ಚಕ್ರವರ್ತಿಗಳು – ಸುತ್ತು ಇಪ್ಪತ್ಮೂರು
ತಪೋಮಣೆಯಿಂದ ಸರ್ವಜ್ಞ ಪೀಠಕ್ಕೆ ಭಾಗ ೫
“ನಿಮ್ಮನ್ನೆಲ್ಲೋ ಕಂಡ ಹಾಗಿದೆಯಲ್ಲಾ” ಎಂಬ ದೇಶಾವರಿ ಪಾತಾಳಗರಡಿ ಬಿಟ್ಟು ನಿಮ್ಮ ಪ್ರವರ ಬಿಚ್ಚಿಸುವಲ್ಲಿ ನಿಸ್ಸೀಮ ಪರಮೇಶ್ವರ ಭಟ್ಟರು – ನಮ್ಮ ಆತಿಥೇಯರು! ವಾಸ್ತವದಲ್ಲಿ ನಾಗೋಡಿ ಕೊಲ್ಲೂರಿಗೂ ಆಚೆ ಭಟ್ಟರು ಹೋದವರೇ ಅಲ್ಲ. ಮತ್ತೆ ನೀವು, ನಿಮ್ಮ ಮನೆ ಹಿತ್ತಲಿಂದಾಚೆಗೆ ಸುತ್ತಿದವರೂ ಆಗಬೇಕಿಲ್ಲ. ಆದರೂ ಅಂಬಾವನ ಹೊಕ್ಕು ಎದ್ದವರಿಗೆ, ಕೊಡಚಾದ್ರಿ ನೆತ್ತಿ ಮೆಟ್ಟಿದವರಿಗೆ ಪರಮೇಶ್ವರ ಭಟ್ಟರ ಬಾದರಾಯಣ ಸಂಬಂಧ ಗ್ಯಾರಂಟಿ. ಬೆಟ್ಟಕ್ಕೆ ಬಂದವರಿಗೆ ಊಟಕ್ಕೆ ವಾಸಕ್ಕೆ ಇವರ ಮನೆ ಸದಾ ಮುಕ್ತ. ಇವರು ಕಾಫಿ ಎಂದು ಬಿಸಿ ನೀರೇ ಕೊಟ್ಟರೂ ಸಕ್ಕರೆ ಕಡಿಮೆಯಾಯ್ತೇ ಎಂದು ಆತಂಕಿಸುತ್ತಾರೆ. ಊಟಕ್ಕೆ ಕುಳಿತವರು ತಿಳಿದೋ ತಿಳಿಯದೆಯೋ ಮೊಸರೂ ಎಂದು ಬೊಬ್ಬಿಟ್ಟರೆ ನೀನೀರು ಮಜ್ಜಿಗೆ ಕೊಟ್ಟರೂ ಪಂಚ ಭಕ್ಷ್ಯ ಪರಮಾನ್ನ ಉಣಿಸಿದಂತೆ ಕಾಣಿಸಿಯಾರು. ಭಟ್ಟರ ಆರ್ಥಿಕ ಬಿಕ್ಕಟ್ಟು, ಬೆಟ್ಟದ ಇಕ್ಕಟ್ಟು ಮತ್ತು ಹವಾಮಾನದ ಚೌಕಟ್ಟಿನಲ್ಲಿ ಆ ಮನೆ ಅಲ್ಲಿನವರಿಗೇ ಕಿಷ್ಕಿಂಧೆ. ಆದರೂ ರಾತ್ರಿಯಲ್ಲಿ ಬಂದಷ್ಟೂ ಜನಗಳಿಗೆ, ಮನೆಯೊಳಗೆ ಕಾಲು ಚಾಚಲು ಎಡೆ ಇದ್ದಲ್ಲೆಲ್ಲಾ ಚಾಪೆ, ಕಂಬಳಿ ಕೊಟ್ಟು “ಸಂಕೋಚ ಮಾಡಿಕೊಳ್ಳಬೇಡಿ” ಎನ್ನುವುದೂ ಇವರ ನಿರ್ವಹಣಾ ಶಾಸ್ತ್ರದ ಗರಿಷ್ಠ ಸಿದ್ಧಿ! ಊಟಕ್ಕೆ ಮೊದಲು ಗುಡಿಯಲ್ಲಿ ಪೂಜೆ, ನೈವೇದ್ಯ, ಪ್ರಸಾದ, ಆರತಿ ತಟ್ಟೆಗಳ ಮೂಲಕ ಯಾತ್ರಿಗಳಿಗೆ ಕ್ಷೇತ್ರ ಭಾವದ ಮಾನಸಿಕ ಹದಕೊಡುತ್ತಾರೆ. ನಾವು ಉಪಯೋಗಿಸಿದ ತಟ್ಟೆ ಲೋಟಗಳನ್ನು ನಮ್ಮಲ್ಲೇ ತೊಳೆಸಿ ‘ಸೇವಾಭಾವ’ವನ್ನೂ ಜಾಗೃತಗೊಳಿಸುತ್ತಾರೆ. ಆದರೂ ಅವರ ಊಟೋಪಚಾರಗಳು ಉಚಿತವೆಂದು ಯಾರೂ ಭಾವಿಸುವುದಿಲ್ಲ. ಭಟ್ಟರೇ ಹೇಳುವಂತೆ ತಲೆತಲಾಂತರದಿಂದ ಕೊಡಚಾದ್ರಿ ಅಮ್ಮನ ಮತ್ತು ಭಕ್ತರ ಸೇವೆಯೇ ಇವರ ಕುಟುಂಬ ವೃತ್ತಿ ಮತ್ತು ಜೀವನ.
[ಆ ಕಾಲದಲ್ಲಿ ಸಾರ್ವಜನಿಕರಿಗೆ ಇಲ್ಲದ ಬಚ್ಚಲು, ಯಾರಿಗೂ ಇಲ್ಲದ ಕಕ್ಕಸ್ಸಿನ ಸೌಕರ್ಯಗಳನ್ನು ಅನಂತರದ ದಿನಗಳಲ್ಲಿ ಭಟ್ಟರು ಹೊಂದಿಸಿದ್ದಾರೆ! ಇಲ್ಲಿನ ಗುಡಿಯಲ್ಲಿ ಎಲ್ಲ ಕ್ಷೇತ್ರಗಳಂತೆ ರಖಂವಾರು ವಿಶೇಷ ಪೂಜಾ ವ್ಯವಸ್ಥೆಯೂ ಉಂಟು. ಅನಂತರದ ದಿನಗಳಲ್ಲಿ ಒಮ್ಮೆ ನನ್ನ ಹತ್ತಿರದ ಸಂಬಂಧಿಕರನ್ನು ನಾನು ಬೆಟ್ಟಕ್ಕೆಂದು ಕರೆದುಕೊಂಡು ಹೋಗಿದ್ದಾಗ ಅವರ ದೈವಭೀರುತ್ವವನ್ನು ಪರಮೇಶ್ವರ ಭಟ್ಟರು ಸರಿಯಾಗಿಯೇ ನಗದು ಮಾಡಿಕೊಂಡಿದ್ದರು! ಈಚೆಗೆ ಪರಮೇಶ್ವರ ಭಟ್ಟರು ತೀರಿಕೊಂಡ ಸುದ್ದಿ ಪತ್ರಿಕೆಯಲ್ಲಿ ಕಂಡಿದ್ದೇನೆ. ಸಂಪ್ರದಾಯ ಹೇಗೆ ಮುಂದುವರಿದಿದೆಯೋ ನನಗೆ ತಿಳಿದಿಲ್ಲ.]
ಮಳೆಗಾಲದ ಶಿಖರದಲ್ಲಿ ಕೊಡಚಾದ್ರಿ ಶಿಖರಕ್ಕೆ ಸಾಮಾನ್ಯವಾಗಿ ಯಾವ ಯಾತ್ರಿಯೂ ಬರುವುದಿಲ್ಲ. ಪ್ರಸ್ತುತ ಸುಮಾರು ಮೂರು ತಿಂಗಳ ಅಂತರದಲ್ಲಂತೂ ಮಳೆ ತುಸು ಬಿಡುವು ಕೊಟ್ಟಿದ್ದಾಗ ಒಮ್ಮೆ ಯಾರೋ ಮೂವರು ಬಂದು, ಹೋದದ್ದೇ ಕೊನೆಯಂತೆ. ಅಂದು – ಬಾನಬೋಗುಣಿಯೇ ಕವುಚಿ ಬಿದ್ದಂದು, ಅದೂ ತಡ ಸಂಜೆಯಲ್ಲಿ ದೊಡ್ಡ ಸಂಖ್ಯೆಯಲ್ಲೇ ನಮ್ಮ ಆಗಮನ ಅವರಿಗೆ ತೀರಾ ಅನಿರೀಕ್ಷಿತ; ಆದರೆ ಖಂಡಿತಕ್ಕೂ ಹೊಸತಲ್ಲ. ನಾವು ಶಿಖರಕ್ಕೆ ಹೋಗಿ ಬರುವುದರೊಳಗೆ ಅವರ ಅಡುಗೆಮನೆಯ ಮಿಣಿಮಿಣಿ ದೀಪದ ಬೆಳಕಲ್ಲಿ, ಸೌದೆ ಒಲೆಯಲ್ಲಿ ಮಸಲತ್ತು ನಡೆದಿತ್ತು, ಕಡೆಯುವ ಕಲ್ಲಿನಲ್ಲಂತೂ ಕಸರತ್ತು ತೀವ್ರವಿತ್ತು. ನಮಗಾಗಿ ಪೆಟ್ರೋಮ್ಯಾಕ್ಸ್ ಹಚ್ಚಿ ಬೆಳಕು ಕೊಟ್ಟರು. ಜಿಗಣೆ ಕೆಸರು ಶುದ್ಧರಾಗಿ, ಗದಗುಟ್ಟುತ್ತ ಒಳ ಸೇರಿದೆವು. ತಗ್ಗು ಮಾಡಿನ ಮನೆಯ ವಸಾರಕ್ಕೇ ಗೋಡೆ ಕಟ್ಟಿ ಮಾಡಿದ ಕೋಣೆ ನಮ್ಮ ವಾಸಕ್ಕೆ ಮೀಸಲು. ಅದಕ್ಕೆ ಕಿಟಕಿ ಇರಲಿಲ್ಲ. ಅಂದು ಹೊರಗಿನ ಗಾಳಿ, ಚಳಿ ನೋಡಿದರೆ ನಮಗೆ ಅದು ಬೇಕೂ ಇರಲಿಲ್ಲ. ಇದ್ದುದರಲ್ಲಿ ತುಸು ಒಣ ಬಟ್ಟೆ ಹೊಂದಿಸಿಕೊಳ್ಳುವಷ್ಟರಲ್ಲೇ ಎಲ್ಲರಿಗೂ ಚಳಿ ಮೂಳೆಯಾಳಕ್ಕಿಳಿದ ಅನುಭವ. ಮಲಗಲು ಎದುರು ಕೋಣೆಯ ಮನೆಯವರು ಗೋಡೆಯಿಂದ ಗೋಡೆಗೆ ದಪ್ಪ ಪ್ಲ್ಯಾಸ್ಟಿಕ್ ಹಾಳೆ ಹಾಸಿ, ಮೇಲೆ ಎರಡು ಪದರ ಕಂಬಳಿ ಹಾಸಿ ಮಲಗಲು ವ್ಯವಸ್ಥೆ ಮಾಡಿದ್ದರು. (ರೂಂ ಹೀಟರ್ ಬಿಡಿ,) ಒಂದು ಅಗ್ಗಿಷ್ಟಿಕೆಯಾದರೂ ಸಿಕ್ಕಿದರೆ ಒಳ್ಳೆಯದಿತ್ತು ಎಂದು ನಮಗೆಲ್ಲಾ ಯೋಚನೆಯೇನೋ ಬಂತು.
ಆದರೆ ಪರಿಸ್ಥಿತಿಯ ಅರಿವು ನಮಗೆ ಮಾತು ಕೊಡಲಿಲ್ಲ. ಮಲಗಿದಾಗ ಹೊದೆಯಲೆಂದು ಬದಿಯಲ್ಲಿ ಜೋಡಿಸಿದ್ದ ಕಂಬಳಿ ಸುತ್ತಿಕೊಂಡೂ ಚಳಿ ತಡೆಯುವುದು ಅಸಾಧ್ಯ ಎನ್ನುವವರು ಕೈ ಮುಂದೆ ಮಾಡಿಕೊಂಡು ಪೆಟ್ರೋಮ್ಯಾಕ್ಸಿಗೇ ಮುತ್ತಿಗೆ ಹಾಕಿ, ಶ್ರುತಿ ರಾಗರಹಿತವಾಗಿ ಪಲುಕುತ್ತಿದ್ದರು! ವಿಶೇಷ ತಡ ಮಾಡದೆ, ಮನೆಯವರು ನಮ್ಮನ್ನು ಊಟಕ್ಕೆಬ್ಬಿಸಿದರು. ಮನೆಯ ಹಿತ್ತಲಿನಲ್ಲೂ ಹೀಗೇ ಮಾಡಿಳಿಸಿ, ಗೋಡೆ ಕಟ್ಟಿ ಮಾಡಿದ್ದ ಕೋಣೆಯಲ್ಲಿ ಮಣೆ, ಬಟ್ಟಲು ಇಟ್ಟು ಬಿಸಿಯೂಟ ಕೊಟ್ಟರು. ಮತ್ತೆ ವಿಳಂಬವಿಲ್ಲದಂತೆ ಮಡಿಚಿಟ್ಟ ಖಾಲೀ ಗೋಣಿಚೀಲಗಳನ್ನೇ ತಲೆಗಿಂಬಾಗಿ ಎಳೆದುಕೊಂಡು, ಹೊದೆಯಲು ಮನೆಯವರು ಒದಗಿಸಿದ ಬಟ್ಟೆ, ಕಂಬಳಿಯ ಬಣ್ಣ ಕಮಟು ಲೆಕ್ಕಿಸದೆ, ತಲೆ ಕಾಲಿನ ದಿಕ್ಕಂದಾಜಿಸದೆ ಎಲ್ಲ ಅಡ್ಡ ಬಿದ್ದೆವು. ಎರಡು ದಿನದ ಬಳಲಿಕೆ, ಕಳೆದ ರಾತ್ರಿಯ ಜಾಗರಣೆ, ಸುತ್ತಣ ತೀವ್ರ ಚಳಿ ಮುಪ್ಪುರಿಗೊಂಡು ನಮ್ಮನ್ನು ಆವರಿಸಿದ್ದು ನಿದ್ರೆಯಲ್ಲ, ಸಾವಿನ ಪರ್ಯಾಯ ಸ್ಥಿತಿ ಎಂದರೆ ಅತಿಶಯೋಕ್ತಿಯಲ್ಲ! ಹೊರಗಿನ ಅವಿರತ ಮೋಡ ಧಾವಂತದ ಹುಯ್ಲು, ಜಡಿಮಳೆಯ ಆರ್ಭಟೆ ನಮಗೆ ಬರಿಯ ಜೋಗುಳ!!
ಹಾಸಿಗೆ ಚಾ ಅಲ್ಲದಿದ್ದರೆ ನಮಗೆ ಬೆಳಗ್ಗಾಗುತ್ತಲೇ ಇರಲಿಲ್ಲ. ಮಳೆ ಬಿಟ್ಟರೂ ಮಬ್ಬು, ಚಳಿ ಹಾಗೇ ಇತ್ತು. ನಮ್ಮಲ್ಲಿ ಹಲವರು ಅಮೋಘ ಎರಡನೇ ದಿನ ಹಲ್ಲುಜ್ಜುವುದು, ಮುಖ ತೊಳೆಯುವುದು ಕ್ರಿಯೆಗಳಿಗೆ ರಜಾ ನೀಡಿದ್ದರು. ಆದರೂ ನಮ್ಮ ತಂಡದ ಪ್ರಸನ್ನ ಪ್ರವೀಣರ ನಂಬಿಕೆಯ ದೃಢತೆ, ಎದುರಿನ ಪುಟ್ಟ ಕೊಳದಲ್ಲಿ ಮೂರು ಮುಳುಗಿನ ಸ್ನಾನ ಮಾಡಿಸಿದ್ದು, ಇಂದಿಗೂ ಹಲವರು ನಂಬಲಾರರು! ಬಿಸಿ ಇಡ್ಲಿ, ಚಟ್ನಿ, ಕಾಫಿಯ ಧಾರಾಳದಲ್ಲಿ ನವಚೇತನ ಮೈಗೂಡಿಸಿಕೊಂಡೆವು. ಮೊದಲ ಸುತ್ತಿನಲ್ಲೇ ತಿಂಡಿ ಮುಗಿಸಿ ಸುಂದರರಾಯರ ಜೋಡಿ ನಡೆದು ಹೋಗಿತ್ತು. ಅವರ ಬೆನ್ನಿಗೇ ಇನ್ನೊಂದು ತರುಣ ಜೋಡಿ, ಇದ್ದಕ್ಕಿದ್ದಂತೆ ಮಂಗಳೂರಿಗೆ ತುರ್ತು ತಲಪುವ ನೆಪ ಒಡ್ಡಿ ಹೊರಟು ಹೋದರು.
[ಸಾಮಾನ್ಯರ ಕೈಯಲ್ಲಿ ಚರವಾಣಿಯ ಕಲ್ಪನೆಯೂ ಅಸಾಧ್ಯವಾದ ಕಾಲವದು. ಸಾಹಸ ಯಾತ್ರೆಗೆ ಮುನ್ನ ಈ ತರುಣ ಜೋಡಿ ಇಂಥಾ ತುರ್ತನ್ನು ಹೇಳಿದ್ದೂ ಇಲ್ಲ. ಪ್ರಸ್ತುತ ಸಾಹಸ ಯಾತ್ರೆಗೆ ಮೂರನೆಯವರ ಶಿಫಾರಸಿನಲ್ಲಿ ದಾಖಲಾದ ಈ ಜೋಡಿ, ಉದ್ದಕ್ಕೂ ತಂಡದೊಡನೆ ಆತ್ಮೀಯತೆ ಬೆಳೆಸಿಕೊಂಡಿರಲಿಲ್ಲ. ಇವೆಲ್ಲ ಸೇರಿ ನಮಗೆ ಅವರ ನೆಪ ಸದಭಿರುಚಿಯದ್ದಾಗಿ ಕಾಣಲಿಲ್ಲ. ಆದರೆ ಪ್ರತಿ ಸಾಹಸಯಾನಕ್ಕಷ್ಟೇ ಒಟ್ಟಾಗುವ ‘ಆರೋಹಣದ ಅನೌಪಚಾರಿಕ ಬಂಧದಲ್ಲಿ ತಂಡಕ್ಕೆ ಬರುವ ಪ್ರತಿ ವ್ಯಕ್ತಿಯೂ ತಂಡಕ್ಕೆ ಬಾಧೆ ತರದ ವೈಯಕ್ತಿಕ ಕ್ರಿಯೆಗಳಿಗೆ ಸ್ವತಂತ್ರನೇ ಇರುತ್ತಾನೆ. ನಾವು ದಿನದ ಎಲ್ಲ ಓಡಾಟ ಮುಗಿಸಿ ಸಂಜೆ ಕುಂದಾಪುರದಿಂದ ಮುಂದೆ ಮಂಗಳೂರು ದಾರಿಗಿಳಿದಾಗ ಇದೇ ಜೋಡಿ ಮುಖಮರೆಸಿಕೊಂಡು ನಮ್ಮನ್ನು ಹಿಂದಿಕ್ಕಿ ಸಾಗಿದಾಗ ನಿಜಕ್ಕು ನಮಗೆ ವಿಷಾದವಾಯ್ತು. (ಮನೆಯವರ ಲೆಕ್ಕದಲ್ಲಿ ಪರ್ವತಾರೋಹಣದ ನೆಪವೊಡ್ಡಿ ದಿನ ‘ಗಳಿಸಿ’ಕೊಂಡ ಈ ಜೋಡಿ ಕುಂದಾಪುರದಲ್ಲಿ ಏನು ಮಾಡಿರಬಹುದು ಎನ್ನುವುದನ್ನು ನಿಮ್ಮ ಊಹೆಗೆ ಬಿಡುತ್ತೇನೆ) ಮುಂದೆಂದೂ ಇವರು ನಮ್ಮತ್ತ ಸುಳಿಯಲಿಲ್ಲ, ಬಂದಿದ್ದರೂ ನಾನು ಸೇರಿಸಿಕೊಳ್ಳುತ್ತಿರಲಿಲ್ಲ. ಎನ್.ಸಿ.ಸಿ ಶಿಬಿರಗಳ ನೆಪದಲ್ಲಿ ಅಸ್ಸಾಂ ರಾಜಾಸ್ತಾನಗಳಿಗೆ ಹೋಗಿದ್ದಾಗ ಕೆಲವು ಸಹಪಾಠಿ ತರುಣರು ಇಂಥವೇ ಪಿಳ್ಳೆ ನೆಪ ಹೂಡಿ, ಪರವೂರಿನ ಗಲ್ಲಿಗಳಲ್ಲಿ ಕಳೆದು ಹೋಗುತ್ತಿದ್ದುದು ಯಾಕೆಂದು ನಾನು ತಿಳಿಯದವನೇನಲ್ಲ!]
ರಾತ್ರಿ ಗಾಳಿಯ ಹಾವಳಿಗೆ ಗುಡಿಯ ಹಲವು ಹಂಚುಗಳು ಹಾರಿದ್ದವು. ನಮ್ಮ ಅದೃಷ್ಟಕ್ಕೆ ಅಂಗಳದಲ್ಲಿ ಎರಚಾಡಿದ್ದ ಹಂಚು ತುಂಡುಗಳು ನಮ್ಮ ಬೈಕುಗಳನ್ನು ತಟ್ಟಿರಲಿಲ್ಲ. ಮನೆ ಗುಡಿಗಿಂತ ತಗ್ಗಿನಲ್ಲಿದ್ದದ್ದೂ ಮತ್ತದರ ಹಂಚಿನ ಮಾಡಿನ ಮೇಲೆ ಅಲ್ಲಲ್ಲಿ ಭಾರ ಹೇರಿದ್ದೂ ನಮಗಾಗ ಪೂರ್ಣ ಅರ್ಥವಾಯ್ತು! ನಮ್ಮ ಸದಸ್ಯರೆಲ್ಲ ಸಾಹಸ ಯಾತ್ರೆಗೆ ನವಚೇತನ ಮೂಡಿದ ಭಾವದಲ್ಲಿ ಹಾಸ್ಯ, ಗದ್ದಲಗಳೊಡನೆ ಗಂಟುಗದಡಿಗಳನ್ನು ಬೈಕಿಗೇರಿಸಿ ಕಟ್ಟುತ್ತಿದ್ದೆವು. ನಾನು ಕೊನೆಯದಾಗಿ ಎಂಬಂತೆ, “ಊಟ, ಕಾಫಿ, ವಾಸಕ್ಕೆಲ್ಲಾ ನಾವೂ…” ಲೆಕ್ಕವನ್ನೇ ಕೇಳಿದೆ. ಆದರೆ ಪರಮೇಶ್ವರ ಭಟ್ಟರು ನಾನಂದುಕೊಂಡಂತೆ ಐಟಂವಾರು ಲೆಕ್ಕ, ತಲೆ ಲೆಕ್ಕ ಹಾಕದೇ ಸರಳವಾಗಿ ಕೊಡೀ ಎಂದರು. ನಾನೇ ಒಂದು ಅಂದಾಜಿನಲ್ಲಿ ಕೊಟ್ಟೆ. ಪುಣ್ಯಾತ್ಮ ಯಾವ ನಿರೀಕ್ಷಾ ಸಂಕಟಗಳನ್ನೂ ಕಾಣಿಸದೇ ಸ್ವೀಕರಿಸಿ, ಎಂದಿನ ವಿಶ್ವಾಸಭಾವದಲ್ಲಿ ಹೋಗಿಬಿಟ್ಟು ಬನ್ನಿ ಎಂದುಬಿಟ್ಟರು. ಭಟ್ಟರ ಕುಟುಂಬ ಸದಸ್ಯರು ಮನೆಯ ಹೊಸ್ತಿಲಲ್ಲಿ, ಅಂಗಳದಲ್ಲಿ ಚದುರಿದಂತೆ ನಿಂತು, ಹೊಳಪುಗಣ್ಣುಗಳಲ್ಲಿ ನಮ್ಮ ಚಟುವಟಿಕೆಗಳನ್ನು ನೋಡುತ್ತಿದ್ದರು. ಎಲ್ಲ ಯಾವುದೋ ಬಾದರಾಯಣ ಸಂಬಂಧಿಕರನ್ನು ಬೀಳ್ಕೊಡಲು ನಿಂತಂತೆಯೇ ಕಾಣಿಸಿತು. ದುಡ್ಡು ಕೊಟ್ಟ ಹಮ್ಮಿನಲ್ಲಿ ಸುಲಭವಾಗಿ ಅವರನ್ನು ಹೋಟೆಲೊಂದರ ನೌಕರವರ್ಗ ಎಂದು ನಿರ್ಲಕ್ಷಿಸುವುದು ಸುಲಭ. ಆದರೆ ನಮಗೆ ಹಾಗನ್ನಿಸಲೇ ಇಲ್ಲ. ಆ ವಿಪರೀತಗಳ ನೆಲದಲ್ಲಿ ನಿಂತು ನಮಗೆ ಬಿಸುಪೂಡಿದ ಅವರಿಗೆ ನಾವು ಎಲ್ಲ ವ್ಯಂಗ್ಯ ಮೀರಿ, ಸಖೇದ ವಿದಾಯ ಹೇಳಿದೆವು.
ಒಂಬತ್ತು ಗಂಟೆಯ ಸುಮಾರಿಗೆ ಬೆಟ್ಟ ಇಳಿಯತೊಡಗಿದೆವು. ಹತ್ತಿ ಬರುವಾಗಿನ ತರಾತುರಿಯಿಲ್ಲದ ಓಟ. ಒಂದೆರಡು ಕಡೆಯಂತೂ ಬೈಕಿಳಿದು ಬದಿಯ ಹುಲ್ಲುಗಾವಲಿನಲ್ಲೂ ಅಡ್ಡಾಡಿ ಸಂತೋಷಿಸಿದೆವು. ದೊರಗು ಹಸುರಿನ ಹುಲ್ಲಿನ ನಡುವೆ ಒರಟು ಮಳೆಕೋಟನ್ನು ಸರಬುರ ಉಜ್ಜಿಕೊಂಡು ನಡೆದರೂ ಮೋಡಗಳ ಮರಸಾಟದಲ್ಲಿ ಹೆಚ್ಚು ನೋಡಿ, ಕೇಳುವುದೇನೂ ಸಿಗಲಿಲ್ಲ. ಮಳೆನೀರ ಚರಂಡಿ ವ್ಯವಸ್ಥೆ ಬಹುತೇಕ ಸರಿಯಿದ್ದುದರಿಂದ, ನೆಲ ಸಹಜ ಕಲ್ಲ ಚೂರುಗಳಿಂದ ಬಿಗಿಯಿದ್ದುದರಿಂದ, ಅವೆಲ್ಲಕ್ಕೂ ಮಿಗಿಲಾಗಿ ಬಳಸುವವರೇ ಇಲ್ಲದೆ ಕೆಸರೇಳದುದರಿಂದ ಜಾರಿಕೆ, ಹೂಳಿಕೆಗಳ ಸಮಸ್ಯೆಗಳೇನೂ ಇಲ್ಲದೆ ಬಹಳ ಚುರುಕಾಗಿಯೇ ಇಳಿದೆವು. ಶ್ರೇಣಿಯ ತಪ್ಪಲಿನ ಕಾಡು ಸೇರುತ್ತಿದ್ದಂತೆ ಹೊಸ ದಿನದ ಮೇವರಸಿ ಹೊರಟ ಊರ ಜಾನುವಾರು ಹಿಂಡು ಸಿಕ್ಕಿತು.
[ಇಂದಿನ ಸತ್ಯದಲ್ಲಿ ಆ ವಲಯ ಮೂಕಾಂಬಿಕ ವನಧಾಮದ ಭಾಗವಾಗಿದೆ. ಸಹಜವಾಗಿ ಪಾರಂಪರಿಕ ಹಕ್ಕುಗಳು ಲುಪ್ತವಾಗಿರುವುದನ್ನು ತಿಳಿದು, ಅನುಸರಿಸುವುದು ಅವಶ್ಯವಾಗುತ್ತದೆ. ಕೋಟ್ಯಂತರ ವರ್ಷಗಳ ಭೂ, ಜೀವವಿಕಾಸದಲ್ಲಿ ಕೇವಲ ನೂರಿನ್ನೂರು ವರ್ಷಗಳಾಚೆಗೂ ಚಾಚದ ಕೆಲವು ಮನುಷ್ಯ ಕಲಾಪಗಳನ್ನು ಸಾರ್ವಕಾಲಿಕ ಸತ್ಯಗಳೆಂದೂ ಆಜೀವ ಹಕ್ಕುಗಳೆಂದೂ ಸಾಧಿಸುವವರಿದ್ದಾರೆ; ಅದು ತಪ್ಪು. ವನಧಾಮಗಳಂಥ ಸೀಮಿತ ವಲಯಗಳಲ್ಲಿ ಮುಂದಾದರೂ ಪ್ರಾಕೃತಿಕ ವಿಕಾಸಕ್ಕೆ ಉಳಿಯಬಹುದಾದ ಅವಕಾಶವನ್ನು, ಅರ್ಥಾತ್ ವನ್ಯಸಂರಕ್ಷಣೆಯನ್ನು, ಜನವಿರೋಧಿ ಎಂಬ ಭ್ರಮೆ ಹುಟ್ಟಿಸುವುದು ಪರಮ ಅನ್ಯಾಯ.]
ಕಾಡುಹೊಳೆ ದಂಡೆಯಲ್ಲಿ ಸುಂದರರಾವ್ ಜೋಡಿ ಬೈಕ್ ಸಮೇತ ನಮ್ಮನ್ನು ಕಾದಿತ್ತು. ಅವರು ತಮ್ಮಿಂದಾಗಿ ತಂಡದ ಹೊತ್ತು ಹಾಳಾಗಬಾರದೆಂದು ಸಾಕಷ್ಟು ಚುರುಕಾಗಿಯೇ ನಡೆದಿದ್ದರು. ಅನಂತರವೂ ತಮ್ಮ ಹಿಂದಿನಿಂದ ಬೈಕ್ಗಳು ಘಟ್ಟ ಇಳಿಯುವ ಸದ್ದು ಕೇಳದಾದಾಗ ಎರಡು ದಿನಗಳಿಂದ ಬಾಕಿಯಿದ್ದ ಸ್ನಾನದ ನೆನಪಾಗಿತ್ತು. ನಡೆದು ಮೈ ಬಿಸಿಯೇರಿದ ಹುರುಪಿನಲ್ಲಿ ಕಾಡು ಹೊಳೆಗಿಳಿದು ಮಿಂದು ಮಡಿ ಬೇರೆ ಆಗಿದ್ದರು! ಆದರೆ ವಿಶೇಷ ಶ್ರಮವಿಲ್ಲದೆ, ಶೀತ ವಾತಾವರಣಕ್ಕೊಡ್ಡಿಕೊಂಡೇ ಬೈಕೇರಿ ಬಂದವರಲ್ಲಿ ಕಡುಶೀತದ ಹೊಳೆ ಸ್ನಾನಕ್ಕೆ ಉಮೇದುವಾರರೇನೂ ಹುಟ್ಟಲಿಲ್ಲ. ಎಲ್ಲ ಒಟ್ಟಾಗಿ, ಹೋಗುವಾಗಲೇ ಕಂಡುಕೊಂಡ ನಿಟ್ಟೂರಿನ ಒಳದಾರಿ ಹಿಡಿದೆವು. ಆ ದಾರಿಯಲ್ಲಿ ‘ಅಭಿವೃದ್ಧಿಯ ಕಲ್ಲು ಹಾಸಾಗಲೀ ಘಟ್ಟ ತಪ್ಪಲಿನ ತೀವ್ರ ಏರಿಳುಕಲಾಗಲೀ ಮತ್ತು ಬಹುಬಳಕೆಯಿಂದ ಉಂಟಾದ ಹೊಂಡ ಕೊರಕಲಿನ ಕಾಟವೂ ಇರಲಿಲ್ಲ. ನಿರಾತಂಕವಾಗಿ ದಾರಿ ಕಳೆದು ನಿಟ್ಟೂರಿಗೂ ಒಂದು ಕಿಮೀ ಮೊದಲೇ ಮತ್ತೆ ಡಾಮರು ದಾರಿ ಸೇರಿದೆವು.
ಆವಶ್ಯಕತೆಗಳು ಅಸಮರ್ಥನೀಯವಾಗಿ ಚಟಗಳಾಗಿ ಬೆಳೆಯುವುದು ನಾಗರಿಕತೆಯ ಅವಲಕ್ಷಣವೇ ಇರಬೇಕು. ಇದಕ್ಕೆ ಕಿರು ಉದಾಹರಣೆ ಚಹಾ (ಅಥವಾ ಕಾಫಿ, ತಂಪು/ಬಿಸಿ ಇತ್ಯಾದಿ ಪಾನೀಯಗಳ ನಿರಂತರ) ಸೇವನೆ. ನಾವೂ ನಾಗರಿಕರೆ! ನಿಟ್ಟೂರಿನಲ್ಲೊಂದು ಹೋಟೆಲ್ ಕಂಡದ್ದೇ ಏನೋ ಸಾಧಿಸಿದವರಂತೆ, ಒಂದೇ ಗಂಟೆಯ ಹಿಂದೆ ಬೆಟ್ಟದಲ್ಲಿ ಅಮಿತ ಇಡ್ಲಿ ಕಬಳಿಸಿದ್ದೆಲ್ಲ ಮರವೆಗೆ ಸಂದಂತೆ ನುಗ್ಗಿಯೇ ಬಿಟ್ಟೆವು. ಹಳ್ಳಿ ಹಿನ್ನೆಲೆಗೆ ಸಹಜವಾಗಿ ಮಸಿಹಿಡಿದ ಗೋಡೆ, ಬಲೆ ನೇಲುವ ಮಾಡು, ಒರಟು ಬೆಂಚು ಡೆಸ್ಕು, ನೊಣ ಮುತ್ತಿದ ಗಾಜಿನ ಗೂಡಿನೊಳಗೆ ಅವಲಕ್ಕಿ ಉಪ್ಪಿಟ್ಟಿನ ಗುಡ್ಡೆ! ನಾವು ಹೋಟೆಲಿಗೆ ಕೃಪೆ ಮಾಡುವವರಂತೆ ಇದ್ದ ಸ್ಥಳವನ್ನೆಲ್ಲ ಆಕ್ರಮಿಸಿದೆವು. ಆರೋಗ್ಯ ಇಲಾಖೆಯವರಂತೆ ಜಗ್ಗಿನಲ್ಲಿಟ್ಟ ಕುಡಿ-ನೀರಿನ ಪಾರದರ್ಶಕತೆಯ ಬಗ್ಗೆ ಸಂದೇಹಿಸಿ, ಒಣಗಿಕೊಂಡೇ ಇದ್ದ ಮೇಜನ್ನು ಮತ್ತೆರಡು ಸಲ ಒರೆಸಿ ‘ಬಿಸಿ ಏನುಂಟು ಪ್ರಶ್ನೆ ಇಟ್ಟೆವು. ಸಹಜವಾಗಿ ಕೇಳಿದ ಇಡ್ಲಿ, ಬನ್ನುಗಳಿಗೆ ಯಾರೋ ಒಬ್ಬಿಬ್ಬರ ಉದಾಸೀನದ ಬೇಡಿಕೆಯೂ ಹೋಯ್ತು. ಆದರೆ ಮೂಗರಳಿಸುವ ಪರಿಮಳದ ಬಿಸಿ ಸಾಂಬಾರಿನ ಮಡುವಿನೊಳಗೆ ಅಚ್ಚ ಬಿಳಿಯ ಹೂಮೃದುವಿನ ಇಡ್ಲಿ ಅರೆಮುಳುಗಿದಂತಿರಲು, ಅದರ ನೆತ್ತಿ ತಂಪಾಗಿಸುತ್ತಿತ್ತು ಕಮ್ಮನೆಯ ಅಪ್ಪಟ ಬೆಣ್ಣೆ. ಕರಿಗೆಂಪು ಮಿರುಗುತ್ತಾ ನಸುಕಂಪ ಸೂಸುತ್ತಾ ಒಂದಿಷ್ಟು ನೆಗ್ಗಿಲ್ಲದೆ ಉಬ್ಬಿ ಹಬೆಯಾಡುತ್ತಿದ್ದ, ಹಿಸಿದರೆ ರುಚಿಯೇ ಪದರಗಟ್ಟಿದಂತಿದ್ದ ಬನ್ನು ಅವರಿವರೆದುರು ಬಂತು. ರಸಿಕರ ವಾಹ್, ಆಹ್ಗಳ ಅಲೆ ಏಳುತ್ತಿದ್ದಂತೆ ಎಲ್ಲರಿಗೂ ಹುರುಪು ಬಂತು. ಇಲ್ಲೊಂದು ಇಡ್ಲಿ, ಮತ್ತೊಂದು ಬನ್ನು, ಅಲ್ಲೊಂದು ಇಡ್ಲಿ ಮೇಲೊಂದು ಬನ್ನೆಂದು ಎಲ್ಲಕ್ಕೂ ಬೆಣ್ಣೆಯೆಂದೂ ಬೇಡಿಕೆಗಳ ಬಾಲ ಹನೂಮಂತನದ್ದೇ ಆಯ್ತು. ಮುಕ್ತಾಯಕ್ಕೆ ಕಾಫಿ ಚಾ ಹೊಯ್ದವರೂ ಲೋಟ ಸಂಖ್ಯೆ ಇಮ್ಮಡಿಸಿದ್ದು ಕೇವಲ ಚಲಪಕ್ಕೆ ಮಾತ್ರ. ಎಲ್ಲ ಮುಗಿದು ಹೊಟ್ಟೆ ಭಾರವೇನೋ ಹೆಚ್ಚಿದರೂ ಆಶ್ಚರ್ಯಕರವಾಗಿ ಕೊನೆಗೆ ಬಂದ ಬಿಲ್ಲು ರಾಮನ ಕೈಯ ಶಿವಧನುಸ್ಸಾಗಿತ್ತು! [ಮುಂದೆ ಎಷ್ಟೋ ಸಲ ಅತ್ತ ಹಾದು ಹೋಗುವಾಗ ನಿಟ್ಟೂರಿನ ಬನ್ಸ್ ನಾವು ತಿನ್ನದಿದ್ದರೆ ಬೈಕೇ ಮುಷ್ಕರ ಹೂಡುವ ಸ್ಥಿತಿ ಬಂದಿತ್ತು.]
ಕೊಡಚಾದ್ರಿ ಶಿಖರವಲಯದಲ್ಲಿ, ತಿಳಿ ವಾತಾವರಣದ ದಿನಗಳಲ್ಲಿ ಪಶ್ಚಿಮಾಭಿಮುಖರಾದವರಿಗೆ ಕಡಲ ವಿಸ್ತಾರ ಕಣ್ಣು ತುಂಬುವುದು ನಿಶ್ಚಿತ. ಆದರೆ ಉತ್ತರ-ಪೂರ್ವಕ್ಕೆ ದೃಷ್ಟಿ ಹರಿಸಿದರೂ ಅದೇನು ನೀರ ಹರಹು, ಬಂಗಾಳಕೊಲ್ಲಿಯೇ ಮೇರೆವರಿದಿರಬಹುದೇ? ಇಲ್ಲ, ಇದೇ ಶರಾವತಿ ಪಾತ್ರೆ, ಲಿಂಗನಮಕ್ಕಿಯ ಅಡ್ಡಗಟ್ಟೆ ಕಟ್ಟಿಕೊಟ್ಟ ಸಾಗರ! ವಾರಾಹಿಗಿಂತ ಬಲು ಹಿಂದೆ, ಬಹು ಹೆಚ್ಚು ವ್ಯಾಪ್ತಿಯ ಭೂಮಿ, ಕೃಷಿ, ಸಂಸ್ಕೃತಿ ಎಲ್ಲವನ್ನೂ ಗುಳುಂಕರಿಸಿದ ಖ್ಯಾತಿ ಇದರದು. ಪರಿಸರ ರಕ್ಷಣೆ, ಮಾಹಿತಿ ಹಕ್ಕು, ಸಾರ್ವಜನಿಕ ಹಿತಾಸಕ್ತಿ, ಬಳಕೆದಾರರ ಜಾಗೃತಿ, ಮಾನವೀಯತೆ ಮುಂತಾದ ಪ್ರಜಾಸತ್ತೆಯ ಸಾರ್ವಕಾಲಿಕ ಮೌಲ್ಯಗಳಿನ್ನೂ ಮೂರ್ತವಾಗದ ದಿನಗಳು. ಅಲ್ಲಿ ಉಳಿದುಕೊಂಡ ನಡುಗಡ್ಡೆಗಳಲ್ಲಿ, ಕೃತಕ ನೀರಂಚುಗಳಲ್ಲಿ ಅಳಿದುಳಿದ ಜನಜೀವನದೊಡನೆ ಅಪಾರ ಜೀವ ಪರಿಸರ ಅನಿವಾರ್ಯ ಮತ್ತು ಮೂಕ ಹೊಂದಾಣಿಕೆಗಿಳಿದು ಹಲವು ದಶಕಗಳೇ ಸಂದು ಹೋದವು. ನಗರ ಸುಂದರೀಕರಣದಲ್ಲಿ ಚತುಷ್ಪಥ ಕಾಂಕ್ರೀಟ್ ರಸ್ತೆಯ ವಿಭಾಜಕದ ಉದ್ದಕ್ಕೆ ಹದಿನೈದು ಅಡಿಗೊಂದು ಇರ್ತಲೆ ಕಂಬ ಊರಿ ರಾತ್ರಿಯಿಡೀ ಕೆಂದೀಪ ಉರಿಸುತ್ತೇವೆ (ಲೈನ್ ಮ್ಯಾನ್ ಮರೆತರೆ ಇಪ್ಪತ್ನಾಲ್ಕು ಗಂಟೆಯೂ). ಇದರ ಹಿಂದೆ ಯಾವೆಲ್ಲಾ ತ್ಯಾಗಗಳಾಗಿರಬಹುದು ಎಂಬ ಪರಿಚಯವನ್ನು ತುಸುವಾದರೂ ಮಾಡಿಕೊಳ್ಳಲು ನಾವೊಮ್ಮೆ ಈ ಮನುಷ್ಯಕೃತ ಮುಳುಗಡೆಯ ನಡುವಣ ಒಂದು ಜಾಡಿನಲ್ಲಿ, ಒಂದು ಮಳೆಗಾಲದಲ್ಲಿ ಬೈಕ್-ಯಾತ್ರೆ ನಡೆಸಿದ್ದೆವು. ವಾಸ್ತವದಲ್ಲಿ ಅದು ‘ಶೋಕಯಾತ್ರೆಯಂತೇ ಕಾಣಿಸಿತ್ತು. ಆಗ ಕಾಣಲಾಗದ ಇನ್ನಷ್ಟು ಭಾಗಗಳನ್ನು ಈಗ ನೋಡಲು ನಿಟ್ಟೂರಿನಿಂದ ಬಲಕ್ಕೆ ಕವಲೊಡೆದ ಮಣ್ಣದಾರಿಗಿಳಿದೆವು.
ಭಾರತ ಹಳ್ಳಿಗಳ ನಾಡು ಎನ್ನುವುದು ಉಕ್ತಿ ಸೌಂದರ್ಯಕ್ಕೆ ನಿಜ. ವಾಸ್ತವದಲ್ಲಿ ನಮ್ಮ ಸಾಧನೆ – ನಗರ ಲಕ್ಷ್ಯದ ಬೀಡು, ಹಳ್ಳಿಗಳನ್ನು ಕೊಂಪೆಗಳತ್ತ ದೂಡು! ನಗರಗಳ ಮನೆ ಮನ ಬೆಳಗುವ, ಉದ್ದಿಮೆ ಸಂಚಾರ ನಡೆಸುವ ಸೌಭಾಗ್ಯಕ್ಕಾಗಿ ಇಲ್ಲಿ ಮುಳುಗಿದ ಜನ ಇನ್ನೂ ಮಿಣುಕು ದೀಪಗಳಲ್ಲಿ ಬಳಲುವ, ಗೊಸರು ದಾರಿಗಳಲ್ಲಿ ಪಾದ ಕೀಳುವ, ಬಳಸಂಬಟ್ಟೆಗೆ ಹೆದರಿ ಎಲ್ಲೆಲ್ಲೋ ಕಡವಿನ ಕಟ್ಟೆಗಳಲ್ಲಿ ಆಯುಷ್ಯ ಕಳೆಯುವ ದೃಶ್ಯಗಳನ್ನು ಮುಂದಿನ ಮೂರು ಕಿಮೀ ಉದ್ದಕ್ಕೆ, ಅಂದರೆ ಲಿಂಗದಕಾಯ್ ಎಂಬ ಹಳ್ಳಿಯವರೆಗೂ ಕಂಡೆವು. ನಮ್ಮ ಎರಡು ದಿನಗಳ ಸವಾರಿಯಿಂದ ಬಳಲಿದ್ದ ಬೈಕ್ಗಳನ್ನು ಮತ್ತಷ್ಟು ಗೊಸರು ಹಾಳುದಾರಿಗಳಲ್ಲಿ ಬಳಲಿಸಿ ವಿಳಂಬಿಸುವುದು ಅಥವಾ ಮಂಗಳೂರಿಗೆ ಮರಳುವ ದಾರಿಗೆ ತೊಂದರೆ ತಂದುಕೊಳ್ಳುವ ಧೈರ್ಯ ಸಾಲದೇ ‘ನಿಟ್ಟುಸಿರೂರಿಗೆ’ ಮರಳಿದೆವು. ಸಂದ ಒಂದು ಗಂಟೆಯ ಅವಧಿಯಲ್ಲಿ ಖಾಲಿಯಾದ ಹೊಟ್ಟೆಯಂಶಕ್ಕೆ ಮತ್ತೆ ಇಡ್ಲಿ, ಬೆಣ್ಣೆ, ಬನ್ನು ಸೇರಿಸುವ ಆಮಿಷ ಹತ್ತಿಕ್ಕಿ, ಕೊಲ್ಲೂರಿನತ್ತ ಸಾಗಿದೆವು. ಅರಣ್ಯ ತಪಾಸಣಾ ಗೇಟು, ನಾಗೋಡಿ ದಾಟಿ ಸುಮಾರು ಎರಡು ಕಿಮೀ ಅಂತರದಲ್ಲಿ ಎಡಕ್ಕೆ ಕೊಡಚಾದ್ರಿಗೆ ಪಥಿಕರು ಬಳಸುವ ದಾರಿ ಸಿಕ್ಕಿತು.
ಅದು ಈ ಹಿಂದೆ ನಾವು ಬಳಸಿದ್ದೇ ಆದ್ದರಿಂದ ಉಪೇಕ್ಷಿಸಿದೆವು. ಅಲ್ಲೇ ಬಲಕ್ಕಿದ್ದ ಇನ್ನೊಂದು ಲಾರಿ, ಜೀಪುಗಳ ದಾರಿಯ ಅವಶೇಷ – ಕಬ್ಬಿಣದ ಅದುರು ಯೋಜನೆಯದ್ದಂತೆ. ನಮ್ಮ ಕುತೂಹಲ ಅತ್ತ ತಿರುಗಿಸಿತು. ರಚನೆ ವಿಶಾಲವಾಗಿತ್ತು. ತೀವ್ರವಲ್ಲದ ಏಕ ರೀತಿಯ ಏರು, ಜಲ್ಲಿ ಹಾಸು ಕಂಡಿತ್ತು. ವಾಹನವಿರಲಿ, ಜನಗಳ ಬಳಕೆಯೂ ತೀರಾ ವಿರಳವಿದ್ದುದರಿಂದಲೋ ಏನೋ ಅಲ್ಲಲ್ಲಿ ಕೊರಕಲು ಬಿದ್ದು, ಜಲ್ಲಿ ಕೆದರಿ ಹರಡಿಹೋಗಿತ್ತು. ಅದರ ಮೇಲೆ ತರಗೆಲೆ, ತೆಳು ಕೆಸರಪದರ ಹರಡಿ ಕುಂದಾದ್ರಿಯ ದಾರಿಯನ್ನೇ ನೆನಪಿಸುವಂತಿತ್ತು. ಎರಡೂ ಬದಿಯ ದಟ್ಟ ಕಾಡಿನ ಬಳ್ಳಿಗೈಗಳು ಪರಸ್ಪರ ಒಂದಾಗುವ ಸಂದೇಶ ಕಳಿಸುವಂತಿತ್ತು. ನಡುವೆ ನೆಲದಲ್ಲೂ ಅಸಂಖ್ಯ ಪೊದರುಗಳು ಹಬ್ಬಿ ಸಂಧಾನ ಶೀಘ್ರ ಫಲಕಾರಿಯಾಗುವ ಲಕ್ಷಣಗಳು ದಟ್ಟವಾಗುತ್ತ ಹೋದಂತೆ, ಸವಕಲು ಜಾಡಷ್ಟೇ ಉಳಿದಿತ್ತು. ನಿಗೂಢತೆಯನ್ನು ಅನಾವರಣಗೊಳಿಸುವ ನಮ್ಮ ಉದ್ದೇಶಕ್ಕೆ ಪೂರಕವಾಗಿ, ಮೋಡ ಮಂಜು ಕವಿದು ದಟ್ಟವಾಗುತ್ತ ಪಿರಿಪಿರಿ ಮಳೆಯೇ ಸುರಿಯತೊಡಗಿತು. ಸಹವಾರಿಗಳು ಇಳಿದು ಬಳ್ಳಿ ಪೊದರುಗಳನ್ನು ಸರಿಸುತ್ತಾ ಮುಂದಿನ ಜಾಡು ಸ್ಪಷ್ಟಪಡಿಸುತ್ತಿದ್ದಂತೆ ಒಂದೊಂದೇ ಬೈಕ್ ಅನುಸರಿಸತೊಡಗಿತು. ಹ್ಯಾಂಡಲ್ಲೇನೋ ಬಿಗಿಯಾಗಿಯೇ ಹಿಡಿಯುತ್ತಿದ್ದೆವು.
ಆದರೂ ಬೈಕುಗಳು ಕಾಲ್ತುರಿಸುವ ನಾಯಿಗಳಂತೆ ಹಿಂದಿನ ಚಕ್ರಗಳಿಂದ ಹುಲ್ಲಿನ ಎರಿ, ಕೆಸರು, ಸಣ್ಣಪುಟ್ಟ ಕಲ್ಲುಗಳನ್ನು ರಟ್ಟಿಸುತ್ತ, ‘ಅಂಡನ್ನು ಎಡಕ್ಕೊಮ್ಮೆ ಬಲಕ್ಕೊಮ್ಮೆ ತೊನೆಯುತ್ತಾ (ವೈಯ್ಯಾರ ಏನೂ ಇಲ್ಲ ಬಿಡಿ!) ಸಾಗಿದುವು. ನಮಗೋ ಎರಡೂ ಬದಿಗೆ ಕಾಲಿಳಿಬಿಟ್ಟು, ಅಗತ್ಯಕ್ಕೆ ತಕ್ಕಂತೆ ನೆಲ ಒದ್ದು ಮುಂದುವರಿಯುವ ಛಲ. ಆಗೀಗ ಪ್ಯಾಂಟುಮೀರಿ ಮುಳ್ಳುಗೀರುವುದು, ಚಾಚಿದ ಕಾಲಿಗೆ ಬಳ್ಳಿಯೋ ಕೋಲೋ ತೊಡರಿ ತಡವರಿಸುವುದು, ಕಡಿಮೆಯಾಗದಂತೆ ಜಿಗಣೆ ಸೇವೆಯೂ ಸೇರಿಕೊಳ್ಳುತ್ತಲೇ ಇತ್ತು. ದೇವಕಿ ಸಾಲಿನ ಮುಂದಾಳು. ಅವಳ ಭಯಗ್ರಸ್ತ ಕಣ್ಣಿಗೆ ಒಮ್ಮೆಗೆ ಕಿರಿದಂತರದಲ್ಲೇನು ಕಾಣಿಸಿತೋ ಏನೋ ಕಾಟಿ, ಕಾಟಿ ಎಂದು ಧ್ವನಿ ಏರಿಸಿ, ಹಿಂದೆ ಸರಿಯುತ್ತ, ಹಿಂಬಾಲಿಸುತ್ತಿದ್ದ ಬೈಕ್ ತಡೆಯಲು ನೋಡಿದಳು. ಆದರೆ ಬೈಕ್ ಸಂಭಾಳನೆಯಲ್ಲಿ ಪೂರ್ಣ ಮಗ್ನನಾಗಿದ್ದ ಪ್ರಸನ್ನನಿಗೆ ದಾಟಿ, ದಾಟಿ ಎಂದಂತನ್ನಿಸಿರಬೇಕು, ರೊಂಯ್ ರೊಂಯ್ ನುಗ್ಗಿಸಿದ. ಆದರೆ ಮತ್ತೂ ಹಿಂದಿನವರಿಗೆ ಅರ್ಥ ಹೊಳೆದು ಖಾಟಿಯಾ? ಎಲ್ಲೀ? ಎಂದಿತ್ಯಾದಿ ಬೊಬ್ಬೆ, ದಡಬಡ. ಅಲ್ಲೇನಿತ್ತೋ ಇಲ್ಲವೋ ಎಲ್ಲ ಮಂಗಮಾಯ.
[ಇಂದಿನ ಅರಿವಿನಲ್ಲಿ, ನಾವೆಷ್ಟು ಬಾಲಿಶವಾಗಿದ್ದೆವು ಎಂದು ನಗೆ ಬರುತ್ತದೆ. ಅಂದಿನ ನಮ್ಮ ಗದ್ದಲದಲ್ಲಿ ಯಾವುದೇ ಘನ ವನ್ಯ ಜೀವಿಗಳು ನಮ್ಮಿಂದ ಕನಿಷ್ಠ ಒಂದು ಕಿಮೀ ಅಂತರದಲ್ಲೂ ಸುಳಿದಿರಲಾರವು. ಅವಕ್ಕೇನು ಕಿವಿಗೆ ಬಡಿದ ಎಪ್ಫೆಮ್ ಗೂಟದ ಕಾಟವೇ ಬಗಲ ಮಿತ್ರನಿಗಿಂತ ಆಪ್ತವಾದ ಚರವಾಣಿ ಸಂಕಟವೇ!!]
ಎಲ್ಲರೂ ಮಳೆಕೋಟೇನೋ ಹಾಕಿಕೊಂಡೇ ಇದ್ದೆವು. ಆದರೆ ಬೈಕ್ ಸರ್ಕಸ್ಸಿನಲ್ಲಿ ಅದೂ ಅಲ್ಲಿಲ್ಲಿ ಹರಿದು ಒಳಾಗೆ ಪೂರಾ ಒದ್ದೆ ಮುದ್ದೆ. ಇದರೊಡನೆ ದಾರಿಯ ದುರ್ಗಮತೆಗೆ ಶರಣಾಗಿ (ಸುಮಾರು ಎರಡು ಕಿಮೀ ಸಾಗಿದ ಮೇಲೆ) ನಾವು ಬೈಕ್ಗಳನ್ನು ತ್ಯಜಿಸುವ ನಿರ್ಧಾರಕ್ಕೆ ಬಂದೆವು. ಅಸಮ ನೆಲದಲ್ಲಿ ಬೈಕ್ಗಳನ್ನು ಗಟ್ಟಿಯಾಗಿ ನಿಲ್ಲಿಸುವ ತಯಾರಿ ನಡೆಸಿದ್ದಂತೆ ಈಗ ಬೊಬ್ಬೆ ಹೊಡೆಯುವ ಸರದಿ ಪ್ರವೀಣನದ್ದು – ಆನೆ ಬಂತೂ ಆನೆ; ವಿಷಯ ಸಣ್ಣದಲ್ಲ! ಹಿಂದೆ ಅನಾವಶ್ಯಕ ಹುಯ್ಲಿನಿಂದ ‘ಪ್ರಾಕೃತಿಕ ಪರಿಸರದಲ್ಲಿ ಕಾಟಿ ಸೆರೆ ಹಿಡಿಯುವ ಅರವಿಂದರ ಹುಮ್ಮಸ್ಸಿಗೆ ಭಂಗವುಂಟಾಗಿತ್ತು. ಈಗ ಪ್ರಸಂಗ ಕೈಬಿಟ್ಟು ಹೋಗಬಾರದೆಂದು ಅವರು ಮುಂದೋಡಿದರೆ, ಪ್ರವೀಣಾದಿಗಳು ಭಯಗ್ರಸ್ತರಾಗಿ ಹಿಂದೋಡಿದರು. ಅಲ್ಪಾನುಭವಿಗಳು ಎರಡೂ ಭಾವಗಳನ್ನು ತೊಡೆದು, ಎಲ್ಲರೂ ಬೈಕುಗಳೊಡನೆ ಒಟ್ಟಾಗಲು, ಅವಶ್ಯಕತೆ ನೋಡಿಕೊಂಡು ಬೈಕ್ ಚಲಾಯಿಸಿ ಗದ್ದಲ ಹೆಚ್ಚಿಸಿ ಆನೆಯನ್ನು ಬೆದರಿಸಿ ಓಡಿಸುವ ನಿರ್ಧಾರಕ್ಕೆ ಬಂದರು. ಆದರೆ ಅಷ್ಟರಲ್ಲೇ ‘ಆನೆ ಪಟಾಕಿ ಠುಸ್ಸಾಗಿತ್ತು! ಕುಂಬಾಗಿ ತೊಗಟೆ ಕಳಚಿ ನಿಂತಿದ್ದೊಂದು ಭಾರೀ ಮರದಿಂದ ಇಳಿದ ಬೀಳಲುಗಳು ಮಂಜಿನ ಮಬ್ಬಿನಲ್ಲಿ ಪ್ರವೀಣನಿಗೆ ಆನೆಯಾಗಿ ತೋರಿತ್ತು. ಹೃದಯದ ತುಡಿತವನ್ನು ತಹಬಂದಿಗೆ ತಂದು ನಡಿಗೆ ಮುಂದುವರಿಸಿದೆವು.
ಪೊದರುಗಳನ್ನು ಮೈಯಲ್ಲಿ ಒತ್ತುತ್ತಾ ಮುಳ್ಳಸರಿಗೆಗಳನ್ನು ಹುಶಾರಾಗಿ ಸರಿಸುತ್ತಾ (ಕಡಿಯಲು ನಮ್ಮಲ್ಲಿ ಹತ್ಯಾರುಗಳೂ ಇರಲಿಲ್ಲ, ಪುರುಸೊತ್ತೂ ಇರಲಿಲ್ಲ) ಹೆಚ್ಚು ಕಡಿಮೆ ಮುಚ್ಚಿಯೇ ಹೋಗಿದ್ದ ದಾರಿಯನ್ನು ಬಿಡಿಸಿಕೊಳ್ಳುತ್ತ ನಡೆದೆವು. ಸ್ವಲ್ಪದರಲ್ಲೆ ಹೊಸ ಕಾಟದ ಅನುಭವ ಒಬ್ಬೊಬ್ಬರಿಗೆ ಅರಿವಾಗತೊಡಗಿತು; ಜಿಗಣೆ ಇಲ್ಲಿ ಸರ್ವಂತರ್ಯಾಮಿಯಾಗಿತ್ತು. ಅಭಯನ ನೆತ್ತಿಯಲ್ಲೂ ಜಿಗಣೆ ಗೇಣಿಕ್ಕುತ್ತ ‘ಸಿಕ್ಕಿಬಿದ್ದ ಮೇಲೆ ನಾವು ಮೂವರು ಒಂದು ಸ್ವಲ್ಪ ತೆರೆವಿನ ಸ್ಥಳದಲ್ಲಿ ಹಿಂದುಳಿಯುವುದು ಅನಿವಾರ್ಯವಾಯ್ತು. (ಅಭಯನ ಸಮಾಧಾನಕ್ಕೆ ಅಮ್ಮ, ಧೈರ್ಯಕ್ಕೆ ಅಪ್ಪ!) ಮುಂದುವರಿದ ಉಳಿದವರಿಗೆ ಮತ್ತೆ ಹತ್ತೇ ಮಿನಿಟಿನ ನಡಿಗೆಯಂತೆ. ಅಗಣಿತ ಹೊಂಡಗಳು, ಕೆಲವು ಹಾಳುಬಿದ್ದ ಕಟ್ಟಡಗಳು – ಎಲ್ಲ ನಿರ್ಜನ, ಗತವೈಭವ ಮಾತ್ರ. ಅಕ್ಷರಶಃ ಗೋರಿಗಿಟ್ಟ ಹೂವಿನಂತೆ ಅಲ್ಲಿ ಎಲ್ಲೆಲ್ಲೂ ಹಬ್ಬಿದ್ದ ನೆಲನೈದಿಲೆ ಹೂವರಳಿಸಿದ ಚಂದ ನೋಡಿಯೇ ಅನುಭವಿಸಬೇಕಂತೆ. ಕಾಡಿನ ಗಹನಾಂತರಾಳದಲ್ಲಿ ಈ ಸೌಂದರ್ಯ ಸೂರೆ ಯಾಕೋ ಎಂದು ಒಮ್ಮೆ ಮನಸ್ಸಿಗೆ ಕಾಣುತ್ತದೆ. ಆದರೆ ಮರುಕ್ಷಣದಲ್ಲಿ ಅದರ ಧನ್ಯತೆಯನ್ನು ನಿರ್ಧರಿಸುವ ಮನುಷ್ಯನ ಅಳತೆ ಇಂಚು ಅಡಿಗಳಲ್ಲಿದ್ದರೆ ಪ್ರಕೃತಿಯದು ಮೀಟರ್ ಕಿಲೋಮೀಟರಿನಲ್ಲಿದೆಯಲ್ಲವೇ ಎಂದು ಅರಿವಾಗದಿರದು. ಅರ್ಧ ಗಂಟೆಯೊಳಗೆ ಮತ್ತೆ ಎಲ್ಲ ಒಂದಾಗಿ ಬೈಕಿಗೂ ಡಾಮರು ದಾರಿಗೂ ಮರಳಿದೆವು.
ದಾರಿಯಲ್ಲಿ ಮೊದಲ ಮಹತ್ತರ ಕೆಲಸ ಇಂಬುಳ ಮುಕ್ತಿ. ನಡುಮಾರ್ಗದಲ್ಲಿ ನಿಂತು, ಶೂ ಕಳಚಿ, ಕನಿಷ್ಠ ಬಟ್ಟೆಯವರೆಗೆ ಕಳೆದು ಶೋಧಿಸಿದೆವು. ಶೂ ಕಣ್ಣಿನೊಳಗಿಣುಕಿದ, ಕಾಲ್ಚೀಲದ ಮೇಲೆ ಜೊಂಪೆಗಟ್ಟಿದ, ಬೆರಳ ಸಂದುಗಳಲ್ಲಿ ರಕ್ತಕ್ರಾಂತಿ ಮಾಡುವ ಜಿಗಣೆಗಳ ಅನುಭವ ನಮಗೇನೂ ಹೊಸತಲ್ಲ. ಪ್ಯಾಂಟಿನ ಕಾಲೆತ್ತಿದಂತೆಲ್ಲಕಣಕಾಲು, ಮೀನಖಂಡ, ಮೊಣಕಾಲ ಅಳ್ಳೆ, ತೊಡೆಯಲ್ಲೂ ವಿವಿಧ ಗಾತ್ರದಲ್ಲಿ ಜೋಲುತ್ತಿದ್ದ ಜಿಗಣೆಗಳ ಕೊಯ್ಲು ಮಾಡುವಾಗ ಮತ್ತೂ ಮೇಲಿನ ಸ್ಥಿತಿ ಊಹಿಸಿಯೇ ಕಳವಳಿಸಿದೆವು. ಹಾಗೆಂದು ನಡುದಾರಿಯಲ್ಲಿ ನಿಂತು ಅದನ್ನು ಶೋಧಿಸುವ ಹಾಗೂ ಇಲ್ಲ; ಎಷ್ಟಿದ್ದರೂ ಅದು ಅಪರೂಪಕ್ಕೆ ಕಾರೋ ಬಸ್ಸೋ ಓಡಾಡುವ ಸಾರ್ವಜನಿಕ ದಾರಿ. ಡಾಮರು ಬಿಟ್ಟು ಬದಿಗೆ ಸರಿದರೆ ಮತ್ತಷ್ಟು ಹೊಸ ರಕ್ತಸಂಬಂಧಿಗಳು ತಗುಲಿಕೊಳ್ಳುವ ಭಯದಿಂದ ಅನಿವಾರ್ಯ ಉದಾರಿಗಳಾದೆವು. ವಾಸ್ತವದಲ್ಲಿ ಜಿಗಣೆಗಳು ಒಂದು ಪಾನಕ್ಕಷ್ಟೇ ಕಚ್ಚುತ್ತವೆ, ಹೊಟ್ಟೆ ತುಂಬಿದ್ದೇ ಕಳಚಿಕೊಳ್ಳುತ್ತವೆ. ನಮ್ಮ ಮೈಮೇಲಿದ್ದ ಅಷ್ಟೂ ಜಿಗಣೆ ಕುಡಿದರೂ ಆರೋಗ್ಯವಂತರು ರಕ್ತದಾನ ಮಾಡಬಹುದಾದ ಮಿತಿಯಿಂದ ತುಂಬಾ ಕೆಳಗೇ ಇರುತ್ತದೆನ್ನುವುದು ನಮಗೆ ನಿಶ್ಚಿತ. (ವ್ಯಂಗ್ಯ ಭಾಷೆಯಲ್ಲಿ ಅಧಿಕಾರಾಪನ್ನರ ಲೋಲುಪತೆಯನ್ನು ಜಿಗಣೆಗೆ ಹೋಲಿಸುವುದು ತಪ್ಪು; ಜಿಗಣೆಗೆ ಅವಮಾನ!) ಮತ್ತೆ ಮೇಲೆ ಕಂಕುಳಿನಲ್ಲಿ, ಬೆನ್ನಿನಲ್ಲಿ, ಕುತ್ತಿಗೆಯಲ್ಲಿ, ವಾಚಿನ ಪಟ್ಟಿಯ ಸಂದಿನಲ್ಲಿ, ಕಿವಿಯ ಹಿಂಬದಿಯಲ್ಲಿ, ತಲೆಗೂದಲಿನಲ್ಲೂ ನಾವು ಜಿಗಣೆ ಸಮೃದ್ಧಿ ಇಲ್ಲಿ ಕಂಡಿದ್ದೇವೆ. ಈ ಯಾನದಲ್ಲೇ ನಾವು ಹೊಸೆದ ಪ್ರಾಸ – ಇಂಬುಳಾ ಇಂಬುಳಾ! ಎಲ್ಲಿ ನೋಡಿದ್ರು ಇಂಬುಳಾ!… ಕೊಡ್ಬೇಡಿದ್ಕೆ ನೀ ಸಂಬುಳಾ!, ಅಕ್ಷರಶಃ ಅನುಭವದ ಪಾಕ!
ಜಿಗಣೆ ನಿವಾರಣಾ ಯಜ್ಞ ಮುಗಿದಾಗ ಗಂಟೆ ಅಪರಾಹ್ನ ಮೂರಾಗಿತ್ತು. ನಿಟ್ಟೂರ ‘ಹೊಟ್ಟೆ ಪ್ಯಾಕ್ ನಿಡಿದು ದೂರಕ್ಕೆ ಬರುವಷ್ಟಾಗಿದ್ದುದರಿಂದ ಯಾರಿಗೂ ಊಟದ ಚಿಂತೆಯಾಗಿರಲಿಲ್ಲ. ಮತ್ತೆ ಬಿಟ್ಟು ಬಿಟ್ಟು ಕಾಡುತ್ತಿದ್ದ ಸಣ್ಣ ಮಳೆ, ದಾರಿಯ ಗುಂಡಾಂತರಗಳನ್ನು ಅಂದಾಜಿಸಿ ಮಂಗಳೂರ ದಾರಿಯಲ್ಲಿ ಚುರುಕಾದೆವು. ಕೊಲ್ಲೂರು, ವಂಡ್ಸೆಗಳಿಗಾಗಿ ಕುಂದಾಪುರದವರೆಗೆ ಅವಿರತ ಓಟ. ಅಲ್ಲಿ ಕಾಫಿ ತಿಂಡಿಗಷ್ಟೇ ಬಿಡುವು. ಮತ್ತೆ ಹೆಚ್ಚು ಹೊತ್ತು ದಿನದ ಬೆಳಕುಳಿಯದಿದ್ದರೂ ಅವಸರಕ್ಕೆ ಬುದ್ಧಿಯೊಪ್ಪಿಸದೆ, ಶಿಸ್ತಿನ ಸಾಲಿನಲ್ಲಿ ಹೆದ್ದಾರಿಯನ್ನೇ ಅನುಸರಿಸಿದೆವು. (ಇಲ್ಲೇ, ಈ ಮೊದಲು ಹೇಳಿದಂತೆ, ಕೊಡಚಾದ್ರಿಯಿಂದ ನಮ್ಮಲ್ಲಿ ಮಂಗಳೂರಿನ ಕಾರ್ಯಾವಸರದ ಮಾತು ಹೇಳಿ ಮುಂದೋಡಿದ್ದ ತರುಣರ ಕಳ್ಳಾಟ ನಮ್ಮ ಅನುಭವಕ್ಕೆ ಬಂತು!) ಉಡುಪಿಯಾಗಿ ಪಡುಬಿದ್ರೆ ಹಾಯುವಾಗ ಎರಡು ದಿನಗಳ ಹಿಂದಿನ ಸ್ಮರಣೆಯಾಗದಿರಲಿಲ್ಲ. ರಾತ್ರಿ ಒಂಬತ್ತರ ಸುಮಾರಿಗೆ ಸುಖಮುಖವಾಗಿ ಮಂಗಳೂರು ಸೇರುವಾಗಲಂತೂ ನೆನಪಿನ ಕಳಸ ಸಮೃದ್ಧವಾದ್ದಕ್ಕೆ ಇಲ್ಲಿ ಹಂಚಿದ್ದೇನೆ ನಿಮಗಿಷ್ಟು ಕುಡ್ತೆ! ಕೊಡ್ತೀರಲ್ಲಾ ಪ್ರತಿಕ್ರಿಯೆಯ ಪಾವಾಣೆ?
Dear Ashokanna… Sorry to hear about Parameshwara Bhat's demise. If not for him and his family visitors like us would have ended up eating some stale bread on top of Kotachadri..Ha ha Even I remember hearing his dialogue… Nimmanu Yellio kanda haagiddeyella!
ತುಂಬಾ ಸೊಗಸಾದ ವಿವರಣೆ ಮತ್ತು ಅನುಭವದ ಹಂಚಿಕೆ. ನನಗೆ ನೀವು ಬಳಿಸಿರುವ ಪದ ” ಸಾವಿನ ಪರ್ಯಾಯ ಸ್ಥಿತಿ ” ತುಂಬ ರಂಜಕವಾಗಿದೆ ಎನಿಸಿತು. ಇದನ್ನು ಒದಿದ ಮೇಲೆ ನನಗೂ ಆ ಜಾಗಗಳಿಗೆ ಹೋಗುವ ಆಸಿ ಹುಟ್ಟುವ ಸಾದ್ಯತೆ ಇದೆ. ನಿಮಗೆ ನನ್ನ ಅಭಿನಂದನೆಗಳು. – ಮಂಜುತಿಮ್ಮ
ಲೇಖನ ತುಂಬಾ ಚೆನ್ನಾಗಿದೆ ಮತ್ತು ಅನುಭವ ಕಣ್ಣಿಗೆ ಕಟ್ಟುವಂತಿದೆ . ಭಟ್ಟರ ಬಗ್ಗೆ ಕೇಳಿದ್ದೆ ಓದಿದ ಮೇಲೆ ಪರಿಚಯ ಆದಂತಾಯ್ತು. ಈ ಸಾಲುಗಳು ಮನಸ್ಸಿಗೆ ತುಂಬಾ ತಾಕಿತು “…… ಇದೇ ಶರಾವತಿ ಪಾತ್ರೆ, ಲಿಂಗನಮಕ್ಕಿಯ ಅಡ್ಡಗಟ್ಟೆ ಕಟ್ಟಿಕೊಟ್ಟ ಸಾಗರ! ವಾರಾಹಿಗಿಂತ ಬಲು ಹಿಂದೆ, ಬಹು ಹೆಚ್ಚು ವ್ಯಾಪ್ತಿಯ ಭೂಮಿ, ಕೃಷಿ, ಸಂಸ್ಕೃತಿ ಎಲ್ಲವನ್ನೂ ಗುಳುಂಕರಿಸಿದ ಖ್ಯಾತಿ ಇದರದು. ಪರಿಸರ ರಕ್ಷಣೆ, ಮಾಹಿತಿ ಹಕ್ಕು, ಸಾರ್ವಜನಿಕ ಹಿತಾಸಕ್ತಿ, ಬಳಕೆದಾರರ ಜಾಗೃತಿ, ಮಾನವೀಯತೆ ಮುಂತಾದ ಪ್ರಜಾಸತ್ತೆಯ ಸಾರ್ವಕಾಲಿಕ ಮೌಲ್ಯಗಳಿನ್ನೂ ಮೂರ್ತವಾಗದ ದಿನಗಳು. ಅಲ್ಲಿ ಉಳಿದುಕೊಂಡ ನಡುಗಡ್ಡೆಗಳಲ್ಲಿ, ಕೃತಕ ನೀರಂಚುಗಳಲ್ಲಿ ಅಳಿದುಳಿದ ಜನಜೀವನದೊಡನೆ ಅಪಾರ ಜೀವ ಪರಿಸರ ಅನಿವಾರ್ಯ ಮತ್ತು ಮೂಕ ಹೊಂದಾಣಿಕೆಗಿಳಿದು ಹಲವು ದಶಕಗಳೇ ಸಂದು ಹೋದವು. ನಗರ ಸುಂದರೀಕರಣದಲ್ಲಿ ಚತುಷ್ಪಥ ಕಾಂಕ್ರೀಟ್ ರಸ್ತೆಯ ವಿಭಾಜಕದ ಉದ್ದಕ್ಕೆ ಹದಿನೈದು ಅಡಿಗೊಂದು ಇರ್ತಲೆ ಕಂಬ ಊರಿ ರಾತ್ರಿಯಿಡೀ ಕೆಂದೀಪ ಉರಿಸುತ್ತೇವೆ (ಲೈನ್ ಮ್ಯಾನ್ ಮರೆತರೆ ಇಪ್ಪತ್ನಾಲ್ಕು ಗಂಟೆಯೂ). ಇದರ ಹಿಂದೆ ಯಾವೆಲ್ಲಾ ತ್ಯಾಗಗಳಾಗಿರಬಹುದು ಎಂಬ ಪರಿಚಯವನ್ನು ತುಸುವಾದರೂ ಮಾಡಿಕೊಳ್ಳಲು ನಾವೊಮ್ಮೆ ಈ ಮನುಷ್ಯಕೃತ ಮುಳುಗಡೆಯ ನಡುವಣ ಒಂದು ಜಾಡಿನಲ್ಲಿ, ಒಂದು ಮಳೆಗಾಲದಲ್ಲಿ ಬೈಕ್-ಯಾತ್ರೆ ನಡೆಸಿದ್ದೆವು. ವಾಸ್ತವದಲ್ಲಿ ಅದು ‘ಶೋಕಯಾತ್ರೆಯಂತೇ ಕಾಣಿಸಿತ್ತು.
Aha aa Buns with benne on top !! aa Jigane bites ! All very memorable Ashokere. Thanks for bringing back those ultimate moments back to life. That was my first trek / ride with you… Aug 13,14 & 15th 1989. Also i remember Prasanna bathing in the ice cold waters of the pond on top of Kundadri betta. I have visited Kodachadri many many times after that. The last one was a year ago. And that was just after a few days of the demise of Parameswara Bhatru. But now things are desperate on top. There was a total of over a HUNDRED JEEPS which was parked on top, going up and down the crazy roads. It has become a HUGE tourist DUSTBIN. !!!
Nicely written…Girish, Bajpe
ಆಹ್…ಪ್ರವಾಸಕಥನದ ಒಂದು ಉತ್ತಮ್ ಮಾದರಿ… ! 🙂