ಕಾಡಜಾಡಿನಲ್ಲಿ ಹೆಕ್ಕಿದ ಪರಿಸರ ಪ್ರಶ್ನೆಗಳು ಭಾಗ ಒಂದು

ಹದಿನಾಲ್ಕು ಜನ ಸರಬುರ ಹೆಜ್ಜೆ ಹಾಕುವುದಷ್ಟೇ ಸದ್ದು. ತೆಳು ಗಾಳಿಯ ಚಳಿ ಕಳೆಯಲು ಪ್ರತಿ ಎಲೆ ಹುಲ್ಲಿನ ಮೇಲೆ ಕೋಟಿ ಮಣಿ ಸೂರ್ಯರು. ಭಗವತಿ ಬೋಗುಣಿಯ ಒಳಗೆ ಅಂದು ಹಿಮದ ಹೊದಿಕೆ ಹರಿದಿತ್ತು, ಆಲಸಿ ಮೋಡಗಳ ಗುಡಿ ಗುಂಡಾರ ಪೂರ್ಣ ಕಳಚಿತ್ತು. ಮಂಗಳೂರಿನಿಂದ ಬಂದು ಚಾರಣಕ್ಕಿಳಿದ ನಮ್ಮ ನಾಗರಿಕ ಲೆಕ್ಕಕ್ಕೆ ಬೆಳಗ್ಗಿನ ಒಂಬತ್ತು ಗಂಟೆ ಸಾಕಷ್ಟು ಬೇಗವೇ ಇರಬಹುದು. ಆದರೆ ಮುಂಬೆಳಕಿನಿಂದಲೇ ತೊಡಗುವ ಪ್ರಾಕೃತಿಕ (ಪಶುಪಕ್ಷ್ಯಾದಿಗಳ) ಚಟುವಟಿಕೆಗಳ ಹೆಚ್ಚಿನ ವೀಕ್ಷಣೆಗೆ ಕನಿಷ್ಠ ಮೂರು ಗಂಟೆಯಾದರೂ ತಡವಾದ ಅರಿವು ನಮಗಿತ್ತು. ದೃಶ್ಯ ನಿಚ್ಚಳವಾಗಿದ್ದು, ಗುರುತಿಸಬಲ್ಲವರಿಗೆ ಉತ್ತರ ಮೂಲೆಯಲ್ಲಿನ ಕುರಿಯ (ಕುರಿಯಂಗಲ್ಲಿನ, ೩೮೧೮ ಅಡಿ) ಹಿಮ್ಮಂಡೆಯಿಂದ ತೊಡಗಿ, ಗಡಿಕಲ್ಲು (೩೯೦೬), ಕಡಮಡಿ ಕಲ್ಲು (೪೯೦೦), ಕಡಕೇಜಗುಡ್ಡೆಗಾಗಿ (೫೪೦೬) ದಕ್ಷಿಣಕ್ಕೆ ಸರಿಯುತ್ತಾ ಕಾಣದ ಕುದುರೆಮುಖ ಶಿಖರದಲ್ಲಿ (೬೨೦೭) ಅತ್ಯುನ್ನತಿಯನ್ನು ಕಾಣುವ ಸಾವಿರ ಹೆಡೆಗಳ ಪಶ್ಚಿಮಘಟ್ಟ ಮೈಚಾಚಿ ಬಿದ್ದಿತ್ತು. ಬೋಗುಣಿಯನ್ನು ಪೂರ್ತಿ ಮಾಡುವಂತೆ ನಮ್ಮ ಹಿಂದಕ್ಕೂ ಆವರಿಸಿತ್ತು ಗಂಗಡಿಕಲ್ಲಿನ ಕಿರು ಶ್ರೇಣಿ. ಅದರ ಪೂರ್ವ ಕೊನೆ ನಾವಿದ್ದ ಎತ್ತರಕ್ಕೆ ಮರೆಯಲ್ಲಿದ್ದರೂ ಮಾನವ ನಿರ್ಮಿತ ಗಡಿರೇಖೆ – ಲಖ್ಯಾ ಅಣೆಕಟ್ಟೆ. ಮತ್ತೂ ಬಲಕ್ಕೆ ಗಣಿಗಾರಿಕೆಯ ಕೇಂದ್ರ, ಅಂದರೆ ವಿದೇಶಕ್ಕೆ ಲೋಹಾಂಶ ಕಳಿಸಿ, ಹೂಳನ್ನು ಲಖ್ಯಾಕ್ಕೆ ತುಂಬುತ್ತ ನಿಂತ ಬೆಟ್ಟಸಾಲು. ಮದ್ದಿಟ್ಟು ಉಡಾಯಿಸಿ, ರಕ್ಕಸ ಕೈಗಳಿಂದ ಬಗಿದು ಮುಕ್ಕುವ ಕ್ರಿಯೆ ನಿಂತು ಮೂರು ನಾಲ್ಕು ವರ್ಷಗಳೇ ಕಳೆದರೂ ‘ರಕ್ತಸಿಕ್ತವಾಗಿ’ ಕಾಣುತ್ತಿತ್ತು. ಆ ಶ್ರೇಣಿಯ ಹಿಮ್ಮೈ, ಅಂದರೆ ಪಾಂಡರಮಕ್ಕಿ ಎನ್ನುವ ವಲಯದುದ್ದಕ್ಕೆ ವನ್ಯ ವೀಕ್ಷಣಾ ಚಾರಣವಷ್ಟೇ ನಮ್ಮ ಅಂದಿನ ಲಕ್ಷ್ಯ.

ಸುಮಾರು ನಾಲ್ಕು ದಶಕಗಳ ಹಿಂದೆ, ಕುದುರೆಮುಖ ಗಣಿ ಕಾರ್ಯರೂಪಕ್ಕೆ ಬರುವ ಕಾಲದಲ್ಲಿ, ಮಹಾದಾರಿಯೊಂದು ಹೊಸದಾಗಿ ಕರಾವಳಿಯಿಂದ ಘಟ್ಟ ಏರಿಬಂತು. ಅದು ಪರ್ವತಸಾಲಿನ ಹಿಮ್ಮೈಯ ವಿಸ್ತಾರ ಭದ್ರಾ ಕಣಿವೆಯ ಒಂದು ಕೊನೆಯ ಮಲ್ಲೇಶ್ವರ ಎಂಬ ಕುಗ್ರಾಮವನ್ನು ವ್ಯವಸ್ಥಿತ ಉದ್ಯಮ-ನಗರಿ, ಕುದುರೆಮುಖ ಪಟ್ಟಣವಾಗಿ ರೂಪಾಂತರಿಸಿತು. ಸಹಜವಾಗಿ ಒತ್ತಿನ ಅರಣ್ಯ ಪ್ರದೇಶದಲ್ಲಿ ಉಪವೃತ್ತಿಗಳನ್ನು ಶೋಧಿಸುವವರು ಗೋಪಾಲನೆ, ಕೃಷಿ ಎನ್ನುತ್ತಾ ನೆಲೆಸುತ್ತ ಹೋದರು. (ಜವಾಬ್ದಾರಿಯುತ ಸರಕಾರ ಗಣಿಗಾರಿಕೆಯ ‘ವಿದೇಶೀ ವಿನಿಮಯದ’ ಏಕನಾದಕ್ಕೆ ತಲೆದೂಗುತ್ತಾ ಕುಳಿತದ್ದು ವಿಸ್ತೃತ ಪರಿಸರ ದುರಂತ ಎಂದೇ ಹೇಳಬೇಕು.) ಆಗ ಬಿಟ್ಟಿ ಹುಲ್ಲು, ಧಾರಾಳ ನೀರನ್ನು ದಕ್ಕಿಸಿಕೊಳ್ಳುತ್ತಾ ಈ ಭಗವತಿ ಬೋಗುಣಿಯಲ್ಲಿ (ಕರಾವಳಿಯಿಂದ ಹೋಗುವಾಗ ಪೇಟೆಗೂ ಸುಮಾರು ಹತ್ತು ಕಿಮೀ ಮೊದಲೇ ಸಿಗುತ್ತದೆ) ಪೂರ್ಣ ಅಕ್ರಮವಾಗಿ ಆರೆಂಟು ಕುಟುಂಬ, ನಾನೂರಕ್ಕೂ ಮಿಕ್ಕ ಜಾನುವಾರು ನೆಲೆಸಿದವು. ಇವರಿಗೆ ಕುದುರೆಮುಖ ಹಾಲಿನ ಗಿರಾಕಿ. ಅವರ ಜಾನುವಾರು ಪುರಾಣ, ಬಲು ಕಠಿಣ ಜೀವನ ಪರಿಸ್ಥಿತಿಗಳನ್ನು ನಾನಿಲ್ಲಿ ವಿಸ್ತರಿಸುವುದಿಲ್ಲ. ಆದರೆ ಗಣಿಗಾರಿಗೆ ರದ್ದಾದ ಮೇಲೆ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಗಟ್ಟಿಯಾಗುತ್ತಿದ್ದಂತೆ, ಅವರ ಅಸ್ತಿತ್ವ ಪರಿಸರ ಮತ್ತು ಮಾನವೀಯತೆಯ ಸ್ಪಷ್ಟ ಮುಖಾಮುಖಿಯಾಗಿ, ಕಗ್ಗಂಟಾಗಿ ಉಳಿದಿತ್ತು. ಅಷ್ಟೂ ಮನೆ, ಜನ, ಜಾನುವಾರನ್ನು ಮನಃಪೂರ್ವಕವಾಗಿ ವನ್ಯದಿಂದ ಹೊರಗೆ ನೆಲೆಕಾಣಿಸುವಲ್ಲಿ ಪ್ರಧಾನವಾಗಿ ಗೆಳೆಯ ನಿರೇನರ ಕೆಲಸ, ಕುದುರೆಮುಖ ವೈಲ್ಡ್ ಲೈಫ್ ಫೌಂಡೇಶನ್ ಸಾಧನೆ ಭಾರೀ ದೊಡ್ಡದು. ಹೀಗೆ ಶುದ್ಧ ವನ್ಯಕ್ಕೆ ಮತ್ತೆ ಸಲ್ಲಬೇಕಾದ ನೆಲದಲ್ಲಿ, ಇಂದು ಅಧಿಕಾರಯುತವಾಗಿ ರಾಜ್ಯ ವನ್ಯ ಇಲಾಖೆ (ಕುದುರೆಮುಖ ರಾಷ್ಟ್ರೀಯ ಉದ್ಯಾನವನ) ನಡೆಸುತ್ತಿರುವ ‘ಹೋಟೆಲು’ – ನೇಚರ್ ಕ್ಯಾಂಪ್!

ಮಹಾದ್ವಾರ ನಾವು ತಲಪುವಾಗ (೨೦-೧೧-೧೧) ಬೆಳಿಗ್ಗೆ ಎಂಟೂಮುಕ್ಕಾಲು. ನಿರೇನ್ ಕೇಳಿಕೊಂಡಂತೇ ಗೆಳೆಯ ಧರ್ಣಪ್ಪನವರು ನಮಗೆಲ್ಲಾ (ಎರಡು ಕಾರು, ಒಂದು ಬೈಕೇರಿ ಬಂದ ಹನ್ನೆರಡು ಮಂದಿ) ಉದ್ಯಾನವನದ ಪ್ರವೇಶಕ್ಕೆ ತಲಾ ರೂ ಎಪ್ಪತ್ತೈದು, ದಿನದ ಚಾರಣಕ್ಕೆ ತಲಾ ರೂ ಇನ್ನೂರು ಮತ್ತು ತಂಡಕ್ಕೆ ಓರ್ವ ಇಲಾಖಾ ಮಾರ್ಗದರ್ಶಿಗೆ ರೂ ಐದುನೂರು ಮುಂದಾಗಿ ಮಲ್ಲೇಶ್ವರದಲ್ಲಿ ಪಾವತಿಸಿ, ಮಾರ್ಗದರ್ಶಿ – ಪರಮೇಶ್ವರನೊಡನೆ ನೇಚರ್ ಕ್ಯಾಂಪಿನ ಮಹಾದ್ವಾರದಲ್ಲಿ ಕಾದಿದ್ದರು. (ಇಲ್ಲವಾದರೆ ನಾವು ಈ ಔಪಚಾರಿಕತೆಗೆ, ಅನಾವಶ್ಯಕ ಮೇಲೆ ಕೆಳಗಿನ ಓಡಾಟದಲ್ಲಿ ಮತ್ತೂ ಕನಿಷ್ಠ ಒಂದು ಗಂಟೆ ಕಳೆದುಕೊಳ್ಳಬೇಕಾಗುತ್ತಿತ್ತು!) ನನ್ನ ಖಾಸಗಿ ಪ್ರಯೋಗ ಭೂಮಿ ‘ಅಭಯಾರಣ್ಯ’ದಲ್ಲಿ ನಾನು ಅನಿವಾರ್ಯವಾಗಿ ಕಬ್ಬಿಣದ ಗೇಟು ಮಾಡಿದ್ದೇನೆ. ಆದರೆ ಅದರ ಕುಂದದ ಹಿಂದೆಯೇ ಮುರಕಲ್ಲು ಹಾಸನ್ನು ನಾಲ್ಕಡಿ ಆಳಕ್ಕೆ ತೋಡಿ, ಮಣ್ಣು ತುಂಬಿ, ಮುಂದಕ್ಕಾದರೂ ಪ್ರಾಕೃತಿಕ ಆಧಾರದಲ್ಲಿ ದ್ವಾರ ನಿಲ್ಲಿಸುವ ಯೋಜನೆ ಹಾಕಿದ್ದೇನೆ. ಆದರೆ ಇಲ್ಲಿ ಸಹಜವಾಗಿ ಮರಗಿಡಗಳು ಇದ್ದ ಮತ್ತು ಬರಬಹುದಾದ ಸಮೃದ್ಧ ಮಣ್ಣಿನಲ್ಲಿ, ಪರಿಸರದಲ್ಲಿ ಕಬ್ಬಿಣ ಮತ್ತು ಕಾಂಕ್ರೀಟಿನ ರಚನೆಗಳನ್ನು ಹೇರಿ ಅವಕ್ಕೆಲ್ಲಾ ಕ್ಯಾಮಫ್ಲೇಜ್ ಕಲರ್ (ದಟ್ಟ ಹಸುರು ಹಿನ್ನೆಲೆಯ ಮೇಲೆ ಕಂದು ಬಣ್ಣದ ದೊಡ್ಡ ದೊಡ್ಡ ಬುಟ್ಟಗಳು) ಬಳಿದಿರುವುದು ತಮಾಷೆಯಾಗಿದೆ. ಅಲ್ಲೇ ಆವರಣದ ಒಳಗೆ ಬಲಬದಿಯಲ್ಲಿ ಯಾವ ಆಯ ರುಚಿಯಿಲ್ಲದೆ ಸ್ವಾಗತ/ಕಾವಲುಗಾರನ ಮನೆ, ಒಂದೆರಡು ‘ತುರ್ತು ದೂಳು ಸಂಗ್ರಹ’ ಕೋಣೆಗಳನ್ನು ಕಟ್ಟಿರುವುದು ಪಕ್ಕಾ ಸರಕಾರೀ ಬುದ್ಧಿ. ಇನ್ನೂ ವಿಚಿತ್ರವಾಗಿ ಎಡ ಬದಿಯಲ್ಲಿ ಸ್ವಾಗತ ಕಛೇರಿಯಿದೆ. ಅಚ್ಚ ಬಿಳೀ ಪ್ಯುಟ್ರಿಫೈಡ್ ಟೈಲ್ಸ್ ಹಾಕಿ, ಅಲಂಕಾರಿಕ ಸರಪಳಿಯುಕ್ತ ಎಂಟಡಿ ಪುಟ್ಟಪಥ ಸಹಿತ ಸಣ್ಣ ಜಗುಲಿ. ಹಿಂಬದಿಗೇನೋ ಕೋಣೆ ಬಾಗಿಲು ಮುಚ್ಚಿಕೊಂಡಿತ್ತು. (ಪಂಚತಾರಾ ಮಟ್ಟದ ಫಿಟ್ ಮೆಂಟ್ಸಿನ ಪಾಯಖಾನೆ ಇರಬಹುದು, ಸೌರಸೌಲಭ್ಯದ ಹವಾನಿಯಂತ್ರಕ, ತೂಗು ಗೊಂಚಲು ದೀಪಾಲಂಕಾರ, ರಾಜಸ್ತಾನೀ ಅರಮನೆಗಳ ವೈಭವ ನಾಚಿಸುವ ಡೈನಿಂಗ್ ಟೇಬಲ್ ಸೆಟ್ ಏನೂ ಇರಬಹುದು. ಆದರೆ ಜನನ ದೋಷದಲ್ಲಿ ಬಳಕೆಗೆ ಒಡ್ಡಿಕೊಳ್ಳದೆ ದೂಳು ಬಲೆ ಗೆದ್ದಲುಗಳ ಕಲಾವಂತಿಕೆಯನ್ನು ಮೆರೆಸುತ್ತಿರಲೂ ಬಹುದು) ಇಲ್ಲೂ ಗೋಡೆಗೆ ಮಾತ್ರ ಕ್ಯಾಮಾಫ್ಲೇಜ್ ಬಣ್ಣ ಬಳಿದಿರುವುದು ಹಿಲರಿ ಕ್ಲಿಂಟನ್ ತಲೆಗೆ ಮುಟ್ಟಾಳೆ ತೊಡಿಸಿದಂತೆ ಭೂಷಣಪ್ರಾಯವಾಗಿದೆ!

ಮಹಾದ್ವಾರದಿಂದ ನೇರ ಸುಮಾರು ಒಂದು ಕಿಮೀ ಅಂತರದಲ್ಲಿ ಇಲಾಖೆಯ ಶಿಬಿರ ಸ್ಥಾನವಿದೆ. ಆದರೆ ನಾವು ಎಡಕ್ಕೆ ತಿರುಗಿ, ಹೆದ್ದಾರಿಗೆ ಸಮವಾಗಿಯೇ ಮಣ್ಣದಾರಿ ಸವೆಸಿದ್ದೆವು. ಅದಿರು-ಪಾಯಸವನ್ನು ಮಂಗಳೂರಿಗೆ ತಲಪಿಸಲು ಜೋಡಿಸಿದ್ದ ಎರಡು ಭಾರೀ ಕೊಳವೆ ಸಾಲು ನಮ್ಮ ಎಡಕ್ಕೆ ಅಲ್ಲಿ ಕೆಲವೆಡೆಗಳಲ್ಲಿ ಪ್ರಕಟವಾಗಿಯೇ ಸಾಗಿತ್ತು. ಇದರೊಳಗಿನ ದ್ರವ ಗುರುತ್ವಾಕರ್ಷಣ ಬಲದಲ್ಲೇ ಹರಿಯುವುದಾದ್ದರಿಂದ ಕುರಿಯಂಗಲ್ಲಿನ ದಕ್ಷಿಣ ಒತ್ತಿನ ಕಣಿವೆಯ ಆಯಕಟ್ಟಿನ ಜಾಗದಲ್ಲಿ ಘಟ್ಟ ಇಳಿಸಿದ್ದಾರೆ. ಅತ್ಯಂತ ಕಡಿಮೆ ಶ್ರಮದಲ್ಲಿ ಶಿಖರ ಸಾಲು ನಿವಾರಿಸಲು ಅಲ್ಲಿ ಸುಮಾರು ಒಂದೂಕಾಲು ಕಿಮೀ ಉದ್ದಕ್ಕೆ ಕಗ್ಗಲ್ಲನ್ನೇ ಕೊರೆದು ಸುರಂಗ ಮಾರ್ಗ ರಚಿಸಿದ್ದಾರೆ. ಹಿಂದೊಮ್ಮೆ ಕುರಿಯಂಗಲ್ಲಿಗೆ ಹೊರಟಿದ್ದ ನನ್ನ ಪುಟ್ಟ ತಂಡವೊಂದರೊಡನೆ, ಉದ್ದೇಶಪಟ್ಟು ಟಾರ್ಚು ಹಿಡಿದುಕೊಂಡೇ ಹೋಗಿ, ಸುರಂಗದ ಉದ್ದಕ್ಕೂ ನಡೆದು, ಇನ್ನೊಂದು ಕೊನೆಯನ್ನು ನೋಡಿ ಮರಳಿದ್ದೆ. ಜೋಡು ಕೊಳವೆ ಸಾಲು ಮುಂದೆ ಒಂದೆರಡು ಕಿರು ಕಣಿವೆ ದಾಟುವಲ್ಲಷ್ಟೇ ಪ್ರಕಟವಾಗುವುದು ಬಿಟ್ಟರೆ ಪೂರ್ಣ ಭೂಗತವಾಗಿಯೇ ಸಾಗುತ್ತವೆ. ಅಂದಿನ ದಿನಗಳಲ್ಲಿ ಪ್ರಾಕೃತಿಕ ಅದ್ಭುತಗಳು ಮತ್ತವನ್ನು ಪಳಗಿಸುವಲ್ಲಿ ಮನುಷ್ಯ ಪ್ರಯತ್ನಗಳೆರಡೂ ನನಗೆ ಮೆಚ್ಚುಗೆಯ ಮತ್ತು ಪ್ರೇಕ್ಷಣೀಯ ಸ್ಥಳಗಳೇ ಆಗಿದ್ದವು.

ಮುಂದೊಂದು ಕಾಲದಲ್ಲಿ ಗಣಿಗಾರಿಕೆಯ ಆಯುಷ್ಯ ಮುಗಿಯುತ್ತಿರುವಂತೆ, ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಘೋಷಣೆ ಆಗಿತ್ತು. ಆಗ ಈ ಭೂಗತ ಕೊಳವೆಗಳು ಅಲ್ಲಲ್ಲಿ ಒಡೆದು ಸೋರುತ್ತಿದ್ದದ್ದು ಬೆಳಕಿಗೆ ಬಂತು. ಹೊಸ ಖನಿಜ ನಿಕ್ಷೇಪಗಳನ್ನರಸಿ ಗಣಿಯವರು ಗಡಿಮೀರಿ ಪರ್ವತ ವಲಯವೆಲ್ಲ ಬುಲ್ಡೋಜರ್ ಚಲಾಯಿಸಿ ದಾರಿ ಮಾಡಿದ್ದು, ಜೀವಂತ ಹಸುರಿನ ತುಪ್ಪುಳದಲ್ಲಿ ರಕ್ತ ಒಸರುವ ಗಾಯಗಳೇ ಆಗಿ ತೋರಿದವು. ಆಕಸ್ಮಿಕವೆಂಬಂತೆ ನಡೆಸಿದ ಭೂ ಅತಿಕ್ರಮಣಗಳು ಕಾನೂನಿನ ಪರಿಧಿಯಲ್ಲಿ ದಾಖಲಾಗತೊಡಗಿದವು. ಪರ್ಯಾಯವೇ ಇಲ್ಲದ, ಕನಿಷ್ಠ ಇಂದಿನ ಅರಿವಿನಲ್ಲಿ ಮೌಲ್ಯಮಾಪನಕ್ಕಿಳಿದರೂ ಬೆಲೆಕಟ್ಟಲಾಗದ ಪರಿಸರಕ್ಕೆ, ವನ್ಯಕ್ಕೆ ಗಣಿಗಾರಿಕೆ ಕೊಟ್ಟದ್ದೇನೂ ಇಲ್ಲ. ಮಾಡಿದ್ದು ಅವಹೇಳನ ಮಾತ್ರ ಎನ್ನುವ ಕಾಲಕ್ಕೆ ಪರೋಕ್ಷ ಲಾಭಗಳಿಗಾಗಿ ಗಣಿ ಕಂಪೆನಿಯೂ ನಿರ್ಲಜ್ಜ ಮಿತಿಯಲ್ಲಿ ಸರಕಾರವೂ ಒಂದಾಗಿ ‘ಆಯುಷ್ಯ ರೇಖೆ’ ಹೆಚ್ಚಿಸಲು ತಿಣುಕಾಡಿದರು. ದಾರಿಯನ್ನು ಸಮರ್ಥಿಸಿಕೊಳ್ಳುವಂತೆ ಆದರೆ ಶೋಲಾ ಅರಣ್ಯದ ಪ್ರಾಥಮಿಕ ಜ್ಞಾನವೂ ಇಲ್ಲದವರಂತೆ ದಾರಿ ಹೋದ ಹುಲ್ಲ ಹರಹಿನಲ್ಲೆಲ್ಲಾ ಚಂದ್ರಗುಂಡಿ ತೆಗೆದು, ವಿದೇಶೀ ಗಿಡ ನೆಟ್ಟರು. (ಹೆಚ್ಚಿನ ಜಾಗಗಳಲ್ಲಿ ಇಂದು ಅವುಗಳ ಕುತ್ತಿಯೂ ಉಳಿದಿಲ್ಲ) ಸಾಮಾನ್ಯವಾಗಿ ಪರಿಸರ ವೇದಿಕೆಗಳನ್ನೆಲ್ಲಾ ಅಲಂಕರಿಸಿ, ವ್ಯವಸ್ಥೆಗೆ ಅನುಕೂಲವಾಗಿ ತಮ್ಮ ಮಾತು, ಕಲಿಕೆ ಮತ್ತು ‘ಸಂಶೋಧನೆ’ಗಳನ್ನೆಲ್ಲಾ ಮೀಸಲಿಟ್ಟು, “ಒಳ್ಳೇ ಸಮಯ ಒಳ್ಳೇ ಸಮಯ…” ಹಾಡಿಕೊಳ್ಳುತ್ತಾ ಅನುದಾನ, ಪ್ರಶಸ್ತಿ, ಪುರಸ್ಕಾರಗಳಿಗೆ ಮಾರಿಕೊಂಡ ‘ಪರಿಸರವಾದಿಗಳಿಂದ’ ಗಣಿಗಾರಿಕೆಗೆ ‘ಪರಿಸರಸ್ನೇಹೀ’ ಮುದ್ರೆ ಹೊಡೆಸಿಕೊಳ್ಳತೊಡಗಿದರು! ಆಗ ನನಗೆ ಯಂತ್ರಸಾಧನೆಯ ಬೆರಗು ಕಳೆದು, ಪ್ರಕೃತಿಯ ಮೇಲಾಗುತ್ತಿದ್ದ ಅನಾಚಾರದ ಅರಿವು ಮೂಡಿತ್ತು! ಅನುಭವಿಸಿದರೆ ಸಾಲದು, ಉಳಿಸಿಕೊಳ್ಳಲೂ ದುಡಿಯಬೇಕೆಂಬ ಛಲ ಬೆಳೆದಿತ್ತು.

ಕೆ.ಎಂ ಚಿಣ್ಣಪ್ಪ, ಉಲ್ಲಾಸ ಕಾರಂತ ಮತ್ತು ನಿರೇನ್ ಜೈನ್ ಮುಖ್ಯರಾಗಿ (ವೈಲ್ಡ್ ಲೈಫ್ ಫಸ್ಟ್!) ತೊಡಗಿದ್ದ ಗಣಿಗಾರಿಕೆಯ ವಿರುದ್ಧದ ಕಾನೂನು ಸಮರದಲ್ಲಿ ಸಣ್ಣದಾಗಿ ಸೇರಿಕೊಂಡೆ. ಆರೋಹಣ ಪರ್ವತಾರೋಹಿಗಳು ಸಾಹಸಿಗಳಿಗೆ ಸ್ಪಷ್ಟ ವನ್ಯ ಸಂರಕ್ಷಣೆಯ ಮುಖ ಬಂದಿತ್ತು. ಆಗ ಒಮ್ಮೆ ಈ ಕೊಳವೆ ಸಾಲು ಘಟ್ಟದ ಅರ್ಧ ಅಂತರದಲ್ಲೆಲ್ಲೋ ಒಡೆದು ದಿನಗಟ್ಟಳೆ ಭಾರೀ ಅದಿರುಪಾಯಸ ಹರಿದು ಮಾಡಿದ ಅವಾಂತರವನ್ನು ನೋಡಲು ನಾವೂ ಓಡಿದ್ದೆವು. ಕೊಳವೆ ಸಾಲಿನ ಜಾಡಿನುದ್ದಕ್ಕೂ ಘಟ್ಟ ಇಳಿದು ನಡೆದಿದ್ದೆವು. ಕುದುರೆಮುಖ ವಲಯದ ನಕ್ಸಲ್ ಚಳವಳಿಯಲ್ಲಿ ಈದು ಗ್ರಾಮದ ‘ಮುಖಾಮುಖಿ’ ಇಂದು ಜಗತ್ಪ್ರಸಿದ್ಧವಾಗಿದೆ. ಆದರೆ ಅಂದು, ಅದೇ ಈದು ಗ್ರಾಮದ ನೀರಿನಾಸರೆಗಳು, ಫಲವತ್ತಾದ ಕೃಷಿಭೂಮಿಗಳು ಮೊಳಕಾಲು ಮಟ್ಟದ ಕರಿಹೂಳಿನಲ್ಲಿ ನರಳಿದ್ದು ಸುದ್ದಿ ಸಾಗರದಲ್ಲಿ ಕ್ಷಣಿಕ ಮಿಂಚಾಗಿ ಮರೆಯಾದದ್ದು ನಿಜಕ್ಕೂ ನಾಗರಿಕ ಪ್ರಜ್ಞೆಗೊಂದು ದೊಡ್ಡ ಕರಿಚುಕ್ಕೆ.

ನಾವು ನಡಿಗೆಗಿಳಿದಿದ್ದ ಮಣ್ಣ ದಾರಿಯ ಬಲ ಮಗ್ಗುಲ ಬಯಲಿನಲ್ಲಿ ಮುಳ್ಳಸರಿಗೆಗಳ ಬೇಲಿ ಕಳಚಿಕೊಂಡುಳಿದ ಒಂದೆರಡು ಕಲ್ಲಗೂಟಗಳು ಕುಂಬಾಗಲಾಗದೇ ಚಿಗುರಲು ತಿಳಿಯದೇ ಬುಡ ಸೇರಿದ ಕುರುಚಲಿನಿಂದ ಅಕ್ಷರಶಃ ಆಶ್ಚರ್ಯ ಚಿಹ್ನೆಗಳೇ ಆಗಿದ್ದವು. ಆಚೆ, ಸುಮಾರು ಮೂರು ವರ್ಷದಷ್ಟೇ ಹಿಂದೆ ಒಕ್ಕಲೆದ್ದವರ ಮನೆಗಳ ಸಣ್ಣಪುಟ್ಟ ಅವಶೇಷಗಳು ಹುಡುಕು ನೋಟಕ್ಕೆ ಮಾತ್ರ ಸಿಗುತ್ತಿದ್ದವು. ಸೆಗಣಿ ಸಾರಿಸಿದ್ದ ಅಂಗಳಗಳಲ್ಲಿ ಕಾಟಿ ಸೆಗಣಿಯ ಗುಡ್ಡೆ, ಹಂದಿ ದುಂಡಿನ ಅಗೆತ ಚೇತೋಹಾರಿಯಾಗಿದ್ದವು. ಬಸಳೆ ಬಾಳೆಗಳು ಬಸವಳಿದು ಕೈತೋಟ ಕಾಡು ಬಿದ್ದಿತ್ತು. ಬಸಿಗಾಲುವೆಗಳು ನಿಗಿದು, ಗದ್ದೆ ಗೊಸರ ನೆಲವಾಗಿ, ಆಳೆತ್ತರದ ಕರಡ ಬೆಳೆದು ವನ್ಯ ಅಂಕ ಪೂರ್ವರಂಗ ಮೆರೆದಿತ್ತು. ಅಪರೂಪಕ್ಕೊಂದೊಂದು ಚಿಟ್ಟೆಯಾಡುತ್ತಿತ್ತು. ಬಿಸಿಲೇರುತ್ತಿದ್ದುದರಿಂದ ನೋಟ ಮತ್ತು ಹಕ್ಕಿಗಳುಲಿಯಲ್ಲಿ ಆಗಲೇ ಜಿಪುಣತೆ ಇತ್ತು. ವನ್ಯ ಜಾಗೃತಿಯ ಹೆಚ್ಚಿನ ನೋಟಗಳಿಗಾಗಿ ನಮ್ಮ ಹೆಜ್ಜೆಗಳ ಬೀಸು ಏರುಗತಿಯಲ್ಲೇ ಮುಂದುವರಿದಿತ್ತು.

ಕರಡಿ ಬೆಟ್ಟದ ಉಪಕಥೆ:
ದಾರಿ ಬಲಕ್ಕೆ ಹೊರಳಿ ಹೊಳೆಪಾತ್ರದತ್ತ ಸರಿಯಿತು. ಇಲ್ಲಿ ಗಣಿಗಾರಿಕೆಗಾಗಿ ವಿದ್ಯುತ್ ಕೊಡಲೆಂದೇ ಎತ್ತೆತ್ತರದ ಸ್ತಂಭ ಸಾಲಿನೊಡನೆ ಎಳೆದಿದ್ದ ವಿದ್ಯುತ್ ಸರಿಗೆಯ ಅಡಿ ದಾಟುವಾಗ ತಿಂಗಳ ಹಿಂದೆ ಕರಡಿಬೆಟ್ಟಕ್ಕೆ ಹೋದ ನೆನಪು ಮರುಕಳಿಸಿತು. ಪರಿಸರದ ಕತೆಗಳೆಲ್ಲಾ ಒಂದರೊಳಗೊಂದು ಬೆಸೆದೇ ಇರುವುದರಿಂದ ಮೊದಲು ಕರಡಿಬೆಟ್ಟದ್ದನ್ನೇ ಸ್ವಲ್ಪದರಲ್ಲಿ ಹೇಳಿಬಿಡುತ್ತೇನೆ. ಇದೇ ಕಳೆದ ಮಳೆಗಾಲದ ಮಸುಕಿನಲ್ಲಿ ಬೈಕೇರಿ ಚಾರ್ಮಾಡಿ ಘಾಟಿಯಲ್ಲಿ ಸವಾರಿಗೆ ಹೋಗಿದ್ದ ಗೆಳೆಯ ಮಹೇಶ ಮಯ್ಯನಿಗೆ ಕೊಳ್ಳದಾಚಿನ ಶಿಖರಸಾಲಿನಲ್ಲಿ ಹೀಗೇ ವಿದ್ಯುತ್ ಸ್ತಂಭಗಳು ಮೊಳೆಯುತ್ತಿರುವುದು ಕಾಣಿಸಿತು. ಅದು ಕರಡಿಬೆಟ್ಟದ ಶ್ರೇಣಿ. ಕಾಯ್ದಿರಿಸಿದ ವನ್ಯಪ್ರದೇಶವಾದ ಇದು, ಅದುವರೆಗೆ ಅಷ್ಟಾಗಿ ಮನುಷ್ಯ ಚಟುವಟಿಕೆಗಳಿಗೆ ಸಿಕ್ಕಿರಲಿಲ್ಲ. ಹಾಗಿದ್ದರಿದೇನೆಂದು ಆತ ವಿಷಯವನ್ನು ನಿರೇನ್ ಮುಂದಿಟ್ಟ. ನಿರೇನ್‌ಗೆ ಅದು ರಾಷ್ಟ್ರೀಯ ಉದ್ಯಾನವನದೊಳಗೂ ವಿಸ್ತರಿಸಿರಬಹುದೇ ಎಂಬ ಸಂಶಯ ಸೇರಿಕೊಂಡಿತು. ಪಶ್ಚಾತ್ತಾಪಕ್ಕಿಂತ ಮುಂದಾಲೋಚನೆ ಒಳ್ಳೆಯದೆಂದು ನಿರೇನ್ ಕರೆ ಕೊಟ್ಟರು, “ಚಲೋ ಕರಡಿಬೆಟ್ಟ.” ವಾಸ್ತವದಲ್ಲಿ ನಮ್ಮಲ್ಲಿ ಹಲವರಿಗೆ ಕರಡಿಬೆಟ್ಟ ಹೊಸತೇನೂ ಆಗಿರಲಿಲ್ಲ. ಅದೊಂದು ದಿನ ನನ್ನಂಗಡಿಯಲ್ಲಿ…

“ಆನೆ ಕಾಟ ಸ್ವಾಮೀ. ಚಿಕ್ಮಗ್ಳೂರ್ ಡೀಸಿನ ಕೇಳಿದ್ರೆ, ಕಾಡ್ ಪ್ರಾಣಿ ಅಲ್ವಾ. ಫಾರೆಸ್ಟಿನವರಲ್ಲಿ ಪರಿಹಾರ ಕೇಳೀಂತೋಡ್ಸುದ್ರು. ಫಾರೆಸ್ಟ್ನವ್ರು, ನಮ್ಮಲ್ಲಿ ರೆವಿನ್ಯೂ ಖಾತೆಯವರಿಗೆ ಪ್ಯಾಕೇಜು ಇಲ್ಲಾಂತ ಕೈಯಾಡಿಸಿಬಿಟ್ರು. ಮತ್ತವ್ರೇ ಪ್ರೈವೇಟಾಗಿ ಕರ್ದು ‘ಮಂಗ್ಳೂರು ಕದ್ರೀಲಿ ನಿರಂಜನ್ ಇದ್ದಾರೆ. ಅವರು ಕಾಡುಪ್ರಾಣಿ ಉಳ್ಸಾಕೆ ಎಲ್ಲರಿಗೂ ನೆಲೆ ಕಾಣಿಸ್ತಾರೆ’ ಅಂತ ಸಾಗಾಕಿದ್ರು.” ಇದು ಸುಮಾರು ಎರಡು ವರ್ಷದ ಹಿಂದಿನ ಕಥೆ. ಮೂರು ಹಳ್ಳಿಗರು ನನ್ನಂಗಡಿಯಲ್ಲಿ ತಮ್ಮ ಭೂ ದಾಖಲೆ ಎಲ್ಲಾ ಇಟ್ಟು ಮಾಡಿದ ಪ್ರಾರ್ಥನೆ! ಚಿಕ್ಕಮಗಳೂರಿನ ಹಳ್ಳಿ ಮೂಲೆ ‘ಕೋಗಿಲೆ’ಯಿಂದ ದೈನ್ಯವೇ ಮೈವೆತ್ತಂತೆ ಮಂಗಳೂರ ಬಸ್ಸಿಡಿದು ಬಂದ ಇವರು ನೇರ ಕದ್ರಿ ಪಾರ್ಕಿಗೆ ಹೋಗಿ ನೌಕರರ ಬಳಿ ‘ನಿರಂಜನ್’ ವಿಚಾರಿಸಿದ್ದಾರೆ. ಅದೃಷ್ಟವಶಾತ್ ಅಲ್ಲಿದ್ದ ಅರಣ್ಯ ಇಲಾಖೆಯ ನೌಕರನೊಬ್ಬ, ನಮ್ಮ ಬಳಗದ ಸ್ವಲ್ಪ ಪರಿಚಯವಿದ್ದದ್ದಕ್ಕೆ ನನ್ನಲ್ಲಿಗೆ ರವಾನಿಸಿದ್ದ. ನಾನು ಸರಿಯಾದ ಹೆಸರು, ವಿಳಾಸ ಕೊಟ್ಟು ಗೆಳೆಯ ನಿರೇನ್ ಜೈನ್‌ರಲ್ಲಿಗೆ ಕಳಿಸಿದೆ. ರಾಷ್ಟ್ರೀಯ ಉದ್ಯಾನವನದೊಳಗಿನ ಜನಗಳ ಮರುವಸತಿಗೆ ಕೆಲವು ಉದಾತ್ತ ವ್ಯಕ್ತಿ ಮತ್ತು ಖಾಸಗಿ ಸಂಸ್ಥೆಗಳ ಸಂಪರ್ಕದಲ್ಲಿ ನಿರೇನ್ ಅಪಾರ ಕೆಲಸ ಮಾಡಿದವರೇ. ಆದರೆ ವಿಸ್ತೃತ ವನ್ಯ ಸಂರಕ್ಷಣೆ ಎನ್ನಿ, ಮನುಷ್ಯ ಪ್ರೀತಿ ಎನ್ನಿ ಇಲ್ಲೂ ಏನಾದರೂ ನಮ್ಮಿಂದ ಮಾಡಲಾದೀತೇ ಎನ್ನುವುದು ನಿರೇನ್ ಉತ್ಸಾಹ. ಹಾಗೆ ಹೋಗಿ ಬಂದ ತಂಡದಲ್ಲಿ ನಾನೂ ಒಬ್ಬ. ಆ ಕೋಗಿಲೆ, (ಮುಂದುವರಿದಾಗ ಸಿಕ್ಕುವ) ದೇವರಮನೆಯೇ ಮೊದಲಾದ ಹಳ್ಳಿಗಳ ಹಿನ್ನೆಲೆಯ ಶ್ರೇಣಿಯೇ ಕರಡಿಬೆಟ್ಟ. [ನಿರೇನ್ (ಅಥವಾ ನಮ್ಮೆಲ್ಲರ) ವ್ಯಾಪ್ತಿ ಮೀರಿದ ಸಮಸ್ಯೆ ಇದಾಗಿತ್ತು. ಆದರೂ ಪರಿಚಿತ ದಕ ಜಿಲ್ಲಾಧಿಕಾರಿಯ ಮೂಲಕ ನಡೆಸಿದ ಕೆಲಸಗಳ ಕಥೆ ಹೀಗೇ ಮುಂದೆಂದಾದರೂ ವಿಸ್ತರಿಸುತ್ತೇನೆ.]

ಕರಡಿಬೆಟ್ಟಕ್ಕೆ ಹೀಗೆ ನಮ್ಮದು ಎರಡನೇ ಭೇಟಿ. ಚಾರ್ಮಾಡಿ, ಕೊಟ್ಟಿಗೆಹಾರ ಕಳೆದು ಬಣಕಲ್ಲಿಗೂ ಮೊದಲೇ ಬಲಕ್ಕೆ ಹಳ್ಳಿದಾರಿಗೆ ಕವಲೊಡೆಯುವವರೆಗೂ ಪ್ರಯಾಣ ಸುಗಮ. ಮತ್ತೆ ಸುಮಾರು ಆರೆಂಟು ಕಿಮೀ ದೂರದ ಕೋಗಿಲೆವರೆಗೆ ದಾರಿ ತೀರಾ ಸಪುರ ಮತ್ತು ಕೆಲವು ತೀವ್ರ ಏರುಗಳಿದ್ದರೂ ಡಾಮರಿನ ಅವಶೇಷವಿತ್ತು. ಮುಂದೆ ದೇವರಮನೆವರೆಗೆ ಚರಂಡಿಬಿದ್ದ, ವಾಹನಸಂಚಾರವೇನು ಜನಸಂಚಾರವೂ ಇಲ್ಲದ ಸುಮಾರು ನಾಲ್ಕು ಕಿಮೀ ಮಣ್ಣ ದಾರಿ. ಕಾರಿನ ಮಿತಿಗೆ ಸ್ವಲ್ಪ ಅತಿಯೇ ಆದರೂ ಸಕಾಲಕ್ಕೆ ತಲಪಿದೆವು.

ಹೆಸರಿಗೆ ತಕ್ಕಂತೆ ದೊಡ್ಡ ಪುಷ್ಕರಿಣಿ ಸಹಿತವಾದ ಪ್ರಾಚೀನ ದೇವಾಲಯದ್ದೇ ಹಳ್ಳಿಯದು. ದೇವಳದ ಬಲ ಎದುರಿಗಿದ್ದ ಹಸುರುಮಿಂದ ಬೆಟ್ಟದ ನೆತ್ತಿಗೆ ನೀಳ ಭರ್ಚಿ (ಮೂವತ್ತು-ನಲವತ್ತಡಿ ಇರಬಹುದು) ಚುಚ್ಚಿದಂತೆ ಒಂದು ಸಪುರ (ಆಂಟೆನಾ ಇರಬಹುದು) ಸ್ತಂಭ ಮೊದಲೇ ನಿಲ್ಲಿಸಿದ್ದರು. ಅದರ ಒತ್ತಿಗೆ ಭಾರೀ ವಿದ್ಯುತ್ ಸ್ತಂಭ ನಿಲ್ಲಿಸಲು ಕೆಲಸ ನಡೆಸಿದ್ದರು. ಹಾಗೇ ದೇವಳದ ಎಡ ಹಿತ್ತಿಲಿನಲ್ಲೂ ಇನ್ನೊಂದೇ ಗುಡ್ಡೆಯ ನೆತ್ತಿಯ ಮೇಲೂ ಕೆಲಸ ನಡೆದಿತ್ತು. ಎರಡೂ ನೆತ್ತಿಗಳಿಗೆ ಬುಲ್ಡೋಜರ್ ಚಲಾಯಿಸಿ, ದಾರಿ ಮಾಡಿದ್ದರು. ಮತ್ತಲ್ಲಿ ಕನಿಷ್ಠ ಐವತ್ತೈವತ್ತಡಿಯ ಚೌಕವಾಗುವಂತೆ ನೆಲವನ್ನು ಬುಲ್ಡೋಜ್ ಮಾಡಿ ತಟ್ಟು ಮಾಡಿದ್ದರು. ಅಲ್ಲಿಂದ ಮಳೆಗೆ ತೊಳೆದು ಹೊರಟ ಮಣ್ಣು, ಚೆಲ್ಲಿದ ಜಲ್ಲಿ, ಸಿಮೆಂಟಿನವರೆಗಿನ ಸುರಿಕೆಗಳು ಗುಡ್ಡೆಗಳ ಮೈಯಲ್ಲೆಲ್ಲಾ ಹರಿದು, ಕಣಿವೆಗಳ ಅಚ್ಚ ನೀರಕಣ್ಣುಗಳಲ್ಲಿ ನಿಗಿದು ಹೋದದ್ದನ್ನು ನಾವು ನಡೆದು ನೋಡಿದೆವು. ಗಮನಿಸಿ, ನಾವು ನೋಡಿದ್ದು ಎರಡೇ ಸ್ತಂಭಗಳ ನೆಲೆ. ಈಗ ನೀವೇ ಅಂದಾಜಿಸಿ, ಇಂಥ ನೂರಾರು ಸ್ತಂಭಗಳು ಪಡುಬಿದ್ರೆಯ ಯೂಪಿಸಿಎಲ್ಲಿನಿಂದ ತೊಡಗಿ ಘಟ್ಟದ ಮೇಲಿನೂರಿಗೆ ಪೂರ್ತಿ ಹೊಸ ಜಾಡಿನಲ್ಲಿ ಸಾಗಿರುವಾಗ ಪ್ರಾಕೃತಿಕ ಅವಹೇಳನದ ವ್ಯಾಪ್ತಿ ಎಷ್ಟು ದೊಡ್ಡದಿರಬಹುದು?

ಕರಡಿ ಬೆಟ್ಟದಿಂದ ಮರಳುವಾಗ ನಮ್ಮಲ್ಲಿ ಮೂಡಿದ ಕೆಲವು ಪ್ರಶ್ನೆಗಳು ೧. ಈಗಾಗಲೇ ಇರುವ ಜಾಡುಗಳನ್ನು ಬಿಟ್ಟು ಹೊಸದನ್ನು ಆರಿಸುವುದರಿಂದ ನಿರ್ಮಾಣ ಮತ್ತೆ ನಿರ್ವಹಣೆಯ ಹೆಸರಿನಲ್ಲಿ ವೆಚ್ಚ ಹೆಚ್ಚಾಗುವುದಿಲ್ಲವೇ? ಮತ್ತು ಶುದ್ಧ ಪ್ರಾಕೃತಿಕ ನೆಲೆಗಳ ಮೆಲೆ ನಾಗರಿಕ ಹೊರೆ ನಿರಂತರವಾಗುವುದಿಲ್ಲವೇ? ೨. ಈಗ ನಿರುಪಯುಕ್ತವಾದ ಕುದುರೆಮುಖದ ಸರಿಗೆ ಸ್ತಂಭಗಳನ್ನು ಕಳಚುವ ಮುನ್ನ ಹೊಸತರಲ್ಲಿ ತೊಡಗುವ ಅವಸರವೇನಿತ್ತು? ೩. ನೆಲದ ಪ್ರಾಕೃತಿಕ ದೃಢತೆ ಕಡಿಮೆಯಿರುವ, ಕೆದರಿದ ನೆಲ ಕೊರೆದುಹೋಗುವ ಸಾಧ್ಯತೆ ಹೆಚ್ಚಿರುವ ಮಳೆಗಾಲ ಆರಿಸಿದ್ದು ಯಾಕೆ? ೪. ಕೆಲಸ ಮಾಡಲೂ ಮಾಡಿದ ಕೆಲಸದಲ್ಲಿ ನಿರೀಕ್ಷಿತ ದೃಢತೆ ಉಳಿಸಿಕೊಳ್ಳಲೂ ವಿಪರೀತ ಎನ್ನುವ ಮಳೆಗಾಲದಲ್ಲೇ ಈ ದುರ್ಗಮ ಪ್ರದೇಶಗಳಲ್ಲಿ ತೊಡಗಿಕೊಂಡದ್ದೇಕೆ? ೫. ಹೊಸ ವಿದ್ಯುತ್ ಸಾಗಣಾ ಮಾರ್ಗ ಅನಿವಾರ್ಯವೇ ಆಗಿದ್ದರೆ ಈಗಾಗಲೇ ಇರುವ ಸುದೃಢ ದಾರಿ, ಜಾಡುಗಳ ಅನುಕೂಲಕ್ಕೇ ಹೊಂದಿಸಿಕೊಳ್ಳಲು ಬರುತ್ತಿರಲಿಲ್ಲವೇ? ೬. ಇದನ್ನು ಹಿಂದೆ ಪೆಟ್ರೋ ಕೊಳವೆ ಹಾಕುವಾಗಲೂ ಮತ್ತೆ ಹೊಸದೇ ಜಾಡಿನಲ್ಲಿ ಇನ್ನಷ್ಟು ಹಾಕಲು ಯೋಜಿಸುತ್ತಿರುವಂತೆ ನಮ್ಮಂಥವರು ಕೇಳಿದ್ದೆಲ್ಲಾ ಕಿವುಡು ಕಿವಿಯ ಮೇಲೇ ಬಿದ್ದಿರಬಹುದೇ? ಇತ್ಯಾದಿ.

(ಮುಂದುವರಿಯಲಿದೆ)