(ಮೊದಲ ಅರ್ಧ – ಪ್ರಥಮ ಚುಂಬನೇ….)

ಶರಾವತಿಯ ಕೆಳಪಾತ್ರೆಯಲ್ಲಿ ಲಿಂಗನಮಕ್ಕಿ ಅಣೆಕಟ್ಟು (೧೯೬೪) ಬಂದಾಗ ಹಿರೇಭಾಸ್ಕರ ಅಣೆಕಟ್ಟು (೧೯೪೮) ಮುಳುಗಿತು. ಸಹಜವಾಗಿ ಇದು ಮತ್ತಷ್ಟು ಕಣಿವೆ ಬಯಲುಗಳಿಗೂ ತನ್ನ ಹಿನ್ನೀರ ಸೆರಗನ್ನು ಹಾಸಿತ್ತು. ಕಟ್ಟೆ ಪೂರ್ಣ ತುಂಬಿದ (೧೮೧೯ ಅಡಿ) ದಿನಗಳಲ್ಲಿ ‘ಶರಾವತಿ ಸಾಗರ’ದ ವ್ಯಾಪ್ತಿ ೩೫೦ ಚದರ ಕಿಮೀ. ಇದರ ನಾಲೆಗಳ ಇನ್ನೊಂದು ಸಂಸ್ಕೃತಿ ಶಿಬಿರದ ನಿರೀಕ್ಷೆಯಲ್ಲಿ)

ಜಾಲ ಅಸಂಖ್ಯ. ಇಲ್ಲಿ ಮುಳುಗದುಳಿಯದ ಎತ್ತರಗಳೆಲ್ಲ ದ್ವೀಪಗಳೇ. ಹಾಗಾಗಿ ಕಟ್ಟೆ ಪೂರ್ವದಲ್ಲಿ ಚಾಲ್ತಿಯಿದ್ದ ಎಲ್ಲ ಸಾರ್ವಜನಿಕ ಹಕ್ಕುಗಳನ್ನು ಸರಕಾರ ವಜಾ ಮಾಡಿ, ಶರಾವತಿ ಕಣಿವೆ ವನ್ಯಧಾಮವೆಂದೇ ಹೆಸರಿಸಿತು. (ಅಂದಿನ ಜನ, ವೃತ್ತಿಗಳ ಮರುವಸತಿಯ ಬಹುತೇಕ ದುರಂತದ ಕತೆಗಳು ಇಂದಿಗೂ ಕಾಡುತ್ತವೆ. ಇಲ್ಲಿ ವಿಸ್ತರಿಸುವುದಿಲ್ಲ) ವರ್ಷಂಪ್ರತಿ ಶರಾವತಿ ಸಾಗರ ಬೇಸಗೆಯಲ್ಲಿ ಸೊರಗಿ, ಮಳೆಗಾಲದಲ್ಲಿ ಸೊಕ್ಕಿದಂತೆಲ್ಲ ದ್ವೀಪಗಳ ರೂಪ, ಮುಖ್ಯ ನೆಲದೊಡನೆ ಸಂಪರ್ಕ ಬದಲಾಗುತ್ತಲೇ ಇರುತ್ತದೆ.

ಮುಖ್ಯಭೂಮಿಯ ಅಂಚಿನ ಜನ, ಇನ್ನೂ ಮುಖ್ಯವಾಗಿ ಇತರ ಜೀವವೈವಿಧ್ಯ ತತ್ಕಾಲೀನ ನೆಲ ವಿಸ್ತರಣೆಯನ್ನು ಬಳಸಿಕೊಳ್ಳುತ್ತಲೇ ಇರುತ್ತವೆ. ಆದರೂ ಕಾನೂನಾತ್ಮಕವಾಗಿ ಹೆಚ್ಚಿನ ದ್ವೀಪಗಳು ಕನಿಷ್ಠ ಸುಮಾರು ಆರು ದಶಕಗಳಿಂದ ಮನುಷ್ಯ ಚಟುವಟಿಕೆಗಳಿಂದ ದೂರವುಳಿದಿವೆ. ಅವನ್ನು ಇದ್ದಂತೇ ಒಂದೆರಡು ದಿನಗಳಲ್ಲಿ ಕಂಡು, ತತ್ಕಾಲೀನ ಬಿಡಾರ ಹೂಡಿ ಅನುಭವಿಸುವ ಉತ್ಸಾಹ ನಮ್ಮದು. ಅದಕ್ಕಾಗಿಯೇ ಮೊನ್ನೆಮೊನ್ನೆ ನೀನಾಸಂ ಸಂಸ್ಕೃತಿ ಶಿಬಿರದ ಉತ್ತರೋತ್ತರವಾಗಿ ನಾನು, ದೇವಕಿಯೂ ಹೊನ್ನೆಮರಡಿಗೆ ಭೇಟಿ ಕೊಟ್ಟದ್ದು ನಿಮಗೆಲ್ಲ ತಿಳಿದೇ ಇದೆ. (ನೋಡಿ: ೧೯೭೦ರ ಸುಮಾರಿಗೆ, ನನ್ನ ಮೈಸೂರಿನ ವಿದ್ಯಾ ದಿನಗಳಲ್ಲಿ, ದಖ್ಖಣ ಪರ್ವತಾರೋಹಣ ಸಂಸ್ಥೆ (ದಪಸಂ) ನನಗೆ (ತಮ್ಮ ಆನಂದವರ್ಧನನಿಗೂ) ಪರ್ವತಾರೋಹಣದ ಪ್ರಾಥಮಿಕ ಪಾಠ ಮತ್ತು ಕೆಲವು ಸಾಹಸಯಾನಗಳ ಅವಕಾಶ ಕೊಟ್ಟದ್ದು ಸದಾ ಸ್ಮರಣೀಯ. ನಾನು ಮೈಸೂರು ಬಿಟ್ಟ ಕಾಲದಲ್ಲಿ ದಪಸಂ ಸೇರಿದ ಓರ್ವ ತರುಣ – ಎಸ್.ಎಲ್.ಎನ್. ಸ್ವಾಮಿ. ಅವರಿಗೆ ದಪಸಂನಲ್ಲಿ ಆನಂದನ ಗೆಳೆತನ ಇದ್ದರೂ ಯಾಕೋ ನನ್ನ ಕುರಿತೂ ವಿಶೇಷ ಪ್ರೀತಿ ಇತ್ತಂತೆ! ಇಷ್ಟು ವರ್ಷಗಳ ಅಂತರದಲ್ಲಿ ಮೊನ್ನೆ ನಾನು ಚರವಾಣಿಯಲ್ಲಿ ಪರಿಚಯಿಸಿಕೊಂಡಾಗ, ಮತ್ತರ್ಧ ಗಂಟೆಯಲ್ಲಿ ತಾಳಗುಪ್ಪದಲ್ಲೇ ಭೇಟಿಯಾದಾಗ ಸ್ವಾಮಿಯವರ ನನ್ನ ಕುರಿತ ಭಾವುಕ ಮಾತುಗಳಿಗೆ ನಾನು ನಿಜಕ್ಕೂ ಮೂಕನಾಗಿದ್ದೆ. ಔಪಚಾರಿಕತೆಗಳನ್ನು ಹೇಗೋ ನಿವಾರಿಸಿ, ಶರಾವತಿ ಸಾಗರ ದರ್ಶನದ ಮಾತು ಬಂದಾಗ, ತಕ್ಷಣಕ್ಕೆ ಸ್ವಾಮಿಯವರು ಬತ್ತಳಿಕೆಯಿಂದ ಎರಡು ಅಸ್ತ್ರಗಳು ಹೊರಬಿದ್ದವು. ಒಂದು, ಮರುದಿನದಿಂದಲೇ ತೊಡಗಲಿದ್ದ ವಿಶಿಷ್ಟಚೇತನ ಮಕ್ಕಳ ಜಲಕ್ರೀಡಾ ಶಿಬಿರ. ಮತ್ತೊಂದು ನನ್ನದೇ ಬಯಕೆಯ ಮೂರ್ತರೂಪ – ನವೆಂಬರ್ ಒಂದರಿಂದ ತೊಡಗಿದಂತೆ, ಶರಾವತಿ ಪಾತ್ರೆಯಲ್ಲಿ ಮೂರು ದಿನಗಳ ಸಾಹಸೀ ನೌಕಾಯಾನ. ನಾವು ಹಿಂದುಮುಂದಾಲೋಚನೆ ಮಾಡದೆ ನೌಕಾಯಾನಕ್ಕೆ ಹೆಸರು ನೊಂದಾಯಿಸಿ ಬಂದಿದ್ದೆವು.

ಮಂಗಳೂರಿಗೆ ಮರಳಿದ ಕೂಡಲೇ ನನ್ನ ಇತರ ಕಯಾಕೀ ಮಿತ್ರರಿಗೆಲ್ಲ ಸುದ್ಧಿ ಕೊಟ್ಟೆ. ಆದರೆ ನನ್ನಷ್ಟೇ ಉತ್ಸಾಹದಲ್ಲಿ ವೆಚ್ಚ ತುಂಬಿ (ರೂ ೪೫೦೦/-), ಔಪಚಾರಿಕತೆಗಳನ್ನು ಪೂರೈಸಿ ತಯಾರಾದವರು ಒಬ್ಬರೇ – ತರುಣ ಪಶುವೈದ್ಯ ಯಶಸ್ವೀ. ಅಕ್ಟೋಬರ್ ಮೂವತ್ತೊಂದರಂದು ಮೂವರೂ ನಮ್ಮ ಕಾರಿನಲ್ಲಿ ಹೋಗುವುದೆಂದು ನಿಶ್ಚಯಿಸಿದ್ದೆವು. ಈ ಸಲದ ಮಳೆಗಾಲವೇ ಉದ್ದ. ಸಾಲದ್ದಕ್ಕೆ, ಬೆನ್ನು ಬೆನ್ನಿಗೆ ಚಕ್ರವಾತದ ಪರಿಣಾಮದಲ್ಲೂ ಭಾರೀ ಮಳೆಯ ಹೊಡೆತಗಳು. ಮೂವತ್ತರ ಸಂಜೆ, ಮಂಗಳೂರಿನಲ್ಲಿ ಸಿಡಿಲಬ್ಬರದ ಮಳೆ ಹೊಡೆಯುತ್ತಿರುವಾಗ, ಹೊನ್ನೆಮರಡಿನಿಂದ ಸ್ವಾಮಿ ಕೇಳಿದರು “ಇಲ್ಲಿ ಭಾರೀ ಮಳೆ, ಏನು ಮಾಡೋಣ?” ನಾನು ‘ಬಹುಮತಕ್ಕೆ ಜೈ’ ಎಂದೆ. ಅವರೇ ಸ್ವಲ್ಪ ಸಮಯ ಬಿಟ್ಟು ಮತ್ತೆ ಕರೆ ಮಾಡಿದರು “ತಂಡ ಸೇರಲಿದ್ದ ಇತರ ಹತ್ತೂ ಸದಸ್ಯರು ಬೆಂಗಳೂರಿನ ವಿವಿಧ ಐಟಿ ಕಂಪೆನಿಗಳ ತರುಣರು. ಅವರೆಲ್ಲ ಕಷ್ಟದಲ್ಲಿ ಹೊಂದಿಸಿದ್ದ ರಜೆ, ಯೋಜಿಸಿದ್ದ ಪ್ರಯಾಣಗಳನ್ನು ಸುಲಭದಲ್ಲಿ ಬಿಡಲು ಸಿದ್ಧರಿಲ್ಲ, ಬರ್ತಾರಂತೆ. ಆದದ್ದಾಗಲಿ, ನೀವೂ ಬಂದುಬಿಡಿ.”

ಗುರುವಾರ ಬೆಳಿಗ್ಗೆ ಆರು ಗಂಟೆಯ ಸುಮಾರಿಗೆ, ಚಿರಿಪಿರಿ ಮಳೆಯಲ್ಲೇ ನಮ್ಮ ಕಾರು ಉಡುಪಿ ದಾರಿ ಹಿಡಿಯಿತು. ಎಂದಿನಂತೆ ಸಾಲಿಗ್ರಾಮದ ಮಂಟಪ ಹೋಟೆಲಿನಲ್ಲಿ ಚೊಕ್ಕ, ರುಚಿಕರ ತಿಂಡಿ ಮುಗಿಸಿ ಮುಂದುವರಿದೆವು. ಇಪ್ಪತ್ತು ದಿನಗಳ ಹಿಂದಷ್ಟೇ ಹೆಗ್ಗೋಡಿನಿಂದ ಬೈಕೇರಿ ಬರುವಾಗ, ಕತ್ತಲ ಹೆದರಿಕೆಯಲ್ಲಿ ಬಲುಪ್ರಚುರಿತ ಮರವಂತೆ ‘ಕಟ್ಟೆಪೂಜೆ’ ಮಾಡಿರಲಿಲ್ಲ. ಇಕ್ಕೆಲಗಳಲ್ಲಿ ನದಿ ಮತ್ತು ಸಾಗರವನ್ನಿಟ್ಟುಕೊಂಡ ಹೆದ್ದಾರಿ ಈಚಿನ ವರ್ಷಗಳಲ್ಲಿ ಕಡಲಕೊರೆತದಿಂದ ಬಹಳ ಬಳಲುತ್ತಿದೆ. ಕಲ್ಲು, ಟೆಟ್ರಾಪೋಡು ಎಂದು ಅದದೇ ಹಳೆ ಮಂತ್ರಗಳು ಸೋತಿದ್ದವು. ಈಗ ಹೊಸತೇನೋ ತಾಯಿತ ಕಟ್ಟಿದ್ದಾರೆಂದು ಗೆಳೆಯ ಅನಿಲ್ ಶಾಸ್ತ್ರಿ ವರದಿ ಮಾಡಿದ್ದು ಕಂಡಿದ್ದೆ. ಅಲೆಯ ಹೊಡೆತಕ್ಕೆ ಮೈ ಕೊಡುವಂತೆ ಉದ್ದಕ್ಕೆ ಭಾರೀ ಬಂಡೆತುಂಡುಗಳನ್ನು ಹೇರುವುದು ಬಿಟ್ಟು, ದಂಡೆಗೆ ಲಂಬವಾಗಿ, ಅಂದರೆ ದಂಡೆಯಿಂದಲೇ ತೊಡಗಿ ಸಮುದ್ರದ ಒಳಕ್ಕೇ ನುಗ್ಗಿದಂತೆ ಕಲ್ಲಿನ ಗೋಡೆಗಳನ್ನು ಬಿಗಿದಿದ್ದರು. ಅದರಲ್ಲೂ ಕೆಲವು ಇಂಗ್ಲಿಷಿನ ಅಯ್ (I) ಮತ್ತು ಕೆಲವು ಟಿ (T) ರೂಪದ ರಚನೆಗಳು. ಇವು ಸುಮಾರು ಐವತ್ತಡಿ ಸಮುದ್ರದ ಒಳಕ್ಕೆ ನುಗ್ಗಿ, ಅಲೆ ಮಗುಚುವ ತಾಣದಲ್ಲೇ ಮುಗಿಯುವುದರಿಂದ, ಅಲೆಗಳ ಶಕ್ತಿಹ್ರಾಸವಾಗುತ್ತದಂತೆ; ನನಗೆ ವಿಶ್ವಾಸವಿಲ್ಲ. ಆದರೂ ಕ್ಷಣ ಮಾತ್ರ ನಿಂತು, ಪಟವೆರಡು ಹಿಡಿದು ಮುಂದುವರಿದೆವು. ಹೀಗೇ ಸಾರ್ವಜನಿಕ ವೆಚ್ಚ ಮತ್ತು ಅನಾನುಕೂಲದಲ್ಲಿ ನಮ್ಮ ‘ಮಹಾತಂತ್ರಜ್ಞರ’ ಇನ್ನೊಂದು ಪ್ರಯೋಗಕಣ ಒತ್ತಿನೆಣೆ!

ಇಲ್ಲಿ ಹೆದ್ದಾರಿ ಚತುಷ್ಪಥೀಕರಣದ ಮಾನದಂಡಗಳಿಗೆ ಹೊಂದುವಂತೆ ಗುಡ್ಡೆಯನ್ನು ಸೀಳಿದ್ದು, ಅದರ ಮಿದು ಹೃದಯವನ್ನೇ ಕಲಕಿದಂತಾಗಿದೆ. ಈಗ ದರೆಕುಸಿತ ನಿಲ್ಲದಾಗಿದೆ. ಭಾರೀ ಕಲ್ಲು, ಮಣ್ಣುಗಳನ್ನು ಗೋರುತ್ತಲೇ ಸಿಮೆಂಟ್ ಗುಡ್ಡೆಯನ್ನೇ ತಡೆಯಾಗಿ ಒಡ್ಡುತ್ತಿರುವ ವಿಚಿತ್ರ ಕಾಣುತ್ತದೆ. ಹೀಗೇ ಮೇಲ್ಪದರದ ಸರ್ಕಸ್ ಹೆಚ್ಚಿ, ಭೂಗರ್ಭದಲ್ಲಿ ಸಾಗಿರುವ ರೈಲ್ವೇ ಸುರಂಗ ಮಾರ್ಗ ಕುಸಿಯದಿದ್ದರೆ ಸಾಕು!

ಒತ್ತಿನೆಣೆಯ ಗುಡ್ಡೆ ವಾಸ್ತವದಲ್ಲಿ ಸಮುದ್ರದ ಅಂಚಿನವರೆಗೂ ಚಾಚಿಕೊಂಡ ಪಶ್ಚಿಮ ಘಟ್ಟದ್ದೇ ಒಂದು ಪಾದ. ಅದನ್ನು ಹೆದ್ದಾರಿ ಏರಿದ ಶಿಖರ ಪ್ರದೇಶದ ತಟ್ಟಿನಲ್ಲಿ ನಿಂತು, ಬಲಕ್ಕೆ ದೃಷ್ಟಿ ಹರಿಸಿದರೆ ಸುದೂರದಲ್ಲಿ ಘಟ್ಟದ ಮುಖ್ಯಶ್ರೇಣಿಯ ದಟ್ಟ ಹಸುರಿನಲ್ಲಿ ಭೂಮಿಗಿಳಿವ ಎರಡು ಬೆಳ್ಳಿಧಾರೆಗಳು ಕೂಸಳ್ಳಿ ಮತ್ತು ಕುಡುಮರಿ ಅಬ್ಬಿಗಳು. ಅವುಗಳಲ್ಲಿ ಮೂರು ನಾಲ್ಕು ದಶಕಗಳ ಹಿಂದೆ ಕೂಸಳ್ಳಿ ಅಬ್ಬಿಯನ್ನು ಮಾತ್ರ ನೋಡಿ ಬಂದ ನೆನಪು ನನ್ನದು. ಹಾಗೇ ದಾರಿಯ ಎಡ ಮಗ್ಗುಲಿಗೆ ದೃಷ್ಟಿ ಹರಿಸಿದರೆ, ತಟ್ಟು ಮುಂದುವರಿದಿರುವುದನ್ನೂ ಸಾಮಾನ್ಯ ಡಾಮರು ದಾರಿಯೋಡುವುದನ್ನೂ ಕಾಣಬಹುದು. ಕ್ಷಿತಿಜ ಹೆಸರಿನ ಆ ಕೊನೆಯನ್ನು ನಾನು ಹಿಂದೆ ಕಂಡವನೇ. ನೆನಪಿನ ನವೀಕರಣಕ್ಕೆ ಅತ್ತ ಹೋದೆವು. ಮಧ್ಯಂತರದಲ್ಲಿ ಹಿಂದೆ ನಾನು ಕಂಡಿರದ ಒಂದು ‘ಉದ್ಯಮೀ’ ದೇವಾಲಯ ವಿರಾಜಮಾನವಾಗಿದೆ. ಇಂದು ದಾರಿ ಅದನ್ನು ಬಳಸಿ ಹೋಗುವಂತಾಗಿದೆ. ಒಟ್ಟಾರೆ ಎರಡು ಕಿಮೀ ಅಂತರದಲ್ಲಿ, ಅಂದರೆ ತಟ್ಟಿನ ಕೊನೆಯಲ್ಲಿ, ದಾರಿ ಮುಗಿಯುವಲ್ಲಿ, ಹುಲ್ಲಿನ ಮೊಟ್ಟೆಯೇರಿದ ನಾಯಿಯಂತೆ (ಡಾಗ್ ಆನ್ ದ ಮೇಂಜರ್!) ಅರಣ್ಯ ಇಲಾಖೆ ಪಾಗಾರ ಕಟ್ಟಿ ಕುಳಿತಿದೆ. ಅಲ್ಲಿ ನೆಲ ಒಮ್ಮೆಲೇ ಸಮುದ್ರ ತೀರಕ್ಕೆ ನೇರ ಇಳಿಯುವುದರಿಂದ ಸುಂದರ ದೃಶ್ಯ ಸಾಮ್ರಾಜ್ಯವೇ ಹರಡಿದೆ. ಅದನ್ನು ಅರಣ್ಯ ಇಲಾಖೆ ‘ನೇಸರ’ ಎಂಬ ವಿರಾಮಧಾಮವನ್ನಾಗಿಸಿ, ನಿರ್ಮಾಣದಲ್ಲೇ ಭಗ್ನತೆಯನ್ನು ಸಾಧಿಸಿದಂತೆ ಒಂದಷ್ಟು ಕಾಂಕ್ರೀಟ್, ಕಬ್ಬಿಣ ಹೇರಿಟ್ಟಿದೆ. ಅಲ್ಲಿ ನಮ್ಮ ವಾಹನಕ್ಕೆ ವಠಾರ ಪ್ರವೇಶಾವಕಾಶ ಕೊಡದಿದ್ದರೂ ಕಡಲತ್ತ ಒಂದು ಇಣುಕುನೋಟ ಹಾಕುವವರಿಗೆ ಸಂದರ್ಶನ ಶುಲ್ಕ ವಿಧಿಸುವ ಇಲಾಖಾ ದೌಷ್ಟ್ಯಕ್ಕೆ ಮನಸ್ಸು ಕುದಿಯುತ್ತದೆ. ಸರಕಾರ ನಿಜದಲ್ಲಿ ಇಲ್ಲಿ ಪ್ರಾಕೃತಿಕ ಸ್ಥಿತಿಯನ್ನು ಕಾಪಾಡಲಷ್ಟೇ ಅಧಿಕಾರಿಗಳು. ಆದರೆ ಎಲ್ಲೆಡೆಗಳಂತೆ, ರಾಜಸತ್ತೆಯ ಉತ್ತರಾಧಿಕಾರಿಗಳಂತೆ ಸ್ವ-ಅರ್ಥಸಾಧನೆಗಾಗಿ ದುಂದು ವೆಚ್ಚಗಳಲ್ಲಿ ಅನರ್ಥ ರಚನೆಗಳನ್ನು ಹೇರಿ, ಪ್ರಕೃತಿಯನ್ನು ಬಿಕರಿಗಿಟ್ಟಂತೆ ಕುಳಿತಿರುವುದು ಅನ್ಯಾಯ!

ನಾವು ಮನಸ್ಸಿಲದ ಮನಸ್ಸಿನಿಂದ ದಂಡ ಕೊಟ್ಟು, ಅಂಚಿನ ಅಟ್ಟಳಿಗೆಯಿಂದ ಎರಡು ಮಿನಿಟು ವಿಹಂಗಮ ನೋಟ ಹಾಕಿದೆವು. ಮತ್ತೆ ಆಚೆ ಬದಿಯಿಂದ ಕಡಲತ್ತ ಇಳಿಯುವ ಸೋಪಾನ ಸರಣಿ ಹಿಡಿದೆವು. ಗುಡ್ಡದ ಇಳುಕಲಿನಲ್ಲಿ ಇಲಾಖೆಯ ಹಸುರೀಕರಣದ ವಿಪರೀತಕ್ಕೆ ಸಾಕ್ಷಿಯಾದ ಅಕೇಸಿಯಾ ವನ ಗಮನಾರ್ಹವಾಗಿದೆ. ಆ ಕೆಳಗೊಂದು ಕರಾವಳಿ ದಾರಿ ಓಡಿತ್ತು. ಅದನ್ನು ಕಳೆದು, ಸವಕಲು ಜಾಡಿನಲ್ಲಿಳಿದು, ನೇರ ನೀರಂಚಿನ ಹಾಸು ಬಂಡೆ ಸೇರಿದೆವು. ಅಲ್ಲೊಂದು ಸೋಮನಾಥೇಶ್ವರ ದೇವಸ್ಥಾನ. ಒಂದು ಕಾಲದಲ್ಲಿ ಹಾಸು ಬಂಡೆಗಳ ಒರಟಿನಲ್ಲೆಲ್ಲೋ ಜನಪದರು ಕಂಡ ಸೋಮನಾಥನಿಗೆ, ಕಡಲೇ ನಿತ್ಯ ಅಭಿಷೇಚನ ನಡೆಸುತ್ತಿದ್ದಿರಬೇಕು. ಇಂದು ಅದನ್ನು ಎತ್ತರಿಸಿ, ವಿಕಾರ ಕಾಂಕ್ರೀಟ್ ಗೋಡೆ ಕಟ್ಟಿ, ಮಕ್ಕಳಾಟದ ಬೊಂಬೆ ಬಣ್ಣಗಳನ್ನು ಹೇರಿ, ಪುಷ್ಕರಣಿ ಎಂಬ ಕಸ ಕೆಸರ ಹೊಂಡಕ್ಕೆ ಸೀಮಿತಿಗೊಳಿಸಿದ್ದು ನೋಡಿದರೆ ಬೇಸರ ಹುಟ್ಟುತ್ತದೆ. ನಾವು ಎಲ್ಲಕ್ಕು ಮಿನಿಟುಗಳ ಮೂಕ ಸಾಕ್ಷಿಯಷ್ಟೇ ಆಗಿ, ಬಂಡೆಯ ಮೇಲಿನ ಅಲೆಯ ಲೀಲೆಯನ್ನಷ್ಟೇ ಮನದುಂಬಿಕೊಂಡು ಮರಳಿದೆವು.

ನಾನು ಮೂರು ವಾರಗಳ ಹಿಂದಷ್ಟೇ ಬೈಕೇರಿ ಬಂದ ದಾರಿಯ ನೆನಪಿನಲ್ಲಿ, ಜೋಗದತ್ತ ತಿರುಗಲು ಭಟ್ಕಳದ ನಿರೀಕ್ಷೆಯಲ್ಲಿದ್ದೆ. ಜತೆಗಾರ ಯಶಸ್ವೀ ಈ ವಲಯಗಳಲ್ಲಿ ಮೊದಲೇ ಸಾಕಷ್ಟು ಸುತ್ತಿದ್ದ ಅನುಭವದಲ್ಲಿ ಒಳದಾರಿಯೊಂದನ್ನು ತೋರಿದರು. ಆದರೆ ಅದರಲ್ಲಿ ಉಳಿಸಿದ ಅಂತರವನ್ನು, ಮಾರ್ಗದ ಗಂಡಾಗುಂಡಿ ಕಳೆದದ್ದಕ್ಕೆ ಎಲ್ಲರೂ ಪಶ್ಚಾತ್ತಾಪಪಟ್ಟೆವು! ನಮ್ಮ ಮಾರ್ಗಕ್ರಮಣದ ‘ಲಾಭದ ಪಟ್ಟಿ’ಯಲ್ಲಿ ಇನ್ನೂ ಕೆಲವು ಹೆಸರುಗಳಿದ್ದವು. ಈಗ ಅದರಲ್ಲಿ ಮುಖ್ಯವಾದ ಭೀಮೇಶ್ವರದ ಜಪದಲ್ಲಿದ್ದೆವು. ಆಗ ಬಹುತೇಕ ಕಾಡು ಮುಚ್ಚಿದ ನಿರ್ಜನ ಪ್ರದೇಶವೊಂದರಲ್ಲಿ, ಅನಿರೀಕ್ಷಿತ ಫ್ಲೆಕ್ಸ್ ಆಹ್ವಾನಿಸಿತ್ತು: ‘ಚಂದ್ರಗಿರಿ – ೧ ಕಿಮೀ’. ಅದರಲ್ಲೇ ಭಗ್ನ ಮಂದಿರದ ಒಂದು ಚಿತ್ರವೂ ಇದ್ದದ್ದಕ್ಕೆ ಕಾರು ಅತ್ತ ನುಗ್ಗಿಸಿದೆವು. “ಮಣ್ಣದಾರಿ ಅಡ್ಡಿಯಿಲ್ಲ” ಎನ್ನುವುದರೊಳಗೆ, ಕೊರಕಲು ಬಿದ್ದು, ತೀವ್ರ ಏರು ಕಾಣಿಸಿತು. ಕಾರಲ್ಲೇ ಬಿಟ್ಟು, ಐದೇ ಮಿನಿಟಿನ ನಡಿಗೆಯಲ್ಲಿ, ಹತ್ತಿಪ್ಪತ್ತು ಸೋಪಾನಗಳ ಸರಣಿಯ ಕೊನೆಯಲ್ಲಿ, ಭಗ್ನ ದೇವ ಮಂದಿರವೊಂದನ್ನು ತಲಪಿದೆವು. ಕುಸುರಿ ಕೆಲಸದ ಭಾರೀ ಕಲ್ಲ ಕಂಬಗಳ, ತೊಲೆ, ಮುಚ್ಚಿಗೆಗಳನ್ನು ಹೊತ್ತ ರಚನೆ ಪ್ರಾಚೀನ ಜಿನಮಂದಿರದಂತಿತ್ತು. ಕಾಲನಹತಿಯಲ್ಲಿ ಕಂಬಗಳು ಅಲುಗಿ, ತೊಲೆಗಳು ಜರುಗಿ, ಶಿಖರದ ಅಲಂಕಾರಗಳೆಲ್ಲ ಕಳಚಿ ಮಂದಿರವಿಡೀ ಶಿಥಿಲವಾಗಿದೆ. ಇಡೀ ವಠಾರದಲ್ಲಿ ಇತಿಹಾಸದ ಮೇಲೆ ವರ್ತಮಾನದ ದುರಾಚಾರ ಮೆರೆಯುತ್ತಿತ್ತು. ಬಲು ಜಾಗ್ರತೆಯಿಂದಲೇ ಒಳ ನುಗ್ಗಿ ನೋಡಿದೆವು. ಸಹಜ ಕತ್ತಲೆ, ಬಾವಲಿ ಮೂರಿಯನ್ನು ಮೀರಿ, ದೇವ ಬಿಂಬಗಳಿದ್ದಿರಬಹುದಾದ ಸ್ಥಳಗಳನ್ನೆಲ್ಲ ಮೂರ್ತಿಗಳ್ಳರೋ ನಿಧಿಬೇಟೆಯವರೋ ತೋಡಿ ಹಾಕಿದ್ದರು. ಮುಖಮಂಟಪದಲ್ಲಿನ ಚಾಮರ ಸೇವಕಿಯರ ಉಬ್ಬುಶಿಲ್ಪ,

ಮಳೆಗಾಳಿಗೆ ತೆರೆದಿಟ್ಟ ಶಾಸನಫಲಕ, ಹಿಂದಿನ ಅಂಗಳದ ಒಂದು ವೀರಮೂರ್ತಿಯನ್ನು ಬಿಟ್ಟರೆ ವಠಾರದಲ್ಲಿ ಮತ್ಯಾವುವೂ ಗಣ್ಯತೆ ಉಳಿಸಿಕೊಂಡಿರಲಿಲ್ಲ. ಅವೆಲ್ಲಕ್ಕಿಂತ ದೊಡ್ಡದಾಗಿ ನಮ್ಮನ್ನು ಕೆರಳಿಸಿದ್ದು, ಅಲ್ಲಿ ಈಚೆಗೆ ನಡೆದಿರಬಹುದಾದ ಅಭಿವೃದ್ಧಿ ನಾಟಕದ ಅವಶೇಷಗಳು. ಯಾವ ಸೌಂದರ್ಯಪ್ರಜ್ಞೆಯೂ ಇಲ್ಲದ ಒಂದು ಆಧುನಿಕ ವಸತಿ ಸೌಕರ್ಯ – ಕಾಂಕ್ರೀಟ್ ತಾರಸಿ ಕಟ್ಟಡ, ದೇವಳದ ಬಲ ಅಂಗಳವನ್ನೆಲ್ಲ ಆಕ್ರಮಿಸಿತ್ತು. ದೇವಳದ ಎದುರಿನ ಅಂಗಳವನ್ನೇ ಸಂಪ್ ಮಾಡಿ, ತಾರಸಿಗೆರಡು ಸಿಂಟೆಕ್ಸ್ ಹೇರಿ, ವಿದ್ಯುತ್ಸಂಪರ್ಕ, ಕೊಳವೆ ಜಾಲ ಅಡ್ಡಾತಿಡ್ಡ ಹಾಕಿದ್ದರು. ಬಹುಶಃ ಹಾಕುವ ಉತ್ಸಾಹ, ಕನಿಷ್ಠ ಒಂದು ದಿನಕ್ಕೂ ವಾಸಕ್ಕೆ ವಿಸ್ತರಿಸಿದಂತಿರಲಿಲ್ಲ. ವಠಾರದ ಕಬ್ಬಿಣದ ಗೇಟಿನ ಸರಳುಗಳನ್ನು ಯಾರೋ ಕಿತ್ತೊಯ್ದಿದ್ದರು. ಸಂಪಿನ ಎರಡು ಮೂರು ಮುಚ್ಚಳ ಹಾರುಹೊಡೆದು, ಒಳಗೆ ಗೊಸರು ಕಳೆ ತುಂಬಿ ಆನೆಕರ್ಪಿನಂತಾಗಿತ್ತು. ‘ಬಂಗ್ಲೆ’ಯ ಬಾಗಿಲುಗಳೆಲ್ಲ ಸೂರೆ ಹೋಗಿ, ಕಿಟಕಿಯ ಕನ್ನಡಿಗಳೆಲ್ಲ ಪುಡಿಯಾಗಿ, ಸಂಪರ್ಕಗಳೆಲ್ಲ ಮುಕ್ಕಾಗಿ ಒಟ್ಟಾರೆ ವ್ಯವಸ್ಥೆ ‘ಪ್ರಾಚೀನತೆ’ಯಲ್ಲಿ ದೇವಳಕ್ಕೆ ಸ್ಪರ್ಧೆ ಕೊಡುವಂತಿತ್ತು ! ಇನ್ನೂ ಹೀಗೆ ಸ್ವತಂತ್ರವಾಗಿಯೇ ಉಳಿದಿರುವ, ನಮ್ಮ ಸಂಸ್ಕೃತಿ ಸಾರುವ ಸಾವಿರಾರು ರಚನೆಗಳನ್ನು ಅಭಿವೃದ್ಧಿಯ ಕಪಟ ನಾಟಕದಲ್ಲಿ ಹಾಳುಗಳೆಯುವ ನಾವು ಅಯೋಧ್ಯೆಯಲ್ಲಿ ಮಂದಿರ ಕಟ್ಟಿ, ಭಾರತೀಯತೆ ಸಾರುವುದು ನಿಜವೇ?! ವಿಷಾದಗಳೊಡನೆಯೇ ಕಾರಿಗೆ ಮರಳಿ, ಪಯಣ ಮುಂದುವರಿಸಿದೆವು.

ಭೀಮೇಶ್ವರ – ಜಲಪಾತದಡಿಯ ಗುಹಾದೇವಾಲಯ, ಮೂರು ದಶಕಗಳ ಹಿಂದೊಮ್ಮೆ ನೋಡಿದ್ದೆ. (ನೋಡಿ: ಪ್ರಕೃತಿ ಸಂಸ್ಕೃತಿ) ‘ಆಧುನಿಕ ಅಭಿವೃದ್ಧಿ’ಯ ಮೊದಲ ಅಲೆ ಬಡಿದ ಕಾಲವದು. ಉತ್ಸಾಹೀ ಭಕ್ತರು ಭಾರೀ ಮರಗಳನ್ನುರುಳಿಸಿ, ಭೀಮೇಶ್ವರನ ಜಿಡ್ಡೆಣ್ಣೆ ಬೆಳಕಿಗೆ ವಿದ್ಯುತ್ ಸಂಪರ್ಕವನ್ನು ಕೊಡಿಸಿದ್ದರು. ಅಂದು ಭಕ್ತರು ಒತ್ತಾಯಪೂರ್ವಕವಾಗಿ ನನ್ನ ಅಭಿಪ್ರಾಯ ಕೋರಿ, ದಾಖಲೆ ಪುಸ್ತಕ ಒಡ್ಡಿದಾಗ ಬರೆದಿದ್ದೆ ” ಪ್ರಕೃತಿಯೇ ಇಲ್ಲಿ ದೇವರು. ಕಾಡು, ಬಂಡೆ, ಜಲಪಾತಗಳ ಪರಿಸರವನ್ನು ಹಾಗೇ ಉಳಿಸಿಕೊಳ್ಳುವುದು ಇಲ್ಲಿ ಪೂಜೆ. ಭಕ್ತಿಯ ನೆಪಕ್ಕೆ ದುಡಿಯುವ ಇನ್ನೊಂದು ವಾಣಿಜ್ಯ ಕೇಂದ್ರ ಭೀಮೇಶ್ವರ ಆಗದಿರಲಿ.” ಆದರೆ ಇಂದು ಆಗಬಾರದ್ದೆಲ್ಲ ಇಲ್ಲಿ ತೆವಳು ವೇಗದಲ್ಲಿ ಆಗುತ್ತಲೇ ಇರುವುದನ್ನು ನೋಡಬಹುದು. ಮೂವತ್ತಡಿ ಅಗಲಕ್ಕೆ ಗಟ್ಟಿ ಕಲ್ಲು ಬಿಗಿದ ಮಣ್ಣ ಮಾರ್ಗ ಕಣಿವೆಗಿಳಿದಿದೆ. ಮಳೆಲಕ್ಷಣ ಇದ್ದುದರಿಂದ, ಮರಳುವಲ್ಲಿ ಕಾರೇರಿಸುವ ಕಷ್ಟ ಬೇಡವೆಂದು ನಾವು ನಡೆದೇ ಸಾಗಿದೆವು. ಕಣಿವೆಯ ಹೊಳೆಗೆ ಸೇತುವೆಯಾಗಿದೆ. ಅರ್ಚಕರ ಬಿಡಾರ, ಭೋಜನ ಶಾಲೆ, ಒಂದೆರಡು ಬಯಲು ವಸತಿ ಸೌಕರ್ಯ, ಮೆಟ್ಟಿಲ ಸರಣಿಗಳೆಲ್ಲ ಹೊಸತೋ ಇಲ್ಲಾ ನವೀಕರಣವನ್ನೋ ಕಂಡಿವೆ. ಮಳೆಗಾಲದ ವಿಸ್ತರಣೆಯ ಫಲವೆನ್ನುವಂತೆ ಜಲಪಾತ ರಮಣೀಯವಾಗಿತ್ತು, ಸಮಯದ ಒತ್ತಡವಲ್ಲದಿದ್ದರೆ ನಿಜದ ತೀರ್ಥಸ್ನಾನಯೋಗ್ಯವಿತ್ತು. ದೇವಳದ ಶೈಥಿಲ್ಯ, ಕೊಳಕು ಹೇಳಿ ಸುಖವಿಲ್ಲ. ನಾವು ಬರುವ ದಾರಿಯಲ್ಲೇ ಇದ್ದ ಪ್ರಕಟಣೆ ನೋಡಿ, ಅರ್ಚಕರ ಮನೆಯಲ್ಲಿ ಹೇಳಿ ಬಂದಂತೆ, ಮರಳುವ ದಾರಿಯಲ್ಲಿ ಸರಳ, ಬಿಸಿಯೂಟ ಮುಗಿಸಿ (ತಲಾ ರೂ ಎಂಬತ್ತು), ಕಾರಿನತ್ತ ಓಡಿದೆವು.

ಮಧ್ಯಾಹ್ನದ ಬಿಸಿ ಮತ್ತು ನಮ್ಮ ಭುಂಜಿತಾಯಾಸದ ನಿವಾರಣೆಗೆಂಬಂತೆ ನಾಲ್ಕೇ ನಾಲ್ಕು ಹನಿ ಮಳೆ ತಟ್ಟಿತು. ಉಳಿದಂತೆ ನಿಶ್ಚಿಂತೆಯಿಂದ ಕಾರು ಸೇರಿದ್ದೆವು. ಮುಂದೆ ಸುರಿದ ಮಳೆಯಲ್ಲಿ ನಮ್ಮ ‘ಮಾರ್ಗಕ್ರಮಣದ ಲಾಭ’ಗಳ (ಹಾಡುವಳ್ಳಿ, ಕಾನುಗೋಡು ಕೋಟೆ, ಮೇಘಾನೇ, ಮುಪ್ಪಾನೇ, ಲಿಂಗನಮಕ್ಕಿ ಅಣೆಕಟ್ಟು ಇತ್ಯಾದಿ) ವಿಚಾರವನ್ನು ಸಿಕ್ಕವರಲ್ಲಿ ವಿಚಾರಣೆಗಷ್ಟೆ ಉಳಿಸಿಕೊಂಡು ಕಾರ್ಗಲ್ ಸೇರಿದೆವು. ತಾಳಗುಪ್ಪ, ಜೋಗ, ಕಾರ್ಗಲ್ ತ್ರಿಕೋನದಲ್ಲಿ ಎಡ ಮೂಲೆಯ ಜೋಗವನ್ನು ಬಿಟ್ಟು ನೇರ ದಾರಿ ಹಿಡಿದೆವು. ತಾಳಗುಪ್ಪಕ್ಕೂ ತುಸು ಮೊದಲೇ ಬಲ ಹೊರಳಿ, ಚಿಟಿಪಿಟಿ ಮಳೆಯಲ್ಲೇ ಹೊನ್ನೇಮರಡು ಸೇರುವಾಗ ಸಂಜೆಯಾಗಿತ್ತು. ಸುವಿಸ್ತಾರಕ್ಕೆ ಹರಡಿದ ಶರಾವತಿ ಸಾಗರ ತೊನೆತೊನೆದು ಕಡಲತಡಿಯಿಂದ ಬಂದ ನಮ್ಮನ್ನು ಸ್ವಾಗತಿಸಿತು.

೧೯೭೯ರ ಸುಮಾರಿಗೆ ಬಯಲುಸೀಮೆಯ ಎಸ್ಸೆಲ್ಲೆನ್ ಸ್ವಾಮಿ ಸಾಹಸ ಪ್ರಧಾನವಾದ ‘ಅಡ್ವೆಂಚರರ್ಸ್’ ಬಳಗ ಕಟ್ಟಿದರು. ವಿವಿಧ ಕಲಿಕೆ, ಸಂಶೋಧನೆ, ನೌಕರಿಗಳ ಜಂಝಾಟದೊಡನೆ ಅನುಭವ ಹಾಗೂ ನೊಮಿತೋ ಕಾಮ್ದಾರರಲ್ಲಿ ಜೀವನ ಸಂಗಾತಿಯನ್ನೂ ಕಂಡುಕೊಂಡರು. ಮತ್ತು ಸುಮಾರು ಮೂರು ದಶಕಗಳ ಹಿಂದೆ, ಪ್ರಕೃತಿಪರವಾದ ಸಾಹಸವನ್ನೇ ಜೀವನವ್ರತವಾಗಿ ನಂಬಿ ಹೊನ್ನೇ ಮರಡಿನಲ್ಲಿ ನೆಲೆಸಿದರು. ಇಷ್ಟರಲ್ಲಿ, ಮೈಸೂರಿನಲ್ಲಿ ಪಡೆದ ಪರ್ವತಾರೋಹಣದ ಪ್ರಾಥಮಿಕ ಶಿಕ್ಷಣ, ವಿದೇಶದಲ್ಲಿ ಪಡೆದ ಜಲಕ್ರೀಡಾ ವಿಶೇಷ ತರಬೇತಿ, ಕನ್ನಡ ವಿವಿ ಆಶ್ರಯದಲ್ಲಿ ಗಳಿಸಿದ ಪರಿಸರ ವಿಜ್ಞಾನದ ಸಂಶೋಧನಾ ಪದವಿ, ಯಾವುದೋ ಕಾರ್ಖಾನೆಯ ವೃತ್ತಿ ಅನುಭವ, ಯೂಥ್ ಹಾಸ್ಟೆಲ್ಸ್ ಆಫ್ ಇಂಡಿಯಾದ ನಿರ್ವಹಣಾನುಭವ ಸಂಸ್ಥೆಗೆ ಆಧಾರ ಸ್ತಂಭ. ಗುಜರಾಥೀ ಮೂಲದ, ಬಂಗಾಳಿ ಹೆಸರಿನ, (ಬೆಂಗಳೂರಿನ ಬಾಲ್ಯ ಮತ್ತು ಓದಿನ) ಅಪ್ಪಟ ಕನ್ನಡಿತಿ ನೊಮಿತೋ ಕಾಮ್ದಾರ್ ಮೊದಲಿಗೆ ಸ್ವಾಮಿಯ ಯೂಥ್ ಹಾಸ್ಟೆಲ್ ಸಂಗಾತಿ. ಅವರ ಸಂಘಟನಾ ಚಾತುರ್ಯ ಮತ್ತು ಮಾನವಪರ ಕಾಳಜಿಗಳು ‘ಆಧಾರ ಸ್ತಂಭ’ವನ್ನು ಆಪ್ತಗೊಳಿಸುವ ಶಕ್ತಿ. ನೊಮಿತೋ ಸ್ವತಃ ಕೆಲಸಗಾತಿ ಮತ್ತು ಭಾಗಿಗಳಿಂದ ಕೆಲಸ ತೆಗೆಯುವಲ್ಲೂ ಸಮರ್ಥೆಯಾದ್ದಕ್ಕೇ ಹೆಸರಿನರ್ಧ ‘ಕಾಮ್ದಾರ್’ ಅನ್ವರ್ಥನಾಮವೂ ಇರಬಹುದು! ಮುಖ್ಯಮಂತ್ರಿ ಬಂಗಾರಪ್ಪನವರಿಂದ ಸಾಹಸಕ್ರೀಡೆಗಾಗಿಯೇ ಹೊನ್ನೆಮರಡಿನಲ್ಲಿ ಎರವಲು ಭೂಮಿ ಮತ್ತು ಶರಾವತಿ ಸಾಗರದ ಮೇಲಿನ ಅನುಮತಿ ಸಿಕ್ಕಿತು. ಮೇಲಿನಿಂದ ಸ್ವಲ್ಪ ಸರಕಾರದಿಂದ ದಾನವಾಗಿ ಸಿಕ್ಕ ಸಲಕರಣೆ, ಉಳಿದಂತೆ ಸ್ವಂತ ಗಳಿಕೆಯ ಹೂಡಿಕೆ, ಎಲ್ಲಕ್ಕೂ ಮಿಗಿಲಾಗಿ ಸ್ವಾಮಿದಂಪ್ತಿಯ ಅಪಾರ ಎದೆಗಾರಿಕೆಯಲ್ಲಿ, ‘ಅಡ್ವೆಂಚರರ್ಸ್’ – ಸಾಹಸ ಕ್ರೀಡಾ ಶಾಲೆ, ಇಂದು ದೇಶದಲ್ಲೇ ಅದ್ವಿತೀಯ ಎನ್ನುವಂತೆ, ೨೭ ವರ್ಷಗಳ ಸಾಧನೆಯೊಡನೆ ದೃಢವಾಗಿ ಮುನ್ನಡೆದಿದೆ.

ಲಿಂಗನಮಕ್ಕಿ ಅಣೆಕಟ್ಟಿನಿಂದ ತುಸುವೇ ಹಿಂದಿರುವ ಹೊನ್ನೆಮರಡು, ನಾಗರಿಕ ಸವಲತ್ತುಗಳ ಲೆಕ್ಕದಲ್ಲಿ ತೀರಾ ಹಿಂದುಳಿದ ಕೊಂಪೆ. (ಹಣ ಎಸೆದು “ಒಂದು ಚಾ ಕೊಡ್ರೀ” ಎನ್ನುವುದಿದ್ದರೂ ದಡಬಡ ಮಣ್ಣ ರಸ್ತೆಯಲ್ಲಿ ಹತ್ತು ಕಿಮೀ ದೂರದ ತಾಳಗುಪ್ಪಕ್ಕೇ ಹೋಗಬೇಕು!) ಆದರೆ ವಿಸ್ತಾರವಾಗಿ ನೆಲೆಸಿದ ನೀರು, ನಡುನಡುವೆ ನಿಂತ ಕಾಡು ಕವಿದ ನಿರ್ಜನ ದ್ವೀಪಗಳು, ಮಲೆತಿರುವ ಪಶ್ಚಿಮ ಘಟ್ಟದ್ದೇ ಭಾಗವಾದ ಗಿರಿಗಳು, ಹಾಸುಹೊಕ್ಕಾದ ಜೀವವೈವಿಧ್ಯಗಳನ್ನೆಲ್ಲ ನೋಡಿ ಅನುಭವಿಸುವ ಕಣ್ಣು ಮನಸ್ಸಿದ್ದವರಿಗೆ ನಿಸ್ಸಂದೇಹವಾಗಿ ಇದೇ ಸ್ವರ್ಗ! ಪ್ರಕೃತಿಪರ ಯಾವುದೇ ಚಟುವಟಿಕೆಗೆ ಹೊನ್ನೆಮರಡು ಹೇಳಿ ಮಾಡಿಸಿದಂತಿದೆ. ಸ್ವಾಮಿ ದಂಪತಿಯ ಮೊದಲ ಪ್ರೀತಿಯೇ ಈ ಪರಿಸರದ್ದು. ಮೊದಮೊದಲು ಸ್ಥಳೀಯರು ಇವರನ್ನು ‘ವಿದೇಶೀ’ಯರನ್ನಾಗಿ ಕಂಡರಂತೆ. ಹಾಗೆ ಉದ್ಭವಿಸಿದ ಬಹುವಿಧದ ಸಮಸ್ಯೆಗಳನ್ನು (ಸೌದೆ, ಒತ್ತುವರಿ ಇತ್ಯಾದಿ) ದಿಟ್ಟವಾಗಿ ಎದುರಿಸಿದ್ದಕ್ಕೆ (ಇದು ಅಯಾಚಿತ ಆದರೆ ನಿಜ ಸಾಹಸವೂ ಹೌದು!) ಇಂದು ಇವರ ವಠಾರ, ಬೋಳುಗುಡ್ಡೆ ಹೋಗಿ ಹಸಿರು ವನವಾಗಿದೆ. ವೈಯಕ್ತಿಕ ವ್ಯಾಜ್ಯಗಳನ್ನು ಮರೆಸಿ, ಸಾಮಾಜಿಕ ಹಿತಸಾಧಿಸಿದ್ದನ್ನು ಗುರುತಿಸಿ ಅನೇಕ ಪ್ರಶಸ್ತಿ ಪುರಸ್ಕಾರಗಳೂ ಇವರಿಗೆ ಬಂದಿವೆ. (ನೊಮಿತ ಕಾಮ್ದಾರ್ ಅವರಿಗೆ ೨೦೧೯ರ ಸಾಲಿನ ರಾಷ್ಟ್ರಪ್ರಶಸ್ತಿಯೇ ಆದ ನಾರಿ ಶಕ್ತಿ ಪುರಸ್ಕಾರ ಸಂದಿದೆ.)

ವಿವಿಧ ವಿಶೇಷಣಗಳನ್ನು ಹೊತ್ತ ಪ್ರವಾಸೀ ಕೇಂದ್ರಗಳಲ್ಲಿ (ವನಧಾಮ, ಗಿರಿಧಾಮ, ತೀರ್ಥಕ್ಷೇತ್ರ ಇತ್ಯಾದಿ) ಸವಲತ್ತು ಸೇವೆಗಳ ಮುದ್ದುಮಾಡಿಸಿಕೊಂಡು, (ಸ್ಥಳಕ್ಕೆ ತಕ್ಕಂತೆ ಸಾಲಂಕೃತರಾಗಿ, ದರ್ಶನಕ್ಕೋ ತಮ್ಮ ಪ್ರದರ್ಶನಕ್ಕೋ) “ವಾವ್, ಸೂಪರ್” ಎಸೆಯುವವರು ಇಲ್ಲಿ ಬಂದರೆ ಸೋಲುವುದು ನಿಶ್ಚಿತ. ಅಡ್ವೆಂಚರರ್ಸ್ ಸಂಸ್ಥೆ ಯಾವುದೇ ವಾಣಿಜ್ಯ ಮರಸು ಇಲ್ಲದ ಅಪ್ಪಟ ಸಾಹಸ ಕ್ರೀಡಾಕೇಂದ್ರ.

ದಾರಿಯ ಬಲ ಮಗ್ಗುಲಲ್ಲಿ ಹತ್ತು ಮೆಟ್ಟಿಲುಗಳ ಎತ್ತರದಲ್ಲಿನ ದೊಡ್ಡಾ ಕೋಣೆ ಸ್ವಾಮಿ ದಂಪತಿಗಳ ಖಾಯಂ ಮನೆ, ಸಂಸ್ಥೆಯ ಕಚೇರಿ, ಎಲ್ಲಕ್ಕೂ ಮುಖ್ಯವಾಗಿ ಅಲ್ಲಿನ ಸಕಲ ಚಟುವಟಿಕೆಗಳಿಗೆ ಅಗತ್ಯದ ಸರಂಜಾಮುಗಳ ಗುದಾಮು. ಅಲ್ಲೇ ಅಂಗಳದಂಚಿನಲ್ಲಿರುವ ದುಂಡು ಚಪ್ಪರ, ಎಲ್ಲ ಪಂಚಾಯತಿಗೂ ಕಟ್ಟೆ. ಅದರಿಂದ ಕೆಳಗೆ, ಅಂದರೆ ಮುಖ್ಯ ದಾರಿಯ ಮಟ್ಟದಲ್ಲೇ ಬಲಕ್ಕೆ ಸಿಗುವ ಬಾವಿಯೇ ಎಲ್ಲರಿಗೂ ಸ್ನಾನದ ಕಟ್ಟೆ! ಇದನ್ನು ದಾರಿಗಷ್ಟೇ ಮರೆ ಮಾಡುವಂತೆ ಮೋಟು ಗೋಡೆ, ಡಬ್ಬಾ ಬಾಗಿಲು ಒದಗಿಸಿದ್ದಾರೆ.

ಉಳಿದಂತೆ ಬಾವಿಯ ಸುತ್ತೂ ಪೊದರು, ದರೆ. ಇಲ್ಲಿನ ಸೌಕರ್ಯವೆಂದರೆ ರಾಟೆ, ಹಗ್ಗಕ್ಕೆ ಕಟ್ಟಿದೊಂದು ಕೊಡಪಾನ, ಒಂದು ಬಾಲ್ದಿ, ಎರಡು ಪಾಟೆ ಮಾತ್ರ. (ಮಳೆಗೆ ಮಾಡು, ಚಳಿಗಾಲಕ್ಕೆ ಮಸಿ ಹಿಡಿದ ಕಡಾಯ, ಧಗಧಗಿಸುವ ಒಲೆ, ಪೇರಿಸಿಟ್ಟ ಸೌದೆ….. ಒಂದೂ ಕೇಳಬೇಡಿ) ಅಲ್ಲೇ ದಾರಿಯ ಕೆಳ ಮಗ್ಗುಲಲ್ಲಿ ಮೋಟುಗೋಡೆ, ಡಬ್ಬಾ ಬಾಗಿಲಿನ ಮೂರು ಪಾಯಖಾನೆಗಳಿವೆ. ಅವುಗಳ ಹೊರಗೊಂದು ನಲ್ಲಿ ಸಂಪರ್ಕವಿರುವ ದೊಡ್ಡ ಡ್ರಂ ಮತ್ತು ಮೂರು ಪುಟ್ಟ ಬಕೆಟ್ ಒದಗಿಸಿದ್ದಾರೆ; ಎಲ್ಲರಿಗೂ ಎಲ್ಲ ಕಾಲಕ್ಕೂ ಇರುವ ಶೌಚ.

ದಾರಿಯಲ್ಲೇ ಮನೆಯನ್ನು ಬಿಟ್ಟು ನೂರಡಿ ಮುಂದುವರಿದರೆ, ಎಡಮಗ್ಗುಲಿನಲ್ಲಿ, ಹೆಚ್ಚಿನ ವಾಸಾನುಕೂಲಕ್ಕೆ ಕೊಡಲು ಮೂರು ಕೊಠಡಿಗಳ ಕಟ್ಟಡವೊಂದೂ ಇದೆ. ಇದಕ್ಕೆ ಸರಕಾರೀ ವಿದ್ಯುತ್ ಪೂರೈಕೆ ಸರಿಯಿದ್ದರೆ ದೀಪಭಾಗ್ಯ ಮಾತ್ರ ಇದೆ. (ಕಾಟು, ಕಪಾಟು, ಫರ್ನಿಚರ್, ಫ್ಯಾನ್…. ನಿಲ್ ಅಂದರೆ ಇಲ್ಲ!) ಸ್ನಾನ, ಶೌಚಕ್ಕೆ ಮೊದಲೇ ಹೇಳಿದ ವ್ಯವಸ್ಥೆಗೇ ಹೊಂದಿಕೊಳ್ಳಬೇಕು. ಇಲ್ಲಿ ಪೂರ್ಣಾವಧಿಯ ಯಾವ ನೌಕರರೂ ಇಲ್ಲ! ತಿಂಡಿ, ತೀರ್ಥವೇನಿದ್ದರೂ ಸ್ವಾಮಿ ದಂಪತಿಗಳದೇ ಸಂಗ್ರಹ ಮತ್ತು ತಯಾರಿ. ಸ್ವಂತಕ್ಕೇ ಕನಿಷ್ಠ ಸವಲತ್ತುಗಳನ್ನಿಟ್ಟುಕೊಂಡ ಸ್ವಾಮಿದಂಪತಿಗಳ ಸಾಹಸೀ ಜೀವನದಲ್ಲಿ ಸೇರಿಕೊಳ್ಳುವುದೇ ಬಹುಮಂದಿಗೆ ಸಾಹಸಕ್ರೀಡೆಗೆ ಪ್ರವೇಶಿಕೆಯಾಗಿ ಕಂಡರೆ ಆಶ್ಚರ್ಯವಿಲ್ಲ.

ಚಿರಿಪಿರಿ ಮಳೆ ಮತ್ತು ಶರಾವತಿ ಸಾಗರದ ಅಲೆಗಳ ತಳಕ್ ಪಳಕ್ನಷ್ಟೇ ಸಹಜವಾಗಿ ಸ್ವಾಮಿ ದಂಪತಿ ನಮ್ಮನ್ನು ಹೊನ್ನೆಮರಡಿನ ‘ಸಾಹಸಾಶ್ರಮ’ಕ್ಕೆ ಸ್ವಾಗತಿಸಿದರು. ಬೇರೊಂದು ನರಹುಳವೂ ಅಲ್ಲಿರಲಿಲ್ಲ. ಮರುದಿನದ ನಮ್ಮ ತಂಡದ ಬಲ (ಸ್ವಾಮಿ ದಂಪತಿ ಸೇರಿ) ಹದಿನೈದು ಎಂದು ಸ್ವಾಮಿ ತಿಳಿಸಿದ್ದರು. ಅದರಲ್ಲಿ ಸಿರ್ಸಿ ಮೂಲದ, ಬೆಂಗಳೂರು ನೌಕರಿಯ ಮಿತ್ರರಿಬ್ಬರು, ಸ್ವಂತ ಕಾರೇರಿ ಹೊರಟವರು, ಸಾಗರ ಮುಟ್ಟಿದ ಸುದ್ಧಿ ಬಂದಿತ್ತು. ಉಳಿದ ಎಂಟೂ ಮಂದಿ ಬೆಂಗಳೂರಿನಿಂದ ರಾತ್ರಿ ಬಸ್ಸೇರಿ ಹೊರಡುವುದೂ ಖಾತ್ರಿಯಾಗಿತ್ತು. ನಮಗೆ ನೊಮಿತೋ ಚಾ ಕೊಟ್ಟರು. ಉಳಿದಂತೆ ಮಾತಿನಲ್ಲಿ ಪರಸ್ಪರ ಪರಿಚಯ ಹೆಚ್ಚಿಸಿಕೊಳ್ಳುತ್ತಿದ್ದಂತೆ, ದಂಪತಿ ಅಡುಗೆಯಿಂದ ತೊಡಗಿ, ಮರುದಿನದ ತಯಾರಿಗಳನ್ನೆಲ್ಲ ಮಾಡುತ್ತಲೇ ಇದ್ದರು. ಆ ಕೆಲಸಗಳಲ್ಲಿ ತೊಡಗಿಕೊಳ್ಳಲು ನಮಗೇನೂ ತೋಚಲಿಲ್ಲ, ಅವರೂ ಹೇಳಲಿಲ್ಲ. ಮಳೆ ಏರೇರುತ್ತ ಒಮ್ಮೆ ಧೋಗುಟ್ಟಿ, ಇಳಿಮುಖವಾಗುತ್ತಿದ್ದಂತೆ ಹಗಲೂ ಜಾರಿತ್ತು. ಸಕಾಲಕ್ಕೆ ಬಿಸಿಬಿಸಿ ಅನ್ನ, ಪಲ್ಯ, ಸಾರನ್ನು ಐದೂ ಜನ ನೆಲದಲ್ಲೇ ಕುಳಿತು ಮುಗಿಸಿದೆವು. ಮತ್ತೆ ಅವರ ಕೆಲಸದ ನಡುವೆ ನಾವು ಮಾತಿನ ಹೊರೆಯಾಗಲು ಬಯಸಲಿಲ್ಲ. ಬೆಳಗ್ಗಿನ ಸಮಯ ಮತ್ತು ತಯಾರಿಗಳ ಬಗ್ಗೆ ಅವರಿಂದ ಸೂಚನೆಗಳನ್ನು ಪಡೆದು, ಮೊದಲೇ ನೊಮಿತೋ ಬೀಗ ತೆರೆದುಕೊಟ್ಟಿದ್ದ ಅತಿಥಿಗೃಹದ ಕೋಣೆ ಸೇರಿ, ಮಲಗಿದೆವು.

ನಮ್ಮ ಲಕ್ಷ್ಯ – ಹೊನ್ನೆಮರಡಿನಿಂದ ಹೊಸನಗರಕ್ಕೆ ಮೂರು ದಿನಗಳಲ್ಲಿ ಶರಾವತಿ ಸಾಗರದ ಮೇಲೆ ಹರಿಗೋಲು ಚಾಲನೆಯ ಸಾಹಸ. ಹೆಚ್ಚಿನ ಆಕರ್ಷಣೆ, ದಾರಿಯಲ್ಲಿ ಎರಡು ರಾತ್ರಿ ನಿರ್ಜನ ದ್ವೀಪಗಳಲ್ಲಿ ಶಿಬಿರವಾಸ. ಹೊನ್ನೆಮರಡಿನ ವಠಾರದಲ್ಲಿ, ಅಡ್ವೆಂಚರರ್ಸ್ ಸಂಸ್ಥೆಯ ಹತ್ತಿಪ್ಪತ್ತು ಹರಿಗೋಲುಗಳು (ಕೊರ್ಯಕಲ್) ಕವುಚಿ ಬಿದ್ದುಕೊಂಡಿದ್ದದ್ದನ್ನು ನಾವು ಮೊದಲ ಭೇಟಿಯಲ್ಲೇ ಕಂಡಿದ್ದೆವು. ಹರಿಗೋಲು, ಸರಳವಾಗಿ ಹೇಳುವುದಿದ್ದರೆ – ಒಂದು ಭಾರೀ ಬಾಣಲೆ. ಜನಪದರು ಅವನ್ನು ಬೆತ್ತ, ಎಲೆ, ಚರ್ಮ, ಈಚೆಗೆ ಸಿಲ್ಪಾಲಿನ್, ಫೈಬರಿನಲ್ಲೂ ರೂಪಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಒಂದೋ ಎರಡೋ ಜನ ಇದರ ತಳದಲ್ಲಿ ಕಾಲುಮುದುರಿ ಕುಳಿತು, ಮರದ ತೊಳಸುಗೈಗಳಲ್ಲಿ ನೀರು ಬಗಿದು ಸಾಗುವುದು ಕ್ರಮ. ಆಕಸ್ಮಿಕಗಳಲ್ಲಿ ಇವು ಕಲ್ಲೋ ಕೋಲೋ ಬಡಿದು, ನೀರ ಸುಳಿಗೆ ಸಿಕ್ಕು, ನೀರು ತುಂಬಿ ಅತಂತ್ರವಾಗುವುದೂ ಇದೆ. ಸ್ವಾಮಿ ಬಳಗದ್ದು ಫೈಬರ್ ಗ್ಲಾಸಿನ ರಚನೆಯಾದ್ದರಿಂದ ಸಾಮಾನ್ಯ ಆಘಾತಗಳಿಗೇನೂ ಜಗ್ಗುವುದಿಲ್ಲ. ಇದರ ತಳ ಸಪಾಟಾದ್ದರಿಂದ (ಸಾಂಪ್ರದಾಯಿಕದವು ಗುಂಡಗಿರುತ್ತವೆ) ಮಗುಚಿಬೀಳುವುದೂ ಕಡಿಮೆ. ಒಳಮೈಯಲ್ಲಿ ಎರಡು ಪೂರ್ಣ ಮುಚ್ಚಿದ ಡಬ್ಬಿಯಂಥ ರಚನೆಗಳನ್ನು ಅಂಚಿಗೆ ಬೆಸೆದಿದ್ದಾರೆ. ಇವು ಪ್ರಧಾನವಾಗಿ ಮುಳುಗು ನಿರೋಧಿಸುವುದರೊಡನೆ, ನಾವಿಕನಿಗೆ ಆಸನದಂತೆಯೂ ಒದಗುತ್ತದೆ. ನಡುವೆ ಸಾಮಾನುಗಳನ್ನು ಹೇರಿ, ಡಬ್ಬಿಗಳ ಮೇಲೆ ಕಾಲಿಳಿಬಿಟ್ಟು ಕುಳಿತು ಹುಟ್ಟು ಹಾಕುವ ಹೆಚ್ಚಿನ ಅನುಕೂಲ ಇಲ್ಲಿದೆ.

ಮೊದಲ ಬೆಳಗ್ಗೆ ನಾಲ್ಕು ಹರಿಗೋಲುಗಳು, ಸ್ವಾಮಿ ದಂಪತಿ ಸೇರಿದಂತೆ ಹದಿನೈದು ಮಂದಿಯನ್ನು ಹೊತ್ತು ಸಾಹಸಯಾನಕ್ಕೆ ಹೊರಡುವುದಿತ್ತು. ಮೂರು ಹಗಲು ಮತ್ತು ಎರಡು ರಾತ್ರಿಯನ್ನು ಪೂರ್ಣ ಅನಾಗರಿಕ ಪರಿಸರದಲ್ಲಿ ಕಳೆಯಲು ನಮಗವಶ್ಯವಾದ ಸಾಮಗ್ರಿಗಳನ್ನೂ ಅದೇ ನಾಲ್ಕಕ್ಕೆ ಹಂಚಿ ಹಾಕಲಿದ್ದರು. ಯಾನ ಕುದ್ರುಗಳ (ನದಿ ದ್ವೀಪ) ನಡುವೆ ಮೂಲ ನದಿಪಾತ್ರೆಯನ್ನು ಸಾಧ್ಯವಾದಷ್ಟು ಗುರುತಿಸಿ ಅನುಸರಿಸುತ್ತ, ಎದುರು ದಿಕ್ಕಿನಲ್ಲಿ ಎಂಬಂತೆ, ಹಗಲಿನ ಉದ್ದಕ್ಕೆ ಸಾಗುವುದಿತ್ತು. ಎರಡು ರಾತ್ರಿ ಸೇರಿದಂತೆ ನಮ್ಮೆಲ್ಲ ವಿಶ್ರಾಂತಿಗೂ (ನಿದ್ರೆ, ತಿಂಡಿತೀರ್ಥ, ಶೌಚ ಇತ್ಯಾದಿ) ಸಮಯಕ್ಕೆ ಸಿಕ್ಕ ಯಾವುದೇ ಅನಾಮಧೇಯ, ಪೂರ್ಣ ನಿರ್ಜನ ಮತ್ತು ಯಾವುದೇ ನಾಗರಿಕ ಸವಲತ್ತುಗಳೂ ಇಲ್ಲದ ಕುದ್ರುಗಳಲ್ಲಿ ಕಂಡುಕೊಳ್ಳಬೇಕಿತ್ತು. ಕಷ್ಟ ಸಹಿಷ್ಣುತೆ, ಶ್ರಮ, ಸ್ವಂತಪಾಕ, ಶಿಬಿರವಾಸ, ವನ್ಯಪರಿಸರಕ್ಕೆ ಹೊಂದಿಕೊಳ್ಳುವುದೆಲ್ಲ ನಾವು ಒಪ್ಪಿಕೊಂಡ ಸಾಹಸದ ಭಾಗ. ಅವನ್ನೆಲ್ಲ ಮೀರಿದಂತೆ, ಜೀವಾಪಾಯವನ್ನೇ ತರಬಹುದಾದ ಒಂದು ಮುಖ್ಯ ಆಕಸ್ಮಿಕವಿದ್ದರೆ, ಅದು ಮುಳುಗಡೆ. ಹಾಗಾಗಿ ಇಲ್ಲಿ ನೀರಂಚನ್ನು ಮುಟ್ಟುವ ಎಲ್ಲರಿಗೂ ಜೀವರಕ್ಷಕ ತೇಲಂಗಿಯನ್ನು ಸಂಸ್ಥೆ ಕಡ್ಡಾಯಗೊಳಿಸಿದೆ. ನಗರಗಳಲ್ಲಿ ದ್ವಿಚಕ್ರ ಸವಾರಿಗರು ಶಿರಸ್ತ್ರಾಣ ಉಡಾಫೆ ಮಾಡಿದಂತೆ, ಇಲ್ಲಿ ಪಯಣದ ಯಾವುದೇ ಹಂತದಲ್ಲಿ, ಎಂಥ ಈಜು ಪರಿಣತನಾದರೂ ತೇಲಂಗಿ ಕಳಚುವುದಿರಲಿ, ಬಿಗಿತವನ್ನು ತಪ್ಪಿಸಿದರೂ ಸ್ವಾಮಿ ದಂಪತಿಯ ಕಡುಕೋಪಕ್ಕೆ ಪಾತ್ರರಾಗುವುದು ನಿಶ್ಚಿತ. ತೇಲಂಗಿಯ ಪ್ರಾಯೋಗಿಕ ಅನುಭವ ಅನಂತರ ಹರಿಗೋಲು ಚಲಾವಣೆಯ ಕಲಿಕೆ, ಮೊದಲ ದಿನದ ಎರಡು ಪ್ರಾಥಮಿಕ ಪಾಠಗಳೆಂದೇ ಸ್ವಾಮಿ ದಂಪತಿ ಹೇಳಿದ್ದರು.

ರಾತ್ರಿಯಿಡೀ ಆಕಾಶ ಶುಭ್ರವಿತ್ತು. ಆದರೆ ಶರಾವತಿ ಸಾಗರದ ಅಲೆಯೊಲೆತದ ಸದ್ದು ಕಡಲನ್ನು ಬಿಟ್ಟು ಬಂದ ನಮ್ಮನ್ನು ಓಲೈಸುವಂತೆಯೂ “ನಿಂತ ನೀರೆಂದು ಹಗುರಾಡಬೇಡ” ಎಂಬ ಬೆದರಿಕೆಯಂತೆಯೂ ರಾತ್ರಿಯಿಡೀ ಕೇಳುತ್ತಲೇ ಇತ್ತು. ಕಾರೇರಿದಿಬ್ಬರು, ತಡವಾಗಿ ಕೋಣೆ ಸೇರಿಕೊಂಡದ್ದು ಬೆಳಿಗ್ಗೆ ತಿಳಿಯಿತು. ನಾವೈವರು ನೊಮಿತೋ ಪೂರ್ವ ಸೂಚನೆಯಂತೆ, ಯಾನಕ್ಕೊಯ್ಯಲು ಹಗುರ ಹೊರೆ ಹಿಡಿದು, ಕೇವಲ ಈಜುಡುಗೆಯಲ್ಲಿ, ಬೆಳಕು ಹರಿಯುವ ಮುನ್ನ ಹಾಜರಾದೆವು. ಆದರೆ ಬೆಂಗಳೂರ ಬಸ್ಸು ತಡವಾಯ್ತು. ಹಾಗೆ ಬಂದವರೆಲ್ಲ ಮುಖತಿಕಾದಿಗಳನ್ನು ತೊಳೆಯುವಾಗ ಗಂಟೆ ಎಂಟೂವರೆಯೇ ಕಳೆದಿತ್ತು. ತಾಳಗುಪ್ಪದ ಮೂವರು ಅಕ್ಕಿ ಗಿರಣಿ ಮಾಲಿಕರು – ಸ್ವಾಮಿ ದಂಪತಿಯ ಅಭಿಮಾನಿಗಳು (ಸಂಸ್ಥೆಯ ಕಷ್ಟ ಕಾಲಗಳಲ್ಲಿ ಎಲ್ಲ ರೀತಿಯ ಸಹಕಾರ ಕೊಟ್ಟವರು), ನಮ್ಮ ಸಾಹಸಯಾನಕ್ಕೆ ಶುಭ ಕೋರಲು ಬಂದಿದ್ದರು. ಹಾಗಾಗಿ ಪ್ರಾಥಮಿಕ ಕಲಿಕೆಗಳನ್ನು ಹಿಂದಿಕ್ಕಿ, ಸಣ್ಣ ಔಪಚಾರಿಕ ಸಭೆಗಾಗಿ ಎಲ್ಲರೂ ದುಂಡು ಚಪ್ಪರದಡಿಯಲ್ಲಿ ಸೇರಿದೆವು. ಒಟ್ಟು ಸಭೆಯೇನೋ ಕಾಲರ್ಧ ಗಂಟೆಯಲ್ಲೇ ಮುಗಿಯಿತು. ಸ್ವಾಮಿದಂಪತಿ ಅದರಲ್ಲಿ ಮುಖ್ಯವಾಗಿ ನಮ್ಮಿಬ್ಬರ ಸಮ್ಮಾನ ನಡೆಸಿದ್ದು ಮಾತ್ರ ತೀರಾ ಅನಪೇಕ್ಷಿತ, ಅನಿರೀಕ್ಷಿತ ಮತ್ತು ನಮಗೆ ತೀವ್ರ ಮುಜುಗರವನ್ನೇ ಉಂಟು ಮಾಡಿತು!

ಅನಂತರ ಮೊದಲು ತಿಂಡಿ ತಿಂದು, ಹೆಚ್ಚಿನದನ್ನು ಮಧ್ಯಾಹ್ನಕ್ಕೆ ಬುತ್ತಿಯಾಗಿ ಕಟ್ಟಿಕೊಂಡೆವು. ಮುಂದೆ ಎಲ್ಲರಿಗೂ ತೇಲಂಗಿ ಕೊಟ್ಟು, ಸರಿಯಾಗಿ ಧರಿಸುವ ಪರಿ ಕಲಿಸಿದರು. ಮತ್ತೆ ನಮ್ಮ ಚೀಲ, ಹುಟ್ಟು, ಶಿಬಿರ ಸಾಮಗ್ರಿಗಳ ಹೊರೆ ಹೊತ್ತು ನೀರಂಚು ಸೇರಿದೆವು. ಹೇಳಿಕೇಳಿ ಸಾಹಸ ಸಂಸ್ಥೆಯಾದ್ದರಿಂದ, ಇಲ್ಲಿ ನೀರಿಗಿಳಿಯಲು ‘ವ್ಯವಸ್ಥಿತ’ ದಂಡೆ ಮಾಡಿಕೊಂಡಿಲ್ಲ. ಸರಿಯಾದ ಮಳೆಗಾಲವಾದರೆ, ಎರಡು ಮೂರು ತಿಂಗಳಲ್ಲಿ, ನೀರು ಒಮ್ಮೆಲೆ ನೂರಾರು ಅಡಿ ಎತ್ತರಕ್ಕೇರಿ ಬರುತ್ತದೆ. ಉಳಿದ ಎಂಟೊಂಬತ್ತು ತಿಂಗಳಲ್ಲಿ ವಿದ್ಯುಜ್ಜನಕದ ಬಳಕೆಯನ್ನನುಸರಿಸಿ, ನಿಧಾನಕ್ಕೆ ಇಳಿಯುತ್ತಲೇ ಹೋಗುತ್ತದೆ. ಈ ಏರಿಳಿತಗಳೂ ನಮ್ಮ ಸಾಹಸದ ಭಾಗಗಳೇ. ಇಂದು ಶರಾವತಿ ಸಾಗರ ಪೂರ್ಣಮಟ್ಟದಲ್ಲೇ ಇದೆ. ಈ ಮಟ್ಟದಲ್ಲಿ ಅದರ ಅಂಚನ್ನು ಬಹುತೇಕ ದಟ್ಟವಾಗಿ ಪೊದರುಗಳೇ ಆವರಿಸಿವೆ. ಪೊದರುಗಳ ಕೋಟೆಯಲ್ಲಿನ ಸಮೀಪದ ಸಹಜ ಸಂದು ನಮಗೆ ಪ್ರವೇಶದ್ವಾರ. ಪೊದರು ಸವರಿ ಸ್ಪಷ್ಟ ಜಾಡು ಮೂಡಿಸುವುದು ಅಥವಾ ದಂಡೆ ಕೆತ್ತಿ ನಾಲ್ಕು ಮೆಟ್ಟಿಲು ಕೊಡುವುದು ದೊಡ್ಡ ಕೆಲಸವಲ್ಲ. ಆದರೆ ಅದೂ ಪರಿಸರ ವಿರೋಧೀಯೂ ಹೌದು, ಎನ್ನುವ ಎಚ್ಚರ ಸ್ವಾಮಿ ದಂಪತಿಗಳಿಗಿದೆ. (ಅತಿಥಿಗೃಹಕ್ಕಿರುವ ಕಾಲುದಾರಿಯಲ್ಲಿ ಎರಡು ತೋರ ಮುಳ್ಳಿನ ಗೆಲ್ಲುಗಳು ಅಡ್ಡ ಹಾಯ್ದಿವೆ. ಅದನ್ನು ಕಡಿದು ಕಳೆಯುವುದು ಬಿಟ್ಟು, ಅಲ್ಲಿ ಎಲ್ಲ ತಲೆ ಸೊಂಟ ಬಗ್ಗಿಸಿಯೇ ಸಾಗುತ್ತೇವೆ!) ದಂಡೆಯ ಇಳುಕಲಿನ ನೆಲ ಕೆಸರೆದ್ದು ಜಾರುತ್ತಿತ್ತು. ಕೊನೆಯ ಹಂತದಲ್ಲಂತೂ ದಂಡೆ ಮೂರಡಿ ಆಳಕ್ಕೆ ಕೊರೆದೇ ಹೋಗಿತ್ತು. ಅಲ್ಲಿ ನೀರಿಗಿಳಿಯುವುದಲ್ಲ, ಹಾರುವುದಷ್ಟೇ ಸಾಧ್ಯ! ಆಳ ಗೊತ್ತಿಲ್ಲದ ಸ್ಥಿತಿಯಲ್ಲಿ ಹೊಸಬರು ಕೆಸರಿನಲ್ಲಿ ಕುಳಿತಾದರೂ ನಿಧಾನಕ್ಕೆ ನೀರಿಗಿಳಿಯುವುದಾದಲ್ಲಿ, ಆಧರಿಸಿಕೊಳ್ಳಲು ಕೈ ಚಾಚಿದರೆ ಸುಲಭವಾಗಿ ಸಿಗುತ್ತಿದ್ದದ್ದು ಮುಳ್ಳ ಪೊದರು! ಸ್ವತಃ ಸ್ವಾಮಿದಂಪತಿ ಬೇರೆ ಬೇರೆ ಸಂದರ್ಭಗಳಲ್ಲಿ ಇಲ್ಲಿ ಜಾರಿ ಬಿದ್ದದ್ದು (ಅದೃಷ್ಟಕ್ಕೆ ಜಖಂಗೊಳ್ಳದಿದ್ದದ್ದು) ಎಲ್ಲರಿಗೂ ಒಳ್ಳೇ ಪ್ರಾತ್ಯಕ್ಷಿಕೆ ಎಂದೇ ಹೇಳುಬೇಕು!

ಸೂರ್ಯ ಸರಿಯಾಗಿ ಮೋಡಗಂಬಳಿ ಜಾರಿಸದ ಮುಂಜಾನೆಯಲ್ಲಿ, ತೊಡೆಮಟ್ಟದ ತಣ್ಣನೆ ನದಿಯಲ್ಲಿ ನಿಂತ ಸ್ವಾಮಿ ದಂಪತಿ, ಒಬ್ಬೊಬ್ಬರಿಗೂ ಕೈ ಆಧಾರ ಕಲ್ಪಿಸಿ ನದಿಗೆ ಕರೆದಿದ್ದರು. ಸೆಕೆಯ ದಿನಗಳಲ್ಲೂ ಹನ್ನೊಂದರ ಬಿಸಿ ಹೊತ್ತಿನಲ್ಲೂ ತಣ್ಣೀರ ಸ್ನಾನವನ್ನು ನಿರಾಕರಿಸುವ ನಾಗರಿಕರು ನಾವು. ಆದರೂ ಬಲಿಗಟ್ಟೆಗೇರುವ ಕುರಿಗಳಂತೆ, ಕನಿಷ್ಠ ಬಟ್ಟೆಯಲ್ಲಿ ಉಹುಹುಹು ಜಪಿಸುತ್ತ ಆಳಕ್ಕಿಳಿದದ್ದೋ ತೊಳ್ಳೆ ನಡುಗಿ ಬಿದ್ದದ್ದೋ ನೆನಪಾಗುತ್ತಿಲ್ಲ! ಮತ್ತೆ ಅವರು ಕೈ ಹಿಡಿದಿದ್ದಂತೆ ಒಂದೊಂದು ಮುಳುಗು ಹಾಕಿದ್ದೂ ಆಯ್ತು. ಮುಂದುವರಿದು ತೇಲಂಗಿಯ ಬೆನ್ನ ಮೇಲೆ ಒರಗುತ್ತ, ಪಾದಗಳನ್ನು ಮೇಲೆತ್ತುತ್ತಿದ್ದಂತೆ ಸುಖವಾದ ತೇಲನುಭವ ಒದಗಿಬಂತು. ಅಜ್ಜನ ಮನೆಯ ತೋಟದ ಕೆರೆಗಳಲ್ಲಿ ದಡಬಡ ಈಜು ಕಲಿತವ ನಾನು. ಅದು ‘ಶ್ರಮ ಜಾಸ್ತಿ ಪ್ರಗತಿ ನಾಸ್ತಿ’ ಎನ್ನುವ ನಾಯಿ ಈಜು (ಡಾಗ್ ಪೆಡಲ್)! ದೇವಕಿಗೆ ಅದೂ ಬಾರದು. ನಮ್ಮ ಮಂಗಳೂರಿನ ಕಯಾಕೀ ಪ್ರಯೋಗಗಳಲ್ಲೆಲ್ಲ ತೇಲಂಗಿಯನ್ನು ಶಿಸ್ತಿನಲ್ಲೇ ಹಾಕಿಕೊಳ್ಳುತ್ತಿದ್ದೆವು. ಆದರೆ ಎಂದೂ ಅದರ ನಿಜಗುಣವನ್ನು ಪರೀಕ್ಷಿಸುವ ಧೈರ್ಯ ಮಾಡಿರಲಿಲ್ಲ. (ಇದಕ್ಕೆ ನೇತ್ರಾವತಿ, ಫಲ್ಗುಣಿ, ಶಾಂಭವಿ, ನಂದಿನಿ ಮುಂತಾದ ಭವ್ಯ ಹೆಸರಿನ ನಮ್ಮ ನದಿಗಳ ನೀರ ‘ಪಾವಿತ್ರ್ಯ’ವೂ ಒಂದು ಪ್ರಬಲ ಕಾರಣ.) ಹಾಗಾಗಿ ಅದನ್ನೇ ಇಲ್ಲಿಗೆ ಹೊತ್ತು ತಂದು, ಧರಿಸಿದ್ದೆವು. ತುಳುಕುವ ಅಲೆಗಳನ್ನು ನಗಣ್ಯ ಮಾಡಿ, ತಳದಲ್ಲಿ ಏರುವ ಆಳದ ಬಗ್ಗೆ ನಿರಾಳವಾಗಿ, ನೀರ ಮೇಲೆ ಬಿದ್ದ ವಿಲಾಸಿಯಂತೆ, ನಿಧಾನಕ್ಕೆ ಒಂದೊಂದೇ ತೋಳನ್ನು ಹಿಂಚಾಚಿ ನೀರ ತಳ್ಳಿದಾಗ ಬೆನ್ನ ಈಜು (ಬ್ಯಾಕ್ ಸ್ಟ್ರೋಕ್) ಸಿದ್ಧಿಸಿದ್ದೇ ಭ್ರಮೆ. ಹರಿಗೋಲ ಹಂಗ್ಯಾಕೆ, ಹೀಗೇ ಹೊಸನಗರಕ್ಕೂ ಹೋದೇನೆಂಬ ಹುಮ್ಮಸ್ಸು!

ಮುಂದಿನ ಹಂತ ಹರಿಗೋಲಿನದ್ದು. ಮೂರೋ ನಾಲ್ಕೋ ಮಂದಿ ಸೇರಿ ಕವುಚಿ ಬಿದ್ದಿದ್ದ ಹರಿಗೋಲನ್ನು ಮಗುಚಿ ನಿಧಾನಕ್ಕೆ ನೀರಿಗೆ ಇಳಿಸಿದೆವು. ಅವಕ್ಕೆ ನಾವಿಕರನ್ನು ಆಯುವಲ್ಲಿ ಸ್ವಾಮಿಯವರ ಅನುಭವದ ಜಾಣತನ ಕಾಣಿಸುತ್ತಿತ್ತು. ರೂಢಿಯ ಮಿತ್ರಕೂಟಗಳನ್ನು ಒಡೆದು, ಹೊಸದೇ ನಾಲ್ನಾಲ್ಕು ಮಂದಿಯನ್ನು ಒಂದೊಂದೇ ಹರಿಗೋಲಿಗೇರಿಸಿದ್ದರು. (ನನ್ನನ್ನೂ ದೇವಕಿಯನ್ನೂ ಬೇರೆ ಬೇರೆ ಹರಿಗೋಲಿಗೆ ಹಾಕಿದ್ದರು.) ಸರಿಯೇ, ಅತಿ ಬಳಕೆ ಉದಾಸೀನಕ್ಕೆ ಅಥವಾ ಉಡಾಫೆಗೆ ಕಾರಣ! ಹರಿಗೋಲಿಗೆ ಏರುವಲ್ಲಿಂದ ತೊಡಗಿ, ಕೈ ಸೇರಿದ್ದ ಹುಟ್ಟಿನಲ್ಲಿ ನೀರು ಮಗುಚುವವರೆಗೆ ಹೆಚ್ಚು ಹೇಳುವಂತ ಪಾಠವೇನೂ ಇಲ್ಲ. ನೀರ ತುಳುಕಾಟದಲ್ಲಿ ಪ್ರತಿಯೋರ್ವರೂ ಸಹಜವಾಗಿ ಹರಿಗೋಲಿನ ಸಮಸ್ಥಿತಿ ಕಾಪಾಡುವ ಅಗತ್ಯ ಮನಗಾಣುತ್ತಿದ್ದ. ನಿಂತಲ್ಲೇ ಒಂದೆರಡು ದೋಸೆ ಸುತ್ತಿ, ಎರಡು ಮಗ್ಗುಲಿನಲ್ಲಿ ಏಕಕಾಲಕ್ಕೆ ಹುಟ್ಟು ಹಾಕುವ ಸಾಮರಸ್ಯ ಕಂಡುಕೊಂಡೆವು. ಕುಳಿತವರು ಎಚ್ಚರ ತಪ್ಪಿ ನಿಲ್ಲುವುದೋ ಭಾರ ಅತ್ತಿತ್ತ ಹೊಂದಿಸುವುದೋ ನಡೆಸಿದರೆ ಹರಿಗೋಲಿನಂಚು ತಗ್ಗಿ ನೀರು ಒಳಸೇರುವ ಅಪಾಯದ ಅರಿವೂ ಮೂಡಿತು. ಸರ್ತಿಗೆ ಒಂದರಂತೆ ನಾಲ್ಕೂ ಹರಿಗೋಲುಗಳ ತೇಲಾಟಕ್ಕಿಳಿದ ಮೇಲೆ, ಐವತ್ತರವತ್ತಡಿ ಆಸುಪಾಸಿನಲ್ಲೇ ಎಲ್ಲ ಸುಮಾರು ಅರ್ಧ ಗಂಟೆಯ ಕಾಲ ಸಾಕಷ್ಟು ಕಸರತ್ತು, ಅಭ್ಯಾಸ ನಡೆಸಿದ ಮೇಲೆ ಎಲ್ಲ ಮತ್ತೆ ದಂಡೆಗೇರಿಸಿದೆವು. ಅಷ್ಟರಲ್ಲಿ ನೀರಿನ ಹೊಯ್ಲಿನಿಂದಲೋ ನಮ್ಮ ಅನನುಭವದಿಂದಲೋ ಎಲ್ಲ ಹರಿಗೋಲುಗಳಲ್ಲೂ ಸಾಕಷ್ಟು ನೀರು ಸೇರಿತ್ತು. ಸ್ವಾಮಿ ದಂಪತಿ, ಹರಿಗೋಲುಗಳಿಂದ ನೀರು ಖಾಲಿ ಮಾಡಿಸಿ, ಎಚ್ಚರಿಕೆಯ ನುಡಿಗಳೊಡನೆ ಮತ್ತೆ ಒಂದೊಂದಾಗಿ ನೀರಿಗಿಳಿಸಿ, ನಿಜಯಾನ ಸಿದ್ಧತೆ ಶುರು ಮಾಡಿದರು.

ಸ್ವಾಮಿ ದಂಪತಿ ನೀರಲ್ಲಿ ನಿಂತಂತೇ ಹರಿಗೋಲನ್ನು ಹಿಡಿದಿಟ್ಟುಕೊಳ್ಳುತ್ತಿದ್ದರು. ಹರಿಗೋಲಿನೊಳಗೆ ಮೊದಲು ಒಬ್ಬ ಏರುತ್ತಿದ್ದ. ಆತ ಅಷ್ಟೂ ಅಗಲಕ್ಕೊಂದು ದೊಡ್ಡ ಸಿಲ್ಪಾಲಿನ್ ಶೀಟ್ ಹಾಸುತ್ತಿದ್ದ. ಅದರ ಮೇಲೆ ಆ ಪಾಲಿನವರ ಚೀಲ ಮತ್ತು ಶಿಬಿರಸಾಮಗ್ರಿಗಳನ್ನು ಬಿಗಿಯಾಗಿ ಹೇರಿ, ಶೀಟನ್ನು ನಡುವಿಗೆ ಒತ್ತರಿಸುತ್ತಿದ್ದ. ಅನಂತರ ಸಮತೋಲನ ತಪ್ಪದಂತೆ, ನಿಧಾನಕ್ಕೆ ಇತರರನ್ನು ಹತ್ತಿಸಿಕೊಳ್ಳುತ್ತಿದ್ದ. ಹಾಗೆ ಭರ್ತಿಯಾದವರಿಗೆ, ಸುದೂರದಲ್ಲಿ ಕಾಣುತ್ತಿದ್ದ ಮೂರು ಕುದ್ರುಗಳ ಗುರಿ ಕೊಟ್ಟು, ಸ್ವಾಮಿ ದಂಪತಿ ವಿದಾಯ ಹೇಳುತ್ತಿದ್ದರು. ಹೀಗೆ ಎರಡನ್ನು ಕಳಿಸಿ ಮೂರನೆಯದ್ದಕ್ಕೆ ಕೆಲಸ ಶುರುವಾಗಿತ್ತು.

ಮೊದಲು ಹೊರಟ ಹರಿಗೋಲು ನೂರಿನ್ನೂರಡಿ ಹೋದ ಮೇಲೆ ಯಾಕೋ ತಡವರಿಸುತ್ತಿತ್ತು. ಅದನ್ನು ಕಂಡು. ಸ್ವಾಮಿ ದಂಪತಿ ಬೊಬ್ಬೆ ಹೊಡೆದು ಕೊಟ್ಟ ಸೂಚನೆಗಳೆಲ್ಲ ಕಿವುಡು ಕಿವಿ ಸೇರಿದಂತಿತ್ತು. ಆ ಹರಿಗೋಲು ಗಿರಕಿ ಹಾಕುತ್ತ, ಅನಿಯಂತ್ರಿತವಾಗಿ ಅನತಿ ದೂರದ ದಂಡೆಯ ಪೊದರ ಮರೆಗೆ ಸರಿದಿತ್ತು. ಪೂರ್ಣ ಮರೆಯಾಗುವ ಹಂತದಲ್ಲಿ “ಹೋ ಹೆಲ್ಪ್ ಹೆಲ್ಪ್….” ಬೊಬ್ಬೆಯೂ ಕೇಳಿಸಿತು. ಸ್ವಾಮಿ ದಂಪತಿ ಕೂಡಲೇ ಸಜ್ಜುಗೊಳ್ಳುತ್ತಿದ್ದ ಹರಿಗೋಲನ್ನು ಏರಿ, ಚುರುಕಾಗಿ ಆಗಲೇ ಜೋಡಿಸಿದ್ದ ಸಾಮಾನುಗಳನ್ನು ದಂಡೆಗೆಸೆದು, ರಕ್ಷಣೆಗೆ ಧಾವಿಸಿದರು. ಹಾಗೆ ಹೋಗುತ್ತ, ಸ್ವಲ್ಪ ಮುಂದಕ್ಕೆ ಹೋಗಿದ್ದ ಎರಡನೇ ಹರಿಗೋಲಿಗೆ ದಂಡೆಗೆ ಮರಳಿ, ಖಾಲೀ ಮಾಡಿಕೊಳ್ಳಲೂ ಸೂಚನೆ ಕೊಟ್ಟರು. ನಿಜದಲ್ಲಿ ಮೊದಲನೇ ಹರಿಗೋಲಾಗಲೀ ನಾವಿಕರಾಗಲೀ ಪೂರ್ಣ ಮುಳುಗಿಹೋಗುವ ಅಪಾಯವೇನೂ ಇರಲಿಲ್ಲ. ಆತಂಕ ಇದ್ದದ್ದು ಚೀಲ ಸಾಮಾನುಗಳ ಬಗ್ಗೆ ಮಾತ್ರ. ಸ್ವಾಮಿ ದಂಪತಿ ಎರಡು ಸಲ ಅತ್ತಿತ್ತ ಓಡಾಡಿ ಆ ಹರಿಗೋಲು ಸಹಿತ ಎಲ್ಲರನ್ನೂ ಸಿಕ್ಕಷ್ಟು ಸಾಮಾನುಗಳನ್ನೂ ದಂಡೆಗೆ ತಂದು ಹಾಕಿದರು. ವಿರಾಮದಲ್ಲಿ ವಿಚಾರಣೆ ನಡೆಸಿದಾಗ, ನಾವಿಕರು ಗಾಬರಿಗೆ ಬುದ್ಧಿಗೊಟ್ಟದ್ದು ಸ್ಪಷ್ಟವಾಯ್ತು. ಆದರೆ ಅಷ್ಟರಲ್ಲೇ ಒಂದು ಗುಡಾರ, ಒಂದು ಹುಟ್ಟು ಮುಳುಗಿಹೋಗಿತ್ತು. (“ಅವನ್ನು ವಿರಾಮದಲ್ಲಿ ಮುಳುಗಿ ಎತ್ತುತ್ತೇನೆ, ಇಲ್ಲವೇ ನೀರಿಳಿದ ಮೇಲೆ ಸಿಕ್ಕಿಯಾವು” ಎಂದು ಹಿಂದಿನಿಂದ ಸ್ವಾಮಿ ಹೇಳಿದರು) ಶಿಬಿರಸಾಮಗ್ರಿ, ವೈಯಕ್ತಿಕ ಗಂಟುಗಳೆಲ್ಲ ಧಾರಾಳ ನೀರು ಕುಡಿದಿದ್ದವು. ಎಲ್ಲಕ್ಕೂ ಮುಖ್ಯವಾಗಿ ದಿನದ ಅರ್ಧ ಭಾಗವೇ ಕಳೆದರೂ ನಾವು ಹೊರಟಲ್ಲೇ ಇದ್ದೆವು! ಆಗೀಗ ಕರಿಮೋಡ ಹಾರಿಸುತ್ತ ಶರಾವತಿ ಸಾಗರ ನಗುತ್ತಲೇ ಇತ್ತು – ತಳಪಳಕ್, ತುಳುತುಳುಕ್!

ಹರಿಗೋಲು ಮುಳುಗಿದಂತಾದ್ದಕ್ಕೆ ಮುಖ್ಯ ಕಾರಣ ನಾವಿಕರ ಗೊಂದಲ. “ನಡುನೀರಿನಲ್ಲಿ ಹರಿಗೋಲಿನ ಸಮತೋಲನ ಕಾಯ್ದುಕೊಳ್ಳಿ” ಎಂದು ಸ್ವಾಮಿ ದಂಪತಿ ಕೊಟ್ಟ ಸ್ಪಷ್ಟ ಎಚ್ಚರಿಕೆಯನ್ನೇ ಮರೆತಿದ್ದರು. ಗಾಳಿ ತೆರೆಗಳ ಕುಲುಕಾಟದ ಗಡಿಬಿಡಿಯಲ್ಲಿ, ನಾಲ್ವರಲ್ಲೊಬ್ಬ ಕುಳಿತ ಜಾಗ ಬದಲಾಯಿಸಿಕೊಳ್ಳಲು ಎದ್ದದ್ದೇ ಸಾಕಾಯ್ತು. ಹರಿಗೋಲು ವಾಲಿ, ಒಂದಷ್ಟು ನೀರು ತುಂಬಿಕೊಂಡಿತು. ಮತ್ತೆ ಹೊರಗೂ ಒಳಗೂ ನೀರಿನ ತುಯ್ದಾಟ. ಹುಟ್ಟುಹಾಕುವುದರಲ್ಲಿ ಪಳಗುವ ಮೊದಲೇ ಎದುರಾದ ಸಮಸ್ಯೆ ಸೇರಿ ಪರಿಸ್ಥಿತಿ ಕೆಡುತ್ತಲೇ ಹೋಯ್ತು. ಮತ್ತೆ ಮತ್ತೆ ನೀರು ನುಗ್ಗುತ್ತ, ಅಲೆಗಳು ಇವರನ್ನು ದಂಡೆಯತ್ತ ನೂಕುತ್ತ ಬಂತು. ನಮ್ಮ ಕಣ್ಣ ಮರೆಯಾಗುವ ವೇಳೆಗೆ ಹರಿಗೋಲಿನಲ್ಲಿ ನೀರು ಭರ್ತಿಯಾಗಿತ್ತು. ನಾಲ್ವರಿಗೂ ಹರಿಗೋಲು ಅಥವಾ ತಾವು ಪೂರ್ಣ ಮುಳುಗುವ ಭಯವೇನೂ ಇರಲಿಲ್ಲ. ಆದರೆ ಶಿಬಿರ ಸಾಮಗ್ರಿಗಳು ಸ್ವತಂತ್ರವಾಗಿ ತೇಲಿಯೋ ಮುಳುಗಿಯೋ ಹೊರಟಾಗ, ಅನಿವಾರ್ಯವಾಗಿ ಬೊಬ್ಬೆ ಹಾಕಿದ್ದರು. ಸ್ಥಳಕ್ಕೆ ಸ್ವಾಮಿ ದಂಪತಿ ಹೋಗುವಾಗ, ಒಬ್ಬೊಬ್ಬರೂ ಸಿಕ್ಕಿದಷ್ಟು ಪಾತ್ರೆ, ಸಾಮಾನುಗಳನ್ನು ಮುಳುಗಿ ಕಳೆಯದಂತೆ ಬಾಚಿ ಹಿಡಿದುಕೊಳ್ಳಲು ಒದ್ದಾಡುತ್ತಿದ್ದರಂತೆ!

ದೋಷ ವೈಯಕ್ತಿಕವೇ ಆದರೂ ಪ್ರೇರಣೆ ಗಾಳಿ, ಅಲೆಗಳದ್ದೆನ್ನುವುದನ್ನು ಮರೆಯಬಾರದು. ಗಗನ ಪರಿಷತ್ತಿನಲ್ಲಿ ಮತ್ತೆ ಮಳೆ ಅವತರಿಸುವ ಲಕ್ಷಣಗಳೇ ಇತ್ತು. ಉದ್ಧರಿಸಿ ತಂದ ನೀರು ಕುಡಿದ ಗುಡಾರ, ದಿನಸಿ, ಬಟ್ಟೆ ಬರಿ, ಮೊಬೈಲ್, ಪರ್ಸಿನಲ್ಲಿದ್ದ ನೋಟುಗಳನ್ನೂ ದುಂಡು ಚಪ್ಪರದಡಿ ಬಿಚ್ಚಿ ಹರಡಿ, ನಡುವೆ ಹದಿನೈದೂ ಮಂದಿ ಕುಳಿತು ಮಂತ್ರಾಲೋಚನೆ ನಡೆಸಿದೆವು – ಮುಂದೇನು? ಸ್ವಾಮಿ ದಂಪತಿ ನಿವೇದಿಸಿದರು, ಹಿನ್ನೀರು ತಗ್ಗಿದ್ದಾಗ, ಮಳೆ ಬಂದರೂ ಅಡ್ವೆಂಚರರ್ಸ್ ಧಾರಾಳ ಜಲಕ್ರೀಡೆ ನಡೆಸಿದ್ದಿದೆ. ಆಗೆಲ್ಲ ನದೀಪಾತ್ರೆಯಲ್ಲಿ ನುಗ್ಗುವ ಗಾಳಿ ಸಣ್ಣದಾಗಿ ದಿಕ್ಕೆಡಿಸುವುದಿತ್ತು. ಆದರೆ ಕುದ್ರುಗಳ ಮರೆಯಲ್ಲಿ, ತೀವ್ರತೆ ಎಂದೂ ಕಾಡಿದ್ದಿಲ್ಲ. ಪೂರ್ಣ ನೀರಿದ್ದು, ಗಾಳಿ ಅಲೆಗಳ ತುಯ್ದಾಟವೂ ಸೇರಿಕೊಂಡಾಗ, ಇಂಥ ದೀರ್ಘ ಯಾನ ಹಾಕಿಕೊಂಡದ್ದು ಇದೇ ಮೊದಲು. ಈಗ ತೊಡಗಿದ್ದಾಗಿದೆ, ಸಣ್ಣ ಸೋಲೂ ಆಗಿದೆ. ಚೇತರಿಸಿಕೊಂಡು, ನಾಳೆ ಹೊರಟರೂ ಮತ್ತೆ ಅನಿಶ್ಚಿತ ಹವೆಯಲ್ಲಿ, ಎರಡೇ ದಿನಗಳಲ್ಲಿ, ಉದ್ದೇಶಿಸಿದ ದೂರವನ್ನು (ಹೊಸನಗರ) ಸಾಧಿಸುವುದು ಅಸಾದ್ಯ. ಸಂಸ್ಥೆಗಾದ ಸೊತ್ತು ನಷ್ಟವನ್ನು ಗಂಭೀರವಾಗಿಸದೆ, ಮೂರು ದಿನದ ಸಾಹಸಯಾನ ಬಯಸಿ ಬಂದ ನಮ್ಮ ಹಿತ ಕಾಯುವುದನ್ನೇ ಲಕ್ಷಿಸಿ, ನಮ್ಮ ಸಲಹೆ ಕೋರಿದ್ದರು – ಮುಂದೇನು?

ನಾವು ಮೂವರಲ್ಲದೆ ಇನ್ನು ಕೆಲವರು, ಇಷ್ಟಕ್ಕೇ ಊರಿಗೆ ಮರಳಿ, ಮುಂದೊಂದು ಅನುಕೂಲದ ದಿನ ಮತ್ತೆ ಬರಲು ಸಿದ್ಧರೆಂದೆವು. ಕೆಲವರು ಜೋಗಕ್ಕೆ ಪ್ರವಾಸೀ ಭೇಟಿ, ಸಣ್ಣ ಚಾರಣ, ಗಾಳಿ ಇಲ್ಲದಾಗ ಸಮೀಪದ ಕುದುರಿಗಷ್ಟೇ ಹೋಗಿ ಶಿಬಿರವಾಸದ ಮೋಜು…. ಎಂಬಿತ್ಯಾದಿ ಸಲಹೆಗಳನ್ನು ಕೊಟ್ಟರು. ಆದರೆ ಎಲ್ಲರೂ ಅಂತಿಮ ನಿರ್ಧಾರವನ್ನು ಸ್ವಾಮಿ ದಂಪತಿಗೇ ಬಿಟ್ಟೆವು. ಅವರು ದಿನದ ಆಕಸ್ಮಿಕದ ತಿದ್ದುವಿಕೆ ಮತ್ತು ಮುಂದಿನ ಯೋಜನೆಯನ್ನು ಆತುರದ ಕೈಗೆ ಕೊಡಲಿಲ್ಲ. ಮೊದಲಿಗೆ, ಅಂದಿಗೆ ವಿರಾಮ ಘೋಷಿಸಿದರು. ಮತ್ತೆ, ಮೂಲ ಯೋಜನೆಯಂತೆ ಸಾಗುವಾಗ, ನಾವು ಎರಡು ಕಡೆಗಳಲ್ಲಿ (ಹೊಳೆಬಾಗಿಲು ಮತ್ತು ಹಸುರುಮಕ್ಕಿಗಳಲ್ಲಿ ನೀರಂಚಿಗೆ ಬರುವ ದಾರಿಯಿಂದ ಜನ ಮತ್ತು ವಾಹನಗಳನ್ನು ಈ ದಡ ಆ ದಡ ಮಾಡಲು ಖಾಯಂ ಸಣ್ಣ ಹಡಗುಗಳಿವೆ) ಸಾರ್ವಜನಿಕ ದಾರಿಗಳನ್ನು ಸಮೀಪಿಸುತ್ತೇವೆ. ಈಗ ಪರಿಷ್ಕೃತ ಯೋಜನೆಯಂತೆ, ನಾಳೆ ಬೆಳಿಗ್ಗೆ ಹೊರಟು, ನಾಡಿದ್ದಿಗೆ ಎರಡನೇ ಕಡವಿಗೇ ಕಲಾಪ ಮುಗಿಸುವುದೆಂದಾಯ್ತು. ಜತೆಗೇ ಶರಾವತಿ ಸಾಗರದ ಪ್ರಕ್ಷುಬ್ದ ಸ್ಥಿತಿಯ ಲೆಕ್ಕ ಹಿಡಿದು, ಪ್ರಯಾಣವನ್ನು ಹರಿಗೋಲಿನಿಂದ ರಬ್ಬರ್ ತೆಪ್ಪಕ್ಕೂ (ಡಿಂಘಿ) ಬದಲಿಸಿದರು. ನಮ್ಮೂವರನ್ನುಳಿದು ಎಲ್ಲರೂ ಮಾಹಿತಿ ತಂತ್ರಜ್ಞಾನ, ಅಂದರೆ ‘ಅಂಗೈ ಬ್ರಹ್ಮಾಂಡ’ (ಚರವಾಣಿ) ಚಪಲಿಗರೇ. ಸಲಹೆ ಕೇಳಿದಾಗಲೂ ಕೊನೆಗೆ ಅರ್ಧ ದಿನ ವಿರಾಮ ಎಂದಾಗಲೂ ಅಂತರ್ಜಾಲಾಡಿ ಉಬ್ಬರದ ಟ್ಯಾಕ್ಸಿ ತರಿಸಿ, ಜೋಗದಲ್ಲಿ ಸ್ವಂತೀ, ಕಾರ್ಗಲ್ಲಿನಲ್ಲಿ ತಿಂತೀ ಎಂದೆಲ್ಲ ಹೊಂಚಿದ್ದರು. ಆದರೆ ಮೂರು ದಿನಗಳ ವನ್ಯ-ವ್ರತಧಾರಿಗಳ ಅನ್ಯಾಕರ್ಷಣೆಗಳನ್ನು ಸ್ವಾಮಿದಂಪತಿ ಖಡಕ್ಕಾಗಿ ನಿರಾಕರಿಸಿದರು. ಈಜುವ ಉತ್ಸಾಹಿಗಳಿದ್ದರೆ, ತೇಲಂಗಿ ಸಡಿಲಿಸದೇ ಕಣ್ಣಳತೆ ಮೀರದೇ ಶರಾವತಿ ಸಾಗರಕ್ಕೆ ಧುಮುಕಲು ಹೇಳಿದರು. ಇಲ್ಲವೇ ಹಿತ್ತಿಲಿನ ವಲಯ ವರಿಷ್ಠ ಗಿರಿಶೃಂಗ ಏರಿ ಬರಬಹುದೆಂದೂ ಸೂಚಿಸಿದರು.

(ಮುಂದುವರಿಯಲಿದೆ)