ಕನ್ನಡ ವಿದ್ಯುನ್ಮಾನ (ವಿ)-ಪುಸ್ತಕಗಳು ಅತ್ರಿ ಬುಕ್ ವಿಪ್ರಕಾಶನ(ಉಚಿತ)
 
ಕನ್ನಡ ಪುಸ್ತಕೋದ್ಯಮದಲ್ಲಿ ಮುಖ್ಯವಾಗಿ ಬಿಡಿ ಮಾರಾಟಗಾರನಾಗಿ ಮತ್ತೆ ಪ್ರಕಾಶನವೇ ಮೊದಲಾದ ಕೆಲವು ಮುಖಗಳಲ್ಲಿ ಚೂರುಪಾರೆಂದು ಸುಮಾರು ಮೂವತ್ತಾರು ವರ್ಷ ಪ್ರಾಮಾಣಿಕ ದುಡಿದ ಅನುಭವ ನನ್ನದು. ಆ ಕೊನೆಯಲ್ಲಿ ಕನ್ನಡ ಮುದ್ರಣಪ್ರಕಾಶನ ಮಾಧ್ಯಮದ ಹುಸಿತನಕ್ಕೆ ರೋಸಿ ಪ್ರಕಾಶನವನ್ನು ಮುಚ್ಚಿದೆ, ಅನಂತರ ಸ್ವಯಂ ನಿವೃತ್ತಿ ಘೋಷಿಸಿ ಪುಸ್ತಕ ಮಾರಾಟವನ್ನೂ ನಿಲ್ಲಿಸಿದೆ. ಹಾಗೆಂದ ಮಾತ್ರಕ್ಕೆ ಕನ್ನಡದಲ್ಲಿ ಗಂಭೀರ ಓದುಗರಿಲ್ಲ ಅಥವಾ ಸಾರ್ವತ್ರಿಕ ಉಪಯುಕ್ತವಾದ ಅನುಭವಗಳಿಗೆ ಅಭಿವ್ಯಕ್ತಿ ಮಾಧ್ಯಮವೇ ಇಲ್ಲ ಎಂದಲ್ಲ ಎನ್ನುವಂತೆ ಅಂತರ್ಜಾಲದ ಜಾಲತಾಣಗಳು, ಜಾಲಪತ್ರಿಕೆಗಳು ವಿಕಸಿಸುವುದನ್ನು ಕಾಣುತ್ತಿದ್ದೇನೆ. ಸ್ವತಃ ನನ್ನದೇ ಆದ ಈ ಜಾಲತಾಣದ (www.athreebook.com) ವ್ಯಾಪ್ತಿ ಇನ್ನೂ ಅಚಿಂತ್ಯ, ಅನಂತವಾಗಿಯೇ ಕಾಣುತ್ತಿದೆ. ಜಾಲತಾಣದ ಬಹುಮುಖೀ ಸಾಧ್ಯತೆಗಳನ್ನು ಕಂಡುಕೊಳ್ಳುತ್ತಾ, ಕಾಲಕಾಲಕ್ಕೆ ಅವನ್ನು ನನ್ನ ಜಾಲತಾಣಕ್ಕೆ ಅಳವಡಿಸಿಕೊಡುತ್ತಲಿರುವವನು ನನ್ನ ಮಗ ಅಭಯಸಿಂಹಈ ಜಾಲತಾಣದ ನಿರ್ವಾಹಕ.
ನಾನು ಜಾಲತಾಣಕ್ಕಿಳಿಯುವ ಕಾಲದಲ್ಲಿ, ಇದು ಮುದ್ರಣ ಮಾಧ್ಯಮದಲ್ಲಿ ಬಂದ ನನ್ನ ಬರಹಗಳ ವಿದ್ಯುನ್ಮಾನ ದಾಸ್ತಾನು ಕೋಠಿ ಎಂದಷ್ಟೇ ಭಾವಿಸಿದ್ದೆ. ಆದರಿಂದು ಇಲ್ಲಿನ ಏಳ್ನೂರಕ್ಕೂ ಮಿಕ್ಕ ಸಚಿತ್ರ ಬರಹಗಳು, ಸಾವಿರಕ್ಕೂ ಮಿಕ್ಕು ಪ್ರತಿಕ್ರಿಯೆಗಳು, ಅಸಂಖ್ಯ ಸಂಪರ್ಕಸೇತುಗಳು, ಚಲನಚಿತ್ರ ಮತ್ತು ಧ್ವನಿದಾಖಲೆಗಳು, ಪರೋಕ್ಷವಾಗಿ ಇದರ ಪ್ರೇರಣೆಯಲ್ಲೇ ರೂಪುಗೊಳ್ಳುತ್ತಿರುವ ಪತ್ರಿಕಾ ಬರಹಗಳು, ಪುಸ್ತಕಗಳು ನಿಜ ಕನ್ನಡಕ್ಕೆ ಹೊಸದೇ ಆಯುಷ್ಯ ವಿಸ್ತರಣೆಯನ್ನು ಕೊಡುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ. ಅತ್ರಿ ಬುಕ್ ಸೆಂಟರಿನ ಹೆಸರಿನಲ್ಲಿ ನಾನು ಐವತ್ತಕ್ಕೂ ಮಿಕ್ಕು, ಅದರಲ್ಲೂ ಮುಖ್ಯವಾಗಿ ನನ್ನ ತಂದೆ ಜಿಟಿನಾರಾಯಣ ರಾಯರ ವಿಜ್ಞಾನ ಬರಹಗಳನ್ನು ಪ್ರಕಟಿಸಿದ್ದೆ. ಅವು ಮುಗಿಯುತ್ತ ಬಂದಂತೆ ಕಾಲನ ಅಟ್ಟಕ್ಕೆ ತಳ್ಳಿ, ಮರೆವಿನ ಹೊದಿಕೆ ಮುಚ್ಚುವುದರಲ್ಲಿದ್ದೆ. ಆಗ ಕಾಣಿಸಿದ ಸಾಧ್ಯತೆ ವಿಪುಸ್ತಕ.
ಇಂದು ಮುದ್ರಿತ ಪತ್ರಿಕೆಗಳ ಜೀವಾಳ ಜಾಹೀರಾತುಗಳು ಮತ್ತು ಪ್ರಾಯೋಜಿತ ಸುದ್ದಿಗಳು. ಜಾಹೀರಾತಿನ ಎಡೆ ತುಂಬುವುದಕ್ಕೆ ಎಷ್ಟೂ ಅಂಕಣ ಬರಹಗಾರರಿದ್ದಾರೆ. ಮತ್ತೆ ಈ ಅಂಕಣ ಸಂಕಲನವೂ ಮಹಾಪ್ರಸಾದ ಎನ್ನುವುದಕ್ಕೆ ಎಷ್ಟೂ ಪ್ರಕಾಶಕರು ಇದ್ದಾರೆ. ಈ ಪ್ರಕಾಶಕರು ಮುದ್ರಿಸಿದ್ದೆಲ್ಲಾ ಖರೀದಿಸಲು ನಮ್ಮಲ್ಲಿ ಎಷ್ಟೂ ಯೋಜನೆಗಳಿವೆ. ಪರೋಕ್ಷವಾಗಿ ಅಷ್ಟೂ ಮತ್ತು ಬರಲಿರುವ ಇನ್ನಷ್ಟೂ ಯೋಜನೆಗಳು ನಾಡಿನ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಉತ್ಥಾನಕ್ಕೆ ಅವಶ್ಯ ಎಂದು ಕಾಲಕಾಲಕ್ಕೆ ಆ ಎಲ್ಲ ಜಾಹೀರಾತುದಾರರು, ಲೇಖಕರು, ಪ್ರಕಾಶಕರು, ಯೋಜಕರು ಪ್ರಚುರಿಸುತ್ತಲೇ ಇದ್ದಾರೆ. ಆದರಿದು ಸುಳ್ಳನ್ನು ಹಲವು ಬಾರಿ ಹೇಳಿಸತ್ಯಕಾಣಿಸುವ ಪ್ರಯತ್ನ ಮಾತ್ರ. ಮುದ್ರಣದ ಪುಸ್ತಕೋದ್ಯಮ ನಿಸ್ಸಂದೇಹವಾಗಿ ತನ್ನ ಕೊನೆಗಾಲದಲ್ಲಿದೆ. ಹಾಗಾಗಿ ನಾನು ತಂದೆಯ ಪುಸ್ತಕಗಳನ್ನು ಸ್ವಂತ ನೆಲೆಯಲ್ಲಿ ಮರುಮುದ್ರಣ ಮಾಡಿಸಿ, ಮಾರಾಟಕ್ಕೆ ಒಡ್ಡಲಿಲ್ಲ. ಅಯಾಚಿತವಾಗಿಯೇ ಕೇಳಿ ಬಂದ ಅನ್ಯ ಪ್ರಕಾಶಕರಿಗೂ ಕೊಡಲಿಲ್ಲ.
ಕನ್ನಡದಲ್ಲೂ ವಿದ್ಯುನ್ಮಾನ ಪುಸ್ತಕಗಳು ರೂಪುಗೊಳ್ಳುವ ಮಾತುಗಳು ಬರುವಾಗ ನನ್ನಸನ್ಯಾಸಕ್ಕೆ ರಕ್ತಿ ಮೂಡಿತು. ಗೆಳೆಯ ಪಂಡಿತಾರಾಧ್ಯರು ಕನ್ನಡ ಗಣಕ ಪರಿಷತ್ತಿನ ಅಪರಿಮಿತ ಚಟುವಟಿಕೆಗಳ ಅಂಗವಾಗಿ ನನ್ನೆಲ್ಲ ಪ್ರಕಟಣೆಗಳನ್ನು ಅಂತರ್ಜಾಲಕ್ಕೆ ಮುಕ್ತಗೊಳಿಸುವ ಮಾತುಗಳನ್ನು ಕೆಲವು ಸಮಯದ ಹಿಂದೆಯೇ ಪ್ರಸ್ತಾವಿಸಿದ್ದರು. ಸರಕಾರದ ಕೃಪಾಪೋಷಿತ ಇಲಾಖೆಯೂ ಅಂತಹುದೇ ಮನವಿ ಸಲ್ಲಿಸಿತ್ತು. ತೀರಾ ಈಚೆಗೆ ಇನ್ನೋರ್ವ ಗೆಳೆಯ ಪವನಜರಂತೂ ವಿಪ್ರಕಾಶನದ ಆರ್ಥಿಕ ಸಾಧ್ಯತೆಗಳನ್ನೂ ವಿವರಿಸಿದ್ದರು. ಈ ಮೂರೂ ಶಕ್ತಿಗಳ ಹಿಂದಿನ ಆಶಯಗಳು ಮತ್ತು ವ್ಯಕ್ತಿಗಳು ನನಗೆ ಒಪ್ಪಿತವೇ. ಸ್ವತಂತ್ರ ಭಾರತದಲ್ಲಿ ಪ್ರಜಾಪ್ರಭುತ್ವದ ಒಳ್ಳೆಯ ಹೆಸರಿನಲ್ಲಿ ಅದೆಷ್ಟು ಉದಾತ್ತ ಆಶಯಗಳು ನಂಬಲಸಾಧ್ಯವಾದ ಕೆಳಮಟ್ಟವನ್ನು ಕಂಡಿವೆ ಎಂಬ ಕಹಿ ನನ್ನ ಗಂಟಲಲ್ಲಿ ಉಳಿದದ್ದಕ್ಕೆ ಅವೆಲ್ಲವನ್ನೂ ಸವಿನಯ ತಿರಸ್ಕರಿಸಿದ್ದೆ. ಆದರೀಗ ನನ್ನದೇ ಮಿತಿಯಲ್ಲಿ ಅವನ್ನು ವಿದ್ಯುನ್ಮಾನ ಅವತರಣಿಕೆಗಳಾಗಿ ಮೂಡಿಸಿ ಸಾರ್ವಜನಿಕಕ್ಕೆ ಮುಕ್ತಗೊಳಿಸುತ್ತಿದ್ದೇನೆ. ಇಲ್ಲಿ ಯಾವುದೇ ವಾಣಿಜ್ಯ ಅನುಸಂಧಾನವಿಲ್ಲ.
ಹೀಗೇ ಇನ್ಯಾರಿಗಾದರು ತಮ್ಮ ಬರಹಗಳನ್ನು ನನ್ನ ಜಾಲತಾಣದ ಮೂಲಕ ಸಾರ್ವಜನಿಕಕ್ಕೆ ಮುಕ್ತಗೊಳಿಸುವ ಬಯಕೆ ಇದ್ದರೆ ಅದಕ್ಕೂ ಆದರದ ಸ್ವಾಗತವಿದೆ. ಒಂದೇ ನಿಬಂಧನೆಕೃತಿಯ ವಿಮೂಲಪ್ರತಿಯನ್ನು ಅವರೇ ಸಂಯೋಜಿಸಿ ನಮಗೆ ಪೂರೈಸಬೇಕು.

ಈಗ ತೆಗೆದುಕೊಳ್ಳಿ…

ಜಿ.ಟಿ. ನಾರಾಯಣ ರಾವ್ ಎಲ್ಲ ಕೃತಿಗಳ ಉಚಿತ ವಿದ್ಯುನ್ಮಾನ ಪುಸ್ತಕಗಳಿಗೆ – https://bit.ly/3t6kudc

 

ಜಿ.ಟಿ. ನಾರಾಯಣ ರಾವ್ ಬರಹಗಳು
ಅನ್ಯ ಲೇಖಕರ  ಬರಹಗಳು
ಮನಿಯಾರ್ಡರ್ ಕಳಿಸಬೇಕಾದ ವಿಳಾಸ 
ಜಿ.ಎನ್.ಅಶೋಕವರ್ಧನ
ಅಭಯಾದ್ರಿ, ಪಿಂಟೋರವರ ಓಣಿ, ಕರಂಗಲ್ಪಾಡಿ, ಮಂಗಳೂರು ೫೭೫೦೦೩
ದೂ – ೦೮೨೪-೨೯೮೨೩೯೭ ಮಿಂಚಂಚೆ:athreebook@gmail.com