(ದಕ್ಷಿಣ ಭಾರತ ತೀರ್ಥಯಾತ್ರಾ ಪ್ರಸಂಗ ಅಧ್ಯಾಯ – ಎರಡು)
ಮಾರ್ಗಾಯಾಸಕ್ಕೆ ಚಾರಣದ ಕತೆಗಳು? ನಿದ್ರೆ! ಮೂರನೇ ದಿನದ ನಮ್ಮ ಲಕ್ಷ್ಯ ಸುದೀರ್ಘ ನಾನೂರು ಕಿಮಿ! ಹಾಗಾಗಿ ಕನ್ಯಾಕುಮಾರಿಯನ್ನು ಆದಷ್ಟು ಬೇಗನೇ ಬಿಟ್ಟು, ಸಾಕಷ್ಟು ಹೆದ್ದಾರಿ ಸವೆಸಿದ ಮೇಲೆ, ದೊಡ್ಡ ಹೋಟೆಲೊಂದರಲ್ಲಿ ತಿಂಡಿಗೆ ನಿಂತಿದ್ದೆವು. ಪ್ರತ್ಯಕ್ಷ ಅನ್ನ ಕೊಟ್ಟು ಸಾಕದಿದ್ದರೂ ಇಂಥಲ್ಲಿ ಸಾಮಾನ್ಯವಾಗಿ ನಾಡಸಿಂಹಗಳು, ಅರ್ಥಾತ್ ಬೀದಿ ನಾಯಿಗಳು ಧಾರಾಳ ಠಳಾಯಿಸುತ್ತವೆ. ಅವಿಲ್ಲಿ ಕಾಣಿಸದಿದ್ದರೂ ಹೋಟೆಲಿನವರು ನಿಜ ಸಿಂಹದವನ್ನೇ ವಿಗ್ರಹರೂಪದಲ್ಲಿ ಇಟ್ಟುಕೊಂಡಿದ್ದರು! ಮುಂದುವರಿದ ಓಟದಲ್ಲಿ, ಕೆಲವರಿಂದ ಭಜನೆ, ಭಾವಗೀತೆ, ಕುಶಾಲು ಚಪ್ಪೆಯಾಗತೊಡಗಿದ ಕಾಲಕ್ಕೆ ನಾರಾಯಣ ಭಟ್ಟರು ನನ್ನನ್ನು ಎಚ್ಚರಿಸಿದರು…
ಪ್ರಸ್ತುತ ತೀರ್ಥಯಾತ್ರೆಗೆ ನಾವು ಹೆಸರು ನೋಂದಾಯಿಸಿದಂದೇ ಪೂರ್ವ ಪರಿಚಯದ ಆತ್ಮೀಯತೆಯಲ್ಲಿ, ಪ್ರಾಧ್ಯಾಪಕ ನಾರಾಯಣ ಭಟ್ಟರು “ನಮ್ಮ ಪ್ರವಾಸ ತಂಡದಲ್ಲಿ ಆತ್ಮೀಯರ ಸಂಖ್ಯೆ ದೊಡ್ಡದಿದೆ. ದಾರಿ ಸಾಗುವಾಗ ನಾವು ಹೆಚ್ಚಾಗಿ ಭಜನೆ, ಪ್ರವಚನ ನಡೆಸುವುದಿದೆ. ಈ ಬಾರಿ ನಿಮ್ಮ ವಿಶಿಷ್ಟಾನುಭವಗಳ ಹಂಚಿಕೆಯೂ ಆಗಬೇಕು…” ಎಂದ್ದಿದ್ದರು. ನಾನು ಸರಳವಾಗಿ ಒಪ್ಪಿಕೊಂಡಿದ್ದೆ. ಹಾಗೆ ನಾನು ಬಸ್ಸೋಡಿದ್ದಂತೇ ಮೈಕ್ ಹಿಡಿದು ನಿಂತು, ಮನೆಮಾತು, ಭಕ್ತಿ ಭಾವಗಳ ವಲಯದಿಂದ ತುಸು ಹೊರಗಿನ ಅನುಭವಗಳಿಗೆ ಮಾತುಕೊಟ್ಟೆ….
ಮೊದಲಿಗೆ ನಮ್ಮಿಬ್ಬರ ಪರ್ವತಾರೋಹಣ ಮತ್ತು ಪ್ರಾಕೃತಿಕ ಒಡನಾಟಗಳ ಕುರಿತು ಸಣ್ಣ ಪರಿಚಯ ನೋಟವಿತ್ತೆ. ಅದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ನಾವು ರೈಲು, ಬಸ್ಸು, ಕಾರು, ಸೈಕಲ್ಲು, ವಿಮಾನ, ಹಡಗುಗಳಲ್ಲೆಲ್ಲ ಧಾರಾಳ ಪ್ರವಾಸ ಮಾಡಿದ್ದಿದೆ. ಮೋಟಾರ್ ಸೈಕಲ್ ಯಾನದಲ್ಲಿ ನಡೆಸಿದ ಮೂರು ಭಾರತ ಯಾನಗಳು ಅವಿಸ್ಮರಣೀಯ. ಮಂಗಳೂರಿನ ಸುತ್ತಮುತ್ತ ನಾವು ನಿತ್ಯ ಎನ್ನುವಂತೆ ಹತ್ತಿಪ್ಪತ್ತು ಕಿಮೀ ನಡೆಸಿದ ಜಂಟಿ ಸೈಕಲ್ ಸವಾರಿ ನಾವು ಮರೆತರೂ ಊರ ಜನ ಮರೆತಿಲ್ಲ! ಮುಂದೆ ನಾನು ಒಂಟಿ ಸೈಕಲ್ಲೇರಿ ಜಿಲ್ಲೆಯೊಳಗೆ ಮಾತ್ರವಲ್ಲ, ಬೆಂಗಳೂರು, ಊಟಿ, ರಾಜಸ್ತಾನದವರೆಗೂ ಅನುಭವದ ಪರಿಧಿ ವಿಸ್ತರಿಸಿಕೊಂಡೆ. ಇಷ್ಟೆಲ್ಲ ಇದ್ದೂ ನನ್ನ/ನಮ್ಮ ಸುಮಾರು ಆರು ದಶಕಗಳ ಪ್ರಾಕೃತಿಕ ಒಡನಾಟಗಳಲ್ಲಿ ಅತ್ಯಂತ ಪ್ರೀತಿಪಾತ್ರವಾಗುಳಿದಿರುವುದು ಕಾಲ್ನಡಿಗೆ ಅರ್ಥಾತ್ ಚಾರಣ. ನಮ್ಮ ಯಾತ್ರಾ ಸೌಕರ್ಯ ಸರಳವಾದಷ್ಟೂ ಗಳಿಸುವ ಅನುಭವ ಸಂಪತ್ತು ದೊಡ್ಡದು. ಆ ಲೆಕ್ಕದಲ್ಲಿ ಸಮೂಹಯಾನ ಯಾವತ್ತೂ ನನಗೆ ಪ್ರಿಯವಲ್ಲ. ಮೊದಲೇ ಹೇಳಿದಂತೆ, ಇದುವರೆಗೆ ನೋಡಲಾಗದ ಸ್ಥಳಗಳ ಭೇಟಿಯ ಸಂತೋಷಕ್ಕೆಂದೇ ನಾನು ಈ ಪ್ರವಾಸಕ್ಕೆ ಸೇರಿಕೊಂಡೆ….
ಐದಾರು ಮಿನಿಟಿನ ಪೀಠಿಕೆಯ ಹೊರೆ ಹೆಚ್ಚಾಯ್ತೋ ಎಂಬ ಭಯದಲ್ಲಿ, ಉಳಿದ ಮಾತುಗಳಿಗೆ ರೋಚಕತೆ ಸ್ಪರ್ಷ ಕೊಡುವಂತೆ ಕುಮಾರಧಾರಾ ನದಿಯುದ್ದದ ನಮ್ಮೊಂದು ಚಾರಣದ ಕತೆ ಹೇಳಿದೆ. ಅಂದು ಅನಿರೀಕ್ಷಿತವಾಗಿ ಒದಗಿದ ಕಳ್ಳಬೇಟೆಯವರ ಸಾಂಗತ್ಯದ ರೋಮಾಂಚಕಾರೀ ಅನುಭವವನ್ನಂತೂ ತುಸು ವಿಸ್ತಾರದಲ್ಲೇ ಹಂಚಿಕೊಂಡು ಮಾತು ಮುಗಿಸಿದೆ. (ಆಸಕ್ತರು ಇಲ್ಲಿ ಓದಿಕೊಳ್ಳಬಹುದು: ಕುಮಾರಧಾರೆಯ ವೀರಪ್ಪನ್ಗಳೊಡನೆ). ಒಟ್ಟಾರೆ ಹತ್ತಿಪ್ಪತ್ತು ಮಿನಿಟಿನ ಮಾತಿಗೆ, ಬಸ್ಸಿನೊಳಗೆ ಸಣ್ಣ ಪ್ರೋತ್ಸಾಹಕರ ಸಂಚಲನ ಕಾಣಿಸಿತು. ಅದೇ ಧೈರ್ಯದಲ್ಲಿ ಇನ್ನೊಂದು ದಿನ, ಅಂದರೆ….
ಬಸ್ ತಂಜಾವೂರಿನ ಆಸುಪಾಸಿನಲ್ಲಿದ್ದಾಗ, ದೇವಕಿ ಬೇಡವೆಂದು ಕಾಲೆಳೆದರೂ ಕೇಳದೆ, ಮತ್ತೆ ಮೈಕ್ ಕೈಗೆತ್ತಿಕೊಂಡಿದ್ದೆ. ತಂಜಾವೂರು ಕಾವೇರಿ ಕೃಪೆಯಲ್ಲಿ ನಳನಳಿಸಿದಂತೇ ಕರ್ನಾಟಕದೊಡನೆ ಜಲವಿವಾದದಲ್ಲಿ ಆಗಿಂದಾಗ್ಗೆ ಉರಿದೇಳುವ ನೆಲವೂ ಹೌದು. ಅದನ್ನು ನೆನಪಿಸಿಕೊಂಡು, ನಾವು ಕಂಡ ಹೋಟೆಲುಗಳ ವಿಸ್ತಾರ ಅಂಗಳಗಳಲ್ಲಿ ನೀರಿಂಗಿಸದ ಕಾಂಕ್ರೀಟ್ ಹಾಸಿನ ವ್ಯವಸ್ಥೆಯನ್ನು ಸಣ್ಣದಾಗಿ ಟೀಕಿಸಿದೆ. ಮತ್ತೆ ಮುಂಡಾಸು ತಲೆಗಿಂತ ದೊಡ್ಡದಾಗದ ಎಚ್ಚರದಲ್ಲಿ, ಶರಾವತಿ ಹಿನ್ನೀರಿನಲ್ಲಿ ನಾವು ನಡೆಸಿದ ಜಲಸಾಹಸದ ರೋಚಕ ಕಥನವನ್ನೇ (ಆಸಕ್ತರು ಇಲ್ಲಿ ಓದಿಕೊಳ್ಳಬಹುದು : ಶರಾವತಿ ಸಾಗರದ ಉದ್ದಕ್ಕೆ ) ಸಣ್ಣದಾಗಿ ಹೇಳಿಕೊಂಡೆ. ನನ್ನ ಮಾತಿನ ಕೊರತೆಯೋ (ನಾನೇನೂ ವಾಗ್ಮಿಯಲ್ಲ) ಕೇಳುಗರಿಗೆ ಒತ್ತಿ ಬರುತ್ತಿದ್ದ ನಿದ್ರೆಯ ಪೀಡೆಯೋ ಕೇಳುಗರ ಸ್ಪಂದನ ದುರ್ಬಲವಿತ್ತು. ನಾನು ದೇವಕಿಯ ಮಾತು ಕೇಳಬೇಕಿತ್ತು ಅಂದುಕೊಂಡೆ. ಮುಂದೆ ಪ್ರವಚನ ಪಾಂಡಿತ್ಯ ಬಿಟ್ಟು, ಮೌನಿಯಾದೆ.
ಇನ್ಯಾವಾಗಲೋ ಬಸ್ಸಿನಲ್ಲೇ ಪರಿಸರ, ಅದರಲ್ಲೂ ಮುಖ್ಯವಾಗಿ ಪ್ಲ್ಯಾಸ್ಟಿಕ್ ಬಳಕೆಯ ಅವಗುಣಗಳ ಚರ್ಚೆ ಸಾರ್ವಜನಿಕಕ್ಕೆ ಬಂತು. ಬಾಲಣ್ಣರ ಸಹಾಯಕ ಚೇತನ್ ನನ್ನ ಬಳಿಗೆ ಮೈಕ್ ತಂದು “ನೀವು ಮಾತಾಡಬೇಕು ಸಾರ್…” ಎಂದ. ಆದರೆ ಪರ್ಯಾಯಗಳಿಗೆ ದುಡಿಯದೆ, ನಮ್ಮೊಂದೇ ಬಸ್ಸು ದಿನಕ್ಕೆ ಕನಿಷ್ಠ ನೂರು ಸಂಖ್ಯೆಯ ಕುಡಿನೀರ ಬಾಟಲುಗಳನ್ನು ಖರೀದಿಸಿ, ಬಳಸಿ, ತ್ಯಾಜ್ಯ ಕುಪ್ಪೆಹಾಕುತ್ತಿದ್ದಾಗ, ನಡೆಸುವ ಚರ್ಚೆ ಬರಿಯ ಕಾಲಹರಣ ಎನ್ನಿಸಿದ್ದಕ್ಕೆ, ನಾನು ಅಪ್ರಿಯ ಸತ್ಯ ಹೇಳುವುದಕ್ಕೆ ಹೋಗಲಿಲ್ಲ, ಮೌನ ಮುರಿಯಲಿಲ್ಲ. ಮೈಕ್ ಮೋಹದಲ್ಲಿ ಕೆಲವರು ಕೊಟ್ಟ ಕರೋಕೇ ಹಾಡಿಕೆ, ಹಾಸ್ಯೋಕ್ತಿಗಳೂ ಚಪ್ಪೆಯಾದವು. ಕನಿಷ್ಠ ಸುತ್ತಣ ಪ್ರಾಕೃತಿಕ ವಿಶೇಷಕ್ಕಾದರೂ ಕಣ್ಣಾಗಿ, ಸುಂದರ ಭಾವಗಾನ ಆಗಬಹುದಾಗಿದ್ದ ಬಸ್ ಯಾನ, ಕೇವಲ ಕಾಡು ಹರಟೆ, ಅಖಂಡ ತೂಕಡಿಕೆಗಳಲ್ಲಿ ವ್ಯರ್ಥವಾಯ್ತು ಎಂಬ ಖೇದವನ್ನು ನನ್ನಲ್ಲುಳಿಸಿತು. ಬನ್ನಿ, ಯಾತ್ರೆಯ ಮೂರನೇ ದಿನದಲ್ಲೇ ಮುಂದುವರಿಯೋಣ…
ಮೊದಲೇ ಸೂಚಿಸಿದಂತೆ, ಮಧುರೆಯತ್ತ ಸಾರಿದ್ದ ಹೆದ್ದಾರಿಯಂಚಿನ ಹೋಟೆಲಿನಲ್ಲಿ ಬೆಳಗ್ಗಿನ ತಿಂಡಿ ಮುಗಿಸಿ, ಎಲ್ಲ ಬಸ್ಸೇರುತ್ತಿದ್ದಂತೆ, ನಾನು ಸುಮ್ಮನೆ ದಾರಿಗುಂಟ ಮುನ್ನೋಟ ಓಡಿಸಿದೆ. ಚತುಷ್ಪಥಗಳು ಭೋರ್ಗರೆಯುತ್ತಾ ಒಂದು ಗುಡ್ಡ ಸಾಲನ್ನೇ ಕತ್ತರಿಸಿ ಕಣ್ಮರೆಯಾಗಿತ್ತು. ಆಶ್ಚರ್ಯಕರವಾಗಿ ಎಡ ಮಗ್ಗುಲಿನ ಕಡಿತದ ಮೇಲಂಚಿನಲ್ಲಿ ಒಂದು ಬೆಟ್ಟದಾಡಿನ (ವೈಲ್ಡ್ ಗೋಟ್/ನೀಲ್ಗಿರಿ ತಾರ್) ಭಾರೀ ಮೂರ್ತಿ ನಿಲ್ಲಿಸಿದ್ದು ಕಾಣಿಸಿತು. ವನ್ಯ ಜೀವಿಗಳು ಋತುಮಾನಕ್ಕೆ ತಕ್ಕಂತೆ ಮೇವು/ ಬೇಟೆಯರಸುತ್ತಾ ಕಾಡಿಂದ ಕಾಡಿಗೆ ಸಂಚರಿಸುವಲ್ಲಿ ರೂಢಿಗತ ಓಣಿಗಳಿರುತ್ತವೆ. “ನಾಗರಿಕತೆಯ ಮೇಲೆ ವನ್ಯ ಹಾವಳಿ” ಏರ್ಪಟ್ಟಲ್ಲೆಲ್ಲ ಹೆಚ್ಚಾಗಿ ದಾರಿ, ರೈಲು, ಕೊಳವೆ ಸಾಲು ಮುಂತಾದ ನಾಗರಿಕ ರಚನೆಗಳು ಈ ವನ್ಯ ಓಣಿಗಳನ್ನು ಕಡಿದು ಪ್ರಾಣಿಗಳನ್ನು ದಿಕ್ಕೆಡಿಸಿದ ಪ್ರಸಂಗಗಳೇ ಆಗಿರುತ್ತವೆ. ಇಲ್ಲಿ ಹೆದ್ದಾರಿ ಬೆಟ್ಟದಾಡುಗಳ ನೈಜ ಜಾಡು ಕತ್ತರಿಸಿದ್ದನ್ನೇ ಹೀಗೆ ಪ್ರಪಾತದಂಚಿನಲ್ಲಿ ನಿಂತ ವಿಗ್ರಹ ಸೂಚಿಸುತ್ತಿದೆಯೇ? …. ಬಲ್ಲವರು ತಿಳಿಸಬೇಕು.
ಮೀನಾಚ್ಚೀ ಕಲ್ಯಾಣಂ! : ಮೀಂಗಣ್ಣಿನವಳ (ಮೀನಾಕ್ಷೀ) ಊರೆಂದೇ ಖ್ಯಾತಿವೆತ್ತ ಮಧುರೈಗೆ ನಾವು ದಿನದ ಅರ್ಧ ಲಕ್ಷ್ಯ ಸಾಧಿಸಿದ್ದೆವು, ಮಧುರೈಯ ಮುಖ್ಯ ದೇವಾಲಯ ಮೀನಾಕ್ಷಿಯದ್ದು. ಅದು ಹನ್ನೆರಡನೇ ಶತಮಾನದ ಪಾಂಡ್ಯರಿಂದ ಅರಳಿ, ದಿಲ್ಲಿಯರಸರ ಹಾವಳಿಯಲ್ಲಿ ನಲುಗಿತ್ತು. ಮುಂದೆ ಹದಿನೇಳನೇ ಶತಮಾನದಲ್ಲಿ ವಿಜಯನಗರದ ಅರಸರಿಂದ ಜೀರ್ಣೋದ್ಧಾರ ಸೇವೆ ಮಾಡಿಸಿಕೊಂಡ ಖ್ಯಾತಿಯಲ್ಲಿ ಇಂದೂ ಮೆರೆದಿದೆ. ವಿಷ್ಣುವಿನ ಪೌರೋಹಿತ್ಯದೊಂದಿಗೆ ನಡೆದ ಮೀನಾಕ್ಷಿ (ಪಾರ್ವತೀ) ಮತ್ತು ಸುಂದರೇಶ್ವರರ (ಶಿವ) ವೈಭವೋಪೇತ ಮದುವೆಯನ್ನು ಕೇಂದ್ರೀಕರಿಸಿಕೊಂಡು ದೇವಳವಿಡೀ ಆವರಿಸಿದ ಶಿಲ್ಪಕಲಾವೈಭವಕ್ಕೆ ಎಷ್ಟು ಸಮಯ ಕೊಟ್ಟರೂ ಕಡಿಮೆಯೇ. ಆದರೆ ಧರ್ಮ-ವಾಣಿಜ್ಯ ಮತ್ತು ಪುರೋಹಿತಶಾಹೀಗಳ ಕಲಸು ಮೇಲೋಗರದಲ್ಲಿ ಕಾಡುವ ದರ್ಶನ ಮುಹೂರ್ತಗಳ ಅನಾವಶ್ಯಕ ವ್ಯೂಹದ ಪೂರ್ಣ ಪರಿಚಯವಿದ್ದ ಬಾಲಣ್ಣ ನಮಗೆ ಮೊದಲು ಭರ್ಜರಿ ಭೋಜನವನ್ನೇ ಕೊಟ್ಟರು. ಅನಂತರ…
ನಗರದ ಕೇಂದ್ರದಲ್ಲೇ ಇರುವ ದೇವಳಕ್ಕೆ, ಗಲ್ಲಿ ದಾರಿಗಳ ಜಾಲ ಹರಿದುಕೊಂಡು, ಬಸ್ಸು ಹೋಗುವಂತಿರಲಿಲ್ಲ. ಹಾಗಾಗಿ ನಾವು ಆಯಕಟ್ಟಿನ ಜಾಗದಲ್ಲಿ ಬಸ್ಸಿಳಿದು ನಡೆದೆವು. ಉರಿ ಬಿಸಿಲಿನ ಹೊಡೆತಕ್ಕೆ ಕಟ್ಟಡಗಳ ನೆರಳು ತಣ್ಪು ಕೊಟ್ಟರೂ ಗಲ್ಲಿಗಳ ಕೊಳಚೆ ಕುಶಿಕೊಡಲಿಲ್ಲ. ವಾಹನ ಮುಕ್ತವಾದ ಭಾರೀ ರಥಬೀದಿ ಸೇರಿ, ಪಶ್ಚಿಮದ ಮಹಾದ್ವಾರ ಮುಟ್ಟಿದಾಗ ಗಂಟೆ ಸುಮಾರು ಎರಡೂವರೆ. ‘ಕಲ್ಯಾಣ ಮಂಟಪ’ದ ಪೂರ್ವಾಹ್ನದ ಮುಹೂರ್ತ ಹನ್ನೆರಡು ಗಂಟೆಗೇ ಮುಗಿದದ್ದು ಮತ್ತೆ ಸಮನಿಸುವುದು ಸಂಜೆ ನಾಲ್ಕು ಗಂಟೆಗೇ. ಏತನ್ಮಧ್ಯೆ ದೇವಳದ ವಸ್ತ್ರ ಸಂಹಿತೆ ಮತ್ತು ಭದ್ರತಾ ನಿಯಮಗಳ ಹೊಂದಾಣಿಕೆಗೆ ಬಾಲಣ್ಣ ಖಾಸಗಿ ವ್ಯವಸ್ಥೆ ಮಾಡಿದ್ದನ್ನು ಬಳಸಿಕೊಂಡೆವು. ದೇವಳದ ಪಶ್ಚಿಮ ದ್ವಾರದ ಎದುರೇ ಇದ್ದ ಕೈಮಗ್ಗದ ಕಿರು ಮಳಿಗೆ ನಮ್ಮ ಒಂದೂವರೆ ಗಂಟೆಯ ವಿಶ್ರಾಂತಿಗೂ (ನೆರಳು, ಫ್ಯಾನ್, ಕುರ್ಚಿ, ನೀರು, ಶೌಚ…) ಮುಂದುವರಿದಂತೆ, ನಮ್ಮ ಪಾದರಕ್ಷೆ ಉಡುಪು, ಚರವಾಣಿ ಮೊದಲಾದ ಸಲಕರಣೆಗಳಿಗೆ ಭದ್ರ ಕೋಠಿಯಾಗಿಯೂ ಒದಗಿತ್ತು. ಆ ವೇಳೆಯಲ್ಲಿ ಮಳಿಗೆಗೆ ನಮ್ಮವರಿಂದ ಆಗಿರಬಹುದಾದ ಕಿಂಚಿತ್ ವ್ಯಾಪಾರವನ್ನು ಶುಲ್ಕವೆಂದು ಕೀಳೆಣಿಸಬಾರದು. ಹಾಗೆ ಎಲ್ಲರೂ ಕಾಯುತ್ತಿದ ಸಮಯದಲ್ಲಿ….
ಚೌಕಾಕಾರದಲ್ಲಿ ಸುಮಾರು ಐದು ಎಕ್ರೆ ವಿಸ್ತೀರ್ಣಕ್ಕೆ ವ್ಯಾಪಿಸಿದ್ದ ದೇವಳದ ಹೊರವಲಯದ ರಥಬೀದಿಯ ಗುಂಟ, ನಾನೊಂದು (ಅನುದ್ದೇಶಿತ) ಅಪ್ರದಕ್ಷಿಣೆ ಹಾಕಿದೆ. ಕಲ್ಲಗೂಟಗಳನ್ನು (ಗಮನಿಸಿ, ಮಳೆಗಾಲದಲ್ಲಿ ಭಕ್ತರ ನಡೆ ಮತ್ತು ಉತ್ಸವ ಕಾಲಗಳಲ್ಲಿ ರಥದ ಚಕ್ರಗಳನ್ನು ಜಾರಿಸಬಹುದಾದ ಚಪ್ಪಡಿಗಳಲ್ಲ) ಮಟ್ಟಸವಾಗಿ ಹುಗಿದು ಮಾಡಿದ ಸುವಿಸ್ತಾರ ರಥಬೀದಿಯ ಹೊರ ಮಗ್ಗುಲಿನಲ್ಲಿ ಸಾರ್ವಜನಿಕ ವ್ಯಾಪಾರೀ ಮಳಿಗೆಗಳಿದ್ದವು. ದೇವಳದ ನಾಲ್ಕೂ ದ್ವಾರಗಳ ಮಹಾ ಗೋಪುರಗಳು ಜೀರ್ಣೋದ್ಧಾರದ ನೆಪದಲ್ಲಿ ಹಸಿರು ಮುಸುಕಿನಲ್ಲಿದ್ದವು. ದೇಶ ವಿದೇಶಗಳಿಂದ ವರ್ಷದ ಎಲ್ಲ ಕಾಲಗಳಲ್ಲೂ ಹರಿದು ಬರುವ (ಭಕ್ತರನ್ನು ಬಿಡಿ) ವೀಕ್ಷಕರ ಕುರಿತು ದೇವಳದ ಆಡಳಿತಕ್ಕೇನೂ ಕಾಳಜಿ ಇದ್ದಂತಿರಲಿಲ್ಲ. ಹಾಗಿದ್ದಿದ್ದರೆ, ಸರದಿಯಲ್ಲಿ ಒಂದು ಗೋಪುರದ ಕೆಲಸ ಮುಗಿಸಿ, ಇನ್ನೊಂದನ್ನು ಹಿಡಿದಿದ್ದರೆ, ಯಾವ ಕಾಲದಲ್ಲೂ ಬಂದವರಿಗೆ ಒಮ್ಮೆಗೆ ಕನಿಷ್ಠ ಮೂರು ಗೋಪುರ ದರ್ಶನಾವಕಾಶ ಖಾತ್ರಿಯಾಗುತ್ತಿತ್ತು.
ನಾಲ್ಕು ಗಂಟೆಯ ಸುಮೂಹೂರ್ತ ಬಂದ ಮೇಲೆ, ಔಪಚಾರಿಕತೆಗಳನ್ನೆಲ್ಲ ಪೂರೈಸಿ, ಭಣಗುಟ್ಟುತ್ತಿದ್ದ ಸರತಿ ಸಾಲಿನ ಬೇಲಿಗಳಲ್ಲಿ ಅನಾವಶ್ಯಕ ಸುತ್ತಾಡಿ, ದೇವಬಿಂಬದಿಂದ ತೊಡಗಿ ವಿವಿಧ ಕಥನಗಳ ಪ್ರತ್ಯಕ್ಷ ದರ್ಶನ ಮಾಡಿಸಿಕೊಂಡೆವು. ಒಂದೆಡೆ ತುದಿಗಾಲಿನಲ್ಲಿ ನಿಂತು ಅಮ್ಮನ ಗುಡಿಯ ಸುವರ್ಣ ಕಳಶ, ಪುರಾಣಭೋಜನದಲ್ಲಿ ಬಡಿಸಿದಷ್ಟನ್ನೂ ತಿಂದ ಡುಮ್ಮನ ಕಥಾಶಿಲ್ಪ ಮತ್ತೆ ಆತನ ಕೈ ತೊಳೆಯಲೆಂದೇ ಹುಟ್ಟಿಕೊಂಡ (ವೈಗೈ) ನೀರಿನ ಕಥೆ…. ಹೀಗೆ ನೂರೆಂಟು ನೋಡಿ, ಕೇಳಿ ವಿಸ್ತಾರ ಜಗುಲಿಗಳಲ್ಲಿ ಸಾಕಷ್ಟು ಅಲೆದಾಡಿದೆವು. ಮಧುರೈವರೆಗೆ ಬಾಲಣ್ಣನ ಸೌಮ್ಯ ಮತ್ತು ಮೆಲು ಧ್ವನಿಯ ವಿವರಣೆ ಕೇಳಿ ತುಸು ಜಡಗೊಂಡ ನಮ್ಮ ಕಿವಿಗಳಿಗೆ, ಇಲ್ಲಿ ತುಳಸಿಯ (ಮಾರ್ಗದರ್ಶಿ) ಉಚ್ಚ ಕಂಚಿನ ಕಂಠದ ‘ದಮಿಳು-ಗನ್ನಡ’ದ ವಿವರಣಾಶೈಲಿ ಬಹು ಮೋಜಿನದಾಗಿ ಒದಗಿತ್ತು. ಎಲ್ಲ ಮುಗಿಸಿ ಹೊರಬೀಳುವಾಗ ಮುಸ್ಸಂಜೆ ಆವರಿಸಿತ್ತು.
“ದಿನದ ದಾರಿ ಇನ್ನೂ ಇದೆ, ಅದೂ ದೂರವಿದೆ” ಎಂಬ ಕಾರಣಕ್ಕೆ ಬಾಲಣ್ಣ ಬಳಗ, ಸಿಕ್ಕ ವಟವೃಕ್ಷಗಳಲ್ಲಿ, ಅಲ್ಲಲ್ಲ ಆಟೋರಾಕ್ಷಸರುಗಳಲ್ಲಿ ನಮ್ಮ ಆರಾರು ಮಂದಿಯನ್ನು ತುರುಕಿ, ಬಸ್ ನಿಲ್ದಾಣಕ್ಕೆ ಎತ್ತಾಕಿದರು! ಅಲ್ಲೂ ನೀರು, ನಿಡಿ ಎಂದು ಸಮಯ ಕಳೆಯದೇ ಎಲ್ಲರೂ ಕೆಂಪು ಗುಬ್ಬಿ ಸೇರಿ, ರಾಮೇಶ್ವರಕ್ಕೆ ದೌಡಾಯಿಸಿದೆವು.
ಪುಣ್ಯ ಸ್ನಾನಗಳು…: ಕತ್ತಲ ಮೊತ್ತಕ್ಕೆಸೆದ ಬಿಳಿಚೂರಿಯಂತೆ ಧಾವಿಸಿದ್ದ ನಂಬಸ್ಸು, ಒಂಬತ್ತು ಗಂಟೆಯ ಸುಮಾರಿಗೆ ರಾಮನಾಥಪುರಂನ ಬೆಳಕಿನ ಹೊಳೆಯಲ್ಲಿ ಊಟದ ವಿರಾಮಕ್ಕೆ ತಂಗಿತು. ಅದು ಹೆದ್ದಾರಿ ಎರಡರ ಮಹಾ ಸಂಗಮ ಸ್ಥಾನ, ರಾಮನಾಡ್ ಎಂದೂ ಹೇಳುತ್ತಾರೆ. ಉಪಾಹಾರ ಮುಗಿಸಿ ಮುಂದುವರಿದೆವು.
ಪರಶುರಾಮ ಸೃಷ್ಟಿ ಎಂದು ಪುರಾಣಖ್ಯಾತವಾದ ಪಶ್ಚಿಮ ಕರಾವಳಿಯನ್ನು ವಿಜ್ಞಾನದ ಒರೆಗಲ್ಲಿಗೆ ಉಜ್ಜಬೇಕು. ಆಗ ಲಕ್ಷಾಂತರ ವರ್ಷಗಳ ಹಿಂದಿನ ಭಾರತ ಭೂಖಂಡದ ಚಲನೆಯ ಇತಿಹಾಸ ಕಾಣಿಸುತ್ತದೆ. ಅಂದು ಪಶ್ಚಿಮ ಕಿನಾರೆಯ ಭೂಭಾಗದ ತುಂಡೊಂದು, ಒಡ್ಡೊಡ್ಡಾಗಿ ಹರಿದು, ಕಡಲಿನಲ್ಲೇ ದಕ್ಷಿಣ-ಪಶ್ಚಿಮಕ್ಕೆ ಚಲಿಸಿತ್ತು. (ಮತ್ತು ಇಂದಿನ ಮಡಗಾಸ್ಕರ್ ಹುಟ್ಟಿತ್ತು.) ಆ ಪ್ರಕ್ರಿಯೆಯಲ್ಲಿ ಗೋಡೆಯಂತೆ ಉಳಿದ ಭೂ ಭಾಗ ಪಶ್ಚಿಮ ಘಟ್ಟ. ಭೂಸೀಳು ಕೊನೆಯಲ್ಲಿ ತೆಳುವಾಗುತ್ತಾ ಹೋಗಿ ದಕ್ಷಿಣ ತುದಿಯಲ್ಲಿ ಕನ್ಯಾಕುಮಾರಿಯನ್ನೂ ತುಸು ಪೂರ್ವ ಅಂಚಿನಲ್ಲಿ ರಾಮೇಶ್ವರ, ಧನುಷ್ಕೋಡಿಗಳನ್ನೂ ನೀರ ಮೇಲುಳಿಸಿತು. ಧನುಷ್ಕೋಡಿಯಿಂದಲೂ ಪೂರ್ವಕ್ಕೆ ನೀರಿನಡಿಯಲ್ಲೂ ಕಡಿಮೆ ಆಳದಲ್ಲಿ ಮುಂದುವರಿದ ಭೂ ಭಾಗ ಪುರಾಣ ಪ್ರಸಿದ್ಧಿಯ ರಾಮಸೇತು. ರಾಮೇಶ್ವರ ಮತ್ತಾಚೆ ನೆಲ ಸಪುರಗೊಂಡರೂ ಜನವಸತಿ ಮತ್ತು ಚಟುವಟಿಕೆಗಳು ತುಸು ಹೆಚ್ಚೇ ಇದೆ. ಅಲ್ಲಿ ದೊಡ್ಡ ಬಸ್ಸಿನ ಸಂಚಾರ ಅಸಾಧ್ಯವೆಂದರಿತು, ನಮ್ಮನ್ನೆಲ್ಲ ಮೂರು ಮಿನಿ ಬಸ್ಸುಗಳಿಗೆ ವರ್ಗಾಯಿಸಿದರು. ಅವು ಕೊನೆಯ ಆರು ಕಿಮೀ ಕಳೆದು, ನಮಗೆ ಹೋಟೆಲ್, ಹಾಸಿಗೆ ಕಾಣಿಸುವಾಗ ಗಂಟೆ ಹನ್ನೊಂದು ಕಳೆದಿತ್ತು!
ಅಯೋಧ್ಯೆಗೆ ಮರಳುವ ದಾರಿಯಲ್ಲಿ ರಾಮ, ಬ್ರಹ್ಮಹತ್ಯಾ ದೋಷ ಪರಿಹಾರಾರ್ಥವಾಗಿ ರಾಮೇಶ್ವರದಲ್ಲಿ ತ್ರಿಮೂರ್ತಿ ಶಕ್ತಿ ಸಂಪನ್ನ ಸ್ಫಟಿಕಲಿಂಗವನ್ನು ಪೂಜಿಸಿದನಂತೆ. ಇಂದಿಗೂ ಆ ಲಿಂಗ ರಾಮನಾಥಸ್ವಾಮಿ ದೇವಳದಲ್ಲಿ, ಕೇವಲ ಬ್ರಾಹ್ಮೀ ಮುಹೂರ್ತದಲ್ಲಿ ಅಂದರೆ, ಬೆಳಿಗ್ಗೆ ಐದರಿಂದ ಆರು ಗಂಟೆಯ ಒಳಗೆ ಭಕ್ತರ ದರ್ಶನಕ್ಕೆ ಮುಕ್ತವಾಗುತ್ತದೆ. ಅದರ ದರ್ಶನಕ್ಕಾಗಿ ಬಾಲಣ್ಣ ಬಳಗ, ಮರು ಬೆಳಗ್ಗೆ ಮೂರೂವರೆ ಗಂಟೆಗೇ ಸುಪ್ರಭಾತ ಹೇಳಿತ್ತು. ದಾರಿ ಬದಿಯ ದುಕಾನಿನಲ್ಲಿ ಚಾ ಹೀರಿ, ಐದು ಗಂಟೆಗೇ ಸರದಿ ಸಾಲಿಗೆ ಸೇರಿಕೊಂಡೆವು. ಮತ್ತೆ ಮಾಮೂಲೀ ದೇವಾಲಯದ ಶಾಸನ ಪಾಲಿಸಿ (ಚಪ್ಪಲಿ, ಪಟ, ಚರವಾಣಿ ನಿಷಿದ್ಢ, ಪುರುಷರು ಅರೆಬೆತ್ತಲೆ….) ಲಿಂಗ ದರ್ಶನ ಮಾಡಿದೆವು. ಮುಂದಿನ ಹಂತ…
ಪುಣ್ಯಪ್ರದವಾದ ಕಡಲ ಸ್ನಾನಕ್ಕೆ ನಡೆದೆವು. ಅದು ಕಡಲ ಕಿನಾರೆಯ ಪ್ರಾಕೃತಿಕ ಕಾಠಿಣ್ಯದೊಡನೆ ಸಾವಿರದೊಂದು ಮನುಷ್ಯ ಕಲಾಪಗಳ ಸಂತೆಯಾಗಿತ್ತು. ಅಸ್ಥಿರ ನೆಲದಲ್ಲೂ ದಾನಿ-ಶಾಸನ ಹೊತ್ತು ಎದ್ದಿದ್ದ ಭೀಕರ ಕಾಂಕ್ರೀಟ್ ತೋರಣಗಳು ಉದಯರವಿಯನ್ನೇ ಮರೆ ಮಾಡಿದ್ದವು. ಅದಲ್ಲದೆ ಪತಾಕೆ, ಬಟ್ಟೆ ತೋರಣಗಳು ಮಾಸಿ ಚಿಂದಿಯಾದ ಮೇಲೂ ನೇಲುವ ಹಗ್ಗ, ವಿದ್ಯುತ್-ಟೀವೀ ಕೇಬಲ್ಲುಗಳು, ಗುಡಿ – ಮರಿ ಗುಡಿಗಳು, ಹತ್ತೆಂಟು ಪೂಜಾಪರಿಕರ, ಚಾ, ತಿನಿಸು, ಮಣಿಸರಕಿನ ಸ್ಥಿರ ಚರ ಮಾರಾಟಗಾರರು, ಗೋಗ್ರಾಸಗಳಿಗೆ ಬಿಟ್ಟಿಯೇ ಒದಗುತ್ತಿದ್ದ ಗೋಬಂಧುಗಳು, ಕಾಲಕಾಲಕ್ಕೆ ಅವುಗಳ ತೀರ್ಥ ಪ್ರಸಾದ ಸಹಿತ ಕುಶಾಲಿನ ಹುರುಡುಗಳು, ರಾಮದೂತರು (ಮಂಗ), ಶನಿವಾಹನಗಳು (ಪೋಲಿ ನಾಯಿಗಳು)…. ಇವೆಲ್ಲಕ್ಕೂ ಕಳಶಪ್ರಾಯವಾಗಿ ಸ್ಥಳೀಯ ಆಡಳಿತದ ಆಳುಗುಂಡಿಯೊಂದರ ಸ್ಥಿರ ನೆಲೆಗೂ ಅಡ್ಡ ನಾಮ ಹಾಕಿದಂತೆ, ಕುಂಕುಮ ಬಡಿದ ವಿಗ್ರಹಗಳು…. ನಿರಂತರ ಅಲೆಗೈ ಅಟ್ಟಿ ತೊಳೆಯುವ ಕಡಲಿಗೇ ಕೈ ಸೋಲುವಷ್ಟು ಕೊಳಚೆ. ಪಾದ ಊರಿದರೆ ಎದೆಗೇರಿ ಬರುವ ನೀರಿನಲ್ಲಿ, ಸಾಂಪ್ರದಾಯಿಕ ಮೀನುಗಾರರ ದೋಣಿ, ಚಟುವಟಿಕೆಗಳನ್ನು ನಗಣ್ಯ ಮಾಡಿ ಜನ ಗೌಜಿ ನಡೆಸಿದ್ದರು. ಅರ್ಚನೆಯ ಹೂ, ಹಣ್ಣು, ಹಾಲು ಮುಂತಾದ ಸುವಸ್ತುಗಳಲ್ಲದೇ ಮಡಕೆ, ಮೂಳೆ, ಬೂದಿ ಸೇರಿಸುತ್ತಲೇ ಇದ್ದರು. ಸಾಲದೆನ್ನುವಂತೆ, ಹಳೆ ಬಟ್ಟೆಗಳನ್ನು ಬಿಡುವ ವಿಚಿತ್ರ ವಿಧಿ, ಅಸಹ್ಯದೊಡನೆ (ಅನ್ಯ ಭಕ್ತರ ಕಾಲುಕಟ್ಟಿ ನೀರಿಗೆ ಕೆಡೆಯುವ) ಅಪಾಯಕಾರಿಯೂ ಆಗುವಷ್ಟಿದ್ದವು. ಸ್ಥಳೀಯ ಆಡಳಿತದ ಜನ ಆ ಬಟ್ಟೆಗಳನ್ನು ದಂಡೆಗೆಳೆದು, ಉಂಡೆ ಮಾಡಿ ಒಯ್ದಷ್ಟು ಮುಗಿಯದ ಆ ‘ಭಕ್ತಿ ಭಾವ’ಕ್ಕೆ ನನ್ನ ತಲೆಯೇ ಕೆಟ್ಟು ಹೋಯ್ತು. ಈ ಮಂದೆಯಲ್ಲೂ….
ನಮ್ಮ ಬಳಗದ ಕೋರಿಕೆಯ ಮೇರೆಗೆ ಬಾಲಣ್ಣ ನಿಯುಕ್ತಿಸಿದ್ದ ಕನ್ನಡಿಗ ಪುರೋಹಿತರೊಬ್ಬರು ನಮ್ಮ ದಾರಿ ಕಾದಿದ್ದರು. ಅವರು ಆಸಕ್ತರಿಗೆ ಪೂಜಾ ಪರಿಕರ ಸಮೇತ ಸಂಕಲ್ಪ ವಿಧಿ ವಿಧಾನಗಳನ್ನು ಹೇಳಿಕೊಟ್ಟು, ಸ್ನಾನವೋ ತರ್ಪಣವೋ ಹೆಚ್ಚಿನ ಪೂಜೆಗಳನ್ನೋ ಸಾಂಗಗೊಳಿಸಿದರು. ಅವರನ್ನು ತಮಿಳು ಕೋಟೆಯಲ್ಲಿನ ಕನ್ನಡಿಗನೆಂದೇ ಹೆಚ್ಚಿನ ಮೋಹ ತೋರಿ ಮಾತಾಡಿಸಿದ್ದರು. ಅವರು ಠಕ್ಕಿಲ್ಲದೆ ನಸುನಕ್ಕು “ಬಂಟ್ವಾಳದ ಮೂಲೆಯಿಂದ ಹೊಟ್ಟೆ ಪಾಡಿಗೆಂದು ಇಲ್ಲಿಗೆ ವಲಸೆ ಬಂದವರು ನನ್ನಪ್ಪ. ಇಲ್ಲೇ ಹುಟ್ಟಿ ಬೆಳೆದ ನಾನು ಕುಲವೃತ್ತಿಯಲ್ಲಿ ಭಕ್ತರ ಬಳಕೆಯಿಂದ ಕನ್ನಡ ಬಳಸುತ್ತೇನೆ, ಅಷ್ಟೆ” ಎಂದರು. ಮುಂದೆ…
ದೇವಳದ ವಠಾರದೊಳಗೆ ಇಪ್ಪತ್ತಕ್ಕೂ ಮಿಕ್ಕು ವಿವಿಧ ಪುಣ್ಯ ಕುಂಡಗಳಿವೆ, ಕಥೆಗಳಿವೆ. ಆ ಪುಣ್ಯ ಸ್ನಾನಕ್ಕೆ ಸರದಿ ಸಾಲು ಹಚ್ಚಿದೆವು. ವಾಸ್ತವದಲ್ಲಿ ಕಡಲ ಕಿನಾರೆಯ ಮರಳಿನ ಹಾಸಿನಲ್ಲಿ ಮೈಪೂರಾ ಕಣ್ಣುಗಳುಳ್ಳ ಎಂಟು ಹತ್ತಡಿ ಉದ್ದದ ಕೊಳವೆಗಳನ್ನು ನೆಲಕ್ಕೆ ಹೊಡೆದು ಸಿಹಿ ನೀರು ತೆಗೆಯುವುದು ಹೊಸ ವಿಷಯವೇನಲ್ಲ. ಇಲ್ಲೂ ಅಂಥಾ ಸ್ಥಿರ ಜಲಮೂಲಕ್ಕೆ ಪುಟ್ಟಪುಟ್ಟ ಬಾವಿ ಮುಖವನ್ನೇ ಕೊಟ್ಟು, ಇಪ್ಪತ್ತೆರಡು ಹೆಸರು ಕೊಟ್ಟಿದ್ದಾರೆ. ಪ್ರತಿ ಬಾವಿ ಕಟ್ಟೆಯ ಮೇಲೂ ಇಬ್ಬಿಬ್ಬರು ದಾಂಡಿಗರು ನಿಂತು, ಪುಟ್ಟ ಬಕೆಟ್ಟುಗಳಿಂದ ನೀರು ಮೊಗೆದು, ತೀರ್ಥಸ್ನಾನ ಬಯಸುವ ಭಕ್ತರ ಮೇಲೆ ಎರಚುತ್ತಾರೆ. ಅದರೆಡೆಯಲ್ಲಿ ಖಾಲೀ ಅಂಡೆಗಳನ್ನು ಎತ್ತಿ ಹಿಡಿದು ‘ತೀರ್ಥ’ ಸಂಗ್ರಹಿಸಿಕೊಳ್ಳುವವರ ಚಪಲ, ಬರಿಯ ಪ್ರೋಕ್ಷಣೆ ಸಾಲದು, ಬಕೆಟ್ ತುಂಬಾ ಸುರಿಯಿರಿ ಎಂದು ಹೆಚ್ಚಿನ ಕಾಸು ಕೊಟ್ಟು ಮಾಡಿಸಿಕೊಳ್ಳುವವರನ್ನು ಕಂಡು ಬೆರಗಾಗಿ ನಗುತ್ತಿದ್ದ ಪುರಂದರ ವಿಠಲ! ಹೀಗೆ….
ಮನಸ್ಸು, ದೇಹಗಳ ಪಾಪದೂರ ಮಾಡಿದ ಭಕ್ತರು, ನಮ್ಮವರೂ ಚಂಡಿ ಕಳಚಿ, ಮರಳಿ ಸಾರ್ವಕಾಲಿಕ ದೇವ – ರಾಮನಾಥ ಸ್ವಾಮಿಯನ್ನು ದರ್ಶಿಸಿ, ತೀರ್ಥ ಪ್ರಸಾದ ಪಡೆದು ಕೃತಾರ್ಥರಾದರು. (ಸಾಕ್ಷಿ ಹಾಕಲು ನಾನು ಹೋಗದೇ ಕೆಲವು ಗಲ್ಲಿ ಸುತ್ತಿ ದಿನ ಪತ್ರಿಕೆ ಬೇಟೆ ಆಡಿದ್ದೆ!) ಹೀಗೆ ನಮ್ಮ ರಾಮೇಶ್ವರದ ಕಲಾಪಗಳೂ ಸಂಪನ್ನಗೊಂಡವು. ವಾಸದ ನೆಲೆಗೆ ಮರಳಿ, ಮುಂದಿನ ಪಯಣಕ್ಕೆ ಸಜ್ಜಾಗಿ, ಖೋಲಿ ಖಾಲಿ ಮಾಡಿ, ಶರವಣ ಹೋಟೆಲಿನ ಶಾಖೆಯಲ್ಲಿ ತಿಂಡಿಯ ಚಿಂತೆ ಪರಿಹರಿಸಿಕೊಂಡೆವು.
ರಾಮಾಯಣ, ಕಲಮಾಯಣ….: ರಾಮೇಶ್ವರದಿಂದಲೂ ಪೂರ್ವಕ್ಕೆ ಮತ್ತಷ್ಟು ಸಪುರವಾಗಿ ಚಾಚಿಕೊಂಡ ಭೂ ಭಾಗ ಧನುಷ್ಕೋಡಿ. ಹಿಂದಿನವೇ ಕೆಂಪು ಗುಬ್ಬಿಯ ಕವಳವನ್ನು ಹಂಚಿಕೊಂಡಿದ್ದ ಮೂರು ಮಿನಿ ಗುಬ್ಬಿಗಳು (ಮಿನಿ ಬಸ್), ಪುಣ್ಯಸ್ನಾತರನ್ನು ಹೊತ್ತು, ನೇರಾತಿನೇರ ಸೂರ್ಯನಾವಾಸಕ್ಕೇ ಧಾಳಿಯಿಡುವವರಂತೆ ಭೋರಿಟ್ಟು ಓಡುತ್ತಿದ್ದವು. ಜನಜೀವನ ವಿರಳವಾಗುತ್ತಿದ್ದಂತೆ ಎರಡೂ ಮಗ್ಗುಲಿನಲ್ಲಿ ಒಣ ನೆಲದಲ್ಲೂ ದಟ್ಟ ಹಸಿರುಳಿಸಿಕೊಳ್ಳುವ, ಬಳ್ಳಾರಿ-ಜಾಲಿ ಎಂದೇ ಖ್ಯಾತವಾದ ಮುಳ್ಳ ಪೊದರಿನಂತಾ ಮರಗಳು ಕಾಣಿಸಿದವು. ಅವೂ ವಿರಳವಾಗುತ್ತಿದ್ದಂತೆ ಎಲ್ಲೆಲ್ಲೂ ಕಡಲ ನೀಲಿಮೆಯೇ ಮೆರೆದಿತ್ತು, ಮೊರೆದಿತ್ತು. ಆ ವಲಯಕ್ಕೆ ಸಹಜವಾದ ಹೆಚ್ಚಿನ ಗಾಳಿ, ಅಪರೂಪವಲ್ಲದ ಬಿರುಗಾಳಿ ಮತ್ತು ಸಮುದ್ರದ ಏಳುಬೀಳುಗಳ ಹೊಡೆತದಲ್ಲಿ ಕಡಲ ಕಿನಾರೆಯ ಮರಳ ಹಾಸು ಮಾರ್ಗದಂಚಿನಲ್ಲಿ ಅಕ್ರಮ ನೆಲೆಸಿತ್ತು. ಅದೂ ಅಲೆಅಲೆಯಂತೆ, ಸುಳಿಸುತ್ತಿದಂತೆ, ದಿಣ್ಣೆತಗ್ಗುಗಳನ್ನು ತೋರಿ ಸಣ್ಣದರಲ್ಲಿ ಪಕ್ಕಾ ಮರುಭೂಮಿಯದೇ ನೆನಪು ಹುಟ್ಟಿಸುವಂತಿತ್ತು. ಮರಳಿನ ಸೆಳವಿನಲ್ಲಿ ಸಂಚಾರವ್ಯಸ್ತವಾಗದಂತೆ ಮಗ್ಗುಲುಗಳಲ್ಲಿ ಕಟ್ಟೆ, ಮತ್ತೂ ಆಚೆಗೆ ಉಕ್ಕಿನ ಸರಿಗೆ ಹಂದರದಲ್ಲಿ ತುಂಬಿದ ಕಾಡು ಕಲ್ಲುಗಳ ಗೋಡೆಯೂ ಕಾಣುತ್ತಿತ್ತು. ಒಂದೆಡೆ ಎಡ ಮಗ್ಗುಲಿನ ಸಪುರ ದಾರಿ ‘ಕೋದಂಡ ರಾಮನ ಗುಡಿ’ಗೇ ಆಮಂತ್ರಿಸಿತು. ಆದರೆ ಬಸ್ ಚಾಲಕ, ವಾಪಾಸಾಗುವ ದಾರಿಯಲ್ಲಿ ತೋರಿಸುವ ಆಶ್ವಾಸನೆಯಷ್ಟೇ ಕೊಟ್ಟ, ವೇಗವರ್ಧಕದ (ಐ ಮೀನ್ ಆಕ್ಸಿಲರೇಟರ್ರೂ) ಮೇಲಿನ ಪಾದ ಹಗುರ ಮಾಡದೆ, ಮಾರ್ಗದ ಅಕ್ಷರಶಃ ‘ಡೆಡ್ ಎಂಡ್’ (ಕುರುಡು ಕೊನೆ) ಮುಟ್ಟಿಸಿದ.
ಮಹಾ ಆಳದಿಂದೆದ್ದ ಪ್ರಾಕೃತಿಕ ಶಿಲಾ ಫಲಕದ ಮೇಲೆ, ಹೊರಗಿನ ಭಾರೀ ಬಂಡೆಗುಂಡುಗಳನ್ನು ಸುಮಾರು ಐವತ್ತಡಿ ವ್ಯಾಸದ ವೃತ್ತಾಕಾರಕ್ಕೆ ಗಿಡಿದು, ಮಟ್ಟಸ ನೆಲ ಮಾಡಿದ್ದರು. ಅದರ ಹೊರ ಅಂಚಿನಲ್ಲಿ ದೃಢ ರಕ್ಷಣಾ ಪೌಳಿ, ನಡುವೆ ತುಸು ಎತ್ತರದ (ಅಶೋಕ ಸ್ತಂಭ ಸಹಿತ) ವೀಕ್ಷಣಾ ಕಟ್ಟೆಯೂ ಇತ್ತು. ಅಲ್ಲಿ ಅನ್ಯ ಸ್ಥಳಾವಕಾಶ ಇಲ್ಲದ್ದರಿಂದ, ಜನ ಸಾಕಷ್ಟು ಮೊದಲೇ ವಾಹನಗಳನ್ನು ಅಲ್ಲಲ್ಲೇ ತಂಗಲು ಬಿಟ್ಟು ನಡೆಯಬೇಕಾದ್ದು ಅನಿವಾರ್ಯ. ಮುಂದೆ ಎಲ್ಲೆಡೆಗಳಂತೆ ತುರ್ತು ತಿನಿಸು, ತೀರ್ಥಗಳ ಗಾಡಿ ಸಂತೆಯಿದ್ದರೂ ಮೊದಲು ವೀಕ್ಷಣಾ ಕಟ್ಟೆ ಸೇರಿದೆವು. ನಾಲ್ಕೂ ದಿಕ್ಕಿನಲ್ಲಿ ಆಕಾಶ ನೀಲಿಮೆಯೇ ಕರಗಿ ಇಳಿದಂತೆ, ಕಡಲ ನೀಲಿಮೆಯೇ ಗಾಳಿಗೆದ್ದಂತೆ ತೋರಿ ಯಾರನ್ನೂ ಹುಚ್ಚುಗಟ್ಟಿಸುತ್ತಿತ್ತು. ಅಲ್ಲಿ (ನಾವೂ ಸೇರಿದಂತೆ) ಜನರ ಸಂಭ್ರಮವೂ ನೋಡುವಂತದ್ದೇ. ನಡುವಣ ಕಟ್ಟೆ ಹತ್ತಿಳಿದು, ಸುತ್ತಣ ಕಟ್ಟೆಯಲ್ಲಿ ಸುತ್ತಿ ಸುಳಿದು, ಒಟ್ಟು ಓಡಾಡಿ, ಚರವಾಣಿಯಲ್ಲಿ ಊರೂರಿನ ಇಷ್ಟರಿಗೆ ವಾರ್ತೆ, ವಿಡಿಯೋ ಪ್ರಸರಿಸಿ, ಸ್ವಂತೀ, ಇಷ್ಟರ ವಿವಿಧ ಸಮೂಹ ಭಂಗಿಗಳು, ವಿಡಿಯೋ, ರೀಲಿಗೆ ಠಕ್ಕು, ದಿಗಂತದಾಚಿನ ಶ್ರೀಲಂಕಾವನ್ನು ಕಾಲ್ಪನಿಕ ಕಣ್ಣಲ್ಲಿ ಕಂಡಂತೆ “ಹಾಯ್”ಕುಗಳು…. ಆಚರಣೆಗಳ ಹುಚ್ಚು ಹೆಚ್ಚಿದ ಮಂದಿ, ರಕ್ಷಣಾಗೋಡೆಯ ಆಚಿನ ಅಸ್ಥಿರ ಬಂಡೆಗಳ ಮೇಲೂ ಧಾರಾಳ ಮೆರೆದಿದ್ದರು. ಪಾಪ ಅವರಿಗೆ ತಿಳಿದಿಲ್ಲ – ತಪ್ಪಿದ ಒಂದು ಹೆಜ್ಜೆ, ನಿರೀಕ್ಷೆ ಮೀರಿದ ಒಂದು ಅಲೆ ಇವರ ಜೀವನದ್ದೇ ಕುರುಡು ಕೊನೆ ಕಾಣಿಸೀತು!
ತಡವಾಗಿ ತಿಂಡಿ ತಿಂದದ್ದಲ್ಲದೆ, ಊಟವೂ ವಿಳಂಬಿತವಾಗುವ ಭಯದಲ್ಲಿ, ಬಾಲಣ್ಣ ಕೊಡಿಸಿದ ಕಲ್ಲಂಗಡಿ, ಮಾವು, ಅನಾನಸು ಹಣ್ಣ ಹೋಳುಗಳನ್ನು ನಾವೆಲ್ಲ ಧಾರಳ ಮೆದ್ದು ಮತ್ತೆ ಬಸ್ಸೇರಿದೆವು. ಕೋದಂಡ ರಾಮನ ಗುಡಿಗಿಂತ ಕಥಾರಂಜನೆ ಹಾಗೂ ಅಲ್ಲಿನ ಪರಿಸರ ವೀಕ್ಷಣೆ ಹೆಚ್ಚು ಆಕರ್ಷಕ. ಮುಂದುವರಿದು, ರಾಮೇಶ್ವರ ಗಲ್ಲಿಯೊಂದರ ‘ಹನೂಮಾನ್ಜೀ ಮಠ’ಕ್ಕೆ ಭೇಟಿ ಕೊಟ್ಟೆವು. ಪೌರಾಣಿಕ ರಾಮಸೇತಿನ ವಾಸ್ತುಶಿಲ್ಪಿ ನಳ ನೀಲರನ್ನು ಸ್ಮರಿಸುವ ಅಲ್ಲಿನ ಪುಟ್ಟ ಪ್ರದರ್ಶಿಕೆಯನ್ನೂ ನೋಡಿದೆವು. ಕಂದು ಬಣ್ಣದ ಹವಳದ ಗಿಟ್ಟೆಗಳಂತಿದ್ದ ಕೆಲವು ಘನಾಕೃತಿಗಳನ್ನು ರಾಮನಾಮ ಬಲದ ತೇಲುಗಲ್ಲುಗಳೆಂದೇ ಪ್ರದರ್ಶನಕ್ಕಿಟ್ಟಿದ್ದರು. ಒಂದನ್ನಂತೂ ಬಕೆಟ್ ನೀರಿನಲ್ಲಿ ತೇಲಿಸಿಯೂ ಇಟ್ಟಿದ್ದರು. ವಿಮರ್ಶೆಗೊಡ್ಡಿಕೊಳ್ಳದ ವಿಶ್ವಾಸವನ್ನು ಪ್ರಶ್ನಿಸುವ ಅಗತ್ಯ ಕಾಣದೇ ಮುಂದುವರಿದೆವು.
ರಾಮೇಶ್ವರದ ಹೊರವಲಯದಲ್ಲಿ ಮಿನಿಗುಬ್ಬಿಗಳನ್ನು ಬೀಳ್ಕೊಂಡು ಮತ್ತೆ ಕೆಂಪುಗುಬ್ಬಿಯ ಉದರ ಸೇರಿದೆವು. ಸ್ವಲ್ಪ ಮುಂದೆ, ವಲಯದ ಕೊನೇ ಪ್ರದರ್ಶಿಕೆ ಎಂಬಂತೆ ಮಾಜೀ ರಾಷ್ಟ್ರಪತಿ ಅಬ್ದುಲ್ ಕಲಂ ಸ್ಮಾರಕ ಭವನಕ್ಕೆ ಭೇಟಿ ಕೊಟ್ಟೆವು. ರಾಷ್ಟ್ರ ನಾಯಕರುಗಳ ಗೋರಿಗಳ ಊರಾಗಿರುವ ದಿಲ್ಲಿಯನ್ನು ನಿರಾಕರಿಸಿ, ಕಲಂ ಹುಟ್ಟೂರಾದ ರಾಮೇಶ್ವರಕ್ಕೇ ಭವನ ಬಂದದ್ದು ಔಚಿತ್ಯಪೂರ್ಣವೇ ಸರಿ. ಆದರೆ ಸುಮಾರು ಎರಡು ಎಕ್ರೆ ವಿಸ್ತೀರ್ಣದಲ್ಲಿ, ಪೂರ್ಣ ಅನುತ್ಪಾದಕ, ಅನುದಾನ ಆಧಾರಿತ ಮತ್ತು ಅದೇಶೀಯ ನಿರ್ಮಾಣ ಕಂಡ ಕಟ್ಟಡ, ನೀರು, ಹಸಿರು ಕಂಡು ನನಗಂತು ತುಂಬಾ ನಿರಾಶೆಯಾಯ್ತು. ಇಂದೇ ಅದರ ನಾಲ್ಕು ಸುತ್ತಿನ ಬೇಲಿಯಾಚೆಗೆ ಪೇರಿದ ಕಸ, ಅವ್ಯವಸ್ಥೆಯ ಬಗ್ಗೆ (ನಾನು ಬೆಟ್ಟು ಮಾಡಿ ಕೇಳಿದಾಗಲೂ) ಕಾಳಜಿ ವಹಿಸದ ಆಡಳಿತ, ಬಹು ಬೇಗನೆ ಒಟ್ಟು ವ್ಯವಸ್ಥೆಯನ್ನೇ ಸಮಾಧಿ ಮಾಡಿದರೆ ಆಶ್ಚರ್ಯವಿಲ್ಲ. ಕನ್ಯಾಕುಮಾರಿಯ ಗಾಂಧಿ ಮತ್ತು ಕಾಮರಾಜ ಸ್ಮಾರಕಗಳ ಸಾಲಿನಲ್ಲಿ ಕಲಂ ಸೇರುವ ವಿಷಾದದೊಡನೆ, ಊಟ ಕಾಣದ ಹಸಿ ಹೊಟ್ಟೆಯೊಡನೆ ನಾವು ಬಸ್ಸೇರಿದಾಗ ಗಂಟೆ ನಾಲ್ಕು ಕಳೆದಿತ್ತು.
ರಾಮೇಶ್ವರಕ್ಕೆ ಹೋಗುವ ದಾರಿಯಲ್ಲಿ ಸ್ಪಷ್ಟ ದರ್ಶನಕ್ಕೆ ಸಿಗದ, ‘ರಾಮೇಶ್ವರದ ಎತ್ತುವ ಸೇತುವೆ’ ಎಂದೇ ಖ್ಯಾತವಾದ ಪಂಬನ್ ವ್ಯವಸ್ಥೆಯನ್ನು ನಾನು ಬಸ್ಸಿಳಿದು ನಿಂತೋ ನಡೆದೋ ನೋಡುವ ಉತ್ಸಾಹದಲ್ಲಿದ್ದೆ. ಆದರೆ ಸಮಯದ ಕೊರತೆ ಮರೆಯುವಂತಿರಲಿಲ್ಲ. ನಮಗೆ ಅದರ ಅಲ್ಪ ದರ್ಶನ ಭಾಗ್ಯವಾದರೂ ದಕ್ಕುವಂತೆ ಕೆಂಪು ಗುಬ್ಬಿ, ಸೇತುವಿನ ಎರಡು ಕಿಮೀ ಉದ್ದಕ್ಕೆ ನಿಧಾನವಾಗಿ ಓಡಿತು. ಭಾಗ್ಯವಿದ್ದಷ್ಟೇ ಲಭ್ಯ ಎಂದು ಊಟದ ಜಪ ಮಾಡುತ್ತಾ….
(ನಕ್ಷೆ )
ಹಿಂದೆ ನನ್ನ ಸಾಹಸೀ ಓಡಾಟಗಳಿಗೆ ಸರ್ವೇಕ್ಷಣ ಇಲಾಖೆಯ ಒಂದು ಇಂಚು ಅಂದರೆ ಒಂದು ಮೈಲು (೧:೧) ಅಳತೆಯ ನಕ್ಷೆಗಳನ್ನು ಬಹುವಾಗಿ ನೆಚ್ಚಿಕೊಳ್ಳುತ್ತಿದ್ದೆ. ಮತ್ತೆ ಯೋಜನೆಯ ಕೊನೆಯಲ್ಲಿ, ನಾನು ಗ್ರಹಿಸಿದ ಅಂಕಿ ಮತ್ತು ಮಾಹಿತಿಗಳನ್ನು ಹೊಸದೇ ನಕ್ಷೆಯ ಮಿತಿಗೊಳಪಡಿಸಿ ಕೈಯಾರೆ ತಯಾರಿಸುತ್ತಿದ್ದೆ. ನಮ್ಮನ್ನು ಅನುಸರಿಸುವ ಅಥವಾ ಅದರಿಂದಲೂ ಉತ್ತಮಿಕೆಗೆ ತೊಡಗಿಕೊಳ್ಳುವ ಉತ್ಸಾಹಿಗಳಿಗೆ ಆ ನಕ್ಷೆಗಳು ಆರಂಭ ಬಿಂದುವಾಗುವಂತೆ ಯಥಾಪ್ರತಿಗಳನ್ನು ಕೊಡುತ್ತಿದ್ದೆ. ಈ ಬಾರಿಯ ತೀರ್ಥಯಾತ್ರಾ ಪ್ರಸಂಗ ಮುಗಿದು, ಕಥನಕ್ಕೆಂದು ಕುಳಿತಾಗ, ಅಂಥಾ ಒಂದು ಚಿತ್ರದ ಆವಶ್ಯಕತೆ ನನಗೆ ಕಾಣಿಸಿದ್ದಕ್ಕೆ ಈ ನಕ್ಷೆ ತಯಾರಿಸಿದೆ. ಇದಕ್ಕೆ ಇನ್ನಷ್ಟು ಮಾಹಿತಿ ಸೇರಿಸುವ, ರೇಖೆ ಭಾಷೆಗಳನ್ನು ಸುಂದರಗೊಳಿಸುವ ಉತ್ಸಾಹಿಗಳಿದ್ದರೆ, ನನ್ನ ಉಚಿತ ಮತ್ತು ಅನಿರ್ಬಂಧಿತ ಅನುಮತಿ ಇದೆ.
ಜುಲೈ ೨೭ರ ಸಂಜೆ, ಅಂದರೆ ತೀರ್ಥಯಾತ್ರೆಗೂ ಒಂಬತ್ತು ದಿನ ಮುಂಚಿತವಾಗಿ, ಮಂಗಳೂರಿನ ಓಶನ್ ಪರ್ಲ್ ಹೋಟೆಲಿನಲ್ಲಿ, ರುಚಿಕರ ತಿಂಡಿ ತೀರ್ಥಗಳೊಡನೆ ನಡೆದ ಯಾತ್ರಾಪೂರ್ವ ಸಭೆಯಲ್ಲಿ ನನಗೆ ಪ್ರಥಮತಃ ಕಡಬ ಮೂಲದ ಬಾಲಕೃಷ್ಣ ಗೌಡ, ಜನಪ್ರಿಯವಾಗಿ ಹೇಳುವಂತೆ ಬಾಲಣ್ಣ ಪರಿಚಿತರಾದರು. ಇವರು ಸುಮಾರು ಹದಿನೈದು ವರ್ಷಗಳ ಕಾಲ ನಿರ್ಮಲಾ ಟ್ರಾವೆಲ್ಸಿನಲ್ಲಿ ವೃತ್ತಿಪರ ಅನುಭವ ಗಳಿಸಿ, ಕಳೆದ ಐದು ವರ್ಷಗಳಿಂದ ಟ್ರಾವೆಲ್ ಫಾರ್ ಯೂ (ಟೀಯೆಫ್ವೈ) ಸಂಸ್ಥೆ ಕಟ್ಟಿ, ಸ್ವತಂತ್ರವಾಗಿ ಯಾತ್ರಾ ನಿರ್ವಹಣೆ ನಡೆಸುತ್ತಿರುವ ಸಮರ್ಥ. ಬಾಲಣ್ಣರ ಮಾತು ಮೃದು, ನಡವಳಿಕೆ ವಿನಯಪೂರ್ಣ, ಕೆಲಸ ಅಚ್ಚುಕಟ್ಟು. ಸಭೆಯನಂತರವೂ ವಾಟ್ಸಪ್ ಗ್ರೂಪಿನಲ್ಲಿ, ಪ್ರಯಾಣದುದ್ದಕ್ಕೂ ಕಾಲಕಾಲಕ್ಕೆ ಅವರು ಕೊಡುತ್ತಿದ್ದ ಸೂಚನೆಗಳು, ವಿವರಣೆಗಳು ಅವರ ಸಾಮರ್ಥ್ಯಕ್ಕೆ ಸ್ಪಷ್ಟ ಸಾಕ್ಷಿಗಳೇ ಆಗಿದ್ದವು.
ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಆಗಸ್ಟ್ ಐದರಂದು ನಮ್ಮನ್ನು ಸ್ವಾಗತಿಸಿದಲ್ಲಿಂದ ಎಂಟು ದಿನಗಳನಂತರ ಅಲ್ಲೇ ಬೀಳ್ಕೊಡುವವರೆಗೆ ಬಾಲಣ್ಣ ಸರ್ವಂತರ್ಯಾಮಿಯಾಗಿ, ನಲ್ವತ್ತೂ ಮಂದಿಯನ್ನು ಪ್ರೀತಿಯ ಕಟ್ಟಿನಲ್ಲಿ ಒಂದಾಗಿ ನಡೆಸಿಕೊಂಡ ಪರಿ ಎಲ್ಲರ ಮೆಚ್ಚುಗೆಯನ್ನೂ ಗಳಿಸಿತು. ನಡುವೆ ಎಲ್ಲೋ ಒಬ್ಬ ಹೋಟೆಲಿನವನು ಉಡಾಫೆ ಮಾಡಿದಾಗ, ಮತ್ತೆಲ್ಲೋ ದೇವಳದ ಸರತಿ ಸಾಲಿನ ನಿರ್ವಾಹಕ ಇನ್ಯಾರದೋ ಮೇಲೆ ಒರಟಾಟ ನಡೆಸಿದಾಗ, ಪರಿಣಾಮಕಾರಿಯಾಗಿ ಬಾಲಣ್ಣ ಸಿಡಿದಿದ್ದರು. ಆಗ ನಮ್ಮ ತಂಡ ಅತ್ಯಾಶ್ಚರ್ಯದಿಂದ “ಏ ಬಾಲಣ್ಣಂಗೆ ಕೋಪ ಬತ್ತೂ….” ಎಂದಿದ್ದ ಪಿಸು ನುಡಿ ದಟ್ಟವಾಗಿಯೇ ಹರಡಿತ್ತು!
ಬಸ್ಸಿನ ಹವಾ ನಿಯಂತ್ರಿತ ವಿಭಾಗದ ಆಸನ ವ್ಯವಸ್ಥೆಯಲ್ಲಿ ಬಾಲಣ್ಣ ಮತ್ತು ಸಹಾಯಕರಿಬ್ಬರಿಗೆ (ಮನೋಜ್ ಮತ್ತು ಚೇತನ್) ಕುಳಿತುಕೊಳ್ಳುವ ಅವಕಾಶ ಧಾರಾಳವೇ ಇತ್ತು. ಆದರೆ ಪ್ರಯಾಣ ಕಾಲದಲ್ಲಿ ನಮ್ಮ ಸಣ್ಣಪುಟ್ಟ ಅಗತ್ಯಗಳನ್ನು (ಕುಡಿನೀರು, ಕುರುಕಲು ಹಂಚಿಕೆ ಇತ್ಯಾದಿ) ನೋಡಿಕೊಳ್ಳಲು ಸಹಾಯಕರನ್ನು ಉಳಿಸಿ, ಬಾಲಣ್ಣ ಬಸ್ಸಿನ ನಿರಪಾಯ ಓಟದ ಉಸ್ತುವಾರಿಗೆಂಬಂತೆ, ಖುದ್ದು ಚಾಲನಾ ವಿಭಾಗದಲ್ಲಿ ಜಾಗೃತರಾಗಿಯೇ ಕುಳಿತಿರುತ್ತಿದ್ದರು. ಬಸ್ಸಿನೊಳಗೆ ಉದ್ದ ವಯರಿನ ಜತೆ ಮೈಕ್ ವ್ಯವಸ್ಥೆ ಮಾಡಿದ್ದರು. ಸಕಾಲಗಳಲ್ಲಿ ಬಾಲಣ್ಣ ನಮ್ಮ ವಿಭಾಗಕ್ಕೆ ಬಂದೋ ಕುಳಿತಲ್ಲಿಂದಲೆಯೋ ಮೈಕ್ ಹಿಡಿದು ಮಾರ್ಗದ ಮತ್ತು ಭೇಟಿಕೊಡಲಿರುವ ಸ್ಥಳ ವಿಶೇಷಗಳನ್ನು, ಸ್ಥಳಪುರಾಣ ಸಹಿತ ಹೇಳುತ್ತಿದ್ದರು. ಇಳಿದ ಮೇಲೂ ಆಯಕಟ್ಟಿನ ಜಾಗಗಳಲ್ಲಿ ನಮ್ಮನ್ನು ಒಗ್ಗೂಡಿಸಿ, ಪಳಗಿದ ಉಪಾಧ್ಯಾಯನಂತೆ ಸ್ಥಳ ವಿವರಗಳನ್ನು (ರಿವಿಶನ್ ಅನ್ನಿ) ತುಸು ಬೇರೇ ಕ್ರಮದಲ್ಲಿ ಮರುಪಠಿಸುತ್ತ, ಹೊರಗಿನ ಮಾರ್ಗದರ್ಶಿಯ ಅಗತ್ಯವಿಲ್ಲದಂತೆ ನಡೆಸುತ್ತಿದ್ದರು.
ಬಾಲಣ್ಣನ ಕ್ಷೇತ್ರಪುರಾಣ ಕಥನ, ಎದುರಿಸುತ್ತಿದ್ದ ವಾಸ್ತವಗಳು, ಸಮಯಪ್ರಜ್ಞೆಯಲ್ಲಿ ತಳೆಯುತ್ತಿದ್ದ ನಿರ್ಧಾರಗಳು, ಉಪಯುಕ್ತ ಸಂಪರ್ಕಗಳು ಮತ್ತು ನೆರಳಿನಂತೇ ಸಹಕರಿಸುತ್ತಿದ್ದ ಸಹಾಯಕರುಗಳಿಂದ ನಮ್ಮ ಪ್ರವಾಸ ಎಲ್ಲೂ ಪ್ರಯಾಸವಾಗಲೇ ಇಲ್ಲ. ಹಾಗಾಗಿ ಕೊಡೈಕೆನಾಲಿನಲ್ಲಿ ಸಿಕ್ಕ ಸಣ್ಣ ಬಿಡುವಿನಲ್ಲಿ, ನಾರಾಯಣ ಭಟ್ಟರ ನೇತೃತ್ವದಲ್ಲಿ ನಾವೊಂದು ಸಣ್ಣ ಅನೌಪಚಾರಿಕ ಸಭೆ ಮಾಡಿ, ಅವರೈವರನ್ನೂ (ಚಾಲಕ ಮತ್ತಾತನ ಸಹಾಯಕ ಸೇರಿ) ಸಮ್ಮಾನಿಸಿದೆವು. ಅಲ್ಲಿ ಸಮ್ಮಾನಕ್ಕೆ ಉತ್ತರಿಸುವ ಬದಲು, ನಮಗೆ ಉತ್ತಮ ಅಂಗಸೌಷ್ಠವದ ಕುರಿತು ಕಿವಿ ಮಾತು ಕೊಡಲು ಬಾಲಣ್ಣನನ್ನು ಒತ್ತಾಯಿಸಿದ್ದೆವು. ವಾಸ್ತವದಲ್ಲಿ ಬಾಲಣ್ಣ ಉತ್ತಮ ದೇಹದಾರ್ಢ್ಯಪಟು, ಸಾಲದ್ದಕ್ಕೆ ಉಪ್ಪಿನಂಗಡಿಯಲ್ಲಿ ಸಹಾಯಕರನ್ನಿಟ್ಟು ಸ್ವಂತದ ವ್ಯಾಯಮಶಾಲೆಯನ್ನೂ (ಜಿಮ್) ನಡೆಸಿದ್ದಾರೆ. ಆದರೆ ಬಾಲಣ್ಣ ವಿನಯಕ್ಕೆ ಎರವಾಗದೆ, ಕೇವಲ ಮಿತಾಹಾರ ಮತ್ತು ಹಿತ ವ್ಯಾಯಾಮಗಳನ್ನಷ್ಟೇ ನಾಲ್ಕು ಮಾತುಗಳಲ್ಲಿ ಸೂಚಿಸಿದರು; ಉಪದೇಶಕ್ಕಿಳಿಯಲಿಲ್ಲ.
ಕಾವೇರಿ ಕಣಿವೆ ವಿರಾಜಿತ ಬೃಹದೀಶ್ವರ : ರಾಮನಾಡಿನಲ್ಲಿ ಸಂಜೆ ಏಳು ಗಂಟೆಯ ಸುಮಾರಿಗೆ ಮಧ್ಯಾಹ್ನದೂಟದ ಶಾಸ್ತ್ರ ಮುಗಿಸಿದೆವು. ರಾತ್ರಿ ಒಂಬತ್ತೂವರೆಗೆ ತಂಜಾವೂರು ಮುಟ್ಟಿದಾಗ ನಾನಂತೂ ಉಪವಾಸವನ್ನೇ ನೆಚ್ಚಿದೆ. ಪೂರ್ವಯೋಜಿತ ಹೋಟೆಲ್, ಕೋಣೆ ವಿಲೇವಾರಿಯಲ್ಲಿ ತುಸು ಎಡವಿತ್ತು. ಆದರೆ ಬಾಲಣ್ಣ, ನಮ್ಮಲ್ಲೇನೂ ಚೌಕಾಸಿ ಮಾಡದೆ, ಬಾಕಿಯಾದವರಿಗೆ ತಕ್ಷಣ ಸಮೀಪದಲ್ಲೇ ಇದ್ದ ಮತ್ತು ಸಮಾನ ಯೋಗ್ಯತೆಯ ಇನ್ನೊಂದೇ ಹೋಟೆಲಿನಲ್ಲಿ ವ್ಯವಸ್ಥೆ ಮಾಡಿದ್ದು ಅವರ ಸಾಮರ್ಥ್ಯಕ್ಕೆ ಒಳ್ಳೆಯ ನಿದರ್ಶನ. “ಈ ಯಾತ್ರೆಯಲ್ಲಿ ಮೊದಲ ಬಾರಿಗೆ ದೀರ್ಘ ನಿದ್ರೆ” ಎಂದುಕೊಂಡೇ ನಾವು ಹಾಸಿಗೆ ಸೇರಿದರೂ….
ರೂಢಿಯಂತೆ ಐದೂವರೆಗೇ ಎದ್ದಿದ್ದೆವು. ವಿರಾಮದಲ್ಲೇ ಪ್ರಾತರ್ವಿಧಿಗಳನ್ನು ಮುಗಿಸಿ ಸಜ್ಜಾದರೂ ಸಮಯ ಉಳಿದಿತ್ತು! ನಾವಿಬ್ಬರೇ ಕಾಲಾಡಿಸುತ್ತ ಪಕ್ಕದಲ್ಲೇ ಹೊಸದಾಗಿ ನಿರ್ಮಾಣಗೊಂಡಂತಿದ್ದ ಭಾರೀ ಬಸ್ ನಿಲ್ದಾಣದ ಅಜಮಾಷೀ ಮಾಡಿ (ದಿನಪತ್ರಿಕೆ ಸಂಗ್ರಹಿಸಿ), ಎದುರಿನ ದಾರಿಯ ಉದ್ದಳತೆ ನೋಡುತ್ತ, ಊರಿನ ವಿದ್ಯಾಸಂಸ್ಥೆಗಳ ಧಾರಾಳವನ್ನೂ ಕಂಡುಕೊಂಡೆವು. ತೆಗೆದಿದ್ದೆವು. ಬೆಳಗ್ಗಿನ ತಿಂಡಿಯಾದ ಮೇಲೆ, ವಸತಿ ಖಾಲಿ ಮಾಡಿ, ಬಸ್ಸಿನಲ್ಲೇ ಊರೊಳಗಿನ ಬಹುಖ್ಯಾತ ಬೃಹದೀಶ್ವರ ದೇವಳ ಸೇರಿದೆವು.
ಕರ್ನಾಟಕದಲ್ಲಿ ಕಾವೇರಿ ಸುಮಾರು ಮುನ್ನೂರೈವತ್ತು ಕಿಮೀ ಉದ್ದದಲ್ಲಿ ಅನೇಕ ಸಖಿಯರನ್ನು ಕೂಡಿಕೊಂಡು ಬಲವಂತಳಾಗುತ್ತಾಳೆ. ಅದೇ ತಮಿಳ್ನಾಡಿನ ಸುಮಾರು ನಾನೂರು ಕಿಮೀ ಓಟದಲ್ಲಿ ಸಾಗರ ಸಂಗಮಿಸುವ ಮುನ್ನ ಹಲವು ಸೀಳಾಗಿ, ಕೆಲವೆಡೆಗಳಲ್ಲಿ ತನ್ನ ಹೆಸರಿಗೇ ಎರವಾಗಿ, ಬಹು ಲೋಕೋಪಯೋಗಿ ಆಗುತ್ತಾಳೆ. ಅವಳ ಮಡಿಲಲ್ಲಿ ಸಮೃದ್ಧಿ ಕಂಡ ಚೋಳ, ಪಾಂಡ್ಯ, ಪಲ್ಲವ ಮತ್ತು ಸ್ವಲ್ಪ ಮಟ್ಟಿಗೆ ನಮ್ಮ ವಿಜಯನಗರದ ರಾಜವಂಶಗಳು ಹಲವು ದೇವಾಲಯಗಳನ್ನೂ ಕಟ್ಟಿ, ವಿಸ್ತರಿಸಿ, ಪೋಷಿಸಿದ್ದಾರೆ. ಅವುಗಳಲ್ಲಿ ನಾವು ಹಿಡಿದ ಮೊದಲನೆಯದು ಬೃಹದೀಶ್ವರ. (ಮರುದಿನ ತಿರುಚ್ಚಿಯ ಶ್ರೀರಂಗ.)
ಬೃಹದೀಶ್ವರ, ಹೆಸರಿನಂತೆ ರಚನೆ ಮತ್ತು ವೈವಿಧ್ಯದಲ್ಲಿ ನಿಜಕ್ಕೂ ಬೃಹತ್ತಾಗಿಯೇ ಇದೆ. ಸುಮಾರು ಹದಿನೆಂಟು ಹೆಕ್ಟೇರ್ ವಿಸ್ತೀರ್ಣದ ದೇವಳ ವಠಾರ, ಭಾರೀ ಕಂದಕ ಸಹಿತ ಭದ್ರ ಕೋಟೆಯೇ ಆಗಿದೆ. ದೇವಳದ ಹೊರಗೋಡೆಯ ಎತ್ತರದಲ್ಲಿ ನೂರಾರು ಪುಟ್ಟ ನಂದಿಗಳ ಸಾಲಿದ್ದರೆ, ಅಲ್ಲೇ ಒಳಮೈಯಲ್ಲಿ ಹಾಗೇ ಶಿವಲಿಂಗಗಳಿವೆ. ಕೇಂದ್ರದಲ್ಲಿರುವ ಮುಕ್ತ ಮಂಟಪದಲ್ಲಿ, ಭಾರತದೊಳಗೆ ಎತ್ತರದಲ್ಲಿ ಮೂರನೇ ಸ್ಥಾನದಲ್ಲಿರುವ ನಂದಿ ಕುಳಿತಿದೆ. ಎದುರಿನ ಎತ್ತರಿಸಿದ ಮಂದಿರದೊಳಗಿನ ಪ್ರಧಾನ ದೈವ – ಬೃಹದೀಶ್ವರನೆಂದೇ ಖ್ಯಾತವಾದ ಶಿವಲಿಂಗ, ಭಾರತದೊಳಗೆ ಎತ್ತರದಲ್ಲಿ ಐದನೇ ಸ್ಥಾನಲ್ಲಿದೆ (ಆಧಾರ: ಮೆಟಾ ಏ.ಐ). ಉಳಿದಂತೆ ವಠಾರದೊಳಗೆ ಅನೇಕ ಸ್ವತಂತ್ರ ಮಂದಿರಗಳಲ್ಲಿ ಪಾರ್ವತಿ, ಗಣೇಶಾದಿ ಶಿವನ ಪರಿವಾರ ಮತ್ತು ಗಣ್ಯ ಭಕ್ತ ಪರಿವಾರವೆಲ್ಲ ವಿಗ್ರಹರೂಪದಲ್ಲಿ ಮೆರೆದು, ಭಕ್ತ ಮನೋರಥದಂತೆ ಪೂಜೆ ಸ್ವೀಕರಿಸುತ್ತಲಿದ್ದಾರೆ.
ಬೃಹದೀಶ್ವರ ಸಂಕೀರ್ಣ ಪ್ರಾಚ್ಯ ಇಲಾಖೆಯ ಅಧೀನದಲ್ಲಿರುವುದರಿಂದ, ಮುಖ್ಯ ದೇವಬಿಂಬಗಳನ್ನುಳಿದು ಪಟಗ್ರಹಣಕ್ಕೆ ನಿಷೇಧ ಇರಲಿಲ್ಲ. ಕೃಷಿ, ದೇವಸ್ಥಾನಗಳಂತೆ ಸಾಹಿತ್ಯ ಕಲೆಗಳ ವಿಕಾಸದಲ್ಲೂ ಈ ಬಯಲು ಪ್ರಸಿದ್ಧವೇ ಇದೆ. ಅದರ ಪ್ರತಿಫಲನವನ್ನು ಶಿವಮಂದಿರದ ಹೊರಗಿನ ಭಿತ್ತಿ ಸಾಹಿತ್ಯದಲ್ಲೂ ಇನ್ನೊಂದೆಡೆ ಇಲಾಖೆ ವ್ಯವಸ್ಥೆ ಮಾಡಿರುವ ಪುಟ್ಟ ಪ್ರದರ್ಶನಾಂಕಣದಲ್ಲೂ ಧಾರಾಳ ನೋಡಬಹುದು. ರಾಜಕಾರಣದ ಮೇಲಾಟದಲ್ಲಿ ದೇವಳ ಸಣ್ಣಪುಟ್ಟ ಅವನತಿ ಕಂಡದ್ದಿದೆಯಾದರೂ ಕಾಲಕಾಲಕ್ಕೆ ವಿಸ್ತರಿಸಿ, ಪರಿಷ್ಕಾರ ಕಂಡ ಕತೆಯೇ ಎದ್ದು ಕಾಣುತ್ತದೆ. ಯಂತ್ರ ವಿಶೇಷಗಳ ಸೌಕರ್ಯಗಳಿಲ್ಲದ ಕಾಲದಲ್ಲಿ ಐವತ್ತು ಕಿಮೀ ದೂರದ ಕೋರೆಗಳಿಂದ ಭಾರೀ ಕಲ್ಲ ತುಣುಕುಗಳನ್ನು ಪ್ರತ್ಯೇಕಿಸಿ ತಂದದ್ದು, ಗಚ್ಚು ಗಾರೆಗಳ ಅಂಟಿಲ್ಲದೇ ಚಡಿ, ಕುಟ್ಟಿಗಳ ತಂತ್ರದಲ್ಲೇ ಮಂದಿರ ನಿರ್ಮಿಸಿದ್ದು, ಅದರಲ್ಲೂ ಸುಮಾರು ಎಂಬತ್ತು ಟನ್ ತೂಕದ ಏಕಶಿಲಾ ಗುಮ್ಮಟವನ್ನು ಇನ್ನೂರ ಹದಿನಾರು ಅಡಿಗಳಿಗೂ ಮೀರಿದ ಎತ್ತರಕ್ಕೇರಿಸಿದ್ದು ಅದ್ಭುತವೇ ಸರಿ. ಅಷ್ಟಕ್ಕೂ ವಿರಮಿಸದೆ, ಅಸಂಖ್ಯ ಮೂರ್ತಿ, ಕುಸುರಿ ಕೆಲಸಗಳಿಂದ ಮನೋಹರವಾಗಿಸಿದ್ದು ನೋಡಿದರೆ, ವಿಶ್ವಖ್ಯಾತ (ಬೋಳು) ಪಿರಮಿಡ್ಡುಗಳನ್ನೂ ಮೀರಿಸಿದ ಸಾಧನೆ ಎಂದೇ ಹೇಳಬೇಕು. ಜತೆಗೇ ಮುಂದಿನ ದಿನಗಳಲ್ಲಿ ಸಾಮಾನ್ಯರು, ಅದರಲ್ಲೂ ಹೆಚ್ಚಾಗಿ ಶುದ್ಧಾಂಗ ಭಕ್ತರು, ಇತಿಹಾಸದ ಪುಟಗಳನ್ನು ಮರೆತು, ಕೇವಲ ಬೆರಗು, ಸಂತೋಷಗಳಲ್ಲಿ ಕಳೆದು ಹೋಗುವ ಮುನ್ನ ಪೂರ್ಣ ಅಜ್ಞಾತವಾಗಿಯೇ ಸಂದುಹೋದ ಕೂಲಿ, ಕುಶಲಕರ್ಮಿಗಳ ಶ್ರಮ ಜೀವಹಾನಿಗಳನ್ನೂ ನೆನೆದು ಹಣ್ಣಾಗಬೇಕು.
ಸುಮಾರು ಎರಡೂವರೆ ಗಂಟೆಯ ಸುತ್ತಾಟದ ಬಳಲಿಕೆಯೊಡನೆ ಮರಳಿ ಬಸ್ಸೇರಿ ತಿರುಚಿರಾಪಳ್ಳಿ ಯಾನೆ ತ್ರಿಚ್ಚಿಗೋಡಿದೆವು.
ತೀರ್ಥಯಾತ್ರೆಯಲ್ಲ, ಕುಟುಂಬಯಾನ! : ಮೊದಲೇ ಹೇಳಿದಂತೆ ಪ್ರಸ್ತುತ ತೀರ್ಥಯಾತ್ರೆಗೆ ಮೂಲ ಪ್ರೇರಕರು ಪ್ರಾಧ್ಯಾಪಕ (ನಿವೃತ್ತ) ಮರುವೊಳು ನಾರಾಯಣ ಭಟ್ಟರು. ಅವರು ಹೆಂಡತಿ (ವೀಣಾ) ಮತ್ತು ಮಗಳ ಸಹಿತ (ಮೇಧಾ) ಭಾಗಿಯಾಗಿದ್ದರು. ಮೇಧಾ ತನ್ನ ಸಹಪಾಠಿ ಮತ್ತು ಗೆಳತಿ ಅಪೂರ್ವಾಳನ್ನು ಯಾತ್ರೆಗೆ ಎಳೆದುಕೊಂಡರೆ, ಸರದಿಯಲ್ಲಿ ಆಕೆ ಸ್ವಂತ ತಂದೆ, ತಾಯಿಯರನ್ನೂ ಎಳೆದುಕೊಂಡಿದ್ದಳು. ನಾರಾಯಣ ಭಟ್ರು ಮೊದಲು ಸ್ವತಂತ್ರವಾಗಿ ನಡೆಸಿದ ಇಂಥದ್ದೇ ಅನ್ಯ ಯಾತ್ರಾಭಾಗಿಗಳನ್ನು “ಇದೂ ನನ್ನದೇ” ಎಂಬ ಆತ್ಮೀಯತೆಯಲ್ಲಿ ಆಹ್ವಾನಿಸಿ ಸೇರಿಸಿಕೊಂಡದ್ದರಿಂದ, ತಂಡದಲ್ಲಿ ‘ಹವ್ಯಕ ಬ್ರಾಹ್ಮಣ’ರ ಸಂಖ್ಯೆ ಹೆಚ್ಚಿದ್ದದ್ದು ನಿಜ. ಆದರೆ ನಿಜದಲ್ಲಿ ಇದಕ್ಕೆ ಯಾವ ಪೂರ್ವ ಯೋಗ್ಯತೆ, ಪ್ರಮಾಣಗಳೂ (ಜಾತಿ, ಕಲಿಕೆ, ವೃತ್ತಿ….) ಬೇಕಿರಲಿಲ್ಲ.
ಲಗತ್ತಿಸಿದ ಮೊದಲ ಪಟದಲ್ಲಿ ಅರೆ-ಛಾಯಾ ಮುಖ ತೋರಿಸಿ, ಕಿರು ಚಲಚಿತ್ರದ ಕೊನೆಯಲ್ಲಿ ಕೈತಾಂಗು ಸಾಲದಾದಾಗ ಮೊಣಕಾಲಿಗೆ ಕೈ ಕೊಟ್ಟಾದ್ರೂ ಏರಿ ಬಂದ ಛಲವಂತ, ನಮ್ಮ ತೀರ್ಥಯಾತ್ರೆಯ ಅತಿ ಹಿರಿಯ ಸದಸ್ಯ, ಕೃಷಿಕ ವೆಂಕಟ್ರಮಣ ಭಟ್ಟರು. ಅವರಿಗೆ ಬಸ್ಸಿನ ಸೀಟು ಹಂಚಿಕೆಯಲ್ಲೂ ವಾಸ್ತವ್ಯದ ಕೋಣೆಗಳಲ್ಲೂ ನಿರಂತರ ಜತೆಗೊಟ್ಟವರು ಅವರ (ಹೆಂಡತಿಯ ತಮ್ಮ) ಭಾವ ರಾಮ ಭಟ್. ದಕ ಮೂಲದವರೇ ಆದ ರಾಮ ಭಟ್ಟರು ಮುಂಬೈಯಲ್ಲಿ ಆನ್ವಯಿಕ ಕಲೆಗಳ ಪರಿಣತಿ ಗಳಿಸಿ, ವಿದೇಶದಲ್ಲಿ ವೃತ್ತಿ ನೆಲೆ ಕಂಡುಕೊಂಡವರು.
ಯಾತ್ರಾರಂಭಕ್ಕೂ ಮೊದಲೇ ನಮ್ಮ ಸೊಸೆ ರಶ್ಮಿಯ ದೊಡ್ಡಮ್ಮ – ಧರ್ಮತಡ್ಕದ ರೇವತಿ ಶಂಕರ್, ನಿವೃತ್ತ ಅಧ್ಯಾಪಕಿ, ಬರುವುದು ತಿಳಿದಿತ್ತು. ಉಳಿದಂತೆ ನಾನು ಹೆಂಡತಿ ದೇವಕಿ, ತಮ್ಮ ಅನಂತ ಮತ್ತವನ ಹೆಂಡತಿ ರುಕ್ಮಿಣಿಯರನ್ನು ಬಿಟ್ಟು ಹೊಸಬರಲ್ಲಿ ಹೆಚ್ಚು ಮಾತಾಡಿರಲಿಲ್ಲ. ಆದರೆ ಕೌಟುಂಬಿಕ ಎಳೆಗಳನ್ನೆಳೆದು ಸಂಬಂಧ ಸ್ಥಾಪಿಸುವಲ್ಲಿ ದೇವಕಿ ನನ್ನಿಂದ ತುಂಬಾ ಮುಂದಿದ್ದಾಳೆ. ಸಹಜವಾಗಿ ಆಕೆಯ ಅಕ್ಕನ ಪುತ್ತೂರಿನ ಗೆಳತಿ ಮನೋರಮಾ ತಂಡದಲ್ಲಿದ್ದರು. ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕ ಶ್ರೀಧರ ಭಟ್ಟರ ಹೆಂಡತಿ ಸಾವಿತ್ರಿ, ನನ್ನಂತೇ ದೇವಕಿಗೂ ಅವರ ಬಸ್ಸಿನ ಹಾಡುಗಾರಿಕೆಯಿಂದಲೇ ಹೆಚ್ಚು ಪರಿಚಯಕ್ಕೆ ಸಿಕ್ಕರು. ಆಗ ಅವರ ಯಾತ್ರಾ ಸಂಗಾತಿಯಾಗಿ ಬಂದಿದ್ದ, ವಾರಗಿತ್ತಿ ಬಡೆಕ್ಕಿಲ ಜಯಲಕ್ಷ್ಮಿ ಕಣ್ಣರಳಿಸಿ, ನನ್ನತ್ತ ಕೈ ಮಾಡಿ, ದೇವಕಿಯನ್ನು ಕೇಳಿದ್ದರು “ಮರಿಕೆ ಪೈ ಅಪ್ಪಚ್ಚಿಯನ್ನು (ನನ್ನ ಸೋದರ ಮಾವ) ನೆನಪಿಸುವ ಅವರ್ಯಾರು? ನನ್ನಪ್ಪ ಮುಂಡಾಜೆ ಕಿಟ್ಟ (ಕೃಷ್ಣ ಶಾಸ್ತ್ರಿ). ನನ್ನ ಮೂರು ನಾಲ್ಕರ ಹರಯದ ದಿನಗಳಲ್ಲಿ, ಪರ್ವ ಕಾಲಗಳಲ್ಲಿ ನಮ್ಮನೆಗೆ ಬರುತ್ತಿದ್ದ ಪಾರ್ವತಿ ಅತ್ತೆಯ (ನನ್ನಜ್ಜಿ) ಜತೆ ಬರುತ್ತಿದ್ದ ಅವರ ಕಿರಿ ಮಗಳು (ನನ್ನ ಸಮಪ್ರಾಯದ ಚಿಕ್ಕಮ್ಮ) ಅನೂರಾಧಾ ನನ್ನಕ್ಕನ ಜತೆ. ಅವರ ಜತೆ ಬರುತ್ತಿದ್ದ ಆರೇಳರ ಪ್ರಾಯದ ಹುಡುಗ ಅಶೋಕ ಅಂದ್ರೇ…?” ಆರು ದಶಕಗಳ ಮೇಲೂ ನನ್ನ ಒಂದೇ ನೋಟದಿಂದ ಸೋದರ ಮಾವನ ಸಾಮ್ಯ ಗುರುತಿಸಿ, ನನ್ನನ್ನೂ ಅಂದಾಜಿಸಿದ ಜಯಲಕ್ಷ್ಮಿ ಬಹಳ ಚುರುಕಿನವರೇ ಸರಿ. ಕೃಷಿ ಮನೆಯ ಗೃಹಿಣಿಯಾಗಿದ್ದುಕೊಂಡು ಇಂದಿಗೂ ನಾಕೆಂಟು ದನದ ಹಾಲು ಹಿಂಡುವ ಜಯಲಕ್ಷ್ಮಿ, ಬಾಲ್ಯದಲ್ಲಿ ತೋಟದ ತೋಡಿನಲ್ಲಿ ಈಜು ಹೊಡೆದವರು, ಅಣ್ಣನ ಸೈಕಲ್ಲಿನಲ್ಲಿ ಅಂಗಳ ಸುತ್ತಿದವರು. ಕೊಡೈಕೆನಾಲಿನಲ್ಲಿ ನಾನವರಿಗೆ ಯುಕ್ತ ಸಮ್ಮಾನ ಮಾಡಿದ್ದನ್ನು ವಿಡಿಯೋದಲ್ಲಿ ನೋಡಿ.
ಯಾತ್ರಾರಂಭದ ಕೊನೇ ಗಳಿಗೆಯಲ್ಲಿ ರದ್ದುಗೊಂಡ ಸದಸ್ಯರೊಬ್ಬರ ಬದಲಿಗೆ ಬಂದವರು ಬೆಂಗಳೂರು ಮೂಲದ ಸಾವಿತ್ರಿ. ಇವರೂ ಇನ್ನೋರ್ವ ಸಾವಿತ್ರಿಯಂತೇ ಬಸ್ಸಿನಲ್ಲಿ ಸಂಗೀತ ಸುಧೆಯನ್ನೇ ಹರಿಸಿದ್ದರು. ತ್ರಿಚ್ಚಿಯ ಸರತಿ ಸಾಲಿನ ಸಂಕಟದ ನಡುವೆ ಈ ಸಾವಿತ್ರಿ ಏನೋ ಹಾಡು ಗುನುಗಿಕೊಂಡಿದ್ದರು. ಪಕ್ಕದಲ್ಲೇ ಇದ್ದ ನಾನು ಕುಶಾಲಿಗೆಂಬಂತೆ “ಇದು ರಂಗನಾಥನ ಕ್ಷೇತ್ರ, ಸುಬ್ಬುಲಕ್ಷಿಯವರ ಶ್ರೀರಂಗಪುರ ವಿಹಾರಾ….” ಎಂದು ಸೂಚಿಸಿದ್ದೇ ಸಾಕಾಯ್ತು. ಅವರು ಮೆಲುದನಿಯಲ್ಲಿ ಸುಶ್ರಾವ್ಯವಾಗಿ ಹಾಡಿದ್ದು, ನಿಜಕ್ಕೂ ಅಪ್ಯಾಯಮಾನವಾಗಿತ್ತು. ಸಾವಿತ್ರಿಯವರನ್ನು ತಮ್ಮ ಜತೆಗೆ ಯಾತ್ರೆಗೆಳೆದುಕೊಂಡವರು ಅವರ ಮಗಳ ಮೂಲಕ ಬೀಗರಾದ ಕೃಷ್ಣಭಟ್, ಶಶಿಕಲಾ (ನಿವೃತ್ತ ವೈದ್ಯೆ) ದಂಪತಿ.
ಯಾತ್ರೆಯ ಮೊದಲ ದಿನ ನಾವು ತಿರುವನಂತಪುರದ ಹೋಟೆಲಿನಲ್ಲಿಳಿಯುವಾಗ (ಮುಂಬೈಯಿಂದ ವಿಮಾನದಲ್ಲಿ ಬಂದು, ಕಾದು), ಸೇರಿಕೊಂಡ ಸದಸ್ಯರು – ಇನ್ನೊಬ್ಬ ಕೃಷ್ಣ ಭಟ್. ವಾಸ್ತವದಲ್ಲಿ ಈತ ನನ್ನ ಅತ್ತೆಯ (ಸೋದರ ಮಾವ ಗೋವಿಂದನ ಹೆಂಡತಿ – ಎಪಿ ಮಾಲತಿ) ತಮ್ಮ, ಪೂರ್ವ ಪರಿಚಿತ, ಇಲ್ಲಿ ಅನಿರೀಕ್ಷಿತ ಜತೆಗಾರನಾಗಿ ಒದಗಿದ್ದು ಸಂತಸದ ಸಂಗತಿ.
ಯಾತ್ರಾಪೂರ್ವ ಕೂಟದಲ್ಲಿ ಸರಕಾರೀ ಆಸ್ಪತ್ರೆಗಳ ನಾಲ್ವರು ನಿವೃತ್ತ ದಾದಿಯರೂ (ಶಕುಂತಲಾ, ಉಷಾ, ತಂಗಮ್ಮ, ಸುಶೀಲಾ) ಭಾಗಿಗಳಾಗಿದ್ದದ್ದು ಗಮನಿಸಿದ್ದೆ. ಬಸ್ಸಿನಲ್ಲಿ ನನ್ನ ಅನುಭವ ಕಥನದ ತುಣುಕಿನ ಬೆನ್ನಿಗೆ ಸುಶೀಲಾ ಮೆಚ್ಚುಗೆಯ ನುಡಿ ಕೊಟ್ಟಿದ್ದರು. ಆಗ ದೇವಕಿ “ನಮ್ಮದು ಎಳೆದು ಹಾಕಿಕೊಂಡ ಸಾಹಸ. ನೀವಾದರೋ ನೇರ ಮನುಷ್ಯ ಜೀವಗಳ ಸಾವು ಬದುಕಿನ ಹೋರಾಟದಲ್ಲಿ ಆಸರೆಯಾಗಿ ನಿಂತ ಸಾಹಸಿಗಳು. ನಿಮ್ಮ ನಿಜ ಜೀವನದ ರೋಚಕ ಘಟನೆಗಳನ್ನು ಹಂಚಿಕೊಳ್ಳಿ….” ಎಂದು ಸವಾಲು ಹಾಕಿದಾಗ, ಒಂದು ಅವಧಿಯಲ್ಲಿ ಅದನ್ನು ಸ್ವೀಕರಿಸಿದ ಸುಶೀಲಾ ಮೈಕ್ ಹಿಡಿದಿದ್ದರು…
ಅದೊಮ್ಮೆ ಯಾವ ಪತ್ತೆಯೂ ಇಲ್ಲದ, ವಿಷಸೇವನೆಯಿಂದ ಕೋಮಾಕ್ಕೆ ಜಾರಿದ್ದ ಯುವಕನೋರ್ವನನ್ನು ರೈಲ್ವೇ ಪೋಲಿಸರು ಸರಕಾರೀ ಆಸ್ಪತ್ರೆಗೆ ದಾಖಲು ಮಾಡಿದ್ದರು. ವೈದ್ಯ ಹಾಗೂ ದಾದಿಯರ ತಿಂಗಳುದ್ದದ ಶುಶ್ರೂಷೆಯಲ್ಲಿ ಆತ ಎಚ್ಚರಕ್ಕೆ ಬಂದದ್ದಲ್ಲದೇ ತೊದಲು ನುಡಿಗಳಲ್ಲಿ ತನ್ನ ಮೂಲವನ್ನೂ ಹೇಳಿಕೊಂಡಿದ್ದ. ಇವರು ಬಹು ಕಷ್ಟದಲ್ಲಿ ಅದರ ಜಾಡುಹಿಡಿದು, ದೂರದ ರಾಜಸ್ತಾನದಿಂದ ಯುವಕನ ಆಪ್ತ ಬಂಧುಗಳನ್ನು ಮಂಗಳೂರಿಗೆ ಕರೆಸಿಕೊಳ್ಳುವುದರಲ್ಲೂ ಯಶಸ್ವಿಯಾಗಿದ್ದರು. ಸ್ಥಿತಿವಂತರೂ ಅತಿ ಕಾಳಜಿವಂತರೂ ಆದ ಆಪ್ತರು ಮರಣೋನ್ಮುಖನಾಗಿದ್ದ ಬಂಧುವನ್ನು ಮರಳಿ ಒಪ್ಪಿಸಿದವರ ಕಾಳಜಿಯನ್ನು ಪೂರ್ಣ ಗೌರವಿಸಿದರೂ ವ್ಯವಸ್ಥೆಯನ್ನು (ಸರಕಾರೀ ಆಸ್ಪತ್ರೆ) ಕೀಳ್ಗಣಿಸಿದ್ದರು. ಹಣ ಬಲದಲ್ಲಿ ಆತನನ್ನು ಖಾಸಗಿ ಆಸ್ಪತ್ರೆಗೆಲ್ಲೋ ಒಯ್ದು, ಆಕಸ್ಮಿಕದಲ್ಲಿ ನಿಜಕ್ಕೂ ಕಳೆದುಕೊಂಡರು. ಯಾವ ಕೃತಕ ರಂಗುಗಳಿಲ್ಲದೇ ಹೀಗೆ ಹರಿದ ಸುಶೀಲಾರ ಕಥನ ನಮ್ಮೆಲ್ಲರ ಕಣ್ಣನ್ನು ಮಂಜಾಗಿಸಿತ್ತು. ಸುಶೀಲರ ಮಾತಿನಿಂದ ಪ್ರೇರಣೆ ಪಡೆದು ಸುನಂದಾ, ಓರ್ವ ಗೃಹಿಣಿ, ತಾನೆದುರಿಸಿದ ಒಂದು ದುರ್ಭರ ಆದರೆ ಸುಖಾಂತ ಪ್ರಸಂಗವನ್ನೂ ನಮ್ಮೊಡನೆ ಹಂಚಿಕೊಂಡರು. ಹುಟ್ಟಿನ ಆಕಸ್ಮಿದ ಗುರುತುಗಳು ಏನಿದ್ದರೂ ಆ ನಾಲ್ವರು ದಾದಿಯರೂ ನಮ್ಮ ತಂಡದ ಬಂಧುತ್ವಕ್ಕೆ ಹೊರಗಿನವರಾಗಲೇ ಇಲ್ಲ.
ತುಸು ಹೆಚ್ಚಿನ ವಿವರಕ್ಕೆ ಹೋಗುವುದಿದ್ದರೆ ಹೀಗೇ ಹೇಳುವುದಿದ್ದರೆ, ನನ್ನ ಹೆಂಡತಿ ದೇವಕಿಯ ಕಾಸರಗೋಡು ಸೋದರ ಮಾವನ ವ್ಯವಹಾರದ ಮಂಗಳೂರು ಪಾಲುದಾರರ ಮಗ – ಕಾಶೀಮಠ ಗಣೇಶ. ಬಾಲ್ಯದ ಒಲವಿನಲ್ಲಿ ದೇವಕಿಗೆ ಗಣೇಶ “ಅಣ್ಣಿಮಾವನ ಮಗ”. ಅವರು ಸಪತ್ನೀಕರಾಗಿಯೇ (ಶ್ರೀದೇವಿ) ಬಾಗಿಯಾಗಿದ್ದರು. ಪುಸ್ತಕ ವ್ಯಾಪಾರಿಯಾದ ನನಗೆ ಬೇಟೆ, ವಾಸ್ತುವೇ ಮೊದಲಾದ ಅನುಭವ ಪ್ರಣೀತ ಪುಸ್ತಕಗಳನ್ನು ಬರೆದು, ಪ್ರಕಟಿಸಿ, ಒದಗಿಸುತ್ತಿದ್ದ ಕೈಂತಜೆ ವಿಷ್ಣು ಭಟ್ಟರ ಪರಿಚಯ ದೊಡ್ಡದೇ. ಯಾತ್ರಾತಂಡದ ಓರ್ವ ಸದಸ್ಯೆ “ನಾನವರ ಮಗಳು ಉದಯ…” ಎಂದೇ ಪರಿಚಯಿಸಿಕೊಂಡಿದ್ದರು. ಹೀಗೇ ಚೂಂತಾರಿನ, ಮುಳ್ಳಂಕೊಚ್ಚಿಯ ಸಂಬಂಧಗಳ ಎಳೆ ಹಿಡಿದವರೂ ತಂಡದಲ್ಲಿದ್ದರು. ಎಂಟು ದಿನಗಳ ತುರುಸಿನ ಓಡಾಟದ, ಆತ್ಮೀಯ ಒಡನಾಟದ ಎಳೆಗಳನ್ನು ಇನ್ನಷ್ಟು ಅಕ್ಷರ ರೂಪದಲ್ಲಿ ಪೋಣಿಸುವಲ್ಲಿ ನನಗೆ ಶಕ್ತಿ ಸಾಲದಾಗಿದೆ. ಹಾಗಾಗಿ ಹೆಸರಿಸದುಳಿದವರ ಕ್ಷಮೆ ಕೋರುತ್ತಾ ನಮ್ಮದು ತೀರ್ಥಯಾತ್ರೆಯಷ್ಟೇ ಆಗಿರಲಿಲ್ಲ, ಒಂದೇ ಕುಟುಂಬದ ಯಾತ್ರೆಯೂ ಆಗಿತ್ತು ಎಂದು ಹೇಳುವಲ್ಲಿ ನನಗ್ಯಾವ ಸಂಕೋಚವೂ ಇಲ್ಲ.
ರಂಗನಿಂದ ವಿನಾಯಕನವರೆಗೆ : ಉತ್ತರದ ಯಮುನಾತೀರ ವಿಹಾರಿ, ದಕ್ಷಿಣದಲ್ಲಿ ಕಾವೇರೀ ತೀರವನ್ನೂ ಪ್ರೀತಿಸಿದ್ದಾನೆ. ಈತ ಕರ್ನಾಟಕದ ಶ್ರೀರಂಗಪಟ್ಟಣದಲ್ಲಿ ಶೇಷಶಾಯೀ ಭಂಗಿಯ ಆದಿರಂಗನಾದರೆ, ಶಿವನಸಮುದ್ರದ ಬಳಿ ಮಧ್ಯರಂಗನಾಗಿ, ಮೆರೆದಿದ್ದಾನೆ. ಅದೇ ತಿರುಚಿರಾಪಳ್ಳಿ ಯಾನೆ ತಿರುಚ್ಚಿ, ಇಂಗ್ಲಿಷ್ ಅಪಭ್ರಂಶದಲ್ಲಿ (ಮಡಿಕೇರಿ ಮರ್ಕ್ಯರಾ ಆದಂತೆ) ಟ್ರಿಚ್ಚಿಗೆ ಬಂದಾಗ, ಅಂತ್ಯರಂಗನಾಗಿ ಆಳುತ್ತಿದ್ದಾನೆ. ಕಾವೇರಿಯ ಸೀಳೆರಡರ ನಡುವಣ ನೆಲ, ಅಂದರೆ ಕುದುರು ಅಥವಾ ನದೀ ದ್ವೀಪವನ್ನು ಇಲ್ಲಿ ರಂಗ ಆರಿಸಿಕೊಂಡಿದ್ದಾನೆ. ಇಲ್ಲಿನ ರಂಗಸಾಮ್ರಾಜ್ಯ ಬಹು ವಿಸ್ತಾರದ್ದು, ದೇವಳವೂ ಅಷ್ಟೇ ದೊಡ್ಡದು. ಅದನ್ನೇ ಸೂಕ್ಷ್ಮವಾಗಿ ಕಟ್ಟಿಕೊಡುವ (ಅಂತರ್ಜಾಲ ಕೃಪೆ) ಸಣ್ಣ ಅಂಕಿಸಂಕಿ ನೋಡಿ – ದೇವಳದ ವಿಸ್ತೀರ್ಣ ೧೫೫ ಎಕ್ರೆ (ಈಚೆಗೆ ಇನ್ನೂ ಹೆಚ್ಚಿದೆಯಂತೆ), ಆರಾಧನಾ ಸ್ಥಳಗಳು ೮೧, ಗೋಪುರಗಳು ೨೧, ವೇದಿಕೆಗಳು ೩೯, ಕೆರೆ ಪುಷ್ಕರಣಿಗಳಂತೂ ಅಸಂಖ್ಯ. ಪ್ರಧಾನ ಗುಡಿಯ ಸ್ವರ್ಣಮಯ ವಿವರಗಳು, ಸುವಿಸ್ತಾರ ಪ್ರದಕ್ಷಿಣಾಪಥಗಳು, ಅಖಂಡ ಶಿಲಾ ಮಹಾ ಸ್ತಂಭಗಳೂ ಕುಸುರಿಯಲ್ಲರಳಿದ ಪರಿಗಳನ್ನೂ ಲೆಕ್ಕ ಹಾಕ ಹೋದರೆ, ರಂಗಾಲಯಗಳಲ್ಲಿ ಇಂಥದ್ದು ಇನ್ನೊಂದಿಲ್ಲ, ನಿಸ್ಸಂದೇಹವಾಗಿ ಇದು ಅಂತ್ಯರಂಗ!
ತಂಜಾವೂರಿನಿಂದ ತಿರುಚ್ಚಿ ಏನೂ ದೂರದ ಊರಲ್ಲ. ಆದರೆ ದಾರಿಯಲ್ಲಿ ನಮ್ಮ ಬಸ್ಸಿನ ಹಿಂಟಯರುಗಳಲ್ಲಿ ಒಂದು ಢಬ್ ಎಂದಿತ್ತು. ಅದನ್ನು ಮುಂದೆ ಮೊದಲು ಸಿಕ್ಕ ಗ್ಯಾರೇಜಿನಲ್ಲಿ ಬದಲಿಸಿಕೊಂಡು ಹೊರಡುವಾಗ ತುಸು ಸಮಯ ಸೋರಿ ಹೋಗಿತ್ತು. ಹಾಗಾಗಿ ತಿರುಚ್ಚಿಯಲ್ಲಿ ಮೊದಲು ಶರವಣ (ಊಟದ ಹೋಟೆಲ್) ಸೇವೆ ಸ್ವೀಕರಿಸಿಯೇ ಶ್ರೀರಂಗನ ಖಾಸಾ ದ್ವೀಪ ಪ್ರವೇಶಿಸಿದೆವು.
ರಾಜಸ್ತಾನದಲ್ಲಿ ವರ್ತಮಾನದ ಜನಜೀವನದೊಡನೆ ಸಮನ್ವಯ ಸಾಧಿಸಿದ ಕೆಲವು ಕೋಟೆಗಳನ್ನು ಕಾಣುತ್ತೇವೆ. ಅಂಥದ್ದೇ ಖ್ಯಾತಿ ತ್ರಿಚ್ಚಿಯ ಶ್ರೀರಂಗನ ದೇವಳಕ್ಕೂ ಇದೆ. ಹಾಗಾಗಿ ಅದರ ಸಮ್ಮರ್ದ ಮತ್ತು ಹಳೆಗಾಲದ ರಸ್ತೆಗೆ ನಮ್ಮ ಗಜಗಾಂಡಿಯಾದ ಬಸ್ಸನ್ನು ನುಗ್ಗಿಸದೆ, ನಾವು ಸಾಕಷ್ಟು ಮೊದಲೇ ಇಳಿದಿದ್ದೆವು. ಮತ್ತೆ ಪೇಟೆಯ ಗೊಂದಲಗಳ ನಡುವೆ ನಮ್ಮ ಅಸಂಗತ ಮೆರವಣಿಗೆ ನಡೆಯಿತು. ಈ ಪೇಟೆ, ವಸತಿ ದೇವಳದ ಮೊದಲ ಒಂದೆರಡು ಸುತ್ತುಗಳನ್ನು ಗಾಢವಾಗಿ ವ್ಯಾಪಿಸಿವೆ. ದಾರಿಯ ಅಸಮ ಅಂಚುಗಟ್ಟೆಗಳು. ಒಡಕಲು ಮೋರಿ, ಸೋರುವ ನಲ್ಲಿ, ಎಲ್ಲೆಂದರಲ್ಲಿ ಪಾದ ಊರಿ, ದಶದಿಕ್ಕುಗಳಿಗೆ ಸರಿಗೆ ಚಾಚಿದ ವಿದ್ಯುತ್ ಕಂಬಗಳು, ಅದರದೇ ಪಕ್ಕೆ ತಿವಿಯುವ ಮಹಾಸ್ವಿಚ್ಚುಗಳು, ಮಳಿಗೆಗಳ ವೈವಿಧ್ಯಮಯ ನಾಮಫಲಕ ಮತ್ತು ‘ಸುಂದರ’ ಜಾಹೀರಾತು ಫಲಕಗಳಂತೇ ರಾಜಕೀಯ ಪಕ್ಷಗಳ ಅಡ್ಡಾದಿಡ್ಡೀ ಭಿತ್ತಿಗಳು, ತೋರಣಗಳು, ಭರಾಟೆಯ ಮತ್ತು ವಿಶ್ರಮಿಸಿದ್ದ ಅಸಂಖ್ಯ ವಾಹನಗಳು, ಪೋಲಿ ದನ ನಾಯಿಗಳು, ಮಳಿಗೆಗಳಿಂದ ಚೆಲ್ಲುವರಿಯುವ ಗಿರಾಕಿಗಳು, ಕಸ, ಕೊಚ್ಚೆ, ಸೆಗಣಿ…. ಕೊನೆಗೆ ನಮ್ಮಂತೇ ಪಾದ ಎಳೆಯುವ ಮಂದೆಯಲ್ಲಿ ನಾವೂ ಒಂದಾಗಿ ನಡೆದೆವು.
ದೇವಾಲಯದ ಯಾವುದೋ ಒಂದು ಸುತ್ತಿನಲ್ಲಿ, ಪಾದರಕ್ಷೆ ನಿರ್ಮೂಲನೆ, ಭದ್ರತಾ ತನಿಖೆ, ವಸ್ತ್ರ ಸಂಹಿತೆ, ಫೋಟೋ ನಿಷೇಧಗಳಿಗೆಲ್ಲ ಒಡ್ಡಿಕೊಂಡೆವು. ಹಾಗೆಂದು ಗೊಂದಲವೇನೂ ಕಡಿಮೆಯಾದದ್ದಿಲ್ಲ. ದೇವಳದ್ದೇ ಎಂದೂ ಮುಗಿಯದ ದುರಸ್ತಿ, ಪರಿಷ್ಕರಣಾ ಕಾಮಗಾರಿಗಳಿಗೆ ಕಟ್ಟಿದ ಅಟ್ಟಳಿಗೆಗಳು, ಕಲ್ಲು, ಸಿಮೆಂಟ್, ಧೂಳುಗಳೆಲ್ಲ, ಮೂರ್ತಿ ಪೂಜೆಯ ಭಾಗಗಳಾದ ದೀಪ ಸೇವೆಗಳ ಎಣ್ಣೆ ಜಿಡ್ಡು, ಕರಿಕು, ಕುಂಕುಮ, ಹೂಕಸ… ಮುಂತಾದ ಭೌತ ಸತ್ಯಗಳೊಡನೆ ರಾಜೀ ಮಾಡಿಕೊಂಡಿದ್ದವು. ಅವನ್ನು ನಾವು ಉಪೇಕ್ಷಿಸಿ ನಡೆದರೂ ಅಧಿಭೌತ ಮಟ್ಟದಲ್ಲಿ ದೇವಳದ ಒಳ ವಠಾರದಲ್ಲಿ ಅಲ್ಲಲ್ಲಿ ಹುದುಗಿದ್ದ ಪುಟ್ಟ ಮೈಕುಗಳು ಮಂದವಾಗಿ ಅನುರಣಿಸುತ್ತಿದ್ದ ಸಂಗೀತ ಸೇವೆ, ಭಕ್ತರ ಹುಕಿಗೆ ಅನುಗುಣವಾಗಿ ಏಳುತ್ತಿದ್ದ ನಾಮಸ್ಮರಣೆಯ ಬೊಬ್ಬೆಗಳು, ಸಾಲದೆಂಬಂತೆ ಸೈಕಲ್ಲಿಗೆ ಬ್ಯಾಟರಿಯೊಡನೆ ಮೈಕ್ ಕಟ್ಟಿ, ಭಜನೆಯೊಡನೆ ಮರ್ದಲ ಕುಟ್ಟುತ್ತಾ ಬಂದ ‘ಹರಿಕಿಸ್ಣಾ’ ಪಂಥ…. ಅನುಭವಿಸುತ್ತಾ ನಾವೂ ಹಾಕಿದೆವು ಗೋವಿಂದೋ ಗೋವಿಂದ!
ಭಕ್ತ ಪ್ರವಾಹ ಒಂದು ಹಂತದಲ್ಲಿ ನಮ್ಮನ್ನು ಸರತಿ ಸಾಲಿನ ಜಾಲಕ್ಕೆ ಸೇರಿಸಿತು. ಬಾಲಣ್ಣನಿಗೆ ಅಲ್ಲಿನ ಉಚಿತ ದರ್ಶನದ ಸರತಿ ಸಾಲಿನ ಮೇಲೆ ವಿಶ್ವಾಸವಿರಲಿಲ್ಲ. ಅವರು ಅಧಿಕೃತವಾಗಿಯೇ ಹೆಚ್ಚಿನ ದುಡ್ಡು ಕೊಟ್ಟು, ನಮ್ಮನ್ನು ‘ವಿಶೇಷ ದರ್ಶನಾಕಾಂಕ್ಷಿ’ಗಳನ್ನಾಗಿಸಿದರೂ ಭವ ಹಿಂಗಲಿಲ್ಲ. ಕುಚೇಲರ ಸಾಲಿನ ಹತ್ತು ನಡೆಗೆ, ಕುಬೇರರ (ನಮ್ಮ) ಸಾಲಿನದು ಇಪ್ಪತ್ತು ನಡೆ ಮಾತ್ರ. ಇಬ್ಬರನ್ನೂ ಏಮಾರಿಸಿ ನುಗ್ಗುವ ವಿಶೇಷ ಸೇವಾಕರ್ತರ ಕಾಟ ಬೇರೇ. ಭರ್ಜರಿ ಬೇಲಿ ಸಾಲುಗಳಲ್ಲಿ ನಿಂತೂ ಕುಂತೂ ಸುಳಿದೂ ಸುತ್ತೀ ಮತ್ತಷ್ಟು ದೇವಳದ ಒಳಸುಳಿಗಳಲ್ಲಿ ಬಸವಳಿದೆವು. ಅಲ್ಲಲ್ಲಿ ಬೇಲಿಗೇ ಬೆಸೆದಿದ್ದ ಕೂರುವ ಸೌಕರ್ಯ, ರೊಂಯ್ಗುಟ್ಟುವ ಪಂಕಗಳ ಪ್ರಭಾವಲಯಗಳಲ್ಲಿ ತುಸು ಸುಧಾರಿಸಿಕೊಳ್ಳುತ್ತಿದ್ದೆವು, ಅಷ್ಟೆ. (ತಿರುಪತಿಯಲ್ಲಾದರೋ ಪಂಕ, ಆಸನಗಳನ್ನು ಮೀರಿ, ಸಾಮಾನ್ಯರಿಗೂ ಸರತಿ ಸಾಲುಗಳಲ್ಲಿ ಕಾಲಕಾಲಕ್ಕೆ ತಿನಿಸು ಪಾನೀಯಗಳ ವ್ಯವಸ್ಥೆ, ವಿವಿಧ ಹಜಾರಗಳ ನಡುವೆ ಪ್ರಕೃತಿ ಕರೆಗೂ ವ್ಯವಸ್ಥೆ ಇದ್ದುದು ನೆನಪಿಗೆ ಬಾರದಿರಲಿಲ್ಲ) ಇಂಥಾ ಒಂದು ಹಂತದಲ್ಲಿ ಕನಕದಾಸ “ಬಾಗಿಲನು ತೆರೆದು ಸೇವೆಯನು ಕೊಡು…” ಎಂದು ಬೇಡಿದಂತೆ, ಕಣ್ಣಪ್ಪ “ಶಿವಪ್ಪಾ ಕಾಯೋ ತಂದೇ…” ಎಂದು ಅಲವತ್ತುಕೊಂಡಂತೆ, ನಮ್ಮ ಬಳಗದವರೇ ಆದ ಸಾವಿತ್ರಿ ಸುಬ್ರಹ್ಮಣ್ಯ “ಶ್ರೀರಂಗಪುರ ವಿಹಾರಾ…” ಹಾಡಿನ ಮನವಿಯನ್ನೂ ಸಲ್ಲಿಸಿದರು (ಇದರ ವಿಡಿಯೋ ತುಣುಕು ಹಿಂದಿನ ಕಥನದಲ್ಲಿದೆ, ಮತ್ತೆ ನೋಡಿಕೊಳ್ಳಿ). ಆದರೆ ಶ್ರೀರಂಗ ಗೋಡೆಯಲ್ಲಿ ಕಿಂಡಿ ತೆರೆದೋ ಮೋರೆ ತಿರುಗಿಸಿಯೋ ಪ್ರತ್ಯಕ್ಷನೇನೂ ಆಗಲಿಲ್ಲ.
ಸಂಜೆ ಐದು ಗಂಟೆಯ ಸುಮಾರಿಗೆ ಕೇಂದ್ರ ಗರ್ಭಗುಡಿಯ ದ್ವಾರ ಸೇರಿ, ಮೂರು ಭಿನ್ನ ಹಂತಗಳಲ್ಲಿ ಸರಿಯುತ್ತಿದ್ದ ಸರತಿ ಸಾಲುಗಳಲ್ಲಿ ದ್ವಾರಕ್ಕೆ ಸಮೀಪದವರಾಗಿ ಹೋಗಿ, ಕೊನೇ ಹಂತದಲ್ಲಿ ದೇವಬಂಟನೊಬ್ಬನಿಂದ ಎಳೆಸಿಕೊಂಡು, ಇನ್ನೊಬ್ಬನಿಂದ ನೂಕಿಸಿಕೊಳ್ಳುವ ಎಡೆಯಲ್ಲಿ ದರ್ಶನದ ಶಾಸ್ತ್ರ ಮುಗಿಸಿಕೊಂಡೆವು. ಆ ಗೊಂದಲದಲ್ಲೂ ಆರತಿ ತಟ್ಟೆಗೆ ಕಾಸಿಕ್ಕಿದವರಿಗಷ್ಟೇ ತೀರ್ಥ, ಪ್ರಸಾದ ಕೊಡುವ ಅರ್ಚಕರ ತಾರತಮ್ಯ ಜ್ಞಾನ ನಿಜಕ್ಕೂ ಚಚ್ಚುವಂತದ್ದೇ ಸರಿ.
ಸಂಗೀತ ಸ್ತಂಭಗಳು, ಇನ್ನೆಲ್ಲೋ ತಳದಲ್ಲಿ ನೆಲ ಮುಟ್ಟದ ಸ್ತಂಭ, ಹಂಪಿಯಲ್ಲಿ ತಲೆಕೆಳಗಾಗಿ ಛಾಯಾಬಿಂಬ ಮೂಡಿಸುವ ಕಿಂಡಿ… ಎಂದೇನೇನೋ ನೋಡಿದ್ದೂ ಇದೆ, ಕೇಳಿದ್ದೂ ಇದೆ. ಇಲ್ಲೂ ಅಂಥವೇ ಕೆಲವು ಶಿಲ್ಪಕಲಾ ಚಾತುರ್ಯಗಳನ್ನು ಕಂಡೆವು. ಗರ್ಭಗುಡಿಯ ಪೂರ್ಣ ಸ್ವರ್ಣಮಯ ಚಿನ್ನದ ಶಿಖರ ಮತ್ತು ಸೇವಾಕರ್ತ ರಾಜನ ಮೂರ್ತಿಗಳನ್ನು ಆಯಕಟ್ಟಿನ ಜಾಗಗಳಲ್ಲಿ ನಿಂತು ದರ್ಶನ ಮಾಡಿಕೊಂಡೆವು. ದಿಲ್ಲಿಯ ಅಶೋಕಸ್ತಂಭವನ್ನು ಹಿಂಗೈ ಅಪ್ಪುಗೆಗೆ ಒಳಪಡಿಸುವವರಿಗೆ ಕಾದಿರಿಸಿದ ಭಾಗ್ಯೋದಯದ ಕಥನಗಳನ್ನು ಕೇಳಿದ್ದೇನೆ. ಹಾಗೇ ಇಲ್ಲೊಂದು ಜಾಗದ ನೆಲದಲ್ಲಿರುವ ಐದು ತೂತುಗಳಲ್ಲಿ ಬೆರಳು ತೂರಿ, ವಿಶಿಷ್ಟ ಭಂಗಿಯಲ್ಲಿ ಡೊಂಕಿದವರಿಗೆ ದೇವಬಿಂಬ ದರ್ಶನವಾದರೆ ಏನೋ ಶುಭಯೋಗದ ಕಥನವನ್ನು ನಮ್ಮಲ್ಲೂ ಕೆಲವರು ಪರೀಕ್ಷಿಸಿದ್ದೂ ಆಯ್ತು! ಎಲ್ಲಾ ಮುಗಿಸಿ ಮತ್ತೆ ಅಂಗಿ, ಚಪ್ಪಲಿ ತೊಡುವ ಹಂತಕ್ಕೆ ಮರಳುವಾಗ ಮುಸ್ಸಂಜೆ ಮುಸುಕಿತ್ತು.
ತಿರುಚ್ಚಿಯ ಕೇಂದ್ರದಲ್ಲೆಂಬಂತೆ ಇರುವ ಪುಟ್ಟ ಕಲ್ಲಗುಡ್ಡೆಯ (೮೩ ಮೀಟರ್, ಸುಮಾರು ನಾನೂರು ಮೆಟ್ಟಿಲುಗಳು) ನೆತ್ತಿಯಲ್ಲೊಬ್ಬ ಗಣೇಶ, ಮಂದಿರ ಕಟ್ಟಿಸಿಕೊಂಡು ಕೂತಿದ್ದಾನೆ. ರಾಮಾಯಣದ ಕಾಲಕ್ಕೆ ಚಾಚಿಕೊಂಡ ಇವನ ಸ್ಥಳ ಪುರಾಣದಲ್ಲಿ ದ್ವೀಪವಾಸಿಯಾದ ಶ್ರೀರಂಗನೂ ಪಾಲುದಾರನಂತೆ. (ಆಸಕ್ತರು ಅಂತರ್ಜಾಲದಲ್ಲಿ ಓದಿಕೊಳ್ಳಿ) ನಮ್ಮಲ್ಲಿ ಹೆಚ್ಚಿನವರು ಉಚ್ಚಿ ಪಿಳ್ಳೈಯರ್ ಎಂದೇ ಹೆಸರಾಂತ ಈ ಗಣಪನ ದರ್ಶನದಷ್ಟೇ ತಿರುಚ್ಚಿಯ ರಾತ್ರಿಯ ವಿಹಂಗಮ ನೋಟ ಪಡೆಯಲು ಕಾತರರಾಗಿದ್ದರು. ಶ್ರೀರಂಗದಿಂದ ಬಸ್ ನಮ್ಮನ್ನು ಈ ಬಂಡೆ ಬೆಟ್ಟದ ತಪ್ಪಲಿನ (ಸುಮಾರು ಏಳೆ ಕಿಮೀ ಅಂತರ) ಬಳಿಯ ಮುಖ್ಯ ದಾರಿಯಲ್ಲೇ ಇಳಿಸಿತ್ತು.
ತಿರುಚ್ಚಿ ತಮಿಳ್ನಾಡಿನ ಬಹು ಮುಖ್ಯ ವಾಣಿಜ್ಯ ಕೇಂದ್ರವೂ ಹೌದು. ನಮ್ಮಲ್ಲಿ ಬಹುಮಂದಿಗೆ ಸ್ಮರಣಿಕೆ ಖರೀದಿಯ (ಮಾರ್ಕೆಟಿಂಗ್!) ಚಪಲವೂ ಸಾಕಷ್ಟಿತ್ತು. ಅದನ್ನೆಲ್ಲ ಅರಿತೇ ಬಾಲಣ್ಣ ನಮಗೆ ಕೆಲವು ಮುಖ್ಯ ವಾಣಿಜ್ಯ ಕೇಂದ್ರಗಳ ಪರಿಚಯವನ್ನೂ ಹೇಳಿ, ರಾತ್ರಿಯ ಉಪಾಹಾರಕ್ಕೆ ನಿಕ್ಕಿಯಾಗಿದ್ದ ಹೋಟೆಲ್ ಮತ್ತು ಪುನಃ ಸೇರುವಿಕೆಯ ಸಮಯವನ್ನೂ ತಿಳಿಸಿ ಸ್ವತಂತ್ರಗೊಳಿಸಿದರು. ನಾವು ಕೆಲವರು ಬಾಲಣ್ಣ ಕೊಟ್ಟ ಮಾಹಿತಿಯಲ್ಲಿ ಬಹುಮುಖ್ಯವಾದ ‘ಸಾರಥಾಸ್’ ಎಂಬ ಜವಳಿ ಮಳಿಗೆಗೆ ಅನ್ಯ ಉದ್ದೇಶಕ್ಕಾಗಿ ಮೊದಲು ನುಗ್ಗಿದ್ದೆವು. ಸಾರಥಾಸಿನ ಬಹುಮಾಳಿಗೆ ಮತ್ತು ವಿಸ್ತಾರದಲ್ಲಿ (ಜವುಳಿ ವೈವಿಧ್ಯಗಳ ಹರಹೂ ಭಾರಿಯೇ ಇತ್ತು) ನಾವು ಚುರುಕಾಗಿಯೇ ಸುತ್ತಾಡುವಾಗ, ಅಕ್ಷರಶಃ ದಾರಿತಪ್ಪಿದ ಮಕ್ಕಳೇ ಆಗಿದ್ದೆವು. ಆದರೆ ‘ಅರಮನೆಗೆ ನುಗ್ಗಿದ ಮುದ್ದಿನ ಬೆಕ್ಕಿ’ನಂತೆ ನಮಗೂ ಉದ್ದೇಶ ಸ್ಪಷ್ಟವಿತ್ತು. ಆ ಬೆಕ್ಕು, ಮುದ್ದಿನ ಸೊಕ್ಕು ರಾಣೀ ಮಂಚದ ಕೆಳಗೆ ಇಲಿ ಕಂಡು ಬಂದಂತೇ ನಾವು ಸಾರ್ಥಾಸಿನ ಮೂತ್ರಿಯನ್ನಷ್ಟೇ ಕಂಡು, ಉಚಿತವಾಗಿ ಬಳಸಿ, ಹೊರ ಬಿದ್ದೆವು, ಕೋಟೆ ಏರಲು ಸಜ್ಜಾದೆವು.
ಅಂಗಡಿ ಮುಂಗಟ್ಟುಗಳ ಸಂತೆಯ ಒಂದು ಕೊನೆಯಲ್ಲಿ, ಬೆಟ್ಟವೇರುವವರ ಮೊದಲ ಪೂಜೆ ಸ್ವೀಕರಿಸಿ, ಏರುವವರಿಗೆ ಶುಭಕೋರುವಂತೆ ಲಿಂಗಪ್ಪ ಕೂತಿದ್ದಾನೆ. ಮುಂದೆ ನಡುವಣ ಹಂತದಲ್ಲಿ ಪಾರ್ವತಮ್ಮ ಮತ್ತು ಕೆಲವು ಪರಿವಾರಗಳೂ ಪ್ರತ್ಯೇಕ ಬಿಡಾರ ಹೂಡಿದ್ದು ತಿಳಿದುಕೊಂಡೆವು. ಮೊದಲು ನೇರ ಶಿಖರ ಮುಖಿಗಳಾಗಿ, ಬಂಡೆಯಲ್ಲೇ ಕಡಿದ ಎತ್ತೆತ್ತರದ ಮೆಟ್ಟಿಲುಗಳನ್ನು ಎಣಿಸಿದೆವು. ಮೆಟ್ಟಿಲ ಸಾಲಿನ ಅಂಚಿಗೂ ನಡುವೆಯೂ ಇದ್ದ ದೃಢ ಕೈ ತಾಂಗುಗಳು ಒಳ್ಳೆಯ ಆಸರೆಯನ್ನೇ ಕೊಡುತ್ತವೆ. (ಹಿಂದಿನ ಕಂತಿನ ವಿಡಿಯೋವನ್ನೂ ಇನ್ನೊಮ್ಮೆ ನೋಡಿಕೊಳ್ಳಿ) ಸಾಕಷ್ಟು ವಿದ್ಯುದ್ದೀಪ ವ್ಯವಸ್ಥೆಯಿದ್ದರೂ ರಾತ್ರಿಯ ವೇಳೆ, ಎರಡೂ ಬದಿಯ ಶಿಲಾಭಿತ್ತಿ ಮತ್ತು ನೆತ್ತಿಯ ಮುಚ್ಚಿಗೆಗಳು ನಮಗೆ ಗುಹಾಮಾರ್ಗದಲ್ಲೇ ಏರಿದಂತನ್ನಿಸಿತ್ತು.
ಬಂಡೆಯ ಬೃಹನ್ನೆತ್ತಿಯ ಒಂದು ಅಂಚಿನಲ್ಲಿ ಮತ್ತೂ ಸ್ವಲ್ಪ ಮೇಲೆ ಚಾಚಿಕೊಂಡಿದ್ದ ಬಂಡೆಯ ಕೊಡಿಯಲ್ಲಿ ಗಣೇಶ ಮಂದಿರ ಝಗಮಗಿಸಿ ತೋರುತ್ತಿತ್ತು. ಉಳಿದಿದ್ದ ಆ ಅಂಶಕ್ಕೆ ತೆರೆಮೈಯಲ್ಲೇ ತೆಳು ಮೆಟ್ಟಿಲ ಸಾಲು ಕಡಿದಿದ್ದರು. ಅಲ್ಲಿ ಹಗಲಿನ ಹೊತ್ತು ಸೂರ್ಯ ತಾಪ ತಟ್ಟದಂತೆ ದೃಢ ಚಪ್ಪರವೂ ಇತ್ತು. ‘ಗುಹಾಮಾರ್ಗ’ದಲ್ಲಿ ಬೆವರು ಹರಿಸಿದ ನಾವು, ಇಲ್ಲಿ ಬೀಸುವ ಭೋರ್ಗಾಳಿಗೆ ಮೈಯೊಡ್ಡಿ, ಗಣೇಶ ಮಂದಿರ ಮುಟ್ಟಿ ಧನ್ಯರಾದೆವು. ಪುಟ್ಟ ಗರ್ಭಗುಡಿಯ, ಅಷ್ಟೇ ಸಣ್ಣ ಪರಿಕ್ರಮದಲ್ಲಿ, ಆರಾಮವಾಗಿಯೇ ಸುತ್ತು ಹಾಕಿ, ತಿರುಚ್ಚಿ ಎಂಬ ಬೆಳಕಿನ ಹೊಳೆಯನ್ನು ಮನ ತುಂಬಾ ಮೊಗೆದುಕೊಂಡೆವು, ಸ್ವಲ್ಪವನ್ನಷ್ಟೇ ಕ್ಯಾಮರಾಗಳಲ್ಲೂ ತುಂಬಿಕೊಂಡೆವು.
ಕೋಟೆಯ ಇಳಿ ನಡೆಯಲ್ಲಿ ಮಧ್ಯಂತರದ ಪಾರ್ವತಮ್ಮನಾದಿ ಇತರ ಗಣಗಳನ್ನು ಮರೆಯದೆ ದರ್ಶಿಸಿದೆವು. ಅಲ್ಲಿ ಯಾರೋ ಭಕ್ತರು, (ಬಹುಶಃ ಮಂಗಗಳಿಗೆ) ಬಾಳೇ ಗೊನೆಗಳ ದಾನ ಕೊಡುವ ಹರಕೆ ಹೊತ್ತಿದ್ದಂತಿತ್ತು. ಆದರೆ ಅವರ ಹರಕೆಯ ಹೊರೆ ಮಂಗಗಳಿಗೂ ವಿಪರೀತವಾದಂತಿತ್ತು. (ಮತ್ತೆ ಅಗತ್ಯಕ್ಕೂ ಹೆಚ್ಚಿನ ಸಂಗ್ರಹ ಸುಧಾರಿಸಲು ಅವಕ್ಕೆ ಫ್ರಿಜ್ಜೋ, ದಾಸ್ತಾನು ಕೊಠಡಿಯೋ ಇಲ್ಲವಲ್ಲಾ.) ಆದರೇನು ಉಳಿದ ಗೊನೆಗಳನ್ನು ಹರಕೆದಾರರು ನಮಗೂ ಧಾರಾಳವೇ ಕೊಟ್ಟರು. (ಅವರು ನಮ್ಮನ್ನೂ ಮಂಗಗಳೆಂದೇ ಭಾವಿಸಿದರು ಇನ್ನುವುದು ನಿಜವಲ್ಲ್!!) ಆ ಚಿಪ್ಪುಗಟ್ಟಳೆ ಬಾಳೇ ಹಣ್ಣಿನ ದಾನವನ್ನು ನಾವೆಲ್ಲ ಹಾಗೇ ಹಿಡಿದು ಇಳಿ ಇಳಿಯುತ್ತ ಅವಕ್ಕೆ ಸಾರ್ಥಕತೆ ಕೊಟ್ಟೆವು!
ಕೋಟೆ ಮುಗಿಸಿದ ಮೇಲೂ ಉಳಿದ ಸಮಯ ಹೊಂದಿಸುವಂತೆ, ನಾವು ಹೋಟೆಲಿನತ್ತ ವಿರಾಮದಲ್ಲೇ ನಡೆದಿದ್ದೆವು. ಆಗ ಕೇವಲ ವೀಕ್ಷಣೆಗೆಂದು ನುಗ್ಗಿದ್ದ ಭಾರೀ ಸ್ಟೇನ್ ಲೆಸ್ ಸ್ಟೀಲ್ ಮಳಿಗೆಯಲ್ಲೊಂದು ಡಬರಿಗೆ ಸೋತೆವು. ಮುಂದೆ ಹಾಗೇ ಪ್ರವೇಶಿಸಿದ್ದ ಕೈಮಗ್ಗದ ಮಳಿಗೆಯಲ್ಲೊಂದು ಜುಬ್ಬಾ ಬಟ್ಟೆ ಕತ್ತರಿಸಿಕೊಂಡೆವು. ಬೀದಿ ಬದಿಯ ಗಾಡಿಯಲ್ಲಿ ಮಾರಾಟಕ್ಕಿದ್ದ ತೆಂಗಿನ ಕಾಂಡದ ತಿರುಳಿನ ಪುಟ್ಟ ಭಾಗವನ್ನು ದೊನ್ನೆಯಲ್ಲಿ ಕುರುಕುತ್ತಾ ಹೋಟೆಲ್ ಸೇರಿದೆವು. ಅಲ್ಲಿ ಉಪಾಹಾರದ ಶಾಸ್ತ್ರ ಮುಗಿಸಿ, ಬಸ್ಸೇರಿ ವಾಸ್ತವ್ಯದ ಹೋಟೆಲಿಗೆ ದಿನ ಮುಗಿಸಿದೆವು.
ಜಂಬುಕೇಶ್ವರನಿಂದ ಕೋಡಿಯ ಕೊಡಿಗೆ : ಕೈಲಾಸದಲ್ಲಿ ಗಣಗಳೆರಡು ಜಗಳಕ್ಕಿಳಿದು, ಶಿವ ಶಾಪದಲ್ಲಿ, ಪ್ರಾಣಿಜನ್ಮವೆತ್ತು, ಭೂಮಿಗೆ ಬಿದ್ದದ್ದು ತಿರುಚ್ಚಿಗೇ. ಅದರಲ್ಲೊಬ್ಬ ಆನೆಯಾದರೆ ಇನ್ನೊಬ್ಬ ಜೇಡ ಇವು ಪ್ರಾಚೀನ ಜಂಬೂ ಮರವೊಂದರ ಬುಡದಲ್ಲಿ, ಎಂದೂ ಬತ್ತದ ಭೂಗತ ಕೊಳದಿಂದೆದ್ದ ಶಿವಲಿಂಗವನ್ನು ಅನನ್ಯ ಭಕ್ತಿಯಿಂದ ಪೂಜಿಸತೊಡಗಿದವು. ಲಿಂಗಕ್ಕೆ ಮರದ ಕಸ ಬೀಳದಂತೆ ಜೇಡ, ಮೇಲೆ ಬಲೆ ಕಟ್ಟುತ್ತಿತ್ತು. ಆನೆ ಕಾವೇರೀ ತೀರ್ಥ ತಂದು ಅಭಿಷೇಕ ನಡೆಸುತ್ತಿತ್ತು. ಶಿವ ಅವುಗಳ ಭಕ್ತಿಗೊಲಿದ ಕಾಲಕ್ಕೆ, ಜೇಡ ಆನೆಯ ಸೊಂಡಿಲಿಗೆ ಹೊಕ್ಕು, ಇಬ್ಬರ ಪ್ರಾಣಿಜನ್ಮ ನೀಗಿಕೊಂಡು, ಕೈಲಾಸಕ್ಕೆ ಮರಳಿದರಂತೆ. ಹೀಗೆ ಪ್ರಾಣಿಜೀವ ಕಾರುಣ್ಯಕ್ಕೆ ಕಾರಣನಾದ, ಚಿರಾಯು ಜಂಬೂಮರದ ಆಶ್ರಯದ ಶಿವ ಜಂಬುಕೇಶ್ವರನೇ ಆದ. ಹಿಂಬಾಲಿಸಿದ ಪತ್ನಿ ಪಾರ್ವತಿ ಅಖಿಲಾಂಡೇಶ್ವರಿಯ ರೂಪದಲ್ಲಿ ಪರಿವಾರದೊಂದಿಗೆ ಅದೇ ಕ್ಷೇತ್ರದಲ್ಲಿ ನೆಲೆಸಿ, ಹೆಚ್ಚಿನ ಲೋಕಕಲ್ಯಾಣ ಕಾರಕಳೂ ಆಗಿದ್ದಾಳೆ.
ಆದಿತ್ಯವಾರದ ಶುಭ ಮುಂಜಾನೆ ನಾವು ಜಂಬುಕೇಶ್ವರನ ದೇವಳ ಸಂದರ್ಶಿಸಿದೆವು. ಐತಿಹಾಸಿಕವಾಗಿ ಈ ದೇವಳವೂ ತಂಜಾವೂರಿನದೇ ಕಾಲಮಾನದಲ್ಲಿ (೧೮೦೦ ವರ್ಷಗಳ ಹಿಂದಿನ), ಮುಖ್ಯವಾಗಿ ಚೋಳ ಅರಸೊತ್ತಿಗೆಯಲ್ಲಿ ಸ್ಥಾಪನೆ, ಸಮೃದ್ಧಿಯನ್ನು ಕಂಡಿತಂತೆ. ಸಹಜವಾಗಿ ವಲಯದ ಇತರ ದೇವಳಗಳಂತೇ ಅಗಾಧ ಮತ್ತು ವೈಭವಪೂರ್ಣವಾಗಿಯೇ ಇದೆ. ದೇವದರ್ಶನದಲ್ಲೇ ನಮ್ಮ ಸುಮಾರು ಸಮಯ ಸೋರಿಹೋಗಿತ್ತು. ಮತ್ತೆ ತಡವಾದ ಬೆಳಗ್ಗಿನ ತಿಂಡಿ ಮುಗಿಸುವಲ್ಲಿ ಇನ್ನಷ್ಟು ವಿಳಂಬ ಸೇರಿ, ಮುಂದಿನೂರು, ಅಂದರೆ ಕೊಡೈಕೆನಾಲಿನ ದಾರಿಗೇ ನಮ್ಮ ಬಸ್ಸಿಳಿದಾಗ ಗಂಟೆ ಹನ್ನೊಂದು ಕಳೆದಿತ್ತು.
ಗುಜರಾತಿನಿಂದ ಭಾರತದ ದಕ್ಷಿಣ ತುದಿಗೆ ಅಗಾಧ ಗೋಡೆಯಂತೆ ಹಬ್ಬಿರುವ ಪಶ್ಚಿಮಘಟ್ಟಗಳು, ಕೇರಳದ ಪಾಲ್ಘಾಟ್ ವಲಯದಲ್ಲಿ ದೊಡ್ಡ ಸಂದನ್ನು ಬಿಟ್ಟಿದೆ. ಅದನ್ನು ಭೂವಿಜ್ಞಾನಿಗಳು ‘ಪಾಲ್ಘಾಟ್ ಗ್ಯಾಪ್’ ಎಂದೇ ಗುರುತಿಸುತ್ತಾರೆ. ಈ ಗ್ಯಾಪಿನ ದಕ್ಷಿಣ ಒಳ ಅಂಚಿನಲ್ಲಿ ನೇರ ಘಟ್ಟಕ್ಕೆ ತಲೆ ಘಟ್ಟಿಸುವವರಂತೆ ನಮ್ಮ ಬಸ್ ಓಡಿತ್ತು. ಈ ಸಂದಿನಲ್ಲಿ ಕಡಲಿನಿಂದ ಘಟ್ಟಕ್ಕಪ್ಪಳಿಸುವ ಪಶ್ಚಿಮದ ಗಾಳಿ ಪ್ರಾಕೃತಿಕ ಮಹಾ ಪನ್ನಾಲಿಯಲ್ಲಿ (ಫನೆಲ್, ಚೂಲಿ) ಒಂದಾಗಿ ವಿಶೇಷ ವೇಗವನ್ನೇ ಪಡೆಯುತ್ತದೆ. ಅದನ್ನು ದುಡಿಸಿಕೊಳ್ಳುವಂತೆ, ನಮ್ಮ ದಾರಿಯುದ್ದಕ್ಕೂ (ಹೆಚ್ಚಾಗಿ ಎಡ ಬದಿ, ಅಂದರೆ) ಉತ್ತರ ಮಗ್ಗುಲಿನ ಬಯಲುಗಳಲ್ಲಿ (ಹಲವೆಡೆಗಳಲ್ಲಿ ಕೃಷಿ ಇದ್ದಂತೇ) ನೂರಾರು ಗಾಳಿಗಿರಣಿಗಳು ಹಗಲಿರುಳೆನ್ನದೆ ತಿರುಗಿ, ವಿದ್ಯುಚ್ಛಕ್ತಿಯನ್ನು ತಯಾರಿಸುತ್ತಿದ್ದವು.
ಭೂ ನಕ್ಷೆಯಲ್ಲಿ ತಿರುಚಿರಾಪಳ್ಳಿ ಕೊಡೈಕೆನಾಲಿನ ಅಂತರ ಕೇವಲ ೨೬೦ ಕಿಮೀ. ಪೂರ್ವಯೋಜನೆಯ ಪ್ರಕಾರ ನಮ್ಮ ಮಧ್ಯಾಹ್ನದ ಊಟ ಕೊಡೈಕೆನಾಲೆಂದೇ ನಿಕ್ಕಿಯೂ ಆಗಿತ್ತು. ಅದರಲ್ಲಿ ಬಯಲೋಟದ ಮೊದಲ ಸುಮಾರು ೨೦೦ ಕಿಮೀ, ಲೆಕ್ಕಕ್ಕೆ ಚತುಷ್ಪಥದ ರೂಪ ಪಡೆದ ಹೆದ್ದಾರಿಯೂ ಹೌದು. ಆದರೆ ಅದರ ಅಂಕುಡೊಂಕುಗಳು, ವಿಸ್ತಾರಹೀನತೆ ಮತ್ತು ಸ್ಥಳೀಯ ವಾಹನಗಳ ಗೊಂದಲ ನಮ್ಮನ್ನು ಸಾಕಷ್ಟು ನಿಧಾನಿಸಿತು. ಸಹಜವಾಗಿ ಇನ್ನೊಂದು ತಡ-ಮಧ್ಯಾಹ್ನದೂಟಕ್ಕೆ ಸಿದ್ಧರಿರುವಂತೆ ಬಾಲಣ್ಣ ಮನವಿ ಮಾಡಿಕೊಂಡರು. ಅದಕ್ಕೆ ಸಣ್ಣ ಪರಿಹಾರವೆಂಬಂತೆ, ಒಂದೆಡೆ ಮಾರ್ಗ ಬದಿಯ ಸೈಕಲ್-ಬೊಂಡದವನಿಗೇ ಮುತ್ತಿಗೆ ಹಾಕಿಸಿದರು. ಆತ ಇನ್ನೂ ಹನ್ನೆರದು- ಹರಿಮೂರರ ಎಳೇ ಹುಡುಗ. ಆದರೆ ಅವನ ಸೈಕಲ್ಲಿನ ದಾಸ್ತನೇನೋ ದೊಡ್ಡದೇ ಇತ್ತು. ಆತ ಯಾವ ಅಳುಕೂ ಇಲ್ಲದೆ, ಬೊಂಡ ಒತ್ತಿಕೊಳ್ಳಲು ಆಧಾರ ಕುಂಟೆಯೂ ಇಲ್ಲದೆ, ಕೈಯಾಸರೆಯಲ್ಲೇ ಕೆತ್ತಲು ಮೊದಲಿಟ್ಟ. ನಾವು ಕೆಲವರು “ದೊಡ್ಡ ವ್ಯಾಪಾರದ ಬಿಸಿಯಲ್ಲಿ ಹುಡುಗ ಕೈ ಕೆತ್ತಿಕೊಳ್ಳದಿದ್ದರೆ ಸಾಕು…” ಎಂದು ಉದ್ಗರಿಸಿದ್ದೂ ಆಯ್ತು. ಆತ ಹತ್ತಿಪ್ಪತ್ತು ಕೆತ್ತಿಯಾಗುವಾಗ, ದೂರದಲ್ಲಿದ್ದ ಇನ್ನೊಂದು ಸೈಕಲ್ ಬೊಂಡದ ಧಡಿಯ ಇವನ ಸಹಾಯಕ್ಕೆಂದೇ ಬಂದ. ಆದರೆ ಹುಡುಗ (ವೀರ ಅಭಿಮನ್ಯುವಿನಂತೆ) ನಮ್ಮ ನಿರೀಕ್ಷೆ ಮೀರಿದ ಚುರುಕಿನಲ್ಲಿ, ಏಕಾಂಗವೀರನಾಗಿಯೇ ಅವಿರತ ಎಷ್ಟೂ ಬೊಂಡಗಳನ್ನು ಕೆತ್ತಿ ನಮಗೆ ಕುಡಿಯಲು ಕೊಟ್ಟ, ಉತ್ತರೋತ್ತರದಲ್ಲಿ ಅಷ್ಟನ್ನೂ ಚಚ್ಚಿ ತಿನ್ನಲೂ ಅನುಕೂಲಿಸಿದ. ಹಲವರು ಎರಡೆರಡನ್ನೇ ಕುಡಿದು ತಿಂದು, ಹುಡುಗನಿಗೆ ದಾಸ್ತಾನು ತೀರುವಳಿಯನ್ನೇ ಮಾಡಿಸಿದರು. ಕೊನೆಗೆ ನಾವು ಬಸ್ಸೇರಿ ಹೊರಟಾಗ “ಏನಲ್ಲದಿದ್ದರೂ ಹುಡುಗ ಮನೆಗ್ ಹೋದಮೇಲೆ, ಅಮ್ಮನ ಹತ್ತಿರ ತ್ಯಾಂಪಣ್ಣ ಭಂಡಾರಿಯವರ ನೋಂವಿನ ಎಣ್ಣೇ ಮಸಾಜ್ ಮಾಡಿಸಿಕೊಳ್ಳಲೇಬೇಕು…” ಎಂದು ನಮ್ಮ ಗರ್ವವನ್ನು ಸಮಾಧಾನಿಸಿಕೊಂಡೆವು.
ಕೊಡೈಕೆನಾಲಿಗಿನ್ನೂ ಅರವತ್ತು ಕಿಮೀ ಇದ್ದಂತೇ ನಾವು ಘಾಟಿ ರಸ್ತೆಯ ಆರಂಭ ಬಿಂದು – ವಟ್ಟಲಗುಂಡು ತಲಪಿದ್ದೆವು. ಗಿರಿಧಾಮ ಅಲ್ಲಿಂದ ಮುಂದೆ, ತನ್ನ ಪರಿಸರ ರಕ್ಷಣೆಗಾಗಿ, ಪ್ಲ್ಯಾಸ್ಟಿಕ್ ನೀರ ಅಂಡೆಗಳನ್ನು (ಐದು ಲೀಗಿಂತ ಸಣ್ಣವು) ನಿಷೇಧಿಸಿತ್ತು. ತನಿಖಾ ಸಿಬ್ಬಂದಿ ಬಸ್ಸಿನೊಳ ಬಂದು, ಚೀಲ ಚೀಲವನ್ನೂ ತೆರೆದೇ ನೋಡಿದ್ದರು. ಅಕಸ್ಮಾತ್ ಸಿಕ್ಕಿದ್ದರೆ ರೂ ಎರಡು ಸಾವಿರದ ದಂಡವನ್ನೇ ವಿಧಿಸುವ ಅಪಾಯವೂ ಇತ್ತು. ಇದರ ಮುನ್ನರಿವಿದ್ದ ಬಾಲಣ್ಣ, ತುಸು ಮೊದಲೇ ನಮ್ಮೆಲ್ಲ ಪರ್ಲ್ಪೆಟ್ ನೀರಂಡೆಗಳಿಗೆ ಮೋಕ್ಷ ಕಾಣಿಸಿದ್ದರು. ಬಸ್ಸು ನಿರ್ವಿಘ್ನವಾಗಿ ಆರೋಹಣಮುಖಿಯಾಯ್ತು.
ದಾರಿ ಚತುಷ್ಪಥ ಬಿಟ್ಟು ದ್ವಿಪಥಿಯಾದರೂ ಹಲವೆಡೆಗಳಲ್ಲಿ ಎದುರು ಬದಿರಾಗುವ ಘನವಾಹನಗಳು ನಿಂತು ಯೋಚಿಸುವಂತಾಗುತ್ತಿತ್ತು. ಉಳಿದಂತೆ ದಾರಿ ಬಹುತೇಕ ದೃಢವೇ ಇತ್ತು. ಹೋಲಿಕೆಯಲ್ಲಿ ಇದು ನಮ್ಮ ಭಾಗದ ಘಟ್ಟ ದಾರಿಗಳಂತೆ, ಮಿದು ಮಣ್ಣು ಮತ್ತು ಅಸ್ಥಿರ ಬಂಡೆಗಳ ರಾಶಿಯಲ್ಲ. ಮಣ್ಣು ಹಸಿರು ಕಾಣಿಸಿದರೂ ಲಕ್ಷಾಂತರ ವರ್ಷಗಳಿಂದ ಬಿರುಗಾಳಿ, ಮಳೆಗಳ ಸವಕಳಿಯಲ್ಲಿ ಬಹು ಬಿಗುಗೊಂಡ, ಬಹುತೇಕ ಘನ ಶಿಲಾಮಯ ಬೆಟ್ಟವೇ ಆಗಿತ್ತು. ಇದನ್ನು ಸಮಗ್ರ ರಾಷ್ಟ್ರ ಕಟ್ಟುವ ಮುನ್ನೋಟವಿಲ್ಲದ ಮಂದಿ, ಚುನಾಯಿತ ಒಂದವಧಿಯ (ಗರಿಷ್ಠ ಐದು ವರ್ಷ) ಸಾಧನೆಯ ಹುಚ್ಚಿಗೆ ಬಲಿಯಾಗಿಸಿ, ವಿಸ್ತರಣೆ ಅಥವಾ ಚತುಷ್ಪಥ ಮಾಡಲು ಹೊರಡದಿರಲಿ ಎಂದು ಆಶಿಸುವುದಷ್ಟೇ ನಮಗೆ ಸಾಧ್ಯ.
ಹೆಚ್ಚುತ್ತಿದ್ದ ಮಂಜು, ಮೋಡಗಳಲ್ಲದೆ, ಸಂಜೆಯೂ ಮುಂದೊತ್ತಿ ಬಂದು, ಚಳಿ ಏರುತ್ತಿತ್ತು. ನಮ್ಮದು ಹವಾನಿಯಂತ್ರಿತ ಬಸ್ ಬೇರೆ. ಸಹಜವಾಗಿ ನಮ್ಮಲ್ಲಿ ಒಬ್ಬಿಬ್ಬರು ಒಂದು ಬೆರಳೆತ್ತಿ “ತುಸು ಅರ್ಜಂಟ್. ಮಾರ್ಗದ ಬದಿಯಾದರೂ ಸಾಕು…” ಎನ್ನುವ ಸ್ಥಿತಿ ಬಂದಿತ್ತು. ಮಳೆಗಾಲ ಕಳೆದು, ಗಿರಿಧಾಮಗಳ ಭೇಟಿಯ ಶ್ರಾಯ (ಸೀಸನ್) ಇನ್ನೂ ಶುರುವಾಗಿಲ್ಲ. ಆದರೂ ವಾಹನ ಸಂಚಾರದಲ್ಲಿ ಆದಿತ್ಯವಾರದ ಒತ್ತಡ ಹೆಚ್ಚೇ ಇತ್ತು. ಅವುಗಳನ್ನು ಸುಧಾರಿಸಿಕೊಳ್ಳುವ ಜಂಝಾಟವೇ ನಮ್ಮ ಭಾರೀ ಬಸ್ಸಿಗೆ ಭಾರಿಯೇ ಇತ್ತು. ಅದೇ ಕಾರಣಕ್ಕೆ ಕಾಣಸಿಕ್ಕ ಏಕೈಕ (ಸೊರಗಿದ) ಜಲಪಾತದ ಬಳಿಯೂ ನಿಲ್ಲದೇ ಮುಂಬಂದಿದ್ದೆವು. ಅಂತೂ ಹೇಗೋ ಜನ ಸಂಚಾರ, ಪೇಟೆ ಇದ್ದ ಒಂದೆಡೆ, ಸಿಕ್ಕ ಶೌಚಾಲಯದಲ್ಲಿ ಮಿನಿಟೆರಡು ವಿರಮಿಸಿದ್ದೆವು. ಕೋಡಿಯ (ಕೊಡೈಕೆನಾಲಿನ ಚಾಲ್ತಿಯಲ್ಲಿರುವ ಹೃಸ್ವರೂಪ) ಕೊಡಿ ತಲಪುವಾಗ ಗಂಟೆ ನಾಲ್ಕು ಕಳೆದಿತ್ತು. ಅಲ್ಲಿನ ಮತ್ತಷ್ಟು ವಾಹನ ಸಮ್ಮರ್ದದಲ್ಲಿ ಯಾರಿಗೂ ತಾಗದೇ ಸ್ವಂತ ಮೈ ಘಾಸಿಮಾಡಿಕೊಳ್ಳದೆ ಬಸ್ ನಮ್ಮ ನಿಗದಿತ ಹೋಟೆಲ್ಲಿನ ಅಂಗಳ ಮುಟ್ಟಿದಾಗ ನಾವೇ ಏನೋ ಭಾರೀ ಸಾಧನೆ ಮಾಡಿದ ಮನೋಸ್ಥಿತಿಗೆ ಬಂದಿದ್ದೆವು.
ಹೋಟೆಲಿನವರು ಪೂರ್ವಸೂಚನೆಯಂತೇ ಮಧ್ಯಾಹ್ನವೇ ಊಟ ಸಜ್ಜುಗೊಳಿಸಿಟ್ಟಿದ್ದರು. ಹಾಗೆಂದು ತಡವಾದ ನಮ್ಮನ್ನು ನಿರಾಶೆಗೊಳಿಸದಂತೆ (ಗಿರಾಕಿ ದೇವೋಭವ!) ಬಿಸಿ ಕಾದಿರಿಸಿಕೊಂಡದ್ದಕ್ಕೆ ಇದೇ ಹೊಸದೆಂಬಂತೆ (ಬಫೇ) ತೆರೆದಿಟ್ಟರು. ಚುರುಕಾಗಿಯೇ ಕೈಮುಖ ತೊಳೆಯುವ ಕೆಲಸ ಮುಗಿಸಿ, ಕಮಕ್ ಕಿಮಕ್ಕೆನ್ನದೆ (ರುಚಿಯೇ ಇತ್ತು, ಬಿಡಿ) ಹೊಟ್ಟೆ ತುಂಬಿಕೊಂಡಲ್ಲಿಗೆ, ಎಲ್ಲರೂ ಹೊಸ ಹುರುಪು ಪಡೆದೆವು.
ಕೊಡೈಕೆನಾಲ್ ಎಂಬ ಭ್ರಮೆ : ಗಿರಿಧಾಮ ಕೋಡಿ ಎಂದೇ ಖ್ಯಾತವಿರುವ ಕೊಡೈಕೆನಾಲ್ ನಮಗೇನೂ (ದೇವಕಿ ಸಹಿತ) ಹೊಸತಲ್ಲ. ೧೯೮೫ರ ನಮ್ಮ ದಕ್ಷಿಣ ಭಾರತ ಬೈಕ್ ಯಾನದಲ್ಲಿ, ಮೂನಾರಿನಿಂದ ಹತ್ತಿರದ ದಾರಿ ಹಿಡಿದು ನಾವಿಲ್ಲಿಗೆ ಬಂದಿದ್ದೆವು. ಆಗ ಇಲ್ಲಿನ ಮಡಿಕೇರಿ ಊಟಿಗಳಂತಾ ಹವೆಯನ್ನುಳಿದು ಕಂಡ ಪ್ರಧಾನ ಆಕರ್ಷಣೆ – ಘಟ್ಟದ ಕಡಿದಾದ ಮುಖದ ಒಂದು ಭಾರೀ ಸೀಳು. ಅದಕ್ಕೆ ಸರಣಿಯಲ್ಲಿ ಫೌಕ್ಸ್ ಫಿಲ್ಲಿಂಗ್, ವೀಕ್ಷಣಾ ಸ್ತಂಭ, ಗ್ರೀನ್ ವ್ಯಾಲೀ ವ್ಯೂ, ಪಿಲ್ಲರ್ ರಾಕ್, ಗಾಲ್ಫ್ ಕೋರ್ಸ್, ಕೋಕರ್ಸ್ ವಾಕ್ ಎಂದು ಮೇಲಂಚಿನಲ್ಲೂ ಬೇರ್ ಶೋಲಾ ಫಾಲ್ಸ್, ಗುಣಾ ಗುಹೆಗಳು ಎಂದು ತಳ ಅಂಚಿನಲ್ಲೂ ಕೊಟ್ಟಾ ವಿವರಣೆಗಳು ಇಂದು ಅಂಕಿತ ನಾಮಗಳೇ ಆಗಿ ಪ್ರಸಿದ್ಧಿಸಿವೆ. ಉಳಿದಂತೆ ಪೇಟೆಯ ನಡುವಣ ಸುಮಾರು ಆರು ಕಿಮೀ ಸುತ್ತಳತೆಯ ಒಂದು ಸರೋವರ, ಘಾಟಿ ಮಾರ್ಗದಂಚಿನ ಕೆಲವು ಝರಿ, ಜಲಪಾತಗಳು ಮಾತ್ರ. ಅವುಗಳ ಕುರಿತಂತೆ ನನ್ನ ನಾಲ್ಕು ದಶಕಗಳ ಹಿಂದಿನ ವಿವರಣೆಗಳನ್ನು ಆಸಕ್ತರು ಈ ಸೇತು ಬಳಸಿ ಓದಿಕೊಳ್ಳಬಹುದು: ಎರಡು ಮಾನಗಳ ಊರು…
ಈ ಬಾರಿ ನಮ್ಮ ಕೊಡೈಕೆನಾಲ್ ನಗರ ಪ್ರವೇಶವೇ ತಡವಾಗಿತ್ತು. ಮುಖ್ಯ ವೀಕ್ಷಣಾ ಚಟುವಟಿಕೆ ಮತ್ತು ಕ್ರೀಡೆಗಳೆಲ್ಲಾ ಬಾಗಿಲೆಳೆದಿದ್ದವು. ಅವೆಲ್ಲವನ್ನು ಮರುದಿನಕ್ಕೆ ಬಿಟ್ಟು, ಬಾಲಣ್ಣರ ಸೂಚನೆಯ ಮೇರೆಗೆ, ನಡೆದೇ ಸರೋವರದ ದಂಡೆ ಮತ್ತದರ ವಿಸ್ತರಣೆಯೇ ಆದ ಪೇಟೆ ಸುತ್ತಾಟಕ್ಕೆ ಹೋಗಿದ್ದೆವು. ನೀರ ಅಂಚಿನ ಒಂದು ಭಾಗದಲ್ಲಷ್ಟೇ ವಿಹಾರ ದೋಣಿಗಳ ದಕ್ಕೆ ಇತ್ತು, ಎಲ್ಲ ತಂಗಿದ್ದವು. ಉಳಿದಂತೆ ಕೆರೆಯ ಪೂರ್ಣ ಸುತ್ತಿನಲ್ಲಿ ಸಾಮಾನ್ಯ ಮಟ್ಟಸ ದಾರಿ ಸಾರ್ವಜನಿಕ ವಾಹನ ಸಂಚಾರಕ್ಕೆ ಮುಕ್ತವೇ ಇತ್ತು. ಮಾರ್ಗದ ಕೆರೆ ಮಗ್ಗುಲಿನಲ್ಲಿ, ಎತ್ತರಿಸಿದ ಚೊಕ್ಕ ಪುಟ್ಟಪಥ, ನೀರಂಚಿನಲ್ಲಿ ಭದ್ರ ಬೇಲಿ, ದಾರಿ ದೀಪದ ವ್ಯವಸ್ಥೆಯೊಡನೆ ನಡೆಯುವ ಉತ್ಸಾಹಿಗಳನ್ನು ಆಹ್ವಾನಿಸುವಂತಿತ್ತು. ದಾರಿಯ ಇನ್ನೊಂದು ಮಗ್ಗುಲಿನಲ್ಲಿ, ಅವಕಾಶವಿದ್ದಲ್ಲೆಲ್ಲಾ ವ್ಯಾಪಿಸಿದ್ದ ತತ್ಕಾಲೀನ ಮಳಿಗೆಗಳು ಝಗಮಗ ಬೆಳಕಿನ ಹೊಳೆ ಹರಿಸಿ, ಬಹುವಿಧದ ತಿನಿಸು ಪಾನೀಯ ಹಾಗೂ ಸಂಭಾರ ಜಿನಸುಗಳ ಘಮ ಎಬ್ಬಿಸಿ, ಮಣಿ ಸರಕುಗಳ ಚಮಕ್ ಪ್ರದರ್ಶಿಸಿ, ಜನಮರುಳು ನಡೆಸಿದ್ದವು. ನಮ್ಮಲ್ಲಿ ಬಹುಮಂದಿ ಮಳಿಗೆಗಳ ಸಾಲಿನಲ್ಲಿ ಕಳೆದು ಹೋದರೆ, ನಾನು ಮತ್ತು (ತಮ್ಮ) ಅನಂತ ಕೆರೆಗೊಂದು ಪೂರ್ಣ ಪ್ರದಕ್ಷಿಣೆ ಹಾಕಿದೆವು. ರಾತ್ರಿ ಎಂಟು ಗಂಟೆಯ ಸುಮಾರಿಗೆ ಎಲ್ಲರೂ ವಾಸ್ತವ್ಯದ ಹೋಟೆಲ್ ಸೇರಿಕೊಂಡೆವು. ಮತ್ತೆ ಮೊದಲೇ (ಎಂಟನೇ ಕಂತು ನೋಡಿ) ಹೇಳಿದಂತೆ, ಸಣ್ಣ ಅನೌಪಚಾರಿಕ ಸಂತೋಷಕೂಟ ನಡೆಸಿ, ಊಟ ಮುಗಿಸಿ, ನಿದ್ರೆಗೆ ಶರಣಾದೆವು.
ನಮಗಿಬ್ಬರಿಗೆ ರೂಢಿಯಂತೆ, ಬೆಳಗು ಬೇಗನೇ ಬಂದಿತ್ತು. ಹವಾಸೇವನೆ ಎಂದರೂ ಸರಿ, ವ್ಯಾಯಾಮ ಎಂದರೂ ಸರಿ, ಪೇಟೆಯ ವಿರುದ್ಧ ದಿಕ್ಕಿನ ಮಾರ್ಗದಲ್ಲಿ ತುಸು ಅಡ್ಡಾಡಿದೆವು. ಹಿಂದಿನ ಘಾಟಿದಾರಿ ಪ್ರವೇಶಿಸುವಲ್ಲಿ ಮೂಡಿದ್ದ ‘ಸ್ವಚ್ಛ ಕೋಡಿ’ ಚಿತ್ರ, ಇಲ್ಲಿ ಮಸುಕಾಗಿತ್ತು. ಪರ್ಲ್ಪೆಟ್ ಬಾಟಲೊಂದನ್ನು ಬಿಟ್ಟು ಎಲ್ಲ ತರದ ಪ್ಲ್ಯಾಸ್ಟಿಕ್ ಕಸ ಕೊಳಕು ಎಲ್ಲೆಡೆ ಮೆರೆದಿತ್ತು. ಹಾಳಾದ ಟ್ಯೂಬ್ ಲೈಟುಗಳನ್ನು ಮಾರ್ಗಕ್ಕೆ ಮರೆಯಾಗುವಂತೆ ಪೊದರಿಗೆ ನುಗ್ಗಿಸಿಟ್ಟದ್ದು, ಎಂದೋ ಮಗುಚಿದ ಭಾರೀ ಮರದ ಬೊಡ್ಡೆ ಉಳಿಸಿದ್ದು, ಮೋರಿ ಸ್ಲ್ಯಾಬ್ ಕುಸಿದದ್ದು, ಹಾಳು ಬೀಳುವ ಮತ್ತು ಹೊಸದಾಗಿ ಚಿಗಿತುಕೊಳ್ಳುವ ಕಟ್ಟಡಗಳ ಅವ್ಯವಸ್ಥೆ, ಚರಂಡಿ ದಾರಿಗಳ ಅವಿನಾಭಾವ ಸಂಬಂಧ… ನಮ್ಮೂರಿನ ನಿತ್ಯ ದೃಶ್ಯಗಳಿಂದ ಹೆಚ್ಚೇನಿಲ್ಲ ಎಂದು ತೃಪ್ತರಾಗಿ, ಹೋಟೆಲಿಗೆ ಮರಳಿದೆವು. ಅಲ್ಲಿ ಎಲರೊಡನೆ ತಿಂಡಿ ಮುಗಿಸಿ, ಖೋಲಿ ಖಾಲಿ ಮಾಡಿ (ಗಂಟು ಗದಡಿಗಳನ್ನು ಕೆಂಪು ಗುಬ್ಬಿಗೇರಿಸಿ), ವಿಸ್ತೃತ ಕೋಡಿ ದರ್ಶನಕ್ಕಷ್ಟೇ ಕಾದಿದ್ದ ಮೂರು ವ್ಯಾನುಗಳಲ್ಲಿ ತುಂಬಿಕೊಂಡೆವು.
ಕಟ್ಟಿದ ಬಚ್ಚಲ ತೂಬಿಗೆ ಕೋಲು ಹಾಕಿ ಬಿಡಿಸಿದಂತೇ ನಮ್ಮ ವ್ಯಾನುಗಳು ಧಾವಿಸಿದವು. ಇಕ್ಕಟ್ಟಿನ, ಸುರುಳಿ ಸುತ್ತಿನ, ಭಾರೀ ಏರಿಳುಕಲುಗಳ ದಾರಿಯ ಓಟವನ್ನು ಮನೆಯಂಗಳದಾಟ ಎನ್ನುವಂತೆ ಚಾಲಕ ನಿಭಾಯಿಸುವ ಪರಿಗೆ ಮೋಹಿತನಾಗಿ ನಾನು ಸುತ್ತಣ ದೃಶ್ಯ ನೋಡುವುದನ್ನೇ ಮರೆತುಬಿಟ್ಟಿದ್ದೆ. ಹಾಗೆ ಒಂದೆತ್ತರದಲ್ಲಿ ಓಟ ನಿಲ್ಲಿಸಿದ ಚಾಲಕ, ನಮಗೆ ಕಣಿವೆ, ಕೆರೆಯ ವಿಸ್ತಾರ ನೋಡಲು ಅವಕಾಶ ಕಲ್ಪಿಸಿದ. ಮುಂದುವರಿದು ಆತ ನಿಲ್ಲಿಸಿದ್ದು ಒಂದು ವ್ಯಾಪಾರೀ ಅಡ್ಡದಲ್ಲಿ. ಅದು ನನಗೆ ರುಚಿಸಲಿಲ್ಲ. ಆಗ ಬಾಲಣ್ಣ ಕೆಳಧ್ವನಿಯಲ್ಲಿ ಹೇಳಿದರು “ಇದು ವ್ಯಾನಿನವರು ಮಳಿಗೆದಾರರಿಂದ ಕಮಿಶನ್ ಹೊಡೆಯುವ ತಂತ್ರ. ನಮ್ಮಂಥ ಯಾತ್ರಾನುಕೂಲಿಗಳು (ಟೂರ್ ಕಂಡಕ್ಟರ್ಸ್) ಅದನ್ನು ಧಿಕ್ಕರಿಸಿದರೆ, ಅವರು ಒಂದೋ ಬರಲೊಪ್ಪುವುದಿಲ್ಲ, ಮತ್ತೆ ಹೆಚ್ಚು ಬಾಡಿಗೆಗೆ ಬಂದರೂ ಸುಳ್ಳು ಸಬೂಬುಗಳಲ್ಲಿ ಹಲವು ಪ್ರದರ್ಶಿಕೆಗಳನ್ನು ವಂಚಿಸುತ್ತಾರೆ”. ಅಲ್ಲಿ ಹತ್ತಿಪ್ಪತ್ತು ಮಿನಿಟು ವ್ಯರ್ಥ ಕಳೆದ ಮೇಲೆ….
ನಾನು ನಾಲ್ಕು ದಶಕಗಳ ಹಿಂದಿನ ನೆನಪಿನ ರೀಲನ್ನು ಹೊಸ ಬಣ್ಣದಲ್ಲಿ ಸುತ್ತುವ ನಿರೀಕ್ಷೆಯಲ್ಲಿದ್ದೆ. ಅದಕ್ಕೆ ಪ್ರಥಮತಃ ಸಿಗಬೇಕಿದ್ದ ಫೌಕ್ಸ್ ಫಿಲ್ಲಿಂಗ್ ಮತ್ತು ವೀಕ್ಷಣಾ ಸ್ತಂಭಗಳು ಇಂದಿನ ಜನಪ್ರಿಯ ಪಟ್ಟಿಯಿಂದಲೇ ಕಳಚಿ ಹೋದದ್ದು ತಿಳಿಯಿತು. ಗಾಲ್ಫ್ ಕೋರ್ಸ್ ಮಾರ್ಗದ ಬದಿಯಲ್ಲೇ ಸರಿದು ಹೋಯ್ತು, ನಿಂತು ನೋಡುವಂಥದ್ದು ಏನೂ ಇರಲಿಲ್ಲ. ಒಂದು ವೀಕ್ಷಣಾ ತಾಣ – ಗ್ರೀನ್ ವ್ಯಾಲೀ ವ್ಯೂ. ನಲ್ವತ್ತು ವರ್ಷಗಳ ಹಿಂದೆ ಕಂಡಾಗ ಪೂರ್ಣ ನಿರ್ಜನ ಪ್ರದೇಶವಾಗಿದ್ದ ಅದು, ಇಂದು ಭಾರೀ ಮಾಲ್ ಒಂದರ ಓಣಿಯ ನಿರ್ಲಕ್ಷಿತ ಕೊನೆ ಕೊಂಪೆಯಂತೆ ಕಾಣಿಸಿತು. ನಾವು ಝಗಮಗಿಸುವ ದೀಪ, ಮಾಲುಗಳನ್ನು ನಿರ್ಲಕ್ಷಿಸಿ ನಡೆದು, ತುಕ್ಕು ಹಿಡಿದ ಭಾರೀ ರಕ್ಷಣಾ ಬೇಲಿಗೆ ಜೋತು ಬಿದ್ದದ್ದೇನೋ ಆಯ್ತು. ಆದರೆ ನಾವೆಷ್ಟು ಕಾದರೂ ‘ಹಸಿರು ಕಂದರ ದೃಶ್ಯ’ ದಟ್ಟ ಮಂಜಿನ ಅವಗುಂಠನ ಸರಿಸಲೇ ಇಲ್ಲ. ಕೋಕರ್ಸ್ ವಾಕ್ ಕೂಡಾ ಅಷ್ಟಕ್ಕಷ್ಟೇ. ಇದ್ದುದರಲ್ಲಿ ತೃಪ್ತಿ ಕೊಟ್ಟದ್ದು ಪಿಲ್ಲರ್ ರಾಕ್ ಒಂದೇ….
ಪಿಲ್ಲರ್ ರಾಕ್ ಕೂಡಾ ಘಟ್ಟದಿಂದ ಪ್ರತ್ಯೇಕಗೊಂಡ ದೊಡ್ಡ ದರೆಯದ್ದೇ ಒಂದು ಭಾಗ. ಇಲ್ಲಿ ಬಹುತೇಕ ಮಣ್ಣು ಪುಡಿಗಲ್ಲುಗಳೆಲ್ಲ ಸಾವಿರಾರು ವರ್ಷಗಳ ಮಳೆ ಗಾಳಿಗಳ ಸವಕಳಿಯಲ್ಲಿ ಕಳಚಿ ಭಾರೀ ಶಿಲಾ ರಚನೆಯೊಂದು ಉಳಿದಿದೆ. ಇದಕ್ಕೆ ಸ್ಪಷ್ಟ ಸ್ತಂಭಾಕೃತಿ ಇಲ್ಲ ಮತ್ತೆ ಏಕಶಿಲೆಯೂ ಅಲ್ಲ. ಆದರೂ ಅಗೋಚರ ತಳದಿಂದ ಎದ್ದು ನಿಂತಂತಿರುವ ಭಂಗಿ, ತಳದಿಂದಲೇ ಅದನ್ನು ಆವರಿಸಿದಂತೆ, ಆಧರಿಸಿದಂತೆ ಶೋಭಿಸುವ ದಟ್ಟ ಕಾಡು ಆಕರ್ಷಕವಾಗಿದೆ. ಅದನ್ನು ಸುತ್ತಿ ಸುಳಿದಾಡುತ್ತ, ಅಲ್ಲಿ ತೆರೆದು ಇಲ್ಲಿ ಮರೆಮಾಡಿ, ಭಯಕಾರಿಯಾದ ಬಂಡೆಗೂ ಮನೋಹರ ಲಾಲಿತ್ಯ ತಂದಿತ್ತು ತೆಳು ಮಂಜಿನ ಸೆಳಕುಗಳು. ಪ್ರತಿಕ್ಷಣದಲ್ಲೂ ಹೊಸದೇ ಭಾವ ಚಿಮ್ಮಿಸುವ ಇವನ್ನೆಲ್ಲ ದೊಡ್ಡ ಹಿನ್ನೆಲೆಯಲ್ಲಿ ನೋಡುತ್ತಾ ಸುಳಿಯುವ ಗಾಳಿಯಾಟಕ್ಕೆ ಕಿವಿಗೊಡುತ್ತಾ ಮೈಮರೆಯೋಣವೆಂದರೇ …..
ಸಾವಿರಾರು ವರ್ಷಗಳಲ್ಲಿ ಕೋಡಿಯಲ್ಲಿ ಪ್ರಕೃತಿ ವಿಕಸಿಸಿದ ರೂಪ, ವ್ಯವಸ್ಥೆಯನ್ನು, ಕಳೆದ ನಲ್ವತ್ತೇ ವರ್ಷಗಳಲ್ಲಿ ಮನುಷ್ಯನ ದುರಾಸೆ ಕುಲಗೆಡಿಸಿರುವ ಪರಿ ತೀವ್ರ ಚಿಂತಾಜನಕ. ದಿಗಂತ ಪರ್ಯಂತ ವ್ಯಾಪಿಸಿದ ಪ್ರಾಕೃತಿಕ ಭವ್ಯತೆಯನ್ನು, ಕೆಟ್ಟ ವಾಣಿಜ್ಯ ಮತಿಗಳು ಅನಾವಶ್ಯಕ ಸವಲತ್ತುಗಳಿಂದ, ಕೆಟ್ಟ ಜೋಪಡಿ ವಹಿವಾಟುಗಳಿಂದ, ಹುಸಿ ಜಾಹೀರಾತುಗಳಿಂದ ಕುಲಗೆಡಿಸಿದ್ದಾರೆ. ಉದಾಹರಣೆಗೆ ಪಿಲ್ಲರ್ ರಾಕಿನ ವಠಾರವನ್ನೇ ನೋಡಿ. ಇಲ್ಲಿ ನಿಮ್ಮ ಮೊದಲ ನೋಟಕ್ಕೆ ಸಿಕ್ಕುವುದು ಗಾತ್ರದಲ್ಲಿ ದೊಡ್ಡದಾಗಿಯೂ ಬಣ್ಣದಲ್ಲಿ ಕೆರಳಿಸುವ ಕೆಂಪಾಗಿಯೂ ಇರುವ ಘೋಷವಾಕ್ಯ – “ಕಾಡನ್ನು ಪ್ರೀತಿಸಿ!” ಅದನ್ನು ಮೀರಿ ದೃಷ್ಟಿ ಹರಿಸಿದರೆ, ಸ್ವಲ್ಪ ಕೆಳ ಹಂತದಲ್ಲಿ ಕಾಣುವುದು ಜೋಪಡಿ ಅಂಗಡಿಗಳ ಕೊಳಕು ಸಾಲು. ಇವನ್ನೆಲ್ಲ ಮರೆತು, ಅಲ್ಲಿ ಏಳುವ ಗದ್ದಲಗಳಿಗೆ ಕಿವುಡಾದ ಮೇಲಷ್ಟೇ ನಿಮಗೆ ನಿಜ ದೃಶ್ಯ ದಕ್ಕುತ್ತದೆ. ಕೋಕರ್ಸ್ ವಾಕಿನಲ್ಲಂತೂ ನಿಮ್ಮ ದಿಟ್ಟಿಗೆ ಪೂರ್ಣ ಅಡ್ಡವಾಗುವಂತೆ ಕಣಿವೆಯ ಆಳದಿಂದಲೇ ದೃಢ ಕಾಂಕ್ರೀಟ್ ಹಂದರದೊಡನೆ ಬಹುಮಹಡಿ ಕಟ್ಟಡಗಳೇ ಏಳುತ್ತಿವೆ. ನಮ್ಮ ಬಹುತೇಕ ಪ್ರೇಕ್ಷಣೀಯ ಸ್ಥಳಗಳಲ್ಲಿರುವಂತೆ, ಕೋಡಿಯಲ್ಲೂ ಜನ ಸಂದಣಿ ನಿಯಂತ್ರಕ ದ್ವಾರ, ಬೇಲಿ, ಬೆಳಕು, ಶೌಚಾದಿ ಕನಿಷ್ಠ ವ್ಯವಸ್ಥೆಗಳು, ಅನಿವಾರ್ಯವೇ ಇರಬಹುದಾದ ವ್ಯಾಪಾರ ವಹಿವಾಟುಗಳು, ಇಲ್ಲಿ ಜನ ಏನನ್ನು ಅನುಭವಿಸಲು ಬರುತ್ತಾರೆ ಎಂಬ ತಿಳಿವಿನಿಂದ ರೂಪುಗೊಂಡೇ ಇಲ್ಲ.
ಸುಮಾರು ಮೂರು ಗಂಟೆ ಸುತ್ತಾಡಿಸಿದ ವ್ಯಾನುಗಳು, ನಮ್ಮನ್ನು ಮತ್ತೆ ಕೋಡಿಯ ಕೇಂದ್ರ ಸರೋವರದ ದಂಡೆಯಲ್ಲಿ ಇಳಿಸಿ ಹೋದವು. ಸರೋವರದಲ್ಲಿ ದಂಪತಿಗಳಿಗಾಗಿ ಜೋಡಿ ಆಸನದ, ಕುಟುಂಬಕ್ಕಾಗಿ ಬಹು ಆಸನದ, ವರ್ಣರಂಜಿತ ಫೈಬರ್ ದೋಣಿಗಳು ಬಾಡಿಗೆಗೆ ದೊರೆಯುತ್ತಿದ್ದವು. ಅವುಗಳಲ್ಲಿ ಹುಟ್ಟಾಡಿಸುವ ಅಥವಾ ಪೆಡಲಿಸುವ ಮಾದರಿಗಳಿದ್ದವು. ಬಹುತೇಕ ಜನಪ್ರಿಯ ತಾಣಗಳಂತೆ ಮೋಟಾರ್ ಅಥವಾ ಪರಿಣಿತ ನಾವಿಕನ ಸಹಾಯದ ವ್ಯವಸ್ಥೆ ಇಲ್ಲಿ ಇದ್ದಂತಿರಲಿಲ್ಲ. ನಾವಿಬ್ಬರು ಸ್ವಂತದ ಕಯಾಕ್ ಇಟ್ಟುಕೊಂಡು ಗಳಿಸಿದ ಅನುಭವ ಅಪಾರ. ಅದಕ್ಕೂ ಮುಖ್ಯವಾಗಿ ಸಂತೆ ಗದ್ದಲವೇ ಸುತ್ತುವರಿದ, ಶಾಂತ ಸರೋವರದಲ್ಲಿನ ನೀರಸ ವ್ಯಾಯಾಮ ನಾವು ಬಯಸಲಿಲ್ಲ. ಬದಲಿಗೆ…..
ಅಲ್ಲಿ ಬಾಡಿಗೆಗೆ ದೊರೆಯುತ್ತಿದ್ದ ಸೈಕಲ್ ಅಡ್ಡಾದಲ್ಲಿ ಜಂಟಿ ಸೈಕಲ್ಲೊಂದನ್ನು ಹಿಡಿದೆವು. ಜಂಟಿ ಸೈಕಲ್ ಅರ್ಥಾತ್ ಟ್ಯಾಂಡೆಮ್ ಸೈಕಲ್ ಸವಾರಿಯೂ ನಮಗೆ ಹೊಸತೇನಲ್ಲ. ದಶಕದ ಹಿಂದೆ ನಮ್ಮದೇ ಒಂದು ಜಂಟಿ ಸೈಕಲ್ಲಿತ್ತು. ಮತ್ತದನ್ನು ಹೆಚ್ಚು ಕಡಿಮೆ ಪ್ರತಿ ದಿನ ಮೆಟ್ಟುತ್ತ, ಸುತ್ತದ ಮಂಗಳೂರಿನ ಗಲ್ಲಿಗಳಿಲ್ಲ. ಅದರಲ್ಲಿ ಕೋಡಿ ಸರೋವರದ ಸುತ್ತಳತೆ ತೆಗೆಯುವುದು ನಮಗೆ ಹೆಚ್ಚು ಸ್ವಾರಸ್ಯಕರ ಅನ್ನಿಸಿತು. ಅನಂತ ರುಕ್ಮಿಣಿಯರೂ ನಮ್ಮನ್ನೇ ಅನುಸರಿಸಿದರು. ಅರ್ಧ ಗಂಟೆ ಅವಧಿಗೆ ರೂ ನೂರೈವತ್ತು ತೆತ್ತು, ಸರೋವರಕ್ಕೆ ಪ್ರದಕ್ಷಿಣೆ ಹಾಕಿದೆವು. ಸಮಯ ಮಧ್ಯಾಹ್ನವಾಗಿದ್ದರೂ ಕಣಿವೆ ಬಿಟ್ಟೇಳುವಲ್ಲಿ ಸೋಮಾರಿಯಾಗಿದ್ದ ಒಂದಷ್ಟು ಮಂಜು ಕೆಲವೆಡೆಗಳಲ್ಲಿ ನಮ್ಮನ್ನು ಮುಸುಕಿ, ಸಾಮಾನ್ಯ ಸವಾರಿಗೆ ನಾಟಕೀಯತೆಯನ್ನೂ ಹೆಚ್ಚಿನ ರಂಜಕತೆಯನ್ನೂ ತುಂಬಿತು.
ನಾವು ಸುಮಾರು ಇಪ್ಪತ್ತು ಮಿನಿಟಿನಲ್ಲಿ ಕೆರೆ ಸುತ್ತು ಮುಗಿಸಿದ್ದೆವು. ಇನ್ನೂ ಸ್ವಲ್ಪ ಸಮಯ ಉಳಿಯಿತಲ್ಲಾ ಎನ್ನುವಾಗ, ದೋಣಿ ಸವಾರಿ ಮುಗಿಸಿ ಬಂದವರ ಪೈಕಿ ನನಗೆ ಬಡೆಕ್ಕಿಲ ಜಯಲಕ್ಷ್ಮಿ ಕಾಣಿಸಿದರು. ಪ್ರವಾಸದ ಮೊದಲ ದಿನವೇ ಅವರು ಬಾಲ್ಯ ನೆನೆಸಿಕೊಂಡು, ತೋಡಿನಲ್ಲಿ ಈಜಿದ್ದು, ಅಂಗಳದಲ್ಲಿ ಸೈಕಲ್ ಬಿಟ್ಟದ್ದನ್ನು ಹೇಳಿದ್ದೂ ನೆನಪಾಯ್ತು. ಸಂದ ಕನಿಷ್ಠ ಆರು ದಶಗಳಲ್ಲಿ ಅವರು ಮತ್ತೆ ಸೈಕಲ್ ಬಿಟ್ಟಿರಲಾರರು. ಆದರೂ ನಾನು ಧೈರ್ಯ ಮಾಡಿ ಸವಾಲಿಕ್ಕಿದೆ “ಬರ್ತೀರಾ, ಸೈಕಲ್ಲಿನಲ್ಲಿ ನನ್ನ ಬೆಂಬಲಕ್ಕೇ?” ಅವರು ಅಷ್ಟೇ ಸಹಜವಾಗಿ ಒಪ್ಪಿ, ಕೂತು, ಪೆಡಲಿದರು. ಅದರ ಒಂದು ವಿಡಿಯೋ ತುಣುಕು, ಫೇಸ್ ಬುಕ್ಕಿನಲ್ಲಿ ಇಂದು (ನನಗೇ ಹೊಟ್ಟೆಕಿಚ್ಚಾಗುವಷ್ಟು?) ಪ್ರಶಂಸೆ ಗಳಿಸುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ನಮ್ಮೆರಡು ‘ಸೈಕಲ್ ಸರ್ಕಸ್’ ನೋಡಿ, ಬಳಗದ ಇನ್ನಷ್ಟು ಮಂದಿ, ದೋಣಿ ಸವಾರಿಯ ಮೇಲೆ ಸೈಕಲ್ ಸವಾರಿಯನ್ನೂ ಬಯಸಿದರು. ಅವೆಲ್ಲಾ ಮುಗಿದು, ನಾವು ಮರಳಿ ಕೆಂಪು ಗುಬ್ಬಿ ಏರಿ, ಕೋಡಿಗೆ ವಿದಾಯ ಹೇಳುವಾಗ ಗಂಟೆ ಎರಡಾಗಿತ್ತು. ಯೋಜಿತ ವೇಳೆಯಿಂದ ತುಂಬಾ ಹಿಂದೆ ಬಿದ್ದುದಕ್ಕೆ, ಆಡು ಮಾತಿನಲ್ಲಿ ಹೇಳುವಂತೆ, ಹೊಟ್ಟೆಯ ಹುಳುಗಳೂ ಸತ್ತಿದ್ದವು!
ಗುರುವಾಯೂರಿನಿಂದ ಮಂಗಳಾಪುರಿಗೆ, ಮಂಗಳಂ ಜಯ ಮಂಗಳಂ: ಕೊಡೈಕೆನಾಲ್ ಗಿರಿಧಾಮಕ್ಕಿರುವುದು ಒಂದೇ ಮುಖ್ಯ ದಾರಿ. (ನಲ್ವತ್ತು ವರ್ಷಗಳ ಹಿಂದೆಯೇ ನಾವು ಮುನಾರಿನಿಂದ ಬಂದಿದ್ದ ಕಚ್ಚಾ ರಸ್ತೆ, ಇಂದಿಗೂ ಜನಪ್ರಿಯವಾಗಿಲ್ಲ.) ಈ ಮುಖ್ಯ ದಾರಿಗೆ ಘಟ್ಟ ಶ್ರೇಣಿಯ ಮೇಲೇ ಇರುವ ಪೆರುಮಾಳ್ ಮಲೈ ಎಂಬಲ್ಲಿ ಅತ್ತ ಪೂರ್ವ ಮಗ್ಗುಲಿನಿಂದ, ಅಂದರೆ ನಾವು ಬಂದಂತೆ ತ್ರಿಚ್ಚಿ – ಡಿಂಡಿಗಲ್ಲಿನ ದಾರಿ ಸೇರುತ್ತದೆ. ಹಾಗೇ ಇತ್ತ ಪಶ್ಚಿಮ ಮಗ್ಗುಲಿನಿಂದ, ಅಂದರೆ ನಾವಿಳಿಯುತ್ತಿದ್ದ ಪಳನಿಯ ದಾರಿಯೂ ಸಂಗಮಿಸುತ್ತದೆ. ದಾರಿಯ ಕಾಠಿಣ್ಯ ಹಾಗೂ ಭಯಮೂಡಿಸುವ ದೃಶ್ಯ ವೈಭವಗಳಲ್ಲಿ ಎರಡೂ ಮಗ್ಗುಲುಗಳು ಒಂದನ್ನೊಂದು ಮೀರಿಸುತ್ತವೆ.
ಇಳಿದಾರಿಯ ಒಂದು ಪ್ರಪಾತದಂಚಿನಲ್ಲಿ ನಮಗೆ ಭಾರೀ ಲಾರಿಯೊಂದು ಎದುರಾದಾಗಂತೂ ನಮಗೆ ಕ್ಷಣಗಳು ಯುಗಗಳೇ ಆಗಿತ್ತು. ಉಳಿದಂತೆ ಐದು ದಿನಗಳ ದೇವಾಲಯ ದರ್ಶನದ ಏಕತಾನತೆಯನ್ನು ಕೊಡೈಕೆನಾಲ್ ಹರಿದದ್ದಕ್ಕೋ ಎಂಬಂತೆ, ನಮ್ಮ ಬಳಗ ಹೊಟ್ಟೆ ತಾಳವನ್ನು ಮೀರಿಯೇ ಗಾನ ಲಹರಿಗೆ ಒಲಿದಿತ್ತು. ಒಟ್ಟಾರೆ ಅರವತ್ತು ಕಿಮೀ ಅಂತರದ ಪಳನಿ, ಸುಮಾರು ಅರ್ಧ ದಾರಿ ಕಳೆಯುವುದರಲ್ಲೇ ದೂರ ತಪ್ಪಲಿನಲ್ಲಿ ನಮಗೆ ದರ್ಶನ ಕೊಡಲು ಶುರು ಮಾಡಿದ ಮೇಲೆ ನಿರೀಕ್ಷೆಯೂ ತೀವ್ರವೇ ಇತ್ತು. ಹಾಗೆಂದು ಹಕ್ಕಿ ನೋಟದ ಅಂತರಕ್ಕೆ ಬಸ್ಸು ಆತುರಪಡದೇ ಸುಮಾರು ನಾಲ್ಕು ಗಂಟೆಗಷ್ಟೇ ನಮ್ಮನ್ನು ಸುಕ್ಷೇಮವಾಗಿ ಪಳನಿ ಮುಟ್ಟಿಸಿತು. ಅತಿ ವಿಲಂಬಿತ್ ಕಾಲವಾದರೂ ಭೋಜನ ವಿರಾಮ ಸಿಕ್ಕಿತ್ತು.
ಪೂರ್ವ ಯೋಜನಾ ಪಟ್ಟಿಯಲ್ಲಿ ‘ಸಮಯವಿದ್ದರೆ ಪಳನಿ’ ಎಂದೇ ನಮೂದಿತ್ತು. ಆದರೆ ಮಧ್ಯಾಹ್ನದೂಟ ಮತ್ತು ರಾತ್ರಿಯ ಉಪಾಹಾರವನ್ನು ಒಮ್ಮೆಲೇ ಹೊಟ್ಟೆಗಿಳಿಸಿದ ಹುರುಪಿನಲ್ಲಿ ಬಳಗ, “ಪಳನಿಯಪ್ಪನ ದರ್ಶನ ಬೇಕೇ” ಎಂದಿತ್ತು. ಸುಮಾರು ಐದು ನೂರಡಿ ಎತ್ತರದ ಮಹಾಬಂಡೆಯ ಮೇಲೆ ಈ ಆರ್ಮುಗಂ ಕುಳಿತಿದ್ದಾನೆ. ಅವನ ದರ್ಶನಕ್ಕೆ ಇಂದು ಆರ್ನೂರು ಚಿಲ್ಲರೆ ಮೆಟ್ಟಲಿನೊಡನೆ, ಮೂರು ಸಾಲಿನ ಎಳೆ ತೊಟ್ಟಿಲೂ ಒಂದು ಸಾಲಿನ ತೂಗು ತೊಟ್ಟಿಲ ವ್ಯವಸ್ಥೆಗಳೂ ಇವೆ. ನಾವು ಮೊದಲು ನಿಯಮಾನುಸಾರ ಪಾದರಕ್ಷೆ, ಚರವಾಣಿಗಳನ್ನು ಅಡ ಇಟ್ಟು ಯಾಂತ್ರಿಕ ಸೌಕರ್ಯ ಬಯಸಿದೆವು. ತೂಗು ತೊಟ್ಟಿಲು ನಾದುರಸ್ತು ಎಂದು ಬೋರ್ಡು ಸಾರಿತು. ಎಳೆ ತೊಟ್ಟಿಲುಗಳ ಸರತಿ ಬೇಲಿಯೊಳಗೆ ನಮಗಿಂತಲೂ ಸಾಕಷ್ಟು ಮೊದಲೇ ಬಂದ ಜನ ಊಊದ್ದಕ್ಕೆ ಸಾಲು ಹಿಡಿದು ಜಡವಾಗಿದ್ದರು. ವಿಚಾರಿಸಿದರೆ “ಇನ್ನೂ ಒಂದು ಗಂಟೆ ಲೇಟ್” ಎಂದರು. ಅಸಮಾಧಾನದ ಭರದಲ್ಲಿ ಒಮ್ಮೆ ಎಲ್ಲರೂ ಚರವಾಣಿ, ಚಪ್ಪಲಿಗಳ ಸೆರೆಬಿಡಿಸಿ, “ಆಪ್ದಲ್ಲಾ ಹೋಪ್ದಲ್ಲಾ…” ಎಂದೇ ಉದ್ಗರಿಸಿದ್ದಿತ್ತು. ಆದರೆ….
ಭಕ್ತ ಮನಸ್ಸು ಕೇಳಲಿಲ್ಲ. ಅರ್ಧಕ್ಕರ್ಧ ಮಂದಿ, ಬಸ್ಸಿಗೆ ಮರಳಿ ಕಾಯುವುದಾಗಿ ಹೇಳಿದರು. ಉಳಿದವರು ನಿಯಮಾನುಸಾರ, ಮನೋಜ್ ಹಿಡಿದ ಕೈಚೀಲಕ್ಕೆ ಚರವಾಣಿ ಹಾಕಿ, ಚಪ್ಪಲಿ ಬಿಟ್ಟು ಮೆಟ್ಟಿಲ ಎಣಿಕೆ ಶುರು ಮಾಡಿದೆವು. ಸುಮಾರು ಇಪ್ಪತ್ತು ಮಿನಿಟಿನಲ್ಲಿ ಬಂಡೆಯ ಮಂಡೆಯೇನೋ ಒಲಿಯಿತು. ಆದರೆ ದರ್ಶನಕ್ಕೆ “ಇನ್ನೂ ಅರ್ಧ ಗಂಟೆ…” ಎಂಬ ಘೋಷಣೆ, ಗಿಜಿಗುಡುತ್ತಿದ್ದ ಸರತಿ ಸಾಲು ನಮ್ಮನ್ನು ಹೆದರಿಸಿತು. ದೇವ ದರ್ಶನವೇ ವಿಶೇಷ ಎನ್ನಬೇಕಾದವರು, ತಲಾ ನೂರು ರೂಪಾಯಿ ಕೊಟ್ಟು ನಾವೇ ವಿಶೇಷದವರಾದೆವು. ಅರ್ಚಕ ಪರಾಧೀನನಾದ ಷಣ್ಮುಖ ಗರ್ಭ ಗುಡಿಯ ಮಂಕು ಮೂಲೆಯಲ್ಲಿದ್ದಿರಬೇಕು. ನಾವಂತೂ ಬೆವರು ತಳಿದ ನಮ್ಮ ಇಪ್ಪತ್ತೆರಡು ಮುಖಗಳನ್ನು ಬಾಗಿಲಲ್ಲಿ ಕಾಣಿಸಿ, ಬಿಡುಗಡೆ ಪಡೆದೆವು. ಪ್ರಾಕಾರದೊಳಗೊಂದು ಸುತ್ತು ಹಾಕಿ, ಮರಳಿ ಮಣ್ಣಿಗೆ ಬಂದೆವು. ಏನು ಮಾಡಲೀ, ಕನಿಷ್ಠ ಚರವಾಣಿ ಇದ್ದಿದ್ದರೆ, ನನ್ನ ನೀರಸ ಗದ್ಯಕ್ಕೆ, ನಾಲ್ಕು ಪಟ ಸೇರಿಸಿ ಚಂದಗಾಣಿಸುತ್ತಿದ್ದೆ 🙁
ಮುಸುಕಿದ ಮುಸ್ಸಂಜೆಯಲ್ಲಿ ಮತ್ತೆ ಬಸ್ಸೇರಿ, “ಗುರುವಾಯ್ಯೂರದು ದೂರಾ… ಬಲು ದೂರಾ…” ಎಂದು ಹಾಡಿಕೊಳ್ಳುತ್ತಾ ಸುಮಾರು ಇನ್ನೂರು ಕಿಮೀಟರ್ ಅಂತರದ ಇಳಿಯೆಣಿಕೆಗೆ ಇಳಿದೆವು. ಪೂರ್ವ ಯೋಜನೆಯಂತೆ ಬಾಲಣ್ಣ ಆ ಕೊನೆಯಲ್ಲೆಲ್ಲೋ ನಲ್ವತ್ತೈದು ಊಟ ಕಾಯ್ದಿರಿಸಿದ್ದರಂತೆ. ಆದರೆ ಪಳನಿ ಬಿಡುವಾಗಲೇ ಕತ್ತಲಾಗಿದ್ದುದರಿಂದ ಅದನ್ನು (ನಷ್ಟದಲ್ಲೇ) ರದ್ದು ಪಡಿಸಿದರು. ನಮಗೆ ಮತ್ತೆ ಉದರ ವೈರಾಗ್ಯ ಉಂಟಾಗದಂತೆ, ಒಂಬತ್ತು ಗಂಟೆಯ ಸುಮಾರಿಗೆ ಸಿಕ್ಕ ಇನ್ನೊಂದು ಮಹಾ ಹೋಟೆಲಿನಲ್ಲಿ ರಾತ್ರಿಯ ಭರ್ಜರಿ ಭೋಜನವನ್ನೇ ಕೊಡಿಸಿದರು. ಮತ್ತೆ ಕೇಳಬೇಕೇ… ಅದುವರೆಗೆ ಬರಿದೇ ತೂಕಡಿಸುತ್ತಿದ್ದವರು, ಮಾರ್ಗಕ್ರಮಣದ ಆತಂಕಗಳನ್ನೆಲ್ಲ ಚಾಲಕ ಮತ್ತು ಬಾಲಣ್ಣರಿಗೆ ಹೊರಿಸಿ, ನಿದ್ರಾವಸ್ಥೆಗಿಳಿದೆವು. ನಡು ರಾತ್ರಿಯಿಂದ ತುಸು ಆಚೆ ಅಥವಾ ಮರುದಿನದ ಬೆಳೀಈಈಗ್ಗೆ, ಅಂದರೆ ಒಂದು ಗಂಟೆಗೆ ಗುರುವಾಯೂರಿನ ಹೋಟೆಲ್ ಸೇರಿದೆವು. ಅದುವರೆಗಿನ ಕೋಳಿ ನಿದ್ರೆಗೆ ಸಣ್ಣ ವಿರಾಮ ಕೊಟ್ಟು, ಕೋಣೆಗಳ ಸುಪ್ಪತ್ತಿಗೆಗಳಲ್ಲಿ ಗಾಢ ನಿದ್ರೆಗೆ ಜಾರಿದೆವು. ಸಹಜವಾಗಿ…
ನಿಜ ಬೆಳಿಗ್ಗೆ ಬಾಲಣ್ಣ “ಆದಷ್ಟು ಬೇಗಾ….” ಎಂದರೂ ಎಲ್ಲ ಹೊರಡುವಾಗ ಗಂಟೆ ಏಳು ಕಳೆದಿತ್ತು. ಗುರುವಾಯೂರಪ್ಪನ ದೇವಳ ಹೆಚ್ಚು ಕಡಿಮೆ ನಮ್ಮ ಹೋಟೆಲಿನ ಹಿತ್ತಲಿನಲ್ಲೇ ಇತ್ತು. ಹಾಗಾಗಿ ಶಿಸ್ತಿನ ವಸ್ತ್ರ ಸಂಹಿತೆ, ಚರವಾಣಿ ನಿಷೇಧ ಮತ್ತು ಪಾದುಕಾ ಪ್ರದಾನವೆಲ್ಲ ಹೋಟೆಲಿನಲ್ಲೇ ಮುಗಿಸಿ, ತಚಪಚ ಕೊಚ್ಚೆ ಮೆಟ್ಟಿ ದೇವಳದ ವಠಾರ ಪ್ರವೇಶಿಸುತ್ತಿದ್ದಂತೆ ನಮಗಿಬ್ಬರಿಗೆ ಮಾತ್ರ….
ನಾಲ್ಕು ದಶಕಗಳ ಹಿಂದಿನ ನೆನಪು ಮರುಕಳಿಸಿತು. ಜೋಪಡಾ ಮಳಿಗೆಗಳು, ಕೊಳಕು ಮನೆಗಳು ಇಡಿಕಿರಿದಿದ್ದ ಗಲ್ಲಿಯಂತಿದ್ದ ಮುಖ್ಯ ದಾರಿಯಲ್ಲೇ ದಾಂಡಿಗರು ನಮ್ಮ ಬೈಕ್ ತಡೆದಿದ್ದರು. ಹಿಂದೂಗಳಿಗಷ್ಟೇ ಪ್ರವೇಶ, ಗಂಡಸರು ಅರೆಬೆತ್ತಲಾಗಬೇಕು, ಹೆಂಗಸರು ಸೀರೆ ಸುತ್ತಬೇಕು, ಚಪ್ಪಲಿ, ಕ್ಯಾಮರಾ, ಚರ್ಮದ ನಡುಪಟ್ಟಿ… ಎಂದೇನೇನೋ ‘ಮಾಡು ಮಾಣ್’ ಪಟ್ಟಿ ಪ್ರದರ್ಶಿಸಿದ್ದರು. ನಾವು ಬೈಕನ್ನು ಅಲ್ಲೇ ಹಿಮ್ಮುರಿ ತಿರುಗಿಸಿ, ಮುಂದಿನೂರಿಗೆ ಹೋಗಿದ್ದೆವು. (ನೋಡಿ: ಕಣ್ಣಾನೂರು ಕೋಟೆ – ಒಂದು ಸ್ಮಾರಕ ) ಇಂದು ತೋರಿಕೆಗೆ ಪರಿಸರವೆಲ್ಲಾ ಝಗಮಗ, ಭಾರೀ, ಭವ್ಯ… ಎಂದೇ ತೋರಿತು. ಆದರೆ ನಿರ್ವಾಹಕರ ಮನೋ ಸಂಸ್ಕಾರ ಇನ್ನಷ್ಟು ಸಂಕುಚಿತಗೊಂಡದ್ದು ಅರಿವಾಯ್ತು. (ಗುರುವಾಯೂರಪ್ಪನನ್ನು ಇನ್ನಿಲ್ಲದಂತೆ ಹಾಡಿ ಹೊಗಳುವ ವಿಖ್ಯಾತ ಗಾಯಕ ಯೇಸುದಾಸರು ಹುಟ್ಟಾ ಕ್ರಿಶ್ಚನ್ ಎಂಬೊಂದೇ ಕಾರಣಕ್ಕಾಗಿ ಇಂದಿಗೂ ದೇವಳ ಒಳಕ್ಕೆ ಬಿಟ್ಟಿಲ್ಲ!)
ಗುಂಪಿನಲ್ಲಿ “ಗೋವಿಂದಾ…” ಎಂದು ನಾವೂ ಮಂದೆಯಲ್ಲಿ ಒಂದಾದೆವು. ವಿಶೇಷ ದರ್ಶನದ ಚೀಟಿ ಪಡೆದೂ ಅಮೃತ ಮುಹೂರ್ತ ಕಾಯಬೇಕಾಯ್ತು. ಗಂಟೆ ಗಟ್ಟಳೆ ಸರತಿ ಸಾಲಿನಲ್ಲಿ ನವೆದು, ಕೊನೆಯಲ್ಲಿ ದರ್ಶನದ ನೆಪದಲ್ಲಿ ನೂಕಿಸಿಕೊಂಡು ಹೊರಬೀಳುವಾಗ ಗಂಟೆ ಹತ್ತು ಕಳೆದಿತ್ತು. ಅನಂತರ ಅವಸರವಸರವಾಗಿ ತಿಂಡಿ ತಿಂದು, ಖೋಲಿ ಖಾಲಿ ಮಾಡಿ, ಕೆಂಪು ಗುಬ್ಬಿ ತುಂಬಿದೆವು. ಹನ್ನೊಂದೂವರೆಗೆ ತ್ರಿಚ್ಚೂರಿಗೆ (೨೬ ಕಿಮೀ) ಧಾವಿಸಿ, ಮಂಗಳೂರಿನ ರೈಲನ್ನು ಸಕಾಲದಲ್ಲಿ ಹಿಡಿಯುವ ಯೋಜನೆ ನಮ್ಮದಾಗಿತ್ತು.
ಚಿರಂಜೀವಿ ಪರಶುರಾಮ ಈ ದಿನಗಳಲ್ಲೂ ತೀವ್ರ ಕಾಳಜಿಯೊಡನೆ, ನಿತ್ಯ ತನ್ನ ಸೃಷ್ಟಿಯ (ಪಶ್ಚಿಮ ಕರಾವಳಿ ಅಂದರೆ ಪರಶುರಾಮ ಸೃಷ್ಟಿಯೇ) ಉದ್ದಕ್ಕೆ ಓಡಾಡುತ್ತಾನೆ. ಬಾಲಣ್ಣ ಸುಮಾರು ನಲ್ವತ್ತು ದಿನ ಮುಂಚಿತವಾಗಿ, ಯುಕ್ತ ವಿಧಿ ವಿಧಾನಗಳಿಂದ ಆತನನ್ನು ಒಲಿಸಿಕೊಂಡು, ನಮ್ಮೆಲ್ಲರನ್ನು ಆತನ ಪರಿವಾರಕ್ಕೆ ದಾಖಲಿಸಿದ್ದರು. ಆ ಉನ್ಮತ್ತ ಪರಶುರಾಮನು (ಪರಶುರಾಮ ಎಕ್ಸ್ಪ್ರೆಸ್) ಇಂದೂ ನಿಗದಿತ ಶುಭ ಮುಹೂರ್ತಕ್ಕೇ (ಬೆಳಿಗ್ಗೆ ಸುಮಾರು ಆರು ಗಂಟೆಗೆ) ತಿರುವನಂತಪುರದಲ್ಲಿ ರಂಗ ಪ್ರವೇಶ ಮಾಡಿದ್ದ. ಆತ ಮಧ್ಯಾಹ್ನ ಹನ್ನೆರಡೂವರೆಯ ಶುಭ ಮುಹುರ್ತದಲ್ಲಿ, ತ್ರಿಚ್ಚೂರಿನ ಭಕ್ತರನ್ನು ಕೂಡಿಕೊಂಡು, ಮಂಗಳೂರಿನತ್ತ ಧಾವಿಸುವುದೂ ನಮಗೆ ತಿಳಿದೇ ಇತ್ತು. ಮಟ್ಟಸ ರಸ್ತೆಯ ೨೬ ಕಿಮೀಗೆ ಒಂದು ಗಂಟೆ ಧಾರಾಳ ಸಮಯವೇ ಎಂಬ ಧೈರ್ಯ ನಮ್ಮದು. ಆದರೆ
ಸಪುರ ದಾರಿ, ಅಮಿತ ವಾಹನ ಸಮ್ಮರ್ದಗಳಲ್ಲಿ ನಮ್ಮ ಬಸ್ ನಿಧಾನಿಸ ತೊಡಗಿತ್ತು. ಕಾಲ ಜಾರುತ್ತಿದ್ದಂತೆ ನಮ್ಮ ಹಣೆಯ ಚಿಂತಾರೇಖೆಗಳು ಆಳವಾಗತೊಡಗಿದ್ದವು. ಕಳಶಪ್ರಾಯವಾಗಿ ಒಂದೆಡೆ ರಸ್ತೆ ದುರಸ್ತಿಯ ನೆಪದಲ್ಲಿ ನಮ್ಮನ್ನೂ ಸೇರಿಸಿದಂತೆ ನೂರಾರು ವಾಹನಗಳು ಅನಿರ್ದಿಷ್ಟ ನಿಲುಗಡೆಗೇ ಬಂದಾಗ, ಆತಂಕದಲ್ಲಿ ನಾವು ಬೊಬ್ಬೆ ಹೊಡೆಯುವುದೊಂದೇ ಬಾಕಿ. ಆದರೆ ಇಂಥಾ ಹಲವು ಯುದ್ಧಗಳ ವೀರಾಗ್ರಣಿ, ಸ್ಥಿತಪ್ರಜ್ಞ ಬಾಲಣ್ಣ ಮಾತ್ರ, ಚರವಾಣಿ ಎಂಬ ಮಾಯಾಗನ್ನಡಿಯಲ್ಲಿ (ರೈಲಿನ ಪ್ರತಿಕ್ಷಣದ ಪ್ರಗತಿ ಹೇಳುವ ಯಾಪ್) ನೋಡುತ್ತಾ “ಭಯ ಬೇಡ, ಪರಶುರಾಮ ನಿಧಾನಿಯಾಗಿದ್ದಾನೆ…” ಎಂದು ಮುಹೂರ್ತ ಮುಂದೆ ಹೋಗುತ್ತಿರುವುದನ್ನು ಹೇಳುತ್ತಿದ್ದರು. ಮುಂದುವರಿದು “ಹಾಗೊಮ್ಮೆ ಪರಶುರಾಮ ತಪ್ಪಿದರೂ ಪರ್ಯಾಯ ಕ್ರಮವಾಗಿ ನಿಮನ್ನೆಲ್ಲಾ ಕೆಂಪು ಗುಬ್ಬಿಯಲ್ಲೇ…..” ಎಂದದ್ದೂ ಉಂಟು. ಅದೃಷ್ಟಕ್ಕೆ ಹತ್ತೇ ಮಿನಿಟಿನಲ್ಲಿ ಮಾರ್ಗ ತಡೆ ಮುಕ್ತವಾಯಿತು. ಬಸ್ಸು ತ್ರಿಚೂರು ರೈಲ್ವೇ ನಿಲ್ದಾಣ ತಲಪಿದಾಗ, ಕ್ಷೇತ್ರಪಾಲರು ಪರಶುರಾಮನನ್ನು ಎರಡನೇ ನಿಲುಗಟ್ಟೆಗೆ ಆಹ್ವಾನಿಸಿ, ಜಯಘೋಷಕ್ಕೇ ಇಳಿದಿದ್ದರು.
ನಾವಷ್ಟೂ ಮಂದಿ, ಎಲ್ಲ ಗಂಟು ಗದಡಿಗಳ ಸಹಿತ (ಭಾರೀ ಇದ್ದವಕ್ಕೆ ಮತ್ತು ದುರ್ಬಲರಿಗೆ ಇತರರ ಸಹಾಯ ಕೊಟ್ಟು) ಮೇಲ್ಸೇತುವಿಗೆ ಹತ್ತಿ, ಆಚೆಗೆ ಓಡಿ, ಇಳಿದು, ನಿಟ್ಟುಸಿರು ಬಿಡುತ್ತಿದ್ದಂತೇ, ಅಂದರೆ ಸುಮಾರು ಮೂವತ್ತು ಮಿನಿಟು ತಡವಾಗಿ ಪರಶುರಾಮ ಬಂದೇ ಬಿಟ್ಟ. ನಾವೆಲ್ಲ ಸುಕ್ಷೇಮವಾಗಿ ಉಡಿ ಸೇರಿ ಕೃತಾರ್ಥರಾದೆವು. ಪಾಲ್ಘಾಟಿನಲ್ಲಿ ಊಟ ಮುಗಿಸಿ, ರಾತ್ರಿ ಒಂಬತ್ತು ಗಂಟೆಯ ಸುಮಾರಿಗೆ ಅಂದರೆ, ನಡುವಣ ವಿಳಂಬವನ್ನು ಸರಿಪಡಿಸಿಕೊಂಡು ಸಕಾಲಕ್ಕೇ ಮಂಗಳೂರು ತಲಪಿದ್ದೆವು.
ಒಟ್ಟು ಬಳಗದಲ್ಲಿ ನಾಲ್ವರು ಮೊದಲೇ ನಮಗೆ ವಿದಾಯ ಹೇಳಿದ್ದರು. ಅನಂತ ರುಕ್ಮಿಣಿ ಮತ್ತು (ಬಾಲಣ್ಣರ ಸಹಾಯಕ) ಚೇತನ್ ನಮ್ಮೊಡನೇ ತ್ರಿಚ್ಚೂರಿಗೆ ಬಂದರೂ ಮುಂದುವರಿದು ಬಸ್ ನಿಲ್ದಾಣಕ್ಕೆ ಹೋಗಿದ್ದರು. ಅಲ್ಲಿಂದ ತುಸು ತಡವಾಗಿ ಹೊರಡುತ್ತಿದ್ದ ಭಿನ್ನ ಬಸ್ಸುಗಳಲ್ಲಿ ಅನಂತ ಮತ್ತು ರುಕ್ಮಿಣಿ ಮೈಸೂರಿಗೂ ಚೇತನ್ ಬೆಂಗಳೂರಿಗೂ ಹೋಗಿದ್ದರು. ಗುರುವಾಯೂರ್ ಹೋಟೆಲಿನಲ್ಲೇ ನಮಗೆ ವಿದಾಯ ಹೇಳಿದ್ದ ಕೃಷ್ಣ ಭಟ್, ಸಂಜೆ ತ್ರಿಚ್ಚೂರಿನಿಂದ ಮುಂಬೈಗೆ ವಿಮಾನ ಹಿಡಿಯುವವರಿದ್ದರು.
ತೀರ್ಥಯಾತ್ರಾ ಪ್ರಸಂಗದ ಫಲಶ್ರುತಿ: ಶಾಂತಿ ಕಾಲಗಳಲ್ಲಿ ಸಿರಿಮನೆಗಳ ಸಂಪತ್ತಿಗೆ ಸಂಬಳದ ಕಾವಲಿನವರು ಇರುತ್ತಾರೆ. ಅವುಗಳಿಗಿಂತ ಎಷ್ಟೋ ಪಾಲು ಹೆಚ್ಚಿನ ಸಂಪತ್ತನ್ನು ಪ್ರಕಟದಲ್ಲೂ (ದೇವಬಿಂಬವಷ್ಟೇ ಅಲ್ಲದೆ ಚಿನ್ನದ ಬಾಗಿಲು, ಗುಮ್ಮಟ…..) ಗುಪ್ತವಾಗಿಯೂ ತುಂಬಿಕೊಂಡ ದೇವಳಗಳಿಗಾದರೆ, ಸಾರ್ವಜನಿಕರ ನದರು ಹಾಗೂ ದೇವಭಯ ಹೆಚ್ಚಿನ ರಕ್ಷಣೆ ಕೊಡುತ್ತಿದ್ದಿರಬೇಕು. ಹಾಗಾಗಿ ಅಂಥಾ ರಾಜ್ಯಗಳನ್ನು ಯುದ್ಧದಲ್ಲಿ ಗೆದ್ದವರು, ಮತ ಧರ್ಮಗಳ ಹಂಗಿಲ್ಲದೇ ದೇವಾಲಯಗಳನ್ನು ಹೆಚ್ಚಿಗೇ ಲೂಟಿ ಮಾಡುತ್ತಿದ್ದರು. (ನೆನಪು ಮಾಡಿಕೊಳ್ಳಿ – ವಿಜಯನಗರ ಹಾಳು ಹಂಪಿಯಾಗುವಲ್ಲಿ ‘ಹಿಂದೂ’ ರಾಜರುಗಳ ಕೈವಾಡ ತುಂಬ ದೊಡ್ಡದು!) ಈ ಪ್ರವಾಸದಲ್ಲಿ ನಾವು ಕಂಡ ಹೆಚ್ಚಿನ ದೇವಾಲಯಗಳು ದುರ್ಗಮ ಕೋಟೆಗಳ ರಚನೆಗಳನ್ನೇ ರೂಡಿಸಿಕೊಂಡಿರುವುದು ಆ ಕಾರಣಕ್ಕೂ ಇರಬಹುದು. ಹಲವು ಸುತ್ತಿನ ಭಾರೀ ಪಾಗಾರಗಳು, ಭಾರೀ ಬಾಗಿಲುಗಳು, ವಿಸ್ತೃತ ನೋಟ ಕೊಡುವ ಗೋಪುರಗಳು, ಗುಪ್ತ ಮಾರ್ಗಗಳು… (ಬೃಹದೀಶ್ವರದಲ್ಲಿ ಪಕ್ಕಾ ಕಂದಕವೂ ಇತ್ತು.) ತನ್ನ ಗುಪ್ತನಿಧಿಯ ಅಂಶ ಬಯಲಾದ ತಿರುವನಂತಪುರ ದೇವಳವಂತೂ ವಿಶ್ವಖ್ಯಾತವೇ ಆಗಿದೆ.
ಪ್ರಾಕೃತಿಕ ಅವಹೇಳನ : ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯ ಮೂರು ಸಾಗರಗಳ ಪ್ರಕ್ಷುಬ್ದತೆಯನ್ನೀಸಿ, ಬಂಡೆಯೇರಿ, ಬಳಸಿದ್ದಾದರೂ ಯಾಕೆ? ಏಕಾಂತ ಧ್ಯಾನಕ್ಕೆ! ಅದಕ್ಕಿಂದು ಸಮರ್ಥ ದೋಣಿಗಳ ಸವಾರಿ ಕೊಟ್ಟು, ಬಂಡೆಯ ಮೇಲೆ ಟನ್ನುಗಟ್ಟಳೆ ಕಬ್ಬಿಣ, ಕಾಂಕ್ರೀಟೂ…. ಸುರಿದು, ಭವನ, ಬೊಂಬೆ ಇಟ್ಟು, ಏಕಾಂತ-ಧ್ಯಾನ ಬಿಡಿ, ಸಾರ್ವಜನಿಕ ದಾಂಧಲೆಯೇ ನಡೆಯುತ್ತಿದೆ. ಭೂಶಿರದ ಪ್ರಶಾಂತ, ಸುಂದರ ಸೂರ್ಯೋದಯಕ್ಕೆ ಕಾದಿದ್ದ ನಮಗೆ, ಊರಿನದೇ ಬೇರೊಂದು ದೇವಾಲಯ ಮೈಕ್ ಹಚ್ಚಿ ಗದ್ದಲ ನಡೆಸುತ್ತಿದ್ದದ್ದು, ಊರ ದೀಪಗಳು ಕಡಿಮೆಯಾಯ್ತೆಂಬಂತೆ ರಾತ್ರಿಪೂರ್ತಿ ತಿರುವಳ್ಳುವರ್ ಪ್ರತಿಮೆಗೆ ಮಹೋಜ್ವಲ ದೀಪಗಳ ಸ್ನಾನ ಕೊಡುತ್ತಿದ್ದದ್ದು ಮರೆಯಲಾಗದ ಹಿಂಸೆ.
ವಿವೇಕಾನಂದ ಶಿಲಾ ಸ್ಮಾರಕದ ರಚನೆ ಕಾಲಕ್ಕೆ (೧೯೭೦) ಸಾರ್ವಜನಿಕದ ಪ್ರಾಕೃತಿಕ ಅರಿವು ಇಂದಿನಷ್ಟು ಜಾಗೃತವಿರಲಿಲ್ಲ, ಅನಿವಾರ್ಯತೆಯಲ್ಲಿ ಒಪ್ಪಿಕೊಳ್ಳೋಣ. ಯಾವುದೇ ಮಹಾ ಘಟನೆಗಳು (ಕೆಟ್ಟ/ಒಳ್ಳೇ) ಇತಿಹಾಸದ ಪುಟಗಳಲ್ಲಿ ಒಂದು ಮಾಹಿತಿಯಾಗುತ್ತದೆ, ರಾಷ್ಟ್ರೀಯ ಭಾವಸಂಪುಷ್ಟಿಯ ಭಾಗವಾಗಿಬಿಡುತ್ತದೆ. (ಉದಾ: ನಿರ್ಮಾಣ ಕಾಲದಲ್ಲಿ ಸತ್ತ ಸಾವಿರಾರು ಗುಲಾಮರ ಲೆಕ್ಕ ಮರೆತ ಇಂದು, ಪಿರಮಿಡ್ಡುಗಳನ್ನು ಮೆಚ್ಚಿಕೊಂಡಂತೆ) ಆದರೆ ಮುಂದುವರಿದು, ಎತ್ತರದಲ್ಲಿ ಅದನ್ನು ಮೀರಿಸಿದಂತೆ (ದಿಕ್ಕು ತಪ್ಪಿದ ಪ್ರಾದೇಶಿಕ ಅಭಿಮಾನದಲ್ಲಿ) ತಿರುವಳ್ಳುವರ್ ವಿಗ್ರಹ ನಿಲ್ಲಿಸಿ, ಗಾಜಿನ ಸೇತುವೆ ಸೇರಿಸಿ, ಹಗಲೂ ರಾತ್ರಿ ಬೆಳಕಿನ ಹೊಳೆ ಹರಿಸುತ್ತಿರುವುದು ಆ ಮಹಾತ್ಮರುಗಳ ಆದರ್ಶಕ್ಕೂ ಪ್ರಾಕೃತಿಕ ತತ್ವಕ್ಕೂ ದೊಡ್ಡ ಅವಹೇಳನ. ಇವುಗಳ ಪೂರ್ವಾನ್ವಯದಲ್ಲಿ, ಮುಂದಿನ ದಿನಗಳಲ್ಲಿ ಭೂಶಿರದ ಉಳಿದ (ಸಾಕಷ್ಟು ಇವೆ) ಕಲ್ಲ ಮೊಳಕೆಗಳ ಮೇಲೆಲ್ಲ ಹೊಸತೇ ಮಾನವ ರಚನೆಗಳು ಬರತೊಡಗಿದರೆ ಕೊನೆಯುಂಟೇ???
ದೇವರಿಗೆ ವಿಧಿ ನಿಷೇಧಗಳೇ? : ‘ದೇವರು’ ಎಂಬ ನಂಬಿಕೆಗೆ, ಸರ್ವಂತರ್ಯಾಮಿ ಮತ್ತು ಸಾರ್ವಕಾಲಿಕ ಎಂಬ ವಿಶೇಷಣ ಸಹಜವಾಗಿ ಸೇರಿಕೊಳ್ಳುತ್ತದೆ. ಸ್ತುತಿ, ನಿಂದೆಗಳಿಗೆ ಅತೀತನಾದ ಅವನಿಗೆ ಎಲ್ಲ ಪೂಜೆಯೂ ಸಲ್ಲುತ್ತದೆ. ಹಾಗಾಗಿ ಕಗ್ಗತ್ತಲ ಕಲ್ಲಕೋಣೆಯೊಳಗೆ (ಗರ್ಭಗುಡಿ) ಬಂಧಿಸಲ್ಪಟ್ಟ ಆ ಬಿಂಬಕ್ಕೆ ನೀವು ಎಂದೂ ಗಾಳಿ, ನೀರು, ಬೆಳಕು, ಅರ್ಚನೆ…. ಕೊಟ್ಟರೂ ಸಲ್ಲುತ್ತದೆ. ವಿಧಿ ನಿಷೇಧಗಳೇನಿದ್ದರೂ ಆ ಬಿಂಬವನ್ನು ಪ್ರಸ್ತುತಪಡಿಸುವ ವ್ಯಕ್ತಿ ಅಥವಾ ವ್ಯವಸ್ಥೆಯ ಹುನ್ನಾರ. ಕೊಡುವ ಶಾಸ್ತ್ರಾಧಾರ ದಿನ ತಪ್ಪಿದ (ಔಟ್ ಡೇಟೆಡ್) ನಿರ್ದೇಶನಗಳು ಮಾತ್ರ. ವಿವಿಧ ಮುಹೂರ್ತಗಳಿಗಷ್ಟೇ ದೇವಬಿಂಬದ ದರ್ಶನ ಭಾಗ್ಯವನ್ನು ಕಲ್ಪಿಸುವುದು ಕೇವಲ ದೇವಾಲಯಗಳ ನಿರ್ವಹಣಾ ಸೌಕರ್ಯಕ್ಕಷ್ಟೇ ಆಗಿದ್ದರೆ (ಎಲ್ಲಾ ಸಾರ್ವಜನಿಕ ವ್ಯವಸ್ಥೆಗಳಿಗಿರುವಂತೆ ಕೆಲಸದ ಸಮಯ) ಇಂದು ಅಲ್ಲೆಲ್ಲ ನಾವು ಕಾಣುವ ಸರತಿ ಸಾಲಿನ ಕೋಟೆ, ನೂಕುನುಗ್ಗಲು ಖಂಡಿತ ಇರಲಾರದು. ಸರತಿ ಸಾಲಿನಲ್ಲಿ ಹಣದ ಸೊಕ್ಕು, ಹೋಟೆಲ್ ಮೆನು ಕಾರ್ಡಿನಂತೆ ದೇವಬಿಂಬವನ್ನು ಪೂಜಿಸುವ ನೂರೆಂಟು ಕಲಾಪಗಳೆಲ್ಲ ಪುರೋಹಿತಶಾಹಿಯ ದುರಾಗ್ರಹಗಳು. ಇವನ್ನು ನಿವಾರಿಸಿದರೆ, ಭಕ್ತಿಯಲ್ಲೇ ಬಂದವರೂ ವಿರಾಮದಲ್ಲಿ ಓಡಾಡುವಾಗ ಹಿಂದಿನ ವೈಚಾರಿಕರು ಉದ್ದೇಶಪಟ್ಟಂತೆ ದೇವಳಗಳು ಕಲೆ ಸಾಹಿತ್ಯವೇ ಮುಂತಾದ ಉದಾತ್ತ ಭಾವಗಳನ್ನು ಕಿಂಚಿತ್ತಾದರೂ ಉದ್ದೀಪಿಸೀತು.
ವಸ್ತ್ರ ಸಂಹಿತೆ: ಜಾತ್ಯಾತೀತ ಭಾರತದ ಹಲವು ದೇವಾಲಯಗಳಲ್ಲಿ ಇನ್ನೂ ಜಾತಿ, ಲಿಂಗ ಬೇಧಗಳು ಉಳಿದೇ ಇವೆ. ಎಷ್ಟೋ ದೇವಳಗಳು ಅದನ್ನು ಸಾರ್ವಜನಿಕದಲ್ಲಿ ಹೇಳದೇ ಆಚರ್ಣೆಯಲ್ಲಿ ಹೇರುವ ಕ್ರಮದ ಹೆಸರು – ವಸ್ತ್ರ ಸಂಹಿತೆ. ದೈವೀ ಸಾನ್ನಿಧ್ಯದಲ್ಲಿ ಶುಚಿ, ಸರಳತೆಯನ್ನು ಮೀರಿದ ವಸ್ತ್ರ ಕಟ್ಟಳೆ ಅಸಂಗತ. ವ್ಯಕ್ತಿಯ ಜನನ ಮತ್ತು ಜೀವನಕ್ರಮವನ್ನು ತಿಳಿಯುವ ಯಾವ ಮಾನದಂಡವೂ ಇಲ್ಲದ ದೇವಳಗಳು, ಕೇವಲ ಜನಜನಿತ ಹೆಸರು ಅಥವಾ ಹುಟ್ಟಿನ ಆಕಸ್ಮಿಕವನ್ನಷ್ಟೇ ಆಧಾರವಾಗಿ ಗ್ರಹಿಸುತ್ತದೆ. ಗುರುವಾಯೂರು ದೇವಳ, ಕೇಳಿದಲ್ಲೆಲ್ಲಾ ‘ಜಾತಿಯಿಲ್ಲ’ ಎಂದು ಸ್ಪಷ್ಟ ಹೇಳುವ ನಮ್ಮನ್ನು (ಅಶೋಕ, ದೇವಕಿ ನಾಮದ ಬಲ?) ‘ದೇವ ಸನ್ನಿಧಿ’ಗೆ ಬಿಟ್ಟುಕೊಂಡಿತು. ಆದರೆ ತನ್ನ ಜೀವಿತಾವಧಿಯ ಉದ್ದಕ್ಕೂ ಗೋಪಾಲಕೃಷ್ಣನ ಸ್ತುತಿಯಲ್ಲೇ ಮುಳುಗಿದ ‘ಏಸು ದಾಸ’ನನ್ನು ಬಹಿಷ್ಕರಿಸಿದೆ! ವಸ್ತ್ರ ಸಂಹಿತೆಯಲ್ಲೂ ದೇವಳದಿಂದ ದೇವಳಕ್ಕೆ ಹೀಗೇ ಅರ್ಥಹೀನ ಭಿನ್ನತೆಗಳನ್ನು ಕಾಣಿಸುತ್ತವೆ. ಚರ್ಮದ ರಚನೆಗಳಾದ ಸೊಂಟಪಟ್ಟಿ, ಪರ್ಸ್, ಚೀಲಗಳನ್ನು ನಿಷೇಧಿಸುವ ದೇವಳಗಳು ನಿಜಕ್ಕೂ ಶುದ್ಧಕ್ಕಿಳಿದರೆ, ಚರ್ಮ ಹೊದ್ದ ಡೋಲು, ಚಂಡೆ, ಮದ್ದಳೆಯಾದಿ ವಾದ್ಯಗಳನ್ನೆಲ್ಲ ಹೊರಗಟ್ಟುವಂತಾದರೆ ದೇವಾಲಯಗಳು ಮಂಗಳಸ್ವನ ನಷ್ಟವಾಗಿ ಮಡಕೆ (ಘಟ) ಪಾತ್ರೆಗಳನ್ನಷ್ಟೇ ಭಣಭಣಿಸಬೇಕಾದೀತು!
ಚಿತ್ರಗ್ರಹಣ: ಕೃತಕ ಉಪಗ್ರಹ, ಡಿಜಿಟಲ್ ದಾಖಲೀಕರಣ, ಡ್ರೋನ್ ಮುಂತಾದವುಗಳ ಅಭಿವೃದ್ಧಿಯೊಡನೆ ಇಂದು ರಾಷ್ಟ್ರೀಯ ಗೋಪ್ಯತೆಗಳೇ ಬಟಾಬಯಲಾಗುತ್ತಿವೆ. ಹಾಗಿರುವಾಗ ಕೇವಲ ಭಾವನಾತ್ಮಕ ಸಂತೃಪ್ತಿಯನ್ನು ಕೊಡಬಹುದಾದ ದೇವಾಲಯಗಳ ಚಿತ್ರಗ್ರಹಣವನ್ನು ನಿಷೇಧಿಸುವುದು ಹಾಸ್ಯಾಸ್ಪದವೇ ಸರಿ. ವಾಸ್ತವದಲ್ಲಿ ಈ ನಿಷೇಧ, ದೇವ ಪಾವಿತ್ರ್ಯಕ್ಕೆ ಸಂಬಂಧಿಸಿದ್ದೇ ಅಲ್ಲ. ಇವು ದೇವಾಲಯಗಳ ವಾಣಿಜ್ಯ ಆಸಕ್ತಿಗಳನ್ನು ಕಾಪಿಡುವ ಹುನ್ನಾರಗಳು. ಹೆಚ್ಚಿನ ದೇವಾಲಯಗಳು ತಮ್ಮದೇ ಜಾಲತಾಣಗಳಲ್ಲಿ ತಮ್ಮ ದೇವ ಬಿಂಬಗಳ, ಎಲ್ಲಾ ತೆರನ ಚಟುವಟಿಕೆಗಳ ಪಟ, ವಿಡಿಯೋಗಳನ್ನು ಪ್ರದರ್ಶಿಸುತ್ತವೆ. ಬೀದಿ ಮಳಿಗೆಗಳಲ್ಲೂ ಯಾವುದೇ ದೇವಳದ ಬಿಂಬಗಳ ಪ್ರತಿಕೃತಿಗಳು ನಿಮಗೆ ಬೇಕಾದ ಮಾಧ್ಯಮ (ಕಲ್ಲು, ಮರ, ಲೋಹ, ಪ್ಲ್ಯಾಸ್ಟಿಕ್, ಪಟ…) ಮತ್ತು ಗಾತ್ರಗಳಲ್ಲಿ ಬಿಸಾಡಿದಂತೇ ಬಿಕರಿಗೆ ಬಿದ್ದಿವೆ. ದೇವಳಗಳು ನಿಜದಲ್ಲಿ ಮಾಡಬೇಕದದ್ದು ಇಷ್ಟೇ – ಕೆಲವು ನಾಟಕಕಾರರು, ಪ್ರದರ್ಶನಪೂರ್ವ ಪ್ರೇಕ್ಷಕರಿಗೆ ಹೇಳುವಂತೆ “ಇತರರ ವೀಕ್ಷಣೆಗೆ, ತನ್ಮಯತೆಗೆ ವ್ಯತ್ಯಯ ಬಾರದಂತೆ….” ಪಟವೋ ವಿಡಿಯೋ ಮಾಡಿಕೊಳ್ಳುವಂತೆ ನಿಯಂತ್ರಿಸಿದರೆ ಸಾಕು. ನಾನು ಮುಂದುವರಿದು ಹೇಳುತ್ತೇನೆ, ಇಂಥ ನಿಯಂತ್ರಣ ಬರಿಯ ದೇವಳಕ್ಕಲ್ಲ, ಎಲ್ಲ ಸಾರ್ವಜನಿಕ ಸ್ಥಳಗಳಿಗೂ ವ್ಯಾಪಿಸುವುದು ಉತ್ತಮ. ಸಣ್ಣ ಉದಾಹರಣೆ: ಕೊಡೈಕೆನಾಲಿನ ಪಿಲ್ಲರ್ ರಾಕಿನ ಬಳಿ ಓರ್ವ ವೃತ್ತಿಪರ ಪಟಗ್ರಾಫರ್, ತನ್ನ ಗಿರಾಕಿ ಮತ್ತು ಚೌಕಟ್ಟಿಗಾಗಿ ಇತರ ಪ್ರೇಕ್ಷಕರ ಮೇಲೆ ದರ್ಪ ತೋರುತ್ತಿದ್ದ. (ನಾವು ಆತನನ್ನು ಧಿಕ್ಕರಿಸಿದೆವು, ಬಿಡಿ)
ನೀರು, ಸ್ವಾಸ್ಥ್ಯ:
ರೈಲು, ಹೋಟೆಲು, ಎಲ್ಲಕ್ಕೂ ಮಿಗಿಲಾಗಿ ನಮ್ಮ ವ್ಯವಸ್ಥಾಪಕರೂ ಯಾತ್ರೆಯುದ್ದಕ್ಕೆ ನಮಗೆ ಬಾಟಲ್ ನೀರನ್ನು ಧಾರಾಳವಾಗಿ ಒದಗಿಸಿದ್ದರು. (ತಲಾ ಹತ್ತೋ ಹನ್ನೆರಡೋ ಬಾಟಲಿರುವ ಕನಿಷ್ಠ ಆರೇಳು ಪೆಂಡಿ, ಸದಾ ನಮ್ಮ ಬಸ್ಸಿನ ಎದುರು ಸೀಟುಗಳ ಅಡಿಯಲ್ಲಿ ದಾಸ್ತಾನಿರುತ್ತಿತ್ತು) ಅಂದರೆ ಸಣ್ಣ ಲೆಕ್ಕದಲ್ಲೂ ನಾವು ೪೫ ಮಂದಿ, ದಿನಕ್ಕೆ ಎರಡು ಲೀ, ಎಂಟು ದಿನ, ಅಂದರೆ ೭೨೦ ಪರ್ಲ್ಪೆಟ್ ಬಾಟಲುಗಳನ್ನು ಬಳಸಿ, ಬಿಟ್ಟಿದ್ದೇವೆ. ಇದರ ಬದಲು ಎಲ್ಲರಿಗೂ ಸ್ವಂತ ಸ್ಟೀಲ್ ನೀರಂಡೆ ಇಟ್ಟುಕೊಳ್ಳಲು ಸೂಚಿಸುವುದು ದೊಡ್ಡ ಪರಿಸರಸ್ನೇಹೀ ಕ್ರಮವಾಗುತ್ತಿತ್ತು. ಈ ದಿನಗಳಲ್ಲಿ ಬಹುತೇಕ ಸಾರ್ವಜನಿಕ ಸ್ಥಳಗಳಲ್ಲಿ ಉಚಿತವಾಗಿ ಫಿಲ್ಟರ್ ನೀರೊದಗಿಸುವ ವ್ಯವಸ್ಥೆ ಇರುತ್ತದೆ. ಹೋಟೆಲುಗಳಲ್ಲೂ ಕುಡಿಯಲು ಕುದಿಸಿದ ನೀರೂ ಇರುತ್ತದೆ. ಅಲ್ಲದಿದ್ದರೂ ನಮ್ಮ ಯಾತ್ರಾ ವ್ಯವಸ್ಥಾಪಕರು ಮರುಬಳಕೆಯಾಗುವ ದೊಡ್ಡ ಮರುಪೂರಣ ಅಂಡೆಗಳಷ್ಟೇ ಬಸ್ಸಿನಲ್ಲಿರುವಂತೆ ನೋಡಿಕೊಂಡಿದ್ದರೆ ಸಾಕಾಗುತ್ತಿತ್ತು. ನಮ್ಮಲ್ಲನೇಕರು ನೀರ ಬಾಟಲಿಗಳನ್ನು ಹಕ್ಕಿನಲ್ಲೆಂಬಂತೆ ಪಡೆದು, ಅರೆ ಬಳಸಿ ಬಾಟಲಿಯ ಕಸದೊಂದಿಗೇ ಶುದ್ಧ ನೀರನ್ನೂ ವ್ಯರ್ಥಗೊಳಿಸುತ್ತಿದ್ದುದು ಪರಿಸರ ದ್ರೋಹದೊಂದಿಗೆ ಜಲ ಅವಹೇಳನವೂ ಹೌದು. ಇನ್ನೂ ದೊಡ್ಡ ತಮಾಷೆ ಎಂದರೆ, ಹೋಟೆಲುಗಳಲ್ಲಿ ಸಿಗುವ ಹಸಿ ಪಾಕವಿಶೇಷಗಳು (ಚಟ್ನಿ, ತಂಬುಳಿ, ಮೊಸರು, ಹಣ್ಣಿನ ರಸ…) ನಾವು ಕೈ ಬಾಯಿ ತೊಳೆಯುವ, ಸ್ನಾನ ಮಾಡುವ ನೀರೆಲ್ಲವೂ ಸಾಮಾನ್ಯ ಬಳಕೆಯವೇ ಎನ್ನುವುದನ್ನು ಮರೆತೇ ಬಿಡುತ್ತೇವೆ. ಇಂಥದ್ದೇ ಅತಿರೇಕ ಸ್ಯಾನಿಟೈಜರ್ ಮತ್ತು ಟಿಸ್ಯೂ ಪೇಪರ್. ಯಾವುದೇ ಕ್ರಿಮಿ ನಾಶಕ ಎಂದರೆ ಜೀವನಾಶಕವೂ ಹೌದು. ಅನಿವಾರ್ಯತೆಯಲ್ಲಿ ಅವುಗಳ ಸೀಮಿತ ಬಳಕೆ ಬಿಟ್ಟು ಎಲ್ಲೆಲ್ಲೂ ಬಳಸುವುದು ನಮ್ಮ ಜೀವಕ್ಕೂ ಹಾನಿಕಾರವೇ ಸರಿ. ಶುಚಿಯ ಭ್ರಮೆಯಲ್ಲಿ ಅನಾವಶ್ಯಕ ಬಳಸಿ ಎಸೆಯುವ ಟಿಷ್ಯೂ ಪೇಪರ್ ಬದಲು, ಸ್ವಂತ ಕರವಸ್ತ್ರಗಳನ್ನೇ ಬಳಸುವಂತಾಗಬೇಕು.
ಸಮಯ ಪರಿಪಾಲನೆ : ಸಮೂಹ ಪ್ರವಾಸವಾದ್ದರಿಂದ ವ್ಯವಸ್ಥಾಪಕರು ಮೊದಲೇ ಯೋಜಿತ ಕಲಾಪಪಟ್ಟಿ ಕೊಟ್ಟಿದ್ದರು. ಮರೆತು ಹೋಗದಂತೆ ಕಾಲಕಾಲಕ್ಕೆ ಸ್ಪಷ್ಟ ಬಾಯ್ದೆರೆ ವಿವರಣೆಯನ್ನು ಕೊಡುತ್ತಿದ್ದರು. ಆದರೂ ತಂಡದಲ್ಲಿ ಬಹುಮಂದಿ ವಿನಾ ಕಾರಣ ನಿಧಾನವೇ ಪ್ರಧಾನ ಮಾಡಿಕೊಂಡಿದ್ದರು ಮತ್ತದಕ್ಕೆ ನಮ್ಮದೇ ಯಾತ್ರೆ ತುಂಬಾ ಬಳಲಿತು. ಸಮೂಹ ಸಮಯ ಪರಿಪಾಲನೆಗಾಗಿ ವೈಯಕ್ತಿಕ ಖಯಾಲಿ ಅಥವಾ ಖರೀದಿಗಳ ನೆಪ ಬಳಸುತ್ತಿದ್ದದ್ದು ಸರಿಯಲ್ಲ. ಅಂಥವರು ಸಮೂಹ ಯಾತ್ರೆಗಳು ಕೊಡುವ ಹೊಳಹಿನ ಮೇಲೆ, ಮುಂದೆ ಸ್ವಂತ ವ್ಯವಸ್ಥೆಯಲ್ಲೇ ಪ್ರವಾಸ ಕೈಗೊಳ್ಳುವುದು ಎಲ್ಲರಿಗೂ ಶುಭಕರ.
ನಿಜಾರ್ಥ ಕಳೆದುಕೊಂಡ ತೀರ್ಥಯಾತ್ರೆ : ನಾವಿಬ್ಬರೂ ಪಾಪ ನಾಶ ಮತ್ತು ಪುಣ್ಯ ಸಂಪಾದನೆ ಎಂಬ ಕಲ್ಪನೆಗಳಿಲ್ಲದೆ, ‘ತೀರ್ಥಯಾತ್ರೆ’ಗೆ ಸೇರಿಕೊಂಡವರು. ನಮಗೆ ಯಾವುದೇ ಅಮೂರ್ತ ಶಕ್ತಿಗಳು (ದೇವರು, ದೆವ್ವ, ಸ್ವರ್ಗ, ನರಕ, ಪುನರ್ಜನ್ಮ…) ಮತ್ತವುಗಳ ಆರಾಧನಾ ಕಲಾಪಗಳಲ್ಲಿ (ಪೂಜೆ, ಹರಕೆ…) ನಂಬಿಕೆ ಇಲ್ಲ. ಹೆಸರಿಸಲೇ ಬೇಕೆಂದಿದ್ದರೆ, ನಮ್ಮ ದೇವರು ಶುದ್ಧ ರೂಪದ ಪ್ರಾಕೃತಿಕ ಸಂಪತ್ತುಗಳು. ಬಹುತೇಕ ಪ್ರಾಚೀನ ತೀರ್ಥಕ್ಷೇತ್ರಗಳು ಪ್ರಾಕೃತಿಕ ಸತ್ಯಗಳನ್ನು (ಬಂಡೆ, ಬೆಟ್ಟ, ಗುಹೆ, ನೀರು, ಕಾಡು, ಜೀವವೈವಿಧ್ಯ…..) ಮನುಷ್ಯ ಭಾವನೆಗಳಿಗೆ ಬೆಸೆಯಲು ಮಾಡಿದ ಪ್ರಯತ್ನಗಳೆಂದೂ ನನ್ನ ನಂಬಿಕೆ. ಇವನ್ನು ಪೋಷಿಸುವಲ್ಲಿ ಕಲೆ, ಸಾಹಿತ್ಯಗಳ ಸಾಂಗತ್ಯವೇ ಪೂಜೆ. ಅಂಥ ಸ್ಥಳ ಪುರಾಣ, ಕಲಾಕೌಶಲ್ಯ, ಆರಾಧನಾ ವೈವಿಧ್ಯಗಳನ್ನು ನೋಡುವ ಸಲುವಾಗಿ ನಾವು ತೀರ್ಥಯಾತ್ರೆಯಲ್ಲಿ ಸೇರಿಕೊಂಡೆವು. ಸಹಜವಾಗಿ ನಾನು ಆರತಿ, ತೀರ್ಥ, ಪ್ರಸಾದಗಳಿಗೆ ಕೈ ಒಡ್ಡಲಿಲ್ಲ. ಪವಿತ್ರ ಸ್ನಾನ, ಪ್ರದಕ್ಷಿಣೆ, ನಾಮಜಪ, ವಂದನೆ ಮಾಡಲಿಲ್ಲ. ಕಾಣಿಕೆ, ಮಾತು ಕೊಡಲಿಲ್ಲ. ಒತ್ತಾಯ ಬಂದಲ್ಲಿ, ನಮ್ಮ ಕೌಟುಂಬಿಕ ಕೂಟಗಳಲ್ಲಿ ಮಾಡುವಂತೇ ಸ್ಪಷ್ಟವಾಗಿ ನಿರಾಕರಿಸಿದ್ದೇನೆ. ಆದರೆ ಈ ನಿರಾಕರಣೆ ಒಂದು ಪ್ರದರ್ಶನವಾಗದಂತೆ, ಇತರರ ಭಾವನೆಗೆ ನೋವುಂಟು ಮಾಡದಂತೆ ಎಚ್ಚರವಹಿಸಿದ್ದೇನೆ. ಹೀಗೆ ಯಾತ್ರೆಯಲ್ಲಿ ಗ್ರಹಿಸಿದ ಸತ್ಯವನ್ನು ದಾಖಲಿಸುವಂತೆ ಲೇಖನ ಮಾಲೆ, ಈಗ ವಿಮರ್ಶೆಯನ್ನೂ ಬರೆದಿದ್ದೇನೆ. ಎಲ್ಲರಿಗೂ ಶುಭವಾಗಲಿ.
(ದಕ್ಷಿಣ ಭಾರತ ತೀರ್ಥ ಯಾತ್ರಾ ಪ್ರಸಂಗವು ಮುಗಿದುದು)










































0 Comments