(ಕುದುರೆಮುಖದ ಆಸುಪಾಸು – ೩)

೧೯೯೦ರ ನವರಾತ್ರಿಯ ಮೂರು ರಜಾದಿನಗಳನ್ನು ಹೊಂದಿಸಿಕೊಂಡು ನಮ್ಮ ಇನ್ನೊಂದೇ ಪುಟ್ಟ ತಂಡ – ಆರೇ ಜನ ಕುದುರೆಮುಖ ಶಿಬಿರವಾಸಕ್ಕೆ ಹೊರಟೆವು. ಹೆಂಡತಿ – ದೇವಕಿ, ಮಗ – ಒಂಬತ್ತರ ಬಾಲಕ ಅಭಯ ಸೇರಿಕೊಂಡಿದ್ದರು. (ಕೇದಗೆ) ಅರವಿಂದ ರಾವ್, ಮೋಹನ್ (ಆಚಾರ್ಯ) ಮತ್ತು (ಕೆ.ಆರ್) ಪ್ರಸನ್ನ ಇತರ ಸದಸ್ಯರು. ಮಳೆಗಾಲದ ಛಾಯೆ ಇನ್ನೂ ಬಿಟ್ಟಿರಲಿಲ್ಲವಾದ್ದರಿಂದ ಎರಡು ಗುಡಾರ, ಅಡುಗೆಗೆ ಪುಟ್ಟ ಗ್ಯಾಸ್ ಒಲೆಯನ್ನು ಮುಖ್ಯವಾಗಿ ಸಜ್ಜುಗೊಳಿಸಿಕೊಂಡಿದ್ದೆವು. ಶುಕ್ರವಾರ (೨೮-೯-೯೦) ಬೆಳಗ್ಗಿನ ಮೊದಲ ಕಳಸ ಬಸ್ಸೇರಿ ಕಾರ್ಕಳ, ಕುದುರೆಮುಖ (ಪೇಟೆ) ಆಗಿ ಸಂಸೆಯಲ್ಲಿಳಿದಾಗ ಸುಡುಸುಡು ಹನ್ನೊಂದು ಗಂಟೆ. ಭುಜ ಜಗ್ಗುವ ಹೊರೆ ಹೊತ್ತು ಹೇವಳದ ದಾರಿ ಹಿಡಿದೆವು. ಸ್ವಲ್ಪ ಹೆಚ್ಚು ಕಡಿಮೆಯಾದರೂ ಗಂಟೆಗೊಮ್ಮೆ ಐದು ಮಿನಿಟಾದರೂ ವಿಶ್ರಾಂತಿ ತೆಗೆದುಕೊಂಡೇ ನಡೆಯುವುದು ನಮ್ಮ ಕ್ರಮ. ಮೊದಲಲ್ಲೇ ಸಂಸೆ ಹೊಳೆ ಸಿಗುತ್ತದೆ. ಅದು ಕುದುರೆಮುಖದ ಪಾದ ತೊಳೆದೇ ಬರುತ್ತದೆ ಮತ್ತು ಗಣಿಗಾರಿಕೆಯ ಮಾಲಿನ್ಯಕ್ಕೂ ದೂರ ಎಂದು ನಮಗೆ ವಿಶೇಷ ಪ್ರೀತಿ. ಅದಿನ್ನೂ ಸಾಕಷ್ಟು ಮೈದುಂಬಿಕೊಂಡೇ ಇತ್ತು. ಅದನ್ನು ಮಳೆಗಾಲವಲ್ಲದ ದಿನಗಳಲ್ಲಿ ಲಾರಿ ಜೀಪ್ ದಾಟಲು ಒಂದು ವಿಸ್ತಾರ ಪಾತ್ರೆಯನ್ನಾರಿಸಿ, ಕಾಡು ಕಲ್ಲು ನಿಗಿದು ಕಚ್ಚಾದಾರಿ ಮಾಡಿದ್ದಿತ್ತು. ಅಲ್ಲಿ ಕಾಲಿನ ಬೂಟು ಕಳಚಿ, ಪ್ಯಾಂಟ್ ಮೇಲಕ್ಕೆ ಮಡಚಿ, ಕಡಿಮೆ ಅನುಭವಿಗಳು ಮತ್ತು ನೇತಾಡುವ ಹೆಚ್ಚಿನ ಹೊರೆಗಳನ್ನೆಲ್ಲ ಹೆಚ್ಚಿನ ಎಚ್ಚರದಿಂದ ನದಿ ದಾಟಿಸಿಕೊಂಡು ಮುಂದುವರಿದೆವು. ಬಹುಶಃ ಅಪರೂಪದ ಲಾರಿ ಬರುವ ಕಾಲಕ್ಕೆ ಎದುರೊಬ್ಬರೋ ಇಬ್ಬರೋ ಗುದ್ದಲಿ ಹಿಡಿದುಕೊಂಡು ದಿಬ್ಬ ತೆಮರು ಸವರಿ ತುಂಬುತ್ತಾ ಸಾಗಿಸುವಂಥ ಸ್ಥಿತಿಯಲ್ಲಿತ್ತು ದಾರಿ. ಆದರೆ ಹಳ್ಳಿಯ ಜನ ಜಾನುವಾರು ಧಾರಾಳ ಬಳಸುತ್ತಿದ್ದುದರಿಂದ ನಮ್ಮ ನಡಿಗೆಗೆ ಬೇಕಾದ ಸವಕಲು ಜಾಡಿಗೇನೂ ಕೊರತೆಯಾಗಲಿಲ್ಲ. ಸಣ್ಣಪುಟ್ಟ ಕಾಫಿ ತೋಟ, ಅಪರೂಪಕ್ಕೆ ಮನೆ ಸಿಕ್ಕಿದರೂ ಮುಖ್ಯ ವಾತಾವರಣ ಕಾಡಿನದ್ದೇ ಇತ್ತು.

ಅಲ್ಲೊಂದು ಇಲ್ಲೊಂದು ಹೆಚ್ಚು ಸವೆತದ ಕಾಲುದಾರಿ ಕವಲೊಡೆಯುವುದಿತ್ತು. ಆದರೆ ದಾರಿಗಂಚುಗಟ್ಟಿದ ಹಸಿರು ದಟ್ಟವಾಗಿದ್ದುದರಿಂದಲೋ ಏನೋ ಆ ವಲಯದ ಕೃಷಿ ಹಾಗೂ ಜನವಸತಿಯ ವಿಸ್ತಾರ ನಮ್ಮ ಅರಿವಿಗೆ ಸಿಕ್ಕಲೇ ಇಲ್ಲ. ಎಲ್ಲ ಬಿಟ್ಟು ಈಚೆಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಲೆಕ್ಕದಲ್ಲಿ ಮರುವಸತಿಗೊಳಗಾದ ಮುಳ್ಳೋಡಿಯೇ ಮುಂತಾದವುಗಳ ದರ್ಶನವೇನು ಹೆಸರೂ ನಮ್ಮ ಲೆಕ್ಕಕ್ಕೆ ಸಿಕ್ಕಲೇ ಇಲ್ಲ. ಸುಮಾರು ಒಂದು ಗಂಟೆಯ ದಾರಿ ಸವೆಸಿ ಕಾಡ ತೊರೆಯೊಂದರ ದಂಡೆಯಲ್ಲಿ ಬುತ್ತಿಯೂಟವನ್ನೇ ಮಾಡಿದೆವು. ಮುಂದಿನೊಂದು ಗಂಟೆಯಲ್ಲಿ, ಅಂದರೆ ಹಿಂದಿನ ಲೇಖನದಲ್ಲಿ ಪ್ರಸ್ತಾವಿಸಿದ ಗುಜ್ಜಾರಿ ಒಂಟಿಮರವನ್ನು ದಾಟಿ ಇನ್ನೊಂದು ಕಾಡತೊರೆಯ ಬಳಿ ವಿಶ್ರಮಿಸಿದ್ದೆವು. ಅಲ್ಲಿನ ನೀರನ್ನು ನಮ್ಮ ಪಾತ್ರೆಯಲ್ಲಿ ಹಿಡಿದು ಪಾನಕ ಮಾಡಿ ಕುಡಿವಾಗ ನಗರದ `ಐಸ್ಕೋಲ್ಡಿಗಿಂಥ’ ತಣ್ಣಗಿನ ಅನುಭವ ನಮ್ಮಲ್ಲಿ ಕೆಲವರಿಗೆ ಅಪೂರ್ವ! ಹೇವಳದ ಸಿಂಹಪುರ್ಬುಗಳ ಕೃಷಿಭೂಮಿ ನಮಗೆ ಸಿಕ್ಕ ಕೊನೆಯ ನಾಗರಿಕತೆ.

ಅದುವರೆಗೆ ನಮ್ಮ ನಡಿಗೆಗೆ ಬಲಮೂಲೆಯ ಲಕ್ಷ್ಯವಾಗಿ ತೋರುತ್ತ, ಬಿಸಿಲು ಬೆವರನ್ನು ಮರೆಯಿಸಿ ಕುಮ್ಮಕ್ಕು ಕೊಡುತ್ತಿದ್ದ ಶಿಖರವನ್ನಿಲ್ಲಿ ಎಡಮೂಲೆಗೆ ಬಿಟ್ಟುಕೊಂಡೆವು. ಹೇವಳದ ಗದ್ದೆ ವಲಯ ಕಳೆದ ಮೇಲಂತೂ (ಹಿಂದಿನ ಕಂತಿನಲ್ಲಿ ಹೇಳಿದಂತೆ,) ಕುದುರೆಯ ಬಾಲದತ್ತ ಸರಿಯುವ ಕಾಟಿ-ಗಾಡಿ ದಾರಿಯನ್ನು ಒಂಟಿಮರದ ಬಳಿ ಸಂಧಿಸುವ ಛಲದಲ್ಲಿ ನೇರ ಬೆಟ್ಟ ಏರುವ ಸವಕಲು ಜಾಡು ಅನುಸರಿಸಿದೆವು. ಹೇವಳಿಗರು ತಮ್ಮ ವಲಯಕ್ಕೆ ಮಾಡಿಕೊಂಡ ನೀರಾವರಿ ವ್ಯವಸ್ಥೆ (ಬೆಟ್ಟದ ಮೈಯಲ್ಲಿ ಉದ್ದಕ್ಕೆ ತೋಡಿದ ಕಚ್ಚಾ ಚರಂಡಿ) ನಮ್ಮ ಒತ್ತಿನಲ್ಲೇ ಹರಿದಿತ್ತು, ಉದ್ದಕ್ಕೂ ನಮಗೆ ಸಾಂತ್ವನ ಕೊಟ್ಟಿತು. ಸಂಜೆ ಐದು ಗಂಟೆಗೆ ಒಂಟಿಮರ ಸೇರಿದೆವು.

ಒಂಟಿಮರದ ಬಳಿ, ನೀರು ಮತ್ತು ಮರದ ನೆರಳಿನಿಂದ ತುಸು ದೂರದಲ್ಲಿ ನಾವು ಅಂದು ರಾತ್ರಿಗೆಂದು ಹೊರೆ ಇಳಿಸಿ ನಿಂತೆವು. ಹಸಿರು ಹುಲ್ಲುಗಾವಲನ್ನು ತೆಳುವಾಗಿ ತೀಡುವ ಗಾಳಿ, ಶಿಖರದ ಮರೆಯಲ್ಲಿ ಪಶ್ಚಿಮಾಂಬುಧಿಯತ್ತ ಸಾಗಿದ್ದ ನೇಸರ ನಮ್ಮ ಕುಶಲವನ್ನು ವಿಚಾರಿಸಿಕೊಳ್ಳುತ್ತಿದ್ದಂತೆ ಶಿಬಿರ ಕಲಾಪಗಳು ಅರಳಿಕೊಂಡವು. ಸಣ್ಣ ಏಣಿನ ಮರೆಯ ಅನುಕೂಲ ನೋಡಿಕೊಂಡು ಎರಡು ಗುಡಾರ, ಒಂದರ ಅಂಚಿಗೆ ಗಾಳಿಮರೆ ಕಟ್ಟಿ ಅಡುಗೆ ವ್ಯವಸ್ಥೆ, ಗಾಳಿಬೀಸಿನ ವಿರುದ್ಧ ದಿಕ್ಕಿನಲ್ಲಿ ಗುಡಾರಗಳಿಂದ ತುಸು ಅಂತರವಿಟ್ಟು ಶಿಬಿರಾಗ್ನಿ ಇತ್ಯಾದಿ. ಅಸಾಮಾನ್ಯ ಹೊರೆ, ಏರಿಬಂದ ಶ್ರಮಕ್ಕೆ ಮುದಕೊಟ್ಟ ಗಾಳಿ ಸಮಯ ಹೋದಂತೆ ಚಳಿಯೇರಿಸಿತೋ ಸೂರ್ಯ ಕಂತಿದ್ದಕ್ಕೆ ಬಿಸಿಯಿಳಿಯಿತೋ – ನಾವು ಬಲು ಬೇಗನೆ ಸ್ವೆಟ್ಟರ್, ಮಂಗನ ಟೊಪ್ಪಿ ಅಲಂಕೃತರಾದೆವು. ನೀರ ತೊರೆಯಿಂದಾಚಿನ ಇಳಿಜಾರಿನಲ್ಲಿ ಕೆಲವು ಒಣಕೋಲು ಕುಂಟೆ ಸಿಕ್ಕವನ್ನು ತಂದು ಸಣ್ಣಕ್ಕೆ ಶಿಬಿರಾಗ್ನಿ ಎಬ್ಬಿಸಿದ್ದೂ ಆಯ್ತು. ಮೈಕ್ರೋಬಯಾಲಜಿ ಮಾಸ್ಟರ್ ಆಗಿ ವೃತ್ತಿತಃ ಜೀವ ಮಾರಕಗಳ ವಿಶ್ಲೇಷಕನಾದರೂ ಅರವಿಂದರಿಗೆ ಜೀವ ಪೂರಕ ಕೆಲಸ ಮಾಡುವುದರಲ್ಲೂ ಭಾರೀ ಉಮೇದು. ಅವರ ಮುಂದಾಳ್ತನದಲ್ಲಿ ರಾತ್ರಿಯಡುಗೆಯ ಕೆಲಸ ಸಾಂಗವಾಯ್ತು.

ತಿನಿಸುಗಳ ವಿವರ ನೆನಪಿಲ್ಲದಿದ್ದರೂ ತಣ್ಣನೆಯ ರಾತ್ರಿಯಲ್ಲಿ, ತಂಗದಿರನ ಸಾಕ್ಷಿಯಲ್ಲಿ, ಶಿಬಿರಾಗ್ನಿಯ ಸುತ್ತ ಕುಳಿತು ಮನದುಂಬುವ ಮಾತಾಡುತ್ತ ಉಂಡದ್ದು, ಗುಡಾರಗಳ ಬಿಸುಪಿನಲ್ಲಿ ನಿದ್ರೆ ಮಾಡಿದ್ದರ ಸವಿಭಾವ ಚಿರಂಜೀವ. ಹವಾಮಾನದ ವೈಪರೀತ್ಯ ಮಾರಣೇ ರಾತ್ರಿಗೂ ನಮ್ಮನ್ನು ಮತ್ತದೇ ಒಂಟಿಮರದ ಆಶ್ರಯಕ್ಕೆ ತಂದಿತ್ತು. ಆ ರಾತ್ರಿಗೆ ನಮ್ಮ ಪಾಕಪಟ್ಟಿಯಲ್ಲಿಲ್ಲದ ವಿಶೇಷವಾಗಿ, ಉಳಿದ ಘನೀಕೃತ ಹಾಲು, ರವೆ ಬಳಸಿ ಅರವಿಂದ ಮಾಡಿದ ಪಾಯಸವಂತೂ ನಿತ್ಯದಲ್ಲಿ ಪಾಯಸ ವಿರೋಧಿಯಾದ ನನಗೂ ಮೆಚ್ಚುಗೆಯಾಗಿತ್ತು! (ನಾಯಿ ಹಸಿದಿತ್ತು, ಅನ್ನ ಹಳಸಿತ್ತು!) ಅದೇ ನಲ್ವತ್ತು ವರ್ಷಗಳ ಹಿಂದೆ, ನಾವೂರಿನಿಂದ ಕತ್ತಲು ಹರಿದು ಬಂದವರಿಗೆ…

* * * * * *

ವಿರಾಮದಲ್ಲಿ ನೆಲೆನಿಲ್ಲುವುದಾಗಲೀ ಪಾಯಸದ ವೈಭವಕ್ಕಾಗಲೀ ಅವಕಾಶವಿರಲಿಲ್ಲ. ತೊರೆ ಪಕ್ಕದಲ್ಲಿ ಮೂರು ಕಲ್ಲೊಡ್ಡಿ, ಬೆಂಕಿ ಹೂಡಿ ಚಾ ಕಾಯಿಸುವುದು, ಪ್ರಾತರ್ವಿಧಿಗಳನ್ನು ಪೂರೈಸುವುದೆಲ್ಲಾ ಸರದಿಯಲ್ಲೇ ನಡೆಯಿತು. ಕೊನೆಯಲ್ಲಿ ಬುತ್ತಿಯ ತಣಕಲು ಚಪಾತಿಯನ್ನು ಕೆಂಡದ ಮೇಲೆ ಯಥಾನುಶಕ್ತಿ ಉರುಳಾಡಿಸಿ ಹೊಟ್ಟೆ ತಣಿಸಿದೆವು. ನಿದ್ರೆ, ಬಳಲಿಕೆಗಳನ್ನೂ ಸೇರಿಸಿ ಬೆನ್ನಚೀಲವನ್ನು ಕಟ್ಟಿ, ಬೆನ್ನಿಗೇರಿಸಿ ಮತ್ತೆ ಜಪಿಸಿದೆವು ಮಂತ್ರ – ನಡೆ ಮುಂದೆ, ನಡೆ ಮುಂದೆ! (ನಮ್ಮ ಚಾ ಕಾಸಿ ಮಸಿಹಿಡಿದ ಪಾತ್ರೆಯಂತೂ ನಾವೂರು ಬಂಗ್ಲೆಯಿಂದಲೇ ಸೋಜಾನ ಶಿರಸ್ತ್ರಾಣವಾಗಿದ್ದದ್ದಕ್ಕೆ ಈಗಲೂ ನಮ್ಮಲ್ಲಿ ಚಿತ್ರ ಸಾಕ್ಷಿಯೇ ಇದೆ.)

* * * * *

ಸಾಹಸಯಾನಗಳಲ್ಲಿ ನಾನು ಬಹುತೇಕ ತಂಡದ ಸ್ವಯಂಪೂರ್ಣತೆಯಲ್ಲೇ ನಂಬಿಕೆ ಇಟ್ಟವನು. ಹೊಸ ಜಾಗಗಳಿಗೆ ಮಾರ್ಗದರ್ಶಿ ಸರಿ, ಆದರೆ ಆತನನ್ನು ಕೂಲಿಯಾಗಿಯೂ ನಾವು ಬಳಸುತ್ತಿರಲಿಲ್ಲ. ಕಾಡು ಬೆಟ್ಟ ಎಂದರೂ ಕೆಲವೆಡೆಗಳಲ್ಲಿ ಜನವಸತಿ ಇರಬಹುದು, ಆದರವು ನಮ್ಮ ಆತಿಥ್ಯಕ್ಕಲ್ಲ ಎಂದೇ ಭಾವಿಸಿದವನು ನಾನು. ಹಾಗೆಂದು ಕಾಲದ ನಿಯಮ ಮತ್ತು ಪರಿಸ್ಥಿತಿಯ ಅನಿವಾರ್ಯತೆಗಳ ಎದುರು ನಾನು ವಿಶೇಷ ಹಠ ಸಾಧಿಸಿದ್ದೂ ಇಲ್ಲ.

ಕುದುರೆಮುಖದ ವಲಯ ರಾಷ್ಟ್ರೀಯ ಉದ್ಯಾನವನವಾದ ಮೇಲೆ ಶಿಸ್ತು ಸಂಹಿತೆಯಲ್ಲಿ ಬಿಗಿ ಬಂದಿದೆ. ಶಿಬಿರವಾಸ, ಅಡುಗೆಯ ನೆಪದಲ್ಲೇ ಆದರೂ ಬೆಂಕಿ ಮಾಡುವುದಕ್ಕೆ ಅವಕಾಶಗಳೆಲ್ಲ ರದ್ದಾಗಿವೆ. ಹಾಗಾಗಿ ನಾವೂರಿನಿಂದ ಹೊರಟು ಒಂದೇ ಹಗಲಿನಲ್ಲಿ ಶಿಖರ ಸಾಧಿಸಿ ಮರಳುವ ಸಾಹಸ ಯಾನಗಳೂ ಇಲ್ಲವಾಗಿವೆ. ಸಹಜವಾಗಿ ಅತ್ತಣ ಜಾಡು ಹೇಗುಳಿದಿದೆಯೋ ನನಗೆ ತಿಳಿದಿಲ್ಲ. ಹೇವಳದ ನಾಗರಿಕ ಆವಾಸ ಅಥವಾ ಒಂಟಿಮರದ ಶಿಬಿರತಾಣವೆಲ್ಲ ಇತಿಹಾಸಕ್ಕಷ್ಟೇ ಸರಿ. ಈಚಿನ ವರ್ಷಗಳಲ್ಲಿ ಅಂದರೆ, ಹೇವಳದ ಪುರ್ಬುಗಳ ಆಡಳಿತದ ಕೊನೆಯ ವರ್ಷಗಳಲ್ಲಿ ಅವರ ಮನೆ ಚಾರಣಿಗರ ಲೆಕ್ಕಕ್ಕೆ ಇನ್ನೊಂದೇ ಅಡಗೂಲಜ್ಜಿ ಮನೆ, ಆಧುನಿಕವಾಗಿ ಹೆಸರಿಸುವುದಾದರೆ `ಹೋಂಸ್ಟೇ’ಯ ರೂಕ್ಷ ವ್ಯವಸ್ಥೆ ಆಗಿದ್ದುದನ್ನು ಧಾರಾಳ ಕೇಳಿದ್ದೆ. ಸುಬ್ರಹ್ಮಣ್ಯದಿಂದ ಕುಮಾರಪರ್ವತ ಏರುವವರಿಗೆ ಗಿರಿಗದ್ದೆ ಭಟ್ಟರೋ ಕೊಡಚಾದ್ರಿ ಆರೋಹಿಗಳಿಗೆ ಪರಮೇಶ್ವರ ಭಟ್ಟರೋ ಕೊಟ್ಟಂತೆ ಹೇವಳಿಗರದು ಸರಳ ಅಶನವಲ್ಲ. ಕೊಡಚಾದ್ರಿಯ ಸರ್ಕಾರಿ ಬಂಗ್ಲೆ ಮತ್ತು ಜೋಗಿ ಮನೆಯಂತೇ ಇವರು ರುಚಿಗೆ ತಕ್ಕಂತೆ ಕಡಿಯುವುದನ್ನೂ ಕುಡಿಯುವುದನ್ನೂ ಒದಗಿಸುತ್ತಿದ್ದರು.

೧೯೭೭ರ ಕ್ರಿಸ್ಮಸ್ ರಜೆಯ ಹೊಂದಾಣಿಕೆಯೊಡನೆ ನಾನು ಮತ್ತೊಂದು ತಂಡವನ್ನು ಹೀಗೇ ಸೋಜಾ ಮಾರ್ಗದರ್ಶಿತನದಲ್ಲಿ ರಾತ್ರಿ ಚಾರಣಕ್ಕೇ ತಂದಿದ್ದೆ. ಮರುದಿನ ಹಬ್ಬ ಇದ್ದರೂ ಸೋಜಾ ನಮಗೆ ಸಹಜವಾಗಿ ಒದಗಿದ್ದ. ಬಹುಶಃ ಆತನ ಆರೋಪಿತ ಧರ್ಮದ ಒಳಗಿನ ಜನಪದ ಸಂವೇದನೆ ಪ್ರಾದೇಶಿಕವೇ ಇದ್ದಿರಬೇಕು. ತಂಡದಲ್ಲಿ ಮೈಸೂರು ವಿವಿ ನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದ (ಅಲ್ಲದಿದ್ದರೂ) ಕನ್ನಡಕ್ಕೊಬ್ಬರೇ ಪಂಡಿತಾರಾಧ್ಯ ಅಲ್ಲಿನ ಗಣಿತ ಸಂಶೋಧನ ವಿದ್ಯಾರ್ಥಿ ಪ್ರಕಾಶರನ್ನೂ ಕೂಡಿಕೊಂಡು ಬಂದಿದ್ದರು. ಮೈಸೂರಿನ ದಖ್ಖಣ ಪರ್ವತಾರೋಹಣ ಸಂಸ್ಥೆಯ ಕಾಲದಿಂದ ನನ್ನ ಸಹ-ಪರ್ವತಾರೋಹಿ ಮಿತ್ರನಾಗಿದ್ದ, ಅಂದು ಕೋಟದ ಗ್ರಾಮೀಣ ಬ್ಯಾಂಕ್ ಒಂದರ ಅಧಿಕಾರಿಯಾಗಿದ್ದ ಗಿರೀಶ ಪುತ್ರಾಯ ಇದ್ದರು. ಎರಡನೇ ಕುದುರೆಮುಖಾರೋಹಣ ತಂಡ ಹೊರಡಿಸಲು ನನಗೆ ಪ್ರೇರಕರೇ ಆಗಿದ್ದ, ಮೀನುಗಾರಿಕಾ ಕಾಲೇಜಿನ ಅತ್ಯುತ್ಸಾಹೀ ವಿದ್ಯಾರ್ಥಿ ಮಿತ್ರ ದ್ವಯ – ಲೋಕೇಶ್ ಮತ್ತು ರಾಜಶೇಖರ್ ಇದ್ದರು. ಎರಡು ವರ್ಷಗಳ ಹಿಂದೆ, ಇನ್ನೂ ಹತ್ತನೇ ತರಗತಿಯಲ್ಲಿದ್ದಾಗಲೇ ನನ್ನೊಡನೆ ತನ್ನ ಪ್ರಥಮ ಚಾರಣವನ್ನು ಕುಮಾರಪರ್ವತಕ್ಕೆ ಯಶಸ್ವಿಯಾಗಿ ನಡೆಸಿದ್ದ ಎ.ಪಿ. ಚಂದ್ರಶೇಖರ ಲೆಕ್ಕದಲ್ಲಿ ಕಿರಿಯ ಮತ್ತು ಕೊನೆಯ ಸದಸ್ಯನಾದರೂ ಯಾರಿಗೂ ಕಡಿಮೆಯಿಲ್ಲದಂತೆ ಹೆಜ್ಜೆ ಹಾಕಿದ್ದ. ಈ ಯಾತ್ರೆಯಲ್ಲಿ ತಂಡ ನಾವೂರಿನ ಕಿರು ನಿದ್ರೆಯ ಅವಕಾಶವನ್ನೂ ನಿರಾಕರಿಸಿ ನಡೆದಿತ್ತು. ಹೇವಳದಲ್ಲಿ ಕ್ರಿಸ್ಮಸ್ಸಿನ ಉಲ್ಲಾಸ ಕಾಣುತ್ತಿತ್ತು. ಸೋಜಾ ಒಬ್ಬನೇ ಅಲ್ಲಿಗಿಳಿದು ನಡೆದರೂ ನಾವು ಮುಂದುವರಿದದ್ದು ಒಂಟಿ ಮರಕ್ಕೇ. ನಮ್ಮ ಪ್ರಾತರ್ವಿಧಿಗಳ ಕಿರು ವಿರಾಮ ಕಳೆದು ಶಿಖರಗಾಮಿಗಳಾಗಲು ಸಜ್ಜಾಗುವುದರೊಳಗೆ ಸೋಜಾ ಮಾತ್ರ ನೆಂಟರ ಮನೆಯ ಬಂಟನಾಗಿ, ಪುನಶ್ಚೇತನನಾಗಿ ಮರಳಿ ಸೇರಿಕೊಂಡಿದ್ದ. ಆದರೆ ನಮಗೆ ಯಾರಿಗೂ ಹೇವಳವನ್ನು ಬಳಸಿಕೊಳ್ಳುವ ಯೋಚನೆ ಬಂದೇ ಇರಲಿಲ್ಲ!

* * * * *

೧೯೮೩ಕ್ಕಾಗುವಾಗ ನನಗೆ ಈ ವಲಯದ ಸುತ್ತಾಟದಲ್ಲಿ ಎಂಟು ವರ್ಷಗಳ ಹಿರಿತನ ಬಂದಿತ್ತು. ಸಹಜವಾಗಿ ಒಂದಷ್ಟು ಮಿತ್ರರು ಸೂಚಿಸಿದ್ದಕ್ಕೆ ಕುದುರೆಮುಖವೇರಲು ಹೊಸ ತಂಡ ಹೊರಡಿಸಿದೆ. ಅದು ನವರಾತ್ರಿಯ ಕೊನೆಯ ರಜಾ ದಿನಗಳು. ನನ್ನಂಗಡಿಯ ಸಹಾಯಕ ಪ್ರಕಾಶ ನಾಟೇಕರ್, ಸಾಲಿಗ್ರಾಮದ ವೆಂಕಟ್ರಮಣ ಉಪಾಧ್ಯ, ಮಂಗಳೂರು ವಿವಿನಿಲಯದ ಗಣಿತ ಅಧ್ಯಾಪಕ ಸಂಪತ್ಕುಮಾರ್, ಮಜ್ಗಾಂ ಡಾಕಿನ ಬಾಲಕೃಷ್ಣ ಸೋಮಯಾಜಿ, ಮಂಗಳೂರು ಉರಗೋದ್ಯಾನದ ಆದಿಮೂರ್ತಿಗಳಾದ ಬಿ.ಕೆ. ಶರತ್ ಮತ್ತು ಚಾರ್ಲ್ಸ್ ಪಾಲ್, ನನ್ನ ಕರಾಟೆ ಸಂಗಾತಿ ಅರುಣ ನಾಯಕ್ ಮತ್ತು ಆತನ ಆತ್ಮಸಖ ವಿನ್ಸಿ, ಮೀನುಗಾರಿಕಾ ಕಾಲೇಜಿನ ವಿನಯ, ಕೊನೆಯದಾಗಿ ಇನ್ನೂ ವಿದ್ಯಾರ್ಥಿ ದೆಸೆಯಲ್ಲೇ ಇದ್ದ ಎ.ಪಿ. ಸುಬ್ರಹ್ಮಣ್ಯಂ ಉರುಫ್ ತಮ್ಮಣ್ಣ ಭಾವ (ತಂಡದಲ್ಲಿ ಎಲ್ಲರಿಗೂ ಮತ್ತು ನನ್ನ ಮಿತ್ರವಲಯಕ್ಕೂ ಈತ ತಮ್ಮಣ್ಣನೇ) ಸದಸ್ಯರು. ನನ್ನ ಅನುಭವದ ಬಲದಲ್ಲಿ ಮಾರ್ಗದರ್ಶಿ ಬೇಡವೆಂದೇ ನಿರ್ಧರಿಸಿದ್ದೆ. ಶುಕ್ರವಾರ ರಾತ್ರಿ ನನ್ನ ಅಂಗಡಿ ಮುಚ್ಚುವ ವೇಳೆಗೆ ದಿಬ್ಬಣ ಹೊರಡುವ ಮನೆಯ ಸಂಭ್ರಮ ಬಂದಿತ್ತು. ಹನ್ನೊಂದೂ ಮಂದಿ ಬಾಡಿಗೆ ಟೆಂಪೋದಲ್ಲಿ ಮಂಗಳೂರು ಬಿಟ್ಟೆವು. ನಾವೂರು ಅರಣ್ಯ ಬಂಗ್ಲೆ ಮುಟ್ಟುವಾಗ ನಡು ರಾತ್ರಿ ಹನ್ನೆರಡು. ಟೆಂಪೋಗೆ ವಿದಾಯ ಹೇಳಿ, ಅಂಗಳದಲ್ಲೇ ತಂಗಿದೆವು. ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಪ್ರಾತರ್ವಿಧಿಗಳನ್ನು ತೀರಿಸಿ, ಕಟ್ಟಿ ಒಯ್ದ ದೋಸೆ ತಿಂದು, ಚಹಾ ಮಾಡಿ ಕುಡಿದೆವು. ಮುಂಬೆಳಕಿಗಾಗಲೇ ಬೆನ್ನಹೊರೆ ಏರಿಸಿ, ಏರುಮಲೆ ಜಾಡು ಹಿಡಿದಿದ್ದೆವು.

ಮುಂಜಾವಿನ ತಂಪಿಗೆ ನಮ್ಮ ನಡಿಗೆ ಚುರುಕಾಗಿತ್ತು. ಗುಂಡಲ್ಪಾದೆಯಿಂದ ತುಸು ಮುಂದಿನವರೆಗೂ ನನ್ನ ನೆನಪು ಸರಿಯಾಗಿಯೇ ಇತ್ತು. ಅಲ್ಲಿ ನಾನು ಗಾಡಿ ದಾರಿ, ಒಳದಾರಿ, ಮತ್ತು ಅನ್ಯ ಸವಕಲು ಜಾಡುಗಳಲ್ಲಿ (ವನ್ಯಪ್ರಾಣಿಗಳ ಅಥವಾ ವನ್ಯೊತ್ಪತ್ತಿಗಳ ಸಂಗ್ರಾಹಕರು ರೂಪಿಸಿದ್ದು) ಏನೋ ಆಯ್ಕೆ ಮಾಡಿ ನೇರ ಆ ವಲಯದ ಶಿಖರಕ್ಕೇರಿಸಿದ್ದೆ. ವಾಸ್ತವದಲ್ಲಿ ಕುದುರೆಮುಖದ ದಾರಿ ಎಲ್ಲೂ ನೇರ ಬೆಟ್ಟವನ್ನು ಏರುವುದೇ ಇಲ್ಲ. ಅದು ನಿರಂತರ ಉತ್ತರ-ಪೂರ್ವ ಮುಖಿಯಾಗಿ, `ಓಂತಿ’ಯ (ಓಂತಿ ಬೆಟ್ಟ – ಹಿಂದೆ ಓದಿದ್ದು ನೆನಪಿರಲಿ) ಬೆನ್ನ ಹುರಿಯನ್ನು ಎಲ್ಲೂ ಸಾಧಿಸದೆ, ಕೇವಲ ಬಲ ಮಗ್ಗುಲಿನಲ್ಲೇ ಸಾಗಿತ್ತು. ನಾವೋ ಜಾಡು ಮುಗಿದು, ಆರು-ಏಳಡಿ ಎತ್ತರದ ದಟ್ಟ ಹುಲ್ಲಿನ ನಡುವೆ ಸಿಕ್ಕಿಬಿದ್ದೆವು. ಹಿಂದೆ ಸರಿದು ಜಾಡು ತಿದ್ದಿಕೊಳ್ಳಬಹುದಿತ್ತು. ಆದರೆ ದಮ್ಮುಕಟ್ಟಿ ಗಳಿಸಿದ್ದ ಔನ್ನತ್ಯ ಕಳೆದುಕೊಳ್ಳಲು ಮನಸ್ಸು ಬರಲಿಲ್ಲ. ದಿಕ್ಕಿನ ಅಂದಾಜು ಮಾಡಿ ಹುಲ್ಲು ಬಗೆದು ನಡೆಯಲು ಪ್ರಯತ್ನಿಸಿದೆವು. ಆದರೆ ಹೊತ್ತ ಹೊರೆ, ಸಮಯದ ಮಿತಿ ಮತ್ತು ಎಲ್ಲಕ್ಕೂ ಮಿಗಿಲಾಗಿ ತಂಡದ ಸಾಮರ್ಥ್ಯ ಬೇಗನೆ ಸೋಲಿಸಿತು. ಮತ್ತೆ ಬಲು ಕಷ್ಟದಲ್ಲಿ ಕೆಳಕ್ಕೆ ಜಾರಿ ಮೂಲ ಜಾಡನ್ನು ಸೇರಿಕೊಂಡ ಮೇಲೆ ನಿರಾಳವಾಯ್ತು.

ಈ ಸಾಹಸಯಾನದಲ್ಲಿ ಸದಾ ನನ್ನ ನೆನಪಿನಲ್ಲುಳಿದ ಒಂದು ಸಂಗತಿ – ಶರತ್ತಿನ `ಜಿಗಣೇಪ್ರೂಫ್’ ತಂತ್ರ. ಆ ಋತುವಿನಲ್ಲಿ ದಾರಿಯಲ್ಲಿ ನೀರಪಸೆಯಿದ್ದಲ್ಲೆಲ್ಲಾ ಇನ್ನೂ ಜಿಗಣೆಗಳು ಉಳಿದಿದ್ದುವು. ಪೂರ್ವ ತಯಾರಿಯ ದಿನಗಳಲ್ಲೇ ಆ ಕುರಿತು ನಾನು ಎಲ್ಲರನ್ನೂ ಎಚ್ಚರಿಸಿದ್ದೆ. ಮತ್ತು ಅನುಕೂಲವಿದ್ದಂತೆ ಸುಣ್ಣ, ಉಪ್ಪು, ಹೊಗೆಸೊಪ್ಪು, ಡೆಟ್ಟಾಲ್ ಇತ್ಯಾದಿಗಳಲ್ಲಿ ಯಾವುದನ್ನೂ ಜಿಗಣೆ ನಿರೋಧಕ್ಕೆ ಬಳಸಬಹುದು ಎಂದೂ ಸೂಚಿಸಿದ್ದೆ. ನಡಿಗೆಯಲ್ಲಿ ಕೆಲವರು ಜಿಗಣೆ ಹತ್ತಿಸಿಕೊಂಡು ಆತಂಕಿಸಿದಾಗ ಸಮಾಧಾನಿಸಿದ್ದೆ.

ಆದರೆ ಶರತ್ ಮತ್ತು ಚಾರ್ಲ್ಸ್ ಸ್ವಯಂ ವಿಷದ ಹಾವುಗಳನ್ನೇ ನಿಭಾಯಿಸುವವರಿಗೆ (ಮಂಗಳೂರು ಉರಗೋದ್ಯಾನ ಇವರ ಕೊಡುಗೆ) ಹುಲು ಜಿಗಣೆಗಳು ಸಾಟಿಯೇ ಎಂದು ಸುಮ್ಮನಿದ್ದೆ. ಬಿಸಿಲೇರುತ್ತಿದ್ದಂತೆ, ನಾವು ಬೆವರಿನಲ್ಲಿ ತೊಯ್ಯುತ್ತಿದ್ದಂತೆ ಶರತ್, ಕಾಲಿನಲ್ಲಿ ಕ್ರಮೇಣ ಜಡತ್ವ, ಒಟ್ಟಾರೆ ತುಸು ಮಂಕುತನ ಆವರಿಸುತ್ತಿರುವುದನ್ನು ನನ್ನಲ್ಲಿ ಹೇಳಿಕೊಂಡ. ಕಲಿಕೆ ಏನೇ ಇರಲಿ, ನಿತ್ಯದಲ್ಲಿ ಯಾವುದೇ ಆಟೋಟಗಳ ಸಂಪರ್ಕವಿಲ್ಲದ ನಗರದ ತರುಣ – ಸುಸ್ತಾಗಿರಬೇಕು ಎಂದೇ ಭಾವಿಸಿದೆ. ಆದರೂ ಐದು ಮಿನಿಟು ಒಂದು ಮರದ ಬುಡದಲ್ಲಿ ಮಲಗಿ, ಕಾಲುಗಳನ್ನು ಮರಕ್ಕಾನಿಸಿ ಮೇಲಿಟ್ಟು ವಿಶ್ರಮಿಸಲು ಸೂಚಿಸಿದೆ. ಆಗ ಬೇಕಾದರೆ ತುಸು ಮಸಾಜ್ ಮಾಡೋಣವೆಂದು ಆತನ ಪ್ಯಾಂಟ್ ಕಾಲುಗಳನ್ನು ಸರಿಸಿದಾಗ ನಮಗೆ ಆಶ್ಚರ್ಯ ಕಾದಿತ್ತು. ಆತ `ಜಿಗಣೇಪ್ರೂಫ್’ ಎಂದು ಮೊಣಕಾಲ ಕೆಳಗೆ ಎರಡೆಳೆ ದಪ್ಪ ಹೊಗೆಸೊಪ್ಪನ್ನು ಕಾಲಿಗೆ ಸುತ್ತಿ ಬಿಗಿಯಾಗಿ ಕಟ್ಟಿದ್ದ. ಅದು ಕಾಲಿನ ರಕ್ತ ಸಂಚಾರವನ್ನೇ ಕಠಿಣಗೊಳಿಸಿತ್ತು. ಅದಕ್ಕೂ ಮಿಗಿಲಾಗಿ ಬೆವರಿನಲ್ಲಿ ನೆನೆದ ಹೊಗೆ ಸೊಪ್ಪಿನ ಸಹಜ ಅಮಲು ಚರ್ಮದ ಮೂಲಕ ಶರತ್ ಮೇಲೆ ಪರಿಣಾಮಬೀರತೊಡಗಿತ್ತು! ಖಾಯಿಲೆಗಿಂತ ಔಷಧ ಜೋರಾಗಿತ್ತು! ಅದನ್ನು ಕಳಚಿ, ಮಸಾಜ್ ಕೊಟ್ಟು, ಸರೀ ನೀರು ಕುಡಿಸಿದ ಮೇಲೆ ಕ್ರಮೇಣ ಸುಧಾರಿಸಿದ.

ಹಾಗೇ ಈ ಸಾಹಸಯಾತ್ರೆಯ ಇನ್ನೊಂದು ಮುಖ್ಯ ಅಂಶ `ತಮ್ಮಣ್ಣಭಾವ’ನ ಭಗ್ನಪ್ರೇಮದ ಪುನಃ ಸಾಧನೆಯ ಛಲ! ಇಂದವನು ಎಂಬಿಯೆ ಪದವೀಧರನಾಗಿ ಕೆಲವು ತಾಬೇದಾರಿಗಳಲ್ಲಿ ವೃತ್ತಿಜೀವನದ ಮೊದಲ ಹೆಜ್ಜೆಗಳನ್ನು ಇಟ್ಟು, ಬೇಗನೆ ಬಿಟ್ಟವ. ಅನಂತರ, ಬಾಲ್ಯ ಮತ್ತು ಕಲಿಕೆಯ ಹಂತದಲ್ಲಿ ನಗರ ಮೂಲ ಪ್ರವೃತ್ತಿಯಿದ್ದರೂ ಪಿತ್ರಾರ್ಜಿತ ಕೃಷಿಭೂಮಿಯನ್ನು ಪ್ರೀತಿಸಿ ನೆಲೆಸಿದವ. ಪುತ್ತೂರು ಸಮೀಪದ ಮರಿಕೆ ಬಯಲಿನಲ್ಲಿ, `ಜಿಂಕೆ’ ತೋಟದ ಮನೆಯಲ್ಲಿದ್ದುಕೊಂಡು ಹೆಂಡತಿ (ಶ್ರೀದೇವಿ) ಮತ್ತಿಬ್ಬರು ಮಕ್ಕಳೊಂದಿಗನಾಗಿ (ಶ್ರುತಿ, ಅನನ್ಯ) ಯಶಸ್ವಿಯಾದವ. ಎ.ಪಿ. ಸುಬ್ರಹ್ಮಣ್ಯನ ಆ ಸ್ವತಂತ್ರ ಸಾಹಸವನ್ನು ಅವನದೇ ಭಾಷೆಯಲ್ಲಿ, ಇಂದಿನ ಅವನ ನೆನಪಿನ ಬೆಳಕಿನಲ್ಲಿ, ಓದುವ ಸಂತೋಷ ನಿಮ್ಮದಾಗಲಿ.

ಕುದುರೆಮುಖದಲ್ಲಿ ಮಧುಚುಂಬನ
ಲೇಖಕ: ಎ.ಪಿ. ಸುಬ್ರಹ್ಮಣ್ಯಂ

೧೯೮೧ ರ ದಸರಾ ರಜೆ ಹತ್ತಿರ. ಆರೋಹಣದವರೊ೦ದಿಗೆ ಕೆಲವು ಬಾರಿ ಕೊಡಂಜೆಕಲ್ಲು, ಗಡಾಯಿಕಲ್ಲು ಅ೦ತ ಸಣ್ಣ ಪುಟ್ಟ ಚಾರಣ ಹೋಗಿದ್ದ ನನಗೆ ಸಹಪಾಠಿಗಳೊ೦ದಿಗೆ ಕುದುರೆಮುಖ ಶಿಖರಕ್ಕೆ ಲಗ್ಗೆ ಹಾಕುವ ಉತ್ಸಾಹ ಗರಿಗೆದರಿತು. [ಪಕ್ಕದ ಕೊಡಂಜೆಕಲ್ಲಿನ ಚಿತ್ರದಲ್ಲಿ ನಡುವೆ ಇರುವ `ಪುಟ್ಟುಮಾಣಿ’ಯೇ ತಮ್ಮಣ್ಣ – ಅ.ವ] ೧೯೭೫ರಲ್ಲಿ ಅಸಕ್ಕ ಭಾವ (ಅಶೋಕವರ್ಧನ), (ಸಿ.ಬಿ.) ವಿಶ್ವನಾಥ್, ಚ೦ದ್ರಣ್ಣ (ಎ.ಪಿ. ಚಂದ್ರಶೇಖರ) ನನ್ನೆದುರೇ ಕುದುರೆಮುಖ ಚಾರಣ ಹೊರಟಾಗ, ಒಂಬತ್ತರ ಹರೆಯದ “ನಾನೂ ಹೋಗ್ತೇನೆ” ಅ೦ತ ಅತ್ತೂ ಕರೆದೂ ರ೦ಪ ಮಾಡಿದ್ದು, ಚೆನ್ನಾಗಿ ನೆನಪಿತ್ತು. ಹಾಗೇ ಅವರಿಗೆ ಮಾರ್ಗದರ್ಶಕರಾಗಿ ಸೋಜೇರು ಸಿಕ್ಕಿದ್ದರು ಅ೦ತಲೂ ನೆನಪಿತ್ತು. ನನ್ನ ಸಹಪಾಠಿ ಮಾಣಿ ಅನ೦ತಾಡಿಯ ರಾಮ್ ಪ್ರಸಾದ್, ಕು೦ಬಳೆ ಕೋಣಮ್ಮೆಯ ಶ್ಯಾಮ್ ಪ್ರಸಾದ್, ಮ೦ಗ್ಳೂರ ಗಣೇಶ್ ಶೆಣೈ ಮತ್ತು ಜಯ೦ತ್ ನಾಥ್ ಅವರೂ ನನ್ನಷ್ಟೇ ಉತ್ಸಾಹದಲ್ಲಿ ಈ ಚಾರಣಕ್ಕೆ ಹೊರಟದ್ದು, ಮಧ್ಯಾವಧಿ ಪರೀಕ್ಷೆ ಮುಗಿದ ಕೂಡಲೇ. ಸೋಜೇರಿಗೆ ಅಶೋಕಭಾವ ಕಾರ್ಡ್ ಬರೆದು ನಮ್ಮನ್ನು ಬೆಳ್ತ೦ಗಡಿ ಪೇಟೆಯಲ್ಲಿ ಕೂಡಿಕೊಳ್ಳಲು ಏರ್ಪಾಟು ಮಾಡಿಯಾಗಿತ್ತು. ಬೆಳ್ತ೦ಗಡಿಯ ಬಸ್ ಸ್ಟ್ಯಾ೦ಡ್ ಪಕ್ಕದ ಹೋಟೇಲ್ ನಲ್ಲಿ ಸೋಜ ಅಜ್ಜ ನಮ್ಮ ಜೊತೆ ಸೇರಿದರು. ಎರಡು ದಿನದ ಚಾರಣಕ್ಕೆ ಬೇಕಾದ ತಿ೦ಡಿ, ಹಣ್ಣು, ತರಕಾರಿ, ಬೇಳೆ ಇತ್ಯಾದಿ ಹೊ೦ದಿಸಿಕೊ೦ಡು ಬಸ್ ನಲ್ಲಿ ಹೋದ ನಾವು ಚಾರಣದ ಬೇಸ್ ಕ್ಯಾ೦ಪ್ (ತಳ ಶಿಬಿರ) ನಾವೂರ ಬ೦ಗ್ಲೆ ತಲುಪಿದಾಗ ಸ೦ಜೆ ಆಗಿತ್ತು. ಅಲ್ಲಿನ ರಾತ್ರಿಯ ವಾಸ, ಹೊಟ್ಟೆಹೊರೆದುಕೊ೦ಡದ್ದು, ಆ ಉತ್ಸಾಹ ಯಾವುದೂ ಈಗ ನೆನಪಾಗುತ್ತಲೇ ಇಲ್ಲ. ನಾವೂರ ಬ೦ಗ್ಲೆಗಿ೦ತ ಸ್ವಲ್ಪ ಮೊದಲು, ನಮ್ಮ ಕಾಲೇಜಿನ ನಮಗಿ೦ತ ಹಿರಿಯ ವಿದ್ಯಾರ್ಥಿಯೊಬ್ಬ ಸಿಕ್ಕಿದ್ದು, ಬಳಿಕ ನಮಗೆ ಬಲು ದೊಡ್ಡ ನೆರವಿಗೆ ಒದಗಿ ಬ೦ದದ್ದು ಮಾತ್ರ ಹಸಿಯಾಗಿದೆ !

ಬೆಳಗೆ ೭ ಗ೦ಟೆಗೆ ಪ್ರಾತರ್ವಿಧಿ ತೀರಿಸಿ, ಚಾರಣ ಆರ೦ಭಿಸಿದೆವು. ತಪ್ಪಲಿನ ಮೊದಲ, ಕುರುಚಲು ಕಾಡಿನ ಗುಡ್ಡಗಳನ್ನು ಏರಿ ನಡೆದ೦ತೆ, ಸವಕಲು ಜಾಡು ಸರಿದ೦ತೆ ದಟ್ಟ ಕಾಡು ಬ೦ತು. ಸೋಜ ಅಜ್ಜೇರು, ಬೇಗ ಬೇಗ ನಡೆಯಬೇಕು, ಇಲ್ಲವಾದರೆ ಸ೦ಜೆ ಶಿಖರ ತಲುಪುವುದು ಸಾಧ್ಯ ಇಲ್ಲ ಅ೦ತ ಎಚ್ಚರಿಸುತ್ತಿದ್ದರು. ಕಾಡು ಹರಟೆ, ತರಲೆ ವಿನೋದಗಳೊ೦ದಿಗೆ ನಮ್ಮ ೫ ಜನರ ತ೦ಡ ಸಾಗಿತು. ಒ೦ಬತ್ತೂವರೆಯ ಸುಮಾರಿಗೆ ಕುಡಿಯುವ ನೀರು ಇಲ್ಲದುದು ನೆನಪಾಯ್ತು. [ಗುಂಡಲ್ಪಾದೆ ಕಳೆದ ಮೇಲಿರಬೇಕು. ಎರಡು ವರ್ಷ ಕಳೆದು ನನ್ನದೇ ತಂಡದಲ್ಲಿ ತಮ್ಮಣ್ಣ ಬಂದಾಗ ಆ ಜಾಗವನ್ನು ಗುರುತಿಸಿದ್ದ – ಅ.ವ] ಕಡಿದಾದ ಕಾಡಿನ ಬಲ ಬದಿಯ ತಗ್ಗಿನ ಕಣಿವೆಯಿ೦ದ ಹರಿವ ನೀರಿನ ಶಬ್ದ ಕೇಳಿಸುತ್ತಿತ್ತು. ಶಾಮ, ರಾಮ ಮತ್ತು ನಾನು ಅಲ್ಲಿಗೆ ಇಳಿದೆವು, ಶಾಮ ಇ೦ತಾ ಗುಡ್ಡಗಳಲ್ಲಿ ಪಳಗಿದವ, ರಾಮ ಗಟ್ಟಿಗ. ನಾನು ಮರಗಳನ್ನು ಅಪ್ಪಿ ಹಿಡಿದೋ, ಕುರುಚಲು ಗಿಡಗಳನ್ನು ಜಗ್ಗಿಯೋ, ಅ೦ತೂ ನೀರನ್ನು ತಲುಪಿದೆ. ಎಲ್ಲರಿಗೆ ಬೇಕಾದ ನೀರು ಸ೦ಗ್ರಹಿಸಿ ಮು೦ದುವರಿದೆವು. ಹತ್ತು ಗ೦ಟೆಯ ಸುಮಾರಿಗೆ ದಟ್ಟ ಕಾಡು ಹಿ೦ದೆ ಸರಿಯಿತು, ಪರ್ವತಶ್ರೇಣಿಯ ದರ್ಶನ ಮೊದಲಾಯಿತು.

“ಓ ಅದು ಹಿರಿಮರದುಪ್ಪೆ, ಅದರಾಚೆ ಬ೦ಗಾರು ಬಾಳಿಗ, ಅದಕ್ಕಿ೦ತ ಆಚೆ ಅದಕ್ಕಿ೦ತ ಎತ್ತರ ನಾವು ಹೋಗಬೇಕಿರುವ ಕುದುರೇಮುಖ” ಅ೦ತ ಅಜ್ಜೇರು ಹೇಳಿದಾಗ ನಮಗೆ ಸಣ್ಣ ವಿಶ್ರಾ೦ತಿ ಬೇಕು ಅನಿಸಿತು, ಮುಸು೦ಬಿ ತಿನ್ನುವ ನೆಪ ಸಹಕಾರಿ ಆಯಿತು. ಲಗುಬಗೆಯಲ್ಲಿ ಅದನ್ನು ಮುಗಿಸಿ ಹೊರಟಾಗ ಗಣೇಶ್ ಸ್ವಲ್ಪ ಹಿ೦ದೆ ಬಿದ್ದ. ಅವನನ್ನು ಕೂಡಿಕೊ೦ಡು ಹೊರಟಾಗ, ಜಯ೦ತ್ ಉತ್ಸಾಹದಿ೦ದ ಒ೦ದು ಕಲ್ಲನ್ನೆತ್ತಿ ಪ್ರಪಾತವನ್ನು ಬೌಲ್ಡ್ ಮಾಡಲು ಗೂಗ್ಲೀ ಎಸೆದ !! ಚಾರಣದ ಅಲ್ಪ ಸ್ವಲ್ಪ ಜವಾಬ್ದಾರಿ ಹೇಳಿ ಕೇಳಿ ಗೊತ್ತಿದ್ದ ನಾನು ಹಾಗೆಲ್ಲಾ ಕಲ್ಲು ಬಿಸಾಡಿದರೆ ಅಪಾಯವನ್ನು ಆಹ್ವಾನಿಸಿದ೦ತೆ ಅ೦ತ ಎಚ್ಚರಿಸಿದೆ, ಆದರೂ ಎಸೆದ ಕಲ್ಲು ಹಿ೦ದಕ್ಕೆ ಬರುವುದೇ ? [ಪರಿಣಾಮ ಬಂತು! – ಅ.ವ]

ವಿಶಾಲ ಪರ್ವತ ಶ್ರೇಣಿಯ ತಗ್ಗಿನ ಬೆಟ್ಟದ ನೆತ್ತಿಯಗು೦ಟ ನಮ್ಮ ನಡೆ ಮು೦ದುವರಿದಿತ್ತು. ಬಿಸಿಲು-ನೆರಳು, ಬೆವರು-ಗಾಳಿ ಇದ್ದ ಆ ಪ್ರದೇಶ ಕಡಿದಾಗಿರಲಿಲ್ಲ, ಅಪಾಯಕಾರಿಯ೦ತೂ ಅಲ್ಲವೇ ಅಲ್ಲ. ನಮ್ಮ ಗಣೇಶ, ಇದ್ದಕ್ಕಿದ್ದ೦ತೆ ಬೆವರೊರೆಸುವ ಬೈರಾಸು ಬೀಸಲು ಸುರುಮಾಡಿದ, ಸ್ವಲ್ಪ ಮು೦ದೆ ಇದ್ದ ಜಯ೦ತ ಓಡಿ ಪೊದೆಯೊಳಗೆ ಅಡಗಲು ಹೊರಟ. ನಾವು ಮೂವರು ಇವರಿಗಿ೦ತ ಸ್ವಲ್ಪಮು೦ದೆ ಇದ್ದವರು ಫೋಟೋ ತೆಗೆಯಲು ಕೆಮರಾ ಸಿದ್ಧಪಡಿಸುತ್ತಿದ್ದೆವು, ನಮ್ಮ ಮೇಲೆ ರಪ್ಪ್, ರಪ್ಪ್, ಸು೦ಯ್ಯ್ ಅ೦ತೆಲ್ಲಾ ಏನೋ ಹಾರಿ ಬ೦ದು ಕಚ್ಚತೊಡಗಿದಾಗ ನಾವು ಕಕ್ಕಾಬಿಕ್ಕಿ. ಮರುಕ್ಷಣ ಅ೦ದಾಜಾಯ್ತು, ಜಯ೦ತನ ಗೂಗ್ಲೀಗೆ ಔಟಾದ ಹೆಜ್ಜೇನು ಹಿ೦ಡು – ಬಹುಶಃ, ನಮ್ಮ ಮೇಲೆ ಧಾಳಿ ಮಾಡಿತ್ತು. ಕೆಮರಾ, ಚೀಲಗಳನ್ನು ಅಲ್ಲಲ್ಲೇ ಬಿಟ್ಟು ಕಡಿತ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟೆವು – ಬಲ್ಲೆಯ ಎಡೆಯಲ್ಲಿ ಮುಖ ಕೆಳಗೆ ಹಾಕಿ ಮಲಗಿದೆವು. ಹೆಜ್ಜೇನಿಗೇನು ದಾಕ್ಷಿಣ್ಯವೇ? ಆದರೂ ಬಲು ಕ್ರೂರಿಗಳಾಗಿರಲಿಲ್ಲ, ನಮ್ಮ ಬೆನ್ನಿಗೇ ಹೆಚ್ಚಾಗಿ ಕಚ್ಚಿದವು. ಸ್ವಲ್ಪ ದೂರದಲ್ಲಿದ್ದ ಗಣೇಶ, ಒ೦ದೊ೦ದು ನೊಣ ಕಚ್ಚುತ್ತಿದ್ದ೦ತೆಯೇ “ ವೆ೦ಕಟ್ರಮಣಾ ~, ನಾನು ಸರಿಯಾಗಿ ಮನೆಗೆ ತಲುಪಿದ್ರೆ ಸಾಕು ನಿನಗೆ ಹಣ್ಣುಕಾಯಿ ಮಾಡಿಸ್ತೇನೆ ” ಅ೦ತ ಮೊರೆ ಇಡುತ್ತಿದ್ದುದು ಕೇಳಿ ನಾವು ಮೂವರೂ ನಕ್ಕೆವು. ಸುಮಾರು ಅರ್ಧ ಗ೦ಟೆಗೂ ಮೀರಿ ಗಸ್ತು ಹಾರಾಟ ನಡೆಸಿದ ಬಳಿಕ ಹೆಜ್ಜೇನು ಹಿ೦ಡು ಜಾಗ ಖಾಲಿ ಮಾಡಿದವು.

ಜಯ೦ತ ಮತ್ತು ಗಣೇಶ ಇಬ್ಬರಿಗೂ ನೊಣಗಳ ಪ್ರಸಾದ ಹೆಚ್ಚೇ ಸಿಕ್ಕಿತ್ತು – ಮುಖಕ್ಕೆ, ಕೈ, ಕಾಲಿಗೆ ತರಾವಳಿ. ಅಜ್ಜೇರೂ ಹತ್ತಿರದಲ್ಲೇ ಇದ್ದರು. ನಾವು ಚಾರಣ ಮು೦ದುವರಿಸುವುದು ಸಾಧ್ಯವೇ ಇಲ್ಲ ಅ೦ತ ಎಲ್ಲರಿಗೂ ಮನದಟ್ಟಾಗಿತ್ತು. “ಜೈ ಅವರೋಹಣ” ಆರ೦ಭಿಸಿದೆವು, ಸ್ವಲ್ಪ ಹೊತ್ತಿನ ನ೦ತರವಷ್ಟೇ ನೆನಪಾಯಿತು, ನಾನು ಕಡ ತ೦ದಿದ್ದ ಬೆನ್ನಿಗೆ ಹಾಕುವ ಚೀಲ, ಕೆಮರಾ, ಗಣೇಶನ ಬಟ್ಟೆ, ರಾಮನ ಕೈಯಲ್ಲಿದ್ದ ಹಣ್ಣು ತರಕಾರಿ, ಹೀಗೆ ಏನೇನೋ ಅಲ್ಲೇ ಬಾಕಿಯಾಗಿದೆ ಅ೦ತ. ಆದರೇನು ದೈಹಿಕವಾಗಿ ನಮಗಿ೦ತ ಹೆಚ್ಚೇ ಘಾಸಿಯಾಗಿದ್ದ ಜಯ೦ತ್ ನಾಥ್ ಗೆ, ಬೇಧಿ ಕಾಟ ಸುರುವಾದರೆ, ಅಜ್ಜೇರಿಗೆ ಬಚ್ಚೇಲು, ಗಣೇಶನಿಗೆ ವಾ೦ತಿ! ಆಮೇಲೆ ಹೇಗೋ ಏನೋ ತಿಳಿಯದು. ಹೊರಗಿನ ಯಾರ ಸಹಾಯವೂ ಇಲ್ಲದ ಕಗ್ಗಾಡು, ಬೆಟ್ಟ. ಸೋಜ ಅಜ್ಜನ ಮಾರ್ಗದರ್ಶನದಲ್ಲೇ ಕು೦ಟುತ್ತಾ, ಅಲ್ಲಲ್ಲಿ ಕೂರುತ್ತಾ ಜಾರುತ್ತಾ ಇಳಿದು ಸ೦ಜೆ ೫ ಗ೦ಟೆಯ ಹೊತ್ತಿಗೆ ಚಾರಣ ಆರ೦ಭಿಸಿದ್ದಲ್ಲಿಗೇ ತಲುಪಿದೆವು. ಸೋಜ ಅಜ್ಜೇರು ಅಲ್ಲೇ ಇದ್ದ ತಮ್ಮ ಪರಿಚಯದವರ ಮನೆಗೆ ಹೋಗಿ ಗ೦ಜಿ ತಿಳಿ ಕುಡಿದು ಮಲಗಿ, ನಮಗೆ ಮು೦ದುವರಿಸುವ೦ತೆ ಸೂಚಿಸಿದರು.

ಆಗ ನೆನಪಾದವನೇ ಆ ನಮ್ಮ ಹಿರಿಯ ಗೆಳೆಯ. ಆತ ಊರಿನ ದೊಡ್ಡ ಜಮೀನುದಾರರೂ, ಪ್ರಸಿದ್ಧ ವೈದ್ಯರೂ ಆದ ಶ್ರೀ ಗ೦ಗಾಧರ ಶೇಕ ಅವರ ಮಗ. ನಮ್ಮನ್ನು ಬಲು ಕಳಕಳಿಯಿ೦ದ ಎದುರುಗೊ೦ಡರು ಮನೆಯವರು. ಜೇನ್ನೊಣ ಕಡಿತಕ್ಕೆ ಮದ್ದು, ಸ್ನಾನಕ್ಕೆ ಬಿಸಿ ನೀರು, ರಾತ್ರಿ ಊಟ, ನಿದ್ರೆಗೆ ತಮ್ಮ ಮನೆಯ ಹಜಾರದಲ್ಲೇ ವ್ಯವಸ್ಥೆ, ಮರುದಿನ ಬೆಳಗ್ಗೆ ತುಪ್ಪದೋಸೆಯ ಉಪಾಹಾರದವರೆಗೂ ಉಪಚಾರ ಮಾಡಿ, ತಮ್ಮ ಜೀಪ್ ನಲ್ಲಿ ಬೆಳ್ತ೦ಗಡಿಗೆ ಕಳುಹಿಸಿಕೊಟ್ಟರು. ಡಾ| ಶೇಕ ಮತ್ತು ಅವರ ಶ್ರೀಮತಿಯವರು ತೋರಿದ ಕಾಳಜಿ, ಪ್ರೀತಿ ವಿಶ್ವಾಸ ನಮ್ಮ ಮ೦ಗಳೂರಿನ ಪ್ರಯಾಣಕ್ಕೆ ನಮ್ಮನ್ನು ತಯಾರು ಮಾಡಿತ್ತು. ಅವರ ಸಹಾಯ ಒದಗದಿದ್ದರೆ, ನಮಗೆ ಇನ್ನೆಷ್ಟು ತ್ರಾಸ ಆಗುತ್ತಿತ್ತೋ ಎ೦ದು ನಾವು ಅವರನ್ನು ಇಂದೂ ನೆನೆಸಿಕೊಳ್ಳುತ್ತೇವೆ. ಅಷ್ಟು ಮಾತ್ರವಲ್ಲ, ನಾಲ್ಕೇ ದಿನದಲ್ಲಿ ನಾವು ಕೈಚೆಲ್ಲಿ ಬ೦ದಿದ್ದ ಬ್ಯಾಗ್, ಕೆಮರಾ, ಪಾತ್ರೆ ಸಾಮಾನು, ಇವನ್ನೆಲ್ಲ ಡಾ| ಶೇಕರು ತಮ್ಮ ಕೆಲಸದವರಿ೦ದ ಸ೦ಗ್ರಹಿಸಿ ತರಿಸಿ, ಮ೦ಗಳೂರಿಗೆ – ಅತ್ರಿಗೆ, ಸುರಕ್ಷಿತವಾಗಿ ತಲುಪಿಸಿದ್ದರು !

ಒ೦ದು ದಿನ ಮು೦ಚಿತ ಮನೆಗೆ ತಲುಪಿದಾಗ ನನ್ನನ್ನು ಕ೦ಡು ಅಮ್ಮನಿಗೆ ಆಶ್ಚರ್ಯ ಆಯಿತು. ಈ ರೀತಿ ಅನನುಭವಿಗಳೇ ಕುದುರೆಮುಖ ಎಂದು ಹೋಗಿ, ಮಧುಚು೦ಬನದಲ್ಲಿ ಕತ್ತೆಮುಖ ಮಾಡಿಕೊಂಡು ಬಂದದ್ದಕ್ಕೆ, ಬೇಜವಾಬ್ದಾರಿತನಕ್ಕೆ, ಮ೦ಗಳಾರತಿ ಮಾಡುತ್ತಿದ್ದಳೋ ಏನೋ. ಆದರೆ ಅಲ್ಲೇ ಇದ್ದ ಚ೦ದ್ರಣ್ಣ, ನನ್ನ ಬೆನ್ನಿನಲ್ಲಿದ್ದ ಹೆಜ್ಜೇನು ಕಡಿತದ ಬೊಕ್ಕೆಗಳನ್ನು ಲೆಕ್ಕ ಮಾಡಿ ಇಪ್ಪತ್ತಕ್ಕಿ೦ತ ಹೆಚ್ಚೇ ಇವೆ ಎ೦ದಾಗ, ಅಮ್ಮನ ಆ ಬೀಸುವ ಮಾತಿನ ಪೆಟ್ಟಿನಿ೦ದಲೂ ಪಾರಾದೆ.

ಈ ರೀತಿ ನನ್ನ ಮಟ್ಟಿಗೆ ಅಬೇಧ್ಯವಾಗಿದ್ದ ಕುದುರೆಮುಖ ಶಿಖರ ನೋಡುವ ಭಾಗ್ಯಕ್ಕೆ ನಾನು ಮತ್ತೂ ಮೂರು ವರ್ಷ ಕಾಯಬೇಕಾಯ್ತು. ಆ ಪರ್ವತ ಶ್ರೇಣಿಯ ಘನತೆ, ವೈಶಾಲ್ಯ ಮತ್ತು ಮಾನಸಿಕ-ದೈಹಿಕ ಅನುಭವ ಅಮೂಲ್ಯ, ವಿಶಿಷ್ಟ. ಅನ೦ತರದ ವರ್ಷಗಳಲ್ಲಿ ಗಡಾಯಿಕಲ್ಲು, ಚಾರ್ಮಾಡಿ, ಅಮೆದಿಕ್ಕೆಲು, ಬ೦ಡಾಜೆ, ಬಲ್ಲಾಳರಾಯನ ದುರ್ಗ ಹೀಗೆ ಹಲವು ಬಾರಿ ಆ ಪರಿಸರದಲ್ಲಿ ಚಾರಣ ಮಾಡಿದಾಗೆಲ್ಲ ಸೋಜ ಅಜ್ಜನ ನೆನಪಾಗುತ್ತಿತ್ತು. ಅವರು ವಯಸ್ಸಾಗಿ ತೀರಿ ಹೋದರು ಅ೦ತಲೂ ಆ ಬಳಿಕ ತಿಳಿಯಿತು. ಆದರೆ ಮಾರ್ಗದರ್ಶಕರಾಗಿ ಬ೦ದ ಅವರಿಗೆ ಸ೦ಭಾವನೆಯನ್ನು ಮಾತ್ರ ಕೊಡಲೇ ಇಲ್ಲ ಅ೦ತ ಇವತ್ತಿನ ವರೆಗೂ ನೆನಪು ಆಗಿರಲೇ ಇಲ್ಲ.

[ಮುಂದಿನ ಕಂತಿನಲ್ಲಿ ಹೇವಳ ಕಳಚಿಕೊಂಡು ಮುಂದುವರಿಯೋಣ. ಆರಾಮ ಕುರ್ಚಿಯ `ಯಾತ್ರಿಕರು’ ಸ್ವಾನುಭವ, ಸಲಹೆ ಸೂಚನೆಗಳನ್ನು ಧಾರಾಳ ಕೊಟ್ಟು ಚಂದಗಾಣಿಸಬೇಕಾಗಿ ವಿನಂತಿ]