(ಚಕ್ರವರ್ತಿಗಳು ಮೂರನೆಯ ಸುತ್ತು – ಮೂಲ ಪುಸ್ತಕದಲ್ಲಿ ಮೂರುದಾರಿಗಳು ಅಧ್ಯಾಯದ ಅಂಗಭಾಗ)
ದಕ್ಷಿಣದ ಚಿರಾಪುಂಜಿ ಎಂದೇ ಹೆಸರಾಂತ ಆಗುಂಬೆಪೇಟೆಗೆ ಒನಕೆ ಅಬ್ಬಿ ಕವಲಿನಿಂದೇ ಒಂದೇ ಕಿಮೀ ಅಂತರ. ವಾತಾವರಣಕ್ಕೆ ಸಹಜವಾಗಿ ಮುದುರಿ ಕುಳಿತ ಕೆಲವು ಮನೆಗಳ ಸಾಲು, ನಡುವೆ ಒಂದೆರಡು ಅಂಗಡಿಯೇ ಊರು. [ಇಂದು ಆಗುಂಬೆಯ ಚಹರೆ ತೀವ್ರವಾಗಿ ಬದಲುತ್ತಿದೆ. ಅಂದು ಮಾಲ್ಗುಡಿ ಹಳ್ಳಿಯನ್ನು ಇಲ್ಲೇ ಕಂಡ ಶಂಕರನಾಗ್ ಇಂದು ಬಂದರೆ ಹೆದರಿ ಓಡಿಹೋದಾರು!] ಈ ವಲಯದಲ್ಲಿ ನಮ್ಮ ಎರಡನೆಯ ಲಕ್ಷ್ಯ ಬರ್ಕಣ ಅಬ್ಬಿ. ಬಸ್ ನಿಲ್ದಾಣ ಕಳೆದು ಹೋಗುವ ನೇರ ದಾರಿ ತೀರ್ಥಳ್ಳಿಗಾದರೆ ಬಲದ ದಾರಿ ಶೃಂಗೇರಿಗೆ. ಶೃಂಗೇರಿ ದಾರಿಯಲ್ಲಿ ನೂರಿನ್ನೂರು ಮೀಟರ್ ಕಳೆದು ಬಲಕ್ಕೊಂದು ಮಣ್ಣ ಮಾರ್ಗ. ಅದರಲ್ಲಿ ಸ್ವಲ್ಪ ದೂರ ಮಾತ್ರ ಜಲ್ಲಿ ಹಾಸಿನ ಬಿಗಿ. ಮುಂದೆ ಚದರಿದ ಪೊದರು, ಕುರುಚಲು ಕಾಡು, ಬಿಳಿ ಸೇಡಿಮಣ್ಣಿನ ನೆಲ. ವಾಹನ ಜಾಡುಗಳೇನೋ ಸ್ಪಷ್ಟವಿದ್ದರೂ ಕವಲುದಾರಿಗಳನ್ನು ದೂಳಹೂಳು ತಪ್ಪಿಸಲು ರೂಪುಗೊಂಡ ಪರ್ಯಾಯ ದಾರಿಗಳಿಂದ ಪ್ರತ್ಯೇಕಿಸುವುದು ಕಷ್ಟದ ಕೆಲಸ. ಈ ಹುಡುಕಾಟ ಮತ್ತು ತಂಡ ಪರಸ್ಪರ ಕಣ್ಣಳವಿಯಿಂದ ಚದುರದಂತೆ ಅನುಸರಿಸುವಲ್ಲಿ ಏಳುವ ದೂಳಿನ ಅಲೆ ಹಿಂಬಾಲಕರಿಗೆ ಗೋಳು. ಮತ್ತೆ ಕೆಲವರು ದೂಳು ತುಂಬಿದ ತಗ್ಗುಗಳಲ್ಲಿ ಅಂದಾಜು ತಪ್ಪಿದ ಓಟದಿಂದ, ಬೈಕಿನ ಚಕ್ರ ಕಚ್ಚಿದಂತಾಗಿ ತೂರಾಡಿ ಹೋದದ್ದೂ ಉಂಟು. ಆ ವಲಯದಲ್ಲಿ ಕೃಷಿ, ಹಳ್ಳಿಗಳು ಹೆಚ್ಚಿದ್ದಂತಿರಲಿಲ್ಲ. ಸಹಜವಾಗಿ ಜನಸಂಚಾರವೂ ಇಲ್ಲದಾಗಿ ಸೋಲಬಹುದಾಗಿದ್ದ ನಮ್ಮನ್ನು ಕೆಲವು ಅಸ್ಪಷ್ಟ ಸೂಚನೆಗಳು (ಹವ್ಯಾಸೀ ಚಾರಣಿಗರೋ ಸಮೀಪದ ಹಳ್ಳಿಗರೋ ರಟ್ಟಿನಲ್ಲೋ ಪುಟ್ಟ ಮರಗಳ ಕಾಂಡದಲ್ಲೋ ಹಾಕಿದ ಬಾಣದ ಗುರುತುಗಳು) ಬಚಾಯಿಸಿದವು. ತೀರಾ ಸಣ್ಣ ಒಂದೆರಡು ಬಳಸೋಟವಾದರೂ ನಾವು ಪ್ರಚುರಿತ ‘ಬರ್ಕಣ’ ತಾಣವೇನೋ ಸೇರಿದೆವು. ಆದರೆ ವಾಸ್ತವದಲ್ಲಿ ಅದು ಹೆಸರಾಂತ ಜಲಪಾತವೇ ಅಲ್ಲ, ಅದರ ಬಲು ದೂರದ ವೀಕ್ಷಣ ಕಟ್ಟೆ ಮಾತ್ರ.
ಪಶ್ಚಿಮ ಘಟ್ಟದ ಅತ್ಯುನ್ನತ ಸಾಲು, ಒನಕೆ ಅಬ್ಬಿಯಂತದ್ದೇ ಸನ್ನಿವೇಶದಲ್ಲಿ ಇಲ್ಲೂ ಒಂದು ಪ್ರಪಾತ ತೆರೆದಿಟ್ಟಿತ್ತು. ನಾವು ನಿಂತ ಪರ್ವತಸಾಲು ವಿಸ್ತಾರದ ಕಣಿವೆಗೆ ಸುದೀರ್ಘ ಗೋಡೆಯಂತೆ ಪಶ್ಚಿಮ-ಪೂರ್ವವಾಗಿ ಸಾಗಿ ಸುದೂರದ ಮೂಲೆಯಲ್ಲಿ ದಕ್ಷಿಣಕ್ಕೆ ಹೊರಳಿಕೊಂಡಿತ್ತು. ಅಲ್ಲಿ ಒತ್ತಿನಿಂತ ಕಡು ಹಸುರಿನ ನಡುವೆ ಬೆಳ್ಳಿ ಸರಿಗೆಯಾಗಿ ತೋರಿತು ಬರ್ಕಣ ಅಬ್ಬಿ. ಅದರಲ್ಲಿ ಮೊಳಕೆ ಎದ್ದ ಕಲ್ಲುಗಳೋ ಅಡ್ಡ ಸಿಕ್ಕಿರಬಹುದಾದ ಭಾರೀ ಮರಗಳೋ ಜೋಕಾಲಿಯಾಡುವ ಬಳ್ಳಿಗಳೋ ಅಲಂಕರಿಸಿದ ವರ್ಣಮಯ ಹೂಗಳೋ ಎಲ್ಲ ನಾವು ನಿಂತ ದೂರಕ್ಕೆ ಕರಗಿ ನಿಶ್ಚಲ ಬಿಳಿಯ ಛಾಯೆ ಮಾತ್ರ ಶೋಭಿಸಿತ್ತು. ಕಣಿವೆಯ ಝರಿ ತೊರೆಗಳ ಶ್ರುತಿಯಾಗಲೀ ಹಕ್ಕಿ ಕೀಟಗಳ ನುಡಿ ಪಲುಕುಗಳಾಗಲೀ ಹೆಚ್ಚೇಕೆ ಅಬ್ಬಿಯ ಮೊರೆತವೂ ಒಂದಾಗಿ ಅಲ್ಲೊಂದು ನಿಗೂಢ ಮೌನವಿತ್ತು. ಅಲ್ಲಿ ಎಲ್ಲವೂ ಇದ್ದು ಇಲ್ಲದ ಸ್ಥಿತಿ. ಊರಿನವರೇ ಪ್ರಪಾತದಂಚಿನಲ್ಲಿ ಬಲವಾದ ಮರದ ಕಂಬಗಳನ್ನು ಹುಗಿದು, ಅಡ್ಡಕ್ಕೂ ಅಡಿಗೂ ಸಾಕಷ್ಟು ಕಂಬಗಳನ್ನೇ ಬಳ್ಳಿಯಲ್ಲಿ ಬಿಗಿದು ಮಾಡಿದ್ದ ಅಟ್ಟಳಿಗೆ ಸಾರ್ವಜನಿಕಕ್ಕೆ ಸಾರ್ಥಕ ಸೇವೆ. ಬರ್ಕಣ ಅಬ್ಬಿಯ ಸಾಮೀಪ್ಯ ಸುಲಭದ ಸವಾಲಲ್ಲ ಮತ್ತು ಅಂದಿಗದು ಸಾಧ್ಯವೂ ಇಲ್ಲ ಎಂಬ ಎಚ್ಚರದೊಡನೆ ಹಿಮ್ಮುಖರಾದೆವು.
[ಬರ್ಕಣಾ ತಲೆ-ತಳ ನೋಡಲು ಇನ್ನೊಮ್ಮೆ ಬರ್ಕಣ್ಣಾ. ಆಗುಂಬೆಯ ತಪ್ಪಲಿನ ದಕ್ಷಿಣ ಮಗ್ಗುಲು, ಎಂದರೆ ತಿಂಗಳೆಯ ಮೂಲೆ ನನ್ನ ಲೆಕ್ಕದಲ್ಲಿ ಜಲಪಾತಗಳ ತವರುಮನೆ. ಜನಪದ ನಂಬಿಕೆಯಲ್ಲಿ ಕೂಡ್ಲು (ಸಂಗಮ) ತೀರ್ಥವೇ ಆಗಿದ್ದ ಅಬ್ಬಿಯೊಂದು, ಜನಪ್ರಿಯ ಪತ್ರಿಕೆಯೊಂದರ ಬೇಜವಾಬ್ದಾರಿಯಲ್ಲಿ ಸೀತಾ ಫಾಲ್ಸ್ ಆಗಿ ಮೆರೆದಿರುವುದು ಈ ಕಣಿವೆಯಲ್ಲೇ. (ಸೀತಾ ಫಾಲ್ಸ್ ಎಂದರೆ ರಾಮಾಯಣದ ಅಗಸರವ ಒಗೆದ ಸೀತೆಯ ಅಧಃಪತನದ ಹೇಳಿಕೆಯಲ್ಲ. ಸೀತಾ ನದಿಯ ಉಪೋಪ ಹಳ್ಳವೊಂದರ ಜಲಪಾತವನ್ನು ಆಧುನಿಕರಿಗೆ ಅರ್ಥವಿಸುವ ಪತ್ರಿಕೋದ್ಯಮ ಪಾಂಡಿತ್ಯ ಭ್ರಮೆ!) ಇಲ್ಲಿ ಕೂಡ್ಲು ತೀರ್ಥವೂ ಸೇರಿದಂತೆ, ಬರ್ಕಣದ ತಳಶೋಧನೆಗಿಳಿದು ನಾವು ಮಾಡಿದ ಅಸಂಖ್ಯ ಚಾರಣಗಳ ಕಥನ, ಅನಾವರಣಗೊಳಿಸಿದ ಕೆಲವು ಜಲಪಾತಗಳ ವೈಭವ, ಹೀಗೇ ಮುಂದೆಂದಾದರೂ ಹೇಳುವೆ. ಸದ್ಯ ಬನ್ನಿ ಬನ್ನಿ ಚಕ್ರದ ಮುಂದುರುಳುರುಳುರುಳುತ್ತಾ…]
ಆಗುಂಬೆಯ ತೀರಾ ಅಸ್ಪಷ್ಟ ಪ್ರಚಾರಸಾಹಿತ್ಯದಲ್ಲಿ ನಾವು ಕೇಳಿದ್ದ ಇನ್ನೊಂದು ಹೆಸರು ಜೋಗಿಗುಂಡಿ (ಜಲಪಾತವಂತೆ). ಮರಳುವ ದಾರಿಯಲ್ಲಿ ಒಂದು ಕಾಡುಕಂಬವೇನೋ ದಾರಿ ಸೂಚಿಸಿದ್ದೂ ನಾವು ಅನುಸರಿಸಿದ್ದೂ ಆಯ್ತು. ಆದರೆ ಸ್ವಲ್ಪದರಲ್ಲೇ ಅದು ನಮ್ಮನ್ನು ಎಲ್ಲೂ ತಲಪಿಸದಾಗ, ಶೋಧ ಕೈಚೆಲ್ಲಿದೆವು. [ತಮಾಷೆ ಎಂದರೆ, ಸಂದ ಈ ಮೂರು ದಶಕಗಳಿಗೂ ಮಿಕ್ಕ ಕಾಲದಲ್ಲಿ ಮತ್ತೆ ಮತ್ತೆ ಸಣ್ಣಪುಟ್ಟ ಸಾಹಿತ್ಯಗಳಲ್ಲಿ, ಪ್ರತ್ಯಕ್ಷದರ್ಶಿಗಳ ವಿವರಣೆಯಲ್ಲಿ ಜೋಗಿಗುಂಡಿ ಕೇಳುತ್ತಲೇ ಇದ್ದೇನೆ. ನಾನೆಷ್ಟೋ ಬಾರಿ ಆ ವಲಯಗಳಲ್ಲಿ ಸುತ್ತಿದ್ದೂ ಉಂಟು. ಆದರೆ ಜೋಗಿಗುಂಡಿ ಕಂಡಿಲ್ಲ! ನಾನು ಭಾವಕೋಶದಲ್ಲಿ ಅದು ಭಾರೀ ಪ್ರಾಕೃತಿಕ ವೈಶಿಷ್ಟ್ಯವಲ್ಲ ಎಂದೇ ಇನ್ನೂ ನಂಬಿದ್ದೇನೆ.] ಅಂದು ಸೂರ್ಯ ಸಮುದ್ರ ಸ್ನಾನಕ್ಕಿಳಿಯುವ ಮೊದಲು ನಾವು ಪೂರೈಸಬೇಕಾದ ಘನ ಕಾರ್ಯ ಇನ್ನೂ ಒಂದಿದೆಯೆಂದು ಆಗುಂಬೆಗೆ ಮರಳಿ ತೀರ್ಥಹಳ್ಳಿ ದಾರಿ ಹಿಡಿದೆವು.
ಆಗುಂಬೆಯಿಂದ ಎಂಟನೇ ಕಿಮೀ ಕಲ್ಲೆಂದರೆ ಗುಡ್ಡೆಕೆರೆ ಹಳ್ಳಿ. ಅಲ್ಲಿ ಕೆರೆ ಎಲ್ಲಿತ್ತೋ ಗೊತ್ತಿಲ್ಲ. ಆದರೆ ಬಲದ ಕವಲು ಹಿಡಿದರೆ ಆಕಾಶ ತಿವಿಯುವಂತೆ ಕರಿಕಲ್ಲ ಗುಡ್ಡೆ – ಕುಂದಾದ್ರಿ (೮೭೭ ಮೀ. ಸ.ಮ) ಕಣ್ಣು ತುಂಬುವುದಂತೂ ನಿಶ್ಚಯ. ಆ ದಾರಿಯಲ್ಲಿ ಬೈಕೋಡಿದಂತೆ ಬಂಡೆಯ ದಕ್ಷಿಣ-ಪಶ್ಚಿಮ ಮೈ, ಅಖಂಡ ಕಲ್ಲಗೋಡೆಯಂತೇ ನಮಗೆದುರಾಯ್ತು. ದಾರಿ ಹಾಗೆ ಸುತ್ತಿ, ಕರಾವಳಿಯ ಮಳೆಗಾಳಿಯ ನೇರ ಬಿರುಸನ್ನು ತಪ್ಪಿಸಿಕೊಂಡ ಹಿಮ್ಮೈಗೆ ಒಯ್ಯಿತು. ಅಲ್ಲಿ ಹೆಚ್ಚು ಕಡಿಮೆ ನೆತ್ತಿಯವರೆಗೂ ದಪ್ಪನ್ನ ಮಣ್ಣ ಹೊದಿಕೆ ಇದ್ದು ಸಾಕಷ್ಟು ದಟ್ಟವಾಗಿ ಕಾಡೂ ಹಬ್ಬಿತ್ತು. ಅಲ್ಲಿ ಗುಡ್ಡೆಯ ಮೇಲಿನ ದೇವಳದ ಸೇವಾರ್ಥಿಗಳು ತೀರಾ ಕಡಿದಾದರೂ ಹಲವು ಹಿಮ್ಮುರಿ ತಿರುವುಗಳಿದ್ದರೂ ಶಿಖರಕ್ಕೆ ದೃಢ, ವಾಹನಯೋಗ್ಯ ದಾರಿ ಮಾಡಿದಂತಿತ್ತು. ಅದರ ಮೊದಲ ಹಂತಕ್ಕೆ ನಯವಾದ ಡಾಮರಿನ ಹೊದಿಕೆಯೂ ಇತ್ತು. ಆದರೆ ಕೊನೆಯ ಸುಮಾರು ಒಂದು ಕಿಮೀ ಮಣ್ಣಿನದೇ ದಾರಿ. ಅದು ಮಳೆಗಾಲದ ಹೊಡೆತಕ್ಕೆ ಕೊರೆದು, ಕುಸಿದು, ಕಳೆ ಬೆಳೆದಿತ್ತು. ಕಾಲಿಕ ಸಣ್ಣಪುಟ್ಟ ದುರಸ್ತಿಗಳು ಪುನಾರಚನೆಯ ಅಗಾಧವೆಚ್ಚವನ್ನು ನಿವಾರಿಸುತ್ತದೆ ಎಂಬುದನ್ನು ಯಾರೂ ಕಂಡಂತಿರಲಿಲ್ಲ. ನಾವೇನೋ ಬೈಕ್ ಅಲ್ಲೇ ಬಿಟ್ಟು, ನಡೆದೇ ಶಿಖರ ಸೇರಿದೆವು.
ಕುಂದಾದ್ರಿಯ ಶಿಖರ ಒಂದು ಜೈನ ಕ್ಷೇತ್ರ. ಅದಕ್ಕೇರುವ ದಾರಿ ಒಂದು ಪುಟ್ಟ ಪ್ರವಾಸಿ ಬಂಗ್ಲೆಯ ಅಂಗಳದಲ್ಲಿ ಮುಗಿದಿತ್ತು. ಮತ್ತೆ ಕೆಲವೇ ಮೆಟ್ಟಿಲುಗಳ ಅಂತರದಲ್ಲಿ ನಿಜ ಶಿಖರ. ಬಂಡೆಯಲ್ಲೇ ಮೂಡಿದ ತಗ್ಗಿನಲ್ಲಿ ನಿಂತ ನೀರಿನ ಪುಟ್ಟ ಕೆರೆ, ಒತ್ತಿನಲ್ಲೇ ಒಂದು ಬಾವಿ, ದೇವಾಲಯ ಮತ್ತು ಸಣ್ಣ ಆಧುನಿಕ ರಚನೆಯದೇ ಛತ್ರವೇನೋ ಇತ್ತು. ಆದರೆ ಯಾವುದರದೇ ಕಿಟಕಿ ಬಾಗಿಲು ಸ್ವಸ್ಥವಿರಲಿಲ್ಲ. ಒಳಗೆ ಕಾಲ ಪೇರಿಸಿದ ಕಸಕುಪ್ಪೆಯೊಡನೆ, ಕೀಳಭಿರುಚಿಯ ಮನುಷ್ಯರು ಮಾಡಿದ ಗಲೀಜುಗಳೂ ಧಾರಾಳ ಇದ್ದವು. ಕೆರೆಯೋ ಕೊಳಚೆ ಹೊಂಡ, ಛತ್ರವೋ ಎಮ್ಮೆ ದೊಡ್ಡಿ. ಎಂದೋ ಇದ್ದಿರಬಹುದಾದ ವಿದ್ಯುತ್ ಸಂಪರ್ಕದ ಕುರುಹಾಗಿ ಕಂಬ, ಗೋಡೆಗಳ ಮೇಲೆ ಅಲ್ಲಿಲ್ಲಿ ಚೂರುಪಾರು ಪಟ್ಟಿ, ವಯರು ನೇತಾಡುತ್ತಿದ್ದರೂ ಬಹುತೇಕ ಎಲ್ಲವನ್ನೂ ಅಲ್ಪತೃಪ್ತರು ಕಿತ್ತೊಯ್ದ ಲಕ್ಷಣಗಳು ಕಾಣುತ್ತಿತ್ತು. ಅಪ್ಪಟ ನವ-ಧಾಳಿಕೋರರು ತಮ್ಮ ಸುಂದರ ಹೆಸರುಗಳನ್ನೂ ಪ್ರೇಮ ಶಾಸನಗಳನ್ನೂ ವಿವಿಧ ಬಣ್ಣಗಳಲ್ಲಿ ಮತ್ತು ಗಾತ್ರಗಳಲ್ಲಿ (ಕೆಲವೊಮ್ಮೆ ಸಚಿತ್ರ) ಸ್ಥಳ ಸಿಕ್ಕಲ್ಲೆಲ್ಲಾ ಬರೆದು, ಕೊರೆದು ಹಾಕಿದ್ದರು. ಇತಿಹಾಸ ಹಂಪೆಯೋ ಇನ್ನೊಂದೋ ಹಾಳಾದ್ದಕ್ಕೆ ಜಾತಿಗಳ ಮೇಲೆ ಆರೋಪ ಹೊರಿಸುವುದು ಕೇಳಿದ್ದೇನೆ. ಆದರೆ ಸ್ವಚ್ಛಂದತೆ, ಅವೈಚಾರಿಕತೆ ಎನ್ನುವುದು ಜಾತ್ಯಾತೀತ. ಕುಂದಾದ್ರಿ ದೇವಾಲಯದ ವಿಕಾರೀಕರಣದಲ್ಲಿ ಘಜನಿ ಮಹಮ್ಮದ್, ಲಾರ್ಡ್ ಕ್ಲೈವ್ ಹೆಸರುಗಳ ಉಲ್ಲೇಖವಿಲ್ಲ. ಬದಲು ‘ಹಿರೇಕುಡಿಗೆ ರಾಮಣ್ಣ ಲೌಸ್ ತೀರ್ಥಳ್ಳಿ ಪುಷ್ಪ’ವೇ ಮೊದಲಾದ ಹೆಸರುಗಳು ಮೆರೆದು ಜಾತ್ಯಾತೀತತೆ ಸಾರುತ್ತಿದ್ದದ್ದಕ್ಕೆ ಅಳುವುದೇ ನಗುವುದೇ? ಯಾರೂ ಸಿಗದಿದ್ದರೆ ನಮ್ಮನ್ನು ನಾವೇ ಕೆಡಿಸಿಕೊಳ್ಳಬಲ್ಲೆವು! (ಜಾಹೀರಾತು: ಅನ್ಯತ್ರ ಮೋಸಹೋಗಬೇಡಿ, ನಮ್ಮಲ್ಲಿಗೆ ಬನ್ನಿ) ಇವನ್ನೆಲ್ಲ ನೋಡಿ ಖಿನ್ನವಾದ ಮನಸ್ಸನ್ನು ಅರಳಿಸುವಂತೆ, ಚಿರ ನೂತನ ಪ್ರಕೃತಿ ತನ್ನ ನಿತ್ಯ ನಾಟಕದ ಮತ್ತೊಂದು ಅಮೋಘ ಉಜ್ವಲ ಪ್ರದರ್ಶನಕ್ಕಣಿಯಾಗುತ್ತಿತ್ತು. ದಿನದ ಓಟದಿಂದ ದಣಿವರಿಯದ ಸೂರ್ಯ ಹೊಸದೇ ಬಣ್ಣ ಕಟ್ಟಿಕೊಳ್ಳುತ್ತ ಸಜ್ಜಾಗುತ್ತಿದ್ದ. ಹಕ್ಕಿಗಳ ನೇಪಥ್ಯ ಗಾನದಲ್ಲಿ ರಾತ್ರಿರಂಗ ಅನಾವರಣಗೊಳ್ಳುತ್ತಿದ್ದಂತೆ ನಾವು ಜಾಗಬಿಟ್ಟೆವು.
[ಕುಂದಾದ್ರಿಯ ಇನ್ನೂ ಹೆಚ್ಚಿನ ಪ್ರಾಕೃತಿಕ ವಿವರಣೆ ಮುಂದೊಂದು ಅಧ್ಯಾಯದಲ್ಲಿ ಅನಿವಾರ್ಯವಾಗಿ ಬರಲಿದೆ – ಕಾದು ನೋಡಿ, ರಜತ ಪರದೆಯ ಮೇಲೆ ]
ಬೈಕೇರಿ ಮತ್ತೆ ಗುಡ್ಡೆಕೆರೆ ಹಳ್ಳಿಗಾಗಿ ತೀರ್ಥಳ್ಳಿ ಸೇರಿದೆವು. ಇದು ಮಂಗಳೂರಿನ ಕೆನರಾ ಕಾಲೇಜಿನ ಕನ್ನಡ ಅಧ್ಯಾಪಕ ಗೆಳೆಯ ನಾಗರಾಜ ರಾವ್ ಜವಳಿಯವರ ತವರೂರು. ಸಹಜವಾಗಿ ನಾವು ಹೊರಡುವ ಮೊದಲೇ ಅವರನ್ನು ಸಂಪರ್ಕಿಸಿದ್ದೆ. (ಜವಳಿಯವರ ಕುರಿತು ಹೆಚ್ಚಿನ ವಿವರಗಳಿಗೆ ಇಲ್ಲೇ ತೀರ್ಥಯಾತ್ರೆ ಹಾಗೂ ಜವಳಿ ಪರವಶ ನೋಡಿ) ಅಂದು ಕಾಲೇಜಿನ ಸ್ವಾತಂತ್ರ್ಯೋತ್ಸವದ ಜವಾಬ್ದಾರಿಯಲ್ಲದಿದ್ದರೆ ಜವಳಿಗೂ ನಮ್ಮೊಡನೆ ಸೇರಿಕೊಳ್ಳುವ ಉತ್ಸಾಹ ಇತ್ತು. ಅವರು ಊರಿನಲ್ಲಿದ್ದ ಅಣ್ಣನನ್ನು ಸಂಪರ್ಕಿಸಿ ನಮಗೆ ಅಂದಿನ ತೀರ್ಥಳ್ಳಿಯಲ್ಲಿ ಲಭ್ಯವಿದ್ದ ಒಳ್ಳೆಯ ಹೋಟೆಲಿನ ಊಟ, ವಾಸದ ವ್ಯವಸ್ಥೆ ಮಾಡಿಸಿಕೊಟ್ಟಿದ್ದರು. ದಿನವಿಡೀ ಸುತ್ತಿ ಸಂಗ್ರಹಿಸಿದ ವೈವಿಧ್ಯಮಯ ಕಸಗಾಯಿಗಳನ್ನು ನೆನಪಿನ ಗೂಡೆಯೊಳಗೆ ಕಾವಿಗಿಟ್ಟು, ಬರುವ ದಿನಗಳ ಮಧುರಫಲಗಳನ್ನು ಕನಸಿನಡ್ಡೆಯಲ್ಲಿ ಬಿಡಿಸಿಡುತ್ತಾ ಸುಖನಿದ್ರೆಗಿಳಿದೆವು.
ತೀರ್ಥಳ್ಳಿಯಲ್ಲಿ ತುಂಗೆ ನದಿ ಕಿನಾರೆ ಒಂದೇ ಮತ್ತು ಎಲ್ಲವೂ ಎನ್ನುವುದು ಜವಳಿಯವರ ಮತ. ಪರ್ವತಾರೋಗಿ(/ಹಿ)ಯ ಒತ್ತಾಯಕ್ಕೆ ಅವರೇ ಊರ ಹೊರವಲಯದ ಸಣ್ಣ ದಿಬ್ಬ, ಹೆಸರು ಮಾತ್ರ ಸಿದ್ಧೇಶ್ವರ ಬೆಟ್ಟ ಸೂಚಿಸಿದ್ದರು. ಬೋರಲು ಬಿದ್ದ ಬೋಗುಣಿಯಂಥ ಶುದ್ಧ ಬಂಡೆ – ಸಿದ್ಧೇಶ್ವರ ಬೆಟ್ಟ, ನಮ್ಮ ಮುಂಜಾವಿನ ವ್ಯಾಯಾಮಕ್ಕೊದಗಿತು. ತಂಪು ಹವೆಯಲ್ಲಿ, ಮಂಜಿನ ಮಬ್ಬಿನಲ್ಲಿ ಕಾಲು ಬೀಸಿದವರಿಗೆ ಚಕ್ಕೆ ಎದ್ದ, ಎಲ್ಲೂ ವಿಶೇಷ ಏರಿಕೆ ತೋರದ ದಿಬ್ಬಕ್ಕೆ ಹೋಗಿ ಬರುವುದು ಬರಿಯ ಒಂದು ಗಂಟೆ ಕಾರ್ಯಕ್ರಮವಾಯ್ತು. ಸವಾಲು ತೀರಾ ಸಾಮಾನ್ಯ ಅನಿಸಿದ್ದೂ ನಿಜ. ಆದರೆ ಊರಿನ ಜನಪದ ಮಾತ್ರ ಅದಕ್ಕೂ ಒಂದು ಪ್ರೀತಿಯ ಸ್ಥಾನ ಕಲ್ಪಿಸಿದ್ದನ್ನು ತಿಳಿದಾಗ ಆದ ಸಂತೋಷವೇ ಬೇರೆ. ಅದರ ಹರಡಿಬಿದ್ದ ನೆತ್ತಿಯಲ್ಲಿರುವ ಪುಟ್ಟ ಒರಟು ಗುಡಿ ಕಾರಣಿಕ ಪುರುಷ ಸಿದ್ದೇಶ್ವರನದಂತೆ. ವರ್ಷಕ್ಕೊಮ್ಮೆ ಊರವರು ಅವನ ನೆನಪಿಗೆ ಸಂಭ್ರಮದಲ್ಲಿ ಸಜ್ಜುಗೊಂಡು ದಿಬ್ಬ ಏರುತ್ತಾರಂತೆ. ಅಲ್ಲಿ ಕಾಡುಕಲ್ಲು ಒಟ್ಟಿ ಒಲೆ ಹೂಡಿ, ವಿಧವಿಧದ ಪಾಕ ಮಾಡಿ ಗುಡಿಯಲ್ಲಿ ನೈವೇದ್ಯಕ್ಕಿಟ್ಟು, ಪ್ರಸಾದ ಉಂಡು ಮರಳುತ್ತಾರಂತೆ. ಊರ ವಿಶೇಷವನ್ನು ಕೊಂಡಾಡುವ ಆ ಕ್ರಮಕ್ಕೆ, ಸಾಮಾಜಿಕ ಬಂಧ ವರ್ಷಕ್ಕೊಮ್ಮೆ ಒಟ್ಟಾಗಿ ಕಾಣುವ ಆ ಚಂದಕ್ಕೆ ಮನದಲ್ಲೇ ಶರಣು ಹೇಳಿದೆವು. ರವಿಕಿರಣ ಮಂಜಿನ ಪೊರೆ ಹರಿಯುತ್ತಿದ್ದಂತೆ ತೀರ್ಥಳ್ಳಿಗೆ ಬೆಳಗಾಯ್ತು, ನಾವು ಮುಂದಿನೂರಿನ ಯೋಚನೆಯಲ್ಲಿದ್ದೆವು.
ಭರ್ಜರಿ ಕಾಫಿಂಡಿ ಮುಗಿಸಿ, ಮಧ್ಯಾಹ್ನಕ್ಕೆ ಬುತ್ತಿಯನ್ನೂ ಕಟ್ಟಿಸಿಕೊಂಡೆವು. ಹೊಳೆ ದಂಡೆಗೊಂದು ಚುಟುಕಿನ ಭೇಟಿ. ತುಂಗೆ ಪಾತ್ರೆ ವಿಸ್ತಾರವಾಗಿತ್ತು. ಒಂದೆರಡು ಬಂಡೆಯ ನಡುಗಡ್ಡೆಗಳು, ಅಲ್ಲಿನ ಪುಟ್ಟ ಗುಡಿ, ದಂಡೆಯ ಮಹಾಮರಗಳು, ಅನತಿದೂರದಲ್ಲಿ ದಂಡೆಗಳೆರಡನ್ನು ಬೆಸೆದ ಸೇತುವೆ, ಎಲ್ಲಾ ಮಂಜಿನಲ್ಲಿ ಮುಖ ತೊಳೆದು ಎಳೆಬಿಸಿಲಿನಲ್ಲಿ ಆರಿಸಿಕೊಳ್ಳುತ್ತಿದ್ದ ಪರಿ ಕಲಾತ್ಮಕವಾಗಿತ್ತು. ಮೀಯುವವರು, ಭಕ್ತರು, ಬಟ್ಟೆಯಲ್ಲಿ ಕಲ್ಲೊಡೆಯುವವರು, ಹಳಸಲು ಪಾತ್ರೆಯನ್ನು ಹೊಳೆಸುವವರು ಹೆಚ್ಚುತ್ತಾ ನದಿಕಿನಾರೆಗೆ ಬೆಸೆದುಕೊಂಡ ಜನಜಾನುವಾರು ಚಟುವಟಿಕೆಗಳು ರಂಗುಪಡೆಯುತ್ತಿರುವುದನ್ನು ನೋಡಿದಾಗ ‘ನದಿ ಊರಿನ ಪ್ರತಿನಿಧಿ’ ಮಾತಿನ ಅರ್ಥ ಸ್ಪಷ್ಟವಾಯ್ತು. ಹಾಗೇ ‘ಊರಿಗೆ ಬಂದವರು ನೀರಿಗೆ ಬಾರರೇ’ ಗಾದೆ ನಿಜಮಾಡುವಂತೆ ನಾವೂ ಅಲ್ಲಿದ್ದೆವು!
ಹೊಟೆಲ್ ಖಾಲಿ ಮಾಡಿ, ಸಾಗರ ದಾರಿ ಹಿಡಿದೆವು. ಸುಮಾರು ನಾಲ್ಕು ಕಿಮೀ ಅಂತರದಲ್ಲಿ ಎಡ ಕವಲು, ಈಗ ದಾರಿಯ ಲಕ್ಷ್ಯ ಹೊಸನಗರ. ಮತ್ತೆ ಹನ್ನೆರಡು ಕಿಮೀಗೆ ಎಡ ಕವಲು, ಐದು ಕಿಮೀ ಕಚ್ಚಾದಾರಿಯಲ್ಲಿ ಒಂದು ವಿಸ್ತಾರ ಕೆರೆಯನ್ನು ಬಳಸಿ ಸಾಗಿ ಸೇರಿದ್ದು ಐತಿಹಾಸಿಕವಾಗುಳಿಯದ, ವರ್ತಮಾನಕ್ಕೇರದ, ಹೆಸರಿಗೆ ಮಾತ್ರ ದೊಡ್ಡ ಆಸರೆ ಕಳಚದ ಹಳ್ಳಿಕೊಂಪೆ – ಕೌಲೇದುರ್ಗ. ಶಿಥಿಲವಾದ ಕಲ್ಲ ಪೌಳಿ ಸ್ವಲ್ಪ ಅನುಸರಿಸಿ, ಬೈಕಿಳಿದೆವು. ಹಳ್ಳಿಯ ಗೌಡರೊಬ್ಬರು ನಮಗೆ ಮಾರ್ಗದರ್ಶಿಯಾಗಿ ಒದಗಿದರು. ಈ ದುರ್ಗ ಇಕ್ಕೇರಿ ಅರಸರದ್ದಂತೆ. ಇಂದುಳಿದಿರುವುದು ಗತವೈಭವದ ಮೇಲಿನ ಪ್ರಾಕೃತಿಕ ಸವಾರಿ ಮಾತ್ರ. ಇದು ಅತ್ತ ಜಗತ್ತಿನ ಅತಿ ದೊಡ್ಡ ಮತ್ತು ಸಸ್ಯಾವೃತ ಹಿಂದೂ ದೇವಾಲಯವೆಂದೇ ಪ್ರಸಿದ್ಧಿಯಲ್ಲಿರುವ ಅಂಕೋರ್ವಾಟಿನ ವೈಭವಕ್ಕೂ ಸಲ್ಲುವುದಿಲ್ಲ, ಇತ್ತ ವಿಸ್ತಾರ ರಚನೆಗಳಿದ್ದರೂ ಘನ ಕೋಟೆಯ ಖ್ಯಾತಿಯೂ ಉಳಿಸಿಕೊಂಡಿಲ್ಲ!
ವಿಸ್ತಾರ ಸೋಪಾನಗಳು, ಆಯಕಟ್ಟಿನ ತಿರುವುಗಳು, ನಮ್ಮ ಮಿತಿಗೆ ನಿಲುಕದಂತೆ ಏನೇನೋ ಮರೆಮಾಡುವ ಮಹಾ ಗೋಡೆಗಳು, ದಿಟ್ಟಿಗಂಡಿಗಳು, ಬುರುಜು, ದಿಡ್ಡೀ ಬಾಗಿಲು ಕೋಟೆಯ ಒಂದು ಕಾಲದ ದುರ್ಗಮತೆಯನ್ನು ಸಾರುತ್ತಿದ್ದವು. ನವನಾಗರಿಕತೆಯ ಸಾಹಿತ್ಯ-ದಾಂಧಲೆ ಧರಿಸಿಯೂ ನಿಂತ ಗೋಡೆಗಳು, ಕವಿದು ಬರುವ ಪೊದರು ಮರಗಳನ್ನು ಮೀರಿಯೂ ಇಣುಕುವ ಕಾವಲು ಠಾಣೆಗಳು ನಮ್ಮ ಪ್ರತಿ ಹೆಜ್ಜೆಗೆ ನಿಗೂಢತೆಯ ಸ್ಪರ್ಷ ಕೊಡುತ್ತಿತ್ತು. ವೈರಿ ಸೈನ್ಯದ ದಿನಗಟ್ಟಳೆ ಆಕ್ರಮಣ ಕಾಲದಲ್ಲಿ ನಿತ್ಯ ಪೂರೈಕೆಗಳ ದಾಸ್ತಾನಿಗಾಗಿ ರಚಿತವಾದ ಕಲ್ಲಬಾನಿ, ಕೋಠಿಗಳು ತರಗೆಲೆ ಕಸ ತುಂಬಿದರೂ ಇಂದೂ ಕಾರ್ಯಭಾರ ಒಪ್ಪಿಸಿದರೆ ಸೈ ಎನ್ನುವಂತಿದ್ದವು. ವೈಭವೋಪೇತ ಪೂಜೆ ಹವನಗಳನ್ನು ಕಂಡಿರಬಹುದಾದ ದೇವಮಂದಿರಗಳು ಬಡ ಜನಪದ ಆರಾಧನೆಯಲ್ಲೂ ಉಳಿದಿರುವುದು, ಹೂಳು ಕಸ ತುಂಬಿದರೂ ಇಂದಿನ ತುರ್ತಿನಲ್ಲಿ ನೀರಿನಾಸರೆಯಾಗಬಲ್ಲ ಊಟೆ ಪುಷ್ಕರಿಣಿಗಳು ಕುಸಿದ ಕಲ್ಲು ಗೋಡೆ, ನಿಗಿದ ಕಂದಕ ಪಟ್ಟಿ ಮಾಡಿದಷ್ಟೂ ಮುಗಿಯದು.
ನಾವು ಬುತ್ತಿಯೂಟದ ಸಮಯಕ್ಕೆ ರಾಣೀ ವಾಸದ ರಚನೆಗಳ ಬಳಿಯಿದ್ದೆವು. ಉಯ್ಯಾಲೆ ಕಂಬಗಳು (ಕಲ್ಲಿನವು) ಈಗಷ್ಟೇ ಸರಪಳಿಯ ಕಿರಲು ಕಳಚಿದಂತೆ ರಿಕ್ತತೆಯಲ್ಲೂ ಮಧುರವಾಗಿ ತೋರಿತು. ನಮ್ಮ ಊಟಾನಂತರದ ಕೈ ತೊಳೆಯಲು ಒದಗಿದ್ದು ಐತಿಹಾಸಿಕ ‘ವಾಷ್ ಬೇಸಿನ್’! ಇಲ್ಲಿ ಸಹಜ ಒರತೆಯನ್ನು ಆವರಿಸಿದ ನಾಜೂಕಿನ ಕಲ್ಲ ಕಟ್ಟೆ, ಶಿಲ್ಪಿಯ ಕೌಶಲ್ಯದಲ್ಲಿ ಈಗಲೂ ಖಾಲಿ ಮಾಡಿದಂತೆಲ್ಲಾ ಕೈಮುಖ ತೊಳೆಯುವಷ್ಟೇ (ಸುಮಾರು ನಾಲ್ಕಿಂಚು ಆಳ) ನಿರಂತರ ನೀರು ತುಂಬುವ ಚೋದ್ಯ ನೋಡಿಯೇ ನಂಬಬೇಕು. ಎಷ್ಟು ಸಂಕ್ಷೇಪವಾಗಿ, ಚುರುಕಾಗಿ ನೋಡಿ ಮುಗಿಸಿದರೂ ಸಂಜೆಯಾಗುವುದನ್ನು ನಮಗೆ ತಪ್ಪಿಸಲಾಗಲಿಲ್ಲ. ಏನೆಲ್ಲ ಇದ್ದೂ ಬಡತನಕ್ಕೆ ಮರುಗುವುದನ್ನು ಕಳಚುವುದಾಗಲಿಲ್ಲ. ಕಳೆದ ಹೊತ್ತಿನ ಬಗ್ಗೆ ಬೇಸರಿಸದೆ, ಉಳಿದ ವಿಚಾರಗಳ ಬಗ್ಗೆ ಕಳವಳಿಸಿ, ಬೈಕೇರಿ ಒಳದಾರಿ ಹಿಡಿದೆವು.
[ಮೊನ್ನೆ ಯಾರೋ ಭಾರತೀಯರು ಬ್ರಿಟಿಷ್ ಮ್ಯೂಸಿಯಂಗೆ ದುಬಾರೀ ಹಣ ಕೊಟ್ಟು ಗಾಂಧೀ ಪತ್ರಗಳನ್ನು ಖರೀದಿಸಿದ ಸುದ್ಧಿ ಬಂತು. ಅದಕ್ಕೆ ಗುದ್ದು ಕೊಡುವಂತೆ ಪತ್ರಿಕಾ ಓದುಗನೊಬ್ಬ ವೀರಾವೇಶದಿಂದ ಬರೆದ – ‘ನಮ್ಮ ಟಿಪ್ಪೂ ಖಡ್ಗ ವಿಜಯಮಲ್ಯರ ಕೃಪೆಯಿಂದ ಭಾರತಕ್ಕೆ (?) ಬಂತು. ಈಗ ನಮ್ಮ ಗಾಂಧಿಯ ಸರದಿ. ನಮ್ಮದನ್ನು ದೋಚಿಕೊಂಡು ಹೋದವರು ನಮಗೇ ಮಾರುವಂತಾಗಿರುವುದು ತಪ್ಪು.’ ನಾನು ಕೇಳುತ್ತೇನೆ – ಬ್ರಿಟಿಷರಿಗೆ ಒಯ್ಯಲಾಗದ ಇನ್ನೂ ಸಾವಿರ ಲಕ್ಷ ಐತಿಹಾಸಿಕ ಸಂಗತಿಗಳು ನಮ್ಮಲ್ಲೇ ಉಳಿದವನ್ನು ನಾವು ಏನು ಮಾಡಿದ್ದೇವೆ? ಹೋಗಿ ನೋಡಿ – ಕೌಲೇದುರ್ಗದಿಂದ ಹಿಡಿದು ಪ್ರತಿಯೊಂದೂ ಸ್ಮಾರಕದೆದುರು ಪ್ರಾಚ್ಯ ಇಲಾಖೆ ಹಾಕಿದ್ದು ಬೋರ್ಡು ಮಾತ್ರ. ಅವುಗಳಲ್ಲೂ ಬಹುತೇಕ ಇಂದು ನಾಚಿ (ಮಣ್ಣುತಿಂದು) ತಲೆತಗ್ಗಿಸುತ್ತಿವೆ! ಮುಂದುವರಿದು ಹೇಳುವುದೇ ಆದರೆ ಇಂದು ಪ್ರತಿ ಇಲಾಖೆಯೂ ತನ್ನ ಸಾರ್ವಜನಿಕ ಬದ್ಧತೆ ಸಾರುವುದಕ್ಕಿಂತ ಹೆಚ್ಚಿಗೆ, ತನ್ನ ಯಾಜಮಾನ್ಯ ಸಾರಿ, ಸಾರ್ವಜನಿಕರಿಗೆ ನಿಷೇಧ ಹೇರುವಲ್ಲಿ ಪರಿಣತಿ ಗಳಿಸಿವೆ.]
ವರ್ತಮಾನದ ಒಳದಾರಿ ಎಂದರೆ ಹಾಳುದಾರಿಯಾಗಬೇಕಿಲ್ಲ. ಆದರೆ ನಾವು ಅದುವರೆಗೆ ಕಂಡ ಸತ್ಯಕ್ಕೆ ಸರಿಯಾಗಿ, ಹಿಡಿದ ಹೊಸನಗರದತ್ತಣ ದಾರಿಯೂ ಐತಿಹಾಸಿಕ ಕಾಲದಲ್ಲೇ ಡಾಮರು ಕಂಡಂತಿತ್ತು. ಆದರೆ ಅನಾವರಣಗೊಳ್ಳುತ್ತ ಹೋದ ವರಾಹಿ ಅಣೆಕಟ್ಟು, ಜಲವಿದ್ಯುತ್ ಯೋಜನೆಯ ಕಾಮಗಾರಿಗಳು ನಮ್ಮನ್ನು ಕಾಲಕೋಶದಲ್ಲಿ ಒಮ್ಮೆಗೆ ಆಧುನಿಕ ಯುಗಕ್ಕೆ ತಂದು ನಿಲ್ಲಿಸಿತ್ತು. ನಮ್ಮ ಅವಸರದಲ್ಲಿ, ನಾವು ನೋಡಿದ್ದಕ್ಕಿಂತೂ ಕೇಳಿ, ಗ್ರಹಿಸಿದ್ದೇ ಹೆಚ್ಚು. ವರಾಹಿ ನದಿಗೆ ಹುಟ್ಟೂರಿನಲ್ಲೇ ನಾಲ್ಕೆಂಟು ಹಿರಿಕಟ್ಟೆ, ಹತ್ತೆಂಟು ಕಿರಿಕಟ್ಟೆ. ಆ ಎಲ್ಲ ತೊರೆ ನದಿಗಳ ಜಲಾನಯನ ಪ್ರದೇಶದ ವ್ಯಾಪ್ತಿಗನುಗುಣವಾಗಿ ರಚಿಸಲಾಗುತ್ತಿದ್ದ ಕಟ್ಟೆಗಳಲ್ಲಿ ಮಣ್ಣಿನವೂ ಕೆಲವಿದ್ದವು. ಈ ಎಲ್ಲ ಜಲಧಾರಣೆಯನ್ನು ವ್ಯವಸ್ಥಿತವಾಗಿ ಘಟ್ಟದಂಚಿಗೆ ತಲಪಿಸುವುದು ಮೊದಲ ಹಂತ. ಮುಂದೆ ಅಂಚಿನ ಬೆಟ್ಟದ ಗರ್ಭಕ್ಕೆ ಹೊಡೆದ ಸುರಂಗದ ಆಳದಲ್ಲಿ, ಅಂದರೆ ಕರಾವಳಿಯ ಮಟ್ಟದಲ್ಲಿ ಅಳವಡಿಸಿದ ಜಲಚಕ್ರಗಳಿಗೆ ಆ ನೀರನ್ನು ಊಡಿ ವಿದ್ಯುಚ್ಛಕ್ತಿ ಬಸಿಯುತ್ತಾರೆ ಅಂತೆ.
ವರಾಹಿಯಲ್ಲಿ ಶಕ್ತಿಯ ಮಾತು ಇನ್ನೂ ರೂಪುಗೊಳ್ಳುತ್ತಿರುವಾಗ, ನಮ್ಮ ದಿನದ ಬೆಳಕು ಮಾಸುತ್ತಿರುವಾಗ ಅರುಣ್ ನಾಯಕ್ ಬೈಕಿನ ಶಕ್ತಿಗುಂದತೊಡಗಿತ್ತು. ಬುಲೆಟ್ ಬೈಕಿಗೆ ಜನ್ಮತಃ ಅಂಟಿ ಬಂದ ರಾಜತ್ವ (ರಾಯಲ್ ಎನ್ಫೀಲ್ಡ್ ಅಲ್ಲವೇ ಎಷ್ಟಾದರೂ) ಕಲ್ಲು ಮಣ್ಣಿನ ದಾರಿಯಲ್ಲಿ ಓಡಿಸಿದ್ದರಿಂದ ಮುನಿದಿತ್ತು. ನಾಕು ಲಾತು ತಿಂದು ಗುಡುದುಡಾಯಿಸುತ್ತಿತ್ತು. ಗೇರ್ ಕೊಟ್ಟರೆ ಗುಮ್ಮಗೆ ಗುಸಕ್ ಎನ್ನುತ್ತಿತ್ತು. ಹಾಗೂ ಹೀಗೂ ಪುಸಲಾಯಿಸಿ ಕೇವಲ ಇಂಜಿನ್ ಚಾಲನೆಯಲ್ಲಿದ್ದಂತೆ ಸಹವಾರ ವಿನ್ಸಿ ಅಷ್ಟು ದೂರಕ್ಕದನ್ನು ನೂಕುತ್ತಿದ್ದ. ಅರುಣ್ ಕಡಿವಾಣ ಸಡಿಲಕೊಟ್ಟು ಎರಡನೇ ಗೇರ್ ಕೊಡುತ್ತಿದ್ದ. ಮೊದಲು ಚಂಡಿಹಿಡಿದ ಕತ್ತೆಗೆ ಮುಷ್ಕರ ಮಾಡಿದ್ದು ಮರೆತು ಬಿಗುಮಾನದಲ್ಲೇ ಓಡಲು ತೊಡಗುತ್ತಿತ್ತು. ಶಿಳ್ಳೆ ಹೊಡೆದು ಧಾವಿಸುವ ಬಸ್ಸನ್ನು ಬೆನ್ನಟ್ಟಿ ಏರುವ ಕಂಡೋರಕುಟ್ಟಿಯಂತೆ ವಿನ್ಸಿ ಹಿಂದೆ ಓಡಿ, ಹಾರಿ, ಕೂರುತ್ತಿದ್ದ. ಮುಂದೂ ಓಡುವಲ್ಲಿ ರಾಯರಿ(/ಲ್ಲಿ)ಗೆ ಪೂರ್ಣ ಮನಸ್ಸಿಲ್ಲ. ಏನೋ ಕೊಸಕೊಸ, ಆಗಾಗ ಕೆಮ್ಮು, ದಮ್ಮು, ಬಿಗುಮಾನ. ಅದುವರೆಗೆ ಎಲ್ಲಾ ಸವಾರರೂ ಕುಶಿ ಬಂದಂತೆ ಒಬ್ಬರನ್ನೊಬ್ಬರು ಹಿಂದೆ ಮುಂದೆ ಹಾಕುತ್ತಿದ್ದದ್ದನ್ನು ಬದಲಿಸಿದೆವು. ಅರುಣ್ ಜೋಡಿಯನ್ನು ಮುಂದಿಟ್ಟು, ಹೋದಷ್ಟೂ ಲಾಭ ಎಂದು ಎಲ್ಲ ಹಿಂಬಾಲಿಸಿದ್ದೆವು. ಅದೃಷ್ಟವಶಾತ್ ಈ ಸೆಡವಿನೋಟ ಬಿಗಡಾಯಿಸುವ ಮುನ್ನ ಘಟ್ಟದಂಚು ಸೇರಿದ್ದೆವು.
ಅಂದು ಅಸಹನೆಯ ಮೂರ್ತಿ ಸೂರ್ಯ. ಆಕಾಶದಲ್ಲೆಲ್ಲ ಆತ ಬಿಚ್ಚಿ ಬಿಸುಡಿದ ಬಣ್ಣದುಡುಗೆ – ಮೋಡಚೂರುಗಳು. ಹಕ್ಕಿ ಮೇಳದ ರಾಗಾಲಾಪನೆ ಆತನನ್ನು ಒಲಿಸಿ ನಿಲ್ಲಿಸುವಲ್ಲಿ ಸೋತಿದ್ದವು. ಸಮುದ್ರವೋ ಅವನ ಉನ್ಮಾದಕ್ಕೆ ಕಲಕಿ ಕೆಂಪಾಗಿ, ಕಪ್ಪಾಗುತ್ತಿದ್ದಂತೆ ರಾತ್ರಿಯಾಯ್ತು. ಘಟ್ಟದ ಇಳಿಜಾರಿನ ಸೌಲಭ್ಯ ಬಳಸಿಕೊಳ್ಳುವಂತೆ ನಮ್ಮ ಬೈಕ್ ತಂಡದ ವ್ಯೂಹ ಬದಲಾಯಿಸಿದೆವು. ಸಾಲು ಹಿಡಿದೇ ಸಾಗುವಲ್ಲೂ ಮುಂದಿನ ಮತ್ತು ಮೂರನೇ ಬೈಕುಗಳ ನಡುವೆ ಅರುಣ್ ಜೋಡಿ ನಿಶ್ಚೈಸಿಕೊಂಡೆವು. ಅದು ಇಂಜಿನ್ ಚಲಾಯಿಸದೇ ಹಿಂದು ಮುಂದಿನ ಬೈಕ್ಗಳ ಎರವಲು ಬೆಳಕಿನಲ್ಲಿ ಓಡುತ್ತಿತ್ತು. ಅಗತ್ಯ ಬಂದಲ್ಲಿ ಬ್ರೇಕಂತೂ ಧಾರಾಳ ಇದ್ದುದರಿಂದ ಆಕಸ್ಮಿಕಗಳೇನೂ ಇಲ್ಲದೇ ಬೇಗನೆ ತಪ್ಪಲನ್ನು ಸೇರಿದೆವು. ಮುಂದಿನ ದಾರಿಯಲ್ಲಿ ಸ್ವಲ್ಪ ಸ್ವಲ್ಪ ಇಂಜಿನ್ ಚಲಾಯಿಸಿ, ಸಣ್ಣಪುಟ್ಟ ಇಳಿಜಾರುಗಳಲ್ಲೂ ಖಾಲಿಯೋಟ ಕೊಡುತ್ತ ಸುಮಾರು ಸುಧಾರಿಸಿದೆವು. ಆದರೂ ಕೆಲವೊಮ್ಮೆ ಅಕ್ಷರಶಃ ಹೊಗೆ ನಳಿಗೆಯಿಂದ ಬೆಂಕಿ ಕಾರುತ್ತ ಅರುಣ್ ಬೈಕ್ ತಲ್ಲಣಿಸುವಾಗ ಹತ್ತತ್ತು ಮಿನಿಟು ನಿಲ್ಲುವುದು ಅನಿವಾರ್ಯವಾಗುತ್ತಿತ್ತು. ಅಂಥ ಸಂದರ್ಭಗಳಲ್ಲಿ ವಿನ್ಸಿಯಂತೂ ಅಕ್ಷರಶಃ (ಟೊಪ್ಪಿ ಬಳಸಿ) ರಾಯ(/ಲ್ಲಿ)ರಿಗೆ ಚಾಮರಸೇವೆ ಮಾಡಿ ತಣಿಸುತ್ತಿದ್ದರು! ಅರುಣ್ ಪಶ್ಚಾತ್ತಾಪ ಪಡುತ್ತಿದ್ದರು, “ಉಳಿದ ದ್ವಿಚಕ್ರಗಳಂತೆ ಯಾವುದೇ ಮೆಕ್ಯಾನಿಕ್ಕಿಗೆ ಒಲಿಯುವ ಜೀವ ಅಲ್ಲ ಬುಲೆಟ್.” ದಾರಿಯಲ್ಲಿ ಕುಂದಾಪುರ, ಉಡುಪಿಯಂತಹ ದೊಡ್ಡ ಪೇಟೆಗಳೇನೋ ಬಂದವು. ಆದರೆ ಯಾವುದೇ ರಿಪೇರೀ ಜನ ಹಿಡಿಯಲಾಗದ ಅವೇಳೆಯಲ್ಲಿ ನಾವಲ್ಲಿದ್ದೆವು. ಆ ಬೈಕಿಗೆ ಭಾರ ಕಡಿಮೆ ಮಾಡುವ ದೃಷ್ಟಿಯಿಂದ ವಿನ್ಸಿಯ ಬದಲು ಕಿಶೋರನನ್ನು ಏರಿಸಿದೆವು. ಈ ಬದಲಾವಣೆಯಲ್ಲೂ ಸಣ್ಣ ಎಡವಟ್ಟಿತ್ತು; ಚಿಕ್ಕಪ್ರಾಯದ ಬಾಲ ತೂಕಡಿಸುತ್ತಿದ್ದ. ಆದರೆ ಅರುಣ್ ಆ ವೇಳೆಗೆ ಸುಮಾರು ಮೂವತ್ತು-ನಲವತ್ತರ ವೇಗದಲ್ಲಿ ಬೈಕನ್ನು ನಿರಂತರ ಓಟಕ್ಕೆ ಪುಸಲಾಯಿಸಿ ಒಲಿಸಿಕೊಂಡಿದ್ದರು. ಇದೇ ಜಾಣತನದಲ್ಲಿ ಕಿಶೋರನನ್ನೂ ನಿಭಾಯಿಸುತ್ತಾ ಸಾಗಿದ್ದರಿಂದ ನಡುರಾತ್ರಿಗಾದರೂ ನಾವು ಮಂಗಳಪುರದಲ್ಲಿ ಸ್ವಾತಂತ್ರ್ಯೋತ್ಸವದ ಓಟಕ್ಕೆ ಮಂಗಳ ಹಾಡಿದೆವು.
[ಸುಗಮ ಮಾರ್ಗಕ್ರಮಣದಲ್ಲಿ ಪ್ರೇಕ್ಷಣೀಯ ಲಕ್ಷ್ಯಗಳ ಕಥೆ ಕೇಳಿದಿರಿ. ಕೇವಲ ಮಾರ್ಗಕ್ರಮಣವೇ ಲಕ್ಷ್ಯವೆಂಬಂತೆ, ಗುಡ್ಡಗಾಡಿನ ಜಾಡುಗಳನ್ನು ಬೈಕುಗಳಲ್ಲಿ ಅನುಸರಿಸಿ ಸಾಗಿದ ನಮ್ಮ ಅನುಭವ ಕಥನಕ್ಕೆ ಮುಂದಿನವಾರ ಸಜ್ಜಾಗಿ. ಅದುವರೆಗೆ ಇಂದಿನ ನನ್ನ ಓಟಕ್ಕೆ (ವಿನ್ಸಿಯಂತೆ?) ನಿಮ್ಮ ಚಾಮರ ಸೇವೆ ಬರಲಿ.]
'ಗುಡ್ಡಗಾಡಿನ ಜಾಡುಗಳನ್ನು ಬೈಕುಗಳಲ್ಲಿ ಅನುಸರಿಸಿ ಸಾಗಿದ ನಮ್ಮ ಅನುಭವ ಕಥನ' ಓದಲು ಎಲ್ಲ ರೀತಿಯಿಂದ ಸಜ್ಜಾಗಿದ್ದೇನೆ. ಆದ್ದರಿಂದ ನಿರಂತರವಾಗಿ ಬರುತ್ತಿರಲಿ
ನಿಮ್ಮ ಚಕ್ರ-ವರ್ತಿಗಳು ಎಂದಿನಂತೆ ಚೆನ್ನಾಗಿ ಸಾಗಿವೆ. ಆ ಫೋಟೋಗಳನ್ನು ನೋಡುವಾಗ ನೆನಪಾಯಿತು; ಕೆಬಿ100ನಲ್ಲಿ ಕುಂದಾದ್ರಿ, ಕೋಟಚಾದ್ರಿ, ಕವಳೆದುರ್ಗ ಕೊಳ್ಳೆಹೊಡೆದುಬಂದ ಕಥನಕ್ಕಾಗಿ ಕಾದುಕುಳಿತಿದ್ದೇನೆ.
1995 ra samaya naanu vayanadinalliruva edakallu guddada tudige hatti kuttichatanante nintidde.allina moola nivasigla nambugeyante jagadalli kuttichata huttiddanante.harida sanna braa mattu nirodannu alli kanda sharapanjara cinema nenapagittu' intahudannu kande puttanna kanagal cinema madiddirabahudu.