ಗುಡ್ಡ ಬೆಟ್ಟಗಳು ಬರಿಯ ಮಣ್ಣ ದಿಬ್ಬವಲ್ಲ – ಬಜ್ಪೆ – (ಚಕ್ರೇಶ್ವರ ಪರೀಕ್ಷಿತ ೨೪ – ದೈನಂದಿನ ಸೈಕಲ್ ಸರ್ಕೀಟಿನ ಸಂಗ್ರಹ) 

ಅನ್ಯ ಕಾರ್ಯ ಒತ್ತಡಕ್ಕೆ ಸಿಕ್ಕಿ ತಳೆದಿದ್ದ ಐದು ದಿನಗಳ ಸೈಕಲ್ ಸನ್ಯಾಸ ಇಂದು ಸಂಜೆ ಮುರಿದೆ. ಬಂಟರ ಹಾಸ್ಟೆಲ್, ಮಲ್ಲಿಕಟ್ಟೆಗಾಗಿ ನಂತೂರು ಚಡಾವು ಹಿಡಿದೆ. ಅರ್ಧಾಂಶ ಕಾಂಕ್ರೀಟೀಕರಣ ಮುಗಿದಿದೆ. ಏಕಮುಖ ಸಂಚಾರದ ನಿರ್ಬಂಧ ಏರುವವರ ಪರವಾಗಿಯೇ ಇತ್ತು. ವೃತ್ತದಲ್ಲಿ ನೇರ ಸಾಗಿ, ಪದವು ಶಾಲೆ, ಯೆಯ್ಯಾಡಿ, ಬೊಂದೇಲ್, ಕಾವೂರು ವೃತ್ತ, ಮರಕಡ, ಫಲ್ಗುಣಿ ನದಿ ದಾಟಿ, ವಿಮಾನ ನಿಲ್ದಾಣದ ಹೊಸ ದಾರಿಯವರೆಗೂ ಓಟಕ್ಕೊಂದು ಚೂಪು ಇರಲಿಲ್ಲ. ಇಲ್ಲಿ ಹಳೆಯ ಆದ್ಯಪಾಡಿ ರಸ್ತೆಗೆ ಹೊಸ ಬಾಯಿ ಕೊಟ್ಟು, ಇಲಿ ಹಿಡಿಯಲೆಂದೇ ಭಾರೀ ಗುಡ್ಡ ಅಗೆದದ್ದರ ವರ್ತಮಾನ ನೋಡುವ ಉತ್ಸಾಹದಲ್ಲಿ ತಿರುಗಿದೆ. ಹೊಸದಾರಿ ಗಿಡ್ಡವಾದ್ದರಿಂದ ಏರುವ ಕೋನದಲ್ಲಿ ಏನೂ ವ್ಯತ್ಯಾಸವಾಗಿರಲಿಲ್ಲ. ಆದರೆ ಹರಹು, ತಿರುವಿನ ಬಳುಕು, ಸಂಧಿಸ್ಥಾನದ ಡಾಮರ್, ಮುಂದುವರಿದು ಕಾಂಕ್ರೀಟ್ ಹಾಸು ನಿರೀಕ್ಷೆಯಂತೆ ಅದ್ಭುತವಾಗಿಯೇ ಇದೆ. ಎರಡೂ ಪಕ್ಕದ ದಿಣ್ಣೆ, ಮರ ಸವರಿ ಒದಗಿಸಿದ ವಿಸ್ತಾರದಲ್ಲಿ ಕಾರುಗಳೇನು, ವಿಮಾನಗಳನ್ನೂ ಇಳಿಸಬಹುದು! ನಮ್ಮ ಅಭಿವೃದ್ಧಿಕೋರರಿಗೆ ಗುಡ್ಡಬೆಟ್ಟಗಳೆಲ್ಲ ಕೇವಲ ಮಣ್ಣ ದಿಬ್ಬಗಳು – ಗಂಗಾಧರರಲ್ಲ! ವನ್ಯ ಗಿಡಮರಬಳ್ಳಿಗಳೆಲ್ಲ ವ್ಯರ್ಥ ಕಾಡುಗಳು – ವನಸ್ಪತಿಗಳಲ್ಲ. ಸಹಜವಾಗಿ ನೀಲಕಾಗದದ ಗೀಟಿನಷ್ಟೇ ಚೊಕ್ಕವಾಗಿ ಗುಡ್ಡ ಸೀಳಿ, ಓರೆ ನಿಲ್ಲಿಸಿ ಕಲ್ಲು ಕಸ ದೂರಮಾಡಿದ್ದರು.

ಪ್ರಾಕೃತಿಕ ನೀರ ಜಾಡುಗಳ ಹರಿವನ್ನು ತಳದ ಭೂಮಿಗರಿವಾಗದಂತೆ ಧರಿಸಿ, ಯಶಸ್ವಿಯಾಗಿ ನದಿ ಮುಟ್ಟಿಸಲು ಕಾಂಕ್ರೀಟ್ ಚರಂಡಿ, ಮೋರಿಗಳು ಸಜ್ಜಾಗುತ್ತಿದ್ದುವು. ಅಂಚುಗಳಲ್ಲಿ ಮತ್ತೆ ಮುಳಿ, ಪೊದರು ಕಾಡದಂತೆ ಇಂಟರ್ಲಾಕುಗಳು ಬಂದೇ ಬರುತ್ತವೆ. ಮರಗಿಡಗಳು ಏಳದಂತೆ ವ್ಯವಸ್ಥಿತ ಭಾರೀ ಜಾಹೀರಾತು ಫಲಕಗಳಿಗೆ ಉಕ್ಕಿನ ಹಂದರಗಳು ಬೇರೂರಿಯಾಗಿದೆ. ತಪ್ಪಲಿನ ಜವುಗು, ಗದ್ದೆ ಪ್ರದೇಶಗಳು ಆಗಲೇ ಇಲ್ಲಿನ ಮಣ್ಣು ಮುಕ್ಕಿ ಒಣನಗೆ ಬೀರುತ್ತಿವೆ. ಸುಂದರ ವಸತಿ ಸಮೂಹ, ವ್ಯವಹಾರಕೇಂದ್ರ, ವಿಹಾರಧಾಮಗಳಾಗಲು ದಿನಗಳೆಣಿಸುತ್ತಿವೆ. ಶುಭ್ರ ರೂಪ, ಶೋಭಾಯಮಾನ ಜುಟ್ಟು ಬೊಟ್ಟಾಲಂಕೃತ ವಿದೇಶೀ `ಕಿಸ್ಣ ಭಕ್ತ’ರು ರಾಗತಾಳಗಳೊಡನೆ ನಲಿಯುತ್ತ ದೇವರ ಮೆರವಣಿಗೆ ನಡೆಸಿದಾಗ ಎಸೆಯುವ `ಪರ್ಸಾದ್’ ಬಾಚಿಕೊಳ್ಳಲು ಅಂಚಿನಲ್ಲಿ ನಿಂತ ಭಿಕಾರಿಯಂತೆ ನಡುವೆ ಆದ್ಯಪಾಡಿಯ ಬಲಗವಲು ಕಾಣಿಸಿತು. ಮುಂದೆ ವಿಮಾನನಿಲ್ದಾಣದ ವಾಹನ ಸಂಚಾರಕ್ಕೆ ಸುಂದರ ದಾರಿ ಮುಕ್ತವಾದಾಗ ಆದ್ಯಪಾಡಿಯ ಬಡ ಬೆರಗು ಬಾಯಿಗಳಿಗೆ ತೀವ್ರ ಅಪಘಾತಗಳ ಪ್ರಸಾದ ಖಾತ್ರಿ.

ನಾನು ವಿಮಾನನಿಲ್ದಾಣದವರೆಗೂ ಸೈಕಲ್ಲೇರಿಸಿದೆ. ಇನ್ನೂ ಹೊಸಮಾರ್ಗದ ದ್ವಾರ ಮುಕ್ತವಾಗಿಲ್ಲ. ಆದರೂ ಸೋರಿ ಬಂದ ವಾಹನ ಹಿಂಡಲು ಸುಂಕದವ ಸ್ಥಾಪಿತನಾಗಿದ್ದಾನೆ. ಪುಣ್ಯಕ್ಕೆ ನನ್ನದು ಪಾದಚಾರಿ ಅಂತಸ್ತಿನ ಸೈಕಲ್ಲು! ನಿಲ್ದಾಣದ ಒತ್ತಿನಲ್ಲಿದ್ದು ತೆರವಾದ ಹೋಟೆಲಿನ ಕಟ್ಟಡದವರೆಗೆ ಸುಂದರ ಇಂಟರ್ಲಾಕಿನ ದಾರಿಯಾಗಿದೆ. ಸದ್ಯಕ್ಕೆ ಹೋಟೆಲ್ ಕಟ್ಟಡ ಕೆಡವದೆ ಬಳಸುತ್ತಿರುವುದು ಆಶ್ಚರ್ಯ! ಅಲ್ಲಿಂದಿಳಿದು ಬರುತ್ತ ನಾನು ಮಾಡಿದ ಪುಟ್ಟ ಚಲಚಿತ್ರ ನೋಡಿ. ಇದು ಇಲ್ಲಿನ ಭೂಮಿಗೆ ನನ್ನ ಮಾತಿಗೂ ಮಿಕ್ಕ ಘಾಸಿಯಾಗಿರುವುದನ್ನು ಪ್ರಮಾಣಿಸಬಲ್ಲುದು.

 

ಸೈಕಲ್ ತುಳಿಯುವ ಸಾತತ್ಯ ಐದು ದಿನ ಬಿಟ್ಟದ್ದಕ್ಕೂ ಬಿರುಬಿಸಿಲು, ಉರಿಸೆಕೆಗಳಲ್ಲಿ ಬಳಲಿದ್ದಕ್ಕೂ ನಾನು ಮತ್ತೆ ಮಂಗಳೂರಾಭಿಮುಖಿಯಾಗಿದ್ದೆ. ಆದರೆ ಮಳವೂರು ಕಿಂಡಿ ಅಣೆಕಟ್ಟಿನಾಚಿನ ರೈಲ್ವೇ ಸೇತುವೆಯಲ್ಲಿ ಚಲನೆ ಕಂಡಾಗ ಕುತೂಹಲ ಕೆರಳಿತು. ಹೊಳೆ ಪಕ್ಕದ ಮಣ್ಣದಾರಿ ಹೋಗುವಷ್ಟೂ ಅನುಸರಿಸಿದೆ. ಸೇತುವೆಗೂ ಸಾಕಷ್ಟು ಮೊದಲೆ ನೆಲದೆತ್ತರದ ನೀರತೊಟ್ಟಿಗೆ ದಾರಿ ಮುಗಿದಿತ್ತು. ಅಡ್ಡ ಬೀಳತೊಡಗಿದ್ದ ಸೂರ್ಯ ಕಿರಣದಲ್ಲಿ ಮಿಂದ ಹೊಳೆ, ನಸುಬೂದುಗಳೆಯ ಸೇತುವೆ, ಹಿನ್ನೆಲೆಯ ಹಸುರಮೊತ್ತದ ಔನ್ನತ್ಯದಲ್ಲಿ ತಲೆ ಎತ್ತಿದ (ಪಿಲಿಕುಳದ) ಸ್ಕೌಟ್ ಭವನ – ಸುಂದರ ಚಿತ್ರವನ್ನು ಕ್ಯಾಮರಾ ತುಂಬಿಕೊಂಡು ಅಣೆಕಟ್ಟಿಗೇ ಮರಳಿದೆ. ಕಟ್ಟೆಯ ಮೇಲೇ ಸೈಕಲ್ ಓಡಿಸಿ ಎದುರು ದಂಡೆ ಕಂಡೆ. ಕಿಂಡಿಗಳಿಗೆ ಹಲಿಗೆ ಇಳಿಸಿದ್ದರು. ನೀರು ವಿಶೇಷವಿರಲಿಲ್ಲ. ಆ ಕೊನೆಯಲ್ಲಿ ಮೂರು ಹುಡುಗರು ಕಟ್ಟೆಯ ಎತ್ತರದಿಂದ ಹೊಳೆಗೆ ಹಾರಿ ತಣ್ಪಿನ ಸುಖ, ಸಾಹಸದ ಸಂತೋಷ ಪಡೆದಿದ್ದರು. ಅವರಲ್ಲಿ ದಾರಿ ವಿಚಾರಿಸಿಕೊಂಡು ಹಾಗೇ ಮುಂದುವರಿದೆ.

ಕಟ್ಟೆಯ ಎರಡು ಬದಿಗಳಲ್ಲಿ ಕೇವಲ ಪಾದಚಾರಿಗಳಷ್ಟೇ ದಾಟುವ ಗೇಟಿದೆ. ಆಚೆ ಕೊನೆಯಂತೂ ಸ್ಪಷ್ಟ ಯಾವುದೋ ಸರಕು ಸಾಗಣಾ ಸಂಸ್ಥೆಯ ವಠಾರವೇ ಇದ್ದಂತಿತ್ತು. ಸೈಕಲ್ಲನ್ನು ಎಂದಿನಂತೆ ಪಾದಚಾರಿಯ ಸರಳತೆಯಲ್ಲೇ ಎಲ್ಲ ದಾಟಿಸಿ, ನುಣ್ಣನೆ ಡಾಮರು ದಾರಿ ಅನುಸರಿಸಿದೆ. ಮೊದಲಿಗೆ ತುಸು ಜವುಗು ಪ್ರದೇಶ, ಕೃಷಿಭೂಮಿಗಳೆಡೆಯಲ್ಲಿ ಸಮಾಧಾನದಲ್ಲಿ ವಿಹರಿಸಿದ ದಾರಿ, ಹಡಿಲುಬಿಟ್ಟ ಕಗ್ಗಲ್ಲ ಕೋರೆ ಕಳೆದ ಮೇಲೆ ಏರತೊಡಗಿತು. ಎಡಕ್ಕೆ ಸಿಕ್ಕ ಇನ್ಯಾವುದೋ ಹಳ್ಳಿದಾರಿ, ಸಮಸೇತಿನೊಡನೆ ರೈಲ್ವೆ ಹಳಿಗಳನ್ನುಪೇಕ್ಷಿಸಿ ನಾನೂ ಏರುಮುಖಿಯೇ ಆದೆ. ಅದೇನೋ `ನಮ್ಮ ದಾರಿ’ ಯೋಜನೆಯಂತೆ. ಹರಕು ದಾರಿಗೆ ವಿಸ್ತರಣೆ ಮತ್ತು ಹೊಸ ಹೊದಿಕೆಯ ಭಾಗ್ಯ ಸಲ್ಲುತ್ತಲಿತ್ತು. ಕಟ್ಟೇರಿನೊಡನೆ ಹುಡಿ ಮಣ್ಣು, ಅಸ್ಥಿರ ಜಲ್ಲಿ ಹಾಸುಗಳೇ ಎದುರಾದರೂ ನನ್ನ ಪರ್ವತಾರೋಹಿ ಸೈಕಲ್ಲಿಗೆ (ಎಂಟೀಬಿ = ಮೌಂಟೇನ್ ಟೆರೇನ್ ಬೈಕ್) ಸವಾಲಾಗಲಿಲ್ಲ.

ಬೆವರು ಬಸಿದದ್ದರ ಲೆಕ್ಕ ಹಿಡಿಯದೆ, ಉಸಿರು ಸಿಕ್ಕಿದ್ದಕ್ಕೆ ತುಸೂ ತಳುವದೆ ಆ ಕೊನೆಯಲ್ಲಿ ನಾನು ಬೊಂದೇಲನ್ನೇ ತಲಪಿದ್ದೆ. ಮತ್ತೇನಿದ್ದರೂ ಔಪಚಾರಿಕ ಪೆಡಲಿಕೆ – ಯೆಯ್ಯಾಡಿ, ಆಕಾಶವಾಣಿ ವೃತ್ತ, ಬಿಜೈ ಇಳಿಜಾರಿನಲ್ಲಿ ಕಂಬಳದತ್ತಣ ಕವಲು. ಕಂಬಳ ಗದ್ದೆಯ ಸೇತುವೆ ವಾಹನಗಳಿಗಿನ್ನೂ ಮುಕ್ತವಾಗಿಲ್ಲವಾದರೂ ನನಗೆ ಧಾರಾಳ ಅವಕಾಶ ಕೊಟ್ಟಿತು. ನಾನು ಮನೆ ಸೇರುವಾಗ ಅತ್ತ ಸೂರ್ಯನೂ “ಉಫ್! ಏನು ಸೆಕೆಯಪ್ಪಾಂತ” ಸಮುದ್ರಕ್ಕೆ ಹಾರಿದ್ದು ಕಾಣಿಸಿತು.

ಸರ್ಕೀಟ್ ೨೧೩ ತಾ ೮-೩-೨೦೧೬ ಇಂದಿನ ಒಗ್ಗರಣೆ: ನಮ್ಮ ನಿಮ್ಮ ಹಣದಲ್ಲಿ ಅಷ್ಟೆಲ್ಲ ಚಂದಕ್ಕೆ ಪ್ಯಾಕ್ ಮಾಡಿದ ವಿಮಾನ ನಿಲ್ದಾಣವನ್ನು ಈಗ ಅದಾನಿಗೆ ಗಿಫ್ಟ್ ಮಾಡಲಾಗಿದೆ.

ವಾಹನಗಳ ‘ಅಗ್ನಿಕಾರ್ಯ’ ಮಳೆ ತರಿಸದೇ? – ಕಾಸರಗೋಡು ದಾರಿ

ಸಂಜೆ ಸವಾರಿ ಜ್ಯೋತಿ, ಕಂಕನಾಡಿ, ಜೆಪ್ಪು, ಮಹಾಕಾಳಿಪಡ್ಪು, ಹೆದ್ದಾರಿ, ತೊಕ್ಕೋಟು, ಕೋಟೆಕಾರು, ತಲಪಾಡಿ ಎಂದಲ್ಲದೆ ಗಡಿಯಾಚೆಯೂ ಒಂದೇ ಲಯದಲ್ಲಿ ಸಾಗುವುದಿತ್ತು. ಹಾಗಾಗಲಿಲ್ಲ. ಕರ್ನಾಟಕದಲ್ಲಿ ಹೆದ್ದಾರಿ – ನಾಲ್ದಾರಿ, ಆರ್ದಾರಿ ಎಂದಿತ್ಯಾದಿ ಯದ್ವಾತದ್ವಾ ವಿಸ್ತರಿಸುತ್ತಾ ಸಾಗಿದೆ. ಆದರೆ ಯಂತ್ರಯುಕ್ತ ವಾಹನಗಳ ಬಹುತೇಕ ಚಾಲಕರು ಹೊಸ ಸನ್ನಿವೇಶಕ್ಕೆ ಹೊಸ ಶಿಸ್ತನ್ನು ರೂಢಿಸಿಕೊಳ್ಳುವುದರಲ್ಲಿ ನಿಧಾನಿಗಳು. ಹೀಗೆ ಭೀಕರ ಅಪಘಾತಗಳು ಹೆಚ್ಚಿ, ಸಾವುನೋವುಗಳು ಏರಿದಾಗ ಹೆದ್ದಾರಿಯೋ ಹೆಮ್ಮಾರಿಯೋ ಎಂದು ಕೇಳುವಂತೆ ಆದದ್ದೂ ಇದೆ. ಹೆದ್ದಾರಿಯ ವೈಭವವೆಲ್ಲ ತಲಪಾಡಿ ಗಡಿಯವರೆಗೆ ಮಾತ್ರ. ಮತ್ತೆ ಅಲ್ಲಿಯವರೆಗೆ ಭೋರ್ಗರೆದ ವಾಹನಗಳು ಕೇರಳ ವಲಯದಲ್ಲಿ ಕುಂಯಿಗುಟ್ಟುವ ಸ್ಥಿತಿ! ಕೇರಳ ಹೆದ್ದಾರಿ ವಿಸ್ತರಣೆಯನ್ನು ಒಪ್ಪಿಕೊಂಡಿಲ್ಲ. ಹಳೆಗಾಲದ ಒಂದೇ ದಾರಿಯಲ್ಲಿ ಎದುರು ಸಾಲುಗಟ್ಟಿ ಬರುವ ವಾಹನಗಳನ್ನು ಸುಧಾರಿಸಿಕೊಂಡು ಹೋಗುವ ಸಂಕಟ. ಆರೆಂಟು ಸಾಲು ಚಕ್ರಗಳ, ಎರಡೆರಡು ಮಾಳಿಗೆ ಎತ್ತರದ ಲಾರಿ ಬಸ್ಸುಗಳು ಜೂಗರಿಸುತ್ತ ಸಾಗಿದರಂತೂ ವೇಗಕಾಮಿ ಇತರರು ಹಿಂದಿಕ್ಕಲವಕಾಶಕ್ಕೆ ಕಿಮೀಗಟ್ಟಳೆ ಉದ್ದಕ್ಕೆ ಹಾರ್ನರ್ಜಿ ಹಾಕುತ್ತ ಹಿಂಬಾಲಕರಾಗಲೇಬೇಕು. ಅಲ್ಲಿನ ರಸ್ತೆ ಪಕ್ಕದ ಬಿಳಿಗೀಟು ನಿಜ ಅಂಚನ್ನೇ ಗುರುತಿಸುತ್ತವೆ. ಬಿಳಿಗೀಟನ್ನು ಮೀರಿದ ದೊಡ್ಡ ವಾಹನಗಳು ತರಹೇವಾರಿ ಆಳದ ಹೊಂಡ ಸರಣಿಯಲ್ಲಿ ಬಿದ್ದೆದ್ದು ಓಡುವುದು ಅನಿವಾರ್ಯ ಕರ್ಮ.

ಆದರೆ ಬಡಪಾಯಿ ದ್ವಿಚಕ್ರಿಗಳು, ಅದರಲ್ಲೂ ನನ್ನಂಥ ಸೈಕಲ್ವಾಲಾಗಳು ಬೀಳುವುದಷ್ಟೇ ಸಾಧ್ಯ, ಎದ್ದು ಬಂದರೆ ಪವಾಡ! ಇಂದು ಆ ದುಸ್ಥಿತಿಯನ್ನು ತುಸುವೇ ಬದಲಿಸುವ ಕ್ರಮ ಗಡಿದಾಟಿದ್ದೇ ಸಿಗುವ ತೂಮಿನಾಡಿನಿಂದಲೇ ಶುರುವಾದಂತಿತ್ತು. ಲಾರಿಗಟ್ಟಳೆ ನಕ್ಕರಿಕಲ್ಲುಗಳನ್ನು (ತುಂಡು ಮುರಕಲ್ಲು) ದಾರಿಯ ಎರಡೂ ಬದಿಗಳಿಗೆ ಸುರಿದು, ಜೇಸೀಬಿಯಲ್ಲಿ ದಮ್ಮಾಸು ಹಾಕುತ್ತಿದ್ದರು. ಇದೂ ದೊಡ್ಡ ವಾಹನಗಳಿಗೆ ಸರಿ. ಉಳಿದಂತೆ ಮೊದಲು ಬಿದ್ದು ಸೋಲುತ್ತಿದ್ದವರು, ಈಗ ಈ ಕಲ್ಲಹಾಸಿಗೆ ಹೆಟ್ಟಿ ಉರುಳಬಹುದು, ಅದೂ ಶರಶಯ್ಯೆಯ ಮೇಲೆ! ನಾನು ಪಟ್ಟು ಹಿಡಿದು ಹೆದ್ದಾರಿಯನ್ನೇ ನೆಚ್ಚಿ ಸ್ವಲ್ಪ ಮುಂದುವರಿದೆ. ಆದರೆ ನಾಲ್ಕು ಮತ್ತು ಮೀರಿದ ಚಕ್ರಿಗಳು ದೊಡ್ಡ ವಾಹನಗಳಿಗೆ ಕೊಟ್ಟ ರಸ್ತೆ ಗೌರವವನ್ನು ನನಗೆ ವಂಚಿಸುವ ಯತ್ನ ನಡೆಸುತ್ತಲೇ ಇದ್ದರು. ಹೆಚ್ಚು ಕಾಲ ಅವರ ಅಬ್ಬರದ ಸಾಮೀಪ್ಯ, ಕಿವಿ ಕತ್ತರಿಸುವ ಹಾರ್ನ್ ತಾಳಿಕೊಳ್ಳುವುದು ಕಷ್ಟವಿತ್ತು. ನಾನು ತಪ್ಪಿ ಅವರಿಗೆ ತುಸು ಮೂತಿ ಮುಂಚಾಚಲು ಅವಕಾಶ ಕೊಟ್ಟರಂತೂ ಮುಗಿದೇ ಹೋಯ್ತು. ಕೂಡಲೇ ಎಡಕ್ಕೊತ್ತರಿಸಿ, ನನಗೆ `ಆತ್ಮಹತ್ಯೆ’ಯ ಅವಕಾಶ ನಿಶ್ಚಿತವಿರುತ್ತಿತ್ತು! ನಾನು ಹಾಗೂ ಹೀಗೂ ಮಂಜೇಶ್ವರದವರೆಗೆ ಸುಧಾರಿಸಿದೆ. ಮತ್ತೆ ಮುಂದುವರಿಯುವ, ಅದಕ್ಕೂ ಹೆಚ್ಚಾಗಿ ಕತ್ತಲು ಸಮೀಪಿಸುತ್ತಿದ್ದಂತೆ ಅದೇ ದಾರಿಯಲ್ಲಿ ಮರಳುವ ಅಪಾಯವನ್ನು ನೆನೆದು ದಾರಿ ಬದಲಿಸಿದೆ.

ಮಂಜೇಶ್ವರ ದಾರಿಯ ಅರ್ಧದಲ್ಲಿನ ಎಡಗವಲು, ಅರ್ಥಾತ್ ಗೋವಿಂದ ಪೈ ಕಾಲೇಜಿನ ದಾರಿ ಮಂಜನಾಡಿಗೆ ಹೋಗುವುದು ನನಗೆ ತಿಳಿದಿತ್ತು. ಅದು ಸಪುರ ದಾರಿಯಾದರೂ ವಾಹನ ಸಂಚಾರ ತೀರಾ ವಿರಳ. ಮೊದಲಲ್ಲೇ ಅಲ್ಲಿ ಯಾವುದೋ ಒಂದು ಶಿವದೇವಳದ ಕಾಣಿಕೆ ಡಬ್ಬಿ ನನ್ನನ್ನು ಆಕರ್ಷಿಸಿತು. ಚಿನ್ನಬಣ್ಣದ ಲೇಪ, ಕ್ಯಾಲೆಂಡರಿನ ಶಿವಪಾರ್ವತಿಯರ ವರ್ಣಚಿತ್ರ, ಬೆಂಗಡೆಗೆ ಕಾವಲಿಗೆ ಕುಳಿತವರೋ ಎಂಬಂತೆ ಭಾಸವಾಗುತ್ತಿದ್ದ ಸೋಮಾರಿಕಟ್ಟೆ ಸದಸ್ಯರನ್ನು ನನ್ನ ಚಿತ್ರ ದಾಖಲೆಗೆ ಸೇರಿಸಿಕೊಂಡು ಮುಂದುವರಿದೆ. ಈ ದಾರಿಯ ಮತ್ತೊಂದು ವಿಶೇಷ – ಇಂಗ್ಲಿಷಿನಲ್ಲಷ್ಟೇ ಹೆಸರು, ಅಂತರ ಕಾಣಿಸುತ್ತಿದ್ದ ಕಿಲೋ ಕಲ್ಲು – ಕೇಡಂ ಬಡಿಯುವ ಕಲ್ಲು. ಈ ಕೇಡು ಬಡಿಯುವ ಕಲ್ಲು ಸುಮಾರು ಐದು ಕಿಮೀ ಉದ್ದಕ್ಕೂ (ಸುಮಾರು ಒಂದು ಕಿಮೀ ಅನ್ನಿ) ನಿಯತಾಂತರದಲ್ಲಿ ತಾನು ಸೂಚಿಸುವ ಅಂಕಿಯ ನಿಖರತೆಗೆ ಕೊಟ್ಟ ಗಮನವನ್ನು (ಮೂರು ಕಿಮೀ ಆರ್ನೂರಾ ಎಂಬತ್ತೆರಡು ಮೀಟರ್) ಸ್ಥಳನಾಮಕ್ಕೂ ತುಸು ಹರಿಸಬಹುದಿತ್ತಲ್ಲವೇ?

ಕೆದಂಬಾಡಿಯಲ್ಲಿ ಬಲಕ್ಕೆ ಹೋದರೆ ಮಂಜನಾಡಿ. ಅಂದರೆ ಏರಿಳಿತಗಳ ಸರಣಿ, ಮಂಗಳೂರಿನ ಅಂತರ ಹೆಚ್ಚು. ಆದರೆ ಮೋಡಗಳನ್ನು ಮರೆಯಿಟ್ಟು, ಜಾಗ ಖಾಲಿ ಮಾಡಲಿದ್ದ ಆದಿತ್ಯನನ್ನು ನಾನು ತಪ್ಪಿಸಿಕೊಳ್ಳುವಂತಿಲ್ಲವಲ್ಲ. ಎಡದ ದಾರಿ – ನೆತ್ತಿಲಪದವು, ನನಗೆ ಹೊಸದು. ಆದರೆ ಸುಲಭ ಮತ್ತು ಹತ್ತಿರ ಎಂದು ವಿಚಾರಿಸಿ ತಿಳಿದೇ ಮುಂದುವರಿದೆ. ಮೋಡದ ತೆರೆ ಅಲ್ಲಲ್ಲಿ ಜಾಳುಬಿದ್ದಿತ್ತು. ಅಡ್ಕ ಪಳ್ಳದಲ್ಲಿ ಭಾರೀ ಮರದ ಕಾರ್ಖಾನೆಯೊಂದು ದಟ್ಟ ಕಪ್ಪು ಹೊಗೆ ಕಾರಿ ಆಗಸದ ಹರಕುಗಳಿಗೆಲ್ಲ ತೇಪೆ ಹಾಕುತ್ತಿತ್ತು. ಯಜ್ಞ ಯಾಗಾದಿಗಳ ದೂಮ ಮಳೆ ತರಿಸುತ್ತದಾದರೆ, ಬಂಡಿಪುರದಂಥ ವನಧಾಮದಲ್ಲೆದ್ದ ಕಿಚ್ಚು (ಸಹಜ ಕಾಳ್ಗಿಚ್ಚು ಎಂಬುದು ಸುಳ್ಳು, ವನಧಾಮದ ಬೆಂಕಿಗಳೆಲ್ಲ ಮಾನವಕೃತ ವಂಚನೆಗಳೇ) ಭವಿಷ್ಯತ್ತಿನ ವನ್ಯ ಫಲವಂತಿಕೆಗೆ ಸಹಕಾರಿಯಾಗುವುದಿದ್ದರೆ (ಅದಕ್ಷತೆಯನ್ನು ಮುಚಿಕೊಳ್ಳಲು ಸಾಕ್ಷಾತ್ ಅರಣ್ಯ ಇಲಾಖೆಯೇ ಕೆಲವೊಮ್ಮೆ ಹೀಗೆ ಹೇಳುವುದಿದೆ!) ಕಾರ್ಖಾನೆಯ ಹೊಗೆ ಯಾಕಾಗದು?

ತೂಮಿನಾಡಿನಲ್ಲಿ ಮತ್ತೆ ಹೆದ್ದಾರಿ. ಆಗಲೇ ನಸುಗತ್ತಲೆ ಮುಸುಕಿತ್ತು. ಆದರೆ ಕಿರಿದಂತರದಲ್ಲೇ ತಲಪಾಡಿ ಸಿಕ್ಕಿದ್ದರಿಂದ “ಸೈಕಲ್ಲೇರಿ ದೊರೆ, ಇತ್ತ ಲಾರಿ, ಅತ್ತ ನಕ್ರಿ…” ಎಂದು ಹಾಡಿಕೆಗೆ ಸಿಗದೇ ಬಚಾವಾದೆ! ಸಂಕೊಳಿಗೆ ಬಳಿ ಕಲಾಗಂಗೋತ್ರಿಯ ಗೆಳೆಯ ಸದಾಶಿವ ಮಾಸ್ಟ್ರು ಸಿಕ್ಕಾಗ ನಮ್ಮೊಳಗೆ ಪಟ್ಟಾಂಗಕ್ಕೆ ವಿಷಯ ಇತ್ತು, ನನ್ನಲ್ಲಿ ಸಮಯ ಇರಲಿಲ್ಲ. ಐದೇ ಮಿನಿಟಿನಲ್ಲಿ ಅವರಿಂದ ಕಳಚಿಕೊಂಡು ದಸ್ ಪುಸ್ ಮಾಡುತ್ತಾ ತೊಕ್ಕೋಟಿನ ವಿಸ್ತರಣಾ ಗೊಂದಲ, ನೇತ್ರಾವತಿ ಹಳೆ ಸಂಕದ ಜೀರ್ಣೋದ್ಧಾರದ ಸಂಕಟ, ಯೆಕ್ಕೂರಿನ ರೈಲ್ವೇ ಮೇಲ್ಸೇತಿನ ವಿಳಂಬಗಳನ್ನೆಲ್ಲ ಕಳೆದು ಪಂಪ್ವೆಲ್ಲಿನ ಸಂಚಾರಗೊಜ್ಜಿಗಿಳಿದಾಗ ಮುಸುಕಿದ್ದು ಹೊಗೆಯೋ ಕತ್ತಲೋ – ಯಾರನ್ನೂ ಕಾಡುವ ದ್ವಂದ್ವ. ಅದನ್ನು ನಿಮಗೆ ಬಿಟ್ಟು, ನಾನು ಮನೆಸೇರಿಕೊಂಡೆ.

ಸರ್ಕೀಟ್ ೨೧೪ (೯-೩-೨೦೧೬) ಇಂದಿನ ಒಗ್ಗರಣೆ: ೧. ಕಾಸರಗೋಡಿನತ್ತ ಹೆದ್ದಾರಿ ಇನ್ನೂ ಸಂಕುಚಿತ ದ್ವಿಪಥಸ್ಥಿತಿಯಲ್ಲೇ ಇದೆ. ೨. ಶೀರ್ಷಿಕೆಗೆ ಪ್ರೇರಣೆ – ಯಜ್ಞ ಮಾಡಿ (ಹೊಗೆಹಾಕಿ) ಮಳೆ ತರಿಸುವವರು.

(ಅನಿಯತವಾಗಿ ಮುಂದುವರಿಯಲಿದೆ)