ಇನಾಕ್ಸ್ ಪ್ರವೇಶಿಸುವಲ್ಲಿನ ತನಿಖೆ ಮುಗಿದಮೇಲೆ ಒಳಗೆ ಹತ್ತೆಂಟು ಕಾರ್ಯಕರ್ತರು ಔಪಚಾರಿಕ ಅಗತ್ಯಗಳಿಗೆ ಒದಗುವವರಂತೆ ಹಸನ್ಮುಖಿಗಳಾಗಿ ನಿಂತು ಸ್ವಾಗತಿಸಿದ್ದರು. ನಿಗದಿತ ಸಮಯಕ್ಕೆ ಒಂದೆರಡು ಮಿನಿಟು ಮೊದಲೇ ಕಾರ್ಯಕರ್ತನೊಬ್ಬ ಅಂದಿನ ಚಿತ್ರದ ಕಿರು ಜಾತಕ ಘೋಷಿಸಿ ನೇರ `ರೀಲು’ ಬಿಚ್ಚಲು ಅನುವುಮಾಡಿಕೊಟ್ಟ! (ನಮ್ಮಲ್ಲಿ ನಾಲ್ಕಾಣೆ ಮಗ್ಗಿ ಪುಸ್ತಕ ಬಿಡುಗಡೆ ಮಾಡುವುದಿದ್ದರೂ ಕನಿಷ್ಠ ನಿರ್ವಾಹಕನಿಂದ ತೊಡಗಿ ಪ್ರಾರ್ಥನೆ, ಉದ್ಘಾಟಕ, ಅಧ್ಯಕ್ಷ, ಪ್ರಸ್ತಾವನೆಕಾರ, ಸ್ವಾಗತಕಾರ, ಅತಿಥಿ, ಲೇಖಕ, ವಂದನಾರ್ಪಣೆ ಎಂಬ ಅಷ್ಟೂಗಿರಗಳ ಮೆರೆತದಲ್ಲಿ ಮುಖ್ಯ ವಿಷಯ ಮತ್ತು ಪ್ರೇಕ್ಷಕ ಚಟ್ಟಕ್ಕೇರುವುದು ನಿಸ್ಸಂದೇಹ!)

Fallen Angels ಅಥವಾ ಧರೆಗೆಬಿದ್ದ ಅಪ್ಸರೆಯರು, ಹಾಂಕಾಂಗಿನ ಚಿತ್ರ, ನಿರ್ದೇಶಕ ವಾಂಗ್ ಕರ್ ವಾಯ್ (ಅಭಯನ ಅನುಭವದಲ್ಲಿ ಬಹುಖ್ಯಾತನಂತೆ). ಕ್ಷೌರ, ಧಾಬಾ, ಕಸಹೊಡೆಯುವುದು, ಸೂಳೇಗಾರಿಕೆ ಮುಂತಾದ ನಗಣ್ಯ ಆದರೆ ಅನಿವಾರ್ಯ ವೃತ್ತಿಪರತೆಗಳ ಪಟ್ಟಿಯಲ್ಲಿ ಇಲ್ಲಿ ಕೊಲೆಗಡುಕತನವೂ ಇದೆ ಎಂಬುದು ಭಾರೀ ಆಘಾತಕರ ಅನುಭವ. ಚಿತ್ರ ನನ್ನ ಅನುಭವ ಸ್ತರಕ್ಕೆ ಅಪರಿಚಿತ ಮಾಹಿತಿಗಳ ಓಣಿಯ ಓಟದ ಹಾಗನ್ನಿಸಿತು. ದೇಶ, ಭಾಷೆಗಳ ಅಂತರವೂ ಪ್ರಯಾಣದ ಆಯಾಸವೂ ನನ್ನ ಗ್ರಹಿಕೆಗಳನ್ನು ಮಸಕುಗೊಳಿಸಿರುವ ಸಾಧ್ಯತೆಗಳೂ ಇರುವುದರಿಂದ ಇಷ್ಟು ಸಾಕು.

ಚಿತ್ರೋತ್ಸವದ ಮುಖ್ಯ ಪ್ರದರ್ಶನಗಳು ಇನಾಕ್ಸ್ ಜೊತೆಗೆ ಸಮೀಪದ ಕಲಾ ಅಕಾಡೆಮಿಯ ಪರಿವರ್ತಿತ ಪರದೆಯಲ್ಲೂ ನಡೆಯುತ್ತಿತ್ತು. ಎರಡು ವಠಾರಗಳ ನಡುವೆ ಯಾವುದೇ ಪ್ರತಿನಿಧಿಗೆ ಸಂಚಾರ ಸಮಸ್ಯೆ ಏರ್ಪಡದಂತೆ ಉಚಿತ ವಾಹನ ಸೌಲಭ್ಯ ವ್ಯವಸ್ಥೆಯಿತ್ತು. ಆದರೆ ಗಿಡ, ಮರ, ಬಳ್ಳಿ ಅಲಂಕಾರ, ವ್ಯವಸ್ಥಿತ ವಿಸ್ತಾರ ಪುಟ್ಟಪಥದೊಡನೆ ಇದ್ದ ಚತುಷ್ಪಥ ದಾರಿಯ ಚಂದ ನೋಡಲೆಂದೇ ನಾವು ನಡೆದು ಹೋದೆವು. ಆಲಂಕಾರಿಕ ತೋರಣಗಳು, ದೀಪ ಮಾಲೆ, ಬ್ಯಾನರ್‍ಗಳಲ್ಲದೆ ತಿನಿಸುಗಟ್ಟೆಗಳೂ ವಿಶೇಷವಾಗಿ ಸಜ್ಜುಗೊಂಡಿದ್ದವು. ಆದರೆ ಆಚಿನ ನದೀ ದಂಡೆ, ನೀರಿಳಿದ ಹಿನ್ನೀರ ಮಡುಗಳೂ ನಿತ್ಯದ ಭಾರತೀಯ ಅಶಿಸ್ತಿಗೆ ನಿದರ್ಶನಗಳಾಗಿಯೇ ಉಳಿದಿದ್ದವು! (ಅರವಿಂದ ಅಡಿಗನ ಟೀಕಾಕಾರರು ನನ್ನಲ್ಲೂ ಬೂಕರ್ ಮೋಹ ಗುರುತಿಸಿಯಾರೇ? ಹೆಚ್ಚಿನ ವಿವರಗಳಿಗೆ ಇದೇ ಬ್ಲಾಗಿನಲ್ಲಿ ನೋಡಿ: ಬಿಳಿಹುಲಿ) ಅರ್ಧ ದಾರಿ ಕಳೆದಲ್ಲಿ ಒಂದು ಕ್ರೀಡಾಂಗಣದ ಕ್ಯಾಂಟೀನ್ ಕಾಣಿಸಿತು. ಅಲ್ಲಿ ಸರಳವಾಗಿ ನಮ್ಮ ಹೊಟ್ಟೆಯ ಚಿಂತೆಯಷ್ಟು ಮುಗಿಸಿಕೊಂಡು ಕಲಾ ಅಕಾಡೆಮಿ ತಲಪಿದೆವು. ಇದು ಸಾಕಷ್ಟು ಹಳೆಯ ನಾಟಕಶಾಲೆಯಂತೆ. ಚಿತ್ರೋತ್ಸವಕ್ಕಾಗುವಾಗ ವಿಶೇಷವಾಗಿ ಸಜ್ಜುಗೊಳ್ಳುತ್ತದಂತೆ. ಇದರ ವಠಾರ, ಒಳಗಿನ ವ್ಯವಸ್ಥೆಗಳೆಲ್ಲ ಔಪಚಾರಿಕ ಸಮಾರಂಭಗಳಿಗೆ ಹೇಳಿ ಮಾಡಿಸಿದಂತಿರುವುದರಿಂದ ಉತ್ಸವದ ಉದ್ಘಾಟನಾ ಸಮಾರಂಭದಿಂದ ತೊಡಗಿ ಒಳಗಿನ ಸಣ್ಣ ಪುಟ್ಟ ವಿಶಿಷ್ಟ ಕಲಾಪಗಳೂ ಇಲ್ಲಿಗೇ ಮೀಸಲಿದ್ದವು. ಹಾಗೇ ಅಲ್ಲಿ ಅಂದು ಸಂಜೆಯ ಪ್ರದರ್ಶನಕ್ಕೊಂದು ಸಣ್ಣ ಔಪಚಾರಿಕ `ಬಿಡುಗಡೆ’ ನಡೆಯುವುದಿತ್ತು. ಸದ್ಯ ಅದಕ್ಕೆ ಮೊದಲಿನ, ಅಂದರೆ ನಮ್ಮ ಅಪರಾಹ್ನದ ಬೇರೊಂದು ಚಿತ್ರದ ಪ್ರದರ್ಶನವೂ ಅಲ್ಲೇ ಇತ್ತು. ಈಗ ಅದರ ಕುರಿತು ನಾಲ್ಕು ಮಾತು.

A thousand years of good prayers ಒಂದು ಜಪಾನೀ ಚಿತ್ರ. ಕೆಲಸದ ಒತ್ತಡ, ಯೌವನದ ಬಿಸಿ ಸೇರಿದ ಯುವಕನೊಬ್ಬ ತನ್ನ ಕೌಟುಂಬಿಕ ಜವಾಬ್ದಾರಿಗಳನ್ನು ಹಗುರವಾಗಿ ಕಂಡಿದ್ದ, ಸಾಮಾಜಿಕ ಟೀಕೆಗಳನ್ನು ಉಪೇಕ್ಷಿಸಿದ್ದ. ವೃದ್ಧಾಪ್ಯದಲ್ಲಿ ಆತನಿಗೆ ಅದರ ಕುರಿತು ಪಶ್ಚಾತ್ತಾಪ ಮೂಡಿ ವಿದೇಶದಲ್ಲಿ ಏಕಾಂಗಿಯಾಗಿದ್ದ ಮಗಳಲ್ಲಿಗೆ ಹೋಗಿ ಸಾಂತ್ವನ ಕ್ರಿಯೆಗೆ ತೊಡಗುತ್ತಾನೆ. ಆದರೆ ಕಾಲದ ಕುಲುಮೆಯಲ್ಲಿ ಮಗಳು ವಿಭಿನ್ನ ಹದವನ್ನೇ ಕಂಡುಕೊಂಡಿರುವುದನ್ನು ಈತ ಗ್ರಹಿಸುವುದರೊಡನೆ ಚಿತ್ರ ಮುಗಿಯುತ್ತದೆ. ಲೆಕ್ಕ ಹಾಕಿದಂತೆ ನಾಲ್ಕೈದೇ ಪಾತ್ರಧಾರಿಗಳೊಡನೆ ಸಣ್ಣ ಪಟ್ಟಣವೊಂದರ ಅಮುಖ್ಯ ಮೂರ್ನಾಲ್ಕು ಪ್ರದೇಶಗಳಲ್ಲೇ ಚಿತ್ರ ಮನೋಜ್ಞವಾಗಿ ಸಾಕಾರಗೊಂಡಿದೆ. ಕನಸು, ಫ್ಲ್ಯಾಷ್ ಬ್ಯಾಕ್, ಉದ್ದುದ್ದ ಸಂಭಾಷಣೆ, ಹಾಡು, ಕುಣಿತ ಮಣಿತಗಳಂಥ ಯಾವುದೇ ಊರುಗೋಲುಗಳನ್ನು ಬಳಸದೇ ತೀರಾ ವರ್ತಮಾನದಲ್ಲೇ ನಡೆಯುತ್ತದೆ. ಭಾವುಕತೆಯ ಅತಿರೇಕ ಇಲ್ಲ, ಸಾಹಿತ್ಯದ ಹೊರೆ ಇಲ್ಲ, ಕ್ರಿಯೆಯಂತೂ ತೀರಾ ಕಡಿಮೆ. ಅಷ್ಟಾಗಿಯೂ ನನ್ನ ಯಾನ ಬಳಲಿಕೆ, ಊಟದ ಬೆನ್ನಿಗೇ ಬರುವ ನಿದ್ರೆಯ ಸೆಳೆತಗಳನ್ನೆಲ್ಲಾ ಈ ಸಿನಿಮಾ ನಿವಾರಿಸಿಬಿಟ್ಟಿತು.

ಪ್ರತಿಮಾಗೃಹ ಕಂಡೆ

ಸಂಜೆಯ ಚಿತ್ರಕ್ಕೆ ಕಾಯುವ ಅವಧಿಯಲ್ಲಿ ಐತಿಹಾಸಿಕ ಸಿನಿಮಾ ಪೋಸ್ಟರುಗಳ ಪ್ರದರ್ಶನಕ್ಕೆ ಒಂದು ಸುತ್ತು ಹಾಕಿದೆವು. ಯಕ್ಷಗಾನದಲ್ಲಿ (ಮಹಾಕವಿ ಭಾಸನ ಕಲ್ಪನೆ) ಅಜ್ಜನ ಮನೆಯಿಂದ ಧಾವಿಸಿ ಬರುವ ಭರತ ಅಯೋಧ್ಯೆಯ ಬಾಗಿಲಿನಲ್ಲಿ ಪ್ರತಿಮಾಗೃಹಕ್ಕೆ ಭೇಟಿಕೊಟ್ಟು ಕಳವಳಿಸುವ, ನಮ್ಮನಮ್ಮದೇ ಮನೆಯ ಹಳೆಯ ಆಲ್ಬಂ ಪುಟ ಮಗುಚುತ್ತ ಸಂಭ್ರಮಿಸುವ ಭಾವಲಹರಿಯ ಮೆರವಣಿಗೆ ಇಲ್ಲೂ ಆಯ್ತು. ಪುಸ್ತಕಲೋಕದಲ್ಲಿ ಮುಖ್ಯವಾಗಿ ಇಂಗ್ಲಿಷ್ ಪ್ರಕಾಶಕರು ಹೀಗೇ ಬಹುತರದ ಪೋಸ್ಟರುಗಳನ್ನು ಮಾಡುವುದಿದೆ. ಆದರೆ ನನಗೆ ತಿಳಿದಂತೆ ಇವುಗಳು ಬೀದಿಬೀದಿಗಳಲ್ಲಿ ರಾರಾಜಿಸಿದ್ದಿಲ್ಲ, ಹಾಗೇ ಅವನ್ನು ಪುಸ್ತಕ ಸಂಸ್ಕೃತಿಯ ಅಂಗವಾಗಿ ಸಂಗ್ರಾಹ್ಯವಾಗಿ ಕಂಡವರನ್ನೂ ನಾನು ಕಂಡದ್ದಿಲ್ಲ. ಹ್ಯಾರೀಪಾಟರಿನ ಕೊನೆಯ ಪುಸ್ತಕದ ಪೋಸ್ಟರನ್ನು ಬಯಸಿ ಪಡೆದವರು ನೆನಪಿಗೆ ಬಂದರೂ ಅವರದ್ದು ಕೇವಲ ಕಥಾನಾಯಕನ ಭ್ರಮೆ! ಕನ್ನಡ ಪುಸ್ತಕಗಳಿಗೆ ಪೋಸ್ಟರಿನ ಯೋಗ ತೀರಾ ಪ್ರಾಥಮಿಕ ಹಂತದಲ್ಲೇ ಇದೆ. ಮೂರು ದಶಕಗಳಿಗೂ ಮಿಕ್ಕು ನನಗೆ ಪ್ರತಿ ವರ್ಷ ಪಂಚಾಂಗ ಒದಗಿಸುವವರು ಒಂದು ಪೋಸ್ಟರು ತಪ್ಪದೇ ಕೊಡುತ್ತಾರೆ. `ವೈಜಯಂತೀ ಪಂಚಾಂಗ ಇಲ್ಲಿ ದೊರೆಯುತ್ತದೆ’ – ಬಡಕಲು ಬಿಳಿಕಾಗದದ ಮೇಲೆ ಕೆಂಪು ಶಾಯಿಯ ಎರಡು ಸಾಲು ಅಷ್ಟೆ. ಜನಾಕರ್ಷಣೆಯ ಸಲುವಾಗಿ ಸತತ ಪುಸ್ತಕ ಅನಾವರಣ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಪ್ರಕಾಶ್ ಕಂಬತ್ತಳ್ಳಿ (ಅಂಕಿತ ಪುಸ್ತಕ) ಆಧುನಿಕ ತಂತ್ರಜ್ಞಾನದ ಸದುಪಯೋಗದಲ್ಲಿ ತಮ್ಮದೇ ಪುಸ್ತಕಗಳ ಮುಖಪುಟವನ್ನೇ ಪೋಸ್ಟರಿನ ಗಾತ್ರಕ್ಕೆ ಹಿಗ್ಗಿಸಿದ್ದು ಅವಶ್ಯ ಅನುಕರಣೀಯ. ಆದರೆ ಇದು ವ್ಯಾಪಕವಾಗಿ ಆಗಬೇಕಾದರೆ ಸದ್ಯದ ಮುದ್ರಿತ ಬೆಲೆ ನಿಷ್ಕರ್ಷೆ ಹಾಗೂ ಕನ್ನಡ ಪುಸ್ತಕೋದ್ಯಮದ ಸ್ಥಿತಿ ತೀವ್ರ ವಿಮರ್ಶೆಗೊಳಗಾಗಬೇಕಾದೀತು. ಓಓಓ ವಿಷಯಾಂತರದಲ್ಲಿ ಬಲು ದೂರ ಬಂದುಬಿಟ್ಟೆ, ಕ್ಷಮಿಸಿ. ಪೋಸ್ಟರ್ ಪ್ರಪಂಚ ಸುತ್ತಿದ ಮೇಲೆ ವಿಸ್ತಾರ ಜಗುಲಿಯಲ್ಲಿ ಹರಡಿ ಬಿದ್ದಿದ್ದ ಟೀ ಶಾಪಿನ ಕುರ್ಚಿಗಳಲ್ಲಿ ನಾವು ಹರಟಿ ಬಿದ್ದುಕೊಂಡೆವು.

ಪೀಟರ್ ಉಸ್ತಿನೋವ್‌ನ ಲೋಲಾ ಮೊಂಟೆಸ್ (Lola Montes), ಚಿತ್ರರಂಗದ ಇತಿಹಾಸದಲ್ಲಿ ತನ್ನದೇ ಸ್ಥಾನ, ಖ್ಯಾತಿಯನ್ನು ಉಳಿಸಿಕೊಂಡ ಬಲು ದೀರ್ಘ ಚಿತ್ರವಂತೆ. ಆದರೇನು ಕಾಲರಾಯನ ಪದಗತಿಯಲ್ಲಿ ನಿಲ್ಲಿಸಲಾಗದ ರಾಸಾಯನಿಕ ಕ್ರಿಯೆಗಳ ಹೊಡೆತದಲ್ಲಿ ಈ ಸಿನಿಮಾದ ರೀಲುಗಳು ಪ್ರದರ್ಶನಕ್ಕೆ ಅಲಭ್ಯದ ಸ್ಥಿತಿಗೆ ಬಂದಿತ್ತು. ಅದನ್ನು ಥಾಂಸನ್ ಫೌಂಡೇಷನ್ ಎಂಬ ಸಂಸ್ಥೆ ಹೊಸ ತಂತ್ರಜ್ಞಾನದ ಬಲದಲ್ಲಿ ತಿಂಗಳಾನುಗಟ್ಟಲೆ ಶ್ರಮಿಸಿ ಪೂರ್ಣ ಸಂಸ್ಕರಿಸಿತ್ತು. ಜೊತೆಗೆ ಮೂಲ ಸಿನಿಮಾವನ್ನು ವರ್ತಮಾನದ ಕಾಲಮಿತಿಗೆ ಹೊಂದುವಂತೆ ಹೊಸ ಸಂಕಲನ ಕ್ರಿಯೆಯನ್ನೂ ನಡೆಸಿದ್ದರು. ಸ್ತ್ರೀ ಸಮಾನತೆಯನ್ನು ಚಿತ್ರ ಮಾಧ್ಯಮದ ಮೂಲಕ ಸಾರ್ವಜನಿಕ ಚರ್ಚೆಗೆ ತೆರೆದಿಟ್ಟ ಮೊದಲ ಚಿತ್ರಗಳಲ್ಲಿ ಇದೂ ಒಂದು ಎಂದೇ ಖ್ಯಾತ. ಚಿತ್ರದ ಪುನರ್ಜನ್ಮದ ಪ್ರಥಮ ಪ್ರದರ್ಶನಕ್ಕೆ ಈ ಚಿತ್ರೋತ್ಸವವನ್ನೇ ಆಯ್ದುಕೊಂಡಿದ್ದುದರಿಂದ ತೀರಾ ಕಿರು ಬಿಡುಗಡೆಯ ಔಪಚಾರಿಕತೆಯೂ ನಡೆಯಿತು. ಇಷ್ಟಾದರೂ ಚಿತ್ರದ ಗತಿ ನಮ್ಮ ಮನಃಸ್ಥಿತಿಗೆ ಕೂಡಿ ಬರಲಿಲ್ಲ. ಜೊತೆಗೆ ಪೂರ್ತಿ ಸಿನಿಮಾ ಮುಗಿಯುವವರೆಗೆ ಕೂರುವುದೇ ಆದರೆ ನನ್ನ ಬಸ್ಸಿನ ಸಮಯ ಮೀರುತ್ತದೆ ಎಂದೂ ಮೊದಲೇ ಅಂದಾಜಿಸಿದ್ದರಿಂದ ಅರ್ಧವೋ ಮುಕ್ಕಾಲೋ ಅವಧಿಯವರೆಗಾದರೂ ನೋಡುವುದು ಎಂದಿದ್ದ ನಿರ್ಧಾರವನ್ನು ಬಳಸಿಕೊಂಡೆವು. ನಿಶ್ಶಬ್ದವಾಗಿ ಥಿಯೇಟರ್ ಬಿಟ್ಟೆವು. ಉಚಿತ ರಿಕ್ಷಾ ಸೌಲಭ್ಯ ಬಳಸಿಕೊಂಡು ಇನಾಕ್ಸ್‌ವರೆಗೆ ಹೋಗಿ ಹೋಟೆಲ್ ಒಂದರಲ್ಲಿ ಊಟದ ಶಾಸ್ತ್ರ ಮುಗಿಸಿ ಚದುರಿದೆವು; ನನಗೆ ರಾತ್ರಿ ಬಸ್ಸು, ನವದಂಪತಿಗೆ ಸ್ವಾತಂತ್ರ್ಯ!

ಉಪಸಂಹಾರ

ನಾನು ಇನ್ನೂ ಒಂದು ದಿನ ತಡವಾಗಿ ಹೋಗಿದ್ದರೆ ಅಥವಾ ಒಂದು ದಿನ ಅಲ್ಲೇ ಉಳಿದು ಕಾದಿದ್ದರೆ ಅಭಯನ ಸಿನಿಮಾಪ್ರದರ್ಶನಕ್ಕೇ ಸಾಕ್ಷಿಯಾಗಬಹುದಿತ್ತು. ಈ ಬಾರಿ ಸಾಮಾನ್ಯ ಪ್ರೇಕ್ಷಕರಿಗೆ ದಿನಕ್ಕೆ ಮೂರೇ ಸಿನಿಮಾವಾದರೂ ಪ್ರತಿನಿಧಿಗಳಿಗೆ ಐದರವರೆಗೆ ಅವಕಾಶವಿತ್ತು. ಹಿಂದಿನ ವರ್ಷಗಳಲ್ಲಿ ಮುದ್ರಿತ ಪಾಸ್ ಅಥವಾ ಟಿಕೆಟ್ ಮಟ್ಟದ ನಿರ್ಬಂಧವಿತ್ತು. ಆದರೆ ಔದಾರ್ಯ, ಒತ್ತಾಯಗಳ (ಲಂಚಕೋರತನವೂ ಇದ್ದಿರಬಹುದು) ಹಿಂಸೆಯಲ್ಲಿ ಪ್ರತಿ ಪ್ರದರ್ಶನದುದ್ದಕ್ಕೆ ನೂಕು ನುಗ್ಗಲು ಸಾಮಾನ್ಯವಿತ್ತಂತೆ. ಆದರೆ ಈ ಬಾರಿ ಎಲ್ಲವೂ ಗಣಕೀಕೃತಗೊಂಡಿದ್ದುದರಿಂದ `ಅನಗತ್ಯಗಳಿಗೆ’ ವಠಾರಕ್ಕೇ ಪ್ರವೇಶವಿಲ್ಲದಿದ್ದುದರಿಂದ ಗೊಂದಲಗಳೇನೂ ಇರಲಿಲ್ಲ. ಆದರೆ ಸಾಮಾನ್ಯ, ವೃತ್ತಿಪರ, ಅತಿಥಿ ಎಂದೆಲ್ಲಾ ಕೋಟಾ ಪದ್ಧತಿ ಜ್ಯಾರಿಗೊಂಡು ಮೂರೂ ಪ್ರದರ್ಶನದಲ್ಲಿ ಅಸಂಖ್ಯ ಕುರ್ಚಿಗಳು ಖಾಲಿಯೇ ಉಳಿವಂತಾದ್ದು ಸರಿಯಲ್ಲ. ಉತ್ಸವದ ಉದ್ದಕ್ಕೆ ಪ್ರತಿ ಸಂಜೆ ಹೊರಗೆಲ್ಲೋ ಬೀಚಿನಲ್ಲಿ, ಸಾರ್ವಜನಿಕ ಪಾರ್ಕಿನಲ್ಲಿ ದೊಡ್ಡ ಪರದೆ ಎಬ್ಬಿಸಿ ಖ್ಯಾತ ಚಿತ್ರಗಳ ಮುಕ್ತ ಪ್ರದರ್ಶನವೂ ಇತ್ತಂತೆ. ಆದರೆ ಇದನ್ನು ಶೋಧಿಸಲು ನನಗೆ ಸಮಯ ಸಾಲಲಿಲ್ಲ. ನಿಜ ಅರ್ಥದಲ್ಲಿ ನಮ್ಮ ಊರ ಸಂತೆ, ಜಾತ್ರೆ, ಸಾಹಿತ್ಯ ಸಮ್ಮೇಳನಗಳಂತೆ ಈ ಚಿತ್ರೋತ್ಸವಗಳೂ ಸಾಂಸ್ಕೃತಿಕ ಹಬ್ಬಗಳೇ ಸರಿ. ಆದರೆ ಆರೋಗ್ಯಪೂರ್ಣ, ವೈವಿಧ್ಯಾತ್ಮಕ ಸಾಮಾಜಿಕ ಅಭಿವೃದ್ಧಿಯ ಅಂಗವಾಗಿಯೇ ನಡೆಯುವಂತೆ ನೋಡಿಕೊಳ್ಳುವ (ನಡೆಸುವ ಅಲ್ಲ. ಕೇಂದ್ರ ಹಾಗೂ ರಾಜ್ಯ) ಸರಕಾರಗಳ ಜವಾಬ್ದಾರಿ ಮಾತ್ರ ಇನ್ನಷ್ಟು, ಮತ್ತಷ್ಟು ಹೆಚ್ಚಿನದು.