ಕುಮಾರ ಪರ್ವತದ ಸುತ್ತ ಮುತ್ತ (ಭಾಗ ೩)
ಅವಿಭಜಿತ ದಕ ಜಿಲ್ಲೆಯ ಪಾದ ತೊಳೆಯಲು ಅರಬೀ ಸಮುದ್ರವಿದ್ದರೆ ನೆತ್ತಿಯ ಹಸುರಿನ ದಂಡೆ ಪಶ್ಚಿಮಘಟ್ಟ. ಸಹಜವಾಗಿ ಘಟ್ಟದ ಮೇಲಿನ ಕೆಲವು ಜಿಲ್ಲೆಗಳೊಡನೆ ಇವು ಕೆಲವು ಗಿರಿಶಿಖರಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ಕೊಡಚಾದ್ರಿ ಉಡುಪಿಯದ್ದೆಷ್ಟೋ ಶಿವಮೊಗ್ಗದ್ದೂ ಅಷ್ಟೇ. ವಾಲಿಕುಂಜ, ಕುದುರೆಮುಖ, ಬಲ್ಲಾಳರಾಯನ ದುರ್ಗದ ಔನ್ನತ್ಯದಲ್ಲಿ ನಮಗಿರುವಷ್ಟೇ ಹೆಮ್ಮೆ ಚಿಕ್ಕಮಗಳೂರಿನವರಿಗೂ ಇದ್ದರೆ ತಪ್ಪಿಲ್ಲ. ಆದರೆ ಕುಮಾರಪರ್ವತಾಗ್ರದಲ್ಲೂ ಅಂತರ್ಜಿಲ್ಲಾ ಗಡಿರೇಖೆ ಹಾದು ಹೋದರೂ ಇಲ್ಲಿ ಬರಿಯ ಖ್ಯಾತಿಗೆ ಇಮ್ಮುಖವಲ್ಲ, ಹೆಸರಿನಲ್ಲೂ ದ್ವಂದ್ವ. ನಿತ್ಯ ಹರಿದ್ವರ್ಣ ಕಾಡೇ ಕಂಗೊಳಿಸುವ ದಕ ಮೈಯ ಶಿಖರವನ್ನು ಸುಬ್ರಹ್ಮಣ್ಯದವರು ಕುಮಾರನೆಂದೇ ಸಂಬೋಧಿಸಿದರೂ ಅತ್ತಣ ಜಿಲ್ಲೆ, ಕೊಡಗಿನವರ ದರ್ಶನ ಬೇರೇ. ವಲ್ಕಲಗಳು (ಶಿಲಾವಲ್ಕಲ ಎಂದೇ ಖ್ಯಾತವಾದ ಬಿಳಿಬಿಳಿಯಾಗಿ ತೋರುವ ಪಾಚಿ) ಹಬ್ಬಿದ ಬಂಡೆಯ ಕೊಡಿ ಕಾಣುವುದರಿಂದಲೋ ಕಡಿಮೆ ನೀರ ವಾತಾವರಣಕ್ಕೆ ಸಹಜವಾಗಿ ಆಚೆ ಮೈಯಲ್ಲಿ ಹಬ್ಬಿದ್ದ ಗೋಸಂಪಿಗೆಯ ಗಿಡಗಳ ಬಿಳಿ ಹೂಗಳ ಚಂದಕ್ಕೆ ಸೋತೋ ಅವರು ಪುಷ್ಪಗಿರಿ ಎಂದೇ ಕರೆಯುತ್ತಾರೆ. ಇದು, ಇಂಥವೇ ಹಲವನ್ನು ಅನುಭವಿಸುವಲ್ಲಿ ಎಲ್ಲೋ ಒಬ್ಬ ಕುಂಡ, ಇನ್ನೆಲ್ಲೋ ಒಬ್ಬ ಸೋಜ ಮತ್ತೆಲ್ಲೋ ಒಬ್ಬ ಕರಿಯಣ್ಣ ನಮಗೆ ಸಿಕ್ಕುವುದಿರಬಹುದು. ಆದರೆ ಮಾಹಿತಿಯ ಖಾಚಿತ್ಯಕ್ಕೆ, ಸಾಧ್ಯತೆಗಳ ಅನಂತವನ್ನು ತೆರೆಯುವುದಕ್ಕೆ ಮತ್ತು ಚಾರಣಗಳ ಸಮರ್ಥ ನಿರ್ವಹಣೆಗಾಗಿ ನನ್ನ ಎನ್.ಸಿ.ಸಿ ತರಬೇತಿಯ ಅಲ್ಪ ಅನುಭವದಲ್ಲಿ ನಾನು ಭಾರತ ಸರ್ವೇಕ್ಷಣಾ ಇಲಾಖೆಯ ಸವಿವರ ನಕ್ಷೆಗಳಿಗೆ ಹಾತೊರೆದಿದ್ದೆ.
ಪುತ್ತೂರಿನ ಹಿರಿಯ ವಕೀಲ ದಿವಂಗತ ಬಂದಾರು ಶ್ರೀಪತಿರಾಯರು (೧೯೧೮-೨೦೦೧) ನನ್ನ ವಕೀಲ ಮಾವ ಎ.ಪಿ ಗೌರೀಶಂಕರರ ಮೂಲಕ ನನಗೂ ಆತ್ಮೀಯರಾಗಿದ್ದರು. ಅವರೋ ಹತ್ತು ಹಲವು ಆರೋಗ್ಯಪೂರ್ಣ ಗೀಳುಗಳ ಸರದಾರ. ಸರಳ ಜೀವನಕ್ಕೆ ಬೇಕಾದಷ್ಟೇ ವೃತ್ತಿ ನಿರ್ವಹಣೆ (ಗಮನಿಸಿ – ವೈಭವಕ್ಕಲ್ಲ), ಉಳಿದಂತೆ ವೈವಿಧ್ಯಮಯ ಪುಸ್ತಕಗಳ ಓದು, ಶಾಸ್ತ್ರೀಯ ಸಂಗೀತದ ಕೇಳ್ಮೆ ಮುಂತಾದವುಗಳೊಡನೆ ಭೂಪಟಗಳ ಸಂಗ್ರಹ ಮತ್ತು ಅಧ್ಯಯನವೂ ಇವರ ಜನ್ಮಕ್ಕಂಟಿದ ಚಟ. ನನ್ನಲ್ಲಿಗೆ ಇವರು ಬಂದಷ್ಟು ಸಲ ಜಗತ್ತಿನ ಯಾವ್ಯಾವುದೋ ಪರ್ವತ ಶಿಖರಗಳ ಔನ್ನತ್ಯ, ಅವನ್ನು ವಿಭಿನ್ನ ನೆಲೆಗಳಲ್ಲಿ ನಿಂತು ನೋಡಿದಾಗ ಸಿಗುವ ಸೌಂದರ್ಯಾನುಭೂತಿ ವಿವರಿಸುತ್ತಿದ್ದರೆ ಮೂರನೆಯವರಿಗೆ ಇವರೇ ವಿಶ್ವಯಾನಿ ಹ್ಯೂಯನ್ ತ್ಸಾಂಗ್! ಇವರನ್ನು ವಿಶ್ವಯಾನಿಯೆಂದೇ ಭ್ರಮಿಸಬೇಕಿತ್ತು. ವಾಸ್ತವದಲ್ಲಿ ಅವೆಲ್ಲಾ ಇವರ ಶುದ್ಧ ಭೂಪಠ ಅಧ್ಯಯನ ಮತ್ತು ಪೂರಕ ಓದಿನ ಪುಣ್ಯಫಲ. ಶ್ರೀಪತಿರಾಯರು ನನ್ನ ಹುಚ್ಚಿಗೆ ಪೂರಕವಾಗುವಂತೆ ಜಿಲ್ಲೆಯ ಭೂಪಟಗಳ ಆಯ, ಅಳತೆಯೊಡನೆ ಸಂಕೇತ ಸಂಖ್ಯೆಗಳ ಪಟ್ಟಿಯನ್ನೂ ಒದಗಿಸಿದರು. ಅವನ್ನು ತರಿಸಿಕೊಳ್ಳುವ ಕ್ರಮ ಮತ್ತು ವಿಳಾಸಾದಿ ವಿವರಗಳನ್ನೂ ತಿಳಿಸಿದರು. ಬೆಂಗಳೂರಿನ ಸರ್ವೇಕ್ಷಣಾ ಇಲಾಖೆಯ ಪ್ರಾದೇಶಿಕ ಕಛೇರಿಯಿಂದ ಅರ್ಜಿ ತರಿಸಿ, ರಾಜ್ಯ ಮಟ್ಟದ ಹಿರಿಯ ಅಧಿಕಾರಿ ತಂದೆಯ ಆತ್ಮೀಯ ಗೆಳೆಯ ಶೇಷಯ್ಯನವರ ಶಿಫಾರಸಿನೊಡನೆ, ಅಂದು ರಾಜ್ಯ ಸರಕಾರದ ಕಾನೂನು ಕಾರ್ಯದರ್ಶಿಯಾಗಿದ್ದ (ಪುತ್ತೂರಿನ ಸಂಬಂಧಿಕ) ಚಾಮಯ್ಯನವರ ಮೂಲಕ ಅರ್ಜಿ ಗುಜರಾಯಿಸಿ ಅನಿರ್ದಿಷ್ಟ ಕಾಯಬೇಕಾಯ್ತು. ಮುಂದೊಂದು ಕಾಲದಲ್ಲಿ ಆ ಅರ್ಜಿ ಭಾರತದ ಸರ್ವೇಕ್ಷಣಾ ಇಲಾಖೆಯ ಏಕೈಕ ವಿತರಣಾ ಕೇಂದ್ರ ಡೆಹ್ರಾಡೂನ್ ತಲಪಿ, ನನಗರಿವಿರದ ವಿವಿಧ ಪರೀಕ್ಷೆಗಳಿಗೊಳಗಾಗಿ ಉತ್ತೀರ್ಣಗೊಂಡು, ಪೂರ್ಣ ಮೌಲ್ಯ ಮುಂಪಾವತಿಗೆ ನನಗೆ ಪತ್ರ ಬರೆಸಿತು (ಇಪ್ಪತ್ತಾರು ಹಾಳೆಗಳ ಅಪೂರ್ವ ದಾಖಲೆಗೆ ಸಾವಿರಾರು ರೂಪಾಯಿಗಳಿರಬೇಕೆಂದು ನೀವು ಯೋಚಿಸಿದ್ದರೆ ತಪ್ಪು – ಅಂಚೆ ವೆಚ್ಚ ಸೇರಿ ಸುಮಾರು ಎಂಬತ್ತು ರೂಪಾಯಿ ಮಾತ್ರ!). ಒಟ್ಟಾರೆ ೧೯೭೭ರ ಆಗಸ್ಟಿನಲ್ಲಿ ತೊಡಗಿದ ಕ್ರಿಯೆಗೆ ಫಲ ಬರುವಾಗ ೧೯೭೮ರ ಅಕ್ಟೋಬರ್ ನಡೆದಿತ್ತು – ಸುಮಾರು ಹದಿನಾಲ್ಕು ತಿಂಗಳು.
ನನ್ನ ಒಟ್ಟಾರೆ ಬೇಡಿಕೆ ಆ ಕಾಲಕ್ಕೆಸಹಜವಾದ ಒಂದಿಂಚು = ಒಂದು ಮೈಲು ನಕ್ಷೆಗಳೇ ಆದರೂ ಕುಮಾರಪರ್ವತ ವಲಯ ಸೇರಿದಂತೆ ಕೆಲವು ಹಾಳೆಗಳು ಮೆಟ್ರಿಕ್ ಪದ್ಧತಿಗೂ (ಸೆಮೀ, ಮೀ, ಕಿಮೀ ಇತ್ಯಾದಿ) ವರ್ಣಕ್ಕೂ ಪರಿಷ್ಕೃತಗೊಂಡವು ದಕ್ಕಿತ್ತು. ಇಲ್ಲಿ ಭೂಮಿಯ ಸುಮಾರು ಅರ್ಧ ಕಿಮೀ ಸರಳ ರೇಖೆಯನ್ನು ಒಂದು ಸೆಮೀ ಕಾಗದಕ್ಕಿಳಿಸಿರುತ್ತಾರೆ (೧:೫೦,೦೦೦). ಉತ್ತರದಲ್ಲಿ ಶಿರೂರಿನಿಂದ ತೊಡಗಿ ದಕ್ಷಿಣದಲ್ಲಿ ಕಾಸರಗೋಡಿನವರೆಗೆ ಹರಡಿದ ಅಂದಿನ ದಕ ಜಿಲ್ಲೆ ಸುಮಾರು ಅರುವತ್ತು ಗುಣಿಸು ಎಂಬತ್ತು ಸೆಮೀ ವಿಸ್ತಾರದ ಇಪ್ಪತ್ತಾರು ಹಾಳೆಗಳಲ್ಲಿ ದಾಖಲಾಗಿದೆ. ಭೂಮಿಯ ಪ್ರತಿ ಇಪ್ಪತ್ತು ಮೀಟರ್ ಎತ್ತರ ತಗ್ಗುಗಳಿಂದ ತೊಡಗಿ, ನೀರು, ಹಸಿರು ಮುಂತಾದ ಪ್ರಾಕೃತಿಕ ವೈವಿಧ್ಯಗಳೊಡನೆ ಮನುಷ್ಯ ಅಗತ್ಯಗಳಾದ ಕಾಡು ಗುಡ್ಡಗಳಲ್ಲಿನ ಜಾಡು, ತೊರೆ ನದಿಗಳ ಕಡವು, ಘನ ಕಟ್ಟಡಗಳನ್ನೂ ಅಂಕಿತನಾಮಗಳ ಸಹಿತ ಈ ನಕ್ಷೆಗಳು ದಾಖಲಿಸುತ್ತವೆ. ವಿರಾಮದಲ್ಲೊಮ್ಮೆ ಕುಮಾರಪರ್ವತದ ವಲಯದ ನಕ್ಷೆ ‘ಓದುತ್ತಿರುವಾಗ’ ಶಿಖರದ ಉತ್ತರ ಮೈಯಲ್ಲಿನ ಇನ್ನೂರಾ ಇಪ್ಪತ್ತೆರಡು ಮೀಟರ್ ಎತ್ತರದ ಜಲಪಾತವೊಂದರ ಉಲ್ಲೇಖದ ಮೇಲೆ ನನ್ನ ಕಣ್ಣು ಕೀಲಿಸಿಹೋಯ್ತು. ಆದರೆ ನನ್ನ ಬಗೆಗಣ್ಣು ಶ್ರೀಪತಿರಾಯರಷ್ಟು ಶುದ್ಧವಿರಲಿಲ್ಲ.
ನಾನು ಹಿಂದಿನ ಕಂತಿನಲ್ಲಿ ಉಲ್ಲೇಖಿಸಿದ ಜನಜನಿತ ಸ್ಥಳನಾಮಗಳು ಕೆಲವು ಸರ್ವೇಕ್ಷಣಾ ಇಲಾಖೆಯ ನಕ್ಷಾಕಾರರಿಗೆ ದಕ್ಕಿದಂತಿರಲಿಲ್ಲ ಅಥವಾ ನನ್ನರಿವಿಗೆ ನಿಲುಕದ ಪರಿಷ್ಕೃತ ಸ್ವರೂಪಗಳಲ್ಲಿತ್ತು. ಸುಬ್ರಹ್ಮಣ್ಯದ (ಸಮುದ್ರ ಮಟ್ಟದಿಂದ ೧೨೩ ಮೀ) ನೇರ ಪೂರ್ವಕ್ಕೆ ಗಿರಿಗದ್ದೆ (೮೬೮ ಮೀ), ಹಾಗೇ ಮುಂದುವರಿದರೆ ನಾನು ಗ್ರಹಿಸಿದ್ದ ಶೇಷ, ಸಿದ್ಧ ಪರ್ವತಗಳ ಕೊಡಿಯೇ ಇಲ್ಲಿ ‘ಕುಮಾರಪರ್ವತ’ (೧೩೯೯ ಮೀ) ಎಂದು ದಾಖಲಾಗಿದೆ. ನಕ್ಷೆ ಈ ವಲಯದ ಅತ್ಯಂತ ಎತ್ತರದ ಸ್ಥಳವನ್ನು ‘ಪುಷ್ಪಗಿರಿ’ (೧೭೧೨ ಮೀ) ಎಂದಷ್ಟೇ ಹೆಸರಿಸುತ್ತದೆ! (ನನಗೆ ತಿಳಿದ ಮಟ್ಟಿಗೆ ಸುಬ್ರಹ್ಮಣ್ಯದವರಿಗೆ ಅದೇ ಕುಮಾರಪರ್ವತ.) ಕಾಗದದ ಮೇಲೆ ಪುಷ್ಪಗಿರಿಯಿಂದ ಉತ್ತರಕ್ಕೆ ಹತ್ತೇ ಸೆಮೀ ಅಂತರದಲ್ಲಿನ ಅಡ್ಡಗೀಟು ಅಂದರೆ ಭೂಮಿಯ ಮೇಲೆ ಹಕ್ಕಿ ಹಾರುವ ನೇರದಲ್ಲಿ ಕೇವಲ ಐದೇ ಕಿಮೀ ಅಂತರದ ಕೊಳ್ಳ ಪೂರ್ವ-ಪಶ್ಚಿಮಗಾಮಿನಿ ಕುಮಾರಧಾರೆಯದ್ದು. “ಓ ಕಂಕನಾಡಿಯಿಂದ ಉರ್ವಕ್ಕೆ ಎಷ್ಟೂ ನಡೀಲಿಲ್ವಾ ನಾನು” ಎಂದು ಲೆಕ್ಕಾಚಾರಕ್ಕಿಳಿದವರು ಇಲ್ಲಿ ನಡೆಯ ಹೋದರೆ ಸೋಲು ನಿಶ್ಚಿತ. ಮನೆಯ ಬೆಚ್ಚನೆಯ ವಾತಾವರಣದಲ್ಲಿ ಕುಳಿತು, ಹಬೆಯಾಡುವ ಕಾಫಿ ಸೀಪುತ್ತಾ ನಕ್ಷೆ ಓದುತ್ತಿದ್ದವನಿಗೆ ಬೆವರಿಳಿಸುವಂತಿತ್ತು ಆ ಅಂತರದೊಳಗೆ ಮೇಲಿಂದ ಮೇಲೆ ಬಿದ್ದು ಗಂಟಿಕ್ಕಿದ ಔನ್ನತ್ಯ ಸೂಚೀ ರೇಖೆಗಳು (contour lines); ೧೭೧೨ರಿಂದ ಸುಮಾರು ೨೭೦ ಮೀ ಆಳಕ್ಕೆ ಧುಮುಕಿದರಷ್ಟೇ ಕುಮಾರಧಾರಾ ಸಿದ್ಧಿ! ಗಿರಿಯ ಈ ವಲಯದ ಮೈ ಮೇಲಿನ ಪುಟ್ಟ ಪುಟ್ಟ ನೀರಧಾರೆಗಳು ಸೇರುತ್ತಾ ಕುಮಾರಧಾರೆಯೊಡನೆ ಒಂದಾಗುವ ಹಂತದ ಎರಡು ಮುಖ್ಯ ಹೆಸರುಗಳು ಲಿಡಿಸಿಲ್ಕೆ ಹೊಳೆ (ಸಂಗಮಿಸುವ ಸ್ಥಳದ ಔನ್ನತ್ಯ ಸ.ಮ. ೨೭೦ ಮೀ) ಮತ್ತೂ ಮೇಲ್ದಂಡೆಯಲ್ಲಿ ಅಂದರೆ ಇನ್ನಷ್ಟು ಪೂರ್ವಕ್ಕೆ ಲಿಂಗದ ಹೊಳೆ (೩೪೬ಮೀ). ಲಿಡಿಸಿಲ್ಕೆಯ ಆರಂಭದ ಬಿಂದುವಿನ ತುಸುವೇ ಪಶ್ಚಿಮದಲ್ಲಿತ್ತು ನನ್ನ ಗಮನ ಸೆಳೆದ ಅನಾಮಧೇಯ ಜಲಪಾತ (೨೨೨ ಮೀ). ಪುರಾಣ ಪುಣ್ಯಪುರುಷರೇನೋ (ಸಗರ ವಂಶಸ್ಥರು) ಗಂಗಾವತರಣಕ್ಕೆ ಮೂರು ತಲೆಮಾರು ಹೆಣಗಿದ್ದು ತಿಳಿದಿದ್ದೇನೆ. ಆದರೆ ನನಗಿದೇನಿದ್ದರೂ ಸಾರ್ವಜನಿಕ ರಜೆಯ ಶನಿವಾರ ಮತ್ತು ಸೇರಿ ಬರುವ ಆದಿತ್ಯವಾರದೊಳಗೆ (ಮೇ ತಿಂಗಳ ೨೫ ಮತ್ತು ೨೬, ೧೯೭೯) ಸಿದ್ಧಿಸಲೇಬೇಕಾದ ಲಕ್ಷ್ಯ.
ಕುಮಾರ ಪರ್ವತದ ಎರೆಯಿಟ್ಟು, ಜಲಪಾತದ ರಮ್ಯ ಕಲ್ಪನೆಯನ್ನಷ್ಟೇ ಕೊಟ್ಟು ತಂಡ ಕಟ್ಟಿದೆ. ಅಪರಿಚಿತ ದಿಕ್ಕು ಶೋಧಿಸುವಾಗ ಭೂಪಟವಷ್ಟೇ ಸಾಕಾಗದು ಎಂದು ಕುಂಡನನ್ನೂ ಜೊತೆಗೆ ಸೇರಿಸಿಕೊಂಡಿದ್ದೆ. ನನ್ನೊಡನೆ ಹಿಂದೊಂದೆರಡು ಚಾರಣಗಳಿಗೆ ಬಂದ ಗಟ್ಟಿಕುಳಗಳು – ಸಮೀರ, ಶೌರಿ ಮತ್ತು ಶಿವಶಂಕರ ಮಂಗಳೂರಿನವರೇ. ಸಾಲಿಗ್ರಾಮದಿಂದ ಬಂದು ಸೇರಿಕೊಂಡವರು ಮಂಜುನಾಥ ಉಪಾಧ್ಯ (ಈಚಿನ ದಿನಗಳಲ್ಲಿ ನನ್ನೊಡನೆ ಹೆಚ್ಚು ಒಡನಾಡುವ ವೆಂಕಟ್ರಮಣ ಉಪಾಧ್ಯರ ಅಣ್ಣ) ಮತ್ತು ಭಾಸ್ಕರ ಮಧ್ಯಸ್ಥ. ಬೂಟು ಮೆಟ್ಟಿ ಗೊತ್ತೇ ಇಲ್ಲ. ಪಂಚೆ ಎತ್ತಿ ಕಟ್ಟಿದರೆ ಸರಿ, ಎಷ್ಟೂ ನಡೆಯಬಲ್ಲೆ ಎನ್ನುವ ಭರವಸೆಯನ್ನು ನನ್ನಂಗಡಿಯಲ್ಲಿ ಕೊಟ್ಟು ಸೇರಿಕೊಂಡ ಕೊನೇ ಸದಸ್ಯ (ಗಿರಾಕಿ ಮತ್ತು ಮಿತ್ರ) ಉಡುಪಿಯ ದೇವರಾಜ್. ಆದರೆ ದೇವರಾಜರ ಅಳತೆಗೋಲು ಬಹಳ ಮೊಟಕು ಎನ್ನುವುದು ತಂಡ ಗಿರಿಗದ್ದೆ ದಾಟುವಾಗಲೇ ನನ್ನರಿವಿಗೆ ಬಂತು. ಸಂಜೆ ಸ್ವಲ್ಪ ತಡವಾದರೂ ಶಿಖರದ ಶಿಬಿರಸ್ಥಾನ ಸೇರಿ, ಶಿಬಿರ ಕಲಾಪದಲ್ಲಿ ಮುಳುಗಿದ ಮೇಲೆ, ಇನ್ನೇನು, ಬರೀ ಇಳಿಯುವುದಲ್ವಾ? ಸುಧಾರಿಸಿಹೋಗುತ್ತದೆ ಎಂಬ ಉಡಾಫೆ ನನ್ನ ಊರುಗೋಲು. ನಾವಾರಿಸಿಕೊಂಡ ಶುಭದಿನ, ಶುಭ ತಿಥಿಯಲ್ಲೇ ಮತ್ತೂ ಮೂವರ (ವಿಶ್ವನಾಥ್, ಬಾಲಕೃಷ್ಣ ಮತ್ತು ಕಾಮತ್) ಮಂಗಳೂರು ತಂಡವೊಂದು ಕುಮಾರ ಪರ್ವತ ಹತ್ತಲು ಬಂದವರು, ಮಾರ್ಗದರ್ಶನದ ಮನವಿಯೊಡನೆ ನಮ್ಮ ತಂಡಕ್ಕೆ ಬಾಲಂಗೋಚಿಯಾದರು. ಶಿಖರಕ್ಕೆ ಬಂದ ಮೇಲೆ ಅವರಿಗೆ ಮಾರ್ಗದರ್ಶಿ ಇಲ್ಲದೇ ಇಳಿಯಲು ಅಳುಕಾಯ್ತೋ ನಮ್ಮ ಸಾಹಸದಲ್ಲಿ ಒಲವು ಮೂಡಿತೋ ಗೊತ್ತಿಲ್ಲ. ಅಂತೂ ಆರೋಹಣದೊಡನೆ ವಿಲೀನವಾದರು. (ಇಂದಿನ ದಿನಮಾನದ ಕೋಟ್ಯಾಂತರ ರೂಪಾಯಿಗಳ ವಿನಿಮಯ ಅಥವಾ ‘ಮೂರುಲೋಕದ’ ಒಡೆತನ ವಿಲೀನಕ್ರಿಯೆಯಲ್ಲಿ ಏನೂ ಆಗಿಲ್ಲ ಎಂದು ನೀವು ನಂಬಿದ ದೇವರ್ಕಳ ಮೇಲಾಣೆ ಹಾಕಿ ಹೇಳಬಲ್ಲೆ!)
ವರುಣರಾಯರು ಮಳೆಗಾಲದ ಘೋಷಣೆಯೇನೂ ಮಾಡಿರಲಿಲ್ಲ. ಆದರೆ ಪರಿಕರ್ಮಿಗಳ ಸಂಭ್ರಮದ ಓಡಾಟದಲ್ಲಿ ರಾತ್ರಿ ಒಮ್ಮೆ ಸಣ್ಣ ಮಳೆ ಬಂತು. ಸೂರ್ಯೋದಯಕ್ಕೆ ಮುನ್ನ ಶಿಖರ ಭೇಟಿಯ ಔಪಚಾರಿಕತೆ ಮುಗಿಸಿ, ಇಳಿದಾರಿ ಹಿಡಿಯಬೇಕೆಂದಿದ್ದವರಿಗೆ ಮೋಡ ಮೋಸ ಮಾಡಿತು. ಸ್ವಲ್ಪ ತಡಮಾಡಿ ಮಂಜೋ ಮಳೆಯೋ ಎಂದು ತರ್ಕಿಸಲಾಗದ ಸ್ಥಿತಿಯಲ್ಲೇ ಶಿಖರದ ಅಸ್ಪಷ್ಟತೆಯಲ್ಲಿ ಕಾಲಾಡಿಸಿ, ಉತ್ತರಮುಖಿಗಳಾದೆವು. ನಾನು ಪ್ಲ್ಯಾಸ್ಟಿಕ್ ಶೀಟ್ ಮತ್ತು ದಪ್ಪ ಕಾಗದ ಬಳಸಿ (ಮುಚ್ಚಳವೂ ಇರುವಂಥ) ಒಂದು ‘ಬತ್ತಳಿಕೆ’ ಕಟ್ಟಿಕೊಂಡಿದ್ದೆ. ಅದರೊಳಗಿನ ಆ ವಲಯದ ನಕ್ಷೆಯನ್ನು ಕಾಲಕಾಲಕ್ಕೆ ತೆಗೆದು ಹರಡಿ, ಮೇಲೆ ದಿಕ್ಸೂಚಿಯನ್ನು ಇಟ್ಟು, ಘನ ಚಿಂತನೆಯ ಪೋಸ್ ಕೊಟ್ಟು ದಿಕ್ಕು ನಿರ್ಧರಿಸುವ ಹೊಣೆ ನನ್ನದು. ವಾಸ್ತವದ ಮುಂದಾಳು ಕುಂಡ. ಗೊಸರು, ಹುಲ್ಲ ಹಾಸು, ದಟ್ಟ ಕುರುಚಲನ್ನು ಬಲು ಸಣ್ಣ ಅವಧಿಯಲ್ಲಿ ದಾಟಿಕೊಂಡೆವು. ಅನಂತರ ವಿರಳ ಗಿಡಗಂಟೆ, ಹುಲ್ಲಗಡ್ಡೆ. ಸಂಶಯ ಬಂದಲ್ಲಿ ಕತ್ತು ಚಾಚಿ ನೋಡಿ, ನಮಗೆ ‘ಭವಿಷ್ಯ’ ಉಂಟೆಂದು ಕಾಣುವ ದಿಕ್ಕನ್ನು ಕುಂಡ ಆಯ್ದುಕೊಳ್ಳುತ್ತಾ ಮುಂದುವರಿದ. ಮೊದಲಲ್ಲಿ ಒಂದೆರಡು ಪೊದರ ಕೈಗಳನ್ನು ಕುಂಡ ಕಡಿದು ದಾರಿ ಬಿಡಿಸಿಕೊಂಡದ್ದಷ್ಟೇ ಬಂತು. ಮತ್ತೆ ಉದ್ದಕ್ಕೂ ಸಿಕ್ಕ ಬಡ ಹುಲ್ಲು ಕಡ್ಡಿಯೂ ನಮಗೆ ಅಮೂಲ್ಯ ಆಸರೆಯಂತೇ ಕಾಣುತ್ತಿತ್ತು. ಸಾಮಾನ್ಯ ಮನುಷ್ಯರಾರೂ ಕಾಲಿಡದ ಬೆಟ್ಟದ ಮಗ್ಗುಲಿನಲ್ಲೇ ನಾವಿದ್ದರೂ ಕಾಟಿ, ಕಡವೆಗಳಂಥ ಪ್ರಾಣಿಗಳ ಜಾಡು ನಮ್ಮ ಅನುಕೂಲಕ್ಕೆ ಧಾರಾಳ ಒದಗುತ್ತಿತ್ತು. ಆ ಜಾಡೂ ಕುಸಿದಂತೆಯೋ ಕೊರಕಲು ಬಿದ್ದಂತೆಯೋ ಹುಡಿಕಲ್ಲುಗಳ ಕುಪ್ಪೆಯಂತೋ ಬೋಳು ಹಾಸುಬಂಡೆಯೇ ತೆರೆದು ನಿಂತಂತೋ ಕಾಣಿಸುವ ನೆಲಗಳಲ್ಲೂ ನಾವು ಬಲು ಜಾಗರೂಕತೆಯಿಂದ ಇಳಿದಿಳಿದಿಳಿದೆವು. ಇಲ್ಲೆಲ್ಲಾ ಧಾವಂತದ ಮಾತೇ ಇಲ್ಲ, ನಡಿಗೆ ಎನ್ನುವ ಶಬ್ದವೂ ಹೆಚ್ಚಾಯ್ತು ಎನ್ನುವ ಸ್ಥಿತಿ. ಎರಡು ಹೆಜ್ಜೆ ಎಡಕ್ಕೆ ಸರಿದರೆ ಮೂರು ಅಡಿ ಆಳಕ್ಕಿಳಿದ ಅನುಭವ. ಗಟ್ಟಿ ಕಾಲ ಮೇಲೆ ನಿಂತು ಸರಿಯುವುದನ್ನು ಮರೆತಿದ್ದೆವು. ಗಿಡವೋ ಗಡ್ಡೆಕಟ್ಟಿದ ಹುಲ್ಲಿನ ಬುಡವೋ ಗಟ್ಟಿ ಕಲ್ಲೋ ಹುಡುಹುಡುಕಿ ಹಿಡಿದು ನೆಲಕ್ಕೆ ಅಂಡೂರಿ ಮೆಲ್ಲಗೆ ಜಾರುವವರೆ ಎಲ್ಲ! ಅಲ್ಲೂ ಸಡಿಲದ ಒಂದು ಕಲ್ಲು, ಕಡ್ಡಿ ಉರುಳಿಸದ ಎಚ್ಚರ ಎಲ್ಲರಿಗೂ ಕಡ್ಡಾಯ. ಇಲ್ಲವಾದರೆ ಬೆಟ್ಟದ ಆ ಮುಖದಲ್ಲಿ ನಮ್ಮ ಸಾಲು ಎಷ್ಟು ಓರೆಯಲ್ಲೇ ಸಾಗಿದ್ದರೂ ಹಿಂದಿನವರು ನೆಲೆತಪ್ಪಿಸಿದ ಕಲ್ಲುಕೋಲು ಮುಂದಿನವರಿಗೆ ಪ್ರಾಣಾಂತಿಕವಾಗುವ ಅಪಾಯ ಕಟ್ಟಿಟ್ಟ ಬುತ್ತಿ.
ಮಂಜು, ಮೋಡ ಎಂದು ಹೋಯ್ತೋ ಎಲ್ಲರ ಸ್ವೆಟ್ಟರ್ ಮಫ್ಲರ್ ಎಂದು ಚೀಲ ಸೇರಿತೋ ಮುದಕೊಡುವ ವಾತಾವರಣ ಎಂದು ರಣಗುಡತೊಡಗಿತೋ ಲೆಕ್ಕ ಇಟ್ಟವರಿಲ್ಲ. ಆಸರೆಗಳು ವಿರಳವಾಗುವ ಅಥವಾ ಇಲ್ಲದಾಗುವಷ್ಟು ಬೋಳು ಮೈ ಎಂದರೆ ‘ಜಲಪಾತ’ವೇ ಸರಿ ಎಂದು ನಕ್ಷೆಯೂ ಸಾಕ್ಷಿ ಹೇಳಿತು. ಹಾಗಾದರೆ ನೀರು? ಹೊಳೆಗೆ ಹೊಳೆಯೇ ಬೀಳುವ ಜೋಗದ ಗುಂಡಿಯಲ್ಲಿ ಕೇಳಲಾಗದ ನೀರು, ಕೇವಲ ಮಳೆಯಾಸರೆಯನ್ನು ನಂಬಿದ ಈ ‘ಜಲಪಾತ’ದಲ್ಲಿ ಹುಡುಕಲಾಗದು, ಅಷ್ಟೆ! ಸಾಲದ್ದಕ್ಕೆ ಬೇಸಗೆಯ ಕೊನೇ ಪಾದ ಎನ್ನುವುದೂ ಅರಿವಿಗೆ ಬರುವಾಗ ಜಲಪಾತ ದರ್ಶನ ಬಿಡಿ, ಚೀಲದಲ್ಲಿ ಅರೆಮನಸ್ಸಿನಲ್ಲೇ ಒಯ್ದ ಬಾಟಲಿಗಳಲ್ಲು ನೀರು ವಿರಳವಾಗಿತ್ತು! ಆಳದ ಕೊಳ್ಳದ ವೈವಿಧ್ಯಮಯ ಹಸುರಿನ ಮುಚ್ಚಿಗೆಯಡಿಯಲ್ಲಿನ ನೂರೆಂಟು ಭೋರ್ಗರೆತಗಳು, ಸಾವಿರಾರು ಜುಳುಜುಳುಗಳ ಮೊತ್ತ ಕಿವಿ ತುಂಬಿದರೂ ಅಪರಾಹ್ನ ಸುಮಾರು ಎರಡು ಗಂಟೆಯವರೆಗೆ ಒಂದೂ ನೀರಿನಾಸರೆ ನಮಗೆ ಒದಗಲಿಲ್ಲ. ನಾವು ವನ್ಯಪ್ರಜ್ಞೆ ಎಂದೇ ಕಂಡ ಮಲೆಕುಡಿಯರ ಕುಂಡ ಆತಂಕದಲ್ಲೇ ಉಸುರಿದ “ಇನ್ನು ನೀರು ಕಾಣುವುದಿದ್ದರೆ ಕತ್ತಲೆಗೆ. ನಾವು ಸುಬ್ರಹ್ಮಣ್ಯಕ್ಕೆ ನಾಳೆಯೇ.”
ತುರ್ತು ಪರಿಸ್ಥಿತಿ ಎದುಸಿರಲು ಒಂದೊಂದು ಮುಕ್ಕಳಿಯಷ್ಟಾದರೂ ನೀರು ಉಳಿಸಿಕೊಳ್ಳುವುದನ್ನು ಎಲ್ಲರಿಗೂ ಕಡ್ಡಾಯ ಮಾಡಿ, ಬುತ್ತಿಯೂಟಕ್ಕೆ ಕುಳಿತೆವು. ಒರಟು ಹುಲ್ಲು, ಗಿಡ ಸವರಿ ಅಂಗೈಗಾದ ಗೀರುಗಾಯ, ಮೆತ್ತಿದ ಮಣ್ಣು (ತೊಳೆದುಕೊಳ್ಳಲು ನೀರಿಲ್ಲದೆ) ನಮ್ಮ ಊಟಕ್ಕೆ ಹೊಸ ರುಚಿ ಕೊಟ್ಟವು! ಅಷ್ಟಕ್ಕೂ ಅಂದು ಊಟವೆನ್ನುವ ಶಬ್ದ ಭಾರೀ ಆಡಂಬರದ್ದೇ ಸರಿ. ಸರೀ ನೆನಪಿಲ್ಲ, ಬಹುಶಃ ಒಣ ಬ್ರೆಡ್ಡು, ಜ್ಯಾಮ್ ಪಸೆಯಿಲ್ಲದ ಬಾಯಲ್ಲಿ ಹೇಗೋ ಒಳಸೇರಿಸಿರಬೇಕು. ಒಂದು ಮಿನಿಟಿನ ವಿಶ್ರಾಂತಿಯೂ ಇಲ್ಲದಂತೆ ಮತ್ತೆ ಮುಂದುವರಿಯಿತು ನಮ್ಮ ‘ಹೇಗಾದರೂ ಕೊಳ್ಳ ತಲಪುವ’ ಅಭಿಯಾನ! ಇನ್ನೇನು ಕಾಡು ಬಂತು, ನಾವು ಬಚಾವ್ ಎನ್ನುವ ಹಂತ. ಜಾರುನೆಲ, ಪುಡಿ ಕಲ್ಲುಗಳೆಲ್ಲ ಹೋಗಿ ಭಾರೀ ಬಂಡೆಗುಂಡುಗಳ ಒಟ್ಟಣೆ. ಅದರ ನೆತ್ತಿ, ಇದರ ಮೆಟ್ಟಿ, ಅಸಾಧ್ಯವಾದಲ್ಲಿ ಸಂದುಗೊಂದುಗಳ ಅನಾವರಣದಲ್ಲಿ ಕೊಳ್ಳ ಬಂತು, ಜೀವಜಲ ಬಂತೇ ಬಂತು ಎಂದುಕೊಳ್ಳುತ್ತಿದ್ದಂತೆ ದೇವರಾಜರು ಆರ್ತನಾದದೊಡನೆ ಕುಸಿದು ಕುಳಿತರು! ಯಾವುದೋ ಕಲ್ಲಿನ ಇರುಕಿನಲ್ಲಿ ಬಳಲಿದ ಕಾಲು ಬಿಟ್ಟು ಮುಂದೆ ಜಾರಿದವರಿಗೆ ಮೊಣಕಾಲು (ಬಹುಶಃ ಎಡಮೊಣಕಾಲು) ತಿರುಚಿ ಹೋಗಿತ್ತು! ನಮಗೆ ತಿಳಿದ ಪ್ರಥಮ ಚಿಕಿತ್ಸೆ, ಅನಿವಾರ್ಯ ವಿಶ್ರಾಂತಿ ಕೊಟ್ಟೆವು. ಅವರ ಹೊರೆಗಳನ್ನೆಲ್ಲಾ ತಂಡದ ಮೂರು ನಾಲ್ಕು ಸಮರ್ಥರೊಳಗೆ ಹಂಚಿಕೊಂಡದ್ದೂ ಆಯ್ತು. ಮತ್ತವರ ಮೊಣಕಾಲಿಗೆ ಲುಂಗಿಯೋ ಹೊದಿಕೆಯದೋ ದಪ್ಪ ಬ್ಯಾಂಡೇಜ್ ಬಿಗಿದಾಗುವಾಗ ದೇವರಾಜರು ಅಪಾರ ನೋವನ್ನು ನುಂಗುತ್ತಾ ಇನ್ನೊಬ್ಬರ ಭುಜದಾಸರೆಯಲ್ಲಿ ಸ್ವಲ್ಪ ಮಟ್ಟಿಗೆ ಮುಂದುವರಿಯಲು ಸಜ್ಜಾದರು.
ಮೂರು ಹೆಜ್ಜೆ ಜೋಡಿ ನಡಿಗೆ, ಕೂರು, ಇಬ್ಬಿಬ್ಬರ ಕೈಯಾಸರೆಯಲ್ಲಿ ಬಂಡೆಯಿಳಿ ಮತ್ತೆ ಮೂರು ಹೆಜ್ಜೆ ಜೋಡಿನಡಿಗೆ, ಮತ್ತೆ ಕೂರು, ಇನ್ನೊಂದು ಬಂಡೆಯಿಳಿ… ಹೀಗೆ ದೇವರಾಜರ ಪ್ರಗತಿಯಲ್ಲಿ ತಂಡದ ಗತಿ ಸಿಲುಕಿಕೊಂಡಿತು. ಎಲ್ಲೋ ನೀರು ಸಿಕ್ಕಿತು, ಮತ್ತೆಷ್ಟೋ ದೂರಕ್ಕೆ ಕಣಿವೆಯ ತಳ ಸಿಕ್ಕಿ ಕುಮಾರಧಾರೆಯನ್ನು ಮುಟ್ಟಿದ್ದೂ ಆಯ್ತು. ಆದರೆ ವಿರಮಿಸಿ ಆನಂದಿಸದಂತೆ ಸೂರ್ಯ ಹಗಲಿಗೆ ವಿದಾಯ ಹೇಳುವದರಲ್ಲಿದ್ದ. ಕಾಡು, ಕಣಿವೆಗೆ ಕತ್ತಲಿನ ಗೆಳೆತನವೂ ಜಾಸ್ತಿ. ಸಾಲದ್ದಕ್ಕೆ ಗಗನಗಾಮೀ ಪುಂಡು ಮೋಡಗಳು ಮಿಂಚ ಝಳಕಿಸಿ ‘ಅತ್ಯುನ್ನತ ಜಲಪಾತ’ ತೋರುವ ಉತ್ಸಾಹದಲ್ಲಿದ್ದವು. ನೀರ ಸಂಸರ್ಗದ ಬಂಡೆಗಳೋ ಜಾರುಗುಪ್ಪೆಗಳೇ ಆಗಿ ಬೇರೊಂದಿಬ್ಬರಿಗೆ ಬೆದರಿಕೆ ಹಾಕಿದವು. ಆ ಹಂತದಲ್ಲೆಲ್ಲೋ ಒಟ್ಟಾರೆ ಗಾಢಾಂಧಕಾರ ಮುಸುಕುವ ಮೊದಲೇ ಅದೃಷ್ಟಕ್ಕೆ ಕುಂಡನಿಗೆ ಸ್ಥಳ ಪರಿಚಯ ನೆನಪಿಗೆ ಬಂತು. ಅನಂತರ ನಿಧಾನಕ್ಕೆ ಎಡ ದಂಡೆಗೆ ನಡೆದು, ಎಂದೋ ಕಾಡು ಲಾರಿ ಹತ್ತಿ ಹೋದ ಮಣ್ಣ ದಾರಿಗೆ (ಕೂಪು ದಾರಿ) ಮುಟ್ಟಿಸಿದ. ಮತ್ತೆ ಸರದಿಯ ಮೇಲೆ ನಾವೇ ಮೂರು ನಾಲ್ಕು ಮಂದಿ ದೇವರಾಜರನ್ನು ‘ಉಪ್ಪಿನಮೂಟೆ’ (ಮಕ್ಕಳಾಟದಲ್ಲಿ ಸಹಜಕ್ರಿಯೆ. ಇಲ್ಲಿ ನಮ್ಮ ಬೆನ್ನಚೀಲವನ್ನು ಬೇರೆಯವರಿಗೆ ಕೊಟ್ಟು ಅಕ್ಷರಶಃ ದೇವರಾಜರನ್ನು ಬೆನ್ನಿಗೇರಿಸಿಕೊಳ್ಳುವುದು ಅನಿವಾರ್ಯ) ಮಾಡಿ ಸಾಗಿಸ ಹೊರಟ ಮೇಲೆ ಗುಂಪಿಗೆ ಚುರುಕು ಬಂತು. ಕೂಪು ದಾರಿ ಶುದ್ಧ ಬಂಡೆ ಹಾಸಿನ ಹೊಳೆ ದಾಟುವಲ್ಲಿಗೆ ಬಂದಾಗ ಕತ್ತಲು ಪೂರ್ಣಗೊಂಡರೂ ಮಳೆ ತಟಪಟ ಹನಿಯಪ್ಪನಾದರೂ ಬಿಸಿಲೆ ದಾರಿ ಸೇರಿದ್ದೆವು. ಬೂದಿ ಚೌಡಿಯ ಪರಿಚಯ ಅಂದು ನಮಗಿಲ್ಲದಿದ್ದರೂ ಸುಬ್ರಹ್ಮಣ್ಯಕ್ಕೆ ಮತ್ತೆ ಸುಮಾರು ಆರು ಕಿಮೀ ದಾರಿ ಎನ್ನುವುದು ನಿಶ್ಚಯವಾಗಿ, ನಮ್ಮನಮ್ಮ ಮನೆಯನ್ನೇ ಮುಟ್ಟಿದಷ್ಟು ನಿರಾಳರಾದೆವು. ಹನಿಮಳೆಯನ್ನು ಸಂತೋಷದಿಂದ ಅನುಭವಿಸುತ್ತಾ ರಾತ್ರಿ ಸುಮಾರು ಎಂಟೂವರೆ ಗಂಟೆಗೆ ಸುಬ್ರಹ್ಮಣ್ಯ ತಲಪಿದೆವು.
[ನನ್ನ ನೆನಪಿನ ಖಜಾನೆಯಲ್ಲಿ ಈ ಬಿಸಿಲೆದಾರಿ, ಬೂದಿಚೌಡಿ, ಕುಮಾರಧಾರಾ ಪಾತ್ರೆ ಒಂದೊಂದೂ ವಿಭಿನ್ನ ಕಾಲಘಟ್ಟಗಳಲ್ಲಿ ಅಕ್ಷಯ ನಿರಖು ಠೇವಣಿಯಾಗಿ ಜಮೆಯಾಗಿವೆ. ಅದರ ಅಮಿತ ಬಡ್ಡಿಯಲ್ಲಿ ನಾನೇನು ನೀವೂ ಫಲಾನುಭವಿಗಳಾಗಬಹುದು! ಅದಕ್ಕೂ ಮುನ್ನ ಈ ‘ಜಲಪಾತದ ಬೆಂಬತ್ತಿ’ಯ ನಿಂನಿಮ್ಮ utilization certificateನ್ನು ಕೆಳಕಂಡ ಅಂಕಣದಲ್ಲಿ ಒಂದು ವಾರದೊಳಗೇ ಹಾಜರುಪಡಿಸತಕ್ಕದ್ದು. (ಶ್! ಗುಟ್ಟು: ತಪ್ದಂಡ ಇಲ್ಲದೇ ಅನಂತರ ಬಂದವರನ್ನೂ ಪುರಸ್ಕರಿಸಲಾಗುತ್ತದೆ)]
ಚೆನ್ನಾಗಿ ಮೂಡಿಬಂದಿದೆ. ತಂಡದ ಒಬ್ಬ ಸದಸ್ಯರನ್ನು 'ಉಪ್ಪು ಮೂಟೆ' ಮಾಡಬೇಕಾಗಿ ಬಂದದ್ದು ವಿಷಾದನೀಯವಾದರೂ ಕೆಲವೊಮ್ಮೆ ಅನಿವಾರ್ಯ. ಅಂದ ಹಾಗೆ, ಕುಮಾರ ಪರ್ವತದ/ಪುಷ್ದಿಪಗಿರಿ ಯ ತುದಿ ತಲುಪಿದ ಬಳಿಕ ಕೊಡಗಿನ ಕಡೆ ಇಳಿದು ಚಾರಣ ಮುಗಿಸುವವರೂ ಇದ್ದಾರಲ್ಲವೇ?
ಅಶೋಕ ವರ್ಧನರೇ!ಜೂಲ್ಸ್ ವೆರ್ನ್ ಕಾದಂಬರಿ ' ಭೂ ಗರ್ಭದೆಡೆಗೆ” ಓದಿದ ಅನುಭವ ಆಯಿತು. ಸೋಲುವುದು ಕೂಡಾ ಗೆಲುವಿನ ಸೋಪಾನ. ಅಲ್ಲವೆ? ವಂದನೆಗಳು. – ಪೆಜತ್ತಾಯ ಎಸ್. ಎಮ್.
Olleya kathana matthu olleya mahitigalu.ondu kalakke kaadu tirugadiyagidda nanage iiga nimmellara saahasagalu sasntosha matthu asooye kooda tarutthive.
Dear Ashok Fantastic write up , It was like some thriller novel!! , must be a great experience. When we (first brother and then me ) joined it was always a planned trekking we never had experience like this
ಅಶೋಕರೇ,ನನ್ನ 3 ಚಿತ್ರಗಳನ್ನು ತಮ್ಮ ಲೇಖನಕ್ಕಾಗಿ ಉಪಯೋಗಿಸಿದಕ್ಕೆ ಧನ್ಯವಾದಗಳು.ಮೊದಲ ಚಿತ್ರ ಬಿಸಲೆ ಹಳ್ಳಿಯ ಕಲ್ಲು ಗುಡ್ಡಾದ ತುದಿಯಿಂದ ತೆಗೆದ ಕುಮಾರ ಪರ್ವತದ ಸುತ್ತಲಿನ ಪ್ರದೇಶದ ವಿಹಂಗಮ ದ್ರಶ್ಯ. ಪನೋರಮ ತಂತ್ರದ ಸಹಾಯದಿಂದ 8 ಚಿತ್ರಗಳನ್ನು ಅಡ್ಡಗೆ ಹೊಲೆದು ಮಾರ್ಪಡಿಸಿದ ಚಿತ್ರವದು. ಚಿತ್ರದ ನಡುವಲ್ಲಿ ಮೋಡ ಮುಸುಕಿದ ಕುಮಾರಪರ್ವತ ವಲಯ ಕಾಣಬಹುದು.ಕೊನೆಯ ಚಿತ್ರ ಬೆಡ್ಡೋಮನ ಕಪ್ಪೆಯದು. Beddome’s Indian Frog or Beddome’s Leaping frog (Indirana beddomei) ಜಾತಿಯ ಕಪ್ಪೆ ಇದು. ಬಿಸಿಲೆಯ ಕಾಡಲ್ಲಿ ಸೆರೆ ಹಿಡಿದ ಚಿತ್ರದ ಈ ಕಪ್ಪೆಗೆ ಮದ್ರಾಸು ಪ್ರೆಸಿಡೆನ್ಸೀಯ ಪ್ರಥಮ ಅರಣ್ಯ ಸಂರಕ್ಷಣಾಧಿಕಾರಿ ಕರ್ನಲ್ ರಿಚರ್ಡ್ ಹೆನ್ರಿ ಬೆಡ್ಡೋಮ್ ನ ಹೆಸರನಿಟ್ಟಿದ್ದಾರೆ. ಹೆಚ್ಚಿನ ವಿವರಕ್ಕಾಗಿ ನನ್ನ ಬ್ಲಾಗ್ – Beddome’s Indian Frog ನೋಡಿ.
ಇಷ್ಟೆಲ್ಲಾ ವಿವರಗಳು ಭೂಪಟಗಳಲ್ಲಿ ದಾಖಲಾಗಿರಬೇಕಾದರೆ ಅದನ್ನು ಮಾಡಿದವರ ಚಾರಣ ಅನುಭವ ಹೇಗಿದ್ದಿರಬಹುದು!!!
Dear Ashokavardhana,Thank you very much for your mail. The plant is Memecylon malabaricum belonging to the family Melastomataceae. In Kannada it is called Ollekodi. In this plant flowers are bluish and produced in dense clusters.KG Bhatಅಡಿ ಟಿಪ್ಪಣಿ: ಕೃಷ್ಣಮೋಹನ್ ಬಿಸ್ಲೆಯಲ್ಲೇ ಹಿಡಿದ ಮೇಲೆ ಕಾಣಿಸಿದ ನೀಲ ಹೊಳಪಿನ ಹೂವಿನ ಕುರಿತು ಡಾ| ಕೆ.ಜಿ ಭಟ್ಟರಲ್ಲಿ ಮಾಹಿತಿ ಕೋರಿದ್ದೆ. ಅವರು ಕೃಪೆಯಿಟ್ಟು ಬರೆದ ಪತ್ರ ಮೇಲಿದೆ. ‘ಒಳ್ಳೆ ಕೊಡಿ’ಯ ಹೆಚ್ಚಿನ ವಿವರಗಳಿಗೆ ಮತ್ತೂ ಪಶ್ಚಿಮ ಘಟ್ಟದ ಈ ವಲಯದ ಎಲ್ಲಾ ಸಸ್ಯಗಳ ಅಪೂರ್ವ ಪರಿಚಯಕ್ಕೆ ಡಾ| ಕೆ.ಜಿ. ಭಟ್ಟರ Flora of Udupi ಅವಶ್ಯ ನೋಡಲೇ ಬೇಕಾದ ಪುಸ್ತಕ (ಬೆಲೆ ರೂ ಒಂದು ಸಾವಿರದ ಇನ್ನೂರು). ಒಂಬೈನೂರಕ್ಕೂ ಮಿಕ್ಕು ಪುಟಗಳ, ಅಸಂಖ್ಯ ವರ್ಣ ಛಾಯಾಚಿತ್ರ ಹಾಗೂ ಕೊರತೆ ಬಿದ್ದಲ್ಲಿ ಪೂರಕ ವೈಜ್ಞಾನಿಕ ರೇಖಾಚಿತ್ರಗಳ ಅದ್ಭುತ ಸಂಗ್ರಹವಿದು. ಗೋಪಾಲಕೃಷ್ಣ ಭಟ್ಟರ ಅಪಾರ ಅನುಭವ, ಹಲವು ವರ್ಷಗಳ ಸಾಹಸಮಯ ತಿರುಗಾಟ ಮತ್ತು ಅಧ್ಯಯನದ ಫಲವಾದ ಈ ಪುಸ್ತಕ, ಉತ್ತಮ ಕಾಗದ ಮೇಲಿನ ಸುಂದರ ಮುದ್ರಣ ಮತ್ತು ಭದ್ರ ರಟ್ಟುಕಟ್ಟಿನೊಡನೆ ಯಾರದೇ ಸಂಗ್ರಹಕ್ಕೆ ಗೌರವ ತರುವ ಕೃತಿ.
ಶಂಕರಪ್ಪಚ್ಚಿಗೆ ಒಂದು ಲೋಟ ಪಾಯಸ ಕೊಡಿ. ಲೇಖನದಲ್ಲಾದರೂ ಕೈ ತುಂಬ ಮಾವ ಅಂತ ಬರೆದದ್ದಕ್ಕೆ!
Sir, saw your post just now. It was almost like a research paper on Kumara parvatha!. Thank you very much for that . Keep writing sir!.
ಚಾರಣದ ಮೊದಲ ಕಂತು ಓದಿದೆ.ಅಬ್ಬಾ,ಸಾಹಸ ಎಂದರೆ ಹೀಗಿರಬೇಕು ಎನ್ನಿಸಿತು.ಉಪ್ಪಿನಮೂಟೆ ಹೊತ್ತು ನಡೆಯಬೇಕಾದ ಅನಿವಾರ್ಯತೆಯ ಕಲ್ಪನೆಯೇ ರೋಚಕವಾಗಿದೆ.ನಿಮ್ಮ ಸಾಹಸ ಕಥನಗಳಲ್ಲಿ ಅಪರೂಪಕ್ಕೆ ಕಾಣಬರುವ ಹೂವಿನ ಚಿತ್ರ ವೊಂದು ಇಲ್ಲಿ ಕಂಡು ಸಂತಸವಾಯಿತು.ಈರೀತಿಯ ಒಂದು ಹೂವನ್ನು ನಾನು ಪುತ್ತೂರಿನ ಬಳಿ ಇರುವ ಬೇಂದ್ರ್ ತೀರ್ಥಕ್ಕೆ ಹೋಗುವಾಗ ದಾರಿ ತಪ್ಪಿ ಅದ್ಯಾವುದೋ ಗುಡ್ಡದ ಮೇಲೆ ಗುಡಿಸಿಲು ಕಟ್ಟಿಕೊಂಡಿದ್ದ ಬಡವನ ಮನೆ ಮುಂದೆ ನೋಡಿದ್ದೆ.ಕ್ಯಾಮರಾ ಒಯ್ದಿರಲಿಲ್ಲ.ಅಲ್ಲಿ ಸುತ್ತ ಮುತ್ತ ಆ ರೀತಿಯ ಹೂವಿನ ಗಿಡಗಳಿದ್ದವು. ಆದರೆ ಈ ಹೂ ಫಳಫಳ ಎಂದು ಹೊಳೆಯುತ್ತಾ,ಮನೋಹರವಾಗಿದೆ.ನೀವು ನಡೆದ ಆ ಶಿಲಾ ಭಿತ್ತಿಯಲ್ಲಿ ಮಳೆಗಾಲದ ದೃಶ್ಯ ವೈಭವ ಹೇಗಿರಬಹುದು ಎಂದು ಕಲ್ಪಿಸಿ ಸೋತೆ.ಗೋಪಾಲಕೃಷ್ಣ ಭಟ್ಟರ ಆ ದಪ್ಪ ಪುಸ್ತಕ ವನ್ನು ನಾಲ್ಕೈದು ವರ್ಷಗಳ ಹಿಂದೆ ನಿಮ್ಮ ಅಂಗಡಿಯಲ್ಲಿ ನೋಡಿದ್ದೆ.