ಭರತ ಖಂಡೇ ಸಿಂಧೂ ತೀರೇ….

Aug 18, 2026 | 0 comments

(ಲೇಹ್ ಲದ್ದಾಕ್ ಪ್ರವಾಸ ಮಾಲೆ ಅಧ್ಯಾಯ ಐದು)

ಪ್ಯಾಂಗಾಂಗ್ ಸಾಗರ ತೀರದ ಪ್ರಾತಃಕಾಲ ಸುಂದರವಾಗಿಯೇ ಇತ್ತು. ಆದರೆ ನನಗೆ ಹಾಗಾಗಲಿಲ್ಲ. ನನ್ನ ಪ್ರಾತರ್ವಿಧಿಗಳ ಕೊನೆಯಲ್ಲಿ, ಅನಿರೀಕ್ಷಿತವಾಗಿ ಮೂಲವ್ಯಾಧಿ ರಕ್ತಸ್ರಾವದೊಡನೆ ಕೆರಳಿಕೊಂಡಿತ್ತು. Constipation is my birth right, piles I shall conserve ಎನ್ನುವಂತಾಯ್ತು! ಮಲಬದ್ಧತೆ ನನಗೆಂದೂ ಇದ್ದದ್ದೇ. ಅದು ರಕ್ತಸ್ರಾವವಿಲ್ಲದೇ ಮೂಲವ್ಯಾಧಿ ರೂಪದಲ್ಲಿ ಮೊದಲು ಕಾಡಿದ್ದು ನಮ್ಮ ೧೯೯೦ರ ಮೋಟಾರ್ ಸೈಕಲ್ ಭಾರತ ಯಾನದಲ್ಲಿ. ಆಗ ನನಗೆ ಪ್ರಥಮ ಚಿಕಿತ್ಸೆ ಕೊಟ್ಟು, ಎರಡು ವರ್ಷ ಕಳೆದು ಶಸ್ತ್ರ ಚಿಕಿತ್ಸೆಯನ್ನೇ ಮಾಡಿ ಗುಣಪಡಿಸಿದವರು ಹಿರಿಯ ವೈದ್ಯ ಕೆಪಿ ರಾವ್ (ಹೆಚ್ಚು ವಿವರಗಳಿಗೆ ಅವಶ್ಯ ಓದಿ: ಕಾಯಿಲ ಮನಸ್ಕತೆಗೆ ಪರಮಾನಂದ-ದಾರಿ). ಅದಿನ್ನು ನನ್ನನ್ನು ಎಂದೂ ಕಾಡದು ಎಂಬ ಭ್ರಮೆ, ೨೦೧೮ರಲ್ಲಿ ಹುಸಿಯಾಯ್ತು; ಅದೇ ಸಮಸ್ಯೆ ಮರುಕಳಿಸಿತ್ತು. ವೈದ್ಯ ಕೆಪಿ ರಾವ್ ದಿನ ಸಂದುಹೋಗಿದ್ದರು. ಆಗ ಗೆಳೆಯ ವೈದ್ಯ ಶ್ರೀನಿವಾಸ ಕಕ್ಕಿಲ್ಲಾಯರ ಶಿಫಾರಸಿನಲ್ಲಿ, ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿನ ಜೀರ್ಣಾಂಗವ್ಯೂಹದ ಪರಿಣತ ವೈದ್ಯ ಎಂಕೆ. ಗಣೇಶರನ್ನು ಕಂಡೆ. ಇವರೂ ವೈದ್ಯ ಕೆಪಿ ರಾಯರಂತೆ ನಿರಸ್ತ್ರ ‘ಯುದ್ಧ’ದಲ್ಲೇ (ಮಹಾಭಾರತ ಕಾಲದ ಶ್ರೀಕೃಷ್ಣನಂತೆ) ನಂಬಿಕೆ ಇಟ್ಟವರು. ಸಹಜವಾಗಿ ಪ್ರಥಮ ಚಿಕಿತ್ಸೆ ಕೊಟ್ಟು ಕಳಿಸಿದ್ದರು. ಅದು ಈಗ ಎಂಟು ವರ್ಷಗಳ ಮೇಲೆ, ಪ್ರಥಮ ಬಾರಿಗೆ ರಕ್ತಸ್ರಾವ ಸಹಿತ ಪ್ರಕಟವಾಗಿತ್ತು. ಕಾಲವೇ ನಿನಗೆ ನಮಸ್ಕಾರ.

ಪ್ಯಾಂಗಾಂಗ್ ಜನಪ್ರಿಯ ಪ್ರವಾಸೀ ಕೇಂದ್ರವಾದ್ದರಿಂದ ದಿನಕ್ಕೆ ಸಾವಿರಾರು ಮಂದಿ ಬಂದು ಹೋಗುವ ತಾಣ. ಆದರೆ ಅಲ್ಲಿ ವೈದ್ಯಕೀಯ ಪ್ರಥಮ ಚಿಕಿತ್ಸೆ ಬಿಟ್ಟು, ಹತ್ತಿ, ಮುಲಾಮೂ ಕೊಡುವವರೂ ಇರಲಿಲ್ಲ. ದೇವಕಿಯ ದಿಟ್ಟ ಸಹಕಾರದಲ್ಲಿ, ನಮ್ಮದೇ ಕರವಸ್ತ್ರ, ಪಂಚೆ ಹರಕುಗಳಲ್ಲಿ ರಕ್ತಸ್ರಾವ ತಡೆಗಟ್ಟಿ, ಸಜ್ಜಾದೆವು. ನಮ್ಮ ಬಳಗದ ಸದಸ್ಯರೇ ಆದ ವೈದ್ಯೆ ಶಶಿಕಲಾ “ಮೊದಲು ತಲೆನೋವು ನೀಗಿಕೊಳ್ಳಿ” ಎಂದು ಔನ್ನತ್ಯದ ಸಂಕಟ ನಿವಾರಣೆಗೆ ಗುಳಿಗೆ ನುಂಗಿಸಿದರು. ಮುಂದುವರಿದು ಅನುಭವದ ಬಲದಲ್ಲಿ, “ಇಂಥ ರಕ್ತಸ್ರಾವ ನಿರಂತರವೇನೂ ಅಲ್ಲ. ನೀವು ಮಾಡಿದ ಸಣ್ಣ ತಡೆ ಧಾರಾಳ ಸಾಕು” ಎಂದು ಧೈರ್ಯವನ್ನೂ ಕೊಟ್ಟರು. ನಾವು ಬೆಳಗ್ಗೆ ಇನ್ನೊಮ್ಮೆ ಸರೋವರದ ತಟಕ್ಕೆ ಹೋಗಬೇಕೆಂಬ ಆಸೆಯನ್ನು ಹತ್ತಿಕ್ಕಿ, ತಿಂಡಿ ತೀರ್ಥ ಪೂರೈಸಿ, ಟೀಟೀ ಸೀಟಿನ ಮೇಲೆ ಹೆಚ್ಚಿನ ಮೆತ್ತೆ ಹೊಂದಿಸಿ, ಯೋಜನೆಯಂತೇ ಲೇಹಿಗೆ ಮರಳುವವರ ಸಹಯಾನಿಗಳಾದೆವು. ಟೀಟೀಗಳು ಮೊದಲಿಗೆ ನುಬ್ರಾ ಕಣಿವೆಯದ್ದೇ ದಾರಿ ಹಿಡಿದು, ಡುರ್ಬುಕ್ಕಿನಲ್ಲಿ ಎಡಗವಲು ಅನುಸರಿಸಿದವು.

ಬಲು ಕಠಿಣ ಮತ್ತು ಮಹತ್ತರ ಏರು. ಸುಮಾರು ಮೂವತ್ತು ಕಿಮೀಯ ಕೊನೆಯಲ್ಲಿ, ಸುಮಾರು ನಾಲ್ಕು ಸಾವಿರ ಅಡಿಗೂ ಮಿಕ್ಕು ಔನ್ನತ್ಯ ಗಳಿಸಿ, ತಲಪಿದ ಬೆಟ್ಟಸಂದು – ಚಾಂಗ್ಲಾ ಪಾಸ್ (ಸಮ ೧೭,೬೮೮ ಅಡಿ). ಆದರೆ ಮಾತ್ರೆಯ ಪ್ರಭಾವದಿಂದಲೋ ಎಂಬಂತೆ ನಾನೂ ಸೇರಿದಂತೆ, ಎಲ್ಲರೂ ಬಹುಚೇತನರೇ ಆಗಿದ್ದೆವು. ಹಿತವಾದ ಬಿಸಿಲು, ಅಪ್ಪಟ ನೀಲಾಗಸಕ್ಕೆ ಮೆತ್ತಿಕೊಂಡ ತೆಳು ಹತ್ತಿ ಮುದ್ದೆಗಳಂತಾ ಮೋಡ, ಸುತ್ತ ನೆರೆದ ಬೆಟ್ಟಗಳ ಬೆಳ್ಳಿ ಹೊದಿಕೆ ತೆಳುವಾಗಿ. ತೋರುತ್ತಿದ್ದ ತಳದ ಕಲ್ಲುಗುಂಡುಗಳು ಏಣೋ ಕುಸುರಿಗೆಲಸದ ಶೋಭೆ ಕೊಟ್ಟಿತ್ತು. ಹೀಗೆ ಹೆಚ್ಚಿದ ಉತ್ಸಾಹಕ್ಕೆ, ತುಸು ಮುಂದೆ ಧಾಬಾ ಒಂದರ ಚಾಯ್ ಸಮಾರಾಧನೆ ಕೊಟ್ಟು ನವಚೇತನಿಗಳೇ ಆದೆವು.

ಪಾಂಗಾಂಗ್ – ಲೇಹಿಗಿದು (ಕಾರ್ಡೂಂಗ್ಲಾ – ನುಬ್ರಾದಂತಲ್ಲದೇ) ಒಳದಾರಿ. ಸಹಜವಾಗಿ ಅದು ಚಾಂಗ್ಲಾ ಕಳೆದ ಮೇಲೆ ಭಾರೀ ತಿರುವಿನ ಮೇಲೆ ತಿರುವುಗಳಲ್ಲಾಡಿಸುತ್ತಾ ಸುಮಾರು ನಲ್ವತ್ತು ಕಿಮೀ ಅಂತರದಲ್ಲಿ ಕರು ಎಂಬ ಜಾಗಕ್ಕೆ ನಮ್ಮನ್ನು ಮುಟ್ಟಿಸಿತು. ಇದು ನಾವು ಮೂರು ದಿನಗಳ ಹಿಂದೆ ಜಿಸ್ಪಾಕಿನಿಂದ ಲೇಹಿಗೆ ಹೋದದ್ದೇ ದಾರಿ. ಹಾಗಾಗಿ ಹಿಂದೆ ಕಂಡ ದೃಶ್ಯಗಳನ್ನೇ ಹೆಚ್ಚಿನ ವಿವರಗಳಲ್ಲಿ ನೋಡುತ್ತ, ಇನ್ನೇನು ಲೇಹ್ ಬಂತೆನ್ನುವಾಗ….

ಎರಡು ದಿನದ ಹಿಂದೆ, ಲೇಹ್ ನಗರ ದರ್ಶನ ಕಾಲದಲ್ಲಿ ಸಮಯಾಭಾವದಿಂದ ಬಿಟ್ಟಿದ್ದ ಸಿಂಧೂ ನದಿ ತಟಾಕದ ಕವಲು ಮತ್ತು ಪ್ರಥಮ ಸಿಂಧೂ ಕುಂಭ ಮೇಳದ ರಂಗುರಂಗಿನ ಭಿತ್ತಿ ಚಿತ್ರಗಳು ಕೈ ಮಾಡಿ ಕರೆದವು. ನಾವಾಗಲೇ ಮಧ್ಯಾಹ್ನದ ಊಟದ ಹೊತ್ತು ಮೀರಿದ್ದೆವು ಮತ್ತು ನಗರದೊಳಗೆ ಜೋಡು ಹಿಮಾಲಯ ಹೋಟೆಲಿನಲ್ಲಿ ನಮ್ಮ ಊಟ ಕಾದಿರುವ ಅರಿವೂ ಇತ್ತು. ಆದರೂ ಬಹುಜನರ ಅಪೇಕ್ಷೆಯಂತೆ ವಾಹನಗಳನ್ನು ತಿರುಗಿಸಿಯೇ ಬಿಟ್ಟೆವು. ಹಿಂದೆ ಹೇಳಿದಂತೆ (ಜುಲೈ ೨೨ರಿಂದ ೨೭), ಅಲ್ಲಿ ಪ್ರಥಮ ಸಿಂಧೂ ಕುಂಭ ಮೇಳ ನಡೆದಿತ್ತು. ಅವಸರದ ಸಿದ್ಧತೆಗಳಾದರೂ ಧರ್ಮೋದ್ಯದ ಹೊಸದೇ ಹೂಡಿಕೆಗೆ ಭವ್ಯ ಭವಿಷ್ಯವನ್ನು ಸಾರುವಂತೆ ಕೆಲಸಗಳು ಕಾಣುತ್ತಿದ್ದವು. ಅಗತ್ಯದ ಕಾಂಕ್ರೀಟ್ ರಸ್ತೆ, ತತ್ಕಾಲೀನ ವಾಹನ ತಂಗುದಾಣ, ಬಣ್ಣ, ತೋರಣ, ಬಾವುಟ ಪತಾಕೆ ತಟಪಟಿಸಿದ್ದವು. ಸಾಕಷ್ಟು ಅಗಲಕ್ಕೆ ಒಂದು ಮಾಳಿಗೆ ಎತ್ತರದ ಪಕ್ಕಾ ಕಾಂಕ್ರೀಟ್ ಸ್ವಾಗತ ಭವನ ಮತ್ತದರ ಅಂಗಳ ಶೃಂಗಾರಗಳು ಹಬ್ಬದ ವಾತಾವರಣಕ್ಕೆ ಪೂರಕವಾಗಿಯೇ ಇದ್ದವು. ಅದನ್ನು ಹೊಕ್ಕು, ಹಿಮ್ಮೈಯಲ್ಲಿದ್ದ ಸಿಂಧೂ ನದಿ ತಟವನ್ನೇ ಸೇರಿದೆವು.

ನದಿ ಸುಮಾರು ಐವತ್ತಡಿ ಅಗಲದ, ಬಹುತೇಕ ಮಟ್ಟಸ ಭೂಮಿಯಲ್ಲೇ ಜುಳುಜುಳಿಸಿತ್ತು. ಸಹಜ ಗುಂಡು ಕಲ್ಲುಗಳೇ ಗಿಡಿದಂತ ಪಾತ್ರೆಯಲ್ಲಿನ ಶುಭ್ರ ಶೀತಲ ನೀರು, ಮೇಲಿಂದ ಕಂಡಂತೆ ಹೆಚ್ಚು ಆಳವಿಲ್ಲದಿದ್ದರೂ ಭಾರೀ ಸೆಳೆತ ಇದ್ದಂತಿತ್ತು. ಅದರ ಮೇಲ್ದಂಡೆಯಲ್ಲೆಲ್ಲೋ ಸಣ್ಣ ಎಳೆಯೊಂದನ್ನು ಪ್ರತ್ಯೇಕಿಸಿ, ಭದ್ರ ಪಡಿಸಿದ ಕಾಲುವೆಯ ಮೂಲಕ ಸ್ವಾಗತ ಮಂಟಪದ ಅಂಚಿಗೇ ತಂದಿದ್ದರು. (ಹೃಷಿಕೇಶವೂ ಸೇರಿದಂತೆ ಹಲವು ತೀರ್ಥಸ್ನಾನ ಕೇಂದ್ರಗಳಲ್ಲಿನಂತೇ.) ಕಾಲುವೆಗೆ ಮಂಟಪದ ಬಳಿ ಸಣ್ಣ ತಡೆ ಒಡ್ಡಿ ಸ್ನಾನಕ್ಕೊದಗುವ ಹಿತ ಆಳವನ್ನು ಕಾಯ್ದುಕೊಂಡಿದ್ದರು. ಅದಕ್ಕಿಳಿಯಲು ಅನುಕೂಲದ ಸೋಪಾನ ಸರಣಿಯೂ ಇತ್ತು. ಸ್ನಾನದ ಮಡು ಮೀರಿದ ನೀರು, ಆಚೆಗೆ ಮನೋಹರ ಝರಿರೂಪದಲ್ಲಿ ಇಳಿದಿತ್ತು. ಎಲ್ಲೆಲ್ಲೂ ಸುಂದರ ಅಂತರ್ಲಾಕಿನ ನೆಲಹಾಸು, ಕಾಲುವೆ ದಾಟಿ ನಿಜ ನದಿಯನ್ನು ಮುಟ್ಟಲು ಎರಡೆರಡು ಭದ್ರ ಪುಟ್ಟ ಸಂಕ, ಬಣ್ಣಬಣ್ಣದ ಬಾವುಟ, ಪತಾಕೆ, ಶಾಮಿಯಾನಗಳು, ಬುದ್ಧನ ಪ್ರತಿಮೆ… ಕೆಲಸಗಾರರ ಚಟುವಟಿಕೆಗಳು ಕಣ್ತುಂಬುವಷ್ಟು ನಡೆದಿದ್ದವು, ಬೋಳು ನದಿ ದಂಡೆಗೆ ಮಹತ್ತರವಾದ ಮನುಷ್ಯ ಸಂಭ್ರಮ ತುಂಬುವಂತೆ ಎಳೆದ ವಯರು, ಪೇರಿಸಿದ ಧ್ವನಿವರ್ಧಕಗಳ ಪೆಟ್ಟಿಗೆ, ನೇಲಿಸಿದ ಹೆದ್ದೀಪಗಳ ಸರಣಿ ಸಾರಿದ್ದವು. ಸಾಯಂ ಸಂಧ್ಯಾ ಕಾಲದ ಇನ್ನಷ್ಟು ಗದ್ದಲ ಮತ್ತು ಭಕ್ತಸಂದಣಿಯನ್ನು ಊಹಿಸಿಯೇ ಸೋತುಹೋದೆ ….

ಲದ್ದಾಕಿಗೆ ಪೂರ್ಣ ಪರಕೀಯವಾದ ಇಷ್ಟು ದೊಡ್ಡ ಸಂಪ್ರದಾಯದ ಹುಟ್ಟು ಸರಿಯೇ? ಇದರೊಡನೆ ಹೆಚ್ಚೆಚ್ಚು ಆವರಿಸಿಕೊಳ್ಳುವ ಧರ್ಮೋದ್ಯಮ ಮತ್ತು ಪ್ರವಾಸೋದ್ಯಮದ ಹೊರೆಯನ್ನು ಲದ್ದಾಕೀಯರ ಬದುಕು, ಅವಕ್ಕೂ ಮಿಗಿಲಾಗಿ ಲದ್ದಾಕಿನ ಸೂಕ್ಷ್ಮ ಪರಿಸರ ತಾಳಿಕೊಳ್ಳಬಲ್ಲವೇ? ಈ ಹುಚ್ಚಾಟಗಳಿಗೆ ಮೂಲವೆಂದುಕೊಳ್ಳುವ ‘ಭಾರತೀಯ ಸಂಸ್ಕೃತಿ’ ಅಥವಾ ಶಾಸ್ತ್ರಗಳನ್ನೇ ಗಂಭೀರವಾಗಿ ನೋಡಿದರೆ ಕಾಣುವುದು ಒಂದೇ – ನೆಲ, ನೀರು, ಕಾಡು, ಬೆಟ್ಟ… ಪ್ರಾಕೃತಿಕ ಸತ್ಯಗಳನ್ನು ಇದ್ದಂತೇ ಗೌರವಿಸುವ ಭಾವ ನಮ್ಮದು. ಆದರೆ ಸಿಂಧೂ ನದಿಯ ಲೇಹ್ ದಂಡೆಯಲ್ಲಿ, ಸೀಮಿತ ಶಾಸ್ತ್ರಗಳ ಸಾಂಕೇತಿಕತೆ ಮಗ್ಗಾ ಮಲಗಿತ್ತು, ಪಕ್ಕಾ ವಾಣಿಜ್ಯ ಕಲಾಪಗಳು ಪ್ರಾಕೃತಿಕ ಸತ್ಯಗಳನ್ನು ಕೈವಶ ಮಾಡಿಕೊಂಡಿತ್ತು. ಪುರೋಹಿತಶಾಹಿಯ ವೈಭವೀಕರಣ ಎಗ್ಗಿಲ್ಲದೆ ನಡೆದಿತ್ತು! ನಮ್ಮ ನಾಲ್ಕೈದು ದಿನಗಳ ತಿರುಗಾಟದ ನೂರಾರು ಕಿಮೀ ಉದ್ದಕ್ಕೂ ಸಾವಿರಾರು ಅಡಿಗಳ ಎತ್ತರಕ್ಕೆ ಅಕ್ಷರಶಃ ಸಡಿಲವಾಗಿಯೇ ರಾಶಿ ಬಿದ್ದ ಕಲ್ಲು, ಮಣ್ಣು, ಮಂಜುಗಡ್ಡೆಗಳನ್ನೇ ನೋಡಿದ್ದೆವು. ಅಲ್ಲೆಲ್ಲ ಯಾವುದೇ ಮಾತು, ಮಂತ್ರಗಳು ಅರ್ಥಹೀನ. ಅಪಾರ ಭಯ ಮತ್ತು ಆಶ್ಚರ್ಯಗಳೊಡನೆ ಅಂದಂದಿನ ಜೀವ ಉಳಿಸಿಕೊಳ್ಳುವುದೊಂದೇ ಸರಿಯಾದ ರಮವಾಗುತ್ತದೆ. ಮಂಜುಗಡ್ಡೆಯಾಗಿ ಕವಿದು ಕುಳಿತಲ್ಲಿ, ಜಲಪಾತವಾಗಿ ಧುಮ್ಮಿಕ್ಕುವಲ್ಲಿ, ತೊರೆ ನದಿಯಾಗಿ ಹರಿವಲ್ಲೆಲ್ಲಾ ಕ್ಷಣಕ್ಷಣಕ್ಕು ಹೊಸದೇ ಶಕ್ತಿ, ದಂಡೆ, ದಿಕ್ಕುಗಳನ್ನು ರೂಪಿಸಿಕೊಳ್ಳುವ ನೀರನ್ನು ಕಂಡಿದ್ದೇವೆ. ಭೋರ್ಗರೆವ ಗಾಳಿಯ ಕಿಂಚಿದ್ ಪ್ರತಾಪವನ್ನೂ ಅನುಭವಿಸಿದ್ದೇವೆ. ಇಲ್ಲೆಲ್ಲ ಬಿಸಿಲಿಗೆ ಬರ್ಫ ಕರಗಿದರೂ ಎಲ್ಲೋ ಬೆಟ್ಟದಾಡು ಓಡಿ ಗುಲಗಂಜಿ ಗಾತ್ರದ ಕಲ್ಲು ನೆಲೆ ತಪ್ಪಿದರೂ ಹುಲು ಕಡ್ಡಿ ಅಡ್ಡಾದರೂ ಆಗಬಹುದಾದ ಅನಾಹುತ ಹುಲು ಜೀವಿಗಳ ಯಾವ ಅಳತೆಗೂ ಸಿಗಲಾರದು ಎಂಬ ಪೂರ್ಣಪ್ರಜ್ಞರಾಗಿಯೂ….

ಮಹಾ ಹಿಮಾಲಯದ ಮಹಾಪುತ್ರಿ ಸಿಂಧೂವಿನ ಬೇಸಗೆಯ ಉದಾಸೀನದ ಮೈಮೇಲೆ ಈ ಮಕ್ಕಳಾಟ ಸರಿಯೇ? ಆಕೆಯ ಮಳೆಗಾಲದ ಅಬ್ಬರವನ್ನೋ ಹಿಮಗಾಲದ ಹೇರಾಪೇರಿಯನ್ನೋ ಇವು ತಾಳುವುದುಂಟೇ? ನಾವೇ ಕಲ್ಪಿಸಿದ ಆಕಾರ ಅಥವಾ ನಿರಾಕಾರದ ದೇವರು, ಅದಕ್ಕೆ ನಾವೇ ಆರೋಪಿಸುವ (ಅಕ್ಷರ ರೂಪದ) ಸ್ತುತಿಯೋ ಮನವಿಯೋ ಶಾಪವೋ ಪೂಜೆಯೋ ಹವನವೋ ತಟ್ಟುವುದುಂಟೇ? ಯಾವುದೇ ವೃತ್ತಿ, ಉದ್ದಿಮೆಯ ರೂಪ ಪಡೆಯುತ್ತಿದ್ದಂತೇ ಜೀವಪರ ನಿಲುವುಗಳನ್ನು ಕಳೆದುಕೊಳ್ಳುತ್ತವೆ. ಇದು ಖಾಸಗಿ ವ್ಯಕ್ತಿಯ ಕತೆಯಾದರೆ ಆತ ಜೀವದಲ್ಲುಳಿದರೂ (ನಾನು ಹಣ ಗಳಿಕೆಯ ಮಾತಾಡುತ್ತಿಲ್ಲ) ಜೀವನದಲ್ಲಿ ಪೂರ್ಣ ಸೋಲುತ್ತಾನೆ. ಹಾಗಾಗಬಾರದೆಂದು ಪ್ರಜಾಪ್ರಭುಗಳಾದ ನಾವೇ ನಿಯುಕ್ತಿಸಿದ ಸಾರ್ವಜನಿಕ ಸಂಪತ್ತಿನ ನಿರ್ವಾಹಕರು, ಸರಳವಾಗಿ ಹೇಳುವುದಿದ್ದರೆ ಬಹುತೇಕ ರಾಜಕಾರಣಿಗಳು ಮತ್ತು ಅಧಿಕಾರಿಗಳು ಇಂದು ನಖಶಿಖಾಂತ ಭ್ರಷ್ಟರಾಗಿದ್ದಾರೆ. ಅವರು ಸಮಷ್ಟಿಯ ಹೆಸರಿನಲ್ಲಿ ನಡೆಸುವ ಯಾವುದೇ ಕಲಾಪ ಮುಳುಗಿದರೂ ಪರೋಕ್ಷ ಲಾಭವನ್ನೇ ಲೆಕ್ಕ ಹಾಕುತ್ತಾರೆ. ನಾಶವನ್ನು ಪ್ರಕೃತಿಯ ತಲೆಗೆ ಕಟ್ಟಿ, ಹೆಚ್ಚಿನ ಹೂಡಿಕೆ, ಹೆಚ್ಚಿನ ಪ್ರಚಾರದಲ್ಲಿ ಹೆಚ್ಚಿನ ಸಂಪತ್ತು ವಿನಿಯೋಗಿಸುತ್ತಾರೆ. ತನಗೇನೇನೂ ಸಂಬಂಧಿಸದ ಭಾವನಾತ್ಮಕ ಪ್ರಪಂಚದ ಭಕ್ತಿ, ಕಲೆ, ಸಾಹಿತ್ಯಾದಿಗಳನ್ನೇ ಬೃಹತ್ತಾಗಿಸಿ, ಸಾರ್ವಜನಿಕ ಶಿಕ್ಷಣ, ಆರೋಗ್ಯ, ವಿದ್ಯುತ್, ನೀರು, ಸಾರಿಗೆ, ನೆಲ, ಕಾಡು, ಗಾಳಿಗಳೆಲ್ಲವನ್ನೂ ಕ್ಷುದ್ರವಾಗಿಸುತ್ತಾರೆ. ಅವರನ್ನು ಮೇಲೇರಿಸಿದ ನಾವು ಬಹುಮತದಲ್ಲಿ ಕಣ್ಣಿದ್ದೂ ಕುರುಡರಾಗಿದ್ದೇವೆ.

“ಊಟಕ್ಕೆ ಹೊತ್ತಾಯ್ತೂ. ಸ್ನಾನಾ ಪೂಜೆಗಳಿಗೆ ಬೇಕಾದರೆ ಸಂಜೆ ಬರೋಣಾ…” ಎಂದು ಬಾಲಕೃಷ್ಣರು ಘೋಷಿಸಿದ್ದಕ್ಕೆ, ನಮ್ಮ ಆ ಹೊತ್ತಿನ ಸಿಂಧೂ ದರ್ಶನ ಮುಗಿಯಿತು. ವಸತಿ ನಿಲಯ ಸೇರಿ, ಊಟ ಮಾಡಿದ್ದಾಯ್ತು. ಸಂಜೆ ಬಹುಶಃ ನಮ್ಮಿಬ್ಬರನ್ನುಳಿದು ಎಲ್ಲರೂ ಮತ್ತೆ ಸಿಂಧೂ ಸನ್ನಿಧಿಗೆ ಹೋಗಿ, ಪುಣ್ಯ ಸ್ನಾನಾದಿಗಳನ್ನು ಪೂರೈಸಿಕೊಂಡರು. ನಾವಿಬ್ಬರು ಮಾಲ್ರೋಡಿಗೆ ನಡೆದು, ನನ್ನ ದೈಹಿಕ ಅನಾನುಕೂಲಕ್ಕೆ ತತ್ಕಾಲೀನ ಉಪಶಮನ ಕಂಡುಕೊಂಡೆವು. ರಾತ್ರಿಯ ಊಟ, ನಿದ್ರೆ ಮುಗಿಸಿಕೊಂಡೆವು. ಹೊಸ ಬೆಳಕಿನಲ್ಲಿ ಕಿಟಕಿಯಾಚಿನ ಶಿಖರಸ್ಥಿತ ಮಂದಿರದ ಸಾನ್ನಿಧ್ಯದ ಬಯಕೆ ಕಳಚಿ, ಅಡುಗೆಯವರು ಮಧ್ಯಾಹ್ನಕ್ಕೆ ಕಟ್ಟಿಕೊಟ್ಟ ಬುತ್ತಿ ಹಿಡಿದು, ಟಾವೆಲ್ ಫಾರ್ ಯೂ ತಿದ್ದಿಕೊಟ್ಟ ಯಾನ ಪರವಾನಗಿಗಳ ಸಹಿತ ಲೇಹ್ ವಿವಾನ ನಿಲ್ದಾಣಕ್ಕೆ ಹೋದೆವು. ಎಂಟು ಗಂಟೆಗೆ ಸರಿಯಾಗಿ ಗಗನಕ್ಕಡರಿ ಒಂಬತ್ತರ ಸುಮಾರಿಗೆ ದಿಲ್ಲಿಯಲ್ಲಿಳಿದೆವು. ಅಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಯುವಿಕೆಯನಂತರ ಮಂಗಳೂರ ವಿಮಾನವೇರಿ ರಾತ್ರಿ ಎಂಟೂವರೆಗೆ ಮಂಗಳೂರಿನಲ್ಲಿ ಒಟ್ಟಾರೆ ಪ್ರವಾಸ ಮುಗಿಸಿಕೊಂಡೆವು. ಮೂಲ ಯೋಜನೆಯ ಮತ್ತೆರಡು ದಿನಗಳ ಪ್ರಯಾಣ, ಕಾರ್ಗಿಲ್ ಹಾಗೂ ಶ್ರೀನಗರಗಳ ಭೇಟಿಯನ್ನೇನೋ ಕಳೆದುಕೊಂಡೆವು. ಆದರೆ ಅದುವರೆಗೆ ಗಳಿಸಿದ ಲದ್ದಾಕ್ ಅನುಭವದ ಬೆಳಕಲ್ಲಿ, ಕಾರ್ಗಿಲ್ ನೋಡದ ನಷ್ಟ ದೊಡ್ಡದೆಂದನ್ನಿಸುವುದಿಲ್ಲ. ಮತ್ತೆ ಕೆಲವು ವರ್ಷಗಳ ಹಿಂದೆಯೇ ನಾವು ಪಡೆದ ತೇಲುನೋಟದ ಶ್ರೀನಗರದ ಅನುಭವಕ್ಕೆ (ಲಂಚಶ್ರೀಯಲ್ಲಿ ಗಳಿಸಿದ ಶ್ರೀನಗರ!), ಇನ್ನೊಂದು ಅಂಥದ್ದೇ ಭೇಟಿ ತಪ್ಪಿತೆಂದು ಬೇಸರವೂ ಇಲ್ಲ. ಉಳಿದಂತೆ ನಮ್ಮ ಲೇಹ್-ಲದ್ದಾಕ್ ಪ್ರವಾಸದ ಕುರಿತು ಸಣ್ಣ ಹಿನ್ನೋಟ ಹಾಕಿದರೆ ….

ನಾವು ಸ್ವತಂತ್ರವಾಗಿ ಮೂರು ಭಾರತಯಾನ (ಎಲ್ಲಕ್ಕೂ ನನ್ನ ಜಾಲತಾಣ www.athreebook.com ನೋಡಿ) ನಡೆಸಿಯೂ ಬಾಕಿಯಾಗಿದ್ದ ಕೆಲವು ದಕ್ಷಿಣ ಭಾರತದ ಕ್ಷೇತ್ರ ದರ್ಶನಕ್ಕಾಗಿ, ಕಳೆದ ವರ್ಷ ಈ ಬಳಗ ಸೇರಿಕೊಂಡಿದ್ದೆವು. ಅಂದಿನದು ಘೋಷಿತ ತೀರ್ಥಕ್ಷೇತ್ರ ಯಾತ್ರೆಯೇ ಆಗಿತ್ತು. (ಅದರ ಅನುಭವ ಕಥನವನ್ನು ಸುಮಾರು ಒಂಬತ್ತು ತಿಂಗಳ ಹಿಂದೆ ಫೇಸ್ ಬುಕ್ಕಿನಲ್ಲಿ ಧಾರಾವಾಹಿ ಮಾಡಿದ್ದೆ. ಇನ್ನೂ ಜಾಲತಾಣಕ್ಕೇರಿಸುವುದಾಗಿಲ್ಲ)  ಅಲ್ಲಿ ದೇಶ, ಭಾಷೆ, ಜನ, ಸಂಸ್ಕೃತಿ ಕನ್ನಡಿಗರಿಗೆ ತುಂಬ ಭಿನ್ನವೇನೂ ಅಲ್ಲ. ಆದರೆ ಲೇಹ್ ಲದ್ದಾಕ್ ಉದ್ದೇಶವೇ ಬಹುದೊಡ್ಡ ಪ್ರಾಕೃತಿಕ ಮತ್ತು ಸಾಂಸ್ಕೃತಿಕ ಭಿನ್ನತೆಯನ್ನು ಗ್ರಹಿಸುವುದಾಗಿತ್ತು. ಅದಕ್ಕೆ ನಿಜಕ್ಕೂ ‘ನಮಗೆಂದೇ ಅರ್ಪಿಸಿಕೊಂಡ’ (… ಫಾರ್ ಯೂ) ಸಂಘಟನೆ ಸರಿಯಾಗಿಯೇ ಕೆಲಸ ಮಾಡಿತ್ತು. ನಮ್ಮ ದೈಹಿಕ ಸವಲತ್ತುಗಳನ್ನೆಲ್ಲ ಯೋಜನಾ ಪತ್ರದಂತೇ ಪರಿಷ್ಕಾರವಾಗಿ ನಡೆಸಿಕೊಟ್ಟರು; ವಾಹನ, ವಸತಿಗಳಲ್ಲಿ ಚೌಕಾಸಿ ಮಾಡಲಿಲ್ಲ. ಯಾತ್ರಿಗಳ ಹೊಟ್ಟೆ ಕೆಟ್ಟರೆ ಪ್ರವಾಸ ಪ್ರಯಾಸವಾಗುತ್ತಿತ್ತು. ಅದಕ್ಕಾಗಿ ನಮ್ಮ ಬಳಕೆಯದೇ ಅಡುಗೆಯವರ ತಂಡವನ್ನೆ ಜತೆ ಮಾಡಿಕೊಂಡು ಉಣ ಬಡಿಸಿದ್ದೂ ಪರಿಷ್ಕಾರವಾಗಿತ್ತು. ಅದರ ಚಂದವನ್ನು ಚಿಕ್ಕದಾಗಿಯಾದರೂ ದಾಖಲಿಸಲೇಬೇಕು….

ಊಟಕ್ಕೆ ಕುಚ್ಚಲು ಗಂಜಿ/ಅನ್ನ, ಬೆಳ್ತಿಗೆಯ ಅನ್ನ, ಚಪಾತಿಗಳು ಅಡಿಪಾಯಕ್ಕೆ. ಕೂಟಕಗಳ ಪಟ್ಟಿಗಿಳಿದರೆ ಬಗೆ ಬಗೆಯ ಪಲ್ಯ, ಸಾರು, ಸಾಂಬಾರು, ಮೆಣಸ್ಕಾಯ್, ಪಾಯಸ, ಪಲಾವ್, ತಂಬುಳಿ, ಸಾಸಿವೆ, ಮೊಸರು, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಬಾಳ್ಕದ ಮೆಣಸು, ನೀರುಳ್ಳಿ ಕ್ಯಾರಟ್ ಮುಳ್ಳು ಸೌತೆಯಂತಾ ಹಸಿ ತರಕಾರಿಗಳ ಕೊಚ್ಚಲು….ಹೇಳಿ ಮುಗಿಯದು, ಬಗಲಲ್ಲೇ ಪೂರೈಸುತ್ತಿದ್ದ ಹಣ್ಣುಗಳಲ್ಲಿ ಸೇಬು, ಮೋಸುಂಬಿ, ಕಲ್ಲಂಗಡಿ, ಕರಬೂಜಾ, ಪಪ್ಪಾಯಿ, ಬಾಳೇಹಣ್ಣು… ಅಮಿತ ಅಸಂಖ್ಯ. ಬೆಳಿಗ್ಗೆ ಹಾಗೂ ಎಡೆ ಹೊತ್ತಿನಲ್ಲಿ ಮತ್ತು ಸಂಜೆ ಅನುಕೂಲವಿದ್ದಲ್ಲೆಲ್ಲಾ ಕೊಟ್ಟ ತಿಂಡಿಗಳ ಪಟ್ಟಿಯೂ ದೊಡ್ಡದೇ – ಉದ್ದು – ರವಾ ಇಡ್ಲಿಗಳು, ಅಕ್ಕಿ- ರಾಗಿಯ ದೋಸೆಗಳು, ರವಾ – ಶ್ಯಾವಿಗೆ ಉಪ್ಪಿಟ್ಟುಗಳು, ಅವಲಕ್ಕಿ, ಶಿರಾ, ಪೂರಿ, ಅಕ್ಕಿ – ಗೋದಿ ರೊಟ್ಟಿಗಳು, ಬಹುತೇಕ ಎಲ್ಲ ತರಕಾರಿಗಳ ಬೋಂಡಾ ಬಜ್ಜಿಗಳು, ಡ್ರೈ ಜಾಮೂನ್, ಹೋಳಿಗೆ, ಕಾಜು ಕತ್ಲಿ, ತಂಬಿಟ್ಟುಂಡೆ, ಕಾಯಿ ಬರ್ಫಿ… ಬರೆದು ಮುಗಿಯದ ಹನುಮನ ಬಾಲ. ವಿತ್ ವಿತೌಟ್ ಶುಗರ್ ಹಾಲು, ಕಾಫಿ, ಟೀಗಳು, ಜೂಸುಗಳು ಇದ್ದೇ ಇತ್ತು. ಮೇಲಿಂದ ಪ್ರಯಾಣದ ಮಧ್ಯದಲ್ಲಿ ಅಲ್ಪ ವಿರಾಮ ಹಾಕಿದಲ್ಲೂ ಬಜಾರಿನ ಬಗೆತರದ ಕುರುಕಲು ಸಹಿತ ಪಾನೀಯಗಳ ಪೂರೈಕೆ ಕಡಿಮೆಯಾದದ್ದಿಲ್ಲ.

(ಬಹುಶಃ ಸಿಂಧೂ ಮೇಳಕ್ಕೆ ಸಂಬಂಧಪಟ್ಟ ಓರ್ವ ಶ್ರೀಮಂತರ ಮನೆ)

ನಿರ್ವಹಣೆಯಲ್ಲಿ ಬಾಲಕೃಷ್ಣ, ಗಣೇಶ್, ಚೇತನ್, ಅಡುಗೆ ಸಿಬ್ಬಂದಿಗಳೂ ಕಾಲಕಾಲಕ್ಕೆ ಕೊಟ್ಟ ಮಾಹಿತಿ, ನಗುಮೊಗದ ಸಹಾಯ ಸೇವೆಗಳಲ್ಲಿ, ಮಾತಿನಲ್ಲಿ ಎಲ್ಲೂ ಕೊರತೆ ಕಾಣಿಸಲೇ ಇಲ್ಲ. ಆದರೆ ಭಾಗಿಗಳಾದ ನಾವು ಬಹುಮಂದಿ, ರೂಢಿಗತ ನಂಬಿಕೆಗಳ ಸಂಕಲೆ ಕಳಚಿ, ಪ್ರಾಕೃತಿಕ ಅನುಸಂಧಾನಕ್ಕೆ ಒಳಗಾಗಲೇ ಇಲ್ಲ. ಹಿಂದಿನ ಪ್ರವಾಸದಲ್ಲಿ ದೇವಾಲಯಗಳ (ಅನಂತಪದ್ಮನಾಭ, ಗುರುವಾಯೂರಪ್ಪ, ಕನ್ಯಾಕುಮಾರಿ, ಬೃಹದೀಶ್ವರ…) ಹೆಸರಿದ್ದಂತೆ ಈ ಬಾರಿ ಸ್ಥಳನಾಮಗಳು (ಮನಾಲಿ, ಜಿಸ್ಪಾ, ಲೇಹ್…) ಮೆರೆದಿದ್ದವು. ಇಡಿಯ ಪ್ರಯಾಣದಲ್ಲಿ, ಸ್ಥಳಗಳ ನಿಜ ವಿಶೇಷಗಳನ್ನು ಬಹುತೇಕ ಉಪೇಕ್ಷೆ ಮಾಡಿದೆವು. ಅನಿವಾರ್ಯವಾದಲ್ಲೂ (ಅರಮನೆ, ವಸ್ತುಪ್ರದರ್ಶನ, ಆರಾಧನಾ ಸ್ಥಳಗಳು, ನಿಂತಲ್ಲಿ – ಕುಂತಲ್ಲಿ…) ನಮ್ಮದೇ ಭಾವ ಮತ್ತು ಭಾವ ಚಿತ್ರಗಳ ಬಂಧನದಲ್ಲಿ ಕಳೆದು ಹೋದೆವು. ದುರುದ್ದೇಶವೇನೂ ಇಲ್ಲದೆ, ಅಲ್ಲಿನ ವಿಪರೀತ ಪ್ರಾಕೃತಿಕ ಸ್ಥಿತಿಗೆ, ಜೀವನ ಶೈಲಿಗೆ ಒಡ್ಡಿಕೊಳ್ಳದೇ ಉಳಿದು ಬಿಟ್ಟೆವು. ಒಂದು ಲೆಕ್ಕದಲ್ಲಿ ತೀರ್ಥಯಾತ್ರೆಯದೇ ಮನೋಭಾವ, ಸಣ್ಣ ಮಟ್ಟಿನ ಸುಖ ಲೋಲುಪರಾದೆವು (ಕಂಫರ್ಟ್ ಜೋನ್). ಇದಕ್ಕೆ ಕೇವಲ ಮೂರು ಉದಾಹರಣೆಗಳನ್ನು ಕೊಟ್ಟು ನನ್ನ ವಿಶ್ಲೇಷಣೆ ಮುಗಿಸುತ್ತೇನೆ.

ಒಟ್ಟಾರೆ ಪ್ರವಾಸದ ಹತ್ತು ದಿನಗಳಲ್ಲಿ ಮೂವತ್ತು ಮಂದಿ ಸರಾಸರಿಯಲ್ಲಿ ದಿನಕ್ಕೆ ಮೂರು ಲೀಟರಿನಂತೆ ಪ್ಲ್ಯಾಸ್ಟಿಕ್ ಬಾಟಲಿ (ಎಷ್ಟೋ ಬಾರಿ ಅರ್ಧ ಲೀಟರ್ ಬಾಟಲಿಗಳು) ಕುಡಿನೀರು ಬಳಸಿದ್ದೇವೆ. ಅವಕ್ಕೆ ನಮ್ಮ ಚಾ ಕಾಪಿ ಲೋಟ, ಲಘು ತಿನಿಸುಗಳ ತಟ್ಟೆಗಳನ್ನೂ ಸೇರಿಸಿದರೆ ಪರಿಸರ ಸೂಕ್ಷ್ಮ ಲದ್ದಾಕಿಗೆ ನಾವು ಬಿಟ್ಟು ಬಂದ ಅಜೈವಿಕ ಕಸದ ಹೊರೆ ವಿಪರೀತವೇ ಆಗಿತ್ತು. ಬದಲಿಗೆ ಸಂಘಟಕರು ಕೇಂದ್ರೀಯವಾಗಿ ಮರುಬಳಕೆಗೆ ಸಿಗುವ ದೊಡ್ಡ ಅಂಡೆಗಳ ಕುಡಿನೀರನ್ನು ವ್ಯಾನು, ವಸತಿನಿಲಯಗಳಲ್ಲಿ ಒದಗಿಸಬೇಕಿತ್ತು. ಮತ್ತೆ ಎಲ್ಲರಿಗೂ ಅವರವರದೇ ಸ್ಟೀಲ್ ಲೋಟ, ಪುಟ್ಟ ತಟ್ಟೆ ಕೈಚೀಲದಲ್ಲಿ ಇಟ್ಟುಕೊಂಡು, ಮರುಬಳಕೆಗೆ ತಾಕೀತು ಮಾಡಿದ್ದರೆ…ರೆ.

ಲದ್ದಾಕ್ ವಲಯದ ಪರ್ಯಾಯ ನಾಮವೇ ಶೀತಲ ಮರುಭೂಮಿ. ಋತುಮಾನದ ಚಕ್ರದಲ್ಲಿ ಬೇಸಗೆ ಎನ್ನುವ ಜೂನಿನಿಂದ ಎರಡು ಮೂರು ತಿಂಗಳು ಬಿಟ್ಟರೆ, ಇಲ್ಲಿ ನೀರು, ಹಸಿರು, ಬಿಸುಪುಗಳೆಲ್ಲಕ್ಕೂ ತತ್ವಾರ. ನಾವು ಹೋದ ದಿನಗಳ ಅವರ ಬೇಸಗೆಯೇ ಚಳಿಯೂ ಎಷ್ಟು ತೀವ್ರ ಎಂದು ಕಂಡುಕೊಂಡೆವು. ವ್ಯವಸ್ಥೆ ಆ ಚಳಿ ನಮ್ಮನ್ನು ವಿಶೇಷ ಕಾಡದಂತೆ ನೋಡಿಕೊಂಡ ಮೇಲೂ ನುಬ್ರಾದಲ್ಲಿ ನಾವು ಕೇವಲ ಮೋಜಿಗೆ ಶಿಬಿರಾಗ್ನಿ ನಡೆಸಿದ್ದು ತಪ್ಪು. ಬದಲಿಗೆ ಸಂಘಟಕರು ಕಲಾಪ ಪಟ್ಟಿಯಲ್ಲಿ ಕೊಟ್ಟಂತೇ ಅಲ್ಲಿನ ಒಂದಾದರೂ ಹಳ್ಳಿ, ಜನಜೀವನದ ಪರಿಚಯಾವಕಾಶ ಬಳಸಬೇಕಿತ್ತು. ಆಗ ನಾವು ಸುಟ್ಟ ಅಷ್ಟು ಸೌದೆ, ಸುರಿದ ಸೀಮೆ ಎಣ್ಣೆ ಅಲ್ಲಿನವರಿಗೆ ಎಷ್ಟು ಅಮೂಲ್ಯ ಎಂಬ ಅರಿವಾಗುತ್ತಿತ್ತೋ ಏನೋ.

‘ತ್ರೀ ಈಡಿಯಟ್ಸ್’ ನಿಸ್ಸಂದೇಹವಾಗಿ ಪಕ್ಕಾ ವಾಣಿಜ್ಯ ಮತ್ತು ಜನಪ್ರಿಯವೂ ಆದ ಸಿನಿಮಾ. ಅದು ವಾಸ್ತವದಲ್ಲಿ ಸೋನಂ ವಾಂಗ್ಚುಕ್ ನಿಜ ಜೀವನ ಚಿತ್ರ ಅಲ್ಲ ಎಂದು ತಡವಾಗಿಯೇ ನಮಗೆಲ್ಲ ತಿಳಿಯಿತು. ಆದರೂ ಆ ಸಿನಿಮಾದ ಹುಚ್ಚು ಬೆಳಕೇ ಇಂದು ವಿಶ್ವಾಸಾರ್ಹ ಶಿಕ್ಷಣದ ಕುರಿತ (ಸಿಜೆಪಿ ಸಹಿತದ) ರಾಷ್ಟ್ರಾದ್ಯಂತ ಚಳವಳಿಯಲ್ಲಿ, ವಾಂಗ್ಚುಕ್ ಅವರಿಗೆ ರಾಷ್ಟ್ರ ನಾಯಕತ್ವವನ್ನೇ ಕೊಟ್ಟಿತು. ಹೆಚ್ಚಿನ ನಾವೂ ಸಿನಿಮಾದ ಗುಂಗಿನಲ್ಲೇ ಲದ್ದಾಕ್, ರ್ಯಾಂಚೋ ಶಾಲೆ ಮತ್ತು ಪ್ಯಾಂಗಾಗ್ ಸರೋವರ ನೋಡಿದೆವು; ತಪ್ಪಲ್ಲ. ಆದರೆ ಸಿನಿಮಾ ಮೀರಿ, ವಾಂಗ್ಚುಕ್ ಅವರ ನಿಜ ಸಾಧನೆಯ (ಬರ್ಫದ ಸ್ತೂಪ, ಸೌರ ಗುಡಾರ, ಸಾಂಪ್ರದಾಯಿಕ ಮನೆಗಳಿಗೂ ಬಿಸುಪೂಡಿದ ಪ್ರಯೋಗ….) ದರ್ಶನಾವಕಾಶದ ಬಯಕೆ, ಕೊರತೆ ಯಾರಿಗೂ ಹೊಳೆದಂತೇ ಇರಲಿಲ್ಲ!!

ನನ್ನ ಪ್ರಥಮ ಪ್ರಕಟಿತ ಪುಸ್ತಕವೇ ಪ್ರವಾಸ ಕಥನ – ತಾತಾರ್ ಶಿಖರಾರೋಹಣ. ನಾನಾಗ ಬೀಯೇ ವಿದ್ಯಾರ್ಥಿ. ಮುಂದೆ ಬಂದ ನನ್ನ ಬಹುತೇಕ ಪತ್ರಿಕಾ ಲೇಖನ ಮತ್ತು ಪುಸ್ತಕಗಳಲ್ಲೂ ಪ್ರವಾಸ ಕಥನ ಅಗ್ರ ಪಂಕ್ತಿಯಲ್ಲೇ ಇದೆ. ಹೀಗೆ ಅರ್ಧ ಶತಮಾನಕ್ಕೂ ಮಿಕ್ಕ ಪ್ರಾಯೋಗಿಕ ಅನುಭವದಲ್ಲಿ ನಾನು ಪ್ರವಾಸ ಕಥನ ಹೇಗಿರಬೇಕು ಎಂದು ಸಾಕಷ್ಟು ಯೋಚಿಸಿದ್ದರಿಂದ ಒಂದೆರಡು ಮಾತುಗಳು….

ಇಂದು ಊಟ, ವಾಸ, ಓಡಾಟ ಮತ್ತು ಸ್ಥಳ ವಿವರಗಳನ್ನು ಯಾರೂ ಅಂತರ್ಜಾಲದಲ್ಲೋ ವೃತ್ತಿಪರರಲ್ಲೋ ಧಾರಾಳ ಸಂಗ್ರಹಿಸಬಹುದು, ಪರಿಷ್ಕರಿಸಿಕೊಳ್ಳಬಹುದು. ಅವುಗಳ ಚೌಕಟ್ಟಿನಲ್ಲಿ ನಮ್ಮ ಬರಹ/ ಚಿತ್ರಗಳನ್ನು ತುಂಬುವುದು ವೈಯಕ್ತಿಕ ದಿನಚರಿಗಾದರೆ ಸರಿ, ಸಾರ್ವಜನಿಕಕ್ಕಾದರೆ ಕೇವಲ ವರದಿಯಷ್ಟೇ ಆಗಬಲ್ಲುದು. ಆ ಮಾಹಿತಿಗಳನ್ನು ಆಧಾರ ಸೂತ್ರವಾಗಿಟ್ಟುಕೊಂಡು, ನನ್ನ ವಿಶಿಷ್ಟ ತುಡಿತಕ್ಕೆ ದಕ್ಕಿದ ಅನುಭವವನ್ನಷ್ಟೇ ವಿಸ್ತರಿಸುವುದು ಪ್ರವಾಸ ಕಥನ ಎಂದು ನಾನು ನಂಬಿದ್ದೇನೆ. ಆ ನಿಟ್ಟಿನಲ್ಲಿ…

ಹಿಂದೆ ಇದೇ ತಂಡದ ಜತೆ ನಾವು ತೀರ್ಥಕ್ಷೇತ್ರಯಾತ್ರೆಯಲ್ಲೇ ಹೋದರೂ ನಾವು ಪುರಾತನ ವಾಸ್ತುವೈಭವ, ಆಂಶಿಕವಾಗಿ ಪ್ರಕೃತಿ ಸೌಂದರ್ಯವನ್ನೇ ಹೆಚ್ಚು ಆಸ್ವಾದಿಸಿ ಬರೆದಿದ್ದೆ. ಈ ಬಾರಿ ಪ್ರಾಕೃತಿಕ ವಿಶೇಷವೇ ನಮ್ಮ ಲಕ್ಷ್ಯವಾದ್ದರಿಂದ ನಮ್ಮ ಅನುಭವಗಳನ್ನು ಹೆಚ್ಚು ಆಪ್ತವಾಗಿ, ಮುಕ್ತವಾಗಿ ಹಂಚಿಕೊಂಡಿದ್ದೇನೆ. ಇದಕ್ಕೆ ನಿಮ್ಮ ಔಪಚಾರಿಕ ಹೊಗಳಿಕೆ ಅಥವಾ ಸಾಂಕೇತಿಕ ಅನುಮೋದನೆಗಳು (ಇಮೋಜೀ ಅಥವಾ ಭಾವೋಜಿ) ಸಾಕಾಗದು. ಬದಲಿಗೆ ನೀವು ಈ ಕಥನದಲ್ಲಿ ಕಂಡಂತೆ ನನ್ನ ಗ್ರಹಿಕೆ ದೋಷದ ಸಕಾರಣ ಖಂಡನೆಗೂ ನಿಮ್ಮ ಪೂರಕ ಗ್ರಹಿಕೆಗಳ ವಿಸ್ತಾರ ನಿವೇದನೆಗೂ ವೇದಿಕೆ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯ ಬೇಧ ಎಷ್ಟು ಕಟುವಾದದ್ದು ಇದ್ದರೂ ಅಥವಾ ಪೂರಕವಾದ ನಿಮ್ಮ ಅನುಭವಗಳು ಎಷ್ಟು ದೀರ್ಘವಿದ್ದರೂ ಸಕಾರಣ ಇಲ್ಲೇ ಪ್ರಕಟಿಸಿ ಮತ್ತು ಒಟ್ಟಾರೆ ಲೋಕಜ್ಞಾನವನ್ನು ಶ್ರೀಮಂತಗೊಳಿಸಿ.

(ಲೇಹ್ – ಲದ್ದಾಕ್ ಸರಣಿ ಮುಗಿಯಿತು)

0 Comments

Submit a Comment

Your email address will not be published. Required fields are marked *