ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ – ಭಾಗ ಐದು
ಕೊಚ್ಚಿಯ ಉಬ್ಬೆಮನೆಯಿಂದ ಹವಾನಿಯಂತ್ರಿತ ಕವರಟ್ಟಿಯ ತಬ್ಬಿಗೆ ಬರುವಾಗ ಹಾsssss ಎನಿಸಿತ್ತು. ಅಪರಾತ್ರಿಯಲ್ಲಂತೂ ಚಳಿಯೇ ಹಿಡಿದು, ಹಡಗು ಕೊಟ್ಟಿದ್ದ ಚಂದದ ಮಡಿಕೆಯ ರಗ್ಗು ಬಿಡಿಸಿ, ಅದರೊಳಗೆ ನಾವು ಹುಗಿದುಕೊಂಡಿದ್ದೆವು. ಕಲ್ಪೆನಿಯ ಅಸಾಮಾನ್ಯ ಚಟುವಟಿಕೆ ಮತ್ತು ಉರಿಗೆ ಅಂಕದ ಪರದೆಯಾಗಿ ರಾತ್ರಿ “ಚಳಿ ಚಳಿ ತಾಳೆನು ಈ ಚಳಿಯಾ॒” ಗುನುಗುತ್ತಾ ಮತ್ತೆ ರಗ್ಗಿನಾಳಕ್ಕೆ ನುಗ್ಗಿ ಲೋಕಮರೆತಿದ್ದೆವು. ಆದರೆ ನಟ್ಟಿರುಳ ನಡುವೆ ಏನೋ ಎಡವಟ್ಟು, ಸೆಕೆ. ಮತ್ತೆ ತಿಳಿಯಿತು, ಹಡಗಿನ ಹವಾನಿಯಂತ್ರಕ ಕೈಕೊಟ್ಟಿತ್ತು. ಮೂರು ಬೋಲ್ಟ್ ಸಡಿಲಿಸಿದರೆ ಹೊರಕ್ಕೆ ತೆರೆಯುವ ನಮ್ಮ ಕಿಟಕಿಯನ್ನು ತೆರೆದೆ. (ಈ ಸೌಲಭ್ಯ ಎಲ್ಲ ಕೋಣೆಗಳಿಗಿರಲಿಲ್ಲ. ಕೃಶಿ ಮುಂತಾದವರ ಕೋಣೆಯ ಹೊರಗೆ ಜೀವರಕ್ಷಕ ದೋಣಿಯಂಥ ಅನಿವಾರ್ಯತೆಗಳು ನೇತುಬಿದ್ದಲ್ಲಿ ಕಿಟಕಿ ಕೇವಲ ಬೆಳಕಿಂಡಿ, ದೃಶ್ಯಕ್ಕೂ ತತ್ವಾರ) ಬೀಸುಗಾಳಿಯೇನೂ ಇರಲಿಲ್ಲ, ಹೊರಗೂ ಒಳಗಿನದೇ ಬಿಸಿ. ಕೋಣೆಯ ಗೋಡೆಯಲ್ಲಿ ಜೋಡಿಕೊಂಡಿದ್ದ ಏಕೈಕ ಫ್ಯಾನ್ ಚಲಾಯಿಸಿದೆ. ಅದಕ್ಕೆ ಸ್ಪಾಂಡಿಲೈಟಿಸ್ ಅರ್ಥಾತ್ ಕತ್ತು ಬೇನೆ! ಅಧೋಮುಖಿಯಾಗಿ ಗಾಳಿಯೇನೋ ಬೀಸುತ್ತಿತ್ತಾದರೂ ಪಕ್ಕದ ಎರಡಂತಸ್ತಿನ ಮಂಚಿಗರನ್ನು ಮುಟ್ಟುತ್ತಿರಲಿಲ್ಲ. ಕಷ್ಟದಲ್ಲಿ ಮತ್ತೆ ಸ್ವಲ್ಪ ನಿದ್ದೆ ಕದ್ದು, ಇನ್ನೇನೂ ತೋಚದೆ ತಾರಸಿಗೆ ಹೋದೆವು. ಅಲ್ಲಿ ನಮಗೆ ಕಂಪನಿ ಕೊಡಲು ಎಂದಿನಂತಲ್ಲದೆ ತುಂಬಾ ಜನರಿದ್ದರು (ಹಲವರು ಹಾಸಿಗೆ ಹೊದಿಕೆ ತಂದು ಮೂಲೆ ಮೂಲೆಗಳಲ್ಲಿ ಮಲಗಿ “ಡರ್ ಡರ್ರ್ ಡರ್ರ್ರ್ರ್”). ಎಲ್ಲರ ಬಾಯಲ್ಲೂ ಒಂದೇ ಉದ್ಗಾರ “ಉಶ್! ಸೆಕೆ!”
ಹವಾನಿಯಂತ್ರಕ ಕೈಕೊಟ್ಟಿತ್ತಂತೆ. ರಿಪೇರಿ ನಡೆದಿದೆಯಂತೆ. ನಾವು ದ್ವೀಪ ಸುತ್ತಿ ಬರುವಾಗ ಎಲ್ಲ ಕೂಲಿರುತ್ತಂತೆ. ಸಂಜೆ ಬಂದಾಗ ಅಂತೆಗೆ ಮತ್ತಷ್ಟು ಕಂತೆ – ಅರ್ಧಕ್ಕರ್ಧ ಸರಿಯಾಗಿಯಾಗಿದೆಯಂತೆ. ಇನ್ನೇನು ಒಂದೋ ಎರಡೋ ಗಂಟೆ, ಅಬ್ಬಬ್ಬಾಂದ್ರೆ ನಮ್ಮನ್ನು ಮಲಗಿಸಲು ಶೀತಮಾರುತ ಬರುವುದು ಖಾತಿ, ಅಂತೆ! ಪ್ರಸನ್ನನಿಗೆ ಮೆಟ್ಟಿಲ ಓಣಿಯಲ್ಲಿ ತಣ್ಣಗೆ ಗಾಳಿ ಬಂದಂತನ್ನಿಸಿತು. ವಾಸ್ತವದಲ್ಲಿ ನಡೆದಾಡುವ ಓಣಿಗಿಂತ ವಿಶಾಲವಾಗಿದ್ದ ಅಲ್ಲಿ ಹೊತ್ತಿಗೊಂದೊಂದು ಸಲ ಆ ಭ್ರಮೆ ಬರುತ್ತಿದ್ದದ್ದು ನಿಜ. ಭಾ(ಬ)ರೀ ಮೀಸೆಯವರು ಪತ್ನಿಯ ಬಯಕೆ ನಡೆಸಿಕೊಡಲು ಗಂಧಮಾದನ ಪರ್ವತಕ್ಕೆ ಲಗ್ಗೆಯಿಕ್ಕಿದವನಿಗೆ ಕಡಿಮೆಯಿಲ್ಲದ ಭೀಮಗತಿಯಲ್ಲಿ ಕುರ್ಚಿಹತ್ತಿ (ಪುಣ್ಯಕ್ಕದು ಮುರಿದು ಬೀಳಲಿಲ್ಲ), ಕೋಣೆಯೊಳಗಿನ ಶೀತಲ ಮಾರುತ ಬರುವ ಕಿಂಡಿ ಕಲಕಿದರು. ತಡವಾಗಿ ತಿಳಿಯಿತು, ಅದು ರಾಂಗ್ ಅಡ್ರೆಸ್ಸು; ಆತ ರಿಪೇರಿಗೆ ಹಿಡಿದದ್ದು ಒಂದು, ನಿಜ ಕಿಂಡಿ ಬೇರೊಂದು! ಸಿನಿಕರು ಎಲ್ಲರನ್ನೂ ಎಲ್ಲವನ್ನೂ ಬಯ್ದು, ಬಳಕೆದಾರರ ಹಕ್ಕು, ಮಾಹಿತಿ ಹಕ್ಕುಗಳೇ ಮೊದಲಾದ ಶಸ್ತ್ರಗಳನ್ನು ವೀರಾವೇಶದಲ್ಲಿ ಝಳಪಿಸಿ (ಊರು ತಲಪಿದ ಮೇಲೆ ಎಲ್ಲ ಮರೆತು!), ಸೋಮಾರಿಗಳ ಜೊತೆ ತಾರಸಿಯಲ್ಲೋ ಕೋಣೆಯಲ್ಲೋ ಸುಧಾರಿಸಿಕೊಂಡರು. ಮತ್ತಿನ ಪ್ರವಾಸದುದ್ದಕ್ಕೂ ಗಾಳಿಮಾತುಗಳನ್ನು ನಾವು ಹೆಕ್ಕುತ್ತಲೇ ಇದ್ದೆವು. ಹವಾನಿಯಂತ್ರಕದ ಬಿಡಿ ಭಾಗ ಕೊಚ್ಚಿ, ಮುಂಬೈಗಳಲ್ಲಷ್ಟೇ ಲಭ್ಯ – ಲಕ್ಷದ್ವೀಪದಲ್ಲಿ ಸುಳ್ಳು. ಸರಕಾರೀ ನಿರ್ವಹಣೆಯಲ್ಲಿ ಇದು ಹೀಗೆ ಬಹಳ ಕಾಲದಿಂದ ಕೈಕೊಡುತ್ತಲೇ ಇದೆ. ಮೇಲಿನವರದು ‘ಚಲ್ತಾ ಹೈ’ ಧೋರಣೆ. ಡೀಸೆಲ್ ಉಳಿತಾಯಕ್ಕಿದು ಒಳದಾರಿ ಎಂದಿತ್ಯಾದಿ ಪ್ರವಾಸ ಮುಗಿಯುವಾಗ ಅಂತೆಗಳ ಬೊಂತೆ ಬೆಳೆದದ್ದೇ ಲಾಭ.
ನಿಕಾಯ್ ಹವಳದ ಹರಹು ದೊಡ್ಡದು. ಸಹಜವಾಗಿ ಹಡಗಿನಿಂದ ನಮ್ಮ ಸಣ್ಣ ದೋಣಿಗಳ ಯಾನ ದೀರ್ಘ. ದೋಣಿಗಳಿಗೆ ಮಾರ್ಗದರ್ಶಿಸಲು ಮೊದಲಲ್ಲಿ ಸಮುದ್ರದಾಳದಿಂದಲೇ (ಹೆಚ್ಚಿರಲಾರದು) ಎರಡು ಕುಂದವನ್ನೇ ನಿಲ್ಲಿಸಿ, ಉದ್ದಕ್ಕೂ ಉಳಿದೆಡೆಗಳಿಗಿಂತ ಸ್ಪಷ್ಟವಾಗಿ ತೇಲುಬೆಂಡುಗಳನ್ನು ಕೊಟ್ಟಿದ್ದರು. ಉಳಿದಂತೆ ಕಲ್ಪೆನಿಯದೇ ರಾಯಲ್ ಟ್ರೀಟ್ಮೆಂಟ್ – ರಿಕ್ಷಾ ಬೆನ್ನಲ್ಲಿ ಬೆಂಚಾಸನ, ಊರಿನ ಒಂದಂಚಿನ ರಿಸಾರ್ಟಿನಲ್ಲಿ ವೆಲ್ಕಮ್ ಡ್ರಿಂಕ್ (ಗಡಿಬಿಡಿ ಮಾಡಬೇಡಿ, ಬರಿಯ ಬೊಂಡ) ಜೊತೆಗೆ ಗುಡ್ ಮೌರ್ನಿಂಗ್! ಇಲ್ಲಿ ಸ್ಕೂಬಾ ಡೈವಿಂಗ್ ಅಥವಾ ಸಮುದ್ರದ ಮುಳುಗುಶೋಧ ಕೊಡುತ್ತೇವೆ ಎಂದು ಪ್ರಕಟಣೆ ಏನೋ ಇತ್ತು ಮತ್ತು ಪ್ರಸನ್ನ ನಮ್ಮಲ್ಲಿ ತನ್ನ ಅಭ್ಯರ್ಥಿತನವನ್ನೂ ಜಾಹೀರು ಮಾಡಿದ್ದ. ಆದರೆ ‘ಸಂಸಾರ ತಾಪತ್ರಯದಲ್ಲಿ’ (ಪಾಪ, ಗೀತಾ ಏನೂ ತಲೆ ತಿನ್ನಲಿಲ್ಲ. ಮಕ್ಕಳನ್ನು ಹೊರಡಿಸುವುದರಲ್ಲಿ ತಡವಾಯ್ತಷ್ಟೇ) ಹಡಗಿನಿಂದ ಎರಡನೇ ಬೋಟ್ ಯಾತ್ರಿಯಾಗಿ, ರಿಸಾರ್ಟಿಗೆ ಬರುವಾಗ ಸ್ಕೂಬಾ ಮೊದಲ ಹತ್ತು ಮಂದಿಗೆ ಮಾತ್ರ ಎನ್ನುವ ನಿರ್ಬಂಧದಲ್ಲಿ ಅವಕಾಶ ಕಳೆದುಕೊಂಡು ದುಃಖಿಸಿದ. ಇಲ್ಲಿ ಸರಕಾರೀ ರಿಸಾರ್ಟ್ ಹೆಚ್ಚು ಸಜ್ಜುಗೊಂಡಿದೆ. ಸ್ವಾಗತ ಮತ್ತು ಊಟತಿಂಡಿಗಳಿಗೆ ಒದಗುವಂತೆ ಪಕ್ಕಾ ಸಾರಣೆ, ಬಣ್ಣದ ಕುಂದಗಳೊಡನೆ (ಮಂಗಳೂರು) ಹಂಚಿನ ವಿಶಾಲ ಜಗುಲಿ. ಅನ್ಯ ವ್ಯವಸ್ಥೆಗಳಲ್ಲಿ ಬರುವವರಿಗೆ ಪೂರ್ಣ ಸಜ್ಜುಗೊಂಡ ಆರೆಂಟು ಸ್ವತಂತ್ರ ಅತಿಥಿಗೃಹಗಳು, ಅಲ್ಲಿನ ಮಿತಿಯಲ್ಲಿ ಚಂದದ ಕೈತೋಟ. ಕಲ್ಪೆನಿಯಲ್ಲಿ ಬಿಳಿಗಡ್ಡದ ‘ಯಜಮಾನ’ ಆತಿಥ್ಯದ ಹೊಣೆ ನಿರ್ವಹಿಸಿದರೆ, ಇಲ್ಲಿ ಸಾಂಪ್ರದಾಯಿಕ ಅಂಗಿ, ತಲೆಬಟ್ಟೆಗಳ ತರುಣಿಯದೇ ಉಸ್ತುವಾರಿ. ಆದರೆ ರಿಸಾರ್ಟಿಗೆ ವೆಲ್ಕಮ್ಮಿಸುವಲ್ಲಿನ ಇವರ ತರಬೇತಿ, ‘ಮುಂದೇನು’ ಎಂಬುದರ ಬಗ್ಗೆ ಅಲ್ಲೂ ಇಲ್ಲೂ ನಿರುತ್ತರವಾಗುತ್ತದೆ!
ಕೈತೋಟದ ಹಸಿರು ಬೇಲಿಗೆ ಸಮವಾಗಿಯೇ ಇದ್ದ ಕಡಲಕಿನಾರೆ ಹೆಚ್ಚುಕಡಿಮೆ ನೇರವಾಗಿ ಎರಡೂ ದಿಕ್ಕಿಗೆ ಹಬ್ಬಿತ್ತು. ಅವರಿವರ ಮುಖ ನೋಡಿ, ನಮ್ಮಷ್ಟಕ್ಕೇ ಬಟ್ಟೆ ಬದಲಿಸಿ, ಎಲ್ಲರೂ ಕಡಲಪಾಲಾದೆವು. ಇಲ್ಲೂ (ಮರುದಿನದ ಕವರಟ್ಟಿ ದ್ವೀಪದಲ್ಲೂ) ಕಲ್ಪೆನಿಯ ಲಗೂನಿನ ಆವೃತ ಸ್ವರೂಪ ಇಲ್ಲವಾಗಿ ಅಚ್ಚ ಬಿಳಿ ಮರಳು (ಹವಳದ ಹುಡಿ), ಸ್ವಚ್ಛ ನೀಲ ಕಾಣಿಸುವ ನೀರು ನಮ್ಮ ವಿಹಾರಕ್ಕೆ ಮೀಸಲು. ಮೊಣಕಾಲಾಳ ಮೀರದ ಹವಳದ ನೆಲಗಟ್ಟು, ದೂರದಲ್ಲೇ ‘ಸೊಕ್ಕು’ಕಳಚಿಕೊಂಡು ಕೇವಲ ಆಟಕ್ಕೆಳಸುವ ತೆರೆಗಳು ನಮಗೆ ಯಾವ ದಿಕ್ಕಿನಲ್ಲೂ ಎಷ್ಟು ದೂರಕ್ಕೂ ಓಡಾಡಲು ಅವಕಾಶ ಮಾಡಿಕೊಡುತ್ತದೆ. ಆದರೆ ಲಗೂನಿನ ಜಲಸಸ್ಯಗಳ, ಮುಳುಗುನೋಟಕ್ಕೆ ವಿಶೇಷ ರಂಗೇರಿಸುವ ಹವಳ ಮತ್ತು ಮೀನುಗಳ ವೈವಿಧ್ಯ ಇರಲಿಲ್ಲ. ಅಶ್ಚರ್ಯಕರವಾಗಿ ಇಲ್ಲಿ, (ಮರುದಿನದ ಕವರಟ್ಟಿಯಲ್ಲೂ) ಸಾಮಾನ್ಯ ವಿಹಾರದ ಕಡಲಿನಾಳದಲ್ಲಿ ನೋಡಲೇನೂ ಇರದ ಸ್ಥಿತಿ. ಆದರೂ ಬೇಕೆಂದರೆ ಸ್ನಾರ್ಕೆಲ್ಲಿಗೆ ಪ್ರತ್ಯೇಕ ಬಾಡಿಗೆಯಂತೆ! (ಕಲ್ಪೆನಿಯಲ್ಲಿ ಉಚಿತ!) ಎಲ್ಲರಿಗೂ ಕಿನಾರೆಯ ಕಣ್ಣುಕುಕ್ಕುವ ಬಿಳಿ ಸೇರಿ, ಬಿಸಿಲ ಖಾರ ಹೆಚ್ಚಿದಂತನಿಸಿತ್ತು. ಮತ್ತೆ ಕಲ್ಪೆನಿಯ ಲಗೂನಿನ ರುಚಿಯ ಮುಂದೆ ಇದು ತುಂಬ ಚಪ್ಪೆಯೂ ಆಯ್ತು! ದಂಡೆಯಲ್ಲಿ ನೆರಳಿಗೆ ಒಂದೆರಡು ಮರ ಬೆಳೆಸಿದ್ದರು, ತೆಂಗಿನ ಗರಿ ಹೊದೆಸಿದ ಚಪ್ಪರವನ್ನೂ ನಿಲ್ಲಿಸಿ, ಕುರ್ಚಿ, ಸಲಿಕೆಯ ಮಂಚ ಹಾಕಿದ್ದರು. ಏನಲ್ಲದಿದ್ದರೂ ಇಲ್ಲಿನ ಸಮುದ್ರದ ಪ್ರಾಕೃತಿಕ ಶುಚಿ ಮತ್ತು ಭದ್ರತೆಯ ಸ್ಥಿತಿ ಮಂಗಳೂರಿನಲ್ಲಿ ಇಲ್ಲವೆನ್ನುವ ಸಂಕಟಕ್ಕೋ ಕೊಟ್ಟ ದುಡ್ಡಿಗೆ ಇಷ್ಟಾದರೂ ದಕ್ಕಲಿ ಎಂಬ ಹಠಕ್ಕೋ ಹೆಚ್ಚಿನವರು ಊಟದ ಕರೆ ಬರುವವರೆಗೂ ನೀರಿನಲ್ಲಿ ಹೊರಳಾಡಿದೆವು, ಕಯಾಕ್ ಚಾಲನೆ ನಡೆಸಿದೆವು.
ಸ್ನಾನ, ಊಟ ಮತ್ತೆ fake dance. ಇಲ್ಲಿ ಜನಪದ ನೃತ್ಯ ಕಲ್ಪೆನಿ ತಂಡಕ್ಕಿಂತ ಹೆಚ್ಚು ಆಧುನಿಕಗೊಂಡಂತಿತ್ತು (ಅಂದರೆ ಗುಣವೋ ಅವಗುಣವೋ ನೀವೇ ಅಂದಾಜಿಸಿಕೊಳ್ಳಿ). ಮತ್ತೆ ಅಲ್ಲಿನ ದೀಪಸ್ತಂಭ ದರ್ಶನಕ್ಕೆ ನಮ್ಮನ್ನು ಒಯ್ದರು. ಇದರ ಇತಿಹಾಸ ಮತ್ತು ಮಹಿಮೆ ಬಗ್ಗೆ ಈಗಾಗಲೇ ಗೆಳೆಯ ಕೃಶಿ ತಮ್ಮ ಬ್ಲಾಗಿನಲ್ಲಿ ಸುಂದರ ಚಿತ್ರಗಳೊಂದಿಗೆ ಹಾಕಿರುವುದರಿಂದ ನೀವು ಈ ಅಂಕದ ಕೊನೆಯಲ್ಲಿ ಕೊಟ್ಟ ಸೇತು ಬಳಸಿ ಒಂದು ಸಣ್ಣ ಬ್ರೇಏಏಏಏಕ್ ತೆಗೆದುಕೊಂಡು ಮರಳುವುದುತ್ತಮ!
ದೀಪ ಸ್ತಂಭಕ್ಕೆ ನಮಗಿಂತ ಮೊದಲೇ ನಾನು ಹಿಂದೆಯೇ ಹೇಳಿದ ‘ನಮ್ಮೊಡನಿದ್ದೂ ನಮ್ಮಂತಾಗದ’ ಅಧಿಕಾರಿ ಮಹಾಶಯನ ಕುಟುಂಬ ತಲಪಿತ್ತು. ಖಾವಂದರ ಎಂಜಾಯ್ಮೆಂಟಿಗೆ ನಮ್ಮಂತ ಹುಲುಮಾನವರು ಅಡ್ಡಿಯಾಗದಂತೆ ಸ್ಥಳೀಯ ಆಡಳಿತಗಾರರು ನಮ್ಮನ್ನೆಲ್ಲ ಬಾಗಿಲಲ್ಲೇ ತಡೆಹಿಡಿದದ್ದು ನಿಜಕ್ಕೂ ಅವಮಾನಕಾರಿ. ನೂರಿಪ್ಪತ್ತೈದು ವರ್ಷಪ್ರಾಯದ (೧೮೮೫) ದೀಪಸ್ತಂಭವೇನಾದರೂ (ನೆನಪಿನ ಶಕ್ತಿಯಿದ್ದು) ಮಾತಾಡಬಹುದಾಗಿದ್ದರೆ, ಸೌಲಭ್ಯಗಳ ಭಾರೀ ಕೊರತೆಯ ದಿನಗಳಲ್ಲೂ ಅದರ ರಚನೆಯ ಅಗತ್ಯವನ್ನು ಮನಗಂಡ, ರಚಿಸಿದ, ಪ್ರಾಕೃತಿಕ ವೈಪರೀತ್ಯಗಳಲ್ಲೂ ಊರ್ಜಿತಲ್ಲಿಟ್ಟ, ಕಾಲಮಾನಕ್ಕೆ ತಕ್ಕಂತೆ ನವೀಕರಿಸಿದ, ರಾಷ್ಟ್ರ-ಅಂತಾರಾಷ್ಟ್ರ ಮಟ್ಟದದಿಂದಲೂ ಈ ದೀಪಸ್ತಂಭವನ್ನು ನೋಡಿಹೋಗಲೆಂದೇ ಬಂದ ನಿಜ ಮಹಾತ್ಮರ ಹೆಸರುಗಳ ಪಟ್ಟಿಯನ್ನೇ ಈ ಸಾಹೇಬನ ಮುಖಕ್ಕೆ ನಿವಾಳಿಸುತ್ತಿತ್ತೋ ಏನೋ. ದೀಪಸ್ತಂಭ ಪ್ರವೇಶಕ್ಕೆ ವ್ಯಕ್ತಿಗೆ, ಕ್ಯಾಮರಾಕ್ಕೆ ಮತ್ತೆ ವಿಡಿಯೋಗೆ ಪ್ರತ್ಯೇಕ ದರಗಳಲ್ಲದೆ ವಿದೇಶೀಯರಿಗೆ ಹೆಚ್ಚುವರಿ ದರವೂ ನಿಯಮಾನುಸಾರ ವಸೂಲಾಗುತ್ತಿತ್ತು. ಇವುಗಳ ಸರಿತಪ್ಪನ್ನೇನೋ ನಾವು ಕಾನೂನು ಮತ್ತು ನೈತಿಕ ಮಟ್ಟಗಳಲ್ಲಿ ಚರ್ಚಿಸಲು ಬರುತ್ತದೆ. ಆದರೆ ಈ some are more equals ಎಂದು ನಡೆಯುವವರು, ನಡೆಸಿಕೊಳ್ಳುವವರು ಇರುವವರೆಗೆ ಎಲ್ಲಾ ಚರ್ಚೆಗಳು ಕೇವಲ ಅಕಾಡೆಮಿಕ್ ಮಾತ್ರ ಆಗಿ ಉಳಿಯುತ್ತವೆ! ಪರಿಸರ ರಕ್ಷಣೆ ಬಗ್ಗೆ ಅಂಗಡಿಯಲ್ಲಿ ನನಗೇ ಕೊರೆದು ಕೊನೆಯಲ್ಲಿ ನನ್ನಲ್ಲೇ “ಒಂದು ಪ್ಲ್ಯಾಸ್ಟಿಕ್ ಕವರ್ ಕೊಡೀ” ಎಂದು ಕೇಳಿದ ಹಾಗಿರುತ್ತದೆ.
ಮೊದಲ ಐದೋ ಆರೋ ಅಂತಸ್ತುಗಳಲ್ಲಿ ವಿಸ್ತಾರ ಸ್ತಂಭದ ನಡುವೆ ತಲಾ ಸುಮಾರು ಇಪ್ಪತ್ತೊಂಬತ್ತು ಮೆಟ್ಟಿಲುಗಳ ಸುರಳಿ ಮೆಟ್ಟಿಲು ಕೊಟ್ಟಿದ್ದಾರೆ. ಮೇಲೆ ಹೋದಂತೆ ಸ್ತಂಭ ಸಪುರವಾದ್ದರಿಂದ ಮತ್ತೆ ಎರಡಂತಸ್ತು ಓರೆಯಲ್ಲಿಟ್ಟ ಏಣಿಗಳು. ದೀಪದ ಕೋಣೆ, ಹೊರಗಿನ ಬಾಲ್ಕನಿ ಸುತ್ತಿ ಮರಳಿದೆವು. ಅಲ್ಲಿ ದೀಪ ರಾತ್ರಿ ಮಾತ್ರ ಉರಿದು, ಹತ್ತೆಂಟು ಮೈಲಿನ ವ್ಯಾಪ್ತಿಯಲ್ಲಿ ಸಮುದ್ರಯಾನಿಗಳಿಗಷ್ಟೇ ಮಾರ್ಗದರ್ಶಿಸುತ್ತದೆ. ಆದರೆ ಒಂದೂಕಾಲು ಶತಮಾನ ಪ್ರಾಯದ ಆ ಸ್ತಂಭ ಕಂಡು, ಏರಿ ಮತ್ತು ದ್ವೀಪ ದರ್ಶಿಸಿದ ನೆನಪು ನಮ್ಮಲ್ಲಿ ಬಹುಕಾಲದವರೆಗೆ ನಂದಾದೀಪವಾಗುವುದರಲ್ಲಿ ಸಂಶಯವಿಲ್ಲ.
ಮುಂದಿನ ಹಂತ ನಗರದರ್ಶನ. ಮನೆಗಳ ಓಣಿಯ ಒಂದು ಕೊನೆಯಲ್ಲಿ ನಮ್ಮನ್ನಿಳಿಸಿ, ನೂರಿನ್ನೂರು ಅಡಿ ನಡೆಸಿ ಗ್ರಾಮಸಭಾ ಕೇಂದ್ರ ತೋರಿದರು. ಅಲ್ಲಿನ ವಿಶಾಲ ಕೊಟ್ಟಿಗೆಯಲ್ಲಿ ಸಂಜೆ ಕಾಫಿಯ ವ್ಯವಸ್ಥೆ ಇತ್ತು. ಅಲ್ಲೇ ಒಂದಂಚಿನಲ್ಲಿ ಅವರ ಸಾಂಪ್ರದಾಯಿಕ ದೋಣಿಯೊಂದರ ಸುಂದರ ಮಾದರಿಯನ್ನೂ ನಿಲ್ಲಿಸಿದ್ದರು. ಆಚೆಗೆ ಗ್ರಾಮಸಭಾ ಕಟ್ಟಡ. ಈಚೆಗೆ ನಾನಾಗಲೇ ಹೇಳಿದ ‘ದೊಡ್ಡ ಬಟ್ಟೆಗಳನ್ನು ಒಗೆಯುವ ಕೆರೆ.’ ಅನಂತರ ಬೇರೊಂದೇ ಗಲ್ಲಿಯಲ್ಲಿ ಸುತ್ತಿಸಿ, ಮತ್ತೆ ನಮ್ಮ ಸಾರೋಟಿಗೇರಿಸಿದರು. ಪ್ರಧಾನವಾಗಿ ಮರಳೇ ನೆಲವಾಗಿ ತೋರುವ ಓಣಿಗಳು ಒಟ್ಟು ದ್ವೀಪಸ್ತೋಮದ ಮುಖ್ಯ ದಾರಿಗಳಂತೇ (ಅವೂ ಗಲ್ಲಿಗಳೇ) ಅನಿವಾರ್ಯವಾಗಿ ಕಾಂಕ್ರೀಟೇ. ಇಲ್ಲಿನ ತೀರಾ ವಿರಳ ಖಾಸಗಿ ದ್ವಿಚಕ್ರಿಗಳು, ಅಷ್ಟೇ ಕಡಿಮೆ ಸಂಖ್ಯೆಯ ಅನಿವಾರ್ಯ ಸಾಗಣೆ ವಾಹನಗಳ ಓಡಾಟ ಪಾದಚಾರಿಗಳಿಗೋಸ್ಕರ ಪುಟ್ಟಪಥದ ಆವಶ್ಯಕತೆಯನ್ನು ಕಾಣಿಸಿದಂತಿಲ್ಲ. ಮಾರ್ಗದ ಅಂಚುಗಳಲ್ಲಿ ಮಳೆನೀರಚರಂಡಿಯ ನೆಪದಲ್ಲಿ ಸುವಾಸನಯುಕ್ತ ಕೊಳಚೆ ತುಂಬಿಕೊಳ್ಳುವ ಚರಂಡಿಗಳೇ ಇಲ್ಲಿಲ್ಲ. ಎಲ್ಲ ಮರಳು ಮತ್ತು ಹೆಚ್ಚುಕಡಿಮೆ ಸಮತಟ್ಟು ಜಾಗವಾದ್ದರಿಂದ ಹರಿಯುವ (ಅಥವಾ ಹರಿಸುವ) ಪ್ರಮೇಯವೇ ಇದ್ದಂತಿಲ್ಲ. ಆದರೆ ದಾರಿಯ ಮಧ್ಯದಲ್ಲಿ ಮಾತ್ರ ಏನೋ ಭದ್ರವಾಗಿ ಮುಚ್ಚಿದ ಚರಂಡಿ ಸಾಲೊಂದು ಹರಿದಿತ್ತು. ಅದರ ಕುರಿತು ವಿಚಾರಿಸಲಿಲ್ಲ. ಬಾಳೆ, ಕಹಿಬೇವು, ನುಗ್ಗೆ, (ಮೊದಲೇ ಹೇಳಿದ) ನೋಣಿ ಮುಂತಾದ ಹರಿತ್ತು ಎಲ್ಲ ಮನೆಗಳಲ್ಲೂ ಕಾಣುತ್ತಿತ್ತು. ಸಾರ್ವಜನಿಕವಾಗಿ ಗಮನಿಸಿದ್ದೇ ಆದರೆ ಈ ದ್ವೀಪಗಳಲ್ಲಿ ತೆಂಗಿನನಂತರದ ಸರ್ವವ್ಯಾಪೀ ಮಹಾವೃಕ್ಷ ದೀವಿಹಲಸು! ಇಲ್ಲಿನ ದೀವಿಗುಜ್ಜೆಯ ವ್ಯಾಪಕತೆಯಿಂದಲೇ ದ್ವೀಪಗಳು ದೀವ್ಸ್ ಆದವೋ ಇತ್ಯಾದಿ ಉಪಕಥೆಗಳನ್ನು ನಿಮ್ಮ ಮನೋಭೂಮಿಕೆಗೆ ಬಿಟ್ಟು ನಾವೆಲ್ಲ ಮತ್ತೆ ಸಾರೋಟು, ಬೋಟುಗಳ ಸರಣಿಯಲ್ಲಿ ಎಂ.ವಿ ಕವರಟ್ಟಿ ಗರ್ಭಸ್ಥರಾದೆವು.
ಪ್ರವಾಸದ ಮೂರನೇ ಬೆಳಗು ದ್ವೀಪಸ್ತೋಮದ ರಾಜಧಾನಿ, ಕವರಟ್ಟಿಯಲ್ಲಾಯ್ತು. ಇಲ್ಲಿ ನಾವು ಬೋಟಿಳಿವ ದಕ್ಕೆಯ ಒತ್ತಿನಲ್ಲೇ ನಮ್ಮ ವಿಹಾರದ ರಿಸಾರ್ಟೂ ಇತ್ತು (ಸಾರೋಟು ಸವಾರಿ ಇರಲಿಲ್ಲ). ಮಿನಿಕಾಯ್ ಹಾಗೇ ಇಲ್ಲೂ ಸ್ವತಂತ್ರ ಪುಟ್ಟ ಮನೆಗಳ ವ್ಯವಸ್ಥೆಯಿದ್ದರೂ ಎಲ್ಲ ಸೇರಲೊಂದು ಪ್ರತ್ಯೇಕ ನೆಲೆ (ಕೈತೋಟವೂ) ಇರಲಿಲ್ಲ. ಪ್ರವಾಸೀ ಋತುಮಾನಕ್ಕೊದಗುವಂತೆ ತೆಂಗಿನ ಗರಿಗಳ ಚಪ್ಪರ ನಿಲ್ಲಿಸಿದ್ದಲ್ಲೇ ಕುರ್ಚಿ ಮೇಜು ಜೋಡಿಸಿ, ನಮಗೆ ಉಪಚಾರ ನಡೆಸಿದರು. ಇಲ್ಲಿನ ಕಾರ್ಯಕ್ರಮ ಪಟ್ಟಿಯಲ್ಲಿ ಗಾಜಿನ ತಳದ ದೋಣಿ ಸವಾರಿ, ಸ್ನಾರ್ಕೆಲ್, ಸ್ಕೂಬಾ ಮತ್ತು ಊಟ ಪೂರ್ವಾಹ್ನಕ್ಕೆ ನಿಗದಿಯಾಗಿತ್ತು. ಮಿನಿಕಾಯ್ ಸೋಲಿನಿಂದ ಪಾಠ ಕಲಿತ ಪ್ರಸನ್ನ ಇಲ್ಲಿ ಸ್ಕೂಬಾಕ್ಕೆ ಹೆಸರು ನೊಂದಾಯಿಸುವಲ್ಲಿ ಸರ್ವಪ್ರಥಮನಾಗಿದ್ದ. ಆದರೆ ಮಿನಿಕಾಯ್ನಲ್ಲಿ ಒಂದು ಗಂಟೆಗಿದ್ದ ಬಾಡಿಗೆ ಇಲ್ಲಿ ದ್ವಿಗುಣಗೊಂಡದ್ದು ತಿಳಿಯುತ್ತಲೇ (ರೂ ಒಂದೂವರೆ ಸಾವಿರ) ಅಷ್ಟೇ ಚುರುಕಾಗಿ ಹಿಂದೆ ಸರಿದ. (ಆದರೆ ಎಲ್ಲ ಮುಗಿದಮೇಲೆ ಸ್ಕೂಬಾದಲ್ಲಿ ಭಾಗಿಗಳಾದವರು ಯಾರೋ ಆಕ್ಷೇಪಿಸಿದ್ದಕ್ಕೆ ಸಮಜಾಯಿಸುವಂತೆ ಸಂಘಟಕರು ಅರ್ಧ ಹಣ ವಾಪಾಸು ಕೊಟ್ಟಾಗ ಪಶ್ಚಾತ್ತಾಪಪಡುವಲ್ಲೂ ಪ್ರಸನ್ನ ಪ್ರಥಮ!)
ಕಾರ್ಯರಂಗಕ್ಕೆ ತೊಡಗುವಲ್ಲಿ ಈ ಸಂಘಟಕರ ಜಡ ಹಿಂದಿನೆರಡು ದ್ವೀಪದವರಿಗೇನೂ ಬಿಟ್ಟಿರಲಿಲ್ಲ! ಗಾಜಿನ ತಳದ ದೋಣಿಯಾನ ಒಟ್ಟು ಪ್ರವಾಸ ಯೋಜನೆಯ ಅಂಗವಾಗಿ ಎಲ್ಲರಿಗೂ ಉಚಿತವಾಗಿ ಸಿಗುವುದಿತ್ತು. ಆದರೆ ಆ ದೋಣಿಯ ಬರವನ್ನು ಅನಿರ್ದಿಷ್ಟ ಕಾಯುವ ಸಂಕಟ! ಅಲ್ಲೇ ತೆರೆಯುರುಳಿಸುತ್ತಾ ಕಡಲು ಕರೆದಾಗ, “ಇಲ್ಲ, ಗಾಜಿನ ದೋಣಿ ತಪ್ಪೀತು” ಎಂದೆವು. ನೀಲಬಣ್ಣದ ಕಯಾಕುಗಳು ಹೊಯ್ಗೆಗೆ ಮೂಗೊರಸುತ್ತಾ ಅನುನಯಿಸಿದಾಗ “ಇಲ್ಲ, ಮತ್ತೆ ಸ್ನಾರ್ಕೆಲ್ಗೆ ದಮ್ಮು ಕಡಿಮೆಯಾದೀತು” ಎಂದೆವು. ಮೊದಲೇ ಸುಟ್ಟ ಮೈಯಿದ್ದರೂ ನಿರ್ದಯಿ ಸೂರ್ಯನನ್ನು ತೆಂಗಿನ ಮರಗಳ ನೆಪದಲ್ಲಿ ಮರೆತಂತೆ ಮಾಡಿ ಬೀಚ್ ವಾಲಿಬಾಲ್ ಆಡಿದೆವು. ಹಿರಿಯರು ಕಳೆದುಹೋದ ಬಾಲ್ಯ ಶೋಧಿಸುವಂತೆ, ಕಿರಿಯರು ಇರಬೇಕಾದ್ದೇ ಹೀಗೆಂಬಂತೆ ಮರಳಿನಾಟ ಆಡಿದೆವು. ಕಪ್ಪೆಗೂಡು ತೋಡಿದೆವು, ಅವರಿವರ ಕಾಲು ಹೂಳಿದೆವು, ಮರಳ ಕೋಟೆ ಎಬ್ಬಿಸಿ ಕಹಳೆ ಬಾರಿಸಿದೆವು. ಇನ್ನು ಯುದ್ಧವೇ ಸರಿ ಎನ್ನುವಾಗ ಗಾಜಿನತಳದ ದೋಣಿ ಬಂದದ್ದು ಬರಿಯ ಕಾಕತಾಳೀಯವಿರಲಾರದು!
ಹಳೆಮನೆಗಳ ಕಿಟಕಿಯಂತೆ ಮರದ ಚೌಕಟ್ಟಿಗೆ ಭದ್ರವಾಗಿ ಪಾರದರ್ಶಕ ಗಾಜು ಕೂರಿಸಿ ದೋಣಿಯ ತಳವನ್ನು ಸಜ್ಜುಗೊಳಿಸಿದ್ದರು. ಅದರ ವೀಕ್ಷಣೆಯಲ್ಲಿ ನಮಗೆ ನೀರನ್ನು ಮುಟ್ಟದೆ ಸ್ನಾರ್ಕೆಲಿಂಗ್ ಪರಿಣಾಮ ಒದಗುತ್ತಿತ್ತು. ಔಟ್ಬೋರ್ಡ್ ಯಂತ್ರವಿದ್ದ ದೋಣಿ ತುಸುವೇ ಆಳದತ್ತ ಚಲಿಸುತ್ತಿದ್ದಂತೆ ನಮ್ಮ ದೃಷ್ಟಿಯೆಲ್ಲ ದೋಣಿ ತಳದ ನೀಲಿಮೆಯಲ್ಲಿ ಕೀಲಿಸಿತ್ತು. ಮೊದಮೊದಲು ಕೇಬಲ್ ತಪ್ಪಿದ ಟೀವಿಯಂತೆ ಭರ್ರೆಂದು ಬಿಳಿ ಮರಳ ಹಾಸು. ನಂತರ ಅಲ್ಲೊಂದು ಇಲ್ಲೊಂದು ಕಲ್ಲಗುಂಡು. ಅರೆ, ಬಂಡೆಯೊಂದಕ್ಕೆ ಮಂಡೆ ಬಂತೇ ಎಂದು ನಾವು ಚಕಿತರಾಗುವ ಮೊದಲು ನೀರಾಳದಲ್ಲಿ ಬಿಸಿಲಿಗೆ ಕಣ್ಣುಕೂರಿದ್ದ ಆಮೆ ಟಣ್ಣನೆ ಮೊಲದ ವೇಗದಲ್ಲಿ ಮರೆಯಾಯ್ತು! ಆಳ ತುಸುವೇ ಹೆಚ್ಚುತ್ತ ಜಲಸಸ್ಯಗಳು, ಹವಳದ ವಿವಿಧ ರಚನೆಬಣ್ಣಗಳು, ಮೀನು ಆಮೆಗಳು ಕಾಣಿಸತೊಡಗಿದವು. ಆದರೆ ನಮ್ಮ ದೋಣಿಯ ವೇಗದಲ್ಲಿ ಯಾವುದನ್ನೂ ಕೇಂದ್ರೀಕರಿಸಿ ನೋಡುವುದಾಗಲೀ ಕ್ಯಾಮರಾದಲ್ಲಿ ಹಿಡಿಯುವುದಾಗಲೀ ಸಾಧ್ಯವಾಗಲಿಲ್ಲ. ಹೊರಟು ಐದೇ ಮಿನಿಟಿನಲ್ಲಿ ಸುಮಾರು ಎರಡಾಳು ಆಳದ ಭಾಗ ತಲಪುತ್ತಿದ್ದಂತೆ ನೀರ ಅಡಿಯ ಹವಳದ ಹಾಸು ಕೊರಕಲು ಬಿದ್ದದ್ದು, ಜೀವ ಹಾಗೂ ಬಣ್ಣಜಾಲಗಳು ವರ್ಣನೆಗೆ ಸಿಗದಷ್ಟು ಹೆಚ್ಚಿದಲ್ಲಿ ದೋಣಿ ನಿಧಾನಿಸಿತು. ಮತ್ತೆ ಅಲ್ಲಲ್ಲಿ ನಿಂತು, ಮೆಲ್ಲನೆ ಯಾವುದೋ ಮೀನಗುಂಪನ್ನು ಅನುಸರಿಸಲು ತುಸುವೇ ಆಚೀಚೆ ಚಲಿಸಿದಂತೆಲ್ಲ ದೋಣಿಯ ನಿರಂತರ ಸದ್ದನ್ನು ಮೀರಿ ನಮ್ಮವರ ಉದ್ಗಾರಗಳ ಅಲೆಗಳೂ ಏರುತ್ತಿದ್ದವು. ಕೃಶಿ ಮತ್ತು ಪಾರ್ಶ್ವನಾಥರ ಕ್ಯಾಮರಾಗಳು ಕ್ಲಿಕ್ಕಿಸುತ್ತಿರಲಿಲ್ಲ – ಯಾವುದೋ ಯುದ್ಧ ದೃಶ್ಯದಲ್ಲಿ ಗುಂಡಿನ ಮಾಲೆಯನ್ನು ಉಡಾಯಿಸುವ ಮಾದರಿಯಲ್ಲೇ (ಸದ್ದು ಸಣ್ಣದಾದರೂ) ನಿರಂತರ ಚಾಲೂ ಚಕಚಕಚಕಾ! ಉಳಿದವರೂ ನಂನಮ್ಮ ಮಿತಿಯಲ್ಲಿ ಚಿತ್ರಗ್ರಹಿಸುವ ಪ್ರಯತ್ನವನ್ನೇನೋ ಮಾಡುತ್ತಲೇ ಇದ್ದೆವು. ಆದರೆ ಡಿಜಿಟಲ್ ಕ್ಯಾಮರಾಗಳ ಅಪರಿಮಿತ ಸೌಲಭ್ಯದಿಂದಾಗಿ ಆಗೀಗ ಫಲಿತಾಂಶವನ್ನು ನೋಡಿಕೊಂಡಾಗ ನಿರಾಶೆಯೇ ಜಾಸ್ತಿಯಿತ್ತು. ಕೊನೆಕೊನೆಗೆ ನಾನಂತೂ ಕ್ಯಾಮರಾ ಬಂದ್ ಮಾಡಿ, ದೃಶ್ಯಕ್ಕೆ ಮೈಯೆಲ್ಲಾ ಕಣ್ಣಾಗಿ ಉಳಿದೆ. ದೋಣಿಯ ಆಕಾರಕ್ಕೆ, ಕಂಪನಕ್ಕೆ ಹೆಚ್ಚಿನ ಜಲಚರಗಳು ಸ್ಪಷ್ಟವಾಗಿ ಸ್ಪಂದಿಸುತ್ತಿದ್ದುದರಿಂದ ಇನ್ನಷ್ಟು ಕಡಲು ಕಲಕದೆ (ಹಾಯಿ ಕಟ್ಟಿದ್ದೋ ಕನಿಷ್ಠ ಹಗುರವಾಗಿ ಹುಟ್ಟು ಹಾಕುವ ದೋಣಯೋ) ಬರುವಂತಾಗಬೇಕು. ಪುಟ್ಟಪುಟ್ಟ ಟೀವೀ ಪರದೆಗಳನ್ನು ಕೇವಲ ಎರಡೇ ಸಾಲಿನಲ್ಲಿ ಒತ್ತೊತ್ತಾಗಿ ಜೋಡಿಸಿಟ್ಟಂತೆ ಸಿಗುವ ದೃಶ್ಯಗಳಿಗಿಂತ ಅಖಂಡ ಗಾಜಿನ ತಳದ್ದೇ ದೋಣಿಯೋ ಸಮತಳದ ತೆಪ್ಪವೋ ಲಭ್ಯವಾದರೆ ಅದೆಷ್ಟು ರಮ್ಯ ಎಂದು ಹಾರೈಸುತ್ತಿದ್ದಂತೆ ನಮ್ಮ ಸಮಯ ಮುಗಿದಿತ್ತು, ದೋಣಿ ಮತ್ತೆ ದಂಡೆಯೆಡೆಗೆ ಧಾವಿಸಿತು.
ಗಾಜಿನತಳದ ದೋಣಿಯಲ್ಲಿ ನೋಡಿದ ಆಳದಲ್ಲೇ ಸ್ನಾರ್ಕೆಲ್ ಬಳಸುವ ಅವಕಾಶ ಇಲ್ಲಿತ್ತು. ರುಸುಮು ಮಾತ್ರ ತಲಾ ರೂ ಇನ್ನೂರು. ಅನಂತನಿಗೆ ಗಾಜಿನ ತಳದಿಂದ ನೋಡಿದ್ಮೇಲೆ ಇನ್ಯಾಕೆ ಸ್ನಾರ್ಕೆಲ್ ಎಂಬ ಉಡಾಫೆ. ಬಸವರಾಜರಿಗೆ ಬದಲಿ ಬಟ್ಟೆ ತಂದಿಲ್ಲ ಎಂಬ ನೆಪ, ವಾಸುದೇವರಾಯರಿಗೆ ಸ್ಪಷ್ಟ ಭಯ. ಆದರೆ ಎಲ್ಲ ವಿಶೇಷ ಒತ್ತಾಯ ಹೇರಿ ಮೂವರನ್ನೂ ಹಿಂದುಳಿಯಲು ಬಿಡಲಿಲ್ಲ. ಅಜ್ಜ, ಅಜ್ಜಿ, ಸಣ್ಣ ಮೂರು ಪುಳ್ಳಿಯಂದಿರು ಮತ್ತು ನೀತಿ ಮಾತ್ರ ಹಿಂದುಳಿದರು. ಸ್ನಾರ್ಕೆಲ್ಲಿಗೆ ಒಬ್ಬ ಒಳ್ಳೆಯ ಶಿಕ್ಷಕ ಮತ್ತು ಕೆಲವು ಸಹಾಯಕರೂ ಸ್ನಾರ್ಕೆಲ್ ಕಟ್ಟಿಕೊಂಡೇ ಜೊತೆಗೊಟ್ಟರು. ಸ್ನಾರ್ಕೆಲ್ ನೋಡಲು ಬಹಳ ಸರಳವಾಗಿ ಕಂಡರೂ ಆ ಕನ್ನಡಕ ಮತ್ತು ಬಾಯಿಕೊಳವೆಯ ಸಂಯೋಜನೆಯ ಯೋಗ್ಯತೆ ಮತ್ತು ಮಹತ್ವ, ಶುಚೀಕರಣ ಮತ್ತು ಬಳಕೆಯನ್ನು ದೋಣಿ ಹೋಗುತ್ತಿದ್ದಂತೆಯೇ ಶಿಕ್ಷಕ ಚೆನ್ನಾಗಿಯೇ ಕಲಿಸಿದ. ಮತ್ತೆ ಯೋಗ್ಯ ಕೊರಕಲೊಂದರ ಬಳಿ ದೋಣಿಯ ಲಂಗರು ಇಳಿಬಿಟ್ಟು ನಿಲ್ಲಿಸಿದರು. ಅಲ್ಲಿ ನೀರೊಳಗೇ ಇದ್ದ ಎತ್ತರದ ಬಂಡೆ ಮಂಡೆಗೆ, ಅಂದರೆ ದೂರದಿಂದ ಕಾಣುವಂತೆ ನಮ್ಮ ಮೊಣಕಾಲಾಳದ ನೀರಿಗೇ ನಮ್ಮನ್ನು ಇಳಿಸಿಕೊಂಡರು.
ಪ್ರವಾಸದುದ್ದಕ್ಕೂ ಯಾವುದೇ ಕಡಲ ಕ್ರೀಡೆ ಅಥವಾ ವಿಹಾರದಲ್ಲಿ ಎಲ್ಲರೂ ತೇಲುಕವಚ ಬಳಸುವುದು ಕಡ್ಡಾಯವಿತ್ತು ಮತ್ತು ಅಲ್ಲಲ್ಲೇ ಅವನ್ನು ಉಚಿತವಾಗಿ ಒದಗಿಸುತ್ತಲೂ ಇದ್ದರು ಎನ್ನುವುದನ್ನು ನಾನು ಬಿಡಿಸಿ ಹೇಳಬೇಕಿಲ್ಲ ಎಂದು ಭಾವಿಸುತ್ತೇನೆ. ಈಜಬಲ್ಲರು ಮತ್ತು ಸ್ವತಂತ್ರವಾಗಿ ಸ್ನಾರ್ಕೆಲ್ ನಿಭಾಯಿಸಬಲ್ಲರು ಎಂದು ಕಂಡವರ ಮೇಲೆ ಸಹಾಯಕರು ಬರಿಯ ಕಣ್ಗಾವಲು ಇಟ್ಟರು. ಕೊರತೆ ಕಂಡಲ್ಲಿ ಮತ್ತು ಬಯಸಿದವರಿಗೆ ಸ್ಪಷ್ಟ ಸಹಾಯಹಸ್ತವನ್ನೂ ಕೊಟ್ಟರು. ತನಗೆ ಈಜು ಬರದಿದ್ದರೇನು ತೇಲುಕವಚ ಮುಳುಗಲು ಬಿಡದು ಎಂಬ ಧೈರ್ಯ ತಂದುಕೊಳ್ಳುವುದು ಕೆಲವರಿಗೆ ಕಷ್ಟವಾಯ್ತು. ಲಾವಣ್ಯಳಿಗೆ ಹೆಚ್ಚಿನ ಬೆಂಡೊಂದನ್ನು ಕೊಟ್ಟು ಆಚೀಚೆ ಸುತ್ತಿಸಿದರು. ಈಜು, ಧೈರ್ಯಬಾರದ ಪ್ರತಿ (ದೊ)ದಡ್ಡವರನ್ನೂ ಸಹಾಯಕರು ತಾಳ್ಮೆಯಿಂದ ಮತ್ತೆ ಮತ್ತೆ ಕಣ್ಗಾಪು ಹೊಂದಿಸಿ, ಮುಖ ಮುಳುಗಿಸಿ ಉಸಿರಾಟ ಮಾಡಿಸಿ, ತೇಲುಕವಚದ ಅಂಚು ಹಿಡಿದೆಳೆಯುತ್ತ ಅದ್ಭುತ ಲೋಕದ ಅನಾವರಣ ಮಾಡಿಸಿದರು. ಕೃಶಿ ಮತ್ತು ಪ್ರಸನ್ನ ವಾರದ ಮೊದಲೇ ಜಲಾಂತರ್ಚಿತ್ರಗ್ರಹಣಕ್ಕೆ ಸ್ವತಂತ್ರವಾಗಿ ಕೆಲವು ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ ಕೃಶಿ ಅಂತಿಮವಾಗಿ ನೀರಮೇಲಿನ ಚಿತ್ರಗಳಿಗೇ ಸೀಮಿತಗೊಂಡದ್ದರಿಂದ ಸ್ನಾರ್ಕೆಲಿಂಗಿಗೆ ಮಾತ್ರ ಗಮನಕೊಟ್ಟರು. ಪ್ರಸನ್ನ ಇದ್ದ ಕ್ಯಾಮರಾಕ್ಕೆ ಪಾರದರ್ಶಕ ಕವಚ ಹಾಕಿ ಕೆಲವು ಚಿತ್ರಗಳನ್ನೇನೋ ತೆಗೆದ. ಆದರೆ ಉಸಿರಾಟದ ಬಗ್ಗೆ ಎಚ್ಚರ, ತೇಲುವ ಭಂಗಿ ಮತ್ತೆ ಎಲ್ಲಕ್ಕೂ ಮಿಗಿಲಾಗಿ ತಾನೇ ಹೊಸತಾಗಿ ಅನುಭವಿಸಲಾಗದ್ದನ್ನು ದಾಖಲಿಸುವ ಹುಂಬತನ ಬಿಟ್ಟ. ಆದರೆ ಅವನನ್ನು ವಿಶೇಷವಾಗಿ ಆಕರ್ಷಿಸಿದ ಒಂದು ಕೇಸರಿ ಬಣ್ಣದ ಹವಳವನ್ನು ಮಾತ್ರ ಬಿಟ್ಟಿರಲಾಗದೆ ನಮ್ಮ ಶಿಕ್ಷಕನ ಬಳಿ ವಿನಂತಿಸಿದ. ಆತ ತನ್ನ ತೇಲುಗವಚ ತೆಗೆದಿಟ್ಟು ಕ್ಯಾಮರಾ ಸಹಿತ ಹತ್ತಿಪ್ಪತ್ತಡಿಯಾಳಕ್ಕೆ ದಮ್ಮು ಕಟ್ಟಿ ಮುಳುಗಿ ಚಿತ್ರ ತೆಗೆದು ಕೊಟ್ಟರು!
ನಾನು ಪಾಠ ನೆನಪಿಸಿಕೊಂಡೆ. ಬಾಯಲ್ಲಿ ಉಸಿರಾಟ, ತೇಲ್ಗವಚದವಿರುವುದರಿಂದ ಈಜುಹೊಡೆಯುವ ಆವಶ್ಯಕತೆಯಿಲ್ಲ. ದೋಣಿಯಂಚಿನ ಪುಟ್ಟ ಏಣಿ ಇಳಿದೆ. ಇಂಜಿನ್ ಆರಿಸಿ, ಲಂಗರ್ ಕಚ್ಚಿದ ದೋಣಿ ಸ್ಥಿರವೆಂದರೂ ಅಲೆಯೊಲೆತದಲ್ಲಿ ಒಮ್ಮೆ ಒಂದಡಿ ಮೇಲೆ ಮರುಕ್ಷಣದಲ್ಲಿ ಎರಡಡಿ ಕೆಳಕ್ಕಿಳಿಯುತ್ತಿತ್ತು. ಏಣಿಯಂಚಿಗೇ ಇದ್ದ ಸಹಾಯಕನ ಕೈ ನಿರಾಕರಿಸಿ, ನೀರಿನ ಮೇಲೆ ಮೈಚಾಚಿದೆ. ಸುಮಾರು ಇಪ್ಪತ್ತಡಿ ದೂರದಲ್ಲೇ ಮೊಣಕಾಲಾಳದ ನೀರಲ್ಲಿ ನಿಂತ ಶಿಕ್ಷಕನನ್ನು ಗುರಿಮಾಡಿ, ಮುಖ ನೀರೊಳಗೆ ಮುಳುಗಿಸಿ, ಏಣಿಯನ್ನೇ ಕಾಲಲ್ಲಿ ನೂಕಿ ಹಗುರವಾಗಿ ಈಜತೊಡಗಿದೆ. ನೀರ ಪಾರದರ್ಶಕತೆ ಮತ್ತು ಭೂತಗನ್ನಡಿಯಂತೆ ವರ್ತಿಸುವ ಗುಣ ವಾಸ್ತವದ ಅಂತರವನ್ನು ಕಡಿಮೆ ಮಾಡುತ್ತದೆ, ಗಾತ್ರಗಳನ್ನು ದ್ವಿಗುಣಗೊಳಿಸುತ್ತದೆ! (ಇದರ ಅರಿವಿಲ್ಲದೆ ನಾನು ಕಲ್ಪೆನಿಯ ಲಗೂನಿನಲ್ಲಿ ಕಣ್ಗಾಪನ್ನು ನನ್ನ ಕನ್ನಡಕದ ಮೇಲೇ ಅಳವಡಿಸಲು ಒದ್ದಾಡಿದ್ದೆ) ನಾನೋ ಡಾಗ್ ಪೆಡಲ್ ಸ್ಪೆಶಲಿಸ್ಟ್; ಕಾಲು ಬಡಿಯುವಲ್ಲಿ ಗದ್ದಲ ಮಾತ್ರ, ಕೈ ತೊಳಸುವಲ್ಲಿ ಮುನ್ನೂಕು ಕಡಿಮೆ! ಕಿವಿಮುಳುಗಿದ್ದೇ (ಕೆಲವರು ಹೆದರಿದಂತೆ ಕಿವಿಯೊಳಗೆ ನೀರು ಸೇರುವುದಿಲ್ಲ) ಜನರ ಕರೆ ಸೂಚನೆಗಳು, ಅಲೆಯಪ್ಪಳಿಕೆಗಳು ಕೇಳುವುದಿಲ್ಲ. ನೀರಘನತೆಯಲ್ಲಿ ಸೇರಿಹೋದ ದೃಷ್ಟಿಗೆ ಮೇಲೆ ಕಾಣುವ ತೂಗುತುಯ್ತಗಳಿಲ್ಲ. ತೆಳು ನೀಲ ಬೆಳಕಿನ ಲೋಕ. ಅಲ್ಲಿ ಹಗುರವಾಗಿ ಬಳಕುವ ಹಸಿರು, ನಿತ್ಯ ಓಡಾಟದ ಮೀನು, ದೃಷ್ಟಿ ಹರಿದಲ್ಲೆಲ್ಲ ಅಜ್ಞಾತ ಸೂತ್ರದಾಟದ ವೈಭವ. ಒಮ್ಮೆ ನೀರ ನಡುವೆ, ದೋಣಿಯಿಂದ ದೂರ ನಿಂತು ಸಾವರಿಸಿಕೊಂಡು ಬರುತ್ತೇನೆ ಎಂದುಕೊಂಡೆ. ಭಾರೀ ಗೋಧೀ ಮುದ್ದೆಯ ಮೇಲೆ ಮುದ್ದೆಯನ್ನು ಪೇರಿಸಿಟ್ಟಂತ ಬಂಡೆಯ ಅಂಚು ನೋಡಿ “ಓ ಬಂತು” ಎಂದು ಕಾಲು ಇಳಿಬಿಟ್ಟರೆ ಬಂಡೆ ಸಿಗಲೇ ಇಲ್ಲ. ಮತ್ತಷ್ಟು ಮುಂದುವರಿಯೋಣವೆಂದು ಹೆಚ್ಚಿನ ನೂಕುಬಲಕ್ಕೆ ಕೈ ಚಾಚಿದಾಗ ಇನ್ಯಾರದೋ ದಪ್ಪದ ಕೈ ಕಣ್ಣೆದುರು ಸುಳಿದಂತನ್ನಿಸಿ, ತುಸು ಗಾಬರಿಯಲ್ಲೇ ಮುಖ ಎತ್ತಿ ನೋಡಬೇಕಾಯ್ತು! ಶಿಕ್ಷಕ ನಸುನಕ್ಕು, ನನಗೆ ಜಾಗ ತೆರವುಮಾಡಿ ಇನ್ಯಾರದೋ ಸಹಾಯಕ್ಕೆ ಈಜಿ ಹೋದರು.
ಬಂಡೆಯೊದ್ದು, ಮುಖಾಡೆಬಿದ್ದು, ಇನ್ನೊಂದೇ ದಿಕ್ಕಿಗೆ ತೇಲಿಹೊರಟೆ. ಎರಡೂ ಕಾಲನ್ನು ಹಿಂದೆ ಎತ್ತಿ ಹಿಡಿದರೂ ಬಡಿಯುವ ಗೋಜಿಗೆ ಹೋಗಲಿಲ್ಲ. ಎರಡು ಹಸ್ತವನ್ನು ಪೂರ್ಣ ಬಿಡಿಸಿ, ಕಯಾಕಿನ ಹುಟ್ಟಿನಂತೆ ನಿಧಾನಕ್ಕೆ ನೀರ ತೊಳಸುತ್ತ ನನ್ನ ಸವಾರಿ ಸುರುವಾಯ್ತು. ಬಣ್ಣದ ಸಿಂಗಾರಿಯರು, ಸುಂದರ ಉಪವನದಲ್ಲಿ ವಿಹರಿಸುವುದನ್ನು ಗಗನ ಮಾರ್ಗದಲ್ಲಿ ನಿಶ್ಶಬ್ದವಾಗಿ ನೋಡುತ್ತಲಿರುವವನ ಸ್ಥಾನ ನನ್ನದು. ಇದೇನು ಜಿಂಕೆಯ ಕೋಡೋ ಪುತ್ತೂರ ಜಾತ್ರೆಯ ಮಂಡಿಯಲ್ಲಿ ಗುಡ್ಡೆ ಬಿದ್ದ ಸಕ್ಕರೆ ಮಿಠಾಯಿಯೋ. ಬಿಳಿ ಬಣ್ಣಕ್ಕೆ ಇಲ್ಲಿ ಹಸಿರಿನ ಮಸ್ಲಿನ್ ಹೊದೆಸಿದ್ದರು. ಅತ್ತ ನೆಲ ತುಂಬಾ ಹಾಗಲಕಾಯಿಯ ಪ್ರತಿರೂಪಗಳು, ಬಣ್ಣ ಮಾತ್ರ ಬೇರೆ. ಮುಂದುವರಿದರೆ ನೆಲದಿಂದ ಮೇಲಕ್ಕೆ ನೇತುಬಿದ್ದಂತೆ ತೋರುವ ದ್ರಾಕ್ಷಿ ಗೊಂಚಲು. ನಾಜೂಕು ನಯದ ತೋರಿಕೆಯಲ್ಲಿ ಆಹಾ ಏನು ಸವೀ. ಆದರೆ ಎಟುಕದಾಳದಲ್ಲಿತ್ತು, ಇರಲೇಬೇಕು ಹುಳೀ! ರಾಕ್ಷಸ ಮೆದುಳು ಚಿಪ್ಪು ಕಳಚಿ ಬಿದ್ದಂತಿತ್ತು, ಮತ್ತೊಂದರ ಮೇಲೆ ಕೀಟವ್ಯಾವುದೋ ಕುಸುರಿ ಕೆಲಸ ನಡೆಸಿದ್ದೇ ರೂಪು. ಹೇಳಿ ಮುಗಿಯದು ಹವಳದ ವೈವಿಧ್ಯ. ಜಲ ಸಸ್ಯಗಳು, ಮೀನ ಬಗೆಬಗೆಯ ರೂಪಗಳು, ಸೋಂಭೇರಿ ಕಡಲ ಸೌತೆ, ಬಹುರೂಪೀ ಏಡಿಗಳು ಹೀಗೆ ಪಟ್ಟಿ ಮಾಡೋಣವೆಂದರೆ ನಮ್ಮ ತಿಳುವಳಿಕೆಯ ಬಂಡವಾಳವೇ ಸಾಲದು! ನೆಲದ ಮೇಲೆ ನಿಧಾನಕ್ಕೆ ಪರ್ಯಾಯನಾಮವೇ ಆದ ಆಮೆಯಂತೂ ನೀರಿನಾಳದಲ್ಲಿ ನಮ್ಮೆದುರು ಹಲವು ಬಾರಿ ಮಿಂಚಿ ಗಾಬರಿಗೆಡಿಸಿತ್ತು. ಆಗ ಎಲ್ಲೋ ಮಕ್ಕಳ ಸಾಹಿತ್ಯದಲ್ಲಿ ಲಗೂನ್ ಶಾರ್ಕ್ ಬಗ್ಗೆ ನೋಡಿದ್ದು ನೆನಪಿಗೆ ಬಂತು. ದೃಶ್ಯಾವಳಿಗಳ ರಮ್ಯ ಸರಣಿಯಲ್ಲಿ ನಾನು ತೇಲುತ್ತಾ ಇನ್ನದರ ತೆಕ್ಕೆಗೆ ಬಿದ್ದರೆ ಎಂದು ನಾಗರಿಕ ಭಯ ಬಂದು, ತಲೆ ಎತ್ತಿದೆ. ಅಲ್ಲೇ ದೋಣಿಯ ಮಗ್ಗುಲಲ್ಲೇ ಇದ್ದೆ. ಕ್ಷಣವೊಂದು ಗಂಟೆಯಾಗಿ, ಅಡಿಯೊಂದು ನೂರಾಗಿ ಅನುಭವಕ್ಕೆ ಬಂದಿತ್ತು. ಇನ್ನಷ್ಟು, ಮತ್ತಷ್ಟು ಸುತ್ತು ಹೊಡೆದು, ಸುಸ್ತು ಹೊಡೆದು ವಾಪಾಸಾಗುವ ಸಮಯ ಬಂದಾಗ ಬೇಸರದಲ್ಲೆ ದೋಣಿ ಸೇರಿದೆ. ಅನಂತ, ಬಸವರಾಜು, ವಾಸುದೇವರಾವ್ ಸೇರಿದಂತೆ ಎಲ್ಲರದೂ ಉದ್ಗಾರಗಳೇ! ಛೇ, ನೋಡದಿದ್ದರೆ ಹೀಗೊಂದು ಪರಮಾದ್ಭುತ ಲೋಕವಿದೆ ಎಂದು ಎಂದೂ ಊಹಿಸಲು ಸಾಧ್ಯವಿರಲಿಲ್ಲ!
ಕೃಶಿಯಂತೂ ಲಕ್ಷದ್ವೀಪವನ್ನೇ ಆವಾಹಿಸಿಕೊಂಡವರಂತೆ ಈಗಾಗಲೇ ಮೂರು ಕಂತಿನಲ್ಲಿ ಧಾರಾಳ ಚಿತ್ರಗಳನ್ನೂ ಸಾಹಿತ್ಯವನ್ನೂ ಇಂಗ್ಲಿಶ್ನಲ್ಲಿ ಹರಿಬಿಟ್ಟದ್ದನ್ನು ನೀವು ನೋಡಿದ್ದೀರಿ, ಓದಿದ್ದೀರಿ. ನನ್ನ ಭಾವನಾ ಪ್ರಧಾನವಾದ ನಿರೂಪಣೆಗೆ ವಿಭಿನ್ನವಾಗಿ ಅವರದು ಹೆಚ್ಚು ವೈಜ್ಞಾನಿಕ ಮಾಹಿತಿಪೂರ್ಣ ಮತ್ತು ಚಿತ್ರಗ್ರಾಹಿಗಳಿಗಂತೂ ಬಲು ದೊಡ್ಡ ಆಕರಗ್ರಂಥವೇ ಆಗುವ ಅಪಾಯವಿದೆ! ಇನ್ನೂ ಅಲ್ಲಿಗೆ ಹೋಗದವರು ಇದ್ದರೆ (ಇರಲಾರದು!), ಕೂಡಲೇ ಧಾವಿಸಲು ಇಲ್ಲಿ ಕ್ಲಿಕ್ಕಿಸಿ
ಚಿತ್ರ ಲೋಕಕ್ಕೆ ಪಾರುಗಾಣಿಸಿದ ನನ್ನನ್ನು ಗಾದೆ ಮಾತಿನಂತೆ (ನದಿ ದಾಟಿದ ಮೇಲೆ ದೋಣಿಯವ ಮಿಂಡ) ಉಪೇಕ್ಷಿಸದೆ ಮಾತಿನ ಹಾಸಲು ಕೊಟ್ಟೇ ಕೊಡ್ತೀರಲ್ಲಾ?
ನಿಮ್ಮನ್ನು ಉಪೇಕ್ಷಿಸಲುoಟೇ?! ಸ್ವಾರಸ್ಯಪೂರ್ಣ ಬರವಣಿಗೆ, ಪ್ರಸನ್ನ ಹಾಗೂ ಕ್ರುಶಿಯವರ ಚಿತ್ರಗಳೊಂದಿಗೆ ಭರ್ಜರಿಯಾಗಿತ್ತು. ನಮಸ್ಕಾರ.
ಮಾಲಿಕೆ ತುಂಬಾ ಚೆನ್ನಾಗಿದೆ ನೀವು ಹೇಳಿದಂತೆ ಪ್ರವಾಸ ಕಥನದ ಜಾಡು ಬದಲಿಸುತ್ತಿದ್ದೀರಿಇದು ಪ್ರವಾಸ ಕಥನಕ್ಕೂ, ಪರಿಸರ ಕಥನಕ್ಕೂ ಒಳ್ಳೆಯ ಬೆಳವಣಿಗೆನಮಸ್ಕಾರ
ನಿಮ್ಮ ಪ್ರವಾಸ ಕಥನದ ವಿವರಗಳನ್ನು ಓದುತ್ತಾ ಹೋದಂತೆ, ಅವನ್ನೆಲ್ಲಾ ಪ್ರತ್ಯಕ್ಷ ಕಂಡಂತೆ, ಅನುಭವಿಸಿದಂತೆಯೇ ಆಯಿತು. ನಾನೆಲ್ಲಾದರೂ ಮುಂದೆ ಲಕ್ಷದ್ವೀಪಕ್ಕೆ ಹೋದದ್ದಾದರೆ, ಇಲ್ಲಿಗೆ ಹಿಂದೊಮ್ಮೆ ಬಂದಿದ್ದೆನಲ್ಲಾ ಎಂದನಿಸಬಹುದು.
Dear Ashoka Vardhanagariki, Vandemataram. I am appreciated by my relatives, well wishers and friends for my patience to read and tour. I undertake on an average 5,000 K.m. journey, by road and rail. My friends call Desa Thimmari- Alemari. In my 7oth year I am reading “The Framing of India's Constitution” in Six Volumes, edited by Benegal Siva Rao, a Journalist and trade union leader and a member of the Constituent Assembly and represented Mangalore in the First Lok Sabha. With all the humility at my command, I tell them admire the patience of the writer of the book. Still more was the labour of the 308 members,( every one of them was a genius) of the Constituent Assembly. How many tons of papers would have been spent in those three years. Siva Rao's brother Justice Narasingha Rao was the Constitutional Advisor to the Constituent Assembly. He was provided a furnished house and drew Rs.250/- as monthly conveyance allowance. Secretary of the Assembly HVR Ayyangar's remuneration was Rs.4,000/- p.m. If you find time please glance at it. Price at Rs.5,000/-. They are published by Universal Law Publishing Co. Pvt. Ltd., Delhi. They had time, talent and treasure. It is all psychological. My social studies teacher in National High School, Barkur Rajeeva Shetty used to say the Lazy people in this country do not find time to die. So their number is increasing. This long and boring introduction to adore your patience, not only tour, but to write also. Jai Hind, Kalkura, Kurnooll. 518001.
ಪ್ರವಾಸ ಕಥನ ಹೇಗಿರಬೇಕೋ ಹಾಗೆಯೇ ಇರುವುದರಿಂದ (ಹೆಚ್ಚುಕಮ್ಮಿ) ಐದೂ ಭಾಗಗಳನ್ನು ಅನುಕ್ರಮವಾಗಿ ಒಂದೇ ಪಟ್ಟಿನಲ್ಲಿ ಓದಿದೆ. ಲಕ್ಷದ್ವೀಪಕ್ಕೆ ಒಮ್ಮೆ ಹೋಗಬೇಕು ಎಂದು ಆಲೋಚಿಸುತ್ತಿದ್ದೆ. ಹೋಗುವುದೇ ಬೇಡವೇ ಎಂಬುದನ್ನು ತೀರ್ಮಾನಿಸಲು ಅಗತ್ಯವಾದ ಎಲ್ಲ ಮಾಹಿತಿ ಲೇಖನದಲ್ಲಿ ಸಿಕ್ಕಿತು. ಎಂಥ ಅಭಿರುಚಿ ಉಳ್ಳವರಿಗೆ ಈ ಪ್ರವಾಸ ಯುಕ್ತ ಎಂಬ ಕುರಿತು ೧-೨ ವಾಕ್ಯಗಳೊಂದಿಗೆ, ಈ ಪ್ರವಾಸ ಕೈಗೊಳ್ಳ ಬಯಸುವವರಿಗೆ ಉಪಯುಕ್ತವಾಗಬಹುದಾದ ’Dos & Donts' ಪಟ್ಟಿಯೊಂದನ್ನು ಲಗತ್ತಿಸಿದರೆ ಒಳ್ಳೆಯದು.
ಪ್ರವಾಸ ಕಥನ ಹೇಗೆ ಇರಬೇಕೋ ಹಾಗೆಯೇ ಇದ್ದದ್ದರಿಂದ ಐದೂ ಕಂತುಗಳನ್ನು ಒಂದೇ ಪಟ್ಟಿನಲ್ಲಿ ಓದಿದೆ. ಧಾರಾವಾಹಿಗಳನ್ನು ನಾನು ಓದುವುದು ಕಡಿಮೆ). ಲಕ್ಷದ್ವೀಪಕ್ಕೆ ಒಮ್ಮೆ ಹೋಗಬೇಕು ಅಂದುಕೊಳ್ಳುತ್ತಿದ್ದ ನನಗೆ ಉಪಯುಕ್ತ ಮಾಹಿತಿಯನ್ನು ಈ ಲೇಖನ ಒದಗಿಸಿತು. ಈ ಪ್ರವಾಸ ಎಂಥ ಮನೋಧರ್ಮ ಉಳ್ಳವರಿಗೆ ಯುಕ್ತ ಹಾಗೂ ಪ್ರವಾಸಿಗರಿಗೆ ಉಪಯುಕ್ತ್ತವಾಗಬಹುದಾದ ’Dos & Donts' ಕೊನೆಯಲ್ಲಿ ಲಗತ್ತಿಸಿದರೆ ಒಳ್ಳೆಯದು.
nimma pravaasa kathana hosa dhaariyallidhe.
andaman prayanadalli naanuu snarkel baLasalilla…gaajina taLada doaniyalli nodi aaitalla,innenu anta udaafe nanguu ittu.tangi aparna nanna magaLu Jyotsnanna karedoidu adara moolaka torisiyebittaLu….avaribbara khushi eegaloo nenapide