ಈಚೆಗೆ ಫೇಸ್ ಬುಕ್ ಗೆಳೆಯ ರಾಜೇಂದ್ರ ಪ್ರಸಾದ್, ನನ್ನ ಗಣಪತಿ ಗುಹಾ ನಕ್ಷೆ (೧೯೯೪) ನೋಡಿ ಮೋಹಗೊಂಡು, ವಿವರ ವಿಚಾರಿಸಿದರು. ಸೀಮಿತ ಮುದ್ರಿತ ನಕಾಶೆಗಳಿದ್ದ ಕಾಲದ ಅಗತ್ಯಕ್ಕೆ ನಾನು ಬಿಡಿಸಿದ ೯೬ ನಕ್ಷೆಗಳ ಕುರಿತು ಒಂದೆರಡು ಮಾತು ಹೇಳಿದೆ. ಆತ ಎಲ್ಲವನ್ನು ಪುಸ್ತಕವಾಗಿ ಪ್ರಕಟಿಸಲು ಒತ್ತಾಯಿಸಿದರು. ನಾನೋ ‘ಇದು ಮುದ್ರಿತ ಪುಸ್ತಕಗಳ ಕಾಲವೇ ಅಲ್ಲ’ ಎಂದು ಘೋಷಿಸಿ ಇದ್ದ ಪುಸ್ತಕ ಪ್ರಕಾಶನ, ಅಂಗಡಿಗಳನ್ನು ಮುಚ್ಚಿದವ! “ಅದೆಲ್ಲ ಯಾಕೆ? ಕೇವಲ ನನ್ನ ಆವಶ್ಯಕತೆಗೆ ಮಾಡಿಕೊಂಡ ಈ ನಕ್ಷೆಗಳು ಯಾರಿಗಾದರೂ ಉಪಯೋಗವಾಗುವುದಿದ್ದರೆ ಇಲ್ಲೇ ಹಾಕಿಬಿಡುತ್ತೇನೆ” ಎಂದೆ. ಈಗ ಫೇಸ್ ಬುಕ್ಕಿನಲ್ಲಿ ಸರಣಿಯಲ್ಲಿ ಪ್ರಕಟಿಸಿ ಮುಗಿಸಿದ್ದೇನೆ. ನಕ್ಷೆಗಳನ್ನು ಸ್ಕ್ಯಾನ್ ಮಾಡಿ, ಪ್ರವೇಶಿಕೆಯ ಎರಡು ಮಾತು, ಲೇಖನವಿದ್ದರೆ ಸೇತು ಸೇರಿಸುತ್ತ ಬಂದೆ. ಈ ಕ್ರಿಯೆ ನನ್ನನ್ನು ಮೂವತ್ತಾರು ವರ್ಷಗಳ ಹಿಂದಿನಿಂದ (೧೯೮೫) ತೊಡಗಿ, ಇಪ್ಪತ್ತೊಂದು ವರ್ಷಗಳ ಹಿಂದಿನವರೆಗಿನ (೨೦೦೦) ಪರಿಸರ ಮತ್ತು ಮನೋಸ್ಥಿತಿಗೆ ಒಯ್ದಿತ್ತು. ಪರಿಣಾಮವಾಗಿ, ನಕ್ಷೆಗಳನ್ನು ಮೀರಿದ ಕೆಲವು ಮಾತುಗಳು.

೧೯೭೫ರಲ್ಲಿ ಮಂಗಳೂರಿನ ಈ ವಲಯಕ್ಕೂ (ಪುತ್ತೂರಿನ ಅಜ್ಜನ ಮನೆಗೆ ಬರುತ್ತಿದ್ದರೂ ಹೊರಗೆ ಹೋದವನಲ್ಲ) ಪುಸ್ತಕ ವ್ಯಾಪಾರಕ್ಕೂ ನಾನು ಪೂರ್ಣ ಹೊಸಬನಾಗಿಯೇ ಬಂದವ. ವೃತ್ತಿರಂಗದಲ್ಲಿ ನಾನು ಸಮರ್ಥರ ಭುಜವನ್ನೇರಿಯೇ ಬಂದವನು. ಸಾಲದ್ದಕ್ಕೆ ಕ್ಷೇತ್ರವೂ ಫಲವತ್ತಾಗಿಯೇ ಇತ್ತು. ಅದರ ಕುರಿತು ನಾನು ಸಾಕಷ್ಟು ಬರೆದಿದ್ದೇನೆ, ಇಲ್ಲಿ ಬೇಡ. ನನ್ನ ಹವ್ಯಾಸೀ ಮುಖವಾದ ಪರ್ವತಾರೋಹಣಕ್ಕಂತೂ ಈ ವಲಯದಲ್ಲಿ ಸವಾಲುಗಳು ವೈವಿಧ್ಯಮಯ ಮತ್ತು ಧಾರಾಳವೇ ಇದ್ದವು. ಆದರೆ ಅವನ್ನು ಬಗೆಹರಿಸುವಲ್ಲಿ ದಾರಿ ನಾನೇ ಕಡಿಯಬೇಕಾಯ್ತು. ಮೊದಮೊದಲು ಮಾರ್ಗದರ್ಶನಕ್ಕೆ ಸ್ಥಳೀಯರನ್ನು ಹುಡುಕಿಕೊಳ್ಳುತ್ತಿದ್ದೆ. ಆದರೆ ಹೆಚ್ಚಿನ ಜನ ತಮ್ಮ ಸೀಮಿತ ಅನುಭವವನ್ನು “ಸಾರ್ವಕಾಲಿಕ ಸತ್ಯ” ಎಂದು ಬಿಂಬಿಸುವುದರಲ್ಲಿ, ತಮ್ಮ ಸೋಮಾರಿತನಕ್ಕೆ ವೈಚಾರಿಕ ಹೊದಿಕೆ ತೊಡಿಸುವುದರಲ್ಲಿ ಪ್ರವೀಣರು. ಧಾರಾಳ ನಿರುತ್ತೇಜನಗೊಳಿಸುತ್ತಿದ್ದರು, ಅನುದ್ದೇಶಿತವಾದರೂ ತಪ್ಪು ಮಾಹಿತಿ ಕೊಡುತ್ತಿದ್ದರು.

ವ್ಯವಸ್ಥಿತ ಮನುಷ್ಯ ಪ್ರಯತ್ನಗಳಿಗೆ ಅಸಾಧ್ಯವಾದದ್ದು ಏನೂ ಇಲ್ಲ ಎನ್ನುವುದು ನನ್ನ ನಂಬಿಕೆ. ನನಗಿದ್ದ ದೊಡ್ಡ ಆಧಾರ – ಸುಮಾರು ಇನ್ನೂರೈವತ್ತು ವರ್ಷಗಳ ಹಿಂದೆಯೇ ಬ್ರಿಟಿಷರು ಇಲ್ಲಿನ ನೆಲದ ಕುರಿತು ಕೊಟ್ಟ ಕರಾರುವಾಕ್ಕಾದ ನಕ್ಷೆಗಳು. ಭಾರತಾದ್ಯಂತ ಕಾಡು ಬೆಟ್ಟವನ್ನು ಶಿಸ್ತಾಗಿ ಹೊಕ್ಕು ಹೊರಟು, ಸರ್ವೇಕ್ಷಣ ಮಾಡಿ ತಯಾರಿಸಿದ ನಕ್ಷೆಗಳು (ಟೋಪೋ ಶೀಟ್ಸ್) ನಿಜಕ್ಕೂ ಒಂದು ಅದ್ಭುತ. ನಾನು ಅವನ್ನು ವಿದ್ಯಾರ್ಥಿ ದೆಸೆಯಲ್ಲೇ (ಎನ್ಸಿಸಿ) ಪರಿಚಯಿಸಿಕೊಂಡಿದ್ದೆ. ಆದರೆ ಅವು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರಲಿಲ್ಲ. ಬಹಳ ಪ್ರಯತ್ನಗಳಿಂದ ಸುಮಾರು ಆರು ತಿಂಗಳ ಅಂತರದಲ್ಲಿ, ದಕ ಜಿಲ್ಲೆಯ ಸಮಗ್ರ ನಕ್ಷೆಗಳನ್ನು ತರಿಸಿಕೊಂಡೆ. ನಕ್ಷೆ – ೧ ಇಂಚು ಅಂದರೆ ನೆಲದ ೧ ಕಿಮೀ. ಇಂಥ ಎರಡೂವರೆ ಗುಣಿಸು ಎರಡು ಅಡಿ ಅಳತೆಯ ೨೬ ಹಾಳೆಗಳು, ಬಂದ ಮೇಲೆ ನನ್ನ ಹುಚ್ಚಿಗೆ ಕೊನೆ ಇಲ್ಲವಾಗಿತ್ತು.

ನನ್ನ ತಿರುಗಾಟದ ಸಂತೋಷವನ್ನು ಇತರರಲ್ಲಿ ಹಂಚಿ, ಅವರನ್ನೂ ಪ್ರಕೃತಿ ಶೋಧಕ್ಕೆ ಪ್ರೇರಿಸುವಲ್ಲಿ ನನಗೆ ಉತ್ಸಾಹ ಹೆಚ್ಚು. ಹಾಗಾಗಿ ‘ಆರೋಹಣ…..’ದ ಹೆಸರಿನಲ್ಲಿ ನನ್ನ ಕಲಾಪಗಳಿಗೆ ಯಾರನ್ನೂ ಜತೆಗೊಯ್ಯುತ್ತಿದ್ದೆ. (ಲೆಕ್ಕಾಚಾರದಲ್ಲಿ ನಾನು ಬಹಳ ಖಡಕ್ – ಪ್ರತಿ ಬಾರಿಯೂ ನನ್ನದೂ ಸೇರಿದಂತೆ ಭಾಗಿಗಳೆಲ್ಲ ಅವರವರ ಖರ್ಚು ಅವರವರೇ ವಹಿಸಿಕೊಳ್ಳತಕ್ಕದ್ದು!) ಸ್ವತಂತ್ರವಾಗಿ ಹೋಗುವವರಿಗೆ ಖಚಿತ ಮಾಹಿತಿ ಮತ್ತು ಕಟ್ಟುನಿಟ್ಟಿನ ಎಚ್ಚರಿಕೆಗಳನ್ನು ಕೊಡುತ್ತಿದ್ದೆ. ಲೇಖನಗಳನ್ನು ಬರೆದೆ, (ಬೇರೆಯವರಿಗೂ ಬರೆಯಲು ಪೀಡಿಸುತ್ತಿದ್ದೆ!) ಅವಕಾಶ ಸಿಕ್ಕಲ್ಲಿ ಅನುಭವ ಕಥನ, ಸಂವಾದಗಳನ್ನೂ ನಡೆಸಿದೆ. ಅವಕ್ಕೆಲ್ಲ ಅಡಿಪಾಯ ಎನ್ನುವಂತೆ ಹೀಗೆ ನಕ್ಷೆಗಳನ್ನೂ ಮಾಡುತ್ತಲಿದ್ದೆ.

ಯಾನ ಕಾಲದಲ್ಲಿ ನನ್ನ ಸಹವಾರೆ (೯೯% ದೇವಕಿಯೇ) ಪೆನ್ನು ಚೀಟಿ ಇಟ್ಟುಕೊಂಡು, ಕಾಲಕಾಲಕ್ಕೆ ನಾನು ಓದಿ ಹೇಳುವ ಬೈಕ್ ಮೀಟರ್ ಸಂಕಿ, ಕವಲುಗಳಲ್ಲಿ ಎಡ – ಬಲ ಮತ್ತು ಸ್ಥಳನಾಮಗಳನ್ನು ದಾಖಲಿಸಿಕೊಳ್ಳುತ್ತಿದ್ದಳು. ಮನೆಗೆ ಬಂದ ಒಂದೆರಡು ದಿನಗಳಲ್ಲೇ ನಾನು ಅವುಗಳನ್ನು ಸರ್ವೇ ನಕಾಶೆಗಳ ಅಂದಾಜಿಗೆ ಬೆಸೆದು, ನಮ್ಮ ಕಲಾಪವನ್ನು ದಾಖಲಿಸುತ್ತಿದ್ದೆ. ನನ್ನ ಬಿಡುವು ಮತ್ತು ಕಲಾಪದ ಪ್ರಭಾವ ಈ ನಕ್ಷಾ ಅಭಿವ್ಯಕ್ತಿಯನ್ನು ಅಲ್ಲಲ್ಲಿ ವೈವಿಧ್ಯಮಯವನ್ನಾಗಿಸಿದೆ. ನನ್ನ ನಕ್ಷೆ ಮತ್ತು ಯಾನದಲ್ಲಿ ತೆಗೆದ ಆಯ್ದ ಛಾಯಾಚಿತ್ರಗಳನ್ನು ಅಂಗಡಿಯ ನನ್ನ ಮೇಜಿನ ಕನ್ನಡಿಯಡಿಯಲ್ಲಿ ಜೋಡಿಸಿಟ್ಟು, ಸಾರ್ವಜನಿಕ ಕುತೂಹಲ ಕೆರಳಿಸುತ್ತಿದ್ದೆ. ಇವುಗಳ ಯಥಾಪ್ರತಿ (ಜೆರಾಕ್ಸ್) ಬಯಸಿದವರಿಗೆಲ್ಲ ಕೊಟ್ಟಿದ್ದೇನೆ. ಅನ್ಯ ನಿರ್ದಿಷ್ಟ ಸ್ಥಳಗಳ ಕುರಿತೂ ಕೇಳಿ ಬಂದವರಿಗೆ ಆಗಿಂದಾಗ್ಗೆ ಸರಳ ಗೀಟುಗಳ ಚೀಟಿಗಳನ್ನೂ ಧಾರಾಳ ಮಾಡಿಕೊಟ್ಟಿದ್ದೇನೆ.

ಆ ದಿನಗಳಲ್ಲಿ ಸಾರ್ವಜನಿಕ ಸಂವಹನಕ್ಕೆ ಮುದ್ರಣ ಮಾಧ್ಯಮವೇ ಗಟ್ಟಿ ಆಧಾರ. ತೀರಾ ವಿರಳವಾಗಿ ಆಕಾಶವಾಣಿ, ಶಾಲಾ ಕಾಲೇಜು ವೇದಿಕೆಗಳು ಒದಗುವುದೂ ಇತ್ತು. ಆದರೆ ಇಲ್ಲೆಲ್ಲ ಸಂಘಟಕರು ಅನುಭವದ ಸತ್ಯಕ್ಕಿಂತ ತೋರಿಕೆಯ ಮೌಲ್ಯಗಳ ಪ್ರತಿಪಾದನೆ ನಡೆಸುವುದೇ ಜಾಸ್ತಿ ಇತ್ತು. ಉದ್ಘಾಟನೆ, ಔಪಚಾರಿಕ ಉಪನ್ಯಾಸದಂಥ ಕರೆ ಬಂದಲ್ಲೆಲ್ಲ ನಿರಾಕರಿಸಿ, ಕಾಡು, ಬೆಟ್ಟಗಳ ಸಹಯಾನದ ಸವಾಲು ಕೊಡುತ್ತಿದ್ದೆ. ಅದನ್ನು ಒಪ್ಪಿ ಅನುಭವಿಸಿದ ಶಾಲೆ, ಕಾಲೇಜು, ಸಂಘಗಳು ಸಾಕಷ್ಟು ಇವೆ. ಇದರಲ್ಲಿ ಅಧ್ಯಾಪಕ ಮಿತ್ರರಾದ ಪಂಡಿತಾರಾಧ್ಯ, ಜನಾರ್ದನ ಪೈ, ಜಯಂತ, ರೊನಾಲ್ಡ್, ಕಾರ್ಕಳದಿಂದ ರಾಧಾಕೃಷ್ಣ, ಸುರತ್ಕಲ್ಲಿನಿಂದ ದೇವಪ್ಪ ಕುಳಾಯ್, ಉಜಿರೆಯಿಂದ ಪ್ರೇಮಾ ಶಾಸ್ತ್ರಿ, ಪುತ್ತೂರಿನಿಂದ ಮಾಧವ ಭಟ್, ಮೂಲ್ಕಿಯಿಂದ ಅಡ್ಯನಡ್ಕ ಕೃಷ್ಣಭಟ್, ಸಾಲಿಗ್ರಾಮದಿಂದ ಮಾಧವ ಉಡುಪ ಮುಂತಾದವರು ಸದಾ ಸ್ಮರಣೀಯರು.

ಅಂತರ್ಜಾಲದಲ್ಲಿ ಮುಕ್ತವಾಗಿ ಉಪಗ್ರಹಾಧಾರಿತ ಭೂ ವಾಸ್ತವವನ್ನೇ ನಕ್ಷೆಯಾಗಿ ನೋಡುವ ಸ್ಥಿತಿ ವಿಕಸಿಸುತ್ತಿದ್ದಂತೆ ನನ್ನ ನಕ್ಷಾ ಉತ್ಸಾಹ ಕುಂದಿರಬೇಕು. ಮತ್ತೆ ಛಾಯ ಚಿತ್ರಗ್ರಹಣದಲ್ಲೂ ಡಿಜಿಟಲ್ ಕ್ರಾಂತಿ ಒದಗಿದ್ದರಿಂದ, ತತ್ಕಾಲೀನ ಟಿಪ್ಪಣಿಗಳೂ ಚಿತ್ರ ಭಾಷೆಯಲ್ಲಿ ಕ್ಯಾಮರಾಗಳೊಳಗೆ ಇಂಗಿಹೋದವು. ಕೊನೆಯದಾಗಿ, ಯಾವುದೇ ಬರಹಗಳಿಗೆ, ಯಾವುದೇ ಅಂಕುಶವಿಲ್ಲದ ಫೇಸ್ ಬುಕ್, ಜಾಲತಾಣಗಳಂಥ ವಿದ್ಯುನ್ಮಾನ ಮಾಧ್ಯಮ (ಫೇಸ್ ಬುಕ್, ಜಾಲತಾಣ www.athreebook.com) ಮುಕ್ತವಾದ ಮೇಲೆ ಮುದ್ರಣ ಮಾಧ್ಯಮದ ಹಂಗೂ ಕಳಚಿಬಿತ್ತು! ಇಂದು ವಿದ್ಯುನ್ಮಾನ ಮಾಧ್ಯಮದ ಔದಾರ್ಯದಲ್ಲಿ ನನಗೆ ನಾನೇ ವಾಚಾಳಿಯಾಗದ ಅಂಕುಶ ಹಾಕಿಕೊಳ್ಳುವ ಕಷ್ಟದಲ್ಲಿ ನಿಂತಿದ್ದೇನೆ.

ಜಿಟಿ ನಾರಾಯಣ ರಾವ್ (ನನ್ನ ತಂದೆ), ಅವರೇ ಹೇಳಿಕೊಂಡಂತೆ ‘ಲೆಕ್ಕಕ್ಕೆ ಮೇಸ್ಟ್ರು’. ಆದರೆ ಸ್ವಯಂಶಿಕ್ಷಣದಲ್ಲಿ ನಕ್ಷತ್ರವೀಕ್ಷಕ. ಅದನ್ನು ನಿಧಾನದಲ್ಲೇ (ಸುಮಾರು ನಲ್ವತ್ತರ ಹರಯದಲ್ಲಿ) ಲೇಖನಕ್ಕಿಳಿಸಿ, ಸಂಕೋಚದಲ್ಲೇ (ಆ ದಿನಗಳಲ್ಲಿದ್ದ ಒಂದೇ ಮಾಧ್ಯಮ) ಪತ್ರಿಕೆಗಳಿಗೆ ಕೊಡಲು ತೊಡಗಿದರು. ಆದರೆ ಗುಣಪಕ್ಷಪಾತಿಗಳಾದ ಕಸ್ತೂರಿಯ ಪಾವೆಂ ಆಚಾರ್ಯ, ಸುಧಾದ ಎಂಬಿ ಸಿಂಗ್‍ರಂಥ ಸಂಪಾದಕರು, ಇವರಲ್ಲಿ ಹುದುಗಿದ್ದ ‘ವಿಜ್ಞಾನ ಲೇಖಕ’ನನ್ನು ಹೊರಗೆಳೆದರು. ಸಹಜವಾಗಿ ತಂದೆ ವಿಜ್ಞಾನ ಸಾಹಿತ್ಯ ನಿರ್ಮಾಣದಲ್ಲಿ ಅನನ್ಯ ನೆಲೆ ಕಂಡರು. ಕಾಲಗರ್ಭದಲ್ಲಿ ’ಇನ್ನೊಬ್ಬ ಅಧ್ಯಾಪಕ’ ಎಂದು ಮರವೆಗೆ ಸಲ್ಲಬಹುದಾಗಿದ್ದವರು ಅಮರರಾದರು.

ಇನ್ನೊಂದು ಕತೆ ಶ್ರೀಪಡ್ರೆಯವರದು. ನಾನು ಕಂಡಂತೆ, ಮೂಲತಃ ಕೃಷಿಕ. ಅಪಾರ ಉತ್ಸಾಹದಲ್ಲಿ ಚೂರುಪಾರು ಚಿತ್ರಗ್ರಹಣ, ಅಲ್ಲಿ ಇಲ್ಲಿ (ಪತ್ರಿಕಾ) ಲೇಖನಗಳ ಹವ್ಯಾಸಿ. ಆದರೆ ಪ್ರಕಟವಾದ ‘ಐಟಮ್ಮು’, ಅದಕ್ಕೆ ಬರುತ್ತಿದ್ದ ಚೆಕ್ಕು ಮತ್ತು ಉಬ್ಬಾಳ್ತನದಲ್ಲಿ ಅವರು ಕಳೆದುಹೋಗಲಿಲ್ಲ. ‘ಜನಪ್ರಿಯ’ ಪತ್ರಿಕೆಗಳು (ದೈನಿಕ ಮತ್ತು ನಿಯತಕಾಲಿಕಗಳೆಲ್ಲ ಸೇರಿದಂತೆ) ಎಷ್ಟೇ ಉದಾತ್ತವಾಗಿ ಇವರ ಬರೆಹಗಳನ್ನು ಪುರಸ್ಕರಿಸುತ್ತಿದ್ದರೂ ಬಹಳ ದೊಡ್ಡ ಲೋಕಾನುಭವ ಮತ್ತು ಜನವರ್ಗ ಈ ಮಾಧ್ಯಮಗಳಿಗೆ ಅಸ್ಪೃಶ್ಯವಾಗಿಯೇ ಇರುವುದನ್ನು ಮನಗಂಡರು. ಅದರ ಫಲವಾಗಿ ಕೃಷಿಕರ ಕೈಗೆ ಲೇಖನಿ, ಅಡಿಕೆ ಪತ್ರಿಕೆಯಂಥ ಮೇರು ಸಾಧನೆ ಮಾಡಿದರು, ಸಮಾಜ ಶ್ರೀಮಂತವಾಯ್ತು.

ಮೇಲಿನ ಎರಡು ಉದಾಹರಣೆ ಬಿಟ್ಟು ನನ್ನ ಕತೆಗೆ ಬನ್ನಿ. ಇಂದು ನಕ್ಷೆಗಳಲ್ಲಿ ಹಲವಕ್ಕೆ ಪುಷ್ಟಿ ಕೊಡುವ ಲೇಖನ, ಟಿಪ್ಪಣಿ, ಛಾಯಾಚಿತ್ರ, ಕನಿಷ್ಠ ನೆಚ್ಚಬಹುದಾದ ನೆನಪೂ ನನ್ನಲ್ಲುಳಿದಿಲ್ಲ. ಆದರೆ ಆ ದಿನಗಳಲ್ಲೇ ಪತ್ರಿಕೆಗಳು ನನ್ನಂಥ ವಿರಳ ಪ್ರಯೋಗಶೀಲರಿಗೆ (ಜಾಂಬ್ರಿ ಪ್ರಕರಣದಂತೆ) ಹೊಸ ದಿಕ್ಕುಗಳನ್ನು ತೋರುತ್ತ, ಪ್ರಕಟಣಾ ಬೆಂಬಲವನ್ನು ಕೊಟ್ಟಿದ್ದರೆ ಹೀಗಾಗುತ್ತಿರಲಿಲ್ಲ. ನನ್ನ ಕಾಡು ಬೆಟ್ಟ ಸುತ್ತುವ ‘ಹುಚ್ಚು’, ಜಿಟಿನಾ ಅಥವಾ ಶ್ರೀಪಡ್ರೆಯವರ ಕೆಲಸಗಳಂತೆ ನೇರ ಸಾಮಾಜಿಕ ಉಪಯುಕ್ತತೆ ಇರುವಂತದ್ದೇನೂ ಅಲ್ಲ. ಆದರೆ ಬ್ರಿಟಿಷ್ ರಾಯಲ್ ಸೊಸಾಯಿಟಿ, ನ್ಯಾಶನಲ್ ಜಿಯಾಗ್ರಫಿಕ್, ಬೀಯೆನ್ನೆಚ್ಚೆಸ್‍ಗಳಂಥ ಹೆಸರಾಂತ ಸಂಸ್ಥೆಗಳು ರೂಪುಗೊಂಡದ್ದೇ ಇಂಥ ಹುಚ್ಚಿನಿಂದ ಎನ್ನುವುದನ್ನು ಮರೆಯಬಾರದು. ಅವು ಜೀವಜಗತ್ತಿನ ಅನೇಕಾನೇಕ ಅಧ್ಯಯನಗಳಿಗೆ, ನೆಲದ ಹೆಚ್ಚಿನ ತಿಳುವಳಿಕೆಗೆ ಮೂಲಸ್ರೋತಗಳೇ ಆದವು. ನನ್ನ ತೀರಾ ಸೀಮಿತ ಚಟುವಟಿಕೆಯೊಂದಿಗೆ ಒಡನಾಡಿದವರಲ್ಲಿ ಅಂಥಾ ವೈವಿಧ್ಯಮಯ ವಿಚಾರಗಳ ಮೊಳಕೆಗಳನ್ನು ಕಂಡಾಗ ನಾನು ಸಂತೋಷಿಸಿದ್ದೇನೆ, ನನ್ನ ಮಿತಿಯಲ್ಲಿ ಅವರ ವಿಕಾಸಕ್ಕೆ ಸಹಕರಿಸಿದ್ದೇನೆ. ಇಲ್ಲಿ ಚಿತ್ರಗ್ರಹಣ, ಬಂಡೆ ಏರು, ಸೈಕಲ್ ಸುತ್ತು, ಹಾರಾಡು, ನಕ್ಷತ್ರ, ಹಕ್ಕಿ, ಹಾವು, ಕಪ್ಪೆ, ಚಿಟ್ಟೆ, ಸಸ್ಯ… ಎಂದಿತ್ಯಾದಿ ಜೀವಾಜೀವಗಳ ಅಧ್ಯಯನಗಳನ್ನು ಬೆಂಬತ್ತಿದವರು ಅನೇಕ.

ಮಂಗಳೂರಿನ ಉರಗೋದ್ಯಾನಕ್ಕೆ ಕಾರಣವಾದ ಶರತ್, ಮಂಗಳೂರಿನಲ್ಲಿ ಇಂದೂ ಅನಾಥ ಪ್ರಾಣಿಗಳ ಪಾಲಕನಾದ ಚಾರ್ಲ್ಸ್ (ಅನಿಮಲ್ ಕೇರ್ ಟ್ರಸ್ಟ್), ಸೈಕಲ್ಲೇರಿ ವಿಶ್ವ ಸುತ್ತಿದ ಗೋವಿಂದ, ‘ಸಾಮಾನ್ಯರ ವಿಮಾನ’ದ ಕಲ್ಪನೆಯನ್ನೇ ವೃತ್ತಿಯಾಗಿ ನಂಬಿ ಬೆಳೆದ ನೆವಿಲ್, ಮನುಷ್ಯರ ವೈದ್ಯರಾಗಿದ್ದುಕೊಂಡೂ ಕೀಟಗಳ ಮೇಲೆ ಅಂತಾರಾಷ್ಟ್ರೀಯ ವೈಜ್ಞಾನಿಕ ಪ್ರಬಂಧಗಳನ್ನು ಪ್ರಕಟಿಸುತ್ತಿರುವ ಕೃಷ್ಣಮೋಹನ ಪ್ರಭು, ಅಭಿಜಿತ್ ಎಪಿಸಿ…… ಹೀಗೆ ನನ್ನ ಜತೆ ಒಡನಾಡಿದ ಅಸಾಧಾರಣರ ಪಟ್ಟಿ ದೊಡ್ದದೇ ಇದೆ. ವೃತ್ತಿ ಜೀವನದಲ್ಲಿ ಏನು ಹಿಡಿದರೂ ಜಗ್ಗದ, ನುಗ್ಗಿ ಜಯಿಸುವ ಎದೆಗಾರಿಕೆಗಳಿಗೆ ಪ್ರೇರಣೆಯನ್ನು ಇಲ್ಲಿನ ಅನುಭವಗಳಿಂದ ಬಸಿದುಕೊಂಡವರಂತೂ ಅಸಂಖ್ಯ. ಅಂಥವರು ಅನಿರೀಕ್ಷಿತವಾಗಿ ಸಿಕ್ಕಿ, ಎಂದೋ ಎಲ್ಲೋ ಭಾಗವಹಿಸಿದ ನೆನಪು ಹಂಚಿಕೊಂಡಾಗ ನಾನು ಧನ್ಯತೆಯನ್ನು ಅನುಭವಿಸಿದ್ದೇನೆ. ಇಂದೂ ಅವಕಾಶ ಸಿಕ್ಕಲ್ಲೆಲ್ಲ ನಾನು ವನ್ಯದೆಡೆಗೆ ಮಾತು ಎಳೆಯುವುದು, ನನ್ನ ಲೇಖನಗಳ ಸೇತು ತೂರಿಬಿಡುವುದು ಖಂಡಿತಕ್ಕೂ ಆತ್ಮರತಿಯಿಂದಲ್ಲ, ಪರಾತ್ಮ ವಿಕಸನ ದೃಷ್ಟಿಯಿಂದ ಮಾತ್ರ.

ಅನಿಯತವಾಗಿ ‘ಆರೋಹಣ….’ದ ಹೆಸರಿನಲ್ಲಿ ಸಾಹಸ ಚಟುವಟಿಕೆಗಳು ನಡೆಯುತ್ತಲೇ ಇದ್ದವು. ಅವನ್ನು ಮೀರಿದಂತೆ ನಡೆದ ಪರ್ವತಾರೋಹಣ ಸಪ್ತಾಹ ಮತ್ತು ಮುಂದುವರಿಕೆ, ಮುಕ್ತ ಆಹ್ವಾನದಲ್ಲಿ ನಡೆಸಿದ ಎರಡು ಮಹಾಚಾರಣ, ಶಾಲೆ ಕಾಲೇಜುಗಳ ವಾರ್ಷಿಕ ಶಿಬಿರಗಳಲ್ಲಿ ಕೊಟ್ಟ ಪ್ರಕೃತಿಪರ ಚಟುವಟಿಕೆಗಳು, ಅಭಯಾರಣ್ಯದ ಮೂರು ದಿನಗಳ ಶಿಬಿರ ಮುಂತಾದವೆಲ್ಲ ಭಾಗಿಗಳಲ್ಲಷ್ಟೇ ಅಲ್ಲ, ಅನಂತರ ತಿಳಿದವರಿಂದಲೂ ‘ಅಪೂರ್ವ, ಇನ್ನೊಮ್ಮೆ ಮಾಡಿ’ ಎನ್ನುವ ಉದ್ಗಾರವನ್ನೇ ಹೊರಡಿಸಿವೆ. ಮಾಡಿದ್ದನ್ನೇ ಮಾಡುವುದು ಅರ್ಥಾತ್ ಹವ್ಯಾಸವನ್ನು ಸಂಸ್ಥೀಕರಣಗೊಳಿಸುವುದನ್ನು ನಾನು ಎಂದೂ ಒಪ್ಪಲಿಲ್ಲ. ಆದರೆ ಈ ಚಟುವಟಿಕೆಗಳ ಸಾಮಾಜಿಕ ಮಹತ್ವವನ್ನು ಗುರುತಿಸಿ, ದೀರ್ಘ ಕಾಲೀನ ಉಪಯುಕ್ತತೆಯನ್ನು ಮನಗಂಡು, ದಾಖಲೆ ಮತ್ತು ಪ್ರಸರಣೆ ಕೊಡಬಹುದಾಗಿದ್ದ ವೃತ್ತಿಪರ ಮುದ್ರಣ ಜಗತ್ತು ಪೂರ್ಣ ವಿಫಲವಾದದ್ದು ಇಂದು ಅರಿವಾಗುತ್ತದೆ. ನನ್ನಲ್ಲಿ ಶ್ರೀಪಡ್ರೆಯವರ ಸಂಘಟನಾ ಚಾತುರ್ಯ ಖಂಡಿತಾ ಇಲ್ಲ. ಆದರೆ ‘ಪಾವೆಂ’ ಅಥವಾ ‘ಎಂಬಿ ಸಿಂಗ್’ ಬಲಗಳು ನನ್ನ ಶೋಧ, ಬರಹಕ್ಕೆ ಒದಗಿದ್ದರೆ ಸ್ವಲ್ಪವಾದರೂ ‘ಜಿಟಿಎನ್’ ಆಗುತ್ತಿದ್ದೆನೇನೋ!

೧೯೮೨ರವರೆಗೆ ನಾನು ಕಂಡ ಗುಹೆಗಳ ಕುರಿತು ಎಲ್ಲೂ ಬರೆಯ ಹೋಗಿರಲಿಲ್ಲ. ಅಂದು ಉದಯವಾಣಿಯಲ್ಲಿ ಪ್ರಭಾವೀ ಸ್ಥಾನದಲ್ಲಿದ್ದ ಗೆಳೆಯ ಈಶ್ವರ ದೈತೋಟ, ನನ್ನ ಜಾಂಬ್ರಿ ಗುಹಾನ್ವೇಷಣೆಯ ಕುರಿತು ಕಿರು ಟಿಪ್ಪಣಿಯನ್ನು ಬಯಸಿದರು. ಅದಕ್ಕೂ ಎರಡು ವರ್ಷಗಳ ಹಿಂದೆಲ್ಲೋ ನಾನು ಜಾಂಬ್ರಿಯನ್ನು ಒಂದು ಪ್ರಾಕೃತಿಕ ವಿಸ್ಮಯವನ್ನಾಗಷ್ಟೇ ಹೊಕ್ಕು ಬಂದಿದ್ದೆ. ಅದನ್ನೇ ಬರೆದುಕೊಟ್ಟೆ. ಅದು ಪ್ರಕಟವಾದ ಸಂದರ್ಭ, ಹನ್ನೆರಡು ವರ್ಷಕ್ಕೊಮ್ಮೆ ಮಾತ್ರ, ಅದೂ ಭಾರೀ ವ್ರತಸ್ಥ ಮೂರು ಮಂದಿ ಮಾತ್ರ ಆ ಜಾಂಬ್ರಿ ಗುಹೆಯನ್ನು ಪ್ರವೇಶಿಸುವ ಮಹಾ ಉತ್ಸವದ ದಿನಗಳು. ಉದಯವಾಣಿಯಲ್ಲಿ ನಮ್ಮ ತಂಡ ಮತೀಯ ಕಟ್ಟುಪಾಡುಗಳನ್ನು ಹರಿಯಿತೆಂದು ಭಕ್ತ ಓದುಗರ ಓಲೆಗಳು ಹರಿದಾಡಿದವು. ಆಗ ನನಗೆ ಸಮರ್ಥಿಸಿಕೊಳ್ಳಲು, ಮತ್ತೆ ಹೊಸ ಸವಾಲುಗಳು ಬಂದಂತೆ ಗುಹಾನ್ವೇಷಣೆ ನಡೆಸಿ ಬರೆಯಲು ಉದಯವಾಣಿ ಮುಕ್ತ ಅವಕಾಶ ಕೊಟ್ಟಿತು. ಸುಮಾರು ಒಂದು ವರ್ಷದ ಉದ್ದಕ್ಕೆ, ನಾನು (ಬಳಗ ಸಹಿತ) ಇನ್ನಷ್ಟು ಗುಹೆಗಳನ್ನು ಶೋಧಿಸಿ, ಪ್ರಕೃತಿಪರವಾದ ಲೇಖನಗಳನ್ನೇ (ಗಮನಿಸಿ – ಪರಮತ ಭಂಜನೆ ಅಲ್ಲ) ಪ್ರಕಟಿಸುತ್ತ ಬಂದೆ, ಕೆಣಕಿದವರಿಗೂ ಕ್ರಿಯಾತ್ಮಕ ಉತ್ತರವನ್ನೇ ಕೊಟ್ಟೆ. ಅದು ಜಿಲ್ಲೆಯನ್ನೂ ಮೀರಿದ ವೈಚಾರಿಕ ಸಂಚಲನವನ್ನೇ ಎಬ್ಬಿಸಿತ್ತು. ಜತೆಗೇ ಪತ್ರಿಕಾ ಶಕ್ತಿಯ ಅರಿವನ್ನು ನನ್ನಲ್ಲಿ ಮೂಡಿಸಿತ್ತು. ಆದರೆ ಸ್ವತಃ ಪತ್ರಿಕೆಗೆ ಆ ಅರಿವು ಮೂಡಲೇ ಇಲ್ಲ. ಅದು ಅಂದಂದಿನ ಪ್ರಸರಣೆ, ತನ್ನದೇ ಸಂಸ್ಥೆಗಳ ಹಿತರಕ್ಷಣೆಯಲ್ಲೇ ಉಳಿಯಿತು. ಸಾಮಾಜಿಕ ಮೌಲ್ಯಗಳ ಜತೆ ಗುರುತಿಸಿಕೊಂಡು ತನ್ನ ನಿಜ ಬೆಳವಣಿಗೆಯನ್ನು ಕಾಣಲೇ ಇಲ್ಲ. ಇಂದು ಬಹುತೇಕ ಪತ್ರಿಕೆಗಳು, “ಲೇಖಕರ ಅಭಿಪ್ರಾಯಗಳಿಗೆ ಪತ್ರಿಕೆ ಜವಾಬ್ದಾರವಲ್ಲ” ಎಂದು ಪ್ರಕಟಿಸಿಕೊಳ್ಳುವುದನ್ನೇ ಅನುಸರಿಸಿದರು.
‘ಫೇಸ್ ಬುಕ್’ ವರ್ಷಗಳ ಹಿಂದಿನ ನಮ್ಮದೇ ನಮೂದುಗಳನ್ನು ಯಾಂತ್ರಿಕವಾಗಿ ಎತ್ತಿ ತೋರಿಸುವುದಿದೆ. ಹಾಗೇ ಕೆಲವು ಪತ್ರಿಕೆಗಳೂ ತಮ್ಮದೇ ಹಿಂದಿನಗಳ ತುಣುಕುಗಳನ್ನು ‘ಭವ್ಯ’ದ ಚೌಕಟ್ಟಿನಲ್ಲಿ ಮೆರೆಸುವುದಿದೆ. ಅಂಥಲ್ಲಿ ಬೆನ್ನೆಲುಬಿಲ್ಲದ ಮಾಧ್ಯಮಗಳಿಗೆ “…ಹೇಳಿದರು, ….ಮುಂದುವರಿಯುತ್ತಾ ನುಡಿದರು…” ವರದಿಗಳಷ್ಟೇ ಸಂಪತ್ತಾಗಿವೆ! ಸಂದ ಕಾಲದುದ್ದಕ್ಕೆ ವಿಶಿಷ್ಟ ಕಲಾಪಗಳನ್ನು ಕೇವಲ ಸ್ವಂತ ಹುಚ್ಚಿನಲ್ಲಿ ಮಾಡಿಕೊಡುವವರನ್ನು ಬಳಸಿ, ಪ್ರೋತ್ಸಾಹಿಸಿ, ಉಳಿಸಿಕೊಂಡಿದ್ದರೆ ಈ ದಾರಿದ್ರ್ಯ ಕಾಡುತ್ತಿರಲಿಲ್ಲ. (ಇತರ ನೂರೆಂಟು ವಿಷಯಗಳಲ್ಲಿ, ನನಗಿಂತ ಎಷ್ಟೆಷ್ಟೋ ಹೆಚ್ಚಿಗೆ ದುಡಿದವರ ಚಿತ್ರಗಳು ನನ್ನ ನೆನಪಿನ ಭಿತ್ತಿಯಲ್ಲಿವೆ. ವಿಷಯಾಂತರವಾಗಬಾರದೆಂಬ ಎಚ್ಚರದಲ್ಲಿ ಹೆಸರಿಸುತ್ತಿಲ್ಲ, ಕ್ಷಮಿಸಿ)
ಬ್ರಿಟಿಷರು ಎರಡೂವರೆ ಶತಮಾನಗಳ ಹಿಂದೆ ಭಾರತ ಸರ್ವೇಕ್ಷಣೆ ನಡೆಸಿದಲ್ಲಿಗೇ ಸುಮ್ಮನುಳಿಯಲಿಲ್ಲ. ಹಾಗೆ ರೂಪುಗೊಂಡ ನಕ್ಷೆಗಳನ್ನು ಕಾಲಕಾಲಕ್ಕೆ ಭೂಮಿಯನ್ನು ಪರಿಶೀಲಿಸಿಯೇ ಪರಿಷ್ಕರಿಸುವ ಒಂದು ಅನಿವಾರ್ಯತೆಯನ್ನು ತಮ್ಮ ಆಡಳಿತಕ್ಕೆ ಅಳವಡಿಸಿದ್ದರು. ಅಮೆದಿಕ್ಕೆಲ್ ಆರೋಹಣ ಕಾಲದಲ್ಲಿ ನನಗೆ ಆತ್ಮೀಯ ಸಂಪರ್ಕಕ್ಕೆ ಸಿಕ್ಕ ಕೀ.ಶೇ. ನೆರಿಯ ರಾಘವ ಹೆಬ್ಬಾರ್ ಅದನ್ನು ಹೀಗೆ ನೆನಪಿಸಿಕೊಳ್ಳುತ್ತಿದ್ದರು. “ಬ್ರಿಟಿಷ್ ಸರ್ವೇಯವರು ಅಮೆದಿಕ್ಕೆಲ್ ತುದಿಯನ್ನು ‘ಜಿಟಿ ಸ್ಟೇಶನ್’ ಎಂದರು. ಎರಡು ವರ್ಷಕ್ಕೊಮ್ಮೆ ಅದರ ಮರುತನಿಖೆಗೆ ಸ್ವತಃ ಜಿಲ್ಲಾಧಿಕಾರಿಯಾದವ ಭೇಟಿಕೊಡುವ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ನಡೆಸಿದರು. ಭಾರತಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಅದು ವ್ಯವಸ್ಥಿತವಾಗಿ ನಡೆಯುತ್ತಿತ್ತು! ನಮ್ಮ ಏಲಕ್ಕಿ ಮಲೆಯಿಂದಾಚೆ ‘ಸಾಹೇಬರ’ ಕುದುರೆ ಹಾಗೂ ಪರಿವಾರಕ್ಕೆ ದಾರಿ ಬಿಡಿಸಿಕೊಡುವುದರಿಂದ ತೊಡಗಿ, ಅವರ ಶಿಬಿರಕ್ಕೆಲ್ಲ ಪೂರ್ಣ ಸಹಾಯ ಒದಗಿಸುವುದು (ಒಟ್ಟು ಎರಡು ಮೂರು ವಾರ) ನಮ್ಮ ಕರ್ತವ್ಯವೇ ಆಗಿತ್ತು…. ಸ್ವಾತಂತ್ರ್ಯ ಬಂದ ಮೇಲೆ ‘ಸಾಹೇಬ್ಗಿರಿ’ ಮಾತ್ರ ಮುಂದುವರಿಯಿತು, ನೆಲದ ಅರಿವು ನವೀಕರಿಸುವ ಶಿಸ್ತು ಕಳೆದೇಹೋಯ್ತು.” (ನೆನಪಿರಲಿ, ೧೯೮೦ರ ದಶಕದಲ್ಲಿ ನಾನು ಇಲಾಖೆಯಿಂದ ಸಂಗ್ರಹಿಸಿದ ಬಹುತೇಕ ಟೋಪೋ ಶೀಟುಗಳೆಲ್ಲ ೧೯೦೨ರ ಸರ್ವೇಕ್ಷಣೆಯದ್ದೇ ಮುದ್ರಣ ಅಥವಾ ಮರುಮುದ್ರಣ!)
೧೯೮೦ರ ದಶಕದಲ್ಲಿ ‘ಪಶ್ಚಿಮ ಘಟ್ಟ ಉಳಿಸಿ’ ಪಾದಯಾತ್ರೆ ದಕ ಜಿಲ್ಲೆಯನ್ನೂ ಹಾದು ಹೋದದ್ದು ನಿಮಗೆಲ್ಲ ತಿಳಿದೇ ಇದೆ. ಆಗ ಜಿಲ್ಲೆಯ ಮಿತಿಯೊಳಗೆ ಅದಕ್ಕೆ ಪೂರ್ಣ ಸಹಕಾರವನ್ನು ಕೊಟ್ಟದ್ದು ಗುರುವಾಯನಕೆರೆ ಎಂಬ ದೊಡ್ಡ ಹಳ್ಳಿಯ, ಸಣ್ಣ ಸಾಮಾಜಿಕ ಸೇವಾ ಸಂಸ್ಥೆ ‘ನಾಗರಿಕ ಸೇವಾ ಟ್ರಸ್ಟ್’. ಹಳ್ಳಿಯಿಂದ ದಕ ಜಿಲ್ಲೆಯ ವ್ಯಾಪ್ತಿ ಗಳಿಸಿದ ಈ ಟ್ರಸ್ಟ್ ಅನುಭವವನ್ನು ವ್ಯರ್ಥಗೊಳಿಸಲಿಲ್ಲ. ಸೋಮನಾಥ ನಾಯಕ್ ಮತ್ತು ರಂಜನ ರಾವ್ ಎರ್ಡೂರರ ಸಮರ್ಥ ನಾಯಕತ್ವದಲ್ಲಿ ಟ್ರಸ್ಟ್ ಜಿಲ್ಲಾ ಪರಿಸರ ಒಕ್ಕೂಟ ಕಟ್ಟಿ, ಪಾದಯಾತ್ರೆಯ ಆಶಯವನ್ನು ಮುಂದಕ್ಕೊಯ್ಯುವ ಪ್ರಯತ್ನವನ್ನೇ ನಡೆಸಿತು. ಅದರ ಒಂದು ಸಣ್ಣ ಅಂಗವಾಗಿ ಮತ್ತೆ ಸ್ವಯಂಸೇವಕರ ಬಲದಲ್ಲೇ ಕೆಲವು ಹಳ್ಳಿಗಳ ‘ಇಂದಿನ’ ಪ್ರಾಕೃತಿಕ ಸಂಪತ್ತುಗಳ ವೈಜ್ಞಾನಿಕ ಗಣನೆ ನಡೆಸಿ, ಪುಸ್ತಕಗಳನ್ನೂ ಹೊರಡಿಸಿತು.

ಆದರೆ ಅದನ್ನು ಆದರ್ಶವಾಗಿ ಕಂಡವರೂ ಇಲ್ಲ, ಅನ್ಯತ್ರ ಅನುಕರಣಿಯವೆಂದು ಬೆಳೆಸಿದವರೂ ಇಲ್ಲ. ನನ್ನನ್ನು ‘ಜಾಂಬ್ರಿಗೆ ತಳ್ಳಿದ’ ಈಶ್ವರ ದೈತೋಟ, ಉದಯವಾಣಿಯಲ್ಲೇ ‘ಕುಗ್ರಾಮ ಗುರುತಿಸಿ’ ಹೆಸರಿನ ಸಾಮಾಜಿಕ ಅಧ್ಯಯನದ ಬಹಳ ದೊಡ್ಡ ಪ್ರಯೋಗ ಮಾಡಿದ್ದರು. ನೆಲದ ಸತ್ಯವನ್ನು ವೃತ್ತಿಯ ಮಟ್ಟದಲ್ಲೇ ಸಂಗ್ರಹಿಸಿ, ಸಂಸ್ಕರಿಸಿ, ಫಲಿತಾಂಶವನ್ನು ಇತ್ತ ಸಮಾಜಕ್ಕೂ ಅತ್ತ ಆಡಳಿತಕ್ಕೂ ಮುಟ್ಟಿಸಿದ್ದರು. ಅದು ಸಮಾಜದಲ್ಲಿ ಜಾಗೃತಿಯನ್ನೂ ಆಡಳಿತಕ್ಕೆ ಕೆಲಸ ಮಾಡುವ ಅನಿವಾರ್ಯತೆಯನ್ನೂ ಉಂಟುಮಾಡಿತ್ತು. ಅದರ ಯಶಸ್ಸಿನ ಗರಿಯನ್ನೇನೋ ಉದಯವಾಣಿ ಮುಡಿದುಕೊಂಡಿತು. ಆ ಆರೋಗ್ಯಕರ ನಡೆಯನ್ನು ಅನ್ಯ ಪತ್ರಿಕೆಗಳು ಬಿಡಿ, ಸ್ವತಃ ಉದಯವಾಣಿಯೂ ಮುಂದೆ ಉಳಿಸಿಕೊಳ್ಳಲಿಲ್ಲ.ಶಿವರಾಮ ಕಾರಂತರು ೧೯೩೪ರಲ್ಲೇ ‘ಚಿತ್ರಮಯ ದಕ್ಷಿಣ ಕನ್ನಡ’ದ ಕನಸು ಕಂಡರು. ಅವರಿಗೆ ಪತ್ರಿಕೆಯದ್ದೋ ಪ್ರಕಾಶಕರದ್ದೋ ಸಿದ್ಧ ವೇದಿಕೆಯಿರಲಿಲ್ಲ. ಛಾಯಾಚಿತ್ರ ಇನ್ನೂ ಬಾಲಾವಸ್ಥೆಯಲ್ಲಿದ್ದ ಕಾಲ. ಕಾರಂತರು ಡಬ್ಬ ಕ್ಯಾಮರಾ ಹೊತ್ತು, ಎಲ್ಲೆಲ್ಲಿನ ಜನರನ್ನು ನೆಚ್ಚಿ, ಕಾಡು, ಬೆಟ್ಟ, ಅಬ್ಬಿ ಎಂದು ಸುತ್ತಿ ಚಿತ್ರಗ್ರಹಣ ನಡೆಸಿದರು. ಅದರ ಸಂಸ್ಕರಣವನ್ನು ಜರ್ಮನಿಗೆ ಟಪಾಲಿನಲ್ಲಿ ಕಳಿಸಿ ಮಾಡಿಸಿಕೊಂಡರು. ತಿರುಗಾಟದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ವಿಸ್ತರಿಸಿ ಬರೆದು, ಪುಸ್ತಕವನ್ನೇ ಪ್ರಕಟಿಸಿದರು. ಇಂದು ನಾವು “ಪಶ್ಚಿಮಕ್ಕೆ ಕಣ್ಣೆಟುಕದ ಕಡಲು, ಪೂರ್ವಕ್ಕೆ ಗಗನದೆತ್ತರದ ಘಟ್ಟ, ನೆಲಮುಚ್ಚ ಹಸಿರು…” ಎಂದು ರಂಗಾಗಿ ಕೊಚ್ಚಿಕೊಳ್ಳುತ್ತೇವೆ. ಆದರೆ ಅದನ್ನು ಕಾರಂತರಂತೆ ಅನುಭವಿಸಿ ಭಾಷೆ ಕೊಟ್ಟವರನ್ನು ಕಾಣುವುದು ವಿರಳ. ಅರಿವಿಲ್ಲದೇ ಸಣ್ಣದಾಗಿ ಕಾರಂತರ ಹೆಜ್ಜೆಗಳಲ್ಲಿದ್ದ ನನ್ನಂಥವರನ್ನು ಪೋಷಿಸುವ ದೊಡ್ಡಸ್ತಿಕೆ ಸರಕಾರಕ್ಕೂ ಸಮಾಜಕ್ಕೂ ಬರಲೇ ಇಲ್ಲ. ಇದು ಸ್ವಮರುಕವಲ್ಲ, ಇನ್ನೊಬ್ಬರನ್ನು ಮೆಚ್ಚಿಸುವ ಹಪಹಪಿಯದ್ದೂ ಅಲ್ಲ,

ಹೆಚ್ಚೇನು ಪ್ರತಿ ಕಲಾಪದ ಕೊನೆಯಲ್ಲಿ ನಾನು ಪೂರ್ಣ ತೃಪ್ತನೇ ಆಗುತ್ತಿದ್ದೆ. ಈ ನಕ್ಷೆಗಳಲ್ಲಿ ಅವನ್ನು ಮೀರಿದ್ದೇನನ್ನೋ ಒಂದು ಥರದಲ್ಲಿ ನನ್ನದಲ್ಲದ್ದೇನನ್ನೋ ರಾಜೇಂದ್ರ ಪ್ರಸಾದ್ ಕಂಡುಕೊಂಡದ್ದಕ್ಕೆ ಇಷ್ಟಾದರೂ ಚಿಂತನೆಗೆ ಅವಕಾಶವಾಯ್ತು. ಆರ್ಪೀ ಧನ್ಯವಾದಗಳು.

(ವಿಸೂ: ಎಲ್ಲ ನಕ್ಷೆಗಳೂ ಫೇಸ್ ಬುಕ್ಕಿನಲ್ಲಿ ಆಸಕ್ತರಿಗೆ ಮುಕ್ತವಾಗಿವೆ)