(ಈ ಬರಹದ ಮೊದಲ ಪ್ರತಿಯನ್ನು ಐದು ಕಂತುಗಳ ಧಾರಾವಾಹಿಯಾಗಿ ಫೇಸ್ ಬುಕ್ಕಿನಲ್ಲಿ ಪ್ರಕಟಿಸಿದ್ದೆ. ಇಲ್ಲಿ ಅವನ್ನು ಪರಿಷ್ಕರಿಸಿ ಸಂಕಲಿಸಿದ್ದೇನೆ. ಫೇಸ್ ಬುಕ್ಕಿನಲ್ಲಿ ವಿಷಾದ ವ್ಯಕ್ತಪಡಿಸಿದವರು, ತಮ್ಮ ವಲಯದ ಇನ್ನಷ್ಟು ಮಂದಿಗೆ ಮುಟ್ಟಿಸಿದವರು ನೂರಾರು. ಅಲ್ಲಿ ಬಂದ ಕೆಲವು ವಿಷಯಕ ಪ್ರತಿಕ್ರಿಯೆಗಳನ್ನು ಇಲ್ಲಿ ಪ್ರತಿಕ್ರಿಯಾ ಅಂಕಣದಲ್ಲಿ ಸೇರಿಸಿಕೊಳ್ಳುತ್ತಿದ್ದೇನೆ. ಹಾಗೇ ಸುದೀರ್ಘ ಟಿಪ್ಪಣಿಯನ್ನೇ ಕೊಟ್ಟ ‘ಪವಾಡ ವಿರೋಧಿ’ ನರೇಂದ್ರ ನಾಯಕ್ ಮತ್ತು ಹಿರಿಯ ವೈದ್ಯ ಮಿತ್ರ ಶ್ರೀನಿವಾಸ ಕಕ್ಕಿಲ್ಲಾಯರ ಬರಹಗಳನ್ನು, ಅವರ ಅನುಮತಿಯೊಡನೆ ಇದಕ್ಕೆ ಅನುಬಂಧಗಳಾಗಿ ಬಳಸಿಕೊಂಡಿದ್ದೇನೆ)

ಕೃಶಿ ತೊರೆ ಬತ್ತಿಹೋಯ್ತು

ಮಲೇಶ್ಯಾದಿಂದ ವೈದ್ಯಕೀಯ ಓದಿಗಾಗಿ ಅಸಂಖ್ಯ ವಿದ್ಯಾರ್ಥಿಗಳು ಮಂಗಳೂರು, ಮಣಿಪಾಲಕ್ಕೆ ಬರುತ್ತಿದ್ದ ಕಾಲವದು (ಸುಮಾರು ೧೯೮೪). ಆ ಬಳಗದ್ದೇ ಇದೊಂದು ಕುಡಿ ಎಂದೇ ನಾನೋರ್ವ ಧಡೂತಿ ತರುಣನನ್ನು ಭಾವಿಸಿದ್ದೆ. ಆದರೆ ಒಮ್ಮೆ ನಾನು ಇನ್ಯಾರದೋ ಜತೆ ಕನ್ನಡದಲ್ಲಿ ಮಾತಾಡುತ್ತಿದ್ದಾಗ, ಅಲ್ಲೇ ಇದ್ದ ಈತ ಅರ್ಥಪೂರ್ಣ ನಗೆ ಕೊಟ್ಟ! ಆಗ ತಿಳಿಯಿತು, ಈತ ಅಪ್ಪಟ ಕನ್ನಡಿಗ – ಸಮೀಪದ ಮೂಡಬಿದ್ರೆಯ ಕೃಷ್ಣಮೋಹನ ಪ್ರಭು; ಮಿತ್ರವಲಯಕ್ಕೆ ಕೃಶಿ. ಮುಂದೆ ನನ್ನ ಮಾತಿನ ಚಪಲಕ್ಕೋ, ಕೃಶಿಯದೇ ಮಿತಿಯರಿಯದ ಕುತೂಹಲಕ್ಕೋ ನಮ್ಮೊಳಗೆ ಅಪೂರ್ವ ಗೆಳೆತನದ ಬಂಧ ಏರ್ಪಟ್ಟಿತ್ತು. ಮತ್ತದು ಸುಮಾರು ಮೂವತ್ತೇಳು ವರ್ಷಗಳ ಉದ್ದಕ್ಕೆ ದೃಢವಾಗಿ ಬೆಳೆದಿತ್ತು. ಆದರೆ ಈಚೆಗೆ (೧೧-೧-೨೦೨೨) ತೀರಾ ಅನಿರೀಕ್ಷಿತವಾಗಿ, ಅಕಾಲಿಕವಾಗಿ ಮತ್ತು ಯಾವತ್ತಿಗೂ ಕಡಿದು ಹೋಯ್ತು; ಕೃಶಿ ಇನ್ನಿಲ್ಲ! ಮೂಡಬಿದ್ರೆಯ ಆಭರಣಗಳ ವ್ಯಾಪಾರಿಯೋರ್ವರ ನಾಲ್ಕು ಮಕ್ಕಳಲ್ಲಿ ಹಿರಿಯ ಈ ಕೃಶಿ. ಪ್ರೌಢಶಾಲೆಯವರೆಗೂ ಕನ್ನಡ ಮಾಧ್ಯಮದ ಕಲಿಕೆ. ಅದನ್ನು ಮೀರಿದ ಇವರ ಓದಿನ ಹಸಿವಿಗೆ ಸ್ಥಳೀಯ ಸಾರ್ವಜನಿಕ ಗ್ರಂಥಾಲಯ ಒಳ್ಳೆಯ ಅವಕಾಶ ಕೊಟ್ಟಿತ್ತು. ಅಲ್ಲಿದ್ದ ಏಕೈಕ ಗ್ರಂಥಪಾಲನಿಗೆ ಪುಸ್ತಕಗಳ ವಿಷಯವಾರು ವಿಂಗಡಣೆ, ಪಟ್ಟಿ ಮಾಡುವಲ್ಲೆಲ್ಲ ಕೃಶಿ ದೊಡ್ಡ ಸ್ವಯಂಸೇವಕ. ಅಮಿತ ಪುಸ್ತಕಗಳ ಸಾಂಗತ್ಯ, ಉಚಿತ ಓದಿನವಕಾಶ ಇವರ ಸಂಭಾವನೆ. ಶೈಕ್ಷಣಿಕವಾಗಿ ಪದವಿಪೂರ್ವ ಓದನ್ನು ಮೂಡಬಿದ್ರೆಯಲ್ಲೇ ಮುಗಿಸಿ, ವೈದ್ಯಕೀಯ ಕಲಿಕೆಗೆ ಮಂಗಳೂರು ಬಂದರು. “ಅಯ್ಯೋ ಸಾವಿರಗಟ್ಟಳೆ ಪುಟಗಳ, ಕಿಲೋಗಟ್ಟಳೆ ತೂಕದ ಮೆಡಿಕಲ್ ಬುಕ್ಸ್ ಎತ್ತುವುದರಲ್ಲೇ…” ಎಂದು ಸಾಮಾನ್ಯರು ಹೆಣಬೀಳುತ್ತಿದ್ದಾಗ, ಕೃಶಿಯ ಜ್ಞಾನಸರಸಿ ನಗರದಲ್ಲಿ ಹೆಚ್ಚಿನ ಜಲಾನಯನ ಪ್ರದೇಶಗಳನ್ನು, ಅಲ್ಲಲ್ಲ ಪುಸ್ತಕ ಮಳಿಗೆಗಳನ್ನು ಅರಸಿತ್ತು. ನಾನು ‘ನಿತ್ಯದ ಪುಸ್ತಕ’ಗಳಿಂದ ಹೊರಗಿನವನ್ನೇ ಕೊಡುವವನಾದ್ದಕ್ಕೋ ವ್ಯಾಪಾರದಿಂದ ಹೊರಗೆ ಸಾಕಷ್ಟು ಕೊರೆಯುತ್ತಿದ್ದದ್ದಕ್ಕೋ ಕೃಶಿ ನನ್ನಂಗಡಿಯನ್ನು ತುಂಬಾ ಹಚ್ಚಿಕೊಂಡರು. ಸಹಜವಾಗಿ ವೈಯಕ್ತಿಕ ಒಡನಾಟಗಳೂ ಹೆಚ್ಚಿದವು.

ಕೃಶಿ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವೀಧರನಾದರು. ತನ್ನದೇ ಕಾಲೇಜಿನ ಕಿರಿಯ ವೈದ್ಯೆ ಸೀಮಾಳೊಂದಿಗೆ ಗೃಹಸ್ಥನೂ ಆದರು. ಹೊಸ ಕೌಟುಂಬಿಕ ಸಂಪ್ರದಾಯಕ್ಕೆಂಬಂತೆ ನಾಮಾಂತರದಲ್ಲಿ ‘ಸೀಮಾ’ ಹೋಗಿ, ‘ರಾಧಿಕಾ’ ಆದರು. ಕೃಶಿಯ ಬಹುಮುಖೀ ಆಸಕ್ತಿಗಳನ್ನು ಪೊರೆಯುವಲ್ಲೂ ಈಕೆ ಪುರಾಣಪುರುಷ ಕೃಷ್ಣನ ರಾಧೆಯೇ ಆದರು. ಮೂಡಬಿದ್ರೆಯಲ್ಲಿ ತಮ್ಮದೇ ಚಿಕಿತ್ಸಾಲಯ, ಹೊಸ ಮನೆ, ಮಗಳು ಎಂದೆಲ್ಲಾ ಲೌಕಿಕಗಳಲ್ಲಿ ಸಹಜವಾಗಿ ವಿಕಸಿಸುತ್ತಲಿದ್ದರು. ಆದರೆ ಅಷ್ಟಕ್ಕೇ ಸೀಮಿತಗೊಳ್ಳದೆ ಹೊಸತನ್ನು ಅರಸುವ, ದಕ್ಕಿದ್ದನ್ನು ರೂಢಿಸಿಕೊಳ್ಳುವ, ಇತರರೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವ ಕೆಲಸವನ್ನು ಮೊದಲಿಗಿಂತಲು ಹೆಚ್ಚಿಗೇ ನಡೆಸುತ್ತ ಬಂದರು. ಆದರೆ ಅದೆಲ್ಲಿಂದ ಗಂಟುಬಿತ್ತೋ – ಲ್ಯುಕೇಮಿಯಾ (ರಕ್ತ ಕ್ಯಾನ್ಸರ್), ಸುಮಾರು ಮೂರು ತಿಂಗಳ ಮುನ್ಸೂಚನೆಯನ್ನಷ್ಟೇ ಕೊಟ್ಟು, ಕೊನೆಯಲ್ಲಿ ಸುಮಾರು ಮೂವತ್ತಾರು ದಿನಗಳ ಆಸ್ಪತ್ರೆವಾಸ ವಿಧಿಸಿ, ಕೃಶಿ-ತೊರೆಯನ್ನು ಸಾರ್ವಕಾಲಿಕವಾಗಿ ಬತ್ತಿಸಿಬಿಟ್ಟಿತು. ತನ್ನನ್ನು ಏನು ಹಿಡಿದುಕೊಂಡಿದೆ, ಚಿಕಿತ್ಸೆಯ ಸಾಧ್ಯತೆಗಳು ಏನು ಮತ್ತು ಭವಿಷ್ಯ ಏನು ಎನ್ನುವುದು ಕೊನೆಯ ಗಳಿಗೆಯವರೆಗೂ ಕೃಶಿಗೆ ಸ್ಪಷ್ಟವಾಗಿ ಅರಿವಿತ್ತು. ಅದರಲ್ಲಿ ಕೊರತೆಯಾಗದಂತೆ ಜತೆಗೊಟ್ಟವರು ಮುಖ್ಯವಾಗಿ ರಾಧಿಕಾ, ಹಲವು ಹಿರಿಯ ಮತ್ತು ಸಹಪಾಠಿ ವೈದ್ಯರು ಹಾಗೂ ಮಿತ್ರರು. ಅವನ್ನೆಲ್ಲ ವಿಮರ್ಶಿಸುವುದು ನನ್ನ ಮಿತಿಗೆ ಮೀರಿದ್ದು. ಹಾಗಾಗಿ ಅವನ್ನು ಬಿಟ್ಟು, ತಲೆಯಲ್ಲಿ ಸುತ್ತುತ್ತಲೇ ಇರುವ ಕೃಶಿಯ ಮಧುರ ನೆನಪುಗಳ ಸಾರವನ್ನಷ್ಟೇ ಇಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದೇನೆ.

ಸಂಭವಾಮಿ ಯುಗೇ ಯುಗೇ

“ಪ್ರೌಢಶಾಲಾ ಹಂತದಲ್ಲಿ ನಾನೊಮ್ಮೆ ಡುಮುಕಿ ಹೊಡೆದಿದ್ದೆ” ಕೃಶಿ ಹಿಂದೊಮ್ಮೆ ಗಹಗಹಿಸಿ ನಕ್ಕು ಹೇಳಿದ್ದನ್ನು ದೇವಕಿ ನೆನಪಿಸಿಕೊಳ್ಳುತ್ತಾಳೆ. “ನನ್ನ ಓದಿನ ಆಸೆ, ಗುರಿ ಮುಟ್ಟಿಸುವ ಛಲಕ್ಕೆ ಉದಾಸೀನ ಕವಿದಿತ್ತು. ಫೈಲ್ ಕೊಟ್ಟ ಶಾಕಿಗೆ ಉದಾಸೀನ ಹರಿದು, ಹಠ ಬಂತು. ಮತ್ತೆ ಯೋಗ್ಯತೆಯಲ್ಲೇ ವೈದ್ಯಕೀಯ ಸ್ನಾತಕೋತ್ತರ ಪದವಿ ಸಾಧಿಸುವವರೆಗೂ ನಿಲ್ಲಲೇ ಇಲ್ಲ.” ಉಳಿದಿದ್ದರೆ ಇನ್ನೂ ನಿಲ್ಲುವುದಿರಲಿಲ್ಲ! ಕೃಶಿ ಪುಸ್ತಕ ಕೀಟವಲ್ಲ. ಆದರೆ ಅಕ್ಷರಶಃ ಪುಸ್ತಕಗಳಲ್ಲಿ ವೈಚಾರಿಕ ಸೂಕ್ಷ್ಮವನ್ನೂ ವಾಸ್ತವಿಕ ಕೀಟವನ್ನೂ (ಮುಂದೆ ಹೇಳುತ್ತೇನೆ) ಬಿಟ್ಟವರಲ್ಲ. ಹಾಗೆ ಇವರ ಓದಿನ ವೇಗ ಮತ್ತು ಗ್ರಹಿಕೆಯೂ ಅಸಾಧಾರಣ. ಈ ಸಾಮರ್ಥ್ಯವನ್ನು ಗೆಳೆಯ ಶರತ್ ಒಮ್ಮೆ ಬಳಸಿಕೊಂಡದ್ದು ನೆನಪಾಗುತ್ತದೆ.

ಬಹುಶಃ ಪ್ರಸಂಗ ಮಂಗಳೂರಿನ ಪ್ರಥಮ ಉರಗೋದ್ಯಾನದ್ದು. ಅಧ್ಯಾಪಕ ಹಿರಿಯ ಸನ್ನಿ ತರಪ್ಪನ್ ಮತ್ತು ವಿದ್ಯಾರ್ಥಿಗಳಾದ ಶರತ್, ಚಾರ್ಲ್ಸ್ ಒಳಗೊಂಡ ಮಂಗಳೂರು ವೈಲ್ಡ್ ಲೈಫ್ ಟ್ರಸ್ಟ್ ಔಪಚಾರಿಕ ಸಂಘಟನೆಯಾಗುತ್ತಿದ್ದ ಕಾಲ. ಅದಕ್ಕೆ ಪೂರಕವಾಗಿ ಶರತ್ ಕೃಶಿಯನ್ನು ಜೊತೆಮಾಡಿಕೊಂಡು ಬೆಂಗಳೂರಿಸಿದ್ದರು. ಇವರು ಮಾಹಿತಿ ಅರಸಿ ವಿವಿಧ ಗ್ರಂಥಾಲಯ, ಇಲಾಖೆ ಸುತ್ತಾಡಿದರು. ಶರತ್ ಅಗತ್ಯಗಳಿಗೆ ತಕ್ಕ ಪುಸ್ತಕ/ ದಾಖಲೆ, ಅದರೊಳಗಿನ ಸಾರವನ್ನು ಹುಡುಕಿ ತೆಗೆಯುವ, ರೂಪಿಸಿ ಕೊಡುವ ಕೆಲಸ ಕೃಶಿಯದ್ದು. ಅಂದು ಅಂತರ್ಜಾಲ ವಿದೇಶದಲ್ಲೇ ಇನ್ನೂ ಅಂಬೆಗಾಲಿಕ್ಕುತ್ತಿತ್ತು. ಆದರೆ ಕೃಶಿ, ಇಂದು ಹೇಳುವ ‘ಸರ್ಚ್ ಇಂಜಿನ್’ ಕೆಲಸವನ್ನು ಸಮರ್ಪಕವಾಗಿ ನಡೆಸಿದ್ದರು. ನನ್ನ ತಂದೆ ಬಾಗಲೋಡಿ ದೇವರಾಯರ ಇಂಥದ್ದೇ ಅಸಾಮಾನ್ಯ ಸಾಮರ್ಥ್ಯ ಕುರಿತು ಮಾತಾಡುವುದನ್ನು ಕೇಳಿದ್ದೇನೆ. ದೇವರಾಯರು ನಿತ್ಯದ ಸುಮಾರು ಎರಡು ಗಂಟೆ ರೈಲುಯಾನದಲ್ಲಿ (ತಾಂಬರಮ್ಮಿನಿಂದ ವಿವಿನಿಲಯಕ್ಕೆ), ಯಾವುದೇ ಗಂಭೀರ ಪುಸ್ತಕದ, ಮುನ್ನೂರಕ್ಕೂ ಕಡಿಮೆಯಿರದ ಪುಟಗಳನ್ನು ಮಗುಚಿ ಮುಗಿಸುತ್ತಿದ್ದರಂತೆ. ಮತ್ತಷ್ಟೇ ಸುಟಿಯಾಗಿ ಅದರ ಪರಿಚಯ, ಧಾರಾಳ ಉದ್ಧರಣೆ, ವಿಮರ್ಶೆ ನಡೆಸುತ್ತಿದ್ದರಂತೆ.

ಕೃಶಿಯ ಓದಿನ ಹಸಿವಿಗೆ ಕೇವಲ ವ್ಯಾಪಾರೀಮಿತ್ರನಾಗಿ ನಾನು ತರಿಸಿಕೊಟ್ಟ ಪುಸ್ತಕಗಳಿಗೆ ಲೆಕ್ಕವಿಲ್ಲ. ನಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತರಿಸಲು ಇಲ್ಲೂ ಗಣಕ, ಅಂತರ್ಜಾಲ ಪ್ರವೇಶಿಸಿದಂದು ಕೃಶಿ ಅದರಲ್ಲೂ ಪೂರ್ಣ ತೊಡಗಿಕೊಂಡರು. ಕ್ಲೀಷೆ ಎನ್ನಬೇಡಿ, ಅಕ್ಷರಶಃ ತಗಡು, ತಿರುಪಾಣಿಯಿಂದ ಹಿಡಿದು (ಹಾರ್ಡ್ ವೇರ್), ಹೊಸ ವಿದ್ಯುನ್ಮಾನ ನಿವೇಶನವೋ ಮಾಹಿತಿಗಳ್ಳನಿಗೆ ತಡೆಗೇಟೋ (ಸಾಫ್ಟ್ ವೇರ್) ಹಾಕುವವರೆಗೆ ಎಲ್ಲಕ್ಕೂ ಕೃಶಿಯಲ್ಲಿ ವೈಚಾರಿಕ ಸ್ಪಷ್ಟತೆ ಮತ್ತು ಪ್ರಾಯೋಗಿಕ ಪರಿಣತಿಯನ್ನು ಕಂಡಿದ್ದೇನೆ. ಗಣಕಕ್ಕೆ ಕನ್ನಡ ಲಿಪಿಕೊಟ್ಟ ಪ್ರಕಾಂಡ ಪಂಡಿತ, ಹಿರಿಯ ಕೆಪಿ ರಾಯರೊಡನೆ ಈ ಎಳೆಯ, ಸಮಭುಜನಾಗಿ ಸಂವಾದ ನಡೆಸುತ್ತಿದ್ದ. ರಾಯರು ಈ ಸಂತೋಷಕ್ಕಾಗಿಯೇ ಎಷ್ಟೋ ಬಾರಿ ಮಣಿಪಾಲದಿಂದ ಮೂಡಬಿದ್ರೆಗೆ ಹೋಗುತ್ತಿದ್ದದ್ದೂ ಕೇಳಿದ್ದೆ. ವೈದ್ಯರುಗಳೆಲ್ಲ ತಮ್ಮ ದೈನಂದಿನ ಅಗತ್ಯದ ಮಾಹಿತಿಗಳನ್ನೆಲ್ಲ ಕಡತಗಳಲ್ಲಿ ದಾಖಲಿಸುವ, ಹುಡುಕುವ ಗೊಂದಲದಿಂದ ಮುಕ್ತಿ ಅರಸುವ ಕಾಲದಲ್ಲಿ ಕೃಶಿ ತಮ್ಮದೇ ಏನೋ ಸಾಫ್ಟ್ ವೇರ್ ರೂಪಿಸಿ ವಿತರಣೆ ನಡೆಸಿದ್ದರು. ಇನ್ನೋರ್ವ ವೈದ್ಯಗೆಳೆಯ – ಶ್ರೀನಿವಾಸ ಕಕ್ಕಿಲ್ಲಾಯ, ತನ್ನ ನುಡಿತರ್ಪಣದಲ್ಲಿ ಬರೆದುಕೊಂಡಂತೆ, “ತೊಂಬತ್ತರ ದಶಕದ ಕೊನೆಗೆ ಮಂಗಳೂರಿಗೆ ಇಂಟರ್ನೆಟ್ ಹೊಕ್ಕಾಗ ಊರಿಡೀ ಮಾಹಿತಿ ನೀಡಿ ತರಬೇತಿ ನೀಡಿದವರಲ್ಲಿ ಕೃಷ್ಣಮೋಹನ್ ಅಗ್ರಗಣ್ಯರು.” (ಪೂರ್ಣ ಓದಿಗೆ ಅನುಬಂಧ ೧ ನೋಡಿ.) ಅದರಲ್ಲಿ ಇಂದಿಗೂ ಕೃಶಿ ಎಷ್ಟು ಪ್ರಸ್ತುತರಾಗಿದ್ದರು ಎನ್ನುವುದಕ್ಕೆ ಗೆಳೆಯ ಗೋಪಾಲಕೃಷ್ಣ ಬಾಳಿಗರ ಅನುಭವ ಕೇಳಿ.

ಬಾಳಿಗಾ ಸಂದ ಕಾಲದ ಕೇಯಾರೀಸಿಯ (ಇಂದಿನ ಎನ್ನೈಟೀಕೇ) ಎಲೆಕ್ಟ್ರಾನಿಕ್ಸ್ ಇಂಜಿನೇರು, ‘ಪವರ್ ಮೇಟ್’ (ಯೂಪಿಯೆಸ್ ಸಲಕರಣೆಗಳು ಮತ್ತು ಸೇವಾ ಸಂಸ್ಥೆ) ಯಜಮಾನ. ಬಾಳಿಗಾ ದೊಡ್ಡ ನಿಟ್ಟುಸಿರು ಬಿಟ್ಟು ಹೇಳಿದರು “ನನ್ನದೆಂತ ಎಲೆಕ್ಟ್ರಾನಿಕ್ಸ್, ಎಮರ್ಜೆನ್ಸಿ ಲೈಟ್ಸ್, ಬ್ಯಾಟರಿ ಮಾರು, ರಿಪೇರಿ ಮಾಡು. ಎಲ್ಲಕ್ಕೂ ಮುಖ್ಯವಾಗಿ ನಾನು ಮ್ಯಾನೇಜ್ಮೆಂಟಿನಲ್ಲಿ ಕಳೆದುಹೋದೆ. ಈ ಕೃಶಿ ಓದು, ವೃತ್ತಿಯಲ್ಲಿ ವೈದ್ಯರೇ ಆದರೂ ನನ್ನ ಸಹಾಯಕ್ಕೆ ಅಂದೇ ಒದಗಿದ್ದರು. ಭೂತಾಕಾರದ ಡಬ್ಬಿಯ (ಮಾನಿಟರ್) ಕಪ್ಪುಬಿಳಿ ನೋಡಿಕೊಂಡು, ಚಪಾತಿ (ಫ್ಲಾಪಿ) ತುರುಕಿಕೊಂಡು ನನ್ನೆಲ್ಲ ಅಗತ್ಯಗಳಿಗೆ ತಕ್ಕಂತ ಸಾಫ್ಟ್ ವೇರ್ ಮಾಡಿಕೊಟ್ಟಿದ್ದರು. ಅದು ಡಾಸ್, ಈಚೆಗೆ ಹೊಸ ವ್ಯವಸ್ಥೆಗೆ (ವಿಂಡೋಸ್?) ಹೊಂದಿಸಿಕೊಳ್ಳಲು ನಾನು ಮತ್ತೆ ಕೃಶಿಯ ಸಲಹೆ ಕೇಳಿದ್ದೆ. ಆತ ಮಿನಿಟು ತಡವರಿಸದೆ, ಅಂತರ್ಜಾಲದಿಂದ ಅದೇನೋ ಸಾಫ್ಟ್ವೇರ್ ಇಳಿಸಿ, ಅಳವಡಿಸಿಕೊಳ್ಳಲು ಸಲಹೆ ಮಾಡಿದರು. ಮಾಡಿದೆ, ನನ್ನ ಎರಡು ಮೂರು ದಶಕಗಳ ಗಿರಾಕಿ, ಸೇವೆಗಳ ದಾಖಲೆಗಳೆಲ್ಲ ಕಿಂಚಿತ್ತೂ ಕೊಂಕಿಲ್ಲದೇ ಬಂತು, ಮುಂದುವರಿದಿದೆ.” ಗಣಕ, ಅಂತರ್ಜಾಲಗಳ ಮೊದಲ ದಿನಗಳಲ್ಲೇ ಕೃಶಿ ಸ್ವಂತ ಜಾಲತಾಣದಿಂದ ತೊಡಗಿ, ಈಚಿನ ನನಗೆ ಹೆಸರಿಸಲೂ ಗೊತ್ತಿರದ ಎಲ್ಲಾ ಸಾರ್ವಜನಿಕ ವೇದಿಕೆಗಳಲ್ಲೂ ಗಂಭೀರವಾಗಿಯೇ ತೊಡಗಿಕೊಂಡಿದ್ದರು. ನಾನು ಮಹಾ ಕಂದಾಚಾರಿಯಂತೆ ಕೈ ಬರಹದಲ್ಲೇ ಉಳಿಯುವ ಹಠದಲ್ಲಿದ್ದೆ. ಮಗ – ಅಭಯಸಿಂಹನ (ಬೆಂಗಳೂರಲ್ಲಿದ್ದಂತೆ) ಪ್ರಲೋಭನೆಯಲ್ಲಿ (೨೦೦೬ರ ಸುಮಾರಿಗೆ) ಕೇವಲ ಅಂಗಡಿಯ ಲೆಕ್ಕಾಚಾರಕ್ಕೆಂಬಂತೆ, ಮನೆಯಲ್ಲೊಂದು ಗಣಕ ಇಟ್ಟು, ನಿಧಾನಕ್ಕೆ ಮತಾಂತರಗೊಳ್ಳುತ್ತಿದ್ದೆ. ಕೃಶಿ ಮೂಡಬಿದ್ರೆಯಲ್ಲಿದ್ದರೂ ಒಂದೆರಡು ಬಾರಿ ನನ್ನ ಮನೆಗೆ ಮಿತ್ರದಾಳಿ ಮಾಡಿ, ತತ್ಕಾಲೀನ ಗಣಕ ಸಮಸ್ಯೆಗಳನ್ನು ಪರಿಹರಿಸಿ ಕೊಟ್ಟಿದ್ದರು. “ನಿಮ್ಮ ಗಣಕಕ್ಕೆ ಎಂದೆಂದು ಗ್ಲಾನಿ ಬರುತ್ತದೋ ಅಂದಂದು ನಾನು ಅವತರಿಸುತ್ತೇನೆ” ಎಂದು ಈ ಕೃಷ್ಣನೂ ಹೇಳಿದ್ದ. ಆದರೆ ಯಾರದೇ ಸಮಯ ಮತ್ತು ವೃತ್ತಿಯ ಹೊರಗಿನ ಪಾಂಡಿತ್ಯವನ್ನು ಸ್ನೇಹಕ್ಕೆ ಗಂಟು ಹಾಕುವಲ್ಲಿ ನನಗೆ ಸಂಕೋಚ. ನಾನು ಕೃಶಿಯನ್ನು ಕರೆಯಲೇ ಇಲ್ಲ, ಇನ್ನು ಕರೆಯುವಂತೆಯೂ ಇಲ್ಲ.

ಸವಾರಿ ಬಿಟ್ಟ ಸಾಹಸೀ ಸಹಯಾನಿ

ವಿದ್ಯಾರ್ಥಿ ದಿನಗಳಲ್ಲಿ ಕೃಶಿಯ ಓದಿನ ಹಸಿವು, ಪ್ರಾಯ ಸಹಜವಾದ ಬಾಯಿಚಪಲ ಸೇರಿ ದೇಹ ಬಡ್ಡಾಗಿತ್ತು. ದೈಹಿಕ ವ್ಯಾಯಾಮ ಬಿಡಿ, ಕನಿಷ್ಠ ಕ್ರೀಡಾ ಚಟುವಟಿಕೆಗಳೂ ಅವರಿಗೆ ಇರಲಿಲ್ಲ. ಆದರೆ ನಮ್ಮ (ಆರೋಹಣ ಬಳಗ) ಸಂಪರ್ಕ ಹೆಚ್ಚಾಗುತ್ತಿದ್ದಂತೆ, ಪುಸ್ತಕದಿಂದ ಪ್ರಾಯೋಗಿಕತೆಗೆ, ಪ್ರಕೃತಿಗೆ ಇಳಿಯುವ ಹವ್ಯಾಸ ಬೆಳೆಸಿಕೊಂಡರು. ಆ ಮಂಗಳೂರ ದಿನಗಳಲ್ಲಿ ಕೃಶಿ ಸ್ವತಂತ್ರ ಸಂಚಾರ ಸೌಕರ್ಯಕ್ಕೆ (ಕಾಲೇಜು, ಬಿಡಾರ, ಆಸ್ಪತ್ರೆ, ತವರ್ಮನೆ) ಕೈನೆಟಿಕ್ ಹೊಂಡಾ ಇಟ್ಟುಕೊಂಡಿದ್ದರು. ಬಹುಶಃ ಅದಕ್ಕೆ ದಿನವೊಂದಲ್ಲಿ ಮೊದಲ ಗರಿಷ್ಠ ಓಟ ಕೊಟ್ಟದ್ದು (೨೩೫ ಕಿಮೀ.) ಆರೋಹಣವೇ ಇರಬೇಕು.

ಅಂದು ನಮ್ಮ ತಂಡ ಆಗುಂಬೆ ತಪ್ಪಲಿನ ಸೋಮೇಶ್ವರ ಬಸ್ ನಿಲ್ದಾಣಕ್ಕೆ ಹೋಗಿ ಬೈಕ್ ಬಿಟ್ಟು ಚಾರಣಕ್ಕಿಳಿದಿತ್ತು. ನಿಲ್ದಾಣದ ಹಿತ್ತಿಲಿನ ಕಾಡು ಹೊಳೆಯ ಹರಿವಿನ ಎದುರು ಕಾಡು ಹರಿದು, ಬಂಡೆ ಸರಣಿಗಳನ್ನೇರಿ, ಒನಕೆ ಅಬ್ಬಿಯ ಬುಡದಲ್ಲಿ ಮಿಂದು ಮರಳಿದ್ದೆವು. ಮದುವೆ ನಿಕ್ಕಿಯಾದ ಹೊಸತರಲ್ಲಿ ಸೀಮಾರನ್ನು (ಇಂದಿನ ರಾಧಿಕಾ) ಅದೇ ಕೂಡ್ಲು ತೀರ್ಥಕ್ಕೆ ಕೃಶಿ ಕರೆದುಕೊಂಡೂ ಬಂದದ್ದಿತ್ತು. ಅನೇಕ ಸಾಹಸಯಾನಗಳಲ್ಲಿ ಕೃಶಿ ಪಾಲುಗಾರಿಕೆ ಗಟ್ಟಿಯಾಗಿತ್ತು. ಅದರಲ್ಲಿ ಸ್ಮರಣೀಯವಾದ ಒಂದೆರಡನ್ನಷ್ಟೇ ಸೂಕ್ಷ್ಮವಾಗಿ ಹೇಳುವುದಾದರೆ ಭಾರೀ ಮಳೆಗಾಲದಲ್ಲೇ ಕೊಲ್ಲೂರು, ತುಮರಿ ಮೂಲಕ ಶರಾವತಿ ಹಿನ್ನೀರು ದಾಟಿ ಹೆಗ್ಗೋಡು ಸೇರಿದ ದ್ವಿಚಕ್ರಿಗಳ ಯಾನ ಸ್ಮರಣೀಯ.

ನಮ್ಮ ಬಹುತೇಕ ಓಟಗಳೆಲ್ಲ ಕಚ್ಚಾರಸ್ತೆ, ಕಾಡಮೂಲೆಗಳಲ್ಲಿ ಇರುತ್ತಿದ್ದುದರಿಂದ ದೊಡ್ಡ ಚಕ್ರದ, ಬೈಕುಗಳಲ್ಲೇ ಇರುತ್ತಿತ್ತು. ಆದರೆ ಕೈನೆಟಿಕ್ ಹೊಂಡಾದಲ್ಲಿದ್ದ ಕೃಶಿ ಅಸಾಧಾರಣ ಸವಾರ, ಎಂದೂ ಹಿಂದೆ ಬಿದ್ದದ್ದಿಲ್ಲ. ಹೆಗ್ಗೋಡಿನ ಸವಾರಿಯಲ್ಲಿ ಇವರ ಸಹವಾರ – ವಿನಯ್ ಬೋಸ್ (ಸಹಪಾಠಿ ಮಿತ್ರ), ಕಡಿಮೆ ತೂಕದವನೇನೂ ಅಲ್ಲ. ಗ್ರಾಚಾರಗೆಟ್ಟ ಸ್ಕೂಟರ್ ಹೆಗ್ಗೋಡು ಸೇರುವಾಗ ಕಂಗಾಲಾಗಿ ಕಂಯ್ಗುಟ್ಟುತ್ತಿತ್ತು. ಅಂದು ಹೆಗ್ಗೋಡಿನಲ್ಲಿ ಗ್ಯಾರೇಜ್ ಬಿಡಿ, ಮೆಕ್ಯಾನಿಕ್ಕಿಗೂ ಗತಿಯಿರಲಿಲ್ಲ. ಆದರೆ ಭಾವೀ ಶಸ್ತ್ರವೈದ್ಯ ಕೃಷ್ಣಮೋಹನ ಪ್ರಭು, ಸ್ಕೂಟರನ್ನು ಮಣ್ಣಿನಲ್ಲೇ ಅಡ್ಡ ಮಲಗಿಸಿ, ಕಾಡು ಕೋಲು ಕಲ್ಲಿನಲ್ಲಿ ನಡೆಸಿದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿತ್ತು! ಮಾರಣೇ ದಿನ ಮಂಗಳೂರಿಗೆ ಮುಟ್ಟುವವರೆಗೂ ಸ್ಕೂಟರ್ ಮತ್ತೆ ಮಾತಾಡಲಿಲ್ಲ. (ಉದ್ದಕ್ಕೂ ಹಿಂದೆ ಕುಳಿತ ಬೋಸ್, ಸ್ಕೂಟರಿನ ಒಂದು ಸೈಡ್ ಪ್ಯಾನೆಲ್ಲನ್ನು ವೀರಯೋಧನ ಗುರಾಣಿಯಂತೆ ಹೊತ್ತಿದ್ದ!)

ನಾಲ್ಕು ದಿನಗಳ ಉತ್ತರಕನ್ನಡದ ಜಲಪಾತಗಳ (https://bit.ly/3vJ4osg) ಸರಣಿ ಇನ್ನೊಂದು ಕೃಶಿ ಸಾಂಗತ್ಯದ ಸ್ಮರಣೀಯ ಓಟ. ಅದರಲ್ಲಿ ಮೊದಲ ದಿನ ತಂಡ ಗೋಕರ್ಣದಿಂದ ಕುಮಟಾದತ್ತ ಮಟಮಟ ಮಧ್ಯಾಹ್ನ ಓಡುತ್ತಿದ್ದಾಗ ಹೆದ್ದಾರಿಯ ಸುದೂರದಲ್ಲಿ, ಒಂದು ಲಾರಿ ಎಡ ಮಗ್ಗುಲಿಗೆ ಹೊರಳಿ ಬಿದ್ದದ್ದು ಕಂಡೆವು. ನಾವು ಸಮೀಪಿಸುವುದರೊಳಗೆ, ಇನ್ಯಾವುದೋ ವಾಹನದವರು ಗರಬಡಿದ ಚಾಲಕನನ್ನು ಇಳಿಸಿ, ಕರೆಯಲ್ಲಿ ಕೂರಿಸಿದ್ದರು. ಅವನ ಪ್ರಾಥಮಿಕ ತನಿಖೆ ಮತ್ತು ಸಲಹೆಗೆ ಒದಗಿದ ವೈದ್ಯ – ಕೃಶಿ. ಚಾಲಕನಿಗೆ ಕೇವಲ ಮಾನಸಿಕ ಆಘಾತ ಮಾತ್ರ ಆಗಿತ್ತು. ಆದರೆ ಲಾರಿಯ ಎಡ ಬಾಗಿಲು ತೆರೆದು ಪಾರಾಗಲು ಪ್ರಯತ್ನಿಸಿದ್ದ ಅದರದೇ ಸಹಾಯಕ, ಲಾರಿಯಡಿಗೆ ಸಿಕ್ಕಿ ಅಸುನೀಗಿದ್ದ.

ಉಕ ಜಲಪಾತಗಳ ಓಟ ಯಾಣದಲ್ಲಿದ್ದಾಗಲೇ ಕೃಶಿಗೆ ಕಾಡಪೊದರಿನಲ್ಲಿ ಹಸಿರು ಹಾವೊಂದನ್ನು ಗುರುತಿಸಿದ ಸಂಭ್ರಮ (ಪುಸ್ತಕದಿಂದ ವಾಸ್ತವಕ್ಕೆ) ಒದಗಿತ್ತು. “ಅದು ನಿರ್ವಿಷಕಾರಿ. ಕಣ್ಣಿಗೆ ಕುಕ್ಕುತ್ತದೆ ಎನ್ನುವುದು ಸುಳ್ಳು, ಬಹುತೇಕ ನಿರುಪದ್ರವಿ” ಎಂದೆಲ್ಲ ಇತರರೊಂದಿಗೆ ‘ಜ್ಞಾನವಿತರಣೆ’ಯ ಉತ್ಸಾಹದಲ್ಲಿದ್ದ ಕೃಶಿ, ಕೈ ಪಳಗದ ತಪ್ಪಿಗೆ ಆ ಹಾವಿನಿಂದ ಬೆರಳಿಗೆ ಕಡಿಸಿಕೊಂಡಿದ್ದರು. ಅವರು ಹೇಳಿದ್ದೆಲ್ಲವೂ ನಿಜ, ಆದರೂ ಗಾಯ, ಸಣ್ಣ ನಂಜಿನ ಉರಿ ಅವರನ್ನು ಎರಡು ದಿನ ಕಾಡಿದ್ದೂ ಅಷ್ಟೇ ನಿಜ.

ಉಕ ಜಲಪಾತಗಳ ಓಟದ ಕೊನೆಯ ಹಂತದಲ್ಲಿ ನಾವು ಕೃಶಿಯನ್ನು ಹೆಗ್ಗೋಡಿನಲ್ಲಿ ಕಳಚಿಕೊಂಡೆವು. ಆತ ಅಲ್ಲಿನ ನೀನಾಸಂ ವಾರ್ಷಿಕ ಸಂಸ್ಕೃತಿ ಶಿಬಿರದಲ್ಲಿ ಭಾಗಿಯಾಗುವವರಿದ್ದರು. ಆ ದಿನಗಳಲ್ಲಿ ನನಗೂ ಶಿಬಿರದ ಬಯಕೆ ಇದ್ದರೂ ವಾರ – ಹತ್ತು ದಿನ ಬಿಡುವು ಮಾಡಿಕೊಳ್ಳುವ ಧೈರ್ಯವಿರಲಿಲ್ಲ. ಅದನ್ನು ಸಣ್ಣದರಲ್ಲಿ ತೀರಿಸಿಕೊಳ್ಳುವಂತೆ, ಆ ಶಿಬಿರದ ಕೊನೆಯ ಮೂರು ದಿನಕ್ಕಾಗುವಾಗ ನಾನು ಮಂಗಳೂರಿನಿಂದ ಬಸ್ಸೇರಿ ಹೋಗಿ ಸೇರಿಕೊಂಡಿದ್ದೆ. ಕೊನೆಯಲ್ಲಿ ಕೃಶಿಯ ಬೈಕಿನ ಸಹವಾರನಾಗಿ, ಕುಂದಾದ್ರಿ ನೋಡಿಕೊಂಡು ಮರಳಿದ್ದು ನಮಗೆ ಇನ್ನೊಂದೇ ಸಂತೋಷವನ್ನು ಕೊಟ್ಟಿತ್ತು.

ನಾನು ಯೆಜ್ದಿಯಿಂದ ತೊಡಗಿ, ಭಾರೀ ಪೆಟ್ರೋಲ್ ಉಳಿತಾಯದ (ಲೀಟರಿಗೆ ೬೦ ಕಿಮೀ) ಹೀರೋಹೊಂಡಾ-೧೦೦ರಲ್ಲಿದ್ದೆ. ಆಗ ಬಜಾಜ್ ಕಂಪೆನಿಯವರು ಕವಾಸಾಕಿ ಸಹಯೋಗದಲ್ಲಿ ಹೊಸದಾಗಿ ಪರಿಚಯಿಸಿದ ‘ಫೋರ್ – ಎಸ್’ ಲೀಟರಿಗೆ ೭೦ ಕಿಮೀ ಕೊಡುತ್ತದೆಂಬ ಆಕರ್ಷಣೆ ನಮ್ಮೆಲ್ಲರ (ಕಾಡು ಮನುಷ್ಯರ) ಮಂಡೆಗೆ ಹೊಕ್ಕಿತ್ತು. ಆ ಅಲೆಯಲ್ಲಿ, ನನ್ನಂತೇ ಕೃಶಿಯೂ ಹಳತನ್ನು ಮಾರಿ ಫೋರ್ ಎಸ್ ಕೊಂಡಿದ್ದರು. ಅದರ ಮಾರ್ಗಕ್ಷಮತೆಯನ್ನು (ರೋಡ್ ಟೆಸ್ಟ್) ಪರೀಕ್ಷಿಸಲು ನಾವಿಬ್ಬರೂ ಹೊಸಬಾಳೆಯಲ್ಲಿ ನಡೆಯಲಿದ್ದ ನಿರಂಜನ ವಾನಳ್ಳಿಯವರ ಮದುವೆಯನ್ನು (೨೦-೧೨-೯೨) ನೆಪ ಮಾಡಿಕೊಂಡೆವು. ಆದರೆ ನಮ್ಮ ಕಟ್ಟೆಪೂಜೆಗಳು(ಕುಂದಾದ್ರಿ ಹತ್ತು, ಕೌಲೇದುರ್ಗ ಸುತ್ತು) ಹೆಚ್ಚಾಗಿ, ಊಟದ ಸಮಯಕ್ಕೂ ಮದುವೆ ಮನೆ ಸೇರುವುದಿಲ್ಲ ಎನ್ನುವುದು ಖಾತ್ರಿಯಾದಾಗ, ಸಾಹಸಯಾನ ಪೂರೈಸುವುದರಲ್ಲೇ ಹೆಚ್ಚಿನ ಸಂತೋಷ ಕಂಡುಕೊಂಡೆವು.

ಮತ್ತೆ ಕೊಡಚಾದ್ರಿಯನ್ನೂ ಏರಿಳಿದು, ಕೊಲ್ಲೂರ ಮೂಲಕ ಅಪರಾತ್ರಿಗೆ ಮಂಗಳೂರು ಮುಟ್ಟಿದ್ದೆವು. ೧೯ ಗಂಟೆಯ ಸವಾರಿಯಲ್ಲಿ ೪೩೧ ಕಿಮೀ ಸಾಧಿಸಿದ್ದೆವು. ಅಂದು ಬೈಕುಗಳು ಸರಾಸರಿಯಲ್ಲಿ ಲೀಟರಿಗೆ ೬೮ ಕಿಮೀ ಕೊಟ್ಟರೂ ಮುಂದೆ ಬಲು ಬೇಗನೆ ದೊಡ್ಡ ಸೋಲನ್ನೂ ಕೊಟ್ಟವು. ಬೈಕುಗಳನ್ನೇನೋ ನಾವೆಲ್ಲರೂ ಸಿಕ್ಕ ಬೆಲೆಗೆ ಮಾರಿ ಕಳಚಿಕೊಂಡೆವು, ಹೊಸತೇನೇನೋ ವಾಹನಗಳನ್ನು ಕೊಂಡೆವು. ಆದರೆ ಇಂದು ಕೇವಲ ಐವತ್ತೈದರ ಹರಯದಲ್ಲಿ ಜೀವನಯಾನವನ್ನೇ ನಿಲ್ಲಿಸಿದ ಕೃಶಿಗೆ ಬದಲು (ನಮ್ಮ ಜೀವನದಲ್ಲಿ) ಇನ್ನೊಬ್ಬರು ಸಿಕ್ಕುವುದುಂಟೇ?

ವನ್ಯ ಪ್ರಚಾರಕ, ಸಂರಕ್ಷಕ

ಕೃಶಿ ಆರೋಹಣದಲ್ಲಿ ಕೇವಲ ಬೈಕ್ ಯಾನಗಳಿಗೇ ಸೀಮಿತರಾಗಲಿಲ್ಲ. ಬೊಂದೇಲಿನ ಬಂಡೆಗಳಲ್ಲಿ ಪ್ರಾಥಮಿಕ ಶಿಲಾರೋಹಣ ಕಲಿತು, ನಂದಿಕೂರು ಬೆಳ್ಮಣ್ಣುಗಳ ಬಂಡೆಗಳ ಸವಕಳಿಗೆ ಕಾರಣರಾಗಿದ್ದರು. ಗಂಗಡಿಕಲ್ಲು, ಹಿರಿಮರುದುಪ್ಪೆ, ಮೇತಿ ಬೆಟ್ಟ ಮೊದಲಾದ ಶಿಖರಾರೋಹಣಗಳ ಭಾಗವಾಗಿದ್ದರು. ಆ ದಿನಗಳಲ್ಲಿ ಪರ್ವತಾರೋಹಣದ ಪ್ರಾಥಮಿಕ ಸಲಕರಣೆಗಳು ಮಂಗಳೂರು ಬಿಡಿ, ಬೆಂಗಳೂರಿನಲ್ಲೂ ಜನಪ್ರಿಯವಾಗಿರಲಿಲ್ಲ. ಆಗ ಕೃಶಿ ಮುಂಬೈ ಸಂಪರ್ಕದಿಂದ (wwf for nature) ತಮಗೆ ಬೆನ್ನುಚೀಲ, ಗುಡಾರ, ಮಲಗುಚೀಲ ತರಿಸಿಕೊಳ್ಳುವುದರೊಡನೆ ನಮ್ಮಲ್ಲೂ ಹಲವರಿಗೆ ಒದಗಿಸಿದ್ದರು. (ಹಾಗೆ ನಾನು ತರಿಸಿಕೊಂಡ ಬೆನ್ನು ಹಾಗೂ ಮಲಗುಚೀಲಗಳು ಈಗಲೂ ನನ್ನ ಶಿಬಿರವಾಸಗಳನ್ನು ಬೆಚ್ಚಗಿಡುತ್ತವೆ.) “ಈ ಢಾಕೂ (ಡಾಕ್ಟರಿನ ಅಪಭ್ರಂಶ) ಪೇಶಂಟನ್ನು ಆಸ್ಪತ್ರೆಯಲ್ಲಿ ಬಿಟ್ಟು, ಕಾಡಿನ ಶಿಬಿರದಲ್ಲಿ ಮಲಗುವುದುಂಟಾ” ಎಂದು ಕೆಲವರು ತಮಾಷೆ ಮಾಡಿದ್ದಿತ್ತು. ಆದರೆ ಸುಹಾಸಪ್ರಿಯ ಕೃಶಿ ನಗುತ್ತಲೇ ನಮ್ಮ ಜತೆಗೂ ಹಲವು ಚಾರಣ, ಶಿಬಿರವಾಸಗಳನ್ನೂ ಮಾಡಿದ್ದರು. ಈ ಎಲ್ಲಕ್ಕೂ ದೊಡ್ಡತಾರ್ಕಿಕ ಕೊನೆ ಎಂಬಂತೆ, ತಿಂಗಳೊಂದರ ಕಾಲ ಹಿಮಾಲಯದ ಯಾವುದೋ ಶಿಖರಾರೋಹಣ ತಂಡಕ್ಕೆ ಅಧಿಕೃತ ವೈದ್ಯನಾಗಿಯೂ ಹೋಗಿ, ಯಶಸ್ವಿಯಾಗಿ ಮರಳಿದ್ದರು. ಇಲ್ಲೆಲ್ಲ ತೇನ್ ಸಿಂಗನ ಮಾತಿನಂತೆ (ಯಾರೋ “ಯಾಕೆ ಏರಿದಿರಿ” ಎಂದು ಕೇಳಿದ್ದಕ್ಕೆ ಉತ್ತರವಾಗಿ) “ಎವರೆಸ್ಟ್ ಅಲ್ಲಿರುವುದಕ್ಕೆ ನಾನು ಏರಿದೆ” ಎಂಬ ಭಾವ, ಧನ್ಯತೆ ಕೃಶಿಗೂ ಪರ್ವತಾರೋಹಣದಲ್ಲಿ ಧಾರಾಳ ಇತ್ತು. ಮೀರಿದಂತೆ ಪ್ರಾಕೃತಿಕ ಅನ್ವೇಷಣೆಯ ನಿರೀಕ್ಷೆಗಳೂ ಇದ್ದವು. ಇದರ ಫಲವಾಗಿ ಉಲ್ಲಾಸ ಕಾರಂತರ ಹುಲಿ ಸಂಶೋಧನೆಗೆ ಪೂರಕವಾಗಿ ವನ್ಯ ಪ್ರಾಣಿ ಗಣತಿಗೆ ಒಮ್ಮೆ ನಾನು ಕೃಶಿಯೂ ಹೋಗಿ ಸೇರಿಕೊಂಡಿದ್ದೆವು.

ಅಂದು ನಾಗರಹೊಳೆಗೆ ಕೃಶಿ ಬೈಕೋಡಿಸಿದ್ದರು, ನಾನು ಸಹವಾರ. ಅಲ್ಲಿ ವಿಜ್ಞಾನಿ ಉಲ್ಲಾಸ್ ಮತ್ತು ವಿಖ್ಯಾತ ಕೆ.ಎಂ ಚಿಣ್ಣಪ್ಪನವರಿಂದಲೇ ಪಾಠ, ಪ್ರಯೋಗ, ಒಡನಾಟ ನಮಗೆ ತುಂಬಾ ಸಂತೋಷ ಕೊಟ್ಟಿತ್ತು. ಉಲ್ಲಾಸ್ ರೇಡಿಯೋ ಕಾಲರ್ ಅಳವಡಿಸಿದ್ದ ಹುಲಿ – ‘ರಾಣಿ’ಯನ್ನು, ಉಲ್ಲಾಸರ ದೈನಂದಿನ ಕಲಾಪದಲ್ಲಿ ಸೇರಿಕೊಂಡು ಕಾಣುವ ರೋಮಾಂಚನವೂ ನಮ್ಮದಾಗಿತ್ತು. ಪ್ರತೀ ವರ್ಷ ಸುಮಾರು ಒಂದು ತಿಂಗಳ ಕಾಲ ಶುದ್ಧ ಸ್ವಯಂಸೇವಕರ ಬಲದಲ್ಲಿ ಈ ವನ್ಯ ಜಾನುವಾರು ಗಣನೆ ನಡೆಯುತ್ತಿತ್ತು. ಹಾಗೆ ನಮ್ಮ ವಾರದ ಪಾಳಿಯ ಕೊನೆಯಲ್ಲಿ, ಅಂದು ಸಾರ್ವಜನಿಕ ಆಡಳಿತಗಳ ಉಗ್ರ ಟೀಕಾಕಾರನಾಗಿದ್ದ ಎಕೆ ಸುಬ್ಬಯ್ಯ ಅಲ್ಲಿಗಾಗಮಿಸಿದ್ದು, ನಮಗೆಲ್ಲ ಪ್ರೋತ್ಸಾಹಕ ನುಡಿ ಕೊಟ್ಟು, ಸಾಂಕೇತಿಕ ಸ್ಮರಣಿಕೆ ಕೊಟ್ಟದ್ದು ನಮ್ಮಲ್ಲಿ ಹೆಚ್ಚಿನ ಹುಮ್ಮಸ್ಸು ತುಂಬಿತ್ತು. ಹಾಗಾಗಿ ಆ ದಿನಗಳಲ್ಲಿ ಭಾರತಾದ್ಯಂತ ಹುಲಿಗಳ ಕಳ್ಳಬೇಟೆ ವಿಪರೀತಕ್ಕೇರಿತ್ತು. ನ್ಯಾಶನಲ್ ಜಿಯಾಗ್ರಫಿ ಸಂಸ್ಥೆಯವರು ‘ಟೈಗರ್ ಕ್ರೈಸಿಸ್’ (ಅದರ ಪರಿಷ್ಕೃತ ಚಿತ್ರ ಇಲ್ಲಿ ನೋಡಬಹುದು – https://bit.ly/39m42QL) ಎಂಬ ೧೫-೨೦ ಮಿನಿಟಿನ ಚಲನಚಿತ್ರವನ್ನೂ ಮಾಡಿದ್ದರು. ಉಲ್ಲಾಸ್ ಅದರ ಒಂದು ಪ್ರತಿ ಟೇಪನ್ನು ನಮಗೊಪ್ಪಿಸಿ, ಸಾಧ್ಯವಾದರೆ ಜಿಲ್ಲೆಯ ಒಳಗೆ, ಮುಖ್ಯವಾಗಿ ಘಟ್ಟದ ತಪ್ಪಲಿನಲ್ಲಿ ಜನಜಾಗೃತಿಗೆ ಬಳಸಲು ಸೂಚಿಸಿದ್ದರು.

ಅವರ ನಿರೀಕ್ಷೆಯನ್ನು ಹುಸಿಗೊಳಿಸದ ಯೋಜನೆ ನಾವಿಬ್ಬರು (ಕೆಲವಕ್ಕೆ ದೇವಕಿಯೂ ನಮ್ಮ ಜತೆಗೆ ಬಂದಿದ್ದಳು) ನಡೆಸಿದೆವು. ಮೊದಲೇ ನಿಶ್ಚೈಸಿಕೊಂಡಂತೆ ವಾರಾಂತ್ಯಗಳಲ್ಲಿ ಬೈಕೇರಿ ಸುಳ್ಯ, ಸೋಣಂಗೇರಿ, ಬಾಳಿಲ, ರಾಮಕುಂಜ, ಸುಬ್ರಹ್ಮಣ್ಯ, ಪುತ್ತೂರು ಎಂದು ಸುಮಾರು ಮೂವತ್ತೈದಕ್ಕೂ ಮಿಕ್ಕು ಊರುಗಳಿಗೆ ಹೋಗಿ, ಪ್ರದರ್ಶನ, ಸಂವಾದ ನಡೆಸಿದ್ದು ವಿಶಿಷ್ಟ ಅನುಭವ. ಮೊದಲು ವಿಡಿಯೋ ಪ್ರದರ್ಶನ ಮತ್ತೆ ನನ್ನ ಕೇವಲ ಪ್ರಾಸ್ತಾವಿಕ ಮಾತುಗಳು. ಕೊನೆಯಲ್ಲಿ ಸಂವಾದಕ್ಕಾಗುವಾಗ ಮಾಹಿತಿ ಮೈಗೂಡಿಸಿಕೊಂಡ ಗಟ್ಟಿ ಕುಳುವಾರು – ಕೃಶಿ. ಸಾಂಪ್ರದಾಯಿಕವಾಗಿ ದುಷ್ಟ ಹುಲಿ ನಾಶನ, ಗೋಮಾತೆಯ ರಕ್ಷಣೆಯನ್ನೇ ಜಪಿಸಬೇಕಾದವರು ಹಿಂದೂ ಸನ್ಯಾಸಿಗಳು. ಹಾಗಾಗದೆ ಸುಬ್ರಹ್ಮಣ್ಯ ಮಠದಲ್ಲಿ ಚಾತುರ್ಮಾಸ್ಯದಲ್ಲಿದ್ದ ವಿದ್ಯಾಭೂಷಣ ಹಾಗೂ ಬಾಳಿಗಾರಿನ ಮಠಾಧಿಪತಿಗಳು ನಮ್ಮನ್ನು ಕರೆಸಿಕೊಂಡಿದ್ದರು. ನಮ್ಮ ಹುಲಿ ಹುಯ್ಯಲನ್ನು ಕೇಳಿ, ಚಿತ್ರ ನೋಡಿ ಹಾರ್ದಿಕವಾಗಿ ಬೆಂಬಲಿಸಿದ್ದಂತೂ ಮರೆಯಲಾಗದ ಸಂಗತಿ.

ಟೈಗರ್ ಕ್ರೈಸಿಸ್ ನಿವಾರಣೆಗೆ ಸರಕಾರೀ ಕ್ರಮಗಳು ಸಾಲದಾಗಿದ್ದವು. ಮತ್ತೆ ಸಾರ್ವಜನಿಕ ರಂಗದಲ್ಲಿ ವನ್ಯ ಸಂರಕ್ಷಣೆ ಎಂದರೆ ಜನವಿರೋಧಿ ಎಂಬ ತಪ್ಪು ಕಲ್ಪನೆಯೂ ರೂಢಿಸಿತ್ತು. ಇವನ್ನು ಪರಿಷ್ಕರಿಸಲು ಉಲ್ಲಾಸ್, ಚಿಣ್ಣಪ್ಪ ಬಳಗ ವೈಲ್ಡ್ ಲೈಫ್ ಫಸ್ಟ್ ಎಂಬ ಅನೌಪಚಾರಿಕ ಕೂಟವನ್ನು ಕಟ್ಟಿದಾಗ ಸಹಜವಾಗಿ ಕೃಶಿ ಸೇರಿದಂತೆ ನಾವು ಕೆಲವರು ಸದಸ್ಯರಾಗಿದ್ದೆವು. ಆ ಸುಮಾರಿಗೇ ಈ ವಲಯದಲ್ಲಿ ಗೆಳೆಯ ನಿರೇನ್ ಜೈನ್ (ಉಲ್ಲಾಸ್, ಚಿಣ್ಣಪ್ಪರ ಶಿಷ್ಯ) ಮುಖ್ಯವಾಗಿದ್ದುಕೊಂಡು ಕುದುರೆಮುಖ ಗಣಿಗಾರಿಕೆ ಓಡಿಸಿ, ವನಧಾಮ ದೃಢಗೊಳಿಸುವಲ್ಲಿ ಹೋರಾಟವನ್ನೂ ನಡೆಸಿದ್ದರು. ಅದಕ್ಕೆ ಸಮವಾಗಿ, ನಮ್ಮ ಇನ್ನೋರ್ವ ಗೆಳೆಯ – ಡಿ.ವಿ ಗಿರೀಶ್, ಚಿಕ್ಕಮಗಳೂರಿನಲ್ಲಿ ಮುತ್ತೋಡಿಯ ಸ್ವಾಯತ್ತೆಗೂ ಹೋರಾಟ ನಡೆಸಿದ್ದರು. ಇವಕ್ಕೆಲ್ಲ ಪೂರಕವಾಗಿ ನಡೆಯುತ್ತಿದ್ದ ವನ್ಯ ಶಿಬಿರಗಳಿಗೆ ಕೃಶಿ ನಮ್ಮ ಇನ್ನೋರ್ವ ಗೆಳೆಯ ರೋಹಿತ್ ರಾವ್ ಜತೆ ಹೆಚ್ಚು ಕಮ್ಮಿ ಖಾಯಂ ಶಿಕ್ಷಕನೇ ಆಗಿದ್ದರು. ಕೃಶಿಯ ಇಂಥ ವನ್ಯಪರ ಚಟುವಟಿಕೆಗಳ ಉತ್ತುಂಗವಾಗಿಯೇ ಒದಗಿತ್ತು ನಮ್ಮಿಬ್ಬರ ಸಹಯೋಗದ, ಬಿಸಿಲೆಘಾಟಿಯ ಅಶೋಕವನ.(https://bit.ly/3rULDAS)

ಅಶೋಕವನದಲ್ಲಿ “ವನ್ಯಕ್ಕಿಲ್ಲ ಶೋಕ” ಎಂದೇ ಘೋಷಿಸಿಕೊಂಡು, ಕೃಶಿ ಮತ್ತು ನಾನು ಸುಮಾರು ಹದಿನೈದು ವರ್ಷಗಳಿಂದ ಖಾಸಗೀ ವನ್ಯ ಸಂರಕ್ಷಣೆಯನ್ನು ಚಂದಕ್ಕೆ ನಡೆಸಿಕೊಂಡು ಬಂದಿದ್ದೆವು. ಹಲವು ವನ್ಯ ವಾಸಗಳು, ಈ ವಲಯಗಳಲ್ಲಿ ಅಳಿದಿವೆ ಎಂದು ನಂಬಲಾಗಿದ್ದ ಮರನಾಯಿಯ ಪತ್ತೆ, ಆರಕ್ಕೂ ಮಿಕ್ಕ ಕಪ್ಪೆ ಶಿಬಿರಗಳು ಕಳೆದು ಈಗ ಖಾಯಂ ಸಂಶೋಧನಾ ನೆಲೆಯಾಗಿ ‘ಕಪ್ಪೆಗೂಡು’ ಕೂರುವವರೆಗೂ ಬೆಳೆದು ಬಂತು ಅಶೋಕವನ. ಅನೇಕ ಕಿರುಕುಳಗಳನ್ನು ಎದುರಿಸಿಯೂ ದೃಢವಾಗಿ ಕಾಲುಗಳನ್ನೂರಿತ್ತು ಅಶೋಕವನ. ಆದರಿಂದು ಅನಿರೀಕ್ಷಿತವಾಗಿ ಮತ್ತು ತೀರಾ ಅನಪೇಕ್ಷಿತವಾಗಿ ಕೃಶಿ ಎಂಬ ಕಾಲು ಕುಸಿದು, ಗಾಢ ಸಾಮಾಜಿಕ ಶೋಕ ಆವರಿಸಿದೆ.

ಕೃತಿ ಶಾಶ್ವತ, ಕೃಶಿಯಲ್ಲ ಎನ್ನುವ ಕಹಿ

ಹಿಡಿದ ವಿಚಾರವನ್ನು ತಮ್ಮ (ಆರ್ಥಿಕ, ದೈಹಿಕ) ಮಿತಿಯಲ್ಲಿ ತಾರ್ಕಿಕ ಕೊನೆ ಮುಟ್ಟಿಸುವಲ್ಲಿ ಕೃಶಿ ಪರಿಣತರಿದ್ದರು. ಇವರು ‘ಬೆಂಕಿ ಕಾರುವ ಹುಲಿ’ಯದೊಂದು (ವೇಶ) ಪಟ ಹಿಡಿದಿದ್ದರು. ಯಾವುದೋ ಜಾಹೀರಾತು ಏಜನ್ಸಿ ಅದನ್ನು ಕದ್ದು ವಾಣಿಜ್ಯ ಲಾಭಕ್ಕೆ ದುಡಿಸಿಕೊಂಡಿತ್ತು. ಅದನ್ನು ಕೃಶಿ ವ್ಯಕ್ತಿಯಾಗಿ ಹೋರಾಡಿ ಜಯಿಸಿದ್ದು ಸಣ್ಣ ಮಾತೇನಲ್ಲ. ವರ್ಷಾವಧಿ ಕಂಬುಳಗಳನ್ನು ಪಟಗ್ರಾಫರುಗಳಿಗೆ ಬಹು ಕೊಯ್ಲಿನ ಸುಗ್ಗಿಯಾಗಿಸುವಲ್ಲಿ ಕೃಶಿ ಮುಂದಾಳಾಗಿದ್ದರು. ಕಂಬುಳದ ಋತು ತೊಡಗುವ ಮೊದಲೇ ಕೃಶಿ ಪ್ರಕಟಿಸುವ ವಿವಿಧ ಕಂಬುಳಗಳ ಕಾಲಪಟ್ಟಿಯನ್ನು ಎಲ್ಲೆಲ್ಲಿನ ಪಟಗ್ರಾಫರುಗಳು ಕಾದು ಕೂರುತಿದ್ದರು. ಮೂಡಬಿದ್ರೆ ಸಮೀಪದ ಕಡಲಕೆರೆ ಜೀರ್ಣೋದ್ಧಾರದಲ್ಲಿ (ಬಹುಶಃ) ರೋಟರಿ ಕ್ಲಬ್ಬಿನೊಂದಿಗೆ, ಕುಂದಾಪುರ ಸಮೀಪದ ಮಲ್ಯಾಡಿ ಪಕ್ಷಿಧಾಮದಲ್ಲಿ ವೈದ್ಯ ಉಮಾನಾಥ ಮಲ್ಯರೊಂದಿಗೆ, ಕಾರ್ಕಳ ಕೇಂದ್ರವಾದ ಇನ್ನೊಂದೇ ಹಕ್ಕಿಬಳಗದಲ್ಲಿ ಪ್ರಭಾಕರ ಆಚಾರ್ಯ, ಶಿವಶಂಕರ್ ಮೊದಲಾದವರ ಜತೆ, ಬೆಳ್ವಾಯಿಯ ಚಿಟ್ಟೆ ಉದ್ಯಾನದ ಸಮ್ಮಿಲನ ಶೆಟ್ಟಿಯವರ ಜತೆ, ಮಾಳದ ಮಣ್ಣಪಾಪು ಮನೆಯಲ್ಲಿ ಪುರುಷೋತ್ತಮ ಅಡ್ವೆಯವರ ಜತೆ ಎಲ್ಲಾ ಕೃಶಿಯ ಸಹಯೋಗ ಕೇವಲ ತೋರಿಕೆಯದ್ದಾಗಿರಲಿಲ್ಲ; ಆಸಕ್ತಿ ಅಧ್ಯಯನಗಳದ್ದೇ ಇತ್ತು.

ಕೃಶಿ ವೈದ್ಯಕೀಯ ಶಿಕ್ಷಣದ ದಿನಗಳಲ್ಲೇ “ಕ್ಯಾಮರಾ ಬಂತು” ಎಂದೊಮ್ಮೆ ಹೇಳಿದ್ದು ನೆನಪಿದೆ. ಹಾಗೆಂದು ನಮ್ಮ ಆರೋಹಣ ಚಟುವಟಿಕೆಗಳಲ್ಲಿ ಇವರು ಚಿತ್ರ ಹಿಡಿದದ್ದು ನೆನಪಿಲ್ಲ. ಆದರೆ ಅವರು ವೃತ್ತಿರಂಗದಲ್ಲಿ (ಖಾಸಾ ಆಸ್ಪತ್ರೆ) ಗಟ್ಟಿಯಾಗುತ್ತಿದ್ದಂತೆ, ತಮ್ಮ ಹವ್ಯಾಸಗಳನ್ನು ಹೆಚ್ಚು ಬಲಪಡಿಸಿದರು. ಜಾಲತಾಣ, ಪಕ್ಷಿವೀಕ್ಷಣೆ, ಕಂಬುಳದ ಸಾಂಗತ್ಯ, ಅಪೂರ್ವ ರಂಗ ಕಲೆಗಳ ದರ್ಶನಗಳಲ್ಲೆಲ್ಲ ಇವರ ಅತ್ಯುತ್ತಮ ಚಿತ್ರಗಳು ಮೆರೆದಾಡಿದವು. ನಾನು ಕುಶಾಲಿಗೆ ಪ್ರಶ್ನಿಸಿದ್ದಿತ್ತು “ಇಂದ್‍ಲಾ ಬರ್ಪುಂಡಾ”?! ಅದು ‘ಬರಿದೇ ತಿಳಿದಿರುವುದು’ ಅಲ್ಲ, ಆಳವಾದ ಪ್ರಯೋಗ ಪಾಂಡಿತ್ಯವೇ ಇತ್ತು ಎನ್ನುವುದಕ್ಕೆ ಇಂದು ಇವರ ಅಸಂಖ್ಯ ಚಿತ್ರಗ್ರಹಣ ಕಮ್ಮಟ ಹಾಗೂ ಅವರ ಅಗಲಿಕೆಗೆ ಕಣ್ಣೀರಿಕ್ಕುವ ಶಿಷ್ಯಗಡಣವೇ ಸಾಕ್ಷಿ. (ಕೃಶಿಯ ಚಿಕಿತ್ಸಾ ಕಾಲದಲ್ಲಿ ಪತ್ನಿ ರಾಧಿಕಾರಿಗೆ ಜತೆಗೆ ನಿಂತದ್ದು, ಆಸ್ಪತ್ರೆ ರಕ್ತ ಬೇಕೆಂದಾಗ ‘ರಕ್ತದ ಹೊಳೆ’ಯನ್ನೇ ಹರಿಸಿದ್ದರಲ್ಲಿ ಇವರ ಪಟಾಗ್ರಫಿ ಶಿಷ್ಯರ ಬಳಗ ದೊಡ್ಡದಿತ್ತು.) ಪಟಾಗ್ರಫಿಯ ವಿವಿಧ ತಾಂತ್ರಿಕ ಸೂಕ್ಷ್ಮಗಳನ್ನು ಕಲಾಸಾಧನೆಗೆ ದುಡಿಸಿಕೊಳ್ಳುವುದು ಇವರ ಕಮ್ಮಟಗಳ ಮುಖ್ಯ ಲಕ್ಷ್ಯ. ಇವರ ಹೊಸ ಕ್ಯಾಮರಾ ಹಾಗೂ ಮಸೂರವೇ ಮುಂತಾದ ಸಲಕರಣೆಗಳ ಉಪಯೋಗನಿಷ್ಠ ವಿಮರ್ಶೆಯನ್ನು ಕಂಪೆನಿಯವರೂ ಕೇಳಿ ಪಡೆಯುವುದಿತ್ತು. ಅಂತರ್ಜಾಲ, ಮಂಗಳೂರುಗಳಿಂದ ತೊಡಗಿದ ಕೃಶಿಯ ಪಟಾಗ್ರಫಿ ಕಮ್ಮಟಗಳು ಬೆಂಗಳೂರಿನವರೆಗೂ ವ್ಯಾಪಿಸಿತ್ತು. ಪಟಾಗ್ರಫಿಯ ಪ್ರತ್ಯಕ್ಷ ಕ್ಷೇತ್ರ ಕಾರ್ಯದ ಸಾಧನೆಗೆ ಒಮ್ಮೆ ಕೃಶಿ ಪುಟ್ಟ ತಂಡ ಕಟ್ಟಿ ಬಲು ದೂರದ ಐಸ್ ಲ್ಯಾಂಡಿನ ಪ್ರವಾಸವನ್ನೂ ನಡೆಸಿದ್ದರು. (ಅಕಾಲಿಕ ಮರಣವಲ್ಲದಿದ್ದರೆ, ಇನ್ನೊಂದನ್ನು ನಡೆಸುವವರಿದ್ದರಂತೆ.)

ಇಂದು ಬಹುತೇಕ ಸಂಶೋಧನಾ ಕಾರ್ಯ ಮತ್ತು ಜನಪ್ರಿಯತೆಗಳು ವಿದ್ಯಾನಿಲಯಗಳ ಪದನಿಮಿತ್ತವಾಗಿ, ಡಿಗ್ರಿ ಡಾಕ್ಟರೇಟುಗಳಂಥ ಪ್ರಮಾಣಪತ್ರಮೂಲವಾಗಿ ಜ್ಞಾನಮಾಲಿನ್ಯವನ್ನೇ ಹರಡಿವೆ. ಮತ್ತವು ಪ್ರಶಸ್ತಿ, ಬಿರುದುಗಳ ಅಸಂಖ್ಯ ಅವಾಸ್ತವಿಕ ಮರಿಗಳನ್ನೂ ಹಾಕುತ್ತಿರುತ್ತವೆ. ಡಾ| ಕೃಷ್ಣಮೋಹನ ಪ್ರಭು ತನ್ನ ಕಲಿಕೆ (ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿ), ಸಾಧನೆಗಳಿರಲಿ, ಪೂರ್ಣ ಹೆಸರಿನ ಮೋಹವನ್ನೂ ಹಚ್ಚಿಕೊಳ್ಳದೆ ‘ಕೃಶಿ’ಯಾಗುಳಿದರು (“ಕೃಷಿಯಲ್ಲ, ನಾನು ಮಹಾಪ್ರಾಣಿಯಲ್ಲ ಸಾರ್” ಎಂದು ಒಮ್ಮೆ ತಮಾಷೆಯೂ ಮಾಡಿದ್ದರು). ಅವರ ಎಷ್ಟೋ ಸಂಶೋಧನಾತ್ಮಕ ಲೇಖನಗಳು ಅಂತಾರಾಷ್ಟ್ರೀಯ ವೈಜ್ಞಾನಿಕ ಪತ್ರಿಕಾ ಲೇಖನಗಳಾಗಿ ಪ್ರಕಟವಾಗಿವೆ. ಅವೂ ಸೇರಿದಂತೆ ತನ್ನೆಲ್ಲ ಕೃತಿಗಳು ಯಾರಿಗೂ ಎಲ್ಲ ಕಾಲಕ್ಕೂ ದಕ್ಕುವಂತೆ, ವಿಮರ್ಶೆಗೂ ಒಡ್ಡಿಕೊಳ್ಳುವಂತೆ ಅವನ್ನು ಕೃಶಿ ತನ್ನ ಜಾಲತಾಣದಲ್ಲೂ ಪ್ರಕಟಿಸುತ್ತಲೇ ಬಂದರು.

ಕೃಶಿಯ ಜಾಲತಾಣ http://www.drkrishi.com. ಇದರ ಚಿತ್ರ ಭಾಷೆ ಮತ್ತು ಮಾಹಿತಿಗಳು ಸ್ವಾನುಭವದ ಒರೆಗಲ್ಲಿಗೆ ಉಜ್ಜಿಯೇ ಪ್ರಕಟವಾಗಿವೆ. ಮತ್ತು ಉಚಿತ ಸಾರ್ವಜನಿಕ ಸಂವಹನವನ್ನೇ ಲಕ್ಷ್ಯವಾಗಿಸಿಕೊಂಡಿವೆ. ಅಷ್ಟೇ ಅಲ್ಲ, ಅವರ ಜಾಲತಾಣ ಅದರ ಭಿನ್ನ ಸ್ತರಗಳಿಂದ ವಿಶಿಷ್ಟ ಪ್ರಾತ್ಯಕ್ಷಿಕೆಯೂ ಹೌದು. ನನ್ನ ಯೋಗ್ಯತೆಯ ಮಿತಿಯಲ್ಲಿ ಉದಾಹರಿಸುತ್ತೇನೆ, ಕ್ಷಮೆಯಿರಲಿ. ಅವರ ಯಾವುದೇ ಲೇಖನದ ಜತೆ ಬಂದ ಚಿತ್ರದಲ್ಲಿ ನಾವು ಆಳಕ್ಕಿಳಿದರೆ (ಚಿಟಿಕೆ ಹೊಡೆದು ನೋಡಿದರೆ) ಆ ಚಿತ್ರಗ್ರಹಣದ ತಾಂತ್ರಿಕ ವಿವರಗಳೂ ನಮ್ಮೆದುರು ಪ್ರತ್ಯಕ್ಷವಾಗುತ್ತವೆ. ಕೃಶಿ ಜಾಲತಾಣದಲ್ಲಿ ತುಂಬಿದ ವಿಷಯಗಳು ಅಸಂಖ್ಯ – ಕೀಟ, ಹಕ್ಕಿ ಮುಂತಾದ ಜೀವವೈವಿಧ್ಯ, ಸಾಹಿತ್ಯ, ಸಂಗೀತವೇ ಮೊದಲಾದ ಲಲಿತ ಕಲೆಗಳು, ಪ್ರವಾಸ ಕಥನಗಳು, ಪಟಗ್ರಾಫಿ ಗಣಕಗಳ ತಾಂತ್ರಿಕ ಲೇಖನಗಳು, ಇರಲೇಬೇಕಾದ ವೈದ್ಯಕೀಯ ಹಾಗೂ ವೈಜ್ಞಾನಿಕ ಮನೋಧರ್ಮ ಪೋಷಕ ಬರಹಗಳು…. ಇಲ್ಲೊಂದು ಸಣ್ಣ ವಿವರಣೆ ಕೊಡುವುದು ಅಪ್ರಸ್ತುತವಾಗಲಾರದು. ಗೆಳೆಯ ಪ್ರಸನ್ನ ಕಾವೂರು ಆಯೋಜಿಸಿದ್ದ ಲಕ್ಷ್ಯದ್ವೀಪ ಪ್ರವಾಸದಲ್ಲಿ ಕೃಶಿ ನಮ್ಮ ಜತೆಗಿದ್ದರು. ಪ್ರವಾಸಾನಂತರ ನಾನು ಕನ್ನಡದಲ್ಲಿ ಎಂದಿನಂತೇ (ಕನ್ನಡದಲ್ಲಿ) ಮೂರು ನಾಲ್ಕು ಭಾಗಗಳ ಕಥನವನ್ನು ನನ್ನ ಜಾಲತಾಣದಲ್ಲಿ ಪ್ರಕಟಿಸಿದೆ. ಕೃಶಿ (ಎಂದಿನಂತೆ ಇಂಗ್ಲಿಷಿನಲ್ಲಿ) ಅಷ್ಟೇ ದೀರ್ಘವಾಗಿ, ಎಲ್ಲೂ ಮರು ಓದು ಅಥವಾ ಕೊರತೆಯಾಯ್ತು ಎಂದನ್ನಿಸದಂತೆ, ಹೊಸತೇ ದೃಷ್ಟಿಕೋನದೊಂದಿಗೆ ತಮ್ಮ ಜಾಲತಾಣದಲ್ಲೂ ಬರೆದುಕೊಂಡದ್ದನ್ನು ಇಂದೂ ಓದಿಕೊಳ್ಳಬಹುದು.

ಕೋವಿಡ್-೧೯ರ ಹೆಸರಿನಲ್ಲಿ ಸರಕಾರಗಳು ನಡೆಸುತ್ತಿರುವ ಕಂದಾಚಾರಗಳನ್ನು ಖಂಡಿಸುವಲ್ಲಿ, ವೈಜ್ಞಾನಿಕ ಮನೋಧರ್ಮ ಪಸರಿಸುವಲ್ಲಿ ಕೃಶಿ, ವೈದ್ಯ ಶ್ರೀನಿವಾಸ ಕಕ್ಕಿಲ್ಲಾಯ, ನರೇಂದ್ರ ನಾಯಕ್ ಮೊದಲಾದವರೊಂದಿಗೆ ನಿಸ್ಸಂಕೋಚವಾಗಿ ಭಾಗಿಯಾಗಿದ್ದರು. ಆದರೂ ಕೃಶಿ ಸಾಮಾಜಿಕ ಬದ್ಧತೆಗಳನ್ನು ಧಿಕ್ಕರಿಸದೇ ಮೊದಲೆರಡು ಲಾಕ್ ಡೌನುಗಳ ಕಾಲದಲ್ಲಿ ಸ್ವಂತ ಆಸ್ಪತ್ರೆ ಮುಚ್ಚಿ, ಮನೆಯಲ್ಲುಳಿದಿದ್ದರು. ಆಗಲೂ ಸುಮ್ಮನುಳಿಯದೇ ತಮ್ಮ ಮನೆಯಂಗಳದ ಜೀವವೈವಿಧ್ಯವನ್ನು (ಜೇಡ, ಮಿಡಿತೆ, ಚಿಟ್ಟೆಯೇ ಮೊದಲಾದ ಕೀಟಪ್ರಪಂಚ) ಐವತ್ತಕ್ಕೂ ಮಿಕ್ಕು ಸಚಿತ್ರ ಲೇಖನ ಮಾಲೆಯಲ್ಲಿ ತೆರೆದಿಟ್ಟದ್ದು ಬಹು ಮೌಲಿಕವಾಗಿದೆ ಮತ್ತು ಯಾವತ್ತಿಗೂ ಜ್ಞಾನಪಿಪಾಸುಗಳಿಗೆ ಅವರ ಜಾಲತಾಣದಲ್ಲಿ ಮುಕ್ತವೇ ಇದೆ. ಆದರೆ ಇಂಥ ಎಲ್ಲವನ್ನೂ ಹೆಚ್ಚಿಸುವ, ಕುತೂಹಲಿಗಳಿಗೆ ಸಾಮರ್ಥ್ಯದ ನೆಲೆಯಿಂದ ಉತ್ತರಿಸುವ ಕೃಶಿ ಮಾತ್ರ ಉಳಿದಿಲ್ಲ.

(ಮುಗಿಯಿತು)

ಅನುಬಂಧ:೧

ವೈದ್ಯ ಶ್ರೀನಿವಾಸ ಕಕ್ಕಿಲ್ಲಾಯರ ಕೃಶಿ ನಮನ

(ಅವರ ಫೇಸ್ ಬುಕ್ ಪುಟದಿಂದ)

ಈ ಕೊರೋನ ಕಾಲದಲ್ಲಿ ವೈಜ್ಞಾನಿಕ ಮನೋವೃತ್ತಿಯ, ಸ್ಥಿರಚಿತ್ತದ, ಜಾತ್ಯತೀತವಾದ, ಪ್ರಗತಿಪರವಾದ ದನಿಗಳು ತೀರಾ ಅಪರೂಪವೆನ್ನುವ ಸತ್ಯವು ಎದ್ದು ತೋರಿರುವಾಗ ಅಂಥದ್ದೊಂದು ಅಪರೂಪದ ಗಟ್ಟಿ ದನಿಯಾಗಿದ್ದ, ಜೊತೆಗೆ, ಬಹುಮುಖ ಪ್ರತಿಭೆಯೂ ಆಗಿದ್ದ ನೆಚ್ಚಿನ ಸಹೋದ್ಯೋಗಿ, ಸನ್ಮಿತ್ರ ಡಾ| ಕೃಷ್ಣಮೋಹನ ಪ್ರಭು ಇಂದು ಬೆಳಗ್ಗೆ ನಮ್ಮನ್ನಗಲಿ ಹೋಗಿದ್ದಾರೆ. ನಮ್ಮೆಲ್ಲರಿಗೂ, ವೈಜ್ಞಾನಿಕ ಮನೋವೃತ್ತಿ ಬೆಳೆಸುವ, ಪರಿಸರ ಉಳಿಸುವ ಚಳುವಳಿಗಳಿಗೂ ‘ಕೃಷಿ’ಯ ಅಗಲಿಕೆಯು ಬಹು ದೊಡ್ಡ ಆಘಾತವಾಗಿದೆ, ಬಹು ದೊಡ್ಡ ನಷ್ಟವಾಗಿದೆ.

ತೊಂಬತ್ತರ ದಶಕದ ಕೊನೆಗೆ ಮಂಗಳೂರಿಗೆ ಇಂಟರ್ನೆಟ್ ಹೊಕ್ಕುವ ತಯಾರಿಗಳಾಗುತ್ತಿದ್ದಾಗ, ಕಂಪ್ಯೂಟರ್ ಅಂದರೆ ಏನು, ಅದನ್ನು ತಾವೇ ಕಟ್ಟುವುದು ಹೇಗೆ, ಅದರೊಳಕ್ಕೆ ತಂತ್ರಾಂಶಗಳನ್ನು ತುರುಕಿಸುವುದು ಹೇಗೆ, ಇಂಟರ್ನೆಟ್ ಏನು, ಅದರ ಬಳಕೆ ಹೇಗೆ ಎಂಬೆಲ್ಲ ವಿಷಯಗಳ ಬಗ್ಗೆ ಊರಿಡೀ ಮಾಹಿತಿ ನೀಡಿ ತರಬೇತಿ ನೀಡಿದವರಲ್ಲಿ ಕೃಷ್ಣಮೋಹನ್ ಅಗ್ರಗಣ್ಯರು. ಎಂಬತ್ತರ ದಶಕದ ನಡುವಿನಿಂದ ತನ್ನ ವೈದ್ಯಕೀಯ ವ್ಯಾಸಂಗದ ದಿನಗಳಿಂದಲೂ ಚಿತ್ರಗ್ರಹಣದಲ್ಲಿ ಅತ್ಯಾಸಕ್ತರಾಗಿದ್ದುಕೊಂಡಿದ್ದ ‘ಕೃಷಿ’, ಅದಕ್ಕಾಗಿ ಅತ್ಯುತ್ತಮ ಪರಿಕರಗಳನ್ನು ಹೊಂದಿ ಅದನ್ನು ಬಹಳ ಗಂಭೀರವಾದ ಹವ್ಯಾಸವಾಗಿ ಬೆಳೆಸಿದ್ದಷ್ಟೇ ಅಲ್ಲದೆ, ಛಾಯಾಚಿತ್ರಗ್ರಹಣದ ಸೂಕ್ಷ್ಮಗಳ ಬಗ್ಗೆ, ಅದರ ಪರಿಕರಗಳ ಬಗ್ಗೆ, ಚಿತ್ರಗಳನ್ನು ಪರಿಷ್ಕರಿಸುವ ಅತ್ಯಾಧುನಿಕ ತಂತ್ರಾಂಶಗಳ ಬಗ್ಗೆ ಅಧಿಕಾರಯುತವಾಗಿ ಮಾತಾಡುವ, ಬರೆಯುವ ಸಾಮರ್ಥ್ಯವನ್ನು ಹೊಂದಿದ್ದರು, ಈ ವಿಷಯಗಳಲ್ಲಿ ಆಸಕ್ತಿಯಿದ್ದವರಿಗಾಗಿ ಅನೇಕ ಕಡೆಗಳಲ್ಲಿ ಲೆಕ್ಕವಿಲ್ಲದಷ್ಟು ಶಿಬಿರಗಳನ್ನೂ ಅವರು ನಡೆಸಿದ್ದರು. ಮತ್ತೊಮ್ಮೆ ಐಸ್ ಲ್ಯಾಂಡ್ ದೇಶಕ್ಕೆ ಚಿತ್ರಗ್ರಹಣಕ್ಕಾಗಿ ಹೊರಡುವ ಸಿದ್ಧತೆಯಲ್ಲಿದ್ದಾಗಲೇ ಅಸ್ವಸ್ಥರಾಗಿ ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.

ಕೊರೋನ ಸೋಂಕಿನ ಈ ಎರಡು ವರ್ಷಗಳಲ್ಲಿ ಸರ್ಕಾರಗಳು ಮತ್ತು ಅವುಗಳ ತಥಾಕಥಿತ ಸಮಿತಿಗಳು ಒಂದರ ಹಿಂದೊಂದು ಅವೈಜ್ಞಾನಿಕವಾದ, ಸಾಕ್ಷ್ಯಾಧಾರಗಳಿಲ್ಲದ, ಅಮಾನವೀಯವಾದ ನೀತಿಗಳನ್ನು ಪ್ರಕಟಿಸುತ್ತಿದ್ದಾಗ, ಮಾಧ್ಯಮಗಳು ನಿರಂತರವಾಗಿ ಜನರನ್ನು ಬೆದರಿಸುವ, ಆಡಳಿತಗಳ ಮೇಲೆ ಒತ್ತಡ ಹೇರುವ ಕೆಲಸಗಳನ್ನು ಮಾಡುತ್ತಿದ್ದಾಗ, ಇವನ್ನೆಲ್ಲ ವಿವೇಚನೆಯಿಂದ ಪ್ರಶ್ನಿಸಿ ಜನರಿಗೆ ಸರಿಯಾದ ದಾರಿ ತೋರಬೇಕಿದ್ದ ವೈದ್ಯರೂ, ಅವರ ಸಂಘಟನೆಗಳೂ ಸ್ವತಃ ತಾವೇ ಹೆದರಿಕೊಂಡು ಸರಕಾರಕ್ಕೆ ಚಪ್ಪಾಳೆ ತಟ್ಟುತ್ತಿದ್ದಾಗ, ಕೊರೋನ ಸೋಂಕಿನ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ಕಲೆಹಾಕಿ, ಸರಕಾರದ ತಪ್ಪು ನಿರ್ಧಾರಗಳನ್ನು ಪ್ರಶ್ನಿಸಿ, ಸತ್ಯವನ್ನು ಜನರಿಗೆ ತಲುಪಿಸಲು ಶ್ರಮಿಸಿದ, ಅದಕ್ಕೆ ಧೈರ್ಯ ತೋರಿದ ಕೆಲವೇ ವೈದ್ಯರಲ್ಲಿ ಡಾ| ಕೃಷ್ಣಮೋಹನ್ ಒಬ್ಬರಾಗಿದ್ದರು.

ದೇಶದಲ್ಲಿಂದು ಮತಾಂಧತೆಯು ಎಲ್ಲ ವಲಯಗಳನ್ನೂ ಆಕ್ರಮಿಸುತ್ತಿರುವಾಗ, ವೈದ್ಯರಲ್ಲೂ ಹೊಕ್ಕಿ ಮೆರೆಯುತ್ತಿರುವಾಗ, ಸರಕಾರದ ನೀತಿಗಳನ್ನು ವೈಜ್ಞಾನಿಕ ನೆಲೆಯಿಂದ ಪ್ರಶ್ನಿಸುವುದು ದೇಶದ್ರೋಹವೆಂದು ಹಲವು ವೈದ್ಯರೇ ಕಿರುಚುತ್ತಿರುವಾಗ, ಚಿತ್ತಸ್ಥೈರ್ಯವನ್ನುಳಿಸಿಕೊಳ್ಳುವುದಾಗಲೀ, ವೈಜ್ಞಾನಿಕ-ವೈಚಾರಿಕ ಮನೋವೃತ್ತಿಯನ್ನು ಕಾದಿಟ್ಟುಕೊಳ್ಳುವುದಾಗಲೀ, ತನ್ನ ಜಾತ್ಯತೀತ, ಪ್ರಗತಿಪರ ನಿಲುವುಗಳನ್ನು ಧೈರ್ಯದಿಂದ ಹೇಳುವುದಾಗಲೀ, ಹಾಗೆ ಹೇಳುವ ಕೆಲವೇ ಕೆಲವರ ಜೊತೆಗೆ ಗುರುತಿಸಿಕೊಳ್ಳುವುದಾಗಲೀ, ಭಾಗಿಗಳಾಗುವುದಾಗಲೀ ಸುಲಭವಲ್ಲ. ಕೊನೆಯವರೆಗೂ ವೈಜ್ಞಾನಿಕ ಮನೋವೃತ್ತಿಗೆ, ವೈಚಾರಿಕತೆಗೆ, ಜಾತ್ಯತೀತ ನಿಲುವಿಗೆ ಬದ್ಧರಾಗಿದ್ದು, ತನಗೆ ಹೇಳಬೇಕೆನಿಸಿದ್ದನ್ನು ಹೇಳುವ ಧೈರ್ಯವನ್ನು ತೋರಿದ್ದ ಸಹೋದ್ಯೋಗಿ, ಸನ್ಮಿತ್ರ, ಸಂಗಡಿಗ ಡಾ| ಕೃಷ್ಣಮೋಹನ ಪ್ರಭುವಿಗೆ ಕೃತಜ್ಞತೆಗಳು, ಅಂತಿಮ ನಮನಗಳು.

(ಚಿತ್ರ ಕೃಪೆ: ಕಕ್ಕಿಲ್ಲಾಯರದೇ ಎಫ್ಬಿ ಪುಟ)

 

ಅನುಬಂಧ -೨

Farewell to a Humanist brother

by Narendra Nayak (ಅವರ ಫೇಸ್ ಬುಕ್ ಪುಟದಿಂದ)

Dr.Krishnamohan Prabhu MBBS, MS who passed away yesterday at the age of 55 after a short battle with illness, diagnosed as acute myeloid leukemia was my student at the Kasturba Medical College, Mangalore. I had taught him biochemistry but do not remember him as a student because we have three hundred of MBBS students every year along with a hundred BDS, BPT, MSc and so on. But later on it turned out that I had taught things more than biochemistry. It was late B Premanand who told me that there is Dr. Prabhu from Moodabidri who was a subscriber to Indian Skeptic and it turned out to be him! Later on he did take active part in our work. In fact, he turned up for the third FIRA national conference at Podanur with three others. From that time our friendship grew.

To describe him as a surgeon who had a nursing home at Moodabidri would be doing a grave injustice to his multi faceted personality- he was a computer expert, a conservationist, entomologist, a wild life photographer, a mountain climber and a lot more. There have been a number of eulogies to him in the media. I would recall a few things that we did together. It was around 2000 or so. A psychic ‘surgeon’ called Alex Orbito had come to India. He had a great reputation including being the guest of the US government at their recreational facilities for three years. He was from Philippines well known for this quackery. We decided to counter it by going to Bangalore, demonstrating it to medical colleges, public and at TV studios. He came with his car and we drove down. We conducted two programs for medical colleges, one for public and a recording at TV studio. I demonstrated the trick with him by my side! Probably, the only one of its kind with an actual surgeon in attendance. It was a big hit and we had to show the same in a good number of places. Nowhere else did I have that privilege.

On medical topics, scientific temper related issues, taking up public causes- he had the courage of conviction, clarity of thought, a systematic approach and depth of knowledge. I had a visitor from Germany who told me that there was a dolmen near Mangalore which he wanted to visit. It was near Moodabidri and immediately my hunch was that if it is near Moodabidri, Krishnamohan would be knowing about it. It was right, he knew about it also someone who could take us there! We visited the place surrounded by a small forest. As to be expected the place had some religious flags and an offering box!He was a sort of encyclopedia for me in tricky matters involving medical subjects.

He would come up with references in minutes! I had such confidence in his abilities that when I had been infected with covid19 in 2020 March itself, I used to message him about my state of health and he used to give me confidence. When we founded article 51 ah a group for the development of scientific temper, he was naturally invited to join in. He was an administrator for one of the groups, a post which handled with great finesse. In 2021 February we had a one day workshop on scientific temper in times of covid19 and when I asked him to speak he was ready and presented a scholarly essay about history of vaccination. The same was also done at the Dr. A V Baliga Hospital on 28th of March, 2021. I could never imagine that it was the last time we would meet face to face. Sadly, we lost him to a dreaded disease whose prognosis is very bad for his age group.. His environmental concerns were shown even in the last rites. He was taken to the electric crematorium at Boloor, Mangalore for cremation. It is a great loss for us that we will not have his sane, balanced considered authoritative views on a number of topics. But, he will live on in our hearts and minds forever.

(ಚಿತ್ರಗಳ ಕೃಪೆ ನಾಯಕರ ಎಫ್ಬೀ ಪುಟ)

www.athreebook.com