೋಚರವಾದ್ದರಿಂದ ಸುಮಾರು ಇನ್ನೂರು ಕಿಮೀ ಉದ್ದದ್ದ ದಿಲ್ಲಿಯ ಜಪವನ್ನೇ ನಾವು ಮಾಡಿಕೊಂಡಿದ್ದೆವು. ಸುಮಾರು ಮಧ್ಯಂತರದಲ್ಲಿದ್ದ ಏಕೈಕ ಬದಲಾವಣೆ ಮಥುರಾ. ಪುರಾಣ, ಇತಿಹಾಸಗಳಿಗೆ ಇಂದೂ ಈ ನೆಲದಲ್ಲಿ ಸಾಕಷ್ಟು ಪುರಾವೆಗಳು ಇವೆ. ಅವನ್ನು ವೈಚಾರಿಕವಾಗಿ ಗುರುತಿಸಿಕೊಳ್ಳುವ ಸಂತೋಷವೇ ನಿಜ ಸಂಸ್ಕೃತಿ. ಅದು ಬಿಟ್ಟು, ಅವನ್ನು ಯಾವುದೋ ಒಂದು ಕಾಲಘಟ್ಟಕ್ಕೆ ಸೀಮಿತಗೊಳಿಸಿ, ಇತಿಹಾಸವನ್ನು ತಿದ್ದುವ ಪ್ರಯತ್ನ ಮಾಡುವುದು ವಿಕೃತಿ. ನಮ್ಮೀ ಬೈಕ್ ಯಾನದಲ್ಲಿ ಬಾದಾಮಿಯಿಂದ ಆಗ್ರಾದವರೆಗಿನ ಐತಿಹಾಸಿಕ ರಚನೆಗಳಲ್ಲಿ ಹೆಚ್ಚಾಗಿ ಮೆರೆಯುವುದು – ವಿವಿಧ ಕಾಲಗಳ ವೈಯಕ್ತಿಕ ಮಹತ್ವಾಕಾಂಕ್ಷೆ ಮಾತ್ರ. ಅವರಲ್ಲಿ ಹೆಚ್ಚಿನವರಿಗೆ ಖಾಯಂ ಯಾವ ಮತಧರ್ಮದ ಸೋಂಕೂ ಇಲ್ಲ, ಜನಾಂಗ ಭಾಷೆಗಳ ದುರಭಿಮಾನವೂ ಇಲ್ಲ. ಇವನ್ನು ಗ್ರಹಿಸುವಲ್ಲಿ ಎಲ್ಲ ಕಾಲದಲ್ಲೂ ಇದ್ದಂತೆ ದೊಡ್ಡ ಅಡ್ಡಿ ವಿಚಾರಹೀನ ಆರಾಧಕರು ಮತ್ತು ಅವರನ್ನು ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳುವ ರಾಜಕಾರಣಿಗಳು.

ಕೃಷ್ಣ ಜನನಸ್ಥಾನ – ಕಂಸನ ಕಾರಾಗೃಹ. ಅದು ಅನಂತರದ ದಿನಗಳಲ್ಲಿ ದೇವಳವಾಗಿ, ಇಂದಿನವರೆಗೆ ಉಳಿದು ಬಂದದ್ದೂ ಇರಬಹುದು. ಹಾಗೇ ಅದನ್ನೊತ್ತಿಕೊಂಡು ನೆಲೆಸಿದ ಈದ್ಗಾವೂ ಕನಿಷ್ಠ ಮುನ್ನೂರು ವರ್ಷಗಳ ಇತಿಹಾಸದ ಭಾಗವಾಗಿಯೇ ಇಂದು ನಮ್ಮೆದುರಿದೆ. ಆದರೆ ರಾಮಜನ್ಮಭೂಮಿಯನ್ನು ಮುಂದಿಟ್ಟುಕೊಂಡು ಬೆಳೆದಿರುವ ‘ನವಜಾಗೃತಿ’, ಕೃಷ್ಣ ಜನ್ಮಭೂಮಿಯ ‘ಬಿಡುಗಡೆ’ಯ ಉಗ್ರ ಪೋಸ್ಟರುಗಳನ್ನು ದೇವಳದ ಭಾಗದಲ್ಲಿ ಹಚ್ಚಿತ್ತು. ಸಹಜವಾಗಿ ಯಥಾಸ್ಥಿತಿ ಕಾಯಲು ಪೋಲಿಸ್ ಬಂದೋಬಸ್ತೂ ಕಾಣಿಸಿತು. ಬೇಕೇ ಇವೆಲ್ಲ? ಬೇಕೆಂದೇ ಹೇಳಿದರೆ, ಕಂಸ ಕಾರಾಗೃಹಕ್ಕೂ ಹಿಂದೆ ಇದೇ ನೆಲದ ಸತ್ಯ ಇನ್ನೊಂದೇ ಇದ್ದಿರಬಹುದಲ್ಲವೇ? ಅದು ತಿಳಿದರೆ ಅದಕ್ಕೂ ನ್ಯಾಯ ಕೊಡಬಲ್ಲೆವೇ? ಎಲ್ಲಕ್ಕೂ ಮುಖ್ಯವಾಗಿ ಇವೆಲ್ಲ ವರ್ತಮಾನದ ಸಾಮಾಜಿಕ ಬಂಧವನ್ನು ಪೋಷಿಸುತ್ತವೆಯೇ?

ಮಥುರಾದಲ್ಲಿ ವಿಪರೀತ ಅಮೃತಶಿಲೆಯನ್ನು ಹೇರಿ ನವೀಕರಿಸಿದ, ಇನ್ನೊಂದು ದೊಡ್ಡ ದೇವಾಲಯಕ್ಕೂ ಹೋಗಿದ್ದೆವು. ಅಲ್ಲಿನ ‘ಭಕ್ತಿ’ಯ ಗದ್ದಲ, ಕೊಳಕು ನೋಡಿ ನಾವು ಬೇಗ ಜಾಗ ಖಾಲಿ ಮಾಡಿದೆವು. ಇನ್ನು ಅಂಧಭಕ್ತಿಯಲ್ಲಿ ಕೊಳಚೆಗೇರಿಯೇ ಆಗಿರಬಹುದಾದ ಯಮುನಾ ತೀರ, ಆಧುನಿಕ ಸೌಕರ್ಯಗಳಿಗಾಗಿ ಬೋಳಿಸಿ, ಹೆರೆಸಿ ಘಾಸಿಯಾದ ಗೋವರ್ಧನಗಿರಿಗಳನ್ನೆಲ್ಲ ನೋಡುವ ಉತ್ಸಾಹ ಉಳಿಯದೆ ದಿಲ್ಲಿಯಾನವನ್ನು ಮುಂದುವರಿಸಿದೆವು. ಪರ್ವತಾರೋಹಿಗೆ ‘ಶಿಖರ’ ಸಾಧನೆಯಷ್ಟೇ ಅನುಸರಿಸಿದ ವಿಧಾನ, ಮಾರ್ಗ, ಕಾಲಗಳೂ ಮುಖ್ಯವೇ ಆಗುತ್ತವೆ. ಹಾಗೇ ಬೈಕ್ ಯಾನದಲ್ಲಿ ನಮಗೆ ಊರಿಂದೂರು ಸಾಧಿಸುವುದರೊಡನೆ ಎಲ್ಲ ತರದ ಬಾಹ್ಯ ಸಂಗತಿಗಳೊಡನೆ ಸಂವಾದಿಸುವುದೂ ಮುಖ್ಯವೇ ಇತ್ತು. ಆ ವೈವಿಧ್ಯವನ್ನು ನೇರ, ವಿಸ್ತಾರ, ನುಣ್ಣನೆ ದಾರಿ ಒಂದು ಲೆಕ್ಕದಲ್ಲಿ ವಂಚಿಸಿ, ಏಕತಾನತೆಯನ್ನು ಮೂಡಿಸುತ್ತದೆ. ಇದು ಮಥುರಾದಿಂದ ಮುಂದೆ ನಮ್ಮನ್ನು ಹೆಚ್ಚು (ಸುಮಾರು ೧೫೦ ಕಿಮೀ) ಕಾಡಿತ್ತು.

ಒಟ್ಟು ಸಾಹಸಯಾನದಲ್ಲಿ ದಿಲ್ಲಿಯೊಂದೇ ನಮಗೆ ಮಧ್ಯಂತರಕ್ಕೂ ಕೊನೆಗೂ ಸಿಗುವ ಏಕೈಕ ಕೇಂದ್ರ. ಮಥುರಾ ಬಿಟ್ಟ ಮೇಲೆ, ದಿಲ್ಲಿಯನ್ನು ಮಧ್ಯಾಹ್ನದೂಟಕ್ಕೇ ತಲಪಿಕೊಳ್ಳುವ ಆತುರ ತಲೆಯೊಳಗಿತ್ತು. ಮಾಮೂಲಿನ ಗಂಟೆಗೊಮ್ಮೆಯ ವಿಶ್ರಾಂತಿಯನ್ನೂ ಬಿಟ್ಟು ಓಡಿಸಿದ್ದೆವು. ಹಾಗೆಂದು ಸ್ಪೀಡಿನ ಮಿತಿ, ಹೆದ್ದಾರಿಯ ಶಿಸ್ತಿನಲ್ಲೇನೂ ತಪ್ಪಿರಲಿಲ್ಲ. ಎಡ ಮಗ್ಗುಲಿನಲ್ಲೇ ಸಾಲುಗಟ್ಟಿದಂತೆ ಓಡಿದ್ದೆವು. ರಣಗುಡುವ ಬಿಸಿಲು, ತೀಡುವ ಬಿಸಿಗಾಳಿ, ದಾರಿಯಲ್ಲಿ ಕಾಣುವ ಮರೀಚಿಕೆ, ಯಾಂತ್ರಿಕವಾಗಿ ನಮ್ಮನ್ನು ಹಿಂದಿಕ್ಕುವ ಅನ್ಯ ವಾಹನಗಳು ಒಂದು ತೆರನ ಮಂಕು ಕವಿಸಿರಬೇಕು. ಎದುರಿನಿಂದ ಬರುತ್ತಿದ್ದ ಒಂದು ಟ್ರ್ಯಾಕ್ಟರ್, ಅದರ ನಿಧಾನಗತಿಯಲ್ಲೂ ನಿಧಾನಿಯಾಗಿ ಬಲ ಮಗ್ಗುಲಿಗೆ ತಿರುಗತೊಡಗಿತು. (ಅಲ್ಲಿನ ಹಳ್ಳಿ ದಾರಿಯಲ್ಲಿ ಹೋಗುವವ) ಮುಂದಿದ್ದ ನಾನು, ಹಿಂಬಾಲಿಸಿದ ಬಾಲ ಸರಿಯಾಗಿಯೇ ಅಂದಾಜಿಸಿ, ಇನ್ನಷ್ಟು ಎಡಕ್ಕೇ ಸರಿದು ಟ್ರ್ಯಾಕ್ಟರ್ ತಪ್ಪಿಸಿ ಮುಂದುವರಿದೆವು. ಕೊನೆಯಲ್ಲಿದ್ದ ನಾಯಕರಿಗಾಗುವಾಗ ಎಡ ಸಂದು ಉಳಿದೇ ಇರಲಿಲ್ಲ. ಇವರದನ್ನು ಕಡೇ ಗಳಿಗೆಯಲ್ಲಿ ಗಮನಿಸಿ, ಬೈಕಿನ ವೇಗವನ್ನು ಫಕ್ಕನೆ ಇಳಿಸುತ್ತ ಬಲ ಹೊರಳಿಸಿದ್ದರು. ಆದರೆ ಅಪಘಾತವನ್ನು ಪೂರ್ತಿ ತಪ್ಪಿಸಲಾಗಲಿಲ್ಲ. ಟ್ರ್ಯಾಕ್ಟರಿನ ಎಡ ಹಿಂದಿನ (ದೊಡ್ಡ) ಚಕ್ರಕ್ಕೆ ಕುಟ್ಟಿ ಕೆಳಗುರುಳಿದ್ದರು. ಅದೃಷ್ಟಕ್ಕೆ ನಾಯಕ್, ರಾಜರಿಗೆ ಗಾಯ ನೋವೇನೂ ಆಗಲಿಲ್ಲ. ಬೈಕಿನ ಎದುರು ಮಡ್‍ಗಾರ್ಡ್ ಸ್ವಲ್ಪ ಡೊಂಕಿ ಚಕ್ರಕ್ಕೆ ಸಿಕ್ಕಿಕೊಂಡಿತ್ತು. ನಾವದನ್ನು ಕಲ್ಲಿನಲ್ಲಿಯೇ ಜಜ್ಜಿ ಸರಿಪಡಿಸಿಕೊಂಡೆವು. ಮತ್ತೆ ಸುಮಾರು ಇಪ್ಪತ್ತೇ ಕಿಮೀ ಅಂತರದಲ್ಲಿದ್ದ ದಿಲ್ಲಿ ಸೇರುವ ಅತುರ ಬಿಟ್ಟು, ಧಾಬಾ ಒಂದರಲ್ಲೇ ಊಟಕ್ಕೆ ನಿಂತೆವು.

ಯೋಜನಾ ದಿನಗಳಲ್ಲೇ ನಮ್ಮ ದಿಲ್ಲಿವಾಸ ಮತ್ತು ಸಂಪರ್ಕಗಳು ಹೆಚ್ಚು ಗಟ್ಟಿಯಿರಬೇಕೆಂದು ಕಂಡುಕೊಂಡಿದ್ದೆ. ಆಗ ನನಗೆ ಮುಖ್ಯವಾಗಿ ಒದಗಿದವರು ಗೆಳೆಯ ಬಂಟಮಲೆಯ ಹಿಮಕರ. ಇವರು ಜೆ.ಎನ್.ಯು ಸಂಶೋಧನಾ ವಿದ್ಯಾರ್ಥಿಯಾಗಿದ್ದು ಸಾಕಷ್ಟು ದಿಲ್ಲಿ ಕಂಡವರು. ಸಹಜವಾಗಿ ನನಗೆ ದಿಲ್ಲಿ ಕರ್ನಾಟಕ ಸಂಘದ ಪರಿಚಯ ಮಾಡಿಸಿದ್ದಲ್ಲದೆ, ಅಲ್ಲಿ ನಮ್ಮ ಬಗ್ಗೆ ಒಳ್ಳೇ ಶಿಫಾರಸನ್ನೂ ಕೊಟ್ಟರು. ಹಾಗೆ ಯಾನದ ಕೊನೆಯ ದಿನದವರೆಗಿನ ಸಂಪರ್ಕ ವಿಳಾಸಕ್ಕೂ ದಿಲ್ಲಿವಾಸಕ್ಕೂ ಕರ್ನಾಟಕ ಸಂಘವನ್ನು ನೆಚ್ಚಿದ್ದೆವು. ಆ ಮಹಾಧಗೆಯ ದಿನದ ಅಪವೇಳೆ – ಎರಡೂ ಮುಕ್ಕಾಲಕ್ಕೆ, ಕರ್ನಾಟಕ ಸಂಘದ ಕಟ್ಟಡ ಸೇರಿಕೊಂಡೆವು.

ನಮ್ಮ ಸಾಹಸದೋಟಕ್ಕೆ ದಿಲ್ಲಿಯವರೆಗಿನ ದಾರಿ ಬಯಲು ಸೀಮೆಯದು ಮತ್ತು ಉಗ್ರ ಬಿಸಿಲಿನದು. ಮುಂದಿನದು ಹಿಮಾಲಯ. ಅಲ್ಲೂ ಬೇಸಗೆಯೇ. ಆದರೆ ಸೂರ್ಯ ಕಾಣದಾಗ ಮತ್ತು ರಾತ್ರಿಗಳಲ್ಲಿ ವಿಪರೀತ ಚಳಿಯದ್ದೇ ಆಡಳಿತ. ಅಲ್ಲಿನ ದಾರಿ ವಿಪರೀತ ಅಂಕಾಡೊಂಕಿ, ಸಿಕ್ಕಾಬಟ್ಟೆ ಏರಿಳಿತಗಳದ್ದು. ಹಾಗೆ ಚತುರ್ಧಾಮ ಸುತ್ತಿ ನಮ್ಮ ಸಾಹಸಯಾನ ಕೊನೆಗೊಳ್ಳುವುದೂ ದಿಲ್ಲಿಯಲ್ಲೇ ಇತ್ತು. ಮತ್ತೆ ಮಂಗಳೂರಿಗೆ ಮರಳುವಲ್ಲಿ ರೈಲು ನಮ್ಮನ್ನೂ ಬೈಕುಗಳನ್ನೂ ಒಯ್ಯುವುದೆಂದೇ ನಿರ್ಧರಿಸಿದ್ದೆವು. ನೆನಪಿರಲಿ, ಆ ದಿನಗಳಲ್ಲಿ ಯಾವುದೇ ಸರಕಾರೀ ವ್ಯವಸ್ಥೆಗಳಲ್ಲಿ ಗಣಕದ ಉಪಯೋಗವೇ ಇರಲಿಲ್ಲ. ಅಂದರೆ ಸ್ಥಾನ ಕಾಯ್ದಿರಿಸುವ ಕೆಲಸ ಸ್ಥಳೀಯವಾಗಿಯೇ ಕೈಯಾರೆ ನಡೆಯಬೇಕಿತ್ತು. ಆಗ ಒದಗಿದವರು ಪುತ್ತೂರಿನ ನನ್ನ ಹಿರಿಯ ಆತ್ಮೀಯರೂ ಸಂಬಂಧಿಕರೂ ಆದ ಎಂ.ಎಸ್. ಭಟ್ (ಇಂದು ಕೀರ್ತಿಶೇಷರು). ಇವರು ಭಾರತೀಯ ರೈಲ್ವೇಯ ಹಿರಿಯ ಇಂಜಿನಿಯರ್ ಆಗಿ, ಭಾರತಾದ್ಯಂತ ಅಮೋಘ ಸೇವೆ ಸಲ್ಲಿಸಿ, ನಿವೃತ್ತ ಜೀವನವನ್ನು ಪುತ್ತೂರಿನಲ್ಲಿ ಕಳೆಯುತ್ತಿದ್ದರು. ಅವರ ದಿಲ್ಲಿಯ ಮಾಜೀ ಸಹೋದ್ಯೋಗಿ ಮಿತ್ರ ವಿವಿ ಮೆಹ್ತಾ ರೈಲ್ವೇಯ ನಮ್ಮೆಲ್ಲ ಕೆಲಸಗಳನ್ನು ಅತ್ಯಂತ ಸಮರ್ಪಕವಾಗಿ ನಡೆಸಿದ್ದರು. ನಾವು ದಿಲ್ಲಿ ತಲಪಿದ ಸಂಜೆ ಅವರನ್ನೂ ಕೆಲವಾದರೂ ದಿಲ್ಲಿ ಪರಿಚಿತರ ಭೇಟಿಯಾಗುವ ಆಸೆ ಹೊತ್ತಿದ್ದೆವು.

ದಿಲ್ಲಿ ಕರ್ನಾಟಕ ಸಂಘ (ಸ್ಥಾಪನೆ ೧೯೪೮) ಆಗ ಹಳೆಯ ಕಟ್ಟಡದಲ್ಲಿತ್ತು. (ಇಂದಿನ ಹೊಸ ಸಂಕೀರ್ಣ ೨೦೦೬ರ ಸುಮಾರಿಗೆ ಗೆಳೆಯ ಪುರುಷೋತ್ತಮ ಬಿಳಿಮಲೆಯವರ ಅಧ್ಯಕ್ಷತೆಯ ಸಾಧನಾ ಸಾಹಸ) ಅದರ ಮೇಲಿನ ಎರಡೋ ಮೂರೋ ಮಾಳಿಗೆಯಲ್ಲಿ ವಸತಿ ಸೌಲಭ್ಯಗಳೇನೋ ಇದ್ದವು. ಆದರೆ ಸಂಘದ ಆಡಳಿತ ತಲಾ ರೂ ಹತ್ತರ ಹಾಸಲಿನಲ್ಲಿ, ನೆಲ ಮಾಳಿಗೆಯ ಪುಸ್ತಕ ಕಪಾಟುಗಳ ನಡುವಿನ ನೆಲ ಕೊಟ್ಟಿತ್ತು. ಸಂಘದ ಆ ಗ್ರಂಥಾಲಯ ತೀರಾ ತಿರಸ್ಕೃತ ಸ್ಥಿತಿಯಲ್ಲಿತ್ತು, ದೂಳು ಕಸವೂ ಸಾಕಷ್ಟಿತ್ತು. ಆದರೆ ಖಾಲೀ ನೆಲ ಧಾರಾಳವಿತ್ತು. ತಿರುಗುವ ಶಕ್ತಿ ಉಳಿಸಿಕೊಂಡಿದ್ದ ಒಂದೆರಡು ಫ್ಯಾನೂ ಇತ್ತು. ಬೇಡುವವರಿಗೆ ಆಯ್ಕೆ ಇಲ್ಲ ಎಂದು ನಾವಲ್ಲಿ ಕಸ ಗುಡಿಸಿ, ಮಲಗುವ ಜಾಗ ಮಾಡಿಕೊಂಡೆವು. ಸೆಕೆ ವಿಪರೀತವಿದ್ದುದರಿಂದ ನಮ್ಮ ಸರಳ ಮಲಗುವ ಹಾಸು ನಮಗೆ ಧಾರಾಳವೇ ಆಯ್ತು.

ಪಾತಾಳದಿಂದ ಮೇಲೆ ಬಂದು, ಕಟ್ಟಡದ ಹಿತ್ತಿಲ ಅಂಗಳಕ್ಕಿಳಿದು ಹತ್ತು ಹೆಜ್ಜೆಯಲ್ಲಿ ಕ್ಯಾಂಟೀನ್ ನೌಕರರಿಗೂ ಮತ್ತು ಸಂಘಕ್ಕೆ ಬರುವ ಸಾರ್ವಜನಿಕ ಉಪಯೋಗಕ್ಕೆಂದು ಬಿಟ್ಟಿದ್ದ ನಲ್ಲಿ, ಕಕ್ಕೂಸುಗಳೇ ನಮಗೆ ಅದಕು ಇದಕು ಎದಕು! ಶೌಚಾಲಯಕ್ಕೆ ತಗುಲಿದಂತಿದ್ದ ಔಟ್ ಹೌಸಿನಲ್ಲಿದ್ದ ಕ್ಯಾಂಟೀನೊಂದೇ ನಾವು ನೆಚ್ಚುವ ವರ. ಹೊರಗುತ್ತಿಗೆಗೆ ಕೊಟ್ಟಿದ್ದ ಅದು, ತುಸು ದುಬಾರಿಯಾದರೂ ಒಳ್ಳೆಯ ಶುಚಿ ರುಚಿಯ ದ.ಭಾರತೀಯ ತಿನಿಸುಗಳನ್ನು ಕೊಡುತ್ತಿತ್ತು. ಅದರ ಜನಪ್ರಿಯತೆಗೆ ಸಾಕ್ಷಿ – ಪರ್ವ ಸಮಯಗಳಲ್ಲಿ ದಿಲ್ಲಿಯ ಮೂಲೆಮೂಲೆಗಳಿಂದ ಬಂದ ಜನ (ಎಲ್ಲ ಭಾಷಿಕರೂ) ಹೊರಗೆ ಸರದಿಯ ಸಾಲು ಹಿಡಿದು ಅರ್ಧ ಒಂದು ಗಂಟೆಯವರೆಗೂ ಕಾಯುವುದಿತ್ತು!

ಎಪ್ಪತ್ತರ ಹಿರಿಯ ವಿವಿ ಮೆಹ್ತಾ ರೈಲ್ವೇ ಟಿಕೇಟ್ ಮತ್ತು ವಿವರಗಳನ್ನು ಹಿಡಿದುಕೊಂಡೇ ಅಂದು ಬೆಳಿಗ್ಗೆಯೇ ಸಂಘಕ್ಕೆ ಬಂದಿದ್ದರಂತೆ. (ನಾವು ಆಗ್ರಾ – ದಿಲ್ಲಿ ದಾರಿಯಲ್ಲಿದ್ದೆವು.) ಅವರು ನಮ್ಮ ಕುರಿತು ವಿಚಾರಿಸಿದಾಗ ಕಚೇರಿಯ ಬೇಜವಾಬ್ದಾರೀ ಅಟೆಂಡರ್, “ಅವರಾಗಲೇ ಬಂದು, ಆಗ್ರಾ, ಜೈಪುರ್ ಪ್ರವಾಸ ಹೋಗಿದ್ದಾರೆ. ರಾತ್ರಿ ಬರುತ್ತಾರೆ” ಎಂದು ಸಾಗಹಾಕಿದ್ದ. ನಾನು ಮೊದಲು ಅವರಿಗೆ ದೂರವಾಣಿಸಿ, ವಿವರಿಸಿ, ಕ್ಷಮೆ ಯಾಚಿಸಿದೆ. ‘ದೆಹಲಿ ಕನ್ನಡಿಗ’ ಪತ್ರಿಕೆಯ ಎಲ್ಲಾ-ಇನ್-ಎಲ್ಲಾ, ನನಗೆ ಪೂರ್ವ ಪರಿಚಿತರೇ ಆದ ಬಾ ಸಾಮಗ, ಹೀಗೇ ಕಛೇರಿಗೆ ಬಂದವರು ಸಿಕ್ಕಿದ್ದರು. ಆದರೆ ಅವರು ನಮ್ಮ ಧಾರಾಳ ಪೂರ್ವಪರಿಚಯದ ದಾಕ್ಷಿಣ್ಯಕ್ಕೂ ನಮ್ಮೊಡನೆ ನಾಲ್ಕು ಮಾತಾಡದುಳಿದರು. ನಾವು ಹಿಂದೆ ಬಿಟ್ಟು ಬಂದಿದ್ದ ನಮ್ಮ ಅಸಂಖ್ಯ ಇಷ್ಟ ಮಿತ್ರರಿಗೆ ದಿಲ್ಲಿ ಸಂಪರ್ಕ ವಿಳಾಸ ಕೊಟ್ಟಿದ್ದೆವು. ಸಾಲದ್ದಕ್ಕೆ ಪ್ರಯಾಣದುದ್ದಕ್ಕೂ ನಾವು ಬರೆದ ಅಸಂಖ್ಯ ಪತ್ರಗಳಲ್ಲಿ ಕನಿಷ್ಠ ಒಂದೊಂದಾದರೂ ಎಲ್ಲರಿಗೂ ಬರೆದಿದ್ದೆವು. ಆದರೆ ದಿಲ್ಲಿಯಲ್ಲಿ ನಮ್ಮನ್ನು ಕಾದಿದ್ದದ್ದು ಎರಡೇ ಪತ್ರ – ನನ್ನಪ್ಪಮ್ಮರದೊಂದು, ನನ್ನ ಮಾವ – (ಇಂದು ಕೀರ್ತಿಶೇಷ) ಕೊಂದಲಕಾನ ಕೃಷ್ಣಭಟ್ಟರದೊಂದು. ಉಳಿದ ಯಾರಿಂದಲೂ ಪತ್ರವಿಲ್ಲದ ಕೊರತೆಯನ್ನು ಅವೆರಡೇ ತುಂಬಿಕೊಟ್ಟವು. (ರಾತ್ರಿ ತಾಪ ೨೭.೫, ತೇ. ೪೦% ಔನ್ನತ್ಯ ೧೩೦೦, ದಿನದ ಓಟ ೨೦೫ ಕಿಮೀ)

ದಿಲ್ಲಿ ತಲಪಿದ ಸಂಜೆಯೇ ನಾವು ಹೀರೊಂಡಾದ ಆಫೀಸಿಗೆ ಹೋಗಿದ್ದೆವು. ಮರ್ಕಟಿಂಗ್ ಡ್ಯಾಮೇಜರ್ ಬಾಲಿಶವಾಗಿ ವರ್ತಿಸಿದ. ಆಡಳಿತ ನಿದ್ರೇಶಕ ಇರಲಿಲ್ಲ. ನಾನು ಅವರ ಕಂಪೆನಿಯ ಬಳಕೆದಾರನ ದಿಟ್ಟತನದಲ್ಲಿ, ನಾಳೆ (೧೦-೫-೯೦) ಬೆಳಿಗ್ಗೆ ಮತ್ತೆ ಬರುತ್ತೇವೆ ಎಂದಂತೆ, ಮೊದಲು ಅಲ್ಲಿಗೇ ಹೋದೆವು. ಎಂಡಿ ಇನ್ನೊಬ್ಬ ನಿಷ್ಪ್ರಯೋಜಕ. ಸಮೀಪದಲ್ಲೇ ಇದ್ದ ಯಾವುದೋ ಹೀರೋ ಹೊಂಡಾ ಏಜನ್ಸಿಯಲ್ಲಿ, ನಮ್ಮದೇ ಖರ್ಚಿನಲ್ಲಿ ‘ಮಹಾಮಜ್ಜನ’ ಮಾಡಿಸಿಕೊಂಡೆವು. ಈ ಎಲ್ಲ ನಿರಾಶೆಗಳಿಗೆ ವ್ಯತಿರಿಕ್ತವಾಗಿ ವಿವಿ ಮೆಹ್ತಾರ ಭೇಟಿ ಫಲಪ್ರದವೂ ಸಂತೋಷದಾಯಿಯೂ ಆಯ್ತು. ಸಂಜೆ ಉಳಿದ ಸಮಯಕ್ಕೆ ಸಮೀಪದ ಮಾರುಕಟ್ಟೆಯೊಂದನ್ನು ನೋಡಿ ಬಂದು, ರಾತ್ರಿ ‘ಊಠ’ಕ್ಕೆ (ದೊಡ್ಡೂಟಕ್ಕೆ ಮಹಾಕವಿ ಪಂಡಿತಾರಾಧ್ಯ ಪ್ರಯೋಗ!) ಕರ್ನಾಟಕ ಕ್ಯಾಂಟೀನಿಗೆ ಹೋದೆವು.

ಹಿಮಾಲಯ ಲಂಘನಕ್ಕೆ ಹೆಚ್ಚು ಶಕ್ತಿ ಬೇಕೆಂದು ಮಹಾಭೋಜನವನ್ನೇ ತರಿಸಿಕೊಂಡೆವು. ರೋಟೀ ಪೂರಿಯಲ್ಲಿ ಬೇಸತ್ತ ಇಬ್ಬರು ಗೆಳೆಯರು ಅವರ ಪಾಲಿನ ಪೂರಿಗಳನ್ನು ನನಗೇ ಕೊಟ್ಟರು. ನಾನು ಬಕಾಸುರನ ಬಂಡಿಬೋವನಂತೆ ಎಲ್ಲ ಹುಡಿ ಮಾಡಿದೆ. ಮಾಣಿ ಬಂದು “ಇನ್ನೇನಾದರೂ ಕೋಲ್ಡ್, ಆಯುಷ್ಯಕ್ರೀಂ…” ಎಂದಾಗ ಉಳಿದವರು ನಕಾರಾತ್ಮಕವಾಗಿ ತಲೆಯಾಡಿಸಿದರೂ ನಾನು ಪಾಕಪಟ್ಟಿಯಲ್ಲಿ, ನನ್ನ ಲೆಕ್ಕಕ್ಕೆ ಹೊಸ ರುಚಿ ‘ಫೆಲುಡಾ’ ತರಿಸಿಕೊಂಡೆ. ಅದನ್ನು ಹೊಟ್ಟೆಗಿಳಿಸುವಲ್ಲಿ ಮಾತ್ರ ನಾನು ಸೋತೆ. ಬಹುಶಃ ಉಳಿದಷ್ಟು ‘ಒಳ್ಳೇ ಮಾಲು’ ಹಾಳು ಮಾಡಬಾರದೆಂದು ದೇವಕಿ ಮುಗಿಸಿರಬೇಕು.

ಕನಸಿನಲ್ಲಿ ನಮ್ಮ ಹಿಮಗಿರಿಯೆಲ್ಲ ಫೆಲುಡಾ ವ್ಯಾಪಿಸಿದ್ದಂತೇ ಕಂಡು, ಹೊಟ್ಟೇ ತೊಳಸಿ, ಅಪರಾತ್ರಿ ಮೂರು ಗಂಟೆಗೆ ವಾಂತಿ, ಬೇಧಿ ಹಿಡಿದುಕೊಂಡಿತು! ಅವುಗಳ ಮುನ್ನೆಚ್ಚರಿಕೆ ಬಂದಾಗಲೆಲ್ಲ ‘ಕರ್ನಾಟಕ’ದ ಪಾತಾಳದಿಂದ ಎದ್ದು, ಬಾಗಿಲು ಹಾರುಹೊಡೆದು, ಹಿತ್ತಿಲಿಗೆ ಓಡುತ್ತಿದ್ದೆ. ಅದೃಷ್ಟಕ್ಕೆ ದೇವಕಿಗೆ ಅಗಸ್ತ್ಯರ ಮಂತ್ರ ಸಿದ್ಧಿಸಿದ್ಧಿರಬೇಕು – “ವಾತಾಪಿ ಜೀರ್ಣೋದ್ಭವ”! ಆದರೆ ಪ್ರತಿ ಬಾರಿಯೂ ನಾನೆದ್ದ ಪ್ರತಿಸಲವೂ ಅವಳೂ ನಿದ್ರೆ ಬಿಟ್ಟು ಓಡಿ ಬರುತ್ತಿದ್ದಳು. ನಾನು ಓಡುವ ರಭಸದಲ್ಲಿ ಎಡವಿ ಬೀಳಬಾರದಲ್ಲ, ಕಣ್ಕತ್ತಲೆ ಬಂದು ಅಮೇಧ್ಯದ ಮೇಲೆ ಒರಗಬಾರದಲ್ಲ ಎಂಬ ಕಾಳಜಿ. ಬೆಳಗಿನ ಜಾವಕ್ಕೆ ಬಹುತೇಕ ಅಬದ್ಧವೆಲ್ಲ ಖಾಲಿಯಾಗಿ, ಜಲೋದರನಾಗಿ, ತುಸು ಹೆಚ್ಚೇ ಮಲಗಿದ್ದೆ. ಆದರೂ ದಿನಚರಿ ತಪ್ಪಿಸಲಿಲ್ಲ. (ಸಂಜೆ ತಾಪಮಾನ ೩೭ ತೇ ೩೪% ದಿನದ ಓಟ ೭೭ ಕಿಮೀ)

ಹೊಸ ಹಗಲಿಗೆ (೧೧-೫-೯೦) ಅಜೀರ್ಣ ಒಟ್ಟು ತಂಡದ ಮೇಲೇ ಭಾರವಾಗಿ ಕೂತಿತ್ತು. ಒಮ್ಮೆ ಸಂಘದದಿಂದ ಬೈಕ್ ಹೊರಡಿಸಿದವನೂ ತಡವರಿಸಿ, ಸ್ವಲ್ಪ ನೀರನ್ನೇ ವಾಂತಿ ಮಾಡಿ, ಹೊರಡಬೇಕಾಯ್ತು. (ತಾಪ ೩೪, ತೇವ ೪೦%) ದಿನದ ಲಕ್ಷ್ಯ – ಋಷಿಕೇಶ, ಸುಮಾರು ಇನ್ನೂರು ಕಿಮೀ, ದೊಡ್ಡ ದೂರವೇನಲ್ಲ. ನಿಧಾನದಲ್ಲೇ ಮುಂದುವರಿದೆವು. ಕಾಲರ್ಧ ಗಂಟೆಗೊಮ್ಮೆ ದಾರಿ ಬದಿಯ ತುಂಡು ನೆರಳಿನ ನೆಲ ಹೇಗಿದ್ದರೂ ಸರಿ, ಐದು ಹತ್ತು ಮಿನಿಟು ನಾನು ಮೈಚಾಚಿ, ವಿರಮಿಸುತ್ತ ಸಾಗಿದೆವು. ಹಾಗೂ ಒಮ್ಮೆ ವಾಂತಿ ಬಂದಾಗ ಪೂರಿಗಳ ಕೊನೆಯ ತುಣುಕೂ ಬಂದದ್ದು ಕಂಡು ಮನಸ್ಸು ನಿರಾಳವಾಯ್ತು. ಸುಮಾರು ಎರಡೂವರೆ ಗಂಟೆಯಲ್ಲಿ ಅರವತ್ತೇಳೇ ಕಿಮೀ ಕಳೆದಿದ್ದಾಗ ಡಾ| ರಾಜೇಶ್ ಶರ್ಮ ಎನ್ನುವವರ ಕ್ಲಿನಿಕ್ ತೆರೆದಿದ್ದದ್ದು ಕಾಣಿಸಿ ಹೋದೆವು. ಅವರು ಭಾರೀ ಕಾಳಜಿಯಲ್ಲಿ ತನಿಖೆ ಮಾಡಿದರು. ನನ್ನೊಲವಿನಂತೆ ಹೊಸತೇನೂ ಮದ್ದು ಹೇಳದೆ, ನಾನಾಗಲೇ ಪ್ರಥಮ ಚಿಕಿತ್ಸೆ ಗಂಟಿನಿಂದ ನುಂಗಿದ್ದ ಒಂದು ಗುಳಿಗೆಯನ್ನೇ ಸಮರ್ಥಿಸಿದರು. “ಬರೀ ಅಜೀರ್ಣ, ಸಮಸ್ಯೆ ಏನೂ ಇಲ್ಲ, ಹೀಗೇ ಮುಂದುವರಿಯಿರಿ” ಎಂದರು, ಹಾರ್ದಿಕ ಶುಭಾಶಯವನ್ನು ಕೋರಿ, ಅದೇ ತನ್ನ ಫೀಸೆಂದೇ ಸಾಧಿಸಿಬಿಟ್ಟರು!

ದಾರಿಯಲ್ಲಿ ಸುಮಾರು ಹದಿನೈದಿಪ್ಪತ್ತು ಮಿನಿಟು ಪಿರಿಪಿರಿ ಮಳೆ ಬಂತು. ಏರಿದ್ದ ವಾತಾವರಣದ ಬಿಸಿಗೆ ನಾವದನ್ನು ವರವೆಂದೇ ಭಾವಿಸಿ ಸವಾರಿಯಲ್ಲೇ ಸುಖಿಸಿದೆವು! ಮುಜಾಫರ್ ನಗರದಲ್ಲಿ ಸಿಕ್ಕ ಒಂದೋ ಎರಡೋ ಇಡ್ಲಿ, ಚಾ ನಾನು ಸೇವಿಸಿದ್ದೆ. ಮುಂದೆ ಕೇವಲ ನೀರು, ನೀರು ತೀರಾ ಚಪ್ಪೆಯಾದಾಗ ಚಾ, ಎಂದಷ್ಟೇ ಸೇವಿಸುತ್ತ ಬೈಕ್ ಓಡಿಸುತ್ತಲೇ ಹೋದೆವು. ರೂರ್ಕಿಯಲ್ಲಿ ಉಳಿದವರು ಊಟ ಮಾಡಿದರೆ, ನಾನು ಕಡುಪಥ್ಯದಲ್ಲೇ ಇದ್ದೆ. ಹರಿದ್ವಾರ ಕೇವಲ ಪುಣ್ಯಕ್ಷೇತ್ರ ಎಂದು ಅವಗಣಿಸಿ, ಸಂಜೆ ಸುಮಾರು ನಾಲ್ಕು ಗಂಟೆಗೇ ಋಷಿಕೇಶ ಸೇರಿಕೊಂಡೆವು. ಓಟದ ಕೊನೆಯ ಮುಕ್ಕಾಲಂಶದಲ್ಲಿ ನನಗೆ ತುಸು ನಿಶ್ಶಕ್ತಿ ಬಿಟ್ಟು, ಬೇರೇನೂ ಸಮಸ್ಯೆ ಉಳಿದಿರಲಿಲ್ಲ.

ಹಿಮಾಲಯದ ಚತುರ್ಧಾಮಗಳ ವಲಯವನ್ನು ‘ಗಢವಾಲ್’ ಎಂದೇ ಗುರುತಿಸುತ್ತಾರೆ. ಅಲ್ಲಿ ಸರಳವಾಗಿ ಮತ್ತು ವ್ಯಾಪಕವಾಗಿ ಯಾತ್ರಾ ಆಯೋಜಕ ಸಂಘ – ಗಢವಾಲ್ ಮಂಡಲ್ ವಿಕಾಸ್ ನಿಗಮ್ (ಜೀಯಂವೀಯೆನ್). ಇದು ವಲಯದೊಳಗೆ ವಾಹನ ಸಂಪರ್ಕವಿಲ್ಲದ ಸ್ಥಳಗಳನ್ನೂ ಸೇರಿಸಿದಂತೆ, ಹಾಸ್ಟೆಲ್, ಬಾಡಿಗೆಗೆ ಸಲಕರಣೆಗಳು, ಪ್ಯಾಕೇಜ್ ಪ್ರವಾಸಗಳನ್ನೆಲ್ಲ ದಕ್ಷವಾಗಿ ನಿರ್ವಹಿಸುತ್ತದೆ. ನಾನು ಅದರ ಋಷಿಕೇಶದ ಪ್ರಧಾನ ಕಛೇರಿಗೆ ಮುಂದಾಗಿಯೇ ನಮ್ಮ ಪ್ರವಾಸೀ ಯೋಜನೆಯನ್ನು ಪತ್ರದಲ್ಲಿ ವಿವರವಾಗಿ ಕೊಟ್ಟಿದ್ದೆ. ಮತ್ತು ನಮ್ಮ ರಾತ್ರಿಗಳಿಗೆ ವಸತಿ ಸೌಕರ್ಯವನ್ನಷ್ಟೇ ಕೇಳಿದ್ದೆ. ಆದರೆ ನಮ್ಮ ಗ್ರಹಚಾರಕ್ಕೆ ನನಗೆ ಲಿಖಿತ ಹಿಂದಿ ಬರುವುದಿಲ್ಲ, ಅವರಿಗೆ ಇಂಗ್ಲಿಷ್ ಅರ್ಥವಾಗುವುದಿಲ್ಲ. ಅವರು ಏನೋ ಒಂದಷ್ಟು ಹಿಂದಿಯಲ್ಲಿ ಗೀಚಿ, ಉತ್ತರಿಸಿದ ಕಾಲಕ್ಕೆ ನಾವು ಮಂಗಳೂರು ಬಿಡುವ ದಿನವೇ ಬಂದಿತ್ತು. ಋಷಿಕೇಷದಲ್ಲೇನೋ ಹಾಸ್ಟೆಲ್ಲಿನಲ್ಲಿ ಕೋಣೆಗಳು ಸಿಕ್ಕವು. ಮುಂದೆ ನಮಗೆ ಅದೃಷ್ಟವನ್ನಷ್ಟೇ ನೆಚ್ಚಿಕೊಳ್ಳಿ ಎಂದು ಬಿಟ್ಟರು.

ಸಂಜೆಯೇ ನನ್ನ ಹೊಟ್ಟೆ “ಕೊಡೋ ಕೊರೋ ಇನ್ಮೇಲ್ ಮಾಡಲ್ಲ” ಎಂಬಂತೆ ಕೊರಗುತ್ತಿತ್ತು. ಧಾಬವೊಂದರಲ್ಲಿ ಸುಕ್ಕಾ ರೊಟ್ಟಿಯನ್ನಷ್ಟೇ ಮಾಡಿಸಿ, ಅದೂ ಎರಡೋ ಮೂರೋ ಮಾತ್ರ ತಿಂದೆ. (ಮುಂದೆ ಪೂರ್ತಿ ಸರಿಯಾದೆ, ಬಿಡಿ.) ಹಿಮಾಲಯದ ಚಳಿಗೆ, ಸಂಘದ ಬಾಡಿಗೆ ಉಡುಪು ತೊಡವುಗಳನ್ನು ನೋಡಿದೆವು. ಅವುಗಳ ದುಃಸ್ಥಿತಿ ನೋಡಿ ಹೆದರಿ ಬಿಟ್ಟೆವು. ತೀರಾ ಅವಶ್ಯಗಳನ್ನು ಡೆಹ್ರಾಡೂನಿಗೆ ಮುಂದೂಡಿದೆವು. ಬೇಗ ಮಲಗಿ ದೊಡ್ಡ ರಾತ್ರಿಯ ನಿದ್ರೆ ತೆಗೆದೆವು. (ಸಂಜೆ ತಾ. ೩೪% ತೇ. ೪೦% ಔನ್ನತ್ಯ ೧೬೦೦, ದಿನದ ಓಟ ೨೫೬ ಕಿಮೀ)

ಋಷಿಕೇಷದ ಶಿವಾನಂದಾಶ್ರಮದ ಪ್ರಕಟಣೆಗಳಿಗೆ ಮಂಗಳೂರಿನಲ್ಲಿ ನಾನು ಗಟ್ಟಿ ಗಿರಾಕಿಯೇ ಆಗಿದ್ದೆ. ಮತ್ತೆ ಅದರ ಮುಖ್ಯಸ್ಥರಾದ ಸ್ವಾಮಿ ಶಿವಾನಂದರು ಕನ್ನಡಿಗರು, ತುಂಬಾ ಸಹೃದಯಿಗಳು ಎಂದೂ ಕೇಳಿದ್ದೆ. ಹಾಗೆ ಅವರ ಭೇಟಿ, ಮತ್ತು ಸಣ್ಣದಾಗಿ ಊರು ಸುತ್ತುವ ಅಂದಾಜಿನಲ್ಲೇ ಬೆಳಿಗ್ಗೆ (೧೨-೫-೯೦) ಕೋಣೆ ಖಾಲಿ ಮಾಡಿದ್ದೆವು. ಸ್ವಾಮಿಗಳು ಊರಲ್ಲಿರಲಿಲ್ಲ. ಉಳಿದಂತೆ ಖ್ಯಾತ ಶಿವಾನಂದ ಝೂಲಾ ದಾಟಿ, ಎದುರು ದಂಡೆಯ ಸಂತಿ, ಮ್ಯೂಸಿಯಂ ಸುತ್ತಿ, ಲಕ್ಷ್ಮಣ ಝೂಲಾದಲ್ಲಿ ಮರಳಿದೆವು.

ಹತ್ತು ಗಂಟೆಯ ಸುಮಾರಿಗೆ ಋಷಿಕೇಶ ಬಿಟ್ಟೆವು. ದಿನದ ಲಕ್ಷ್ಯ ತುಂಬ ಸಣ್ಣದು – ಮಸ್ಸೂರಿ (ಸುಮಾರು ೮೦ ಕಿಮೀ). ಅರ್ಧ ದಾರಿ – ಡೆಹ್ರಾಡೂನಿನಲ್ಲಿ ಸ್ವಲ್ಪ ಹೆಚ್ಚೇ ಸಮಯ ಕಳೆದೆವು. ಆ ಊರು ಎಲ್ಲ ತೆರನ ಪರ್ವತಾರೋಹಣ ಸಾಮಗ್ರಿಗಳಿಗೆ ಒಳ್ಳೆಯ ನೆಲೆ. (೧೯೭೯ರ ಸುಮಾರಿಗೆ ಮಂಗಳೂರಿನ ಆರೋಹಣಕ್ಕೆ ಸಲಕರಣೆಗಳು, ನನಗೆ ಶಿಲಾರೋಹಣ ಸೇರಿದಂತೆ ಚಾರಣ ಬೂಟ್ ಎಲ್ಲ ಬಂದದ್ದು ಇಲ್ಲಿಂದಲೇ) ನಾವಲ್ಲಿ ಬಾಡಿಗೆ ಅಥವಾ ಖರೀದಿ ಎಂದು ಚೌಕಾಸಿ ನಡೆಸಿ, ಕೆಲವನ್ನು ಕೇವಲ ಖರೀದಿಸಿದೆವು. (ಬಾಡಿಗೆಗಾದರೆ ಯಾತ್ರೆಯ ಕೊನೆಯಲ್ಲಿ ಅನ್ಯ ದಾರಿಯಲ್ಲಿರುವ ನಾವು ಡೆಹ್ರಾಡೂನಿಗೆ ಬರುವ ಕಷ್ಟ ಸೇರಿಕೊಳ್ಳುತ್ತಿತ್ತು.) ತುಸು ಬೇಗದ ಮಧ್ಯಾಹ್ನದ ಊಟವನ್ನೇ ಮಾಡಿ ಸ್ಪಷ್ಟವಾಗಿ ಹಿಮಾಲಯವನ್ನು ತುಡುಕುವವರಂತೆ ಘೋಷಿಸಿದೆವು, “ಚಲೋ ಮನಾಲೀ”.

(ಮುಂದುವರಿಯಲಿದೆ)