ಭಾಗ ಒಂದು – ಎಂ.ವಿ ಕವರಟ್ಟಿ

“ಅಶೋಕೆರೇ ಲಕ್ಷದ್ವೀಪಗ್ ಬರ್ಪರೇ” ಆ ಸಂಜೆ ಅಂಗಡಿಗೆ ಬಂದ ಪ್ರಸನ್ನ ಅರೆ-ಕುಶಾಲಿನಲ್ಲೇ ಕೇಳಿದ. ನಾನೂ ಅಷ್ಟೇ ಹಗುರವಾಗಿ “ಹಾಂ, ಪೋಯಿ” ಎಂದವನು ಎರೆಕಚ್ಚಿದ ಮೀನಿನಂತೆ ಇದೇ ೧೬ ರಿಂದ ೨೨ರವರೆಗೆ ಬಲಿಬಿದ್ದದ್ದು ಏಪ್ರಿಲ್ (೨೦೧೦) ಮಹಿಮೆಯಲ್ಲೂ ಇರಬಹುದು! ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ಸರಕಾರವೇ ನಡೆಸುತ್ತಿರುವ ಪ್ರವಾಸೋದ್ಯಮ ಇಲಾಖೆಯ ಹೆಸರು SPORTS (= Society for Promotion Of natuRe Tourism & Sports) ಇವರ ‘ಸಮುದ್ರಂ’ ಎಂಬ ಪೂರ್ವಯೋಜಿತ (ಮತ್ತು ಪೂರ್ಣ ಯೋಜಿತವೂ ಹೌದು) ಪ್ರವಾಸಕ್ಕೆ ನಾವು Comforts Holiday Pvt. Ltd ಎಂಬ ದಳ್ಳಾಳಿ ಮೂಲಕ ದಾಖಲಾದೆವು. ಅತ್ಯುನ್ನತ ವಜ್ರ ವರ್ಗದಲ್ಲಿ ತಲಾ ರೂ. ೨೦,೮೫೦ ತುಂಬಿಯೇ ಬಿಟ್ಟೆವು. ವಿವಿಧೆಡೆಗಳಿಂದ ಸ್ವಂತ ವ್ಯವಸ್ಥೆಯಲ್ಲಿ (ಮತ್ತು ಖರ್ಚಿನಲ್ಲಿ) ಎರ್ನಾಕುಲಂ ಉರುಫ್ ಕೊಚ್ಚಿ ತಲಪಿದವರಿಗೆ ಹದಿನೇಳರ ಬೆಳಿಗ್ಗೆಯಿಂದ ಇಪ್ಪತ್ತೊಂದರ ಬೆಳಗ್ಗಿನವರೆಗೆ ಯಾನ, ದೃಶ್ಯ, ಉಣಿಸು ಮತ್ತು ವಾಸ ಇಲಾಖೆಯದೇ. ಮತ್ತು ಪ್ರವಾಸಿಗಳಿಗೆ ತೀರಾ ನಿಯಮಿತ ವಸತಿ ಮತ್ತು ಸಾರಿಗೆ ವ್ಯವಸ್ಥೆಯಿರುವ ಲಕ್ಷದ್ವೀಪ ದರ್ಶನಕ್ಕೆ ಈ ಕೆಲವೇ ಸಾವಿರ ರೂಪಾಯಿಗಳ ಯೋಜನೆ ನಿಜದಲ್ಲಿ ಅಪೇಕ್ಷಣೀಯವೂ ಹೌದು.

ಲಕ್ಷದ್ವೀಪ ನೈಜಾರ್ಥದಲ್ಲಿ ದ್ವೀಪಗಳಲ್ಲ (ಮಣ್ಣು ಕಲ್ಲಿನ ಭೂಭಾಗ ಎಂಬ ಅರ್ಥದಲ್ಲಿ), ಕೇವಲ ಹವಳದ ದಿಬ್ಬಗಳು (atolls). ಶುದ್ಧಾಶುದ್ಧಗಳನ್ನು ಎಣಿಸದಿದ್ದರೆ ಇಲ್ಲಿ ಸುಮಾರು ಮೂವತ್ತಾರು ದ್ವೀಪಗಳಿವೆ. ಬಿಡಿಬಿಡಿಸಿದರೆ ಹನ್ನೆರಡರಷ್ಟೇ ಮನುಷ್ಯ ವಾಸಯೋಗ್ಯ. ಅದರಲ್ಲೂ ಹತ್ತರಲ್ಲಿ ಮಾತ್ರ ಇಂದು ಜನವಸತಿ ಇದೆ. ಉಳಿದವುಗಳಲ್ಲಿ ಕೆಲವು ಕೇವಲ ಮರಳ ತೀರಗಳು ಮತ್ತುಳಿದವು ಸಮುದ್ರದ ಇಳಿತದ ಸಂದರ್ಭದಲ್ಲಷ್ಟೇ ಪ್ರಕಟವಾಗುವ ಗಟ್ಟಿನೆಲೆಗಳು. ಜನವಸತಿ ಇರುವಲ್ಲೂ ನಮ್ಮ ಯೋಜಕರು ತೋರಿಸಲಿದ್ದದ್ದು ಕೇವಲ ಮೂರು. ಕ್ರಮವಾಗಿ ಕಲ್ಪೆನಿ, ಮಿನಿಕಾಯ್ ಮತ್ತು ದ್ವೀಪ ಸಮೂಹದ ರಾಜಧಾನಿ – ಕವರೆಟ್ಟಿ. ಭಾರತದ ಮುಖ್ಯ ನೆಲದ ಪಶ್ಚಿಮ ಕರಾವಳಿಯ ಸುಮಾರು ಮಂಗಳೂರಿನಿಂದ ಕೊಚ್ಚಿವರೆಗಿನ ಹರಹಿನಲ್ಲಿ ನೇರ ಪಶ್ಚಿಮಕ್ಕೆ ಅರಬ್ಬೀ ಸಮುದ್ರದಲ್ಲಿ ಹರಡಿಕೊಂಡಿರುವ ಇವುಗಳಿಗೆ ಸ್ವತಂತ್ರ ಮಾರಿಷಸ್ ದ್ವೀಪರಾಜ್ಯ ನೆರೆಮನೆ. ಕೊಚ್ಚಿಯಿಂದ ಸುಮಾರು ಹನ್ನೆರಡು ಗಂಟೆಗಳ ಯಾನ ಸಮಯದ ದೂರದಲ್ಲಿದೆ ಕವರೆಟ್ಟಿ (ಇನ್ನೂರಕ್ಕೂ ಮಿಕ್ಕು ಕಿಮೀ). ಹಾಗೇ ಪರಸ್ಪರ ಅಂತರದಲ್ಲೂ ಈ ದ್ವೀಪಗಳು ಆರೆಂಟು ಗಂಟೆಯ ಯಾನ ಸಮಯ ಕೇಳುತ್ತವೆ. ತೀರಾ ಸಣ್ಣ ಜನಸಂಖ್ಯೆ ಮತ್ತು ಯಾವುದೇ ಮಹಾ ಆರ್ಥಿಕ ವಹಿವಾಟಿನ ಜಂಝಡಗಳಿಲ್ಲದ ಈ ನಾಡಿಗೆ ಸಹಜವಾಗಿ ಸಾರಿಗೆ ಮತ್ತು ಆತಿಥ್ಯ ವ್ಯವಸ್ಥೆ ತೀರಾ ಪ್ರಾಥಮಿಕ ಹಂತದಲ್ಲೇ ಇರುವುದರಿಂದ ನಮಗೆ ಹೆಚ್ಚಿನ ಆಯ್ಕಾ ಸ್ವಾತಂತ್ರ್ಯವಿಲ್ಲ ಎಂದು ಒಪ್ಪಿಕೊಂಡೇ ಹೊರಟಿದ್ದೆವು.

ಪ್ರಸನ್ನ ತನ್ನ ಹೆಂಡತಿ (ಗೀತಾ) ಎರಡು ಮಕ್ಕಳು (ವಿಭಾ ಮತ್ತು ಪ್ರಜ್ಞಾ), ತಂದೆ (ರಾಮಚಂದ್ರ ಭಟ್), ತಾಯಿ (ರಂಜಿನಿ), ತಂಗಿ (ಪ್ರತಿಭಾ), ಭಾವ (ವಾಸುದೇವ ರಾವ್) ಮತ್ತವರ ಎರಡು ಮಕ್ಕಳು (ಲಾವಣ್ಯ ಮತ್ತು ಚೈತನ್ಯ) ಸಜ್ಜುಗೊಳಿಸಿದ್ದ. (ಹತ್ತು ವರ್ಷದ ಕೆಳಗಿನವರಿಗೆಲ್ಲ ಅರ್ಧ ಟಿಕೆಟ್.) ಅವರ ಕುಟುಂಬದ ವ್ಯವಹಾರವನ್ನು ವಾರಕಾಲ ಸಮರ್ಥವಾಗಿ ನಿರ್ವಹಿಸಲು ತಮ್ಮ ಪ್ರವೀಣ ಇದ್ದುದರಿಂದ ಹೆಚ್ಚು ಯೋಚನೆ ಮಾಡಬೇಕಿರಲಿಲ್ಲ. ನಾನಂತೂ ವಾರ ಮುಂದೆಯೇ ‘ಅತ್ರಿಗೆ ಬೇಸಿಗೆ ರಜೆ’ ಘೋಷಣಾಪತ್ರ ಅಂಗಡಿಯಲ್ಲಿ ಪ್ರದರ್ಶಿಸಿ, ಹೊರಡುವ ದಿನ ಶಟರ್ ಮೇಲೆ ಅಂಟಿಸಲು ವ್ಯವಸ್ಥೆಮಾಡಿಬಿಟ್ಟೆ. ನನಗೆ ಯಾವುದೇ ಸ್ಥಳ, ಸನ್ನಿವೇಶವನ್ನು ಔಚಿತ್ಯವರಿತು ಸಾರ್ವಜನಿಕಗೊಳಿಸಲು ಎಲ್ಲಿಲ್ಲದ ಉತ್ಸಾಹ. ಸೂಚನೆ ಕೊಟ್ಟ ಪ್ರಸನ್ನನದ್ದು ಕುಟುಂಬ ಮಾತ್ರ ಹೊರಟಿದ್ದರೂ ವ್ಯವಸ್ಥೆಗಳೆಲ್ಲ ಸಾರ್ವಜನಿಕದ್ದೇ ಎಂದಾದ ಮೇಲೆ ನಾವೂ ಒಂದಷ್ಟು ಸಮಾನಮನಸ್ಕರು ಯಾಕೆ ಸೇರಬಾರದೆಂದು ಅಲ್ಲಿ ಇಲ್ಲಿ ಹೇಳಿದೆ. ಮೈಸೂರಿನಿಂದ ನನ್ನ ತಮ್ಮ (ಅನಂತವರ್ಧನ) – ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್, ಆರ್ಥಿಕ ವರ್ಷದ ಬಿಸಿ ಮುಗಿದ (ಮಾರ್ಚ್ ಮೂವತ್ತೊಂದು) ಸಂತೋಷದಲ್ಲಿ ದ್ವೀಪಾವಳಿಯ ಬಿಸಿ ನಗಣ್ಯ ಮಾಡಿ ಹೆಂಡತಿಯೊಂದಿಗೆ (ರುಕ್ಮಿಣಿಮಾಲಾ) ತಂಡಕ್ಕೆ ಸೇರಿಕೊಂಡ. ಮೂಡಬಿದ್ರೆಯಿಂದ ಗೆಳೆಯ ಡಾ| ಕೃಷ್ಣಮೋಹನ್ ಪ್ರಭು (ಉರುಫ್ ಕೃಶಿ) ಮತ್ತು ಅವರ ಹೆಂಡತಿ (ಡಾ|ಸೀಮಾ), ತಮ್ಮ ಖಾಸಗಿ ಆಸ್ಪತ್ರೆಯನ್ನು ಎಂಟು ದಿನಕ್ಕೆ ಮುಚ್ಚಿಯೇ ಹೊರಡುವ ನಿರ್ಧಾರದಲ್ಲಿ ಮಗಳನ್ನೂ (ನೀತಿ) ಸೇರಿಸಿಕೊಂಡು ಹೆಸರು ಬರೆಸಿದರು. ಮಾರುತಿ ಕಾರಿನ ಸೇವಾಕೇಂದ್ರದ ವರಿಷ್ಠ ಪಾರ್ಶ್ವನಾಥರಿಗೆ ಕೃಶಿ ಪ್ರಾಕೃತಿಕ ಛಾಯಾ ಚಿತ್ರಗ್ರಹಣದ ಹುಚ್ಚು ಹಿಡಿಸಿದ್ದು ನನಗೆ ತಿಳಿದಿತ್ತು. ಹಾಗಾಗಿ ನನ್ನ ಕಾರಿನ ರಿಪೇರಿಗೆ ಹೋದವನು ಅವರ ತಲೆಗೆ ಲಕ್ಷದ್ವೀಪದ ಹುಳು ಹತ್ತಿಸಿದ್ದೆ. ಇವರು ಕೃಶಿಗುರುವನ್ನು ಕೇಳಿ ಮರುದಿನವೇ ತನ್ನ ಹೆಂಡತಿಯೊಡನೆ (ಸುಧಾ) ತಂಡದ ಭಾಗವಾದರು. ಯಾರಾದರು ನಿಮಗೆ “ಕರೇಗಾರ್ ಲಕ್ಷ್ಮೀನಾರಾಯಣ ರೆಡ್ಡಿ, ಹಿರಿಯ ಹಿಂದಿ ಪ್ರಾಧ್ಯಾಪಕ” ಎಂದು ಪರಿಚಯಿಸ ಹೊರಟರೆ, ನೀವು ಅತ್ತಿತ್ತ ಭಾರೀ ಗಾತ್ರದ ಮತ್ತು ತೂಕದ ಆಸಾಮಿಯನ್ನು ಹುಡುಕಿದರೆ ಅದು ನಿಮ್ಮ ತಪ್ಪು! ಸದಾ ಮುಗುಳು ನಗೆ ಹೊತ್ತು, ಮೂರ್ತಿ ಸಣ್ಣದಾದರೂ (ಪ್ರಾಯದಲ್ಲಿ ನಿವೃತ್ತ) ವೈವಿಧ್ಯಮಯ ಚಟುವಟಿಕೆಯಲ್ಲಿ ಸದಾ ತೊಡಗಿಕೊಳ್ಳುವ ಇವರು ನನಗೆ ಅಂಗಡಿ ತೆರೆದಂದಿನಿಂದಲೂ (ಮೂವತ್ತೈದು ವರ್ಷ) ಆತ್ಮೀಯ ಗೆಳೆಯ. ಇನ್ನೇನು ರೆಡ್ಡಿ ದಂಪತಿ (ಪತ್ನಿ – ಜಾನಕಿ, ಕನ್ನಡ ಅಧ್ಯಾಪಿಕೆ) ತಂಡಕ್ಕೆ ಸೇರಿದ ಹಾಗೇ ಎನ್ನುವಾಗ ಜಾನಕಿಗೆ ಉತ್ತರಪತ್ರಿಕೆಗಳ ಮೌಲ್ಯಮಾಪನದ ಅನಿವಾರ್ಯ ಕರ್ತವ್ಯ ಹಿಡಕೊಂಡಿತು. ರೆಡ್ಡಿ (ನನಗೂ) ಗೆಳೆಯರಾದ ಮೈಸೂರಿನ ಬಸವರಾಜು ದಂಪತಿಗೆ ಪ್ರವಾಸದ ಸುದ್ದಿ ಮುಟ್ಟಿಸಿದರು. ಅಲ್ಲೂ ಪತ್ನಿ ಶಾಂತಾರನ್ನು ಅನ್ಯ ಕರ್ತವ್ಯದ ಮೇಲೆ ಬಿಟ್ಟು ಹೊರಡಬೇಕಾದ ಸ್ಥಿತಿ. ಕೊನೆಯಲ್ಲಿ ರೆಡ್ಡಿ, ಬಸವರಾಜು ಸೇರಿ ನಮ್ಮ ತಂಡ ಇಪ್ಪತ್ತೊಂದರ ಗಾತ್ರಕ್ಕೆ ಬೆಳೆದು ನಿಂತಿತು.

ಹದಿನಾರರ ಸಂಜೆ ಮಲ್ಬಾರ್ ಎಕ್ಸ್‌ಪ್ರೆಸ್ (ಮಲಬಾರದ ರೈಲು?) ಏರಿ, ಅಪರಾತ್ರಿ ಮೂರೂವರೆಗೆ ಎರ್ನಾಕುಲಂ (ಅಥವಾ ಕೊಚ್ಚಿ) ತಲಪಿದೆವು. ಪ್ರಸನ್ನನ ವ್ಯವಸ್ಥೆಗಳೆಲ್ಲ ಪ್ರಶಸ್ತವಾಗಿದ್ದದ್ದಕ್ಕೆ ಕಾದಿದ್ದ ವ್ಯಾನೇರಿ, ಎಂಜಿ ರಸ್ತೆಯಲ್ಲಿ ಕಾಯ್ದಿರಿಸಿದ್ದ ಹೋಟೆಲ್ (ಅನಂತ ಲಾಜ್) ಜಟ್ಪಟ್ ಸೇರಿ ವಿಶ್ರಾಂತರಾದೆವು. ಆದರೆ ಸರ್ಕಾರಿ ವ್ಯವಸ್ಥೆಗಳು ಹಾಗಲ್ಲ, (ಸಾಮಾನ್ಯವಾಗಿ ಜನಸ್ನೇಹಿಯೂ ಅಲ್ಲ) ಎನ್ನುವುದಕ್ಕೆ ಹೊಸ ಸಾಕ್ಷಿ ಬೆಳಿಗ್ಗೆ ಒದಗಿತು. ಇಲಾಖೆ ಕೊಟ್ಟ ಕಾಲಪಟ್ಟಿಯಂತೆ ಸುಮಾರು ಒಂಬತ್ತು ಗಂಟೆಗೆ ನಾವು ಕೊಚ್ಚಿ ಬಂದರಿನಲ್ಲಿ ಹಾಜರಿರಬೇಕಿತ್ತು. ಪ್ರಸನ್ನ ಹಿಂದಿನ ದಿನದಿಂದಲೇ ಫೋನಿನ ಮೇಲೆ ಫೋನ್ ಹಚ್ಚಿ ಸೋತ ಎನ್ನುವಾಗ ತಿಳಿಯಿತು ಹಡಗು ಮೂರೂವರೆಗೆ ಮುನ್ನ ಹೊರಡುವುದಿಲ್ಲ. ನಮ್ಮನ್ನು ಹಡಗಿಗೇರಿಸಲು ಬಂದ ವ್ಯಾನನ್ನು ಅರ್ಧ ದಿನ ಕೊಚ್ಚಿ ದರ್ಶನಕ್ಕೆ ಬಳಸಿಕೊಂಡೆವು.

ಮಹಾ ಗೋಲ್ಡ್ ರೋಡ್‌ನ (=ಎಂಜಿ ರೋಡ್. ಅಲ್ಲಿನ ಮಹಾತ್ಮ ಗಾಂಧಿ ರಸ್ತೆಯುದ್ದಕ್ಕಿರುವ ಚಿನ್ನದ ಮಳಿಗೆಗಳ ವೈಭವ ನೋಡಿದವರ್ಯಾರೂ ನನ್ನ ಅಧಿಕಪ್ರಸಂಗವನ್ನು ಪ್ರಶ್ನಿಸರು!) ವಾಹನ ಸಮ್ಮರ್ದ ಪಾರುಗಾಣಿಸಿಕೊಂಡು ಕೊಚ್ಚಿಯ ಬಂದರಿನ ಬಳಿ ಹೋದೆವು. ಅಲ್ಲಿ ಮೀನು ಹಿಡಿಯಲು ಸ್ಥಾಪಿಸಿದ್ದ ಸರಣಿ ಚೀನೀ ಬಲೆಗಳನ್ನು ನೋಡಿ, ಸಣ್ಣದೊಂದು ದೋಣೀಯಾನಕ್ಕೆ ಸೇರಿಕೊಂಡೆವು. ಹಳೆ ದೋಣಿತಂಗುದಾಣಗಳು, ಮೀನುಗಾರಿಕಾ ಬಂದರಿನ ಗೊಂದಲ, ಕೊಚ್ಚೆ, ಹಾಯ್ದು ಅಳಿವೆ ಬಾಗಿಲಿಗೆ ಸೇರಿದೆವು. ಅಲ್ಲಿ ಬಂದರು ಆಡಳಿತ ಕಛೇರಿ ಕಟ್ಟಡ (ಆಧುನಿಕ ಬಹುಮಹಡಿ ಕಟ್ಟಡಕ್ಕೆ ಪ್ರಾದೇಶಿಕ ವಾಸ್ತು ವಿನ್ಯಾಸ ಸೇರಿಸಿದ್ದರು) ಮತ್ತು ಪಂಚತಾರಾ ತಾಜ್ ಹೋಟೆಲಿನ ಕಟ್ಟಡ ನಮ್ಮ ದೃಷ್ಟಿ ಸೆಳೆಯುತ್ತಿದ್ದವು. ಆದರೆ ಅವನ್ನೂ ಮೀರಿದ ಆಕರ್ಷಣೆಯಾಗಿ ಸಂಜೆ ನಮ್ಮನ್ನು ಹೊರಲಿದ್ದ ಹಡಗು – ಎಂ.ವಿ ಕವರಟ್ಟಿ, ತಂಗಿದ್ದು ಕಾಣಿಸಿತು.

ಶುಭ್ರ ಬಿಳಿಯ, ಐದಾರು ಮಾಳಿಗೆ ಎತ್ತರದ (ಜಲಮಟ್ಟದಿಂದ ಸುಮಾರು ಐವತ್ತು ಮೀಟರ್ ಎತ್ತರ) ಹಾಕಿ ಮೈದಾನದ ಉದ್ದದ (ಸುಮಾರು ನೂರಾ ಇಪ್ಪತ್ತು ಮೀಟರ್) ಅದರಲ್ಲಿ ನರಹುಳುಗಳು ಸಂಚರಿಸುತ್ತಿದ್ದದ್ದು ಕಾಣಿಸಿತು. ೨೦೦೮ರಲ್ಲಿ ಲಕ್ಷದ್ವೀಪಗಳಿಗೇ ಸಮರ್ಥ ಸಂಪರ್ಕ ಸಾಧನವಾಗಿ ಭಾರತ ಸರಕಾರ ನೀರಿಗಿಳಿಸಿದ ಅದ್ಭುತವಿದು. (ಹಳಗಾಲದವರಿಗೆ ಎಂವಿ ಟಿಪ್ಪುಸುಲ್ತಾನ ಮಾತ್ರ ಪರಿಚಿತ) ಅಂತರ್ಜಾಲದಲ್ಲಿ ಬೆದಕಿ ಅಂಕಿ ಸಂಕಿಗಳನ್ನು ನೋಡಿದರೆ ಇದು ಪೂರ್ಣ ಕೇಂದ್ರೀಕೃತ ಹವಾನಿಯಂತ್ರಿತ ಸೌಕರ್ಯದೊಡನೆ ಮೂರು ವರ್ಗಗಳಲ್ಲಿ ಒಟ್ಟಾರೆ ಏಳ್ನೂರು ಜನರನ್ನೂ ಪ್ರತ್ಯೇಕ ಸರಕು ಸಾಗಣಿಕೆಯ ಲೆಕ್ಕದಲ್ಲಿ ಇನ್ನೂರು ಟನ್ನಿಗೂ ಮಿಕ್ಕ ಹೊರೆಯನ್ನೂ ನಿಶ್ಚಿಂತ ಹೊರಬಲ್ಲುದು. ಸಾಮಾನ್ಯ ಪರಿಸ್ಥಿತಿಗಳಲ್ಲಿ ಹದಿನೇಳು ನಾಟಿಕಲ್ ಮೈಲ್ ವೇಗದಲ್ಲಿ ಸಾಗಬಲ್ಲ ಈ ದೈತ್ಯ, ಮಳೆಗಾಲದ ಸಾಗರದಲ್ಲೂ ಸ್ಥಿರತೆಗೆ ಇನ್ನೊಂದು ಹೆಸರಂತೆ. ಇದರ ಮೈತುಂಬಾ ಮುನ್ನೂರು (ಬರಿಯ ಮೀಟರ್ ಅಲ್ಲ ಸ್ವಾಮೀ) ಕಿಲೋಮೀಟರ್ ಉದ್ದದ ವಯರು, ಐವತ್ತು ಕಿಮೀ ಉದ್ದದ ನೀರಕೊಳವೆಗಳು ಎಂದೆಲ್ಲಾ ಲೆಕ್ಕ ಬೆಳೆಯುತ್ತಿದ್ದಂತೆ ನಮ್ಮ ಬೋಟ್ ಏನೂ ಅಲ್ಲ ಎನಿಸಿತು; ಇಲ್ಲಿರುವುದು ಸುಮ್ಮನೆ, ಅಲ್ಲಿದೆ ನಮ್ಮ ಮನೆ!

ಕೊಚ್ಚಿಯ ವೆಲ್ಲಿಂಗ್ಟನ್ ಬಂದರು ಭಾರೀ ಹಡಗುಗಳಿಗೆ ಕಡಲ ಹಿನ್ನೀರಲ್ಲಿ ಮನುಷ್ಯಕೃತ ಸರೋವರ. ಈ ಹಿನ್ನೀರಿನ ಇನ್ನೊಂದೇ ಸಹಜ ದಂಡೆಯಲ್ಲಿ ನಮ್ಮ ವಿಹಾರ ಮುಗಿಯಿತು. ಜ್ಯೂ ಜನಾಂಗದವರು ಐತಿಹಾಸಿಕ ಕಾರಣಗಳಿಂದ ತಮ್ಮ ತಾಯ್ನೆಲವನ್ನು ಬಿಟ್ಟು ಭದ್ರ ನೆಲೆಗಾಗಿ ಜಗತ್ತಿನಾದ್ಯಂತ ವಲಸೆಹೋದ ಕಥೆ ಕೇಳಿದ್ದೇವೆ. ಆ ಕಾಲದಲ್ಲಿ ಹಾಗೆ ಬಂದವರು ಸ್ಥಳೀಯ ರಾಜರ ಕೃಪೆಯಿಂದ ನೆಲೆಸಿ, ವಹಿವಾಟು ನಡೆಸಿ, ನಾಗರಿಕಗೊಳಿಸಿದ ದ್ವೀಪ ಅದು. ಇಂದು ಅದಕ್ಕೆ ಮುಖ್ಯ ನೆಲದಿಂದ ಸಮರ್ಪಕ ಸೇತು-ಸಂಪರ್ಕ ಬೆಳೆದು ದ್ವೀಪ ಸ್ವರೂಪಕ್ಕೆ ಭಂಗ ಬಂದಿದೆಯಾದರೂ ನೆಲೆಗೊಂಡ ಜ್ಯೂಗಳ ಸಾಂಸ್ಕೃತಿಕ ರಚನೆಗಳಿಂದ ಜ್ಯೂಸ್ ಐಲ್ಯಾಂಡ್ ಪ್ರವಾಸಿ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಗಳಿಸಿದೆ. ಅಲ್ಲಿನ ಪ್ರಧಾನ ಆಕರ್ಷಣೆ ೧೫೬೮ರಲ್ಲೇ ರಚಿತವಾದ ಜ್ಯೂಯಿಷ್ ಪ್ರಾರ್ಥನಾಮಂದಿರ – ಸೆನೆಗೋಗ್. ನಾಲ್ಕು ಶತಮಾನಗಳನ್ನು ಕಳೆದೂ ದೃಢವಾಗಿದೆ ಮತ್ತು ಬಳಕೆಯಲ್ಲೂ ಇದೆ. ಇದಕ್ಕೆ ಬರುವ ಪ್ರವಾಸಿಗಳ ಪ್ರವಾಹ ನೋಡಿಕೊಂಡು ಆ ಪುಟ್ಟಪೇಟೆಯ ಕಿರಿದಾದ ಬೀದಿಗಳು ಸಾಂಪ್ರದಾಯಿಕ ಸ್ಮರಣಿಕೆಗಳ ಬಲುದೊಡ್ಡ ಬಜಾರಾಗಿಯೇ ಬೆಳೆದಿರುವುದು ಕುತೂಹಲಕಾರಿಯಾಗಿದೆ. ಪೂರ್ವಾಹ್ನದಲ್ಲಿ ಹನ್ನೆರಡೂವರೆಗೆ ಮುಚ್ಚುವ ಜ್ಯೂಸ್ ದೇವಾಲಯ ‘ತೆರೆದಿರಲಿ ದೇವೇರೇ’ ಎಂದು ಪ್ರಸನ್ನ ಹಾರೈಸಿ ಧಾವಿಸಿದ. (ನಾವೂ ಯಥಾನುಶಕ್ತಿ ಹಿಂಬಾಲಿಸಿದೆವು) ಹನ್ನೆರಡೂಕಾಲಕ್ಕೆ ದೋಣಿಯಿಳಿದು ಓಡುತ್ತಿದ್ದವನಿಗೆ ಇಚ್ಛಾಪೂರ್ತಿ ಮಾಡಲು ದೇವರು ಖಂಡಿತಾ ಪ್ರಯತ್ನಿಸುತ್ತಿದ್ದನೋ ಏನೋ. ಆದರೆ ಅಂದು ಶನಿವಾರ, ಅಂದರೆ ಸೆನೆಗೋಗಿನ ವಾರದ ರಜಾದಿನವೂ ಆಗಿದ್ದಕ್ಕೆ ಭಕ್ತವತ್ಸಲ ಕೈಚೆಲ್ಲಬೇಕಾಯ್ತು! ಈ ಎಲ್ಲಾ ಗೊಂದಲದ ಮಧ್ಯೆ ಅಲ್ಲಿವರೆಗೆ ನಾವು ಗಟ್ಟಿಯಾಗಿ ಹೇಳಲು ಹಿಂಜರಿದಿದ್ದ ‘ಜ್ಯೂಸ್’ ಶಬ್ದ ಲೀಕಾಗಿ, ಪ್ರಸನ್ನನ ಕಿರಿಮಗಳು – ಪ್ರಜ್ಞಾಳ (೩-೪ರ ಹರಯ) ಕಿವಿ ಸೇರಿ, ಆಕೆ ವರಾತ ಹಚ್ಚಿದ್ದು ತಮಾಷೆಯಿತ್ತು. ಅವಳು ಗಂಟಲು ನೋವು ಹಿಡಿಸಿಕೊಂಡಿದ್ದರೂ ಐಸ್ಕೋಲ್ಡ್ ಜ್ಯೂಸ್ (ಹಣ್ಣಿನರಸ) ದಕ್ಕುವವರೆಗೆ ಪುರಾಣ ಖ್ಯಾತಿಯ ಚಂಡಿಯೇ ಆದದ್ದು ಇತರ ಮಕ್ಕಳಿಗೂ ವರವಾಯ್ತು, ಉರಿಬಿಸಿಲಿನಲ್ಲಿ ಬಾಯ್ಕಟ್ಟಿದ್ದ ಕೆಲವರಾದರೂ ಹಿರಿಯ ಚಪಲಿಗರಿಗೂ ಒಳ್ಳೇ ನೆಪವಾಯ್ತು!

ಪೂರ್ವ ಸೂಚನೆಯಂತೆ ಸುತ್ತು ಬಳಸಿನ ದಾರಿ ಮತ್ತು ಸೇತುವೆಯಲ್ಲಿ ಬಂದ ನಮ್ಮ ವ್ಯಾನ್ ಜ್ಯೂಸ್ ದ್ವೀಪದಲ್ಲಿ ಕಾದಿತ್ತು. ಮತ್ತೆ ಅದರ ಚಾಲಕನ ಸಲಹೆ ಮೇರೆಗೆ ಭಾರತ್ ಟೂರಿಸ್ಟ್ ಹೋಮಿನ ಖ್ಯಾತ ಊಟ ಮುಗಿಸಿಕೊಂಡು ನೇರ ಬಂದರಕ್ಕೇ ಹೋದೆವು. ಸರಳ ಕೆಲಸಗಳನ್ನು ಜಿಡುಕುಗೊಳಿಸುವುದೇ ಸರಕಾರೀ ಕ್ರಮ. ಪೂರ್ವ ಸೂಚನೆಯಂತೇ ಊಟಕ್ಕೂ ಮೊದಲೇ ಪ್ರಸನ್ನ ಒಮ್ಮೆ ಪ್ರವಾಸೀ ಏಜಂಟರ ಕಛೇರಿಗೆ ಧಾವಿಸಿ ಕಡೇ ಮಿನಿಟಿಗೆ ಲಭ್ಯವಾಗುವ ಬೋರ‍್ಡಿಂಗ್ ಪಾಸ್ (ತಿಂಗಳ ಮೊದಲೇ ಹಣ ಪಡೆದಾಗಲೇ ಟಿಕೇಟ್ ರೂಪದಲ್ಲಿ ಕೊಟ್ಟಿದ್ದರೆ ಇವರ ಗಂಟೇನು ಹೋಗುತ್ತಿತ್ತೋ ಗೊತ್ತಿಲ್ಲ) ಸಂಗ್ರಹಿಸಿಕೊಂಡು ಬಂದಿದ್ದ. ಈಗ ಬಂದರ್ ಗೇಟಿನ ಹೊರಗೇ ಒಂದು ಕಿಷ್ಕಿಂದೆಯಲ್ಲಿ ನೂರಾರು (ಹಡಗಿನ ಪೂರ್ಣ ತಾಕತ್ತಿನ ಮೇಲೆ ಅದು ಏಳ್ನೂರರವರೆಗೂ ಹೋಗಬಹುದು) ಜನ, ತಮ್ಮ ಚಿಳ್ಳೆಪಿಳ್ಳೆಗಳನ್ನು ಸಾವಿರಾರು ಗಂಟುಗದಡಿಗಳನ್ನು ಸುಧಾರಿಸಿಕೊಂಡು ಭದ್ರತಾ ತಪಾಸಣೆಗೆ ಒಳಪಡಬೇಕಾಯ್ತು. ಮತ್ತೆ ಪ್ಯಾಸೆಂಜರ್ರು ಲಗ್ಗೇಜುಗಳನ್ನು ಕೇರ್ಫುಲ್ಲಾಗಿ ಸೆಪರೇಟಿಸಿ, ಟ್ರಾನ್ಸ್‌ಪೋರ್ಟಿಸಿ, ಬೋರ್ಡಿಂಗ್ ಮಾಡಿಸುವುದು ನಿಯಮ. ಹಾಗೇ ಜನಕ್ಕೆ ಬಸ್ಸೂ, ಸಾಮಾನುಗಳಿಗೆ ಲಾರಿಯೂ ಅಲ್ಲಿತ್ತು. ಆದರೆ ತಪಾಸಣೆಗೊಳಗಾದವರೂ ಇತರರ ಸಂಪರ್ಕಕ್ಕೆ ಬಾರದ ಸ್ಥಿತಿ ಅಲ್ಲಿರಲಿಲ್ಲ. ಮತ್ತೆ ತನಿಖೆಯ ಶಾಸ್ತ್ರಕ್ಕೊಳಪಟ್ಟ ಗಂಟುಗದಡಿಗಳು (ವಿಮಾನ ನಿಲ್ದಾಣದಂತೆ) ನಮ್ಮ ಸಂಪರ್ಕಕ್ಕೆ ಸಿಗದಂತೆ ನೋಡಿಕೊಳ್ಳುವ ಸಿಬ್ಬಂದಿ ಬಲವೂ ಅಲ್ಲಿರಲಿಲ್ಲ. ಸಂತೆಯಲ್ಲಿ ನಮ್ಮ ಚೀಲಗಳನ್ನು ನಾವೇ ಲಾರಿಗೆ ಹಾಕಿ, ಗುದ್ದಾಡಿ ಬಸ್ಸೇರಿ, ಹಡಗಿನ ಬುಡದಲ್ಲಿ ಮತ್ತೆ ಚೀಲಗಳನ್ನು ಎಳೆದಾಡಿ, ಬೋರ್ಡಿಂಗ್ ಪಾಸಿನ ತಪಾಸಣೆ ಮುಗಿಸಿ ಅಂತೂ ಇಂತೂ ತಣ್ಣನೆಯ ಕವರಟ್ಟಿ ಗರ್ಭ ಸೇರುವಾಗ… ಸುಮಾರು ಮೂರು ಗಂಟೆಗಳ ಕಾಲ ಸೋರಿಹೋಗಿತ್ತಾ ಆಗ ಸಂಜಿಯಾಗಿತ್ತಾ!