ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ ಭಾಗ – ೩

ಕೋಟ್ಯಂತರ ಸೂಕ್ಷ್ಮಜೀವಿಗಳ OYHS – ಓನ್ ಯುವರ್ ಹೋಂ ಸ್ಕೀಂ, ಹವಳದ್ವೀಪದ ರಚನೆಗಳು. ತೀರಾ ಸರಳವಾಗಿ ಹೇಳುವುದಾದರೆ ಮಣ್ಣಿನಲ್ಲಿ ಗೆದ್ದಲು ಗೂಡಿನ ಹಾಗೇ ಇವು. (ಹೋಲಿಕೆ ಮುಂದುವರಿಸುವುದು ತಪ್ಪು. ಗಾತ್ರ ಮತ್ತು ವ್ಯವಸ್ಥೆಯಲ್ಲಿ ಗೆದ್ದಲು ದೊಡ್ಡದು ಮತ್ತು ತುಂಬಾ ಮುಂದುವರಿದದ್ದು.) ಆಳ ಕಡಿಮೆಯಿರುವ ಸಾಗರದ ನೆಲದಲ್ಲಿ ನೇರ ನೀರಿನಿಂದಲೇ ಸತ್ತ್ವ ಹೀರುತ್ತಾ ಕೆಲವೊಂದು ವರ್ಗಗಳು ಪಾಚಿಯಂಥ ಹರಿತ್ತನ್ನು ಪೋಷಿಸಿ ಸತ್ತ್ವ ಬೆಳೆಸಿಕೊಳ್ಳುತ್ತಾ ಭೂಮವಾಗುವುದೆ ಈ ಹವಳ ಪುರಾಣ. ಬೆಳೆಯುತ್ತ ಬಂದ (ಬೆಳೆಯುತ್ತಲೂ ಇರುವ) ಸಾವಿರಾರು ವರ್ಷಗಳ (ಸುಣ್ಣದಂಶ ಪ್ರಧಾನ) ವಸತಿಸಂಕೀರ್ಣವಿದು. ಗಾತ್ರ ಮತ್ತು ವ್ಯವಸ್ಥೆಯಲ್ಲಿ ಗೆದ್ದಲಿನಂತೆ ನಮ್ಮ ಬರಿಗಣ್ಣಿಗೆ ಈ ಜೀವಿಗಳು ಕಾಣವು ಮತ್ತು ಚಟುವಟಿಕೆ ಗುರುತಿಸುವುದೂ ಕಷ್ಟ. ಆದರೆ ಅವು ಪ್ರಕಟಿಸುವ ಬಣ್ಣ, ಅಲಂಕಾರ ಮತ್ತು ವೈವಿಧ್ಯಗಳಲ್ಲಿ ವಸತಿ ಸಮೂಹದ ಜೀವಂತಿಕೆಯನ್ನು ವಿಜ್ಞಾನಿಗಳು ಗುರುತಿಸುತ್ತಾರೆ. ಲಕ್ಷದ್ವೀಪದ ನೆಲ ಮಣ್ಣಲ್ಲ- ಸಾವಿರಾರು ವರ್ಷಗಳಲ್ಲಿ ಪೇರಿಕೊಂಡ ನಿರ್ವಸಿತ (ಹಾಗಾಗಿ ಬಿಳಿಚಿಕೊಂಡ) ಹವಳದ ದಿಬ್ಬ (Atol). ಅದರ ದಂಡೆಯ ಹಾಸು ಮರಳಲ್ಲ, ಇಲ್ಲೆಲ್ಲೂ ಸಿಗಬಹುದಾದ ಕಲ್ಲು ಕಲ್ಲಲ್ಲ – ಹವಳದ್ದೇ ವಿವಿಧ ಗಾತ್ರ. (ಇಲ್ಲಿನ ಹಳಗಾಲದ ನಾಗರಿಕ ರಚನೆಗಳೆಲ್ಲ ಮುರಿದು ತಂದ ಹವಳದ ಗಿಟ್ಟೆಗಳಲ್ಲೇ ಆಗಿದೆ. ಕುಶಾಲಿಗೆ ಒಂದು ಕಲ್ಲು ಬಿಸಾಡುತ್ತೇನೆಂದರೂ ತರಲು ನೀವು ಕೊಚ್ಚಿಗೇ ಹೋಗಬೇಕು!) ಈ ದಿಬ್ಬಗಳು ಹೆಚ್ಚಾಗಿ ಆಳ ಸಮುದ್ರಕ್ಕೆ ವಿಮುಖವಾಗಿ ಕೋಟೆ ಕಟ್ಟಿದಂತೆ ವಿಕಸಿಸುತ್ತಾ ಹೋಗುತ್ತವೆ. ಈ ಕೋಟೆಯೊಳಗಿನ ತಗ್ಗು ಪ್ರದೇಶಗಳಿಗೆ ಕಡಲು ವ್ಯಾಪಿಸುವುದಿದೆ – ಆ ಸರೋವರವೇ Lagoon. ಸಮುದ್ರದ ಭರತ, ಇಳಿತಗಳಲ್ಲಿ ಲಗೂನಿನ ನೀರು ನವೀಕರಣಗೊಳ್ಳುತ್ತಲೇ ಇರುತ್ತದೆ. ಆದರೆ ನೇರ ಸಮುದ್ರದ ಮಹಾ ಅಲೆ, ಅಪಾಯಕಾರೀ ಸೆಳೆತ ಒಂದೂ ಇಲ್ಲದೆ ತನ್ನದೇ ವೈಶಿಷ್ಟ್ಯಪೂರ್ಣ ಜೀವಿಗಳಿಗೂ ಈಚೆಗೆ (ವಿನಾಶಕಾರಿಗಳಾದ) ವಿಹಾರಿಗಳಿಗೆ ಹೇಳಿಮಾಡಿಸಿದಂತಿರುತ್ತವೆ. ಲಗೂನಿನಲ್ಲಿ ಇಳಿತ ಕಂಡಾಗ ಈಜು ಬಾರದ ಹುಬ್ಬಳ್ಳಿಯಾಂವ ಗೆಳೆಯ/ಳತಿಯಲ್ಲಿ ಅಂದನಂತೆ “ಲಗೂನ ಲಗೂನ ಮುಟ್ಟೂಣು ಬಾ, ಜಳಕಾದ ಆಟಾನ ನಡಸೂಣ ಬಾ.”

ಕಲ್ಪೆನಿಗೆ ಸುಮಾರು ಅರ್ಧ ಗಂಟೆ ದೂರದಲ್ಲೇ ನಮ್ಮ ಹಡಗು ತಂಗಿತ್ತು. ಒಮ್ಮೆಗೆ ನಲ್ವತೈವತ್ತು ಮಂದಿಯನ್ನು ಒಯ್ಯಬಲ್ಲ ಊರಿನ ಮೋಟಾರ್ ಬೋಟುಗಳು ಬೆಳಗ್ಗಿನಿಂದಲೇ ಓಡಾಡಿ ಕಂತುಗಳಲ್ಲಿ ಮೊದಲು ಕೇವಲ ಪ್ರಯಾಣಿಕರನ್ನು, ಸರಕುಗಳನ್ನು ವಿನಿಮಯ ಮಾಡುತ್ತಿದ್ದವು. ಅಷ್ಟರೊಳಗೆ ನಾವು (ಪ್ರವಾಸಿಗಳು) ಪ್ರಾತ:ಸ್ಮರಣೀಯವಾದ್ದೆಲ್ಲವನ್ನು ಮುಗಿಸಿ, ಮೈಕಿನಲ್ಲಿ ಕರೆಬಂದಾಗ ಕನಿಷ್ಠಾವಶ್ಯಕತೆಗಳನ್ನು ಮಾತ್ರ ಹಿಡಿದುಕೊಂಡು ಕೆಳ ಅಂತಸ್ತಿಗೆ ಇಳಿದೆವು, ಸರದಿ ಬಂದಾಗ ದೋಣಿಗೂ ಇಳಿದೆವು. ಅಲ್ಲಲ್ಲ, ನಾವಿಕರು ನಮ್ಮ ಅನುಭವ, ಪ್ರಾಯ, ದೈಹಿಕ ತಾಕತ್ತುಗಳನ್ನು ಅನುಲಕ್ಷಿಸದೆ ಗೌರವಪೂರ್ಣವಾಗಿ ಪ್ರತಿಯೊಬ್ಬರ ರಟ್ಟೆ ಹಿಡಿದು ಎಳೆದುಹಾಕಿಕೊಂಡರು! ದಿಬ್ಬಣ ಎದುರುಗೊಳ್ಳುವ ಅಲಂಕಾರದ ಅತ್ತೆಮ್ಮನಂತೆ ಹಳೇ ಟಯರುಗಳನ್ನು ಸುತ್ತ ನೇತುಬಿಟ್ಟುಕೊಂಡು (ಅಲಂಕಾರ? ಅಲ್ಲ, ಹಡಗಿಗೋ ಧಕ್ಕೆಗೋ ಅಲೆಯೊಲೆತದಲ್ಲಿ ಒರಸುವಾಗ ಪೆಟ್ಟಾಗದಂತೆ), ಸೀಮೆಣ್ಣೆ ಹೊಗೆ (ಗಂಧ, ಅಗರುಬತ್ತಿ?) ಧಾರಾಳ ಕಾರುತ್ತಾ ಕಿವಿಗಡಚಿಕ್ಕುವಂತೆ (ವಾದ್ಯಮೇಳ) ಗೊಟಗೊಟಾ ಸದ್ದು ಮಾಡುತ್ತಾ ಬೋಟು ಹೊರಟಿತು. ಸ್ಥಿರ-ತೇಲು ನಿಶಾನೆಗಳನ್ನು ಕೊಟ್ಟು (ತಳಿರು ತೋರಣ!) ಆಳ ಹೆಚ್ಚಿರುವ ಜಾಡು ಗುರುತಿಸಿದ್ದನ್ನು ಅನುಸರಿಸುತ್ತಾ ಅಲೆಯಲೆಯಲ್ಲೂ ಸಂಭ್ರಮಿಸುತ್ತ ದಂಡೆ ಸಮೀಪಿಸಿದೆವು. ದಕ್ಷಿಣೋತ್ತರವಾಗಿ ನೇರಾನೇರ ಚಾಚಿಕೊಂಡ ಬಿಳಿಯಂಚಿನ, ಮಟ್ಟಸ ತೆಂಗಿನ ತೋಪೇ ಕಲ್ಪೆನಿ. ಸಹಜವಾಗಿ ದೋಣಿಗಟ್ಟೆಗೆ ಪ್ರಾಕೃತಿಕ ಏರುಪೇರುಗಳಿಂದ ರಕ್ಷಣೆ ಕಲ್ಪಿಸಲು ಭಾರೀ ಕಾಂಕ್ರೀಟ್ ಬ್ಲಾಕುಗಳನ್ನು ನೀರಿನಲ್ಲಿ ಪೇರಿಸಿ ಮರೆ ಮಾಡಿದ್ದರು. ಅದರ ಒಳಮೈಯಲ್ಲಿದ್ದ ಧಕ್ಕೆಯಲ್ಲಿ ನಮ್ಮನ್ನು ಇಳಿಸಿದರು (ಮತ್ತೆ ತೋಳಿಗೆ ಕೈ ಹಾಕಿ ಎಳ್ದು ಹಾಕಿದ್ರು ಅನ್ನಿ).

ಊದ್ದಕ್ಕೆ ಸೇತುವೆಯಲ್ಲಿ ನಡೆದು, ನಮ್ಮನ್ನೇ ಕಾದು ನಿಂತಿದ್ದ ‘ಸಾರೋಟು’ (ಸರಕು ಸಾಗಣೆಯ ಪುಟ್ಟ ಟೆಂಪೋಗಳಲ್ಲಿ ಎರಡೆರಡು ಬೆಂಚ್ ಕೂರಿಸಿದ್ದರು. ಟೆಂಪೋ ಎತ್ತರ ಜಾಸ್ತಿ ಎನ್ನುವಲ್ಲಿ ಪುಟ್ಟ ಏಣಿಗಳೂ ಇತ್ತು) ಏರಿದೆವು. ಮತ್ತೆ ಸ್ವಲ್ಪ ಕೆಳಶ್ರುತಿಯಲ್ಲಿ ದೋಣಿಯದ್ದೇ ನಾದಸುಖದೊಡನೆ (?) ಫಟ್ಫಟಿಗಳು ಊರಿನ ಇನ್ನೊಂದೇ ಕೊನೆಗೆ ಓಟಕಿತ್ತವು. ಮಂಗಳೂರಿನಲ್ಲಿ ಬಸ್ಸು ಲಾರಿಗಳ ಮಟ್ಟದಲ್ಲಿ ದ್ವಿಪಥ, ಚತುಷ್ಪಥಗಳ ಬಗ್ಗೆ ಮೆಗಾ ಸೀರಿಯಲ್ಲ್ ನಡೆಸುತ್ತಿದ್ದರೆ ಇಲ್ಲಿ ಆಟೋಟೆಂಪೋಗಳಿಗೆ ಕಷ್ಟದಲ್ಲಿ ದ್ವಿಪಥವನ್ನು ಕಾಂಕ್ರೀಟ್ ಮಾಡಿದ್ದಾರೆ. ವಿಶೇಷ ಎತ್ತರಿಸಿಯೂ ಇಲ್ಲ, ಚರಂಡಿ, ಪುಟ್ಟಪಥಗಳಂತೂ ಕೇಳಲೇಬೇಡಿ. ಎಲ್ಲೋ ಒಂದೆರಡು ಬೈಕ್ ಎದುರಾದವು. ಒಮ್ಮೆ ಲಡಕೋಸಿ ಜೀಪೊಂದು ಎದುರಾದಾಗ ಆತ ಸ್ವಲ್ಪ ಹಿಂದೆ ಸರಿದು ಕಾಂಕ್ರೀಟ್ ಬಿಟ್ಟು ದಾರಿಕೊಡಬೇಕಾಯ್ತು. ತೆಂಗಿನ ಮರಗಳು ಕೆಲವೆಡೆ (ಅಶೋಕ ನೆಟ್ಟ) ಸಾಲುಮರಗಳಂತೆ ಇದ್ದರೂ ಒಂದೊಂದು ಹೀಗೆ ದಾರಿಗೆ ಮೈಚಾಚಿದ್ದೂ ದಾರಿಯೇ ಓರೆ ಹೋಗುವಂತೆ ನೋಡಿಕೊಂಡದ್ದೂ ಧಾರಾಳ ಇತ್ತು. ಚಾಲಕರು ಆ ದಾರಿಯಲ್ಲೇ ಪಳಗಿದವರಾದರೂ ನಾವು ಕುಳಿತಲ್ಲೇ ಅಲ್ಲಿ ಇಲ್ಲಿ (ಅನಾವಶ್ಯಕ) ತಲೆ ಬಗ್ಗಿಸಿ, ಮೈ ಡೊಂಕಿಸಿ ‘ಬಚಾವ್’ ಆದ ಉಸಿರು ಬಿಟ್ಟದ್ದುಂಟು.

ದ್ವೀಪದ ಒಂದು ಕೊನೆ ಮುಟ್ಟಿದಲ್ಲಿ ಸರಕಾರ ಒಂದು ಸಣ್ಣ ಸಾರ್ವಜನಿಕ ವಸತಿ ವ್ಯವಸ್ಥೆ ಮಾಡಿತ್ತು (ಪ್ರವಾಸೀ ಬಂಗ್ಲೆ). ಆದರೆ ನೂರರ ಸಂಖ್ಯೆಯಲ್ಲಿ ಬಂದ ನಮಗಾಗಿ ಅಲ್ಲೇ ಮರಳ ಅಂಗಳದಲ್ಲಿ ತೆಂಗಿನ ಗರಿಗಳ ಚಪ್ಪರ ಹಾಕಿ ಪ್ಲ್ಯಾಸ್ಟಿಕ್ ಮೇಜು, ಕುರ್ಚಿಗಳನ್ನು ಹೊಂದಿಸಿ, ಮುಖಕ್ಕೊಂದಿಷ್ಟು ನಗೆ, ಬಾಯಲ್ಲೊಂದಿಷ್ಟು ಗುಡ್ಮಾರ್ನಿಂಗೂ ತುಂಬಿಕೊಂಡು ವೆಲ್ಕಮ್ಮಿದರು. ಎಲ್ಲರಿಗೂ ಕೆತ್ತಿದ ಬೊಂಡ (ಎಳನೀರು) ಕೊಟ್ಟು ಔಪಚಾರಿಕತೆ ಮುಗಿಸಿಕೊಂಡರು. ಅಲ್ಲೇ ಚಪ್ಪರದಾಚೆಗೆ ಗೊಸರಿನಂಥ ನೆಲದಲ್ಲಿ ಸಣ್ಣ ದೋಣಿಯೊಂದು ತಂಗಿತ್ತು. ಅದರ ಇನ್ನೊಂದು ತುದಿಯಿಂದ ತೊಡಗಿದಂತೆ ನೀರ ನೀಲಿಮೆ ಬಲು ದೂರದ ತನಕ ತಣ್ಣಗೆ ಪಸರಿಸಿತ್ತು. ಮೂವತ್ತಡಿ ಆಚೆಗೊಂದು ಮರಳದಿಬ್ಬ – ಬಹುಶಃ ಇಳಿತದ ಕಾಲದಲ್ಲಿ ಮಾತ್ರ ಪ್ರಕಟವಾಗುತ್ತದೆ. ಸುಮಾರು ಇನ್ನೂರು ಅಡಿಯಾಚೆಗೊಂದು – ತಿಲಕಂ, ಅಲ್ಲಿಂದ ಮತ್ತಷ್ಟೇ ದೂರದಲ್ಲಿ ಇನ್ನೊಂದೇ ದಿಕ್ಕಿನಲ್ಲಿ ಇನ್ನೊಂದು – ಪಿಟ್ಟಿ, ಪುಟ್ಟ ದ್ವೀಪಗಳೇ ಕಾಣುತ್ತಿದ್ದವು. ಅವೆರಡರಲ್ಲೂ ತೆಂಗು, ಕಾಂಡ್ಲಾ ಕತ್ತಾಳೆಯಂತ ಹಸಿರು ಕಾಣುತ್ತಿದ್ದರೂ ಜನವಸತಿ ಇಲ್ಲವೆಂದು ತಿಳಿದುಬಂತು. ನಮ್ಮ ನೆಲ ಎಡಕ್ಕೆ ಅರ್ಧಚಂದ್ರಾಕಾರದಲ್ಲಿ ವಿಸ್ತರಿಸುತ್ತಾ ಹೋಗಿ ಬಲುದೊಡ್ಡ ಸರೋವರವನ್ನೇ (ಲಗೂನ್) ರೂಪಿಸಿತ್ತು. ಬಲು ಆಚೆ ದೂರದಲ್ಲಿ ನಿಜ ಸಮುದ್ರ (ನೀರಮೇಲೆ ಪ್ರಕಟವಾಗದ) ಹವಳದ ಗೋಡೆಗಳಿಗೆ ಬಡಿದು ನೊರೆಗಾರುತ್ತಾ ಬುಸುಗುಡುವುದು ಬಹಳ ಕುತೂಹಲಕಾರಿಯಾಗಿ ಕಾಣುತ್ತಿತ್ತು. ರಭಸ ಮತ್ತು ಒಲೆತಗಳನ್ನು ಅಲ್ಲಿ ಕಳೆದುಕೊಂಡ ನೀರಷ್ಟೇ ಲಗೂನಿಗೆ ಬರುತ್ತಿದ್ದುದು ನಮ್ಮಲ್ಲಿನ ಹೆಳವನಿಗೂ ಹಾರೀಜುಹೊಡೆಯುವ (ಪಂಗುಂ ಲಂಘಯಾತೇ. . . ) ಹುಮ್ಮಸ್ಸು ತುಂಬಿತು.

ಆಗ ಇನ್ನೂ ಸಮುದ್ರ ಇಳಿತದಲ್ಲಿತ್ತು. ಅದನ್ನು ಹೇಳುವಷ್ಟೂ ನಮ್ಮ ಆತಿಥೇಯರಿಗೆ ಮಾತಿನ ಚಾಲಾಕಿರಲಿಲ್ಲ. ಮತ್ತೆ ಅಲ್ಲಿಲ್ಲದ್ದನ್ನು ಇದೆಯೆಂಬ ರೀತಿಯಲ್ಲಿ ಬಿಂಬಿಸಲು ಮ್ಯಾನೇಜ್ಮೆಂಟ್ ಮಂತ್ರವೂ ಸಿದ್ಧಿಸಿರಲಿಲ್ಲ. ನಮ್ಮನ್ನು ಸುಮ್ಮನೆ ಬಿಟ್ಟಿದ್ದರು. ಚಪ್ಪರದ ಸಂಕೇತವನ್ನು ಅರ್ಥ ಮಾಡಿಕೊಳ್ಳದ ಉರಿಬಿಸಿಲು, ಕಣ್ಣುಕೋರೈಸುವ ಬಿಳಿಮರಳು, ಎಲ್ಲಕ್ಕೂ ಮಿಗಿಲಾಗಿ ಆಳಕ್ಕೆ ತಕ್ಕಂತೆ ನೀಲಿಯ ವಿವಿಧ ಛಾಯೆಗಳನ್ನು ಕಾಣಿಸುತ್ತ ನಲ್ಮೆಯಿಂದ ಬಳಕುವ ಅಪಾರವಾರಿಯನ್ನು ನೋಡುತ್ತ ಕೂರುವುದುಂಟೇ. ಬಲುಬೇಗನೆ ಎಲ್ಲರೂ ನೀರಿಗಿಳಿಯಲು ಸಜ್ಜಾದರು. ಮುಖ್ಯ ಕಟ್ಟಡದಲ್ಲಿ ಗಂಡಸು ಹೆಂಗಸರಿಗೆ ಎರಡೆರಡು ಸಶೌಚ ಸ್ನಾನದ ಮನೆಗಳನ್ನು ಕಟ್ಟಿದ್ದರು. ರಚನೆ ಎಷ್ಟೇ ಒಡ್ಡೊಡ್ಡಾಗಿದ್ದರೂ kings, queens ಎಂಬ ನಾಮಫಲಕಗಳು ಉದ್ದಿಮೆಯ ಸಂಸ್ಕೃತಿಗನುಗುಣವಾಗಿತ್ತು. ಗಿರಾಕಿ ದೇವೋಭವ! ಹಡಗಿನದೇ ಭದ್ರತಾ ಭರವಸೆ ಇಲ್ಲೂ ಇದ್ದದ್ದರಿಂದ ನಾವು ನಿರ್ಯೋಚನೆಯಿಂದ ಅಲ್ಲಲ್ಲೆ ಕುರ್ಚಿ ಮೇಜುಗಳ ಮೇಲೆ ನಮ್ಮ ಅಮೂಲ್ಯ ವಸ್ತುಗಳನ್ನು (ವಾಚು, ಕ್ಯಾಮರಾ, ಮೊಬೈಲ್, ಹಣದಚೀಲ ಸಹಿತ ಉಡುಗೆ ತೊಡುಗೆಗಳೆಲ್ಲಾ) ಬಿಟ್ಟು, ಅವರವರ ಅನುಕೂಲದ ಈಜುಡುಗೆಗೆ ಬದಲಿಕೊಂಡೆವು. ವ್ಯವಸ್ಥಾಪಕರು ಎಲ್ಲರಿಗೂ ಲೈಫ್ ಬೆಲ್ಟ್ ವಿತರಿಸಿ, ಆಕಸ್ಮಿಕಗಳಾಗದಂತೆ ಅನೌಪಚಾರಿಕವಾಗಿ ಕಣ್ಗಾವಲು ಇಟ್ಟಿದ್ದರು. ಕನಿಷ್ಠ ಎಣ್ಣೆಮಡ್ಡಿಯೋ ತಳ ಒಟ್ಟೆಬಿದ್ದ ಬೂಟೋ ಅಲಂಕರಿಸುವ ಮಂಗಳೂರ ಕಡಲ ಕಿನಾರೆಯನ್ನು ಮರೆಸುವಂಥ ಶುದ್ಧ ಪ್ರಾಕೃತಿಕ ಸ್ಥಿತಿ ಇಲ್ಲಿತ್ತು. ನಗರದ ಕಪ್ಪುಕೊಳಚೆ ದುರ್ವಾಸನೆ ಪಸರಿಸುತ್ತ ಕರಡುವ ಮಹಾನಗರದ (ಮಹಾನರಕದ?) ಪರಿಸರ ಇಲ್ಲಿನದಲ್ಲ. ಕಿರುತೆರೆ ಬಡಿತಕ್ಕೆ ಹಾಯೆಂದು ಮುಖವೊಡ್ಡಿದಾಗ ಯಾವುದೋ ಕೊಳಕು ಬಟ್ಟೆ ಸುತ್ತಿಕೊಂಡ ಅಸಹ್ಯ ಇಲ್ಲಿ ನೆನಪಿಗೂ ಭಾರ. ಸ್ಫಟಿಕ ನಿರ್ಮಲ ನೀಲಿಮೆಯ ತಳದಲ್ಲಿ ಉದ್ದುದ್ದ ಎಸಳಿನ ಜಲಸಸ್ಯಗಳು ಮೃದುವಾಗಿ ಬಳಕುತ್ತ ಆಕರ್ಷಿಸುವಾಗ ದೂರ ಉಳಿದವರಿಲ್ಲ. ಹಾಗೆಂದು ಸರಾಗ ಕಾಲು ಹಾಕುವಂತೆಯೂ ಇರಲಿಲ್ಲ. ಹವಳದ ಹರಕುಗಳು (ನಮ್ಮ ಮುಷ್ಠಿಯಿಂದ ತಲೆಗಾತ್ರದವರೆಗೂ ಇರುತ್ತಿತ್ತು), ಪುಟ್ಟ ದಿಬ್ಬಗಳು ಪಾದವನ್ನು ಘಾಸಿ ಮಾಡುವ ಅಪಾಯವಿತ್ತು. ಹೆಚ್ಚುಕಡಿಮೆ ಎಲ್ಲರೂ (ನಮಗೆ ಅಂಡಮಾನ್ ಪಾಠ ಇತ್ತು!) ಪಟ್ಟಿಬಿಗಿದ ರಬ್ಬರ್ರೋ ಫೋಮಿನದೋ ಚಪ್ಪಲಿಗಳನ್ನು ಕಳಚದೇ ಧುಮುಕಿದರು ವಾರಿಧಿಗೆ! ಹತ್ತು ಹದಿನೈದಡಿಯವರೆಗೆ ಮೊಣಕಾಲು, ಸೊಂಟದವರೆಗಷ್ಟೇ ನೀರು. ಮತ್ತಿನದು ಧೈರ್ಯದ್ದಲ್ಲ. ಮೇಲ್ಮೈಯ ಏಕವರ್ಣ ಮತ್ತು ಮೃದು ತರಂಗಗಳಿಂದ ಎಲ್ಲ ಚಂದ ಎಂಬ ಭ್ರಮೆ ಹುಟ್ಟುತ್ತದೆ. ಆದರೆ ತಳದ ತಗ್ಗು ತೆಮರುಗಳಲ್ಲಿ ಎಡವಿ, ಕಲ್ಲು, ದಿಬ್ಬ ಹೆಟ್ಟಿ ನೀರಿನ ರುಚಿ ನೋಡಿದವರೇ ಎಲ್ಲ! ಒಟ್ಟು ತಂಡದಲ್ಲಿ ಭಾರೀ ಈಜು ಸಾಹಸಿಗಳ್ಯಾರೂ ಇದ್ದಂತಿರಲಿಲ್ಲ. ಆದರೆ ಕಾಲಸರಿದಂತೆ ಹಲವರು ಎರಡಾಳು ಆಳದ ಪುಟ್ಟ ಕಂದರವನ್ನೂ ಈಜಿ ಸಮೀಪದ ಮರಳದಿಬ್ಬದವರೆಗೂ ವ್ಯಾಪಿಸಿಕೊಂಡರು.

ಸ್ವಲ್ಪ ಹೊತ್ತುಗಳೆದು ಔಟ್ಬೋರ್ಡ್ ಇಂಜಿನ್ನಿನ ದೋಣಿಯೊಂದು ಬಂದು ನಮ್ಮನ್ನು ಕಂತುಗಳಲ್ಲಿ ತಿಲಕಂಗೆ ಒಯ್ಯಲು ತೊಡಗಿತು. ಎರಡನೇ ಕಂತಿನ ನಮ್ಮಾರೇಳು ಜನಕ್ಕೆ ಸಿಕ್ಕಿದ್ದು ಜಲ್ಲೆ ಹಾಕುವ ಒಂದು ದೋಣಿ. ಚಪ್ಪಟೆ ತಳದ ಮೊದಲ ದೋಣಿ ಅನುಸರಿಸಿದ ಜಾಡಿನಲ್ಲಿ ನಮ್ಮದಕ್ಕೆ ಆಳ ಸಾಲದೇ ಅಂಬಿಗ ನೇರ ದ್ವೀಪ ಸೇರುವ ಯತ್ನ ಮಾಡಿದ. ಆದರೆ ಇನ್ನೂ ತಿಲಕಂ ಮೂವತ್ತು-ನಲವತ್ತು ಅಡಿ ದೂರವಿರುವಲ್ಲೇ ಬರಿಯ ಎರಡೇ ಅಡಿ ಆಳದ ನೀರನಲ್ಲಿ ಹವಳದ ಗುಂಡುಗಳು ಹೆಟ್ಟತೊಡಗಿದಾಗ ಅಂಬಿಗ ಸಣ್ಣ ಆತಂಕ ತೋರಿದ. ನಾವು ಮೂರು ನಾಲ್ಕು ಮಂದಿ ದೊಡ್ಡವರು ನೀರಿಗಿಳಿದು ನಡೆಯತೊಡಗಿದೆವು. ಪ್ರಸನ್ನನ ತಂಗಿ ಪ್ರತಿಭಳ ಸಣ್ಣ ಮಗಳು – ಚೈತನ್ಯ ಉರುಫ್ ಚೇತು (ನಾಲ್ಕನೇ ತರಗತಿ) ನೋಡಲು ಟೊಮ್ಯಾಟೋ ಆದರೆ ಉಲ್ಲಾಸದ ಬುಗ್ಗೆ. ದೋಣಿಯ ತಳ ಡೊಕ್, ಡ್ರುಂಕ್ ಎಂದು ಕಲ್ಲಿಗುಜ್ಜುವಾಗ ಹೌಹಾರಿದ್ದ ಚೇತು, ನೀರಿಗಿಳಿಸಿದಾಗ ಕುಶಿಯಲ್ಲಿ ಕುಪ್ಪಳಿಸಿದ್ದಳು. ಹವಳದ ಗಿಟ್ಟೆಗಳ ನಡುವೆ, ಜಲಸಸ್ಯಗಳ ಲಾಸ್ಯದ ತೆರವಿನಲ್ಲಿ ಸುಮಾರು ಎಂಟಿಂಚು ಉದ್ದಕ್ಕೆ ಎಂಥದ್ದೋ ಕಪ್ಪಿನದು, ಕೊಳೆತ ಹ್ಯಾಂಬುರ್ಗರಿನಂತದ್ದು ಅವಳ ಕಣ್ಣಿಗೆ ಬಿತ್ತು. ನಮ್ಮ ಮಾರ್ಗದರ್ಶಿ ಅಕ್ಬರ್ (ನಾನೀತನ ಹೆಸರು ಕೇಳಿದ್ದೇ “ಅಕ್ಬರ್ ದಿ ಗ್ರೇಟ್! ಮೈ ಹೂಂ ಸಾಮ್ರಾಟ್ ಅಶೋಕ್! ಹಾತ್ ಮಿಲಾವ್” ಎಂದಾಗ ಭಾರೀ ಕುಶಿಪಟ್ಟಿದ್ದ. ಕಲ್ಪೆನಿಯ ಮೂಲವಾಸಿಯಾದ ಅಕ್ಬರ್ ಎಸ್ಸೆಸ್ಸೆಲ್ಸಿಯವರೆಗೆ ಓದಿದವನಾದ್ದರಿಂದ ಸ್ವಲ್ಪ ಇತಿಹಾಸ ಜ್ಞಾನವಿತ್ತು) ಅದನ್ನು ಕೈಯಲ್ಲಿ ಎತ್ತಿ (ಸಜೀವಿ, ಪ್ರಾಣಿವರ್ಗದ್ದು. ಮನುಷ್ಯರ ಲೆಕ್ಕಕ್ಕೆ ನಿರುಪದ್ರವಿ) ಬ್ಲ್ಯಾಕ್ ಸೀಕುಕುಂಬರ್ ಎಂದು ಪರಿಚಯಿಸಿದ. ಆದರೆ ಈ ಕಡಲಸೌತೆ ಕಂಡು ಚೇತು ಕಂಗಾಲು! ಮತ್ತೆ ಮುಂದಿನ ಮೂರೂ ದಿನ ನಾನು ಅವಳನ್ನು ಚೇತು, ಚೈತನ್ಯ ಎಂದು ಕರೆದದ್ದಕ್ಕಿಂತಲೂ ಹೆಚ್ಚಿಗೆ ಸೀಕುಕುಂಬರ್, ಕುಕ್ಕುಬರಲಾ ಎಂದೇ ಕರೆದಿದ್ದೆ.

ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲಾಳವೇ ನೀರು ಎಂಬ ಗಾದೆಯನ್ನು ಆ ಹೊತ್ತಿಗೆ ತಿಲಕಂಗೆ ಅನ್ವಯಿಸಿದ್ದೇ ಆದರೆ ಜಗತ್ತಿನಲ್ಲಿ ಪುಣ್ಯಾತ್ಮರಿಲ್ಲ. ಅಲ್ಲಿ ನಡೆದಷ್ಟೂ ಮುಗಿಯದ ಮೊಣಕಾಲಾಳದ ಸಮುದ್ರ ವ್ಯಾಪಿಸಿತ್ತು. ಅಲ್ಲಿ ದಂಡೆಯಲ್ಲಿ ಅಸಂಖ್ಯ ಲೈಫ್ ಜಾಕೆಟ್‌ಗಳು, ಸ್ನಾರ್ಕೆಲ್‌ಗಳೂ ನಾಲ್ಕೈದು ಕಯಾಕ್ ಎಂದೆ ಪ್ರಸಿದ್ಧವಾದ ಪ್ಲ್ಯಾಸ್ಟಿಕ್ ದೋಣಿಗಳೂ ನಮ್ಮ ಇಚ್ಛಾನುಸಾರ ಬಳಕೆಗೆ ಒದಗುವಂತೆ ಬಿದ್ದಿದ್ದವು. ಯಾರಿಗೂ ಯಾವುದಕ್ಕೂ ಒದಗುವಂತೆ ನಾಲ್ಕೆಂಟು ಸಹಾಯಕರನ್ನೂ ಇಲಾಖೆ ಒದಗಿಸಿತ್ತು. ನಾವು ಲಕ್ಷದ್ವೀಪಕ್ಕೆ ಹೋಗುತ್ತೇವೆ ಎಂದು ಕೇಳಿದ ಕೂಡಲೇ ಗೆಳೆಯ ನಿರೇನ್ ಹಾಗೂ ರೋಹಿತ್ (ಲೈಫ್ ಜಾಕೆಟ್ಟೂ ಕೊಟ್ಟಿದ್ದ) ತಮ್ಮ ಸ್ವಂತದ ಸ್ನಾರ್ಕೆಲ್ ನಮಗೆ ಕೊಟ್ಟು “ನೀವಿಬ್ಬರಾದರೂ ಯಾರ ಹಂಗಿಲ್ಲದೆ ಧಾರಾಳ ಕಡಲ ತಳ ವೀಕ್ಷಿಸಿ” ಎಂದಿದ್ದದ್ದು ನೆನಪಿತ್ತು. ಮತ್ತೆ ನಮ್ಮ ಅಂಡಮಾನ್ ನೆನಪಿನಲ್ಲಿ ನಾವಿಬ್ಬರು ಇತರರಿಗೆ ಪರೋಕ್ಷ ಗುರುಗಳೂ ಆಗುವುದರೊಡನೆ ಧಾರಾಳ ಸ್ನಾರ್ಕೆಲ್ಲಿಂಗ್ ಮಾಡಿದೆವು. (ಇದರ ಕುರಿತು ವಿವರಗಳಿಗೆ ಇಲ್ಲೇ ೧೯-೩-೨೦೦೯ರಷ್ಟು ಹಿಂದೆಯೇ ನಾನು ಬರೆದಿರುವ ಅಂಡಮಾನ್ ಯಾತ್ರೆಯ ಮೂರನೇ ಭಾಗ ನೋಡಿ.  ತಿಲಕಂನ ಲಗೂನಿನಲ್ಲಿ ಅಲ್ಲಲ್ಲಿ ನೆಲ ಸ್ವಲ್ಪ ಹೆಚ್ಚು ತಗ್ಗಿದ್ದದ್ದೂ ಮೂಲೆ ಮೊಡಕುಗಳ ಸ್ಥಿತಿಯಿದ್ದದ್ದೂ ಇತ್ತು. ಅಂಥಲ್ಲಿ ವಿರಳವಾಗಿ ಕಡಲ ಸಸ್ಯವೂ ಪ್ರವಾಸಿಗಳ ತುಳಿತಕ್ಕೆ ಸಿಗದ ವಿಶಿಷ್ಟ ಹವಳದ ರಚನೆಗಳೂ ನೋಡಲು ಸಿಕ್ಕುತ್ತಿದ್ದವು. ಈಜಿನ ಅನುಭವ ಅಥವಾ ಲೈಫ್ ಜಾಕೆಟ್ಟಿನ ತಾಕತ್ತಿನ ಅರಿವಿದ್ದವರು ನೀರಿನ ಮೇಲೆ ಮುಖಾಡೆ ಬಿದ್ದು ಬರಿದೆ ತೇಲುತ್ತಲೋ ಆಲಸಿಗಳಂತೆ ಸಣ್ಣದಾಗಿ ನೀರ ಬಗಿಯುತ್ತಾ ಮುಂದುವರಿಯುವುದಿತ್ತು. ಹಲವರು ಕೇವಲ ಸೊಂಟ ಡೊಂಕಿಸಿ ಅರೆಮುಖ ಮಾತ್ರ ಮುಳುಗಿಸಿ ವೀಕ್ಷಣೆ ನಡೆಸಿದ್ದೂ ಇತ್ತು.

ಬೊಟ್ಟಂಗಿ ಧರಿಸಿದ ಒಬ್ಬ ಕರಿಯ ಕಲ್ಲ ಅರೆಯಿಂದ ಹಗುರವಾಗಿ ಸ್ವಲ್ಪ ಮೇಲೇರಿ ಬಂದ. ಹುಲ್ಲ ಎಸಳೊಂದು ಹೀಗೆ ಬಳುಕಿ ಶ್ಯಾಳೆ ಮಾಡಿದರೂ ಸೊಪ್ಪು ಹಾಕದೇ ಮುಂದುವರಿದ. ಧಿಗ್ಗನೆ ಆರು ಪುಟ್ಟ ಮೀನ ತುಕಡಿಯೊಂದು ಎಲ್ಲೋ ತುರ್ತು ಕಾರ್ಯವಿದ್ದವರಂತೆ ಧಾವಿಸಿ ಬಂತು. ನಮ್ಮ ಬೊಟ್ಟಂಗಿ ಕರಿಯ ಒಮ್ಮೆ ಕುಂಡೆ ಕುಸುಕಿ ನೋಡಿ, “ಈ ಮಕ್ಕಳೂ…” ಎಂದು ಉದ್ಗರಿಸಿದವರಂತೆ ಬಾಯಿ ಕಳೆದು ಮತ್ತೆ ಇನ್ನೊಂದೇ ಕಲ್ಲ ಅರೆಯ ಶೋಧಕ್ಕೆ ಹೊರಟ. ಅಲ್ಲೊಬ್ಬಳು ಚಿತ್ರಾಂಗಿ, ಬಿನ್ನಾಣಗಿತ್ತಿ, ಚಂಚಲತೆಯೇ ನೀಂ ಪೆಣ್ಣಲ್ತೇ ಎನ್ನುವಂತೆ ಹಾಗೂ ಹೀಗೂ ನಲಿದು ಬಂದಳು. ಬೊಟ್ಟಂಗಿ ಕರಿಯನನ್ನು ಕಂಡೂ ಕಾಣದಂತೆ ನಸುಗೆಂಪಿನ ಹವಳದ ಕೋಲಿಗೆ ಮುತ್ತಿನ ಮಾಲೆ ತೊಡಿಸಿದಳು. ಕವಿಹೃದಯ ಆಹಾ ಎನ್ನಲು ಹೋಗಿ ಮೂಗಲ್ಲಿ ನೀರೆಳೆದು ನೆತ್ತಿಗೇರಿದಾಗ ತಡಬಡಾಯಿಸಿದಾಗ, ಓ ರಸಭಂಗ!

ದಪ್ಪ ಪ್ಲ್ಯಾಸ್ಟಿಕ್‌ನಲ್ಲಿ ತಳದಲ್ಲಿ ಮಾತ್ರ ಸಪುರ ದೋಣಿಯಾಕಾರವಿರುವಂತೆ ರೂಪಿಸಿದ ಬಲವಾದ ಗುಳ್ಳೆ – ಕಯಾಕ್. ಇವುಗಳ ಉದ್ದವನ್ನು ನಿರ್ಮಾಣಕಾಲದಲ್ಲೇ ಒಬ್ಬರಿಗೋ ಹೆಚ್ಚು ಮಂದಿಗೋ ಎಂದು ನಿಷ್ಕರ್ಷಿಸಿ ಅಚ್ಚಿಗೆ ಹೊಯ್ಯುತ್ತಾರೆ. ಮತ್ತು ಒಬ್ಬನೋ ಹೆಚ್ಚು ಮಂದಿಯೋ ಕಾಲು ಚಾಚಿ, ಅಂಡೂರಿ ಕೂರುವಂತೆ ಸಣ್ಣ ತಗ್ಗುಗಳನ್ನಷ್ಟೇ ಮಾಡಿರುತ್ತಾರೆ. ಆ ತಗ್ಗುಗಳಲ್ಲಿ ನೀರು ತುಂಬಿದರೂ, ಕಯಾಕ್ ಮಗುಚಿ ಬಿದ್ದರೂ ಮುಳುಗುವ ಹೆದರಿಕೆಯಿಲ್ಲ. ನಾವಿಕರಾಗುವ ಆರಂಭಿಕರಿಗಂತೂ ಕಯಾಕ್ ತುಂಬಾ ಕ್ಷಮಾಶಾಲೀ ನಾವೆ. ಅವುಗಳೊಡನೇ ಬಿದ್ದಿದ್ದ, ಎರಡೂ ಕೊಡಿಗಳಲ್ಲಿ ನೀರು ತೋಡುವ ಅನುಕೂಲವಿರುವ ಹಗುರ ಮರದ ಹುಟ್ಟುಗಳು ಹಿಡಿದುಕೊಂಡು ಎಲ್ಲರೂ ನುಗ್ಗಿದ್ದೇ ನುಗ್ಗಿದ್ದು. ನೀರಿನಲ್ಲಿ ತೂಗಾಡುವ ದೋಣಿಗೆ ಕಾಲು ಮುಂದಿಟ್ಟರೆ ಅತ್ತ ನೂಕಿದಂತಾಗಿ ಅಂಡಿನಡಿಯಿಂದ ಜಾರಿತು. ಅಂಡು ಮೊದಲೇರಿಸುವಾಂದ್ರೆ ಎತ್ತರ ಸ್ವಲ್ಪ ಹೆಚ್ಚಾಗಿ ನಿಲುಕದು. ಬೋಳು ದೋಣಿಮೈ ಹಿಡಿದು, ಸ್ವಲ್ಪ ಕುಪ್ಪಳಿಸಿ ಇನ್ನೇನು ಏರಿದೆ ಎನ್ನುವಾಗ ಅದಕ್ಕೆ ಎಡತಲೆಭಾರ ಹೆಚ್ಚಿ, ಮಗುಚಿ, ಸವಾರ ನೀರ ತಳಕ್ಕು ಮುಳುಗುಂ! ಮರ್ಯಾದೆ ಕೆಟ್ಟ್‌ತ್ ಬದ್ಕಾಯೆ ಎಂದು ಆಚೀಚೆ ನೋಡಿದರೆ ಹೆಚ್ಚು ಕಡಿಮೆ ಎಲ್ಲರ ಮುಖದಲ್ಲೂ ಇಂಥದ್ದೇ ಅನುಭವಗಳ ಹೆಡ್ಡು ಕಳೆ! ಕಾಲಿನ ತಗ್ಗಿಗೆ ಅಂಡೇರಿಸಿದ ದಿಕ್ಕೇಡಿಗಳು, “ದೋಣಿ ಸರಿಯಿಲ್ಲ” ಎಂದದ್ದೂ ಆಯ್ತು. (ಕುಣಿಯಲು ಬಾರದ. . . . .) ಯಾರದೋ ದೋಣಿಯ ಬೆನ್ನು ಹಿಡಿಯುವುದರಲ್ಲಿ ಕೈತಪ್ಪಿ, ನೀರು ಎಲ್ಲಿ ಸೇರಿ ಎಲ್ಲಿ ಹೊರಟಿತು ಎಂದು ಅರಿವಾಗದಂತೆ ಮುಳುಗೇಳುತ್ತ, ಕೆಮ್ಮುತ್ತ, ಕ್ಯಾಕರಿಸುತ್ತ ಮೂಗುಬಾಯಲ್ಲಿ ಸಮುದ್ರ ಆಪೋಷಣ ತೆಗೆದವರೆಲ್ಲ ಅಗಸ್ತ್ಯರೇನೂ ಅ. ನಿಚ್ಚಳ, ನಿರ್ಮಲ, ನೀಲಿಮೆ, ನೀ-ರಮೆ ಎಂದಿತ್ಯಾದಿ ಚುಟುಕಿನ ಲಯಹಿಡಿದು ಧಾವಿಸಿದ ಕವಿಪುಂಗವ ಹವಳದ ಗಿಟ್ಟೆ ಬೆರಳು ಜಜ್ಜಿದಾಗ ಹಾಯ್‌ಕುಗಳನ್ನು ಎಸೆದ. ಎಡಕ್ಕೆ ತೊಳಸಿದಾಗ ಬಲಕ್ಕೂ ಬಲಕ್ಕೆ ತೊಳಸಿದಾಗ ಎಡಕ್ಕೂ ತುಸು ತಿರುಗುತ್ತಾ ದೋಣಿ ಮುಂದುವರಿಯುತ್ತದೆ – ಥಿಯರಿಯಲ್ಲಿ ಎಲ್ಲರೂ ಸ್ಟ್ರಾಂಗು. ಹುಟ್ಟನ್ನು ಮಧ್ಯದಲ್ಲಿ ಹಿಡಿದು ಕ್ರಮವಾಗಿ ತೊಳಸುವ ಪ್ರಾಕ್ಟಿಕಲ್ಲಿನಲ್ಲಿ ತರಹೇವಾರಿ ವೀಕು! ಅವನ ಹುಟ್ಟಿಗೆ ಇವನ ಹುಟ್ಟು ಕುಟ್ಟಿದ್ದು (ಪುಣ್ಯಕ್ಕೆ ತಲೆಗೆ ಹೆಟ್ಟಲಿಲ್ಲ), ಶರವೇಗದ ಕಲ್ಪನೆಯಲ್ಲಿ ಹುಟ್ಟನ್ನು ಚಪ್ಪಟೆ ಎಳೆದು ಕೈ ತಪ್ಪಿಸಿಕೊಂಡವರು, ಎಡಬಲದ ತೊಳಸು ಏಕರೀತಿಯಲ್ಲಿ ಬಾರದೆ ಬಾಲಕಚ್ಚುವ ನಾಯಿಯಂತೆ ಗರಗರ ತಿರುಗುವವರು, ಒಚ್ಚಾಟದಲ್ಲಿ ಕುಳಿತ ತಗ್ಗಿನಲ್ಲಿ ನೀರು ಸೇರಿದಾಗ ಖಾಲೀ ಮಾಡಲು ಹೆಣಗುವವರು, ಎರಡು ಮಾರು ವೇಗ ಗಳಿಸಿದಾಗ ಇನ್ನೊಂದು ಕಯಾಕೋ ಜನವೋ ಬಂತೆಂದು ಗಾಬರಿಗೆಟ್ಟು ಬೊಬ್ಬೆ ಹೊಡೆಯುವವರು (ಸಾಮಾನ್ಯ ಆಘಾತದಲ್ಲಿ ಕಯಾಕುಗಳು ಏನೂ ಮುಕ್ಕಾಗುವುದಿಲ್ಲ. ಮತ್ತೆ ಸವಾರನ ಗ್ರಹಿಕೆಯ ವೇಗ ನೀರಿನ ಪ್ರತಿರೋಧದಲ್ಲಿ ಸಾಮಾನ್ಯವಾಗಿ ಜನಕ್ಕೆ ತಾಗುವಾಗ ಆಘಾತಕಾರಿಯಾಗಿಯೂ ಇರುವುದಿಲ್ಲ) ಸೇರಿ ಅಂದು ನಿರ್ಜನ ತಿಲಕಂ ದ್ವೀಪದಲ್ಲಿ ಮೊದಲರ್ಧ ಗಂಟೆ ಸಂತೀ ಗದ್ದಲ!

ಸಂತೀ ಎಂದಾಗ ಶರೀಫ್ ಸಾಹೇಬರ ಹಾಡು ನೆನಪಾಗಿಯೋ ಏನೋ ರಾಮಚಂದ್ರ ಭಟ್ಟರೂ ರಂಜಿನಿಯಮ್ಮ ಇನ್ನೂ ಕೆಲವು ಹಿರಿಯರೊಡನೆ (ಅಂಥಾ ಏನು ಮುದೂಕರಲ್ಲದಿದ್ದರೂ) ದಂಡೆಯಲ್ಲೆ ಕೂತು ಪೂರ್ಣ ಧ್ವನಿಮತ ಕೊಟ್ಟು ಆಸ್ವಾದಿಸುತ್ತಿದ್ದರು. ಮಯೂರ, ತಿಂಗಳು ಖ್ಯಾತಿಯ ಬಸವರಾಜ್, ಕತೆಗಾರ ಕತೆಯಾಗದ ಎಚ್ಚರದಲ್ಲಿ ತನ್ನ ಫುಲ್ ಸ್ಲೀವ್ಸಿನ ಕಫ್ಲಿಂಗೂ ಸಡಿಲಿಸದೆ ಘಟನೆಗಳ ಸರಣಿಯಲ್ಲಿ ವಿಘಟನೆಯ ಸಂಕೇತದಂತೆ ತಿಲಕಂನ ಇನ್ನೊಂದೇ ದಿಕ್ಕು ನೋಡುತ್ತ ವಿರಾಮದಲ್ಲಿ ಪಾದ ಬೆಳೆಸಿದ್ದರು. ಸಂತೆಯ ಸುರ್‌ಗಳಲ್ಲಿ ಕನ್ನಡವಲ್ಲದೆ ತುಳು, ಕೊಂಕಣಿ, ಮರಾಠಿ, ಮಲಯಾಳಿ, ತಮಿಳು, ಹಿಂದಿ, ಇಂಗ್ಲಿಶ್ ಇತ್ಯಾದಿ ಮಿಲೇ ಆದರೂ ಅರ್ಥ ಒಂದೇ – ಗೊಂದಲ. ಆದರೆ ನಮಗೆ ಪರಿಚಯ ಮರೆತ ಗೆಳೆಯನಂತೆ ಇಲಾಖೆಯ ಸಹಾಯಕರು ಮೌನವಾಗಿ, ಪೂರ್ಣ ಸೌಜನ್ಯಯುಕ್ತವಾಗಿ, ಸಹಜ ನಗುಮೊಗದೊಡನೆ ಎಲ್ಲರಿಗೂ ಎಲ್ಲದಕ್ಕೂ ಒದಗುತ್ತಿದ್ದರು. ಅವರಿಗೆ ಸಮವಸ್ತ್ರವೋ ಎದೆಪಟ್ಟಿಯೋ ಇರಲಿಲ್ಲ. ಇನ್ನೂ ದೊಡ್ಡಗುಣ ಅವರು ಯಾವುದಕ್ಕೂ ಆಕ್ಷೇಪವೆತ್ತುತ್ತಿರಲಿಲ್ಲ. ಲೈಫ್ ಜಾಕೆಟ್ ಬಿಗಿಯುವುದರಿಂದ ಹಿಡಿದು, ಬಯಸಿದವರ ಸ್ನಾರ್ಕೆಲ್ ಬಿಗಿದ ಮುಖವನ್ನು ನೀರಿನಲ್ಲಿ ಒತ್ತಿಹಿಡಿದು ಲಗೂನಿನ ಉದ್ದಗಲಕ್ಕೆ ಎಳೆದೊಯ್ದು ಚಿತ್ರವಿಚಿತ್ರಗಳನ್ನು ತೋರಿದರು. ಮಲಯಾಳೀ-ಹಿಂದಿಯ ಕರಿಮಣಿ ಸರಕ್ಕೆ ಇಂಗ್ಲಿಶಿನ ಚೆಂಬವಳ ಪೋಣಿಸಿ ವಿವರಿಸುತ್ತಿದ್ದರು. ಲಗೂನಿನ ಮಹಿಮೆಯೋ ಪ್ರವಾಸಿಗಳ ಮಿತಿಯೋ ಅಲ್ಲೆಲ್ಲೂ Donot’s ಬೋರ್ಡೂ ಇರಲಿಲ್ಲ.

“ಚಿನ್ಸ್ ಅಪ್, ಐಸ್ ಸ್ಟ್ರೇಟ್, ಡಿಗ್ ದ ಹೀಲ್ಸ್ (ಕ್ಷಮಿಸಿ, ಎನ್‌ಸಿಸಿ ಮಾರ್ಚ್ ಪಾಸ್ಟ್ ನೆನಪಿಗೆ ಬಂತು. ಮಾನ್ಯ ವಾಚಕರು ಹೀಲ್ಸನ್ನು ಪ್ಯಾಡಲ್ ಎಂದು ತಿದ್ದಿಕೊಳ್ಳುವುದು). ಲೆಫ್ಟ್, ರೈಟ್, ಲೆಫ್ಟ್, ರೈಟ್, ಲೆಫ್ಟ್. . . . . .” ನನ್ನ ಕಯಾಕ್ ದೂರ ದೂರ ಸಾಗಿತು. ನಿಜಸಮುದ್ರ ಅಲೆಮಗುಚುತ್ತ ಬಿಳಿಗೀಟೆಳೆಯುವ ಹತ್ತತ್ತಿರಕ್ಕೂ ಹೋದೆ, ಲಗೂನಿನ ಅಗಲವನ್ನು ಅಳೆದೆ, ತಿಲಕಂನ ಇನ್ನೊಂದೇ ಸೆರಗಿನ ಹವಳದ ಕೊರಕಲಿನಲ್ಲಿ ಇಳಿದು ಅಂಡಮಾನಿನ ಏಡಿಗಳ ಕುಶಲವಾರ್ತೆ ಇಲ್ಲಿನವಕ್ಕೆ ಬಿತ್ತರಿಸಿ ಬಂದೆ. ಯಾರೋ ಬಯಸಿದರೆಂದು ಕಯಾಕ್ ಕೊಟ್ಟು, ಸ್ನಾರ್ಕೆಲ್ ಕಟ್ಟಿ ನೀರಾಳ ನೋಡುತ್ತ ತೇಲಿದೆ. ಆಗೀಗ ಹೀಗೇ ಯಾರಿಗೋ ಡಿಕ್ಕಿ ಹೊಡೆದು, ನಿಂತು ಮುಖ ನೋಡಿದರೆ ಎಲ್ಲರ ಮುಖದಲ್ಲಿ ಅದೇ ಭಾವ – ನನ್ನದೇ ಅಪೂರ್ವ, ನೀ ಕಂಡದ್ದು ಯಃಕಶ್ಚಿತ್! ವಾದ, ವಿವರಣೆ, ಅನುಸರಣೆಗಳ ಸಣ್ಣತನಗಳ ಅಗತ್ಯವೇ ಇಲ್ಲದಷ್ಟು ಪ್ರಕೃತಿ ಧಾರಾಳಿ. ಮತ್ತೆ ಬಾಯಲ್ಲಿ ಬುಸ್ಸ್ ಬುಸ್ಸ್ – ಹೊಸತೇ ಸಸ್ಯ, ಹೊಸತೇ ಮೀನು, ಹೊಸತೇ ಹವಳ ಹೊತ್ತು ಹೋದದ್ದೇ ತಿಳಿಯದ ಹದುಳ.

ದಂಡೆಯಲ್ಲಿ ಪುಟ್ಟ ಡ್ರಂ ತುಂಬಾ ನಿಂಬೇ ಪಾನಕ ತಂದಿಟ್ಟರು. ಕುಡಿದು ಎಸೆಯುವ (?) ಕಾಗದದ ಲೋಟಗಳಿಗೆ ಡಬ್ಬಿಯನ್ನೂ ಒತ್ತಿಗೇ ಇಟ್ಟಿದ್ದರು. ಆದರೆ ಅಕ್ಷರಶಃ ಎಸೆಯುವ ಬುದ್ಧಿವಂತರಿಗೇನೂ ಕೊರತೆಯಿರಲಿಲ್ಲ. (ದೇಶಕಾಲದ ವಿಶೇಷಾಂಕದಲ್ಲಿ ವೈದೇಹಿ ಸಂದರ್ಶಿಸಿದ ಹೋಟೆಲ್ ಮಾಲಿಕನಿಗೆ ಹೋಟೆಲಿನಲ್ಲಿ ಕೊಳಕು ಮಾಡುವವನೊಬ್ಬ ಹೇಳಿದನಂತೆ “ನಾವು ಮನೆಯಲ್ಲೂ ಹೀಗೇ” – ಜೈ ಭಾರತ ಮಾತೇ) ಆದರೆ ಗಮನಿಸಿದೆ, ಕೊನೆಯಲ್ಲಿ ಇಲಾಖಾ ನೌಕರರು ಎಲ್ಲವನ್ನೂ ಹೆಕ್ಕಿ ತೆಗೆಯುವ ಕೂಲಿ ಕೆಲಸ ಸರಿಯಾಗಿಯೇ ಮಾಡಿದರು. ಒಂದು ಗಂಟೆಯ ಸುಮಾರಿಗೆ “ಇನ್ನು ಭರತದ ಕಾಲ, ಮುಖ್ಯ ದ್ವೀಪಕ್ಕೆ ಮರಳುವ ಬನ್ನಿ” ಎಂದು ದೋಣಿಗರು ಸೂಚಿಸತೊಡಗಿದರು. ದೋಣಿ ಕಂತುಗಳಲ್ಲಿ ಜನ ಸಾಗಿಸಲು ಶುರು ಮಾಡಿತ್ತು.

ಬೆಳಿಗ್ಗೆ ನಾವು ತೊಡಗಿಕೊಳ್ಳುವಾಗ ಮೊಣಕಾಲಾಳವಿದ್ದಲ್ಲಿ ನೀರೀಗ ಸೊಂಟಕ್ಕೆ ಬಂದಿತ್ತು. ಮೈ ಸುಟ್ಟರೇನು, ತೋಳು ಸೋತರೇನು ಇನ್ನೆಂದೋ ಈ ಯೋಗ ಎನ್ನುತ್ತ ನಾನೂ ರೆಡ್ಡಿಯೂ ಜೋಡು ತಗ್ಗಿನ ಕಯಾಕೊಂದನ್ನೇ (ನೌಕರರ ಅನುಮೋದನೆ ಪಡೆದು) ಮುಖ್ಯ ದ್ವೀಪಕ್ಕೂ ಚಲಾಯಿಸಲು ಇಳಿದೆವು. ಸ್ಪಾರ್ತಕಸ್ ಸಿನಿಮಾದಲ್ಲಿ ಅಸಂಖ್ಯ ಹುಟ್ಟುಗಳ ಏಕತಾನವನ್ನು ಕಾಪಿಡುವ ಕೆಂಗೂದಲ ಅತಿಕಾಯ ನೆನಪಿಗೆ ಬಂದ. ಎಡತೊಡೆಯ ಮೇಲೆ ಬಿದ್ದುಕೊಂಡ ಉದ್ದದ ಚಾಟಿ. ಎದುರೊಂದು ದಿಮ್ಮಿ, ಎತ್ತೆತ್ತಿ ಕುಟ್ಟುವ ಎರಡೂ ಕೈಗೊಂದೊಂದು ಭಾರೀ ಕೊಡತಿ. ಕೆಂಗಣ್ಣು, ಹುರಿಮೀಸೆ ಬಯ್ಗುಳವೇ ಬಾಯಿಯಾದ ಆ ದೈತ್ಯನನ್ನು ನನಗೋ ಸೋಲಿಸುವ ಕೆಚ್ಚು. ಆದರೆ ಎಲ್ಲಿ ಸಾಧ್ಯ, ರೆಡ್ಡಿ ಗುಲಾಮನಾಗಲು ನಾಲಾಯಕ್ಕು. (ಅವರು ನಡೆಯುವಾಗಲೂ ಹಾಗೇ ಒಂದು ಕೈ ಪ್ಯಾಂಟಿನ ಕಿಸೆಯಲ್ಲಿಟ್ಟುಕೊಂಡು ನನ್ನ ಎರಡೆರಡು ಹೆಜ್ಜೆಗೆ ಒಮ್ಮೆ ಪುಟ್ಟದಾಗಿ ಓಡಿ ಸೇರಿಕೊಳ್ಳುತ್ತಲೇ ಇರುತ್ತಾರೆ!) ಒಮ್ಮೊಮ್ಮೆ ಎಡಕ್ಕೆ ಖಾಲೀ ಹೊಡೆದು ದೋಣಿ ಜೋಲಿ ಹೊಡೆಯುತ್ತಿತ್ತು. ಒಮ್ಮೊಮ್ಮೆ ನನ್ನ ಹುಟ್ಟಿನೊಡನೆ ತಾಕಲಾಟಕ್ಕಿಳಿಯುತ್ತಿತ್ತು. “ಏಯ್ ಬಿಡ್ರೀ. ನೀವು ಬರೇ ಬಲದ್ದು ಹೋಡೀರಿ, ನಾ ಎಡದ್ದು ಮಾತ್ರ ನೋಡ್ಕೊಳ್ತೇನೆ” ನಮ್ಮೊಳಗೇ ಒಪ್ಪಂದವಾಯ್ತು. ಎಲ್ಲಾ ಭಾರತ ಪಾಕೀಸ್ತಾನದ ಮಾತುಕತೆಯದೇ ಸ್ಟೇಟಸ್ಸು. ನಾ ಹೊಡೆದದ್ದು ಜಾಸ್ತಿಯಾಯ್ತೂಂತ ಅವರು, ಅವರು ಹೊಡೆದದ್ದು ಕಮ್ಮಿಯಾಯ್ತೂಂತ ನಾನು. ವಾಸ್ತವದಲ್ಲಿ ಇಬ್ಬರಿಗೂ ದಂ ಖಾಲಿಯಾಗಿತ್ತು. ಹುಟ್ಟನ್ನು ಹಾಗೇ ಅಡ್ಡಯಿಟ್ಟು, ಚುರುಗುಟ್ಟುವ ಕತ್ತು, ಬೆನ್ನಿಗೆ ಎರಡೂ ಕೈಗಳಲ್ಲಿ ನೀರು ಮೊಗೆಮೊಗೆದು ಸುರುವಿಕೊಂಡು “ದೋಣಿ ಸಾಗಲಿ, ಮುಂದೆ ಹೋಗಲಿ, ಕಲ್ಪೆನಿ ತೀರವ ಸೇರಲೀ” ಹಾಡುತ್ತಾ ಹೋದೆವು. ಭರತದ ಹರಿವು ನಮ್ಮನ್ನು ಇನ್ನೆಲ್ಲೋ ಒಯ್ಯುತ್ತದೆ ಅನಿಸಿದಾಗ ಮತ್ತೆ ಹುಟ್ಟು ಕೈಗೆತ್ತಿಕೊಂಡು ಕಲ್ಪೆನಿ ಸೇರಿದೆವು.

ಬಚ್ಚಲುಗಳು ಭರ್ತಿಯಾಗಿದ್ದವು. ಒಂದಂಚಿನಲ್ಲಿ ಊಟದ ವಿಲೇವಾರಿ ನಡೆದಿತ್ತು. ಮುಂದಾಗಿ ಬಂದ ಕೆಲವರು ಸಿಹಿನೀರ ಶುದ್ಧರಾಗಿ, ತಡವಾಗಿ ಬಂದ ನಮ್ಮಂತವರು (ನಿಜಾ ಹೇಳ್ತೇನೆ ಹೊಟ್ಟೆಪಕ್ಷದವರು) “ಸಮುದ್ರದಲ್ಲಿ ಸ್ನಾನವೇ ಮಾಡಿದ್ದಲ್ವಾ” ಎಂದು ಸಮಜಾಯಿಶಿ ಕೊಟ್ಟುಕೊಂಡು ಊಟ ನಡೆಸಿದೆವು. ಬೆಳಿಗ್ಗೆ ಚಪ್ಪರದಲ್ಲಿ ಇಣುಕುತ್ತಿದ್ದ ಬಿಸಿಲಕೋಲುಗಳಿಂದ ಕನಲಿದ ನಾವೇ ಇಲ್ಲಿ ನೆರಳೂ ಇದೆ ಎಂದು ಮೈಚಾಚಿ ತೀಡುವ ಗಾಳಿಗೆ ಕಣ್ಣೆವೆ ಭಾರವಾಗುವುದನ್ನು ಆನಂದಿಸತೊಡಗಿದೆವು. ಬೆಂಗಳೂರಿನಿಂದ ಬಂದಿದ್ದವರ ಪುಟ್ಟ ಮಗು ನಾನು ಎಲ್ಲಿ ಯಾವಾಗ “ಬಾಬೂ” ಎಂದು ಕರೆದರೂ ಬಾಲಕೃಷ್ಣನನ್ನು ನಾಚಿಸುವ ಅರಳುಗಣ್ಣು, ತೊದಲುನುಡಿ, ತುಂಟ ಅಡಿಯಿಡುತ್ತಾ ಬಂದು, ಮುಷ್ಠಿ ಮರಳನ್ನು ಗೋಚಿ ತನ್ನ ತಲೆಗೊಂದಿಷ್ಟು, ನನ್ನ ಕೈಗೊಂದಿಷ್ಟು ತುಂಬುತ್ತ ಓಡಾಡುತ್ತಿತ್ತು. ಚೇತು, ನೀತಿ (ಕೃಶಿ ಪುತ್ರಿ) ಈಗ ನಮ್ಮಂಗಳದಂಚಿಗೇ ಬಂದಿದ್ದ ನೀರು ಮರಳಿನ ಮರುಳಿಗೆ ಮರಳಿದ್ದರು. ಒಂದಂತೂ ಖಾತ್ರಿ ಅಲ್ಲೆಲ್ಲೂ ಸೀಕುಕುಂಬರ್ ಇರಲಿಲ್ಲ!

ನಮ್ಮ ಕವರಟ್ಟಿ ಹಡಗಿನಲ್ಲೇ ಕುಟುಂಬ ಸಹಿತ ವಿಹಾರಕ್ಕಾಗಿ ಬಂದಿದ್ದ ಈ ದ್ವೀಪ ಸಮೂಹದ ಯಾವುದೋ ಅಧಿಕಾರಿ ಇಲ್ಲೂ ಮುಂದಕ್ಕೂ ತನ್ನ ಶ್ರೇಷ್ಠತೆಯನ್ನು ಪ್ರತ್ಯೇಕ ವ್ಯವಸ್ಥೆಗಳು ದಕ್ಕಿಸಿಕೊಳ್ಳುವಲ್ಲಿ ಪ್ರದರ್ಶಿಸುತ್ತಿದ್ದ (ನಮ್ಮೊಡನಿದ್ದೂ ನಮ್ಮಂತಾಗದೇ). ಆತ ತಿಲಕಂಗೆ ಬಂದಂತಿರಲಿಲ್ಲ. ಅವನಿಗಾಗಿ ಬಂದಂತಿದ್ದ ಕಾರಿನಲ್ಲಿ ಇನ್ನೆಲ್ಲೋ ಇನ್ನೇನೋ ಸ್ಪೆಷಲ್ ಮುಗಿಸಿಕೊಂಡು ತಡವಾಗಿ ಊಟಕ್ಕೆ ಬಂದ. ಸ್ಥಳೀಯ ವ್ಯವಸ್ಥಾಪಕರು ಒಂದಷ್ಟು ಮೇಜುಕುರ್ಚಿಗಳಿಗೆ ಬೇರೇ ಸೆಟ್ಟಪ್ಪು ಗೆಟ್ಟಪ್ಪೂ ಕೊಟ್ಟು ಉಪಚಾರ ನಡೆಸುತ್ತಿದ್ದದ್ದನ್ನು ನಾವಂತೂ ಕಡೆಗಣ್ಣಲ್ಲೂ ನೋಡಲಿಲ್ಲ. ಆದರೆ ಅವರು ಬಂದಮೇಲೇ ಅಲ್ಲೇ ತೆಂಗಿನ ಮರಗಳ ನೆರಳಲ್ಲಿ ಒಂದು ಕುರ್ಚಿಯನ್ನು ಕೇಂದ್ರವಾಗಿಟ್ಟುಕೊಂಡು ನಮ್ಮ ಪ್ರವಾಸೀಪಟ್ಟಿಯಲ್ಲಿದ್ದ ಒಂದು ಐಟಂ – ಫ಼ೋಕ್ ಡ್ಯಾನ್ಸ್ ಪ್ರಸ್ತುತಪಡಿಸಿದರು. ಅದೇ ನಮ್ಮ ದೋಣಿಯವನು, ಅಕ್ಬರ್ ದಿ ಗ್ರೇಟ್, ಒಂದೆರಡು ಅಜ್ಜಂದಿರು ಎಲ್ಲಾ ಸೇರಿಕೊಂಡು ಚೂರುಪಾರು ಬಣ್ಣ ಸುತ್ತಿಕೊಂಡು (ಯಾವುದೂ ಸಾಂಪ್ರದಾಯಿಕತೆಯನ್ನೂ ಮಣ್ಣಿನ ವಾಸನೆಯನ್ನೂ ಸಾರುತ್ತಿರಲಿಲ್ಲ) ಕುಣಿದರು. ಅಜ್ಜನ ಕೈಯಲ್ಲಿ ಚಕ್ರ ತಾಳ (ನಿಯತವಾಗೇನೂ ಬಾರಿಸುತ್ತಿರಲಿಲ್ಲ) ಉಳಿದವರ ಕೈಯಲ್ಲಿ ಮರದ ಪುಟ್ಟ ಕತ್ತಿ ಗುರಾಣಿ. ಅಜ್ಜ ಹಾಡುತ್ತಿದ್ದ ಮಾಪಿಳ್ಳಾಪಾಟಿನಂತಹ ಏನೋ ಸಾಹಿತ್ಯ ಮತ್ತು ರಾಗವನ್ನು (ಇದು ಜನಪದವೇ ಇರಬಹುದು) ಉಳಿದವರು ಮರುಜಪ ಮಾಡುತ್ತಾ ಕುಣಿದರು. ಆದರೆ ಪಾಪ, ಒಂದೆರಡರಲ್ಲೇ ಆ ಶೈಲಿಯ ಹಾಡುಗಳಿಗೂ ವಿನಾಯ್ತಿ ಕೊಟ್ಟು ಯಾವುದೋ ಮಲಯಾಳೀ ಹಿಂದೀ ಚಿತ್ರಗೀತೆಗಳಿಗೆ ಬಂದಾಗಲಂತೂ (fake dance?) ನಮಗೆ ಅವರ ಬಗ್ಗೆ ಕನಿಕರವೂ ವ್ಯವಸ್ಥೆ ಬಗ್ಗೆ ರೋಷವೂ ಉಕ್ಕಿತು. ಆದರೆ ನಮ್ಮ ಅಸಹನೆ ಆ ಮುಗ್ದರ (ಅಪಾತ್ರರೂ ಹೌದು) ಮೇಲಾಗಬಾರದೆಂಬ ವಿವೇಚನೆ ಉಳಿಸಿಕೊಂಡೆವು. ಪ್ರವಾಸಿಗಳಲ್ಲಿದ್ದ ಮರಾಠೀ ತಂಡ ಮಾತ್ರ ಖಾಸಗಿಯಾಗಿ “ಅವರ ಕೈಗೆ ಕತ್ತಿಗುರಾಣಿ ಬಿಟ್ಟು ಎಕೆ-೪೭ ಕೊಟ್ಟಿದ್ದರೆ ಚೆನ್ನಾಗಿ ನುಡಿಸುತ್ತಿದ್ದರು” ಎಂದದ್ದು ಮಾತ್ರ ತೀರಾ ವಿಕೃತ. ಯಾವುದೋ ಸಂದರ್ಭದಲ್ಲಿ ನಾವು ವಿಚಾರಿಸಿದಾಗ ಸಹಜ ಸ್ಥಿತಿಯನ್ನಷ್ಟೇ ಹೇಳುವ ಉತ್ಸಾಹದಲ್ಲಿ “ದ್ವೀಪದಲ್ಲಿ ಎಲ್ಲರೂ ಮುಸ್ಲಿಮರು” ಎಂದು ತಿಳಿಸಿದ್ದರು. ಅದಕ್ಕೆ ಮುಖ್ಯ ಭೂಮಿಯಿಂದ ಬಂದ ನಾವು ಕೊಡುವ ಈ ರಂಗು ಅನುಚಿತ ಪ್ರವಾಸೋದ್ಯಮದ ಬಹು ದೊಡ್ಡ ಶಾಪ. ಮುಂದಿನೊಂದು ದ್ವೀಪದಲ್ಲಿ ಕಡಲಕಾವಲಿಗಾಗಿ ನೆಲೆಗೊಂಡ (ಜಲಸೈನ್ಕದ) ಮಂದಿ ಕೃಷ್ಣ ಮಂದಿರ ರಚಿಸಿರುವುದೂ ತಿಳಿಯಿತು. ಯಾವುದೇ ವಿಕಾರಗಳಿಲ್ಲದೆ ಮೂಲವಾಸಿಗಳು ಅದರ (ಪ್ರಾಕೃತಿಕ ವಿಕೋಪಗಳಿಂದ) ರಕ್ಷಣೆ ನಡೆಸುವುದು ಮತ್ತು ನೈಮಿತ್ತಿಕ ಕಲಾಪಗಳಲ್ಲಿ ಭಾಗಿಗಳಾಗುವುದು ಈ ಕೇಸರಿ-ರೋಗ ಬಡಿದವರಿಗೆ ಮನದಟ್ಟು ಮಾಡುವುದು ಕರಕಷ್ಟ. “ಕಲ್ಪೆನೀ ಬೋಡ್ಚಿಯಾಂದಿನೈನೂ ಕಲ್ಪೆನೀ” (ಕಲ್ಪೆನಿ ಬೇಡದಿರುವುದನ್ನೂ ನೀನು ಕಲಿಯುತ್ತಿಯಾ) ಎಂಬ ತೌಳವ ವಿಷಾದದೊಡನೆ ನಾವು ಊರು ನೋಡಲೆದ್ದೆವು.

(…ಮುಂದುವರಿಯುತ್ತದೆ)

ನನ್ನ ಹಿಂದಿನ ಕಂತಿನ ಕಾಲಕ್ಕೇ ಗೆಳೆಯ ಕೃಶಿ ಕಲ್ಪೆನಿ ಮುಗಿಸಿ ಮುಂದಿನ ಹೆಜ್ಜೆ ಎತ್ತಿಯಾಗಿತ್ತು. ಬಹುಶಃ ಇಂದೋ ನಾಳೆಯೋ (http//drkrishi.com) ಅವರು ಮುಂದಿನ ಕಂತು ಕೊಟ್ಟಾರು (ಆಗ ಇಲ್ಲಿನ ಪ್ರತಿಕ್ರಿಯಾ ಅಂಕಣದಲ್ಲೂ ಸೇತು ಸೇರಿಸುತ್ತಾರೆ), ತಪ್ಪಿಸ್ಕೊಳ್ಳಬೇಡಿ. ಮತ್ತೆ ರುಕ್ಮಿಣಿ ತನ್ನ ಮೊದಲ ಪಟ್ಟಿನಲ್ಲೇ ದ್ವೀಪಸಮೂಹವನ್ನು ಚಿತ್ ಮಾಡಿದ್ದು ನೀವು ಓದಿಯಾಗಿದೆ ಎಂದು ಭಾವಿಸುತ್ತೇನೆ. (ಇಲ್ಲವಾದರೆ ಕೂಡಲೇ ಹೋಗೀಪ್ಪಾ) ಅಲ್ಲೆಲ್ಲಾ ಫಾಸ್ಟ್ ಫುಡ್ ತಿಂದು, ನನ್ನಲ್ಲಿಗೆ ಬಂದಾಗ ದಯವಿಟ್ಟು ಹಸಿವೆಯಿಲ್ಲ (ಅಜೀರ್ಣ?) ಎನ್ನಬೇಡಿ. ದಿನದಿನಾ ಕೆಳಗಿನ ತಟ್ಟೆಯಲ್ಲಿ (ಪ್ರತಿಕ್ರಿಯಾ ಅಂಕಣ) ಎಷ್ಟು ಮುಗಿಸಿದ್ದೀರಿ, ಏನುಳಿಸಿದ್ದೀರಿ ಎಂದು ನೋಡುತ್ತಿರುತ್ತೇನೆ.