“ಕೇಳ್ರಪ್ಪೋ ಕೇಳಿ! ಒಂಟಿ ದೋಣಿ, ಕತ್ತಿ ದೋಣಿ, ಜೋಡು ದೋಣಿ, ಸ್ಟೀಮರ್ ಲಾಂಚ್, ಜೆಟ್ ಬೋಟ್, ಉಗಿ ಹಡಗು, ಹಾರುವ ದೋಣಿ ತಯಾರಿಯಲ್ಲಿ ನಾನು ಪರಿಣತನಿದ್ದೇನೆ, (ಕುರುಕ್ಷೇತ್ರದ ಧರ್ಮರಾಯನ ಇಳಿಧ್ವನಿಯಲ್ಲಿ) ಕಾಗದ ಮಡಚುವುದರಲ್ಲಿ!” ಆದರೆ ಇಲ್ಲಿ ಪರಿಸ್ಥಿತಿ ಮಕ್ಕಳಾಟದ್ದಲ್ಲ, ವಾಸ್ತವದೊಡನೆ ಮುಖಾಮುಖಿಯದು.
ನಮ್ಮದೇ ದೋಣಿ ಬರುತ್ತಾ ಇದೆ. ಕೊಚಿನ್ನಿನ `ಸಮುದ್ರ ಶಿಪ್ಪಿಂಗ್ ಯಾರ್ಡ್ ಪ್ರೈ. ಲಿ’., ಸಂಸ್ಥೆಯ ಸೋದರರಿಗೆ ಬಹುವಿಧದ ದೋಣಿ ತಯಾರಿಯಲ್ಲಿ ಮೈಪೂರಾ ಕೆಲಸ. ಭಾರತವೇನು ಹಲವು ವಿದೇಶೀ ಸಂಸ್ಥೆಗಳೂ ಇವರ ಖಾಯಂ ಗಿರಾಕಿಗಳು. ಆದರೂ ಮಙ್ಗಳಾಪುರದಿಂದ ಶುದ್ಧ ವೈಯಕ್ತಿಕ ದೋಣಿಚಾಲನೆಯ ಸಂತೋಷಕ್ಕೆ ತಮ್ಮ ಕಯಾಕ್ ಕೊಳ್ಳಲು ಬಂದರಲ್ಲಾಂತ ಭಾರೀ ಕುಶಿ. ನಮ್ಮ ಉತ್ಸಾಹ ಕಂಡು, ಪ್ರತ್ಯೇಕ ಹವಾನಿಯಂತ್ರಿತ ಕೋಣೆಯಲ್ಲಿದ್ದ ಎಂ.ಡಿ., (ಹಿರಿಯಣ್ಣ-ಸುಧಾಕರನ್) ತಯಾರಿ ಘಟಕ ವರಿಷ್ಠ (ಎರಡನೇ ಸೋದರ) ಹಾಗೂ ಮಾರಾಟ ವಿಭಾಗದ ಮುಖ್ಯಸ್ಥರೆಲ್ಲ (ಮೂರನೆಯವ – ಮುರಳೀಧರನ್) ಕೈಯಲ್ಲಿದ್ದ ಕೆಲಸ ಬಿಟ್ಟು ಬಂದು, ಮಾತಾಡಿಸಿದರು. ಕೊನೆಯಲ್ಲಿ ಕೆಲವು ರಿಯಾಯಿತಿಗಳನ್ನೂ ಕೊಟ್ಟು, ಒಂದೇ ವಾರದಲ್ಲಿ ನಮ್ಮ ಅಗತ್ಯ ಪೂರೈಸುವುದಾಗಿ ಭರವಸೆ ಕೊಟ್ಟರು. ಕುಶಿಯಲ್ಲೇ ಮುಂಗಡ ಕೊಟ್ಟು ಮರಳಿದ್ದೇನೋ ಸರಿ. ಈಗ ವಾರ – ಹತ್ತು ದಿನಗಳಲ್ಲಿ ಲಾರಿಯೇರಿ ಬರುವ ದೋಣಿಯನ್ನು ಮನೆ ತುಂಬಿಕೊಳ್ಳುವುದು ಹೇಗೆ ಎಂಬಲ್ಲಿಂದಲೇ ಕೆಲಸಗಳು ಶುರುವಾದವು. ದೋಣಿ ಹೊರಲು ನನ್ನ ವ್ಯಾಗನರ್ ಕಾರಿಗೆ ತಲೆಗೊಂದು ಬಲವಾದ ಕಿರೀಟ ತೊಡಿಸಿದೆ. ಬಿಗಿದು ಕಟ್ಟಲು ಹಳತಾದ ನನ್ನ ಪರ್ವತಾರೋಹಣದ ನೂರಡಿ ಹಗ್ಗವನ್ನೇ ಸಜ್ಜುಗೊಳಿಸಿಟ್ಟುಕೊಂಡೆ. ಮನೆಯಲ್ಲಿ ಕಾರು ಶೆಡ್ಡಿನ ತಾರಸಿಯಿಂದ ಎರಡು ಹಗ್ಗದ ಬಳೆ ಇಳಿಸಿ, ಬಳಕೆಯಿಲ್ಲದಾಗ ದೋಣಿ ವಿರಮಿಸಲು ವ್ಯವಸ್ಥೆ ಮಾಡಿದೆ; ಕನಸಿನ ಕೂಸಿಗೆ ತೊಟ್ಟಿಲು ಕಟ್ಟಿದ್ದೆ! ಇನ್ನು ಸವಾರಿ ಎಲ್ಲಿಂದ ಶುರು? ತರಬೇತಿ? ರಕ್ಷಣೆ??
ಸುಲ್ತಾನ್ ಬತೇರಿಯ ಬೋಟ್ ಕ್ಲಬ್ಬಿನ ಯಜಮಾನರು ಹಿರಿಯ ಪಿಂಟೋ ತಮ್ಮ ವಠಾರದಲ್ಲಿ ಕಾರು ನಿಲ್ಲಿಸಿ, ಗುರುಪುರ ನದಿ ವಿಹಾರಕ್ಕೆ ಹೋಗಲು ಉಚಿತ ಅನುಮತಿಯೇನೋ ಕೊಟ್ಟರು. ಆದರೆ ನದಿಯ ಸೆಳೆತ, ಸುಳಿ, ನಮ್ಮ ಚಾಲನೆಯ ಸರಿ ತಪ್ಪುಗಳನ್ನು ತಿಳಿಸುವವರು ಯಾರು? ಆಗ ಮಹಾಮೈಸೂರಿನ ಗೆಳೆಯ ಯಶವಂತ ಕಂಗನ್ ಹೇಳಿದ `ಸರ್ಫಿಂಗ್ ಗುರು’ ನೆನಪಿಗೆ ಬಂದರು.
ಭಾರತದ ಏಕೈಕ ಸರ್ಫಿಂಗ್ ಕ್ಲಬ್ ಎಂದೇ ಖ್ಯಾತವಾದ ಮಂತ್ರ ಸರ್ಫ್ ಕ್ಲಬ್, ಮೂಲ್ಕಿ ಬಳಿಯ ಕೊಳಚೆಕಂಬಳ ವಲಯದಲ್ಲಿ, ಶಾಂಭವೀ ನದಿ ತಟದಲ್ಲಿದೆ. ಅಲ್ಲಿನ ಶ್ರೀ ಕಾಳೀಯಮರ್ದನ ಕೃಷ್ಣಾಶ್ರಮದ ವರಿಷ್ಠ – ಅಮೆರಿಕ ಮೂಲದ ಸನ್ಯಾಸಿ, ಪೂರ್ವಾಶ್ರಮದಲ್ಲೇ ಅಲೆಯೊಲೆತಗಳ ಸವಾರಿಯಲ್ಲಿ (ಸರ್ಫಿಂಗ್) ಸಿದ್ಧಿಯನ್ನು ಪಡೆದಿದ್ದರು. ಅದನ್ನವರು ಇಲ್ಲಿ ಆಶ್ರಮದ ಆಶ್ರಯದಲ್ಲೇ `ಮಂತ್ರ ಸರ್ಫ್ ಕ್ಲಬ್’ ಕಟ್ಟಿ, ಸಲಕರಣೆಗಳನ್ನು ಸಂಗ್ರಹಿಸಿ ಅಧ್ಯಾತ್ಮಕ್ಕೆ ಸಮನ್ವಯಿಸಿದ್ದಾರೆ. ಅವರ ಪೂರ್ವ (ಜ್ಯಾಕ್ ಹೆಂಡರ್ಸನ್) ಹಾಗೂ ಸನ್ಯಾಸ ಆಶ್ರಮದ (ಶ್ರೀ ನರಸಿಂಗ ಮಹಾರಾಜ್) ಹೆಸರುಗಳು `ಸರ್ಫಿಂಗ್ ಗುರು’ ಖ್ಯಾತಿಯಿಂದ ಮರವೆಗೆ ಸಂದು ಹೋಗಿವೆ! ನಾವಿಬ್ಬರು ಮೊದಲ ಅವಕಾಶದಲ್ಲೇ ಮೂಲ್ಕಿಗೆ ಬೈಕೇರಿ ಧಾವಿಸಿದೆವು.
ಗುರುಗಳು ಇರಲಿಲ್ಲ. ಆದರೆ ಸ್ಥಳೀಯ ಕಾರ್ಯವರಿಷ್ಠ – ನಟರಾಜ್ ಗೌರ, ನಮ್ಮನ್ನು ಹಾರ್ದಿಕವಾಗಿಯೇ ಸ್ವಾಗತಿಸಿದರು. ಮತ್ತು ಅಷ್ಟೇ ಉದಾರವಾಗಿ ನಮ್ಮ ಪ್ರಾಥಮಿಕ ಕಸರತ್ತುಗಳನ್ನು ಅವರ ವಠಾರದ ಮೂಲಕ ಶಾಂಭವಿ ನದಿಯಲ್ಲಿ ನಡೆಸಲು ಅನುಮತಿಸಿದರು.
ಅಕ್ಟೋಬರ್ ಹತ್ತು (೨೦೧೪) ಕಯಾಕ್ ಲಾರಿಯಲ್ಲಿ ಬಂತು. ನಾವಿಬ್ಬರೇ ಅದನ್ನು ಸಣ್ಣ ಅಳುಕಿನೊಡನೆ ಕಾರಿಗೇರಿಸಿ ಮನೆಗೆ ತಂದೆವು. ಇಂದು ಯಾವುದೇ ನಗರದಲ್ಲಿ ಯಃಕಶ್ಚಿತ್ ಆಟೋರಾಕ್ಷಸಗಳು ತಮ್ಮುದ್ದದ ನಾಲ್ಕಡಿ ಮುಂದಕ್ಕೂ ಐದಡಿ ಹಿಂದಕ್ಕೂ ಭಾರೀ ಕಬ್ಬಿಣದ ಸರಳುಗಳನ್ನು ಹೊತ್ತು, ದಾರಿ ಗೀರುತ್ತಾ ಸಾಗುವುದು ವಿಶೇಷವೆನ್ನಿಸದು. ಆದರೆ ವ್ಯಾಗನರಿನ ತಲೆಯೇರಿ ಕುಳಿತ ಕಯಾಕ್ ಆಕರ್ಷಣೆ, ಇನ್ನೂ ಮುಖ್ಯವಾಗಿ ಆಕ್ಷೇಪಣೆ ತಂದರೆ ಎಂಬ ಆತಂಕ ನಮ್ಮದು. ಹಾಗೇನು ಆಗಲಿಲ್ಲ. ಅದು ಕಾರಿನ ಹಿಂದೆ ತುಸು ಚಾಚಿಕೊಂಡರೂ (ಒಟ್ಟು ಉದ್ದ ೧೪.೫ ಅಡಿ, ಅಗಲ ೨.೭೫ ಅಡಿ ಹಾಗೂ ತೂಕ ಸುಮಾರು ೩೯ ಕೆಜಿ) ಅಗಲ ಮತ್ತು ತೂಕಗಳಲ್ಲಿ ಯಾವ ಸಮಸ್ಯೆಯೂ ಇಲ್ಲದೆ, ಅಡಕವಾಗಿ ಕುಳಿತಿತ್ತು. ವಾಹನ ಸಮ್ಮರ್ದದಲ್ಲೂ ಗಲ್ಲಿ ದಾರಿಯಲ್ಲೂ ಕಾರು ಚಾಲನೆಗೆ ಸಮಸ್ಯೆಯೂ ಆಗಲಿಲ್ಲ. ಇದು ಇಷ್ಟು ಸುಲಭ ಎಂದು ಮೊದಲೇ ತಿಳಿದಿದ್ದರೆ, ಲಾರಿ ಸಾಗಣೆಗೆ ಕೊಟ್ಟ ರೂ ೨೮೦೦ರಿಂದ ಸ್ವಂತ ಕಾರಿನಲ್ಲಿ ಸಣ್ಣ ಕೇರಳ ಪ್ರವಾಸವನ್ನೇ ನಡೆಸಿ, ಮರಳುವ ದಾರಿಯಲ್ಲಿ ಕಯಾಕ್ ತರಬಹುದಿತ್ತು ಎಂದು ಪಶ್ಚಾತ್ತಾಪಪಟ್ಟೆವು!
ಮನೆಯಂಗಳಕ್ಕೆ ಕಾರೇರುತ್ತಿದ್ದಂತೆ ಅಕ್ಕಪಕ್ಕದ ಮನೆಯ ಬಾಲರ ಕಣ್ಣು ಮಾತ್ರ ಇದನ್ನು ತಪ್ಪಿಸಿಕೊಳ್ಳಲಿಲ್ಲ. ನಮ್ಮ ಜಂಟಿ, ಒಂಟಿ ಸೈಕಲ್ ಕಲಾಪ ತೊಡಗಿದಂದಿನಿಂದ, ಸದಾ ನಮ್ಮನ್ನು ಆಸೆಗಂಗಳಲ್ಲಿ ನೋಡುವ ಇವರು ಕಾರು ನಿಲ್ಲಿಸುವ ಮೊದಲೇ ಹಾಜರ್! “ಅಂಕಲ್, ಅಂಕಲ್” ಎಂದು ಹಿಂದೆ ಮುಂದೆ ಹಾರಾಡಿ, ಪ್ಯಾಕಿಂಗ್ ಬಿಚ್ಚುವ ನನ್ನ ಚೂರಿಗಿಂತಲೂ ಚುರುಕಾಗಿ ಅವರ ಬರಿಯ ಕೈಗಳೇ ಎಲ್ಲ ಕಳಚಿ ಕೊಟ್ಟವು. ದೋಣಿಯೊಟ್ಟಿಗೆ ಬಂದ ತೇಲಂಗಿ (ಲೈಫ್ ಜಾಕೆಟ್ – ತಲಾ ರೂ ೧೭೫೦ರ ಬೆಲೆಯವು) ಹಾಕಿ, ಕಾಂಕ್ರೀಟ್ ಅಂಗಳದಲ್ಲಿ ಸಂಭ್ರಮದ ಸವಾರಿಯ ಅಣಕವನ್ನೂ ನಡೆಸಿಬಿಟ್ಟರು. ವಾಸ್ತವದಲ್ಲಿ ನಮ್ಮ ಗುರುವಿಲ್ಲದ ಶೋಧವೂ ಹಾಗೇ ಆಗಬಹುದೇ? ಅಪಾಯಕಾರಿಯೂ ಆಗಬಹುದಾದ ಪ್ರಯೋಗವಾದ್ದರಿಂದ ಆ ಮಕ್ಕಳ ನಿಜದ ಸವಾರಿಯ ಬೇಡಿಕೆಗಳನ್ನು ಮಾತ್ರ ಸಖೇದ ನಿರುತ್ತೇಜನಗೊಳಿಸಬೇಕಾಯ್ತು.
ಕಯಾಕ್ ಬೆಳಗ್ಗೆ ಬಂದರೆ ಸಂಜೆಗೇ ಸವಾರಿ ಎನ್ನುವಷ್ಟು ಕಾತರದಲ್ಲಿ ನಮ್ಮ ತಯಾರಿಗಳೇನೋ ಮುಗಿಸಿದ್ದೆವು. ಆದರೆ ಕೊಚಿನ್ನಿನಲ್ಲಿ ಕಯಾಕ್ ನಿರ್ಮಾಣ ಮತ್ತು ಮಂಗಳೂರಿಗೆ ಸಾಗಣೆ, ನವರಾತ್ರಿ ರಜಾದಿನಗಳ ಸುಳಿಯಲ್ಲಿ ಬಿತ್ತು. ಹತ್ತು ದಿನ ಬಿಟ್ಟು ಇಪ್ಪತ್ತು ದಿನಕ್ಕೆ ಲಂಬಿಸಿ, ಶುಕ್ರವಾರ ಸಂಜೆ ಬಂತು. ಅದೇ ಶನಿವಾರ, ಆದಿತ್ಯವಾರ ನನಗೆ ಕುದುರೆಮುಖ ಚಾರಣಕ್ಕೆ ಮುಹೂರ್ತ ನಿಗದಿಯಾಗಿತ್ತು. (ಅದರ ಕತೆ ಮುಂದೆಂದಾದರೂ ಹೇಳುತ್ತೇನೆ, ಬಿಡಿ) ಮತ್ತೆ ಎರಡು ದಿನ ಚಾರಣದ ದೇಹಾಲಸ್ಯ. ಕೊನೆಗೂ ಬುಧವಾರ ಬೆಳಗ್ಗೆ ಏಳೂವರೆಗೆ ನಮ್ಮ ರಥೋತ್ಸವ ಮೂಲ್ಕಿಯೆಡೆಗೆ ಹೊರಟಿತು.
ದೋಣಿಯ ತಳ ಏಕರೂಪದ ಓರೆಯಾಗಿತ್ತು. ಅದು ಜಾರದಂತೆ ಮತ್ತು ಘಾಸಿಗೊಳ್ಳದಂತೆ ಕಾರು-ಕಿರೀಟದ ಸರಳುಗಳ ಮೇಲೆ ಫೋಮ್ ಹಾಸಿಟ್ಟು ದೋಣಿಯನ್ನು ಬಿಗಿದು ಕಟ್ಟಿದ್ದೆವು. ಆದರೆ ಯೋಜನೆಯಿಲ್ಲದೇ ಕಟ್ಟಿದ್ದು ಹಿಂದುಮುಂದಾಗಿತ್ತು. ಸಹಜವಾಗಿ ದೋಣಿಯ ಹೆಚ್ಚಿನ ಭಾರದ ಹಿಂಭಾಗ ಮಾರ್ಗದ ಹೊಂಡ ಚಡಿಗಳನ್ನು ಹಾಯುವಾಗ ನನ್ನ ಕಣ್ಣಿಗೆ ಕಾಣುವಂತೆ ತೊನೆದು ತುಸು ಆತಂಕ ಹುಟ್ಟಿಸುತ್ತಿತ್ತು. ಅನಿವಾರ್ಯವಾಗಿ ನಿಧಾನದಲ್ಲೇ ಪಯಣಿಸಿದೆವು. ಮೂಲ್ಕಿ ರೈಲ್ವೇ ನಿಲ್ದಾಣ, ಕಾರ್ನಾಡು-ಜೋಡು ಮಾರ್ಗ ಕಳೆದ ಮೇಲೆ ಮೊದಲು ಸಿಗುವ ಎಡ ಮಾರ್ಗ ಕೊಳಚೆ ಕಂಬಳ ವಲಯದ್ದು. ಈ ದಾರಿಯ ಇನ್ನೊಂದು ಮುಖ ಒಂದು ಕಿಮೀ ಆಚಿನ ಮೂಲ್ಕಿ ಬಸ್ ನಿಲ್ದಾಣದ ಹಿಂದೆಯೂ ಇದೆ (ಉಡುಪಿಯವರಿಗೆ ಅದು ಅನುಕೂಲ). ಉತ್ತಮ ಡಾಮರು ಕಂಡ, ಆದರೆ ತೀರ ಸಪುರ ಹಾಗೂ ಅಂಕುಡೊಂಕಿನ ದಾರಿ. ಮೊದಲಲ್ಲಿ ನಂದಿನಿ ನದಿಯ ಹಿನ್ನೀರ ಜಾಲ ಹಾಗೂ ಸಣ್ಣಪುಟ್ಟ ಗದ್ದೆಗಳ ಅಂಚಿನಲ್ಲಿ ವಿರಾಮದಲ್ಲಿ ಹರಿದಿದೆ. ನಾವು ಹೋಗುವಾಗ ಸಮುದ್ರ ಭರತದಲ್ಲಿದ್ದುದರಿಂದ ಎಲ್ಲ ಜಲ-ಗಲ್ಲಿಗಳೂ (ಸುಂದರಬನ್ಸಿನಲ್ಲಿ ಇವನ್ನು `ಖಾಲಿ’ ಎನ್ನುತ್ತಾರೆ) ಮೈದುಂಬಿಕೊಂಡಿದ್ದುವು. ಅಲ್ಲೇ ಒಂದೆಡೆ ತುಸು ಉದ್ದ ಸೇತುವೆಯ ಮೇಲೊಬ್ಬ ಬೆಸ್ತ ಮಗುವಿನ ತಲೆಯಷ್ಟು ದೊಡ್ಡ ಏಡಿಯೊಂದನ್ನು ಹೇಗೋ ಮಾರ್ಗಮಧ್ಯಕ್ಕೆ ಎಳೆದು ಹಾಕಿ ಉರುಡಾಟ ನಡೆಸಿದ್ದ. ಅಂತಿಮ ಹೋರಾಟಕ್ಕಿಳಿದ ಏಡಿ ತನ್ನ ಮಾರಕ ಮಹಾಕರಗಳನ್ನು ಭಯ ಹುಟ್ಟಿಸುವಂತೆ ಪ್ರದರ್ಶಿಸುತ್ತ, ಒಮ್ಮೆ ಅತ್ತ ಒಮ್ಮೆ ಇತ್ತ ಸರಿದು, ನೀರಿನತ್ತ ಓಡುವ ದಾರಿ ಹುಡುಕುತ್ತಿತ್ತು. ಪಳಗಿದ ಬೆಸ್ತನಾದರೋ ಅದರ ಹುನ್ನಾರಗಳನ್ನು ಪೂರ್ಣ ಅರಿತವನಾಗಿ ದಪ್ಪ ಕೋಲೊಂದರಲ್ಲಿ ಅದರ ಬೆನ್ನನ್ನು ಬಲವಾಗಿ ನೆಲಕ್ಕೆ ಒತ್ತಿ ಹಿಡಿದು, ಹಿಂಬದಿಯಿಂದ ಏಡಿಯನ್ನು ನಿರಸ್ತ್ರಗೊಳಿಸಲು (ಮಾರಕ ಕೈಗಳನ್ನೇ ತಿರುಟಿ ಮುರಿದುಬಿಡುತ್ತಾರೆ) ಸಜ್ಜಾಗಿದ್ದ. ಊಟ ಮತ್ತು ಆತ್ಮರಕ್ಷಣೆಗಳ ನಡುವೆ ತೀರ್ಪು ಕೊಡಲಾಗದ ನಾವು ಎಡೆಯಲ್ಲಿ ದಾರಿ ಮಾಡಿಕೊಂಡು ಆಶ್ರಮ ಸೇರಿದೆವು.
ಮೂಲ್ಕಿಯ ಕಡಲ ಕಿನಾರೆಯಲ್ಲೊಂದು ಯಕ್ಷವೇದಿಕೆ ಕಲ್ಪಿಸಿಕೊಳ್ಳಿ. ಅಲ್ಲಿ ಕಡಲರಾಜನಿಗೆ ಮುಖವಾಗಿ ಶಾಂಭವಿ, ನಂದಿನಿ – ಎಂಬೆರಡು ನೀಳವೇಣಿಯರು, ನೂರಾರು ವರ್ಷಗಳಿಂದ ಏಕರೂಪದ ರಮಣೀಯ ನಡೆ ಕಾಣಿಸುತ್ತಾರೆ. ಕಾರ್ಕಳದ ಆಸುಪಾಸಿನಿಂದ ತೊಡಗಿ ಬೋಳ ಪಲಿಮಾರುಗಳಿಗಾಗಿ ಪಶ್ಚಿಮಮುಖಿಯಾದ ಶಾಂಭವಿ ಬಲು ವೈಯಾರದಲ್ಲಿ ಹೆಜಮಾಡಿ, ನಡಿಕುದುರುಗಳನ್ನು ಪೂರ್ಣ ಬಳಸುತ್ತ, ದಕ್ಷಿಣಕ್ಕೆ ತಿರುಗಿ ಹರಿಯುತ್ತ ರಂಗದ ಎದುರು ಬಂದಿದ್ದಾಳೆ. ಇತ್ತ ಮಿಜಾರಿನ ಆಸುಪಾಸಿನಿಂದ ತೊಡಗಿ ಕಟೀಲು ಚೇಳಾಯರಾಗಿ ಪಶ್ಚಿಮಮುಖಿಯಾದ ನಂದಿನಿ ಅಷ್ಟೇ ಮುದದಿಂದ ಪಾವಂಜೆ, ಕೊಳುವೈಲುಗಳನ್ನು ತನ್ನಪ್ಪುಗೆಯೊಳಗೆ ಸೇರಿಸುತ್ತ ಉತ್ತರಕ್ಕೆ ಹರಿದು ರಂಗದೆದುರಿನಲ್ಲಿ ಶಾಂಭವಿಗೆ ಜತೆಗೊಡುತ್ತಾಳೆ. ಇಬ್ಬರೂ ಒಂದಾಗಿ ಕಡಲರಸನಲ್ಲಿ ಸೇರಿಹೋಗುತ್ತಾರೆ (ಮಂಗಳೂರಿನಲ್ಲಿ ನೇತ್ರಾವತಿ ಮತ್ತು ಗುರುಪುರ ಎಂದೇ ಖ್ಯಾತವಾದ ಫಲ್ಗುಣಿ ನದಿಗಳಂತೆ). ಈ ಅದ್ಭುತರಂಗದ ಉತ್ತರ ಹಿಮ್ಮೂಲೆಯಲ್ಲಿ (ನಿಷ್ಕ್ರಮಣ ದ್ವಾರದಲ್ಲಿ) ಸರ್ಫಿಂಗ್ ಆಶ್ರಮದ ದೋಣಿಗಟ್ಟೆ ಇತ್ತು. ಪ್ರಾಕೃತಿಕ ಕಲಾಶಾಲೆಯ ನಮ್ಮ ಕೋಡಂಗಿ ಕುಣಿತವೇನಿದ್ದರೂ ಅಲ್ಲಿ ಆರಂಭವಾಗುವುದಿತ್ತು.
ಮಂತ್ರ ಸರ್ಫಿಂಗ್ ಕ್ಲಬ್ಬಿನ ಬಹುತೇಕ ಮಂದಿಯಾಗಲೇ ವಿವಿಧ ಕ್ರೀಡಾ ಸಾಮಗ್ರಿಗಳನ್ನು ಹಿಡಿದುಕೊಂಡು ಸಮುದ್ರಕ್ಕೆ ಹೋಗಿಯಾಗಿತ್ತು. ನಾವು ಮುಂದಾಗಿ ಬರುವ ಸೂಚನೆಯನ್ನು ಕೊಟ್ಟದ್ದಕ್ಕೆ ನಟರಾಜ್ ದಾರಿ ಕಾದಿದ್ದರು. ಸರ್ಫ್ ಕ್ಲಬ್ಬಿನ ದೋಣಿಗಳಿಗೆ ಹಿಂದಿನ ಕೊನೆಯಲ್ಲಿ ಒಂಟಿ ದಪ್ಪ ಚಕ್ರ ಇತ್ತು. ದೊಡ್ಡ ಸೂಟ್ ಕೇಸುಗಳನ್ನು ಸಾಗಿಸಿದಂತೇ ನೆಲದ ಮೇಲೆ ದೋಣಿಯ ಮೂಗನ್ನಷ್ಟೇ ಎತ್ತಿ ಹಿಡಿದು ಎಳೆದೊಯ್ಯಬಹುದಿತ್ತು. ಮತ್ತು ಹಾಗೆ ಮಾಡಲು ಅನುಕೂಲವಾಗುವಂತೆ ಹಿಡಿಕೆಯೂ ಇತ್ತು. ಆದರೆ ನಮ್ಮದಕ್ಕೆ ಅವೇನೂ ಇರಲಿಲ್ಲ. ನಟರಾಜ್ ಸ್ವತಃ ಕೈಸೇರಿಸಿ ನಮ್ಮ ದೋಣಿಯನ್ನು ಕಾರಿನಿಂದಿಳಿಸಿ, ಆಶ್ರಮದ ಹಿತ್ತಿಲಿನ ದೋಣಿಗಟ್ಟೆಗೆ ಸಾಗಿಸುವಲ್ಲಿ ಸಹಕರಿಸಿದರು. ಇಲ್ಲವಾದರೆ, ಎರಡು ಸಣ್ಣ ಗೇಟುಗಳನ್ನು ದಾಟುವುದರೊಡನೆ ಆಶ್ರಮದ ಕಟ್ಟಡವನ್ನು ಬಳಸಿ ಸುಮಾರು ನೂರಡಿ ದೋಣಿ ಹೊರುವುದು ನಮಗಿಬ್ಬರಿಗೆ ಬಲು ಪ್ರಯಾಸಕರವೇ ಆಗುತ್ತಿತ್ತು.
ನದಿಮುಖಜಭೂಮಿಯಾದ್ದರಿಂದ ಸಮುದ್ರದ ಭರತ ಇಳಿತಗಳು ಇಲ್ಲೂ ಉಬ್ಬರ, ಸೊರಗನ್ನು ಕಾಣಿಸುತ್ತಿರುತ್ತದೆ. ಅಂಥ ಉಬ್ಬರಗಳಲ್ಲಿ ಮತ್ತು ಮಳೆಗಾಲದಲ್ಲೂ ನದಿಯ ಪ್ರಾಕೃತಿಕ ದಂಡೆ ಕುಸಿಯದಂತೆ ಆಶ್ರಮದವರು ಕಲ್ಲು ಕಟ್ಟಿ ಇತ್ತ ಮೆಟ್ಟಿಲು ಅತ್ತ ಹರಡಿಕೊಂಡ ಸೋಪಾನ ಹಾಗೂ ಮರಳ ಮೂಟೆಗಳ ವಿಸ್ತರಣೆಯ ವ್ಯವಸ್ಥೆ ಮಾಡಿದ್ದರು. ಎದುರು ತುಸು ಬಲಕ್ಕೆ ಕಾಣುವ ನೆಲ ನಡಿಕುದುರು – ನದಿಯ ದ್ವೀಪ. ಅದಕ್ಕೂ ಆಚೆ ಕಾಣುವ ದಂಡೆಯಲ್ಲಿ ಹಸುರಿದ್ದರೂ ಎಡಕ್ಕೆ ಅಳಿವೆಯತ್ತ ಸರಿಯುತ್ತ ಸ್ಪಷ್ಟ ಬಿಳಿಯ ಮರಳ ಹರಹಷ್ಟೇ ಆಗಿದೆ. ಸರ್ಫ್ ಕ್ಲಬ್ಬಿನ ಸದಸ್ಯರು ಅಲ್ಲೇ ಸಮುದ್ರದ ಭಾಗದಲ್ಲಿ ಕ್ರೀಡಾ ಅಭ್ಯಾಸ ನಡೆಸಿದ್ದಿರಬೇಕು. ನಮ್ಮ ದೋಣಿಗಟ್ಟೆ ಮುಖ್ಯ ಪಾತ್ರೆಯ ಪೂರ್ವದಂಡೆ ಮತ್ತು ಆ ವಲಯದಲ್ಲಿ ಹೆಚ್ಚು ಆಳವಿರುವ ಮಗ್ಗುಲಿನಲ್ಲೇ ಇತ್ತು. ಪಶ್ಚಿಮ ದಂಡೆಯತ್ತ ಸರಿದಂತೆ ಹೊಳೆಪಾತಳಿಯೇ ಮೇಲೆ ಬಂದಂತೆ ಮರಳಿನ ಹಾಸು ಹೆಚ್ಚುತ್ತಿತ್ತು, ಇದು ಇಳಿತಗಳ ಕಾಲದಲ್ಲಿ ಸಾಂಪ್ರದಾಯಿಕ ದೋಣಿ ಚಾಲನೆಯನ್ನೂ ಕಾಡುತ್ತಿತ್ತು.
ಯಾವ ಔಪಚಾರಿಕತೆಗಳೂ ಇಲ್ಲದೆ ನಮ್ಮ ದೋಣಿಯನ್ನು ನೇರ ನೀರಿಗಿಳಿಸಿದೆವು. ಉತ್ತರದಿಂದ ಬರುವ ಹೊಳೆಯ ಹರಿವಿಗೆ ಎದುರಾಗಿ ನಂದಿನಿ ಹೊಳೆ ಹಾಗೂ ಕಡಲು ಒತ್ತುವುದರಿಂದ ನೀರಿನಲ್ಲಿ ಒಂದು ವಿಧವಾದ ಸಮಸ್ಥಿತಿ ಇತ್ತು. ಆದರೂ ನಟರಾಜ್ ಅಳಿವೆಯತ್ತ ಸಾಗದಿರುವಂತೆ ಎಚ್ಚರಿಸಿದರು. ಮತ್ತೆ ನದಿಯಲ್ಲಿ ಆಳ ಹೆಚ್ಚಿರುವ ಪೂರ್ವ ಮೈಯಲ್ಲೇ ಪ್ರವಾಹದ ಮೇಲ್ಮುಖವಾಗಿಯೇ ಅಭ್ಯಾಸ ನಡೆಸಲು ಸೂಚಿಸಿದರು. ನಾವಿಬ್ಬರೂ ತೇಲಂಗಿ ಬಿಗಿಯಾಗಿ ತೊಟ್ಟುಕೊಂಡಿದ್ದೆವು. ಇಲ್ಲವಾದರೆ (ಅವಘಡಗಳಲ್ಲಿ ಬೆಲ್ಟ್ ಬಿಗಿಯದೇ ತೊಟ್ಟ ಹೆಲ್ಮೆಟ್ ರಟ್ಟಿ ಹೋಗಿ, ತಲೆ ರಸ್ತೆಗೆ ಘಟ್ಟಿಸಿದಂತೆ) ಆಕಸ್ಮಿಕಗಳಲ್ಲಿ ಅಂಗಿ ಜಾರಿ ಅಪಾಯ ಹೆಚ್ಚುವುದೂ ಇದೆ. ಅಲ್ಯೂಮಿನಿಯಮ್ ಕೊಳವೆಯ ಎರಡೂ ತುದಿಗೆ ಗಟ್ಟಿ ಫೈಬರ್ ಹಾಳೆಗಳ ಅಲಗುಗಳನ್ನು ಬೆಸೆದು ಮಾಡಿದ ಎರಡು ಹುಟ್ಟು ನಮ್ಮ ದೋಣಿಯ ನೂಕು ಸಲಕರಣೆಗಳು. ದೊಡ್ಡ ದೋಣಿಗಳಲ್ಲಾದರೋ ಒಂದಕ್ಕೂ ಮಿಕ್ಕು ನೂಕುಬಲ ಇರುವಲ್ಲಿ ಚಲನೆಯ ದಿಕ್ಕು ನಿರ್ಧರಿಸಲು ಚುಕ್ಕಾಣಿಯೆಂಬ ಪ್ರತ್ಯೇಕ ಸಲಕರಣೆ ಇರುತ್ತದೆ. ಇಲ್ಲಿ ಹಾಗಿಲ್ಲ. ಕೊಳವೆಯ ನಡುಭಾಗವನ್ನು ಎರಡೂ ಕೈಗಳಲ್ಲಿ ಹಿಡಿದು, ಕ್ರಮವಾಗಿ ಎಡಕ್ಕೂ ಬಲಕ್ಕೂ ನೀರನ್ನು ತೋಡುವುದರಲ್ಲಿ ಚಲನೆಯೇನೋ ಸರಿ. ಆದರೆ ನೀರಿನ ಸೆಳೆತವನ್ನೂ ಸುಧಾರಿಸಿಕೊಂಡು ಅನಗತ್ಯ ಓರೆಕೋರೆಗಳಿಲ್ಲದೆ ಸಾಗುವ ಹದಕ್ಕೆ ಪಳಗುವುದು ಸಾಧನೆ. ಜೀವನ ನೌಕೆಯಲ್ಲಿ ಸುಮಾರು ಮೂವತ್ನಾಲ್ಕು ವರ್ಷಗಳಲ್ಲಿ ವಿಶೇಷ ವ್ಯತ್ಯಯವಿಲ್ಲದೇ ಹುಟ್ಟು ಹಾಕಿದ ನಮ್ಮನುಭವಕ್ಕಿದು ಹೊಸದೇ ಹೊಳಪು ಕೊಡುವುದು ಖಾತ್ರಿ.
ಹುಟ್ಟು ಕೈಗೆತ್ತಿಕೊಂಡು ನಿರ್ಭಯವಾಗಿಯೇ ಒಂದು ಸಣ್ಣ ಸುತ್ತು ತೆಗೆದೆವು. ಅಷ್ಟರಲ್ಲಿ ಆಶ್ರಮದಲ್ಲಿ ಅತಿಥಿಯಾಗಿದ್ದ ವಿನಯ್ ಶೆಟ್ಟಿ – ತುಳು ಮೂಲದ ಬೆಂಗಳೂರು ನಿವಾಸೀ ತಮಿಳು ಚಿತ್ರ ನಟ, ಮತ್ತು ಆತನ ಎರಡು ಗೆಳೆಯರೂ ದೋಣಿಗಟ್ಟೆಗೆ ಬಂದರು. ಕ್ಲಬ್ಬಿನದೇ ಒಂಟಿ ಕಯಾಕ್ ವಿನಯ್ ಬಳಸಿದರು. ನಮಗೆ ತುಸು ಉಸಿರು ತೆಗೆದುಕೊಳ್ಳುವಂತೆ ಸೂಚಿಸಿ, ನಮ್ಮ ದೋಣಿಯನ್ನು (ನಮ್ಮ ಅನುಮತಿಯೊಡನೇ) ಉಳಿದಿಬ್ಬರಿಗೆ ಒಂದು ಸಣ್ಣ ಸುತ್ತು ಹಾಕಲು ಕೊಟ್ಟರು. ನಾವು ಎರಡನೇ ಸುತ್ತನ್ನು ತುಸು ದೀರ್ಘವಾಗಿಯೇ ಬೆಳೆಸಿದೆವು. ಒಟ್ಟಾರೆ ಸುಮಾರು ಮೂರು ಗಂಟೆಯ ಸುತ್ತಾಟ ಮೊದಲ ದಿನಕ್ಕೆ ಸಾಕಾಯ್ತು. ಅಂದಿಗೆ ದೋಣಿಯನ್ನು ಆಶ್ರಮದಲ್ಲೇ ಬಿಟ್ಟು, ಮಾರಣೇ ದಿನವೂ ಹೋದೆವು. ಮತ್ತೆ ಸುಮಾರು ನಾಲ್ಕು ಗಂಟೆಗಳ ಕಾಲ ಶಾಂಭವಿ-ಶೋಧ ನಡೆಸಿ, ಸದ್ಯಕ್ಕೆ ಸಾಕೆಂದು ದೋಣಿ ಸಹಿತ ಮರಳಿದೆವು.
ಶಾಂಭವಿ ನದಿ ಈ ವಲಯದಲ್ಲಿ ಅಸಂಖ್ಯ ಸೀಳುಗಳಲ್ಲಿ ಹರಡಿಕೊಂಡಿದೆ. ಹಾಗೇ ದಕ್ಷಿಣದಲ್ಲಿ ವ್ಯಾಪಿಸಿರುವ ನಂದಿನಿ ನದಿಯ ಕೆಲವು ಸೀಳುಗಳನ್ನೂ ಸೇರಿಸಿಕೊಂಡ ಈ ವಲಯದ ನೆಲವನ್ನು ಕೊಳಚೆ ಕಂಬಳ ಎನ್ನುತ್ತಾರೆ. (ನಂದಿನಿಯ ಉಳಿದಷ್ಟು ಭಾಗಗಳಿಗೆ ಮುಕ್ಕದಿಂದ ಭೂ ಸಂಪರ್ಕವಿದ್ದು ಬಹ್ವಂಶ ಸಸಿಹಿತ್ಲು ಎಂದೇ ಖ್ಯಾತವಾಗಿದೆ. ಅದನ್ನು ಇನ್ನೆಂದಾದರೂ ಸುತ್ತುತ್ತೇವೆ.) ಇದನ್ನು ಹೆಸರಿಸುವಲ್ಲಿ ಸ್ಥಳ ಪುರಾಣಿಕರು ನಿರಂತರ ನೀರಿನ ಪ್ರಭಾವದಲ್ಲಿನ ಪ್ರಾಕೃತಿಕ `ಕೊಳೆ’ಯನ್ನು ಗಣಿಸಿದ್ದಿರಬಹುದು. (ಸ್ಥಳನಾಮ ತಜ್ಞರು ಕ್ಷಮಿಸಬೇಕು, ಇದು ಅನಧ್ಯಯನದ ಊಹೆ ಮಾತ್ರ) ಆದರೆ ಇಂದು ಅನತಿದೂರದಲ್ಲೇ ಇರುವ ಉಷ್ಣ ವಿದ್ಯುತ್ ಸ್ಥಾವರದಿಂದ ತೊಡಗಿ, ದಂಡೆಗಳ ಮೇಲೆ ಬರುವ ಎಲ್ಲಾ ಸಾಮಾಜಿಕ ಚಟುವಟಿಕೆಗಳ ಕೊಳಚೆಗೂ (ಇಂದು ನಮ್ಮ ಎಲ್ಲ ಜಲಮೂಲಗಳಂತೆ) ಇದೂ ಪಾತ್ರೆಯಾಗಿರುವುದನ್ನು ಕಾಣುವ ದೌರ್ಭಾಗ್ಯ ನಮ್ಮದು. ಆಧುನಿಕವಾಗಿಯೂ `ಕೊಳಚೆ’ ಇಲ್ಲಿ ಅನ್ವರ್ಥಕ, ವಿಶೇಷಣ!
ಸರ್ಫಿಂಗ್ ಆಶ್ರಮದ ಕಾಳೀಯಮರ್ದನ ಕೃಷ್ಣ ಗೋಪಿಕೆಯರನ್ನು ಮರುಳುಗೊಳಿಸಿದ್ದರಲ್ಲಿ ಖ್ಯಾತನಿದ್ದರೆ, ಅಲ್ಲೇ ಆಚೆಗೆ ನಮಗೆ ಸಿಕ್ಕ ವಾಸುದೇವ ವೃತ್ತಿಪರ ಮರಳುಗಾರ, ಒಂದರ್ಥದಲ್ಲಿ ಶಾಂಭವೀಮರ್ದನನೂ ಹೌದು! ಹೊಳೆಯ ಪಶ್ಚಿಮ ಭಾಗದ ನೀರಿನಲ್ಲಿ ಸೊಂಟಮಟ್ಟಕ್ಕೆ ಮುಳುಗಿ ನಿಂತು, ತನ್ನ ನಾಡದೋಣಿಯನ್ನು ಕೈಯಾರೆ ಆಧರಿಸಿಕೊಂಡು ಕಾರ್ಯನಿರತನಾಗಿದ್ದ. ದೊಡ್ಡ ಬಾಣಲೆಯಂಥ ಗುದ್ದಲಿಯಲ್ಲಿ ಕಾಲಬುಡದಿಂದ ಮರಳು ಗೋಚಿ, ದೋಣಿ ತುಂಬುತ್ತಿದ್ದ. ಬಹುಶಃ ಹೊಳೆ ತಳೆಯುತ್ತಿದ್ದ ಪ್ರತಿ ಸೌಮ್ಯ ತಿರುವಿನ ತಳದ ಹೊರ ಸುತ್ತಿನಲ್ಲೆಲ್ಲ ಮರಳ ಹಾಸು ಹೀಗೇ ಹೆಚ್ಚಿದ್ದಿರಬೇಕು. (ಬೇರೆಡೆಗಳಲ್ಲು ಹೀಗೇ ಮೂರು ನಾಲ್ಕು ಮರಳೆತ್ತುಗರು ಕಾಣಸಿಕ್ಕರು) ವಾಸುದೇವ ತುಸು ಹೊತ್ತು ಕಳೆದು ನಡಿಕುದುರುವಿನ ಸಂಕದ ಬಳಿ, ದೋಣಿಯನ್ನು ದಂಡೆ ಮುಟ್ಟಿಸಿದ್ದೂ ಕಂಡೆವು. ಅಲ್ಲಿ ಬೇರಿಬ್ಬರು ಅನುಕೂಲವಿದ್ದಂತೆ ದೋಣಿಯಿಂದ ದಂಡೆಗೋ ದಂಡೆಯಿಂದ ಲಾರಿಗೋ ಮರಳು ದಾಟಿಸುತ್ತಿದ್ದರು.
ನೇತ್ರಾವತಿಯ ಕಣ್ಣೂರು, ಅಡ್ಯಾರು ವಲಯಗಳಲ್ಲಿ ಸದ್ಯ ನಾನು ಕಂಡಂತೆ ಸ್ಥಳೀಯ ಮರಳುಗಾರರು ಹೆಚ್ಚಾಗಿ ಹಿಂದಿ (ಒರಿಯಾ ಬಂಗಾಳಿಗಳೂ ಇರಬಹುದು) ಮಾತಾಡುವ ಔತ್ತರೇಯರಿಗೆ ಬಿಟ್ಟುಕೊಟ್ಟಂತೆ ಕಾಣುತ್ತದೆ. ಅಲ್ಲೆಲ್ಲ ಸಣ್ಣ ನಾಡದೋಣಿಗಳ ಜಾಗದಲ್ಲಿ ದೊಡ್ಡ, ದೃಢ ಮತ್ತು ಹೆಚ್ಚು ಸ್ಥಳಾವಕಾಶವಿರುವ ದೋಣಿಗಳನ್ನು ಕಂಡಿದ್ದೇನೆ. ಎರಡು ಕೈಗಳ ಜಾಗದಲ್ಲಿ ಎಂಟು-ಹತ್ತು ಕೈಗಳು ದುಡಿಯುತ್ತಿವೆ. ಕೆಲವೆಡೆಗಳಲ್ಲಿ ಬಹುಶಃ ಇನ್ನೂ ದೊಡ್ಡ ಮಟ್ಟದಲ್ಲಿ (ಯಾಂತ್ರಿಕ?) ಮರಳುಗಾರಿಕೆ ನಡೆಯುವುದನ್ನೂ ಕೇಳಿದ್ದೇನೆ. ನಗರದ ಅಮಲಿನಲ್ಲಿ ಸಹಜ ಗುಡ್ಡದ ತಲೆಯಲ್ಲೂ ಇಮ್ಮಡಿ ಮುಮ್ಮಡಿ ಎತ್ತರದ ರಕ್ಕಸ ಕಟ್ಟಡಗಳು ಏಳುವಾಗ, ಡಾಮರು ಮಾರ್ಗಗಳೆಲ್ಲ ಕಾಂಕ್ರೀಟ್ ಹಾಸುಗಳನ್ನು ಹೊರುತ್ತಿರುವಾಗ, `ಗಲೀಜು ಮಣ್ಣು’ ಕಾಣುವಲ್ಲೆಲ್ಲ ದಪ್ಪದ ಮರಳ ಹಾಸಿನ ಮೇಲೆ ಸುಂದರ ಇಂಟರ್ಲಾಕ್ ಹೊದಿಕೆ ಮೂಡುತ್ತಿರುವಾಗ `ವಾಸುದೇವರ’ ಮರಳು ಸಾಕಾಗಲುಂಟೇ. ಆದರೆ ನದಿ ತೊರೆಗಳ ಪ್ರಾಕೃತಿಕ ಸ್ಥಿತಿ, ಪಾರಿಸರಿಕ ಸಮತೋಲನವೆಲ್ಲಾ ಅಂದಾಜಿಸತೊಡಗಿದರೆ ಮತ್ತೆ ಯಂತ್ರಗಳನ್ನು ಬಿಟ್ಟು ಚರಕಾ ನೆಚ್ಚಿದ ಗಾಂಧಿವಾದವೇ ಸರಿ; ಮರಳೆತ್ತುವಲ್ಲಿ `ವಾಸುದೇವ’ನೇ ಮಿತಿಯಾಗಬೇಕು! ಇಲ್ಲವಾದರೆ ಕೇಳಿಲ್ಲವೇ ಹಾಡು – ಎಂಥಾ ಮರುಳಯ್ಯಾ ಇದು ಎಂಥಾ ಮರಳೋ!
ಮೊದಲ ಸುತ್ತಿನಲ್ಲಿ ನಾವು ಸುಮಾರು ಇನ್ನೂರು ಮೀಟರ್ `ಎದುರು ಸವಾರಿ’ (ಎದುರೀಜು ಇದ್ದ ಹಾಗೆ) ನಡೆಸಿದ್ದೆವು. ಆಗ ಹೊಳೆಯ ಪಾತ್ರೆಯಲ್ಲೇ ಎರಡು ಅಂತರಗಳಲ್ಲಿ ಜೋಡುಪಾದ ಊರಿನಿಂತು ನಡಿಕುದುರಿಗೆ ವಿದ್ಯುತ್ ಸಂಪರ್ಕ ಒದಗಿಸಿದ್ದ ಕಂಬಗಳಿಗೆ ಸುತ್ತು ಹಾಕಿ ಮರಳಿದೆವು. ಆ ವಿದ್ಯುತ್ ಕಂಬಗಳು ಹೊರಟ ದಂಡೆಯಲ್ಲಿ ಮಿನಿ ಲಾರಿಗಳು ನೀರಂಚಿಗೆ ಬರಲನುಕೂಲವಾಗುವಂಥ ವ್ಯವಸ್ಥೆಯಿತ್ತು. ಅಲ್ಲೇ ನೀರಿನಲ್ಲಿ ಸ್ವಲ್ಪ ಆಚೀಚೆ ಎರಡು ಮೂರು ತೇಲುಬೇಲಿಗಳಂಥ ರಚನೆ, ದಂಡೆಯಲ್ಲಿ ಕಪ್ಪೆಚಿಪ್ಪು ರಾಶಿ ಕಂಡು ನಾವು ಕುತೂಹಲ ತೋರಿದೆವು. ನಾವು ಅಲ್ಲಿ ತುಸು ತಂಗಿದ್ದಾಗ, ದಂಡೆಯಲ್ಲಿದ್ದ ಒಬ್ಬ ಹಿರಿಯರು ನಮಗವನ್ನು ಉತ್ಸಾಹದಲ್ಲೇ ಪರಿಚಯಿಸಿದರು. ಅಲ್ಲಿನ ಉಪ್ಪು ಮಿಶ್ರಿತ ನೀರಿನಲ್ಲಿ ಎರಡು ವಿಧದ ಚಿಪ್ಪಿನ ಮಾಂಸಗಳನ್ನು ಆಹಾರವಾಗಿ ಸಂಗ್ರಹಿಸುತ್ತಾರೆ. ಒಂದು ನಾವು ಸ್ಪಷ್ಟ ಕಪ್ಪೆಚಿಪ್ಪೆಂದೇ (ವಾಸ್ತವದಲ್ಲಿ ಇದಕ್ಕೆ ಕಪ್ಪೆಯ ಸಂಬಂಧವೇನೂ ಇದ್ದಂತಿಲ್ಲ!) ಗುರುತಿಸುವಂತೆ ಆಕಾರವುಳ್ಳ ಜೀವಿ. ಇನ್ನೊಂದನ್ನು ಆತ `ಕಲ್ಲು’ ಎಂದೇ ಹೇಳಿದಂತಿತ್ತು.
ನೋಟಕ್ಕೂ ಅದು ನಿರ್ದಿಷ್ಟ ರೂಪ ಹೊಂದದೇ ಸಣ್ಣ ಕಲ್ಲಿನಂತೆಯೇ ಇತ್ತು. ಆ ತೇಲು ಬೇಲಿಗಳಲ್ಲಿ ಈ `ಕಲ್ಲ’ನ್ನು (ಗದ್ದೆಗಳನ್ನೇ ಕೊಳ ಮಾಡಿ, ಸಿಗಡಿಯನ್ನು ಮಾಡಿದಂತೇ) ಕೃಷಿ ಮಾಡುವ ಕ್ರಮವೇ ತೇಲು ಬೇಲಿಗಳು. ಅಲ್ಲಿ ಎರಡೋ ಮೂರೋ ಗುಪ್ಪೆಗಳಲ್ಲಿ ಬಿದ್ದುಕೊಂಡಿದ್ದ ಎರಡೂ ರೀತಿಯ ಚಿಪ್ಪುಗಳು ಎಂದೋ ಮಾಂಸ ಕಳಚಿಕೊಂಡು, ಕೇವಲ ಸುಣ್ಣದ ಭಟ್ಟಿಗೆ ಹೋಗಲು ಕಾದಿದ್ದುವು. ಆ ಹಿರಿಯ ಮುಗ್ಧವಾಗಿ ಹಿಂದೊಮ್ಮೆ ತಮ್ಮ ಸಾಂಪ್ರದಾಯಿಕ ತಿಳುವಳಿಕೆಯ ಕೊರತೆಯೊಂದು ಕಳಚಿದ್ದನ್ನು ನಮ್ಮಲ್ಲಿ ಹೇಳಿಕೊಂಡ ಪರಿ ನನಗೆ ಕುಶಿಕೊಟ್ಟಿತು. ಯಾವುದೋ ಇಲಾಖೆಯ ವತಿಯಿಂದ ಜಪಾನ್ ಮೀನುಗಾರಿಕಾ ವಿಜ್ಞಾನಿಯೊಬ್ಬ ಈ ವಲಯಕ್ಕೆ ಬಂದಿದ್ದನಂತೆ. ಆತ ಯಾವುದೋ ಚಿಪ್ಪನ್ನು ಎತ್ತಿ ಸಹಜವಾಗಿ ಅದರ ಪ್ರಾಯ ಹೇಳಿದಾಗ ಸ್ಥಳೀಯ `ಬುದ್ಧಿವಂತರ’ ಹುಬ್ಬು ಹಾರಿತಂತೆ. ಆತ ಬುರುಡೆ ಹೊಡೆದನೆಂದೇ ನಕ್ಕರಂತೆ. ಆದರೆ ಆತ ಬೇಸರಿಸದೇ ಇವರಿಗೆ ವಿ-ಜ್ಞಾನವನ್ನು ಕೊಟ್ಟ. ಮರದ ಕಾಂಡಗಳಿಗೆ ಅಡ್ಡ ಕತ್ತರಿ ಹಾಕಿದಾಗ ಕಾಣುವ ಬಳೆಗಳು ಮರದ ಪ್ರಾಯ ಹೇಳುವುದು ನಮಗೆ ತಿಳಿದದ್ದೇ. ಹಾಗೇ ಪ್ರತಿ ಚಿಪ್ಪಿನ ಹೊರಗೂ ಇರುವ ಗೀಟುಗಳು ಪ್ರಾಯಸೂಚಕಗಳು. ಜಪಾನೀಯನನ್ನು ಒಪ್ಪಿಕೊಳ್ಳುವಲ್ಲಿನ ಇವರ ವಿನಯ, ಸ್ಮರಿಸುವಲ್ಲಿನ ಕೃತಜ್ಞತಾಭಾವ ನನಗೆ ಉನ್ನತ ಕಲಿಕೆಯ ವಿದ್ಯಾಲಯಗಳಲ್ಲಿ ದುರ್ಲಭ ಎಂದೇ ಅನ್ನಿಸಿತು!
ಎರಡನೇ ದಿನ ನಾವು ನಡಿಕುದುರು ಪ್ರದಕ್ಷಿಣೆಗಿಳಿದೆವು. ಹೆದ್ದಾರಿಯಲ್ಲಿ ಮೂಲ್ಕಿ-ಬಪ್ಪನಾಡು ಕಳೆದದ್ದೇ ಸಿಗುವ ದೊಡ್ಡ ಸೇತುವೆ ಶಾಂಭವಿ ನದಿಗೇ ಹಾಕಿದ್ದು. ಅನಂತರ ಸಿಗುವ ಹೆಜಮಾಡಿಯಲ್ಲಿ ಪಶ್ಚಿಮಕ್ಕೆ ಕವಲಾಗುವ ರಸ್ತೆ ಕೊಳಚೆ ಕಂಬಳದ ಹೊರಮೈಯನ್ನು ಆವರಿಸಿ, ಶಾಂಭವಿಯ ಅಳಿವೆ ಬಾಗಿಲಿನವರೆಗೂ ಬರುತ್ತದೆ. ಹಾಗೇ ಆ ಬದಿಯಿಂದ ನಡಿಕುದುರಿಗೂ ಸೇತುವೆ ಇದೆ; ವಾಸ್ತವದಲ್ಲಿ ಅದರ ದ್ವೀಪ ಸ್ಥಿತಿ ಮರೆಯಾಗಿದೆ. ನಾವು ಮೊದಲು ನೇರ ಎದುರು ದಂಡೆಯತ್ತ ಹುಟ್ಟು ಹಾಕಿದೆವು. ಅಲ್ಲಿ ಮೀನುಗಾರರ ಅನುಕೂಲಕ್ಕಾಗಿ ವಿಸ್ತಾರ ಸೋಪಾನಗಳನ್ನೂ ಹರಾಜು ಹಜಾರಗಳನ್ನೂ ಕಟ್ಟಿದ್ದು ಕಾಣುತ್ತಿತ್ತು. ಹಲವು ಯಾಂತ್ರೀಕೃತ ದೋಣಿಗಳು ಅದೇ ತಾನೆ ಕಡಲ ಮೀನುಗಾರಿಕೆಯಿಂದ ಬಂದು, ಮೀನ ವಿಲೇವಾರಿ ನಡೆಸಿದ್ದವು. ಅಲ್ಲಿನವರಿಗೆಲ್ಲ ಮಂತ್ರ ಸರ್ಫ್ ಕ್ಲಬ್ಬಿನ ಮೂಲಕ ವಿಹರಿಸುವ ಮಂದಿಗಳನ್ನು ನೋಡಿ ಅಭ್ಯಾಸವಾದ್ದಕ್ಕೋ ಏನೋ ನಮ್ಮ ಬಗ್ಗೆ ವಿಶೇಷ ಕುತೂಹಲಿಗಳಾಗಲಿಲ್ಲ.
ನಡಿಕುದುರುವಿನ ಪಶ್ಚಿಮ ಜಲಸಂದು ಸಪುರವಿದೆ ಮತ್ತು ಒಂದು ಬದಿಯಲ್ಲಿ ಕಾಂಡ್ಲಗಿಡಗಳು ಸೊಂಪಾಗಿಯೂ ಬೆಳೆದಿವೆ. ಅವುಗಳ ಬೇರುಗಾಲುಗಳ ಎಡೆಯಲ್ಲಿ ನಾಗರಿಕ ಕೊಳಕುಗಳು – ಹರಕು ಬಟ್ಟೆ, ಪ್ಲ್ಯಾಸ್ಟಿಕ್ಕಿನ ವೈವಿಧ್ಯಮಯ ಕಸ ಸಾಕಷ್ಟು ಕಂಡರೂ ಇನ್ನೂ ಪೂರ್ಣ ವಿಷಮಯವಾಗಿಲ್ಲವೆಂಬಂತೆ ಬಗೆ ತರದ ಹಕ್ಕಿಗಳ ತಪಸ್ಸು, ಜಾಲಾಟ ನಡೆದಿತ್ತು. ನಡಿಕುದುರು ಒಂದೇ ಕೃಷಿ ಕುಟುಂಬದ ಸುಮಾರು ೨೭ ಕವಲುಗಳ ಬಿಡಾರವನ್ನು ಇಂದಿಗೂ ಪೋಷಿಸಿದೆಯಂತೆ. ನಮಗೆ ದೋಣಿಯಿಳಿದು ಸುತ್ತಾಡಿ, ಮಾತಾಡಿ ಬರುವ ಮನಸ್ಸಿತ್ತಾದರೂ ಪುರುಸೊತ್ತು ಇರಲಿಲ್ಲ. ಬರಿಯ ಜಲಸಂದನ್ನಷ್ಟೇ ಕಣ್ಣೆದುರು ಬಿಡಿಸಿಕೊಳ್ಳುತ್ತ ಹುಟ್ಟು ಹಾಕಿದೆವು.
ಹಳೆಗಾಲದ ಒಂದು ಸೇತುವೆಯ ಅವಶೇಷಗಳು ಕಾಣಿಸಿದವು. ಮರಳುಗಾರ ವಾಸುದೇವನ ತಿಳುವಳಿಕೆಯಂತೆ ಅದು ಬ್ರಿಟಿಷರ ಕಾಲದ್ದೇ ಇರಬೇಕು. ಆದರೆ ಅದು ಹವಾಮಾನ ವೈಪರೀತ್ಯಕ್ಕೋ ನಮ್ಮವರ ನಿರ್ಲಕ್ಷ್ಯಕ್ಕೋ ಇನ್ನೂ ಕಟುವಾಗಿಯೇ ಹೇಳುವುದಿದ್ದರೆ – ದುರುದ್ದೇಶಕ್ಕೋ ಪಕ್ಕಾಗಿ ಕೆಲವು ಅಂಶಗಳಲ್ಲಿ ಕುಸಿದು ಬಿದ್ದಿತ್ತು. ದೇಖರೇಖೆಗಳ ಯಃಕಶ್ಚಿತ್ ಅನುದಾನಕ್ಕಿಂತ, ಅದು ನಶಿಸಿದರೆ, ಹೊಸತನ್ನು ಕಟ್ಟಿಸುವಲ್ಲಿ `ಮೇಲು ಸಂಪಾದನೆ’ಗೆ ಅವಕಾಶಗಳು ಜಾಸ್ತಿ ಎನ್ನುತ್ತದೆ `ನವ-ಆಡಳಿತ’ ಸಿದ್ಧಾಂತಗಳು. (ತಿಂಗಳ ಹಿಂದೆ ಪತ್ರಿಕೆಯಲ್ಲಿ ಮಂಗಳೂರು ವಿವಿ ನಿಲಯದ ಕುಲಪತಿ ನಿವಾಸದ ಕಕ್ಕಸು ನಿರ್ಮಾಣಕ್ಕೆ ರೂಪಾಯಿ ಐದು ಲಕ್ಷದ ಟೆಂಡರು ಕರೆದಿದ್ದಾರೆ. ಅಂದರೆ ಸುಮಾರು ಮೂರು ದಶಕಗಳ ಕಾಲ ಮಂಗಳೂರು ವಿವಿನಿಲಯದ ಕುಲಪತಿ ನಿವಾಸದಲ್ಲಿ ಈ ಸೌಕರ್ಯವಿರಲಿಲ್ಲವೇ? ಇಂದು ನಿಮ್ನ ಆರ್ಥಿಕ ವರ್ಗದಲ್ಲಿ ಎರಡೋ ಮೂರೋ ಮನೆಗಳನ್ನೇ ಪೂರೈಸಬಹುದಾದ ಐದು ಲಕ್ಷದ ವೆಚ್ಚದಲ್ಲಿ ಕುಲಪತಿ-ಕಕ್ಕಸ್ಸು ರಚನೆಯಾಗುವುದಿದ್ದರೆ, ಇವರು ತಿನ್ನುವುದು ಏನನ್ನು ಎಂದು ಪ್ರತ್ಯೇಕ ಹೇಳಬೇಕೆ?) ತುಸು ಮುಂದೆ ಇಂದು ಬಳಕೆಯಲ್ಲಿರುವ ಹೊಸದೇ ಸಂಕವನ್ನು ದಾಟುವುದರೊಡನೆ ನಾವು ಮತ್ತೆ ಶಾಂಭವಿಯ ಮುಖ್ಯ ಪಾತ್ರೆಯನ್ನೇ ಸೇರಿದ್ದೆವು.
ನಡಿಕುದುರು ಕಳೆದದ್ದೇ ಶಾಂಭವಿಯ ಬಲು ವಿಸ್ತಾರಕ್ಕೆ ಹರಡಿಕೊಂಡು, ಪಶ್ಚಿಮ ತಿರುವು ತೆಗೆದಿತ್ತು. ಅನತಿ ದೂರದ ಉತ್ತರ ದಂಡೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರದ ಬಿಳಿ ಚಿಮಣಿ, ಬೂದು ಹೊಗೆ ಕಾರುತ್ತಿತ್ತು. ಫಲಿಮಾರಿನ ಆ ದೂರಕ್ಕಲ್ಲದಿದ್ದರೂ ಹೆದ್ದಾರಿಯ ಮೂಲ್ಕಿ ಸೇತುವೆಯನ್ನಷ್ಟು ನೋಡಿಯೇ ಬಿಡೋಣವೆಂದು ಮುಂದುವರಿದೆವು. ಬಚ್ಚಲ ಕೊಳಚೆಯನ್ನು ಧಾರಾಳ ನದಿಗಿಟ್ಟ ಮನೆ, ಭೂತಸ್ಥಾನಗಳನ್ನು ಹಾಯುತ್ತಿದ್ದಂತೆ ದೂರದಲ್ಲಿ ಸೇತುವೆಯೇನೋ ಕಾಣಿಸಿತು. ಆದರೆ ಕಾಯುತ್ತಿದ್ದ ಬಿಸಿಲು, ಸ್ವಾರಸ್ಯಕರ ಏನಿಲ್ಲವೆಂದೂ ಶ್ರಮವಷ್ಟೇ ಸಾಧನೆಯೆಂದು ಅಂದಾಜಾಗುತ್ತಿದ್ದಂತೆ ಮುಖ ಹಿಂದಕ್ಕೆ ತಿರುಗಿಸಿದೆವು. ನದಿಯ ಸೌಮ್ಯ ಹರಿವಿನ ಅನುಕೂಲವನ್ನೂ ಸಾಕಷ್ಟು ಬಳಸಿಕೊಂಡು ಆಶ್ರಮಕ್ಕೂ ಮೊದಲೇ ಸಿಗುವ (ಕಪ್ಪೆ ಚಿಪ್ಪುಗಳ ಗುಪ್ಪೆಯಿದ್ದ) ತಂಗುದಾಣದಲ್ಲೇ ದಂಡೆ ಸೇರಿದೆವು. ಆಶ್ರಮಕ್ಕೆ ದಾರಿಯಲ್ಲೇ ನಡೆದು ಹೋಗಿ, ಕಾರು ತಂದು, ಕಟ್ಟೆಯ ಒತ್ತಿಗಿಟ್ಟೆ. ಇದರಿಂದ ದೋಣಿಯನ್ನು ಉದ್ದಕ್ಕೆ ಹೊರುವ ಶ್ರಮವೂ ಉಳಿಯಿತು, ಸುಲಭದಲ್ಲಿ ಕಾರಿನ ಮೇಲಕ್ಕೇರಿಸುವುದೂ ಸಾಧ್ಯವಾಯಿತು. ದಿಗ್ವಿಜಯ ಮುಗಿಸಿದ ಸಂತೋಷದಲ್ಲಿ ಜಲಜಾಲಾಟಕ್ಕೆ ನಾಂದಿ ಹಾಡಿದ ಸಂತೋಷದಲ್ಲಿ ಮಂಗಳೂರಿಗೆ ಮರಳಿದೆವು.
*** *** ***
ಮರಳು ಹೊರುತ್ತಿದ್ದ ಬುದ್ಧಿವಂತನೊಬ್ಬ ಹೀಗೇ ವಾಗ್ಬಾಣ ಎಸೆದಿದ್ದ “ಗುಡ್ ಮಾರ್ನಿಂಗ್, ವ್ಹೇರ್ ಯು ಕಮ್?” ಆಡು ಭಾಷೆಯಲ್ಲಿ ನುಡಿಯುವಲ್ಲಿ ನಾನು ತುಸು ಮುಖಹೇಡಿಯೇ ಆದರೂ ತಡೆಯದೆ ತುಳು ಎಸೆದು ಬಿಟ್ಟೆ “ಎಂಕ್ಲು ಕುಡ್ಲದಾರ್ ಮಾರಾಯ್ರೇ. ಈರ್ ಫಾರಿನ್ ಮಲ್ತಾರಾ?” ನಮ್ಮೂರ ನಿಜವನ್ನು ಇನ್ನೂರಿನವರಷ್ಟೇ ಕಂಡಾರು ಎನ್ನುವ ಸ್ಥಿತಿ ನಮ್ಮೆಲ್ಲ (ಪರಿಸರವೂ ಸೇರಿದಂತೆ) ಅಜ್ಞಾನಕ್ಕೆ ಮೂಲ.
ಕಯಾಕ್ ಕೊಂಡ ವಿವರದೊಡನೆ ಓದಿದ ನಮಗೂ ಒಳ್ಳೇ ವಿಹಾರವಾಯ್ತು . ಶಾಂಭವಿ ನದಿಯ , ಅಳಿವೆಯ ರುದ್ರ ಸೌಂದರ್ಯವನ್ನು ನಾನೂ ಸವಿದಿದ್ದೇನೆ, ನಮ್ಮ ಮಾವ ಅಲ್ಲಿ ಹೆಜಮಾಡಿ ಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿದ್ದರಿಂದ ಆ ಭಾಗ್ಯ ಒದಗಿತ್ತು . ಬಸ್ ಇಳಿದು ದೋಣಿಯಲ್ಲಿ ನದಿ ದಾಟಿ , ಇಳಿದು ಹೋದರೆ, ಕಣ್ಣು ಹಾಯ್ವಷ್ಟೂ ವಿಸ್ತಾರದ ಗದ್ದೆಗಳ ನಡುವೆ ಮನೆ. ಸಣ್ಣ ಪ್ರಾಯದಲ್ಲೇ ಮಾಡುವೆ ಆಗಿದ್ದರಿಂದ, ( ೧೭ ) ಪುಟ್ಟ ಮೈದುನಂದಿರೊಂದಿಗೆ ಆ ಗದ್ದೆಗಳಲ್ಲೂ ಅಳಿವೆ ಬಳಿಯೂ ಸುತ್ತಾಡಿ ಬರುವ ಮೋಜು, . ಅಳಿವೆಯ ರೌದ್ರಾವತಾರ ಆಗ ಕಂಡಿದ್ದೆ.
ಜಲಮಾಲಿನ್ಯದ ಬಗ್ಗೆ ಈ ವಿಡಿಯೋ ಅವಶ್ಯ ನೋಡಬೇಕು: https://www.youtube.com/watch?v=1I7on22jA48#t=199
ನಿಮ್ಮ ಜೀವನೋತ್ಸಾಹ ಪ್ರೇರಣೆ ನೀಡುವಂತಹುದು…ನಿಮ್ಮ ದೋಣಿಯಲ್ಲಿ ಒಂದು ಸುತ್ತು ಹಾಕೋಣವೆಂದರೆ ನೀರೆಂದರೆ ಭಯ…ನಿಮ್ಮ ಸಾಹಸ ಚಟುವಟಿಕೆ ಹೀಗೇ ಮುಂದುವರೆಯಲಿ..
What a wonderful experience Ashok. I feel envy. Although I have experienced & enjoyed Kayaking once, thought of having one’s own Kayak never came to my mind. My all good wishes to you & Devaki for long lasting safe and joyful Kayaking experience.
maarayre 3 sala type maadidru upload aaglilla so… nimma dOni vihaara chennagali. naanu mulki vijaya kaaalej hostel nalliddaaga allella odaadiddu nenapaayitu. benglur ದೆಕಾಟ್ಲಾನ್ ಶಾಪ್ ನಲ್ಲಿ ಹಳದಿ ಬಣ್ಣದ ದೋಣಿ [೧೫ ಅಡಿ] ನೋಡಿ ಆಸೆಯಾದರೂ ತುಂಗೆಯಲ್ಲಿ ಮುಳುಗುವ ಭಯದಿಂದ ಸುಮ್ಮನಾದೆ.
ಸುಮಿತ್ರಾ
ತೇಲಂಗಿ ಹಾಕಿಕೊಂಡರೆ ಮುಳುಗುವ ಯಾವ ಭಯವೂ ಇಲ್ಲ.ಮತ್ತೆ ಕಯಾಕ್ ಉಳಿದ ತೋಡು ದೋಣಿಗಳಂತೆ ಮಗುಚುವ ಅಥವಾ ನೀರು ತುಂಬಿದರೆ ಮುಳುಗುವ ರಚನೆಯೇ ಅಲ್ಲ. ಅದನ್ನು ನೀರೊಳಗೆ ತೂರಿದರೂ ಅದು ತೇಲುತ್ತದೆ – ತೆಪ್ಪದಂತೆ. ಮಳೆಗಾಲದ ರೌದ್ರ, ಅಣೆಕಟ್ಟಿನ ಬಾಗಿಲು ತೆರೆದ ಸಂದರ್ಭದಲ್ಲಿ ಅದರ ಸೆಳೆತಕ್ಕೆ ಒಳಗಾಗದ ಅಂತರ ಇಂಥ ಸಾಮಾನ್ಯ ಜ್ಞಾನದ ಎಚ್ಚರಿಕೆ ವಹಿಸಿದರೆ ಯಾರೂ ಧಾರಾಳ ಈ ಜಲಯಾನ ಅನುಭವಿಸಬಹುದು. ಡೆಕತ್ಲಾನ್ ದುಬಾರಿ (೫೫ರಿಂದ ೬೦೦೦೦ ಅಲ್ಲಿನ ಬೆಲೆಯಾದರೆ ನನ್ನದಕ್ಕೆ ೨೨೦೦೦. ಬೇಕಾದರೆ ನೇರ ಸಂಪರ್ಕಿಸಿ (ನನ್ನ ಹೆಸರನ್ನು ಧಾರಾಳ ಉಲ್ಲೇಖಿಸಬಹುದು) – ಸಮುದ್ರ ಶಿಪ್ ಯಾರ್ಡ್ (ಪ್ರೈ) ಲಿ., PB No. 10, Chemical industrial estate, Aroor, 688534 KERALA, email:sales@samudrashipyard.com ದೂರವಾಣಿ.೦೪೭೮೨೮೭೪೦೨೭. ಲಾರಿಗೆ ಹಾಕಿ ಕಳಿಸುತ್ತಾರೆ (ಸಾಗಣೆ ವೆಚ್ಚವೇ ತುಸು ಹೆಚ್ಚು – ವಿಯಾರೆಲ್ಲಿನವರದು)
ಪ್ರತಿಕ್ರಿಯಾ ಅಂಕಣದಲ್ಲಿ ನಿಮ್ಮ ಅಭಿಪ್ರಾಯ ಧಾರಾಳ ತುಂಬಿದ ಮೇಲೆ ಕೆಳಗೆ Google a/c ಎಂದೊಂದು ಆಯ್ಕಾ ಕಿಟಿಕಿ ಕಾಣುತ್ತದೆ ನೋಡಿ. ಅದರಲ್ಲಿ Name ಆಯ್ದುಕೊಳ್ಳಿ – ತುಂಬಿ.ಮತ್ತೆ ಕೆಳಗೆ URL ಎಂದುಬಂದಲ್ಲಿ ನನ್ನ ಜಾಲತಾಣದ ವಿಳಾಸ – http://www.athreebook.com ತುಂಬಿ, Publish ಕೊಡಿ, ನೀವು ಗಣಕವಲ್ಲವೆಂದು ಶ್ರುತ ಪಡಿಸಿಕೊಳ್ಳಲು ಎಂಥದ್ದೋ ಸಂಖ್ಯೆ (ಅಕ್ಷರವೂ ಇರಬಹುದು) ಕಾಣಿಸಿಕೊಂಡು ನಕಲಿಸಲು ಹೇಳುತ್ತದೆ, ಯಥಾವತ್ತು (ಇಂಗ್ಲಿಷಿನಲ್ಲೇ) ತುಂಬಿ ಮತ್ತೆ Publish ಕೊಟ್ಟರಾಯ್ತು 🙂
nice …only ashok can think of these varieties of nature exploration….great inspiring…
ನಿಮ್ಮ ಉಮೇದು ನೋಡಿ ಯಾಕೋ ನಾವು ಪ್ರಯೋಜನವಿಲ್ಲ ಅನ್ನುವಸ್ಟರ ಮಟ್ಟಿಗೆ ಅಭಿಮಾನ ಉಕ್ಕುತ್ತದೆ. ನೀವು ಎನನ್ನೆ ಮಾಡಿ ವಿಶಿಶ್ಟವಾಗಿರುತ್ತದೆ. ನೆಲವ ಬಿಟ್ಟು ನೀರ ಮೇಲೇ ನಿಮ್ಮ ಸವಾರಿ ತುಂಬಾ ಖುಶಿ ಕೊಟ್ಟಿತು.ಮುಂದಿನ ಲೇಖನ ನಿರೀಕ್ಶೆಯಲ್ಲಿ ..
Its just amazing Ashok sir.
ನೀವು ಯಾವಾಗ್ಲೂ ನಮ್ಮ ಸಾಹಸ ಕ್ರೀಡೆಗಳಿಗೆ ಸ್ಪೂರ್ಥಿ Ashoka Vardhana ಗುರುಗಳೇ.