ಪ್ರಿಯಾನಂದಾ,
ಬಂಗಾಳಕೊಲ್ಲಿಯ ಕಡೆದಿಟ್ಟ ನವನೀತ ‘ಅಂಡಮಾನ್’ ಒಂದು ಆಪ್ತ ಪತ್ರ-ಪ್ರವಾಸ ಕಥನ ಎರಡನೇ ಭಾಗ

[ಅಮೆರಿಕಾದಲ್ಲಿರುವ ನನ್ನೊಬ್ಬ ತಮ್ಮ ಆನಂದವರ್ಧನ (ಐದು ವರ್ಷ ಕಿರಿಯನಾದರೂ) ನನ್ನ `ಬಹುಹುಚ್ಚುಗಳ’ ನಿಕಟ ಅನುಯಾಯಿ. ಹತ್ತತ್ತಿರ ಎರಡು ವರ್ಷದ ಹಿಂದಿನ ಅನುಭವವಿದಾದರೂ ಪುರುಸೊತ್ತಿದ್ದಾಗ ಉದ್ದಕ್ಕೂ ನಿಧಾನಕ್ಕೆ ಬರಹಕ್ಕಿಳಿಯುತ್ತಲೇ ಇತ್ತು. ಆನಂದನಿಗೂ ಬ್ಲಾಗಿಗರಿಗೂ ಅದನ್ನು ಉಣಬಡಿಸುವ ಉಮೇದು ನನ್ನದು. ನಿಮ್ಮೆಲ್ಲರ ಸಹೃದಯೀ ಪತ್ರಪ್ರತಿಕ್ರಿಯೆಗಳ ಕುಮ್ಮಕ್ಕಿನಲ್ಲಿ ಮುಂದಿನ ಕಂತುಗಳು ಬೇಗಬೇಗನೆ ಅನಾವರಣಗೊಳ್ಳಲಿವೆ – ಅಶೋಕವರ್ಧನ]

ತಾಪೇದಾರಿಯಲ್ಲಿರುವವರು ಒಂದು ಲೆಕ್ಕದಲ್ಲಿ (`ನಮಗೆ ನಾವೇ ಯಜಮಾನರು’ ಎಂದುಕೊಳ್ಳುವ ನನ್ನಂಥವರಿಗಿಂಥ ಅಂದರೆ) ಸ್ವೋದ್ಯೋಗಿಗಳಿಗಿಂಥ ಹೆಚ್ಚು ಮುಕ್ತರು. ಅವರು ರಜಾ ಅರ್ಜಿ ಎಸೆದು ಎಲ್ಲಿಗೂ ಎದ್ದುಕೊಂಡು ಹೋಗಿಬಿಡಬಹುದು. ಹಾಗೇಂತ ನಾನು ದಿಢೀರ್ ಅಂಗಡಿ ಬಾಗಿಲು ಎಳೆದು ಹೋದರಾದೀತೇ? ಅಂಗಡಿ ತೆರೆದ ಮೊದಮೊದಲ ಸ್ಥಿತಿಯನ್ನು ಸರಳವಾಗಿ ಹೇಳುವುದಾದರೆ ಹೊಟ್ಟೆಪಾಡು ಮತ್ತು ಭವಿಷ್ಯದ ಹೆದರಿಕೆ ನಿವಾರಣೆಗೆ ಶಿಸ್ತು ಅಗತ್ಯವಿತ್ತು. ಕಾಲಾನಂತರ ಆ ಸ್ವಾರ್ಥಕ್ಕೂ ಮಿಗಿಲಾಗಿ ಒಂದು ಸಾಮಾಜಿಕ ಜವಾಬ್ದಾರಿಯಾಗಿ ನಾನು ಶಿಸ್ತು ಪಾಲಿಸಲೇಬೇಕಾಗುತ್ತದೆ. ಎಲ್ಲೆಲ್ಲಿಂದಲೋ ವೈಯಕ್ತಿಕ ಮತ್ತು ಸಾಂಸ್ಥಿಕ ಪುಸ್ತಕ ಅಗತ್ಯಗಳವರು ಸ್ಪಷ್ಟವಾಗಿ ನನ್ನಂಗಡಿಗೇ ಸಮಯ, ಹಣಹೊಂದಿಸಿಕೊಂಡು ಬರುವಾಗ ನಾನಿಲ್ಲದಿದ್ದರೆ? ನನ್ನಂಗಡಿಗೆ ಬರುವ ತುಂಬಾ ವಿದೇಶೀ ಪ್ರವಾಸಿಗಳು ಒಂಬತ್ತು ತಿಂಗಳು ಸರಿಯಾಗಿ ದುಡಿದು ಹಣ, ರಜೆ ಕೂಡಿಹಾಕಿ ಪ್ರವಾಸ ಹೊರಟುಬಿಡ್ತಾರಂತೆ. ಕಷ್ಟವೋ ನಷ್ಟವೋ ನಿನ್ನ ಭಾರತಯಾತ್ರೆಗಳು ನಡೆಯುವುದೂ ಇದೇ ಸೂತ್ರದಲ್ಲಿ ತಾನೇ. ಆದ್ರೆ ನನ್ನದು? “ಬೆಳಿಗ್ಗೆ ಎಂಟೂವರೆಯಿಂದ ಒಂದು, ಎರಡೂವರೆಯಿಂದ ಎಂಟು. ವಾರದ ರಜಾ ಆದಿತ್ಯವಾರ” ಎಂದು ವರ್ಷದ ಹನ್ನೆರಡೂ ತಿಂಗಳು ಸಾರ್ವಜನಿಕಕ್ಕೆ ಒಪ್ಪಿಸಿಕೊಳ್ಳುತ್ತೇನೆ. ಮಹಾರಾಜನ ವೇಷದ ಗುಲಾಮ, ಏರಿಂಡಿಯಾ `ಮಹಾರಾಜ’ನ ಹಾಗೇ! ನನಗೂ ಹೀನಾಯ ನನ್ನ ಸಹಾಯಕ ಶಾಂತಾರಾಮನದು!! ಇದಕ್ಕೆ ಸಣ್ಣ ಸಮಾಧಾನವಾಗಿ ಸುಮಾರು ಮೂರ್ನಾಲ್ಕು ವರ್ಷದ ಹಿಂದೆ ಆರೇಳು ದಿನ ಮೀರದ `ಅತ್ರಿಗೆ ಬೇಸಗೆ ರಜಾ’ ಘೋಷಿಸಿದೆ. ಅದನ್ನು ಅರ್ಥಪೂರ್ಣವಾಗಿ ನಡೆಸುವ ಅನುಕೂಲ ಒದಗಿದ್ದು ಬಹುಶಃ ಒಮ್ಮೆ ಮಾತ್ರ. ಆದರೆ ಮೊದಲೇ ಹೇಳಿದ ಹಾಗೆ ಸುಮಾರು ಎರಡು ವರ್ಷದ ಹಿಂದೆ ಒದಗಿದ ಅಂಡಮಾನ್ ಪ್ರವಾಸಾವಕಾಶ. ಅದು ಕಾಲದಿಂದ ಮಾಸದಾ ವಿಚಿತ್ರವಾಗಿಯೇ ನನ್ನ ಮನದೊಳಗಿರುವುದರಿಂದ ಮತ್ತೆ ಹೇಳಲು ತೊಡಗುತ್ತೇನೆ. ಮೊನ್ನೆ ಅಂಗಡಿಯ ಗಲ್ಲಾದಲ್ಲಿ ನಿರ್ಯೋಚನೆಯಿಂದ ಕುಳಿತಿದ್ದವ ಇಂದು, ಹಿಂದಿನ ಪತ್ರ ಕಂತಿನಲ್ಲಿ ಹೇಳಿದಂತೆ…

“ಇನ್ನು ಕೆಲವೇ ಮಿನಿಟುಗಳಲ್ಲಿ ಪೋರ್ಟ್ ಬ್ಲೇರಿನಲ್ಲಿ ಇಳಿಯಲಿದ್ದೇವೆ” ಎಂದು ಘೋಷಿಸಿಕೊಂಡು ಅಂಡಮಾನ್ ದ್ವೀಪ ಸ್ತೋಮಕ್ಕೆ ಸಣ್ಣ ಸುತ್ತು ಹಾಕಲುತೊಡಗಿದ್ದೆವು. ಇಳಿದಾಣ ತೆರವು ಮಾಡಲು ನೆಲದ ಸಿಬ್ಬಂದಿಗೆ ಕೆಲವು ಮಿನಿಟುಗಳ ಕೊರತೆ ಕಾಡಿರಬೇಕು. ವಿಮಾನ ಹೀಗೊಮ್ಮೆ ಹಾಗೊಮ್ಮೆ ತೀವ್ರ ತಿರುವುಗಳನ್ನು ತೆಗೆಯುತ್ತಾ ಎಲ್ಲಾ ಕಿಟಕಿ ನೋಟಕರಿಗೂ ಅನುಕೂಲವಾಗುವಂತೆ, ಮುತ್ತುತ್ತಿದ್ದ ಬಿಳಿಮುಗಿಲ ಸಾಗರದಿಂದ ಪಾರಾಗುವಂತೆ ವಿಹರಿಸಿತು. ಅಖಂಡ ನೀಲಿಮೆಯಲ್ಲಿ ಒಮ್ಮೆಗೆ ಮೂಡಿದ ಅನೂಹ್ಯ ಕಲಾಪತ್ತಿನಂತೆ ನೆಲ ಕಾಣಿಸಿತು. ನೀರು ಮಗುಚುತ್ತಿದ್ದ ಸಪುರ ಬಿಳೀ ಮರಳ ಕಿನಾರೆ (ಹೀಗೂ ಉಂಟೇ? ಮತ್ತೆ ತಿಳಿಯಿತು ಇಲ್ಲಿ ವಾಸ್ತವದ ಮರಳಿಲ್ಲ, ಎಲ್ಲವೂ ಹವಳದ ವೈವಿಧ್ಯ ಅಂದರೆ ಸುಣ್ಣದ ಕಲ್ಲಿನ ರೂಪಗಳು), ಒತ್ತಿ ಬಂದಂತೆ ಗಾಢ ಹಸಿರಿನ ಕಾಡ ಕವಚ ಮೋಹಕವಾಗಿ ಕಾಣಿಸಿತು. ಅದು ಸೆಂಟಿನೆಲ್ ದ್ವೀಪವಂತೆ. (ಅಲ್ಲಿ ಒಂದು ಆದಿವಾಸಿ ಪಂಗಡ ಇಂದೂ ಸ್ವತಂತ್ರವಾಗಿ, ಸ್ವಯಂಪೂರ್ಣವಾಗಿ ಬಾಳುತ್ತಿದೆ. ಇಂದಿನ ನಾಗರಿಕರಿಗೂ ಆಧುನಿಕ ಸವಲತ್ತುಗಳಿಗೂ ಅಲ್ಲಿ ಪ್ರವೇಶ ನಿಷಿದ್ಧ). ಐದು ಮಿನಿಟಿನ ಸುತ್ತಾಟ ಮುಗಿಸಿ, ಪೋರ್ಟ್ ಬ್ಲೇರ್ಗೆ ಮರಳಿ ಸ್ಪಷ್ಟವಾಗಿ ಕಾಣುತ್ತಿದ್ದ ರನ್ವೇಯ ಉದ್ದವನ್ನು ಬಲು ಧಾವಂತದಲ್ಲಿ ಅಳೆದು ವಿಮಾನ ತಂಗಿತು. ಇಳಿ-ಮೆಟ್ಟಿಲ ಗಾಡಿಯನ್ನು ಇಬ್ಬರು ನೂಕಿಕೊಂಡು ಬಂದು ನಿಲ್ಲಿಸಿದರು. ನಮ್ಮ ಗಂಟು ಗದಡಿಗಳನ್ನು ಇಳಿಸಿ ಹಂಚು-ಸರಪಳಿಗೊಡ್ಡಲೂ ಕೈಗಾಡಿಯೇ ವಾಹನ. ಹೊರಗೆ ಎಲ್ಲೆಡೆಗಳಂತೆ ಬಹುಸಂಖ್ಯೆಯಲ್ಲಲ್ಲದಿದ್ದರೂ ಯಾವ್ಯಾವ್ಯುದೋ ಹೋಟೆಲಿನವರೋ ಆಫೀಸಿನವರೋ ಯಾರ್ಯಾರದೋ ಹೆಸರಿನ ಫಲಕ ಹಿಡಿದು ಕಾದಿದ್ದರು. ಅವರನ್ನು ಸರಿಸಿಕೊಂಡು ಬಾಡಿಗೆ ಕಾರು ಹಿಡಿದೆವು. ಅಂಕು ಡೊಂಕಿನ ವಿಪರೀತ ಏರಿಳಿತಗಳ ದಾರಿ, ಡಬ್ಬೆ ಮಾಡಿನ ಅನಾಕರ್ಷಕ ಕಟ್ಟಡಗಳ ನಡುನಡುವೆ ದೃಷ್ಟಿ ನಿವಾಳಿಸುವಂತ ಹೊಸ ಕಟ್ಟಡಗಳು. ಒಟ್ಟಾರೆ ನನ್ನ ಬಾಲ್ಯದ ಮಡಿಕೇರಿಯನ್ನೇ ನೆನಪಿಸುತ್ತಿತ್ತು. ಆದರೆ ಸೆಕೆ ಅಪ್ಪಟ ದಕ್ಷಿಣ ಕನ್ನಡದ್ದೇ ಅಥವಾ ಒಂದು ಕೈ ಮಿಗಿಲು!

ಅರಣ್ಯಾಧಿಕಾರಿ, ಪ್ರವಾಸೋದ್ಯಮ ಇಲಾಖೆಗಳೊಡನೆ ಸಂವಾದ, ಅನುಮತಿ ಇತ್ಯಾದಿಗಳನ್ನು ನಿರೇನ್ ಅಭಯರು ನಡೆಸಿದ್ದರು. ಉಳಿದವರು ಅಪರಾಹ್ನದ ಹಾವ್ಲಾಕ್ ದ್ವೀಪಯಾನಕ್ಕೆ ದೋಣಿ ಟಿಕೆಟ್ ಖರೀದಿಸಲು ದಕ್ಕೆಗೆ ಹೋದೆವು. ಅರಣ್ಯಾಧಿಕಾರಿ ಪ್ರವಾಸೀ ಇಲಾಖೆಗೆ ಎಲ್ಲಾ ಬಿಟ್ಟು ಕೊಟ್ಟಂತಿತ್ತು. ಅಲ್ಲಿನವರು ವಿಕೇಂದ್ರೀಕರಣ, ಅಂದರೆ ಆಯಾ ಜಾಗದ ಸಮೀಪದಲ್ಲೇ ಸ್ಥಳೀಯವಾಗಿ ಅನುಮತಿ ಇತ್ಯಾದಿ ಕೊಡುವವರಿದ್ದರೂ ಸಿಕ್ಕಿದ ಮೇಲುಗೈಯನ್ನು ಕಳೆದುಕೊಳ್ಳಬಾರದೆಂಬಂತೆ ಏನೇನೋ ಪತ್ರಗಳನ್ನು ಕೊಟ್ಟರು. ಒಬ್ಬನಿಂದ ದಿನವೊಂದರಲ್ಲಾಗುವ ಕೆಲಸಕ್ಕೆ ನಾಲ್ಕು ಜನರಿಟ್ಟರೂ ಅರ್ಧದಿನದಲ್ಲಾಗುವುದಿಲ್ಲ ಬದಲಿಗೆ ಅಷ್ಟೇ ಕೆಲಸ ಇರುವಷ್ಟೂ ಜನ ಮತ್ತು ಸಮಯಕ್ಕೆ ಪಸರಿಸಿಕೊಳ್ಳುತ್ತದೆ ಎಂಬ ಅರ್ಥದಲ್ಲಿ ಪಾರ್ಕಿನ್ಸನ್ ನಿಯಮವನ್ನು ನಮ್ಮಪ್ಪ ಉದ್ಧರಿಸಿ ಹೇಳುತ್ತಿದ್ದದ್ದು ನೆನಪಿಗೆ ಬಂತು!

ಇತ್ತ ದಕ್ಕೆಯಲ್ಲಿ ಮೂರ್ನಾಲ್ಕು ಪುಟ್ಟ ಹಡಗು, ದೋಣಿಗಳು ಪ್ರತ್ಯೇಕ ಅಂಕಣಗಳಲ್ಲಿ ನಿರ್ಲಿಪ್ತವಾಗಿ ತೇಲಿಬಿದ್ದಿದ್ದವು. ಸ್ಫಟಿಕ ನಿರ್ಮಲ ನೀರು ನಿತ್ಯ ಕರ್ಮದಂತೆ ದಡ ನೆಕ್ಕುತ್ತಿತ್ತು. ಮುಖ್ಯ ಅಂಕಣವೊಂದರಲ್ಲಿ ಪ್ರವಾಸೋದ್ಯಮದ ಪುಣ್ಯಫಲವೋ ಅಂಡಮಾನದಲ್ಲಿ ತೀವ್ರವಾಗಿ ವಿಕಸಿಸುತ್ತಿರುವ ನಾಗರಿಕತೆಯ ಸಲ್ಲಕ್ಷಣವೋ ಎಂಬಂತೆ ರಾಶಿಗಟ್ಟಳೆ ಪ್ಲ್ಯಾಸ್ಟಿಕ್ ಕಸ ತೇಲಿಬಿದ್ದಿತ್ತು. ನೀರು, ಲಘುಪೇಯಗಳ ಖಾಲಿ ಬಾಟಲುಗಳಿಂದ ತೊಡಗಿ ಅಸಂಖ್ಯ ಪ್ಲ್ಯಾಸ್ಟಿಕ್ ಸಂಬಂಧೀ ತೇಲು ಕಸವನ್ನು ಒಂದು ಜಾಡಮಾಲೀ ದೋಣಿ ಬಲೆಬೀಸಿ ಒಟ್ಟು ಮಾಡಿ ತೆಗೆಯುತ್ತಿತ್ತು! ಹಾಗಾದರೆ ಕರಗಿದ, ಮುಳುಗಿದ ಕಸ ಇನ್ನೆಷ್ಟಿರಬಹುದೋ ಎಂದು ಗಾಬರಿಪಡುವುದಷ್ಟೇ ನಮಗೆ ಉಳಿಯಿತು. ಆ ಬಂದರು ಪ್ರಾದೇಶಿಕ ಸಾರಿಗೆಯ ಬಸ್ ನಿಲ್ದಾಣದ ಹಾಗಿತ್ತು. ಅಲ್ಲಿಂದ ಅಂಡಮಾನಿನ ವಿವಿಧ ದ್ವೀಪ ನೆಲೆಗಳಿಗೆ (ನಿರ್ಜನ ದ್ವೀಪಗಳು ಅಸಂಖ್ಯವಿವೆ ಮತ್ತಲ್ಲಿಗೆ ಖಾಯಂ ಸಾರಿಗೆ ಸಂಚಾರ ಇಲ್ಲ) ಪುಟ್ಟ ಹಡಗುಗಳ ಸಾರಿಗೆ ಜಾಲವಿತ್ತು. ಆದರೆ ಸಮುದ್ರದ ಭರತ ಇಳಿತಗಳು ಮತ್ತು ಎಂದೂ ಬದಲಾಗಬಹುದಾದ ಹವಾಮಾನದ ವೈಪರೀತ್ಯಗಳಿಂದಾಗಿ ಕಾಲದ ನಿಯತಿ ಖಾಯಂ ಇದ್ದಂತಿರಲಿಲ್ಲ. ಪ್ರವಾಸಿ ಮತ್ತು ಸ್ಥಳಿಯರಿಗೆ ಟಿಕೆಟ್ ದರದಲ್ಲಿ ವ್ಯತ್ಯಾಸವಿತ್ತು. ಆದರೆ ಪ್ರಯಾಣಾವಕಾಶ ಶಕ್ತರಿಗೆ ಮಾತ್ರ ಎಂಬಂತಿತ್ತು ಅಲ್ಲಿನ ನೂಕು ನುಗ್ಗಲು; ಅಕ್ಷರಶಃ ದೊಂಬಿ. ಮೂರೂ ದಿಕ್ಕುಗಳಲ್ಲಿ ಟಿಕೆಟ್ ಕೌಂಟರ್ ಮಾತ್ರವಿರುವಂತಿದ್ದ ಒಂದು ಕೋಳಿಗೂಡಿಗೆ ಸುತ್ತಲಿಂದ ಜನ ಮುತ್ತಿಗೆ ಹಾಕಿದ್ದರು. ಆ ಟಿಕೆಟ್-ಕಂಡಿಗಳಿಲ್ಲದ ಎಡೆಗಳಲ್ಲಿನ ಗೋಡೆಗಳಲ್ಲಿ ಏನೋ ಅಸ್ಪಷ್ಟ ನೋಟೀಸುಗಳನ್ನು ಹಚ್ಚಿದ್ದರು. ಸಮೀಪಿಸಿ ಓದೋಣವೆಂದರೆ ಅಲ್ಲೇ ಸಿಗುವ ತುಂಡು ನೆರಳಿಗೆ (ಸೂರ್ಯ ಹೆಚ್ಚು ಕಡಿಮೆ ನಡುನೆತ್ತಿಯಲ್ಲಿದ್ದ) ದೋಣಿ ಕಾಯುವ ಮಂದಿ ಗಂಟು ಗದಡಿ ಸಮೇತ ಮುತ್ತಿಕೊಂಡಿದ್ಡರು. `ಯಾವ ಕಿಟಕಿ ಯಾವುದಕ್ಕೆ’ ಎಂಬ ನಾಮನಿರ್ದೇಶನಗಳೂ ಇರಲಿಲ್ಲ. ಜನಸಾಗರದಲ್ಲಿ ಈಜಿ ಉಪಾದ್ಯ ಒಂದು ಅರ್ಜಿಫಾರಂ ಗಿಟ್ಟಿಸಿದರು. ಅದನ್ನು ಭರ್ತಿ ಮಾಡಿ ರಣಗುಟ್ಟುವ ಬಿಸಿಲಿನಲ್ಲಿದ್ದ ಯಾವುದೋ ಅಪರಿಪೂರ್ಣ (ಜನ ಅದನ್ನು ಲೆಕ್ಕಿಸದೆ ನುಗ್ಗುವುದೂ ನಡೆದಿತ್ತು) ಸರತಿ ಸಾಲಿನಲ್ಲಿ ಭವ್ಯ ಭವಿಷ್ಯದ ಕನಸು ಕಳೆದುಹೋದವರಂತೆ ನಿಂತೆವು. ಅದೃಷ್ಟವಶಾತ್ ಪೋಲಿಸಪ್ಪನಂತವನೊಬ್ಬ ಒಂದು ಕಿಟಕಿಯೆದುರು ಮುಕುರಿದ್ದ ಹುಡುಗರನ್ನು, ಗಂಡಸರನ್ನು ನೂಕುತ್ತಾ ಗಟ್ಟಿ ಧ್ವನಿಯಲ್ಲಿ `ಮಹಿಳಾ ಸರದಿ ಸಾಲು’ ರಿಪೇರಿ ಮಾಡಿದ. ಕೂಡಲೇ ಸೋತ ನಾವು ದೇವಕಿಯನ್ನು `ಪಣಕ್ಕಿಟ್ಟು’ ಗೆದ್ದೆವು!

ಅನಂತರ ಪೂರ್ವನಿಶ್ಚಯದಂತೆ ಆ ಊರಿನ, ಬಹುಶಃ ಅತ್ಯುತ್ತಮ ದಕ್ಷಿಣ ಭಾರತೀ ಊಟ ತಿಂಡಿಗಳ ಹೋಟೆಲ್ ಅನ್ನಪೂರ್ಣದಲ್ಲಿ ಎಲ್ಲ ಸೇರಿದೆವು. ಯಾವುದೋ ಸಾಮಾನ್ಯ ಮನೆಯನ್ನು ಸಣ್ಣಪುಟ್ಟ ತಿದ್ದುಪಡಿಗಳೊಂದಿಗೆ ಹೋಟೆಲ್ ವ್ಯವಸ್ಥೆಗೆ ಹೊಂದಿಸಿದಂತಿತ್ತು. ಅದೊಂದು ಉಡುಪಿ ಹೋಟೆಲ್ಲೇ ಇರಬೇಕೆಂಬ ಗುಮಾನಿ ನಮ್ಮದು! [ನಿನಗ್ಗೊತ್ತಿರಬಹುದು ಚಂದ್ರನ ಮೇಲೆ ಆರ್ಮ್‌ಸ್ಟ್ರಾಂಗ್ ಇಳಿಯುವಾಗ ಮೊದಲು ಕಂಡದ್ದೇ `ಉಡುಪಿ ಶ್ರೀಕೃಷ್ಣ ಭಾ(ಭ)ವನನ್ನಂತೆ.’ ಈ ವಿಚಾರದಲ್ಲಿ ಜಾತ್ಯಾತೀತರ “ಅಲ್ಲವೇ ಅಲ್ಲ. ನಮಗೆ ಅಲ್ಲಿನ ಕರೆಯೂ ಕೇಳಿದೆ, ಅದೂ ಕಾಕನ ಚೋಯ್” ಕೇವಲ ಆಶಯ ಮಾತ್ರ.] ಆದರೆ ಪ್ರಾದೇಶಿಕತೆಯನ್ನು ಕನ್ನಡ ಹೋಟೆಲ್ಲುಗಳೂ ಎಂದೋ ಮೀರಿ ರೈಸು, ಗೋಬಿ, ಸಾಂಬಾರ್, ಮೊಸಳೆ ದೋಸೆ ಇತ್ಯಾದಿ ಜೀರ್ಣಿಸಿಕೊಂಡಿರುವುದರಿಂದ ಊಟ ಚೆನ್ನಾಗಿಯೇ ಮುಗಿಸಿದೆವು. ಗಲ್ಲಾದಲ್ಲಿದ್ದ ಯಜಮಾನರನ್ನು ಹಠಗಟ್ಟಿ ಕನ್ನಡದಲ್ಲಿ ಮಾತಾಡಿಸಿದಾಗ ತಿಳಿಯಿತು ಅವರ ಪಾಲ್ಘಾಟ್ ಮೂಲ!

ವಟವೃಕ್ಷವನ್ನು (= ಆಟೋರಾಕ್ಷಸ ಅಥವಾ ಆಟೋರಿಕ್ಷಾ) ಏರಿ ಮತ್ತೆ ಬಂದರಕ್ಕೆ ಬಂದಾಗ ಕಟ್ಟೆಯಂಚಿನಲ್ಲಿ ನಮ್ಮ ಹಡಗು ಸಿದ್ಧವಾಗೇನೋ ಇತ್ತು. ಜನ ಸಾಕಷ್ಟು ಸೇರಿದ್ದರು, ಸ್ಥಳೀಯರದ್ದೋ ಕೇವಲ ಸಾಗಣೆಯದ್ದೋ ಸಾಮಾನು ಬಂದು ಬಂದು ರಾಶಿ ಬೀಳುತ್ತಲೇ ಇತ್ತು. ಆದರೆ ಹಡಗಿಗೆ ಪ್ರವೇಶಕ್ಕೆ ಕೊಡುವ `ಮಹರಾಯ’ ಇನ್ನೂ ಎಲ್ಲೋ ಆರಾಮದಲ್ಲಿದ್ದ. ನಮಗೆ ರಣಗುಡುವ ಸೂರ್ಯಸ್ನಾನ ಕಡ್ಡಾಯ! ಕಟ್ಟೆಯ ಆ ಕೊನೆಯಲ್ಲಿ ಒಂದು ತಗಡಿನದ್ದೇ ಮಾಡು ಎರಡು ಗೋಡೆಗಳಿದ್ದ ಪುಟ್ಟ ಶೆಡ್ಡಿತ್ತು. ಬಹುಶಃ ಬಂದರದ ನೌಕರರ ವಾಹನ ತಂಗುದಾಣ. ಒಳಗೆ ಅಡ್ಡಾದಿಡ್ಡಿ ತುಂಬಿಕೊಂಡಿದ್ದ ಬೈಕು ಸ್ಕೂಟರುಗಳು ಎಡೆ ಎಡೆಯಲ್ಲಿ ನೆರಳರಸಿ ನಾವು ನುಗ್ಗಿಕೊಂಡರೂ ದಕ್ಕಿದ್ದು ಬೆಂಕಿಯಿಂದ ಬಾಣಲೆಗೆ ಬಿದ್ದಷ್ಟೇ ಸುಖ! ಅಂತೂ ಟಿಕೆಟ್ ಚಕ್ಕರ್ ಮಹಾಶಯ ಬಂದ. ಸಮುದ್ರದಲ್ಲಿ ಭರತವಿದ್ದುದರಿಂದ ನೇರ ಹಡಗಿನ ಹೊಟ್ಟೆಗೇ ಪ್ರವೇಶದ್ವಾರ ತೆರೆಸಿದ. (ಇಳಿತವಿದ್ದಿದ್ದರೆ ನಾವು ಹಡಗಿನ ಡೆಕ್ಕಿಗೇ (ಮೇಲ್ಚಪ್ಪರ) ನುಗ್ಗಿ, ಹಡಗಿನ ಹೊಟ್ಟೆಗೆ ಇಳಿಮೆಟ್ಟಿಲು ಹಿಡಿಯಬೇಕಾಗುತ್ತಿತ್ತು.) ಕೂಡಲೇ ಮತ್ತೆ ಗ್ರಾಮಾಂತರ ಬಸ್ಸು ನಿಲ್ದಾಣಗಳದ್ದೇ ನೆನಪು. ದೌರ್ಭಾಗ್ಯವಶಾತ್ ಇಲ್ಲಿ ತೆರೆದ ಕಿಟಕಿಗಳಿರಲಿಲ್ಲವಾಗಿ ನಾವು ಕರಚೀಪು, ಚೀಲ, ಏನೂ ಇಲ್ಲದಿದ್ದರೆ ಒಂದು ಚಪ್ಪಲಿಯನ್ನಾದರೂ ಒಳಗೆ ತೂರಿ ಸೀಟು ಕಾದಿರಿಸಲಾಗಲಿಲ್ಲ. ತಹತಹದಲ್ಲಿ ಸಂಪರ್ಕ ಹಲಿಗೆ ನಡೆಯುವಾಗ ಎಡವಿ, ತಗ್ಗು ಬಾಗಿಲಿನಲ್ಲಿ ತಲೆ ಹೆಟ್ಟಿ, ಕಿರು ಓಣಿಯಲ್ಲಿ ಅಂಚುಗಳಿಗೆ ಮೈ ಒರೆಸಿ ಐದು ಸೀಟು ಗೆದ್ದೇಬಿಟ್ಟೆವು! ಸ್ವಲ್ಪ ಹೊತ್ತಿನಲ್ಲೇ ನಮ್ಮ ಧಾವಂತ ಅನಾವಶ್ಯಕವಿತ್ತು ಎಂದು ಕಂಡು ನಗೆ ಬಂತು. ಅಲ್ಲಿ ಸೀಮಿತ ಹವಾನಿಯಂತ್ರಕ ಇದ್ದರೂ ದೃಶ್ಯ ಸೌಕರ್ಯ ಏನೂ ಇರಲಿಲ್ಲ. ಸಹಜವಾಗಿ ಒಂದಷ್ಟು ಮಂದಿ ಸ್ಥಳೀಯರನ್ನು ಬಿಟ್ಟು ಹೆಚ್ಚಿನೆಲ್ಲ ಪ್ರಯಾಣಿಕರು ನಿರಂತರ ಡೆಕ್ಕಿನ ಮೇಲೆ ಹೋಗಿ ಬರುವುದು ನಡೆದೇ ಇತ್ತು. ಹೆಚ್ಚಿನೆಲ್ಲಾ ಸೀಟುಗಳು ಖಾಲಿ ಅಥವಾ ಚೀಲ `ಕೂರುವ’ ಸೌಕರ್ಯಗಳಾಗಿದ್ದವು!

ನಮಗೆ ಈ ದ್ವೀಪಸ್ತೋಮಗಳ ಪರಿಚಯದ ಕೊರತೆಯಲ್ಲಿ ಅಥವಾ ಊರಿನ ಸವಿನೆನಪಿನಲ್ಲಿ ಚೀಲಗಳ್ಳರ, ಸೀಟುಗಳ್ಳರ ಭಯ ಸಹಜವಾಗಿತ್ತು. ಸರದಿಯಲ್ಲಿ ಒಬ್ಬರನ್ನಾದರೂ ಕೆಳಗುಳಿಸಿ ನಾವೂ ಸಾಕಷ್ಟು ಡೆಕ್ಕಿನ ಓಡಾಟ ನಡೆಸಿದೆವು. ಮತ್ತೆ ಅರಿವಿಗೆ ಬಂದಂತೆ ಈ `ಹಿಂದುಳಿದ’ ಪ್ರದೇಶದಲ್ಲಿ ಕಳ್ಳತನ, ಸುಲಿಗೆ, ವಂಚನೆಗಳೂ ಬಹಳ ಹಿಂದುಳಿದಿವೆಯಂತೆ! ಚಿಂತಿಸಬೇಡಿ, ಸರಕಾರಿ ಅಭಿವೃದ್ಧಿ ಕಾರ್ಯಕ್ರಮಗಳು ಮುಂದುವರಿದಂತೆ ಇಲ್ಲಿನ ಸಮಾಜವೂ ಅವನ್ನು ಕಲಿತುಕೊಳ್ಳುತ್ತದೆ. ನಮ್ಮ ಹಡಗು ಎಡಕ್ಕೆ ಸ್ಪಷ್ಟವಾಗಿ ಬ್ಲೇರ್ ದ್ವೀಪಕ್ಕೆ ಸಮಾನಾಂತರದಲ್ಲಿ ಓಡುವಂತೆ ಕಾಣುತ್ತಿತ್ತು. ನಮ್ಮ ಬಲಕ್ಕೂ ಚಾಚಿದಂತೆ ಕಾಣುವ ದ್ವೀಪ ಸರಣಿ ಮಧ್ಯ ನಿಧಾನಕ್ಕೆ ಮುಳುಗಿ ವಿಶಾಲ ಸಾಗರಕ್ಕೊಂದು ಹೆಬ್ಬಾಗಿಲು ತೆರೆದ ಹಾಗಿತ್ತು. ಆ ತೋರಿಕೆಯ ಅಳಿವೆಯಿಂದ ನುಗ್ಗುವ ಅಲೆಗಳು ಅತ್ತವೇ ಇಳಿಯುತ್ತಿದ್ದ ಸೂರ್ಯರಶ್ಮಿಗಳೊಡನೆ ಹುರಿಗೊಂಡು ವಿವಿಧ ನೀಲಛಾಯೆಗಳಲ್ಲಿ ನಮ್ಮೆದುರು ಬಿಡಿಸಿಕೊಳ್ಳುತ್ತಿತ್ತು. ಹಡಗು ನಿರ್ಲಿಪ್ತವಾಗಿ ಎಲ್ಲವನ್ನು ಕತ್ತರಿಸಿ ತನ್ನದೇ ರಾಟೆಯಲ್ಲಿ ಹೊಸ ಛಾಯೆ ಹೊಸೆದು ಹಿಂದೆ ಬಿಡುತ್ತಾ ಸಾಗಿತ್ತು. ಎದುರು ಎರಡೂ ಪಕ್ಕಕ್ಕೆ ನೊರೆಯುಕ್ಕುವಂತೆ ನೀರ ಹಾಸನ್ನು ಸೀಳುತ್ತ ಹಿಂದೆ ಸದಾ ವಿಸ್ತರಿಸುವ ಅಲೆಯ ಜಾಡನ್ನುಳಿಸುತ್ತಾ ಮೋಟಾರು ಏಕಶ್ರುತಿಯಲ್ಲಿ ಭೋರ್ಗರೆದಿತ್ತು. ಆಗೀಗ ಹಾರುವ ಮೀನು ಕಾಣಿಸಿ ನಮ್ಮ ವೀಕ್ಷಣೆಗೆ ಹೊಸ ನಿರೀಕ್ಷೆಗಳ ಗರಿ ಕಟ್ಟುತ್ತಿತ್ತು. ಬಾಲ್ಯದಲ್ಲಿ ತೋಡು, ಹೊಳೆಗಳ ಅಂಚಿನಲ್ಲಿ ನಿಂತು, ಚಪ್ಪಟೆ ಕಲ್ಲು ಹಿಡಿದು `ಕಪ್ಪೆಹಾರಿಸಿದ್ದು’ ಈ ಹಾರುಮೀನುಗಳ ಜಾಡಿನಲ್ಲಿ ಜೀವತಳೆದಂತಿತ್ತು.

ಸುಮಾರು ಎರಡೂವರೆ ಗಂಟೆಯ ಪ್ರಯಾಣದಲ್ಲಿ ನಾವು ಹ್ಯಾವ್ಲಾಕ್ ದ್ವೀಪವನ್ನು ಸಮೀಪಿಸಿದ್ದೆವು. ಜನಸಾಮಾನ್ಯರ ಭಾವಕ್ಕೊದಗುವ ಈ ನೀರು, ನೆಲಗಳೆಲ್ಲಾ ಆಕಾಶದ ಎತ್ತರದಲ್ಲಿ ಅಂದರೆ ವೈಮಾನಿಕ ಅಥವಾ ಗೂಗಲ್ ಅರ್ತ್ ಕೊಡುವ ಚಿತ್ರಗಳಲ್ಲಿ ಬೇರೆಯೇ ಇರುವುದನ್ನು ಯಾರೂ ಕಾಣಬಹುದು. ಗಂಟೆಗಟ್ಟಳೆ ನಾವು ಓಡುತ್ತಿದ್ದ `ಮಹಾಸಮುದ್ರ’ ವಾಸ್ತವದಲ್ಲಿ ನಿಜಮಹಾಸಮುದ್ರದ ಆಳದಿಂದೆದ್ದ ಶಿಖರ ಸಮೂಹದ ಸಣ್ಣಪುಟ್ಟ ಕಣಿವೆಗಳು. ಅಲ್ಲಿನ ಔನ್ನತ್ಯಗಳಲ್ಲೆಲ್ಲಾ ಹವಳದ ಜಾಲ ಬೆಳೆದು ಮತ್ತಷ್ಟು ಇಕ್ಕಟ್ಟಾಗಿದ್ದಿರಬೇಕು. ದೊಡ್ಡ ಹಡಗುಗಳು ಇಲ್ಲಿ ಬರುವುದು ಬಿಡಿ, ನಮ್ಮ ಸಣ್ಣ ಹಡಗೂ ಕೆಲವೊಂದು ಪ್ರದೇಶಗಳಲ್ಲಿ ಹಾದುಹೋಗುವಾಗ, ದ್ವೀಪ ಸಮೀಪಿಸುವಾಗ ಆಳಸಾಲದೆ ನೆಲತಾಗುವ ಅಪಾಯವಿರುತ್ತಿತ್ತು. ಸಹಜವಾಗಿ ಅಂತಲ್ಲೆಲ್ಲಾ ತೇಲುಬೆಂಡುಗಳ ಮಾರ್ಗಸೂಚನೆ ಇರುತ್ತಿತ್ತು. ಮೊದಮೊದಲು ನಮ್ಮೆದುರು ಬಲು ದೂರದಲ್ಲಿ ಅಸ್ಪಷ್ಟ ಹಸುರಿನಂತೆ ತೋರುತ್ತಿದ್ದ ನೆಲದಲ್ಲಿ ಎಲ್ಲೋ ಬಿಳಿ ಚುಕ್ಕಿಬಿದ್ದಂತಾಗಿ ಬರಬರುತ್ತಾ ಯಾವ್ಯಾವುದೋ ಕಟ್ಟಡವಾಗಿ ಹ್ಯಾವ್ಲಾಕಿನ ಪುಟ್ಟ ಹಡಗು ಕಟ್ಟೆಯೇ ಪ್ರತ್ಯಕ್ಷವಾಯ್ತು. ಮರಳಂಚಿಗೆ ಭದ್ರ ಕಾಂಕ್ರೀಟು ಕಟ್ಟೆ ಕಟ್ಟಿ ನೀರೊಳಕ್ಕೆ ಅಸಂಖ್ಯ ಪಿಲ್ಲರುಗಳ ಕಾಲುಚಾಚಿ ಎರಡು ಮೂರು ಅಂತಸ್ತುಗಳ ದಕ್ಕೆ ಕಾದಿತ್ತು. ಆದರೆ ಸಮುದ್ರದಲ್ಲಿ ಇಳಿತ ಶುರುವಾಗಿದ್ದರಿಂದ ಹಡಗು ಬಲು ನಿಧಾನ ಮತ್ತು ಎಚ್ಚರದಿಂದ ಜಾಡು ಆಯುತ್ತಾ ಕಟ್ಟೆ ಸಮೀಪಿಸಿತು. ಹಡಗಿನ ಎಲ್ಲ ಜನ, ಸಾಮಾನುಗಳನ್ನು ಡೆಕ್ಕಿಗೆ ಸಾಗಿಸಿ ಕಟ್ಟೆಯ ಮೇಲಕ್ಕಿಳಿದೆವು.

ಹ್ಯಾವ್ಲಾಕ್ ಸ್ಥಳಪುರಾಣದ ಬಗ್ಗೆ ಕೆಟಿ ಗಟ್ಟಿಯವರ `ನಿಸರ್ಗ ಕನ್ಯೆ ಅಂಡಮಾನ್’ನಲ್ಲಿ ಓದಿದ್ದ ನೆನಪು ಒತ್ತರಿಸಿ ಬಂತು. ಬ್ರಿಟಿಷ್ ಆಡಳಿತದ ಕೊನೆಯ ಪಾದ ಅಂದರೆ ಸುಮಾರು ಅರುವತ್ತು ವರ್ಷಗಳ ಹಿಂದೆ, ಈ ದ್ವೀಪ ಸಮೂಹಗಳು ಇನ್ನೂ ಶಿಕ್ಷೆಗೆ ಪರ್ಯಾಯನಾಮಗಳೇ ಆಗಿದ್ದ ಕಾಲವದು. ಇವು ಜಗತ್ತನ್ನೇ ಆಳುವ ಕನಸಿಗ ಜಪಾನೀಯರ ವಶದಲ್ಲಿದ್ದವು. ಆಳರಸರಲ್ಲಿ ಬ್ರಿಟಿಷರನ್ನು ನಾಚಿಸುವಷ್ಟು ಕ್ರೂರಿಗಳಂತೆ ಜಪಾನಿಗಳು! ಬ್ರಿಟಿಷರು ಸ್ವಾರ್ಥಕ್ಕೇ ಆದರೂ ವರ್ಷಾನುಗಟ್ಟಳೆ ವ್ಯವಸ್ಥಿತವಾಗಿ ನಾಗರಿಕಗೊಳಿಸಿದ್ದ ಪೋರ್ಟ್ ಬ್ಲೇರನ್ನು ಸುಲಭ ತುತ್ತಿನಂತೆ ಪಡೆದ ಜಪಾನಿಗಳ ಆಡಳಿತವಿದ್ದದ್ದು ಕೇವಲ ಮೂರೇ ವರ್ಷವಂತೆ. ಅಷ್ಟರೊಳಗೆ ಇವರು ಅಲ್ಲಿನ ಕುಖ್ಯಾತ ಸೆರೆಮನೆಯಲ್ಲಿದ್ದ ಅವರ ಲೆಕ್ಕಕ್ಕೆ ಕೇವಲ ಕೂಳುಬಾಕರಾದ ರಾಜಕೀಯ ಮತ್ತು ಇತರ ಕೈದಿಗಳು ಮಾತ್ರವಲ್ಲದೆ ಊರಿನ ಹಲವು ಸಂಶಯಿತರನ್ನು ಒಟ್ಟುಮಾಡಿದರಂತೆ. ಇದು ಸುಮಾರು ಆರುನೂರರ ಸಂಖ್ಯೆ ತಲಪಿದಾಗ ಸಾಕುವ, ವಧಿಸಿದರೂ ಹೆಣ-ನಿರ್ವಹಣಾವೆಚ್ಚವನ್ನೂ ಉಳಿಸುವ ಉಪಾಯ ಮಾಡಿದರಂತೆ. ಕರಾಳ ರಾತ್ರಿಯಲ್ಲಿ ಎಲ್ಲರನ್ನೂ ಹಡಗೊಂದರಲ್ಲಿ ತುಂಬಿ ಸುಮಾರು ಮೂರುಗಂಟೆಯ ನಿಗೂಢ ಯಾನದಲ್ಲಿ ಇದೇ ಹ್ಯಾವ್ಲಾಕ್ ದ್ವೀಪದ ಬಳಿ ತಂದು ಸಮುದ್ರಕ್ಕೆ ನೂಕಿಯೇ ಬಿಟ್ಟರು. ಹಲವರಿಗೆ ಖಾಯಂ `ಆಭರಣಗಳೇ’ ಆಗಿದ್ದ ಬೇಡಿ ಸರಪಣಿಗಳನ್ನೂ ಕಳಚದೇ ನೂಕುವಲ್ಲಿ ಶೀಘ್ರ ಮರಣವೊಂದೇ ಅವರ ಲಕ್ಷ್ಯದಲ್ಲಿತ್ತು. ಈಜು ಬಾರದವರು, ಸಮ್ಮರ್ದದಲ್ಲಿ ಉಸಿರುಳಿಸಿಕೊಂಡು ಈಜಲಾಗದವರು, ಬೇಡಿಸರಪಳಿಗಳ ಭಾರ ಬಂಧನದಲ್ಲಿ ನೇರ ಸಾಗರತಳ ಕಚ್ಚಿದವರು, ಜಲಚರಗಳ ಆಹಾರವಾದವರು, ದಿಕ್ಕು ಸಿಕ್ಕದೆ ಕಳೆದುಹೋದವರು ಲೆಕ್ಕಕ್ಕಿಲ್ಲದೆ ಹೋದರು. ಅಲ್ಪಾಂಶ ಸಾಹಸ ಬಹ್ವಂಶ ಅದೃಷ್ಟದಲ್ಲಿ ಸುಮಾರು ಒಂದು ನೂರು ಮಂದಿ ಆಗ ಮೊದಲ ಮಾನವರಾಗಿ ಹ್ಯಾವ್ಲಾಕ್ ದ್ವೀಪದ ಮೇಲೆ ಕಾಲಿರಿಸಿದರಂತೆ! ಆದರೇನು ನಾಗರಿಕತೆ ಕಾಣಿಸುವ ನೀರು ಆಹಾರಗಳಿಲ್ಲದ ಕಗ್ಗಾಡಿನಲ್ಲಿ ನರಳುವುದೊಂದೇ ಅವರಿಗಿದ್ದ ಅವಕಾಶ. ನೆಲಕಾಣುವ ಮತ್ತೆ ಬಂಧಮುಕ್ತವಾಗುವ ಹೋರಾಟದಲ್ಲಿ ಪಡೆದ ಗಾಯಗಳು ಉಲ್ಬಣಿಸಿ, ವಿಷಕಾರಿ ಜಂತುಗಳಿಗೆ ಸಿಕ್ಕಿ, ದಿನಗಳೆಯುತ್ತಾ ನೀರು ಆಹಾರಗಳಿಲ್ಲದೆ ಸಾಯುತ್ತಾ ಹೋದವರ ಕತೆಯೊಡನೆ ಬದುಕುಳಿದವರು ನರಮಾಂಸ ಭಕ್ಷಣೆಯ ಅನಿವಾರ್ಯತೆಗಿಳಿದ ದಾರುಣತೆ ಅದೋ ಇಲ್ಲಿ, ಇದೇ ದ್ವೀಪದಲ್ಲಿ ನಡೆಯಿತು ಎಂಬ ಗಂಭೀರ ಚಿತ್ರ ನೋಡಹೊರಟವರಿಗೆ ಅಬ್ಬರದ ಜಾಹೀರಾತಿನಂತೆ ಕಾಣಿಸಿತು ಹ್ಯಾವ್ಲಾಕ್!

ಜೀಪು ಕಾರುಗಳು ಬಿಡಿ, ಬಸ್ಸಿನ ಸಾರಿಗೆ ಸೌಲಭ್ಯವೂ ದ್ವೀಪದೊಳಗಿತ್ತು. ಯಾವ್ಯಾವುದೋ ರಿಸಾರ್ಟ್‌ಗಳ ಎರೆಗಳು, ಈಗಾಗಲೇ ಎರೆ ಕಚ್ಚಿದ್ದವುಗಳನ್ನು ಗುರುತಿಸಿ ಎಳೆಯುವ ದಾರಗಳು ಅಲ್ಲಿದ್ದವು. ಇಲ್ಲಿನ ವಾಸ್ತವ್ಯದ ಬಗ್ಗೆ ನಾವು ಯಾವುದೇ ಮಾನಸಿಕ ಸಿದ್ಧತೆ ಇಲ್ಲದೆ ಬಂದಿದ್ದೆವು. ಕೇವಲ ಸ್ನಾರ್ಕೆಲ್ಲಿಂಗ್ ಮತ್ತು ಸ್ಕ್ಯೂಬಾ ಡೈವಿಂಗ್ ಅವಕಾಶಗಳು ಇಲ್ಲಿ ಹೆಚ್ಚಿರುವ ಮಾಹಿತಿ ಮಾತ್ರ ನಮ್ಮಲ್ಲಿತ್ತು. ಡೈವಿಂಗ್ ಇಂಡಿಯಾ ಎಂಬ ಖಾಸಗಿ ಸಂಸ್ಥೆ ಸಹಾಯದಲ್ಲಿ ದ್ವೀಪದ ಸುತ್ತಿನ ಹವಳ, ಜಲಜೀವಿಗಳ ವೀಕ್ಷಣೆಯಷ್ಟೇ ನಮ್ಮ ಲಕ್ಷ್ಯ. ಅದಕ್ಕನುಕೂಲವಾಗುವ ಸರಳ ವಾಸ ವ್ಯವಸ್ಥೆ ತೋರುವುದಾಗಿ ಹೇಳಿದ ಟ್ಯಾಕ್ಸಿ ಒಂದನ್ನು ಹಿಡಿದೆವು. ಜೋಪಡ ಪಟ್ಟಿಯಂತೆ ತೋರುವ ಮನೆ, ಅಂಗಡಿಗಳು, ಸಣ್ಣ ಸಂತೆ ಕಟ್ಟೆ ಮತ್ತಲ್ಲಿನ ತರಕಾರಿ ವ್ಯಾಪಾರ ಭರಾಟೆ, ಗದ್ದೆ ತೋಟಗಳನ್ನು ಹಾಯುತ್ತಾ ಏಕಮುಖ ಸಂಚಾರಕ್ಕಷ್ಟೆ ಯೋಗ್ಯವಾದ ದಾರಿಯಲ್ಲೂ ಎದುರಾಗುತ್ತಿದ್ದ ವಾಹನಗಳಿಗೆ ದಾರಿಕೊಡಲು ಹೆಣಗುತ್ತಾ ಸಾಗಿ ಒಂದು ತೆಂಗಿನ ತೋಪಿನ ಬಳಿ ಇಳಿಸಿದ. ಓಟೆ ಹೆಣಿಗೆಯ ಗೋಡೆ, ಜಿಂಕ್ ಶೀಟಿನ ಮಹಡು ಹೊತ್ತ ಹೊಗೆ ಹಿಡುಕಲು ಜೋಪಡಿಯೇ ಅಲ್ಲಿನ `ರಿಸೆಪ್ಷನ್ ಅಂಡ್ ಡೈನಿಂಗ್ ಹಾಲ್’ ಅಂದಾಗ ಇದು ಹೋಟೆಲ್ಲೇ ಎನ್ನುವ ಪ್ರಶ್ನೆ ಹುಟ್ಟಡಗಿತು! ಒಂದು ಕಾಲು ಮಡಚಿದ ಪ್ಯಾಂಟು, ಚಾ ಸಬ್ಜಿಗಳ ರುಚಿ ನೋಡಿದ್ದ ಮಾಸಲು ಅಂಗಿ ಧರಿಸಿದ್ದ ಬಂಗಾಳಿ ಮೂಲದ ಇಬ್ಬರು ತರುಣರು ಅದರ `ವಾನರುಗಳು’ (Owners). ಭಾರೀ ಮರದ ಬೊಡ್ಡೆಗಳನ್ನು ಉದ್ದಕ್ಕೆ ಸಿಗಿದು ಅಡಿ ಬದಿ ಕಚ್ಚಾವಾಗಿಯೇ ಉಳಿಸಿಕೊಂಡಂತ ಹಲಿಗೆಗಳಿಗೆ ಅಷ್ಟೇ ಒರಟು ಕಂಬಗಳನ್ನು ಕಾಲುಕೊಟ್ಟು ನಿಲ್ಲಿಸಿದ್ದ ನಾಲ್ಕೆಂಟು ಟೇಬಲ್, ಬೆಂಚ್, ಎಡೆಯಿದ್ದಲ್ಲಿ ಪ್ಲ್ಯಾಸ್ಟಿಕ್ ಕುರ್ಚಿಗಳು. ನೆಲ ಹೊರಗಿನದೇ ಸಹಜ ಮರಳಾದ್ದರಿಂದ ಗುಡಿಸುವ, ಒರಸುವ (ತೊಳೆಯುವ) ಕಷ್ಟವೇ ಇರಲಿಲ್ಲ. ಎಡ ಮೂಲೆಯಲ್ಲಿ ಹೊಗೆಹಿಡುಕಲು ನಾಲ್ಕಡಿ ಎತ್ತರದಲ್ಲೊಂದು ಸಣ್ಣ ಅಟ್ಟ ಮಾಡಿ ಅದಕ್ಕೊಂದು ಒರಟು ಏಣಿಯೂ ಕೊಟ್ಟಿದ್ದರು. ಅಲ್ಲಿ ಒರಗು ದಿಂಬುಗಳೊಡನೆ ನೆಲದಲ್ಲೇ ಕುಳಿತು `ಅಪ್ಪಟ ಭಾರತೀಯ’ ಕೂಟವನ್ನೂ ನಡೆಸಬಹುದಿತ್ತು. ಇವುಗಳ ಹಿತ್ತಲಿನ ಇಳಿಸಿದ ಮಾಡಿನಡಿಯಲ್ಲಿ, ಮಾಸಲು ತಟ್ಟಿಯ ಮರೆಯೇಯ್‌ಯಲ್ಲಿ ಅಡಿಗೆಮನೆ. ಇದರ ಒಡ್ಡುತನವೂ (ಕೊಳಕುತನ?) ನಮ್ಮ ಅನುಭವದ ಅಂಗ ಎಂದು ನಿರ್ಧರಿಸಿ ಅಡಿಗೆಮನೆಗೆ ಇಣುಕಿ ವಿಚಲಿತನಾಗಬಹುದಾದ ಅಪಾಯವನ್ನು ನಾನು ತಪ್ಪಿಸಿಕೊಂಡೆ!

ನಾಲ್ಕೆಂಟು ವಿದೇಶಿಯರು ಹರಡಿ ಕುಳಿತು, ವಿರಾಮದಲ್ಲಿ ಹರಟುತ್ತಾ `ಪಾನಕ’ ಸೇವೆ ನಡೆಸಿದ್ದರು. ಓರ್ವ `ವಾನರ’ ಹರಕು ಹಿಂದಿ, ಮುರುಕು ಇಂಗ್ಲಿಷ್ಗಳೊಡನೆ ಡಾರ್ಮಿಟರಿ ದರ್ಶನಕ್ಕೆ ನಮ್ಮನ್ನು ಹೊರನಡೆಸಿದ. ಅದೊಂದು ತೆಂಗಿನ ತೋಪು. ಎಡೆಯಲ್ಲಿ ಖಾಲೀ (ಮದ್ಯದ) ಶೀಷೆಗಳನ್ನೇ ಅಂಚುಗಟ್ಟಿದ ನಡೆಮಡಿ. ಅಲ್ಲಲ್ಲಿ ತುಂಡು ಪೀವೀಸಿ ಪೈಪ್ ನಿಲ್ಲಿಸಿ ಮೇಲೊಂದು ಮಿಣುಕು ವಿದ್ಯುತ್ ಬಲ್ಬ್ ಸಿಕ್ಕಿಸಿದ್ದರು – ರಾತ್ರಿಯ ಅನುಕೂಲಕ್ಕೆ. ಈ ಅಸಡ್ಡಾಳ ಕಾಲು ದಾರಿಯ ಅಂಚಿನಲ್ಲಿ ಅಷ್ಟೇ ಅವ್ಯವಸ್ಥಿತವಾಗಿ ಆದರೆ ಹಂಚಿಹಾಕಿದಂತೆ ಸ್ವತಂತ್ರವಾದ ವಿಚಿತ್ರ ಕೋಣೆಯೋ ಮನೆಯೋ (ನಿಜದಲ್ಲಿ ಜೋಪಡಿಗಳು) ನಿಂತಿದ್ದವು. ಅವುಗಳಲ್ಲಿ ಮೊದಲು ನಮ್ಮನ್ನು ಆರ್ಕಸಿದ್ದು `ಪರ್ಲ್‌ಪೆಟ್‌ರ್ಲ್ಪೆಟ್ ಹೌಸ್’. ಇದು ಅಕ್ಷರಶಃ ಖಾಲೀ ಪ್ಲಾಸ್ಟಿಕ್ ಬಾಟಲಿಗಳನ್ನು ಅರ್ಧಕ್ಕೆ ಸಿಗಿದು ಬಿದಿರು ಸಲಿಕೆಗಳಿಗೆ ಹೆಣೆದ ಗೋಡೆ, ಬಾಗಿಲುಗಳ ಮನೆ. ಒಳಗೆ ಎಂಥಾ ನರಕವೇ ಇರಲಿ ಒಮ್ಮೆಗೆ ಇದರ ತಮಾಶೆ ನೋಡೋಣ ಎಂಬ ಭಾವ ಯಾರಿಗೂ ಬರುವಂಥಾ ರಚನೆವ್ಯವಸ್ಠೆ. (ಆನಂದಾ ನಿನಗೆ ನೆನಪಿರಲಾರದು, ನಾನಿನ್ನೂ ಎರಡೋ ಮೂರನೆಯದೋ ಕ್ಲಾಸಿನಲ್ಲಿದ್ದೆ. ಮಡಿಕೇರಿಯ ರೊಚ್ಚು ಹಿಡಿದ ಮಳೆಗಾಲದ ಒಂದು ರಾತ್ರಿ. ಅಪ್ಪ ಎಂದಿನಂತೆ ಅಂದೂ ತಡವಾಗಿದ್ದದ್ದಕ್ಕೆ ಅಮ್ಮನಲ್ಲಿ ಮೂಡಿರಬಹುದಾದ ಆದರೆ ನಮ್ಮ ಯಾರಲ್ಲೂ ಹೇಳಿಕೊಳ್ಳಲಾಗದ ಆತಂಕಕ್ಕೆ ಅಭಿವ್ಯಕ್ತಿ ಪಡೆದಂಥ ಆಟ ನನ್ನದು. ಸಣ್ಣ ಮೇಜನ್ನು ಕವುಚಿಹಾಕಿ ಅದರ ಕಾಲುಗಳ ಮೇಲೆ ಎರಡೋ ಮೂರೋ ಕೊಡೆ ಬಿಡಿಸಿಟ್ಟು ಒಳ ಸೇರುತ್ತಿದ್ದೆ. ನೆಲಗಡಲೆ, ಬಾಳೆಹಣ್ಣು ಅಮ್ಮನ ಕಣ್ಣು ತಪ್ಪಿಸಿ ಒಳಗಿಟ್ಟುಕೊಳ್ಳುತ್ತಿದ್ದೆ ಎಂದು ನೆನಪು. ಭೀಕರ ಜಲಪ್ರಳಯ ಇಂದೇ ಸಂಭವಿಸಿದರೆ ನನ್ನ ಮರದ ಮೇಜಿನ ಮನೆ ಮುಳುಗಲರಿಯದು. ಹಸಿವೆಗೆ ಬಂದೋಬಸ್ತು ಕಡ್ಲೆ, ಹಣ್ಣು. ಅಂಥದ್ದೇ ಮೋಜಿನ ಕಲ್ಪನೆಗಿಲ್ಲಿ ವ್ಯಾವಸಾಯಿಕ ಸ್ಪರ್ಷ!) ನಮ್ಮ ಅದೃಷ್ಟಕ್ಕೆ ಅದನ್ನ್ಯಾವನೋ ಬಿಳಿದೊಗಲಿನವನು ಹಿಡಿದಿದ್ದ. ಯಾರಿಗ್ಗೊತ್ತು, ಇಲ್ಲವಾದರೆ ನಾವು ಅದನ್ನೇ ಹಿಡಿದುಬಿಡುತ್ತಿದ್ದೆವೋ ಏನೋ.

ನಮ್ಮನ್ನೊಂದು `ಮಹಡಿಮನೆ’ಗೆ ಒಯ್ದ. ಸಮುದ್ರದ ಅಂಚಿನಿಂದ ಮೂವತ್ತೇ ಅಡಿ ದೂರದಲ್ಲಿ ತೆರೆದ ಬಾಲ್ಕನಿ ಹೊತ್ತ ಮಹಡಿ ಮನೆ ಪೂರ್ತಿ ಬಿದಿರು ಬೆತ್ತಗಳ ರಚನೆಯಂತಿತ್ತು. ಎರಡು ಪಡಿಗಳ ತಡಿಕೆ ಬಾಗಿಲನ್ನು ಶಾಸ್ತ್ರಕ್ಕೊಂದು ಸಣ್ಣ ಬೀಗ ಜಡಿದು ಮುಚ್ಚಿದ್ದರು. ಬಾಗಿಲು ತೆರೆದರೆ ಅದೊಂದು ಸಣ್ಣ ಕೋಣೆ. ಅದರ ಬಲ ಅರ್ಧಾಂಶದಲ್ಲಿ ಭಾರೀ ಮರವೊಂದರ ಸುಮಾರು ನಾಲ್ಕಡಿ ಎತ್ತರದ ಗುತ್ತಿ ಅಲ್ಲೇ ಮರವಾಗಿ ಮೆರೆದ ನೆನಪು ಹುಟ್ಟಿಸುವಂತೆ ಆವರಿಸಿಕೊಂಡಿತ್ತು. ಅದರ ಮೇಲೇರುವಂತೆ ನಾಲ್ಕು ಹಲಗೆಯ ಸೋಪಾನ. ಮತ್ತಲ್ಲಿಂದ ಬಲಕ್ಕೆ ತಿರುಗಿ ನೇರ ಮೇಲೇರುವಂತೆ ವಿಶೇಷ ಪರಿಷ್ಕರಣೆಗೊಳಪಡದ ಮರದ ಏಣಿ, ಎರಡೂ ಬದಿಗೆ ಕೈತಾಂಗು. ಮೇಲೆ ಬಲಕ್ಕೆ ದೊಡ್ಡ ಮಂಚ (ಬಿದಿರಿನ ಚಾರ್ಪಾಯ್). ಅದಕ್ಕೆ ತಾಗಿದಂತೆ ಬೆತ್ತದ ಕಪಾಟು, ಹೆಚ್ಚಿನ ಸಾಮಾನಿಡಲು ಬಿದಿರ ಸೀಳುಗಳ ಪುಟ್ಟ ಅಟ್ಟ. ಎಡಕ್ಕೆ ಸಮುದ್ರಕ್ಕೆ ಚಾಚಿಕೊಂಡಂತೆ ಸಣ್ಣ ಬಾಲ್ಕನಿ. ಬಾಲ್ಕನಿಯ ಮೂರೂ ದಿಕ್ಕಿಗೆ ಪುಟ್ಟ ಕಟಕಟೆ ಮತ್ತು ಮೇಲಿನಿಂದ ವಾಟೆ ಸಲಿಕೆಗಳನ್ನು ಹೆಣೆದ ತೆರೆ ಇಳಿಬಿಟ್ಟಿದ್ದರು. ಆ ವಠಾರದ (ಮಾತ್ರವಲ್ಲ ಒಟ್ಟಾರೆ ಈ ದ್ವೀಪಸ್ತೋಮದ ಎಂದರೂ ತಪ್ಪಾಗಲಾರದು) ಎಲ್ಲಾ ಕುಟೀರಗಳಿಗೂ ಇರುವ ಹೊರಗಿನ ಮೇಲ್-ಮುಚ್ಚಿಗೆ ಶೀಟಿನದ್ದೇ ಇದ್ದರೂ ಒಳಗಿನಿಂದ ಮರೆ ಮಾಡಿದ್ದರು. ಕೆಳಗಿನ ಪ್ರವೇಶ ಕೋಣೆಗೊಂದು ಬಟ್ಟೆಯ ತೆರೆ ಇದ್ದ ಹಿಂಬಾಗಿಲಿತ್ತು. ಅಲ್ಲೊಂದು ಪುಟ್ಟ ಆವರಣ. ಬಲಬದಿಗೆ ಕಚ್ಚಾ ಸಿಮೆಂಟು ಸಾರಿಸಿ ಒಂದು ಕಮೋಡು ಕೂರಿಸಿದ್ದರು. ಎಡ ಬದಿಗೆ ಸಹಜವಾಗಿದ್ದ ಒಂದು ದೊಡ್ಡ ಗಿಡದ ಕಾಂಡಕ್ಕೆ ತಾಗಿದಂತೆ ಶವರ್ ಸ್ನಾನಕ್ಕೆ ವ್ಯವಸ್ಥೆಯೂ ಮಾಡಿದ್ದರು. ಸ್ನಾನದ ಅಂಕಣದಲ್ಲಿ ಕಾಲಿಗೆ ಮರಳು ಹತ್ತದಂತೆ ಸಣ್ಣ ಕಟ್ಟೆ ಕಟ್ಟಿ ಒಳಗೆ ಕಚ್ಚಾ ಹವಳದ ಕಲ್ಲುಗಳನ್ನು ಹರಡಿಬಿಟ್ಟಿದ್ದರು. ಮಹಡಿಯ ಕೋಣೆಗೊಂದು ಪಂಕಾ ಸೇರಿದಂತೆ ಎಲ್ಲಾ ಕಡೆಯೂ ವಿದ್ಯುತ್ ದೀಪದ ಸೌಕರ್ಯವೂ ಇತ್ತು. ಈ `ಜನಪದೀಯ ತೋರಿಕೆಯ ವೈಭವಕ್ಕೆ’ ವಾಸ್ತವದಲ್ಲಿ ಒಮ್ಮೆ ತಮಾಷೆಗಷ್ಟೇ ವಾಸ ಮಾಡಬಹುದಾದ ಜೋಪಡಿಗೆ ಒಂದು ರಾತ್ರಿಯ ಬಾಡಿಗೆ, ಎದೆ ಗಟ್ಟಿಮಾಡಿಕೊಳ್ಳಿ, ಒಂದೂವರೆ ಸಾವಿರ ರೂಪಾಯಿ!

ಭರ್ಜರಿ ಏರೋಪ್ಲೇನ್ನಲ್ಲಿ ಹಾರಿ ಬಂದು, ಮತ್ತೂ ಸಮೀಪಕ್ಕೆ ಹೆಲಿಕಾಪ್ಟರಿನಲ್ಲಿ ಕುಪ್ಪಳಿಸಿ ಕಾಲಿನ ತೊಡವಿಗೂ ದೂಳು ಸೋಂಕದಂತೆ ಜಮಖಾನೆಯ ಮೇಲೆ ವೇದಿಕೆಗೆ ನಡೆಯುವ ಆಧುನಿಕ ಮಹಾರಾಜರುಗಳು ಒಂದು ತೋರಿಕೆಗೆ ಸ್ಥಳೀಯ ದಟ್ಟ ದರಿದ್ರರ ಒಂದು ತೊಡವನ್ನು (ಮುಟ್ಟಾಳೆ, ಯಾವುದೋ ಕಾಡು ಮಣಿಗಳ ಸರ ಇತ್ಯಾದಿ) ಧರಿಸಿ ಮಾಧ್ಯಮಗಳಲ್ಲಿ ಮೆರೆಯುವುದು ನೋಡಿದ್ದೇವೆ. ಇದು ಅಂಥದ್ದೇ ಸ್ಥಿತಿ, ಆದರೆ ನಮಗನಿವಾರ್ಯ. ನಾವು ಮರದ ಮನೆಯನ್ನೇ ಒಪ್ಪಿಕೊಂಡೆವು. ಬಾಲ್ಕನಿಯ ಮೂರೂ ದಿಕ್ಕಿನ ಪರದೆಯನ್ನು ಮೇಲೆತ್ತಿ ಕಟ್ಟಿ ಸುದೂರದ ಸಮುದ್ರ ದೃಶ್ಯಕ್ಕೆ ತೆರೆದುಕೊಂಡೆವು. ನಮ್ಮ ಅರಮನೆಯ ಅಂಗಳದಲ್ಲೇ ಬೀಚ್ ವಾಲಿಬಾಲಾಡುವವರ ಅನುಕೂಲಕ್ಕೆಂಬಂತೆ ನೆಟ್ ಕಟ್ಟಿ ಸಣ್ಣ ಕೋರ್ಟ್ ಗುರುತಿಸಿದ್ದರು. ಅದರಾಚೆಗೆ ಗೊಸರು (?) ನೆಲದ ದೊಡ್ಡ ಹರವು. ಅದರ ದೂರದ ಕೊನೆಯಲ್ಲಿ ಯಾರೋ ಒಂದು ದೋಣಿಯನ್ನು ಯಾವುದೋ ಒಂದು ಕೊರಡಿಗೆ ಕಟ್ಟಿಹೋಗಿದ್ದರು. ಅದರಾಚಿನ ನೀರ ನೀಲಿಮೆ — ಸಮುದ್ರ. ನಮ್ಮೂರ ಗಂಟೆ ಅಂದಾಜಿನಲ್ಲಿ ನಾವು ಬೇಗನೆ ಹ್ಯಾವ್ಲಾಕ್ ತಲಪಿದ್ದರೂ ಅಂಡಮಾನ್ ಲೆಕ್ಕದಲ್ಲಿ ತಡವಾದ್ದು ತಿಳಿಸಲು ಐದೂವರೆಗೇ ಕತ್ತಲಾವರಿಸತೊಡಗಿತು.

ಕತ್ತಲರಾಜ್ಯದಲ್ಲಿರುವ (ಹಾರಾಡಬೇಡ, ನಮ್ಮ ಹಗಲಿನಲ್ಲಿ ಅಮೆರಿಕಾದ ನೀವು ಕತ್ತಲಲ್ಲಿರುತ್ತೀರಿ ಎಂದಷ್ಟೇ ಅರ್ಥ) ನಿನಗಿದನ್ನು ಕುಟ್ಟಿಹೇಳಲು (ಗಾಬರಿಯಾಗಬೇಡ, ಲೇಖನಿ ಹಿಡಿದು ಬರೆಯುವುದಲ್ಲಾ, ಗಣಕದ ಕೀಲಿಮಣೆ ಬಳಸುತ್ತಿದ್ದೇನೆ ಎಂಬ ಎಚ್ಚರ ಅಷ್ಟೆ) ನಾನು ಕುಳಿತದ್ದು ಮಾತ್ರ ರಾತ್ರಿ ಹನ್ನೊಂದು ಗಂಟೆಯ ತಪ್ಪು ಮಗ್ಗುಲಿನಲ್ಲಿ. ಅದೂ ಚೆನ್ನೈಯ ದೂರದಿಂದ ಹಲವು ಸಾಹಸ ಮಾಡಿ ಹ್ಯಾವ್ಲಾಕಿನ ಗೂಡು ಸೇರಿ ಕತ್ತಲೂ ಆವರಿಸಿತು ಎಂದ ಮೇಲೆ ಇಂದು ಇನ್ನು ವಿಸ್ತರಣೆಗೆ ಮನಸ್ಸು ಬಾರದು, ನಿದ್ರೆ ತೂಗುತ್ತಿದೆ. ಶುಭರಾತ್ರಿ ಅಲ್ಲಲ್ಲ ನಿನಗೆ ಶುಭ ಪ್ರಾತಃಕಾಲ!

ಇಂತು ನಿನ್ನಣ್ಣ
ಅಶೋಕವರ್ಧನ