(ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ ಭಾಗ – ೨)

ಎಂ.ವಿ ಕವರಟ್ಟಿಯ ಮೂರನೆಯ ಮಾಳಿಗೆಯ (Deck. ಈ ಶಬ್ದಕ್ಕೆ ಮೈವಿವಿನಿಲಯದ ನಿಘಂಟು ದಕ್ಕ ಎನ್ನುತ್ತದೆ. ಕನ್ನಡ ಕೋಶಗಳು ಬಂದರುಗಟ್ಟೆಯನ್ನು ಮಾತ್ರ ಧಕ್ಕೆ ಎನ್ನುತ್ತವೆ, ದಕ್ಕ ದಕ್ಕಿಸಿಕೊಂಡಿಲ್ಲ. ವಾಸ್ತವದಲ್ಲಿ ನಮ್ಮ ಹೆಚ್ಚಿನ ಕೋಶಕಾರರು ಬಯಲು ಸೀಮೆಯವರು, ಸಮುದ್ರದೂರರು. ನಿಘಂಟು ಬೆಳೆಸಲು ಕ್ಷೇತ್ರಕಾರ್ಯ ಆದಂತಿಲ್ಲ. ಸದ್ಯದ ಗೊಂದಲ ತಪ್ಪಿಸಲು ನಾನು ಬಹುಮಹಡಿ ಕಟ್ಟಡದ ಶಬ್ದಗಳನ್ನೇ ಬಳಸುತ್ತಿದ್ದೇನೆ) ಹೊರಜಗುಲಿ ಹಡಗಿಗೆ ಸದಾ ಮುಕ್ತ ದ್ವಾರ. ಅದರ ಎತ್ತರಕ್ಕೇರಿಸಿಕೊಳ್ಳಲು ಇಲ್ಲಿ ಬಲವಾದ ಏಣಿ ಇದೆ. (ನೀನೇರಲೇ ಬೇಕು ನಾನಿರುವ ಎತ್ತರಕೆ). ಅಲ್ಲೇ ಕಡಲ ಆಕಸ್ಮಿಕಗಳಲ್ಲಿ ಒದಗುವಂತೆ ಎರಡು ಮಗ್ಗುಲು ಸೇರಿದಂತೆ ನಾಲ್ಕು ದೋಣಿಗಳನ್ನು ಭದ್ರವಾಗಿ ನೇತುಬಿಟ್ಟಿದ್ದಾರೆ. ಮೂರನೆಯ ಮಾಳಿಗೆಯ ಎತ್ತರದ ಬಳಕೆ ಒಮ್ಮೆ ನಮ್ಮನ್ನು ಹತ್ತಿಸಿಕೊಳ್ಳುವಾಗ ಮತ್ತೊಮ್ಮೆ ಒಟ್ಟು ಪ್ರವಾಸ ಮುಗಿದು ಇಳಿಸುವಾಗ ಕೊಚ್ಚಿಯಲ್ಲಿ ಮಾತ್ರ ಆಯ್ತು. ಬಹುಶಃ ಹಡಗೇ ಸ್ಥಿರ ಬಂದರು ಕಟ್ಟೆಗೆ ಬಂದಾಗ ಮಾತ್ರ ಇದನ್ನು ಬಳಸುತ್ತಾರೆ. ದ್ವೀಪಸ್ತೋಮದಲ್ಲೆಲ್ಲೂ ಎಂವಿ ಕವರಟ್ಟಿಗೊಪ್ಪುವ ಆಳದ ಬಂದರುಗಟ್ಟೆಗಳಿರಲಿಲ್ಲ. ಅಲ್ಲೆಲ್ಲಾ ನಾವು ನೀರಮಟ್ಟಕ್ಕೆ ತೀರಾ ಹತ್ತಿರದ ಅಂದರೆ ಹಡಗಿನ ಒಂದನೇ ಮಾಳಿಗೆಗೇ ಇಳಿದು, ಸಣ್ಣ ದೋಣಿಗಳಿಗೆ ಹತ್ತಿ ದಂಡೆ-ಯಾತ್ರೆ ನಡೆಸಬೇಕಾಗುತ್ತಿತ್ತು. ಒಂದನೇ ಮಾಳಿಗೆಯ ಎರಡೂ ಬದಿಗಳಲ್ಲಿ ಎರಡೆರಡು ಪುಟ್ಟ ಕಂಡಿಗಳಿವೆ. ಇವಕ್ಕೆ ಎತ್ತರದ ಹೊಸಿಲು, ತಗ್ಗು ದಾರಂದ ಮತ್ತು ಸದಾ ಮುಚ್ಚಿರುವ ಜಲನಿರ್ಬಂಧೀ ಬಾಗಿಲುಗಳಿವೆ. ಅದನ್ನು ತೆರೆದು ಮುಚ್ಚುವ ನಿಯಂತ್ರಕ ನೇರ ಆರನೇ ಮಾಳಿಗೆಯಲ್ಲಿ ಕುಳಿತ ಕಪ್ತಾನ.

ಹಡಗಿನ ಹೊಟ್ಟೆಯಲ್ಲಿ ಉದ್ದಕ್ಕೋಡುವ ಎರಡು ಓಣಿಗಳಿವೆ. ಇವು ಅಲ್ಲಲ್ಲಿ ಪರಸ್ಪರ ಅಡ್ಡಕ್ಕೆ ಸಂಪರ್ಕ ಓಣಿ ಪಡೆಯುವುದಿದೆ, ವಿವಿಧ ಮಾಳಿಗೆಗಳಿಗೇರಿ ಇಳಿಯಲು ಮೆಟ್ಟಿಲ ಸಾಲು ತೋರುವುದಿದೆ ಮತ್ತು ಹಡಗಿನ ಹೊರಮೈಗೆ ಬರಲು ಪ್ರತಿ ಮಾಳಿಗೆಯಲ್ಲೂ ಬಲವಾದ ಎರಡೆರಡು ಕವಾಟಗಳ (ಬಾಗಿಲು ಎನ್ನುವುದು ತೀರಾ ಸೌಮ್ಯವಾಗುತ್ತದೆ!) ದ್ವಾರಗಳನ್ನೂ ತೋರುತ್ತವೆ. ಒಂದರಿಂದ ಮೂರನೇ ಮಾಳಿಗೆಯವರೆಗೆ ಸಾರ್ವಜನಿಕ ಸರಕು ಸಾಗಾಣಿಕೆ, ಸಾಮಾನ್ಯ ಪ್ರಯಾಣಿಕರ ಮಲಗು ಅಟ್ಟಳಿಗೆ, ಪ್ರಾರ್ಥನಾ ಮಂದಿರ, ಸಾರ್ವಜನಿಕ ಭೋಜನಾಲಯ ಹಾಗೇ ಸ್ತ್ರೀಪುರುಷರಿಗೆ ಪ್ರತ್ಯೇಕಿಸಿದಂತೆ ‘ಇನ್ನೊಂದರ’ ವ್ಯವಸ್ಥೆ, ಮಾಹಿತಿ ಕೇಂದ್ರ ಎಲ್ಲಾ ಕ್ರಮವಾಗಿ ಹರಡಿದ್ದವು. ಮಾಳಿಗೆಗಳಲ್ಲಿ ಮೂರನೆಯ ಮಾಳಿಗೆಯಿಂದ ಮೇಲಿನ ಈ ಓಣಿಗಳ ಉದ್ದಕ್ಕೆ ಎರಡು ಪಕ್ಕಗಳಲ್ಲಿ ಮುಖ್ಯವಾಗಿ ವಸತಿ (ಸ-ಶೌಚ = attached bath) ಮತ್ತು ವಿವಿಧ ಆವಶ್ಯಕತೆಗಳಿಗನುಗುಣವಾಗಿ (ನೌಕರವರ್ಗದ ಕೋಣೆಗಳು, ಕ್ಯಾಂಟೀನ್, ಪ್ರಾರ್ಥನಾ ಮಂದಿರ (ಇದು ಬೇಕಾಗಿರಲಿಲ್ಲ), ವೈದ್ಯಕೀಯ ಸವಲತ್ತು ಇತ್ಯಾದಿ) ಕೋಣೆಗಳು ಹಂಚಿಹೋಗಿವೆ..

ನಾಲ್ಕನೆಯ ಮಾಳಿಗೆಯ ಹಿಂದಿನ ಕೊನೆಯಲ್ಲಿ ‘ಮೇಲ್ವರ್ಗದ’ ವಿಸ್ತಾರ ಊಟದ ಮನೆಯೂ ಮುಂದಿನ ಕೊನೆಯಲ್ಲಿ ಸಾರ್ವಜನಿಕ ರಂಜನೆಗೇ ಮೀಸಲಾದ ಪುಟ್ಟ ಹಾಲೂ ಇದೆ. ಹೆಸರಿನಲ್ಲಿ ರಂಜನೆ ಇದ್ದರೂ ಅಲ್ಲಿನ ದೊಡ್ಡ ಕೊರತೆ ಎರಡು ಸಜೀವ ಟಿವಿ ಮತ್ತೆ ಜಾಗ ಉಳಿಯದಂತೆ ಎದುರು ಹತ್ತೈವತ್ತು ಕುರ್ಚಿ. (ಅರುಂಧತೀ ರಾಯ್ ದಾಂತೇವಾಡ ವಲಯದ ನಕ್ಸಲ್ ಕುರಿತು ಬರೆದ ಲೇಖನ ಮಾಲೆಯಲ್ಲಿ ಮೂಲವಾಸಿಗಳ ಸಂಘ ಶಕ್ತಿಯನ್ನು, ಸಂಸ್ಕೃತಿಯನ್ನು ನಿರ್ವೀರ್ಯಗೊಳಿಸಲು ಪ್ರಸ್ತಾಪಗೊಂಡ ಪ್ರಮುಖ ತಂತ್ರ ಅವರಿಗೆಲ್ಲ ಟಿವಿ ಕೊಡುವುದು – ನೆನಪಿಸಿಕೊಳ್ಳಿ) ಈ ವಲಯದ ಹಳೆಯ ಹುಲಿ – ಎಂವಿ ಟಿಪ್ಪುಸುಲ್ತಾನಿನಲ್ಲಿ ಟೀವೀ ಇದ್ದರೂ ಇತರ ಚಟುವಟಿಕೆಗಳಿಗೆ ಖಾಲೀ ವೇದಿಕೆ ಇರುವುದೂ ಸಹಯಾನಿಗಳ ಪ್ರತಿಭಾ ಪರಿಚಯಕ್ಕೆ ಅವಕಾಶ ಒದಗುವುದೂ ಉಷಾ ಪಿ. ರೈ ಅವರ ಪ್ರವಾಸ ಕಥನದಲ್ಲಿ (ಲಕ್ಷ ದ್ವೀಪಕ್ಕೆ ಲಗ್ಗೆ ಇಟ್ಟಾಗ) ತಿಳಿಯುತ್ತದೆ. ಬಿಸಿಲೇ ಕಾಡಿನಲ್ಲಿ, ದೇವಂದಬೆಟ್ಟದ ಕೊಡಿಯಲ್ಲಿ, ಜಲಕನ್ಯೆಯರ ಕುದುರಿನಲ್ಲೆಲ್ಲಾ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿದ ದಿನೇಶ ಹೊಳ್ಳರಿಗೇನಾದರೂ ‘ಕಡಲ ಕನವರಿಕೆ’ ಅಭಿವ್ಯಕ್ತವಾದರೆ ಅನಾವರಣಕ್ಕೆ ಎಂವಿ ಟಿಪ್ಪು ನೋಡಿ ಎನ್ನಬಹುದೇನೋ!

ಹಡಗಿನ ಆರನೇ ಮಾಳಿಗೆ ವಾಸ್ತವದಲ್ಲಿ ಬೋಳು ತಾರಸಿ. ಅದರ ಮುಂದಿನ ತುದಿಯಲ್ಲಿ ಮುಖ್ಯ ಅಧಿಕಾರಿ (ಇಲ್ಲಿ ಕ್ಯಾಪ್ಟನ್ ಅಥವಾ ಕಪ್ತಾನ ಎನ್ನುವುದಿಲ್ಲ – ಮಾಸ್ಟರ್ ಅಂತೆ. ತಮಾಷೆ ಗೊತ್ತಾ -ಕುಡ್ಲದ ಸಿಟಿಬಸ್ ಕಂಡೋರ್-ಕುಟ್ಟಿಗೆ ಪ್ರಯಾಣಿಕರೆಲ್ಲ ಮೇಸ್ಟ್ರೇ) ಮತ್ತು ನಿಯಂತ್ರಣ ಕೇಂದ್ರವಿದೆ. ನಡುವೆ ಹಡಗಿನಗಲಕ್ಕೂ ಹಬ್ಬಿದಂತೆ ಆಳದಿಂದೆದ್ದ ಅನಿವಾರ್ಯ ಯಂತ್ರ ಭಾಗಗಳು, ಮುಖ್ಯವಾಗಿ ಕಾಣುವಂತೆ ಹೊಗೆ ನಳಿಕೆ. ಉಳಿದಂತೆ ಮುಂದಷ್ಟು ಹಿಂದಷ್ಟು ವಿಸ್ತಾರವಾದ ಮತ್ತು ಸಾರ್ವಜನಿಕರಿಗೆ ಮುಕ್ತವಾದ ತಾರಸಿ. ಇದಕ್ಕೂ ಹೆಚ್ಚಿನ ಹಡಗಿನ ವಿನ್ಯಾಸ ವಿವರಿಸುವುದಿರಲಿ, ಗ್ರಹಿಸುವುದಕ್ಕೂ ನಮ್ಮ ನಾಲ್ಕು ರಾತ್ರಿ ಮೂರು ಹಗಲೇ ಸಣ್ಣದಾಯ್ತೆಂದ ಮೇಲೆ ನೀವು ಓದಿ ಮಾಡುವುದು ಅಷ್ಟರಲ್ಲೇ ಇದೆ.

ಸಂಜೆ ಚಾ, ಬಿಸ್ಕತ್ತಿನೊಡನೆ ಹಡಗಿನ ಸಾರ್ವಜನಿಕ ವಕ್ತಾರನ ಮುಖ ಪರಿಚಯವಾಯ್ತು. ಆತ ಹಡಗು, ಪ್ರವಾಸ ಮತ್ತು ಆಪತ್ಕಾಲೀನ ಕ್ರಮಗಳ ಬಗ್ಗೆ ಆಸಕ್ತರಿಗೆ ತಿಳಿಸುವ ಕಾರ್ಯಕ್ರಮವನ್ನು ಟೀವೀ ಕೋಣೆಯಲ್ಲಿಟ್ಟುಕೊಂಡಿದ್ದಾನೆಂದು ನಮಗೆ ತಿಳಿಯುವಾಗ ತಡವಾಗಿತ್ತು. ಆದರೂ ಅಪಾರ ಸಹನಾಶೀಲನಾಗಿ ಲೇಟ್-ಲತೀಫ್‌ಗಳಾದ ನಮ್ಮ ಕೇಳಿದಷ್ಟೂ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರವನ್ನು ಕೊಡುವವನಿದ್ದ. ಆದರೆ ಅಲ್ಲಿದ್ದ ಎರಡೂ ಟೀವೀಗಳು ಐಪಿಎಲ್ ಆಟದ ನೇರಪ್ರಸಾರ ಕೊಡಲು ಸುರುಮಾಡಿದಾಗ ಎಲ್ಲರ ಮನಸ್ಥಿತಿಯೂ ಹೋಂ ಎವೇ ಫ಼್ರಂ ಹೋಂ ಆಗಿತ್ತು. ಕ್ಯಾಂಟೀನಿನಿಂದ ಕುರುಕಲು ತಂದು, ಕಾಲು ಎಲ್ಲೆಂದರಲ್ಲಿ ಎಸೆದು ಕೂತು, ಕಮೆಂಟರಿಗೆ ಸಮತೂಕದ ಮೊಮೆಂಟರಿ ಉದ್ಗಾರಗಳನ್ನು ಹೊಡೆಯುವವರನ್ನು ಬಿಟ್ಟು ನಾವು ತಾರಸಿಗೋಡಿದೆವು. (ಇಂದು ಬಹುಜನರ ಭಾರೀ ಹಾಬಿ – ಟೀವೀ ವೀಕ್ಷಣೆ!) ಅಲ್ಲಿ ಬೀಳ್ಕೊಡುವ ಕೊಚ್ಚಿ, ಸ್ವಾಗತಿಸುವ ಅರಬೀ ಸಮುದ್ರಕ್ಕೆ ಕಣ್ಣಾಗುವವರು ಹೆಚ್ಚಿರಲಿಲ್ಲ. ದಿನದ ಚಿತ್ತಾರ ಮುಗಿಸಿದ ಸೂರ್ಯನ ಬ್ರಷ್ ತೊಳೆದ ನೀರು ದಿಗಂತದಲ್ಲಿ ಹರಡಿದ್ದರೆ, ಆಕಾಶ ಒಣ ಒರೆಸಿಕೊಂಡ ವಿಸ್ತಾರ ಚಿಂದಿ. ನಮ್ಮ ಸಣ್ಣ ಗ್ರಹಿಕಾ ಮಿತಿಯಲ್ಲಿ ಎಂವಿ ಕವರಟ್ಟಿಯ ತಿರುಗಣಿ ಹುಟ್ಟು ಸಪ್ತಸಾಗರಗಳಿಗೆ ಹಾಕಿದ ಮಹಾ ಕಡೆಗೋಲಾಗಿ ಏನದ್ಭುತಗಳನ್ನು ತರಲಿದೆಯೋ ಎಂದು ನಿರುಕಿಸುತ್ತಲೇ ಇದ್ದೆವು. ಹಡಗಿನ ಸುವ್ಯವಸ್ಥಿತ ಸಾರ್ವಜನಿಕ ಘೋಷಣಾ ಜಾಲದಲ್ಲಿ ಊಟದ ಕರೆ ಕೇಳದಿದ್ದರೆ ಊಟ, ನಿದ್ರೆಯ ಪರಿವೆಯೂ ಇರುತ್ತಿರಲಿಲ್ಲವೋ ಏನೋ!

ಹಡಗಿನ ನಮ್ಮ ಊಟದ ಮನೆಯಲ್ಲಿ ಸಸ್ಯಾಹಾರೀ ಮಾಂಸಾಹಾರೀ ಪ್ರತ್ಯೇಕ ಬಡಿಸು ಕಟ್ಟೆಗಳಿದ್ದವು, ಧಾರಾಳ ಕುರ್ಚಿ ಮೇಜುಗಳಿದ್ದವು. ಬೆಳಿಗ್ಗೆ ಆರರಿಂದ ಆರೂವರೆಯವರೆಗೆ ಬಿಸ್ಕತ್, ಚಾ/ ಕಾಫಿ, ಏಳೂವರೆಯಿಂದ ಎಂಟರವರೆಗೆ ತಿಂಡಿ. ಬ್ರೆಡ್, ಬೆಣ್ಣೆ, ಜ್ಯಾಂ ಮತ್ತು ಒಂದು ಹಣ್ಣು (ಬಾಳೆ/ ಮೊಸುಂಬಿ) ಎಷ್ಟೂ ಇತ್ತು. ಮೇಲೆ ನಮಗೆ ನಾಲ್ಕೂ ಬೆಳಿಗ್ಗೆಗಳಿಗೆ ಪ್ರತ್ಯೇಕ ತಿಂಡಿಗಳೂ ಇದ್ದವು. ಒಂದು ದಿನ ಇಡ್ಲಿ, ಇನ್ನೊಮ್ಮೆ ಸೆಟ್ ದೋಸೆ, ಮತ್ತೊಮ್ಮೆ ಮಸಾಲೆದೋಸೆಯಾದರೆ ಕೊನೆ ದಿನ ಉಪ್ಪಿಟ್ಟು. ನಮ್ಮ ಊಟಕ್ಕೆ ಕಟ್ಸಾರು (ಸೂಪ್), ಕೊಚ್ಚುಸಳ್ಳಿ (ಸೌತೆ ನೀರುಳ್ಳಿ ನಿಂಬೆ ಇತ್ಯಾದಿಗಳ ಹಸಿ ಚೂರುಗಳ ಮಿಶ್ರಣ – ವೆಜಿಟೆಬಲ್ ಸಲಾಡ್), ಚಪಾತಿ, ಅನ್ನ, ಹಪ್ಪಳ, ತೊವ್ವೆ, ಕಡಲೆಗಸಿ, ಪಲ್ಯ, ಸಾಂಬಾರ್, ಮೊಸರು, ಪಾಯಸ, ಉಪ್ಪುಪ್ಪಿನಕಾಯಿ, ಬಿಸಿಬಿಸಿಯಾಗಿ ರುಚಿಕರವಾಗಿ ಮತ್ತು ಅಕ್ಷಯವಾಗಿ ಒಡ್ಡಿಕೊಳ್ಳುತ್ತಿದ್ದವು. ಮಾಂಸಾಹಾರಿಗಳಿಗೆ ಮೊಟ್ಟೆ, ಕಡಲ ಮೀನಿನ ಅದರಲ್ಲೂ ಲಗೂನ್‌ಗಳ ವಿಶಿಷ್ಟ ರುಚಿಗಳು ಸ್ಥಳೀಯ ಪಾಕದ ವೈಶಿಷ್ಟ್ಯದೊಡನೇ ಲಭಿಸಿತ್ತು ಮತ್ತು ಸ್ಮರಣೀಯವಾಗಿತ್ತು ಎಂದು ಮಿತ್ರರು ಹೇಳಿದರು. ಮೂರೂ ಮಧ್ಯಾಹ್ನದೂಟಗಳು ಮತ್ತು ಸಂಜೆಯ ಕಾಫಿ ದ್ವೀಪಗಳಲ್ಲಿ ಆಗುತ್ತಿದ್ದರೂ ವ್ಯವಸ್ಥೆ ಮತ್ತು ವೈವಿಧ್ಯ ಕೊರತೆಯಾದದ್ದಿಲ್ಲ. ಎಲ್ಲೆಡೆಗಳಲ್ಲಿ ಬಡಿಸಲು ವಿನಯವಂತ ಮತ್ತು ಧಾರಾಳೀ ಸಹಾಯಕರಿರುತ್ತಿದ್ದರು, ನಾವೇ ಬೇಕಾದ್ದನ್ನು, ಬೇಕಾದಷ್ಟು ಹಾಕಿಕೊಳ್ಳುವ ಸ್ವಾತಂತ್ರ್ಯವೂ ಇತ್ತು. ಆದರೆ ಕೆಲವರು ತಿನಿಸುಗಳನ್ನು ಅನಾವಶ್ಯಕ ರಾಶಿ ಹಾಕಿಕೊಂಡು, ಅನಂತರ ತಮ್ಮ ರುಚಿ ಸೂಕ್ಷ್ಮವನ್ನೋ ಕೋಮಲ ಆರೋಗ್ಯವನ್ನೋ ಕಾಳಜಿಪೂರ್ಣವಾಗಿ ಕಾಪಾಡಿಕೊಳ್ಳಲು ಅಷ್ಟಿಷ್ಟು ಬಿಸಾಡಿ ಹೋಗುತ್ತಿದ್ದದ್ದು ಕಾಣುತ್ತಿತ್ತು; ಎಷ್ಟಿದ್ದರೂ ನಮ್ಮದು ಮೇಲ್ವರ್ಗ.

ನಮ್ಮ ಇಪ್ಪತ್ತೊಂದು ಜನಕ್ಕೆ ಟಿಕೇಟ್ ದರದಲ್ಲಿ ಅರ್ಧ, ಇಡೀ ಇದ್ದರೂ ಇಬ್ಬರಿಗೆ ಒಂದರಂತೆ ಸಜ್ಜುಗೊಂಡ ಕೋಣೆಗಳನ್ನು ಧಾರಾಳ ಕೊಟ್ಟಿದ್ದರು. ಕೆಲವರದು ನಾಲ್ಕನೆಯ ಮಾಳಿಗೆ, ನಮ್ಮದು ಐದನೆಯದು. ಎರಡಂತಸ್ತಿನ ಮಂಚ, ಹಾಸಿಗೆ, ರಗ್ಗು, ಕಪಾಟು, ಮೇಜು, ಕುರ್ಚಿ, ಫ್ಯಾನು, ಬಿಗಿಮುಚ್ಚಿದ ಕನ್ನಡಿ ಕಿಟಕಿ ಹೆಚ್ಚೇನೂ ಬೇಡವೆನ್ನುವಂತಿತ್ತು. ಪ್ರತಿ ಕೋಣೆಗೂ ಸೇರಿದಂತಿದ್ದ ಪುಟ್ಟ ಬಚ್ಚಲಿನಲ್ಲಿ ಎಲ್ಲ ಹೊತ್ತಿಗೂ ಬೇಕಾದ ಬಿಸಿಯ ನೀರಿನ ವ್ಯವಸ್ಥೆಯೊಡನೆ ವಾಶ್ ಬೇಸಿನ್, ಕಮೋಡ್, ಸ್ನಾನದ ವ್ಯವಸ್ಥೆಯೂ ಸಾಬೂನು, ಟವೆಲಿನವರೆಗೆ ಒಪ್ಪವಾಗಿತ್ತು. ಇಲ್ಲಿನ ಬಾಗಿಲುಗಳಿಗೆ ಒಳಗಿನಿಂದ ಅಗುಳಿಯಿದೆಯಾದರೂ ಹೊರಗಿನಿಂದ ಬೀಗವಿಲ್ಲ! ಹಗಲಿನ ಚಟುವಟಿಕೆಗಳಿಗೆ ನಾವು ಹಡಗು ಬಿಟ್ಟು ಹೋಗಿ ಮರಳುವಾಗ ಕೋಣೆ ಮಡಿಗೊಳಿಸುತ್ತಾರೆ. ದ್ವೀಪಗಳಲ್ಲೂ ನಾವು ನಮ್ಮೆಲ್ಲಾ ಸೊತ್ತುಗಳನ್ನು ಎಲ್ಲೆಂದರಲ್ಲಿ ಬಿಟ್ಟು ದಿನಪೂರ್ತಿ ನಿರ್ಯೋಚನೆಯಿಂದ ವಿಹರಿಸಿ ಮರಳಿದರೂ ಕಳ್ಳತನದ ಸೊಲ್ಲು ಬರಲೇ ಇಲ್ಲ. ಒಟ್ಟು ಪ್ರವಾಸವೇ ಆಶ್ಚರ್ಯಕರವಾಗಿ ಯಾನಿ-ಸಿಬ್ಬಂದಿಗಳ ಮೇಲಿನ ಅಪಾರ ವಿಶ್ವಾಸದಿಂದ ನಡೆಯುತ್ತಿದೆ. ಇದು ಆಕಸ್ಮಿಕವಲ್ಲ, ಸಿಬ್ಬಂದಿ ಸ್ಪಷ್ಟವಾಗಿ ಘೋಷಿಸಿ ಹಾಗೇ (ಈ ಕಾಲದಲ್ಲೂ) ನಡೆಸಿಕೊಂಡು ಬರುತ್ತಿರುವ ವಾಸ್ತವ.

ಕೊಚ್ಚಿಯಿಂದ ಕಲ್ಪೆನಿಗೆ ಸುಮಾರು ಹದಿಮೂರು ಗಂಟೆಯ ಯಾನವಂತೆ. ಹಡಗಿನ ಸೌಮ್ಯ ಏಕನಾದದಲ್ಲಿ, ಸಣ್ಣ ಒಲೆತದ ಸಂತಸದಲ್ಲಿ (ಅವರಿವರು ಹೇಳಿದ ಸೀ-ಸಿಕ್ನೆಸ್ ಅಥವಾ ಕಡಲ-ಕಾಯಿಲೆ ಕಾಡಿಸಬಹುದಾದ ಸಮುದ್ರದ ಆಟೋಪ ನಮಗೆ ಸಿಗಲೇ ಇಲ್ಲ), ಕಲ್ಪಿತ ಚಳಿಗೆ ಬಿಸಿ ರಗ್ಗಿನ ಆಳಕ್ಕಿಳಿದು ನಿದ್ರಿಸಿದೆವು. ರಾತ್ರಿ ಆಗೀಗ ಎದ್ದರೂ ಕಂಡಿಯಾಚೆಗೆ ಹಡಗಿನದೇ ಬೆಳಕಿನಲ್ಲಿ ನೊರೆನೀರ ಮೊತ್ತ ಹಿಂದೆ ಸರಿಯುವ ಚಂದ ಕಾಣುತ್ತಿತ್ತು. ನಗರದ ಬೆಳಕಿಲ್ಲದೆ, ಚಂದ್ರನೂ ವಿಶೇಷ ಆಕ್ರಮಿಸದೆ (ಅಮಾವಾಸ್ಯೆ ಕಳೆದು ಎರಡೇ ದಿನವಾಗಿತ್ತು), ಯಾವ ಚೌಕಾಸಿಯಿಲ್ಲದೆ ಎಲ್ಲಾ ದಿಕ್ಕುಗಳಲ್ಲೂ ದಿಗಂತದವರೆಗೆ ಹಬ್ಬಿ ನಿಂತ ರಾತ್ರಿಯಾಕಾಶದ ಕಲ್ಪನೆ ನನ್ನ ತಂದೆ(ಜಿಟಿನಾ)ಗೆ (ನಕ್ಷತ್ರ ವೀಕ್ಷಣೆಗೆ) ಪುಳಕ ತರಿಸುತ್ತಿತ್ತು. ನಾನು ಅವರ ಕಿಂಚಿದಂಶ ಮಾತ್ರವಾದ್ದರಿಂದ ನಿದ್ದೆಗೇಡು, ಕತ್ತುನೋವು ಇಲ್ಲದೇ ನಿದ್ದೆ ಮುಂದುವರಿಸಿದೆ. ಹಾಗೆಂದ ಮಾತ್ರಕ್ಕೆ ನಮ್ಮ ಅತಿ ಹತ್ತಿರದ ನಕ್ಷತ್ರ – ಸೂರ್ಯನನ್ನೂ ಮರೆತು ಮಲಗುವುದುಂಟೇ? ಅದು ಹೊದಿಕೆ ಝಾಡಿಸುವುದರಿಂದ ಹಿಡಿದು ಮೇಲೇಳುವವರೆಗೆ ಎಲ್ಲಾ ನೋಡಬೇಕೆಂದು ನಾನು, ದೇವಕಿಯೂ ಐದು ಗಂಟೆಗೇ ಮೇಲಿನ ಧಕ್ಕೆಗೆ ಓಡಿದೆವು.

ಕಡುನೀಲಿಯ ತೆಳುತೆರೆಗಳ ಮೇಲೆ ಹಡಗಿನ ದೀಪವಾಡುತ್ತಿತ್ತು. ಸೀಳೋಟದ ಬಿಳಿನೊರೆಗಳ ಜಾಡಿರಲಿಲ್ಲ. ಹಡಗಿನ ಏಕನಾದದಲ್ಲಿ ತೀವ್ರತೆ ಇಳಿದಿದ್ದಿರಬೇಕು (ಗುರುತಿಸುವುದು ನನ್ನಿಂದಾಗಲಿಲ್ಲ), ಹಡಗು ನಿಂತಿತ್ತು. ನೀರು ಆಕಾಶದ ಗಡಿರೇಖೆ ಗುರುತಿಸಲಾಗದ ಸ್ಥಿತಿಗೆ ತುಸುವೇ ಭಂಗ ತರುವಂತೆ ಹಡಗಿನ ನೇರ ಎದುರು ಬಲು ದೂರದಲ್ಲಿ ಪುಟ್ಟ ದೀಪವೊಂದು ಬಿಟ್ಟು ಬಿಟ್ಟು ಹೊಳೆಯುವುದು ಕಾಣಿಸಿತು. ಓ, ಕಲ್ಪೆನಿಯ ಸ್ಥಿರ ನೆಲದ ಮೇಲಿನ ದೀಪಸ್ತಂಭವಿರಬೇಕೆಂದು ಊಹಿಸಿದೆವು. ಕಣ್ಣು ಚೂಪು ಮಾಡಿದಾಗ ಅದರ ಆಜುಬಾಜಿನಲ್ಲಿ ಇನ್ನೂ ಕೆಲವು ಮಸಕು ಸ್ಥಿರ ದೀಪಗಳು – ಕಲ್ಪೆನಿಯ ಬೀದಿ ದೀಪಗಳೇ ಇರಬೇಕು, ಮುಂದುವರಿಯಿತು ನಮ್ಮ ಕಲ್ಪೆನಿಯ ಕಲ್ಪನಾ ಸಾಹಿತ್ಯ. ಆದರೆ ಮಿನಿಟುಗಳು ಉರುಳುತ್ತಿದ್ದಂತೆ ಆ ದೀಪ ಸಮೂಹ ನಮ್ಮ ಎಡಮಗ್ಗುಲಿಗೆ ಸರಿಯುತ್ತಾ ಹೋಯ್ತು. ಅರೆ, ಯಾವುದೋ ಹಡಗಿರಬಹುದು. ಅಂದರೆ ನಮ್ಮದು ನಿಂತದ್ದು ಯಾಕೆ? ಗೊಂದಲಗಳ ಮೂಟೆ ದೊಡ್ಡದಾಗದಂತೆ ಆ ದೀಪ ಸಮೂಹದ ಹಿನ್ನೆಲೆಯಲ್ಲಿ ಸ್ವತಃ ಸೂರ್ಯನೇ ಮುಂಬೆಳಕು ಚೆಲ್ಲಿದ. ನಿಧನಿಧಾನಕ್ಕೆ ಬೆಳಕಿನ ಹುಡಿ ಹೆಚ್ಚುತ್ತಿದ್ದಂತೆ ಅವೆಲ್ಲ ನಮ್ಮ ಎಡಮಗ್ಗುಲಿನಿಂದಲೂ ಎಡಕ್ಕೆ ಸರಿಯುತ್ತಿರುವುದಲ್ಲ, ನಮ್ಮ ಹಡಗೇ ಪಶ್ಚಿಮಮುಖಿಯಾಗುವಂತೆ ತಿರುಗುತ್ತಿದೆಯೆಂಬ ಅರಿವು ಬಂತು. ಹಡಗಿನ ಬಲಮಗ್ಗುಲ ಅಂಚಿನಲ್ಲಿ ನಿಂತು ಎಡ ಅಂಚಿನಾಚೆಗೆ ಖಚಿತಗೊಂಡ ಕಲ್ಪೆನಿಯನ್ನು ನೋಡನೋಡುತ್ತಾ ಹಡಗಿನ ತೂಗಾಟವನ್ನೂ ಗುರುತಿಸುವ ಸಂತೋಷವನ್ನೂ ಅನುಭವಿಸುತ್ತಾ ಸೂರ್ಯೋದಯಕ್ಕೆ ಅನಿಮಿಷರಾದೆವು.

ಸೂರ್ಯೋದಯದ ಚಂದವನ್ನು ಸಾವಿರ ಮಾತಿನ ಸೋಲಿನಲ್ಲಿ ಕಾಣುವುದಕ್ಕಿಂತ ಗೆಳೆಯ ಕೃಶಿ ತೆಗೆದ ಚಿತ್ರ ಸರಣಿಯಲ್ಲಿ ನೀವೇ ಅನುಭವಿಸುವುದು ಲೇಸು. (ಇಲ್ಲಿ ಚಿಟಿಕೆ ಹೊಡೆಯಿರಿ) ಅಲ್ಲಿ ಕೃಶಿ ಕಂತು-ಕಥನದಲ್ಲಿ ನನ್ನಿಂದ ದಿನ ಮುಂದೆ ಓಡಿದ್ದರೆ, ಇತ್ತ ಮೈಸೂರಿನಲ್ಲಿ ರುಕ್ಮಿಣಿ ತನ್ನ ಮಾಲಾಲಹರಿ ಬ್ಲಾಗಿನಲ್ಲಿ (ಇಲ್ಲಿ ಚಿಟಿಕೆ ಹೊಡೆಯಿರಿ) ಇನ್ನಷ್ಟು ಆತುರದಲ್ಲಿ ಇಡಿಯ ಪ್ರವಾಸವನ್ನೇ ಮುಗಿಸಿಬಿಟ್ಟಿದ್ದಾಳೆ. ಅಲ್ಲೆಲ್ಲಾ ‘ಕ್ವಿಕ್ಕೀ’ ಸಿಕ್ಕಿತೆಂದು ನನ್ನ ಸಹ-ಯಾನ ಮರೆಯಬೇಡಿ. ಇದುವರೆಗಿನ ಕೊರೆತಕ್ಕೆ ನಿಮ್ಮ ಚಡಪಡಿಕೆ, ಮುಂದಿನ ಭೈರಿಗೆಗೆ ನಿಮ್ಮ ಹಾರೈಕೆ ಕೊಡುತ್ತೀರಲ್ಲಾ?