(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ನಾಲ್ಕು)

ಅಲಿಪಿರಿ ಮೆಟ್ಟಿಲಸಾಲು ಏರುವ ತಿರುಮಲದ ಮುಖ ಪ್ರಾಕೃತಿಕವಾಗಿ ತೀವ್ರ ಇಳುಕಲಿನ ಮತ್ತು ಬಹ್ವಂಶ ಹುಡಿ ಕಲ್ಲೇ ಗಿಡಿದಂಥ ನೆಲ. ಆ ಸ್ಥಿತಿಗನುಗುಣವಾಗಿ ಗಟ್ಟಿ ಕುಳ್ಳ ಮರಗಳೂ ದಟ್ಟ ಕುರುಚಲ ಕಾಡೂ ಸಹಜವಾಗಿ ವ್ಯಾಪಿಸಿವೆ. ಆದರೆ ಭಕ್ತಾದಿಗಳ ಆವೇಶದಲ್ಲಿ ಅಗ್ನಿ ಆಕಸ್ಮಿಕಗಳು ಸಂಭವಿಸದಂತೆ ಮೆಟ್ಟಿಲಸಾಲಿನ ಎರಡು ಪಕ್ಕಗಳಲ್ಲಿ ಸುಮಾರು ಐವತ್ತಡಿ ದೂರದವರೆಗೂ ಪೊದರು, ಉದುರು ದರಗು ಕಡ್ಡಿಗಳೆಲ್ಲವನ್ನು ಸವರಿ ತೆರವುಗೊಳಿಸಿದ್ದಾರೆ. ಉಳಿದ ಮರಗಳಷ್ಟೂ ಮೆಟ್ಟಿಲ ಸಾಲಿಗೆ ಬಿಸಿಲ ಗಾರು ತಟ್ಟದಂತೆ ನೋಡಿಕೊಳ್ಳುತ್ತವೆ. ಹೀಗಾಗಿ ಬೇಸಗೆಯ ಅಪರಾಹ್ನವನ್ನೇ ನಾವು ಆಯ್ದುಕೊಂಡಿದ್ದರೂ ನಮ್ಮ ಆರೋಹಣ ರಮ್ಯವಾಗಿತ್ತು. ಟಿಟಿಡಿಯೇನೋ ಬೆಳಿಗ್ಗೆ ಆರರಿಂದ ಸಂಜೆ ಆರರೊಳಗಷ್ಟೇ ಇಲ್ಲಿ ಸಂಚಾರ ಪ್ರಶಸ್ತ ಎಂದು ಸೂಚಿಸುತ್ತದೆ. ಆದರೆ ಭಕ್ತಾದಿಗಳು ದಿನದ ಇಪ್ಪತ್ನಾಲ್ಕೂ ಗಂಟೆ ಏರಿಳಿಯುತ್ತಲೇ ಇರುತ್ತಾರಂತೆ. (ಹಸಿವು ಶೌಚಗಳಿಗೆ ವ್ಯವಸ್ಥೆ, ಮೆಟ್ಟಿಲ ಶುಚಿ ಗಮನಿಸಿ ಎಷ್ಟೋ ಯಾತ್ರಿಗಳು ಅವೇಳೆಯಲ್ಲಿ ಅಲ್ಲಲ್ಲೇ ಧಾರಾಳ ಮಲಗುವುದೂ ಇದೆಯಂತೆ.) ನಿಜದಲ್ಲಿ ಅಲ್ಲಿನ ರಾಷ್ಟ್ರೀಯ ಉದ್ಯಾನವನದ ಸ್ಥಿತಿಯನ್ನೂ ಗ್ರಹಿಸಿ ಹೇಳುವುದಾದರೆ ಅವೇಳೆಯ ಸಂಚಾರ ಅಥವಾ ವಾಸ್ತವ್ಯ ಸೂಕ್ತವಲ್ಲ. ವನ್ಯ ಮೃಗಗಳ ಮುಖಾಮುಖಿ ನಿರಾಕರಿಸುವಂತಿಲ್ಲ. ಅದಕ್ಕೂ ಹೆಚ್ಚಿನದು ಮನುಷ್ಯರದೇ ಕ್ರೌರ್ಯಗಳನ್ನು ಹೀಗೆ ಎಂದು ಊಹಿಸುವುದಕ್ಕಾದೀತೇ?!

ನಾನು ಮತ್ತು ದೇವಕಿ ಆರಾಮವಾಗಿ ಮೆಟ್ಟಿಲ ಸಾಲು ಏರುತ್ತ ಸಾಗಿದೆವು. ಪ್ರತಿ ಮೆಟ್ಟಿಲ ಅಂಚಿಗೂ ಅರಶಿನ, ಕುಂಕುಮದ ದ್ರವವನ್ನು ಮೆತ್ತಿ ವಂದಿಸುತ್ತ ಸಾಗುವವರು, ಪ್ರತಿ ಮೆಟ್ಟಿಲಿಗೂ ಕರ್ಪೂರದ ಬಿಲ್ಲೆಯಿಟ್ಟು ಉರಿಸುವವರು, ಗೋವಿಂದ ನಾಮಸಂಕೀರ್ತನೆ ಮಾಡುತ್ತ ಸಾಗುವವರೆಲ್ಲ ನಮಗೆ ಸಿಕ್ಕರು. ದೀರ್ಘದಂಡ ನಮಸ್ಕಾರದಿಂದ ತೊಡಗಿ ನಮಗೂಹಿಸಲೂ ಸಾಧ್ಯವಿಲ್ಲದಂಥ ದೈಹಿಕ ದಂಡನೆಯೊಡನೆ ಹರಿಕೆ ತೀರಿಸುತ್ತ ಸಾಗುವವರು ಇಲ್ಲೇನೂ ವಿರಳವಲ್ಲವಂತೆ; ನಮಗೆ ಸಿಗಲಿಲ್ಲ. (ಅದ್ಯಾರೋ ಇತಿಹಾಸ ಪ್ರಸಿದ್ಧ ದಾಸಶ್ರೇಷ್ಠರು ಪೂರ್ಣ ಮೊಣಕಾಲಿನಲ್ಲಿ ಹತ್ತಿದ್ದರಂತೆ. ಇನ್ಯಾರೋ ಇಡಿಯ ತಿರುಮಲ ಕ್ಷೇತ್ರವನ್ನು ಸಾಲಿಗ್ರಾಮವನ್ನಾಗಿ ಪರಿಗಣಿಸಿ ತಮ್ಮ ನಿತ್ಯದ ಶೌಚಾದಿಗಳಿಗೆ ಬೆಟ್ಟವಿಳಿದು ಹತ್ತುತ್ತಿದ್ದರಂತೆ) ನಮ್ಮ ದಾರಿಯಲ್ಲಿ ಓರ್ವ ತರುಣಿ ಗಟ್ಟಿಯಾಗಿ ಸ್ತೋತ್ರಪಾಠ ಒಪ್ಪಿಸುತ್ತ, ಪ್ರತಿ ಮೆಟ್ಟಲಿಗೂ ನಮಸ್ಕರಿಸುತ್ತ ಸಾಗಿದ್ದಳು.

ನಾನು ದೇವಕಿಯನ್ನು ನೆಪಮಾಡಿ, ಆ ತರುಣಿಯ ಕೃತಿಯನ್ನೂ ಸೇರಿಸಿದಂತೆ ಸಣ್ಣ ವಿಡಿಯೋ ದಾಖಲೀಕರಣ ನಡೆಸಿ, ಮುಂದುವರಿದೆ. ನಾವು ಸುಮಾರು ಮೂವತ್ತಡಿ ಮುಂದೆ ಹೋದಾಗ ಆಕೆ ನಮ್ಮನ್ನು ಗಮನಿಸಿರಬೇಕು. ಕೂಡಲೇ ಗೋವಿಂದ ನಾಮಸ್ಮರಣೆ ನಿಲ್ಲಿಸಿ “ಅಂಕಲ್”ಗೆ ಕರೆ ಕೊಟ್ಟಳು. ಏನಪ್ಪಾಂತ ವಿಚಾರಿಸಿದೆ. ನಾವಿಬ್ಬರೂ ಚಪ್ಪಲಿ ಹಾಕಿ ನಡೆದದ್ದು ಆಕೆಗೆ ಅಸಮಾಧಾನ ತಂದಿತ್ತು. ಅದನ್ನು ಹೇಳಿಕೊಂಡದ್ದಲ್ಲದೆ, ನಮ್ಮದು ‘ಪಾಪಕಾರ್ಯ’ ಎಂದು ಅಧಿಕಾರಯುತವಾಗಿ ದೂಷಿಸಿದಳು. ನಮ್ಮ ‘ಆರಾಧನಾ ಸ್ವಾತಂತ್ರ್ಯ’ವನ್ನು ಪ್ರಶ್ನಿಸಿದ ಅವಳ ದಾರ್ಷ್ಟ್ಯಕ್ಕೆ ಆಶ್ಚರ್ಯಪಟ್ಟೆ. ಆದರೂ ಸಮಾಧಾನದ ಧ್ವನಿಯಲ್ಲಿ, ಸ್ಪಷ್ಟ ಮಾತುಗಳಲ್ಲಿ, “ಟಿಟಿಡಿ ಅಂಥ ಯಾವ ನಿರ್ಬಂಧವನ್ನೂ ಹೇರಿಲ್ಲ” ಎಂದಷ್ಟೇ ಹೇಳಿ ಮುಂದುವರಿದೆವು. ಇಂದು ನಮ್ಮ ಧರ್ಮ-ರಾಜಕೀಯ ಹಿಡಿದಿರುವ ಭಯಕಾರೀ ಜಾಡಿನಲ್ಲಿ ಈ ಒಂದು ನರಹುಳುವೂ ಇದೆಯಲ್ಲಾ ಎಂದು ನಮ್ಮಷ್ಟಕ್ಕೇ ಕನಿಕರಿಸಿದೆವು. ಅನಂತ ರುಕ್ಮಿಣಿಯರು ಹೀಗೇ ಮೆಟ್ಟಿಲೇರಿದ್ದಾಗ ಕೆಲವು ವಲಯಗಳಲ್ಲಿ ಇತರರು ಚಪ್ಪಲಿ ನಿಷೇಧ ಹೇರಿದ್ದರಂತೆ. ಅದಕ್ಕಿವರು ಅಂಥ ಸಂಶಯಾಸ್ಪದ ಪ್ರದೇಶಗಳಲ್ಲೆಲ್ಲ ಚಪ್ಪಲಿ ಕಳಚಿ, ಕೈಯಲ್ಲಿದ್ದ ಚೀಲಕ್ಕೆ ತುಂಬಿ ನಡೆದಿದ್ದರಂತೆ. ಉತ್ತರ ಭಾರತದಲ್ಲಿ ಇನ್ನೂ ಬುದ್ಧಿವಂತಿಕೆ ಕಂಡಿದ್ದೆವು. ಪಾದರಕ್ಷೆ ನಿಷೇಧವಿದ್ದಲ್ಲಿ ಅದರ ಮೇಲೇ ಬಟ್ಟೆ ಚೀಲ ಧರಿಸಿ ನಡೆಯುವವರ ಕಂಡು ‘ಬೆರಗಾಗಿ ನಗುತ್ತಿದ್ದ ಪುರಂದರ ವಿಠಲ.’

ಹರಿದ್ರಾಕುಂಕುಮ ಸೇವೆ ಇಲ್ಲಿ ಮೆಟ್ಟಿಲಿಗಷ್ಟೇ ಸೀಮಿತವಲ್ಲ. ಪುಟ್ಟ ಗುಡಿಗಳ ಮೂರ್ತಿ, ಬಾಗಿಲು, ಕುಂದ, ‘ಸಂಶಯಾಸ್ಪದ’ ಕಾಡಕಲ್ಲಿಗೂ ಬಳಿದವರಿದ್ದಾರೆ. ಕರ್ಪೂರ ಹಚ್ಚುವ ಕೆಲಸ ಮಾತ್ರ ಕೆಲವೆಡೆಗಳಲ್ಲಿ ಆಧಾರಕ್ಕೂರಿದ ಕೊಳವೆ ಬೇಲಿಗೆ ಹಾನಿ ತಂದಿರುವುದು ಕಾಣುತ್ತದೆ. ಅದೃಷ್ಟವಶಾತ್ ಟಿಟಿಡಿ ‘ಇಲ್ಲಿ ಹೂವುಗಳೆಲ್ಲಾ ಸ್ವಾಮಿಗೇ’ ಎಂದು ಘೋಷಿಸಿದೆ. ಸಹಜವಾಗಿ ‘ಖಯಾಲಿ ಆರಾಧನೆ’ಗಳಲ್ಲಿ ಧಾರಾಳ ಹೂವಿನ ಬಳಕೆಯಾಗಿ ನಿರ್ಮಾಲ್ಯದ ಕುಪ್ಪೆ ಎಲ್ಲಂದರಲ್ಲಿ ಬೆಳೆಯುವುದು ತಪ್ಪಿದೆ. ಗಮನಿಸಿದ್ದೀರಾ – ಇಂದು ಸಾಂಪ್ರದಾಯಿಕ ಆರಾಧನಾ ಸುಮಮಾಲಿಕೆಗಳಲ್ಲೂ ಆಧುನಿಕ ಪುಷ್ಪಗುಚ್ಛಗಳಲ್ಲೂ ಪ್ಲ್ಯಾಸ್ಟಿಕ್, ಥರ್ಮಕೋಲ್ ಧಾರಾಳ ಬಳಕೆಯಾಗುತ್ತಿವೆ. ಅವುಗಳ ಬಳಕೆಯ ಔಪಚಾರಿಕ ಕ್ಷಣ ಮುಗಿದ ಮೇಲೆ ಎಸೆದಾಗ ಉಳಿಯುವುದು ಮುಷ್ಠಿಯಷ್ಟು ಹೂವಾದರೆ ಬೊಗಸೆಯಷ್ಟು ಪರಿಸರವಿರೋಧೀ ಸಂಗತಿಗಳು! (ಅಯ್ಯಪ್ಪ ಋತುವಿನಲ್ಲಿ ಹೆದ್ದಾರಿಯಂಚಿನುದ್ದಕ್ಕೂ ವ್ರತಧಾರಿಗಳು ಬಳಸಿ ಎಸೆದ ಭರ್ಜರಿ ಮಾಲೆಗಳ ನೈಲಾನ್ ದಾರ, ಥರ್ಮ್ಕೋಲ್ ಗೊಂಡೆಗಳು, ಪ್ಲ್ಯಾಸ್ಟಿಕ್ ಬೇಗಡೆ ಜರಿಗಳು ಮಳೆಗಾಲದ ಚರಂಡಿ ನೀರಾವರಿಗೆ ಉಚಿತ ಕಟ್ಟೆಗಳು) ತಿರುಮಲದಲ್ಲಿ ಹೂ ಮಾರಾಟ ಮಳಿಗೆಗಳಾಗಲೀ ಮಹಿಳೆಯರು ವಿಶೇಷ ಹೂ ಮುಡಿದದ್ದಾಗಲೀ ನಮಗೆ ಕಂಡ ನೆನಪಿಲ್ಲ!

ಅಂಚುಗಟ್ಟೆ ಮೀರಿದ ನೆಲದಲ್ಲೂ ಭಕ್ತಾದಿಗಳ ಸೇವಾಕಾರ್ಯ ಧಾರಾಳ ನಡೆಯುತ್ತದೆ. ಅಲ್ಲಿ ಕೈಗೆಟಕುವ ಕೊಂಬೆ, ರೆಂಬೆ ಕೆಲವೆಡೆ ವಿವಿಧ ಗುಡಿಗಳ ರಕ್ಷಣಾ ಬೇಲಿಗಳಿಗೂ ಮಣಿಸರಗಳನ್ನು ಕಟ್ಟಿದ್ದು ಕಾಣುತ್ತೇವೆ. ಅದು ರುಕ್ಮಿಣೀವಲ್ಲಭನಲ್ಲಿ ಮೊರೆಯಂತೆ “ಕಂಕಣಭಾಗ್ಯ ಕೊಡೋ.” ಹೀಗೇ ಬಣ್ಣ ಬಣ್ಣದ ಪುಟ್ಟ ಬಟ್ಟೆ ಜೋಳಿಗೆಗಳನ್ನು ಕಟ್ಟಿದ್ದೂ ಇವೆ. ಅಲ್ಲಿ “ತೊಟ್ಟಿಲು ಕಟ್ಟುವ ಭಾಗ್ಯ ಕರುಣಿಸೋ ಕರುಣಾನಿಧೀ.” ಒಂದೆಡೆ ಕಸ ಹೆಕ್ಕುವ ನೌಕರನೊಬ್ಬ ನಮ್ಮನ್ನು ಗಮನಿಸದೇ ಆ ಜೋಳಿಗೆಗಳೊಳಗಿನ ಪುಡಿಗಾಸು (ಇಡುತ್ತಾರೆ ಎಂದೂ ನಮಗೆ ಆಗಲೇ ತಿಳಿದದ್ದು) ಸಂಗ್ರಹಿಸುವುದು ಕಂಡು ನಮ್ಮೊಳಗೇ ಗೊಣಗಿಕೊಂಡೆವು “ಬಡವನ ಕಾಫಿ ಖರ್ಚಾದರೂ ನಿವಾರಿಸಿದಿಯಲ್ಲಾ ಶ್ರೀನಿಧೇ.” ಕಾಡು ಕಲ್ಲುಗಳನ್ನೇ ನಾಲ್ಕೆಂಟು ಸೇರಿಸಿ ಗುಪ್ಪೆ ಮಾಡಿದ್ದೂ ಸಾಕಷ್ಟಿದ್ದವು. ಮನವಿ ಸ್ಪಷ್ಟ – “ತಲೆ ಮೇಲೊಂದು ಸೂರು ಕಲ್ಪಿಸೋ ಗೋವರ್ಧನಗಿರಿಧಾರಿ.” ‘ಮನೆ ಹರಕೆಯ’ ಚಿತ್ರಗ್ರಹಣಕ್ಕಾಗುವಾಗ ದೇವಕಿಗೆ ಅತ್ತ ಹೋಗುವಂತೆ ಸೂಚಿಸಿದೆ. ಅವಳು ಕುಶಾಲಿಗೆ ‘ಬೇರೆ ಮನೆಯ’ ಕಲ್ಲು ಬಳಸಿ, ತಾನೂ ಒಂದು ‘ಮನೆ’ ನಿಲ್ಲಿಸಿದಳು. ಹೇಳುವವರು ಹೇಳಬಹುದು, “ನೋಡಿದ್ರಾ ತಿರುಪತಿ ಯಾತ್ರೆ ಮುಗಿಸಿದ ಮೇಲೆ ನೀವು ಅಭಯನಿಗೆ ‘ಬೇರೆ ಮನೆ’ಗಳೊಡನೆ ಒಂದು ಮನೆ ಅರ್ಥಾತ್ ಫ್ಲ್ಯಾಟ್ ನಿಶ್ಚಯಿಸಲಿಲ್ವಾ!!”

ನಮಗೆ ಮೆಟ್ಟಿಲೇರುವುದು ಅಂಥಾ ಸಮಸ್ಯೆ ಆಗಲಿಲ್ಲ. ಮೊದಮೊದಲು ಮೆಟ್ಟಿಲುಗಳು ವಿರಳ, ನಡಿಗೆ ಜಾಸ್ತಿ. ಮುಂದೆ ಎರಡು, ಐದರ ಗುಂಪುಗಳಲ್ಲಿ ಬರುತ್ತಾ ಕಡಿದಾಗತೊಡಗಿತು. ನನಗೆ ಮರುಕಳಿಸುವ ಯಾವುದೇ ಕೆಲಸ ಮಾಡುವಾಗ ಅಂಕಿಗಳ ಮೋಹ ಕಳಚಿಕೊಳ್ಳಲಾಗುವುದಿಲ್ಲ. ಚಾರಣಕ್ಕಿಳಿದರೆ ಕಿಮೀ ಎಷ್ಟು, ಬಂಡೆ ಹತ್ತಿದರೆ ಔನ್ನತ್ಯ ಎಷ್ಟು, ಬೈಕೋಡಿಸಿದರೆ ವೇಗ ಎಷ್ಟು, ಅಂತರ ಎಷ್ಟು, ನದಿ ಪಾರುಗಾಣಿಸಿದರೆ ಆಳ ಅಗಲ ಸೆಳವು ಇತ್ಯಾದಿ ನೂರೊಂದು ಲೆಕ್ಕಾಚಾರ ಉಪಯೋಗ ಇರಲಿ, ಇಲ್ಲದಿರಲಿ ಕಾಡುತ್ತಲೇ ಇರುತ್ತವೆ. ಪ್ರತಿ ಪ್ರಯಾಣಕ್ಕೂ ಮೊದಲು ನಾನು ಕ್ರಮವಾಗಿ ಪೆನ್ನು ಪೇಪರ್ ಹಿಡಿದು ‘ಶ್ರೀಕಾರ’ ಹಾಕುವುದು ಇದ್ದೇ ಇದೆ. (ಇಂಥಾ ಸಂಗ್ರಹದ ಸಣ್ಣ ಪರಿಷ್ಕೃತ ರೂಪ ಇಲ್ಲೇ ನನ್ನ ನಕ್ಷೆ ವಿಭಾಗದಲ್ಲಿ ದಾಖಲಿಸಿದ್ದೇನೆ) ಆದರೆ ಹೆಚ್ಚಿನ ಓಡಾಟಗಳಲ್ಲಿ, ಬಲುಬೇಗನೆ ಅನ್ಯಾಕರ್ಷಣೆಗಳಲ್ಲಿ ಲೆಕ್ಕ ತಪ್ಪಿಸಿಕೊಳ್ಳುತ್ತಿರುತ್ತೇನೆ! ಮೂವತ್ತಾರು ವರ್ಷ ಅಂಗಡಿಯ ಅಟ್ಟಕ್ಕೆ ಹೋಗಲು ಬಳಸುತ್ತಿದ್ದ ಮೆಟ್ಟಿಲ ಲೆಕ್ಕ, ಎಷ್ಟೋ ಬಾರಿ ಉದ್ದೇಶಪೂರ್ವಕವಾಗಿ ಲೆಕ್ಕ ಹಾಕಿಯೂ ಇಂದು ನನ್ನ ನೆನಪಿನಲ್ಲಿಲ್ಲ. (ಬಹುಶಃ ಮೆಟ್ಟಿಲ ಲೆಕ್ಕದಲ್ಲಿ ಗಟ್ಟಿಜನ ಶಬರಿಮಲೆ ಅಯ್ಯಪ್ಪ; ಹದಿನೆಂಟು ಮೆಟ್ಟಿಲು!) ಪಾಪ, ಪುಣ್ಯದ ಲೆಕ್ಕಾಚಾರದವರು ನಾಮಸ್ಮರಣೆ ಮಾಡುವಾಗ ಇದಕ್ಕೇ ಜಪಮಣಿ ಉಪಯೋಗಿಸುವುದನ್ನು ಕಾಣುತ್ತೇವೆ. (ಅವರಾದರೋ ಮಣಿ ನೂಕಿದಷ್ಟು ಜಪ ಮಾಡುತ್ತಾರೆಂದು ನಾನು ನಂಬಿಲ್ಲ. ಇಸ್ಕಾನಿನ ಕೆಲವು ಭಕ್ತರು ಎಲೆಕ್ಟ್ರಾನಿಕ್ ಕೌಂಟರ್ ಬಳಸುವುದೂ ನೋಡಿದ್ದೇನೆ; ರಿಕ್ಷಾ ನಿಂತರೂ ಮೀಟರ್ ಓಡುತ್ತಾ ಇರುತ್ತದೆ! ಸಣ್ಣ ಕಿವಿಮಾತು: ರಗಳೆ ಯಾಕೆ ಸ್ವಾಮೀ ಎಲೆಕ್ಟ್ರಾನಿಕ್ ಚಾಂಟರ್ರೂ ಬಳಸಿಬಿಡಿ!) ಆ ಕಷ್ಟ ಯಾರನ್ನೂ ಕಾಡದಂತೆ ತಿರುಮಲದ ಮೆಟ್ಟಿಲಲ್ಲಿ ಕೆಲವೆಡೆ ಐವತ್ತಕ್ಕೂ ಉಳಿದಂತೆ ಪ್ರತಿ ನೂರಕ್ಕೂ ಸ್ಪಷ್ಟ ಮೆಟ್ಟಿಲ ಸಂಖ್ಯೆಗಳನ್ನು ಕೆತ್ತಿಯೇ ಇಟ್ಟಿದ್ದರು.

ಗಾಳಿಗೋಪುರ ಕಳೆದ ಮೇಲಿನ ತಿರುಮಲದ ಇಳಿಮಾರ್ಗದಲ್ಲಿ ವಾಹನ ಸಂಚಾರ ಧಾರಾಳವಿತ್ತು. ಇಲ್ಲೂ ಪಾದಚಾರಿಗಳ ಸೌಕರ್ಯಕ್ಕೆ ಕೆಳಸೇತುವೆ ಕೊಟ್ಟಿದ್ದರು. ಇಲ್ಲಿ ಮೆಟ್ಟಿಲೇರುವವರನ್ನು ಪರೋಕ್ಷವಾಗಿ ಲೆಕ್ಕ ಹಾಕುವ ವ್ಯವಸ್ಥೆಯನ್ನು ಟಿಟಿಡಿ ಮಾಡಿದೆ. ಸುವಿಸ್ತಾರ ಅಂಗಳದಲ್ಲಿ ಸರತಿಸಾಲಿನ ವ್ಯವಸ್ಥೆ, ಕೊನೆಯಲ್ಲಿ ಸುಂಕದ ಕಟ್ಟೆಯಂಥ ಕೆಲವು ಗೂಡುಗಳಿವೆ. ಅವು ಜನ ಸಮ್ಮರ್ದ ನೋಡಿಕೊಂಡು ಎರಡೋ ಹೆಚ್ಚೋ ಕಾರ್ಯಾಚರಿಸುತ್ತವೆ. ನಾವು ಹೋದಂದು ಒಂದೇ ಗೂಡು, ವಿರಾಮದಲ್ಲಿ ಕಾರ್ಯ ನಡೆಸಿತ್ತು.

ಅಲ್ಲಿ ಪ್ರತಿ ಯಾತ್ರಿಯೂ ಗಣಕದ ಕಣ್ಣೆದುರು ಹಾಯಬೇಕಿತ್ತು. ಆಗ ಗಣಕ ಸ್ಥಳ (ಇದೇ ವ್ಯವಸ್ಥೆ ಇನ್ನೊಂದು ದಿಕ್ಕಿನ ಮೆಟ್ಟಿಲಸಾಲಿನಲ್ಲೂ ಇದೆ), ತಾರೀಕು ಮತ್ತು ಗಂಟೆಗಳನ್ನು ದಾಖಲಿಸುವುದರೊಡನೆ ನಮ್ಮ ಚಿತ್ರವನ್ನೂ ಹಿಡಿದು, ಒಂದು ಪರಿಚಯ ಪತ್ರವನ್ನು ವಿಳಂಬವಿಲ್ಲದೆ ಕೊಟ್ಟಿತು. ಆ ಅವಸರದ ಕಲಾಪದಲ್ಲಿ ಹಿಡಿದ ನಮ್ಮಿಬ್ಬರ ಭಾವಚಿತ್ರಗಳನ್ನು ಸ್ವತಃ ತಿರುಮಲೇಶನಿಗೂ ಗುರುತಿಸುವುದು ಅಸಾಧ್ಯ. ಆದರೆ ಅದು ದಾಖಲಿಸುವ ಇತರ ಮಾಹಿತಿಗಳು ಕರಾರುವಾಕ್ಕಿರುವುದರಿಂದ ಉತ್ತರೋತ್ತರ ಅನುಕೂಲಗಳಿಗೇನೂ ತೊಂದರೆಯಾಗುವುದಿಲ್ಲ. ಪತ್ರಾಂಕಿತನು ವಾಹನ ಸವಾರಿಯ ಸುಖ ನಿರಾಕರಿಸಿ ಬಂದವನೆಂದು ಪ್ರಥಮ ಪ್ರಾಶಸ್ತ್ಯದ ದೇವದರ್ಶನದ ಅವಕಾಶ – ‘ದಿವ್ಯದರ್ಶನ’, ಕೊಡುತ್ತಾರೆ. ಅಲ್ಲದೇ ಉಚಿತ ಒಂದು ಲಡ್ಡುಪ್ರಸಾದವೂ ಇನ್ನೂ ಅನೇಕ ಸವಲತ್ತುಗಳನ್ನೂ ಟಿಟಿಡಿ ಕಾಯ್ದಿರಿಸಿದೆ. (ಪರ್ವ ಕಾಲಗಳಲ್ಲಿ ಅಂದರೆ ದಿನಕ್ಕೆ ಲಕ್ಷದ ಮೇಲೆ ಜನ ನುಗ್ಗುವಲ್ಲಿ ಇದನ್ನು ನಿಯಂತ್ರಿಸುವ ಸಂಕಟದಲ್ಲಿ ಟಿಟಿಡಿ ದಿನದ ಮೊದಲ ಹನ್ನೊಂದು ಸಾವಿರ ಮಂದಿಗೆ ಮಾತ್ರ ಎಂದೇನೋ ಸಂಖ್ಯಾ ಮಿತಿ ಹೇರುತ್ತದೆ ಎಂದು ಅನಂತ ತಿಳಿಸಿದ.) ಮೊದಲೇ ಹೇಳಿದಂತೆ ಇಲ್ಲಿ ವಾಹನ ಮಾರ್ಗ ಸಂಗಮಿಸುತ್ತದೆ. ಅಂದರೆ ಉಚಿತ ಸವಲತ್ತುಗಳ ಆಸೆಗೆ ಕೆಲವರಾದರೂ ಒಳದಾರಿ ಹುಡುಕಬಾರದೆಂದಿಲ್ಲ. (ಬ್ರಹ್ಮಚಾರಿಗಳಿಗೇನೋ ಉಚಿತವೆಂದಿದ್ದಲ್ಲಿ ಯಾರೋ ಘೋಷಿಸಿಕೊಂಡನಂತೆ “ನಾನೂ ನನ್ನಪ್ಪನೂ ಬ್ರಹ್ಮಚಾರಿಗಳು, ಎರಡು ಕೊಡಿ.”) ಇದನ್ನು ಮನಗಂಡಂತೆ ಮುಂದೆ ಮೆಟ್ಟಿಲ ಸಾಲು ಮಾರ್ಗ ಬಿಟ್ಟು ಇನ್ನೊಂದೇ ಕಡಿದಾದ ಬೆಟ್ಟದ ಮೈ ಹಾಯುವಲ್ಲಿ ಪರಿಚಯ ಪತ್ರಕ್ಕೆ ಅನುಮೋದನೆಯ ಮೊಹರು ಒತ್ತುವ ಕ್ರಮವನ್ನೂ ರೂಢಿಸಿದ್ದಾರೆ! (ಪುಣ್ಯಕ್ಷೇತ್ರದಲ್ಲೂ ಅಪ್ರಾಮಾಣಿಕತೆಯನ್ನು ಸೋಲಿಸಲು ಅದೆಷ್ಟು ಕಷ್ಟ!)

ಗಾಳಿಗೋಪುರದ ಮೇಲಿನ ವಲಯದಲ್ಲಿ ತಿನಿಸು ಪಾನೀಯಗಳ ಅಸಂಖ್ಯ ಗುಡಾರಗಳಿವೆ. ಅವುಗಳ ರುಚಿ ಶುಚಿಯನ್ನು ಪರೀಕ್ಷಿಸುವ ಅಗತ್ಯವೇನೂ ನಮಗಿರಲಿಲ್ಲ. ಸ್ಥಳಪುರಾಣ ಹೇಳುವಂತೆ ಅಂಜನಾದೇವಿ ಪುತ್ರೋತ್ಸವವನ್ನು ಕಂಡ ಕ್ಷೇತ್ರವೂ ಇದೇಯಂತೆ (ಹಾಗಾಗಿ ಅಂಜನಾದ್ರಿ. ಇನ್ನು ನಮ್ಮ ಹಂಪಿ ಬಳಿಯ ಕಿಷ್ಕಿಂಧಾಭಿಮಾನಿಗಳು ಏನು ಹೇಳುತ್ತಾರೋ ಗೊತ್ತಿಲ್ಲ). ಅಲ್ಲೆಲ್ಲೋ ಒಂದು ಮಹಾ ಆಂಜನೇಯನ ಮೂರ್ತಿಯ ದರ್ಶನವೂ ನಮಗಾಯ್ತು. ಅವನ ಪದತಳದಲ್ಲಿ ಕುಳಿತು ಒಂದು ಚಾ ಕುಡಿದು ಮುಂದುವರಿದೆವು. ಹಾಗೇ ಪಾದಚಾರಿ-ಪರಿಚಯ ಪತ್ರದ ಅನುಮೋದನೆಯ ಮೊಹರೊತ್ತುವಲ್ಲಿ ಮತ್ತೆ ದೊನ್ನೆಗಳಲ್ಲಿ ಪ್ರಸಾದ ಹಂಚಿಕೆಯೂ ನಡೆದಿತ್ತು.

ಶಿಖರವಲಯದಲ್ಲಿ ವನ್ಯದ ಸ್ಥಿತಿ ಬದಲಿತ್ತು. ಮಹಾವೃಕ್ಷಗಳು ಬಳ್ಳಿಬೀಳಲುಗಳ ಹಂದರ ಕಣ್ಣಿಗೆ ಹೆಚ್ಚಿನ ತಂಪು ಕೊಡುತ್ತಿತ್ತು. ಈ ವಲಯಗಳಲ್ಲೇ ಹಲವು ಸ್ಥಿತಿವಂತರು, ಘನ ಉದ್ದಿಮೆಗಳು ಆಂಶಿಕವಾಗಿ ವನ್ಯವನ್ನು ದತ್ತು ತೆಗೆದುಕೊಂಡು ಪೋಷಿಸುತ್ತಿರುವ ಬೋರ್ಡುಗಳನ್ನೂ ಕಂಡೆವು. (‘ವನವರ್ಧನ ಸೇವೆ’, ಬೋರ್ಡುಗಳಲ್ಲಿ ಕಾಣಿಸಿದಂತೆ ಎಕ್ರೆ ಒಂದಕ್ಕೆ ವಾರ್ಷಿಕ ಶುಲ್ಕ ರೂ ಹದಿನೈದು ಸಾವಿರ ಮಾತ್ರ. ಮೈಸೂರು ಮೃಗಾಲಯದಲ್ಲಿ ಖ್ಯಾತ ಅನಿಲ್ ಕುಂಬಳೆ ಯಾವುದೋ ಹುಲಿಯನ್ನು ದತ್ತು ತೆಗೆದುಕೊಂಡಂತೇ.) ಇಲ್ಲಿನ ಒಂದು ಹಂತದಲ್ಲಿ ತಂತಿ ಬೇಲಿ ಹಾಕಿದ ಬಲು ದೊಡ್ಡ ಆವರಣದ ಒಳಗೆ ಜಿಂಕೆಗಳನ್ನು ಸಾಕಿದ್ದರು. ಜಿಂಕೆ ಉದ್ಯಾನದ ಅಂಚಿನಲ್ಲಿ ಸೌತೆಕಾಯಿ, ಕ್ಯಾರಟ್ ಮುಂತಾದವನ್ನು ಮಾತ್ರ ಮಾರುತ್ತಿದ್ದ ಮಳಿಗೆ ಮಾತ್ರ ಇದ್ದುದು ತುಂಬಾ ಒಳ್ಳೆಯ ಬೆಳವಣಿಗೆ. ಜಿಂಕೆಯನ್ನು ಆಕರ್ಷಿಸುವ ಚಪಲಕ್ಕೆ ಸಮೀಪದ ಹಸಿರನ್ನು ಹುಡಿ ಮಾಡುವ, ಇನ್ನೂ ಅಪಾಯಕಾರಿಯಾಗಿ ತಮ್ಮಲ್ಲಿದ್ದ ಬಿಸ್ಕೆಟ್ಟೋ ಕುರುಕುರೆಯೋ ತಿನ್ನಿಸಬಯಸುವವರಿಗೆ ಇದು ಚೊಕ್ಕ ಪರ್ಯಾಯವೂ ಹೌದು, ಅರ್ಥ ಮಾಡಿಕೊಳ್ಳುವವರಿಗೆ ಪಾಠವೂ ಆಯ್ತು.

ಇನ್ನೊಂದು ಮಟ್ಟಸ ಭೂಮಿಯಲ್ಲಿ ಪ್ರಾಕೃತಿಕವಾಗಿ ಬಂದಂತಿದ್ದ ಬೃಹತ್ ವಟವೃಕ್ಷವನ್ನು ಆವರಿಸಿದಂತೆ ಸುಂದರ ಉದ್ಯಾನವನ ಮಾಡಿ, ಚದುರಿದಂತೆ ಸಾಕಷ್ಟು ಆಸನ ವ್ಯವಸ್ಥೆಯನ್ನೂ ಮಾಡಿದ್ದರು. ಆ ಮಹಾಮರ ಜಾಡಿನ ಬದಿಯಲ್ಲೇ ಇರುವುದರಿಂದ ಹಾದುಹೋಗುವ ಮಂದಿಯ ಅತಿರೇಕಗಳಿಂದ ಪರೋಕ್ಷವಾಗಿ ರಕ್ಷಿಸುವ ಕ್ರಮವೂ ಇರಬಹುದು. ಅಲ್ಲದಿದ್ದರೂ ದೀರ್ಘ ಏರಿ ಬಂದವರಿಗೆ ತುಸು, ವಿರಮಿಸಿ ಮುಂದುವರಿಯಲಿ ಅವಕಾಶವೂ ಇರಬಹುದು. ಇಲ್ಲಿ ಆವರಣ, ಉಸ್ತುವಾರಿ ಸಿಬ್ಬಂದಿ ಇದ್ದುದರಿಂದ ಎಲ್ಲ ನೇರ್ಪಿನಲ್ಲಿತ್ತು. ಅದೇ ಸ್ವಲ್ಪ ಮುಂದೆ ಎಡಬದಿಗೆ ಒಂದು ಕಿರು ಕವಲು ಮೆಟ್ಟಿಲ ಸಾಲು ಕೊಟ್ಟು ‘ಅಯ್ಯಪ್ಪ ವನಂ’ ಎಂದು ಬೋರ್ಡಿನ ಸೂಚನೆ ಕೊಟ್ಟಿದ್ದರು. ನಾವು ಕುತೂಹಲದಲ್ಲಿ ಅನುಸರಿಸಿ ನೋಡಿ, ಬಂದೆವು. ಅಲ್ಲಿ ಸುಮಾರು ನೂರು ಮೀಟರ್‌ವರೆಗೆ ಸಸ್ಯಾವರಣವನ್ನು ಪ್ರಾಕೃತಿಕ ಸ್ಥಿತಿಯಲ್ಲೇ ಉಳಿಸಿ, ಕೊನೆಗೆ ಸಣ್ಣ ದಿಬ್ಬದ ಮೇಲೊಂದು ಯಾವುದೇ ಬಿಂಬ ರಹಿತ ಪುಟ್ಟ ಮಂಟಪ ಕಟ್ಟಿದ್ದರು. (ವರ್ಷಾವಧಿ ಏನಾದರೂ ಉತ್ಸವ ಸಂಬಂಧೀ ರಚನೆಯಿರಬಹುದು) ಅಲ್ಲಿಗೆ ಖಾಯಂ ಸಿಬ್ಬಂದಿ ಇದ್ದಂತಿರಲಿಲ್ಲ (ಅಗತ್ಯವೂ ಇದ್ದಂತಿರಲಿಲ್ಲ). ಅಗತ್ಯದ ಮೆಟ್ಟಿಲ ಸಾಲೇನೋ ಶುಚಿಯಾಗಿಯೇ ಇಟ್ಟಿದ್ದರು. ಆದರೆ ವಿಷಾದದ ಸಂಗತಿಯೆಂದರೆ ಮಂಟಪದ ಆಚಿನ ತಗ್ಗಿನಲ್ಲಿ ಪೊದರುಗಳ ಎಡೆಯಲ್ಲಿ ಅಸಂಖ್ಯ ಮನುಷ್ಯ ಕಸ ಪೇರಿತ್ತು. ಇಲ್ಲೊಂದು ಉಪಕಥೆಗೆ ಕ್ಷಮೆಯಿರಲಿ.

ತಿಂಗಳ ಹಿಂದೆ ನನ್ನ ಗೆಳೆಯರಾದ ರೋಹಿತ್ ರಾವ್, (ಕ್ಯಾಪ್ಟನ್) ದೀಪಿಕಾ, ವಿವೇಕ್ ಮಲ್ಲೇಶಪ್ಪ ಆದಿಯಾಗಿ ಕೆಲವರು ತಮ್ಮ ವಾರಾಂತ್ಯದ ರಜಾದಿನವನ್ನು ಒಂದು ಅಪೂರ್ವ ಕೆಲಸಕ್ಕೆ ಮೀಸಲಿಟ್ಟರು. ಕಾರ್ಕಳದಿಂದ ಇತ್ತ ಶೃಂಗೇರಿ ಅಥವಾ ಅತ್ತ ಹೊರನಾಡಿನತ್ತ ಓಡುವ ಉತ್ತಮ ವಾಹನಮಾರ್ಗದ ಬಹು ದೊಡ್ಡ ಅಂಶ ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಸಾಗುತ್ತದೆ. ವನ್ಯ ಇಲಾಖೆ ಅದರಲ್ಲಿ ಕೇವಲ ವಾಹನ ದಾಟಲು ಮಾತ್ರ ಅನುಮತಿ ನೀಡುತ್ತದೆ. (ಉದ್ಯಾನವನದೊಳಗೆ ಶಿಬಿರ, ಮೋಜು ಭೋಜನಕೂಟಾದಿಗಳಿಗೆ ಅವಕಾಶ ಯಾರಿಗೂ ಇಲ್ಲ. ಇಲಾಖೆಯ ಅನುಮತಿಯೊಡನೆ ಪ್ರಕೃತಿಪ್ರಿಯರು ಚಾರಣಿಸಲು ಬಯಸಿದರೂ ಇಲಾಖೆಯ ಕಾವಲುಗಾರನ ಜೊತೆಯಲ್ಲಿ, ಕಣ್ಗಾವಲಿನಲ್ಲೇ ನಡೆಯಬೇಕು.) ಆದರೂ ಕೇವಲ ಹಾದು ಹೋಗುವ ಯಾತ್ರಿಗಳು ಎಸೆದ ಪರಿಸರ ವಿರೋಧಿ ಕಸ ಅಪಾರ. ಅವನ್ನು ಸ್ವಂತ ವಾಹನ, ಖರ್ಚು ಮತ್ತು ಶ್ರಮದೊಡನೆ ತೆಗೆದು ತರುವ ಯೋಜನೆ ನನ್ನ ಮಿತ್ರ ಬಳಗದ್ದು. ನಂಬಿದರೆ ನಂಬಿ, ಸುಮಾರು ೬೨ ಕಿಮೀ ಉದ್ದದ ದಾರಿ ಇವರ ಲಕ್ಷ್ಯ. ಆದರೆ ಕಸದ ಮೊತ್ತ ಎಷ್ಟು ವ್ಯಾಪಕವಿತ್ತೆಂದರೆ, ಇವರು ಮೊದಲ ಆರು ಕಿಮೀ ಪೂರೈಸುವಲ್ಲೇ ಹಗಲು ಕಳೆದು ಹೋಗಿತ್ತು. ಸಂಗ್ರಹಿಸಿದ ಕಸದ ಮೊತ್ತ – ಒತ್ತಿ, ಒತ್ತಿ ತುಂಬಿದರೂ ೨೧ ದೊಡ್ಡ ಗೋಣಿಚೀಲ ತುಂಬಿತ್ತು. ಇದನ್ನು ಸಚಿತ್ರ ನೋಡಿ ನಂಬಲು ಈ ಸೇತು ಬಳಸಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ. ನಮ್ಮ ಮಿತ್ರ ಬಳಗ ಈಗ ಹೆಚ್ಚಿದ ಛಲದಲ್ಲಿ ಎರಡನೇ ಹಂತದ ಕಾರ್ಯಾಚರಣೆಗೆ ಸಿದ್ಧರಾಗುತ್ತಿದ್ದಾರೆ. ಇದು ವನ್ಯ ಪ್ರೇಮಿಗಳ ಕತೆಯಾಯ್ತು. ತಿರುಮಲಕ್ಕೆ ಅಯ್ಯಪ್ಪ ಭಕ್ತರು ಇಂತದ್ದೇ ಕಾರ್ಯಕ್ರಮ ಹಮ್ಮಿಕೊಳ್ಳಬೇಕೇ? ಶಿಖರವಲಯದಲ್ಲಿ ನಾವು ಸಾಗಿದ್ದಂತೆ ನಾವಿನ್ನೂ ಸಮೀಪಿಸಬೇಕಿದ್ದ ಕೆಲವು ಶಿಖರಾಗ್ರಗಳಲ್ಲಿ ದೈತ್ಯಾಕೃತಿಯ ಗಿರಿಗಿಟಿಗಳನ್ನು ಕಂಡೆವು. ಇದು ಟಿಟಿಡಿಯ ಹಸಿರು ಸ್ನೇಹೀ ಕಲಾಪದಲ್ಲಿ ಬಹು ಮುಖ್ಯ ಅಂಗವಂತೆ. ದೇಶದಲ್ಲೇ ಇರುವ ವಿದ್ಯುತ್ ಕೊರತೆಯನ್ನು ಪರಿಗಣಿಸಿ ಟಿಟಿಡಿ ಲಭ್ಯ ಪರಿಸರಸ್ನೇಹೀ ಪ್ರಾಕೃತಿಕ ಸೌಲಭ್ಯಗಳನ್ನು ಈಚಿನ ವರ್ಷಗಳಲ್ಲಿ ಹೆಚ್ಚೆಚ್ಚು ಬಳಕೆಗೆ ತರುತ್ತಿದೆಯಂತೆ. ಈ ಗಿರಿಗಿಟಿಗಳಂತೇ ತಿರುಮಲ ಪಟ್ಟಣದೊಳಗೆ ಸ್ಥಾಪಿಸಿದ ಅಸಂಖ್ಯ ಸೌರಶಕ್ತಿ ಪರಿವರ್ತಕಗಳಿಂದ ತನ್ನ ಸುಮಾರು ೪೫% ವಿದ್ಯುತ್ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದೆಯಂತೆ! (- ಜಾಲ ಮಾಹಿತಿ.) ಈ ಸ್ವಯಂಪೂರ್ಣತೆಯ ನಿಟ್ಟಿನಲ್ಲಿ ಬಹಳ ಮುಖ್ಯವೇ ಆದ ಜಲ ಸಂರಕ್ಷಣೆಯನ್ನು ಕುರಿತಂತೆ ನಾನು ಮುಂದೆ ಸ್ವಾನುಭವದೊಡನೆಯೇ ಬರುತ್ತೇನೆ.

ಸುಮಾರು ನಾಲ್ಕೂವರೆ ಗಂಟೆಗಳ ನಡಿಗೆಯ ಕೊನೆಯಲ್ಲಿ ನಾವು ಪ್ರಸನ್ನವದನರಾಗಿಯೇ (ಇದು ತೀರ್ಥಕ್ಷೇತ್ರಗಳಲ್ಲಿ ನನ್ನ ಲೆಕ್ಕಕ್ಕೆ ತುಂಬಾ ಅಪರೂಪದ ಸಂಗತಿಯಾದ್ದಕ್ಕೆ ಒತ್ತಿ ಹೇಳಿದೆ!) ತಿರುಮಲ ತಲಪಿದೆವು. ಬೆಟ್ಟದ ಒಂದಂಚಿನಿಂದ ನಾವು ಹಗುರವಾಗಿ ಮೇಲೇರುತ್ತ ಬಂದಂತೆ, ಎದುರು ಸುತ್ತುವರಿದ ಗಿರಿಗಳ ಮಡಿಲಲ್ಲಿ ಮಲಗಿತ್ತು ತಿರುಮಲ; ಮಡಿಕೇರಿಯಂಥದ್ದೇ ಆವರಣ. ನಮಗೆ ದೇವದರ್ಶನದ ಧಾವಂತ ಏನೂ ಇರಲಿಲ್ಲ. ಹಾಗಾಗಿ ಆ ಪ್ರಾಕೃತಿಕ ಬೋಗುಣಿಯ ತಳಕ್ಕಿಳಿಯುವ (ಅಲ್ಲಿ ಮುಖ್ಯ ದೇವಸ್ಥಾನವಿದೆ) ಮೊದಲು ನಮ್ಮ ವ್ಯವಸ್ಥೆಯ ಬಗ್ಗೆ ಗಮನಹರಿಸಿದೆವು. ಅಲ್ಲಿ ಎಡಪಕ್ಕದಲ್ಲೇ ಇದ್ದ ಮಾರ್ಗದಲ್ಲಿ ವಾಹನಗಳ ತಪಾಸಣಾ ಗೇಟು, ಪೋಲಿಸ್ ಠಾಣೆ ಇದ್ದರೆ ಬಲಬದಿಗೆ ಕೆಳಗಿನಿಂದ ಬರುವ ನಮ್ಮ ಸಾಮಾನುಗಳನ್ನು ವಿತರಿಸುವ ಕೇಂದ್ರ ಇತ್ತು. ನಾವು ಚೀಲವನ್ನು ಬಿಡಿಸಿಕೊಂಡು ಮುಂದೆ ಇದ್ದ ಉಚಿತ ವಸತಿಕೇಂದ್ರ ಸಮೀಪಿಸಿದೆವು. (ಅಲ್ಲೂ ಇತರ ಸೇವಾಕೇಂದ್ರಗಳಲ್ಲೂ ‘ನೌಕರರಿಗೆ ಇನಾಮು ಕೊಡಬಾರದು. ಯಾರಾದರೂ ಕೇಳಿದರೆ ಕೂಡಲೇ ಸಂಪರ್ಕಿಸಿ’ ಎಂದು ಆಡಳಿತ ಕಛೇರಿಯ ದೂರವಾಣಿ ಸಂಖ್ಯೆ ಕೊಟ್ಟಿದ್ದರು. ನಮಗೆ ಪ್ರಯೋಗಿಸುವ ಅವಕಾಶ ಒದಗಲಿಲ್ಲ.)

ಭೂರಿ ವಸತಿ ಸೌಕರ್ಯದಲ್ಲಿ ಅಮೃತಶಿಲೆಯ ವಿಸ್ತಾರ ಮತ್ತು ಚೊಕ್ಕ ಹಜಾರಗಳಲ್ಲಿ ಯಾತ್ರಿಗಳು ತಮ್ಮದೇ ಆಯ್ಕೆಯಲ್ಲಿ ಉಳಿಯಲು, ಮಲಗಲು ಹರಡಿಕೊಳ್ಳುತ್ತಿದ್ದರು. ಆ ಧರ್ಮ ಛತ್ರದಲ್ಲಿ ಸಾಮೂಹಿಕ ಶೌಚ, ಸ್ನಾನದ ವ್ಯವಸ್ಥೆಗಳಂತೂ ಚೊಕ್ಕವಾಗಿಯೇ ಇತ್ತು. ಅಲ್ಲದೆ ನಿಮ್ಮ ಸಾಮಾನುಗಳನ್ನು ನಿಶ್ಚಿಂತೆಯಿಂದ ಬಿಟ್ಟುಹೋಗಲು ರೈಲ್ವೇ, ಬಸ್ ನಿಲ್ದಾಣಗಳಲ್ಲಿರುವಂತೆ ಕ್ಲೋಕ್ ರೂಂ, ಇನ್ನೂ ಅಮೂಲ್ಯವೇನಾದರೂ ಇದ್ದರೆ ಬ್ಯಾಂಕ್‌ಗಳಲ್ಲಿರುವಂತೆ ಲಾಕರ್, ಹಾಸಿಹೊದೆಯಲು ಚಾಪೆ ಕಂಬಳಿಗಳನ್ನು ಕೊಡುವ ಗುದಾಮುಗಳು ವಿಳಂಬರಹಿತವಾಗಿಯೂ ಚೊಕ್ಕವಾಗಿಯೂ ನಿಶ್ಶುಲ್ಕವಾಗಿಯೂ ಇದ್ದುವು. (ಚಾಪೆ ಕಂಬಳಿಗಳಿಗೆ ಮಾತ್ರ ಠೇವಣಿ ಇಡಬೇಕು. ಆದರೆ ಇಡುವುದು, ಕೊನೆಯಲ್ಲಿ ಹಿಂಪಡೆಯುವುದು ರಗಳೆ ರಹಿತ). ನಾವು ಪ್ರತ್ಯೇಕ ಕೊಠಡಿ ಸಿಕ್ಕೀತೇ ಎಂದು ಪ್ರಯತ್ನಿಸಿದೆವು. ಅದಕ್ಕೆ ಸ್ವಲ್ಪ ಅಲ್ಲಿನ ನೌಕರರು ಸ್ವಲ್ಪ ಕೆಳಗಿನ ಕೇಂದ್ರ ಸ್ವಾಗತ ಕಛೇರಿಗೆ (Central Reception Office – ಸೀಯಾರ್ವೋ) ಕೈ ತೋರಿದರು.

“ಓ ಇಲ್ಲಿ, ಓ ಇಲ್ಲಿ” ಎಂದು ಕೇಳಿಸಿಕೊಳ್ಳುತ್ತ ಬಸ್ ನಿಲ್ದಾಣದವರೆಗೂ ಇಳಿಯುತ್ತ ಹೋದೆವು. ಸೀಯಾರ್ವೋದಲ್ಲಿ ಅಸಾಧ್ಯ ಜನಸಂದಣಿ. ಆದರೆ ವಿಶ್ರಾಂತಿ ಇಲ್ಲದ ಸರದಿಯ ಸಾಲಿನಲ್ಲಿ, ನಾಲ್ಕೈದು ಮುಖಗಳಲ್ಲಿ ‘ತಲ್ಲಣಿಸದಿರು ಕಂಡ್ಯ… ಎಲ್ಲರನು ಸಲಹುವೆವು’ ಎಂದು ಕೆಲಸ ನಡೆಸಿದ್ದರು. ಅಲ್ಲಿನ ಗುಮಾಸ್ತ ಆಧಾರ್ ಕಾರ್ಡಿನಿಂದ ತೊಡಗಿ ವಾಹನ ಚಾಲನಾ ಪರವಾನಗಿವರೆಗೆ ಯಾವುದಾದರೂ ಒಂದು ವಿಳಾಸ ಖಾತ್ರಿ ದಾಖಲೆ ಕೇಳಿದ. ನಾನು ಹಾಜರುಪಡಿಸಿದ್ದನ್ನು ಗುಮಾಸ್ತ ಕ್ಷಣಾರ್ಧದಲ್ಲಿ ನನ್ನ ಮುಖ ಹಾಗೂ ಬೆರಳಚ್ಚುಗಳ ಸಹಿತ ಗಣಕ ಗರ್ಭೀಕರಿಸಿಕೊಂಡ (ಬಯೋಮೆಟ್ರಿಕ್ ದಾಖಲೆ ಎಂದ). ಮತ್ತೆ ನನ್ನ ತಿಳುವಳಿಕೆಗೆ ವಿರುದ್ಧವಾಗಿ ಮನೆ ಒಂದಕ್ಕೆ ಮುನ್ನೂರು ರೂಪಾಯಿ ಠೇವಣಿ, ದಿನ ಒಂದಕ್ಕೆ ಐವತ್ತು ರೂಪಾಯಿ ಸೇವಾಶುಲ್ಕ ಕೇಳಿದ. ನಾನು ನಮ್ಮ ಪಾದಯಾತ್ರಿ ಪತ್ರವನ್ನು ಹಾಜರುಪಡಿಸಿದೆ. ಅದನ್ನಾತ ಒಪ್ಪಿದವನಂತೆ ಬದಿಗೆ ಸರಿಸಿದರೂ ನಾನೂರು ರೂಪಾಯಿ ಮಾತ್ರ ಕಡ್ಡಾಯ ಎಂದ. ನಮಗೆ ವಾಸಸೌಲಭ್ಯ ಧರ್ಮಕ್ಕೇ ಸಿಕ್ಕಬೇಕೆಂಬ ಹಠವೇನೂ ಇರಲಿಲ್ಲ. ದುಡ್ಡು ಕೊಟ್ಟೆ. ಮರುಕ್ಷಣದಲ್ಲಿ ಎರಡು ಸದಸ್ಯರಿಗೆ ಅನುಕೂಲವಾಗುವಂಥ ಒಂದು ಪುಟ್ಟ ಮನೆಯ ಸಂಖ್ಯೆಯನ್ನೂ ನಮೂದಿಸಿ ಪೂರ್ಣ ಮೊತ್ತಕ್ಕೆ ರಸೀದಿ ಕೊಟ್ಟು, ಗರುಡಾದ್ರಿ ನಗರ ಕಾಲೊನಿಗೆ (ಜೀಎನ್ಸಿ) ಹೋಗಲು ತಿಳಿಸಿದ. ರಸೀದಿಯಲ್ಲಿ ಹೆಚ್ಚಿನ ಮಾಹಿತಿಯೂ ಇತ್ತು. ನಮ್ಮ ವಾಸ ಎರಡನೇ ದಿನಕ್ಕೆ ವಿಸ್ತರಿಸಿದ್ದೇ ಆದರೆ ಕೊನೆಯಲ್ಲಿ ಹೆಚ್ಚುವರಿ ಐವತ್ತು ರೂಪಾಯಿ ಸೇವಾಶುಲ್ಕ ಕೊಟ್ಟರೆ ಸಾಕಿತ್ತು. ಒಪ್ಪಿಕೊಂಡು ಹೊರ ನಡೆದೆವು.

‘ದಾರಿ ಯಾವುದಯ್ಯಾ ಗರುಡಾದ್ರಿ ನಗರಕ್ಕೆ’ ಎನ್ನುವಾಗ ನಾ ಮುಂದು ತಾಮುಂದೆಂದು ಸಮವಸ್ತ್ರಧಾರೀ ಕೂಲಿಗಳೇನೋ ಮುಂಬಂದರು. (ಅವರ ಸೇವೆ ಉಚಿತವಿರಲಾರದು.) ಆದರೆ ನಾವು ಮಿತ ಹೊರೆ ಹೊತ್ತವರಾದ್ದರಿಂದ ಬರಿಯ ವಿಳಾಸ ತಿಳಿದುಕೊಂಡೆವು. ನಾವು ಊರೊಳಗೆ ಪ್ರವೇಶಿಸುವಲ್ಲಿದ್ದ ಪೊಲಿಸ್ ಠಾಣೆಯ ಒತ್ತಿನದೇ ಜೀಎನ್ಸಿ ಕಛೇರಿ. ಸರಿ, ಮತ್ತೆ ಗಂಟು ಹೊತ್ತು ಈಗ ಏರುದಾರಿಯ ಬಲಬದಿಯಲ್ಲೇ ನಡೆದೆವು. ಅಲ್ಲಿ ಮೊದಲು ತೋರುವಂತೆ ಸುಂದರ ಗೀತೋಪದೇಶದ ಪ್ರತಿಕೃತಿಯನ್ನು ಸುತ್ತುವರಿದಂತೆ ಒಳ್ಳೆಯ ಹೂದೋಟ ಮಾಡಿದ್ದರು. ಅದರಾಚೆಗೂ ಮೇಲೇರಿದಂತೆ ಮುಖ್ಯ ದಾರಿಯ ಬದಿಗೂ ಸಮಾನಾಂತರದಲ್ಲಿ ಹಲವು ಅಡ್ಡ ರಸ್ತೆಗಳನ್ನು ಮಾಡಿ, ವಿವಿಧ ಆಕಾರಗಳ (ಅನುಕೂಲಗಳಲ್ಲು ವೈವಿಧ್ಯವಿದ್ದಿರಬಹುದು. ರಸೀದಿ ಬರೆಯುವಲ್ಲೇ ನಮ್ಮದು ಎರಡೇ ಸದಸ್ಯರ ಅಗತ್ಯವಿದ್ದಂತೆ, ಎಂಟು ಜನರ ಕುಟುಂಬಕ್ಕೂ ಬರೆಸಿಕೊಂಡವರಿದ್ದರು.) ಆಧುನಿಕ ಮನೆಗಳನ್ನು ರಚಿಸಿದ್ದರು. ಸ್ಥಳೀಯ ನಿರ್ವಹಣೆಗೆ ಅನುಕೂಲವಾಗುವಂತೆ ಅಲ್ಲಲ್ಲೇ ವಿಭಾಗ ಕಛೇರಿಗಳೂ ಪ್ರತಿ ದಾರಿಗೊಂದರಂತೆ ನಿರ್ವಾಹಕನನ್ನೂ ವ್ಯವಸ್ಥೆ ಮಾಡಿದ್ದರು. ನಾವು ಜೀಎನ್ಸಿಯ ಕಛೇರಿಗೇ ಹೋದೆವು. ಅಲ್ಲೂ ಗಿಜಿಗಿಜಿ ಜನ ಆದರೆ ಯಾರೂ ಬಳಲದಂತೆ ಸರದಿ ಸಾಲಿಗೆ ಕುರ್ಚಿ ಸಾಲನ್ನೇ ಇಟ್ಟಿದ್ದರು. ಸಾಲದ್ದಕ್ಕೆ ಶಾಖೆಯ ಮುಖ್ಯ ನಿರ್ವಾಹಕ ಕೌಟುಂಬಿಕ ಕಾರ್ಯಕ್ರಮಗಳಲ್ಲೆಲ್ಲ ಇರುವ ‘ಸುಧಾರಿಕೆಯ ಜನ’ದಂತೆ ಆಗಿಂದಾಗ್ಗೆ ಆಚೀಚೆ ಓಡಾಡಿ ಎಲ್ಲ ಚಂದಗಾಣಿಸುತ್ತಿದ್ದ! ನಾವು ಅಲ್ಲಿನ ಕಡತಗಳನ್ನೂ ನೇರ್ಪುಗೊಳಿಸಿ ಮತ್ತೂ ಮೇಲೆ ನಡೆದೆವು. ಪೋಲಿಸ್ ಠಾಣೆಯ ಹಿಂದಿನ ಮೊದಲ ಓಣಿಯ ಮೊದಲ ಕಟ್ಟಡದ ನಾಲ್ಕನೇ (ಡಿ) ವಿಭಾಗ ನಮ್ಮದು. ಚೊಕ್ಕವಾಗಿ ಹಾಸಿದ್ದ ಎರಡು ಹಾಸಿಗೆಗಳ ವಿಸ್ತಾರ ಕೋಣೆ, ಒಳಮಗ್ಗುಲಿಗೆ ಒಂದೇ ಕೋಣೆಯ ಅದಕು ಇದಕು ಎದಕು. ಆ ಓಣಿಯ ನಿರ್ವಾಹಕನ ಕೊಠಡಿಯ ಹಿಂದೆ ದಿನದ ಇಪ್ಪಾತ್ತ್ನಾಲ್ಕು ಗಂಟೆಯೂ ಬಿಸಿನೀರು ಒದಗಿಸುವ ಎರಡು ಸಾರ್ವಜನಿಕ ಬಚ್ಚಲೂ ಇತ್ತು. ಓಣಿಯವರು ಅಗತ್ಯವಿದ್ದಂತೆ ಅಲ್ಲೇ ಬಳಸಬಹುದು, ಬಾಲ್ದಿಯಲ್ಲಿ ಮನೆಗಳಿಗೇ ಒಯ್ದೂ ಬಳಸಬಹುದಿತ್ತು. ಅವೆಲ್ಲಾ ಏನಿದ್ದರೂ ನಾಳೆ ಬೆಳಿಗ್ಗೆಯ ಯೋಚನೆ ಎಂದುಕೊಳ್ಳುತ್ತ ಒಮ್ಮೆಗೆ ಕೈ ಮುಖ ತೊಳೆದು, ಫ್ಯಾನ್ ಹಾಕಿ ಹಾಸಿಗೆಯ ಮೇಲೆ ಮೈಚಾಚಿದೆವು. ನಾಲ್ಕೂವರೆ ಗಂಟೆಯ ಏರೋಣದ ಕೊನೆಯಲ್ಲಿ ಸುಮಾರು ಒಂದೂವರೆ ಗಂಟೆಯ (ಕೋಣೆ) ಸೇರೋಣ ಮುಗಿಯುವಾಗ ಮನಸ್ಸು ರೋಸಿ ಹೋಗಿತ್ತು. ನನಗಂತೂ ಪಾದಯಾತ್ರಿಗಳ ‘ಹಕ್ಕಿನ ಉಚಿತ ದರ್ಶನ’ ಪಡೆಯುವ ಉತ್ಸಾಹ ಕಳೆದೇ ಹೋಗಿತ್ತು.

(ಮುಂದುವರಿಯಲಿದೆ)