(ಇದುವರೆಗಿನ ದೋಣಿಯಾನದ ಟಿಪ್ಪಣಿಗಳ ಎರಡನೇ ಸಂಕಲನ)
ವಿಶ್ವ ಜಲದಿನ (೨೩-೩-೧೫), “ನೇತ್ರಾವತಿ ಉಳಿಸಿ” ಅರಣ್ಯರೋದನಂತೇ ಕೇಳುತ್ತಿತ್ತು. ಈಗ ಇರುವಷ್ಟನ್ನಾದರೂ ಸ್ವಲ್ಪ ವಿವರಗಳಲ್ಲಿ ನೋಡಲು ನಾನು, ದೇವಕಿ ಹೊರಟೆವು. ಬಹುದಿನಗಳ ಬಿಡುವಿನ ಮೇಲೆ ದೋಣಿ ಸವಾರಿಗೆ ಸಜ್ಜಾದೆವು. ಅದುವರೆಗಿನ ನಮ್ಮ ದೋಣಿ ಚಲಾವಣೆಗಳೆಲ್ಲ ಲೆಕ್ಕಕ್ಕೆ ಹೊಳೆಗಳಲ್ಲೇ ನಡೆದಿತ್ತು. ಆದರೆ ವಾಸ್ತವದಲ್ಲಿ ಅವೆಲ್ಲಕ್ಕೆ ಅತ್ತ ನೀರ ಮೂಲಬಲ (ಜಲಾನಯನ ಪ್ರದೇಶ) ಹೆಚ್ಚಿಲ್ಲದೆ, ಇತ್ತ ಸಮುದ್ರದ ಒತ್ತಡವೂ ಪ್ರಭಾವಿಸದೆ ನಮಗೆ ಸರೋವರ ಸ್ಥಿತಿಯೇ ಸಿಕ್ಕಿತ್ತು. ದೋಣಿ ಹುಟ್ಟು ಹಾಕಿದತ್ತ ಸುಲಭದಲ್ಲಿ ಚಲಿಸುತ್ತಿತ್ತು, ಇಲ್ಲವಾದರೆ ಬಹುತೇಕ ನಿಂತಂತೆಯೇ ಇರುತ್ತಿತ್ತು. ಆದರೆ ಈ ಬಾರಿ ನಾವಾರಿಸಿದ ನೇತ್ರಾವತಿಯ ಭಾಗ ಹಾಗಿಲ್ಲವೆಂದು ನಮಗೆ ತಿಳಿದಿತ್ತು. ಅತ್ತ ಮಂಗಳೂರು ನೀರು ಸರಬರಾಜು ವ್ಯವಸ್ಥೆಯ ತುಂಬೆ ಅಣೆಕಟ್ಟು ಈ ವರ್ಷ ಇನ್ನೂ ತುಂಬಿಯೇ ಇದ್ದು, ಕೆಳಪಾತ್ರೆಯಲ್ಲಿ ಹರಿವಿತ್ತು. ಇತ್ತ ಸಮುದ್ರದ ಸಂಪರ್ಕವೂ ನೇರವೇ ಇದ್ದುದರಿಂದ ಅಲ್ಲಿನ ಉಲ್ಲೋಲ ಕಲ್ಲೋಲಗಳು ನದೀ ಪಾತ್ರೆಯನ್ನು ಪ್ರಭಾವಿಸುವುದು ಸ್ಪಷ್ಟವಿತ್ತು. ಹಾಗಾಗಿ ನನ್ನದೇ ತರ್ಕದಲ್ಲಿ, ಭರತ ಕಾಲದಲ್ಲಿ ನದಿಯ ಎದುರು ಸವಾರಿ ಅನುಕೂಲವೆಂದು ಯೋಚಿಸಿದೆ. ದಿನ ಮುಂಚಿತವಾಗಿ ಉಚ್ಚಿಲದ ದಿನೇಶರನ್ನು ಸಂಪರ್ಕಿಸಿ ಮರುದಿನ ಭರತ ಇಳಿತಗಳ (ಭರತ = ಉಕ್ಕು, ಉಬ್ಬು, ಏರು, ಹೈ ಟೈಡ್. ಇಳಿತ = ಲೋ ಟೈಡ್) ವೇಳೆಯಷ್ಟೇ ವಿಚಾರಿಸಿಕೊಂಡೆ. ಆ ಲೆಕ್ಕದಲ್ಲಿ ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ನಮ್ಮ ಕಯಾಕ್ ಹೊತ್ತ ಕಾರು ಉಳ್ಳಾಲದ ಒಂದು ಖಾಸಗಿ ನೆಲೆ ತಲಪಿತು.
ಹನ್ನೊಂದು ಗಂಟೆಯ ಸುಮಾರಿಗೆ ಸಂತ ಮೇರಿ ಇಗರ್ಜಿ ಪಕ್ಕದ ಸವೇರಾ ಮೊಂಟೆರೋ ಮನೆಯಂಗಳದಲ್ಲಿ ಕಾರು ಬಿಟ್ಟು, ನಮ್ಮ ಕಯಾಕ್ ನೀರಿಗಿಳಿಸಿದೆವು. ನೇತ್ರಾವತಿಯಲ್ಲಿ ಏರಲೆಗಳು ಜೋರಾಗಿಯೇ ಇದ್ದವು. ದಂಡೆಯ ಆಧಾರಕ್ಕೆ ಉದ್ದ ಹಗ್ಗದಲ್ಲಿ ಕಟ್ಟಿದ್ದ ನಾಡದೋಣಿ ಗೂಟಕ್ಕೆ ಕಟ್ಟಿದ ಪುಂಡುಗರುವಿನಂತೆ ತಪಕ್ ತಪಕ್ಕೆಂದು ತುಯ್ದಾಡುತ್ತಿತ್ತು. ಮೊಂಟೆರೋ ದಂಪತಿ ಸ್ಕೂಟರ್ ಏರಿ ಇಗರ್ಜಿಗೆ ಹೊರಟವರು ಎಚ್ಚರಿಸಲು ಮರೆಯಲಿಲ್ಲ “ಗೊತ್ತಲ್ಲಾ ಮೊನ್ನೆ ಇಲ್ಲೇ ಸಮೀಪದಲ್ಲಿ ಇಬ್ಬರು ಹುಡುಗರು – ಈಜು ಬರುವವರು, ನೀರ ಸೆಳೆತಕ್ಕೆ ಮುಳುಗಿ ಸತ್ತರು.” ನಮ್ಮಿಬ್ಬರ ಈಜು ಪರಿಣತಿ ಅಷ್ಟಕ್ಕಷ್ಟೆ. ಆದರೆ ನಮಗೆ ಎರಡು ಭಂಡ ಧೈರ್ಯವಿತ್ತು. ಒಂದು, ಕಯಾಕಿನೊಳಗೆ ನೀರು ತುಂಬಿದರೂ ಮುಳುಗುವುದಿಲ್ಲ, ಮಗುಚುವುದಿಲ್ಲ. ಮತ್ತೊಂದೂ ಇಬ್ಬರೂ ಒಳ್ಳೆಯ ತೇಲಂಗಿ (ಲೈಫ್ ಜಾಕೆಟ್) ಹಾಕಿದ್ದುದರಿಂದ ಹೊಳೆಗೆ ಬಿದ್ದರೂ ನೀರು ಕುಡಿದು ಸಾಯುವ ಭಯವಿಲ್ಲ!
ನೇತ್ರಾವತಿಯ ನದಿಮುಖಜಭೂಮಿಯಿಂದಾಗಿ ಒಳನಾಡಿನ ಬಹುದೂರದವರೆಗೆ ಬಹುತೇಕ ಮಟ್ಟಸವಾಗಿದೆ ಮತ್ತು ಸಮುದ್ರಕ್ಕೆ ಲಂಬವಾಗಿಯೇ ಇದೆ. (ಫಲ್ಗುಣಿ ನದಿ ಗಮನಿಸಿ – ಉತ್ತರದಿಂದ ಹರಿದು ಬಂದು ಮುಖಜಭೂಮಿಯಲ್ಲಷ್ಟೇ ಸ್ಪಷ್ಟ ಪಶ್ಚಿಮ ತಿರುವು ಪಡೆಯುತ್ತದೆ. ಸಮುದ್ರದ ಭರತ ಇದನ್ನು ಪ್ರಭಾವಿಸಿದರೂ ಈ ತಿರುವಿನಿಂದಾಗೆ ಅಲೆಗಳ ಅಬ್ಬರ ತೀವ್ರವಾಗುವುದಿಲ್ಲ) ಹಾಗಾಗಿ ಒಳನಾಡಿನತ್ತ ನುಗ್ಗುವ ಏರಲೆಗಳನ್ನು ನಮ್ಮ ಬೆಂಬಲಕ್ಕಿಟ್ಟುಕೊಂಡು ನದಿಯ ಹರಿವಿನ ಎದುರು ನಾವು ಹುಟ್ಟು ಹಾಕಿದ್ದೆವು. ಕಿರಿದಂತರದಲ್ಲೇ ಜೋಡು ರೈಲ್ವೇ ಹಳಿಗಳ ಸೇತುವೆ. ಅನಂತರ ಸಿಗುವ ಒಂದಷ್ಟು ಭೂಭಾಗದಲ್ಲೇ ಆ ದುರದೃಷ್ಟಶಾಲೀ ಮಕ್ಕಳು ನೀರಾಟಕ್ಕಿಳಿದು ಜೀವ ತೆತ್ತದ್ದು. ಮುಂದೆ ಹೆದ್ದಾರಿಯ ಜೋಡು ಸೇತುವೆ. ಅದರ ಮುಂದಿನ ಬಲ ಕುದುರು ಆದಂಕುದುರು. ನಾವು ಬರುವ ವೇಳೆಗೆ ಅಲ್ಲೇನಾದರೂ ದರಾ ಬೇಂದ್ರೆಯವರು ಕುಳಿತಿದ್ದರೆ, ನಮ್ಮನ್ನು ನೋಡಿ “ರೈಲ್ವೇ ಅಡಿಯಿಂದ, ಹೆದ್ದಾರಿ ತೊಡೆಯಿಂದ ನುಸುಳಿ ಬಾ” ಎಂದೇ ನಮ್ಮ ಬಗ್ಗೆ ಖಂಡಿತಾ ಬರೆಯುತ್ತಿದ್ದರು!
ಮುಂದೆ ನದಿಯ ದೊಡ್ಡದೊಂದು ಎಡ ಸೀಳು ಕಲ್ಲಾಪುವಿನತ್ತ ಚಾಚಿಕೊಂಡಿತ್ತು. ಹೆದ್ದಾರಿ ಬರುವ ಮೊದಲು ಬಹುಶಃ ಇದು ಹಾಗೇ ಹರಿದು ರೈಲ್ವೇ ಸಂಕದಿಂದಲೂ ಆಚೆಗೆ ಮರಳಿ ಮುಖ್ಯ ಪಾತ್ರೆಗೆ ಸೇರುವುದಿತ್ತು. ಇಂದು ಹೆದ್ದಾರಿಯ ಪಶ್ಚಿಮ ಮೈಯಲ್ಲಿ ಕಾಣಸಿಗುವ ಪ್ಲೈವುಡ್ ಕಾರ್ಖಾನೆಯ ಅನುಕೂಲಕ್ಕೊದಗುವ ನೀರ ಹರಹೆಲ್ಲ ಇದರದೇ ಸಂಪರ್ಕ ಕಡಿದ ತುಣುಕುಗಳಿರಬೇಕು. ಸದ್ಯಕ್ಕೆ ಪ್ರವಾಹದ ಎದುರು ಸವಾರಿಯಲ್ಲಿರುವ ನಮ್ಮ ಬಲಗವಲು ನದಿಯ ಹರಿವಿನ ಲೆಕ್ಕಕ್ಕಿ ಕುರುಡುಕೊನೆ. ಆದರದು ಹೆದ್ದಾರಿಯಲ್ಲಿ ಹೋಗುವವರಿಗೆಲ್ಲ ಸ್ಪಷ್ಟವಾಗಿ ಕಾಣುವಂತೆ ಮುಖ್ಯವಾಗಿ ಭಾರೀ ಮರಳು ಸಂಗ್ರಹದ (ಮಾಫಿಯಾ?) ಅಡ್ಡೆ. ಹಾಗೇ ಆ ನೀರಕಂಪ ಹೆದ್ದಾರಿಯನ್ನು ಸಮೀಪಿಸಿದ ಭಾಗವನ್ನು ಅರಣ್ಯ ಇಲಾಖೆಯ ನಿರಂತರ ಕಾಂಡ್ಲಾ ಬೆಳೆಸುವ ಯೋಜನೆಯ ವಿಫಲಭೂಮಿ ಎಂದೂ ಹೆಸರಿಸಬಹುದು!
ನಾವು ನದಿಯ ದಕ್ಷಿಣದಂಡೆ ಬಿಟ್ಟು, ತುಸು ಉತ್ತರಕ್ಕೆ ಚಾಚಿಕೊಂಡಂತೆ ಎದುರು ತೋರುತಿದ್ದ ನೆಲದತ್ತ ಹುಟ್ಟು ಹಾಕಿದೆವು. ಅಲ್ಲಿ ತೋರುತ್ತಿದ್ದ ಭಾರೀ ವಿದ್ಯುತ್ ಟವರ್ ನಮ್ಮ ಲೆಕ್ಕಕ್ಕೆ, ಹಿಂದೆ ಬಿಟ್ಟ ಸೇತುವೆಗಳನಂತರದ ಮುಖ್ಯ ಭೂ ನಿಶಾನಿ. ಈ ಜಲಸಂದು ಮೂರು ಬಲಗಳ ತಾಕಲಾಟ ಕೇಂದ್ರ. ನದಿಯ ಸಹಜ ಹರಿವು, ಹಾಗೆ ಕುರುಡು ಕವಲಿನತ್ತ ನುಗ್ಗಿ ಮರಳುವ ನೀರಿನ ಅಡ್ಡ ಪ್ರತಿರೋಧ ಮತ್ತು ಭರತದಲೆಗಳ ಎದುರುತ್ತರ. ಅಲೆಗಳು ನಮ್ಮ ದೋಣಿಯ ಮೂಕಿಯಡಿಗೆ ತೊಪ್ ತೊಪ್ಪೆಂದು ಬಾರಿಸುತ್ತಿತ್ತು, ಆಗೀಗ ತೆರೆ ಮಗುಚಿ ಮುಂದಿನ ಗುಂಡಿಯಲ್ಲಿದ್ದ ದೇವಕಿಯ ಪಾದಗುಂಡಿಯಲ್ಲಿ ಸ್ವಲ್ಪಸ್ವಲ್ಪವೇ ಸೇರಿಕೊಳ್ಳುತ್ತಿತ್ತು. ನಮ್ಮಿಂದಲೂ ಎಡಕ್ಕೆ, ಅಂದರೆ ನದಿಯ ಒಟ್ಟಾರೆ ಹರಹಿನ ನಡುವೆ, ತಳಮಳ ಇನ್ನೂ ಹೆಚ್ಚಿದ್ದಂತೆ ನಮಗೆ ಭಾಸವಾಯ್ತು. ನಾವು ನಿರ್ಯೋಚನೆಯಿಂದ, ವಿಪರೀತ ಶ್ರಮವಹಿಸಿ ಟವರಿದ್ದ ದಂಡೆಯತ್ತ ಹುಟ್ಟು ಹಾಕುತ್ತಲೇ ಇದ್ದೆವು.
ಈ ಹಂತದಲ್ಲಿ ಹೊಸಬರ ಅನುಕೂಲಕ್ಕಾಗಿ ನಮ್ಮ ಕಯಾಕ್, ಅರ್ಥಾತ್ ಫೈಬರ್ ಗ್ಲಾಸಿನ ವಿಶಿಷ್ಟ ದೋಣಿಯ ಬಗ್ಗೆ ಸಣ್ಣ ವಿವರಣೆ ಕೊಡುವುದು ಅವಶ್ಯ. ಇದು ಎರಡು ಪದರಗಳ ರಚನೆ. ತಳದ ಪದರ (ಹೊರಪದರ) ಪಕ್ಕಾ ದೋಣಿಯದ್ದು. ಅದಕ್ಕೆ ಬೆಸೆದುಕೊಂಡಿರುವ ಮೇಲ್ಪದರ (ಒಳಪದರ) ಇಬ್ಬರಿಗೆ ನೆಟ್ಟಗೆ ಕುಳಿತು ಸವಾರಿ ನಡೆಸುವಂತೆ ವಿನ್ಯಾಸಗೊಂಡಿದೆ. ಸವಾರರು ಒಬ್ಬರ ಬೆನ್ನಿಗೊಬ್ಬರು ಕೂರುವಂತೆ ಎರಡು ತುಸು ಎತ್ತರದ ತಗ್ಗುಗಳಿವೆ. ಅವುಗಳಲ್ಲಿ ಸ್ವಸ್ಥ ಅಂಡೂರಿ ಸೊಂಟ ಹಿಂದಕ್ಕೊತ್ತಿದಾಗ ಎದುರು ತುಸು ತಗ್ಗಿನಲ್ಲಿ ಎರಡು ಕಾಲುಗಳನ್ನು ಚಾಚಲು ಪ್ರತ್ಯೇಕ ಚರಂಡಿ, ಕೊನೆಯಲ್ಲಿ ತಡೆ ಕೊಟ್ಟಿದ್ದಾರೆ. ಸ್ವಭಾವತಃ ಫೈಬರ್ ಗ್ಲಾಸ್ ತೇಲುತ್ತದೆ. ಸಾಲದ್ದಕ್ಕೆ ಎರಡು ಪದರಗಳ ನಡುವೆ ಸಹಜವಾಗಿ ತುಂಬಿದ ಗಾಳಿ ಕಯಾಕನ್ನು ಮಾಮೂಲೀ ದೋಣಿಗಳಿಂದ ಭಿನ್ನವಾಗಿಸುತ್ತದೆ. (ಗಾಳಿ ಹೊರಗೆ ಸೋರಿಹೋಗದಂತೆಯೂ ನೀರು ಒಳಗೆ ಒಸರದಂತೆಯೂ ಬೆಸುಗೆ ಭದ್ರವಾಗಿದೆ.) ಸವಾರರ ಭಾರದೊಡನೆ ಆ ತಗ್ಗುಗಳಲ್ಲಿ ನೀರು ತುಂಬಿದರೂ ಕಯಾಕ್ ಮುಳುಗದು! ಅಲೆಯ ಮಗುಚುಗಳು ನಮ್ಮಿಬ್ಬರ ಕಾಲಿನ ಗುಂಡಿಗಳಲ್ಲಿ ನೀರು ಸೇರಿಸುತ್ತ ಬಂದು ಸೊಂಟವನ್ನು ಆವರಿಸತೊಡಗಿತ್ತು. ತತ್ತ್ವ ಏನೇ ಹೇಳಿದರೂ ಅಲೆಗಳ ಹುಯ್ಯಲು, ನೀರಿನ ತುಂಬಾಟ ನಮಗೆ ಅನಾವಶ್ಯಕ ಆತಂಕವೇರಿಸಿತ್ತು. ಹಾಗಾಗಿ ಟವರಿನ ಭೂಭಾಗ ಬಂದಲ್ಲೊಂದೆಡೆ ದಂಡೆಗೆ ಸರಿದೆವು. ನೀರಿಗೆ ಮಗುಚಿ ಬಿದ್ದಿದ್ದ ದೊಡ್ಡ ಮರವೊಂದರ, ಬೇರಗಟ್ಟೆಗಳನ್ನು ಹಿಡಿದು ತುಸು ವಿರಮಿಸಿದೆವು. ಒಳತುಂಬಿದ ನೀರ ಭಾರ ನಿವಾರಿಸಬೇಕು. ಅದಕ್ಕೂ ಮಿಗಿಲಾಗಿ ಸೊಂಟದವರೆಗೆ ಸ್ನಾನತೊಟ್ಟಿಯಲ್ಲಿ ಕುಳಿತ ಮುಜುಗರ ತಪ್ಪಿಸಬೇಕು ಎಂಬ ತಹತಹ ದೇವಕಿಗೆ ಹೆಚ್ಚಿತ್ತು. ಅದೃಷ್ಟಕ್ಕೆ ಅಲ್ಲಿ ಬೇರ ಜಾಲದ ನಡುವೆ ನುಣ್ಣನೆ ಸಿಪ್ಪೆ ಸುಲಿದ ಇಡಿಕಾಯಿ ಸಿಕ್ಕಿಕೊಂಡಿತ್ತು. ಮೇಲೆ ತುಂಬೆಯಲ್ಲಿ ರಮಾನಾಥ ರೈಗಳು ಬಾಗಿನ ಅರ್ಪಿಸಿದ ಕಾಯಿಯೇ ಇರಬಹುದು! ದೇವಕಿ ಅದನ್ನು ಬಿಡಿಸಿ, ಅಂಚಿನ ಕಲ್ಲೊಂದಕ್ಕೆ ಬಡಿದು ಎರಡು ಹೋಳು ಮಾಡಿದಳು. ನೀರಿನಲ್ಲಿ ವಿಶೇಷ ನೆನೆದದ್ದಕ್ಕೋ ಏನೋ ಕರಟ ಎರಡು ಹೋಳಾದರೂ ಒಳತಿರುಳು ಇಡಿ ಗಿಟಕಾಗಿಯೇ ಉಳಿದಿತ್ತು. (ಅದನ್ನು ಮುಂದೆ ಬಿಹಾರೀ ಮರಳಿಗರಿಗೆ ಕೊಟ್ಟೆವು) ಮತ್ತೆ ಕರಟದಲ್ಲಿ ದೋಣಿಯ ನೀರು ಖಾಲಿ ಮಾಡಿದೆವು. ಜತೆಯಲ್ಲಿ ಒಯ್ದಿದ್ದ ಜಂಬು ನೇರಳೆ ಮೆದ್ದು, ಬಾಟಲಿ ನೀರು ಹೊಟ್ಟೆಗೆ ಸೇರಿಸಿ ಸುಧಾರಿಸಿಕೊಂಡೆವು.
ಸ್ವಲ್ಪದರಲ್ಲೇ ಟವರಿದ್ದ ನೆಲವೂ ಒಂದು ಕುದುರು ಎನ್ನುವಂತೆ ಇನ್ನೊಂದು ಭಾರೀ ನದಿ ಸೀಳು ದಕ್ಷಿಣಕ್ಕೆ ಚಾಚಿಕೊಂಡಿತು. ಹಾಗೇ ನಮ್ಮ ಎಡಕ್ಕೆ (ಉತ್ತರಕ್ಕೆ) ಬೇರೊಂದು ಕುದುರು ತೊಡಗಿತ್ತು. ನಾವು ಹೊಸ ಕವಲಿನ ಸಂಘರ್ಷ ತಪ್ಪಿಸುವಂತೆ ಉತ್ತರದ ಕುದುರಿನ ದಂಡೆಯತ್ತ ಅಡ್ಡ ಸರಿದು ಮುಂದುವರಿದೆವು. ಇಷ್ಟರಲ್ಲಿ ನಮಗರಿವಿಲ್ಲದಂತೆ ನಾವು ನದಿಯ ದೀರ್ಘ ಉತ್ತರ ತಿರುವಿನೊಡನೆ ಸರಿದದ್ದಕ್ಕೆ ಹಿನ್ನೋಟದಲ್ಲಿ ಬಿಟ್ಟು ಬಂದ ಹೆದ್ದಾರಿ ಸೇತುವೆ, ಆಚಿನ ಕಡಲು ಏನೂ ಕಾಣಲಿಲ್ಲ. ಬಹುಶಃ ಅದರಿಂದ ನೀರಿನ ತುಳುಕಾಟ ತುಸು ಕಡಿಮೆಯಾಯ್ತು. ಸಹಜವಾಗಿ ನಮ್ಮ ಮೇಲ್ಮುಖ ಪ್ರಗತಿ ಜೋರಾಯ್ತು. ಅಪರಾಹ್ನ ಒಂದೂವರೆ ಗಂಟೆಯ ಹೊತ್ತಿಗೆ ದಕ್ಷಿಣ ದಂಡೆಯ ಹರೇಕಳದ ಮಸೀದಿಯ ಪ್ರಾರ್ಥನಾ ಕರೆ ಕೇಳಿದಾಗ ನಮಗೆ ಹೊಟ್ಟೆಯ ಕರೆ ಮುಟ್ಟಿತು. ಆ ಹಂತದಲ್ಲಿ ನಿರ್ವಸಿತವಾಗಿಯೇ ತೋರುತ್ತಿದ್ದ ಕುದುರಿನ ದಂಡೆಯುದ್ದ ಹುಟ್ಟುಗಾರಿಕೆಯನ್ನು ಬದಲಿಸಿ ನಾವೂ ಮಸೀದಿಯತ್ತ ಸರಿದೆವು. ಅಲ್ಲಿ ನದೀಕಿನಾರೆಯಲ್ಲೇ ಬಿಹಾರಿ ಮರಳಿಗರ
ದೊಡ್ಡ ಶಿಬಿರವೇ ಇತ್ತು.
ಅಲ್ಲಿ ಮರಳು ತುಂಬಲು ಅನುಕೂಲವಾಗುವಂತೆ ನದೀ ತಳದಿಂದಲೇ ಕಲ್ಲು ಕಟ್ಟಿ ದೋಣಿಗಟ್ಟೆ ಮಾಡಿದ್ದರು. ಭರತದ ನೀರು ಅದನ್ನು ಮೀರಿಯೇ ದಂಡೆಯತ್ತ ತುಳುಕುತ್ತಿದ್ದುದರಿಂದ ನಮ್ಮ ಪುಟಗೋಸಿಯನ್ನು ಸರಾಗ ದಂಡೆಗೇ ಚಲಾಯಿಸಿ ಇಳಿದೆವು. ಮತ್ತದನ್ನು ನೆಲದ ಮೇಲೇ ತುಸು ಎಳೆದು ಹಾಕಿ, ಬುತ್ತಿಯೂಟದ ವಿರಾಮ ಅನುಭವಿಸಿದೆವು. ಕಡಲು ಪ್ರತಿ ಆರುಗಂಟೆಗೊಮ್ಮೆ ಶ್ವಾಸೋಚ್ಛ್ವಾಸ (ಭರತ, ಇಳಿತ) ನಡೆಸುತ್ತದೆ. ಹಾಗಾಗಿ ಭರತದ ಅನುಕೂಲವನ್ನು ಇನ್ನಷ್ಟು ಅನುಭವಿಸುವಂತೆ ಅಪರಾಹ್ನದ ಅವಧಿಯಲ್ಲೂ ಎದುರು ಸವಾರಿಯನ್ನು ಮುಂದುವರಿಸಿದೆವು. ನಾವು ಬಿಟ್ಟು ಬಂದಿದ್ದ ಉತ್ತರದ ಕುದುರಿನ ದಂಡೆಯತ್ತಲೇ ಸಾಗಿದ್ದೆವು. ಈ ಕುದುರು ಕೊನೆಯಲ್ಲಿ ಕೆಲವು ಸೀಳುಗಳಾಗಿತ್ತು. ಅವುಗಳಲ್ಲಿ ಬಹುತೇಕ ಕುರುಡು ಕೊನೆಯವಿರಬೇಕು (ಬ್ಲೈಂಡ್ ಎಂಡ್). ಬಹುಶಃ ಭರತದ ಸಮಯದಲ್ಲಿ ಮಾತ್ರ ಅಲ್ಲಿ ನೀರು ತುಂಬುವುದಿರಬೇಕು. ಆ ಎಲ್ಲ ಕವಲುಗಳ ಒಳಕ್ಕೆ ನಾವು ಸರಿಯಲಿಲ್ಲ. ಆದರೆ ನದಿಯ ವಿವಿಧ ಸೆಳೆತ, ಧಾರೆಗಳಿಗೆ ಸಿಕ್ಕ ಎಲ್ಲೆಲ್ಲಿನ ಅಸಂಖ್ಯ ಪರ್ಲ್ ಪೆಟ್ ಬಾಟಲುಗಳೂ ಪ್ಲ್ಯಾಸ್ಟಿಕ್ ಥರ್ಮಕೋಲ್ ಕಸಗಳು ಅವುಗಳ ಒಳಗೆ ಸೇರಿ ಸಂಭ್ರಮದಲ್ಲಿ ನಲಿಯುತ್ತಿದ್ದುವು!
ಒಂದು ಕವಲು ನದಿಯ ಉತ್ತರ ಹರಿವಿಗೊಂದು ನೀರ ಓಣಿ ಕಾಣಿಸಿತ್ತು. ಅದರಲ್ಲಿ ನಾವತ್ತ ಸರಿದು, ನಾವು ಎದುರು ಸವಾರಿ ಸಾಕುಮಾಡಿದೆವು. ಆಚೆ ಸುದೂರದಲ್ಲಿ ಅಡ್ಯಾರ್ ಕಟ್ಟೆಯ ಸುಪರಿಚಿತ ದೋಣಿಗಟ್ಟೆ ಕಾಣಿಸಿತು. ನಾನು ಎಷ್ಟು ಬಾರಿಯೂ ಸೈಕಲ್ಲೊಡನೆ ಬಂದಾಗ ಅಡ್ಯಾರ್ ಕಟ್ಟೆಯಿಂದ ಪಾವೂರಿಗೆ ಮುಟ್ಟಿಸುತ್ತಿದ್ದ ದೋಣಿಸೇವೆ ಸುದೂರದಲ್ಲಿ ಸಾಗಿತ್ತು. ಅದರ ಪರಿಚಿತ ಅಂಬಿಗನಿಗೆ ಮುಖ ತೋರಿಸುವ ಉತ್ಸಾಹ ನನಗಿತ್ತು. ಆದರೆ ಇನ್ನು ಭರತ ನಿಲ್ಲುತ್ತದೆ, ಇಳಿತ ತೊಡಗುತ್ತದೆ. ನಮ್ಮ ಅನನುಭವದಲ್ಲಿ ಹೊಳೆಯ ಹರಿವು, ಇಳಿತದ ಸೆಳವು ಸೇರಿ ನಾವು ಸಮುದ್ರಕ್ಕೇ ಹೋಗುವಂತಾದರೆ ಎಂಬ ಸಣ್ಣ ಆತಂಕವಿದ್ದುದರಿಂದ ನೇರ ಪಶ್ಚಿಮಾಭಿಮುಖಿಗಳಾದೆವು. ಅಡ್ಯಾರಿನತ್ತಣ, ಅಂದರೆ ಉತ್ತರ ದಂಡೆಯೆಡೆಗಿನ ನೀರ ಹರಹು ತುಂಬ ವಿಸ್ತಾರವಿತ್ತು. ಅದನ್ನು ಅಡ್ಡ ಹಾಯುವಲ್ಲಿ ಸಮಯ ಸಾಕಾಗದೆಂದು ಅನ್ನಿಸಿ, ಮತ್ತಿದೇ ಕುದುರಿನ ಉತ್ತರ ಅಂಚನ್ನೇ ನೆಚ್ಚಿಕೊಂಡೆವು.
ಹಿಂದೊಂದು ಕಾಲವಿದ್ದಿರಬೇಕು, ಕುದುರುಗಳೆಲ್ಲದರ ದಂಡೆಯನ್ನು ಕಾಂಡ್ಲಾ ಕಾಡುಗಳು ಅಂಚುಗಟ್ಟಿ ಕಾಪಾಡಿರಬೇಕು. ಆದರೆ ಕಾಲಾನುಗತವಾಗಿ ಹೆಚ್ಚು ಕಡಿಮೆ ಎಲ್ಲ ಕುದುರುಗಳಲ್ಲೂ ಮನುಷ್ಯನ ಕೃಷಿ, ವಾಸ್ತವ್ಯದ ವಿವಿಧ ಪ್ರಯೋಗಗಳು ಧಾರಾಳ ನಡೆದ ಕುರುಹುಗಳು, ಈಗಲೂ ಮುಂದುವರಿದಿರುವ ಸಾಕ್ಷಿಗಳು ಸಿಗುತ್ತವೆ. ತೆಂಗು, ಅಡಿಕೆ, ಬಾಳೆ, ಹಲವು ಕುಟುಂಬಗಳು, ಹೈನುಗಾರಿಕೆ ಕೆಲವು ಕುದುರುಗಳಲ್ಲಿ ಈಗಲೂ ನಡೆದಿವೆ. ಸುಮಾರು ಮೂರು ದಶಕಗಳ ಹಿಂದೆ ರಸ್ತೆಯಲ್ಲಿ ಅತ್ತ ಕಲ್ಲಾಪು ಬಳಿ, ಇತ್ತ ಫರಂಗಿಪೇಟೆಯ ಬಳಿ ಕಳ್ಳಭಟ್ಟಿ ನಿಷೇಧ ಜ್ಯಾರಿ ಮಾಡುವ ತಂಡದ ಪೊಲಿಸ್ ವ್ಯಾನುಗಳು ನಿಂತಿರುವುದನ್ನು ಕಾಣುವಾಗೆಲ್ಲ ಜನರ ಬಾಯಿಯಲ್ಲಿ ಈ ಕುದುರುವಾಸಿಗಳ `ಪ್ರತಾಪ’ವೇ ನಲಿಯುತ್ತಿತ್ತು. ಎರಡು ದಶಕ ಒಂದೆರಡು ಮನೆ, ಜಾನುವಾರು ಸಹಿತ ವಾಸವೆಲ್ಲ ಕುದುರಿರಬೇಕು. ಬಹುಶಃ ಅವರ ಹಿರಿಯರೆಲ್ಲ ಕಾಂಡ್ಲಾಗಳ ಪ್ರಾಕೃತಿಕ ಮಹತ್ತ್ವ ಅರಿಯುವ ಮೊದಲು “ಸೌದೆಗಷ್ಟೇ ಲಾಯಕ್ಕು” ತೀರ್ಮಾನ ಕೊಟ್ಟು, ಅವನ್ನು ಸಮೂಲ ಕಳೆದು ಮಸಿ ಮಾಡಿರಬೇಕು. ಸರಕಾರೀ ಸಹಾಯವೋ ಖಾಸಗಿ ಪ್ರಯತ್ನವೋ ಅಲ್ಲಲ್ಲಿ ಕಲ್ಲು ಕಟ್ಟಿದ, ದೋಣಿಗಟ್ಟೆಗೆ
ಕಾಂಕ್ರೀಟ್ ಹಾಕಿದ ರಚನೆಗಳು ಮಳೆಗಾಲದ ಕೊರೆತದಲ್ಲಿ ಕೇವಲ ಅವಶೇಷಗಳಾಗಿ ಕಾಣಿಸುತ್ತಿದ್ದುವು. ಭರ್ಜರಿ ಮರ ಕಡಿದು ಸೋರುವ ಮಾಡು ಕಟ್ಟಿಕೊಟ್ಟ ಹಾಗೆ! ಕರಡ ಹುಲ್ಲು, ಕೆಲವೆಡೆ ಭಾರೀ ಮುಂಡುಗದ ಪೊದರುಗಳು ನೆಲವನ್ನು ಹಿಡಿದಿಡಲು ನಡೆಸಿದ್ದ ವಿಫಲ ಪ್ರಯತ್ನಗಳು, ಮಗುಚಿದ ಭಾರೀ ಗ್ಲಿರಿಸಿಡಿಯಾ ಮರಗಳು, ಅಕೇಸಿಯಾ, ಮಳೆ ಮರ, ಬಿದಿರು ಅಂಚಿನ ನೋಟಕ್ಕೇ ಸಿಗುತ್ತಿದ್ದುವು. ಯಾವವೂ ಆ ನೆಲದವಲ್ಲ, ಆ ಪರಿಸರದಲ್ಲಿ ಉಳಿದದ್ದಿದ್ದರೂ ಬಹುದೊಡ್ಡ ಸಂಖ್ಯೆಯ ವೈಫಲ್ಯದ ಆಕಸ್ಮಿಕ ಉಳಿಕೆಯಾಗಿ ನೆಲೆಸಿದವು ಮಾತ್ರ. ಅವೆಲ್ಲಕ್ಕೂ ಮುಖ್ಯವಾಗಿ ಈ ಸಸ್ಯ ವಿಶೇಷಗಳು ಕುದುರಿನ ನೆಲವನ್ನು ಪ್ರಾಕೃತಿಕ ವೈಪರೀತ್ಯಗಳಲ್ಲಿ ಹಿಡಿದಿಡುವಲ್ಲಿ, ಸಹಜ ಜೀವವೈವಿಧ್ಯವನ್ನು ಪೋಷಿಸುವ ನೆಲೆಯಲ್ಲಿ ಎಂದೂ ಯಶಸ್ವಿಯಾಗುವುದು ಸಾಧ್ಯವಿಲ್ಲ. ಮುಖ್ಯ ಪ್ರವಾಹ ಹೋಗುವ ಕುದುರಿನ ಒಂದು ಮೈಯಂತೂ ಸುಮಾರು ಆರು ಅಡಿ ಎತ್ತರದ ದರೆಯೇ ಉಳಿಯುವಂತೆ ಕೊರೆದಿತ್ತು.
ಕುದುರುಗಳಲ್ಲಿ ಹೊಕ್ಕು, ವಿರಾಮದಲ್ಲಿ ಒಳಗೆ ನಡೆದಾಡಿದರೆ ಹಕ್ಕಿಗಳೂ ಸೇರಿದಂತೆ ಏನೆಲ್ಲಾ ಸಣ್ಣ ಜೀವಿಗಳನ್ನು ಕಾಣಬಹುದು ಎಂದು ನಾವು ಅಂದಾಜಿಸಿದ್ದೇ ಬಂತು. ಬೆಳಗ್ಗಿನಿಂದಲೂ ಕುದುರುಗಳಲ್ಲಿ, ನೀರಂಚುಗಳಲ್ಲಿ ಹಲವು ವಿಧದ ಹಕ್ಕಿಗಳ ಉಲಿ, ನಲಿ ದರ್ಶನ ನಮಗಾಗುತ್ತಲೇ ಇತ್ತು. ನಮ್ಮ ಒರಟು ನಡೆ, ಎಲ್ಲೂ ನಿಲ್ಲದ ಅವಸರದಿಂದಾಗಿ ನನ್ನ ಸಾಮಾನ್ಯ ಕ್ಯಾಮರಾದಲ್ಲಿ ಅವನ್ನು ಹಿಡಿದಿಡುವ ಪ್ರಯತ್ನವನ್ನು ಮಾಡಲಿಲ್ಲ.
ಗಂಟೆ ಮೂರಾದರೂ ನೀರ ಹುಯ್ಲು ಇಳಿಯಲಿಲ್ಲ, ಅದಕ್ಕೀಗ ಗಾಳಿಯ ಸಾಂಗತ್ಯ ಬೇರೆ ಸಿಕ್ಕಂತಿತ್ತು. ದೇವಕಿಯಂತೂ ಪೂರ್ಣ ಜಲಾಸನದಲ್ಲೇ ಇದ್ದಳು. ನಾವು ಶಾಂಭವಿ ನದಿಯಲ್ಲಿ ಕ್ಯಾಮರಾಕ್ಕೆನೀರು ಕುಡಿಸಿದ್ದನ್ನು ಮರೆಯುವಂತಿರಲಿಲ್ಲ. ಹಾಗಾಗಿ ಅಮೂಲ್ಯವಾದ್ದನ್ನೆಲ್ಲ ಪ್ಲ್ಯಾಸ್ಟಿಕ್ ಕವರುಗಳಲ್ಲಿ ಬಿಗಿ ಮಾಡಿ, ಅವನ್ನು ಭುಜಕ್ಕಡ್ಡ ಹಾಕಿಕೊಂಡ ರೆಕ್ಸಿನ್ ಚೀಲಗಳಲ್ಲಿ ತುಂಬಿಕೊಂಡಿದ್ದೆವು. ನನ್ನ ಗುಂಡಿಯಲ್ಲಿ ನೀರು ತುಂಬುತ್ತಿತ್ತು. ಆದರೆ ಕಯಾಕ್ ರಚನೆಯಲ್ಲೇ ಹಿಂಬದಿಗೆ ತುಸು ಎತ್ತರದ ಸ್ಥಾನವಿದೆ. ಆದ್ದರಿಂದ ಅರೆತೊಡೆ ಮಟ್ಟದಿಂದಲೇ ನೀರು ಹೊರ ಹರಿಯುತ್ತಿತ್ತು, ಚೀಲಕ್ಕೆ ಬಾಧೆಯಿರಲಿಲ್ಲ. ದೇವಕಿಯದು ಹಾಗಾಗಲಿಲ್ಲ, ಚೀಲವೂ ನೀರು ಕುಡಿಯುತ್ತಿದ್ದು ಆತಂಕ ಅಧಿಕವಾಯ್ತು. ಖಾಲಿಯಾದ ಬುತ್ತಿಪಾತ್ರೆಯ ಎರಡೂ ಭಾಗಗಳನ್ನು ನಾವಿಬ್ಬರು ಹಿಡಿದುಕೊಂಡು, ಎರಡು ಮಿನಿಟು ನೀರು ಖಾಲಿ ಮಾಡುವುದು, ಹತ್ತು ಮಿನಿಟು ಹುಟ್ಟು ಹಾಕುವುದು ನಡೆಸಿದ್ದೆವು. ಸುಮ್ಮನಿದ್ದರೆ ಪೂರ್ವಗಾಳಿ ನಮ್ಮನ್ನೆ ಹಾಯಿಪಟವಾಗಿ ಬಳಸಿ ಹಿಂದೆ ತಳ್ಳುವಷ್ಟು ಜೋರಿತ್ತು.
ಗಾಳಿ ಅಲೆಗಳ ಹೋರಾಟದಲ್ಲಿ ಕೈಚೆಲ್ಲದೆ ಸಾಕಷ್ಟು ದೊಡ್ಡವೇ ಇದ್ದ ಆ ಕುದುರನ್ನು ನಾವು ಹುಟ್ಟುಗೋಲಿನಲ್ಲಿ ಮೀಟಿದಂತೆ ಹಿಂದೆ ತಳ್ಳಿದೆವು! ಬಲಕ್ಕೆ ಕಣ್ಣೂರಿನ ಮಸೀದಿ ಮತ್ತು ಅದರ ಉರೂಸು ಸಂದರ್ಭದಲ್ಲಿ ಜನ ಬಳಸುವ ಸಣ್ಣ ಕುದುರು ನಿಧಾನಕ್ಕೆ ಹಿಂದೆ ಸರಿದಿತ್ತು. ಕುದುರಿನ ಅಪ್ರದಕ್ಷಿಣೆ ಪೂರ್ಣವಾದ ಮೇಲೆ, ಬೆಳಗ್ಗೆ ಹಿಡಿದ ದಕ್ಷಿಣ ದಂಡೆಯನ್ನೇ ನೆಚ್ಚಿದೆವು. ಹುಟ್ಟು ಹಾಕುವುದು, ನೀರು ಖಾಲಿ ಮಾಡುವುದು ನಡೆಸುತ್ತಾ ಹಾಗೂ ಹೀಗೂ ಅದರ ಕೊನೆಯನ್ನು ಸಮೀಪಿಸಿದೆವು. ಮತ್ತೆ ಆ ಹಂತದ ನೀರಿನ ದೊಡ್ಡ ಹರಹು ದಾಟುವುದು ಎದುರಾಯ್ತು. ಆಚೆಗೆ ನಾವು ಕಾಣಬಹುದೆಂದು ಆಶಿಸಿದ್ದ ವಿದ್ಯುತ್ ಟವರ್ ಕಾಣಿಸಿದರೂ ಉಳ್ಳಾಲ ಸೇತುವೆ ಮರೆಯಾಗಿಯೇ ಇತ್ತು. ಹಾಗಾಗಿ ತತ್ಕಾಲೀನವಾಗಿ ಬಳಲಿದ ತೋಳುಗಳಿಗೆ ವಿಶ್ರಾಂತಿ ಬಯಸಿದೆವು. ಮತ್ತೆ ತುಸು ವೇಳೆಗಳೆದರೆ ಖಚಿತ ಇಳಿತದ ಅಲೆಗಳ ಸಹಕಾರವೂ ಸಿಕ್ಕೀತು ಎಂಬ ವಿಶ್ವಾಸ ಸೇರಿತು. ಹಾಗೆ ಆ ಕೊನೆಯಲ್ಲಿದ್ದ ಒಂಟಿ ತಾಳೆ ಮರದ ಸಮೀಪ, ದಂಡೆಗೇರಲಿದ್ದ ಬೇರಗಟ್ಟೆಯ ಒಂದು ಸಣ್ಣ ಅವಕಾಶವನ್ನು ಬಳಸಿಕೊಂಡು ತಂಗಿದೆವು.
ದೋಣಿಯನ್ನು ಬೇರಿಗೆ ಕಟ್ಟಿ ಮೂರಡಿ ಮೇಲಿದ್ದ ನೆಲಕ್ಕೇರಿದೆವು. ಆ ನೆಲದ ಪೂರ್ವ ಭಾಗದಲ್ಲಿ ಕೃಷಿ, ಮನೆ ನೋಡಿದ್ದೆವು. ಪಶ್ಚಿಮ ಭಾಗದಲ್ಲಿ ಬಹುತೇಕ ಎಲೆಯುದುರಿಸಿ ಒಣಗಿನಿಂತ ಕುರುಚಲು ಕಾಡಿತ್ತು. ಪಶ್ಚಿಮ ಕೊನೆಗೊಂದು ಚೂಪುಕೊಡುವಂತೆ ನಿಂತಿದ್ದ ಒಂದು ಕಿರು ತಾಳೆಮರ ವಿಚಿತ್ರ ಶೋಭೆಯನ್ನು ಕೊಟ್ಟಿತ್ತು. (ಅದಕ್ಕೆ ಜೀವ ಹಿಡಿಯಲು ಬೇಕಾದಷ್ಟೇ ಗರಿಗಳನ್ನು ಉಳಿಸಿ, ಜನ ಉಳಿದವನ್ನು ಕಾಲಕಾಲಕ್ಕೆ ಕ್ಷೌರಮಾಡುತ್ತಲೇ ಬಂದಂತಿತ್ತು!) ಆ ಒಣಗಾಡಿನ ನಡುವೆ ನಾಲ್ಕೆಂಟು ಜಾನುವಾರುಗಳು ತಿನ್ನಲೇನೂ ಉಳಿದಿಲ್ಲವೆಂಬಂತೆ ಶೂನ್ಯ ನೋಡಿಕೊಂಡಿದ್ದುವು. ಅವಕ್ಕೆ ನಮ್ಮ ನೋಟ ಹಿಡಿಸಲಿಲ್ಲವೆಂದು ಅಂದಾಜಿಸಿದ್ದರಿಂದ, ಅಭ್ಯಾಸದಂತೆ `ಮಾತಾಡಿಸಲು’ ಹತ್ತಿರ ಹೋಗುವ ಧೈರ್ಯ ಮಾಡಲಿಲ್ಲ. ದೇವಕಿ ಸವಕಲು ಜಾಡು ಹಿಡಿದು ಪೂರ್ವಕ್ಕೆ ನಡೆದರೆ ನಾನು ತಾಳೆಮರದ ಚಿತ್ರ ಹಿಡಿಯಲು ಪಶ್ಚಿಮಕ್ಕೆ ಸರಿದೆ. ತಿರುಗಿ ಬರುವಾಗ ಒಂದು ಪುಟ್ಟ ಕರುವನ್ನು ಸ್ವಲ್ಪ ಉದ್ದ ಹಗ್ಗ ಕೊಟ್ಟು ಕಟ್ಟಿ ಹಾಕಿದ್ದು ಕಂಡೆ. ಇದನ್ನಾದರೂ ಮುದ್ದು ಮಾಡೋಣ ಎಂದು ಅದರ ಹತ್ತಿರ ನಿಧಾನಕ್ಕೇ ಹೋದೆ. ಅದು ಗಾಬರಿಯಲ್ಲಿ ಏದುಸಿರು ಬಿಡುತ್ತಾ ವಿರುದ್ಧ ಅಂಚಿಗೆ ಹಗ್ಗ ಜಗ್ಗುತ್ತಾ ನಿಂತಿತು. ನಾನು ನನ್ನದೇ ರೀತಿಯಲ್ಲಿ ಅದಕ್ಕೆ ಪ್ರೀತಿಯೊಂದನ್ನೆ ತೋರಿಸುತ್ತ ನಿಧಾನಕ್ಕೆ ಮುಂದುವರಿದೆ. ನಾನು ಆ ಗೂಟ ಸಮೀಪಿಸುವಷ್ಟರಲ್ಲಿ ಕರು ಒಮ್ಮೆಲೇ ಹಗ್ಗ ಜಗ್ಗುತ್ತಾ ಓಡತೊಡಗಿತು.
ನಾನೇನಾಗುತ್ತಿದೆ ಎಂದು ಅಂದಾಜಿಸುವುದರೊಳಗೆ ಅದರ ಓಟ ಗೂಟವನ್ನು ಕೇಂದ್ರವಾಗಿಟ್ಟು ಎರಡು ಸುತ್ತು ತಿರುಗಿ ಇನ್ನು ಹಗ್ಗವಿಲ್ಲದೇ ಮುಗ್ಗುರಿಸಿ ಮೊಣಕಾಲು ಹಾಕಿತು. ಇದು ನನ್ನ ಮೇಲೆ ವಿಪರೀತ ಪರಿಣಾಮವನ್ನೇ ಮಾಡಿತ್ತು. ನಾನು ಯೋಚಿಸುವುದರೊಳಗೆ ಅದರ ಹಗ್ಗ ನನ್ನ ಕಾಲುಗಳನ್ನು ಅನಾಮತ್ತಾಗಿ ಬಿಗಿದು ಇನ್ನೇನು ನಾನು ಅಡ್ಡ ಬೀಳಬೇಕು ಎನ್ನುವಲ್ಲಿ ನಡುವಿನ ಗೂಟ ಆಧಾರಕ್ಕೆ ಒದಗಿತ್ತು! ಪ್ಯಾಂಟಲ್ಲದಿದ್ದರೆ ಆ ರಭಸಕ್ಕೆ ನನ್ನ ಕಾಲಿನ ಚರ್ಮ ಸುಲಿದೇ ಹೋಗುತ್ತಿತ್ತು. ಕರು ಕೈಯಳವಿಯಲ್ಲಿದ್ದರೂ ಅದನ್ನು ರಮಿಸಲು, ಹಿಂದೆ ನೂಕಲು ಅಸಾಧ್ಯದ ಪರಿಸ್ಥಿತಿ; ಗೂಟ ಬಿಟ್ಟರೆ ನನಗೆ ಅಡ್ಡ ಮಗುಚುವ ಭಯ. ದೇವಕಿಯನ್ನು ಬೊಬ್ಬೆ ಹೊಡೆದು ಕರೆದು, ಬಿಡಿಸಿಕೊಳ್ಳಬೇಕಾದರೆ ಸಾಕುಬೇಕಾಯ್ತು! ಇನ್ನು ಗ್ರಹಚಾರಕ್ಕೆ ಮೊದಲೇ ಬೆದರಿದ ಆ ಅಡ್ನಾಡಿ ಜಾನುವಾರುಗಳಲ್ಲಿ ಕರುವಿನ ಅಮ್ಮನೇನಾದರೂ ಇದ್ದರೆ, ನಮ್ಮನ್ನು ವಿಚಾರಿಸಿಕೊಳ್ಳಲು ಬಂದರೆ, ಎಂದು ಹೆದರಿ ಬೇಗನೆ ದೋಣಿ ಸೇರಿಕೊಂಡೆವು.
ಗಂಟೆ ನಾಲ್ಕು ಕಳೆದಿತ್ತು, ನಿಜವೋ ನಮ್ಮ ಭ್ರಮೆಯೋ ಅಲೆಯೊಲೆತ ಕಡಿಮೆಯಾದಂತೆ ಕಾಣಿಸಿತು. ಗಾಳಿ ಕೆಲವೊಮ್ಮೆ ಸಣ್ಣ ಮೌನ, ಮರುಕ್ಷಣದಲ್ಲಿ ನಮಗೆ ಸವಾಲಿಕ್ಕುವಂತೆ “ಬರ್ರೋ.” ವಿಸ್ತಾರ ಹರಹಿನಲ್ಲಿ ಕಾಣಿಸುತ್ತಿದ್ದ ನೊರೆಸಾಲು ನಮಗೆ ಧೈರ್ಯವನ್ನಂತೂ ಕೊಡಲಿಲ್ಲ. ಕುದುರು ಬಿಡುವ ಮುನ್ನ ದೋಣಿ ಅಡ್ಡ ಹಾಕಿ ನೀರು ಖಾಲಿ ಮಾಡಿದ್ದೆವು. ಅದನ್ನು ಅಣಕಿಸುವಂತೆ ಐದೇ ಮಿನಿಟಿನಲ್ಲಿ ಅಲೆಗಳು ಮತ್ತೆ ನಮ್ಮಿಬ್ಬರನ್ನೂ ನೀರಗುಂಡಿಯಲ್ಲೇ ಕೂರಿಸಿದ್ದುವು. ನಾವು ನೀರು ಖಾಲಿಮಾಡುವ ಯೋಚನೆ ಬಿಟ್ಟು ಏಕ ಲಕ್ಷ್ಯವಾಗಿ ವಿದ್ಯುತ್ ಟವರ್ ನೋಡುತ್ತಾ ಹುಟ್ಟು ಹಾಕಿದೆವು. ಅದು ಸಮೀಪಿಸುತ್ತಿದ್ದಂತೆ, ಹೋಗುವ ದಾರಿಯಲ್ಲಿ ನಾವು ಗಮನಿಸದ ನದಿಯ ತಿರುವು ಕಳೆದದ್ದು ತಿಳಿಯಿತು. ಆಶಾ ಸಂಕೇತದಂತೆ ದೂರದಲ್ಲಿ ಉಳ್ಳಾಲ ಸಂಕ ಕಾಣಿಸತೊಡಗಿತು. ಗಾಳಿಯ ಬೀಸು, ಅಲೆ ಮಗುಚುವ ಕ್ರಿಯೆ ಮೊದಲಿನಂತೇ ಇತ್ತು. ಆದರೀಗ ನಾವು `ಅರೆಜಲವಾಸ’ವನ್ನು ರೂಢಿಸಿಕೊಂಡ ಮತ್ತು ಸ್ಪಷ್ಟ ಗುರಿಯನ್ನೂ ಕಂಡ ಉತ್ಸಾಹಿಗಳು. ಏಕ್ದಂ ಹುಟ್ಟು ಹಾಕುವುದನ್ನೇ ನಡೆಸಿದೆವು. ಆ ಸಂಕಟದಲ್ಲೂ ದೇವಕಿಗೆ ನೆನಪಿಗೆ ಬಂದದ್ದು ಅಸಮಸಾಹಸಿ ಖೈದಿ ಪ್ಯಾಪಿಲಾನ್! ವಿಸ್ತಾರ ಸಮುದ್ರದಲ್ಲೇ ದಿನಗಟ್ಟಳೆ ಅನ್ನ ನೀರು ವಿಶ್ರಾಂತಿಗಳ ಕಲ್ಪನೆಯಿಲ್ಲದೇ ಹುಟ್ಟು ಹಾಕಿದ ಅವನ ನಾಮದ ಬಲ ನಮಗೆ ಮತ್ತಷ್ಟು ಬಲವೂಡಿರಬೇಕು. ರಸ್ತೆಯ ಜೋಡು ಸಂಕ ಬರುವಾಗ ಮೇಲಿನಿಂದ ಒಂದೆರಡು ಬೈಕ್ ಸವಾರರು ನಮ್ಮನ್ನು ಗುರುತಿಸಿ, ನಿಂತರು. ಅವರು ಕೈಬೀಸಿ ಪ್ರೋತ್ಸಾಹಿಸುವಾಗ ಸಹಾಯ ಯಾಚನೆಗೆ ಕೈ ಚಾಚಬಹುದಾಗಿದ್ದ ನಾವೂ ಪುನಶ್ಚೇತನಗೊಂಡದ್ದು ಸುಳ್ಳಲ್ಲ! ಜೋಡಿ ರೈಲ್ವೇ ಸಂಕ ಬರುತ್ತಿದ್ದಂತೆ ಆ ಕೊನೆಯಲ್ಲಿ ಜನಹೊತ್ತ ಗಾಡಿ ಕಾಣಿಸಿತು. ಮೇಲಿನಿಂದ ಅದರ ತೀರ್ಥ ಪ್ರಸಾದ ಬೀಳಬಾರದಲ್ಲಾಂತ ಹೆಚ್ಚಿನ ಶಕ್ತಿಯೂಡಿ ಸಕಾಲದಲ್ಲಿ ಕಳಚಿಕೊಂಡೆವು. ಎಲ್ಲಾ ಕತೆಗಳಂತೆ ಕೊನೆಯಲ್ಲೇ ಅಂದರೆ ಐದೂಮುಕ್ಕಾಲು ಗಂಟೆಗೆ ನಾವು ಮತ್ತೆ ಸವೇರಾ ಮೊಂಟೆರೋ ಮನೆಯ ದಂಡೆ ಸೇರಿದೆವು.
ಇಡಿಯ ಮೊಂಟೆರೋ ಕುಟುಂಬ ಅಲ್ಲಿ ನಮ್ಮನ್ನು ಕಾದಂತಿತ್ತು. ಆದರೂ ನಮ್ಮ ನಗೆ ಮಾಸದ ಮುಖ ನೋಡಿ ಮೊಂಟೆರೋ ಆಶ್ಚರ್ಯದಲ್ಲೇ ನುಡಿದರು “ಇವತ್ತು ಗಾಳಿ ಸ್ವಲ್ಪ ಜೋರಿದೆ. ನೀವು ಬೆಳಾಗ್ಗೆ ಬರಬೇಕಿತ್ತು.” ಬರಿಯ ಭರತ ಇಳಿತವಲ್ಲ, ಗಾಳಿಯನ್ನೂ ಅರಿತಿರಬೇಕು ಎಂಬ ಅವರ ಭಾವ ಗ್ರಹಿಸಿಕೊಂಡೆ. ನಾವು ನಿಧಾನಕ್ಕೆ ಕಟ್ಟೆಗೇರಿ ದೋಣಿಯನ್ನೂ ಎಳೆದುಕೊಂಡೆವು. ಆದರೆ ಕಾರಿನೆತ್ತರಕ್ಕೆ ಅದನ್ನೆತ್ತಲು ಹೊರಟಾಗಲೇ ಗೊತ್ತು – ನಮ್ಮ ಕೈ ಪೂರ್ಣ ಸೋತು ಹೋಗಿತ್ತು! ಆಗ ಮೊಂಟೆರೋ ಕುಟುಂಬದ ಬೆರಗು ಅನುಕಂಪವಾಗಿ ಸಹಾಯಕ್ಕೊದಗಿತು. ನಾವು ನಖಶಿಖಾಂತ ತೊಯ್ದದ್ದು ನೋಡಿ, “ಬೇಕಾದರೆ ಇಲ್ಲಿ ಸ್ನಾನ ಮಾಡಬಹುದು” ಎನ್ನುವಷ್ಟೂ ಅವರು ಆತ್ಮೀಯತೆ ತೋರಿದರು. ಆದರೆ ಕಾರಿನಲ್ಲಿ ನಮಗೆ ಮನೆ ಹತ್ತಿಪ್ಪತ್ತು ಮಿನಿಟಿನ ದಾರಿಯಾದ್ದರಿಂದ ಸವಿನಯ ನಿರಾಕರಿಸಿದೆವು. ಶಾಂಭವಿ, ನಂದಿನಿ, ಕೂಳೂರು, ಉಚ್ಚಿಲ ಹೊಳೆಗಳನ್ನು ನಮ್ಮ ಬಿರುದಾವಳಿಯಲ್ಲಿ ಸೇರಿಸಿಕೊಂಡ ನಮಗೆ ನೇತ್ರಾವತಿ ಮಾತ್ರ ಹೆದರಿಸಿಬಿಟ್ಟಳು. ಅದೃಷ್ಟವಶಾತ್ ನಮ್ಮ ಯಾವ ಸಲಕರಣೆಗಳೂ ನೀರಿನಿಂದ ಬಾಧಿತವಾಗಲಿಲ್ಲ. ಹಾಗೇ ಎಷ್ಟೋ ನಾಟಕೀಯ ಸನ್ನಿವೇಶಗಳನ್ನು ಸಚಿತ್ರ ದಾಖಲಿಸಲೂ ಆಗಲಿಲ್ಲ ಎಂಬ ಕೊರಗು ಮಾತ್ರ ಉಳಿಯಿತು!!
ಅರರೆ ಅನುಪಮ ಸಾಹಸಿಗರೈ ನೀವ್ | ನದಿಯ ಹರಿವನುತ್ತರಿಸಿ ಮೆರೆದಿರೈ || ಜೀವಯಾನ ರೂಪಕವು ಕಯಾಕ್ ಯಾನದಿ | ಕೃತಕೃತ್ಯ ಭಾವಕೆ ಸಂದುದೈ ||