(ಸೂರಿಕುಮೇರು ಗೋವಿಂದ ಭಟ್ಟರ ಆತ್ಮಕಥೆಗೊಂದು ಅರೆಖಾಸಗಿ ಅನಿಸಿಕೆ) ಪ್ರಿಯ ಗೋವಿಂದ ಭಟ್ಟರೇ ನಾನು ವ್ಯಾಪಾರೀ ಅಗತ್ಯದಲ್ಲಿ ಯಕ್ಷೋಪಾಸನೆ ಕೊಳ್ಳುತ್ತಿದ್ದರೂ ನೀವು ವೈಯಕ್ತಿಕವಾಗಿ ನನಗೆ ಒಂದು ಗೌರವಪ್ರತಿ ಕೊಡುವ ಉತ್ಸಾಹ ತೋರಿಸಿದಿರಿ. ನಾನು ಪ್ರತಿ ಒಪ್ಪಿಸಿಕೊಳ್ಳದಿದ್ದರೂ ನೀವು “ನನ್ನಿಂದ ಗೌರವ ಪ್ರತಿ ಪಡೆದ ಅಥವಾ ಪುಸ್ತಕ ಕೊಂಡ ಎಲ್ಲರಿಗೆ ನಾನು ಹೇಳುವುದಿಲ್ಲ. ಆದರೆ ನೀವು ಮಾತ್ರ ಪುಸ್ತಕ ಓದಿ ನಿಮ್ಮ ಅಭಿಪ್ರಾಯ ತಿಳಿಸಬೇಕು” ಎಂದು ಹೇಳಿಹೋದಿರಿ. ಹಾಗಾಗಿ ಮುಂದಿನ ಸಾಲುಗಳನ್ನು ಓದುವ ಕಷ್ಟ ಕೊಡುತ್ತಿದ್ದೇನೆ. ಕಡುಬಡತನ, `ನಮ್ಮವರು’ ಎನ್ನಬಹುದಾದವರಿಂದಲೂ (ಅದೇ ಹೆಚ್ಚೇನೋ!) ಆದ ದ್ರೋಹಗಳು, ಯಾವುದೇ ಆದರ್ಶ ಕಟ್ಟಿಕೊಡುವವರಿಲ್ಲದೆಯೂ ನೀವು ರೂಪಿಸಿಕೊಂಡ ಜೀವನ, ಹಳೆಯ ಕಹಿಗಳ್ಯಾವವೂ ನಿಮ್ಮ ವರ್ತಮಾನವನ್ನು ಕಲುಷಿತಗೊಳಿಸದಂಥ ನಿಮ್ಮ ಸಂಯಮ ಹೀಗೆ ಪಟ್ಟಿ ಮಾಡ ಹೋದರೆ ಮೊದಲೇ ನಿಮ್ಮ ಬಗ್ಗೆ ಇದ್ದ ಪ್ರೀತಿ, ಗೌರವ ಅಪಾರವಾಗುತ್ತದೆ. ಹೀಗೆ ಇನ್ನಷ್ಟು ವಿವರಗಳಲ್ಲಿ ನಿಮ್ಮನ್ನೇ ನಿಮಗೆ ತೋರಿಸುವ ಬದಲು ಸದ್ಯ ನನಗೆ ಕಾಣಿಸಿದ ಭಿನ್ನಮತವನ್ನಷ್ಟೇ ಒಕ್ಕಣಿಸುತ್ತೇನೆ.
ಇದೇ ಜುಲೈ ಆಗಸ್ಟ್ ಸುಮಾರಿಗೆ ಹೀಗೇ ಸಿಕ್ಕ ಗೆಳೆಯ ಹಿರಣ್ಯ ವೆಂಕಟೇಶ್ವರ ಭಟ್ಟ “ಗೋವಿಂದ ಭಟ್ಟರ ಆತ್ಮಕಥೆ ಬರುತ್ತಿದೆ” ಎಂದು ಘೋಷಿಸಿದರು. ನಿಮ್ಮ ಸರ್ವಾಂಗ ಸುಂದರ ಕಲಾಗಾರಿಕೆ, ಲೋಕಾನುಭವ. ಪ್ರಾಯದ ಹಿರಿತನ, ಇನ್ನೂ ರಂಗದಲ್ಲಿ (ತಾಳಮದ್ದಳೆಯೂ ಸೇರಿದಂತೆ) ಎಲ್ಲರೂ ಬಯಸುವಂತೆ ಉಳಿಸಿಕೊಂಡಿರುವ ಚಟುಲತೆ ಮತ್ತೆ ಎಲ್ಲಕ್ಕೂ ಮಿಗಿಲಾಗಿ ನಿಮ್ಮ ವ್ಯಕ್ತಿತ್ವದ ನಿಗರ್ವ, ಸರಳ, ಸ್ನೇಹಶೀಲತೆಗಳ ಮುನ್ನೆಲೆಯಲ್ಲಿ ನನಗೆ ಆ ಸುದ್ದಿ ನಿಜಕ್ಕೂ ರೋಮಾಂಚನ ತಂದಿತ್ತು. ಕೇವಲ ಮಾತನ್ನೇ ಬಂಡವಾಳವಾಗಿಟ್ಟುಕೊಂಡು `ಯಕ್ಷಗಾನದಲ್ಲಿ’ ಅಚ್ಚಳಿಯದ ಮಧುರ ಅನುಭವಗಳನ್ನು ಕಟ್ಟಿಕೊಟ್ಟ ಕುಂಬಳೆಯವರ ಆತ್ಮಕಥೆಯ ಬೆನ್ನಿಗೇ ಬರಲಿದ್ದ `ಯಕ್ಷೋಪಾಸನೆ’ಯ ಬಗ್ಗೆ ನನಗೆ ಬಹುತರವಾದ ನಿರೀಕ್ಷೆಗಳೂ ಬೆಳೆದಿದ್ದವು. ಆದರೆ ಪುಸ್ತಕ ಓದಿದ ಮೇಲೆ ದಕ್ಕಿದ್ದು ಇಂಗ್ಲಿಷಿನ ನುಡಿಗಟ್ಟು – tip of the iceberg, ಅಷ್ಟೆ! (ಅರ್ಥಾತ್ ಮಂಜುಗಡ್ಡೆಯ ಕೊಡಿ. ಧ್ರುವ ಪ್ರದೇಶಗಳಲ್ಲಿ ಕೋಟ್ಯಂತರ ಟನ್ನು ತೂಕ, ಗಾತ್ರದ ಮಂಜುಗಡ್ಡೆಗಳು ಮುಖ್ಯ ಭೂಮಿಯಿಂದ ಕಳಚಿಕೊಂಡು ಸಮುದ್ರದಲ್ಲಿ ತೇಲಿಬರುತ್ತವಂತೆ. ಪ್ರಾಕೃತಿಕವಾಗಿ ಗಡ್ಡೆಯ ಬಹ್ವಂಶ ನೀರಿನಲ್ಲಿ ಮುಳುಗಿಕೊಂಡಿದ್ದು, ಬರಿಯ ಸಣ್ಣ ಅಂಶ ಮಾತ್ರ ನೀರಮೇಲೆ ಕಾಣಿಸಿಕೊಳ್ಳುತ್ತದಂತೆ. ಅನುಭವವಿಲ್ಲದ ನಾವಿಕ ಅಂಥ ಕೊಡಿಯನ್ನು ಉಪೇಕ್ಷಿಸಿ, ಸಮೀಪಿಸಿ ಅಪಾಯಕ್ಕೀಡಾಗಿ ಈ ನುಡಿಗಟ್ಟು ಹುಟ್ಟಿಕೊಂಡಿದೆ).
೧) ನನಗೆ ಮೊದಲು ಕಣ್ಣಿಗೆ ಕಟ್ಟುವ `ಗೋವಿಂದ ಭಟ್ಟ’ ಸುಮಾರು ಮೂವತ್ತು ವರ್ಷಗಳ ಹಿಂದೆ ಮಂಗಳೂರು ಪುರಭವನದ ಮಳೆಗಾಲದ ಪ್ರದರ್ಶನದ ಹನೂಮಂತ. ಪ್ರಚಾರಪತ್ರದ ಸೂಚನೆಯಂತೆ ಹನುಮಂತನ ಸಾಂಪ್ರದಾಯಿಕ ತೆರೆಮರೆ ಕುಣಿತವನ್ನು ನೀವು ಪ್ರದರ್ಶಿಸಿದ್ದಿರಿ. ಹೇನು ಹೆಕ್ಕುವ ಮತ್ತು ತಿನ್ನುವ, ಪಕ್ಕೆ ತುರಿಸುವ, ಹಲ್ಲು ಕಿಸಿದು ಬೆದರಿಸುವ ಬಾಳೆತೋಟದ ಕಪಿತ್ವ ನನಗೆ ಸರಿ ಕಾಣಲಿಲ್ಲ. ನಾನು ಉದಯವಾಣಿಗೊಂದು ಪತ್ರ ಬರೆದು ಟೀಕಿಸಿದೆ. ಪ್ರತಿಕ್ರಿಯೆ ಯಾರಿಂದಲೂ ಬಂದಿರಲಿಲ್ಲ. ಆ ದಿನಗಳಲ್ಲೊಮ್ಮೆ ನೀವು ನನ್ನಂಗಡಿಗೆ ಯಾವುದೋ ಪುಸ್ತಕ ಕೇಳಿಕೊಂಡು ಬಂದಾಗ ಹುಂಬತನದಲ್ಲಿ ನೆನಪಿಸಿದೆ. ತಿರುಗಾಟದಲ್ಲಿದ್ದ ನೀವು ಪತ್ರಿಕೆಯನ್ನೇ ನೋಡಿರಲಿಲ್ಲವೆಂದು ತಿಳಿದು ನಿರಾಶೆಯಾಯ್ತು. ಛಲಬಿಡದೆ ನನ್ನಲ್ಲಿದ್ದ ಪ್ರತಿಯನ್ನು ತೋರಿಸಿದಾಗ, ಓದಿ ದಿವ್ಯ ನಿರ್ಲಕ್ಷ್ಯದಲ್ಲಿ “ನಾನು ಅಷ್ಟೇ ತೋರಿಸಿದೆ. ವಿವೇಚನೆ ಬಳಸದಿದ್ದರೆ ಹನುಮಂತ ತನ್ನದೇ ಹೇಲು ತಿನ್ನುವುದನ್ನು ತೋರಿಸಬೇಕಾಗುತ್ತಿತ್ತು” ಎಂದು ನನ್ನನ್ನು ಅಪ್ರತಿಭನನ್ನಾಗಿಸಿ ನಡೆದಿರಿ. ಅದನ್ನು ಬಿಟ್ಟ ವಿವೇಚನೆ ಇದನ್ನೂ ಯಾಕೆ ಬಿಡಲಿಲ್ಲ? ಶೌರ್ಯದ ಸಂಕೇತಗಳಾದ ಬಂಡೆ ಹೊತ್ತು ಹಾಕುವುದು, ದೀರ್ಘ ಗಗನಗಮನದ ಬಲ ಪ್ರದರ್ಶನಾದಿಗಳನ್ನು ಪರಿಷ್ಕರಿಸಿ ವಿಸ್ತರಿಸಬಹುದಿತ್ತಲ್ಲಾ? ಎಂಬಿತ್ಯಾದಿ ಸಂದೇಹಗಳನ್ನು ನುಂಗಿಕೊಂಡೆ.
೨) ಯಾವತ್ತೋ ಎಲ್ಲೋ ನಿಮ್ಮ ಮೇಳದ ಚೌಕಿಯಲ್ಲಿ ನಾನು ಯಾರದೋ ಬಣ್ಣಗಾರಿಕೆ ನೋಡುತ್ತಾ ನಿಂತಿದ್ದಾಗ ನೀವು ಏನೋ ವೇಷದಲ್ಲಿ ರಂಗಕಲಾಪ ಮುಗಿಸಿ ಬಂದಿದ್ದಿರಿ. ಆಗ ಯಾರೋ ಅಂದಿನ ಪತ್ರಿಕೆಯಲ್ಲಿ ಇನ್ಯಾರೋ (ನಾನಲ್ಲ) ಬರೆದಿದ್ದ ಯಕ್ಷ-ವಿಮರ್ಶಾ ವಾಕ್ಯವನ್ನು ಉದ್ಧರಿಸುತ್ತಾ `ಗೋವಿಂದ ಭಟ್ಟರೂ ಒಳ್ಳೆ ಮಾತಾಡಿದರು’ ಎಂದಾಗ ನೀವು ಅಸಹನೆಯಲ್ಲಿ ಗೊಣಗಿದ್ದು ನನ್ನ ಕಿವಿಗೂ ಬಿತ್ತು – “ಗೋವಿಂದ ಭಟ್ಟ ಒಳ್ಳೇ ಕುಣಿದ, ಒಳ್ಳೇ ಅಭಿನಯ ಕೊಟ್ಟ, ಎಂದ್ಯಾಕೆ ಇವರಿಗೆಲ್ಲಾ ಕಾಣುವುದಿಲ್ಲ”. ರಂಗಕರ್ಮದಲ್ಲಿ ನಗೆಪಾಟಲಾಗುವ ಅಂಗಚೇಷ್ಟೆಗಳಿದ್ದೂ ಮೆರೆಯುತ್ತಿದ್ದ ರಾ.ಸಾಮಗರು, ಕುಣಿತ ಮಣಿತಗಳ ಸಾಧ್ಯತೆಯನ್ನೂ ನಿರಾಕರಿಸಿ ಜನಪ್ರಿಯರಾಗಿದ್ದ ತೆಕ್ಕಟ್ಟೆ ಕುಂಬಳೆಯವರು, ಎಷ್ಟೋ ಬಾರಿ ತಲೆನೋವು ಹಿಡಿಸುವಷ್ಟು ಏಕವ್ಯಕ್ತಿತ್ವವನ್ನು ಮೇಳದೊಳಗೂ ಸಾಧಿಸಿ ಸಹಕಲಾವಿದರು ಬಿಡಿ, ಸಾಮಾನ್ಯ ಪ್ರೇಕ್ಷಕರನ್ನು ಅದುಮಿಡುತ್ತಿದ್ದ ಶೇಣಿಯಂಥವರನ್ನೆಲ್ಲ `ವಿಮರ್ಶಕರು’ ಅಳೆಯುತ್ತಿದ್ದದ್ದು ಮಾತಿನ ಅಡಿಗೋಲಿನಲ್ಲಿ. ಸರ್ವಾಂಗ ಸೌಂದರ್ಯಕ್ಕೆ ಶ್ರಮಿಸಿದ ನಿಮ್ಮನ್ನೂ ಅದೇ ಕೋಲಿನಲ್ಲಿ ಅಳೆದು ಹನ್ನೆರಡಕ್ಕೆ ಒಂದೆರಡು ಇಂಚು ಕಡಿಮೆ ಎನ್ನುವಂತೆ ಹೊಗಳಿದ್ದು ನಿಜಕ್ಕೂ ಅವಮಾನಕರ ಎಂದು ನನಗೂ ಆಗ ಹೊಳೆಯಿತು!
೩) ಬನ್ನಂಜೆ ಸಂಜೀವ ಸುವರ್ಣರ ಬಳಗ ಬಡಗುತಿಟ್ಟಿನ ಪೂರ್ವರಂಗದ ಪುನರುಜ್ಜೀವನ ಪರಿಷ್ಕಾರವಾಗಿ ನಡೆಸುತ್ತಿದ್ದದ್ದು ಡಾ| ಮನೋಹರ ಉಪಾದ್ಯ ಮತ್ತು ನನ್ನ ಗಮನದಲ್ಲಿತ್ತು. ಅದು ಉಡುಪಿಯ ಹೊರಗೂ ಸಾರ್ವಜನಿಕ ವೇದಿಕೆಯಲ್ಲಿ ಪ್ರಚುರಗೊಳಿಸಬೇಕಾದ ವಿಷಯ ಎನ್ನುವುದು ನಮ್ಮ ಪ್ರಜ್ಞೆಯಲ್ಲಿತ್ತು. ಇದೇ ಸಮಯಕ್ಕೆ ನನ್ನ ಮಗ – ಅಭಯಸಿಂಹ, ಪುಣೆಯಲ್ಲಿ ಚಲನಚಿತ್ರದ ನಿರ್ದೇಶಕತ್ವದ ಸ್ನಾತಕೋತ್ತರ ಅಧ್ಯಯನ (ಮೂರು ವರ್ಷದ ಅವಧಿಯದ್ದು) ನಡೆಸುತ್ತಿದ್ದ. ಪ್ರಜ್ಞೆ ವಾಸ್ತವಗಳ ಸಂಗಮವಾಗಿ ನಾವು ಮಂಗಳೂರಿನಲ್ಲಿ ಉಡುಪಿಯ ಯಕ್ಷಗಾನ ಕೇಂದ್ರದ `ಪೂರ್ವರಂಗ ಮತ್ತು ಯಕ್ಷೋತ್ತಮ ಕಾಳಗ’ದ ಸಾರ್ವಜನಿಕ ಪ್ರದರ್ಶನ ಮತ್ತು ವಿಡಿಯೋ ದಾಖಲೀಕರಣವನ್ನು ನಡೆಸಿದೆವು. ಅಭಯನ ನಿರ್ದೇಶನ ಕೇವಲ ದಾಖಲೀಕರಣಕ್ಕೆ ಸೀಮಿತವಿತ್ತು. ಬೇರೆ ಬೇರೆ ಕೋನದಲ್ಲಿ ಮೂರು ಸ್ಥಿರ ಮತ್ತು ಒಂದು ಜಂಗಮ ಕ್ಯಾಮರಾವಿದ್ದರೂ ಟೇಪಿನ ಖರ್ಚು ಮತ್ತು ಚಿತ್ರೀಕರಣದ ಉತ್ತರಕ್ರಿಯೆಗಳ ವೆಚ್ಚ ನಮ್ಮ ಕೈ ಮೀರದಿರಲು ಸ್ಥಳೀಯವಾಗಿಯೇ ಸಂಕಲನ ಕ್ರಿಯೆಯನ್ನೂ ನಡೆಸುತ್ತ ದಾಖಲಿಸಿದೆವಾದರೂ ಅದು ಐದು ಸೀಡಿಗಳಷ್ಟು ದೀರ್ಘವಾಯ್ತು.
ಆ ಪೂರ್ವರಂಗದ ಸೀಡೀಗಳು ಪ್ರಕಟವಾದ ಕೆಲವೇ ವಾರಗಳಲ್ಲಿ ಪ್ರತಿಸ್ಪರ್ಧೆಯೋ ಎಂಬಂತೆ ನೀವು ತೆಂಕು ತಿಟ್ಟಿನ ಪೂರ್ವರಂಗವನ್ನು ದಾಖಲಿಸಿದ್ದು ಮೊದಲು ಕೇಳಿ, ಅನಂತರ ನೋಡಿ ವಿಷಾದವಾಯ್ತು. ತಿಟ್ಟುಗಳಲ್ಲಿ ಶ್ರೇಷ್ಠ, ಕನಿಷ್ಠ ಎಂಬ ಭಾವ ನಮಗಿರಲಿಲ್ಲ. ಅಲ್ಲಿ ಸಮರ್ಥ ಗುರು ಇದ್ದಾನೆ, (ಕನಿಷ್ಠ ಆರೇಳು ತಿಂಗಳು ಅವರಲ್ಲೇ) ಪಳಗಿದ ಶಿಷ್ಯವೃಂದವಿದೆ, ಕಲಾತ್ಮಕವಾಗಿ ದಾಖಲಿಸಲು ನಮ್ಮಲ್ಲಿ ತಂತ್ರಜ್ಞನಿದ್ದಾನೆ ಮತ್ತು ಯಾರ ಹಂಗೂ ಪ್ರತಿಫಲಾಪೇಕ್ಷೆಯೂ ಇಲ್ಲದೆ ತಯಾರಿಸಲು ನಮ್ಮಿಬ್ಬರಲ್ಲಿ ಸ್ವಲ್ಪ ಹಣವಿದ್ದದ್ದಷ್ಟೆ ನಮಗಿದ್ದ ಪ್ರೇರಣೆ. (ಮುಂದೊಂದು ದಿನ ಹೀಗೇ ಕಳೆದು ಹೋಗುತ್ತಿರುವ ಕರ್ಕಿಶೈಲಿಯ ದಾಖಲೀಕರಣವನ್ನು ನಾವು ಇನ್ನೂ ಹೆಚ್ಚಿನ ತಯಾರಿ ಮತ್ತು ವೆಚ್ಚದೊಡನೆ ಮಾಡಿದ್ದೂ ಉಂಟು.) ನೀವು ಅವನ್ನು ಪರಿಗಣಿಸದೆ ಎಲ್ಲೆಲ್ಲೋ ವೃತ್ತಿರಂಗದಲ್ಲಿ ಕಳೆದುಹೋದವರನ್ನು ಒಟ್ಟುಮಾಡಿ, ಸಾರ್ವಜನಿಕ ಪ್ರದರ್ಶನದ ನಿಕಷಕ್ಕೊಡ್ಡದೆ ಎಲ್ಲೋ ಸಪುರ ಕೋಣೆಯಲ್ಲಿ ಒಂದೇ ಕ್ಯಾಮರಾದಲ್ಲಿ ದಾಖಲಾತಿ ನಡೆಸಿಬಿಟ್ಟಿರಿ. ಸಹಜವಾಗಿ ಅದು ನೀವು ಉದ್ದೇಶಪಡದೇ ಅನುಭವೀ ಯಕ್ಷಗುರುವೂ ಅಪ್ರತಿಮ ಕಲಾವಿದನೂ ಆಗಿದ್ದ ನಿಮ್ಮ ಯೋಜನೆ ಮತ್ತು ಕಾರ್ಯನಿರ್ವಹಣೆ ಎಂಬ ಹೆಸರಿನಲ್ಲಿ ವಿತರಣೆಗೊಳ್ಳುವ ಕಳಪೆ ಮಾಲಾಯ್ತು! ಒಟ್ಟಾರೆ ನಿಮ್ಮ ನಿಜ ಯೋಗ್ಯತೆಯನ್ನೂ ಮತ್ತು ತೆಂಕು ತಿಟ್ಟಿನ ಗುಣವನ್ನೂ ತಪ್ಪು ಬೆಳಕಿನಲ್ಲಿ ದಾಖಲಿಸಿದ ಹಾಗಾಯ್ತು.
ಹೀಗೇ ಸ್ವಯಂಸ್ಪಷ್ಟವಾಗುವ, ಕಾಲಾನುಕ್ರಮ ವಿಭಿನ್ನ ಆಖ್ಯಾಯಿಕೆಗಳ ಸರಣಿಯಲ್ಲಿ ಕಲಾವಿದ ಗೋವಿಂದ ಭಟ್ಟ ವಿಕಸಿಸಿದ್ದನ್ನು ನೋಡಲು ಬಯಸಿದ್ದೆ. ಮೇಲೆ ಹೇಳಿದ ಮೂರೂ ಘಟನೆಗಳಲ್ಲಿ ನನ್ನದು ಏಕಪಕ್ಷೀಯ ನಿರ್ಧಾರಗಳು ಮತ್ತು ತಪ್ಪೂ ಇರಬಹುದು. ಆದರೆ ಇಂಥವುಗಳು ಕೊಡುವ ಆಪ್ತ ಚಿತ್ರವನ್ನು ಯಾವ ಅಭಿನಂದನಾ ಪತ್ರವೂ (ಅಥವಾ ಆಪಾದನಾ ಪಟ್ಟಿಯೂ) ಕೊಡಲಾರದು. `ಅನುಭವ ಸಿಹಿಯಲ್ಲ, ಅದರ ನೆನಪೇ ಸವಿ’ ಎನ್ನುವುದು ಇದಕ್ಕೇ ಅಲ್ಲವೇ. ಇದು ಸಹಜವಾಗಿ ಹಾಸುಹೊಕ್ಕಾಗಿ ವೈಯಕ್ತಿಕ ಜೀವನವನ್ನು ಹೇಳಿಯೇ ಹೇಳುತ್ತಿತ್ತು. ಪರೋಕ್ಷ ಮಾರ್ಗದಲ್ಲಿ ಕಾಣಿಸಿದರೂ ಕಲೆ ಮತ್ತು ಕಲಾವಿದತನವನ್ನು ಸ್ಪಷ್ಟಗೊಳಿಸುತ್ತಾ ಹೋಗುತ್ತಿತ್ತು. ಪುಸ್ತಕದಲ್ಲಿ ನೀವು ಮೇಳ ಸೇರುವವರೆಗೆ ದೈನಂದಿನ ಕಲಾಪಗಳಲ್ಲಿ ಒಂದು ಮಟ್ಟಿಗೆ ಸರಿಯಾಗಿಯೇ ವಿಶಿಷ್ಟವಾದ್ದನ್ನು ಎತ್ತಿ ಹೇಳುತ್ತಾ ಹೋಗಿದ್ದೀರಿ. ಮತ್ತೆ ಮುಖ್ಯವಾಗಿ ಧರ್ಮಸ್ಥಳ ಮೇಳದಲ್ಲಿ ಗಟ್ಟಿಯಾದಲ್ಲಿಗೆ ಕೇವಲ ಪಟ್ಟಿ ಮಾಡಲು ತೊಡಗಿದ್ದು ನನಗೆ ಸರಿ ಕಾಣಲಿಲ್ಲ. ನಿಮ್ಮ ಬಾಲ್ಯದ ಮತ್ತೂ ಸಾಂಸಾರಿಕ ಜೀವನದ ವಿವರಗಳನ್ನು ಹೇಳುವಲ್ಲಿ ನಿಮಗಿಲ್ಲದ ದಾಕ್ಷಿಣ್ಯ ವೃತ್ತಿರಂಗದ ಮಾತಿಗೆ ಬಂದಾಗ ತುಂಬಾ ಸತಾಯಿಸಿರುವಂತೆ ಕಾಣುತ್ತದೆ. `ಊರೂರಿನ ದೂಳು ತಿನ್ನುವವನಿಗೆ ಮನೆಯಲ್ಲಿ ಜಾಗವಿಲ್ಲ’ ಎಂದು ಭಾವನಿಂದ ನೂಕಿಸಿಕೊಂಡರೂ ಕ್ಷೀಣವಾಗಿ ಅಕ್ಕನ ಬಿಕ್ಕು ಕೇಳುವ ಸೂಕ್ಷ್ಮಜ್ಞ, ವೃತ್ತಿರಂಗದ ವಿಚಾರದಲ್ಲಿ ಒಮ್ಮೆಗೆ ವೈಯಕ್ತಿಕತೆ ಕಳೆದುಕೊಂಡು ಕೇವಲ ಮೇಳದ ವಕ್ತಾರನಂತೆಯೋ ವರದಿಗಾರನ ಪಾತ್ರದಲ್ಲಿ ಬಂದಂತೆಯೋ ಕಾಣುತ್ತದೆ. (ಜಪಾನ್ ಪ್ರವಾಸ ಕಥನ, ಧರ್ಮಸ್ಥಳ ಮೇಳಕ್ಕೆ ಸಂಬಂಧವಿಲ್ಲದ್ದು ಚೊಕ್ಕ ಚಂದವಿದೆ) ಬಾಹುಬಲಿ ಯಾತ್ರೆಯೊಡನೆ ಮೇಳದ ಕಲಾಪ (ನಿಮ್ಮ ಪಾತ್ರ) ಚೆನ್ನಾಗಿಯೇ ಬಂದಿದೆ. ಆದರೆ ಧರ್ಮಸ್ಥಳ ಮೇಳದ ನಲ್ವತ್ತು ವರ್ಷಗಳ ನಿಮ್ಮ ಕಸುಬುದಾರಿಕೆಯಲ್ಲಿ ಉಲ್ಲೇಖನಾರ್ಹ ಅನುಭವ ಇಷ್ಟು ಸ್ವಲ್ಪವೇ ಎಂದು ಆಶ್ಚರ್ಯ ಉಳಿಯುತ್ತದೆ.
ಅಧ್ಯಾಯ ೧೫ರ ಸಂದರ್ಶನ, ಅನುಬಂಧವಾಗಿ ಬಂದ ಕಲಾವಿದನ ಅಂತರಂಗ ಮತ್ತು ಕೆಲವು ನೆನಪುಗಳು, ಅವು ರೂಪುಗೊಂಡ ಘಟನೆಗಳ ಚಿತ್ರಣದೊಂದಿಗೆ ಆತ್ಮವೃತ್ತಾಂತದಲ್ಲಿ ಸೇರಿಹೋಗಬೇಕಿತ್ತು. ಅವನ್ನು ಸೂತ್ರ ರೂಪದಲ್ಲಿ ಗ್ರಹಿಸುವುದೋ ಅಥವಾ ಅರ್ಥ ಕಟ್ಟುವುದೋ ಓದುಗನ ಮನೋಭೂಮಿಕೆಯಲ್ಲಿ ಆಗಬೇಕಿತ್ತು. ಅಧ್ಯಾಯ ೧೩ರ ಆವಿಷ್ಕಾರಿಕ ಪ್ರಸಂಗಗಳು, ೧೪ರ ಎಂತು ಬಣ್ಣಿಪೆ, ೧೭ರ ಯಕ್ಷ ಹಿನ್ನೋಟ ಮುನ್ನೋಟ, ಇವುಗಳು ನೀವು ಬರೆಯಬಹುದಾದ ಪ್ರತ್ಯೇಕ ಶಾಸ್ತ್ರಗ್ರಂಥವೇನಾದರೂ ಇದ್ದರೆ ಅದರ ಅಧ್ಯಾಯಗಳಾಗಲು ಅಡ್ಡಿಯಿಲ್ಲ. ಆತ್ಮಕಥೆಯಲ್ಲಿ ಪ್ರತ್ಯೇಕವಾಗಿ ಬರುವುದು ಸರಿಯಲ್ಲ. ನನ್ನ ಮಿತಿಯಲ್ಲಿ ವ್ಯಕ್ತಿಚಿತ್ರ ಹೇಗಿರಬೇಕಿತ್ತು ಎನ್ನುವುದಕ್ಕೆ ಉದಾಹರಣೆಯಾಗಿಯೂ (ನಿಮ್ಮ ಜೀವನ ಸಾಹಸದಲ್ಲಿ ಏನೂ ಅಲ್ಲದ ನನ್ನನುಭವದ) ಮೇಲೆ ಮೂರು ತುಣುಕುಗಳಲ್ಲಿ ನನ್ನ `ಗೋವಿಂದ ಭಟ್ಟರನ್ನು’ ತೆರೆದಿಟ್ಟಿದ್ದೇನೆ ಎಂಬುದನ್ನು ಗಮನಿಸಿ. ಆ ಉದಾಹರಣೆಯ ಗ್ರಹಿಕೆಗಳೆಲ್ಲ ಏಕಪಕ್ಷೀಯವೂ ತಪ್ಪೂ ಇರಬಹುದು. ಅವನ್ನು ನಿಮ್ಮಲ್ಲಿ ತೆರೆದಿಟ್ಟು ಸರಿಪಡಿಸಿಕೊಳ್ಳಲು ಎಂದೂ ಅವಕಾಶ ಒದಗಲೇ ಇಲ್ಲ. ಕುಂಬಳೆಯವರಿಗೆ ಡೈರಿ ಬರೆಯುವ ಅಭ್ಯಾಸವಿದ್ದದ್ದು ತುಂಬಾ ಸಹಾಯವಾಯ್ತು ಎಂದು ಕೇಳಿದ್ದೇನೆ. ನಿಮಗೆ ಅಂಥ ಬಲವಿರಲಾರದು. ಮತ್ತೆ ಅವರ ಹಾಗೆ ರಂಗದ ಜನಪ್ರಿಯತೆಯನ್ನು ಲೌಕಿಕ ಸಂಬಂಧಗಳಿಗೆ ವಿಸ್ತರಿಸಿ ಬೇರೆಯವರ ನೆನಪಿನಲ್ಲಿ ಪುನರುಜ್ಜೀವನ ಕಾಣಬಹುದಾದ ಜೀವನ ಶೈಲಿಯೂ ನಿಮ್ಮದಲ್ಲ. ಆದರೆ ನೀವು ವಹಿಸಿದ ಪಾತ್ರ ವೈವಿಧ್ಯ ಮತ್ತವಕ್ಕೆ ಮಾತಿನಲ್ಲೇ ಕಟ್ತಿಕೊಟ್ಟ ಸ್ವತಂತ್ರ ನುಡಿಚಿತ್ರಗಳ ತಾಕತ್ತಿನಲ್ಲಿ ನಿಮಗೆ ಆತ್ಮಕಥೆ ಪರಿಷ್ಕರಿಸುವುದು ಕಷ್ಟವಾಗಬಾರದಿತ್ತು; ಈಗಲೂ ತಡವಾಗಿಲ್ಲ.
`ಯಕ್ಷೋಪಾಸನೆ’ ಡಾ| ಪ್ರಭಾಕರ ಶಿಶಿಲರು ಬರೆದ `ಗೋವಿಂದ ಭಟ್ಟರ ಜೀವನ, ಸಾಧನೆ’ಯ ಮಟ್ಟಕ್ಕೆ ಚೆನ್ನಾಗಿ ಬಂದಿದೆ. ಈ ಪುಸ್ತಕ `ರೂಪುಗೊಂಡ ಬಗೆ’ಯಲ್ಲಿ ಶಿಶಿಲರು “…ಜೋಶಿಯವರು ಸಲಹೆ ಸೂಚನೆಗಳ ದೊಡ್ಡ ಪಟ್ಟಿಯನ್ನು ನೀಡಿದರು. ಅವುಗಳು ಸ್ವೀಕಾರಾರ್ಹವಾಗಿದ್ದವು” ಎನ್ನುವಲ್ಲಿ ಕಾಣುವ ಧೋರಣೆ ನನ್ನ ಪುಸ್ತಕದ ಓದನ್ನು ಪ್ರಭಾವಿಸಿದ್ದರೆ ಆಶ್ಚರ್ಯವಿಲ್ಲ! ಇದು ಹೆಚ್ಚು ವಸ್ತುನಿಷ್ಠ ಅಂದರೆ ಆತ್ಮಕಥೆಯಾದ್ದರಿಂದ `ಗೋವಿಂದಭಟ್ಟ’ ನಿಷ್ಠವಾಗಿರಬೇಕಿತ್ತು. ಹಾಗಾಗಿದ್ದರೆ ಅದು ಖಂಡಿತವಾಗಿಯೂ ಇದಕ್ಕೂ ದೊಡ್ಡದಾಗುತ್ತಿತ್ತು. ಮತ್ತದಕ್ಕೆ ಕೇವಲ ಗ್ರಾಂಥಿಕ ಶುದ್ಧ ತರುವಷ್ಟೇ ಕೆಲಸ ಸಂಪಾದಕನಿಂದ ನಡೆಯಬೇಕಿತ್ತು, ಹಾಗೆ ನಡೆದಿಲ್ಲ ಎಂದು ನನ್ನ ಭಾವನೆ.
ತಪ್ಪಿದ್ದರೆ, ಬೇಸರವಾದರೆ ದಯವಿಟ್ಟು ಕ್ಷಮಿಸಿ ಮತ್ತೆ ಅವಶ್ಯ ಸ್ಪಷ್ಟಪಡಿಸಿ. ನೀವು ಏನು ಹೇಳಿದರೂ ಬಿಟ್ಟರೂ ಮೊದಲೇ ನಿಮ್ಮಲ್ಲಿನ ಕಲಾವಿದನಿಂದ ಈಗ ಯಕ್ಷೋಪಾಸನೆಯಲ್ಲಿ ಸಿಕ್ಕಿದ ವ್ಯಕ್ತಿಪರಿಚಯದಿಂದ ನಿಮ್ಮ ಬಗೆಗಿನ ನನ್ನ ಗೌರವ ಹೆಚ್ಚಿದೆ.
ಇಂತು ವಿಶ್ವಾಸಿ
ಜಿ.ಎನ್. ಅಶೋಕವರ್ಧನ
ತಾರೀಕು ೨೧-೧೨-೨೦೦೮
ಪುಸ್ತಕ ಮಾಹಿತಿ: ಯಕ್ಷೋಪಾಸನೆ – ಸೂರಿಕುಮೇರಿ ಗೋವಿಂದ ಭಟ್ಟರ ಆತ್ಮ ವೃತ್ತಾಂತ. (ಸಂಪಾದಕ?/ಲೇಖಕ?) ಡಾ| ಬಿ. ಪ್ರಭಾಕರ ಶಿಶಿಲ, ಸುಳ್ಯ. ಪ್ರಕಾಶನ: ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ. ಪುಟ: ೨೫೨ ಬೆಲೆ ರೂ ೨೦೦.
Dear Ashok, As usual you came up with few hard truths. I appreciate your committment for the art. How ever I have read that book and I feel such books really a need of the hour and our understanding of Yakshagana would extend a lot. Congratulations to Mr. Govinda Bhat for his efforts,
ಪ್ರಿಯ ಬಿಳಿಮಲೆಯವರೇ ಪ್ರತಿಕ್ರಿಯೆಗೆ ಕೃತಜ್ಞ. ಪುಸ್ತಕದ ಉಪಯುಕ್ತತೆ, ಗೋವಿಂದಭಟ್ಟರ ಯೋಗ್ಯತೆಗಳ ಬಗ್ಗೆ ನನಗೇನೂ ಸಂದೇಹವಿಲ್ಲ. ಇದು ಅವರು ಒತ್ತಾಯಪೂರ್ವಕವಾಗಿ ಕೇಳಿದ್ದರಿಂದ ಮತ್ತು ಪುಸ್ತಕದ ಉತ್ತಮಿಕೆಗಾಗಿ, ನೇರ ಗೋವಿಂದ ಭಟ್ಟರನ್ನೇ ಉದ್ದೇಶಿಸಿ ಬರೆದ ಪತ್ರ. ಮೂರು ವಾರಕ್ಕೂ ಮಿಕ್ಕು ಭಟ್ಟರ ಪ್ರತಿಕ್ರಿಯೆಗೆ ಕಾದ್ದದ್ದು ಸುಮ್ಮನಾಯಿತು. ಬ್ಲಾಗ್ ಅರೆಖಾಸಗಿಯೂ ಹೌದಾದ್ದರಿಂದ ಇನ್ನಷ್ಟು ಸಮಾನ ಮನಸ್ಕರಿಗೆ ತಲಪಲೆಂದು ಇಲ್ಲಿ ಹಾಕಿದ್ದೇನೆ. ಇದೇ ಸಾರ್ವಜನಿಕರನ್ನು ಉದ್ದೇಶಿಸುವ ವಿಮರ್ಶೆಯಾದರೆ ಪ್ರಾಮಾಣಿಕವಾಗಿಯೇ ಪುಸ್ತಕವನ್ನು ಸಮರ್ಥಿಸುವಲ್ಲಿ ಶೇಕಡಾ ಎಪ್ಪತ್ತರ ಮೇಲಿನ ಅಂಕ ಕೊಡುತ್ತಿದ್ದೆ.
Great piece. I read that book. (Fast reading). I think, what you say is perfectly right and my views match yours. There are not much indications about the learning as a kalavidha in that book. Govindanna is essentially belonging to “Realism” in concept in such a rich art form like Yakshagaana which would always challenge realism. In fact Pandit Muliya Timmappayya in “Nadoja Pampa” is more influenced by the art around him in appreciating “Tagalchi heluva” style of Pampa. When we compare it with Mysore critics who said “ In Pampa Charitre Yennuva Kasavu Seride” we understand Muliya better. Govindanna in the middle of that art of Yakshagana and still is close to “realism”. Shishila's focus is more on romanticizing his poverty than appreciating the learning in art. The growth and combination of various levels of growth in yakshagana as a performer would have made the book greater. Now the book becomes the compilation of facts. Dr. M. Prabhakara Joshi has high level of understanding of concepts in Yakshagana. But, he had some limitation as an advisor. Perhaps it also depends on the perception of the people in what they think of biography. For most people it is only chronological record of life history. Perhaps the limitation is in the perception of Govindanna himself. Unless he feels that such a change and growth in performing art is to be recorded, it will be difficult for Prabhakar Shishila to record it.(Compare the book with B.V.Karanth’s biography Illiralare Allige Hogalaare written and compiled by Vaidhehi. It will be easy to understand what I say) When some one else writes on Govindanna and Yakshagana perhaps these things could be recorded I guess. Having said that, I am with Ashoka Vardhana and endorse his views as a reader of the book. These words I say with due respect to Govindanna. Alike Ramayya Rai (Particularly his Ruthu Parna) and some of the Arjunas of Govindanna are always a pleasure memory for me for the grace of dance, body gestures and stage performance. My two cents for the great discussion started by Ashoka Vardhana.
ಪ್ರಿಯ ಅಶೋಕರೇನಿಮ್ಮ ಪ್ರಯೋಗಕ್ಕೆ ಪ್ರತಿಯಾಗಿ ಸೂರಿಕುಮೇರರು ತೆಂಕು ತಿಟ್ಟಿನ ಪೂರ್ವರಂಗವನ್ನು ದಾಖಲಿಸಿಲು ಹೊರಡಬಾರದಿತ್ತು. ನಮ್ಮಲ್ಲಿ ಅನುಕರಣೆ ಶೂರರೇ ಹೆಚ್ಚು. ಹೆಚ್ಚಿನವರಿಗೆ ಬಿನ್ನ ದಾರಿಯಲ್ಲಿ ನಡೆಯುವ ಆಸಕ್ತಿ ಇಲ್ಲ ಎನ್ನಲು ವಿಷಾದವಾಗುತ್ತದೆ. ನೀವು ಹೇಳಿದಂತೆ ಅವರ ಕೃತಿ ಅವರ ಯೋಗ್ಯತೆಯನ್ನೂ ಮತ್ತು ತೆಂಕು ತಿಟ್ಟಿನ ಗುಣವನ್ನೂ ತಪ್ಪು ಬೆಳಕಿನಲ್ಲಿ ದಾಖಲಿಸಿದ ಹಾಗಾಯ್ತ. ನಿಮ್ಮ, ಗೋವಿಂದ
ಚಿಕ್ಕ೦ದಿನಿ೦ದ ಸೂರಿಕುಮೇರಿನವರ ವೇಷ ನೋಡುತ್ತ ಬೆಳೆದ ನನಗೆ ಅವರ ಬಗ್ಗೆ ಇದ್ದ ಗೌರವ ಒ೦ದೆರಡು ವರ್ಷ ಹಿ೦ದೆ ದೂರದರ್ಶನ ಚ೦ದನದಲ್ಲಿ ಬಿತ್ತರಗೊ೦ಡ ಸ೦ದರ್ಶನ ನೋಡಿ ನೂರ್ಮಡಿಸಿತು. ಸ೦ದರ್ಶನಕಾರರ ಪ್ರಶ್ನೆಯಲ್ಲಿ ’ತಮ್ಮ ಕಲಾಸೇವೆ, ಕಲಾತಪಸ್ಸು, ’ ಇತ್ಯಾದಿ ಪದಗಳಿಗೆ ಪ್ರತಿಕ್ರಿಯಿಸುತ್ತ ಮಾನ್ಯರು, ’ ನಾನು ಹಣಪಡೆದು ಪಾತ್ರನಿರ್ವಹಣೆ ಮಾಡಿದ್ದೇನೆ, ಇದನ್ನು ಸೇವೆ ಇತ್ಯಾದಿ ಬಣ್ಣಿಸುವುದು ಎಷ್ಟು ಸರಿ ?’ ಎ೦ದಿದ್ದರು. ನಿಸ್ಸ೦ದೇಹವಾಗಿಯೂ ಬಹುತೇಕ ಎಲ್ಲ ವೃತ್ತಿನಿರತ ಕಲಾವಿದರು ಇದನ್ನು ಗಮನಿಸಬೇಕು.ಸುಮಾರು ೨೫ – ೩೦ ವರ್ಷ ಹಿ೦ದೆ ಇಲಸ್ಟ್ರೇಟೆಡ್ ವೀಕ್ಲಿ ಯಲ್ಲಿ ಇ೦ತಹುದೇ ಮಾತು ಲಾಲ್ಗುಡಿಯವರಿ೦ದ ಮೂಡಿದುದನ್ನು ಓದಿದ ನೆನಪು. ಉತ್ತರದ ಬಹು ಹಲವು, ದಕ್ಷಿಣದ ಅನೇಕ ಕಲಾವಿದರು ಕಲಾಸೇವೆ, ಕಲೆಗಾಗಿ ಜೀವನ ಮುಡಿಪು, ಇತ್ಯಾದಿ ಆಡುತ್ತ, ಒ೦ದು ಕಾರ್ಯಕ್ರಮಕ್ಕೆ ೪ – ೫ ಲಕ್ಷ ಸ೦ಭಾವನೆ, ಮತ್ತು ಅದರಲ್ಲಿ ಪ್ಯಾಕೇಜ್ ಡೀಲ್, ಹಿ೦ಸೆಯೆನಿಸುವಷ್ಟು ಹಸಿ ಸುಳ್ಳುಗಳ ವೈಯುಕ್ತಿಕ ಶ್ಲಾಘನೆ ( ಇದು ನನ್ನ ೨೬,೧೦೧ ನೇ ಕಾರ್ಯಕ್ರಮ – ೭೭ ವರ್ಷ ವಯಸ್ಸಿನ ಆ ಗಾಯಕ ಹುಟ್ಟಿ ೨೮೫೦೦ ದಿನ ಆಗಿಲ್ಲ!), ಪ್ರಶಸ್ತಿಗಾಗಿ ಮೇಲಾಟ, ಇನ್ನೂ ಏನೇನೋ ನಡೆಸುತ್ತಾರೆ. ಇ೦ತಹವುಗಳ ಮಧ್ಯೆ, ಯಾವತ್ತೂ ತನ್ನ ಪೂರ್ಣ ಸಾಮರ್ಥ್ಯ ಧಾರೆಯೆರೆದು ಪಾತ್ರಫೋಷಣೆ ಮಾಡುತ್ತಿದ್ದ ಗೋವಿ೦ದ ಭಟ್ಟರನ್ನು ಅತ್ಯುತ್ತಮ ಕಲಾವಿದ, ಇನ್ನೂ ಶ್ರೇಷ್ಟ ವ್ಯಕ್ತಿ ಎನ್ನಬೇಕು, ಧರ್ಮಸ್ಥಳ ಮೇಳದಲ್ಲಿ ದೀರ್ಘಸಮಯ ಅವರಿಗೆ ಸ೦ಚಾಲಕರ ಜವಾಬ್ದಾರಿಯೂ ಇತ್ತು.ಪ್ರಸ್ತುತ ಪುಸ್ತಕವನ್ನು ನಾನು ಓದಿಲ್ಲ, ನಿಮ್ಮ ಬರಹ ನೋಡಿ ಅವರ ವ್ಯಕ್ತಿತ್ವದ ಸರಿಯಾದ ಚಿತ್ರಣಕ್ಕೆ ಪರಿಷ್ಕರಣೆ ಮಾಡಬಹುದೇನೋ ಎನಿಸುತ್ತದೆ.
Dear Sir,I would like to introduce myself as Radheshyam, native of Sediyapu,Puttur, presently working at Visakhapatnam, AP.I was going today through your comments on “Yakshopasane” in your blogand it was very fantastic. I would also rightly term the experiencesexposed in the above as like “Tip of the ice berg”.
The publication of Sri K. Govinda bhats autobiography(prof. shishilas narration), is an important Yaksha event.The narrator has done a lot of work. by nature gobindanna doesnot explain things. He is brief in his conversations too. so it is not easy to draw out material from him. i thank sri s. r. vijayashankar for the kind words about me rg. conceptual understanding of yakshagana. i feel it is unfair to compare govindannas autobiography with that of late sri B.V. karanth. why should we ?are we often obsessed with karanths, anathamuthys, subbannas, or such other names–of course they are great. I also congratulate you on your blog m p joshy. also the to ommissions which myself and Dr. shishila should have cared to see , areGovindannas involvement as an arthadari and his Badagu connections –hi contact woth the badagu(northern style ) yakshagana, m p joshy.
ಯಕ್ಷೋಪಾಸನೆ ನಾನು ಓದಿದ್ದೇನೆ.. ನಿಮ್ಮ ಬಹಳಷ್ಟು ಅಂಶಗಳು ನನಗೂ ಸರಿ ಎನಿಸಿದ್ದಿದೆ. ಆದರೆ ಅದನ್ನು ಹೇಳುವಷ್ಟು ದೊಡ್ಡವಳು ನಾನಲ್ಲವಾದ್ದರಿ. ಅದ್ದರಿಂದ ಸುಮ್ಮನಿದ್ದೆ.. ಹೌದು.., ಯಕ್ಷಗಾನದ ಬಹಳಷ್ಟು ಕೊಂಡಿಗಳನ್ನು ಚೆನ್ನಾಗಿ ಬೆಸೆಯಬೇಕಿತ್ತೆನ್ನಿಸಿದ್ದು ಹೌದು. ಜೊತೆ ಒಂದಷ್ಟು ಅನುಬಂಧ, ಸಂದರ್ಶನ, ವಿವರಗಳನ್ನು ಪ್ರಕಟಿಸದೆ ಇದ್ದರು ಗ್ರಂಥದ ತೂಕಕ್ಕೆ ಕಡಿಮೆಯೇನಿಸುತ್ತಿರಲಿಲ್ಲ. (ಆದರೆ ನಿಮ್ಮಷ್ಟು ವಿಮರ್ಶೆ ಮಾಡಲು ನನಗಿನ್ನೂ ಅನುಭವ ಬೇಕಾದ್ದರಿಂದ ಕೇವಲ ಸರಿಯೆನಿಸಿದ ಅನುಭವ ತುಣುಕುಗಳನ್ನು ನೂಪುರ ಭ್ರಮರಿಯಲ್ಲಿ ಕೇವಲ ಮುಖ್ಯ ಅಂಶಗಳಾಗಿ ದಾಖಲಿಸಿದೆ..)
ಶ್ರೀ ಅಶೋಕವರ್ಧನರಿಗೆನಿಮ್ಮ ಪತ್ರ ಓದಿ ಸಮಾಧಾನವಾಯ್ತು. ಹೊಗಳಿದರೆ ಹಿಗ್ಗುವ ತೆಗಳಿದರೆ ಕುಗ್ಗುವ ಮನಸ್ಥಿತಿ ನನ್ನದಲ್ಲ. ನಾನು ಟಿಪ್ಪಣಿ ಮಾಡಿದುದನ್ನು ಶಿಶಿಲರು ಬರೆದರು. ಪ್ರಕಟಿಸುವ ಉತ್ಸಾಹವನ್ನು ಟಿ. ಶ್ಯಾಮ ಭಟ್ಟರು ತೋರಿಸಿದರು. ನಾನಿನ್ನೂ ಋಣಭಾರದಲ್ಲೇ ಇದ್ದೇನೆ. ನಿಮ್ಮಲ್ಲಿ ಮಾತಾಡಿ ಪೂರ್ವರಂಗದ ಸಿ.ಡಿ ಮಾದುವ ಯೋಚನೆಯಲ್ಲಿಯೇ ನಾನಿದ್ದೆ. ಅದಕ್ಕೆ ಬೇಕಾದ ಪರಿಕರಗಳಿವೆ ಎಂದೂ ತಿಳಿದಿದ್ದೆ. ಆದರೆ ಬಡಗು ತಿಟ್ಟಿನ ಪೂರ್ವರಂಗದ ಸಿ.ಡಿ ತಯಾರಾದ ಮೇಲೆ ತೆಂಕಿನವರಿಗೆ “ಪೂರ್ವರಂಗದ ಬಗ್ಗೆ ಏನೂ ಗೊತ್ತಿಲ್ಲ” ಎಂಬುದನ್ನು ಕೇಳಿ ಕೇಳಿ ತಲೆ ಚಿಟ್ಟು ಹಿಡಿಯಿತು. ಸ್ಪರ್ಧೆಯಲ್ಲವಾದರೂ ನಾನು ತಿಳಿದಷ್ಟನ್ನು ಒಂದೇ ದಿನದಲ್ಲಿ ಪಾವಂಜೆ ದೇವಸ್ಥಾನದಲ್ಲಿ ಮಾಡಿಸಿದೆ. ಕಲಾವಿದರಿಗೆ ಊಟ, ತಿಂಡಿಯ ವ್ಯವಸ್ಥೆ ಪಾವಂಜೆ ಕೃಷ್ಣ ಭಟ್ಟರು ಮಾಡಿದರು. ಸುರತ್ಕಲ್ಲು ‘ಗೋಪಿ’ ವೀಡಿಯೋದವರು ರಿಕಾರ್ಡಿಂಗ್ ಮಾಡಿದರು. ಮೂರು ಕ್ಯಾಮರಾಗಳಿದ್ದವು. ಯಾರಿಗೆಲ್ಲ ಕ್ರಮಬದ್ಧವಾಗಿ ನಾನು ಹೇಳಿಕೊಟ್ತಿದ್ದೆನೋ ಅವರೆಲ್ಲ ಕೊನೆಗೂ ನನಗೆ ಸಿಗಲಿಲ್ಲ. ಸಿಕ್ಕಿದವರು ಕಲಿತದ್ದನ್ನು ಮರೆತಿದ್ದರು. ಬೆಳಗ್ಗೆ ಒಂಬತ್ತು ಗಂಟೆಯೊಳಗೆ ಬರುತ್ತೇವೆ ಎಂದವರು ಅಂತೂ ಮಧ್ಯಾಹ್ನದ ಊಟದ ಹೊತ್ತಿಗೆ ಬಂದರು. ಬಂದವರು ನಾವೇನು ಮಾಡಬೇಕೆಂದು ಕೇಳಿದರಲ್ಲದೆ ಹೇಗೆ ಮಾಡಬೇಕೆಂದು ಕೇಳಿದವರಲ್ಲ. ಹಾಡುಗಾರರನ್ನು, ಚೆಂಡೆ ಮದ್ದಳೆಯವರನ್ನು ಹೊಂದಿಕೆ ಮಾಡಲು ಸಾಕಾಯ್ತು. ಕುಣಿಯುವವರನ್ನು ಸಿದ್ಧಪಡಿಸಲು ಮತ್ತಷ್ಟು ತೊಡಕುಗಳು. ನನ್ನ ವಿದ್ಯಾರ್ಥಿಗಳೇ ಆದರೂ ಬೇರೆ ಬೇರೆ ಮೇಳಗಳಲ್ಲಿ ಇದ್ದವರು. ಅರ್ಥಕ್ಕಾಗಿ ಅರ್ಥವಿಲ್ಲದೆ ಕುಣಿಯುವವರು. ನಾನು ಹೇಳಿದೆನೆಂದು ದಾಕ್ಷಿಣ್ಯಕ್ಕೆ ಬಂದವರು. ನನ್ನ ಕಲ್ಪನೆಯಂತೆ ಬಾರದಿದ್ದರೂ ಪೂರ್ವರಂಗ ಸಿದ್ಧವಾಯಿತು. ಕಳಪೆಯೋ ಒಳ್ಳೆಯದೋ ಆಯ್ತು. ಈಗ ಸಿದ್ಧವಾಗುತ್ತಿರುವ ಯಕ್ಷಗಾನ ಸಿ.ಡಿಗಳಂತೆ. ನಾನು ಹೇಳುವಂತೆ ಕುಣಿಯಬಲ್ಲ, ಹಾಡಬಲ್ಲ, ಚೆಂಡೆ ಮದ್ದಳೆ ನುಡಿಸಬಲ್ಲವರು ಸಿಗಲಿಲ್ಲ. ಹಾಗೆಂದು ನೀವೊಮ್ಮೆ ಭಾಗವಹಿಸಿದ ಕಲಾವಿದ್ರನ್ನು ನಾನು ಸಂಭಾವನೆ ಕಡಿಮೆ ಕೊಟ್ಟಿದ್ದೇನೆಯೇ? ವಿಚಾರಿಸಿರಿ. ತೆಂಕು ತಿಟ್ಟಿನವರಿಗೆ ಪೂರ್ವರಂಗದ ಬಗ್ಗೆ ಗೊತ್ತಿಲ್ಲ ಎಂಬುದು ಕಡಿಮೆಯಾಯ್ತು.೮೫ನೇ ಇಸವಿಯಲ್ಲಿಯೂ ನಾನು ಉಡುಪಿ ರಾಜಾಂಗಣದಲ್ಲಿ ಶ್ರೀ ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ನಡೆದ ಕಮ್ಮಟದಲ್ಲಿ ತೆಂಕುತಿಟ್ಟಿನ ನೃತ್ಯವಿಧಾನ, ಪೂರ್ವರಂಗ ಪ್ರದರ್ಶಿಸಿದ್ದೆ, ನನ್ನ ವಿದ್ಯಾರ್ಥಿಗಳಿಂದ. ಪೂರ್ವರಂಗ (ಸೀಡಿ) ಮಾರಾಟಕ್ಕೆ ಸಿದ್ಧಪಡಿಸಲಿಲ್ಲ. ನನಗೆ ಆರ್ಥಿಕವಾಗಿ ಸೋಲಾಗಿದೆ. ರೂ ಅರುವತ್ತೈದು ಸಾವಿರ ಸಾಲವೂ ಆಗಿದೆ. ತೆಂಕಿನವರಿಗೆ ಪೂರ್ವರಂಗದ ಬಗ್ಗೆ ಗೊತ್ತಿಲ್ಲ ಎಂದವರಾಗಲಿ, ಪೂರ್ವರಂಗ ಮಾಡಿದ್ದು ಒಳ್ಳೆಯದಾಯ್ತು ಎಂದವರಾಗಲಿ ನನಗೆ ಆರ್ಥಿಕವಾಗಿ ಸಹಾಯಕರಾಗಿಲ್ಲ. ನೆರವು ನೀಡಿದವರು ಸಾಲದ ಹೊರೆ ಕಡಿಮೆ ಮಾಡಿದವರು ಬಿ. ಕೃಷ್ಣ ಭಟ್ ಗಿರಿನಗರ ಮತ್ತು ಟಿ. ಶ್ಯಾಮ ಭಟ್ಟರು. ಈಗಲಂತೂ ನಾನು ಯಾವುದರಲ್ಲೂ ಆಸಕ್ತನಲ್ಲ. ನನ್ನ ಜೀವನ ವೃತ್ತ ಹೇಗಿರಬೇಕು. ಹೇಗಿದ್ದರೆ ಒಳ್ಳೆಯದು ಇತ್ಯಾದಿಯಾಗಿ ನಾನು ಯೋಚಿಸಿದವನೇ ಅಲ್ಲ. ಮೇಳಗಳಲ್ಲಿ ತಿರುಗಾಟ ಮಾಡಿದವರಿಗೆ ಅದು ತಿಳಿದೇ ತಿಳಿಯುತ್ತದೆ. ವರ್ಷದಿಂದ ವರ್ಷಕ್ಕೆ ಸಂಬಳದಲ್ಲಿ ಗಮನೀಯವಲ್ಲವಾದರೂ ಧರ್ಮಸ್ಥಳ ಮೇಳದಲ್ಲಿ ಸ್ವಲ್ಪ ಸ್ವಲ್ಪವಾಗಿ ಹೆಚ್ಚಾಗುತ್ತದೆ. ವ್ಯವಸ್ಥಾಪಕರು ಬದಲಾಗುತ್ತಾರೆ. ವ್ಯವಸ್ಥೆಗಳು ಬದಲಾಗುವುದಿಲ್ಲ. ಒಂದು ವರ್ಷದ್ದನ್ನು ಹೇಳಿದರೆ ಸಾಕು ಎಂದು ನಾನು ಭಾವಿಸುತ್ತೇನೆ. ಮತ್ತೆಲ್ಲ ಅದರ ಪುನರಾವರ್ತನೆಗಳೆ. ಹೀಗೆ ಬರೆಯುತ್ತ ಹೋದರೆ ಅಧಿಕಪ್ರಸಂಗವಾದೀತು. ಕ್ಷಮಿಸಿ.ಇಂತು ಕೆ. ಗೋವಿಂದ ಭಟ್ಟ ೨೦-೪-೨೦೦೯
“ಒಂದು ಗೌರವಪ್ರತಿ ಕೊಡುವ ಉತ್ಸಾಹ ತೋರಿಸಿದಿರಿ. ನಾನು ಪ್ರತಿ ಒಪ್ಪಿಸಿಕೊಳ್ಳದಿದ್ದರೂ ನೀವು “ನನ್ನಿಂದ ಗೌರವ ಪ್ರತಿ ಪಡೆದ ಅಥವಾ ಪುಸ್ತಕ ಕೊಂಡ ಎಲ್ಲರಿಗೆ ನಾನು ಹೇಳುವುದಿಲ್ಲ. ಆದರೆ ನೀವು ಮಾತ್ರ ಪುಸ್ತಕ ಓದಿ ನಿಮ್ಮ ಅಭಿಪ್ರಾಯ ತಿಳಿಸಬೇಕು” ಎಂದು ಹೇಳಿಹೋದಿರಿ. ಹಾಗಾಗಿ ಮುಂದಿನ ಸಾಲುಗಳನ್ನು ಓದುವ ಕಷ್ಟ ಕೊಡುತ್ತಿದ್ದೇನೆ.”avarige pratikriye koduva badalu internet nalli hakiddeeralla nimge publicity ge olle idea ….innu tenkutittu poorvarangavannu spardhege chitrisidante anta heliddu sariyalla…Govinda Bhatra shrama shlaghaneeya… Camera onde idroo channagi chitrisabahudu adare illantoo ondakkinta hechchu camera balasiddare anta noduvaga swalpa common sense iddavrige tiliyuttade …Govinda Bhatrannu tumba laghuvaagi kandiddeeri idantoo sariyalla…….
ಪ್ರಿಯ unknown-ಮಿಕವೇ,ಬ್ಲಾಗ್ ಎನ್ನುವುದು ಅನೌಪಚಾರಿಕ ಆದರೆ ಅರೆ-ಖಾಸಗಿ (ಅಂದರೆ ಅರ್ಧ ಸಾರ್ವಜನಿಕ ತಾನೇ) ಸಂವಹನ ಮತ್ತು ಚರ್ಚಾ ವೇದಿಕೆ ಎಂದೇ ಗಂಭೀರವಾಗಿ ನಂಬಿ ನಡೆಸುತ್ತಿರುವವನು ನಾನು. ಗೋವಿಂದ ಭಟ್ಟರಿಗೂ ನನಗೂ ದೀರ್ಘ ಕಾಲೀನ ಪರಿಚಯವಿದೆ, ಆತ್ಮೀಯತೆ ಇದೆ ಆದರೂ ಸಂಬಂಧ ಹುಡುಕಿದರೆ ಕಲಾವಿದ ಮತ್ತು ರಸಿಕನದು ಮಾತ್ರ. ನನ್ನ ರಸಿಕತನದ ಪ್ರಾಮಾಣಿಕತೆ ಬಗ್ಗೆ ಅವರಿಗೆ ವಿಶ್ವಾಸವಿತ್ತು, ಕೇಳಿದರು. ನಾನಾದರೋ ಜವಾಬ್ದಾರಿಯುತನಾಗಿಯೇ ಪ್ರತಿಕ್ರಿಯಿಸಿದೆ ಮತ್ತು ಎಲ್ಲೂ ವಸ್ತುನಿಷ್ಠವಾಗಿ ಹೇಳಬಹುದಾದ್ದನ್ನು ಒಕ್ಕಣಿಸಿ ಮೊದಲ ಅವಕಾಶದಲ್ಲೇ ಗೋವಿಂದ ಭಟ್ಟರಿಗೇ ತಲಪಿಸಿದೆ. ಇದು ಎಲ್ಲೂ ಹೇಳಬಹುದಾದ್ದು ಮತ್ತು ಚರ್ಚೆಗೆ ಯೋಗ್ಯವಾದದ್ದು ಎಂದು ಕಂಡದ್ದರಿಂದ ನನ್ನ ಬ್ಲಾಗಿಗೂ ಏರಿಸಿದೆ. ನನ್ನ ಟೀಕೆಯನ್ನು ಸ್ವಲ್ಪ ತಡವಾಗಿಯೇ ಆದರೂ (ಮೇಳದ ತಿರುಗಾಟಾದಲ್ಲಿದ್ದರು) ಸ್ವತಃ ಗೋವಿಂದ ಭಟ್ಟರೇ ಅನುಮೋದಿಸಿದ್ದನ್ನೂ ಇಲ್ಲಿ ನೀವು ನೋಡಬಹುದು. ಪೂರ್ವರಂಗದ ಸೀಡಿ ಬಗ್ಗೆ ಮತ್ತೆ ಭಟ್ಟರೇ ಸ್ಪಷ್ಟನೆ ಕೊಟ್ಟ್ರಿವುದರಿಂದ ನಾನೇನೂ ಹೇಳಬೇಕಾಗಿಲ್ಲ. ಭಟ್ಟರ ಕಲಾವಂತಿಕೆಯನ್ನು ಕೀಳ್ಗಳೆಯುವ ಅಥವಾ ವೈಯಕ್ತಿಕವಾಗಿ ಅವರನ್ನು ಲಘುವಾಗಿ (ಅದೂ ತುಂಬಾ ಲಘುವಾಗಿ) ನಾನೆಲ್ಲೂ ಕಂಡಿಲ್ಲ. ಅನಾಮಿಕರು ‘ಮುಖಕೊಟ್ಟು’ ಹಾಗೆ ಭಾಸವಾಗುವ ಸಂದರ್ಭಗಳನ್ನು ತಿಳಿಯಪಡಿಸಿದರೆ ಅವಶ್ಯ ತಿದ್ದಿಕೊಳ್ಳುತ್ತೇನೆ.ಅಶೋಕವರ್ಧನ
ಗೋವಿಂದ ಭಟ್ರನ್ನು ತುಂಬಾ ಲಘುವಾಗಿ ಕಂಡಿದ್ದಿರಿ ಎಂಬುದು ಅವಿವೇಕದ ಮಾತು. ಗೋವಿಂದ ಭಟ್ರ ಮೇಲೆ ಅತಿಯಾದ ಗೌರವ ಇದ್ದುದರಿಂದಲೇ ಇಲ್ಲಿ ಇಂತಹ ಚರ್ಚೆಗಳೆಲ್ಲ ಸಾಧ್ಯ ಆದುವು. ಮೇಲಾಗಿ ಹೊಗಳಿಕೆ ಮಾತ್ರ ಗೌರವ ಅಂತ ನಾವು ತಿಳಿಯುವುದು ತಪ್ಪು. ದೊಡ್ಡ ಕಲಾವಿದರ ಸಣ್ಣತನಗಳು ಕೂಡ ಅವರ ಬಗೆಗೆ ನಮ್ಮ ಗೌರವವನ್ನು ಹೆಚ್ಚು ಮಾಡುತ್ತವೆ. ನಾವು ಖಾಸಗಿಯಾಗಿ ಅವುಗಳ ಬಗ್ಗೆ ಮಾತಾಡಿಕೊಳ್ಳುತ್ತೇವೆ. ಮನ್ದೆಚ್ಚರು, ಕಡತೋಕ, ಬಲಿಪರು, ಮಾಧವ ಶೆಟ್ಟಿ ಮತ್ತಿತರ ಮಹಾನ್ ಕಲಾವಿದರ ಬಗೆಗೆ ಮೌಖಿಕ ರೂಪದಲ್ಲಿ ಜನಪ್ರಿಯವಾಗಿರುವ ಅನೇಕ ಕಥೆಗಳು ನನ್ನಲ್ಲಿ ಇವೆ. ಅವರೆಲ್ಲ ದೊಡ್ಡ ಕಲಾವಿದರಾದುದರಿಂದಲೇ ಆ ಕಥೆಗಳು ಸಂಗ್ರಹಿತವಾಗಿವೆ. ಅಶೋಕವರ್ಧನರು ಯಕ್ಶೋಪಾಸನೆ ಬಗ್ಗೆ ಬರೆದು ಗೋವಿಂದ ಭಟ್ಟರ ಬಗೆಗಣ ನಮ್ಮ ಅಭಿಮಾನವನ್ನು ಇನ್ನಷ್ಟು ಹೆಚ್ಚುಗೊಳಿಸಿದ್ದಾರೆ. ಯಕ್ಷಗಾನ ವಿಮರ್ಶೆ ಮುಂದಿನ ದಿನಗಳಲ್ಲಿ ಬೆಳೆಯಬೇಕಾದ ರೀತಿಯದು.
ಅನಾಮಿಕರ ಟೀಕೆ ಅಪ್ರಸ್ತುತ. ಲೇಖನದಲ್ಲಿ ಟೀಕೆ ಗ್ರಂಥದ ಕುರಿತಾಗಿತ್ತೆ ಹೊರತು ಕಲಾವಿದರ ಕುರಿತಾಗಿರಲಿಲ್ಲ. ಗೋವಿಂದ ಭಟ್ಟರ ಬಗ್ಗೆ ಅಶೋಕರಿಗಿರುವ ಗೌರವ ಆದರಗಳು ” ನಿಮ್ಮ ಸರ್ವಾಂಗ ಸುಂದರ ಕಲಾಗಾರಿಕೆ, ಲೋಕಾನುಭವ. ಪ್ರಾಯದ ಹಿರಿತನ, ಇನ್ನೂ ರಂಗದಲ್ಲಿ (ತಾಳಮದ್ದಳೆಯೂ ಸೇರಿದಂತೆ) ಎಲ್ಲರೂ ಬಯಸುವಂತೆ ಉಳಿಸಿಕೊಂಡಿರುವ ಚಟುಲತೆ ಮತ್ತೆ ಎಲ್ಲಕ್ಕೂ ಮಿಗಿಲಾಗಿ ನಿಮ್ಮ ವ್ಯಕ್ತಿತ್ವದ ನಿಗರ್ವ, ಸರಳ, ಸ್ನೇಹಶೀಲತೆಗಳ ಮುನ್ನೆಲೆಯಲ್ಲಿ ನನಗೆ ಆ ಸುದ್ದಿ ನಿಜಕ್ಕೂ ರೋಮಾಂಚನ ತಂದಿತ್ತು ” ವಾಕ್ಯಗಳೇ ಅದಕ್ಕೆನಿದರ್ಶನ. ತೆಂಕುತಿಟ್ಟು ಪೂರ್ವ ರಂಗದ ಸಿಡಿಯನ್ನು ಅದೆಂತಹ ತರಾತುರಿಯಲ್ಲಿ ( ಸಾಕಷ್ಟು ಪೂರ್ವ ಸಿದ್ದತೆಯಿಲ್ಲದೆ ) ಅವರು ತಯಾರಿಸಿದರು ಎಂಬುದನ್ನು ಅವರೇ ಬರೆದಿದ್ದಾರೆ. ಕೇವಲ ಗೋವಿಂದ ಭಟ್ಟರ ಮೇಲಿನ ಅಭಿಮಾನದಿಂದ ಮಾತ್ರ ಬರೆಯಲಾದ ಅನಾಮಿಕರ ಟೀಕೆಗೆ ಅಂತಹ ಮಹತ್ವವೇನಿಲ್ಲ. ಆದರೂ ಯಕ್ಷರಂಗದ ಮರೆಯಲ್ಲಿರುವ ಅನಾಮಿಕರ ಬಗ್ಗೆ ತಿಳಿಯುವಂತಾಯಿತು.
Dear Ashok I bought book from you, I really loved the book, I finished book in one sitting could'nt even sleep I was reading night till 1 am . But after reading your blog I realized where it could have been more informative mistakes of great personality , moment you hold up the mistakes show it a person will not become dis-honored , I'm sure a personality like Govinda Bhat also will feel like that. Its blind following in general public you can see generally you can see, which will not allow you to accept mistakes of you “Hero”. , from your writings I started looking at the works at different angles.
If only more than 89 people could hear this.