ಲೇಖನ ಮತ್ತು ಚಿತ್ರ: ಗಿರೀಶ ಪಾಲಡ್ಕ
[ಎರಡು ವಾರಗಳ ಹಿಂದೆ ಗೆಳೆಯ ಗಿರೀಶ್ ಫೇಸ್ ಬುಕ್ಕಿನಲ್ಲಿ ನಾಲ್ಕು ಚಿತ್ರ ಹಾಕಿ, ಕೇಳಿದವರಿಗೆ “ನಿರ್ಜನ ದ್ವೀಪ – ಪೆರುಮಾಳ ಪಾರ” ಎಂದು ಸುಧಾರಿಸಿ ಮುಗಿಸುವುದರಲ್ಲಿದ್ದರು. ಆದರೆ ಈಗ ನನ್ನ ಒತ್ತಾಯಕ್ಕೆ, ಪುಟ್ಟ ಲೇಖನ ಮತ್ತು ಹೆಚ್ಚಿನ ಪಟಗಳನ್ನೂ ಪೂರೈಸಿದ್ದಾರೆ. ಗಿರೀಶ್ ಮಂಗಳೂರು ವಿಮಾನ ನಿಲ್ದಾಣದಲ್ಲಿದ್ದಾಗಲೇ ಅಂದರೆ, ಸುಮಾರು ಐದು ವರ್ಷಗಳ ಹಿಂದೆಯೇ ತಮ್ಮ ಡಾರ್ಜಿಲಿಂಗ್ ಚಾರಣಾನುಭವವನ್ನು ಇಲ್ಲಿ ಮೂರು ಕಂತುಗಳಲ್ಲಿ ಹಂಚಿಕೊಂಡದ್ದು ನೀವೆಲ್ಲ ಓದಿಯೇ ಇರುತ್ತೀರಿ. ಕಳೆದ ವರ್ಷ ಅವರು ವೃತ್ತಿ ಸಹಜವಾದ ವರ್ಗಾವಣೆಯಲ್ಲಿ ಲಕ್ಷದ್ವೀಪಕ್ಕೆ ಹೊರಟಾಗ ನಾನು ಎಚ್ಚರಿಸಿದ್ದಿತ್ತು “ಬರವಣಿಗೆಗೆ ವಿರಾಮ ಕೊಡಬೇಡಿ.” ಅದನ್ನು ನೆನಪಿನಲ್ಲಿಟ್ಟು ಅವರು ಕಳೆದ ವರ್ಷ ‘ಲಕ್ಷದ್ವೀಪದತ್ತ ಒಂದು ಲಕ್ಷ್ಯ’ ಹರಿಸಿದ್ದೂ ನಿಮ್ಮ ಗಮನಕ್ಕೂ ಬಂದೇ ಇದೆ. ಈಗ ಕುಸುರಿ ಕೆಲಸದಲ್ಲಿ ಪೆರುಮಾಳ್ ಪಾರ. ಮೂಲತಃ ಎರಡೂವರೆ ಎಕ್ರೆ ವಿಸ್ತೀರ್ಣದ ನಿರ್ಜನ ದ್ವೀಪ, ಕಡಲು ಹೆಚ್ಚುತ್ತಿರುವ ಭೌಗೋಳಿಕ ವಿದ್ಯಮಾನದ ಅಂಗವೋ ಎನ್ನುವಂತೆ ಒಂದೂವರೆ ಎಕ್ರೆಗೆ ಇಳಿದಿದೆ. ಆ ಪುಟ್ಟ ನೆಲವೂ ನಡು ರಾತ್ರಿಯಲ್ಲಿ, ಕಡಲಿನ ಭರತದ ವೇಳೆ, ಮುಳುಮುಳುಗುತ್ತ ಕೇವಲ ಹದಿನಾಲ್ಕು ಚದರ ಮೀಟರ್ ಮುಟ್ಟುವುದನ್ನು ನಿಶ್ಚಿಂತೆಯಿಂದ ನೋಡಿ, ಆಡಿ, ಉಂಡು, ಮಲಗಿ ಬಂದ ಕಥನ ಈಗ ನಿಮಗಾಗಿ – ಅಶೋಕವರ್ಧನ]
ನಾನು ಮಂಗಳೂರಿನಿಂದ ಲಕ್ಷದ್ವೀಪ ಸಮೂಹದ ಅಗಾತ್ತಿ ದ್ವೀಪದ ವಿಮಾನ ನಿಲ್ದಾಣಕ್ಕೆ ವರ್ಗಾವಣೆಯಾಗಿ ಬಂದು ಒಂದು ವರ್ಷ ಕಳೆಯಿತು. ಇಲ್ಲಿನ ಎಲ್ಲಾ ದ್ವೀಪಗಳಿಗೆ ಒಮ್ಮೆಯಾದರೂ ಭೇಟಿ ನೀಡಬೇಕು ಎನ್ನುವುದು ನನ್ನ ಆಸೆ. ಆದರೆ ದುರದೃಷ್ಟಕ್ಕೆ ಈ ಕೊರೊನಾ ಬಾಧೆ ವಕ್ಕರಿಸಿ ಕೆಲವು ತಿಂಗಳಕಾಲ ಎಲ್ಲವೂ ಅಸ್ತವ್ಯಸ್ತವಾಯಿತು. ದ್ವೀಪಕಲ್ಪದ ಹೊರಗಿನವರು ಇತರ ಮುಖ್ಯ ದ್ವೀಪಗಳಿಗೆ ತೆರಳಲು ಅಧಿಕೃತ ಅನುಮತಿ ಪಡೆಯಬೇಕು. ಅದನ್ನು ಪಡೆದರೂ ಇಲ್ಲಿ ಸಮರ್ಪಕ ಸಂಚಾರ ವ್ಯವಸ್ಥೆ ಇಲ್ಲ. ಆದರೂ ಇಲ್ಲಿನ ನನ್ನ ಸೇವಾವಧಿ ಮುಗಿಯುವ ಮುನ್ನ ಕನಿಷ್ಠ ಎಲ್ಲ ಜನವಸತಿಯ ದ್ವೀಪಗಳನ್ನಾದರೂ ಕಾಣಬೇಕೆನ್ನುವ ಕನಸಿಗೆ ಕಾವು ಕೊಡುತ್ತಲೇ ಇದ್ದೇನೆ.
ಅಗಾತ್ತಿಯ ಸಮೀಪವಿರುವ ಕೆಲವು ದ್ವೀಪಗಳನ್ನು ನೋಡಲು ನನಗೆ ವಿಶೇಷ ಅನುಮತಿಯ ಅಗತ್ಯವಿಲ್ಲ. ಅವುಗಳಲ್ಲಿ ಕಲ್ಪಿಟ್ಟಿ, ಬಂಗಾರಂ, ತಿನ್ನಗರ ಹಾಗೂ ಪರಲಿ ದ್ವೀಪಗಳಿಗೆ ಇತರರೊಡನೆ ಹೋಗುವ ಅವಕಾಶ ಧಾರಾಳ ಸಿಗುತ್ತಿತ್ತು. ಅವುಗಳಲ್ಲಿ ವಿಶಿಷ್ಟ ಪ್ರಾಕೃತಿಕ ಸೌಂದರ್ಯದ ಹಾಗೂ ಪ್ರವಾಸೋದ್ಯಮಕ್ಕೆ ಹೆಸರಾಂತ ಬಂಗಾರಂ ದ್ವೀಪಕ್ಕೆ ಸಾಕಷ್ಟು ಬಾರಿ ಹೋಗಿ ಬಂದಿದ್ದೇನೆ. ಇನ್ನೆಲ್ಲಾದರೂ ಅವಕಾಶ ಸಿಗಬಹುದೇ ಎಂದು ಕಾಯುತ್ತಿದ್ದೆ. ಅಗಾತ್ತಿಯ ರಾಜೀವ ಗಾಂಧಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿನ ವೈದ್ಯರ ಬಳಗದಲ್ಲಿ ನನಗೆ ಕೆಲವು ಸಮಾನಾಸಕ್ತ ಗೆಳೆಯರಿದ್ದಾರೆ. ಅದೊಂದು ಬೆಳಗ್ಗೆ ನಾನು ನಿತ್ಯದಂತೆ ಕರ್ತವ್ಯನಿರತನಾಗಿದ್ದಾಗ ವೈದ್ಯ ಪ್ರಶಾಂತ್ ನಾಯಕರ ಕರೆ ಬಂತು. “ಪಿರುಮಾಳ ದ್ವೀಪಕ್ಕೆ ಇವತ್ತು ಮಧ್ಯಾಹ್ನ ದೋಣಿಯಲ್ಲಿ ಹೊರಡ್ತಾ ಇದ್ದೇವೆ. ರಾತ್ರಿ ಅಲ್ಲೇ ಉಳಿದು, ನಾಳೆ ಮಧ್ಯಾಹ್ನ ವಾಪಾಸು. ನೀವು ಬರುತ್ತೀರಾ?” ಪ್ರವಾಸ ಅನಿರೀಕ್ಷಿತವಾದರೂ ಸಿಕ್ಕಿದ ಅವಕಾಶ ಬಿಟ್ಟು ಕೊಟ್ಟೇನೇ. ಅವರ ತಂಡದಲ್ಲಿ ಒಂದಾದೆ.
ಪೆರುಮಾಳ ಪಾರ ದ್ವೀಪ ಅಗಾತ್ತಿಯ ವಾಯುವ್ಯಕ್ಕೆ ಸುಮಾರು ಮೂವತ್ತೈದು ಕಿ. ಮೀ. ದೂರದಲ್ಲಿದೆ. ಕೇರಳದ ಕಣ್ಣೂರು ಭಾಗದ ರಾಜ ಚೇರಮಾನ್ ಪೆರುಮಾಳ್ ಲಕ್ಷದ್ವೀಪದಲ್ಲಿನ ಬದಲಾವಣೆಗಳಿಗೆ ಕಾರಣಕರ್ತನಂತೆ. ಈ ಅನಾಮಧೇಯ ದ್ವೀಪಕ್ಕೆ ಆತನ ನೆನಪಿಗಾಗಿ ಇಟ್ಟ ಹೆಸರು – ಪೆರುಮಾಳ ಪಾರ. ಇದು ಜನ, ಹಸಿರು ಏನೂ ಇಲ್ಲದ ಅತೀ ಚಿಕ್ಕ ದ್ವೀಪ. ಮೀನುಗಾರರ ಹೊರತು ಇತರರಿಗೆ ಇದು ಒಂದರ್ಥದ ಸಾಹಸಯಾನಕ್ಕಷ್ಟೇ ಸೀಮಿತ. ಹಿಂದೆ ಪ್ರವಾಸಿಗರಿಗೆ ವಿಶೇಷಯಾನವೆಂದು ಹೆಚ್ಚುವರಿ ಶುಲ್ಕದೊಂದಿಗೆ ಅಲ್ಲಿಗೆ ಕರೆದೊಯ್ಯುತ್ತಿದ್ದರಂತೆ. ರಾತ್ರಿ ತಂಗುವುದು ಕಷ್ಟವಾದ ಕಾರಣ ದಿನದ ವೇಳೆಯಲ್ಲಿ ಮಾತ್ರ ವಿಹಾರ ಏರ್ಪಡಿಸುತ್ತಿದ್ದರು. ಈಚಿನ ದಿನಗಳಲ್ಲಿ ಪ್ರವಾಸಿಗರೇ ವಿರಳವಾಗಿರುವುದರಿಂದ ಎಲ್ಲ ನಿಂತೇ ಹೋಗಿತ್ತು.
ಒಟ್ಟು ಹತ್ತು ಮಂದಿ ಹೋಗುವುದೆಂದು ತೀರ್ಮಾನವಾಗಿತ್ತು. ಇದರಲ್ಲಿ ಜಾಸ್ತಿ ಇದ್ದಿದ್ದು ವೈದ್ಯರುಗಳೇ. ಅವರ ಕೆಲಸದ ಒತ್ತಡ ಎಲ್ಲರಿಗೂ ತಿಳಿದಿರುವಂತಾದ್ದೆ. ಕೊನೆ ಕ್ಷಣದಲ್ಲಿ ತುರ್ತು ಕರ್ತವ್ಯದ ಕರೆಯಿಂದಾಗಿ ಇಬ್ಬರು ವೈದ್ಯರಿಗೆ ಬರಲಾಗಲಿಲ್ಲ. ದ್ವೀಪದಲ್ಲಿನ ರಾತ್ರಿ ವಾಸ, ಶೌಚ ಇತ್ಯಾದಿ ಸಮಸ್ಯೆಗಳ ಆತಂಕದಲ್ಲಿ ಮಹಿಳೆಯರು ಬರಲೊಪ್ಪಲಿಲ್ಲ. ಹಾಗಾಗಿ ಕೊನೆಗೆ ಹೊರಟವರು ನಾವು ಏಳು ಮಂದಿ ಮತ್ತು ದೋಣಿಯ ಮೂವರು ಸಿಬ್ಬಂದಿಗಳು. ಈ ಏಳರಲ್ಲೂ ನನ್ನನ್ನೂ ಸೇರಿಸಿ ನಾಲ್ಕು ಜನರಷ್ಟೇ ವಿಶೇಷ ಆಸಕ್ತರು. ಕಿವಿ, ಮೂಗು ಹಾಗೂ ಗಂಟಲಿನ ತಜ್ಞ ಡಾ| ಪ್ರಶಾಂತ ನಾಯಕ್ ಮೂಲತಃ ಹೊನ್ನಾವರದವರು. ಬೆಂಗಳೂರು ನಿವಾಸಿ. ಎರಡನೆಯವರು ಡಾ| ನಿತಿನ್. ಮಾನಸಿಕ ರೋಗ ತಜ್ಞ. ಊರು ಹೈದರಾಬಾದ್. ತಾಯಿ ಮನೆ ತಿಪಟೂರು. ವೈದ್ಯಕೀಯ ಓದಿದ್ದು ಬೆಂಗಳೂರಿನಲ್ಲಿ. ಚೆನ್ನಾಗಿ ಕನ್ನಡ ಮಾತನಾಡುತ್ತಾರೆ. ಹಾಗಾಗಿ ಅಪ್ಪಟ ಕನ್ನಡಿಗರೆನ್ನೆಬಹುದು. ಮತ್ತೋರ್ವರು ಜಯದೇವ್. ವೃತ್ತಿಯಲ್ಲಿ ಆರ್ಕಿಟೆಕ್ಟ್. ಪ್ರವೃತ್ತಿಯಲ್ಲಿ ಗಿಟಾರ್ ವಾದಕ. ಊರು ಕೊಚ್ಚಿನ್. ಇವರ ಪತ್ನಿ ಅಗಾತ್ತಿಯ ಆಸ್ಪತ್ರೆಯಲ್ಲಿ ಅಲ್ಪಾವಧಿ ಸೇವೆಗೆಂದು ಬಂದ ರೇಡಿಯಾಲಾಜಿಸ್ಟ್. ನಮ್ಮ ಈ ಯಾನದ ಅವಶ್ಯಕತೆಗಳ ಉಸ್ತುವಾರಿ ವಹಿಸಿಕೊಂಡಾತ ಆಸ್ಪತ್ರೆಯ ಸಹಾಯಕ ಸಿಬ್ಬಂದಿ ಸದ್ದಾಂ. ಆತ ಅವನ್ನೆಲ್ಲ, ಅಂದರೆ ಗ್ಯಾಸ್, ಸ್ಟವ್, ಪಾತ್ರೆ, ಸ್ವಲ್ಪ ಅಡುಗೆ ಸಾಮಾನುಗಳನ್ನೆಲ್ಲ ಅದಾಗಲೇ ತಂದಿರಿಸಿದ್ದ. ಅಪರಾಹ್ನ ಒಂದು ಗಂಟೆಯ ಸುಮಾರಿಗೆ ಅಗಾತ್ತಿ ದಕ್ಕೆ ಬಿಟ್ಟೆವು.
ಒಟ್ಟಾರೆ ಲಕ್ಷದ್ವೀಪದ ನೆಲ ಮಣ್ಣಲ್ಲ – ಸಾವಿರಾರು ವರ್ಷಗಳಲ್ಲಿ ಪೇರಿಕೊಂಡ, ಬಹುತೇಕ ಜನ ಸಂಪರ್ಕವಿಲ್ಲದ (ಹಾಗಾಗಿ ಬಿಳಿಚಿಕೊಂಡ) ಹವಳದ ದಿಬ್ಬಗಳು (Atol). ಅಲ್ಲಿನ ದಂಡೆಯ ಮರಳು, ಕಲ್ಲು ಚೂರುಗಳೆಲ್ಲ ಹವಳವೇ. ಹವಳ ದಿಬ್ಬಗಳು ಹೆಚ್ಚಾಗಿ ಆಳ ಸಮುದ್ರಕ್ಕೆ ವಿಮುಖವಾಗಿ ವಿಸ್ತರಿಸುತ್ತವೆ. ವಿಸ್ತರಣೆಯ ತಗ್ಗು ಪ್ರದೇಶಗಳಿಗೆ ಕಡಲು ವ್ಯಾಪಿಸಿದರೆ ಅದೇ ಲಗೂನ್ (Lagoon – ಇಟಾಲಿಯನ್ ಮೂಲ). ಇವುಗಳ ಅಂಚಿನಲ್ಲಷ್ಟೇ ಹಾರುದೆರೆಗಳೇಳುತ್ತವೆ. ಲಗೂನಿನ ಒಳಗೆ ಅಲೆಗಳು ಸಣ್ಣ ಕುಲುಕಾಟವನ್ನಷ್ಟೇ ಮಾಡುತ್ತವೆ. ಅಪಾಯಕಾರಿ ಸೆಳೆತಗಳು ಕಡಿಮೆ. ಉಬ್ಬರದ ಸಮಯದಲ್ಲಿ ಬಳುಕಾಟ ಸ್ವಲ್ಪ ಹೆಚ್ಚು. ಬಂಗಾರಂನ ಲಗೂನ್ ಅದ್ಭುತವಾಗಿದೆ. ಆಂದ್ರೋತ್ ಎನ್ನುವ ದ್ವೀಪದಲ್ಲಿ ಲಗೂನ್ ಇಲ್ಲವೆನ್ನುವಷ್ಟು ಕಿರಿದು ಎನ್ನುತ್ತಾರೆ.
ಪೆರುಮಾಳ್ ಪಾರ ಅಗಾತ್ತಿಯ ವಾಯುವ್ಯ (ಉತ್ತರ-ಪಶ್ಚಿಮ) ದಿಕ್ಕಿನಲ್ಲಿದೆ. ಆ ದಿಕ್ಕಿನಲ್ಲಿ ನಮ್ಮ ಲಗೂನ್ ಹೆಚ್ಚು ಕಡಿಮೆ ೩ – ೪ ಕಿ. ಮೀ ಉದ್ದಕ್ಕಿದೆ. ಇದು ದೋಣಿ, ಚಿಕ್ಕ ಮಂಜಿಗಳಿಗೇ ಸೀಮಿತ, ಹಡಗುಗಳಿಗಲ್ಲ. ಸಾಲದ್ದಕ್ಕೆ ನಾವು ಹೊರಟಾಗ ಕಡಲು ಇಳಿತದಲ್ಲಿತ್ತು. ತೆಳು ನೀರಿನಲ್ಲಿ ಅಸಮ ಹವಳದ ದಿಬ್ಬಗಳು ದೋಣಿಯ ತಳಕ್ಕೆ ಆಘಾತವನ್ನು ಉಂಟು ಮಾಡುವ ಅಪಾಯವಿತ್ತು. ಹಾಗಾಗಿ ಸ್ವಲ್ಪ ಉತ್ತರಕ್ಕೆ ಸರಿದು, ಬಳಸು ಮಾರ್ಗವನ್ನೇ ಅನುಸರಿಸಿದೆವು. ಅಲ್ಲಿ ಲಗೂನ್ ಕಿರಿದಾಗಿದೆ. (ಪೂರ್ವದಲ್ಲಿ ಲಗೂನೇ ಇಲ್ಲ, ಸಮುದ್ರ ಮಾತ್ರ) ಸುಮಾರು ಮೂರು ಕಿ. ಮೀ. ಕಳೆದ ಮೇಲೆ ನಮ್ಮ ದೋಣಿ ಆಳ ಸಮುದ್ರ ಪ್ರವೇಶಿಸಿತು. ಇಲ್ಲಿ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸುವಂತೆ ಅಲೆಗಳ ಹೊಯ್ದಾಟ ಅಧಿಕವೇ ಇತ್ತು. ನಮ್ಮದು ವೇಗದ ನಾವೆಯೇನೂ ಅಲ್ಲ. ಸಾಮಾನ್ಯ ಇಂಜಿನ್ ಅಳವಡಿಸಿದ್ದರಿಂದ ಹೆಚ್ಚೆಂದರೆ ಗಂಟೆಗೆ ೧೦ -೧೫ ಕಿ. ಮೀ ದೂರವಷ್ಟೇ ಚಲಿಸಬಲ್ಲದು (ಇದರ ಮೂರು ಪಟ್ಟು ವೇಗ, ಅಂದರೆ ಗಂಟೆಗೆ ಸುಮಾರು ೩೦- ೩೫ ಕಿ.ಮೀ ಚಲಿಸಬಲ್ಲವೂ ಇವೆ). ಇಂಧನ ಬಳಕೆಯೂ ಅಧಿಕ. ನೆಲದ ಮೇಲಿನ ವಾಹನಯಾನಕ್ಕಿಂತ ಸಮುದ್ರ ದೋಣಿಯಾನಕ್ಕೆ ಸಾಮಾನ್ಯವಾಗಿ ೫ ರಿಂದ ೧೦ ಪಟ್ಟು ಹೆಚ್ಚು ಖರ್ಚು ಬೀಳುತ್ತದೆ.
ದೋಣಿ ಸುಮಾರು ಐದಾರು ಕಿ. ಮಿ. ಗಳಷ್ಟು ಚಲಿಸಿರಬಹುದು. ದೋಣಿಯ ಮುಂಭಾಗದಲ್ಲಿ ಕುಳಿತಿದ್ದ ನನಗೆ ಅಕಸ್ಮತ್ತಾಗಿ ನೀರಿನಲ್ಲೇನೋ ಮೀನುಗಳ ಗುಂಪೊಂದು ಚಲಿಸುತ್ತಿರುವಂತೆ ಭಾಸವಾಯಿತು. ಏನಪ್ಪಾ ಇದು ಎಂದು ಗಮನಿಸುತ್ತಾ ಇದ್ದಂತೆ ಐದಾರು ಮತ್ಸ್ಯಗಳ ಆ ಸಮೂಹ ಬಳುಕುತ್ತಾ ಬಂದು ನಮ್ಮ ದೋಣಿಯ ಪಕ್ಕದಲ್ಲೇ ಆಟವಾಡಲು ತೊಡಗಿತು. ಓಹ್…! ಡಾಲ್ಫಿನ್ಗಳು!! ಕಪ್ಪು ಮಿಶ್ರಿತ ಕಂದು ಬಣ್ಣದ, ಸುಮಾರು ಮೂರರಿಂದ ನಾಲ್ಕು ಅಡಿಗಳಷ್ಟು ಉದ್ದವಿರಬಹುದಾದ ಈ ಚುರುಕು ಮೀನುಗಳು ಅಲ್ಲೇ ಓಡಿಯಾಡಿ ಒಂದಷ್ಟು ನೆಗೆದಾಡಿದವು. ದೋಣಿಯ ಓಟಕ್ಕೆ ಸ್ಪರ್ಧೆ ನೀಡುವಂತೆ ಅಕ್ಕಪಕ್ಕ ದೋಣಿಗೆ ತಾಗಿಕೊಂಡಂತೆಯೇ ನೀರಿನಲ್ಲಿ ಜಿಗಿದಾಡಿದವು. ನಾನು ಸದ್ದಾಂ ಹಾಗೂ ಇತರರನ್ನು ಕೂಗಿ ಕರೆದೆ. ಎಲ್ಲರೂ ತಂತಮ್ಮ ಸೆಲ್ ಫೋನ್ ಕ್ಯಾಮರಾಗಳನ್ನು ಸಿದ್ಧ ಮಾಡಿ ಇನ್ನೆನು ಚಿತ್ರ / ವೀಡಿಯೋ ತೆಗೆಯ ಬೇಕೆನ್ನುವಷ್ಟರಲ್ಲಿ ಎಲ್ಲ ಡಾಲ್ಫಿನ್ಗಳೂ “ಹೋಗ್ರಿ, ನಿಮ್ಮ ಸಹವಾಸವೇ ಬೇಡ” ಎನ್ನುವಂತೆ ಎಲ್ಲೋ ಓಡಿ ಕಣ್ಮರೆಯಾದವು! ಇಲ್ಲಿನ ಸಮುದ್ರದಲ್ಲಿ ಡಾಲ್ಫಿನ್ಗಳು ಸುಮಾರು ಸಂಖ್ಯೆಯಲ್ಲಿ ಇವೆಯಾದರೂ ಅವು ನಮಗೆ ಕಾಣಸಿಗುವುದು ಅದೃಷ್ಟವನ್ನು ಅವಲಂಬಿಸಿದೆ. ನನಗೆ ಈ ಹಿಂದೆ ಕವರತ್ತಿಯಿಂದ ಅಗಾತ್ತಿಗೆ ನನ್ನ ಪತ್ನಿ ಮಕ್ಕಳೊಂದಿಗೆ ವೇಗದ ನಾವೆಯೊಂದರಲ್ಲಿ ಪ್ರಯಾಣಿಸುತ್ತಿದ್ದಾಗ ಸ್ವಲ್ಪ ದೊಡ್ಡ ಗಾತ್ರದ ಒಂಟಿ ಡಾಲ್ಫಿನ್ ಒಂದು ಕಾಣ ಸಿಕ್ಕಿತ್ತು. ಅದು ನಾವೆಗಿಂತ ತುಸು ದೂರದಲ್ಲಿ ನಾವೆಯೊಂದಿಗೆ ಸಮಾನಾಂತರವಾಗಿ ಬಂದು ಒಂದಷ್ಟು ಲಾಗ ಹೊಡೆದು ಮಿಂಚಿ ಮರೆಯಾಗಿತ್ತು. ಅಲ್ಲೂ ಚಿತ್ರ ತೆಗೆಯಲಾಗಲಿಲ್ಲ. ವೃತ್ತಿಪರ ಛಾಯಾಗ್ರಹಣ ಲಭ್ಯವಿದ್ದಲ್ಲಿ ಚಿತ್ರ ಅಥವಾ ವೀಡಿಯೋ ತೆಗೆಯಬಹುದಿತ್ತೇನೋ. ಅಗಾತ್ತಿಯ ಸಮುದ್ರ ದಂಡೆಗಳಲ್ಲಂತೂ ಡಾಲ್ಫಿನ್ಗಳು ಕಂಡು ಬರುವುದು ತೀರಾ ವಿರಳ.
ಆ ನಂತರ ಡಾಲ್ಫಿನ್ಗಳು ಕಾಣಸಿಗಲಿಲ್ಲ. ನಮ್ಮ ದೋಣಿ ಸುಮಾರು ಮೂವತ್ತು ಕಿ. ಮೀ ಗಳಷ್ಟು ಬಂದಿರಬಹುದೇನೋ. ಸಮುದ್ರವನ್ನು ಕಂಡಾಗ ಯಾವುದೋ ಮತ್ತೊಂದು ಲಗೂನಿಗೆ ಹತ್ತಿರವಾದಂತೆ ಅನ್ನಿಸುತ್ತಿತ್ತು. ಅಲ್ಲೆಲ್ಲೋ ಒಂದೆಡೆ ಹಲವಾರು ಪಕ್ಷಿಗಳು ಹಾರಾಡುತ್ತಾ ಮೀನು ಬೇಟೆಯಾಡುವುದು ಕಂಡು ಬಂತು. ಇದು ಆ ಭಾಗದಲ್ಲಿ ಮೀನುಗಳು ಹೆಚ್ಚಿರುವ ಸೂಚನೆ ಎಂದ ಸದ್ದಾಂ. ನೋಡುತ್ತಿದ್ದಂತೆಯೇ ನಮ್ಮೊಡನಿದ್ದ ದ್ವೀಪವಾಸಿಗಳು ತಮ್ಮ ಗಾಳಗಳನ್ನು ಜೋಡಿಸಿ ಮೀನು ಬೇಟೆ ಪ್ರಾರಂಭಿಸಿಯೇ ಬಿಟ್ಟರು! ಸುಲಭವಾಗಿಯೇ ಎನ್ನುವಂತೆ ಆರೇಳು ಮೀನುಗಳು ಗಾಳಕ್ಕೆ ಸಿಕ್ಕವು! ಸದ್ಯಕ್ಕೆಇಷ್ಟು ಮೀನು ಸಾಕೆಂದು ನಮ್ಮ ದೋಣಿ ಮುಂದುವರಿಯಿತು. ಸುಮಾರು ನಾಲ್ಕೈದು ಕಿ. ಮೀ. ಮುಂದುವರೆದಾಗ ಮತ್ತೊಂದು ಲಗೂನಿಗೆ ನಮ್ಮ ಪ್ರವೇಶವಾಗಿತ್ತು. ಅಲ್ಲೇ ದೂರದಲ್ಲಿ ಬೆಳ್ಳಗಿನ ಒಂದು ಪುಟ್ಟ ಗೆರೆಯಂತೆ ಕಂಡಿತು ಪೆರುಮಾಳ್ಪಾರ ದ್ವೀಪ!
ಲಕ್ಷದ್ವೀಪ ಸಮೂಹದ ಹೆಚ್ಚಿನ ದ್ವೀಪಗಳಂತೆ ಪೆರುಮಾಳ್ ಪಾರದ ಒಂದು ಭಾಗದಲ್ಲಿ ವಿಸ್ತಾರವಾದ ಲಗೂನ್ ಇದೆ. ದೋಣಿ ಚಾಲಕನು ದ್ವೀಪದ ಸಮೀಪಕ್ಕೆ ದೋಣಿಯನ್ನು ಕೊಂಡೊಯ್ದು ಒಂದೆಡೆ ಲಂಗರು ಹಾಕಿ ನಿಲ್ಲಿಸಿದ. ನೇರ ಒಣ ನೆಲಕ್ಕೇ ತಾಗುವಂತೆ ದೋಣಿಯನ್ನು ಚಲಾಯಿಸುವುದು ಹಾಗೂ ನಿಲ್ಲಿಸುವುದು ಸ್ವಲ್ಪ ಕಷ್ಟದ ಕಾರ್ಯ. ಮತ್ತೆ ಒಮ್ಮೆ ನಿಲ್ಲಿಸಿದಷ್ಟಕ್ಕೇ ಸುಮ್ಮನಿರುವಂತಿಲ್ಲ. ನೀರಿನ ಭರತ ಇಳಿತಗಳ ಕಡೆಗೂ ಗಮನ ನೀಡುತ್ತಿರಬೇಕು. ಇಲ್ಲವಾದರೆ ಭರತದ ಸಮಯದಲ್ಲಿ ನಿಂತ ದೋಣಿ ಇಳಿತದಲ್ಲಿ ಮರಳಬಂಧಿಯಾಗಬಹುದು. ಅದನ್ನು ಅಲ್ಲಿಂದ ಕದಲಿಸ ಬೇಕಾದರೆ ಮತ್ತೆ ಭರತ ಬರುವವರೆಗೆ ಕಾಯಬೇಕಾಗುತ್ತದೆ. ಹಾಗಾಗಿ ದೋಣಿ ಚಾಲಕರು ಈ ವಿಷಯದಲ್ಲಿ ಬಹಳ ಎಚ್ಚರಿಕೆ ವಹಿಸುತ್ತಾರೆ. ನಮ್ಮ ಬೆನ್ನ ಚೀಲಗಳನ್ನು ಹೊತ್ತುಕೊಂಡು ದೋಣಿಯಿಂದ ಮೊಣಕಾಲೆತ್ತರದ ನೀರಿಗಿಳಿದು ದ್ವೀಪದತ್ತ ನಡೆದೆವು.
ಪೆರುಮಾಳ್ ಪಾರ ದ್ವೀಪ ಒಂದು ಬೋಳು ನಡುಗುಡ್ಡೆ. ಇಲ್ಲಿ ಯಾವುದೇ ಗಿಡ ಮರಗಳಿಲ್ಲ, ಬರೇ ಬಿಳಿ ಮರಳು. ವಿಶಾಲ ನೀಲಿಮೆಯ ನಡುವೆ ಸೂಜಿ ಮೊನೆಯಲ್ಲಿಟ್ಟ ಚುಕ್ಕಿಯಂತೆ, ಸ್ವಲ್ಪವೇ ತಲೆ ಎತ್ತಿದ ಒಂದು ಪುಟ್ಟ ಭೂಭಾಗ. ಸ್ವಲ್ಪ ಹಿಂದಿನಗಳ ಕಡಲ ಗಾಳಿಯ ಪ್ರಭಾವದಲ್ಲಿ ಮೇಲ್ಮೈ ರಚನೆ ತುಸು ಬದಲುವುದು ಇರಬಹುದು. ಆದರೆ ಅಲ್ಲಿನ ಖಾಯಂ ಅತ್ಯುನ್ನತ ಸ್ಥಾನವನ್ನು ಗುರುತಿಸಿದಂತೆ ಯಾರೋ (ಸರಕಾರೀ ಇಲಾಖೆ?) ಬಲವಾದ ಮರದ ಕಂಬ – ಚಬುಕು ಅರ್ಥಾತ್ ಗಾಳಿಮರದ್ದು, ಊರಿದ್ದರು. ಸಾಮಾನ್ಯ ದಿನಗಳಲ್ಲಿ ಆ ಕಂಬದ ವರೆಗೆ ನೀರು ತಲುಪುವುದಿಲ್ಲವಂತೆ. ನಾವು ನೋಡಿದಂತೆಯೂ ಆ ರಾತ್ರಿಯ ಉಬ್ಬರದ ಅತ್ಯುನ್ನತಿಯಲ್ಲಿ, ಅಂದರೆ ರಾತ್ರಿ ಒಂದೂವರೆ ಗಂಟೆಗೆ, ನೀರು ಕಂಬದ ಬುಡದಿಂದ ಸುಮಾರು ಒಂದೂವರೆ ಮೀಟರ್ ದೂರದಲ್ಲೇ ಇತ್ತು.
ನಾವು ದ್ವೀಪ ತಲುಪುವ ಹೊತ್ತಿಗೆ ಸಮುದ್ರ ಇಳಿತದಲ್ಲಿತ್ತು. ಹಾಗಾಗಿ ಪೆರುಮಾಳ್ ಪಾರ ನಮ್ಮ ದೃಷ್ಟಿಗೆ ಹೆಚ್ಚು ಕಡಿಮೆ ಒಂದೂವರೆ ಎಕರೆಯಷ್ಟು ವಿಸ್ತಾರವಾಗಿ ಕಂಡಿತ್ತು. ವಾಸ್ತವದಲ್ಲಿ ಅದರ ವಿಸ್ತೀರ್ಣ ಸುಮಾರು ಎರಡೂವರೆ ಎಕರೆಯಂತೆ. ಇಂದು ಕಡಲು ಸ್ವಲ್ಪ ಭಾಗವನ್ನು ಕಬಳಿಸಿದೆ ಎನ್ನುತ್ತಾರೆ. ಹವಳದ್ವೀಪಗಳಲ್ಲಿ ಇಂತಹ ವಿದ್ಯಮಾನಗಳು ಹೊಸದೇನೂ ಅಲ್ಲ. ಹಾಗಾಗಿ ಇಲ್ಲೂ ಜನವಸತಿ ಇರುವ ದ್ವೀಪಗಳಲ್ಲಿ ಸರಕಾರ ಸಮುದ್ರ ಕೊರೆತ ತಡೆಯಲು “ಸೂಕ್ತ ಕ್ರಮ”ಗಳನ್ನು ಕೈಗೊಳ್ಳುತ್ತಲೇ ಇರುತ್ತದೆ. ಒಂದಷ್ಟು ಸ್ಯಾಂಡ್ ಪೈಪರ್ ಹಕ್ಕಿಗಳ ಹಿಂಡು ದ್ವೀಪದ ಒಂದು ಮೂಲೆಯಲ್ಲಿ ತಮ್ಮ ಚಟುವಟಿಕೆಯಲ್ಲಿ ವ್ಯಸ್ತವಾಗಿತ್ತು. ನಾವು ಚೀಲಗಳನ್ನು ಒಂದೆಡೆ ಇಳಿಸಿ ಸಮುದ್ರದತ್ತ ನಡೆದೆವು. ಪ್ರಶಾಂತ್ ಮತ್ತು ಜಯದೇವ್ ಈಜು ಕನ್ನಡಕ (Swimming goggle) ಜಾಲ ಪಾದಗಳು, (Fins), ಸ್ನಾರ್ಕೆಲ್ ಇತ್ಯಾದಿ ಪರಿಕರಗಳೊಂದಿಗೆ ಸಜ್ಜಿತರಾಗಿ ಬಂದಿದ್ದರು. ನನ್ನಲ್ಲಿ ಸಾಮಾನ್ಯ ಉಡುಪುಗಳು ಮತ್ತೊಂದು ಈಜು ಕನ್ನಡಕ ಬಿಟ್ಟರೆ ಬೇರೇನೂ ಇರಲಿಲ್ಲ. ನಿತಿನ್ಗೆ ಈಜು ಬರುತ್ತಿತ್ತು. ಆದರೂ “ಧೈರ್ಯ ಸಾಲಲ್ಲ” ಎನ್ನುತ್ತಿದ್ದರು. ನನಗೆ ಈಜು ಪರಿಕರಗಳನ್ನು ಹೊಂದಿಸಿಕೊಳ್ಳುವುದಕ್ಕೇನೂ ಸಮಸ್ಯೆಯಿರಲಿಲ್ಲ. ಆದರೆ ಹಿಂದಿನ ಕೆಲವು ಈಜಾಟ ಮುಳುಗಾಟಗಳಿಂದ ಹೆಚ್ಚೇ ಎನ್ನುವಷ್ಟು ಕಿವಿ ನೋವಿನ ತೊಂದರೆ ಅನುಭವಿಸಿದ ಕಾರಣಕ್ಕೆ ನಾನು ಜಲಕ್ರೀಡಾ ಚಟುವಟಿಕೆಗಳಿಂದ ಸ್ವಲ್ಪ ದೂರವೇ ಉಳಿದಿದ್ದೆ. ಜಯದೇವ್ ಇಂತಹ ವಿಷಯಗಳಲ್ಲಿ ಅಪಾರ ಅನುಭವಿ, ನುರಿತ ಈಜುಗಾರ. ಅವರ ಪ್ರಕಾರ ಲಗೂನ್ಗಳಲ್ಲಿ ಈಜು ಶೂಗಳಿಲ್ಲದೆ ನೀರಿಗೆ ಇಳಿಯಲೇ ಬಾರದು. ನಿಜ, ಮೇಲಿನಿಂದ ಅಷ್ಟಾಗಿ ಕಾಣಿಸದ ಹವಳದ ಹರಿತ, ಚೂಪು ನಮ್ಮ ಕಾಲಿಗೆ ತೀವ್ರ ಸ್ವರೂಪದ ಗಾಯಗಳನ್ನುಂಟು ಮಾಡಬಹುದು. ಹಾಗಾಗಿ ನಾವು ಕಡಿಮೆ ಆಳದ ನೀರಿನಲ್ಲೂ ಬಹಳ ಎಚ್ಚರಿಕೆಯಿಂದಲೇ ಈಜಾಟ ನಡೆಸಿದೆವು.
ಸೂರ್ಯಾಸ್ತದ ವೇಳೆ ಸಮೀಪಿಸುತ್ತಿದಂತೆಯೇ ನಾವೆಲ್ಲಾ ಸಮುದ್ರದಿಂದ ಮೇಲೆ ಬಂದೆವು. ಸದ್ದಾಂ ಮತ್ತವನ ಗೆಳೆಯರು ಗಾಳ ಬೀಸುವಲ್ಲಿ ತಲ್ಲೀನರಾಗಿದ್ದರು. ಅದಾಗಲೇ ಒಂದೆರಡು ದೊಡ್ದ ಮೀನುಗಳನ್ನು ಹಿಡಿದಾಗಿತ್ತು. ನೋಡೋಣವೆಂದು ನಾನೂ ಸ್ವಲ್ಪ ಹೊತ್ತು ಗಾಳ ಬೀಸಿದೆ. ಹೊಸ ಅನುಭವ ನನಗೆ. ಯಾಕೋ ಈ ಬೀಸುಗಾಳದಲ್ಲಿ ನನಗೆ ಒಂದೂ ಮೀನು ಸಿಗಲಿಲ್ಲ! ಅಲ್ಲೇ ಒಂದೆರಡು ಕಿ.ಮೀ. ದೂರದಲ್ಲಿ ಎಲ್ಲಿಯದೋ ಎರಡು ದೊಡ್ಡಗಾತ್ರದ ಮೀನುಗಾರಿಕಾ ದೋಣಿಗಳು ಕಾರ್ಯ ನಿರತವಾಗಿದ್ದವು. ಈ ದ್ವೀಪದ ಸುತ್ತಲಿನ ಪ್ರದೇಶ ಹೇರಳ ಮೀನುಗಳಿರುವ ಸಮುದ್ರಭಾಗ. ಹಾಗಾಗಿ ಲಕ್ಷದ್ವೀಪ ಸಮೂಹದ ಮೀನುಗಾರರಿಗೆಲ್ಲಾ ಇದು ಪರಿಚಿತ ಜಾಗ. ಮುಖ್ಯಭೂಮಿಯ ದೋಣಿಗಳೂ ಇಲ್ಲಿಗೆ ಮೀನುಗಾರಿಕೆಗೆ ಬರುವುದುಂಟಂತೆ.
ಪುಟ್ಟ ದ್ವೀಪದ ಆಚಿನ ಸೂರ್ಯಾಸ್ತದಲ್ಲಿ ಏನೋ ಹೊಸತನ, ಹೇಳಲಾಗದ ಸೌಂದರ್ಯ. ಸೂರ್ಯನ ಕಪ್ಪು ಚಾದರ ಪೂರ್ಣ ಬಿಡಿಸಿಕೊಳ್ಳುವ ಮುನ್ನ, ಪೂರ್ವ ದಿಗಂತದಲ್ಲಿ, ಹೊನ್ನ ಹರಿವಾಣದಲ್ಲಿಟ್ಟಂತೆ ಪೌರ್ಣಮಿಯ ಚಂದ್ರ ಮೇಲೆದ್ದು ಬಂದ! ಇಲ್ಲಿ ಯಾವ ಕಸರತ್ತು ಗದ್ದಲಗಳಿಲ್ಲದೆಯೂ (ಭಾರತ-ಪಾಕಿಸ್ತಾನಗಳ ನಡುವಣ ಗಡಿಠಾಣೆ ವಾಘಾದಂತಲ್ಲದೇ) ಏರ್ಪಡುವ ಪಾಳಿ ಬದಲಿನ ಚಂದ ವರ್ಣನಾತೀತ. ಹಗಲು ಕಳೆದು ರಾತ್ರಿ ಬಂದರೂ ದ್ವೀಪದಲ್ಲಿ ಪೂರ್ಣ ಕತ್ತಲಾಗಲೇ ಇಲ್ಲ! ಹಕ್ಕಿಗಳೆಲ್ಲಾ ದ್ವೀಪದ ಇನ್ನೊಂದು ಮೂಲೆಯಲ್ಲಿ ಕಿಲಿಗುಡುತ್ತಿದ್ದವು. ಆದರೆ ಅವುಗಳ ಸಂಖ್ಯೆ ಮಾತ್ರ ಹಠಾತ್ತಾಗಿ ಏರಿದಂತೆ ಕಂಡಿತು. ಬಹುಶಃ ದೂರ ಹಾರಾಟಕ್ಕೆ ಹೋದ ಸಮೂಹ ಮರಳಿರಬೇಕು.
ಚಂದ್ರೋದಯವಾದಂತೆ ಡಾ| ನಿತಿನ್ ಘೋಷಿಸಿದರು “ಭರತ ಪ್ರಾರಂಭವಾಗಿ ಒಂದು ಗಂಟೆಯಾಯಿತು. ಪೂರ್ಣ ಭರತವಾಗುವ ಹೊತ್ತಿಗೆ ನೀರು ಇನ್ನೂ ಒಂದೂ ಕಾಲು ಮೀಟರ್ ಮೇಲೇರಲಿದೆ. ಮಧ್ಯರಾತ್ರಿ ಒಂದೂವರೆ ಗಂಟೆಗೆ ಪೂರ್ಣ ಭರತ. ಮುಕ್ಕಾಲು ಮೀಟರ್ ಎತ್ತರಕ್ಕಷ್ಟೇ ನೆಲ ಉಳಿಸಿ, ದ್ವೀಪವೆಲ್ಲಾ ಮುಳುಗಲಿದೆ”. ಇದೇನೂ ತ್ರಿಕಾಲ ಜ್ಞಾನದ ಭವಿಷ್ಯವಾಣಿಯಲ್ಲ! ನಿತಿನ್ ಸ್ಮಾರ್ಟ್ ಫೋನಿನಲ್ಲಿದ್ದ ಆಪ್ ಒಂದರ ಮಹಾತ್ಮ್ಯೆ. ಅದು ಸ್ವಲ್ಪವೂ ನೆಟ್ವರ್ಕ್ ಲಭ್ಯವಿಲ್ಲದ ದೂರದ ತಾಣವಾಗಿಯೂ ಮಾಹಿತಿ ಅತ್ಯಂತ ನಿಖರವಾಗಿತ್ತು. ಹಿಂದೆ ಜನ ಈ ಉಬ್ಬರ ಇಳಿತಗಳನ್ನೆಲ್ಲಾ ಹೇಗೆ ಲೆಕ್ಕಾಚಾರ ಹಾಕುತ್ತಿದ್ದರೋ ನನಗೆ ಗೊತ್ತಿಲ್ಲ. ಆಪ್ ತಂತ್ರಜ್ಞಾನಕ್ಕಂತೂ ಶಾಭಾಸ್ ಎನ್ನಲೇ ಬೇಕು! ಹೊತ್ತು ಸಾಗುತ್ತಿದ್ದಂತೆಯೇ ಕಡಲು ಮೇಲೇರಲಾರಂಭಿಸಿತ್ತು.
ಪೂರ್ವ ಯೋಜನೆಯಂತೆ ನಾವು ‘ಶಿಬಿರಾಗ್ನಿ’ಗೆ ಸಿದ್ಧತೆ ನಡೆಸಿದೆವು. ದ್ವೀಪದಲ್ಲಿ ಹಾಗೇ ತೇಲಿ ಬಂದ ಕಸ ಸ್ವಲ್ಪ ಎರಚಾಡಿಕೊಂಡಿತ್ತು. ಅವುಗಳಲ್ಲಿ ಬಹುಭಾಗ ಪ್ಲಾಸ್ಟಿಕ್ಕೇ. ಅವನ್ನು ನಾವು ನಾಗರಿಕತೆಗೆ ವಾಪಾಸು ಮುಟ್ಟಿಸಲು ಸಂಗ್ರಹಿಸಿಕೊಂಡೆವು. ಸುಡಲು ಯೋಗ್ಯವಾದ ಒಂದಷ್ಟು ಕಟ್ಟಿಗೆ ತುಂಡುಗಳಿಗೆ ದೋಣಿಯಲ್ಲಿ ತಂದಿದ್ದ ತೆಂಗಿನ ಸಿಪ್ಪೆ, ಕರಟ, ಮರದ ತುಂಡುಗಳನ್ನೆಲ್ಲ ಸೇರಿಸಿ ಸಣ್ಣ ಗುಡ್ಡೆಹಾಕಿದೆವು. ಅತೀವೇಗದ ಗಾಳಿಗೆ ಬೆಂಕಿ ಹೊತ್ತಿಸುವುದೇ ಒಂದು ಸವಾಲಾಗಿತ್ತು. ಅದು ಹೊತ್ತಿದ ಮೇಲೆ, ದೋಣಿ ಹುಡುಗರು ಅದುವರೆಗೆ ಹಿಡಿದ ಕೆಲ ಮೀನುಗಳನ್ನು ಸುಡಲು ತೊಡಗಿದರು. ಆ ಮೃದು ಮೀನುಗಳು, ಮಸಾಲೆ ಹಾಕಿ, ಪಲ್ಯ ಮಾಡಿ ತಿನ್ನುವಷ್ಟೇನೂ ರುಚಿಕರವಲ್ಲವಂತೆ. ಒಲೆದಾಡುವ ಒಲೆಯಲ್ಲೂ ಮೀನುಗಳನ್ನು ಸಾವಕಾಶವಾಗಿ ಸುಟ್ಟರು! ಅದಕ್ಕೆ ‘ಓಪನ್ ತಂದೂರಿ’ ಎನ್ನುವ ಅನ್ವರ್ಥನಾಮ ಬೇರೆ! ಕೆಂಡದಲ್ಲಿ ಸುಟ್ಟ ಗೆಣಸಿನಂತೇ ಇವು ಬಿಸಿಯಾಗಿಯೂ ರುಚಿಯಾಗಿಯೂ ಇದ್ದವು. ನಮ್ಮ ವೃತ್ತಿ, ಪ್ರವೃತ್ತಿಗಳ ಕುಶಲ ಸಂಭಾಷಣೆಯಲ್ಲಿ ಹೊತ್ತು ಸಾಗಿದ್ದೇ ತಿಳಿಯಲಿಲ್ಲ. ಮುಖ್ಯಭೂಮಿಯಲ್ಲಿ ನಮಗೆ ರೂಢಿಸಿದ ಅಲೆಯಾಟದ ವಿಶೇಷ ಸದ್ದು, ನಲಿವುಗಳನ್ನು ತೋರದೇ ಕಡಲು ಮೇಲೇರುತ್ತಲೇ ಇತ್ತು. ನೆಲದ ಸತ್ಯ ಅರಿವಾಗುತ್ತಿದ್ದಂತೆ, ನಮ್ಮ ಬೆನ್ನಚೀಲಗಳನ್ನು ಉತ್ತಮ ತಾಣಗಳಿಗೆ ಸ್ಥಳಾಂತರಿಸಿದೆವು. ಬಾನಿನಲ್ಲಿ ಚಂದಿರ ಸವಾರಿ ಮೇಲೇರಿದಷ್ಟು ಅದನ್ನು ಮುಟ್ಟುವ ಕಡಲ ಹಂಬಲ (ಉಬ್ಬರ) ಹೆಚ್ಚುತ್ತಲೇ ಇತ್ತು! ಹನ್ನೆರಡು ಗಂಟೆಯ ಹೊತ್ತಿಗೆ ಚಂದ್ರ ನಮ್ಮ ನೆತ್ತಿಗೇ ಬಂದಿದ್ದ. ಅದಾಗಲೇ ದ್ವೀಪದ ಮುಕ್ಕಾಲು ಭಾಗ ಜಲಸ್ತಂಭನದಲ್ಲಿತ್ತು! ನಮ್ಮ ಜೋಯಿಸ ನಿತಿನ್, ಮತ್ತೆ ‘ಕವಡೆ ಎಸೆದು’ (ಸ್ಮಾರ್ಟ್ ಫೋನ್) “ಪೂರ್ಣ ಭರತಕ್ಕಾಗುವಾಗ ಇನ್ನೂ ೨೦ ಸೆ. ಮೀ. ಮೇಲೇರಲಿದೆ” ಎಂದರು! ಸ್ವಲ್ಪ ದೂರದಲ್ಲೇ ತೇಲುತ್ತಿದ್ದ ದೋಣಿಯಲ್ಲಿ ಅಷ್ಟರಲ್ಲಿ ಅಡುಗೆ ಸಿದ್ಧವಾಗಿತ್ತು. ಈಗ ಹೆಚ್ಚಿದ ಆಳದಲ್ಲಿ ದೋಣಿ ನಿಧಾನವಾಗಿ ನಮ್ಮತ್ತ ತೇಲಿ ಬಂತು. ಬಿಸಿ ಬಿಸಿ ಊಟದ ಪಾತ್ರೆಗಳನ್ನೆಲ್ಲಾ ಇಳಿಸಿದೆವು. ದೋಣಿಯವರು ಉಪಚಾರಕ್ಕೆ “ಅನ್ನ, ಸಾರು, ಮೀನಿನ ಎರಡು ಬಗೆಯ ಖಾದ್ಯಗಳಷ್ಟೇ” ಎಂದೇನೋ ಹೇಳಿದರು. ವಿವರ ಎಲ್ಲ ಕೇಳಬೇಡಿ, ಅಪೂರ್ವ ಪರಿಸರದಲ್ಲಿ ಹಸಿವು ಹೆಚ್ಚಾಗಿ ಎಲ್ಲವೂ ರುಚಿಯಾಗಿಯೇ ಇತ್ತು! ಊಟ ಮುಗಿಯುವುದರಲ್ಲಿ ಭರತದ ಅವಧಿಯೂ ಬಹುತೇಕ ಮುಗಿದಿತ್ತು.
ಮಧ್ಯರಾತ್ರಿ ಒಂದೂವರೆ ಗಂಟೆ. ದ್ವೀಪದ ಸುಮಾರು ಒಂದೂವರೆ ಎಕ್ರೆ ನೆಲ, ಕೇವಲ ನಲವತ್ತು ಚ. ಮೀ.ಗಳಿಗೆ ಇಳಿದಿತ್ತು! ಅಂದಿಗೆ ಅದೇ ನಮಗೆ ಮಲಗೋಕೆ ಭೂಮಿತಾಯಿಯ ಮಂಚ! ಹಾಸಲು ಬೆಡ್ಶೀಟ್ ತೆಗೆದರೆ, ಹಾರಿಸಿ ಬಿಡುವಂತ ಗಾಳಿ! ಶೀಟ್ಗಳ ಅಂಚಿನಲ್ಲಿ ನಮ್ಮ ಚೀಲ, ಚಪ್ಪಲಿ, ಒಂದಷ್ಟು ಮರಳೆಲ್ಲ ಪೇರಿಸಿ, ಕೊನೆಗೆ ನಮ್ಮನ್ನೇ ಹೇರಿಕೊಂಡೆವು, ಅಲ್ಲಲ್ಲ ಮಲಗಿದೆವು. ನೀರಾಟದ ಸುಸ್ತು, ತಡವಾದದ್ದು ಎಲ್ಲ ಸೇರಿ ಬೇಗನೇ ಗಾಢ ನಿದ್ದೆಯೇ ಬಂದಿತ್ತು. ಹೊತ್ತು ಎಷ್ಟಾಗಿತ್ತೋ ಗೊತ್ತಿಲ್ಲ, ಮೈಮೇಲೆ ಏನೋ ಹರಿದಾಡಿದಂತಾಗಿ ಒಮ್ಮೆಲೇ ಎಚ್ಚರವಾಯಿತು. ದಡಬಡಾಯಿಸಿ ಎದ್ದು ನೋಡಿದರೆ ನಾಲ್ಕೈದು ಚಿಗುರೇಡಿಗಳು (ಕುದುರೇಡಿಗಳೆಂದೂ ಕರೆಯುತ್ತಾರೆ) ಮೈಮೇಲೆ ಹರಿದಾಡುತ್ತಿದ್ದವು! ನಾನು ಎದ್ದು ಕುಳಿತ ಮರುಕ್ಷಣಕ್ಕೆ ಎಲ್ಲ ಮಂಗಮಾಯ! ಇದು ಸಮುದ್ರ ತೀರದಲ್ಲಿ ನಡೆದಾಡುವಾಗಲೂ ನಾವು ಕಂಡದ್ದೇ. ಮಲಗಿದ್ದಕ್ಕಷ್ಟೇ ಹೊಸ ಅನುಭವ. ಮುಂದೆ ಮಲಗಿದರೂ ಏಡಿಗಳ ಕಚಗುಳಿಯ ನೆನಪಿನಲ್ಲಿ ಫಕ್ಕನೆ ನಿದ್ದೆ ಬರಲಿಲ್ಲ. ಈಗ ಹೊಸದೇ ಅನುಭವ, ಮೃದು ಸಂಗೀತದಂತಹ ಕಲರವ! ಮತ್ತೆ ಎದ್ದು ನೋಡಿದರೆ, ಒಣ ನೆಲದ ಅಗತ್ಯದಲ್ಲಿ ತಂಗಿದ್ದ ಪಕ್ಷಿಗಳ ಗುಂಪು ಹತ್ತಿರ ಬಂದಿತ್ತು! ಸಾಮಾನ್ಯವಾಗಿ ನಾವು ಸಮೀಪ ಹೋದರೆ ಹಾರಿ ದೂರ ಹೋಗುವ ಈ ಪಕ್ಷಿಗಳು, ನಿದ್ರಿಸಿದ ನಮ್ಮಿಂದ ಯಾವುದೇ ತೊಂದರೆ ಇಲ್ಲ ಎಂದು ಮನಗಂಡಿರಬೇಕು. ಪ್ರಾಯಶಃ ಅವುಗಳ ನಿತ್ಯ ಜಾಗವನ್ನೇ ನಾವು ಆಕ್ರಮಿಸಿದ್ದೆವು! ಏಕೆಂದರೆ ಅದಾಗಲೇ ದ್ವೀಪದ ಬಹುಭಾಗವನ್ನು ಕಡಲು ಆಕ್ರಮಿಸಿತ್ತಲ್ಲವೇ…!
ಮಲಗಿದಲ್ಲಿಂದ ಕಣ್ಣು ಬಿಟ್ಟು ನೋಡಿದರೆ, ಪೂರ್ಣಚಂದ್ರ ನೆತ್ತಿಯಿಂದ ಪಶ್ಚಿಮದ ಕಡೆಗೆ ಜಾರುತ್ತಲಿದ್ದ. ಮತ್ತೆ ಸರಿಯಾಗಿ ನಿದ್ದೆ ಬರಲೇ ಇಲ್ಲ. ಏಡಿಗಳು ಏರುವುದು, ನಾವೆದ್ದಾಗ ಅವು ಓಡುವುದು ನಡೆಯುತ್ತಲೇ ಇತ್ತು. ಜಯದೇವ್ಗೂ ಬಹುಶಃ ನಿದ್ದೆ ಬಂದಿಲ್ಲವೆಂದು ಕಾಣುತ್ತದೆ. ಆಗಾಗ ಎದ್ದು ಅಲ್ಲೇ ನಡೆದಾಡುತ್ತಿದ್ದರು. ಅವರು ನಡೆಯಲು ಎದ್ದಂತೆ ಪಕ್ಷಿಗಳ ಕಿಲಿಕಿಲಿ ನಿಂತುಹೋಗುತ್ತಿತ್ತು. ದೂರ ಹಾರಿ ಮತ್ತೆ ಮರಳಿ ಬರುತ್ತಿದ್ದವು. ನೀರು ಇಳಿಯುತ್ತಿದ್ದಂತೆಯೆ ಹಕ್ಕಿಗಳೆಲ್ಲಾ ಮತ್ತೆ ದ್ವೀಪದ ಮೂಲೆಗಳಿಗೆ ಹರಡಿಕೊಂಡವು. ಯಾವ ಏಡಿಗಳಿಗೂ ಕ್ಯಾರೇ ಎನ್ನದೆ ಸಶಬ್ಧ ನಿದ್ರಾ ಸುಖವನ್ನು ಅನುಭವಿಸಿದವರೆಂದರೆ ನಿತಿನ್ ಮತ್ತು ಸದ್ದಾಂ ಮಾತ್ರ! ಇನ್ನೂ ವಿಶೇಷವೆಂದರೆ, ದೋಣಿಯ ಓರ್ವ ಕೆಲಸಗಾರ ಬೆಳಗಾದ ಮೇಲೆ ದ್ವೀಪಕ್ಕೆ ಬಂದು ಮಲಗಿಕೊಂಡವನು ಬಿಸಿಲಿಗೂ ಜಗ್ಗದೆ ಒಂಬತ್ತು ಗಂಟೆಯವರೆಗೂ ಗಾಢ ನಿದ್ರೆಯಲ್ಲಿದ್ದ! ಸೂರ್ಯ ವಂಶದವನೆಂದು ಕರೆಯಬಹುದೇನೋ!
ಪೌರ್ಣಮಿಯ ಚಂದಿರ ಇನ್ನೂ ಪಶ್ಚಿಮ ಬಾನಿನಿಂದ ಇಳಿದು ಮರೆಯಾಗುವ ಮುನ್ನವೇ ಮೂಡಣದಲ್ಲಿ ಸೂರ್ಯ ಮೇಲೆದ್ದು ಬಂದ. ಪೂರ್ವ ಪಶ್ಚಿಮದಲ್ಲಿ ವರದಿ ಒಪ್ಪಿಸುವ ರೀತಿಯಲ್ಲಿ ಸೂರ್ಯ ಚಂದ್ರರು ಮಾತಾಡಿಕೊಳ್ಳುವಂತಿತ್ತು ಆ ದೃಶ್ಯ. ಹಕ್ಕಿಗಳು ಅದಾಗಲೇ ತಮ್ಮ ನಿತ್ಯ ಕಾರ್ಯ ಪ್ರಾರಂಭಿಸಿದ್ದವು. ರಾತ್ರಿ ಎರಡಿದ್ದ ಮೀನುಗಾರಿಕಾ ದೋಣಿಗಳಲ್ಲಿ ಒಂದು ತುಂಬಾ ದೂರದಲ್ಲಿ ಕಾಣಿಸುತ್ತಿದ್ದರೆ ಇನ್ನೊಂದು ನಮ್ಮ ದ್ವೀಪದ ತೀರಾ ಸಮೀಪಕ್ಕೆ ಬಂದು ಕಾರ್ಯ ನಿರತವಾಗಿತ್ತು. ಇನ್ನು ನಿತ್ಯ ಕರ್ಮಗಳು, ಶೌಚ ಒಂದು, ಎರಡು ಎಲ್ಲಾ ಕಡಲ ಬದಿಯಲ್ಲಿಯೆ ಪೂರೈಸಿಯಾಯಿತು. ಕಡಲಕರೆಯ ಈ ಸುಖ ಅನುಭವಿಸಿ ಅದೆಷ್ಟು ವರ್ಷಗಳಾಗಿತ್ತೋ ! ಜಯದೇವ್ ಅದಾಗಲೇ ಜಾಲಪಾದಗಳನ್ನು ಧರಿಸಿ ನೀರಿನಲ್ಲಿ ದೂರದವರೆಗೂ ಸಾಗಿ ಬಂದರು. ನಮಗಾದರೂ ಬೇರೇನು ಕೆಲಸ? ಮುಂಜಾನೆಯೇ ನೀರಿಗಿಳಿದೆವು. ಚಳಿಯೇನಿರಲಿಲ್ಲ. ಮೀನುಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ ಪ್ರಶಾಂತರು ಒಂದಷ್ಟು ಈಜಾಡಿ ಎಲ್ಲೋ ಒಂದು ಹೊಸ ಸಮುದ್ರ ಜೀವಿ ಕಂಡರೂ ಬಂದು ವರ್ಣಿಸುತ್ತಿದ್ದರು. ಹವಳ ದಿಬ್ಬಗಳ ಬಣ್ಣಬಣ್ಣದ ಮೀನುಗಳು ಸಾಕಷ್ಟು ಕಾಣಸಿಕ್ಕರೂ ವಿಶೇಷ ಹವಳಗುಡ್ಡೆಗಳೇನೂ ಗೋಚರಿಸಲಿಲ್ಲ.
ಮುಂಜಾನೆಯ ಹೊತ್ತಿಗೆ ಜಯ್ ಹೇಳಿದ ಮಾತೊಂದು ಇಲ್ಲಿ ನೆನಪಾಗುತ್ತದೆ. “ಒಂದು ವೇಳೆ ನಾವೆಲ್ಲಾ ಪಾನಪ್ರಿಯರಾಗಿದ್ದು , ರಾತ್ರಿ ಎಲ್ಲಾದರೂ ನಾವು ಕುಡಿದು ಮಲಗಿದ್ದಲ್ಲಿ, ಬೆಳಿಗ್ಗೆ ನೋಡುವಷ್ಟರಲ್ಲಿ ನಮ್ಮ ಚೀಲ ಸರಂಜಾಮುಗಳು ಸಮುದ್ರ ಪಾಲಾಗಿ ಹೋಗುತ್ತಿದ್ದವು”. ಇದನ್ನವರು ತಮಾಷೆಗೆಂದೇ ಹೇಳಿರಬಹುದು. ಆದರೆ ನಾನು ಕಂಡಂತೆ, ಚಾರಣ ಮತ್ತಿತರ ಸಾಹಸ ಯಾನಗಳಲ್ಲಿ ಕೆಲವು ಹವ್ಯಾಸಿಗಳಿಗೆ ‘ಡ್ರಿಂಕ್ಸ್’ ಬೇಕೇ ಬೇಕು. ಇಲ್ಲದೇ ಹೋದಲ್ಲಿ “ಸಪ್ಪೆ” ಎನ್ನುವವರಿದ್ದಾರೆ. ಅದರಲ್ಲೂ ಕೆಲವರಿಗೆ ಆಗಾಗ “ದಾಹ” ವೆನಿಸಿದಾಗಲೆಲ್ಲಾ ಈ ಪಾನೀಯವೇ ಬೇಕು. ತಂಡದ ಕೆಲವರ ಈ ಮದ್ಯಾಸಕ್ತಿಯು ಚಾರಣದ ಎಲ್ಲಾ ಸದಸ್ಯರ ಆನಂದವನ್ನು ಕಸಿದು ಕೊಳ್ಳುವುದನ್ನೂ ನಾನು ಕಂಡಿದ್ದೇನೆ. ಚಾರಣದ ಅಪಚಾರಗಳಿಗೆ ಆನಂತರ ಅಪಘಾತ, ಗಾಯಗಳಿಗೂ ಈ ಹುಚ್ಚಾಟ ಕಾರಣವಾಗಬಹುದು. ವೃತ್ತಿಪರ ಚಾರಣಿಗರು ಈ ಬಗ್ಗೆ ತುಂಬಾ ಎಚ್ಚರ ವಹಿಸುತ್ತಾರೆ. ನಾನು ನೋಡಿದಂತೆ ಡಾರ್ಜಿಲಿಂಗ್ನಂತಹ ಅತೀ ತಂಪಿನ ಪ್ರದೇಶದಲ್ಲೂ ಮದ್ಯಾರ್ಥಿಗಳಿಗೆ ಅವಕಾಶವಿರಲಿಲ್ಲ. ಈ ಬಗ್ಗೆ ಕಟ್ಟಾ ಎಚ್ಚರಿಕೆ ನೀಡಲಾಗಿತ್ತು. ಯಾವುದೇ ಸಾಹಸ ಯಾನವು ಕನಿಷ್ಟ ಶಿಸ್ತು ಹಾಗೂ ಗರಿಷ್ಠ ಎಚ್ಚರಿಕೆಯನ್ನು ಅಪೇಕ್ಷಿಸುತ್ತದೆ. ಹಾಗಿದ್ದಲ್ಲಿ ಮಾತ್ರ ಸಾಹಸ ವಿಹಾರದ ನೈಜ ಸಂತೋಷವನ್ನು ಅನುಭವಿಸಬಹುದು. ಲಕ್ಷದ್ವೀಪದಲ್ಲಿ ಮದ್ಯ ಲಭ್ಯವಿಲ್ಲ ಹಾಗೂ ನಮ್ಮ ತಂಡದಲ್ಲಿ ಮದ್ಯಾರ್ಥಿಗಳೂ ಇಲ್ಲದೇ ಹೋದುದರಿಂದ ನಾವು ಈ ಅಪೂರ್ವ ಪ್ರಾಕೃತಿಕ ಸೌಂದರ್ಯವನ್ನು ಪೂರ್ಣ ಅನುಭವಿಸುವಂತಾಯಿತೆನ್ನುವುದು ನಮ್ಮ ಅಭಿಪ್ರಾಯವಾಗಿತ್ತು.
ಮರಳಲು ದೋಣಿ ಹತ್ತುವಾಗ ಒಂಬತ್ತು ಗಂಟೆ ದಾಟಿತ್ತು. ದೋಣಿಯಲ್ಲೇ ನಮ್ಮ ಬೆಳಗ್ಗಿನ ಉಪಹಾರ. ಒಂದಷ್ಟು ಎಳೆನೀರು ಮತ್ತದರ ಗಂಜಿ. ಅದೇ ಸಾಕಾಗಿತ್ತು ನಮಗೆ. ಲಗೂನಿನಲ್ಲಿ ದೋಣಿ ನಿಧಾನಕ್ಕೆ ಮುಂದುವರೆಯುತ್ತಾ ಬಂದಂತೆ ಸದ್ದಾಂ ತಂಡದವರ ಮೀನಬೇಟೆಯೂ ಬಿರುಸಿನಿಂದ ಸಾಗುತ್ತಿತ್ತು. ಸ್ಥಳೀಯವಾಗಿ ಶೆಮ್ಮಂ ಎಂದು ಕರೆಯಲ್ಪಡುವ ಗ್ರೂಪರ್ ಜಾತಿಯ ಮೀನುಗಳು ಈ ಭಾಗದಲ್ಲಿ ಹೆಚ್ಚಾಗಿದ್ದವು. ಜೊತೆಗೆ ಕೆಂಪು ಬಣ್ಣದ ಚೆಂಬಲ್ಲಿ, ಟ್ಯೂನಾ ಮೀನುಗಳು ಕೂಡಾ. ಗ್ರೂಪರ್ ಮೀನುಗಳಿಗೆ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಿದೆ ಎನ್ನುತ್ತಾರೆ. ನಮ್ಮ ಹುಡುಗರಿಗೇನೂ ಹಿಡಿದ ಮೀನುಗಳನ್ನು ಮಾರುವ ಉದ್ದೇಶವಿರಲಿಲ್ಲ. ಒಂದಷ್ಟು ಮೀನುಗಳ ಸಂಗ್ರಹವಾದ ನಂತರ ದೋಣಿ ಮತ್ತೆ ಮುಂದುವರೆಯಿತು. ಬೆಳಿಗ್ಗಿನಿಂದ ನೀರಿನಲ್ಲಿಯೇ ಚಟುವಟಿಕೆಯಲ್ಲಿದ್ದ ನಮಗೆ ಸುಸ್ತಾಗಿ ದೋಣಿಯಲ್ಲಿ ತೂಕಡಿಕೆ ಬರುವಂತಾಗುತ್ತಿತ್ತು. ಅಲ್ಲಿಯೇ ಒರಗಿದಾಗ ನಿದ್ದೆ ಆವರಿಸಿಯೇ ಬಿಟ್ಟಿತು. ಮತ್ತೆ ಎದ್ದಾಗ ಸಮಯ ಮಧ್ಯಾಹ್ನ ಹನ್ನೆರಡೂವರೆ ಗಂಟೆ. ಬಂಗಾರಂ ದ್ವೀಪವನ್ನು ಮುಟ್ಟಿದೆವು.
ಪ್ರಶಾಂತ್ ಮತ್ತು ಜಯದೇವ್ ಬಂಗಾರಂನಲ್ಲಿ ಇಳಿದು ಮೊದಲೇ ಅಲ್ಲಿಗೆ ಬಂದಿದ್ದ ಅವರ ಕುಟುಂಬವನ್ನು ಕೂಡಿಕೊಂಡರು. ಬಂಗಾರಂ ಪ್ರವಾಸಿ ಆಕರ್ಷಣೆಯ ದ್ವೀಪ. ಈ ದ್ವೀಪದ ಬಗ್ಗೆ ಮುಂದೆ ಎಂದಾದರೂ ಬರೆಯುತ್ತೇನೆ. ನಾನೂ ನಿತಿನ್ ಬಂಗಾರಂನಲ್ಲಿ ಊಟ ಮುಗಿಸಿ, ಬಂದ ದೋಣಿಯಲ್ಲಿಯೇ ಅಗಾತ್ತಿಗೆ ವಾಪಾಸಾದೆವು. ಅಗಾತ್ತಿಯಲ್ಲಿ ಇಳಿಯುತ್ತಿದ್ದಂತೆ, ಪೂರ್ಣ ಲೌಕಿಕಕ್ಕೆ ಬಂದವರಂತೆ ಹಿಂದಿನ ದಿನ ಬೆನ್ನ ಚೀಲ ಸೇರಿದ್ದ ಮಾಸ್ಕ್ ಮತ್ತೆ ನಮ್ಮ ಮುಖವೇರಿತು!
ಸೊಗಸಾಗಿದೆ ಲೇಖನ ಬರೆದ ನಿಮಗೂ ಬರೆಸಿದ ಅಶೋಕರಿಗೂ ಧನ್ಯವಾದಗಳು
ನಾವೇ ಆ ಪ್ರವಾಸ ಕೈಗೊಂಡಂತೆ ಓದಿಸಿಕೊಂಡು ಹೋಯಿತು.ಇಡೀ ರಾತ್ರಿ ನಿರ್ಜನ ದ್ವೀಪದಲ್ಲಿ ಅಡ್ಡಾಡಿ,ಮಲಗಿ ಕೂತು, ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿದ ಪರಿ ತುಂಬಾ ಇಷ್ಟ ಆಯಿತು.ದಿಗಂತದ ಆ ತುದಿಯ ಚಂದಿರ,ಈ ತುದಿಯ ಸೂರ್ಯ,ಸುತ್ತ ನೀಲಿ/ಹಸಿರು ಸಮುದ್ರ, ಮಧ್ಯೆ ಬಿಳಿ ಮರಳಿನ ಮೇಲೆ ಕೂತು ನಿಸರ್ಗದ ಚೆಲುವನ್ನು ಸವಿಯುವ ಕಲ್ಪನೆಯೇ ನನ್ನನ್ನು ಲಕ್ಷದ್ವೀಪಕ್ಕೆ ಎಳೆದುಕೊಂಡು ಹೋಯಿತು. ಏಡಿಗಳು ಮೈಮೇಲೆ ಎರಗುವ ಪ್ರಸಂಗ,ಅದರ ಪರಿವೇ ಇಲ್ಲದೆ ನಿದ್ದೆ ಹೊಡೆದ ಸಹಚರರ ರಸ ಪ್ರಸಂಗ ಕಿರು ನಗು ಮೂಡಿಸಿತು. ಮತ್ತು ನಿಸರ್ಗದ ಕರೆಗೆ ಓಗೊಡಲು ಮಹಿಳಾಮಣಿಗಳಿಗಿರುವ ಅಡೆತಡೆಗಳ ವಿಷಯ ಗಂಭೀರವಾದದ್ದೇ.ಲೇಖಕರಿಗೂ ನಿಮಗೂ ಧನ್ಯವಾದಗಳನ್ನು ಹೇಳದೇ ಇರಲಾರೆ.ಅವರು ಉಳಿದ ದ್ವೀಪಗಳನ್ನೂ ಆದಷ್ಟೂ ಬೇಗ ಸಂದರ್ಶಿಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದನ್ನು ಕಾದಿರುವೆ.
ಓದಿದೆ, ಊಹೆಗೂ ನಿಲುಕದ ದ್ವೀಪದ ಚಿತ್ರಣ ಅದ್ಭುತ.
ಸಣ್ಣದಾಗಿ ಶಿಬಿರಾಗ್ನಿ ಎಬ್ಬಿಸಿ ಬೆಟ್ಟ ಬಯಲುಗಳಲ್ಲಿ, ಅದಿಲ್ಲದೆಯೂ ದಟ್ಟ ಕಾಡಿನ ನಡುವೆ ತೆಳು ಬಟ್ಟೆಯ ಗುಡಾರದಲ್ಲಿ ನಾನು ಕಳೆದ ರಾತ್ರಿಗಳಿಗೆ ಲೆಕ್ಕವಿಲ್ಲ. ಅಷ್ಟೂ ಬಾರಿ, ಅಪ್ರಚೋದಿತವಾಗಿ ವನ್ಯಜೀವಿಗಳು ನಮ್ಮನ್ನು ಆಕ್ರಮಿಸುವುದಿಲ್ಲ, ಬೆಟ್ಟ ಮಗುಚುವುದಿಲ್ಲ, ಕಾಡು ನುಂಗುವುದಿಲ್ಲ ಎಂಬ ನಮ್ಮ ನೆಲದ ಅರಿವಿದ್ದೂ ನಾನು ಸ್ವಸ್ಥ ನಿದ್ರೆ ಮಾಡಿದ್ದು ಇಲ್ಲಾ ಎನ್ನುವಷ್ಟು ಕಡಿಮೆ. ಆದರೆ ಪ್ರಸ್ತುತ ಸನ್ನಿವೇಶ ತೀರಾ ಭಿನ್ನ. ಸಾಗರದ ವಿಸ್ತಾರದಲ್ಲಿ ಕಿರಿ ಬೊಟ್ಟಾಗಿಯೂ ಕಾಣದ ಲಕ್ಷದ್ವೀಪಗಳು. ಅದರಲ್ಲೂ ನಗಣ್ಯ ಚುಕ್ಕೆ – ನಿರ್ಜನ ಪೆರುಮಾಳ್ ಪಾರ ಎಂಬ ದ್ವೀಪ; ತೋರ ನೋಟಕ್ಕೆ ನಿರ್ಜೀವ ಕ್ಷುದ್ರ ನೆಲ. ಮೇಲೆ ಆಕಾಶ, ಸುತ್ತ ಕಡಲು, ಕಣ್ಣು ಹರಿದಲ್ಲೆಲ್ಲ ನೀಲಿಮೆಯ ಮೊತ್ತದ ನಡುವೆ ಪುಟ್ಟ ಬಿಳಿ ರೇಖೆಯಂತ ನೆಲ. ಅದನ್ನೂ ರಾತ್ರಿಯ ಕತ್ತಲಿನಲ್ಲಿ ಕಡಲ ನೀಲಿಮೆ ಸದ್ದಿಲ್ಲದೆ ಸುತ್ತಣಿಂದಲೂ ಮುತ್ತುತ್ತಿದೆ ಎಂಬ ಸ್ಪಷ್ಟ ಅರಿವಿನೊಡನೆ ಮಲಗಿದವರ ಕತೆ…ಅದ್ಭುತ
ನಾನು ಕಲ್ಪಿಸಿರದ ಅನುಭವ.ಅಸ್ಥಿರ ಪ್ರಕೃತಿಯಲ್ಲಿ ನಶ್ವರತೆಯ ಸಾಕ್ಷಾತ್ ಅನುಭವವಾಯಿತು, ಓದಿನಲ್ಲಿ. ಪ್ರತ್ಯಕ್ಷ ಅನುಭವ ಬಾಕಿ. ಉಳಿದಕಂತುಗಳನ್ನು ಕಾಯುವಂತೆ ಮಾಡಿದೆ