(ಪುಸ್ತಕ ಮಾರಾಟ ಹೋರಾಟ – ೧)
[ಹೊಟ್ಟೆಗೆ ಹಿಟ್ಟು ಹೇಗೊ ಮಿದುಳಿಗೆ ಪುಸ್ತಕ ಹಾಗೆ. ಗ್ರಾಹಕ ಅಥವಾ ಉಪಯೋಗಕಾರ ಇವೆರಡನ್ನೂ ಹಣ ಕೊಟ್ಟು ಕೊಳ್ಳುವುದು ವಾಡಿಕೆ. ಮಾರಾಟಗಾರನ ಪಾತ್ರ ಬರುವುದು ಇಲ್ಲಿಯೇ. ಉತ್ಪಾದಕನಿಗೂ ಗ್ರಾಹಕರಿಗೂ ನಡುವಿನ ಸ್ನೇಹಸೇತುವಾಗಿ. ಉತ್ಪಾದಕ-ಮಾರಾಟಗಾರ-ಗ್ರಾಹಕ ಎಂಬ ತ್ರಿಭುಜ ಸಮತೋಲನದಲ್ಲಿದ್ದು ಸಮಾಜೋಪಯೋಗಿ ಆಗಿರಬೇಕಾದದ್ದು ನಿಯಮ. ಇದನ್ನು ಪಾಲಿಸುವುದು ಪ್ರತಿಯೊಬ್ಬ ಪಾತ್ರಧಾರಿಯ ಸ್ವಯಂಪ್ರೇರಿತ ಕರ್ತವ್ಯ ಆಗಬೇಕು. ಆಗದಿದ್ದರೆ? – ಜಿ.ಟಿ.ನಾ]
(ಪ್ರಸ್ತುತ ಅಧ್ಯಾಯ ಮೈಸೂರಿನಲ್ಲಿ ೧೯೮೫ರ ಡಿಸೆಂಬರ್ ೧೫ರಿಂದ ೧೭ರವರೆಗೆ ನಡೆದ ಪ್ರಥಮ ವಿಶ್ವಕನ್ನಡ ಮೇಳದಲ್ಲಿ ಮಂಡಿಸಿದ ಪ್ರಬಂಧದ ಪರಿಷ್ಕೃತ ರೂಪ)
ಪ್ರಕಾಶಕನಿಂದ ಅಥವಾ ವಿತರಣಕಾರನಿಂದ ಪುಸ್ತಕಗಳನ್ನು ಸಗಟಾಗಿ ಕೊಂಡು ಅಂಗಡಿಗೆ ತಂದು, ಅಲ್ಲಿ ಅದನ್ನು ಪ್ರದರ್ಶಿಸಿ ಬಳಕೆದಾರನಿಗೆ ಅಂದರೆ ಓದುಗನಿಗೆ ಬಿಡಿಯಾಗಿ ಮಾರುವ ಮಧ್ಯವರ್ತಿ ಮಾರಾಟಗಾರ. ಈತ ಪ್ರಕಾಶಕ ಮತ್ತು ಓದುಗರ ನಡುವಿನ ಉಪಯುಕ್ತ ಮತ್ತು ಅನಿವಾರ್ಯ ಕೊಂಡಿ. ಮಾರಾಟಗಾರನಾಗಿ ನನ್ನ ಅನುಭವ ೧೯೭೫ರಿಂದ ಈಚಿನದು. ಅದನ್ನು ಮೂರು ವಿಭಾಗಗಳಲ್ಲಿ ಅಳವಡಿಸಿ ವಿಶ್ಲೇಷಿಸುತ್ತೇನೆ.
ವಿಭಾಗ ಒಂದು, ಪ್ರಕಾಶಕರು
ನಮ್ಮ ಸರಕಾರದ ನೀತಿಯಲ್ಲಿ ಪುಸ್ತಕ ಪ್ರಕಾಶನಕ್ಕೆ ವಿಪುಲ ಸೌಕರ್ಯಗಳು ಒದಗಿರುವುದು ಕಾಣುತ್ತದೆ. ಸಹಾಯಧನ, ರಿಯಾಯಿತಿ ದರದಲ್ಲಿ ಕಾಗದ ಸರಬರಾಜು, ಮುದ್ರಣ ವಿನ್ಯಾಸಕ್ಕೆ ಬಹುಮಾನ, ಲೇಖಕರಿಗೆ ಬಹುಮಾನ ಇತ್ಯಾದಿ. ಈ ಹೆಚ್ಚಿನ ಹಣಕಾಸು ಬೇರೆ ಬೇರೆ ಇಲಾಖೆ ಮುಖಗಳಲ್ಲಿ, ಬೆನ್ನು ಬೆನ್ನಿಗೇ ಸಿಗುವುದೂ ಇದೆ. ಇದಕ್ಕಾಗಿಯೇ ಎಂಬಂತೆ ಅಕಾಡೆಮಿ, ಪ್ರಾಧಿಕಾರ, ಇಲಾಖೆ, ವಿವಿನಿಲಯ ಮುಂತಾದ ಹೆಸರುಗಳ ಸರಕಾರೀ ಮುಖವಿದ್ದಂತೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ತೊಡಗಿ ಹಲವು ಅರೆ ಹಾಗೂ ಪೂರ್ಣ ಖಾಸಗಿ ಸಂಸ್ಥೆಗಳೂ ಇವೆ. ಮಾರಾಟಗಾರನಿಗೆ ಇಂಥ ಯಾವ ಪ್ರೋತ್ಸಾಹ, ಪುರಸ್ಕಾರ ಸರಕಾರದಿಂದಾಗಲೀ ಸಮಾಜದಿಂದಾಗಲೀ ದೊರೆಯುವುದಿಲ್ಲ; ಬೇಕಾಗಿಯೂ ಇಲ್ಲ. ಮಾರಾಟಗಾರ ಪ್ರಕಾಶಕರಿಂದ ನಿರೀಕ್ಷಿಸುವುದೇನು? ವ್ಯಾಪಾರ ಸಂಹಿತೆಯೊಳಗಿನ ಸವಲತ್ತು, ಸೇವೆ ಮತ್ತು ಸೌಜನ್ಯ. ಪ್ರಕಾಶಕರಿಂದ ಇವು ಹೇಗೆ ಒದಗುತ್ತಿವೆ ಎನ್ನುವುದನ್ನು ಮೂರು ಶೀರ್ಷಿಕೆಗಳ ಅಡಿಯಲ್ಲಿ ವಿವರಿಸುತ್ತೇನೆ.
(ಅ) ಸರಕಾರಿ ಪ್ರಕಟಣೆಗಳು: [ಸಂಸ್ಕೃತಿ, ಮುದ್ರಣ, ಕಾನೂನು, ಅರಣ್ಯವೇ ಮೊದಲಾದ ಇಲಾಖೆಗಳು] ಈ ಪ್ರಕಟಣೆಗಳ ಹೊಣೆ ಹೊತ್ತಿರುವ ಅಧಿಕಾರಿಗಳಿಗೆ ವ್ಯಾಪಾರಜ್ಞಾನವೇ ಇಲ್ಲ. ತಮ್ಮ ಪುಸ್ತಕಗಳು ಹೊರಬೀಳದಿದ್ದರೂ ಜಾಹೀರಾತು ಕೊಡುವುದು, ಸುದ್ದಿ ಮಾಡುವುದನ್ನು ಇವರು ಬಿಡುವುದಿಲ್ಲ. ಇವರು ಮಾರಾಟಗಾರರನ್ನೋ ಬಳಕೆದಾರರನ್ನೋ ಸಂಪರ್ಕಿಸುವುದು ದೂರವೇ ಉಳಿಯಿತು. ಬದಲು ಮಾರಾಟಗಾರನೇ ಇವರ ಪುಸ್ತಕಗಳನ್ನು ಪಡೆಯುವುದಾದಲ್ಲಿ ಮೊದಲಿಗೆ ನಿಗದಿತ ಮಾಸದಲ್ಲಿ ಅರ್ಜಿ, ಶುಲ್ಕ, ಪ್ರಮಾಣಪತ್ರ, ಮುಂದಿರಿಸಿ ಅಧಿಕಾರಿಗಳ ವಿಳಂಬ ಕಿರುಕುಳ ಸುಧಾರಿಸಿಕೊಂಡು ಮಾನ್ಯತೆ ಪಡೆಯಬೇಕು. ಅನಂತರ ಬರಬಹುದಾದ ಲಾಭಾಂಶ ಮೀರುವ ಖರ್ಚುಗಳನ್ನು ಭರಿಸಿ ಪುಸ್ತಕ ಪಡೆಯಲು ಹೋರಾಡಬೇಕು.
[ಇದರ ಮೇಲೆ ಸರಕಾರೀ ಇಲಾಖೆಗಳೆಲ್ಲ ವಿಶ್ವಾಸಾರ್ಹತೆಯ ಸ್ವಾಮ್ಯ ತಮ್ಮದು ಮಾತ್ರ ಎಂಬ ಧೋರಣೆಯಲ್ಲೇ ವ್ಯವಹರಿಸುತ್ತವೆ. ಅಂದರೆ ನಾವು ಅವರಿಂದ ಪುಸ್ತಕ ತರಿಸಿಕೊಳ್ಳಬೇಕಾದರೆ ಪಾವತಿ ಮುಂದಾಗಿ ಕೊಟ್ಟು (ಅಥವಾ ಬ್ಯಾಂಕ್ ಮೂಲಕ ಬರುವಂತೆ ಹೇಳಿ), ಪುಸ್ತಕ ಬರಲು ಅವರೆಲ್ಲಾ ವಿಳಂಬ, ತಪ್ಪನ್ನೂ ಸಹಿಸಿಕೊಳ್ಳಬೇಕು. ಪರಿಸ್ಥಿತಿ ತಿರುಗಾಮುರುಗಾವಾದಾಗಲೂ `ವಂಚಕ’ರು ನಾವೇ! ಯಾವುದೇ ಇಲಾಖೆಗೆ, ವಿವಿನಿಲಯಕ್ಕೆ ನಾವು ಪುಸ್ತಕ ಮಾರುವುದಿದ್ದರೆ, ಅವರ ಚೌಕಾಸಿಗಳಿಗೆ ಒಪ್ಪಿಕೊಂಡೂ ಮುನ್-ರಸೀದಿ ಸಹಿತ ಬಿಲ್, ಪುಸ್ತಕಗಳನ್ನು ಮೊದಲು ಒದಗಿಸಬೇಕು. ಮತ್ತೆ ಅವರಿಂದ ಪಾವತಿ ಬಂದಾಗ ಬಂತು. ನ್ಯಾಶನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ದಿಲ್ಲಿಯಿಂದ ಒಮ್ಮೆ ತುರ್ತಾಗಿ ಯಾವುದೋ ನೂರಿನ್ನೂರು ರೂಪಾಯಿಯ ಪುಸ್ತಕ ತರಿಸಿಕೊಂಡು ಸುಮ್ಮನುಳಿಯಿತು. ನನ್ನ ನೆನಪಿನೋಲೆಗಳು ವ್ಯರ್ಥವಾದಮೇಲೆ, ಯು.ಆರ್. ಅನಂತಮೂರ್ತಿಯವರು ಅದರ ಅಧ್ಯಕ್ಷರಾದ ಕಾಲಕ್ಕೆ, ಅವರಿಗೆ ವೈಯಕ್ತಿಕ ಪತ್ರ ಬರೆದು ನನ್ನ ಬಿಲ್ ಮೊತ್ತ (ನಿಬಡ್ಡಿ) ಪಡೆಯಬೇಕಾಯ್ತು!]
ತಮ್ಮ ಇರವನ್ನು ಯೋಗ್ಯ ವಿತರಣೆಯಿಂದ (ವ್ಯಾಪಾರದಿಂದ) ಸಮರ್ಥಿಸಿಕೊಳ್ಳದ ಈ ಪ್ರಕಟಣಾಂಗ ಯಾರಿಗಾಗಿ ಇದೆ? ಸಾರ್ವಜನಿಕ ಹಣವನ್ನು ಪ್ರಕಟಣೆಗಳಿಗೆ ತೊಡಗಿಸಿ ಅತ್ತ ಗಂಟೂ ಉಳಿಸದ ಇತ್ತ ಮಾರುಕಟ್ಟೆಗೂ ಮುಟ್ಟಿಸದ ಸರಕಾರೀ ಪ್ರಕಟಣಾಂಗವನ್ನು ಮುಚ್ಚುವುದೊಳಿತು. ಸರಕಾರೀ ಪ್ರಕಟಣಾಂಗದ ಈಚಿನ ವೃತ್ತಿರಂಗ ದ್ರೋಹವನ್ನು, ಅಂದರೆ ವಿಶ್ವ ಕನ್ನಡ ಸಮ್ಮೇಳನದ (೧೯೮೫) ಹೆಸರಿನಲ್ಲಿ ಅತಿ ಕಡಿಮೆ ಬೆಲೆಯ ಪುಸ್ತಕಗಳ ಕುರಿತು, ಇಲ್ಲಿ ಒಂದು ಮಾತು ಹೇಳದೆ ಉಳಿದರೆ ತಪ್ಪಾದೀತು. ಇವರು ಕನ್ನಡ ವಿಶ್ವಕ್ಕೆ ಸುಮಾರು ಒಂದು ನೂರು ಪುಸ್ತಕಗಳನ್ನು ಮರುಮುದ್ರಿಸಿ ಕೊಟ್ಟರು. ಆ ಪೈಕಿ ಎಷ್ಟೋ ಪುಸ್ತಕಗಳು ಮಾರುಕಟ್ಟೆಯಲ್ಲಿ ನ್ಯಾಯಬೆಲೆಯಲ್ಲಿ ಸಿಗುತ್ತಿರುವಾಗ ಇವರು ಅನ್ಯಾಯ ಬೆಲೆ (ತುಂಬಾ ಕಡಿಮೆ) ನಿಗದಿಸಿದರು. ವಿನಾ ಕಾರಣ ಖಾಯಂ ಪುಸ್ತಕ ಮಾರಾಟಗಾರರ ಜಾಲವನ್ನು ಅವಗಣಿಸಿದರು. ಅವರಾದರೂ ರಾಜ್ಯಾದ್ಯಂತ ನೇರ ಆಸಕ್ತರಿಗೆ ಪುಸ್ತಕ ಮುಟ್ಟಿಸಿದರೇ (ವಿತರಣೆ) ಎಂದು ನೋಡ ಹೋದರೆ ಇಲಾಖೆಯಲ್ಲಿ ಆ ವ್ಯವಸ್ಥೆಯೇ ಇಲ್ಲ. ಆ ಪುಸ್ತಕಗಳು ಹೇಗೆ ಮುಗಿದವು ಎನ್ನುವುದನ್ನು ವಿವರಿಸಹೋದರೆ ಅದೇ ದೊಡ್ಡ ಪುಸ್ತಕವಾದೀತು, ಇಲ್ಲಿ ಬೇಡ.
(ಆ) ಅರೆಸರಕಾರಿ ಪ್ರಕಾಶಕರು : (೧) ಕನ್ನಡ ಸಾಹಿತ್ಯ ಪರಿಷತ್ತು: ಇದು ತನ್ನ ಇಬ್ಬಗೆಯ ಲಾಭ ನೀತಿಯಿಂದ ಗ್ರಂಥೋದ್ಯಮದಲ್ಲೇ ಸಾಕಷ್ಟು ಹೆಸರು ಮಾಡಿರುವ ಸಂಸ್ಥೆ. ಅತ್ತ ಸರಕಾರದಿಂದ ಖಾಯಂ ಅನುದಾನ, ಇತ್ತ ಬಳಕೆದಾರರಿಂದ ಹೆಚ್ಚು ಕಡಿಮೆ ಪೂರ್ಣ ಮುಖಬೆಲೆ ಗಿಟ್ಟಿಸುವ ತಂತ್ರ. ಉಭಯ ಲಾಭ ಗಳಿಸುವ ಇದಕ್ಕೆ ಮಾರಾಟಗಾರನ ಅಸ್ತಿತ್ವವೇ ತಿಳಿದಂತಿಲ್ಲ. ಮಹಿಳಾವರ್ಷದ ಪ್ರಕಟಣೆ, ಸಂಕ್ಷಿಪ್ತ ನಿಘಂಟು, ರತ್ನಕೋಶ, ವಜ್ರ ಮಹೋತ್ಸವದ ಗದ್ಯಾನುವಾದ ಮಾಲಿಕೆ ಮತ್ತು ಮಕ್ಕಳ ವರ್ಷದ ಪ್ರಕಟಣೆಗಳಿಗೆ ಶೇಕಡಾ ಹತ್ತರಿಂದ ಹದಿನೈದರವರೆಗಷ್ಟೇ ವ್ಯಾಪಾರೀವಟ್ಟ ಕೊಟ್ಟರೆ ಕಳಶಪ್ರಾಯವಾಗಿ ಸಮಗ್ರ ಕನ್ನಡ ನಿಘಂಟು, ಪಿನೋಕಿಯಾಗಳಂಥ ಪುಸ್ತಕಗಳಿಗೆ ಏನೂ ಇಲ್ಲ. ಸಾಲದ್ದಕ್ಕೆ ಪುಸ್ತಕ ಕಟ್ಟುವ, ಲಾರಿ ತುಂಬುವ, ಸಾಗಣೆ, ಅಂಚೆವೆಚ್ಚವೆಲ್ಲವನ್ನೂ ವಸೂಲು ಮಾಡುತ್ತದೆ. ಇದು ಬೆಂಗಳೂರಿನ ತನ್ನ ಕಛೇರಿಯ ವಠಾರದಲ್ಲಿ ಮಾತ್ರ ಸಾರ್ವಜನಿಕರಿಗೆ ಮಾರಾಟ ಮಳಿಗೆ ಹೊಂದಿದೆ. ಮತ್ತೆ ವಾರ್ಷಿಕ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಸೀಮಿತ ದಾಸ್ತಾನಿನೊಡನೆ ಮಾರಾಟ ನಡೆಸುತ್ತದೆ. ಸಮ್ಮೇಳನಗಳಲ್ಲಿ ಇದು ಸಾಗಣೆ ಖರ್ಚು, ಸಿಬ್ಬಂದಿ ಸವಲತ್ತುಗಳನ್ನೆಲ್ಲ ತಾನೇ ಭರಿಸಿಕೊಳ್ಳುವುದರೊಡನೆ ಪುಸ್ತಕಗಳ ಮುದ್ರಿತ ದರದ ಮೇಲೆ ಸಾರ್ವಜನಿಕರಿಗೆ ವಿಶೇಷ ರಿಯಾಯ್ತಿ ಕೊಡುವ ಔದಾರ್ಯ ತೋರುತ್ತದೆ. ಆಗ ನಿಜದಲ್ಲಿ ಇದರ ಪ್ರಕಟಣೆಗಳನ್ನು ವರ್ಷಪೂರ್ತಿ ರಾಜ್ಯಾದ್ಯಂತ ಪ್ರಸರಿಸುವ ಮಾರಾಟಗಾರ, ಮುದ್ರಣ ಬೆಲೆಯನ್ನೇ ಕೇಳುವುದರಿಂದ ಶೋಷಕನಂತೇ ತೋರುತ್ತಾನೆ. ಮೊದಲ ಬಾರಿಗೆ ಕಸಾಪ ಸಂಕ್ಷಿಪ್ತ ಮತ್ತು ರತ್ನ ನಿಘಂಟುಗಳನ್ನು ತಂದಾಗ ನಾನೇ ಎಲ್ಲ ಖರ್ಚುಗಳನ್ನು (ಶುದ್ಧ ನಷ್ಟ ಮಾತ್ರ) ಭರಿಸಿಕೊಂಡು ಇನ್ನೂರು ಮುನ್ನೂರು ಪ್ರತಿಗಳ ಮೇಲೆ ಮಾರಿದ್ದೆ. ತದ್ವಿರುದ್ಧವಾಗಿ ಖಾಸಗಿ ವಲಯದ ಒಂದು ಉದಾಹರಣೆ ನೋಡಿ: ಐಬಿಎಚ್ ಪ್ರಕಾಶನ, ಕಾರಂತರ ವಿಜ್ಞಾನಪ್ರಪಂಚವನ್ನು ಒಮ್ಮೆ ಸರಕಾರಿ ಸಹಾಯದೊಡನೆ ಮತ್ತೊಮ್ಮೆ ಸ್ವಂತ ಬಲದಿಂದ ಕಡಿಮೆ ಬೆಲೆಗೆ ಪ್ರಕಟಿಸಿದರು. ಆದರೆ ತಮ್ಮ ವ್ಯಾಪಾರಿ ನೀತಿಯಲ್ಲಿ ಕಡಿತ ಮಾಡಲೇ ಇಲ್ಲ. ಪ್ರತಿಯೊಂದರ ಬೆಲೆ ಹನ್ನೊಂದು ರೂಪಾಯಿ ಇದ್ದರೂ ನಮಗೆ ಅದೇ ೨೫% ರಿಯಾಯ್ತಿ, ಉಚಿತ ಸಾಗಣೆ, ಪಾವತಿ ಕಳಿಸಲು ಅನುಕೂಲದ ಸಮಯವೆಲ್ಲವನ್ನೂ ಕೊಟ್ಟಿದ್ದರು. [ಇಂಥ ವ್ಯವಹಾರದಿಂದ ಐಬಿಎಚ್ ಪ್ರಕಾಶನ ಮುಚ್ಚಲಿಲ್ಲ ಎನ್ನುವುದನ್ನು ಎಲ್ಲರೂ ನೆನಪಿಡಬೇಕು.]
(೨) ರಾಜ್ಯದ ವಿವಿಧ ಭಾಷಾ ಸಾಹಿತ್ಯ, ಲಲಿತಕಲೆ, ಜನಪದ ಮುಂತಾದ ಅಕಾಡೆಮಿಗಳೂ ಪುಸ್ತಕ, ಅನುಷ್ಠಾನ, ಭಾಷಾಂತರವೇ ಮೊದಲಾದ ಪ್ರಾಧಿಕಾರಗಳು: ಇವುಗಳಲ್ಲಿ ಕೆಲವು ಪುಸ್ತಕ ಪ್ರಕಾಶನ ಮಾಡಿವೆ ಎಂಬುದರ ಹೊರತು ನನಗಿನ್ನೇನೂ ತಿಳಿದಿಲ್ಲ. ತಿಳಿಯುವ ಉದ್ದೇಶದಿಂದ ನಾನು ಬರೆದ ಕಾಗದಗಳು ಹಿಂದೆ ಬರಲಿಲ್ಲ; ಪ್ರತಿಕ್ರಿಯೆ ತರಲೂ ಇಲ್ಲ. ಈ ಸ್ವಾಯತ್ತ ಸಂಸ್ಥೆಗಳು ಸರಕಾರದ ನಿದ್ರಾನೀತಿಯಿಂದ ಮುಕ್ತವಾಗಿಲ್ಲವೆಂಬುದೇ ನನ್ನ ಅನುಭವ. ಇಂಥ ಗುಪ್ತ ಪ್ರಕಾಶಕರು ತಿಳಿದಿರಲೇಬೇಕಾದ ಒಂದು ಮುಖ್ಯ ಸಂಗತಿ – ತಾವು ಗೌರವಿಸಲು ಉದ್ದೇಶಿಸಿ ಪ್ರಕಟಿಸಿದ ಕೃತಿಗಳಿಗೆ ಪ್ರಸಾರ ಕೊಡದಿರುವುದು ಖುದ್ದು ಆ ಕೃತಿ ಮತ್ತು ಕರ್ತೃವಿಗೆ ಮಾಡುವ ಅವಮಾನ.
(೩) ವಿಶ್ವವಿದ್ಯಾಲಯಗಳು: ಸೃಜನೇತರ ಕೃತಿಗಳ ಅತಿ ದೊಡ್ಡ ಪ್ರಕಾಶನ ಸಂಸ್ಥೆಗಳಾದ ಇವು ತಮ್ಮ ವ್ಯವಹಾರನೀತಿಗೆ ಘನತೆ ತಂದುಕೊಳ್ಳಲೇಬೇಕು. ಈ ಮಾತನ್ನು ನಮ್ಮ ಪ್ರಮುಖ ವಿಶ್ವವಿದ್ಯಾಲಯಗಳಿಗೆ ಅನ್ವಯಿಸಿ ಕೆಲವು ಉದಾಹರಣೆಗಳೊಂದಿಗೆ ಸ್ಪಷ್ಟೀಕರಿಸುತ್ತೇನೆ.
ಮೈಸೂರು ವಿಶ್ವವಿದ್ಯಾನಿಲಯ: ಒಮ್ಮೆ ಕಣ್ತಪ್ಪಿ ಕೆಲವು ಅನಾವಶ್ಯಕ ಪುಸ್ತಕಗಳನ್ನು ತರಿಸಿದೆ. ತಪ್ಪಿನ ಅರಿವಾದ ಮೇಲೆ ಕೇಳಿಕೊಂಡಾಗ ಪುಸ್ತಕ ವಾಪಾಸಾತಿಯಾಗಲಿ, ಬದಲಾವಣೆಯಾಗಲಿ ಸಾಧ್ಯವಿಲ್ಲ ಎಂದಿತು – ಪ್ರಸಾರಾಂಗದ ಕಾನೂನು. ಉದಾತ್ತ ಉದ್ದೇಶಗಳಿಗಾಗಿ ಪ್ರಕಟಣೆ, ವಿತರಣೆಗಿಳಿದ ಸಂಸ್ಥೆಗೆ ಇಷ್ಟೂ ಔದಾರ್ಯಕ್ಕೆ ಕೊರತೆ. ಆದರೆ ನೂರು ಪ್ರತಿಗಳಿಗೂ ಮಿಕ್ಕ ಅವಧಿ ಮೀರಿದ ಪಠ್ಯಪುಸ್ತಕಗಳನ್ನು ನನ್ನ ಒಳಿತಿಗಾಗಿ ಹಿಂತೆಗೆದುಕೊಂಡ ಗೀತಾ ಬುಕ್ ಹೌಸ್ – ಖಾಸಗಿ ಪ್ರಕಾಶಕ, ಇನ್ನೂ ಪ್ರಕಾಶಕರಾಗಿ ಗಟ್ಟಿಯಾಗಿ ಮುಂದುವರಿದಿದ್ದಾರೆ.
ಕರ್ನಾಟಕ ವಿವಿ ನಿಲಯ: ಇವರಿಗೆ ಪೂರ್ಣ ಮುಂಗಡ ಪಾವತಿ ಮುಟ್ಟಿದ ಮೇಲೆಯೇ ಪುಸ್ತಕ ಕೊಟ್ಟು ಗೊತ್ತು. ಹಾಗೇ ಐದಾರು ವರ್ಷಗಳ ಹಿಂದೊಮ್ಮೆ ಪಾವತಿ ಕಳಿಸಿದ್ದೆ. ಮತ್ತೆ ಆ ಮೌಲ್ಯದ ಪುಸ್ತಕ ಪಡೆಯಬೇಕಾದರೆ ಕುಲಪತಿಗಳವರೆಗೆ ನಾಲ್ಕೆಂಟು ನೆನಪಿನೋಲೆ ಹೋಗಬೇಕಾಯಿತು. ಇವರು ಇನ್ನೂ ಬ್ಯಾಂಕ್ ಮೂಲಕದ ವ್ಯವಹಾರವನ್ನೂ ಕಲಿತಿಲ್ಲ. ನಾನು ಇವರ ಅನಿವಾರ್ಯವಾದ ಪ್ರಕಟಣೆಗಳನ್ನು ಅದೇ ಊರಿನ ಖಾಸಗೀ ವಿತರಣಕಾರರಿಂದ, ಆದಾಯ ನಷ್ಟದೊಡನೆ ತರಿಸಿಕೊಳ್ಳುತ್ತಿದ್ದೇನೆ.
ಬೆಂಗಳೂರು ವಿವಿ ನಿಲಯ: ಎಂಟು ತಿಂಗಳ ಹಿಂದೆ ಇವರದೊಂದು ಬಿಲ್ಲು ಬ್ಯಾಂಕಿನ ಮೂಲಕ ಬಿಡಿಸಿಕೊಂಡೆ. ಭಾಂಗಿಯೊಳಗೆ ಸುಮಾರು ಅರುವತ್ತು ರೂಪಾಯಿ ಮೌಲ್ಯದ ಪುಸ್ತಕಗಳು ಕಡಿಮೆಯಿದ್ದುವು. ಬಿಲ್ಲು ತಪಾಸಣೆಯಲ್ಲಿ ಅವರು ಕಣ್ತಪ್ಪಿನಿಂದ ಸುಮಾರು ನೂರು ರೂಪಾಯಿ ಕಳೆದುಕೊಳ್ಳುವಂತಿದ್ದದ್ದೂ ಪತ್ತೆಯಾಯಿತು. ಎರಡೂ ವಿವರಗಳನ್ನು ಪತ್ರ ಮುಖೇನ ಹಂತ ಹಂತವಾಗಿ ಮೇಲಿನವರವರೆಗೂ ಮುಟ್ಟಿಸಿದೆ. ಈ ತನಕ ಅರುವತ್ತು ರೂಪಾಯಿಯ ಪುಸ್ತಕ ನನಗೆ ಬಂದಿಲ್ಲ, ನನ್ನಿಂದ ನೂರು ರೂಪಾಯಿಯನ್ನೂ ಅವರು ಕೇಳಿಲ್ಲ! ಇಂಥವರಿಗೆ ಹೊಸ ಬೇಡಿಕೆ ಕಳಿಸಲು ನನಗೆ ಧೈರ್ಯವಾದರೂ ಬರುವುದು ಹೇಗೆ?
ಕೃಷಿ ವಿವಿ ನಿಲಯ: ಇವರ ಕೃಷಿ ಸಂಬಂಧೀ ಪ್ರಕಟಣೆಗಳು ಕಳೆದ ಕೆಲವು ವರ್ಷಗಳಿಂದ ಮಾರಾಟಕ್ಕೆ ಸಿಕ್ಕುತ್ತಿಲ್ಲ. ಕಾರಣ – ಖಾಸಗಿ ವಿತರಣಕಾರರೊಬ್ಬರೊಡನೆ ಇವರು ಮಾಡಿಕೊಂಡ ಸಗಟು ವ್ಯಾಪಾರೀ ಒಪ್ಪಂದ. ಆ ವಿತರಣಗಾರನಿಗೆ ವಿವಿನಿಲಯದ ಜಡ ಪ್ರಕಟಣೆಗಳನ್ನು ಕಷ್ಟದಲ್ಲಿ ವಿತರಿಸಿ ಕಿಲುಬು ಕಾಸು ಪಡೆಯುವುದು ಬೇಕಿರಲಿಲ್ಲ. ಬದಲು ಆ ಒಪ್ಪಂದದ ಇನ್ನೊಂದು ಮುಖ, ಅಂದರೆ ಎಷ್ಟೋ ಹೆಚ್ಚುಪಾಲು ಲಾಭವನ್ನು ತರುವ ವಿವಿನಿಲಯದ ಗ್ರಂಥಾಲಯಕ್ಕೆ ತನ್ನ ವಿತರಣೆಯ ಅನ್ಯ ಪುಸ್ತಕಗಳನ್ನು ಏಕಸ್ವಾಮ್ಯದಲ್ಲಿ ತುಂಬಿ ಮಾಡಿಕೊಳ್ಳುತ್ತಿದ್ದಾರೆ!
ಯಾವುದೇ ಸರಕಾರೀ ಪ್ರಕಟಣಾಂಗದ ಅನುದಾನ, ಸಂಬಳ, ಸೌಕರ್ಯಗಳು ಅವರ ಪ್ರಕಟಣೆಗಳ ವಿತರಣೆಯನ್ನು ಅಥವಾ ಹೂಡಿದ ಹಣವನ್ನು ಮರಳಿ ತೆಗೆಯುವ ಆಧಾರದಲ್ಲಿ ರೂಪುಗೊಂಡದ್ದೇ ಇಲ್ಲ. ಅಂದರೆ ಅವರ ಉತ್ಪನ್ನಗಳು ಮಾರಲೀ ಮಣ್ಣಾಗಲೀ ಸಿಬ್ಬಂದಿಗಳ ಸಂಬಳ ಸವಲತ್ತಿಗೆ ಕುತ್ತು ಎಂದೂ ಬರುವುದಿಲ್ಲ. “ಪುಸ್ತಕದ ಬದನೇಕಾಯಿಯೂ ಕೊಳೆಯುತ್ತದೆ ಸ್ವಾಮೀ” ಎಂದು ಈ ಕೃಷಿ ತಜ್ಞರಿಗೆ ತಿಳಿಸುವವರು ಯಾರು?
(ಇ) ಖಾಸಗಿ ಪ್ರಕಾಶಕರು: ಇವರಲ್ಲಿ ಮೂರು ವರ್ಗ.
ವರ್ಗ ಒಂದು ಅಥವಾ ಪ್ರಕಾಶಕ ಮಾರಾಟಗಾರರು: ಪ್ರಕಾಶನ ಮತ್ತು ಮಾರಾಟವನ್ನು ಏಕಕಾಲದಲ್ಲಿ ಮಾಡುವವರ ಪೈಕಿ ಕೆಲವರಿಗೆ ತಮ್ಮ ಭಿನ್ನ ಮುಖಗಳ ವ್ಯಾಪ್ತಿ ಮರೆಯುತ್ತದೆ. ಇದು ಇತರ ಮಾರಾಟಗಾರರಿಗೆ ಇವರೆಸಗುವ ಅಪಚಾರ. ಉದಾಹರಣೆಗೆ ಬೆಂಗಳೂರಿನ ವಿತರಣಕಾರರೊಬ್ಬರನ್ನು ಅವರ ಏಕಸ್ವಾಮ್ಯದ ಬೃಹತ್ ಕೃತಿಯೊಂದರ ಬೆಲೆ ಮತ್ತು ವಟ್ಟಾದರವನ್ನು ನಾನು ಮತ್ತು ನನ್ನ ಗಿರಾಕಿಯಾದ ಒಂದು ಕಾಲೇಜು ಪ್ರತ್ಯೇಕವಾಗಿ ಕೇಳಿದೆವು. ಕೇಳುಗರಿಬ್ಬರ ನಡುವಣ ಅಂತರ ಗೊತ್ತಿದ್ದರೂ ವಿತರಣಕಾರ ಇಬ್ಬರಿಗೂ ಒಂದೇ ಬೆಲೆ ಮತ್ತು ಒಂದೇ ವಟ್ಟಾದರ ಹೇಳಿದರು. ಸಹಜವಾಗಿ ನನಗೆ ಗಿರಾಕಿ ತಪ್ಪಿತು. ಇಂಥದ್ದರ ಫಲ – ಯಾವುದೇ ಪ್ರಕಟಣೆಗಳಿಗೆ ಸ್ಥಳೀಯವಾಗಿ ಪ್ರದರ್ಶನ, ನಿರಂತರ ಮಾರಾಟಾವಕಾಶ ಕಲ್ಪಿಸಿಕೊಡುವ ಮಧ್ಯವರ್ತಿಯ ಆರೋಗ್ಯಪೂರ್ಣ ಬೆಳೆವಣಿಗೆಗೆ ಹಾನಿ ಉಂಟಾಗುತ್ತದೆ. ಪ್ರಕಾಶನದ ಪ್ರತಿನಿಧಿ, ಸಂಸ್ಥೆಯ ಅಧಿಕಾರಿಗಳಿಗೆ ಅವ್ಯವಾಹಾರಕ್ಕೆ ಕುಮ್ಮಕ್ಕು ಕೊಟ್ಟಂತಾಗುತ್ತದೆ. `ಪರ್ಸೆಂಟೇಜು’, ಕಾಣಿಕೆ, ಉಪಚಾರ ಇತ್ಯಾದಿ ದುಷ್ಟ ಸಂಪ್ರದಾಯವೂ ಕೇವಲ ಲೆಟರ್ ಹೆಡ್, ಬಿಲ್ ಪುಸ್ತಕಗಳ ಬೇನಾಮಿ ಸಂಸ್ಥೆಗಳೂ ಹುಟ್ಟಿಕೊಳ್ಳುತ್ತವೆ.
ವರ್ಗ ಎರಡು ಅಥವಾ [ಖಾಸಗೀ ಪ್ರಕಾಶಕರಲ್ಲಿ] ಹವ್ಯಾಸಿ ಪ್ರಕಾಶಕರು: ದೊಡ್ಡ ಸಂಖ್ಯೆಯಲ್ಲಿ ಕೃತಿಕಾರರು ಅದರಲ್ಲೂ ಮುಖ್ಯವಾಗಿ ಅಧ್ಯಾಪಕರು ಹವ್ಯಾಸಿಗಳಾಗಿ ಪ್ರಕಾಶನದಲ್ಲಿ ತೊಡಗಿಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ಮೊದಲ ಸುತ್ತಿನಲ್ಲಿ ತಮ್ಮ ಪರಿಚಯದಾಕ್ಷಿಣ್ಯಕ್ಕೆ ಬಲಿಬೀಳುವ ಸಂಸ್ಥೆಗಳು, ಶಿಷ್ಯರು ಮೊದಲಾದ ಸುಲಭ ಗಿರಾಕಿಗಳನ್ನು ಬಗಲಿಗೆ ಹಾಕಿಕೊಂಡು ನೇರ ವ್ಯವಹರಿಸುತ್ತಾರೆ. ಹಾಗೆ ಖರ್ಚಾಗದೆ ಉಳಿದ ಪುಸ್ತಕಗಳನ್ನು ಮಾರಾಟಗಾರರಿಗೆ ತಗಲಿಸಲು ಪ್ರಯತ್ನಿಸುತ್ತಾರೆ. ಸಾಲದ್ದಕ್ಕೆ PUSH ಮಾಡಲು (ಅಂದರೆ ಹೇಗೋ ತಳ್ಳಲು) ಸೂಚಿಸುವುದೂ ಇದೆ. ಇವರು ನಿಜ ಮಾರಾಟಕ್ಕೆ ಮತ್ತು ಖಚಿತ ವ್ಯವಹಾರ ನೀತಿಗೆ ಬಾಧಕರು. ಒಂದು ನಿದರ್ಶನ: ಒಂದು ಪ್ರಕಾಶನ ಸಂಸ್ಥೆ ಬೃಹತ್ ಗ್ರಂಥವೊಂದನ್ನು ಹೊರ ತಂದಿತು. ನೇರ ಗಿರಾಕಿಗಳಿಗೆ ಪ್ರಕಟಣಪೂರ್ವ, ಬಿಡುಗಡೆ ಸಮಾರಂಭದ ರಿಯಾಯಿತಿ, ಹೆಚ್ಚುವರಿ ಪ್ರತಿಗಳನ್ನು ಕೊಂಡವರಿಗೆ ರಿಯಾಯಿತಿ ಎಲ್ಲ ಮುಗಿದ ಬಳಿಕ ಮಾರಾಟಗಾರರನ್ನು ಹಿಡಿಯಿತು. ಅಲ್ಲಿಗೂ ಸುಮ್ಮನಿರದೆ ಶಾಲಾಕಾಲೇಜುಗಳಿಗೆ ಮನವಿ ಪತ್ರ, ಒತ್ತಾಯದ ನೇರ ಮಾರಾಟವನ್ನೂ ಮುಂದುವರಿಸಿತು. ಕೊನೆಗೆ ಪುಸ್ತಕದ ಬೆಲೆಯನ್ನೇ ಅರ್ಧಕ್ಕರ್ಧ ಇಳಿಸಿ ಮಾರತೊಡಗಿತು. ಇವರು ಮೊದಲ ನೇರ ಮಾರಾಟದಲ್ಲೇ ನನ್ನ ಕೆಲವು ಗಿರಾಕಿಗಳನ್ನು ನಗದು ಮಾಡಿಕೊಂಡಿದ್ದರು. ಮುಂದೆ ನಿಯಮಿತ ವ್ಯಾಪಾರೀ ವಟ್ಟಾದಲ್ಲಷ್ಟೇ ನನ್ನಂಥವರಿಗೆ ಪ್ರತಿಗಳನ್ನು ಮಾರಿದ್ದರು. ನಾನು ಮುದ್ರಿತ ಬೆಲೆಗೆ ಅವನ್ನು ಮಾರಾಟಕ್ಕಿಳಿಸುವ ಕಾಲಕ್ಕೆ ಪ್ರಕಾಶಕ ಮಹಾಶಯ ಅದನ್ನೇ ಸಾರ್ವಜನಿಕಕ್ಕೆ ಅರ್ಧ ಬೆಲೆಗೆ ಕೊಡಲು ಶುರು ಮಾಡಿದ್ದ. ಅಂದರೆ ನಾನು ಹಾಕಿದ ಹಣವನ್ನು ಹಿಂದೆ ಗಳಿಸುವುದು ಹೇಗೆ? ಇಂಥ ಘಾತಕ ನೀತಿಯ ಹೊಡೆತದಲ್ಲಿ ಪ್ರಾಮಾಣಿಕ ಮಾರಾಟಗಾರನ ನೆಲೆ ಏನು?
ಪ್ರಕಾಶನ ಎಂಬುದು ವ್ಯಕ್ತಿಯ ಖಾಸಗಿ ಖಯಾಲಿಯ ಪ್ರದರ್ಶನ ಆಗಬಾರದು. ಬದಲು, ಪೂರ್ಣಾವಧಿಯ ವೃತ್ತಿ ಆಗಬೇಕು. ಆಗ ಮಾತ್ರ ಇದು ಪರೋಕ್ಷವಾಗಿ ಮೌಲಿಕ ಸಾಹಿತ್ಯಕ್ಕೆ, ಮುದ್ರಣ ಕಾಗದದದ ಅಪವ್ಯಯ ನಿವಾರಣೆಗೆ, ಎಲ್ಲಕ್ಕೂ ಮುಖ್ಯವಾಗಿ ಪುಸ್ತಕೋದ್ಯಮದ ಆರೋಗ್ಯಪೂರ್ಣ ಬೆಳವಣಿಗೆಗೆ ದಾರಿ ಹಸನಾದೀತೂ.
ವರ್ಗ ಮೂರು ಅಥವಾ [ಖಾಸಗಿ ಪ್ರಕಾಶಕರಲ್ಲಿ] ಸಗಟು ಖರೀದಿಗೆ ಹುಟ್ಟಿದವರು: ಒಬ್ಬ ಲೇಖಕ-ಪ್ರಕಾಶಕ ಎಂಬತ್ತು ಪುಟದ ಕೊಳಕು ಪುಸ್ತಕಕ್ಕೆ ಹದಿನೈದು ರೂಪಾಯಿ ಬೆಲೆ ಮುದ್ರಿಸಿ ನನಗೆ ಶೇಕಡಾ ೭೫ರ ರಿಯಾಯಿತಿ ದರದಲ್ಲಿ ಮಾರಲು ಬಂದ. ಕೆದಕಿದಾಗ ತಿಳಿಯಿತು ಈತ ಸಗಟು-ಖರೀದಿಜ! ಇಂಥವರು ಪುಸ್ತಕದ ವಿಷಯ, ಭಾಷೆ, ಮುದ್ರಣದ ಗುಣ ಒಂದನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಸಗಟು ಖರೀದಿ ಇಲಾಖೆಯ ನಿಯಮಾವಳಿಗಳ ಪಟ್ಟಿ, ಪುಸ್ತಕ ತಯಾರಿಯಲ್ಲಿ ಕನಿಷ್ಠ ಖರ್ಚು ಇವರಿಗೆ ಮಾರ್ಗದರ್ಶಿ ಸೂತ್ರಗಳು. ನಾಲ್ಕಾಣೆ ಖರ್ಚು ಮಾಡಿ ನಲವತ್ತು ರೂಪಾಯಿ ಮುದ್ರಿತ ಬೆಲೆಯಿಡಲೂ ಹೇಸದ ಮಂದಿಯಿವರು. ಇಂಥವರು ತಮ್ಮ ಕಲಸುಮೇಲೋಗರವನ್ನು ಗರಿಷ್ಠ ಕೊಳ್ವಿಕೆಗಾಗಿ ಹಚ್ಚದ ವಶೀಲಿ ಇಲ್ಲ, ಮಗುಚದ ಕಲ್ಲಿಲ್ಲ, ಸುರಿಯದ ತೀರ್ಥವಿಲ್ಲ. ಸಹಜವಾಗಿ ಇಂಥವರ ಸಾವಿರಾರು ಪುಸ್ತಕಗಳ ನೂರಾರು ಪ್ರತಿಗಳು ಖರೀದಿಸಲ್ಪಟ್ಟು, ಬಳಕೆದಾರ ಸಂಸ್ಥೆಗಳಿಗೆ ಹೇರಲ್ಪಡುತ್ತವೆ. ಪರಿಣಾಮವಾಗಿ ಸಂಸ್ಥೆಗಳ ಕೊಳ್ಳು ಶಕ್ತಿ ಹ್ರಾಸವಾಗಿ ಕಾಳು ಸೋರಿ, ಜಳ್ಳು ಉಳಿಯುವ ವಿಪರ್ಯಾಸ ಉಂಟಾಗುತ್ತದೆ. ಸಗಟು ಖರೀದಿ ರದ್ದಾಗಬೇಕು. ಪ್ರಕಟಿತ ಕೃತಿಯ ಗುಣಾವಗುಣಗಳಿಂದ ಮಾರು ಕಟ್ಟೆ ನಿರ್ಧಾರವಾಗುವೊಂದೇ ರಾಜ ಮಾರ್ಗ; ಒಳದಾರಿ ಸಲ್ಲ.
[ಮುಂದುವರಿದ ದಿನಗಳಲ್ಲಿ ಸಗಟು ಖರೀದಿಯ ಅವ್ಯವಹಾರ ಬಹಳ ವ್ಯವಸ್ಥಿತವಾದದ್ದನ್ನೂ ನಾನು ನೋಡಿದ್ದೇನೆ, ಮುಂದಿನ ಅಧ್ಯಾಯಗಳಲ್ಲಿ ಇಲ್ಲೇ ಬರೆದಿದ್ದೇನೆ ಕೂಡಾ. `ಪ್ರಕಾಶಕ’ (ಎಂಬುವವನು) ಏನನ್ನೂ ಪ್ರಕಟಣೆಗೆ ಎತ್ತಿಕೊಳ್ಳಬಲ್ಲ. ಲೇಖಕನ ಖ್ಯಾತಿ, ವಿಷಯದ ವ್ಯಾಪ್ತಿ ನೋಡಿಕೊಂಡು ಕಾಲು ಹಿಡಿಯಬಲ್ಲ, ಕಾಲಿಗೆ ಬೀಳಿಸಿಕೊಳ್ಳಲೂ ಬಲ್ಲ!
ಇಂದು ಮುದ್ರಣರಂಗದಲ್ಲಿ ಗಣಕದ ಅಭಿವೃದ್ಧಿಯೊಡನೆ, ಒಮ್ಮೆಗೆ ಐವತ್ತೋ ನೂರೋ ಪ್ರತಿಗಳನ್ನಷ್ಟೆ ಮಾಡುವುದೂ ಸಾವಿರಾರು ಪ್ರತಿ ತರುವುದಕ್ಕೂ (ಕಾಗದದ ಬೆಲೆಯೊಂದು ಬಿಟ್ಟು) ವಿಶೇಷ ಖರ್ಚು ಅಥವಾ ಸಮಯದ ವ್ಯತ್ಯಾಸ ಬರುವುದಿಲ್ಲ. ಮತ್ತಿದರೊಳಗೆ ಯಾವ ಹಂತದಲ್ಲೂ ಯಾವ ಹೆಚ್ಚಿನ ವೆಚ್ಚವೂ ಇಲ್ಲದೆ ಅನುಕೂಲದ ತಿದ್ದುಪಡಿಗಳನ್ನು ಅಳವಡಿಸಿಕೊಳ್ಳಬಹುದು. ಸರಳವಾಗಿ ಹೇಳುವುದಿದ್ದರೆ, ಲೇಖಕನಿಗೆ ಕೊಟ್ಟ ಪ್ರತಿಯಲ್ಲಿ ಮುದ್ರಣದ ವರ್ಷ ೨೦೦೮, ಪುಟಗಳು ೧೪೦, ಬೆಲೆ ರೂ ೧೦೦, ಮುದ್ರಿತ ಪ್ರತಿಗಳು ೧೦೦೦ ಎಂದು ನಮೂದಾಗಿದೆ ಎಂದು ಭಾವಿಸಿ. ವಾಸ್ತವವಾಗಿ ಪ್ರಕಾಶಕ ಲೇಖಕನಿಗೆ (ಇಪ್ಪತ್ತೋ ಮೂವತ್ತೋ) ಗೌರವ ಪ್ರತಿ, ಬಿಡುಗಡೆ ಸಮಾರಂಭ ನಡೆಯುವುದಿದ್ದರೆ ಅಲ್ಲಿನ ಆವಶ್ಯಕತೆಗೆ ಮೇಲೊಂದು ನೂರು ಪ್ರತಿಗಳನ್ನಷ್ಟೇ ಮುದ್ರಿಸುತ್ತಾನೆ. ಮತ್ತಾ `ಪುಸ್ತಕ’ ಗಣಕದಲ್ಲಿ ಒಂದು ಸಣ್ಣ, ಸುಪ್ತ, ಕಡತ ಮಾತ್ರ. (ನಿಜಮುದ್ರಣದ ಆ ಐವತ್ತು-ನೂರು ಪ್ರತಿಗಳಲ್ಲಿ ಉಳಿದ ಪ್ರತಿಗಳನ್ನು ಒಂದೆರಡು ಖ್ಯಾತ ಮಳಿಗೆಗಳಿಗೆ ಎರಡೋ ಮೂರೋ ಪ್ರತಿಗಳ ಸಂಖ್ಯೆಯಲ್ಲಿ ವಿತರಿಸಿ ಒಮ್ಮೆಗೆ ಕೈ ತೊಳೆದುಕೊಳ್ಳುತ್ತಾರೆ.) ಸಗಟು ಖರೀದಿ ಘೋಷಣೆಯಾದಾಗ, ಕಾಲದ ನಿಯಮಗಳಿಗೆ ಹೊಂದುವಂತೆ ಆ ಸುಪ್ತ ಕಡತ ಅರಳುತ್ತದೆ. ಗಣಕದಲ್ಲಿ ಕಡತದ ಪರಿಷ್ಕರಣೆ ಒಂದೆರಡು ಕೀಲಿಗಳ ಕರಮತ್ತು ಮಾತ್ರ. ಮುದ್ರಣದ ವರ್ಷ ೨೦೧೫ ಆಗಬಹುದು. ಅಕ್ಷರಗಳ ಗಾತ್ರ ಹೆಚ್ಚು ಕಡಿಮೆಯಾಗುವುದರೊಂದಿಗೆ ಪುಟ ಸಂಖ್ಯೆ ಏನೂ ಆಗಬಹುದು. ಮುದ್ರಿತ ಬೆಲೆ ಮಾತ್ರ ನಿಯಮಾವಳಿಯ ಗರಿಷ್ಠ ಮಿತಿಯನ್ನು ನೋಡಿಕೊಂಡು ಅನೂಹ್ಯ ಎತ್ತರವನ್ನೇ ಮುಟ್ಟುತ್ತದೆ!
ನಾನು ನನ್ನ ಅಂಗಡಿಯ ಮಿತಿಯಲ್ಲೇ ಇಂಥ ನೂರಾರು ಅಪರಾಧಗಳನ್ನು ಪತ್ತೆ ಹಚ್ಚಿದ್ದೇನೆ. (ಇಂಥ ಕೆಲವು ಪ್ರಕಾಶಕರು – ವಿಶೇಷವಾಗಿ ನನಗೆ ಪುಸ್ತಕ ಒದಗಿಸುವಾಗ, ಮುದ್ರಿತ ಬೆಲೆಯ ಮೇಲೆ ಶೇಕಡ ೫೦ ರಿಂದ ೬೦ರವರೆಗೂ ರಿಯಾಯ್ತಿ ಕೊಡುತ್ತಿದ್ದರು! ನಾನವನ್ನು ಕೇವಲ ಪೆನ್ನಿನಲ್ಲೇ ಇಳಿಸಿದ ಬೆಲೆಯಾಗಿ ನಮೂದಿಸಿ `ಲಾಭ’ವನ್ನು ನನ್ನ ಗಿರಾಕಿಗಳಿಗೆ ದಾಟಿಸುತ್ತಿದ್ದೆ.) ನಾನೇ ಬಯಲು ಮಾಡಿ ಅಪರಾಧ ಸಾಬೀತಾದ ಹಲವು ಪ್ರಕರಣಗಳಲ್ಲಿ ಮೈಸೂರಿನ ಪ್ರಕರಣ – ಕುವೆಂಪು ಆಯ್ದ ಕವನಗಳು ಮತ್ತು ಬೆಂಗಳೂರಿನ ಪ್ರಕರಣ – ದಾಸ ಕೀರ್ತನೆಗಳ ಬೃಹತ್ ಸಂಕಲನದ್ದು ಸದಾ ಸ್ಮರಣಾರ್ಹ! ಹೀಗೆ ಸಿಕ್ಕಿಬಿದ್ದ ಪ್ರಕಾಶಕರುಗಳು ಮಹತ್ವಾಕಾಂಕ್ಷೆಯಲ್ಲಿ ತಮ್ಮ ವಹಿವಾಟನ್ನು ನಿಜ ಮಾರುಕಟ್ಟೆಗೂ ಅಂದರೆ, ನನ್ನಂಥ ಮಾರಾಟಗಾರನಿಗೂ ವಿಸ್ತರಿಸಿದ್ದೇ ತಪ್ಪಾಗಿತ್ತು! ಸಗಟು ಖರೀದಿಯಲ್ಲಿ ಉತ್ತೀರ್ಣಗೊಂಡು, ಗ್ರಂಥಾಲಯಕ್ಕೆ ವಿತರಣೆಗೊಂಡ ಪ್ರತಿಗಳಲ್ಲಿನ ಬೆಲೆ, ಮುದ್ರಣ ಇತಿಹಾಸವನ್ನು ತನಿಖೆಗೊಡ್ದಿದ ಲೇಖಕರು ತುಂಬಾ ಕಡಿಮೆ; ನಾನು ಕೇಳಿಲ್ಲ! ಇನ್ನವರು ನಿಜವಾಗಿ ಮುದ್ರಿಸಿದ ಪ್ರತಿಗಳ ಸಂಖ್ಯೆ ಅವರ ಮತ್ತು ಮುದ್ರಕನ ನಡುವಿನ ರಾಜರಹಸ್ಯ.
ನನ್ನ ತಂದೆಯ `ನೋಡೋಣು ಬಾರಾ ನಕ್ಷತ್ರ’ವನ್ನು ನಾನು ಇಪ್ಪತ್ತು ರೂಪಾಯಿ ಬೆಲೆ ಮುದ್ರಿಸಿ ಮಾರುತ್ತಿದ್ದೆ. ಇತರ ಮಾರಾಟಗಾರರಿಗೆ ಎಂದಿನಂತೆ ೩೩% ರಿಯಾಯ್ತಿಯನ್ನೂ ಕೊಡುತ್ತಿದ್ದೆ. ಬೆಂಗಳೂರಿನ ಮಹಾಮಳಿಗೆಯ ಮಾಲಕರೊಬ್ಬರು – ಎಂದೂ ನನ್ನನ್ನು ಕಂಡು ಮಾತಾಡಿದವರಲ್ಲ. ಅವರು ಒಮ್ಮೆಗೆ ನೋಡೋಣು ಬಾರಾ ಪುಸ್ತಕವನ್ನು ವಿಚಾರಿಸಿದರು. ಮುನ್ನೂರು ಪ್ರತಿಯನ್ನು ೫೦% ರಿಯಾಯ್ತಿಯಲ್ಲಿ ಕೇಳಿದರು. ನಾನು ರಿಯಾಯ್ತಿ ದರದಲ್ಲಿ ಬದಲಾವಣೆ ಅಸಾಧ್ಯವೆಂದೆ. ಆತ ಪ್ರತಿಗಳ ಸಂಖ್ಯೆಯನ್ನು ಹಂತಹಂತವಾಗಿ ಸಾವಿರದ ಮೇಲಕ್ಕೂ ಏರಿಸಿ ಆಮಿಷ ಒಡ್ಡಿದ. ನನಗೆ ಮುದ್ರಿತ ಬೆಲೆ ಏರಿಸಿ, ಆತ ಕೇಳಿದ ೫೦% ವ್ಯಾಪಾರೀ ವಟ್ಟಾ ಕೊಡಲೂ ಸೂಚಿಸಿದ. ನಾನು ಒಪ್ಪಲಿಲ್ಲ. ಕೊನೆಯ ಅಸ್ತ್ರವಾಗಿ ಆತ “ಒಂದು ಮುದ್ರಣಕ್ಕೆ ನಮಗೆ ಹಕ್ಕಾದರೂ ಕೊಡಿ” ಎಂದು ನಿರ್ಲಜ್ಜವಾಗಿ ಕೇಳಿ, ಇಲ್ಲವೆನ್ನಿಸಿಕೊಂಡ. ಇದರ ಹಿಂದಿನ ಗುಟ್ಟು ನನಗೆ ನಿಧಾನವಾಗಿ ತಿಳಿದು ಬಂತು. ಆ ದಿನಗಳಲ್ಲಿ ಯಾವುದೋ ಒಂದು ಸರಕಾರೀ ಸಗಟು ಖರೀದಿ ವಿಭಾಗದ ವರಿಷ್ಠಸ್ಥಾನಕ್ಕೆ ನನ್ನ ತಂದೆಯ ಅಭಿಮಾನಿಯೊಬ್ಬರು ಬಂದಿದ್ದರು. ಅವರಿಗೆ ಇಲಾಖೆಯ ವಿಷವ್ಯೂಹಕ್ಕೆ ನೇರ ನನ್ನನ್ನೇ ಆಹ್ವಾನಿಸುವುದು ಮತ್ತೆ ಋಜು ವ್ಯವಹಾರವಾಗಿ ಕೊನೆ ಮುಟ್ಟಿಸುವುದು ತನ್ನ ಮಿತಿಯೊಳಗಿನದಲ್ಲ ಎಂಬ ಅರಿವಿತ್ತು. ಹಾಗಾಗಿ ಒಳದಾರಿಗಳಲ್ಲಿ ಪಳಗಿದವನಿಗೇ ನೋಡೋಣು ಬಾರಾಕ್ಕೆ ಆದೇಶ ಕೊಟ್ಟಿದ್ದ. ನೋಡೋಣು ಬಾರಾ ಮಾತ್ರವಲ್ಲ, ನನ್ನ ಯಾವ ಪ್ರಕಟಣೆಗಳೂ ಸಗಟು ಖರೀದಿಯ ನಿಯಮಗಳಿಗೊಳಪಟ್ಟು ಸರಕಾರೀ ಗುದಾಮು ಸೇರಲೇ ಇಲ್ಲ. ಇದಕ್ಕೊಂದು ಸಣ್ಣ ಅಪವಾದ –ಸುಬ್ರಹ್ಮಣ್ಯನ್ ಚಂದ್ರಶೇಖರ್ ಪುಸ್ತಕದ್ದಿದೆ, ಮುಂದೆ ಹೇಳುತ್ತೇನೆ.]
ವಿಭಾಗ ಎರಡು – ಬಳಕೆದಾರರು ಅಥವಾ ಗಿರಾಕಿಗಳಿಂದ ಉದ್ಭವಿಸುವ ಸಮಸ್ಯೆಗಳು
ಆಧುನಿಕ ಬದುಕಿಗೆ ಪುಸ್ತಕ ಐಶಾರಾಮವಲ್ಲ, ಅನಿವಾರ್ಯ. ಪುಸ್ತಕ ಕೊಳ್ಳುವಾತ ಉಪಕಾರಿ, ಮಾರಾಟಗಾರ ಉಪಕೃತ, ಎಂಬ ಮನೋಭಾವವೇ ತಪ್ಪು. ದಾನಿನಾನುತನವೂ (ಕೊಳ್ಳುಗನದು) ದೀನನಾನುತನವೂ (ಮಾರಾಟಗಾರನದು) ಬೇಡ. ಶುದ್ಧ ವ್ಯವಹಾರವೊಂದೇ ಬಂಧನದ ಸೂತ್ರವಾಗಬೇಕು. ಇದನ್ನು ತಿಳಿಯದ ಬಳಕೆದಾರರು ಮಾರಾಟಗಾರನ ಇನ್ನೊಂದು ಸಮಸ್ಯೆ. ಇವರಲ್ಲಿ ಸಂಸ್ಥೆಗಳು ಸೇರಿವೆ, ವ್ಯಕ್ತಿಗಳೂ ಇದ್ದಾರೆ.
ಸಾಂಸ್ಥಿಕ ಕೊಳ್ವಿಕೆಗಳಿಗೆ ಮುದ್ರಿತ ಬೆಲೆಯ ಮೇಲೆ ಗಿರಾಕಿಗಳು ವಟ್ಟಾ ಕೇಳುವುದು ಇಂದು ವ್ಯವಹಾರಧರ್ಮವೇ ಆಗಿದೆ. ಇದನ್ನು ಸ್ಥಿರೀಕರಿಸುವಂತೆ ವಿಶ್ವವಿದ್ಯಾನಿಲಯಗಳಿಗೆ ಅನುದಾನ ಪ್ರದಾನಿಸುವ ಸಂಸ್ಥೆ (ಯುಜಿಸಿ) ಕನಿಷ್ಠ ತನ್ನ ವ್ಯಾಪ್ತಿಯೊಳಗಿನ ಖರೀದಿದಾರರೆಲ್ಲ ಕನಿಷ್ಠ ೧೦% ರಿಯಾಯ್ತಿ ಪಡೆಯಬೇಕೆಂದು ತಾಕೀತೇ ಮಾಡಿದೆ. ಆದರೆ ಪ್ರಾದೇಶಿಕವಾಗಿ ಎಲ್ಲ ಸರಕಾರೀ ಸಂಸ್ಥೆಗಳೂ ಕೆಲವೊಮ್ಮೆ ಖಾಸಗಿ ಸಂಸ್ಥೆಗಳೂ ಪ್ರತಿ ಖರೀದಿಯ ಸಮಯದಲ್ಲೂ ಮೂವರು ಪುಸ್ತಕ ವ್ಯಾಪಾರಿಗಳ ದರಪಟ್ಟಿ ಸಂಗ್ರಹಿಸಿ, ಸಂಸ್ಥೆಗೆ ಲಾಭಕರವಾದ್ದನ್ನೇ ಆರಿಸಬೇಕು ಎನ್ನುವುದನ್ನು ಅನುಸರಿಸುತ್ತವೆ. ಮುದ್ರಿತ ಪುಸ್ತಕಗಳು ಅನ್ಯ ಮಾಲುಗಳಂತಲ್ಲ ಎನ್ನುವ ಸಾಮಾನ್ಯ ಜ್ಞಾನ ಈ ಸರಕಾರೀ ಮಂಡೆಗಳಿಗೆ ಎಂದೂ ಬಂದದ್ದಿಲ್ಲ! ಉದಾಹರಣೆಗೆ ಭೈರಪ್ಪನವರ ವಂಶವೃಕ್ಷ ಪುಸ್ತಕಕ್ಕೆ ಯಾವುದೇ ಪುಸ್ತಕ ಮಳಿಗೆಗೆ ಹೋದರೂ ಒಂದೇ ಮುದ್ರಿತ ಬೆಲೆ. ಅದೇ ಒಂದು ನಕಾಶೆಗೋ ಪ್ರನಾಳಕ್ಕೋ ಭಿನ್ನ ತಯಾರಕರ ನೆಲೆಯಲ್ಲಿ ಭಿನ್ನ ಬೆಲೆಗಳಿರುವುದು ತಪ್ಪಲ್ಲ. ಮತ್ತಲ್ಲಿ ದರಪಟ್ಟಿ ವಿಚಾರಣೆ ಸಮರ್ಥನೀಯವೂ ಇರಬಹುದು. ಮುದ್ರಿತ ಬೆಲೆಗಳ ಮೇಲೆ ನಡೆಯುವ ಈ ಅಬದ್ಧ ಚೌಕಾಸಿಗೆ ವ್ಯಾಪಾರೀರಂಗ ಸುಲಭದ ಪ್ರತಿತಂತ್ರವನ್ನೇ ನಡೆಸಿರುವುದು ಎಲ್ಲರಿಗೂ ತಿಳಿದೇ ಇದೆ.
ಒಂದೇ ಮಳಿಗೆಯವರು ಅಸ್ತಿತ್ವವಿಲ್ಲದ ಮೂರು ನಾಲ್ಕು ಸಂಸ್ಥೆಗಳ ಲೆಟರ್ ಹೆಡ್ ತಯಾರಿಸಿ ಇಟ್ಟುಕೊಂಡಿರುತ್ತಾರೆ. ಗಿರಾಕಿ ಮೂರು ದರಪಟ್ಟಿ ಅರಸಿ ಅಲೆಯುವ ಶ್ರಮ ಇದು ತಪ್ಪಿಸುತ್ತದೆ. ವಾಸ್ತವದ ತುಲನಾತ್ಮಕ ಪರಿಪತ್ರದಲ್ಲಿ ಎರಡು ನಕಲಿ, ಒಂದು ಅಸಲಿ ಸಂಸ್ಥೆ ಭಾಗವಹಿಸಿದಂತಾಗುತ್ತದೆ. ಇಲ್ಲಿ ನ್ಯಾಯ ಕೇಳುವ (ಬೆಪ್ಪು) ತಕ್ಕಡಿ ಎತ್ತ ವಾಲಬೇಕು?
ಸಹ ಮಾರಾಟಗಾರರಲ್ಲಿ ಮನಸ್ತಾಪಕ್ಕೆ ಅವಕಾಶ, ಬಗಲಿಗಿರಿಯಲು ಪ್ರೇರಣೆ. ಒಂದು ಉದಾಹರಣೆ ನೋಡಿ: ಒಮ್ಮೆ ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಪುಸ್ತಕ ವ್ಯಾಪಾರಿಗಳಿಂದ ಪ್ರಾಮಾಣಿಕವಾಗಿಯೇ ದರಪಟ್ಟಿ ಕೇಳಿತ್ತು. ನಗರದ ಓರ್ವ ಹಿರಿಯ ವ್ಯಾಪಾರಿ ಉದ್ದೇಶಪೂರ್ವಕವಾಗಿಯೇ ತನ್ನ ದರ ಪಟ್ಟಿ ಕಳಿಸಲಿಲ್ಲ. ಆದರೆ ಬಂದವನ್ನು ಹೋಲಿಕೆಗಾಗಿ ತೆರೆದು ನೋಡುವ ವೇಳೆ ವಿಚಾರಿಸಿ, ಅಲ್ಲಿ ಹಾಜರಾದರು. ಮತ್ತು ಬಂದವಲ್ಲಿ ಸಂಸ್ಥೆಗೆ ಗರಿಷ್ಠ ಅನುಕೂಲ-ದರ ತಿಳಿದುಕೊಂಡು, ಅದರ ಮೇಲೆ ಶೇಕಡಾ ಅರ್ಧದಷ್ಟು ತನ್ನ ರಿಯಾಯ್ತಿ ದರ ದಾಖಲಿಸಿ ಅಲ್ಲೇ ತನ್ನ ಪತ್ರ ಹಾಜರುಪಡಿಸಿದರು. ಹೋಗಲಿ, ಸಂಸ್ಥೆಗೆ ಲಾಭವಾಯ್ತೆಂದು ಯೋಚಿಸಿದಿರಾ? ಇಲ್ಲ, ಮುಂದೆ ಪುಸ್ತಕ ಒದಗಿಸುವಾಗಿನ ಕತೆಯೇ ಬೇರೆ. ಪ್ರಕಾಶಕ, ವಿತರಕರೊಡನೆ ಈ ಮಹಾಶಯನ ಸಂಬಂಧ ಯಾವತ್ತೂ ಕೆಟ್ಟದ್ದೇ. ಸಹಜವಾಗಿ ವಿದ್ಯಾಸಂಸ್ಥೆಗೆ ಅವಶ್ಯವಿದ್ದ ಹಲವು ಪುಸ್ತಕಗಳಿಗೆ ಈತ `ಅಲಭ್ಯ’ ಷರಾ ಹೊಡೆದು, ತನ್ನಲ್ಲಿದ್ದ ಕೆಟ್ಟ ದಾಸ್ತಾನನ್ನು ತುಂಬಿ ಕೃತಾರ್ಥನಾದ!
ದೊಡ್ಡ ಬಂಡವಾಳದವರಿಂದ ಸಣ್ಣವರ ಮೇಲೆ ಸವಾರಿ. ಗುಣ ಕೇವಲ ದೊಡ್ಡವನ ಏಕಸ್ವಾಮ್ಯ ಆಗಬೇಕಿಲ್ಲವಷ್ಟೆ!
ವಿಷಯ ವೈವಿಧ್ಯ ಒದಗಿಸುವ ಮಾರಾಟಗಾರರಿಗೂ (ಅಂದರೆ ಪ್ರಕಟಣರಂಗದ ಹೊಸತೆಲ್ಲವನ್ನು ಕೊಡಬೇಕೆನ್ನುವ ಉತ್ಸಾಹಿಗೂ) ದಾಸ್ತಾನು ತೀರುವಳಿ ಮಾರಾಟಕ್ಕಿಳಿದವನಿಗೂ ಅಸಮಾನ ಸ್ಪರ್ಧೆ.
ಇವೆಲ್ಲದರ ಅಂತಿಮ ಫಲ – ಕೊಳ್ಳುಗನಿಗೆ ಆರ್ಥಿಕ ಲಾಭ ಅಥವಾ ಲಾಭ ಪಡೆದ ಭ್ರಮೆ ಬರಬಹುದೇ ಹೊರತು ಮೌಲಿಕವಾಗಿ ನೋಡಿದ್ದೇ ಆದರೆ ಗೆಲವು ನೀರ ಮೇಲಿನ ಗುಳ್ಳೆ.
ಸಾಂಸ್ಥಿಕ ಮಾರಾಟದಲ್ಲಿ ಅಲ್ಪಾವಧಿ ಕಡ ಅನಿವಾರ್ಯ. ಆದರೆ ಇದು ಆಡಳಿತ ಅವ್ಯವಸ್ಥೆಯಲ್ಲಿ ಸಿಕ್ಕು, ದೀರ್ಘಾವಧಿಗೆ ಎಳೆದು ಹೋಗುವುದು ಶೋಚನೀಯ. ಇತ್ತ ಪ್ರಕಾಶಕನಿಗೆ ನಗದು ಕೊಟ್ಟು ತರಿಸಿದ್ದನ್ನು, ಅತ್ತ ಬಳಕೆದಾರರಿಗೆ ಮುನ್-ರಸೀತಿ ಸಹಿತ ಕೊಟ್ಟು, ಅವರು ಕೊಡುವ ಕಾಟಕ್ಕೆ, ಪಾವತಿ ಬರುವ ಕಾಲಕ್ಕೆ ಚಾತಕಗಳಾಗಿ ಕೂರುವ ಸ್ಥಿತಿ ಮಾರಾಟಗಾರರಿಗೆ ತಪ್ಪಬೇಕು.
ಮಾರಾಟಮಳಿಗೆಯನ್ನು ಓದುವ ಕೋಣೆ ಮಾಡುವವರು, ಪುಸ್ತಕೋದ್ಯಮದ ಹಿನ್ನೆಲೆ ಏನು ಇಲ್ಲದೇ ಧಾರಣೆ ಧೋರಣೆಗಳ ಬಗ್ಗೆ ಚುಚ್ಚುವವರು, ಪುಸ್ತಕ ಕಳ್ಳತನ, ಹಾಳುಗೇಡಿತನ, ಇತ್ಯಾದಿ ಹಿರಿಕಿರಿ ಕಿರಿಕಿರಿಗಳಿಲ್ಲದೆ ಇಂದು ವ್ಯಾಪಾರವೇ ಇಲ್ಲ. ಶಿಷ್ಟಾಚಾರಕ್ಕೆ ಬಿಟ್ಟ ನಗೆ, ಕೊಟ್ಟ ನಮಸ್ಕಾರ, ಇಟ್ಟ ಪ್ರಶ್ನೆಗಳಿಗೆ ಏನೆಲ್ಲ ಅರ್ಥ ಕಟ್ಟಿ ಅನರ್ಥ ಮಾಡುವ ಬಳಕೆದಾರದೊಡನೆಯೂ ಮಾರಾಟಗಾರ ಏಗಬೇಕು. ಒಂದು ಉದಾಹರಣೆ: ಗೋವಿಂದ ಪೈ ಶತಾಬ್ದಿಯ ಸಮಾರಂಭದಲ್ಲಿ ಪ್ರಬಂಧ ಮಂಡಿಸಬೇಕಿದ್ದ ನನ್ನ ಪರಿಚಿತರೊಬ್ಬರು ಮೂರು ರೂಪಾಯಿ ಬೆಲೆಯ `ನಂದಾದೀಪ’ವನ್ನು ಮೂರು ದಿನದ ಬಳಕೆಗೆ ಕಡ ಕೇಳಿ ಬಂದಿದ್ದರು. ಆದರೆ ಪಾಪ, ಅವರ ಪರಿಚಯಬಲ ಅಥವಾ ನಾಮದ ಬಲ ಈ ಮೂರು ರೂಪಾಯಿಯನ್ನು ಅವರಿಗೆ ಉಳಿಸಿಕೊಡಲಿಲ್ಲ!
ವಿಭಾಗ ಮೂರು – ಉತ್ಪನ್ನ ಹಾಗೂ ಸೇವೆಗಳ ಕೊರತೆಗಳು ಅನಿವಾರ್ಯ ಖರ್ಚುಗಳಿಗೆ ಸರಿದೂಗದ ಸೇವೆಗಳು, ಉತ್ಪನ್ನಗಳು ಮಾರಾಟಗಾರನ ಬಾಯಿಗಿಕ್ಕಿದ ಬಿಸಿತುಪ್ಪ. ಉತ್ಪನ್ನ ಅರ್ಥಾತ್ ಪುಸ್ತಕಗಳನ್ನೇ ತೆಗೆದುಕೊಳ್ಳಿ. ಜಿರಳೆಗೆ ಸ್ವಾದಿಷ್ಟವಾದ ಗೋಂದಿನ ಪುಸ್ತಕಗಳು, ಮಳೆಗಾಲದ ತೇವ ವಾತಾವರಣದಲ್ಲಿ ರಟ್ಟು ಬಟ್ಟೆಗಳ ಸಂಬಂಧ ಕಡಿದುಕೊಳ್ಳುವ `ಉತ್ತಮ ಪ್ರತಿಗಳು’ (ಕ್ಯಾಲಿಕೋ ಬೈಂಡ್), ಸಂಪರ್ಕಕ್ಕೆ ಬಂದವಕ್ಕೆಲ್ಲ ಉಚಿತ ಬಣ್ಣ ಕೊಡುವ ವರ್ಣರಂಜಿತ ಹೊತ್ತಗೆಗಳು, ಪುಟ ಹೊಂದಿಸುವ ಹೊಲಿಯುವ ದೋಷಗಳು ಇತ್ಯಾದಿ. ಈ ಸಮಸ್ಯೆಯಿದ್ದಲ್ಲಿ ಸರಕಾರಿ ಪ್ರಕಟಣೆಗಳನ್ನು ಉಳಿದು ಎಲ್ಲ ಪ್ರಕಾಶಕರೂ ಬದಲಿ ಪ್ರತಿ ಕೊಡುತ್ತಾರೆ. ಇದರಿಂದ ಕೆಲವೊಮ್ಮೆ ತತ್ಕಾಲೀನವಾಗಿ ಗಿರಾಕಿ ಕಳೆದುಕೊಳ್ಳುವುದು, ಪ್ರಕಾಶಕನಿಗೆ ಹಾಳಾದ ಪ್ರತಿಯನ್ನು ಕಳಿಸಿ ಕೊಡುವ ಖರ್ಚು ಮಾರಾಟಗಾರನದ್ದೇ ಆದರೂ ಸುಧಾರಿಸಿಕೊಳ್ಳಬಹುದು. ಹೆಚ್ಚಿನ ಸರಕಾರೀ ಪ್ರಕಟಣಾಂಗಗಳಿಂದ ಒಮ್ಮೆ ತರಿಸುವುದೇ ಸಾಹಸವಾದಾಗ, ಬದಲಿ ಕೇಳುವ ಧೈರ್ಯ ಯಾರೂ ಮಾಡುವುದೇ ಇಲ್ಲ.
ಕೆಲವು ದೊಡ್ಡ ಪುಸ್ತಕಗಳು ಬೆನ್ನ ಮುದ್ರಣವಿಲ್ಲದೆ ಬಂದು ಶೆಲ್ಫುಗಳಲ್ಲಿ ಶಾಶ್ವತ ಸಾಹಿತ್ಯಗಳಾಗುತ್ತವೆ. ಬೆಲೆ ಕಾಣಿಸುವಲ್ಲಿಯ ಸರ್ಕಸ್ಸುಗಳು ದೊಡ್ಡ ಹಿಂಸೆ. ರಟ್ಟಿನಲ್ಲೊಂದು ಒಳಗೊಂದು ಬೇರೆ ಬೇರೆ ಬೆಲೆ, ಮುದ್ರಿತ ಬೆಲೆಯ ಮೇಲೆ ಅವ್ಯವಸ್ಥಿತ ಪರಿಷ್ಕರಣದ ಚೀಟಿಗಳು – ಅದೂ ಹೇಗೆ, ಕ್ಯಾಲೆಂಡರಿನ ಚೀಟಿ ಅಂಟಿಸುವುದು, ಮಸಿಯಿಲ್ಲದ ರಬ್ಬರ್ ಮೊಹರೊತ್ತುವುದು, ಕೇವಲ ಪೆನ್ನೋ ಪೆನ್ಸಿಲ್ಲಿನಲ್ಲೋ ತಿದ್ದಿ ತೋರುವುದು, ಪುಸ್ತಕದ ಮೇಲೇ ಏನೂ ಕಾಣಿಸದೆ ಬರೀ ಬಿಲ್ಲಿನಲ್ಲಿ ಮಾತ್ರ ಹೆಚ್ಚಳ ತೋರಿಸುವುದು ಹೀಗೆ ನೂರೊಂದು ವಿಧ. ಇವನ್ನು ಮಾರುವಲ್ಲಿ ಮಾರಾಟಗಾರನ ಮರ್ಯಾದೆಯ ಒಂದಂಶವೂ ಉಚಿತವಾಗಿಯೇ ಸವೆಯುತ್ತಿರುತ್ತದೆ! ಎರಡನೆಯದಾಗಿ ಭಾಂಗಿಗಳ ರೂಪ ಮತ್ತು ಸಾಗಣೆದಾರರ ಕಿರುಕುಳ. ಕ್ಷಮಿಸಿ, ಮತ್ತೆ ಮೈಸೂರು ಪ್ರಸಾರಾಂಗವನ್ನೇ ಉದಾಹರಿಸುತ್ತೇನೆ. ದೊಡ್ಡ ಗಾತ್ರದ ವಿಶ್ವಕೋಶವಿರಲಿ, ಕಿರುಗಾತ್ರದ ನೂರೆಂಟು ಪ್ರಚಾರೋಪನ್ಯಾಸ ಮಾಲೆಯ ಪುಸ್ತಕಗಳಿರಲಿ ಒಟ್ಟು ಕೇವಲ ಎರಡು ಪದರದ ಹಾಳೆಯೊಳಗೆ ಗಿಡಿದು, ಮೇಲೆ ಗೋಣಿ ಸುತ್ತಿ ಭಾಂಗಿ ತಯಾರು ಮಾಡುತ್ತಾರೆ. ಕೂಲಿಗಳ ಎತ್ತಾಟ ಸಾಗಣೆಯ ಉರುಡಾಟಗಳಲ್ಲಿ ಕಿರಿ ಪುಸ್ತಕಗಳು ಹುಡಿಯಾಗುವುದೂ ಹಿರಿ ಪುಸ್ತಕಗಳು ರೂಪಗೆಡುವುದೂ ಸಾಮಾನ್ಯ. ಭಾಂಗಿ ಕಟ್ಟುವುದಕ್ಕೂ ಲಾರಿ ತುಂಬುವುದಕ್ಕೂ ಹೆಚ್ಚಿನ ಖಾಸಗೀ ಪ್ರಕಾಶಕರು ಏನೂ ಕೇಳುವುದಿಲ್ಲ. ಆದರೆ ಪ್ರಸಾರಾಂಗ ಗಾಯದ ಮೇಲೆ ಉಪ್ಪೆರಚುವಂತೆ ಶೇಕಡಾ ಮೂರಕ್ಕೆ ಕಡಿಮೆಯಿಲ್ಲದ ದರದಲ್ಲೇ ವೆಚ್ಚ ವಿಧಿಸುತ್ತದೆ. ಕಾಗದದ ಶೀಟು, ಗೋಣೀ ಥಾಟು (thought?), ಸುತ್ತಲೀದಾರ (ಅಮಲ್ದಾರ?), ಆಟೋ (autocratic?) ಛಾರ್ಜು ಎಂದೆಲ್ಲ ಸ್ಪಷ್ಟ ನಮೂದುಗಳಿಟ್ಟೇ ವಸೂಲುಮಾಡುತ್ತಾರೆ. ಅಷ್ಟರ ಮೇಲೆ ತಾವು ಕಳಿಸುವ ಪುಸ್ತಕಗಳು ಮಾರಾಟಗಾರನ ಮಳಿಗೆಯಲ್ಲಿ ಪೂರ್ಣ ಸೌಂದರ್ಯದಿಂದ ರಾರಾಜಿಸಬೇಕು ಎಂಬ ಕನಿಷ್ಠ ಜ್ಞಾನ ಇವರಿಗೆಂದು ಮೂಡೀತು? ಮೂರನೆಯದಾಗಿ ಸಾಗಣಾ ಸೌಕರ್ಯಗಳು. ಮಾರಾಟಗಾರರಿಗೆ ಸಾಧಾರಣವಾಗಿ ಸಿಗುವ ಸಾಗಣಾ ಸೌಕರ್ಯಗಳು ಅಂಚೆ, ರೈಲ್ವೆ, ಲಾರಿ, ಬಸ್ಸು. ರಿಜಿಸ್ಟರ್ ಮಾಡದ ಅಂಚೆ ಭಾಂಗಿಗಳೂ ರೈಲ್ವೇ ಭಾಂಗಿಗಳೂ ಸರ್ವೇ ಸಾಮಾನ್ಯವಾಗಿ ಗುರಿ ತಲಪದಿರುವ ಅಥವಾ ಇಡಿಯಾಗಿ ತಲಪದಿರುವ, ಹಾಗೆ ತಲಪಿದರೂ ಸುರೂಪದಲ್ಲುಳಿಯದಿರುವ ಕುಖ್ಯಾತಿ ಗಳಿಸಿವೆ. ಪುಸ್ತಕಗಳಿಗಾಗಿ ಇರುವ ಅಂಚೆಯ ವಿಶೇಷ ಸೌಲಭ್ಯಗಳು ಅವನ್ನು ಅರ್ಥವಿಸುವ ಗುಮಾಸ್ತರ ಮಿತಿಗಳಿಂದ ಸಾಧಾರಣವಾಗಿ ಅಧಿಕ ಪಾವತಿಯನ್ನೇ ಕೇಳುತ್ತವೆ. ರೈಲ್ವೆ ಎಂದೂ ಸೇವೆಯಾಗಿ ಕಾಣಿಸಿದ್ದೇ ಇಲ್ಲ; ಹಣ ತೆಗೆದುಕೊಂಡು ಮಾಡುವ ಉಪಕಾರದ ಗತ್ತು ಇವರದು. ಶ್ರೀಸಾಮಾನ್ಯನ ತಪ್ಪಿಗೆ ದಂಡನೆ, ತಾನು ಮಾಡಿದ್ದು ಎಲ್ಲ ಸರಿ ಎಂಬ ಧೋರಣೆ ರೈಲ್ವೆಗೆ ಸಹಜ. ವೇ ಬಿಲ್ ತೋರದೇ ಇವರು ಭಾಂಗಿಯ ಬಗ್ಗೆ ಮಾಹಿತಿಯನ್ನು ಕೊಡರು. ಭಾಂಗಿ ವಿಚಾರಣೆ ಕನಿಷ್ಠ ಮೂರು ದಿನಕ್ಕೊಮ್ಮೆಯಾದರೂ ನಡೆಸದಿದ್ದರೆ ದಂಡ ತಪ್ಪದು. ಹೀಗಿದ್ದೂ ವಾರದ ಹಿಂದೆ ಒಂದು ಭಾಂಗಿ ಬಂದಿದ್ದು, ಗುಮಾಸ್ತನ ಕಣ್ತಪ್ಪಿನಿಂದ ಬರಲಿಲ್ಲ ಎನಿಸಿಕೊಂಡರೂ ದಂಡ ನಮಗೇ. ಯಾಕೆಂದರೆ ರೈಲ್ವೇ ತೋಳ, ಗಿರಾಕಿ (ಇಲ್ಲಿ ಮಾರಾಟಗಾರ) ಕುರಿಮರಿ! ಅವರು ತಿಂಗಳುಗಟ್ಟಳೆ ಸತಾಯಿಸಿದರೂ ನಾವು ದಂಡ ಹಾಕುವಂತಿಲ್ಲ. ಅದು ಬಿಟ್ಟು ಬಂದಾಗ ಬರಲಿ, ಎಂದು ನಾವು ಉದಾಸೀನರೂ ಆಗುವಂತಿಲ್ಲ. ವಿಳಂಬದ ಕುರಿತು ನಮ್ಮ ಗೈರುಹಾಜರಿ ಆರು ತಿಂಗಳು ಮೀರಿದರೆ ಮತ್ತೆ ಅವರಿಂದ ಭಾಂಗಿಯ ನಷ್ಟಭರ್ತಿಯನ್ನು ಕೇಳುವ ನಮ್ಮ ಅಧಿಕಾರವೇ ಲುಪ್ತವಾಗುತ್ತದೆ
ಹಾಗೆಂದು ಕಳೆದು ಹೋದ ಭಾಂಗಿಗೆ ನಿಗದಿತ ಅವಧಿಯೊಳಗೆ ನಷ್ಟಭರ್ತಿಗೆ ಅರ್ಜಿ ಸಲ್ಲಿಸಿದರೂ ಅದು ಪೂರೈಸುತ್ತದೆ ಎಂಬ ಭರವಸೆಯಿಲ್ಲ. ನಾನು ರೈಲ್ವೆಯಲ್ಲಿ ಕಳೆದುಕೊಂಡ ಸುಮಾರು ಸಾವಿರದಾರ್ನೂರು ರೂಪಾಯಿ ಮೌಲ್ಯದ ಪುಸ್ತಕಗಳ ನಷ್ಟಭರ್ತಿ ಇಂದಿನ ತನಕವೂ ಆದದ್ದಿಲ್ಲ. Heads – you lose, tails – I win! ಲಾರಿ ಬಗ್ಗೆ ವಾಸ್ತವಕ್ಕೆ ಹತ್ತಿರದ ಹಾಸ್ಯ ಕೇಳಿ: ದಿಲ್ಲಿಯಿಂದ ಇಲ್ಲಿಗೆ ಲಾರಿ ವೆಚ್ಚವೂ ಇಲ್ಲೇ ಹೊಸ ಲಾರಿ ಕೊಳ್ಳುವುದೂ ಒಂದೇ! ಮಾರಾಟಗಾರನಿಗೆ ರೈಲ್ವೆಗಿಂತ ದಕ್ಷವಾದ, ಆದರೆ ಅಂಚೆ ಲಾರಿಗಳಷ್ಟು ದುಬಾರಿಯಾಗದ ಮಾಧ್ಯಮವೊಂದು ಸಾಗಣೆಗೆ ಬೇಕಾಗಿದೆ. ಇದು ಸಣ್ಣಮಟ್ಟದಲ್ಲಿ ಸಾರ್ವಜನಿಕ ಬಸ್, ಖಾಲಿ ಮರಳುವ ಪೇಪರ್ ವ್ಯಾನುಗಳಲ್ಲಿ ನಡೆದಿದೆ. [ಈಚಿನ ವರ್ಷಗಳಲ್ಲಿ ರಾತ್ರಿ ಬಸ್ಸುಗಳ ನಿಗದಿತ ದಾರಿಗಳಲ್ಲಿ ಬಸ್ ಪಾರ್ಸೆಲ್ ಭಾರೀ ದಂಧೆಯಾಗಿಯೇ ಬೆಳೆದಿದೆ. ಪ್ರಯಾಣಿಕ ಸೌಲಭ್ಯವನ್ನೇ ಕಡೆಗಣಿಸಿ ಪಾರ್ಸೆಲ್ ತರುವ, ಬಸ್ಸಿಗೆ ಪೂರಕವಾಗಿ ಲಾರಿಯನ್ನೇ ಓಡಿಸುವ ಬಸ್ ಸಂಸ್ಥೆಗಳೂ ಇವೆ.] ದಕದೊಳಗೆ ಕಂಬೈನ್ಡ್ ಬುಕ್ಕಿಂಗ್ ಏಜನ್ಸಿ ಎಂಬ ಬಸ್ಸುಗಳ ಸಂಯುಕ್ತ ಸಂಸ್ಥೆಯೊಂದು ಬಲು ಸಮರ್ಪಕವಾಗಿ ಬಸ್ ಪಾರ್ಸೆಲ್ ಜಾಲ ನಡೆಸಿದೆ. ಅನೌಪಚಾರಿಕ ವಿಧಿಗಳೊಡನೆ ಮುಂಬೈ, ಸಾಗರಗಳಿಂದಲೂ ಭಾಂಗಿಗಳು ಬಸ್ಸಿನಲ್ಲಿ ಬರುವುದಿದೆ. ಪ್ರಿಂಟರ್ಸ್ ಪ್ರಕಾಶನ (ಪ್ರಜಾವಾಣಿ ಬಳಗ) ತಮ್ಮ ಪತ್ರಿಕಾ ವಿತರಣಾಜಾಲವನ್ನೇ ಸ್ವಂತ ಪ್ರಕಾಶನಗಳಿಗೂ ಯಶಸ್ವಿಯಾಗಿ ವಿಸ್ತರಿಸಿರುವುದು ಗಮನಾರ್ಹವಾಗಿದೆ. ಸಾಗಣೆ ವೆಚ್ಚ ಮತ್ತು ವೇಳೆ ಉಳಿಸುವ ಪರೋಕ್ಷ ಜಾಲದ ಕುರಿತು ಮಾರಾಟಗಾರರ ಚಿಂತನೆ ಹರಿಯಬೇಕಾಗಿದೆ.
ಕೊನೆಯದಾಗಿ, ದಿನವಹಿ ಎದುರಾಗುವ ಇತರ ಸಮಸ್ಯೆಗಳು. ಜಾಹೀರಾತು, ಸಹಾಯಧನ, ಪುಸ್ತಕದಾನ ಕೇಳಿ ಬರುವವರು ಸರಾಸರಿಯಲ್ಲಿ ದಿನಕ್ಕೆ ಇಬ್ಬರಾದಾರು. ಊರಿಗೆ ನಾಲ್ಕು ಪುಸ್ತಕ ಮಾರಾಟಗಾರರಾದರೆ ನಲ್ವತ್ತು ವಿದ್ಯಾಸಂಸ್ಥೆಗಳು, ನೂರೆಂಟು ಸಂಘಗಳು, ಸಾವಿರಾರು ಸಮಾಜ ಸೇವಕರು! ಅವರಲ್ಲಿ ಹೆಚ್ಚಿನವರು ತಾವು ವ್ಯಾಪಾರ ಕೊಟ್ಟು ಉಪಕರಿಸಿದ್ದೇವೆಂಬ ಹಮ್ಮಿನೊಡನೇ ಬಂದು ಜಾಹೀರಾತು ಇತ್ಯಾದಿಗಳಿಗೆ ಹಕ್ಕೊತ್ತಾಯ ಮಂಡಿಸುತ್ತಾರೆ! ಇಲ್ಲಿ ಉಪಕಾರ ಸ್ಮರಣೆ ಮಾಡುವುದೇ ಆದರೆ ಅದು ಪರಸ್ಪರ, ಎಂಬ ತಿಳಿವು ಇಬ್ಬರಲ್ಲೂ ಇರಬೇಕು. ಅಂಗಡಿ ಎಂಬುದು ಅರಸ ಇಟ್ಟ ಅರವಟ್ಟಿಗೆ ಅಲ್ಲ, ಕೊಳ್ಳುಗ ದಾನಶೂರಕರ್ಣನೂ ಅಲ್ಲ. ಒಮ್ಮೊಮ್ಮೆ ಪುಸ್ತಕ ಮಾರಾಟಗಾರರ ಸಮುದಾಯಕ್ಕೆ ತೊಂದರೆ ಬರುವುದಿದೆ. ಅಂಥಲ್ಲಿ ಸ್ಥಳೀಯವಾಗಿ ಮಾರಾಟಗಾರರು ಸಂಘಟಿಸಿ ಹೋರಾಟ ನಡೆಸಬಹುದು. ಆದರೆ ಖಾಯಂ ಸಂಘಟನೆ ಒಂದಿರಬೇಕೆಂದು ನಾನು ಸೂಚಿಸುವುದಿಲ್ಲ. ಕಾರಣ – ಸಮೂಹದ ಒಳಿತಿಗೆ ಹೋರಾಡಲು ಅವಕಾಶವಿಲ್ಲದ ಖಾಯಂ ಸಂಘಟನೆ ಕ್ರಮೇಣ ಪದಾಧಿಕಾರಿಗಳ ಸ್ವಾರ್ಥಕ್ಕೆ ವೇದಿಕೆಯಾಗುವುದನ್ನು ನಾನು ಧಾರಾಳ ಕಂಡಿದ್ದೇನೆ. ಎರಡೂವರೆ ವರ್ಷಗಳ ಹಿಂದೆ ಮೈಸೂರು ವಿವಿ ನಿಲಯದ ಪ್ರಸಾರಾಂಗದ ಚಿನ್ನದ ಹಬ್ಬದಲ್ಲಿ ಈ ಪ್ರಬಂಧವನ್ನು ಹೆಚ್ಚು, ಕಡಿಮೆ ಇದೇ ಹದದಲ್ಲಿ ಮಂಡಿಸಿದ್ದೆ. ಇಂದಿಗೂ [ಅಂದರೆ ನೆನಪಿರಲಿ ಈ ಪ್ರಬಂಧ ಮಂಡಿಸಿದ ೧೯೮೫ಕ್ಕೂ] ಆ ಸಮಸ್ಯೆಗಳನ್ನು ಹಾಗೇ ಉಳಿಸಿಕೊಟ್ಟ ಎಲ್ಲರಿಗೆ ಪ್ರಬಂಧಕಾರನಾಗಿ ನಾನು ಕೃತಜ್ಞ! ಆದರೆ ಮಾರಾಟಗಾರನಾಗಿ?