(ನೀನಾಸಂ ನಾಟಕಗಳ ದಾಖಲೀಕರಣ, ಹಿಂದೆ ಮತ್ತು ಮುಂದೆ, ಭಾಗ -೧)
ಅಭಯಸಿಂಹ (ಮಗ), ಇಸ್ಮಾಯಿಲ್ ಮತ್ತು ಓಂಶಿವಪ್ರಕಾಶ್ ಸೇರಿಕೊಂಡು ಕಟ್ಟಿದ ಸಂಚಿ ಫೌಂಡೇಶನ್ ನಿಮಗೆ ತಿಳಿಯದ್ದೇನಲ್ಲ. ಈ ಸಲ ಅದರ ಮಹತ್ತ್ವಾಕಾಂಕ್ಷೆಯ ಕಲಾಪವಾಗಿ ಹೆಗ್ಗೋಡಿನ, ವಿಶ್ವಖ್ಯಾತಿಯ ನೀನಾಸಂ ತಿರುಗಾಟದ, ೨೦೧೫ನೇ ಸಾಲಿನ ನಾಟಕಗಳ ದಾಖಲೀಕರಣ ಯೋಜಿಸಿದ್ದರು. ಒಂದೆರಡು ತಿಂಗಳ ಹಿಂದೆ ಅಭಯ ನೀನಾಸಂನಲ್ಲೇ ಕಿರುಚಿತ್ರ ನಿರ್ಮಾಣದ ಕಮ್ಮಟವೊಂದನ್ನು ನಡೆಸಿದ್ದ. ಅದರ ಅನುಭವದ ಬಲದಲ್ಲಿ ನೀನಾಸಂ ಮುಖ್ಯಸ್ಥ – ಕೆ.ವಿ. ಅಕ್ಷರ, ದಾಖಲೀಕರಣದ ಯೋಜನೆಯನ್ನು ಪೂರ್ಣ ಹೃದಯದಿಂದಲೇ ಒಪ್ಪಿ, ಅಪ್ಪಿಕೊಳ್ಳುವವರಿದ್ದರು. ಆದರೆ ನೀನಾಸಂಗೆ ಎಂದೂ ಬಾರದ ಆರ್ಥಿಕ ಅಸಹಾಯಕತೆ ಇಂದು ಬಂದಿದೆ! ಕಾರಣ ಇಷ್ಟೆ: ಇಂಥವಕ್ಕೆಲ್ಲ ಪೋಷಕ ಜೀವಾತುಗಳನ್ನು ಕೊಡಲೆಂದೇ ಕೇಂದ್ರ ಸರಕಾರ ಬಹುಮುಖಗಳನ್ನೇ ಹೊಂದಿದೆ. ಆದರೆ ಇಂದಿನ ದಿಲ್ಲಿ ದರ್ಬಾರಿಗೆ ಚತುರ್ಮುಖನ (ಸೃಷ್ಟಿಕರ್ತ) ದೇವಗುಣ ಬಿಟ್ಟು, ದಶಕಂಠನ (ವಿಧ್ವಂಸಕ) ರಕ್ಕಸಗುಣ ಆವಾಹನೆಯಾಗಿದೆ. ಬಹುರಂಗೀ ಭಾರತೀಯ ಸಾಂಸ್ಕೃತಿಕ ವೈವಿಧ್ಯಕ್ಕೆ ಕೇಸರಿ ಅಂಗಿ ಹೊಲಿಯುವ ಗದ್ದಲದಲ್ಲಿ ಕೇಂದ್ರ ಸರ್ಕಾರದ ಕಲಾಪೋಷಕ ಇಲಾಖೆ ನೀನಾಸಂ ಮನವಿಗೆ ಜಾಣ ಕಿವುಡು ತಾಳಿದೆ. ಆದರೆ ಸಂಚಿ ಟ್ರಸ್ಟ್ ಹಿಂದುಳಿಯಲಿಲ್ಲ. ಹಳ್ಳಿಯಂಗಳದಲ್ಲೇ ಇದ್ದುಕೊಂಡು, ಅಂತಾರಾಷ್ಟ್ರೀಯ ಮ್ಯಾಗ್ಸೇಸೆ ಪ್ರಶಸ್ತಿಯವರೆಗೆ ಕನ್ನಡ ಸಂಸ್ಕೃತಿಯನ್ನು ನಿರಪೇಕ್ಷವಾಗಿ ಶ್ರೀಮಂತಗೊಳಿಸಿದ ನೀನಾಸಂಗೆ ಬಹು ಸಣ್ಣ ಋಣಸಂದಾಯಕ್ಕೆ ಸಜ್ಜಾಯಿತು. ನಾಟಕಗಳ ದಾಖಲೀಕರಣ ಪರೋಕ್ಷವಾಗಿ ಕನ್ನಡಕ್ಕೇ ಬಹು ದೊಡ್ಡ ಆಸ್ತಿಯೂ ಆಗುವ ಸಾಧ್ಯತೆಯನ್ನು ಮನಗಂಡ ಸಂಚಿ ಟ್ರಸ್ಟ್, `ಸಾರ್ವಜನಿಕ ಬಿಕ್ಷೆ’ ನಡೆಸಿತು. ಸ್ವಂತ ಸೇವೆಯೊಡನೆ, ಕೊರತೆ ಬಂದಲ್ಲಿ ಸ್ವಂತ ಹಣವನ್ನೂ ತೊಡಗಿಸುವ ಉಮೇದು ತೋರಿತು.
ನೀನಾಸಂ ತನ್ನಳವಿಯೊಳಿರುವ ಎಲ್ಲ ಸವಲತ್ತುಗಳನ್ನು ಸಂಚಿ ಟ್ರಸ್ಟಿಗೆ ಮುಕ್ತಗೊಳಿಸಿತು. ಅದರಲ್ಲಿ ಮುಖ್ಯವಾದವು, ತಿರುಗಾಟದ ಎರಡು ಮತ್ತು ಶಿಬಿರದ ಒಂದು ನಾಟಕಗಳ ವಿಶೇಷ ಪ್ರದರ್ಶನ (೨-೧೦-೨೦೧೫) ಹಾಗೂ ದಾಖಲೀಕರಣದ ತಾಂತ್ರಿಕ ವರ್ಗಕ್ಕೆ ಉಚಿತ ಆತಿಥ್ಯ. ಈ ಅಪೂರ್ವ ಸನ್ನಿವೇಶದಲ್ಲಿ ಸೇರಿಕೊಳ್ಳುವ ಸಂಭ್ರಮಕ್ಕೆ, `ಅಳಿಯನೊಂದಿಗೆ ಗಿಳಿಯ’ ಎಂಬ ನೆಲೆಯಲ್ಲಿ ನಾನು ದೇವಕಿಯೂ ಅಕ್ಟೋಬರ್ ಒಂದರ ಬೆಳಿಗ್ಗೆ ಮಂಗಳೂರು ಬಿಟ್ಟೆವು.
ಮಳೆ ಮುಗಿದ ದಿನಗಳಲ್ಲಿ, ಮಲೆನಾಡಿನ ಪರಿಸರದಲ್ಲಿ ಪಯಣದ ಸಂತೋಷಕ್ಕೆ ಮೋಟಾರ್ ಸೈಕಲ್ಲೇ ಸರಿ ಎಂದು ವಾರ ಮೊದಲೇ ನಾನು ಅಂದಾಜು ಮಾಡಿದ್ದೆ. ಆದರೆ ಎರಡು ಮೂರು ದಿನ ಮುಂದಾಗಿ, ಅತ್ತ ಬೆಂಗಳೂರಿನಿಂದ ಬರುವ ಅಭಯನ ಜೊತೆ ರಶ್ಮಿ (ನಮ್ಮ ಸೊಸೆ) ಬರುತ್ತಾಳೆ. ಅದಕ್ಕೂ ಮಿಗಿಲಾಗಿ ದಾಖಲೀಕರಣದ ಕಲಾಪಗಳು ಮುಗಿದ ಮೇಲೆ ಅವಳು ನಮ್ಮೊಡನೆ ತವರೂರಿಗೆ ಬರುತ್ತಾಳೆ ಎಂದು ತಿಳಿಯಿತು. ಮತ್ತೆ ಅಕಾಲಿಕ ಮಳೆಯ ವಾರ್ತೆಯೂ ಸೇರಿಕೊಂಡಾಗ ನಾವು ಸ್ವಂತ ಕಾರಿನಲ್ಲೇ ಹೊರಡುವುದು ಅನಿವಾರ್ಯವಾಯ್ತು.
ಆ ವಲಯದ ದಾರಿಗಳನ್ನು ನಾನು ಕಂಡು ಬಹುಕಾಲವಾಯ್ತೆಂದು ಅಂತರ್ಜಾಲದಲ್ಲಿ ಗೂಗಲ್ ನಕ್ಷೆ ನೋಡಿದ್ದೆ. ಅದು ಎರಡು ಸಾಧ್ಯತೆಗಳನ್ನು ತೋರಿತ್ತು. ಮಂಗಳೂರಿನಿಂದ ಶಿವಮೊಗ್ಗ ವಲಯದ ಊರುಗಳಿಗೆ ಬಹಳ ಹಿಂದಿನಿಂದ ಚಾಲ್ತಿಯಲ್ಲಿರುವ ದಾರಿ ಆಗುಂಬೆಘಾಟಿಯದ್ದು. ಇದರಲ್ಲಿ ಹೆಗ್ಗೋಡು ೨೧೪ ಕಿಮೀ ಮತ್ತು ಕಾರಿಗೆ ಪ್ರಯಾಣಾವಧಿ ಸುಮಾರು ನಾಲ್ಕೂವರೆ ಗಂಟೆ ಅನ್ನುತ್ತದೆ ಗೂಗಲ್. ಭೂಪಟದ ಮೇಲೆ ಸುಮ್ಮನೆ ಕಣ್ಣು ಹಾಯಿಸಿದರೆ ಪಶ್ಚಿಮ-ದಕ್ಷಿಣ ಮೂಲೆಯಿಂದ ಪೂರ್ವ-ಉತ್ತರಮೂಲೆಗೆಳೆದ ಕರ್ಣರೇಖೆಯಂತೇ ಒಳದಾರಿಯಂತೇ ಇದು ಭಾಸವಾಗುತ್ತದೆ. ಆದರೆ ವಾಸ್ತವದಲ್ಲಿ ಹಳೆಗಾಲದ ಅಂಕುಡೊಂಕು, ಏರಿಳಿತ ಮತ್ತು ದ್ವಿಮುಖ ಸಂಚಾರದ ಅಷ್ಟೇನೂ ಒಳ್ಳೆಯದಿಲ್ಲದ ದಾರಿಯಿದು. ಸಾಲದ್ದಕ್ಕೆ ತಿಂಗಳೆರಡರ ಹಿಂದಷ್ಟೇ ನಾವಿದರಲ್ಲೇ ಆಗುಂಬೆಯವರೆಗೂ ಹೋಗಿ ಬಂದಿದ್ದೆವು. ಹಾಗಾಗಿ ಪರ್ಯಾಯ ದಾರಿಯ ಮೇಲೆ ಕಣ್ಣು ಹಾಕಿದೆವು. ಭೂಪಟದಲ್ಲಿ ತುಸು ದೂರದ್ದೆಂದೇ ಕಾಣುವ ಇದು ಹುಲಿಕಲ್ ಘಾಟಿ ದಾರಿ ಎಂದೇ ಪ್ರಸಿದ್ಧ.
ಗೂಗಲ್ ನಕ್ಷೆ ಇದರ ಕೆಲವು ಸಣ್ಣ ಪರ್ಯಾಯ ದಾರಿಗಳನ್ನು ನಿರಾಕರಿಸಿ, ಮೊದಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂದಾಪುರದ ಹೊರವಲಯ ಮತ್ತೆ ಲಂಬ ಕೋನದಲ್ಲಿ ಸಿದ್ಧಾಪುರಕ್ಕಾಗಿ ಘಟ್ಟವೇರಲು ಸೂಚಿಸುತ್ತದೆ. ಇದರಲ್ಲಿ ಹೆಗ್ಗೋಡು ೨೦೭ ಕಿಮೀ ಅಂತರದಲ್ಲೇ ಸಿದ್ಧಿಯಾಗುತ್ತದೆ. ಆದರೆ ಆಗುಂಬೆಘಾಟಿಗೆ ಹೋಲಿಕೆಯಲ್ಲಿ ಇಲ್ಲಿನ ಪ್ರಯಾಣಾವಧಿ ಮಾತ್ರ ಮೂರ್ನಾಲ್ಕು ಮಿನಿಟು ಹೆಚ್ಚೆಂದೇ ತೋರಿಸುವುದು ತಮಾಷೆಯಾಗಿದೆ. ಬಹುಶಃ ಈ ಮಾರ್ಗದಲ್ಲಿ ಅರ್ಧಾಂಶ ದಾರಿ ಈಗ ತೀರಾ ಆಧುನಿಕ ಸೌಕರ್ಯಗಳ ಮತ್ತು ಆರೋಗ್ಯಕರ ವೇಗಸಾಧನೆಯ ಅವಕಾಶ ಹೊಂದಿರುವುದು ಗೂಗಲ್ಲಿನ ಗಮನಕ್ಕೆ ಬಂದಂತಿಲ್ಲ.
ದೀರ್ಘ ಲಕ್ಷ್ಯ, ಅನೇಕ ವಿವರಗಳು ಆದರೆ ಅವಸರದ ಓಟ ನನ್ನ ಸ್ವಭಾವ. ಜತೆಗೊಡುತ್ತಿದ್ದ ಗೆಳೆಯರು ತಮಾಷೆಗೆ `ಕಬಡ್ಡಿ ತಂಡ’ ಎಂದೇ ನಮ್ಮ ಕಲಾಪವನ್ನು ಗುರುತಿಸುವುದಿತ್ತು. ಆದರೆ ಈ ಬಾರಿ ನಾಲ್ಕೈದು ಗಂಟೆಯ ದಾರಿಗೆ ಹಗಲಿಡೀ ಬಳಸಿಕೊಳ್ಳುವಂತೆ ಯೋಜಿಸಿದ್ದೆ. ಹಾಗಾಗಿ ಅಬ್ರಾಹ್ಮೀ ಮುಹೂರ್ತದಲ್ಲೆ ಅಂದರೆ, ಆರಾಮವಾಗಿ ಎದ್ದು ಕಾಫಿಂಡಿಯವರೆಗೆಲ್ಲವನ್ನೂ ವಿರಾಮವಾಗಿ ಮನೆಯಲ್ಲೇ ಪೂರೈಸಿ (೭.೪೫ಕ್ಕೆ) ಹೊರಟಿದ್ದೆವು.
ನುಣ್ಣನೆ ವಿಸ್ತಾರ ಮಾರ್ಗ, ಬಹುತೇಕ ಏಕ ಮುಖ ಸಂಚಾರದ ಅನುಕೂಲಗಳಲ್ಲಿ ಉಡುಪಿ ಕಳೆದು, ಮುಂದಿನೂರು ಸಾಲಿಗ್ರಾಮವನ್ನು (೭೫ ಕಿಮೀ) ಒಂಬತ್ತು ಗಂಟೆಗೂ ಮೊದಲೇ ತಲಪಿದ್ದೆವು.
ಸಾಲಿಗ್ರಾಮ ದಾಟುವಾಗ ಗೆಳೆಯರಾದ ಮಂಜುನಾಥ ಮತ್ತು ವೆಂಕಟ್ರಮಣ ಉಪಾಧ್ಯ ಸೋದರರ ಮಳಿಗೆಯಲ್ಲೊಮ್ಮೆ ಇಣುಕದೆ ಮುಂದುವರಿಯಲು ಮನಸ್ಸು ಬರುವುದಿಲ್ಲ. ಪೇಟೆಯಿಂದ ತುಸು ದೂರದಲ್ಲಿ, ಪ್ರತ್ಯೇಕ ಮನೆಯಲ್ಲಿರುವ ಸಂಸಾರಿ ಮಂಜುನಾಥ ಇನ್ನೂ ಬಂದಿರಲಿಲ್ಲ. `ಉಪಾಧ್ಯ ಬ್ರದರ್ಸ್’ ಮಳಿಗೆಯ ಭಾಗವೇ ಆಗಿರುವ ಮೂಲಮನೆಯಲ್ಲಿರುವ ಒಂಟಿಗ ವೆಂಕಟ್ರಮಣ ಮಳಿಗೆಯಲ್ಲೇ ಸಿಕ್ಕರು. ಇವರ ಸಾಂಪ್ರದಾಯಿಕ ಸರ್ವಸರಕಿನ ಮಳಿಗೆ ಒಂದು ಗ್ರಾಮೀಣ ಬದುಕಿಗೆ ಹಿಡಿದ ಕನ್ನಡಿ. ಅವರ ನಲ್ವತ್ತಕ್ಕೂ ಮಿಕ್ಕು ವರ್ಷಗಳ ಅನುಭವ ಯಾವುದೇ ಜನಪದ ಅಧ್ಯಯನಕ್ಕೆ ಬಹುದೊಡ್ಡ ಸಂಪತ್ತು; ಕುರಿತು ಮಾತಾಡಿ ದಾಖಲಿಸಿದವರಿಲ್ಲ. ನಾವಿದ್ದ ಕೆಲವೇ ಮಿನಿಟುಗಳಲ್ಲಿನ ಅವರ ಮಾಲು, ವಹಿವಾಟಿನ ಸಣ್ಣ ವಿವರಣೆ (ಇವೆಲ್ಲ ಉಪಾಧ್ಯರ ಅನುಭವಕ್ಕೆ ನನ್ನ ಭಾಷೆ): ಎರಡು ಗಾಜಿನ ಭರಣಿಗಳಲ್ಲಿ ಮಧ್ಯಮ ಹಾಗೂ ಕಿರುಗಾತ್ರದ ಗಾಜಿನಗೋಲಿಗಳಿದ್ದುವು. ದೊಡ್ಡ ಗಾತ್ರದವಕ್ಕೆ ಬೇಡಿಕೆ ಕಡಿಮೆ. ಮಕ್ಕಳಿಗಿಂದು ಗೋಲಿಯಾಟವೇ ತಿಳಿದಿಲ್ಲ. ಆದರೂ ಊರಿಗೆ ಬಂದ ಹಿರಿಯರು ತಮ್ಮ ಬಾಲ್ಯದ ನೆನಪಿಗಾಗಿ ಮಕ್ಕಳಿಗೆ ಈ ಬಹುವರ್ಣದ ಗೋಲಿಗಳನ್ನು ತೆಗೆಸಿ ಕೊಡುತ್ತಾರಂತೆ. ಮೊದಲೆಲ್ಲ ಬಹುತೇಕ ಏಕವರ್ಣದಲ್ಲಷ್ಟೇ ಸಿಗುತ್ತಿದ್ದ ಗೋಲಿಗಳು ಭಾರತೀಯವೇ ಇರುತ್ತಿದ್ದವು. ಇಂದಿನ ಆಕರ್ಷಕ ವರ್ಣಗಳ ಗೋಲಿಗಳು ಮೇಡ್ ಇನ್ ಚೀನಾ! ಪುಟ್ಟ ಗೋಲಿಗಳನ್ನು ಚೆನ್ನೆಮಣೆಯಾಟಕ್ಕೂ ಬಳಸುತ್ತಾರಂತೆ. ಮಧ್ಯಮ ಗಾತ್ರದವು ಮೀನ್ಮನೆಯ ಅಲಂಕಾರಕ್ಕೂ ಹೋಗುವುದಿದೆ. ಉಪಾಯ್ದರು ಇದನ್ನು ವಿವರಿಸುವ ನಡುವೆ “ಐದ್ರೂಪಾಯ್ಗೆ ಹರ್ವೆಬೀಜ” ಎಂದ ಗಿರಾಕಿಯೊಂದನ್ನು ಸುಧಾರಿಸಿದ್ದರು. ಅವರ ವಿಖ್ಯಾತ ಹೆರೆಮಣೆ ನೇತು ಬಿದ್ದದ್ದರ ಪಕ್ಕದಲ್ಲೇ ಅಸಂಖ್ಯ ಕ್ಯಾಟರ್ ಬಿಲ್ಲು ಕಾಣಿಸಿತು. ಈ ಕಾಲದಲ್ಲೂ ಅದರ ಆವಶ್ಯಕತೆಯದೇ ಪ್ರತ್ಯೇಕ ಕತೆ, ಬಿಡಿ. ಇದು ವೆಂಕಟ್ರಮಣ ಉಪಾಧ್ಯರದೇ ಕಮ್ಮಟದ ಒಂದು ಕಿಡಿ. ಹಳೆಗಾಲದ ಮರದ ಕವೆಯನ್ನಿವರು ಪೀವೀಸಿಗೆ ಬದಲಿಸಿದ ಬಗೆ, ಸೈಕಲ್ ಟ್ಯೂಬ್ ಲಾಡಿಗಳಿಗಿಂತ ಎಷ್ಟೋ ಹೆಚ್ಚಿನ ಸ್ಥಿತಿಸ್ಥಾಪಕ ಗುಣವಿರುವ ಭಿನ್ನ ರಬ್ಬರಿನ ಗುಟ್ಟು, ಕಲ್ಲಿಡುವ ಪಟ್ಟಿಯ ಜಾಣ್ಮೆ, ಕೊನೆಗೆ ಬಳಕೆ ಗೊತ್ತಿಲ್ಲದೆ ಆಕರ್ಷಿತನಾಗುವ ಗಿರಾಕಿಗೆ ಇವರು ಕೊಡುವ ಪಾಠ…. ಇಲ್ಲ, ವಿವರಿಸಿದಷ್ಟು ಮುಗಿಯದು. ಇಲ್ಲಿ ಕ್ಯಾಟರ್ ಬಿಲ್ಲಿನ ಉಪ ಉತ್ಪನ್ನವಾಗಿ ಉಳಿದ ತುಂಡು ಪೀವಿಸಿ ತಳೆದ ಅವತಾರ ನೋಡಿ. ಆ ತುಂಡಿನ ನಡುವಿಗೊಂದು ತೂತ ಮಾಡಿ, ಮಾರುದ್ದದ ದಪ್ಪ ಹತ್ತಿ ಹಗ್ಗ ಕಟ್ಟಿ ನೇತು ಹಾಕಿದ್ದರು. ದೇವಕಿ “ಇದೇನು” ಎಂದು ಕೇಳುವುದರೊಳಗೆ ನನ್ನ ಬಗೆಗಣ್ಣಿಗೆ ಬಾಲ್ಯದಲ್ಲಿ ಅಜ್ಜನ ಮನೆಯಲ್ಲಿ ಪೆಟ್ರೊಲ್ ಪಂಪುಗಳನ್ನು ಚಾಲನೆಗಿಳಿಸುವ ದೃಶ್ಯ ಕಟ್ಟಿಕೊಂಡಿತ್ತು. ಅಷ್ಟರಲ್ಲಿ ಇನ್ನೊಂದು ಗಿರಾಕಿ “ಹತ್ರುಪಾಯ್ಗೆ ಹರ್ವೆಬೀಜ” ಬಂತು. ತರಕಾರಿ ಬೀಜದ ಮಾತು ಬಂದಾಗ, “ಹೌದು ನನ್ನಪ್ಪಯ್ಯನ ಕಾಲದಲ್ಲಿ ಇಲ್ಲೇ ಮೂರು ಕ್ವಿಂಟಾಲಿನವರೆಗೂ ಕೆಲವು ಬೀಜಗಳ ದಾಸ್ತಾನು, ಮಾರಾಟ ನಡೀತಿತ್ತು” ಎಂದದ್ದು ಮತ್ತೊಂದು ಬೆರಗು. ಅವರಲ್ಲಿದ್ದ ಬೀಡುಕಬ್ಬಿಣದ ಅಪ್ಪದಗುಳಿ, ಇಲಿ ಕತ್ತರಿ, ಟೀಚಿಬ್ಲಿ, ಜಾನುವಾರು ಗಂಟೆ, ಲೈಟರ್… ಹೀಗೆ ಒಂದೊಂದರ ವಿಕಾಸ, ವರ್ತಮಾನದ ಕೊರತೆ, ಉತ್ತಮಿಕೆಗೆ ತಯಾರಕರಲ್ಲಿನ ಉದಾಸೀನ, ಸರಿಯಾದದ್ದಕ್ಕೆ ಹಕ್ಕೊತ್ತಾಯ ಮಂಡಿಸುವಲ್ಲಿನ ಗಿರಾಕಿಗಳ ಅಜ್ಞಾನ ಉಪಾಧ್ಯರು ಮಾತಿನ ಲಹರಿಯಲ್ಲಿ ಹೇಳುತ್ತಿದ್ದಂತೆ, ಸ್ವಾರಸ್ಯದಲ್ಲಿ ನಾವು ಮುಂದೆ ಹೋಗುವುದೇ ಮರೆತೀತೆಂದು ಹೆದರಿ ಸಂವಾದ ತುಂಡು ಮಾಡಿದೆ.
ಸಾಲಿಗ್ರಾಮದಿಂದ ಸುಮಾರು ಆರೆಂಟು ಕಿಮೀ ಮುಂದೆ ಹೆದ್ದಾರಿಯಲ್ಲಿ ಸಿಗುವ ಕುಂಭಾಸಿಯಲ್ಲಿ ಬಲಕ್ಕಿರುವ, ಬಹುಪ್ರಚಾರದಲ್ಲಿರುವ ಕ್ಷೇತ್ರ – ಆನೆಗುಡ್ಡೆ ವಿನಾಯಕನದ್ದು. ದೇವದರ್ಶನ, ಪುಣ್ಯ ಸಂಪ್ರಾಪ್ತಿಗಳಲ್ಲಿ ನಮಗೇನೂ ಆಸಕ್ತಿಯಿಲ್ಲ. ಆದರೆ ಬಹುದೊಡ್ಡ ಜನವರ್ಗದ ನಂಬಿಕೆಯ ನೆಲೆ ಮತ್ತು ಅಪರಿಮಿತ ಆರ್ಥಿಕ ಮತ್ತು ಸಾಮಾಜಿಕ ಪ್ರಭಾವಗಳ ನೆಲೆಯಾಗಿ ಅವುಗಳನ್ನು ನೋಡುವಲ್ಲಿ, ಅಲ್ಲಿನ ಆಚಾರಗಳನ್ನು ತಿಳಿದುಕೊಳ್ಳುವಲ್ಲಿ ನಮ್ಮ ಆಸಕ್ತಿ ಎಂದೂ ಹಿಂಗಿದ್ದಿಲ್ಲ. ನಾವು ಬಹುಕಾಲ ಹಿಂದೆ ನೋಡಿದಾಗ ಕಿರು ಗುಡ್ಡೆಯ ನೆತ್ತಿಯಲ್ಲಿ, ಭಾರೀ ತೋಪಿನ ನಡುವೆ ಇದ್ದ ಸಾಮಾನ್ಯ ಗುಡಿ ಇಂದು ಭರ್ಜರಿ ವಿಸ್ತರಣೆ ಕಂಡಿದೆ. ಶುದ್ಧ ಡಾಮರು ದಾರಿ, ಇಂಟರ್ಲಾಕಿನ ನೆಲಹಾಸು ವ್ಯಾಪಿಸಿ ತೋಪನ್ನೆಲ್ಲ ಶಿಸ್ತುಬದ್ಧ ವಾಹನ ತಂಗುದಾಣವಾಗಿಸಿದ್ದರು. ಅದರಲ್ಲೂ ಪೂಜೆಗಾಗಿಯೇ ಬರುವ ವಾಹನಗಳಿಗಾಗಿ ಭರ್ಜರಿ ಮಾಡು ನಿಲ್ಲಿಸಿದ್ದು ಗಮನ ಸೆಳೆಯುವಂತಿತ್ತು. ಎಷ್ಟೋ ನಿಜ ವಾಹನ ಸಮ್ಮಾನತಾಣ ಅರ್ಥಾತ್ ಗ್ಯಾರೇಜುಗಳಿಗಿಲ್ಲದ ಈ ಭಾಗ್ಯ, ಇಲ್ಲಿ ಕೇವಲ ಅದರ ಮಾಲಿಕರ ಮನೋಕಾಮನೆಗಾಗಿ ಒದಗುತ್ತಿರುವುದು ಕಂಡು ನಗು ಬಂತು. ಲೋಹಕ್ಕೆ ತುಕ್ಕು ತರುವ ಕುಂಕುಮಾದಿ ನಾಮ, ಚಾಲಕನ ದೃಷ್ಟಿ ಮರೆಮಾಡುವ ಬಾಳೆ ಪುಷ್ಪಾದಿ ಅಲಂಕಾರಗಳು, ತಾಯಿತವಾಗಿ ವ್ಯರ್ಥವಾಗುವ ಮೆಣಸು, ನಿಂಬೆ, ಕುಂಬಳಾದಿ ತರಕಾರಿಗಳ ಯಾದಿ ಮಾಡುತ್ತ ವಠಾರದಲ್ಲಿ ಒಂದು ಸುತ್ತು ತೆಗೆದೆವು.
ಗರ್ಭಗುಡಿಯ ಪ್ರದಕ್ಷಿಣೆ ಸುತ್ತಿನಲ್ಲಿ ಗೋಡೆಯ ಮೇಲೆ ಗಣೇಶಪುರಾಣದ ಭಿತ್ತಿ ಚಿತ್ರಗಳಿದ್ದುವು. ಅವು ಭಕ್ತಾದಿಗಳ ನಿರಂತರ ಸ್ಪರ್ಷದಿಂದ (ತೈಲ, ಗಂಧಾದಿ ಲೇಪಗಳೂ ಮಾಡುವುದಿದೆ) ಮುಕ್ಕಾಗದಂತೆ ಗಾಜಿನ ಮರೆ ಕಟ್ಟಿದ್ದರು. ಆದರೆ ಅದರ ಮೇಲಾದರೂ ಸೈಯೆಂದು ಕೈ ಮುಟ್ಟಿಸುವವರು, ಮೃದುವಾಗಿ ತಲೆ ಹೆಟ್ಟುವವರನ್ನು ನೋಡಿ ಅಬ್ಬ ಅನಿಸಿತು. ನಮ್ಮನೆ ಸಮೀಪದ ಕರಂಗಲ್ಪಾಡಿ ಈಶ್ವರನ ಗುಡಿ ಎದುರು ಇಂಥ ಹಲವು ಸರ್ಕಸ್ಸುಗಳನ್ನು ನಾನು ನಿತ್ಯ ಕಾಣುತ್ತಿರುತ್ತೇನೆ. ಇಂಥವನ್ನೆಲ್ಲ ನೆನೆಸುವಾಗ ದೇವರು ಇರಬೇಕಿತ್ತು ಎಂದನ್ನಿಸಿಬಿಡುತ್ತದೆ. ಪ್ರಾಕೃತಿಕ ಬಲಗಳಿಗೆ ಅತೀತವಾದ ಆಶಯವೊಂದಕ್ಕೆ ತೆತ್ತುಕೊಂಡ ಈ ಭಕ್ತಿ ಎಷ್ಟು ದೊಡ್ಡ ಮೌಢ್ಯವಾದರೂ ದೊಡ್ಡದೇ ಎನ್ನುವುದರಲ್ಲಿ ಸಂಶಯವಿಲ್ಲ.
ಕೋಟೇಶ್ವರದಿಂದ ಮುಂದೆ, ಕುಂದಾಪುರಕ್ಕೂ ತುಸು ಹಿಂದೆ ನಾವು ಹೆದ್ದಾರಿ ಬಿಟ್ಟು ಬಲಕ್ಕೆ ಹೊರಳಿಕೊಂಡೆವು. ನಮ್ಮ ಮುಂದಿನ ಲಕ್ಷ್ಯ ಕಮಲಶಿಲೆ. ಮಂಗಳೂರಿನ ಆಸುಪಾಸಿನಲ್ಲಿ ೧೯೮೦ರ ದಶಕದಲ್ಲಿ ನಾನು ತಂಡ ಕಟ್ಟಿಕೊಂಡು ತೀವ್ರವಾಗಿ ನಡೆಸಿದ ಗುಹಾನ್ವೇಷಣೆಗಳ ಕಾಲದಲ್ಲಿ ಸದಾ ಕೇಳುತ್ತಿದ್ದ ಹೆಸರು ಈ ಕಮಲಶಿಲೆ. ನಮ್ಮ ದಾರಿಯಲ್ಲಿ ಅದಕ್ಕೆ ಕವಲೊಡೆಯುವ ನೆಲೆ ಸಿದ್ಧಾಪುರ. ಇದು ಪಶ್ಚಿಮ ಘಟ್ಟದ ನೇರ ತಪ್ಪಲು, ಹುಲಿಕಲ್ ಘಾಟಿಯ ಆರಂಭ ಬಿಂದು. ವರಾಹಿ ಜಲವಿದ್ಯುದಾಗರಕ್ಕೆ ಹೋಗುವುದಿದ್ದರೂ ಸಿದ್ಧಾಪುರ, ಪ್ರಮುಖ ಕೈಕಂಬ. ಸುಮಾರು ಮೂವತ್ತು ವರ್ಷಗಳಿಂದ ನದಿ ಜೋಡಣೆಯ ಹೆಸರಿನಲ್ಲಿ ಕೋಟ್ಯಂತರ ಸಾರ್ವಜನಿಕ ಹಣ ಪೋಲು ಮಾಡಿ, ಪರಿಸರವನ್ನು ಇನ್ನಿಲ್ಲದಂತೆ ಕೆಡಿಸಿ, ಇಂದಿಗೂ ಒಂದು ಹನಿ ಸರಿಯಾಗಿ ಹರಿಸಲಾಗದ ಕುಪ್ರಸಿದ್ಧ ವರಾಹಿ ನೀರಾವರಿ ಯೋಜನೆಯ ಮೂಲನೆಲೆಯೂ ಇದೇ ಸಿದ್ಧಾಪುರ. ಅಲ್ಲಿಂದ ಒಂದೇ ಕಿಮೀ ಮುಂದೆ, ಮುಖ್ಯ ದಾರಿ ಬಿಟ್ಟು ಎಡಗವಲು ಹಿಡಿದರೆ, ಸುಮಾರು ಏಳು ಕಿಮೀ ಅಂತರದಲ್ಲಿ ಕಮಲಶಿಲೆ – ಬ್ರಾಹ್ಮಿ ದುರ್ಗಾಪರಮೇಶ್ವರಿಯ ಆರಾಧ್ಯ ನೆಲೆ.
ಕುಬ್ಜಾ ನದಿ ತೀರದಲ್ಲಿ, ದಿಟ್ಟ ಬೆಟ್ಟದ ಬುಡಕ್ಕಂಟಿಕೊಂಡು, ದಟ್ಟ ಕಾಡನ್ನು ಹೊದ್ದುಕೊಂಡು ಕುಳಿತಂತಿರುವ ಕ್ಷೇತ್ರ ಕಮಲಶಿಲೆ. ಆ ಪ್ರಾಕೃತಿಕ ಸನ್ನಿವೇಶಕ್ಕೆ, ಪುರಾಣ ಹೇಳಿಕೊಳ್ಳುವ ಪ್ರಾಚೀನತೆಗೆ ಏನೂ ಒಪ್ಪದ ಅಭಿವೃದ್ಧಿಗಳ ಸುಳಿಯಲ್ಲಿ ಸಿಕ್ಕ ದೇವಳ ನೀರಸವಾಗಿ ತೋರಿತು. ಎದುರಿನ ಅಂಗಡಿ ಮುಂಗಟ್ಟುಗಳು, ಸಿಮೆಂಟು ಗ್ರಿಲ್ಲುಗಳ ಕಟಕಟೆ ಸಹಿತವಾದ ಒಂದು ಮಾಳಿಗೆಯ ಹಂಚಿನ ಮಾಡಿನ ಉದ್ದನ್ನ ಕಟ್ಟಡ ಯಾವುದೋ ಹಳೆಗಾಲದ ವಿದ್ಯಾರ್ಥಿ ನಿಲಯ ನೆನಪಿಸುವಂತಿತ್ತು. ಅಂಗಡಿಗಳಲ್ಲಿನ ಪೂಜಾವಸ್ತುಗಳು, ಬೋರ್ಡುಗಳು ಮತ್ತು ಹಂಚಿನ ಮಾಡನ್ನು ಮೀರಿ ಹಿಂದಿನಿಂದ ಸಣ್ಣದಾಗಿ ಇಣುಕುವ ಗರುಡಗಂಬದ ತಲೆಯಲ್ಲದಿದ್ದರೆ ಹೊಸಬರು “ದೇವಳ ಎಲ್ಲಿ” ಎಂದು ಕೇಳುವ ಸ್ಥಿತಿ! ವಠಾರದ ಶುಚಿನೋಡಿಕೊಳ್ಳುವವರು ಕಾಂಕ್ರೀಟ್ ಹಾಕಿದ ಅಂಗಳ ಗುಡಿಸಿ ತೆಗೆದ ಪ್ಲ್ಯಾಸ್ಟಿಕ್ಕಾದಿ ಕಸವನ್ನು ಶಿಸ್ತಿನಲ್ಲಿ (ಬಹುಶಃ ಮಾಮೂಲಿನಂತೆ) ಪವಿತ್ರ ಕುಬ್ಜಾನದಿಯ ಮಡಿಲು ತುಂಬಿದಾಗಂತೂ ನಮಗೆ ಅಯ್ಯೋ ಅನ್ನಿಸದಿರಲಿಲ್ಲ. ಆದರೆ ಪರಿಸರ ಪಾಠಕ್ಕಿಳಿದು, ನಮ್ಮ ಕ್ಷಣಕಾಲದ ಭೇಟಿಯ ಲಕ್ಷ್ಯ (ಗುಹಾ ದರ್ಶನ) ಕಳೆದು ಹೋಗದ ಎಚ್ಚರದಲ್ಲಿ ಮೌನಿಯಾಗುಳಿದೆ. ಕಾರು, ಚಪ್ಪಲಿ ಬಿಟ್ಟು, ದೇವಳದ ಮೊದಲ ಆವರಣದ ಒಳ ನಡೆಯುತ್ತಿದ್ದಂತೆ, “ಗಂಡಸರು ಅಂಗಿ ಬನಿಯನ್ನು ತೆಗೆಯಬೇಕು” ದೇವಳದ ಪಹರೆಯವನ ಫರ್ಮಾನು ಹೊರಟಿತು. ಮತ್ತೆ ಮನದಲ್ಲೊಂದು ಹೆದ್ದೆರೆ – ಪ್ರತಿಭಟನೆಯದ್ದು, ಧುತ್ತನೆದ್ದಿತು. ಅದನ್ನಲ್ಲೇ ಅದುಮಿಕೊಂಡು, ನಿಂತು, “ದೇವಳದ ಒಳಗಿನ ಗುಹೆಗೆ ಪ್ರವೇಶವಿದೆಯಲ್ಲವೇ” ಎಂದು ಆತನನ್ನೇ ಕೇಳಿದೆ. “ಇಲ್ಲಿ ದೇವಸ್ಥಾನ ಮಾತ್ರ. ಗುಹೆಗೆ ನೀವು ಬಂದ ದಾರಿಯಲ್ಲೇ ಒಂದು ಕಿಮೀ ಮೆಲೆ ಹೋಗಬೇಕು. ಅದಕ್ಕೆ ಟಿಕೆಟ್ ಮತ್ತು ಮಾರ್ಗದರ್ಶಿಯನ್ನು ಆಫೀಸಿನಲ್ಲಿ ಕೊಡುತ್ತಾರೆ” ಎಂದ. ಅಂಗಿ ಕಳಚಲು ತೊಡಗಿದ್ದ ನಾನು ಕೂಡಲೇ ಹಿಂದಡಿಯಿಟ್ಟೆ. ಒಳಗಿನ ಕಟ್ಟೆಯೊಂದರಲ್ಲಿ ಕುಳಿತ ಭಟ್ಟರೂ ಪಹರೆಯವನೂ ನನ್ನನ್ನು ದುರದುರನೆ ನೋಡಿದರು. ಅವರನ್ನು ತುಸು ತಣಿಸುವಂತೆ ದೇವಕಿಯೊಬ್ಬಳೇ ಚುರುಕಾಗಿ ಒಳಗೆ ಒಂದು ಸುತ್ತು ಹಾಕಿ ಬಂದಳು. ಅಷ್ಟರೊಳಗೆ ನಾನು ಇಪ್ಪತ್ತೈದು ರೂಪಾಯಿ ತೆತ್ತು ಗುಹಾ ಟಿಕೆಟ್ ಖರೀದಿಸಿ, ಮಾರ್ಗಸೂಚನೆ ಪಡೆದಿದ್ದೆ.
ಕಾರೇರಿ ಸಿದ್ಧಾಪುರದಿಂದ ನಾವು ಬಂದ ದಾರಿಯಲ್ಲೇ ಸುಮಾರು ಒಂದು ಕಿಮೀ ಮುಂದೆ ಹೋದೆವು. ಕಗ್ಗಾಡು ಮತ್ತು ಪಕ್ಕಾ ಏರುದಾರಿ. `ಆದಿ ಸ್ಥಳ, ಗುಹಾಲಯಾ’ ಎಂದು ಬೋರ್ಡು ಕಂಡಲ್ಲಿ ಎಡದ ಮಣ್ಣ ದಾರಿ ಅನುಸರಿಸಿದೆವು. ನೂರಿನ್ನೂರು ಮೀಟರಿನಲ್ಲೇ ನಿರ್ಜನ ಕಾಡಿನ ಪರಿಸರದಲ್ಲೇ ದೇವಳ ಸೂಚಿಸಿದ್ದ ಮಾರ್ಗದರ್ಶಿ – ರಾಘು ನಮ್ಮನ್ನು ಸ್ವಾಗತಿಸಿದ. ಸ್ಥಳ ಮರ್ಯಾದೆಯಂತೆ ಕಾರು, ಚಪ್ಪಲಿ ಬಿಟ್ಟು, ಆತ ಕೊಟ್ಟ ಹೆಚ್ಚುವರಿ ಟಾರ್ಚ್ ಹಿಡಿದು (ನಮ್ಮಲ್ಲಿ ಒಂದಿತ್ತು) ಸ್ವಲ್ಪ ನಡೆದೆವು. ಗಟ್ಟಿ ಮುರಕಲ್ಲಿನ ಹಾಸಿನ ದಾರಿ ಒರಟೊರಟಾಗಿಯೇ ಇತ್ತು. ಅಲ್ಲೇ ನೂರಡಿ ಮುಂದೆ ಎದ್ದು ಕಾಣುವಂತೆ ಒಂದು ಸಣ್ಣ ಹಂಚಿನ ಮನೆಯಂಥ ರಚನೆಯಿತ್ತು. ಅದು ಬಹುಶಃ ಸ್ಥಳೀಯ ಉಸ್ತುವಾರಿಯ ಉಗ್ರಾಣವಿರಬೇಕು. ಸಮೀಪಿಸಿದಾಗ, ಅದರ ಅಂಗಳದಲ್ಲೇ ಎನ್ನುವಂತೆ ಮುರಕಲ್ಲಿನ ನೆಲ ವಿಸ್ತಾರವಾಗಿ ಬಿರಿದು ಗುಹಾದ್ವಾರವನ್ನು ಕಾಣಿಸಿತ್ತು.
ದಕ ವಲಯದಲ್ಲಿ ನಾನು ಈ ವರೆಗೆ ಕಂಡ ಪ್ರಾಕೃತಿಕ ಮುರಕಲ್ಲ ಸವಕಳಿ ಮಾಟೆಗಳಿಗಿಂಥ ಕಮಲಶಿಲೆಯ ಗುಹಾಲಯ ಏನೂ ಭಿನ್ನವಲ್ಲ. ಮುರಕಲ್ಲು ಅಥವಾ ಜಂಬಿಟ್ಟಿಗೆ ಎಂದೆಲ್ಲ ಪರಿಚಿತವಿರುವ ಗಟ್ಟಿಮಣ್ಣಿನೊಡನೆ ಶೇಡಿ ಅಥವಾ ಬಿಳಿಯ ಮಿದು ಮಣ್ಣು ಹಾಸುಹೊಕ್ಕಾಗಿರುವುದು ನಮಗೆಲ್ಲ ತಿಳಿದಿರುವ ಪ್ರಾಕೃತಿಕ ಸತ್ಯ. ಈ ಶೇಡಿ ಯುಗಾಂತರಗಳ ನೀರಿನ ಸವಕಳಿಯಲ್ಲಿ ತೊಳೆದು ಹೋಗಿ ಉಳಿದ ಪೊಳ್ಳುಗಳೇ ಗುಹೆಗಳು. ಅವುಗಳಲ್ಲಿ ಮನುಷ್ಯ ಪ್ರವೇಶದ ಸಾಧ್ಯತೆ ಇರುವವನ್ನು ಹಲವು ಕಡೆಗಳಲ್ಲಿ ಕಂಡುಕೊಂಡಂತೆ, ಇಲ್ಲೂ ಭಯಾಧಾರಿತ ಭಕ್ತಿಯಲ್ಲಿ ಗುಹಾಲಯವೆಂದೂ ಯಾವ್ಯಾವುದೋ ತೀರ್ಥಕ್ಷೇತ್ರಗಳಿಗೆ ಭೂಗತ ಮಾರ್ಗ ಎಂದೂ ಸ್ಥಳಪುರಾಣ ಕಟ್ಟಿಕೊಂಡಿದ್ದಾರೆ. ನಾವು ಪುರಾಣದ ವಿವರಗಳನ್ನು ಕೇಳದೇ ನಮ್ಮ ತಿಳುವಳಿಕೆಯನ್ನು ರಾಘುವಿಗೆ ತಿಳಿಸಲೂ ಹೋಗಲಿಲ್ಲ. ಕೇವಲ ಗುಹಾಲಯದ ಪ್ರಾಕೃತಿಕ ಸತ್ಯವನ್ನಷ್ಟೇ ಗ್ರಹಿಸುವ ಉತ್ಸಾಹದಲ್ಲಿ ರಾಘು ಅನುಸಾರಿಗಳಾದೆವು.
ಗುಹೆಗೆ ಗುಡ್ಡೆಯ ಮಳೆಗಾಲದ ನೀರಿಳಿವ ಜಾಡು ತಪ್ಪಿಸಿ, ಓರೆಯಲ್ಲಿ ಹಗುರಕ್ಕೆ ಇಳಿಮೆಟ್ಟಿಲು ಕಡಿದಿದ್ದರು. ಅದಕ್ಕೆ ಹೊರಗಿನ ಕಲ್ಲು, ಸಿಮೆಂಟಾದಿ ಯಾವುದೇ ಅನ್ಯ ಉಪಚಾರಗಳನ್ನು ನಡೆದಿಲ್ಲ. ಹಾಗಾಗಿ ನೀರಪಸೆ, ಮಿದುಮಣ್ಣಿನ ಅಸ್ಪಷ್ಟ ಜಾಡುಗಳಲ್ಲಿ ಜಾರದಂತೆ ಜಾಗ್ರತೆಯಿಂದ ಪದವೂರುತ್ತ ಗುಹೆಯ ಅಂಧಕಾರದಲ್ಲಿ ಸೇರಿಕೊಂಡೆವು. ಗುಹೆ ನಮ್ಮ ಆಯ ಅಳತೆಗಳ ಯಾವುದೇ ನಿರ್ದಿಷ್ಟ ವಿವರಣೆಗೆ ದಕ್ಕದಂತೆ ವ್ಯಾಪಿಸಿತ್ತು. ನಮ್ಮ ಭಾಷೆಯಲ್ಲೇ ಹೇಳುವುದಿದ್ದರೆ ಅಲ್ಲಿನ ನೆಲ, ಗೋಡೆ, ಮಾಡು ಮತ್ತು ಹಲವು ಕವಲುಗಳೆಲ್ಲ ಸವಕಳಿಯಲ್ಲಿ ನಿಧಾನಿಯಾದ ಮುರಕಲ್ಲಿನದೇ. ಮನುಷ್ಯ ಸುಲಭವಾಗಿ ಸಂಚರಿಸಬಹುದಾದಷ್ಟು ಉದ್ದಗಲ ಒದಗಿಸುವ ಮುಖ್ಯ ಪೊಳ್ಳಜಾಡಿನಲ್ಲಿ ಸುಮಾರು ಐವತ್ತು ನೂರು ಮೀಟರಿನಷ್ಟು ಒಳಗಿನವರೆಗೆ ಮಾತ್ರ ಭಕ್ತಾದಿಗಳು ಓಡಾಡುವುದು, ಒಂದೆರಡು ಕಡೆ ತೀರಾ ಸರಳ ಪೂಜಾಕಾರ್ಯ ನಡೆಸುವುದೂ ಕಾಣಿಸುತ್ತದೆ.
ನಾವೂ ಅಷ್ಟೇ ಗುಹೆಯನ್ನು ಅನುಭವಿಸಿ ಬಂದೆವು. ಒಂದಷ್ಟು ಉದ್ದಕ್ಕೆ ತೆಳು ನೀರಿನ ಹರಿವು, ಒಂದೆರಡು ಕಡೆ ತುಸು ತಲೆ ತಗ್ಗಿಸಿ ನಡೆವಂತೆ ತಗ್ಗಿದ ಮಾಡು, ನೆಲದಲ್ಲಿ ಕರಗಿಹೋಗದ ಮಣ್ಣ ದಿಣ್ಣೆ, ಎಂದೆಂದೋ ಕಳಚಿ ಬಿದ್ದಿರಬಹುದಾದ ಕಲ್ಲಗುಂಡುಗಳಲ್ಲಿ ಕೆಲವನ್ನು ಬಳಸಿ, ಕೆಲವನ್ನು ಹತ್ತಿಳಿದು ಸುತ್ತಿದ್ದೆವು. ಇನ್ನೂ ಮಳೆಗಾಲದ ತಂಪು ವಾತಾವರಣದಲ್ಲಿದ್ದುದರಿಂದ, ಒಳಗಿನ ತೇವಾಂಶದ ಪರಿಣಾಮದ ಬಿಸಿ ನಮ್ಮನ್ನು ಕಾಡಲಿಲ್ಲ. ಬಾವಲಿಮೂರಿ ಮಾತ್ರ ದಟ್ಟವಾಗಿ ಮೂಗಿಗಡರುತ್ತಿತ್ತು. ಎತ್ತರದ ಛತ್ತುಗಳಲ್ಲಿ ನೇತು ಬಿದ್ದ ಸಾವಿರಾರು ಬಾವಲಿಗಳು ನಮ್ಮ ಟಾರ್ಚುಗಳ ಬೆಳಕೋಲು `ಕುಟ್ಟಿ’ದಂತೆಲ್ಲಾ ಭರ್ರೆಂದು ಸ್ಥಳಾಂತರಗೊಳ್ಳುತ್ತ ಹಾರಾಟ ನಡೆಸಿದ್ದವು. ನೆಲದ ಸಹಜ ಕೆಂಪನ್ನೂ ನೀರಿನ ಶುದ್ಧವನ್ನೂ ಅವುಗಳ ಹಿಕ್ಕೆಯ ಕರಿ, ಗುಡ್ಡೆ ತೊಳೆದು ಬಂದಿರಬಹುದಾದ ಕಸ ಮರೆಸಿತ್ತು.
ಒಂದೆರಡು ದಿಣ್ಣೆಗಳ ಮೇಲೆ ಸಣ್ಣಪುಟ್ಟ ಕಗ್ಗಲ್ಲೋ ಮೂರ್ತಿಯೋ ಇಟ್ಟು ಪೂಜಿಸಿದ್ದರು. ಬೆಳ್ಳಿಯಂತೆ ತೋರುತ್ತಿದ್ದ ಪೂಜಾ ಸಲಕರಣೆಗಳು, ಕೆಲವು ದೊಡ್ಡ ನೋಟುಗಳೂ ಇದ್ದ ಆರತಿ ತಟ್ಟೆ, ಕೈಮುಗಿಯುವುದು, ತೀರ್ಥ, ಕುಂಕುಮಾದಿಗಳ ತಂಟೆಗೆ ನಾವು ಹೋಗಲೇ ಇಲ್ಲ. ಅವಕ್ಕೆಲ್ಲ ನಮ್ಮದೇನಿದ್ದರೂ ಹಾರುನೋಟ. ಮಾರ್ಗದರ್ಶಿ ಮಾತ್ರ ಎಲ್ಲೆಡೆಗಳಂತೆ `ಉದ್ಭವಮೂರ್ತಿ’ಗಳ ಕಾರಣಿಕ, ಕವಲು ಗುಹೆಗಳ ನಿಗೂಢ ಮಹಿಮೆಗಳನ್ನು ಬಿತ್ತರಿಸಲು ಉತ್ಸುಕನಾಗಿದ್ದ; ನಮಗೆ ಬೇಕಿರಲಿಲ್ಲ! ಒಂದು ಹಂತದನಂತರ ತುಸು ತೀವ್ರ ಇಳುಕಲಿದ್ದುದರಿಂದ ಸಾಮಾನ್ಯರು ಮುಂದುವರಿಯಲು ಹೆದರುವಂತೇ ಇತ್ತು. ಅದರಾಚೆಗೆ “ಮಹಾಯೋಗಿ ವರದಳ್ಳಿ ಶ್ರೀಧರಸ್ವಾಮಿಗಳಿಗೂ ಹೋಗಲಾಗಲಿಲ್ಲ. ಇನ್ನು ನಾವೇನು ಬಿಡಿ” ಎಂದು ರಾಘು ನಮ್ಮನ್ನು ವಾಪಾಸು ಹೊರಡಿಸಿದ್ದ.
ಒಳಗೆ ಹೋಗುವಾಗಲೇ ನಮ್ಮ ನಾಸ್ತಿಕ್ಯ ಕಂಡು ಒಮ್ಮೆ ಆತ “ಬೇಗ ಹೊರಗೆ ಹೋಗಬೇಕು. ದೈವೀ ಶಕ್ತಿಗಳ ಮುನಿದರೆ ಏನೂ ಆಗಬಹುದು…” ಎಂದು ನಮ್ಮಲ್ಲಿ ಭಯ ಬಿತ್ತಲೂ ನೋಡಿದ್ದ. ಆಗ ನಾನು ಸಣ್ಣದಾಗಿ ನಾನಿಂಥ ಮೂವತ್ತಕ್ಕೂ ಮಿಕ್ಕು ಗುಹೆಗಳನ್ನು ಶೋಧಿಸಿದ್ದನ್ನು ಹೇಳಿದೆ. ಈ ರಚನೆಗಳೆಲ್ಲ ಮಳೆಗಾಲದಷ್ಟು ಉಳಿಗಾಲಗಳಲ್ಲಿ ಅಸ್ಥಿರವಲ್ಲ ಎಂದೂ ಸಮಾಧಾನಿಸಿದ್ದೆ. ಆದರೂ ಆತ ಮುಂದುವರಿದು, “ಇಲ್ಲಿ ಎಂಥಾ ಕತ್ತಲಿತ್ತೂಂತ ಅಂದಾಜುಂಟಾ” ಎಂದೇ ಕೇಳಿದ. ನಮಗೆ ಅದೇನೂ ಹೊಸತಲ್ಲ. ಆದರೂ ಆತನ ತೃಪ್ತಿಗಾಗಿ ಒಂದು ಮಿನಿಟು ಮೂವರೂ ಟಾರ್ಚು ಆರಿಸಿ ನಿಂತದ್ದೂ ಆಯ್ತು.
ಈ ಎಲ್ಲದರ ಕೊನೆಯಲ್ಲಿ ನಮ್ಮ ಭಯ, ಭಕ್ತಿಗಳ ಪ್ರತಿಕ್ರಿಯೆಯೇನೂ ಕಾಣದೆ ಆತ ನಿರಾಶನಾಗಿರಬೇಕು. ಹಾಗಾಗಿ ಕೊನೆಯ ಅಸ್ತ್ರವಾದ ದೈನ್ಯಾನುಸಂಧಾನ ನಡೆಸಿದ. ಇಲ್ಲಿನ ಶುಚಿ, ಪೂಜೆ, ಟಾರ್ಚುಗಳ ಖರ್ಚು ತನ್ನದೇ. ಜನ ಏನು ಭಾರಿ ಬರುವುದಿಲ್ಲ. ತನಗೆ ಸಂಬಳ ಇಲ್ಲ. ಇಲ್ಲಿನ ಭಕ್ತಿಯಷ್ಟೇ ತನ್ನ ಆದಾಯ ಇತ್ಯಾದಿ. ನಾನು ದೇವಳದ ಇಪ್ಪತ್ತೈದು ರೂಪಾಯಿ ಟಿಕೆಟ್ ತೋರಿದ ಮೇಲೆ ಆತನ ನಿರಾಶೆ ಹೆಚ್ಚಿರಬೇಕು, “ವ್ಯಾಪಾರ ಗಿಟ್ಟುವುದಿಲ್ಲ” ಎಂದನ್ನಿಸಿರಬೇಕು. ಅದಕ್ಕೆ ಸರಿಯಾಗಿ ನಾವು ಮತ್ತೆ ಹೊರದ್ವಾರ ಸಮೀಪಿಸಿದ್ದೆವು. ಅದರ ಬೆಳಕಿಂಡಿಯಲ್ಲಿ ಯಾರೋ ಸುಳಿದದ್ದು ಕಾಣಿಸಿತ್ತು. “ಸರಿ ಬೇಗ ಹೋಗುವ, ಬೇರೆಯವರು ನೋಡಲು ಬಂದಿದ್ದಾರೆ” ಎಂದು ನಮ್ಮನ್ನು ಅವಸರಿಸಿದ. ನಮಗಾದರೋ ಅಲ್ಲೇ ಬೇರು ಬಿಡುವ ಉತ್ಸಾಹವೇನೂ ಇಲ್ಲದ್ದರಿಂದ ಆತನಿಗೆ ಹತ್ತು ರೂಪಾಯಿ ಇನಾಮು ಕೊಟ್ಟು, ಟಾರ್ಚ್ ಮರಳಿಸಿ ಮತ್ತೆ ಕಾರೇರಿದೆವು.
ಈ ಪ್ರವಾಸಕಥನ ಬರೆಯುವ ಕಾಲಕ್ಕೆ ಅಂತರ್ಜಾಲದಲ್ಲಿ ಟಿವಿ ೯ ೨೦೧೧ರಲ್ಲಿ ಇದೇ ಗುಹಾಲಯದ ಕುರಿತೊಂದು ವಿಸ್ತೃತ `ಕಥೆ ಕಟ್ಟಿದ್ದು’ ನೋಡುವ ಅವಕಾಶ ಸಿಕ್ಕಿತು. ಆದರದು ಟೀವೀ ಚಾನೆಲ್ಲುಗಳ ಹೊಲಸು ಮಾದರಿಗೆ ಇನ್ನೊಂದು ಸೇರ್ಪಡೆಯಷ್ಟೇ ಆಗಿತ್ತು. ಅದು ಅತ್ತ ರಕ್ಕಸ ಮರ್ಧಿನಿಯ ಪುರಾಣದ ಚಂದವನ್ನೂ ಇತ್ತ ಪ್ರಾಕೃತಿಕ ಅದ್ಭುತದ ಅನಾವರಣವನ್ನೂ ಮಾಡದೆ, ಕೆಟ್ಟ ಧ್ವನಿಯಲ್ಲಿ, ಉತ್ಪ್ರೇಕ್ಷೆಗಳ ಬಲದಲ್ಲಿ ತೀರಾ ದುರ್ಬಲವಾದ `ಹುಲಿ ಪವಾಡ’ವನ್ನು ಕಟ್ಟಲು ಹೋಗಿ ಹೊಲಸು ಮಾಡಿಕೊಂಡಿತ್ತು. ನನ್ನ ಗುಹಾಶೋಧದ ಮಾಲಿಕೆ, ಮುಖ್ಯವಾಗಿ ಜಾಂಬ್ರಿಯ ಕುರಿತು ಬೆಳೆದ ದಾರಿ ತಪ್ಪಿದ ವಾದಸರಣಿ ನೆನಪಾಗಿ ಮನಸ್ಸು ರೋಸಿಹೋಯ್ತು. ಮೂವತ್ತು ವರ್ಷಗಳ ಹಿಂದೆ, ಪತ್ರಿಕಾ ಮಾಧ್ಯಮ ನಮಗೆ ವಸ್ತುನಿಷ್ಠ ಪ್ರತಿಪಾದನೆಗೆ (ನಾವೆಲ್ಲೂ ಪರನಿಂದೆ ನಡೆಸಲಿಲ್ಲ) ಧಾರಾಳ ಅವಕಾಶ ನೀಡಿತ್ತು. ಆದರೂ ಒಂದೆರಡು ಕಡೆ ನಮಗೆ ಪ್ರತಿರೋಧ ಕಾಣಿಸಿತ್ತು. ಬದಲಿಗೆ ಇಂದಿನ ಟೀವೀ ಛಾನೆಲ್ಲುಗಳಿದ್ದಿದ್ದರೆ ನಾವು ಬದುಕಿ ಉಳಿಯುತ್ತಿರಲಿಲ್ಲ; ಹೀಘೇ ಉಂಠು!
ಸಿದ್ಧಾಪುರಕ್ಕೆ ಮರಳಿ ಮತ್ತೆ ಸಾಗರದತ್ತ, ಅಂದರೆ ಘಾಟಿ ಏರ ಹೊರಟೆವು. ಬಳ್ಳಾರಿ ಗಣಿಧಣಿಗಳ ಹಾವಳಿಯಲ್ಲಿ ಕಿತ್ತು ಕುಲಗೆಟ್ಟು ಹೋಗಿದ್ದ ಹುಲಿಕಲ್ ಘಾಟಿ, ಇಂದು ಸುಮಾರು ಅರ್ಧಾಂಶ ಒಳ್ಳೆಯ ಡಾಮರು ಮತ್ತಷ್ಟೇ ಕಾಂಕ್ರೀಟ್ ಕಂಡು ಉತ್ತಮ ಸ್ಥಿತಿಯಲ್ಲಿದೆ. ಆದರೆ ದಾರಿಯ ಅಗಲ ಹೆಚ್ಚಿಸದೇ ಓರೆಕೋರೆಗಳನ್ನು ತಿದ್ದದೇ ಈ ಗುಣಮಟ್ಟಕ್ಕೆ ತಂದದ್ದು ಅಪಾಯಕಾರಿ ಅಂತಲೇ ನನಗನ್ನಿಸಿತು. ಅಂಚುಗಟ್ಟಿದ ಮರಗಿಡಗಳ ಮರೆ ಕಳೆದು ಕಣಿವೆಯ ನೋಟ ಸಿಕ್ಕುವ ಒಂದೆಡೆ ನಿಂತು ಮಿನಿಟೆರಡು ಕಳೆದಿದ್ದೆವು. ಋತುಮಾನದ ಜಲಸಮೃದ್ಧಿ, ಉಕ್ಕುವ ಹಸಿರಿಗೆ ಮಂಜಿನ ಮಸ್ಲಿನ್ ಹೊದ್ದ ಪ್ರಕೃತಿ ಕಣ್ಣಿಗೆ ರಮ್ಯವಾದಷ್ಟು ನನ್ನ ಬಡಕಲು ಕ್ಯಾಮರಾಕ್ಕೆ ದಕ್ಕಲಿಲ್ಲ. ಹಾಗೇ ಮಳೆಗಾಲದಲ್ಲಷ್ಟೇ ಸೊಕ್ಕಿ ತೋರುವ ದಾರಿ ಬದಿಯ ಅಬ್ಬಿಯ ನೋಟಕ್ಕೊಬ್ಬ ಲಾರಿಯವನು ಲಗ್ಗೆ ಹಾಕಿದ್ದ. ತುಸು ಮುಂದೆ ವರಾಹಿ ಜಲವಿದ್ಯುದಾಗರಕ್ಕೆ ನೀರೊಯ್ಯುವ ಸುರಂಗಮಾರ್ಗದ ಮೇಲ್ತುದಿ ಸಿಕ್ಕಿತು. ಇದನ್ನು ಹಿಂದೆಲ್ಲ ನಾವು ಮುಕ್ತವಾಗಿಯೇ ಕಂಡಿದ್ದೆವು. ಈಗಲ್ಲಿ ಬೇಲಿ, ಪಹರೆ ಕಂಡು ನಾವು ನಿಧಾನಿಸಲೂ ಇಲ್ಲ.
ಹುಲಿಕಲ್ಲು, ಮಾಸ್ತಿಕಟ್ಟೆ ದಾಟಿದ ಮೇಲೆ ನಾವು ವರಾಹಿ ಜಲವಿದ್ಯುತ್ ಯೋಜನೆಯ ಹಲವು ಮುಖದ ಮುಳುಗಡೆಯ ಚಿತ್ರಗಳನ್ನು ಕಾಣುತ್ತೇವೆ. ಬಲ ಮಗ್ಗುಲಿನ ಅನತಿ ದೂರದಲ್ಲೆಲ್ಲೋ ಇದ್ದ ಮಾಣಿ ಅಣೆಕಟ್ಟು ಅವುಗಳಲ್ಲಿ ಪ್ರಧಾನ. ಅದು ಈ ದಾರಿಹೋಕರ ನೋಟಕ್ಕೆ ದಕ್ಕುವುದಿಲ್ಲ. ಆದರೆ ಅದಕ್ಕೆ ಪೂರಕವಾದ ಸಾವೇಹಕ್ಲು ಅಣೆಕಟ್ಟಿನ ಹಿನ್ನೀರು ನಮಗೊಂದೆಡೆ ಆಕರ್ಷಕ ನೋಟ ಕೊಟ್ಟಿತು. ಆದರೆ ಈ ಮನುಷ್ಯಕೃತ ಸರೋವರಗಳು ನಿನ್ನೆಯಿಂದ ಇವತ್ತಿಗೆ ಬಂದವು. ಹಾಗಾಗಿ ಅಲ್ಲಿ ಕೇವಲ ನೆಲ ಮುಳುಗಡೆಯಾದ್ದಲ್ಲ – ಕೃಷಿ, ಜನಜೀವನ, ಭಾವನೆ ಹೀಗೆ ಹೇಳಿದಷ್ಟೂ ಮುಗಿಯದು. ಮತ್ತದು ತೀವ್ರ ವಿಷಾದಗೀತೆಯೂ ಹೌದು. ಮಡುಗಟ್ಟಿದ ನೀರಹರಹಿನ ಆಳ ಅಗಲಗಳನ್ನೆಲ್ಲ “ಏನೂ ಅಲ್ಲ” ಮಾಡುವ ಈ ದುಃಖದ ಕಡಲನ್ನು ಕಾಲನೌಕೆಯೊಂದೇ ಪಾರುಗಾಣಿಸಬಲ್ಲುದು. ಅಲ್ಲೊಂದೆಡೆ ನಮ್ಮ ದಾರಿ ನೀರ ಹರಹಿನ ನಡುವೆ ಎತ್ತರಿಸಿದ ಮಣ್ಣ ದಿಬ್ಬದ ಮೇಲೆ ಹಾವಾಡಿತ್ತು.
ಎಡ ಮಗ್ಗುಲಿನಲ್ಲಿ ನೂರಿನ್ನೂರು ಅಡಿಯಾಚೆ ಹಳೆಗಾಲದ ಡಾಮರು ದಾರಿಯೊಂದು ಇಳಿಜಾರಿನಲ್ಲಿ ಬಂದು ನೀರಗರ್ಭ ಸೇರುವುದು ಕಾಣುತ್ತಿತ್ತು. ಅಲ್ಲಿ ಕೆಲವರು ನೀರಂಚಿಗೆ ವ್ಯಾನು, ಬೈಕ್ ತಂದು ತೊಳೆದಿದ್ದರು. ನಾವು ನಮ್ಮ ವಿರಾಮದೋಟಕ್ಕೆ ಅದನ್ನೂ ಸೇರಿಸಿಕೊಂಡೆವು. ನಮ್ಮ ದಾರಿಯಲ್ಲೇ ತುಸು ಮುಂದುವರಿದಾಗ ಸಿಕ್ಕ ಎಡಗವಲಿನಲ್ಲಿ ಹೋಗಿ, ನಾವೂ ನಿರಂಚಿಗಿಳಿದು, ಫೋಟೋ ತೆಗೆದು ಮುಂದುವರಿದೆವು. ಒಂದು ಗಂಟೆಯ ಸುಮಾರಿಗೆ `ನಗರ’ ಎಂಬ ನಗರವನ್ನು ಸೇರಿ ಹೋಟೆಲಿನಲ್ಲಿ ಊಟ ಮುಗಿಸಿದೆವು.
ಈ ವಲಯದಲ್ಲಿ ಹಿಂದೆ ಓಡಾಡಿದಾಗೆಲ್ಲ ನಗರದ ಐತಿಹಾಸಿಕ ವೈಭವ ಸಾರುವ, ಹಾಳುಬಿದ್ದ ಕೋಟೆಯೊಂದನ್ನು ಸಾಕಷ್ಟು ಕಂಡಿದ್ದೆ. ಆದರೆ ಎಂದೂ ಒಳಗೆ ಸುತ್ತಿ ನೋಡುವ ಬಿಡುವು ಸಿಕ್ಕಿರಲಿಲ್ಲ. ಈ ಬಾರಿ ಮಾತ್ರ ನಮ್ಮ ತುಂಡೋಟಕ್ಕೆ ಹೆಗ್ಗೋಡು ಮುಖವಾದರೆ, ಕಮಲಶಿಲೆಯ ಗುಹೆ ಮತ್ತು ನಗರದ ಕೋಟೆ ಕಣ್ಣುಗಳು. ಹಿಂದೆ ಕೋಟೆಯ ಹೊರವಲಯದಲ್ಲಿ ಪೇಟೆ ಬೆಳೆಯುವುದಿತ್ತು. ಮೌಲ್ಯಗಳ ಪಲ್ಲಟದೊಡನೆ ಇಂದು ನಗರ ಎಂಬ ಪೇಟೆಯ ಹೊರವಲಯಕ್ಕೆ ಈ ಕೋಟೆ ಬಿದ್ದಿದೆ!
ಕ್ರಿ.ಶ. ೧೫೦೫ನೇ ಇಸವಿಗೂ ಮುನ್ನ ರೂಪುಗೊಂಡಿದ್ದ ಇದು `ಬಿದನೂರು’ ಕೋಟೆ ಎಂದೇ ಖ್ಯಾತವಿತ್ತು. ಅದುವರೆಗೆ ಆಳಿಕೊಂಡಿದ್ದ ಹೊನ್ನೆಯ ಕಂಬಳಿ ಅರಸರನ್ನು ಸೋಲಿಸಿ, ಇದನ್ನು ವಶಪಡಿಸಿಕೊಂಡವರು ಕೆಳದಿಯ ಹಿರಿಯ ವೆಂಕಟಪ್ಪ ನಾಯಕ. ಅವರ ವಂಶಸ್ಥರಾದ ವೀರಭದ್ರ ನಾಯಕ, ಅವರ ಮಗ ಶಿವಪ್ಪ ನಾಯಕರ ಕಾಲದಲ್ಲಿ ಕೋಟೆ ಹೆಚ್ಚಿನ ಬಂದೋಬಸ್ತಿನೊಂದಿಗೆ ರಾಜಧಾನಿಯೇ ಆಗಿ ತನ್ನ ಉಚ್ಛ್ರಾಯವನ್ನು ಕಂಡಿತೆನ್ನುತ್ತದೆ, ಆಧುನಿಕ ಶಾಸನ.
ಐತಿಹಾಸಿಕ ಹೊಡೆತಗಳನ್ನು ಮರುನಿರ್ಮಿಸುವುದು ಅನಗತ್ಯ, ಅಪ್ರಾಯೋಗಿಕವೂ ಇರಬಹುದು. ಆದರೆ ಇದ್ದಷ್ಟನ್ನು ಕಾಲನ ಹೊಡೆತದಿಂದ ಮೇಲೆತ್ತಲು ಜೀರ್ಣೋದ್ಧಾರದ ಕಾರ್ಯ ತೀರಾ ಪ್ರಾಥಮಿಕ ಹಂತದಲ್ಲಿ ನಡೆದಿತ್ತು. ಭಾರೀ ಕಂದಕ, ಹತ್ತಾಳೆತ್ತರದ ಕಗ್ಗಲ್ಲ ಗೋಡೆಗಳು, ರಕ್ಷಣಾಪ್ರಧಾನವಾದ ರೂಕ್ಷತೆಯಲ್ಲೂ ಅಂದ ಉಳಿಸಿಕೊಂಡಿದ್ದುವು.
ದಾರಂದ, ಇಣುಕಿಂಡಿ, ಬತೇರಿ, ಮಹಾದ್ವಾರ, ಕೊಳ, ಮೆಟ್ಟಿಲ ಸರಣಿ, ಅರಮನೆಯ ಆಯ, ಕಾವಲ ಕೊಠಡಿ ಹೀಗೆ ನೋಡಿ ಮೆಚ್ಚಲೇಬೇಕಾದ ರಚನೆಗಳು ಅಸಂಖ್ಯವಿವೆ. ಸಾಕಷ್ಟು ವಿಸ್ತಾರವಾಗಿಯೇ ಇರುವ ಪ್ರಾಕೃತಿಕ ಗುಡ್ಡೆಯೊಂದನ್ನು ಪೂರ್ಣ ಆವರಿಸಿ, ಪಳಗಿಸಿ, ನೀರು-ನೆಲೆ ಕಂಡುಕೊಂಡ ಮನುಷ್ಯಪ್ರಯತ್ನಕ್ಕೆ ಮನಸೋಲುತ್ತದೆ.
ಫಿರಂಗಿಗಳನ್ನು ಎಳೆಸಿರಬಹುದಾದ ದೃಢ ಇಳಿಜಾರುಗಳು, ರಕ್ಷಣಾಪೂರ್ಣ ವೀಕ್ಷಣೆ ಮತ್ತು ಅವಶ್ಯವಿದ್ದಾಗ ಆಕ್ರಮಣಕಾರರಿಗೆ ಧೀರಪ್ರತಿರೋಧಕ್ಕೊದಗುವ ಬುರುಜು, ಮುಂಚಾಚಿಕೆಯ ಗೂಡುಗಳು, ಬುರುಜಿಗೆ ತುರ್ತಾಗಿ ಏರಿಳಿಯಲು ಓರೆ ಮೆಟ್ಟಿಲುಗಳೇ ಮೊದಲಾದವು ಹಿಂದೆ ಕಂಡಿರಬಹುದಾದ ವೀರ, ದುರಂತ, ಕರುಣಕಥೆಗಳ ಸ್ಥಿತಪ್ರಜ್ಞೆಯಲ್ಲೇ ಇಂದಿನ ಪ್ರವಾಸಿಗಳ ನಗುಕೇಕೆಗಳನ್ನು, ಮೇಯುತ್ತ ಅಡ್ಡಾಡುವ ಜಾನುವಾರುಗಳನ್ನು ಕಾಣುತ್ತಿರುವುದನ್ನು ಯೋಚಿಸಿದರೆ ಆಶ್ಚರ್ಯ ಮೂಡುತ್ತದೆ.
ಅರಮನೆಯ ವಠಾರದಲ್ಲಿ ಮೋಟುಗೋಡೆಗಳನ್ನಷ್ಟೇ ಒತ್ತರೆ ಮಾಡಿ ಉಳಿಸಿದಂತಿದೆ. ಹೊರಗೋಡೆಯುದ್ದಕ್ಕೂ ಒಳ ಮೈಯಲ್ಲಿ ಭಟರ ಆವಾಸಗಳನ್ನು ರಚಿಸಿದ್ದು ಇಂದಿಗೂ ಸುಲಭವಾಗಿ ವಾಸಯೋಗ್ಯಗೊಳಿಸಬಹುದು. ಅದಕ್ಕೆ ಹೋಲಿಸಿದಾಗ ಅರಮನೆಯ ಈ ಆಯದ ಮೇಲೆ ಅದೆಷ್ಟು ಭವ್ಯ ರಚನೆಗಳಿದ್ದಿರಬಹುದು, ಅದರೊಳಗಿನ ಭಾವಲಹರಿಗಳು ಅದೆಷ್ಟು ಅದ್ಭುತಗಳನ್ನು ಕಂಡಿರಬಹುದು ಎಂದೆಲ್ಲಾ ಅಂದಾಜು ಹಾಕತೊಡಗಿದರಂತೂ ಸಮಯದ ಪರಿವೆಯೇ ತಪ್ಪಿ ಹೋಗಬಹುದು! ಓದಿದ ಅಸಂಖ್ಯ ಐತಿಹಾಸಿಕ ಕಾದಂಬರಿಗಳ ಪಾತ್ರಗಳೆಲ್ಲ ಇಲ್ಲಿ ಜೀವತಳೆದಂತೆ ಕಂಡು, ನಾವು ಶತಮಾನಗಳ ಹಿಂದೆಲ್ಲೋ ಕಳೆದೂ ಹೋಗಬಹುದು.
ಅಭಯ, ರಶ್ಮಿ ಮತ್ತು ತನ್ನ ತಾಂತ್ರಿಕವರ್ಗವನ್ನು ಜತೆಗೂಡಿಕೊಂಡು, ಬೆಂಗಳೂರಿನಿಂದ ಹಿಂದಿನ ರಾತ್ರಿಯೇ ಬಸ್ಸಿನಲ್ಲಿ ಹೆಗ್ಗೋಡಿಗೆ ಹೊರಟಿದ್ದ. ನೇರ ಹೆಗ್ಗೋಡಿಗೇ ಬಂದು ತಂಗುವ, ಮಲಗುವ ಸೌಕರ್ಯದ ರಾಜಹಂಸ ಬಸ್ಸನ್ನೇ ಅವರು ಆಯ್ದುಕೊಂಡಿದ್ದರು. ಆದರೆ ಇವರ ಗ್ರಹಚಾರಕ್ಕೆ ಬಸ್ಸು ದಾರಿಯಲ್ಲಿ ಪಂಚೇರ್ ಆಗಿ, ರಿಪೇರಿ ಕಂಡು ಹೆಗ್ಗೋಡು ತಲಪುವಾಗ ಬೆಳಗ್ಗೆ ಒಂಬತ್ತು ಗಂಟೆಯೇ ಆಗಿತ್ತು. ಮತ್ತೆ ಅಭಯ – ಕ್ಯಾಮರಾದ ವಿಷ್ಣು, ಶಬ್ದಗ್ರಹಣದ ಜೆಮಿ ಮತ್ತು ಸಂಕಲನಕಾರ ಪ್ರಶಾಂತರ ಸಂಗದಲ್ಲಿ ಪೂರ್ವಸಿದ್ಧತೆಗಳಿಗಿಳಿದ. ರಶ್ಮಿ ಏಕಾಂಗಿಯಾದರೂ ಬೇಸರಿಸುವಂತೇನೂ ಇರಲಿಲ್ಲ. ಆಕೆ ಮದುವೆಗೂ ಮುನ್ನ, ಅಂದರೆ ವಿದ್ಯಾರ್ಥಿ ದೆಸೆಯಲ್ಲಿ ಒಂದು ಸಂಸ್ಕೃತಿ ಶಿಬಿರವಾಸಕ್ಕೆ ಬಂದವಳೇ. ಅದರ ನೆನಪಿನ ಪುಟ ಮಗುಚುತ್ತ ಆ ವಠಾರದಲ್ಲಿ ಸಮಯ ಕಳೆಯುವುದೇನು ಪ್ರಯಾಸದ ಕೆಲಸವಾಗಿರಲಿಲ್ಲ. ಆದರೂ ಸಾಂಗತ್ಯದ ಸಂತೋಷಕ್ಕೆ ಆಗಿಂದಾಗ ಚರವಾಣಿಯಲ್ಲಿ ನಮ್ಮ ಪ್ರಗತಿಯನ್ನು ವಿಚಾರಿಸಿಕೊಳ್ಳುತ್ತಲೇ ಇದ್ದಳು. ಸುಮಾರು ಒಂದೂವರೆ ಗಂಟೆಗಳ ಕಾಲ ನಗರದ ಕೋಟೆ ಸುತ್ತಿ ಮುಗಿಸಿದ ಮೇಲೆ ನಾವು ರಶ್ಮಿಗೆ ಕೊನೆಯ ಸಂದೇಶ ಕಳಿಸಿದೆವು. “ನಾವೀಗ ಅಂತಿಮ ಓಟದಲ್ಲಿದ್ದೇವೆ. ನಾಲ್ಕು ಗಂಟೆಗೆ ಹೆಗ್ಗೋಡಿಗೆ ಬರುತ್ತೇವೆ.”
ನಗರದಿಂದ ಸಾಗರಕ್ಕೋಡುವ ದಾರಿ ಅಲ್ಲಲ್ಲಿ ತುಂಬಾ ದುಸ್ಥಿತಿಯಲ್ಲಿತ್ತು. ಕೋಟೆ ಸುತ್ತುವಷ್ಟು ಕಾಲ ನಮಗೆ ನೆರಳು ಕೊಟ್ಟು ಸಹಕರಿಸಿದ್ದ ಮೇಘಾವಳಿ ಈಗ ಹನಿಹನಿಯಾಗಿ ಅಲ್ಲಿ ಇಲ್ಲಿ ಇಳಿದು ವಾತಾವರಣ ತಂಪುಗೊಳಿಸಿತು. ಬೈಕಿನಲ್ಲಿ ಬರಬಹುದಾಗಿದ್ದ ಇಬ್ಬರೇ ಕಾರಿನಲ್ಲಿ ಬಂದದ್ದಕ್ಕೆ ಸಣ್ಣ ಸಮಜಾಯಿಷಿ ಸಿಕ್ಕಿದ ಹಾಗೂ ಆಯ್ತು.
ಮಳೆಯೊಡನೆ ಹೊಸನಗರವನ್ನು ಹಾಯುವಾಗ ನಮಗೆ ಸದ್ಯದ ಗೊಂದಲಕ್ಕೂ ಮೊದಲು, ನಾನೂ ಅದೇ ಮೊದಲು ಎನ್ನುವಂತೆ ಮಠಕ್ಕೆ ಕೊಟ್ಟ ಭೇಟಿಯೂ ನೆನಪಾಯ್ತು. ಅದೂ ಒಂದು ಮಳೆಗಾಲ. ಗೆಳೆಯ ಮನೋಹರ ಉಪಾಧ್ಯ ದಂಪತಿ ಮಠದಲ್ಲಿ ನಡೆಯುತ್ತಿದ್ದ ಯಕ್ಷ-ಕಮ್ಮಟಕ್ಕೆ ಹೊರಟಿದ್ದರು. “ಕಾರಿನಲ್ಲಿ ನಾವಿಬ್ಬರೇ ಹೋಗುತ್ತಿದ್ದೇವೆ. ಬನ್ನಿ” ಎಂದು ನಮ್ಮಿಬ್ಬರನ್ನೂ ಸೇರಿಸಿಕೊಂಡಿದ್ದರು. ಅಲ್ಲಿನ ಅಪರಾಹ್ನದ ಕಲಾಪಕ್ಕೆ ಸರಿಯಾಗಿ ನಾವು ತಲಪಿದ್ದೆವು. ಸಾರ್ವಜನಿಕರೊಡನೆ ಮಠದ ಉಪಾಹಾರ ತೆಗೆದುಕೊಂಡು, ಕೆಲವು ಯಕ್ಷ-ಪ್ರಾತ್ಯಕ್ಷಿಕೆಗಳನ್ನು ನೋಡಿ ಆನಂದಿಸಿದ್ದೆವು. ಸಭಾಕಲಾಪದ ವೇಳೆ ಮಠದ ಗೋಶಾಲೆಗೊಂದು ಸುತ್ತು ಹಾಕಿ, ಅದರ ಅಪ್ರಾಯೋಗಿಕತೆಯ ಬಗ್ಗೆಯೂ (ನಿಮಗೆ ತಿಳಿದಂತೆ ಮನೋಹರ ಉಪಾಧ್ಯರು ಪಶುವೈದ್ಯ) ಚಿಂತಿಸಿದ್ದೆವು. ಸ್ವಾಮಿಗಳನ್ನು ಸಭೆಯಲ್ಲಿ ಕಂಡಿದ್ದೆವು. ವೈಯಕ್ತಿಕವಾಗಿ ಭೇಟಿಯಾಗುವ ಕೆಲಸ ನಮಗೇನೂ ಇರಲಿಲ್ಲ. ಹಾಗಾಗಿ ಅಂದಿನ ಕಲಾಪ ಮುಗಿದದ್ದೇ ರಾತ್ರಿಯೇ ಮರಳಿ ಮಂಗಳೂರಿಸಿದ್ದೆವು. ಈ ಬಾರಿಯಂತು ನಮಗೆ ಅತ್ತ ತಿರುಗಿ ನೋಡುವ ಕಾರಣವೂ ಇರಲಿಲ್ಲವಾದ್ದರಿಂದ ನೇರ ಮುಂದುವರಿದೆವು. ಆದರೆ ಸ್ವಲ್ಪೇ ಮುಂದೆ ನಮಗೆ ತಿರುಗಿ ಏನು, ನಿಂತೇ ನೋಡುವ ಕಾರಣ ಬಂತು ಕಾರಣಗಿರಿಯಲ್ಲಿ!
ಅಲ್ಲಿನ ವಿನಾಯಕ ದೇವಳದ ಗೋಪುರದ ವರ್ಣ ಸಂಯೋಜನೆ ತುಸು ವಿಚಿತ್ರವಾಗಿ ಕಾಣಿಸಿದ್ದಕ್ಕೆ, ಒಂದು ಫೋಟೋ ಹಿಡಿಯುವಷ್ಟು ನಿಂತು ಮುಂದುವರಿದೆವು. ಉಳಿದಂತೆ ಆರಾಮವಾಗಿಯೇ ಪಯಣಿಸಿ, ರಶ್ಮಿಗೆ ಮಾತು ಕೊಟ್ಟಂತೆ ನಾಲ್ಕು ಗಂಟೆಗೆ ಸರಿಯಾಗಿಯೇ ಹೆಗ್ಗೋಡಿನ ನೀನಾಸಂ ವಠಾರ ತಲಪಿದೆವು. ಊರಿನ ಮುಖ್ಯದಾರಿಯುದ್ದಕ್ಕೆ ಸುಮಾರು ಇನ್ನೂರು ಮೀಟರ್ ಉದ್ದಕ್ಕೆ ಅದು ವ್ಯಾಪಿಸಿದೆ. ಈ ತುದಿಯ ಎರಡು ಅತಿಥಿಗೃಹಗಳು, `ಆಹಾರ್ಯ’ ಎಂದೇ ಬೋರ್ಡು ಹೊತ್ತ ಭೋಜನಾಲಯ, ಒಂದು ತರಗತಿ, ಸ್ವಾಗತ ಕಚೇರಿ ಎಂದೆಲ್ಲ ಕಳೆದು ಇನ್ನೊಂದು ಆ ಕೊನೆಯ ಶಿವರಾಮ ಕಾರಂತ ರಂಗಮಂದಿರದವರೆಗೆ ಔಚಿತ್ಯಪೂರ್ಣ ಅಭಿವೃದ್ಧಿಗೆ ನಿದರ್ಶನದಂತೇ ಇದೆ.
ಎರಡು ವಿಧಾನಸೌಧದಿಂದ ತೊಡಗಿ, ಅಸಂಖ್ಯ ಅದ್ದೂರಿಯ ಕಾಮಗಾರಿಗಳ ಲೆಕ್ಕಾಚಾರದಲ್ಲೇ ಕಳೆದುಹೋಗುವ ಸರಕಾರೀ ಬಾಬುಗಳು ಇದನ್ನು ಅರ್ಥ ಮಾಡಿಕೊಳ್ಳುವ ದಿನವೆಂದಾದರೂ ಬರುವುದುಂಟೇ? ಹೆಗ್ಗೋಡಿನ ಕಲಾಪಗಳ ವಿವರಗಳನ್ನು ಮುಂದಿನ ಕಂತಿಗುಳಿಸಿಕೊಳ್ಳುತ್ತೇನೆ. ಆದರೆ ಅದು ಪ್ರತಿನಿಧಿಸುವ ಸರಳತೆಗೆ ಅನುಗುಣವಾಗಿ, ಅಂದರೆ ಸಹಜವಾಗಿ, ನಾವು ಅಲ್ಲಿಗೆ ಹೋಗುತ್ತಿದ್ದಂತೆ “ಹೋಯ್ ಅಪ್ಪ!” ಎಂದು ಕಾಫಿಗೆಂದೇ ಹೊರಟ ಅಭಯ ರಶ್ಮಿಯರು ಎದುರು ಸಿಕ್ಕಿ ಸ್ವಾಗತಿಸಿದರು. ಇನ್ನವರೊಡನಾಡಿದ ಖಾಸಾ ಮಾತು, ನೀನಾಸಂನ ವಿವರಗಳು ಈ ವಾರಕ್ಕೆ ನಿಮಗೆ ಹೊರೆಯಾಗಬಹುದು. ನಿರೀಕ್ಷೆಯಲ್ಲಿರಿ:
ಮುಂದಿನ ಕಂತು – ಸಿನಿಮಾವಲ್ಲ, ದಾಖಲೀಕರಣ!
uththama vivrane. dhanyavada.
ಬಲು ಸೊಗಸಾದ ವಿವರಣೆ.. ಓದುತ್ತ ಹೋದಂತೆ ನಾವೇ ಹೋದಂತಾಯಿತು – ಹೆಗ್ಗೋಡಿಗೆ ಬೈಕೇರಿ ನಿಮ್ಮ ತಂಡದೊಡನೆ ಹೋದ ಕಾಲೇಜು ದಿನಗಳು ಅಯಾಚಿತವಾಗಿ ನೆನಪಿಗೆ ಬಂತು. ಮುಂದಿನ ಕಂತಿಗೆ ಕಾಯಬೇಕಲ್ಲ!
“ಆದರೆ ಇಂದಿನ ದಿಲ್ಲಿ ದರ್ಬಾರಿಗೆ ಚತುರ್ಮುಖನ (ಸೃಷ್ಟಿಕರ್ತ) ದೇವಗುಣ ಬಿಟ್ಟು, ದಶಕಂಠನ (ವಿಧ್ವಂಸಕ) ರಕ್ಕಸಗುಣ ಆವಾಹನೆಯಾಗಿದೆ. ಬಹುರಂಗೀ ಭಾರತೀಯ ಸಾಂಸ್ಕೃತಿಕ ವೈವಿಧ್ಯಕ್ಕೆ ಕೇಸರಿ ಅಂಗಿ ಹೊಲಿಯುವ ಗದ್ದಲದಲ್ಲಿ ಕೇಂದ್ರ ಸರ್ಕಾರದ ಕಲಾಪೋಷಕ ಇಲಾಖೆ ನೀನಾಸಂ ಮನವಿಗೆ ಜಾಣ ಕಿವುಡು ತಾಳಿದೆ.” ನೀವು ಪ್ರಾಸಂಗಿಕವಾಗಿ ಬರೆದ ಈ ಮಾತುಗಳು ಖಂಡಿತವಾಗಿಯೂ ನಿಜ ಇರಬಹುದು. ಆದರೆ ನೀನಾಸಮ್ ಶಿಬಿರಕ್ಕೆ ಬಂದು ” ಸಂವಾದ” ನಡೆಸುವ, ಬಹುಮುಖೀ ಸಂವಾದಗಳ ಬಗ್ಗೆ ಮಾತಾಡುವ, ಭಾರತದಾದ್ಯಂತ ಹೆಸರು ಮಾಡಿದ ಸಂಸ್ಕೃತಿ ಚಿಂತಕರಾದ ಪ್ರಭೃತಿಗಳ “ಪ್ರಾಮಾಣಿಕತೆ” ಬಗ್ಗೆ ನನಗೆ ನಿಜವಾಗಿ ಮರುಕ ಇದೆ. ಅಸಹಿಷ್ಣುತೆ ಬಗ್ಗೆ ಎಲ್ಲರೂ ಮಾತಾಡುವ ಈಚಿನ ದಿನಗಳಲ್ಲಿ ಆ ಬಗ್ಗೆ ವಿಶ್ಲೇಷಣೆ ಮಾಡಿ ನಾನು ಒಂದು ಇಂಗ್ಲಿಷ್ ಲೇಖನವನ್ನು ಬರೆದು ನೀನಾಸಮ್ಮಿನ ಖಾಯಂ ವಿದ್ವಾಂಸರೂ ಸೇರಿದಂತೆ ಇಂಥ ನೂರಿನ್ನೂರು ಮಂದಿಗೆ ಮೇಲ್ ಮಾಡಿದ್ದೆ. ಎಲ್ಲದಕ್ಕೂ ಎಲ್ಲರೂ ಪ್ರತಿಕ್ರಿಯಿಸಬೇಕಿಲ್ಲ ನಿಜ.ನನ್ನದೊಂದು ಪ್ರತಿಕ್ರಿಯಿಸಲೇಬೇಕಾದ ಲೇಖನ ಅಂತಲೂ ಅಲ್ಲ. ಆದರೂ ತನ್ನ ವಿಚಾರಗಳನ್ನು ಕುರಿತ ಚರ್ಚೆ ಅಥವಾ ವಿಮರ್ಶೆಗೆ ಪ್ರತಿಯಾಗಿ ಒಬ್ಬನೇ ಒಬ್ಬ ಘೋಷಿತ “ಬಹು”ವಾದಿಯೂ ಕೊನೇಪಕ್ಷ ಮೇಲ್ ಬಂದಿದೆ ಎಂಬ ಸ್ವೀಕೃತಿ ಕೂಡ ಕಳಿಸಿಲ್ಲ ಎಂಬುದನ್ನು ನೋಡಿದಾಗ ಇವರ ಬಹುಮುಖೀ ಸಂವಾದವೆಂಬ ಹೆಸರಿನ ಏಕಮುಖೀ ನಿಲುವು ಮತ್ತು ಇಂಗ್ಲಿಷ್ ಮಾಧ್ಯಮಗಳ ಮೇಲಿನ ಹಿಡಿತದ ಮೂಲಕ ಕಳೆದ ೪೦-೫೦ ವರ್ಷಗಳಲ್ಲಿ ಮಾಡಿದ ಅನಾಹುತವನ್ನು ಊಹಿಸುವುದು ಕಷ್ಟವಲ್ಲ.ಹೊಡೆದು ಓಡುವ ವಿಡ್ವಂಸಕರ ಪಡೆ ಮಾಡಿದಷ್ಟು ಅನಾಹುತಗಳನ್ನು ಖಂಡಿತವಾಗಿಯೂ ಚುನಾವಣೆ ಮೇಲೆ ಕಣ್ಣಿಟ್ಟ, ಚುನಾವಣೆಯನ್ನೇ ಅವಲಂಬಿಸಬೇಕಾದ ರಾಜಕಾರಣಿಗಳು ಮಾಡಿಲ್ಲ.-
ಅಭಯ ಮತ್ತು ಬಳಗದವರ ಸಂಚಿ ಪರಿಚಿತವೇ ನನಗೆ. ಈ ಹೆಸರು ತುಂಬ ಇಷ್ಟ. ಇದೇ ಹೆಸರು ಹೇಗೆ ಹುಟ್ಟಿಕೊಂಡಿತು ಎನ್ನುವ ಕುತೂಹಲ ಕೂಡ. ಹೇಳಿ….
ಸಾಂಸ್ಕೃತಿಕವಾಗಿ ಕಾಯ್ದುಕೊಳ್ಳಬೇಕಾದ್ದನ್ನೆಲ್ಲ ತುಂಬಿಕೊಳ್ಳುವ ಚೀಲ 🙂
'ಆ ಪ್ರಾಕೃತಿಕ ಸನ್ನಿವೇಶಕ್ಕೆ, ಪುರಾಣ ಹೇಳಿಕೊಳ್ಳುವ ಪ್ರಾಚೀನತೆಗೆ ಏನೂ ಒಪ್ಪದ ಅಭಿವೃದ್ಧಿಗಳ ಸುಳಿಯಲ್ಲಿ ಸಿಕ್ಕ ದೇವಳ ನೀರಸವಾಗಿ ತೋರಿತು.'ಹಲವು ಅತ್ಯಂತ ಸುಂದರ ಹಳೆಯ ದೇವಾಲಯಗಳಿಗೆ ಪೈಂಟ್ ಬಳಿದದ್ದು ನೋಡಿದಾಗ ಅತ್ಯಂತ ಬೇಸರ ಆಗುತ್ತದೆ. ಅದಷ್ಟೇ ಅಲ್ಲ, ನಮ್ಮ ದುರವಸ್ಥೆ, ದಾರಿದ್ರ್ಯ ಎಲ್ಲಾ ಕಡೆ ಕಾಣುತ್ತದೆ. ಒಂದು ಅದ್ಭುತ ಹೊಯ್ಸಳ ದೇವಾಲಯದ ಟಿಕೆಟ್ ಕೌಂಟರ್ ಅನ್ನು ಹಾಲೋಬ್ಲಾಕ್ ನಿಂದ ಕಟ್ಟಿದ್ದಾರೆ. ಪುರಾತತ್ವ ಇಲಾಖೆ, ಟ್ಯೂರಿಸಂ ಇಲಾಖೆ, ವಿಶ್ವವಿದ್ಯಾಲಯ ಗಳು ಎಲ್ಲಾ ಸೇರಿ ಹಳೆಯ ಸಂಪತ್ತನ್ನು ಹೇಗೆ ಉಳಿಸಬೇಕು ಅನ್ನುವ ಕಾರ್ಯಸೂಚಿಯನ್ನು ಪ್ರತಿಯೊಂದು ಸ್ಥಳ ಕ್ಕೂ ಮಾಡಿ ಅದಕ್ಕೆ ಬೇಕಾದ ಹಣವನ್ನು ಸರಕಾರದ ಅನುದಾನ, ಸಾರ್ವಜನಿಕ ದೇಣಿಗೆ ಇತ್ಯಾದಿ ಗಳಿಂದ ಸಂಗ್ರಹಿಸಿ ಅತ್ಯುತ್ತಮ ರೀತಿಯಲ್ಲಿ ವಿಶ್ವಕ್ಕೇ ಮಾದರಿಯಾಗುವಂತೆ ಮಾಡುವ ದಿನ ಬರಲಿ ಅಂತ ಕನಸು ಕಾಣುತ್ತಿರುತ್ತೇನೆ.