(ದಕ್ಷಿಣಾಪಥದ ಚಕ್ರವರ್ತಿಗಳು ಭಾಗ ಎರಡು)
ಸುತ್ತು ಇಪ್ಪತ್ತೈದು

ಪಾಶ್ಚಾತ್ಯರು ವ್ಯಾಪಾರೀ ಸೋಗಿನಲ್ಲಿ ಭಾರತಕ್ಕೆ ಒಂದು ಹೂಡಿದ ಮೊದಲ ಬಿಡಾರಗಳಲ್ಲಿ ಕಣ್ಣಾನೂರು ಅಥವಾ ಕಣ್ಣೂರು ಕೋಟೆ ಬಲು ಮುಖ್ಯವಂತೆ. ಹದಿನಾರನೇ ಶತಮಾನದ ಇದು ಪೋರ್ಚುಗೀಸರ ರಚನೆ. ಎತ್ತರದ ಭವ್ಯಗೋಡೆ, ಮೇಲೆ ಹೂಡಿದ ಫಿರಂಗಿಗಳು, ವಿಸ್ತಾರ ಕಂದಕ, ಅದರಲ್ಲಿ ಸಮುದ್ರದ ನೀರು ಹಿಡಿದಿಡುವ ವ್ಯವಸ್ಥೆ, ಕಮಾನುಗಳಲ್ಲೇ ರಚಿಸಲ್ಪಟ್ಟ ವಾಸಯೋಗ್ಯ ಜಗಲಿಗಳು, ಗುಪ್ತ ದ್ವಾರಗಳು ದರ್ಶನಯೋಗ್ಯವಾಗಿ ಉಳಿದಿವೆ. ಆದರೇನು ನಮ್ಮ ಹೆಚ್ಚಿನ ಸ್ಮಾರಕಗಳಂತೆ ಇವೂ ಮುಖ್ಯ ಜನವಾಹಿನಿಯಿಂದ ದೂರ ಸರಿದಿವೆ. ಇನ್ನೊಂದು ಬದಿಯಿಂದ ಕಡಲ ಕೊರೆತವೂ ಕೋಟೆಯನ್ನು ಕಬಳಿಸುತ್ತಿದೆ. ಅಧಿಕೃತ ಇಲಾಖೆ ಕೋಟೆಯ ಭದ್ರ ಮೂಲೆಯೊಂದರಲ್ಲಿ ಇತಿಹಾಸ ಪ್ರಜ್ಞೆ ಹೂತು, ಆಧುನಿಕ ಬಂಗ್ಲೆ ರಚಿಸಿ, ರಾಷ್ಟ್ರೀಯ ಸ್ಮಾರಕದ ರಕ್ಷಣೆಗೆ ಸಜ್ಜಾಗಿ, ಸುಸ್ತಾಗಿ, ಬೀಗ ಜಡಿದಾಗಿತ್ತು, ಅದಕ್ಕೂ ತುಕ್ಕುಹಿಡಿದುಹೋಗಿತ್ತು!

ಕಣ್ಣೂರಿನಲ್ಲಿ ಊಟ ಮುಗಿಸಿ ಮತ್ತೆ ಸವಾರಿ ಹೊರಟಿತು. ಭಾರತದ ಮಾಜಿ ಫ್ರೆಂಚ್ ವಸಾಹತುಗಳ ಪಶ್ಚಿಮ ಶಾಖೆ ಮಾಹೆ. ಇದು ಅಂದು ಪಾಂಡಿಚೇರಿ, ಅಂಡಮಾನ್ ಮುಂತಾದವುಗಳಂತೆ ಕೇಂದ್ರಾಡಳಿತ ಪ್ರದೇಶ. ಈ ಸಣ್ಣ ಊರಿನಲ್ಲಿ ಹೆದ್ದಾರಿ ಕಿರುದಾರಿಯಾಗಿ ಊರ ಮನೆಯಂಗಳ ಎಲ್ಲ ಸುತ್ತಿ ಸಾಗಿದಂತಿದೆ. ಅಲ್ಲೂ ಎಡೆ ಸಿಕ್ಕಲ್ಲಿ ಕಾಲೂರಿದ ಜಾಹೀರಾತು ಫಲಕಗಳು ವಿದೇಶೀ ಮದ್ಯಕ್ಕೆ ಪ್ರಚಾರ ಕೊಡುವಲ್ಲಿ ಗತ ವೈಭವ ಉಳಿಸಿಕೊಂಡಂತಿವೆ. ಗೋವಾದಂತೆಯೇ ಕರಮುಕ್ತ ಮದ್ಯ ವೈಭವಕ್ಕೂ ಬಲು ಕಡಿಮೆ ಕರಭಾರದ ವಾಹನ ಖರೀದಿಗಳಿಗೂ ಮಾಹೆ ಆ ಕಾಲದಲ್ಲಿ ಪ್ರಸಿದ್ಧವಿತ್ತಂತೆ. ಅವೆರಡೂ ನಮ್ಮ ಆಸಕ್ತಿಯ ವಿಷಯಗಳಲ್ಲವಾದ್ದರಿಂದ ವಿಚಲಿತಗೊಳ್ಳದ ನಮ್ಮ ಓಟಕ್ಕೆ ಧುತ್ತೆಂದು ಸಮುದ್ರವೇ ಎದುರಾಯ್ತು! ಇಲ್ಲಿ ನಾವೇನು, ದಾರಿಯೇ ಬೆಚ್ಚಿ ತೀವ್ರವಾಗಿ ಎಡಕ್ಕೆ ತಿರುಗಿದೆ. ಕಡಲರಸ ಅಲೆಯಲೆಗಳನ್ನು ಅಟ್ಟಿ ಆಕ್ರಮಣದ ಹುಯ್ಲಿಟ್ಟ. ಹೆದ್ದಾರಿ ಹೆದರಿ, ಗುಡ್ಡದ ಓರೆಯಲ್ಲಿ ಏರಿ ಓಡಿತ್ತು. ಋತುಮಾನದ ಲೆಕ್ಕದಲ್ಲಿ ಅವು ಕಡಲಿನ ಸೋಲಿನ ದಿನಗಳು. ಇನ್ನು ಸೊಕ್ಕಿನ ದಿನಗಳು (ಮಳೆಗಾಲ) ಹೇಗಿದ್ದಾವು ಎಂಬ ಕಲ್ಪನೆಯೊಡನೆ ನಾವು ಮುಂದುವರಿದೆವು.

ಬಿಸಿಲು ರಣಗುಡುತ್ತಿತ್ತು. ಮಟ್ಟಸದಾರಿಯ ಏಕತಾನದ ಓಟ ಮತ್ತು ಬರಿಸುವಂತಿತ್ತು. ನಮ್ಮದು ಪಶ್ಚಿಮದ ಬೀಸುಗಾಳಿಯನ್ನು ಅಡ್ಡ ಸೀಳುವ ಓಟ. ಎದುರಿನಿಂದ ಬರುವ ದೊಡ್ಡ ವಾಹನಗಳು ನಮ್ಮನ್ನು ಹಾಯ್ದು ಹೋಗುವಾಗ ಕಡೆದ ಗಾಳಿಯ ಧಾರೆ ಹೊಸ ಅಲೆ ಜಡಿದು ತೂರಾಡುತ್ತಿದ್ದೆವು. ಬಿಸಿಲು, ಮಂಪರು, ದಾಹ ನಿವಾರಿಸಲು ಒಂದೆರಡು ಬಾರಿ ನಿಂತರೂ ಸೆಕೆ ಜೋರಾಗಿ ಮತ್ತೆ ಓಡುವ ಸ್ಥಿತಿ. ಮುಂಗೈ, ಮುಖದ ಮೇಲೆ ಬೆವರುಪ್ಪು ಹರಳುಗಟ್ಟುತ್ತಿತ್ತು. ಕಲ್ಲಿಕೋಟೆ ಬಂತು. ಕೇವಲ ಕಾಫಿ ವಿರಾಮ ಮತ್ತೆ ಗುಡುಗುಡಿಕೆ. ಕೋಟ್ಟಕ್ಕಲ್ಲಿನಲ್ಲಿ ಬೈಕುಗಳಿಗೂ ದಾಹ; ಪೆಟ್ರೋಲ್ ಕುಡಿಸಿದೆವು.
ಜಾತಿ ದೇವ

ಖ್ಯಾತ ತೀರ್ಥಕ್ಷೇತ್ರ ಗುರುವಾಯೂರು ತಲಪಿದಾಗ ಹಗಲು ಕಳೆದಿತ್ತು. ದೇವಾಲಯವನ್ನು ಕೇಂದ್ರವಾಗಿಟ್ಟುಕೊಂಡು ಬೆಳೆದಂತಿದೆ ಊರು. ದೇವಳದ ಬೀದಿಯಲ್ಲಿ ಅಪಾರ ಜನಸಂದಣಿಯಿತ್ತು. ಓಡಾಡುವವರಿಗೆ ಮಳೆ ಬಿಸಿಲು ತಟ್ಟದಂತೆ ದಾರಿಗೇ ಶಾಶ್ವತವಾದ ಚಪ್ಪರವೂ ಇತ್ತು. ಆದರೆ ಮುಂದುವರಿದಂತೆ ಬೀದಿಯನ್ನು ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ಅಲಭ್ಯವಾಗುವಂತೆ ಮಾಡಿದ್ದರು. [ಈಚೆಗೆ ಉಡುಪಿಯಲ್ಲಿ, ಸುಬ್ರಹ್ಮಣ್ಯದಲ್ಲಿ ನಾವಿದನ್ನು ಕಾಣುತ್ತಿದ್ದೇವೆ. ತಿರುಪತಿಯಲ್ಲಿ ಬಹು ದೊಡ್ಡ ವಲಯವೇ ವಾಹನಮುಕ್ತವಾಗಿರುವುದನ್ನು ಕಳೆದ ವರ್ಷ ನಾವೇ ನೋಡಿಬಂದದ್ದು ಈ ಹಿಂದೆ ಹೇಳಿದ್ದೇನೆ.] ಹಾಗೆಂದು ನಮ್ಮೆಲ್ಲ ಗಂಟು ಗದಡಿಯುಕ್ತ ಬೈಕ್ಗಳನ್ನು ಧೈರ್ಯದಲ್ಲಿ ಬಿಟ್ಟುಹೋಗಬಹುದಾದ ತಂಗುದಾಣ ಸಿಗಲಿಲ್ಲ. ಅಷ್ಟರಲ್ಲಿ ನಿರ್ಬಂಧ ಸರಣಿಯಲ್ಲಿ “ಗಂಡಸರೇ, ಬರಿಮೈಗೆ ಪಂಚೆ ಸುತ್ತಿ. ಹೆಂಗಸರೇ ಸೀರೆ ರವಿಕೆಯಲ್ಲೇ ಬನ್ನಿ. ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ” ಎಂಬ ಬಲವಾದ ಬೋರ್ಡು ಕಾಣಿಸಿದಾಗ ನಮ್ಮ ನಡೆ ತಡವರಿಸಿತು. ನಾವು ಆಶಿಸದೆಯೂ ಪೋಷಿಸದೆಯೂ ಸಮಾಜ ನಮ್ಮ ಹುಟ್ಟಿನ ಆಕಸ್ಮಿಕಕ್ಕೆ ಇಂಥಲ್ಲೆಲ್ಲ ಮಹತ್ವವೇನೋ ಕೊಡುತ್ತಿತ್ತು. ಗುಂಪಿನಲ್ಲಿ ಒಂದಾಗಿ ಹೋಗುವಾಗ ನಮ್ಮ ಹೆಸರು, ಮುಖಚಹರೆಗಳಿಂದ ಪ್ರವೇಶ ಸರಾಗವೇ ಆಗುತ್ತಿತ್ತೋ ಏನೋ. ಮತ್ತೆ ಉಡುಪಿನ ಬದಲಾವಣೆ – ಇದೂ ನಮ್ಮ ರೂಢಿಯದ್ದಕ್ಕೇನೂ ಹೊರಗಿನದ್ದಾಗಿರಲಿಲ್ಲ. ಆದರೆ ಸಂದರ್ಭ ಅದಕ್ಕೆ ಪೂರಕವಾಗಿರಲಿಲ್ಲ. ಬೈಕ್ ಯಾತ್ರೆಯನ್ನು ಪರಿಗಣಿಸಿ ದೇವಕಿ ಕೇವಲ ಸಲ್ವಾರ್ ಕಮೀಜ್ಗಳನ್ನು ಮಾತ್ರ ತಂದಿದ್ದಳು (ಸೀರೆ ರವಕೆ ತಂದಿರಲಿಲ್ಲ). ಇಂಥವರಿಗಾಗಿಯೇ ಎನ್ನುವಂತೆ ಅಲ್ಲಿ ಬಾಡಿಗೆ ಸೀರೆ, ಪಂಚೆ, ಶಾಲು ಒದಗಿಸುವ ವ್ಯವಸ್ಥೆಯೂ ಇತ್ತು. ಆದರೆ ಅವುಗಳ ಶುಚಿತ್ವದ ಬಗ್ಗೆ ನಮಗೆ ವಿಶ್ವಾಸ ಬರಲಿಲ್ಲ. (ಅನ್ಯರ ರೋಗಪ್ರಸಾರ ಮಾಡಲಾರವು ಎನ್ನುವಂತಿರಲಿಲ್ಲ.) ಎಲ್ಲಕ್ಕೂ ಮುಖ್ಯವಾಗಿ ನನಗೆ ಘೋಷಣೆ ಮಟ್ಟದಲ್ಲಿ ನನ್ನ ವಿಶ್ವಮಾನವತ್ವವನ್ನು ನಿರಾಕರಿಸುವ `ಹಿಂದೂ’ತನ ಸಾರಿಕೊಳ್ಳಲು ಬದ್ಧ ವಿರೋಧವಿತ್ತು. ಅರವಿಂದ ಮತ್ತು ಬಾಲಕೃಷ್ಣರಿಗೆ ನಮ್ಮ ಹಿಂಜರಿಕೆಗಳೇನೂ ಇರಲಿಲ್ಲ. ಆದರೆ ನಮ್ಮನ್ನು ಬಿಟ್ಟು `ದೇವದರ್ಶನ’ ಮಾಡಬೇಕೆಂಬ ಭಾರೀ ಭಕ್ತಿಯೂ ಇರಲಿಲ್ಲ. ಗುರುವಾಯೂರಪ್ಪನಿಗೆ ನಮ್ಮ ದರ್ಶನ ಭಾಗ್ಯವಿಲ್ಲವೆಂದು ನಮ್ಮಷ್ಟಕ್ಕೇ ಹೇಳಿಕೊಂಡು ಮತ್ತೆ ಬೈಕೇರಿದೆವು. ಕತ್ತಲೆಗೆ ಮುನ್ನ ವಾಸ್ತವ್ಯ ಸ್ಥಾನ ಸೇರಬೇಕೆಂಬ ನಮ್ಮ ನಿಲುವಿಗೆ ಹೆಚ್ಚು ಕೊರತೆಯಾಗದಂತೆ ಮುಂದಿನ ದಾರಿ ಹಿಡಿದೆವು. [ಸಂಪಾದಕೀಯ ಟಿಪ್ಪಣಿ: ಜಿ.ಟಿ.ನಾ – ಮದ್ದುಂಟೆ ಮನುಷ್ಯಕೃತ ಮೋಸಗಳಿಗೆ, ವಂಚನೆಗಳಿಗೆ,ಕೋಟೆ ಕೊತ್ತಲ ಕಂದಕ ದ್ವೇಷಗಳಿಗೆ?]

[ನನ್ನ ಮೈಸೂರಿನ ದಿನಗಳಲ್ಲೊಮ್ಮೆ (೧೯೬೯-೭೪) ಮಡಿಕೇರಿಯಿಂದ ಬಂದಿದ್ದ ಭಾಂತೆಮ್ಮಜ್ಜಿಯ ಜತೆಗೆ ನನ್ನಮ್ಮನನ್ನೂ ನಂಜನಗೂಡಿಗೆ ಕರೆದೊಯ್ದಿದ್ದೆ. ದೇವ ದರ್ಶನ, ವಿಶೇಷ ಸೇವೆಗಳೆಲ್ಲವನ್ನು ಮುಗಿಸಿಯಾಗುವಾಗ ಮಟಮಟ ಮಧ್ಯಾಹ್ನವಾಗಿತ್ತು. ಸೇವಾಕೈಂಕರ್ಯದಿಂದ ನಮ್ಮನ್ನು `ಗುರುತಿಸಿದ’ ಅರ್ಚಕರು “ಎದುರು ಕೌಂಟರಿನಲ್ಲಿ ಭೋಜನಪ್ರಸಾದಕ್ಕೆ ಕೂಪನ್ ಕೊಡ್ತಾರೆ. ತೊಗೊಂಡು ಹೋಗಿ” ಸೂಚಿಸಿದರು. ಇಂಥಲ್ಲೆಲ್ಲಾ ಆರತಿ, ತೀರ್ಥ, ಗಂಧಹೂಗಳನ್ನು ನಾನೆಂದೂ ಮೇಲೆ ಬಿದ್ದು ತೆಗೆದುಕೊಂಡದ್ದಿಲ್ಲ. ಮುಖದಾಕ್ಷಿಣ್ಯಕ್ಕೆ ಪಡೆಯಲೇಬೇಕಾದ ಅನಿವಾರ್ಯತೆ ಬಂದಲ್ಲಿ, ಗೆಳೆಯ ಪಂಡಿತಾರಾಧ್ಯರಂತೆ ಘೋಷಣೆ ಹಾಕಿ ಕೊಡುವವರನ್ನು ಮುಜುಗರಕ್ಕೆ ಸಿಕ್ಕಿಸಿದ್ದೂ ಇಲ್ಲ! ತುಳಸಿಯದ್ದೋ ಕರ್ಪೂರದ್ದೋ ಪರಿಮಳಯುಕ್ತ ನೀರೊಂದು ಚಮಚ ಕುಡಿಯುವುದರಿಂದ, ಹೂವೋ ಗಂಧವನ್ನೋ ಸ್ವೀಕರಿಸುವುದರಿಂದ ನನ್ನ ತತ್ವಗಳಿಗೇನೂ ಬಾಧೆಯಾಗುವುದಿಲ್ಲ ಎನ್ನುವುದು ನನ್ನ ಧೋರಣೆ. ಪ್ರದರ್ಶನ ಲಾಂಛನದಂತಲ್ಲದೆ ಗಂಧಪೂಸಿಕೊಳ್ಳುವುದರಲ್ಲೂ ಯಾವುದೇ ಸಸ್ಯ ವಿಶೇಷವನ್ನು (ಹೂವೋ ಪತ್ರೆಯೋ) ತತ್ಕಾಲೀನವಾಗಿ ಕಿಸೆ ಸೇರಿಸುವುದರಲ್ಲೂ ನನಗೇನೂ ಮುಜುಗರವೂ ಇರಲಿಲ್ಲ. ಹಾಗೇ ಪಂಚಾಮೃತ, ಸಪಾತ್ ಭಕ್ಷ್ಯ, ಲಡ್ಡು, ಅಪ್ಪ, ಪಂಚಕಜ್ಜಾಯ ಮುಂತಾದ ರುಚಿಕರವಾದ ಭೋಜ್ಯಗಳನ್ನು ಪ್ರಸಾದರೂಪದಲ್ಲಿ ಕೊಡುವಾಗಂತು ಸ್ವೀಕರಿಸುವಲ್ಲಿ ನಾನು ಯಾವ ದಾಕ್ಷಿಣ್ಯವೂ ಮಾಡಿದವನಲ್ಲ! ಸರಿ, ನಂಜುಂಡೇಶ್ವರನ ಹೆಸರಿನಲ್ಲಿ ಊಟ ಯಾಕಾಗಬಾರದೆಂದು ಕೌಂಟರಿಗೇನೋ ಹೋದೆ. ಆದರೆ ಅಲ್ಲಿ ಸ್ಪಷ್ಟ ಬ್ರಾಹ್ಮಣ ಭೋಜನಕ್ಕೆ ಮಾತ್ರ ಉಚಿತ ಕೂಪನ್ ವ್ಯವಸ್ಥೆಯಿತ್ತು. ನಾನು ಎಲ್ಲರನ್ನೂ ಹಸಿಹೊಟ್ಟೆಯಲ್ಲೇ ಮೈಸೂರಿಗೇ ಮರಳಿಸಿಬಿಟ್ಟೆ. ಜಾತಿ ವ್ಯವಸ್ಥೆಯ ಅವಮಾನವನ್ನು ಅಮ್ಮ ಅಜ್ಜಿಯರು ತಿರಸ್ಕರಿಸುವವರೇ. ಆದರೆ ಅಂದು ಅಲ್ಲಿ ತಮಗೆ `ಸಹಜ’ವಾಗಿ ದಕ್ಕುತ್ತಿದ್ದ ಪ್ರಸಾದವನ್ನು `ಬುದ್ಧಿಜೀವಿ’ಯಾಗಿ ನಾನು ತಪ್ಪಿಸಿದ್ದಕ್ಕೆ ಅಮ್ಮ ಈಗಲೂ ನನ್ನನ್ನು ಕ್ಷಮಿಸಿಲ್ಲ!

ಅನಂತರದ ದಿನಗಳಲ್ಲಿ ಜೇಸುದಾಸ್, ಜಾನ್ ಹಿಗ್ಗಿನ್ಸ್ ಭಾಗವತ (ಇಂದಿರಾಗಾಂಧಿ ಕೂಡಾ) ಆದಿಯಾಗಿ ಹಲವರ ಪ್ರಾಮಾಣಿಕ ಬಯಕೆಗೆ ವಿರುದ್ಧವಾಗಿ ಗುರುವಾಯೂರಪ್ಪನ ಕಾವಲಿನವರು ಪ್ರವೇಶ ನಿರಾಕರಿಸಿದ್ದು ಕೇಳಿದ ಮೇಲೆ ನಾವು ದೊಡ್ಡವರ ವಲಯದಲ್ಲಿದ್ದೇವೆ ಎಂದು ಹೆಮ್ಮೆ ಪಟ್ಟುಕೊಂಡೆ!]
ದಾರಿ ಮೊಟಕಾದವರು

ಅತ್ರಿ ಬುಕ್ ಸೆಂಟರ್ ನನಗೆ ಬರಿಯ ಹೊಟ್ಟೆಪಾಡಿನ ಮಳಿಗೆಯಾಗಿರಲಿಲ್ಲ. ಅಲ್ಲಿನ ಪುಸ್ತಕಗಳಲ್ಲಿ ನನಗೆ `ಮಾಲು’ ಮೀರಿದ ಆಸಕ್ತಿಯಿದ್ದಂತೆ, ಅಲ್ಲಿಗೆ ಬರುವ ಪ್ರತಿ ವ್ಯಕ್ತಿಯಲ್ಲೂ `ಗಿರಾಕಿ’ ಮೀರಿದ ಕುತೂಹಲ ಕಾಡುತ್ತಿತ್ತು. ಹೀಗೇ ನನಗೆ ಸಿಕ್ಕಿಬಿದ್ದ ವ್ಯಕ್ತಿ – ಬಾಲಕೃಷ್ಣ ವರ್ಮ (ಬಿಕೆ ವರ್ಮ). ಈತ ಕೇರಳದ ರಾಜವಂಶದ ಕುಡಿ. ತಂದೆ – ರವಿವರ್ಮ, ಸಾಂಪ್ರದಾಯಿಕ ವಲಯಗಳಲ್ಲಿ ಕೊಚ್ಚಿಯ ರಾಜ. ಆದರೆ ಕಾಲಧರ್ಮಾನುಸಾರ ಆದಾಯ ಕರ ವಿಭಾಗದ ಹಿರಿಯ ಅಧಿಕಾರಿಯಾಗಿ, ದಕ್ಷತೆಯ ಖ್ಯಾತಿ ಗಳಿಸಿದ್ದರು. ಬಾಲಕೃಷ್ಣ ವರ್ಮ ಇನ್ನೂ ಎಸ್ಸೆಸ್ಸೆಲ್ಸಿ ಹಂತದಲ್ಲೇ ಇದ್ದಾಗ ಅಕಾಲಿಕವಾಗಿ ತಂದೆಯನ್ನು ಕಳೆದುಕೊಂಡರು (೧೯೭೧). ತಾಯಿ – ರಾಧಾವರ್ಮ, ತ್ರಿಚೂರಿನಲ್ಲಿ ನೆಲೆಸಿದರು. ವಿದ್ಯಾರ್ಥಿ ಬಿಕೆ ವರ್ಮ ವೈದ್ಯಕೀಯ ಓದನ್ನು ಮಣಿಪಾಲದಲ್ಲಿ ತೊಡಗಿ, ೧೯೭೯ರ ಸುಮಾರಿಗೆ ಮಂಗಳೂರಿಗೆ ವರ್ಗಾಯಿಸಿಕೊಂಡಿದ್ದರು. ರಾಜಕುಟುಂಬದ ಹಿನ್ನೆಲೆಗೆ ಸಹಜವಾಗಿ ಇವರ ಮಂಗಳೂರು ಮೊಕ್ಕಾಂ ಭರ್ಜರಿಯೇ ಇತ್ತು. ಹಳೆಗಾಲದ ದೊಡ್ಡ ಬಂಗ್ಲೆಯೊಂದನ್ನು ಬಾಡಿಗೆಗೆ ಹಿಡಿದು, ಓಡಾಟಕ್ಕಾಗಿ ಕಾರು, ಹವ್ಯಾಸಕ್ಕಾಗಿ ಬುಲೆಟ್ ಬೈಕ್, ಅಡುಗೆಗೊಂದು ಜನ, ಇತರ ಸಹಾಯಕ್ಕೆರಡು ತೈನಾತಿಗಳು, ಪರಿವಾರಕ್ಕಾಗಿ ಹದಿನೇಳು ವಿವಿಧ ತಳಿಗಳ ನಾಯಿಗಳನ್ನೂ ಇಟ್ಟುಕೊಂಡಿದ್ದರು. ವರ್ಮನಿಗೆ ಓದು, ಚಿತ್ರಗಾರಿಕೆಗಳಲ್ಲಿ ಅಪಾರ ಆಸಕ್ತಿ. ಸಹಜವಾಗಿ ನನ್ನಂಗಡಿಯ ದೊಡ್ಡ ಗಿರಾಕಿ. ಟಿನ್-ಟಿನ್, ಆಸ್ಟೆರಿಕ್ಸ್ ಮುಂತಾದ ಅದ್ಭುತ, ಆದರೆ ದುಬಾರೀ ಚಿತ್ರಕಥಾ ಸರಣಿಯ ಎಲ್ಲಾ ಪುಸ್ತಕಗಳ ಸಹಿತ ಈತ ನನ್ನಂಗಡಿಯಿಂದ ಕೊಂಡ ಪುಸ್ತಕಗಳಿಗೆ ಲೆಕ್ಕ ಇಲ್ಲ. ಸಿನಿಮಾ ಅದರಲ್ಲೂ ರಹಸ್ಯಾತ್ಮಕ, ಭಯಾನಕ ಚಿತ್ರಗಳೆಂದರೆ ಪಂಚಪ್ರಾಣ; ಆ ಕಾಲಕ್ಕೆ ಮಂಗಳೂರಿನಲ್ಲಿ ಇಂಗ್ಲಿಶ್ ಚಿತ್ರಗಳಿಗೆ ಹೆಸರುವಾಸಿಯಾದ ನ್ಯೂಚಿತ್ರ ಟಾಕೀಸಿನ ಖಾಯಂ ಗಿರಾಕಿ ಬಿಕೆ ವರ್ಮ! ವರ್ಮ ವೈದ್ಯಕೀಯ ಓದಿನಲ್ಲಿ ತೊಡಗಿದ್ದಂತೆ, ವೈವಾಹಿಕ ಅಗತ್ಯವನ್ನೂ ಮಂಗಳೂರಿನಲ್ಲೇ ಪೂರೈಸಿಕೊಂಡದ್ದು ಒಂದು ಆಕಸ್ಮಿಕ.

ಮಂಗಳೂರಿನ ಹಿರಿಯ ಸಂಗೀತ ವಿದ್ವಾನ್ ಗೋಪಾಲಕೃಷ್ಣ ಅಯ್ಯರ್ ಅವರ ಪತ್ನಿ – ಸ್ವತಃ ವೀಣಾ ಕಲಾವಿದೆ ರಾಜಲಕ್ಷ್ಮಿ ಅಯ್ಯರ್. ರಾಜಲಕ್ಷ್ಮಿ ಅಯ್ಯರ್ ಅವರ ತಂದೆ ಟಿ.ಜಿ. ವಿಶ್ವನಾಥ ಭಾಗವತರ್, ಕೊಚ್ಚಿಯ ರಾಜವಂಶದ ಆಸ್ತಾನ ವಿದ್ವಾಂಸ. ಸಹಜವಾಗಿ ವಿಶ್ವನಾಥ ಭಾಗವತರ್ ಬಿಕೆ ವರ್ಮನ ತಾಯಿ – ರಾಣಿ, ರಾಧಾವರ್ಮರಿಗೆ ಸಂಗೀತ ಗುರುಗಳೂ ಆಗಿದ್ದರು. ಈ ಪರಿಚಯದ ಬಲ, ಮಂಗಳೂರಿನಲ್ಲಿ ಹೆಚ್ಚಿನ ಆಪ್ತತೆಯ ಸುಳಿಗೆ ತಂದು, ಗೋಪಾಲಕೃಷ್ಣ ಅಯ್ಯರ್ ದಂಪತಿಯ ಮಗಳು ಶೋಭಾರನ್ನು ಬಿಕೆ ವರ್ಮ ವರಿಸುವವರೆಗೂ ಬೆಳೆಯಿತು. ಮುಂದೆ ರಾಜಕುಟುಂಬದ ತಾಪತ್ರಯಗಳಲ್ಲಿ ವರ್ಮರಿಗೆ ಮಂಗಳೂರಿನ ವಾಸ್ತವ್ಯವನ್ನು ಐದು ವರ್ಷಗಳ ಕಾಲ ಉಳಿಸಿಕೊಳ್ಳುವುದಕ್ಕೂ ಕ್ರಮದಂತೆ ಓದು ಪೂರೈಸುವುದಕ್ಕೂ ಆಗಲಿಲ್ಲ. ವರ್ಮ ದಂಪತಿ `ಊರಿ’ಗೆ ಮರಳಿದ್ದೂ ಆಯ್ತು. ಗೆಳೆಯ ವರ್ಮ ಸಕಾಲದಲ್ಲಿ ಡಾಕ್ಟರ್ ಆಗದಿದ್ದರೂ ಡಾಟರ್ ಪಡೆದರು; ಅವರಿಗೊಂದು ಮಗಳು ಜನಿಸಿದ್ದೂ (ಸ್ಯಾಲಿ ಕ್ರಿಸ್ಟಿ) ಆಯ್ತು. ಹೆಚ್ಚಾಗಿ ದೂರವಾಣಿಯಲ್ಲಿ, ಕೆಲವೊಮ್ಮೆ ಪತ್ರಗಳಲ್ಲಿ, ವರ್ಷಕ್ಕೊಮ್ಮೆಯಾದರೂ `ಮಾವನ ಮನೆ’ ನೆಪದಲ್ಲಿ ವರ್ಮ ದಂಪತಿಗಳ ಮುಖತಃ ಭೇಟಿಗಳಿಂದ ನಮ್ಮ ಸ್ನೇಹ ಗಟ್ಟಿಯಾಗಿಯೇ ಉಳಿದಿತ್ತು. ಅದು ಅನಿರೀಕ್ಷಿತವಾಗಿ ಈ ಯಾತ್ರೆಯಲ್ಲಿ ಸಾರ್ಥಕ್ಯವನ್ನೂ ಪಡೆಯಿತು!

ನಾನು ಯಾವುದೇ ಸಾಹಸ ಯಾತ್ರೆಗಳನ್ನು ಆಯೋಜಿಸುವಾಗ ಪ್ರಾಯೋಗಿಕತೆ ಮತ್ತು ಮಿತವ್ಯಯವನ್ನು ಮುಖ್ಯವಾಗಿ ಗಮನಿಸುತ್ತೇನೆ. ಯಾತ್ರೆಗಳಲ್ಲಿ ಸ್ಪಷ್ಟ ಕಾರಣಗಳಿಲ್ಲದಿದ್ದರೆ ನಮ್ಮ ಬೆಳಿಗ್ಗೆಗಳು ಸದಾ ಸೂರ್ಯೋದಯಕ್ಕೂ ಮುನ್ನವೇ ತೊಡಗುತ್ತವೆ. ಆದರೆ ದಿನದ ಓಟ, ವೀಕ್ಷಣೆಗಳೆಲ್ಲವನ್ನು ಸುಮಾರು ಮುನ್ನೂರರಿಂದ ನಾನೂರು ಕಿಮೀ ಮಿತಿಯಲ್ಲಿಟ್ಟು, ಕತ್ತಲೆಗೆ ಮುನ್ನ ವಾಸ್ತವ್ಯ ಹೂಡುವುದನ್ನು ಬಯಸುತ್ತೇನೆ. ಹೀಗೆ ನನ್ನ ಯೋಜನಾ ಹಂತದ ಚೌಕಾಸಿಗಳು ನಡೆದಿದ್ದಾಗಲೇ ಬಿಕೆ ವರ್ಮ ನಮಗೆರಡು ಕಡೆಯ ಪೂರ್ಣ ವಸತಿ ಸಮಸ್ಯೆ ನೀಗಿದ್ದರು. ಮೊದಲು ತ್ರಿಶ್ಶೂರು ಅಥವಾ ತ್ರಿಚೂರು, ವರ್ಮರ ಮೂಲ ಮನೆ. ಅಲ್ಲಿ ವೈಯಕ್ತಿಕ ನೆಲೆಯಲ್ಲಿ ಸಾಂಪ್ರದಾಯಿಕ ರಾಜಮಾತೆಯ ವಿಧಿಗಳನ್ನು ಪೂರೈಸಿಕೊಂಡು ನೆಲೆಸಿದ್ದ ವರ್ಮರ ತಾಯಿ ನಮ್ಮ ಆತಿಥೇಯರು. ಸ್ವತಃ ವರ್ಮ ದಂಪತಿ, ಕುಟುಂಬದ ಉದಕಮಂಡಲದ ವಾಸ್ತವ್ಯವನ್ನು ಊರ್ಜಿತಲ್ಲಿಟ್ಟುಕೊಂಡು ಕೋತಗೇರಿಯಲ್ಲಿ ಬಿಡಾರ ಹೂಡಿದ್ದವರು, ನಮ್ಮ ಯಾನದ ಕೊನೆಯ ಹಂತವನ್ನು ಸುಧಾರಿಸಿ ಕೊಡಲು ಕಾದಿದ್ದರು.

ಬಿಕೆ ವರ್ಮರ ತಂದೆ ಬಹಳ ಹಿಂದೆಯೇ ಕಾಲಕ್ಕೆ ಸಂದುಹೋಗಿದ್ದರು. ಆ ಕಾಲಕ್ಕೇ ತಾಯಿ, ಅಂದರೆ ರಾಜಮಾತೆ, ತಮ್ಮ ಅಸಂಖ್ಯ ಅವಕಾಶಗಳಲ್ಲಿ ತ್ರಿಚೂರನ್ನು ಆಯ್ದುಕೊಂಡು ನೆಲೆಸಿದ್ದರು. ಅಲ್ಲಿನ ಕರಿಂಪಟ್ಟು ಮನೆಗೆ ಅರಮನೆಯ ತೋರಿಕೆಗಳಿರಲಿಲ್ಲ ಆದರೆ ಧಾರಾಳತನ, ವ್ಯವಸ್ಥೆಯಿತ್ತು. ಅವರು ಮನೆಗೆ ತಾಗಿದಂತೇ ಇದ್ದರೂ ಸ್ವತಂತ್ರ ಅನುಕೂಲವಿದ್ದ ವಿಸ್ತಾರ ಕೋಣೆಯನ್ನೇ ನಮಗೆ ಬಿಟ್ಟಿದ್ದರು. ಪಯಣದ ಕೊಳೆ ಹಾಗೂ ಅರೆವಾಸಿ ಬಳಲಿಕೆಯನ್ನೂ ತೊಳೆಯಲು ಧಾರಾಳ ನೀರು, ಕರಾವಳಿಯ ಬಿಸಿಲ ದಿನಗಳ ಸುಖನಿದ್ರೆಗೆ ಅವಶ್ಯವಾದ ಫ್ಯಾನು ಸಿಕ್ಕ ಮೇಲೆ ನಾವು ಬಯಸುವುದೇನೂ ಇರಲಿಲ್ಲ. ನಮ್ಮ ಸಂಖ್ಯಾಬಲ, ವೇಳಾಪಟ್ಟಿಯ ಅನಿಶ್ಚಿತತೆ ಮತ್ತು ರುಚಿಗಳ ವ್ಯತ್ಯಾಸವನ್ನು ಹೊಂದಿಸುವಲ್ಲಿ ಯಾವುದೇ ಆತಿಥೇಯರು ಬಳಲಬಾರದೆಂದು ನಾವು ಕರಾರನ್ನೇ ಹೇರುತ್ತಿದ್ದೆವು. ಗುರುವಾಯೂರಿನಲ್ಲಿ ಉಳಿಸಿದ ಸಮಯ ನಮ್ಮನ್ನು ಏಳೂವರೆಗೇ ತ್ರಿಚೂರು ಮುಟ್ಟಿಸಿತ್ತು. ನಾವು ಮೊದಲು ಹೋಟೆಲ್ಲಿನಲ್ಲಿ ಊಟ ಮುಗಿಸಿ ಅನಂತರ ಕರಿಂಪಟ್ಟು ಮನೆ ಹುಡುಕಿ, ಸೇರಿದೆವು. ಅಲ್ಲಿ ಅರುಣ್ ನಾಯಕ್ ಜೋಡಿ ಕಾದಿರುತ್ತದೆಂದು, ಅಲ್ಲವಾದರೆ ತಡವಾಗಿಯಾದರೂ ಬಂದೀತೆಂದು ನಾವು ನಿರೀಕ್ಷಿಸಿದ್ದು ತಪ್ಪಾಯಿತು. ಒಟ್ಟು ಪ್ರವಾಸ ಮುಗಿದ ಮೇಲೆ ತಿಳಿದದ್ದಿಷ್ಟು:

ಅರುಣ್ ಜೋಡಿಗೆ ಅರವಿಂದರ ವಾಸ್ತವ್ಯದ ಗುರುತಿರಲಿಲ್ಲ, ನಾವು ನಿಂತದ್ದಕ್ಕೂ ವಿಶೇಷ ಗಮನಹರಿಸಲಿಲ್ಲ. ಮೊದಲು ಉಳ್ಳಾಲ ಸಂಕದವರೆಗೂ ನಿಧಾನಕ್ಕೇ ಗುಡುಗುಡಾಯಿಸಿದರಂತೆ. ಯಾರೂ ಹಿಂಬಾಲಿಸುವುದು ಕಾಣದೇ ನಿಂತರಂತೆ. ಐದು ಮಿನಿಟು ಯೋಚಿಸಿ, ಮತ್ತೆ ತಾಳ್ಮೆ ತಪ್ಪಿ ಹುಡುಕುತ್ತಾ ವಾಪಾಸಾದರಂತೆ. ಸನ್ನಿವೇಶದ ಪಿತೂರಿಯಲ್ಲಿ, ಅದುವರೆಗೆ ದಾರಿಬದಿಯಲ್ಲೇ ಇದ್ದ ನಾನೂ ತಾಳ್ಮೆ ತಪ್ಪಿ ಆಗಷ್ಟೇ ಕೊಳಚೆ ಜಲಮಂಡಳಿಯ ವಠಾರಕ್ಕೆ ಹೋಗಿದ್ದೆ. ಅರುಣ್ ದಾರಿಬದಿಯನ್ನಷ್ಟೇ ಗಮನಿಸಿಕೊಂಡು, ಸರಾಗ ಬೈಕೋಡಿಸಿ ಬ್ಲೇಝಿಮನೆ ಸೇರಿ ಕಾಯುತ್ತಾ ನಿಂತರು. ಅಲ್ಲಿ ಅರ್ಧ ಒಂದು ಗಂಟೆ ಕಳೆದು, ನಿರಾಶೆಯಲ್ಲಿ ಮನೆ ಸೇರಿದರು. ಎಷ್ಟೋ ಸಮಯ ಕಳೆದು ನನ್ನ ಅಂಗಡಿ ನೆನಪಾಯ್ತಂತೆ. ಅಲ್ಲಿಗೊಮ್ಮೆ ದೂರವಾಣಿಸಿ, “ಅಶೋಕ್…” ಎಂದು ವಿಚಾರಿಸಲು ಮಾತು ತೆಗೆದರಂತೆ. ಇವರ ಗೊಂದಲಗಳ ಅರಿವೇನೂ ಇಲ್ಲದ ನನ್ನ ತಂದೆ ಸಹಜ ಖಡಕ್ ಧ್ವನಿಯಲ್ಲಿ “ನಮಸ್ಕಾರ ಅತ್ರಿ ಬುಕ್ ಸೆಂಟರ್” ಹೇಳಿದವರು, ಅಷ್ಟೇ ಚುರುಕಾಗಿ “…ಇಲ್ಲ, ಅಶೋಕ ಇಲ್ಲ, ದ.ಭಾರತ ಪ್ರವಾಸ ಹೋಗಿದ್ದಾನೆ, ವಾಪಾಸಾಗಲು ಇನ್ನು ಹತ್ತು ದಿನ. ಏನಾದರೂ ಹೇಳಬೇಕೇನು?” ಅರುಣ್ ಗೆ ಬಾಯಿ ಕಟ್ಟಿತು, ಫೋನಿಟ್ಟರಂತೆ! ಅವರ ಕಿಸೆಯಲ್ಲೂ ಇದ್ದ ಸವಿವರ ನಕ್ಷೆ ನೆನಪಿಗೆ ಬರುವಾಗ ತುಂಬಾ ತಡವಾಗಿತ್ತಂತೆ!
ಹಿಂಬಾಲಿಸುವಲ್ಲಿ ಏಕಾಗ್ರತೆಯೋ ಸಿದ್ಧಯೋಜನೆಯಲ್ಲಿ ನಿಷ್ಠೆಯೋ ಕೊನೆಗೆ ಸ್ವತಂತ್ರ ಮಾರ್ಗರೂಪಣಕ್ಕೆ ಛಲವೋ ಇಲ್ಲದವರ ದಾರಿ ತೀರಾ ಮೊಟಕೇ ಸರಿ; ಸಾಹಸಯಾನಗಳೇನಿದ್ದರೂ ಜಾಕಿಗೇರಿಸಿ ಚಾಲೂ ಮಾಡಿದ ಬಂಡಿಯಂತೆ ನಿಂತಲ್ಲೇ ಮುಲುಕು!

(ಮುಂದುವರಿಯಲಿದೆ)