ಅಧ್ಯಾಯ ನಾಲ್ಕು
[ಡೇವಿಡ್ ಕಾಪರ್ಫೀಲ್ಡ್‌ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್ ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಆರನೇ ಕಂತು

ನಾನು ನನ್ನ ಕೋಣೆಗೆ ತಲಪುವವರೆಗೂ ನಾಯಿ ಬೊಗಳುತ್ತಲೇ ಇತ್ತು. ಕೋಣೆಯಲ್ಲಿ ಒಬ್ಬಂಟಿಗನಾಗಿ ಕುಳಿತನಂತರ ನನ್ನ ದುಃಖವನ್ನೂ ಕೋಣೆಯೊಳಗಿನ ವಸ್ತುಗಳೆಲ್ಲವನ್ನೂ ವಿಚಾರ ದೃಷ್ಟಿಯಿಂದ ನೋಡತೊಡಗಿದೆ. ನನಗಾಗಿ ಕೋಣೆಯೊಳಗೆ ಇಡಲಾಗಿದ್ದ ವಸ್ತುಗಳೆಲ್ಲ ಹಳೆಯವೂ, ರೂಪವಿಲ್ಲದವೂ ಆಗಿದ್ದುವು. ಈ ದುಃಖದ ಹಿನ್ನೆಲೆಯಲ್ಲೇ ಸದ್ಯ ಬಿಟ್ಟುಬಂದಿದ್ದ ಯಾರ್ಮತ್ತೂ ಅಲ್ಲಿನ ಹಿಂದಿನ ಸುಖ ಸಂತೋಷದ ದಿನಗಳೂ ನಿಂತಿದ್ದುವು. ನನ್ನ ಪ್ರೀತಿಯ ಎಮಿಲಿ ನನ್ನೆದುರೇ ಸ್ಫುರದ್ರೂಪದಿಂದ ನಿಂತಿರುವಂತೆ ತೋರಿದಳು. ಎಮಿಲಿಯ ಜತೆಗೆ ನನ್ನ ಅಳುವೂ ಮತ್ತೊಬ್ಬ ಜತೆಗಾರನಂತೇ ಭಾಸವಾಗುತ್ತಿತ್ತು. ಕೊನೆಗೆ ಅಳುವುದೇ ನನ್ನ ಸ್ವಭಾವವೆಂದೂ ತೋರಿತು. ಹೀಗೆ ಅಳುತ್ತಾ, ಬಚ್ಚಿ, ಬೆಂಡಾಗಿ ಮಲಗಿ ನಿದ್ರಿಸಿದೆ. ಹೀಗೆ ಎಷ್ಟು ಹೊತ್ತು ನಿದ್ರಿಸಿದೆನೆಂಬ ನೆನಪು ನನಗಿಲ್ಲ. ಈ ನಿದ್ರೆಯಲ್ಲಿದ್ದಾಗಲೇ ತಾಯಿಯೂ ಪೆಗಟಿಯೂ ಬಂದು ನನ್ನನ್ನು ಮೆಲ್ಲಗೆ ಎಬ್ಬಿಸಿದರು. ನಾನು ತಾಯಿಯನ್ನು ಕುರಿತು ಸ್ವಲ್ಪ ಸಿಟ್ಟಿನಿಂದಲೇ ಇದ್ದೆನು. ತನ್ನ ಮಧುಮಾಸದ ಮಧ್ಯವೇ ತನ್ನ ಪ್ರೇಮದ ಪತಿ ಮಿ. ಮರ್ಡ್‌ಸ್ಟನ್ನರ ವಿರೋಧವಾಗಿ ನನ್ನನ್ನು ಪೆಗಟಿ ಹುರಿದುಂಬಿಸಬಾರದಿತ್ತೆಂದು ತಾಯಿ ಪೆಗಟಿಯನ್ನು ಬೈದಳು. ಪೆಗಟಿಯು ತನ್ನ ನಿರ್ದುಷ್ಟ ವರ್ತನೆಯನ್ನು ಮನಬಿಚ್ಚಿ ವಿವರಿಸತೊಡಗಿದಳು. ತಾಯಿಯು ನನ್ನನ್ನು ಸಂತೈಸತೊಡಗಿದಳು. ನಾನು ಸ್ವಲ್ಪ ಸ್ವಲ್ಪ ಅಳುತ್ತ ತಾಯಿಯ ಸಮೀಪಕ್ಕೆ ಹೋಗಿ ಕುಳಿತೆನು. ನಾನು ಹೀಗೆ ಕುಳಿತು ತಾಯಿಯನ್ನು ಮುಟ್ಟುವಷ್ಟರಲ್ಲಿ ಒಂದು ಅಪರಿಚಿತ ಕೈ ನನ್ನ ಹೆಗಲ ಮೇಲೆ ಬಂದಿತು. ನಾನು ಅಳುವನ್ನು ನಿಲ್ಲಿಸುತ್ತಿದ್ದಾಗ ಮಿ. ಮರ್ಡ್‍ಸ್ಟನ್ನರಂದರು –
“ಕ್ಲೇರಾ, ಪ್ರಿಯಳೇ, ಮನಸ್ಸನ್ನು ಹಿಡಿತದಲ್ಲಿಡು – ತಪ್ಪು ಪ್ರೇಮ, ಅತಿಪ್ರೇಮದಿಂದ ಬಾಲಕನನ್ನು ಕೆಡಿಸಬೇಡ.”
ನಾನು ದಾರಿತಪ್ಪಿ ನಡೆದಿರುವುದಾಗಿ ತಾಯಿ ಈ ಮಾತುಗಳಿಗೆ ಉತ್ತರವಾಗಿ ಹೇಳಿಕೊಂಡಳು. ಆ ಕಠಿಣ ಮನಸ್ಸಿನ ಮರ್ಡ್‌ಸ್ಟನ್ನರ ಕೈಯಲ್ಲಿ ಮನೋಧಾರ್ಢ್ಯವಿಲ್ಲದ, ಮೃದು ಮನಸ್ಸಿನ ನನ್ನ ತಾಯಿ, ಮರ್ಡ್‍ಸ್ಟನ್ನರು ತಿದ್ದಿ ಸರಿಪಡಿಸಲು ನಿಂತಿದ್ದ ಒಂದು ಮಯಣದ ಮೂರ್ತಿಯೇ ಆಗಿದ್ದಳು. ತಾಯಿಯ ಬುದ್ಧಿ, ಮನಸ್ಸೆಲ್ಲ ಮರ್ಡ್‍ಸ್ಟನ್ನರ ಮುಷ್ಟಿಯ ಹಿಡಿತದಲ್ಲಿದ್ದುವು.

ಮಿ. ಮರ್ಡ್‌ಸ್ಟನ್ನರು ತಾಯಿಯನ್ನು ಹೊರಗೆ ಕಳುಹಿಸಿದರು; ಅನಂತರ ಪೆಗಟಿಯನ್ನು ನೋಡಿ –
“ಈಗ ಅವಳು ಮಿಸೆಸ್ ಡೇವಿಡ್ ಕಾಪರ್ ಫೀಲ್ಡ್ ಅಲ್ಲ – ಈಗವಳು ಮಿಸೆಸ್ ಮರ್ಡ್‍ಸ್ಟನ್, ತಿಳಿಯಿತೇ” ಅಂದರು. ಮತ್ತು ಪೆಗಟಿಯನ್ನು ಕೋಣೆಯಿಂದ ಹೊರಗೆ ಕಳುಹಿಸಿದರು. ಅನಂತರ ನನ್ನನ್ನು ನೋಡಿ ನಾನು ಮುಖ ತೊಳೆದುಬರುವಂತೆ ಆಜ್ಞಾಪಿಸಿದರು. ನಾನು ಕಣ್ಣೀರು ಸುರಿಸಿ ಮುಖ ತೊಳೆಯಬೇಕಾದಂತೆ ಆಗಿರುವೆನೆಂದು ಒಪ್ಪಲು ತಯಾರಿರಲಿಲ್ಲ. ಸ್ವಲ್ಪ ವಿರೋಧಿಸುತ್ತಾ ಮುಖವನ್ನು ತೊಳೆದು ಬಂದೆ. ಅನಂತರ ಮಿ. ಮರ್ಡ್‍ಸ್ಟನ್ನರು ಕೇಳಿದರು –
“ಒಂದು ಕುದುರೆ ನಾನು ಹೇಳಿದಂತೆ ನಡೆಯದಿದ್ದರೆ ನಾನೇನು ಮಾಡುವೆನು ಗೊತ್ತಿದೆಯೇ?”
“ಇಲ್ಲ.”
“ಬಡಿದು ಬಗ್ಗಿಸುವೆನು – ಅದರ ಮೈ ರಕ್ತ ಸುರಿದರೂ ಚಿಂತೆಯಿಲ್ಲ. ನನ್ನ ಇಚ್ಛೆಯಂತೆ ಅದು ನಡೆಯತಕ್ಕದ್ದೇ ಸರಿ, ತಿಳಿಯಿತೇ – ಈ ವಿಧದ ಅಭಯವನ್ನು ಕೊಡುತ್ತಾ ಮಿ. ಮರ್ಡ್‍ಸ್ಟನ್ನರು ನನ್ನ ಕೈ ಹಿಡಿದು ಕರೆದುಕೊಂಡು ಹೋಗಿ ತಾಯಿಯ ಬಳಿ ಬಿಟ್ಟು –
“ನಮ್ಮ ಮಧುಮಾಸದಲ್ಲೇ ಇಂಥ ದುಷ್ಟರಿಂದ ನಾವು ಬಾಧಿಸಲ್ಪಡಬಾರದು. ಇವನನ್ನು ಸರಿದಾರಿಗೆ ತರೋಣ” ಅಂದರು.
ಎಳೆಯ ವಯಸ್ಸಿನ ನನ್ನ ಮೇಲೆ ಆ ಕಠಿಣ ವಾಕ್ಪ್ರಯೋಗ, ಅಂಥ ಭಯೋತ್ಪಾದನೆ ನಡೆಸದಿರುತ್ತಿದ್ದರೆ – ಇವುಗಳ ಬದಲು ಮೃದುಮಾತು, ಸೌಮ್ಯ ವರ್ತನೆಗಳನ್ನು ಸ್ವಲ್ಪವಾದರೂ ತೋರಿಸಿದ್ದರೆ ನನ್ನ ಮುಂದಿನ ಜೀವನವೃತ್ತಾಂತವೇ ಬೇರೆಯಾಗಬಹುದಿತ್ತು. ಸರ್ವಸಾಧಾರಣವಾಗಿ ಚಿಕ್ಕವರನ್ನು ಸನ್ಮಾರ್ಗಕ್ಕೆ ಒಯ್ಯುವುದೆಂಬ ಕಾರ್ಯವೇ ಅಗತ್ಯವಿಲ್ಲ – ಅವರ ನಿಷ್ಕಲ್ಮಷ ಹೃದಯದ ಬಲವೇ ಸನ್ಮಾರ್ಗದ ಕಡೆಗೆ ಇರುವುದು, ಸ್ವಾಭಾವಿಕವಾದ ಮಾರ್ಗವನ್ನನುಸರಿಸದೆ ಎಷ್ಟೊಂದು ಜನ ಹಿರಿಯರು ದುಷ್ಟ, ಅಥವಾ ಕ್ರೂರ ವಚನಗಳನ್ನಾಡಿ ಬಾಲಕರ ಭವಿಷ್ಯವನ್ನೇ ಹಾಳು ಮಾಡುತ್ತಾರೆ!

ಈ ದಿನವೇ ಮಿ. ಮರ್ಡ್‍ಸ್ಟನ್ನರ ತಂಗಿಯೂ ಅವಳ ಆಗಮನವನ್ನು ಮಿ. ಮರ್ಡ್‍ಸ್ಟನ್ನರು ನಿರೀಕ್ಷಿಸುತ್ತಿದ್ದಂತೆ, ನಮ್ಮ ಮನೆಗೆ ತಕ್ಕ ಸಮಯದಲ್ಲೇ ಬಂದಳು. ಈ ಅಣ್ಣ ತಂಗಿಯರ ವಿಷಯ ಆಗ ನನಗೆ ಏನೂ ಗೊತ್ತಿರದಿದ್ದರೂ ಕೆಲವು ಕಾಲಾನಂತರ ಗೊತ್ತಾಯಿತು. ಆ ವಿಷಯ ಇಲ್ಲಿ ಹೇಳುವೆನು. ಅಣ್ಣ ತಂಗಿಯರಿಗೆ ಒಂದು ವೈನ್ ಕಂಪೆನಿಯಲ್ಲಿ ತುಂಬಾ ಪಾಲುಗಳಿದ್ದುವು. ತಂಗಿಗೆ ಮದುವೆಯಾಗಿರಲಿಲ್ಲ – ಮತ್ತು ಮದುವೆಯಾಗುವ ಆಲೋಚನೆಯೂ ಇರಲಿಲ್ಲ. ಈ ಕಾರಣದಿಂದ ಅವಳ ಸ್ವಂತ ಹಣವೂ ತನಗೆ ಸಿಕ್ಕಬಹುದೆಂದು ಸಹ ಮಿ.ಮರ್ಡ್‍ಸ್ಟನ್ನರು ತಂಗಿಯ ಸಂಗಡ ಬಹು ವಿನಯ, ಪ್ರೀತಿ, ಗೌರವಗಳಿಂದ ನಡೆಯುತ್ತಿದ್ದರು. ಅಣ್ಣ ತಂಗಿಯರ ರೂಪ, ಸ್ವರ, ನಡೆ, ನುಡಿಗಳೆಲ್ಲ ಬಹುವಾಗಿ ಹೋಲುತ್ತಿದ್ದುವು. ತಂಗಿ ಬರುವಾಗ್ಗೆ ಬೀಗಮುದ್ರೆಯ ಬಂದೋಬಸ್ತುಗಳಿದ್ದ ಪೆಟ್ಟಿಗೆಗಳನ್ನೂ, ಉಕ್ಕಿನ ಬಾಯಿಯಿದ್ದ ಹಣದ ಚೀಲಗಳನ್ನೂ ತಂದಿದ್ದಳು. ಅವಳ ಪೆಟ್ಟಿಗೆಗಳು, ಚೀಲಗಳಿದ್ದ ಸರಪಣಿಗಳು, ಕೈಯ್ಯಲ್ಲಿದ್ದ ಬೀಗದ ಕೈ ಗೊಂಚಲು – ಇವೆಲ್ಲವೂ ಉಕ್ಕಿನವೇ ಆಗಿದ್ದುವು. ಹೆಂಗುಸು ಅಣ್ಣನಷ್ಟೇ ದೀರ್ಘಕಾಯಳಾಗಿದ್ದಳು. ಅವಳು ಹೆಂಗುಸಾಗಿದ್ದ ಒಂದೇ ಕಾರಣದಿಂದ ಅವಳಿಗೆ ಸಮಾಜವೂ, ಸ್ವಭಾವವೂ ಮೀಸೆಗಳನ್ನು ಹೊರುವ ಗೌರವವನ್ನು ಕೊಟ್ಟಿರಲಿಲ್ಲ. ಆದರೆ, ಅಣ್ಣನಿಂದ ನಮ್ಮ ಮನೆಯ ಯಜಮಾನಿಕೆಯನ್ನೂ ಪಡೆದ ಈ ಹೆಂಗುಸು ತನ್ನ ಮೀಸೆಯ ಭಾಗದ ಕೂದಲನ್ನು, ಮೊದಲೇ ಇದ್ದ ಹುಬ್ಬಿಗೆ ಸೇರಿಸಿಕೊಂಡು, ಬಹು ದಪ್ಪ ಹುಬ್ಬುಗಳಿಂದ, ಮನೆಯನ್ನೂ, ಮನೆಯ ಜನ ಸಮಸ್ತರನ್ನೂ ಹೆದರಿಸಿ ನಡೆಸಿಬರುವ ಒಂದು ಉಕ್ಕಿನ ಮೂರ್ತಿಯೇ ಆಗಿದ್ದಳು. ಅಣ್ಣ ತಂಗಿಯ ಪರಿಚಯವನ್ನು – ನಮಗೆ ಅಗತ್ಯ ತೋರದಿದ್ದರೂ, ಶಿಸ್ತು ಸ್ಥಾಪನೆಗಾಗಿ – ಮಾಡಿಕೊಟ್ಟರು. ಅಣ್ಣ ತಂಗಿಯರ ಈ ಉಕ್ಕಿನಗುಂಡು, ಉಕ್ಕಿನ ಕಲ್ಲುಗಳ ಮಧ್ಯೆ ಮೃದುವಾದ ನನ್ನ ತಾಯಿ, – ಆ ಉಕ್ಕಿನ ಹೆಂಗುಸು ಮನೆಗೆ ಕಾಲಿಟ್ಟ ಕ್ಷಣದಿಂದಲೇ – ಸಿಕ್ಕಿ, ಪುಡಿಯಾಗಿ, ಅವರು ಇಚ್ಛೆಪಟ್ಟ ರೂಪವನ್ನು ಪಡೆಯತೊಡಗಿದಳು.

ನಮ್ಮ ಮನೆಯ ಅಧಿಕಾರವನ್ನು ಆ ಉಕ್ಕಿನ ಹೆಂಗುಸು ಪಡೆದ ಕ್ರಮ ಒಂದು ಆಶ್ಚರ್ಯತರದ್ದು. ತನ್ನಣ್ಣನಿಂದ ಪರಿಚಯ ಮಾಡಿಸಿಕೊಂಡನಂತರ ಮಿಸ್ ಮರ್ಡ್‍ಸ್ಟನ್ನಳು ನನ್ನ ತಾಯಿಯನ್ನು ಉದ್ದೇಶಿಸಿ –

“ಕ್ಲೇರಾ, ನೀನು ಪೂರಾ ಚಿಕ್ಕವಳು – ಗೃಹಕೃತ್ಯದ ಅನುಭವವಿಲ್ಲದವಳು. ನನಗೆ ಸಾಧ್ಯವಿರುವಷ್ಟೆಲ್ಲ ಸಹಕಾರವನ್ನು ಈ ಮನೆಯಲ್ಲಿ ನಾನು ಪತಿ-ಪತ್ನಿಯರಿಬ್ಬರಿಗೂ ಕೊಟ್ಟು ಬರುವೆನು – ಅದು ನನ್ನ ಪಾಲಿನ ಕರ್ತವ್ಯ. ಅದಕ್ಕಾಗಿ ನೀನು ನನ್ನನ್ನು ವಂದಿಸುವ ಅಗತ್ಯವಿಲ್ಲ. ನಿನ್ನಲ್ಲಿರುವ ಬೀಗದ ಕೈಗಳನ್ನೆಲ್ಲಾ ಇತ್ತ ಕೊಡು. ನಿನ್ನ ಮೃದುಮನಸ್ಸು ಇಂಥ ಜವಾಬ್ದಾರಿಯಿಂದ ವಿರಹಿತವಾಗಿ, ಹಗುರವಾಗಿ, ನೀನು ಅಣ್ಣನಲ್ಲಿ ಅನುರಕ್ತಳಾಗಿರು,” ಅಂದಳು.
ಉಪಾಯ ತೋರದೆ ತಾಯಿ ಬೀಗದ ಕೈಗಳನ್ನೆಲ್ಲ ಮಿಸ್ ಮರ್ಡ್‍ಸ್ಟನ್ನಳಿಗೆ ಕೊಟ್ಟಳು. ಅವಳ ಉಕ್ಕಿನ ಭಂಡಾರ ಆ ಮಟ್ಟಿಗೆ ದೊಡ್ಡದೂ ಆಯಿತು. ಈ ವರ್ತನೆ ಮೇಲಿಂದ ಮೇಲೆ ಗ್ರಹಿಸಿದ್ದಾದರೆ ಬಹು ಸಾಧಾರಣದ್ದೆಂದು ತೋರಿದರೂ, ವಸ್ತು ಸ್ಥಿತಿಯಲ್ಲಿ ಬಹು ಕ್ರೂರತರದ್ದೇ ಆಗಿತ್ತು. ನನ್ನ ತಾಯಿಗೆ ಇದರಿಂದ ಕೇವಲ ಎರಡನೆ – ಅಥವಾ – ಕೀಳುಸ್ಥಾನ ಕೊಡಲಾಯಿತು. ಈ ವರ್ತನೆಯ ಅರ್ಥವನ್ನು ತಾಯಿ ಅರಿತು ಅತ್ತಳು. ಈ ರೀತಿ ಅಂದಿನಿಂದ ತಾಯಿ, ಮಕ್ಕಳಾದ – ಆವರೆಗೆ ಮನೆಯ ಯಜಮಾನರಾದ – ನಾವಿಬ್ಬರೂ ಆ ಮನೆಯ ಉಪಕರಣಗಳು ಮಾತ್ರ ಆಗಿಬಿಟ್ಟೆವು.

ಬಾಲ್ಯದಿಂದಲೂ ನಾನು ಆ ಮನೆಯಲ್ಲಿ ಕಂಡು ಬರುತ್ತಿದ್ದ ದಿನವಹಿಯ ಕ್ರಮಗಳೆಲ್ಲ ತಪ್ಪಿದುವು. ಮನೆಯ ಸಾಮಾನುಗಳೆಲ್ಲಾ ಹೊಸ ಕ್ರಮದಲ್ಲಿ ಇಡಲಾದುವು. ನಮ್ಮ ಪೈಕಿ ಯಾರೋ ಆ ಮನೆಯಲ್ಲಿ ಒಬ್ಬ ಕೆಲಸದವನನ್ನು ಅಡಗಿಸಿಟ್ಟು ಕೆಲಸ ಮಾಡಿಸಿಕೊಳ್ಳುತ್ತಿದ್ದೇವೆಂಬ ಸಂಶಯದಿಂದ ಮಿಸ್ ಮರ್ಡ್‍ಸ್ಟನ್ನಳು ಆ ಕೆಲಸದ ಗಂಡಸನ್ನು ಸದಾ ಹುಡುಕುತ್ತಿರುವಂತೆ ಎಚ್ಚರದಲ್ಲಿರುತ್ತಿದ್ದಳು. ತಾನು ಗಂಡು ಸ್ವಭಾವದವಳಾಗಿದ್ದುದರಿಂದ ಈ ವಿಷಯದಲ್ಲಿ ಬಹು ಚಾತುರ್ಯವನ್ನರಿತವಳೆಂದು ಗ್ರಹಿಸಿಕೊಂಡು ಹಠಾತ್ತಾಗಿ ಮನೆಯ ಕೋಣೆಗಳನ್ನೂ, ಕಪಾಟುಗಳನ್ನು ಸಂದರ್ಶಿಸುವುದೂ, ಬಾಗಿಲನ್ನು ಹಠಾತ್ತಾಗಿ ತೆರೆದು ನೋಡುವುದೂ, ಇತ್ಯಾದಿ ತನಿಕೆಯನ್ನು ಆಗಾಗ ಮಾಡುತ್ತಿದ್ದಳು. ಮಿಸ್. ಮರ್ಡ್‍ಸ್ಟನ್ನಳು ನಿದ್ರಿಸುವಾಗ ಒಂದು ಕಣ್ಣನ್ನು ಮನೆಕಾವಲಿಗಾಗಿ ತೆರೆದಿಟ್ಟೇ ನಿದ್ರಿಸುವಳು ಎಂದು ಪೆಗಟಿ ನನಗೆ ಗುಟ್ಟಾಗಿ ತಿಳಿಸಿದ್ದಳು. ನಾನು ಆ ರೀತಿ ಒಂದೇ ಕಣ್ಣು ಮುಚ್ಚಿ ನಿದ್ರೆ ಮಾಡಲು ಪ್ರಯತ್ನಿಸಿ ಸೋತು, ಆ ಕಾರಣದಿಂದ ಮಿಸ್ ಮರ್ಡ್‍ಸ್ಟನ್ನಳ ಆ ವಿಷಯದ ಶಕ್ತಿಗಾಗಿ ಮತ್ತಷ್ಟು ಹೆದರಿಕೊಂಡೆನು.

ಅಣ್ಣತಂಗಿಯರ ಜೀವನಮಂತ್ರವೇ ಶಿಸ್ತು ಆಗಿತ್ತು. ಈ ತತ್ವಾನುಷ್ಠಾನದಲ್ಲಿ ಮನುಷ್ಯ, ಮೃಗ, ಪಕ್ಷಿಗಳೆಲ್ಲ ಅವನ ಅಧಿಕಾರಕ್ಕೆ – ಶಿಸ್ತಿಗೆ – ಬಗ್ಗಲೇಬೇಕಾಗಿತ್ತು. ನನ್ನ ತಾಯಿ ಎಳೆಯ ಪ್ರಾಯದವಳೂ, ಸುಂದರಿಯೂ ಆಗಿದ್ದುದರಿಂದ ಅವಳಿಗೆ ನಿಯಮ – ಶಿಸ್ತುಗಳ ಅಗತ್ಯತೆ ಇತರರೆಲ್ಲರಿಗಿಂತ ಹೆಚ್ಚೇ ಆಗಿತ್ತು. ಈ ಗುರಿಯಿಂದ ನನ್ನ ತಾಯಿಯನ್ನು ಅವರ ಶಿಸ್ತುಗಳಿಗೆ ಒಳಪಡಿಸಿದರು. ಕಪ್ಪು ಪ್ರಧಾನವಾದ ಮಿ. ಮರ್ಡ್‍ಸ್ಟನ್ನರ ಮುಖ ವರ್ಚಸ್ಸಿನಂತೆಯಾ ಅವರ ಶಿಸ್ತು, ನಿಯಮ, ನಿಷ್ಠೆ, ನಡೆ, ನುಡಿಗಳೆಲ್ಲ ಕಪ್ಪು ಪ್ರಧಾನವಾಗಿ – ಮಾರಕವಾಗಿ – ಭಯಂಕರವಾಗಿ ತೋರುತ್ತಿದ್ದುವು. ಇಗರ್ಜಿಗೆ ಹೋಗುವುದೆಂದರೆ ಮೊದಲು ನಮಗೆ ಒಂದು ಸಂತೋಷದ ಮೆರವಣಿಗೆಯೇ ಆಗಿತ್ತು. ಆದರೆ ಇಂದು ನಾವು ಕೈದಿಗಳಂತೆ ದುಃಖದಿಂದ, ಅಣ್ಣ ತಂಗಿಯರ ಎಡೆಬಿಡದ ಕಾವಲಿನಿಂದ, ಇಗರ್ಜಿಗೆ ಹೋಗಿ ಬರಬೇಕಾಗಿದ್ದಿತು. ಇಗರ್ಜಿಗೆ ಹೋಗುವಾಗ ನನ್ನ ನಡಿಗೆ ಸರಿಯಾಗದೆ ರಸ್ತೆಯ ಅತ್ತಿತ್ತ ಸರಿದಾಗ, ಆ ತಂಗಿ, ನನ್ನನ್ನು ಕೈಯಲ್ಲಿ ಮುಟ್ಟಿ ಹೊಲಸು ಮಾಡಿಕೊಳ್ಳದಂತೆ, ಅವಳ ಕೈಯ್ಯಲ್ಲಿರುತ್ತಿದ್ದ ಬೈಬಲ್ಲಿನ ಮೂಲೆಗಳಿಂದ ಇರಿದು ಸರಿಮಾಡುತ್ತಿದ್ದಳು. ಇಗರ್ಜಿಯಿಂದ ವಾಪಾಸು ಬರುವಾಗಲೂ ಈ ಶಿಸ್ತು ಸಂಪೂರ್ಣ ಜಾರಿಯಲ್ಲಿರುತ್ತಿತ್ತು. ತನ್ನ ದೇಹ ಕಪ್ಪು ಬಣ್ಣ ಪ್ರಧಾನವಾಗಿದ್ದುದರ ಜತೆಗೆ ಆ ತಂಗಿ ಇಗರ್ಜಿಗೆ ಹೋಗುವಾಗ ಹೆಣಕ್ಕೆ ಮುಚ್ಚುವಂಥ ಕಪ್ಪು ಬಟ್ಟೆಯ ಜೋಲು ಕುಪ್ಪಸವನ್ನು ತೊಟ್ಟು, ಸರ್ವತ್ರ ಅಧಿಕಾರವನ್ನು ಬೀರುತ್ತಿದ್ದಳು.
ಇಗರ್ಜಿಯಿಂದ ಹಿಂತಿರುಗುವ ನಮ್ಮ ಕೂಟವನ್ನು ನೆರೆ ಕರೆಯವರು ಕುತೂಹಲದಿಂದಲೂ – ಸ್ವಲ್ಪ ದುಃಖದಿಂದಲೂ – ನೋಡುತ್ತಿದ್ದರು. ನಮ್ಮನ್ನು ನೋಡಿ ಅವರೊಳಗೇ ಏನೇನೋ ಪಿಸುಮಾತುಗಳನ್ನಾಡಿಕೊಳ್ಳುತ್ತಿದ್ದರು. ನನ್ನ ತಾಯಿಯ ಸುಂದರವಾದ ಮುಖ ಈಗ ಬಾಡಿರುತ್ತಿತ್ತು. ನಡೆಯುವಾಗ ಬಗ್ಗಿ ನಡೆಯುತ್ತಿದ್ದಳು. ಅಶಕ್ತ – ದುಃಖಪೂರಿತ ನಡೆ, ಎಡೆಬಿಡದೆ ಹಿಂಬಾಲಿಸುತ್ತಿದ್ದ ಶಿಸ್ತು ಇವುಗಳ ಕುರಿತೇ ಆ ಪಿಸುಮಾತು ನಡೆಯುತ್ತಿರಬೇಕೆಂದು ನಾನು ಊಹಿಸುತ್ತಿದ್ದೆ.

ನನ್ನನ್ನು ವಿದ್ಯಾಭ್ಯಾಸಕ್ಕಾಗಿ ದೂರದ ಒಂದು ಪಾಠಶಾಲೆಗೆ ಕಳುಹಿಸಬೇಕೆಂದು ಅಣ್ಣ ತಂಗಿಯರ ಅಭಿಪ್ರಾಯವಾಗಿತ್ತು. ಆದರೆ ತಾಯಿಯ ಬೇಡಿಕೆಗಳಿಂದ ನಾನು ಮನೆಯಲ್ಲೇ ತಾಯಿಯಿಂದ ಪಾಠ ಕಲಿಯುತ್ತಿದ್ದೆ. ತಾಯಿಯ ಎರಡನೆ ಮದುವೆಯ ಮೊದಲು ನಾನು ಪಾಠ ಕಲಿಯುತ್ತಿದ್ದ ಸಮಯದ ಸಂತೋಷದ ಎದುರು ಇಂದು ಮಿಸ್ ಮರ್ಡ್‍ಸ್ಟನ್ನಳ ಸಮಕ್ಷಮದಲ್ಲಿ – ತಾಯಿಯೇ ಹೇಳಿಕೊಡುವುದಾಗಿದ್ದರೂ – ಕಲಿಯುವಾಗ ನನಗೆ ಹಿಂಸೆಯೇ ಆಗಿ ಸಮಯ ಭಾರವೆನಿಸುತ್ತಿತ್ತು. ಆ ಹಿಂದಿನ ದಿನಗಳಲ್ಲಿ ಒಂದು ಪಾಠ ಮುಗಿದು, ಮತ್ತೊಂದಕ್ಕಾಗಿ ದಪ್ಪದ ಪುಟವನ್ನು ಮಗುಚುವಾಗ ನನಗಾಗುತ್ತಿದ್ದ ಆನಂದ- ಹೆಮ್ಮೆ – ಅಷ್ಟಿಷ್ಟಲ್ಲ. Q, O, S ಅಕ್ಷರಗಳ ಸುಂದರ ಸುಲಭ ಆಕಾರ, ಅಕ್ಷರಗಳ ಜತೆಯಲ್ಲಿ ಅಚ್ಚಾಗಿರುತ್ತಿದ್ದ ಬಣ್ಣ ಬಣ್ಣಗಳ ಅಲಂಕಾರ, ಮೊಸಳೆ ಪುಸ್ತಕದಂಥ ಸುಂದರ ಕಥೆಗಳ ದಪ್ಪ ಪುಟಗಳ ಪುಸ್ತಕ, ಎಲ್ಲವೂ ನನ್ನ ಮೆಚ್ಚಿನ, ಸಂತೋಷದ ವಿಷಯಗಳೂ, ವಸ್ತುಗಳೂ ಆಗಿದ್ದುವು. ನನ್ನ ಭವಿಷ್ಯ ಎಂದೂ ಉತ್ತಮವಾಗುವ ಲಕ್ಷಣಗಳು ತೋರಿ ಬರುತ್ತಿಲ್ಲವೆಂದೆನ್ನುತ್ತಾ, ನನ್ನ ಶಕ್ತಿಯಲ್ಲೂ, ಭವಿಷ್ಯದಲ್ಲೂ ಸಂಪೂರ್ಣ ಸಂಶಯವೇ ಇದೆಯೆಂದು ಸದಾ ಕಾದು ನೋಡುತ್ತಿದ್ದ ಮಿಸ್ ಮರ್ಡ್‍ಸ್ಟನ್ನಳ ಎದುರು ನಾನು ಪಾಠ ಕಲಿಯುವಾಗ ಆಗಿಂದಾಗ್ಗೆ ತಪ್ಪಿ ತಬ್ಬಿಬ್ಬಾಗುತ್ತಿದ್ದೆ. ಈ ಕಾಲದ ನನ್ನ ಒಂದು ಕಠೋರಾನುಭವವನ್ನು ಮಾತ್ರ ಇಲ್ಲಿ ಹೇಳುತ್ತೇನೆ.

ಪಾಠಕ್ಕಾಗಿ ನನ್ನ ತಾಯಿಯಿದ್ದ ಕೋಣೆಗೆ ಎಂದಿನಂತೆ ಒಂದು ದಿನ ಬೆಳಗ್ಗೆ ಹೋದೆ. ಅಲ್ಲಿ ಮಿ. ಮತ್ತು ಮಿಸ್ ಮರ್ಡ್‌ಸ್ಟನ್ನರಿದ್ದರು. ತಾಯಿ ನನ್ನ ಪಾಠವನ್ನು ಪ್ರಾರಂಭಿಸಿದಳು. ತಾನೊಂದು ಪುಸ್ತಕವನ್ನು ಓದುತ್ತಿದ್ದವರಂತೆ ಪುಸ್ತಕವನ್ನು ಹಿಡಿದುಕೊಂಡು ಕುಳಿತು ಮಿ. ಮರ್ಡ್‍ಸ್ಟನ್ನರು ನನ್ನನ್ನು ಓರೆಯಿಂದ ನೋಡುತ್ತಿದ್ದರು. ತಂಗಿ ಉಕ್ಕಿನ ಮಣಿಗಳನ್ನು ಜಪಸರಕ್ಕೆ ಪೋಣಿಸುತ್ತಾ ಕುಳಿತಿದ್ದಳು. ನಾನು ಪಾಠಗಳನ್ನೆಲ್ಲ ಕಲಿತೇ ಬಂದಿದ್ದೆ. ಆದರೆ ಇಂಥ ಸನ್ನಿವೇಶದಲ್ಲಿ ಕಲಿತದ್ದನ್ನು ಹೇಳಲು ಪ್ರಾರಂಭಿಸಿದೊಡನೆ ಅಣ್ಣತಂಗಿಯರನ್ನು ಕಂಡು, ಉಕ್ಕಿನ ಮಣಿಗಳು ಸರಿಗೆಯಲ್ಲಿ ಜಾರಿದಂತೆ, ಕಲಿತದ್ದು ಜಾರಲು ಪ್ರಾರಂಭವಾಯಿತು. ನಾನು ಸೋಲಬಾರದೆಂದು ತಾಯಿ ಪುಸ್ತಕವನ್ನು ಓರೆಯಾಗಿ ಹಿಡಿದು ತೋರಿಸಿದಳು. ಅದನ್ನು ಅಣ್ಣತಂಗಿಯರಿಬ್ಬರೂ ಕಂಡರು. ಅವರು ಅದನ್ನು ಕಂಡರೆಂದು ತಾಯಿಗೆ ತಿಳಿದೊಡನೆ ಅವಳ ಮುಖ ಗಾಬರಿಯಿಂದ ಕೆಂಪಾಯಿತು. ತಾಯಿಯ ಮುಖವನ್ನು ನೋಡಿದ ಕೂಡಲೇ ನಾನು ಕಲಿತದ್ದೆಲ್ಲಾ ಸಂಪೂರ್ಣ ಅದೃಶ್ಯವೇ ಆಗಿಹೋಯಿತು. ನಾನು ಏನೇನೋ ಒದರಿದೆ; ಎಲ್ಲರೂ ಗದರಿಸಿದರು. ತಾಯಿ ತುಟಿಗಳನ್ನಲ್ಲಾಡಿಸಿ ಪಾಠ ಹೇಳಿಕೊಟ್ಟು ನನ್ನನ್ನುಳಿಸಲು ಪ್ರಯತ್ನಿಸಿದಳು.

“ಕ್ಲೇರಾ, ಶಿಸ್ತುಭಂಗ ಮಾಡಬೇಡ – ಎಲ್ಲದಕ್ಕೂ ಕ್ರಮವಿರಬೇಕು ಅಂದರು ಮಿ. ಮರ್ಡ್‍ಸ್ಟನ್ನರು.
“ಅವನಂತೂ ಮಡ್ಡಿ, ಮೂರ್ಖ. ನೀನೂ ಅವನ ಹಾಗೆ ಆಗಬೇಡ” ಅಂದಳು ಮಿಸ್ ಮರ್ಡ್‍ಸ್ಟನ್ನಳು.
ತಾಯಿಗೆ ನನ್ನನ್ನು ಕುರಿತು ಯಾವ ಹಿತಚಿಂತನೆಯೂ, ಸಂಬಂಧವೂ ಇಲ್ಲದಿದ್ದಂತೆ ಅಣ್ಣ ತಂಗಿಯರು ಮಾತಾಡಿದರು. ನಾನು ಆ ಕೊಠಡಿಗೆ ಹೋದದ್ದೇ ಏತಕ್ಕೆಂಬುದೇ ನನಗೆ ಮರೆತುಹೋಗಿತ್ತು. ಮಿಸ್ ಜೇನ್ ಮರ್ಡ್‍ಸ್ಟನ್ನಳ ಲಂಗ ತಯಾರಿಸಲು ಎಷ್ಟು ಗಜ ಬಟ್ಟೆ ಬೇಕಾಗಬಹುದು, ಮಿ. ಮರ್ಡ್‍ಸ್ಟನ್ನರ ಕ್ಷೌರದವನಿಗೆ ಎಷ್ಟು ಸಂಬಳ ಕೊಡುವರು, ಎಂಬಿತ್ಯಾದಿ ಅನೇಕ ವಿಷಯಗಳು ಮನಸ್ಸಿನಲ್ಲಿ ಮೂಡತೊಡಗಿದವು.

ಮಿ. ಮರ್ಡ್‍ಸ್ಟನ್ನರು ನನ್ನ ಕೈಯನ್ನು ಹಿಡಿದುಕೊಂಡು
“ಈ ಲೆಕ್ಕ ಮಾಡು – ಗ್ಲೌಸ್ಟರಿನ ಡಬ್ಬಿ ಹಾಲಿಗೆ, ಜೋಡು ಡಬ್ಬಿ ಒಂದಕ್ಕೆ ಅರ್ಧ ಶಿಲಿಂಗ್ ಕ್ರಯವಾದರೆ, ನಾನೂರ ಅರವತ್ತೈದು ಒಂಟಿ ಡಬ್ಬಿಗಳಿರುವ ಎರಡು ಸಾವಿರದ ಐನೂರ ಏಳು ಡಬ್ಬಿಗಳ ಪೆಟ್ಟಿಗೆಗಳಿಗೆ ಎಷ್ಟು ಪೌಂಡು, ಎಷ್ಟು ಶಿಲಿಂಗ್, ಎಷ್ಟು ಪೆನ್ಸ್?” ಅಂದರು.
ನನಗದು ಅರ್ಥವಾಗಲಿಲ್ಲ. ನಾನು ಮಾತಾಡದೆ ನಿಂತುಬಿಟ್ಟೆ. ಮಿ. ಮರ್ಡ್‍ಸ್ಟನ್ನರು ನನ್ನ ರಟ್ಟೆ ಹಿಡಿದು ಎಳೆದು ಹೊರಗೆ ಹಾಕಿದರು. ಆ ದಿನ ಮಧ್ಯಾಹ್ನದಲ್ಲಿ ಅದೇ ಗ್ಲೌಸ್ಟರ್ ಹಾಲಿನಲ್ಲಿ ಅದ್ದಿದ್ದ ಬ್ರೆಡ್ ಒಂದು ತುಂಡನ್ನು ಮಾತ್ರ ನನಗೆ ಊಟಕ್ಕಾಗಿ ಕೊಟ್ಟು ನನ್ನ ಮಿದುಳು ಶಕ್ತಿಯನ್ನು ವೃದ್ಧಿಸಲು ಪ್ರಯತ್ನಿಸಿದರು. ನನ್ನ ಎಲ್ಲ ಪಾಠಗಳೂ ಸಾಧಾರಣ ಇದೇ ಕ್ರಮದಲ್ಲಿ ಸಾಗುತ್ತಿದ್ದುವು. ಚಿಕ್ಕ ಬಾಲಕರು ಒಟ್ಟಾಗಿ ಆಡಿದರೆ ಅವರ ಮಿದುಳಿನಲ್ಲೊಂದು ವಿಧದ ವಿಷ ಉತ್ಪನ್ನವಾಗುವುದೆಂದೂ, ಅದೇ ವಿಷದಿಂದ ಕಲಿತ ಪಾಠಗಳನ್ನು ಬಾಲಕರು ಮರೆಯುತ್ತಾರೆ ಮಾತ್ರವಲ್ಲದೆ, ಅವರ ಮಿದುಳಿನ ಶಕ್ತಿಯೇ ಕುಂದುವುದೆಂದೂ ಮರ್ಡ್‍ಸ್ಟನ್ ಸಹೋದರ-ಸಹೋದರಿಯರ ಅಭಿಮತವಾಗಿತ್ತು. ಈ ಕಾರಣದಿಂದ ನನ್ನನ್ನು ಯಾವ ಬಾಲಕರೊಂದಿಗೂ ಸೇರದಂತೆ ಒಂದು ವಿಧದ ಪಹರೆಯಲ್ಲೇ ಇಟ್ಟಿದ್ದರು.
ನಾನೇನಾದರೂ ಸುಮ್ಮಗೆ ಕುಳಿತದ್ದು, ನಿಂತದ್ದು ಕಂಡರೆ
“ಕ್ಲೇರಾ, ಮನುಷ್ಯನಿಗೆ ಕೆಲಸವಿರಬೇಕು; ಕೆಲಸವಿಲ್ಲದ ಮನಸ್ಸು ಬರಡಾಗುವುದು,” ಎಂದು ಹೇಳಿ ಸ್ಲೇಟು, ಪುಸ್ತಕಗಳನ್ನು ಹಿಡಿಸಿ ದಣಿಸುತ್ತಿದ್ದರು. ಈ ಶಿಸ್ತುಗಳೇ ನನ್ನನ್ನು ಒಬ್ಬ ಹಟವಾದಿ – ಹಟಮಾರಿಯನ್ನಾಗಿ ಮಾಡದಿದ್ದುದು ನನ್ನ ಪುಣ್ಯ. ಹಟಮಾರಿಯಾಗದೆ ಉಳಿಯಲೂ ಒಂದು ಕಾರಣವಿತ್ತು. ತಮ್ಮ ಜವಾಬ್ದಾರಿಯನ್ನು ಹಗುರಮಾಡಿಕೊಳ್ಳುವುದೂ – ನನ್ನನ್ನು ಹಿಂಸಿಸುವುದೂ – ಮುಖ್ಯ ಗುರಿಯಾಗಿದ್ದುದರಿಂದ ಮಿ. ಮರ್ಡ್‌ಸ್ಟನ್ನರು ನನ್ನನ್ನು ಓದಲು ಮನೆಯ ಹಿಂಬದಿಗೆ ಅಟ್ಟಿಬಿಡುತ್ತಿದ್ದರು. ಅಲ್ಲಿ ನನಗೊಂದು ವಿಶೇಷತರದ – ಅವರು ಗ್ರಹಿಸದಿದ್ದ – ಅನುಕೂಲವಿತ್ತು. ಈ ಅನುಕೂಲವೇ ನನ್ನನ್ನು ಎಲ್ಲರಂತಾದರೂ ಉಳಿಯಲು ಕಾರಣವಾಗಿರಬೇಕೆಂದು ನನ್ನ ಅಭಿಪ್ರಾಯ.

ಪುಸ್ತಕಗಳು ಮೈಗಳ್ಳರ ಆಶ್ರಯಸ್ಥಾನವೆಂದು ತಿಳಿಯುತ್ತಿದ್ದ ಮರ್ಡ್‍ಸ್ಟನ್ ಅಣ್ಣ-ತಂಗಿಯರು ನನ್ನ ತಂದೆಯವರು ಸಂಗ್ರಹಿಸಿಟ್ಟಿದ್ದ ಎಲ್ಲಾ ಪುಸ್ತಕಗಳನ್ನು ನಾನು ಮಲಗುವ ಕೋಣೆಯ ಹೊರಬದಿ ಹಾಳು ಹರಕು ಮುರುಕು ವಸ್ತುಗಳ ಜತೆಯಲ್ಲಿ ರಾಶಿ ರಾಶಿಯಾಗಿ ಸುರಿದಿದ್ದರು. ಅವುಗಳಲ್ಲಿ ಅರ್ಥವಾಗುವವುಗಳನ್ನೆಲ್ಲ ಚೆನ್ನಾಗಿ ಓದತೊಡಗಿದೆ. ಇಗರ್ಜಿ ಕಾಂಪೌಂಡಿನಲ್ಲಿ ನನ್ನ ಪ್ರಾಯದ ಮಕ್ಕಳು ಆಟವಾಡುತ್ತಿದ್ದಾಗಲೇ ನಾನು ನನಗೆ ರುಚಿಸಿದ ಪುಸ್ತಕಗಳನ್ನು ಅಮೂಲಾಗ್ರವಾಗಿ ಓದಿದೆ. ನಾನು ಓದಿದ ಕಥೆಗಳಲ್ಲಿನ ದುಷ್ಟ ಕಥಾನಾಯಕ- ನಾಯಕಿಯರನ್ನು ನಮ್ಮ ಮನೆಯಲ್ಲಿದ್ದ ಅಣ್ಣ-ತಂಗಿಯರಿಗೆ ಹೋಲಿಸಿಕೊಂಡು ಸಂತೋಷಪಡುತ್ತಿದ್ದೆ. ನನ್ನೆದುರಿನ ಮರ, ಮನೆ, ನೆಲ, ಗಾಳಿ ಬೆಳಕನ್ನು ಕಥೆಗಳ ಭಾವನೆಗೆ ತಕ್ಕಂತೆ ಹೊಂದಿಸಿಕೊಂಡು ಆ ಕಥೆಗಳನ್ನು ಪ್ರತ್ಯಕ್ಷ ಕಂಡೂ, ಕೇಳಿಯೂ ಅನುಭವಿಸುತ್ತಿದ್ದೆನು.

ಒಂದು ದಿನ ಬೆಳಗ್ಗೆ ಎಂದಿನಂತೆ ಬೈಠಖಾನೆಗೆ ಪಾಠಕ್ಕಾಗಿ ಹೋಗುವಾಗ ತಾಯಿ ಸ್ವಲ್ಪ ಗಾಬರಿಯಿಂದ ಕುಳಿತಿದ್ದಳು. ಮಿ. ಮರ್ಡ್‍ಸ್ಟನ್ನರು ತೆಳ್ಳಗಿನ ಒಂದು ಬೆತ್ತದ ತುದಿಗೆ ಚರ್ಮದ ಲಾಡಿಯನ್ನು ಕಟ್ಟುತ್ತಿದ್ದರು. ನನ್ನನ್ನು ನೋಡುತ್ತ ಮಿ. ಮರ್ಡ್‍ಸ್ಟನ್ನರು –
“ಪ್ರಿಯ ಕ್ಲೇರಾ, ಮಕ್ಕಳಿಗೆ ಪೆಟ್ಟಿನಿಂದ ತುಂಬಾ ಪ್ರಯೋಜನವಿದೆ; ನಾನು ಬಾಲ್ಯದಲ್ಲಿ ತುಂಬಾ ಪೆಟ್ಟು ತಿಂದಿದ್ದೇನೆ” ಅಂದರು.
“ಆದರೆ ನಿಮಗೆ ಅದರಿಂದ ಏನು ಪ್ರಯೋಜನವಾಗಿದೆ?” ಎಂದು ಕೇಳಿದಳು ತಾಯಿ.

“ನನಗೆ ಅದರಿಂದ ಏನೂ ಅಪಾಯವಾಗಿಲ್ಲವೆಂಬುದು ಸ್ಪಷ್ಟ; ಮತ್ತು ನಾನು ತಪ್ಪು ಮಾರ್ಗವನ್ನು ಹಿಡಿಯದಿರುವುದೇ ಆ ಪೆಟ್ಟಿನ ಪ್ರಭಾವದಿಂದ” ಎಂದನ್ನುತ್ತಾ, ಹೀಗೆಯೇ ಅವನನ್ನು ಬಿಟ್ಟರೆ ಆಗಲಿಲ್ಲಾ ಎಂದು ಹೇಳಿ ಬೆತ್ತವನ್ನು ಜಳಪಿಸಿದರು.
ಅನಂತರ ಪಾಠ ಪ್ರಾರಂಭವಾಯಿತು. ನಾನು ಎಷ್ಟೇ ಚೆನ್ನಾಗಿ ಪಾಠವನ್ನು ಕಲಿತಿದ್ದರೂ, ಆ ಅಣ್ಣ ತಂಗಿಯರೆದುರು ಯಾವ ಸತ್ಕಾರ್ಯವೂ – ಸತ್ಫಲವೂ – ಉಳಿಯಲಾರವಾದ್ದರಿಂದ, ನಾನು ಕಲಿತದ್ದೆಲ್ಲಾ ಈ ಲೋಕವನ್ನು ಬಿಟ್ಟು ದೇವಲೋಕಕ್ಕೇ ಪಲಾಯನವಾದುವು. ಬಾಯಿಪಾಠದಲ್ಲಿ ಸೋತೆ; ಬಾಯಿಲೆಕ್ಕದಲ್ಲೂ ಹಾಗೆಯೇ ಆಯಿತು. ಗ್ಲೌಸ್ಟರ್ ಹಾಲಿನ ಡಬ್ಬಿಗಳೂ ಸಹ ಹಾರಿಹೋದುವು. ಕೊನೆಗೆ ಉಳಿದಿದ್ದ ಪ್ರತ್ಯಕ್ಷ ಬೆತ್ತದ ಲೆಕ್ಕವನ್ನು ಪ್ರಾರಂಭಿಸಿದರು; ಅದರಲ್ಲೂ ಸೋತೆನು. ಆಗ ಅವರು ಬೆತ್ತವನ್ನು ಜಳಪಿಸಿದರು –
ತಾಯಿ ಅಳಲಾರಂಭಿಸಿದಳು.

“ಕ್ಲೇರಾ, ಜಾಗ್ರತೆ” ಅಂದಳು ಜೇನ್ ಮರ್ಡ್‍ಸ್ಟನ್ನಳು.
“ಮನಸ್ಸನ್ನು ಬಿಗಿಹಿಡಿಯುವ ಪಾಠವನ್ನು ಅಷ್ಟು ಬೇಗ ಮರೆತೆಯೇನು, ಕ್ಲೇರಾ?” ಎಂದಂದರು ಮಿ. ಮರ್ಡ್‍ಸ್ಟನ್ನರು.
ತಾಯಿ ಅಳುತ್ತಾ ಎದ್ದು ನಿಂತಳು.

“ನಿಶ್ಶಕ್ತ – ಮೃದು – ಮನಸ್ಸಿನ ಕ್ಲೇರಾಳಿಗೆ ತನ್ನ ಮಗನ ದಡ್ಡತನ ಸಹಿಸದೆ ಆಗಿದೆ. ಆದ್ದರಿಂದ ಈ ಪಾಠ ಇಲ್ಲಿ ಬೇಡ” ಎಂದನ್ನುತ್ತಾ ಮಿ. ಮರ್ಡ್‍ಸ್ಟನ್ನರು ನನ್ನನ್ನು ದರದರನೆ ಎಳೆದುಕೊಂಡು ಹೊರಹೊರಟರು. ತಾಯಿ ಅಳುತ್ತಾ ಅಡ್ಡ ಬಂದಾಗ ಜೇನಳು ಮಾತಿನಿಂದ ಸಮಾಧಾನವನ್ನು ಸುರಿಯುತ್ತಾ, ಕೈಯಲ್ಲಿ ಕಠೋರವಾಗಿ ಅಮ್ಮನನ್ನು ದರದರನೆ ಎಳೆದು ಕುರ್ಚಿಗೆ ನೂಕಿ, ಅಲ್ಲಿ ಒತ್ತಿ ಕುಳ್ಳಿರಿಸಿದಳು. ಮಿ. ಮರ್ಡ್‍ಸ್ಟನ್ನರು ನನ್ನನ್ನು ಮಹಡಿಯ ಮೇಲಕ್ಕೆ ಎಳೆದುಕೊಂಡು ಹೋದರು. ಅಲ್ಲಿ ನನ್ನನ್ನು ಕಂಕುಳಲ್ಲಿ ಒತ್ತಿ ಹಿಡಿದು ಬೆತ್ತದಿಂದ ಹೊಡೆಯಲಾರಂಭಿಸಿದರು. ನನ್ನ ತಲೆಯು ಅವರ ಬೆನ್ನ ಕಡೆಗೆ ಇದ್ದು ನನ್ನ ಬೆನ್ನು, ತಿಕ, ಕಾಲುಗಳಿಗೆ ಬೆತ್ತದಿಂದ ಚೆನ್ನಾಗಿ ಹೊಡೆದರು. ಪೆಟ್ಟಿನ ಉರಿಯನ್ನು ಸಹಿಸಲಾರದೆ ಅತ್ತೆ – ಬಹಳವಾಗಿ ಅತ್ತೆ. ಎಷ್ಟು ಅತ್ತರೂ ಪೆಟ್ಟು ಮತ್ತಷ್ಟು ಹೆಚ್ಚುತ್ತಿತ್ತು; ಕೊನೆಗೆ ದಾರಿ ತೋಚದೆ ಮಿ. ಮರ್ಡ್‍ಸ್ಟನ್ನರ ಕೈಯನ್ನು ಬಲವಾಗಿ ಕಚ್ಚಿದೆ. ಕಚ್ಚಿದುದರಲ್ಲಿ ಅವರ ಮಾಂಸ ತುಂಡಾದುದೂ ನನಗೆ ತಿಳಿಯಿತು. ಕಚ್ಚಿದ ಕೂಡಲೆ ನನ್ನನ್ನು ಒಮ್ಮೆಗೆ ಬಿಟ್ಟರು. ಆದರೆ, ಮರುಕ್ಷಣವೇ ಮತ್ತೊಂದು ಕೋಣೆಗೆ ನನ್ನನ್ನು ಎಳೆದುಕೊಂಡು ಹೋಗಿ ಅವರಿಗೆ ತ್ರಾಣವಿದ್ದಷ್ಟೂ ಹೊಡೆದರು. ಗೊತ್ತುಗುರಿ, ಸ್ಥಳ, ಏನನ್ನೂ ಗ್ರಹಿಸದೆ ಸಿಕ್ಕಾಬಟ್ಟೆ ಹೊಡೆದರು. ಪೆಟ್ಟು ಸಹಿಸಲಾರದೆ, ಓಡಿಹೋಗಲು ಎಡೆಯಿಲ್ಲದೆ, ನೆಲಕ್ಕೆ ಉರುಳಿ, ಅಲ್ಲಿಯೂ ಪೆಟ್ಟು ತಿನ್ನುತ್ತಾ ಪ್ರಜ್ಞೆ ತಪ್ಪುವ ಸ್ಥಿತಿಗೇ ತಲಪಿದೆ. ಆಗಲೇ ಕೋಣೆಯ ಹೊರಗಿನಿಂದ ನನ್ನಮ್ಮ ಅಳುವುದೂ ಕೇಳಿಸಿತು. ಸ್ವಲ್ಪ ಹೊತ್ತಿನಲ್ಲಿ ಅಮ್ಮ ಒಳಗೆ ಬರಲು ಪ್ರಯತ್ನಿಸಿದಳು. ಮಿ. ಮರ್ಡ್‍ಸ್ಟನ್ನರು ಆ ಕೂಡಲೇ ಅಮ್ಮನನ್ನು ಹೊರನೂಕಿ, ತಾನೂ ಹೊರಗೆ ಹೋಗಿ, ನನ್ನನ್ನು ಕೋಣೆಯೊಳಗೇ ಕೂಡಿಟ್ಟು, ಬಾಗಿಲು ಬೀಗ ಬಂದೋಬಸ್ತು ಮಾಡಿ ಹೊರಟು ಹೋದರು.

ಆ ದಿನ ರಾತ್ರಿಯಲ್ಲೂ ನಾನು ಅದೇ ಕೋಣೆಯಲ್ಲಿದ್ದೆ! ಜೇನ್ ಮರ್ಡ್‍ಸ್ಟನ್ನಳು ಬಂದು ಬ್ರೆಡ್ ಮತ್ತೂ ಹಾಲನ್ನೂ ಒಂದು ದೀಪವನ್ನೂ ಇಟ್ಟು ಬಾಗಿಲು ಹಾಕಿಕೊಂಡು ಹೋದಳು.

ಈ ರೀತಿಯಲ್ಲಿ ನಾನು ಐದು ದಿನಗಳನ್ನು ಕೈದಿಯಾಗಿ ಕಳೆದೆನು. ಈ ಐದು ದಿನಗಳಲ್ಲಿ ಒಂದು ನಿರ್ದಿಷ್ಟ ಪರಿಮಾಣದಷ್ಟು ಮಾತ್ರ ಆಹಾರ, ನೀರುಗಳನ್ನು ಒದಗಿಸುತ್ತಿದ್ದರು. ಮತ್ತು ಒಂದು ಕ್ಲುಪ್ತವಾದ ಕಾಲದಲ್ಲಿ ಸ್ವಲ್ಪ ತಿರುಗಾಡಿ ಬರಲೂ ಬಿಡುತ್ತಿದ್ದರು.
ಆರನೆಯ ದಿನ ರಾತ್ರಿ ಒಂದು ಪರಿಚಿತ ಸ್ವರ ಬಾಗಿಲ ಬೀಗದ ಕೈ ತೂತಿನ ಮುಖಾಂತರ ಕೇಳಿಸಿತು. ಆಲಿಸಿ ನೋಡಿದಾಗ ಅದು ಪೆಗಟಿ ಮಾತಾಡಿದ್ದೆಂದು ಗೊತ್ತಾಯಿತು.

“ಡೇವೀ, ಮುದ್ದೂ ಬಾಗಿಲ ಸಮೀಪ ಬಾ” ಅಂದಳು ಪೆಗಟಿ.
ನಾನು ಒಳಗಡೆಯಿಂದ ಬಾಗಿಲ ತೂತಿಗೆ ಬಾಯಿಯನ್ನಿಟ್ಟು
“ಅಮ್ಮ ಹೇಗಿದ್ದಾಳೆ? ಅವಳು ಕೈ ಕಚ್ಚಿದ್ದಕ್ಕೆ ಸಿಟ್ಟಾಗಿದ್ದಾಳೋ?” ಎಂದು ಕೇಳಿದೆ.
“ಅಮ್ಮನಿಗೆ ಸಿಟ್ಟಿಲ್ಲ – ಅವಳಿಗೆ ಸುಖವಿಲ್ಲ” ಎಂದು ಹೇಳಿ, ಗಂಟಲು ಸರಿಪಡಿಸಿಕೊಂಡು –
“ನಿನ್ನನ್ನು ಲಂಡನ್ ಸಮೀಪದ ಯಾವುದೋ ಒಂದು ಶಾಲೆಗೆ ಓದಲು ಕಳುಹಿಸುತ್ತಾರಂತೆ – ಓದಿ ಬುದ್ಧಿವಂತನಾಗಿ ಬಾರಪ್ಪಾ.”
“ಅಮ್ಮನನ್ನು ಒಂದಾವೃತ್ತಿಯಾದರೂ ತೋರಿಸದೇ ಕಳುಹಿಸಿಬಿಡುತ್ತಾರೋ, ಪೆಗಟಿ?”
“ತೋರಿಸುತ್ತಾರೆ – ಅನಂತರ ನಾನು ನಿನಗೆ ಪತ್ರ ಬರೆಯುತ್ತಿರುತ್ತೇನೆ, ಮುದ್ದೂ” ಅಂದಳು ಪೆಗಟಿ.
“ನಾನು ಅನ್ಯಾಯ ಮಾಡಲಿಲ್ಲ, ಪೆಗಟಿ – ಅವರ ಹಿಂಸೆ ತಡೆಯಲಾರದೆ ಕಚ್ಚಿಬಿಟ್ಟೆ” ಅಂದೆ.
ಆ ಮನೆಯಲ್ಲಿ ಅಪಮಾನ, ದುಃಖಗಳೇ ತುಂಬಿಕೊಂಡಿದ್ದಿದ್ದರೂ, ಅದರಲ್ಲಿ ನನ್ನಮ್ಮನಿದ್ದಾಳೆಂಬ ಒಂದೇ ಒಂದು ಭಾವನೆ ಆ ಮನೆಯನ್ನು ನನ್ನ ಪ್ರೀತಿಯ ಸ್ಥಳವನ್ನಾಗಿ ಮಾಡಿತ್ತು. ಮರುದಿನವೇ ನನ್ನ ಪ್ರೀತಿಯ ತಾಯಿಯನ್ನೂ, ಪ್ರೀತಿಯ ಮನೆ, ಮನೆವಠಾರಗಳನ್ನೆಲ್ಲ ಬಿಟ್ಟು ಹೋಗಬೇಕಲ್ಲವೇ ಎಂದು ಬಹುವಾಗಿ ದುಃಖವಾಯಿತು. ರಾತ್ರಿ ಇಡೀ ಈ ದುಃಖವು ನನ್ನನ್ನು ಬಾಧಿಸುತ್ತಿತ್ತು.
ಬೆಳಿಗ್ಗಿನ ನಿರ್ದಿಷ್ಟ ಆಹಾರ ಸೇವನೆಯಾದನಂತರ ನನ್ನನ್ನು ಕರೆದುಕೊಂಡು ಹೋಗಿ ತಾಯಿಯ ಎದುರು ನಿಲ್ಲಿಸಿದರು. ತಾಯಿಯ ಮುಖ ಮತ್ತೂ ಕಣ್ಣುಗಳು ಬಾತುಕೊಂಡಿದ್ದುವು. ಅವಳು ಮೆಲ್ಲಗೆ ಅಳುತ್ತಲೇ ಇದ್ದಳು.
“ಅಮ್ಮಾ ಕ್ಷಮಿಸಬೇಕು” ಎಂದು ನಾನು ಮಾತನ್ನು ಪೂರ್ತಿ ಆಡುವ ಮೊದಲೇ ಅವಳಿಗೂ, ನನಗೂ ಅಳು ಬಂತು. ಅವಳು ಅಳುತ್ತಾ ನನ್ನನ್ನು ಅಪ್ಪಿಕೊಂಡಳು.

“ನಿನ್ನನ್ನು ಪ್ರೀತಿಸುತ್ತಿರುವವರನ್ನು ನೀನು ಕಚ್ಚಬಹುದೇ?” ಎಂದು ಕೇಳಿದಳು. ತಾಯಿ ಇಲ್ಲದ ಸ್ಥಳದಲ್ಲಿ ನಡೆದಿದ್ದ ಸಂಗತಿಗಳನ್ನು ಅವರಿಗೆ ಬೇಕಾದಂತೆ ಮಿ. ಮರ್ಡ್‍ಸ್ಟನ್ನರು ತಾಯಿಗೆ ತಿಳಿಸಿರಬೇಕೆಂದು ನಾನು ಊಹಿಸಿದ್ದೆ. ನಿಜಸ್ಥಿತಿಯನ್ನು ಹೇಳಿಕೊಳ್ಳಲು ನಾನು ನಿಸ್ಸಹಾಯ ಪರಿಸ್ಥಿತಿಯಲ್ಲಿದ್ದುದನ್ನೂ ಅರಿತಿದ್ದೆ.
ಮಾರ್ಗದ ಕಡೆಯಿಂದ ಬಂಡಿ ಬರುತ್ತಿದ್ದ ಶಬ್ದ ಕೇಳಿಸಿತು. ನನ್ನ ಪೆಟ್ಟಿಗೆ, ದುಸ್ತು ಇತ್ಯಾದಿಗಳನ್ನು ಮಿಸ್ ಜೇನ್ ಮರ್ಡ್‍ಸ್ಟನ್ನಳು ಬಂಡಿಯಲ್ಲಿಟ್ಟಳು. ತಾಯಿ ಎಡೆಬಿಡದೆ ಅಳುತ್ತಲೇ ಇದ್ದಳು. ಮಿ. ಮರ್ಡ್‍ಸ್ಟನ್ನರು ಅಲ್ಲೆಲ್ಲೂ ಗೋಚರಿಸಲಿಲ್ಲ.
“ಕ್ಲೇರಾ, ಧೈರ್ಯ ತಾಳು – ಡೇವಿಡ್ ಬಂಡಿಯನ್ನು ಹತ್ತು” ಅಂದಳು ಮಿಸ್ ಮರ್ಡ್‍ಸ್ಟನ್.
“ಅಮ್ಮಾ ನಮಸ್ಕರಿಸುವೆನು” ಎಂದು ಗದ್ಗದ ಕಂಠದಿಂದ ಹೇಳಿ ಬಂಡಿಯನ್ನೇರಿದೆ. ಆಗ ಮಿಸ್‍ ಮರ್ಡ್‍ಸ್ಟನ್ನಳು ಹತ್ತಿರ ಬಂದು –
“ಹುಡುಗಾ, ಹುಷಾರ್! ನಿನ್ನ ದುಷ್ಟಬುದ್ಧಿಯಿಂದ ನೀನಾಗಿಯೇ ನಾಶವಾಗುವ ಮೊದಲು ಅಣ್ಣನ ಕೈ ಕಚ್ಚಿದ್ದಕ್ಕಾಗಿ ಪಶ್ಚಾತ್ತಾಪವನ್ನಾದರೂ ಪಡು – ಇಲ್ಲದಿದ್ದರೆ ಬಹು ಕ್ಷಿಪ್ರದಲ್ಲೇ ಹಾಳಾಗಿ ಹೋಗುವೆ,” ಎಂದು ಆಶೀರ್ವದಿಸಿದಳು.
ಹಿಂದೆ ನಾನು ಯಾರ್ಮತ್ತಿಗೆ ಹೋದ ಬಂಡಿಯೇ ಇಂದೂ ನನ್ನನ್ನೂ, ನನ್ನ ಸಾಮಾನುಗಳನ್ನೂ ಸಾಗಿಸತೊಡಗಿತು.

(ಮುಂದುವರಿಯುತ್ತದೆ)