(ಜಲಪಾತಗಳ ದಾರಿಯಲ್ಲಿ ಭಾಗ ಒಂದು)

ಮೂರು ಕಂತಿನಲ್ಲಿ ಬಂಡೆಗೆ ಮಂಡೆ ಕೊಟ್ಟು ಬಿಸಿಯಾದ್ದಕ್ಕೆ ಬನ್ನಿ, ಜಲಪಾತಗಳ ಸಣ್ಣ ತಿರುಗಾಟ ನಡೆಸೋಣ. ಅರೆ ಆಗಲೇ ‘ಎಂದು, ಎಲ್ಲಿ, ಹೇಗೆ’ ಕೇಳದೆ, ಮುಂಡು ಹೆಗಲಿಗೆಸೆದು, ಬದಲಿ ಬಟ್ಟೆಗಳ ಚೀಲ ಬಗಲಿಗೇರಿಸಿ ನೀವು ಹೊರಟದ್ದಾ?! ತಡೀರಿ, ಹಿರಿಯ ಗೆಳೆಯ ಪೆಜತ್ತಾಯರ ಪ್ರೀತಿಯ ನುಡಿಗಟ್ಟನ್ನು ಬಳಸುವುದಾದರೆ ಇದು ನಿಮಗೆ ಕೇವಲ ಮಾಯಾಜಮಖಾನದ ಪಯಣ. ವಾಸ್ತವವಾಗಿ ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಕಥೆಯಿದು. ಜಿಲ್ಲೆಯ ಖ್ಯಾತ ಪತ್ರಿಕೆಯೊಂದರ ಹಿರಿಯ ಉಪಸಂಪಾದಕ ಮಿತ್ರರು ತಮ್ಮ ವಿಶೇಷ ಸಂಚಿಕೆಗಾಗಿ ನನ್ನಿಂದ ಇದನ್ನು ಬರೆಸಿದರು. ಸಕಾಲದಲ್ಲಿ ಒದಗಿದ ನನ್ನ ದೀರ್ಘ ಲೇಖನ ಅಂದಿನ ಮುದ್ರಣ ತಂತ್ರಕ್ಕನುಗುಣವಾಗಿ ಸೂಕ್ತ ಚಿತ್ರಗಳ ಸಮೇತ ಫೋಟೋ ನೆಗೆಟಿವ್ ಆಗಿಯೂ ಕಾದಿತ್ತು. ಅದರೆ ತಿಂಗಳಾರು ಕಳೆದರೂ ಮುದ್ರಣಪೂರ್ವ ಕೆಲಸಗಳನ್ನೆಲ್ಲ ಮುಗಿಸಿ ಕೂತರೂ ಪತ್ರಿಕಾ ಆಡಳಿತಕ್ಕೆ ಕವುಚಿಕೊಳ್ಳುತ್ತಿದ್ದ ಜಾಹೀರಾತು ಮೊತ್ತದಲ್ಲಿ ಇದಕ್ಕೆ ಪ್ರಕಟಣಾ ಯೋಗ ಬರಲೇ ಇಲ್ಲ. ಸುಮಾರು ಒಂಬತ್ತು ತಿಂಗಳನಂತರ ತನ್ನ ಅಸಹಾಯಕತೆಯನ್ನು ನಿವೇದಿಸಿಕೊಳ್ಳುತ್ತಾ ಮಿತ್ರ-ಉಪಸಂಪಾದಕ ನೆಗೆಟಿವ್‌ಗಳೂ ಸೇರಿದಂತೆ ಇಡಿಯ ಕಡತವನ್ನು ನನಗೆ ಮರಳಿಸಿದ್ದರು. ಸುಮಾರು ಏಳು ವರ್ಷಗಳನಂತರ ಇನ್ನೊಂದೇ ಪತ್ರಿಕೆಯ ಮಿತ್ರ-ಉಪಸಂಪಾದಕರಿಗೆ ಇದರ ಸುಳಿವು ಹತ್ತಿ, ನನ್ನಿಂದ ಪಡೆದು, ತಮ್ಮ ಪತ್ರಿಕೆಯ ಸಾಪ್ತಾಹಿಕದಲ್ಲಿ ನಾಲ್ಕು ಕಂತುಗಳ ಧಾರಾವಾಹಿ ಮಾಡಿ ‘ಉ.ಕ. ಜಿಲ್ಲೆಯೊಳಗೊಂದು ಪ್ರಾಕೃತಿಕ ನೋಟ ಸಹಿತವಾದ ಓಟ’ ಎಂದೇ ಪ್ರಕಟಿಸಿದರು. ಅದನ್ನಿಂದು ಕೆಲವು ಪರಿಷ್ಕರಣೆ, ವಿಸ್ತರಣೆ ಸಹಿತ ಇಲ್ಲಿ ಧಾರಾವಾಹಿಸುತ್ತಿದ್ದೇನೆ.

ಸದಾ ಕಾಡು, ಬೆಟ್ಟ, ಗುಹೆ ಎನ್ನುತ್ತಿದ್ದ ನಾನು “ಧಾರೇಶ್ವರ, ಗೋಕರ್ಣ, ಶಿರಸಿ, ಬನವಾಸಿ” ಎಂದಾಗ ನಿತ್ಯ ಕರ್ಮಾನುಷ್ಠಾನಿ ಪ್ರಸನ್ನ ಕೇಳಿಯೇ ಬಿಟ್ಟ, “ಏನು, ಇಷ್ಟು ವರ್ಷ ಸಂಚಯಿಸಿದ ಪಾಪರಾಶಿ ತೊಳೆಯುವ ಅಂದಾಜೋ?” ಅದು ಹಾಸ್ಯವೇ ಇದ್ದರೂ ಜನಪ್ರಿಯ ಹೆಸರುಗಳಿಗಿರುವ ಮೋಡಿಯಲ್ಲಿ ಹದಿನಾಲ್ಕು ಮಂದಿಯ ತಂಡ ಏಳು ಬೈಕುಗಳಲ್ಲಿ ಅದೊಂದು ಬೆಳೀsssಗ್ಗೆ ನಾನಂದಾಜಿಸಿದ ದಾರಿಯಲ್ಲೇ ಮಂಗಳೂರು ಬಿಟ್ಟದಂತೂ ನಿಜ.

ಕತ್ತಲಿನ್ನೂ ಹರಿದಿರಲಿಲ್ಲ. ಹೆದ್ದೀಪ ಬೆಳಗಿಕೊಂಡು, ಹೆದ್ದಾರಿಯಲ್ಲಿ ಬಲುದೂರದಿಂದಲೇ ಕಣ್ಣು ಕುಕ್ಕಿಕೊಂಡು ಬರುವ ಭಾರೀ ವಾಹನಗಳೆದುರು ಸ್ವಲ್ಪ ಒಲೆದಾಡಿಕೊಂಡರೂ ನಮ್ಮ ತಂಡ ಸಾಗಿತ್ತು. ಆಗ ಇನ್ನೂ ‘ಹೆದ್ದಾರಿ ಅಗಲೀಕರಣ, ಉನ್ನತೀಕರಣದ’ ಗೊಂದಲಗಳು ಭೂಮಿಗಿಳಿದಿರಲಿಲ್ಲವಾದರೂ ಉದ್ಭವ-ಹೊಂಡಗಳಿಗೇನೂ ಕೊರತೆಯಿರಲಿಲ್ಲ. ಯಾರೋ ಎಂದೋ ತಮ್ಮ ವಾಹನ ರಿಪೇರಿಗೆ ನಿಲ್ಲಿಸಿದ್ದಾಗ, ಕಷ್ಟದಿಂದ ರಸ್ತೆಯ ಅಂಚುಗಟ್ಟೆಯಿಂದ ಕಿತ್ತು ತಂದು ಕಟ್ಟೆ ಇಟ್ಟು, ಕೆಲಸ ಮುಗಿದ ಮೇಲೆ ಉದಾರವಾಗಿ ಮರೆತುಹೋದ ಸೈಜುಗಲ್ಲುಗಳಂತೂ ಅಂತರ್ಜಾಲದಲ್ಲಿ ಬರುವ ರದ್ದಿಯಂಚೆಯಂತೆ (spam) ಧಾರಾಳ ಸಿಗುತ್ತಿದ್ದವು. ನಾವವುಗಳ ನಿರೀಕ್ಷೆ ಮತ್ತು ನಮ್ಮ ಮಟ್ಟದ ಎಚ್ಚರಿಕೆಯನ್ನು ಸರಿಯಾಗೇ ಮಾಡುತ್ತಿದ್ದರೂ ಕಳೆದೊಗೆಯುವ (select, delete?) ಸಮಾಜಸೇವೆಗೆ ನಿಲ್ಲುತ್ತಿರಲಿಲ್ಲ (ಯಾಕೆಂದರೆ ಇಂಥವಕ್ಕೆ ಹಿಂದೊಂದು ಬ್ಯಾನರ್ರು ಮುಂದೊಂದು ಕ್ಯಾಮರಾ ಮತ್ತೆ ಸಾರ್ವಜನಿಕ ಮಾಧ್ಯಮವೊಂದರ ಬಾತ್ಮೀದಾರನನ್ನು ಇಟ್ಟುಕೊಂಡು ಹೆಣಗುವವರ ಅವಕಾಶ ವಂಚಿಸಿದಂತಾಗದೇ?). ಬೆಳಕು ಹರಿಯುತ್ತಿದ್ದಂತೆ ನಮ್ಮ ವೇಗ ಏರಿದರೂ ನಮ್ಮೊಳಗೆ ಅದು ಎಂದೂ ಸ್ಪರ್ಧಾತ್ಮಕವಾಗುತ್ತಿರಲಿಲ್ಲ. ಪರಸ್ಪರ ಕಣ್ಣಳವಿಯಲ್ಲೇ ಎಲ್ಲರ ಓಟ. ನಿಕಟ ಅನುಸರಣೆ ಸಲ್ಲ, ಕಣ್ಣಳವಿಯಿಂದ ಮರೆಯಾಗುವಷ್ಟು ದೂರವೂ ಅಲ್ಲ. ಮಾತಿನ ಚಪಲಕ್ಕೆ ದೀರ್ಘ ಬಗಲೋಟ ನಡೆಸುತ್ತಿರಲಿಲ್ಲವಾದರೂ ಏಕತಾನತೆ ತಪ್ಪಿಸಲು ಆಗೊಮ್ಮೆ ಈಗೊಮ್ಮೆ ಎಲ್ಲರೂ ಹಿಂದು ಮುಂದಾಗುತ್ತಾ ಸಾಲು ಹಿಡಿದಿದ್ದೆವು. ಮೂಲ್ಕಿ, ಉಡುಪಿಗಳನ್ನೂ ಬದಿಗೊತ್ತಿ ಸಾಗಿದ ನಮ್ಮ ನಾನ್ ಸ್ಟಾಪ್ ಎಕ್ಸ್‌ಪ್ರೆಸ್ಸಿಗೆ ಸಾಲಿಗ್ರಾಮದ ಮಂಟಪ ಹೋಟೆಲಿನಲ್ಲಿ ಇಡ್ಲಿ ಬ್ರೇಕ್! ಬೈಕುಗಳು ಕಿರುಗುಟ್ಟುವಷ್ಟು ಕಾಫಿಂಡಿ (ವೈಯಾಕರಣಿಗಳು ಗಮನಿಸಬೇಕು ತಿ-ಕಾರ ಲೋಪ ಸಂಧಿ) ಗಿಡಿದು ಮುಂದುವರಿದೆವು.

ಕುಂದಾಪುರ ಕಳೆದು ಮರವಂತೆ. ಇಲ್ಲಿ ನಾನು ನುಡಿಕಪ್ಪ ಕೊಡದೆ ಮುಂದುವರಿಸಿದರೆ ನೀವು ಥಟ್ಟಂತ ಹೇಳಿ ಭಾಗಿಗಳಿಗಿಂತ ತುಸುವೇ ಬುದ್ಧಿವಂತರಾದರೂ ಕೇಳೀರಿ “ಇದೆಂಥ ಮರೆವಂತೆ?” ಅದು ಇಂದಿರಾಗಾಂಧಿ ಪ್ರಣೀತ ರಾಷ್ಠ್ರವ್ಯಾಪೀ ತುರ್ತುಪರಿಸ್ಥಿತಿ ಕಳಚಿಬಿದ್ದ ಕಾಲ. ನಾಲಿಗೆಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮತ್ತೊಮ್ಮೆ ಗಳಿಸಿ, ಚುನಾವಣೆಯ ಒರೆಗಲ್ಲಿನಲ್ಲಿ ಮಸೆಯುತ್ತಿದ್ದ ಕಾಲ. ನಾನು ಸಮೀರ ಸಾರ್ವಜನಿಕ ಸಾರಿಗೆ ನಂಬಿ, ಒಂದೇ ದಿನದಲ್ಲಿ ಮಂಗಳೂರು-ಕೊಡಚಾದ್ರಿ ಮುಟ್ಟಿ ಮರಳಲು ಹೊರಟು, ಸೋತು ಮರಳುವ ದಾರಿಯಲ್ಲಿ ಕುಂದಾಪುರದಲ್ಲಿ ಬಸ್ಸು ಕಾದಿದ್ದೆವು. ಆಗ ನಮ್ಮನ್ನು ಸೆರೆ ಹಿಡಿದವರು ಗೆಳೆಯ (ಸಾಲಿಗ್ರಾಮ)ಪಾರಂಪಳ್ಳಿಯ ನರಸಿಂಹ ಮಯ್ಯ (ಅಂದು ರೋಶನಿ ನಿಲಯದ ಕನ್ನಡ ಅಧ್ಯಾಪಕ). ಅವರು ವಾರಾಂತ್ಯದ ಊರು-ಮನೆಗೆ ಬರುವಾಗ ತನ್ನಷ್ಟೇ ಏಕಾಂಗಿಗಳಾದ ಮತ್ತು ಸಹೋದ್ಯೋಗೀ ಮಿತ್ರರಾದ ಲಕ್ಷೀನಾರಾಯಣ ರೆಡ್ಡಿ ಮತ್ತು ಜಯದೇವಪ್ಪರನ್ನೂ ‘ಜಗದ್ವಿಖ್ಯಾತ’ ಮರವಂತೆ ತೋರಿಸುವ ಭರವಸೆ ಕೊಟ್ಟು ಕರೆತಂದವರು, ನಮ್ಮನ್ನೂ ಆವರಿಸಿಕೊಂಡರು. ಮತ್ತೆ ಬೇರೊಂದೇ ಬಸ್ಸು ಹಿಡಿದು ಮರವಂತೆಗೆ ಹೋದದ್ದು ನನ್ನ ಮೊದಲ ನೆನಪು. ಆಗ ಕಡಲ ಕೊರೆತದ ಹಾವಳಿಯಿರಲಿಲ್ಲವೋ ಅಥವಾ ಅದರ ನೆಪದ ಸಮುದ್ರಕ್ಕೆ ಕಲ್ಲು ತುಂಬುವ ಯೋಜನೆ ಯಾರಿಗೂ ಹೊಳೆದಿರಲಿಲ್ಲವೋ ನಮ್ಮ ಪುಳಿನತೀರವಿಹಾರವಂತೂ ಮನೋಹರವಾಗಿತ್ತು. ಅಲ್ಲಿ ನಮ್ಮ ‘ಎಂಥಾ ಮರುಳಯ್ಯಾ ಇದು ಎಂಥಾ ಮರುಳೋ’ ಗಾನ ವೈಖರಿಯನ್ನು ಕೇಳಿದ್ದರೆ ಕವಿ ಲಕ್ಷ್ಮೀನಾರಾಯಣ ಭಟ್ಟರು, ಗಾಯಕ ಅಶ್ವಥ್ ‘ನಿಜಕ್ಕೂ ಇವಕ್ಕೆ ಮರುಳು’ ಎನ್ನುವಂತಿತ್ತು. ರಣಗುಡುವ ಬಿಸಿಲು (ಮಾರ್ಚ್ ತಿಂಗಳು), ನಮ್ಮ ಲಗಾಮಿಲ್ಲದ ಹಾರಾಟಕ್ಕೆ ಹೆಚ್ಚಿದ್ದ ದಾಹವನ್ನು ಸೈಕಲ್ ಡಬ್ಬೆಯ ಐಸ್ ಕ್ಯಾಂಡೀ ಚಪ್ಪರಿಸಿ ತೀರಿಸಿಕೊಂಡೆವು. ಅಷ್ಟರಲ್ಲಿ ಅಲ್ಲೇ ಪಕ್ಕದ ದೇವಾಲಯದ ವಠಾರದಲ್ಲಿ ಜನತಾಪಕ್ಷದ ಚುನಾವಣಾ ಪ್ರಚಾರ ಸಭೆ ನಡೆಯುವ ವಿಚಾರ ತಿಳಿದಾಗ ಮಯ್ಯರ ವಾಕ್ಚಾಪಲ್ಯ ಜಾಗೃತವಾಯ್ತು. ಆ ವಲಯದ ಅಭ್ಯರ್ಥಿಯ ಕುಲಗೋತ್ರಶೀಲವಿದ್ಯಾಬುದ್ಧಿಗಳನ್ನು ವಿಚಾರಿಸದೆ ‘ಮಂಗಳೂರಿನ ಕನ್ನಡ ಪ್ರೊಫೆಸರ್’ ಐವತ್ತು ನೂರುಮಂದಿಯ ಹಳ್ಳಿಗರೆದುರು, ಮೈಕ್ ಜಗ್ಗಿ “ಮರವಂತೆಯ ಗುಣವಂತರೇ” ಎಂದೇ ಕುಟ್ಟಿದ ಭಾಷಣದ ವಿಚಾರವೇನೇ ಇರಲಿ ದಿನಮಾನದ ಅವಶ್ಯಕತೆಗಂತೂ ವಿಶ್ವದ ಇನ್ನೊಂದೇ ಮೂಲೆಯಲ್ಲಿ (ಚಿಕಾಗೋ?) ಯಾರೋ “ಸೋದರ ಸೋದರಿಯರೇ” ಎಂದಷ್ಟೇ ಗಂಭೀರವಾಗಿ ಕೇಳಿದ್ದು ಸುಳ್ಳಲ್ಲ.

ರಾಷ್ಟ್ರೀಯ ಹೆದ್ದಾರಿಯ ಪೂರ್ವಕ್ಕೊಬ್ಬಳು ನೀರೆ (ಅಕ್ಷರಶಃ ನೀರೇ), ಹೆಸರು ಸೌಪರ್ಣಿಕೆ, ನಾರೀಕೇಳವನದ ನಡುವೆ ಬಳುಕಿ ಬಂದ ಚೆಲುವೆ, ಯೋಜನದ ಉದ್ದಕ್ಕೆ ನೀರವ ನಿಶ್ಚಲ ಮೈಚಾಚಿ ಮಲಗಿದ್ದಾಳೆ. ಅಲ್ಲೇ ದಾರಿಯ ಪಶ್ಚಿಮಕ್ಕೆ ಸಾವಿರ ನೀರೆಯರ ಗಂಡ, ಮತ್ತೂ ಬೇಕೆನ್ನುವ ನಿರ್ಲಜ್ಜ ಭಂಡ, ನೂರೆಂಟು ನಿರಿಗೆಗಳ (ಯಕ್ಷ ಭಾಷೆಯಲ್ಲಿ ಸೋಗೋಲೆ ಎನ್ನಿ) ಚಿಮ್ಮುತ್ತ, ಕ್ರಮವಾಗಿ ಮುಂದಕ್ಕೂ ಹಿಂದಕ್ಕೂ ಒಲೆಯುತ್ತಾ ಮೊರೆಯುವ ಸಾಕ್ಷಾತ್ ಜಲಧಿಪತಿ, ಅರಬ್ಬೀ ಸಮುದ್ರ. ಪ್ರಾಕೃತಿಕ ವೈವಿಧ್ಯದಲ್ಲಿ ನಿಸ್ಸಂದೇಹವಾಗಿ ಇದು ಒಂದು ಸುಂದರ ತಾಣ. ಆದರೆ ಇಲ್ಲಿ ಕಾಣುವುದಕ್ಕಿಂತ ಪ್ರಚಾರ ಹೆಚ್ಚಾಗಿ, ‘ಜನಪ್ರಿಯ’ ಆಡಳಿತಗಳು ಸಾರ್ವಜನಿಕ ಅನುಕೂಲಗಳ ಹೆಸರಿನಲ್ಲಿ ಹೇರಿದ ಯೋಜನೆಗಳ ಕುರುಹು ಮತ್ತು ಪೋಲು ಮಾಡಿದ ಹಣದ ನಿಜಲೆಕ್ಕ ತೆಗೆದರೆ ಮಾತ್ರ ನಾಲಿಗೆ ಕಹಿಯಾಗುತ್ತದೆ. ಸಮುದ್ರ ಕೊರೆತದಲ್ಲಿ ದಾರಿ ಮತ್ತು ಅದನ್ನು ಹೊತ್ತ ಸಪುರ ನೆಲವನ್ನು ಉಳಿಸಿಕೊಳ್ಳಲು ಲಾರಿಗಟ್ಟಳೆ ಕಲ್ಲು ಬಿದ್ದಿವೆ; ಮುಳುಗಿದ ಕಲ್ಲಿನ ಲೆಕ್ಕಕ್ಕೆ ನಿಜದ ಲೆಕ್ಕ ತಾಳೆಹಿಡಿದವರಿಲ್ಲ. ರಾತ್ರಿಯಲ್ಲೂ ಪ್ರಾಕೃತಿಕ ಸೌಂದರ್ಯ ವೀಕ್ಷಣೆಗೆಂಬಂತೆ ಹೈಮಾಸ್ಟ್ ದೀಪಗಳ ಸಾಲೇ ಬಂತು; ಕೊಚ್ಚಿ ಹೋದದ್ದೂ ಆಯ್ತು. ಕರ್ನಾಟಕಕ್ಕಿರುವ ನೂರಾರು ಕಿಮಿ ಕಡಲಕಿನಾರೆಯಲ್ಲಿ ಜನಪ್ರಿಯವಲ್ಲದ ಎಷ್ಟೂ ಜಾಗಗಳಲ್ಲಿ ಕಡಲಾಮೆಗಳ ಸಂರಕ್ಷಣೆ ನಡೆಸಬಹುದಾಗಿದ್ದ ಅರಣ್ಯ ಇಲಾಖೆ ಎಲ್ಲ ಬಿಟ್ಟು ಇಲ್ಲೇ ಭರ್ಜರಿ ಬೋರ್ಡು ಹಾಕಿ ಗುಡಾರ ಕಟ್ಟಿ ದುಡ್ಡು ಹುಡಿಹಾರಿಸಿದ್ದು ಆಯ್ತು (ಅದರ ಅವಶೇಷಗಳನ್ನು ಮತ್ತೆ ಹೈಮಾಸ್ಟ್ ಕಿತ್ತು ನುಂಗಿದ ಸಮುದ್ರವೇ ಜೀರ್ಣೀಸಿಕೊಳ್ಳಬೇಕಾಯ್ತು!). ಪ್ರವಾಸೋದ್ಯಮ ಇಲಾಖೆ, ಮತ್ಸ್ಯಾಭಿವೃದ್ಧಿ ಮಂಡಳಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಪರಿಸರ ಇಲಾಖೆ (ಹೌದು, ಇದೂ ಸೇರಿ) ಮುಂತಾದ ನೂರೊಂದು ದಂಡಪಿಂಡಗಳು ಸಂದ ವರ್ಷಗಳುದ್ದಕ್ಕೂ ಕಡತ ಮತ್ತು ಅನುಷ್ಠಾನಗಳ ಮಟ್ಟದಲ್ಲಿ ಇನ್ನೆಷ್ಟೆಷ್ಟೋ ಹೊಸೆಯುತ್ತಲೇ ಬಂದಿವೆ, ಬಿಡಿ. ಸಾಹಸಯಾತ್ರೆಯನ್ನು ಶೋಕಗೀತೆ ಮಾಡದ ಎಚ್ಚರದಲ್ಲಿ ಮುಂದುವರಿಯುತ್ತೇನೆ.

ದಕ್ಷಿಣ ಕನ್ನಡ ಜಿಲ್ಲೆಗೆ (ಇಂದಿನ ಲೆಕ್ಕಾಚಾರದಲ್ಲಿ ಬೇಕಾದರೆ ಅವಿಭಜಿತ ಎಂದು ಸೇರಿಸಿಕೊಳ್ಳಿ) ವಿಸ್ತಾರ ನೆಲಕೊಟ್ಟು ಕರಾವಳಿ ಜಿಲ್ಲೆ ಎಂಬುದಕ್ಕೆ ಗಡಿರೇಖೆಯಾಗಿಯೇ ನಿಂತ ಪಶ್ಚಿಮ ಘಟ್ಟಸಾಲು ಈ ಕೊನೆಯ ಬೈಂದೂರು, ಶಿರೂರಿನಲ್ಲಿ ಹೆಚ್ಚು ಕಡಿಮೆ ಸಮುದ್ರಕ್ಕೇ ನುಗ್ಗುತ್ತದೆ. ಬೈಂದೂರಿನ ಕೈಕಂಬ ಹಾಯುವಾಗ ಬಗೆಗಣ್ಣಿನಲ್ಲಿ ಕೊಲ್ಲೂರು, ಮೂಕಾಂಬಿಕಾ ಅರಣ್ಯಗಳ ಚಿತ್ರ ಮೂಡುವುದರೊಡನೆ ನೇಪಥ್ಯದಲ್ಲಿ ಸಾಕ್ಷಾತ್ ಕೊಡಚಾದ್ರಿ ಶಿಖರ ದರ್ಶನ ನಮ್ಮನ್ನು ಪುಳಕಿತಗೊಳಿಸುತ್ತದೆ. ಶಿರೂರಿನ ಜಿಲ್ಲಾ ಗಡಿಯಾಚಿನ ಒತ್ತಿನೆಣೆಯ ಗುಡ್ಡೆ (ಹೆಚ್ಚಿನ ವಿವರಗಳಿಗೆ ಇಲ್ಲೇ ಹಿಂದಿನ ಕಡತಗಳಲ್ಲಿ ಅಂಡಮಾನ್ ಪ್ರವಾಸ ಕಥನವನ್ನು ಅವಶ್ಯ ನೋಡಿ) ಏರಿದಾಗ ಬಲಕ್ಕೆ ಅನತಿದೂರದಲ್ಲಿ ಬಳಕುವ ಬಳ್ಳಿಯಾಗಿ, ಹಸುರಿನ ಮೊತ್ತದಲ್ಲೆಳೆದ ಹತ್ತಿಯ ಮಾಲೆಯಂತೆ ತೋರುವ ಅರೆಹಳ್ಳಿ ಅಬ್ಬಿ ಮತ್ತೆ ಕಿವಿ ತುಂಬಾ ಮೊರೆದು, ಕಣ್ತುಂಬಾ ನೊರೆದು, ನಮ್ಮ ತಲೆತಟ್ಟಿ, ಮೈದಡವಿ ಮೀಯಿಸಿದ್ದೇ ನೆನಪು. ಭಟ್ಕಳದ ಕೈಕಂಬದಲ್ಲಿ ನೆನಪಿನ ಕುದುರೆ ನಾಗಾಲೋಟಿಸಿ, ಕೋಗಾರು ಘಾಟಿಯಲ್ಲಿ ಎಡಕೊಳ್ಳಕ್ಕಿಳಿದು, ಭೀಮೇಶ್ವರದ ಮಹಾಬಂಡೆಯ ಎದುರು ಕುಬ್ಜವಾಗಿಸಿದ್ದೂ ಮಧುರಾ ಮಧುರ!

ಹೊನ್ನಾವರಕ್ಕೂ ಮೊದಲೇ ಸಿಗುವ ಇಡಗುಂಜಿ ಅಥವಾ ನನ್ನ ಒಲವಿನ ಖಾತೆಯಲ್ಲಿ ದೊಡ್ಡ ಅಕ್ಷರಗಳಲ್ಲಿ ಕಾಣಿಸುವ ಕೆರೆಮನೆ ಮತ್ತು ಹೊನ್ನಾವರದಾಚೆಗೆ ಸಿಗುವ ಮುರುಡೇಶ್ವರ ನನಗೆ ಯಾವತ್ತೂ ಪರಂಪರೆ ಮತ್ತು ಪ್ರಯೋಗಗಳ ಎರಡು ವಿಭಿನ್ನ ನಿದರ್ಶನಗಳನ್ನು ಕೊಡುವ ತಾಣಗಳು. ಇಡಗುಂಜಿ ಮೇಳ ಅಥವಾ ಕೆರೆಮನೆ ಹೆಗಡೆ ಬಂಧುಗಳ ಯಕ್ಷಗಾನ ಪ್ರದರ್ಶನಗಳು ‘ಪ್ರಯೋಗ’ದ ಧನಮುಖವನ್ನು ತೋರಿಸಿದರೆ, ಮುರುಡೇಶ್ವರದ ಸಾಂಪ್ರದಾಯಿಕ ದೇವಳಕ್ಕೆ ಕವಿದ ಆರೆನ್ ಶೆಟ್ಟಿಯವರ ಧನಸಂಪತ್ತು ‘ಅಭಿವೃದ್ಧಿಯ’ ಋಣಮುಖವನ್ನು ತೋರಿಸುತ್ತವೆ. ಯಕ್ಷಗಾನದ ಜನಪ್ರಿಯತೆಗಾಗಿ ಕ್ಯಾಬರೆ ನರ್ತನದಂತವನ್ನು ಪೂರ್ವರಂಗಕ್ಕೆ ತಂದವರು, ಬೀದಿಜಗಳ ಕೋಳಿಕಟ್ಟ ಹಂದಿಮರಿಗಳಿಗೂ ದಶಾವತಾರ ಆಟದ ಎತ್ತರಕ್ಕೆ ಮುಟ್ಟಿಸಿದವರ, ಮಾತೇ ಸಕಲ ಸಾಧನವು ಎಂದು ಯಕ್ಷಗಾನದಲ್ಲಿ ಮೆರೆಸುತ್ತಿದ್ದವರ ನಡುವೆ ಮೇಳಕಟ್ಟಿ ಬಂದು ಅದದೇ ಪೌರಾಣಿಕ ಪ್ರಸಂಗಗಳನ್ನು ಸಮಗ್ರ ರಂಗಕ್ರಿಯೆಗೆ ಒಗ್ಗುವಂತೆ ರೂಪಿಸಿ ಎಲ್ಲರ ಮನಸೂರೆಗೊಂಡವರು ಈ ಕೆರೆಮನೆ ಬಂಧುಗಳು. ಪಾರಂಪರಿಕ ಜೀರ್ಣೋದ್ಧಾರದ ಅವಶ್ಯಕತೆ ಇದ್ದ ದೇವಾಲಯಕ್ಕೆ ಬಹುಮಹಡಿಯ ಮಹಾದ್ವಾರದಿಂದ ತೊಡಗಿ ಸಿಮೆಂಟು, ಬಣ್ಣಗಳ ಅತಿರೇಕದಲ್ಲಿ ಮುಳುಗಿಸಿ ತೆಗೆದು ಪಂಚತಾರಾ ಹೋಟೆಲ್ಲಿನಂತೋ ಸೂಪರ್ ಬಜಾರಿನಂತೆಯೋ ಮೂಡಿಸಿ ಮೆರೆಯುತ್ತಿರುವವರು ಆರೆನ್ ಶೆಟ್ಟರು! ಇಲ್ಲಿ ಯಕ್ಷಗಾನ ವಿಚಾರವಂತರ ಉಸಿರಿನಲ್ಲಿ ಬತ್ತಿತೀವಿದ ನಂದಾದೀವಿಗೆಯಾದರೆ ಅಲ್ಲಿ ಸೇವಾಕರ್ತನ ಧನದೌಲತ್ತೊಂದೇ ಮೆರೆದಿದೆ. ಇಡಗುಂಜಿಗೆ ನುಗ್ಗಿನೋಡಲು ಸಮಯವಿಲ್ಲ, ಮುರುಡೇಶ್ವರಕ್ಕೆ ಮನಸ್ಸಿಲ್ಲ ಎಂದು ನಮ್ಮ ಬೈಕೋಟ ಅವಿರತ ಸಾಗಿಯೇ ಇತ್ತು. ಮಧ್ಯೆ ಕಳೆದ ಕಾಸರಕೋಡ, ಶರಾವತಿ ಸೇತುವೆ ಮತ್ತು ಹೊನ್ನಾವರಗಳ ಕುರಿತು ನನ್ನ ಕತೆಗಳ ಕಂತೆ ಇಲ್ಲಿ ಬಿಚ್ಚಿದರೆ ನೀವು ನನಗೆ ಹರಿದಾಸ ಪಟ್ಟ ಕೊಡುವುದು ಖಾತ್ರಿ ಎಂದು ಹೆದರಿ, ಬಿಟ್ಟು ಮುಂದುವರಿಯುತ್ತೇನೆ. (ಪೂರ್ತಿ ನಿಶ್ಚಿಂತರಾಗಬೇಡಿ, ಹೀಗೇ ಮುಂದೆಂದೋ ಅವಕ್ಕೂಅವಕಾಶ ಕೊಡುತ್ತೇನೆ. ಮತ್ತೇಳ್ನೂರು ಟಿಕೆಟ್ಗೆ ಏಳ್ಸಾವ್ರ ಜನ ನುಗ್ಗಿ ಬೆಂಗ್ಳೂರಲ್ಲಿ ಬೇಲಿ ಮುರ್ದಂಥಾ ಆಕರ್ಷ್ಣೇ ಇಲ್ಲಿ ಬರೋಕೇ ಇದೇನ್ ಕಿರಿಕೆಟ್ಟಿಗೆ ಕೆಟ್ಟೋಗ್ಲಿಲ್ಲ ಬಿಡಿ)

ಹೆದ್ದಾರಿಯಲ್ಲಿ ದಾರಿ ಬದಿಗೇ ಸಿಗುವ ಧಾರೇಶ್ವರದಲ್ಲಿ ನಮ್ಮ ಮೊದಲ ಯೋಜಿತ ನಿಲುಗಡೆಗೆ ಬರುವಾಗ ಗಂಟೆ ಹತ್ತೂವರೆ. ಸ್ಥಳಪುರಾಣಗಳ ಮತ್ತು ಜನಬಳಕೆಯ ಚಾಲ್ತಿಯಲ್ಲಿ ಮುರ್ಡೇಶ್ವರ, ಧಾರೇಶ್ವರ ಮತ್ತು ಗೋಕರ್ಣ ಮುಪ್ಪುರಿಗೊಂಡ ಕಥೆ ಕೇಳಿದ್ದ ನಾವು, ಮುಖ್ಯವಾಗಿ ನಾನು ಈ ಸಂದರ್ಭದಲ್ಲಿ ಉಳಿದೆರಡನ್ನೂ ನೋಡಿಬಿಡಬೇಕು ಎಂದೇ ಅಂದಾಜಿಸಿದ್ದೆ. ತ್ರಿವಳಿಗಳಲ್ಲಿ ಉಳಿದೆರಡಕ್ಕೆ ಸಿಕ್ಕ ಧನಬಲ ಇದಕ್ಕೆ ಒದಗಿದಂತಿರಲಿಲ್ಲ. ಕೊಳಕು ಕೆರೆ, ಜಲಾಧಿವಾಸದಲ್ಲಿದ್ದ ಕೆಲವು ಮೂರ್ತಿಗಳು, ಎಲ್ಲೆಡೆ ಹಾಳು ಸುರಿಯುವ ರಚನೆಗಳು, ಎಲ್ಲಕ್ಕೂ ಮುಖ್ಯವಾಗಿ ಇದ್ದದ್ದನ್ನೂ ಒಪ್ಪವಾಗಿಡದ ಔದಾಸೀನ್ಯಕ್ಕೆ ದೇವಸ್ಥಾನವೇ ಕುಸಿದು ಬಿದ್ದರೆ ಆಶ್ಚರ್ಯವಿಲ್ಲ ಎನ್ನುವಂತಿತ್ತು. ಸಹಜವಾಗಿ ನಮ್ಮ ಆಸಕ್ತಿಯನ್ನು ಹೆಚ್ಚು ಹಿಡಿದಿಡಲಿಲ್ಲ. ಅದ್ಭುತದ ಶಿಲೆ ಟೈಲ್ಸುಗಳ ಸೇವೆ, ಬೆಳ್ಳಿಚಿನ್ನದ ಒಪ್ಪ, ರಥಪಲ್ಲಕ್ಕಿಗಳನ್ನೇ ಕೊಡುವವರು ಬರಬೇಕಾಗಿಲ್ಲ. ಸಂದುಗಿಡಿದು, ಕಸ ಕೊಚ್ಚೆ ತೊಡೆದು, ಸಾಂಪ್ರದಾಯಿಕ ಸುಣ್ಣ ಬಣ್ಣ ಕಾಣಿಸುವವರಾದರೂ ದಕ್ಕಲಿ ಎಂದು ಆಶಿಸಿ ಮುಂದುವರಿದೆವು.

ಕುಮಟಾ ಪೇಟೆಯೊಳಗೆ ಹಾದು, ಪಶ್ಚಿಮಕ್ಕೆ ಕವಲಾಗಿ, ಅಘನಾಶಿನಿ ನದಿ ಮುಖ ಅರ್ಥಾತ್ ಸಮುದ್ರ ಸಂಗದ ಸ್ಥಾನವನ್ನು ಸುಮಾರು ಹದಿಮೂರು ಕಿಮೀಯೊಳಗೆ ಸೇರುವ ಕಿರುದಾರಿ ಅನುಸರಿಸಿದೆವು. ಬಾಡ ಈ ದಾರಿಯ ಮುಖ್ಯ ಹಳ್ಳಿ. ನಮ್ಮ ತಂಡದ ಸದಸ್ಯರೇ ಆದ ವಿ.ಪಿ ನಾಯಕರ (ಬಂಟ್ವಾಳದಲ್ಲಿ ಶಾಲಾಶಿಕ್ಷಕ) ತವರೂರು ಗುಡೇ ಹಳ್ಳಿ, ಹೆಚ್ಚುಕಡಿಮೆ ಈ ದಾರಿಯ ಕೊನೆಯ ಜನವಸತಿ ಸ್ಥಳ. ರಜೆಯಲ್ಲಿ ಊರಿನಲ್ಲೇ ಇದ್ದ ನಾಯಕರು ಕಾದು ನಿಂತು ನಮ್ಮನ್ನು ಕುಮಟದಲ್ಲೇ ಸೇರಿಕೊಂಡಿದ್ದರು. ನಾಯಕರ ಮನೆಯಿಂದ ಮೂರ್ನಾಲ್ಕು ಕಿಮೀ ಮುಂದೆ ದಾರಿ ಪುಟ್ಟ ಗುಡ್ಡೆ ಏರುವುದಿತ್ತು. ಡಾಮರೂ ಕಾಣದ ಏರುದಾರಿ, ಉಪಯುಕ್ತತೆಯೂ ಕಡಿಮೆ ಆದದ್ದಕ್ಕೋ ಏನೋ ವಿಪರೀತ ಕೊರಕಲು ಬಿದ್ದಿತ್ತು. ಹಳ್ಳಿಗಾಡಿನದ್ದೇನು ಘಟ್ಟವೇರುವ ಕಾಲುದಾರಿಗಳನ್ನೂ ಅನುಸರಿಸಿ ಸಾಗಿದ ಅನುಭವ ನಮ್ಮ ಬೈಕ್ ಪಡೆಯದ್ದು. ಹಾಗಾಗಿ ಸ್ವಲ್ಪ ನಿಧಾನಿಸಿದರೂ ಲಕ್ಷ್ಯ ಸಾಧಿಸಿದೆವು. ಆ ಎತ್ತರದ ಆಚಿನ ದೃಶ್ಯ ಎರಡೂ ಅರ್ಥದಲ್ಲಿ ಅಪೂರ್ವ. ಮಲೆರಾಯನ ಬಲು ಪ್ರೀತಿಯ ಮಗಳಿರಬೇಕು ಅಘನಾಶಿನಿ. ಆಕೆಯ ಬಿಡು ಬೀಸೋಟವನ್ನು ಪ್ರತಿ ಹೆಜ್ಜೆಯಲ್ಲೂ ತಡೆಯುವಂತೆ ಕಿರುಬೆಟ್ಟ ಸಾಲುಗಳೇ ಕಡಲವರೆಗೂ ಓಡೋಡಿ ಬಂದಂತಿತ್ತು. ದಿಟ್ಟ ಏಣುಗಳ ಕಾಲಸಂದಿನಲ್ಲಿ ಹಾಗೊಮ್ಮೆ ಹೀಗೊಮ್ಮೆ ಬಳುಕಿದ ಅಘನಾಶಿನಿ ಅಂತಿಮವಾಗಿ ದಕ್ಷಿಣಮುಖಿಯಾಗಿ ಸಮುದ್ರದ ತೆಕ್ಕೆಯನ್ನು ಸೇರುತ್ತಾ ಉಸ್ಸೆಂದು ಹರಡಿಕೊಂಡ ಚಂದ ನೋಡಿಯೇ ಅನುಭವಿಸಬೇಕು. ಇತ್ತಿಂದ ಹರಿ, ಅತ್ತಿಂದ ತೆರೆಗಳ ತಾಕಲಾಟದಲ್ಲಿ ನೊರೆಗೀಟುಗಳು ಮಗುಚುವುದು, ಮಾಯುವುದು ಮೋಹಕ. ನಾವು ನಿಂತ ಗುಡ್ಡದಾಚೆಗೂ ಮುಂದುವರಿಯುವ ದಾರಿ ಅನುಸರಿಸಿ ಇಳಿದರೆ ಕೆಲವು ಪ್ರಾಕೃತಿಕ ಗುಹೆಗಳನ್ನೂ ನದಿಮುಖದ ಇನ್ನಷ್ಟು ಸುಂದರ ದೃಶ್ಯಗಳನ್ನೂ ಸವಿಯಬಹುದೆಂದು ನಾಯಕರು ಸೂಚಿಸಿದ್ದರು. ಆದರೆ ಸಮಯದ ಮಿತಿ ನಮ್ಮನ್ನು ಹಿಂದಕ್ಕೆ ಹೊರಳಿಸಿತು.

“ಮನೆ ಬಾಗಿಲಿಗೆ ಬಂದವರನ್ನು ಹಾಗೇ ಬಿಡುವ ಕ್ರಮ ಇಲ್ಲ” ಎಂದರು ನಾಯಕ್. ದೊಡ್ಡ ಬಾಳೆಗೊನೆಯನ್ನೇ ಬಿಡಿಸಿಟ್ಟರು. ತಿಥಿ ಇಲ್ಲದವರು ಬರ್ತಾರೇಂತ ಬಾಳೆ ದಿನಕ್ಕೆ ಮೊದಲೇ ಪೂರ್ತಿ ಕಳಿತಿರುವುದು ಸಾಧ್ಯವಿರಲಿಲ್ಲ. ಆದರೂ ಬೇಡ ಬೇಡ ಎನ್ನುತ್ತ ಕೈ ಹಾಕಿದ ನಾವು ಸಿಪ್ಪೆ ಮತ್ತು ದಡಿ ಉಳಿಸಿದ್ದೇ ದೊಡ್ಡದು! ಬೊಂಡದ ಗೊನೆ ಇಳಿಸ ತೊಡಗಿದರು. ಈಗ ಮಾತ್ರ ನಮಗೆ ಪ್ರಾಮಾಣಿಕವಾಗಿ ದಾಕ್ಷಿಣ್ಯ ಕಾಡಿತು. ಮನೆಯವರಿಗೆ ಕೇಳದಂತೆ ನಾಯಕರಿಗೆ ಬೆದರಿಕೆ ಹಾಕಿದೆ, “ಬೇಡ, ಮೋಡದಂಚಿನ ಬಿಸಿಲ ಹೊಡೆತ ಮತ್ತು ದೀರ್ಘ ಪ್ರಯಾಣದಲ್ಲಿ ಬಂದ ತರುಣರೊಬ್ಬಬ್ಬರೂ ಕನಿಷ್ಠ ಎರಡೆರಡರ ನೀರು, ಕಾಯಿ ಖಾಲಿ ಮಾಡ್ತಾರೆ.” ಅವರು ಹೆದರಲಿಲ್ಲ. ಗೊನೆ ಇಳಿಸಿ ಕೆತ್ತಿ, ಕೆತ್ತಿ ಕೊಟ್ಟರು. ಸೋಲುವ ಸರದಿ ನಮ್ಮದು. ಬಾಯಿ ಹಚ್ಚಿ ಕವುಚಿದ ಒಂದೊಂದೂ ಬೊಂಡ ಅಕ್ಷಯವಾದಂತಿತ್ತು. ಅದರ ಕೊನೆ ಹನಿ ಕಾಣುವುದು ಬಿಟ್ಟು ನಮ್ಮ ಉಸಿರು ತೇಕುಮುರ್ಕಾಗಿತ್ತು! ಇನ್ನೊಂದು ಬೊಂಡ ಬಿಟ್ಟು ಹಿಡಿದದ್ದರ ಕಾಯಿಯನ್ನೇ ಖಾಲಿ ಮಾಡುವಲ್ಲಿ ನಮ್ಮ ತಾಕತ್ತು ಖಾಲಿಯಾಗಿತ್ತು. ಮನೆಯವರಿಗೆ ವಿದಾಯ ಹೇಳಿ ಮತ್ತೆ ಹೆದ್ದಾರಿಗೆ ಮರಳಿ ಗೋಕರ್ಣದತ್ತ ಮುಂದುವರಿದೆವು.

ಬಾಡದಲ್ಲಾದ ಪರಿಚಯವನ್ನು ಭಾರೀ ಹಚ್ಚಿಕೊಂಡವಳಂತೆ ಈಗ ಅಘನಾಶಿನಿ ನಮಗೆ ಜೊತೆಕೊಟ್ಟಿದ್ದಳು. ಆಕಾಶದೆತ್ತರದಿಂದ ಇಳಿದು ಬರಲಾಗದ ಸೂರ್ಯನ ಹೊಟ್ಟೆಕಿಚ್ಚು ಹೊಳೆಯುದ್ದಕ್ಕೂ ತಳಮಳಿಸಿ ನಮ್ಮನ್ನು ಕಾಡಿತು. ರಸ್ತೆಯೂ ಕಪ್ಪನ್ನೂ ಕಾಯಿಸಿ, ಮೃಗಜಲ ಕುಣಿಸಿದ್ದೂ ಸೂರ್ಯನದ್ದೇ ಫಿತೂರೀಂತ ನಮಗರ್ಥವಾಯ್ತು. ಹಾಗಾಗಿ ಮಾದನಕೇರಿ ಬಳಿ ಹೆದ್ದಾರಿ ಬಿಟ್ಟು ಗೋಕರ್ಣಕ್ಕೆ ಒಳದಾರಿ ಹಿಡಿದಾಗ ಬಯಲಲ್ಲಿ ಅಲ್ಲಲ್ಲಿ ಬಿಳಿಬಿಳಿಯಾಗಿ ರಾಶಿಬಿದ್ದ ಉಪ್ಪಿನಮಡಿಗಳು ನಮಗೆ ಆಶ್ಚರ್ಯವನ್ನುಂಟು ಮಾಡಲಿಲ್ಲ! ಮಟಮಟ ಮಧ್ಯಾಹ್ನ ಸುಮಾರು ಒಂದೂ ಕಾಲಕ್ಕೆ ಗೋಕರ್ಣ ತಲಪಿದೆವು. ನಮ್ಮ ಯಾವುದೇ ತೀರ್ಥಕ್ಷೇತ್ರಗಳಿಗೆ ಕಡಿಮೆಯಾಗದಂತೆ ಕಂಗೊಳಿಸಿತು ಗೋಕರ್ಣ. ಕೊಳಕು ಗಲ್ಲಿಗಳ ಜಾಲದಲ್ಲೊಂದೆಡೆ ಹಸಿರುಗಟ್ಟಿದ ಕೊಚ್ಚೆ ಹೊಂಡ ಕೋಟಿತೀರ್ಥ. ಅದರ ಅಂಚಿನ ಮಂಟಪಗಳಲ್ಲಿದ್ದ ಪಿಂಡದಂಡಗಳು ನಾಯಿಮೂಸದಷ್ಟೂ ನಾರಿದ್ದವು. ನೀರು ಭಕ್ತರ ಆಚರಣೆಗೆ ಅನುಗುಣವಾಗಿ ಬಣ್ಣವಡೆದು ಅಸಹ್ಯ ಅವಶೇಷಗಳನ್ನು ತೇಲಿಸಿತ್ತು. ಕೆರೆಯಂಚಿನ ಗೋಡೆಗಳ ಮೇಲೆ ಅವಕಾಶವಿದ್ದಲ್ಲೆಲ್ಲಾ ವಿವಿಧ ಗಾತ್ರಗಳಲ್ಲಿ, ಭಾಷೆಗಳಲ್ಲಿ ‘ಕೆರೆ ಕೊಳಕು ಮಾಡಬಾರದು’ ಎಂಬ ಸೂಚನೆ ಸಾರಿ ಹೇಳುತ್ತಿದ್ದರೂ ವಸ್ತು ಸ್ಥಿತಿ ನೋಡಿ ಮರುಗಿದೆವು. ನಾವು ಸ್ನಾನ ಮಾಡುವುದಿರಲಿ, ಎರಡು ಬೊಗಸೆ ಮುಖಕ್ಕೆ ತಳಿದು ಬೆವರು ದೂಳು ಕಳೆದು, ಸೆಕೆಗೊಮ್ಮೆ ‘ಬಾಯ್’ ಎನ್ನುವ ಸಂತೋಷಕ್ಕೂ ಎರವಾದೆವು. ‘ಮಡಿ’ ಇಲ್ಲಿ ಮಡಿದಿದೆ!

ಕಡಲಕಿನಾರೆಗೇ ಹೋಯ್ತು ನಮ್ಮ ಸವಾರಿ. ನೂರಿನ್ನೂರು ಅಡಿ ಹುಡಿ ಮರಳ ಹಾಸಿನ ಮೇಲೆ ಬೈಕ್ ಚಲಾವಣೆ ಅನಾವಶ್ಯಕವೆಂದು ಕಂಡು ಅಂಗಡಿಗಟ್ಟೆಗಳ ಬಳಿಯೇ ನಮ್ಮ ಬೈಕ್ ಇಳಿದದ್ದು ಸರಿ. ಆದರೆ ನೀರಿಗಿಳಿಯುವ ಕಾತರದಲ್ಲಿ ಚಪ್ಪಲಿಬೂಟುಗಳನ್ನೂ ಅಲ್ಲೇ ಬಿಟ್ಟದ್ದು ತಪ್ಪಾಯ್ತು. ಪಾದ ಹುಗಿಯುತ್ತಿದ್ದ ಕಾದುಕೆಂಪಾದ ಮರಳಲ್ಲಿ ನಿಲ್ಲುವುದಿರಲಿ, ವಿಹಾರದ ಹೆಜ್ಜೆಯೂ ಅಸಾಧ್ಯ; ನಮ್ಮದು ಅಯ್ಯಯ್ಯಪ್ಪಾ ಗೆಂಡಸೇವೆ. ಉರಿಬಿಸಿಲಿಗೆ ಜೂಗರಿಸುವಂತಿದ್ದ ಸಮುದ್ರ ಪೂರ್ಣ ಮರಳು ತಣಿಸುವ ಉತ್ಸಾಹ ಕಳೆದುಕೊಂಡಿದ್ದರೂ ಮತ್ತೆ ಮತ್ತೆ ಪುಟ್ಟ ಅಲೆಗೈಗಳನ್ನು ಚಾಚುತ್ತಿದ್ದ ದೂರಕ್ಕೆ ಅಕ್ಷರಶಃ ಓಡಿದ್ದೆವು. ಬೆಸ್ತರ ದೋಣಿ ಸಂಚಾರ, ಪುಣ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸ್ನಾನೇತ್ಯಾದಿ ಚಟುವಟಿಕೆ, ಚುಟುಕುಗುಟುಕು ಹೆಕ್ಕುವ ಕಾಗೆ, ಪೋಲಿನಾಯಿಗಳೇನು ತಣ್ಪೂಡುವ ಎಳೆಗಾಳಿಯೂ ಇರಲಿಲ್ಲ. ನಮ್ಮ ಕಣ್ಣೋಟಕ್ಕೆ ಬಲದ ಪುಳಿನತೀರ ಸಾಮಾನ್ಯ ರೇಖೆ. ಎಡಕ್ಕೆ ಅಂದರೆ ದಕ್ಷಿಣಕ್ಕೆ ಪುಟ್ಟ ಗುಡ್ಡೆಯೊಂದು ಸುಮಾರು ಇನ್ನೂರು ಮುನ್ನೂರಡಿಯವರೆಗೂ ಸಮುದ್ರಕ್ಕೆ ನುಗ್ಗಿದಂತಿತ್ತು, ಆಚಿನ ದೃಶ್ಯ ಮರೆಮಾಡಿತ್ತು. ಬಲು ಹಿಂದಿನಿಂದ ಗೋವಾ ಕಡಲಕಿನಾರೆಗಳು ವಿದೇಶೀಯರ ಬೆತ್ತಲೆಸೇವೆಗೆ, ಅಮಲು ಸವಾರಿಗಳಿಗೆ ಹೆಸರು ಹೋಗಿವುರುದು ನಮಗೆ ತಿಳಿದಿತ್ತು. ಈಚೆಗೆ ಅಲ್ಲಿ ತುಸು ಸನಾತನೀ ಸಾಂಸ್ಕೃತಿಕ ಜಾಗೃತಿ ಉಂಟಾದ್ದರಿಂದ ನವನಾಗರಿಕರು, ಭಂಗೀಕೂಟಗಳೂ ಗೋಕರ್ಣದ ಈ ಮೋಟು ಗುಡ್ಡೆಯಾಚೆಗೆ ವಲಸೆ ಬಂದಿವೆ ಎಂದು ಕೇಳಿದ್ದೆವು. ಅಲ್ಲಿನ ನೀರಂಚಿನ ಗೆರೆ ಸಂಸ್ಕೃತದ ಓಂ ಅಕ್ಷರವನ್ನೇ ಹೋಲುವುದರಿಂದ ಕ್ಷೇತ್ರಕ್ಕೊಂದು ವ್ಯಂಗ್ಯ ಭಾಷ್ಯದಂತೆ ಜನರ ಬಾಯಲ್ಲಿ ಅದು ‘ಓಂಬೀಚು.’ (ರಥಬೀದಿಯ ಆಚಾರ್ರು ಕದ್ದುಮುಚ್ಚಿ ಮುಂಗ್ಲಿ ಕೈಗಾಡಿಯಲ್ಲಿ ಬಿಶಿಬಿಶಿಯಾಗಿ ತಿಂದ ಓಂ-ಲೆಟ್ಟಿನಂತೆ) ಸಮಯ ಮತ್ತು ಕಾರ್ಯಭಾರದ ಅರಿವಿನೊಡನೆ ನಾವು ಓಂಬೀಚ್ ಸಂದರ್ಶನಕ್ಕೆ ಮನಸ್ಸು ಮಾಡದೆ ಬೈಕಿಗೆ ಮರಳಿದೆವು. ಅಲ್ಲಿನ ಗುಡಿಗೊಂದು ಚುಟುಕಿನ ಹಾಜರಾತಿ ಹಾಕಿದರೂ ನಮ್ಮ ಹೊಟ್ಟೆಗೆ ವಿಸ್ತಾರದ ಶಾಂತಿಯ ಅಗತ್ಯವಿತ್ತು. ಪೇಟೆಯೊಳಗೆ ಸ್ಪಷ್ಟ ಬಸ್ ನಿಲ್ದಾಣವಿರಲಿಲ್ಲ. ಆದರೂ ಅವು ನಿಲ್ಲುವ ದಾರಿ ಬದಿಯನ್ನೇ ನಿಲ್ದಾಣ ಎಂದು ಕರೆಯುವುದೇ ಆದರೆ ಅಂಥಲ್ಲಿದ್ದ ‘ಊರಿಗೆ ಉತ್ತಮ ಹೋಟೆಲ್’ ನುಗ್ಗಿದೆವು. ಊರಿನ ವ್ಯವಸ್ಥೆಗೆ ಅನುರೂಪ ಜೋಡಿ ಆ ಹೋಟೆಲ್. (ನಮ್ಮಲ್ಲಿದ್ದ ಅರೆ-ಕವಿಯೊಬ್ಬ ‘ಯಥಾ ಕ್ಷೇತ್ರೇ ತಥಾ ಛತ್ರೇ’ ಎಂದದ್ದರಲ್ಲಿ ಭಾಷೆ, ವ್ಯಾಕರಣ ಹುಡುಕಬಾರದು!) ಹೊಟ್ಟೆಪಾಡಿಗಾಗಿ ಮಹಾತಪಸ್ವಿಯೊಬ್ಬ ನಾಯಿಮಾಂಸ ತಿಂದನಂತೆ ಎಂದು ನಗೆಚಾಟಿಕೆ ಮಾಡುತ್ತ, ಶುಚಿರುಚಿಗಳನ್ನು ಮರೆತು, ಹಗ್ಗದಲ್ಲಿ ನೇತುಬಿದ್ದು ನಮ್ಮ ತಲೆ ಸವರುವಂತಿದ್ದ ಹೊಟೆಲ್ ನೌಕರರ ಕೊಳೆ ಬಟ್ಟೆಗಳ ಅಡಿಯಲ್ಲೇ ಕುಳಿತು, ನಿರ್ಗುಣ ಪರಬ್ರಹ್ಮವನ್ನು ಉದರ ಕುಹರಕ್ಕಿಳಿಸಿ ಊರು ಬಿಟ್ಟೆವು.

(ಮುಂದುವರಿಯಲಿದೆ)