ಪ್ರಿಯ ಆನಂದಾ,

[ಅಮೆರಿಕಾದಲ್ಲಿರುವ ನನ್ನೊಬ್ಬ ತಮ್ಮ ಆನಂದವರ್ಧನನನ್ನು ಉದ್ದೇಶಿಸಿದ ಅರೆ-ಖಾಸಗಿ ಪತ್ರವಿದು. ಹೆಚ್ಚಿನ ವಿವರಗಳಿಗೆ ‘ಮೆಕ್ಸಿಕೋಕ್ಕೆ ಬನ್ನಿ, ಅಂಡಮಾನ್ ಬಿಡಿ’ ಸೇರಿದಂತೆ ಇದರದ್ದೇ ಹಿಂದಿನ ಆರು ಭಾಗಗಳನ್ನು ಇಲ್ಲೇ ನೋಡಿ. ಪ್ರತಿ ಓದುಗನ ಸಹೃದಯೀ ಪತ್ರಪ್ರತಿಕ್ರಿಯೆಗಳ ಕುಮ್ಮಕ್ಕಿನಲ್ಲಿ ಮುಂದಿನ ಕಂತುಗಳು ಬೇಗಬೇಗನೆ ಅನಾವರಣಗೊಳ್ಳಲಿವೆ ಎಂದು ಉದ್ದಕ್ಕೂ ಕೇಳಿಕೊಂಡಿದ್ದೆ, ಬಂದವು ಕೆಲವೇ ಕೆಲವು. ನಾನು ಕೊರೆತಕ್ಕೆ ಮುಕ್ತಾಯ ಕಾಣಿಸಿದ್ದಕ್ಕಾದರೂ ನೀವು ಉದಾರಿಗಳಾಗುತ್ತೀರೋ ಕಾದಿದ್ದೇನೆ – ಅಶೋಕವರ್ಧನ]

ಕಾಂಡ್ಲವನದ ದೋಣಿಗಟ್ಟೆಯಲ್ಲಿಳಿದ ನಾವು ನಾವಿಕನೊಬ್ಬೊಬ್ಬನ ನೇತೃತ್ವದಲ್ಲಿ, ಸಣ್ಣ ಸಣ್ಣ ತಂಡಗಳಲ್ಲಿ, ಪಾಳುಬಿದ್ದ ಗದ್ದೆಯಂತಹ ಹರಹಿನಲ್ಲಿ, ಕೇವಲ ಸವಕಲು ಜಾಡಿನಲ್ಲಿ ಒಳನಾಡಿನತ್ತ ನಡೆದೆವು. ನಿಂಬೇ ಶರಬತ್, ಸಣ್ಣಪುಟ್ಟ ತಿನಿಸು ಪಾನೀಯಗಳ ಒಂದೆರಡು ಜೋಪಡಿ ಬಿಟ್ಟರೆ ಏನೂ ಮನುಷ್ಯ ರಚನೆಗಳ ಹಾವಳಿ ಅಲ್ಲಿಗೆ ತಲಪಿದಂತಿರಲಿಲ್ಲ. ಮುಂದುವರಿದಂತೆ ಕೃಷಿಯ ವೈಭವ ಒಂದನ್ನು ಕಳೆದು ಪಕ್ಕಾ ನಮ್ಮದೇ ಹಳ್ಳಿಗಳನ್ನು ನೆನಪಿಗೆ ತರುವ ಪುಟ್ಟ ಜನವಸತಿ ಕಾಣಿಸಿತು. ಒಂದೋ ಎರಡೋ ಬಿಡಾರ ಕಂಡ ನೆನಪು. ಆದರೆ ಅವರ ಜೀವನಯಾಪನೆಯ ಪರಿ ಏನೆಂದು ಯೋಚಿಸಲೂ ಪುರುಸೊತ್ತಿಲ್ಲದ ಧಾವಂತ ನಮ್ಮದು. ನಮ್ಮ ಬಿಸಲೇ ಹಳ್ಳಿಯಲ್ಲಿ ಹೀಗೇ ಗದ್ದೆಯೊಂದರ ಕಟ್ಟಪುಣಿಯಲ್ಲಿ (=ದಂಡೆ, ಬದು) ಪುಟ್ಟ ಶಿಖರವೊಂದರ ಗುರಿ ಇಟ್ಟುಕೊಂಡು ಧಾವಿಸುತ್ತಿದ್ದಾಗ ಒಮ್ಮೆಗೆ ಮೆಟ್ಟಿದ ಬಿಸಿ ಆನೆಲದ್ದಿ ನೆನಪಾಯ್ತು. ಮತ್ತೆ ಪ್ರತಿ ಹೆಜ್ಜೆಗೂ ಎದುರಿನ ಕಾಡಿನ ಸಂಚಲನ, ಅಲ್ಲಿಗೆ ಸಹಜವಾದ ಸದ್ದುಗಳು ನಮಗೆ ಗಜಮೂಲದವಿರಬಹುದೇ ಎಂಬ ತವಕ. ಅದು ಬೇಸಗೆಯ ಕೊನೆಯ ಪಾದ. ಸಿಕ್ಕ ವಿಸ್ತಾರ ಪಾತ್ರೆಯ ತೋಡಿನಲ್ಲಿ ಗೊಸರು ಹೆಚ್ಚಾಗಿದ್ದರೂ ತೆಳು ನೀರಿನ ಹರಿವು ಇದ್ದೇ ಇತ್ತು. ಆ ತೋಡಿನುದ್ದಕ್ಕೆ ನಡೆಯುವಲ್ಲಿ ಇನ್ನೂ ಪೂರ್ತಿ ನೀರು ತುಂಬದ ಆನೆಯ ಹೆಜ್ಜೆ ಗುಂಡಿಗಳು. ಇದ್ದಕ್ಕಿದ್ದಂತೆ ಅನತಿ ದೂರದಿಂದ ಮರದ ಗೆಲ್ಲು ಮುರಿದ ಸದ್ದು. ಮುಂಚೂಣಿಯ ಕರಿಯಣ್ಣನ ಹವಾಯ್ ಚಪ್ಪಲಿ ಗೊಸರಿನಂಟಿನಿಂದ ಮೇಲೇಳಲಿಲ್ಲವೋ ಇವನೇ ಮರವಟ್ಟು ಕಾಲೆತ್ತಲಿಲ್ಲವೋ ತಿಳಿಯುವುದರೊಳಗೆ ದಟ್ಟ ಪಿಸುನುಡಿ – ಆನೆ! ಇಡೀ ಸಾಲಿನ ಲಯ ತಪ್ಪಿಹೋಯ್ತು. ಹೌದು ಹಾಗೇ ಇಲ್ಲೂ ಆಯ್ತು. ಒಳನಾಡಿನತ್ತ ಧಾವಿಸುತ್ತಿದ್ದ ಮುಂದಾಳು ಒಮ್ಮೆಲೆ ಹಾವು ಮೆಟ್ಟಿದವನಂತೆ ನಿಂತ! ಇದು ಅಕ್ಷರಶಃ ನಿಜ, ಸಣ್ಣ ತಿದ್ದುಪಡಿಯೊಡನೆ – ಕಟ್ಟುಕಟ್ಟಿನ ಈ ಭಾರೀ ಹಾವು ಸತ್ತುಬಿದ್ದಿತ್ತು. ವಾಸ್ತವವಾಗಿ ಅದೇನೂ ಅಂಥ ದೊಡ್ದ ಸಂಗತಿಯಲ್ಲ. ದ್ವೀಪಸ್ತೋಮದಲ್ಲಿ ಯಾವುದೇ ಆಕ್ರಮಣಕಾರೀ ಪ್ರಾಣಗಳಿಲ್ಲ ಎಂದು ತಿಳಿದಿದ್ದದ್ದಲ್ಲದೆ, ಐದಾರು ದಿನಗಳನ್ನು ಕಳೆದ ಸ್ಥಿತಿಯಲ್ಲಿ ನಮ್ಮ ಮನಸ್ಸೂ ಗಟ್ಟಿಗೊಂಡಿತ್ತು. ಒಮ್ಮೆಗೆ ಹಾವು, ಅದೂ ಭಯಂಕರ ವಿಷಕಾರಿಯೇ ಇರಬಹುದು ಎಂದೆಲ್ಲಾ ತಲೆಯಲ್ಲಿ ಒಮ್ಮೆಗೆ ಮಿಂಚು ಹೊಡೆದಂತಾಯ್ತು ಅಷ್ಟೇ. ಮರುಕ್ಷಣದಲ್ಲಿ ಚೇತರಿಸಿಕೊಂಡು ಮುಂದುವರಿದೆವು.

ಸಣ್ಣ ದಿಬ್ಬ ಸಾಲನ್ನು ಸಮೀಪಿಸುತ್ತಿದ್ದಂತೆ ಜಾಡು ಸಪುರ ಕೊರಕಲಿನಾಳಕ್ಕೆ ಇಳಿಯಿತು. ಆಚೀಚಿನ ಪ್ರಾಕೃತಿಕ ಗೋಡೆಯ ತುಂಬಾ ನೂರಾರು ವರ್ಷಗಳ ನೀರ ಒಸರಿಕೆಯೊಡನೆ ಮೂಡಿದ ಕುಸುರಿ ಶಿಲ್ಪ; ಹನಿ ಹನಿ ಕಳೆದು ಉಳಿದ ತೊಂಗಲು. ಮೇಣದ ಬತ್ತಿಯ ರಸ ಅದರದೇ ದೇಹದುದ್ದಕ್ಕೆ ಹರಿಹರಿಯುತ್ತ ಘನವಾಗುತ್ತ ಚಿತ್ರ ವಿಚಿತ್ರ ಆಕೃತಿಗಳನ್ನು ಮೂಡಿಸಿದ ಹಾಗೇ ಇದು ಎನ್ನಬಹುದೋ ಏನೋ! ಹೆಚ್ಚಾಗಿ ಇಂಥ ರಚನೆಗಳು ನೀರಿನೊಡನೆ ಬಂದ ಸುಣ್ಣದ ಅಂಶ ಶೇಖರಣೆಯಾಗಿ (ರಾತ್ರಿ ಹಗಲಾಗುವುದರೊಳಗಲ್ಲ – ನೂರಾರು ವರ್ಷಗಳ ದೀರ್ಘ ಕಾಲಮಾನದಲ್ಲಿ) ಶೇಖರಣೆಯಾಗಿ ಮೂಡುತ್ತದಂತೆ. ಇವು ನೆಲದತ್ತ ಚಾಚಿಕೊಂಡವನ್ನು stalactites – ಇಳಿತೊಂಗಲು ಎಂದೂ ನೆಲದಲ್ಲಿ ಶೇಖರಣೆಗೊಂಡು ಶಂಖುವಿನಂತೆ ಬೆಳೆದವನ್ನು stalagmites – ನೆಲತೊಂಗಲು ಎಂದೂ ಕರೆಯುತ್ತಾರೆ. (ಹಿಮಾಲಯದಂಥ ಅತಿಶೀತದ ವಲಯಗಳಲ್ಲಿ ಇಂಥವೇ ರಚನೆಗಳು ಕೇವಲ ನೀರು ಘನೀಕರಿಸುವುದರಿಂದಲೇ ಆಗಿರುವುದು ಧಾರಾಳ ಕಾಣಬಹುದು. ಬಹಳ ಜನಪ್ರಿಯ ಉದಾಹರಣೆ ಅಮರನಾಥದ ಶಿವಲಿಂಗ. ಆದರೆ ಅವೆಲ್ಲ ವಾರ್ಷಿಕ ಋತುಮಾನದ ಏರುಪೇರುಗಳಲ್ಲಿ ‘ಉದ್ಭವಿಸಿ’ ‘ಅಂತರ್ಧಾನ’ವಾಗುವ ಗಂಟೆ ದಿನಮಾನದ ರಚನೆಗಳು. ತೊಂಗಲುಗಳ ಗೌರವ ಇವಕ್ಕೆ ಸಲ್ಲುವುದಿಲ್ಲ. ಶಿಲ್ಪ ಕಾರಕ ಶಕ್ತಿಯಲ್ಲಿ ಸೋರುವ ನೀರಷ್ಟೆ ಸಮಾನಗುಣ). ನೋಟಕರ ಕಲ್ಪನಾಶಕ್ತಿಗನುಗುಣವಾಗಿ ರಚನೆಗಳಲ್ಲಿ ದೇವಾಧಿದೇವತೆಗಳಿಂದ ಹಿಡಿದು ಅಸಂಗತ ಕಾವ್ಯದವರೆಗೆ ಏನೆಲ್ಲಾ ಗುರುತಿಸಬಹುದು. ಅಕ್ಕಪಕ್ಕಗಳನ್ನು ಕತ್ತೆತ್ತಿ ನೋಡುವುದೋ ಸಪುರ ಓಣಿಯಲ್ಲಿ ಎದುರಿನಿಂದ ವಾಪಾಸಾಗುತ್ತಿರುವವರ ಮೈ ಒರೆಸದಂತೆ ಸುಧಾರಿಸುವುದೋ ಎನ್ನುವುದರೊಳಗೆ ಗೋಡೆ ಗೋಡೆ ಕೂಡಿ ಗವ್ವನೆ ಗವಿ ತೆರೆದುಕೊಂಡಿತು. ನಾಲ್ಕು ಹೆಜ್ಜೆ ಒಳ ಹೋಗುತ್ತಿದ್ದಂತೆ ಅಲ್ಲಿ ಮಾಡು ಹಿಂದೆಂದೋ ಕುಸಿದು ಗವಾಕ್ಷಿಯನ್ನೇ ತೆರೆದು ಕೊಟ್ಟಿತ್ತು. ಮುಂದೆ ಮಾಡು ತಗ್ಗುತ್ತಾ ಕತ್ತಲು ಗಾಢವಾಗುತ್ತಾ ಬಂದಲ್ಲಿಗೆ ನಾವು ಹಿಮ್ಮುಖರಾಗುವುದು ಅನಿವಾರ್ಯವಾಯ್ತು. ಆನಂದಾ ಇಲ್ಲಿ ಅನಿವಾರ್ಯವಾಗಿ ಎರಡು ಉಪಕಥೆಗಳು.

ಭಾರತದ ಸನ್ನಿವೇಶದಲ್ಲಿ ‘ಪಶ್ಚಿಮಘಟ್ಟ’ ಧಾರಾಳ ಕೇಳುತ್ತೇವೆ. ಹಾಗೇ ಪೂರ್ವಘಟ್ಟವೂ ಒಂದು ಇದೆ (ನಿನಗ್ಗೊತ್ತಿತ್ತಾ?). ನನ್ನ ಎರಡನೇ ಭಾರತ ಬೈಕ್ ಪ್ರವಾಸದಲ್ಲಿ ವಿಶಾಖಪಟ್ಟಣದಿಂದ ನೇರ ಪಶ್ಚಿಮಕ್ಕೆ ಸಾರಿ ಇದರ ಒಂದು ವೈಶಿಷ್ಟ್ಯ ಕಂಡದ್ದನ್ನು ಇಲ್ಲಿ ಜ್ಞಾಪಿಸಿಕೊಳ್ಳದಿರಲಾರೆ. ಈ ವಲಯಗಳಲ್ಲಿ ಭಾರೀ ಕೇಳಿಬರುವ ಹೆಸರು ಅರಕ್ಕು ಕಣಿವೆ, ಬುರ್ರಾಗುಹೆ. ದಕ ಜಿಲ್ಲೆಯ ಯಾವುದೇ ಕಣಿವೆ, ಗುಡ್ಡೆ, ಪದವು (= ಗುಡ್ಡೆ ನೆತ್ತಿಯ ಸಮತಳ ಭೂಮಿ, ಮೈದಾನ) ಕೊಡುವ ದೃಶ್ಯದೆದುರು ಅರಕ್ಕು ನಿವಾಳಿಸಿ ಒಗೆಯಬಹುದು. ನಾಲ್ಕು ಚರುಮುರಿ ದುಕಾನು ಎರಡು ಡಬ್ಬಿ ಹೋಟೆಲುಗಳ ಕೊಳಕಿನ ಅರಕ್ಕು ಕಣಿವೆಗೆ ಸುತ್ತು ಗುಡ್ಡಗಳೇನೋ ಇವೆ. Added attractionಊಂತ ಜಲಪಾತ ಒಂದರ ಉಲ್ಲೇಖವೂ ಇದರೊಡನೆ ಬರುತ್ತದೆ. ಆದರೆ ನೀರು, ಹಸಿರು, ರಚನಾ ವೈಶಿಷ್ಟ್ಯವೇನೂ ಇಲ್ಲದೆ ಅರಕ್ಕು ಕಣಿವೆ ದೊಡ್ಡ ನಿರಾಶೆ. ವ್ಯತಿರಿಕ್ತವಾಗಿ ಅದಕ್ಕೂ ಸ್ವಲ್ಪ ಮೊದಲೆ ಸಿಗುವ ಬುರ್ರಾ ಗುಹೆಗಳು ಮಾತ್ರ ಪರಮಾದ್ಭುತ. ನಮ್ಮ ವಾಹನ ತಂಗುದಾಣದಲ್ಲೇ ಇಲಾಖೆ ಪ್ರವೇಶಶುಲ್ಕ ವಸೂಲಾತಿಯೊಡನೆ (ಬೇಕಾದವರಿಗೆ) ಮಾರ್ಗದರ್ಶಿ, ಬಾಡಿಗೆಗೆ ಟಾರ್ಚುಗಳನ್ನೂ ಒದಗಿಸುತ್ತಿತ್ತು. ಕಾಂಕ್ರೀಟು ಮೆಟ್ಟಿಲುಗಳಲ್ಲಿ ಇಳಿಯುವ ನಮ್ಮನ್ನು ಭಾರೀ ಗುಹೆ ಆವರಿಸಿಬಿಡುತ್ತದೆ. ಎಂಬತ್ತು-ನೂರಡಿ ಎತ್ತರಕ್ಕೆ ಸುಮಾರು ಅಷ್ಟೇ ಅಗಲಕ್ಕೆ ತೆರೆದುಕೊಂಡಿದ್ದರೂ ಯಾವುದೇ ಆಯಕ್ಕೆ ದಕ್ಕದ ಮಹಾದ್ವಾರವದು. ಒಳಗೂ ವರ್ಣಿಸಿ ಮುಗಿಯದ ವಿವಿಧ ಸ್ತರಗಳು, ತಿರುವುಗಳು, ಉಪಗುಹೆಗಳು, ಪೊಳ್ಳು ದಿಬ್ಬಗಳು – ಅದೊಂದು ಮಾಯಾಲೋಕ. ಅಲ್ಲೆಲ್ಲೋ ಮಾಡು ಸಣ್ಣದಾಗಿ ಕಿಂಡಿಬಿದ್ದು ದ್ವಾರದ ಬೆಳಕಿಗೆ ಪೂರಕ ಊರೆಗೋಲು (ಬೆಳಕಿನಕೋಲು) ಕೊಟ್ಟಿದೆ. ಒಳಗೊಳಗೆ ಹೋದಂತೆ ಕಣ್ಣಿಗೆ ತ್ರಾಸವಾಗದಂತೆ ಜೊತೆಗೆ ಪರಿಸರಕ್ಕೆ ಹೊರೆಯಾಗದೆ ಗುಹಾಶಿಲ್ಪವನ್ನು ಎತ್ತಿ ತೋರುವ ವಿದ್ಯುತ್ ದೀಪವ್ಯವಸ್ಥೆ ಇತ್ತು. ಇಲ್ಲಿನ ತೊಂಗಲುಗಳ ಅಗಾಧ ಅಪಾರ ರಚನೆಗಳ ಬಗ್ಗೆ ಹೇಳಹೊರಟರೆ ಅಕ್ಷರಶಃ ಸಾವಿರ ನಾಲಗೆ ಬೇಕು! ಅಲ್ಲಲ್ಲಿ ನೀರು ತೊಟ್ಟಿಕ್ಕುತ್ತಿತ್ತು. ಶೋಧಿಸಿದ ಆದರೆ ಸಾರ್ವಜನಿಕ ಪ್ರವೇಶಕ್ಕೆ ಭದ್ರವಲ್ಲದ, ಶೋಧವೇ ನಡೆಯದ ಹತ್ತಾರು ಒಳಗುಹಾಮುಖಗಳು ತೆರೆದುಕೊಂಡೂ ಇದ್ದವು. ಮುಖ್ಯ ಗುಹೆಯಲ್ಲಿ ಸುಮಾರು ಒಳಗಿನವರೆಗೆ ಪ್ರವಾಸಿಗಳ ಓಡಾಟಕ್ಕೆ ಪುಟ್ಟಪಥ ನಿರ್ಮಿಸಿ, ಕವಲುಗಳಲ್ಲಿ ನುಗ್ಗಿ ಸಾಹಸ ಮಾಡದಂತೆಯೂ ಅವಘಡಕ್ಕೆ ಸಿಲುಕದಂತೆಯೂ ಬೇಲಿ, ನಾಮಫಲಕಗಳ ತಡೆ ಕಟ್ಟಿದ್ದರು. ಪತ್ರಲಹರಿಯ ಓಟವನ್ನು ಬಿಟ್ಟು ಅದರ ವಿವರಗಳನ್ನು ಹುಡುಕಿ ಕೊಡುವ ಸಾಹಸ ಸದ್ಯ ಮಾಡುವುದಿಲ್ಲ. ಅಂದಿನ ಟಿಪ್ಪಣಿಗಳನ್ನು ತೆಗೆದು, ಆಕರಗಳನ್ನು ತೆರೆದು ನಿಖರ ವಿವರಗಳನ್ನು ಅದರ ಮೇಲೆ ನನ್ನ ಭಾವವಿಸ್ತರಣ ಕೊಡುವುದನ್ನು ಮುಂದೆಂದಾದರೂ ಬರವಣಿಗೆಗಿಳಿಯಬಹುದಾದ ನನ್ನ ಭಾರತ ಪ್ರವಾಸ ಕಥನಕ್ಕೆ ಮೀಸಲಿಟ್ಟಿದ್ದೇನೆ. ಹಾಗೇಂತ ಅದೆಂದು ಬರುತ್ತದೆ ಎಂದು ಕೇಳಬೇಡ, ಬಾರದೆಯೂ ಇರಬಹುದು!! ಏನೇ ಇರಲಿ, ಸುತ್ತಾಡಲು, ಒಂದೊಂದು ಹೆಜ್ಜೆಯಲ್ಲೂ ಗಂಟೆಗಟ್ಟಳೆ ಧ್ಯಾನಿಸಲು ಬುರ್ರಾ ನೀಡುವ ಪ್ರೇರಣೆ ಎಂದೂ ಮಾಸದು.

ತೊಂಗಲು, ದೀರ್ಘಕಾಲೀನ ರಚನಾವೈವಿಧ್ಯ ಉಳಿಸಿಕೊಂಡ ಖ್ಯಾತಿಗಳೇನೂ ಇಲ್ಲದಿದ್ದರೂ ನಮ್ಮ ಕರಾವಳಿ ಜಿಲ್ಲೆಗಳಲ್ಲಿ ಪ್ರಾಕೃತಿಕ ಗುಹೆಗಳಿಗೇನೂ ಕೊರತೆಯಿಲ್ಲ. ನೆಲ್ಲಿತೀರ್ಥದ ಕೊಳ, ನೆಲ್ಲಿತಟ್ಟು ತೀರ್ಥದ ಜಲಪಾತ, ಜಾಂಬ್ರಿಯ ಐತಿಹ್ಯ, ಅಂಬರೀಷ ಗುಹೆಯ ಜಾನಪದ, ಕನಕಮಜಲಿನ ಚಾರಿತ್ರಿಕತೆ, ದಂಬೆಗುಡ್ಡೆಯ ಜಲಸಮೃದ್ಧಿ, ಸೂಳೆಪದವಿನ ಬಾವಲಿಸೈನ್ಯ, ಮಂಡೆಕೋಲಿನ ಪಿಲಿಬಾಂಜಾರ, ಸುಳ್ಳಮಲೆ ಮತ್ತು ಗುಗ್ಗುಳಮಾಟೆಗಳ ತೀರ್ಥಸ್ನಾನ, ಪೊಸಡಿಗುಂಪೆಯ ಪಾಂಡವರ ಬಾವಿ ಮತ್ತು ತೀರ್ಥ ವಿಭೂತಿಗುಹೆಗಳು, ಅನಂತಪುರದ ‘ಬಬ್ಯನಿವಾಸ’ ಹೀಗೆ ಪಟ್ಟಿಮಾಡಿದಷ್ಟೂ ಮುಗಿಯದ ಗುಹೆಗಳನ್ನು ನಾನು ತಂಡ ಕಟ್ಟಿ ಈ ವಲಯದಲ್ಲಿ ಶೋಧಿಸಿದ್ದು ನಿನಗೆ ಗೊತ್ತೇ ಇದೆ. ಆದರೆ ಇದ್ದ ಸ್ಥಿತಿಯಲ್ಲೂ ಅವನ್ನು ಗುರುತಿಸಿ, ಉಳಿಸಿಕೊಳ್ಳುವ ಕೆಲಸ ಮಾತ್ರ ಏನೂ ನಡೆದಿಲ್ಲ. ಎಲ್ಲೋ ಕೆಲವಕ್ಕೆ ದೇವಾಲಯಗಳ ಸಂಬಂಧ ಇರುವುದರಿಂದ ತೀರಾ ಸೀಮಿತ ಸಾರ್ವಜನಿಕ ಭೇಟಿ ನಡೆಯುತ್ತದೆ. ಉಳಿದಂತೆ ಕಾಶಿಗೋ ರಾಮೇಶ್ವರಕ್ಕೋ ಭೂಗತ ಮಾರ್ಗದ ಕನಿಷ್ಠ ಗೌರವವೂ ದಕ್ಕದೆ ಬೇಟೆಂii ಕಣವಾಗಿ, ಅಕ್ರಮ ಚಟುವಟಿಕೆಗಳ ತಾಣವಾಗಿ, ಕಸದ ಕುಪ್ಪೆಯಾಗಿ ಪರಿವರ್ತನೆಗೊಂಡಿವೆ. ಗುಹೆಯ ಹೆಸರಿನಲ್ಲಿ ಪ್ರಚಾರ ಗಿಟ್ಟಿಸಿದರೂ ಅದರ ಉಳಿವಿಗೇ ಸಂಚಕಾರ ತರುವ ಅಭಿವೃದ್ಧಿಯ ಕಾಮಗಾರಿಗಳು ನಡೆದಿವೆ.

ಬಂದಂತೆಯೇ ದೋಣಿಯೇರಿ ಭರಟಾಂಗ್ ಸೇರಿದೆವು. ಮುಂದಿನದು ಜೀಪು ಸವಾರಿಯ ದಾರಿ. ದೂರ, ತಗುಲಿದ ಸಮಯ ಇತ್ಯಾದಿ ನೆನಪಿನಿಂದ ದೂರವಾಗಿವೆ ಆದರೆ ಕೊನೆಗೆ ಜೀಪಿಳಿದ ಜಾಗ ಮಾತ್ರ ದಟ್ಟ ಕಾಡಿನ ಎಲ್ಲೂ ಅಲ್ಲದ ಒಂದು ಮೂಲೆ. ಮುಂದಕ್ಕೂ ಅಸ್ಪಷ್ಟ ದಾರಿ ಇತ್ತು ಆದರೆ ವಾಹನ ಸಂಚಾರ ನಿರ್ಬಂಧಿಸಿದ್ದರು. ಅಲ್ಲಿ ನೂರಿನ್ನೂರು ಅಡಿ ಉದ್ದಗಲಕ್ಕೆ ಮರಗಿಡಗಳ ಸುಳಿವಿರದ ಬೋಳು ದಿಬ್ಬ ರಣಗುಡುವ ಬಿಸಿಲಿನಲ್ಲಿ ಹರಡಿಕೊಂಡಿತ್ತು. ಕಾರುಲಾರಿಗಳ ವರ್ಕ್‌ಶಾಪಿನಲ್ಲಿ ಮಡ್ಡಿ ಎಣ್ಣೆ ಕುಡಿದ ಮಣ್ಣಿನ ಹಾಗೆ ನೆಲ ಕರಿ ಕರಿ. ಅದೇ ನಮ್ಮನುಭವಕ್ಕೆ ಪ್ರಥಮವಾಗಿ ಸಿಕ್ಕಿದ್ದ ಪ್ರಾಕೃತಿಕ ವೈಶಿಷ್ಟ್ಯ – Mud Volcano ಅರ್ಥಾತ್ ಕೆಸರ ಬುಗ್ಗೆ! ಅಗ್ನಿಮುಖಿಗಳು ಬರಿಯ ಬೆಂಕಿ ತೋರಿಸಿ, ಲಾವಾ ಹರಿಸುವುದಲ್ಲ. ಸಾಕಷ್ಟು ಹೊಗೆ, ಉಗಿ ಅಬ್ಬರದೊಡನೆ ಕಲ್ಲು ಮಣ್ಣು ಬೂದಿಯನ್ನೂ ಕಕ್ಕುತ್ತವೆ ಎಂದು ಕೇಳಿದ್ದೆವು. ವಾಸ್ತವದಲ್ಲಿ ಇಲ್ಲೂ ಒಂದು ಅಗ್ನಿಮುಖಿ, ತನ್ನೊಳಗುದಿಗೆ ಹಿಂದೆಂದೋ (ಮನುಷ್ಯನ ಆಯುರ್ಮಾನದ ಲೆಕ್ಕ ಹಾಕುವುದೇ ಆದರೆ ಸಾವಿರಾರು ವರ್ಷಗಳ ಹಿಂದೆ!) ಬಾಯಿ ಕಳೆದದ್ದಿರಬೇಕು. ಆದರೆ ಕಾಲಾಂತರದಲ್ಲಿ ಒಳಗಿಂದೊಳಗೇ ಸಾಗರದ ನೀರು, ಮಣ್ಣು ಅದರಲ್ಲಿ ನುಗ್ಗಿ ದಮ್ಮು ಕಟ್ಟಿಸಿರಬೇಕು. ಹಾಗಾಗಿ ಒಳಗಿನ ಒತ್ತಡಕ್ಕೆ ಇಂದು ಹೊರಜಿನುಗುವುದು ಕೇವಲ ಕರಿ ಕರಿ ಕೆಸರು ಮಾತ್ರ. ಸುಮಾರು ನೂರಡಿ ಗುಣಿಸು ನೂರಡಿ ಜಾಗಕ್ಕೆ ರಕ್ಷಣಾ ಬೇಲಿ ಹಾಕಿ ಕೆಸರಕಣ್ಣುಗಳನ್ನು ಜನ ಸಮೀಪಿಸದಂತೆ ವ್ಯವಸ್ಥೆ ಮಾಡಿದ್ದಾರೆ. ಅತ್ಯುತ್ಸಾಹಿಗಳು ಬೇಲಿ ಹಾರದಂತೆ, ಕಲ್ಲು ಕಸ ಎಸೆದು ಪ್ರಾಕೃತಿಕ ಸ್ಥಿತಿಯನ್ನು ಕೆಡಿಸದಂತೆ (ಯಾರಿಗ್ಗೊತ್ತು, ಅಲ್ಲಿ ನೆಲಕುಸಿದು ಜೀವನಷ್ಟವಾಗುವ ಸಾಧ್ಯತೆಯೂ ಇರಬಹುದು) ಒಂದು ಪಾರದ ಜನವನ್ನೂ (ಹೆಂಗಸು) ಇಟ್ಟಿದ್ದಾರೆ. ಆವರಣದ ಒಳಗೆ ಹತ್ತಿಪ್ಪತ್ತಡಿ ಅಂತರದಲ್ಲಿ, ಒಂದೆರಡು ಬೆರಳ ಗಾತ್ರದ ಅಸ್ಪಷ್ಟ ತೂತದಿಂದ ತುಸುವೇ ಉಗಿ ಸುಳಿದಂತೆ, ಗುಳ್ಳೆ ಸಿಡಿದಂತೆ, ಗೋಬರ್ ಗ್ಯಾಸ್ ಪ್ಲಾಂಟಿನ ಕೊನೆಯಲ್ಲಿ ಗ್ಯಾಸ್ ಕಳೆದುಳಿದ ಸಗಣಿಪಾಕ ಜಿನುಗಿದಂತೆ, ಸಣ್ಣ ಸಣ್ಣ ಬುದ್ಬುದಿಕೆಯಲ್ಲೂ ನಮ್ಮ ಪುಟ್ಟ ಬೊಗಸೆ ತುಂಬಬಹುದಾದಷ್ಟೇ ಕರಿ ಮಡ್ಡಿ ಹೊರ ಉಕ್ಕುತ್ತಿತ್ತು. ಮೊಂಬತ್ತಿಯ ನೀರಿನಂತೆ ವಿವಿಧ ಧಾರೆಗಳಲ್ಲಿ ಇಳಿದಿಳಿದು ಸ್ಥಿರವಾಗುತ್ತಿತ್ತು. ನನಗೆ ಹಿಂದೆ ಊರಲ್ಲಿ, ನಿಖರವಾಗಿ ಹೇಳುವುದಾದರೆ ಬೆಟ್ಟಂಪಾಡಿಯ ಬೆಂದ್ರ್ ತೀರ್ಥ (= ಬಿಸಿನೀರ ಕೆರೆ) – ಇದರದ್ದೇ ಇನ್ನೊಂದು ರೂಪವನ್ನು ನೋಡಿದ್ದು, ಕೆರೆಗಿಳಿದು ಅನುಭವಿಸಿದ್ದು ನೆನಪಿಗೆ ಬಂತು. ಬೆಂದ್ರ್ ತೀರ್ಥದಷ್ಟಲ್ಲದಿದ್ದರೂ ಇಲ್ಲಿನ ಕೆಸರು ಸಾಕಷ್ಟು ಬಿಸಿಯಿತ್ತು, ಆಗೀಗ ಸಣ್ಣದಾಗಿ ಹಬೆಯಾಡುತ್ತಲೂ ಇತ್ತು. ಕುದುರೆಮುಖ ಗಣಿಗಾರಿಕೆಯ ‘ಅದಿರಿನ ಪಾಯಸ’ (slurry) ಕೊಳವೆ ಒಡೆದು ಸ್ಫಟಿಕ ನಿರ್ಮಲ ಝರಿಗಳನ್ನು, ಹಸಿರುಬಿಟ್ಟು ಇನ್ನೊಂದು ವರ್ಣವಿಲ್ಲ ಎನ್ನುವಂತಿದ್ದ ಪಶ್ಚಿಮ ಘಟ್ಟದ ಓರೆಯ ಕಾಡನ್ನೂ ವ್ಯಾಪಿಸಿದಂತೆ ಇದು ನಿರಂತರ ಹರಡುತ್ತಲಿತ್ತು. ತನ್ನ ಬಾಲವನ್ನೇ ಸಿಂಬಿಸುತ್ತಿ ಉನ್ನತಾಸನದಲ್ಲಿ ಕುಳಿತ ಕಪಿವೀರನಂತೆ ಮೆರೆದ ಕೆಸರಮುಖಿಯನ್ನು ಕುತೂಹಲ, ಭಯಮಿಶ್ರಿತ ಭಾವದಿಂದ ಬೇಲಿಗುಂಟ ಪ್ರದಕ್ಷಿಣೆ ಹೊಡೆದೆವು. ಉದ್ದಕ್ಕೂ ವಿಜ್ಞಾನದ ಮಿತಿಯಲ್ಲಿ ಅದು ಆ ಕ್ಷಣಕ್ಕೆ ವಿಶ್ರಾಂತವೆಂದು ಗಣಿಸಲ್ಪಟ್ಟರೂ ಎಂದೂ ಅಬ್ಬರಿಸಬಹುದು, ನಿರ್ಭಾವದ ಕೆಸರತೆರೆಯನ್ನು ಕಿತ್ತೊಗೆದು, ರಾಳ ಹೊಡೆದು ದೈತ್ಯವೇಷದಲ್ಲಿ ಧೀಂಗಣಿಸಬಹುದು ಎನ್ನುವ ಭಯ ತಲೆಯಲ್ಲಿ ತಿರುಗುತ್ತಲೇ ಇದ್ದದ್ದನ್ನು ಹೇಳದಿರಲಾರೆ.

ಕೆಸರಮುಖಿಯ ದಿಬ್ಬದ ತಪ್ಪಲಿನಲ್ಲಿ ಇಲಾಖೆ ಅಂಡಮಾನಿಗರ ಅಟ್ಟಳಿಗೆ ಮನೆಯ ರೂಪದಲ್ಲಿ ಒಂದು ನೆರಳಾಸರೆ ಕಲ್ಪಿಸಿತ್ತು. ನಮ್ಮನ್ನು ಅಲ್ಲಿಗೆ ತಂದಿದ್ದ ಜೀಪು ದಿನಕ್ಕೆ ಹತ್ತೆಂಟು ಟ್ರಿಪ್ ಮಾಡುತ್ತದಂತೆ. ಹಾಗಾಗಿ ಜೀಪಿನ ಸಮಯ ಕಾಯುವ ನೆಪದಲ್ಲಿ ಹತ್ತು ಮಿನಿಟು ಅಟ್ಟಳಿಗೆಯಲ್ಲಿ ವಿಶ್ರಮಿಸಿ ಭರಟಾಂಗಿಗೆ ಮರಳಿದೆವು. ಅಲ್ಲೊಂದು ಮನೆಯಲ್ಲಿ ಊಟದ ವ್ಯವಸ್ಥೆ ಮಾಡಿದ್ದರು. ಷಡ್ರಸಗಳ ವೈಭವ ಇರಲಿಲ್ಲವಾದರೂ ಹೊಟ್ಟೆ ತುಂಬಿಸುವ ಮಟ್ಟದಲ್ಲಿ ಗುಣ ಶುಚಿ ತೃಪ್ತಿಕರವಾಗಿತ್ತು. ಎರಡು ಮೂರು ಬಸ್ಸುಗಳ ಜನ (ಜೀಪಿನ) ಕಂತು ಕಂತಿನಲ್ಲಿ ಬರುತ್ತಿದ್ದಂತೆ ಮನೆಯವರು ಸೀಮಿತ ಜಾಗದಲ್ಲಿ ಊಟ ಹಾಕಿ ಹಾಕಿ ಜನರನ್ನು ಹೊರ ‘ನೂಕು’ತ್ತಿದ್ದರು. ಹೊರಗೆ ಒಂದು ತುಣುಕೂ ನೆರಳಿಲ್ಲದೆ ಬಿಸಿಲು ತಲೆ ತೂತಾಗುವಷ್ಟು ಖಾರವಿತ್ತು. ಅಲ್ಲೇ ನೂರಿನ್ನೂರು ಮೀಟರ್ ದೂರದ ದೋಣಿಗಟ್ಟೆಗೆ ನಡೆದು ಹೋಗಿ, ಇದ್ದ ಒಂದು ಜೋಪಡಿಯಂಥಾ ತಂಗುದಾಣ, ಮೂರು ಪದರದಲ್ಲಿ ಕಿತ್ತು ಬರುತ್ತಿದ್ದ ಪೈಂಟ್ ಬಡುಕೊಂಡ ಹೋಟೆಲಿಗೆಲ್ಲಾ (ನೆಪಕ್ಕೆ ಚಾ ಕುಡಿದೆವು) ಹಂಚಿಕೊಂಡು ದೋಣಿ ಕಾದೆವು. ಉಪಾದ್ಯರಿಗೆ ಅಂಚೆ ಡಬ್ಬಿಯೊಂದು ಕಂಡು ಹಳೆ ಸೀಕು ಮರುಕಳಿಸಿತು. “ಕಾಂಬ, ಇಲ್ಲಿಂದ ಸಾಲಿಗ್ರಾಮಕ್ಕೆ ಎಷ್ಟ್ ದಿನ ತೆಕ್ಕೊಂತಾ” ಎಂದು ಹೇಳುತ್ತಾ ತಮ್ಮ ಮನೆ ವಿಳಾಸ ಬರೆದ ಖಾಲಿ ಕಾರ್ಡೊಂದನ್ನು ಪೋಸ್ಟ್ ಮಾಡಿದರು. ಎಲ್ಲ ಸರಿ, ಖಾಲಿ ಕಳಿಸಿದ್ದು ಯಾಕೇಂತ ನನ್ನ ಆಕ್ಷೇಪ! ಬಂದ ಲಕ್ಕೋಟೆಯ ಬದಿ ಕತ್ತರಿಸಿ, ಒಳ ಹೊರಗೆ ಮಾಡಿ ಬೇಕಾದ್ದು ಬೇಡದ್ದೆಲ್ಲಾ ಟಿಪ್ಪಣಿ ಮಾಡಿ, ಓದ್ತಾರೋ ಬಿಡ್ತಾರೋ ಪಾವತಿ ಕಾಯುವ ನನ್ನ ಪ್ರಕಾಶಕ ಮಿತ್ರರನ್ನೆಲ್ಲ ಗೋಳುಹೊಯ್ಕೊಳ್ಳುವ ನನಗೆ ಐವತ್ತು ಪೈಸೆಯ ಕಾರ್ಡು ಖಾಲಿ ಹೋದದ್ದು ಹೇಗೆ ಒಪ್ಪಿಗೆಯಾದೀತು! ಅಂದು ಬ್ಲೇರಿಗೆ ಮರಳುವ ದಾರಿಯನ್ನು ದೋಣಿ, ಬಸ್ಸುಗಳಲ್ಲಿ ಮತ್ತೆ ಇಂಚಿಂಚೂ ಹೊಸತೆಂಬಂತೆ ಕಣ್ತುಂಬಿಕೊಂಡರೂ ಇಲ್ಲಿ ದಾಖಲಿಸುವ ವಿಶೇಷ ಏನೂ ಇರಲಿಲ್ಲ. ಅಪರಾಹ್ನ ಇನ್ನೂ ಸಾಕಷ್ಟು ಉಳಿದಿರುವಂತೇ ಬ್ಲೇರ್ ತಲಪಿದೆವು.

ಬಸ್ಸಿಳಿದಲ್ಲಿ ಜಲಸೈನ್ಯದವರದೊಂದು ಮ್ಯೂಸಿಯಂ ಇತ್ತು. ಅದಕ್ಕೊಂದಿಷ್ಟು ಕಾಣಿಕೆ ಕೊಟ್ಟು ನೋಡಿದೆವು. ಸಮೃದ್ಧ ಮೀನ್ಮನೆ (aquarium) ಮುಖ್ಯವಾಗಿ ನಿರೀಕ್ಷಿಸಿದ್ದ ನಮಗೆ ನಿರಾಶೆಯೇ ಆಯ್ತು. ಭಾರೀ ಮೀನುಗಳ ಒಂದೆರಡು ಮೃದ್ವಸ್ಥಿ, ಆ ವಲಯಗಳಲ್ಲಿ ಸಾಮಾನ್ಯವಾಗಿ ಕಾಣುವ ಬಹುರೂಪೀ ಹವಳದ ರಚನೆಗಳು ಮತ್ತೆ ಬೋರ್ಡು ತುಂಬಾ ಬರವಣಿಗೆ ಕಪ್ಪು ಬಿಳುಪಿನ ಚಿತ್ರಗಳು. ಪುಸ್ತಕ ಸೀಡೀಗಳ ಮಾರಾಟ ಮಳಿಗೆಯೂ ಒಂದು ಹರಕೆ ಸಂದಾಯಕ್ಕೆ ಇತ್ತು. ಅವರದೇ ಪಟ್ಟಿಯನ್ನು ತಲಾಶ್ ಮಾಡಿ ನಿರೇನ್ ಬಯಸಿದ ಸೀಡೀ ಒಂದೂ ಅಲ್ಲಿರಲಿಲ್ಲ. ಇಲಾಖೆಯ ಬಿಲ್ವಿದ್ಯಾ ಪರಿಣತಿಗೆ ಮ್ಯೂಸಿಯಂ ಒಂದು ಖಾಯಂ ಸಾಕ್ಷಿ ಎಂದುಕೊಂಡು ಹೀಗೆ ನುಗ್ಗಿ ಹಾಗೆ ಹೊರಟೂ ಬಂದೆವು. ಅನ್ನಪೂರ್ಣೆಯಲ್ಲಿ ಹೊಟ್ಟೆ ಪೂರ್ಣರಾಗಿ ಕೋಣೆ ಸೇರಿಕೊಂಡೆವು.

ಬ್ಲೇರ್ ದ್ವೀಪ ಮಹಾಬಂಧೀಖಾನೇ ಪ್ರಧಾನವಾಗಿ ಆಡಳಿತ ಕೇಂದ್ರವಾಗಿತ್ತು. ಅಂದರೆ ಅಲ್ಲಿ ಆಳುವ ವರ್ಗಕ್ಕೆ (ಬ್ರಿಟಿಷರು) ಕೌಟುಂಬಿಕ ವಿರಾಮ ವಿಹಾರದ ಖಾಸಗಿತನಕ್ಕೆ ಅವಕಾಶಗಳು ಸಾಲದನ್ನಿಸಿರಬೇಕು. ಅನುಕೂಲಕ್ಕೆ ಒದಗಿದ ದ್ವೀಪ ರಾಸ್ (ಬಹುಶಃ ನಿರ್ವಸಿತ ದ್ವೀಪವನ್ನು ನಾಗರಿಕ ಮಾಡಿದ ಅಧಿಕಾರಿಯ ಹೆಸರಿರಬೇಕು). ಬ್ಲೇರಿನಿಂದ ಮಂದಜಲಯಾನದಲ್ಲೂ ಹತ್ತೇ ಮಿನಿಟಿನ ದೂರ, ಯಾವುದೇ ತುರ್ತು ಪರಿಸ್ಥಿತಿಗೆ ‘ಕಣ್ಣಳವಿಯಲ್ಲೇ’ ಒದಗುವ ನೆಲವೆಂದೇ ರಾಸ್ ಅಭಿವೃದ್ಧಿಗೊಂಡಿರಬೇಕು. ಅಲ್ಲಿನ ನೆಲದ ಪ್ರತಿ ಅಂಗುಲಂಗುಲದ ರಕ್ಷಣೆ, ವಸತಿ, ವಿಹಾರ ರಚನೆಗಳೆಲ್ಲ ಸೌಕರ್ಯಗಳೆಲ್ಲ ಉನ್ನತ ದರ್ಜೆಯವು. ಆ ನೆಲದ ಮತ್ತು ಜನಗಳ ಕಾವಲು, ಚಾಕರಿಗಾಗಿದ್ದವರಿಗೆ ತಾತ್ಕಾಲಿಕ ವಸತಿಯ ವ್ಯವಸ್ಥೆಯಿದ್ದಿರಬಹುದಾದರೂ ಅವರ ಮುಖ್ಯ ನೆಲೆಯನ್ನು (ಮನೆ, ಹೆಂಡತಿ ಮಕ್ಕಳು ಇತ್ಯಾದಿ) ಬ್ಲೇರ್ ದ್ವೀಪದಲ್ಲೇ ಉಳಿಸಿದ್ದರಿಂದ ಸ್ವಾತಂತ್ರ್ಯೋತ್ತರದಲ್ಲಿ ರಾಸ್ ಅನಾಥವಾಗಿರಬೇಕು. ಅದಕ್ಕೂ ಹೆಚ್ಚಿಗೆ ಹೊಸ ಜಮಾನಾದ ದೇಶಪ್ರೇಮದಲ್ಲಿ ತಿರಸ್ಕಾರಕ್ಕೊಳಗಾಗಿರಬೇಕು. ಮುಂದೆಂದೋ ‘ಹಳತನ್ನು ಪ್ರದರ್ಶಿಸುವಲ್ಲೂ’ ಹಣವಿದೆ – ಅರ್ಥವಾಗಲಿಲ್ವಾ, ಪ್ರವಾಸೋದ್ಯಮದ ಹೆಸರಿನಲ್ಲಿ ಆಂಶಿಕವಾಗಿ ಜೀರ್ಣೋದ್ಧಾರಗೊಂಡು ನೋಡಲೇಬೇಕಾದ ಐಟಂ ಆಗಿದೆ! ಸರಿ, ಬ್ಲೇರ್ ವಾಸದ ಕೊನೆಯ ದಿನವನ್ನು ಅದಕ್ಕೇ ಮೀಸಲಿಟ್ಟಿದ್ದೆವು. ಭಾರಾಟಾಂಗ್ ಪ್ರವಾಸದ ಜಡ ಮರುಬೆಳಗ್ಗೆ ಎಷ್ಟು ಎಳೆದರೂ ಆರು ಗಂಟೆಗೂ ಮುನ್ನ ನಮ್ಮನ್ನು ಸ್ನಾನಾದಿ ಪ್ರಾತರ್ವಿಧಿಗಳನ್ನು ಮುಗಿಸಿ ಅನ್ನಪೂರ್ಣೆಯ ಎದುರು ಇಡ್ಲಿ ವಡೆಯ ಪ್ರಸಾದಕ್ಕೆಗೆ ಧ್ಯಾನ ಮಾಡಿಸಿತು. ಅದು ದಕ್ಕಿದ ಮೇಲೆ ನಿದ್ರಿಸಿದ್ದ ಪೇಟೆಯುದ್ದಕ್ಕೆ ನಡೆದೇ ದೋಣಿಗಟ್ಟೆ ಸೇರಿದರೂ ಮೊದಲ ದೋಣಿಗೆ ಸುಮಾರು ಒಂದೂವರೆ ಗಂಟೆ ಚುರುಗುಟ್ಟುವ ಬಿಸಿಲಿನಲ್ಲಿ ಕಾಯಬೇಕಾಯ್ತು. ಅಲ್ಲಿ ಕೆಲವು ಹೊಸಯುಗದ ಯುದ್ಧವೀರರ ಗೋರಿಕಲ್ಲುಗಳು (ಬ್ರಿಟಿಷರದ್ದಲ್ಲ) ವೈಭವೋಪೇತವಾಗಿ ನೆಲ ಆಕ್ರಮಿಸಿದ್ದವು. ಹಾಗೆ ಮೂರಡಿ ಎತ್ತರ, ಹದಿನೈದಿಪ್ಪತ್ತಡಿ ಚಚ್ಚೌಕಕ್ಕೆ (ಕನ್ನಡಿಯಂತೆ ಪಾಲಿಷ್‌ಗೊಂಡ) ವ್ಯಾಪಿಸಿದ್ದ ಕಟ್ಟೆಯೊಂದರ ಕೇಂದ್ರದಲ್ಲಿ ನಿಂತಿದ್ದ ಸ್ಮಾರಕ ಸ್ತಂಭದ ಮರೆಯ ತುಣುಕು ನೆರಳಿನಲ್ಲಿ ನಾವು ಸುಖ ಕಂಡದ್ದನ್ನು ನೆನೆಸುವಾಗ ನಗುವುದೋ ಅಳುವುದೋ ನೀನೇ ಹೇಳು. ಒಂದೇ ಭಾರತದ ಅಪಕಲ್ಪನೆಯಲ್ಲಿ ದ್ವೀಪಸ್ತೋಮದ ನಿಜದ ಹಗಲು ರಾತ್ರಿಯನ್ನು ಅನುಸರಿಸುವ ಆಡಳಿತ ನಮ್ಮಲ್ಲಿ ಇಲ್ಲದಿರುವುದೇ ಈ ಸಮಯಹಾಳುತನಕ್ಕೆ ಮುಖ್ಯ ಕಾರಣವಿರಬಹುದು. (ನಿನ್ನ ಅಮೆರಿಕಾದಲ್ಲಿ ನಾಲ್ಕೈದು time zones ಇದ್ದರೂ ಐಕ್ಯಮತ್ಯಕ್ಕೆ ಕೊರತೆ ಬಂದಿಲ್ಲವೆಂದು ಕೇಳಿದ್ದೇನೆ.)

ರಾಸ್ ದ್ವೀಪಕ್ಕೆ ಕೊಳಕಟೆ ದೋಣಿಗಟ್ಟೆ ಇಲ್ಲ, ಕೆಂಪುಗಂಬಳಿ ಹಾಸಿದ ನಡೆಮಡಿಯ ಸ್ವಾಗತ ಕಛೇರಿಯೇ ಇದೆ ಎಂದು ಕಂಡಾಗ ನಿಜಕ್ಕೂ ಹೆದರಿಕೆಯಾಯ್ತು. ಇನ್ನೆಲ್ಲಿ ಪರಂಗಿಯವ ಎದುರುಗೊಂಡು ಕೊಳ್ಕಟೆ ಚಡ್ಡಿ, ಹರ್ಕಟೆ ಚಪ್ಲಿಯಲ್ಲಿದ್ದ ನಮ್ಮ ಉಪಾದ್ಯರನ್ನು ಅನಾಮತ್ತಾಗಿ ಎತ್ತಿ…, ಇತಿಹಾಸದ ಪುನರಾವರ್ತನೆಯಾಗುತ್ತದೋ (ಈಚೆಗಲ್ವಾ ನಮ್ಮ ವಿಪರೀತ ಬುದ್ಧಿಯ ಅಂತಾರಾಷ್ಟ್ರೀಯ ಕಲಾವಿದ ಎಂ ಎಫ್ ಹುಸೇನ್ ಲಂಡನಿನ ಪ್ರತಿಷ್ಠಿತ ಕ್ಲಬ್ಬಿಗೆ ಆಹ್ವಾನಿತನಾದರೂ ಚಪ್ಲಿಯಲ್ಲಿ ಬಂದದ್ದಕ್ಕೆ ತಿರಸ್ಕೃತನಾದ್ದು?) ಎಂದು ಹೃದಯ ತಲ್ಲಣಿಸಿತು. ಸೂಟುಬೂಟಿನವರೇ ಎದುರುಗೊಂಡರೂ (ದೇಶೀಯರೇ!) ಅದು ಕೇವಲ ಟಿಕೆಟ್ ಚೆಕ್ ಮಾಡಲು ಮತ್ತು ಅಲ್ಲಿದ್ದ ಅಧಿಕೃತ ತಿನಿಸುಗಟ್ಟೆಯ ದುಬಾರಿ ತಿನಿಸುಗಳಿಗೆ ಗಿಲೀಟು ಹಚ್ಚುವ ಕ್ರಮ ಎಂದು ತಿಳಿದು ಮನಸ್ಸು ಹಗುರಾಯ್ತು. ಮುಂದೆ ನಾವು ಮುಕ್ತರು; ಅಪ್ಪಟ ದೇಶೀ ಅವ್ಯವಸ್ಥೆಯ ಬಳಕೆದಾರರು! ಬ್ರಿಟಿಷರು ಆ ದ್ವೀಪದಲ್ಲೊಂದು ಸಣ್ಣ ಪ್ರಾಣಿ ಸಂಗ್ರಹಾಲಯ ನಡೆಸಿದ್ದರಂತೆ. ಮುಂದೆ ಅದನ್ನು ಕೇಳುವವರಿಲ್ಲದೆ ಜಿಂಕೆಗಳನ್ನುಳಿದು ಎಲ್ಲವೂ ನಶಿಸಿದವಂತೆ. ಬಂಧನ ಹರಿದು ದ್ವೀಪದೊಳಗೆ ಸ್ವತಂತ್ರವಾದ ಜಿಂಕೆಗಳು ಅರೆ-ವನ್ಯವಾಗಿ ಇಂದಿಗೂ ಉಳಿದಿರುವುದು ನಮಗೆ ಧಾರಾಳ ನೋಡಸಿಕ್ಕಿತು. ದ್ವೀಪ ಸುತ್ತಿ ಮರಳುವಾಗ ಆ ಜಿಂಕೆಗಳು ಪ್ರವಾಸಿಯ ಕೈ ತುತ್ತಿಗೆ ಕತ್ತು ಚಾಚುವುದೂ ಕಂಡಾಗ ಬಹುಶಃ ಇಂದಿನ ಅಭಿವೃದ್ಧಿಯ ಅಲೆಯಲ್ಲಿ ಅವಕ್ಕೆ ಆಡಳಿತವೇ ಸೊಪ್ಪು ನೀರಿನ ವ್ಯವಸ್ಥೆ ಮಾಡಿರಬೇಕು ಎಂದುಕೊಂಡೆವು (ಕಡಿಕೆ ಕಟ್ಟಿ, ಭತ್ತ ಅಕ್ಕಿ ತುಂಬಿಸಿಕೊಂಡು ಊಟ ಮಾಡುತ್ತಿದ್ದ ನಮ್ಮ ಮೇಲೆ ಕೃಪೆದೋರಿ ಸರಕಾರ ರೇಷನ್ ಅಂಗಡಿ ಒದಗಿಸಲಿಲ್ಲವೇ ಹಾಗೆ). ಅಯ್ಯೋ ಬಿಡು, ಇನ್ನು ಹೀಗೇ ಹೆಚ್ಚು ನಾನು ಬರೆಯುತ್ತಾ ಹೋಗಿ ನಾಳೆ ಬೂಕರ್ರೋ ಆಸ್ಕರ್ರೋ ನನ್ನ ಮೇಲೆ ಮುರ್ಕೊಂಡು ಬಿದ್ದೀತು. ಅನಂತರ ದೇಶಭಕ್ತಿಯನ್ನು ಗುತ್ತಿಗೆ ತೆಗೆದುಕೊಂಡವರು ಗುದ್ಧಿವಾದ ಹೇಳಲು ಬಂದಾರು.

ಹಳಗಾಲದ ಈಜುಕೊಳ ತುಸುವೇ ಜೀರ್ಣೋದ್ಧಾರಗೊಂಡಂತಿತ್ತು. ಹಿಂದಿನ ಎಂಥದ್ದೋ ಒಂದು ಕಟ್ಟಡ, ತುಸುವೇ ಜೀರ್ಣೋದ್ಧಾರಗೊಂಡು (ನಾಲ್ಕೆಂಟು ಪ್ರೇಕ್ಷಕರು ಸಿಕ್ಕರೂ) ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಜ್ಜುಗೊಂಡಿತ್ತು. ಚಿತ್ರವನ್ನು ನಾವು ಸ್ವಲ್ಪ ಅನುಭವಿಸಿ ಹೊರನಡೆದೆವು. ಪ್ರವಾಸಿಗಳು ಸಾಕಷ್ಟು ಬಂದರೂ ಆ ಸಣ್ಣ ಸಿನಿಮಾ ಮಂದಿರ ಯಾಕೆ ನಿರ್ವಸಿತ ಕಳೆ, ಕೊಳೆ ಹೊಂದಿರಬಹುದು ಎನ್ನುವುದಕ್ಕೆ ಸಾಕ್ಷಿಯಾಯಿತು ಆ ಸಾಕ್ಷ್ಯಚಿತ್ರ. (ಈಚೆಗಿನ ಅಭಯನ ಅನುಭವದ ಬೆಳಕಿನಲ್ಲಿ ವಿಶ್ಲೇಷಿಸುವುದೇ ಆದರೆ ಚಿತ್ರ ಹೇಗಿದೆ ಎನ್ನುವುದಕ್ಕಿಂತ ಯಾರದ್ದಿದೆ ಎಂದೂ ನೋಡಬೇಕೋ ಏನೋ). ಉಳಿದಂತೆ ಉಪ್ಪು ನೀರಿನಿಂದ ಕುಡಿಯುವ ನೀರು ತಯಾರಿಸುವ ಘಟಕ, ಅಚ್ಚುಮನೆ, ದ್ವೀಪದ ಅತ್ಯುನ್ನತ ಕೇಂದ್ರದಲ್ಲಿ ಭವ್ಯಗಾಗಿ ರಚಿಸಿದ್ದ ಇಗರ್ಜಿ, ಸೈನಿಕರ ವಸತಿ ಸಾಲು ಎಲ್ಲಾ ವಾತಾವರಣದ ಆಘಾತದಲ್ಲಿ ಶಿಥಿಲವಾಗಿ ಆಲದ ಜಾತಿಯ ಮರಗಳ ಆಕ್ರಮಣದಲ್ಲಿ ಮತ್ತಷ್ಟು ಗತಿಗೆಟ್ಟಿವೆ. ಆ ಬೀಳಲು, ಬೇರುಗಳ ಹೆಣಿಗೆಯಲ್ಲಿ ಗೋಡೆ, ಗೋಪುರಗಳ ದೊಡ್ಡ ದೊಡ್ಡ ಭಾಗಗಳು ಕಳಚಿಯೂ ಬಿದ್ದುಹೋಗಲಾಗದ ಸ್ಥಿತಿಯಲ್ಲಿ ನಿಂತಿರುವ ಅದ್ಭುತ ಪ್ರಾಕೃತಿಕ ಸತ್ಯ ರೋಮಾಂಚನವುಂಟು ಮಾಡುತ್ತದೆ. ಜಗತ್ತಿನಲ್ಲಿ ಅತ್ಯಂತ ದೊಡ್ಡ ಬೌದ್ಧ ದೇವಾಲಯ ಸಂಕೀರ್ಣವೆನ್ನಿಸಿರುವ ಇಂಡೋನೇಶಿಯಾದ ಬೋರಾಬುದರ್ ಹೀಗೇ ವನ್ಯದ ತೆಕ್ಕೆಗೆ ಸಿಲುಕಿರುವಂತೆ ಪುನಃಶೋಧಗೊಂಡಾಗಿನ ಚಿತ್ರಗಳು ನೆನಪಿಗೆ ಬಂತು. ಬೋರಾಬುದರ್‌ನಲ್ಲೋ ಅಜಂತಾದಂತಲ್ಲೋ ಸಂಸ್ಕೃತಿಯ ಒಂದು ಮಹತ್ತರ ಕುರುಹು ನಶಿಸಿ ಹೋಗುತ್ತದೆ ಎನ್ನುವ ಒತ್ತಡದಲ್ಲಿ ಜೀರ್ಣೋದ್ಧಾರ ನಡೆದಿದೆ, ಸಹಜವಾಗಿ ಪ್ರವಾಸೀ ಆಕರ್ಷಣೆ ಹೆಚ್ಚುತ್ತಲೇ ಇದೆ. ಆದರೆ ಇಲ್ಲಿ ಮೂಲದಲ್ಲಿ ಭಾರೀ ವೈಶಿಷ್ಟ್ಯಪೂರ್ಣ ರಚನೆಗಳೇನೂ ಇರಲಿಲ್ಲವಾದ್ದರಿಂದ ಸದ್ಯದ ಪ್ರಾಕೃತಿಕ ಪುನರುತ್ಥಾನವನ್ನೇ ಮುಂದುವರಿಸುವುದು ಪ್ರವಾಸೀ ಆಕರ್ಷಣೆಯ ದೃಷ್ಟಿಯಿಂದಲೂ ವೆಚ್ಚದ ದೃಷ್ಟಿಯಿಂದಲೂ ಹೆಚ್ಚು ನ್ಯಾಯ. ಆದರೆ ಈಗಾಗಲೇ ಇಲಾಖೆಗಳು ಇಲ್ಲಿ ಆಡಿರುವ (ಸದ್ಯಕ್ಕೆ ಸಣ್ಣದೇ) ಆಟಗಳನ್ನು ನೋಡುವಾಗ ಬೇಸರ ಆವರಿಸಿಕೊಳ್ಳುತ್ತದೆ. ನಾವಲ್ಲಿದ್ದಷ್ಟೂ ಹೊತ್ತು ಎಲ್ಲೋ ಮೂಲೆಯಿಂದ ವಿದ್ಯುಜ್ಜನಕವೋ ಕುಡಿ ನೀರ ಪಂಪೋ ಇಡೀ ದ್ವೀಪವನ್ನು ನಡುಗಿಸುವಂತೆ ಬೊಬ್ಬಿರಿಯುತ್ತಿದ್ದದ್ದು ಆ ಪರಿಸರಕ್ಕೆ ಮಾಡಿದ ಅವಮಾನ. ದ್ವೀಪಕ್ಕೆ ಪ್ರವಾಸಿಗಳು ಬರುವ ದಿಕ್ಕಿನಲ್ಲೇ ರಚಿಸಿರುವ ಭಾರೀ ಕಾಂಕ್ರೀಟ್ ಕಟ್ಟಡ (ಮ್ಯೂಸಿಯಂ ಇರಬೇಕು, ಅಂದು ರಜಾದಿನವಿದ್ದಿರಬೇಕು) ಪ್ರಾಚ್ಯ ಸೌಂದರ್ಯ ಗ್ರಹಿಸುವ ಕಣ್ಣುಗಳಿಗೆ ಕಿಸರು. ಇಂದಿಗೂ ದ್ವೀಪದ ನೀರ ಅಗತ್ಯಗಳನ್ನು ಪೂರೈಸುತ್ತಿರುವ ಹಳೆಯ ಮಳೆನೀರ ಸಂಗ್ರಹಕ್ಕಿದ್ದ ಕೆರೆ ತೀರಾ ದುಸ್ಥಿಯಲ್ಲಿದೆ, ದ್ವೀಪದ ಹಿಮ್ಮೈಗೆ ಬಂಗಾಳಕೊಲ್ಲಿಯೇ ತೆರೆದುಕೊಂಡಂತಿದೆ. ಅಲ್ಲೂ ಒಳಭಾಗದಲ್ಲೂ ರಚಿತವಾದ ಗೋಡೆ ಬುರುಜುಗಳು ಇಲಾಖೆಗಳ ಅಭಿವೃದ್ಧಿ ಯೋಜನೆಗಳ ಭಾರದಲ್ಲೇ ಕುಸಿದು ಬಿದ್ದರೆ ಆಶ್ಚರ್ಯವಿಲ್ಲ. ದ್ವೀಪದಲ್ಲಿ ಅಸಂಖ್ಯ ತೆಂಗಿನ ಮರಗಳಿವೆ. ಇಂದು ಅವೆಲ್ಲ ತೀರಾ ಅಸಡ್ಡೆಗೊಳಗಾದಂತಿವೆ. ಆದರೂ ಅವುಗಳೆಡೆಯಲ್ಲಿ ದ್ವೀಪ ಬೆಳಗಲು ವಿಶಿಷ್ಟ ದೀಪಸಾಲು ಹಚ್ಚುವ ಯೋಜನೆಯೊಂದು ಎಂದೋ ಕಾರ್ಯಗತಗೊಂಡು (ಬಿಲ್ಲು ಪಾಸಾಗುವವರೆಗೆ ಕಾರ್ಯಾಚರಣೆಯೂ ಮಾಡಿರಬಹುದು) ಇಂದು ಐತಿಹಾಸಿಕ ಅವಶೇಷಗಳ ಸಾಲಿಗೆ ಸೇರುತ್ತಿದೆ. ಇಂಥ ಬೊಂತೆಗಳನ್ನು ಕಟ್ಟಿಕೊಂಡ ಇಲಾಖೆ (ಪ್ರವಾಸೋದ್ಯಮದ್ದಿರಲಿ, ಪ್ರಾಚ್ಯವೇ ಇರಲಿ) ದ್ವೀಪಕ್ಕೆ ಪ್ರೇಕ್ಷಣೀಯ ಪಟ್ಟಿಯಲ್ಲಿ ಅತಿ ಗಣ್ಯ ಸ್ಥಾನಗಿಟ್ಟಿಸುತ್ತೇವೆ ಎಂದು ತಿಳಿದಿದ್ದರೆ ಅದು ಸುಳ್ಳು.

ಮಧ್ಯಾಹ್ನ ಮತ್ತೆ ನಾವು ಬ್ಲೇರ್‌ನಲ್ಲಿ ಅನ್ನಪೂರ್ಣರಾದೆವು. ಅಪರಾಹ್ನದ ಕಾರ್ಯಕ್ರಮ ಚಾರಣ. ದ್ವೀಪಸ್ತೋಮದ ಅತ್ಯುನ್ನತ ಕೇಂದ್ರ, ಬ್ರಿಟಿಷರ ಭಾಷೆಯಲ್ಲಿ ಹೇಳುವುದಾದರೆ ಹಿಲ್ ಸ್ಟೇಶನ್ – ಮೌಂಟ್ ಹ್ಯಾರಿಯೆಟ್, ಬ್ಲೇರ್ ದ್ವೀಪದ್ದೇ ಒಂದು ದೂರದ ಅಂಚಿನಲ್ಲಿ ಕಂಗೊಳಿಸುತ್ತಿತ್ತು. ಅದಕ್ಕೆ ಊದ್ದದ ನೆಲದಾರಿ ಬಿಟ್ಟು ಸಮೀಪದ ನೀರ್ಮಾರ್ಗವೂ ಒಂದಿತ್ತು. ನಾವು ಅದನ್ನೇ ಹಿಡಿದೆವು. ಮೊದಲು ಪುಟ್ಟ ಹಡಗಿನ ಯಾನ. ಅದು ಹೆಚ್ಚು ಸಾರ್ವಜನಿಕ ಬಳಕೆಯಲ್ಲೂ ಇರುವ ಸೌಕರ್ಯವಾದ್ದರಿಂದ ಲಾರಿ, ಬಸ್ಸು, ಕಾರಲ್ಲದೆ ಹಲವು ದ್ವಿಚಕ್ರ ವಾಹನಗಳೂ ನಮ್ಮ ಹಡಗೇರಿದ್ದು ನಿಜಕ್ಕೂ ಒಂದು ದೃಶ್ಯ. ಮುಂದಿನ ದೋಣಿಗಟ್ಟೆಯಲ್ಲಿ ಒಂದು ಬಾಡಿಗೆ ಕಾರು ಹಿಡಿದು “ಹ್ಯಾರಿಯೆಟ್ ಚಲೋ” ಎಂದೆವು. ಮೂರ್ನಾಲ್ಕು ಕಿಮೀ ಸಪುರ ದಾರಿಯಲ್ಲಿ ಊರು, ಮನೆಗಳನ್ನು ದಾಟಿ ನಿರ್ಜನ ಘಾಟೀ ದಾರಿಗೆ ಬರುತ್ತಿದ್ದಂತೆ ಅಯಾಚಿತವಾಗಿ ಚಾಲಕ ಕಾರು ನಿಲ್ಲಿಸಿ, ನಮ್ಮನ್ನಿಳಿಸಿ ಕಡಲಕಿನಾರೆಯತ್ತ ನಮ್ಮ ಗಮನ ಸೆಳೆದ. ಗುಡ್ಡದ ಏಣೊಂದು ಸಮುದ್ರದೊಳಗೆ ಚಾಚಿತ್ತು. ಅದರ ಅಂಚಿನಲ್ಲಿ ಪುಟ್ಟದೊಂದು ದೀಪಸ್ತಂಭ; ನಮ್ಮ ವಂಡೂರ್ ಯಾತ್ರೆಗೆ ಬೈಕ್ ಬಾಡಿಗೆ ಕೊಟ್ಟವ ರೂಪಾಯಿ ಇಪ್ಪತ್ತರ ನೋಟಿನಲ್ಲಿ ತೋರಿಸಿದ್ದೇ ಚಿತ್ರ. ಬೇಡ ಬೇಡಾಂದ್ರೂ ಮತ್ತಾತನದೇ ಮಾತು ನೆನಪಿಗೆ ಬಂತು – “ದ್ವೀಪಸ್ತೋಮದ ಅಸ್ತಿತ್ವವನ್ನು ಮಹಾನ್ ದೇಶ ತನ್ನದೇ ಭಾಗವೆಂದು ಕೃಪೆಯಿಟ್ಟು ತೋರಿದ ಏಕೈಕ ಕುರುಹು”. ಅದರಲ್ಲಿ ವಿಷಾದವಿತ್ತು. ಅದು ಪ್ರಾಮಾಣಿಕವೂ ಇರಬಹುದು. ಆದರೆ ಇಂಥಲ್ಲಿ ಆತ್ಮಶೋಧ ನಮಗೆ ಇನ್ನೊಬ್ಬರನ್ನು ಸಮಾಧಾನಿಸಲು ಹೆಚ್ಚು ಸ್ಥೈರ್ಯ ಕೊಡುತ್ತದೆ. ಮುಖ್ಯ ನೆಲದಲ್ಲಿರುವ ನಮ್ಮ ಕೊರಗುಗಳ ಪಟ್ಟಿಯೇನೂ ಕಡಿಮೆಯದ್ದಲ್ಲ. ನೆಲ, ಜಲ, ಪಾರಿಸರಿಕ, ಜಾನಾಂಗಿಕ, ಭಾಷೆ, ಸಂಸ್ಕೃತಿ, (ಕೊನೆಯದಾಗಿ ಎನ್ನಲೋ ಪ್ರಧಾನವಾಗಿ ಎನ್ನಲೋ) ವೈಯಕ್ತಿಕ ರಾಜಕೀಯ ಪ್ರಣಾಳಿಗಳ ವಿಪುಲ ವೈವಿಧ್ಯ ಮತ್ತಷ್ಟೇ ಗೊಂದಲಗಳ ನಡುವೆಯೂ ಜೀವನ (ಚೆನ್ನಾಗಿಯೇ) ನಡೆದೇ ಇದೆಯಲ್ಲವೇ! ಜೀವನ ಸಾಗರದ ಆಳ ಹರಹುಗಳ ಬಗಲಿಗೆ ಅಪ್ರಿಯ ಸತ್ಯಗಳು ನುಗ್ಗಿದರೆ ಗುರುತು ತಪ್ಪದಂತೆ ದೀಪಸ್ತಂಭವಿಡಲು ಮರೆಯಬೇಡ ಮಂಕುತಮ್ಮ!

ಚಿಡಿಯಾ ಟಾಪಿನಲ್ಲಿ ಕಂಡಂಥದ್ದೇ ಘಾಟಿ, ಕಾಡು. ಒಟ್ಟು ಕಾಲರ್ಧ ಗಂಟೆಯ ಸವಾರಿ ನಮ್ಮನ್ನು ದಾರಿಯ ಕೊನೆ ಮುಟ್ಟಿಸಿತು. ವಾಹನಗಳಿಗೆ ತಂಗಲು, ತಿರುಗಲು ಅನುಕೂಲವಾಗುವಷ್ಟು ಕಾಡು ಬೋಳಿಸಿ ಸಣ್ಣ ಮೈದಾನ ಮಾಡಿದ್ದರು. ಉಳಿದಂತೆ ಜೋಪಡಿ ಚಾ ದುಕಾನು, ಹಳಗಾಲದ ವಿಶ್ರಾಂತಿಗೃಹ, ಆಧುನಿಕ ವೀಕ್ಷಣಾ ಅಟ್ಟಳಿಗೆ, ಕೆಲಸಗಾರರ ವಸತಿ ಇಷ್ಟೇ ಹ್ಯಾರಿಯೆಟ್ಟಿನ ನಾಗರಿಕ ಸೌಲಭ್ಯಗಳು. ಅಟ್ಟಳಿಗೆಗೇರಿದರೆ ಸುತ್ತುವರಿದ ಕಾಡು ಮೀರಿ ನೀರು, ಆಚಿನ ಬ್ಲೇರ್ ದ್ವೀಪ ಸುಂದರ ವಿಹಂಗಮ ನೋಟಗಳು. ನಾವು ನಿಂತಲ್ಲಿಂದ ತೊಡಗಿ ಆ ಶ್ರೇಣಿಯ ತಲೆಯಲ್ಲೇ ಚಾರಣ ಪಥವಿದೆ. ಅದರಲ್ಲಿ ಒಂದೆರಡು ಕಿಮೀ ನಡೆದರೆ ಸಿಗುವ ಕಾಲಾಪತ್ತರ್ ನೋಡಲೇಬೇಕಾದ ಅದ್ಭುತ ಎಂದ ಕಾರಿನ ಚಾಲಕ. ನಾನು ಎಲ್ಲೇ ಒಡ್ಡೋಲಗ ಕೊಡುವಾಗ “ಬೆಟ್ಟಗುಡ್ಡಕ್ಕೆ ನಾನೇ ಸರಿ” ಎನ್ನುವವ ಇಲ್ಲಿ ಸುಮ್ಮನೆ ವಾಪಾಸಾಗುವುದುಂಟೇ. ಮಟ್ಟಸ ಕಾಲುದಾರಿ ಕಡಿದಿದ್ದರು. ಸಣ್ಣ ಇಳುಕಲು ಮತ್ತಷ್ಟೇ ಏರು. ಇಕ್ಕೆಲಗಳ ಗೋಡೆಯಷ್ಟೇ ಅಲ್ಲ, ಚಾಚಿಕೊಂಡು ನೆತ್ತಿಯ ಮೇಲೂ ಹೆಚ್ಚುಕಡಮೆ ಚಪ್ಪರ ಹಾಕಿದಂತೆ ಮರಗಿಡ ಬಳ್ಳಿ. ಪಕ್ಷಿಗಳ ಉಲಿ ಮತ್ತು ದರ್ಶನ ಯಾಕೋ ಚಿಡಿಯಾ ಟಾಪಿನಷ್ಟು ಇರಲಿಲ್ಲ. ಹಿಂದೇ ಹೇಳಿದಂತೆ ಬೇರೆ ದೊಡ್ಡಪ್ರಾಣಿಗಳೇನೂ ಎದುರಾಗುವ ಯೋಚನೆ ಈ ದ್ವೀಪ ಸ್ತೋಮಗಳಲ್ಲೇ ಇರಲಿಲ್ಲ. ಎಲ್ಲೋ ಒಂದೆರಡು ಸಣ್ಣ ಕವಲು ದಾರಿ ಕಾಣಿಸಿದರೂ ಮುಖ್ಯ ಜಾಡು ತಪ್ಪುವಂತಿರಲೇ ಇಲ್ಲ. ನಾವು ನಡಿಗೆಗಿಳಿಯುವಾಗಲೇ ಸೂರ್ಯ ದ್ವೀಪಸ್ತೋಮದ ದಿಗಂತದಂಚಿಗೆ ತಲಪಿದ್ದ. ಸಹಜವಾಗಿ ನಮ್ಮ ಧಾವಂತ ಅರ್ಧ ಮುಕ್ಕಾಲು ಗಂಟೆಯೊಳಗೆ ಮರಳಿ ಕಾರಿನ ಬಳಿ ಮುಗಿಯಲೇ ಬೇಕಿತ್ತು. ಆದರೆ ಅಷ್ಟೂ ಏಕಮುಖವಾಗಿ ಸಾಗಿದರೂ ಕಾಲಾಪತ್ತರ್ ಕಾಣಲೇ ಇಲ್ಲ. ಎಲ್ಲೋ ಒಂದು ಕಡೆ ಸ್ವಲ್ಪ ಗಿಡಮರಗಳು ವಿರಳವಾದಲ್ಲಿ ಜಾಡಿನಂಚಿಗೆ ಸರಿದು ಕಣ್ಣೋಟದಲ್ಲಿ ಪರಿಸರ ಜಾಲಾಡಿದೆವು. ಕೀಲುಕೋತಗೇರಿಯಿಂದ ಒಳಗೆ ಕಾಡಿನಲ್ಲಿ ಊದ್ದಕ್ಕೆ ನಡೆದು ಹೀಗೇ ಭವಾನೀ ಹೊಳೆಯಂಚಿನ ಕಣೆವೆಗಿಣುಕಲು ಬಂದವರಿಗೆ ಧುತ್ತನೆ ಪಾತಾಳದಿಂದೆದ್ದು ನಮ್ಮಿಂದಲೂ ಮೇಲಕ್ಕೆ ಮಲೆತು ನಿಂತ (ನೆಲ ಮಟ್ಟದಿಂದ ಸುಮಾರು ಎರಡು ಸಾವಿರ ಅಡಿ ಎತ್ತರದ) ರಂಗನಾಥ ಸ್ತಂಭವೇ ಮನದಾಳದಿಂದ ಎದ್ದು ಇಲ್ಲಿ ಜೋಡಿ ಹುಡುಕುತ್ತಿತ್ತು! ಆದರೆ ಕಾಲಾಪತ್ತರ್ ನಾಪತ್ತೆ. ಕಡಿದು ಮಾಡಿದ ಜಾಡು ಮುಗಿದು ಅಸ್ಪಷ್ಟ ಕವಲು ದಾರಿ ಎದುರಾಯ್ತು. ಕತ್ತಲಲ್ಲಿ ಸಿಕ್ಕಿಕೊಳ್ಳಬೇಡೀಂತ ಕಾರಿನ ಚಾಲಕ ಎಚ್ಚರಿಸಿದ್ದೂ ನೆನಪಿಗೆ ಬಂದು ಸ್ವಲ್ಪ ನಿರಾಶೆಯಲ್ಲೇ ಹಿಂದಕ್ಕೆ ನಡೆದೆವು. ಅದೇ ಗಿಡಮರಗಳು ವಿರಳವಾದ ಜಾಗದಲ್ಲಿ ಮತ್ತೊಮ್ಮೆ ಕತ್ತು ಕೊಕ್ಕರೆ ಮಾಡುವಾಗ ನಿಂತದ್ದು ಮಣ್ಣಲ್ಲ, ಕರಿಕಲ್ಲು ಎಂದು ಗುರುತಿಸಿದೆವು. ಎಲಾ ಇವನಾಂತ ಆ ಪುಟ್ಟ ದಿಣ್ಣೆಯಂತಾ ಕಲ್ಲಿನ ಆಜೂಬಾಜೂ ನೋಡುವಾಗ ಯಾರೋ ಸೀಮೆಸುಣ್ಣದಲ್ಲಿ ಗೀಚಿದ್ದು ಕಾಣಿಸಿತು – ಕಾಲಾಪತ್ತರ್; ಕುಂಟರ ನಾಡಿನಲ್ಲಿ ಮೋಂಟನೇ ನೆಂಟ!

ಎಲ್ಲೋ ಯಾರೋ ಕೂಗಿದ್ದು ಕೇಳಿಸಿತು. ಜಾಡು ಕಾಣಿಸುವಷ್ಟು ಬೆಳಕು ಉಳಿದಿತ್ತು ಮತ್ತು ನಮಗೆ ದಾರಿ ತಪ್ಪುವ ಭಯವೇನೂ ಇರಲಿಲ್ಲವಾದ್ದರಿಂದ ಅದನ್ನು ಉಪೇಕ್ಷಿಸಿ ನಡೆದೇ ಇದ್ದೆವು. ಕೂಗು ದೊಡ್ಡದೂ ಆಗಿ ಯಾರೋ ಟಾರ್ಚ್ ಬೆಳಗಿಕೊಂಡು ಎದುರಿನಿಂದ ಓಡಿಯೂ ಬಂದರು – “ಅರೆ! ಇಂವಾ ಚಾ ದುಕಾನಿನ ಮಾಲಿಕ” ಎಂದು ನಮಗೆ ಉದ್ಗರಿಸಿ ಹೋಯ್ತು. ಅವನ್ನ ಹಿಂಬಾಲಿಸಿದಂತೆ ನಮ್ಮ ಕಾರಿನ ಚಾಲಕ ಮತ್ತೆ ಅತಿಥಿಗೃಹದ ಮೇಟಿ. ಅವರು ಕೂಗಿದ್ದು ನಮಗಾಗಿ, ಹುಡುಕಿ ಬರುತ್ತಿದ್ದದ್ದೂ ನಮ್ಮನ್ನೇ. ಅವರ ಆತಂಕ – ಆ ಕಾಡಿನ ಪಿಶಾಚವೆಲ್ಲೋ ನಮ್ಮನ್ನು ವಶಪಡಿಸಿಕೊಂಡಿದೆ. ನಾವು ಅವರನ್ನು ಸಮಾಧಾನಿಸುತ್ತಾ ಕಾರಿಗೆ ಮರಳಿದೆವಾದರೂ ನಮ್ಮ ಹಲವು ‘ಭೂತಪಿಶಾಚಗಳ’ ರೋಮಾಂಚಕ ನೆನಪು ಮರುಕಳಿಸದಿರಲಿಲ್ಲ. ಸುಳ್ಯದಾಚಿನ ವಿಷ್ಣುದೇವಳಕ್ಕೆ ಸಂಬಂಧಿಸಿದ ಕಾಡಿನಲ್ಲಿ ‘ಮೋಹಿನಿ’ಯನ್ನು ಉಪೇಕ್ಷಿಸಿ ವನವನ್ನು ಮನಸಾ ಪ್ರೇಮಿಸಿದ್ದು, ಭಾಗಮಂಡಲದ ಸಮೀಪದ ಈರುಳ್ಳಿಮಲೆಯಲ್ಲಿ ಶಿವಪಾರ್ವತಿಯರ ಉಯ್ಯಾಲೆಯಾಟ ನೋಡಿ ಲೋಕ ಕಳೆದುಕೊಳ್ಳುವ ಜನಪದ ನಂಬಿಕೆಯನ್ನು ಪ್ರಕೃತಿಪ್ರೇಮದ ತಕಡಿಯಾಟದಲ್ಲಿ ಕಡಿಮೆ ತೂಗಿದ್ದು, ಪ್ರಾಕೃತಿಕ ಗುಹೆಗಳ ಅನಾವರಣದ ಪರ್ವಕಾಲದಲ್ಲಿ ಕೌಂಡಿಕಾನದ ರುದ್ರಪಾದೆಯನ್ನು (ಸೂಕ್ತ ವಿಧಿವಿಧಾನವಿಲ್ಲದೆ ದಾಟಿದವರು ರಕ್ತಕಾರಿ ಸಾಯುತ್ತಾರೆ – ಸ್ಥಳೀಯ ನಂಬಿಕೆ) ಸವಾಲು ಜವಾಬಿನ ಅಮಲಿನಲ್ಲೇ ಹೊಕ್ಕು ಹೊರಟು ಮರಗಳ್ಳರ ಹುನ್ನಾರವನ್ನು ಪ್ರಕಟಿಸಿದ್ದು ಒಂದೇ ಎರಡೇ. ಏಳು ಸಾಗರದಾಟಿ ಮೌಂಟ್ ಹ್ಯಾರಿಯೆಟ್ ತಲೆಯಲ್ಲೂ ನಮ್ಮನ್ನು ಕಾಡಿದ (ಕಾಡದ?) ಅಲೌಕಿಕ ಶಕ್ತಿಗೆ ನಮೋನ್ನಮ:

ಮತ್ತೆ ಕಾರು, ದೋಣಿಗಟ್ಟೆ, ಹಡಗು, ಅನ್ನಪೂರ್ಣೆ, ಬಿಡಾರ ವಿವರಿಸಲೇನೂ ಉಳಿದಿಲ್ಲ. ಮರುದಿನ ಬೆಳಿಗ್ಗೆ ಅನ್ನಪೂರ್ಣೆಯಲ್ಲಿ ಕುರ್ಚಿ ಬಿಸಿಮಾಡಿ ಅರ್ಥಾತ್ ಕಾದು, ತಿಂಡಿ ತಿನ್ನಬೇಕಾಯ್ತು. ಕಾರಣ, ಅವರು ಆದ್ಯತೆಯಲ್ಲಿ ವಿಮಾನದವರ ನಿಶ್ಚಿತ ಪೊಟ್ಟಣ ತಿಂಡಿಗಳನ್ನು ನಮಗೂ ಮೊದಲೇ ಬಂದು ಕಾದಿದ್ದ ಭದ್ರತಾ ವ್ಯಾನಿಗೆ ಕೊಡಬೇಕಿತ್ತು. ಈ ಲಾಡೆನ್ನೂ ಎಲ್ಟಿಟೀಯೀ (ಈಗ ಒಂದು ಕಡಮೆಯಾಗಿದೆ!?) ಗೊಂದಲವಿರದಿದ್ದರೆ ಹಳಗಾಲದಲ್ಲಿ ನಮ್ಮೂರ ಪೇಪರ್ ವ್ಯಾನುಗಳಲ್ಲಿ ಚಾಲಕನ ಪಕ್ಕ ಇರುಕಿಕೊಂಡು ಅವೇಳೆಯಲ್ಲಿ ಪ್ರಯಾಣಿಸಿದ ಹಾಗೇ ನಾವು ಭದ್ರತಾ ವ್ಯಾನ್ ಚಾಲಕನಿಗೆ ನಾಕಾಣೆ ಕೊಟ್ಟು ವಿಮಾನ ನಿಲ್ದಾಣಕ್ಕೆ ಹೋಗಬಹುದಿತ್ತು ಎಂದು ಜೋಕಿಕೊಂಡೆವು. ನಮ್ಮ ಬಾಡಿಗೆ ಕಾರು ಕೇಳಿದ್ದಂತೆ ಬಂತು. ಮರಳುವ ವಿಮಾನ ಸರಣಿಯಲ್ಲಿ ಮೊದಲ ಯಾನ ಮಾತ್ರ ಏರಿಂಡಿಯಾದ್ದು. ನಮ್ಮ ಪರ್ವತಾರೋಹಿ ಪ್ರಜ್ಞೆಯಲ್ಲಿ (ಹೊಟ್ಟೆ ಗಟ್ಟಿಯಿರಬೇಕು, ಘಟ್ಟ ಎದುರಾಗಬೇಕು) ಹೋಟೆಲನ್ನು ಖಾಲಿ ಮಾಡುವವರಂತೆ ತಿಂದು ಬಂದವರಿಗೆ ವಿಮಾನದಲ್ಲಿ (ಹಿಂದೆ ಮೂರೂ ಡೆಕ್ಕನ್ ಟ್ರಾವಲ್ಸ್ ಯಾನದಲ್ಲಿ ಕುಡಿಯುವ ನೀರೂ ಹಣ ಕೇಳುತ್ತಿತ್ತು. ಇಲ್ಲಿ ಟಿಕೇಟಿನ ಅಂಗವಾಗಿ ತಿಂಡಿ, ತೀರ್ಥ ಉಚಿತ) ತಿಂಡಿ ತಂದಾಗ “ಅಯ್ಯೋ ಸೋತೆವಲ್ಲಾ” ಎಂದುಕೊಂಡರೂ ಹೊಟ್ಟೆಗೆ ಮೋಸ ಮಾಡಲಿಲ್ಲ. (ಅಮ್ಮನಿಗೆ ಗೊತ್ತಾಗಿದ್ದರೆ ಖಂಡಿತಾ ಬಯ್ತಿದ್ದಳು – ಪ್ರಾಯ ಐವತ್ತು ದಾಟಿದ ಮೇಲೂ ಹಾಗಿ ಯಾಕೆ ತಿನ್ನದೂ?) ಮಧ್ಯಾಹ್ನ ಊಟಬಿಟ್ಟರೂ ಸರಿ (ಅಜೀರ್ಣವಾದರೆ ದೇವರೇ ಗಸಿ – ದೇವು ಉವಾಚ!) ಎಂದು ಕಟ್ಟೊಡೆದರೆ ಮತ್ತದೇ ಬ್ಲೇರ್ ದ್ವೀಪದ ಅನ್ನಪೂರ್ಣೆಯ ತಿನಿಸುಗಳು. ಅಪ-ಉಲ್ಲೇಖಿಸುವುದಾದರೆ ‘ಹೋದೆಯಾ ಪಿಶಾಚಿ ಎಂದರೆ ಬಂದೇ ಏರಿಂಡಿಯಾದಲ್ಲಿ’ ಎಂದ ಹಾಗಾಯ್ತು! ಚೆನ್ನೆಯ್ಯಲ್ಲಿ ಡೆಕ್ಕನ್ನಿನ ಲಿಂಕಿರಬೇಕಿತ್ತು. ಆದರೆ ಆ ಕಂತ್ರಿಗಳು ಮತ್ತೇನೇನೋ ಸಬೂಬು ಹೇಳಿ (ನಿಜದಲ್ಲಿ ಸಾಕಷ್ಟು ಜನವಾಗಿರಲಿಲ್ಲಾಂತ ನಮ್ಮ ಸಂಶಯ) ಸಂಜೆ ವಿಮಾನಕ್ಕೆ ಭರ್ತಿ ಮಾಡಿದರು. ಸಹಜವಾಗಿ ಬೆಂಗಳೂರಿನಿಂದ ನಮ್ಮ ಮುಂದಿನ ಪ್ರಯಾಣ ಮಾರಣೇ ದಿನ ಬೆಳಿಗ್ಗೆಯಷ್ಟೇ ಸಾಧ್ಯ ಎನ್ನುವ ಅವರ ಮಾತಿಗೆ ಮರುಳಾಗದಷ್ಟು ಈಗ ನಾವು ಪಳಗಿದ್ದೆವು. ‘ಚೆನ್ನೈ ಲೌಂಜಿನ ಹವಾನಿಯಂತ್ರಿತ ವ್ಯವಸ್ಥೆಯೊಳಗಿದ್ದೂ ಬೆಮರ್ದನ್ ಅಶೋಕವರ್ದನ್’ ಎಂಬಂತೆ ನಾವು ಕೋಪಿಸಿ, ನಿರೇನ್ ಅಭಯರು ಡೆಕ್ಕನ್ ಸಿಬ್ಬಂದಿಗಳ ತಲೆ ತಿಂದು ಬೆಂಗಳೂರು-ಮಂಗಳೂರು ಟಿಕೆಟ್ ಹಣ ವಾಪಾಸು ಮಾಡಿಸಿಕೊಂಡೆವು. ಮತ್ತೆ ದೂರವಾಣಿಯಲ್ಲಿ ಬೆಂಗಳೂರಿನ ಪರಿಚಿತರನ್ನು ಸಂಪರ್ಕಿಸಿ ಅಂದಿನ ರಾತ್ರಿ ಬಸ್ಸಿನ ಸೀಟ್ ಕಾದಿರಿಸಿಕೊಂಡದ್ದರಿಂದ ಊರಿನಲ್ಲಿ ನಮ್ಮ ನಮ್ಮ ಕೆಲಸಕ್ಕೆ ಹಾಜರಾಗುವಲ್ಲಿ ತಪ್ಪಲಿಲ್ಲ ಎನ್ನುವುದೇ ಸಮಾಧಾನ!

ವಾಸಕ್ಕೆ ಮೊದಲು ಅಭಯ ತನ್ನ ವಿಡಿಯೋ ಕ್ಯಾಮರಾ ಒಯ್ಯುವುದಿಲ್ಲ ಎಂದು ಪಟ್ಟು ಹಿಡಿದಿದ್ದ. ಆ ಕ್ಯಾಮರಾ ಹಿಡಿದುಬಿಟ್ಟರೆ ಮತ್ತದೇ ತ್ರಿಪಾದಿ ಊರು (ಇದೊಂದು ಪ್ರಾಣಿಯಲ್ಲ, Tripodಊ), ವಿಶಿಷ್ಟ ಚೌಕಟ್ಟು ಸಂಯೋಜಿಸು, ಬೆಳಕು ಏನು ಮಾಡಲೀ ಎಂದೆಲ್ಲಾ ವೃತ್ತಿಪರತೆ ಕಾಡಿ ‘ಎಂಜಾಯ್‌ಮೆಂಟ್’ ಹಾಳುಮಾಡಿಬಿಡುತ್ತದೆ ಎನ್ನುವುದು ಅವನ ನಿಲುವು. ವೃತ್ತಿ ಮತ್ತು ವಿರಾಮ ಅಥವಾ ಮನರಂಜನೆಯನ್ನು ಪ್ರತ್ಯೇಕಿಸದ (ಮಿಶ್ರ ಮಾಡಿ ಒಂದನ್ನೊಂದು ಕೆಟ್ಟಾದಾಗಿ ಪ್ರಭಾವಿಸದ ಎಚ್ಚರದೊಡನೆ) ಜೀವನಕ್ರಮ ನನ್ನದು. ಅಂಗಡಿಯಲ್ಲಿ ಯಾರೊಡನೆಯೂ ಹರಟೆ ಹೊಡೆಯಬಲ್ಲೆ ಜೊತೆಗೇ ನಿರ್ದಾಕ್ಷಿಣ್ಯವಾಗಿ ಅವರ ಖರೀದಿಯ ಬಿಲ್ಲು ವಸೂಲು ಮಾಡುತ್ತೇನೆ. ಕಾಡುಬೆಟ್ಟದ ಚಾರಣ, ಶಿಬಿರದಲ್ಲಿ ಏನನ್ನೂ (ವೈಯಕ್ತಿಕ ಮಿತಿಯಲ್ಲಿ) ನಿಭಾಯಿಸಬಲ್ಲೆ ಹಾಗೆಂದು ಆರ್ಥಿಕವಾಗಿ ಇನ್ನೊಬ್ಬರಿಗೆ ಹೊರೆಯೂ ಆಗದ ‘ವ್ಯಾಪಾರೀ ಬುದ್ಧಿ’ ಕಳೆದು ಹೋಗುವುದಿಲ್ಲ. ಮತ್ತೆ ಅಲ್ಲಿ ಎಂದೂ ನನ್ನ ಅಂಗಡಿಯ ವಶೀಲೀಬಾಜೀ ಹಚ್ಚಿದ್ದೂ ಇಲ್ಲ. ಇದನ್ನೆಲ್ಲ ಹೇಳಿ, ಅಭಯನ ತಲೆತಿಂದು ಕ್ಯಾಮರಾ ಹಿಡಿಸಿದ್ದೆ. ಆದರೆ ಯಾವುದು ತೆಗೆಯಬೇಕು, ಬೇಡ ಇತ್ಯಾದಿ ನಿರ್ದೇಶನವನ್ನು ನಾನು ಅವನಿಗೆ ಕೊಡದ ಸಂಯಮ ಪ್ರವಾಸದುದ್ದಕ್ಕೂ ಕಾಪಾಡಿಕೊಂಡಿದ್ದೆ. ಹಾಗೆ ಅವನು ತೆಗೆದ ಒಂದಷ್ಟು ದೃಶ್ಯಗಳನ್ನು ಅವನದೇ ದೃಷ್ಟಿಕೋನದಲ್ಲಿ ಸಂಕಲಿಸಿದ್ದನ್ನು ಲಗತ್ತಿಸಿದ್ದೇನೆ. ಇಷ್ಟುದ್ದಕ್ಕೆ ನನ್ನನ್ನು ನೀನು (ನೀವು) ಸಹಿಸಿಕೊಂಡದ್ದು ನಿಜವೇ ಆದರೆ ಐದೇ ಮಿನಿಟಿನ ಈ ಚಿತ್ರವನ್ನೂ ನೋಡಿ. ಎಲ್ಲಕ್ಕೂ ಒಟ್ಟಾಗಿ ಇದುವರೆಗೆ ಕಟ್ಟೆ ಕಟ್ಟಿ ಇಟ್ಟ ಪ್ರತಿಕ್ರಿಯೆಗಳ ಮಹಾಪೂರವನ್ನು ಕೆಳಗಿನ ಪಾತ್ರೆಗೆ ತುಂಬುವಿಯಾ(ರಾ)ಗಿ ನಂಬಿದ್ದೇನೆ.

https://www.youtube.com/watch?v=6I_tAtrjpBM&ab_channel=AbhayaSimha

ಇಂತು ನಿನ್ನ ಏಕಮಾತ್ರ ಅಣ್ಣ
ಅಶೋಕವರ್ಧನ