ಮಂಗಳೂರಿನಲ್ಲಿ ನಾನು ವೃತ್ತಿಪರನಾಗಿ (ಪುಸ್ತಕೋದ್ಯಮಿ – ೧೯೭೫) ನೆಲೆಸಿದಂದಿನಿಂದ ‘ಸಾಹಸ’ದ ಹೊದಿಕೆಯಲ್ಲಿ ಪ್ರಾಕೃತಿಕ ಅನ್ವೇಷಣೆಯನ್ನು (ಬೆಟ್ಟ, ಕಾಡು, ಜಲಪಾತ ಇತ್ಯಾದಿ ಸೇರಿದಂತೆ) ಗಟ್ಟಿ ಹವ್ಯಾಸವಾಗಿ ರೂಢಿಸಿಕೊಂಡೆ. ಅದರಲ್ಲಿ ಗಳಿಸಿದ ಸಂತೋಷ ಇತರರಿಗೂ ಪ್ರೇರಕವಾಗಬೇಕೆಂಬ ಆಸೆಯಲ್ಲಿ ಯುಕ್ತ ಪ್ರಚಾರಕ್ಕೂ ಇಳಿದೆ. ಆ ದಿನಗಳಲ್ಲಿ ಇದ್ದ ಬಹುಶಕ್ತ ಮಾಧ್ಯಮ ಮುದ್ರಣದ್ದು. ಅದಾದರೂ ನನ್ನ ಅಷ್ಟೇನೂ ಜನಪ್ರಿಯವಲ್ಲದ ವಿಷಯಕ್ಕೆ, ಶಬ್ದಗಳ ಮಿತಿಯನ್ನೂ ಚಿತ್ರಗಳಲ್ಲಿ ಗುಣಮಟ್ಟದ ಮಡಿಯನ್ನೂ ತೋರುತ್ತಿದ್ದವು. ಆ ಕಾಲದಲ್ಲಿ ಚಿತ್ರಗ್ರಹಣವೇ ದುಬಾರಿ. ಕ್ಯಾಮರಾ, ರೋಲ್, ಸಂಸ್ಕರಣ, ಮುದ್ರಣ ಎಲ್ಲವೂ ಹಣಭಾರೀ ಕರ್ಮಗಳು. ಅಷ್ಟಾಗಿಯೂ ಇಂದಿನಂತೆ ಚರವಾಣಿಗಳೆಲ್ಲ ಕ್ಯಾಮರಾಗಳಲ್ಲ, ಇದ್ದವೂ ನಾವು ಉದ್ದೇಶಪಟ್ಟ ದೃಶ್ಯದ ಪ್ರತಿರೂಪ ಕೊಡುವ (ಡಿಜಿಟಲ್) ತಂತ್ರಜ್ಞಾನಾಧಾರಿತವೂ ಅಲ್ಲ. ಇನ್ನು ನಮ್ಮ ಚಿತ್ರಗ್ರಹಣದ ಸನ್ನಿವೇಶಗಳೋ ತೀರಾ ಒರಟು – ಕಾಡು, ಬಂಡೆ, ಮಳೆ, ಕತ್ತಲೆ, ನೀರು… ಒಟ್ಟಾರೆಯಲ್ಲಿ ಪರಿಣಾಮಕಾರಿ ಚಿತ್ರಗಳೇ ವಿರಳ.
ನಾವು ಇವೆಲ್ಲವನ್ನು ಮೀರಿ ಉತ್ತಮವನ್ನೇ ಕೊಟ್ಟರೂ ಮಾಧ್ಯಮಗಳು ಜಿಪುಣತನ ತೋರುತ್ತಿದ್ದವು. ಹಾಗಾಗಿ ನಾನು ವೈಯಕ್ತಿಕ ಅಗತ್ಯಗಳಿಗಾದರೂ ಇರಲಿ ಎಂಬಂತೆ, ಹೆಚ್ಚು ವಿವರಗಳನ್ನು ತುಂಬಿದ ಕಚ್ಚಾ ನಕ್ಷೆಗಳನ್ನು, ನನ್ನ ಅಪರಿಣತ ಕೈಗಳಲ್ಲೇ ಬರೆಯುತ್ತಿದ್ದೆ. ಚಿತ್ರಗಳನ್ನು ನಾನು ಸಾರ್ವಜನಿಕಕ್ಕೆ ಮುಕ್ತವೇ ಇಡುತ್ತಿದ್ದೆ. ಅವುಗಳಿಗೆ ನನ್ನ ಲೇಖನಗಳ ಜತೆ ಪ್ರಕಟಣಾ ಭಾಗ್ಯ ಎಂದೂ ಬಂದದ್ದಿಲ್ಲ. ಆದರೆ ಭಾಗಿಗಳಲ್ಲಿ ಕೆಲವರು, ನನ್ನಿಂದ ಮಾರ್ಗದರ್ಶನ ಕೇಳಿ ಬಂದವರು ತುಂಬ ಪ್ರೀತಿಯಿಂದಲೇ ಪ್ರತಿ ಮಾಡಿಸಿಕೊಂಡು ಹೋಗುತ್ತಿದ್ದರು. (ಈಗ ಯಾರೆಲ್ಲ ಉಳಿಸಿಕೊಂಡಿದ್ದಾರೋ ತಿಳಿದಿಲ್ಲ) ಸದ್ಯ ನನ್ನಲ್ಲಿ ನೂರಕ್ಕೂ ಮಿಕ್ಕು ನಕ್ಷೆಗಳಿವೆ. ಇಂದಿನ ವಿದ್ಯುನ್ಮಾನ ಮಾಧ್ಯಮದ ಬಲದಲ್ಲಿ, ಛಾಯಾಚಿತ್ರಗಳ ಕೊರತೆಯಲ್ಲಿ, ಅವುಗಳಾದರೂ ಲೇಖನಗಳಿಗೆ ಹೆಚ್ಚಿನ ಬಲ ಕೊಡುತ್ತವೆ. ಅವುಗಳ ಬಲದಲ್ಲಿ ನನ್ನ ಮಾಸಿದ ನೆನಪೂ ಹೊಸ ಚಿಗುರುಗಳನ್ನು ಮೂಡಿಸುತ್ತಿದೆ. ಹಾಗೆ ಬಂದ ಇನ್ನಷ್ಟು ಗುಹಾ ಟಿಪ್ಪಣಿಗಳನ್ನು ಇಲ್ಲಿ ಒಟ್ಟು ಮಾಡಿ, ಪ್ರಸ್ತುತ ಮೂರರ ಸರಣಿಗೆ ಮಂಗಳ ಹಾಡುತ್ತೇನೆ.
ಸುಳ್ಳಮಲೆಯ ತೀರ್ಥದ ಗುಹೆ
“ಅಶೋಕ್ವರ್ಧನ್ ನೀವು ಈ ಸುಳ್ಳಮಲೆ-ಬಲ್ಲಮಲೆ ಕಾಡಿನೊಳಗಿರುವ ಗುಹೆಯಳಗಿನ ಜಲಪಾತ ನೋಡಲೇಬೇಕು” ಎಂದು ಮೊದಲ ಕಿಡಿ ಹಚ್ಚಿದವರು ಏರ್ಯ ಲಕ್ಷ್ಮೀನಾರಾಯಣ ಆಳ್ವ. ಆ ಹೊಸತರಲ್ಲೇ ಒಂದು ದಿನ (೨೫-೨-೧೯೯೦) ನಮ್ಮ ಏಳು ಮಿತ್ರರ ಬಳಗ, ಬೈಕ್ ಸ್ಕೂಟರುಗಳನ್ನೇರಿ ಸುಳ್ಳಮಲೆಯ ತೀರ್ಥದ ಗುಹೆ ವಿಚಾರಿಸಿಕೊಂಡು ಹೋಗಿತ್ತು. ಮಂಗಳೂರು – ಪುತ್ತೂರು ದಾರಿಯಲ್ಲಿ ಸೂರಿಕುಮೇರಿಗೆ ಮೊದಲೇ ಬಲಕ್ಕೆ ಸಿಗುವ ಮಣ್ಣ ದಾರಿಯವರೆಗೆ ಅವರಿವರಲ್ಲಿ ವಿಚಾರಿಸಿಕೊಂಡೇ ಹೋಗಿದ್ದೆವು. ಅಲ್ಲಿ ನಮ್ಮ ಅದೃಷ್ಟಕ್ಕೆ ಶಂಭುಕದ ಬಾಲಕೃಷ್ಣ ಶೆಟ್ಟಿ ಮಾರ್ಗದರ್ಶಿಯಾಗಿ ಒದಗಿದರು..
ಅಲ್ಲಿ ವರ್ಷಕ್ಕೊಮ್ಮೆ ಚೌತಿಯ ಆಸುಪಾಸಿನಲ್ಲಿ ಮಾತ್ರ ಆರಾಧನೆ ಮತ್ತು ಗುಹಾಪ್ರವೇಶದ ಸಂಭ್ರಮ ನಡೆಯುತ್ತದಂತೆ. ನಮ್ಮ ಒಲವೇನಿದ್ದರೂ ಪ್ರಾಕೃತಿಕ ಸತ್ಯಗಳಿಗೆ ಮಾತ್ರ. ಅದರಲ್ಲೂ ಅದುವರೆಗೆ ನಾವು ‘ಶೋಧಿಸಿದ’ ಮುರಕಲ್ಲಿನ ಗುಹೆಗಳಿಗೆ (ಪೊಳ್ಳು) ವ್ಯತಿರಿಕ್ತವಾಗಿ ಇದು ಕಗ್ಗಲ್ಲ ಗುಂಡುಗಳ ಸಡಿಲ ಒಟ್ಟಣೆಯಂತಿತ್ತು. ಹಾಗಾಗಿ ಕೂಡಲೇ ಶೋಧಕ್ಕಿಳಿಯುವ ಉತ್ಸಾಹ ತೋರಿದೆವು. ಆದರೆ ಮಾರ್ಗದರ್ಶಿಯಾಗಿ ಬಂದಿದ್ದಾತ “ಇಲ್ಲ, ಈಗ ನೀವು ಗುಹಾಪ್ರವೇಶ ಮಾಡಿದರೆ ಸ್ಥಳೀಯ ನಂಬಿಕೆಗೆ ಅವಮಾನವಾಗುತ್ತದೆ” ಎಂಬ ಅರ್ಥದ ಸೌಮ್ಯ ಪ್ರತಿರೋಧ ತೋರಿದರು. ನಿಮಗೆಲ್ಲ ತಿಳಿದಂತೆ, ನಾವೆಂದೂ (ಗುಹಾನ್ವೇಷಣೆ) ಪ್ರಾಕೃತಿಕ ಶೋಧದ ದಾರಿಯಲ್ಲಿ ಸ್ಥಳೀಯರ ವಿರೋಧವನ್ನು ಬಯಸಿದ್ದಿಲ್ಲ. ಹಾಗಾಗಿ ತೀರ್ಥದ ಗುಹೆಯನ್ನು ಅಂದು ಬರಿದೇ ಇಣುಕಿ ಮುಗಿಸಿದೆವು. ಆದರೆ ತೀರ್ಥ ಗುಹಾದ್ವಾರದ ಪಕ್ಕದಲ್ಲೇ ಇನ್ನೊಂದು ಬಂಡೆ ಸಂದು ಪೊದರು ಮುಚ್ಚಿಕೊಂಡಿತ್ತು. ಅದರ ಕುರಿತು ಮಾರ್ಗದರ್ಶಿ ಬಾಲಕೃಷ್ಣ ಶೆಟ್ಟಿಗೇನೂ ತಿಳಿದಿರಲಿಲ್ಲ. ಮತ್ತದು ಸ್ಥಳೀಯ ನಂಬಿಕೆಯ ಭಾಗವೂ ಆಗಿರಲಿಲ್ಲ. ಹಾಗಾಗಿ ಅಂದಿನ ನಮ್ಮ ಶೋಧ ಅದರ ಹತ್ತಿಪ್ಪತ್ತು ಅಡಿಯ ಆಳಕ್ಕೇ ಸೀಮಿತವಾಯ್ತು. ಅಲ್ಲಿ ನಾವು ನುಸುಳಲಾಗದ ಒಂದೆರಡು ಕವಲು ಮತ್ತು ಮಳೆನೀರಿನೊಡನೆ ಬಂದಿರಬಹುದಾದ ಕೆಲವು ಕಸ ಬಿಟ್ಟರೆ ನೋಡುವುದೇನೂ ಇರಲಿಲ್ಲ. ಹಾಗಾಗಿ ಮುಂದೆಂದಾದರೂ ಚೌತಿಯ ‘ಪುಣ್ಯ ಕಾಲ’ದಲ್ಲೇ ಬಂದು ತೀರ್ಥಗುಹೆಯನ್ನೂ ನೋಡುವುದಾಗಿ ಬಾಲಕೃಷ್ಣ ಶೆಟ್ಟಿಗೆ ಆಶ್ವಾಸನೆ ಕೊಟ್ಟು ಮರಳಿದೆವು. ಹಾಗೇ ಮುಖ್ಯ ಉದ್ದೇಶ ಸೋತದ್ದಕ್ಕೆ ಹ್ಯಾಪ್ಮೋರೆ ಹೊತ್ತು ಬರುತ್ತಿದ್ದಾಗ ಜೋಡುಮಾರ್ಗದಲ್ಲಿ ಹೊಸದಾಗಿ ಮತ್ತೆ ನಾಲ್ಕು ಮಿತ್ರರು ತಡವಾಗಿ ಬಂದು ಸೇರಿಕೊಂಡರು. ಆಗ ಹೊಸದೇನು ಶೋಧಿಸಬಹುದೆಂದು ತಲೆ ಕೆರೆದಾಗ ನೆನಪಿನಿಂದ ಉದುರಿತ್ತು ಪಿಲಿಮಾಂಟೆ!
ನಾವು ಹೋದದ್ದು ಅಪ್ಪಟ ಬೇಸಗೆಯ ದಿನ (೨೫-೨-೧೯೯೦). ಹಾಗಾಗಿಯೇ ಏನೋ ಗುಹಾ ಶಿಲ್ಪಿ, ಅರ್ಥಾತ್ ಹರಿನೀರು, ತೊರೆ ಏನೂ ಕಾಣಿಸಲಿಲ್ಲ. ಒಳಗೆ ಕೆಲವು ಕವಲುಗಳು, ಹಲವು ಏರು ಜಾರುಗಳು, ದೂಳೇಳುವ ಮತ್ತು ಜವುಗಿನ ನೆಲೆಗಳಿದ್ದರೂ ನಿಗೂಢವೇನೂ ಸಿಗಲಿಲ್ಲ. ವ್ಯಾಪ್ತಿ ದೊಡ್ಡದೇ ಆದರೂ ಎಲ್ಲ ಕವಲುಗಳು ಸಣ್ಣ ಸಣ್ಣ ಕುರುಡು ಕೊನೆಗಳಲ್ಲೇ ಮುಗಿದಿತ್ತು.
ಗಣಪತಿ ತೀರ್ಥ – ಸುಳ್ಳಮಾಲೆ?
ಸುಳ್ಳಮಲೆಯ (ಗಣಪತಿ) ತೀರ್ಥಗುಹೆಯ ಪ್ರಥಮ ಭೇಟಿ ಸಂದು ನಾಲ್ಕು ವರ್ಷವೇ ಕಳೆದಿತ್ತು. ಅಂದು (೯-೯-೧೯೯೪) ಪಿರಿಪಿರಿ ಮಳೆಯಿದ್ದರೂ ಅಜ್ಜನ ಮನೆಯ ಚೌತಿಯ ಊಟ ತಪ್ಪಿಸಿಕೊಳ್ಳುವುದುಂಟೇ? ನಾನು ದೇವಕಿಯೂ ಮೈಗೆ ರಾಣೀಕೋಟು, ತಲೆಗೆ ಹಾಳೆಮೆಟ್ಟು ಹಾಕಿ, ಬೈಕೇರಿ ಪುತ್ತೂರು ದಾರಿಯಲ್ಲಿ ಧಾವಿಸಿದ್ದೆವು. ಆದರೆ ಸುಳ್ಳಮಲೆಯ ಕವಲಿನಲ್ಲಿ ಜಾತ್ರೆಯ ಸಂಭ್ರಮ ಕಂಡಾಗ, ಒಮ್ಮೆಲೇ ತೀರ್ಥ ದರ್ಶನದ ಅವಕಾಶ ಮುಕ್ತವಿದೆ ಎಂಬ ಅರಿವು ಜಾಗೃತವಾಯ್ತು. ಸಮಯ, ಸಿದ್ಧತೆಗಳ ಯೋಚನೆ ಬಿಟ್ಟು ನಮ್ಮ ಸವಾರಿ ಅತ್ತ ಹೊರಳಿಕೊಂಡಿತು. ದಾರಿ ಮುಗಿದಲ್ಲಿಗೆ ಬೈಕ್ ಬಿಟ್ಟು ಜಾತ್ರೆಯಲ್ಲಿ ಒಂದಾದೆವು.
ಸವಕಲು ಜಾಡನ್ನು ಭಕ್ತ ಸೇವಾ ಮಂಡಳಿ ಹಸನಾಗಿಸಿತ್ತು. ಬಂಡೆಯ ಮೇಲೆ ನಡೆಮಡಿಯಷ್ಟಕ್ಕೆ ಸುಣ್ಣವೋ ಮರಳೋ ಹಾಕಿ, ಪಾಚಿಯಿಂದ ಯಾರೂ ಜಾರದ ವ್ಯವಸ್ಥೆ ಮಾಡಿದ್ದರು. ಗುಹಾದ್ವಾರಕ್ಕೂ ಇಪ್ಪತ್ತಡಿ ಮೊದಲೇ ಸಿಕ್ಕ ಭಕ್ತಾದಿಗಳ ಸರತಿ ಸಾಲಿನ ಕೊನೆಗೆ ನಾವೂ ಸೇರಿಕೊಂಡೆವು. ವರ್ಷದಲ್ಲಿ ನಾಲ್ಕೈದು ದಿನಗಳಷ್ಟೇ ಸಿಗುವ ಅವಕಾಶವಾದ್ದರಿಂದ ಎಲ್ಲೆಲ್ಲಿಂದಲೋ ಬರುವ ಭಕ್ತರಿಂದಾಗಿ ಇಪ್ಪತ್ನಾಲ್ಕೂ ಗಂಟೆ ಸರದಿ ಸಾಲು, ತೀರ್ಥಸ್ನಾನ ಮುಗಿಯುವುದೇ ಇಲ್ಲವಂತೆ. ಅಂದರೆ ಕೆಲವೊಮ್ಮೆ ಸರತಿ ಸಾಲು ನೂರಿನ್ನೂರಡಿ ಉದ್ದಕ್ಕೂ ಬೆಳೆಯುವುದಿದೆಯಂತೆ. ನಾವು ಹೋದಂದು ಬಹುತೇಕ ಗಂಡು ಭಕ್ತರು, ಕೇವಲ ತುಂಡು ಮುಂಡುಟ್ಟು, ಅಲ್ಲಿನ ಆರಾಧನಾ ವಿಧಾನಕ್ಕೆ ಹೊಂದುವ ಹೂ, ಎಲೆ, ಅಡಿಕೆ ಮುಂತಾದವನ್ನು ಕೈಯಲ್ಲಿ ಹಿಡಿದಿದ್ದರು. (ಮಹಿಳೆಯರು ಎಂದಿನ ಸಾದಾ ವಸ್ತ್ರಗಳಲ್ಲೇ ಇದ್ದರು.) ಆ ಕಾಲದಲ್ಲಿ ‘ವಸ್ತ್ರ ಸಂಹಿತೆ’ ಹೇರುವ ‘ಧರ್ಮದರ್ಶಿ’ಗಳು ‘ಉದ್ಭವಿ’ಸಿರಲಿಲ್ಲವಾಗಿ ನಾವು ಪಾರಾದೆವು. ಚಪ್ಪಲಿಗಳನ್ನಷ್ಟೇ ಹೊರ ಬಿಟ್ಟು, ಮಳೆಕೋಟು, ಟೊಪ್ಪಿಯಿದ್ದಂತೇ ಗುಹೆ ಪ್ರವೇಶಿಸಿದ್ದೆವು. ಗಣಪತಿ ಗುಹೆ ಶೇಡಿ ತೊಳೆದು ಹೋದ ಮುರಕಲ್ಲ ಪೊಳ್ಳು ಅಲ್ಲ, ಕಗ್ಗಲ್ಲಿನದು. ಹಾಗೆಂದು ಇದು ಸುಣ್ಣದ ಅಂಶ ಕರಗಿ ತೊಂಗಲುಗಳನ್ನಿಳಿಸಿ ಆದ (ಬುರ್ರಾ, ಮೆಘಾಲಯದ ಕೆಲವು ಗುಹೆಗಳಂಥ) ರಚನೆಯೂ ಅಲ್ಲ; ಸಡಿಲವಾಗಿ ರಾಶಿ ಬಿದ್ದಂತಿದ್ದ ಬಂಡೆ ಗುಂಡುಗಳ ನಡುವಣ ಸಂದು. ಇಂದು ಮನುಷ್ಯ ನುಗ್ಗುವ ಸಂದಿನಿಂದಾಚಿನ ಮಣ್ಣು ಎಂದೂ ತೊಳೆದು ಈ ವ್ಯವಸ್ಥೆಯೂ ಮುಚ್ಚಿಹೋಗಬಹುದು ಅಥವಾ ಬೇರೇ ರೂಪವನ್ನೂ ತಾಳಬಹುದು. ನಾವು ಬಂಡೆಗಳ ಸಂದು, ಹಾಸಿನ ಮೇಲೆ ಬಹಳ ಎಚ್ಚರದ ಹೆಜ್ಜೆಗಳನ್ನಿಡುತ್ತ ಇಳಿದೆವು. ಅದೃಷ್ಟಕ್ಕೆ ಇಳಿಜಾಡಿನ ಹೆಚ್ಚಿನೆಲ್ಲ ಬಂಡೆ ಸಂದುಗಳಲ್ಲಿ ಮಣ್ಣು ತುಂಬಿ, ಏಕವಾಗಿ ಬೆಸೆದಿದ್ದುದರಿಂದ ಕೊರಕಲಿಗೆ ಸಿಕ್ಕಿಕೊಳ್ಳುವ ಅಪಾಯವೇನೂ ಇರಲಿಲ್ಲ.
ಗುಹೆ ಆಕಾಶಕ್ಕೆ ಮುಖ ಮಾಡಿದಂತಿದೆ ಮತ್ತು ಬಹುತೇಕ ನೇರವೇ ಇದೆ. ಹಾಗಾಗಿ ದಿನದ ಬೆಳಕೇ ನಮ್ಮ ಕಣ್ಣುಗಳನ್ನು ನಿಧಾನಕ್ಕೆ ಒಳಗಿನ ಕತ್ತಲಿಗೆ ಹೊಂದಿಸಿಬಿಡುತ್ತದೆ. ಹೀಗೆ ಸೂರ್ಯಪ್ರಕಾಶ, ಬಂಡೆಗಳ ಎಡೆಯಲ್ಲಿ ಸಿಕ್ಕ ಮಣ್ಣು, ನೀರಿಗೆ ಗುಹೆಯ ಮೊದಲೊಂದಿಷ್ಟು ದೂರ ಸಹಜವಾಗಿ ಬೆಳೆದ ಸಣ್ಣಪುಟ್ಟ ಸಸ್ಯಗಳ ಹಸಿರು ಮತ್ತು ಹೂ ಗುಹೆಗೆ ಅಲಂಕಾರವೇ ಸರಿ. ಆಳಕ್ಕಿಳಿದಂತೆ ಕೆಲವು ಭಕ್ತಾದಿಗಳು ಹಿಡಿದ ಟಾರ್ಚೋ ಸೇವಾ ಸಂಸ್ಥೆಗಳು ಉರಿಸಿದ ದೀವಟಿಗೆಗಳೋ ದಾರಿ ಬೆಳಗಿದ್ದವು. (ಒಳಗಿನ ಬೆಳಕಿನ ವ್ಯವಸ್ಥೆಯ ವಿವರ ನನಗಿಂದು ನೆನಪಾಗುತ್ತಿಲ್ಲ.) ನನ್ನಂಥ ‘ನಾಲ್ಕು ಕಣ್ಣುಳ್ಳವರ’ ಸಣ್ಣ ವೈಯಕ್ತಿಕ ಸಂಕಟವನ್ನೂ ಇಲ್ಲೇ ಹೇಳಿಬಿಡುತ್ತೇನೆ. ಸಾಮಾನ್ಯವಾಗಿ ಗುಹೆಗಳ ಒಳಗೆ ಗಾಳಿಯಲ್ಲಿ ತೇವಾಂಶ ಜಾಸ್ತಿ ಇರುತ್ತದೆ. ಗಣಪತಿ ಗುಹೆಯಲ್ಲಂತೂ ಮಳೆ, ತಳದ ಜಲಪಾತದ ಪ್ರಭಾವ ಸೇರಿ ತೇವಾಂಶ ಅಧಿಕಾಧಿಕವೇ ಇತ್ತು. ಸಹಜವಾಗಿ ನನ್ನ ಕನ್ನಡಕ ಮಂಜುಗಟ್ಟಿ, ಮೊದಲಲ್ಲೇ ಅದನ್ನು ತೆಗೆಯಬೇಕಾಯ್ತು. ಹಣ, ವಾಚು, ಕಾಗದ ಪತ್ರಗಳು ಇತ್ಯಾದಿಗಳೊಡನೆ ಅದನ್ನೂ ಪ್ಲ್ಯಾಸ್ಟಿಕ್ ಕವರಿಗೆ ಹಾಕಿ ಒಳ ಕಿಸೆಯಲ್ಲಿ ಭದ್ರಪಡಿಸಿಬಿಟ್ಟೆ. ಪರಿಣಾಮವಾಗಿ ನನ್ನ ದೃಷ್ಟಿ ಮಯಮಯ, ನಾನು ಬಹಳ ಕಷ್ಟದಲ್ಲೇ ತೆಗೆದ ಕೆಲವೇ ಚಿತ್ರಗಳೂ ಮಸಮಸಕು!!
ಬಂಡೆ ಸಂದುಗಳಿಂದ ಜಿನುಗುವ ನೀರು, ಕಾಲಿಟ್ಟಲ್ಲಿ ಕೈ ಆಧರಿಸಿದಲ್ಲೆಲ್ಲಾ ತಚಪಿಚ ಕೆಸರು, ಜಾರು ಸುಧಾರಿಸಿಕೊಳ್ಳುತ್ತ ಇಳಿದೆವು. ಸುಮಾರು ಐವತ್ತರವತ್ತಡಿ ಇಳಿದಲ್ಲಿಗೆ ಮೊದಲ ಹಂತ ಮುಗಿದಿತ್ತು. ಮುಂದೆ ಸಾಮಾನ್ಯ ದಿನಗಳಲ್ಲಿ ಬಂದರೆ, ಯಾವ ಆಸರೆಯೂ ಒದಗದ ಎಂಟು ಹತ್ತಡಿ ಆಳದ ನೇರ ತಗ್ಗು ಇದೆ. ಅಲ್ಲಿ ತೀರ್ಥಸ್ನಾನದ ಕಾಲದಲ್ಲಿ ಮಾತ್ರ ಸ್ಥಳ ಪುರೋಹಿತರು ಸಾಂಪ್ರದಾಯಿಕವಾಗಿ ಕೂರಿಸುವ ಎಂಟೋ ಒಂಬತ್ತೋ ಗೆಣ್ಣಿನ ಕೇರ್ಪು (ಗಂಟಿನ ಬಿದಿರು – ಒಂದೇ ಕಾಲಿನ ಏಣಿ ಎನ್ನಬಹುದು) ಇತ್ತು. ತಳದಲ್ಲಿ ಗುಹೆ ಸುಮಾರು ಹತ್ತಡಿ ಎತ್ತರ, ಮೂರಡಿ ಅಗಲ, ಹಾಗೂ ಹದಿನೈದಡಿ ಉದ್ದದ ಓಣಿಯಂತಿದೆ ಮತ್ತು ಮನುಷ್ಯ ಪ್ರವೇಶಕ್ಕೆ ಕೊನೆಯನ್ನೂ ತೋರುತ್ತದೆ. ಆ ಹೊಂಡದಲ್ಲಿ ಎರಡೋ ಮೂರೋ ದಿಕ್ಕುಗಳಿಂದ ವಿವಿಧ ಗಾತ್ರಗಳ ಜಲಧಾರೆ ಧುಮುಗುಡುತ್ತಿತ್ತು. ಸಹಜವಾಗಿ ಅಲ್ಲಿ ನೀರಿನ ಆಂದೋಲನವೂ ತೀವ್ರವಿತ್ತು. ಗುಹೆಯ ತುಸು ಇಳಿಜಾರಿನಿಂದಾಗಿ ಈ ಕೊನೆಯಲ್ಲಿ ನೀರು ಎರಡು-ಮೂರಡಿ ಆಳವಿದ್ದರೆ ಆ ಕೊನೆ ಮುಟ್ಟುವಾಗ ನನಗೆ (ಐದಡಿ ಹನ್ನೊಂದಿಂಚು) ಕಂಠ ಮಟ್ಟದ ಮುಳುಗೇ ಸಿಕ್ಕಿತ್ತು. ಉದ್ದಕ್ಕೂ ಆಯಕಟ್ಟಿನ ಜಾಗಗಳಲ್ಲಿ ಸ್ವಯಂ ಸೇವಕರು ನಿಂತಿದ್ದು, ಅಗತ್ಯವಿದ್ದವರಿಗೆ ಸೂಚನೆ, ಕೈಯಾಸರೆಗಳನ್ನೂ ಕೊಡುತ್ತಿದ್ದುದರಿಂದ, ಅಘಟಿತ ಘಟನೆಗಳಿಗೇನೂ ಅವಕಾಶವಿರಲಿಲ್ಲ. ಗುಹೆಯ ತಳ ಮಟ್ಟದ ಕೆಲವು ಪೊಳ್ಳುಗಳಲ್ಲಿ ನೀರು ಬಂದಷ್ಟೇ ವೇಗದಲ್ಲಿ ಮತ್ತಷ್ಟು ಕೆಳಗಿನ ಮಾಟೆಗಳಿಗೆ ಹರಿದು ಹೋಗುತ್ತಿದ್ದುದರಿಂದ ಆಳ ಹೆಚ್ಚುವ ಅಪಾಯವೂ ಇರಲಿಲ್ಲ. ಅಲ್ಲಿನ ನೀರು ಗುಡ್ಡದ ತಪ್ಪಲಿನ ಯಾವುದೋ ಅಂಚುಗಳಲ್ಲಿ ಹೊರ ಹರಿಯುತ್ತದೆ. ಮತ್ತು ಇಲ್ಲಿ ಭಕ್ತರು ಅರ್ಪಿಸಿದ ಹೂ, ಎಲೆ, ಅಡಕೆಗಳನ್ನು ಜನ ಅಲ್ಲಿ ಧಾರಾಳ ಸಂಗ್ರಹಿಸುವುದೂ ಇದೆ ಎಂದು ಕೇಳಿದ್ದೇನೆ.ನೀರ ತಾಡನ ಮುಗಿಸಿ, ಸೀರ್ಪನಿಗಳ ಮುಸುಕು ಸರಿಸಿ, ಬಿದಿರ ಗಂಟುಗಳನ್ನು ಹುಶಾರಾಗಿ ಎಣಿಸಿ, ನಿಗೂಢ ಕತ್ತಲೆ-ಬೆಳಕಿನ ಆಟದಲ್ಲಿ ಜಾರು ಬಂಡೆಗಳನ್ನೇರುತ್ತ, ಎದುರಿನಿಂದಿಳಿಯುವವರನ್ನು ಸುಧಾರಿಸುತ್ತ, ಕೆಳಗಿನ ಭೋರ್ಗರೆತದ ಸದ್ದು, ಭಕ್ತರ “ಗೋವಿಂದ” ಘೋಷ (ಹೆದರಿದವರ ಬೊಬ್ಬೆಯೂ ಇರಬಹುದು) ಎಲ್ಲ ಸೇರಿ, ಹೊರಗೆ ಬರುವಾಗ ನಮ್ಮಲ್ಲೂ ಏನೋ ಅಲೌಕಿಕ ಭಾವ ತುಂಬಿಕೊಂಡಿತ್ತು! ಕಾಡಮರೆಗೆ ಸರಿದು, ಮೇಲೆಂದ ಮೇಲೆ ಬಟ್ಟೆ ಕಳಚಿ, ಕೆಸರು ತೊಳೆದು, ಚಂಡಿ ಹಿಂಡಿ ಮತ್ತದನ್ನೇ ಧರಿಸಿದೆವು. ಎಲ್ಲ ಮರೆಸುವಂತೆ ಮಳೆಕೋಟು ಹೊದ್ದು, ಪ್ರಯಾಣ ಮುಂದುವರಿಸಿದೆವು. ಅಜ್ಜನ ಮನೆ ಊಟಕ್ಕೇನೂ ಕೊರತೆ ಮಾಡಿಕೊಳ್ಳಲಿಲ್ಲ. ಆದರೆ ಅದಕ್ಕೆ ಮೊದಲು, ನಾವು ಮಳೆಕೋಟು ಕಳಚಿದಾಗ, ಕೆಸರ ಕಲೆ ನೋಡಿ ಬೆರಗಾದವರು ನಾನು ಹೇಳಿದ ಕತೆ ಮಾತ್ರ ನಂಬಲಿಲ್ಲ. “ಅಶೋಕ ಎಲ್ಲೋ ಬೈಕ್ ಸರ್ಕಸ್ ಮಾಡಿ, ಕೆಸರ ಹೊಂಡಕ್ಕೆ ಉರುಳಿರಬೇಕು…” ಎಂದೇ ತೀರ್ಮಾನಿಸಿದ್ದರು! ನಂಬದಿರಲು ಮುಖ್ಯ ಕಾರಣ ಸ್ಥಳನಾಮದ ಅಪಾರ್ಥ ಮಹಿಮೆ ಇರಬಹುದೇ – ಸುಳ್ಳಮ(/ಮಾ)ಲೆ!?
ಪರ್ಪಲೆ ಗುಡ್ಡೆ
ಆದರೆ ಹತ್ತಿಪ್ಪತ್ತು ಅಡಿಯಲ್ಲೇ ಗವಿಯ ಒಳಮೈ ಮುಗಿದಿತ್ತು. ತಳದಲ್ಲೆಲ್ಲೋ ಇದ್ದ ಸಣ್ಣ ಮಾಟೆ ಮನುಷ್ಯ ಪ್ರವೇಶಕ್ಕೆ ಒಡ್ಡಿಕೊಳ್ಳಲಿಲ್ಲ. ನಾನು ಹೋದಂದು ಪರ್ಪಲೆ ಗುಡ್ಡೆಯ ಪಿಲಿಮಾಂಟೆ ನಿರ್ಜನವೇ ಇತ್ತು. ಅಂದು ನಾವು ಕಂಡಂತೆ, ಗವಿಯ ಪ್ರವೇಶದಲ್ಲೇ ಗೋರಿಯಂತೆ ಒಂದು ಮಣ್ಣ ದಿಬ್ಬವಿತ್ತು. ಅದಕ್ಕೆ ಮುಸ್ಲಿಂ ಆರಾಧನೆಯ ಕುರುಹುಗಳೂ ಇದ್ದವು. ಆ ಕಾಲದಲ್ಲೇ ಪರ್ಪಲೆ ಗುಡ್ಡೆಯ ಗುಹೆ ಬಗ್ಗೆ ನಾನೊಂದು ಜನಪದ ಐತಿಹ್ಯ ಕೇಳಿದ್ದೆ. ಆ ಗವಿಯಲ್ಲಿ ಸಾಮಾನ್ಯವಾಗಿ ಹುಲಿ ವಾಸ್ತವ್ಯವಿರುತ್ತದೆ. ‘ಗವಿಮಠ’ದ ಭಕ್ತರು ಬಂದು “ಮಸ್ತ್ ಖಲಂದರ್, ಗವೀಕಾ ಅಂದರ್” ಮಂತ್ರ ಜಪಿಸಿದರೆ, ಹುಲಿ ಶಾಂತವಾಗಿ ಗುಹೆಯನ್ನು ಆರಾಧಕರಿಗೆ ಬಿಟ್ಟು ಕೊಡುತ್ತಿತ್ತಂತೆ. ಈಚೆಗೆ ಪರ್ಪಲೆಗುಡ್ಡೆ ನಾನು ಕಂಡದ್ದಕ್ಕೆ ಭಿನ್ನವಾದ ಮತೀಯ ಉತ್ಕರ್ಷವನ್ನು ಕಾಣುತ್ತಿದೆ. ನಾನು ಐತಿಹ್ಯವನ್ನು ನಂಬಿದವನಲ್ಲ ಮತ್ತು ಒಮ್ಮೆ ಕಂಡು, ಕೇಳಿದಷ್ಟಕ್ಕೇ ಸಾಕ್ಷ್ಯ ಪ್ರಮಾಣಿಸಲು ಉತ್ಸಾಹಿಯೂ ಅಲ್ಲ. ಆದರೆ ಕಾರ್ಕಳದ ಒಂದು ಪ್ರಾಕೃತಿಕ ವೈಶಿಷ್ಟ್ಯ ಬಾಬಾ ಬುಡನ್ ಗಿರಿಯ ಗುಹೆಯಂತೆ ಮತೀಯ ಮೇಲಾಟಗಳಿಗೆ ಪಕ್ಕಾಗುವುದು ನಿಜಕ್ಕೂ ಶೋಚನೀಯ.ಇತರ ಟಿಪ್ಪಣಿಗಳು
ಪ್ರಾಕೃತಿಕ ಗುಹೆಗಳು ಸಣ್ಣಪುಟ್ಟ ಜೀವಿಗಳ ತತ್ಕಾಲೀನ ತಂಗುದಾಣ ಮತ್ತು ಅಪರೂಪಕ್ಕೆ ಜನಪದ ಆಚರಣೆಗಳ ಭಾಗವಷ್ಟೇ ಆಗಿವೆ. ಅವುಗಳ ಮಳೆಗಾಲದ ಅಸ್ಥಿರತೆಯಿಂದಾಗಿ ಬಹುತೇಕ ಜೀವಿಗಳ ವಸತಿ, ವಂಶಾಭಿವೃದ್ಧಿಗೆ ಬೇಕಾದ ವಿಶ್ವಾಸಾರ್ಹತೆ ಗಳಿಸಿಲ್ಲ. ಹಾಗೇ ಅಧ್ಯಯನದ ಮಹತ್ವವನ್ನೂ ಗಳಿಸಿದಂತಿಲ್ಲ. ಬದಲಿಗೆ ಅವಹೇಳನಕ್ಕೆ ಒಳಗಾದದ್ದೇ ಹೆಚ್ಚು. ಸುಬ್ರಹ್ಮಣ್ಯದ ಬಿಲದ್ವಾರ, ಕದ್ರಿ ಪದವಿನ ಪಾಂಡವರ ಗುಹೆಗಳಂಥವನ್ನು ಜನರ ನಡುವೆಯೇ ಇರುವ ಕಷ್ಟಕ್ಕೆಂಬಂತೆ ಸ್ಥಳಪುರಾಣದಲ್ಲಷ್ಟೇ ಉಳಿಸಿ, ವಾಸ್ತವವನ್ನು ಮುಚ್ಚಿ ಕಳೆದಿದ್ದಾರೆ. ಗುಂಪೆಯ ಐದರಲ್ಲಿ ಮೂರೂ ತಿರಸ್ಕಾರಕ್ಕೇ ಈಡಾಗಿವೆ. (ವಿವರಗಳಿಗೆ ನೋಡಿ: ಗುಹಾ ವಿವಾದಕ್ಕೆ ಮಂಗಳ)
ಪ್ರಾಕೃತಿಕ ಸತ್ಯಗಳ ಪ್ರಚಾರದೊಡನೆ ಗುಹೆಗಳ ದಾಖಲಾತಿಯೂ ಆಗಬೇಕೆಂಬ ಉಮೇದಿನಲ್ಲಿ ನಾನು ಲೇಖನ ಮಾಡುತ್ತಲೇ ಇದ್ದೆ. ಅದರಿಂದ ಪ್ರೇರಿತರಾಗಿ ಅಂದು ಸುಳ್ಯದಲ್ಲಿ ಅಧ್ಯಾಪಕರಾಗಿದ್ದ ಗೆಳೆಯ ಪುರುಷೋತ್ತಮ ಬಿಳಿಮಲೆಯವರೊಂದು ತಂಡ ಕಟ್ಟಿದರು. ಅದರೊಡನೆ ಪ್ರಾಕೃತಿಕವೇ ಆದ ‘ಮಂಡೆಕೋಲು ಬಾಂಜಾರ’ ಶೋಧಿಸಿ, ಲೇಖನ ಮಾಡಿದ್ದರು. ಅದಕ್ಕೆ ತಂಡದ ಭಾಗವಾಗಿಯೇ ಹೋಗಿದ್ದ ಕಲಾವಿದ ಗೆಳೆಯ (ಇಂದಿಲ್ಲದ) ಮೋಹನ ಸೋನರು ಒಳ್ಳೆಯ ಚಿತ್ರವನ್ನೂ ಕೊಟ್ಟಿದ್ದರು. ಮಂಡೆಕೋಲು ಶೋಧದಲ್ಲಿ ಬಿಳಿಮಲೆ ಬಳಗ ಅತ್ಯುತ್ಸಾಹದಲ್ಲಿ ಕೆಲವು ಸಣ್ಣ ತಪ್ಪುಗಳನ್ನು ಮಾಡಿದ್ದನ್ನು ತೋರಿಕೊಡುವ ಅಪ್ರಿಯ ದೊಡ್ಡಸ್ತಿಕೆ ನನ್ನದಾಗಿತ್ತು. ಆದರೆ ಬಿಳಿಮಲೆ ಬಳಗ ಕನಕಮಜಲು ಸಮೀಪದಲ್ಲಿ ಐತಿಹಾಸಿಕ ಗುಹೆಯೊಂದನ್ನು ಗುರುತಿಸಿ, ಉತ್ಖನನವನ್ನೇ ಮಾಡಿ ಲೇಖನ ಹಾಕಿದರು. ಅದರ ವಿವರಗಳನ್ನಷ್ಟೇ ಕೇಳಿದ (ಪ್ರತ್ಯಕ್ಷ ನೋಡದೇ) ಇತಿಹಾಸ ತಜ್ಞ ಪುಂಡಿಕಾಯ್ ಗಣಪಯ್ಯ ಭಟ್ಟರು, “ಬೃಹತ್ ಶಿಲಾಯುಗದ ಶುದ್ಧ ಮಾನವ ನಿರ್ಮಿತ ಗುಹೆ. ಮೃತರ ಬೂದಿ, ಮೂಳೆಗಳನ್ನು ಮಡಿಕೆಯಲ್ಲಿಟ್ಟು ರಚಿಸಿದ ಸಮಾಧಿ” ಎಂದು ಸ್ಪಷ್ಟಪಡಿಸಿದ್ದೂ ಆಯ್ತು. ಅದುವರೆಗೆ ಈ ವಲಯದಲ್ಲಿ ಐತಿಹಾಸಿಕ ಗುಹಾರಚನೆಗಳಿವೆ ಎಂಬ ಅರಿವೇ ನನಗಿರಲಿಲ್ಲ. ಹಾಗಾಗಿ ಉತ್ಖನನ ಮಾಡಿದ್ದು (ಪ್ರಾಕೃತಿಕ ಸ್ಥಿತಿಯನ್ನು ತಿದ್ದಿದರು ಎಂದೇ ಗ್ರಹಿಸಿ) ಪತ್ರಿಕೆಯಲ್ಲೇ ಟೀಕಿಸಿ ಬರೆದಿದ್ದೆ. ನನ್ನ ಬಳಗದ ಒಬ್ಬ ಸದಸ್ಯನಂತೂ ಗಣಪಯ್ಯ ಭಟ್ಟರನ್ನು ಗೇಲಿಯೂ ಮಾಡಿದ್ದ! ಆದರೆ ನಾನೇ ತಂಡ ಕಟ್ಟಿ ಹೋಗಿ ನೋಡಿದಾಗ ನಮಗೆ ಬಿಳಿಮಲೆ ಬಳಗ ಹಾಗೂ ಗಣಪಯ್ಯ ಭಟ್ಟರ ಮಾತುಗಳ ಸತ್ಯದ ಅರಿವಾಯ್ತು. ನಾನು ನಮ್ಮೆಲ್ಲರ ಪರವಾಗಿ ಮತ್ತೆ ಪತ್ರಿಕಾ ಪ್ರಕಟಣೆಯಲ್ಲೇ ಕ್ಷಮೆಯಾಚಿಸಿ ಮುಗಿಸಿದೆ. ಈ ಅರಿವು ದಕ್ಕಿದ್ದರಿಂದ, ಮಾಡಾವಿನ ಶಾಲೆಯೊಂದರ ಬಳಿ ಸಿಕ್ಕ ಗುಹೆಯೂ ಮನುಷ್ಯ ಮಾಡಿದ್ದು ಮತ್ತು ಐತಿಹಾಸಿಕ ರಚನೆ ಎಂದೇ ಸ್ಥಳೀಯರಿಗೆ ತಿಳಿಸಲು ಸಾಧ್ಯವಾಯ್ತು.
ಮುರಕಲ್ಲ ಹಾಸು ಇರುವ ಪದವುಗಳಲ್ಲಿ (ಗುಡ್ಡದ ನೆತ್ತಿಯ ಸಮತಲ ಭೂಮಿ) ಆಂತರ್ಯದ ಪೊಳ್ಳಿನ ಚಪ್ಪರ ಕಾಲಾಂತರದಲ್ಲಿ ತೆಳುವಾಗಿ, ಮುರಿದು ಬೀಳುತ್ತದೆ. ಇದಕ್ಕೆ ಪರೋಕ್ಷವಾಗಿ ಮಳೆ ನೀರು ನಿಲ್ಲುವ ತಗ್ಗು (ಉದಾ: ಜಾಂಬ್ರಿ, ಚಂಡೆತಡ್ಕದ ಒಂದು ಮಳೆನೀರಿನ ತೂಂಬಿನಂತೇ ಇದೆ), ಮೇಲೆ ಬೆಳೆದ ಮರ (ಉದಾ: ಗುಂಪೆ ತೀರ್ಥಗುಹೆ – ಇದರ ಹಿಮ್ಮುಖದಲ್ಲಿ ಅಡಿಕೆ ತೋಟವಿದೆ), ಮನುಷ್ಯ ರಚನೆಗಳ ಭಾರ, ಕಂಪನ ಎಂದಿತ್ಯಾದಿ ಕಾರಣ ಹುಡುಕಬಹುದು. ಅಲ್ಲೆಲ್ಲ ಮುರಿದು ಬಿದ್ದ ಚಪ್ಪರದ ಅವಶೇಷಗಳು ಗುಹೆಯ ಒಳಗೆ ಗುಡ್ಡೆ ಬಿದ್ದಿದ್ದರೆ, ಪರೋಕ್ಷವಾಗಿ ನಮಗಿಳಿಯಲು ಸಹಕಾರಿಯಾಗುತ್ತವೆ (ಉದಾ: ಕಮಲಶಿಲೆ, ಮಂಚಿಯ ಗುಹೆ). ಜಾಂಬ್ರಿ ಮತ್ತು ಗುಂಪೆ ಗುಡ್ಡೆ ಶಿಖರದ ಇರ್ವಾಯ್ (ಎರಡು ಬಾಯಿಯ) ಗುಹೆಗಳಲ್ಲಿ ಆ ಅನುಕೂಲ ಉಳಿದಿಲ್ಲ. ಕುಸಿತದ ಅನಂತರದ ಮಳೆಗಾಲಗಳ ಸವಕಳಿಯಲ್ಲಿ ಅವಶೇಷಗಳೆಲ್ಲ ತೊಳೆದು ಹೋಗಿವೆ. ಜಾಂಬ್ರಿಯ ಹತ್ತು ಹನ್ನೆರಡಡಿಯಾಳವನ್ನು ಅಲ್ಲೇ ಇದ್ದ ಬಡಕಲು ಗಿಡದ ಸಹಾಯದಲ್ಲಿ ನಾವು ಮೂರು ನಾಲ್ಕು ಮಂದಿಯಷ್ಟೇ ಇಳಿದಿದ್ದೆವು. ಗುಂಪೆಯ ಇರ್ವಾಯಂತೂ ಇಪ್ಪತ್ತಡಿಗೂ ಮಿಕ್ಕು ಆಳವಿತ್ತು. ಅಲ್ಲಿಗೆ ನಾವು ಒಯ್ದಿದ್ದ ಪರ್ವತಾರೋಹಣದ ಹಗ್ಗವನ್ನು ಬಳಸಲು ನನಗೆ ಮಾತ್ರ ತಿಳಿದ ಕಾರಣಕ್ಕೆ ಒಬ್ಬನೇ ಇಳಿದು, ಶೋಧಿಸಿದ್ದೆ. ಇವುಗಳ ಕುರಿತು ಹೆಚ್ಚಿನ ಆಸಕ್ತಿ ಇದ್ದವರು ‘ಗುಹಾಶೋಧ’ಕ್ಕೆ ಚಿಟಿಕೆ ಹೊಡೆದು ಉಳಿದ ಗುಹಾಶೋಧಗಳನ್ನು ಕ್ರಮವಾಗಿ ಓದಿಕೊಳ್ಳಬಹುದು.ನೆಲ್ಲಿತೀರ್ಥದ ಸ್ಥಳ ಪುರಾಣಿಕರು, ಗುಹೆಯಲ್ಲಿ ಬೆಳವಣಿಗೆ ಮತ್ತು ಆಕ್ರಮಣಶೀಲತೆಯನ್ನು ಗುರುತಿಸುತ್ತಾರೆ. ಸಂದ ಯುಗಗಳಲ್ಲಿ ಗುಹೆ ನಾಲ್ಕು ಶಿವಾಲಯಗಳನ್ನು ನುಂಗಿ ಬೆಳೆದು ಬಂದಿದೆ. ಇಂದಿನ ಸೋಮನಾಥ ದೇವಳವನ್ನು ಅಂತಿಮವಾಗಿ ನುಂಗಲಿದೆ, ಎನ್ನುತ್ತದೆ ಕತೆ. ಅದನ್ನು ಗುಹೆ ನುಂಗಿದಂದು ಕಲಿಯುಗವೇ ಕೊನೆಗೊಳ್ಳುತ್ತದಂತೆ. ಇಂಥ ಹುಸಿ ‘ಮಹಿಮೆ’ಯ ಕಾರಣದಿಂದಲೋ ಏನೋ ದೇವಳದ ಜನಪ್ರಿಯತೆ ಹೆಚ್ಚಿದಂತಿದೆ. ಅದನ್ನು ಸುಧಾರಿಸುವ ನೆಪದಲ್ಲಿ ದೇವಳ ನಡೆಸಿರುವ ಅಭಿವೃದ್ಧಿ ಕೆಲಸಗಳು ಗುಹೆಯ ಪ್ರಾಕೃತಿಕ ಸ್ಥಿತಿಗೇ ಒತ್ತಡ ಹೆಚ್ಚಿಸುತ್ತಿದೆ. ಗುಹಾಗರ್ಭದಲ್ಲಿ ಯಾರೋ ಊರಿದ ಕರಿಕಲ್ಲಿನ ಕಂಬಕ್ಕೆ ಉದ್ಭವಲಿಂಗದ ಖ್ಯಾತಿ ಕೊಟ್ಟಿದ್ದಾರೆ. ಅಲ್ಲಿ ಸ್ನಾನ, ಅದರ ಅರ್ಚನೆ, ದೀಪ ಧೂಪ ಗದ್ದಲ, ಗುಹಾಚಪ್ಪರದ ಮೇಲೆ ವಾಣಿಜ್ಯ ರಚನೆಗಳು, ಜಾತ್ರೆ ಸೇರುವುದು, ವಾಹನ ತಂಗುದಾಣ, ವಿಸ್ತರಿಸುವ ದೇವಾಲಯದ ಸೌಲಭ್ಯಗಳು…. ಎಲ್ಲವೂ ಗುಹೆಗೆ ಅನಪೇಕ್ಷಿತ ಹಾನಿಕಾರಕಗಳು. (ಇಂಥವನ್ನು ಮುಂಗಂಡೇ ಮೇಘಾಲಯದ ಮೌಜಿಬುಯಿನ್ ಗುಹೆಯಲ್ಲಿ ಎಲ್ಲ ಮತೀಯ ಕಲಾಪಗಳನ್ನು ನಿಷೇಧಿಸಿದ್ದಾರೆ!)
ಕೆಲವು ಗುಡ್ಡೆಯ ಏಣುಗಳ ನಡುವೆ ಹೊರಗೆ ಕಾಣುವ ಕಣಿವೆ ಅಥವಾ ಕೊರಕಲಿಗೆ ಬಹುತೇಕ ಸಮಾನವಾಗಿ ನೆಲದ ಅಡಿಯಲ್ಲೂ ಪೊಳ್ಳು ರಚನೆಯಾಗಿ ತೆರೆದುಕೊಳ್ಳುವುದಿದೆ. ಅಂಥಲ್ಲಿ ಸರಣಿ ದ್ವಾರಗಳಿದ್ದರೂ ಆಶ್ಚರ್ಯವಿಲ್ಲ. ನಾವು ಕಂಡಂತೇ ಉದ್ದಕ್ಕೆ ಮೂರು ಭಾಗಗಳಲ್ಲಿ ತೆರೆದುಕೊಂಡಿರುವ ನೆಲ್ಲಿತಟ್ಟುತೀರ್ಥ ಮತ್ತು ಭೈರಿಕಟ್ಟೆಯ ಪಿಲಿಮಾಂಟೆ ಇದಕ್ಕೆ ಒಳ್ಳೆಯ ಉದಾಹರಣೆಗಳು.
ಪ್ರಾಕೃತಿಕವಾಗಿ ರೂಪುಗೊಂಡ ಕರಿಕಲ್ಲ ಗುಹೆಗಳು ದೀರ್ಘಾಯುಷಿಗಳು. ಇವುಗಳಲ್ಲಿ ಅನ್ಯ ಜೀವಿಗಳೂ ಸೇರಿದಂತೆ ಮನುಷ್ಯರ ವಾಸ ಹಾಗೂ ಕಲ್ಪಕತೆಗಳಿಗೆ ಧಾರಾಳ ಇಂಬು ಸಿಕ್ಕಿವೆ, ದಾಖಲಾಗಿವೆ. ಸಹಜವಾಗಿ ಅವು ಮನುಷ್ಯ ಇತಿಹಾಸದೊಡನೆ ಭೂ ಇತಿಹಾಸದ ಅಧ್ಯಯನಕ್ಕೂ ಒಳಪಟ್ಟಿವೆ. ಇವು ಕರಾವಳಿ ವಲಯಗಳಲ್ಲಿ ಕಡಿಮೆ. ಇಲ್ಲಿನ ಮುರಕಲ್ಲ ಹಾಸಿನ ಗುಹೆಗಳ ಸ್ಪಷ್ಟ ಏಕೈಕ ಉಪಯೋಗ ನೀರಾವರಿಯದ್ದು ಮಾತ್ರ. ಪ್ರಾಕೃತಿಕವಾಗಿ ತೆರೆದುಕೊಂಡು ನೀರು ಕಾಣಿಸುವ ಗುಹೆಗಳಲ್ಲದಿದ್ದರೂ ಕೃಷಿಕರೇ ಭೂಗರ್ಭದ ಜಲನಿಧಿಗಳನ್ನು ಅಂದಾಜಿಸಿ ತೋಡುವ ಗುಹೆಗಳೂ ಇಲ್ಲಿ ಸಾಕಷ್ಟಿವೆ. ಈ ಮನುಷ್ಯಕೃತ ಗುಹೆಗಳನ್ನು ಸುರಂಗ ಎಂದೇ ಕರೆಯುತ್ತಾರೆ. ಅಂಥವನ್ನು ತೋಡುವಾಗ ನಡುವೆ ಎಲ್ಲೋ ಪ್ರಾಕೃತಿಕ ಗುಹೆಗಳು ಸಿಗುವುದೂ ಇದೆ. ಅಂಥಲ್ಲಿ ಅದಕ್ಕೆ ಮೊದಲು ಹೊರಲೋಕಕ್ಕೆ ತೆರೆದುಕೊಳ್ಳದ ಗುಹೆಗಳೂ ಇರುವುದಿದೆ. ಸುರಂಗ ತೋಡುವವರಿಗೆ ಪ್ರಾಕೃತಿಕ ಗುಹೆ ಸಿಗುವುದರಿಂದ ಸುಲಭದಲ್ಲಿ ಹೆಚ್ಚಿನ ನೀರು ಸಿಗಲೂಬಹುದು, ಅದುವರೆಗಿನ ಕಾಮಗಾರಿ ವ್ಯರ್ಥವಾಗುವುದೂ ಇದೆ. ಗುಂಪೆಯ ತೀರ್ಥಗುಹೆಯ ಕಣಿವೆಯಂಚಿನ ಸುರಂಗ ಪ್ರಯೋಜನಕ್ಕೆ ಉದಾಹರಣೆ. ಅಲ್ಲೇ ತುಸು ಮೇಲಿನ ಒಂದು ಬಾವಿ ನಿಷ್ಪ್ರಯೋಜಕವಾಗಲು ತಳದಲ್ಲಿ ಸಿಕ್ಕ ಹೊಟ್ಟು ಗುಹೆಯೇ ಕಾರಣ ಎನ್ನುವುದನ್ನು ಮರೆಯುವಂತಿಲ್ಲ. ಒಟ್ಟಾರೆ ಪ್ರಾಕೃತಿಕ ಗುಹೆಗಳ ಪ್ರಾಯ, ರೂಪುಗೊಂಡ ಸ್ಪಷ್ಟ ಕ್ರಮ, ಪ್ರಾಕೃತಿಕ ಆವಶ್ಯಕತೆ ಮತ್ತು ಮನುಷ್ಯ ಉಪಯೋಗದ ಸಾಧ್ಯತೆಗಳ ಅಧ್ಯಯನ ಮಾತ್ರ ಇಂದಿಗೂ ಯಾರೂ ನಡೆಸಿದಂತಿಲ್ಲ!












Thumba olleya vivarane. Lekhana kushi kottitu. Nimma saahasa karyagala bagge gottiddaru, odiddaru aa nenapugalu kushi koduttave. Aabhaari Ashok.
ನಾನು ಹೋದ ಸಮಯದಲ್ಲಿ ನಾವು ನಾಲ್ಕು ಜನ ಮತ್ತು ಬೇರೆ ಇಬ್ಬರು ಇದ್ರು. ಆಗ ಜನ ಬರ್ತಾ ಇರ್ಲಿಲ್ಲ. ಹಿಂದಿನ ದಿನ ಪೂಜೆ ಮಾಡಿ ' ಕೆರ್ಪು ದೀಪುನೇ ' ಎನ್ನುವ ಕೆಲಸ ಮಾಡಿ ಹೋಗುತಿದ್ದರು. ಮತ್ತೆ ನಾವೆ ಹಿಂದೆ ಹೋದವರೊಟ್ಟಿಗೆ ಹೋಗಬೇಕಿತ್ತು.
ಈಗಿನ ಜಿಯೋಮ್ಯಾಪಿಂಗ್ ಇತ್ಯಾದಿಗಳನ್ನು ನೀವಾಳಿಸಬೇಕು
I have been to Parpale cave(s) because there are two of them. I have gone inside about a km with a lot of torch light. The remnants were also visited by Dr. Gururaja Bhatt. The Muslim relationship is associated with Tipu, that is all. A story of Su;tan's cave. The upper cave had not tigers, but leopards (chitte huli or nayipili) but only for a time. Good material associated with caves.