“ಯಕ್ಷಗಾನಕ್ಕೆ ಆರ್ನೂರೋ ಎಂಟ್ನೂರೋ ವರ್ಷಗಳ ಇತಿಹಾಸವಿದೆ ಎಂದು ಕೇಳಿದ್ದೇನೆ, ಇರಬಹುದು. ಆದರೆ ಇಂದು ನಮ್ಮಲ್ಲಿ, ಅಂದರೆ ಕರ್ನಾಟಕದ ಕರಾವಳಿ ಸೇರಿದಂತೆ ಸ್ವಲ್ಪ ಮಲೆನಾಡಿನ ಜಿಲ್ಲೆಗಳಲ್ಲಿ ಬಹಳ ಜನಪ್ರಿಯತೆ ಮಾತ್ರವಲ್ಲ, ಬಹುದೊಡ್ಡ ‘ಉದ್ಯಮ’ವೇ ಆಗಿ (ತೆಂಕು, ಬಡಗು ಮತ್ತು ಬಡಾಬಡಗು ತಿಟ್ಟುಗಳು) ಕಂಡ ಬೆಳವಣಿಗೆಗೆ ಮಾತ್ರ ಈ ಪ್ರಾಚೀನತೆ ಇದ್ದಂತಿಲ್ಲ. ವಾಸ್ತವದಲ್ಲಿ ಇದು ನೂರು ನೂರಿಪ್ಪತ್ತು ವರ್ಷಗಳಷ್ಟು ಆಧುನಿಕವೇ ಇದೆ” ಎಂದು ಗೋವಾ ವಿವಿನಿಲಯದ ಪ್ರಾಧ್ಯಾಪಕ ಕೆ. ಶ್ರೀಪಾದ ಭಟ್ ಹೇಳಿದರು.

ಇದು ಈಚೆಗೆ  (೧೦-೪-೨೦೨೧) ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆದ ‘ಯಕ್ಷಗಾನ: ವರ್ತಮಾನದ ಬೆಳಕಿನಲ್ಲಿ ಮರುಚಿಂತನೆ ಗೋಷ್ಠಿಗಳು ಮತ್ತು ಪ್ರದರ್ಶನ’ದ ಭಾಗವಾಗಿ ಬಂತು. ಈ ಮಾತು ನನಗಂತೂ ಒಟ್ಟಾರೆ ಕಲಾಪಗಳಿಗೆ ಸೂತ್ರರೂಪದ ಮುನ್ನುಡಿಯಂತೆಯೇ ಭಾಸವಾಯ್ತು. ಬೆಳಿಗ್ಗೆ ಒಂಬತ್ತೂವರೆಯಿಂದ ತೊಡಗಿ ರಾತ್ರಿ ಒಂಬತ್ತರವರೆಗಿನ ಈ ಕಾರ್ಯಕ್ರಮದ ಸಂಯೋಜನೆಯಲ್ಲಿ ಪ್ರಧಾನ ಪಾತ್ರ ಮತ್ತು ನಿರ್ವಹಣೆಯಲ್ಲಿ ಪೂರ್ಣ ಪಾತ್ರವನ್ನು ಸಂತ ಅಲೋಶಿಯಸ್ ಕಾಲೇಜು ವಹಿಸಿತ್ತು.ಆ ನೆಲೆಯಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಅಧ್ಯಾಪಕ ದಿನೇಶ್ ನಾಯಕ್ ಆಡಿದರು. ಕಲಾಪಗಳ ಉದ್ಘಾಟಕನ ನೆಲೆಯಲ್ಲಿ ನೀನಾಸಂನ ವಿಶ್ರಾಂತ ಪ್ರಾಂಶುಪಾಲ ಬಿ.ಆರ್ ವೆಂಕಟ್ರಮಣ ಐತಾಳರು ಆಶಯದ ನುಡಿಗಳನ್ನು ಕೊಟ್ಟರು. ಅಲೋಶಿಯಸ್ಸಿಗೆ ಸಾಂಸ್ಥಿಕ ನೆಲೆಯಲ್ಲಿ ಸಹಯೋಗವನ್ನು ಕೊಟ್ಟವರು ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಯೂಜೀಸಿಯ ಸ್ಟ್ರೈಡ್ ಯೋಜನೆಗಳು.

ಉದ್ಘಾಟನಾ ಕಲಾಪದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ, ಜಾನಪದ ವಿವಿಯ ವಿಶ್ರಾಂತ ಕುಲಪತಿ ಕೆ. ಚಿನ್ನಪ್ಪ ಗೌಡರು ಸ್ಟ್ರೈಡಿನ ಸಲಹೆಕಾರನೂ ಆಗಿರುವುದರಿಂದ ಆ ಕುರಿತು ವಿವರಣೆಗಳನ್ನೂ ಹಂಚಿಕೊಂಡರು. ಇನ್ನೋರ್ವ ಅತಿಥಿಯಾಗಿದ್ದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಎಂ.ಎ ಹೆಗಡೆ ಮತ್ತು ಅಧ್ಯಕ್ಷತೆ ವಹಿಸಿದ್ದ ಅಲೋಶಿಯಸ್ಸಿನ ಪ್ರಾಂಶುಪಾಲ ವಂದನೀಯ ಪ್ರವೀಣ್ ಮಾರ್ಟಿಸ್ ಅವರು ಔಚಿತ್ಯಪೂರ್ಣ ನಾಲ್ಕು ನುಡಿಗಳನ್ನಷ್ಟೇ ಸೇರಿಸಿದರು. ಪೂರ್ವಾಹ್ನ ಮತ್ತು ಅಪರಾಹ್ನ ಎಂಬಂತೆ ಒಂದೊಂದು ಗೋಷ್ಠಿ ನಡೆಯಿತು. ಒಂದೊಂದರಲ್ಲೂ ಯಕ್ಷ-ಪ್ರೇಕ್ಷಕನ ನೆಲೆಯಿಂದ ಇಬ್ಬರು ಪ್ರಬಂಧಕಾರರಿದ್ದಂತೆ, ಕಲಾವಿದರ ನೆಲೆಯಿಂದ ಇಬ್ಬರು ಪ್ರತಿಕ್ರಿಯಾಕಾರರನ್ನು ವ್ಯವಸ್ಥೆ ಮಾಡಿದ್ದರು. ಮೊದಲ ಗೋಷ್ಟಿಯಲ್ಲಿ ಯಕ್ಷಗಾನದ ಭಾಷಿಕ ಲೀಲೆಯ ಕುರಿತು ಪ್ರಾಧ್ಯಾಪಕ ನಿತ್ಯಾನಂದ ಬಿ. ಶೆಟ್ಟಿ, ಅರ್ಥಗಾರಿಕೆಯಲ್ಲಿ ತತ್ತ್ವಜ್ಞಾನದ ಕುರಿತು ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರೂ ಮಾತಾಡಿದರು.

ಪ್ರತಿಕ್ರಿಯೆಯಲ್ಲಿ ಅರ್ಥದಾರಿ ಜಬ್ಬಾರ್ ಸಮೋ ಮತ್ತು ಮದ್ದಳೆಗಾರ ಕೃಷ್ಣಪ್ರಕಾಶ ಉಳಿತ್ತಾಯರು ಅಭಿಪ್ರಾಯಗಳನ್ನು ಕೊಟ್ಟರು. ಅಪರಾಹ್ನದ ಗೋಷ್ಟಿಯಲ್ಲಿ ಯಕ್ಷಗಾನ ಮತ್ತು ಕರಾವಳಿಯ ಸಾಮಾಜಿಕತೆಯ ಕುರಿತು ಅಜೀಂ ಪ್ರೇಂಜಿ ವಿವಿಯ ಎ. ನಾರಾಯಣರು ಮಾತಾಡಿದರು. ನಾನು ಮೊದಲಲ್ಲೇ ಉಲ್ಲೇಖಿಸಿದ ಶ್ರೀಪಾದ ಭಟ್ಟರು (ಕೋವಿಡ್ ಕಾರಣದಿಂದ), ಗೋವಾದಿಂದ ವೀಡಿಯೋ ಉಪನ್ಯಾಸದಲ್ಲಿ ಯಕ್ಷಗಾನ ಸಂಸ್ಕೃತಿ ಮತ್ತು ಆಧುನಿಕತೆ ವಿಷಯದ ಮೇಲೆ ಅಭಿಪ್ರಾಯಗಳನ್ನು ಮಂಡಿಸಿದರು.

ಇವರೀರ್ವರಿಗೆ ಪ್ರತಿಕ್ರಿಯಿಸುವಲ್ಲಿ ಇಡಗುಂಜಿ ಮೇಳದ ಪ್ರಧಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಮತ್ತು ಅರ್ಥದಾರಿ/ ಹನುಮಗಿರಿ ಮೇಳದ ಪ್ರಧಾನ ಕಲಾವಿದ ವಾಸುದೇವ ರಂಗಾ ಭಟ್ ಅಭಿಪ್ರಾಯಗಳನ್ನು ಕೊಟ್ಟರು. ಕೊನೆಯಲ್ಲಿ ಸಭೆಯಿಂದ ಎಂ.ಎಲ್ ಸಾಮಗ, ಕೆವಿ ರಾವ್, ಪೇಜಾವರ ಸದಾನಂದ ರಾವ್, ಪ್ರತಿಭಾ ಸಾಮಗ, ನಾರಾಯಣ ಚಂಬಲ್ತಿಮಾರ್, ದೇರಾಜೆ ಮೂರ್ತಿ, ವಾಸುದೇವ ಉಚ್ಚಿಲ, ಸೂರಿಕುಮೇರು ಗೋವಿಂದ ಭಟ್ಟರುಗಳೂ ತಂತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಒಟ್ಟು ಸಭಾ ಕಲಾಪವನ್ನು, ನಾನು ಗ್ರಹಿಸಿದಂತೆ ಮತ್ತು ನನಗೆ ಅನಿಸಿದಂತೆ ಕೆಲವು ವಾಕ್ಯಗಳಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದೇನೆ. (ತಪ್ಪಿದ್ದರೆ ನನ್ನದು, ಒಪ್ಪಿದ್ದರೆ ಪ್ರಬಂಧಕಾರರದು)  ಭಾರತದ ನೆಲದ ತೋರಿಕೆಯ ಸಂಪತ್ತುಗಳನ್ನು ಶೋಷಿಸುವುದಕ್ಕೇ ಬಂದಿತ್ತು ಬ್ರಿಟಿಷ್ ವಸಾಹತುಶಾಹಿ. ಆದರೆ ಮುಂದುವರಿದಂತೆ ಅದು ಇಲ್ಲಿನ ಸಾಂಸ್ಕೃತಿಕ ಸತ್ವವನ್ನೇ ತುಡುಕಿತ್ತು. ೧೯ನೇ ಶತಮಾನದ ಕೊನೆ ಹಾಗೂ ೨೦ನೇ ಶತಮಾನದ ಆದಿಯಲ್ಲಿ, ಶೋಷಣೆಗೆ ಪ್ರತಿಯಾಗಿ, ಆದರೆ ಎಲ್ಲೂ ಪ್ರತಿಭಟನೆಯ ಬಣ್ಣ ಕಾಣಿಸದಂತೆ ಭಾರತದಲ್ಲೊಂದು ಸಾಂಸ್ಕೃತಿಕ ಜಾಗೃತಿ ಭುಗಿಲೆದ್ದಿತು.

ಅದಕ್ಕೆ ಪೂರಕವಾಗಿ, ಇಂದು ದೇಶಾದ್ಯಂತ ಮೆರೆಯುವ ವಿನಾಯಕ ಚೌತಿಯ ವಿಜೃಂಭಣೆ ತೊಡಗಿತ್ತು. ರಾಜಾಸ್ತಾನ ಮತ್ತು ಆಢ್ಯ ಕುಟುಂಬಗಳಿಗೆ ಸೀಮಿತವಾಗಿದ್ದ ಸಂಗೀತ ಪ್ರಕಾರಗಳು (ಕರ್ನಾಟಕ ಮತ್ತು ಹಿಂದೂಸ್ತಾನೀ) ಸಾರ್ವಜನಿಕ ವೇದಿಕೆಗಳಿಗೆ ವಿಸ್ತರಿಸಿತ್ತು. ತೀರಾ ಸುಪ್ತವಾಗಿದ್ದ ಜನಪದ ನಾಟ್ಯ-ನಾಟಕ ಪ್ರಕಾರಗಳೂ ಮೈಕೊಡವಿಕೊಂಡು ಎದ್ದವು.  ಆ ಅಲೆಯಲ್ಲೇ ಅಂದರೆ, ತೆಂಕು ತಿಟ್ಟು – ಪಾರ್ತಿಸುಬ್ಬ, ದೊಡ್ಡ ಬಲಿಪರಂಥವರಿಂದಲೂ ಬಡಗು ತಿಟ್ಟು – ಉಡುಪಿ ಮಠಮೂಲದಿಂದಲೂ ಬಡಾಬಡಗು – ಕೆರೆಮನೆ ಹಾಸ್ಯಗಾರದಂತ ಮನೆತನಗಳ ಕೈಂಕರ್ಯದಿಂದಲೂ ಇಂದಿನ ಪ್ರದರ್ಶನ ಖಾಚಿತ್ಯ, ದೊಡ್ಡ ಪ್ರೇಕ್ಷಕ ಸಮುದಾಯ (ವ್ಯಾಪ್ತಿ) ಹಾಗೂ ಪ್ರಸಿದ್ಧಿಯನ್ನು ಗಳಿಸಿದ್ದಿರಬೇಕು. ಆಧುನಿಕತೆ ಅಥವಾ ವರ್ತಮಾನ ಎನ್ನುವುದನ್ನು ದಿನದಿನದ ಅಥವಾ ಐದು ಹತ್ತು ವರ್ಷಗಳ ಕಾಲಘಟ್ಟದ ಬದಲಾವಣೆಗಳ ನೆಲೆಯಲ್ಲಿ ನೋಡಲಾಗದು. ಕಳೆದ ನೂರು – ನೂರಿಪ್ಪತ್ತು ವರ್ಷಗಳಲ್ಲಿ ಈ ವಲಯದ ಯಕ್ಷಗಾನ ರಂಗ ಮಂಚ (ಉದ್ದಗಲ, ಬೆಳಕು, ಧ್ವನಿ ಇತ್ಯಾದಿ), ಉಡುಗೆ ತೊಡುಗೆ (ಬಣ್ಣ, ಆಹಾರ್ಯ), ದೈಹಿಕ ಭಾವ ಭಂಗಿ (ನಾಟ್ಯ ಅಭಿನಯಗಳು), ಹಿಮ್ಮೇಳದ ರಾಗ ಭಾವ (ಸಂಗೀತ ಮತ್ತು ವಾದ್ಯಗಳು), ಕಥಾನಕದ ವಸ್ತು ಮತ್ತು ಮಾತು (ಪ್ರಸಂಗ ಮತ್ತು ನಿರ್ವಹಣೆ) ಮುಂತಾದವುಗಳಲ್ಲಿ ಧಾರಾಳ ವಿಕಸಿಸಿದೆ.

ಈ ಬದಲಾವಣೆಗಳಿಗೆ ಸಂಬಂಧಿಸಿದಂತೆ, ಘೋಷಿತ ಎಂಟ್ನೂರು ವರ್ಷಗಳ ಪ್ರಾಚೀನತೆಯಲ್ಲಿ ಯಾವುದೇ ಸಾಕ್ಷಿ ಸಿಗುತ್ತಿಲ್ಲ. ಹಾಗಾಗಿ ಒಟ್ಟು ನೂರಿಪ್ಪತ್ತು ವರ್ಷಗಳ ಬದಲಾವಣೆಯೇ ನಿಜವಾದ ಆಧುನಿಕತೆ! ಈ ಉದ್ದಕ್ಕೆ ‘ಶುದ್ಧ ಕೆಟ್ಟಿತು’ ಎಂದ ಸಂಪ್ರದಾಯವಾದಿಗಳನ್ನು ಉಪೇಕ್ಷಿಸಿ ಯಕ್ಷಗಾನ ಗಟ್ಟಿಯಾಗಿಯೇ ಉಳಿದಿರುವುದಕ್ಕೆ ಈ ಆಧುನಿಕತೆಯೇ ಕಾರಣ. ದೇಶದ ಗಡಿಯನ್ನೇ ಮೀರಿ ಪ್ರದರ್ಶನಗೊಂಡ ಶಿವರಾಮ ಕಾರಂತರ ಯಕ್ಷ-ರೂಪಕಗಳು, ಮಾತನ್ನು ನಿರೂಪಣೆಗಷ್ಟೇ ಮಿತಿಗೊಳಿಸಿ ಮೆರೆದ ಗಾನ ನೃತ್ಯವೈಭವಾದಿಗಳು, ಮನೆಗಳಿಗೇ ನುಗ್ಗಿದ ಏಕವ್ಯಕ್ತಿಯಿಂದ ವಿಸ್ತೃತ ರಂಗಮಂಚವನ್ನು ಆಕ್ರಮಿಸಿದ ಸಮೂಹ ನೃತ್ಯಾದಿಗಳು – ಸೂಕ್ಷ್ಮದಲ್ಲಿ ಹೇಳುವುದಿದ್ದರೆ ಎಲ್ಲ ‘ವೈಭವ’ಗಳೂ ತತ್ಕಾಲೀನ ಪ್ರಚಾರ ಗಳಿಸಿದ್ದಿರಬಹುದು.

ಆದರೆ ಯಕ್ಷ ಇತಿಹಾಸ ಪುಟದಲ್ಲಿ ‘ಪ್ರಯೋಗ’ದ ಹಣೆಪಟ್ಟಿಯನ್ನಷ್ಟೇ ಉಳಿಸಿಕೊಂಡವು, ನಿತ್ಯಕ್ಕೆ ನಿಲ್ಲಲಿಲ್ಲ. ಹಾಗೇ ಹರಕೆಯಾಟದ ಬೇಡಿಕೆ, ಟೆಂಟ್ ಮೇಳದ ಸೋಲು, ಕಾಲಮಿತಿಯ ಅನಿವಾರ್ಯತೆ, ಕೊರೋನಾ ದಿಗ್ಬಂಧನಗಳನ್ನೆಲ್ಲ ಜೀರ್ಣಿಸಿಕೊಳ್ಳುತ್ತ, ಕಾರಣ ಏನೇ ಇರಲಿ ಪ್ರದರ್ಶನ ಮತ್ತು ವ್ಯಾಪ್ತಿಯನ್ನು (ಹವ್ಯಾಸೀ, ತುಳು ಭಾಷಿಕ, ಮಹಿಳಾ, ಮಕ್ಕಳ ತಂಡಗಳಲ್ಲದೇ ನಾಟಕ, ಸಿನಿಮಾರಂಗವನ್ನೂ ಪ್ರಭಾವಿಸುವಲ್ಲಿ) ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ. ಮೂಲದಲ್ಲಿ ಅದು ಸಂವಾದಿಸುತ್ತಿದ್ದ ಸ್ತರಗಳನ್ನು ಮೀರುತ್ತಲೂ ಬಂದಿದೆ. (ಹಿಂದೆ ಪೂರ್ವರಂಗ ನಿಜದ ಕಲಿಕಾರಂಗವಾಗಿದ್ದರೆ, ಇಂದು ಅದು ಬೇಡಿಕೆಯಾನುಸಾರ ಪ್ರದರ್ಶನದ ಭಾಗವೇ ಆಗಿದೆ) ಹಾಗೆಂದ ಮಾತ್ರಕ್ಕೆ ಯಕ್ಷಗಾನದ ಸಮಗ್ರ ಬದಲಾವಣೆ ಅಪೇಕ್ಷಣೀಯವಲ್ಲ. ಅಂಥ ಬದಲಾವಣೆಗೆ ಕೆಟ್ಟ ಉದಾಹರಣೆಯಾಗಿ ಬಂಗಾಳದ ‘ಜಾತ್ರಾ’ ಇದೆ ಎಂಬ ಮಾತೂ ಬಂತು.

ಅಷ್ಟಾಗಿಯೂ.. ಯಕ್ಷಗಾನ ತನ್ನ ಮೂಲ ಪ್ರದೇಶದಲ್ಲಾಗಲಿ (ಕರಾವಳಿ ಕರ್ನಾಟಕ ಮತ್ತು ಸ್ವಲ್ಪ ಮಲೆನಾಡು), ಹೊರಗೆ ಹೋದಲ್ಲಾಗಲಿ, ಇಂದಿಗೂ ತನ್ನ ಪಾರಂಪರಿಕ ಪ್ರೇಕ್ಷಕ ವರ್ಗದಿಂದ ಹೊರಗೆ ಹೊಸ ಪ್ರೇಕ್ಷಕರನ್ನು ಆಕರ್ಷಿಸಿ, ತನ್ಮೂಲಕ ಹೊಸ ಆಯಾಮಗಳನ್ನು ಕಾಣುವಲ್ಲಿ ಯಶಸ್ವಿಯಾಗಿಯೇ ಇಲ್ಲ. ಜಗತ್ತಿನ ಅನ್ಯ ಕೆಲವು ಜನಪದ ರಂಗ ಪ್ರಕಾರಗಳು ಆಯಾ ರಾಷ್ಟ್ರಪ್ರಜ್ಞೆಯ ಭಾಗವಾಗಿ, ಪ್ರಜಾವರ್ಗದ ಕಲಾಸ್ಪಂದನದ ಆತ್ಮವಾಗಿ ರೂಪುಗೊಂಡಿರುವುದನ್ನು ಕಾಣುತ್ತೇವೆ. ಇದಕ್ಕೆ ಉದಾಹರಣೆಯಾಗಿ ಪ್ರಖ್ಯಾತ ಜಪಾನೀ ಸಿನಿಮಾ ನಿರ್ದೇಶಕ ಕುರೊಸೋವಾನ ಉಲ್ಲೇಖ ಬಂತು. ಆತನ ಸಿನಿಮಾ ದರ್ಶನವನ್ನು ಅಲ್ಲಿನ ಜನಪದ ರಂಗಭೂಮಿ – ನೋ, ದಟ್ಟವಾಗಿ ಪ್ರಭಾವಿಸಿದೆಯಂತೆ.

ಆದರೆ ಯಕ್ಷಗಾನ, ಜಗತ್ತಿನಾದ್ಯಂತ ಕಂಡವರೆಲ್ಲ ಇಂಥದ್ದಿನ್ನೊಂದಿಲ್ಲ ಎಂದೇ ಪ್ರಾಮಾಣಿಕವಾಗಿ ಪ್ರಶಂಸಿಸುತ್ತಾರೆ. ಆದರೇನಾಯ್ತು, ಇದು ತನ್ನ ದೇಶ ರಾಜ್ಯಗಳು ಬಿಡಿ, ಮೂಲ ನೆಲೆಯಲ್ಲೇ ಹೊಸ ಸಂವಹನ ಸಾಧ್ಯತೆಯನ್ನು ಶೋಧಿಸಿಲ್ಲ, ಸಾಧಿಸಿಯೇ ಇಲ್ಲ. ಅದೇ ನಮ್ಮಲ್ಲಿ ಯಕ್ಷಗಾನ ತುಣುಕಾಗಿಯೋ ಇಡಿಯಾಗಿಯೋ ನಾಟಕ, ಸಿನಿಮಾಗಳಲ್ಲಿ ಪಡಿಮೂಡುವುದಿದೆ. ಪ್ರತ್ಯಕ್ಷ ಪ್ರದರ್ಶನಗಳಿಲ್ಲದೆಯೂ ಯಕ್ಷಗಾನತನ ಇನ್ನೊಂದು ರಂಗಪ್ರಕಾರದಲ್ಲಿ ಕಾಣಿಸಿದ್ದು ಇಲ್ಲವೆನ್ನುವಷ್ಟು ಅಲ್ಪ. ತಾಳಮದ್ದಳೆ ಸ್ವತಂತ್ರ ಮತ್ತು ಜಗತ್ತಿನಲ್ಲಿ ಅನನ್ಯ ಎನ್ನುವಷ್ಟು ಸೃಜನಶೀಲ ಕಲಾಪ್ರಕಾರವೇ ಆಗಿದೆ. ಹಾಗೇ ಇದು ಯಕ್ಷಗಾನದ ವಾಚಿಕಾಭಿನಯದ ವಿಜೃಂಭಣೆ ಮಾತ್ರ ಎನ್ನುವವರೂ ಇದ್ದಾರೆ. ಅದಕ್ಕಾಗಿ ಯಕ್ಷಗಾನದ ಇತರ ಅಂಗಗಳ ವೈಭವೀಕರಣವನ್ನು (ಗಾನವೈಭವ, ನೃತ್ಯ ವೈಭವ…) ಅಲ್ಲಗಳೆದಂತೆ ತಾಳಮದ್ದಳೆಯ ಉತ್ಕರ್ಷವನ್ನು ಸಣ್ಣಮಾಡದೆ, ಗೋಷ್ಠಿಯಲ್ಲಿ ಸಹಜವಾಗಿ ಒಳಗೊಂಡದ್ದು ಸರಿಯಾಗಿಯೇ ಇತ್ತು.

ಗೋಷ್ಠಿಗಳ ಉದ್ದಕ್ಕೆ ಆಸ್ಟ್ರಿಯನ್ ಮೂಲದ ಗೊಂಬ್ರಿಚ್ ಎನ್ನುವವನ ಕಲಾ ವ್ಯಾಖ್ಯೆ ಮತ್ತೆ ಮತ್ತೆ ಕೇಳಿ ಬರುತ್ತಿತ್ತು. ‘ಕಲೆ ಎನ್ನುವುದಿಲ್ಲ, ಇರುವುದು ಕಲಾವಿದ ಮಾತ್ರ’. ಇದು ತಾಳಮದ್ದಳೆಗೆ ತುಂಬ ಆಪ್ತವಾಗಿ ಅನ್ವಯಿಸುತ್ತದೆ. ಸಂವಾದ ಎನ್ನುವುದು ಮಾತಿನ ಅತಿಸ್ರಾವವಲ್ಲ, ಹೇಳದೇ ಇದ್ದದ್ದನ್ನು ಗ್ರಹಿಸುವ ಸ್ಥಿತಿ. ಅಮೂರ್ತವಾದ ಕಲೆ ಕಲಾವಿದನ ಅನುಭವದಲ್ಲಿ ಮೊಳೆತು, ಅನುಸಂಧಾನದಲ್ಲಿ ವಿಕಸಿಸಿ, ಅನುಸೃಷ್ಟಿಯಲ್ಲಿ ಫಲಿಸುತ್ತದೆ! 

ಈ ಸರಣಿಯಲ್ಲಿ ಎಲ್ಲೇ ಎಡವಿದರೂ ಕಲೆ ಪಕ್ಷಪಾತಿಯಾಗುತ್ತದೆ, ಅಂದರೆ ಊನಗೊಳ್ಳುತ್ತದೆ. ಇದಕ್ಕೆ ಒದಗಿದ ಜನಪ್ರಿಯ ಉದಾಹರಣೆ: ದೇವಿ ಮಹಾತ್ಮ್ಯೆ! ಇಲ್ಲಿ ಆಟ ಎಷ್ಟೆಷ್ಟು ವೈಭವೀಕರಣಕ್ಕೊಳಪಡುತ್ತದೋ ಅಷ್ಟಷ್ಟು ಕಲೆ ನಶಿಸುತ್ತದೆ. ತದ್ವಿರುದ್ಧವಾಗಿ – ವಾಲಿವಧೆ, ಎಷ್ಟು ಮಂಥನಕ್ಕೊಳಪಡುತ್ತದೋ ಅಷ್ಟು ಕಲಾವಲ್ಲರಿಯಲ್ಲಿ ಹೊಸ ಹೂಗಳು ಅರಳುತ್ತವೆ. ಗೋಷ್ಠಿಗಳ ವಿಷಯಕ ವಿಂಗಡಣೆಯಲ್ಲಿ ಭಾಷೆ, ಸಾಮಾಜಿಕತೆ ಮತ್ತು ಆಧುನಿಕತೆಗಳ ವಿಸ್ತರಣೆ ನನಗೆ ಹಿಡಿಸಿತು. ಆ ಮೂರಕ್ಕೆ ಹೊಂದದ ಸ್ತರ ತತ್ತ್ವಶಾಸ್ತ್ರದ್ದು. ಈ ವಿಷಯ ಎಲ್ಲ ಲೋಕವ್ಯಾಪಾರದಲ್ಲೂ ಇದೆ, ಇರಬೇಕಾದ್ದೇ. ಆದರೆ ಯಕ್ಷಗಾನದ ಸಂದರ್ಭದಲ್ಲಿ “ಇದು ಕಲೆಯಲ್ಲ, ಆರಾಧನೆ” ಎನ್ನುವ ಮಠಮಾನ್ಯಗಳ ವಿಪರೀತವನ್ನೇ ಹೆಚ್ಚು ಪುರಸ್ಕರಿಸುತ್ತದೆ. ತತ್ತ್ವಶಾಸ್ತ್ರದ ಕಲಾನ್ವಯದಲ್ಲಿ (ತೋಳ್ಪಾಡಿಯವರ ಮಾತಲ್ಲ), ನನಗೆ ಭಕ್ತಿಯ ವಾಸನೆ ಹೆಚ್ಚು ಬಡಿಯುತ್ತದೆ. ಹಾಗಾಗಿ ನನ್ನೆಲ್ಲ ಕಸರತ್ತಿನೊಡನೆಯೂ ತೋಳ್ಪಾಡಿಯವರ ಮಾತಿಗೆ ಮನಸ್ಸು ತೊಡಗಿಕೊಳ್ಳಲೇ ಇಲ್ಲ, ಕ್ಷಮಿಸಿ.

ಪ್ರತಿಕ್ರಿಯಾಕಾರರಲ್ಲಿ ಕೃಷ್ಣಪ್ರಕಾಶ್ ಮತ್ತು ವಾಸುದೇವರು ಸ್ಥಾನಗೌರವವನ್ನು ಚೆನ್ನಾಗಿ ಕಾಪಾಡಿದರು, ಪ್ರಸ್ತುತವಾದದ್ದನ್ನೇ ಚುಟುಕಾಗಿ ನುಡಿದರು. ಶಿವಾನಂದರು ಉಪನ್ಯಾಸದ ಮೇಲಿನ ಗ್ರಹಿಕೆಗೆ ಹೊರತಾದ ಉಪನ್ಯಾಸಕ್ಕೇ ಎಳಸಿದ್ದು ಸರಿಯಾಗಲಿಲ್ಲ. ಸಂತ ಅಲೋಶಿಯಸ್ ಕಾಲೇಜ್ ನೂರೈವತ್ತು ವರ್ಷಗಳ ಇತಿಹಾಸ ಹೊಂದಿದೆ.  ಸಹಜವಾಗಿ ಅದರ ಆಶ್ರಯದ ಕಲಾಪವಾದ್ದರಿಂದ ಗೋಷ್ಟಿಗೆ ಬಂದ ಹಲವರು ವೇದಿಕೆಯಿಂದಲೂ ಆಪ್ತ ಸಂಭಾಷಣೆಗಳಲ್ಲೂ ಕಾಲೇಜಿಗೆ ಸಂಬಂಧಿಸಿದಂತೆ ತುಸು ಭಾವುಕವಾಗಿ, ಆತ್ಮಕಥಾನಕದ ಎಳೆಗಳನ್ನು ಹೊಸೆದಿದ್ದರು. ಪ್ರತಿಕ್ರಿಯಾಕಾರನ ನೆಲೆಯಲ್ಲಿ ಮಾತಾಡಬೇಕಿದ್ದ ಜಬ್ಬಾರ್ ಮೊದಲು ತನ್ನ ಜವಾಬ್ದಾರಿಯ ಕುರಿತಂತೆ ಅಸಹಾಯಕತೆಯನ್ನು ಹೇಳಿಕೊಂಡರು, ತಪ್ಪಲ್ಲ.

ಆದರೆ ಮುಂದುವರಿದು, ಇತರರಂತೆ ನಿಂತ ನೆಲೆಗೆ (ಅಲೋಶಿಯಸ್ ಕಾಲೇಜು) ಅಥವಾ ಸ್ಥಾನ ಮರ್ಯಾದೆಗೆ ಸಂಬಂಧಿಸದ ತನ್ನ ಆತ್ಮಕಥಾನಕವನ್ನು ವಿಸ್ತರಿಸುತ್ತ ‘ವಾಗ್ಜಾಲ’ ಹೊಸೆದದ್ದು, ಅದೂ ಒಟ್ಟು ಕಲಾಪದ ಸಮಯ ಮೀರಿ ನಡೆಯುತ್ತಿದ್ದ ಸಂದರ್ಭದಲ್ಲಿ, ನಿರ್ವಾಹಕ ನಿರ್ವಾಹವಿಲ್ಲದೇ ಮುಗಿಸಲು ಸೂಚಿಸುವವರೆಗೂ ಎಳೆದದ್ದು ಏನೇನೂ ಸರಿಯಲ್ಲ.

ಗೋಷ್ಠಿ ಕಲಾಪಗಳೆಲ್ಲ ಕಾಲೇಜಿನ ಒಂದು ಸಭಾಮಂದಿರದ ಒಳಗೆ, ಹವಾನಿಯಂತ್ರಿತ ಹಿತ ವಾತಾವರಣದಲ್ಲಿ ನಡೆದಿತ್ತು. ಗೋಷ್ಠಿಗಳ ಹಿಂದೂ ಮುಂದೂ ಉಪಾಹಾರ ಮತ್ತು ಮಧ್ಯಾಹ್ನದ ಸವಿಯೂಟ ಔಚಿತ್ಯಪೂರ್ಣವಾಗಿತ್ತು. ಇದು ವೇದಿಕೆ, ಪ್ರೇಕ್ಷಾಂಗಣ ಎಂಬ ಬೇಧವನ್ನು ಅಳಿಸಿ, ಬಂದ ಎಲ್ಲರೂ ಅನೌಪಚಾರಿಕವಾಗಿ ವಿಚಾರ ವಿನಿಮಯ ಮಾಡಿಕೊಳ್ಳುವುದಕ್ಕೂ ಒಳ್ಳೆಯ ಅವಕಾಶವನ್ನೇ ಕೊಟ್ಟಿತು. ಒಟ್ಟು ಕಲಾಪದ ಕೊನೆಯ ಕಾರ್ಯಕ್ರಮ – ಯಕ್ಷಪ್ರದರ್ಶನವನ್ನು, ಕಾಲೇಜಿನ ಬಯಲು ರಂಗದಲ್ಲಿ ವ್ಯವಸ್ಥೆ ಮಾಡಿದ್ದರು. ಅದು ಇಳಿಸಂಜೆ ಸುಮಾರು ಆರೂವರೆಯಿಂದ ತೊಡಗಿ, ಚೊಕ್ಕವಾಗಿ ನಡೆದು, ಒಂಬತ್ತು ಗಂಟೆಯ ಸುಮಾರಿಗೆ ಸಂಪನ್ನವಾಯಿತು.

ತೆಂಕು ತಿಟ್ಟು ಯಕ್ಷಗಾನದ ದಿಗ್ಗಜರಲ್ಲೊಬ್ಬರಾದ ಸೂರಿಕುಮೇರು ಕೆ. ಗೋವಿಂದ ಭಟ್ಟರು ಸುಮಾರು ನಲ್ವತ್ತೊಂದು ವರ್ಷಗಳ (೧೯೭೬) ಹಿಂದೊಂದು ಯಕ್ಷ ಪ್ರಸಂಗವನ್ನು ರಚಿಸಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿದ್ಯಾರ್ಥಿಗಳಿಂದ ಆಡಿಸಿ, ಮರೆತಿದ್ದರು. ಅಂದು ಭಾಗವತಿಕೆ ನಡೆಸಿದ ದಂಬೆ ಈಶ್ವರ ಶಾಸ್ತ್ರಿಗಳಲ್ಲಿ ಅದರ ಪ್ರತಿ ಉಳಿದಿತ್ತು. ಈಚೆಗೆ ಅದರ ವಿಚಾರ ಎಲ್ಲೋ ಮಾತಿನ ಆಕಸ್ಮಿಕಗಳಲ್ಲಿ ಸುಳಿದಾಗ, ತುಮಕೂರಿನಲ್ಲಿ ಅಧ್ಯಾಪಕ ವೃತ್ತಿ ನಡೆಸಿರುವ ಸಿಬಂತಿ ಪದ್ಮನಾಭ ಮತ್ತು ಆರತಿ ಪಟ್ರಮೆ ದಂಪತಿಗಳ ಕುತೂಹಲ ಕೆರಳಿಸಿತು. ಈ ದಂಪತಿ, ಹುಟ್ಟಿ ಬೆಳೆದ ನೆಲದ (ದಕ) ಪ್ರೀತಿಗೆ ತುಮಕೂರಿನ ದೂರದಲ್ಲೂ ಒಂದು ಹವ್ಯಾಸಿ ಯಕ್ಷಕೂಟವನ್ನೇ (ಯಕ್ಷದೀವಿಗೆ) ಕಟ್ಟಿಕೊಂಡಿದ್ದಾರೆ. (ಅದರಲ್ಲಿ ಹಿಂದೆ ನನ್ನ ಪ್ರಕಟಣೆ – ಮಾರೀಷಾ ಕಲ್ಯಾಣ ಸೇರಿದಂತೆ, ಹಲವು ಪ್ರಸಂಗಗಳ ಆಟ ಕೂಟ ನಡೆಸಿದ್ದಾರೆ) ಅದಕ್ಕೊಂದು ಹೊಸ ಪ್ರಸಂಗ ಆರಿಸುವ ಕಾಲದಲ್ಲಿ ಇವರು ಸವಕಲು ಜಾಡು ಬಿಟ್ಟು, ಚಾಲ್ತಿಯಲ್ಲಿಲ್ಲದೇ ಮೂಲೆ ಸೇರಿದ ಸಾವಿರಾರು ಪ್ರಸಂಗಗಳ ಸಮೃದ್ಧಿಯಲ್ಲಿ ಗೋವಿಂದ ಭಟ್ಟರ ಹಳೇ ಪ್ರಸಂಗವನ್ನೇ ಆಯ್ಕೆ ಮಾಡಿದ್ದರು. ಅದಕ್ಕಿದ್ದ ಒಂದೇ ಕಾರಣ – ಪ್ರಸಂಗದ ನಾಮದ ಬಲ! ಗೋವಿಂದ ಭಟ್ಟರು ಯಕ್ಷಪ್ರಸಂಗವಾಗಿ ಪಳಗಿಸಿದ್ದು ವಿಶ್ವಖ್ಯಾತ ನಾಟಕಕಾರ ವಿಲಿಯಂ ಶೇಕ್ಸ್ ಪಿಯರನ ಮ್ಯಾಕ್ಬೆತ್! 

 

ಗೋವಿಂದ ಭಟ್ಟರ ಸಾಹಸಕ್ಕೆ ಕಡಿಮೆಯಿಲ್ಲದ ಸವಾಲು ಈಗ ಸಿಬಂತಿ-ಪಟ್ರಮೆ ದಂಪತಿಗಳ ಎದುರಿತ್ತು. ತಮ್ಮ ಯಕ್ಷಕೂಟದ ಸದಸ್ಯರು (ಬಹುತೇಕ ಮಕ್ಕಳು) ಹುಟ್ಟಾ ಕನ್ನಡಿಗರಿದ್ದರೂ ಇಂಗ್ಲಿಷ್ ಮಾಧ್ಯಮದ ಕೂಸುಗಳು. ಅವರಲ್ಲಿ ಮಹತ್ವಾಕಾಂಕ್ಷೆಯ ಹುಚ್ಚು ಕುದುರೆಯನ್ನು ರಕ್ತಪಥದಲ್ಲೇ ನಡೆಸಿದ ಮ್ಯಾಕ್ಬೆತ್ ದಂಪತಿಯ ದುರಂತಕ್ಕೆ ಆಶು-ಸಾಹಿತ್ಯವನ್ನು ನಿರೀಕ್ಷಿಸುವುದು ಅಸಾಧ್ಯವೇ ಇತ್ತು. ಹಾಗಾಗಿ ಇವರು ಪಟ್ಟಾಗಿ ಕುಳಿತು, ಇಂಗ್ಲಿಷ್ ಮೂಲ ಮತ್ತು ಮುಖ್ಯವಾಗಿ ಡಿವಿಜಿ ಅನುವಾದದ ಮ್ಯಾಕ್ಬೆತ್ ನಾಟಕಗಳನ್ನು ಎದುರಿಗಿಟ್ಟುಕೊಂಡರಂತೆ. ಪ್ರಸಂಗ ಸಾಹಿತ್ಯದ ಪದ್ಯಗಳಿಗನುಗುಣವಾಗಿ ಸಂಭಾಷಣೆಗಳನ್ನು ಬರೆದರು. ಸುಮಾರು ಒಂದು ತಿಂಗಳ ಈ ಸಾಹಸಕ್ಕೆ, ಕೂಟದ ಸದಸ್ಯರ ಶ್ರದ್ಧೆಯ ಪೋಷಣೆಯೂ ಸಿಕ್ಕಿತು. ಯಕ್ಷದೀವಿಗೆಯ ಮ್ಯಾಕ್ಬೆತ್ ಕೂಟ (ತಾಳಮದ್ದಳೆ) ಅಪಾರ ಜನಮನ್ನಣೆಯನ್ನೇ ಪಡೆಯಿತು. ಅದೇ ಸಂವಾದಗಳ ಬಲ ಇಲ್ಲಿ ಅಲೋಶಿಯನ್ನರ ಕೈಯನ್ನೂ ಹಿಡಿಯಿತು. ಹೆಚ್ಚು ಕಮ್ಮಿ ಏಳು ದಶಕಗಳ ನಿಷ್ಠಾವಂತ ಯಕ್ಷ-ವ್ಯವಸಾಯೀ ಬಲದ ಗೋವಿಂದ ಭಟ್ಟರ ಸಾಮರ್ಥ್ಯವೇ ನಿರ್ದೇಶನಕ್ಕೆ ನಿಂತಿತ್ತು. ಅಲೋಶಿಯಸ್ ಯಕ್ಷ ತಂಡ ಕಲಾಶಿಲ್ಪವನ್ನು ನಿಲ್ಲಿಸುವಲ್ಲಿ ಸೋಲಲಿಲ್ಲ ಎಂದರೆ ಸಣ್ಣ ಮಾತಾಯ್ತು. ನಿಸ್ಸಂದೇಹವಾಗಿ ಅಪಾರ ಜನಮನ್ನಣೆಯನ್ನೇ ಪಡೆಯಿತು. 

 

ಸಾಂಪ್ರದಾಯಿಕ ಯಕ್ಷಗಾನದ ನಡೆಗಳನ್ನು ತುಸುವೇ ಸುಲಭೀಕರಿಸಿಕೊಂಡು ಮ್ಯಾಕ್ಬೆತ್ ಪ್ರಯೋಗವಾದ್ದಕ್ಕೇ ಇರಬೇಕು ಇದನ್ನು ಯಕ್ಷರೂಪಕವೆಂದೇ ಹೆಸರಿಸಿದ್ದಾರೆ. ಭಾಗವತದ್ವಯರಾಗಿ ಪುತ್ತಿಗೆ ರಘುರಾಮ ಹೊಳ್ಳ ಮತ್ತು ದಿನೇಶ ಅಮ್ಮಣ್ಣಾಯ, ಮದ್ದಳೆಗಾರರಾಗಿ ಕೃಷ್ಣಪ್ರಕಾಶ ಉಳಿತ್ತಾಯ, ಚಂಡೆಯಲ್ಲಿ ಮುರಾರಿ ಕಡಂಬಳಿತ್ತಾಯ ಮತ್ತು ಚಕ್ರತಾಳದಲ್ಲಿ ಮಧುಸೂದನ ಅಲೆವೂರಾಯರು ಸುಯೋಗ್ಯ  ಹಿಮ್ಮೇಳವನ್ನೇ ಒದಗಿಸಿದರು. 

ರಕ್ತ ಚರಿತೆಗೆ ಹೆಚ್ಚಿನ ವಾತಾವರಣ ಕಲ್ಪಿಸುವಂತೆ ಪ್ರಸ್ತುತ ಪ್ರಯೋಗ ದೀವಟಿಗೆ ಬೆಳಕನ್ನು ಆಯ್ದುಕೊಂಡದ್ದು ಸರಿಯಾಗಿಯೇ ಇದೆ. ಆದರೆ ಅವನ್ನು ಬಳಸುವಲ್ಲಿ ತಂಡ ಹಿಂದಿನ ದೀವಟಿಗೆ ಪ್ರಯೋಗಗಳ ಅನುಭವ ಲಾಭವನ್ನು ಏನೂ ಪಡೆದಿಲ್ಲವಾದ್ದರಿಂದ ಪರಿಣಾಮದಲ್ಲಿ ಸೋತಿದೆ. ರಂಗದ ಇಕ್ಕೆಲಗಳಲ್ಲಿ ನಾಲ್ಕು ಎಣ್ಣೆಯದೇ ದೀವಟಿಗೆಗಳನ್ನು ಬೆಳಗಿದ್ದರು, ಅಡ್ಡಿಯಿಲ್ಲ. ಅದೇ ಎದುರಿಗಾದರೆ ಕಾಲಕಾಲಕ್ಕೆ ಎಣ್ಣೆ ಕೊಟ್ಟು, ಕರಿಕಳೆವವನ ರಗಳೆ, ಪ್ರೇಕ್ಷಕರ ಕಣ್ಣ ಕಿಸರಾಗುವ ಭಯ ಬಂದಿರಬೇಕು. ಗೆಳೆಯ ಮನೋಹರ ಉಪಾಧ್ಯರ ಉದಾರ ನೆರವಿನಲ್ಲಿ ಆರು ಗ್ಯಾಸ್ ದೀವಟಿಗೆಗಳ ಸಾಲನ್ನೇ ಎದುರಿಟ್ಟಿದ್ದರು. ದೀವಟಿಗೆಗಳ ಸಂಖ್ಯೆ ಏನೋ ದೊಡ್ಡದು. ಆದರೆ ಪ್ರಾಥಮಿಕವಾಗಿ ಅವುಗಳನ್ನು ರಂಗ ಬೆಳಗಿಸುವ ಪ್ರಖರತೆಗೆ ಏರಿಸಲಾಗದ ಬಂಧನವನ್ನೂ ತಂಡ ಕಟ್ಟಿಕೊಂಡಿತ್ತು. ದೀವಟಿಗೆಗೆ ಸಾಂಪ್ರದಾಯಿಕವಾಗಿ ಹೊಂದುವ ಬಾಳೆ ಕಂಬ ಹಾಗೂ ಸರಳ ಮಾವಿನೆಲೆಯ ತೋರಣವನ್ನು ಇವರು ಬಿಟ್ಟಿದ್ದರು. ಬದಲಿಗೆ ವಿದ್ಯುದ್ದೀಪಾಲಂಕೃತ ಮಂಟಪ ಬಳಸುವಂತೇ ಮರ ಹಾಗೂ ಬಟ್ಟೆಯ ತೋರಣಗಳಿರುವ ರಂಗಮಂಚವನ್ನು ಸಿದ್ಧಪಡಿಸಿದ್ದರು. ಜ್ವಾಲೆಗಳು ದೊಡ್ಡದಾಗುವುದಿರಲಿ, ಮೈದಾನದ ಗಾಳಿ ಹೆಚ್ಚಿ ಜ್ವಾಲೆಗಳ ಒಲೆತ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕವಾಗುವ ಅಪಾಯ ಇತ್ತು. (ಬಿಡಿ, ಎಲ್ಲ ಸಸೂತ್ರ ಮುಗಿಯಿತು.) ಇನ್ನೂ ದೊಡ್ಡ ಕೊರತೆ… 

 

ಹದಿಮೂರು ದೀವಟಿಗೆ ಬೆಳಗಿಯೂ ಪ್ರೇಕ್ಷಕನ ದೃಷ್ಟಿಗೆ ರಂಗಮಂಚ ಮತ್ತೂ ಮುಖ್ಯವಾಗಿ ಹಿಮ್ಮೇಳ ಕತ್ತಲ ಆಳದಲ್ಲಿ ಕುಳಿತಂತಿತ್ತು. ಇಲ್ಲೇ ಪೂರ್ವಸೂರಿಗಳ ಅನುಭವ ಉಪಯೋಗಕ್ಕೆ ಬರುತ್ತಿತ್ತು. ದೀವಟಿಗೆಯ ಬೆಳಕು ರಂಗ ಬೆಳಗುವುದರೊಡನೆ ಪ್ರೇಕ್ಷಕರ ಕಣ್ಣುಗಳನ್ನೂ ಧಾರಾಳ ತುಂಬುತ್ತಿತ್ತು. (ಗಮನಿಸಿ – ವಿದ್ಯುದ್ದೀಪಗಳಿಗೆ ಯಾವತ್ತೂ ಬೆನ್ನಿಗೆ ಮರೆ ಇರುತ್ತದೆ) ಸಹಜವಾಗಿ ಆಚಿನ ಬೆಳಕು ಪ್ರೇಕ್ಷಾಂಗಣಕ್ಕೆ ಕತ್ತಲಿನಂತೇ ಭಾಸವಾಗುತ್ತಿತ್ತು. ಬೆಳಕಿನ ವ್ಯವಸ್ಥೆ ಮಾಡಿದವರಿಗೆ ಈ ಕತ್ತಲಿನ ಅರಿವಷ್ಟೇ ಮೂಡಿದ್ದಕ್ಕೆ ಪ್ರತ್ಯೇಕ ಹಲವು ವಿದ್ಯುದ್ದೀಪಗಳನ್ನೂ ಅಳವಡಿಸಿದ್ದರು, ಪ್ರದರ್ಶನ ಸೋಲಲಿಲ್ಲ. 

 

ಮಹಾಯುದ್ಧ ಮುಗಿಸಿ ಬರುವ ಸೇನಾನಿ ಮ್ಯಾಕ್ಬೆತ್ ಮತ್ತು ಬ್ಯಾಂಕೋರನ್ನು ಮೂರು ಕ್ಷುದ್ರ ಶಕ್ತಿಗಳು ಆಮಿಷಕ್ಕೊಳಪಡಿಸುತ್ತವೆ. ಅದರಿಂದ ಹುಟ್ಟಿದ ನಿರೀಕ್ಷೆಗೆ, ಮಹಾರಾಜ ಕೊಟ್ಟ ಯೋಗ್ಯತಾ ಪುರಸ್ಕಾರ ಅಪಕಲ್ಪನೆಗಳ ಕೊಂಬೆ ಮೂಡಿಸುತ್ತದೆ. ಸಹಧರ್ಮಿಣಿಯ ಒತ್ತಾಸೆ ಮತ್ತು ದೈವಬಲಕ್ಕೆ ಪುರುಷಪ್ರಯತ್ನ ಸೇರಬೇಕೆಂಬ ತಪ್ಪು ದಾರಿಯಲ್ಲಿ ಮ್ಯಾಕ್ಬೆತ್ ಬಹುದೂರ ಹೋಗುತ್ತಾನೆ. ಮಹಾರಾಜನನ್ನು ಸೇರಿಸಿದಂತೆ ಸರಣಿ ಕೊಲೆಗಳನ್ನು ಮಾಡುತ್ತಾನೆ. ಜತೆಗೇ ಕುಸಿಯುವ ಮನೋಬಲಕ್ಕೆ ಮತ್ತೆ ಕ್ಷುದ್ರಶಕ್ತಿಗಳ ಆಶ್ವಾಸನೆಯನ್ನೇ ನೆಚ್ಚಿ ಸರ್ವನಾಶವನ್ನೇ ಕಾಣುತ್ತಾನೆ.

 

ಮ್ಯಾಕ್ಬೆತ್ ಕಥನದ ಸಾರ್ವದೇಶಿಕ ಮತ್ತು ಸಾರ್ವಕಾಲಿಕ ಸತ್ಯವೇ ಇದನ್ನು ವಿಶ್ವದ ಎಲ್ಲ ಭಾಷೆಗಳಲ್ಲೂ ರಂಗದ ಎಲ್ಲ ಪ್ರಕಾರಗಳಲ್ಲೂ ಸಂಪೂರ್ಣ ಗೆಲ್ಲಿಸಬಲ್ಲುದು. ಇಲ್ಲಿ ಅದರ ಪೂರ್ಣ ಯಶಸ್ಸಿಗೆ ಕಿಂಚಿತ್ ಊನ ತಂದದ್ದು ಇಂಗ್ಲಿಷ್ ಮೂಲದ ಅಂಕಿತ ನಾಮಗಳು. ಯಕ್ಷಗಾನೀಯ ವೇಷಭೂಷಣ, ಗಾನನರ್ತನ ಮತ್ತು ವರ್ತನೆಗಳಿಗೆ ಏನೂ ಹೊಂದದ ಮೂಲ ಹೆಸರುಗಳನ್ನು ಯಾಕೆ ಪ್ರಾದೇಶಿಕ ಮಾಡಲಿಲ್ಲವೋ ತಿಳಿಯಲಿಲ್ಲ. 

ಮೂಲ ಮ್ಯಾಕ್ಬೆತ್ ನಾಟಕದಲ್ಲಿ ಬರುವ ಮಾಟಗಾತಿಯರು, ಪ್ರಸಂಗದಲ್ಲೂ ಹೇಳುವಂತೆ ಯಕ್ಷಿಣಿಯರು, ನಿಜದಲ್ಲಿ ಕ್ಷುದ್ರ ಶಕ್ತಿಗಳು (ನಮ್ಮದೇ ಮನಸ್ಸಿನ ವಿಕಾರಗಳು). ನನ್ನ ಅಂದಾಜಿನಂತೆ ಅವು ಯಕ್ಷಗಾನದ ಹೆಣ್ಣು ಕಾಟುಬಣ್ಣಕ್ಕೆ ಹೇಳಿ ಮಾಡಿಸಿದಂತಿವೆ. (ಹಾಗೆ ಮಾಡಿದ್ದಲ್ಲಿ ಪ್ರದರ್ಶನದ ಬಣ್ಣದ ವೇಷದ ಕೊರತೆಯನ್ನೂ ಹಿಂಗಿಸಿದಂತಾಗುತ್ತಿತ್ತು.) ಮೂಲ ನಾಟಕದ ಅರಿವಿಲ್ಲದ ಪ್ರೇಕ್ಷಕರು ಇಲ್ಲಿ ಬಂದ ಝಗಝಗಿಸುವ ಮೂರು ವೇಷಗಳನ್ನು ‘ದೇವೀ’ಪಾತ್ರಕ್ಕೆ ಗೊಂದಲಿಸಿಕೊಳ್ಳುವ ಅವಕಾಶ ಹೆಚ್ಚಿದೆ. 

ಉಳಿದಂತೆ ಶಕ್ತವಾದ ಹಿಮ್ಮೇಳಕ್ಕೆ ಹೊಂದಿದಂತೆ ಹಿತಮಿತವಾದ ಕುಣಿತ, ಗತ್ತು ಗೈರತ್ತು, ವೇಷ ಭೂಷಣ, ಮಾತು ಅಭಿನಯ, ರಂಗ ನಡೆಗಳು ಯಾವ ವೃತ್ತಿಪರಿಣತರ ಪ್ರಯೋಗಗಳಿಗೆ ಕಡಿಮೆ ಇಲ್ಲದಂತೆ ತುಂಬಿ ಬಂತು. ಯಾವುದೇ ವೇದಿಕೆಯಲ್ಲೂ ಜಯಭೇರಿ ಬಾರಿಸುವಂತೆ ಮೂಡಿದ ಈ ಪ್ರದರ್ಶನವನ್ನು ಆಯೋಜಿಸಿದ ಸಂತ ಅಲೋಶಿಯಸ್ ಕಾಲೇಜಿಗೂ ನಿರ್ದೇಶಿಸಿದ ಸೂರಿಕುಮೇರು ಗೋವಿಂದ ಭಟ್ಟರಿಗೂ ಮನನೀಯ ಹಿಮ್ಮೇಳವನ್ನು ಒದಗಿಸಿದ ವೃತ್ತಿಪರರ ಬಳಗಕ್ಕೂ ಕೊನೆಯಲ್ಲಿ ದಿಟ್ಟವಾಗಿ ರಂಗದಲ್ಲಿ ಮೆರೆದ ವಿದ್ಯಾರ್ಥಿ, ಅಧ್ಯಾಪಕ ಹಾಗೂ ಕೆಲವೇ ಅತಿಥಿ ಕಲಾವಿದರ ಕೂಟವಾದ ‘ಯಕ್ಷ ತಂಡಕ್ಕೂ ಹಾರ್ದಿಕ ಅಭಿನಂದನೆಗಳು. http://www.athreebook.com