[ಅಮೆರಿಕಾದಲ್ಲಿರುವ ನನ್ನೊಬ್ಬ ತಮ್ಮ ಆನಂದವರ್ಧನನನ್ನು ಉದ್ದೇಶಿಸಿದ ಅರೆ-ಖಾಸಗಿ ಪತ್ರವಿದು. ಹೆಚ್ಚಿನ ವಿವರಗಳಿಗೆ ‘ಮೆಕ್ಸಿಕೋಕ್ಕೆ ಬನ್ನಿ, ಅಂಡಮಾನ್ ಬಿಡಿ’ ಸೇರಿದಂತೆ ಇದರದ್ದೇ ಹಿಂದಿನ ಐದು ಭಾಗಗಳನ್ನು ಇಲ್ಲೇ ನೋಡಿ. ಆದರೆ ಪ್ರತಿ ಓದುಗನ ಸಹೃದಯೀ ಪತ್ರಪ್ರತಿಕ್ರಿಯೆಗಳ ಕುಮ್ಮಕ್ಕಿನಲ್ಲಿ ಮುಂದಿನ ಕಂತುಗಳು ಬೇಗಬೇಗನೆ ಅನಾವರಣಗೊಳ್ಳಲಿವೆ ಎಂದು ಮಾತ್ರ ಖಚಿತವಾಗಿ ಹೇಳಬಲ್ಲೆ – ಅಶೋಕವರ್ಧನ]

ಪ್ರಿಯ ಆನಂದಾ,

ಪೋರ್ಟ್ ಬ್ಲೇರಿಗೆ ಮರಳಿ ಇತಿಹಾಸದ ಪುಟಗಳಲ್ಲಿ ಕುಖ್ಯಾತವೂ ವರ್ತಮಾನದಲ್ಲಿ ವಿಖ್ಯಾತವೂ ಆದ ಸೆಲ್ಯುಲರ್ ಜೈಲ್ ಸೇರಿದೆವು. ಅದರ ಸಂಜೆಯ ಸಂದರ್ಶನ ವೇಳೆ ತೀರಾ ಸಂಕ್ಷಿಪ್ತ. ಬಾಗಿಲು ತೆರೆದು ನಮ್ಮನ್ನು ಒಳಗೆ ಬಿಡುವಾಗಲೇ ಮುಸ್ಸಂಜೆ. ಜೈಲಿನ ಸ್ವಾಗತ ಕಛೇರಿಯ ವಠಾರದಲ್ಲಿ ಐತಿಹಾಸಿಕ ಚಿತ್ರ, ಕೆಲವು ದಾಖಲೆಗಳು, ಸಾಮಗ್ರಿಗಳು ಜೋಡಿಸಿದ್ದರು. ಅವನ್ನು ನೋಡನೋಡುತ್ತಿದ್ದಂತೆ ಸಿಬ್ಬಂದಿ ದೀಪವಾರಿಸುತ್ತಾ ನಮ್ಮನ್ನು ಜೈಲಿನ ಒಳವಠಾರ ನೋಡಲು ಹೋಗುವಂತೆ ಅವಸರಿಸಿದರು. ಮುಖ್ಯ ಅಂಗಳದಲ್ಲಿ ಸಣ್ಣ ವೇದಿಕೆಯ ಎದುರು ನೂರಾರು ಕುರ್ಚಿ ಜೋಡಿಸಿ ಸಜ್ಜುಗೊಳಿಸಿದ್ದರು. ಕಾಲದ ಪರೀಕ್ಷೆಯಲ್ಲಿ ದಾಟಿಬಂದವೆಲ್ಲಾ ಐತಿಹಾಸಿಕ ಮಹತ್ವಪಡೆದುಕೊಳ್ಳುವುದನ್ನು ಸಾಕ್ಷಿಸುವಂತೆ ಪ್ರಾಚೀನ ಒಂಟಿಮರ, ಹಿಂದೆ ಶಿಕ್ಷೆಯ ಅಂಗವಾಗಿ ನಡೆಯುತ್ತಿದ್ದ ಕಾರ್ಯಾಗಾರ, ಗಲ್ಲಿಗೇರಿಸುವ ಕೋಣೆಗಳನ್ನು ನೋಡಿದೆವು. ಎರಡೋ ಮೂರೋ ಮಹಡಿಯ ಎತ್ತರಕ್ಕೆ ನಿಂತ ವೃತ್ತಾಕಾರದ ಮೆಟ್ಟಿಲ ಕೋಣೆ ಮತ್ತು ಕೇಂದ್ರೀಯ ಕಣ್ಗಾವಲ ಕೋಣೆಗೂ ನುಗ್ಗಿದೆವು. ಅಲ್ಲಿಂದ ಸೂರ್ಯ ಕಿರಣಗಳು ವಿಸ್ತರಿಸುವಂತೆ ಚಾಚಿಕೊಂಡಿದ್ದ ಓಣಿಗಳಲ್ಲಿ ಪಾದಬೆಳೆಸುವಾಗ ಹ್ಯಾವ್ಲಾಕಿನಲ್ಲಿ ಮಣ್ಣಗೋಲಿಗಳನ್ನು ಸೂರ್ಯಕಿರಣದ ಮಾದರಿಯಲ್ಲಿ ಜೋಡಿಸಿದ ಏಡಿ ನೆನಪಾಗಿ ಬೆರಗುಪಟ್ಟೆ. ಓಣಿಯುದ್ದಕ್ಕೆ ಖೈದಿಗಳ ಕೋಣೆ ಕೋಣೆ; ಕಿಷ್ಕಿಂಧೆ, ಓಣಿಯೊಂದೇ ದೃಶ್ಯ. ಅಲ್ಲೆಲ್ಲೋ ಸಾವರ್ಕರ್ ಇದ್ದ ಕೊಠಡಿ, ಇನ್ಯಾರ್ಯಾರೋ ಮಹಾತ್ಮರುಗಳು ರಾಜಕೀಯ ಕೈದಿಗಳಾಗಿದ್ದ ಗೂಡುಗಳನ್ನೂ ತಗುಲಿಸಿದ್ದ ನಾಮಫಲಕಗಳಿಂದ ಕಂಡುಕೊಂಡೆವು. ಇವನ್ನೆಲ್ಲ ಚರಿತ್ರೆಯ ಭಾಗವಾಗಿ ನೋಡುವುದಷ್ಟೇ ನನಗೆ ಸಾಧ್ಯ. ಸ್ವಾತಂತ್ರ್ಯ ಹೋರಾಟಗಾರರ ಕಥೆಗಳು ಮಹತ್ವದವೇ – ವಿಕಾಸವಾದದ ಎಲ್ಲ ಕೊಂಡಿಗಳಂತೆ. ಯಾವುದೇ ಪುರಾಣಗಳನ್ನು (ನಿರಾಧಾರ ಇತಿಹಾಸ?) ಅವು ಪ್ರತಿಪಾದಿಸುವ ಸಾರ್ವಕಾಲಿಕ ಮೌಲ್ಯಗಳಿಗಾಗಿ ಬಳಸುವಂತೆ ಇಂಥವನ್ನೂ ನೋಡುವುದು ನಮಗೆ ಸಾಧ್ಯವಾಗಬೇಕು. ಅವುಗಳಿಗೆ ವರ್ತಮಾನದಲ್ಲಿ ಭಾವುಕರಾಗುವುದು (ಭಜನೆ ಮಾಡುವುದು), ನ್ಯಾಯ ಹುಡುಕುವ ಪ್ರಯತ್ನ ಮಾಡುವುದನ್ನು ನಾನು ಬುದ್ಧಿಪೂರ್ವಕವಾಗಿ ತಿರಸ್ಕರಿಸುತ್ತೇನೆ. ಅಂದಿನ ಹೋರಾಟ ೧೯೪೭ರ ‘ವಿಜಯ’ದಿಂದಷ್ಟೇ ‘ನಮಗೆ’ ಉದಾತ್ತವಾಗುತ್ತದೆ. ಇಲ್ಲವಾದರೆ ಇಂದಿನ ಶ್ರೀಲಂಕಾದ ಎಲ್ಟಿಟಿಯಿ, ಪಾಕಿಸ್ಥಾನದ ತಾಲೀಬಾನಿಗಳ ಹಾಗೇ ಅಂದಿನ ಆಡಳಿತ ಇವರನ್ನು ನೋಡಲೇಬೇಕಿತ್ತಲ್ಲವೇ? (ಎಸ್.ಎಲ್ ಭೈರಪ್ಪನವರ ಕೊನೆಯ ಕಾದಂಬರಿ – ಆವರಣ, ನೆನಪಿಗೆ ಬಂದು ಈ ಮಾತು ಹೇಳಿದ್ದೇನೆ. ಆನಂದಾ ನೀನದನ್ನು ಓದಿದ್ದೀಯಾ?)

ಕತ್ತಲಾವರಿಸುತ್ತಿದ್ದಂತೆ ಅಂಗಳಕ್ಕಿಳಿದು ಕುರ್ಚಿಗಳನ್ನಾಕ್ರಮಿಸಿದೆವು. ಸೆಲ್ಲ್ಯುಲ್ಲರ್ ಜೈಲ್ ಪ್ರವಾಸಿಗಳಿಗೆ ಪ್ರತಿ ಸಂಜೆ ಬೆಳಕು, ಧ್ವನಿಗಳ ವ್ಯವಸ್ಥೆಯಲ್ಲಿ ಭಾರತದ ಸ್ವಾತಂತ್ರ್ಯ ವೀರಗಾಥೆಯೊಳಗಿನ ತನ್ನ ನೆನಪುಗಳನ್ನು ಬಿತ್ತರಿಸುತ್ತದೆ. ಅದನ್ನು ಪೂರ್ತಿ ಅನುಭವಿಸಿದ ಮೇಳೆ ನನಗಂತೂ ಇದು ಇತಿಹಾಸವನ್ನು ಅಕಾರಣಕ್ಕೆ ಪೂಜನೀಯವಾಗಿಸುತ್ತಿದೆ ಎಂದೇ ಕಾಣಿಸಿತು. ವರ್ತಮಾನಕ್ಕೆ ಪ್ರಾಮಾಣಿಕರಾಗಿಲ್ಲದವರು (ಇಲ್ಲಿ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವ ನಮ್ಮ ಪ್ರಜಾಪ್ರತಿನಿಧಿಗಳಿಗೆ) ಸದಾ ಭೂತಕಾಲದಲ್ಲಿ ಆಸರೆ ಹುಡುಕಿ ಹಾಳಾಗುತ್ತಾರೆ. ಬ್ರಿಟಿಷರ ಕ್ರೌರ್ಯ, ಖೈದಿಗಳ ಶೌರ್ಯಗಳನ್ನು (ರಾಮಾಯಣ, ಮಹಾಭಾರತಗಳಂತ) ಪುರಾಣಗಳ ಅಂತರದಲ್ಲಿಟ್ಟು ನೋಡದಿದ್ದರೆ ಮೌಲ್ಯಗಳು ಮಸುಕಿ ಕ್ರಿಯೆಗಳು ಮಾತ್ರ ವಿಜೃಂಭಿಸುತ್ತವೆ. ಅಂದು ಭಾರತಕ್ಕೆ ಸ್ವಾತಂತ್ರ್ಯ ಬರುವ ಕಾಲದಲ್ಲಿ ಸೈನ್ಯದಲ್ಲಿದ್ದ ಬ್ರಿಟಿಷನೊಬ್ಬನ ಪುಟ್ಟ ಮಗ ಈಚೆಗೆ ಭಾರತಕ್ಕೆ ಬಂದವರು ನನಗೆ ಅಕಸ್ಮಾತಾಗಿ ಸಿಕ್ಕಿದ್ದರು. ಆತ ತನ್ನ ಬಾಲ್ಯ ಕಳೆದ ನೆಲದ, ಒಡನಾಡಿದ ಜನರ ಮೋಹವಿಟ್ಟುಕೊಂಡು ಬಂದರೆ ಇಲ್ಲಿನ ಮನಸ್ಸು ಇತಿಹಾಸಕ್ಕೆ ವರ್ತಮಾನದಲ್ಲಿ ಸೇಡಿನ ದಾರಿಗಳನ್ನು ಶೋಧಿಸುತ್ತಿರುವುದನ್ನು ಕಂಡು ಮೂಕನಾದ! ಸೆಲ್ಯುಲರ್ ಜೈಲಿನ ಬೆಳಕು, ಧ್ವನಿಯ ಸಾಹಿತ್ಯ ಅದೇ ಭಾವವನ್ನು ಜಾಗೃತಗೊಳಿಸುವಂತಿತ್ತು. ಅದಕ್ಕೆ ಸರಿಯಾಗಿ ಸಿಕ್ಕಿದ ಇನ್ನೊಂದು ಮಾಹಿತಿಯನ್ನು ಇಲ್ಲಿ ದಾಖಲಿಸಲೇಬೇಕು: ದ್ವೀಪಸಮೂಹದಲ್ಲಿ ಮುಖ್ಯವಾಗಿ ಐತಿಹಾಸಿಕ ತಾಣಗಳಿಗೆ ಭೇಟಿಕೊಡಲು ಈಗಲೂ ವಿದೇಶೀ ಪ್ರವಾಸಿಗರಿಗೆ ಪರವಾನಗಿ ಇಲ್ಲವಂತೆ. ಈ ಸಮೀಕರಣ ಮುಂದುವರಿದದ್ದೇ ಆದರೆ ನಾಳೆ ನಮ್ಮ ಎಲ್ಲಾ ಐತಿಹಾಸಿಕ ಕ್ಷೇತ್ರಗಳೂ ಪ್ರತಿಕಾರದ ಧ್ವನಿ ಎತ್ತಲು ತೊಡಗೀತು. ಒಂದು ಹಂತದಲ್ಲಿ ದೇಶೀಯರೊಳಗೂ ಈ ವಿಷ ವ್ಯಾಪಿಸಿ ಸ್ವತಂತ್ರ ಭಾರತ ಎಂಬ ಕಲ್ಪನೆಯೂ ದ್ರೋಹವಾದೀತು.

ಸೆಲ್ಯುಲರ್ ಜೈಲಿನ ಕಾರ್ಯಕ್ರಮ ಮುಗಿದ ಮೇಲೆ ಎರಡು ದಿನದ ಲೆಕ್ಕ ಕೊಟ್ತು ಬೈಕ್‌ಗಳನ್ನು ಮರಳಿಸಿದೆವು. ಬಾಡಿಗೆ ಅಂಗಡಿ ಯಜಮಾನ, ನಾನು ಮೊದಲೇ ಹೇಳಿದಂತೆ ಊರಿನ ಮರಿ ರಾಜಕಾರಣಿ, ನಮ್ಮ ಊರು, ಆಸಕ್ತಿ, ಮುಂದಿನ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಆತ್ಮೀಯವಾಗಿ ವಿಚಾರಿಸಿಕೊಂಡರು. ರೂಪಾಯಿ ಇಪ್ಪತ್ತರ ನೋಟಿನಲ್ಲಿ ಮುದ್ರಿತವಾಗಿರುವ ದೀಪಸ್ತಂಭದ ದೃಶ್ಯ ತಮ್ಮದೇ ದ್ವೀಪಸ್ತೋಮದ್ದು ಎಂದು ಅಭಿಮಾನದಿಂದ ತೋರಿಸಿದರೂ ಅಖಂಡ ಭಾರತದ ವ್ಯಾಪ್ತಿಯಲ್ಲಿ ತಮಗಿಷ್ಟೇ ಪ್ರಾತಿನಿಧ್ಯ ಎಂದು ಗೊಣಗಿದ್ದೂ ಆಯ್ತು. ಆಡಳಿತಾತ್ಮಕ ವಿಭಜನೆಗಳು ಕೇವಲ ಭೌಗೋಳಿಕ ಪ್ರಾಂತ್ಯಗಳನ್ನು ಗುರುತಿಸಬೇಕಿತ್ತು. ಜಾತಿ, ಭಾಷೆ, ಜಾನಾಂಗಿಕ ವ್ಯತ್ಯಾಸಗಳೆಲ್ಲ ಕೇವಲ ಸಾಂಸ್ಕೃತಿಕ ಅಭಿವೃದ್ಧಿಯ ಸ್ತರದಲ್ಲಷ್ಟೇ ಉಳಿದಿದ್ದರೆ ಅಂಡಮಾನಿನ ಕೊರಗು ಇರುತ್ತಿರಲಿಲ್ಲ. ಅದಕ್ಕೂ ಮಿಕ್ಕು ಇಂದಿನ ಮತೀಯ ಗಲಭೆಗಳು, ಭಾಷಾದ್ವೇಷಗಳು ಒಟ್ಟಾರೆ ಮನುಷ್ಯನ ಭಾವನಾಕೋಶದ ಪುಢಾರೀಕರಣ ಆಗುತ್ತಿರಲಿಲ್ಲ ಎಂದು ನನ್ನ ನಂಬಿಕೆ. ಏನಂತೀ?

ಪ್ರವಾಸದ ಏಳನೇ ದಿನ ನಮಗೆ ಮೂರು ಗಂಟೆಗೇ ಬೆಳಗ್ಗಾಯ್ತು! ಗಾಬರಿಯಾಗಬೇಡ, ಯಾವುದೇ ಪ್ರಾಕೃತಿಕ ಉತ್ಪಾತಗಳೂ ಘಟಿಸಲಿಲ್ಲ. ದ್ವೀಪ ಸಮೂಹದ ಅತ್ಯಂತ ಉದ್ದದ ದಾರಿಯುದ್ದಕ್ಕೆ ಸರಕಾರೀ ಬಸ್ಸಿನಲ್ಲಿ ಯೋಜಿತ ಪ್ರವಾಸಕ್ಕೆ ಟಿಕೇಟ್ ಖರೀದಿಸಿದ್ದೆವು. ಆ ದಾರಿ ದ್ವೀಪ ಸಮೂಹದ ಜರವಾ ಎನ್ನುವ ಮೂಲವಾಸಿಗಳ ನೆಲೆಯನ್ನು ಹಾಯ್ದುಹೋಗುತ್ತಿತ್ತು. ಆ ಜನರ ಅನನ್ಯತೆಯನ್ನು ಹಾಳುಗೆಡವದಂತೆ ಮತ್ತು ಅವರಿಂದ ಸಾರ್ವಜನಿಕರಿಗೆ ಬಾಧೆ ತಟ್ಟದಂತೆ ನೋಡಿಕೊಳ್ಳಲು ವಾಹನ ಸಂಚಾರವನ್ನು ಹಗಲಿಗೆ ಮಾತ್ರ ಮತ್ತು ಸೀಮಿತ ಸಂಖ್ಯೆಯಲ್ಲಿ ಮಾತ್ರ ನಡೆಸಲು ಸರಕಾರ ಅನುಮತಿಸಿತ್ತು. ಇದನ್ನು ಜಾರಿಗೆ ತರುವಲ್ಲಿ ಅವರ ವಲಯದಿಂದ ಹೊರಗೆ ದಾರಿಯ ಎರಡೂ ಕೊನೆಗಳಲ್ಲಿ ಗೇಟು, ನಿಶ್ಚಿತ ವೇಳಾಪಟ್ಟಿ ಸಿದ್ಧಪಡಿಸಿದ್ದಾರೆ. ಅದಕ್ಕೆ ಸರಿಯಾಗಿ ವಾಹನಗಳನ್ನು ಒಂದು ಗುಂಪಿನಂತೆ ಮಾಡಿ ನುರಿತ ಮಾರ್ಗದರ್ಶಿಗಳ ಜೊತೆಗೆ ಒಂದು ದಿಕ್ಕಿನಿಂದ ಕಳಿಸುತ್ತಿದ್ದರು. ಅಂಥ ಮೊದಲ ಅವಕಾಶದಲ್ಲೇ ನಮ್ಮ ಬಸ್ಸು ದಾಟಿದರಷ್ಟೇ ನಮಗೆ ಮುಂದಿನ ಕಲಾಪಗಳಿಗೆ ಸಮಯಾವಕಾಶ ಸಿಗುತ್ತದೆ ಎಂದು ಈ ಬೆಳಗಿನ ಧಾವಂತ. ವಸತಿಗೃಹದ ಹೊರಗೆ ಪೂರ್ವನಿಶ್ಚಿತ ಸ್ಥಾನದಿಂದ ನಮ್ಮನ್ನು ಬಸ್ಸು ಪಿಕ್ಕಪ್ಪಿಸಿ ಉತ್ತರಮುಖಿಯಾಯ್ತು. ನಾವು ಪುಟ್ಟ ಹಡಗೇರಿ ಹ್ಯಾವ್ಲಾಕ್ ದ್ವೀಪಕ್ಕೆ ಹೋದ ‘ನೀರದಾರಿಗೆ’ ಸಮಾನಾಂತರವಾಗಿ ನೆಲದಲ್ಲಿ ನಾವು ಹೋಗುತ್ತಿದ್ದಂತೆ ಅನಿಸುತ್ತಿತ್ತು. ಬಸ್ಸಿನಲ್ಲಿ ಪ್ರವಾಸಿಗರೇ ಬಹುಸಂಖ್ಯಾತರಾದರೂ ಸಿಬ್ಬಂದಿಯೋ ಪರಿಚಿತ ಬಿಟ್ಟಿ ಪ್ರಯಾಣಿಕರೋ ಕೆಲವರಿದ್ದರು. ಆದರೆ ಎಲ್ಲರೂ ತರಬೇತಿ ಅಥವಾ ಮಹತ್ವಾಕಾಂಕ್ಷೆಗಳ ಸೋಂಕೂ ಇಲ್ಲದಂತೆ ದಾರಿ, ಇಕ್ಕೆಲಗಳ ವಿವರ ಮತ್ತು ನಮ್ಮ ಲಕ್ಷ್ಯಗಳನ್ನೆಲ್ಲಾ ತಿಳಿಸುವ ಗೋಜಿಗೇ ಬರಲಿಲ್ಲ. ಹೊಂಡ ಚಡಿಗಳಿಲ್ಲದ ಆದರೆ ಎಲ್ಲೂ ನುಣುಪು ಸಪಾಟಾಗಿಯೂ ಇರದ ದಾರಿಯಲ್ಲಿ ಶಕ್ತಿ ಮೀರಿದಂತೆ ಸದ್ದು ಮಾಡಿದರೂ ಸಾಮಾನ್ಯ ವೇಗದಲ್ಲಿ ನಮ್ಮ ಬಸ್ಸು ಸುಮಾರು ಮೂವತ್ತು ಕಿಮೀ ಕ್ರಮಿಸಿದಾಗ ತಡೆಗಟ್ಟೆ ಬಂತು.

ಮೊನ್ನೆ ಮೊನ್ನೆ ನೀನಾಸಂ ತಿರುಗಾಟದ ನಟನಾರಾಯಣೀ ನಾಟಕದಲ್ಲಿ ಬೆಳಕು ಮಸುಕಿ ಬೆಳಗುವ ಕ್ಷಣಾರ್ಧದಲ್ಲಿ ಪ್ರಶಾಂತ ಮನೆಯ ವಾತಾವರಣದಿಂದ ಸಂತೆಚೌಕಕ್ಕೆ ದೃಶ್ಯ ಬದಲಾದದ್ದು ನೆನಪಿಗೆ ಬಂತು. ನಿರ್ಜನ, ನೀರವ ಬಯಲುಸೀಮೆಯಂಥ ಹಳ್ಳಿಗಾಡಿನ ಮೌನ ಮತ್ತು ಮುಂಜಾವದ ಮಬ್ಬು, ಮಂಜನ್ನು ಹರಿಯುತ್ತ ನಾವೇ ನಾವಾಗಿ ಓಡಿ ಬಂದವರಿಗೆ ಒಮ್ಮೆಗೆ ದಟ್ಟ ಕಾಡಿನಂಚಿಗೆ ಬಂದ ಅನುಭವ. ಹತ್ತೆಂಟು ಬಸ್ಸು, ಕಾರುಗಳು ಮೊದಲೇ ಬಂದವು ಹಾಗೇ ದಾರಿಯ ಬದಿಯಲ್ಲಿ ಜನರನ್ನು ‘ಚೆಲ್ಲಿ’ ಗೇಟು ತೆರೆಯುವ ಮುಹೂರ್ತವನ್ನು ‘ಉಸ್ಸಪ್ಪಾಂತ’ ಕಾದು ನಿಂತಿದ್ದವು. ಜನ ಬೇಕಾಬಿಟ್ಟಿ ಅಡ್ಡಾಡಿಕೊಂಡಿದ್ದರು. ಸರಕಾರೀ ಇಲಾಖೆಗಳ ವಸತಿ-ಕಛೇರಿಯಂತಿದ್ದ ನಾಲ್ಕೆಂಟು ಸಾರ್ವಕಾಲಿಕ ರಚನೆಗಳು ಅಲ್ಲಿ ಚದುರಿದಂತೆ ಇದ್ದವು. ಆದರೆ ಜನರೆಲ್ಲ ದಾರಿ ಬದಿಯಲ್ಲೇ ಇದ್ದ ತಟ್ಟಿ, ತಗಡುಗಳ ನಾಲ್ಕೆಂಟು ಚಾಯ್ ದುಕಾನುಗಳ ವಲಯದಲ್ಲೇ ಗಸ್ತು ಹೊಡೆದಿದ್ದರು. ನಾವೂ ಒಂದೆರಡು ಜೋಪಡಿಗಳಲ್ಲಿ ಚೌಕಾಸಿ ವ್ಯಾಪಾರ ಮಾಡಿ ಸಮೋಸಾವೋ ಆಲೂಗೆಡ್ಡೆ ಬೋಂಡಾವೋ ತಿಂದು ಚಾ ಕುಡಿದು ಕ್ಷುದ್ಭಾದೆಯೇನೋ ತೀರಿಸಿಕೊಂಡೆವು. ಆದರೆ ಜಲಮಲಬಾಧೆ?! ದಿಕ್ಕಲ್ಲದ ದಿಕ್ಕಿನಲ್ಲಿ ಸರಕಾರೀ ವ್ಯವಸ್ಥೆಯೇನೋ ಇದೆಯೆಂದು ತಿಳಿಯಿತು, ಆದರೆ ಪರೀಕ್ಷಿಸುವ ಧೈರ್ಯ ನನಗಂತೂ ಬರಲಿಲ್ಲ. ಆನಂದಾ ನಿಮ್ಮ (ಅಮೆರಿಕಾದ) ದಟ್ಟ ಕಾಡು, ಕುತ್ತ ಬೆಟ್ಟಗಳಲ್ಲೂ ಶಿಬಿರ ಸ್ಥಾನಗಳು ಪೂರ್ವನಿಗದಿತ. ಅಲ್ಲಿ ನೀರು ಮತ್ತು ಪಾಯಖಾನೆಯ ವ್ಯವಸ್ಥೆ ಪ್ರಕೃತಿಯೊಡನೆ ಶ್ರುತಿಸೇರಿಸಿದಂತಿದ್ದರೂ ಸೌಲಭ್ಯಗಳು ಆಧುನಿಕ ಎಂದು ನೀನು ಹೇಳಿದ್ದು ಇಂಥಲ್ಲಿ ಮತ್ತೆ ಮತ್ತೆ ನೆನಪಿಗೆ ಬರುತ್ತಿರುತ್ತದೆ. ವಾಸ್ತವದ ಅವ್ಯವಸ್ಥೆಗಳನ್ನು ಕೇಸರಿ ಶಾಲಿನಲ್ಲಿ ಮುಚ್ಚುವ, ಹೇಳಹೊರಟವರನ್ನು ದೇಶಪ್ರೇಮದ ಹೆಸರಿನಲ್ಲಿ ತುಳಿಯುವ ‘ರಾಜಕಾರಣದ’ ದಿನಗಳಿವು. ಹಾಗಾಗಿ ಇಷ್ಟು ಸಾಕು.

ಆರೂವರೆಯ ಸುಮಾರಿಗೆ ನಮ್ಮ ವಾಹನಗಳ ಮೆರವಣಿಗೆ ಹೊರಟಿತು. ಇಲ್ಲಿವರೆಗೆ ಕೇವಲ ಟಿಕೆಟ್ ವ್ಯವಹಾರದಲ್ಲಷ್ಟೆ ಇದ್ದಂತಿದ್ದ ಕಂಡೋರಕುಟ್ಟಿ (ಕಂಡಕ್ಟರ್) ಮೊದಲೇ ಘೋಷಿಸಿದ – ಇನ್ನೊಂದು ಹದಿನೈದಿಪ್ಪತ್ತು ಕಿಮೀ ಅಂತರದಲ್ಲಿ ಜರವಾಗಳ ವಲಯ ನಾವು ದಾಟುತ್ತೇವೆ. ಎಲ್ಲ ಕಿಟಕಿ, ಕ್ಯಾಮರಾ ಬಂದ್ ಮಾಡಿಕೊಳ್ಳಿ. ಅವರಿಗೇನೂ ಪ್ರಚೋದನೆ, ಉಡುಗೊರೆ ಕೊಡಲು ಹೋಗಬೇಡಿ ಇತ್ಯಾದಿ, ಶಾಸನ ವಿಧಿಸಿದ ಎಚ್ಚರಿಕೆ! ನಮ್ಮ ಎದುರೂ ಹಿಂದೂ ಕೆಲವು ಬಸ್ಸುಗಳು, ಕಾರುಗಳು ಪರಸ್ಪರ ಹಿಂದಿಕ್ಕುವ ಧಾವಂತ ಇಲ್ಲದೆ ಸಾಗಿದ್ದವು. ಪ್ರತಿ ತಿರುವಿನಲ್ಲಿ, ಮರಗಿಡಬಳ್ಳಿಯ ಚಲನೆಯಲ್ಲಿ ನಾವಂತೂ ಕುತೂಹಲದ ಕಣ್ಣು ಓಡಿಸುತ್ತಲೇ ಇದ್ದೆವು. ಫಕ್ಕನೆ ಕಾಣ ಸಿಕ್ಕಿದ ದಾರಿ ಕೆಲಸಗಾರರನ್ನು ಕೆಲವರು ಗೊಂದಲಿಸಿಕೊಂಡರು. ಆಗ ನನಗೆ ಮೂಡಿದ ಪ್ರಶ್ನೆ, ಸಾರ್ವಜನಿಕರಿಗೆ ವಿಧಿಸಿದ ಎಚ್ಚರಿಕೆಗಳು ಈ ದಾರಿ ರಚನೆಯಲ್ಲಿ ಎಲ್ಲಿ ಹೋಯ್ತು? ಅವರಿವರ ಮಾತಿನಲ್ಲಿ ತಿಳಿದಂತೆ, ಜರವಾಗಳು ಸ್ನೇಹಜೀವಿಗಳಲ್ಲವಂತೆ. ಪೊಲೀಸ್ ಜಬರ್ದಸ್ತಿನಲ್ಲೇ ರಸ್ತೆಯ ಕಾಮಗಾರಿ ಮತ್ತೆ ಕಾಲಕಾಲದ ಉಸ್ತುವಾರಿ ನಡೆದಿದೆಯಂತೆ! ಪೌರಾಣಿಕ ಯುಗದಲ್ಲಿ, ಭಾರತದ ಮುಖ್ಯ ನೆಲದಲ್ಲಿ ಅಗಸ್ತ್ಯರು ವಿಂಧ್ಯಾಚಲ ಮಣಿಸಿ ದಕ್ಷಿಣೋತ್ತರಗಳ ಬಾಂಧವ್ಯ ಬೆಸೆದ ಕಥೆ ಕೇಳಿದ್ದೇನೆ. ನಮ್ಮ ಕರಾವಳಿ ಬಯಲು ಸೀಮೆಗಳ ನಡುವೆ ಪಶ್ಚಿಮಘಟ್ಟ ಸಾರಿಗೆ ಸಂಪರ್ಕಕ್ಕಾಗಿ ಪಳಗಿಸುವುದು ಎಂದೆಂದೂ ಮುಗಿಯದ ಕಥೆಯಾದರೂ ತಾರ್ಕಿಕವಾಗಿ ಆಗಬೇಕಾದ್ದೇ ಇದೆ. ಆದರೆ ಇಲ್ಲಿ ಬಹು ಸಣ್ಣ ಸಂಖ್ಯೆಯಲ್ಲಿರುವ ಜರವಾಗಳ ವಲಯ (ಅವರೂ ಭಾರೀ ಅಲೆಮಾರಿಗಳೂ ಅಲ್ಲ) ಹಾಯ್ದರೆ ನಮಗೆ ಕೂಡಲೇ ಸಿಕ್ಕುವುದು ಸೇತುವಿಲ್ಲದ ಸಾಗರ ಮಾತ್ರ. ಒಂದು ಕಡೆ ಆದಿವಾಸಿಗಳ ಶುದ್ಧವನ್ನು ನವನಾಗರಿಕತೆಯಿಂದ ಕಾಪಾಡುವ ಮಾತಾಡುವ ಸರಕಾರಕ್ಕೆ ಮೂಲದಲ್ಲಿ ಈ ಮಾರ್ಗವನ್ನೇ ರಚಿಸದಿದ್ದರೆ ಏನಾಗುತ್ತಿತ್ತು? ಅಂಡಮಾನಿನ ಇತರ ಸ್ವತಂತ್ರ ದ್ವೀಪವಾಸಿಗಳಾದ ಓಂಗೆ, ಸೆಂಟಿನೆಲೀಸ್‌ರಂತೆ ಜರವಾವಲಯವನ್ನು ಸಾರ್ವಜನಿಕ ದೃಷ್ಟಿಯಿಂದ ಹೊರಗುಳಿಸಬೇಕಿತ್ತು. ನನಗಂತೂ ಈ ದಾರಿ ಜೇನು ಹುಟ್ಟಿನ ನಡುವೆ ತೂರಿದ ಕೋಲಿನ ಹಾಗೇ ಅನಿಸಿತು. ರಾಷ್ಟ್ರೀಯ ಉದ್ಯಾನವೋ ಅಭಯಾರಣ್ಯದ್ದೋ ಹೆಸರಿನಲ್ಲಿ (ಅಂದರೆ ವನ್ಯದ ರಕ್ಷಣೆ ಪೋಷಣೆಯ ಹೆಸರಿನಲ್ಲಿ) ಮೂಲವಾಸಿಗಳನ್ನು ಅವ್ಯವಸ್ಥಿತವಾಗಿ, ನಿಷ್ಕರುಣೆಯಿಂದ ಎತ್ತಂಗಡಿ ಮಾಡಿ (ಮರುನೆಲೆಗಾಣಿಸುವ ಆಶ್ವಾಸನೆ ಕಾಗದದಲ್ಲಿ ಮಾತ್ರ!) ಇಲಾಖೆಯ ರಚನೆಗಳನ್ನು ನಿರ್ಲಜ್ಜವಾಗಿ ಹೇರುವ ಧೋರಣೆಯೇ ಅಂಡಮಾನಿನಲ್ಲೂ ನಡೆದದ್ದು ಕಾಣುತ್ತೇವೆ. (ಸಾರ್ವಜನಿಕ ಸೇವೆಯ ಹೆಸರಿನಲ್ಲಿ ಶಪಥ ಕೈಗೊಳ್ಳುವ ನಮ್ಮ ಜನಪ್ರತಿನಿಧಿಗಳು ತಮ್ಮ ಅಧಿಕಾರಾವಧಿಯ ತಾತ್ಕಾಲಿಕ ನೆಲೆಯ ಶೃಂಗಾರಕ್ಕೆ ಲಕ್ಷಾಂತರ ರೂಪಾಯಿ ಹುಡಿಹಾರಿಸುತ್ತಿರುವ ಸಂಗತಿ ಈಗ ಕರ್ನಾಟಕದಲ್ಲಿ ಬಹು ಚರ್ಚೆಗೆ ಒಳಗಾಗಿದೆ)

ಇದ್ದಕ್ಕಿದ್ದಂತೆ ಬಸ್ಸಿನೊಳಗೇನೋ ವಿಶೇಷ ಸಂಚಲನ. ಜರವಾ ಜಪದೊಡನೆ ನಿರ್ವಾಹಕ “ಕಿಟಕಿ ಹಾಕಿ, ಏನೂ ಕೊಡಬೇಡಿ. ಫೋಟೋ ತೆಗೆಯಬೇಡಿ…” ಹಿಂದೆ ಹೇಳಿದ್ದನ್ನೆ ಹೇಳುತ್ತಿದ್ದಂತೆ ಒಂದಷ್ಟು ಆದಿವಾಸಿಗಳು (ಆಫ್ರಿಕನ್ ಬುಡಕಟ್ಟುಗಳ ಛಾಯೆಯವರು) ದಾರಿಯ ಆಚೆ ಈಚೆ ಹರಡಿಕೊಂಡು ಇರುವುದು ಕಾಣಿಸಿತು. ತಮಾಷೆ ಎಂದರೆ ಗಂಡು, ಹೆಣ್ಣು, ಚಳ್ಳೆಪಿಳ್ಳೆಗಳ ಗುಂಪು ನಮ್ಮ (ವಾಹನ ಮೇಳದಲ್ಲಿ ಬರುವ ನಾಗರಿಕರ) ನಿರೀಕ್ಷೆಯಲ್ಲೇ ಇದ್ದಂತಿತ್ತು! ಪಿಳ್ಳೆಗಳನ್ನು ಬಿಟ್ಟರೆ ಎಲ್ಲರೂ ಸೊಂಟದ ಕೆಳಗೆ ಒಂದಲ್ಲ ಒಂದು ಸುತ್ತಿಕೊಂಡವರೇ. ಕರಿ ಮುಖ ಮೈಗೆ ಹಲವರು ಬೂದಿ ಬಡಿದುಕೊಂಡಂತಿದ್ದರು. (ಅಂದೇ ಅಪರಾಹ್ನ ಕೆಸರು ಕಕ್ಕುವ ‘ಅಗ್ನಿಮುಖಿ’ಯೊಂದನ್ನು ಕಂಡಾಗ ಜರವಾಗಳ ಬೂದಿಯ ರೂಪು ಆ ಕೆಸರಿನದೇ ಇರಬೇಕೆಂದು ತರ್ಕಿಸಿದೆವು) ಬೇಕಾಬಿಟ್ಟಿಯಾಗಿ (ಎಲ್ಲರಿಗೂ ಕಡ್ಡಾಯವೆನ್ನುವಂತಿರಲಿಲ್ಲ ಎಂಬರ್ಥದಲ್ಲಿ) ಹಕ್ಕಿಯ ಗರಿ, ಬಳ್ಳಿ ಎಲೆಗಳ ಅಲಂಕಾರ ಮತ್ತೆ ಕೈಯಲ್ಲಿ ಬಿಲ್ಲು, ಬಾಣ, ಬಡಿಗೆ ಅವರನ್ನು ನಮ್ಮಿಂದ ಪ್ರತ್ಯೇಕಿಸುವಂತಿತ್ತು. ಆದರೆ ಚಡ್ಡಿ, ಬನಿಯನ್ನು, ಟೋಪಿಯಲ್ಲದೆ ನಾನು ಕಾಣದ ಇನ್ನೆಷ್ಟೋ ಸಂಗತಿಗಳು ಅವರಲ್ಲಿದ್ದಿರಬೇಕು. ಮತ್ತವು ಇಲ್ಲ ಇಲ್ಲಾ ಎಂದು ‘ನಾವೇ’ ಕೊಟ್ಟ ಉಡುಗೊರೆಗಳು ಎನ್ನುವುದೂ ಅರ್ಥವಾಗುತ್ತಿತ್ತು. ನಮಗೆ ಅವರನ್ನು ಕಾಣುವ ಕುತೂಹಲವಿದ್ದಷ್ಟೇ ಅವರಿಗೂ ತಮ್ಮನ್ನು ಕಾಣಿಸಿಕೊಳ್ಳುವ, ಅರಿವಿದ್ದೋ ಇಲ್ಲದೆಯೋ ನಮ್ಮಿಂದ ಬಿಕ್ಷೆಬೇಡುವ ಉತ್ಸಾಹ ಕಾಣುತ್ತಿತ್ತು. ಹೀಗೇ ದಾರಿ ಅಡ್ಡಗಟ್ಟಿದ (ಅವ್ಯವಸ್ಥಿತವಾಗಿ) ನಾಲ್ಕೆಂಟು ತರುಣರು ಬಸ್ಸುಗಳ ಸುತ್ತ ಸುಳಿದಾಡಿದರು. ಒಂದಿಬ್ಬರು ಕೈಯಲ್ಲಿದ್ದ ಬಿಲ್ಲೋ, ಕೋಲೋ ಬಸ್ಸಿನ ಬಾಡಿಗೆ ಬಡಿದು (ಪುಣ್ಯಕ್ಕೆ ಮುಚ್ಚಿದ್ದ ಕನ್ನಡಿಗಲ್ಲ) ಏನಾದರೂ ಕೊಡಿ ಎನ್ನುವ ಭಾವವನ್ನೂ ಪ್ರಕಟಿಸಿದರು. ನೋಡನೋಡುತ್ತಿದ್ದಂತೆ ಬಸ್ಸಿನ ಏಣಿ ಹಿಡಿದು ಎದುರು ಬಸ್ಸಿನ ಮೇಲೆ ನಮ್ಮ ಬಸ್ಸಿನ ಮೇಲೆ ಒಂದಿಬ್ಬರು ಏರಿ ಸವಾರಿಯೇ ಹೊರಟರು. ಚಾಲಕರು ಜರವಾಗಳಿಗಾಘಾತವಾಗದ ಎಚ್ಚರದಲ್ಲಿ ದಾರಿಬಿಡಿಸಿಕೊಳ್ಳಲು ಮಾತ್ರ ನಿಧಾನಿಸಿದ್ದವರು (ಅಥವಾ ನಿಲ್ಲಿಸಿದ್ದವರು) ಹಾಗೇ ಮುಂದುವರಿದರು. ಸುಮಾರು ಅರ್ಧ ಒಂದು ಕಿಮೀ ಹೋಗುತ್ತಿದ್ದಂತೆ ಏರುದಾರಿಯಲ್ಲಿ ನಮ್ಮೆದುರಿನ ಬಸ್ಸು ನಿಧಾನಿಸಿದಾಗ ಮೇಲಿದ್ದ ಇಬ್ಬರೂ ಇಳಿದು ಓಡಿದರು. ನಮ್ಮ ಮೇಲಿದ್ದವ ಮತ್ತೂ ಸ್ವಲ್ಪ ದೂರ ಬರುತ್ತಿದ್ದಂತೆ ಟಾಪಿಗೆ ಬಿಲ್ಲು ಬಡಿದು ಸಣ್ಣ ಗಲಭೆ ಮಾಡಿದ, ಪರೋಕ್ಷವಾಗಿ ಇಳಿಯುವ ಸೂಚನೆ ನೀಡಿದ ಮತ್ತು ಚಾಲಕ ನಿಧಾನಿಸುತ್ತಿದ್ದಂತೆ ಇಳಿದುಹೋದ. ಮತ್ತೊಂದೇ ಕಿಮೀ ಅಂತರದಲ್ಲಿ ಭಾರಟಾಂಗ್ ಎಂಬ ದಾರಿಯ ಮತ್ತು ನಮ್ಮ ಬಸ್ಸು ಪ್ರಯಾಣದ ಕೊನೆ ಬಂತು.

ಹ್ಯಾವ್ಲಾಕ್ ದೋಣಿಗಟ್ಟೆಯದೇ ಇನ್ನೊಂದು ರೂಪ ಈ ಭಾರಟಾಂಗ್. ನಾವು ಬಸ್ಸಿಳಿದು ಕಾದಿದ್ದ ದೊಡ್ಡ ಬೋಟುಗಳಲ್ಲಿ ತುಂಬಿಕೊಂಡೆವು. ಇಲ್ಲಿ ಸಮುದ್ರ ಎರಡು ಭೂಖಂಡಗಳ ನಡುವೆ ವಿಸ್ತಾರದ ಹೊಳೆಯಂತೆ ಚಾಚಿಕೊಂಡಿದೆ. ಆದರೆ ಇಲ್ಲಿ ನೀರಿಗೆ ಏಕಮುಖದ ಹರಿವಿಲ್ಲವಾದ್ದರಿಂದ ಮೇಲ್ದಂಡೆ, ಕೆಳದಂಡೆ ಅನ್ನುವಂತಿಲ್ಲ. ಹಾಗಾಗಿ ನಮ್ಮ ದಾರಿ ಮುಗಿದ ಕ್ರಮದಲ್ಲಿ ನೀರಿನ ಮೇಲೆ ಎಡದಿಕ್ಕಿಗೆ ಸಾಗುತ್ತಾ ಎದುರು ದಂಡೆಯೆಡೆಗೆ ‘ದೋಣಿಸಾಗಲಿ, ದೂರ ಹೋಗಲಿ’ ಹಾಡು ಹರಿಯಿತು. ಸುಮಾರು ಇಪ್ಪತ್ತು ಮಿನಿಟಿನಲ್ಲಿ ಅಲ್ಲಿನೊಂದು ಪುಟ್ಟ ಪೇಟೆಯ ದೋಣಿಗಟ್ಟೆ ಸೇರಿದೆವು. ಅದು ನಮ್ಮ ಪ್ಯಾಕೇಜ್ ಟೂರಿನ ಅಧಿಕೃತ ಊಟೋಪಚಾರಗಳ ಕೇಂದ್ರ. ನಮಗೆಲ್ಲಾ ಕೈಗೊಂದು ತಿಂಡಿ ಪೊಟ್ಟಣ ಹಾಗೂ ಲೈಫ್ ಜ್ಯಾಕೆಟ್ ಕೊಟ್ಟು ಸಣ್ಣ ಸಣ್ಣ ಗುಂಪುಗಳಾಗಿ ವಿಂಗಡಿಸುತ್ತಾ ಸಣ್ಣ ದೋಣಿಗಳಿಗೆ ಏರಿಸಿದರು. ಒಂದೊಂದು ದೋಣಿಯಲ್ಲಿ ಐದಾರು ಜನ ಇದ್ದರೂ ವಿಂಗಡಿಸುವಾತ ಅಭಯನನ್ನು ಪ್ರತ್ಯೇಕಿಸಿಬಿಟ್ಟ! ಅನ್ಯ ಗುಂಪುಗಳು ನಾವು, ನಮ್ಮವರು ಎಂದು ಗುಲ್ಲು ಮಾಡಿ ಹೊಂದಾಣಿಕೆ ನಡೆಸುವುದನ್ನು ನೋಡಿ ಒಗ್ಗಟ್ಟು ಎನ್ನುವುದೋ ಸಣ್ಣತನ ಎನ್ನುವುದೋ ಅರ್ಥವಾಗಲಿಲ್ಲ. ಎಲ್ಲ ದೋಣಿಗಳೂ ಒಂದೇ ಗುರಿಯತ್ತ ಹೆಚ್ಚುಕಡಮೆ ಒಟ್ಟಿಗೇ ಹೋಗುತ್ತವೆ. ಮುಂದೆ ಆದ್ಯತೆಯಲ್ಲಿ ಸಮ್ಮಾನವೋ ಮದುವೆಮುಂಜಿಯಂತ ಕೌಟುಂಬಿಕ ಕಾರ್ಯಕ್ರಮವೇನೂ ನಡೆಯುವುದು ಇರಲಿಲ್ಲ. ಹಾಗೆ ಒದಗುವ ಕ್ಷಣಕಾಲವಾದರೂ ಸಮಾನಗುರಿಯ ಇತರ ಜನರೊಂದಿಗೆ ಬೆರೆಯುವ ಅವಕಾಶವನ್ನು ತಿರಸ್ಕರಿಸುವ ಈ ಭಾವ ನನಗೆ ಎಂದೂ ಹಿಡಿಸಿಲ್ಲ. ಯಾವುದೇ ಪ್ರವಾಸ ಕಥನ ಆತ್ಮಕಥಾನಕದ ಒಂದು ಎಳೆಯೇ ಆದ್ದರಿಂದ ಇಲ್ಲೊಂದು ನನ್ನದೇ ಸಣ್ಣ ಉಪಕಥೆ ಹೇಳಿಬಿಡುತ್ತೇನೆ.

ನನ್ನ ಶಾಲಾ ದಿನಗಳಲ್ಲಿ ತಂದೆ ಅವರ ಕಾಲೇಜು ಎನ್.ಸಿ.ಸಿ ಶಿಬಿರ ಅಲ್ಲಿ ಇಲ್ಲಿ ನಡೆಸುತ್ತಿದ್ದರು. ಅಂಥ ಕೆಲವಲ್ಲಿ ಅವರು ನನ್ನನ್ನೂ (ಕೈಯಿಂದ ಖರ್ಚು ಹಾಕಿ) ಶಿಬಿರಕ್ಕೆ ಸೇರಿಸಿದ್ದಿತ್ತು. (ಆ ಕಾಲದಲ್ಲಿ ಹಾಗೊಂದು ಅವಕಾಶ ಇತ್ತು.) ತಂದೆಯ ಉದ್ದೇಶವಾದರೂ ನನ್ನ ಲೋಕಾನುಭವದ ಪರಿಧಿ ವಿಸ್ತರಿಸುವುದೇ ಇತ್ತು. ಅಲ್ಲೆಲ್ಲ ನನ್ನ ಊಟ, ವಾಸ, ಚಟುವಟಿಕೆ ಇತರ ಶಿಬಿರಾರ್ಥಿಗಳೊಡನೆಯೇ ಇರುತ್ತಿತ್ತು ವಿನಾ ‘ರಾಜಕುಮಾರ’ನದ್ದಲ್ಲ ಅರ್ಥತ್ ತಂದೆಯೊಡನೆ ಅಲ್ಲ. ಮುಂದುವರಿದು ನನ್ನ ಕಾಲೇಜು ದಿನಗಳಲ್ಲಿ ನಾನೇ ಎನ್.ಸಿ.ಸಿಯ ಒಂದು ಅಖಿಲ ಭಾರತ ಮಟ್ಟದ ನಾಯಕತ್ವ ಶಿಬಿರಕ್ಕಾಗಿ ಅಸ್ಸಾಂಗೆ ಹೋಗಿದ್ದೆ. ಸಹಜವಾಗಿ ಅಲ್ಲಿ ವಿವಿಧ ರಾಜ್ಯಗಳ ಪುಟ್ಟಪುಟ್ಟ ತಂಡಗಳು ಬಂದಿದ್ದವು. ಸಂಘಟಕರು ‘ಭಾರತೀಯರೆಲ್ಲ ಒಂದೇ’ ಎಂಬ ಭಾವ ಬೆಳೆಸಲು ಎಲ್ಲಾ ತಂಡಗಳನ್ನು ಮಿಶ್ರ ಮಾಡಿ ವಾಸ್ತವ್ಯದ ಗುಡಾರಗಳಿಗೆ ಹಂಚುವ ಪ್ರಯತ್ನ ಮಾಡಿದರು. ಹೆಚ್ಚು ಕಡಮೆ ಎಲ್ಲಾ ಭಾಷಾ-War ಮನೋಸ್ಥಿತಿಯವರೂ ನಿರ್ಲಜ್ಜವಾಗಿ ವಿರೋಧಿಸಿ, ಗೆದ್ದರು. ಪ್ರಯಾಣ ಕಾಲದಲ್ಲಿ ಕರ್ನಾಟಕದ ತಂಡಕ್ಕೆ ನಾಯಕನಾಗಿದ್ದವ ನಾನು. ಆದರೆ ನನ್ನನ್ನುಳಿದು ಹನ್ನೆರಡೂ ಜನ ಇಪ್ಪತ್ತೊಂದು ದಿನದ ಶಿಬಿರಾವಧಿಯನ್ನು ವಾಸ್ತವದಲ್ಲಿ ಹತ್ತು ಜನರಿಗೆ ಹೊಂದುವ ಗುಡಾರವನ್ನೇ ಬಯಸಿ ಅನುಭವಿಸಿದರು. ಕೊನೆಗೆ ಸುಮಾರು ನೂರಾಮೂವತ್ತು ಶಿಬಿರಾರ್ಥಿಗಳಲ್ಲಿ, ಹಾಕಿದ್ದ ಹದಿನಾಲ್ಕೋ ಹದಿನೈದೋ ಗುಡಾರಗಳಲ್ಲಿ ಕೇವಲ ಎಂಟು ಮಂದಿಯ ನಮ್ಮ ಗುಡಾರವೊಂದೇ ನಿಜ ಭಾಷಾತೀತ, ನಿಜ ಭಾರತೀಯ! ದೇವಕಿ ಒಮ್ಮೆ ಕೇವಲ ತಾಯಿ-ಪ್ರಜ್ಞೆಯಲ್ಲಿ ಅಭಯನ್ನ ನಮ್ಮ ಗುಂಪಿಗೆ ಸೇರಿಸಿಕೊಳ್ಳಲು ಪ್ರಯತ್ನ ಮಾಡಿದಳು. ಮುಂದೆ ಅಲ್ಲಿ ಇಲ್ಲಿ ಅವನು ಎದುರಾದನಾದರೂ ಮಧ್ಯಾಹ್ನದವರೆಗಿನ ಓಡಾಟಗಳಲ್ಲಿ ನಮ್ಮದು ನಾಲ್ಕು ಜನರ ಗುಂಪಾಗಿಯೇ ಉಳಿಯಿತು!

ನಮ್ಮ ದೋಣಿಗಳು ಔಟ್ ಬೋರ್ಡ್ ಎಂಜಿನ್ ಹೊತ್ತ ಸಪುರ ರಚನೆಗಳು. ಹಿಂದೊಬ್ಬ ಚಾಲಕ ಎದುರು ಮೂತಿಯ ಮೇಲೊಬ್ಬ ನಾವಿಕ. ದೋಣಿಗರು ನಮಗೆ ಜಾಕೆಟ್ ಹಾಕಿಕೊಳ್ಳುವಲ್ಲಿ ಸಹಕರಿಸಿ ಎಂಜಿನ್ ಚಲಾಯಿಸಿಯೇ ಬಿಟ್ಟರು. ನಮಗೆ ಕೊಟ್ಟ ಪೊಟ್ಟಣದಲ್ಲಿ ಬಂದ ಮೂರೋ ನಾಲ್ಕೋ ಸಣಕಲು ಪೂರಿ ಬಾಜಿಯನ್ನು ನಾವು ಗಳಿಗೆಯಲ್ಲಿ ಮುಗಿಸಿ ನೀರನೋಟಕರಾದೆವು. ಎಂಜಿನ್ನಿನ ಭೀಕರ ಕೊಟಕೊಟ ಸದ್ದಿನಲ್ಲಿ ದಂಡೆಯನ್ನು ದಟ್ಟವಾಗಿ ಆವರಿಸಿದ್ದ ಸಸ್ಯರಾಶಿಯಿಂದ ಹೆಚ್ಚಿನ ಜೀವ ವೈವಿಧ್ಯ ಕಾಣುವ ಆಸೆ ನಮಗೆ ಇರಲಿಲ್ಲ. ನಮ್ಮ ಆ ಹೊತ್ತಿನ ಗುರಿ ಅದೇ ದ್ವೀಪದ ಇನ್ನೊಂದೇ ಭಾಗದಲ್ಲಿದ್ದ ಸುಣ್ಣದ ಗವಿ. ನಾವು ಹೊರಟ ದಂಡೆಗೆ ಸಮವಾಗಿ ಆದರೆ ಅಲ್ಲಿಗೆ ಬಂದ ದಿಕ್ಕಿನಲ್ಲೇ ಮತ್ತೆ ಹೋಗುತ್ತಿದ್ದೆವು. ಹೋಗುವಾಗ ದೂರನೋಟಕ್ಕೆ ಸಿಕ್ಕ ಹಸುರು ಈಗ ಸ್ಪಷ್ಟ ಕಾಂಡ್ಲಾವನ. ಅದರ ಬಲಿಷ್ಟವಾದ ಬೇರುಗಾಲುಗಳು ದ್ವೀಪಗಳ ನೆಲಕ್ಕೆ ಸುಭದ್ರ ಅಂಚು ಹೊಲಿದಂತೆಯೇ ಇತ್ತು. ಸಮುದ್ರದ ಸಾಮಾನ್ಯ ಭರತದ ಮೇಲಂಚಿನಿಂದ ಕನಿಷ್ಠ ಹತ್ತು ಹನ್ನೆರಡು ಅಡಿ ಮೇಲಕ್ಕೆ ಹಬ್ಬಿದ ಇದರ ಕಾಂಡ ಸುನಾಮಿಯಂಥ ಪ್ರಾಕೃತಿಕ ವಿಪರೀತಕ್ಕೆ ಪ್ರಭಾವೀ ಪ್ರಾಕೃತಿಕ ತಡೆಗೋಡೆಯಂತೆ. ಕಾಂಡ್ಲಾದ ಬೇರುಗಾಲುಗಳ ಮೇಲೆ ಹೆಜ್ಜೆಯೂರುತ್ತಾ ದ್ವೀಪಶೋಧಿಸುವ ರಮ್ಯಾದ್ಭುತವನ್ನು ಮನಸ್ಸಿನಲ್ಲೇ ಚಪ್ಪರಿಸಿದೆವು. ಒಂದೆರಡು ಕಡೆ ಸ್ಪಷ್ಟವಾಗಿ ಕಾಂಡ್ಲಾ ಮುಕ್ತವಾಗಿ ಒಳನಾಡಿನತ್ತ ನೀರ ಕಾಲುವೆಯೊಂದು ಹೋದ ಹಾಗೋ ನೆಲದಿಂದ ತೊರೆಯೊಂದು ಹರಿದು ಬಂದು ಸಾಗರಕ್ಕೆ ಸೇರುವಂತೆಯೋ ಭಾಸವಾಗುತ್ತಿತು. ಪಶ್ಚಿಮ ಬಂಗಾಳದ ಸುಂದರಬನ್ಸ್ ವ್ಯಾಘ್ರಧಾಮ ಇಂಥದ್ದೇ ಪರಿಸರದಲ್ಲಿದೆ. ಆದರದು ನದಿಮುಖಜ ಭೂಮಿಯಲ್ಲಿರುವುದರಿಂದ ಅಲ್ಲಿನ ಕಾಲುವೆಗಳು (ಬಂಗಾಲಿಗಳು ಇವನ್ನು ಖಾಲಿ ಎನ್ನುತ್ತಾರೆ) ಆಂತರ್ಯದಲ್ಲಿ ನದಿ ಸಾಗರದೊಡನೆ ಸಂಗಮಿಸುವ ರಚನೆಯಾಗಿರುವ ಸಾಧ್ಯತೆ ಹೆಚ್ಚು. ಇಲ್ಲಿನದು ಸಾಗರದ ನಡುವೆ ಮೊಳೆತ ‘ನೆಲ’ವಾದ್ದರಿಂದ ಕಾಲುವೆಯಂತೆ ಕಾಣುವುದು ವಾಸ್ತವದಲ್ಲಿ ಕೇವಲ ಕೊರಕಲು. ಇದು ಕೇವಲ ಒಳನೆಲಕ್ಕೆ ಚಾಚಿದ್ದೂ ಇರಬಹುದು, ಈ ದಂಡೆಯಿಂದ ಆಚೆ ದಂಡೆಗೆ ಓಣಿಯೂ ಇರಬಹುದು. ಇಲ್ಲಿ ಕೇವಲ ಭರತ, ಇಳಿತ; ಏಕಮುಖದ ಪ್ರವಾಹ ಎಂದೂ ಇಲ್ಲ.

ಕಾಂಡ್ಲಾ ಎಡೆಯ ಕೆಲವು ಕೊರಕಲನ್ನು ಹಾಗೇ ಹಾಯ್ದು, ಒಂದರಲ್ಲಿ – ನಾಮಫಲಕ ಇದ್ದ ಕೊರಕಲಿನಲ್ಲಿ ನಮ್ಮ ದೋಣಿ ನುಗ್ಗಲು ಸಜ್ಜಾಯಿತು. ತಾರದಲ್ಲಿದ್ದ ಎಂಜಿನಿನ ಸದ್ದುಪೂರ್ತಿ ಇಳಿಯಿತು. ಚಾಲಕ ಎಂಜಿನಿನ ನಿರಂತರ ನೂಕು ಶಕ್ತಿಯನ್ನು ಪೂರ್ಣ ಇಳಿಸಿದ: ಕೊಟಟಟಟಟ ಬಿಟ್ಟು ಕೋಟಾ ಕೊಟಾ ಕೊಟಾ ಮಾತ್ರ. ಬಲು ಚಾಣಾಕ್ಷತೆಯಿಂದ ನಿಭಾಯಿಸುತ್ತಾ ಕೊರಕಲಿನ ಹಾವಿನ ಬಳುಕಿನಲ್ಲಿ ನುಗ್ಗಿಸಿದ. ಮೂಕಿಯ ಮೇಲಿದ್ದ ನಾವಿಕ ಅಲ್ಲೇ ನಿಂತು, ಜಲ್ಲೆ ಹಿಡಿದು ಸೂಕ್ಷ್ಮ ದಿಕ್ಕು ಬದಲಾಯಿಸುವ ಕೆಲಸ ಸುರುಮಾಡಿದ. ನೇರ ಬೇರಜಾಲದತ್ತ ನುಗ್ಗುತ್ತಿದ್ದ ಮೂಕಿಯ ಎದುರು ಜಲ್ಲೆಯನ್ನು ನೀರಿನಾಳಕ್ಕೆ ಬಿಟ್ಟು ಹಗುರಕ್ಕೆ ನೂಕುತ್ತಾ ಬಲಕ್ಕೆ ಹೊರಳಿಸಿದ. ಮತ್ತದು ಬಲದ ಅಂಚಿಗೆ ಒರೆಸುವ ಮುನ್ನ ಕೈ ಅಳವಿಗೆ ಬಂದ ಮರದೊಂದು ಗೆಲ್ಲನ್ನು ಜಗ್ಗಿ ಎಡಕ್ಕೆ ಸುಧಾರಿಸಿದ. ಅರ್ಧ ಚಂದ್ರಾಕೃತಿಯ ತಿರುವಿನಲ್ಲಿ ಮೂಕಿಯೇನೋ ಹಾಯ್ದು ದೇಹ ಒರೆಸುತ್ತದೆ ಎನ್ನುವಲ್ಲಿ ಮತ್ತೊಂದೇ ಮರದ ಗೆಲ್ಲಿಗೆ ಜಲ್ಲೆಯ ಒತ್ತು ಕೊಟ್ಟು ದೋಣಿಯೇ ಬಳುಕಿತೋ ಎನ್ನುವಂತೆ ನಯಸಾಣೆ ಮಾಡಿದ. ಆ ಕಿಷ್ಕಿಂಧೆಯಲ್ಲು ಎದುರಿನಿಂದ ಇನ್ನೊಂದು ‘ಕೊಟಾ ಕೊಟಾ’ ಎದುರಾಗಬೇಕೇ! ಮಂಗಳೂರಿನ ಬಂದರದಲ್ಲಿ ಲಾರಿ ಲಾರಿಗಳ ಸಂವಾದದಲ್ಲಿ ಪಾರಾಗುವ ನಗರಸಾರಿಗೆ ಬಸ್ಸಿನ ಚಾಲಕನ ಸಹಜ ಪ್ರಾವೀಣ್ಯ ನಮ್ಮ ನಾವೆಯ ಚಾಲಕನಿಗಿತ್ತು; ನಾವು ಲೈಫ಼್ ಜಾಕೆಟ್ ಗಂಟುಗಳನ್ನು ಪರಿಶೀಲಿಸಿದ್ದು ಅನಾವಶ್ಯಕವಿತ್ತು!

ಸಣ್ಣ ಕೆರೆಯಂತೆ ವಿಸ್ತರಿಸಿದ ಜಾಗವೊಂದರಲ್ಲಿ ದೋಣಿಗಟ್ಟೆ ಮಾಡಿದ್ದರು. ಅಲ್ಲೂ ಕಾಂಡ್ಲಾ ಕಾಂಡಗಳ ಸೊಂಟದಿಂದ ಸೊಂಟಕ್ಕೆ ಬಿದಿರ ಸಲಿಕೆಗಳ ಚಾಪೆಯನ್ನೇ ಕಟ್ಟಿ ಒಂದಷ್ಟು ನಡೆದೇ ನೆಲ ಕಾಣುವಷ್ಟು ಕಾಂಡ್ಲಾವನ ಹೆಣೆದುಕೊಂಡಿತ್ತು; ಬುದ್ಧಿಪೂರ್ವಕವಾಗಿ ಹೇಳುವುದಾದರೆ ಉಳಿಸಿದ್ದರು ಎನ್ನುವುದು ಹೆಚ್ಚು ಸೂಕ್ತ! ನಮ್ಮ ಪಶ್ಚಿಮ ಘಟ್ಟದಲ್ಲಿ ಕತ್ತಿ, ಗುದ್ದಲಿಗಳ ಭ್ರಾಂತಿಯಲ್ಲಿ ದಟ್ಟ ಕಾಡುಗಳು ತರ್ಕವಿಲ್ಲದ ಅಸಂಖ್ಯ ಅಣೆಕಟ್ಟುಗಳು ಹಿಡಿದಿಡಬಹುದಾದ ನೀರಿಗಾಗಿ, ಮಲೆತು ನಿಂತ ಘಟ್ಟಗಳು ವಿವೇಚನೆಯಿಲ್ಲದ ಅಭಿವೃದ್ಧಿಯ ಸಾಕ್ಷಿಗಳಿಗಾಗಿ ಬೋಳು, ಮಟ್ಟವಾಗುತ್ತಿರುವಾಗ ಇಲ್ಲಿ ಹತ್ತಿಪ್ಪತ್ತಡಿಯಾದರೂ ಪ್ರಾಕೃತಿಕ ಸ್ಥಿತಿ ಉಳಿಯುವ ವ್ಯವಸ್ಥೆಯಾದದ್ದು ನಮಗೆ ನಿಜಕ್ಕೂ ಕುಶಿಕೊಟ್ಟಿತು.\

*** *** ***

ಈ ಕಂತಿನ ಕೊನೇ ವಾಕ್ಯದ ಬಗ್ಗೆ ಒಂದು ಟಿಪ್ಪಣಿ: ೨೦೦೮ರ ಸೆಪ್ಟಂಬರ್ ಉದಯವಾಣಿಯಲ್ಲಿ ನೀವೆಲ್ಲ ಓದಿರಬಹುದಾದ ಇಲ್ಲವೇ ಈಗಲೂ ಇಲ್ಲೇ ನನ್ನ ಬ್ಲಾಗಿನ ವನ್ಯಲೋಕ ವಿಭಾಗದೊಳಗೆ ಓದಬಹುದಾದ ‘ಗುಂಡ್ಯಕ್ಕೆ ಗುಮ್ಮ ಬರುತಿದೆ’ಯಲ್ಲಿ ಉಲ್ಲೇಖಿತ ಗುಂಡ್ಯ ಯೋಜನೆಗೆ ಇಂದು (೨೩-೫-೨೦೦೯) ಸಕಲೇಶಪುರದಲ್ಲಿ ಮುಖ್ಯಮಂತ್ರಿ ಶಿಲಾನ್ಯಾಸ ಮಾಡಿದ್ದಾರೆ. ಈ ಯೋಜನೆಯ ಎರಡೂ (ಮೊದಲನೆಯದು ಹಾಸನದ ಹೊಂಗಡಳ್ಳದಲ್ಲೂ ಎರಡನೆಯದು ದಕ ಜಿಲ್ಲೆಯ ಗುಂಡ್ಯದಲ್ಲೂ ನಡೆದಿತ್ತು) ಸಾರ್ವಜನಿಕ ಅಹವಾಲು ಸ್ವೀಕಾರ ‘ನಾಟಕ’ದಲ್ಲಿ ಪರಿಸರಪರವಾದ, ಸ್ಪಷ್ಟ ದಾಖಲೆಗಳ ಆಧಾರದ ವಿರೋಧವನ್ನು ನಮ್ಮ (ಮಂಗಳೂರಿನ) ನಿರೇನ್ ಜೈನ್, ಕಾನೂನು ಅಬದ್ಧವನ್ನು (ಸಕಲೇಶಪುರದ ವಕೀಲ) ಕಿಶೋರಕುಮಾರ್ ಲಿಖಿತವಾಗಿ (ಸ್ವೀಕೃತಿಯೊಡನೆ) ಕೊಟ್ಟಿದ್ದಾರೆ. ತಮಾಷೆ ಎಂದರೆ ವಿಚಾರದ ಬಲದಲ್ಲಿ ನಿರ್ಧಾರವಾಗಬೇಕಾದ ಸಾರ್ವಜನಿಕ ಅಹವಾಲು ಕಲ್ಪಿತ (ಪರ, ವಿರೋಧಗಳ) ತಲೆಲೆಕ್ಕದಲ್ಲಿ ನಡೆದಿದೆ. ದೂರುವಂತಿಲ್ಲ, ಪ್ರಜಾಪ್ರಭುತ್ವ ನಡೆದಿರುವುದೇ ಈ ಮಾನದಲ್ಲಿ! ಆನಂದಾ ಐದು ವರ್ಷ ಕಳೆದು ಭಾರತ ಪ್ರವಾಸಕ್ಕೆ ಬರಬಹುದಾದ ನಿನಗೆ ಹೊಂಗಡಳ್ಳದ ಜಿಗಣೆ, ಇಲಿ ಸಂರಕ್ಷಣಾರಣ್ಯಕ್ಕೆ ಸ್ವಾಗತ!! ಆಗ ಬಹುಮತದ ತೀರ್ಪಿಗೆ ಬದ್ಧವಾಗಿ ನೀನೂ ನಾವೂ ಹಾಕಲೇಬೇಕು “ಕೊತ್ತಂಬರಿ ಮರಕ್ಕೆ ಜೈ”!?#@$#@$!#

ಇಂತು ನಿನ್ನ ಅಗ್ರಜ
ಅಶೋಕವರ್ಧನ