[ಎರಡು ವಾರದ ಹಿಂದೆ ಏರಿಸಿದ ಲೇಖನಕ್ಕೆ ‘ಏನ್ ಸೈಕಲ್ ಸಾ ಏನ್ ಸೈಕಲ್ಲ್’ಗೆ ಪೂರಕ ಬರಹ]

ಬಳ್ಳಾರಿಯಲ್ಲಿ ನಾನು ಆರನೇ ತರಗತಿಯಲ್ಲಿದ್ದಾಗಿನ (೧೯೬೨-೬೩) ಕಥೆ. ಅಲ್ಲಿ ಪೂರ್ಣಾವಧಿ ಎನ್.ಸಿಸಿ ಅಧಿಕಾರಿಯಾಗಿದ್ದ ತಂದೆಗೆ ಸಂಜೆಯ ಕಾಫಿ ಒಯ್ಯಲು ದೂತ ಮೊಯ್ನುದ್ದೀನ್ ಸೈಕಲ್ ಏರಿ ಮನೆಗೆ ಬರುತ್ತಿದ್ದ. ತಾಯಿ ಬಿಸಿ ಕಾಫಿ ಫ್ಲಾಸ್ಕಿಗೆ ತುಂಬಿ ಕೊಡುವ ಅಂತರದಲ್ಲಿ ನನಗೆ ಮೊಯ್ನುದ್ದೀನ್ ಸೈಕಲ್ ಗುರು. ಮುಂದೆ ಕೌಲ್ ಬಜಾರಿನ ಗಿರಣಿಗೆ ಅಕ್ಕಿ, ಗೋಧಿ ಒಯ್ದು ಹಿಟ್ಟು ಮಾಡಿ ತರಬೇಕಾದರೆ ನನಗೆ ಅಮ್ಮ ಬಾಡಿಗೆ ಸೈಕಲ್ಲಿನ ಲಂಚ ಕೊಡಲೇ ಬೇಕಾಗುತ್ತಿತ್ತು. ಅಕ್ಕಿ, ಗೋಧಿ ಚೀಲವನ್ನು ಹ್ಯಾಂಡಲಿಗೆ ತೂಗು ಹಾಕಿ, ಮನೆಯೆದುರಿನ ಕಲ್ಲ ಮಂಚದಿಂದ ಟೇಕಾಫ್ ಆದವನಿಗೆ ಗಿರಣಿಯೆದುರಿನ ಮೋಟು ಜಗಲಿ ಲ್ಯಾಂಡಿಂಗ್ ಸೈಟು. ಗ್ರಹಚಾರಗೆಟ್ಟು ಅದು ಇನ್ಯಾರದೋ ಸೈಕಲ್ಲಿಗೋ ಸೋಮಾರಿಗಳ ಬೈಠಕ್ಕಿನಲ್ಲೋ ಎಂಗೇಜ್ ಆಗಿದ್ದರೆ ನನ್ನದು ಕ್ರ್ಯಾಶ್ ಲ್ಯಾಂಡು!

ಬಳ್ಳಾರಿಯಲ್ಲಿ ನಿತ್ಯ ನಾನು ಕಂಟೋನ್ಮೆಂಟಿನಿಂದ ರೈಲ್ವೇ ಹಳಿಯ ಅಂಚಿನ ಸವಕಲು ಜಾಡಿನಲ್ಲಿ ನಡೆದು ಕೋಟೆಯೊಳಗಿನ ಸಂತ ಜಾನ್ ಪ್ರೌಢ ಶಾಲೆಗೆ ಹೋಗುತ್ತಿದ್ದೆ. ಆಗ ರೈಲ್ವೇ ದಿಬ್ಬಕ್ಕೆ ಹತ್ತಿಳಿಯುವ ಜಾಡು, ಪ್ರತಿ ಕಿರು ಸೇತುವೆ, ಹಳಿದಾಟುವ ಹೆಜ್ಜೆಗಳಲ್ಲೆಲ್ಲಾ ನಾನು ಸೈಕಲ್ ಏರಿ ಬಂದರೆ ನಿಭಾಯಿಸುವ ಕನಸನ್ನೇ ಕಾಣುತ್ತಿದ್ದೆ. ನಾನು ಏಳನೇ ಕ್ಲಾಸಿಗೆ ಬಂದಾಗ ನನ್ನದೇ ಶಾಲಾ ಸಂಗಾತಿಗಳಾದ ವಿಲ್ಸನ್, ಜಾಯ್ಸನ್ (ಅವಳಿ ಸೋದರರು) ನಮ್ಮ ಪಕ್ಕದ ವಠಾರಕ್ಕೆ ಬಂದರು. ಅವರು ಸಣ್ಣಾಳುಗಳೇ ಆದರೂ ಅವರಪ್ಪ ಅವರಿಗೆ ಶಾಲೆಗೆ ಹೋಗಿಬರಲು ಒಂದು ದೊಡ್ಡ ಸೈಕಲ್ಲನ್ನೇ ಕೊಟ್ಟಿದ್ದರು (ಅಂದು ನನ್ನ ಲೆಕ್ಕಕ್ಕೆ ಅವರು ಭಾರೀ ಶ್ರೀಮಂತರೇ ಸರಿ!). ನಿತ್ಯ ಡಬ್ಬಲ್ ರೈಡಿನಲ್ಲೇ ಶಾಲೆಗೆ ಹೋಗಿ ಬರುತ್ತಿದ್ದ ಆ ಹುಡುಗರಾದರೋ ಸೈಕಲ್ ತುಳಿಯಲು ನಾನು ಮುಂದಾದಾಗ ತ್ರಿಬ್ಬಲ್ ರೈಡ್ ಬೇಡ ಎನ್ನದ ಉದಾರಿಗಳು. ಹಿಂದಿನ ವರ್ಷವಷ್ಟೇ ಕನಸುತ್ತಿದ್ದ ರೈಲ್ವೇ ಒತ್ತಿನ ಜಾಡುಗಳಲ್ಲೇ ಮೂವರ ಸವಾರಿ ಹಾಯುವಾಗ, ಕೋಟೆ ಬಾಗಿಲಿನಿಂದ ಮೆಟ್ಟಿಲ ಸಾಲಿನವರೆಗಿನ ಏರನ್ನು ಮೂವರ ಹೇರಿನೊಡನೆ ಹತ್ತಿಸುವಾಗ ನನ್ನನ್ನು ಬಳ್ಳಾರಿಯ ಉರಿಬಿಸಿಲು ಕಾಡಲಿಲ್ಲ!

ಬೆಂಗಳೂರಿಗೆ ಬಂದಾಗ ತಂದೆ ಕಾಲೇಜಿಗೆ ಹೋಗಿ ಬರಲು ಸೈಕಲ್ ಕೊಂಡರು. ನಿತ್ಯ ಅದನ್ನು ನಮ್ಮ ಮಹಡಿ ಮನೆಯಿಂದ ಕೆಳಗಿಳಿಸಿ, ದೂಳು ಒರೆಸಿ, ಅಗತ್ಯ ಬಿದ್ದರೆ ಕೀಲುಗಳಿಗೆ ಎಣ್ಣೆ ಹಾಕುವ ಡ್ಯೂಟಿ ನನ್ನದು. ಅಲ್ಲಿ ನಾನು ಸೈಕಲ್ ಸೇವೆ ಮಾಡಿದ್ದಕ್ಕಿಂತ ಟ್ರಯಲ್ ರನ್ನಿನ ನೆಪದಲ್ಲಿ (ಹನುಮಂತ ನಗರದ) ಹಿಂದಿನ ಗಲ್ಲಿಗಳ ಖಾಲೀ ವಠಾರಗಳಲ್ಲಿ ಮಾಡುತ್ತಿದ್ದ ಸವಾರಿಗಿಂತ ಸರ್ಕಸ್ಸೇ ಹೆಚ್ಚಿತ್ತು! ಹೌದು, ಆ ಕಾಲಕ್ಕೆ ಪಕ್ಕದ ಸುಂಕೇನ ಹಳ್ಳಿಯ ಪುಟ್ಟ ಮೈದಾನದಲ್ಲಿ ವರ್ಷದಲ್ಲೊಂದೆರಡು ಬಾರಿ ನಿರಂತರ ಸೈಕಲ್ ಸವಾರಿ ಮಾಡುವವರ್ಯಾರೋ ಆರೇಳು ದಿನ ಝಂಡಾ ಹೊಡೆಯುತ್ತಿದ್ದರು. (ಅಲ್ಲಿ ಜೊತೆಗೇ ಮೈಕ್ ಕೊರೆಯುತ್ತಿದ್ದ ಗ್ರಾಮಾಫೋನಿನ ಮಧುರಗಾನ, “ಎನಕ್ ವಂದಾ ಮಾಪಿಳ್ಳೆ ಅದ್ ಅಪ್ಪಾ ಸೊಲ್ಲರೆ ಕೇಸಲೇsssss” ಇಂದೂ ನನ್ನ ಗಾರ್ದಭ ಗಾನಲಹರಿಗಳಲ್ಲಿ ಆಗಾಗ ಸ್ಫುರಿಸುತ್ತಿರುತ್ತದೆ!) ನಾನು ಅಲ್ಲಿ ಹೆಕ್ಕಿಕೊಂಡ ಹಿಕ್ಮತ್‌ಗಳಿಗೆ ಅಪ್ಪನ ಸೈಕಲ್ ಪ್ರಯೋಗ ಸಲಕರಣೆಯಾಗುತ್ತಿತ್ತು. ಸೈಕಲ್ ಓಡುತ್ತಿರುವಂತೆ ಸೀಟಿಂದೆದ್ದು, ಎರಡೂ ಪೆಡಲ್ ಮೇಲೆ ನಿಂತು, ಹ್ಯಾಂಡಲ್ ಬಾರಿನ ಮೇಲೆ ಮುಂದಕ್ಕೆ ಬಾಗಿ, ಎದುರು ಚಕ್ರವನ್ನು ಕೈಯಲ್ಲೇ ನೂಕುತ್ತಾ ಸುತ್ತು ಹಾಕುವುದು, ಕೇವಲ ಎಡ ಪೆಡಲಿನ ಮೇಲೆ ಒಗ್ಗಾಲಿನಲ್ಲಿ ಕೂತು ಬಲಗೈಯಲ್ಲಿ ಹ್ಯಾಂಡಲ್ ತಿರುಗಿಸಿ ಹಿಡಿದು, ಎಡಗೈಯಲ್ಲಿ ಮುಂದಿನ ಚಕ್ರ ಹಿಡಿದು ಸುತ್ತು ಸುತ್ತು ಬರುವುದು, ಹ್ಯಾಂಡಲ್ ಅಡ್ಡ ತಿರುಗಿಸಿ ಎದುರಿನ ಚಕ್ರದ ಕಡ್ಡಿಗಳ ಮೇಲೇ ನಿಂತು ಸೈಕಲ್ ಬ್ಯಾಲೆನ್ಸ್ ಮಾಡುತ್ತಾ ‘ಎನಕ್ ವಂದಾ ಮಾಪಿಳ್ಳೆ’ ಗುನುಗುವುದು ಆಹಾ ಎಂಥಾ ಮಜಾ.

ಮೈಸೂರಿನಲ್ಲಿ ನನ್ನ ಐದು ವರ್ಷಗಳ ವಿದ್ಯಾರ್ಥಿ ದೆಸೆಯಲ್ಲಿ ಸೈಕಲ್ ಅನಿವಾರ್ಯ ಸಂಗಾತಿ. ದಖ್ಖಣ ಪರ್ವತಾರೋಹಣ ಸಂಸ್ಥೆಯ ಸದಸ್ಯನಾದ ಮೇಲಂತೂ ಸೈಕಲ್ ಬಿಡುವುದು ಒಂದು ಪ್ರತ್ಯೇಕ ಶ್ರಮವೆಂಬುದೇ ಮರೆತುಹೋಗುವಷ್ಟು ಸದಸ್ಯರೆಲ್ಲರೂ ಸೈಕಲ್ ಬಳಸುತ್ತಿದ್ದೆವು. ಶ್ರೀರಂಗಪಟ್ಟಣದ ಬಳಿಯ ಕರಿಘಟ್ಟದ ಬಂಡೆಗೋ ಪಾಂಡವಪುರದ ಫ್ರೆಂಚ್ ರಾಕ್ಸ್ ಅಥವಾ ಕುಂತಿಬೆಟ್ಟಕ್ಕೋ ನಾವೇ ಬೆಳಗು ಮಾಡುವವರಂತೆ ಸೈಕಲ್ಲಿನಲ್ಲಿ ಹೋಗುತ್ತಿದ್ದೆವು. ಅಲ್ಲಿ ಸೈಕಲ್ಲುಗಳನ್ನು ನೆರಳಿನಲ್ಲಿ ನಿಲ್ಲಿಸಿ, ಇಡೀ ದಿನ ಶಿಲಾರೋಹಣದಲ್ಲಿ ಹೊಸ ಜಾಡುಗಳ ಅನಾವರಣ, ಬಂಡೆ ಇಳಿಯುವಲ್ಲಿ ಹೊಸ ಸಿದ್ಧಿಗಳಿಗೆ ಪರಿಶ್ರಮ ಮಾಡುತ್ತಿದ್ದೆವು. ಎಲ್ಲ ಸೋತಾದಾಗ ಅಂದರೆ ಅಪರಾಹ್ನ ಸುಮಾರು ಎರಡು ಮೂರು ಗಂಟೆಯ ವೇಳೆಗೆ ಬುತ್ತಿಯೂಟದ ನೆನಪಾಗುತ್ತಿತ್ತು. ಮತ್ತೆ ತರಚಲು ಗಾಯ, ಬಳಲಿದ ಸ್ನಾಯುಗಳ ಪರಿವೆಯಿಲ್ಲದವರಂತೆ ಅಷ್ಟೂ ಪರ್ವತಾರೋಹಣ ಸಲಕರಣೆಗಳನ್ನು ನಮ್ಮ ಮೇಲೆ ಹೇರಿಕೊಂಡು ವಾಪಾಸು ಹೊರಡುತ್ತಿದ್ದೆವು. ಆಗ ಅಕಸ್ಮಾತ್ ಯಾವುದಾದರೂ ಒಂದೋ ಎರಡೋ ಸೈಕಲ್ ಪಂಚೇರಾಗಿದ್ದರೆ ಅದರ ಸವಾರನನ್ನು ಡಬ್ಬಲು ಮಾಡುವುದರ ಜೊತೆಗೇ ಹಾಳಾದ ಸೈಕಲ್ಲನ್ನು ಒಂದು ಕೈಯಲ್ಲಿ ನೂಕಿಕೊಂಡು ತಂದದ್ದರ ಲೆಕ್ಕ ತೆಗೆದರೆ ಇಂದು ಕೇಳಿದವರು ನಕ್ಕಾರು, “ ಏ ಎಲ್ಲ ಸುಳ್ಳು!”

ಪರ್ವತಾರೋಹಣ ತರಬೇತಿಯ ಉಪೋತ್ಪನ್ನವಾಗಿ ಗಳಿಸಿದ ಈ ಸೈಕಲ್ ತಾಕತ್ತು ನನ್ನನ್ನು ತುಯ್ಯದ ದಿಕ್ಕುಗಳಿಲ್ಲ. ವಿವರಗಳಿಗೆ ಹೋಗದೇ ಕೆಲವನ್ನು ಮಾತ್ರ ಇಲ್ಲಿ ಸೂಕ್ಷ್ಮವಾಗಿ ನೆನಪಿಸಿಕೊಳ್ಳುತ್ತೇನೆ. ನಾನು ಗಿರೀಶ ಪುತ್ರಾಯ ಅದೊಂದು ಎರಡು ದಿನದ ರಜಾ ಸಮಯ ನೋಡಿಕೊಂಡು ಮೈಸೂರಿನಿಂದ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗಿದ್ದೆವು. ನಂಜನಗೂಡು, ಚಾಮರಾಜನಗರ ಆದಮೇಲೆ ಕ್ಯಾತೇ ದೇವರಗುಡಿ ಸೇರಿದಂತೆ ಕಟ್ಟಾ ಏರು, ದಟ್ಟ ಕಾಡು. ಏಕಮುಖದಲ್ಲಿ ಸುಮಾರು ನೂರಾಹದಿನೆಂಟು ಕಿಮೀ ಪಯಣಿಸಿ ಗಿರಿಧಾಮದಲ್ಲಿ ರಾತ್ರಿ ಕಳೆದು ಮರುದಿನ ಮೈಸೂರಿಗೆ ಮರಳಿದ ವಿವರಗಳನ್ನು ಸ್ವಲ್ಪ ಮಟ್ಟಿಗೆ ನನ್ನ ಚಕ್ರವರ್ತಿಗಳು ಪುಸ್ತಕದಲ್ಲಿ ದಾಖಲಿಸಿದ್ದೇನೆ. ಪೂರ್ವಾಲೋಚನೆ ಅಥವಾ ಯೋಜನೆಯಿಲ್ಲದೆ ಕಿಸೆಯಲ್ಲಿ ನಾಲ್ಕೆಂಟು ಕಾಸಷ್ಟೇ ಇಟ್ಟುಕೊಂಡು ಹೋದ ನಾವು ಏರು ಮತ್ತು ಹಾಳು ದಾರಿಯ ಪಾಡು ಅನುಭವಿಸಿದ್ದು, ಆನೆಗಳ ಭಯದಲ್ಲಿ ಬಳಲಿದ್ದು, (ಆ ಕಾಲದಲ್ಲಿ ಹೋಟೆಲ್ ಎಲ್ಲಾ ಕೇಳಬೇಡಿ) ಪ್ರವಾಸಿ ಬಂಗ್ಲೆ ಒಳಗುಳಿಯಲು ಕಾಸಿಲ್ಲದೆ ಜಗುಲಿಯಲ್ಲಿ ಮುರುಟಿಕೊಂಡದ್ದು, ನಡುರಾತ್ರಿ ಬೆಟ್ಟದ ಚಳಿಗೆ ಕೊರಡುಗಟ್ಟುವ ಹೆದರಿಕೆಯಲ್ಲಿ ಯುಗಯುಗಗಳ ದೂಳು, ಕಮಟು ಹಿಡಿದ ಜಮಖಾನೆಯ ಅಡಿಗೆ ನುಸಿದದ್ದು, ಮರುದಿನ ಸತ್ತ ಚಕ್ರಕ್ಕೆ ಬದಲಿ ವಿಚಾರಿಸಿ “ಸುಮಾರು ಆರು ವರ್ಷದಿಂದ ಬೆಟ್ಟಕ್ಕೆ ಸೈಕಲ್ಲೇ ಬಂದಿಲ್ಲ” ಕೇಳಿದ್ದು, ಬಸ್ಸಿನವರ ಕೃಪೆಯಲ್ಲಿ ಅಂತೂ ಚಾಮರಾಜನಗರಕ್ಕೆ ಬಂದು ಬಿದ್ದದ್ದು, ಪರಿಚಯದವರಲ್ಲಿ ಸಾಲ ಮಾಡಿ ಚಕ್ರ ಬದಲಿಸಿ ಮರಳಿದ್ದು ಯೋಚಿಸುವಾಗ ನಗೆ ಬರುತ್ತದೆ.

ವಿದ್ಯಾರ್ಥಿ ದೆಸೆಯದ್ದೇ ಅದೊಂದು ದಿನ ನಾನು ಮಡಿಕೇರಿಯಿಂದ ಆರು ಮೈಲು ದೂರದ ಅಜ್ಜನಮನೆ, ಮೋದೂರಿನಲ್ಲಿ ಸೊಕ್ಕಿಕೊಂಡು ಇದ್ದೆ. ಆಗ ಮೈಸೂರಿನಲ್ಲಿದ್ದ ನನ್ನ ಮೊದಲ ತಮ್ಮ, ಆನಂದವರ್ಧನನಿಗೆ (ಐದು ವರ್ಷ ಚಿಕ್ಕವ) ಅಜ್ಜನ ಮನೆಗೆ ಬರುವ ತುರ್ತು ಮೂಡಿತು. ಅವನು ಸಾಹಸಕ್ರೀಡೆಗಳಲ್ಲಿ ನನಗೇನೂ ಕಡಿಮೆಯವನಲ್ಲ. ಸಹಜವಾಗಿ ಗಂಟೆಗಟ್ಲೆ ಬಸ್ ಕಾದು, ಯಾರ್ಯಾರೊಡನೆಯೋ ಮೈ ಒರೆಸಿಕೊಂಡು ದೂಳು, ಹೊಗೆ, ವಾಂತಿ ಭ್ರಾಂತಿ ಅನುಭವಿಸುವುದಕ್ಕಿಂತ ಸುಲಭ ದಾರಿ ಹುಡುಕಿದ. ಆ ಕಾಲದಲ್ಲಿ ಬಾಡಿಗೆ ಸೈಕಲ್ ಕೊಡುವ ಅಂಗಡಿಗಳು ಧಾರಾಳವಿದ್ದವು. ಇವನು ಅಂತದ್ದೊಂದು ಸೈಕಲ್ ಹಿಡಿದು, ಸಣ್ಣ ಬಟ್ಟೆಯ ಚೀಲ ನೇಲಿಸಿಕೊಂಡು ಬೆಳಿಗ್ಗೆ ಮೈಸೂರು ಬಿಟ್ಟ. ಕುಶಾಲ ನಗರದಿಂದಾಚೆಗೆ ಘಾಟಿಯೂ ಇವನಿಗೆ ಸಾಟಿಯಲ್ಲ. ಮಧ್ಯಾಹ್ನ ಊಟಕ್ಕೆ ಆನಂದ ಮೋದೂರಿನಲ್ಲಿ ಹಾಜರ್. ಆ ಕಾಲದಲ್ಲಿ ಚರವಾಣಿ ಬಿಡಿ, ದೂರವಾಣಿಯೂ ಅಪರೂಪದ ಸಂಗತಿ. ಆನಂದನ ಯಾವ ನಿರೀಕ್ಷೆಯೂ ಇಲ್ಲದಿದ್ದ ನನಗೆ ಅವನು ಬಂದದ್ದಷ್ಟೇ ಅಲ್ಲ, ರಿಲೇ ಓಟದ ಬ್ಯಾಟನ್ ಹಿಡಿಸಿದಂತೆ ಸೈಕಲ್ ನನ್ನ ಕೈಗೆ ಕೊಟ್ಟ. “ಅಶೋಕಾ ನೀನಿವತ್ತೇ ಇದನ್ನ ಮೈಸೂರಿಗೆ ತೆಕ್ಕೊಂಡೋದ್ರೆ ಒಂದು ದಿನದ ಬಾಡಿಗೆ ಉಳಿಸಬಹುದು” ಎಂದೂ ಹೇಳಿಬಿಟ್ಟ. ಕಾಲಾತಿಕ್ರಮಣಕ್ಕೆ ಕ್ಷಮೆ ಇರಲಿ, ಯಾವ ಅಕ್ಕುಂಜಿ ಅಶ್ವಿನಿಗೂ ಕಡಿಮೆಯಿಲ್ಲದ ವೇಗದಲ್ಲಿ ನಾನು ಮರು ಧಾವಿಸಿದೆ; ದೀಪ ಇಲ್ಲದ ಸಂಚಾರಕ್ಕೆ ನಾಕಾಣೆ ದಂಡವೂ ಕೊಡದಂತೆ ಕತ್ತಲೆಗೆ ಮುನ್ನ ಮೈಸೂರಿಸಿದೆ!

ಮಹಾರಾಜ ಕಾಲೇಜಿನಲ್ಲಿ ಬೀಎ ಓದುತ್ತಿದ್ದಾಗ ನನ್ನ ಏಕೈಕ ಆತ್ಮೀಯ ಗೆಳೆಯ ಶಂಕರಲಿಂಗೇಗೌಡ. (ಮುಂದೆ ನಾವು ಎಂಎಯಲ್ಲೂ ಜೊತೆಗಾರರೇ. ಶಂಲಿಂಗೌ ಒಂದೋ ಎರಡೋ ವರ್ಷ ಅಧ್ಯಾಪಕರಾಗಿದ್ದರು. ಮತ್ತೆ ಕೆ.ಎ.ಎಸ್ ಉತ್ತೀರ್ಣನಾಗಿ, ತರಬೇತಾವಧಿಯಲ್ಲಿ ಮಂಗಳೂರಿಗೇ ಬಂದದ್ದು ಮತ್ತೂ ನಾನಿದ್ದ ಅಲೋಶಿಯಸ್ ಹಾಸ್ಟೆಲ್ಲಿನಲ್ಲೆ ಇರುವಂತಾದ್ದು ಹೇಳುತ್ತಾ ಹೋದರೆ ಭಾರೀ ಕಥೆ ಬಿಡಿ. ಸದ್ಯ ರಾಜ್ಯ ಸರಕಾರದಲ್ಲಿ ಸಾರಿಗೆ ಸಚಿವಾಲಯದ ಹಿರಿಯ ಐಎಎಸ್ ಅಧಿಕಾರಿ ಇದೇ ಶಂಲಿಂಗೌ) ಮೂರೂ ವರ್ಷದ ಅಂತಿಮ ಪರೀಕ್ಷೆ ಮುಗಿದ ಮರುದಿನವೇ ನಾವಿಬ್ಬರು ಒಂದು ವಾರದ ಕೊಡಗು ಸೈಕಲ್ ಪ್ರವಾಸ ಹೋದದ್ದು ನನ್ನ ಸೈಕಲ್ ಯಾನದ ದೀರ್ಘ ಮತ್ತು ಸವಿಸ್ಮರಣೆಂii ಅನುಭವ. (ವಿವರಗಳನ್ನು ಪ್ರತಿಕ್ರಿಯಾ ಅಂಕಣದಲ್ಲಿ ತುಂಬಲು ಶಂಲಿಂಗೌ ಸಾಯೇಬ್ರನ್ನೇ ಕೇಳಿಕೊಳ್ತೇನೆ) ಆ ಅನುಭವದ ಬಲದಲ್ಲಿ ಪ್ರಥಮ ಎಂಎ ಬೇಸಗೆ ರಜೆಯಲ್ಲಿ ಒಂಟಿಯಾದರೂ ಸೈ, ಕರ್ನಾಟಕ ಸೈಕಲ್ ಯಾತ್ರೆ ನಡೆಸಿಯೇ ಸಿದ್ಧ ಎಂದುಕೊಂಡಿದ್ದೆ. ಡಿವಿಕೆ ಮೂರ್ತಿಯವರು ನನ್ನ ದಾರಿ ತಪ್ಪಿಸಿ (ನನ್ನ ಒಳ್ಳೇದಕ್ಕೇ) ಮುಂಬೈಗೆ ರೈಲು ಟಿಕೇಟು ಮತ್ತು ಮಾರಾಟಕ್ಕೆ ಪುಸ್ತಕದ ಕಟ್ಟೂ ಕೊಟ್ಟದ್ದು ಇಂದು ನನ್ನನ್ನು ಇಲ್ಲಿ ಯಸಸ್ವಿ ಪುಸ್ತಕ ವ್ಯಾಪಾರಿಯಾಗಿ ನಿಲ್ಲಿಸಿದೆ. ಹಾಗಾಗಿ ಇನ್ನು ಹೆಚ್ಚಿನ ಉರುಳುವ ಚಕ್ರಗಳ ಮೇಲಿನದೇ ಕನಸುಗಳನ್ನು, ಸಾಧನೆಗಳನ್ನು ಎಲ್ಲಕ್ಕೂ ಮಿಕ್ಕು ಅದ್ಭುತಗಳನ್ನು ಕನ್ನಡದಲ್ಲಿ ಓದಲು ನೀವು ಅವಶ್ಯ ಎಂ. ಶಿವು ಅವರ ‘ಸೈಕಲ್‌ವಾಲಾ’ ಪುಸ್ತಕಕ್ಕೇ ಮೊರೆ ಹೋಗಬೇಕು.

ಸೈಕಲ್‌ವಾಲಾದ ಮುನ್ನುಡಿಯಲ್ಲಿರುವ ಪ್ರಕಾಶಕರ (ಪುಸ್ತಕ ಪ್ರಕಾಶನದ ಶ್ರೀರಾಮ್ ೧೯೯೪ರಂದು ಬರೆದ) ಮಾತನ್ನೇ ಉದ್ಧರಿಸುತ್ತೇನೆ: “ಪ್ರತಿದಿನ ನಮ್ಮ ಕಣ್ಣಿಗೆ ಬೀಳುವ, ನಾವು ಉಪಯೋಗಿಸುವ ಸೈಕಲ್ ಇಲ್ಲಿ ಯುಗಾಂತರದ ತನ್ನ ಆತ್ಮಕಥೆಯನ್ನು ಹೇಳಿಕೊಂಡಿದೆ. ಮನುಷ್ಯನ ನಾಗರಿಕತೆಯಲ್ಲಿ ನೂರಾರು ಸಂಶೋಧನೆಗಳು ಸಾಧ್ಯವಾದಂತೆ ಸೈಕಲ್ಲು ರೂಪುಗೊಳ್ಳುತ್ತಾ… ಮನುಷ್ಯಪ್ರಜ್ಞೆಯ ಪ್ರಯತ್ನ ಶೀಲತೆಯನ್ನೂ ಆಯಾಕಾಲದ ಸಮಾಜಗಳ ವೈಲಕ್ಷಣ್ಯಗಳನ್ನೂ ಶ್ರೀ ಶಿವಕುಮಾರ್ ಗುರುತಿಸುತ್ತಾ ತಮ್ಮ ಎಂದಿನ ವಿನೋದದ ಶೈಲಿಯಲ್ಲಿ ಸೈಕಲ್ ಜೊತೆ ಸಂವಾದಿಸಿದ್ದಾರೆ.” ಎಲ್ಲೆಲ್ಲಿನ ಸೈಕಲ್ ಕುರಿತ ಬರಹಗಳನ್ನು ಜೀರ್ಣಿಸಿಕೊಂಡು, ಉದ್ದೇಶಪಟ್ಟು ಕಾರ್ಖಾನೆಗಳ ಭೇಟಿ, ವ್ಯಕ್ತಿಗಳ ಸಂದರ್ಶನಗಳನ್ನು ನಡೆಸಿ, ಅಸಂಬದ್ಧ ಎಂದೇ ತೋರುವ ಜೀವನಾನುಭವದ ಕೊಂಡಿಗಳನ್ನು ಬಲು ಎಚ್ಚರದಿಂದ ಆದರೆ ಪೂರ್ಣ ಸಮರ್ಥಿಸಿಕೊಳ್ಳುವಂತೆ ಇಲ್ಲಿ ಬೆಸುಗೆ ಹಾಕಿದ್ದಾರೆ. ಕೊರವಂಜಿ ಖ್ಯಾತಿಯ ರಾಶಿ (ಡಾ| ಎಂ. ಶಿವರಾಂ) ಅವರ ಮಗ ಮಾತ್ರ ಅಲ್ಲ, ಹಾಸ್ಯಪ್ರಜ್ಞೆಗೂ ಸಮರ್ಥ ಉತ್ತರಾಧಿಕಾರಿ (ಅಪರಂಜಿ ಶಿವು ಎಂದೇ ಖ್ಯಾತರು) ಎನ್ನುವಂತೆ ಶಿವಕುಮಾರ್ ಈ ಪುಸ್ತಕ ರೂಪಿಸಿದ್ದಾರೆ. ಒಂದು ಉದಾಹರಣೆಯನ್ನಾದರೂ ಇಲ್ಲಿ ಕೊಡದಿದ್ದರೆ ಬಹುಶಃ ನನ್ನ ಈ ಬರಹ ಅಪೂರ್ಣವಾದೀತು.

ತಂತಿಯ ಮೇಲಿನ ಚೆಲುವೆ ಎಂಬ ಅಧ್ಯಾಯದಲ್ಲಿ ಸರ್ಕಸ್ಸಿನಲ್ಲಿ ಕಾಣಸಿಗುವ ಹಲವು ಸೈಕಲ್ (ಸಾಹಸಗಳು) ಸಾಧ್ಯತೆಗಳನ್ನು ಹೇಳುತ್ತಾ ಶಿವು, ತಮ್ಮ ಬಾಲ್ಯದ ನೆನಪೊಂದನ್ನು ಹೆಕ್ಕುತ್ತಾರೆ. ನಮಗೆಲ್ಲಾ ತಿಳಿದೇ ಇರುವ ಬಿಗಿಸರಿಗೆಯ ಮೇಲಿನ ಸೈಕಲ್ ಸವಾರಿಯ ನಿರೂಪಣೆಯಲ್ಲಿ “ತರುಣಿ ಕೈಲಿದ್ದ ದಂಡವನ್ನು ಹಾಗೂ ಹೀಗೂ ಆಡಿಸುತ್ತಾ ನಿಧಾನವಾಗಿ ಸೈಕಲ್ ಪೆಡಲು ತುಳಿದಳು. ತಂತಿಯ ಮೇಲೆ ಸೈಕಲ್ ಮುಂದೆ ಚಲಿಸಿತು. ಆ ತರುಣಿ ಸೈಕಲ್ ನಡೆಸುತ್ತಿದ್ದ ವೈಖರಿ, ಅವಳ ಫ್ರಾಕಿನ ಅಂಚಿನಲ್ಲಿ ಹೊಳೆಯುತ್ತಿದ್ದ ಕೆಂಪು ಹಸಿರು ನಕ್ಷತ್ರಗಳು, ಅವಳ ಗಾಂಭೀರ್ಯ ಇವನ್ನೆಲ್ಲಾ ತದೇಕಚಿತ್ತದಿಂದ ನೋಡುತ್ತಿದ್ದ ನನಗೆ ಅವಳನ್ನೇ ಮದುವೆಯಾಗಬೇಕೆಂಬ ಅಚಲ ನಿರ್ಧಾರ ಮನಸ್ಸಿನಲ್ಲಿ ಮೂಡಿತು. ಮದುವೆಗೂ ತಂತಿಯ ಮೇಲಿನ ಸವಾರಿಗೂ ಇದ್ದ ನಿಗೂಢ ಸಂಬಂಧ ಆ ಎಳೆಯ ವಯಸ್ಸಿನಲ್ಲಿಯೇ ನನಗೆ ಹೊಳೆದದ್ದು ಕಂಡು ನನಗೆ ಇಂದಿಗೂ ಆಶ್ಚರ್ಯವಾಗುತ್ತದೆ.”

ಹಲವು ರೇಖಾಚಿತ್ರಗಳ ಸಹಿತ ನೂರು ಪುಟಗಳ ಆದರೆ ಕೇವಲ ನಲ್ವತ್ತೇ ರೂಪಾಯಿ ಬೆಲೆಯ ‘ಸೈಕಲ್‌ವಾಲಾ’ ಹದಿನಾರು ವರ್ಷಗಳ ಮೇಲೂ ಮಾರಾಟಕ್ಕೆ ಲಭ್ಯ ಎನ್ನುವುದನ್ನು ಅದೃಷ್ಟ ಎನ್ನಲೇ ಕನ್ನಡದ ದೌರ್ಭಾಗ್ಯ ಎನ್ನಲೇ! ಆ ಪುಸ್ತಕ ಪ್ರಕಾಶಕರ ಮುಂದುವರಿದ ಒಂದು ಮಾತನ್ನೂ ನಾನಿಲ್ಲಿ ಉಲ್ಲೇಖಿಸಲೇಬೇಕು. “ಮುದ್ರಣ ಕಾಗದದ ಬೆಲೆ ಮತ್ತು ಆಫ್ ಸೆಟ್ ಮುದ್ರಣದ ಪ್ಲೇಟ್‌ಗಳ ಬೆಲೆ ತಾರಾಮಾರಿ ಏರಿರುವುದರಿಂದ ಅದ್ಭುತ ಜಗತ್ತು ಸರಣಿಯ ಬೆಲೆಯನ್ನು ನಾಲ್ಕು ರೂಪಾಯಿ ಏರಿಸಲೇಬೇಕಾಗಿ ಬಂದುದಕ್ಕೆ ವಿಷಾದಿಸುತ್ತೇವೆ.” ಇಂದು ಪುಸ್ತಕ ಕೊಳ್ಳುಗರ ಕುರಿತು ಕಾಳಜಿಪೂರ್ಣವಾಗಿ ಒಂದು ಸಾಲು ಬರೆಯುವುದಿರಲಿ, ಹೀಗೆಲ್ಲಾ ಯೋಚನೆ ಮಾಡುವುದೂ ಹುಚ್ಚು ಎನ್ನುವ ವಾತಾವರಣ ಬಲಿದಿರುವುದಕ್ಕೇ ನಾನು (ಅತ್ರಿ ಪ್ರಕಾಶನ ಮುಚ್ಚಿದೆ ಮತ್ತು) ಈಚಿನ ಕೆಲವು ಕಾಲದಿಂದ ಗೊಣಗುತ್ತ ಬಂದದ್ದನ್ನು ಇಲ್ಲಿ ಗಟ್ಟಿಯಾಗಿ ಹೇಳುತ್ತೇನೆ “ಕನ್ನಡವೂ ಸಂಸ್ಕೃತದಂತೆ ಸದ್ಯದಲ್ಲೇ ಮೃತಭಾಷೆಯಾಗಲಿದೆ.”

ವಿದ್ಯಾರ್ಥಿ ದೆಸೆಯಿಂದಲೂ ನನ್ನ ಸೈಕಲ್ ಚಾಲನೆ ‘ಟಾಪ್‌ಗೇರ್’ನಲ್ಲೇ ಇರುತ್ತಿತ್ತು. ಪ್ರತಿ ಮುಂದಿನ ಸವಾರನೂ ನನಗೆ ಹಿಂದಿಕ್ಕಲೇ ಬೇಕಾದ ಸವಾಲು! ಎಂಎ ತರಗತಿಯಲ್ಲಿದ್ದಾಗಲಂತೂ ಮಧ್ಯಾಹ್ನ ಜೊತೆಜೊತೆಗೇ ಮನೆಗೆ ಹೊರಟ ಪ್ರೊಫೆಸರರ ಕಾರಿಗೆ ದಕ್ಕದಂತೆ ನಾನು ಸೈಕಲ್ ಓಡಿಸಿದಾಗ ತರಗತಿಯಲ್ಲಿನ ಮಳ್ಳನಿಗೆ ಸಾರ್ವಜನಿಕದಲ್ಲಿ ಹೀರೋ ಆದ ಸಂತೋಷ! ಮಂಗಳೂರಿನಲ್ಲಿ ಅಂಗಡಿ ತೆರೆದ ಕಾಲದಲ್ಲಿ (೧೯೭೫) ಲಾರಿಯಾಫೀಸಿನಿಂದ ಪಾರ್ಸೆಲ್ ತರಲು ಮತ್ತು ಶಾಲೆ ಕಾಲೇಜುಗಳಿಗೆ ಪುಸ್ತಕಗಳ ಕಟ್ಟು ಕೊಡಲು ನನ್ನ ಅಂಗಡಿ ಸಹಾಯಕರಿಗೆ ಸೈಕಲ್ ಅನಿವಾರ್ಯ ಸಂಗಾತಿ. ಆದರೆ ಉಳಿದಂತೆ ಅದು ನನ್ನ ‘ಮರ್ಸಿಡಿಸ್ ಬೆಂಜ್.’ ಹಂಪನಕಟ್ಟದಿಂದ ಬಲ್ಮಠಕ್ಕೆ ಬರುವಲ್ಲಿ (ಆಗ ಬಲ್ಮಠ ರಸ್ತೆಯಲ್ಲಿ ದ್ವಿಮುಖ ಸಂಚಾರವಿದ್ದರೂ) ನನ್ನ ಆಯ್ಕೆ – ದಮ್ಮು ಕಟ್ಟಿಸುವ ಬಾವುಟಗುಡ್ಡ ರಸ್ತೆ. ಅಲೋಶಿಯಸ್ ಹಾಸ್ಟೆಲ್ಲಿನಿಂದ ಸೈಕಲ್ ಏರಿದವ ಸೀಟಿನಲ್ಲಿ ಕುಳಿತಂತೇ ಕುತ್ತ ಏರಿನ ಕೋರ್ಟುಗುಡ್ಡೆಯನ್ನುತ್ತರಿಸಿ, (ಆಗ ಅತ್ತ ಹಾಯಲು ದಾರಿಯಿರಲಿಲ್ಲವಾದ್ದರಿಂದೆ ಕೋರ್ಟಿನ ಮೆಟ್ಟಿಲಲ್ಲಿ ಮಾತ್ರ ಸೈಕಲ್ಲನ್ನು ಎತ್ತಿ ದಾಟಿಸಿ) ಅಲೋಶಿಯಸ್ ಕಾಲೇಜ್ ಮತ್ತೆ ಜ್ಯೋತಿಯತ್ತಣ ಇಳಿಜಾರಿನಲ್ಲಿ ಮಿಂಚಿನಂತೆ ಸಾಗಿ ಅಂಗಡಿ ಸೇರದಿದ್ದರೆ ಏನೋ ಸೋತ ಭಾವ! ಫರಂಗಿಪೇಟೆಯ ದಿವಾಕರ ಶೆಟ್ಟಿ ಎನ್ನುವ ಹುಡುಗನೊಬ್ಬ ಕೆಲವು ಸಮಯ ನನ್ನಲ್ಲಿ ಕೆಲಸಕ್ಕಿದ್ದ. ರಾತ್ರಿ ನನ್ನಂಗಡಿ ಮುಚ್ಚುವ ವೇಳೆ ಎಂಟು. ದಿವಾಕರನಿಗೆ ಫರಂಗಿಪೇಟೆಗೆ ದಿನದ ಕಡೇ ಬಸ್ಸು ಹಂಪನಕಟ್ಟೆ ಬಿಡುವ ಸಮಯ ಎಂಟೂ ಐದೋ ಹತ್ತೋ ಇತ್ತು. ಆದರೆ ಅಂಗಡಿಗೆ ಬೀಗ ಜಡಿದು, ದಿವಾಕರನನ್ನು ಹಿಂದೆ ಕೂರಿಸಿಕೊಂಡು ನಾನು ಹಂಪನಕಟ್ಟೆಗೆ ಧಾವಿಸುವ ವೇಗಕ್ಕೆ ಆತ ಒಂದು ದಿನವೂ ಬಸ್ಸು ತಪ್ಪಿಸಿಕೊಳ್ಳಲಿಲ್ಲ!

ಜಡಿ ಮಳೆಗಾಲದ ಒಂದು ಆದಿತ್ಯವಾರ ನಾನು ಗೆಳೆಯ ಸಮೀರನನ್ನು ಜೊತೆಮಾಡಿಕೊಂಡು (ಪ್ರತ್ಯೇಕ ಸೈಕಲ್ಲುಗಳಲ್ಲಿ) ಗಣಿಗಾರಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದ ಕುದುರೆಮುಖ ಪಟ್ಟಣಕ್ಕೆ ಹೊರಟದ್ದು ನಿಜಕ್ಕೂ ರೋಚಕ ಅನುಭವ. ದೀರ್ಘ ಓಟಕ್ಕೆ ಕೊಡೆಗಿಡೆ ಹಿಡಿಯುವ ಸಂಭವವಿಲ್ಲ. ಮತ್ತೆ ಮಳೆಕೋಟೋ ಮತ್ತೊಂದೋ ನಮ್ಮಲ್ಲಿರಲಿಲ್ಲ. ಗಂಟೆಗಟ್ಟಳೆ ಸ್ನಾನ ಮಾಡಿದರೆ, ಕೆರೆಯಲ್ಲಿ ಈಜುಹೊಡೆದರೆ ಜ್ವರ ಶೀತ ಆಗದ ನಮಗೆ ಮಳೆಯಲ್ಲಿ ನೆನೆಯುವುದು ಒಂದು ಸವಾಲೇ ಆಗಿರಲಿಲ್ಲ. ಮಧ್ಯಾಹ್ನದೊಳಗೇ ಗಂಗಾಮೂಲವೇನೋ ಸರಾಗ ತಲಪಿದ್ದೆವು. ಆದರೆ ಘಟ್ಟದ ಮೇಲಿನ ಶೈತ್ಯ ಮತ್ತು ಭಗವತೀ ಕಾಡೂ ಸೇರಿ ಒತ್ತರಿಸುತ್ತಿದ್ದ ಕಾವಳಕ್ಕೆ ಮಣಿಯಲೇ ಬೇಕಾಯ್ತು. ಅಲ್ಲೇ ರಸ್ತೆ ನಿರ್ಮಾಣ ಕಾಲದ ಒಂದು ಮುರುಕು ಜೋಪಡಿಯೊಳಗೆ ಕುಳಿತು, ಬುತ್ತಿಯೂಟ ಮುಗಿಸಿ, ವಾಪಾಸು ಹೊರಟೆವು. ನಮ್ಮ ಯೋಚನೆ ಭಾರೀ ಸ್ಪಷ್ಟವಿತ್ತು – ಹತ್ತುವುದಷ್ಟೇ ಶ್ರಮ, ಮರಳುವಾಗ ಕಣ್ಣು ಮುಚ್ಚಿ ಕೂತರಾಯ್ತು, ರೊಂಯ್ಯಂತ ಮಂಗಳೂರು! ಆದರೆ ಮರಳಿ ಹೊರಟ ಒಂದೇ ಮಿನಿಟಿನಲ್ಲಿ ಈ ಭ್ರಮಾ ಗುಳ್ಳೆ ಒಡೆದುಹೋಯ್ತು. ಅಲ್ಲಿ ಸೈಕಲ್ ವೇಗಗಳಿಸುವ ಪರಿ ನೋಡಿ ನಾವಿಬ್ಬರೂ ಕಂಗಾಲು. ನಿಯಂತ್ರಣಕ್ಕೆ ಬ್ರೇಕ್ ಹಿಡಿದರೆ ಕುಂಭದ್ರೋಣ ಮಳೆ ಅಪ್ಪಟ ಕೀಲೆಣ್ಣೆಯಂತೆ ಒದಗಿ ನಾವು ಚಂದ್ರಯಾನಕ್ಕೆ ಹೊರಟ ರಾಕೆಟ್ಟಿನಂತೆ ಈಗಲೋ ಇನ್ನೊಂದು ಕ್ಷಣದಲ್ಲೋ ‘ವಿಮೋಚನಾವೇಗ’ (escape velocity) ಮುಟ್ಟುವ ಭಯ ಬಂತು. ಪಾಪಪುಣ್ಯಗಳ ಅಲೌಕಿಕ ಶಕ್ತಿಯಲ್ಲಿ ನನಗೆ (ಈ ವಿಚಾರದಲ್ಲಿ ಸಮೀರ ನನ್ನ ಜೊತೆಯಲ್ಲಿಲ್ಲ!) ನಂಬಿಕೆಯಿಲ್ಲದಿದ್ದರೂ ನಮ್ಮನೆಯ ಏಕೈಕ ಪುಣ್ಯವಂತೆ ಅಮ್ಮನ ಪೂಜೆ ವ್ರತಾದಿಗಳೇ ನಮ್ಮನ್ನು ಅಂದು ಉಳಿಸಿರಬೇಕು. ಹೇಗೋ ಒಮ್ಮೆಗೆ ಸೈಕಲ್ಲನ್ನು ನಿಲ್ಲಿಸಿ ಇಳಿದಾಗ ನಿಜಕ್ಕೂ ‘ನೀರೊಳಗಿರ್ದೂ ಬೆಮರ್ದನ್’ ಆಗಿದ್ದೆವು. ಮತ್ತೆ ಹತ್ತಿದ್ದಕ್ಕಿಂತ ನಿಧಾನವಾಗಿ, ಒಂದೆರಡು ಬಾರಿ ಬ್ರೇಕ್ ಶೂ ಒತ್ತಡ ತಡೆಯದೆ ಕಡ್ಡಿಗೆ ಸಿಕ್ಕಿ ರಟ್ಟಿಹೋದದ್ದನ್ನು ಹುಡುಕಿ, ಮರುಸಂಧಾನಗೊಳಿಸಿ ಮಾಳ ಗಡಿ ತಲಪಬೇಕಾದರೆ ಸಾಕೋ ಸಾಕು.

ಸೈಕಲ್ ಹುಚ್ಚು ಹೆಚ್ಚಾದ ಕಾಲದಲ್ಲೊಮ್ಮೆ ಸಾಂಪ್ರದಾಯಿಕ ಸೈಕಲ್ಲನ್ನು ಅಂಗಡಿ ಹುಡುಗನಿಗೇ ಮೀಸಲಿಟ್ಟು ‘ಧನಿಯ ಘನತೆಗೆ’ ತಕ್ಕಂತೆ, ಇದೇ ಜ್ಯೋತಿ ಸೈಕಲ್ ಮಾರ್ಟಿನಿಂದ ಐದು ಗೇರಿನ ಸೈಕಲ್ಲೊಂದನ್ನು ಖರೀದಿಸಿದ್ದೆ. ಆದರೆ ವ್ಯಾಪಾರಕ್ಕಾಗಿ ಬ್ಯಾಂಕ್ ಸಾಲಗಾರನಾಗಿದ್ದ ನನಗೆ ಆ ದಿನಗಳಲ್ಲಿ ಅದರ ನ್ಯಾಯಬೆಲೆಯೇ ಆದ ಸಾವಿರದಿನ್ನೂರು ರೂಪಾಯಿ ಭಾರೀ ಹೊರೆ ಎಂದೆನ್ನಿಸಿ, ಸೋದರ ಮಾವ ರಾಮನಾಥರಾಯರಿಗೆ ಸ್ವಲ್ಪ ಪೂಸಿ ಹೊಡೆದು ಮಾರಿಬಿಟ್ಟೆ! ಇಷ್ಟೆಲ್ಲ ಆದರೂ ನನಗೆಂದೂ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವುದು ಮಾತ್ರ ಹಿಡಿಸಲೇ ಇಲ್ಲ. ಮುಂದೆ ಕೆಲವು ಕಾಲ ನನ್ನಲ್ಲಿ ಮಾಮೂಲಿ ಸೈಕಲ್ ಬಿಡುವ ಉತ್ಸಾಹ ಇತ್ತಾದರೂ ಮಂಗಳೂರಿನ ಬೆವರು ಬಸಿಯುವ ವಾತಾವರಣದಲ್ಲಿ ಅಂಗಡಿಯ ಕಲಾಪ ನಡೆಸಲು ತುಂಬ ತೊಂದರೆಯಾಗುತ್ತಿದ್ದುದರಿಂದ ಸವಾರಿ ಕಡಿಮೆ ಮಾಡಿದೆ. ಅಂಗಡಿಯ ವಹಿವಾಟು ಹೆಚ್ಚಿದಂತೆ ಪುಸ್ತಕ ಕಟ್ಟುಗಳ ಓಡಾಟಕ್ಕೂ ಹೊರಗಿನ ವ್ಯವಸ್ಥೆಗಳನ್ನೇ ನೆಚ್ಚ ಬೇಕಾದ್ದರಿಂದ, ಇದ್ದ ಸೈಕಲ್ ಕೇವಲ ಸಹಾಯಕನ ಖಾಸಗಿ ವಾಹನವಾಯ್ತು. ಮತ್ತೂ ಮುಂದುವರಿದ ದಿನಗಳಲ್ಲಿ ಸಹಾಯಕರುಗಳಿಗೂ ಅದರ ಖಾಯಸ್ಸಿಲ್ಲ ಎಂದು ಕಂಡಾಗ ಕಾಲವೂ ಹಳಸಿತ್ತು; ಗುಜರಿಗೆ ಹಾಕಿ ಕೈತೊಳೆದುಕೊಂಡೆ.

ನನ್ನ ತಂದೆ ತಾರುಣ್ಯದಲ್ಲಿ, ಎನ್.ಸಿ.ಸಿ ಅಧಿಕಾರದ ಬಲದಲ್ಲಿ ಒದಗಿದ್ದ ಅಂಬಾಸಿಡರ್ ಕಾರೇನು ತ್ರೀ ಟನ್ನರ್ ಲಾರಿಯನ್ನೂ ಸರಾಗ ಓಡಿಸಿದವರು. ಆದರೆ ಮುಂದೆ ಸಾಮಾಜಿಕ ನಿರೀಕ್ಷೆಯಲ್ಲೂ ಆರ್ಥಿಕವಾಗಿಯೂ ಕಾರೇನು, ಕನಿಷ್ಠ ಬೈಕೋ ಸ್ಕೂಟರ್ರೋ ಇಟ್ಟುಕೊಳ್ಳಬಹುದಾಗಿದ್ದರೂ ಸ್ವಂತ ವಾಹನವಾಗಿ ಸಂತೋಷದಲ್ಲೇ ಸೈಕಲ್ಲನ್ನು ನೆಚ್ಚಿದ್ದರು. ಎಪ್ಪತ್ತೆಂಟರ ಹರಯದ ಸುಮಾರಿಗೆ, ದೇಹ ಮಾಲುವಂತಾದಾಗ, ತನ್ನ ಪ್ರಾಯದ ದೋಷದಲ್ಲಿ ಇತರರಿಗೆ ತೊಂದರೆಯಾಗಬಾರದೆಂಬ ಎಚ್ಚರದಲ್ಲಿ ಸೈಕಲ್ ಬಿಟ್ಟರು. (ಅದುವರೆಗೆ ರಿಪೇರಿಗೆ ಒದಗಿದ್ದ ಅಂಗಡಿಯವನಿಗೇ ಅದನ್ನು ದಾನ ಮಾಡಿದರು) ಚಿಕ್ಕಪ್ಪ ಈಶ್ವರನೂ ಅಷ್ಟೇ; ಕೊನೆಗಾಲದವರೆಗೂ ಫ್ಯಾಂಟಮನಿಗೆ ಹೀರೋ (ಕುದುರೆಯ ಹೆಸರು) ಇದ್ದಂತೆ ತನಗೆ ಸೈಕಲ್ಲು ಎಂದುಳಿಸಿಕೊಂಡವನು.

ನನ್ನ ಮಟ್ಟಿಗೆ ಸೈಕಲ್ಲಿನ ನವೋದಯಕ್ಕೆ ನಾಂದಿ ಹಾಡಿದವ ನೆಲ್ಯಾರು ಗೋವಿಂದ; ಸೈಕಲ್ ವಿಶ್ವಯಾನಿ. ಅವನು ಕೇಳಿದನೋ ಬಿಟ್ಟನೋ ಎಲ್ಲಾ ಕೈಲಾಗದವರು ಮಾಡುವಂತೆ ಆಶೀರ್ವಚನ ಧಾರಾಳ ಕೊಟ್ಟೆ. ನನ್ನತ್ತೆ, ಎ.ಪಿ ಮಾಲತಿಯವರ ತಮ್ಮ, ಆರ್.ಜಿ. ಭಟ್ ಭಾರೀ ಕಂಪನಿಯ ಉನ್ನತಾಧಿಕಾರಿಯಾಗಿದ್ದವ, ನಿವೃತ್ತಿಯ ಅಂಚಿನಲ್ಲಿ, ಕಿವಿಗೆ ಗಾಳಿ ಹೊಕ್ಕವರಂತೆ ಸೈಕಲ್ ಕೊಂಡ. ಅಲ್ಲಿ ಇಲ್ಲಿ ಅಭ್ಯಾಸದ ಓಟಗಳನ್ನು ಮಾಡಿ, ಒಂಟಿಯಾಗಿ ಬೆಂಗಳೂರು – ಮುಂಬೈ ಸಾಧಿಸಿದಾಗ (ಪ್ರವಾಸ ಕಥನ ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ), ಹೊಟ್ಟೆ ಕಿಚ್ಚಾದರೂ ಒಂದೆರಡು ಪ್ರೋತ್ಸಾಹಕ ಟಿಪ್ಪಣಿಗಳನ್ನು ಬರೆದು ನಾನೂ ಇದ್ದೇನೆ ಎಂದು ತೋರಿಸಿಕೊಂಡೆ. ಒಂದು ಕಾಲದಲ್ಲಿ ಸರಳತೆಯ ಸಂಕೇತವಾಗಿ ಸೈಕಲ್ ಉಳಿಸಿಕೊಂಡಿದ್ದ ವೆಂಕಟ್ರಮಣ ಉಪಾಧ್ಯರು ಮೊಪೆಡ್ಡಿಗೇರಿದ್ದರು. ಆದರೆ ರಸ್ತೆ ಆಕಸ್ಮಿಕದಲ್ಲಿ ತುಸು ದೀರ್ಘವೇ ಆಸ್ಪತ್ರೆ ವಾಸ ಮುಗಿಸಿ ಬಂದ ಮೇಲೆ ಆರ್ಥಿಕ ಅನಾನುಕೂಲ ಅಥವಾ ಅಳುಕು ಇಲ್ಲದಿದ್ದರೂ ಹಾಗೇ ಇದ್ದವರು ಒಮ್ಮೆಗೇ ಮೂವತ್ತು ಸಾವಿರದ ಅತ್ಯಾಧುನಿಕ ಸೈಕಲ್ ಕೊಂಡಾಗ ಮಾತ್ರ ಮೇಲೆ ಸಿಕ್ಕಿಕೊಂಡ ನನ್ನ ಹುಬ್ಬಿಗೆ ಇಳಿದಾರಿ ಹುಡುಕುವಂತಾಯ್ತು. ಆ ನನ್ನ ಗರ್ವಕ್ಕೆ ಇಂಬಾಗುವಂತೆಯೋ ಇಷ್ಟೊಂದು ಉದ್ದದಲ್ಲಿ ಹಳತಕ್ಕೆಲ್ಲ ಹೊಸ ಬಣ್ಣ ಕೊಟ್ಟು ನಿರಾಳವಾಗುವಂತೆಯೋ ಕಳೆದ ಕಂತಿನಲ್ಲಿ ಉಲ್ಲೇಖಿಸಿದ ಸೈಕಲ್ ಅಭಿಯಾನ ಒದಗಿತು. ಅದನ್ನೊದಗಿಸಿದ ವಂದನಾ ನಾಯಕರಿಗೆ ಅನಂತ ವಂದನೆಗಳು.

(ಮುಗಿಯಿತು)

[ನನ್ನ ಸೈಕಲ್ಲಿನ ಬಾಗು ಬಳುಕಿನ ಇಷ್ಟುದ್ದಕ್ಕೂ ಅನುಸರಿಸಿದ ನಿಮಗಿದು ಅಜೀರ್ಣವಾದರೆ ದಯವಿಟ್ಟು ಹೇಳಿ. ನಿಮ್ಮ ಕಡತವೇನಾದರೂ ಇದ್ದರೆ ದಯವಿಟ್ಟು ಬಿಡಿಸಿ. ಎರಡಕ್ಕೂ ಆಸರೆ ಕೆಳಗಿನ ಪ್ರತಿಕ್ರಿಯಾ ಅಂಕಣ ಎನ್ನುವುದನ್ನು ಮರೆಯಬೇಡಿ]