೧. ಬಳಸು ದಾರಿಯಲ್ಲಿ
‘ಏಪ್ರಿಲ್ ೧೬ರಿಂದ ಜೂನ್ ೧ರವರೆಗೆ ಬಿಸಿಲೆ ದಾರಿ ಬಂದ್’ ಹಾಸನ ಜಿಲ್ಲಾಧಿಕಾರಿ ಪ್ರಕಟಣೆ ಬಂತು. ಗಡಿಬಿಡಿಯಾಗಬೇಡಿ, ಇದು ಕೋವಿಡ್ ಸಂಬಂಧಿಯಲ್ಲ. ನಾನೇ ಹಿಂದೆ ಹೇಳಿದ್ದ ಕುಳ್ಕುಂದ – ಬಿಸಿಲೆ ನಡುವೆ ಬಾಕಿಯುಳಿದಿದ್ದ ಮೂರು ಕಿಮೀ ಕಾಂಕ್ರಿಟೀಕರಣ ಪೂರೈಕೆಗೆ. ಆದರೆ ಆರಂಭಕ್ಕೆ ತಡ, ಮುಕ್ತಾಯ ಎಂದೂ ಇಲ್ಲ ಎನ್ನುವ ನಮ್ಮ ಸರಕಾರೀ ಕಾಮಗಾರಿಗಳು ನಂಬಲರ್ಹವಲ್ಲ. ಹಾಗಾಗಿ ನಾನು ಬಿಸಿಲೆ ಗಣೇಶರಲ್ಲಿ ಚರವಾಣಿಸಿ ಕೇಳಿದೆ. “ಅಯ್ಯೋ ಮೂರು ಕಿಮೀ ಕಾಂಕ್ರೀಟಿಗೆ ಒಂದೂವರೆ ತಿಂಗಳು ಎಲ್ ಸಾಲುತ್ತೇ? ಹಂಗಾಗಿ ಎಂಟು ದಿನ ಮೊದಲೇ ರೋಡ್ ಕ್ಲೋಸ್ ಮಾಡಿ, ಕೆಲಸ ಜೋರಾಗಿ ನಡೆದಿದೆ…” ಎಂದರು.
‘ಕಪ್ಪೇಗೂಡಿ’ಗೆ ಮೇಲ್ಟಾಂಕಿ ಕೂರಿಸಿ ಬಂದ ಮೇಲೆ ನಾನು ಅತ್ತ ತಲೆ ಹಾಕಿರಲಿಲ್ಲ. ಬಾಕಿಯುಳಿದ ಚಿಲ್ಲರೆ ಕೆಲಸ ಸೇರಿಸಿಕೊಂಡು, ಬಳಸು ದಾರಿಯಲ್ಲಿ ಅಶೋಕವನಕ್ಕೆ ಹೋಗುವ, ಮೂರು ದಿನದ ಮೊಕ್ಕಾಂ ಮಾಡುವ ಯೋಜನೆ ಹಾಕಿದೆ. ಹಿಂದಾದರೋ ಶಿರಾಡಿಘಾಟ್ ಏರಿ ಸಕಲೇಶಪುರಕ್ಕೂ ಮೂರು ಕಿಮೀ ಮೊದಲು ಸಿಗುವ ಮಂಜರಾಬಾದಿನಲ್ಲಿ ಬಲ ಹೊರಳಬೇಕಿತ್ತು. ಆದರೆ ಈಗ ಹದಿನಾರು ಕಿಮೀ ಮೊದಲೇ ಸಿಗುವ ಮಾರನಹಳ್ಳಿಯಲ್ಲಿ ಕವಲಾದರೆ ಸಾಕು. ಎತ್ತಿನಹೊಳೆ ಯೋಜನೆಯ ಉಪೋತ್ಪನ್ನವಾದ ಕಾಂಕ್ರೀಟ್ ದಾರಿ ನಮಗೆ ಮೂವತ್ತಕ್ಕೂ ಮಿಕ್ಕು ಉಳಿತಾಯದ ದಾರಿ.
ಶುಕ್ರ (೧೬-೪-೨೧) ಬೆಳಿಗ್ಗೆ ಒಂಬತ್ತು ಗಂಟೆಗೆ ಚತುರಂಗ ಸೇನೆ ಮಂಗಳೂರು ಬಿಟ್ಟಿತು. ಮೂರು ದಿನದ ಊಟ, ವಾಸದ ಲೆಕ್ಕದಲ್ಲಿ ಕಾರಿನೊಳಗಿನ ಭರ್ತಿ ಹೊರೆ ಹೇಗೂ ಇತ್ತು. ಅಲ್ಲದೆ ಕಾರಿನ ತಲೆಯ ಮೇಲೆ ೭*೩*೧.೫ ಅಡಿಯ ಒಂದು ದೊಡ್ಡ ಕಪಾಟು, ೪*೪*೦.೫ ಅಡಿಯ ಒಂದು ಸಣ್ಣ ಕಪಾಟು, ದೊಡ್ಡ ತಾರ್ಪಾಲು, ಒಂದಷ್ಟು ಹಳೇ ಗೋಣಿ ಕಟ್ಟೆಲ್ಲ ಹೇರಿದ್ದೆ. ಕಯಾಕ್, ಒಂಟಿ ಚಕ್ರದ ಗಾಡಿ, ಏಣಿ ಎಂದೇನೆಲ್ಲಾ ಸಾಗಿಸಿದ ಅನುಭವವೇನೋ ನನ್ನಲ್ಲೂ ಕಾರಿಗೂ ಧಾರಾಳ ಇತ್ತು. ಆದರೆ ಹೆದ್ದಾರಿ, ಜಿಲ್ಲಾ ಗಡಿ ಠಾಣೆಗಳನ್ನು ಹಾದು ಹೋಗುವಾಗ ಯಾವುದಾದರೂ ತನಿಖೆ, ತಕರಾರು ಬಂದೀತೆಂಬ ಮನ ಮಿಡುಕುತ್ತಿತ್ತು. ಅದೃಷ್ಟಕ್ಕೆ ಪಯಣ ನಿರ್ವಿಘ್ನವಾಯ್ತು.
೨. ಅಭಿವೃದ್ಧಿಯ ಕಳ್ಳ ಬಸಿರು ನಂಬಿ…
ಉಪ್ಪಿನಂಗಡಿಯಲ್ಲಿ ಸಣ್ಣ ಕಾಫಿ ವಿರಾಮ. ಅಲ್ಲಿ ಬುತ್ತಿಯೂಟವನ್ನೂ ಕಟ್ಟಿಸಿಕೊಂಡು, ಶಿರಾಡಿ ದಾರಿಯಲ್ಲಿ ಮುಂದುವರಿದೆವು. ಮಾರನಹಳ್ಳಿ ಕವಲು ನಮಗೆ ಎತ್ತಿನಹೊಳೆ ಯೋಜನೆಯಿನ್ನೂ ಸರಕಾರೀ ಆದೇಶದಲ್ಲಿದ್ದಾಗಲೇ ಹೆಚ್ಚಿನ ಪರಿಚಯಕ್ಕೆ ಸಿಕ್ಕಿತ್ತು. ಇಲ್ಲಿನ ದಾರಿಯನ್ನು ವಿವಿಧ ರೂಪಗಳಲ್ಲಿ ಅಂದರೆ, ಕಷ್ಟದಲ್ಲಿ ನಡೆದು, ಜೀಪೇರಿ ಹುಡಿಯಾಗಿ, ಕೊನೆಗೆ ಕಾರಿನಲ್ಲಿ ತೂಕಡಿಸಿಯೂ ಓಡಾಡಿ, ಅನುಭವಿಸಿದ್ದೇನೆ. ಮೂರು ಅಣೆಕಟ್ಟೆಗಳ ನಿರ್ಮಾಣ, ಕೊಳವೆ ಸಾಲುಗಳ ಹೂಳಾಟ, ಪವರ್ ಲೈನುಗಳಿಗಾಗಿ ಧ್ವಂಸ ಎಲ್ಲವನ್ನೂ ಕಂಡಿದ್ದೇನೆ. ರಕ್ಕಸ ಯಂತ್ರವೊಂದು ಗೊಸರಿನಲ್ಲಿ ಸಿಲುಕಿಕೊಂಡು ವರ್ಷವೆಲ್ಲಾ ಅತಂತ್ರವಾಗಿದ್ದದ್ದು, ಕೊಚ್ಚಿ ಹೋದ ಕೊಳವೆಸಾಲು, ಕುಸಿದು ಬಿದ್ದ ಸೇತುವೆ, ಹಳತನ್ನು ಮೇಲೆತ್ತುವುದಕ್ಕಿಂತ ಪರ್ಯಾಯಗಳನ್ನು ಹೇರುವುದನ್ನೂ ಕಾಣುತ್ತಲೇ ಬಂದಿದ್ದೇನೆ. ಹಾಳಾದವನ್ನು, ಹಳತನ್ನು ಕಳಚಿ ಒಯ್ಯುವ ಕೆಲಸವನ್ನು ಸಾಮಾನ್ಯವಾಗಿ ಯಾವ ‘ಅಭಿವೃದ್ಧಿ ಯೋಜನೆ’ಗಳೂ ಮಾಡುವುದಿಲ್ಲ. ಜನ ಸ್ಪಷ್ಟವಾಗಿ ಕಸಕೊಳಕನ್ನು ನೆಲ, ನೀರು, ಗಾಳಿಗೆ ಸೇರಿಸುವಂತೇ ನಿರುಪಯುಕ್ತವನ್ನು ಭಾರೀ ಮೊತ್ತದಲ್ಲಿ ಹಾಗೇ ಪ್ರಕೃತಿಯಲ್ಲುಳಿಸುವುದೂ ಪರಿಸರ ವಿರೋಧಿಯೇ ಎಂದು ಹೇಳುವವರು ಕಡಿಮೆ. (ಸಣ್ಣ ಉದಾ: ಬಿಸಿಲೆ ಘಾಟಿನ ದಾರಿ ಕಾಂಕ್ರಿಟೀಕರಣದಲ್ಲಿ ಅಕಾಲಿಕ ಮಳೆ ಬಂದೋ, ದಾಸ್ತಾನಿಗೆ ಪಸೆ ನುಗ್ಗಿಯೋ ಗಟ್ಟಿಯಾದ ಸುಮಾರು ಏಳು ಚೀಲಗಳನ್ನು ಅಶೋಕವನದ ತೊರೆ ಪಾತ್ರೆಯಿಂದ ನಾವು ತೆಗೆದಿದ್ದೇವೆ.) ಭೂಕುಸಿತದ ಅವಶೇಷಗಳು ಹಾಗೂ ಯಾವುದೇ ನಿರ್ಮಾಣ ಕೆಲಸದಲ್ಲಿನ ಮಿಗತೆ ಸಾಮಗ್ರಿಗಳಾದ ಜಲ್ಲಿ, ಮರಳು ಇತ್ಯಾದಿಗಳನ್ನು ಶುದ್ಧ ಮಾಡುವುದು ನಮ್ಮ ಅಭಿವೃದ್ಧಿ ಯೋಜನೆಗಳ ಕಲಾಪಪಟ್ಟಿಯಲ್ಲಿ ಎಂದೂ ಸೇರಿಯೇ ಇಲ್ಲ. ಇಂಥವನ್ನು ಮತ್ತೆ ನೋಡುವುದು, ಮತ್ತೆ ಕೊರಗುವುದು ಮಾಡಲಿಚ್ಛಿಸದೇ ಕಾರೋಡಿಸಿದೆ.
ಮಂಗಳೂರು – ಹಾಸನ ರೈಲ್ವೇ ಹಳಿಗಳ ಕೆಳಸೇತಿನ ಕೆಳ ಹರಿಯುವ ಎತ್ತಿನಳ್ಳದ ದಂಡೆಯಲ್ಲಿ ಐದು ಮಿನಿಟು ನಿಂತಿದ್ದೆವು. ಅಲ್ಲಿ ಕುಸಿದ ಹಳೆಸೇತುವೆಯ ಅವಶೇಷಗಳು ಹಾಗೇ ಉಳಿದಿದ್ದವು. ತುಸು ಮುಂದೆ ಎಡದ ಕವಲಿನಲ್ಲಿ ಹೋದರೆ ಸಿಗುವ ಅಣೆಕಟ್ಟನ್ನು ಉಪೇಕ್ಷಿಸಿ ಮುಂದುವರಿದೆವು. ಅಲುವಳ್ಳಿಯ ಜನ ಅಲ್ಲಿನ ಐತಿಹಾಸಿಕ ಬಸವಣ್ಣನ ಗುಡಿ, ಚಿತ್ರಶಾಸನದಂತಿರುವ ಶಿಲಾಫಲಕ, ಸ್ವಾಗತ ತೋರಣ, ಶಿಥಿಲ ವಿಗ್ರಹಗಳನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಕುಂಕುಮ ಬಡಿದು ಆರಾಧಿಸುವುದರಲ್ಲೇ ಹೆಚ್ಚು ಲಾಭ ಕಂಡಂತಿತ್ತು.
ಕೀರಿ ಹಳ್ಳ ಮತ್ತು ಹೊಂಗಡಳ್ಳದ ಅಣೆಕಟ್ಟೆಗಳು ನಮ್ಮ ದಾರಿಯ ಮಗ್ಗುಲುಗಳಲ್ಲೇ ಇದ್ದುದರಿಂದ ಐದೈದು ಮಿನಿಟಿನ ದರ್ಶನದಿಂದಲೇ ‘ಕೃತಾರ್ಥ’ರಾದೆವು! ಹೊಂಗಡಳ್ಳದಲ್ಲಿ ಅಣೆಕಟ್ಟಿನ ಕಾಮಗಾರಿ ತೊಡಗುವುದಕ್ಕೆ ಸ್ವಲ್ಪ ಮುಂಚಿನವರೆಗೂ ಕಾಲ್ದಾರಿ ಮಾತ್ರವಿದ್ದಿರಬೇಕು. ಆ ಜನಗಳ ಅನುಕೂಲಕ್ಕಾಗಿ, ಅಂದರೆ ಸುಮಾರು ಐದಾರು ವರ್ಷಗಳ ಹಿಂದೆ, ಅಲ್ಲೊಂದು ತೂಗು ಸೇತುವೆ ಬಂದಿತ್ತು. ಅದು ಎಷ್ಟು ವರ್ಷಗಳ ಬೇಡಿಕೆಯೋ ಎಷ್ಟು ಜನರ ತಪಸ್ಸೋ ಗೊತ್ತಿಲ್ಲ! ಆದರೆ ಎತ್ತಿನಹೊಳೆ ಯೋಜನೆಯೊಡನೆ ದಿಢೀರೆಂದು ಪಕ್ಕಾ ದಾರಿ, ಹಾಗೂ ಎತ್ತರಿಸಿದ ದೊಡ್ಡ ಸೇತುವೆ ಪಕ್ಕದಲ್ಲೇ ಬಂದಿತ್ತು. ಅದರ ಪರಿಣಾಮದಲ್ಲೇ ಏರ್ಪಟ್ಟ ಪ್ರಾಕೃತಿಕ ವೈಪರೀತ್ಯದಲ್ಲಿ ತೂಗು ಸೇತುವೆ ಮುರಿದು ಬಿದ್ದಿತ್ತು. ಅದು ಬಿದ್ದ ಹೊಸತರಲ್ಲೇ ಕಂಡಿದ್ದ ನನ್ನಂತವರು “ತೂಗು ಸೇತುವೆಯನ್ನು ಇನ್ನು ಕಳಚಿ, ಅಗತ್ಯವಿರುವ ಇನ್ನೊಂದು ಕಡೆ ಮರುಬಳಕೆ ಮಾಡುತ್ತಾರೆ” ಎಂದು ಅಂದುಕೊಂಡದ್ದೇ ಬಂತು. ಏನೂ ಆಗಿಲ್ಲ. ಸ್ಥಳೀಯರಂತೂ ಅಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆದಿರುವ ಪಾಕೃತಿಕ ಅವಹೇಳನದ ಕುರಿತು ಚಿಂತಿಸಿದಂತೆ ಕಾಣಲಿಲ್ಲ. ಬದಲಿಗೆ ಅಯಾಚಿತವಾಗಿ ಒದಗಿದ ‘ಗಬ್ಬದ ದನ’ದ (ದಾರಿ ಸೌಲಭ್ಯ) ಹಾಲು ಕರೆಯುವ ಸಿದ್ಧತೆಯಲ್ಲಿ ಕಳೆದುಹೋಗಿದ್ದಾರೆ! ಸೇತುವೆಯ ಮಗ್ಗುಲಿನ ಜೋಪಡಿ ಅಂಗಡಿಯಲ್ಲಿ ಈಗ ಕುರುಕಲು ತಿನಿಸು, ಚಾ ಸಿಗುತ್ತದೆ. ಹಿಂದೆ ನಡೆಯಲೂ ಅಸಾಧ್ಯವಾದ ಮೂಲೆಮೂಲೆಗಳಲ್ಲೂ ವಾಹನಗಳು ಮಿಂಚುತ್ತಿವೆ, ರೆಸಾರ್ಟ್, ಹೋಂ ಸ್ಟೇ ಕಟ್ಟಡಗಳು ಮೊಳೆಯುತ್ತಿವೆ. ದನ ಮೇಯದ ಲಾನ್, ನೀರಿಂಗದ ಅಂತರ್ಲಾಕ್ ಅಂಗಳಗಳಲ್ಲಿ ನಗರಗಳ ಚಿಣ್ಣರು ಚೆಂಡಾಡುವುದು ಕಂಡೆ, ಕಾಡು ಕಸವಿಲ್ಲದ ತೊರೆಯಲ್ಲಿ ನಗರಗಳ ಹಿರಿಯರು ತೇಲು ಬೆಂಡು ಎಸೆದು, ದಂಡೆಯಲ್ಲಿ ವಿಹರಿಸುವುದ ಕಂಡೆ…. (ರೇವ್ ಪಾರ್ಟಿ ನಡೆಸಿ ಸೆರೆಸಿಕ್ಕವರು ಕೇವಲ ನೂರಮೂವತ್ತು ಮಂದಿ ಮಾತ್ರ!)
೩. ಪಂಚವಟಿಯ ಎಲೆಮನೆ ?
ಒಂದು ಗಂಟೆಯ ಸುಮಾರಿಗೆ ಅಶೋಕವನಕ್ಕೆ ಹೊಕ್ಕು, ಕಪ್ಪೆಗೂಡು ಸೇರಿಕೊಂಡೆವು. ಕಾರಿನ ಹೊರೆ ಇಳಿಸಿದ್ದೇ ಬುತ್ತಿಯೂಟ ಮುಗಿಸಿದೆವು. ಓರೆ ಬಾವಿಗೆ ಹೊಸ ಹಗ್ಗ ಹಾಕಿ ನೀರು ಜಗ್ಗಿದ್ದಾಯ್ತು. ನಡುವೆ ಕೊಡ ಗೋಡೆಗುಜ್ಜಿದರೂ ನಾಲ್ಕಡಿಯ ಮೂರು ರಿಂಗಿನ ಬಾವಿಯಲ್ಲಿ, ಒಂದು ರಿಂಗಿನಷ್ಟು ಅಕ್ಷಯ ನೀರಿತ್ತು. ನೀರು ಇನ್ನೂ ಇಳಿದರೆ, ಬೇಗನೆ ಹೊಸ ಕೊಡ ಕೊಳ್ಳಬೇಕಾಗುತ್ತದೆ! ನೀರಿನ ಮೇಲಿದ್ದ ರಿಂಗುಗಳ ಒಳ ಸುತ್ತಿನ ದೂಳು ಕಸಗುಡಿಸಿ, ನೀರು ಹಾಕಿ ತೊಳೆದು ಶುದ್ಧ ಮಾಡಿಕೊಂಡೆವು. ಸೌರ ವಿದ್ಯುತ್ತಿನ ಬ್ಯಾಟರಿ ಇಡಲು ಒಯ್ದಿದ್ದ ಹಳೆಯದೊಂದು ಸಣ್ಣ ಕಪಾಟು ಒಪ್ಪವಾಗಿ ಕುಳಿತಿತು. ಅಡುಗೆ ಕಟ್ಟೆಯ ಅಡಿಗೆ ಹೊಂದಬಹುದೆಂದು ಒಯ್ದಿದ್ದ ಇನ್ನೊಂದು ಭಾರೀ ಅಗಲದ ಕಪಾಟು ಒಳ ನುಗ್ಗಲು ಕೊಸರಾಟ ನಡೆಸಿತು. ಅದನ್ನು ನಡುವೆ ಆಯಕಟ್ಟಿನ ಜಾಗದಲ್ಲಿ ಗರಗಸ ಹಾಕಿ ಕತ್ತರಿಸಿದ್ದಾಯ್ತು. ಒಂದರ್ಧಕ್ಕೆ ಮೂಲದ ಕಾಲಿನ ಬಲವೇ ಒದಗಿತು. ಇನ್ನರ್ಧಕ್ಕೆ ಸಣ್ಣ ಎರಡು ರೀಪು ಬಡಿಯುವುದು ಬಾಕಿ. (ಇನ್ನೊಮ್ಮೆ ಹೋಗುವಾಗ ಪೂರೈಸಿಕೊಳ್ಳುತ್ತೇನೆ) ಇದು ಒಂದಿದ್ದದ್ದು ಎರಡಾದರೂ ಸ್ಥಳ ಮತ್ತು ಅಗತ್ಯಕ್ಕೆ ಹೇಳಿ ಮಾಡಿಸಿದಂತೆ ಕುಳಿತಿತ್ತು. ಈ ಕಪಾಟುಗಳು ಹಿಂದಿನ ಜನ್ಮದಲ್ಲಿ (ನನ್ನಂಗಡಿಯಲ್ಲಿ) ಪುಟ್ಟಪುಟ್ಟ ಮಂತ್ರ, ಸ್ತೋತ್ರ, ಸುಪ್ರಭಾತಾದಿ ಭಕ್ತರ ಮನೋಸ್ಥಿರತೆಗೆ ಸಾಹಿತ್ಯ ಒದಗಿಸಿದ್ದವು. ಇಲ್ಲಿ ಅಕ್ಕಿ, ಬೇಳೆ, ಮೆಣಸು, ಜೀರಿಗೆಯೆಂದು ದೇಹಸ್ಥಿರತೆಗೆ ಇಂಬಾಗಲಿದ್ದಾವೆ. ಹಿಂದೊಂದು ರಾತ್ರಿ ಮಳೆ ಕುಟ್ಟಿದಾಗ ಕಪ್ಪೇಗೂಡಿನೊಳಗೆ ನಮಗೆ ಉಚಿತ ಗಟ್ಟಿಮೇಳ ಕೇಳಿದಂತಾಗಿತ್ತು. ಅದಕ್ಕೆ ಮದ್ದೆಂದೇ ಹಳೇ ಗೋಣಿ ಚೀಲಗಳ ದೊಡ್ಡ ಪಿಂಡಿ ಒಯ್ದಿದ್ದೆ. ಅದನ್ನು ಮಾಡಿನ ಮೇಲೆ ವ್ಯವಸ್ಥಿತವಾಗಿ ಹಂಚಿ ಹರಡಿದೆವು. ಮತ್ತೆ ಅವು ಮಳೆಗೆ ಒದ್ದೆಯಾಗದಂತೆ ಮೇಲೆ ೨೪*೧೨ ಅಡಿಯ ದಪ್ಪ ತಾಡಪತ್ರಿಯನ್ನು (ಗೂಡಿನ ಉದ್ದಗಲ ೨೦*೯ ಅಡಿ) ಬಿಡಿಸಿದೆವು. ಅದು ಗಾಳಿಗೆ ಹಾರಿಹೋಗದಂತೆ, ಅಂಚಿನ ಕಣ್ಣುಗಳಿಗೆ ಕಲ್ಲು ಕಟ್ಟಿದೆವು. ಅದರ ಗೂಡನ್ನು ಮೀರಿದ ಉದ್ದ, ಬಾಗಿಲಿನ ಮೇಲೆ ಅವಶ್ಯ ಮುಂಚಾಚಿಕೆಯಾಗಿ ಒದಗಿತ್ತು. ಇಷ್ಟಾಗುವಾಗ ನಮ್ಮ ವ್ಯವಸ್ಥೆಯ ಪರೀಕ್ಷೆಗೆಂಬಂತೆ ಸಣ್ಣ ಮಳೆ ಬಂದದ್ದು ಆಕಸ್ಮಿಕ. ಆದರೆ ಅದು ಪ್ರಯೋಗದ ಯಶಸ್ಸಿಗೆ ಪ್ರಮಾಣಪತ್ರವನ್ನೇ ಕೊಟ್ಟಂತಿತ್ತು.
ಪ್ರತಿಸಲದಂತೆ, ಪೂರ್ವ ಸಿದ್ಧತೆಯ ಕಾಲದಲ್ಲಿ ನಾನು ದೀರ್ಘಕಾಲೀನ ವ್ಯವಸ್ಥೆಗಳ ಕುರಿತು ಕೆಲಸ ನಡೆಸಿದ್ದೆ. ಆದರೆ ದೇವಕಿ, ಅಲ್ಲಿನ ದೈನಂದಿನ ಅಗತ್ಯಗಳ ಪಾತ್ರೆ ಪರಡಿ, ಹಾಸುಗೆ ಹೊದಿಕೆ, ಹಾಲು ಜಿನಸು, ಅಕ್ಕಿ ಬೇಳೆ, ತರಕಾರಿ ಹಣ್ಣು ಇತ್ಯಾದಿ ಜೋಡಿಸಿ, ಅವನ್ನು ಅಲ್ಲಿ ಕೆಡದಂತುಳಿಸಿಕೊಳ್ಳುವ ಹಂಚಿಕೆ ಹಾಕಿದ್ದಳು. ಅಲ್ಲಿಗೆ ತಲಪಿದ ಮೇಲೆ ಅಷ್ಟೇ ಶ್ರದ್ಧೆಯಲ್ಲಿ ರಟ್ಟಿನ ಪೆಟ್ಟಿಗೆ, ಬುಟ್ಟಿ, ಸೂಟ್ ಕೇಸುಗಳ ಹೂರಣವನ್ನು ಹಂಚಿ ಹಾಕಿದಳು. ತಿಂಗಳ ಹಿಂದಿನ ಲೋಕಾರ್ಪಣ ಸಭೆಯಲ್ಲಿ ನಾವು ಉಪಯೋಗಿಸಿದ್ದು ಪರಿಸರಸ್ನೇಹೀ ಹಾಳೆ ತಟ್ಟೆ ಲೋಟಗಳೇ. ಆದರೆ ಅವನ್ನು ಒಂದು ಮೂಲೆಯಲ್ಲಿ ಒಟ್ಟಿಟ್ಟದ್ದನ್ನು ಮೇಯಲು ಬಂದ ಹಳ್ಳಿ ಜಾನುವಾರು ಚಲ್ಲಾಪಿಲ್ಲಿ ಮಾಡಿದ್ದವು. ಮತ್ತು ಅವು ದೃಶ್ಯಸ್ನೇಹಿಯಲ್ಲವೆಂಬ ಕಾರಣಕ್ಕೆ ದೇವಕಿ ಸುಟ್ಟುರುಹಿದಳು. ಮತ್ತೆ ಎಡೆ ಎಡೆಯಲ್ಲಿ ಮೇಲೆ ಕುಳಿತವರಿಗೆ ಕಲ್ಲು ಎಸೆಯುತ್ತ (ಅಂಚಿಗೆ ಕಟ್ಟಲು), ಗರಗಸ ಹಾಕುವವರಿಗೆ ಕೈಕೊಡುತ್ತ (ಸ್ವಾನುಭವಕ್ಕಾಗಿ), ನಿರಾಕರ್ಷಕ ಚಿತ್ರಗಳೇ ಆದರೂ ಕ್ಯಾಮರಾದಲ್ಲಿ ಸೆರೆಹಿಡಿಯುತ್ತ, ನೀರೆಳೆದು ತಂದವರಿಗೆ ಬಕೆಟ್ ಹಿಡಿಯುತ್ತ, ಸಾಕಷ್ಟು ಕಾಸಿಡುತ್ತ (ಕುಡಿಯಲು), ಸಂಜೆಯ ಹನಿ ಮಳೆ ಬಿಡುವಾಗ ಎಲ್ಲರಿಗೂ ವಿಶ್ರಾಂತಿ ಘೊಷಿಸುತ್ತ ಚರ್ಮುರಿ, ಕಾಫಿ ಕೊಟ್ಟಳು. ಮತ್ತು ಬೆಳಗ್ಗಿನಿಂದ ಪ್ರಯಾಣ, ಕೆಲಸವೆಂದು ಬಳಲಿದ್ದಕ್ಕೆ ತುಸು ಬದಲಾವಣೆಯೆಂದು ಕಿಮೀ ದೂರದ ಸೌಂದರ್ಯತಾಣಕ್ಕೆ ಹೊರಟೆವು.
ಮೋಡದ ಉದ್ವೇಗ ಪೂರ್ಣ ಹರಿದಿರಲಿಲ್ಲ. ಹಾಗಾಗಿ ಕಾರೇರಿಯೇ ಹೋಗಿದ್ದೆವು. ದಾರಿ ಮುಚ್ಚಿದ್ದಕ್ಕೆಂಬಂತೆ ವೀಕ್ಷಣಾ ಕಟ್ಟೆ ನಿರ್ಜನವಾಗಿತ್ತು. ತೆರೆದು ಬಿದ್ದ ಕುಮಾರಧಾರಾ ಕಣಿವೆಯ ಮಂದ್ರ ಮೊರೆತ ಮೋಹಕವಾಗಿತ್ತು. ಅರಳೆಗೆ ಬಿಲ್ಲು ಹೊಡೆದಂತೆ ಮೋಡ ಮುದ್ದೆಗಳ ಹಾರಾಟ ಗಿರಿ ಕಂದರಗಳನ್ನೆಲ್ಲಾ ವ್ಯಾಪಿಸಿತ್ತು. ಅದುವರೆಗೆ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದ ನಮ್ಮ ಚರವಾಣಿಗಳೆಲ್ಲ ಕಷ್ಟದಲ್ಲಿ ಮಿಡಿಯತೊಡಗಿದ್ದವು. ಆವಶ್ಯಕ ಕರೆಗಳನ್ನಷ್ಟೇ ಮಾಡಿ,ಆಪ್ತರಿಗೆ ಕುಶಲವಾರ್ತೆ, ಇತರರಿಗೆ ಮತ್ಸರ ಜಾಗೃತಗೊಳಿಸುವುದನ್ನೂ ಮರೆಯಲಿಲ್ಲ! ಕತ್ತಲ ಪತ್ತಲ ಬಿಡಿಸಿಕೊಳ್ಳುತ್ತಿದ್ದಂತೆ ಮತ್ತೆ ಗೂಡು ಸೇರಿಕೊಂಡೆವು.
ಸೌರ ವಿದ್ಯುತ್ತಿನ ಬೆಳಕಿನಲ್ಲಿ ಪಟ್ಟಾಂಗ ಕೊಚ್ಚುತ್ತಿದ್ದಂತೆ, ದೇವಕಿಯ ಆವಶ್ಯಕ ಪಾಕಕಲೆ ರೂಪ ತಳೆದಿತ್ತು. ಮುಕ್ತಾಯದ ಒಗ್ಗರಣೆ ಚಿಟಿಪಿಟಿಸುವಷ್ಟರಲ್ಲೇ ನಡುವೆ ಮೇಜು, ನಾಲ್ಕು ತಳಿಗೆ ಸಿದ್ಧಮಾಡಿದ್ದೆವು. ಮೂರು ಬಾರಿ ಅನ್ನದಗುಡ್ಡೆ ಮಾಡಿ, ನಡುವೆ ಹಳ್ಳ ತೋಡಿ ಊಟದ ಕತೆ ನಡೆಸಿದೆವು. ದೊಡ್ಡಳ್ಳಕ್ಕೆ ತಾಜಾ ಪಾಕದ ದಾಳಿ ತೊವ್ವೆ ತುಂಬಿ ಮೆದ್ದೆವು. ಮತ್ತಿನದ್ದಕ್ಕೆ ತಂದಿದ್ದ ಬುತ್ತಿಯೂಟದಲ್ಲಿನ ಶೇಷ ಸಾಂಬಾರನ್ನು ಎರೆದು, ನಿಶ್ಶೇಷಗೊಳಿಸಿದೆವು. ಅಂತಿಮ ಸುತ್ತಿನಲ್ಲಿ (ನಂದಿನಿ) ಮೊಸರು ಕಲಸಿ, ಕುಡ್ಪಿರಾಜರ ಸೇವಾರ್ಥ ಸಂದಿದ್ದ ಉಪ್ಪಿನಕಾಯಿ ನಂಚಿ, ಅನ್ನದ ಕೊನೆಯಗುಳಿನವರೆಗೂ ಧ್ವಂಸ ಮಾಡಿದೆವು. ನಮ್ಮನೆಯದೇ ಸಕ್ಕರೆಪಾಕದಂತ ಬೆಳೆ – ಕಾಳಪಾಡಿ ಮಾವಿನ ಹಣ್ಣು, ಹೆಚ್ಚುವರಿ ಅಗತ್ಯಕ್ಕೆ ಬಾಳೆ ಹಣ್ಣು. ತೃಪ್ತರಾಗುತ್ತಿದ್ದಂತೆ ಕಣ್ಣು ಜೋಲಿ ಹೊಡೆದಿದ್ದವು. ಗಂಟೆಯ ಪರಿವೆಯುಳಿಸಿಕೊಳ್ಳದೇ (ಸುಮಾರು ಎಂಟೂವರೆ ಇದ್ದಿರಬೇಕು) ನಾಲ್ಕೂ ಪಲ್ಲಂಗಗಳನ್ನು ಕೃತಾರ್ಥಗೊಳಿಸಿದೆವು.
೪. ವನ್ಯದಲ್ಲಿ ಪುಣ್ಯಜೀವಿಗಳ ಹಾವಳಿ
ಅಶೋಕವನದ ಪುಟ್ಟ ಕಣಿವೆ ಮಳೆಗಾಲದ ರಾತ್ರಿಯಲ್ಲಿ ನಡೆಸುವ ಗದ್ದಲಕ್ಕೆ ಪೂರ್ಣ ವಿರುದ್ಧವಾಗಿ ಅಂದಿನದು ನೀರವ ರಾತ್ರಿ. ಅದೇ ವಠಾರದಲ್ಲಿ ಕೇವಲ ಗುಡಾರಗಳನ್ನು ಹಾಕಿಯೂ ನಿಶ್ಚಿಂತ ರಾತ್ರಿ ಕಳೆದವರಿಗೆ ಸುಭದ್ರ ಕಪ್ಪೆಗೂಡು (ಕಬ್ಬಿಣದ ಮನೆ) ಇರುವಾಗ ಕೇಳಬೇಕೇ. ಐದೂವರೆಯ ಸುಮಾರಿಗೆ, ವಿವಿಧ ಏಕತಾರಿಗಳ ಮೇಳದಲ್ಲಿ ‘ಮಲೆಯಾಳೀ ಒಂಟಿ ಶಿಳ್ಳೆಗಾರ’ ಆಲಾಪಿಸುವಾಗಲೇ ಎಚ್ಚರ! ಮುಂದುವರಿದಂತೆ ತೆಳು ಮೋಡ ಮಂಜಿನ ಕೋಟೆ ಆವರಿಸಿತು. ಅಲ್ಲದಿದ್ದರೆ, ಹಿಂದಿನ ಬಾರಿ ನಮ್ಮ ದಾರಿಗುಂಟ ಬಹು ಆಕರ್ಷಕ ವಿನ್ಯಾಸಗಳನ್ನು ತೋರಿದ್ದ ಸೂರ್ಯನ ಕೋಲುಗಳನ್ನು (ಕ್ಯಾಮರಾದಲ್ಲಿ) ಒಟ್ಟು ಮಾಡುತ್ತಿದ್ದೆ. ದೇವಕಿ ಚಾ ಕೊಟ್ಟು ಚಾಲನಶಕ್ತಿ ಕೊಟ್ಟರೆ, ಉಪಾಧ್ಯರು ಉಪ್ಪಿಟ್ಟು ಮಾಡಿ ಇಂಧನ ತುಂಬಿದರು. ಮತ್ತೆ ನಿಲ್ಲುವುದುಂಟೇ…
ಘಾಟಿದಾರಿಯ ಬಾಕಿಯುಳಿದ ಕಾಂಕ್ರೀಟ್ (ಸುಮಾರು ಮೂರು ಕಿಮೀ ಉದ್ದ ಮಾತ್ರ) ಕೆಲಸ ನಮ್ಮಲ್ಲಿಂದ ಸುಮಾರು ಎರಡು ಕಿಮೀ ಕೆಳಗೆ ತೊಡಗಿತ್ತು. ಅಲ್ಲಿವರೆಗೆ ಕಾಡು ನೋಡುತ್ತ ನಡೆದು, ಕೆಲಸದ ಮೇಲೂ ಒಂದು ಕಣ್ಣು ಹಾಯಿಸಿ ಬರಲು ಹೊರಟೆವು. ನುಣ್ಣನೆ ಮಾರ್ಗದಲ್ಲಿ (ಕೆಲವಂಶ ಡಾಮರು, ಉಳಿದಂತೆ ಕಾಂಕ್ರೀಟ್) ವಿರಾಮದಲ್ಲಿ ಪಾದ ಬೆಳೆಸಿದೆವು. ಆವಶ್ಯಕ ಮೆಲುದನಿಯ ಮಾತು ಬಿಟ್ಟರೆ, ಎಲ್ಲರೂ ಅವರವರ ಆಸಕ್ತಿ, ಕುತೂಹಲಕ್ಕೆ ಕಣ್ಣಾಗಿ, ಕಿವಿಯಾಗಿ, ಕೆಲವೊಮ್ಮೆ ನಾಲಿಗೆಯೂ ಆಗಿ ಗ್ರಹಿಸಿಕೊಳ್ಳುತ್ತ ನಡೆದೆವು. ಅತ್ತಿ, ಹೆಬ್ಬಲಸು, ಹಲಸುಗಳಿಂದಾಚೆ ನನ್ನ ಜ್ಞಾನ ಸಾಲದು. ಹುಳ ಊದಿ ನಾನು ಚಪ್ಪರಿಸಿದ ಎರಡು ಮೂರು ಅತ್ತಿ ಹಣ್ಣುಗಳು ನನ್ನ ಬಾಲ್ಯದ ಸವಿಗೆ ಸಾಟಿಯಾಗಲಿಲ್ಲ! ವಾಸ್ತವದಲ್ಲಿ ಬಾಲ್ಯದ್ದೂ ಹೀಗೇ ಇದ್ದಿರಬಹುದು, ಆದರೆ ಭೂತಕ್ಕಿರುವ ರಮ್ಯ ಪರಿವೇಷ ವರ್ತಮಾನಕ್ಕೆಲ್ಲಿ!
ಹೆಬ್ಬಲಸೂ ಅಷ್ಟೇ. ಖಚಿತವಿದ್ದ ಹಲಸಿನಲ್ಲಿ ಮಾತ್ರ ಒಂದು ಗುಜ್ಜೆಯನ್ನು ಪಲ್ಯ/ಸಾಂಬಾರುಗಳ ಯೋಚನೆಯೊಡನೆ ಸಂಗ್ರಹಿಸಿಕೊಂಡೆವು. (ಅದನ್ನು ಅಲ್ಲಿ ಬಳಸುವುದಾಗಲೇ ಇಲ್ಲ) ಉಳಿದಂತೆ ಅಸಂಖ್ಯ ಚಿಗುರು, ಹೂ, ಕಾಯಿ, ಹಣ್ಣು, ಕೋಡು ನೋಡುತ್ತ ಸಾಗಿದೆವು. ಅಶೋಕವನ ಕೊಂಡ ಹೊಸತರಲ್ಲಿ ಕೆಂಜಳಿಲುಗಳ ಚೊಳ್ಚೊಳ್ಕಾರಗಳು ಈ ವಲಯದ ಅರಣ್ಯವೆಲ್ಲ ಅನುರಣಿಸುತ್ತಿತ್ತು. ಅನಂತರದ ದಿನಗಳಲ್ಲಿ ಕಳ್ಳಬೇಟೆಯ ವೈಪರೀತ್ಯದಲ್ಲಿ ನಿರ್ನಾಮವಾದ ಕೆಂಜಳಿಲುಗಳಿಗೆ ಅರಣ್ಯದ ಮೌನ ಪ್ರಾರ್ಥನೆ ವಿಷಾದ ಹುಟ್ಟಿಸುತ್ತಿತ್ತು. ಆದರೆ ಈ ಬಾರಿ ನಮ್ಮ ಸಂತೋಷಕ್ಕೆ ಮೂರು ನಾಲ್ಕು ಕೆಂಜಳಿಲುಗಳನ್ನು ಕಂಡೆವು, ಕೇಳಿದೆವು. ಇಂದು ಕೃಷಿಕರೇನು ಪೇಟೆಯ ಮಂದಿಯೂ ಮಂಗಗಳ ಹಾವಳಿ, ಅವುಗಳ ದಿಟ್ಟ ಪುಂಡಿನ ಬಗ್ಗೆ ಧಾರಾಳ ಮಾತಾಡುವುದು ಕೇಳುತ್ತೇವೆ. ಆದರೆ ಇಲ್ಲಿ ನಮ್ಮನ್ನು ಕಂಡು ಮರಬಿದ್ದು ಓಡಿಹೋಗುವ ನಿಜದ ಕಾಡುಮಂಗಗಳೂ ಉಳಿದಿದ್ದವು. ಅಂದು ನಮಗೆ ಊಹಾತೀತ ಬೆರಗನ್ನುಂಟು ಮಾಡಿದ ಮರನಾಯಿಗಳು ದರ್ಶನ ಕೊಟ್ಟ ಜಾಗದಲ್ಲಿ ಭಾರೀ ಇರುವೆ ಸಾಲೊಂದು ದಾರಿ ದಾಟಿತ್ತು. ಅಲ್ಲಿನ ವಾಹನ ಸಂಚಾರ ನಿತ್ಯದಂತಿದ್ದಿದ್ದರೆ ಅವೆಷ್ಟು ಬಲಿದಾನ ಕೊಡಬೇಕಾಗುತ್ತಿತ್ತು ಎಂಬ ಯೋಚನೆಯೂ ಬರದಿರಲಿಲ್ಲ.
ಪಶ್ಚಿಮ ಘಟ್ಟದ ಅಖಂಡ ಹಸಿರುಗಂಬಳಿ ಮನುಷ್ಯ ದುರಾಸೆಯಲ್ಲಿ ಇಂದು ಅಸಂಖ್ಯ ಚಿಂದಿಯಾಗಿರುವುದು ನಿಮಗೆಲ್ಲ ತಿಳಿದೇ ಇದೆ. ಅದರ ಫಲವಾಗಿ ನೀರು, ಆಹಾರ ಹಾಗೂ ಸಹಜ ಸಂಚಾರದಲ್ಲಿ ದಿಕ್ಕೆಟ್ಟ ಮೃಗಗಳು ಕೃಷಿಭೂಮಿಗಳಿಗೆ ಪೀಡೆಗಳಂತೆ ಕಾಣುತ್ತವೆ. ಅದನ್ನು ಪರಿಹರಿಸಬೇಕಾದ ಪುಡಾರಿಯಿಂದ ‘ಬಾಬು’ವಿನವರೆಗಿನ ಮಂದಿ, ರೋಗ ಮೂಲವನ್ನು ಬದಿಗಿಟ್ಟುಬಿಡುತ್ತಾರೆ. ಕೇವಲ ರೋಗ ಲಕ್ಷಣಕ್ಕೆ ಮದ್ದು ಹುಡುಕುವಂತೆ, ಆನೆಯಂಥ ಭಾರೀ ಮೃಗಗಳಿಗೆ ಕಾಡಿನ ವಿವಿಧ ತುಣುಕುಗಳ ನಡುವೆ ಹಸಿರು ಸೇತುವಾಗಿ ‘ಎಲಿಫೆಂಟ್ ಕಾರಿಡಾರ್’ (ಆನೆ ಓಣಿ) ಎಂದು ಭಾರೀ ಹಣಕಾಸಿನ ಯೋಜನೆಗಳನ್ನು ತೇಲಿಬಿಟ್ಟಿದ್ದಾರೆ. (ಅದರ ವಿವರಗಳನ್ನು ಬಿಡಿ.) ಆದರೆ ಅವರಿಗೆಲ್ಲ ‘ಪರಿಪೂರ್ಣ ವನ್ಯ’ಕ್ಕೆ ಇರುವೆ ಸಾಲೂ ಅಷ್ಟೇ ಮುಖ್ಯ ಎಂಬ ತಿಳಿವು ಎಂದೂ ಬಂದದ್ದಿಲ್ಲ! (ಕಪ್ಪೆ ಶಿಬಿರವನ್ನು ಗೇಲಿ ಮಾಡಿದ್ದ ಸುಬ್ರಹ್ಮಣ್ಯದ ಅರಣ್ಯಾಧಿಕಾರಿಯನ್ನು ನಾನು ಎಂದೂ ಮರೆಯಲಾರೆ!) ಉಲ್ಲಾಸ ಕಾರಂತ ತೋರಿಕೆಗೆ ಹುಲಿ ತಜ್ಞ. ಆದರೆ ಅವರನ್ನು ಅರ್ಥ ಮಾಡಿಕೊಂಡವರು ಗ್ರಹಿಸುವುದು ವನ್ಯವಿಜ್ಞಾನಿ ಎಂದು. ಅವರ ‘ಹುಲಿ’ ಇರುವೆ, ಕಪ್ಪೆಗಳಿಂದ ತೊಡಗಿ, ಕಾಟಿ ಆನೆಗಳವರೆಗೂ ವಿಶ್ವವನ್ನೇ ವ್ಯಾಪಿಸುವ ಜೀವಾಜೀವವೈವಿಧ್ಯಗಳ ದೇಗುಲದ ಕಳಶ ಮಾತ್ರ.
ಇಳಿದಾರಿಯಲ್ಲಿ ಮೊದಲಿಗೆ ಸಿಗುವ ಇಮ್ಮಡಿ ಹಿಮ್ಮುರಿ ತಿರುವಿಗೆ ನಮ್ಮ ನಡಿಗೆ ನಿಲ್ಲಿಸಿದೆವು. ಕಾಂಕ್ರೀಟ್ ಕಾಮಗಾರಿ ಕಾಣಿಸಲಿಲ್ಲ. ಆದರೆ ಬಿಸಿಲು ಸಾಕಷ್ಟು ಏರಿತ್ತು ಮತ್ತು ಅಶೋಕವನದೊಳಗೇ ನಮ್ಮನ್ನು ಇನ್ನಷ್ಟು ಕೆಲಸಗಳು ಕರೆದಿದ್ದವು. ನಾವು ನಿಂತಲ್ಲಿಗೆ ಸುಬ್ರಹ್ಮಣ್ಯ ಪೇಟೆಯ ಬಹು ದೂರದೃಶ್ಯದೊಡನೆ ಪಕ್ಕದಲ್ಲೇ ಎಂಬಂತೆ ಕನ್ನಡಿಕಲ್ಲಿನ ಬೆಂಭಾಗವೂ ಅರೆಬರೆ ಗೋಚರಿಸುತ್ತದೆ. ಕನ್ನಡಿಕಲ್ಲಿಗೆ ನಮ್ಮ ತಂಡದ ಮೊದಲ ಏರಿಕೆಯಾದರೂ (೧೯೮೪-೮೫) ಅಲ್ಲಿಂದಲೇ ತೊಡಗಿತ್ತು ಎನ್ನುವುದು ಬಾಳಿಗರಿಗಷ್ಟೇ ಹೊಸಮಾತು. ದೇವಕಿ ಮತ್ತು ಉಪಾಧ್ಯ ಕ.ಕಲ್ಲು ಹಲವು ಬಾರಿ ಹತ್ತಿದ ಅನುಭವಿಗಳು. ಬಂದಂತೇ ಮತ್ತಷ್ಟು ವಿವರಗಳಲ್ಲಿ ದಾರಿಯ ಎರಡೂ ಮಗ್ಗುಲುಗಳನ್ನು ನೋಡುತ್ತ ಮರಳಿದೆವು. ಅಶೋಕವನದ ತೊರೆ ಮುಖ್ಯ ದಾರಿಯನ್ನು ಅಡ್ಡ ಹಾಯುವಲ್ಲೊಂದು ಸವಕಲು ಜಾಡಿದೆ. ಅದು ಮುಖ್ಯವಾಗಿ ರೂಪುಗೊಂಡದ್ದು ಬಿಸಿಲೆ ಹಳ್ಳಿಯ ಗೋಪಾಲರು ಮೇಯಿಸುತ್ತ ಬರುವ ಜಾನುವಾರುಗಳಿಂದ. ನಾವು ಆ ನೆಲವನ್ನು ಕೊಂಡ ಮೇಲೆ ದನ ಹೊಡೆಯುವುದನ್ನು ಆಕ್ಷೇಪಿಸುತ್ತಿದ್ದೆವು. ಆದರೆ ಅಲ್ಲಿದ್ದು ನಿಗಾವಹಿಸುವುದು ಸಾಧ್ಯವಾಗಿರಲಿಲ್ಲ. ಅದೃಷ್ಟಕ್ಕೆ ದಾರಿ ಅಗಲೀಕರಣದಲ್ಲಿ ಅಲ್ಲಿನ ಸೇತುವೆ ಪುನಾರಚನೆಯಾಯ್ತು. ಇದು ಒಳದಾರಿಯ ಪ್ರವೇಶವನ್ನು ಕಷ್ಟ ಸಾಧ್ಯ ಮಾಡಿತು. ಮುಂದೆ ಒಳಮಗ್ಗುಲಿನಲ್ಲಿ, ಅರಣ್ಯ ಇಲಾಖೆಯ ಆನೆ ತಡೆಯುವ ವಿದ್ಯುತ್ ಬೇಲಿ ಬಂದ ಮೇಲಂತೂ ಜಾಡು ಬಹುತೇಕ ಅಳಿಸಿಯೇ ಹೋಗಿತ್ತು. ನಾವು ಅದನ್ನು ನೋಡುವ ಸಲುವಾಗಿಯೇ ಎಚ್ಚರಿಕೆಯಿಂದ ಸೇತುವೆಯ ಮಗ್ಗುಲಿನಲ್ಲಿ ಇಳಿದು, ನುಗ್ಗಿದೆವು.
ಸುಬ್ರಹ್ಮಣ್ಯದ ‘ಪುಣ್ಯ ಯಾತ್ರಿಗಳು’ ಮಾರ್ಗದಂಚಿನಲ್ಲಿ ಎಸೆಯುವ ನಾಗರಿಕ ಕಸ ರಾಶಿಯನ್ನು ಬಿಸಿಲೆ ವಿಭಾಗದ ಅರಣ್ಯ ಇಲಾಖೆ ಹೆಕ್ಕಿ ಶುದ್ಧ ಮಾಡುತ್ತಲೇ ಇರುತ್ತಾರೆ. ಆದರೆ ಅವರನ್ನೂ ಕಾಡುವ ಪ್ರಶ್ನೆ – ಮುಂದೇನು? ನಮ್ಮ ಮಹಾನಗರಗಳ ದಡ್ಡ ವ್ಯವಸ್ಥೆಯಲ್ಲಿ ಕೈಗಾಡಿ, ಲಾರಿ ಎಲ್ಲ ಇದ್ದೂ ಸಂಗ್ರಹಿಸಿದ ಕಸವನ್ನು ಏನು ಮಾಡಬೇಕೆನ್ನುವ ಕುರಿತು ಪರ್ಯಾಪ್ತ ಕ್ರಿಯಾಕ್ರಮಗಳಿಲ್ಲದೇ ಬಳಲುತ್ತಾರೆ. ಹಾಗಿರುವಾಗ ಈ ಬಡಪಾಯಿ ಬಿಸಿಲೆಯ ಕೂಲಿಗಳು ಯಾವ ವಾಹನ ಬಲವಿಲ್ಲದೆ, ಇಪ್ಪತ್ಮೂರು ಕಿಮೀ ಉದ್ದದ ದಾರಿಯದ್ದನ್ನು ಏನು ಮಾಡಬಹುದು! ಹೆಚ್ಚು ಕಸ ಸಂಗ್ರಹವಾಗುವ ವೀಕ್ಷಣಾ ಕಟ್ಟೆಯ ಹೊರ ಮಗ್ಗುಲಿನ ಕಲ್ಲ ಬಾಣಿಯಲ್ಲಿ ಕೆಲವು ಬಾರಿ ಬಹುತೇಕ ಪ್ಲ್ಯಾಸ್ಟಿಕ್ ಕಸದ ರಾಶಿಯನ್ನು ನೌಕರರೇ ಸುಡುವುದು ಕಂಡಿದ್ದೇನೆ. ಇಲ್ಲಿ ಅವರ ಇನ್ನೊಂದು ಅನಿವಾರ್ಯ ಅನಾಚಾರ ಕಾಣಿಸಿತು. ಸೇತುವೆಯ ಒಳ ಮಗ್ಗುಲಿನ ಕಟ್ಟೆಯಲ್ಲಿ, ಸಾರ್ವಜನಿಕ ದೃಷ್ಟಿಗೆ ಸಿಲುಕದಂತೆ, ಆದರೆ ತೊರೆಯ ಪ್ರವಾಹಕಾಲದಲ್ಲಿ ಕೊಚ್ಚಿ ಹೋಗುವಂತೆ ಮೂರ್ನಾಲ್ಕು ದೊಡ್ಡ ಚೀಲ ತುಂಬಾ ಪ್ಲ್ಯಾಸ್ಟಿಕ್ ಕಸ ಜಮೆ ಮಾಡಿದ್ದರು! (ಇದು ಎಲ್ಲ ಸೇತುವೆಗಳಲ್ಲೂ ಇರಬಹುದೇ? ಗೊತ್ತಿಲ್ಲ!)
ನಾನು ‘ಸಾರ್ವಜನಿಕರಿಗೆ ಪ್ರೇರಣೆ’ ಮತ್ತು ‘ಶುದ್ಧೀಕರಣದಲ್ಲಿ ಸ್ವಯಂಸೇವೆ’ ಎನ್ನುವ ಕಲಾಪಗಳಿಂದ ಬಹುತೇಕ ದೂರವುಳಿಯುತ್ತೇನೆ. ಅವು ಖಂಡಿತಕ್ಕೂ ತಪ್ಪಲ್ಲ. ಆದರೆ ಆ ಹೆಸರಿನಲ್ಲಿ ಇಂದು ಬಹುತೇಕ ನಡೆದಿರುವುದು ಕೇವಲ ಪ್ರದರ್ಶನ ಚಟ. ವೈಯಕ್ತಿಕವಾಗಿ ನಮ್ಮದೇ ಜನ, ಮನೆ, ಅಭಯಾರಣ್ಯ, ಅಶೋಕವನವನ್ನೇ ಸುಧಾರಿಸುವಲ್ಲೇ ಎಷ್ಟೋ ಬಾರಿ ನಮ್ಮ ಸಾಮರ್ಥ್ಯ ಸಾಲದಾಗುವಾಗ, ಸುಲಭವಾಗಿ ಸಿಗುವ ಸಮಾಧಾನ ಪದ – ಲೋಕದ ಡೊಂಕ ನೀವೇಕೆ ತಿದ್ದುವಿರಿ……
೫. ಮಿಣುಕು ಹುಳಗಳ ಬೆಳಕಿನಲ್ಲಿ…
ಕಪ್ಪೇಗೂಡಿನೆದುರಿನ ಸಾರ್ವಕಾಲಿಕ ತೊರೆ ನಮಗೆಲ್ಲರಿಗೂ ಬಹುಪ್ರೇರಣೆಗಳ ಜಲಮೂಲ. ವಾಸ್ತವದಲ್ಲಿ ಇಲ್ಲಿ ಬಾವಿಯಾಗುವವರೆಗೂ ಆ ನೀರೇ ನಮಗೆ ಅದಕು ಇದಕು ಎದಕು ಆಗಿತ್ತು. ಮುಂದಕ್ಕೂ ಅದರ ಸಾಂಗತ್ಯ ಉಳಿಸಿಕೊಳ್ಳುವಂತೆ, ಉಪಾಧ್ಯರು ಒಂದು ಅನೌಪಚಾರಿಕ ಕಿರಿ ಒಡ್ಡು ಕಟ್ಟತೊಡಗಿದರು. ಮರಳಿನಲ್ಲಿ ಗಿಡಪ್ಪಾಗಿ ಕೂತಿದ್ದ ಗುಂಡುಕಲ್ಲುಗಳನ್ನು ಪಿಕ್ಕಾಸಿಯಲ್ಲಿ ಮೀಟಿ, ಬೇಕಾದಲ್ಲಿಗೆ ಉರುಳಿಸಿಟ್ಟರು. ಬರಿಗೈಯಲ್ಲೇ ಮರಳು ಚರಳು ಗೋಚಿ ಪೇರುತ್ತ (ಸಿಮೆಂಟಾದಿ ಹೊರಗಿನದ್ದೇನನ್ನೂ ಹೇರದೆ), ಅವರೇ ಹೇಳಿದಂತೆ “ಕೊಂಡಾಟ”ದಲ್ಲಿ ಉರಿಬಿಸಿಲನ್ನೇ ಮರೆತು ತಲ್ಲೀನರಾದರು.
ನಾನು ಬಾವಿಯಿಂದ ನೇರ ಕಪ್ಪೇಗೂಡಿನಂಗಳಕ್ಕೇರಲು ಒಳದಾರಿಯ ಯೋಜನೆ ಹಾಕಿಕೊಂಡೆ. ಅಯಾಚಿತವಾಗಿ ಉಳಿದಿದ್ದ ಮುರಕಲ್ಲುಗಳನ್ನು ಬದಿಗೆ ಸಾಲಾಗಿ ಜೋಡಿಸಿದೆ.ಬಾವಿ ತೋಡಿ ಅಂಗಳದಲ್ಲಿ ಗುಡ್ಡೆ ಬಿದ್ದಿದ್ದ ಪುಡಿ ಕಲ್ಲು ಮಣ್ಣನ್ನು ಬುಟ್ಟಿ ತುಂಬಿ ನಡುವೆ ಸುರಿಯುತ್ತ ಬಂದೆ. ಅಂದೋ ಮುಂದೆಯೋ ಬರುವ ಮಳೆ ಇದನ್ನು ಸಮತೋಲನಗೊಳಿಸಿದ ಮೇಲೆ, ಮುಂದೆಂದಾದರೂ ಅದರ ಮೇಲೆ ನಮ್ಮಲ್ಲೇ ಉಳಿದಿರುವ ಜಲ್ಲಿ ಹಾಸುವ ಯೋಚನೆಯೂ ಇದೆ. ದೇವಕಿ ಅಡುಗೆ ಕೆಲಸದ ನಡುವೆ ಇತ್ತ ಸುಳಿದಾಗ, ಬಿಡುವಾದಾಗ ನನಗೆ ಬುಟ್ಟಿಯೋ ಕಲ್ಲೋ ಹೊರಲು ಜತೆ, ಉಪಾಧ್ಯರಿಗೆ ಮಾತಿನ ಕುಮ್ಮಕ್ಕೂ ಕೊಟ್ಟದ್ದಿತ್ತು.
ಗೋಪಾಲಕೃಷ್ಣ ಬಾಳಿಗರು ೧೯೮೦ರ ದಶಕದ ಕೆಯಾರೀಸೀಯ (ಅರ್ಥಾತ್ ಇಂದಿನ ಎನ್ನೈಟೀಕೆ) ಎಲೆಕ್ಟ್ರಾನಿಕ್ಸ್ ಎಂಜಿನೇರು. ಹಾಗೆ ಆ ಕಾಲದಲ್ಲೇ ಸಣ್ಣ ಮಟ್ಟಿಗೆ ‘ಆರೋಹಣ’ದ ಗಾಳಿ ಬಡಿದ ಪರ್ವತಾರೋಹಿ ಮಿತ್ರ. ಅವರು ಸುಲಭ ಸಂಬಳದ ಉದ್ಯೋಗವನ್ನು ನಿರಾಕರಿಸಿ, ಸ್ವಂತ ಉದ್ದಿಮೆಗಿಳಿದ (ಪವರ್ ಮೇಟ್ ಸಂಸ್ಥೆಯ ಯಜಮಾನ) ಸಾಹಸಿ. ಅಂದಿನ ವಿದ್ಯುತ್ ಬರಗಾಲ ಬಾಳಿಗರನ್ನು (ಪವರ್ ಮೇಟ್ ಸಂಸ್ಥೆ) ಪರ್ಯಾಯ ವಿದ್ಯುತ್ ವ್ಯವಸ್ಥೆಯ (ಇನ್ವರ್ಟರ್) ಉತ್ಪಾದನೆ, ವಿತರಣೆ ಮತ್ತು ಉತ್ತರೋತ್ತರ ಸೇವೆಗಳಲ್ಲಿ ಪೂರ್ಣ ಮುಳುಗಿಸಿಬಿಟ್ಟಿತು. ಚಿಂತಿಸಬೇಡಿ, ಬಾಳಿಗಾ ಸಮರ್ಥ ಈಜುಗಾರ. ಹಾಗಾಗಿ ಅವರು ಸಾಹಸದೊಲವು, ಪ್ರಕೃತಿಪ್ರೇಮಗಳನ್ನು ಹವ್ಯಾಸವಾಗುಳಿಸಿಕೊಂಡು, ನಿಜದ ಈಜು, ಸೈಕಲ್, ಚಿತ್ರಗ್ರಹಣ ಮುಂತಾದವನ್ನು ಪೋಷಿಸಿಕೊಂಡು ಬಂದರು. ಇವರು ತಮ್ಮಂಗಳಕ್ಕೆ ಭೇಟಿ ಕೊಟ್ಟ ಚಿಟ್ಟೆಗಳದೇ ಒಂದು ಚಿತ್ರ ಕೋಷ್ಠಕ (ಅಂತರ್ಜಾಲದಲ್ಲಿ) ಮಾಡಿದ್ದಾರೆ. ಅದನ್ನು ನೋಡಿದ, ಬೆಳ್ವಾಯ್ ಚಿಟ್ಟೆ ಪಾರ್ಕಿನ ಸಮ್ಮಿಳನ ಶೆಟ್ಟಿ “ನಗರ ಮಿತಿಯೊಳಗೆ ಬಾಳಿಗರ ಸಾಧನೆ ಅದ್ವಿತೀಯ” ಎಂದು ಹೊಗಳಿದ್ದು ಸಣ್ಣ ಮಾತೇನಲ್ಲ. ಈಚೆಗೆ ಬಿಸಿಲೆ ದಾರಿಯಲ್ಲಿ ಸೈಕಲ್ ಮೆಟ್ಟಿದ್ದು ಮತ್ತು ಕಪ್ಪೇಗೂಡು ಲೋಕಾರ್ಪಣದ ನೆಪ ಬಾಳಿಗರಿಗೆ ಬಿಸಿಲೆಯನ್ನು ಸ್ವಲ್ಪ ಪರಿಚಯಿಸಿತ್ತು. ಈ ಬಾರಿ ಹೆಚ್ಚಿನ ಆಪ್ತತೆಯಲ್ಲಿ ಕಾಡು ಪರಿಚಯಿಸಿಕೊಳ್ಳಲು ಅಶೋಕವನದ ತೊರೆಯಗುಂಟ ಸಣ್ಣದಾಗಿ ಅಲೆದಾಡಿ ಸಂತೋಷಿಸಿದರು. (ಚಿತ್ರ ಸಾಕ್ಷಿ ಲಗತ್ತು) ಕೊಳ ನಿರ್ಮಿತಿಯಲ್ಲಿ ಅರೆಸ್ನಾತರಾಗಿದ್ದ ಉಪಾಧ್ಯ ಕೊನೆಯಲ್ಲಿ ಅದರಲ್ಲೇ ಪೂರ್ಣ ಸ್ನಾನವನ್ನೂ ಮುಗಿಸಿಕೊಂಡರು. ನಾನೂ ಅದನ್ನೇ ಬಳಸಿದೆ. ಉಳಿದಿಬ್ಬರು ಬಿಸಿನೀರಿನ ಅಗತ್ಯ ಕಾಣದಿದ್ದರೂ ಗೂಡಿನ ಸುಸಜ್ಜಿತ ಬಚ್ಚಲಿನ ಸದುಪಯೋಗ ಮಾಡಿಕೊಂಡರು. ಕ್ಯಾರಟ್, ಬಟಾಟೆ, ಟೊಮೇಟೋ ಸಂಕಲಿತ ಬೇಳೆ ಸಾಂಬಾರ್ ಹಾಗೂ ಮೊಸರು ಉಪ್ಪಿನಕ್ಕಾಯಿಗಳೊಡನೆ ನಮ್ಮ ಊಟ ಸಂಪನ್ನವಾಯ್ತು. ಭುಂಜಿತಾಯಾಸ ಕಳೆದು, ಚರುಮುರಿ ಕಾಫಿ ಏರಿಸಿ, ಸಂಜೆಯ ಚಾರಣಕ್ಕೆ ಹೊಸ ದಿಕ್ಕು ಹಿಡಿದೆವು.
ಮೂಲದಲ್ಲಿ ಬಿಸಿಲೆ ವಲಯ ಕಡಿದಾದ ಘಟ್ಟದಂಚಿನಲ್ಲಿದೆ. ಹಾಗಾಗಿ ಕಾಡಾನೆಗಳು ಅಷ್ಟಾಗಿ ಓಡಾಡುವುದಿಲ್ಲ. ಹತ್ತು ಹನ್ನೆರಡು ವರ್ಷಗಳ ಹಿಂದೆ, ಯಡ್ಡೀ ಸರಕಾರ ‘ಗುಂಡ್ಯ ೨೦೦ ಮೆವಾ ಜಲವಿದ್ಯುತ್ ಯೋಜನೆ’ಯ ಹುನ್ನಾರ ನಡೆಸಿತ್ತು. ಅದಕ್ಕೆ ಪೂರ್ವಭಾವಿಯಾಗಿ ಕೆಪಿಟಿಸಿಎಲ್ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ, ಊರವರನ್ನು ಸೇರಿಸಿ ಪರಿಸರ ಸಮೀಕ್ಷೆ ನಾಟಕ ನಡೆಸುವುದು ಅನಿವಾರ್ಯವಿತ್ತು. ಅದರಲ್ಲಿ ನಾವೂ ಕೆಲವು ವನ್ಯಾಸಕ್ತರು ಭಾಗವಹಿಸಿದ್ದೆವು. ಅಲ್ಲಿನ ಮುಕ್ತ ಮಾತಿನಲ್ಲಿ ಓರ್ವ ಹಳ್ಳಿಗ ಹೇಳಿದ್ದ “ಹಿಂದೆಲ್ಲಾ ನಾವು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋದಾಗಷ್ಟೇ ದೇವರ ಆನೆ ನೋಡಿ, ಭಕ್ತಿಯಲ್ಲಿ ಕೈ ಮುಗಿದು ಬರುತ್ತಿದ್ದೆವು. ಯಾವಾಗ ಇಲ್ಲಿನ ಘಟ್ಟಗಳ ಮೇಲೆ ರೈಲ್ವೇ, ಪೆಟ್ರೋಲ್ ಕೊಳವೆ, ಮಿನಿ ವಿದ್ಯುತ್, ಹೈ ಟೆನ್ಷನ್ ಸ್ತಂಭ ಸಾಲು ಬರ ತೊಡಗಿದವೋ ಕಾಡಾನೆಗಳು ನಮ್ಮ ಅಂಗಳಕ್ಕೇ ಬರ ತೊಡಗಿದವು. ನಾವೀಗ ಜೀವಭಯದಲ್ಲಿ ಓಡತೊಡಗಿದ್ದೇವೆ…” ಇಂದು ಬಿಸಿಲೆ ವಲಯದಲ್ಲಿ ಬಹುತೇಕ ಗದ್ದೆಗಳು ಆನೆ ಕಾಟದಲ್ಲಿ ಹಡಿಲು ಬಿದ್ದಿವೆ. ಅದಕ್ಕೆ ಪರಿಹಾರ ಎಂಬಂತೆ….ಸರಕಾರ ತೇಲಿಬಿಟ್ಟ ವದಂತಿ ‘ಎಲಿಫೆಂಟ್ ಕಾರಿಡಾರ್’ ಮತ್ತು ಕೈಕೊಂಡ ಕಾರ್ಯಕ್ರಮ ಕೃಷಿಕ್ಷೇತ್ರಗಳಿಗೆ ವಿದ್ಯುತ್ ಬೇಲಿಯ ಆವರಣ. ಇಲ್ಲಿನ ಭೂ ದಾಖಲೆಗಳಲ್ಲಿ ಅಶೋಕವನವನ್ನು ಕೃಷಿಭೂಮಿ ಎಂದೇ ಗುರುತಿಸಲಾಗುತ್ತದೆ. ಸಹಜವಾಗಿ ನಾನು ಬೇಡವೆಂದರೂ ಇಲಾಖೆ ಅಶೋಕವನಕ್ಕೂ ವಿದ್ಯುತ್ ಬೇಲಿ ಕೊಟ್ಟಿದೆ. ಅದು ಲೆಕ್ಕಕ್ಕೆ ನಿಯತಾಂತರದಲ್ಲಿನ ಸುಮಾರು ಐದಡಿ ಎತ್ತರದ ಕಬ್ಬಿಣದ ಗೂಟ ಮತ್ತು ಐದೆಳೆ ತಂತಿಯ ಬೇಲಿ. ಆದರೆ ಅದನ್ನು ಉದುರು ಕೊಂಬೆ, ಬಳ್ಳಿ ಪೊದರುಗಳು ಆವರಿಸದಂತೆ ಕಾಪಾಡಿಕೊಳ್ಳಲು ಸುಮಾರು ಐವತ್ತಡಿ ಅಗಲಕ್ಕೆ ಕಾಡು ಕೀಸಿದ್ದಾರೆ. ಬಿಸಿಲೆ ಗೇಟಿನ ಬಳಿಯಿಂದ ಹೊರಟು, ಬೆಟ್ಟದ ಏಣೊಂದನ್ನು ಹಿಡಿದು ನಮ್ಮಲ್ಲಿಗೆ ಬಂದಿತ್ತು. ಮೊದಲಲ್ಲಿ ಕೆಲವು ದಿನಗಳ ಮಟ್ಟಿಗೆ ಅದರಲ್ಲಿ ವಿದ್ಯುತ್ ಸಂಚಾರವಾಗಿತ್ತಂತೆ. (ನಾನು ಎಂದೂ ಕಂಡಿಲ್ಲ/ ಅನುಭವಿಸಿಲ್ಲ!) ಊರ ಗೋಪಾಲರು ತಂತಿಗಳ ನಡುವೆ ಕಬರುಗೋಲಿಟ್ಟು ದನ ಹೊಡೆದರು, ಗಾಳಿ ಮಳೆಗೆ ಗೆಲ್ಲೇನು ಮರವೇ ಬಿದ್ದು, ಗೂಟ ತಿರುಚಿ, ತಂತಿ ಕಡಿದು, ಬ್ಯಾಟರಿ ಸೋರಿ, ಬಹು ಬೇಗನೆ ವ್ಯವಸ್ಥೆ ಬೆದರುಬೊಂಬೆಯಷ್ಟೇ ಆಗಿ ಉಳಿಯಿತು. ದ್ವಿಚಕ್ರಿಗಳ ಹೆಲ್ಮೆಟ್ ಹಿಂತಲೆಯಲ್ಲಿ ನೇತಂತೆ, ಕೊರೋನಾ ಮೂಗ್ಮುಚ್ಚ ಗಲ್ಲ ಮುಚ್ಚಿದಂತೆ, ವಿದ್ಯುತ್ ಇಲ್ಲದ ಬೇಲಿ ಉಳಿದಿದೆ! ಏನೇ ಇರಲಿ, ಆ ಹೊಸ ಜಾಡನ್ನಷ್ಟು ನಡೆದು ನೋಡಬೇಕೆಂಬ ನನ್ನಾಸೆಯನ್ನು, ಈ ಸಂಜೆಯ ಚಾರಣದಲ್ಲಿ ಪೂರೈಸಿದೆವು.
ಬೇಲಿ ಜಾಡಿನ ಅತ್ಯುನ್ನತಿಯಲ್ಲಿ ನಮ್ಮ ಚರವಾಣಿಗಳು ಸಂಪರ್ಕವಲಯ ಕಂಡಿದ್ದವು. ಇದು ಮುಂದಿನಗಳಲ್ಲಿ ಕಪ್ಪೆಗೂಡಿನಲ್ಲಿ ಸಂಶೋಧನೆಗೆ ಬಂದವರಿಗೆ ಅನಿವಾರ್ಯವಾದಾಗ ಅಂತರ್ಜಾಲ ಸಂಪರ್ಕಕ್ಕೆ ಒದಗಲೂ ಬಹುದು. ಆ ಎತ್ತರದಲ್ಲಿ ನಾವು ಬೇಲಿ ಬಿಟ್ಟು ಬಲದ ಸವಕಲು ಜಾಡು ಅನುಸರಿಸಿದ್ದರೆ, ವಲಯದ ಉನ್ನತ ಕೇಂದ್ರ – ಕಲ್ಬೆಟ್ಟ, ಏರಬಹುದಿತ್ತು. ಹೊರಡುವ ಮೊದಲು ನಾನು ಅದನ್ನೇ ಗುರಿಯಾಗಿಟ್ಟುಕೊಂಡಿದ್ದೆ. ಆದರೆ ಪಶ್ಚಿಮಕ್ಕೆ ಜಾರುವ ಸೂರ್ಯನನ್ನು ನೋಡಿ ಉಪೇಕ್ಷಿಸಿದೆ. ನೇರ ಬಿಸಿಲೆ ಗೇಟ್ ಸೇರಿ, ತುಳಸಿ ಹೋಟೆಲಿನಲ್ಲಿ ಚಾ ಕುಡಿದು, ದೇವೇಗೌಡ ಕಮಲಮ್ಮರಲ್ಲಿ ಎರಡು ಮಾತಿನ ಉಪಚಾರ ಮುಗಿಸಿಕೊಂಡೆವು. ಮತ್ತೆ ಡಾಮರು ದಾರಿಯಲ್ಲೇ ವೀಕ್ಷಣಾ ಕಟ್ಟೆಗೆ ನಡೆದೆವು. ನೋಡಿದಷ್ಟೂ ಕಣ್ಣು ದಣಿಯದ ಕಾಡು ಬೆಟ್ಟಗಳನ್ನು ನೋಡುತ್ತಾ ಆವಶ್ಯಕ ಚರವಾಣಿ ಕರೆಗಳನ್ನೆಲ್ಲ ಮುಗಿಸಿಕೊಂಡು, ಅಶೋಕವನಕ್ಕೆ ಮರಳಿದೆವು. ರಾತ್ರಿಯ ನಮ್ಮ ಉದರಶಾಂತಿಗೆ ದೇವಕಿ ಧಾರಾಳ ಕಾಳು, ತರಕಾರಿ ಸೇರಿಸಿದ ಶ್ಯಾವಿಗೆ ಉಪ್ಪಿಟ್ಟು ಮಾಡಿದ್ದಳು. ಪಾತ್ರೆ ತೊಳೆಯುವವರ ಮೇಲೆ ಕರುಣೆ ತೋರಿ, ಬಾಣಲೆಯ ತಳ ನೆಕ್ಕುವವರೆಗೂ ಮುಕ್ಕಿ ಮುಗಿಸಿದ್ದೆವು. ಸಣ್ಣ ತೊಳೆಯುವಿಕೆಯನ್ನು ಗೂಡಿನೊಳಗಿನ ಸಿಂಕಿನಲ್ಲೇ ಮಾಡುತ್ತಿದ್ದೆವು. ಹೆಚ್ಚಿನದ್ದಿದ್ದಾಗ ಅವನ್ನು ನೇರ ತೋಡಿಗೇ ಒಯ್ಯುತ್ತಿದ್ದೆವು. ಉಪಾಧ್ಯರ ಕೊಳದ ಪೀಠಗಳನ್ನು ಇಬ್ಬರು ಹಂಚಿಕೊಳ್ಳುತ್ತಿದ್ದೆವು. ಕೆಳದಂಡೆಯ ಪೀಠಸ್ಥ ಉಜ್ಜಿಕೊಟ್ಟದ್ದನ್ನು, ಮೇಲ್ದಂಡೆಯವ ಶುದ್ಧ ಮಾಡಿ ಸುಲಭದಲ್ಲಿ ಮುಗಿಸಿಕೊಂಡೆವು. ಹಿಂದಿನದಂತೇ ಬೇಗನೇ ದೀಪವಾರಿಸಿ ಎಲ್ಲರೂ ಅಡ್ಡಾದೆವು. “ದಿನ ಕಳೆದದ್ದೇ ಗೊತ್ತಾಗಲಿಲ್ಲ” ಎಂದು ಬಾಳಿಗರ ಅಶರೀರವಾಣಿ ಸಣ್ಣದಾಗಿ ಕೇಳಿತು. ಗೂಡು ಹೊಕ್ಕಿದ್ದ ನಾಲ್ಕಾರು ಮಿಣುಕುಹುಳಗಳು ನಲಿನಲಿದು ನಮ್ಮ ಕನಸಿನ ಚಿತ್ರಗಳಿಗೆ ಮುಂಬೆಳಕು ಕೊಡುತ್ತಿದ್ದಂತೆ, ನಿದ್ರಾದೇವಿ ಎಲ್ಲರ ರೆಪ್ಪೆ ನೇವರಿಸಿದ್ದಳು.
೬. ಉಪಾಧ್ಯ ಕೊಳ, ಬಾಳಿಗರ ಒಣಮಹೋತ್ಸವ!
ಕನಸಿನಂತೆ ಕಳೆದ ಎರಡು ದಿನಗಳ ಬೆನ್ನಿಗೂ ಸೂರ್ಯೋದಯ ಆಗಿಯೇಬಿಟ್ಟಿತು! ನಾವು ಒಂದೂವರೆ ದಿನಗಳಲ್ಲಿ ಮಾಡಿರಬಹುದಾದ (ಅ)ವ್ಯವಸ್ಥೆಗಳಿಗೆ ಸಣ್ಣಪುಟ್ಟ ಒಪ್ಪಕೊಡುತ್ತಿದ್ದಂತೆ ದೇವಕಿ ‘ಪೋಹಾ’ ಮಾಡಿ ಕರೆಕೊಟ್ಟಳು! ಇದೇನಪ್ಪಾಂತ ಗಾಬರಿಯಾಯ್ತೇ? ಮೊದಲೆಲ್ಲ ‘ಅವಲಕ್ಕಿ ಒಗ್ರಣೆ’ ಎಂದು ತಾತ್ಸಾರಿಸುತ್ತಿದ್ದ ತಿಂಡಿ, ಮಗ ಅಭಯನ ಪೂನಾ ವಾಸದಲ್ಲಿ ‘ಅದ್ಭುತ ಭಕ್ಷ್ಯ’ವಾದ ಪರಿಯಿದು! (ಇನ್ನೂ ವಿವರ ಬೇಕಾದವರು ನೇರ ‘ಸಿಂಹದ ಬಾಯಿ’ಗೇ ಬೀಳಬಹುದು)
ಬಿಸಿಲೆ ಘಾಟಿ ರಸ್ತೆಯ ಕಾಂಕ್ರಿಟೀಕರಣದ ಮಝವನ್ನು ನಾನು ಹಿಂದೊಮ್ಮೆ ನೋಡಿದ್ದೆ. ಮತ್ತೆ ಇಂದು ಎಲ್ಲರೂ ನೋಡೋಣವೆಂದು ಬೆಳಗ್ಗಿನ ಚಾರಣಕ್ಕೆ ಸಜ್ಜಾದೆವು. ಸಮಯದ ಉಳಿತಾಯಕ್ಕಾಗಿ ಹಿಂದಿನ ಕೆಳದಿಕ್ಕಿನಲ್ಲಿ ನಡೆದಷ್ಟು ದಾರಿಗೆ ಕಾರು, ಮತ್ತೆ ನಡಿಗೆ ಎಂದು ಕಾರೇರಿದೆವು. ಘಟ್ಟದ ಮೇಲಿನ ಅರಸನೋರ್ವನ ಕೋರಿಕೆಯ ಮೇರೆಗೆ ಬ್ರಿಟಿಷರೇ ನಿರ್ಮಿಸಿದ ದಾರಿ ಬಿಸಿಲೆಘಾಟ್. ಕಾಲದ ಮಹಿಮೆಯಲ್ಲಿ ಅಂದಿನ (ಬಹುತೇಕ ಕುದುರೇ ಸಾರೋಟು) ಧಾರಾಳ ಅಗಲ ಇಂದಿಗೆ ಸಪುರವೆಂದನ್ನಿಸಿದ್ದು ಹೌದು. ಆದರೆ ಅದಕ್ಕಾಗಿ ಬೆಟ್ಟದ ಮೈಯಲ್ಲಿ ಅನುಸರಿಸಿದ ಜಾಡು, ಬಲು ಸಮರ್ಪಕ. ಎಲ್ಲೂ ಏರುದಾರಿಯಲ್ಲಿ ಏದುಬ್ಬಸ ಬಾರದು, ಇಳಿದಾರಿಯಲ್ಲಿ ನರಹರಿಯದು. ಸುಮಾರು ಇಪ್ಪತ್ತೆರಡು ಕಿಮೀ ಉದ್ದದಲ್ಲಿ ಐದು ಸ್ಪಷ್ಟ ಹಿಮ್ಮುರಿ ತಿರುವಿನೊಡನೆ, ಎಷ್ಟೊಂದು ಅಂಕಾಡೊಂಕೂ ಎಂದನ್ನಿಸಿದರೂ ಆಘಾತಕೊಡದೇ ವೈಯಾರ ತೋರುವ ಬಳಕು ಈ ದಾರಿಯದೇ ವಿಶೇಷ. (ಉಗ್ರ ದೇಶಪ್ರೇಮಿಗಳು ಓದಬೇಡಿ -) ಬ್ರಿಟಿಷ್ ಮಾರ್ಗ ನಿರ್ಮಾಪಕರಿಗೆ ದೊಡ್ಡ ಸಲಾಂ!
ರಾಜಸತ್ತೆಯ ಅಳಿವಿನೊಡನೆ ಮಾರ್ಗದ ಉಪಯುಕ್ತತೆ ಕ್ಷೀಣಿಸಿ, ದಾರಿ ಶಿಥಿಲವಾಯ್ತು, ಸುಮಾರು ನಾಲ್ಕು ದಶಕಗಳ ಹಿಂದೆ ಪೂರ್ಣ ಮುಚ್ಚಿಯೇ ಹೋಗಿತ್ತು. ಆದರೆ ಹೊಸ ರಾಜಕಾರಣದಲ್ಲಿ ಪ್ರತ್ಯಕ್ಷ ಉಪಯುಕ್ತತೆಗಿಂತ ಪರೋಕ್ಷ ಲಾಭಗಳ ಮೇಲೇ ದೊಡ್ಡ ಕಣ್ಣು! ನಿಜದ ಉಪಯುಕ್ತತೆ ಇಲ್ಲದಿದ್ದರೂ ಇದನ್ನು ಜೀರ್ಣೋದ್ಧಾರದಿಂದ ತೊಡಗಿ ಇಂದಿನ ಅಗಲೀಕರಣ, ಕಾಂಕ್ರಿಟೀಕರಣದವರೆಗೂ ಪುಡಾರಿ-ಕಂತ್ರಾಟುದಾರರ ದುಷ್ಟಕೂಟ ಹೆಚ್ಚಿಸುತ್ತಲೇ ಬಂದಿವೆ. ದಾರಿ ಎರಡು ವರ್ಷಗಳ ಹಿಂದಿನ ಭಾರೀ ಕುಸಿತವನ್ನು ಅತ್ಯಲ್ಪ ಸಮಯದಲ್ಲಿ ಕಳಚಿಕೊಂಡು ನಿಂತದ್ದು ನನ್ನ ಲೆಕ್ಕಕ್ಕಂತೂ ದೊಡ್ಡ ಪವಾಡವೇ ಸರಿ. (ಎಚ್.ಡಿ ರೇವಣ್ಣ ಮಹಾತ್ಮೆ!) ಈ ದಾರಿಗೆ ಉಪಯುಕ್ತತೆಯ ಹುಸಿ ಮುದ್ರೆ ಒತ್ತಲು ಸರ್ಕಾರೀ ಬಸ್ಸುಗಳನ್ನು ಖಾಲಿಯೇ ಓಡಿಸುತ್ತಾರೆ. ಅವುಗಳ ಮಾರ್ಗಸೂಚಿಯೇ ಒಂದು ತಮಾಷೆ: ‘ಬೆಂಗಳೂರು – ಧರ್ಮಸ್ಥಳ, ಬಿಸಿಲೆ ಸುಬ್ರಹ್ಮಣ್ಯ ಮೂಲಕ.’ ಈ ಬಸ್ ಸೇವೆ ನಿಂತಾಗೆಲ್ಲ, ದೊಡ್ಡದಾಗಿ ಕೊರಗಿದವರೇ ಇಲ್ಲ! ದಾರಿ ಒಂದೆಡೆ ಎರಡು ಹಿಮ್ಮುರಿ ತಿರುವುಗಳೊಡನೆ ಮೂರು ಹಂತದಲ್ಲಿಳಿಯುತ್ತದೆ. ಅಲ್ಲಿ ಬೆಟ್ಟದ ಮಳೆನೀರ ಹರಿವಿಗೆ ಮೂರು ಹಂತದ ಸೇತುವೆಯೂ ಇದೆ. ಇದು ಯಾವತ್ತೂ ನನ್ನ ಕುತೂಹಲವನ್ನು ಕೆರಳಿಸುತ್ತಲೇ ಇತ್ತು. ಅದನ್ನು ತೀರಿಸಿಕೊಳ್ಳುವಂತೆ, ಈ ಬಾರಿ ಮೂರನೇ ಹಂತದ ದಾರಿಗೆ ನಾನು ಉಪಾಧ್ಯರು ನೇರ ಸವಕಲು ಜಾಡಿನಲ್ಲಿ ಕಾಡು ಬಳ್ಳಿ ಹಿಡಿದು ಇಳಿದೆವು. ವಾಪಾಸಾಗುವಾಗ ಒಂದು ಸೇತುವೆಯೊಳಗೇ ನುಸಿದು (ರಚನೆಗಳು ನವೀಕರಣಗೊಂಡಿದ್ದಾವೆ, ಐತಿಹಾಸಿಕ ಹಳೆತನವೇನೂ ಉಳಿದಿಲ್ಲ), ಮತ್ತೊಂದರ ದರೆ ಏರಿ, ಒಟ್ಟಾರೆ ನಮ್ಮ ಕಾಡುಬೀಳುವ ಚಟ ತೀರಿಸಿಕೊಂಡೆವು. “ಸರಿಯಾದ ದಾರಿಯಲ್ಲಿ ನಡೀಬಾರ್ದಾ” ಎನ್ನುವವರ ಮಾತಿನೆದುರು ಗೆಲುವಿನ ನಗೆ ಬೀರಿದೆವು.
ಅದೇ ಮೂರು ತಿರುವುಗಳ ಕೊನೆಯಲ್ಲಿ ಕಾಂಕ್ರೀಟೀಕರಣಕ್ಕೆ ಒಳಗಾಗಬೇಕಿದ್ದ ಕಚ್ಚಾ ದಾರಿಯೇನೋ ಸಿಕ್ಕಿತು. ಆದರೆ ಕಾಮಗಾರಿಯ ಗದ್ದಲ ಕೆಳಕೊನೆಯಿಂದೆಲ್ಲೋ ಕೇಳುತ್ತಿತ್ತು. ಅಂದರೆ ಇನ್ನು ಮೂರು ಕಿಮೀ ನಡೆಯಬೇಕೇ ಎಂದು ಯೋಚಿಸುತ್ತಿದ್ದಂತೆ, ದೇವಕಿ ಜಾಗೃತಳಾದಳು. ಆಕೆ ಮಾರ್ಗದ ಬದಿಯಲ್ಲೆಲ್ಲೋ ಬಾಲ್ಯದ ನೆನಪಿಗೆಂದು ಸಂಗ್ರಹಿಸಿದ್ದ ‘ಪೀಪಿ ಕೋಡಿ’ನ ತೊಟ್ಟು ಹರಿದು ಬಿಗಿಲೂದಿದಳು. ಇನ್ನು ಮುಂದುವರಿದರೆ ಮಂಗಳೂರಿನ ಮರುಪಯಣಕ್ಕೆ ತಡವಾಗುವ ಎಚ್ಚರ ನಮಗೂ ಮೂಡಿ ವಾಪಾಸು ಹೊರಟೆವು.
ಮ್ಯಾಕ್ಬೆತ್ ನಾಟಕದ ಮೂರು ಮಾಟಗಾತಿಯರಂತೇ ನಮ್ಮ ದುಷ್ಟಚತುಷ್ಟಯ “ಮತ್ತೆಂದು ಭೇಟಿಯಾಗೋಣ? ಆಕಾಶ ಭೂಮಿ ಒಂದಾಗುವ ಮಳೆಗಾಲದಂದು, ಗಾಳಿಯ ಬಿರುಸುಳಿಗಳಲ್ಲಿ ಭಾರೀ ಮರಗಳು ಬುಗುರಿಯಾಗುವಂದು, ತೊರೆ ಸೊಕ್ಕಿ ಘಟಸರ್ಪವಾಗುವಂದು, ಉದುರೆಲೆ ತೊಟ್ಟುಗಳೆಲ್ಲ ಜಿಗಣೆಯಾಗಿ ಚಿಗುರುವಂದು, ಬಯಲು ಮೂಲೆಗಳಲ್ಲೂ ಮಂಡೂಕ ಸಂತತಿಯ ಘೋಷ ಮುಗಿಲು ಮುಟ್ಟುವಂದು….” ಹಾಡಿಕೊಳ್ಳುತ್ತ ಶಿಬಿರ ಮುಚ್ಚುವ ಕಾಯಕ ನಡೆಸಿದೆವು. ಹಳ್ಳಿಯ ಅಲೆಮಾರಿ ಜಾನುವಾರು ಬಿಟ್ಟು ಹೋಗಿದ್ದ ಸೆಗಣಿಮುದ್ದೆಗಳನ್ನು ಗೋಣಿ ತುಂಬಿ ಕಾರಿನ ಮಂಡೆಗೆ ಏರಿಸಿದೆವು. (ಮಂಗಳೂರಿನ ನಮ್ಮನೆಯ ಕೈತೋಟಕ್ಕೆ ಬಿಟ್ಟಿ ಗೊಬ್ಬರ!) ಒಗೆದು ಹರವಿದ ಬಟ್ಟೆ, ಅದಕ್ಕೆ ಕಟ್ಟಿದ ಹಗ್ಗ, ರಾಟೆ, ಹಗ್ಗ, ಕುರ್ಚಿ, ಗುದ್ದಲಿ, ಬುಟ್ಟಿ…. ಎಂದು ಎಲ್ಲ ಹೆಸರಿಸಿ, ‘ವಂದನಾರ್ಪಣೆ’ ಅರ್ಪಿಸಿದೆವು. ಉಪಾಧ್ಯರು ಮುಂದಿನ ‘ಗೋಷ್ಠಿ’ಗೆ ರೂಪುರೇಖೆಗಳನ್ನೂ ಚಿಂತಿಸಿದರು. ಕಪಾಟಿನೊಳಗೆ ಅಡ್ಡಾತಿಡ್ಡಾ ಬೀಳುವ ತಟ್ಟೆ ಲೋಟಾದಿಗಳನ್ನು ನೇಲಿಸುವುದೆಲ್ಲಿ, ಪಂಪಿನ ಮಂತ್ರ ಸಿದ್ಧಿಸುವವರೆಗೆ ಕೈತೊಟ್ಟಿಗೆ ಹರಿನೀರು ಬರುವುದು ಹೇಗೆ, ಕಾಲಿಲ್ಲದ ಅರೆ ಕಪಾಟಿನ ಆಧಾರಕ್ಕೆ ಎಷ್ಟು ರೀಪು, ಎಷ್ಟು ಸ್ಕ್ರೂ… ಇತ್ಯಾದಿ. ಜತೆಗೇ ಹರಿತ ಕಳೆದ ಗರಗಸಕ್ಕೆ ಪುನರುಜ್ಜೀವನ, ತಲೆಯಲುಗುವ ಪಿಕ್ಕಾಸಿಗೆ ಮದ್ದು, ಮುಂಚಾಚಿಕೆಯ ತಾಡಪತ್ರಿಗೆ ಆಧಾರ ಚೌಕಟ್ಟು… ಇವುಗಳ ಕುರಿತೂ ಚಿತ್ರಗಳನ್ನು ಅಳತೆ ಸಹಿತ ಸ್ಪಷ್ಟ ಮಾಡಿಕೊಂಡೆವು. ಕೊನೆಯಲ್ಲಿ ಎಲ್ಲ ‘ಉಪಾಧ್ಯ ಸರಸಿ’, ಬಚ್ಚಲುಗಳೆಂದು ಹಂಚಿಕೊಂಡು ಮಿಂದದ್ದಾಯ್ತು. ದೇವಕಿ ಯಡ್ಡಿಯಡ್ಡ ಬಾರದಂತೆ ಸಿದ್ಧಪಡಿಸಿದ್ದ ಬಿಸಿಯೂಟವನ್ನು ಮೆದ್ದು, ಗೂಡು ಮುಚ್ಚುವಾಗ ಗಂಟೆ ಮೂರಾಗಿತ್ತು. ಬಂದ ಬಳಸು ದಾರಿಯೇ ಗತಿಯಾದರೂ ಅವಿರತ ಆರಾಮದೋಟದಲ್ಲಿ ಕತ್ತಲೆಗೆ ಮುನ್ನ ಮಂಗಳೂರು ಖಾತ್ರಿ ಎಂದುಕೊಳ್ಳುತ್ತಾ ನಾನು ಕಾರನ್ನು ಗೇರಿಗೇರಿಸಿದೆ. ೭. ನಿಜ ಕಾಡಿನಿಂದ ಉಡ್ಲ್ಯಾಂಡ್ಸಿಗೆ!
ಬಿಸ್ಲೆ, ವಣಗೂರು ಕಳೆದು, ಲೆಕ್ಕದಂತೇ ಅತ್ತಿಹಳ್ಳಿಯಲ್ಲಿ ಕವಲಿದೆವು. ಇನ್ನು ಹೊಂಗಡಳ್ಳ ಎಂದು ಸಪುರ ದಾರಿಯಲ್ಲಿದ್ದಂತೆ, ನಮ್ಮ ದಿಕ್ಕಿನಲ್ಲೇ ಓಡುತ್ತಿದ್ದ ಎರಡು ಬೈಕುಗಳ ಗೊಂದಲ ಗಮನಿಸಿದೆವು. (ಆಮೇಲೆ ತಿಳಿದಂತೆ) ಆ ನಾಲ್ವರು ಶಿರಾದಿಂದ ಸುಬ್ರಹ್ಮಣ್ಯಕ್ಕೆ ಹೊರಟವರಂತೆ. ಊರಲ್ಲೇ ಯಾರೋ “ಬಿಸ್ಲೆ ದಾರಿ ಶಾರ್ಟೂ, ಸ್ವೀಟೂ..” ಅಂದರಂತೆ. ಇವರು ಮಂಜರಾಬಾದಿಗಾಗಿ ಬಿಸ್ಲೆವರೆಗೂ ಹೋಗಿ ಸೋತು ಬಂದಿದ್ದರು. ಇನ್ಯಾರದೋ ಮಾತು ಕೇಳಿ, ಮಾರನಹಳ್ಳಿ – ಗುಂಡ್ಯ ದಾರಿಗೆ ಬಿದ್ದಿದ್ದರು. ಅವರಿಗೆ ಅಲ್ಲಿನ ಕವಲುಗಳಿರಲಿ, ಸರಿ ದಿಕ್ಕೂ ಗೊತ್ತಿರಲಿಲ್ಲ. ಒಂದೆರಡು ಬಾರಿ ನಮ್ಮ ಹಿಂದೇ ಮುಂದೇ ಸುಳಿದಾಡಿ, ಎಲ್ಲೋ ಸುತ್ತಾಡಿ, ಹೊಂಗಡಳ್ಳ ಪೇಟೆಯಲ್ಲಿ ಮತ್ತೆ ನಮ್ಮ ಬೆನ್ನು ಹಿಡಿದಿದ್ದರು. ಆದರೆ ಎಲ್ಲರೂ ಹೊಂಗಡಳ್ಳದ ಅಣೆಕಟ್ಟಿದ್ದ ಕಣಿವೆಗೆ ಇಳಿಯುತ್ತಿದ್ದಂತೆ, ಎಲ್ಲೆಲ್ಲಿನ ಮೋಡಗಳೆಲ್ಲ ಒಟ್ಟಾಗಿ ನಮ್ಮ ಮೇಲೆ ದಾಳಿಯಿಟ್ಟವು. ಬೈಕಿನವರು ಎಲ್ಲೋ ಮರೆ ಸೇರಿಕೊಂಡರು. ನಾವು ರಗಳೆ ಕಳೆಯಿತೆಂದು ಮುಂದುವರಿದೆವು. ಆದರೆ ಮಳೆಯ ರಭಸಕ್ಕೆ ಕಾರಿನ ಕನ್ನಡಿ ಮಂಜು ಕಟ್ಟುವುದನ್ನು ನಿವಾರಿಸಿಕೊಳ್ಳುವ ಗೊಂದಲದೊಡನೆ, ಮುಂದೊಂದು ಕವಲಿನಲ್ಲಿ ನಾನು ದಾರಿ ತಪ್ಪಿದ್ದೆ.
ಇಲ್ಲೆರಡು ತಮಾಷೆಗಳು. ಇಲ್ಲೆಲ್ಲ ದಾರಿಬದಿಯಲ್ಲಿ ಕಾಣುವ ಬಹುತೇಕ ಮಾರ್ಗಸೂಚಿಗಳು ರಿಸಾರ್ಟಿನವರದು. ಅವರು ಎಲ್ಲಿನದೋ ಹೆಸರನ್ನು ಎಲ್ಲೋ ಬಳಸಿಕೊಂಡು ಹೊಸಬರನ್ನು ಗೊಂದಲಗೆಡಿಸುತ್ತಾರೆ. ಉದಾಹರಣೆಗೆ – ನಾವು ಜಡಿಮಳೆಯಲ್ಲಿ, ಸವಕಲು ಜಾಡಿನಲ್ಲಿ, ಕಟ್ಟೇರಿನ ಕುದುರೆಮುಖ ಶಿಖರಕ್ಕೆ ಹತ್ತಿಳಿದು ಬಂದ ಘಟನೆ ಹೇಳಿದ್ದೆ. ಆಗ ಅದರ ಹೆಸರಿನ ಕಡ ತೆಗೆದುಕೊಂಡ ಗಣಿಗಾರಿಕಾ ನಗರ – ಮಲ್ಲೇಶ್ವರಕ್ಕೆ, ಕಾರಿನಲ್ಲಿ ಹೋಗಿ ಬಂದವರು “ಹೂಂ ನಾವೂ ನೋಡಿದ್ದೇವೆ” ಎಂದ ಹಾಗಾಗುತ್ತದೆ. ಈಚೆಗೆ ಗೂಗಲ್ ನಕ್ಷೆಯೊಂದಿದ್ದರೆ ಯಾವ ಬೋರ್ಡೂ ವಿಚಾರಣೆಯೂ ಬೇಕಾಗಿಲ್ಲ ಎಂದೂ ಕೇಳುತ್ತೇವೆ. ಹಾಗೆಂದು ಅದರಲ್ಲಿ ಅತ್ತಿ ಹಳ್ಳಿಯಿಂದ ಮಾರನ ಹಳ್ಳಿ (ಗೂಗಲ್ ಕನ್ನಡ – ಮರಣ ಹಳ್ಳಿ!) ದಾರಿ ಕೇಳಿದರೆ, ಅದು ಪಕ್ಕಕ್ಕೆ ಗೀಟೆಳೆಯುವುದಿಲ್ಲ! ದೂರದ ಜಾವಗಲ್ ಆಚಿನ ಇನ್ನೊಂದೇ ಮಾರನಹಳ್ಳಿಗೆ ನೀಲ ಜಮಖಾನ ಹಾಸುತ್ತದೆ! ಸ್ವಲ್ಪ ಮಳೆ ತಿಳಿಯಾದಾಗ, ನನಗೆ ದಾರಿ ತಪ್ಪಿದ್ದು ಸ್ಪಷ್ಟವಾಗಿತ್ತು. ಹಳ್ಳಿಗರನ್ನು ವಿಚಾರಿಸಿ, ನಾಲ್ಕೈದು ಕಿಮೀ ನಷ್ಟವನ್ನು ನಮ್ಮ ಖಾತೆಗೆ ಜಮಾ ಮಾಡಿಕೊಂಡೆ. ಮಳೆ ಪಿರಿಪಿರಿ ಮಾಡುತ್ತಿದ್ದಂತೇ ಹಿರಿದನ ಹಳ್ಳಿಯಲ್ಲಿ, ಆ ಬೈಕ್ ಸವಾರರು ಇನ್ಯಾವುದೋ ತಪ್ಪು ಕವಲು ಶೋಧ ಮುಗಿಸಿ ನಮ್ಮೆದುರಿಗೇ ಬಂದರು. ಅಷ್ಟರಲ್ಲಿ ನನ್ನ ನೆನಪೂ ಸರಿದಾರಿಗೆ ಬಂದಿತ್ತು. ಹಾಗಾಗಿ ಬೈಕಿನವರನ್ನು ವಿಚಾರಿಸಿ, ನಮ್ಮ ಮೆರವಣಿಗೆಗೇ ಸೇರಿಸಿಕೊಂಡೆ. ಅಂದಾಜಿನ ಲೆಕ್ಕದಿಂದ ಸುಮಾರು ಮುಕ್ಕಾಲು ಗಂಟೆ ತಡವಾಗಿ, ಶಿರಾಡಿ ಹೆದ್ದಾರಿಯನ್ನು ಮಾರನಹಳ್ಳಿಯಲ್ಲಿ ಸೇರಿಕೊಂಡೆವು.
ಮಂಜುಶ್ರೀಯಲ್ಲಿ ಒಂದು ಚಾ ಹಾಕಿ ಮುಂದುವರಿದೆವು. ಕೋವಿಡ್ ನೆರಳಿಗೋ ಎಂಬಂತೆ ಹೆದ್ದಾರಿಯಲ್ಲಿ ಮಾಮೂಲಿನ ವಾಹನಗಳ ಮೇಲಾಟವಿರಲಿಲ್ಲ. ಆದರೆ ಇಳಿಯಿಳಿಯುತ್ತಿದ್ದಂತೆ ಕವಿದ ಕರ್ಮೋಡ, ಗುಡುಗಿನ ಗದ್ದಲ, ಮಿಂಚು ಸಿಡಿಲುಗಳ ಝಳಪಿಕೆ ಅಸಾಧಾರಣವಾಗಿತ್ತು. ಸಂಜೆ ಐದು ಗಂಟೆಗೇ ಕಾರಿನ ಹೆದ್ದೀಪ ಬೆಳಗಿಕೊಂಡು ನಿಧಾನಕ್ಕೆ ಮುಂದುವರಿದೆವು. ಗುಂಡ್ಯ ಸಮೀಪಿಸುತ್ತಿದ್ದಂತೆ ಭರ್ಜರಿ ಮಳೆ. ಅನೇಕ ಕಾರು, ಲಾರಿಗಳೆಲ್ಲ ಮಾರ್ಗದಂಚುಗಳಲ್ಲಿ ಬೆಪ್ಪುಗಣ್ಣು (ಬ್ಲಿಂಕರ್ಸ್) ಮಿಟುಕಿಸುತ್ತ ನಿಂತುಬಿಟ್ಟಿದ್ದವು. ನನಗಾದರೋ ಮಳೆಯ ಅಲೆ ಬೇಗ ಕಳೆದೀತು. ಮತ್ತೆ ನಮ್ಮ ದೂರ ದಾರಿಗೆ ಸ್ವಲ್ಪ ಹಗಲ ಬೆಳಕು ಉಳಿದೀತು ಎಂಬ ಆಶೆಯೇ ಪ್ರೇರಣೆ. ಸ್ವಲ್ಪ ಮಟ್ಟಿಗೆ ಪರಡಿದರೂ ಅಂದಾಜು ತಪ್ಪಾಗಲಿಲ್ಲ. ಕಾಡಿನ ಸಿಕ್ಕಿನಲ್ಲೇ ಮೋಡಗಳು ನಮ್ಮನ್ನು ಹುಡುಕುತ್ತಿರುವಾಗ, ನಾವು ಪೆರಿಯ ಶಾಂತಿ, ನೆಲ್ಯಾಡಿ ಎಂದು ಬೆಳಕಿನ ದಾರಿಯಲ್ಲಿ ಓಡಿದ್ದೆವು. ಹಗಲು ಬೆಳಕಿನ ಲಾಭ ಹೆಚ್ಚಾಗುವಂತೆ, ಉಪ್ಪಿನಂಗಡಿಯಲ್ಲಿ ಕಾಫಿ, ತಿಂಡಿಗಳನ್ನೂ ತ್ಯಾಗ ಮಾಡಿ, ಮಂಗಳೂರು ಭಜಿಸಿದೆವು. ಮೇಘಾವಳಿಯ ಮುಂಚೂಣಿಯ ಭಟರು ಅಲ್ಲಲ್ಲಿ ಸಣ್ಣದಾಗಿ ಅಟಕಾಯಿಸುತ್ತಿದ್ದರೂ ಏಳೂವರೆಯ ಸುಮಾರಿಗೆ ಮಂಗಳೂರು ನಿರ್ವಿಘ್ನವಾಗಿ ಸಿದ್ಧಿಸಿತ್ತು. ಪೂರ್ಣ ಹಿಡಿದಿಡಲು ಸೋತೆನೆಂದು ಮಳೆ ದೊಡ್ಡ ಧ್ವನಿ ತೆಗೆದು ಭೋರೆನ್ನುವುದರೊಳಗೆ, ಉಪಾಧ್ಯರಿಗೆ ಉಡುಪಿ ಬಸ್, ಬಾಳಿಗರಿಗೆ ಅವರ ಮನೆಗೇಟು ತೋರಿ, ನಾವು ಉಡ್ಲ್ಯಾಂಡ್ಸ್ ಸೇರಿಕೊಂಡಿದ್ದೆವು. ಸುಮಾರು ನಾಲ್ಕೂವರೆ ಗಂಟೆಯ ಪ್ರಯಾಣದಲ್ಲಿ ನಿಜ ಕಾಡನ್ನು ನೆನಪಿನ ಪುಟಕ್ಕೆ ಬಿಟ್ಟು, ಕಾಡ ಹೆಸರು ಹೊತ್ತ ಹೋಟೆಲಿನಲ್ಲಿ ನಿರುಮ್ಮಳದ ಊಟ ಮಾಡುತ್ತಿದ್ದೆವು.
(ಸರಣಿ ಮುಗಿಯಿತು)
ಚೆನ್ನಾಗಿ ಬರೆದಿದ್ದೀರಿ ಗುರುಗಳೇ…. ಆದ್ರೆ ಅನುಭವಿಸುವ ಪರಿಯೇ ಬೇರೆ…. ಅದು ಬರಹದಲ್ಲಿ ಎಷ್ಟೇಂದರೂ ಅಷ್ಟೇ…..
ಬಿಡಿಯಾಗಿ ಈ ಮೊದಲೇ ಓದಿದ್ದನ್ನು ಮತ್ತೆ ಇಡಿಯಾಗಿ, ನಿಧಾನವಾಗಿ ಓದಿ ಖುಷಿ ಪಟ್ಟೆ.
ಅದ್ಬುತ ಅನುಭವದ ಬರವಣಿಗೆ, ನಾನೇ ಸ್ವತಃ ಅಶೋಕವನಕ್ಕೆ ಹೋಗಿ ಕಪ್ಪೆಗೂಡಿನಲ್ಲಿ ಉಳಿದು ಬಂದಂತೆ, ಅಲ್ಲೆಲ್ಲ ಚಾರಣ ಮಾಡಿದಂತೆ ಆಯಿತು
ಲೇಖನದ ಓದಿನ ಓಘದಲ್ಲೇ ಮುಳುಗಿದವಳಿಗೆ ನೀಲ ಜಮಖಾನ ಹಾಸಿದ್ದು ಕಂಡಾಗ ಇದೇನು, ಕೆಂಪು ಜಮಖಾನ ಯಾಕೆ ನೀಲಿ ಆಯ್ತು ಅಂತ ಗಕ್ಕನೆ ನಿಂತೆ.ಎರಡು ಕ್ಷಣದ ನಂತರ ಹೊಳೆಯಿತು.ನಿಮ್ಮ ಭಾಷಾ ಪ್ರಯೋಗ ತುಂಬಾ ಖುಷಿ ಕೊಡುತ್ತದೆ.��ಈ ಸರಣಿಯಲ್ಲಿ ಅದು ಎದ್ದು ಕಂಡಿತು.ಮೇಘದ ಜಮಾವಣೆ ಗೂಡಲ್ಲೇ ನಿರೀಕ್ಷಿಸಿದ್ದರೆ ಇನ್ನೂ ಒಂದು ದಿನ ಅಲ್ಲೇ ಉಳಿದು,ಆ ಟಾರ್ಪಾಲೂ,ಗೋಣಿಯೊಳಗಿಂದ ಮೇಘ ಮಲ್ಹಾರದ ಸಂಗೀತ ಆಲಿಸಿಯೇ ಬರಬಹುದಿತ್ತು.ಹೇಗೂ ಅತ್ರಿ ಬಾಗಿಲು ತೆಗೆಯುವ ಕೆಲಸವಂತೂ ಇರಲಿಲ್ಲ.ಉಳಿದವರೂ ಆರಾಮವಾಗಿ ಇರುವವರೇ ತಾನೇ.ಹಿಂದಿನ ಸಂಚಿಕೆಯ ದೆವ್ವದ ಹಾಡು ತುಂಬಾ ಇಷ್ಟ ವಾಯಿತು.ಆ ಸಂಚಿಕೆ ಒಂಥರಾ ಥ್ರಿಲ್ಲರ್ ಸ್ಟೋರಿ ಇದ್ದ ಹಾಗಿತ್ತು.ಕೊನೆಯಲ್ಲಿ ದೇವಕಿಯವರ ಊಂ ಊಂ ಊಂ ಊಂ…. ಶಿಳ್ಳೆ ಧ್ವನಿಯ ಸಾಂಗತ್ಯ.ನಾನಂತೂ ಮನೆಯಲ್ಲೇ ಕೂತು ನಿಮ್ಮ ಅಜ್ಞಾತ ವಾಸದ ಕಥೆಯ ಮಜಾ ಅನುಭವಿಸಿದೆ.ಧನ್ಯವಾದಗಳು������ಈ ಸರಣಿಗೆ ಬಂದ ಕಾಮೆಂಟ್ಗಳೂ ಭಿನ್ನವಾಗಿತ್ತು
��ಅಂತೂ ಇಂತೂ ಕುಂತೀಪುತ್ರರಿಗೆ ವನವಾಸ ಕಳೆಯಿತು!��ನಾಲ್ಕುದಿನದ ವನವಾಸದಿಂದ ಮರಳಿಬಂದರು ಸೀತೆ, ರಾಮ, ಲಕ್ಷ್ಮಣ (+ಭರತರು).��ಅಶೋಕವನದಿಂದ ಅಯೋಧ್ಯೆಗೆಕ್ಷಮಿಸಿ ಕೊಡಿಯಾಲಬಯಲಿಗೆ ��
ಮಳೆಯಲ್ಲಿ ಅದರೊಳಗೆ ಕೂರಬೇಕು
ನಿಮ್ಮ ಮಾರ್ಗದರ್ಸನದಲ್ಲಿ ಈಚೆಗೆ ನೋಡಿ ಬಂದ ಮೇಲೆ ವಿವರಗಳು ಹೆಚ್ಚು ಆಪ್ತವಾಗುತ್ತಾ ಹೋದುವು