೧೯೯೦ರ ಏಪ್ರಿಲ್ ತಿಂಗಳ ಉರಿಉರಿ ಬೇಸಗೆಯಲ್ಲಿ, ನಾವು ಆರು ಜನ (ನನ್ನ ಬೆಂಗಾವಲಿಗೆ ದೇವಕಿ, ಉಳಿದಂತೆ ಬಾಲಕೃಷ್ಣ ಬೆನ್ನಿಗೆ ವೆಂಕಟ್ರಮಣ ಉಪಾಧ್ಯ ಮತ್ತು ವಿಷ್ಣು ನಾಯಕ್ ಬೆನ್ನಿಗೆ ರಾಜಶೇಖರ ರಾವ್), ಮೂರು ಮೋಟಾರ್ ಸೈಕಲ್ಲುಗಳಲ್ಲಿ, ಬಹುತೇಕ ಭಾರತವನ್ನು ನಡುವಿನಿಂದ ಉದ್ದಕ್ಕೆ ಸೀಳಿದಂತೆ ದಾರಿ, ಸ್ಥಳ ಆಯ್ದುಕೊಂಡು ಭಾರತ ದರ್ಶನಕ್ಕೆ ಹೊರಟಿದ್ದೆವು. (ಕ್ಷಮಿಸಿ, ಪ್ರವಾಸ ಕಥನ ಇನ್ನೂ ಬರೆಯುವುದಾಗಿಲ್ಲ, ಇದು ಆ ಉದ್ದೇಶದ್ದೂ ಅಲ್ಲ.) ದಿನಕ್ಕೆ ಸರಾಸರಿ ಮುನ್ನೂರೈವತ್ತು ಕಿಮೀ ಓಟ, ಸ್ಥಳವೀಕ್ಷಣೆ, ಬಹುತೇಕ ಸಿಕ್ಕ ತಿನಿಸು, ಹೋಟೆಲ್ ವಾಸ – ಚೆನ್ನಾಗಿಯೇ ಸಾಗಿತ್ತು. ಹುಬ್ಬಳ್ಳಿ, ಬಿಜಾಪುರ, ಶೋಲಾಪುರ, ಔರಂಗಾಬಾದ್, ಇಂದೋರ್, ಭೋಪಾಲ್, ಶಿಯೋಪುರ್, ಸವಾಯ್ ಮಾಧೋಪುರ್, ಜೈಪುರ್, ಆಗ್ರಾಕ್ಕಾಗಿ ದಿಲ್ಲಿ ಸಾಧಿಸಿದ್ದೆವು. ನಮ್ಮ ಬಹುತೇಕ ವೀಕ್ಷಣಾ ತಾಣಗಳೆಲ್ಲ ಪ್ರಾಕೃತಿಕ ಅಥವಾ ಐತಿಹಾಸಿಕ ವೈಶಿಷ್ಟ್ಯಗಳೇ ಆದ್ದರಿಂದ ನಡಿಗೆಯ ಶ್ರಮವೂ ಏಪ್ರಿಲ್ ಮೇ ತಿಂಗಳ ಉರಿಬಿಸಿಲಿನ ಹೊಡೆತವೂ ಸಾಕಷ್ಟು ಇತ್ತು. ದಿಲ್ಲಿಯಲ್ಲಿ ‘ಬಸ್ ಪ್ಯಾಕೇಜ್’ನ ನಗರ ದರ್ಶನ, ಬೈಕುಗಳಿಗೊಂದು ಸಮಗ್ರ ಪುನಶ್ಚೇತನವೆಂದು ಎರಡೋ ಮೂರೋ ದಿನ ಬಿಡುವಿಟ್ಟುಕೊಂಡಿದ್ದೆವು. ಅಲ್ಲಿನ ಕೊನೆಯ ರಾತ್ರಿ ನನಗೆ, ಉಂಡದ್ದು ಹೆಚ್ಚುಕಮ್ಮಿಯಾಯ್ತೋ ಒಟ್ಟು ಪಯಣದ ಶ್ರಮ ಪ್ರತಿಫಲಿಸಿತೋ ಗೊತ್ತಿಲ್ಲ, ಒಂದೆರಡು ವಾಂತಿ, ಬೇಧಿ ಆಯ್ತು. ಬೆಳಿಗ್ಗೆ ಎಂದಿನ ಶಿಸ್ತು (ಸುಮಾರು ನಾಲ್ಕು- ಐದು ಗಂಟೆಗೇ ನಾವು ಹೊರಟುಬಿಡುತ್ತಿದ್ದೆವು) ಉಳಿಸಿಕೊಳ್ಳಲಾಗಲಿಲ್ಲ. ಆದರೆ ವೈದ್ಯಕೀಯ ಸಲಹೆಗೆ ಹೋಗದೆ, ಸ್ವಯಂ ಔಷಧಗಳೇನೂ ಮಾಡಿಕೊಳ್ಳದೆ, ಧಾರಾಳ ನೀರು, ಚಾ, ಹಸಿವೆಯಿಂದ ನಿತ್ರಾಣ ಎಂದನ್ನಿಸಿದಾಗ ಕೆಲವು ಹಳುಕು ಬ್ರೆಡ್ ಸೇವಿಸುತ್ತ, ಅಲ್ಲಲ್ಲಿ ಮಾರ್ಗಬದಿಯ ನೆರಳಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತ ಸಂಜೆಗೆ ಋಷಿಕೇಶ ತಲಪಿದೆವು. ಯೋಜನೆಗೇನೂ ವ್ಯತ್ಯಯವಾಗದಂತೆ ನೋಡಿಕೊಂಡೆವು. ಮುಂದೊಂದೆರಡು ದಿನಗಳಲ್ಲಿ ಪೂರ್ಣ ಚೇತರಿಸಿಕೊಂಡೆ ಎಂದೇ ಹೇಳಬೇಕು! ಆದರೆ….

ಮಲಬದ್ಧತೆ ನಮ್ಮ ಕುಟುಂಬದಲ್ಲಿ ಬಹುಮಂದಿಯ ಹುಟ್ಟಾ ಸಂಬಂಧಿ; ನನಗೂ. ಅಪರೂಪಕ್ಕೆ ಅದರ ತೀವ್ರತೆಯಲ್ಲಿ ತಲೆಭಾರವಾಗುವುದು, ಮಲದಲ್ಲಿ ರಕ್ತದ ಸೆಳಕು ಕಾಣುವುದು, ಗುದದ್ವಾರ ಊದಿ ಕಾಟಕೊಡುವುದೂ ಇತ್ತು. ನಿತ್ಯದಲ್ಲಿ ಅದನ್ನು ನಾನು ಔಷಧಿರಹಿತವಾಗಿಯೇ ಪಳಗಿಸಿಕೊಂಡಿದ್ದೆ. ದಿಲ್ಲಿಯ ಅಸ್ವಾಸ್ಥ್ಯದ ಬೆನ್ನಿಗೆ ಗುದದ್ವಾರ ಯಾಕೋ ತುಸು ಕಿರಿಕಿರಿ ಶುರು ಹಚ್ಚಿಕೊಂಡಿತ್ತು, ನಾನು ಯಾರಿಗೂ ತಿಳಿಸದೆ ಸುಧಾರಿಸಿಕೊಂಡಿದ್ದೆ. ಮಸ್ಸೂರಿ, ಹನುಮಾನ್ ಚೆಟ್ಟಿಗಳಲ್ಲಿ ವಾಸ, ಯಮುನೋತ್ರಿ ನಡಿಗೆ (ಒಂದೇ ದಿನದಲ್ಲಿ ಹೋಗಿ ಬಂದ ಅಂತರ ಸುಮಾರು ೨೮ ಕಿಮೀ) ಎಲ್ಲ ಚೆನ್ನಾಗಿಯೇ ನಿರ್ವಹಿಸಿದೆ.

ಹನುಮಾನ್ ಚೆಟ್ಟಿಯಿಂದ ಗಂಗೋತ್ರಿ ದಾರಿ ತೀರಾ ಕೆಟ್ಟದ್ದಾಗಿತ್ತು. ಬೈಕುಗಳ ಎರಡೆರಡು ಪಂಚೇರ್, ಅವನ್ನು ಉರಿಬಿಸಿಲಿನಲ್ಲಿ ನಾವೇ ಸುಧಾರಿಸಿಕೊಳ್ಳುವುದು ಅಧಿಕ ಶ್ರಮವನ್ನೇ ಕೊಟ್ಟಿತ್ತು. ನಡುವೆ ಒಂದೆಡೆ ದಾರಿ, ನಾವು ತಲಪುವ ಎಷ್ಟೋ ಮೊದಲು ಭಾರೀ ಭೂ ಕುಸಿತಕ್ಕೆ ಸಿಕ್ಕು, ಸುಮಾರು ಐವತ್ತು ಮೀಟರಿನಷ್ಟು ಮಂಗಮಾಯವಾಗಿತ್ತು. ಅಲ್ಲೆಲ್ಲ ರಸ್ತೆ ಕಾಮಗಾರಿಯ ವ್ಯವಸ್ಥೆ ತುಂಬ ಸಮರ್ಥವಾಗಿದೆ ಮತ್ತು ಕೆಲಸ ಶುರುವಾಗಿತ್ತು. ಮುಂದೆ ಹೋಗಬೇಕಿದ್ದ ಎಲ್ಲ ಚತುಷ್ಚಕ್ರಿಗಳು, ಕನಿಷ್ಠ ಎರಡು ದಿನ ಕಡ್ಡಾಯ ವಿರಾಮ ಅನುಭವಿಸುವವರಿದ್ದರು. ನಾವು ಮಾತ್ರ ಗುಡ್ಡೆ ಬಿದ್ದ ಹಿಮ ಕಲ್ಲುಮಣ್ಣಿನ ರಾಶಿಯ ಮೇಲೆ, ರಸ್ತೆ ಕಾಮಗಾರಿಯವರು ಬುಲ್‍ಡೋಜರ್ ಉಪಯೋಗಿಸಿ ಮಾಡಿಕೊಂಡಿದ್ದ ತೀರಾ ಒರಟು ಜಾಡಿನಲ್ಲಿ ಬೈಕುಗಳನ್ನು ಎತ್ತಿ, ನೂಕಿ, ಮತ್ತೆ ಸುದೃಢ ದಾರಿ ಸೇರಿ, ರಾತ್ರಿಗೆ ಗಂಗೋತ್ರಿ ವಾಸ ಸಾಧಿಸಿಬಿಟ್ಟೆವು. ಇವೆಲ್ಲದರ ಮೊತ್ತವಾಗಿ…..

ಮರು ಬೆಳಿಗ್ಗೆ ಮಲಶೋಧದನಂತರ ನನ್ನ ಗುದದ್ವಾರ ಊತದ ಹಿಂಸೆ ತುಸು ಹೆಚ್ಚೇ ಇತ್ತು. ನಾನದನ್ನು ಉಪೇಕ್ಷಿಸಿ, ಯೋಜನೆಯಂತೇ ಗೋಮುಖದ ಚಾರಣಕ್ಕೆ ಇಳಿದೇ ಬಿಟ್ಟೆ. ಗಂಗೋತ್ರಿ – ಗೋಮುಖದ ಚಾರಣ ಹೆಚ್ಚು ಕಮ್ಮಿ ಸಪಾಟು ಕಾಲು ದಾರಿಯಲ್ಲೇ ಇದ್ದರೂ ಅಂತರ ಹಿಮ ಕರಗುವ ಋತುಮಾನದಲ್ಲಿ ಹೆಚ್ಚಾಗುತ್ತಲೇ ಇರುತ್ತದೆ. ಬಹುಶಃ ಅಂದು ನಾವು ಸುಮಾರು ಹದಿನೇಳು ಕಿಮೀ ಹೋಗಿ, ಭೋಜಬಾಸಿಯ ಆಶ್ರಮವೊಂದರಲ್ಲಿ ಮಧ್ಯಾಹ್ನ ಉಚಿತ ‘ಪರ್ಶಾದ್’ (ಊಟ, ಅಲ್ಲಿ ಬೇರೆ ಸೌಕರ್ಯಗಳು ಇರಲಿಲ್ಲ) ಸ್ವೀಕರಿಸಿ, ಸಂಜೆಗೆ ಮರಳಿಯೇ ಬಿಟ್ಟೆವು (ಮೂವತ್ನಾಲ್ಕು ಕಿಮೀ ಕಚ್ಚಾದಾರಿಯ ಚಾರಣ). ನನ್ನ ಗುದದ್ವಾರ ಸುತ್ತ ದಪ್ಪ ದ್ರಾಕ್ಷಿಗಳ ಮಾಲೆಯನ್ನೇ ಪೋಣಿಸಿಕೊಂಡಂತೆ ಹೊರಚಾಚಿಕೊಂಡು, ಹೆಜ್ಜೆ ಹೆಜ್ಜೆಗೂ ಅವರ್ಣನೀಯ ನೋವು ಉಣ್ಣಿಸುತ್ತಲೇ ಇತ್ತು. ಗಂಗೋತ್ರಿಯಲ್ಲಿ ಆಗ ಇದ್ದದ್ದೇ ಜೋಪಡಾ ಹೋಟೆಲುಗಳು. ಅಂಥ ಒಂದರ ಅವ್ಯವಸ್ಥೆಯಲ್ಲಿ, ನನ್ನ ಸಂಕಟ ದೇವಕಿಗೆ ತಿಳಿಸಿ, ಆಕೆಯ ಸಹಾಯ ಪಡೆದು, ಉರಿ ತಣಿಸಲು ಮೊದಲು ಹಿಮಕರಗಿದ ನೀರಿನ ಚಿಕಿತ್ಸೆ ಕೊಟ್ಟು ನೋಡಿದೆ. ಉಪಯೋಗವಾಗದಾಗ ಬಿಗಿತ ಇಳಿಸಲು ಬಿಸಿ ನೀರು ಪ್ರಯೋಗಿಸಿಯೂ ಸೋತೆ. ಆ ಊರಲ್ಲಿ ಯಾವುದೇ ವೈದ್ಯಕೀಯ ವ್ಯವಸ್ಥೆ ಇದ್ದಂತಿರಲಿಲ್ಲ. ಹೇಗೋ ರಾತ್ರಿ ಕಳೆದೆ. ಬೆಳಿಗ್ಗೆ ತಂಡದ ಎಲ್ಲ ಸದಸ್ಯರಿಗೆ ಸಮಸ್ಯೆ ತಿಳಿಸಿದೆನಾದರೂ ಸವಾರಿಯನ್ನು ಕನಿಷ್ಠ ಯುಕ್ತ ಚಿಕಿತ್ಸಾ ಕೇಂದ್ರದವರೆಗಾದರೂ ಸಾಗಿಸುವ ಹಠತೊಟ್ಟೆ.

ಊತದ ಜೊಂಪೆ ಬೈಕ್ ಸೀಟಿಗೆ ಮುಟ್ಟದಂತೆ, ಕೆಲ ಹೊತ್ತು ಬಲ ತೊಡೆಯ ಮೇಲೆ, ಕೆಲಹೊತ್ತು ಎಡ ತೊಡೆಯ ಮೇಲೆ ಓರೆಯಲ್ಲಿ ಕುಳಿತು ಸವಾರಿ ನಿಭಾಯಿಸಿದೆ. ಬರುವ ದಾರಿಯಲ್ಲಿ ಸಿಕ್ಕಿದ್ದ ಭೂ ಕುಸಿತದ ನಿವಾರಣೆ ಆ ಎರಡು ರಾತ್ರಿಗಳ ನಡುವೆ ಬಹುತೇಕ ಮುಗಿದಿತ್ತು. ಆದರೆ ಒಟ್ಟಾರೆ ದಾರಿಯ ಕಚ್ಚಾ ಸ್ಥಿತಿ ನನಗಂತೂ ಭಾರೀ ಹಿಂಸೆ ಕೊಡುತ್ತಿತ್ತು. ತುಸು ದೊಡ್ಡ ಧಡಕ್ಕೂ ನನ್ನಲ್ಲಿ ಎಬ್ಬಿಸುತ್ತಿದ್ದ ನೋವಿನಲೆಗೆ ಕಣ್ಣೀರೇ ಬರುತ್ತಿತ್ತು. ದಾರಿಯಲ್ಲಿ ನಮ್ಮ ಸೈನ್ಯದ ಯಾವುದೋ ಸಣ್ಣ ಆಸ್ಪತ್ರೆ ಕಾಣಿಸಿತು. ಬಹಳ ಸಂತೋಷದಲ್ಲೇ ಭೇಟಿ ಕೊಟ್ಟೆವು. ವೈದ್ಯರಿರಲಿಲ್ಲ, ಹಿರಿಯ ಶುಶ್ರೂಷಕರೊಬ್ಬರು ಸಹಾನುಭೂತಿಯಿಂದಲೇ ಪರಿಶೀಲಿಸಿದರು. ಕೊನೆಯಲ್ಲಿ “ಕ್ಷಮಿಸಿ, ಇಲ್ಲಿ ಸೈನಿಕರನ್ನುಳಿದು ನಾವು ಅನ್ಯರ ಸೇವೆ ಮಾಡುವುದು ಅಪರಾಧವಾಗುತ್ತದೆ. ನಿಮ್ಮ ಸಮಸ್ಯೆಯಲ್ಲಿ ರಕ್ತಸ್ರಾವವಿಲ್ಲ. ಹಾಗಾಗಿ ಎಚ್ಚರಿಕೆಯಿಂದ ನೀವು ನಿಮ್ಮೂರಿಗೆ ಹೋಗಿ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದೊಂದೇ ಪರಿಹಾರ” ಎಂದು ಬಿಟ್ಟರು.

ಮುಂದೊಂದು ಸಾಕಷ್ಟು ದೊಡ್ಡ ಪೇಟೆಯಲ್ಲಿ ಹುಡುಹುಡುಕಿ, ಸಿಕ್ಕಿದ್ದೊಬ್ಬ ಮುದಿಯ ಆಯುರ್ವೇದ ಪಂಡಿತ. ಸುತ್ತ ಬೆಂಚುಗಳಲ್ಲಿ ಭಜಕರಂತೇ ಕುಳಿತಿದ್ದ ರೋಗಿಗಳ ಸಭೆಯ ಕೇಂದ್ರದಲ್ಲಿ ಸಿಂಹಾಸನದಂತೇ ಇದ್ದ ಕುರ್ಚಿಯಲ್ಲಿ ಕುಳಿತಂತೇ ಆತ, ಎದುರಿನ ಬೆಂಚಿನಲ್ಲಿ ಕುಳಿತಂತೇ ನಾನು. ನನ್ನ ಟುಟೀಪುಟೀ ಹಿಂದಿಯಲ್ಲೇ ಆತ ಒಂದು ಮಿನಿಟು ವಿಚಾರಣೆ ನಡೆಸಿದ. ಕೊನೆಯಲ್ಲಿ ಶ್ರೀಮದ್ಗಾಂಭೀರ್ಯದಿಂದ “ಹರೀ ಕಾ ನಾಮ್ ಲೋ. ಸುನಾ ನೈ ಕ್ಯಾ – ತೇನ ವಿನಾ ತೃಣಮಪಿ ನ ಚಲತಿ….” ಪ್ರವಚನಕ್ಕೆ ತೊಡಗಿಕೊಂಡ. ನನಗೆ ರೇಗಿ ಹೋಯ್ತು. ನಾನು ಹಿಂದಿಯೋ ಇಂಗ್ಲೀಷೋ ಗಮನಿಸದೆ ಬೆರಕೆ ಮಾಧ್ಯಮದಲ್ಲಿ “ನನಗಿರುವುದು ಸ್ಪಷ್ಟ ದೈಹಿಕ ಬೇನೆ. ಭಕ್ತಿ ಮಾರ್ಗದಲ್ಲಿ ಗುಣವಾಗುವ ದೈವಿಕ ಬೇನೆಯಲ್ಲ” (ನನ್ನ ಸಮಸ್ಯೆ ಅಧ್ಯಾತ್ಮಮಾರ್ಗದ ಕುಂಡಲಿನೀ ಶಕ್ತಿ ಜಾಗೃತಿಯಲ್ಲ, ಖಾಸಾ ಕುಂಡೆಲೇನೀ ಶಕ್ತಿ ಜಾಗೃತವಾಗಿದೆಯೋ ಅದಕ್ಕೆ ಶಾಂತಿ) ಖಡಕ್ಕಾಗಿ ಹೇಳಿ ಎದ್ದು ನಡೆದೆ.

ಇಷ್ಟರಲ್ಲಿ ದೇವಕಿ ಒಂದು ತತ್ಕಾಲೀನ ದೊಡ್ಡ ಪರಿಹಾರ ಹುಡುಕಿದ್ದಳು. ಅವಳ ಎರಡು ಮಿದು ಶಾಲುಗಳನ್ನು ಸಿಂಬೆ ಸುತ್ತಿ, ನಾನು ಬೈಕೇರುವಾಗ ಊತದ ಜೊಂಪೆ ಸೀಟಿಗೆ ತಗುಲದಂತೆ ಇಟ್ಟು ಕೊಡುತ್ತಿದ್ದಳು. ಇದು ನನ್ನ ಸವಾರಿಗೆ ಬಹಳ ಬಲ ಕೊಟ್ಟಿತು. ನಿಶ್ಚಿಂತೆಯಿಂದ ಸುಮಾರು ಮುನ್ನೂರಕ್ಕೂ ಕಿಮೀ ಮಿಕ್ಕ ವಿಪರೀತ ಏರಿಳಿತದ, ಬಳುಕಾಟದ ದಾರಿಯಲ್ಲಿ ಗೌರಿಕುಂಡ, ಅಂದರೆ ಕೇದಾರನಾಥದ ತಪ್ಪಲು ಮುಟ್ಟಿದೆವು.

ಮರುದಿನ ಬೆಳಿಗ್ಗೆ ನಾವು ವಾಸ್ತವ್ಯ ಮತ್ತು ಬೈಕ್ ಬಿಡಲು ಆಯ್ದುಕೊಂಡಿದ್ದ ಜಿ.ಎಂ.ವಿ.ಎನ್ ಹಾಸ್ಟೆಲ್ಲಿನಲ್ಲಿ ನಾನೊಬ್ಬನೇ ಪೂರ್ಣ ವಿಶ್ರಾಂತಿ ಪಡೆಯುವ ನಿರ್ಧಾರ ಮಾಡಿದೆ. ಯೋಜನೆಯಂತೆ, ದೇವಕಿಯೂ ಸೇರಿದಂತೆ ತಂಡದ ಐದೂ ಮಂದಿಗೆ, ಸುಮಾರು ಹದಿನಾಲ್ಕು ಕಿಮೀ ಕಠಿಣ ಏರಿನ ಕೇದಾರನಾಥಕ್ಕೆ ಹೋಗಿ ಸಂಜೆಗೆ ಮರಳಲು ಒತ್ತಾಯಿಸಿ ಕಳಿಸಿದೆ. ಉಳಿದ ದಿನಗಳಲ್ಲಿ ಪೂರ್ವ ನಿಗದಿತ ವೇಳೆಗೆ ತಂಡ ಹೊರಡಿಸುವ ಗಡಿಬಿಡಿಯಲ್ಲಿ ನನ್ನ ಮಲಶೋಧ ತುಂಬ ತಡಬಡವಾಗುತ್ತಿತ್ತು. ಅಂದು ದಿನವಿಡೀ ನನ್ನದು ಎಂಬ ಮನೋಭಾವದಲ್ಲಿ, ವಿರಾಮದಲ್ಲಿ ನಾನು ಹೊಟ್ಟೆ ಹಗುರ ಮಾಡಿಕೊಂಡೆ. ಮತ್ತೆ ‘ಈಗ ಊತದ ಜೊಂಪೆ ಅಡ್ಡಿಯಿಲ್ಲ’ ಅನ್ನಿಸಿ, ಕೇದಾರದ ಚಪಲಕ್ಕೆ ಬಿದ್ದೆ. ಕೈಗೂಸುಗಳಿಂದ ಮಹಾಮುದಿಯರವರೆಗೆ, ನಡಿಗೆ ಹೇಸರಗತ್ತೆ ಬುಟ್ಟಿ ಪಲ್ಲಕ್ಕಿಗಳ ಪಕ್ಕಾ ಯಾತ್ರಾರ್ಥಿ ಸಾರ್ವಜನಿಕ ಸಂದೋಹದಲ್ಲಿ, ಜೈಕಾರಗಳ ಗದ್ದಲದಲ್ಲಿ ನಿಧಾನಕ್ಕೆ ಸೇರಿಹೋದೆ. ನನ್ನದೇ ಲಯದಲ್ಲಿ ಕೇದಾರದ ಮೆಟ್ಟಿಲ ಎಣಿಕೆ ಶುರು ಮಾಡಿಯೇಬಿಟ್ಟೆ. ಕಾಡು ಕಲ್ಲು ಹಾಕಿ ಬಿಗಿ ಮಾಡಿದ ಜಾಡೋ ಒರಟು ಮೆಟ್ಟಿಲ ಸಾಲೋ ಮೊದಮೊದಲು ಚೆನ್ನಾಗಿಯೇ ಇತ್ತು. ಔನ್ನತ್ಯ ಗಳಿಸುತ್ತಿದ್ದಂತೆ ನಮ್ಮ ಜಾಡುಳಿದು ತುಸು ಆಚೀಚೆ, ಮಣ್ಣು ಕಲಸಿದ ಹಿಮದ ಹೊದಿಕೆಯೂ ಕಾಣಿಸುತ್ತಿತ್ತು. ಆದರೆ ಜತೆಗೇ ಶುಭ್ರಾಕಾಶದಿಂದ ಬೆಳಗುತ್ತಿದ್ದ ಸೂರ್ಯನ ಕಿರಣ ವಾತಾವರಣದ ಶುಷ್ಕತೆಯಿಂದ ಪ್ರಖರವಾಗಿಯೇ ಕುಕ್ಕುತ್ತಿತ್ತು. ಕೆಲವೆಡೆ ಜಾಡು ಜರಿದಲ್ಲಿ, ಕೂಲಿಯಾಳುಗಳು ತತ್ಕಾಲೀನ ರಿಪೇರಿ ಮಾಡುತ್ತಾ ಅಗತ್ಯವಿದ್ದವರಿಗೆ ಸಹಾಯಹಸ್ತ ಕೊಡುತ್ತಾ ದಾಟಿಸುತ್ತಿದ್ದರು. ಅಲ್ಲೆಲ್ಲ ಪುಡಿ ಕಲ್ಲಿನಿಂದ ತೊಡಗಿ ದೊಡ್ಡ ಕುಸಿತಗಳವರೆಗೆ ಯಾರೂ ಏನೂ ಹೇಳುವಂತಿರದುದರಿಂದ ಒಂದೆಡೆ ಹೆಚ್ಚು ಜನ ಸೇರುವುದೂ ಅಪಾಯಕಾರಿಯಿತ್ತು.

ಆ ಕಾಲದಲ್ಲಿ ಯಾವುದೇ ತೀರ್ಥಕ್ಷೇತ್ರಗಳಿಗೆ ಹೆಲಿಕಾಪ್ಟರ್ ಸೇವೆ ಇರಲಿಲ್ಲ. ಹಾಗಾಗಿ ಬಹುತೇಕ ಮಂದಿ ಒಂದು ದಿನ ಮೇಲೇರಿ, ದರ್ಶನ ಮುಗಿಸಿ, ಅಲ್ಲುಳಿದು ಮರುದಿನವಷ್ಟೇ ಮರಳುತ್ತಿದ್ದರು. ಅದರಲ್ಲೂ ಎಷ್ಟೋ ಮಂದಿ ಏರುದಾರಿಗೆ ಹೇಸರಗತ್ತೆಯಾದಿ ಇತರ ಸವಲತ್ತುಗಳನ್ನು ಬಳಸಿದವರು ನಡಿಗೆಯ ‘ಪುಣ್ಯಸಂಪಾದನೆ’ಯನ್ನು ಬಯಸುತ್ತಿದ್ದರು. ಸಹಜವಾಗಿ ಹೊತ್ತೇರುತ್ತಿದ್ದಂತೆ ಎದುರು ಮುಖದ ಸಾರ್ವಜನಿಕ ಪ್ರವಾಹವೂ ಹೆಚ್ಚುತ್ತ ಹೋಯ್ತು. ಹೊಸ ಗಿರಾಕಿ ಹುಡುಕಾಟದಲ್ಲಿ, ಖಾಲೀ ಬಿಟ್ಟ ಸವಾರಿಗಳೊಡನೆ ವೃತ್ತಿಪರರೂ ಸಿಗುತ್ತಿದ್ದರು. ಅವರು ನನ್ನಂತೆ ಅರೆಬರೆ ತಾಕತ್ತಿನಲ್ಲಿ ‘ಸಾಹಸ ನಡಿಗೆ’ ತೊಡಗಿ ಸೋತಂತೆ ತೋರುವವರಿಗೆ ರಿಯಾಯ್ತಿ ದರದ ಆಮಿಷ ಒಡ್ಡುವುದೂ ಇತ್ತು. ಸಹಜವಾಗಿ ಒಂದು ಹಂತದಲ್ಲಿ ನಾನು ಅದೇ ಮೊದಲು ಎನ್ನುವಂತೆ ಒಂದು ಹೇಸರಗತ್ತೆ ಏರಿಯೇಬಿಟ್ಟೆ. ‘ಬಾಣಲೆಯಿಂದ ಬೆಂಕಿಗೆ’ ಎನ್ನುವ ಗಾದೆ ಇಲ್ಲಿ ಚೆನ್ನಾಗಿ ಅನ್ವಯಿಸುತ್ತದೆ. ಕಾಸ್ತಾರ ಕೊಟ್ಟ ಹೆಚ್ಚಿನ ಮೆತ್ತೆ, ನಾನು ಕುಳಿತ ಭಂಗಿ ಯಾವವೂ ನನಗೆ ಹಿತವಾಗಲೇ ಇಲ್ಲ. ಆದರೆ ಪ್ರಗತಿ ಮಾತ್ರ ಬಹಳ ಚುರುಕಾಗಿ, ದೇವಳದ ಬಳಿ ನಾನು ನಮ್ಮ ತಂಡದವರನ್ನು ಸೇರಿಬಿಟ್ಟಿದ್ದೆ. ಹಿಂದಿರುಗುವ ದಾರಿಯಲ್ಲಿ ಮಾತ್ರ ‘ಕೇದಾರನಾಥನಾಣೆಗೂ ಹೇಸರಗತ್ತೆ ಸವಾರಿ ಬೇಡ’ ಎಂಬಷ್ಟಾಗಿತ್ತು. ನೋವಿನ ಪುರಾಣ ವಿಸ್ತರಿಸುವುದಿಲ್ಲ, ಸಂಜೆ ಬೈಕ್ ಬಿಟ್ಟಿದ್ದ ವಾಸಸ್ಥಾನ ಸೇರುವಾಗ ಪೂರ್ಣ ಹೈರಾಣಾಗಿದ್ದೆ.

ತಂಡಕ್ಕೆ ಯೋಜನೆಯಂತೆ ಕೊನೆಯ ಧಾಮ – ಬದರೀನಾಥಕ್ಕೆ, ಮುಂದುವರಿಯಲು ಸೂಚಿಸಿ, ದಾರಿಯಲ್ಲಿ ಕರ್ಣಪ್ರಯಾಗದಲ್ಲಿ ನಾನು ದೇವಕಿಯೂ ಹೋಟೆಲೊಂದರಲ್ಲಿ ವಿಶ್ರಮಿಸಿದೆವು. ಎರಡು ದಿನ ಕಳೆದು ತಂಡ ಮರಳಿದಾಗ ಮತ್ತೆ ದೇವಕಿಯ ಶಾಲಿನ ಸಿಂಬೆಯ ಸಹಾಯದಲ್ಲಿ ಯೋಜನೆಯಂತೇ ದಿಲ್ಲಿಗೆ ಮರಳುವ ಸವಾರಿಗಿಳಿದೇ ಬಿಟ್ಟೆವು. ನೈನಿತಾಲ್, ರಾಮನಗರ್‍ಗಳಲ್ಲಿ ಒಂದೊಂದು ರಾತ್ರಿ ತಂಗಿ, ಅನುಭವಿಸುವುದನ್ನೆಲ್ಲ ಏನೂ ತಪ್ಪಿಸಿಕೊಳ್ಳದೆ ದಿಲ್ಲಿ ಸೇರಿದೆವು. ಮೊದಲೇ ಕಾಯ್ದಿರಿಸಿದ್ದಂತೆ ರೈಲಿನಲ್ಲಿ ನಮ್ಮ ಜತೆಗೇ ಬೈಕುಗಳನ್ನು ಹೇರಿಕೊಂಡು ೪೮ ಗಂಟೆ ಪಯಣಿಸಿ ಮಂಗಳೂರು ಸೇರುವಾಗ ಕತ್ತಲಾಗಿತ್ತು.

ಪರಮ ವೈದ್ಯ ಮಿತ್ರ!

ಮರುದಿನ ಬೆಳಿಗ್ಗೆ ಮೊದಲು ಮಾಡಿದ ಕೆಲಸ ಸಮೀಪದ ವಿನಯಾ ಕ್ಲಿನಿಕ್ಕಿಗೆ ಹೋಗಿ, ಆಪ್ತ ಹಿರಿಯ ಗೆಳೆಯರೂ ವಿವೇಚನಾವಂತ ಶಸ್ತ್ರಚಿಕಿತ್ಸಾ ವೈದ್ಯರೂ ಆದ ಪರಮಾನಂದರಾಯರನ್ನು ಕಂಡೆ. “ಹೋ ಪ್ರಾತಃಕಾಲೇ ಗುದದರ್ಶನ” ಎಂದು ಕೀಟಲೆ ಮಾಡುತ್ತಲೇ ನನ್ನ ಪ್ರವಾಸದ ವಿವರಗಳನ್ನಷ್ಟೇ ಕೇಳುತ್ತ ಚಿಕಿತ್ಸಾ ಕೊಠಡಿಗೆ ಒಯ್ದರು. ಯಾವುದೋ ಮಗ್ಗುಲಿಗೆ ಮಲಗಿಸಿ, ಮೊಣಕಾಲುಗಳನ್ನು ಮಡಚಲು ಹೇಳಿ ಸಮಸ್ಯಾ ಪರೀಕ್ಷೆ ನಡೆಸಿದರು. “ಹೋ ಇಷ್ಟೆಯಾ? ಸರಾಗ ದೀರ್ಘ ಶ್ವಾಸೋಚ್ಛ್ವಾಸ ನಡೆಸುತ್ತಿರಿ…” ಎಂದೇನೋ ಹೇಳುತ್ತ ಐದೇ ಮಿನಿಟಿನ ‘ಮಾಯ’ ಮಾಡಿಬಿಟ್ಟರು. ಕೈಗೆ ವೈದ್ಯಕೀಯ ಗವುಸು ಹಾಕಿ, ಅದೇನೋ ಮುಲಾಮು ಧಾರಾಳ ಸವರಿಕೊಂಡರು. ಅನಂತರ, ಬಹುಶಃ ಅವರ ಐದೂ ಬೆರಳನ್ನು ತುದಿಯಲ್ಲಿ ಉರುಟಾಗಿರುವಂತೆ ಹಿಡಿದು, ನನ್ನ ಊತದ ಜೊಂಪೆಯನ್ನು ಒಟ್ಟುಗೂಡಿಸುತ್ತ, ನಿಧಾನಕ್ಕೆ ಆದರೆ ದೃಢವಾಗಿ, ಅದರದೇ ದ್ವಾರದ ಮೂಲಕ ಒಳ ತಳ್ಳಿಯೇಬಿಟ್ಟರು. ಅಸಾಧ್ಯ ನೋವಿನಲ್ಲಿ ನನಗೆ ದಮ್ಮೇ ಕಟ್ಟಿದಂತಾದ್ದು, ಸಂಕೋಚ ಕಟ್ಟಿನಲ್ಲಿ ಹೂತು ಹೋದಂತ “ಅಯ್ಯೋ ಅಬ್ಬಾ” ಉದ್ಗಾರ ತೆಗೆದದ್ದು ಅವರನ್ನು ವಿಚಲಿತಗೊಳಿಸಲೇ ಇಲ್ಲ. ಕ್ಷಣಾರ್ಧದಲ್ಲಿ ಅಷ್ಟೂ ಜೊಂಪೆಯನ್ನು ಒಳ ಸೇರಿಸಿಬಿಟ್ಟಿದ್ದರು! ನಾನು ಕನಿಷ್ಠ ಹತ್ತು ದಿನಗಳಿಂದ ಸತತ ತಿಂದ ನೋವು, ಅದರ ಹೆದರಿಕೆಯಿಂದ ಸೇವಿಸಿದ ಕನಿಷ್ಠ ಆಹಾರದ ಬಳಲಿಕೆ ಇತ್ಯಾದಿಗಳೆಲ್ಲ ಅನಾವಶ್ಯಕ ಎನ್ನುವಷ್ಟು ಸರಳವಾಗಿ ಅವರು ಕೆಲಸ ಮುಗಿಸಿದ್ದರು. ನಾನು ದೊಡ್ಡ ಉಸಿರು ಬಿಟ್ಟು, ಸಂತೋಷವನ್ನು ಅಲ್ಲೇ ಹತ್ತು ಮಿನಿಟು ಕಾಲು ಚಾಚಿ ಬಿದ್ದುಕೊಂಡು ಅನುಭವಿಸುವವನಿದ್ದೆ. ಪರಮಾನಂದ ರಾಯರ ಹಾಸ್ಯ ಬಿಡಲಿಲ್ಲ “ಏ ಬೇಗ ಬಟ್ಟೆ ಸರಿ ಮಾಡಿಕೊಂಡು ಹೊರಗೆ ಓಡಿ. ಇಲ್ಲವಾದರೆ ಮಿನಿಟುಗಳ ಲೆಕ್ಕದಲ್ಲಿ ಓಟಿ ಬಿಲ್ಲ್ ಹೆಚ್ಚಾಗುತ್ತೆ!”

ಇದು ಅಂತರ್ಜಾಲದಿಂದ ತೆಗೆದ ಒಂದು ಮಾದರಿ ಮಾತ್ರ

ಡಾ| ಪರಮಾನಂದ ರಾವ್ ಅಷ್ಟೇನೂ ಎತ್ತರವಲ್ಲದ ಆದರೆ ಗಟ್ಟಿಯಾಳು, ಹಿಟ್ಲರ್ ಮೀಸೆ, ಬಿಗು ದವಡೆ – ಆಂತರ್ಯ ತಿಳಿಯದವರಿಗೆ ಕಠೋರಮುಖ. ಇವರು ನನ್ನಂಗಡಿಯ ಒಳ ಬರುವಾಗ, ಹೊರಹೋಗುವಾಗ ನಮ್ಮೊಳಗಿನ ಕಣ್ಣಿನ ಮಿನುಗು ಗುರುತಿಸದ ಮೂರನೆಯವರು, ಯಾರೋ ಹೊಸಬರಿರಬೇಕು ಎಂದೇ ತಿಳಿಯುವಂತ ವರ್ತನೆ. ನಾನು ಗಟ್ಟಿಯಾಗಿ ಥ್ಯಾಂಕ್ಸ್ ಹೇಳಿದರೆ ಮೋಹಕ ಕಿರು ನಗೆಯಷ್ಟೇ ಅವರ ತುಟಿಯಲ್ಲಿ ಸುಳಿದೀತು. ಅವರು ಅವರೆರಡೂ ಮಗಳಂದಿರೂ ಹೆಚ್ಚೇನು, ಅವರ ಸಂಬಂಧದ ಬಹುಮಂದಿಯೂ (ಅವರ ಒಬ್ಬ ಮಗಳ ಚಿಕ್ಕಮಗಳೂರಿನ ಮಾವಂದಿರೂ) ಬಹುದೊಡ್ಡ ಪುಸ್ತಕಪ್ರೇಮಿಗಳು, ಸಹಜವಾಗಿ ನನ್ನ ದೊಡ್ಡ ಗಿರಾಕಿಗಳೇ. ಅವೆಲ್ಲದರ ಅರಿವಿದ್ದು ನಾನೇನಾದರೂ ಬಿಲ್ಲಿನಲ್ಲಿ ಸಾಂಕೇತಿಕ ರಿಯಾಯಿತಿ ಕೊಟ್ಟರೆ, ಪರಮಾನಂದರಾಯರು ಜೋರು ಮಾಡಿ ತೆಗೆಸಿ ಹೇಳುತ್ತಿದ್ದರು, “ಅದು ನಿಮ್ಮ ಹಕ್ಕು”. ಅವರ ಬಳಗದಲ್ಲಿ ಯಾರಿಗೂ ‘ತಾವು ವ್ಯಾಪಾರ ಕೊಟ್ಟವರು’ ಎಂಬ ಹಮ್ಮು ಇರುತ್ತಿರಲಿಲ್ಲ, ‘ತಮ್ಮ ಒಲವಿನ ಪುಸ್ತಕ ಸಿಕ್ಕಿದ ಸಂತೋಷ’ ಮಾತ್ರ ಧಾರಾಳ ಕಾಣುತ್ತಿತ್ತು. ಒಂದು ಕಾಲದಲ್ಲಿ ಇವರು ಮಣಿಪಾಲ/ ಮಂಗಳೂರು ಕೆ.ಎಂ.ಸಿಯ ಪರಿಣತ ವೈದ್ಯ, ಮತ್ತಲ್ಲಿನ ಶಸ್ತ್ರಚಿಕಿತ್ಸಾ ವಿಭಾಗದ ಹಿರಿಯ ಪ್ರಾಧ್ಯಾಪಕ. ಸತ್ಯನಿಷ್ಠುರಿ, ಎಲ್ಲಕ್ಕೂ ಮಿಕ್ಕು ಬಹುದೊಡ್ಡ ಮಾನವತಾವಾದಿಯಾಗಿ ಇವರಿಗೆ ವ್ಯವಸ್ಥೆಯೊಡನೆ ಅದೇನು ಸಂಘರ್ಷ ಬಂತೋ ನನಗೆ ತಿಳಿದಿಲ್ಲ, ಬಂಡಾಯಗಾರನಾಗಿ, ಸ್ವಯಂ ನಿವೃತ್ತರಾಗಿ ಮಂಗಳೂರಿನಲ್ಲಿ ಖಾಸಗಿ ವೈದ್ಯಕೀಯ ಸೇವೆಗೆ ನೆಲೆ ನಿಂತರೆಂದು ಕೇಳಿ ತಿಳಿದಿದ್ದೆ.

ಪತ್ನಿ ವೃಂದಾರಾವ್ ಜತೆ ಕೆ.ಪಿ.ರಾವ್

ಶರವು ಗಣಪತಿ ದೇವಳದ ಸಮೀಪ ಇವರು ತನ್ನದೇ ರೋಗಿ ಸಂದರ್ಶನ ‘ಮಳಿಗೆ’ ಇಟ್ಟುಕೊಂಡಿದ್ದರು. ಆದರೆ ಖಯಾಲಿಯಲ್ಲಿ, ಬಹುತೇಕ ಸಮಯವನ್ನು ನನ್ನ ಮನೆಯ ಸಮೀಪದ ವಿನಯಾ ಕ್ಲಿನಿಕ್ ಆಸ್ಪತ್ರೆಯಲ್ಲೆ ಕಳೆಯುತ್ತಿದ್ದಂತಿತ್ತು. ವಿನಯಾದ ಆಡಳಿತ ಮುಖ್ಯ ಹಾಗೂ ಹಲವು ವೈದ್ಯರೊಡನಿದ್ದ ಗೆಳೆತನ ಮತ್ತು ಇವರ ಸಾಮಾಜಿಕ ಕಾಳಜಿಗೆ, ಬಹುಶಃ ಇಲ್ಲಿ ಸಾಂತ್ವನ ಸಿಕ್ಕುತ್ತಿದ್ದಂತಿತ್ತು. ಆಸ್ಪತ್ರೆ ಖಾಸಗಿಯದ್ದೇ ಆದರೂ ಇವರು ಎಷ್ಟೋ ಕೇವಲ ಖಾಯಿಲ ಮನಸ್ಕ ಮಂದಿಗೆ ‘ಬಿಟ್ಟಿ ಸಲಹೆ’ಯನ್ನಷ್ಟೇ ಕೊಟ್ಟು ಗುಣಪಡಿಸುವುದರಲ್ಲಿ ಸಂತೋಷ ಕಾಣುತ್ತಿದ್ದರು. ತನ್ನ ಪರಿಣತಿಗೆ (ಶಸ್ತ್ರಚಿಕಿತ್ಸೆ) ಅನಾವಶ್ಯಕ ರೋಗಿಗಳನ್ನು ಒಳಪಡಿಸುವುದಾಗಲೀ ನಾವು ಮಾಮೂಲು ಕೇಳುವ ‘ಔಷಧ ಉದ್ದಿಮೆ’ಯ ವಿಷಜಾಲದಲ್ಲಿ ತಾನೊಂದು ‘ಹೀರುವಹುಳು’ ಆಗುವುದನ್ನಾಗಲೀ (ಕಮಿಶನ್ ಆಸೆಗೆ ಹತ್ತೆಂಟು ದುಬಾರಿ ಪರೀಕ್ಷೆ ಮತ್ತು ಅನಾವಶ್ಯಕ ಔಷಧಗಳನ್ನು ಶಿಫಾರಸು ಮಾಡುವುದು) ಮಾಡುತ್ತಿರಲಿಲ್ಲ, ಎಲ್ಲೂ ಇತರರ ಮುಖದಾಕ್ಷಿಣ್ಯ ನೋಡದೆ ಕಠೋರವಾಗಿ ವಿರೋಧಿಸುತ್ತಿದ್ದರು. ಅಂಥಾ ಒಂದನ್ನು ಮಾತ್ರ ಇಲ್ಲಿ ಉಲ್ಲೇಖಿಸುತ್ತೇನೆ. ನನಗೊಬ್ಬ ಕೊಡವ ತರುಣ ಗೆಳೆಯನಿದ್ದ. ಮಂಗಳೂರಿನಲ್ಲಿ ಒಂಟಿಯಾಗಿದ್ದ ಆತ, ಅನಿವಾರ್ಯವಾಗಿ ಹೋಟೆಲ್ ಆಹಾರ ತಿನ್ನಬೇಕಿತ್ತು. ಇದರಿಂದ ತಾನು ತೀವ್ರ ಜೀರ್ಣ ಸಂಬಂಧೀ ಅವ್ಯವಸ್ಥೆಗಳಿಂದ ನರಳುತ್ತಿದ್ದೇನೆ ಎಂದೇ ಆತ ಹಲವು ಬಾರಿ ಪರಮಾನಂದ ರಾಯರಿಗೆ ತಗುಲುತ್ತಲೇ ಇದ್ದ. ಬಹುಶಃ ಅವರು ಆತನಲ್ಲಿ ಅಷ್ಟೇನೂ ಗಂಭೀರ ದೈಹಿಕ ಸಮಸ್ಯೆ ಕಂಡಂತಿರಲಿಲ್ಲ. ಸಹಜವಾಗಿ ಮದ್ದು, ತೀವ್ರ ಚಿಕಿತ್ಸೆಗಳನ್ನೆಲ್ಲ ನಿರಾಕರಿಸಿದಂತೇ ಕಾಣುತ್ತಿತ್ತು. ಆದರೆ ಆತನ ಓದು, ತಿಳುವಳಿಕೆಗಳನ್ನು ಮೆಚ್ಚಿದ ರಾಯರು, ಆತನ ಖಾಯಿಲ ಮನಸ್ಕ ಸ್ವಭಾವಕ್ಕೆ ತಕ್ಕಂತೆ ಹೆಚ್ಚು ಮಾತುಕತೆ ನಡೆಸಿ, ಓಡಿಸಿ ಬಿಡುತ್ತಿದ್ದರು! ಕನಿಷ್ಠ ಸಂದರ್ಶನ ಶುಲ್ಕವನ್ನೂ ಪಡೆಯುತ್ತಿರಲಿಲ್ಲ. (ಆ ತರುಣ ಮುಂದೊಂದು ದಿನ ಸಹಜವಾಗಿ ಊರಿಗೆ ಮರಳಿ, ಆರೋಗ್ಯಪೂರ್ಣವಾಗಿಯೇ ನೆಲೆಯಾದ. ಆದರೆ ಆತನ ನಿರೀಕ್ಷೆಯಂತೆ ಮತ್ತು ನನ್ನ ತಿಳುವಳಿಕೆಯಂತೆ, ಎಂದೂ ಪರಮಾನಂದರಾಯರ ‘ಚಿಕಿತ್ಸಾಚೂರಿ’ ಆತನನ್ನು ಸೋಂಕಲೇ ಇಲ್ಲ!)

ಭಾರತ ಬೈಕ್ ಯಾತ್ರೆಯ ಕೊನೆಯ ನನ್ನ ಸಂಕಟವನ್ನು ಪರಮಾನಂದರಾಯರು ಒಮ್ಮೆಗೆ ಕ್ಷಣಾರ್ಧದಲ್ಲೇನೋ ನಿವಾರಿಸಿದ್ದರು. ಅದು ಯಾಕೆ ಬಂತೆಂದು ಕಾರಣ ವಿಚಾರಿಸಿದಾಗ, ಹಗುರವಾಗಿ ಹೀಗೇನೋ ಹೇಳಿದ್ದರು – ‘ನಿರಂತರ ಪ್ರಯಾಣದ ಬಳಲಿಕೆ, ಅದರೊಡನೆ ಆತಂಕಿತವಾದ ಮಲಶೋಧ, ದಿಲ್ಲಿಯ ಅಜೀರ್ಣಗಳ ಪರಿಣಾಮವಿರಬಹುದು. ಅಂಥ ಸಮಯಗಳಲ್ಲಿ ಆ ವಲಯದಲ್ಲಿ ರಕ್ತ ಸಂಚಾರ ಹೆಚ್ಚುವಂತೆ ನೋಡಿಕೊಳ್ಳುವುದು ಉತ್ತಮ. ಸದ್ಯ ವಾರ-ಹತ್ತು ದಿನ, ದಿನಕ್ಕೊಂದೆರಡು ಬಾರಿ, ಬಿಸಿನೀರ (ನಿತ್ಯ ಸ್ನಾನದಲ್ಲಿ ನಮ್ಮ ದೇಹ ತಡೆಯುವಷ್ಟೇ ಬಿಸಿ, ಕುದಿನೀರಲ್ಲ!) ತೊಟ್ಟಿಯಲ್ಲಿ ಕಾಲು-ಅರ್ಧ ಗಂಟೆ ಅಂಡು ಮುಳುಗಿಸಿಡಿ. (ಗಂಗೋತ್ರಿಯಲ್ಲಿ ನಾನು ವ್ಯತಿರಿಕ್ತ ಚಿಕಿತ್ಸೆ – ಉರಿ ತಗ್ಗಿಸುವ ಭ್ರಮೆಯಲ್ಲಿ ಹಿಮ ಕರಗಿದ ನೀರಿನ ಧಾರೆ ಹರಿಸಿದ್ದು ನೆನಪಾಗದಿರಲಿಲ್ಲ.) ಆಹಾರಸೇವನೆಯ ಶಿಸ್ತನ್ನು ಹೆಚ್ಚು ಪ್ರಾಕೃತಿಕ ತತ್ತ್ವಗಳಿಗೆ ಹೊಂದಿಸಿಕೊಂಡು (ನಾರು, ಮೊಳಕೆ, ಸೊಪ್ಪು ಇತ್ಯಾದಿ) ಮಲಬದ್ಧತೆಯನ್ನು ಔಷಧರಹಿತವಾಗಿ ನಿವಾರಿಸಿ.’ ತತ್ಕಾಲೀನ ಸಹಾಯಕ್ಕೆ ಒಂದು ಮುಲಾಮನ್ನೂ ಬರೆದುಕೊಟ್ಟರು. ಆದರೆ ಖಡಕ್ಕಾಗಿ “ಖಾಯಂ ಬಳಸಬೇಡಿ ಮತ್ತು ಎಂದೂ ಒಳಕ್ಕೆ ತುಂಬಬೇಡಿ” ಎಂದು ಹೇಳಿಯೇ ಕಳಿಸಿದ್ದರು.

ಮುಂದೆಯೂ ನನ್ನ ‘ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟ್’ – ಮಲಬದ್ಧತೆ, ಕಾಡುತ್ತಲೇ ಇತ್ತು. ಆಪ್ತವರ್ಗದಿಂದ ಬಾಳೆ ಮುಖ್ಯವಾಗಿ ಹಣ್ಣುಗಳು, ವಿವಿಧ ನಮೂನೆಯ ಧಾನ್ಯ, ಸೊಪ್ಪು, ಇಸಬ್ಗೋಲ್‍ನಂಥ ತೌಡುಗಳು, ಹರಳೆಣ್ಣೆ, ಬಿಸಿ ಹಾಲು, ಧಾರಾಳ ನೀರು, ಯೋಗ…. ಎಂದಿತ್ಯಾದಿ ಬಿಟ್ಟಿ ಜನಪದ, ಅನುಭವ ವೈದ್ಯ ಸಲಹೆಗಳು ಧಾರಾಳ ಸಿಗುತ್ತಿದ್ದವು. ನಾನು ನನ್ನ ವೃತ್ತಿ, ಹವ್ಯಾಸಗಳಿಗೆ ಬಾಧೆಯಾಗದಂತೆ ಕೆಲವನ್ನು ಕೆಲವು ಸಮಯ ಪ್ರಯೋಗಿಸಿದ್ದೂ ಇತ್ತು. ಆದರೆ ‘ಮಾಂತ್ರಿಕ ಗುಣ’ಗಳನ್ನೇ ಪತ್ರಿಕಾ ಜಾಹೀರಾತು ಮತ್ತು ಗಲ್ಲಿದಾರಿಗಳಲ್ಲೂ ಹೇಳಿಕೊಳ್ಳುತ್ತಿದ್ದ ಅಸಂಖ್ಯ ಮಾತ್ರೆ (ಉದಾ: ಹೆಡೆಂಜಾ), ಮುಲಾಮುಗಳನ್ನು (ಉದಾ: ಜಾಲಿಮ ಲೋಶನ್) ಒಮ್ಮೆಯೂ ಪ್ರಯೋಗಿಸಿ ನೋಡಿದ್ದಿಲ್ಲ.

ಅದೊಂದು ಸಾಹಸಯಾನದ ಕೊನೆಯಲ್ಲಿ ನನ್ನ ಸಮಸ್ಯೆ ಇನ್ನೊಮ್ಮೆ ವ್ಯಗ್ರವಾಯ್ತು. ಆಗ ಮತ್ತೆ ಪರಮಾನಂದ ರಾಯರಿಗೆ ‘ಪ್ರಾತಃಕಾಲೇ ಗುದದರ್ಶನ’ ಕೊಟ್ಟೆ. ಕಳೆದ ಸುಮಾರು ಎರಡು ವರ್ಷಗಳಲ್ಲಿ ಅದರಿಂದ ನಾನು ಅನುಭವಿಸಿದ ಹಿಂಸೆಯ ಅರಿವಿನಲ್ಲಿ ಅವರು ಶಸ್ತ್ರಚಿಕಿತ್ಸೆಯನ್ನೇನೋ ಶಿಫಾರಸು ಮಾಡಿದರು. ಆದರೆ ಚಾಲ್ತಿಯಲ್ಲಿದ್ದ ಅತಿಶೀತ, ರಾಸಾಯನಿಕ ಪ್ರಯೋಗವೇ ಮೊದಲಾದ ಪ್ರಮಾಣೀಕೃತ ಪರ್ಯಾಯ ಚಿಕಿತ್ಸೆಗಳನ್ನು (ಅವರು ಮಾಡುತ್ತಿರಲಿಲ್ಲ) ವಿವರಿಸಿ, ಬೇಕಾದರೆ ಯೋಚಿಸಿ ಬರಲು ಅವಕಾಶ ಕೊಟ್ಟಿದ್ದರು. ನಾನು ಅವರ ಪರಿಣತಿಯನ್ನೇ ಗಟ್ಟಿಯಾಗಿ ನೆಚ್ಚಿದೆ. ಶಸ್ತ್ರ ಚಿಕಿತ್ಸೆಗನುಕೂಲವಾಗಿ ನಾನು ಬೆಳಗ್ಗಿನಿಂದ ತೊಟ್ಟು ನೀರನ್ನೂ ಕುಡಿದಿರಲಿಲ್ಲವಾದ್ದರಿಂದ ಅವರು ಕ್ರಮದಂತೆ, ಕೂಡಲೇ ಶಸ್ತ್ರಚಿಕಿತ್ಸೆಯನ್ನು ಮಾಡಿದರು. ಇಲ್ಲಿ ಅನಿವಾರ್ಯವಾಗಿ ನಾನೊಂದು ಸಣ್ಣ ಉಪಕಥೆ ಹೇಳಲೇಬೇಕು.

ಟಿಕೆಟ್ ಸಿಗಲಿಲ್ಲವೇ?

ಆ ದಿನಗಳಲ್ಲಿ ಮೈಸೂರಿನಿಂದಿಳಿದು ಬಂದ ನನ್ನಮ್ಮ, ಕೆಲವು ಸಮಾನಾಸಕ್ತರೊಡನೆ ಸಿಕ್ಕ ಬಸ್ಸುಗಳಲ್ಲಿ ದಕ ಜಿಲ್ಲೆಯೊಳಗೇ ತೀರ್ಥಕ್ಷೇತ್ರ ಸಂದರ್ಶನ ನಡೆಸಿದ್ದಳು. ಅವರು ಧರ್ಮಸ್ಥಳ ಮುಗಿಸಿ ಹೊರಡುವ ಕಾಲದಲ್ಲಿ ಸಮೀಪದಲ್ಲೇ ಘಟ್ಟದ ನೇರ ತಪ್ಪಲಲ್ಲೆಲ್ಲೋ ಪುಡಾರಿ ದೇವೇಗೌಡರ ‘ಮಹಾಯಜ್ಞ’ ನಡೆಯುತ್ತಿರುವ ಸುದ್ಧಿ ಸಿಕ್ಕಿತ್ತು. ಜತೆಗೇ ಬಾಡಿಗೆ ಜೀಪು, ವ್ಯಾನ್ ಸರ್ವಿಸುಗಳು ಜನ ಗಿಡಿದು ತುಂಬಿ ಅತ್ತಲೇ ಹೋಗುತ್ತಿರುವುದೂ ತಿಳಿಯಿತು. ಇವರ ತಂಡವೂ ಒಂದು ವ್ಯಾನ್ ಹತ್ತಿಯೇಬಿಟ್ಟಿತು. ಆದರೆ ಇವರ ವ್ಯಾನ್ ಯಜ್ಞಶಾಲೆಯ ಸಮೀಪದಲ್ಲೆಲ್ಲೋ ಕಚ್ಚಾ ಮಾರ್ಗದಲ್ಲಿ ಹೂತೋ ಜಾರಿಯೋ ನಿಧಾನಕ್ಕೆ ಒಂದು ಪಲ್ಟಿ ಹೊಡೆದು ಬಿತ್ತು. ಅದೃಷ್ಟವಶಾತ್ ಇವರು ಯಾರಿಗೂ ತರಚಲು ಗಾಯವೂ ಇಲ್ಲದೇ ಪಾರಾದ್ದರಿಂದ ಎಲ್ಲ ಅನ್ಯ ವಾಹನಗಳಲ್ಲಿ ಅವರವರ ಊರು, ಮನೆಗಳಿಗೆ ವಾಪಾಸು ಹೊರಟಿದ್ದರು. ಆ ಅಪಘಾತದ ಸುದ್ಧಿ ತಿಳಿಸಿ, ತಮ್ಮ ಕ್ಷೇಮವಾರ್ತೆ ಮುಟ್ಟಿಸಲು ಅಲ್ಲೆಲ್ಲಿಂದಲೋ ಅಮ್ಮ ನನ್ನಂಗಡಿಗೆ ದೂರವಾಣಿಸಿದ್ದಳು (ಅದು ಕಾಯಿನ್ ಫೋನಿನ ಕಾಲ, ಚರವಾಣಿಯದ್ದಲ್ಲ). ಆಗ ನನ್ನ ಬದಲಿಗೆ ಅಂಗಡಿ ನೋಡಿಕೊಳ್ಳುತ್ತಿದ್ದ ದೇವಕಿ, ನನ್ನ ಶಸ್ತ್ರ ಚಿಕಿತ್ಸೆಯ ಸುದ್ಧಿ ಮುಟ್ಟಿಸಿದಳು. ಸಹಜವಾಗಿ ಅಮ್ಮನಿಗೆ ತೀವ್ರ ಆತಂಕವಾದರೂ ಬೆಳ್ತಂಗಡಿಯ ದೂರದಿಂದ ಬಸ್ ಪ್ರಯಾಣದ ವಿಳಂಬವನ್ನು ಸಹಿಸಿಕೊಳ್ಳಲೇಬೇಕಾಯ್ತು. ಬಸ್ಸಿಳಿದವಳೇ ವಿಶ್ರಾಂತಿ, ಬಾಯಾರಿಕೆಯನ್ನೂ ಯೋಚಿಸದೇ ವಿನಯಾ ಕ್ಲಿನಿಕ್ಕಿಗೆ ಧಾವಿಸಿ ಬಂದಳಂತೆ. ನನ್ನ ಶಸ್ತ್ರಕ್ರಿಯೆ ಮುಗಿಸಿ, ಚೇತರಿಕೆ ಕೋಣೆಗೆ ಬಿಟ್ಟು, ಹೊರಬಂದ ಪರಮಾನಂದರಾಯರೇ ಅಮ್ಮನನ್ನು ಸ್ವಾಗತಿಸುವಂತಾದ್ದು ಒಂದು ಆಕಸ್ಮಿಕ. ಈ ಪುಣ್ಯಾತ್ಮ ಕೇಳಿದ್ದಾದರೂ ಏನು “ಓ, ನಿಮಗೆ ಟಿಕೆಟ್ ಸಿಕ್ಕಲಿಲ್ಲವಾ?” ಅಮ್ಮ ಒಂದು ಕ್ಷಣ ಗಲಿಬಿಲಿಗೊಂಡಳು. ಮತ್ತೆ ಜತೆಗೊಟ್ಟ ರಾಯರ ತುಂಟ ನಗೆ ಕಂಡು, ಪ್ರಯಾಣದುದ್ದಕ್ಕೆ ಹೊತ್ತು ತಂದ ಆತಂಕ ಹಾರಿಹೋಗುವಂತೆ ನಕ್ಕಳು. ವ್ಯಾನ್ ಮಗುಚಿಯೂ ತಾವು ಸಾಯದುಳಿದದ್ದನ್ನು ಅವರು ಲಘುಧಾಟಿಯಲ್ಲಿ ವಿಚಾರಿಸಿದ್ದು ಅಮ್ಮನಿಗೆ ಕುಶಿ ಕೊಟ್ಟಿತ್ತು. ತಮ್ಮ ತಂಡ ನಿರಪಾಯವಾಗಿ ಬಂದ ಕತೆಯನ್ನು ಅವರಿಗೆ ಅಮ್ಮ ವಿವರದಲ್ಲಿ ಹೇಳುತ್ತ ಹಗುರಾದಳು. ಅನಂತರ ರಾಯರು ಅಷ್ಟೇ ಹಗುರಾಗುವಂತೆ ನನ್ನ ಆರೋಗ್ಯದ ವಿಚಾರವನ್ನು ಆಕೆಗೆ ತಿಳಿಸಿ, ಇನ್ನೂ ಸ್ವಯ ಬಾರದ ನನ್ನನ್ನು ನೋಡಲೂ ಬಿಟ್ಟಿದ್ದರು. (ಅಮ್ಮ ಈ ಪ್ರಸಂಗವನ್ನು ಕೊನೆಗಾಲದಲ್ಲಿ ನೆನೆಸುತ್ತ “ಟಿಕೆಟ್ ಸಿಕ್ಕಿದೆ, ಗಾಡಿ ಬರಲಿಲ್ಲ” ಎಂದು ಹೇಳುತ್ತಲೇ ಇದ್ದಳು. ಹೆಚ್ಚಿನ ವಿವರಗಳಿಗೆ ನೋಡಿ: ಅಮ್ಮನ ವಿದಾಯದೊಡನೆ ಉಕ್ಕಿದ ನುಡಿಗಳು)

ಕೆ.ಪಿ. ರಾವ್, ಜತೆಗೆ ಎರಡನೇ ಮಗಳು ಅರುಣ

ಅದೇ ಸಂದರ್ಭದಲ್ಲಿ, ಅಮ್ಮ ಪರಮಾನಂದ ರಾಯರೊಡನಿದ್ದ ಸಲಿಗೆಯಲ್ಲಿ, ತನ್ನ ಕೈಚೀಲದಲ್ಲಿದ್ದ ಯಾವುದೋ ಒಂದು ನೋವು ನಿವಾರಕ ಮಾತ್ರೆಯನ್ನು ತೆಗೆದು ತೋರಿಸಿದಳಂತೆ. “ಇದು ಬೆನ್ನು ನೋವಿಗೆ ಒಳ್ಳೆಯದಾ? ಅಥವಾ……?” ರಾಯರ ವಿಚಾರಪ್ರಜ್ಞೆ ಕೂಡಲೇ ಚುರುಕಾಯ್ತು. ಮೈಸೂರಿನ ಯಾರೋ ವೈದ್ಯೋದ್ಯಮಿ ಕೊಟ್ಟ ದುಬಾರಿ ಮಾತ್ರೆಯನ್ನು ದುರುಗುಟ್ಟಿ ನೋಡಿ “ಓ ಇದಾ! ಇದರ ಜತೆ ಆ ಡಾಕ್ಟ್ರೂ ಇನ್ನೇನೂ ಕೊಡಲಿಲ್ಲವಾ?” ಕೇಳಿದರು. ಅಮ್ಮ ತುಸು ಸಂಕೋಚದಲ್ಲಿ “ಹೌದು, ಇನ್ನೊಂದು ಕೊಟ್ಟಿದ್ದಾರೆ….” ಎನ್ನುತ್ತ, ಚೀಲದಾಳದಿಂದ ಮೆಲ್ಲನೆ ಇನ್ನೊಂದನ್ನು ತೆಗೆದು ರಾಯರ ಕೈಗಿತ್ತಳು. ರಾಯರ ಹುಬ್ಬು ಗಂಟು ಹಾಕಿತ್ತು. “ಮತ್ತಿದರ ಸೈಡ್ ಇಫೆಕ್ಟ್ ತೆಗೆಯಲು ಆ ಖಳ್ಳ ಇನ್ನೊಂದು ಕೊಟ್ಟಿರಬೇಕಲ್ಲಾ…” ಎಂದು ಮುಗಿಸುವುದರೊಳಗೇ ಅಮ್ಮ ಪೂರ್ತಿ ಸೋತವಳಂತೆ ಮೂರನೇ ಮಾತ್ರೆಯನ್ನೂ ಒಪ್ಪಿಸಿದಳು. ರಾಯರು ಸಾವರಿಸಿಕೊಂಡು, “ಇವೆಲ್ಲ ವಿಷಜಾಲ, ಕಸಕ್ಕೆ ಹಾಕಿ. ಮದ್ದು ಯಾವುದೂ ಬೇಡ. ವಿಶ್ರಾಂತಿ ಕೊಡಿ, ಶಾಖ ಕೊಡಿ, ಬೇಕಾದರೆ ಮನೆಯಲ್ಲೇ ಬೆನ್ನು ನೀವಿಸಿಕೊಳ್ಳಿ, ನೋವು ಸಹಜವಾಗಿ ಗುಣವಾಗುತ್ತದೆ!” ಈ ಕಥನಾರಂಭದಲ್ಲಿ ಹೇಳಿದ, ನನ್ನ ತಿಂಗಳ ಕಾಲದ ಬೈಕ್ ಯಾತ್ರೆಯ ಸಮಯದಲ್ಲಿ ಅಂಗಡಿಯನ್ನು ಸಂತೋಷದಲ್ಲಿ ನಡೆಸಿದವರು ನನ್ನ ತಂದೆ. ಅವರಿಗೋ ಸುಮಾರು ಮೂರು ದಶಕಗಳ ಹಿಂದೆ (೧೯೫೩ ರಿಂದ ೧೯೬೨), ತಾನು ಮಡಿಕೇರಿ ಸರಕಾರೀ ಕಾಲೇಜಿನ ಗಣಿತೋಪನ್ಯಾಸಕನಾಗಿದ್ದುಕೊಂಡು, ಸೊನ್ನೆ ಬಂಡವಾಳದಿಂದ ಹುಟ್ಟು ಹಾಕಿ, ಬಹು ಲಕ್ಷದ ಮಾಲು ಮತ್ತು ನಿರಖು ಠೇವಣಿಗಳ ಮಟ್ಟಕ್ಕೆ ಬೆಳೆಸಿದ ಕಾಲೇಜಿನ ಸಹಕಾರೀ ಸರ್ವ ಸರಕಿನ ಮಳಿಗೆಯನ್ನು ಕಟ್ಟಿದ ಉತ್ಸಾಹದ್ದೇ ಆವಾಹನೆಯಾದಂತಿತ್ತು. (ನೋಡಿ: ಸಹಕಾರದಲ್ಲಿ ಒಂದು ಪ್ರಯೋಗ ) ಆಗ ಎಂದಿನಂತೇ ಅಂಗಡಿಗೆ ಬಂದಿದ್ದ ಪರಮಾನಂದ ರಾಯರ ಪರಿಚಯ ತಂದೆಗಾಗಿತ್ತು. ರಾಯರು ಮೇಲೆ ಬಿದ್ದು ಮಾತಾಡುವವರಲ್ಲ. ಆದರೆ ಯಾರದೇ ಆಸಕ್ತಿಯನ್ನು ಪ್ರಚೋದಿಸಿ, ತನ್ನ ಅಪಾರ ಓದು ಮತ್ತು ಲೋಕಾನುಭವದ ಬಲದಲ್ಲಿ, ಅವರು ಬಯಸಿ ಬಂದ ಪುಸ್ತಕಗಳ ಮೇಲೆ ಮತ್ತಷ್ಟು ಯುಕ್ತ ಪುಸ್ತಕಗಳನ್ನೇ ಹಿಡಿಸಬಲ್ಲ ತಂದೆಯ ಮಾತುಗಾರಿಕೆಯ ಸೆಳವಿಗೆ ಸಿಕ್ಕಿಕೊಂಡರು. ಮತ್ತೆ ಸಮಾನ ಗುಣಧರ್ಮಗಳನ್ನು ಹೆಚ್ಚೆಚ್ಚು ಗುರುತಿಸಿಕೊಂಡಂತೆ ಇವರ ಪರಿಚಯ ಆತ್ಮೀಯ ಗೆಳೆತನಕ್ಕೇ ಬೆಳೆದಿತ್ತು. ಬಹುಶಃ ಆ ಅವಧಿಯಲ್ಲೇ, ರಾಯರು ಒಂದು ಆದಿತ್ಯವಾರದಂದು ತಂದೆಯೊಡನೆ ಬರಿಯ ಪಟ್ಟಾಂಗಕ್ಕಾಗಿ ನಮ್ಮನೆಗೂ ಬಂದದ್ದಿರಬೇಕು! ನಾನು ಯಾತ್ರೆ ಮುಗಿಸಿ ಬಂದ ಮೇಲೆ ತಂದೆ ಸ್ವಂತ ಕಾರ್ಯಕ್ಷೇತ್ರ ಮೈಸೂರಿಗೆ ಮರಳಿದರೂ ನೆಪ ಸಿಕ್ಕಾಗ ರಾಯರೊಡನೆ ಪತ್ರವ್ಯವಹಾರ, ನನಗೆ ಫೋನಿಸಿದಾಗೆಲ್ಲ ಅವರ ಕುರಿತೊಂದು ವಿಚಾರಣೆ ಇಲ್ಲದಿರುತ್ತಿರಲಿಲ್ಲ. ಹಾಗೇ ಕೌಟುಂಬಿಕ ಕಲಾಪಗಳಿಗೆ ಇತ್ತ ಬಂದಾಗಂತೂ ವಿನಯಾ ಕ್ಲಿನಿಕ್ಕಿಗೆ ಹೋಗಿ, ಅವರೊಡನೆ ನಾಲ್ಕು ಮಾತಾದರೂ ಆಡದಿದ್ದರೆ ಇಬ್ಬರಿಗೂ ತೃಪ್ತಿಯೇ ಆಗುತ್ತಿರಲಿಲ್ಲ. ಹೀಗಿರುತ್ತಿರಲೊಂದು ದಿನ…….

ಮೈಸೂರಿನಲ್ಲೇ ಇದ್ದ ತಂದೆಗೆ ಹರ್ನಿಯಾ ತೊಂದರೆ ಕಾಣಿಸಿತ್ತು, ಶಸ್ತ್ರ ಚಿಕಿತ್ಸೆ ಅನಿವಾರ್ಯ ಎನ್ನುವ ಮಾತೂ ಬಂತು. ಆದರೆ ಮೈಸೂರಿನಲ್ಲಿ ಹಾಗೆ ಮಾಡಿಸಿಕೊಂಡರೆ, ಆಸ್ಪತ್ರೆಗೆ ಶುಭ ಹಾರೈಕೆಗೆ ಬರುವವರ ಸಾಲಿಗೆ ಹೆದರಿ ಎಂಬಂತೆ ತಂದೆ ಮಂಗಳೂರು ಆಯ್ದುಕೊಂಡರು. ಅದಕ್ಕೂ ಮಿಗಿಲಾಗಿ ಇಲ್ಲಿ ಆಪ್ತರಾದ ಪರಮಾನಂದರಾಯರ ಕೈಗುಣವನ್ನು ತಂದೆ ಹೆಚ್ಚು ನೆಚ್ಚಿದ್ದರೆಂದು ನನ್ನ ತಿಳುವಳಿಕೆ. ರಾಯರು ಬಹಳ ಸಂತೋಷದಿಂದಲೇ, ಪರಿಷ್ಕಾರವಾಗಿಯೇ ಚಿಕಿತ್ಸೆ ಮತ್ತು ಶುಶ್ರೂಷೆ ನಡೆಸಿದರು. ತಂದೆಯನ್ನು ಮನೆಗೆ ಕರೆದೊಯ್ಯುವ ದಿನ, ಕ್ರಮದಂತೆ ಆಸ್ಪತ್ರೆಯ ಸಮಗ್ರ ಚಿಕಿತ್ಸಾ ಬಿಲ್ ಬಂದಾಗ, ವೈದ್ಯಸೇವೆ ಉಚಿತವೆಂಬ ನಮೂದಿತ್ತು. ತಂದೆ ರೌಂಡ್ಸಿನಲ್ಲಿ ಬಂದ ರಾಯರನ್ನು ಕೇಳಿದಾಗ “ನಾನು ಗುರುಗಳಿಂದ ಏನೂ ತೆಗೆದುಕೊಳ್ಳುವುದಿಲ್ಲ. ಅದು ನನ್ನ ಆಯ್ಕೆ” ಎಂದು ಬಿಟ್ಟರು. “ಪ್ರಾಯದಲ್ಲಿ ಹಿರಿಯ, ಗೆಳೆಯ ಇರಬಹುದು. ಆದರೆ ಇವರಿಗೆ ನಾನೆಂದೂ ಪಾಠ ಮಾಡಿದವನಲ್ಲ” ಎಂಬಷ್ಟೇ ನ್ಯಾಯ ಹಿಡಿದ, ತಂದೆ ನನ್ನ ಮೇಲೆ ಒತ್ತಾಯ ತಂದರು. ನಾನು ಎಂದಿನಂತೆ ಅಂಗಡಿಗೆ ಹೋಗುವ ಐದು ಮಿನಿಟು ಮೊದಲು ಆಸ್ಪತ್ರೆಗೆ ಹೋಗಿ, ಅಲ್ಲಿನ ವೈದ್ಯರುಗಳ ವಿರಾಮದ ಕೊಠಡಿ ಬಾಗಿಲಿನಲ್ಲಿ ನಿಂತು, ರಾಯರನ್ನು ಆಪ್ತ ಸಂಭಾಷಣೆಗೆ ಹೊರ ಕರೆಸಿಕೊಂಡೆ. “ತಂದೆಯ ಶಸ್ತ್ರಚಿಕಿತ್ಸೆ, ಶುಶ್ರೂಷೆಗೆ ನ್ಯಾಯಸಮ್ಮತವಾದ ಕನಿಷ್ಠ ಮೊತ್ತವನ್ನಾದರೂ ತೆಗೆದುಕೊಳ್ಳಿ ಸರ್” ಎಂದು ಒತ್ತಾಯ ಮಾಡಿದೆ. ಅವರು ಹುಸಿಕೋಪ ಆವಾಹಿಸಿಕೊಂಡು “ಹೋಗಿ ಅಯ್ಯಾ, ಅಂಗಡಿಗೆ ಲೇಟ್ ಆಯ್ತು” ಎಂದು ಕೈ ಝಾಡಿಸಿ, ಗವಿ ಸೇರಿಬಿಟ್ಟರು. ಮತ್ತೆ ಸಿಂಹವನ್ನು ಕೆಣಕುವ ಧೈರ್ಯ ನನಗೆ ಬರಲಿಲ್ಲ. ಅನಂತರ ತಂದೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಹೊರಟಾಗ, ಎದುರು ಸಿಕ್ಕ ರಾಯರು ಹುಸಿಕೋಪ ಮುಂದುವರಿಸಿ, “ಆ ಮೀಸೆಯವರಿಗೆ ನನಗುಪದ್ರ ಕೊಡಬಾರದೆಂದು ಹೇಳಿ, ಏನು” ಎಂದು ಬಿಟ್ಟರಂತೆ.

ಪ್ರತಿಪಟ್ಟಿನಲ್ಲಿ ನನ್ನ ತಂದೆ ಏನೂ ಕಡಿಮೆಯಿರಲಿಲ್ಲ. ಇಬ್ಬರಿಗೂ ಸಮಾನ ಸ್ನೇಹಿತರಾದ ನಿವೃತ್ತ ಇಂಗ್ಲಿಷ್ ಪ್ರೊಫೆಸರ್ ಸೇತು ಮಾಧವರಾಯರನ್ನು ಮೈಸೂರಿಗೆ ಮರಳುವ ಮುನ್ನಾದಿನ ಭೇಟಿಯಾದರು. ಪ್ರೊಫೆಸರ್ ಅವರ ಪಾಲಿನ ಸಮಾಜಸೇವೆಯಾಗಿ ಉಚಿತ ‘ಕಣ್ಣಿನ ಬ್ಯಾಂಕ್’ ಒಂದರ ಪ್ರತಿನಿಧಿಯಾಗಿದ್ದರು. ಆ ಕಣ್ಣಿನ ಬ್ಯಾಂಕಿಗೆ ತಂದೆ ಪರಮಾನಂದ ರಾಯರ ಹೆಸರಿನಲ್ಲಿ ಯುಕ್ತ ಮೊತ್ತವನ್ನು ಕಟ್ಟಿ, ರಸೀದಿಯನ್ನು ರಾಯರಿಗೆ ನೇರ ಮುಟ್ಟಿಸುವಂತೆ ಕೇಳಿಕೊಂಡರು. ಮತ್ತೆ ಮೈಸೂರಿನಲ್ಲಿ ತಂದೆಗೆ ಖಾಯಂ ಬಳಕೆಯಿದ್ದ ಸ್ಟಾರ್ ಆಫ್ ಮೈಸೂರ್ ಪತ್ರಿಕೆಯಲ್ಲಿ, ಪರಮಾನಂದರಾಯರು ಪ್ರತಿನಿಧಿಸುತ್ತಿದ್ದ ಮೌಲ್ಯಗಳ ಕುರಿತು ಭಾರೀ ಮೆಚ್ಚುಗೆಯ ಒಂದು ಲೇಖನ ಪ್ರಕಟಿಸಿ, ಪ್ರತಿಯನ್ನೂ ಅವರಿಗೆ ಕಳಿಸಿಕೊಟ್ಟರು. ಮುಂದೊಂದು ದಿನ ಪರಮಾನಂದ ರಾಯರು ನನಗೆ ಸಿಕ್ಕಾಗ ನಿಜ ಸಾತ್ತ್ವಿಕ ಕೋಪದಲ್ಲೇ ಸ್ಟಾರ್ ಪತ್ರಿಕಾ ಲೇಖನವನ್ನು ಉಲ್ಲೇಖಿಸಿ “ಹೀಗೆಲ್ಲ ವೃತ್ತಿ ವೈದ್ಯನ ಕುರಿತು ಹೊಗಳಿ ಬರೆಯಬಾರದು – this is not done” ಎಂದೇ ಖಡಕ್ಕಾಗಿ ಹೇಳಿದರು. ಮತ್ತೆ ಕಣ್ಣಿನ ಬ್ಯಾಂಕಿನ ರಸೀದಿ – ಇನ್ನು ಯಾರೇ ಆದರೂ ಅನಿವಾರ್ಯತೆಗೆ ತಲೆ ಬಾಗಿ, ಕನಿಷ್ಠ ಆರ್ಥಿಕ ವರ್ಷದ ಕೊನೆಗೆ ಆದಾಯ ಕರ ವಿನಾಯ್ತಿಗೆ ಆ ರಸೀದಿಯನ್ನು ಬಳಸಿಕೊಳ್ಳುತ್ತಿದ್ದರೋ ಏನೋ. ರಾಯರು ಮಾತ್ರ ಆ ರಸೀದಿಯನ್ನು ಪ್ರೀತಿಯಿಂದಲೇ ನನಗೆ ಕೊಟ್ಟು “ಇದರಲ್ಲಿ ನನ್ನದೇನೂ ಇಲ್ಲ. ಭಾವನೆಗಳಿಗೆ ಕೃತಜ್ಞ” (‘ನಿಮ್ಮಪ್ಪನ ತತ್ತ್ವ ತಿಳಿದದ್ದೇ’ ಎನ್ನುವ ಮುಗುಳು ನಗೆ ಮಿಂಚಿದಂತಿತ್ತು!) ಎಂದು ಬಿಟ್ಟರು. ೧೯೯೫ರ ಸುಮಾರಿಗೆ ಮಗ ಅಭಯನಿಗೆ ಅಪೆಂಡಿಸೈಟಿಸ್ ತುರ್ತು ಶಸ್ತ್ರ ಚಿಕಿತ್ಸೆ ಬೇಕಾದಾಗ ಮತ್ತೆ ಪರಮಾನಂದ ರಾಯರನ್ನು ಸಂಪರ್ಕಿಸಿದೆವು. ಚೆನ್ನಾಗಿಯೇ ಮುಗಿಸಿಕೊಟ್ಟರು. ಆಗ ಅವರ ಹಾಸ್ಯಪ್ರಜ್ಞೆ “ಮೂರು ತಲೆಮಾರುಗಳಿಗೆ ಚೂರಿ ಹಾಕಿದ ಯೋಗ ನನ್ನದು”! ಕಾಲ ಚಕ್ರದಲ್ಲಿ ಇಂದು ನನ್ನ ತಂದೆ ತಾಯಿಯರಂತೆ, ಕೆ.ಪಿ. ರಾವ್ ಎಂದೂ ಖ್ಯಾತರಾಗಿದ್ದ ಪರಮಾನಂದ ರಾಯರೂ ನಮ್ಮೊಡನಿಲ್ಲ. ಅಂಥ ಸ್ಥಿತಿಯಲ್ಲಿ……

ಉತ್ತರ ಕಾಂಡ (ಎಡೆಬಿ-ಡೆಂಗಿ?)

ಮೊನ್ನೆ ‘ಅಮ್ಮನನ್ನು ಕಳಿಸಿಕೊಟ್ಟು’ ಮೈಸೂರಿನಿಂದ ಮರಳಿದ ನನಗೆ ಭಾರೀ ಮೈಕೈ ನೋವಿನೊಡನೆ ತೀವ್ರಜ್ವರ ಹಿಡಿದುಕೊಂಡಿತು. ಶೀತ, ಅಜೀರ್ಣದ ಲಕ್ಷಣಗಳೇನೂ ಇರಲಿಲ್ಲ. ಎಂಟೊಂಬತ್ತು ವರ್ಷಗಳ ಹಿಂದೆ ಒಮ್ಮೆ ನನ್ನನ್ನು ಕಾಡಿದ್ದ ಡಬ್ಬಲ್ ಮಲೇರಿಯಾ ಮತ್ತೆ ಈಚೆಗೆ ದೇವಕಿಯ ತಂಗಿ ಮಗ ಅಕ್ಷರನಿಂದ ತೊಡಗಿ ಅಭಯ ರಶ್ಮಿಯರವರೆಗೆ ಕಾಡಿದ ಡೆಂಗಿಯ ಕಲ್ಪನೆ ನಮ್ಮದು. ಅಲ್ಲಿ ಮತ್ತು ಈಚಿನ ವರ್ಷಗಳಲ್ಲೆಲ್ಲ ನಮ್ಮ ಏಕೈಕ ದೃಢ ವೈದ್ಯಾಧಾರ – ಶ್ರೀನಿವಾಸ ಕಕ್ಕಿಲ್ಲಾಯ. ಇವರನ್ನು ಪ್ರೌಢಶಾಲಾ ವಿದ್ಯಾರ್ಥಿ ದೆಸೆಯಿಂದಲೇ ಕಂಡವನು ನಾನು ಮತ್ತು ಇವರ ತಂದೆ – ಬಿ.ವಿ. ಕಕ್ಕಿಲ್ಲಾಯ ಹಾಗೂ ನನ್ನ ತಂದೆಯ ಸ್ನೇಹಾಚಾರದ ಪರಿಗಣನೆಯಲ್ಲಿ ಕುಟುಂಬ ಮಿತ್ರರೆಂದೇ ಪರಿಗಣಿಸಿದವರು ನಾವು. ಕೆ.ಪಿ. ರಾಯರ ಪರಿಣತಿ ಶಸ್ತ್ರಚಿಕಿತ್ಸೆಯಲ್ಲಿದ್ದರೆ, ಇವರದು ಔಷಧ. ಬಹುತೇಕ ರೋಗ ಲಕ್ಷಣಗಳನ್ನೇ ಕಾಯಿಲೆಯ ಜಾಹೀರಾತು ಎಂದು ಕಂಡು, ಚಿಕಿತ್ಸೆ ಹೇಳುವಾಗ ಸಮಗ್ರ ಆರೋಗ್ಯವನ್ನೇ ಲಕ್ಷ್ಯದಲ್ಲಿಟ್ಟುಕೊಳ್ಳುವುದು ಇವರ ಕ್ರಮ. ಹೋಲಿಕೆಯಲ್ಲಿ ತರುಣ, ಹಸನ್ಮುಖಿ ಎನ್ನುವುದು ಬಿಟ್ಟರೆ ಕಕ್ಕಿಲ್ಲಾಯ ಉಳಿದ ಲಕ್ಷಣಗಳಲ್ಲಿ ರಾಯರದೇ ಗೋತ್ರ, ಒಂದು ಹೆಜ್ಜೆ ಮುಂದೆ ಎಂದರೂ ತಪ್ಪಾಗದು. ಬದುಕಿದ್ದಾಗ ಕೆ.ಪಿ. ರಾಯರೇ ನನ್ನ ತಂದೆಯ ಪ್ರಶಂಸಾ ಲೇಖನ ನೋಡಿ ಹೇಳಿದ ಮಾತು – this is not done, ಕಕ್ಕಿಲ್ಲಾಯರಿಗೆ ಅನ್ವಯಿಸಿಕೊಂಡು ಪ್ರಸಂಗ ಮುಂದುವರಿಸುತ್ತೇನೆ.ಶ್ರೀನಿವಾಸ ಕಕ್ಕಿಲ್ಲಾಯರಿಗೆ ಚರವಾಣಿಸಿದ್ದೆ. “ಮಲೇರಿಯಾಕ್ಕೆ ರಕ್ತ ಪರೀಕ್ಷೆ ಮಾಡಿಸಿಕೊಂಡೇ ಬನ್ನಿ” ಎಂದರು. ಇದು ಸಾಮಾನ್ಯ ರಕ್ತಪರೀಕ್ಷೆ. ಆದರೆ ನಮ್ಮ ಪರಿಚಯದ ಮೊದಲ ಮೂರು ಪ್ರಸಂಗಗಳಲ್ಲಿ ರೋಗಿಗಳು, ಅನ್ಯವಲಯಗಳಲ್ಲಿದ್ದಾಗ ಅನಿವಾರ್ಯವಾಗಿ ರೋಗ ಗುರುತಿಸುವ ಹೆಚ್ಚುವರಿ ಖರ್ಚಿಗೂ ಈಡಾದದ್ದಿತ್ತು. (ಡೆಂಗಿ – ಎಂದು ಪ್ರಯೋಗಾಲಯ ಪ್ರಮಾಣಿಸಲು ಕನಿಷ್ಠ ಏಳ್ನೂರೈವತ್ತು ರೂಪಾಯಿ ದಂಡ ಕೊಡಬೇಕು!) ಈ ವರ್ಗದಲ್ಲಿ ಮಲೇರಿಯಾ ಮಾತ್ರ ಸ್ಪಷ್ಟ ಔಷಧದಿಂದಲೇ ಗುಣವಾಗಬೇಕಾದ ಕಾಯಿಲೆ. ಇತರ ಯಾವುದೇ ವೈರಲ್ ಜ್ವರಗಳು (ಡೆಂಗಿ, ಹಕ್ಕಿ, ಹಂದಿ ಇತ್ಯಾದಿ), ಹೆಚ್ಚೆಂದರೆ ವಾರಕಾಲವಷ್ಟೇ ಕಾಡುತ್ತವೆ ಮತ್ತು ಸಹಜವಾಗಿಯೇ (ದೇಹದ್ದೇ ರಕ್ಷಣಾ ಕ್ರಮಗಳಿಗೆ ಸೋತು) ತೊಲಗುತ್ತವೆ. ಅವಕ್ಕೆ ಔಷಧ ಇಲ್ಲ ಮತ್ತು ಸಲ್ಲ. ರಕ್ತಕಣಗಳ ವಿವರಗಳ ಕುರಿತು ಆತಂಕ ಬೆಳೆಸಿಕೊಳ್ಳುವುದು, ಮುಖ್ಯವಾಗಿ ಪ್ಲೇಟ್ಲೆಟ್ ಪೂರೈಕೆಯೆಂಬುದು ಚಿಕಿತ್ಸೆಯಲ್ಲ, ಅದರ ಹೆಸರಿನಲ್ಲಿ ನಡೆಯುವ ದಂಧೆ ಎಂದೇ ಕಕ್ಕಿಲ್ಲಾಯಾದಿ ನಿಜ ವೈದ್ಯರು ಸ್ಪಷ್ಟ ಸಾರುತ್ತಾರೆ.

ಬಿ.ವಿ. ಕಕ್ಕಿಲ್ಲಾಯರು

ಪಪ್ಪಾಯಿ ಎಲೆಯ ರಸದಿಂದ ತೊಡಗಿ ನೂರೆಂಟು ಬಿಟ್ಟಿ ಸಲಹೆಗಳು ಇಷ್ಟ ಮಿತ್ರರಿಂದ, ನಿಜ ಕಾಳಜಿಯಲ್ಲೇ ಹಿಂದೆಯೂ ಇಂದೂ ಬಂದದ್ದಿವೆ. ಆದರೆ ಈ ಉಪಚಾರಗಳು, ಆಧುನಿಕ ವೈದ್ಯಶಾಸ್ತ್ರ ವ್ಯವಸ್ಥಿತ ಪ್ರಯೋಗಗಳ ಆಧಾರದ ಮೇಲೆ ವಿವರಿಸಿದ ರೋಗಲಕ್ಷಣಗಳನ್ನು ಎಲ್ಲೂ ‘ತೃಪ್ತಿ’ ಪಡಿಸುವುದೇ ಇಲ್ಲ. ಮತ್ತೆ ಆ ‘ಔಷಧಿ’ಗಳಾದರೋ ಯಾವುದೇ ಪ್ರಮಾಣೀಕೃತ ಪ್ರಯೋಗಾಲಯ, ವೈದ್ಯಕೀಯ ಶಿಸ್ತುಗಳ ಉತ್ಪನ್ನಗಳಲ್ಲ. ಅವಕ್ಕೆ ಸ್ಥಿರೀಕೃತ ಅನುಪಾನ ವಿವರಗಳೂ ಇಲ್ಲ. ನೆನಪಿನಲ್ಲಿಡಿ: “ಹೀಗೂ ಸರಿ, ಹಾಗೂ ಸರಿ, ಗುಣವಾಗಲಿಲ್ಲವೋ ಅಯ್ಯೋ….” ಎಂದು ಕಾಡುವ ಮಂದಿ ಅವರ ಅರಿವಿಲ್ಲದೆ, ನಿಮ್ಮ ಜೀವದೊಂದಿಗೆ ವ್ಯವಹರಿಸುತ್ತಿರುತ್ತಾರೆ! ಯಾವುದೇ ನೇರ ಕಸುಬಿ ವೈದ್ಯ ಮತ್ತು ವಿಜ್ಞಾನಪುಟಗಳು ಡೆಂಗಿಯಾದಿ ವೈರಲ್ ಜ್ವರಗಳಿಗೆ ಯಾವುದೇ ಔಷಧವನ್ನು, ನಿರಂತರ ರಕ್ತಕಣಗಳ ಪರೀಕ್ಷೆ ಮತ್ತು ‘ಅಗತ್ಯ ಬಂದರೆ’ ಪೂರಣವನ್ನು ಹೇಳುವುದಿಲ್ಲ. ಈ ವಿಚಾರದಲ್ಲಿ ಶ್ರೀನಿವಾಸ ಕಕ್ಕಿಲ್ಲಾಯರಂತೂ ನಡೆಸಿಕೊಟ್ಟ ಸಾರ್ವಜನಿಕ ಸಂವಾದಗಳಿಗೆ ಲೆಕ್ಕ ಇಲ್ಲ. ಅವರು ಇದನ್ನು ಜನರಿಗೆ ಮುಟ್ಟಿಸಬೇಕು ಎನ್ನುವ ಏಕೈಕ ಹಂಬಲದಿಂದ ಕಾಲಕಾಲಕ್ಕೆ ಒದಗಿದ ಕನ್ನಡಪ್ರಭ, ವಿಜಯ ಕರ್ನಾಟಕ ಮತ್ತು ಪ್ರಜಾವಾಣಿ ಅಂಕಣ ಬರಹದಲ್ಲೂ ಇದರ ಕುರಿತು ಸ್ಪಷ್ಟ ಲೇಖನಗಳನ್ನೇ ಬರೆದಿದ್ದಾರೆ. ಅಂತರ್ಜಾಲ ಮತ್ತು ತಾಂತ್ರಿಕ ಭಾಷೆಯಲ್ಲಿನ ಅಪಾರ ಸಾಹಿತ್ಯಗಳನ್ನು ಜೀರ್ಣಿಸಿಕೊಳ್ಳಲಾಗದವರಿಗೆಂದೇ ಆ ಲೇಖನಗಳನ್ನೆಲ್ಲ ಸಂಕಲಿಸಿ ಮೊದಲು – ‘ಫ್ಲೂ ಎಂದು ಹೆದರುವಿರೇಕೆ’ (ರೂ ೪೦, ೭೪ ಪುಟ), ಈಚೆಗೆ – ‘ಆರೋಗ್ಯ ಆಶಯ’ (ರೂ ೨೫೦, ೩೬೬ ಪುಟ) ನವಕರ್ನಾಟಕ ಪಬ್ಲಿಕೇಶನ್ಸ್ ಮೂಲಕ ಪುಸ್ತಕವಾಗಿಯೂ ಪ್ರಕಟಿಸಿದ್ದಾರೆ. ಅವರ ಸ್ಪಷ್ಟ ಡೆಂಗಿ ಕುರಿತ ಒಂದು ಪತ್ರಿಕಾ ಲೇಖನವನ್ನೂ ನಾನಿಲ್ಲೇ ಕೊಟ್ಟಿದ್ದೇನೆ – ಗಮನಿಸಿ.

ನಿರಂತರ ಜ್ವರದೊಡನೆ ತಲೆನೋವು, ಕೆಮ್ಮು (ಇವೆರಡೂ ನನ್ನನ್ನು ಕಾಡಲಿಲ್ಲ), ಜ್ವರದ ವಿವಿಧ ಹಂತಗಳಲ್ಲಿ ಚರ್ಮ ತೋರುವ ಲಕ್ಷಣಗಳು ಪರಿಣತ ವೈದ್ಯನಿಗೆ ಯಾವುದೇ ಅನ್ಯ ವೆಚ್ಚದಾಯಕ ಪರೀಕ್ಷೆಗಳ ಅಗತ್ಯವಿಲ್ಲದಂತೆ ರೋಗವನ್ನು ಹೆಚ್ಚೆಚ್ಚು ಸ್ಫುಟಗೊಳಿಸುತ್ತದೆ ಎಂದೇ ಕಕ್ಕಿಲ್ಲಾಯ ನಮ್ಮ ನಾಲ್ಕೂ ಪ್ರಸಂಗಗಳಲ್ಲಿ ಸೋದಾಹರಣವಾಗಿಯೇ ತೋರಿಕೊಟ್ಟಿದ್ದಾರೆ. ಸುಮಾರು ನಾಲ್ಕನೇ ದಿನಕ್ಕೆ ಸ್ಫುಟಗೊಳ್ಳಬೇಕಿದ್ದ ಡೆಂಗಿ ಲಕ್ಷಣಗಳು ನನ್ನಲ್ಲಿ ಕಾಣಲಿಲ್ಲ. ಹಾಗಾಗಿ ‘ಯಾವುದೋ ವೈರಲ್ ಜ್ವರ’ (ಹೆಸರಿಸಬೇಕಾದರೆ ಕನಿಷ್ಠ ಏಳ್ನೂರೈವತ್ತು ರೂಪಾಯಿ ದಂಡ, ಮರೆಯಬೇಡಿ!) ಐದಾರು ದಿನಗಳ ಕಾಲ ನನ್ನನ್ನು ಸತಾಯಿಸಿದರೂ ಔಷಧರಹಿತವಾಗಿ ಆರೋಗ್ಯದ ದಂಡೆಗೆ ಬಿಟ್ಟಿತು. ಮನೆಯಲ್ಲೇ ಇದ್ದುಕೊಂಡು ಧಾರಾಳ ಶುದ್ಧ ನೀರು ಕುಡಿಯುವುದು, ಹೊತ್ತು ಹೊತ್ತಿನ ಎಂದಿನದೇ ಊಟೋಪಹಾರ (ಸೇವನೆಯ ಅಂಶದಲ್ಲಿ ಏರಿಳಿತವಿತ್ತು, ಪಥ್ಯ ಏನೂ ಇಲ್ಲ) ಮತ್ತು ವಿಶ್ರಾಂತಿ – ಅಷ್ಟೇ ನನ್ನ ಚಿಕಿತ್ಸಾಂಶಗಳು. ಜ್ವರದ ತೀವ್ರತೆ ೧೦೪ರ ಗಡಿ ಮುಟ್ಟಿದಾಗಲೂ ಹೆಚ್ಚೆಂದರೆ ಹಣೆಗೆ ತಣ್ಣೀರಪಟ್ಟಿ ಇಡುವುದು ಬಿಟ್ಟು ಅನ್ಯ ಉಪಚಾರ ಮಾಡಲಿಲ್ಲ. “ನಿಮ್ಮಷ್ಟಕ್ಕೇ ಪ್ಯಾರಸಿಟಮಾಲ್ ಖಂಡಿತ ಬಳಸಬೇಡಿ. ಅದರ ಮರಸಿನಲ್ಲಿ ನಿಜ ರೋಗ ಹೆಚ್ಚು ಅಪಾಯಕಾರಿ” ಎಂದ ಕಕ್ಕಿಲ್ಲಾಯರ ಮಾತಿನಲ್ಲಿ ಸಂದೇಹವಿಲ್ಲದೆ, ನಡೆದುಕೊಂಡೆವು. ಜ್ವರ ಅದೇನೋ ಕರಾರು ಮಾಡಿಕೊಂಡಂತೆ, ಆರು ಏಳನೆಯ ದಿನಕ್ಕೆ ಬಿಟ್ಟಿತ್ತು. ಇನ್ನು ನಿಶ್ಶಕ್ತಿಯಿಂದ ಕ್ರಮವಾಗಿ ಹೊರಬರುವುದಷ್ಟೇ ಎಂದು ಕೊಳ್ಳುತ್ತಿದ್ದಂತೆ…..

ಆ ಬೆಳಿಗ್ಗೆ ಮಲಶೋಧದ ಬಳಿಕ, ನನ್ನ ಗುದದ್ವಾರ ಹೊರ ಚಾಚಿಕೊಂಡಿತು, ಊತದ ಜೊಂಪೆ, ಹೆಚ್ಚು ಕಮ್ಮಿ ಇಪ್ಪತ್ತಾರು ವರ್ಷಗಳ ಹಿಂದಿನಂತೇ ಪುನರವತರಿಸಿತ್ತು. ದೇಹದ ನಿಶ್ಶಕ್ತಿಯ ಪರಿಣಾಮವೋ ಆಹಾರ ಪಾನೀಯಗಳ ವ್ಯತ್ಯಾಸದ ಪ್ರಭಾವವೋ ಮತ್ತೊಮ್ಮೆ ‘ಕುಂಡೆಲಿ(ನಿ) ಶಕ್ತಿ’ಯ ಜಾಗೃತಿ’! ರಕ್ತವಿಲ್ಲ, ಆದರೆ ಯಾವುದೇ ಚಟುವಟಿಕೆಗೆ ಅಸಾಧ್ಯ ನೋವಿನ ಸಂಗಾತಿ. ನನ್ನ ಮತ್ತು ದೇವಕಿಯ ‘ಕರಾಮತ್ತು’, ಬಿಸಿನೀರ ಮುಳುಗಾಟ ಅದನ್ನು ತಣಿಸಲೇ ಇಲ್ಲ. ಇಂದು ಪರಮಾನಂದ ರಾಯರು ಇಲ್ಲದಿದ್ದರೂ ಅವರು ಹೇಳಿದ ಮುಲಾಮು ಮರೆತಿರಲಿಲ್ಲ. ಕಕ್ಕಿಲ್ಲಾಯರನ್ನು ಚರವಾಣಿಯಲ್ಲಿ ಸಂಪರ್ಕಿಸಿದೆ, ಮುಲಾಮನ್ನೂ ಉಲ್ಲೇಖಿಸಿದೆ. “ಇಲ್ಲ, ಹಳೆಯ ಮುಲಾಮು ಅಥವಾ ನಿಮ್ಮದೇ ಅನ್ಯ ಇಲಾಜು ಬೇಡ. ಜೀರ್ಣಾಂಗವ್ಯೂಹದ ಶಸ್ತ್ರಚಿಕಿತ್ಸಾ ವೈದ್ಯ ಗಣೇಶ್ ಎಂ.ಕೆ ಭೇಟಿಯಾಗಿ” ಎಂದು ಸಲಹೆ ಕೊಟ್ಟರು.

ಗಣೇಶ್ ಹೊಸ ಪರಿಚಯವಾದ್ದರಿಂದ, ವಿಳಾಸ ಪಡೆದು ಕ್ಲಿನಿಕ್ಕಿಗೆ ಹೋದೆವು. ಆದರೆ ಅಂದು ಶನಿವಾರ, ಸ್ವಾಗತಕಾರಿಣಿ ಹೇಳಿದಂತೆ ಅವರು ಕಾಸರಗೋಡಿನ ರೋಗಿಗಳನ್ನು ಭೇಟಿಯಾಗಲು ಹೋಗುವ ದಿನ. ಚರವಾಣಿ ಸಂಖ್ಯೆ ಸಂಗ್ರಹಿಸಿ ಸಂಪರ್ಕಿಸಿದೆ, ನನ್ನ ಅಸಹಾಯಕ ಪರಿಸ್ಥಿತಿ ವಿವರಿಸಿ – “ಸಾಧ್ಯವಾದರೆ ಇಂದೇ ‘ಕೊಯ್ದು’ ಹಾಕಿ” ಎಂದೇ ಕೇಳಿಕೊಂಡೆ. ನನ್ನ ಅದೃಷ್ಟ ಚೆನ್ನಾಗಿತ್ತು – ಗಣೇಶ್ ಮಂಗಳೂರಿನಲ್ಲೇ ಇದ್ದರು. ಅರ್ಧ ಗಂಟೆಯಲ್ಲೇ ಬಂದರು. ಕೆಪಿ ರಾಯರು ಮಾಡಿದಂತೇ ವ್ಯವಸ್ಥಿತವಾಗಿ ಊತ ಜೊಂಪೆಯನ್ನು ಒಳ ತಳ್ಳಿ ಬಿಟ್ಟರು. ಮತ್ತವರಂತೇ “ಇದು ಮಹಾ ಸಮಸ್ಯೆ ಏನೂ ಅಲ್ಲ. ನಿಮ್ಮ ನಿಶ್ಶಕ್ತಿ ದೂರವಾದಂತೆ ಇದೂ ಇಳಿದು ಹೋಗಬಹುದು. ಏನಿದ್ದರೂ ಇನ್ನೊಂದೆರಡು ವಾರಗಳ ಕಾಲ, ನಿಮ್ಮ ದೇಹದ ಚೇತರಿಕೆಯನ್ನು ಕಾದು, ಶಸ್ತ್ರಕ್ರಿಯೆಯನ್ನು ಆಲೋಚಿಸೋಣ” ಎಂದು ನಕ್ಕರು. ಹೊಸದೇ ಮುಲಾಮು ಬರೆದು ಕೊಟ್ಟರು.

‘ಬಿಸಿನೀರ ಮುಳುಗೂ’ ಶಿಫಾರಸು ಮಾಡಲು ಮರೆಯಲಿಲ್ಲ. ಮಲಬದ್ಧತೆಯಾಗದಂತೆ ನೋಡಿಕೊಳ್ಳಲು ಧಾರಾಳ ನೀರು, ಸೊಪ್ಪು ತರಕಾರಿಗಳ ಸೇವನೆಯನ್ನು ಒತ್ತಿ ಹೇಳಿದರು; ಔಷಧಗಳಲ್ಲ. ಆದಿತ್ಯವಾರ ಬೆಳಿಗ್ಗೆ ನಾವೇ ಮನೆಯಲ್ಲಿ ಬಹಳ ಶ್ರಮದಿಂದ ಸುಧಾರಿಸಿದೆವು. ಸೋಮವಾರ ಬೆಳಿಗ್ಗೆ ಮತ್ತೊಮ್ಮೆ ವೈದ್ಯರ ಸಹಕಾರ ಪಡೆಯಬೇಕಾಯ್ತು. ಆದರೆ ಮುಂದಿನ ಮೂರು ನಾಲ್ಕು ದಿನಗಳಲ್ಲಿ ನಿಧಾನಕ್ಕೆ ದೇಹ ಬಲಗೊಳ್ಳುತ್ತಿದ್ದಂತೆ, ಸ್ವತಂತ್ರವಾಗಿಯೇ ಪೂರ್ವಸ್ಥಿತಿಗೆ ಮರಳಿದೆ. (ಶಸ್ತ್ರಕ್ರಿಯೆ ಯೋಚನೆ ಬಿಟ್ಟು, ಆಗಲೇ ಸೈಕಲ್ ಸರ್ಕೀಟ್ ಮೂರು ಮಾಡಿಯೂ ಆಗಿದೆ!)

ತರುಣ ವೈದ್ಯ ಗಣೇಶರಿಗೆ ಕೆಪಿ ರಾಯರನ್ನು ಅವರಿವರಿಂದ ಕೇಳಿಯಷ್ಟೇ ಪರಿಚಯ, ಭೇಟಿಯಾದದ್ದಿಲ್ಲವಂತೆ. ಆದರೇನು, ಕೆಪಿ ರಾಯರು ಹೋದರೂ ಅವರು ಪ್ರತಿನಿಧಿಸಿದ ಮಾನವೀಯ ಮೌಲ್ಯಗಳು – ‘ಪರಮಾನಂದ-ದಾರಿ’, ಶ್ರೀನಿವಾಸ ಕಕ್ಕಿಲ್ಲಾಯರಲ್ಲಿ, ಗಣೇಶರಲ್ಲಿ ಸ್ವಂತ ಜೀವನ ದರ್ಶನದಿಂದ ಹೊಸರೂಪದಲ್ಲಿತ್ತು. ನಾನು ಅಪಾರ ನೋವು ನುಂಗುತ್ತ, ಗಣೇಶರ ಕೈಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ನೋವು ಮರೆಸಲೆಂಬಂತೆ ಅವರು ಆಡಿದ ಮಾತುಗಳು ಈಗ ಸ್ಪಷ್ಟವಾಗುತ್ತಿದೆ, “ನನ್ನ ಪರಿಣತಿ ಶಸ್ತ್ರವೇ ಆದರೂ ಮನಸ್ಸು ನಿರಸ್ತ್ರವನ್ನೇ ಬಯಸುತ್ತದೆ!”