(ಜಮ್ಮು ಕಾಶ್ಮೀರ ಪ್ರವಾಸ ಕಥನ – ೨)

ದಿಲ್ಲಿಯ ಸೆಕೆ ಮುಂದುವರಿದಂತೆ ಬೆಳಗ್ಗಾಯಿತು. ಈ ಪ್ರವಾಸದುದ್ದಕ್ಕೆ ಅನುಭವಿಸಿದಂತೆ ಸುಮಾರು ನಾಲ್ಕು ಗಂಟೆಗೇ ಬೆಳಕು ಮೂಡಿತ್ತು. ಆದರೆ ರೈಲಿನ ಮೂರು ಹಂತದ ಮಲಗು ವ್ಯವಸ್ಥೆಯಲ್ಲಿ ಮಧ್ಯಮರ ಸಹಕಾರವಿಲ್ಲದಿದ್ದರೆ ಇತರ ಇಬ್ಬರು ಸ್ವಸ್ಥ ಕುಳಿತುಕೊಳ್ಳುವುದು ಅಸಾಧ್ಯ. ರಾತ್ರಿ ಉಚ್ಚೆ ಹೊಯ್ಯಲು ಹೋಗಿ ಬಂದ ನಾನು ನನ್ನ ಕೆಳ ಆಸನದಲ್ಲಿ ಕುಳಿತು ತಲೆ ಬಗ್ಗಿಸಿಯೇ ಹಿಂದೆ ಸರಿಯಲು ಪ್ರಯತ್ನಿಸಿದ್ದೆ. ಆದರೆ ನನ್ನ ಅಂದಾಜು ಮೀರಿಯೇ ತಗ್ಗಿನಲ್ಲಿದ್ದ ಮಧ್ಯಮ ಹಲಿಗೆ ಹೆಕ್ಕತ್ತಿಗೆ ಗುದ್ದಿದ್ದು, ಪ್ರವಾಸ ಮುಗಿಯುವವರೆಗೂ ಊತ, ನೋವು ಉಳಿಸಿತ್ತು! ರಾತ್ರಿ ಮಕ್ಕಳಾಟಕ್ಕೆ ಬೇಗ ಮಧ್ಯದ ಹಲಿಗೆ ಬಿಡಿಸಲು ರಚ್ಚೆ ಹಿಡಿದ ಪುಟಾಣಿಯೊಂದು ಬೆಳಗ್ಗೆ ಅದರಲ್ಲಿ ನಿಜ ನಿದ್ರೆ ಮುಂದುವರಿಸಿ ಸಾಕಷ್ಟು ಸತಾಯಿಸಿತು. ಈ ವಲಯದ ರೈಲು ದಾರಿಗಳೆಲ್ಲ ಜಮ್ಮುವಿಗೇ ಕೊನೆಗೊಳ್ಳುತ್ತದೆ ಎಂಬ ಭಾವನೆ ನಮ್ಮಲ್ಲೇನು, ಗಿರೀಶರಲ್ಲೂ ಇತ್ತು. ಗಣೇಶ ಭಟ್ಟರು “ಇಲ್ಲ, ಮತ್ತೂ ಸುಮಾರು ನಲ್ವತ್ತು ಕಿಮೀ ಮುಂದುವರಿದು ಕತ್ರಾದವರೆಗೂ ಹೋಗುತ್ತದೆ. ಬಹುಶಃ ಬೆಂಗಳೂರಿನಿಂದ ವಾರದಲ್ಲಿ ಎರಡೋ ಮೂರೋ ವೈಷ್ಣೋದೇವಿ ಹೆಸರಿನಲ್ಲೇ ಹೊರಡುವ ರೈಲು ದಿಲ್ಲಿ, ಜಮ್ಮು ಕಳೆದು ಕತ್ರಾದವರೆಗೂ ಹೋಗುತ್ತದೆ” ಎಂದೇ ವಾದಿಸಿದ್ದರು. ವಾಸ್ತವದಲ್ಲಿ ನಮಗರಿವಿಲ್ಲದಂತೆ ನಾವು ಹೋದ ರೈಲೂ ಕತ್ರಾಕ್ಕೇ ಹೋಗುವುದಿತ್ತು. ನಮ್ಮೆದುರು ಕುಳಿತಿದ್ದ ಮಹಿಳೆ – ಜಮ್ಮೂವಾಸಿ, ಹಲವು ಬಾರಿ ಇದೇ ರೈಲಿನಲ್ಲಿ ಕತ್ರಾಕ್ಕೆ ಹೋಗಿ, ವೈಷ್ಣೋದೇವಿ ಸಂದರ್ಶನ ಮಾಡಿಬಂದ ಕತೆಯನ್ನೂ ಹೇಳಿದಳು. ಬಹುಶಃ ನಾವು ಪಟ್ಟು ಹಿಡಿದು ನಿದ್ರೆ ಮುಂದುವರಿಸಿದ್ದರೆ ಟ್ರಾವೆಲ್ಸಿನವರ ಪ್ರವಾಸ ಯೋಜನೆಯೇ ಹಿಂದುಮುಂದಾಗುವ ಕತ್ರಾ (=ಅಡ್ಡಿ, ಆತಂಕ) ಎದುರಿಸಬೇಕಾಗುತ್ತಿತ್ತು!

ಪ್ರವಾಸೀ ಯೋಜನೆಯಲ್ಲಿ ರಾಜ್ಯದ ಹೆಸರಿನ ಅನಿವಾರ್ಯತೆಯಿಂದ ನುಸುಳುವ ಜಮ್ಮು ನಮಗೆ ಕೇವಲ ವಾಹನ ಬದಲಾವಣೆ ತಾಣ. ರಾತ್ರಿಪ್ರಯಾಣದ ಕೊಳೆ ಕಳೆದು, ನವಚೇತನರಾಗಲು ತತ್ಕಾಲೀನ ಹೋಟೆಲ್ ವ್ಯವಸ್ಥೆ ಮಾಡಿದ್ದರು. ಬಿಸಿನೀರಿಲ್ಲದ, ಫ್ಲಷ್ ಎಳೆದರೆ ನಲ್ಲಿಯೇ ಕಿತ್ತುಬರುವ ಮೂರು ಕೋಣೆಗಳಲ್ಲಿ ಸರದಿಯ ಮೇಲೆ ಎಲ್ಲ `ಫ್ರೆಶ್’ ಆಗುವುದು, ಉಪಾಹಾರ ಸ್ವೀಕರಿಸುವುದು ಮುಗಿಯುವಾಗ ಗಂಟೆ ಹತ್ತಾಗಿತ್ತು. ಆ ಹೋಟೆಲಿನ ಸಪುರ, ಏಕಮುಖ ಸಂಚಾರ ಮಾರ್ಗದಲ್ಲಿ ವ್ಯಾನು ಬಾರದೆಂಬ ಸಂಕಟಕ್ಕೆ ಮತ್ತೆ ಮೂರೋ ನಾಲ್ಕೋ ಆಟೋರಿಕ್ಷಾ ಮಾಡಿ ಟ್ಯಾಕ್ಸೀ ಸ್ಟ್ಯಾಂಡಿಗೆ ಹೋದೆವು. ಅಲ್ಲಿ ಮುಂದಿನ ಸುಮಾರು ಐದು ದಿನ `ನಮ್ಮದೇ’ ವಾಹನವಾಗಲಿದ್ದ ಟೆಂಪೋ ಟ್ರಾವಲ್ಲರ್ ಕಾದಿತ್ತು.

ಶ್ರೀನಗರದ ಶಬೀರ್ ಟೂರ್ಸ್ ಅಂಡ್ ಟ್ರಾವಲ್ಸ್ ಸಂಸ್ಥೆಯದ್ದು ವಾಹನ, ಸಾರಥಿ ಬಶೀರ್. ಲೆಕ್ಕಕ್ಕೆ ಹವಾನಿಯಂತ್ರಿತ ವಾಹನ. ಆದರೆ ಜಮ್ಮುವಿನ ಉರಿಸೆಕೆಯೊಡನೆ ಏರು ದಾರಿ ಸುಧಾರಿಸಬೇಕೆನ್ನುವಾಗ ಮೋಸ ಮಾಡಿದ್ದೇ ಹೆಚ್ಚು. ಪಯಣಿಗರು ಚಾಲಕನ ಪಕ್ಕದ ಸೀಟನ್ನೇ ಮುಂದೆ ಬಾಗಿಸಿ ಹೊರ ಒಳಗೆ ಓಡಾಡಬೇಕಾದ ವ್ಯವಸ್ಥೆ. ಇತರ ಸೀಟುಗಳಲ್ಲೂ ಪುಶ್-ಬ್ಯಾಕ್ ಮಾಡಿದರೆ ನೇರ ನಿಲ್ಲಲಾಗದ, ನಿಂತರೆ ಹಿಂದೆ ಸರಿಯದ ಒಂದೆರಡು ಸೀಟು ಕೊನೆಯವರೆಗೂ ಬಶೀರಿನ ಸರಿಪಡಿಸುವ ಆಶ್ವಾಸನೆಯಲ್ಲೇ ಸುಧಾರಿಸಿಹೋಯ್ತು. ಕಿಟಕಿಗಳ ಉದ್ದನ್ನ ಕನ್ನಡಿ ಎರಡು ಮತ್ತು ನಾಲ್ಕನೇ ಸಾಲಿನ ಸೀಟಿನವರಿಗೆ ಗಾಳಿ ಇನ್ನೂ ಮುಖ್ಯವಾಗಿ ವೀಕ್ಷಣಾ ಸ್ವಾತಂತ್ರ್ಯವನ್ನು ಬಹುವಾಗಿ ವಂಚಿಸಿತು. ತರುಣ ಬಶೀರ್ ಚಾಲನೆಯಲ್ಲಿ ಚುರುಕು, ಚಾಲಾಕೀ. ಕೆಲವೆಡೆಗಳಲ್ಲಂತೂ ನನ್ನ ಸಾಹಸೀ ಚಾಲನೆಯ ಬಯಕೆಯೂ ಬತ್ತಿಹೋಗುವಷ್ಟು ಬಶೀರ್ ನುಗ್ಗುತ್ತಿದ್ದರೂ ಅಪಾಯವಾಗದಿದ್ದುದು ಆತನ ಪ್ರಾವೀಣ್ಯವೇ ಸರಿ (ಅಂಜುಕುಳಿಗಳು ಸುಲಭದಲ್ಲಿ “ಅದೃಷ್ಟ, ದೇವರ ದಯೆ” ಎಂದಿತ್ಯಾದಿ ಹೇಳುವುದನ್ನು ನಾನೊಪ್ಪಲಾರೆ).

ಮೊದಲೇ ಹೇಳಿದಂತೆ, ವಾರದ ಹಿಂದಷ್ಟೇ ವಿದ್ಯಾಮನೋಹರ್ ಜಮ್ಮು ಕಾಶ್ಮೀರ ಪ್ರವಾಸ ಮುಗಿಸಿ ಬಂದಿದ್ದರು. ಅವರು ಗೆಳೆಯರ ಬಳಗದಲ್ಲಿ ನಾಲ್ಕು ದಂಪತಿ ಜೋಡಿ ಒಟ್ಟಾಗಿ ತಮ್ಮದೇ ಆಯ್ಕೆ ಮತ್ತು ಯೋಜನೆಯಲ್ಲಿ ತಿರುಗಾಡಿದ್ದರು. ಅವರು ಜಮ್ಮು – ಶ್ರೀನಗರ ನಡುವಣ ಮಾರ್ಗದ ಅಪೂರ್ವ ದೃಶ್ಯಗಳ ಕುರಿತು ಚೆನ್ನಾಗಿಯೇ ತಿಳಿದುಕೊಂಡಿದ್ದರು. ಜತೆಗೇ ಅಲ್ಲಿನ ಪ್ರಾಕೃತಿಕ ಅಸ್ಥಿರತೆ ಮತ್ತು ಮನುಷ್ಯ ಮಿತಿಯ ಕೊರತೆಗಳ ಅರಿವಿದ್ದು ವಿಮಾನದಲ್ಲಿ ಕಳೆದಿದ್ದರು. ನಮ್ಮದು ಮಾರ್ಗಕ್ರಮಣದ ಯೋಜನೆ ಎಂದು ಕೇಳಿ ಶುಭ ಹಾರೈಸಿದ್ದರು. ನಾನು ಹೊರಡುವ ಮೊದಲು ಸಮೂಹ ಮಾಧ್ಯಮಗಳ ವರದಿಯಲ್ಲಿ ಈ ಮಾರ್ಗದ ಆರೋಗ್ಯದ ಚಿತ್ರಣವನ್ನೂ ಗಮನಿಸುತ್ತಿದ್ದೆ. ಸುಮಾರು ಮೂರು ವಾರಗಳ ಹಿಂದಿನ ಮಳೆ, ಹಿಂಬಾಲಿಸಿದ ಭೂಕುಸಿತಗಳಲ್ಲಿ ಮಾರ್ಗ ಬಂದಾಗಿತ್ತು. ಜತೆಗೇ ಈ ರಾಜ್ಯದ ವೈಶಿಷ್ಟ್ಯದಂತೆ ಬೇಸಗೆಯಲ್ಲಿ ಸರಕಾರೀ ಕಲಾಪಗಳೆಲ್ಲ ಶ್ರೀನಗರ ಕೇಂದ್ರಿತವಾಗಿ ನಡೆಯುವುದರಿಂದ ಕಡತಗಳ ವರ್ಗಾವಣೆಯ ತುರ್ತೂ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಿತ್ತಂತೆ. ಪ್ರಜಾವಾಣಿ ಪತ್ರಿಕೆ ಹೇಳಿದಂತೆ ನಾವು ಹೋಗುವ ಎರಡು ಮೂರು ದಿನ ಮೊದಲಷ್ಟೇ ಸರದಿಯ ಮೇಲೆ ಏಕಮುಖ ಸಂಚಾರವಾಗಿ ಸಾರ್ವಜನಿಕರಿಗೆ ಮುಕ್ತವಾಗಿತ್ತು. ನಮ್ಮ ವ್ಯಾನು ಶ್ರೀನಗರದ್ದೇ ಮತ್ತು ಪ್ರವಾಸೀ ನಿರ್ವಾಹಕ ಅನುಭವಿ ಎಂಬ ನೆಲೆಯಲ್ಲಿ ನಿರ್ಯೋಚನೆಯಿಂದಲೇ ನಮ್ಮ ಯಾನ ತೊಡಗಿತ್ತು.

ಅದೊಂದು ವಿಸ್ತಾರ ಮರಳುಗಾಡು. ಜತೆಗೆ ಧಾರಾಳ ಗುಂಡುಕಲ್ಲುಗಳ ಮಿಶ್ರಣ. ನಡುವೆ ಎಲ್ಲೋ ಸಪುರ ಧಾರೆಯಂಥ ಪಶ್ಚಿಮವಾಹಿನಿ – ತವಿ ನದಿ. ಇದು ಮುಂದೆ ಪಾಕಿಸ್ತಾನದೊಳಗೆ ಚೀನಾಬ್, ಸಿಂಧೂ ಆಗಿ ಅರಬೀ ಸಮುದ್ರ ಸೇರಿಕೊಳ್ಳುತ್ತದೆ. ತವಿ ನದಿಯ ಇಕ್ಕೆಲಗಳಲ್ಲಿ ಹರಡಿದ ನಗರ ಜಮ್ಮು; ಪ್ರವಾಸಿಗರ Geಮ್ಮು, ರಾಜಕೀಯ ಗೊಂದಲಗಳ Jaಮೂ. ಉರಿ ಉರಿ ಬಿಸಿಲು, ರಿಕ್ಷಾದ ಇರುಕು, ಪೇಟೆ ದಾರಿಯ ದೂಳು ಕಸ ಕೊಳಕು, ವ್ಯಾನು ತುಂಬುವ ಅನಿವಾರ್ಯ ವಿಳಂಬಕ್ಕೆಲ್ಲ ಪರಿಹಾರವೆಂಬಂತೆ ಬಶೀರ್ ಒಮ್ಮೆ ಏಸಿ ಹಾಕಿದ್ದ. ಆದರೆ “ಪಿಕಪ್ ನೈ ಹೈನಾ…” ಅಂತ ಗೊಣಗಿ ಗುಟ್ಟಾಗಿ ಏಸಿ ಆರಿಸಿ, ಕೇವಲ ಫ್ಯಾನ್ ಚಲಾವಣೆಯಲ್ಲಿಟ್ಟಿದ್ದ. ಈ ಪೀಕಲಾಟದ ಅರಿವು ಎಲ್ಲರಿಗು ಇತ್ತು. ಆದರೆ ಅಷ್ಟರಲ್ಲಿ ಕಂಗೊಳಿಸಿದ ವಿಶಾಲ ಪಾತ್ರೆಯ ತವಿ ನದಿ, ಅದರ ದಕ್ಷಿಣ ದಂಡೆಯಿಂದ ತೊಡಗಿದ ಸುಂದರ ಜೋಡಿ ಸೇತುವೆಯ ಓಟ, ಮುಂದುವರಿದು ನುಣ್ಣನೆ ಚತುಷ್ಪಥದಲ್ಲಿನ ಹಿತವಾದ ಸವಾರಿ ನಮ್ಮನ್ನು ಅಪೂರ್ವ ದೃಶ್ಯ ಸೂರೆಗೈಯ್ಯುವ ಮಾನಸಿಕ ಹದಕ್ಕೆ ಮುಟ್ಟಿಸಿತ್ತು. ಅಷ್ಟರಲ್ಲಿ ಬಂತು…

ಅದು ನಗರದಿಂದ ಬಿಡುಗಡೆ ಕಾಣಿಸುವ ಕೂಡುರಸ್ತೆ, ಜತೆಗೆ ಭಯಗ್ರಸ್ತ ರಾಜ್ಯದಲ್ಲಂತೂ ಇರಲೇಬೇಕಾದ ಪೋಲಿಸ್ ಚೌಕಿ. ಚಕ್ರಬೇಲಿಗಳನ್ನು ಅಡ್ಡ ಹಾಕಿ ಠಳಾಯಿಸುತ್ತಿದ್ದ ನಾಲ್ಕೈದು ಪೋಲಿಸರಲ್ಲಿ ಹಿರಿಯನಂತಿದ್ದವ ಭಾರೀ ಕೋಲು ಝಳಪಿಸುತ್ತ, ಮಾತಿಗೂ ಮೊದಲೇ “ವಾಪಾಸು ಹೋಗಿ, ವಾಪಾಸು ಹೋಗಿ” ಎಂದು ಅರಚಿದ. ಒಮ್ಮೆಗೆ ಭಯೋತ್ಪಾದನೆಯ ವಿರುದ್ಧದ ತನಿಖಾ ಶೈಲಿ ಅಂದುಕೊಂಡೆವು. ಆದರೆ ಕತೆ ಬೇರೇ. (ನಾನು ಪತ್ರಿಕೆಯಲ್ಲಿ ಮೊದಲೇ ಓದಿಕೊಂಡಂತೆ,) ಅಕಾಲಿಕ ಮಳೆಯ ಪ್ರಭಾವದ ಏಕಮುಖ ಸಂಚಾರದಲ್ಲಿ ಬೆಳಗ್ಗೆ ಹನ್ನೊಂದು ಗಂಟೆಯವರೆಗೂ ಇಲ್ಲಿಂದ ವಾಹನಗಳನ್ನು ಬಿಟ್ಟಿದ್ದರಂತೆ. ಈಗ ಶ್ರೀನಗರದ ಸರದಿ, ನಾವು ಜಮ್ಮುಗೇ ಮರಳಬೇಕಿತ್ತು. “ಕರ್ನಾಟಕದ ದೂರದಿಂದ ಬಂದವರು, ಕೇವಲ ಪ್ರವಾಸಿಗರು, ಶ್ರೀನಗರದ್ದೇ ಬಾಡಿಗೆ ವಾಹನ, ಬೇಕಾದ ತನಿಖೆ ಮಾಡಿ…” ನಮ್ಮ ಮನವಿಗಳ ಪಟ್ಟಿ ಬೆಳೆದಿತ್ತು. ಬಶೀರ್ ಗುಟ್ಟಿನಲ್ಲಿ ಅಧಿಕಾರಿಗೆ ಲಂಚದ ಆಮಿಷ ಒಡ್ಡಿದ. ಕೆರಳಿದ ಅಧಿಕಾರಿ ಬಶೀರ್ ಕೆನ್ನೆಗೊಂದು ತಪರಾಕಿ ಕೊಟ್ಟು ವ್ಯಾನಿನ ಕನ್ನಡಿಯನ್ನೇ ಹುಡಿ ಮಾಡುವ ಬೆದರಿಕೆ ಬೇರೆ ಹಾಕಿದ. ನಾವು ಅಪ್ರತಿಭರಾಗಿ ಸ್ವಲ್ಪ ದೂರ ಹಿಂದಕ್ಕೇ ಸರಿದು ಮಂತ್ರಾಲೋಚನೆ ನಡೆಸಿದೆವು.

ಶ್ರೀನಗರಕ್ಕೆ ಇನ್ನೊಂದು ತುಸು ಕಠಿಣ ಮಾರ್ಗವಿದೆಯೆಂದೂ ಅದರಲ್ಲಿ ಪ್ರಯತ್ನಿಸೋಣವೆಂದೂ ಬಶೀರ್ ಅಂದಾಜಿಸಿದ. ಮುಘಲ್ ರಸ್ತೆ ಎಂದೇ ಖ್ಯಾತವಾದ ಅದು ಅಖ್ನೂರ್, ರಜೌರಿ ಊರುಗಳ ಮೇಲೆ ಹೋಗುತ್ತದೆಂದಷ್ಟೇ ಬಶೀರ್ ತಿಳಿದಿದ್ದ, ನೋಡಿರಲಿಲ್ಲ. ಈ ದಾರಿಯಲ್ಲೂ ಪೋಲಿಸ್ ತನಿಖಾ ಕೇಂದ್ರ ಸಿಕ್ಕರೆ, ನಾವು ಶ್ರೀನಗರ ದಾರಿಯ ಕಠಿಣ ಭಾಗಕ್ಕೂ ಮುನ್ನ ಸಿಗುವ ಕತ್ರಾಕ್ಕಷ್ಟೇ (ವೈಷ್ಣೋದೇವೀ ಬೆಟ್ಟದ ತಪ್ಪಲಿನ ಊರು) ಹೋಗುವವರು ಎಂಬ ಸುಳ್ಳನ್ನು ಸಿದ್ಧಪಡಿಸಿಕೊಂಡು ಮುಂದುವರಿದೆವು. ಹೊಸ ದಾರಿಯ ವೃತ್ತ ಒಂದರಲ್ಲಿ ಮಾರ್ಗ ವಿಚಾರಿಸಿಕೊಳ್ಳುವ ನೆಪದಲ್ಲಷ್ಟೇ ಪೋಲಿಸರನ್ನು ಸಂಪರ್ಕಿಸಿದೆವು. ನಮ್ಮ ಗ್ರಹಚಾರಕ್ಕೆ ಅವರು ನಮ್ಮ ವ್ಯಾನಿನ ಶ್ರೀನಗರ ನೋಂದಣಿ ನೋಡಿ ವಾಪಾಸು ಕಳಿಸುವ ಬೆದರಿಕೆ ಹಾಕಿದರು! ಆದರೆ ಇಲ್ಲಿ ನೂರರ ನೋಟು ದಾರಿ ಬಿಡಿಸಿತು.

ನಮ್ಮ ಆಗುಂಬೆ ಬೈಲುಗಳಂತ ಪರಿಸರ, ಸಪುರ ಮಟ್ಟಸ ದಾರಿ. ಯಾವುದೋ ನೀರಾವರಿ ಕಾಲುವೆ ಬಹುದೂರದವರೆಗೆ ನಮ್ಮ ದಾರಿಯ ಪಕ್ಕದಲ್ಲೇ ಹರಿದು ಬಂದಿತ್ತು. ಅದರ ಕೊಳಚೆಯಂತಾ ನೀರು, ಅದರಲ್ಲಿ ಎಮ್ಮೆಗಳ ಜಳಕ, ಎಳೆಯರ ಪುಳಕ ನೋಡುತ್ತ ಸುಮಾರು ಮುಕ್ಕಾಲು ಗಂಟೆಯೇ ಪಯಣಿಸಿರಬೇಕು. ನಮ್ಮ `ದುಷ್ಟಗ್ರಹ’ ಮತ್ತೆ ಹೊಂಚಿತ್ತು. ಬೋಳು ದಾರಿಯಲ್ಲಿ, ಎಲ್ಲೂ ಅಲ್ಲದಲ್ಲಿ, ಕೇವಲ ಕೈಕೋಲಿನಲ್ಲಿ ಸನ್ನೆ ಮಾಡಿಯೇ ಪೋಲಿಸ್ ತುಕಡಿಯೊಂದು ನಮ್ಮನ್ನು ನಿಲ್ಲಿಸಿತ್ತು. ಒಟ್ಟಾರೆ ಶ್ರೀನಗರದ ದಾರಿಯ ಕುರಿತಂತೆ ಬಹು ದೊಡ್ಡ ಮಟ್ಟದ ಫರ್ಮಾನು ಇದ್ದಿರಬೇಕು. ನಿಯಮ ಸಡಿಲಿಸಿ ಮುಂದೆ ತನಿಖೆಗೆ ಸಿಕ್ಕಿಬಿದ್ದರೆ ತಮ್ಮ ಬುಡಕ್ಕೆ ಬಂದೀತೆಂದು ಸಣ್ಣ ಅಧಿಕಾರಿಗಳು ಜಗ್ಗಲೇ ಇಲ್ಲ. ಅಷ್ಟರಲ್ಲಿ ನಮ್ಮ ವಿಳಂಬದ ಹೊರೆಯನ್ನು ಹೆಚ್ಚಿಸುವಂತೆ ವ್ಯಾನಿನ ಒಂದು ಚಕ್ರ ನಿಟ್ಟುಸಿರು ಬಿಟ್ಟಿತು! (ಪಂಚೇರ್) ಅದನ್ನು ಬಶೀರ್ ಬದಲಿಸುತ್ತಿದ್ದಂತೆ ಗಣೇಶ್ ಭಟ್ ಮತ್ತು ಧನಂಜಯ ಜೀವಾಳ ಪೋಲಿಸ್-ಸಂಧಾನಕ್ಕೆ ತಮ್ಮ ಕಾಣಿಕೆ ಸಲ್ಲಿಸಲು ಪ್ರಯತ್ನ ನಡೆಸಿದರು. ಧನಂಜಯ ಅಲ್ಲಿದ್ದ ಅಧಿಕಾರಿ ಮೂಲಕ ಮೇಲಿನ ಅಧಿಕಾರಿಯನ್ನು ಚರವಾಣಿಯಲ್ಲಿ ನೇರ ಸಂಪರ್ಕಿಸಿ ಮಾತಾಡಿದರು. “ಶ್ರೀನಗರ ಬೇಡ, ಬರಿಯ ಕತ್ರಾದವರೆಗೆ ನಮಗೆ ಅನುಮತಿ ಕೊಡಿ. ಇಲ್ಲವಾದರೆ ಅಷ್ಟೆಲ್ಲಾ ದೂರದಿಂದ ಖರ್ಚು ಮಾಡಿಕೊಂಡು ಬಂದು, ನಿಮ್ಮೂರು ನೋಡುವ ನಮ್ಮ ಯೋಜನೆಗಳೆಲ್ಲ ಹಾಳಾಗುತ್ತವೆ….” ಎಂದಿತ್ಯಾದಿ ಕೇಳಿಕೊಂಡಿರಬೇಕು. ಆತ “ಹಾಗಾದರೆ ಈ ಒಳ ದಾರಿ ಬೇಡ. ಮುಖ್ಯ ದಾರಿಯಲ್ಲೇ ಬನ್ನಿ, ಚೌಕಿಯಲ್ಲಿ ನಿಮ್ಮನ್ನು ಬಿಡಲು ಸೂಚಿಸುತ್ತೇನೆ” ಎಂದರು. ಹೀಗೆ ಬದಲಿ ಚಕ್ರದೊಡನೆ ಮತ್ತೆ ಜಮ್ಮುಗೆ ಮರಳಿದೆವು. ಮೂರೂವರೆ ಗಂಟೆಯ ಸುಮಾರಿಗೆ ಮತ್ತದೇ – ಬಶೀರ್ ತಪರಾಕಿ ತಿಂದ ಚೌಕಿ, ತಲಪಿದ್ದೆವು. ಆದರೆ ಪಹರೆಯ ಪಾಳಿ ಬೇರೆಯವರದಾಗಿ ವಾತಾವರಣ ತುಸು ತಿಳಿಯಾಗಿತ್ತು. ಧನಂಜಯರೇ ಮುಂದಾಗಿ ಸ್ಥಳದಲ್ಲಿದ್ದ ಅಧಿಕಾರಿಗೆ ಮೇಲಧಿಕಾರಿಯನ್ನು ಸಂಪರ್ಕಿಸಿ, ಸೂಚನೆಯನ್ನು ಕೊಡಿಸಿದ ಮೇಲೆ ಗೇಟು ತೆರೆಯಿತು.

ಸುವಿಸ್ತಾರ ಮಾರ್ಗ ಭಾರೀ ಬೆಟ್ಟಗಳ ಮುಖಾಮುಖಿಯಲ್ಲಿ ಸೊರಗುತ್ತ ಬಂದು, ರೂಪ ಕಳೆದುಕೊಳ್ಳುವ ಹಂತದಲ್ಲಿ ಕತ್ರಾ ಕವಲೂ ಬಂತು. ಅಲ್ಲಿನ ಪೋಲಿಸ್ ಚೌಕೀದಾರರು ಅದುವರೆಗಿನ ನಮ್ಮ ಪ್ರಗತಿಯನ್ನೇ ಯೋಗ್ಯತೆಯೆಂದು ಗ್ರಹಿಸಿದರೋ ಕೊಟ್ಟ ನೋಟು ಪರ್ಯಾಪ್ತವಾಯ್ತೋ ಅಂತೂ ನಮಗೆ ಶ್ರೀನಗರದ ದಾರಿ ಮುಕ್ತಗೊಂಡಿತ್ತು.

ಗಂಟೆ ನಾಲ್ಕೂವರೆ. ಎಂಟೂವರೆಯ ಅಂದಾಜಿಗೆ ತಿಂಡಿ ತಿಂದ ಮೇಲೆ ಖಾಲಿ ಚಾ ಕುಡಿಯಲೂ ಸಮಯವಿಲ್ಲದಂತೆ ಉರಿ ಬಿಸಿಲಿಗೆ ತಲೆಬಿಸಿ ಸೇರಿಸಿ ಮುಘಲ್ ದಾರಿ, ಕತ್ರ, ಶ್ರೀನಗರ ಜಪಮಾಡಿಕೊಂಡು ಸುಮ್ಮನೇ ದಾರಿ ಸವೆಸಿದ್ದಾಗಿತ್ತು. ಆದರೀಗ ಒಮ್ಮೆಲೆ ಎಲ್ಲ ಹೊರೆ ಇಳಿದಾಗ, ಹೊಟ್ಟೆಯ ತಾಳಕ್ಕೆ ಹೆಜ್ಜೆ ಹಾಕುವ ಸಂಭ್ರಮ. ಕೆಲವೇ ಮಿನಿಟುಗಳಲ್ಲಿ ದಾರಿ ಬದಿಯಲ್ಲೇ ಸಿಕ್ಕ ಡಾಬಾಕ್ಕೆ ಅಕ್ಷರಶಃ ದಾಳಿಯಿಟ್ಟೆವು. ಡಾಬಾಗಳ ಆಹಾರಕ್ರಮ ನಮ್ಮೂರ ಹೋಟೆಲ್‍ಗಳಂಥಲ್ಲ. ಸಾಮಾನ್ಯವಾಗಿ ದಿನದ ಯಾವ ಹೊತ್ತೂ ಅವರಲ್ಲಿ ಕಲಸಿದ ಹಿಟ್ಟು, ಅರೆದ ಮಸಾಲೆ, ಕೆಲವೊಮ್ಮೆ ಬೇಯಿಸಿದ ತರಕಾರಿಯೂ ಸಿದ್ಧವಿರುತ್ತದೆ. ಮತ್ತು ಅಲ್ಪ ವಿರಾಮದಲ್ಲಿ ಸ್ವಾದಿಷ್ಟ ತಿನಿಸುಗಳನ್ನು ಕೊಡುವಲ್ಲಿ ಅವರು ಸಿದ್ಧಹಸ್ತರು. ನಮ್ಮ ಅಗತ್ಯಗಳನ್ನು ಮೊದಲು ಅವರಲ್ಲಿ ಹೇಳಿದೆವು. ಅಲ್ಲಿ ಅವರದೇ ತಾಕತ್ತಿನ ಶೌಚಾಲಯ, ನೀರಿನ ವ್ಯವಸ್ಥೆಯೂ (ಕೈ ಪಂಪ್ ಹಾಕಿದ ಸಣ್ಣ ಬೋರ್ವೆಲ್) ಇತ್ತು. ನಾವು ಮೂತ್ರ ಕಳೆದು, ಬೆವರು ದೂಳು ತೊಳೆದು ಸಜ್ಜಾಗುವುದರೊಳಗೆ ಊಟ ಬಡಿಸುವುದೂ ಮೊದಲುಗೊಂಡಿತ್ತು. ಆಲೂ ಪರಾಟ, ಬೇರೆ ಬೇರೆ ತರಕಾರಿಗಳ ರಸಪಾಕಗಳೂ (ಸಬ್ಜಿ ಕರ್ರಿಗಳು) ಮೊದಲ ಸುತ್ತಿಗೆ ಬಂದವು. ಅವು ಮುಗಿಯುವುದರೊಳಗೆ ಬಿಸಿ ಅನ್ನ (ಚಾವಲ್), ತೊಗರಿ ತೊವ್ವೆಯೂ (ದಾಲ್) ಪ್ರತ್ಯಕ್ಷವಾಗಿದ್ದುವು. ಏನಲ್ಲದಿದ್ದರೂ ಔತ್ತರೇಯ ವೈಶಿಷ್ಟ್ಯದ ಉಪ್ಪಿನಕಾಯಿ – ಅಚಾರ್, ಖಡಕ್ ಎಮ್ಮೆ ಮೊಸರು ಊಟವನ್ನು ಪರಿಪೂರ್ಣಗೊಳಿಸಿತ್ತು! (ಮೊಸರು, ಉಪ್ಪಿನಕಾಯಿಯ ಜೋಡಿ ಪ್ರವಾಸದ ಉದ್ದಕ್ಕೂ ನಮಗೆ ಇಸ್ಪೀಟಾಟದ ಜೋಕರಿನಂತೆ, ಎಲ್ಲ ತಿನಿಸುಗಳಿಗೂ ಸುಖ ಸಾಂಗತ್ಯವನ್ನೇ ಕೊಡುತ್ತಿದ್ದುವು!)

ಭಾರೀ ಶೃಂಗಶ್ರೇಣಿಗಳ ಮಗ್ಗುಲಿನಲ್ಲಿ ನಮ್ಮ ಏರು ದಾರಿ ಸಾಗಿತ್ತು. ವಾಸ್ತವದಲ್ಲಿ ಇವು ಬೆಟ್ಟಗಳೇ ಅಲ್ಲ; ಗೋಲಿಗಾತ್ರದಿಂದ ಹಿಡಿದು ಲಾರಿ ಗಾತ್ರದವರೆಗಿನ ಬಂಡೆ ಗುಂಡುಗಳು ಹಾಗೂ ನುಸುಲು ಮಣ್ಣಿನ ಮಿಶ್ರಣ ಮಾಡಿ ಬಲು ಎತ್ತರಕ್ಕೊಟ್ಟಿದ ರಾಶಿ! ನಮ್ಮ ಪಶ್ಚಿಮ ಘಟ್ಟದ ಶ್ರೇಣಿಗಳಂತೆ ಶಾಂತವಾಗಿ ಕುಳಿತು, ಋತುಗಳ ಕುಸುರಿಯಲ್ಲಿ ಶತಶತಮಾನಗಳಿಂದ ತೀಡಿಸಿಕೊಂಡು ಅಲೆಅಲೆಯಾಗಿ ಕಾಣುವ ಏಣುಗಳೂ ಹಂತಹಂತವಾಗಿ ಇಳಿದು ಬಯಲಾಗುವ ಗುಡ್ಡ, ದಿಣ್ಣೆಗಳೂ ಅಲ್ಲೊಮ್ಮೆ ಇಲ್ಲೊಮ್ಮೆ ಜಲಪಾತವಾಗಿ ಅಬ್ಬರಿಸಿದರೂ ಜುಳುಜುಳಿಸುವ ತೊರೆ ನದಿಗಳೂ ಎಲ್ಲಕ್ಕು ಮುಖ್ಯವಾಗಿ ಜಟಿಲ ಹಸಿರೂ ಸೇರಿದಂತೆ ಜೀವವೈವಿಧ್ಯ ಇಲ್ಲಿ ಇಲ್ಲ. ನೂರಾರಲ್ಲ ಸಾವಿರಾರು ಅಡಿ ಎತ್ತರಕ್ಕೆ ಒಂದೇ ರಾಶಿ. ಹುಲ್ಲು, ಸಣ್ಣಪುಟ್ಟ ಪೊದರು ಬಿಟ್ಟರೆ ಎಲ್ಲೋ ತುಸು ದೃಢ ಭಾಗಗಳಲ್ಲಿ ಸೂಚಿಪರ್ಣೀ ಮರಗಳ ಕಾಡು. ಬೆಟ್ಟಗಳ ಮೈಯನ್ನು ಸೀಳಿ ಬರುವ ಝರಿಗಳು, ಪಾತಾಳದಲ್ಲಿನ ಪಾದವನ್ನು ಮಗುಚುವಂತೆ ಕೊರೆಯುವ ಸೆಳವಿನ ತೊರೆಗಳು. ಸಣ್ಣ ಮಳೆಗೂ ಹೊಳೆಯ ಪುಟ್ಟ ಸೊಕ್ಕಿಗೂ ಬೆಟ್ಟವೆಂಬ ರಾಶಿ ಎಲ್ಲೂ ಕುಸಿಯಬಹುದು, ಎಷ್ಟೂ ಮಗುಚಿಕೊಳ್ಳಬಹುದು. ಇವುಗಳೆಡೆಯಲ್ಲಿ ಹೇಗೋ ದಾರಿ ಕಡಿದಿದ್ದಾರೆ. ಅದಕ್ಕೂ ಮಿಗಿಲಾಗಿ ನದಿಪಾತಳಿಯಿಂದ ಶಿಖರದೆತ್ತರದವರೆಗೂ ನಾವು ಊಹಿಸದಿದ್ದಲ್ಲೆಲ್ಲ ಒಳದಾರಿ, ಕಾಲುಸೇತುವೆಗಳನ್ನಿಟ್ಟು ಸಂಕೀರ್ಣ ಕಟ್ಟಡಗಳು, ವಸತಿ, ಕೃಷಿ ನಡೆಸಿದ್ದಾರೆ. ಎಷ್ಟೋ ಕೃಷಿಭೂಮಿಗಳು ಜರಿದು ಹೋದ, ಮತ್ತೆಷ್ಟಕ್ಕೋ ಮೇಲಿನ ಬೆಟ್ಟ ಕವುಚಿಬಿದ್ದು ಹೂತು ಹೋದ ಲಕ್ಷಣಗಳು ಧಾರಾಳ ಕಾಣಿಸುತ್ತವೆ. ಇಲ್ಲೆಲ್ಲ ಕಳೆದು ಹೋದ ಜೀವಗಳೆಷ್ಟೋ ಕಡಿದು ಅನಿವಾರ್ಯವಾಗಿ ಮತ್ತೆ ಹೊಸ ದಿಕ್ಕಿನಲ್ಲಿ ಪಲ್ಲವಿಸಿದ ಜೀವನಗಳೆಷ್ಟೋ! ರಾತ್ರಿಯ ವೇಳೆ ಬೆಟ್ಟಗಳ ಅನೂಹ್ಯ ಎತ್ತರದಲ್ಲಿ ವಿದ್ಯುತ್ ದೀಪದ ಮಿಣುಕು ಕಾಣುವಾಗಂತೂ ಅಲ್ಲೆಲ್ಲ ಜನ ವಸತಿಯಿದೆ ಎಂದು ನಂಬುವುದೇ ಕಷ್ಟವಾಗುತ್ತದೆ. ಮತ್ತೆ ನಾವಿದನ್ನೆಲ್ಲ ನೋಡುತ್ತಿರುವುದು ಅವರ ಅತ್ಯಂತ ಬೆಚ್ಚಗಿನ ಸಮಯದಲ್ಲಿ. ಅಲ್ಲಿ ಮಾಪಕದ ಪಾದರಸ ಸೊನ್ನೆಯಿಂದ ಎಷ್ಟೋ ಕೆಳಗೆ ಜಾರಿರುವ ಕಾಲ, ಎಲ್ಲವೂ ಹಿಮದ ಬಿಳಿಹೊದಿಕೆಯಡಿಯಲ್ಲಿ ಹೂತುಗೊಳ್ಳುವ ಋತುವನ್ನು ಕಲ್ಪಿಸಿಕೊಂಡರೆ, ನಮ್ಮ ಪಶ್ಚಿಮ ಘಟ್ಟದ ಮೂಲೆ ಮೊಡಕಿನ ಹಳ್ಳಿಗೆ ಹಚ್ಚುವ ವಿಶೇಷಣ – ಕುಗ್ರಾಮ, ಕೊಂಪೆ, ನಿಜಕ್ಕೂ ಉತ್ಪ್ರೇಕ್ಷೆಯೇ ಸರಿ.

ಒಂದೆಡೆ ನೂರಾರು ಮೀಟರ್ ಉದ್ದಕ್ಕೆ ದಾರಿ ಕುಸಿದು ಬಿದ್ದಿತ್ತು. ಅದನ್ನು ಕೆಲವು ದಿನಗಳ ಶ್ರಮದಲ್ಲಿ ತತ್ಕಾಲೀನ ಮುಕ್ತಗೊಳಿಸಿದ್ದೂ ಸ್ಪಷ್ಟವಿತ್ತು. ಅವನ್ನು ಕಳೆದ ಏಣಿನಾಚೆ, ಒಂದು ಭಾರೀ ಝರಿಯಂಚಿನಲ್ಲಿ ಎರಡು ಮೂರೇ ಅಂಗಡಿಗಳ ಜನವಸತಿ ಕಾಣಿಸಿತು. ಅಲ್ಲಿ ನಮ್ಮ ಪಂಚೇರಾದ ಚಕ್ರವನ್ನು ಸರಿಪಡಿಸಿಟ್ಟುಕೊಳ್ಳಲು ನಿಲ್ಲಿಸಿದೆವು. ಝರಿ (ತರಡ್ – ಅದರ ಹೆಸರು) ಕುಶಿವಾಸಿ ಎರಡೂ ದಂಡೆಗಳನ್ನು ಕೊರೆದುಕೊಂಡು ಹರಿದಿತ್ತು. ನಮ್ಮ ದಾರಿ ಬಹಳ ಉದ್ದದ ಪೀಠಿಕೆ ಮತ್ತು ಅನುಬಂಧ ಹೊತ್ತ, ರದ್ದಿ ಪುಸ್ತಕದಂಥ ಸೇತುವೆಯಲ್ಲಿ ಆಚೆ ದಾಟಿತ್ತು. ಆ ಸೇತುವೆಗೂ ಮುನ್ನ ದಾರಿಯ ಎತ್ತರ ಮತ್ತು ಮಗ್ಗುಲಿನಲ್ಲೇ ಒಂದು ಬೆಟ್ಟದ ಒರತೆ ಇದ್ದಿರಬೇಕು. ಅದು ಯಥಾನುಶಕ್ತಿ ರಸ್ತೆಯನ್ನು ಅಸ್ಥಿರಗೊಳಿಸೀತೆಂಬುದನ್ನು ಮಾರ್ಗಕಾರರು ಕಂಡಿರಬೇಕು. ಹಾಗಾಗಿ ಅದರ ಕಣ್ಣನ್ನು ಸರಿಯಾಗಿ ಬಿಡಿಸಿ, ಭದ್ರ ಕೊಳವೆ ತುರುಕಿಸಿ, ಸುತ್ತು ಬಹಳ ವಿಸ್ತಾರಕ್ಕೆ ಬಿಗಿ ಕಲ್ಲನ್ನು ಸಿಮೆಂಟಿನಲ್ಲಿ ಕಟ್ಟಿದ್ದರು. ಕೊಳವೆಯಲ್ಲಿ ಸುರಿದ ನೀರಿಗೆ ಪುಟ್ಟ ತೊಟ್ಟಿ, ಹೆಚ್ಚುವರಿ ನೀರು ಕೆಳಗಿನ ಹೊಳೆಗೆ ಹರಿದುಹೋಗಲು ಬಿಗಿ ಚರಂಡಿಯೂ ಇತ್ತು. ಸೇತುವೆಯ ಆಸುಪಾಸಿನ ಜನಕ್ಕೆ ಸಹಜವಾಗಿ ಆ ತೊಟ್ಟಿ ನಿರಾತಂಕ ನೀರಿನ ಮೂಲವಾಗಿತ್ತು.ಓರ್ವ ಹಿರಿಯ ಅಲ್ಲಿಂದ ದೊಡ್ಡ ತಪಲೆಯಲ್ಲಿ ನೀರು ಹೊತ್ತು ದುಕಾನುಗಳಾಚಿನ ಕಣಿವೆಗಿಳಿಯುವುದನ್ನು ನಾನು ಗಮನಿಸಿದೆ. ಆತ ನೇರ ಸವಕಲು ಜಾಡಿನಲ್ಲಿ ಇನ್ನೂರು ಮುನ್ನೂರಡಿ ಇಳಿದು, ಕುರುಚಲು ಕಾಡಿನಲ್ಲಿ ಮರೆಯಾದ. ನನ್ನ ಹುಡುಕು ನೋಟ ಚೂಪಾದಾಗ ಅಲ್ಲಿ ನೆಲದೊಡನೆ ಸೇರಿಹೋದ ಹಾಗೊಂದು ಸಿಮೆಂಟ್ ಶೀಟ್ ಹೊದಿಸಿದ ಮನೆ ಕಾಣಿಸಿತು. ಶೀಟು ಗಾಳಿಗೆ ಹಾರಿ ಹೋಗದಂತೆಯೂ ಬಿಸಿಲ ಕಾಲಗಳಲ್ಲಿ ಒಳಗೆ ಬೇಗೆ ಹೆಚ್ಚದಂತೆಯೂ ಮೇಲೆ ಸಾಲುಗಟ್ಟಿ (ಕೆಳಗಿನ ಗೋಡೆಗಳ ಆಧಾರ ಹೊಂದಿಸಿಕೊಂಡದ್ದಿರಬೇಕು) ದಪ್ಪಕ್ಕೆ ಮಣ್ಣು ಹೇರಿದ್ದರು. ಮುಂದುವರಿದ ನೋಟದಲ್ಲಿ, ದಾರಿಯಂಚಿನಿಂದ ಆ ಮನೆಯವರೆಗೆ ಕೆಲವು ಹಿಮ್ಮುರಿ ತಿರುವುಗಳ ಕಚ್ಚಾ ದಾರಿ ಮಾಡಿಕೊಂಡಂತೆಯೂ ಕಾಣಿಸಿತು. ನಮ್ಮ ಕೊಟಚಾದ್ರಿ ಏರುವಲ್ಲಿ ಒಂದೆಡೆ ಸುಮಾರು ನಲ್ವತ್ತೆಂಟು ಹಿಮ್ಮುರಿಗಳನ್ನುತ್ತರಿಸುವ ದಾರಿ ಬರುತ್ತದೆ ನೋಡಿ, ಹಾಗೆ. (ಕೊಟಚಾದ್ರಿಯ ಸುತ್ತ ಮುತ್ತ) ಆದರೆ ಮರುಕ್ಷಣದಲ್ಲಿ, ಅದರದೇ ತೀರಾ ಕೆಳ ಹಂತದಲ್ಲೊಬ್ಬ ಹುಡುಗ ಎರಡು ಎತ್ತು ಕಟ್ಟಿ `ದಾರಿ’ಯುದ್ದಕ್ಕೆ ನೇಗಿಲು ಎಳೆಸುವುದೂ ಕಾಣಿಸಿತು. ವಾಸ್ತವದಲ್ಲಿ ಅದು ದಾರಿಯಲ್ಲ, ಎರಡು ಅಥವಾ ಮೂರು ಸಾಲು ಉಳುಮೆಗಷ್ಟೇ ಸಿಗಬಲ್ಲ ಅಗಲದ ಹೊಲ. ನೆಲದ ಅಸ್ಥಿರತೆ ಮತ್ತು ತೀವ್ರ ಕಟ್ಟೇರುಗಳನ್ನು ಲೆಕ್ಕ ಹಾಕಿ ಈ ವಲಯಗಳಲ್ಲೆಲ್ಲ ಹೀಗೇ ಮಜಲು ಕೃಷಿಯಷ್ಟೇ ಸಾಧ್ಯವಂತೆ. ಭಾರೀ ತಟ್ಟುಗಳನ್ನು ಮಾಡುವುದು ಮತ್ತವನ್ನು ಉಳಿಸಿಕೊಳ್ಳುವುದು ಅಸಾಧ್ಯವೇ ಸರಿ. ದಾರಿಯಂಚುಗಳಿಗೆ, ಕಟ್ಟಡಗಳಿಗೆ ದೃಢ ಅಡಿಪಾಯ ಎಂದು ಅಂದಾಜಿಸಿದ ಲೆಕ್ಕಾಚಾರವನ್ನೆಲ್ಲ ತಲೆಕೆಳಗೆ ಮಾಡಿದ ನಿದರ್ಶನಗಳನ್ನು ನಾವು ಎಷ್ಟೂ ಕೇಳಿದ್ದಿತ್ತು, ಈಗ ನೋಡುತ್ತಿದ್ದೆವು. ಹಿಮಾಲಯದ ಸೆರಗಿನಲ್ಲೇ ಇಂಥದ್ದೇ ಭಾರೀ ಕುಸಿತ ಹೊಳೆಯೊಂದರ ಪೂರ್ಣ ಅಡ್ಡಲಾಗಿ ಬಿದ್ದು, ತತ್ಕಾಲೀನ ಅಣೆಕಟ್ಟು ನಿರ್ಮಾಣವಾದ ಘಟನೆಗಳನ್ನು ಎಷ್ಟೂ ಕೇಳಿದ್ದೇವೆ.

ಈ ಅಣೆಕಟ್ಟು ಮನುಷ್ಯನ ಎಲ್ಲ ನಿಯಂತ್ರಣ ತಂತ್ರಗಳನ್ನು ನಿರರ್ಥಕಗೊಳಿಸಿ ಕೆಲವು ದಿನಗಳವರೆಗೆ ಭಾರೀ ಸರೋವರವನ್ನೇ ನಿಲ್ಲಿಸಿಬಿಡುತ್ತವೆ. ಮತ್ತೆ ಅಷ್ಟೇ ಅನಿರೀಕ್ಷಿತವಾಗಿ ತನ್ನದೇ ಭಾರಕ್ಕೆ ಒಡೆದು, ಕೆಳದಂಡೆಯಲ್ಲಿ ಜನಜೀವನಕ್ಕೆ ಅಪಾರ ನಷ್ಟ ಮಾಡುತ್ತದೆ. ಮುಂದುವರಿದು ಇನ್ನಷ್ಟು ಬೆಟ್ಟಗಳೆಂಬ ಮಹಾರಾಶಿಗಳ ಬುಡ ಕೊರೆದು ಕಟ್ಟೆ, ಕುಸಿತಗಳ ಸರಣಿಯನ್ನೇ ನಡೆಸುತ್ತಿರುತ್ತದೆ. ನಾವೇನೋ ಅಲ್ಲಿನ ಬೇಸಗೆಯ ಮೊದಲ ಪಾದದಲ್ಲಿದ್ದೆವು. ಈಗಿನ ಜೀವಪೋಷಕ ಬೆಳೆ, ಆದಾಯದಾಯಕ ಉದ್ದಿಮೆ, ಆರೋಗ್ಯ, ಸಂಚಾರಗಳನ್ನೆಲ್ಲ ಹೆಚ್ಚುಕಡಿಮೆ ಪೂರ್ಣ ಸ್ಥಗಿತಗೊಳಿಸುವ ಹಿಮಾಚ್ಛಾದನೆಯ ಕಾಲದಲ್ಲೂ ಅವರ ಜೀವನೋತ್ಸಾಹ ಕಡಿಮೆಯಾದಂತೆ ಕಾಣಲಿಲ್ಲ. ಕಾಶ್ಮೀರಿ ಖ್ಯಾತಿಯ ಶಾಲು, ಸ್ವೆಟ್ಟರಾದಿ ಉಣ್ಣೆ ಉತ್ಪನ್ನಗಳು, ಕುಸುರಿಗೆಲಸಗಳಿಗೆ ಮೂಲವೆಂಬಂತೆ ಬಹು ದೊಡ್ಡ ಸಂಖ್ಯೆಯಲ್ಲಿ ಪಶುಸಂಗೋಪನ ನಡೆಸುತ್ತಾರೆ. ದಾರಿಯಲ್ಲಿ ನಮಗೆ ಸಿಕ್ಕ ಮೇಯಿಸಿಕೊಂಡು ಹೋಗುತ್ತಿದ್ದ ಸಿಗುತ್ತಿದ್ದ ಕುರಿ, ಆಡು, ಎಮ್ಮೆಗಳ ಹಿಂಡು ಅಸಂಖ್ಯ. (ನಮ್ಮಲ್ಲಿ ಜಾನುವಾರು ಸಾಕಣೆ, ಆರೈಕೆಗೆ `ಪ್ರಯೋಗಶಾಲಾ’ ಪರಿಸ್ಥಿತಿಗಳಿದ್ದರೂ ಲೆಕ್ಕಾಚಾರದ ಬುದ್ಧಿವಂತಿಕೆಗಳಲ್ಲಿ, ಸ್ವಾತಂತ್ರ್ಯದ ವಿಶಿಷ್ಟ ಕಲ್ಪನೆಗಳಲ್ಲಿ ಹಾಲಿಗೆ ನಂದಿನಿಯ ತೊಟ್ಟೆ ಹಿಂಜುವವರೇ ಹೆಚ್ಚು!) ಇರುವ ಸಣ್ಣ ಪ್ರವಾಸೀ ಶ್ರಾಯದಲ್ಲಿ ಬರುವ ಎಲ್ಲರಿಗೂ ಕೂಡಿತಾದ ಸೌಕರ್ಯ ಕೊಟ್ಟು, ಗರಿಷ್ಠ ಆದಾಯ ಗಳಿಸುವ ಪ್ರಯತ್ನಗಳನ್ನೂ ಕಾಶ್ಮೀರಿಗಳು ಮಾಡುತ್ತಾರೆ. ಅಂದರೆ ಇಲ್ಲಿನವರು ವೈಯಕ್ತಿಕ ಪರಿಣತಿಯ ತರತಮಗಳನ್ನಿಟ್ಟುಕೊಳ್ಳದೆ ದುಡಿಯುತ್ತಾರೆ ಎನ್ನುವುದಕ್ಕೆ ನಮ್ಮ ಸಣ್ಣ ಪ್ರವಾಸಾವಧಿಯ ಅನುಭವದಲ್ಲಿ ಎರಡೇ ನಿದರ್ಶನ ಕೊಡುತ್ತೇನೆ: ಆತ ಪ್ರಫುಲ್ಲ ವಾತಾವರಣದಲ್ಲಿ ದಾಲ್ ಸರೋವರದ ತನ್ನ ದೋಣಿ-ದುಕಾನಿನಲ್ಲಿ ಹ್ಯಾಂಡ್ ಮಶೀನ್ ಇಟ್ಟುಕೊಂಡು, ಬಟ್ಟೆಯ ಮೇಲೆ ಕುಸುರಿ ಮಾಡುವ ದರ್ಜಿ. ಉಳಿದಂತೆ ಹೊಲದಲ್ಲಿ ಗುದ್ದಲಿ ಹಿಡಿದು ಹೊರಡುತ್ತಾನಂತೆ. ಪೆಹಲ್ಗಾಂನಲ್ಲಿ ಪ್ರವಾಸೀ ಜೀಪೋಡಿಸುವ, ಸ್ವತಃ ಜೀಪಿನ ಯಜಮಾನನಾದರೂ ಉಳಿದ ಸಮಯದಲ್ಲಿ ಗೃಹೋಪಯೋಗಕ್ಕೂ ಸೇರಿದಂತೆ ಬೆಟ್ಟ ಸುತ್ತಿ ಸೌದೆ ಸಂಗ್ರಹಿಸುತ್ತಾನೆ.

ಅಂತಾರಾಷ್ಟ್ರೀಯ ರಾಜಕೀಯ, ಮತೀಯ ವ್ಯಾಜ್ಯಗಳೇನೇ ಹೇಳಲಿ ಪ್ರವಾಸೋದ್ಯಮ ಇಲ್ಲಿನ ಬಹು ದೊಡ್ಡ ಧರ್ಮ, ಮುಖ್ಯ ಜೀವನೋಪಾಯ. ಅದರ ಬಹುದೊಡ್ಡ ಅಂಶವನ್ನು ಪೂರೈಸುವ `ಭಾರತೀಯ’ವನ್ನು ಕಾಶ್ಮೀರಿಗಳು ಅವಶ್ಯ ಗೌರವಿಸುತ್ತಾರೆ. ಕೆದಕಿ ಕೇಳಿದರೆ, ಇಡಿಯ ಭಾರತವನ್ನು ನಡೆಸುತ್ತಿರುವ ಲಂಚ, ಅದಕ್ಷತೆಗಳೇ ಪ್ರಾಕೃತಿಕವಾಗಿ ಪ್ರತ್ಯೇಕವಾಗಿರುವ ಮತ್ತು ವಿಶಿಷ್ಟವಾಗಿರುವ ತಮಗೂ ಅನ್ವಯಿಸುವುದಾದರೆ ಕಾಶ್ಮೀರ ಸ್ವತಂತ್ರವಾಗಲಿ ಎಂದೇ ಬಯಸುತ್ತಾರೆ. ಪಾಕಿಸ್ತಾನದ ಮೇಲೆ ಇವರಿಗೆ ಖಂಡಿತಾ ಮತೀಯ ಮೋಹವಿಲ್ಲ, ಇತ್ತ ನಮ್ಮ ಮೇಲೆ (ಇತರ ಭಾರತೀಯರು ಅನ್ನಿ) ದ್ವೇಷ ನನ್ನ ಅರಿವಿಗೆ ಬರಲಿಲ್ಲ. ಜಮ್ಮು ಬಿಟ್ಟು ಕತ್ರಾದಲ್ಲಿ ಕೊನೆಗೊಂಡಂತೆ ನಮ್ಮ ಪ್ರವಾಸದುದ್ದಕ್ಕೆ ಒದಗಿದ ಎಲ್ಲ ಹೋಟೆಲ್, ಆಹಾರ ಪೂರೈಕೆ ಮತ್ತು ವಾಹನ ಚಾಲಕರೇ ಮೊದಲಾದ ಸಹಾಯಕರು ಮತೀಯವಾಗಿ ಮಾತ್ರ ಮುಸ್ಲಿಮರು (ನಾನು ಕುರಿತು ವಿಚಾರಿಸಲಿಲ್ಲ, ಹೆಸರುಗಳು ಹೇಳುತ್ತಿದ್ದುವು) ಸಂಬಂಧದಲ್ಲಿ ಶುದ್ಧ ಪೂರೈಕೆದಾರರು ಮಾತ್ರ. ನೇತ್ರಾವತಿ ಮೇಲಿನ ಅರ್ಕುಳದ ದೋಣಿ ಸಾಯ್ಬ ದೇವಂದ ಬೆಟ್ಟದ ಬ್ರಹ್ಮಕಲಶಕ್ಕೆ ನನ್ನನ್ನು ಸಹಜವಾಗಿ ಆಹ್ವಾನಿಸಿದ್ದು ಮತ್ತೆ ಮತ್ತೆ ನೆನಪಿಗೆ ಬರುತ್ತಿತ್ತು.

ಗಗನಮಾರ್ಗವಲ್ಲದಿದ್ದರೆ ಶ್ರೀನಗರ ಮತ್ತು ಆಚಿನ (ಕಾರ್ಗಿಲ್, ಲೇಹ್ ಲಡಾಕ್ ಮುಂತಾದ) ಎಲ್ಲ ನಾಗರಿಕ, ಸೈನ್ಯ ಪೂರೈಕೆಗಳಿಗೂ ನಾವನುಸರಿಸಿದ ದಾರಿಯೊಂದೇ ಸಂಪರ್ಕ ಸಾಧನ. ಹೀಗಾಗಿ ತಡವಾಗಿ ಹೊರಟ ನಮಗೆ (ಬೇಗ ಹೊರಟು ಪರವಾನಗಿ ಗಿಟ್ಟಿಸಿದ ಬಹುತೇಕ ಸಣ್ಣ ವಾಹನಗಳೆಲ್ಲ ಬಹಳ ಮುಂದಾಗಿಯೇ ಲಕ್ಷ್ಯ ಸಾಧಿಸಿದ್ದಿರಬೇಕು.) ಹಿಂದಿಕ್ಕಿದಷ್ಟೂ ಮುಗಿಯದ ಲಾರಿಗಳ ಸಾಲು. ಎರಡು ಸಾಲಿನಿಂದ ಹಿಡಿದು ಆರು ಸಾಲು ಚಕ್ರದವರೆಗಿನವು, ವಿಚಿತ್ರ ಗಾತ್ರ ಮುಖವರ್ಣಿಕೆಯವು, ಕಾಕು ಅಬ್ಬರದವು – ದೇವಿ ಮಹಾತ್ಮ್ಯೆ ಯಕ್ಷಗಾನದಲ್ಲಿ ಬರುತ್ತಿದ್ದ ರಕ್ಕಸರ ಪಡೆಯಂತೇ ಭಾಸವಾಗುತ್ತಿತ್ತು. ಭೂಕುಸಿತದಿಂದ ಇಕ್ಕಟ್ಟಾದ ಜಾಗಗಳಲ್ಲಿ ಅವು ದಾಟುವ ಸಂಕಟಗಳಲ್ಲಿ ಕೆಲವೊಮ್ಮೆ ಕಾಲು, ಅರ್ಧ ಗಂಟೆಯೇ ಕಳೆದುಹೋಗುತ್ತಿತ್ತು. ಇದರರಿವಿದ್ದೇ ಎನ್ನುವಂತೆ ಅಲ್ಲಿ ಹಗಲಿನ ಬೆಳಕು ಸಂಜೆ ಸುಮಾರು ಏಳೂವರೆ ಎಂಟರವರೆಗೂ ನಮ್ಮನ್ನು ಬಿಟ್ಟುಕೊಡಲಿಲ್ಲ. ದೂಳು, ಮೈಕೈ ಗುದ್ದು, ಒಮ್ಮೊಮ್ಮೆ ಕೆದರಿಕೊಳ್ಳುತ್ತಿದ್ದ ಅಸಹನೆ ಎಲ್ಲವನ್ನೂ ನಮ್ಮ ಚಾಲಕ ಬಶೀರನ ನಿರಪಾಯ ನಿರ್ವಹಣೆಗಾಗಿ ನುಂಗಿಕೊಳ್ಳುತ್ತಿದ್ದೆವು. ಅದಕ್ಕೂ ಮಿಗಿಲಾಗಿ ಏನೋ ಮಾಡಿ ಇಷ್ಟಾದರೂ ಬಂದೆವು, ಇಲ್ಲವಾದರೆ ಪ್ರವಾಸ ಯೋಜನೆಯೇ ಅಡಿಮೇಲಾಗಿ ಜಮ್ಮುವಿನಲ್ಲೇ ಇರಬೇಕಿತ್ತಲ್ಲಾ ಎನ್ನುವ ಸಮಾಧಾನ.

ಹೆದ್ದಾರಿಯಲ್ಲಿ ಮೊದಲು ಒಂದೆರಡು ಗುಹಾಮಾರ್ಗಗಳು ಸಿಕ್ಕಿದ್ದಿತ್ತು; ಸಣ್ಣವು. ಶ್ರೀನಗರ ಸಮೀಪಿಸುತ್ತಿದ್ದಂತೆ ಖ್ಯಾತ ಜವಾಹರಲಾಲ್ ನೆಹರೂ ಜೋಡಿ ಗುಹಾಮಾರ್ಗವೂ ಸಿಕ್ಕಿತು. ಸುಮಾರು ಅರವತ್ತು ವರ್ಷಗಳ ಹಿಂದೆ, ಜರ್ಮನ್ ತಜ್ಞರ ಉಸ್ತುವಾರಿಯಲ್ಲಿ ರೂಪುಗೊಂಡ ಈ ಜೋಡಿ, ದಿನಕ್ಕೆ ಸುಮಾರು ನೂರೈವತ್ತೇ ವಾಹನಗಳನ್ನು ಪಾರುಗಾಣಿಸುತ್ತಿತ್ತಂತೆ. ಆದರೆ ನಾಲ್ಕೈದು ವರ್ಷಗಳಲ್ಲೇ ಬೀಯಾರ್ವೋ (ಗಡಿ ರಸ್ತೆ ನಿರ್ಮಾಣಾ ಸಂಸ್ಥೆ) ಪರಿಷ್ಕರಣೆಗೊಳಿಸಿದ ಮೇಲೆ ಇಂದು ದಿನಕ್ಕೆ ಸುಮಾರು ಏಳುಸಾವಿರಕ್ಕೂ ಮಿಕ್ಕು ವಾಹನಗಳನ್ನು ದಿನದ ಎಲ್ಲಾ ವೇಳೆಯಲ್ಲೂ ಪಾರುಗಾಣಿಸುತ್ತದಂತೆ. ಪಾಕಿಸ್ತಾನದೊಡನೆ ನಮ್ಮ `ಮಧುರಸಂಬಂಧ’ ಹಾಗೂ ಆಂತರಿಕ ಭಯೋತ್ಪಾದಕರ `ಪ್ರೀತಿ’ ಇದನ್ನೆಂದು ಹಾಳುಗೆಡವೀತೆಂಬ ಭಯ ಸಹಜವಾದದ್ದು. ಹಾಗಾಗಿ ಆ ಪರಿಸರದಲ್ಲಿ ನಿಲ್ಲ ಬಾರದು, ಚಿತ್ರ ತೆಗೆಯಬಾರದು, ಪ್ರವೇಶಕ್ಕೆ ಮುನ್ನ ಜನ, ವಾಹನಗಳ ಬಿಗಿ ತಪಾಸಣೆ ಇತ್ಯಾದಿ ನೂರೆಂಟು ನಿಯಮಗಳೇನೋ ಇವೆ. ಆದರೆ ಅಲ್ಲೂ ನಿಯಮಗಳು ಪಾಲಕರ ಹೆಚ್ಚಿನ ಆದಾಯಕ್ಕಾಗಿ ದುರುಪಯೋಗಗೊಳ್ಳುವುದೇ ಕಂಡು ತೀರಾ ವಿಷಾದವಾಯ್ತು. ನಮ್ಮ ಚೀಲ ಚೀಲಗಳನ್ನು ಬಿಚ್ಚಿ ಪೋಲಿಸರು ತನಿಖೆ ಮಾಡುವ ಸಮಯ ಮತ್ತು ಮುಜುಗರ ತಪ್ಪಿಸಿಕೊಳ್ಳುವಲ್ಲೂ `ವಸೂಲಿ’ ಕೆಲಸ ಮಾಡುವುದು ನೋಡಿ ನಮಗೆ ಮಾತಿಲ್ಲವಾಯ್ತು. ಜಮ್ಮು ಬಿಡುವಾಗಿನಿಂದ ತೊಡಗಿ ಪ್ರವಾಸ ಮುಗಿಸಿ ಮರಳುವವರೆಗೆ ಅಸಂಖ್ಯ ಪೋಲಿಸ್ ಚೌಕಿಗಳಲ್ಲಿ ನಮ್ಮ ನಿರ್ವಾಹಕ ಕೊಟ್ಟ ಲಂಚಗಳ ಲೆಕ್ಕ ಸಾಕಷ್ಟು ದೊಡ್ಡದೇ ಇದೆ. ಇಲ್ಲೆಲ್ಲ ವೈಯಕ್ತಿಕವಾಗಿ ನಮ್ಮ ತಾತ್ತ್ವಿಕ, ನೈತಿಕ ನಿಲುವುಗಳೇನಿದ್ದರೂ ಗುಂಪಿನ ಹಿತದಲ್ಲಿ ಸೋತುಹೋಯ್ತು! ಹಿಂದೆ ನನ್ನದೇ ವ್ಯವಸ್ಥೆಯಲ್ಲಿ ಭಾರತ ಸುತ್ತಿದಾಗ ಇಂಥವೇ ಹಲವು ಪ್ರಸಂಗಗಳು (ಉದಾ: ಮಸ್ಸೂರಿಯಲ್ಲಿ `ಪಹಾಡ್ ಕಾ ಲೈಸೆನ್ಸ್’, ಕೊಲ್ಕೊತ್ತಾದಲ್ಲಿ ಈಶ್ವರಚಂದ್ರ ವಿದ್ಯಾಸಾಗರ ಸೇತುವಿನ ಮೇಲೆ ಫೋಟೊ ತೆಗೆದದ್ದು ಇತ್ಯಾದಿ) ಒದಗಿದರೂ ನಾವು ಸತ್ಯದ ಬಲದ ಮೇಲೆ ಗೆದ್ದು ಬಂದಿದ್ದೆವು ಎನ್ನುವುದು ಕೇವಲ ಮಧುರ ನೆನಪು; ಖಂಡಿತಾ ವರ್ತಮಾನದ ಸೋಲಿಗೆ ಸಮಜಾಯಿಷಿಯಲ್ಲ.

ಶ್ರೀನಗರ ಸಮೀಪಿಸುತ್ತಿದ್ದಂತೆ ದಾರಿಯ ಇಕ್ಕೆಲಗಳಲ್ಲಿ, ಸಣ್ಣಪುಟ್ಟ ತಟ್ಟು ಅಂಗಳಗಳಲ್ಲೆಲ್ಲ ಅಸಂಖ್ಯ ಲಾರಿಗಳು ತಂಗಿರುವುದನ್ನು ಕಂಡೆವು. ಕಿಲೋಮೀಟರ್‍ಗಟ್ಟಳೆ ನಿಂತ ಅವುಗಳ ಲೆಕ್ಕ ತೆಗೆದರೆ ಭಾರತದ ಎಲ್ಲಾ ಲಾರಿಗಳೂ ಸಿಕ್ಕಿಬಿದ್ದಿವೆ ಎಂದರೆ ಅತಿಶಯೋಕ್ತಿ ಅನ್ನಿಸದಷ್ಟೂ ದೊಡ್ಡ ಸಂತೆ ಅಲ್ಲಿತ್ತು. ನನ್ನ ಅಂದಾಜಿನಂತೆ ಅವು ಬಹುತೇಕ ಹೊರೆ ತಂದು ಖಾಲಿ ಮಾಡಿ, ಮರಳುವ ದಾರಿಯಲ್ಲಿ ಏಕಮುಖ ಸಂಚಾರದಲ್ಲಿ ಸರದಿ ಕಾಯುತ್ತಿದ್ದಿರಬೇಕು. ಇವುಗಳ ಎಡೆಯಲ್ಲೇ ಎಲ್ಲೋ ಡಾಬಾದಲ್ಲಿ ನಮ್ಮ ರಾತ್ರಿಯ ಊಟದ ಉಪಚಾರವನ್ನು ಮುಗಿಸಿದೆವು. ಅದು ಅಂದು ನಮ್ಮ ಮಧ್ಯಾಹ್ನದ ಊಟದ ಸಮಯದ ಅಂತರದಲ್ಲಿ ನೋಡಿದಾಗ ನ್ಯಾಯವೇ ಇತ್ತು – ಹನ್ನೊಂದೂವರೆ ಗಂಟೆ! ಲಾರಿಸಾಗರವನ್ನು ಬಲು ಕಷ್ಟದಲ್ಲಿ ಈಜಿ, ಶ್ರೀನಗರ ಪೇಟೆ ಸೇರಿ, ಪೂರ್ವಯೋಜಿತ ಹೋಟೆಲ್ – ಶನೀಲ್ ರೆಸಿಡೆನ್ಸಿ ಸೇರುವಾಗ ಬೆಳಗ್ಗಿನ ಜಾವ ಮೂರು ಗಂಟೆ!

[ಎಣ್ಣೆ ಮಸಾಜ್, ಬಿಸಿನೀರ ಸ್ನಾನ, ಗಡದ್ದು ನಿದ್ರೆಯಿಂದ ಪ್ರಯಾಣಾಯಾಸವನ್ನು ಪರಿಹರಿಸಿಕೊಂಡು ಬನ್ನಿ. ಮುಂದಿನ ಶುಕ್ರವಾರ ಮುಂದುವರಿಸುತ್ತೇನೆ]