ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ ಭಾಗ – ೪

ಸಾರೋಟು ಏರಿಸಿ, ಫಟ್‌ಫಟೀಂತ ಬಂದದ್ದೇ ‘ಹೆದ್ದಾರಿ’ಯಲ್ಲಿ ಇನ್ನಷ್ಟು ಸುತ್ತಿಸಿ, ದಾರಿ ಮುಗಿದಲ್ಲಿ ಇಳಿಸಿದರು. ಎಡಕ್ಕೊಂದು ಹಳೆ ಶೈಲಿಯ ಕಟ್ಟಡವನ್ನು (ಹವಳದ ಗಿಟ್ಟೆಗಳನ್ನು ಕಲ್ಲಿನ ಹಾಗೆ ಬಳಸಿ) ಕುಟ್ಟಿ ಬೀಳಿಸುತ್ತಿದ್ದರು. ಅಲ್ಲೇ ಆಚೆಗೆ ಒಂದು ಸಿಹಿನೀರ ಹೊಂಡ (ಕೆರೆ – ಇದಕ್ಕೆ ಬಹಳ ದೊಡ್ಡ ಶಬ್ದವಾಯ್ತು). ನಮ್ಮ ಕಡಲ ಕಿನಾರೆ – ಬೆಂಗ್ರೆಯಲ್ಲೂ ಅಂಡಮಾನಿನಲ್ಲೂ ಇಂಥವೇ ಕುಡಿನೀರ ಹೊಂಡಗಳಿರುವುದನ್ನು ನಾನು ನೋಡಿದ್ದೇನೆ. ಆದರೆ ಈ ಕೆರೆ ಮಾತ್ರ ಪ್ಲ್ಯಾಸ್ಟಿಕ್, ಕಸ ಬಿದ್ದುಕೊಂಡು ಬರಿಯ ಕಟ್ಟಡದ ಕೆಲಸಕ್ಕೆ ಮಾತ್ರ ಬಳಸುವ ರೂಪದಲ್ಲಿತ್ತು. ಇಂಥದ್ದೇ ಇನ್ನೊಂದು ಮರುದಿನ ಮಿನಿಕಾಯ್ ಪೇಟೆಯ ಗಲ್ಲಿಯಲ್ಲೂ ನೋಡಿದೆವು. ಅಲ್ಲಿ ವಿಚಾರಿಸಿದಾಗ ಅದು ಊರ ದೊಡ್ಡ ಬಟ್ಟೆಗಳನ್ನು ಒಗೆಯುವುದಕ್ಕೆ ಮಾತ್ರ ಬಳಕೆಯಾಗುತ್ತದೆಂದು ಹೇಳಿದರು! ಭೇಟಿಕೊಟ್ಟ ಮೂರೂ ದ್ವೀಪಗಳಲ್ಲಿ ನಮಗೆ ಮನಸೋ ಇಚ್ಛೆ ಬಳಸಲು ಸಿಹಿನೀರ ಶವರ್ ಸುಖ ಒದಗಿಸಿದ್ದರು. ಕವರೆಟ್ಟಿ ದ್ವೀಪದಲ್ಲಂತೂ ನಲ್ಲಿ ನೀರ ರಭಸಕ್ಕೆ ತತ್ಕಾಲೀನ ಬಚ್ಚಲಿನ ಟ್ಯಾಪೇ ರಟ್ಟಿತ್ತು! ಎಲ್ಲಿಂದ ಒದಗಿಸಿದರೋ ನಾವು ಕೇಳಲು ಬಿಟ್ಟೇ ಹೋಯ್ತು. ಅಲ್ಲಿ ಕೆಲವೆಡೆ ಊರ ಮನೆಗಳಲ್ಲಿ ಸರಕಾರೀ ಪ್ರಾಯೋಜಿತ ಮಳೆನೀರ ಸಂಗ್ರಹದ ಬೋರ್ಡುಗಳು ಕಾಣಿಸಿದವು. ಮಿನಿಕಾಯ್ ದೀಪಸ್ತಂಭದ ಬಳಿಯ ಸರಕಾರೀ ವಠಾರದಲ್ಲಂತೂ ಛಾವಣಿಯಿಂದ ಮಳೆನೀರು ಸಂಗ್ರಹಿಸುವ ವ್ಯವಸ್ಥೆಯೊಡನೆ ಭಾರೀ ಟಾಂಕೀ ಮತ್ತು ಪಂಪು ಹೂಡಿದ್ದೂ ಕಾಣಿಸಿತು. ಆದರೆ ಅಲ್ಲಿ ಪೇರಿದ ಕಸ ಮತ್ತು ಮೇಲಿಂದ ಮೇಲೆ ಕಾಣುವಂತೆ ಸುರಿವ ಹಾಳುಕಳೆ ಎಲ್ಲ ಸರಿಯಿರಲಾರದು ಅಥವಾ ಸರಕಾರೀ ವ್ಯವಸ್ಥೆಗೆ ಸರಿಯಾಗಿಯೇ ಇದೆ ಎಂಬ ವಿಷಾದದ ಭಾವವೂ ಮೂಡಿಸಿತು. ಇಷ್ಟಾದರೂ ದ್ವೀಪಸಮೂಹದ ಊರವರೊಡನೆ ಅನೌಪಚಾರಿಕ ಮಾತುಕತೆಗಳಲ್ಲಿ ಕಾಣಿಸಿದ ಬಹುಮುಖ್ಯ ಕೊರತೆ ಸಿಹಿನೀರು! ಅಂದ್ರೇ ನಮ್ಮ ಮನಸೋ ಇಚ್ಛೆ ಶವರ್ರು? ಒಂದೆರಡು ತುಂಡು ಬಟ್ಟೆಯ ಸಮುದ್ರದುಪ್ಪು ಕಳೆಯಲು ಧಂಡಿ ಸಾಬೂನೋ ಡಿಟರ್ಜಂಟೋ ಕಲಸಿ ಬಚ್ಚಲ ತೂಬಿಗೆ ನಮ್ಮವರು ಇಳಿಸಿದ ಬಕೆಟ್ ಗಟ್ಟಳೆ ನೀರು? ನಾವು ಹೋದಲ್ಲಿ ಬಂದಲ್ಲಿ ಎದ್ದು ಕಾಣುವಂತೆ ಇಡುತ್ತಿದ್ದ DRINKING WATER ಡ್ರಂಗಳ ಬಳಿ ಒಂದೊಂದು ಸಿಪ್ ಮಾತ್ರ ಬಳಸಿದರೂ ಲೋಟ ತುಂಬಿ ಚಲ್ಲಿದ ಜೀವದ್ರವ? ಮರೀಬೇಡಿ, ಪ್ರವಾಸೋದ್ಯಮದ ಧ್ಯೇಯ ವಾಕ್ಯ – ಅತಿಥಿ ದೇವೋ ಭವ; ಆತಿಥೇಯ ಸತ್ತರೂ ಕೂಡಾ!

ಕೆಲವು ಮನೆ ದಾಟಿದ ಮೇಲೊಂದು ಸರಕಾರ ಪ್ರಾಯೋಜಿತ ಬನಿಯನ್ ಕಾರ್ಖಾನೆ. ಅಂದು ವಾರದ ರಜಾದಿನವಿದ್ದಂತಿತ್ತು (ಅದು ಆದಿತ್ಯವಾರ ಸರಿ. ಆದರೆ ಶುಕ್ರವಾರ ಬಿಡುವು ಬಯಸುವ ಏಕೈಕ ಧರ್ಮದ ಊರಿನಲ್ಲಿ ವಾರದ ರಜಾದಿನ ಬದಲಾಗಬಾರದ ಪಾವಿತ್ರ್ಯವೇನಿದ್ದೀತು?). ನೂಲು ಹುರಿ ಮಾಡುವ, ಹೆಣೆಯುವ, ಹೊಲಿಯುವ ವಿವಿಧ ನಮೂನೆಯ ಯಂತ್ರಗಳು ಎರಡು ಹಾಲ್ ತುಂಬಾ ಹರಡಿಕೊಂಡಿದ್ದವು. ಆದರೆ ಒಂದು ಯಂತ್ರದ ಮುಂದೆ ಮಾತ್ರ ಒಬ್ಬ ಅಜ್ಜ (ಬರಿಯ ಪ್ರದರ್ಶನಕ್ಕೂ ಇರಬಹುದು) ಕುಳಿತು ಏನೋ ಕಾರುಬಾರು ನಡೆಸಿದ್ದ. ಉಳಿದಂತೆ ಉದ್ದದ ಮೇಜೊಂದರ ಮೇಲೆ ಬನಿಯನ್ನುಗಳ ರಾಶಿ ಹಾಕಿಕೊಂಡು ಮೂರ್ನಾಲ್ಕು ಮಂದಿ ಮಾರಾಟಕ್ಕೆ ನಿಂತಿದ್ದರು. ಈ ಪ್ರವಾಸದ ತಯಾರಿಯ ದಿನಗಳಲ್ಲಿ ನಾನು ಕೊಳೆ ಬಟ್ಟೆ ಒಗೆದು, ಒಣಗಿಸಿ ಮರುಬಳಸುವುದನ್ನು ಅಸಾಧ್ಯವೆಂದೇ ಅಂದಾಜಿಸಿದ್ದೆ. ಹಾಗಾಗಿ ಕೊರತೆ ತುಂಬಲು ದೇವಕಿ ಮಂಗಳೂರಿನಲ್ಲಿ ತಲಾ ಎಂಬತ್ತು ರೂಪಾಯಿ ಕೊಟ್ಟು ನಾಲ್ಕೈದು ಬನಿಯನ್ನು ಕೊಂಡಿದ್ದಳು. ಹೆಚ್ಚು ಕಡಿಮೆ ಅದೇ ಗುಣಮಟ್ಟದ ಬನಿಯನ್ನಿಗೆ ಇಲ್ಲಿ ಮೂವತ್ತು ರೂಪಾಯಿ! ಇದು ತಿಳಿದಾಗ ಪ್ರವಾಸಿಗಳಲ್ಲಿ ಹೆಚ್ಚಿನವರು ವಾಪಾಸು ಊರು ಸೇರಿದ ಮೇಲೆ ಬನಿಯನ್ ಅಂಗಡಿ ತೆರೆಯುವವರಂತೆ ಕೊಂಡರು! ನಮ್ಮ ಪ್ರವಾಸೀ ಸದಸ್ಯನೊಬ್ಬ ಕೊನೆಯಲ್ಲಿ ಒಂದೇ ಬನಿಯನ್ನು ಕೊಂಡರೂ ತನ್ನ ‘ಪೇಟೆ’ ಬುದ್ಧಿ ತೋರಿಸಿದ್ದನ್ನು ನಾನು ವಿಶೇಷ ಗಮನಿಸಿದೆ. “ನಾವೆಲ್ಲಾ ಇಷ್ಟು ಬನಿಯನ್ ಖರೀದಿಸಿದೆವಲ್ಲಾ, ಇದು ಉಚಿತ ಕೊಡಿ.” ಆತನೋ ಅಥವಾ ಇನ್ಯಾರಾದರೂ ಮತ್ತಷ್ಟು ಮುಂದುವರಿದು ಒಂದೆರಡು ಬನಿಯನ್ನು ಕದ್ದು ಒಯ್ದಿದ್ದರೂ ಆಶ್ಚರ್ಯವಿಲ್ಲ. ಆ ಭೋಳೇ ಜನ ಎಲ್ಲೂ ನಮ್ಮ ಮೇಲೆ ಪೋಲಿಸ್ ಕಣ್ಣು ಇಡಲೇ ಇಲ್ಲ!

ಲಕ್ಷ ದ್ವೀಪ ಪರಿಸರದಲ್ಲಿ ಹತ್ತಿ ಬೆಳೆಯುವುದು ಅಸಾಧ್ಯ. ಬನಿಯನ್ನಿಗೆ ಬೇಕಾದ ಕಚ್ಚಾವಸ್ತು, ಪರಿಷ್ಕರಿಸುವ ಯಂತ್ರ ಮತ್ತು ಪರಿಣತಿ, ನಿರ್ವಹಣಾ ವೆಚ್ಚ ಮತ್ತು ಕೊನೆಯಲ್ಲಿ ಮಾರುಕಟ್ಟೆಯೂ ಈ ದ್ವೀಪಕ್ಕೆ ವಿದೇಶೀಯ! ಪ್ರತಿಯೊಂದಕ್ಕೂ ‘ಸಹಾಯಧನ’ ತುಂಬಿ ಸರಕಾರ ಕಲ್ಪಿಸುವ ಈ ಸ್ವಾವಲಂಬನೆ ಎಷ್ಟು ಸರಿ? ಇಲ್ಲಿನ ಜನಗಳು ಅಂಡಮಾನೀ ಮೂಲವಾಸಿಗಳಂತೆ ಮಾನವ ವಿಕಾಸದ ಸ್ವತಂತ್ರ ಕವಲೇನೂ ಅಲ್ಲ. ಕ್ರಿ.ಶ. ಸುಮಾರು ಆರರಿಂದ ಇಲ್ಲಿ ನೆಲೆಸಿರುವ ಜನ ಮೂಲತಃ ಕೈರಳೀಯರು. ಮನುಷ್ಯ ಮಿತಿಯಲ್ಲಿ ಬಲು ದೀರ್ಘ ಕಾಲದ ಧಾರ್ಮಿಕ ಹಾಗೂ ರಾಜಕೀಯ ಪಳಗುವಿಕೆಯಿಂದ ಮೂಡಿರುವ ಅವರ ಸಾಮಾಜಿಕ ಮೌಲ್ಯಗಳು ಅನನ್ಯ. ಅವರ ‘ಮೂಲವಾಸಿ’ ಸ್ಥಾನಮಾನ ವಿಭಿನ್ನ ಎನ್ನುವುದನ್ನು ‘ಅಭಿವೃದ್ಧಿ’ ಕಾರ್ಯಕ್ರಮಗಳು ಅರ್ಥ ಮಾಡಿಕೊಳ್ಳಲು ಸೋತಿವೆ. ಕಡಲು, ತೆಂಗು ಇಲ್ಲಿ ಸಮೃದ್ಧ. ತೆಂಗು ತೀವ್ರ ತೊಡಗಿಕೊಳ್ಳಬೇಕಾದ ಕೃಷಿ ಏನೂ ಅಲ್ಲವಾದ್ದರಿಂದ ಇಂದು ಇಲ್ಲಿನ ಬಹುಪಾಲು ಗಂಡಸರು ನಾವಿಕ ವೃತ್ತಿಯಲ್ಲಿ ಹೊರಗಿದ್ದಾರೆ. (ಭಾರತ ಎಂಬ) ದೇಶದ ದೊಡ್ಡ ಕಲ್ಪನೆಯೊಂದಿಗೆ ಇವರನ್ನು ಬೆಸೆಯಲು ವಿದ್ಯೆ, ಆರೋಗ್ಯಗಳಷ್ಟೇ ನೆಲಕ್ಕೆ ಸಹಜವಾದ ವೃತ್ತಿ ಅವಕಾಶಗಳು ಮತ್ತು ಪೂರೈಕೆಗಳತ್ತ ಮಾತ್ರ ಸರಕಾರ ಗಮನ ಹರಿಸುವುದು ಅವಶ್ಯವಿತ್ತು. ಹಾಗಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ಎರಡು ದಿನ ಕಳೆದು ನಾವು ದ್ವೀಪ ಸ್ತೋಮದ ರಾಜಧಾನಿ ಕವರಟ್ಟಿಯಲ್ಲಿ ಕಾರ್ಮಿಕ ಸಂಘಟನೆಯ ಧ್ವಜ ಪತಾಕೆಗಳು ಕಂಡೆವು. ದ್ವೀಪಸ್ತೋಮದಲ್ಲಿ ಎಲ್ಲೂ ಕಾಣಸಿಗದ ಪೋಲಿಸ್(!) ಬಂದೋಬಸ್ತಿನಲ್ಲಿ ಏನೋ ಸಂಘರ್ಷವನ್ನು ತಣಿಸುವ (ದಮನಿಸುವ?) ಪ್ರಯತ್ನವಂತೂ ದ್ವೀಪ ಸಮೂಹವನ್ನು ‘ಮಹಾನ್‌ಭಾರತದ’ದೊಂದಿಗೆ ಪರಿಪೂರ್ಣವಾಗಿ ಬೆಸೆದಂತೇ ಕಂಡು ಮನಸ್ಸು ಭಾರವಾಯ್ತು.

ಮತ್ತೊಂದು ಆಧುನಿಕ ಕಾಂಕ್ರೀಟ್ ಮನೆಯಲ್ಲಿ ಎಂತದ್ದೋ ವಿಚಿತ್ರ ಅವಸ್ಥೆಯಲ್ಲಿ ಪ್ರಾದೇಶಿಕ ಕಲಾಕೃತಿಗಳದ್ದೋ ವಸ್ತುಗಳದ್ದೋ ಮಾರಾಟ ಮಳಿಗೆಗೊಯ್ದು ಬಿಟ್ಟರು. ಅದೂ ಇನ್ನೊಂದು ಸರಕಾರೀ ಸರ್ಕಸ್. ಹೋದ ಹೋದ ಜಾಗಗಳಲ್ಲಿ ಸ್ಮರಣಿಕೆ ಸಂಗ್ರಹಿಸುವ ಹುಚ್ಚರು ಕೆಲವರು ತಂತಮ್ಮ ಮನೆಗಳಿಗೆ ಇಲ್ಲಿನ ಕೆಲವು ಕಸಗಳನ್ನು ಖರೀದಿಸಿರಬೇಕು. ಪ್ರಸನ್ನನಿಗೆ ಏರ್ ಕಂಡೀಶನರ್ ಮತ್ತು ಚಿಲ್ಲ್ಡ್ ವಾಟರ‍್ಗಳ ಪರಿಣಾಮವಾಗಿ ಗಂಟಲು ನೋವು ಅಮರಿಕೊಂಡಿತ್ತಂತೆ. ಅದಕ್ಕೆ ಸರಿಯಾಗಿ ಅಲ್ಲೇನೋ ವನಸ್ಪತಿ ತಯಾರಿ ಎಣ್ಣೆ ಸಿಕ್ಕಿತೆಂದು ಖರೀದಿಸಿದ. ಮತ್ತೆ ನೋಡಿದರೆ ಅದರ ಡಬ್ಬಿ ಮೇಲಿದ್ದ ಮುದ್ರಿತ ಆಯುಷ್ಯ ಮುಗಿದು ವರ್ಷವೇ ಸಂದುಹೋಗಿತ್ತು. ಆದರೆ ಸಾಂಪ್ರದಾಯಿಕವಾಗಿ ನಮಗೆ (ಭಾರತೀಯರಿಗೆ) ಆಯುರ್ವೇದದ ಬಗೆಗಿರುವ ಮೋಹ ಮತ್ತು ಮೂಢ ನಂಬಿಕೆ ಪ್ರಸನ್ನನಿಗೆ ಕಡಿಮೆಯಿರಲಿಲ್ಲ. ಆಯುರ್ವೇದೀಯ ಔಷಧಗಳು ಹಳತಾದಷ್ಟೂ ವಿಘಟನೆಗೊಳ್ಳುವುದಿಲ್ಲ, ಬದಲಿಗೆ ಸತ್ತ್ವಹೆಚ್ಚಿಸಿಕೊಳ್ಳುತ್ತವೆ ಎಂದು ಅದನ್ನೇ ಬಳಸಿದ! ಪುಣ್ಯಕ್ಕದು ಹೊಟ್ಟೆಗೆ ಸೇವಿಸುವಂತದ್ದಾಗಿರಲಿಲ್ಲ, ಬರಿಯ ಲೇಪನದ್ದು. ಅದರ ಪರಿಣಾಮದ ಕುರಿತು ಅಭಿಪ್ರಾಯಗಳು ಏನೇ ಇರಲಿ, ಮಾರಣೇ ದಿನ ಅವನಿಗೆ ನೋವು ಉಪಶಮನಗೊಂಡದ್ದು ಮಾತ್ರ ಸಂತೋಷದ ವಿಷಯ.

ಕಲ್ಪೆನಿಯ ಕೊನೆಯ ಐಟಂ – ದ್ವೀಪದ ಬಲು ದೀರ್ಘ ಮರಳ ಕೊನೆ. ರಿಕ್ಷಾಬ್ಯಾಕ್‌ನಲ್ಲೇ ಒಯ್ದು, ದ್ವೀಪದ ಹಸಿರು ಮುಗಿದಲ್ಲಿ ಕಟ್ಟಿದ ಒಂದು ಸಣ್ಣ ವಿಶ್ರಾಂತಿ ಕಟ್ಟೆಯಲ್ಲಿಳಿಸಿದರು (ಜರ್ದಾಪಟ್ಟಿ, ಕುರುಕುಲು ಮತ್ತು ಕುಡಿಯುವ ನೀರಿನ ಬಾಟಲಿ ಮಾರುವ ಒಂದು ಚಿಲ್ಲರೆ ಅಂಗಡಿ ಅಲ್ಲಿ ಅನಧಿಕೃತವಾಗಿ ಸೇರಿಕೊಂಡಿತ್ತು). ಮುಂದೆ ಕನಿಷ್ಠ ಅರ್ಧ ಕಿಮೀ ಉದ್ದಕ್ಕೆ ದ್ವೀಪರಾಣಿ ಕಡಲ ನೀಲಿಮೆಯೊಳಗೆ ಬಿಳಿಮರಳ ತೋಳು ಚಾಚಿದ್ದಳು. ಸಮುದ್ರರಾಜನ ಪ್ರೇಮಪೂರ್ಣ ನೇವರಿಕೆ ಮನೋಹರವಾಗಿತ್ತು. ಮೇಲ್ಮೈಯಲ್ಲಿ ಈ ಬಿಳಿಮರಳ ಹಾಸುಹೊದ್ದ ಹವಳದ ದಂಡೆ ಇನ್ನಷ್ಟು ಬಲವಾಗಿಯೂ ಉದ್ದವಾಗಿಯೂ ಇತ್ತಂತೆ. ದಶಕದ ಹಿಂದಿನ ಕುಖ್ಯಾತ ಸುನಾಮೀ ಎಲ್ಲ ಕುಟ್ಟಿ ಪುಡಿಮಾಡಿತ್ತು. ಆ ಕೊನೆಯಲ್ಲಿ ತೆರೆ ಸರಿದಾಗ ಅದರ ಅವಶೇಷಗಳು ಬಿಟ್ಟು ಬಿಟ್ಟು ಕಾಣುತ್ತಿತ್ತು. ಅದನ್ನು ದೃಷ್ಟಿಯಲ್ಲೇ (ಅಂದು ನಡೆಯುವುದು ಅಸಾಧ್ಯ ಮತ್ತು ತೀರಾ ಅಪಾಯಕಾರಿ ಇತ್ತು) ಅನುಸರಿಸಿ ಮುಂದುವರಿದರೆ ಮತ್ತೆ ಸಣ್ಣದಾಗಿ ಹಸುರುಹೊತ್ತ ದ್ವೀಪವೂ (ಚೆರಿಯಂ) ಕಾಣುತ್ತದೆ. ಆದರೆ ಅಂದು ರಣಗುಡುತ್ತಿದ್ದ ಬಿಸಿಲು ನಮ್ಮಲ್ಲಿ ಬಹುತೇಕ ಮಂದಿಯನ್ನು ಸೋಮಾರಿ ಕಟ್ಟೆ (ವಿಶ್ರಾಂತಿ ಕಟ್ಟೆಯ ಅಪಭ್ರಂಶ) ಸದಸ್ಯರನ್ನಾಗಿಸಿತು. ಕೆಲವರು ಮರಳ ಹಾಸಿನ ಕೊನೆಯಲ್ಲಿ, ತತ್ಕಾಲೀನ ನೆರಳಿಗಾಗಿ ತೆಂಗಿನ ಗರಿಗಳನ್ನು ಕಟ್ಟಿ ನಿಲ್ಲಿಸಿದ್ದ ಚಪ್ಪರದವರೆಗೂ ಕಾಲೆಳೆದು ಹೋಗಿ ಬಂದರು. ದಂಡೆಯುದ್ದಕ್ಕೂ ಪೇರಿಕೊಂಡ ಹವಳದ ಚೂರುಗಳು ಒಂದೊಂದೂ ಮೋಹಕ ಅಸಂಗತ ಶಿಲ್ಪ. ಅದು ಅಕ್ಷಯ ತೃತೀಯದ ಮೌಢ್ಯಕ್ಕೆ ಕಾಯದ ಅಪೂರ್ವ ಕುಸುರಿಗಳ, ಅಸಂಖ್ಯ ಜವಾಹಿರಿಗಳ ನಿತ್ಯ ಬಜಾರ್. ಇದು ಬೇಡ ಅದು, ಅದಕ್ಕೂ ಚೆನ್ನ, ಮತ್ತದಕ್ಕೂ ಉತ್ತಮ, ಇದರ ಬಿಟ್ಟರೆ ಇಲ್ಲ ಎಂದು ಹೆಕ್ಕು, ಬಿಕ್ಕು ನಡೆಸಿದೆವು. ಕೆಲವರು ಇತರರ ಕಣ್ಣು ತಪ್ಪಿಸಿ ಸಣ್ಣಪುಟ್ಟದ್ದನ್ನು ಜೋಳಿಗೆಗೆ ಸೇರಿಸಿದ್ದೂ ಆಯ್ತು. ಆದರೆ ಹವಳ ಹೆಕ್ಕುವುದು ಕಾನೂನು ಬಾಹಿರ ಎನ್ನುವುದು ಸ್ಪಷ್ಟವಾದಮೇಲೆ ಅವನ್ನೂ ಹೊರಗೆ ಹಾಕಿ, ವಾಪಾಸಾಗುವ ದಾರಿಯಲ್ಲಿ ಎಂ.ವಿ ಕವರಟ್ಟಿಗೆ ಹೊರೆ ದ್ವಿಗುಣವಾಗುವ ಅಪಾಯ ಕಡಿಮೆಮಾಡಿದರು!

ಮೊದಲೇ ಹೇಳಿದಂತೆ ನಮ್ಮ ಹಡಗು – ಎಂ.ವಿ ಕವರಟ್ಟಿ ನಮ್ಮನ್ನು ವಿಲಾಸೀ ಯಾತ್ರೆಗೊಯ್ಯುವುದರ ಜೊತೆಗೆ ದ್ವೀಪವಾಸಿಗಳಿಗೆ ಸಾರಿಗೆ ಸೌಲಭ್ಯವನ್ನೂ ಕಲ್ಪಿಸಲೇಬೇಕಿತ್ತು. ಹಾಗಾಗಿ ನಮ್ಮನ್ನು ಕಲ್ಪೆನಿಯಲ್ಲಿಳಿಸಿದ ಹಡಗು ಸುಮಾರು ಮೂರು ಗಂಟೆಯ ಪ್ರಯಾಣ ದೂರದ ಇನ್ನೊಂದು ದ್ವೀಪಕ್ಕೆ ಮಾಮೂಲೀ ಭೇಟಿ ನೀಡಿ, ಜನ ಸಾಮಾನುಗಳ ವಿಲೇವಾರಿ ಮುಗಿಸಿ ಮರಳುವವರೆಗೆ ಕಾಯುವಿಕೆ ಅನಿವಾರ್ಯ. ಮತ್ತೆಷ್ಟೋ ಹೊತ್ತಿಗೆ ನಮ್ಮ ಸವಾರಿ ಮೂಲ ಶಿಬಿರಕ್ಕೆ ಮರಳಿತು. ಕಾಫಿ ಬಿಸ್ಕತ್ತುಗಳ ಉಪಚಾರ, ಒಣಗಲು ಹಾಕಿದ್ದ ಬಟ್ಟೆಬರಿಗಳ ಸಂಗ್ರಹದೊಡನೆ ದಕ್ಕೆಗೆ ಮರಳಿದೆವು. ನೀಲಿಯ ಹಾಸಿನ ಮೇಲೆ ಬೆಳ್ಳಿಯ ಬೊಂಬೆ ನಮ್ಮ ಹಡಗು. ಸಂಜೆಯ ಹೋಳಿಯ ನಡುವೆ ನಾವದರಲ್ಲಿ ಲೀನವಾದೆವು. ಕಲ್ಪೆನಿಯೆಂಬ ಗೀಟು ಕತ್ತೆತ್ತಿ ಕಣ್ಣು ಮಿಟುಕಿಸಿ ಮರೆಯಾಗುತ್ತಿದ್ದಂತೆ, ಆಗಸದ ವರ್ಣವೈವಿಧ್ಯವೆಲ್ಲ ಕತ್ತಲಲ್ಲಿ ಕರಗುತ್ತಿದ್ದಂತೆ ನಾವು ನಾವಾದೆವು.

ನಮ್ಮ ಮಿತ್ರ ಹಾಗೂ ಬಂಧುವರ್ಗದಲ್ಲಿ ಕಡಲಯಾನವನ್ನು ಅನುಭವಿಸಿದವರದ್ದೆಲ್ಲ ಒಂದೇ ಅಪಸ್ವರ – ಸಂಕಟ, ವಾಂತಿ. ಕೆಲವು ವರ್ಷಗಳ ಹಿಂದೆ ಅಂಡಮಾನಿಗೆ ಹೋಗಿದ್ದ (ಚಿಕ್ಕಪ್ಪನ ಮಕ್ಕಳು) ಜಯಲಕ್ಷ್ಮೀ ಜ್ಞಾನಶೇಖರ್ ಅಥವಾ ರವಿಶಂಕರ್, ಲಕ್ಷದ್ವೀಪಕ್ಕೇ ಹೋಗಿ ಪುಸ್ತಕ ಬರೆದ ಉಷಾ ಪಿ. ರೈ ಇವರ ಕಡಲಯಾನದ ಸ್ಥಾಯೀ ಭಾವ ಸಾಗರ-ಸಂಕಟ – Sea-sickness. ಗೆಳೆಯ ರೋಹಿತ್ ವಿದ್ಯಾರ್ಥಿ ದೆಸೆಯಲ್ಲೊಮ್ಮೆ ಮತ್ತೆ ಎರಡು ವರ್ಷದ ಕೆಳಗೂ ಒಮ್ಮೆ ಲಕ್ಷದ್ವೀಪಕ್ಕೇ ಹೋಗಿಬಂದವ. ಈತ ಮಹಾ ಮಾತಾಳಿ. ಕಲ್ಲು, ಮರ ಸಿಕ್ಕ ಜನ, ಇದ್ದಬಿದ್ದ ವಿಷಯಕ್ಕೆಲ್ಲ ಈತನಲ್ಲಿ ಮಾತಿದೆ. (ಹಾಗೇಂತ ಖಾಲಿ ಬುರುಡೆಯಲ್ಲ, ಗಟ್ಟಿ ಅನುಭವವಿದೆ.) ಇಷ್ಟು ಮಾತಾಡಿದ್ದು ಸಾಲದೂಂತ ಹವ್ಯಾಸಿ ರೇಡಿಯೋ ಹಿಡಿದು, ಮನೆಯಲ್ಲೇ ಕೂತು, ಆಚೀಚೆ ವಿದೇಶೀ ನುಡಿಗಟ್ಟುಗಳ ಕೋಶ ಇಟ್ಟುಕೊಂಡು ಖಂಡಾಂತರದಲ್ಲೂ ಮಾತು ಬೆಳೆಸಿದ್ದಾಯ್ತು. ಸ್ವಲ್ಪ ತಿರುಗಾಡಿಯೂ ಮಾತು ಬೆಳೆಸಲು ಈತನ ಹವ್ಯಾಸಿ ರೇಡಿಯೋ ಬಳಗ ಲಕ್ಷದ್ವೀಪಕ್ಕೆ ಲಗ್ಗೆಹಾಕಿತು. ಹಡಗಿನಲ್ಲಿ ಇವನ ಸ್ಕೌಟ್, ನಕ್ಷತ್ರ ವೀಕ್ಷಣೆ, ಪಕ್ಷಿವೀಕ್ಷಣೆ ಎಲ್ಲಕ್ಕೂ ಮಿಗಿಲಾಗಿ ರೇಡಿಯೋ ಸಾಹಸಗಳೆಲ್ಲಾ ಕೇಳಿ ಕಪ್ತಾನ ಇವನಿಗೆ ಚಿತ್. ತನ್ನ ಕ್ಯಾಬಿನ್ನಿನಲ್ಲೇ ಕೂರಿಸಿಕೊಂಡು ಹಡಗು ಚಲಾವಣೆಯ ಅವಕಾಶವನ್ನೂ ಕೊಟ್ಟಿದ್ದ ಎಂದರೆ ಯಾರಿಗೂ ನಂಬದಿರಲು ಸಾಧ್ಯವಿಲ್ಲ. ಇಷ್ಟೆಲ್ಲಾ ಯಾಕೆ ಹೇಳಿದೆನೆಂದರೆ ಅಂಥಾ ಕಪ್ತಾನನೂ ಅರಬೀ ಸಮುದ್ರದ ಅದೊಂದು ಭಾಗದಲ್ಲಿ (ಭಾರತದ ಮುಖ್ಯ ಭೂಮಿಯಲ್ಲಿ ಪಶ್ಚಿಮ ಘಟ್ಟದ ಪಾಲ್ಘಾಟ್ ಗ್ಯಾಪಿಗೆ ಹೊಂದಿದ ಸಮುದ್ರ ಭಾಗ) ರೋಹಿತನ ಬಳಗವನ್ನೆಲ್ಲ ಅವರವರ ಕೋಣೆಗಳಿಗೆ ಸೀಮಿತವಿರುವಂತೆ ಹೊರಗಟ್ಟಿ, ಹಡಗಿನ ನಿಯಂತ್ರಣಕ್ಕೆ ನಿಲ್ಲುವಷ್ಟು ನೀರಿನಲ್ಲಿ ಉಲ್ಲೋಲಕಲ್ಲೋಲವಂತೆ. ಎರಡು ದಿನದ ಹಿಂದೆ ತಿಂದದ್ದೂ ವಾಂತಿಯಾಗಿ ಬಂದರೆ ಆಶ್ಚರ್ಯವಿಲ್ಲಂತೆ. ಆದರೆ ಆದರೆ…

ಅಂದು (ಮುಂದಿನ ಮೂರೂ ದಿನವೂ) ಕವರಟ್ಟಿಯ ತಾರಸಿಯಲ್ಲಿ ನಮ್ಮ ಬಳಗ ಕಡಲ ಸಂಕಟ ಎನ್ನುವುದೇ ಸುಳ್ಳು ಎನ್ನುವಂತಿತ್ತು. ಅಂದಂತೂ ಹಗಲಿನ ಬಿಸಿಲು ಹುರಿದದ್ದು ಸುಳ್ಳು, ಉಪ್ಪು ನೀರಿನಲ್ಲಿ ನೆಂದದ್ದು ಸುಳ್ಳು, ಲಗೂನ್ ಸುತ್ತಿ ಕಾಲು ಬಿದ್ದದ್ದೂ ದೋಣಿ ಚಲಾಯಿಸಿ ಕೈ ಸೋತದ್ದೂ ಸುಳ್ಳೇ ಸುಳ್ಳು ಎನ್ನುವಂತೆ ಉಲ್ಲಾಸದ ಜಾಡ್ಯ ಎಲ್ಲೆಡೆ ಪಸರಿಸಿತ್ತು. ಹಡಗಿನ ಅರ್ಧ ತೂಗಾಟಕ್ಕೆ ಇವರೇ ಕಾರಣವೋ ಎನ್ನುವಂತೆ ಉತ್ಸಾಹದಲ್ಲಿ ಪುಟಿಯುತ್ತಿದ್ದರು. ರಾಮಚಂದ್ರ ಭಟ್ಟರೋ ರಂಜಿನಿಯಮ್ಮನೋ ಪ್ರೀತಿಗೆ ಮಾತ್ರ ಹಿರಿತನ ಉಳಿಸಿಕೊಂಡು, ಜವಾಬ್ದಾರಿಯನ್ನು ಮಕ್ಕಳಿಗೆ ಒಪ್ಪಿಸಿದ ಧನ್ಯರು. ಪ್ರಾಯ ಸಹಜವಾದ ಸಣ್ಣಪುಟ್ಟ ಗಂಟು/ ಸೊಂಟ ನೋವೆಂದರೂ ಬನ್ನಿ ಎಂದರೆ ತಾರಸಿಯಲ್ಲೂ ಇದ್ದಾರೆ, ಟೀವೀ ಕೋಣೆಯ ಪ್ರೇಕ್ಷಕರೂ ಹೌದು, ಎಲ್ಲ ಬಿಟ್ಟು ಯಾರದ್ದೇ ಕೋಣೆಯ ಪಟ್ಟಾಂಗಕ್ಕೂ ಸೈ. ಕಾಡುಬೆಟ್ಟ, ಹತ್ತೆಂಟು ಊರು ಸುತ್ತಿದ ಅನುಭವದಲ್ಲಿ ಪ್ರಸನ್ನ, ಅವನ ಧೈರ್ಯದಲ್ಲಿ ಗೀತಾ, ರಜೆಯಲ್ಲಿ ಚನ್ನೈಯಿಂದ ತವರಿಗೆ ಬಂದ ಹಕ್ಕಿನಲ್ಲಿ ಪ್ರತಿಭಾ ಮಕ್ಕಳನ್ನು ಕಣ್ಣಳವಿಯೊಳಗೆ ಇಟ್ಟುಕೊಂಡರೂ ಲಗಾಮು ಕಳಚಿ ಬಿಟ್ಟಿದ್ದರು! ಯಾರೂ ಹೊರಿಸದೇ ರಕ್ಷಣಾ ಹೊರೆ ಹೊತ್ತ ಸಂಕಟ ವಾಸುದೇವರಾಯರದ್ದು. ಇವರು ಸ್ವಭಾವತಃ ಆಟಸುತ್ತಾಟ ವಿದೂರರಂತೆ. ಸಹಜವಾಗಿ ಹೆದರಿಕೆ, ಕಾಳಜಿ ಸ್ವಲ್ಪ ಹೆಚ್ಚೇ. ಲಾವಣ್ಯ ಚೇತು ಏನೋ ಅಪ್ಪನ ಆತಂಕವನ್ನು ಒಗ್ಗಿಸಿಕೊಂಡು ಮಿತಿಯಲ್ಲಿರಲು ಕಷ್ಟಪಡುತ್ತಿದ್ದರು. ಮುದ್ದಿನ ಸೊಸೆಯಂದಿರು ವಿಭಾ ಅವಳಿಗಿಂತಲೂ ಸಣ್ಣವಳು ಪ್ರಜ್ಞಾ, ಕಿವಿಗೆ ಗಾಳಿಹೊಕ್ಕ ಕರುವಿನಂತೆ ತಾರಸಿಯಲ್ಲಿ ತುಕುಡಪ್ಪಯ್ಯ ಲಾಗ ಹೊಡೆಯುವಾಗ ರಾಯರೂ ಹಿಂದೆಯೇ ಓಡಿದರು, ರಾಗ ತಾರಕ್ಕೇರಿತು. ಕೃಶಿ ಪುತ್ರಿ ನೀತಿಗೆ ಚೇತುವಿನದೇ ಪ್ರಾಯವೇನೋ ಇರಬಹುದು ಆದರೆ ಸಾರ್ವಜನಿಕದಲ್ಲಿ ಸಂಕೋಚ ಜಾಸ್ತಿ. ಅಪ್ಪ – ಕೃಶಿಯೋ ನಿತ್ಯ ಕತ್ತರಿಚೂರಿಯ ಢಾಕೂ (ಶಸ್ತ್ರ ಚಿಕಿತ್ಸಾ ವೈದ್ಯ), ಇಲ್ಲಿ ದಿನವಿಡೀ ಹಿಡಿ, ಹೊಡಿ ಸಂಸ್ಕೃತಿಯ ನೇತಾರ. ಕೈಯಲ್ಲಿ ಮಡಿಚಿದ ಮುಕ್ಕಾಲಿ, ಕತ್ತಿಗೆ ನಾಲ್ಕೆಂಟು ಪದಕ. ಹೋದಲ್ಲಿ ಬಂದಲ್ಲಿ ಆ ಕ್ಯಾಮರಾ ಈ ಲೆನ್ಸು, ಲೋಲೈಟು ಬ್ಯಾಕ್ ಲೈಟು, ಯಾಂಗಲ್ಲು ಅಪರ್ಚರ್ರು ಕೇಳ್ತಾ ಕೂತರೆ ನೀತಿಗೆ ಮುಗ್ಯುದಿಲ್ಲಾ ಟಾರ್ಚರ್ರೂ! (ಈಗ ಇಲ್ಲೇ ಸಮಾನಾಂತರದಲ್ಲಿ ನೀವೇ ನೋಡುತ್ತಿದ್ದೀರಿ ಕೃಶಿ ಹಿಡಿದ ಚಿತ್ರಗಳನ್ನು, ಹೊಡೆದ ದೃಶ್ಯಗಳನ್ನು) ಸಹಜವಾಗಿ ಅಮ್ಮ ಸೀಮಾರದ್ದೇ ಪೂರ್ಣ ಉಸ್ತುವಾರಿ. ಸೀಮಾ ನೀತಿ ನಿಯಂತ್ರಣಕ್ಕಿಂತಲೂ ಹೆಚ್ಚಿಗೆ ಆಕೆ ಮಕ್ಕಳ ಬಳಗದಲ್ಲಿ ಮುಕ್ತಗೊಂಡ ಬಗ್ಗೆ ಕುಶಿಯಲ್ಲಿದ್ದರು.

ವಾಸುದೇವರಾವ್ ಜೈ! ಪ್ರಜ್ಞಾ ವಿಭಾರನ್ನು ಹೇಗೋ ಹಿಡಿದು, ತಾರಸಿಯ ಮಧ್ಯ ಚಕ್ಕಳಮಕ್ಕಳ ಹಾಕಿ ಕೂರಿಸಿ, “ಒಂದು ಗುಬ್ಬಿ ಬಂತೂ ಒಂದು ಅಕ್ಕಿ ಕಾಳು ತಿಂತೂ” – ಕಥಾಕಾಲಕ್ಷೇಪ ಸುರುಮಾಡಿದರು. ನಿತ್ಯ ಹತ್ತೆಂಟು ಮ್ಯಾನೇಜ್ಮೆಂಟ್ ಗುರುಗಳ ಅನುಭವ ಸಾರ ಹಿಡಿದು ನೂರೆಂಟು ನೌಕರರಿಂದ ಉತ್ತಮ ಕೆಲಸ, ಸಾವಿರಾರು ಗಿರಾಕಿಗಳಿಂದ ಅವಿಚ್ಛಿನ್ನ ಒಲವು ಗಳಿಸುವ ಪಾರ್ಶ್ವನಾಥ್ ಇಲ್ಲಿ ಕೇವಲ ಕೃಶಿಗೆ ಸಾಥ್. ಇವರ ಕೊರಳಿಗೂ ಕ್ಯಾಮರಾಗಳ ಹಾರ, ನೋಡಿದ್ದಕ್ಕಿಂತ ಹೆಚ್ಚಿಗೆ (ಹೆದರಬೇಡಿ, ದೃಶ್ಯಗಳನ್ನು ಮಾತ್ರ) ಹಿಡಿಯುವ ಹುನ್ನಾರ. ಇವರ ಹೆಂಡತಿ, ಸುಧಾ; ಮೂಢಬಿದ್ರೆಯಲ್ಲಿ ಸುಧಾ ಟೀಚರ್. ನಾಲ್ಕು ಗೋಡೆಗಳ ನಡುವೆ (ತರಗತಿ) ಮಕ್ಕಳನ್ನು ಹಿಡಿದಿಟ್ಟು ಗೋಳಾಡಿಸುವುದು ಅಲ್ಲಿ ಅನಿವಾರ್ಯ ಕರ್ಮ. ಓಡುವಂತಿದ್ದರೆ ಅವಿಶ್ರಾಂತ ದಿಗಂತ, ನೋಡುವಂತಿದ್ದರೆ ತಾರೆಗಳೋ ಅನಂತ. ಕತ್ತಲು ಘನಿಸಿದರೂ ಮೇಲೆ ಕವುಚಿದೆ ಕಲ್ಪಾಂತರಗಳ ಕನಸು – ಆಕಾಶ, ಕೆಳಗಿನಿಂದ ಎತ್ತಿದೆ ಖಂಡಾಂತರಗಳ ತೊಟ್ಟಿಲು – ಸಾಗರ. ಸುಧಾಟೀಚರ್ ವಾಸುಮಾಸ್ಟ್ರ ಕ್ಲಾಸು ಬಿಡಿಸಿ ಗೇಮ್ಸ್ ಕೊಟ್ಟರು! ಈಗ ಮಕ್ಕಳು ಮಾತ್ರವಲ್ಲ, ಅಮ್ಮಂದಿರೂ ಮಕ್ಕಳೇ! ವಿಭಾ ಟೊಪ್ಪಿಯಾಟದಲ್ಲಿ ಅವಳಮ್ಮ ಗೀತಾನ ಬೆನ್ನಿಗೆ ಬಡಿದರೆ, ಪ್ರತಿಭಾ ಹಿಡಿವಾಟದಲ್ಲಿ ಚಿಗರೆಯೋಟದ ಲಾವಣ್ಯನ ಬೆನ್ನುಬಿದ್ದು ತೇಕು ಮುರ್ಕು. ಒಟ್ಟಾರೆ ಹತ್ತೆಂಟು ಮಂಗಾಟಕ್ಕೆ ಕವರಟ್ಟಿ ತಾರಸಿ ಸಾಕ್ಷಿ.

ಏನು ಹಡಗೆಲ್ಲ ನಾವೇ ಅಂತ ಭಾವಿಸಿದಿರಾ? ಇಲ್ಲ, ಆಚೆ ಮೂಲೆಯಲ್ಲಿ ಮರಾಠಿಗರ ಗುಂಪೊಂದು ಕೂತು ಟಮ್ಕಿ ಹಿಡಿದುಕೊಂಡು ಏನೋ ಗುಂಪುಗಾನದಲ್ಲಿ ತಲ್ಲೀನರಾಗಿದ್ದರು. ಆಗೀಗ ಉತ್ಸಾಹ ಉತ್ತುಂಗಕ್ಕೇರಿ “ಹರ ಹರ ಮಹದೇವ್, ಶಿವಾಜಿ ಮಹಾರಾಜ್ ಕೀ ಜೈ” ಕೇಳುವುದೂ ಇತ್ತು. ಅದೇನೋ ದಹನಶೀಲ ವಸ್ತುವಿನ ದಾಸ್ತಾನಿನ ಮೂಲೆಯಲ್ಲಿ No smoking ಬೋರ್ಡಿಗೆ ಬೆನ್ನು ಹಾಕಿ ಸಿಗರೇಟ್ ಕಚ್ಚಿದವನು, ಕವಳ ಜಗಿದು keep the deck cleanಗೆ ಪಿಚಕಾರಿ ಹೊಡೆದವನು, ಅಲ್ಲಲ್ಲಿ ಅಂಚಿನ ಕಟಕಟೆಗೆ ಒರಗಿ ಚರವಾಣಿಯಲ್ಲಿ ರೇಂಜ್ ಹುಡುಕುತ್ತಾ ಮೆಸೇಜುಗಳನ್ನು ದಾಸ್ತಾನಿಸುವ ಪರಧ್ಯಾನಿಗಳಿಗೇನೂ ಕೊರತೆಯಿರಲಿಲ್ಲ. ಮಧ್ಯಂತರದ ಪುಟ್ಟ ತಾರಸಿಯಲ್ಲಿದ್ದ ಒಣ ಈಜುಕೊಳದ ಅಂಚಿನಲ್ಲಿ, ಹಿಂದಿನ ತಾರಸಿಯ ತುಂಬೆಲ್ಲಾ, ಪ್ರತಿ ಅಂತಸ್ತಿನ ಬಾಲ್ಕನಿಯಲ್ಲಿದ್ದ ಆರಾಮಾಸನಗಳಲ್ಲಿ, ಮೆಟ್ಟಲುಗಳಲ್ಲಿ, ಕ್ಯಾಂಟೀನ್ ಓಣಿಯಲ್ಲಿ, ಐಪೀಯೆಲ್ ವೀಕ್ಷಣೆಯಲ್ಲಿ ಏನ್ ಜನಾ ಸಾರ್ ಏನ್ ಜನಾ. ಹೀಗೆ ಹಡಗಿನ ಶ್ರುತಿ ಹಿಡಿದು ವಿಸ್ತರಿಸುವ ಅಮಿತ ಚರಣಗಳನ್ನು ಬಿಟ್ಟು ಮತ್ತೆ ಪಲ್ಲವಿಗೆ ಬರುತ್ತೇನೆ: ಹುಡುಕಿದರೂ ವಾಂತಿ ಭ್ರಾಂತಿಯವರು ಒಬ್ಬರೂ ಇಲ್ಲ.

ಎಂವಿ ಕವರಟ್ಟಿ ಎರಡು ವರ್ಷಗಳ ಹಿಂದಷ್ಟೇ ನೀರಿಗಿಳಿದ ಆಧುನಿಕ ನೌಕೆ. ಅದರದೇ ಏನೋ ಮಹಿಮೆಯಿರಬೇಕು, ಇಲ್ಲಾ ನಾವೆಲ್ಲಾ ಭಾರೀ seasoned ಇರಬೇಕು ಎಂದೆಲ್ಲಾ ನಂಬಿಕೊಂಡು ಮೊನ್ನೆ ಮೊನ್ನೆ ಅಂಗಡಿಯಲ್ಲಿ ಭೇಟಿಯಾದ ನಾವಿಕರೊಬ್ಬರನ್ನು ಕೇಳಿದೆ. ಅವರು ನಗಾಡಿದರು. “ಕಡಲಿನ ಅಗಾಧತೆಗೆ ಕವರಟ್ಟಿ ಹುಲ್ಲುಕಡ್ಡಿ. ನಿಮ್ಮ ಅದೃಷ್ಟ ಆ ಐದೂ ದಿನ, ಪಾಲ್ಘಾಟ್ ಗ್ಯಾಪ್ ಸೇರಿದಂತೆ ಎಲ್ಲೆಡೆಗಳಲ್ಲು ಸಮುದ್ರ ಶಾಂತವಾಗಿತ್ತು.” ಈ ಅದೃಷ್ಟದಾಟ ಮುಂದಿನ ದಿನಗಳಲ್ಲಿ ನಮ್ಮೆದುರು ಇನ್ನು ಏನೆಲ್ಲಾ ತೆರೆದಿಟ್ಟಿರಬಹುದು ಎನ್ನುವುದನ್ನು ನೀವು ಊಹಿಸುತ್ತಿರುವಂತೆ ನಾನು ಕಲ್ಪೆನಿ ಮಿನಿಕಾಯ್‌ಗಳ ನಡುವಣ ನಿದ್ರೆ ಮುಗಿಸಿ ಬರುತ್ತೇನೆ. ಹುಶಾರ್, ನೀವೂ ನಿದ್ರೆಗೆ ಶರಣಾಗಿ ಈ ದಾಸಯ್ಯನ ಜೋಳಿಗೆಗೆ (ಕೆಳಗಿರುವ ಪ್ರತಿಕ್ರಿಯಾ ಅಂಕಣ ಸ್ವಾಮೀ) ನಾಲ್ಕು ಕಾಸು ಹಾಕಲು ಮರೆತೀರಾ. ಶ್ರೀಮದ್ರಮಾರಮಣ ಗೋವಿಂದಾ (ಮಿನಿಕಾಯ್‌ಗೆ) GO ಎಂದಾsssssssss.

(ಮುಂದೂ ಕೊರೆಯುತ್ತದೆ, ಅಲ್ಲಲ್ಲ worryಯುತ್ತದೆ!)