(ಚಕ್ರವರ್ತಿಗಳು – ೩೪)
[೨೦-೧೦-೧೯೭೪ರ ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ಪರಿಷ್ಕೃತ ರೂಪ]
ಮೈಸೂರಿನಲ್ಲಿ ನನ್ನ ಮಹಾರಾಜ ಕಾಲೇಜಿನ ದಿನಗಳು ತೊಡಗುವ ಕಾಲಕ್ಕೆ ಅಲ್ಲಿನ ದಪಸಂ (ದಖ್ಖಣ ಪರ್ವತಾರೋಹಣ ಸಂಸ್ಥೆ), ಪರ್ಯಾಯವಾಗಿ ಸಾಹಸಿಯಾಗಿ ಬಹುಖ್ಯಾತರಾದ ವಿ.ಗೋವಿಂದರಾಜ್ ಪರಿಚಯವೂ ಆಗಿತ್ತು. ನಮ್ಮ ಬಳಗ ವಾರಾಂತ್ಯದ ಶಿಲಾರೋಹಣ, ಚಾರಣ ಚಟುವಟಿಕೆಗಳಿಗೆ ಚಾಮುಂಡಿ ಬೆಟ್ಟದ (ಸುಮಾರು ಮೂರ್ನಾಲ್ಕು ಕಿಮೀ) ಕಿರಿದಂತರದಿಂದ ತೊಡಗಿ ಕರಿಘಟ್ಟ (೧೭ ಕಿಮೀ), ಪಾಂಡವಪುರದವರೆಗಿನ (೨೨ ಕಿಮೀ), ಹಿರಿದಂತರದ ದಾರಿ ಸವೆಸಿ, ಬಂಡೆ ಶಿಖರಗಳಿಗೆ ಬೆಳಿಗ್ಗೆ ಹೋಗಿ ಸಂಜೆಗೆ ಮರಳುತ್ತಿದ್ದೆವು. ಬಂಡೆ, ಬೆಟ್ಟಗಳಲ್ಲಿ ನಮ್ಮ ಅಸಾಮಾನ್ಯ ಚಟುವಟಿಕೆಗಳೇನಿದ್ದರೂ ಹೋಗಿ ಬರುವ ಸಾಧನ ಮಾತ್ರ ಸೈಕಲ್ಲೇ. ಇಂದಿನ ಹಗುರ ಆದರೆ ದೃಢ ದೇಹಿ, ಅದರಲ್ಲೂ ವಿವಿಧ ವೇಗಗಳ ಸೌಕರ್ಯದ ಕಲ್ಪನೆಗಳೆಲ್ಲ ನಮ್ಮನ್ನು ಮುಟ್ಟಿಯೇ ಇರಲಿಲ್ಲ. ನಮ್ಮವೆಲ್ಲ ಫೋರ್ಕ್ ಮುರಿದರೆಂದು ಹೆಚ್ಚುವರಿ ತಿರುಚಿದ ಕಬ್ಬಿಣ ಸರಳಿನ ರಕ್ಷಣೆ, ಸಾರ್ವಕಾಲಿಕ ಮಡ್ಗಾರ್ಡ್, ಚಂದದ ಪೂರ್ಣ ಚೈನ್ ಕವರ್ರು, ಕ್ಯಾರಿಯರ್, ದೊಡ್ಡ ಸ್ಟ್ಯಾಂಡ್ ಮುಂತಾಗಿ ಸಕಲಾಲಂಕಾರವೂ ಕಬ್ಬಿಣದ ರಚನೆಗಳೇ. ಈ ಹೊರೆಯ ಮೇಲೆ ನಮ್ಮ ಮಧ್ಯಾಹ್ನದ ಬುತ್ತಿ, ನೀರು ಮತ್ತು ಪರ್ವತಾರೋಹಣ ಸಲಕರಣೆಗಳ ಹೊರೆಯೂ ಇರುತ್ತಿತ್ತು.
ಎಷ್ಟೋ ಬಾರಿ ಸೈಕಲ್ಲೇ ಇಲ್ಲದ ಮಿತ್ರರು ಬರುವುದಿತ್ತು. ಹಿಂದೆ ಬರುವ ದಾರಿಯಲ್ಲಿ ಕೆಲವರ ಸೈಕಲ್ ಪಂಚೇರಾಗುವುದೂ ಇರುತ್ತಿತ್ತು. ಆ ದಿನಗಳಲ್ಲಿ ನಾವೇ ಮಾಡಿಕೊಳ್ಳಬಹುದಾದ ದಿಢೀರ್ ದುರಸ್ತಿ ತಂತ್ರಜ್ಞಾನ ನಮ್ಮನ್ನು ಮುಟ್ಟಿರಲಿಲ್ಲ. ಇನ್ನು ಆಯಾ ಸ್ಥಳದಲ್ಲಿನ ರಿಪೇರಿ ಅಂಗಡಿಗಳನ್ನು ಹುಡುಕಿ ಹೋಗುವುದು, ಕೆಲಸ ಪೂರೈಸಲು ಕಾದು ನಿಲ್ಲುವುದೆಲ್ಲ ನಮ್ಮ ವೇಳಾಪಟ್ಟಿಯೊಳಗೆ ಬರುತ್ತಲೇ ಇರಲಿಲ್ಲ. ಅಂಥ ಸಂದರ್ಭಗಳಲ್ಲಿ ಸಹಜವಾಗಿ ನಮ್ಮೊಳಗೊಬ್ಬ, ತನ್ನ ಸೈಕಲ್ ಮೆಟ್ಟಿ ಸವಾರಿ ಮಾಡುವುದರೊಡನೆ ಬಲಗೈಯಲ್ಲಿ ಮಿತ್ರನ ಖಾಲೀ ಸೈಕಲ್ಲನ್ನು ನೂಕಿಕೊಂಡು ತರುತ್ತಿದ್ದ. ಇನ್ನೊಬ್ಬ ಅಷ್ಟೇ ಸಹಜವಾಗಿ ಮಿತ್ರನನ್ನು ತನ್ನ ಹಿಂಸೀಟಿಗೇರಿಸಿಕೊಂಡು ನಾಲ್ಗಾಲು ತುಳಿತದಲ್ಲಿ ದಾರಿ ಸವೆಸುತ್ತಿದ್ದ. ದಪಸಂ ಸೈಕಲ್ ಸವಾರಿಗಳನ್ನು ನಾವೆಂದೂ ಸಾಹಸದ ಅಂಗವೆಂದು ಪರಿಗಣಿಸುತ್ತಲೇ ಇರಲಿಲ್ಲ. [ಇಂದಾದರೋ ತಂತ್ರಜ್ಞಾನದ ಅಮಲಿನಲ್ಲಿ ಆರೆಂಟು ಕಿಮೀ ಮಟ್ಟ ದಾರಿಯಲ್ಲಿ ಕೇವಲ ಸೈಕಲ್ ಸವಾರಿ ಮಾಡಿದವರೂ ಸ್ಟ್ರಾವಾ ನಕ್ಷೆಯೊಡನೆ, ಸುಟ್ಟ ಬದನೇಕಾಯಿಯಂಥ ಮುಖಕಮಲವನ್ನು ಫೇಸ್ ಬುಕ್ಕಿನಲ್ಲಿ ಪ್ರದರ್ಶಿಸಿ ನಿಘಂಟಿನ ಎಲ್ಲ ವಿಶೇಷಣಗಳನ್ನೂ ಸೂರೆಗೊಳ್ಳುತ್ತಾರೆ!] ದಿನಪೂರ್ತಿ ಸೈಕಲ್ ಮೆಟ್ಟಿ, ಯಾವುದೋ ಘನ ಲಕ್ಷ್ಯ ಸಾಧಿಸಬೇಕೆಂಬ ಬಯಕೆಗೆ ನಾನು ಮತ್ತು ಗೆಳೆಯ ಗಿರೀಶ (ಈತನ ಪರಿಚಯಕ್ಕೆ ನೋಡಿ: ತಾತಾರ್ ಶಿಖರಾರೋಹಣ) ಸ್ವತಂತ್ರವಾಗಿ ಬಿಳಿಗಿರಿರಂಗನಬೆಟ್ಟವನ್ನು ಆಯ್ದುಕೊಂಡಿದ್ದೆವು.
ಬೆಳಗ್ಗೆ ಐದು ಗಂಟೆಗೆ ನಾನು ಮತ್ತು ಗಿರೀಶ ಸೈಕಲ್ಲೇರಿ ಮೈಸೂರು ಬಿಟ್ಟೆವು. ನಾವು ಆ ಕಾಲದಲ್ಲಿ ಜನಪ್ರಿಯವಾಗಿ ಬಳಕೆಯಲ್ಲಿದ್ದ ಏಕೈಕ ದಾರಿಯನ್ನೇ ಅನುಸರಿಸಿದ್ದೆವು: ನಂಜನಗೂಡು, ಚಾಮರಾಜನಗರ, ಕ್ಯಾತದೇವರಗುಡಿ ಮೂಲಕ ಸುಮಾರು ೧೧೮ ಕಿಮೀ. [ಇಂದು ಗೂಗಲ್ ನಕ್ಷೆ ತಿ.ನರಸೀಪುರ, ಕೊಳ್ಳೇಗಾಲ, ಯಳಂದೂರು ಮಾರ್ಗ ಉತ್ತಮ ಹಾಗೂ ಹತ್ತಿರವೆಂದೇ ಕಾಣಿಸುತ್ತದೆ] ಮೈಸೂರಿನ ನಗರಮಿತಿಯನ್ನು ದಾಟಿ ಕೊಳಚೆ ಜಲಾಶಯವನ್ನು ಹಿಂದಿಕ್ಕಿ, ಮಂಡಕಳ್ಳಿ [ಆ ಕಾಲದಲ್ಲೇ ಇದು ವಿಮಾನ ನಿಲ್ದಾಣಕ್ಕೆ ನಿಯೋಜಿತ ಸ್ಥಳ!] ಚಾಮುಂಡಿ ಬೆಟ್ಟಗಳು ಗತಚಿತ್ರಗಳಾಗುತ್ತಿದ್ದಂತೆ ನಂಜುಂಡೇಶ್ವರ ಸನ್ನಿಧಿಯನ್ನು (ನಂಜನಗೂಡು – ಸುಮಾರು ೨೩ ಕಿಮೀ) ಸೇರಿದೆವು.
ನಮ್ಮ ತುಳಿತ ನಿಲ್ಲಲಿಲ್ಲ. ಮತ್ತಿನದು ಹರಕುದಾರಿ ಚಾಮರಾಜನಗರಕ್ಕೆ. [ಮಹಾರಾಜರ ಆಳ್ವಿಕೆಯ ಕಾಲದಲ್ಲಿ ಮೈಸೂರು, ನಂಜನಗೂಡಿಗಾಗಿ ಉದಕಮಂಡಲಕ್ಕೆ ಹೋಗುವ ಮಾರ್ಗ ಬಹುತೇಕ ಕಾಂಕ್ರೀಟಿನದ್ದೇ ಇತ್ತು. ಆ ಭಾಗ್ಯ ಇತ್ತ ಹರಿದಿರಲಿಲ್ಲ.] ಸೈಕಲ್ ಕಂಪನ-ಚಿಕಿತ್ಸೆ ನೀಡತೊಡಗಿದುದರಿಂದ ನಮ್ಮ ವೇಗಮಿತಿ ಇಳಿಯಿತು. ಒಂದೆರಡು ಸಣ್ಣ ಊರುಗಳನ್ನು ಹಾದು ಒಂಬತ್ತು ಗಂಟೆಗೆ ಚಾಮರಾಜನಗರ (ನಂ.ಗೂಡಿನಿಂದ ಸುಮಾರು ೩೮ ಕಿಮೀ) ತಲಪಿದಲ್ಲಿಗೆ ಬಯಲ ಘಟ್ಟ ಮುಗಿದಿತ್ತು. ಅಲ್ಲಿ ಹೋಟೆಲಿನಲ್ಲಿ ಹೊಟ್ಟೆ ತಣಿಸಿದೆವು. ಮತ್ತೆ ಅವಿರತ ಬಂದ ಅರವತ್ತು ಕಿಮೀ ಮರೆತು ಮುಂದಿನ ಐವತ್ತೆಂಟು ಕಿಮೀ – ಪರಮಘಾಟೀ ಸವಾರಿಗೆ, ದಟ್ಟ ವನಾಂತರ್ಗತ ಮಾರ್ಗಕ್ಕೆ ಮಾನಸಿಕವಾಗಿ ಅಣಿಯಾದೆವು.
ಹತ್ತು ಗಂಟೆಗೆ ಚಾಮರಾಜೇಶ್ವರನಿಗೆ ಸಲಾಮಿಕ್ಕಿ ರಂಗಪ್ಪನ ಬೆಟ್ಟಾಭಿಯಾನಿಗಳಾದೆವು. ನಮ್ಮ ದಾರಿಗಡ್ಡವಾಗಿ ಮೋಡದ ಮುಸುಕಿಕ್ಕಿದ ಪರ್ವತಶ್ರೇಣಿ ಇಟ್ಟು, ಹಿಂದಿನ ಕಣಿವೆಯ ಪಾವನ ಏಕಾಂತದಲ್ಲಿದ್ದ ಸಾಹಸಪ್ರಿಯರಂಗ. ದಾರಿ ಅಡಿಕೆ ತೋಟದ ಮಧ್ಯೆ ನಮ್ಮನ್ನು ಹಾಯಿಸಿ ಸಣ್ಣ ಏರಿಳಿತದಲ್ಲಿ ಒಡಕು ಹರಕಿನಲ್ಲಿ ಗಡಬಡಿಸಿ ಜನವಸತಿಯ ಮಿತಿಯನ್ನು ಮೀರಿಸಿತು. ಐದಾರು ಕಿಮೀ ಕಳೆದರೆ ಮುಂದಿನ ದಾರಿಯ ಉಸ್ತುವಾರಿ ಕಾಡಾನೆಗಳದ್ದು; ಬಿಳಿಗಿರಿರಂಗನ ಕರಿಬಂಟರದ್ದು! ಸ್ವಲ್ಪ ಮುಂದೆ ದಾರಿಯ ಎಡ ಮಗ್ಗುಲಿನ ಸುದೂರದಲ್ಲಿ ಆನೆಗಳ ವಿಹಾರ ಸ್ವರ ಕೇಳಿ ನಮ್ಮ ಕಿವಿ ನಿಮಿರಿತು. ಯಾರೋ ದನಗಾಹಿ “ಆನೆಗಳವೆ, ಉಸಾರೂ” ಎಂದ ಮೇಲಂತೂ ಮನಸ್ಸು ಡೋಲಾಯಮಾನವಾಯ್ತು. [ನಾವಿಬ್ಬರೂ ಕಾಡಾನೆಯನ್ನು ಅದುವರೆಗೆ ನೋಡಿದವರೇ ಅಲ್ಲ. ಪ್ರದೇಶ ಹೊಸತು, ದಾರಿ ಅಪರಿಚಿತ. “ಆನೆ ಬೆನ್ನಟ್ಟಿದರೆ ವಾರೆಕೋರೆ ಓಡಬೇಕು” ಎಂಬ ಮಾತಷ್ಟೇ ನಮ್ಮ ತಿಳುವಳಿಕೆ. ಅಜ್ಞಾನಂ ಪರಮಸುಖಂ! ಇನ್ನೂ ಒಂದು ತಮಾಷೆ ಎಂದರೆ ನನಗಿಂದಿಲ್ಲದ ನಂಬಿಕೆ…] ದಾರಿಯ ಎಡರುತೊಡರುಗಳ ಅಂದಾಜಿಲ್ಲದೆ ಇಲ್ಲಿಯವರೆಗೆ ಬಂದವರನ್ನು ಮುಂದೆಯೂ ನಡೆಸಬಲ್ಲ [ದೈವೀ!!] ಶಕ್ತಿ ಇದ್ದೇ ಇದೆ ಎಂಬ ಧೈರ್ಯದಿಂದ ಮುಂಬರಿದೆವು. ಶ್ವೇತವರ್ಣದ್ವೇಷಿಗಳಾದ ಆನೆಗಳು ಕಿತ್ತು ಎಸೆದಿದ್ದ ಒಂದೊಂದೂ ಬಿಳಿ ಮೈಲುಗಲ್ಲು ನಮ್ಮ ನಂಬುಗೆಯನ್ನೇ ಅಲ್ಲಾಡಿಸುವಂತಿದ್ದುವು. [ಈಚೆಗೆ ಎಲ್ಲೋ ಭಯದ ಅರಿವನ್ನು ಮೀರುವುದೇ ಧೈರ್ಯ ಎಂದು ಓದಿದ್ದು ನೆನಪಾಗುತ್ತದೆ, ಆ] ಭಂಡ ಧೈರ್ಯದಲ್ಲಿ ಸಾಗಿತು ಸೈಕಲ್ ಮುಂದೆ, ಮುಂದೆ.
ಸೂರ್ಯ ನೇರ ಚುರುಕಾಯಿಸಿದ್ದು ಸಾಲದೆಂಬಂತೆ ಕುರುಚಲು ಕಾಡಿನೆಡೆಯ ಹರಕು ಬಂಡೆಗಳೂ ಬಿಸಿಸುಯ್ಯುವಂತೆ ಮಾಡಿ ಬಳಲಿಸಿದ. ಏರುದಾರಿಯ ತುಳಿಯುವಿಕೆಯ ಫಲ ಕುಲುಮೆಗೆ ಒತ್ತಿದ ತಿದಿಯಂತೆ ಏದುಸಿರು, ಬಿಸಿಯುಸಿರು. ಹಾಗೆಂದು ಬುಸುಬುಸು ಮಾಡಿದರೆ ಎಲ್ಲಿ ಆನೆಗೆ ಕೇಳಿಸೀತೋ ಎಂಬ ಭಯ! ಬಲು ದೂರದಿಂದಲೇ ಎದುರುಗೋಡೆಯಂತೇ ತೋರುತ್ತಿದ್ದ ಬೆಟ್ಟದ ಪಾದ ಮುಟ್ಟುವಾಗ ಸುಮಾರು ಹನ್ನೆರಡು ಗಂಟೆಯಾಗಿರಬೇಕು. ಇಲ್ಲಿ ದಾರಿ ಎಡಕ್ಕೆ ಹೊರಳಿ ಓರೆಯಲ್ಲಿ ಬೆಟ್ಟ ಏರುವ ಹುನ್ನಾರ ನಡೆಸಿತ್ತು. ಆ ಮೊದಲಲ್ಲೇ ಅದು ಸಣ್ಣ ಏಣೊಂದನ್ನು ಬಳಸಿ, ಪುಟ್ಟ ಹಳ್ಳಕ್ಕಿಳಿಯಿತು. ಅಲ್ಲಿ ಎಡಕ್ಕೊಂದು ಸಣ್ಣ ಗುಡಿ – ಕ್ಯಾತೆ ದೇವರದ್ದು, ದಾರಿಗಡ್ಡವಾಗಿ ಒಂದು ತೊರೆ – ಭಕ್ತರ ಪಾದ್ಯ. ಅವಿರತ ಓಟಕ್ಕೆ ಅರ್ಧವಿರಾಮ ಹಾಕಲು ಪ್ರಶಸ್ತ ಸ್ಥಳ. ಸುಮಾರು ಎರಡು ಗಂಟೆಯ ಅವಧಿಯಲ್ಲಿ ನಾವು ಇಪ್ಪತ್ತೊಂಬತ್ತು ಕಿಮೀಯಷ್ಟೇ ಕಳೆದಿದ್ದೆವು. ಮುಂದಿನ ಅಂತರ – ಸುಮಾರು ೧೯ ಕಿಮೀ, ಹೋಲಿಕೆಯಲ್ಲಿ ಕಿರಿದು. ಆದರೆ ಸವಾಲಿನಲ್ಲಿ ಅತಿ ಕಠಿಣದ್ದಾಗಿಯೇ ಕಾಣುತ್ತಿತ್ತು. ಒಂದು ಜೋಪಡಿ ಕಾಣಿಸಿದರೂ ಯಾನಕ್ಕೆ ಅಲ್ಲಿ ಪೂರ್ಣವಿರಾಮ ಕೊಡುವ ತುಡಿತ ಇಬ್ಬರದೂ! ಹಾಗಿಲ್ಲವಾದ್ದಕ್ಕೇ ನಿಧಾನದಲ್ಲೇ ಬೆಟ್ಟದ ತಣ್ಣನೆ ನೀರಿನಲ್ಲಿ ಕೈ ಮುಖ ತೊಳೆದುಕೊಂಡೆವು, ಧಾರಾಳ ಹೊಟ್ಟೆಗೂ ಸೇರಿಸಿಕೊಂಡೆವು. ಬಿಸಿಯೇರಿದ ತಲೆಗೂ ಅಷ್ಟು ನೀರು ತಳಿದು, ಆ ನೆಪದಲ್ಲಿ ತೊಟ್ಟ ಬಟ್ಟೆಯನ್ನೂ ತೊಯ್ಯಿಸಿ ದೇಹವನ್ನೂ ತಣಿಸಿಕೊಂಡೆವು. ನಮ್ಮಲ್ಲಿದ್ದ ಸಣ್ಣ ವಾಟರ್ ಬಾಟಲ್ಲುಗಳಿಗೂ ನೀರು ತುಂಬಿ, ತುಸು ಸುಧಾರಿಸಿಕೊಂಡು, ಅಲ್ಲೇ ನಿಲ್ಲಲ್ಲಾಗದ ಸಂಕಟಕ್ಕೆ ಮತ್ತೆ ಹೊರಟಿತು ಸವಾರಿ. [ಇಂದು ಕ್ಯಾತೆ ದೇವರು `ಕೆ.ಗುಡಿ’ಯಲ್ಲಿ ಲೀನವಾಗಿ, ರಿಸಾರ್ಟ್ ಸೌಕರ್ಯ ಧಾರಾಳ ತೆರೆದುಕೊಂಡಿದೆ; ಸಮಸ್ಯೆ ಹಣದ್ದು ಮಾತ್ರ!]
[ಸವಾರಿ ಎಂದ ಕೂಡಲೇ ನನ್ನ ಈಚಿನ ಸೈಕಲ್ ಸಾಹಸಯಾನಗಳ ಬೆಳಕಿನಲ್ಲಿ ನೋಡಬೇಡಿ. ಅಂದಿನ ಸೈಕಲ್ ಸಾರ್ವಜನಿಕ ಅಗತ್ಯಗಳನ್ನು ಕನಿಷ್ಠ ಹೂಡಿಕೆಯಲ್ಲಿ ವ್ಯಾಪಕ ವಿಧಾನಗಳಲ್ಲಿ, ದೀರ್ಘ ಕಾಲ ಪೂರೈಸುವ ಸಾಧನ. ತೋರಿಕೆಯ ದೃಢತೆ, ಅಲಂಕಾರಿಕ ಅಗತ್ಯಗಳ ಹೆಸರಿನಲ್ಲಿ ಒರಟು, ಭಾರ. ವ್ಯತಿರಿಕ್ತ ಉದಾಹರಣೆಯಾಗಿ ನನ್ನ ಇಂದಿನ `ಪರ್ವತಾರೋಹಿ ಸೈಕಲ್’ (ಎಂಟೀಬೀ) ನೋಡಿ. ಅದನ್ನು ಎತ್ತುವುದಿದ್ದರೆ ಒಂದು ಕೈ ಶ್ರಮ ಸಾಕು; ಹದಿನೈದು ಕೇಜಿಯೂ ಇಲ್ಲ. ಆದರೆ ಯಾವುದೇ ಏರನ್ನು ಸೀಟಿಳಿಯದೇ ದಾರಿಯ ಎಂಥಾ ಹರಕುಗಳಿಗೂ ಜಗ್ಗದೇ ಸವಾರಿ ಸುಖ ಕೊಡುವ ಸಾಮರ್ಥ್ಯ ಇದರದು. ಅವನ್ನೆಲ್ಲ ಅರ್ಥಮಾಡಿಕೊಳ್ಳಲಾಗದವರ `ಪ್ರತಿನಿಧಿ’ಯೊಬ್ಬ ಮೊನ್ನೆ ಅಡ್ಯಾರ್ ಕಡವಿನ ಬಳಿ ಸಿಕ್ಕಿದ್ದ. ಮೊದಲು ಆತ ಸೈಕಲ್ಲಿನ ಬೆಲೆ ಕೇಳಿ ಬೆರಗುಪಟ್ಟ. ಮತ್ತೆ “ಅಷ್ಟು ಕೊಟ್ಟೂ….” ಹ್ಯಾಂಡಲ್ಲಿನಲ್ಲಿ ಚೀಲ ನೇತುಹಾಕುವ ಎಂದರೆ ವಯರುಗಳ ಅಡ್ಡಿ, ಇನ್ನೊಬ್ಬರನ್ನು ಕೂರಿಸಿಕೊಳ್ಳುವ ಎಂದರೆ ಕ್ಯಾರಿಯರ್ ಇಲ್ಲ, ಕನಿಷ್ಠ ಫ್ರೇಮಿನ ನಡುವೆ ಮೂಟೆ/ಸೌದೆ ಹೇರುವುದಕ್ಕೂ ಅವಕಾಶವಿಲ್ಲ ಎಂದಿತ್ಯಾದಿ ಅವಗುಣಗಳದ್ದೇ ಪಟ್ಟಿ ಮಾಡಿದ್ದ! ಇನ್ನು ಈ ಕಾಲದಲ್ಲಿ ದಾರಿಗಳೋ ಬುಲ್ಡೋಜಿಂಗಿನ ಅತಿರೇಕದ ಮುದ್ದುಕೂಸುಗಳು. ಎಲ್ಲೂ ತೀವ್ರವಾಗದ ಏರು, ಬೆರಗು ಹುಟ್ಟಿಸದ ತಿರುವು, ನೈಸ್ ಫೇವರ್ ಕಾಂಕ್ರೀಟ್ ಎಂಬಿತ್ಯಾದಿ ನಯಗಾರಿಕೆಯಲ್ಲಿ, ಬಯಸಿದರೆ ಕುಡಿದ ನೀರೂ ಕುಲುಕದ ಓಟ ಸಾಧ್ಯ. ಆದರೆ ಅಂದು…]
ಹೇಳಿಕೇಳಿ ಹಳೆಗಾಲದ ದಾರಿ. ಅದಕ್ಕೆ ಎಲ್ಲ ಪ್ರಾಕೃತಿಕ ಅಡ್ಡಿಗಳನ್ನೂ ನಿವಾರಿಸುವ ಹಠವೇನೂ ಇರಲಿಲ್ಲ. ಹಲವು ನಿರಿಗೆಗಳ ಉಡುಗೆ ತೊಟ್ಟಂತಿದ್ದ ಬೆಟ್ಟದ ಮೈಯಲ್ಲಿ ಬಲದ ಒಳಮೈಗೆ ನುಗ್ಗುತ್ತ, ಎಡದ ಏಣಂಚನ್ನು ಬಳಸುತ್ತ ಸಾಗಿತ್ತು. ಏರಿಳಿಕೆ ಹಾಗೂ ತಿರುವುಗಳಲ್ಲಿ ಏಕಮಾನ ಕಾಯ್ದುಕೊಳ್ಳುವ ಕಷ್ಟ ರೈಲ್ವೇಗೆ ಮಾತ್ರ ಸಾಕು ಎಂಬ ಔದಾರ್ಯ ಇದರದು! ಮೊಳೆಯುವ ಕಲ್ಲುಗಳು, ಅರಳಿ ನಿಂತ ಹೊಂಡಗಳು, ನುಸುಲಾದ ಹಾಸುಗಳು ಅಲ್ಲಲ್ಲಿ. ನಿಯತ ತುಳಿತದ ಸವಾಲು, ನಿಶ್ಚಿತ ಸಾಲು ಹಿಡಿದು ಹೋಗುವ ಸೌಕರ್ಯ, ಗಳಿಸಿದ ಔನ್ನತ್ಯವನ್ನು ವ್ಯರ್ಥಗೊಳಿಸದ ರಚನೆ – ಒಂದೂ ಕೇಳಬೇಡಿ; ರಾಜಿಯಿಲ್ಲದೆ ಏರುವುದೊಂದೇ ಕರ್ಮ. ಅಲ್ಲಿ ಇಲ್ಲಿ ತುಸು ಕಾಠಿಣ್ಯ ಕರಗಿದಂತೆ ತೋರಿ ನಮ್ಮನ್ನು ಸವಾರಿಗೆ ಪ್ರಚೋದಿಸುತ್ತಿತ್ತು. ಏರಿದರೆ ಸೀಟೇನು ಬಾರಿಗೇ ಏರಬೇಕು. ಪೆಡಲಿನಿಂದ ಪೆಡಲಿಗೆ ದೇಹದ ಒಜ್ಜೆ ಹೇರುತ್ತ, ಹರಕು ಬಟ್ಟೆಯ ಮೇಲೆ ಕುಸುರಿಗೆಲಸ ನಡೆಸಿದಂತೆ ದಾರಿಯ ಎಡಬಲದ ಅಂಚುಗಳಲ್ಲಾಡುತ್ತಾ ಹೋಗಬೇಕಿತ್ತು. ಅದೂ ಹೆಚ್ಚು ದೂರಕ್ಕಲ್ಲ. ಕೆಲವೆಡೆ ತುಳಿದರೆ ಹಲವೆಡೆ ಇಳಿದು ನೂಕಿಯೇ ಸಾಗುವ ಸಂಕಟ. ವಾಹನ ಸಂಚಾರ ತೀರಾ ವಿರಳ. ದಾರಿಯ ಎಡಕ್ಕೆ ಕಡಿದಾದ ಜಾರು, ಬಲಕ್ಕೆ ನಿಡಿದಾದ ಏರು. ಬೆಟ್ಟದ ಮೈ ಬೋಳೆಂದರೂ ಸಲ್ಲುತ್ತದೆ. ಆನೆಗಳ ಭಯ ಮಾತ್ರ ಕಡಿಮೆ. ಅಂಥಲ್ಲಿ ಕಾಣಿಸಿತೊಂದು ಮರೀಚಿಕೆ!
ಬೆಟ್ಟದ ಸೆರಗೊಂದು ಕೊಳ್ಳದತ್ತ ತುಸು ಚಾಚಿತ್ತು. ಅದರ ಕೊನೆಯಲ್ಲಿ ಸಣ್ಣ ಬಹುತೇಕ ನೇರ ಎನ್ನುವಂಥ ದೂಳೆದ್ದ ಜಾಡೊಂದು ಕಣಿವೆಯ ಆಳಕ್ಕಿಳಿದಿತ್ತು. ಅನಂತರ ತಿಳಿದಂತೆ, ಅದು ಕಾಡಾನೆಗಳ ಜಾರುಗುಪ್ಪೆಯಂತೆ! ಹೌದು, ಎಂಥ ಏರನ್ನೂ ಶಿಸ್ತಾಗಿ ಏರಬಲ್ಲ ಆನೆಗಳು ಆಳಕ್ಕೆ ಇಳಿಯುವಾಗ ಈ ತಂತ್ರ ಬಳಸುತ್ತವಂತೆ. ಆಯಕಟ್ಟಿನ ಮಣ್ಣ ನೆಲದಲ್ಲಿ, ಅಂಡೂರಿ ಮುಂಗಾಲೆತ್ತಿ, ಹಿಂಗಾಲು ಚಾಚಿ ಜಾರುತ್ತವಂತೆ; ಮಕ್ಕಳು ಜಾರುಗುಪ್ಪೆ ಆಡಿದಂತೇ! ಅಗತ್ಯ ಬಿದ್ದರೆ ಸೊಂಡಿಲಲ್ಲೋ ಮುಂಗಾಲುಗಳಲ್ಲೋ ಸಮತೋಲನ ಕಾಪಾಡಿಕೊಂಡು ಕೆಳಕಣಿವೆ ತಲಪುವುದನ್ನು ಆಟವೋ ಎಂದು ಕಾಣಿಸುತ್ತದಂತೆ. ನಮಗದನ್ನು ಕಾಣುವ ಭಾಗ್ಯವಿರಲಿಲ್ಲ ಬಿಡಿ. ಆದರೆ ಆ ಬೆಟ್ಟದ ಸೆರಗು ನಾವೇರುತ್ತಿದ್ದ ಬೆಟ್ಟದ ಮೈಯನ್ನು ಸಂಪರ್ಕಿಸುವಲ್ಲಿ ಕಾಣಿಸಿದ ನೀಲಿ ಬಂಗಲೆಯ ಮೊದಲ ನೋಟ ಭ್ರಮೆಯಂತೇ ತೋರಿತು! ಮುಂಬರಿದ ಮೇಲೆ ತಿಳಿಯಿತು – ಅದು ನಿಜ, ಮೈಸೂರರಸರು ವಿಹಾರಾರ್ಥವಾಗಿ ಬಂದಾಗ ಉಳಿಯಲು ಕಟ್ಟಿಸಿದ ವಿಶ್ರಾಂತಿಧಾಮ. ಅದು ನಮಗಂತೂ ಆತಂಕ ತಗ್ಗಿಸಲು ಅಯಾಚಿತವಾಗಿ ಒದಗಿದ ವರಪ್ರಸಾದ!
ವರ್ಷಕ್ಕೊಂದೋ ಎರಡೋ ಬಾರಿ ಬರಬಹುದಾದ ರಾಜಕುಟುಂಬದ ನಿರೀಕ್ಷೆಯಲ್ಲಿ ಅಲ್ಲಿದ್ದ ಮೇಟಿಕುಟುಂಬ ಬಂಗ್ಲೆ, ಉದ್ಯಾನವನವನ್ನೆಲ್ಲ ಸ್ವಚ್ಛ, ಸುಂದರವಾಗಿ ನೋಡಿಕೊಂಡಿತ್ತು. ನಮ್ಮ `ಹುಚ್ಚು’ (“ಯಾಕ್ರ, ಬ್ಯಳ್ಗಿನ್ ಬಸ್ ತಪ್ತಾ?”) ಕಂಡು ಬೆರಗಾದ ಮೇಟಿ ನಮಗೆ ಅದರ ಜಗುಲಿಯ ಮೇಲೆ ವಿರಮಿಸಲು ಧಾರಾಳ ಅವಕಾಶ ಮಾಡಿಕೊಟ್ಟ. ನಾವಲ್ಲಿ ಮೈ ಚೆಲ್ಲುತ್ತಿದ್ದಂತೆ ಸುಸ್ತು ಪರಿಹಾರಕ್ಕಿಂತಲೂ ಹೆಚ್ಚಿಗೆ ರಕ್ಷಣೆಯ, ನಿರಾತಂಕದ ಭಾವ ಮೂಡಿ ಗಿರೀಶ ಉದ್ಗರಿಸಿದ “ಇಂದಿಗೆ ನಮ್ಮ ಪಯಣ ಇಲ್ಲಿಗೇ ಕೊನೆ.” ಆಂತರಿಕವಾಗಿ ನಾನೂ ಒಪ್ಪುವವನೇ. ಆದರೆ ನನ್ನ ತವರೂರಿನ ಪ್ರಜ್ಞೆ – ಕೊಡಗಿನವನೆಂಬ ಗರ್ವ, ಬಿಡಲಿಲ್ಲ. ಬುತ್ತಿಯೂಟ, ಒಂದು ಗಂಟೆಯ ವಿಶ್ರಾಂತಿ, ವಾತಾವರಣದ ತಂಪು, ನನ್ನ ಒತ್ತಾಯ ಸೇರಿ ಮತ್ತೆ ಸೈಕಲ್ ಏರಿದೆವು.
ವಾಸ್ತವದಲ್ಲಿ ಆ ಅರಮನೆಯೊಡನೆ ನಾವು ಬೆಟ್ಟ ಸಾಲಿನ ಶಿಖರವಲಯ ತಲಪಿಯಾಗಿತ್ತು. ಮುಂದಿನ ದಾರಿ ಸಣ್ಣ ಏರಿಳಿಕೆಗಳೊಡನೆ ದೇವಳ ಸೇರಿದ ಬಿಳಿಗಿರಿ ಪೇಟೆಯತ್ತ ಸಾಗಿತ್ತು. ಕ್ಯಾತೇ ದೇವರಗುಡಿಯಿಂದ ಅರಮನೆಯವರೆಗೆ ಇಲ್ಲದ ಆನೆಯ ಭಯ ಇಲ್ಲಿ ಮರುಕಳಿಸಿತ್ತು. ನಿರ್ಜನ ದಟ್ಟ ಬಿದಿರ ಕಾಡು. ಪ್ರತಿ ಹೆಜ್ಜೆಗೂ ಮೆಳೆಯ ಮರೆಯಲ್ಲೂ ಆನೆ ಸಿಗಬಹುದಾದ ಸನ್ನಿವೇಶ. ದಾರಿಯಲ್ಲಿ ಅಲ್ಲಲ್ಲಿ ಹರಡಿದ ಬಿದಿರು ಸೀಳುಗಳು, ಆನೆಲದ್ದಿಯ ಗುಪ್ಪೆಗಳು. ಇದು ಸಾಲದೆಂಬಂತೆ ಅಷ್ಟುದ್ದಕ್ಕೆ ದಾರಿಯ ದುಃಸ್ಥಿತಿಗೆ ಮೈಯೊಡ್ಡಿದ್ದ ನನ್ನ ಚಕ್ರಕ್ಕೆ ಸಹನೆ ತಪ್ಪಿತ್ತು; ಕಟ್ಟಿದ್ದ ಉಸಿರನ್ನು ನಿಧಾನವಾಗಿ ಬಿಡತೊಡಗಿತ್ತು. ನನ್ನ ಬಳಿ ಪಂಪೇನೋ ಇತ್ತು. ಆದರೆ ನಿಂತು ಗಾಳಿ ತುಂಬಲು ಆನೆ ಆತಂಕ. ಐದಾರು ಮಿನಿಟಿಗೊಮ್ಮೆ ನಿಂತು, ಅತ್ತಿತ್ತ ನೋಡುತ್ತ ಅವಸರವಸರವಾಗಿ ಗಾಳಿ ತುಂಬಿಕೊಳ್ಳುತ್ತ ಧಾವಿಸಿದಂತೆ ಕಾಡು ಹರಿಯಿತು. ನೀಲಗಿರಿ ವನರಾಜಿ ನಮಗೆ ಜಯಘೋಷಿಸಿತು. ಸ್ವಲ್ಪದರಲ್ಲೇ ಹಲವು ಯಾತ್ರಿಕರು, ಗಂಗಾಧರೇಶ್ವರನ ಗುಡಿ, ಕೊಳ ಎದುರಾದ ಮೇಲೆ ನಿಶ್ಚಿಂತರಾದೆವು. ಚಕ್ರಕ್ಕೆ ಗಾಳಿದುಂಬುವ ಗೋಜಿಗಿಳಿಯದೆ ಸುಮಾರು ಎಂಟು ಕಿಮೀ ಕಾಲೆಳೆದು ಊರು ಸೇರಿದಾಗ ಬೆಂಗದಿರ ತಂಗದಿರನಾಗುತ್ತಿದ್ದ – ಗಂಟೆ ಐದು.
ಊರ ದಾರಿ ದೇವಳದ ಮೆಟ್ಟಿಲು-ಸಾಲಿಗೆ ಮುಕ್ತಾಯ. ಎಡ ಮೇಲಕ್ಕೆ ಮೆಟ್ಟಿಲಸಾಲು ದೇವಾಲಯಕ್ಕೊಯ್ದರೆ, ಬಲ ಕೆಳಗಿಳಿಯುವ ಸಾಲು ಪುಷ್ಕರಿಣಿ ಕಾಣಿಸುವುದಿತ್ತು. ನಾವು ಸೀದಾ ದೇವಾಲಯಕ್ಕೆ ಹೋದೆವು. ವಾರ್ಷಿಕ ಜಾತ್ರೆಯ ಅಂಗವಾಗಿ `ಸ್ವಾಮಿ’ ತೆಪ್ಪೋತ್ಸವಕ್ಕೆಂದು ಪುಷ್ಕರಿಣಿಗೆ ಹೋಗಿದ್ದ. ಆತನನ್ನು ನಿರೀಕ್ಷಿಸುತ್ತ ದೇವಳ ಪ್ರದಕ್ಷಿಣ ಮಾಡಿದೆವು. ದೇವಳದ ಹಿತ್ತಿಲು, ಹೆಸರೇ ಹೇಳುವಂತೆ ಕಮರಿಬೀದಿ – ಭಾರೀ ಕಡಿದಾದ ಕಣಿವೆಗೆ ತೆರೆದುಕೊಂಡಿತ್ತು. ಸುವಿಸ್ತಾರ ಹಸಿರ ಹಾಸು ದಿಗಂತದಂಚಿನವರೆಗೂ ಮುಕ್ತವಾಗಿ ಮಲಗಿತ್ತು. ಸುಮಾರು ಮುನ್ನೂರು ಮೀಟರ್ ಆಳದಲ್ಲಿ ಮಲಗಿದ್ದ ಆ ನಿಬಿಡ ವನರಾಜಿಯಲ್ಲಿ ಮರಗಳ ಗಾತ್ರ, ಅವು ಮರೆಮಾಡಿದ ನೆಲದ ರಚನೆ, ಚರಾಚರಗಳ ಲೆಕ್ಕವೆಲ್ಲ ಹೆಚ್ಚು ನಿಗೂಢವಾಗುವಂತೆ ವನಸ್ವನ ಮೊರೆಯುತ್ತಿತ್ತು. ನೋಡನೋಡುತ್ತಿದ್ದಂತೆ ಕಳೆಲೆಕ್ಕ ನಿಪುಣ ಸೂರ್ಯ, ನಮ್ಮ ಲೆಕ್ಕಕ್ಕೊಂದು ರೋಮಾಂಚಕಾರಿ ದಿನವನ್ನು ಕೂಡಿಸಿ ಮುಗಿಸಿದ್ದ!
ದೇವ ದರ್ಶನ ಮುಗಿಸಿ ಮತ್ತೆ ದಾರಿಗಿಳಿದೆವು. ಅಲ್ಲಿನ ಗೂಡು ಹೋಟೆಲಿನಲ್ಲಿ ಗಟ್ಟಿ ಊಟದ ಶಾಸ್ತ್ರ ಮುಗಿಸಿಕೊಂಡೆವು. ಅನಂತರ ಸೈಕಲ್ ರಿಪೇರಿ ಬಗ್ಗೆ ವಿಚಾರಿಸಿದೆವು. “ಬೆಟ್ಟದ ಮೇಲೆ ಸೈಕಲ್ ಕಾಣದೇ ಆರೇಳು ವರ್ಷವಾಯ್ತು. ಹಾಗಿರುವಾಗಾ….” ಎಂಬ ಉತ್ತರ ಕೇಳಿ ತೆಪ್ಪಗಾದೆವು. ಆ ದಿನಗಳಲ್ಲಿ ಬೆಟ್ಟಕ್ಕೆ ಮಧ್ಯಾಹ್ನಕ್ಕೊಂದು ಸಂಜೆಗೊಂದು ಖಾಸಗಿ ಸಾರ್ವಜನಿಕ ಬಸ್ ಸಂಚಾರವಷ್ಟೇ ಇತ್ತು. ಸಂಜೆಯದು ರಾತ್ರಿ ಅಲ್ಲೇ ಉಳಿದು ಬೆಳಗ್ಗಿನ ಪ್ರಥಮ ಬಸ್ಸಾಗಿ ಹೊರಡುತ್ತಿತ್ತು. ನಾವು ಅದರ ನಿರ್ವಾಹಕನ ಬಳಿ ನಮ್ಮ ಸಂಕಟ ತೋಡಿಕೊಂಡೆವು. ನಾವು ಸ್ವತಂತ್ರರೆಂಬ ಗತ್ತಿನಲ್ಲಿ ತೀರಾ ಕಡಿಮೆ ಹಣ ಕಿಸೆಯಲ್ಲಿಟ್ಟುಕೊಂಡು ಬಂದಿದ್ದೆವು. ಚಾಮರಾಜನಗರದವರೆಗೆ ಮಾತ್ರ ಟಿಕೆಟ್ ಖರೀದಿಸುವ ತ್ರಾಣವಿತ್ತು. ನಿರ್ವಾಹಕ ನಮ್ಮ ಮೇಲೆ ಕರುಣೆದೋರಿ, ನಮ್ಮ ಟಿಕೆಟ್ ಹಾಸಲಿಗೇ ಸೈಕಲ್ಲನ್ನು ಬಸ್ ನೆತ್ತಿಯಲ್ಲಿ ಉಚಿತವಾಗಿ ಒಯ್ಯುವ ಆಶ್ವಾಸನೆ ಕೊಟ್ಟ. ಆದರೆ ದಡಬಡ ದೀರ್ಘ ಪಯಣದಲ್ಲಿ ಅಡ್ಡ ಮಲಗಿದ ಸೈಕಲ್ಲಿನ ಪೆಡಲು ಬಸ್ ನೆತ್ತಿಯನ್ನು ತೂತ ಮಾಡುವುದನ್ನು ತಪ್ಪಿಸಬೇಕು ಎಂದು ಆತ ಎಚ್ಚರಿಸಿದ. ಹಾಗಾಗಿ ಅವನಲ್ಲೇ ಹತ್ಯಾರು ಪಡೆದು, ಪೆಡಲ್ ಕಳಚಿ ರಾತ್ರಿಯೇ ಸೈಕಲ್ ಸ್ಥಾನ ಗಟ್ಟಿ ಮಾಡಿದೆವು. ಇನ್ನು ನಮ್ಮ ವ್ಯವಸ್ಥೆ…
ಅಲ್ಲೊಂದು ಸರಕಾರೀ ಪ್ರವಾಸಿ ಬಂಗ್ಲೆಯೇನೋ ಇತ್ತು. ಆದರೆ ಅದಕ್ಕೆ ಪಾವತಿಸಲು ನಮ್ಮಲ್ಲಿ ಹಣವಿರಲಿಲ್ಲ! ನಮಗೋ “ಎಂತೆಂಥ ಕಾಡು ಹವೆಯಲ್ಲಿ ರಾತ್ರಿ ಕಳೆದಿದ್ದೇವಂತೇ” ಎಂಬ ಗರ್ವ. ಬಂಗ್ಲೆಯ ಮೇಟಿಯ ಕೃಪೆಯಲ್ಲಿ, ನಾವೇ ಒಯ್ದಿದ್ದ ಎರಡು ತೆಳು ಹೊದ್ದಿಕೆಯೊಡನೆ ಬಂಗ್ಲೆಯ ಒಳಜಗುಲಿಯ (ಉಚಿತ) ಮೇಲೆ ಉರುಳಿಕೊಂಡೆವು. ಆದರೆ ಅಲ್ಲಿ ಚಳಿ ಏರುತ್ತ ಹೋದಂತೆ ನಾವು ಮತ್ತೆ ಮೇಟಿಯ ಕೃಪೆ ಹಾರೈಸಿದೆವು. ಆ ಕರುಣಾಳು ಯುಗಯುಗಗಳ ದೂಳು, ಕಮಟು ಹಿಡಿದ ಎರಡು ಜಮಖಾನ ಕೊಟ್ಟ. ನಾವು ಶುಚಿಪ್ರಜ್ಞೆ ಮರೆತು, ನಿರ್ಲಜ್ಜವಾಗಿ ಅದರಡಿಯಲ್ಲಿ ತೂರಿಕೊಂಡು, ಮುರುಟಿ ನಿದ್ರೆ ಮಾಡಿದೆವು. ಇನ್ನೂ ಸರಿಯಾಗಿ ಹೇಳುವುದಾದರೆ ಯಶಸ್ವಿಯಾಗಿ ರಾತ್ರಿ ಕಳೆದೆವು.
ಬೆಳಗ್ಗೆ ಮುಖ ತೊಳೆದ ಶಾಸ್ತ್ರವಷ್ಟೇ ಮಾಡಿ ಬಸ್ಸೇರಿದೆವು. ಚಾಮರಾಜನಗರದಲ್ಲಿ ಹೋಟೆಲಿನಲ್ಲಿ ಹೊಟ್ಟೆಪಾಡು ಹಾಗೂ ಸೈಕಲ್ ಚಕ್ರದ ತೇಪೆಯೇನೋ ಹಾಕಿಸಿ ಮತ್ತೆ ಸವಾರಿಗಿಳಿದೆವು. ಆದರೆ ದುರ್ಬಲ ಟ್ಯೂಬು ಹೆಚ್ಚು ದೂರ ಬಾಳಲಿಲ್ಲ. ಪುನಃ ಐದು ಹತ್ತು ಮಿನಿಟಿಗೆ ಗಾಳಿ ತುಂಬುತ್ತ ನಂಜನಗೂಡಿನವರೆಗೆ ಪ್ರಯಾಣ ತಳ್ಳಿದೆವು. ಅಲ್ಲಿ ಗಿರೀಶನ ಸಂಬಂಧಿಕರ ಹೋಟೆಲಿನಲ್ಲಿ ಹೊಟ್ಟೆಗೆ ಉಚಿತ ಊಟವೂ ಹೊಸ ಸೈಕಲ್ ಟ್ಯೂಬಿಗೆ ಸಾಲವೂ ಮಾಡಿ ನಿಶ್ಚಿಂತರಾದೆವು. ಮತ್ತೇನಿದ್ದರೂ ನಾವೆಂದೂ ಹೆದರದ ಮಾರ್ಗಾಯಾಸ ಮಾತ್ರ; ಸಂಜೆಗೆ ಮೈಸೂರು ಸೇರಿದೆವು.
[ಆ ದಿನಗಳಲ್ಲಿ ಸೈಕಲ್ ಸರಳ ಎನ್ನುವುದಕ್ಕಿಂತ ಉಳಿತಾಯ ಎನ್ನುವ ದೃಷ್ಟಿಕೋನ ನಮ್ಮದಿತ್ತು. ಸಹಜವಾಗಿ ಹೊಟ್ಟೆಪಾಡಿಗಷ್ಟೇ ನಾಲ್ಕು ಕಾಸು ಇಟ್ಟುಕೊಂಡು, ನಮ್ಮ ಕಷ್ಟ ಸಹಿಷ್ಣುತೆಯ ಕುರಿತು ಅಪಾರ ವಿಶ್ವಾಸವಿಟ್ಟುಕೊಂಡೇ ಇಂಥ ಯಾನ ಮಾಡುತ್ತಿದ್ದೆವು. ಆದರೆ ಈ ದಿನಗಳಲ್ಲಿ ಒಂದೆರಡು ಲಕ್ಷದವರೆಗೂ ಸೈಕಲ್ ಬೆಲೆ ಬಾಳುವುದಿದೆ. ಅಷ್ಟೇ ಸವಾರಿ ಸೌಕರ್ಯಗಳೂ ಸಲಕರಣೆಗಳೂ ಸೇರಿಕೊಳ್ಳುತ್ತವೆ. ಇಷ್ಟಾಗಿಯೂ ಸವಾರರ ಹೆಚ್ಚಿನ ಹೊರೆ, ತುರ್ತು ರಿಪೇರಿಯ ಸವಲತ್ತು, ಅಗತ್ಯ ಬಂದರೆ ಅನಾಮತ್ತು ಸವಾರ ಮತ್ತು ಸೈಕಲ್ಲನ್ನೂ ಹೊತ್ತೊಯ್ಯಲು ಸಜ್ಜಾದ ವಾಹನದ ಬೆಂಗಾವಲಿನಲ್ಲೇ ಮಹಾಯಾನಗಳು ನಡೆಯುತ್ತವೆ. ಇಂಥಲ್ಲಿ ಪ್ರಾಯೋಜಕರಿಲ್ಲದಿದ್ದರೆ ಸಾಮಾನ್ಯನಿಗೆ ಸೈಕಲ್ ಸವಾರಿ ಎಟುಕದ ಕನಸಾಗುವ ಅಪಾಯವಿದೆ. ಉದಾಹರಣೆಗೆ ನಾನೂ ಭಾಗವಹಿಸಿದ್ದ ಬೆಂಗಳೂರು ಮಹಾಯಾನದ ಕಥನವನ್ನೇ ನೀವು ನೋಡಬಹುದು. ಅಲ್ಲಿ ಕನಿಷ್ಠ ಎಂದರೂ ಒಂದು ಕಾರು, ಒಂದು ಲಾರಿ ಉದ್ದಕ್ಕೂ ನಮ್ಮನ್ನು ಹಿಂಬಾಲಿಸಿತ್ತು. ಅದರ ಮೇಲೆ ನಡುವೆ ಒಂದು ಮಿನಿ ಬಸ್, ಒಂದು ರಾತ್ರಿಯ ವಾಸ, ಮರಳಿಯಾನದ ಬಸ್ ವೆಚ್ಚ ಹಾಗೂ ಎರಡು ದಿನಗಳ ಊಟೋಪಚಾರಗಳ ಲೆಕ್ಕ ಹಾಕಿದ್ದೇ ಆದರೆ ಸಣ್ಣ ಮೊತ್ತದಲ್ಲಿ ನಿಲ್ಲದು. ಆದರೆ ಈ ಕಾಲದಲ್ಲೂ ಸೈಕಲ್ ಮಹಾಯಾನ ಸರಳ-ಸ್ವಯಂಪೂರ್ಣವಾಗಬಹುದು ಎನ್ನುವುದನ್ನು ನಮ್ಮ ಬಿಸಿಲೆ ಸೈಕಲ್ ಮಹಾಯಾನದಲ್ಲಿ ಕಂಡುಕೊಂಡೆವು ಎನ್ನುವುದನ್ನು ಸವಿನಯ ನೆನಪಿಸಿ ವಿರಮಿಸುತ್ತೇನೆ.]
[ಇಲ್ಲಿಗೆ ೧೯೯೦ರಲ್ಲಿ ಸಂಕಲನಗೊಂಡು ಮೊದಲ ಮುದ್ರಣ ಕಂಡ ನನ್ನ `ಚಕ್ರವರ್ತಿಗಳು’ ಪುಸ್ತಕದ ವಿಸ್ತೃತ ಹಾಗೂ ಪರಿಷ್ಕೃತ ಧಾರಾವಾಹಿ ಮೂವತ್ನಾಲ್ಕು ಕಂತುಗಳಲ್ಲಿ ಸಂಪೂರ್ಣಗೊಂಡಿದೆ. ಇದನ್ನು ಇಲ್ಲೇ ಕಾಲಿಕ ಪ್ರತಿಕ್ರಿಯೆಗಳ ಜತೆಯಲ್ಲಿ ಎಂದೂ ಓದಿಕೊಳ್ಳಬಹುದು. ಪುಸ್ತಕ ರೂಪಿನಲ್ಲೇ ಬಯಸುವವರಿಗೆ (ತಮ್ಮ ವಿದ್ಯುನ್ಮಾನ ಸಲಕರಣೆಗಳಿಗೆ ಇಳಿಸಿಕೊಂಡು ಅನುಕೂಲದಲ್ಲಿ ಬಳಸಲು ಒದಗುವಂತೆ) ಎಂದಿನಂತೆ ಉಚಿತ ವಿ-ಪುಸ್ತಕವಾಗಿ ಸದ್ಯದಲ್ಲೇ ನನ್ನ ಪುಸ್ತಕ ವಿಭಾಗದಲ್ಲಿ ಸೇರ್ಪಡೆಗೊಳಿಸಲಿದ್ದೇವೆ. ಅದರಲ್ಲಿ ಆ ಕಾಲಕ್ಕೆ ನನ್ನ ಪ್ರಕಾಶನದ ನಾಮೋಲ್ಲೇಖವಿಲ್ಲದ ಸಂಪಾದಕರಾಗಿ ಪೂರ್ಣ ಜವಾಬ್ದಾರಿ ಹೊತ್ತ ನನ್ನ ತಂದೆ – ಜಿಟಿನಾ, ಅವರು ಬರೆದಿದ್ದ ಮುನ್ನುಡಿ ಮತ್ತು ನನ್ನ ಅರಿಕೆಗಳೂ ಸೇರಿರುತ್ತವೆ.]
ಚಕ್ರವರ್ತಿಗಳ ಚಕ್ರಯಾನದ ಚೆಂದದ ಚಿತ್ರ – ಲೇಖನ. ನಮ್ಮ ಪೀಳಿಗೆಯ ಸೈಕಲ್ ಸವಾರಿಯ ರೋಚಕತೆ ಇಂದಿಲ್ಲವಾಗಿರುವುದು ದಿಟ.— ಜೀವಂಧರ ಕುಮಾರ್, ಮೈಸೂರು.
ಅಬ್ಬಾ…..
ಆಪ್ತ ಅತ್ರಿಯವರೆ… ನಮನಗಳು.೧೯೭೪ರಲ್ಲಿ ನಾನೂ ಮಿತ್ರರೊಂದಿಗೆ ಹೋಗಿ ಅಲ್ಲಿ ರಾತ್ರಿ ತಂಗಿದ್ದೆ. ಆ ಚಳಿ …ವ್ಯವಸ್ಥೆ.. ಆಹಾರ ಎಲ್ಲಾ ಈಗ ಎಣಿಸಿದರೂ ಮೈ ನವಿರೇಳುತ್ತದೆ.ದೇವರ ದರ್ಶನ ಮೀರಿ ದೇಹ ಕಾಳಜಿ ಗಮನ ಸೆಳೆದಿತ್ತು.ಅಯ್ಯಪ್ಪ..ಉಸ್ಸಪ್ಪಾ..
ಈಗ connect ಆಯ್ತು. ಓದಿ ತುಂಬಾ ಖುಷಿ ಆಯ್ತು. ಹಳೆ ನೆನಪುಗಳನ್ನು ಮರುಕಳಿಸಿದಿರಿ. ನಾನು high school ನಲ್ಲಿದ್ದಾಗ rally cycle ಅದೂ ಬಾರ್ ಇರುವ, ಪುರುಷರು ಮಾತ್ರ ಉಪಯೋಗಿಸುತಿದ್ದ ಸಯಕಲ್ನಲ್ಲೆಊರೆಲ್ಲ ಸುತ್ತುತಿದ್ದೆವು. ಅದೂ ಲಂಗ ಬ್ಲೌಸ್ ವೇಷದಲ್ಲಿ. (ಆಗ ಚೂಡಿದಾರ್ ಇರಲಿಲ್ಲ 1970ರಲ್ಲಿ )ಆ ಸ್ಯಕಲ್ ಪ್ರಿತಿಯೇ ನಿಮ್ಮ ಯಾನ ಓದಲು ಇಷ್ಟ ವಾಗುವುದು. ನಿಮ್ಮ ಭಾಷೆ ತುಂಬಾ ಖುಷಿ ಕೂಡುತ್ತದೆ. ಕಣ್ಣಮುಂದೆಚಿತ್ರಣದಂತೆ ಅನ್ನಿಸಿತ್ತದೆ. ಏನೇ ಆದರೂ ನನಗೆ ಪುಸ್ತಕ ಕೈಯಲ್ಲಿ ಹಿಡಿದು ಆರಾಮ ವಾಗಿಓದುವುದು ಖುಷಿ. ಚಕ್ರವರ್ತಿಗಳು ಪುಸ್ತಕ ಅತ್ರಿಯಲ್ಲಿ ಸಿಗಲಾರದೇನೋ?
ಅತ್ರಿ ಮುಚ್ಚಿ ಮೂರು ವರ್ಷವಾಯ್ತು. ಪುಸ್ತಕ ಮುಗಿದು ಎರಡು ದಶಕವಾಯ್ತು. ಇಲ್ಲೇ ಬಹುಶಃ ಇನ್ನೊಂದು ವಾರದೊಳಗೇ ಬರಲಿರುವ ವಿ-ಪುಸ್ತಕವನ್ನು ಉಚಿತವಾಗಿ ನಿಮ್ಮನುಕೂಲಕ್ಕೆ ತಕ್ಕಂತೆ ಇಳಿಸಿಯೋ ಮುದ್ರಿಸಿಯೋ ಬಳಸಿಕೊಳ್ಳಿ. ಒಳ್ಳೆಯ ಮಾತುಗಳಿಗೆ ಕೃತಜ್ಞ.
ಅಂದೇ ಓದಿದ್ದರೂ ಇಂದು ಇನ್ನೊಮ್ಮೆ ನಿಧಾನವಾಗಿ ಓದಿ ಆನಂದಿಸಿದೆ.ಅಂದಿನ ಪ್ರತಿಕ್ರಿಯೆಯಲ್ಲಿ ಎಷ್ಟೊಂದು ತಪ್ಪುಗಳು ಇದ್ದಿದ್ದು ಎದ್ದು ಕಂಡಿತು.ಇಂದು ಓದುವಾಗ ನನ್ನ ತಾತ(ಅಮ್ಮನ ಅಪ್ಪ) ತಮ್ಮ ಶಾನುಭೋಗ ತನವನ್ನು ಪ್ರತಿದಿನ ನಂಜನಗೂಡಿಗೆ ಏಳು+ಏಳು ,ಮತ್ತೂ ಸ್ವಲ್ಪ ಜಾಸ್ತಿ ಮೈಲುಗಳು ಸೈಕಲ್ ತುಳಿದೇ ಮಾಡಿದವರು.ಒಮ್ಮೆ ನಾವು ಬದನವಾಳಿನಲ್ಲಿದ್ದಾಗ ನಂಜನಗೂಡಿಗೆ ಬಂದು ಬದನವಾಳಿಗೆ ಬಂದು ಅದೇ ದಿನ ವಾಪಸ್ ಆಗಿದ್ದರು.ಅದು 18+18ಕೀಮೀ ಅಂದಾಜು.ಅವರಿಗಾಗ ಅರವತ್ತರ ಸಮೀಪ ಇರಬಹುದು.ಆಗ ಎಲ್ಲರೂ, ನೀವಂದಂತೆ ಸೈಕಲ್ ಸರದಾರರೇ ಆಗಿದ್ದ ಕಾಲ.ಈ ಚಾಮರಾಜನಗರ ರಸ್ತೆ,ಹಾಗೂ ನಂಜನಗೂಡು-ಊಟಿ ರಸ್ತೆ,ಎರಡೂ ಬದಿಯ ಮರಗಳು ನೀವು ಹಾಕಿದ ಪಟ ನೋಡಿ ಗತಕಾಲಕ್ಕೇ ಹೋಗಿಬಿಟ್ಟೆ.ನಾವು ಬದನವಾಳಿನಲ್ಲಿದ್ದಾಗ ರೈಲ್ವೇ ನಿಲ್ದಾಣದ ಬಳಿ ಮನೆ.ಹಾಗಾಗಿ ನಂಜನಗೂಡಿಗೆ ರೈಲಿನಲ್ಲಿ ಓಡಾಟ.ಬಿಳಿಗಿರಿ ಬೆಟ್ಟಕ್ಕೆ ಒಮ್ಮೆ ಮಾತ್ರ ಹೋಗಿದ್ದು.ನೀವು ಬರೆದ ಆ ಕಣಿವೆಯ ನೋಟ ಹಾಗೂ ಅಲ್ಲಿನ ಚಳಿ ಇಂದಿಗೂ ನೆನಪು..