(ಚಕ್ರವರ್ತಿಗಳು – ೩೩)
[ಪ್ರವಾಸ ಎಂದರೆ ಬದಲಾವಣೆ, ಬಿಡು ಸಮಯದ ಹವ್ಯಾಸ ಎಂದಿತ್ತು. ಇದು ೧೯೮೦ರ ಸುಮಾರಿಗೆ ಬಹುಶಕ್ತವಾದ ಉದ್ದಿಮೆಯಾಗಿ ವಿಕಾಸಗೊಂಡಿತ್ತು. ಆಗ ಬೆಂಗಳೂರಿನಲ್ಲಿ ಪ್ರವಾಸೋದ್ದಿಮೆಯನ್ನೇ ಉದ್ದೇಶಿಸಿ ಹುಟ್ಟಿಕೊಂಡ ಸ್ವಯಂಸೇವಾ ಸಂಸ್ಥೆ ಈಕ್ವೇಷನ್ಸ್. ಇದು ಅಧ್ಯಯನ, ಆರೋಗ್ಯಕರ ಪರ್ಯಾಯಗಳ ಸೂಚನೆ ಮತ್ತು ಅವನ್ನು ಪ್ರಜಾಸತ್ತಾತ್ಮಕವಾಗಿ ರೂಢಿಸುವಲ್ಲಿ ಒತ್ತಡಗಳನ್ನು ರೂಪಿಸುತ್ತಿತ್ತು. ಅದು ೧೯೮೯ರ ಆಗಸ್ಟ್ ೨೬ರಂದು ತೊಡಗಿದಂತೆ ಎರಡು ದಿನ ಬೆಂಗಳೂರಿನಲ್ಲೇ `ಪ್ರವಾಸೋದ್ಯಮ ಮತ್ತು ಮಾಧ್ಯಮ’ ಎಂಬೊಂದು ವಿಚಾರಕಮ್ಮಟ ನಡೆಸಿತು. ಅದಕ್ಕೆ ನನ್ನನ್ನು ಪರಿಚಯಿಸಿದವರು ಸುಧಾ ಪತ್ರಿಕೆಯ ಸಂಪಾದಕೀಯ ಬಳಗದ ಆನಂದ. (ಆನಂದರು ನನ್ನ ಪತ್ರಿಕಾ ಬರೆಹಗಳನ್ನು ಚಿಕಿತ್ಸಕವಾಗಿ ಗಮನಿಸಿದ್ದು ಬಿಟ್ಟರೆ ನನಗೆ ಅಪರಿಚಿತರು.) ಬೆಂಗಳೂರಿನ ಕಮ್ಮಟದಲ್ಲಿ ನಾನು ಮಂಡಿಸಿದ ಪ್ರಬಂಧದ ತುಸು ಪರಿಷ್ಕೃತ ರೂಪ ಇಲ್ಲಿದೆ. ನೆನಪಿರಲಿ, ಇದು ೧೯೮೯ರ ಪ್ರಬಂಧದ ತುಸು ಪರಿಷ್ಕೃತ ರೂಪ ಮಾತ್ರ]
ಕರಾವಳಿ ಕರ್ನಾಟಕದ ಪ್ರಮುಖ ವಾಣಿಜ್ಯ ನಗರ ಮಂಗಳೂರು. ಏನೇನೋ ವ್ಯವಹಾರಕ್ಕೆ ಇಲ್ಲಿಗೆ ಬಂದವರು ಬಿಡುವಾದಾಗ ವಿಚಾರಿಸುವುದಿತ್ತು “ಮಂಗಳೂರಿನಲ್ಲಿ ನೋಡುವುದೇನಿದೆ?” ಊರಿನ ಪ್ರವಾಸಿ ತಾಣಗಳ ಪುಸ್ತಿಕೆ, ಭೂಪಟ ಕೇಳುವುದೂ ಇತ್ತು. ಉತ್ತರ ಒಂದೇ “ಇಲ್ಲ.” [ಆನಂತರ ಶಾರದಾ ಪ್ರೆಸ್ ಒಂದು ಒಳ್ಳೆಯ ಮಾರ್ಗದರ್ಶಿಯನ್ನೇ ಮಾಡಿತ್ತು. ಯಾಕೋ ಅದರ ಪರಿಷ್ಕರಣ, ಮರುಮುದ್ರಣ ಮುಂದುವರಿಸಲೇ ಇಲ್ಲ. ಮುಂದುವರಿದ ದಿನಗಳಲ್ಲಿ ಖಾಸಗಿ ವಲಯದಿಂದ ಕೆಲವು ಮಾರ್ಗದರ್ಶಿಗಳು, ಕೇವಲ ನಕ್ಷೆಗಳು ಬಂದಿವೆ] ವಾಸ್ತವವಾಗಿ ಮಂಗಳೂರು ಕೇಂದ್ರವಾಗಿರುವ ಕರಾವಳಿ ವಲಯದಲ್ಲಿ ಪ್ರವಾಸೀ ಯೋಗ್ಯ ತಾಣಗಳು ಅಸಂಖ್ಯವಿವೆ. ತೀರ್ಥಕ್ಷೇತ್ರಗಳು, ಕಡಲ ಕಿನಾರೆ, ಪರ್ವತಶ್ರೇಣಿ, ಅಭೇದ್ಯ ಕಾಡು, ನದಿ-ಜಲಪಾತಗಳು, ಉಡುಪಿಯ ಸಂತಮೇರಿ ದ್ವೀಪ, ಬೆಳ್ತಂಗಡಿಯ ಗಡಾಯಿಕಲ್ಲು, ಕಾರಿಂಜದ ಸರೋವರ, ಪುತ್ತೂರ ಬಿಸಿನೀರ ಕೆರೆ, ನೆಲ್ಲಿತೀರ್ಥದ ಗುಹೆ, ಆಗುಂಬೆಯ ಘಾಟಿ, ಶಿರಾಡಿಯ ರೈಲು ಇತ್ಯಾದಿ ಪಟ್ಟಿ ಮಾಡಿದಷ್ಟೂ ಮುಗಿಯದು. ಇವುಗಳೆಲ್ಲ ಪ್ರೇಕ್ಷಣೀಯವೇ; ಕೆಲವು ಪ್ರಕಟ, ಹಲವು ಸುಪ್ತ. ಸುಪ್ತತೆಯನ್ನು ಗುರುತಿಸುವ ಅದಕ್ಕೂ ಹೆಚ್ಚಿಗೆ ಅದನ್ನು ಹಾಗೇ ಕಾಪಾಡಿಕೊಂಡು ಆಸಕ್ತರಿಗೆ ಮುಟ್ಟಿಸುವ ಕೆಲಸದಲ್ಲಿ ಕೊರೆಯಿದೆ. ನಿಸರ್ಗದ ಅದ್ಭುತ ಕೊಡುಗೆಗಳಿಗೆ ಪ್ರಚಾರ ಸಿಗದಿದ್ದಲ್ಲಿ ಹಿತ್ತಿಲಿನ ಬೆಟ್ಟವನ್ನು ಮರೆತು ಹಿಮಾಲಯವೊಂದೇ ಪರ್ವತ ಎಂಬ ಭ್ರಮೆ ಜನರಲ್ಲಿ ವ್ಯಾಪಿಸುತ್ತದೆ.
ಪ್ರವಾಸ ಕೇವಲ ಮನೋಲ್ಲಾಸಕ್ಕಾಗಿ ಎಂಬೊಂದು ಮಾತಿದೆ. ಅದು ನಿಜವಲ್ಲ. ವ್ಯಕ್ತಿಗಳ ಸಂಸ್ಕಾರಾನುಗುಣವಾಗಿ ಪ್ರವಾಸಿಗಳನ್ನು ಅಥವಾ ಪ್ರವಾಸ ತಾಣಗಳನ್ನು ಮೂರಾಗಿ ವಿಂಗಡಿಸಬಹುದು:
೧. ಮೋಜುಗಾರ: ಈತ ಪ್ರವಾಸದಲ್ಲಿ ನಾಗರಿಕ ಐಶಾರಾಮಗಳನ್ನಷ್ಟೇ ಬಯಸಿಯಾನು. ಅದಕ್ಕೆ ಸರಿಯಾಗಿ ವಿವಿಧ ಬಗೆಯ ಊಟ, ವಸತಿ, ಮೋಜುಕಟ್ಟೆಯ ಹಲವು ಅನಿಷ್ಟಗಳೂ ಬೆಳೆಯುವುದು ಸಹಜ. ಇಂಥ ಬೆಳೆವಣಿಗೆಯಿಂದ ಸಾಮಾಜಿಕ ಸ್ವಾಸ್ಥ್ಯ ಕೆಡದಂತೆ ಕಣ್ಣಿಡುವ ಕರ್ತವ್ಯ ಸರಕಾರದ್ದು. ಇಲ್ಲಿ ಮಾಧ್ಯಮ ದೃಶ್ಯವನ್ನು ರಂಜನೆಯೊಂದಿಗೆ ಬಿಂಬಿಸಿದರೂ ನಡೆಯುತ್ತದೆ. ವಾಸ್ತವದಲ್ಲಿ ಆರ್ಥಿಕ ನಿರ್ಬಂಧಗಳಷ್ಟೆ ಇಂಥ ಪ್ರವಾಸಿಗಳನ್ನು ನಿಯಂತ್ರಿಸಬಲ್ಲವು. ಕಾಫಿಗೆ ತ್ರಿತಾರಾ ಹೋಟೆಲ್ ಐವತ್ತೋ ನೂರೋ ರೂಪಾಯಿ ಕೇಳಿದರೆ ಅಲ್ಪಾದಾಯಿಗೆ ಐದು ಹತ್ತು ರೂಪಾಯಿಯ ದುಕಾನು ಬೇಕೇ ಬೇಕು; ಇಲ್ಲದಿದ್ದರೂ ವಿಕಸಿಸುತ್ತದೆ!
೨ ಪುಣ್ಯಜೀವಿ: ತೀರ್ಥಾಟನೆ ಇವನ ಪ್ರವಾಸದ ಮುಖ್ಯ ಗುರಿ. ಒಂದೆರಡು ಕ್ಷೇತ್ರಯಾನ, ನಾಲ್ಕೆಂಟು ತೀರ್ಥ ಸ್ನಾನ, ಹತ್ತೆಂಟು ಪೂಜೆ ನಮನ ಇಲ್ಲಿ ಸಹಜ. ಸೇವೆಯ ಹೆಸರಿನಲ್ಲಿ ಸುಲಿಗೆ, ತೀರ್ಥ ಪ್ರಸಾದಗಳ ರೂಪದಲ್ಲಿ ಅನಾರೋಗ್ಯದ ಪ್ರಸಾರ, ವಿಧಿನಿಷೇಧಗಳ ಕಟ್ಟಿನಲ್ಲಿ ಮಾನಸಿಕ ಹಿಂಸೆಗಳಿಗೆ ಪುಣ್ಯಜೀವಿಗಳು ಒಗ್ಗಿ ಹೋಗಿರುತ್ತಾರೆ. ಪರ್ಯಾಯ ಸಮಾಧಾನ ಹುಡುಕಲು ಅಥವಾ ಪ್ರವಾಸದ ನಿರಾಕರಣೆಗೆ ಅವರು ಧೈರ್ಯ ಮಾಡುವುದಿಲ್ಲ. ಇಲ್ಲಿ ಮಾನವೀಯತೆಯ ಚೌಕಟ್ಟಿಗೆ ಹತ್ತಿದ ಯುಗಯುಗಗಳ ಗೆದ್ದಲನ್ನು ಒಕ್ಕಿ ತೂರುವ ಜವಾಬ್ದಾರಿ ಮಾಧ್ಯಮಕ್ಕಿದೆ. ಚೌಕಟ್ಟು ಮುಕ್ಕಾಗದಂತೆ ನಿಯಂತ್ರಿಸುವ ಹೊಣೆ ಸರಕಾರಕ್ಕೂ ಇದೆ. ಪಂಡರ ಕೈಗೆ ಸಿಕ್ಕು ಭಿಕಾರಿಗಳಾದ ವಿಠಲನ ಭಕ್ತರ ಕಥೆ, ಗಂಗಾತಟದ ಉತ್ತರಕ್ರಿಯೆಗೆ ಒಯ್ದ ಶವ ನಾಯಿ ಪಾಲಾದಾಗಿನ ಆತ್ಮೀಯರ ವ್ಯಥೆ ಯಾರು ಕೇಳಿಲ್ಲ!
೩ ಸಂಶೋಧಕ: ಇವನ ಪ್ರವಾಸಾಸಕ್ತಿ ಸಂಕೀರ್ಣ. ಪ್ರಾಣಿ ಪಕ್ಷಿಗಳು, ಮರುಭೂಮಿ, ಮುರುಕು ಕೋಟೆ, ಕಾಡುಕೊಂಪೆ, ಜೀವನಕ್ರಮಗಳು ಇತ್ಯಾದಿ ಹೆಸರಿಸಲು ಸಾಧ್ಯವಾಗದವನ್ನೂ ಈತ ಹುಡುಕಿ ಆಸ್ವಾದಿಸುತ್ತಾನೆ. ಸಾಕಷ್ಟು ಶೈಕ್ಷಣಿಕ ಹಿನ್ನೆಲೆ ಇಲ್ಲದೆಯೂ ಎಲ್ಲೆಲ್ಲಿಯ ಕುಕಿಲಿಗೆ ಕಿವಿಯೊಡ್ಡಿ, ಮಿಂಚಿಗೆ ಕಣ್ದೆರೆದು ಪಕ್ಷಿಲೋಕ ತೆರೆದಿಟ್ಟ ಸಲೀಂ ಆಲಿ, ವಿದೇಶಕ್ಕೆ ಮತಪ್ರಚಾರಕನಾಗಿ ಹೋದರೂ ಅಲ್ಲಿಯ ಭಾಷೆಯ ಬನಿಯನ್ನು ಬೆಂಬತ್ತಿ ಕೋಶದಲ್ಲಿ ಸೆರೆಹಿಡಿದ ಕಿಟ್ಟೆಲ್ ಈ ವರ್ಗದ ಎರಡು ಉತ್ತಮ ಉದಾಹರಣೆಗಳು. ಇವರನ್ನು ಅರ್ಥವಿಸುವ ಕರ್ತವ್ಯ ಮಾಧ್ಯಮದ್ದು. ಇವರಿಗೆ ಹೊರೆಯಾಗದಂತೆ ರಕ್ಷಣೆ ಕಲ್ಪಿಸುವ ಮತ್ತು ಸಾಮಾನ್ಯ ನಿಯಮಗಳನ್ನು ಮೃದುಗೊಳಿಸುವ ಔದಾರ್ಯ ಸರಕಾರದ್ದಾಗಬೇಕು.
ಹೆಸರಿಸುವ ಅನುಕೂಲತೆಗಾಗಿ ಪ್ರವಾಸ ಒಂದು ಉದ್ಯಮ ಹೌದು. ಇದರಲ್ಲಿ ಪ್ರೇಕ್ಷಣೀಯ ಅಂಶಗಳು, ಪ್ರವಾಸಿ ಸೌಲಭ್ಯಗಳು ಮತ್ತು ಮಾಧ್ಯಮ ಒಂದಕ್ಕೊಂದು ಪೂರಕವಾದರೂ ಸ್ವಾಯತ್ತತೆ ಉಳಿಸಿಕೊಳ್ಳುವುದು ಅವಶ್ಯ. ಹಲವು ವೃತ್ತಿಪರ ಆಸಕ್ತಿಗಳ ಸಂಯೋಜನೆ ಪ್ರವಾಸೋದ್ಯಮ ಆಗಬೇಕು. ಅವು ರಾಜಕೀಯ ಪ್ರೇರಿತ ಸರ್ಕಾರೀ ಇಲಾಖೆ ಅಥವಾ ಏಕಸ್ವಾಮ್ಯಕ್ಕೆ ಒಳಪಟ್ಟ ಸಂಸ್ಥೆಗಳಾಗಬಾರದು. ಹಾಗಾದ ಪಕ್ಷದಲ್ಲಿ ಪ್ರವಾಸೋದ್ಯಮ ಬಾಧ್ಯತೆಯ ಕಟ್ಟುಗಳಿಲ್ಲದ, ಹಕ್ಕುಗಳ ಬಗ್ಗೆ ಅತಿಜ್ಞಾನವಿರುವ, ವೃತ್ತಿಯ ಬಗ್ಗೆ ನಿಷ್ಠೆಯಿಲ್ಲದ, ಆದರೆ ವೈಯಕ್ತಿಕ ಸವಲತ್ತುಗಳ ಬಗ್ಗೆ ವ್ಯಾಮೋಹಿಯಾಗಿರುವ ಸಿಬ್ಬಂದಿಗಳ ಆಡುಂಬೊಲವಾಗುತ್ತದೆ. ಇವರು ದುಡಿಮೆಯ ಸೋಗಲಾಡಿಗಳು, ಮಾಧ್ಯಮದ ಭ್ರಷ್ಟತೆಗೆ ಕಾರಣ ಕರ್ತೃಗಳು. ಉದ್ಯಮಕ್ಕೆ ಹೆಚ್ಚೆಚ್ಚು ಹಣ ಹೂಡಿ ಸ್ವಲಾಭಗಿಟ್ಟಿಸುವ ವಂಚಕರು. ಇಂಥವರೇ ಕನಿಷ್ಠ ಸೌಕರ್ಯಗಳಿಲ್ಲದ ಜೋಗದಲ್ಲಿ ಲಕ್ಷಾಂತರ ರೂಪಾಯಿಗಳ ಪಟಾಕಿ ಸುಟ್ಟದ್ದು, ಪ್ರಾಚ್ಯ ಸಂಶೋಧನೆಯ ಒತ್ತು ಮರೆಸಿ ಹಾಳು ಹಂಪೆಯಲ್ಲಿ ಕಲೆ ಸಾಹಿತ್ಯ ಗೋಷ್ಠಿ ನಡೆಸಿದ್ದು. ಇತ್ತ ಗಂಟೂ ಉಳಿಸದ ಅತ್ತ ಉದ್ಯಮವನ್ನೂ ಬೆಳೆಸದ ಸಂದಕಾಲದ, ಸಿಂಧುವಾಗದ (outdated, unrealistic) ಗಾಳಿಗೋಪುರ ಕಟ್ಟುವವರು. ಜನಪರವಾದ ಶಾಸನದ ರೂಪಣೆ ಮತ್ತು ಬಿಗಿಯಾದ ಆಚರಣೆಯಷ್ಟೇ ಸರ್ಕಾರದ ಕರ್ತವ್ಯವಾಗಬೇಕು. ಸರಕಾರ ನೇರ ಉದ್ಯಮದಲ್ಲಿ ತೊಡಗಬಾರದು. ಇದನ್ನು ಎರಡು ಉದಾಹರಣೆಗಳೊಡನೆ ಸ್ಪಷ್ಟಪಡಿಸುತ್ತೇನೆ.
ಉಡುಪಿ ಬಳಿಯ ಸಂತ ಮೇರಿ ದ್ವೀಪ ಪ್ರಾಕೃತಿಕ ಷಟ್ಕೋನಾಕೃತಿಯ ಶಿಲಾಸ್ತಂಭಗಳಿಗೆ ಪ್ರಸಿದ್ಧ. ಆ ದ್ವೀಪದ ಒಂದು ಕಿನಾರೆಯಲ್ಲಿ, ನೀರಿನಲ್ಲೇ ಪ್ರಾಕೃತಿಕ ಕಲ್ಲಿನ ಆವರಣ ಉಳಿದು, ಪುಟ್ಟ ಕೊಳವನ್ನೇ (ಲಗೂನ್) ನಿಲ್ಲಿಸಿದೆ. ಇದು ಸಮುದ್ರದ ಅಬ್ಬರದ ಅಲೆಗಳು ಮೃದುವಾಗಿ, ನಿರಪಾಯಕಾರಿಯಾಗಿ ಸುಳಿಯುವ ಸೌಮ್ಯ ಸುಂದರ ತಾಣ. ಇಲ್ಲಿ ಆಳವೂ ಹೆಚ್ಚಿಲ್ಲದ ಕಾರಣ ನೀರಾಟಕ್ಕಂತೂ ಹೇಳಿ ಮಾಡಿಸಿದ ಸ್ಥಳ. ಮೊದಲಾದರೋ ಪ್ರವಾಸಿಗರು ಮಲ್ಪೆಯ ವೃತ್ತಿಪರ ಬೆಸ್ತರನ್ನು ಒಲಿಸಿಕೊಂಡು, ಅವರು ಕೇಳಿದ ಹಣ ಕೊಟ್ಟು ಹೋಗಿ ಬರಬೇಕಾಗುತ್ತಿತ್ತು. ದ್ವೀಪದಲ್ಲಿ ದೋಣಿಗಟ್ಟೆಯಿರಲಿಲ್ಲ. ಸಮುದ್ರದ ಭರತ, ಇಳಿತ, ಕಿನಾರೆಯ ಆಳ, ಸೆಳವುಗಳನ್ನು ಮರೆತು ದೋಣಿಯವರಿಡುತ್ತಿದ್ದ ಹಲಗೆಯ ಮೇಲೋ (Walking the plank!) ತೊಡೆಯಾಳದ ನೀರಿಗೇ ಇಳಿದೋ ನಡೆಯಬೇಕಾಗುತ್ತಿತ್ತು. ದ್ವೀಪದಲ್ಲಿ ಕೆಲವು ಎತ್ತೆತ್ತರದ ತೆಂಗಿನಮರಗಳನ್ನುಳಿದು ನೆರಳು, ಕುಡಿಯುವ ನೀರು, ಶೌಚಗಳಾದಿ ಯಾವುದೇ ಸಾರ್ವಜನಿಕ ವ್ಯವಸ್ಥೆ ಇರಲಿಲ್ಲ. ಸರಕಾರದ ಗೃಧ್ರದೃಷ್ಟಿ ಇದರ ಮೇಲೆ ಬಿತ್ತು. ವೃತ್ತಿಭದ್ರತೆ, ಸಂಬಳ ಸವಲತ್ತುಗಳ ಸಿಬ್ಬಂದಿ ಸಹಿತ ಲಕ್ಷಾಂತರ ರೂಪಾಯಿಯ ವಿಹಾರ ದೋಣಿ ಇಟ್ಟು, ನಾಮಕಾವಸ್ಥೆ ಶುಲ್ಕ ವಿಧಿಸಿತು. ಮಲ್ಪೆಯಲ್ಲಿ ತ್ರಿತಾರಾ ಹೋಟೆಲ್ ಕಟ್ಟಡಕ್ಕೆ ಅಡಿಪಾಯವೂ ಬಿತ್ತು. ದ್ವೀಪದ ಶಿಲಾಸ್ತಂಭಗಳನ್ನಷ್ಟು ವಿರೂಪಗೊಳಿಸುವಂತೆ ಅಲ್ಲೂ ಸಿಮೆಂಟ್ ಮರಳು ಕಲಸಿ ಕ್ಷುದ್ರ ರಾಜಕೀಯದ ಸ್ಮಾರಕ ಶಿಲೆ ಸ್ಥಾಪಿಸಲಾಯಿತು. ಅಲ್ಲಿನ ಶಿಲೆಗಳು ಕೋಟ್ಯಂತರ ವರ್ಷಗಳ ಭೂ-ಇತಿಹಾಸವನ್ನು ಮೌನವಾಗಿ ಸಾರುತ್ತ ಬಂದಿವೆ. ಅವುಗಳನ್ನು ಸರಾಸರಿಯಲ್ಲಿ ಕೇವಲ ಅರವತ್ತು ವರ್ಷಗಳ ಜೀವಿತಾವಧಿಯ, ಅದರಲ್ಲೂ ಎಲ್ಲ ಸರಿಯಿದ್ದರೆ ಐದು ವರ್ಷಗಳ ಮಟ್ಟಿಗೆ ಮಾತ್ರ ದಕ್ಕಿದ ಸಾಮಾಜಿಕ ಪ್ರತಿನಿಧಿತ್ವದ ಬಲದವ ಭಾರೀ ಗದ್ದಲ, ಖರ್ಚು ಮಾಡಿ ಲೋಕಾರ್ಪಣಗೊಳಿಸಿದ್ದು ಎಷ್ಟು ವಿಚಿತ್ರ! ಆಯ್ತು, ಅದಾದರೂ ಚೆನ್ನಾಗುಳಿಯಿತೇ? ಕೆಲಕಾಲದಲ್ಲೇ ಉಸ್ತುವಾರಿ ರಿಪೇರಿಗಳ ಗೊಂದಲದಲ್ಲಿ ದೋಣಿ ನೆಲ ಕಚ್ಚಿತು. ವಿವಿಧ ಗೋಟಾಳೆಗಳಲ್ಲಿ ಸಿಬ್ಬಂದಿ ಕರಗಿದರು, ಹೋಟೆಲ್ ನಿರ್ಮಾಣ ಮೋಟುಗೋಡೆ ಮಟ್ಟದಲ್ಲೆ ಸ್ಥಗಿತಗೊಂಡಿತು. ಮತ್ತೆ ಕೆದಕು ಮಾತುಗಳಿಗೆ, ಅದನ್ನು ಹಾಗೇ ಪರಭಾರೆ ಮಾಡುವುದು ಇತ್ಯಾದಿ ಮಾತುಗಳು ತೇಲಿತು, ಮರವೆಗೆ ಸಂದಿತು. [ಈಗ ಕಡಲ ಕಿನಾರೆಯ ಇನ್ನೂರು ಮೀಟರ್ ಅಂತರದಲ್ಲಿ ಯಾವುದೇ ಹೊಸ ನಿರ್ಮಾಣಗಳು ಕೂಡದು ಎನ್ನುವ ಕಾನೂನೂ ಜ್ಯಾರಿಗೆ ಬಂದಿದೆ.] ಈ ಸ್ಥಿತಿಯಲ್ಲಿ ದ್ವೀಪಕ್ಕೆ ಹಳೆಯ ಕ್ರಮದಂತೆ ಬೆಸ್ತರ ದೋಣಿ ಹಿಡಿದು ಹೋಗುವುದು ಅಕ್ರಮವಾಗುತ್ತದೆ. ಇನ್ನೂ ಪ್ರಾಥಮಿಕ ಆವಶ್ಯಕತೆಗಳಾದ ದೋಣಿಗಟ್ಟೆ, ಕುಡಿನೀರಾದಿ ವ್ಯವಸ್ಥೆಗಳು ಅಲ್ಲಿ ಮೂಡಿಯೇ ಇಲ್ಲ. ಅವಕ್ಕೆ ಇನ್ನೊಂದೇ `ಮಹಾತ್ಮ’ನನ್ನೂ ಮತ್ತೊಂದೇ ಲೋಕಾರ್ಪಣ ಕಲ್ಲನ್ನೂ ದ್ವೀಪ ಕಾಯುತ್ತ ಇದೆ!
ಖಾಸಗಿ ಜವಾಬ್ದಾರಿತನಕ್ಕೆ ಉದಾಹರಣೆಯಾಗಿ ನೆಲ್ಲಿತೀರ್ಥವನ್ನು ನೋಡಬಹುದು. ಮಂಗಳೂರು-ಮೂಡಬಿದ್ರೆ ದಾರಿಯಲ್ಲಿನ ಕವಲುದಾರಿ ಹಿಡಿದರೆ ಮುಚ್ಚೂರಿನ ಸಮೀಪದ ಒಂದು ಪ್ರಾಕೃತಿಕ (ಮುರಕಲ್ಲು) ಗುಹೆಯಿದು. ಇದರ ಅಂಗಳದಲ್ಲೇ ವಿಕಸಿಸಿದ ಸೋಮನಾಥ ದೇವಾಲಯ ಇಂದು ಗುಹೆಯ ಯಜಮಾನಿಕೆ ನಡೆಸುತ್ತದೆ. ನೂರೆಂಬತ್ತು ಮೀಟರಿಗೂ ಮಿಕ್ಕು ಉದ್ದದ ಗುಹೆ, ತೆಳು ನೀರ ಹರಿವಿನಲ್ಲಿ ತೆವಳಿ ಸಾಗಬೇಕಾದ ಜಾಡು, ಪುಟ್ಟ ಕೊಳ, ಮತ್ತಾಚೆ ಅರ್ಚನೆಗೊಳ್ಳುವ ಲಿಂಗ ಇಲ್ಲಿನ ಸಾರ್ವಜನಿಕರ ಮತ್ತು ಭಕ್ತಾದಿಗಳ ಆಕರ್ಷಣೆ. ಇದನ್ನು ವಾಣಿಜ್ಯ ಸರಕಾಗಿಸುವುದೇ ದೇವಾಲಯದ ಆಡಳಿತ ಮಂಡಳಿಯ ಕ್ಷೇತ್ರಾಭಿವೃದ್ಧಿ ಪಟ್ಟಿಯ ಲಕ್ಷ್ಯ. ಅದು ದಾರಿ, ಬಸ್ ಸೌಕರ್ಯ, ಛತ್ರ, ಹೊಟೆಲ್ ಇತ್ಯಾದಿ ಪಟ್ಟಿ ಹನುಮನ ಬಾಲ. ಹಾಗೆಯೇ ಮಂಡಳಿ ಅವಕಾಶ ಸಿಕ್ಕಲ್ಲೆಲ್ಲ ಹೇಳಿಕೆಗಳಲ್ಲಿ, ಲೇಖನಗಳಲ್ಲಿ ಭಾವುಕರ ಮನತಟ್ಟಿ ನಿಧಿ ಕೂಡಿಸುವಲ್ಲೂ ಪ್ರವೃತ್ತವಾಗಿದೆ. ಆದರೆ ಈ ರಚನೆಗಳು ಚಟುವಟಿಕೆಗಳು ಗವಿಯ ದುರ್ಬಲ ಮಾಡಿನ ಮೇಲೇ ಆಗಬೇಕು. ಸಹಜವಾಗಿ ಅಲ್ಲಿನ ಕಂಪನ, ಒತ್ತಡ ಮತ್ತು ಉದ್ಭವಿಸುವ ಮಾಲಿನ್ಯ ಗುಹೆಯನ್ನು ಪ್ರಧಾನವಾಗಿ ಕಾಡಲಿದೆ ಎಂದು ನಾನು ಪರಿಚಿತರ ಮೂಲಕ ಮಂಡಳಿಗೂ ಸಾರ್ವಜನಿಕ ಲೇಖನಗಳಲ್ಲೂ ಎಚ್ಚರಿಸುತ್ತಲೇ ಬಂದಿದ್ದೇನೆ. ಮುಂದುವರಿದು ಅದನ್ನು ಪ್ರಾಕೃತಿಕವಾಗಿ ಉಳಿಸಿಕೊಳ್ಳುವಂತಾಗಲು ಬೇಕಾದ ಕಾರ್ಯಗಳ ಬಗ್ಗೆ ಸೂಚನೆಯನ್ನೂ ಕೊಟ್ಟಿದ್ದೇನೆ: ತಂತ್ರವಿದರ ನೆರವಿನಿಂದ ಒಳಜಾಡು ಹಸನುಗೊಳಿಸುವುದು, ಪ್ರಾಕೃತಿಕ ವ್ಯಾಪಾರದಲ್ಲಿ ಸಹಜವಾಗಿ ಗುಹಾಚಪ್ಪರ ಬಿಗುಕಳೆದುಕೊಳ್ಳದಂತೆ ಭದ್ರಪಡಿಸುವುದು ಮತ್ತು ಪರಿಸರಕ್ಕೊಪ್ಪುವ ನಿಯಮಾವಳಿಯ ರೂಪಣೆ ಮುಖ್ಯಾಂಶಗಳು. ಉದಾಹರಣೆಗೆ ಒಳಗಿನ ಸೀಮಿತ ಪ್ರಾಣವಾಯುವನ್ನು ಕೆಡಿಸುವ ಊದುಬತ್ತಿ, ಎಣ್ಣೆ ದೀಪಗಳ ಬಳಕೆಯನ್ನು ನಿಷೇಧಿಸಬೇಕು. ಒಳಗಿನ ನೀರಬಳಕೆ, ಮೇಲಿನ ಕಟ್ಟಡ ರಚನೆ, ಜಾತ್ರಾ ಚಟುವಟಿಕೆ, ವಾಹನ ಸಂಚಾರ ಮುಂತಾದವುಗಳ ನಿಯಂತ್ರಣ ಇತ್ಯಾದಿ. ನನ್ನೀ ಸೂಚನೆಗಳು ಯಾರನ್ನೂ ಪ್ರಭಾವಿಸಿದಂತಿಲ್ಲ! ಸಾರಾಂಶ… ಪ್ರಕೃತಿಯನ್ನು ಸೂರೆ ಮಾಡುವುದರಲ್ಲಿ ಸರ್ಕಾರವಾಗಲೀ ಖಾಸಗಿಯಾಗಲೀ ಒಂದೇ – ಇಂದು, ಈಗ ಸಿಕ್ಕಿದ್ದನ್ನು ಬಾಚಿಕೊಂಡು ಮೆರೆಯುವ ಉತ್ಸಾಹ. ನಾಳೆಯ ಉಸಾಬರಿ ನಮಗೇಕೆ ಎಂಬ ಅಲ್ಪ ತೃಪ್ತಿ, ರಾಷ್ಟ್ರವಿಘಾತಕ ದೃಷ್ಟಿ.
ನನ್ನ ಹವ್ಯಾಸ ಎಂದರೆ ಸಾಹಸಮಿಶ್ರಿತ ಪ್ರಯತ್ನದಲ್ಲಿ ಪ್ರಕೃತಿವೀಕ್ಷಣೆ. ಇದಕ್ಕೆ ಪಶ್ಚಿಮ ಘಟ್ಟಗಳಲ್ಲಿ ಅವಕಾಶ ಯಥೇಚ್ಛ. ಆದರೆ ಅದಕ್ಕೆ ಯುಕ್ತ ಮಾರ್ಗದರ್ಶನ ಇಲ್ಲ. ನನ್ನ ಮೊದಲ ಓಡಾಟಗಳಲ್ಲಿ ವಿವರಗಳಿಗೆ ಆಯಾ ವಲಯದ ಸ್ಥಳೀಯರನ್ನು ಕೇವಲ ಮಾರ್ಗದರ್ಶನಕ್ಕೆ ಹಿಡಿಯುತ್ತಿದ್ದೆ. ಮುಂದೆ ಭಾರತ ಸರ್ವೇಕ್ಷಣ ಇಲಾಖೆಯವರ ಭೂಪಟ ಸಂಗ್ರಹಿಸಿ, ಬಳಸಿದೆ. ಉಳಿದಂತೆ ಅಂದರೆ, ಪ್ರಶಸ್ತ ಋತುಮಾನ, ಶಿಬಿರಾನುಕೂಲಗಳು, ಅಪಾಯಗಳು ಇತ್ಯಾದಿಗಳ ಕುರಿತಂತೆ ಸಾಮಾನ್ಯಜ್ಞಾನವೊಂದೇ ದಾರಿದೀಪ. ಅಂದಾಜಿನಲ್ಲಿ ಕಾಡುಬೆಟ್ಟ ಸುತ್ತಿದೆ. ಒಮ್ಮೆ ಸೋತಲ್ಲಿ ಮತ್ತೊಮ್ಮೆ ತಿದ್ದಿ ನಡೆದು ಯಶಸ್ವಿಯಾದೆ. ಆ ಎಲ್ಲ ವೈಯಕ್ತಿಕ ಮಟ್ಟದ ವಿವರಗಳನ್ನು ಟಿಪ್ಪಣಿ, ನಕ್ಷೆ, ಲೇಖನ, ಫೋಟೋಗಳಲ್ಲಿ ದಾಖಲಿಸುತ್ತ ಬಂದೆ. ಇಂದು (೧೯೮೯) ಇವಿಷ್ಟೇ ಮೂಲವಸ್ತುಗಳೊಡನೆ ನಾನು ಹಲವು ತಂಡಗಳನ್ನು ಕುಳಿತಲ್ಲಿಂದಲೇ ಉಚಿತವಾಗಿ ಮಾರ್ಗದರ್ಶಿಸುತ್ತಿದ್ದೇನೆ. [ಮುಂದಿನ ದಿನಗಳಲ್ಲಿ ಪ್ರಾಕೃತಿಕ ಅವಹೇಳನದ ಅಗಾಧತೆ ಕಂಡು ಹೆದರಿ ಹೊರಟವರನ್ನು ನಿರುತ್ತೇಜನಗೊಳಿಸಿದ್ದೂ ಇದೆ!] ಕುದುರೆಮುಖಕ್ಕೆ ಸೋಜಾ, ಕುಮಾರಾದ್ರಿಗೆ ಕುಂಡ, ನರಸಿಂಹ ಪರ್ವತಕ್ಕೆ ಕಾಡಪ್ಪಯ್ಯ ಸಮರ್ಥ ಮಾರ್ಗದರ್ಶಿಗಳು. ಇನ್ನು ಕೊಡಚಾದ್ರಿಯ ಪರಮೇಶ್ವರ ಭಟ್ಟರು, ಕುಮಾರಾದ್ರಿಯ ತಪ್ಪಲಿನ ಗಿರಿಗದ್ದೆ ಭಟ್ಟರು, ಹೇವಳದ ಸಿಂಹಪುರ್ಬು ಸೀಮಿತವಾಗಿ ಊಟ ವಸತಿ ಒದಗಿಸುವಲ್ಲಿ ಚಿರಪರಿಚಿತರು. [ಇದರಲ್ಲಿ ಹೆಚ್ಚಿನವರು ಇಂದು ಉಳಿದಿಲ್ಲ. ಉಳಿದ ಕುಟುಂಬಿಕರಾದರೂ] ಇವರು ಇಂದಿನ ಮೌಲ್ಯಗಳಿಗೆ ಸ್ಪಂದಿಸಲಾಗದ, ಒಂದು ಪರಂಪರೆಯನ್ನು ರೂಪಿಸದ ಕೇವಲ ವ್ಯಕ್ತಿಗಳು.
ಇವರನ್ನು ಹೊಸ ಆದರ್ಶಗಳಿಗೆ ಸಂಸ್ಕರಿಸುವ ಪ್ರಯತ್ನ ಅಥವಾ ಇವರ ಅತಿ ಬಳಕೆ ಎರಡೂ ವ್ಯರ್ಥ. ಇಲ್ಲಿ ಮಾಧ್ಯಮದ ಪಾತ್ರ ಮಹತ್ವದು. ಸ್ಥಳ ವಿಶೇಷಗಳನ್ನು ಜ್ಞೇಯನಿಷ್ಠವಾಗಿ ತಿಳಿಸುವ ಸಾಹಿತ್ಯ ಅವಶ್ಯ ತಯಾರಾಗಬೇಕು. ಅದರಲ್ಲಿ ಮಾರ್ಗದರ್ಶಕ ನಕ್ಷೆ, ಸೌಕರ್ಯಗಳ ಪಟ್ಟಿಯಷ್ಟೇ ಸ್ಪಷ್ಟವಾಗಿ ಪಾರಿಸರಿಕ ಕಟ್ಟುಪಾಡುಗಳನ್ನೂ ನಮೂದಿಸಿರಬೇಕು.
ಯಾವುದೇ ಉದ್ಯಮದಂತೆ ಪ್ರವಾಸೋದ್ಯಮವೂ ಸ್ವಾರ್ಥಮೂಲವಾಗಿಯೇ ಬೆಳೆದಿದೆ. ಉದಾಹರಣೆಗೆ ಶಬರಿಮಲೆಯನ್ನೇ ನೋಡಿ. ಯಾವ ಮಲೆಯನ್ನು ಇಷ್ಟಪಟ್ಟು ಅಯ್ಯಪ್ಪ ನೆಲೆಸಿದನೋ ಅದನ್ನೇ ದೇವಸ್ವಂ ಇಲಾಖೆ ಭಕ್ತರ ಅನುಕೂಲ ಹೆಚ್ಚಿಸುವ ನೆಪದಲ್ಲಿ ನುಂಗಿ, ಮನುಷ್ಯ ಅನುಕೂಲಗಳನ್ನು ವಿಸ್ತರಿಸುತ್ತಲೇ ಇದೆ. ಅರಣ್ಯ ಇಲಾಖೆಯಾದ್ದೂ ಪ್ರತಿಮೊಂಡು; (ಕೆಲವೆಡೆಗಳಲ್ಲಿ ತಾನೇ `ಅಭಿವೃದ್ಧಿ’ಯ ಹೆಸರಿನಲ್ಲಿ ಮರಗಳ ಗುತ್ತಿ ಉಳಿಯದಂತೆ ನಾಶಮಾಡಿದರೂ ಇಲ್ಲಿ) ದೇವಸ್ವಂ ಇಲಾಖೆಯನ್ನು ವಿರೋಧಿಸುವುದನ್ನೇ ಲಕ್ಷ್ಯವಾಗಿಸಿಕೊಂಡಿದೆ. ಕಡಿಮೆ ಹೂಡಿಕೆ, ಅಧಿಕ ಆದಾಯದ ಗುರಿ ಪ್ರವಾಸೋದ್ಯಮದಲ್ಲಿ ಪರಿಸರ ಕೆಡಿಸುವುದು ನಿರ್ವಿವಾದ. ಪ್ರತಿ ಸ್ಥಳಕ್ಕೂ ಸ್ವಂತಿಕೆಯಿದ್ದಂತೆ ಮಿತಿಯೂ ಇದೆ. ಪ್ರಾಕೃತಿಕ ಆಕರ್ಷಣೆಯನ್ನು ಸಾರ್ವಜನಿಕಕ್ಕೆ ಒಡ್ಡುವಲ್ಲಿ ಮಿತಿಯ ಅರಿವು ಹೆಚ್ಚಾಗಬೇಕು. ಅದನ್ನು ಮರೆತು ಕೇವಲ ಗುಣವನ್ನೇ ವಿಶೇಷವಾಗಿ ಪ್ರಚುರಿಸುವುದರಿಂದ ಆಗುವ ಅಪಾಯದ ಕುರಿತು ಒಂದು ಉದಾಹರಣೆಯಾಗಿ ಹನುಮನ ಗುಂಡಿಯನ್ನು ತುಸು ವಿವರದಲ್ಲಿ ನೋಡಿ:
ಪತ್ರಕರ್ತ ಮಿತ್ರರೊಬ್ಬರು `ಗ್ರಾಂಡ್ ಐಟಮ್’ ಮಾಡುವ ಉತ್ಸಾಹದಲ್ಲಿ ತಮ್ಮ ಪತ್ರಿಕೆಯ ಮುಖಪುಟದಲ್ಲೆ ಈ ಜಲಪಾತದ ದೊಡ್ಡ ಚಿತ್ರ ಹಾಕಿ, ಅಪೂರ್ವವೆಂದು ಬಣ್ಣಿಸಿದರು. ಕೆಲಕಾಲಾನಂತರ ನಮ್ಮ ಬಳಗ ಅಲ್ಲಿಗೆ ಹೋಗಿತ್ತು. ಮೊದಲು ಅಲ್ಲಿ ದಾರಿ ಬದಿಯಲ್ಲೊಂದು ವೀಕ್ಷಣಾ ಕಟ್ಟೆ ಮಾತ್ರ ಇತ್ತು. ಆದರೆ ಈಗ ಕಟ್ಟೆಯ ಒತ್ತಿನಲ್ಲೇ ಪೊದೆ ಸವರಿ ಸವಕಲು ಜಾಡು ನೀರಿನವರೆಗೂ ಇಳಿದದ್ದು ಕಾಣುತ್ತಿತ್ತು. ನಾವು ಅನುಸರಿಸಿದೆವು. ಅಲ್ಲಿ ದಟ್ಟ ಹಸುರಿನ ಮುಚ್ಚಿಗೆಯಲ್ಲಿ ಧುಮುಕುವ, ಬಿಳಿನೊರೆಗಾರುವ, ಶುಭ್ರ ಶೀತಲ ನೀರು (ಮಲೆನುಗ್ಗಿ ನಡೆಯುವವರು ಇಂಥವನ್ನು ಎಷ್ಟೂ ಕಾಣುತ್ತಾರೆ.) ನಿಜಕ್ಕೂ ಸಂತೋಷ ಕೊಡುತ್ತದೆ. ಆದರೆ ಸುತ್ತ ಕಣ್ಣು ಹಾಯಿಸಿದಾಗ ಜನಪ್ರಿಯತೆಯ ಫಲ – ಅನಾಚಾರ, ನಮ್ಮನ್ನು ಬೆಚ್ಚಿ ಬೀಳಿಸಿತು. ಬಳಸಿ ಎಸೆದ ಹರಕು ಬಟ್ಟೆಗಳು, ಸ್ಯಾನ್ ಪೀಟರ್ ರಟ್ಟಿನ ಪೆಟ್ಟಿಗೆಗಳು, ಸಿಗರೇಟು ಮೋಟು ಖಾಲಿಪ್ಯಾಕು, ಪಾಲಿಥೀನ್ ಕಚಡಗಳು, ನೀರ ಮಡುವಿನಲ್ಲೂ ಒಡಕು ಬಾಟಲುಗಳು, ಮಿತ ಸಂತಾನದ ಅಮಿತ ಸಹಕಾರಿಗಳು, ಕೈಗೆಟಕುವ ಬಂಡೆ ಮರದ ಬೊಡ್ಡೆಯ ಮೇಲೆಲ್ಲ ಹುಸಿಗವನಗಳು, ಭೇಟಿಕೊಟ್ಟ ಮಹಾತ್ಮರ ಸುನಾಮಗಳು, ಒಟ್ಟು ನಾಗರಿಕತೆಯ ಬಗೆಗೆ ವಾಕರಿಕೆ ಬರಿಸುವಷ್ಟಿದ್ದುವು. ಪ್ರಾಕೃತಿಕ ವಿಶೇಷಗಳ ಬಳಿ ಸಾರ್ವಜನಿಕ ಅನುಕೂಲಗಳಿಗೂ ಮೊದಲು, ಸ್ಥಳವಿಶೇಷದ ದುರುಪಯೋಗವಾಗದಂತ ಬಂದೋಬಸ್ತು ಬಿಗಿಗೊಳ್ಳುವುದು ತೀರ ಅಗತ್ಯ. [೨೦೧೫ರ ವರ್ತಮಾನ: ಹನುಮನ ಗುಂಡಿ ಸೇರಿದಂತೆ ಆ ವಲಯವೆಲ್ಲ ಕುದುರೆಮುಖ ರಾಷ್ಟ್ರೀಯ ಉದ್ಯಾನವನವಾಗಿದೆ. ವನ್ಯವಿಭಾಗಗಳ ಒಳಗೆ ಮನುಷ್ಯ ಚಟುವಟಿಕೆಗಳು ಕನಿಷ್ಠವಾಗಬೇಕು ಎನ್ನುವುದು ನಿಯಮ. ಅದಕ್ಕಾಗಿ ಬಹುಮುಖ್ಯವಾಗಿ ಕುದುರೆಮುಖ ಗಣಿಯ ಉಚ್ಛಾಟನೆಯಿಂದ ತೊಡಗಿ, ಕೃಷಿ ಜನವಸತಿಗಳೆಲ್ಲ ಮುಚ್ಚುಗಡೆ ಅಥವಾ ಮರುವಸತಿಗೊಳಪಡುತ್ತಲೇ ಬಂದಿವೆ. ಆದರೆ ಇವೆಲ್ಲವನ್ನೂ ಬಿಗಿಯಾಗಿ ನಿರ್ವಹಿಸಬೇಕಾದ ವನ್ಯ ಇಲಾಖೆಯೇ ಹನುಮನಗುಂಡಿಯಲ್ಲಿ ಯದ್ವಾತದ್ವಾ ಪ್ರವಾಸೀ ಸೌಕರ್ಯಗಳನ್ನು ಹೆಚ್ಚಿಸಿ, ಟಿಕೆಟ್ ಮಾರುತ್ತ ಕುಳಿತಿದೆ. ಎಲ್ಲಾ ರೀತಿಯ ಮಾಲಿನ್ಯಕ್ಕೆ ಅವಕಾಶ ಮಾಡಿಕೊಟ್ಟಿರುವುದು ಬಹು ದೊಡ್ಡ ದುರಂತ. ಇಲ್ಲಿ ಮೋಜನ್ನುಳಿದು ಇನ್ಯಾವ ಪ್ರಕೃತಿಪಾಠವೂ ಇಲ್ಲ. ವನ್ಯ ಇಲಾಖೆ ಆರ್ಥಿಕ ಆದಾಯ ತೋರಿಸಬೇಕಾದ ಅಥವಾ ತನ್ನನ್ನು ತಾನೇ ಸಾಕಿಕೊಳ್ಳಬೇಕಾದ ಸರಕಾರೀ ಅಂಗವಲ್ಲ ಎನ್ನುವುದನ್ನು ಇಲ್ಲಿನ ಬುದ್ಧಿವಂತರಿಗೆ ಯಾರು ತಿಳಿಸಬೇಕು?]
ಯಾವುದೇ ಪ್ರವಾಸೀ ಕೇಂದ್ರದ ಮೂಲ ಆವಶ್ಯಕತೆಗಳ ಅಭಿವೃದ್ಧಿಗೆ ಅಲ್ಲಿಗೆ ಬರುವ ಜನಸಂಖ್ಯೆ ಕೈಮರವಾಗಬಾರದು. ತಾಣಗಳ ಕೊರತೆಯಿದ್ದಾಗ ಪ್ರಸಿದ್ಧ ಕೇಂದ್ರಗಳಿಗೇ (ಇಲ್ಲಿ ಸೌಲಭ್ಯಗಳು ಸಾಕಷ್ಟು ಇರುವುದರಿಂದ) ಸಾಮಾನ್ಯರು ಮುಕುರುತ್ತಾರೆ. ಸಹಜವಾಗಿ ಅವು ಅತಿ ಬಳಲಿಕೆಯಿಂದ ಕೊಳೆಯುತ್ತವೆ. ಪಶ್ಚಿಮ ಘಟ್ಟದುದ್ದಕ್ಕೂ ಹಲವು ಆಕರ್ಷಕ ಜಲಪಾತಗಳಿವೆ. ದಕ ಜಿಲ್ಲಾ ವಲಯದಲ್ಲೇ ಕೆಲವನ್ನು ಹೆಸರಿಸುವುದಾದರೆ ಬಂಡಾಜೆ, ಕೂಡ್ಲು, ಕೂನಳ್ಳಿ, ಒನಕೆ, ಬರ್ಕಣ ಇತ್ಯಾದಿಗಳನ್ನು ವ್ಯವಸ್ಥಿತವಾಗಿ ಅನಾವರಣ ಮಾಡಿ. ಆಗ ಜಲಪಾತ ಎಂದರೆ ಜೋಗ ಎಂದು ಅಲ್ಲಿ ನೀರಿರಲಿ, ಇಲ್ಲದಿರಲಿ ಜನಜಾತ್ರೆ ಸೇರುವುದು ಕಡಿಮೆಯಾಗುತ್ತದೆ.
ಸಮಾಜದ ಅಥವಾ ಪರಿಸರದ ಸಮಗ್ರ ಅಭಿವೃದ್ಧಿಯಾದಾಗ ಅದರ ಯಾವುದೇ ಅಂಶ ಪ್ರಾತಿನಿಧಿಕವೂ ಪ್ರೇಕ್ಷಣೀಯವೂ ಆಗುತ್ತದೆ. ಜಪಾನಿನ ತಾಂತ್ರಿಕ ಪಕ್ವತೆಯಿಂದ ಎಕ್ಸ್ಪೋ ಮೇಳ, ಅಮೆರಿಕದ ಮುಕ್ತ ವೃತ್ತಿಪರ ಧೋರಣೆಯಿಂದ ಒಲಿಂಪಿಕ್ಸ್ ಕ್ರೀಡಾಕೂಟ, ಅದ್ವಿತೀಯ ಯಾಂತ್ರಿಕ ಶಿಸ್ತಿನ ಕೂಸಾದ ರಶ್ಯದ ಸರ್ಕಸ್, ಶ್ರೀಮಂತ ಸಂಸ್ಕೃತಿಯ ಕುರುಹಾಗಿ ಭಾರತೀಯ ಪ್ರದರ್ಶನ ಕಲೆಗಳು ಲೋಕಮುಖದಲ್ಲಿ ಸದಾ ಅಚ್ಚರಿಯ ಸಾಧನೆಗಳಾಗಿ, ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿ ಕಾಣುವ ಉದಾಹರಣೆಗಳು.
ಜಾಹೀರಾತುಗಳು ಎಷ್ಟೇ ಉದಾರವಾಗಿದ್ದರೂ ಯಾರೇ ಮಾಡಿದರೂ ಪೂರ್ಣ ಸತ್ಯವಾಗಿರುವುದಿಲ್ಲ. ಕೃತಿಚೌರ್ಯ, ವಿಷಯದ ಅವಹೇಳನ, ತಪ್ಪು ಪ್ರಾತಿನಿಧ್ಯ, ನಿಖರತೆಯ ಕೊರತೆ, ಅನುಭವಕ್ಕೆ ತಾರ್ಕಿಕ ಕೊನೆಕಾಣಿಸುವಲ್ಲಿ ಛಲಹೀನತೆ ಮೊದಲಾದ ಪಿಡುಗುಗಳು ಪ್ರವಾಸ ಸಾಹಿತ್ಯವನ್ನು ಕೇವಲ ಅಲಂಕಾರಿಕ ಮಟ್ಟದಲ್ಲಿ ಉಳಿಸಿದೆ. ಅವನ್ನು ಒರೆಗೆ ಹಚ್ಚುವ, ಹೊಸ ಅನುಭವಗಳ ಸೇರ್ಪಡೆಯೊಡನೆ ಕಾಲಕ್ಕೆ ತಕ್ಕ ಸ್ಪಷ್ಟ ಅನುಸರಣೆಯ ಸೂಚನೆಯನ್ನು ಕೊಡುವ ಜವಾಬ್ದಾರಿ ಮಾಧ್ಯಮದ್ದಾಗಬೇಕು. ಸಮಾಜ ಮತ್ತು ಪರಿಸರಗಳ ಪಾವಿತ್ರ್ಯಕ್ಕಾಗಿ ಪ್ರವಾಸೋದ್ಯಮ ವಿಮರ್ಶೆಗಳನ್ನು ಸ್ವಾಂಗೀಕರಿಸಿಕೊಂಡು ಪುನಃಸಂಘಟನೆ ಆಗುತ್ತಲೇ ಇರಬೇಕು.
[ಇಲ್ಲಿಗೆ ಚಕ್ರವರ್ತಿಗಳು ಪುಸ್ತಕದ ಮುಖ್ಯ ಭಾಗ ಪೂರ್ಣವಾಗಿದೆ. ನಾನು ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ ಸೈಕಲ್ಲೇರಿ ಮೈಸೂರಿನಿಂದ ಬಿಳಿಗಿರಿ ರಂಗನಬೆಟ್ಟಕ್ಕೆ ಹೋದ ಕಥನವನ್ನು `ಅಂದಕಾಲತ್ತಿಲೇ’ ಅಂದರೆ ೨-೧೦-೧೯೭೪ರಂದು `ಕರ್ಮವೀರ’ ಪ್ರಕಟಿಸಿತ್ತು. ಇದನ್ನು ತದ್ಪ್ರತಿ ಚಕ್ರವರ್ತಿಗಳು ಪುಸ್ತಕದ ಏಕೈಕ ಅನುಬಂಧವಾಗಿ ಸೇರಿಸಿಕೊಂಡಿದ್ದೆ. ಅದನ್ನೂ ಮುಂದಿನವಾರ ಇಲ್ಲಿ ಪ್ರಕಟಿಸುವುದರೊಡನೆ `ಪುಸ್ತಕ’ವನ್ನು ಪೂರ್ಣಗೊಳಿಸಲಿದ್ದೇನೆ.]
ಹೌದು ಸರಕಾರೀಕರಣವು ಸಂಸ್ಕೃತಿಯ ದೊಡ್ಡ ಶತ್ರು. ಸಾಂಸ್ಕೃತಿಕ ಗಾಂಭೀರ್ಯ, ತಾತ್ವಿಕತೆ ಇಟ್ಟುಕೊಂಡು ಹೇಗೆ ಪ್ರವಾಸಿ ತಾಣ ಉಳಿಸಿ ಜನಾಕರ್ಷಕವಾಗಿಸಬಹುದು ಎಂಬುದನ್ನು ಯು.ಎಸ್.ಎಯಲ್ಲಿ ಕಂಡೆ. ಈ ಕುರಿತು ಸಂಸ್ಕೃತಿ ಸಂರಕ್ಷಣೆ ಬಗ್ಗೆ ಬಹಳ ಮಾತಾಡುವ ನಾವು ಕಲಿಯಲಿಕ್ಕಿದೆ.