(ಚಕ್ರವರ್ತಿಗಳು – ೩೦, ದಕ್ಷಿಣಾಪಥದಲ್ಲಿ… – ೭)

ಮರೆಯಬೇಡಿ, ಇದು ಸುಮಾರು ಮೂರು ದಶಕಗಳ ಹಿಂದಿನ ಅನುಭವಕಥನದ ವಿಸ್ತೃತ ರೂಪ. ಪ್ರವಾಸ ಯೋಜಿಸುವಾಗ ನನಗಿದ್ದ ಏಕೈಕ ಗಟ್ಟಿ ಆಕರ ಆಸ್ಟ್ರೇಲಿಯಾ ಪ್ರಕಾಶನ ಸಂಸ್ಥೆ ಲೋನ್ಲೀ ಪ್ಲಾನೆಟ್ ಅವರ ಪುಸ್ತಕ – ಇಂಡಿಯಾ ಟ್ರಾವೆಲ್ ಸರ್ವೈವಲ್ ಕಿಟ್!

(ಗಣಕ, ಉಪಗ್ರಹಗಳಾಧಾರಿತ ನಕ್ಷೆ ಗೊತ್ತೇ ಇರಲಿಲ್ಲ) ಯಾವುದೇ ನಕ್ಷೆ ನೋಡಿದರೂ ಮೂನಾರ್ ಮತ್ತು ಕೊಡೈಕೆನಾಲ್ ಒಂದೇ ಪರ್ವತ ಶ್ರೇಣಿಯ ಭಿನ್ನ ಸ್ಥಳಗಳೆಂದಷ್ಟೇ ಕಾಣುತ್ತಿತ್ತು. ಕೊಡೈಕೆನಾಲ್ ಮೂನಾರಿನಿಂದ ನೇರ ಉತ್ತರ-ಪೂರ್ವಕ್ಕಿದೆ ಎಂದು ಕಂಡರೂ ನಡುವೆ ದುರ್ಗಮ ಬೆಟ್ಟ, ಗೊಂಡಾರಣ್ಯ. ಜನಪ್ರಿಯ ಭಾರತೀಯ ನಕ್ಷೆಗಳೆಲ್ಲ ತೋರುವ ರಸ್ತೆ ಸಂಪರ್ಕ – ಮೂನಾರಿನಿಂದ ಮಧುರೈಯತ್ತ ಹೋಗುವ, ಅಂದರೆ ದಕ್ಷಿಣ-ಪೂರ್ವಕ್ಕೋಡುವ ಸಾರ್ವಜನಿಕ ಮತ್ತು ಬಳಸು ದಾರಿ. (ಸುಮಾರು ನೂರರವತ್ತು ಕಿಮೀ.) ಆದರೆ ಲೋನ್ಲೀ ಪ್ಲಾನೆಟ್ ಕೇವಲ ಎಪ್ಪತ್ತೈದು ಕಿಮೀ ಅಂತರದ ನೇರ, ಆದರೆ ಕಚ್ಚಾದಾರಿಯನ್ನು ತೋರಿಸಿತ್ತು. ನಾವು ಅದನ್ನೇ ನಂಬಿದ್ದೆವು. ಇದರ ಕುರಿತು ಮೂನಾರ್ ಚಾ ತೋಟದ ಮ್ಯಾನೇಜರ್ ಅಯ್ಯಮ್ಮನವರನ್ನು ವಿಚಾರಿಸಿದಾಗ ಖಚಿತ ಮಾಹಿತಿ ಸಿಕ್ಕಿತ್ತು. “ಹತ್ತಿರ ಮತ್ತು ಭಾರೀ ಏರಿಳಿತವೇನೂ ಇಲ್ಲದ ದಾರಿಯೇನೋ ಹೌದು. ಆದರೆ ಪಕ್ಕಾ ಕಾಡುದಾರಿ – ಕೊರಕಲು ಬಿದ್ದಿರಬಹುದು, ಆನೆಗಳು ಎದುರಾಗಬಹುದು, ಎಲ್ಲಕ್ಕೂ ದೊಡ್ಡ ಕೊರತೆ ದಾರಿ ತೋರಲು, ಸಹಾಯಕ್ಕೊದಗಲು ಜನ ಸಿಕ್ಕುವುದೇ ಇಲ್ಲ. ನೆನಪಿರಲಿ, ಕವಲು ದಾರಿಗಳಲ್ಲಿ ಮಾರ್ಗಸೂಚಿಗಳಿಲ್ಲ.”

ಹಿಂದಿನ ದಿನದ ನಮ್ಮ ಅವಸರವನ್ನು ಒಪ್ಪದ ವಾತಾವರಣ ಆ ಬೆಳಗ್ಗೆ ಪೂರ್ಣ ತಿಳಿಯಾಗಿತ್ತು. ಆದರೆ ಸ್ಥಳ ಮಹಿಮೆ ಮತ್ತು ನಮ್ಮಲ್ಲಿ ಒಣಬಟ್ಟೆಗಳೇ ಇರಲಿಲ್ಲವೆನ್ನುವ ಕೊರತೆಗೆ ತುಸು ಸೂರ್ಯ ಮೇಲೇರುವವರೆಗೆ ಕಾಫಿ, ತಿಂಡಿ ಎಂದು ಮೂನಾರಿನಲ್ಲೇ ಠಳಾಯಿಸಿ, ಎಂಟುಗಂಟೆಗೆ ಮತ್ತೆ ಕೋಡಿದಾರಿ (ಕೊಡೈಕೆನಾಲಿನ ಜನಪ್ರಿಯ ಸಂಕ್ಷಿಪ್ತ ರೂಪ) ಹಿಡಿದೆವು. ಹಿಂದಿನ ದಿನದ ದೂರವಾಣಿ ವಿನಿಮಯ ಕೇಂದ್ರ ದಾಟಿ ಮುಂದೊಂದು ಸಣ್ಣ ಅಣೆಕಟ್ಟು/ ಸೇತುವೆ – ಮಾಡುಪಟ್ಟಿ ಡ್ಯಾಂ.

ಅಣೆಕಟ್ಟು ಟಾಟಾಟೀಯದ್ದೇ ಭಾಗ. ಅದು ಮೂನಾರ್ ಪೇಟೆ ಹಾಗೂ ಆ ಆಸುಪಾಸಿನಲ್ಲಿದ್ದ ಚಾ ಕಾರ್ಖಾನೆಗಳ ಜಲಪೂರೈಕೆಯ ಭಾಗ. ಕಟ್ಟೆಯ ಬಾಗಿಲನ್ನು ತಳದಲ್ಲಿ ಸ್ವಲ್ಪ ಎತ್ತಿದ್ದರು. ಕಿರುಗಂಡಿಯೊಳಗಿನಿಂದ ತೀವ್ರ ಒತ್ತಡದಲ್ಲಿ ಚಿಮ್ಮುತ್ತಿದ್ದ ನೀರು ಲೆಕ್ಕಕ್ಕೆ ಸಿಕ್ಕದ, ಆದರೆ ವಿಶಿಷ್ಟ ರೇಖಾಗಣಿತಾತ್ಮಕ ಜಾಲವನ್ನೇ ಅಲ್ಲಿ ನಿರಂತರ ಹೊಸೆದಿತ್ತು. ಅಲ್ಲೊಂದು ಬೋರ್ಡು – ಫೋಟೋಗ್ರಫಿ ನಾಟ್ ಅಲೋಡ್; ನೀರು ಚಿಮ್ಮುವ ಸೊಬಗಿಗಿಟ್ಟ ಬೆರ್ಚಪ್ಪ! (ಮೂವತ್ತು ವರ್ಷದ ಹಿಂದಿನ ಮಾತು ಬಿಡಿ, ಡಿಜಿಟಲ್ ತಂತ್ರಜ್ಞಾನ ಪೆನ್ನು, ಉಂಗುರಗಳಂಥಲ್ಲೂ ಚಿತ್ರಗ್ರಾಹಿಗಳನ್ನು ತರುತ್ತಿರುವಾಗ, ಉಪಗ್ರಹಾಧಾರಿತವಾಗಿ ಗೋಳದ ಯಾವುದೇ ಮೂಲೆಯ ಹುಲ್ಲೆಸಳ ನಡುಕವನ್ನೂ ಪ್ರತ್ಯಕ್ಷ ಕಾಣುವಂತಾಗಿರುವಾಗ ಈಗಲೂ ಇಂಥ ಬೋರ್ಡು ಹಚ್ಚುವ ಬುದ್ಧಿವಂತರಿದ್ದಾರೆ!)

ಹಿಂದಿನ ದಿನ ಇನ್ನೊಬ್ಬ ಮ್ಯಾನೇಜರ್ – ಚಂಗಪ್ಪ, “ಡ್ಯಾಮಿನಿಂದ ಮುಂದೆ ಮುಖ್ಯದಾರಿಗಿಂತ (ಅರಣ್ಯ ಇಲಾಖೆಯದ್ದು) ತೋಟದ ದಾರಿಉತ್ತಮ” ಎಂದು ವಿವರಿಸಿದ್ದರು. ಹಾಗೆ ಸುಮಾರು ೨೨ ಕಿಮೀ ತೋಟದಾರಿಗಳಲ್ಲು ಹಾಯ್ದು, ಪುನಃ ಮುಖ್ಯದಾರಿಯನ್ನು ಮರಳಿ ಸೇರುವಲ್ಲಿನ ವಿಶೇಷವನ್ನೂ ಚಂಗಪ್ಪ ತಿಳಿಸಿದ್ದರು. ಅವರೆಂದಂತೆ ಸಣ್ಣ ಕವಲು ದಾರಿಯನ್ನು ಹಿಡಿದು ಸುಮಾರು ಒಂದು ಕಿಮೀ ಸಾಗುವುದರೊಳಗೆ ಸಿಕ್ಕಿತು – ಟಾಪ್ ಸ್ಟೇಶನ್. ಗಡಿಬಿಡಿಯಾಗಬೇಡಿ, ಆ ಕಗ್ಗಾಡಿನೊಳಗೆ, ಕಟ್ಟೇರಿನ ಕೊನೆಯಲ್ಲಿ ಯಾವುದೇ ವಾಹನ ತಂಗುದಾಣವಾಗಲೀ, ನಾಗರಿಕ ಸೌಕರ್ಯದ ಯಾವುದೇ ತಾಣವಾಗಲೀ ಇಲ್ಲ. ಪ್ರಾಕೃತಿಕ ದೃಶ್ಯ ಉತ್ತುಂಗಕ್ಕೆ ತಾಣವಿದು, ದಕ್ಷಿಣ ಭಾರತದಲ್ಲೇ ಅತ್ಯಂತ ಎತ್ತರದ ಸಾರ್ವಜನಿಕ ದಾರಿ ಹುಡುಕಾಟಕ್ಕಿದು ಅಂತಿಮ ನಿಲ್ದಾಣ!

(ಲಗತ್ತಿಸಿದ ವಿಡಿಯೋ ೨೦೧೨ರಲ್ಲಿ ಬಿನೂ ಸ್ಟೀಫನ್ ಎನ್ನುವವರು ಚಿತ್ರೀಕರಿಸಿ, ಯೂ ಟ್ಯೂಬಿನಲ್ಲಿ ಸಾರ್ವತ್ರಿಕಗೊಳಿಸಿದ್ದು) ನಮ್ಮ ದುರದೃಷ್ಟಕ್ಕೆ ದೃಶ್ಯ ವೀಕ್ಷಣೆಗೆ ಮಾತ್ರ ಆ ದಿನ ಪ್ರಶಸ್ತವಿರಲಿಲ್ಲ. ದಾರಿ ಮುಗಿದಲ್ಲಿ ಬೈಕಿಳಿದು ಸುತ್ತೂ ಸ್ವಲ್ಪ ಅಡ್ಡಾಡಿದೆವು. ಮೂರೂ ದಿಕ್ಕಿಗೆ ಭೂಮಿ ಒಮ್ಮೆಲೆ ಮುಗಿದಂತೆ ಪ್ರಪಾತದಂಚು. ಪಾತಾಳದಲ್ಲೇನೋ ವಾಮಾಚಾರ ನಡೆದು ದಿಕ್ಕೆಲ್ಲವನ್ನೂ ಧೂಮ ಸ್ವಾಹಾಕರಿಸಿದಂತೆ ಮಂಜು, ಮೋಡ. ನಿಂತ ನೆಲವೂ ಬಾಯ್ಬಿಡುವ ಮಸಲತ್ತು ನಡೆದಂತೆ ಮಂದ್ರ ಗುಡುಗು. ಇನ್ನು ವರುಣಾಸ್ತ್ರ ಪ್ರಯೋಗವಾಗುವುದನ್ನು ನಿರೀಕ್ಷಿಸಿ, ಗಳಿಗೆ ವ್ಯಯ ಮಾಡದೆ ನಾವು ಪಲಾಯನಸೂತ್ರ ಪಠಿಸಿದೆವು.

[ನಿನ್ನೆ ಮೊನ್ನೆ ಎಂಬಂತೆ ಫೇಸ್ ಬುಕ್ಕಿನಲ್ಲಿ ಒಂದು ನಮೂದು ಕಂಡೆ. ತಮಿಳ್ನಾಡಿನ ಯಾವುದೋ ಚಾರಣಿಗರ ಬಳಗ ಟಾಪ್ ಸ್ಟೇಶನ್ ಚಾರಣವನ್ನು ತನ್ನ ಖಾಯಂ ಪಟ್ಟಿಯಲ್ಲಿಟ್ಟುಕೊಂಡಿದೆ. ಅಂತರ್ಜಾಲದಲ್ಲಂತೂ ಇಲ್ಲಿನ ಅನೇಕ ಮುಖದ ಅನುಭವ, ಚಿತ್ರ, ವಿಡಿಯೋ ಮಾಹಿತಿ ವ್ಯಾಪಿಸಿದೆ. ರುಚಿಗೆ ಬೇಕಾದರೆ ಇದೊಂದು ಟಾಪ್ ಸ್ಟೇಶನ್ ವಲಯದ ಚಾರಣಾನುಭವ ಇಂಗ್ಲಿಷಿನಲ್ಲಿ ಓದಲೂಬಹುದು]

ಕೋಡಿದಾರಿ ತೋಟದ ವಲಯ ಬಿಟ್ಟು ದಟ್ಟ ಕಾಡಿನೆಡೆಗೆ ಚಾಚಿತ್ತು. ಏರೂ ತೀವ್ರವಾಗಿತ್ತು. ಹಾಗೆಂದು ಕಾಲಚಕ್ರದ ಗತಿಗಡ್ಡಿಯಿಲ್ಲ ಎನ್ನುವ ಅರಿವಿನೊಡನೆ ನಮ್ಮ ಬೈಕಿನ ಚಕ್ರಜೋಡಿಗಳು ತುರುಸಿನ ಕೆಲಸವನ್ನೇ ನಡೆಸಿದ್ದವು. ಪುಡಿ ಕಲ್ಲುಗಳ ಮೇಲೆ ಕುಣಿದು, ಕಿರು ತಗ್ಗುಗಳಲ್ಲಿ ಕುಸಿದು, ಹಿರಿತೆಮರುಗಳ ಸುತ್ತಲೆದು, ತಿರುವೇರಿನಲ್ಲಿ ನೆಲಕಚ್ಚಿ, ದಾರಿ ಓಣಿ ಅಥವಾ ನಡುಗಡ್ಡೆ ಸಾಲಿನಲ್ಲಿ ತೂರಾಡಿದರೂ ನಿಟ್ಟುಸಿರು ಬಿಡಲಿಲ್ಲ, ಸವಾರರನ್ನು ಅಡ್ಡ ಹಾಕಲಿಲ್ಲ! ಬೈಕ್ ಇಂಜಿನ್ನುಗಳ ಬಿಸಿಯೇರಿಕೆ

ಕಡಿಮೆ ಮಾಡಲಷ್ಟೇ ಒಂದೆರಡು ಕಡೆ ನಿಂತದ್ದಿತ್ತು. ಹಾಗೆಂದು ನಮಗೆ ವಿಶೇಷ ದೃಶ್ಯ ಲಾಭವಾಗದಂತೆ ಮಂಜು, ಕಾಡು ಉದ್ದಕ್ಕೂ ಕವಿದೇ ಇತ್ತು, ಹೆಚ್ಚು ನಿಲ್ಲದಂತೆ ಬೆದರಿಸುತ್ತಲೂ ಇತ್ತು. ಮುಗುಮ್ಮಾಗಿದ್ದ ಮೋಡ ಸಂದೋಹ ಆನೆಯರೂಪವನ್ನೂ ತಾಳಬಹುದೆಂಬ ಎಚ್ಚರ ಕಾಡುತ್ತಲೂ ಇತ್ತು.

ಮೂನಾರ್ – ಕೋಡಿಯ ಅರ್ಧ ಅಂತರಕ್ಕೆ ತಮಿಳ್ನಾಡು ಗಡಿ. ಕೇರಳ ವಲಯ ಇನ್ನೂ ಸಹಜಾರಣ್ಯವನ್ನು ಉಳಿಸಿಕೊಂಡಿತ್ತು. ತಮಿಳ್ನಾಡು ವಲಯದ್ದು ನೀಲಗಿರಿ ಮತ್ತು ಪೈನ್ ಮರಗಳ ನೆಡುತೋಪು. ಪಶ್ಚಿಮ ಘಟ್ಟಗಳ ಸಹಜ ಸಸ್ಯ – ಕುರುಂಜಿ, ಒಂದು ಕುರುಚಲು ಗಿಡ ಮಾತ್ರ. ಅವು ಏಕಕಾಲಕ್ಕೆ ನೀಲ ಹೂಬಿಟ್ಟು ಘಟ್ಟಸಾಲುಗಳಿಗೆ ತಂದ ಹೆಸರು – ನೀಲಗಿರಿ. ಆದರೆ ಪಾಶ್ಚಾತ್ಯರೊಡನೆ ಇಲ್ಲಿಗೆ ವಲಸೆಬಂದು ನೆಲೆನಿಂತ ಯೂಕಲಿಪ್ಟಸ್ (ಹಸಿರೆಲೆ, ಬಿಳಿಕಾಂಡದ ಮತ್ತು ಸಾಮಾನ್ಯವಾಗಿ ಎಲ್ಲೂ ನೆಲೆನಿಲ್ಲಬಲ್ಲ ಮರ) ತಪ್ಪು ಅನ್ವಯದಲ್ಲಿ ನೀಲಗಿರಿ ಮರವೆಂದೇ ಪ್ರಚುರಿತವಾಗಿರುವುದೊಂದು ವಿಪರ್ಯಾಸ. ದಾರಿ ಜಲ್ಲಿ ಮಣ್ಣಿನದ್ದೇ ಆದರೂ ದೃಢವಾಗಿತ್ತು, ಏರಿಳಿತ ಸೌಮ್ಯವಾಗಿತ್ತು. ಅಲ್ಲಲ್ಲಿ ಬಲಿತ

ಅರಣ್ಯವಲಯಗಳ ಕಡಿತ (ಕಾಗದದ್ದೋ ಬಟ್ಟೆಯದ್ದೋ ಕಾರ್ಖಾನೆಗೆ ಕಚ್ಚಾವಸ್ತು), ಒಟ್ಟಣೆ, ಸಾಗಣೆ ಕಾಣುತ್ತ ಬಂದಂತೆ ಡಾಮರು ದಾರಿಯೂ ಬಂತು. ಮುಂದುವರಿದಂತೆ ಕೊಡೈಕೆನಾಲ್ ಪ್ರಚಾರ-ಪುಸ್ತಿಕೆಗಳಲ್ಲಿ ಸ್ಥಾನಪಡೆದಿರುವ ಬೆರಿಂಜಾಮ್ ಸರೋವರದ ಬೋರ್ಡು ಕಂಡಮೇಲಂತೂ ನಮ್ಮ ಆತಂಕ ದೂರವಾಗಿ, ಕೋಡಿ ಬಂತೆಂದು ಹರ್ಷ ಕೋಡಿವರಿಯಿತು.

ಬೆರಿಂಜಾಮ್ ಸರೋವರವನ್ನು ಕುರಿತು ಹೋಗುವ ಉತ್ಸಾಹ ನಮಗಿರಲಿಲ್ಲ. (ಅನಂತರ ತಿಳಿದು ಬಂದಂತೆ ಅದು ಆ ವಲಯದ ಹಳ್ಳಿಗರ ನೀರಾವರಿ ಸೌಕರ್ಯಕ್ಕಾಗಿಯೇ ಮಾಡಿದ ಸರೋವರವಾದ್ದರಿಂದ ಪ್ರವಾಸಿಗರ ಭೇಟಿಗೂ ನಿರ್ಬಂಧಗಳಿದ್ದುವಂತೆ) ತುಸು ದೂರ ಮತ್ತು ಎತ್ತರದಿಂದ ಅದನ್ನು ಅಸ್ಪಷ್ಟವಾಗಿ ಕಂಡದ್ದಷ್ಟೇ ಲಾಭ. ಅದಕ್ಕೂ ಮುಖ್ಯವಾಗಿ ಠಳಾಯಿಸುತ್ತಲೇ ಇದ್ದ ಮಂಜು, ಮೋಡಗಳ ಫಲವಾಗಿ ರಾತ್ರಿ ಬಿಗಡಾಯಿಸುವ ಚಳಿಗೆ ವ್ಯವಸ್ಥೆಯಾಗಬೇಕೆಂಬ ಆತುರ ಸೇರಿಕೊಂಡಿತು. ಮೊದಲೊಂದು ಹೋಟೆಲಿನಲ್ಲಿ ಸೂಕ್ತ ಕೋಣೆ. ಅಲ್ಲಿ ಬೈಕಿನ ಹೊರೆ ಇಳಿಸಿ, ಚಂಡಿ ಒಣಗಿಸುವ ಪ್ರಯತ್ನ ಎಂದು ಯೋಚನೆ ಸುತ್ತುತ್ತಿದ್ದಂತೆ, ಬೈಕಿನ ವೇಗ ಹೆಚ್ಚಿಸಿ, ತುಸು ದೃಶ್ಯಮಂಕರಾಗಿದ್ದೆವು. ಘಟ್ಟದ ಏರು ದಾರಿಯಲ್ಲಿ, ತಿರುವುಗಳ ಅಂಚಿನಲ್ಲಿ ಕಣಿವೆಯ ಇಣುಕುನೋಟ ಸಿಗುವುದು ನಮಗೇನೂ ವಿಶೇಷವಾಗಿರಲಿಲ್ಲ. ಆದರೆ ಅದೊಂದು ತೀವ್ರ ಎಡ ತಿರುವಿನಲ್ಲಿ ಬಲ ಕೊಳ್ಳದ ಅಂಚುಕಟ್ಟಿದ್ದ ಮೋಟುಗೋಡೆಯ ಮೇಲಿನ ಬರಹ ನಮಗೆ ಬಿರಿಹಾಕಿತು. (ಬಹುಶಃ, ಹಳಗಾಲದಲ್ಲಿ ಪ್ರಪಾತದಂಚಿನಲ್ಲಿ ಸಾಗಿದ್ದ ಸಪುರ ಜಾಡನ್ನು ವಿಸ್ತರಿಸಲು ಯಾರೋ ಫೌಕ್ ಎಂಬಾತ ತುಂಬಿಕೊಟ್ಟ ಕಣಿವೆ ಅದಾಗಿರಬೇಕು.)

`ಫೌಕ್ಸ್ ಫಿಲ್ಲಿಂಗ್’ – ಗೋಡೆಯಾಚೆಗೆ ಅನಿರೀಕ್ಷಿತ ಖಾಲಿ! ಅದನ್ನು ಮುಚ್ಚಿದಂತಿದ್ದ (ಕ್ಲೌಡ್ಸ್ ಫಿಲ್ಲಿಂಗ್ ಎನ್ನೋಣವೇ?) ಮೋಡ ಕಂಡಿಬಿದ್ದಾಗ, ನಾವು ಟಾಪ್ ಸ್ಟೇಶನ್ನಿನಲ್ಲಿ ಕಳೆದುಕೊಂಡಿರಬಹುದಾದ ಕೊಳ್ಳದ ಆಳ, ಹರಹುಗಳಿಗೆ ಇಲ್ಲಿ ಪರಿಹಾರ ಸಿಕ್ಕ ಹಾಗಾಯ್ತು; ಅದ್ಭುತ! ವಿಶ್ವ-ಸತ್ಯದ ಈ ಬಿಡಿ ವಿವರಗಳನ್ನು ನೋಡಿದ ಮೇಲೂ ಜಗನ್ಮಿಥ್ಯೆ ಎನ್ನುವುದೇ ಮಿಥ್ಯೆ! ಮೋಡದ ಬೆದರಿಕೆ ಹುಸಿಯಾಗಿ ತೆಳುವಾದ ಮಂಜಿನ ಲಹರಿಯೊಳಗೆ ನಾವಿದ್ದೆವು. ಅದು ರುದ್ರರಮಣಿಯ ಒನಪಿನ ಉಡುಗೆಯಂತೆ ಎಲ್ಲ ಮುಚ್ಚಿಯೂ ಹಿತವಾಗಿ ಏನೋ ತೋರಿಸುತ್ತಿತ್ತು. ಆಳದ ಲೆಕ್ಕ, ಹರಹಿನ ವ್ಯಾಪ್ತಿ, ಆಡುವ ಹಕ್ಕಿಯ ಗುರುತು, ಸುಯ್ಯುವ ಗಾಳಿಯ ಸಂದೇಶ, ಸಮಯ ಎಲ್ಲ ಮರೆತು ನೋಡಿದೆವು. ಶೂನ್ಯ ನೋಟದಲ್ಲೂ ಸುಖವಿದೆ; ನಡೆದವಗೆ ನನಸು, ಕುಳಿತವಗೆ ಕನಸು!

ಸ್ವಲ್ಪ ಮುಂದೆ ಹಾದಿಯ ಎಡ ದಿಬ್ಬದ ಮೇಲೊಂದು ವೀಕ್ಷಣಾಗೋಪುರ ಕಾಣಿಸಿತು. ಬಹುಶಃ ಬ್ರಿಟಿಷರ ಕಾಲದ ರಚನೆ. ಅಲ್ಲೆಲ್ಲೂ ನಿಲ್ಲಿಸಿದವನ ಪುರಾಣ ಹೇಳುವ ಬೋರ್ಡು (ಜನವೂ) ಇರಲಿಲ್ಲ. ಆದರೆ. ಯಾರೇ ಇರಲಿ ಅವರನ್ನು ಕೊಂಡಾಡಲೇಬೇಕು. ಆದರೆ ಬೈಕ್ ಬಿಟ್ಟು ಅದನ್ನು ಸಮೀಪಿಸುತ್ತಿದ್ದಂತೆ, ಅಷ್ಟೇ ತೀವ್ರವಾಗಿ ಇಂದು ಅದರ ಆರೈಕೆ ನಡೆಸದವರನ್ನು ಚಂಡಾಡಬೇಕು ಎನ್ನುವ ಭಾವ ಮೂಡಿತು. ಕನಿಷ್ಠ ೧೨ ಮೀಟರ್ ಎತ್ತರದ ಇದರ ಉಕ್ಕಿನ ಹಂದರ ತುಕ್ಕು ಹಿಡಿದಿದೆ. ಮೇಲೇರಲು ಮೂರ್ನಾಲ್ಕು ಅಟ್ಟಳಿಗೆಗಳನ್ನು ಮಾಡಿ ಏಣಿ ಜೋಡಿಸಿದ್ದಾರೆ. ನಾವು ಎಚ್ಚರಿಕೆಯಿಂದ ಒಂದೊಂದನ್ನೇ ಕಳೆದು ತುದಿಯೇನೋ ಮುಟ್ಟಿದೆವು. ಪ್ರತಿ ಹಂತದ ಅಟ್ಟಳಿಗೆಯಲ್ಲೂ ನೆತ್ತಿಯ ಮಂಟಪದಲ್ಲೂ ಇರಲೇಬೇಕಾದ ನೆಲದ ಹಲಗೆಗಳು ಕನಿಷ್ಠಕ್ಕಿಳಿದಿತ್ತು. ಇದ್ದ ಕೆಲವಕ್ಕೂ ನಟ್ಟು ಬೋಲ್ಟು ಸರಿಯಿರಲಿಲ್ಲ. ಹಿಂದೆ ಹಳ್ಳಿಯಲ್ಲಿ ಹೀಗೇ ಇಲಿ, ಹೆಗ್ಗಣಗಳನ್ನು ಹಿಡಿಯಲು ಬೋನಿನಲ್ಲಿ ಮೇಲೆ ತಿನಿಸು ಕಟ್ಟಿ, ತಳದಲ್ಲಿ ಮರೆಸು ಕವಾಟ ರಚಿಸುತ್ತಿದ್ದುದು ನೆನಪಾಯ್ತು. ಯಾವ ಹಲಿಗೆ ಎತ್ತಿಕೊಳ್ಳುತ್ತೋ ಯಾವ ಕಂಡಿ ನುಂಗಿಬಿಡುತ್ತೋ ಎನ್ನುವ ಭಯ. ಕಿಡಿಗೇಡಿಗಳು ನಾಶಮಾಡಿದ್ದೋ ಕುಂಬಾಗಿ ಉದುರಿದ್ದೋ ಹೇಳುವವರಿಲ್ಲ. ನಾಲ್ಕೂ ದಿಕ್ಕಿಗೆ ವಿಸ್ತಾರ ಕಿಟಕಿಗಳ ಸುಭದ್ರ ಮನೆಯಂತಿರಬೇಕಾದ ನೆತ್ತಿಯ ಮಂಟಪದ ಮರದ ಗೋಡೆಗಳೂ ನೆಚ್ಚುವಂತಿರಲಿಲ್ಲ. ಅಡಿತಪ್ಪಿದರೆ ಕೆಳಗುದುರಿದಂತೆ, ಭಾರೀ ಗಾಳಿ ಬಂದರೆ ಪಕ್ಕಗಳಲ್ಲಿ ತೂರಿಯೂ ಹೋಗಬಹುದು ಎಂದು ನಾವು ಯೋಚಿಸಿ ಮುಗಿದಿರಲಿಲ್ಲ. ಆಗ ಒಮ್ಮೆಗೆ ಗಾಳಿಯಲೆಯೊಂದು ನಮಗೆ ಪ್ರಾತ್ಯಕ್ಷಿಕೆ ಕೊಡುವಂತೆ ಇತ್ತ ಸುಳಿದುಹೋಯ್ತು. ವೀಕ್ಷಣಾ ಸ್ತಂಭವಿಡೀ ಕಿರುಗುಟ್ಟಿ ಹಗುರವಾಗಿ ತೊನೆಯಿತು. ನಮ್ಮ ನಾಲ್ವರ ತಲೆಭಾರ ಇನ್ನೊಂದು ಗಟ್ಟಿ ಗಾಳಿಗೆ ಉರುಳುವ ಇದನ್ನು ಅವಸರಿಸಿದಂತಾಗುವುದು ಬೇಡವೆಂದು ನಾವು ತುರ್ತಾಗಿ ಇಳಿದುಬಿಟ್ಟೆವು.

ಮತ್ತದರ ಅಂತಿಮ ಕ್ಷಣಕ್ಕೆ ಕಾರಣರೆಂದೋ ಸಾಕ್ಷಿಯೆಂದೋ ಯಾರಾದರೂ ನೋಡಿದವರು ಹೇಳಿಯಾರೆಂಬ ಜಾಗೃತಿಯಲ್ಲಿ ಅಷ್ಟೇ ಬೇಗನೆ ಬೈಕೇರಿ ಜಾಗ ಖಾಲಿ ಮಾಡಿದೆವು. ನಾಳೆ “ಯಾತ್ರಿಗಳ ದುರ್ಮರಣ – ಕುಸಿದ ವೀಕ್ಷಣಾಗೋಪುರ” ಎಂಬ ಪತ್ರಿಕಾ ವರದಿಗೆ ಗ್ರಾಸವಾಗದ ಪುಣ್ಯಕ್ಕೆ ನಾವು ನಂಬದ ದೇವರುಗಳಿಗೆ ಶರಣೆಂದೆವು!

ದ್ವಿ-ಮಾನ ನಗರ: ಕೊಡೈಕೆನಾಲ್ ಎರಡು ಮಾನಗಳ ನಗರ – ಸೀಸನ್, ಆಫ್ ಸೀಸನ್. ವಾಸ್ತವದಲ್ಲಿ ದುಬಾರಿ, ಅತಿದುಬಾರಿ; ಶ್ರಾಯ, ಉಚ್ಛ್ರಾಯ! ದರಗಳ ವ್ಯತ್ಯಾಸದಲ್ಲಿ ಒಂದಕ್ಕೆ ಮೂರರಷ್ಟು ಏರಿಕೆ, ಸೌಕರ್ಯದಲ್ಲಿ ಇನ್ನಷ್ಟು ದೊಡ್ಡ ಅಂತರದಲ್ಲಿ ಇಳಿಕೆ. ನಾವು ಯೋಚಿಸದೇ ಉಚ್ಛ್ರಾಯದ ಗಿರಾಕಿಗಳಾಗಿದ್ದೆವು. ಪ್ರವಾಸೀ ಕೈಪಿಡಿ ನೋಡಿ ನಾವು ಅಂದಾಜಿಸಿದ್ದ, ಅಂದರೆ ಸಾಮಾನ್ಯ ಅಗತ್ಯಗಳ ಹೋಟೆಲುಗಳೆಲ್ಲ No Rooms ಬೋರ್ಡು ಪ್ರದರ್ಶಿಸಿದ್ದುವು.

ತಾರಾ ಹೋಟೆಲುಗಳು, ರಿಸಾರ್ಟುಗಳು ಇದ್ದಿರಬಹುದು, ಆದರೆ ನಾವು ಕಲ್ಪಿಸಿಕೊಳ್ಳಲೂ ಸಿದ್ಧರಿರಲಿಲ್ಲ. ವಿಧಿಯಿಲ್ಲದೆ ಒಬ್ಬ ದಳ್ಳಾಳಿಗೆ ಶರಣಾದೆವು. ಅವನು ಮಾಡಿಕೊಟ್ಟ `ಸುವಿಸ್ತಾರ’ ಕೊಠಡಿಗೆ (ಸುಮಾರು ಹತ್ತಡಿ ಹತ್ತಡಿ ಅಳತೆಯ ಕೋಣೆ, ಒಳಗೆರಡು ಮಂಚ, ತಗುಲಿಕೊಂಡಂತೆ ಶೌಚಖಾನೆ ಮತ್ತು ನಮ್ಮ ಒತ್ತಾಯಕ್ಕೆ ಒಂದು ಹೆಚ್ಚುವರಿ ಹಾಸಿಗೆ) ಬಾಡಿಗೆ ರೂ ನೂರಿಪ್ಪತ್ತು – ತಿಂಗಳಿಗಲ್ಲ, ದಿನಕ್ಕೆ. (ಆ ಕಾಲಕ್ಕೆ ಮಂಗಳೂರಿನಲ್ಲಿ ಎರಡು ಮಲಗು ಕೋಣೆಗಳ ಸ್ವತಂತ್ರ ಮನೆ ರೂ ನೂರೈವತ್ತಕ್ಕೆ ತಿಂಗಳ ಬಾಡಿಗೆಗೆ ಸಿಗುತ್ತಿತ್ತು!) ಮುಕ್ಕಾಲು ಕೋಣೆಯೆಲ್ಲ ಮಂಚ, ನಾವು ಜನ ನಾಲ್ಕು, ಗಂಟು ಗದಡಿ ಬೇರೆ. ನಮಗೆ ಕೈಕಾಲು ಆಡಿಸಲೂ ಜಾಗವಿಲ್ಲದ ಸ್ಥಿತಿ. ಇದ್ದ ಎರಡು ಮಂಚ ಸೇರಿಸಿ ಅಡ್ಡಡ್ಡಕ್ಕೆ ನಾಲ್ಕು ಜನ ರಾತ್ರಿ ಸುಧಾರಿಸುವ ಯೋಜನೆ ನಮ್ಮದು. ಆದರೆ ರಾತ್ರಿ ಚಳಿಯಾದೀತೆಂದು ಕಿಟಕಿ ಬಂದ್ ಮಾಡುವಂತಿರಲಿಲ್ಲ. ಆ ತಾರಸಿ ಕಿಷ್ಕಿಂಧೆಯೊಳಗೆ ನಾವು ನಾಲ್ಕೂ ಜನ ಸರಿಯಾಗಿ ಉಸಿರೆಳೆದರೆ ಗಾಳಿಯೇ ಮುಗಿದುಹೋಗುವ (ನಿರ್ವಾತ!) ಅಪಾಯಕರ ಸ್ಥಿತಿ. ಒಂದು ನಿದ್ರೆ, ಒಂದು ಹೊತ್ತಿನ ಪ್ರಾತರ್ವಿಧಿಗಳಿಗೆ ಇಷ್ಟಾದರೂ ಸಿಕ್ಕಿತಲ್ಲಾ ಎಂದು ತೃಪ್ತಿಪಟ್ಟುಕೊಳ್ಳುವ ದೀನ ಸ್ಥಿತಿ ನಮ್ಮದು. ಬೇಗನೆ ನಮ್ಮಲ್ಲಿದ್ದ ಉದ್ದದ ಹಗ್ಗವನ್ನು ಕೋಣೆಯೊಳಗೇ ಅಡ್ಡಾದಿಡ್ಡಿ ಕಟ್ಟಿ, ಚಂಡಿ ಬಟ್ಟೆಗಳನ್ನು ಹೇಗೇಗೋ ಒಣಗಲು ಹಾಕಿ, ಹೊರಬಿದ್ದೆವು. ಮುಂದೆ ಊಟದ ಬೇಟೆ. ಮೂರು ಗಂಟೆಯಾಗಿದ್ದುದರಿಂದ ಊಟ ತಿಂಡಿಗಳ ಎಡೆಬಿಡಂಗಿಗಳಾಗಿ ಸಿಕ್ಕ ಸಾಮಾನ್ಯ ಸಸ್ಯಾಹಾರಿ ಹೋಟೆಲ್ ನುಗ್ಗಿದೆವು. ದುಬಾರಿ ದರದ ಊಟವೇನೋ ಸಿಕ್ಕಿತು. ಅದನ್ನಾದರೂ ಸಮಾಧಾನದಲ್ಲಿ ತಿನ್ನೋಣವೆಂದರೆ, ನಮ್ಮ ಪರೀಕ್ಷಕ ಕಣ್ಣಿಗೆ ಅಲ್ಲಿನ ನೀರಿನ ನಿರ್ವಹಣೆ ಬಿದ್ದು, ಹೊಸದೇ ಹೆದರಿಕೆ ಹುಟ್ಟಿಸಿತು. ಬೀದಿಯಲ್ಲಿ ನೀರು ಮಾರುತ್ತ ಬಂದ ಕೊಳಕು ಕೈಗಾಡಿಯಿಂದ ಹೋಟೆಲಿಗೂ ಕೆಲವು ಕೊಡಪಾನಗಳು ಹರಿದವು. ಗಾಡಿ, ಜನ ಹೀಗಿದ್ದರೆ ಇನ್ನು ಆ ನೀರಿನ ಮೂಲ ಹೇಗೋ ಎಂದು ಜಾಗೃತರಾಗಿ, ನಾವು ಬಿಸಿ ನೀರನ್ನೇ ಕೇಳಿ ಬಳಸಿದೆವು. (ಆಗೆಲ್ಲಾ ಸಾಮಾನ್ಯರ ಮಟ್ಟದಲ್ಲಿ ಬಾಟಲಿ ನೀರಿನ ಕಲ್ಪನೆ ಇರಲಿಲ್ಲ) ಅನ್ಯ ಮೇಜುಗಳನ್ನು ಚೊಕ್ಕ ಮಾಡುತ್ತಿದ್ದ ಹುಡುಗ ಲೋಟಗಳಲ್ಲಿ ಉಳಿದ (ಎಂಜಲು) ನೀರನ್ನು ವಾಷ್ ಬೇಸಿನ್ (ನಲ್ಲಿ ಬಂದಾಗಿತ್ತು ಎಂದು ಪ್ರತ್ಯೇಕ ಹೇಳಬೇಕೇ!) ಬಳಿಯ ಬಕೆಟ್ಟಿಗೆ ತುಂಬುವುದು ನೋಡಿದ ಮೇಲಂತೂ ಇನ್ನಿತ್ತ ಬರಬಾರದೆಂದು ಗಟ್ಟಿ ಮಾಡಿಕೊಂಡೆವು. ನಮ್ಮ ಯೋಜನೆಯಂತೆ ಕೋಡಿಗೆ ಮೀಸಲಾದ ಎರಡು ದಿನ ಬಳಸಬೇಕೇ ಎಂಬ ವಿಮರ್ಶೆಯನ್ನೂ ನಡೆಸುತ್ತಲೇ ಹೊರನಡೆದೆವು. ನಮಗೆ ಸಾಮಾನ್ಯಜನ (ಆರ್ಥಿಕತೆಗೂ ಇದಕ್ಕೂ ಸಂಬಂಧವಿಲ್ಲ) ಬಯಸುವ ಗಿರಿಧಾಮದ ಅಥವಾ ವಿಹಾರದ ಲಕ್ಷ್ಯ ಮೊದಲೇ ಇರಲಿಲ್ಲ, ಅಲ್ಪಸ್ವಲ್ಪ ಇತ್ತೆಂದರೂ ಈಗ ಉಳಿದಿರಲಿಲ್ಲ! ರಮ್ಯ ಕೊಡೈಕೆನಾಲಿಗೆಂದೇ ಮೀಸಲಿರಿಸಿದ್ದ ಎರಡು ದಿನಗಳನ್ನು ರದ್ದುಪಡಿಸಿ, ಬೈಕೇರಿ ಸಟಸಟನೆ ಕೋಡಿ ಮುಗಿಸಲು ಸಂಕಲ್ಪಿಸಿದೆವು.

ಉನ್ನತ ಗಿರಿಸಾಲಿನ ಒಂದು ಭಾರೀ ದರೆಯನ್ನು ವೈಭವೀಕರಿಸಿದ ಊರೆಂದಷ್ಟೇ ಕೊಡೈಕೆನಾಲನ್ನು ಚುಟುಕದಲ್ಲಿ ಹೇಳಬಹುದು. ಅತ್ತ ಫೌಕ್ಸ್ ಫಿಲ್ಲಿಂಗಿನಿಂದ ತೊಡಗಿ ನಗರ ಕೇಂದ್ರದವರೆಗೆ ಚಾಚಿಕೊಂಡ ಭಾರೀ ದರೆಗೆ ಭಿನ್ನ ಹೆಸರುಗಳನ್ನು ಕೊಡುವಲ್ಲೇ ಊರಿನ `ವೀಕ್ಷಣಾ ಪಟ್ಟಿ’ ದೊಡ್ಡದಾಗಿದೆ. ಇದರ ಪೇಟೆಯ ಹತ್ತಿರದ ಹೆಸರು ಕೋಕರ್ಸ್ ವಾಕ್. ಇಲ್ಲಿ ಮುಖ್ಯ ದರೆಗೆ ಅಡ್ಡ ಸಾಲಿನ ಬೆಟ್ಟ ಒಂದು, ಮನುಷ್ಯ-ಮಾನದಲ್ಲಿ ಬಹಳ ಹಿಂದೆಯೇ ಕುಸಿದು, ಪ್ರಪಾತದ ಆಳಕ್ಕಿಳಿಯಲು ಅನುವು ಮಾಡಿಕೊಟ್ಟಿದೆ ಮತ್ತು ಕೊಳ್ಳದ ಭಯಾನಕತೆಯನ್ನು ಕಡಿಮೆ ಮಾಡಿದೆ. ಇಲ್ಲಿಂದ ತೊಡಗಿದಂತೆ ದರೆಯ ಅಂಚಿನಲ್ಲೇ ನಡೆಮಡಿಯನ್ನು ಆಳಿದ ಮಹಾಸಾಮ್ರಾಜ್ಯದ ಒಬ್ಬಾನೊಬ್ಬ ಪ್ರತಿನಿಧಿ ಕೋಕರ್ ರಚಿಸಿದ್ದಕ್ಕೆ ಇದು ಕೋಕರ್’ಸ್ ವಾಕ್. ಇದನ್ನು ನಾವು ಅನಿವಾರ್ಯವಾಗಿ. ಆದರೆ ಚುರುಕಾಗಿ ನಡೆದು ನೋಡಿದೆವು. ಇದರ ಮಧ್ಯಂತರದಲ್ಲೊಂದು ಸಣ್ಣ ಅಟ್ಟಳಿಗೆ ಮಾಡಿ, ಕಾಸುಕೊಟ್ಟವರಿಗೆ ದುರ್ಬೀನು ದಕ್ಕುವಂತೆ ಮಾಡಿದ್ದು `ವೀಕ್ಷಕ ತಾಣ’. ಅಲ್ಲಿ ನಾವು ಸಮಯ ಕಳೆಯಲಿಲ್ಲ. ಮುಂದೆ ಈ ಅಂಚನ್ನು ಗಾಲ್ಫ್ ಆಟದ ಮೈದಾನ ವ್ಯಾಪಿಸಿಕೊಂಡದ್ದಕ್ಕೆ ಹೆಸರೂ `ಗಾಲ್ಫರ್ಸ್ ಕ್ಲಬ್’. ಇದು ಸಾರ್ವಜನಿಕ ಓಡಾಟಕ್ಕೆ ಮುಕ್ತವಿರಲಿಲ್ಲ. ಇನ್ನೂ ಸ್ವಲ್ಪ ಊರಿನಿಂದ ಹೊರಗೆ, ಅಂದರೆ ಸಮಸಮವಾಗಿ ಕಣಿವೆಯಲ್ಲೂ ಹರಡಿದ ಊರು ದೂರವಾದಲ್ಲಿ, ಸಹಜವಾಗಿ ಕಣಿವೆ ದೃಶ್ಯ ಹಸುರಾಗಿಯೇ ಕಾಣುವಲ್ಲಿಗೆ ಹೆಸರು `ಗ್ರೀನ್ ವ್ಯಾಲೀ ವ್ಯೂ.’ ಮತ್ತಷ್ಟು ಊರು ಬಿಡಿ – ಪಿಲ್ಲರ್ ರಾಕ್ ವ್ಯೂ.

ಊರಿನಲ್ಲಿ ಅವಕಾಶವಿದ್ದಲ್ಲೆಲ್ಲ ಮಾಡಿದಂತೇ ಇಲ್ಲೂ ಒಂದು ಪುಟ್ಟ ಹೂದೋಟ. ಅದರ ಕಣಿವೆಯಂಚಿನಲ್ಲಿ ನಿಂತು ಬಲ ಪಕ್ಕಕ್ಕೆ ದೃಷ್ಟಿ ಹಾಯಿಸಿದರೆ ಎರಡು ಪ್ರಾಕೃತಿಕ ಕಲ್ಲಕಂಬಗಳು ದರೆ ಬಿಟ್ಟು ನಿಂತದ್ದು ಕಾಣಿಸುತ್ತವೆ – ಪಿಲ್ಲರ್ ರಾಕ್ಸ್. ಇದು ನಮ್ಮ ಕುತೂಹಲವನ್ನು ಕೆರಳಿಸಿತು. ನಮ್ಮ ಅಂದಾಜಿನಂತೆ ಮೊದಲು ನಮಗೆ ಸಿಕ್ಕ ಫೌಕ್ಸ್ ಫಿಲ್ಲಿಂಗಿಗಿಂತಲೂ ಈ ಪ್ರಾಕೃತಿಕ ರಚನೆ ಊರಿಗೆ ಹತ್ತಿರವೇ ಇತ್ತು. ಅದನ್ನು ಇನ್ನಷ್ಟು ಹತ್ತಿರದಿಂದ ನೋಡಬೇಕು ಎಂದು ಬಯಸಿದೆವು. ನಮ್ಮೊಳಗಿನ ಶಿಲಾರೋಹಿಯಂತೂ ಸುಲಭ ಸಾಧ್ಯವಾದರೆ ಹತ್ತಿಯೂ ನೋಡಬೇಕು ಎಂದೇ ಮುನ್ನೂಕಿದ.

ಕಾಲ-ಶಿಲ್ಪಿ ತನ್ನ ಹತ್ಯಾರುಗಳಾದ ಗಾಳಿ, ಮಳೆ, ಬಿಸಿಲುಗಳಲ್ಲಿ ಖಂಡರಿಸುವ, ಅನ್ಯರಿಗೆ ಎಂದೂ ಅನನುಕರಣೀಯವಾಗುವ ಪ್ರಾಕೃತಿಕ ಕಲಾಕೃತಿಗಳಲ್ಲಿ ಪಿಲ್ಲರ್ ರಾಕ್ಸ್ ಒಂದು. (ನನ್ನ ಅಂದಿನ ಅನುಭವಕ್ಕೆ ಕಾಲಾತಿಕ್ರಮಣ ಅನ್ನಿಸಿದರೂ `ರಂಗನಾಥ ಸ್ತಂಭ ವಿಜಯ’ ಇದರೊಳಗಣ `ಗಲಿವರನ ಅಳತೆ ಎಲ್ಲಿಂದ’ ಅವಶ್ಯ ಓದಿ ನೋಡಿ) ಈ ಸೆಟೆ-ಕಂಬಗಳ ಸಾಮೀಪ್ಯಕ್ಕಾಗಿ ನಾವು ದಾರಿಯಲ್ಲೇ ತುಸು ಮುಂಬರಿದೆವು. ಅಂದಾಜಿನಲ್ಲಿ ಒಂದೆಡೆ ಬೈಕ್ ಬಿಟ್ಟು, ನೀಲಗಿರಿ ತೋಪು ನುಗ್ಗಿದೆವು. ಸಣ್ಣ ದಿಬ್ಬ, ಆಚೆ ಕುರುಚಲು ಕಾಡಿನೆಡೆಯಲ್ಲಿ ಸವಕಲು ಜಾಡು. ಮುಂದೆ ನೆಲ ಜಗ್ಗಿದಂತೆ ಸ್ವಲ್ಪ ತಗ್ಗು. ಅಲ್ಲಿ ಹೆಮ್ಮರ, ಬಳ್ಳಿಗಳ ದಟ್ಟ ಹೆಣಿಗೆಯ ತಣ್ಣೆಳಲಿನಲ್ಲಿ, ಅಸ್ಪಷ್ಟತೆಯಲ್ಲಿ ನಿಧಾನಕ್ಕೆ ಹುಡುಕು ನೋಟ, ಎಚ್ಚರದ ಹೆಜ್ಜೆಯಿಟ್ಟು ನಡೆದೆವು. ಅಲ್ಲೊಂದು ಗೋರಿ ಕಾಣಿಸಿತು. ಊರಿನಿಂದ ಇಷ್ಟು ದೂರದಲ್ಲಿ ಇದೇನು, ಎಂಬ ನಮ್ಮ ಕುತೂಹಲಕ್ಕೆ ಅದರ ಇಂಗ್ಲಿಷ್ ಶಿಲಾಲೇಖ ಓದಿದೆವು:

“೧೯೫೫ರಲ್ಲಿ ಸಮೀಪದ ಒಂದು ಕೊರಕಲಿನಲ್ಲಿ ಆಕಸ್ಮಿಕಕ್ಕೀಡಾಗಿ, ಮರುದಿನ ೧೫೨ ಮೀಟರ್ ಆಳದಲ್ಲಿ ಹೆಣವಾಗಿ ಸಿಕ್ಕ ಮಧುರೈ ವ್ಯಾಪಾರಿ…” ಸದ್ಗತಿ ಕೋರಿದ ಮಗನ ಶ್ರದ್ಧಾಂಜಲಿ. ಆವಗಹ್ವರವದಾವ ಆಶೋತ್ತರಗಳ ಗೋರಿಯೋ! ತಣ್ಣೆಳಲು ಮೃತ್ಯುಛಾಯೆಯಾಯ್ತು, ಸುತ್ತಣ ನೆಲ ಅಲ್ಲಲ್ಲಿ ಅಕರಾಳ ವಿಕರಾಳವಾಗಿ ಬಾಯ್ಬಿಟ್ಟು ನಿಗೂಢ ಕೊರಕಲುಗಳ ಜಾಲವನ್ನೇ ನೇಯ್ದಿದ್ದುದು ಸ್ಪಷ್ಟವಾಯ್ತು. ಜಾಗರೂಕತೆಯಿಂದ ಕೊರಕಲುಗಳ ಎಡೆಯಲ್ಲಿ ದಾರಿಮಾಡಿ ಸುಮಾರು ಮೂವತ್ತು ನಲವತ್ತು ಮೀಟರ್ ಪ್ರಗತಿ ಸಾಧಿಸಿದೆವು. ಆದರೂ ಪಿಲ್ಲರ್ ರಾಕ್ಸ್ ಕಾಣಿಸಲಿಲ್ಲ. ಸಂಜೆಗತ್ತಲು ಪಸರಿಸುತ್ತಿತ್ತು, ನಮ್ಮಲ್ಲಿ ಟಾರ್ಚ್ ಇರಲಿಲ್ಲ. ಹೆಚ್ಚಿನ ಶೋಧಕ್ಕೆ ಅದು ಅವೇಳೆ ಎಂದು ಗ್ರಹಿಸಿ ವಾಪಾಸಾದೆವು. ಶುದ್ಧ ಶಿಲಾರೋಹಣ ಪ್ರಯತ್ನಕ್ಕೆ ನಮ್ಮ ಪ್ರವಾಸ ಅನುವು ಮಾಡದು ಎಂಬ ಕಾರಣಕ್ಕೆ ಅದನ್ನು ಮಾರಣೇ ದಿನವಾದರೂ ಶೋಧಿಸುವ, ಏರುವ ಯೋಚನೆಯನ್ನು ಆಗಲೇ ಕೈಬಿಟ್ಟೆವು. ಇದು ಪರೋಕ್ಷವಾಗಿ ನಮ್ಮದು ಇನ್ನೊಂದೇ ಗೋರಿಕಲ್ಲು ನೆಡುವ ಪ್ರಸಂಗವಾದೀತೋ ಎಂದು ನಮ್ಮೊಳಗೇ ಹೆದರಿದವರಿಗೆ ಸಮಾಧಾನವನ್ನು ತಂದಿತು! ಅನಂತರದ ದಿನಗಳಲ್ಲಿ ತಿಳಿದು ಬಂದಂತೆ, ಅಲ್ಲಿ ಮೇಲ್ಮೈಯಲ್ಲಿ ಕಾಣುವ ಕೊರಕಲಿನ ಜಾಲ, ಅಂದರೆ ತಳದಲ್ಲಿನ ಗುಹಾಜಾಲ ವಿಶಿಷ್ಟವೂ ಜಟಿಲವೂ ಆಗಿದೆಯಂತೆ. ಈಚೆಗೆ ಅದನ್ನು ಬಳಸಿಯೇ ಕಮಲಹಾಸನ್ ಸಿನಿಮಾ ಗುಣ (ತಮಿಳು) ಬಂತು. ಸಹಜವಾಗಿ ಸಿನಿ-ಭಕ್ತರು ಅದನ್ನು ನೋಡಲು ಬರುವ ಸಂಖ್ಯೆ ಹೆಚ್ಚಾಗಿತ್ತಂತೆ. ಹಾಗೇ ಅಪಘಾತಗಳೂ ಹೆಚ್ಚಾದಾಗ ಸರಕಾರ ಗುಹೆಗಳಿಗೆ ಪ್ರವೇಶಾವಕಾಶಗಳನ್ನು ಬಂದ್ ಮಾಡಿ, ನಿಷೇಧಾಜ್ಞೆ, ಬೋರ್ಡು ಹಾಕಿ `ಕಡತ ಮುಚ್ಚಿದೆಯಂತೆ’! ವಾಸ್ತವವಾಗಿ ಅದನ್ನು ಸೀಮಿತ ಜನವರ್ಗಕ್ಕಾದರೂ (ಎಲ್ಲವೂ ಎಲ್ಲರಿಗಾಗಿ ಎಂಬ ಕ್ರಮ ತಪ್ಪು) ನಿರಪಾಯಕಾರಿ ಪ್ರೇಕ್ಷಣೀಯವನ್ನಾಗಿಸುವತ್ತ ಸರಕಾರ ಗಮನಹರಿಸಬೇಕು. ಕೋಡಿಯ ಪ್ರಾಕೃತಿಕ ವೈಶಿಷ್ಟ್ಯದಲ್ಲಿ ಬಹುದೊಡ್ಡ ಸಂಗತಿಯೇ ಆಗಿರುವ ಈ ಗುಹಾಸರಣಿ ಇಂದು ಮೌನ ಸಮಾಧಿಯತ್ತ ಸರಿದಿರುವುದು ವಿಷಾದಕರ.

ರಾತ್ರಿಗೆ ಮತ್ಯಾವುದೋ ಹೋಟೆಲ್ ಹುಡುಕಿ, ಹಸಿ ತಿನಿಸುಗಳೇನೂ (ಚಟ್ನಿ, ಕೋಸುಂಬರಿ ಇತ್ಯಾದಿ) ಇರದಂತೆ ನೋಡಿಕೊಂಡು ಹೊಟ್ಟೆ ತುಂಬಿಸಿದೆವು. ಕಿರಿದು ಕೋಣೆಯೊಳಗೆ, ಕಿಕ್ಕಿರಿದು ನೇತುಬಿದ್ದ ಮುಗ್ಗುಲು ವಾಸನೆಯ ಬಟ್ಟೆಗಳ ನಡುವೆ, ಮಂಚವನ್ನು ಅಡ್ಡಕ್ಕೆ ಬಳಸುತ್ತಿದ್ದುದರಿಂದ ನಮ್ಮ ಕಾಲು ಮಂಚದಂಚು ಮೀರದಂತೆ ಮಡಚಿ ಮಲಗಿದ ನಮ್ಮ ಸಂಕಟಕ್ಕೆ ತಿಗಣೆ, ಸೊಳ್ಳೆಗಳೂ ಸಾಂಗತ್ಯ ಕೊಟ್ಟವು.

ಮರು ಬೆಳಗ್ಗೆ ಕೇಂದ್ರ ಸರೋವರಕ್ಕೆ ಹೋದೆವು. ಪರ್ವತಾಗ್ರಗಳಲ್ಲಿ ಸಹಜವಾದ ಗೊಸರುಭೂಮಿಯನ್ನು ಪರಿಷ್ಕರಿಸಿ ೧೮೯೬ರಲ್ಲಿ ಮಾಡಿದ ಜಲಾಶಯವಿದು. ಇದು ಸುತ್ತ ನಡೆಯುವ, ವಾಹನದಲ್ಲಿ ಪ್ರದಕ್ಷಿಣೆ ಬರುವ, ನೀರಿನಲ್ಲಿ ವಿವಿಧ ದೋಣಿ ಚಲಾಯಿಸುವುದೇ ಮೊದಲಾದ ಚಟುವಟಿಕೆಗಳ ಕೇಂದ್ರವೂ ಹೌದು. ಮೈಸೂರಿನ ಕುಕ್ಕರಹಳ್ಳಿ ಮತ್ತು ಕಾರಂಜಿ ಕೆರೆ, ಮಂಗಳೂರಿನ ಪಿಲಿಕುಳದ ಸರೋವರಗಳ ಭಾಗ್ಯ ಈ ನಿಟ್ಟಿನಲ್ಲೇ ರೂಪುಗೊಳ್ಳುತ್ತಿರುವುದಿರಬೇಕು. ನಾವು ಬೈಕಿನಲ್ಲಿ ಇದಕ್ಕೊಂದು ಪ್ರದಕ್ಷಿಣೆ ಹಾಕಿ ಅನಂತರ ದೋಣಿ ಚಲಾವಣೆಗೂ ದಕ್ಷಿಣೆ ಕೊಟ್ಟು `ಪುನೀತ’ರಾದೆವು. ಪ್ರವಾಸೋದ್ಯಮದ ಒತ್ತಡದಲ್ಲಿ ಸರೋವರದ ಸುತ್ತಣ ಜಲಾನಯನ ಪ್ರದೇಶವೆಲ್ಲ ಪ್ರಾಕೃತಿಕ ಪಾವಿತ್ರ್ಯವನ್ನು ಕಳೆದುಕೊಂಡಿವೆ. ಜಲಕ್ರೀಡೆಗಿಳಿಯುವ ಬಹುತೇಕ ಮಂದಿ (ಅಂದು, ಇಂದು ನನಗೆ ತಿಳಿದಿಲ್ಲ.) ಜಲಮಾಲಿನ್ಯದ ಪಾಠ ತಿಳಿದವರಲ್ಲ, ಏನೆಲ್ಲಾ ಎಸೆಯುತ್ತಾರೆ. ಕೊಳಚೆ ಸಸ್ಯ, ದುರ್ನಾತ ಸರೋವರದಲ್ಲಿ ಸರ್ವವ್ಯಾಪಿ. ಇದರ ಒಂದಂಚಿನಲ್ಲಿ ಹಿಂದಿನ ದಿನ ನಾವು ಊಟಮಾಡಿದ ಹೋಟೆಲಿನಲ್ಲಿ ಕಂಡ ಕೈಗಾಡಿ ನೀರು ತುಂಬಿಕೊಳ್ಳುತ್ತಿರುವುದನ್ನು ಕಂಡ ಮೇಲಂತೂ ನಮ್ಮಲ್ಲಿ ಉಳಿದಿದ್ದ ಸ್ವಲ್ಪ ವಿಹಾರದ ಖಯಾಲಿಯೂ ತೊಳೆದುಹೋಯ್ತು.

ಕೋಡಿ ಪ್ರಪಾತದ ತಳಕ್ಕಿಳಿವ ದಾರಿ ಅನುಸರಿಸಿ, ಪ್ರವಾಸೀಪಟ್ಟಿಯ ಇನ್ನೊಂದು ಆಕರ್ಷಣೆ – ಜಲಪಾತ, ಹುಡುಕಿದೆವು. ಫೇರಿ ಫಾಲ್ಸ್, ಬೇರ್ಶೋಲಾ ಫಾಲ್ಸ್ಗಳೆಲ್ಲ ಹೆಸರಿನಲ್ಲಷ್ಟೇ ರಂಗು. ಅವಕ್ಕೆ ನೀರೂಡುತ್ತಿದ್ದ ಮೇಲಿನೆಲ್ಲ ಜಲಾನಯನ ಪ್ರದೇಶಗಳಲ್ಲಿ ಪೇಟೆ ಹಬ್ಬಿದ ಮೇಲೆ ಇವು ಬೋರ್ಡಿಗಷ್ಟೇ ಸೈ. ನೀವು ಹೀನೋಪಮೆ ಎಂದರೂ ಸರಿ, ಪೇಟೆ ಉಚ್ಚೆ ಹೊಯ್ದರೆ ಇಲ್ಲಿ ಜಲಪಾತ ಜೈ! ಕೋಡಿಯಿಂದ ಪಳನಿಯತ್ತ ಹೋಗುವ ದಾರಿಯಂಚಿನಲ್ಲಿ ಕಾಣಸಿಗಬೇಕಾದ ಇನ್ನೊಂದು ಜಲಪಾತ – ಸಿಲ್ವರ್ ಕ್ಯಾಸ್ಕೇಡ್, ಕೂಡಾ ಹೀಗೇ. ಅದು ಮೇಲಿನ ಕೇಂದ್ರ ಸರೋವರದ್ದೇ ಉಕ್ಕು. ಸರೋವರದಲ್ಲೇ ನೀರಿಗೆ ತತ್ವಾರವಾದಮೇಲೆ ಇಲ್ಲಿ ಬಿಳಿ ಬಂಡೆಗೋಡೆಯ ಎದುರು ಬೋರ್ಡಿಗಷ್ಟೇ ಸೊಕ್ಕು.

ನೆನಪಿದೆಯಲ್ಲಾ ನನ್ನ ಈ ಪ್ರವಾಸಕ್ಕಾಗಿ, ಹಿಂದೆ ಮಂಗಳೂರಿನಲ್ಲಿ, ನನ್ನ ತಂದೆ ಬಂದು ಅಂಗಡಿ ವಹಿಸಿಕೊಂಡಿದ್ದರು. ನಮ್ಮನ್ನು ಬೀಳ್ಕೊಡುವಾಗ, ಅವರ ನಕ್ಷತ್ರ ವೀಕ್ಷಣೆಯ ಅಪರಿಮಿತ ಆಸಕ್ತಿಯಲ್ಲಿ “ಕೊಡೈಕೆನಾಲಿನಲ್ಲಿ ತಾರಾಲಯ ಅವಶ್ಯ ನೋಡಿ” ಎಂದು ಎಚ್ಚರಿಸಿದ್ದರು. ವಾಸ್ತವದಲ್ಲಿ ಕೋಡಿಯ ಖಗೋಳವೀಕ್ಷಣಾಲಯ ಸಾರ್ವಜನಿಕರಿಗೆ ಕೇವಲ ತನ್ನ ಮ್ಯೂಜಿಯಮ್ ಮಾತ್ರ ಮುಕ್ತವಾಗಿಟ್ಟಿತ್ತು. ಆದರೆ ಅದು ಯಾವುದೇ ಶಾಲಾಮಟ್ಟದ ವಿಜ್ಞಾನಮೇಳದಷ್ಟೂ ಸಜ್ಜಾಗಿರಲಿಲ್ಲ. ಸಂಶೋಧಕ ಮತ್ತು ಸಂಶೋಧನಾಲಯಗಳು (ಇನ್ನೊಂದರ್ಥದಲ್ಲಿ ಯಾವುದೇ ಸಾರ್ವಜನಿಕ ರಂಗದಲ್ಲಿರುವ ವ್ಯಕ್ತಿ ಅಥವಾ ಸಂಸ್ಥೆ) ತನ್ನನ್ನು ಕುರಿತು ಬಂದ ಸಾಮಾನ್ಯರನ್ನು (ಮೂರ್ಖರನ್ನಲ್ಲ) ಸಮಾಧಾನಿಸುವುದು ಒಂದು ಬಾಧ್ಯತೆಯೆಂದೇ ಭಾವಿಸಬೇಕೆಂದು ನಂಬಿದವ ನಾನು.

ಕೋಡಿಯ ಪ್ರಸಿದ್ಧ ಉದ್ಯಾನವನ ಬ್ರಿಯಾಂಟ್ ಪಾರ್ಕ್. ನುಣ್ಣನೆ ಹುಲ್ಲಿನ ಹಾಸು, ಶಿಸ್ತುಬದ್ಧ ಪೊದರುಗಳು, ಸೈನ್ಯದ ಠೋಳಿ ನಿಂತಂತೆ ನಿಯತ ಅಂತರದಲ್ಲಿ ಒಂದೇ ಬಣ್ಣದ ಹೂ ಪಾತಿಗಳು, ಬಳ್ಳಿಮಾಡ, ಕಾರಂಜಿ, ಕಾಲಮರೆಯುವ ಯುವ ಜೋಡಿಗಳು, ಮರೆತಕಾಲವನ್ನು ಹೆಕ್ಕುವ ಮುದಿಗಾಡಿಗಳು… ಹೀಗೆ ಮಾಮೂಲೀ ಪಟ್ಟಿ, ಎಲ್ಲ ವಿಹಾರಧಾಮಗಳದ್ದನ್ನೇ ಇಲ್ಲಿಗೂ ಅನ್ವಯಿಸಿಕೊಳ್ಳಿ. [ಆ ದಿನಗಳಲ್ಲಿ – ಇಲ್ಲಿ ಹೂ ಕಿತ್ತು, ಅಲ್ಲಿ ಪಾತಿತುಳಿದು, ಹುಲ್ಲಿನಲ್ಲಿ ಉರುಡಿ, ಕೊಳದಲ್ಲಿ ತೊಯ್ದು ಎಲ್ಲಕ್ಕೂ ಎಲ್ಲರಿಗೂ ಸ್ವಲ್ಪ ಸಹಜತೆ, ಸಮಾನತೆ ತರುತ್ತಿದ್ದ ಬಾಲರಾಟ, ಈ ದಿನಗಳಲ್ಲಿ ಅದೂ ಕಳೆದುಹೋಗಿದೆ! ಫೇಸ್ ಬುಕ್ ಮುಂತಾದ ಖಾಸಗಿ-ಸಾರ್ವಜನಿಕ ವೇದಿಕೆಗಳಲ್ಲಿ ಸ್ವಯಂಪ್ರಕಾಶಿಸಿಕೊಳ್ಳುವ ಭರಾಟೆಯಲ್ಲಿ ಹುಚ್ಚಿಗೂ ವ್ಯವಸ್ಥೆ ಬಂದಿದೆ!] ಹೂದೋಟದೊಳಗೆ ನಾವು ಹೆಚ್ಚು ವೇಳೆಗಳೆಯದೆ ಹರಕೆಯ ಸುತ್ತು ಹಾಕಿ ಮುಗಿಸಿದೆವು.

ಪ್ರಾಕೃತಿಕ ಸೌಂದರ್ಯ, ಹವೆ ಈ ಗಿರಿಧಾಮದ ಮೂಲ ಬಂಡವಾಳ. ಅದನ್ನೇ ಬಯಸಿ ಬರುವ ಪ್ರವಾಸಿಗಳಿಗೆ ಶುಚಿಯಾದ ಆಹಾರ, ನೀರು, ಮಿತಬೆಲೆಯಲ್ಲಿ ವಸತಿಕೊಡಲು ಊರು ಸೋಲುತ್ತದೆ. ಬಣ್ಣಬಣ್ಣದ ಹೂಗಿಡಗಳಿಟ್ಟರೇನು, ಸುಂದರ ಮರಗಳು ದಾರಿಗೆ ಅಂಚುಕಟ್ಟಿದರೇನು. ನೀಲಗಿರಿ ತೋಪು ತೈಲ ಸಂಸ್ಕರಣದ ಘಾಟು ತಾನೇ ತಾನಾದರೇನು? ಎಲ್ಲ ಮೀರುವಂತಿದೆ ಕುಪ್ಪೆ ರಾಶಿಯ ನೋಟ, ಚರಂಡಿಗಳ ಕಮಟು. ನಿಸರ್ಗವಲ್ಲಿ ಸೋತಿದೆ ಕೊಳಕರ ಕೇಳಿಗಳಿಂದ, ಹಿಡುಕರ ಹಿಡಿತಗಳಿಂದ! ಮೂನಾರ್ ಬಿಟ್ಟಾಗ ಕನಿಷ್ಠ ಎರಡು ದಿನವೆಂದು ಕೊಂಡು ಕೋಡಿಗೆ ಬಂದವರು ಇಪ್ಪತ್ತೇ ಗಂಟೆಯಂತರದಲ್ಲಿ ಓಡಿಯೇ ಹೋದೆವು.

(ಮುಂದುವರಿಯಲಿದೆ)