(ನೀನಾಸಂ ಕಲೆಗಳ ಸಂಗಡ ಮಾತುಕತೆ-೪)
ತೊಟ್ಟ ಬಾಣವನ್ನು ಮರಳಿ ತೊಡೆ…
ಶಿಬಿರ ಮುಗಿದ ಮೇಲೆ ‘ಅಲ್ಲಿರುವುದು ಸುಮ್ಮನೆ’ ಎಂದು ಬೆಳಿಗ್ಗೆ (೧೦/೧೧) ಏಳು ಗಂಟೆಗೇ ಬೈಕೇರಿದ್ದೆವು. ಹೊಸ ಅನುಭವದ ಹುಡುಕಾಟದಲ್ಲಿ ನನ್ನದೊಂದು ಸಣ್ಣ ನಿರ್ಧಾರ – ಒಮ್ಮೆ ಬಳಸಿದ ದಾರಿಯನ್ನು ವಿಶೇಷ ಕಾಲಾಂತರವಲ್ಲದೇ (ಮತ್ತು ಅನಿವಾರ್ಯತೆಯಲ್ಲದೇ) ಇನ್ನೊಮ್ಮೆ ಬಳಸುವುದಿಲ್ಲ. ಹಾಗಾಗಿ ನಾವು ಹೊಸನಗರದ ದಾರಿ ಹಿಡಿದಿದ್ದೆವು. ಕೊರೆ ಶೀತ ಎದುರಿಸಲು ನಾವು ಸ್ವೆಟ್ಟರ್, ಮಂಗನ ತೊಪ್ಪಿಯ ಮೇಲೆ ಶಿರಸ್ತ್ರಾಣ ಹಾಕಿ ಸಜ್ಜಾಗಿಯೇ ಇದ್ದೆವು. ಮತ್ತೆ ನುಣ್ಣನೆ ದಾರಿ, ವಿರಳ ವಾಹನ ಸಂಚಾರ, ಅಷ್ಟೇನೂ ದಟ್ಟವಾಗಿಲ್ಲದ ಮಂಜು, ಬಿಸಿಲ ಕೋಲಾಟಕ್ಕೆ ಬೈಕಿನ ಶ್ರುತಿ ಸೇರಿಸಿದೆವು. ಹೆಗ್ಗೋಡಿನ ‘ಆಹಾರ್ಯ’ದ ನಿತ್ಯ ಶಿಸ್ತನ್ನು (ಎಂಟು-ಎಂಟೂವರೆ ಗಂಟೆ) ನಾವು ಕಾಯದೇ ಹೊರಟದ್ದರಿಂದ ಬಟ್ಟೆಮಲ್ಲಪ್ಪದ ಹೋಟೆಲ್ ಒಂದರಲ್ಲಿ ಕಾಫಿಂಡಿಗಷ್ಟೇ ನಿಂತು, ಮುಂದುವರಿದೆವು.
ಶಿವನ ಕಲ್ಲು ಬರೆ
ನನಗೆ ಚರವಾಣಿಯಲ್ಲಿ ಅಂತರ್ಜಾಲ ಆಧಾರಿತ ಮಾರ್ಗದರ್ಶಿ ಹಾಕಿಕೊಳ್ಳಲು ತಿಳಿದಿಲ್ಲ. (ನನ್ನ ಚರವಾಣಿ ನೇರಾನೇರ ಮಾತು ಅಥವಾ ಲಿಖಿತ ಸಂದೇಶ ಮತ್ತೆ ಚಿತ್ರಗ್ರಹಣಕ್ಕಷ್ಟೇ ಮೀಸಲು) ಹಾಗಾಗಿ ಹಳೇ ಕ್ರಮದಂತೇ ಮನೆ ಬಿಡುವ ಮೊದಲೇ ತುಂಡು ಕಾಗದ ಒಂದರಲ್ಲಿ ಗೀಚಿಕೊಂಡ ಅಂದಾಜು ನಕ್ಷೆಯಂತೆ ಸಾಗಿದ್ದೆವು. ಹೊಸನಗರ ಕಳೆದ ಮೇಲೆ, ಬಹುಶಃ ಹಿಲ್ಕುಂಜಿಯ ಆಸುಪಾಸಿನಲ್ಲಿ ನನ್ನ ಪೂರ್ವ ನಿರ್ಧಾರವನ್ನು ಅಣಕಿಸುವಂತೆ, ಹೋಗುವಾಗಲೂ ಬಳಸಿದ್ದ ‘ನಗರ’ ದಾರಿಯನ್ನು ಅಡ್ಡ ದಾಟಿದ್ದೆವು. ಮುಂದುವರಿದಂತೆ ಬಲ ಬದಿಯ ಗದ್ದೆ ತೋಟಗಳಿಗೆ ಅನತಿ ದೂರದಲ್ಲೇ ದಟ್ಟ ಕಾಡಿನ ಮರೆಯಲ್ಲೇ ಪರ್ವತಶ್ರೇಣಿಯೊಂದು ಬೆಳೆಯುತ್ತಿದ್ದಂತೆ ಭಾಸವಾಗುತ್ತಿತ್ತು. ಒಂದು ಹಂತದಲ್ಲಿ ಅದು ಬೋಳುಬಂಡೆಯ ಆಕರ್ಷಕ ಶಿಖರವನ್ನೇ ಕಾಣಿಸಿದಾಗ ನನ್ನ ಕುತೂಹಲ ತಡೆಯಲಿಲ್ಲ.
ಬಹುಶಃ ಅದು ‘ಸಾಲಿಮರ’ ಎನ್ನುವ ಸ್ಥಳವಿರಬೇಕು. ಅಲ್ಲೇ ದಾರಿ ಬದಿಗಿದ್ದ ತೋಟದ ಮನೆಯ ಅಂಗಳದಲ್ಲಿ ಅಡಿಕೆ ಹರವುತ್ತಿದ್ದ ವೃದ್ಧರಲ್ಲಿ ವಿಚಾರಿಸಿದೆ. ಒಳಗಿನಿಂದ ಬಂದ ಅವರ ಮಗ, ಭಾರೀ ಉತ್ಸಾಹೀ ತರುಣ ವಕ್ತಾರಿಕೆ ವಹಿಸಿಕೊಂಡ! “ಅದು ಶಿವನ ಕಲ್ಲು ಬರೆ….” ಎಂದು ತೊಡಗಿದ ಸ್ಥಳಪುರಾಣದಲ್ಲಿ, ಚಿರತೆ ಕಾಟ, ಕಳ್ಳಬೇಟೆಯವರ ಹೂಟ, ಬೇಧಿಸಿದ ಅರಣ್ಯ ಇಲಾಖೆಯ ಮಾಟಗಳು ಬಂದವು. ಮತ್ತೆ ಸ್ಥಳಕ್ಕೆ ಹೊಸಬರಾದ ನಾವು ಶಿಖಾರಾರೋಹಣಕ್ಕೆಂದು ಹೋದರೂ ಅರಣ್ಯ ಇಲಾಖೆಯ ಗುಮಾನಿಗೆ ಸಿಕ್ಕುವ ಅಪಾಯವೂ ಪ್ರಕಟವಾಯ್ತು. ಅದರ ನಿವಾರಣೆಗೆ ಸ್ಥಳೀಯನಾದ ಆತನೇ ಮಾರ್ಗದರ್ಶಿಯಾಗಿ ಬರುವ ಉತ್ಸಾಹವನ್ನೂ ತೋರಿದ. ಆದರೆ ದೇವರು ದೊಡ್ಡವ! ಆ ತರುಣ ಪ್ರಥಮಾದ್ಯತೆಯಲ್ಲಿ ಹಳ್ಳಿಯ ಎರಡು ದೇವಳಗಳ ನಿತ್ಯ ಪೂಜೆ ಮುಗಿಸದೇ ಹೊರಡುವಂತಿರಲಿಲ್ಲ…..
ಅತ್ಯುತ್ಸಾಹೀ ಅರ್ಚಕ ಮಾತಿನ ಹೊಯ್ಲಿನಲ್ಲೂ ನಮ್ಮ ಮಾತಿನ ಗೂಢದೊಳಗೇ ನಮ್ಮ ‘ಜಾತಿ’ ಶುದ್ಧ ಮಾಡಿಕೊಂಡಿರಬೇಕು. ಹಾಗೇ “ಒಳಗೆ ಬನ್ನಿ, ಕಾಫಿಯಾದರೂ ತೆಗೊಳ್ಳಿ…” ಎಂದು ಒತ್ತಾಯವೂ ಬಂತು. ನಾವು ಜಾರುತ್ತಿರುವ ಸಮಯ ಉಳಿಸುವ ಒಂದೇ ಉದ್ದೇಶಕ್ಕೆ “ಇನ್ನೊಮ್ಮೆ ಖಂಡಿತ ಬಂದು, ಆತಿಥ್ಯ ಸ್ವೀಕರಿಸಿ, ಶಿವನ ಕಲ್ಲು ಬರೆಯನ್ನೂ ಏರಿಯೇ ಮರಳುತ್ತೇವೆ” ಎಂದು ಜಾರಿಕೊಂಡೆವು. ಈ ಮಧ್ಯೆ ಆತ ನಮ್ಮ ಸ್ಥಳಗಳನ್ನು ನೋಡುವ ಉತ್ಸಾಹವನ್ನೂ ಗುರುತಿಸಿದ. ಹಾಗೆ ಕೊಟ್ಟ ಸಲಹೆಯಂತೆ, ಮುಂದೆ ನಮ್ಮ ದಾರಿಯಲ್ಲೇ ಸಿಗುವ, ಮಾಣೀ ಅಣೆಕಟ್ಟು ನೋಡುವ ಯೋಜನೆಯನ್ನು ಮನದಲ್ಲೇ ಹಾಕಿಕೊಂಡೆವು.
ಕೌಲೇ ದುರ್ಗ
ಸಾಲೂರು ಬಳಿ ಬಲಕ್ಕೆ ಕವಲೊಡೆದು, ಬೊಬ್ಲಿಯಲ್ಲಿ ಸ್ವಾಗತ ಕಮಾನು ಕಳೆದು, ಕೌಲೇ ದುರ್ಗದ ಹಳ್ಳಿ ಮುಟ್ಟುವಾಗ ಗಂಟೆ ಹತ್ತಾಗಿತ್ತು. ಐತಿಹಾಸಿಕವಾಗಿ ಪ್ರಚಾರದಲ್ಲಿರುವಂತೆ ಇದು ವನದುರ್ಗ (ದುರ್ಗಗಳಲ್ಲಿ ಇನ್ನೆರಡು ಪ್ರಕಾರವನ್ನು ಸೋದಾಹರಣ ಹೇಳುವುದಾದರೆ ಗಿರಿದುರ್ಗ – ಸಕಲೇಶಪುರದ ಹತ್ತಿರದ ಮಂಜರಾಬಾದ್ ಕೋಟೆ, ಜಲದುರ್ಗ – ಹೊನ್ನಾವರ ಸಮೀಪದ ಬಸವರಾಜ ದುರ್ಗ). ೧೯೮೦ರ ದಶಕದಲ್ಲಿ ನನ್ನೊಂದು ತಂಡ ಕೌಲೇದುರ್ಗವನ್ನು ಅದೇ ಮೊದಲ ಬಾರಿ ನೋಡಲು ದಾರಿ ಹುಡುಕುತ್ತ ಬಂದಿತ್ತು. (ನೋಡಿ: ಬರ್ಕಣದಿಂದ ತೀರ್ಥಳ್ಳಿಗೆ) ಆಗ ವರಾಹಿಗೆ ಅಣೆಕಟ್ಟಾಗಿರಲಿಲ್ಲ. ನಾವು ಆಗುಂಬೆಯತ್ತಣಿಂದ ಬಂದವರು ತೀರ್ಥಹಳ್ಳಿಯನ್ನು ಮುಟ್ಟದೆ, ಬೇರೊಂದೇ ದಾರಿಯಲ್ಲಿ ದುರ್ಗಕ್ಕೆ ಲಗ್ಗೆ ಹಾಕಿದ್ದೆವು. ಅನಂತರದ ದಿನಗಳಲ್ಲಿ ಆ ದಾರಿಗಳೆಲ್ಲ ಮುಳುಗಡೆಗೊಳಗಾದ ಮೇಲೆ, ತೀರ್ಥಳ್ಳಿ ಮೂಲಕ ಎರಡು ಮೂರು ಬಾರಿ ಬಂದದ್ದೂ ಇತ್ತು. ಆದರೆ ಆಗೆಲ್ಲಾ ಸರಕಾರೀ ಇಲಾಖೆಯಿಂದ ಕೋಟೆ ನಿರ್ಲಕ್ಷ್ಯಕ್ಕೆ ಒಳಗಾದದ್ದು, ಸಹಜವಾಗಿ ಪ್ರಕೃತಿಯಲ್ಲಿ ಒಂದಾಗುತ್ತಿದ್ದನ್ನು ಕಂಡಿದ್ದೆವು. ಆದರೆ…
ಈಗ ಕೆಲವು ವರ್ಷಗಳಿಂದ ಪ್ರಾಚ್ಯ ಇಲಾಖೆ ಇದನ್ನು ಪ್ರವಾಸೋದ್ಯಮದ ದೃಷ್ಟಿಯಿಂದ ಗಂಭೀರವಾಗಿ ಜೀರ್ಣೋದ್ಧಾರಕ್ಕೆ ಕೈಗೆತ್ತಿಕೊಂಡಿದೆ ಎಂದು ಕೇಳಿದ್ದೆ. ಅದಕ್ಕೆ ಸರಿಯಾಗಿ ಒಬ್ಬ ಕಾವಲಿನವನು ನಮ್ಮೆಲ್ಲ ‘ಕುಲ ಗೋತ್ರ’ ದಾಖಲಿಸಿಕೊಂಡ. ಮತ್ತೆ ಎದುರಾಗಬಹುದಾದ ಅಪಾಯ – ಅಂದರೆ ಚಿರತೆ ಹಾಗೂ ಕುಸಿದ ಮತ್ತು ಕುಸಿಯಬಹುದಾದ ಗೋಡೆಗಳ, ಕುರಿತು ಎಚ್ಚರಿಸಿದ. ಎರಡನೇ ದೇವಳದಿಂದ ಮುಂದೆ ಹೋಗದಂತೆಯೂ ತಾಕೀತು ಮಾಡಿದ. ಇನ್ನೂ ಮುಖ್ಯವಾಗಿ ಪರಿಸರ ರಕ್ಷಣೆಯ ಭಾಗವಾಗಿ ನಾವು ಯಾವುದೇ ‘ಬಳಸಿ ಎಸೆಯಬಹುದಾದ’ ಪ್ಲ್ಯಾಸ್ಟಿಕ್ ಒಯ್ಯುತ್ತಿಲ್ಲವೆನ್ನುವುದನ್ನು ಖಾತ್ರಿ ಮಾಡಿಕೊಳ್ಳಲು ಚೀಲ ಜಪ್ತಿಯಾಗಬೇಕು ಎಂದ. ಆದರೆ ಆತ ಆ ಕಷ್ಟಪಡದಂತೆ ನಾವು ಚೀಲಗಳನ್ನು ಬೈಕಿನಲ್ಲೇ ಅಂದರೆ ಪರೋಕ್ಷವಾಗಿ ಆತನ ಸುಪರ್ದಿನಲ್ಲೇ ಬಿಟ್ಟು ಹೊರಟೆವು. ದುರ್ಗದರ್ಶನಕ್ಕೆ ಪ್ರವೇಶ ಶುಲ್ಕ ಇನ್ನೂ ಶುರು ಮಾಡಿಲ್ಲ. ಆದರೆ ಹಿಂದೆ ಬಂದಾಗ ವಾಹನ ‘ನಿಲುಗಡೆಯ ಶುಲ್ಕ’ ಎಂದು ಇನ್ನೊಬ್ಬ ಕಾವಲುಗಾರ ರಸೀದಿ ಕೊಟ್ಟೇ ವಸೂಲು ಮಾಡಿದ.
ನನ್ನ ಹಳೆ ನೆನಪಿನಲ್ಲಿ, ಐತಿಹಾಸಿಕ ರಾಜಬೀದಿಯ ಅವಶೇಷದ ಮೇಲೆ ವರ್ತಮಾನದ ಹಳ್ಳಿ ಮನೆಗಳು ವಿಕಸಿಸಿದ್ದವು. ಆದರೆ ಈ ಬಾರಿ ವಾಹನ ಬಿಟ್ಟಲ್ಲಿಂದ ಮನೆಗಳೇನೂ ಸಿಗಲಿಲ್ಲ. ಒಂದು ಗದ್ದೆ ಕಳೆದದ್ದೇ ನಾವು ಕೋಟೆಯ ಕಲ್ಲ ಹಾಸಿನ ವಿಸ್ತಾರ ಮತ್ತು ಮುಕ್ತ ಮಾರ್ಗವನ್ನು ಸೇರಿದ್ದೆವು. ಹುಲ್ಲು, ಪೊದರುಗಳನ್ನೂ ಸವರಿ, ಚಪ್ಪಡಿಗಳನ್ನು ಮರು ಜೋಡಿಸಿದ್ದರು. ಇಲಾಖಾ ಬೋರ್ಡು ಮಾತ್ರ (ಎಂದಿನಂತೆ) ಬಣ್ಣಗೆಟ್ಟು, ತುಕ್ಕು ಹಿಡಿದು ಐತಿಹಾಸಿಕ ಯುಗಕ್ಕೆ ಸಲ್ಲುವ ಸ್ಥಿತಿಯಲ್ಲಿತ್ತು. ಎರಡು ಮಹಾ ದ್ವಾರ ಚೌಕಟ್ಟುಗಳನ್ನು (ಬಾಗಿಲ ಪಡಿಗಳು ಉಳಿದಿಲ್ಲ) ದಾಟಿ ಕೋಟೆಯೊಳಗೆ ಇದ್ದುದರಲ್ಲಿ ದೊಡ್ಡದಿರುವ ದೇವಳದ ಅಂಗಳ ಸೇರಿದೆವು. ಅಲ್ಲಿನ ವೀಕ್ಷಣಾ ಕಲ್ಲಿನ ದಿಬ್ಬದ ಮೇಲಿನ ಗುಡಿಯನ್ನೂ ನೋಡಿದೆವು. ಅಲ್ಲಿಂದ ಮುಂದೆ, ಅಂದರೆ ಇಲಾಖಾ ಬೋರ್ಡು ಹೇಳುವ ಅರಮನೆ, ಅಂತಿಮ ಶಿಖರೇಶ್ವರ ದೇವಳಕ್ಕೆಲ್ಲ ಪ್ರವೇಶ ನಿಷೇಧವಿದ್ದುದರಿಂದ ಅತ್ತ ಹೋಗಲಿಲ್ಲ.
ನಾವು ವಾರದ ಕೆಲಸದ ದಿನ ಅಲ್ಲಿದ್ದೆವು. ಆದರೂ ಬೆಂಗಳೂರಿನ ಪುಟ್ಟ ಪ್ರವಾಸೀ ಸಂಸ್ಥೆಯೊಂದರ ಬಸ್ಸಿನ ಹತ್ತೆಂಟು ಮಂದಿ ಮತ್ತು ಸ್ವತಂತ್ರವಾಗಿ ಬಂದ ಕೆಲವು ‘ಗೆಣೆವಕ್ಕಿಗಳು’ ಇದ್ದದ್ದು ನೋಡಿ ಸ್ವಲ್ಪ ಆಶ್ಚರ್ಯವೇ ಆಯ್ತು. ಬಸ್ಸಿನ ಮಂದಿ ಅಪ್ಪಟ ‘ನಾಗರಿಕರು’, ಬಹುತೇಕ ಮೂಢರು ಕೂಡಾ! ಸೆಲ್ಫೀ, ಲೈವ್ಗಳಲ್ಲಿ ಕೆಲವರಿದ್ದರು. ಆ ಖಾಸಗಿ ಪ್ರವಾಸೀ ಸಂಸ್ಥೆಯೂ ಅವರನ್ನು ‘ಮುದ್ದು’ಮಾಡಲು ಡ್ರೋನ್ ಸಹಿತ ಎರಡು ಮೂರು ಭಾರೀ ಪೆಟ್ಟಿಗೆಯ ಸಲಕರಣೆಗಳನ್ನು ಎಳೆದಾಡಿಕೊಂಡಿತ್ತು. ಬಹುಶಃ ತಂಡದ್ದೇ ಒಬ್ಬ ಹಿರಿಯ, ಅದೇನು ತಲೆ ಸವರಿದ್ದನೋ – ‘ಸ್ಠಳದ ಎನರ್ಜಿ ಟ್ರಾನ್ಸ್ಫರ್’ ಮಾಡಲು ತರುಣಿಯರಿಗೆ ಸರದಿಯಲ್ಲಿ ಕೆಲವು ಮಿನಿಟುಗಳ ಅಪ್ಪಿಕೋ ಸೇವೆ ಕೊಡುತ್ತಿದ್ದ! ಇನ್ನೂ ಕೆಲವರು, ಸುತ್ತಿನ ಪ್ರಾಕೃತಿಕ ಪರಿಸರಕ್ಕೆ ಕಣ್ಣಾಗುವ ಬದಲು, ಕಣ್ಣು ಮುಚ್ಚಿ, ವಿಚಿತ್ರ ಭಂಗಿಗಳಲ್ಲಿ ‘ಪರಧ್ಯಾನಿ’ಗಳೇ ಆಗಿದ್ದರು.
ಸ್ವತಂತ್ರವಾಗಿಯೇ ಬಂದ ಗೆಣೆವಕ್ಕಿಗಳ ಕತೆ ಬೇರೇ ಇದೆ. ನಾವು ಹೋದಂದು ಒಂದೆರಡು ಜೋಡಿಯಷ್ಟೇ ಇದ್ದಂತಿತ್ತು. ಅವು ಗುಂಪಿನ ಕಣ್ಣು ತಪ್ಪಿಸಲು ಕಷ್ಟ ಪಡುತ್ತಲೇ ಇದ್ದವು. ಅವರಿನ್ನು ಕೋಟೆಯ ಮೂಲೆ ಮೊಡಕು ಸೇರಿ, ಅಲ್ಲೆಲ್ಲಾದರೂ ಹಗಲಿನ ನಿದ್ದೆ ತೆಗೆಯುತ್ತಿರಬಹುದಾದ ನಿಷ್ಪಾಪೀ ಚಿರತೆಗಳನ್ನು ಮೈಮೇಲೆ ಎಳೆದುಕೊಳ್ಳದಿದ್ದರೆ ಸಾಕು ಎಂದು ಹಾರೈಸುತ್ತ ನಾವು ವಾಪಾಸಾದೆವು. ಗೇಟಿನ ಬಳಿ ನಾವು ಚಾ ಕುಡಿಯುತ್ತ, ಕಾವಲಿನವನನ್ನು ಈ ವಿಚಾರಗಳ ಕುರಿತು ಮಾತಾಡಿಸಿದೆವು. ಆತ ಇನ್ನೂ ಹೆಚ್ಚಿನ ಮಾಹಿತಿಯನ್ನೇ ನೀಡಿದ. “ಅಯ್ಯೋ ಬಿಡಿ ಸಾರ್. ಕೆಲವು ಜೋಡಿ ಶಾಲೆ ಯೂನಿಫಾರಮ್ಮಲ್ಲೇ ಬೈಕೋ ಸ್ಕೂಟರ್ರೋ ಏರ್ಕಂಡು ಬತ್ತಾವೆ. ಖಂಡಿತ್ವಾಗ್ಲೂ ಮನೆಯೋರ್ಗೆ ಶಾಲೆಗೆ ಹೋಯ್ತೀವೀಂತಲೇ ಹೇಳಿರ್ತಾರೆ. ಎಲ್ಲಾ ಸೆವೆಂಟೀ ಏಟ್ಟೀ ಪರ್ಸೆಂಟ್ (ಅಂಕ ಗಳಿಕೆಯಲ್ಲಿ ಬುದ್ಧಿವಂತರೇ ಎನ್ನುವುದು ಆತನ ಅಭಿಪ್ರಾಯ!) ಮಕ್ಳೂ ಸಾರ್….” ಪಾರಿಸರಿಕ ಅಥವಾ ವನ್ಯ ಸಂರಕ್ಷಣಾ ವಿಚಾರಗಳಲ್ಲೇ ನಮಗೆ ಜಗಿದು ಜೀರ್ಣಿಸಿಕೊಳ್ಳಲು ಕಷ್ಟವಾಗುವಷ್ಟು ದೊಡ್ಡ ತುತ್ತುಗಳಿರುವಾಗ, ಈ ಸಾಮಾಜಿಕ ಸಮಸ್ಯೆಗಳ ಚಿಂತೆ ಕಟ್ಟಿಕೊಳ್ಳುವುದಾದರೂ ಹೇಗೆ? ಗಂಟೆ ಹನ್ನೆರಡಾಗಿತ್ತು. ಮಾಣಿ ಅಣೆಕಟ್ಟು ನೆನೆಸಿಕೊಂಡು ಬೈಕೇರಿದೆವು.
ಮಾಣಿಗೆ ಮಾರ್ಗದರ್ಶಿನಿ ದುರ್ಗಾಪರಮೇಶ್ವರಿ
ಬೊಬ್ಲಿ ಸ್ವಾಗತ ಕಮಾನಿನ ಬಳಿ ನಾವು ಬಲ ಕವಲು ಹಿಡಿದೆವು. ಅರ್ಧ ಗಂಟೆಯೊಳಗೇ ಸಿಕ್ಕ ಯಡೂರಿನಲ್ಲಿ ಎಡಗವಲು. ಮುಂದೆ ಸ್ವಲ್ಪೇ ಸಮಯದಲ್ಲಿ ನಮ್ಮ ದೃಷ್ಟಿಗೆ ಅಡ್ಡವಾಗಿ ಭಾರೀ ಗೋಡೆಯೇ ಕಾಣಿಸಿತು. ವಾಸ್ತವದಲ್ಲಿ ಅದರ ಇನ್ನೊಂದು ಮಗ್ಗುಲಿನಲ್ಲಿ ಮಾಣಿ ಅಣೆಕಟ್ಟು ಹಿಡಿದಿಟ್ಟ ಭಾರೀ ಹಿನ್ನೀರಿನ ಮೊತ್ತವೇ ಇತ್ತು. ಇಲ್ಲಿ ನಮ್ಮ ದಾರಿ ಕವಲೊಡೆದಿತ್ತು. ತೀರಾ ಬಲಕ್ಕೆ ಕಣಿವೆಮುಖಿಯಾದ ದಾರಿ – ಜಲ ವಿದ್ಯುದಾಗರಕ್ಕೆ. ಮಾಣಿ ಅಣೆಕಟ್ಟೆಯ ಮುಖ್ಯ ಉದ್ದೇಶ – ತುಸು ದೂರದಲ್ಲಿ, ಘಟ್ಟದ ಗರ್ಭದಲ್ಲಿ ಹುದುಗಿದ ವರಾಹಿ ವಿದ್ಯುದಾಗರದ ಆಳಕ್ಕೆ ನೀರನ್ನು ಧುಮುಕಿಸುವುದೇ ಆಗಿದೆ. ಅಂದರೆ ಇಲ್ಲಿನ ವಿದ್ಯುದಾಗರ, ಬಹುಶಃ ಅಣೆಕಟ್ಟಿನಿಂದ ಬಿಟ್ಟ ಹರಿ-ನೀರನ್ನು ಕಿರಿದರಲ್ಲಿ ಬಸಿಯುವ ವ್ಯವಸ್ಥೆ ಇರಬಹುದು. ಏನೇ ಇರಲಿ, ಈ ಹಿಂದೆ ನಾವು ಅನೇಕ ಜಲ ವಿದ್ಯುದಾಗರಗಳನ್ನು ನೋಡಿದ್ದಾಗಿದೆ. ಸಾಮಾನ್ಯವಾಗಿ ಅವೆಲ್ಲಕ್ಕೂ ತತ್ವ ಒಂದೇ. ಲಭ್ಯ ಸ್ಥಳ ಮತ್ತು ನೀರಿನ ಸಾಮರ್ಥ್ಯಾನುಸಾರ ಯಂತ್ರಗಳ ಗಾತ್ರ ಹಾಗೂ ಹಂಚಿಕೆಯಲ್ಲಷ್ಟೇ ವ್ಯತ್ಯಾಸ. ನಮ್ಮ ಆಸಕ್ತಿಯಾದರೋ ಮುಳುಗಡೆಯಲ್ಲಿ ಬದಲಿದ ಪ್ರಾಕೃತಿಕ ವೈವಿಧ್ಯ ದರ್ಶನ ಮಾತ್ರ. ಹಾಗಾಗಿ ಎಡಗವಲಿನಲ್ಲಿ ಏರಿ ಅಣೆಕಟ್ಟಿನ ಪೂರ್ವ ಕೊನೆಯ ತನಿಖಾ ಗೇಟು ಸೇರಿದ್ದೆವು.
ವರಾಹಿ ನದಿಯನ್ನು ಮಾಣಿಯಲ್ಲಿ (ಗೂಗಲ್ ನಕ್ಷೆ – ಮಂದನೆ/ಹುಮ್ಮದ ಗುಡ್ಡ ಎಂದೂ ಹೇಳುತ್ತದೆ) ಹಿಡಿದಿಟ್ಟು, ಉಡುಪಿ-ಸಿದ್ಧಾಪುರದ ಬಳಿ ಘಟ್ಟದ ‘ಗರ್ಭ-ಪಾತಾಳ’ಕ್ಕೆ ಬೀಳಿಸಿ, ವಿದ್ಯುಚ್ಛಕ್ತಿ ಬಸಿಯುತ್ತಾರೆ. ಕೃತಕವಾಗಿ ತಡೆ ಹಿಡಿದ ನೀರು, ನೈಜ ವನ್ಯ ಪರಿಸರಕ್ಕೆ (ಅನೈಸರ್ಗಿಕವೇ ಆದರೂ) ಹೊಸದೇ ಚಂದ ಕೊಡುತ್ತದೆ. ಆದರೆ ಭಯೋತ್ಪಾದನೆಯ ಈ ದಿನಮಾನದಲ್ಲಿ ಇಂಥವನ್ನು ವೀಕ್ಷಕರಿಗೆ ಮುಕ್ತವಾಗಿಡುವುದು ಅಸಾಧ್ಯವಾಗಿದೆ. ಹಾಗಾಗಿ ಮಾಣಿ ಅಣೆಕಟ್ಟನ್ನು ಸುಲಭಸಾಧ್ಯ ಮಾಡಿಕೊಳ್ಳುವ ಉಪಾಯವನ್ನೇ ಹಿಂದೆ ಸಿಕ್ಕ ಸಾಲೂರಿನ ತರುಣ ಅರ್ಚಕ ಹೇಳಿದ್ದನ್ನೇ ನಾವು ಬಳಸಿಕೊಂಡೆವು. ಅದೇನೆಂದರೆ…
ಮಾಣಿ ಅಣೆಕಟ್ಟಿನೊಡನೆ ಬಂದ ಜಲ ಸಾಗರದಲ್ಲಿ ಹೊಳೆಯ ಪಶ್ಚಿಮ ದಂಡೆಯ ನಾಗರಿಕ ಸಂಪರ್ಕಗಳೆಲ್ಲ ಜಲಾಧಿವಾಸಕ್ಕೀಡಾದವು. ಆದರೆ ಅಲ್ಲಿ ಮೇಲುಳಿದ ಗುಬ್ಬಿಗ, ಹುಲಿಬಾಗಿಲು, ಕರಿಗಲ್ಲು, ಮೇಲು ಸಂಕ ಎಂಬಿತ್ಯಾದಿ ಹಳ್ಳಿಗಳಿಗೆ ಇಲಾಖೆ ಅನಿವಾರ್ಯವಾಗಿ ಅಣೆಕಟ್ಟಿನ ಮೇಲೇ ರಸ್ತೆ ಹಕ್ಕನ್ನು ಕೊಡಬೇಕಾಯ್ತು. (ಲಗತ್ತಿಸಿದ ಗೂಗಲ್ ನಕ್ಷೆ ನೋಡಿ – ಅದರಲ್ಲಿ ಮಂದನೆ ಹೆಸರಿನ ಮರೆಯಲ್ಲಿ ಅಣೆಕಟ್ಟು ಇದೆ) ಆ ರಿಯಾಯಿತಿಯನ್ನು ಹೊರಗಿನವರಾದ ನಮಗೆ ಬಳಸಿಕೊಳ್ಳಲು ಇದ್ದ ನೆಪ – ಮೇಲುಸುಂಕ ಹಳ್ಳಿಯ ದುರ್ಗಾಪರಮೇಶ್ವರಿ ದೇವಳ. ಸುಮಾರು ಮೂರು ಶತಮಾನಗಳ ಪ್ರಾಚೀನತೆಯಿರುವ ದೇವಿಯ ದರ್ಶನಾಕಾಂಕ್ಷಿಗಳೆಂದೇ ನಾವು ಅಣೆಕಟ್ಟಿನ ತನಿಖಾ ಗೇಟಿನಲ್ಲಿ ದಾಖಲಿಸಿ, ಅಣೆಕಟ್ಟಿನ ಮೇಲೆ ಸಾಗಿದೆವು.
ಮೊದಲ ಸುಮಾರು ಅರ್ಧ ಕಿಮೀ ದಾರಿ ಅಣೆಕಟ್ಟೆಯ ಮೇಲೆ ಓಡುತ್ತದೆ. ಮುಂದೆ ಸುಮಾರು ಎರಡು ಮೂರು ಕಿಮೀವರೆಗೂ ಅದು ಭದ್ರಪಡಿಸಿದ (ನಮಗೆ ಮೊದಲು ದರ್ಶನ ಕೊಟ್ಟಂತ ಗೋಡೆಯ ಹಾಗೇ) ದಂಡೆಯ ಎತ್ತರದಲ್ಲಿ ಸಾಗುತ್ತದೆ. ಕೆಳಗೆ ನೀರ ಅಂಚು ಬಳುಕಿದಂತೆಲ್ಲಾ ಈ ದಾರಿಯೂ ಬಳುಕುತ್ತಾ ಓಡುವ ಚಂದ ಅನುಭವಿಸಿಯೇ ಸವಿಯಬೇಕು. ನಾವು ಕಂಡ ಅನ್ಯ ಹಿನ್ನೀರ ಹರಹುಗಳಿಗಿಂತ ಇಲ್ಲಿ ತುಂಬ ಎತ್ತರದ ನೋಟ ಲಭ್ಯ. ಹಾಗಾಗಿ ಕೊಳ್ಳದಲ್ಲಿ ಕಾಣುವ ದ್ವೀಪ ದಂಡೆಗಳೆಲ್ಲ ನೀರ ಹರಹಿನ ಮೇಲೆ ತೇಲಿಬಿಟ್ಟ ದಪ್ಪದ ಹಸಿರು ಮಕ್ಮಲ್ ಕುಸುರಿಯಂತೆ ಶೋಭಿಸುತ್ತಿತ್ತು. ಅದೇ ಲಿಂಗನಮಕ್ಕಿಯ ಹಿನ್ನೀರು, ಅಂದರೆ ಶರಾವತಿ ಸಾಗರದಲ್ಲಿ ನಾವು ದ್ವೀಪಗಳನ್ನು ನೀರ ಮಟ್ಟದಿಂದಲೇ ನೋಡಿದ್ದರಿಂದ ದಟ್ಟ ಕಾಡುಗಳಾಗಿಯೇ ತೋರಿದ್ದವು. (ವಿವರಗಳಿಗೆ: ಶರಾವತಿ ಸಾಗರದ ಉದ್ದಕ್ಕೆ ) ಗೋಡೆಯ ಇನ್ನೊಂದು ಮಗ್ಗುಲಿನ ಕಣಿವೆಗಳತ್ತ ದಿಟ್ಟಿಯಟ್ಟಿದರೆ ಅವಿಚ್ಛಿನ್ನ ಹಸಿರ ಸಾಗರ. ನೇರ ಬುಡ ನೋಡಿದರೆ – ಅನೂಹ್ಯ ಆಳದಿಂದ ಓರೆಯಲ್ಲಿ ಕಟ್ಟಿಕೊಟ್ಟ ಕಲ್ಲಗೋಡೆ, ಎಲ್ಲೋ ಒಂದೆರಡು ಕಡೆ ಕಡಿದಾದ ಮೆಟ್ಟಿಲ ಸಾಲಿಳಿಸಿ ಆಳದಲ್ಲಿ ಕಟ್ಟಿದ (ಕಾವಲಿನವರ ತತ್ಕಾಲೀನ?) ಕೋಣೆ, ಇನ್ನೊಂದೇ ಬೆರಗು. ಹೊರಡುವಾಗಲೇ ಕಾವಲಿನವರು “ಎಲ್ಲೆಡೆ ಸಿಸಿ ಕ್ಯಾಮರಾಗಳಿವೆ. ಡ್ಯಾಂ ಮೇಲೆ ನಿಲ್ಲಬಾರದು, ಎಲ್ಲೂ ಚಿತ್ರ, ವಿಡಿಯೋ ಮಾಡಬಾರದು” ಎಂದು ಎಚ್ಚರಿಸಿದ್ದರು. ಹಾಗಾಗಿ ಇಲ್ಲಿ ದೃಶ್ಯ ವೈಭವವನ್ನು ವರ್ಣಿಸುವಲ್ಲಿ ಸೋಲುವ ನನ್ನ ಮಾತಿಗೆ ಚಿತ್ರಾಧಾರವನ್ನೂ ಕೊಡಲಾರದವನಾಗಿದ್ದೇನೆ. ಲಗತ್ತಿಸಿದ ಗೂಗಲ್ ನಕ್ಷೆಯ ಪ್ರತಿ ಮತ್ತು ಅನ್ಯ (ಬಹುಶಃ ಅಧಿಕೃತ) ತಯಾರಿಯ ಈ ವಿಡಿಯೋ ನೋಡಿ, ನಿಮ್ಮ ಮನವ ಸಂತೈಸಿಕೊಳ್ಳಿ
ನೀರ ನೋಟದ ಮೂರ್ನಾಲ್ಕು ಕಿಮೀ ಕಳೆದ ಮೇಲೆ ದಾರಿ ಬಹುತೇಕ ದಟ್ಟ ಕಾಡು ಸೇರಿಕೊಳ್ಳುತ್ತದೆ. ತೀರಾ ವಿರಳವಾಗಿ ಕೃಷಿ, ಮನೆ, ಜನ, ಹಳ್ಳಿ, ಕೊನೆಯಲ್ಲಿ ಒಂದೆರಡು ಕಿಮೀ ಸ್ವಲ್ಪ ಕಚ್ಚಾ ಇದ್ದರೂ ಅಡ್ಡಿಯಿಲ್ಲ ಎನ್ನುವ ಸ್ಥಿತಿ. ಹನ್ನೆರಡೂವರೆಯ ಸುಮಾರಿಗೆ ಸಾಕಷ್ಟು ವಿಸ್ತಾರ ಬಯಲಿನಲ್ಲೇ ಇರುವ ದೇವಳ ತಲಪಿದೆವು. ಯಡೂರಿನಿಂದ ಒಟ್ಟಾರೆ ೧೪ ಕಿಮೀ. ನಿರ್ಜನ ವಠಾರದಲ್ಲಿ ಅರ್ಚಕ ದಂಪತಿ ಕೊಬ್ಬರಿ ಒಣಗಿಸಿಕೊಂಡಿದ್ದರು. ನಿತ್ಯದ ಮಹಾ ಪೂಜೆ ಮತ್ತು ಮಂಗಳಾರತಿ ಹನ್ನೆರಡು ಗಂಟೆಗೇ ಮುಗಿದಿತ್ತು. ಆದರೂ ಅರ್ಚಕರು ನಮ್ಮನ್ನು ಉತ್ಸಾಹದಲ್ಲೇ ಕಂಡುಕೊಂಡರು. ಅವರು ಹೇಳಿದಂತೆ, ಸುಮಾರು ಮುನ್ನೂರು ವರ್ಷಗಳ ಇತಿಹಾಸದ ದೇವಳವನ್ನು, ಶೀರ್ನಾಳಿ ಮನೆತನ ನಡೆಸಿಕೊಂಡು ಬರುತ್ತಿದೆ. ಎದುರಿನ ಪುರಾತನ ಮರ, ದೇವಿಯ ಕಾರಣಿಕ…. ಭಟ್ಟರು ಹೇಳುತ್ತಲೇ ಇದ್ದರು. ಆದರೆ ನಮಗೆ ನೋಡಲು ವಿಶೇಷವೇನೂ ಇರಲಿಲ್ಲ ಮತ್ತು ಅಪ್ರಮಾಣಿತ ಸಾವಿರದಲ್ಲಿ ನಮಗೆ ಆಸಕ್ತಿಯೂ ಇರಲಿಲ್ಲ. ಭಟ್ಟರು “ಸಣ್ಣ ಅರ್ಚನೆ ಮಾಡಿ, ಆರತಿ…. ” ಎಂದು ಹೊರಟವರನ್ನು ತಡೆದು, ಬರಿಯ ತೀರ್ಥ, ಕುಂಕುಮ ಪಡೆದು, ತಟ್ಟೆಗೆ ಪುಟ್ಟ ಕಾಣಿಕೆ ಹಾಕಿ ಮುಗಿಸಿದೆವು. ಅವರು ಕಾಫಿ ಬೇಕೇ, ಊಟ ಮಾಡಿಕೊಂಡೇ ಹೋಗಿ ಎಂದೂ ಹೇಳಿದರು. ಆದರೆ ನಾವೆಷ್ಟಿದ್ದರೂ ತಿಥಿಯಿಲ್ಲದೇ ಅವರಲ್ಲಿಗೆ ಬಂದವರು – ಅತಿಥಿಗಳು! ನಮ್ಮ ಅವಸರಕ್ಕೆ, ಪಾಪ ಅವರಿಗೇ ಮಾಡಿಕೊಂಡ ಗಂಜಿಯೋ ಮಜ್ಜಿಗೆಯೋ ಕೊಟ್ಟು ಬಳಲುವುದು ಬೇಡ ಎಂದು ಸ್ಪಷ್ಟ ನಿರಾಕರಿಸಿ, ಬೈಕೇರಿಯೇ ಬಿಟ್ಟೆವು.
ಕಚ್ಚಾ ದಾರಿಯಲ್ಲಿ ಟ-ಠ-ಡ-ಢ-ಣ ಮಾಡಿದರೂ ಮತ್ತಿನ ಕಾಡ ದಾರಿಯಲ್ಲಿ ಭಾವಗೀತೆಯಾದೆವು. ಹಾಗೆ ತಣಿದ ದೇಹಕ್ಕೆ ಅಣೆಕಟ್ಟೆಯ ವಲಯದಲ್ಲಿ ಬಯಲ ಬಿಸಿ ಕಾಡದಂತೆ ನೀರು ಹಸಿರಿನ ನೋಟ ಹೆಚ್ಚೇ ತಣಿಸಿತು. ಮುಂದೆ ಯಡೂರಿನಲ್ಲಿ ಎಡ ಹೊರಳಿ ಒಂಬತ್ತೇ ಕಿಮೀ ಅಂತರದ ಮಾಸ್ತಿ ಕಟ್ಟೆಯಲ್ಲಿ ಕಾದಿದ್ದ ಶಬರಿಗೆ ರಾಮರಾದೆವು. (ಹ್ವಾಯ್ ಗಾಬರಿಯಾಯ್ತಾ? ಅದು ಹೋಟೆಲ್ ಹೆಸರು ಮಾರಾಯ್ರೇ!) ಅವರು ಎಂಜಲು ಗಿಂಜಲು ಕೊಡುವುದಿಲ್ಲ, ಸಾಕಷ್ಟು ಒಳ್ಳೇ ಊಟವೇ ಸಿಕ್ಕಿತು.
ಎರಡೂ ಮುಕ್ಕಾಲಕ್ಕೆ ಮಾಸ್ತಿ ಕಟ್ಟೆ ಬಿಟ್ಟೆವು. ‘ಮಾಸ್ತಿಕಟ್ಟೆ – ಮಂಗಳೂರು’ ಎಂದು ಗೂಗಲಿದರೆ – ನೂರ್ನೆಲ್ವತ್ತು ಕಿಮೀ, ಮೂರು ಗಂಟೆ ಅನ್ನುತ್ತದೆ. ಇನ್ನೇನು ಬಾಳೇಬರೆ ಘಾಟಿಯ ಪಲುಕುಗಳು, ಬ್ರಹ್ಮಾವರ – ಮಂಗಳೂರಿನ ಚತುಷ್ಪಥದ ಸ್ವಚ್ಛಂದದಲ್ಲಿ ಕತ್ತಲಿಗೂ ಮುನ್ನ ಮಂಗಳೂರು ಅಂದುಕೊಂಡೆವು. ಹಿಂದೆ ಗಣಿಧಣಿಗಳ ಉಚ್ಛ್ರಾಯದಲ್ಲಿ ಆ ದಾರಿ ಅದಿರು ತುಂಬಿದ ಲಾರಿಗಳು ಅಸಂಖ್ಯ ಹರಿದು ನುಚ್ಚುನೂರಾಗಿದ್ದದ್ದು ಕಂಡಿದ್ದೆ. ಕಾಲಾನಂತರದಲ್ಲಿ ಕಾಂಕ್ರೀಟೋ ಡಾಮರೋ ಸಿಕ್ಕಿ ಚೇತರಿಸಿಕೊಂಡದ್ದೂ ಗೊತ್ತಿತ್ತು. ಆದರೆ ಅದನ್ನೂ ಕಾಲ ಕ್ರೀಡೆ ಅಳಿಸಿದೆ. ಘಾಟಿ ದಾರಿ ಅಲ್ಲಲ್ಲಿ ಬಿಕ್ಕುತ್ತಿತ್ತು. ಕೆಲವೆಡೆ ಇಲಾಖೆಯವರು ಸಮಾಧಾನ ಪಡಿಸುವುದನ್ನೂ ಕಂಡೆವು. ನಮ್ಮ ಅದೃಷ್ಟಕ್ಕೆ ತಪ್ಪಲಿನ ಹೊಸಂಗಡಿ ಬರುತ್ತಿದ್ದಂತೆ ಎಲ್ಲ ನಯವಾಯ್ತು, ಓಟ ಸರಾಗವಾಯ್ತು.
ಇಲ್ಲಿಂದ ಮಂಗಳೂರಿಗೆ ಹೋಗಲು ಮುಖ್ಯವಾಗಿ ಎರಡು ಆಯ್ಕೆಗಳಿವೆ. ಕುಂದಾಪುರದ್ದು ತುಸು ದೂರದ್ದು, ಬ್ರಹ್ಮಾವರ ಹತ್ತಿರದ್ದು. “ಇಲ್ಲೆಲ್ಲ ನಾನು ಓಡಾಡಿದ್ದು ಸ್ವಲ್ಪವೇನಲ್ಲ…” ಎಂದು ಮನದಲ್ಲೇ ಬೀಗುತ್ತಿದ್ದವನಿಗೆ ಸಿದ್ಧಾಪುರ, ಅಮಾಸೆಬೈಲು, ಶಂಕರನಾರಾಯಣ, ಹಾಲಾಡಿ, ಬಿದ್ಕಲ್ ಕಟ್ಟೆ, ಸಾಯ್ಬ್ರ ಕಟ್ಟೆ ಎಂದೆಲ್ಲಾ ಪರಿಚಿತ ಹೆಸರುಗಳೇ ಕಲಸಿಕೊಂಡು ಎದುರಾಯ್ತು. ಕಿಮೀ ಕಲ್ಲು, ಕೈಕಂಬ, ಹೊಸ ಚಹರೆಗಳೆಲ್ಲ ಗೊಂದಲ ಮೂಡಿಸಿದವು.
ಹಾಗೆ ಯಾವುದಕ್ಕೂ ಇರಲಿ ಒಂದು ಪೇಟೆಯಲ್ಲಿ ಒಂದು ಜನ ನೋಡಿ ಬೈಕ್ ನಿಧಾನಿಸಿದೆ. ಅವರು ಮನೆಯಂಗಳದಲ್ಲಿ ಕಾರು ನಿಲ್ಲಿಸಿ, ಗೇಟ್ ಹಾಕಲು ಬರುತ್ತಿದ್ದಂತೆ ನಾನು ಕೈಕರಣ ಮಾಡುತ್ತ ಸ್ವಲ್ಪ ಗಟ್ಟಿ ಧ್ವನಿಯಲ್ಲೇ “ಬ್ರಹ್ಮಾವರಕ್ಕೆ ಹೀಗೇ….” ಎಂದು ಅನುಮೋಡನೆ ಬಯಸಿದೆ. ಅವರಿಗೇನು ಅನ್ನಿಸಿತೋ ತಡೆದು ನಿಲ್ಲಿಸಿದರು. ಸಾವಧಾನದಲ್ಲಿ ಎಲ್ಲಿಂದ, ಎಲ್ಲಿಗೆ, ಯಾರು… ವಿಚಾರಣೆ ನಡೆಸಿದರು. ಸಹಜವಾಗಿ ಹೆಗ್ಗೋಡು, ಮಂಗಳೂರು, ಅತ್ರಿ ಎನ್ನುತ್ತಿದ್ದಂತೆ ಅವರ ಉತ್ಸಾಹ ಹೆಚ್ಚಿತು. “ಅರೆ ನನ್ನ ತಮ್ಮನ (ಮಂಗಳೂರು ಶಾಸಕ ಡಿವಿ ಕಾಮತ್) ಕಾನ್ಸ್ಟಿಟ್ಯುಎನ್ಸಿಯವರೂ…. ಅದೇ ನಿಮ್ಮನ್ನು ಎಲ್ಲೋ ಅಲ್ಲ, ಅತ್ರಿಯಲ್ಲೇ ನೋಡಿದ್ದೂ…” ಎಂದು ಪರಿಚಯ ಬಲಿತಂತೆ ಅವರಿಗೆ ಪ್ರೀತಿಯೂ ಹೆಚ್ಚಿತು. ಅಲ್ಲೇ ಮುಂದಿನ ವಠಾರದಲ್ಲಿ ಅವರ ಕುಟುಂಬದ್ದೇ ಏನೋ ವಿಶೇಷಕಟ್ಲೆ ಲೆಕ್ಕದಲ್ಲಿ ವನಭೋಜನ ನಡೆದಿತ್ತು. ನಾವು ಮಾಸ್ತಿಕಟ್ಟೆಯಲ್ಲಿ ಊಟ ಮಾಡಿದ್ದಕ್ಕೆ ಪಶ್ಚಾತ್ತಾಪ ಪಡುವಂತೆ, ಸಹಭೋಜನಕ್ಕೇ ಒತ್ತಾಯಿಸಿದ್ದರು. ಕಾಮತರಿಂದ ಹೇಗೋ ಬಿಡಿಸಿಕೊಂಡು…
ಹಾಲಾಡಿ, ಸಾಯ್ಬ್ರ ಕಟ್ಟೆ ಎಂದು ಬೋರ್ಡು ಸ್ಪಷ್ಟ ಮಾಡಿಕೊಳ್ಳುತ್ತಾ ಬ್ರಹ್ಮಾವರ ತಲಪುವಾಗ ಗಂಟೆ ನಾಲ್ಕು. ಅಲ್ಲೊಂದು ಚಾ ಶಾಸ್ತ್ರ ಮಾಡಿದೆವು. ಮತ್ತೆ ನಮ್ಮ ಬೈಕ್ ಹೆದ್ದಾರಿಗೆ ಹೂಡಿದ ಅಂಬು. ಅದು ನಮ್ಮ ಮಂಗಳೂರ ಮನೆಯಲ್ಲಿ ಶಾಂತವಾಗುವಾಗ ಸೂರ್ಯನ ಕಡಲ ಜಳಕಕ್ಕೆ ಇನ್ನೂ ಧಾರಾಳ ಸಮಯ ಉಳಿದಿತ್ತು; ಗಂಟೆ ಐದೂ ಕಾಲು. ಲೆಕ್ಕಕ್ಕೆ ನಾವು ಹೆಗ್ಗೋಡಿಗೆ ಹೋದದ್ದು, ಐದು ದಿನಗಳ ಕಲೆಗಳ ಸಂಗಡ ಮಾತುಕತೆಗೆ. ಕಲೆ ಎನ್ನುವುದು ಜೀವನದ ಯಾವುದೇ ರಂಗದಲ್ಲೂ ಉತ್ತಮಿಕೆಗೆ ತುಡಿತ. ಅಲ್ಲಿ ಸ್ಪರ್ಧೆ ಇಲ್ಲ, ಸಲ್ಲ. ಆ ಲೆಕ್ಕದಲ್ಲಿ ಎರಡು ದಿನಗಳ ನಮ್ಮ ಪಯಣವೂ ಕಲೆಯ ಸಂಗಡ ಸಂವಾದವೇ ಅಲ್ಲವೇ?
(ಮುಗಿದುದು)
ಈ ಬಾರಿ ಪಟಗಳು ನಿಚ್ಚಳವಾಗಿ ಕಾಣುತ್ತಿದೆ.ಹಚ್ಚಹಸಿರಿನ ಒಂಟಿ ಮರವಂತೂ ಅತ್ಯಂತ ಸುಂದರ.ಅಣೆಕಟ್ಟಿನ ಮೇಲಿನ ರಸ್ತೆಯ ಓಟ ಅಷ್ಟೇನೂ ಖುಷಿ ಕೊಡಲಿಲ್ಲ.ಅದರ ಸೌಂದರ್ಯ ಸವಿಯಲು ನಾವೇ ಹೋಗಬೇಕು…ನೀವೇ ಹೇಳಿದ ಹಾಗೆ.ಪ್ರತಿ ವಿಡಿಯೋ ನೋಡಿ ಮುಗಿದಾಗ ಲೇಖನದ ಆರಂಭಕ್ಕೇ ಬಂದು ನಿಲ್ಲುತ್ತದೆ.ಅದೇಕೆ?ಪ್ರತಿ ಬಾರಿಯೂ ಸ್ಕ್ರಾಲ್ ಮಾಡುತ್ತಾ ಹೋಗಬೇಕು.
ಹಿಲ್ಕುಂಜ ಬಳಿಯ ಬರೇಕಲ್ ಬತೇರಿ,1982ರ ಸುಮಾರಿನಲ್ಲಿ ಏರಿದ್ದೆ. ಮೈಗೆ ಹತ್ತಿದ ಉಣುಗು ಬಹಳ ಕಾಟ ಕೊಟ್ಟಿದ್ದವು. ಎರಡು ವರ್ಷದ ನಂತರ ಕೌಲೇದುರ್ಗದ ಕಾಡಿನಲ್ಲಿ ರಾತುಕಳೆದು, ನಂಟೂರು, ಟಂಕಬೈಲು ದಾರಿಯಾಗಿ ನಡೆದು ಹಿಲ್ಕುಂಜ, ನಗರ ತಲುಪಿದ್ದೆವು. ದಟ್ಟ ಮರಗಳು, ಅಪ್ಪಟ ಕಾಡು ದಾರಿ. ಇದು ಆರೋಗ್ಯದಿಂದ ಹೊರಟು ಹೊಸನಗರ ತನಕ ಮಾಡಿದ ನಡಿಗೆ. ನಿಮ್ಮ ಬರಹ ಓದುತ್ತಾ ಪೂರ್ವ ಭವದ ಈ ನೆನಪು ಮತ್ತೆ ರೂಪು ಪಡೆದವು. ಆಗ ಜೊತೆಯಲ್ಲಿದ್ದ ಗೆಳೆಯರಲ್ಲಿ ಇಬ್ಬರು ಈಗ ಇಲ್ಲವಾಗಿ ಇದ್ದಾರೆ. ನಿಮ್ಮ ಬರಹ ಓದುತ್ತಾ ಆಗಿನ ಅನುಭವ ಬರೆದಿಡಬೇಕಾಗಿತ್ತು ಅನಿಸಿತು. ನಿಮ್ಮ ಬರಹ ನನ್ನ ಮಟ್ಟಿಗೆ ಅಭಿಜ್ಞಾನ, ನೆನಪಿನ ಉಂಗುರ. ಥ್ಯಾಂಕ್ಯೂ.
‘ಗೆಣೆವಕ್ಕಿ’ ಗಳ ಬಗ್ಗೆ ಇನ್ನೂ ಹೆಚ್ಚಿನ ಕರುಣೆ, ರಸಿಕ ನಿರೂಪಣೆ ಇದ್ದರಾಗುತ್ತಿತ್ತು ಎನ್ನಲೇ ? ಇದನ್ನು ಅನುಭವಿಸಬಹುದು, ವಿಮರ್ಶಿಸಲಾಗದು.
ಚೆಂದದ ಪ್ರವಾಸ; ಅಷ್ಟೇ ಸೊಗಸಾದ ನಿರೂಪಣೆ.
ವಾರಾಹಿ ನದಿ ಮಾಣಿ ಡಾಂ ಸಮೀಪ ಕುಂಚಿಕಲ್ ಫಾಲ್ಸ್ ಇದೆ,ದೇಶದ ಅತೀ ಎತ್ತರದ ಫಾಲ್ಸ್ ಎಂದು ಗೂಗಲ್ ಹೇಳುತ್ತಿದೆ,ಆದರೆ ಪ್ರಚಾರದಲ್ಲಿ ಇಲ್ಲವಲ್ಲಾ
Ramaraj PN ನನಗೆ ಟೊಪೋ ಶೀಟ್ ಬಂದ ಹೊಸತರಲ್ಲಿ (೧೯೮೦ರ ದಶಕ, ಆಗ ಗೂಗಲ್ ಇರಲಿಲ್ಲ) ಒಮ್ಮೆ ನಾನು ಇದನ್ನು ಹುಡುಕಿ ಹೋದದ್ದಿತ್ತು, ದಿಕ್ಕು, ಸಮಯ ಹೊಂದಾಣಿಕೆ ಆಗದೇ ಕೈ ಬಿಟ್ಟೆ. ಈಗ ಗೂಗಲ್ ನಕ್ಷೆಯಲ್ಲಿ ನೋಡಿದರೆ ಮಾಣಿ ಮತ್ತು ಹುಲಿಕಲ್ ಘಾಟಿಯ ನಡುವೆ, ಅಂದರೆ ಉತ್ತರ-ಪಶ್ಚಿಮಕ್ಕೆಗುರುತಿಸುತ್ತದೆ. (ವಾರಾಹಿ ನದಿಯ ಮೂಲ ಪಾತ್ರೆಯಲ್ಲೇ ಇದೆ) ಆದರೆ ವಿಕಿಪೀಡೆ ಹೇಳುತ್ತದೆ – ಭದ್ರತಾ ಕಾರಣಗಳಿಗೆ ಅನುಮತಿ ಪಡೆಯದೆ ಹೋಗುವಂತಿಲ್ಲಾ. ಇನ್ನಷ್ಟು ನಿರಾಶಾಜನಕ – ಅಣೆಕಟ್ಟೆಯಾದ ಮೇಲೆ ಮಳೆಗಾಲದಲ್ಲಿ ಅಪರೂಪಕ್ಕೆ ಕಾಣುತ್ತದೆ, ಅಂದರೆ ವಿಪರೀತ ಬರುವಾಗಾಂತ ಇರಬೇಕು. ಆಗ ದಟ್ಟ ಕಾಡು, ಆಳದ ಕಣಿವೆ, ಪ್ರವಾಹ, ಜಿಗಣೆಯೇ ಮೊದಲಾದ ಜೀವಗಳೊಡನೆ ಸುಧಾರಿಸಿಕೊಂಡು ಹೋದರೂ ಮಂಜು, ಮಳೆಯಲ್ಲಿ (ಜೋಗ್ ನೋಡಿದ್ದೀರಲ್ಲಾ) ಅದೃಶ್ಯವೇ ಹೆಚ್ಚಾದೀತು. ಇನ್ನೊಂದು, ಇದು ಹಂತ ಹಂತಕ್ಕೆ ಬೀಳುವಂತದ್ದಂತೆ – ಅಷ್ಟೆಲ್ಲಾ ಕಷ್ಟಪಟ್ಟು ಹೋದರೂ ಒಂದು ನೋಟಕ್ಕೆ ಸಿಕ್ಕುವಂತದ್ದಲ್ಲ – ಏನೂ ಸ್ವಾರಸ್ಯವಿರುವುದಿಲ್ಲ.ಇಷ್ಟೆಲ್ಲಾ ಆದರೂ ನೀವು ಅನುಮತಿ ಗಿಟ್ಟಿಸಿ ಹೋಗುವ ಪ್ರಯತ್ನ ಮಾಡುವುದಿದ್ದರೆ ನೋಡುವ ಉಮೇದು ನನಗೂ ಇದೆ. ಹೋಪನಾ?
ತಿಥಿಯಲ್ಲದೆ ಬಂದವರು ಅತಿಥಿಗಳು… ನಿಮ್ಮ ಬರಹಗಳನ್ನು ಓದುವುದೇ ಒಂದು ಖುಷಿ.
ಒಂಟಿ ಕವಲಿನ ಜಲಪಾತ ಒಂದು ಮಳೆಗಾಲದಲ್ಲಿ ಕಂಡುಬರುತ್ತದೆ ಮತ್ತು ಹೊರ ಪ್ರಪಂಚಕ್ಕೆ ಇದು ಗೊತ್ತಿಲ್ಲ ಆದರೆ ಅಲ್ಲಿಗೆ ಹೋಗುವ ದಾರಿಯಲ್ಲಿ ಕಾಳಿಂಗ ಸರ್ಪ ಇರುತ್ತದೆ ಎಂಬ ಸುದ್ದಿಗಳಿಂದ ಕೂಡಿದೆ ಇದನ್ನು ಆದರಿಸಿ ಒಂದು ಕಾದಂಬರಿ ಬರೆದಿದ್ದು ಪ್ರಕಟ ಆಗಿಲ್ಲ
Arun Prasad ಕಾಳಿಂಗ ನಮ್ಮ ಕಪ್ಪೆಗೂಡಿನ ಬಳಿಯೂ ಇದೆ. ಪಾಪ – ಮೂಲವಾಸಿ, ಸಮಸ್ಯೆಯಲ್ಲ
ಸುಂದರವಾದ ಹೆಗ್ಗೋಡು ಬೈಕಾಯಣ ಮುಗಿದು ಬಿಟ್ಟಿತು ಎಂದು ನಿರಾಶೆ ಆದರೂ ನಿತ್ಯ ನಿಮ್ಮನ್ನು ಹಿಂಬಾಲಿಸುತ್ತಾ ಓದುತ್ತಾ ಹೋಗುವ ಸಂತೋಷ ನೀಡಿದ್ದಕ್ಕೆ ಧನ್ಯವಾದಗಳು
ಸ್ಥಳದ ಎನರ್ಜಿ ಟ್ರಾನ್ಸ್ಫರ್ ಮಾಡಲು ತರುಣಿಯರ ನ್ನು ತಬ್ಬಿ ಕೊಳ್ಳುವುದು ಸಕ್ ತ್…ಆ ಹುಡುಗಿಯರು ಅಷ್ಟು ಪೆದ್ದರೆ..ನಿನ್ನೆ ಒಬ್ಬ ರು ಕೇಂದ್ರ ಸರ್ಕaರದ ಸಂಸ್ಥೆ ಹಿರಿಯ ಇಂಜಿನೀಯರ್ ದೇವಾಲಯದ ಲ್ಲಿ ವೈಬ್ರೇಶನ್ ಅನುಭವ ಆಯ್ತು ಅಂದರು.
ತಿಥಿಯಲ್ಲದೆ ಬಂದವರು ಅತಿಥಿಗಳು… ನಿಮ್ಮ ಬರಹಗಳನ್ನು ಓದುವುದೇ ಒಂದು ಖುಷಿ.
ನಾನು ಯಾವಾಗ ಹೋಗುದು ?ಅದೇ. ಚಿಂತೆ, ಸೂಪರ್ ಬರಹ ಸರ್
cofb67